ಇಬ್ರಾಹೀಮ್ | تـرجمـة سورة إبراهيم

 تـرجمـة سورة إبراهيم من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಇಬ್ರಾಹೀಮ್ | ಪವಿತ್ರ್ ಕುರ್‌ಆನ್ ನ 14 ನೆಯ ಸೂರಃ | ಇದರಲ್ಲಿ ಒಟ್ಟು 52 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

١  الر ۚ كِتَابٌ أَنْزَلْنَاهُ إِلَيْكَ لِتُخْرِجَ النَّاسَ مِنَ الظُّلُمَاتِ إِلَى النُّورِ بِإِذْنِ رَبِّهِمْ إِلَىٰ صِرَاطِ الْعَزِيزِ الْحَمِيدِ

ಅಲಿಫ್ - ಲಾಮ್ - ರಾ! ಪೈಗಂಬರರೇ, ಜನರನ್ನು ಅವರ ಪ್ರಭುವಿನ ಆದೇಶದ ಮೇರೆಗೆ ಅಂಧಕಾರಗಳಿಂದ ಬೆಳಕಿನೆಡೆಗೆ - ಅಂದರೆ ಅತ್ಯಂತ ಬಲಾಢ್ಯನೂ ಸ್ತುತ್ಯರ್ಹನೂ ಆದ (ಅಲ್ಲಾಹ್ ನ) ಮಾರ್ಗದೆಡೆಗೆ - ಕರೆತರಲು ಈ ಗ್ರಂಥವನ್ನು ನಾವು ನಿಮ್ಮತ್ತ ಇಳಿಸಿ ಕೊಡುತ್ತಿರುವೆವು! {1}

٢  اللَّهِ الَّذِي لَهُ مَا فِي السَّمَاوَاتِ وَمَا فِي الْأَرْضِ ۗ وَوَيْلٌ لِلْكَافِرِينَ مِنْ عَذَابٍ شَدِيدٍ

ಭೂಮಿ ಮತ್ತು ಆಕಾಶಗಳಲ್ಲಿರುವ ಸಕಲವೂ ಯಾರ ಒಡೆತನಕ್ಕೆ ಸೇರಿದೆಯೋ ಆ ಅಲ್ಲಾಹ್ ನ ಮಾರ್ಗದೆಡೆಗೆ! ಹೌದು, ಅದನ್ನು ನಿರಾಕರಿಸಿದ ಜನರಿಗೆ ವಿನಾಶಕಾರಿಯಾದ ಕಠಿಣ ಸ್ವರೂಪದ ಶಿಕ್ಷೆಯಿದೆ. {2}

٣  الَّذِينَ يَسْتَحِبُّونَ الْحَيَاةَ الدُّنْيَا عَلَى الْآخِرَةِ وَيَصُدُّونَ عَنْ سَبِيلِ اللَّهِ وَيَبْغُونَهَا عِوَجًا ۚ أُولَٰئِكَ فِي ضَلَالٍ بَعِيدٍ

ಪರಲೋಕಕ್ಕಿಂತ ಇಹಲೋಕದ ಬದುಕನ್ನು ಅವರು ಹೆಚ್ಚು ಇಷ್ಟಪಡುತ್ತಾರೆ; ಅಲ್ಲಾಹ್ ನ ಮಾರ್ಗದೆಡೆಗೆ ಬಾರದಂತೆ ಅವರು ಜನರನ್ನು ತಡೆಯುತ್ತಾರೆ; ಮಾತ್ರವಲ್ಲ, ಅಲ್ಲಾಹ್ ನ ಮಾರ್ಗವು ತಮಗೆ ಬೇಕಾದಂತೆ ಮಣಿಯಬೇಕೆಂಬುದು ಅವರ ಬಯಕೆಯಾಗಿದೆ. ಯಥಾರ್ಥದಲ್ಲಿ ಅವರು ತಪ್ಪು ದಾರಿಯಲ್ಲಿ ಬಹು ದೂರ ಸಾಗಿರುವರು. {3}

٤  وَمَا أَرْسَلْنَا مِنْ رَسُولٍ إِلَّا بِلِسَانِ قَوْمِهِ لِيُبَيِّنَ لَهُمْ ۖ فَيُضِلُّ اللَّهُ مَنْ يَشَاءُ وَيَهْدِي مَنْ يَشَاءُ ۚ وَهُوَ الْعَزِيزُ الْحَكِيمُ

(ಜನರ ಮಾರ್ಗದರ್ಶನಕ್ಕಾಗಿ) ಒಬ್ಬ ದೂತನನ್ನು ನಾವು ಕಳುಹಿಸುವಾಗ ಆತನ ಸಮುದಾಯದ ಭಾಷೆಯಲ್ಲಿ ಹೊರತು ಬೇರೆ ಭಾಷೆಯಲ್ಲಿ ಕಳುಹಿಸುವುದಿಲ್ಲ! ಸತ್ಯವನ್ನು ಜನರಿಗೆ ಸ್ಪಷ್ಟವಾಗಿ ವಿವರಿಸುವ ಸಲುವಾಗಿ (ಹಾಗೆ ಮಾಡಲಾಗುತ್ತದೆ). ಮುಂದೆ, ಯಾರನ್ನು ತಪ್ಪು ದಾರಿಯಲ್ಲೇ ಬಿಟ್ಟುಬಿಡಲು ಅಲ್ಲಾಹ್ ನು ಬಯಸುತ್ತಾನೋ [ಅರ್ಥಾತ್ ದೂತರ ಬೋಧನೆಗಳನ್ನು ಧಿಕ್ಕರಿಸಿದವರನ್ನು] ತಪ್ಪು ದಾರಿಯಲ್ಲೇ ಇರಲು ಬಿಡುತ್ತಾನೆ; ಮತ್ತು ಯಾರನ್ನು ಸರಿದಾರಿಯಲ್ಲಿ ನಡೆಸಲು ಬಯಸುತ್ತಾನೋ [ಅರ್ಥಾತ್ ದೂತರ ಬೋಧನೆಗಳನ್ನು ಗೌರವಿಸಿದವರನ್ನು] ಸರಿದಾರಿಲ್ಲಿ ನಡೆಸುತ್ತಾನೆ. ಅವನು ಬಲಾಢ್ಯನೂ ಬಹಳ ವಿವೇಕಶಾಲಿಯೂ ಆಗಿರುವನು. {4}

٥  وَلَقَدْ أَرْسَلْنَا مُوسَىٰ بِآيَاتِنَا أَنْ أَخْرِجْ قَوْمَكَ مِنَ الظُّلُمَاتِ إِلَى النُّورِ وَذَكِّرْهُمْ بِأَيَّامِ اللَّهِ ۚ إِنَّ فِي ذَٰلِكَ لَآيَاتٍ لِكُلِّ صَبَّارٍ شَكُورٍ

ಹಾಗೆಯೇ, ನಿಮ್ಮ ಸಮುದಾಯವನ್ನು ಅಂಧಕಾರಗಳಿಂದ ಹೊರತೆಗೆದು ಬೆಳಕಿನೆಡೆಗೆ ಮುನ್ನಡೆಸಿರಿ ಮತ್ತು ಅವರಿಗೆ ಅಲ್ಲಾಹ್ ನ ದಿನಗಳನ್ನು [ಅರ್ಥಾತ್ ಧಿಕ್ಕಾರ ಮೆರೆದ ಹಿಂದಿನ ಜನಾಂಗಗಳನ್ನು ಅಲ್ಲಾಹ್ ನು ಶಿಕ್ಷೆಗೆ ಗುರಿಪಡಿಸಿದ ದಿನಗಳನ್ನು] ನೆನಪಿಸಿ ಕೊಡಿರಿ ಎಂಬ ಆದೇಶದೊಂದಿಗೆ ನಾವು ಪ್ರವಾದಿ ಮೂಸಾ ರನ್ನು ಕೆಲವು ದೈವಿಕ ನಿದರ್ಶನಗಳ ಸಮೇತ ಕಳುಹಿಸಿದ್ದೆವು. ಹೌದು, ಅತಿಯಾದ ಸಹನೆ ಮತ್ತು ಕೃತಜ್ಞತೆ ತೋರುವ ಜನರಿಗೆ ಇಂತಹ ಘಟನೆಗಳಲ್ಲಿ ಖಂಡಿತವಾಗಿ ಸಾಕಷ್ಟು ಪಾಠವಿದೆ. {5}

٦  وَإِذْ قَالَ مُوسَىٰ لِقَوْمِهِ اذْكُرُوا نِعْمَةَ اللَّهِ عَلَيْكُمْ إِذْ أَنْجَاكُمْ مِنْ آلِ فِرْعَوْنَ يَسُومُونَكُمْ سُوءَ الْعَذَابِ وَيُذَبِّحُونَ أَبْنَاءَكُمْ وَيَسْتَحْيُونَ نِسَاءَكُمْ ۚ وَفِي ذَٰلِكُمْ بَلَاءٌ مِنْ رَبِّكُمْ عَظِيمٌ

