ಅನ್-ನಹ್‌ಲ್ | تـرجمـة سورة النحل

   تـرجمـة سورة النحل من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅನ್-ನಹ್‌ಲ್ | ಪವಿತ್ರ್ ಕುರ್‌ಆನ್ ನ 16 ನೆಯ ಸೂರಃ | ಇದರಲ್ಲಿ ಒಟ್ಟು 128 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)! 

أَتَىٰٓ أَمْرُ ٱللَّهِ فَلَا تَسْتَعْجِلُوهُ ۚ سُبْحَـٰنَهُۥ وَتَعَـٰلَىٰ عَمَّا يُشْرِكُونَ

[ಪೈಗಂಬರರ ಸಂದೇಶವನ್ನು ಗೇಲಿ ಮಾಡಿ ಧಿಕ್ಕರಿಸಿದ ಜನರ ವಿರುದ್ಧ] ಅಲ್ಲಾಹ್ ನ ಆದೇಶ ಬರುತ್ತಿದೆ! ಅದು ತ್ವರಿತವಾಗಿ ಬಂದು ಬಿಡುವಂತೆ (ಜನರೇ, ನೀವು) ಮಾಡದಿರಿ! ಅಲ್ಲಾಹ್ ನಿಗೆ ಇವರು ಸಹಭಾಗಿಗಳನ್ನಾಗಿಸಿ ಕೊಂಡ ಸಕಲ ವಸ್ತುಗಳಿಗಿಂತ ಅವನ ಸ್ಥಾನ ಬಹಳ ಉನ್ನತವಾಗಿದೆ; ಅವನು ಪರಮ ಪಾವನನು. {1}

يُنَزِّلُ ٱلْمَلَـٰٓئِكَةَ بِٱلرُّوحِ مِنْ أَمْرِهِۦ عَلَىٰ مَن يَشَآءُ مِنْ عِبَادِهِۦٓ أَنْ أَنذِرُوٓا۟ أَنَّهُۥ لَآ إِلَـٰهَ إِلَّآ أَنَا۠ فَٱتَّقُونِ

[ಅಲ್ಲಾಹ್ ನು ಮಲಕ್ ಗಳನ್ನು ಕಳುಹಿಸುವುದು ಈ ಅಧರ್ಮಿಗಳ ಬಯಕೆಯಂತಲ್ಲ. ಬದಲಾಗಿ] ತನ್ನ ಹೊರತು ಬೇರೆ ಯಾರೂ ದೇವರಲ್ಲ; ಆದ್ದರಿಂದ ನನಗೆ ಮಾತ್ರ ಭಯಭಕ್ತಿ ತೋರಿರಿ ಎಂದು ಜನರನ್ನು ಎಚ್ಚರಿಸುವ ಸಲುವಾಗಿ, ತನ್ನ ಆದೇಶದಂತೆ ಅಲ್ಲಾಹ್ ನು ತನಗಿಷ್ಟ ಬಂದ ತನ್ನ ಉಪಾಸಕರ ಬಳಿಗೆ ದೈವಿಕ ಸಂದೇಶ ನೀಡಿ ಮಲಕ್ ಗಳನ್ನು ಕಳುಹಿಸುತ್ತಾನೆ. {2}

خَلَقَ ٱلسَّمَـٰوَٰتِ وَٱلْأَرْضَ بِٱلْحَقِّ ۚ تَعَـٰلَىٰ عَمَّا يُشْرِكُونَ

ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ಅತ್ಯಂತ ಕರಾರುವಾಕ್ಕಾಗಿ ಸೃಷ್ಟಿಸಿರುವನು. (ಹಾಗಿದ್ದರೂ ಅವನ ದೇವತ್ವದಲ್ಲಿ) ಇವರು ಯಾರನ್ನೆಲ್ಲ ಭಾಗಿಯನ್ನಾಗಿ ಮಾಡಿಕೊಂಡಿರುವರೋ ಅವೆಲ್ಲವುಗಳಿಗಿಂತ ಅವನು ಮೇಲಾಗಿರುವನು. {3}

خَلَقَ ٱلْإِنسَـٰنَ مِن نُّطْفَةٍ فَإِذَا هُوَ خَصِيمٌ مُّبِينٌ

ಮಾನವರನ್ನು ಅವನು ಹನಿ ವೀರ್ಯದಿಂದ ಉಂಟುಮಾಡಿರುವನು. ವಾಸ್ತವ ಹಾಗಿದ್ದರೂ ಮಾನವ (ಸತ್ಯವನ್ನು ಒಪ್ಪಿಕೊಳ್ಳುವ ವಿಷಯದಲ್ಲಿ) ಸ್ಪಷ್ಟವಾದ ಜಗಳಗಂಟನಾಗಿ ಮಾರ್ಪಟ್ಟನು. {4}

وَٱلْأَنْعَـٰمَ خَلَقَهَا ۗ لَكُمْ فِيهَا دِفْءٌ وَمَنَـٰفِعُ وَمِنْهَا تَأْكُلُونَ

ಇನ್ನು (ಮೇಕೆ, ಆಕಳು ಹಾಗೂ ಒಂಟೆಗಳಂತಹ) ಜಾನುವಾರುಗಳನ್ನು ಸೃಷ್ಟಿಸಿದವನೂ ಅವನೇ! ಅವುಗಳಿಂದ ಬೆಚ್ಚಗಿನ ಉಡುಗೆ ಮತ್ತು ಇತರ ಹಲವು ಪ್ರಯೋಜನಗಳು ನಿಮಗಿವೆ. ಮಾತ್ರವಲ್ಲ, ಅವನ್ನು ನೀವು ಆಹಾರಕ್ಕಾಗಿ ಸಹ ಬಳಸುತ್ತಿರುವಿರಿ. {5}

وَلَكُمْ فِيهَا جَمَالٌ حِينَ تُرِيحُونَ وَحِينَ تَسْرَحُونَ

ಮುಸ್ಸಂಜೆ ಅವುಗಳನ್ನು ಹಟ್ಟಿಗೆ ತರುವುದು ಹಾಗೂ ಮುಂಜಾನೆ ಮೇಯಲು ಒಯ್ಯುವುದು ನಿಮಗೆ ಭೂಷಣಪ್ರಾಯವಾಗಿದೆ. {6}

وَتَحْمِلُ أَثْقَالَكُمْ إِلَىٰ بَلَدٍ لَّمْ تَكُونُوا۟ بَـٰلِغِيهِ إِلَّا بِشِقِّ ٱلْأَنفُسِ ۚ إِنَّ رَبَّكُمْ لَرَءُوفٌ رَّحِيمٌ

ಮಾತ್ರವಲ್ಲ, ಅತ್ಯಂತ ಕಠಿಣವಾದ ದೈಹಿಕ ಪರಿಶ್ರಮದ ಹೊರತು ನಿಮಗೆ ತಲುಪಿಸಲು ಅಸಾಧ್ಯವಾದ ನಾಡುಗಳಿಗೂ ನಿಮ್ಮ ಭಾರವಾದ ಹೊರಗಳನ್ನು ಅವು ಹೊತ್ತು ಸಾಗಿಸುತ್ತವೆ. ವಾಸ್ತವದಲ್ಲಿ, ಜನರೇ, ನಿಮ್ಮ ಪ್ರಭು ಅನುಕಂಪವುಳ್ಳವನೂ ಕರುಣೆ ತೋರುವವನೂ ಆಗಿರುವನು. {7}

وَٱلْخَيْلَ وَٱلْبِغَالَ وَٱلْحَمِيرَ لِتَرْكَبُوهَا وَزِينَةً ۚ وَيَخْلُقُ مَا لَا تَعْلَمُونَ

ಕುದುರೆಗಳು, ಹೇಸರಗತ್ತೆಗಳು ಮತ್ತು ಕತ್ತೆಗಳನ್ನು ನಿಮ್ಮ ಸವಾರಿಗಾಗಿ ಅವನು ಸೃಷ್ಟಿ ಮಾಡಿದನು. ಅವು ನಿಮಗೆ ಭೂಷಣಪ್ರಾಯವೂ ಹೌದು. ಮಾತ್ರವಲ್ಲ ನಿಮಗೆ ಅರಿವೇ ಇಲ್ಲದ ಜೀವಿಗಳನ್ನೂ ಅವನು ಸೃಷ್ಟಿ ಮಾಡಿರುವನು. {8}

وَعَلَى ٱللَّهِ قَصْدُ ٱلسَّبِيلِ وَمِنْهَا جَآئِرٌ ۚ وَلَوْ شَآءَ لَهَدَىٰكُمْ أَجْمَعِينَ

[ಸೃಷ್ಟಿಕರ್ತನೆಂಬ ನೆಲೆಯಲ್ಲಿ ಮನುಷ್ಯರು ನಡೆಯುತ್ತಿರುವ] ದಾರಿಗಳು ತಲುಪಿಸುವ ಗುರಿಯನ್ನು ವಿವರಿಸುವ ಹೊಣೆ ಅಲ್ಲಾಹ್ ನ ಮೇಲಿದೆ. ಏಕೆಂದರೆ ಅಲ್ಲಿ ಕೆಲವು ತಪ್ಪಾದ ದಾರಿಗಳೂ ಇವೆ! ಸರಿದಾರಿನ್ನು ತೋರಿಸಲೇ ಬೇಕೆಂದು ಅವನು ಬಯಸಿರುತ್ತಿದ್ದರೆ ನಿಮ್ಮೆಲ್ಲರನ್ನು (ಬಲವಂತವಾಗಿ) ಅವನು ಸರಿದಾರಿಯಲ್ಲಿ ನಡೆಸುತ್ತಿದ್ದನು! {9}

هُوَ ٱلَّذِىٓ أَنزَلَ مِنَ ٱلسَّمَآءِ مَآءً ۖ لَّكُم مِّنْهُ شَرَابٌ وَمِنْهُ شَجَرٌ فِيهِ تُسِيمُونَ

ಆಕಾಶದಿಂದ ನೀರನ್ನು ಇಳಿಸಿದವನು ಸಹ ಅವನೇ! ಅದರಿಂದ ನಿಮಗೆ ಕುಡಿಯುವ ನೀರು ಲಭ್ಯವಾಗುತ್ತದೆ. ಅದರಿಂದಲೇ ಸಸ್ಯಾದಿಗಳು ಬೆಳೆಯುತ್ತವೆ. ಅದರಲ್ಲಿ ನೀವು ನಿಮ್ಮ ಜಾನುವಾರುಗಳನ್ನು ಮೇಯಿಸುತ್ತೀರಿ. {10}

يُنۢبِتُ لَكُم بِهِ ٱلزَّرْعَ وَٱلزَّيْتُونَ وَٱلنَّخِيلَ وَٱلْأَعْنَـٰبَ وَمِن كُلِّ ٱلثَّمَرَٰتِ ۗ إِنَّ فِى ذَٰلِكَ لَـَٔايَةً لِّقَوْمٍ يَتَفَكَّرُونَ

ಆ ನೀರಿನ ಮೂಲಕವೇ ಅವನು ಹೊಲಗದ್ದೆಗಳು, ಆಲಿವ್ ಹಣ್ಣುಗಳು, ಖರ್ಜೂರದ ತೋಟಗಳು, ದ್ರಾಕ್ಷಿಯ ತೋಟಗಳು ಹಾಗೂ ಇತರೆಲ್ಲ ಫಲಗಳು ಬೆಳೆಯುವಂತೆ ಮಾಡುತ್ತಾನೆ. ಹೌದು, ಮನನ ಮಾಡುವ ಜನಸಮೂಹಕ್ಕೆ ಆ ಪ್ರಕ್ರಿಯೆಯಲ್ಲಿ ನಿಜವಾಗಿಯೂ ನಿದರ್ಶನವಿದೆ. {11}

وَسَخَّرَ لَكُمُ ٱلَّيْلَ وَٱلنَّهَارَ وَٱلشَّمْسَ وَٱلْقَمَرَ ۖ وَٱلنُّجُومُ مُسَخَّرَٰتٌۢ بِأَمْرِهِۦٓ ۗ إِنَّ فِى ذَٰلِكَ لَـَٔايَـٰتٍ لِّقَوْمٍ يَعْقِلُونَ

ರಾತ್ರಿ ಹಗಲುಗಳ ಹಾಗೂ ಸೂರ್ಯ ಚಂದ್ರರ ಉಪಯುಕ್ತತೆಯನ್ನು ಅವನು ನಿಮ್ಮ ಸ್ವಾಧೀನಕ್ಕೆ ನೀಡಿದನು. ನಕ್ಷತ್ರಾದಿಗಳ ಸೇವೆಯನ್ನು ಸಹ ತನ್ನ ಆಜ್ಞೆಯಂತೆ ಅವನು ನಿಮಗೆ ಅಧೀನಗೊಳಿಸಿದನು. ಹೌದು, ಬುದ್ಧಿ ಉಪಯೋಗಿಸುವ ಜನಸಮೂಹಕ್ಕೆ ಅದರಲ್ಲಿ ನಿಜವಾಗಿಯೂ ನಿದರ್ಶನವಿದೆ. {12}

وَمَا ذَرَأَ لَكُمْ فِى ٱلْأَرْضِ مُخْتَلِفًا أَلْوَٰنُهُۥٓ ۗ إِنَّ فِى ذَٰلِكَ لَـَٔايَةً لِّقَوْمٍ يَذَّكَّرُونَ

ಹಾಗೆಯೇ, ವಿವಿಧ ವರ್ಣ - ಗುಣಗಳನ್ನು ಹೊಂದಿದ ವಸ್ತುಗಳನ್ನು ಅವನು ನಿಮಗಾಗಿ ಭೂಮಿಯಲ್ಲಿ ಹರಡಿ ಬಿಟ್ಟಿರುವನು. ಹೌದು ಪಾಠ ಕಲಿಯುವ ಜನಸಮೂಹಕ್ಕೆ ಅದರಲ್ಲಿ ನಿಜವಾಗಿಯೂ ನಿದರ್ಶನವಿದೆ. {13}

وَهُوَ ٱلَّذِى سَخَّرَ ٱلْبَحْرَ لِتَأْكُلُوا۟ مِنْهُ لَحْمًا طَرِيًّا وَتَسْتَخْرِجُوا۟ مِنْهُ حِلْيَةً تَلْبَسُونَهَا وَتَرَى ٱلْفُلْكَ مَوَاخِرَ فِيهِ وَلِتَبْتَغُوا۟ مِن فَضْلِهِۦ وَلَعَلَّكُمْ تَشْكُرُونَ

ಹೌದು, ಅವನೇ ಸಮುದ್ರವು ನಿಮ್ಮ ಕೆಲಸಕ್ಕೆ ಬರುವಂತೆ ಮಾಡಿದವನು. ನೀವು (ಮೀನಿನ) ತಾಜಾ ಮಾಂಸವನ್ನು ತಿನ್ನಲೆಂದು ಹಾಗೂ ನೀವು ಧರಿಸುವ ಅಲಂಕಾರಿಕ ವಸ್ತುಗಳನ್ನು ಅದರಿಂದ ಹೊರ ತೆಗೆಯಲೆಂದು (ಅವನು ಸಮುದ್ರವನ್ನು ನಿಮ್ಮ ಅಧೀನಕ್ಕೆ ನೀಡಿದನು)! ಸಮುದ್ರದ ನೀರನ್ನು ಸೀಳುತ್ತಾ ಸಾಗುವ ಹಡಗುಗಳನ್ನು ಸಹ ನೀವು ಕಾಣುತ್ತೀರಿ. ಹೌದು, ನೀವು ಅವನ ಅನುಗ್ರಹಗಳನ್ನು [ಅರ್ಥಾತ್ ಜೀವನಾಧಾರಗಳನ್ನು ಸಮುದ್ರ ಮತ್ತು ಸಮುದ್ರ ಮಾರ್ಗಗಳ ಮೂಲಕ] ಅರಸಲು ಹಾಗೂ ನೀವು ಅವನಿಗೆ ಕೃತಜ್ಞರಾಗಿ ಜೀವಿಸಲು ಅದನ್ನೆಲ್ಲ ಮಾಡಿದನು. {14}

وَأَلْقَىٰ فِى ٱلْأَرْضِ رَوَٰسِىَ أَن تَمِيدَ بِكُمْ وَأَنْهَـٰرًا وَسُبُلًا لَّعَلَّكُمْ تَهْتَدُونَ

ನಿಮ್ಮನ್ನು ಹೊತ್ತುಕೊಂಡು ಅಲುಗಾಡದಂತೆ ನಿಲ್ಲಲು ಅವನು ಭೂಮಿಯ ಆಳಕ್ಕೆ ಸದೃಢ ಪರ್ವತಗಳನ್ನು ಇಳಿಸಿಬಿಟ್ಟನು. ನದಿಗಳನ್ನೂ ಹರಿಸಿದನು. ನೀವು ದಾರಿ ಕಂಡುಕೊಳ್ಳಲು ಸ್ವಾಭಾವಿಕವಾದ ರಸ್ತೆಗಳನ್ನೂ ಉಂಟುಮಾಡಿದನು. {15}

وَعَلَـٰمَـٰتٍ ۚ وَبِٱلنَّجْمِ هُمْ يَهْتَدُونَ

(ಹಗಲಿನಲ್ಲಿ ದಾರಿ ಕಂಡುಕೊಳ್ಳಲು ಭೂಮಿಯಲ್ಲಿ ಅವನು ಹಲವಾರು) ಹೆಗ್ಗುರುತುಗಳನ್ನೂ ನಿರ್ಮಿಸಿದನು. ಇನ್ನು (ರಾತ್ರಿಯಲ್ಲಿ) ನಕ್ಷತ್ರಗಳು ಮೂಲಕ ಸಹ ಜನರು ದಾರಿ ಕಂಡುಕೊಳ್ಳುತ್ತಾರೆ. {16}

أَفَمَن يَخْلُقُ كَمَن لَّا يَخْلُقُ ۗ أَفَلَا تَذَكَّرُونَ

(ಅದನ್ನೆಲ್ಲಾ) ಸೃಷ್ಟಿಸಿದ ಸೃಷ್ಟಿಕರ್ತನು, ಏನನ್ನೂ ಸೃಷ್ಟಿ ಮಾಡದವನಂತೆಯೇ!? ನೀವು ಏಕಾದರೂ ಚಿಂತಿಸುವುದಿಲ್ಲ? {17}

وَإِن تَعُدُّوا۟ نِعْمَةَ ٱللَّهِ لَا تُحْصُوهَآ ۗ إِنَّ ٱللَّهَ لَغَفُورٌ رَّحِيمٌ

ಇನ್ನು ನೀವು ಅಲ್ಲಾಹ್ ನ ಕೃಪಾನುಗ್ರಹಗಳನ್ನು ಎಣಿಸಲು ಹೊರಟರೆ ನೀವು ಅವುಗಳನ್ನು ಎಣಿಸಲಾರಿರಿ. ಹೌದು, ಅಲ್ಲಾಹ್ ನು ಖಂಡಿತವಾಗಿ (ಕ್ಷಮೆಯಾಚಿಸುವವರ ಪಾಲಿಗೆ) ಕ್ಷಮಿಸುವವನೂ ಕರುಣೆ ತೋರುವವನೂ ಆಗಿರುವನು. {18}

وَٱللَّهُ يَعْلَمُ مَا تُسِرُّونَ وَمَا تُعْلِنُونَ

ನಿಜವೇನೆಂದರೆ, ನೀವು ಬಚ್ಚಿಡುವ ಮತ್ತು ನೀವು ಬಹಿರಂಗ ಪಡಿಸುವ ಎಲ್ಲಾ ವಿಷಯಗಳನ್ನು ಅಲ್ಲಾಹ್ ನು ಬಲ್ಲವನಾಗಿದ್ದಾನೆ. {19}

وَٱلَّذِينَ يَدْعُونَ مِن دُونِ ٱللَّهِ لَا يَخْلُقُونَ شَيْـًٔا وَهُمْ يُخْلَقُونَ

ಅಲ್ಲಾಹ್ ನನ್ನು ಬಿಟ್ಟು ಯಾರನ್ನೆಲ್ಲ ಈ ಜನರು ಕರೆದು ಮೊರೆಯಿಡತ್ತಿರುವರೋ ಅವರಾರೂ ಏನನ್ನೂ ಸೃಷ್ಟಿ ಮಾಡಿದವರಲ್ಲ! ಬದಲಾಗಿ ಅವರೆಲ್ಲಾ ಸೃಷ್ಟಿಸಲ್ಪಟ್ಟವರು. {20}

