ಅಲ್ ಅಅರಾಫ್ | ترجمة سورة الأعراف

تـرجمـة سـورة الأعراف من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

* سهل الفهم من غير الرجوع إلى كتاب التفسير *

| ಸೂರಃ ಅಲ್ ಅಅರಾಫ್ | ಪವಿತ್ರ್ ಕುರ್‌ಆನ್ ನ 7 ನೆಯ ಸೂರಃ | ಇದರಲ್ಲಿ ಒಟ್ಟು 206 ಆಯತ್ ಗಳು ಇವೆ |

ಅಲ್ಲಾಹ್ ನ ನಾಮದೊಂದಿಗೆ, ಅವನು ಮಹಾ ಕಾರುಣ್ಯವಂತನೂ ನಿರಂತರ ಕರುಣೆ ತೋರುವವನೂ ಆಗಿರುತ್ತಾನೆ !

ಅಲಿಫ್ ಲಾಮ್ ಮೀಮ್ ಸಾದ್ ! {1}

ಇದು [ಅರ್ಥಾತ್ ಈ ಅಧ್ಯಾಯವು] ನಿಮ್ಮೆಡೆಗೆ ಇಳಿಸಲಾದ ಒಂದು ದಿವ್ಯಾದೇಶವಾಗಿದೆ [ಅರಬಿ: ಅಲ್ ಕಿತಾಬ್]. ಅದ್ದರಿಂದ [ಪೈಗಂಬರರೇ, ನಮ್ಮ ಅದೇಶವನ್ನು ಸತತವಾಗಿ ಧಿಕ್ಕರಿಸುತ್ತಾ ಬಂದವರಿಗೆ ಇದನ್ನು ತಲುಪಿಸುವಾಗ] ನಿಮ್ಮ ಹೃದಯದಲ್ಲಿ ಯಾವ ಬಗೆಯ ಸಂಕೋಚವೂ ಉಂಟಾಗದಿರಲಿ! ನೀವು ಇದರ ಮೂಲಕ (ಅವರಿಗೆ) ಮುನ್ನೆಚ್ಚರಿಕೆ ನೀಡುವ ಸಲುವಾಗಿ (ಇದನ್ನು ಇಳಿಸಲಾಗಿದೆ)! ಮತ್ತು [ನಿಮ್ಮನ್ನು ಪೈಗಂಬರರೆಂದು ಒಪ್ಪಿಕೊಂಡ] ವಿಶ್ವಾಸಿಗಳ ಪಾಲಿಗೆ ಇದೊಂದು ಉಪದೇಶವೂ ಹೌದು! {2}

(ಓ ಜನರೇ), ನಿಮ್ಮ ಕರ್ತೃವಿನ ವತಿಯಿಂದ ಯಾವ (ದಿವ್ಯಾದೇಶವನ್ನು) ನಿಮ್ಮೆಡೆಗೆ ಕಳಿಸಿ ಕೊಡಲಾಗುತ್ತಿದೆಯೋ ನೀವು ಅದನ್ನು ಅನುಸರಿಸಿರಿ; ಅವನನ್ನು ಬಿಟ್ಟು ಇತರ ಮುಖ್ಯಸ್ಥರ ಮಾತು ಕೇಳದಿರಿ. (ವಿಪರ್ಯಾಸವೆಂದರೆ) ನಿಮ್ಮಲ್ಲಿ ಉಪದೇಶ ಸ್ವೀಕರಿಸುವವರು ವಿರಳವೇ ಸರಿ! {3}

[ಇದಕ್ಕಿಂತ ಮುಂಚೆ] ನಾವು ಅದೆಷ್ಟು ನಾಡುಗಳನ್ನು ನಾಶಪಡಿಸಿ ಬಿಟ್ಟಿರುತ್ತೇವೆ! ರಾತ್ರಿಯ ನಿದ್ರಾವಸ್ಥೆಯಲ್ಲಿ ಅಥವಾ ಮಧ್ಯಾಹ್ನದ ವೇಳೆ ಅವರು [ಅರ್ಥಾತ್ ಆಯಾ ನಾಡಿನ ಅಕ್ರಮಿಗಳು] ವಿಶ್ರಮಿಸುತ್ತಿರುವಾಗ ನಮ್ಮ ಶಿಕ್ಷೆ ಹಠಾತ್ತನೆ ಎರಗಿ ಬೇಳುತ್ತಿತ್ತು. ಹಾಗೆ ನಮ್ಮ ಶಿಕ್ಷೆ ಅವರ ಮೇಲೆ ಬಂದೆರಗಿದಾಗ, ನಾವು ನಿಜವಾಗಿಯೂ ಅನ್ಯಾಯವೆಸಗಿದವರೇ ಆಗಿದ್ದೆವು ಎಂಬ ಮಾತೊಂದರ ಹೊರತು ಅವರಿಗೆ ಬೇರಾವುದೇ ಫಿರ್ಯಾದು ಇರುತ್ತಿರಲಿಲ್ಲ! {4-5}

ತರುವಾಯ, ಯಾವೆಲ್ಲ (ಜನಾಂಗಗಳ) ಕಡೆಗೆ (ದಿವ್ಯ ಸಂದೇಶದೊಂದಿಗೆ ದೂತರುಗಳನ್ನು) ಕಳುಹಿಸಲಾಗಿತ್ತೋ ಅವರನ್ನು ನಾವು ಪ್ರಶ್ನಿಸಿಯೇ ತೀರುವೆವು. ಹಾಗೆಯೇ ಅಂತಹ ದೂತರುಗಳೊಡನೆ [ಜನರಿಂದ ಅವರಿಗೆ ಸಿಕ್ಕ ಪ್ರತಿಕ್ರಿಯೆಯ ಬಗ್ಗೆಯೂ] ನಾವು ಖಂಡಿತ ಕೇಳಲಿರುವೆವು. ಅನಂತರ (ಅವರದೇ) ವೃತ್ತಾಂತಗಳನ್ನು ನಾವು ಅವರಿಗೆ ವಿವರಸಲಿರುವೆವು - ನಿಖರವಾದ ಅರಿವಿನ ಆಧಾರದಲ್ಲಿ! [ಆ ಜನರ ದುಷ್ಕೃತ್ಯಗಳನ್ನು ಕಾಣದಿರಲು] ನಾವು ಆಗ ಇಲ್ಲದೇ ಇರಲಿಲ್ಲವಲ್ಲ! {6-7}