ಪ್ರವಾದಿ ಮೂಸಾ ರು ತಮ್ಮ ಸಮುದಾಯದ ಜನರೊಡನೆ ಹೇಳಿದ್ದನ್ನು (ಓ ಪೈಗಂಬರರೇ), ನೆನಪಿಸಿರಿ. (ಪ್ರವಾದಿ ಮೂಸಾ ರು ಹೇಳಿದ್ದರು): ಫಿರ್‌ಔನ್ ಮತ್ತು ಸಂಗಡಿಗರು ನಿಮಗೆ ಅತ್ಯಂತ ಕೆಟ್ಟ ಸ್ವರೂಪದ ಶಿಕ್ಷೆ ನೀಡುತ್ತಿದ್ದಾಗ; ನಿಮ್ಮ ಗಂಡು ಮಕ್ಕಳನ್ನು ಕೊಂದು ಹಾಕಿ ನಿಮ್ಮ ಹೆಣ್ಣು ಮಕ್ಕಳನ್ನು ಮಾತ್ರ ಅವರು ಬದುಕಲು ಬಿಡುತ್ತಿದ್ದಾಗ; ಫಿರ್‌ಔನ್ ಮತ್ತು ಆತನ ಸಂಗಡಿಗರ ಗುಲಾಮಗಿರಿಯಿಂದ [ಓ ಇಸ್ರಾಈಲ್ ಸಂತತಿಯವರೇ] ನಿಮ್ಮನ್ನು ವಿಮೋಚಿಸುವ ಮೂಲಕ ಅಲ್ಲಾಹ್ ನು ನಿಮ್ಮ ಮೇಲೆ ಮಾಡಿದ ಅನುಗ್ರಹವನ್ನು ಸ್ಮರಿಸಿರಿ! ಹೌದು, ಅದು ನಿಮ್ಮ ಪ್ರಭುವಿನ ವತಿಯಿಂದ ನಿಮ್ಮ ಪಾಲಿಗೆ ಮಹತ್ತರವಾದ ಒಂದು ಪರೀಕ್ಷೆಯಾಗಿತ್ತು! {6}

٧  وَإِذْ تَأَذَّنَ رَبُّكُمْ لَئِنْ شَكَرْتُمْ لَأَزِيدَنَّكُمْ ۖ وَلَئِنْ كَفَرْتُمْ إِنَّ عَذَابِي لَشَدِيدٌ

ಹೌದು, ನೀವು ಕೃತಜ್ಞತೆ ತೋರಿಸುವವರಾದರೆ ಖಂಡಿತವಾಗಿಯೂ ನಿಮಗೆ ಹೆಚ್ಚು ಹೆಚ್ಚು ದಯಪಾಲಿಸುತ್ತೇನೆ; ಅದನ್ನು ಬಿಟ್ಟು ನೀವು ಕೃತಘ್ನರಾಗಿ ಮಾರ್ಪಟ್ಟರೆ ನನ್ನ ಶಿಕ್ಷೆ ಅತಿ ಕಠಿಣ ಸ್ವರೂಪದ್ದಾಗಿದೆ ಎಂದು (ಪ್ರವಾದಿಗಳ ಮೊಲಕ) ನಿಮ್ಮ ಒಡೆಯನು ನಿಮ್ಮನ್ನು ಎಚ್ಚರಿಸಿ ಸಂದರ್ಭವನ್ನೂ ನೆನಪಿಸಿರಿ! {7}

٨  وَقَالَ مُوسَىٰ إِنْ تَكْفُرُوا أَنْتُمْ وَمَنْ فِي الْأَرْضِ جَمِيعًا فَإِنَّ اللَّهَ لَغَنِيٌّ حَمِيدٌ

ಪ್ರವಾದಿ ಮೂಸಾ ಹೇಳಿದರು: ಇನ್ನು ನೀವು ಕೃತಘ್ನರಾದರೆ, ನೀವು ಮಾತ್ರವಲ್ಲ, ಭೂಮುಖದಲ್ಲಿರುವ ಎಲ್ಲಾ ಜನರು ಒಟ್ಟಾಗಿ ಕೃತಘ್ನರಾಗಿ ಮಾರ್ಪಟ್ಟರೂ [ಅಲ್ಲಾಹ್ ನಿಗೆ ಏನೂ ಆಗದು. ಏಕೆಂದರೆ] ಅಲ್ಲಾಹ್ ನು ನಿಜವಾಗಿ ಯಾವುದೇ ಅಪೇಕ್ಷೆಗಳಿಲ್ಲದ ಸ್ವಯಂ ಪರಿಪೂರ್ಣನು; ಸ್ವಯಂ ಸ್ತುತ್ಯರ್ಹನು! {8}

٩  أَلَمْ يَأْتِكُمْ نَبَأُ الَّذِينَ مِنْ قَبْلِكُمْ قَوْمِ نُوحٍ وَعَادٍ وَثَمُودَ ۛ وَالَّذِينَ مِنْ بَعْدِهِمْ ۛ لَا يَعْلَمُهُمْ إِلَّا اللَّهُ ۚ جَاءَتْهُمْ رُسُلُهُمْ بِالْبَيِّنَاتِ فَرَدُّوا أَيْدِيَهُمْ فِي أَفْوَاهِهِمْ وَقَالُوا إِنَّا كَفَرْنَا بِمَا أُرْسِلْتُمْ بِهِ وَإِنَّا لَفِي شَكٍّ مِمَّا تَدْعُونَنَا إِلَيْهِ مُرِيبٍ

ಜನರೇ, ನಿಮಗಿಂತ ಮುಂಚೆ ಗತಿಸಿ ಹೋದ ನೂಹ್ ರ ಸಮುದಾಯ, ಆದ್ ಮತ್ತು ತಮೂದ್ ಸಮುದಾಯಗಳ ವೃತ್ತಾಂತಗಳು ನಿಮಗೆ ತಲುಪಿಲ್ಲವೇ? ಅವರ ನಂತರವೂ ಕೆಲವು ಸಮುದಾಯಗಳು (ಗತಿಸಿವೆ). ಆದರೆ [ಭೂಮುಖದಿಂದ ಸಂಪೂರ್ಣವಾಗಿ ಅಳಿಸಲ್ಪಟ್ಟ ಕಾರಣ} ಅವರ ಕುರಿತು ಅಲ್ಲಾಹ್ ನಿಗಲ್ಲದೆ ಬೇರಾರಿಗೂ ಏನೂ ತಿಳಿಯದು. ಅವರೆಲ್ಲರ ಬಳಿಗೆ ಆಯಾ ಸಮುದಾಯಕ್ಕೆ ಸೇರಿದ ದೂತರುಗಳು ಅತ್ಯಂತ ಸ್ಪಷ್ಟವಾದ ದೈವಿಕ ನಿದರ್ಶನಗಳೊಂದಿಗೆ ಆಗಮಿಸಿದ್ದರು. ಆದರೆ ಆ ಜನರು ತಮ್ಮ ಕೈಗಳನ್ನು ಬಾಯಿಗೊತ್ತಿ ಹಿಡಿದು [ಇನ್ನು ಮಾತನಾಡ ಬೇಡಿ ಎಂದು ಸೂಚಿಸುತ್ತಾ] ನೀವು ಯಾವ ಬೋಧನೆಗಳೊಂದಿಗೆ ಬಂದಿರುವಿರೋ ನಾವದನ್ನು ತಿರಸ್ಕರಿಸುತ್ತೇವೆ; ಮಾತ್ರವಲ್ಲ, ಯಾವುದರೆಡೆಗೆ ನೀವು ನಮ್ಮನ್ನು ಆಹ್ವಾನಿಸುತ್ತಿರುವಿರೋ ಅದರ ಕುರಿತು ನಾವು ತುಂಬಾ ಕಳವಳಕಾರಿಯಾದ ಸಂಶಯದಲ್ಲಿದ್ದೇವೆ (ಎಂದು ಹೇಳಿ ದೂತರುಗಳನ್ನು ತಿರಸ್ಕರಿಸಿದರು)! {9}

١٠  قَالَتْ رُسُلُهُمْ أَفِي اللَّهِ شَكٌّ فَاطِرِ السَّمَاوَاتِ وَالْأَرْضِ ۖ يَدْعُوكُمْ لِيَغْفِرَ لَكُمْ مِنْ ذُنُوبِكُمْ وَيُؤَخِّرَكُمْ إِلَىٰ أَجَلٍ مُسَمًّى ۚ قَالُوا إِنْ أَنْتُمْ إِلَّا بَشَرٌ مِثْلُنَا تُرِيدُونَ أَنْ تَصُدُّونَا عَمَّا كَانَ يَعْبُدُ آبَاؤُنَا فَأْتُونَا بِسُلْطَانٍ مُبِينٍ