أَمْوَٰتٌ غَيْرُ أَحْيَآءٍ ۖ وَمَا يَشْعُرُونَ أَيَّانَ يُبْعَثُونَ

ಅವರಾರೂ ಬದುಕಿ ಉಳಿದಿಲ್ಲ; ಬದಲಾಗಿ ಸತ್ತು ಹೋಗಿರುವರು! ಇನ್ನು, ಯಾವಾಗ (ವಿಚಾರಣೆಗಾಗಿ ಪುನಃ) ಎಬ್ಬಿಸಲ್ಪಡುವರು ಎಂಬುದರ ಅರಿವೂ ಅವರಿಗಿಲ್ಲ! {21}

إِلَـٰهُكُمْ إِلَـٰهٌ وَٰحِدٌ ۚ فَٱلَّذِينَ لَا يُؤْمِنُونَ بِٱلْـَٔاخِرَةِ قُلُوبُهُم مُّنكِرَةٌ وَهُم مُّسْتَكْبِرُونَ

ನಿಮ್ಮ ದೇವನು ಆ ಏಕಮಾತ್ರ ದೇವನು! ಪರಲೋಕದಲ್ಲಿನ (ವಿಚಾರಣೆ ಮತ್ತು ಪ್ರತಿಫಲವನ್ನು) ಒಪ್ಪದವರ ಹೃದಯವು (ಸತ್ಯವನ್ನು) ನಿರಾಕರಿಸುವ ಹೃದಯವಾಗಿದೆ. ಅಂತಹ ಜನರು ದುರಹಂಕಾರ ಮೆರೆಯುತ್ತಿದ್ದಾರೆ. {22}

لَا جَرَمَ أَنَّ ٱللَّهَ يَعْلَمُ مَا يُسِرُّونَ وَمَا يُعْلِنُونَ ۚ إِنَّهُۥ لَا يُحِبُّ ٱلْمُسْتَكْبِرِينَ

ಇವರು (ತಮ್ಮ ಅಂತರಾತ್ಮಗಳಲ್ಲಿ) ಬಚ್ಚಿಡುವ ಹಾಗೂ ಬಹಿರಂಗಗೊಳಿಸುವ ಸಕಲ ವಿಷಯವನ್ನೂ ಅಲ್ಲಾಹ್ ನು ಬಲ್ಲನು ಎಂಬುದು ಸಂಶಯಾತೀತವಾದ ಸತ್ಯ! ಹೌದು, ಅಂತಹ ದುರಹಂಕಾರ ಮೆರೆಯುವವರನ್ನು ಅಲ್ಲಾಹ್ ನು ಇಷ್ಟಪಡುವುದಿಲ್ಲ. {23}

وَإِذَا قِيلَ لَهُم مَّاذَآ أَنزَلَ رَبُّكُمْ ۙ قَالُوٓا۟ أَسَـٰطِيرُ ٱلْأَوَّلِينَ

ನಿಮ್ಮ ಒಡೆಯನು ಏನನ್ನು ಇಳಿಸಿ ಕೊಟ್ಟಿರುವನು ಎಂದು ಅವರೊಡನೆ ಕೇಳಲಾದಾಗ, ಅವೆಲ್ಲಾ ಹಿಂದೆ ಗತಿಸಿದ ಜನಾಂಗಗಳ ಕಥೆಗಳು ಮಾತ್ರ ಎಂದು ಅವರು ಉತ್ತರಿಸುತ್ತಾರೆ. {24}

لِيَحْمِلُوٓا۟ أَوْزَارَهُمْ كَامِلَةً يَوْمَ ٱلْقِيَـٰمَةِ ۙ وَمِنْ أَوْزَارِ ٱلَّذِينَ يُضِلُّونَهُم بِغَيْرِ عِلْمٍ ۗ أَلَا سَآءَ مَا يَزِرُونَ

(ಅವರ ಅಂತಹ ಮಾತುಗಳ ಪರಿಣಾಮವಾಗಿ) ಪುನರುತ್ಥಾನ ದಿನ ತಮ್ಮ ಪಾಪದ ಹೊರೆಯನ್ನು ಸಂಪೂರ್ಣಗಿ ತಾವೇ ಹೊರಲಿದ್ದಾರೆ; ಮತ್ತದರ ಜೊತೆಗೆ ತಮ್ಮ ತಿಳಿಗೇಡಿತನದಿಂದಾಗಿ ತಾವು ದಾರಿ ತಪ್ಪಿಸಿದ ಇತರರ ಪಾಪದ ಹೊರೆಯನ್ನೂ ಸ್ವಲ್ಪ ಹೊರಬೇಕಾಗುವುದು. ನೀವು ನೋಡಿದಿರಾ; ಅವರು ಹೊರಲಿರುವುದು ಬಹಳ ಕೆಟ್ಟದ್ದಾದ ಹೊರೆ! {25}

قَدْ مَكَرَ ٱلَّذِينَ مِن قَبْلِهِمْ فَأَتَى ٱللَّهُ بُنْيَـٰنَهُم مِّنَ ٱلْقَوَاعِدِ فَخَرَّ عَلَيْهِمُ ٱلسَّقْفُ مِن فَوْقِهِمْ وَأَتَىٰهُمُ ٱلْعَذَابُ مِنْ حَيْثُ لَا يَشْعُرُونَ

ಈ (ಕುರೈಷ್ ವಂಶದ) ಜನರಿಗಿಂತ ಮುಂಚಿನವರು ಸಹ [ದೂತರುಗಳ ಸಂದೇಶವನ್ನು ಹತ್ತಿಕ್ಕಲು] ಹಲವು ಷಡ್ಯಂತ್ರಗಳನ್ನು ರೂಪಿಸಿದ್ದರು. ಆದರೆ ಅಲ್ಲಾಹ್ ನು ಅವರು ನಿರ್ಮಿಸಿದ್ದ ಕಟ್ಟಡದ ಅಡಿಪಾಯವನ್ನೇ ಕಿತ್ತೊಗೆದನು; ಆಗ ಅದರ ಛಾವಣಿ ಅವರ ಮೇಲೆಯೇ ಕುಸಿದು ಬಿದ್ದಿತ್ತು! ಹೌದು, ಅವರಿಗೆ ಅರಿವೇ ಇಲ್ಲದ ಕಡೆಗಳಿಂದ ಅವರ ಮೇಲೆ ಶಿಕ್ಷೆ ಎರಗಿ ಬಿದ್ದಿತ್ತು! {26}

ثُمَّ يَوْمَ ٱلْقِيَـٰمَةِ يُخْزِيهِمْ وَيَقُولُ أَيْنَ شُرَكَآءِىَ ٱلَّذِينَ كُنتُمْ تُشَـٰٓقُّونَ فِيهِمْ ۚ قَالَ ٱلَّذِينَ أُوتُوا۟ ٱلْعِلْمَ إِنَّ ٱلْخِزْىَ ٱلْيَوْمَ وَٱلسُّوٓءَ عَلَى ٱلْكَـٰفِرِينَ

ತರುವಾಯ, ಅಲ್ಲಾಹ್ ನು ಪುನರುತ್ಥಾನ ದಿನ (ಶಿಕ್ಷೆಯ ಭಾಗವಾಗಿ) ಅವರನ್ನು ಅಪಮಾನಕ್ಕೀಡು ಮಾಡಲಿರುವನು. ಮಾತ್ರವಲ್ಲ, ನೀವು ನನಗೆ ಭಾಗೀದಾರರನ್ನಾಗಿಸಿ, ಮತ್ತವರ ಪರವಾಗಿ ತರ್ಕಿಸುತ್ತಿದ್ದ (ನಿಮ್ಮ ಕಲ್ಪನೆಯ ಆ) ನನ್ನ ಭಾಗೀದಾರರು ಈಗೆಲ್ಲಿ? ಎಂದು ಪ್ರಶ್ನಿಸಲಿರುವನು. ಇನ್ನೊಂದೆಡೆ, ಇಂದಿನ ದಿನ ಸಕಲ ಅಪಮಾನ ಮತ್ತು ಸಂಕಟಗಳು (ಭೂಲೋಕದಲ್ಲಿ) ಸತ್ಯವನ್ನು ಅಲ್ಲಗಳೆದಿದ್ದ ಇವರ ಮೇಲೆ ಎರಗುತ್ತಿದೆ ಎಂದು ಅರಿವುಳ್ಳವರು (ತಮ್ಮೊಳಗೆ) ಆಡಿಕೊಳ್ಳುವರು. {27}

ٱلَّذِينَ تَتَوَفَّىٰهُمُ ٱلْمَلَـٰٓئِكَةُ ظَالِمِىٓ أَنفُسِهِمْ ۖ فَأَلْقَوُا۟ ٱلسَّلَمَ مَا كُنَّا نَعْمَلُ مِن سُوٓءٍۭ ۚ بَلَىٰٓ إِنَّ ٱللَّهَ عَلِيمٌۢ بِمَا كُنتُمْ تَعْمَلُونَ

(ಅಲ್ಲಾಹ್ ನ ಆದೇಶಗಳನ್ನು ಸತತವಾಗಿ ಧಿಕ್ಕರಿಸುವ ಮೂಲಕ) ಸ್ವತಃ ತಮ್ಮ ಮೇಲೆ ತಾವೇ ಅನ್ಯಾಯ ಮಾಡುತ್ತಿದ್ದಂತಹ ಸ್ಥಿತಿಯಲ್ಲಿ ಮಲಕ್ ಗಳು ಯಾರ ಪ್ರಾಣಗಳನ್ನು ವಶಪಡಿಸಿಕೊಂಡಿದ್ದರೋ ಅವರೆಲ್ಲ (ಮರಣದ ನಂತರ) ಶರಣಾಗತರಾಗಿ, ನಾವು ಏನೂ ಕೆಟ್ಟದ್ದನ್ನು ಮಾಡಿಲ್ಲವಲ್ಲ ಎಂದು ವಿನಂತಿಸುವರು. ಯಾಕಿಲ್ಲ? ನೀವು ಏನೆಲ್ಲ ಮಾಡುತ್ತಿದ್ದಿರಿ ಎಂಬುದನ್ನು ಅಲ್ಲಾಹ್ ನು ಚೆನ್ನಾಗಿ ಅರಿತಿರುವನು. {28}

فَٱدْخُلُوٓا۟ أَبْوَٰبَ جَهَنَّمَ خَـٰلِدِينَ فِيهَا ۖ فَلَبِئْسَ مَثْوَى ٱلْمُتَكَبِّرِينَ

ಆದ್ದರಿಂದ ಸದಾಕಾಲ ಅದರೊಳಗೆ ಬಿದ್ದಿರಲು ಈಗ ನರಕದ ಬಾಗಿಲುಗಳ ಒಳನಡೆಯಿರಿ (ಎಂದು ಮಲಕ್ ಗಳು ಹೇಳುವರು). ಒಟ್ಟಿನಲ್ಲಿ, ಅಹಂಕಾರದಿಂದ ಮೆರೆದವರ ಅಂತಿಮ ನೆಲೆ ಬಹಳ ಕೆಟ್ಟದ್ದಾಗಿದೆ. {29}

وَقِيلَ لِلَّذِينَ ٱتَّقَوْا۟ مَاذَآ أَنزَلَ رَبُّكُمْ ۚ قَالُوا۟ خَيْرًا ۗ لِّلَّذِينَ أَحْسَنُوا۟ فِى هَـٰذِهِ ٱلدُّنْيَا حَسَنَةٌ ۚ وَلَدَارُ ٱلْـَٔاخِرَةِ خَيْرٌ ۚ وَلَنِعْمَ دَارُ ٱلْمُتَّقِينَ

(ಜೀವನದಲ್ಲಿ ಅಲ್ಲಾಹ್ ನ) ಭಯಭಕ್ತಿ ಪಾಲಿಸುವವರೊಡನೆ, ನಿಮ್ಮ ಒಡೆಯನು ಇಳಿಸಿಕೊಟ್ಟದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲಾದಾಗ, ಬಹಳ ಒಳ್ಳೆಯದನ್ನೇ ಇಳಿಸಿಕೊಟ್ಟಿದ್ದಾನೆ ಎಂದು ಹೇಳುವರು. ಇನ್ನು ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರಿಗೆ ಇಹಲೋಕದಲ್ಲೂ ಒಳ್ಳೆಯದಿದೆ; ಮತ್ತು ಪರಲೋಕದ ನೆಲೆಯಂತು ಅವರ ಪಾಲಿಗೆ ಇನ್ನಷ್ಟು ಉತ್ತಮವಾದುದು. ಅಲ್ಲಾಹ್ ನ ಭಯಭಕ್ತಿ ಪಾಲಿಸಿದವರ ಅಂತಿಮ ನೆಲೆಯು ನಿಜಕ್ಕೂ ಶ್ರೇಷ್ಠವಾದುದು. {30}

جَنَّـٰتُ عَدْنٍ يَدْخُلُونَهَا تَجْرِى مِن تَحْتِهَا ٱلْأَنْهَـٰرُ ۖ لَهُمْ فِيهَا مَا يَشَآءُونَ ۚ كَذَٰلِكَ يَجْزِى ٱللَّهُ ٱلْمُتَّقِينَ

ಅವರು ಪ್ರವೇಶಿಸಲಿರುವುದು ಶಾಶ್ವತ ಸ್ವರೂಪದ ಸ್ವರ್ಗೋದ್ಯಾನಗಳನ್ನು. ಅವುಗಳ ಕೆಳಗೆ ಕಾಲುವೆಗಳು ಹರಿಯುತ್ತಲಿರುವುವು. ಅವರು ಏನನ್ನು ಬಯಸುತ್ತಾರೋ ಅವೆಲ್ಲ ಅಲ್ಲಿ ಅವರಿಗೆ ಲಭ್ಯವಿರುವುದು. ಭಯಭಕ್ತಿ ಪಾಲಿಸಿ ಜೀವಿಸಿದವರಿಗೆ ಅಲ್ಲಾಹ್ ನ ಪ್ರತಿಫಲ ಇರುವುದೇ ಹಾಗೆ. {31}

ٱلَّذِينَ تَتَوَفَّىٰهُمُ ٱلْمَلَـٰٓئِكَةُ طَيِّبِينَ ۙ يَقُولُونَ سَلَـٰمٌ عَلَيْكُمُ ٱدْخُلُوا۟ ٱلْجَنَّةَ بِمَا كُنتُمْ تَعْمَلُونَ

(ಹೌದು, ಅಲ್ಲಾಹ್ ನ ಆದೇಶಗಳನ್ನು ಜೀವನದಲ್ಲಿ ಪಾಲಿಸುವ ಮೂಲಕ) ತಮ್ಮನ್ನು ನಿಷ್ಕಳಂಕರಾಗಿ ಇರಿಸಿಕೊಂಡ ಸ್ಥಿತಿಯಲ್ಲಿ ಮಲಕ್ ಗಳು ಯಾರ ಪ್ರಾಣಗಳನ್ನು ವಶಪಡಿಸಿಕೊಳ್ಳುವರೋ ಅವರೊಂದಿಗೆ, ನಿಮಗೆ ಶಾಂತಿ ಸಮಾಧಾನಗಳು ಪ್ರಾಪ್ತವಾಗಲಿ; ಮತ್ತು ನೀವು (ಭೂಲೋಕದಲ್ಲಿ) ಮಾಡಿದ ಸತ್ಕರ್ಮಗಳ ಫಲವಾಗಿ ಈಗ ಈ ಸ್ವರ್ಗೋದ್ಯಾನವನ್ನು ಪ್ರವೇಶಿಸಿಕೊಳ್ಳಿರಿ ಎಂದು (ಮಲಕ್ ಗಳು) ಹೇಳುವರು. {32}

هَلْ يَنظُرُونَ إِلَّآ أَن تَأْتِيَهُمُ ٱلْمَلَـٰٓئِكَةُ أَوْ يَأْتِىَ أَمْرُ رَبِّكَ ۚ كَذَٰلِكَ فَعَلَ ٱلَّذِينَ مِن قَبْلِهِمْ ۚ وَمَا ظَلَمَهُمُ ٱللَّهُ وَلَـٰكِن كَانُوٓا۟ أَنفُسَهُمْ يَظْلِمُونَ

ಪೈಗಂಬರರೇ, ಪ್ರಾಣಹರಣ ಮಾಡುವ ಮಲಕ್ ಗಳು ಅಥವಾ ಶಿಕ್ಷೆಯ ರೂಪದಲ್ಲಿ ದೇವಾದೇಶ ತಮ್ಮ ಮೇಲೆ ಬರಲಿ ಎಂದೇ ಅವರು ಕಾಯುತ್ತಿರುವುದು!? ಅವರಿಗಿಂತ ಮುಂಚಿನವರು ಸಹ ಅದನ್ನೇ ಮಾಡಿದ್ದರು; (ಕೊನೆಗೆ ನಾಶವಾದರು). ಅಲ್ಲಾಹ್ ನು ಅವರಿಗೆ ಅನ್ಯಾಯ ಮಾಡಿರುವುದಲ್ಲ; ಬದಲಾಗಿ ಅವರು (ಅಲ್ಲಾಹ್ ನ ದೂತರುಗಳನ್ನು ಅಲ್ಲಗಳೆಯುವ ಮೂಲಕ) ತಮಗೆ ತಾವೇ ಅನ್ಯಾಯ ಮಾಡಿದವರಾಗಿದ್ದರು. {33}

فَأَصَابَهُمْ سَيِّـَٔاتُ مَا عَمِلُوا۟ وَحَاقَ بِهِم مَّا كَانُوا۟ بِهِۦ يَسْتَهْزِءُونَ

ಅವರು ಮಾಡಿದ್ದ ದುಷ್ಕರ್ಮಗಳ ಫಲವಾಗಿ ಕೆಟ್ಟ ಸ್ವರೂಪದ ಶಿಕ್ಷೆ ಅವರ ಮೇಲೆ ಎರಗುವಂತಾಯಿತು. ಏನನ್ನು ಅವರು ಗೇಲಿ ಮಾಡುತ್ತಿದ್ದರೋ ಅದೇ ಅವರನ್ನು ಸುತ್ತುವರಿದಿತ್ತು! {34}

وَقَالَ ٱلَّذِينَ أَشْرَكُوا۟ لَوْ شَآءَ ٱللَّهُ مَا عَبَدْنَا مِن دُونِهِۦ مِن شَىْءٍ نَّحْنُ وَلَآ ءَابَآؤُنَا وَلَا حَرَّمْنَا مِن دُونِهِۦ مِن شَىْءٍ ۚ كَذَٰلِكَ فَعَلَ ٱلَّذِينَ مِن قَبْلِهِمْ ۚ فَهَلْ عَلَى ٱلرُّسُلِ إِلَّا ٱلْبَلَـٰغُ ٱلْمُبِينُ

ನಾವು ಅಲ್ಲಾಹ್ ನನ್ನು ಬಿಟ್ಟು ಬೇರೆ ಯಾವುದನ್ನೂ ಆರಾಧಿಸಬಾರದು ಎಂದು ಒಂದು ವೇಳೆ ಅಲ್ಲಾಹ್ ನು ಬಯಸಿದ್ದಿದ್ದರೆ ನಾವಾಗಲಿ ನಮ್ಮ ತಂದೆ-ತಾತಂದಿರಾಗಲಿ ಬೇರೇನನ್ನೂ ಆರಾಧಿಸುತ್ತಿರಲಿಲ್ಲ; ಮಾತ್ರವಲ್ಲ ಅವನ ಅಪ್ಪಣೆ ಇಲ್ಲದೆ ಏನನ್ನೂ ನಾವು ವರ್ಜಿಸುತ್ತಲೂ ಇರಲಿಲ್ಲ ಎಂದು ಅಲ್ಲಾಹ್ ನೊಂದಿಗೆ ಬೇರೆಯವರನ್ನೂ ಆರಾಧಿಸುತ್ತಿರುವ ಇವರು ವಾದಿಸುತ್ತಾರೆ! ಇವರಿಗಿಂತ ಮುಂಚಿನವರ ವರ್ತನೆಯೂ ಅದೇ ರೀತಿಯದ್ದಾಗಿತ್ತು! ವಿಷಯವನ್ನು ಸ್ಪಷ್ಟವಾಗಿ ತಲುಪಿಸಿ ಬಿಡುವ ಹೊರತು ನಮ್ಮ ದೂತರುಗಳಿಗೆ ಬೇರೆ ಹೊಣೆಗಾರಿಕೆ ಇದೆಯೇ? {35}