ಅಂದು (ನಿಮ್ಮ ಕರ್ಮಗಳನ್ನು) ಸರಿದೂಗಿಸಿ ನೋಡಲಾಗುವುದಂತು ಒಂದು ಪರಮ ಯಾಥಾರ್ಥ್ಯ. ಹೌದು, ಯಾರ (ಸತ್ಕರ್ಮಗಳು) ಭಾರವಾಗಿ ತೂಗುವುದೋ ಅವರೇ ವಿಜಯಿಗಳ ಯಾದಿಗೆ ಸೇರುವವರು; ಮತ್ತು ಯಾರ (ಸತ್ಕರ್ಮಗಳ) ತೂಕವು ಕಡಿಮೆಯಾಗಿ ಬಿಡುವುದೋ ಅಂತಹವರು, ನಮ್ಮ ವಚನಗಳ ಜೊತೆ ಅನ್ಯಾಯದಿಂದ ವರ್ತಿಸಿದ ಕಾರಣ ಸ್ವತಃ ತಮ್ಮನ್ನೇ ನಷ್ಟಕ್ಕೊಳಗಾಗಿಸಿ ಕೊಂಡವರು! {8-9}

ಭೂಮಿಯಲ್ಲಿ ನೀವು ಸುಭದ್ರತೆಯೊಂದಿಗೆ ನೆಲೆಸಿಕೊಳ್ಳುವಂತೆ ನಾವು ಮಾಡಿದೆವು; ಜೊತೆಗೆ ಅದರಲ್ಲಿ ನಿಮಗಾಗಿ ಜೀವನೋಪಾಯದ ಏರ್ಪಾಡನ್ನೂ ಮಾಡಿದೆವು. (ವಿಪರ್ಯಾಸವೆಂದರೆ ನಮಗೆ) ಕೃತಜ್ಞರಾಗಿ ಬದುಕುವವರು ನಿಮ್ಮಲ್ಲಿ ವಿರಳವೇ ಸರಿ! {10}

[ಮಾನವರೇ! ನಿಮ್ಮ ಹುಟ್ಟಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ. ಮೊದಲಿಗೆ] ನಾವು ನಿಮ್ಮ (ವ್ಯಕ್ತಿತ್ವವನ್ನು) ಸೃಷ್ಟಿ ಮಾಡಿದೆವು; ನಂತರ ನಿಮ್ಮ (ಅಸ್ತಿತ್ವಕ್ಕೊಂದು) ಆಕಾರ ನೀಡಿದೆವು. ತರುವಾಯ [ನಿಮ್ಮ ಪಿತಾಮಹನಾದ ಆದಿಮಾನವ] ಆದಮ್ ರಿಗೆ ತಲೆಬಾಗುವಂತೆ ನಾವು ಮಲಕ್ ಗಳಿಗೆ ಆಜ್ಞಾಪಿಸಿದೆವು. ಕೂಡಲೇ ಅವರೆಲ್ಲರೂ ತಲೆಬಾಗಿದರು - ಒಬ್ಬ 'ಇಬ್ಲೀಸ್' ನ ಹೊರತು! ಆತ ತಲೆಬಾಗಿದವರೊಂದಿಗೆ ಸೇರಿಕೊಳ್ಳಲಿಲ್ಲ! {11}

ನಾನು ನಿನಗೆ ಆಜ್ಞೆ ನೀಡಿದಾಗ ತಲೆಬಾಗದಂತೆ ನಿನ್ನನ್ನು ತಡೆದಿಟ್ಟ ಅಂಶವು ಯಾವುದು ಎಂದು (ಅಲ್ಲಾಹ್ ನು) ಪ್ರಶ್ನಿಸಿದನು. ನಾನು ಅವನಿಗಿಂತ ಉತ್ತಮವಾದ (ಸೃಷ್ಟಿ ಸ್ವರೂಪ) ಎಂಬುದು! ನನ್ನನ್ನು ನೀನು ಬೆಂಕಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ಹಸಿಮಣ್ಣಿನಿಂದ! (ಇಬ್ಲೀಸನು) ಉತ್ತರಿಸಿದನು. {12}

ಹಾಗಾದರೆ ನೀನು ಅಲ್ಲಿಂದ ಇಳಿದು ಹೋಗು. ಅಲ್ಲಿದ್ದುಕೊಂಡು ದುರಹಂಕಾರ ಮೆರೆಯುವ ಹಕ್ಕು ನಿನಗಿಲ್ಲ; ಹೊರ ಹೋಗು! ಖಂಡಿತವಾಗಿ ನೀನು ನಿಂದಿತರ ಸಾಲಿಗೆ ಸೇರಿ ಹೋದೆ - ಎಂದು (ಅಲ್ಲಾಹ್ ನು) ಆಜ್ಞಾಪಿಸಿದನು. {13}

ನನಗೆ (ಪುನರುತ್ಥಾನದಂದು ಮನುಷ್ಯ ವರ್ಗವು) ಪುನಃ ಎಬ್ಬಿಸಲ್ಪಡುವ ದಿನದ ವರೆಗೂ ಕಾಲಾವಕಾಶ ನೀಡಬೇಕು ಎಂದು ಇಬ್ಲೀಸನು ಕೋರಿದನು. ನಿನಗೆ ಕಾಲಾವಕಾಶ ನೀಡಲಾಗಿದೆ ಎಂದು (ಅಲ್ಲಾಹ್ ನು) ಹೇಳಿದನು. {14-15}

ನಾನು ದಾರಿಗೆಡುವಂತೆ ನೀನು ಕುಮ್ಮಕ್ಕು ನೀಡಿದ ಕಾರಣಕ್ಕಾಗಿ ನಿನ್ನೆಡೆಗಿರುವ ನೇರದಾರಿಗೆ ಅಡ್ಡ ಕುಳಿತು ಅವರಿಗಾಗಿ [ಅರ್ಥಾತ್ ನಿನ್ನ ದಾರಿಯಲ್ಲಿ ನಡೆಯ ಬಯಸುವ ಮಾನವರಿಗಾಗಿ] ಖಂಡಿತಾ ನಾನು ಹೊಂಚು ಹಾಕುತ್ತೇನೆ. ಅಷ್ಟು ಮಾತ್ರವಲ್ಲ, ಅವರ ಮುಂದುಗಡೆಯಿಂದಲೂ ಹಿಂದುಗಡೆಯಿಂದಲೂ ಬಂದೆರಗುವೆನು; ಬಲಗಡೆಯಿಂದಲೂ ಎಡಗಡೆಯಿಂದಲೂ ಅವರನ್ನು ತಡೆಯುವೆನು. ಅವರಲ್ಲಿ ಹೆಚ್ಚಿನವರನ್ನು ಕೃತಜ್ಞತೆಯುಳ್ಳವರಾಗಿ ನೀನು ಕಾಣಲಾರೆ - ಎಂದು ಇಬ್ಲೀಸನು ಹೇಳಿದನು. {16-17}