ಅವರೆಡೆಗೆ ನಿಯೋಗಿಸಲಾದ ದೂತರು ಹೇಳಿದರು: ಭೂಮಿ ಮತ್ತು ಆಕಾಶಗಳನ್ನು ಅಸ್ತಿತ್ವಕ್ಕೆ ತಂದ ಆ ಅಲ್ಲಾಹ್ ನ ಬಗ್ಗೆ ನಿಮಗೆ ಸಂಶಯವೇ? ಅವನು ನಿಮ್ಮ ಪಾಪಗಳನ್ನು ನಿಮಗಾಗಿ ಕ್ಷಮಿಸಲು ಮತ್ತು ಒಂದು ನಿರ್ದಿಷ್ಟ ಅವಧಿಯ ತನಕ ನಿಮಗೆ ಸಮಯಾವಕಾಶವನ್ನು ವೃದ್ಧಿಸಿಕೊಡಲು ನಿಮ್ಮನ್ನು ಆಹ್ವಾನಿಸುತ್ತಿದ್ದಾನೆ. ಜನರು ಹೇಳಿದರು: (ಅಲ್ಲಾಹ್ ನ ದೂತರೆಂದು ಹೇಳಿಕೊಳ್ಳುವ ನೀವು) ನಮ್ಮಂತಹ ಮನುಷ್ಯರೇ ಆಗಿರುವಿರಿ; ಮತ್ತು ನಮ್ಮ ತಂದೆ - ತಾತಂದಿರು ಏನನ್ನೆಲ್ಲ ಆರಾಧಿಸುತ್ತಾ ಬಂದಿದ್ದರೋ ಅವುಗಳನ್ನು ಆರಾಧಿಸದಂತೆ ನಮ್ಮನ್ನು ತಡೆಯಲು ಬಯಸುತ್ತಿರುವಿರಿ. (ಇನ್ನು ನಾವು ಹಾಗೆ ಮಾಡಬೇಕಾದರೆ) ಸ್ಪಷ್ಟವಾದ ಒಂದು (ಪವಾಡವನ್ನು) ನಮ್ಮಲ್ಲಿಗೆ ಪುರಾವೆಯಾಗಿ ತನ್ನಿರಿ. {10}

١١  قَالَتْ لَهُمْ رُسُلُهُمْ إِنْ نَحْنُ إِلَّا بَشَرٌ مِثْلُكُمْ وَلَٰكِنَّ اللَّهَ يَمُنُّ عَلَىٰ مَنْ يَشَاءُ مِنْ عِبَادِهِ ۖ وَمَا كَانَ لَنَا أَنْ نَأْتِيَكُمْ بِسُلْطَانٍ إِلَّا بِإِذْنِ اللَّهِ ۚ وَعَلَى اللَّهِ فَلْيَتَوَكَّلِ الْمُؤْمِنُونَ

ಅದಕ್ಕೆ ಉತ್ತರವಾಗಿ ಅವರ ದೂತರುಗಳು ಅವರೊಡನೆ ಹೇಳಿದರು: ಹೌದು, ನಾವೂ ನಿಮ್ಮಂತಹ ಮನುಷ್ಯರೇ ಆಗಿರುವೆವು; ಆದರೆ ತನ್ನ ಉಪಾಸಕರ ಪೈಕಿ ಯಾರನ್ನು ಬೇಕೋ ಅವರನ್ನು ಅಲ್ಲಾಹ್ ನು (ಪ್ರವಾದಿತ್ವ ದಯಪಾಲಿಸಿ) ಅನುಗ್ರಹಿಸುತ್ತಾನೆ. ಹಾಗಿದ್ದರೂ ಅಲ್ಲಾಹ್ ನ ಅಪ್ಪಣೆ ಇಲ್ಲದೆ ಪವಾಡ - ಪುರಾವೆಗಳನ್ನು ನಿಮಗೆ ತೋರಿಸಿ ಕೊಡಲು ನಮ್ಮಿಂದ ಸಾಧ್ಯವಿಲ್ಲ. ಮತ್ತು [ಅಂತಹ ಸಕಲ ವಿಷಯಗಳೂ ಅಲ್ಲಾಹ್ ನಿಗೆ ಮಾತ್ರ ಸೇರಿವೆಯಾದ್ದರಿಂದ] ಅಲ್ಲಾಹ್ ನಲ್ಲಿಯೇ ವಿಶ್ವಾಸಿಗಳಾದ ಜನರು ಭರವಸೆ ಇಡಬೇಕು. {11}

١٢  وَمَا لَنَا أَلَّا نَتَوَكَّلَ عَلَى اللَّهِ وَقَدْ هَدَانَا سُبُلَنَا ۚ وَلَنَصْبِرَنَّ عَلَىٰ مَا آذَيْتُمُونَا ۚ وَعَلَى اللَّهِ فَلْيَتَوَكَّلِ الْمُتَوَكِّلُونَ

ನಾವು ನಡೆಯಬೇಕಾದ ದಾರಿಗಳನ್ನು ನಮಗೆ ತೋರಿಸಿ ಕೊಟ್ಟವನು ಅಲ್ಲಾಹ್ ನೇ ಆಗಿರುವಾಗ, ಅವನ ಮೇಲೆ ಭರವಸೆ ಇಡದೇ ಇರಲು ನಮಗೇನಾಗಿದೆ?! ಮಾತ್ರವಲ್ಲ ನೀವು ನಮಗೆ ನೀಡುವ ಎಲ್ಲಾ ಕಷ್ಟಗಳನ್ನು ನಾವು (ಅಲ್ಲಾಹ್ ನ ಮೇಲೆ ಭರವಸೆಯಿಟ್ಟು) ಸಹಿಸಿಕೊಳ್ಳುವೆವು. ಹೌದು, ಭರವಸೆ ಇಡುವವರು ಭರವಸೆ ಇಡಬೇಕಾದುದು ಅಲ್ಲಾಹ್ ನ ಮೇಲೆಯೇ ಆಗಿರಬೇಕು. {12}

١٣  وَقَالَ الَّذِينَ كَفَرُوا لِرُسُلِهِمْ لَنُخْرِجَنَّكُمْ مِنْ أَرْضِنَا أَوْ لَتَعُودُنَّ فِي مِلَّتِنَا ۖ فَأَوْحَىٰ إِلَيْهِمْ رَبُّهُمْ لَنُهْلِكَنَّ الظَّالِمِينَ

ಧಿಕ್ಕಾರದ ನಿಲುವು ತಮ್ಮಾದಾಗಿಸಿಕೊಂಡ ಜನರು ತಮ್ಮಲ್ಲಿಗೆ ಬಂದ ದೂತರುಗಳೊಡನೆ ಹೇಳತೊಡಗಿದರು: ನೀವು ನಮ್ಮ ಆಚಾರ-ವಿಚಾರಗಳತ್ತ ಮರಳಿ ಬರಲೇ ಬೇಕು; ಇಲ್ಲವಾದರೆ ನಮ್ಮೀ ನಾಡಿನಿಂದ ಖಂಡಿತವಾಗಿಯೂ ನಾವು ನಿಮ್ಮನ್ನು ಹೊರಗಟ್ಟುವೆವು! ಹಾಗಿರುವಾಗ ದೂತರಿಗೆ ತಮ್ಮ ಪ್ರಭುವಿನಿಂದ 'ವಹೀ' ಮುಖಾಂತರ ದಿವ್ಯಸಂದೇಶ ಬಂದಿತು: ನಾವು ಈ ದುಷ್ಕರ್ಮಿಗಳನ್ನು ಖಂಡಿತ ನಾಶಗೊಳಿಸಲಿದ್ದೇವೆ. {13}

١٤  وَلَنُسْكِنَنَّكُمُ الْأَرْضَ مِنْ بَعْدِهِمْ ۚ ذَٰلِكَ لِمَنْ خَافَ مَقَامِي وَخَافَ وَعِيدِ

ಅಷ್ಟೇ ಅಲ್ಲ, ಇವರನ್ನು ನಾಶಗೊಳಿಸಿದ ನಂತರ ಆ ನೆಲದಲ್ಲಿ ನಿಮ್ಮನ್ನು ನಾವು ನೆಲೆಗೊಳಿಸುವೆವು. ಹೌದು, ಯಾರು ನನ್ನ ಮುಂದೆ (ವಿಚಾರಣೆಗಾಗಿ) ನಿಲ್ಲಲಿರುವ ಕುರಿತು ಮತ್ತು ನನ್ನ ಮುನ್ನೆಚ್ಚರಿಕೆಗಳ ಕುರಿತು ಭಯಪಡುವರೋ ಅಂತಹವರಿಗಿರುವ ಪ್ರತಿಫಲವದು.{14}

١٥  وَاسْتَفْتَحُوا وَخَابَ كُلُّ جَبَّارٍ عَنِيدٍ

ಕೊನೆಗೆ ದೂತರುಗಳು ವಿಜಯಕ್ಕಾಗಿ (ಪ್ರಾರ್ಥಿಸಿದರು). ಹಾಗೆ, ಮೊಂಡುತನ ಮೆರೆದ ದುರಹಂಕಾರಿಯಾದ ಒಬ್ಬೊಬ್ಬನೂ ಸೋಲುಂಡನು. {15}

١٦  مِنْ وَرَائِهِ جَهَنَّمُ وَيُسْقَىٰ مِنْ مَاءٍ صَدِيدٍ

[ಇಹಲೋಕದ ಆ ಸೋಲಿನ] ಬೆನ್ನಿಗೇ ನರಕವೂ ಸಿದ್ಧವಿದೆ; ಅಲ್ಲಿ ಕೀವು ತುಂಬಿದ ನೀರನ್ನು ಆತನಿಗೆ ಕುಡಿಸಲಾಗುವುದು. {16}

١٧  يَتَجَرَّعُهُ وَلَا يَكَادُ يُسِيغُهُ وَيَأْتِيهِ الْمَوْتُ مِنْ كُلِّ مَكَانٍ وَمَا هُوَ بِمَيِّتٍ ۖ وَمِنْ وَرَائِهِ عَذَابٌ غَلِيظٌ