وَلَقَدْ بَعَثْنَا فِى كُلِّ أُمَّةٍ رَّسُولًا أَنِ ٱعْبُدُوا۟ ٱللَّهَ وَٱجْتَنِبُوا۟ ٱلطَّـٰغُوتَ ۖ فَمِنْهُم مَّنْ هَدَى ٱللَّهُ وَمِنْهُم مَّنْ حَقَّتْ عَلَيْهِ ٱلضَّلَـٰلَةُ ۚ فَسِيرُوا۟ فِى ٱلْأَرْضِ فَٱنظُرُوا۟ كَيْفَ كَانَ عَـٰقِبَةُ ٱلْمُكَذِّبِينَ

ನೀವು ಅಲ್ಲಾಹ್ ನನ್ನೇ ಆರಾಧಿಸಿರಿ ಮತ್ತು (ಅವನ ಹೊರತು ಇತರೆಲ್ಲ) ಮಿಥ್ಯ ದೇವರುಗಳನ್ನು ವರ್ಜಿಸಿರಿ ಎಂದು ಉಪದೇಶಿಸಲು ನಾವು ಪ್ರತಿಯೊಂದು ಸಮುದಾದಲ್ಲೂ ನಮ್ಮ ದೂತರುಗಳನ್ನು ನೇಮಿಸಿದ್ದೆವು. ಆ ಜನರ ಪೈಕಿ ಕೆಲವರನ್ನು [ಅರ್ಥಾತ್ ದೂತರುಗಳ ಉಪದೇಶಗಳನ್ನು ಸ್ವೀಕರಿಸಿದವರನ್ನು] ಅಲ್ಲಾಹ್ ನು ಸರಿದಾರಿಯಲ್ಲಿ ನಡೆಸಿದನು. ಇನ್ನು [ಉಪದೇಶವನ್ನು ತಿರಸ್ಕರಿಸಿದ] ಕೆಲವರನ್ನು ತಪ್ಪು ದಾರಿಯಲ್ಲೇ ಬಿಟ್ಟು ಬಿಡುವುದು ಅನಿವಾರ್ಯವಾಯಿತು. ಆದ್ದರಿಂದ (ಈಗ ನೀವು ಪಾಠ ಕಲಿಯಲು) ಈ ಭೂಪ್ರದೇಶದಲ್ಲಿ ಸುತ್ತಾಡಿರಿ ಮತ್ತು (ಉಪದೇಶವನ್ನು) ತಿರಸ್ಕರಿಸಿದ ಸಮುದಾಯಗಳ ಅಂತ್ಯ ಹೇಗಾಯಿತು ಎಂದು ನೋಡಿರಿ. {36}

إِن تَحْرِصْ عَلَىٰ هُدَىٰهُمْ فَإِنَّ ٱللَّهَ لَا يَهْدِى مَن يُضِلُّ ۖ وَمَا لَهُم مِّن نَّـٰصِرِينَ

ಈಗ ಇವರು ಸರಿದಾರಿಯನ್ನು ಪಡೆಯಬೇಕು ಎಂದು (ಪೈಗಂಬರರೇ) ನೀವು ಅದೆಷ್ಟು ಆಸೆ ಪಟ್ಟರೂ ಅಲ್ಲಾಹ್ ನು ಯಾರನ್ನು ದಾರಿಗೆಡಿಸಿ ಬಿಟ್ಟನೋ ಅವರಿಗೆ ಸರಿದಾರಿ ತೋರಿಸಲಾರ; ಮಾತ್ರವಲ್ಲ, ಅಂತಹವರಿಗೆ (ಇರುವ ಶಿಕ್ಷೆಯನ್ನು ನೀಗಿಸಲು) ಸಹಾಯಕರಾಗಿ ಯಾರೂ ಇರಲಾರರು. {37}

وَأَقْسَمُوا۟ بِٱللَّهِ جَهْدَ أَيْمَـٰنِهِمْ ۙ لَا يَبْعَثُ ٱللَّهُ مَن يَمُوتُ ۚ بَلَىٰ وَعْدًا عَلَيْهِ حَقًّا وَلَـٰكِنَّ أَكْثَرَ ٱلنَّاسِ لَا يَعْلَمُونَ

ಮರಣ ಹೊಂದಿದವರನ್ನು ಅಲ್ಲಾಹ್ ನು ಪುನಃ ಎದ್ದೇಳಿಸುವುದಿಲ್ಲ ಎಂದು ಇವರು ಅತ್ಯಂತ ದೃಢವಾಗಿ ಅಲ್ಲಾಹ್ ನ ಹೆಸರಲ್ಲಿ ಆಣೆ ಹಾಕಿ ಹೇಳುತ್ತಾರೆ. ಏಕಿಲ್ಲ? (ವಿಚಾರಣೆಗಾಗಿ ಪುನಃ ಜೀವಂತಗೊಳಿಸುವುದು) ಅಲ್ಲಾಹ್ ನು ಪೂರ್ಣಗೊಳಿಸಲೇ ಬೇಕಾದ ಒಂದು ವಾಗ್ದಾನವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ಅದನ್ನು ತಿಳಿದುಕೊಳ್ಳುವುದಿಲ್ಲ. {38}

لِيُبَيِّنَ لَهُمُ ٱلَّذِى يَخْتَلِفُونَ فِيهِ وَلِيَعْلَمَ ٱلَّذِينَ كَفَرُوٓا۟ أَنَّهُمْ كَانُوا۟ كَـٰذِبِينَ

ಆ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವ ಜನರಿಗೆ ವಾಸ್ತವಿಕತೆಯನ್ನು ಸ್ಪಷ್ಟಪಡಿಸಲು ಮತ್ತು (ಪೈಗಂಬರರನ್ನು) ಅಲ್ಲಗಳೆದವರು ತಾವು ಸುಳ್ಳಾಡುತ್ತಿದ್ದೆವು ಎಂದು ಸ್ವತಃ ಅರಿತುಕೊಳ್ಳಲು (ಪುನರುತ್ಥಾನವು ಒಂದು ಅಗತ್ಯ). {39}

إِنَّمَا قَوْلُنَا لِشَىْءٍ إِذَآ أَرَدْنَـٰهُ أَن نَّقُولَ لَهُۥ كُن فَيَكُونُ

[ನಮಗದು ಕಷ್ಟವಲ್ಲ. ಏಕೆಂದರೆ] ಏನನ್ನಾದರೂ ನಾವು ಅಸ್ತಿತ್ವಕ್ಕೆ ತರಲು ಬಯಸಿದಾಗ "ಉಂಟಾಗು" ಎಂದಷ್ಟೇ ಅದಕ್ಕೆ ಹೇಳಿದರೆ ಸಾಕು, ಅದು ಕೂಡಲೇ ಉಂಟಾಗಿ ಬಿಡುತ್ತದೆ. {40}

وَٱلَّذِينَ هَاجَرُوا۟ فِى ٱللَّهِ مِنۢ بَعْدِ مَا ظُلِمُوا۟ لَنُبَوِّئَنَّهُمْ فِى ٱلدُّنْيَا حَسَنَةً ۖ وَلَأَجْرُ ٱلْـَٔاخِرَةِ أَكْبَرُ ۚ لَوْ كَانُوا۟ يَعْلَمُونَ

(ಪೈಗಂಬರರ ಉಪದೇಶವನ್ನು ತಿರಸ್ಕರಿಸಿದ ಜನರ) ದೌರ್ಜನ್ಯಕ್ಕೆ ಒಳಗಾಗಿ, ಅನಂತರ ತಮ್ಮ ನಾಡನ್ನು ತ್ಯಜಿಸಿ ಅಲ್ಲಾಹ್ ನಿಗೋಸ್ಕರ ಬೇರೆ ನಾಡಿಗೆ ವಲಸೆ ಹೊರಟವರಿಗೆ ನಾವು ಭೂಲೋಕದಲ್ಲೂ ಬಹಳ ಒಳ್ಳೆಯದಾದ ನೆಲೆ ಒದಗಿಸುವೆವು; ಮಾತ್ರವಲ್ಲ, ಪರಲೋಕದಲ್ಲಿ ಅದಕ್ಕಿಂತ ಮಿಗಿಲಾದ ಪ್ರತಿಫಲ ಅವರಿಗಿದೆ. ಜನರು ಅದನ್ನು ಮನಗಂಡಿದ್ದರೆ ಅದೆಷ್ಟು ಚೆನ್ನಾಗಿತ್ತು! {41}

ٱلَّذِينَ صَبَرُوا۟ وَعَلَىٰ رَبِّهِمْ يَتَوَكَّلُونَ

ಸಂಕಷ್ಟವನ್ನು ಅವರು ಸಹನೆಯಿಂದ ಎದುರಿಸುತ್ತಾರೆ, ಹಾಗೂ ತಮ್ಮ ಪ್ರಭುವಿನ ಮೇಲೆ ಭರವಸೆ ಇಡುತ್ತಾರೆ! {42}

وَمَآ أَرْسَلْنَا مِن قَبْلِكَ إِلَّا رِجَالًا نُّوحِىٓ إِلَيْهِمْ ۚ فَسْـَٔلُوٓا۟ أَهْلَ ٱلذِّكْرِ إِن كُنتُمْ لَا تَعْلَمُونَ

[ನಮ್ಮತ್ತ ಅಲ್ಲಾಹ್ ನು ಮಲಕ್ ಗಳನ್ನೇಕೆ ದೂತರನ್ನಾಗಿಸಿ ಕಳುಹಿಸುತ್ತಿಲ್ಲ ಎಂದು ಈ ಜನರು ಪ್ರಶ್ನಿಸುತ್ತಿದ್ದಾರೆಯೇ? ಹಾಗಾದರೆ ಪೈಗಂಬರರೇ] ನಿಮಗಿಂತ ಮುಂಚೆ ಸಹ ನಾವು (ವಹೀ ಮೂಲಕ) ದಿವ್ಯ ಸಂದೇಶ ನೀಡಿ ಮನುಷ್ಯರನ್ನೇ ದೂತರನ್ನಾಗಿಸಿ ಕಳುಹಿಸುತ್ತಿದ್ದೆವು. ಆದ್ದರಿಂದ (ಪೈಗಂಬರರ ವಿರೋಧಿಗಳೇ), ನಿಮಗದು ಗೊತ್ತಿಲ್ಲದಿದ್ದರೆ (ದಿವ್ಯ ಗ್ರಂಥಗಳ) ಜ್ಞಾನವಿರುವವರನ್ನು ಕೇಳಿ ವಿಷಯ ತಿಳಿದುಕೊಳ್ಳಿರಿ. {43}

بِٱلْبَيِّنَـٰتِ وَٱلزُّبُرِ ۗ وَأَنزَلْنَآ إِلَيْكَ ٱلذِّكْرَ لِتُبَيِّنَ لِلنَّاسِ مَا نُزِّلَ إِلَيْهِمْ وَلَعَلَّهُمْ يَتَفَكَّرُونَ

ಸ್ಪಷ್ಟವಾದ ನಿದರ್ಶನಗಳು ಮತ್ತು ಗ್ರಂಥಗಳನ್ನು ನೀಡಿ ಅವರನ್ನೆಲ್ಲ ಕಳುಹಿಸಲಾಗುತ್ತಿತ್ತು. ಮತ್ತು ಪೈಗಂಬರರೇ, ಈಗ ನಿಮಗೆ ಕಳುಹಿಸಲಾಗುತ್ತಿರುವ ಉಪದೇಶದ ಉದ್ದೇಶವೂ, ಜನರಿಗೆ ಏನನ್ನು ಕಳುಹಿಸಲಾಗಿದೆ ಎಂಬುದನ್ನು ನೀವು ಅವರಿಗೆ ತಿಳಿಸಿಲಿಕ್ಕಾಗಿ; ಹಾಗೂ ಅವರು ಅದರ ಬಗ್ಗೆ ಚಿಂತನೆ ನಡೆಸಿಲಿಕ್ಕಾಗಿ! {44}

أَفَأَمِنَ ٱلَّذِينَ مَكَرُوا۟ ٱلسَّيِّـَٔاتِ أَن يَخْسِفَ ٱللَّهُ بِهِمُ ٱلْأَرْضَ أَوْ يَأْتِيَهُمُ ٱلْعَذَابُ مِنْ حَيْثُ لَا يَشْعُرُونَ

[ಪೈಗಂಬರರ ಕರೆಯನ್ನು ಹತ್ತಿಕ್ಕಲು] ಅತ್ಯಂತ ಕೆಟ್ಟ ಸ್ವರೂಪದ ತಂತ್ರಗಳನ್ನು ಹೂಡುತ್ತಿರುವವರನ್ನು ಭೂಮಿಯು ನುಂಗಿ ಬಿಡುವಂತೆ, ಅಥವಾ ಅವರ ಗುಮಾನಿಯಲ್ಲೂ ಇಲ್ಲದಂತಹ ಕಡೆಯಿಂದ ಶಿಕ್ಷೆಯು ಅವರ ಮೇಲೆ ಎರಗಿ ಬೇಳುವಂತೆ ಅಲ್ಲಾಹ್ ನು ಮಾಡಬಲ್ಲನು ಎಂಬ ವಿಷಯದಲ್ಲಿ ಅವರಿಗೆ ನಿರ್ಭಯತೆ ಪ್ರಾಪ್ತವಾಗಿದೆಯೇ? {45}

أَوْ يَأْخُذَهُمْ فِى تَقَلُّبِهِمْ فَمَا هُم بِمُعْجِزِينَ

ಅಥವಾ ಅವರಿನ್ನೂ (ತಮ್ಮ ಕುತಂತ್ರಗಳನ್ನು ಕಾರ್ಯರೂಪಕ್ಕೆ ತರಲು) ಅತ್ತಿತ್ತ ಓಡಾಡುತ್ತಿರುವಾಗಲೇ ಅಲ್ಲಾಹ್ ನು ಅವರನ್ನು ಹಿಡಿದು ಶಿಕ್ಷಿಸುವ ಬಗ್ಗೆ ಅವರಿಗೆ ಅಭಯ ಪ್ರಾಪ್ತವಾಗಿದೆಯೇ? (ಒಂದು ವೇಳೆ ಅಲ್ಲಾಹ್ ನು ಹಾಗೆ ಮಾಡಲು ನಿರ್ಧರಿಸಿದ್ದರೆ) ಅವರು ಅವನನ್ನು ಮಣಿಸಲಾರರು. {46}

أَوْ يَأْخُذَهُمْ عَلَىٰ تَخَوُّفٍ فَإِنَّ رَبَّكُمْ لَرَءُوفٌ رَّحِيمٌ

ಅಥವಾ (ತಮ್ಮ ಮೇಲೆ ಶಿಕ್ಷೆ ಬಂದೀತೆಂದು) ಭಯಪಡುತ್ತಿರುವ ಸ್ಥಿತಿಯಲ್ಲೇ ಅಲ್ಲಾಹ್ ನು ಅವರನ್ನು ಹಿಡಿಯಬಹುದಿತ್ತು! ಆದರೆ (ಅಪರಾಧಿಗಳಿಗೆ ಕಾಲಾವಕಾಶ ನೀಡುವ) ನಿಮ್ಮ ಒಡಯನು ನಿಜವಾಗಿ ವಾತ್ಸಲ್ಯಭರಿತ ಹಾಗೂ ಹೆಚ್ಚು ಕರುಣೆಯುಳ್ಳ ಒಡೆಯನಾಗಿರುವನು. {47}

أَوَلَمْ يَرَوْا۟ إِلَىٰ مَا خَلَقَ ٱللَّهُ مِن شَىْءٍ يَتَفَيَّؤُا۟ ظِلَـٰلُهُۥ عَنِ ٱلْيَمِينِ وَٱلشَّمَآئِلِ سُجَّدًا لِّلَّهِ وَهُمْ دَٰخِرُونَ

ಅಲ್ಲಾಹ್ ನು ಸೃಷ್ಟಿಸಿದ (ಮರಮಟ್ಟುಗಳು, ಪರ್ವತಗಳು ಮುಂತಾದ) ವಸ್ತುಗಳ ನೆರಳುಗಳು ಬಲದಿಂದ ಎಡಕ್ಕೂ ಎಡದಿಂದ ಬಲಕ್ಕೂ ಅತ್ಯಂತ ವಿನಮ್ರತೆಯೊಂದಿಗೆ ಅಲ್ಲಾಹ್ ನಿಗೆ ನಮಿಸುತ್ತಾ ಬಾಗುವ ಪ್ರಕ್ರಿಯೆಯನ್ನು ಈ ಜನರು ನೋಡುವುದಿಲ್ಲವೇ!? {48}

وَلِلَّهِ يَسْجُدُ مَا فِى ٱلسَّمَـٰوَٰتِ وَمَا فِى ٱلْأَرْضِ مِن دَآبَّةٍ وَٱلْمَلَـٰٓئِكَةُ وَهُمْ لَا يَسْتَكْبِرُونَ

ಹೌದು, ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಜೀವಚರಗಳು ಹಾಗೂ ಮಲಕ್ ಗಳು ಅಲ್ಲಾಹ್ ನಿಗೇ ಪ್ರಣಾಮ ಮಾಡುತ್ತವೆ; ಮತ್ತು ಅವುಗಳಲ್ಲಿ ಯಾವುದೂ (ಅಲ್ಲಾಹ್ ನ ಮುಂದೆ ಬಾಗದೆ ಇವರಂತೆ) ಅಹಂಕಾರ ತೋರುವುದಿಲ್ಲ. {49}

يَخَافُونَ رَبَّهُم مِّن فَوْقِهِمْ وَيَفْعَلُونَ مَا يُؤْمَرُونَ  ۩

ಅವು ತಮ್ಮ ಮೇಲೆ ಅಧಿಕಾರ ಹೊಂದಿರುವ ತಮ್ಮ ಒಡೆಯನನ್ನು ಭಯಪಡುತ್ತವೆ; ಮತ್ತು ತಮಗೆ ಏನನ್ನು ಆಜ್ಞಾಪಿಸಲಾಗುವುದೋ ಅವನ್ನು ಪಾಲಿಸುತ್ತವೆ. {50}

وَقَالَ ٱللَّهُ لَا تَتَّخِذُوٓا۟ إِلَـٰهَيْنِ ٱثْنَيْنِ ۖ إِنَّمَا هُوَ إِلَـٰهٌ وَٰحِدٌ ۖ فَإِيَّـٰىَ فَٱرْهَبُونِ

ನೀವು ಇಬ್ಬಿಬ್ಬರು ದೇವರುಗಳನ್ನು ಸ್ವೀಕರಿಸಬೇಡಿರಿ; ದೇವನು ಕೇವಲ ಒಬ್ಬನೇ. ಆದ್ದರಿಂದ ನೀವು ಭಯ ಪಡಬೇಕಾದುದು ನನಗೆ ಮಾತ್ರ ಎಂದು ಅಲ್ಲಾಹ್ ನು ಆಜ್ಞಾಪಿಸಿರುವನು. {51}

وَلَهُۥ مَا فِى ٱلسَّمَـٰوَٰتِ وَٱلْأَرْضِ وَلَهُ ٱلدِّينُ وَاصِبًا ۚ أَفَغَيْرَ ٱللَّهِ تَتَّقُونَ

ಅಕಾಶಗಳು ಹಾಗೂ ಭೂಮಿಯಲ್ಲಿರುವ ಸಕಲವೂ ಅವನ ಒಡೆತದಲ್ಲಿದೆ. ಹೌದು, ನಿತ್ಯವಾಗಿ ಪಾಲಿಸಬೇಕಾದ ಧರ್ಮವೂ ಅವನ ಧರ್ಮವೇ ಆಗಿರಬೇಕು. ಹಾಗಿರುವಾಗ (ಜನರೇ), ಅಲ್ಲಾಹ್ ನನ್ನು ಬಿಟ್ಟು ನೀವು ಅನ್ಯರಿಗೆ ಭಕ್ತಿ ತೋರುವುದೇ? {52}