ಇನ್ನು ಅಲ್ಲಿಂದ ಹೊರನಡೆ; ನಿಂದಿತನಾಗಿ ಬಹಿಷ್ಕೃತನಾಗಿ ತೊಲಗು! ಖಂಡಿತವಾಗಿಯೂ (ನಿನ್ನನ್ನೂ) ಮನುಷ್ಯರ ಪೈಕಿ ನಿನ್ನ ಹಿಂಬಾಲಕರಾಗುವವರನ್ನೂ ಒಟ್ಟಾಗಿಸಿ ನರಕವನ್ನು ನಿಮ್ಮಿಂದ ತುಂಬಿಸಿ ಬಿಡುವೆನು - ಎಂದು (ಅಲ್ಲಾಹ್ ನು) ಹೇಳಿದನು! {18}

ಓ ಆದಮ್! ನೀವು ಮತ್ತು ನಿಮ್ಮ ಪತ್ನಿ ಆ ಉದ್ಯಾನವನದಲ್ಲೇ ತಂಗಿಕೊಳ್ಳುವವರಾಗಿರಿ; ಮತ್ತು ಉದ್ಯಾನವನದ ಯಾವ ಭಾಗದಿಂದ ಬೇಕಾದರೂ ನೀವಿಬ್ಬರೂ ಬಯಸಿಕೊಂಡಂತೆ ತಿನ್ನಬಹುದು. ಆದರೆ ಆ ನಿರ್ದಿಷ್ಟ ವೃಕ್ಷವನ್ನು ಮಾತ್ರ ನೀವಿಬ್ಬರು ಸಮೀಪಿಸಲೂ ಬಾರದು. ಹಾಗೆ ಮಾಡಿದರೆ ನೀವಿಬ್ಬರೂ ಅಕ್ರಮಿಗಳಾಗಿ ತೀರುವಿರಿ (ಎಂದು ಅಲ್ಲಾಹ್ ನ ಆಜ್ಞೆಯಾಯಿತು)! {19}

ಹಾಗಿರುವಾಗ ಆ ಸೈತಾನನು [ಅರ್ಥಾತ್ ಧೂರ್ತನಾದ ಇಬ್ಲೀಸನು] ಆ ಇಬ್ಬರಿಂದಲೂ ಮುಚ್ಚಿಡಲಾಗಿದ್ದ ಅವರ ಗುಪ್ತಾಂಗಗಳು ಪರಸ್ಪರರ ಮುಂದೆ ಪ್ರಕಟವಾಗುವಂತೆ ಮಾಡಲು ಅವರ ಹೃದಯಗಳಲ್ಲಿ ಪಿಸುಗುಟ್ಟುತ್ತಾ, ನಿಮ್ಮ ಕರ್ತಾರನು ನಿಮ್ಮಿಬ್ಬರನ್ನು ಆ ವೃಕ್ಷದಿಂದ ತಡೆದಿರುವುದು ನೀವು ಮುಂದೆ ಮಲಕ್ ಗಳು ಆಗಿಬಿಡಬಾರದು ಅಥವಾ ನೀವು (ಈ ಉದ್ಯಾನದಲ್ಲೇ) ಸ್ಥಿರವಾಗಿ ವಾಸ್ತವ್ಯ ಹೂಡುವಂತೆ ಆಗಬಾರದು ಎಂಬ ಉದ್ದೇಶಕ್ಕಾಗಿಯಲ್ಲದೆ ಬೇರಾವ ಕಾರಣಕ್ಕಾಗಿಯೂ ಅಲ್ಲ ಎಂದು ದುಷ್ಪ್ರೇರಣೆ ಬಿತ್ತಿದನು. ಮಾತ್ರವಲ್ಲ, ನಾನಾದರೋ ನಿಮ್ಮಿಬ್ಬರ ನಿಜವಾದ ಹಿತಾಕಾಂಕ್ಷಿಯಾಗಿದ್ದೇನೆ ಎಂದು ಅವನು ಅವರೊಂದಿಗೆ ಆಣೆ ಹಾಕಿ ಹೇಳಿದನು. {20-21}

ಹಾಗೆ ಅವನು ಮೋಸದಿಂದ ಸ್ವಲ್ಪ ಸ್ವಲ್ಪವಾಗಿ ಅವರಿಬ್ಬರನ್ನು ಪುಸಲಾಯಿಸಿದನು. ಕೊನೆಗೆ ಅವರು ಆ ವೃಕ್ಷದ (ಫಲವನ್ನು) ಸವಿದಾಗ ಅವರ ಗುಪ್ತಾಂಗಗಳು ಅವರಿಗೆ ಪ್ರಕಟವಾದವು. ಕೂಡಲೇ ಉದ್ಯಾನದ ಎಲೆಗಳಿಂದ ತಮ್ಮ ಶರೀರಗಳನ್ನು ಅವರಿಬ್ಬರೂ ಮುಚ್ಚತೊಡಗಿದರು. ಆಗ ಅವರ ಕರ್ತಾರನು ಅವರಿಬ್ಬರನ್ನೂ ಕರೆದು, ಆ ವೃಕ್ಷವನ್ನು (ಸಮೀಪಿಸುವುದರಿಂದ) ನಿಮ್ಮಿಬ್ಬರನ್ನೂ ನಾನು ತಡೆದಿರಲಿಲ್ಲವೇ; ಮತ್ತು ಸೈತಾನನು ನಿಮ್ಮಿಬ್ಬರಿಗೂ ಬಹಿರಂಗ ಶತ್ರುವಾಗಿರುವನು ಎಂದು ನಾನು ಹೇಳಿರಲಿಲ್ಲವೇ - ಎಂದು ಕೇಳಿದನು. {22}

ಓ ನಮ್ಮ ಕರ್ತೃವೇ! ನಾವು ಸ್ವತಃ ನಮ್ಮ ಮೇಲೆಯೇ ಅನ್ಯಾಯ ಮಾಡಿಕೊಂಡವರಾದೆವು. ಇನ್ನು ನೀನು ನಮ್ಮನ್ನು ಕ್ಷಮಿಸದೇ ಹೋದರೆ, ಮತ್ತು ನಮ್ಮ ಮೇಲೆ ಕರುಣೆ ತೋರದೇ ಇದ್ದರೆ, ನಾವಂತು ಎಲ್ಲವನ್ನೂ ಕಳೆದುಕೊಂಡವರಾಗಿ ತೀರುವೆವು ಎಂದು ಅವರಿಬ್ಬರೂ ಪ್ರಾರ್ಥಿಸಿಕೊಂಡರು. {23}