[ಅಸಹ್ಯವಾದರೂ] ಒಂದೊಂದೇ ಗುಟುಕು ಕುಡಿಯಲು ಪ್ರಯತ್ನಿಸುವನು. ಆದರೆ ಅದು ಗಂಟಲಿನಿಂದ ಕೆಳಗಿಳಿಯದು. ಮರಣವು ಎಲ್ಲಾ ದಿಕ್ಕುಗಳಿಂದ ಅವನ್ನನ್ನು ಸುತ್ತುಗಟ್ಟುವುದು. [ಕೊನೆಗೆ ಅಸಹಾಯಕನಾಗಿ ಸಾಯಬಯಸಿದರೂ] ಅವನು ಸಾಯಲಾರನು. ಅದರ ಬೆನ್ನಿಗೇ (ಇನ್ನಷ್ಟು) ಘೋರ ಸ್ವರೂಪದ (ಮತ್ತೊಂದು) ಶಿಕ್ಷೆಯೂ ಇದೆ. {17}

١٨  مَثَلُ الَّذِينَ كَفَرُوا بِرَبِّهِمْ ۖ أَعْمَالُهُمْ كَرَمَادٍ اشْتَدَّتْ بِهِ الرِّيحُ فِي يَوْمٍ عَاصِفٍ ۖ لَا يَقْدِرُونَ مِمَّا كَسَبُوا عَلَىٰ شَيْءٍ ۚ ذَٰلِكَ هُوَ الضَّلَالُ الْبَعِيدُ

ತಮ್ಮ ಸೃಷ್ಟಿಕರ್ತನನ್ನು ಧಿಕ್ಕರಿಸಿದವರು (ಇಹಲೋಕದಲ್ಲಿ) ಮಾಡಿರಬಹುದಾದ ಪುಣ್ಯಕರ್ಮದ ಉದಾಹರಣೆಯು, ಚಂಡಮಾರುತದ ದಿನದಂದು ಬಿರುಸಾಗಿ ಬೀಸಿದ ಬಿರುಗಾಳಿಗೆ ಸಿಕ್ಕಿದ ಬೂದಿಯ ಹಾಗೆ! ತಾವು ಸಂಪಾದಿಸಿದ್ದ ಯಾವುದರ ಮೇಲೂ ಯಾವ ಅಧಿಕಾರವೂ ಅವರಿಗೆ (ಪರಲೋಕದಲ್ಲಿ) ಇರಲಾರದು. ಅದುವೇ ವಿದೂರದ ವರೆಗೆ ಸಾಗಿದ ವಿನಾಶದ ಹಾದಿ! {18}

١٩  أَلَمْ تَرَ أَنَّ اللَّهَ خَلَقَ السَّمَاوَاتِ وَالْأَرْضَ بِالْحَقِّ ۚ إِنْ يَشَأْ يُذْهِبْكُمْ وَيَأْتِ بِخَلْقٍ جَدِيدٍ

ಅಲ್ಲಾಹ್ ನು ಯಥೋಚಿತವಾಗಿ ಭೂಮಿ ಮತ್ತು ಆಕಾಶಗಳನ್ನು ಅಸ್ತಿತ್ವಕ್ಕೆ ತಂದಿರುವುದನ್ನು (ಓ ಮಾನವಾ), ನೀನು ನೊಡುತ್ತಿಲ್ಲವೇ? ಇನ್ನು ಅವನು ಬಯಸಿದರೆ ನಿಮ್ಮನ್ನು (ಭೂಮುಖದಿಂದ ಸಂಪೂರ್ಣವಾಗಿ) ಅಳಿಸಿ (ನಿಮ್ಮ ಸ್ಥಾನದಲ್ಲಿ) ಹೊಸದಾದ ಒಂದು ಸೃಷ್ಟಿಯನ್ನು ತರಬಲ್ಲನು. {19}

٢٠  وَمَا ذَٰلِكَ عَلَى اللَّهِ بِعَزِيزٍ

ಹಾಗೆ ಮಾಡುವುದು ಅಲ್ಲಾಹ್ ನ ಮಟ್ಟಿಗೆ ಒಂದು ದುಬಾರಿ ಕೆಲಸವೇನಲ್ಲ. {20}

٢١  وَبَرَزُوا لِلَّهِ جَمِيعًا فَقَالَ الضُّعَفَاءُ لِلَّذِينَ اسْتَكْبَرُوا إِنَّا كُنَّا لَكُمْ تَبَعًا فَهَلْ أَنْتُمْ مُغْنُونَ عَنَّا مِنْ عَذَابِ اللَّهِ مِنْ شَيْءٍ ۚ قَالُوا لَوْ هَدَانَا اللَّهُ لَهَدَيْنَاكُمْ ۖ سَوَاءٌ عَلَيْنَا أَجَزِعْنَا أَمْ صَبَرْنَا مَا لَنَا مِنْ مَحِيصٍ

[ದೂತರುಗಳನ್ನು ಧಿಕ್ಕರಿಸಿದ ಜನರನ್ನು ವಿಚಾರಣೆಗಾಗಿ ಪರಲೋಕದಲ್ಲಿ ಎಬ್ಬಿಸಿದಾಗ] ಅವರೆಲ್ಲರೂ ಅಲ್ಲಾಹ್ ನ ಸನ್ನಿಧಿಯಲ್ಲಿ ಹಾಜರಾಗುವರು. ಅವರ ಪೈಕಿಯ ದುರ್ಬಲ ಜನರು, (ಹಿಂದೆ ಭೂಮಿಯಲ್ಲಿ) ದೊಡ್ಡಸ್ತಿಕೆ ಮೆರೆದವರೊಂದಿಗೆ, ನಾವು (ಭೂಮಿಯಲ್ಲಿ ಜೀವಿಸಿದ್ದಾಗ) ನೀವು ಹೇಳಿದಂತೆ ಕೇಳುತ್ತಾ ಜೀವಿಸಿದ್ದೆವು; ಆದ್ದರಿಂದ ಅಲ್ಲಾಹ್ ನ ಶಿಕ್ಷೆಯಿಂದ ಸ್ವಲ್ಪವನ್ನಾದರೂ ಈಗ ನಮ್ಮಿಂದ ದೂರಗೊಳಿಸಲು ನಿಮಗೆ ಸಾಧ್ಯವಾಗದೇ ಎಂದು ಕೋರುವರು. ದೊಡ್ಡಸ್ತಿಕೆ ಮೆರೆದವರು ಉತ್ತರಿಸುವರು: ಒಂದು ವೇಳೆ [ಶಿಕ್ಷೆಯಿಂದ ಪಾರಾಗುವ] ದಾರಿ ಅಲ್ಲಾಹ್ ನು ನಮಗೆ ತೋರಿದ್ದರೆ ನಾವು ಅದನ್ನು ನಿಮಗೂ ತೋರುತ್ತಿದ್ದೆವು! ಆದರೆ ಈಗ ಎಷ್ಟು ರೋದಿಸಿದರೂ ಸಹಿಸಿಕೊಂಡರೂ ನಮ್ಮ ನಿಮ್ಮ ಪಾಲಿಗೆ ಅದರಿಂದ ಏನೂ ವ್ಯತ್ಯಾಸವಾಗದು. ನಮಗೆ ತಪ್ಪಿಸಿಕೊಳ್ಳಲು ದಾರಿಯೇ ಇಲ್ಲವಾಗಿದೆ. {21}

٢٢  وَقَالَ الشَّيْطَانُ لَمَّا قُضِيَ الْأَمْرُ إِنَّ اللَّهَ وَعَدَكُمْ وَعْدَ الْحَقِّ وَوَعَدْتُكُمْ فَأَخْلَفْتُكُمْ ۖ وَمَا كَانَ لِيَ عَلَيْكُمْ مِنْ سُلْطَانٍ إِلَّا أَنْ دَعَوْتُكُمْ فَاسْتَجَبْتُمْ لِي ۖ فَلَا تَلُومُونِي وَلُومُوا أَنْفُسَكُمْ ۖ مَا أَنَا بِمُصْرِخِكُمْ وَمَا أَنْتُمْ بِمُصْرِخِيَّ ۖ إِنِّي كَفَرْتُ بِمَا أَشْرَكْتُمُونِ مِنْ قَبْلُ ۗ إِنَّ الظَّالِمِينَ لَهُمْ عَذَابٌ أَلِيمٌ