وَمَا بِكُم مِّن نِّعْمَةٍ فَمِنَ ٱللَّهِ ۖ ثُمَّ إِذَا مَسَّكُمُ ٱلضُّرُّ فَإِلَيْهِ تَجْـَٔرُونَ

ಇನ್ನು ನಿಮ್ಮ ಬಳಿ ಸುಖಸಂಪತ್ತುಗಳೇನಾದರೂ ಇದ್ದರೆ ಅದು ಅಲ್ಲಾಹ್ ನ ವತಿಯಿಂದ ಬಂದವು (ಎಂದು ನಿಮಗೆ ತಿಳಿದೇ ಇದೆ). (ಆದ್ದರಿಂದಲೇ) ಮುಂದೆ ನಿಮಗೇನಾದರೂ ವಿಪತ್ತುಂಟಾದಾಗ ನೀವು ಸಹಾಯಕ್ಕಾಗಿ ಅವನಿಗೇ ಮೊರೆಯಿಡುತ್ತೀರಿ! {53}

ثُمَّ إِذَا كَشَفَ ٱلضُّرَّ عَنكُمْ إِذَا فَرِيقٌ مِّنكُم بِرَبِّهِمْ يُشْرِكُونَ

ತರುವಾಯ ಆ ವಿಪತ್ತನ್ನು ಅವನು ನಿಮ್ಮಿಂದ ನೀಗಿಸಿ ಬಿಟ್ಟರೆ, ಕೂಡಲೇ ನಿಮ್ಮಲ್ಲಿಯ ಒಂದು ಗುಂಪಿನವರು (ಕೃತಜ್ಞತೆ ಸಲ್ಲಿಸುವಾಗ) ತಮ್ಮ ಒಡೆಯನ ಜೊತೆ ಇತರರನ್ನೂ ಸೇರಿಸಿಕೊಳ್ಳುತ್ತಾರೆ. {54}

لِيَكْفُرُوا۟ بِمَآ ءَاتَيْنَـٰهُمْ ۚ فَتَمَتَّعُوا۟ ۖ فَسَوْفَ تَعْلَمُونَ

ನಾವು ನೀಡಿದ ಅನುಗ್ರಹಗಳಿಗಾಗಿ (ಹಾಗೆ ಮಾಡುವ ಮೂಲಕ) ಅವರು ಕೃತಘ್ನತೆ ತೋರುತ್ತಾರೆ. (ಕೃತಘ್ನ ಜನರೇ), ಸ್ವಲ್ಪ ಕಾಲದ ಲೌಖಿಕ ಸುಖ ಅನುಭವಿಸಿ ಕೊಳ್ಳಿರಿ. ಬಹು ಬೇಗನೇ ನಿಮಗೆ ತಿಳಿಯಲಿದೆ. {55}

وَيَجْعَلُونَ لِمَا لَا يَعْلَمُونَ نَصِيبًا مِّمَّا رَزَقْنَـٰهُمْ ۗ تَٱللَّهِ لَتُسْـَٔلُنَّ عَمَّا كُنتُمْ تَفْتَرُونَ

ನಾವು ಅವರಿಗೆ ನೀಡಿದ ಸಂಪತ್ತಿನ ಒಂದಂಶವನ್ನು ಯಾರ ಬಗ್ಗೆ ತಮಗೆ ತಿಳಿದೇ ಇಲ್ಲವೋ ಅಂತಹ (ಕಾಲ್ಪನಿಕ ದೇವರುಗಳಿಗಾಗಿ, ವಿಗ್ರಹಗಳಿಗಾಗಿ) ಅವರು ಮೀಸಲಿಡುತ್ತಾರೆ. ಅಲ್ಲಾಹ್ ನಾಣೆ! ಅವುಗಳ ಬಗ್ಗೆ ನೀವು ಸೃಷ್ಟಿಸಿಕೊಂಡ ಸುಳ್ಳು ಕಥೆಗಳ ಕುರಿತು ಖಂಡಿತಾ ನಿಮ್ಮನ್ನು ಪ್ರಶ್ನಿಸಲಾಗುವುದು. {56}

وَيَجْعَلُونَ لِلَّهِ ٱلْبَنَـٰتِ سُبْحَـٰنَهُۥ ۙ وَلَهُم مَّا يَشْتَهُونَ

[ಆಶ್ಚರ್ಯವೆಂದರೆ] ಅವರು ಅಲ್ಲಾಹ್ ನಿಗಾಗಿ ಕಲ್ಪಿಸುವುದು ಪುತ್ರಿಯರನ್ನು! ಅವನು ನ್ಯೂನತೆಗಳಿಲ್ಲದ ಪವಿತ್ರನೇ ಸರಿ! [ಅಲ್ಲಾಹ್ ನಿಗೆ ಪುತ್ರಿಯರನ್ನು ಹೇರುವ ಅವರು] ತಮಗಾಗಿ ಇಷ್ಟಪಡುವುದು (ಪುತ್ರರರನ್ನು)! {57}

وَإِذَا بُشِّرَ أَحَدُهُم بِٱلْأُنثَىٰ ظَلَّ وَجْهُهُۥ مُسْوَدًّا وَهُوَ كَظِيمٌ

ಅವರಲ್ಲಿ ಯಾರಿಗಾದರೂ ಒಬ್ಬನಿಗೆ ಹೆಣ್ಣುಮಗು ಹುಟ್ಟಿದ ಕುರಿತು ಶುಭ ಸುದ್ದಿ ನೀಡಿದರೆ ಆತನ ಮುಖದಲ್ಲಿ ಕತ್ತಲು ಕವಿಯುತ್ತದೆ. ಆತ ಸಿಡಿಮಿಡಿಗೊಳ್ಳುತ್ತಾನೆ. {58}

يَتَوَٰرَىٰ مِنَ ٱلْقَوْمِ مِن سُوٓءِ مَا بُشِّرَ بِهِۦٓ ۚ أَيُمْسِكُهُۥ عَلَىٰ هُونٍ أَمْ يَدُسُّهُۥ فِى ٱلتُّرَابِ ۗ أَلَا سَآءَ مَا يَحْكُمُونَ

ತನಗೆ ನೀಡಲಾದ ಆ ಕೆಟ್ಟ ಸುದ್ದಿಯಿಂದಾಗಿ ಜನರಿಗೆ ಮುಖ ತೋರಿಸಲಾಗದೆ ಆತನು ತಲೆಮರೆಸಿಕೊಳ್ಳುತ್ತಾನೆ. ಈ ಅಪಮಾನ ಸಹಿಸಿ ಆ ಹೆಣ್ಣುಮಗುವನ್ನು ಉಳಿಸಿಕೊಳ್ಳ ಬೇಕೇ ಅಥವಾ ಮಣ್ಣಿನಲ್ಲಿ ಹೂತು ಬಿಡಬೇಕೇ ಎಂದು ಅವನು ಪರಿತಪಿಸುತ್ತಾನೆ. ಸರಿ, ಕೊನೆಗೆ ಅವರು ತೆಗೆದುಕೊಳ್ಳುವ ತೀರ್ಮಾನ ಅದೆಷ್ಟು ಕೆಟ್ಟದ್ದೆಂದು ನೋಡಿರಿ! {59}

لِلَّذِينَ لَا يُؤْمِنُونَ بِٱلْـَٔاخِرَةِ مَثَلُ ٱلسَّوْءِ ۖ وَلِلَّهِ ٱلْمَثَلُ ٱلْأَعْلَىٰ ۚ وَهُوَ ٱلْعَزِيزُ ٱلْحَكِيمُ

ಕೆಳಮಟ್ಟದ ಗುಣಲಕ್ಷಣಗಳು ಪರಲೋಕ ಜೀವನವನ್ನು ಒಪ್ಪದ ಜನರಿಗೇ ಲೇಸು. ಅಲ್ಲಾಹ್ ನ ಗುಣಲಕ್ಷಣಗಳು [ಪುತ್ರಿ ಅಥವಾ ಪುತ್ರರನ್ನು ಹೊಂದುವುದಲ್ಲ, ಬದಲಾಗಿ] ಬಹಳ ಉನ್ನತ ಮಟ್ಟದ್ದಾಗಿದೆ. ಅವನು ಅತ್ಯಂತ ಶಕ್ತಿವಂತನೂ ವಿವೇಕಪೂರ್ಣನೂ ಆಗಿರುವನು. {60}

وَلَوْ يُؤَاخِذُ ٱللَّهُ ٱلنَّاسَ بِظُلْمِهِم مَّا تَرَكَ عَلَيْهَا مِن دَآبَّةٍ وَلَـٰكِن يُؤَخِّرُهُمْ إِلَىٰٓ أَجَلٍ مُّسَمًّى ۖ فَإِذَا جَآءَ أَجَلُهُمْ لَا يَسْتَـْٔخِرُونَ سَاعَةً ۖ وَلَا يَسْتَقْدِمُونَ

ಜನರನ್ನು ಅವರು ಮಾಡುವ ಅನ್ಯಾಯಕ್ಕಾಗಿ ಒಂದು ವೇಳೆ ಅಲ್ಲಾಹ್ ನು ತಕ್ಷಣವೇ ಹಿಡಿದು ದಂಡಿಸುವವನಾಗಿದ್ದರೆ ಒಬ್ಬ ಜೀವಿಯನ್ನೂ ಅವನು ಭೂಮಿಯ ಮೇಲೆ ಉಳಿಸುತ್ತಿರಲಿಲ್ಲ. ಬದಲಾಗಿ, ಅನ್ಯಾಯ ಮಾಡುವವರಿಗೆ ಅವನು ಒಂದು ಗೊತ್ತುಪಡಿಸಿದ ಸಮಯದ ವರೆಗೆ ಕಾಲಾವಕಾಶ ನೀಡುತ್ತಾತೆ. ಅವರಿಗೆ ನಿಶ್ಚಯಿಸಲಾದ ಆ ಸಮಯ ಬಂದು ಬಿಟ್ಟರೆ ಅದನ್ನು ಕ್ಷಣ ಮಾತ್ರಕ್ಕೂ ಹಿಂದೂಡಲು ಅಥವಾ ಮುಂದೂಡಲು ಅವರಿಂದ ಸಾಧ್ಯವಲ್ಲ. {61}

وَيَجْعَلُونَ لِلَّهِ مَا يَكْرَهُونَ وَتَصِفُ أَلْسِنَتُهُمُ ٱلْكَذِبَ أَنَّ لَهُمُ ٱلْحُسْنَىٰ ۖ لَا جَرَمَ أَنَّ لَهُمُ ٱلنَّارَ وَأَنَّهُم مُّفْرَطُونَ

ತಮ್ಮ ಪಾಲಿಗೆ ಇಷ್ಟಪಡದ (ಹೆಣ್ಣು ಸಂತಾನವನ್ನು) ಅವರು ಅಲ್ಲಾಹ್ ನಿಗೆ ಕಲ್ಪಿಸಿಸ್ಕೊಳ್ಳುತ್ತಾರೆ. ಮಾತ್ರವಲ್ಲ, ತಮಗೆ ಸಿಗಲಿರುವುದು ಒಳಿತು ಮಾತ್ರ ಎಂದು ಅವರ ನಾಲಿಗೆಗಳು ಸುಳ್ಳಾಡುತ್ತವೆ. ಅವರಿಗೆ ನರಕವಿದೆ ಎಂಬುದರಲ್ಲಿ ಸಂಶಯವಿಲ್ಲ; ಮತ್ತು ಅಲ್ಲಿ ಅವರನ್ನು ಉಪೇಕ್ಷಿಸಲಾಗುವುದು. {62}

تَٱللَّهِ لَقَدْ أَرْسَلْنَآ إِلَىٰٓ أُمَمٍ مِّن قَبْلِكَ فَزَيَّنَ لَهُمُ ٱلشَّيْطَـٰنُ أَعْمَـٰلَهُمْ فَهُوَ وَلِيُّهُمُ ٱلْيَوْمَ وَلَهُمْ عَذَابٌ أَلِيمٌ

ಅಲ್ಲಾಹ್ ನ ಆಣೆ! ಪೈಗಂಬರರೇ, ನಿಮಗಿಂತ ಮುಂಚಿನ ಸಮುದಾಯಗಳ ಕಡೆಗೂ ನಾವು (ಮಾರ್ಗದರ್ಶನಕ್ಕಾಗಿ) ದೂತರುಗಳನ್ನು ಕಳುಹಿಸಿದ್ದೇವೆ. ಆದರೆ ಸೈತಾನನು ಅವರ ದುಷ್ಕರ್ಮಗಳನ್ನೇ ಅವರಿಗೆ ಚಂದಗೊಳಿಸಿ ತೋರಿಸುತ್ತಿದ್ದನು. ಇಂದು ಸಹ ಅದೇ ಸೈತಾನನು ಈ ಜನರ ಆಪ್ತನಾಗಿರುವನು! ಅವರಿಗೂ ಇವರಿಗೂ ನೋವುಭರಿತ ಶಿಕ್ಷೆ ಇರುವುದು. {63}

وَمَآ أَنزَلْنَا عَلَيْكَ ٱلْكِتَـٰبَ إِلَّا لِتُبَيِّنَ لَهُمُ ٱلَّذِى ٱخْتَلَفُوا۟ فِيهِ ۙ وَهُدًى وَرَحْمَةً لِّقَوْمٍ يُؤْمِنُونَ

ಪೈಗಂಬರರೇ, ಈ ಜನರು (ಧಾರ್ಮಿಕವಾಗಿ) ಭಿನ್ನಾಭಿಪ್ರಾಯ ತಾಳಿರುವ ವಿಷಯಗಳ ವಾಸ್ತವಿಕತೆಯನ್ನು ಇವರಿಗೆ ಚೆನ್ನಾಗಿ ಅರ್ಥೈಸಿ ಕೊಡಬೇಕೆಂದೇ ನಾವು ಈ ಗ್ರಂಥವನ್ನು (ಅರ್ಥಾತ್ ಈ ಕುರ್‌ಆನ್ ಅನ್ನು) ನಿಮಗೆ ಇಳಿಸಿ ಕೊಟ್ಟಿರುವೆವು. (ಈ ಗ್ರಂಥದ ದೈವಿಕತೆಯನ್ನು) ಒಪ್ಪಿಕೊಳ್ಳುವ ಜನಸಮೂಹಕ್ಕೆ ಇದು ಸರಿದಾರಿ ತೋರುತ್ತದೆ; ಇದು ಅವರಿಗೊಂದು ಅನುಗ್ರಹವೂ ಹೌದು. {64}

وَٱللَّهُ أَنزَلَ مِنَ ٱلسَّمَآءِ مَآءً فَأَحْيَا بِهِ ٱلْأَرْضَ بَعْدَ مَوْتِهَآ ۚ إِنَّ فِى ذَٰلِكَ لَـَٔايَةً لِّقَوْمٍ يَسْمَعُونَ

ಅಲ್ಲಾಹ್ ನು ಆಕಾಶದಿಂದ ಮಳೆನೀರು ಸುರಿಸುತ್ತಾನೆ ಮತ್ತು ಅದರ ಮೂಲಕ ಜೀವಕಳೆ ಇಲ್ಲದೆ (ಪಾಳುಬಿದ್ದ) ನೆಲವನ್ನು ಪುನಃ ಜೀವಂತಗೊಳಿಸುತ್ತಾನೆ. (ಪೈಗಂಬರರ ಉಪದೇಶವನ್ನು) ಆಲಿಸುವ ಜನಸಮೂಹಕ್ಕೆ ಆ ಪ್ರಕ್ರಿಯೆಯಲ್ಲಿ ಖಂಡಿತವಾಗಿಯೂ ದೃಷ್ಟಾಂತವಿದೆ. {65}

وَإِنَّ لَكُمْ فِى ٱلْأَنْعَـٰمِ لَعِبْرَةً ۖ نُّسْقِيكُم مِّمَّا فِى بُطُونِهِۦ مِنۢ بَيْنِ فَرْثٍ وَدَمٍ لَّبَنًا خَالِصًا سَآئِغًا لِّلشَّـٰرِبِينَ

ಹೌದು, ಈ ಜಾನುವಾರುಗಳ (ದೇಹರಚನೆಯಲ್ಲಿ ಸಹ) ನಿಮಗೆ ಮಹತ್ತರವಾದ ಪಾಠವಿದೆ. ಅವುಗಳ ಹೊಟ್ಟೆಯಲ್ಲಿರುವ ಸಗಣಿ ರಕ್ತಗಳ ನಡುವಿನಿಂದ ನಿಮಗೆ ಶುದ್ಧ ಹಾಲನ್ನು ನಾವು ಕುಡಿಸುತ್ತೇವೆ; ಕುಡಿಯುವವರಿಗೆ ಅದೊಂದು ಹಿತಕರವಾದ ಪೇಯವಾಗಿದೆ. {66}

وَمِن ثَمَرَٰتِ ٱلنَّخِيلِ وَٱلْأَعْنَـٰبِ تَتَّخِذُونَ مِنْهُ سَكَرًا وَرِزْقًا حَسَنًا ۗ إِنَّ فِى ذَٰلِكَ لَـَٔايَةً لِّقَوْمٍ يَعْقِلُونَ

ಖರ್ಜೂರದ ಮರಗಳೂ ದ್ರಾಕ್ಷಿಯ ಬಳ್ಳಿಗಳೂ ನೀಡುವ ಫಲಗಳಿಂದ ನೀವು ಮಾದಕ ಪೇಯವನ್ನೂ ತಯಾರಿಸುತ್ತಿರುವಿರಿ; ಮತ್ತು ಶುದ್ಧವಾದ ಆಹಾರವನ್ನೂ ಪಡೆಯುತ್ತಿರುವಿರಿ. ಹೌದು, ಬುದ್ಧಿ ಉಪಯೋಗಿಸುವ ಜನರಿಗೆ ಅದರಲ್ಲಿ ಕಲಿಯಲು ಪಾಠವಿದೆ. {67}

وَأَوْحَىٰ رَبُّكَ إِلَى ٱلنَّحْلِ أَنِ ٱتَّخِذِى مِنَ ٱلْجِبَالِ بُيُوتًا وَمِنَ ٱلشَّجَرِ وَمِمَّا يَعْرِشُونَ

ಹಾಗೆಯೇ ಪರ್ವತಗಳಲ್ಲೂ, ಮರಗಳಲ್ಲೂ, ಮನುಷ್ಯರು ನಿರ್ಮಿಸಿಕೊಳ್ಳುವ ಎತ್ತರದ ಛಾವಣಿಗಳಲ್ಲೂ ಗೂಡುಗಳನ್ನು ಕಟ್ಟಿಕೊಳ್ಳುವಂತೆ ನಿಮ್ಮ ಒಡೆಯನು (ಹೆಣ್ಣು) ಜೇನುನೊಣಗಳಿಗೆ ದಿವ್ಯ ಸೂಚನೆ ನೀಡಿರುತ್ತಾನೆ. {68}

ثُمَّ كُلِى مِن كُلِّ ٱلثَّمَرَٰتِ فَٱسْلُكِى سُبُلَ رَبِّكِ ذُلُلًا ۚ يَخْرُجُ مِنۢ بُطُونِهَا شَرَابٌ مُّخْتَلِفٌ أَلْوَٰنُهُۥ فِيهِ شِفَآءٌ لِّلنَّاسِ ۗ إِنَّ فِى ذَٰلِكَ لَـَٔايَةً لِّقَوْمٍ يَتَفَكَّرُونَ

ತರುವಾಯ ಸಕಲ ರೀತಿಯ ಫಲವರ್ಗಗಳಿಂದ ಉಣ್ಣುತ್ತಾ ನಿನ್ನ ಒಡೆಯನು ನಿನ್ನ ಪಾಲಿಗೆ ಸುಗಮಗೊಳಿಸಿದ ಹಾದಿಯಲ್ಲಿ ಚಲಿಸುತ್ತಿರು (ಎಂದೂ ಅದಕ್ಕೆ ಸೂಚಿಸಿದನು). ಅವುಗಳ ಹೊಟ್ಟೆಗಳಿಂದ ವಿವಿಧ ಬಣ್ಣಗಳ ಪಾನೀಯ ಹೊರಹೊಮ್ಮುತ್ತದೆ; ಅದರಲ್ಲಿ ಮನುಷ್ಯರಿಗೆ ರೋಗಶಮನವಿದೆ. ಹೌದು, ಚಿಂತನೆ ನಡೆಸುವ ಜನಸಮೂಹಕ್ಕೆ ಈ ಪ್ರಕ್ರಿಯೆಯಲ್ಲಿ ದೃಷ್ಟಾಂತವಿದೆ. {69}