ಇನ್ನು ನೀವೆಲ್ಲರೂ (ಉದ್ಯಾನವನದಿಂದ) ಹೊರಗಿಳಿಯಿರಿ; ನೀವುಗಳು [ಅರ್ಥಾತ್ ಮನುಷ್ಯರು ಮತ್ತು ಇಬ್ಲೀಸ್] ಪರಸ್ಪರರಿಗೆ ಶತ್ರುಗಳಾಗಿರುವಿರಿ. ಒಂದು ನಿರ್ದಿಷ್ಟ ಕಾಲದ ವರೆಗೆ ನಿಮಗಾಗಿ ಭೂಮಿಯಲ್ಲಿ ವಾಸದ ಸೌಕರ್ಯವನ್ನು ಮತ್ತು ಜೀವನೋಪಾಯವನ್ನು ಇರಿಸಲಾಗಿದೆ ಎಂದು [ಅಲ್ಲಾಹ್ ನು ತನ್ನ ಯೋಜನೆಯನ್ನು ಅವರಿಗೆ] ವಿವರಿಸಿದನು. (ಇನ್ನು ಮುಂದೆ) ನೀವು ಬದುಕಬೇಕಾದುದು ಅದರಲ್ಲೇ; ನಿಮಗೆ ಸಾವು ಬರುವುದೂ ಅದರಲ್ಲೇ; ತರುವಾಯ ನಿಮ್ಮನ್ನು ಹೊರತೆಗೆಯಲಾಗುವುದೂ ಸಹ ಅದರಿಂದಲೇ ಎಂದೂ ಹೇಳಿದನು. {24-25}

ಆದಮರ ಸಂತತಿಗಳೇ! ನೀವು ನಿಮ್ಮ ಮಾನ ಮುಚ್ಚಿಕೊಳ್ಳುವಂತಾಗಲು ನಾವು ಉಡುಗೆ-ತೊಡುಗೆಗಳನ್ನು ನಿಮಗೆ ಇಳಿಸಿ ಕೊಟ್ಟೀರುತ್ತೇವೆ; ಅದು ಭೂಷಣಕ್ಕಾಗಿಯೂ ಹೌದು. ಮತ್ತು ಭಯ-ಭಕ್ತಿ ಎಂಬ ಒಂದು ತೊಡುಗೆಯನ್ನೂ! ಅದಾದರೋ ಅತ್ಯಂತ ಮಹತ್ತರವಾದುದು! ಮಾನವರು (ಅಲ್ಲಾಹ್ ನ ಕೊಡುಗೆಗಳನ್ನು) ಮನನ ಮಾಡಿಕೊಳ್ಳುವಂತಾಗಲು ಅವೆಲ್ಲ ಅವನ ದೃಷ್ಟಾಂತಗಳೇ ಆಗಿವೆ. {26}

ಆದಮರ ಸಂತತಿಗಳೇ! ನಿಮ್ಮ ಮಾತಾಪಿತರನ್ನು [ಅಲ್ಲಾಹ್ ನು ಅವರನ್ನು ಇರಿಸಿದ್ದ] ಉದ್ಯಾನವನದಿಂದ ಹೊರಗಟ್ಟಿಸಿ ಬಿಟ್ಟಂತೆ, ಆ ಸೈತಾನನು [ಅಂತಹದ್ದೇ ಚಪಲತೆ ಬಳಸಿ] ನಿಮ್ಮನ್ನೂ ಪ್ರಲೋಭಿಸದಿರಲಿ. [ಅಂದು] ಅವರ ನಗ್ನತೆ ಅವರಿಗೆ ಗೋಚರಿಸುವಂತೆ ಮಾಡುವ ಸಲುವಾಗಿ ಸೈತಾನನು ಅವರ ವಸ್ತ್ರಗಳು ಕಳಚಿ ಬೇಳುವಂತೆ ಮಾಡಿದ್ದನು. ಅವನೂ ಅವನ ಸಂಗಡಿಗರೂ ನಿಮಗೆ ಅವರನ್ನು ನೋಡಲು ಸಾಧ್ಯವಾಗದ ಕಡೆಗಳಿಂದ ನಿಮ್ಮನ್ನು ಗಮನಿಸುತ್ತಿರುತ್ತಾರೆ. ಯಾರು ವಿಶ್ವಾಸವಿರಿಸುವುದಿಲ್ಲವೋ ಅಂತಹವರಿಗೆ ಖಂಡಿತವಾಗಿಯೂ ನಾವು ಸೈತಾನರ ವರ್ಗವನ್ನು ಮಿತ್ರರನ್ನಾಗಿ ಮಾಡಿರುತ್ತೇವೆ. {27}

ಅಂತಹವರು ಅಶ್ಲೀಲತೆಗಳಲ್ಲಿ ತೊಡಗಿಕೊಂಡಾಗ [ಅದನ್ನು ಸಮರ್ಥಿಸಿಕೊಳ್ಳಲು] ನಾವು ನಮ್ಮ ಪೂರ್ವಿಕರನ್ನು ಇದೇ ದಾರಿಯಲ್ಲಿ ಸಾಗಿರುವುದನ್ನು ಕಂಡಿರುತ್ತೇವೆ; ಮಾತ್ರವಲ್ಲ, ಅಲ್ಲಾಹ್ ನು ನಮಗೆ ಇದನ್ನೇ ಆಜ್ಞಾಪಿಸಿದ್ದಾನೆ ಎಂದು ಹೇಳುತ್ತಾರೆ. ಅಲ್ಲಾಹ್ ನು ಎಂದಿಗೂ ಅಶ್ಲೀಲತೆಯನ್ನು ಬೋಧಿಸುವುದಿಲ್ಲ. ನೀವು ಅಲ್ಲಾಹ್ ನ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲದ ವಿಷಯಗಳನ್ನು ಕಟ್ಟಿ ಹೇಳುವುದೇ? ಎಂದು (ಪೈಗಂಬರರೇ ನೀವು) ಅವರೊಂದಿಗೆ ಕೇಳಿರಿ. {28}

(ಬದಲಾಗಿ), ನನ್ನ ಕರ್ತಾರನು (ಎಲ್ಲಾ ವ್ಯವಹಾರಗಳಲ್ಲಿ) ನ್ಯಾಯ-ನೀತಿ ಪಾಲಿಸುವಂತೆ ಆಜ್ಞಾಪಿಸಿರುತ್ತಾನೆ ಎಂದು (ಪೈಗಂಬರರೇ) ನೀವು ಅವರಿಗೆ ತಿಳಿಸಿರಿ. ಮಾತ್ರವಲ್ಲ, ಸಾಷ್ಟಾಂಗವೆರಗುವ ಸ್ಥಳ ಮತ್ತು ಸಮಯಗಳಲ್ಲಿ ನೀವು ನಿಮ್ಮ ಮುಖಗಳನ್ನು [ಅವನು ಆಜ್ಞಾಪಿಸಿದ ದಿಕ್ಕಿನತ್ತ] ಸರಿಪಡಿಸಿಕೊಳ್ಳಬೇಕು; ಸಂಪೂರ್ಣ ನಿಷ್ಕಳಂಕತೆಯೊಂದಿಗೆ ಅವನಿಗೆ ಮಾತ್ರ ವಿಧೇಯರಾಗಿದ್ದುಕೊಂಡು ಅವನೊಂದಿಗೆ ಪ್ರಾರ್ಥಿಸಬೇಕು (ಎಂದೂ ಆಜ್ಞಾಪಿಸಿರುವನು). ನಿಮ್ಮನ್ನು ಮೊದಲಬಾರಿಗೆ ಉಂಟು ಮಾಡಿದಂತೆಯೇ ನೀವು (ಕೊನೆಯದಾಗಿ ಅವನೆಡೆಗೇ) ಮರಳುತ್ತೀರಿ [ಎಂಬ ವಾಸ್ತವವನ್ನು ಮರೆಯದಿರಿ]. {29}