(ನಿರ್ಣಾಯಕ ದಿನದಂದು) ಎಲ್ಲಾ ವಿಷಯಗಳು ತೀರ್ಮಾನಗೊಂಡ ನಂತರ ಸೈತಾನನು ಹೇಳುತ್ತಾನೆ: ನಿಜವಾಗಿ, ಅಲ್ಲಾಹ್ ನು ನಿಮಗೆ ಮಾಡಿದ್ದ ವಾಗ್ದಾನವೇ ಸತ್ಯವಾದ ವಾಗ್ದಾನವಾಗಿತ್ತು. ಹೌದು, ನಾನೂ ನಿಮಗೆ (ವಿಜಯ ಸಿದ್ಧಿಸಿ ಕೊಡುವ) ವಚನ ನೀಡಿದ್ದೆನು; ಅದಾಗಿಯೂ ನಾನು ವಚನ ಭಂಗ ಮಾಡಿದೆನು. ನಿಮ್ಮನ್ನು (ಈ ವಿನಾಶದ ಹಾದಿಯೆಡೆಗೆ) ಆಹ್ವಾನಿಸುವ ಕೆಲಸವೊಂದನ್ನು ಬಿಟ್ಟರೆ ನನಗೆ ನಿಮ್ಮ ಮೇಲೆ ಬೇರಾವ ಅಧಿಕಾರವೂ ಇರಲಿಲ್ಲ! ನಾನು ಕರೆದ ಮಾತ್ರಕ್ಕೆ ನೀವು ನನ್ನ ಕರೆಗೆ ಓಗೊಟ್ಟು (ನನ್ನ ಮಾರ್ಗವನ್ನು ಸ್ವಯಿಚ್ಛೆಯಿಂದಲೇ ಸ್ವೀಕರಿಸಿದಿರಿ). ಈಗ ನೀವು ನನ್ನನ್ನು ದೂಷಿಸದಿರಿ; ಬದಲಾಗಿ ನಿಮ್ಮನ್ನು ನೀವೇ ದೂಷಿಸಿಕೊಳ್ಳಿ. ಇಂದು ನಿಮ್ಮನ್ನು ನಾನು ರಕ್ಷಿಸಲಾರೆ, ನನ್ನನ್ನು ನೀವೂ ರಕ್ಷಿಸಲಾರಿರಿ. ಈ ಹಿಂದೆ ನನ್ನನ್ನೂ ನೀವು (ಅಲ್ಲಾಹ್ ನ ದೇವತ್ವದಲ್ಲಿ) ಸಹಭಾಗಿಯನ್ನಾಗಿ ಮಾಡಿಕೊಂಡಿದ್ದನ್ನು ನಾನು ಧಿಕ್ಕರಿಸಿದ್ದೇನೆ. ಹೌದು, ಅಧರ್ಮಿಗಳು ಯಾರೇ ಆದರೂ ನೋವುಭರಿತ ಶಿಕ್ಷೆ ಅವರಿಗೆ ಇದ್ದೇ ಇದೆ. {22}

٢٣  وَأُدْخِلَ الَّذِينَ آمَنُوا وَعَمِلُوا الصَّالِحَاتِ جَنَّاتٍ تَجْرِي مِنْ تَحْتِهَا الْأَنْهَارُ خَالِدِينَ فِيهَا بِإِذْنِ رَبِّهِمْ ۖ تَحِيَّتُهُمْ فِيهَا سَلَامٌ

[ದೂತರುಗಳ ಉಪದೇಶವನ್ನು ಸ್ವೀಕರಿಸಿ ಅದರ ಸತ್ಯತೆಯಲ್ಲಿ] ವಿಶ್ವಾಸವಿರಿಸುವುದರ ಜೊತೆಗೆ ಒಳ್ಳೆಯ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಜನರು ಸ್ವರ್ಗೋದ್ಯಾನಗಳೊಳಗೆ ಪ್ರವೇಶಿಸಲ್ಪಡುವರು; ಅವುಗಳ ಕೆಳಭಾಗದಲ್ಲಿ ನಾಲೆಗಳು ಪ್ರವಹಿಸುತ್ತಲಿರುವುವು. ತಮ್ಮ ಸೃಷ್ಟಿಕರ್ತನ ಒಪ್ಪಿಗೆಯೊಂದಿಗೆ ಅವರು ಅಲ್ಲಿ ಸದಾಕಾಲ ನೆಲೆಸುವರು. ಅಲ್ಲಿ ಸಲಾಮ್ [ಅರ್ಥಾತ್ ಶಾಂತಿ] ಎಂಬುದು ಅವರ ಶುಭಾಶಯವಾಗಿರುವಿದು. {23}

٢٤  أَلَمْ تَرَ كَيْفَ ضَرَبَ اللَّهُ مَثَلًا كَلِمَةً طَيِّبَةً كَشَجَرَةٍ طَيِّبَةٍ أَصْلُهَا ثَابِتٌ وَفَرْعُهَا فِي السَّمَاءِ

[ಅದು ಸಾಧ್ಯವಾಗಲು ಕಾರಣ ಆ ವಿಶ್ವಾಸಿಗಳು ಉಚ್ಛರಿಸಿದ "ಲಾ ಇಲಾಹ ಇಲ್ಲಲ್ಲಾಹ್, ಮುಹಮ್ಮದುರ್ ರಸೂಲುಲ್ಲಾಹ್" ಎಂಬ ಅತ್ಯುತ್ಕೃಷ್ಟ ನುಡಿ]. ಅಲ್ಲಾಹ್ ನು ಅಂತಹ ಅತ್ಯುತ್ಕೃಷ್ಟವಾದ ನುಡಿಗೆ ಎಂತಹ ಉಪಮೆ ನೀಡಿದ್ದಾನೆಂದು ನೀವು ನೋಡಿಲ್ಲವೇ? ಅದು ಒಂದು ಅತ್ಯುತ್ಕೃಷ್ಟವಾದ ಮರವಿದ್ದಂತೆ! ಅದರ ಬೇರುಗಳು ನೆಲದಲ್ಲಿ ಸದೃಢವಾಗಿ ನಾಟಿವೆ ಮತ್ತು ಅದರ ಕೊಂಬೆರೆಂಬೆಗಳು ಆಕಾಶದಲ್ಲಿ ಹರಡಿವೆ! {24}

٢٥  تُؤْتِي أُكُلَهَا كُلَّ حِينٍ بِإِذْنِ رَبِّهَا ۗ وَيَضْرِبُ اللَّهُ الْأَمْثَالَ لِلنَّاسِ لَعَلَّهُمْ يَتَذَكَّرُونَ

ತನ್ನ ದೇವನ ಅಪ್ಪಣೆಯಂತೆ ಅದು ಸದಾಕಾಲ ಫಲ ನೀಡುತ್ತಿರುತ್ತದೆ! ಜನರು ಪಾಠ ಕಲಿಯಲೆಂದು ಅಲ್ಲಾಹ್ ನು ಇಂತಹ ಉಪಮೆಗಳನ್ನು ನೀಡುತ್ತಾನೆ. {25}

٢٦  وَمَثَلُ كَلِمَةٍ خَبِيثَةٍ كَشَجَرَةٍ خَبِيثَةٍ اجْتُثَّتْ مِنْ فَوْقِ الْأَرْضِ مَا لَهَا مِنْ قَرَارٍ

ಅದಕ್ಕೆ ವ್ಯತಿರಿಕ್ತವಾಗಿ, ಹೊಲಸು ನುಡಿ [ಅರ್ಥಾತ್ ಪೈಶಾಚಿಕ ನುಡಿಯ] ಉದಾಹರಣೆಯು ನೆಲದ ಮೇಲ್ಮೈಯಿಂದ ಕೀಳಲ್ಪಟ್ಟ, ಅಸ್ಥಿರವಾದ [ಅಂದರೆ ಉಪಯೋಗಕ್ಕೆ ಬಾರದ] ಒಂದು ಹೊಲಸು ಮರದಂತೆ! {26}

٢٧  يُثَبِّتُ اللَّهُ الَّذِينَ آمَنُوا بِالْقَوْلِ الثَّابِتِ فِي الْحَيَاةِ الدُّنْيَا وَفِي الْآخِرَةِ ۖ وَيُضِلُّ اللَّهُ الظَّالِمِينَ ۚ وَيَفْعَلُ اللَّهُ مَا يَشَاءُ

(ಅತ್ಯುತ್ಕೃಷ್ಟವಾದ) ಆ ಸುಭದ್ರ ನುಡಿಯ ಮೂಲಕ ಅಲ್ಲಾಹ್ ನು ಇಹಲೋಕದಲ್ಲೂ ಪರಲೋಕದಲ್ಲೂ ವಿಶ್ವಾಸಿಗಳ ಸ್ಥಿತಿಯನ್ನು ಸುಸ್ಥಿರಗೊಳಿಸುತ್ತಾನೆ; ಹಾಗೂ ಅನ್ಯಾಯ ಮಾಡಿದ (ಅಧರ್ಮಿಗಳನ್ನು) ತಪ್ಪು ದಾರಿಯಲ್ಲೇ ಬಿಟ್ಟುಬಿಡುತ್ತಾನೆ! ಹೌದು, ಅಲ್ಲಾಹ್ ನು ತಾನು ಇಚ್ಛಿಸಿದ್ದನ್ನು ಕಾರ್ಯಗತ ಗೊಳಿಸುತ್ತಾನೆ. {27}

٢٨  أَلَمْ تَرَ إِلَى الَّذِينَ بَدَّلُوا نِعْمَتَ اللَّهِ كُفْرًا وَأَحَلُّوا قَوْمَهُمْ دَارَ الْبَوَارِ

ಅಲ್ಲಾಹ್ ನು [ಮಾರ್ಗದರ್ಶನಕ್ಕಾಗಿ ದೂತರುಗಳನ್ನು ಕಳುಹಿಸುವ ಮೂಲಕ] ಅನುಗ್ರಹಿಸಿದ್ದಕ್ಕೆ ಪ್ರತಿಯಾಗಿ (ಅದನ್ನು ಅಲ್ಲಗಳೆದು) ಕೃತಘ್ನತೆ ತೋರಿದವರನ್ನು ನೀವು ಕಂಡಿಲ್ಲವೇ? ಅವರು (ತಮ್ಮನ್ನೂ) ತಮ್ಮ ಸಮುದಾಯವನ್ನೂ ವಿನಾಶದ ಕೂಪಕ್ಕೆ ತಳ್ಳಿಬಿಟ್ಟರು. {28}