وَٱللَّهُ خَلَقَكُمْ ثُمَّ يَتَوَفَّىٰكُمْ ۚ وَمِنكُم مَّن يُرَدُّ إِلَىٰٓ أَرْذَلِ ٱلْعُمُرِ لِكَىْ لَا يَعْلَمَ بَعْدَ عِلْمٍ شَيْـًٔا ۚ إِنَّ ٱللَّهَ عَلِيمٌ قَدِيرٌ

ಅಲ್ಲಾಹ್ ನೇ ನಿಮ್ಮನ್ನು ಸೃಷ್ಟಿಸಿದ್ದಾನೆ; ಮುಂದೆ ಅವನೇ ನಿಮಗೆ ಮರಣ ನೀಡುತ್ತಾನೆ. ಒಮ್ಮೆ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಾಗಿ ಆ ಬಳಿಕ ಏನನ್ನೂ ತಿಳಿಯಲಾಗದಷ್ಟರ ಮಟ್ಟಿಗೆ ವೃದ್ಧಾಪ್ಯದ ಹೀನಾಯ ಸ್ಥಿತಿಗೆ ಒಯ್ಯಲ್ಪಟ್ಟವರೂ ನಿಮ್ಮಲ್ಲಿದ್ದಾರೆ. ಹೌದು, ಅಲ್ಲಾಹ್ ನು ಎಲ್ಲ ವಿಷಯಗಳನ್ನು ಚೆನ್ನಾಗಿ ತಿಳಿದವನೂ (ಅದನ್ನು) ಕಾರ್ಯರೂಪಕ್ಕೆ ತರಲು ಶಕ್ತಿಯಿರುವವನೂ ಆಗಿದ್ದಾನೆ. {70}

وَٱللَّهُ فَضَّلَ بَعْضَكُمْ عَلَىٰ بَعْضٍ فِى ٱلرِّزْقِ ۚ فَمَا ٱلَّذِينَ فُضِّلُوا۟ بِرَآدِّى رِزْقِهِمْ عَلَىٰ مَا مَلَكَتْ أَيْمَـٰنُهُمْ فَهُمْ فِيهِ سَوَآءٌ ۚ أَفَبِنِعْمَةِ ٱللَّهِ يَجْحَدُونَ

ಇನ್ನು ಸಂಪತ್ತಿನ ವಿಷಯ ನೋಡುವುದಾದರೆ ಅಲ್ಲಾಹ್ ನು ನಿಮ್ಮಲಿಯ ಕೆಲವರಿಗೆ ಉಳಿದ ಕೆಲವರಿಗಿಂತ ಹೆಚ್ಚು ದಯಪಾಲಿಸಿರುತ್ತಾನೆ. ಯಾರು ಹೆಚ್ಚು ಪಡೆದಿರುವರೋ ಅವರು ಅದನ್ನು ತಮ್ಮ ಕೈಕೆಳಗಿರುವ ನೌಕರರಿಗೆ ವರ್ಗಾಯಿಸುವ ಮೂಲಕ ಸಾಂಪತ್ತಿಕವಾಗಿ ಅವರನ್ನು ತಮಗೆ ಸಮಾನರನ್ನಾಗಿ ಮಾಡಿಕೊಳ್ಳುವುದಿಲ್ಲ! [ಆದರೆ ಅಲ್ಲಾಹ್ ನು ತನ್ನ ದೇವತ್ವವನ್ನು ಇತರರ ಜೊತೆ ಹಂಚುತ್ತಾನೆ ಎಂದು ಬಗೆಯುತ್ತಾರೆ. ಆ ಮೂಲಕ] ಇವರು ಅಲ್ಲಾಹ್ ನ ಅನುಗ್ರಹಗಳನ್ನು ಧಿಕ್ಕರಿಸುವುದಲ್ಲವೇ?! {71}

وَٱللَّهُ جَعَلَ لَكُم مِّنْ أَنفُسِكُمْ أَزْوَٰجًا وَجَعَلَ لَكُم مِّنْ أَزْوَٰجِكُم بَنِينَ وَحَفَدَةً وَرَزَقَكُم مِّنَ ٱلطَّيِّبَـٰتِ ۚ أَفَبِٱلْبَـٰطِلِ يُؤْمِنُونَ وَبِنِعْمَتِ ٱللَّهِ هُمْ يَكْفُرُونَ

ನಿಮಗಾಗಿ ಅಲ್ಲಾಹ್ ನು ಸಂಗಾತಿಗಳನ್ನು ನಿಮ್ಮ ವರ್ಗದಿಂದಲೇ ಸೃಷ್ಟಿಸಿರುವನು. ಮತ್ತು ನಿಮ್ಮ ಆ ಸಂಗಾತಿಗಳ ಮೂಲಕ ಅವನು ನಿಮಗೆ ಪುತ್ರರನ್ನೂ ಪೌತ್ರರನ್ನೂ ನೀಡಿರುವನು. ಹಾಗೆಯೇ, ಒಳ್ಳೆಯ ವಸ್ತುಗಳನ್ನು ನಿಮಗೆ ಅನ್ನಾಹಾರವಾಗಿ ಒದಗಿಸಿರುವನು. ವಾಸ್ತವ ಹಾಗಿರುವಾಗ ಈ ಜನರು ಹುಸಿ (ದೇವರುಗಳನ್ನು) ನಂಬುತ್ತಾ, ಅಲ್ಲಾಹ್ ನ ಎಲ್ಲ ಅನುಗ್ರಹಗಳನ್ನು ಅಲ್ಲಗಳೆಯುತ್ತಾ ಇರುವರೇ? {72}

وَيَعْبُدُونَ مِن دُونِ ٱللَّهِ مَا لَا يَمْلِكُ لَهُمْ رِزْقًا مِّنَ ٱلسَّمَـٰوَٰتِ وَٱلْأَرْضِ شَيْـًٔا وَلَا يَسْتَطِيعُونَ

ಆಕಾಶಗಳಿಂದಾಗಲಿ ಭೂಮಿಯಿಂದಾಗಲಿ, ಈ ಜನರಿಗಾಗಿ ಯಾವುದೇ ರೀತಿಯ ಅನ್ನಾಹಾರವನ್ನು ಒದಗಿಸಲು ಸ್ವಲ್ಪವೂ ಶಕ್ತರಲ್ಲದ, ಯಾವ ಸಾಮರ್ಥ್ಯವನ್ನೂ ಹೊಂದಿರದ (ಕಾಲ್ಪನಿಕ ಹುಸಿ ದೇವರುಗಳನ್ನು) ಇವರು ಅಲ್ಲಾಹ್ ನಿಗೆ ಬದಲಾಗಿ ಆರಾಧಿಸುತ್ತಿದ್ದಾರೆ! {73}

فَلَا تَضْرِبُوا۟ لِلَّهِ ٱلْأَمْثَالَ ۚ إِنَّ ٱللَّهَ يَعْلَمُ وَأَنتُمْ لَا تَعْلَمُونَ

ಜನರೇ, ಅಲ್ಲಾಹ್ ನಿಗೆ (ನೀವೇ ಕಲ್ಪಿಸಿಕೊಂಡಂತಹ) ಗುಣಲಕ್ಷಣಗಳನ್ನು ಹೇರಬೇಡಿ. ಹೌದು, ಅಲ್ಲಾಹ್ ನಿಗೆ (ಅವನ ಬಗ್ಗೆ) ಚೆನ್ನಾಗಿ ತಿಳಿದಿದೆ; ಆದರೆ ನೀವು ತಿಳಿದವರಲ್ಲ. {74}

ضَرَبَ ٱللَّهُ مَثَلًا عَبْدًا مَّمْلُوكًا لَّا يَقْدِرُ عَلَىٰ شَىْءٍ وَمَن رَّزَقْنَـٰهُ مِنَّا رِزْقًا حَسَنًا فَهُوَ يُنفِقُ مِنْهُ سِرًّا وَجَهْرًا ۖ هَلْ يَسْتَوُۥنَ ۚ ٱلْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ

[ನೀವೇ ಸೃಷ್ಟಿಸಿ ಕೊಂಡ ಹುಸಿ ದೇವರುಗಳ ಅಸಹಾಯಕತೆ ನಿಮಗೇ ಅರ್ಥವಾಗಲೆಂದು] ಅಲ್ಲಾಹ್ ನು ಈ ಉಪಮೆ ನೀಡುತ್ತಿರುವನು: ಒಬ್ಬ ಗುಲಾಮನಿರುವನು; ತನ್ನ ಯಜಮಾನನ ಅಧೀನತೆಯಲ್ಲಿರುವನು; ಎನನ್ನೂ ಸ್ವತಃ ಮಾಡಲು ಶಕ್ತಿಯಾಗಲಿ ಸಮರ್ಥ್ಯವಾಗಲಿ ಇಲ್ಲದವನು! ಇನ್ನೊಂದೆಡೆ, ನಾವು ನಮ್ಮ ವತಿಯಿಂದ ಧಾರಾಳವಾಗಿ ಸಂಪತ್ತು ನೀಡಿದ ಮತ್ತೊಬ್ಬನಿರುವನು. ಅವನು ಆ ಸಂಪತ್ತನ್ನು ರಹಸ್ಯವಾಗಿಯೂ ಬಹಿರಂಗವಾಗಿಯೂ (ತನಗಿಷ್ಟ ಬಂದಂತೆ) ಖರ್ಚು ಮಾಡಲು ಶಕ್ತನಾದವನು! ಆ ಇಬ್ಬರೂ ಸಮಾನರಾಗುವರೇ? ಹೌದು, ಸ್ತುತಿ ಸ್ತೋತ್ರಗಳು ಸಲ್ಲಬೇಕಾದುದು ಅಲ್ಲಹ್ ನಿಗೆ! ಆದರೆ ಹೆಚ್ಚಿನ ಜನರು (ವಸ್ತುಸ್ಥಿತಿಯನ್ನು) ತಿಳಿದುಕೊಳ್ಳುವುದಿಲ್ಲ. {75}

وَضَرَبَ ٱللَّهُ مَثَلًا رَّجُلَيْنِ أَحَدُهُمَآ أَبْكَمُ لَا يَقْدِرُ عَلَىٰ شَىْءٍ وَهُوَ كَلٌّ عَلَىٰ مَوْلَىٰهُ أَيْنَمَا يُوَجِّههُّ لَا يَأْتِ بِخَيْرٍ ۖ هَلْ يَسْتَوِى هُوَ وَمَن يَأْمُرُ بِٱلْعَدْلِ ۙ وَهُوَ عَلَىٰ صِرَٰطٍ مُّسْتَقِيمٍ

ಅಲ್ಲಾಹ್ ನು, ಇಬ್ಬರು ವ್ಯಕ್ತಿಗಳ ಮತ್ತೊಂದು ಉದಾಹರಣೆ ನೀಡುತ್ತಿರುವನು: ಅವರಲ್ಲೊಬ್ಬನು ಯಾವುದೇ ಕೆಲಸ ಬಾರದ ಮೂಕನಾಗಿರುವನು; ಮಾತ್ರವಲ್ಲ, ತನ್ನ ಯಜಮಾನನಿಗೆ ಒಂದು ಹೊರೆಯಾಗಿರುವನು. ಯಜಮಾನನು ಅವನನ್ನು ಎಲ್ಲಿಗೆ ಕಳುಹಿಸಿದರೂ ಹಿತವಾದ ಏನನ್ನೂ ಅವನು ತರಲಾರನು. ಹಾಗಿರುವಾಗ ಆ ಮೂಕ ವ್ಯಕ್ತಿಯು, ಸದಾ ನ್ಯಾಯವನ್ನು ಬೋಧಿಸುವ ಮತ್ತು ಸ್ವತಃ ಸತ್ಯದ ದಾರಿಯಲ್ಲಿ ತನ್ನನ್ನು ನೆಲೆಗೊಳಿಸಿದ ಮತ್ತೊಬ್ಬ ವ್ಯಕ್ತಿಗೆ ಸಮನಾಗುವುದು ಸಾಧ್ಯವೇ? {76}

وَلِلَّهِ غَيْبُ ٱلسَّمَـٰوَٰتِ وَٱلْأَرْضِ ۚ وَمَآ أَمْرُ ٱلسَّاعَةِ إِلَّا كَلَمْحِ ٱلْبَصَرِ أَوْ هُوَ أَقْرَبُ ۚ إِنَّ ٱللَّهَ عَلَىٰ كُلِّ شَىْءٍ قَدِيرٌ

[ಲೋಕವು ಅಂತ್ಯಗೊಳ್ಳುವುದು ಯಾವಾಗ ಎಂಬುದನ್ನು ಅರಿಯಲು, ಕುರೈಷರೇ, ನೀವು ಆತುರ ಪಡುತ್ತಿರುವಿರಿ]. ವಾಸ್ತವವೇನೆಂದರೆ ಭೂಮಿ ಮತ್ತು ಆಕಾಶಗಳಿಗೆ ಸಂಬಂಧಿಸಿದಂತೆ ನಿಮಗೆ ಅಗೋಚರವಾದ ಸಕಲ ವಿಷಯಗಳ ಬಗ್ಗೆ ತಿಳಿದಿರುವುದು ಕೇವಲ ಅಲ್ಲಾಹ್ ನಿಗೆ ಮಾತ್ರ. ಲೋಕಾಂತ್ಯಗೊಳ್ಳುವ ಆ ಘಳಿಗೆ ಕಣ್ಣು ಎವೆಯಿಕ್ಕುವಷ್ಟರಲ್ಲಿ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಸಂಭವಿಸಲಿದೆ! (ಅದೇನೂ ಅವನಿಗೆ ಕಷ್ಟದ ಕೆಲಸವಲ್ಲ). ಖಂಡಿತವಾಗಿ ಅಲ್ಲಾಹ್ ನು ಎಲ್ಲಾ ವಿಷಯಗಳ ಸಾಮರ್ಥ್ಯ ಹೊಂದಿರುವನು. {77}

وَٱللَّهُ أَخْرَجَكُم مِّنۢ بُطُونِ أُمَّهَـٰتِكُمْ لَا تَعْلَمُونَ شَيْـًٔا وَجَعَلَ لَكُمُ ٱلسَّمْعَ وَٱلْأَبْصَـٰرَ وَٱلْأَفْـِٔدَةَ ۙ لَعَلَّكُمْ تَشْكُرُونَ

ಯಾವ ವಿಷಯವೂ ನಿಮಗೆ ತೀಳಿಯದಿದ್ದ ಸ್ಥಿತಿಯಲ್ಲಿ ನೀವಿದ್ದಾಗ ಅಲ್ಲಾಹ್ ನು ನಿಮ್ಮನ್ನು ನಿಮ್ಮ ತಾಯಂದಿರ ಉದರಗಳಿಂದ ಹೊರತಂದಿರುವನು. ನೀವು ಅವನಿಗೆ ಕೃತಜ್ಞರಾಗಿ ಜೀವಿಸಬೇಕೆಂದು ಅವನೇ ನಿಮಗೆ ಕಿವಿ, ಕಣ್ಣುಗಳು ಹಾಗೂ ಹೃದಯವನ್ನು ದಯಪಾಲಿಸಿದನು. {78}

أَلَمْ يَرَوْا۟ إِلَى ٱلطَّيْرِ مُسَخَّرَٰتٍ فِى جَوِّ ٱلسَّمَآءِ مَا يُمْسِكُهُنَّ إِلَّا ٱللَّهُ ۗ إِنَّ فِى ذَٰلِكَ لَـَٔايَـٰتٍ لِّقَوْمٍ يُؤْمِنُونَ

ಪಕ್ಷಿಗಳು (ಹಾರಾಡುವಾಗ) ಹೇಗೆ ಬಾನಂಗಳದಲ್ಲಿ ಒಂದು ರೀತಿಯ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ ಎಂಬುದನ್ನು ಇವರು ನೋಡುತ್ತಿಲ್ಲವೆ? ಅವು (ಭೂಮಿಗೆ ಬೀಳದಂತೆ) ಅಲ್ಲಾಹ್ ನಲ್ಲದೆ ಬೇರಾರೂ ಹಿಡಿದಿಡಲಾರರು. ಹೌದು, ವಿಶ್ವಾಸಿಗಳಾಗಲು ಬಯಸುವ ಜನಸಮೂಹಕ್ಕೆ ಆ ಪ್ರಕ್ರಿಯೆಯಲ್ಲಿ ನಿಜವಾಗಿಯೂ ದೃಷ್ಟಾಂತಗಳಿವೆ. {79}

وَٱللَّهُ جَعَلَ لَكُم مِّنۢ بُيُوتِكُمْ سَكَنًا وَجَعَلَ لَكُم مِّن جُلُودِ ٱلْأَنْعَـٰمِ بُيُوتًا تَسْتَخِفُّونَهَا يَوْمَ ظَعْنِكُمْ وَيَوْمَ إِقَامَتِكُمْ ۙ وَمِنْ أَصْوَافِهَا وَأَوْبَارِهَا وَأَشْعَارِهَآ أَثَـٰثًا وَمَتَـٰعًا إِلَىٰ حِينٍ

ನಿಮಗಾಗಿ ಅಲ್ಲಾಹ್ ನು ನೀವು ವಾಸಿಸುವ ಮನೆಗಳನ್ನು ನೆಮ್ಮದಿಯ ತಾಣಗಳನ್ನಾಗಿ ಮಾಡಿರುವನು; ಹಾಗೆಯೇ (ನಿಮ್ಮ ಪ್ರಯಾಣದ ವೇಳೆಯಲ್ಲಿ) ಜಾನುವಾರುಗಳ ತೊಗಲುಗಳ ವಸತಿಗಳನ್ನು ನಿಮೆಗೆ ನೀಡಿರುವನು. ಪ್ರಯಾಣದ ದಿನಗಳಲ್ಲೂ ಮೊಕ್ಕಾಂ ಹೂಡುವ ದಿನಗಳಲ್ಲೂ ಅದು ನಿಮ್ಮ ಪಾಲಿಗೆ (ಭಾರವಾಗಿರದೆ) ತುಂಬಾ ಲಘುವಾಗಿರುವಂತೆ ಅವನು ಮಾಡಿರುವನು. ಅಂತಹ ಜಾನುವಾರುಗಳ ಉಣ್ಣೆ, ತುಪ್ಪಳ ಹಾಗೂ ಅವುಗಳ ರೋಮಗಳಿಂದ ಅವನು ನಿಮಗೆ ಗೃಹೋಪಯೋಗದ ವಸ್ತುಗಳನ್ನು ಮತ್ತು ದಿನಬಳಕೆಯ ಹಲವು ಸಾಮಗ್ರಿಗಳನ್ನು ಮಾಡಿರುವನು; ಅವುಗಳನ್ನು ಒಂದು ನಿರ್ದಿಷ್ಟ ಸಮಯದ ವರೆಗೆ ನೀವು ಉಪಯೋಗಿಸುವಿರಿ. {80}

وَاللَّهُ جَعَلَ لَكُمْ مِمَّا خَلَقَ ظِلَالًا وَجَعَلَ لَكُمْ مِنَ الْجِبَالِ أَكْنَانًا وَجَعَلَ لَكُمْ سَرَابِيلَ تَقِيكُمُ الْحَرَّ وَسَرَابِيلَ تَقِيكُمْ بَأْسَكُمْ ۚ كَذَٰلِكَ يُتِمُّ نِعْمَتَهُ عَلَيْكُمْ لَعَلَّكُمْ تُسْلِمُونَ