[ಆಜ್ಞಾಪಾಲನೆ ಮಾಡಿದ] ಸಮೂಹವನ್ನು ಅವನು ಸರಿದಾರಿಯಲ್ಲಿ ನಡೆಸಿದನು. ಇನ್ನೊಂದು ಸಮೂಹವು ದಾರಿಗೆಡಲು ಸ್ವತಃ ತಾನೇ ಅರ್ಹವಾಯಿತು. ಅವರಾದರೋ ಅಲ್ಲಾಹ್ ನನ್ನು ಬಿಟ್ಟು ಸೈತಾನರನ್ನು ತಮ್ಮ ಮಿತ್ರರನ್ನಾಗಿ ಮಾಡಿಕೊಂಡವರು. ಆದರೂ ನಾವು ಸರಿದಾರಿಯಲ್ಲಿವವರು ಎಂದು ಎಣಿಸಿಕೊಂಡವರು! {30}

ಆದಮರ ಸಂತತಿಗಳೇ! ನಮಾಝ್ ನಿರ್ವಹಿಸುವ ಪ್ರತಿ ವೇಳೆಯಲ್ಲಿ, ಪ್ರತಿ ಮಸೀದಿಯಲ್ಲಿ, ನೀವು [ನಿಮ್ಮ ಪೂರ್ವಜರ ಸಂಪ್ರದಾಯದಂತೆ ಬೆತ್ತಲೆ ಅರೆಬೆತ್ತಲೆಯಾಗದೆ] ಭೂಷಣಪ್ರಾಯವಾದ ವಸ್ತ್ರಧಾರಣೆ ಮಾಡಿಕೊಳ್ಳಿರಿ. ನೀವು [ಎಲ್ಲ ಒಳ್ಳೆಯ ಆಹಾರ ಪಾನೀಯಗಳನ್ನು] ತಿನ್ನಬಹುದು; ಕುಡಿಯಬಹುದು. ಆದರೆ [ಉಡುಗೆ-ತೊಡುಗೆ, ಆಹಾರ ಮುಂತಾದ ವಿಷಯಕ್ಕಾಗಿ] ಅಪವ್ಯಯ ಮಾಡುವವರಾಗಬಾರದು. ಅಲ್ಲಾಹ್ ನು ಖಂಡಿತಾ ದುಂದುವೆಚ್ಚ ಮಾಡುವವರನ್ನು ಇಷ್ಟ ಪಡುವುದಿಲ್ಲ. {31}

ತನ್ನ ಉಪಾಸಕರ ಉಪಯೋಗಕ್ಕೆಂದೇ ಅಲ್ಲಾಹ್ ನು ಒದಗಿಸಿದ ಭೂಷಣಪ್ರಾಯವಾದ (ಉಡುಗೆ-ತೊಡುಗೆಗಳನ್ನು) ಹಾಗೂ ನಿರ್ಮಲವಾದ ಆಹಾರ ಪದಾರ್ಥಗಳನ್ನು ನಿಷಿದ್ಧಗೊಳಿಸಿದವರು ಯಾರು ಎಂದು (ಪೈಗಂಬರರೇ) ನೀವು ಅವರೊಂದಿಗೆ ಕೇಳಿರಿ. ಇಹಜೀವನದಲ್ಲಿ ವಿಶ್ವಾಸಿಗಳಿಗಾಗಿಯೇ ಅವುಗಳನ್ನು ಒದಗಿಸಲಾಗಿದೆ [ಇತರರೂ ಅದರಿಂದ ಪ್ರಯೋಜನ ಪಡೆದರೆ ಅಭ್ಯಂತರವಿಲ್ಲ]! ಆದರೆ ಪುನರುತ್ಥಾನದಲ್ಲಿ ಅವರಿಗಾಗಿ ಮಾತ್ರವೇ ಅವೆಲ್ಲ ಮೀಸಲು [ಅಂದರೆ ವಿಶ್ವಾಸಿಗಳಲ್ಲದವರಿಗೆ ಅವು ಲಭ್ಯವಾಗದು] ಎಂದೂ ಅವರಿಗೆ ತಿಳಿಸಿ ಬಿಡಿರಿ. ತಿಳಿದುಕೊಳ್ಳುವವರಿಗಾಗಿ ನಾವು ದೃಷ್ಟಾಂತಗಳನ್ನು ಹೀಗೆ ವಿಸ್ತಾರವಾಗಿ ತಿಳಿಸುತ್ತೇವೆ! {32}

[ನಿಷೇಧಿಸಿರುವುದು ಅವುಗಳನ್ನಲ್ಲ! ಬದಲಾಗಿ] ನನ್ನ ಕರ್ತಾರನು ನಿಷಿದ್ಧಗೊಳಿಸಿರುವ ವಿಷಯಗಳೆಂದರೆ ಪ್ರಕಟಗೊಳ್ಳುವ ಮತ್ತು ಗುಪ್ತವಾಗಿಯೇ ಉಳಿಯುವಂತಹ ಎಲ್ಲ ಅಶ್ಲೀಲತೆಗಳು; ಎಲ್ಲ ವಿಧ ಪಾಪಕಾರ್ಯಗಳು; ನ್ಯಾಯೋಚಿತವಲ್ಲದ (ಈ ನಿಮ್ಮ) ಉಲ್ಲಂಘನಾ ಪ್ರವೃತ್ತಿ; [ದೇವತ್ವದಲ್ಲಿ ಅಲ್ಲಾಹ್ ನಿಗೆ ಜೊತಗಾರರೆಂದು ಬಗೆಯಲು] ಯಾವುದೇ ಪುರಾವೆಯನ್ನು ಅವನು ಒದಗಿಸಿ ಕೊಡದಿದ್ದರೂ ನೀವು (ಕೆಲವರನ್ನು) ಅವನಿಗೆ ಜೊತೆಗಾರರನ್ನಾಗಿಸಿಕೊಳ್ಳುವುದು ಹಾಗೂ ನಿಮಗೆ [ಒಂದು ವಿಷಯದಲ್ಲಿ ಖಚಿತವಾದ] ಜ್ಞಾನವಿರದಾಗಲೂ ಅಂತಹದ್ದನ್ನು ಅಲ್ಲಾಹ್ ನ ಮೇಲೆ ಕಟ್ಟಿ ಹೇಳುವುದು - (ಇವನ್ನು) ಮಾತ್ರವೇ ಅವನು ನಿಷಿದ್ಧಗೊಳಿಸಿರುತ್ತಾನೆ ಎಂದು (ಪೈಗಂಬರರೇ) ನೀವು ಅವರೊಂದಿಗೆ ಹೇಳಿರಿ. {33}