٢٩  جَهَنَّمَ يَصْلَوْنَهَا ۖ وَبِئْسَ الْقَرَارُ

ಅಂದರೆ ನರಕಾಗ್ನಿಯೊಳಕ್ಕೆ! ಅವರೆಲ್ಲರೂ ಅದರೊಳಗೆ ಎಸೆಯಲ್ಪಡುವರು. ಅದೆಷ್ಟು ಕೆಟ್ಟ ನೆಲೆಯದು! {29}

٣٠  وَجَعَلُوا لِلَّهِ أَنْدَادًا لِيُضِلُّوا عَنْ سَبِيلِهِ ۗ قُلْ تَمَتَّعُوا فَإِنَّ مَصِيرَكُمْ إِلَى النَّارِ

ಅವರು ಜನರನ್ನು ಅಲ್ಲಾಹ್ ನ ಮಾರ್ಗದಿಂದ ಬೇರೆಡೆಗೆ ತಿರುಗಿಸಲು (ವಿಗ್ರಹಗಳನ್ನು) ಅಲ್ಲಾಹ್ ನಿಗೆ ಸರಿಸಾಟಿಯಾಗಿ ಮಾಡಿಕೊಂಡರು. ಅವರೊಡನೆ ಹೇಳಿರಿ: ಈಗ ಸ್ವಲ್ಪ ಸುಖಪಟ್ಟುಕೊಳ್ಳಿ; ಕೊನೆಯದಾಗಿ ನಿಮಗೆ ಹೋಗಲಿಕ್ಕಿರುವುದು ನರಕಾಗ್ನಿಯ ಕಡೆಗೇ! {30}

٣١  قُلْ لِعِبَادِيَ الَّذِينَ آمَنُوا يُقِيمُوا الصَّلَاةَ وَيُنْفِقُوا مِمَّا رَزَقْنَاهُمْ سِرًّا وَعَلَانِيَةً مِنْ قَبْلِ أَنْ يَأْتِيَ يَوْمٌ لَا بَيْعٌ فِيهِ وَلَا خِلَالٌ

ಪೈಗಂಬರರೇ, ವಿಶ್ವಾಸಿಗಳಾದ ನನ್ನ ಉಪಾಸಕರೊಂದಿಗೆ ಹೇಳಿರಿ: ಕೊಡುಕೊಳುಗೆಗಳಾಗಲಿ ಸ್ನೇಹಪರೆತೆಯಾಗಲಿ ಉಪಯೋಗಕ್ಕೆ ಬಾರದ ಆ ದಿನ [ಅರ್ಥಾತ್ ನಿರ್ಣಾಯಕ ದಿನ] ಸಂಭವಿಸುವುದಕ್ಕಿಂತ ಮುಂಚಿತವಾಗಿ ಅವರು ನಮಾಝ್ ಅನ್ನು ಸ್ಥಿರವಾಗಿ ಪಾಲಿಸಲಿ ಹಾಗೂ ನಾವು ಅವರಿಗೆ ನೀಡಿದ ಸಂಪತ್ತಿನಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ದಾನ ಮಾಡಲಿ. {31}

٣٢  اللَّهُ الَّذِي خَلَقَ السَّمَاوَاتِ وَالْأَرْضَ وَأَنْزَلَ مِنَ السَّمَاءِ مَاءً فَأَخْرَجَ بِهِ مِنَ الثَّمَرَاتِ رِزْقًا لَكُمْ ۖ وَسَخَّرَ لَكُمُ الْفُلْكَ لِتَجْرِيَ فِي الْبَحْرِ بِأَمْرِهِ ۖ وَسَخَّرَ لَكُمُ الْأَنْهَارَ

ಭೂಮಿ ಮತ್ತು ಆಕಾಶಗಳನ್ನು ಸೃಷ್ಟಿಸಿದ, ಹಾಗೂ ಆಕಾಶದಿಂದ ಮಳೆ ಸುರಿಸುವ ಮೂಲಕ ನಿಮ್ಮ ಆಹಾರಕ್ಕಾಗಿ ಹಣ್ಣುಹಂಪಲುಗಳನ್ನು ಉತ್ಪಾದಿಸಿದ, ಮತ್ತು ತನ್ನ ಅಪ್ಪಣೆಯಂತೆ ಸಮುದ್ರಗಳಲ್ಲಿ ಚಲಿಸುವ ಹಡಗುಗಳ ಚಲನೆಯನ್ನು ನಿಮ್ಮು ನಿಯಂತ್ರಣಕ್ಕೆ ನೀಡಿದ, ಹಾಗೆಯೇ ನದಿಗಳ ಉಪಯೋಗವನ್ನೂ ನಿಮ್ಮ ನಿಯಂತ್ರಣಕ್ಕೆ ಒಳಪಡಿಸಿದವನು ಆ ಅಲ್ಲಾಹ್ ನೇ! {32}

٣٣  وَسَخَّرَ لَكُمُ الشَّمْسَ وَالْقَمَرَ دَائِبَيْنِ ۖ وَسَخَّرَ لَكُمُ اللَّيْلَ وَالنَّهَارَ

(ತಮ್ಮ ತಮ್ಮ ಕಕ್ಷೆಗಳಲ್ಲಿ) ದಣಿವಿಲ್ಲದೆ ನಿರಂತರ ಚಲಿಸುವ ಸೂರ್ಯ ಮತ್ತು ಚಂದ್ರರ (ಸೇವೆ) ಹಾಗೂ ಹಗಲು ಮತ್ತು ರಾತ್ರಿಯ (ಉಪಯುಕ್ತತೆಯನ್ನು) ನಿಮಗೆ ಅಧೀನಪಡಿಸಿದವನೂ (ಆ ಅಲ್ಲಾಹ್ ನೇ). {33}

٣٤  وَآتَاكُمْ مِنْ كُلِّ مَا سَأَلْتُمُوهُ ۚ وَإِنْ تَعُدُّوا نِعْمَتَ اللَّهِ لَا تُحْصُوهَا ۗ إِنَّ الْإِنْسَانَ لَظَلُومٌ كَفَّارٌ

ಅಷ್ಟೇ ಅಲ್ಲ, ನೀವು ಅವನೊಡನೆ ಬೇಡಿದ್ದೆಲ್ಲವನ್ನೂ ನಿಮಗೆ ದಯಪಾಲಿಸಿದವನೂ ಅವನೇ; ಇನ್ನು ಅಲ್ಲಾಹ್ ನ ಅನುಗ್ರಹಗಳನ್ನು ನೀವು ಎಣಿಸಲು ಹೊರಟರೆ ಅದು ನಿಮ್ಮಿಂದ ಸಾಧ್ಯವಾಗದು! ಅಷ್ಟಾಗಿಯೂ ಮನುಷ್ಯನು ಮಾತ್ರ [ವಿಗ್ರಹ ಮುಂತಾದವುಗಳನ್ನು ಆರಾಧಿಸುವ ಮೂಲಕ] ಅನ್ಯಾಯವನ್ನೇ ಮಾಡಿದ್ದಾನೆ; ಉಪಕಾರಸ್ಮರಣೆ ಇಲ್ಲದವನಾಗಿದ್ದಾನೆ. {34}

٣٥  وَإِذْ قَالَ إِبْرَاهِيمُ رَبِّ اجْعَلْ هَٰذَا الْبَلَدَ آمِنًا وَاجْنُبْنِي وَبَنِيَّ أَنْ نَعْبُدَ الْأَصْنَامَ

(ಜನರೇ, ನಿಮ್ಮ ಪಿತಾಮಹನಾದ ಪ್ರವಾದಿ) ಇಬ್ರಾಹೀಮ್ ರು ಪ್ರಾರ್ಥಿಸಿದ್ದನ್ನು ನೆನಪಿಸಿಕೊಳ್ಳಿ: ಓ ನನ್ನ ಒಡೆಯನೇ! ಈ ನಾಡನ್ನು [ಅರ್ಥಾತ್ ಮಕ್ಕಾ ಪ್ರದೇಶವನ್ನು] ಶಾಂತಿ ಸುಭದ್ರತೆಯ ನೆಲೆವೀಡಾಗಿ ಮಾಡು. ನನ್ನನ್ನೂ ನನ್ನ ಮಕ್ಕಳನ್ನೂ ವಿಗ್ರಹಾರಾಧನೆಯಿಂದ ದೂರವಿರಿಸು. {35}

٣٦  رَبِّ إِنَّهُنَّ أَضْلَلْنَ كَثِيرًا مِنَ النَّاسِ ۖ فَمَنْ تَبِعَنِي فَإِنَّهُ مِنِّي ۖ وَمَنْ عَصَانِي فَإِنَّكَ غَفُورٌ رَحِيمٌ