ಮತ್ತು ಅಲ್ಲಾಹ್ ನು ತಾನು ಸೃಷ್ಟಿಸಿದ ಹಲವು ವಸ್ತುಗಳಿಗೆ ನೆರಳನ್ನು ಉಂಟುಮಾಡಿರುವುದು ನಿಮ್ಮ ಉಪಯೋಗಕ್ಕಾಗಿ. ಹಾಗೆಯೇ ಅವನು ಪರ್ವತಗಳಲ್ಲಿ ಆಶ್ರಯ ಪಡೆಯುವ ಸ್ಥಳಗಳನ್ನು ನಿಮಗಾಗಿ ನಿರ್ಮಿಸಿರುವನು. ಬಿಸಿಲಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಉಡುಪುಗಳನ್ನು ಅವನು ನಿಮಗೆ ನೀಡಿರುವನು; ಅಂತೆಯೇ ನಿಮ್ಮ ಯುದ್ಧಗಳಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳುವ ಕವಚಗಳನ್ನೂ ನೀಡಿರುವನು. ಹಾಗೆ ನೀವು ಅವನಿಗೆ ವಿನಮ್ರರಾಗಿ ಜೀವಿಸಬೇಕೆಂದು ಅವನು ತನ್ನ ಅನುಗ್ರಹವನ್ನು ನಿಮಗೆ ಪೂರ್ತಿಗೊಳಿಸಿರುವನು. {81}

فَإِنْ تَوَلَّوْا فَإِنَّمَا عَلَيْكَ الْبَلَاغُ الْمُبِينُ

ಅವೆಲ್ಲದರ ಹೊರತಾಗಿಯೂ ಈ ಜನರು ಮುಖ ತಿರುಗಿಸಿ ಕೊಳ್ಳುತ್ತಿದ್ದಾರೆ ಎಂದಾದರೆ, ಓ ಪೈಗಂಬರರೇ, ವಿಷಯವನ್ನು ಅತ್ಯಂತ ಸ್ಪಷ್ಟತೆಯೊಂದಿಗೆ ತಲುಪಿಸಿ ಬಿಡುವುದಷ್ಟೇ ನಿಮ್ಮ ಕರ್ತವ್ಯ. {82}

يَعْرِفُونَ نِعْمَتَ اللَّهِ ثُمَّ يُنْكِرُونَهَا وَأَكْثَرُهُمُ الْكَافِرُونَ

ವಾಸ್ತವವೇನೆಂದರೆ, ಅಲ್ಲಾಹ್ ನ ಎಲ್ಲಾ ಅನುಗ್ರಹಗಳನ್ನು ಅವರು ಚೆನ್ನಾಗಿ ಗುರುತಿಸಿಕೊಂಡು ಅನಂತರ ಅವನ್ನು ಅಲ್ಲಗಳೆಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರೂ ಸತ್ಯವನ್ನು ಧಿಕ್ಕರಿಸಿದವರಾಗಿದ್ದಾರೆ. {83}

وَيَوْمَ نَبْعَثُ مِنْ كُلِّ أُمَّةٍ شَهِيدًا ثُمَّ لَا يُؤْذَنُ لِلَّذِينَ كَفَرُوا وَلَا هُمْ يُسْتَعْتَبُونَ

(ಗತಿಸಿ ಹೋದ) ಪ್ರತಿಯೊಂದು ಸಮುದಾಯದಿಂದಲೂ (ಇಂತಹ ಅಪರಾಧಿಗಳ ವಿರುದ್ಧ) ಒಬ್ಬ ಸಾಕ್ಷಿಯನ್ನು ಎಬ್ಬಿಸಿ ನಿಲ್ಲಿಸಲಾಗುವ ಆ ದಿನ, ಸತ್ಯಕ್ಕೆ ಧಿಕ್ಕಾರ ತೋರಿದ ಜನರಿಗೆ ನೆಪವೊಡ್ಡಿಕೊಳ್ಳಲು ಅನುಮತಿ ಸಿಗಲಾರದು; ಮಾತ್ರವಲ್ಲ, (ಅಲ್ಲಾಹ್ ನನ್ನು) ತೃಪ್ತಿ ಪಡಿಸಿಕೊಳ್ಳಲು ಅವಕಾಶವನ್ನೂ ನೀಡಲಾಗದು. {84}

وَإِذَا رَأَى الَّذِينَ ظَلَمُوا الْعَذَابَ فَلَا يُخَفَّفُ عَنْهُمْ وَلَا هُمْ يُنْظَرُونَ

ದುಷ್ಟತನ ಮೆರೆದ ಜನರು ತಮಗಿರುವ ಶಿಕ್ಷೆಯನ್ನು ಕಂಡ ಬಳಿಕ ಅದನ್ನು ಅವರ ಪಾಲಿಗೆ ಲಘುಗೊಳಿಸಲಾಗದು; ಅವರಿಗೆ ಕಾಲಾವಕಾಶ ನೀಡುವ ವಿಷಯವೂ ಇಲ್ಲ. {85}

وَإِذَا رَأَى الَّذِينَ أَشْرَكُوا شُرَكَاءَهُمْ قَالُوا رَبَّنَا هَٰؤُلَاءِ شُرَكَاؤُنَا الَّذِينَ كُنَّا نَدْعُو مِنْ دُونِكَ ۖ فَأَلْقَوْا إِلَيْهِمُ الْقَوْلَ إِنَّكُمْ لَكَاذِبُونَ

(ಇಹಜೀವನದಲ್ಲಿ ಅಲ್ಲಾಹ್ ನೊಂದಿಗೆ) ಶಿರ್ಕ್ ಮಾಡುತ್ತಿದ್ದವರು, ತಾವು (ಕಲ್ಪಿಸಿಕೊಂಡ ಹುಸಿ) ದೇವರುಗಳನ್ನು ಕಂಡಾಗ, (ಅಲ್ಲಾಹ್ ನೊಡನೆ) ನಮ್ಮ ನಿಜವಾದ ಒಡೆಯನೇ, ನಿನ್ನನ್ನು ಬಿಟ್ಟು ನಾವು ಮೊರೆಯಿಡುತ್ತಿದ್ದುದು ಇವರಿಗೇ ಆಗಿತ್ತು ಎಂದು ಹೇಳುವರು. ಆಗ ಅವರು (ತಮಗೆ ಮೊರೆಯಿಟ್ಟವರ) ವಾದವನ್ನು ಅವರತ್ತವೇ ಎಸೆದು, ನೀವು ಹೇಳುತ್ತಿರುವುದು ಅಪ್ಪಟ ಸುಳ್ಳು ಎನ್ನುವರು. {86}

وَأَلْقَوْا إِلَى اللَّهِ يَوْمَئِذٍ السَّلَمَ ۖ وَضَلَّ عَنْهُمْ مَا كَانُوا يَفْتَرُونَ

ಅಂದು ಅವರೆಲ್ಲ ಅಲ್ಲಾಹ್ ನ ಮುಂದೆ ತಲೆತಗ್ಗಿಸಿ ನಿಲ್ಲಲಿರುವರು; ಮತ್ತು ಅವರು ಸೃಷ್ಟಿಸಿದ್ದ ಸುಳ್ಳುಗಳೆಲ್ಲವೂ ಅವರಿಂದ ದೂರ ಸರಿದು ಹೋಗುವುವು. {87}

الَّذِينَ كَفَرُوا وَصَدُّوا عَنْ سَبِيلِ اللَّهِ زِدْنَاهُمْ عَذَابًا فَوْقَ الْعَذَابِ بِمَا كَانُوا يُفْسِدُونَ

ಸತ್ಯವನ್ನು ತಿರಸ್ಕರಿಸುವುದರ ಜೊತಗೆ ಅಲ್ಲಾಹ್ ನ ಮಾರ್ಗದತ್ತ ಬಾರದಂತೆ ಜನರನ್ನು ತಡೆಯುತ್ತಿದ್ದವರಿಗೆ, (ನಾಡಿನಲ್ಲಿ ಅಂತಹ) ಭ್ರಷ್ಟತೆ ಮೆರೆದ ಕಾರಣಕ್ಕಾಗಿ ನಾವು ಅವರಿಗೆ ಶಿಕ್ಷೆಯ ಮೇಲೆ ಮತ್ತಷ್ಟು ಶಿಕ್ಷೆಯನ್ನು ಹೆಚ್ಚಿಸಿ ಕೊಡಲಿದ್ದೇವೆ. {88}

وَيَوْمَ نَبْعَثُ فِي كُلِّ أُمَّةٍ شَهِيدًا عَلَيْهِمْ مِنْ أَنْفُسِهِمْ ۖ وَجِئْنَا بِكَ شَهِيدًا عَلَىٰ هَٰؤُلَاءِ ۚ وَنَزَّلْنَا عَلَيْكَ الْكِتَابَ تِبْيَانًا لِكُلِّ شَيْءٍ وَهُدًى وَرَحْمَةً وَبُشْرَىٰ لِلْمُسْلِمِينَ

ಪೈಗಂಬರರೇ, ಪ್ರತಿಯೊಂದು ಸಮುದಾಯದಿಂದಲೂ ಅವರಿಂದಲೇ ಆದ ಒಬ್ಬ ಸಾಕ್ಷಿದಾರನನ್ನು ನಾವು ಎಬ್ಬಿಸಿ ನಿಲ್ಲಿಸಲಿರುವ ಆ ದಿನದ ಕುರಿತು (ನಿಮ್ಮ ಸಮುದಾಯವನ್ನು ಎಚ್ಚರಿಸಿರಿ)! ಅಂದು, ಪೈಗಂಬರರೇ, ಈ ಜನರ ಕುರಿತು ಸಾಕ್ಷಿ ನುಡಿಯಲು ನಾವು ನಿಮ್ಮನ್ನು ಮುಂದೆ ತರುವೆವು. (ಆ ದಿನಕ್ಕೆ ಸಂಬಂಧಿಸಿದಂತೆ) ಪ್ರತಿಯೊಂದು ವಿಷಯದ ಕುರಿತು ಸ್ಪಷ್ಟೀಕರಣ ನೀಡಲು ಅದಾಗಲೇ ನಾವು ಈ ಗ್ರಂಥವನ್ನು ನಿಮಗೆ ಇಳಿಸಿ ಕೊಟ್ಟಿರುತ್ತೇವೆ; (ಅಲ್ಲಾಹ್ ನ ಆಜ್ಞಾನುವರ್ತಿಗಳಾಗಿ ಬದುಕುವ) ಮುಸ್ಲಿಮ್ ಜನರ ಪಾಲಿಗೆ ಈ ಗ್ರಂಥವು ಒಂದು ಮಾರ್ಗದರ್ಶಿಯಾಗಿದೆ; ಒಂದು ಅನುಗ್ರಹವೂ ಶುಭಸುದ್ದಿ ಸಾರುವ ಗ್ರಂಥವೂ ಆಗಿದೆ. {89}

إِنَّ اللَّهَ يَأْمُرُ بِالْعَدْلِ وَالْإِحْسَانِ وَإِيتَاءِ ذِي الْقُرْبَىٰ وَيَنْهَىٰ عَنِ الْفَحْشَاءِ وَالْمُنْكَرِ وَالْبَغْيِ ۚ يَعِظُكُمْ لَعَلَّكُمْ تَذَكَّرُونَ

ಹೌದು, ಯಾವತ್ತೂ ನ್ಯಾಯ ಪಾಲಿಸಬೇಕೆಂದೂ ಒಳ್ಳೆಯದನ್ನೇ ಮಾಡಬೇಕೆಂದೂ ನೆಂಟರಿಷ್ಟರಿಗೆ ನೀಡುತ್ತಾ ಇರಬೇಕೆಂದೂ ಅಲ್ಲಾಹ್ ನು ಅಜ್ಞಾಪಿಸುತ್ತಾನೆ. ಹಾಗೆಯೇ ಎಲ್ಲ ವಿಧ ಅಶ್ಲೀಲತೆಗಳಿಂದ, ಸಕಲ ರೀತಿಯ ಅಧರ್ಮ - ಅನಾಚಾರಗಳಿಂದ ಹಾಗೂ ಭಂಡತನ - ಅತಿಕ್ರಮಗಳಿಂದ ದೂರವಿರಬೇಕೆಂದು ಅವನು ನಿಮಗೆ ಆದೇಶಿಸುತ್ತಾನೆ. ನೀವು ಪಾಠಕಲಿಯಲೆಂದು ಅವನು ನಿಮಗೆ ಹೀಗೆ ಉಪದೇಶ ನಿಡುತ್ತಿರುತ್ತಾನೆ. {90}

وَأَوْفُوا بِعَهْدِ اللَّهِ إِذَا عَاهَدْتُمْ وَلَا تَنْقُضُوا الْأَيْمَانَ بَعْدَ تَوْكِيدِهَا وَقَدْ جَعَلْتُمُ اللَّهَ عَلَيْكُمْ كَفِيلًا ۚ إِنَّ اللَّهَ يَعْلَمُ مَا تَفْعَلُونَ

ಹಾಗೆಯೇ [ದಿವ್ಯ ಗ್ರಂಥಗಳನ್ನು ಪಡಕೊಂಡಿರುವ ಓ ಜನರೇ], ಅಲ್ಲಾಹ್ ನೊಂದಿಗೆ ನೀವು ಒಂದು ಒಡಂಬಡಿಕೆಯಲ್ಲಿ ಏರ್ಪಟ್ಟಿರುವುದರಿಂದ ಅದನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸುವವರಾಗಿರಿ. ನೀವು ಒಂದು ಪ್ರತಿಜ್ಞೆ ಕೈಗೊಂಡು ಅದನ್ನು ಖಾತ್ರಿಪಡಿಸಿ, ತದನಂತರ ಅಂತಹ ಪ್ರತಿಜ್ಞೆಯನ್ನು ಮುರಿಯುವವರಾಗದಿರಿ! ಸಾಲದಕ್ಕೆ ನೀವು ಅಲ್ಲಾಹ್ ನನ್ನು ಅದಕ್ಕೆ ಸಾಕ್ಷಿಯಾಗಿ ನಿಲ್ಲಿಸಿರುವಿರಿ! (ಅದೆನ್ನೆಲ್ಲ ಕಡೆಗಣಿಸಿ) ನೀವು ಏನೆಲ್ಲ ಮಾಡಿತ್ತಿರುವಿರೋ ಅದು ಅಲ್ಲಾಹ್ ನಿಗೆ ಚೆನ್ನಾಗಿ ತಿಳಿದಿದೆ. {91}

وَلَا تَكُونُوا كَالَّتِي نَقَضَتْ غَزْلَهَا مِنْ بَعْدِ قُوَّةٍ أَنْكَاثًا تَتَّخِذُونَ أَيْمَانَكُمْ دَخَلًا بَيْنَكُمْ أَنْ تَكُونَ أُمَّةٌ هِيَ أَرْبَىٰ مِنْ أُمَّةٍ ۚ إِنَّمَا يَبْلُوكُمُ اللَّهُ بِهِ ۚ وَلَيُبَيِّنَنَّ لَكُمْ يَوْمَ الْقِيَامَةِ مَا كُنْتُمْ فِيهِ تَخْتَلِفُونَ

ನಿಮ್ಮಲ್ಲಿಯ ಒಂದು ಪಂಗಡವು ಮತ್ತೊಂದು ಪಂಗಡಕ್ಕಿಂತ ಹೆಚ್ಚು ಸಂವೃದ್ಧವಾಗಿರುವ ಕಾರಣ, ನೀವು ಕೈಗೊಂಡ ಪ್ರತಿಜ್ಞೆಗಳನ್ನು (ಸರಿಯಾಗಿ ನಿಭಾಯಿಸದೆ) ಪರಸ್ಪರರನ್ನು ವಂಚಿಸಲು ಬಳಸುತ್ತಿರುವಿರಿ. (ಜೋಕೆ!) ಬಹಳ ಶ್ರಮಪಟ್ಟು ಸಾಕಷ್ಟು ಗಟ್ಟಿಯಾದ ನೂಲನ್ನು ತಯಾರಿಸಿ, ನಂತರ ತಾನೇ ಅದನ್ನು ತುಂಡುತುಂಡಾಗಿ ಕತ್ತರಿಸಿ ಹಾಕಿದ ಒಬ್ಬಳಂತೆ ನೀವಾಗದಿರಿ! ಅಲ್ಲಾಹ್ ನು ನಿಮ್ಮ ಪ್ರತಿಜ್ಞೆಗಳ ವಿಷಯದಲ್ಲಿ ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಾನೆ. ನೀವು (ಪರಸ್ಪರರನ್ನು) ಒಪ್ಪದೆ ಭಿನ್ನತೆ ಬೆಳೆಸಿಕೊಂಡ ಸಕಲ ವಿಷಯಗಳ ಕುರಿತು ಅವನು ನಿಮಗೆ ಪುನರುತ್ಥಾನದ ದಿನ [ನರಕ ಶಿಕ್ಷೆ ವಿಧಿಸುವುದಕ್ಕಿಂತ ಮುಂಚಿತವಾಗಿ] ಚೆನ್ನಾಗಿ ತಿಳಿಸಿ ಕೊಡಲಿದ್ದಾನೆ. {92}

وَلَوْ شَاءَ اللَّهُ لَجَعَلَكُمْ أُمَّةً وَاحِدَةً وَلَٰكِنْ يُضِلُّ مَنْ يَشَاءُ وَيَهْدِي مَنْ يَشَاءُ ۚ وَلَتُسْأَلُنَّ عَمَّا كُنْتُمْ تَعْمَلُونَ

ಒಂದು ವೇಳೆ ಅಲ್ಲಾಹ್ ನು ಬಯಸಿರುತ್ತಿದ್ದರೆ ನಿಮ್ಮೆಲ್ಲರನ್ನು [ಭಿನ್ನಾಭಿಪ್ರಾಯಗಳೇ ಇಲ್ಲದ] ಒಂದೇ ಸಮುದಾಯವನ್ನಾಗಿ ಮಾಡಿರುತ್ತಿದ್ದನು. ಆದರೆ ಅವನು [ಭೂಲೋಕದಲ್ಲಿ ನಿಮಗೆ ಸ್ವಾತಂತ್ರ್ಯ ನೀಡಿ ಪರೀಕ್ಷಿಸುತ್ತಿರುವ ಕಾರಣ, ನಿಮ್ಮ ಮನಸ್ಸಿನ ಒಲವು ಪರಿಗಣಿಸಿ, ನಿಮ್ಮಲ್ಲಿ] ಯಾರನ್ನು ದಾರಿ ತಪ್ಪಿಸ ಬಯಸುವನೋ ಅವರನ್ನು ದಾರಿ ತಪ್ಪಿಸುವನು; ಮತ್ತು ಯಾರನ್ನು ಸರಿದಾರಿಯಲ್ಲಿ ನಡೆಸ ಬಯಸುವನೋ ಅವರನ್ನು ಸರಿದಾರಿಯಲ್ಲಿ ನಡೆಸುವನು. ಹೌದು, ನೀವು (ಭೂಲೋಕದಲ್ಲಿ) ಮಾಡುತ್ತಿದ್ದ ಎಲ್ಲ ಕರ್ಮಗಳ ಕುರಿತು ನಿಶ್ಚಿತವಾಗಿಯೂ ನಿಮ್ಮನ್ನು ಪ್ರಶ್ನಿಸಲಾಗುವುದು! {93}

وَلَا تَتَّخِذُوا أَيْمَانَكُمْ دَخَلًا بَيْنَكُمْ فَتَزِلَّ قَدَمٌ بَعْدَ ثُبُوتِهَا وَتَذُوقُوا السُّوءَ بِمَا صَدَدْتُمْ عَنْ سَبِيلِ اللَّهِ ۖ وَلَكُمْ عَذَابٌ عَظِيمٌ

[ಅಂತೆಯೇ, ಓ ಮುಸ್ಲಿಮರೇ], ನೀವು ಕೂಡ ಪ್ರತಿಜ್ಞೆಗಳನ್ನು ಕೈಗೊಂಡ ನಂತರ ಪರಸ್ಪರರನ್ನು ವಂಚಿಸಲು ಅದನ್ನು ಬಳಸದಿರಿ. ಅನ್ಯಥಾ ಒಮ್ಮೆ (ಸತ್ಯಧರ್ಮದ ವಿಷಯದಲ್ಲಿ) ಅಚಲವಾಗಿದ್ದ ನಿಮ್ಮ ಪಾದಗಳು ಕದಲಿ ಹೋದಾವು! ನೀವೂ ಜನರನ್ನು ಅಲ್ಲಾಹ್ ನ ಮಾರ್ಗದಿಂದ ತಡೆದ ಕಾರಣಕ್ಕಾಗಿ ಶಿಕ್ಷೆಯ ರುಚಿ ಸವಿಯ ಬೇಕಾದೀತು; (ಪರಲೋಕದಲ್ಲಿ) ನಿಮಗೂ ದೊಡ್ಡ ಶಿಕ್ಷೆಯಾದೀತು! {94}