[ಧಿಕ್ಕರಿಸಿಯೂ ಗೆದ್ದಿರುವೆವು ಎಂದು ಅವರು ಭ್ರಮಿಸದಿರಲಿ; ಏಕೆಂದರೆ] ಪ್ರತಿ ಸಮುದಾಯಕ್ಕೂ ನಿಗದಿಪಡಿಸಲಾಗಿರುವ ಒಂದು ಕಾಲಾವಧಿ ಇದೆ. ಅವರ (ನಿರ್ಧರಿತ) ಸಮಯ ಬಂದೆರಗಿದರೆ ಒಂದು ಘಳಿಗೆಯಷ್ಟಾದರೂ ಹಿಂದೆಯೋ ಮುಂದೆಯೋ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗದು! {34}

ಆದಮರ ಸಂತತಿಗಳೇ, ನಮ್ಮ ವಚನಗಳನ್ನು ನಿಮ್ಮ ಮುಂದೆ ವಿವರಿಸುತ್ತಾ ನಿಮ್ಮದೇ ಜನಾಂಗಕ್ಕೆ ಸೇರಿದವರಾದ (ನಮ್ಮ) ದೂತರುಗಳು ನಿಮ್ಮ ಬಳಿಗೆ ಬಂದಾಗಲೆಲ್ಲಾ ನಿಮ್ಮ ಪೈಕಿ ಯಾರು (ಅವುಗಳ ಉಲ್ಲಂಘನೆಯಾಗದಂತೆ) ಎಚ್ಚರಿಕೆ ವಹಿಸುತ್ತಾರೋ ಹಾಗೂ ತಮ್ಮನ್ನು (ಅದರ ಪ್ರಕಾರ) ಸುಧಾರಿಸಿಕೊಳ್ಳುತ್ತಾರೋ ಅಂತಹವರಿಗೆ ಭಯವಾಗಲಿ ವ್ಯಥೆಯಾಗಲಿ ಬರಲಾರದು [ಎಂಬುದು ನಮ್ಮ ಸ್ಥಿರ ನಿಯಮವಾಗಿರುತ್ತದೆ]. ಮತ್ತು ಯಾರು ನಮ್ಮ ವಚನಗಳನ್ನು ತಿರಸ್ಕರಿಸುತ್ತಾರೋ, ಅವುಗಳ ವಿರುದ್ಧ ಉದ್ಧಟತಂದಿಂದ ವರ್ತಿಸುತ್ತಾರೋ ಅಂತಹವರೇ ನರಕಾಗ್ನಿಯ ಸಂಗಾತಿಗಳಾಗುತ್ತಾರೆ; ಅದರೊಳಗೇ ಅವರು ಸದಾ ಕಾಲ ಬಿದ್ದಿರುತ್ತಾರೆ. {35-36}

ಇನ್ನು ಸುಳ್ಳುಗಳನ್ನು ಹೆಣೆದು ಅದನ್ನು ಅಲ್ಲಾಹ್ ನ ಮೇಲೆ ಆರೋಪಿಸಿದವರಿಗಿಂತ ಅಥವಾ ಅವನ ವಚನ-ನಿದರ್ಶನಗಳನ್ನು ಸುಳ್ಳೆಂದು ಸಾರಿ ತಳ್ಳಿ ಹಾಕಿದವರಿಗಿಂತ ದೊಡ್ಡ ಅಕ್ರಮಿಗಳು ಯಾರಿರಬಹುದು! ಅಂತಹವರಿಗೂ, ನಮ್ಮ ಮಲಕ್ ಗಳು ಅವರ ಆತ್ಮಗಳನ್ನು ವಶಪಡಿಸಿಕೊಳ್ಳಲು ಅವರಲ್ಲಿಗೆ ಬರುವ ತನಕವೂ [ಇಹಲೋಕದ ಜೀವನಕ್ಕೆ] ಅವರಿಗಾಗಿ ನಿಶ್ಚಿತವಾಗಿರುವ ಪಾಲು ತಲುಪುತ್ತಲೇ ಇರುತ್ತದೆ. (ಆ ಸಂದರ್ಭದಲ್ಲಿ ಮಲಕ್ ಗಳು,) ನೀವು ಅಲ್ಲಾಹ್ ನನ್ನು ಬಿಟ್ಟು (ಸಹಾಯಕ್ಕಾಗಿ) ಯಾರಿಗೆಲ್ಲ ಮೊರೆಯಿಡುತ್ತಿದ್ದಿರೋ ಅವರು ಈಗೆಲ್ಲಿದ್ದಾರೆ ಎಂದು ಕೇಳುವಾಗ, ಅವರೆಲ್ಲ ನಮ್ಮನ್ನು ತೊರೆದು ಮಾಯವಾಗಿ ಬಿಟ್ಟಿದ್ದಾರೆ ಎಂದು ಹೇಳುವರು; ಮಾತ್ರವಲ್ಲ ತಾವು ಧಿಕ್ಕಾರಿಗಳೇ ಆಗಿದ್ದೆವು ಎಂದು ಅವರು ಸ್ವತಃ ತಮ್ಮ ವಿರುದ್ಧ ಸಾಕ್ಷ್ಯವನ್ನೂ ವಹಿಸುವರು. {37}