ನನ್ನೊಡೆಯಾ! ಈ ವಿಗ್ರಹಗಳು ಮಾನವರಲ್ಲಿ ಹಲವರ ದಾರಿ ತಪ್ಪಿಸಿವೆ! [ವಿಗ್ರಹಾರಾಧನೆ ನನ್ನ ಮಾರ್ಗವಂತೂ ಅಲ್ಲ. ನನ್ನ ಸಂತತಿಯಲ್ಲಿ] ಯಾರು ನನ್ನ ಮಾರ್ಗ ಅನುಸರಿಸುವನೋ ಅವನು ಮಾತ್ರ ನನ್ನವನು; ನನ್ನ ಮಾರ್ಗಕ್ಕೆ ಯಾರಾದರೂ ಎದುರಾಗಿ ನಡೆದರೆ, ಒಡೆಯಾ, ನೀನು ಬಹಳವಾಗಿ ಕ್ಷಮಿಸುವವನೂ ಕರುಣೆ ತೋರುವವನೂ ಆಗಿರುವೆ ತಾನೆ! {36}

٣٧  رَبَّنَا إِنِّي أَسْكَنْتُ مِنْ ذُرِّيَّتِي بِوَادٍ غَيْرِ ذِي زَرْعٍ عِنْدَ بَيْتِكَ الْمُحَرَّمِ رَبَّنَا لِيُقِيمُوا الصَّلَاةَ فَاجْعَلْ أَفْئِدَةً مِنَ النَّاسِ تَهْوِي إِلَيْهِمْ وَارْزُقْهُمْ مِنَ الثَّمَرَاتِ لَعَلَّهُمْ يَشْكُرُونَ

ಓ ನಮ್ಮ ದೇವನೇ! ನಿನ್ನ ಪವಿತ್ರ ಭವನ (ಕಅಬಾ) ದ ಬಳಿ, ಯಾವ ಕೃಷಿಯೂ ಇಲ್ಲದ (ಒಂದು ಬಂಜರು) ಕಣಿವೆಗೆ ಹೊಂದಿಕೊಂಡಂತೆ, ನನ್ನ ಸಂತತಿಯ ಒಂದು ಶಾಖೆ [ಅಂದರೆ ಇಸ್ಮಾಈಲ್ ಮತ್ತು ಆತನ ಮುಂದಿನ ಪೀಳಿಗೆಯು] ನೆಲೆಸುವಂತೆ ಮಾಡಿರುತ್ತೇನೆ. ಅವರು (ಈ ಪವಿತ್ರ ಭವನದಲ್ಲಿ) ನಮಾಝ್ ಪಾಲಿಸುವವರಾಗಬೇಕೆಂದು ನಾನು ಹಾಗೆ ಮಾಡಿರುವೆನು ನಮ್ಮ ಪ್ರಭುವೇ! ಜನರ ಹೃದಯಗಳು ಅವರತ್ತ ಒಲಿಯುವಂತೆ ಮಾಡು; ನಿನಗೆ ಚಿರಋಣಿಯಾಗಿರಲು ಹಣ್ಣುಹಂಪಲುಗಳ ಆಹಾರವನ್ನೂ ಅವರಿಗೆ ನೀಡು! {37}

٣٨  رَبَّنَا إِنَّكَ تَعْلَمُ مَا نُخْفِي وَمَا نُعْلِنُ ۗ وَمَا يَخْفَىٰ عَلَى اللَّهِ مِنْ شَيْءٍ فِي الْأَرْضِ وَلَا فِي السَّمَاءِ

ಓ ನಮ್ಮ ದೇವಾ! ನಾವು ಬಚ್ಚಿಡುವ ಮತ್ತು ಬಹಿರಂಗ ಪಡಿಸುವ ಎಲ್ಲವನ್ನೂ ನೀನು ಬಲ್ಲೆ. ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಯಾವ ವಸ್ತುವೂ ಅಲ್ಲಾಹ್ ನಿಂದ ಮರೆಮಾಚಿಲ್ಲ! {38}

٣٩  الْحَمْدُ لِلَّهِ الَّذِي وَهَبَ لِي عَلَى الْكِبَرِ إِسْمَاعِيلَ وَإِسْحَاقَ ۚ إِنَّ رَبِّي لَسَمِيعُ الدُّعَاءِ

ವೃದ್ಧಾಪ್ಯದಲ್ಲಿ ನನಗೆ ಇಸ್ಮಾಈಲ್ ಮತ್ತು ಇಸ್ಹಾಕ್ (ರಂತಹ ಮಕ್ಕಳನ್ನು) ದಯಪಾಲಿಸಿದ ಆ ಅಲ್ಲಾಹ್ ನಿಗೆ ಸಕಲ ವಿಧ ಸ್ತುತಿಸ್ತೋತ್ರಗಳು! ಹೌದು, ನನ್ನ ಪ್ರಭು ನಿಜವಾಗಿಯೂ ಎಲ್ಲಾ ಪ್ರಾರ್ಥನೆಗಳನ್ನು ಆಲಿಸುವವನಾಗಿದ್ದಾನೆ. {39}

٤٠  رَبِّ اجْعَلْنِي مُقِيمَ الصَّلَاةِ وَمِنْ ذُرِّيَّتِي ۚ رَبَّنَا وَتَقَبَّلْ دُعَاءِ

ಓ ದೇವಾ! ನನ್ನನ್ನು ಮತ್ತು ನನ್ನ ಸಂತತಿಯನ್ನು ನಿಷ್ಠೆಯಿಂದ ನಮಾಝ್ ನಿರ್ವಹಿಸುವವರನ್ನಾಗಿ ಮಾಡು. ಓ ನಮ್ಮ ದೇವಾ! ನನ್ನ ಈ ಪ್ರಾರ್ಥನೆಯನ್ನು ಸ್ವೀಕರಿಸು. {40}

٤١  رَبَّنَا اغْفِرْ لِي وَلِوَالِدَيَّ وَلِلْمُؤْمِنِينَ يَوْمَ يَقُومُ الْحِسَابُ

ಓ ನಮ್ಮ ದೇವಾ! ವಿಚಾರಣೆ ನೆಡೆಯಲಿರುವ ದಿನ ನನ್ನನ್ನು ಕ್ಷಮಿಸು; ನನ್ನ ಮಾತಾಪಿತರನ್ನೂ ಸಕಲ ವಿಶ್ವಾಸಿಗಳನ್ನೂ ಕ್ಷಮಿಸು. {41}

٤٢  وَلَا تَحْسَبَنَّ اللَّهَ غَافِلًا عَمَّا يَعْمَلُ الظَّالِمُونَ ۚ إِنَّمَا يُؤَخِّرُهُمْ لِيَوْمٍ تَشْخَصُ فِيهِ الْأَبْصَارُ

[ಪೈಗಂಬರರೇ, ಅಂತಹ ಪಿತಾಮಹ ಇಬ್ರಾಹೀಮ್ ರ ಸಂತತಿಗೆ ಸೇರಿದ ಈ ಕುರೈಷರಲ್ಲಿ ಈಗ] ಅಧರ್ಮಿಗಳು ಎಸಗುತ್ತಿರುವ ಕೃತ್ಯಗಳ ಕುರಿತು ಅಲ್ಲಾಹ್ ನಿಗೆ ಏನೂ ತಿಳಿದಿಲ್ಲವೆಂದು ನೀವು ಭಾವಿಸದಿರಿ. ತೆರೆದ ಕಣ್ಣುಗಳು ತೆರೆದೇ ಉಳಿಯುವಷ್ಟು (ಭಯಾನಕವಾದ) ಆ ದಿನ ಬರುವ ತನಕ ಅವರಿಗೆ ಕಾಲಾವಕಾಶ ನೀಡಲಾಗಿದೆಯಷ್ಟೆ. {42}

٤٣  مُهْطِعِينَ مُقْنِعِي رُءُوسِهِمْ لَا يَرْتَدُّ إِلَيْهِمْ طَرْفُهُمْ ۖ وَأَفْئِدَتُهُمْ هَوَاءٌ

ಅಂದು ಅವರೆಲ್ಲ ತಮ್ಮ ತಲೆಗಳನ್ನು ಎತ್ತಿ ಹಿಡಿದು ಮೇಲೆ ನೋಡುತ್ತಾ (ಭಯಭೀತರಾಗಿ) ಓಡುತ್ತಿರುವರು. ಅವರ ದೃಷ್ಟಿಗಳು ಅವರೆಡೆಗೆ ಮರಳಿ ಬರಲಾರವು. ಆಗ ಅವರ ಹೃದಯಗಳು ಬರಿದಾಗಿರುವುವು. {43}

٤٤  وَأَنْذِرِ النَّاسَ يَوْمَ يَأْتِيهِمُ الْعَذَابُ فَيَقُولُ الَّذِينَ ظَلَمُوا رَبَّنَا أَخِّرْنَا إِلَىٰ أَجَلٍ قَرِيبٍ نُجِبْ دَعْوَتَكَ وَنَتَّبِعِ الرُّسُلَ ۗ أَوَلَمْ تَكُونُوا أَقْسَمْتُمْ مِنْ قَبْلُ مَا لَكُمْ مِنْ زَوَالٍ