وَلَا تَشْتَرُوا بِعَهْدِ اللَّهِ ثَمَنًا قَلِيلًا ۚ إِنَّمَا عِنْدَ اللَّهِ هُوَ خَيْرٌ لَكُمْ إِنْ كُنْتُمْ تَعْلَمُون

ಹಾಗಿರುವಾಗ ಅಲ್ಲಾಹ್ ನೊಂದಿಗೆ ಮಾಡಿದ ಪ್ರತಿಜ್ಞೆಗಳನ್ನು ನೀವು ತುಚ್ಛವಾದ ಬೆಲೆಗೆ [ಅರ್ಥಾತ್ ಭೌತಿಕ ಲಾಭ ಪಡೆಯಲು] ಮಾರದಿರಿ. ನಿಮಗೆ ತಿಳಿವಳಿಕೆ ಇದೆ ಎಂದಾದರೆ, ಅಲ್ಲಾಹ್ ನ ಬಳಿ ಏನಿದೆಯೋ ಅದುವೇ ನಿಮ್ಮ ಪಾಲಿಗೆ ಉತ್ತಮವಾದುದು! {95}

مَا عِنْدَكُمْ يَنْفَدُ ۖ وَمَا عِنْدَ اللَّهِ بَاقٍ ۗ وَلَنَجْزِيَنَّ الَّذِينَ صَبَرُوا أَجْرَهُمْ بِأَحْسَنِ مَا كَانُوا يَعْمَلُونَ

ನಿಮ್ಮ ಬಳಿ ಏನಿದೆಯೋ ಅದೆಲ್ಲ ಅಳಿದು ಹೋಗುವಂತಹದ್ದು; ಆದರೆ ಅಲ್ಲಾಹ್ ನ ಬಳಿ ಏನಿದೆಯೋ ಅದು ಬಾಕಿ ಉಳಿಯುವಂತಹದ್ದು! (ನಮ್ಮ ಮಾರ್ಗದಲ್ಲಿ) ಸಹನೆ ತೋರಿದವರಿಗೆ, ಅವರು ಕೈಗೊಂಡ ಸತ್ಕರ್ಮಗಳ ಫಲವಾಗಿ, ಅತ್ಯುತ್ತಮ ರೀತಿಯ ಪ್ರತಿಫಲವನ್ನು ನಾವು ಕೊಡಲಿರುವುದು ಖಂಡಿತ! {96}

مَنْ عَمِلَ صَالِحًا مِنْ ذَكَرٍ أَوْ أُنْثَىٰ وَهُوَ مُؤْمِنٌ فَلَنُحْيِيَنَّهُ حَيَاةً طَيِّبَةً ۖ وَلَنَجْزِيَنَّهُمْ أَجْرَهُمْ بِأَحْسَنِ مَا كَانُوا يَعْمَلُونَ

ಒಬ್ಬ ವ್ಯಕ್ತಿಯು - ಅದು ಪುರುಷನಾಗಿರಲಿ ಅಥವಾ ಸ್ತ್ರೀಯಾಗಿರಲಿ - ವಿಶ್ವಾಸಿಯಾಗಿರುತ್ತಾ ಸತ್ಕಾರ್ಯಗಳನ್ನೂ ಮಾಡಿದ್ದರೆ, ನಾವು ಅವರಿಗೆ (ಇಹಪರಗಳಲ್ಲಿ) ಪರಿಶುದ್ಧ ಬದುಕು ನೀಡುವೆವು; ಅವರು ಕೈಗೊಂಡ ಸತ್ಕರ್ಮಗಳ ಫಲವಾಗಿ, ಅತ್ಯುತ್ತಮ ರೀತಿಯ ಪ್ರತಿಫಲವನ್ನು ನಾವು ಕೊಟ್ಟೇ ತೀರುವೆವು. {97}

فَإِذَا قَرَأْتَ الْقُرْآنَ فَاسْتَعِذْ بِاللَّهِ مِنَ الشَّيْطَانِ الرَّجِيمِ

ಆದ್ದರಿಂದ [ಓ ಪೈಗಂಬರರೇ, ಇವರನ್ನು ಉಪದೇಶಿಸುವ ಸಲುವಾಗಿ, ಇವರ ಮುಂದೆ] ನೀವು ಕುರ್‌ಆನ್ ಓದುವಾಗಲೆಲ್ಲ, ತಿರಸ್ಕೃತನಾದ ಆ ಸೈತಾನನ (ಕುಯುಕ್ತಿಗಳಿಂದ) ರಕ್ಷಣೆ ನೀಡುವಂತೆ (ಮೊದಲು) ಅಲ್ಲಾಹ್ ನೊಂದಿಗೆ ಪ್ರಾರ್ಥಿಸಿರಿ. {98}

إِنَّهُ لَيْسَ لَهُ سُلْطَانٌ عَلَى الَّذِينَ آمَنُوا وَعَلَىٰ رَبِّهِمْ يَتَوَكَّلُونَ

ಹೌದು, ಯಾರಿಗೆ (ಅಲ್ಲಾಹ್ ನಲ್ಲಿ) ವಿಶ್ವಾಸವಿದೆಯೋ, ತಮ್ಮ ಒಡೆಯನ ಮೇಲೆ ಭರವಸೆ ಇದೆಯೋ ಅಂತಹವರ ಮೇಲೆ ಸೈತಾನನಿಗೆ (ಮೇಲುಗೈ ಸಾಧಿಸುವಂತಹ) ಯಾವ ಶಕ್ತಿಯೂ ಇಲ್ಲ. {99}

إِنَّمَا سُلْطَانُهُ عَلَى الَّذِينَ يَتَوَلَّوْنَهُ وَالَّذِينَ هُمْ بِهِ مُشْرِكُونَ

ಇನ್ನು, ಯಾರಾದರೂ ಸೈತಾನನನ್ನು ಆಪ್ತನನ್ನಾಗಿ ಮಾಡಿಕೊಂಡರೆ; ಪ್ರಾರ್ಥಿಸುವಾಗ ಅಲ್ಲಾಹ್ ನ ದೇವತ್ವದಲ್ಲಿ ಬೇರೆಯವರನ್ನೂ ಸೇರಿಸಿಕೊಂಡರೆ, ಅಂತಹ ಜನರ ಮೇಲೆ ಮಾತ್ರ ಸೈತಾನನು [ತನ್ನ ಕುಯುಕ್ತಿ ಪ್ರಯೋಗಿಸಲು] ಶಕ್ತಿ ಪಡೆಯುತ್ತಾನೆ. {100}

وَإِذَا بَدَّلْنَا آيَةً مَكَانَ آيَةٍ ۙ وَاللَّهُ أَعْلَمُ بِمَا يُنَزِّلُ قَالُوا إِنَّمَا أَنْتَ مُفْتَرٍ ۚ بَلْ أَكْثَرُهُمْ لَا يَعْلَمُونَ

[ಹಿಂದಿನ ದಿವ್ಯ ಗ್ರಂಥದ] ಯಾವುದಾದರೂ ಒಂದು ವಚನವನ್ನು [ಅರ್ಥಾತ್ ಕಾಯ್ದೆಯನ್ನು] ನಾವು ರದ್ದುಗೊಳಿಸಿ ಅದರ ಸ್ಥಾನದಲ್ಲಿ ಬೇರೊಂದು ವಚನವನ್ನು ಕಳುಹಿಸುವಾಗ, ಏನನ್ನು ಕಳುಹಿಸಬೇಕು [ಮತ್ತು ಏನನ್ನು ರದ್ದುಗೊಳಿಸಬೇಕು] ಎಂದು ಅಲ್ಲಾಹ್ ನಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಅದನ್ನು ಸ್ವತಃ ನೀವೇ ರಚಿಸಿ ತಂದಿರುವಿರಿ ಎಂದು ಇವರು ಆರೋಪಿಸುತ್ತಿದ್ದಾರೆ! ಹಾಗಲ್ಲ, ಇವರಲ್ಲಿ ಹೆಚ್ಚಿನವರು (ಅಂತಹ ಬದಲಾವಣೆಯ ಯಥಾರ್ಥ) ತಿಳಿದವರಲ್ಲ. {101}

قُلْ نَزَّلَهُ رُوحُ الْقُدُسِ مِنْ رَبِّكَ بِالْحَقِّ لِيُثَبِّتَ الَّذِينَ آمَنُوا وَهُدًى وَبُشْرَىٰ لِلْمُسْلِمِينَ

ವಿಶ್ವಾಸಿಗಳ ವಿಶ್ವಾಸವನ್ನು ಬಲಪಡಿಸುವ ಸಲುವಾಗಿಯೂ, ಮುಸ್ಲಿಮರ ಪಾಲಿಗೆ ಮಾರ್ಗದರ್ಶಿ ಮತ್ತು ಶುಭಸುದ್ದಿಯಾಗಿಯೂ, ಆ ಪವಿತ್ರಾತ್ಮವು [ಅಂದರೆ ಅಲ್ಲಾಹ್ ನ ಪ್ರಮುಖ ದೂತ ಜಿಬ್ರೀಲ್ ರು] ಇದನ್ನು ನನ್ನ ಒಡೆಯನ ವತಿಯಿಂದ ಯಥಾವತ್ತಾಗಿ (ನನ್ನಲ್ಲಿಗೆ) ಇಳಿಸಿ ತಂದಿರುತ್ತಾರೆ ಎಂದು ಪೈಗಂಬರರೇ, ನೀವು ಈ ಜನರಿಗೆ ಸ್ಪಷ್ಟಪಡಿಸಿರಿ. {102}

وَلَقَدْ نَعْلَمُ أَنَّهُمْ يَقُولُونَ إِنَّمَا يُعَلِّمُهُ بَشَرٌ ۗ لِسَانُ الَّذِي يُلْحِدُونَ إِلَيْهِ أَعْجَمِيٌّ وَهَٰذَا لِسَانٌ عَرَبِيٌّ مُبِينٌ

ಆತನಿಗೆ (ಈ ಕುರ್‌ಆನ್ ಅನ್ನು) ಕಲಿಸುತ್ತಿರುವುದು ಖಂಡಿತವಾಗಿಯೂ ಒಬ್ಬ 'ಮಾನವ' ಎಂದು (ಕುರೈಷರು) ಆರೋಪಿಸುತ್ತಿರುವ ಬಗ್ಗೆ ನಮಗೆ ಚೆನ್ನಾಗಿ ತಿಳಿದಿರುತ್ತದೆ. ಯಾರೆಡೆಗೆ ಅವರು ಬೊಟ್ಟು ಮಾಡುತ್ತಿರುವರೋ ಅವನು ಅರಬಿ ಭಾಷೆ ಮಾತನಾಡದ ಒಬ್ಬ 'ಅಜಮಿ' ಆಗಿರುವನು! ಆದರೆ ಇದು (ಈ ಕುರ್‌ಆನ್) ಸ್ಪಷ್ಟವಾದ ಅರಬಿ ಭಾಷೆಯಲ್ಲಿದೆ! {103}

إِنَّ الَّذِينَ لَا يُؤْمِنُونَ بِآيَاتِ اللَّهِ لَا يَهْدِيهِمُ اللَّهُ وَلَهُمْ عَذَابٌ أَلِيمٌ

ವಾಸ್ತವವೇನೆಂದರೆ ಅಲ್ಲಾಹ್ ನ ವಚನಗಳನ್ನು ನಂಬದ ಜನರಿಗೆ ಅಲ್ಲಾಹ್ ನು ಸರಿದಾರಿ ತೋರಿಸುವುದಿಲ್ಲ; ಮುಂದೆ ಅವರಿಗೆ ನೋವಿನಿಂದ ಕೂಡಿದ ಶಿಕ್ಷೆಯೂ ಇದೆ. {104}

إِنَّمَا يَفْتَرِي الْكَذِبَ الَّذِينَ لَا يُؤْمِنُونَ بِآيَاتِ اللَّهِ ۖ وَأُولَٰئِكَ هُمُ الْكَاذِبُونَ

ಅಲ್ಲಾಹ್ ನ ವಚನಗಳನ್ನು ನಂಬದ ಜನರೇ ಸುಳ್ಳುಗಳನ್ನು ರಚಿಸುತ್ತಿರುವವರು; ಸುಳ್ಳಾಡುತ್ತಿರುವ ಜನರು ಅವರೇ (ಹೊರತು ಪೈಗಂಬರರಲ್ಲ)! {105}

مَنْ كَفَرَ بِاللَّهِ مِنْ بَعْدِ إِيمَانِهِ إِلَّا مَنْ أُكْرِهَ وَقَلْبُهُ مُطْمَئِنٌّ بِالْإِيمَانِ وَلَٰكِنْ مَنْ شَرَحَ بِالْكُفْرِ صَدْرًا فَعَلَيْهِمْ غَضَبٌ مِنَ اللَّهِ وَلَهُمْ عَذَابٌ عَظِيمٌ

ಒಬ್ಬಾತನು ವಿಶ್ವಾಸಿಯಾದ ನಂತರ, ಅಂತರಾತ್ಮದಲ್ಲಿ ವಿಶ್ವಾಸದ ಬಗ್ಗೆ ಸಂಪೂರ್ಣ ಸಂತೃಪ್ತಿ ಹೊಂದಿದ್ದು, [ಕೇವಲ ಪೈಗಂಬರರ ವಿರೋಧಿಗಳ ದಬ್ಬಾಳಿಕೆಗೆ ಒಳಗಾಗಿ] ಅಲ್ಲಾಹ್ ನಿಗೆ ಧಿಕ್ಕಾರ ತೋರ್ಪಡಿಸಲು ನಿರ್ಬಂಧಿತನಾದರೆ ಅಂತಹವನ ವಿಷಯ ಬೇರೆ. ಆದರೆ ಯಾರಾದರೂ ಧಿಕ್ಕಾರದ ನಿಲುವನ್ನು ತೆರೆದ ಹೃದಯದೊಂದಿಗೆ ಸ್ವೀಕರಿಸಿದರೆ ಅಂತಹವರ ಮೇಲೆ ಅಲ್ಲಾಹ್ ನ ಕಡುಕ್ರೋಧ ಎರಗಿ ಬೀಳುವುದು; ಮಾತ್ರವಲ್ಲ ಅಂತಹವರಿಗೆ (ಪರಲೋಕದಲ್ಲಿ) ಘೋರ ಶಿಕ್ಷೆಯೂ ಇದೆ. {106}

ذَٰلِكَ بِأَنَّهُمُ اسْتَحَبُّوا الْحَيَاةَ الدُّنْيَا عَلَى الْآخِرَةِ وَأَنَّ اللَّهَ لَا يَهْدِي الْقَوْمَ الْكَافِرِينَ

(ಅವರ ನಿಲುವು) ಹಾಗಾಗಲು ಕಾರಣವೇನೆಂದರೆ, (ನಶ್ವರವಾದ) ಲೌಕಿಕ ಜೀವನವನ್ನೇ (ಶಾಶ್ವತವಾದ) ಪಾರಲೌಕಿಕ ಜೀವನಕ್ಕಿಂತ ಹೆಚ್ಚಾಗಿ ಅವರು ಇಷ್ಟ ಪಟ್ಟಿರುವುದು. ಹೌದು, ಅಲ್ಲಾಹ್ ನಿಗೆ ಧಿಕ್ಕಾರ ತೋರಿದ ಜನಸಮೂಹಕ್ಕೆ ಅಲ್ಲಾಹ್ ನು ಸರಿದಾರಿ ತೋರಲಾರ! {107}

أُولَٰئِكَ الَّذِينَ طَبَعَ اللَّهُ عَلَىٰ قُلُوبِهِمْ وَسَمْعِهِمْ وَأَبْصَارِهِمْ ۖ وَأُولَٰئِكَ هُمُ الْغَافِلُونَ

ಅಂತಹ ಜನರ ಹೃದಯಗಳನ್ನೂ ಕಿವಿಗಳನ್ನೂ ಕಣ್ಣುಗಳನ್ನೂ ಅಲ್ಲಾಹ್ ನು ಮುದ್ರೆಯೊತ್ತಿ ಮುಚ್ಚಿ ಬಿಡುತ್ತಾನೆ; (ಪರಲೋಕದ ಯಶಸ್ಸಿಗೆ) ಅಸಡ್ಡೆ ತೋರಿದ ಜನರೇ ಅವರು! {108}

لَا جَرَمَ أَنَّهُمْ فِي الْآخِرَةِ هُمُ الْخَاسِرُونَ

ಪರಲೋಕದಲ್ಲಿ ಅಂತಹವರು ಸೋಲುಣ್ಣುವರು ಎಂಬುದರಲ್ಲಿ ಸಂಶಯವೇ ಇಲ್ಲ. {109}

ثُمَّ إِنَّ رَبَّكَ لِلَّذِينَ هَاجَرُوا مِنْ بَعْدِ مَا فُتِنُوا ثُمَّ جَاهَدُوا وَصَبَرُوا إِنَّ رَبَّكَ مِنْ بَعْدِهَا لَغَفُورٌ رَحِيمٌ

[ವಿರೋಧಿಗಳ ದಬ್ಬಾಳಿಕೆಯಂತಹ] ಸತ್ವಪರೀಕ್ಷೆಗೆ ಒಳಗಾದ ನಂತರ (ಅಲ್ಲಾಹ್ ನಿಗಾಗಿ) ಸ್ವಂತ ನಾಡನ್ನು ತ್ಯಜಿಸಿ ಬೇರೆ ನಾಡಿಗೆ ವಲಸೆ ಹೋಗಿ, ಆ ಬಳಿಕ (ಅಲ್ಲಿದ್ದುಕೊಂಡೇ ಸತ್ಯಕ್ಕಾಗಿ) ಶ್ರಮಪಟ್ಟು ಹೋರಾಡಿ, ಬವಣೆಗಳನ್ನು ಸಹಿಸಿ ದೃಢವಾಗಿ ನಿಂತವರು ಯಾರೋ, ನಿಮ್ಮ ಒಡೆಯನು ಅಂತಹವರ ಪಾಲಿಗೆ [ಸತ್ವಪರೀಕ್ಷೆಯ ಆ ಎಲ್ಲ ಹಂತಗಳು ದಾಟಿದ] ನಂತರ ಬಹಳವಾಗಿ ಕ್ಷಮಿಸುವವನೂ ಅತ್ಯಧಿಕ ಕರುಣೆ ತೋರುವವನೂ ಆಗಿರುವನು. {110}

يَوْمَ تَأْتِي كُلُّ نَفْسٍ تُجَادِلُ عَنْ نَفْسِهَا وَتُوَفَّىٰ كُلُّ نَفْسٍ مَا عَمِلَتْ وَهُمْ لَا يُظْلَمُونَ

ಅಂದು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಉಳಿವಿಗಾಗಿ ವಾದಿಸುತ್ತಾ ಬರುವನು; ಪ್ರತಿಯೊಬ್ಬನಿಗೂ ತಾನೆಸಗಿದ ಕರ್ಮಗಳಿಗೆ ಸಂಪೂರ್ಣವಾದ ಪ್ರತಿಫಲ ನೀಡಲಾಗುವಾಗ ದಿನ ಅವರೊಂದಿಗೆ ಸ್ವಲ್ಪವೂ ಅನ್ಯಾಯ ಮಾಡಲಾಗದು. {111}

وَضَرَبَ اللَّهُ مَثَلًا قَرْيَةً كَانَتْ آمِنَةً مُطْمَئِنَّةً يَأْتِيهَا رِزْقُهَا رَغَدًا مِنْ كُلِّ مَكَانٍ فَكَفَرَتْ بِأَنْعُمِ اللَّهِ فَأَذَاقَهَا اللَّهُ لِبَاسَ الْجُوعِ وَالْخَوْفِ بِمَا كَانُوا يَصْنَعُونَ