ನಿಮಗಿಂತಲೂ ಮೊದಲು ಗತಿಸಿ ಹೋದ, ನರಕ ಪಾಲಾದ ಜಿನ್ನ್ ಮತ್ತು ಮನುಷ್ಯರ ಗುಂಪುಗಳನ್ನು ನೀವೂ ನರಕದಲ್ಲಿ ಸೇರಿಕೊಳ್ಳಿ ಎಂದು ಅಲ್ಲಾಹ್ ನು ಅವರೊಂದಿಗೆ ಹೇಳಲಿರುವನು. ಪ್ರತಿಯೊಂದು ಗುಂಪು ನರಕ ಸೇರಿಕೊಳ್ಳುವಾಗಲೂ (ತನ್ನಂತಹ) ತನ್ನ ಸಹೋದರ ಗುಂಪನ್ನು ಶಪಿಸುತ್ತಾ ಸೇರುವುದು. ಎಲ್ಲಿಯವರೆಗೆಂದರೆ, ಎಲ್ಲಾ ಗುಂಪುಗಳು ಅದರಲ್ಲಿ ಒಟ್ಟಾಗಿ ಬಿಟ್ಟಾಗ ನಂತರದವರು (ತಮಗಿಂತ) ಮುಂಚೆ ಅಲ್ಲಿದ್ದವರ ಕುರಿತು, ಓ ನಮ್ಮ ಕರ್ತಾರನೇ, ನಾವು ದಾರಿತಪ್ಪುವಂತೆ ಮಾಡಿದವರು ಇವರೇ ಆಗಿರುತ್ತಾರೆ; ಆದ್ದರಿಂದ ಇವರಿಗೆ ನರಕಶಿಕ್ಷೆಯನ್ನು ಇಮ್ಮಡಿಗೊಳಿಸಿ ನೀಡು ಎಂದು ಹೇಳುವರು. ಆಗ, ಪ್ರತಿ ಗುಂಪಿಗೂ ಇರುವುದು ಇಮ್ಮಡಿ ಶಿಕ್ಷೆಯೇ; ಆದರೆ ಅದು ನಿಮಗೆ ತಿಳಿದಿಲ್ಲವೆಂದು (ಅಲ್ಲಾಹ್ ನು) ಹೇಳುವನು. ಹಾಗಿರುವಾಗ, ಮುಂಚೆಯೇ ಅಲ್ಲಿದ್ದವರು ನಂತರ ಬಂದವರೊಂದಿಗೆ [ನಾವೇನೋ ತಪ್ಪಿತಸ್ಥರು ಹೌದು] ಆದರೆ ನಿಮಗೂ ನಮ್ಮ ಮೇಲೆ ಯಾವ ರೀತಿಯ ಶ್ರೇಷ್ಠತೆಯೂ ಇಲ್ಲ; ಆದ್ದರಿಂದ (ಭೂಲೋಕದಲ್ಲಿ) ಸಂಪಾದಿಸುತ್ತಿದ್ದುದರ ಫಲವಾಗಿ ಈಗ ನೀವೂ ಶಿಕ್ಷೆಯ ಸವಿಯುಣ್ಣಿರಿ ಎಂದು ಹೇಳುವರು. {38-39}

ನಿಜವಾಗಿ, ಯಾರು ನಮ್ಮ ವಚನಗಳನ್ನು ನಿರಾಕರಿಸಿದರೋ, ಅಹಂಕಾರ ತೋರಿ ಅದರಿಂದ ಮುಖ ತಿರುಚಿಕೊಂಡರೋ ಅಂತಹವರ ಪಾಲಿಗೆ ಆಕಾಶದ [ಅರ್ಥಾತ್ ಕರುಣೆಯ] ಬಾಗಿಲುಗಳು ತೆರೆದುಕೊಳ್ಳಲಾರವು; ಸೂಜಿಯ ರಂದ್ರದೊಳಗೆ ಒಂಟೆಯ ನುಸುಳುವಿಕೆ ಸಂಭವಿಸುವ ತನಕ ಅವರು ಸ್ವರ್ಗ ಪ್ರವೇಶಿಸುವುದು ಸಾಧ್ಯವಿಲ್ಲದ ವಿಷಯ! ಅಪರಾಧಿಗಳಿಗೆ ನಾವು ಕೊಡುವ ಶಿಕ್ಷೆ ಹಾಗಿರುತ್ತದೆ. ಅಂತಹವರಿಗೆ ನರಕದ (ಬೆಂಕಿಯ) ಹಾಸಿಗೆ ಮತ್ತು ಮೇಲಿನಿಂದ ಅದರದೇ ಹೊದಿಕೆ ಇರುವುದು. ಅನ್ಯಾಯವೆಸಗಿದವರಿಗೆ ನಾವು ಕೊಡುವ ಶಿಕ್ಷೆ ಹಾಗಿರುತ್ತದೆ. {40-41}

ಇನ್ನು (ನಮ್ಮ ವಚನಗಳನ್ನು ಸತ್ಯವೆಂದು) ಒಪ್ಪಿಕೊಂಡವರು ಮತ್ತದರ ಜೊತೆಗೆ ಸತ್ಕಾರ್ಯಗಳಲ್ಲಿ ತೊಡಗಿಕೊಂಡವರು (ತಿಳಿದಿರಬೇಕಾದ ವಿಷಯವೆಂದರೆ) ಯಾವೊಬ್ಬ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾದ ಹೊರೆಯನ್ನು ನಾವು ಹೊರಿಸುವುದಿಲ್ಲ; (ವಿಶ್ವಾಸಿಗಳಾದ) ಅವರೇ ಆಗಿರುವರು ಸ್ವರ್ಗವಾಸಿಗಳು; ಅದರಲ್ಲಿ ಅವರು ಶಾಶ್ವತವಾಗಿ ನೆಲೆಸಲಿರುವರು. {42}

ಅವರ ಹೃದಯಗಳಲ್ಲಿರಬಹುದಾದ ಕಹಿಭಾವನೆಗಳನ್ನೆಲ್ಲಾ ನಾವು ನೀಗಿಸಿ ಬಿಡುವೆವು; ಅವರ ತಳದಲ್ಲಿ (ಸ್ವರ್ಗೋದ್ಯಾನದ) ಹೊನಲುಗಳು ಹರಿಯುತ್ತಲಿರುವುವು! ಅಲ್ಲಾಹ್ ನಿಗೇ ಸ್ತುತಿ ಸ್ತೋತ್ರಗಳೆಲ್ಲ ಮೀಸಲು; ನಾವು ಈ ಸ್ಥಿತಿಗೆ ತಲುಪುವಂತೆ ಮಾಡಿದವನು ಅವನೇ! ಅಲ್ಲಾಹ್ ನು ನಮಗೆ ಮಾರ್ಗದರ್ಶನ ಮಾಡದೇ ಇರುತ್ತಿದ್ದರೆ ನಾವೆಂದೂ ಸರಿದಾರಿ ಪಡೆಯುತ್ತಿರಲಿಲ್ಲ! ಹೌದು, ನಮ್ಮ ಕರ್ತಾರನ ದೂತರುಗಳು (ತಮ್ಮೊಂದಿಗೆ) ತಂದಿದ್ದ ವಿಷಯವು ಸತ್ಯವೇ ಆಗಿತ್ತು ಎಂದು ಅವರು ನುಡಿಯುವರು. (ಭೂಲೋಕದಲ್ಲಿ) ನೀವು ಮಾಡಿದ್ದ ಸತ್ಕಾರ್ಯಗಳಿಗಾಗಿ ಇಂತಹ ಸ್ವರ್ಗೋದ್ಯಾನಕ್ಕೆ ನಿಮ್ಮನ್ನು ವಾರಸುದಾರರಾಗಿ ಮಾಡಲಾಗಿದೆ ಎಂದು (ಆ ಸಂದರ್ಭದಲ್ಲಿ) ಸಾರಲಾಗುವುದು. {43}