ಪೈಗಂಬರರೇ, ಅವರ (ಅರ್ಥಾತ್ ಎಲ್ಲಾ ಅಧರ್ಮಿಗಳ) ಮೇಲೆ ಶಿಕ್ಷೆಯು ಬಂದೆರಗಲಿರುವ ಆ ಒಂದು ದಿನದ ಕುರಿತು ನೀವು ಜನರನ್ನು ಎಚ್ಚರಿಸಿರಿ. ನಮ್ಮ ಪ್ರಭುವೇ, ನಮಗೆ ಸ್ವಲ್ಪ ಸಮಯದ ವರೆಗೆ ಕಾಲಾವಕಾಶ ನೀಡು; ಹಾಗಾದರೆ ನಾವು ನಿನ್ನ ಕರೆಗೆ ಓಗೊಡುವೆವು ಮತ್ತು (ನಿನ್ನ) ದೂತರುಗಳನ್ನೂ ಅನುಸರಿಸುವೆವು ಎಂದು [ವಿಗ್ರಹಾರಾಧನೆ ಮುಂತಾದ] ಅನ್ಯಾಯಗಳನ್ನು ಮಾಡಿದ ಜನರು ಅಂದು ಗೋಳಿಡುವರು. ನಿಮ್ಮ (ನಿಲುವಿನಿಂದ) ಸ್ವಲ್ಪವೂ ಕದಲುವವರು ನೀವಲ್ಲ ಎಂಬಂತೆ ಈ ಹಿಂದೆ (ಭೂಲೋಕದಲ್ಲಿ) ಪ್ರತಿಜ್ಞೆ ಮಾಡುತ್ತಿದ್ದವರು ನೀವೇ ತಾನೆ (ಎಂದು ಅವರೊಂದಿಗೆ ಕೇಳಲಾಗುವುದು). {44}

٤٥  وَسَكَنْتُمْ فِي مَسَاكِنِ الَّذِينَ ظَلَمُوا أَنْفُسَهُمْ وَتَبَيَّنَ لَكُمْ كَيْفَ فَعَلْنَا بِهِمْ وَضَرَبْنَا لَكُمُ الْأَمْثَالَ

ತಮ್ಮೊಂದಿಗೆ ತಾವೇ ಅನ್ಯಾಯವೆಸಗಿದ (ಆ ಅಧರ್ಮಿಗಳು) ಪಾಸಿಸಿದ್ದ ಪ್ರದೇಶದಲ್ಲೇ [ಅವರ ನಂತರ] ನೀವೂ ವಾಸಿಸಿದ್ದು, ಅವರೊಂದಿಗೆ ನಾವು ಹೇಗೆ (ಕಠಿಣವಾಗಿ) ವ್ಯವಹರಿಸಿದ್ದೆವು ಎಂಬ ವಾಸ್ತವ ನಿಮಗೆ ಸ್ಪಷ್ಟವಾಗಿಯೇ ತಿಳಿದಿದೆ. (ನಿಮ್ಮನ್ನು ಎಚ್ಚರಿಸಲು) ಅಂತಹ ಹಲವು ಉದಾಹರಣೆಗಳನ್ನೂ ನಿಮಗೆ ನಾವು ನಿಮಗೆ ನೀಡಿದ್ದೇವೆ. {45}

٤٦  وَقَدْ مَكَرُوا مَكْرَهُمْ وَعِنْدَ اللَّهِ مَكْرُهُمْ وَإِنْ كَانَ مَكْرُهُمْ لِتَزُولَ مِنْهُ الْجِبَالُ

[ಸತ್ಯವನ್ನು ಹತ್ತಿಕ್ಕಲು] ತಮಗೆ ತಿಳಿದ ಸಕಲ ಕುಟಿಲೋಪಾಯಗಳನ್ನೂ ಅವರು ಪ್ರಯೋಗಿಸಿ ನೋಡಿದರು. ಅವರ ಕುಟಿಲೋಪಾಯಗಳು ಪರ್ವತಗಳನ್ನೇ ಸರಿಸಿ ಬಿಡುವಷ್ಟರ ಮತ್ತಿಗೆ ಪ್ರಬಲವಗಿದ್ದರೂ ಅವೆಲ್ಲ [ವ್ಯರ್ಥಗೊಂಡು ಈಗ] ಅಲ್ಲಾಹ್ ನ ಮುಂದೆ ಇವೆಯಷ್ಟೆ! {46}

٤٧  فَلَا تَحْسَبَنَّ اللَّهَ مُخْلِفَ وَعْدِهِ رُسُلَهُ ۗ إِنَّ اللَّهَ عَزِيزٌ ذُو انْتِقَامٍ

ಆದ್ದರಿಂದ ಓ ಪೈಗಂಬರರೇ, ಅಲ್ಲಾಹ್ ನು ತನ್ನ ದೂತರುಗಳಿಗೆ ನೀಡಿದ ಮಾತಿಗೆ ಎಂದೂ ವಿರುದ್ಧವಾಗಿ ವರ್ತಿಸುವುದಿಲ್ಲ; ವಾಸ್ತವವೇನೆಂದರೆ ಅಲ್ಲಾಹ್ ನು ಬಹಳ ಪ್ರಬಲನೂ ಪ್ರತೀಕಾರ ತೀರಿಸುವವನೂ ಆಗಿರುವನು. {47}

٤٨  يَوْمَ تُبَدَّلُ الْأَرْضُ غَيْرَ الْأَرْضِ وَالسَّمَاوَاتُ ۖ وَبَرَزُوا لِلَّهِ الْوَاحِدِ الْقَهَّارِ

ಈ ಭೂಮಿಯನ್ನು ಬೇರೆಯೇ ಭೂಮಿಯನ್ನಾಗಿ ಮತ್ತು ಅಕಾಶಗಳನ್ನು ಬೇರೆಯೇ ಆಕಾಶವನ್ನಾಗಿ ಪರಿವರ್ತಿಸಲಾಗುವ ಆ ದಿನ ಏಕಮೇವನೂ ಪ್ರಚಂಡನೂ ಆದ ಅಲ್ಲಾಹ್ ನ ಮುಂದೆ ಹಾಜರಾಗಲು ಅವರೆಲ್ಲರೂ [ಅಸಹಾಯಕರಾಗಿ] ಧಾವಿಸುತ್ತಿರುವರು. {48}

٤٩  وَتَرَى الْمُجْرِمِينَ يَوْمَئِذٍ مُقَرَّنِينَ فِي الْأَصْفَادِ

ಅಂದು ಆ ದುಷ್ಕರ್ಮಿಗಳು ಸಂಕೋಲೆಗಳಲ್ಲಿ ಬಿಗಿಯಲ್ಪಟ್ಟಿರುವುದನ್ನು ನೀವು ನೋಡುವಿರಿ. {49}

٥٠  سَرَابِيلُهُمْ مِنْ قَطِرَانٍ وَتَغْشَىٰ وُجُوهَهُمُ النَّارُ

ಅವರ ಉಡುಪುಗಳು ಉರಿಸುವ ವಸ್ತುವಿನಿಂದ ಕೂಡಿರುವುದು; ಮತ್ತು ಬೆಂಕಿಯು ಅವರ ಮುಖಗಳನ್ನು ಆವರಿಸಿರುವುವು. {50}

٥١  لِيَجْزِيَ اللَّهُ كُلَّ نَفْسٍ مَا كَسَبَتْ ۚ إِنَّ اللَّهَ سَرِيعُ الْحِسَابِ

ಅದೇಕೆಂದರೆ, ಅಲ್ಲಾಹ್ ನು ಪ್ರತಿಯೊಬ್ಬ ಜೀವಿಗೂ ತಾನು ( ಭೂಲೋಕದಲ್ಲಿ) ಸಂಪಾದಿಸಿದ್ದರ ಪ್ರತಿಫಲವನ್ನು ನೀಡುವ ಸಲುವಾಗಿ! ಹೌದು, ನಿಜವಾಗಿಯೂ ಅಲ್ಲಾಹ್ ನು ಕ್ಷಿಪ್ರಗತಿಯಲ್ಲಿ ಲೆಕ್ಕ ಮುಗಿಸುವವನು. {51}

٥٢  هَٰذَا بَلَاغٌ لِلنَّاسِ وَلِيُنْذَرُوا بِهِ وَلِيَعْلَمُوا أَنَّمَا هُوَ إِلَٰهٌ وَاحِدٌ وَلِيَذَّكَّرَ أُولُو الْأَلْبَابِ

ಹೌದು, ಈ ಕುರ್‌ಆನ್ ಮಾನವ ಕುಲಕ್ಕೆ ತಲುಪಿಸಬೇಕಾದ ಒಂದು ಸ್ಪಷ್ಟ ಸಂದೇಶವಾಗಿದೆ! ಹೌದು, ಇದರ ಮೂಲಕ ಜನರನ್ನು ಎಚ್ಚರಿಸುವ ಸಲುವಾಗಿ, ಆರಾಧನೆಗೆ ಅರ್ಹನಾದ ದೇವನು ಅವನೊಬ್ಬನೇ ಎಂಬುದನ್ನು ಅವರು ತಿಳಿದು ಕೊಳ್ಳವ ಸಲುವಾಗಿ, ಹಾಗೂ ವಿವೇಚನೆಯುಳ್ಳ ಜನರನ್ನು ಚಿಂತನೆಗೆ ಹಚ್ಚಿಸುವ ಸಲುವಾಗಿ [ಇದನ್ನು ಎಲ್ಲಾ ಮಾನವರಿಗೆ ತಲುಪಿಸಬೇಕಾಗಿದೆ]. {52}




Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...