[ಕುರೈಷ್ ಜನರಿಗೆ ಅರ್ಥವಾಗಲೆಂದು] ಅಲ್ಲಾಹ್ ನು ನಾಡೊಂದರ ಉದಾಹರಣೆ ನೀಡುತ್ತಿದ್ದಾನೆ. ಶಾಂತಿ ಸಮಾಧಾನಗಳು ನೆಲೆಲಿಸಿದ್ದ ಆ ನಾಡಿನ (ವಾಸಿಗಳಿಗೆ) ಎಲ್ಲೆಡೆಗಳಿಂದ ಅನ್ನಾಹಾರವು ಧಾರಾಳವಾಗಿ ಬಂದು ಸೇರುತ್ತಿತ್ತು. ಹಾಗಿರುವಾಗ, ಅಲ್ಲಾಹ್ ನು ನೀಡಿದ್ದ ಆ ಸುಭಿಕ್ಷೆಯ ಅನುಗ್ರಹವನ್ನು (ಅಲ್ಲಿಯ ನಿವಾಸಿಗಳು) ಅಲ್ಲಗಳೆದು ಕೃತಘ್ನತೆ ತೋರಿದರು! ಅವರ ಅಂತಹ ಕೃತ್ಯಕ್ಕೆ ಶಿಕ್ಷೆಯಾಗಿ ಅಲ್ಲಾಹ್ ನು ಅವರಿಗೆ ಹಸಿವಿನ ರುಚಿ ತೋರಿಸಿದನು; (ಶಾಂತಿ ಸಮಾಧಾನಗಳಿಗೆ ಬದಲಾಗಿ) ಭಯ-ಭೀತಿಯ ಉಡುಗೆ ತೊಡಿಸಿದನು! {112}

وَلَقَدْ جَاءَهُمْ رَسُولٌ مِنْهُمْ فَكَذَّبُوهُ فَأَخَذَهُمُ الْعَذَابُ وَهُمْ ظَالِمُونَ

ಇಷ್ಟಾಗಿ ಅವರದೇ ಜನಾಂಗಕ್ಕೆ ಸೇರಿದ ಒಬ್ಬ ದೂತನೂ ಸಹ ಅವರ ಬಳಿಗೆ ಬಂದಿದ್ದರು. ಆದರೆ ಅವರು ಆ ದೂತನನ್ನು ಅಲ್ಲಗಳೆದರು! ಆ ಕಾರಣಕ್ಕಾಗಿ (ಅಲ್ಲಾಹ್ ನ) ಶಿಕ್ಷೆಯು ಅವರನ್ನು ಬಂದು ಹಿಡಿಯಿತು; ಅವರು (ತಮ್ಮ ಮೇಲೆ ತಾವೇ) ಅನ್ಯಾಯ ಮಾಡಿಕೊಂಡರು! {113}

فَكُلُوا مِمَّا رَزَقَكُمُ اللَّهُ حَلَالًا طَيِّبًا وَاشْكُرُوا نِعْمَتَ اللَّهِ إِنْ كُنْتُمْ إِيَّاهُ تَعْبُدُونَ

ಆದ್ದರಿಂದ [ಜನರೇ, ಆ ನಾಡಿನ ಕೃಘ್ನ ಜನರಂತೆ ನೀವಾಗದಿರಿ, ಬದಲಾಗಿ] ನಿಮಗೆ ಆಹಾರವಾಗಿ ಅಲ್ಲಾಹ್ ನು ನೀಡಿದ ಶುದ್ಧವಾದ ಧರ್ಮಬದ್ಧವಾದ ಭಕ್ಷ್ಯ ಪದಾರ್ಥಗಳನ್ನು ಸೇವಿಸಿರಿ. ನೀವು ಅಲ್ಲಾಹ್ ನನ್ನು ಮಾತ್ರ ಆರಾಧಿಸುವ ಜನರು ಹೌದಾದರೆ, ಅವನು ನೀಡಿದ ಅನುಗ್ರಹಗಳಿಗಾಗಿ ಅವನಿಗೆ ಕೃತಜ್ಞತೆ ಸಲ್ಲಿಸಿರಿ. {114}

إِنَّمَا حَرَّمَ عَلَيْكُمُ الْمَيْتَةَ وَالدَّمَ وَلَحْمَ الْخِنْزِيرِ وَمَا أُهِلَّ لِغَيْرِ اللَّهِ بِهِ ۖ فَمَنِ اضْطُرَّ غَيْرَ بَاغٍ وَلَا عَادٍ فَإِنَّ اللَّهَ غَفُورٌ رَحِيمٌ

ಅಲ್ಲಾಹ್ ನು ನಿಮಗೆ ನಿಷೇಧಿಸಿರುವುದು (ಪ್ರಾಣಿ-ಪಕ್ಷಿಗಳ) ಶವದ ಮಾಂಸ, ರಕ್ತ, ಹಂದಿಮಾಂಸ ಹಾಗೂ ಅಲ್ಲಾಹ್ ನಿಗೆ ಬದಲು ಇತರರಿಗೆ ಅರ್ಪಿಸಲಾದ ಆಹಾರ ಪದಾರ್ಥಗಳನ್ನು ಮಾತ್ರ. ಆದರೆ ಒಬ್ಬಾತನು (ಹಸಿವಿನ ಕಾರಣ ಗತ್ಯಂತರವಿಲ್ಲದೆ ಅದನ್ನು ತಿನ್ನಲು) ನಿರ್ಬಂಧಿತನಾದರೆ, ಆತನು ಧಿಕ್ಕಾರದ ಇರಾದೆ ಹೊಂದಿರದೆ, ಮಿತಿಯನ್ನು ಮೀರದೆ (ನಿಷೇಧಿತ ವಸ್ತುಗಳನ್ನು ಸ್ವಲ್ಪ ತಿಂದು ಬಿಟ್ಟರೆ ಪರವಾಗಿಲ್ಲ. ಏಕೆಂದರೆ) ಅಲ್ಲಾಹ್ ನು ಕ್ಷಮಾಶೀಲನೂ ಸದಾ ಕರುಣೆಯುಳ್ಳವನೂ ಆಗಿರುವನು! {115}

وَلَا تَقُولُوا لِمَا تَصِفُ أَلْسِنَتُكُمُ الْكَذِبَ هَٰذَا حَلَالٌ وَهَٰذَا حَرَامٌ لِتَفْتَرُوا عَلَى اللَّهِ الْكَذِبَ ۚ إِنَّ الَّذِينَ يَفْتَرُونَ عَلَى اللَّهِ الْكَذِبَ لَا يُفْلِحُونَ

ಜನರೇ, ನಿಮ್ಮ ನಾಲಿಗೆಗಳು ಸ್ವತಃ ಸೃಷ್ಟಿಸಿ ವಿಧಿಸುವ 'ಇದು ಧರ್ಮಸಮ್ಮತ' ಮತ್ತು 'ಇದು ನಿಷಿದ್ಧ' ಎಂಬಂತಹ ಸುಳ್ಳುಗಳನ್ನು ನೀವು ಎಂದೂ ಅಲ್ಲಾಹ್ ನ ಮೇಲೆ ಆಪಾದಿಸದಿರಿ. ಸುಳ್ಳುಗಳನ್ನು ಸ್ವತಃ ಸೃಷ್ಟಿಸಿ ಅದನ್ನು ಅಲ್ಲಾಹ್ ನ ಮೇಲೆ ಆಪಾದಿಸಿವ ಜನರು ಎಂದೂ ಯಶಸ್ಸು ಕಾಣಲಾರರು. {116}

مَتَاعٌ قَلِيلٌ وَلَهُمْ عَذَابٌ أَلِيمٌ

ಅದು ಅಲ್ಪಾವಧಿಯ ಲೌಕಿಕ ಸುಖವಷ್ಟೆ! ಅಂತಹವರಿಗೆ ಯಾತನಾಮಯ ಶಿಕ್ಷೆಯಿದೆ. {117}

وَعَلَى الَّذِينَ هَادُوا حَرَّمْنَا مَا قَصَصْنَا عَلَيْكَ مِنْ قَبْلُ ۖ وَمَا ظَلَمْنَاهُمْ وَلَٰكِنْ كَانُوا أَنْفُسَهُمْ يَظْلِمُونَ

ಇನ್ನು, ಯಹೂದ್ಯರ ಪಾಲಿಗೆ ನಾವು ನಿಷಿದ್ಧಗೊಳಿಸಿದ್ದ ಆಹಾರಗಳ ಬಗ್ಗೆ ಇದಕ್ಕಿಂತ ಮೊದಲೇ ನಾವು ನಿಮಗೆ ವಿವರಿಸಿದ್ದೇವೆ. ಹಾಗೆ [ಹೆಚ್ಚುವರಿ ನಿಷೇಧಗಳನ್ನು ಹೇರುವ ಮೂಲಕ] ಅವರಿಗೆ ಅನ್ಯಾಯ ಮಾಡಿದವರು ನಾವಲ್ಲ; ಬದಲಾಗಿ ಅವರು ತಮ್ಮ ಮೇಲೆ ತಾವೇ ಅನ್ಯಾಯ ಮಾಡಿಕೊಂಡವರು! {118}

ثُمَّ إِنَّ رَبَّكَ لِلَّذِينَ عَمِلُوا السُّوءَ بِجَهَالَةٍ ثُمَّ تَابُوا مِنْ بَعْدِ ذَٰلِكَ وَأَصْلَحُوا إِنَّ رَبَّكَ مِنْ بَعْدِهَا لَغَفُورٌ رَحِيمٌ

ತರುವಾಯ, ಓ ಪೈಗಂಬರರೇ, ಯಾರಾದರೂ ಅವಿವೇಕಿತನಕ್ಕೆ ಬಲಿಯಾಗಿ ಪಾಪ-ಕೃತ್ಯವನ್ನೆಸಗಿ ಅನಂತರ [ಆ ಯಹೂದ್ಯರಂತೆ ವರ್ತಿಸುವ ಬದಲು] ಪಶ್ಚಾತ್ತಾಪಪಟ್ಟು ತನ್ನನ್ನು ಸರಿಪಡಿಸಿಕೊಂಡರೆ, ನಿಮ್ಮ ಒಡೆಯನು ಬಹಳವಾಗಿ ಕ್ಷಮಿಸುವವನೂ ಸದಾ ಕರುಣೆ ತೋರುವವನೂ ಆಗಿರುವನು. {119}

إِنَّ إِبْرَاهِيمَ كَانَ أُمَّةً قَانِتًا لِلَّهِ حَنِيفًا وَلَمْ يَكُ مِنَ الْمُشْرِكِينَ

[ಯಹೂದ್ಯರು ಮತ್ತು ನಸಾರಾಗಳು ತಮ್ಮ ಮೂಢಸಂಪ್ರದಾಗಳನ್ನು ಪ್ರವಾದಿ ಇಬ್ರಾಹೀಮ್ ರ ಜೊತೆ ಸೇರಿಸಿ ಉಲ್ಲೇಖಿಸುತ್ತಿದ್ದಾರೆ. ಆದರೆ] ಇಬ್ರಾಹೀಮ್ ರು ನಿಜವಾಗಿಯೂ ಸಂಪೂರ್ಣವಾದ ಏಗಾಗ್ರತೆಯೊಂದಿಗೆ ಅಲ್ಲಾಹ್ ನಿಗೆ ಮಾತ್ರ ವಿಧೇಯನಾದ ಒಬ್ಬ ಆದರ್ಶಪ್ರಾಯ ನೇತಾರರಾಗಿದ್ದರು. ಹೌದು, ಅವರು ಅಲ್ಲಾಹ್ ನ ದೇವತ್ವದಲ್ಲಿ ಎಂದೂ ಇತರರಿಗೆ ಪಾಲುಗಾರಿಕೆ ಕಲ್ಪಿಸಿದವರಲ್ಲ! {120}

شَاكِرًا لِأَنْعُمِهِ ۚ اجْتَبَاهُ وَهَدَاهُ إِلَىٰ صِرَاطٍ مُسْتَقِيمٍ

ಅಲ್ಲಾಹ್ ನ ಅನುಗ್ರಹಗಳಿಗೆ ಅವರು ಕೃತಜ್ಞತೆ ಸಲ್ಲಿಸುವವರಾಗಿದ್ದರು. ಅಲ್ಲಾಹ್ ನು ಅವರನ್ನು (ಒಂದು ಮಹಾ ಉದ್ದೇಶಕ್ಕಾಗಿ) ಆರಿಸಿಕೊಂಡನು ಮತ್ತು ನೇರವಾದ ಮಾರ್ಗದತ್ತ ಅವರನ್ನು ಮುನ್ನಡೆಸಿದನು. {121}

وَآتَيْنَاهُ فِي الدُّنْيَا حَسَنَةً ۖ وَإِنَّهُ فِي الْآخِرَةِ لَمِنَ الصَّالِحِينَ

ಅವರಿಗೆ ನಾವು ಭೂಲೋಕದಲ್ಲೂ ಒಳ್ಳೆಯದನ್ನು ನೀಡಿದೆವು; ಪರಲೋಕದಲ್ಲೂ ಅವರು ಖಂಡಿತವಾಗಿ ಸಜ್ಜನರ ಯಾದಿಗೆ ಸೇರಿರುವರು. {122}

ثُمَّ أَوْحَيْنَا إِلَيْكَ أَنِ اتَّبِعْ مِلَّةَ إِبْرَاهِيمَ حَنِيفًا ۖ وَمَا كَانَ مِنَ الْمُشْرِكِينَ

ತರುವಾಯ, ಓ ಪೈಗಂಬರರೇ, (ಅಲ್ಲಾಹ್ ನು ತೋರಿದ ಮಾರ್ಗದಲ್ಲಿ) ಸಂಪೂರ್ಣವಾದ ಏಕಾಗ್ರತೆಯೊಂದಿಗೆ ನಡೆದುಕೊಂಡ ಇಬ್ರಾಹೀಮ್ ರ ಮಾರ್ಗವನ್ನು ನೀವೂ ಸಹ ಅನುಸರಿಸಿರಿ ಎಂದು ನಾವು ನಿಮಗೆ 'ವಹೀ' ಮೂಲಕ ಸೂಚಿಸಿದೆವು. ಅವರಂತು ಅಲ್ಲಾಹ್ ನ ದೇವತ್ವದಲ್ಲಿ ಇತರರಿಗೂ ಪಾಲು ಇದೆ ಎಂದು ಭಾವಿಸುವವರ ಸಾಲಿಗೆ ಸೇರಿದವರಾಗಿರಲಿಲ್ಲ! {123}

إِنَّمَا جُعِلَ السَّبْتُ عَلَى الَّذِينَ اخْتَلَفُوا فِيهِ ۚ وَإِنَّ رَبَّكَ لَيَحْكُمُ بَيْنَهُمْ يَوْمَ الْقِيَامَةِ فِيمَا كَانُوا فِيهِ يَخْتَلِفُونَ

'ಸಬ್ಬತ್' ದಿನದ (ಪಾವಿತ್ರ್ಯತೆಯನ್ನು ಕಾಪಾಡುವ) ವಿಷಯದಲ್ಲಿ ಭಿನ್ನಮತ ತಾಳಿದವರ ಮೇಲೆ ಅದನ್ನು (ಅರ್ಥಾತ್: ಅದರ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿ) ಹೇರಲಾಯಿತು. [ಹಾಗಿರುವಾಗ ಅದಕ್ಕೂ ಇಬ್ರಾಹೀಮ್ ರಿಗೂ ಸಂಬಂಧ ಕಲ್ಪಿಸಬೇಡಿ]. ಪುನರುತ್ಥಾನ ದಿನ ನಿಮ್ಮ ಒಡೆಯನು ಅವರ ನಡುವೆ ವಿವಾದವಾಗಿದ್ದ ಎಲ್ಲಾ ವಿಷಯಗಳ ಬಗ್ಗೆ ಖಂಡಿತಾ ತೀರ್ಪು ನೀಡಲಿದ್ದಾನೆ! {124}

ادْعُ إِلَىٰ سَبِيلِ رَبِّكَ بِالْحِكْمَةِ وَالْمَوْعِظَةِ الْحَسَنَةِ ۖ وَجَادِلْهُمْ بِالَّتِي هِيَ أَحْسَنُ ۚ إِنَّ رَبَّكَ هُوَ أَعْلَمُ بِمَنْ ضَلَّ عَنْ سَبِيلِهِ ۖ وَهُوَ أَعْلَمُ بِالْمُهْتَدِينَ

ಓ ಪೈಗಂಬರರೇ, ಬುದ್ದಿವಂತಿಕೆ ಮತ್ತು ಒಳ್ಳೆಯ ಉಪದೇಶಗಳ ಮೂಲಕ ನೀವು ಜನರನ್ನು ನಿಮ್ಮ ಒಡೆಯನ ಮಾರ್ಗದತ್ತ ಕರೆಯುತ್ತಲಿರಿ. ಮತ್ತು (ಚರ್ಚಿಸುವ ಅಗತ್ಯ ಬಂದಲ್ಲಿ) ಅವರೊಂದಿಗೆ ಚರ್ಚೆ ನಡೆಸಿರಿ, ಆದರೆ ಅದು ಬಹಳ ಉತ್ತಮ ಸ್ವರೂಪದ್ದಾಗಿರಲಿ! ತನ್ನ ದಾರಿಯಿಂದ ದೂರ ಸರಿಯುವವನು ಯಾರೆಂದು ನಿಮ್ಮ ಒಡೆಯನಿಗೆ ಚೆನ್ನಾಗಿಯೇ ತಿಳಿದಿದೆ. ಹಾಗೆಯೇ ಸರಿದಾರಿಯನ್ನು ಸ್ವೀಕರಿಸುವವನು ಯಾರೆಂದೂ ಅವನು ಖಂಡಿತ ಬಲ್ಲನು. {125}

وَإِنْ عَاقَبْتُمْ فَعَاقِبُوا بِمِثْلِ مَا عُوقِبْتُمْ بِهِ ۖ وَلَئِنْ صَبَرْتُمْ لَهُوَ خَيْرٌ لِلصَّابِرِينَ

ಇನ್ನು ಎಂದಾದರೂ ಪ್ರತೀಕಾರದ ಅಗತ್ಯ ಬಂದಲ್ಲಿ ನಿಮ್ಮ ಮೇಲೆ ಆದ ಅನ್ಯಾಯದಷ್ಟು ಮಾತ್ರ ಪ್ರತೀಕಾರ ತೀರಿಸಿ. ಆದರೆ ನೆನಪಿಡಿ, ನೀವು ಸಹಿಸಿಕೊಂಡರೆ ಆ ಸಹನೆಯೇ (ನಿಮ್ಮಂತಹ) ಸಹನಶೀಲರಿಗೆ ಅತ್ಯುತ್ತಮ! {126}

وَاصْبِرْ وَمَا صَبْرُكَ إِلَّا بِاللَّهِ ۚ وَلَا تَحْزَنْ عَلَيْهِمْ وَلَا تَكُ فِي ضَيْقٍ مِمَّا يَمْكُرُونَ

ಮತ್ತು ಪೈಗಂಬರರೇ, ನೀವು ತಾಳ್ಮೆಯೊಂದಿಗೆ ಕಾರ್ಯೋನ್ಮುಖರಾಗಿರಿ. ಆ ನಿಮ್ಮ ತಾಳ್ಮೆಯೂ ಅಲ್ಲಾಹ್ ನ ಅನುಗ್ರಹವಾಗಿದೆ. ಅವರ ವಿಷಯದಲ್ಲಿ ನೀವು ವ್ಯಥೆಪಡಬೇಡಿರಿ. ಅವರು ಹೂಡುತ್ತಿರುವ ಕುತಂತ್ರಗಳಿಗಾಗಿ ನೀವು ಸಂಕಟ ಪಡದಿರಿ. {127}

إِنَّ اللَّهَ مَعَ الَّذِينَ اتَّقَوْا وَالَّذِينَ هُمْ مُحْسِنُونَ

ಹೌದು, ಅಲ್ಲಾಹ್ ನು ಭಯಭಕ್ತಿ ಪಾಲಿಸುವ ಹಾಗೂ ಸಜ್ಜನಿಕೆಯೊಂದಿಗೆ ವರ್ತಿಸುವವರೊಂದಿಗೆ ಇರುತ್ತಾನೆ. {128}

......

 ತಫ್ಸೀರ್ ಗ್ರಂಥಗಳ ಸಹಾಯವಿಲ್ಲದೆ ಸುಲಭವಾಗಿ ಅರ್ಥವಾಗುವ ಹೊಸ ಭಾಷಾಂತರ !

 ಅನುವಾದಕ: ಇಕ್ಬಾಲ್ ಸೂಫಿ, ಕುವೈತ್




Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...