ನಮ್ಮ ಕರ್ತಾರನು ನಮಗೆ ನೀಡಿದ್ದ ವಾಗ್ದಾನವು ಒಂದು ಸತ್ಯವಾಗಿ ಪರಿಣಮಿಸಿರುವುದನ್ನು ನಾವು ಕಂಡುಕೊಂಡೆವು; ನೀವೂ ನಿಮ್ಮ ಕರ್ತಾರನು ನಿಮಗೆ ನೀಡಿದ್ದ ಎಚ್ಚರಿಕೆಯು ಸತ್ಯವಾಗಿರುವುದನ್ನು ಕಾಣುವಂತಾಗಿದೆಯೇ ಎಂದು ಸ್ವರ್ಗ ಸೇರಲಿರುವವರು ನರಕ ಪಾಲಾಗಲಿರುವವರನ್ನು ಕರೆದು ಕೇಳುವರು. ಹೌದೆಂದು ಅವರು ಉತ್ತರಿಸುವರು. ಅಷ್ಟೊತ್ತಿಗೆ ಅವರ ಮಧ್ಯೆಯಿಂದ ಒಬ್ಬ ಸಾರುವಾತನು ಅನ್ಯಾಯವೆಸಗಿದ ಅಧರ್ಮಿಗಳಿಗೆ ಅಲ್ಲಾಹ್ ನ ಶಾಪವಿದೆ ಎಂದು ಸಾರುವನು. {44}

(ಅಧರ್ಮಿಗಳಾದ) ಅವರು ಅಲ್ಲಾಹ್ ನ ಕಡೆಗಿರುವ ದಾರಿಯಿಂದ (ಜನರನ್ನು) ತಡೆಯುತ್ತಿದ್ದರು; ಅದೊಂದು ವಕ್ರ ದಾರಿಯಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ಮಾತ್ರವಲ್ಲ ಅವರು ಪರಲೋಕ ಜೀವನವನ್ನು ಸಹ ಅಲ್ಲಗಳೆಯುತ್ತಿದ್ದರು. {45}

[ಸ್ವರ್ಗ ಮತ್ತು ನರಕಗಳನ್ನು ಸೇರಲಿರುವ] ಆ ಎರಡು ಗುಂಪುಗಳ ನಡುವೆ ಒಂದು ತಡೆ ಇರುವುದು! (ಇನ್ನೊಂದೆಡೆ) ಎತ್ತರದಲ್ಲಿರುವ ಕೆಲವು ಪ್ರತಿಷ್ಠಿತ ವ್ಯಕ್ತಿಗಳು ಪ್ರತಿ ಗುಂಪಿನವರನ್ನು ಅವರವರ ಮುಖಭಾವದಿಂದಲೇ ಗುರುತಿಸಿಕೊಳ್ಳುವರು. ಅವರು ಸ್ವರ್ಗ ಪಡೆಯಲಿರುವವರನ್ನು ಕರೆದು ನಿಮಗೆ ಸಮಾಧಾನ ಪ್ರಾಪ್ತವಾಗಲಿ ಎಂದು ಹಾರೈಸುವರು; ಆಗ ಸ್ವರ್ಗವನ್ನು ಅವರಾರೂ ಇನ್ನೂ ಪ್ರವೇಶಿಸಿರುವುದಿಲ್ಲ, ಆದರೂ (ಅದರ ಬಗ್ಗೆ) ಬಹಳವಾದ ಆಶಾವಾದ ಹೊಂದಿರುವರು. {46}

ಹಾಗಿರುವಾಗ ಎತ್ತರದಲ್ಲಿರುವ ಅವರ ದೃಷ್ಟಿಯನ್ನು ನರಕ ಸೇರಲಿರುವ ಜನರ (ದುರವಸ್ಥೆಯ) ಕಡೆಗೂ ಸ್ವಲ್ಪ ತಿರುಗಿಸಲಾಗುವುದು. ಆಗ ಅವರು ಓ ನಮ್ಮ ದೇವನೇ, ನಮ್ಮನ್ನು ಎಂದೂ ಈ ದುಷ್ಕರ್ಮಿಗಳ ಜೊತೆ ಸೇರಿಸಬೇಡ ಎಂದು ಬೇಡುವರು. ನಂತರ ಎತ್ತರದ ಸ್ಥಾನ ಪಡಕೊಂಡ ಜನರು (ನರಕ ಸೇರಲಿರುವ) ಕೆಲವು ಪ್ರಮುಖರನ್ನು ಅವರ ಮುಖಭಾವದಿಂದಲೇ ಗುರುತಿಸಿ, ಅವರನ್ನುದ್ದೇಶಿಸಿ, ನಿಮ್ಮ (ಜೊತೆಗಿದ್ದ) ಜನಬಲ ಮತ್ತು ನೀವು ಮೆರೆಯುತ್ತಿದ್ದ ಅಹಂಕಾರ ನಿಮ್ಮ ಯಾವ ಪ್ರಯೋಜನಕ್ಕಾಯಿತು - ಎಂದು ಕೇಳುವರು. {47-48}

ಅಲ್ಲಾಹ್ ನು ಒಂದಿಷ್ಟು ಅನುಗ್ರಹವನ್ನೂ ಇವರಿಗೆ ನೀಡಲಾರನು ಎಂದು ನೀವು [ಇವರ ಭೂಲೋಕದ ಬವಣೆಯನ್ನು ಕಂಡಾಗ] ಆಣೆ ಹಾಕಿ ಹೇಳುತ್ತಿದ್ದುದು (ಇಂದು ಸ್ವರ್ಗ ಸೇರಲಿರುವ) ಇದೇ ಜನರ ಕುರಿತು ಆಗಿತ್ತಲ್ಲವೇ (ಎಂದು ಎತ್ತರದಲ್ಲಿರುವವರು ಕೇಳುತ್ತಿರುವಾಗಲೇ) ನೀವಿನ್ನು ಆ ಸ್ವರ್ಗವನ್ನು ಪ್ರವೇಶಿಸಿಕೊಳ್ಳಿರಿ; (ಅಲ್ಲಿ) ನಿಮಗಾವ ಭಯವೂ ಎದುರಾಗದು ಮಾತ್ರವಲ್ಲ ನೀವು ವ್ಯಥೆ ಪಡುವುದೂ ಇಲ್ಲ [ಎಂದು ಆ ಸ್ವರ್ಗ ವಾಸಿಗಳಿಗೆ ಸುವಾರ್ತೆ ತಿಳಿಸಲಾಗುವುದು]. {49}

ನಮ್ಮ ಮೇಲೆ ಒಂದಿಷ್ಟು ನೀರು ಸುರಿದು ಬಿಡಿರಿ ಅಥವಾ ಅಲ್ಲಾಹ್ ನು ನಿಮಗೆ ದಯಪಾಲಿಸಿರುವುದರಲ್ಲಿ ಏನನ್ನಾದರೂ ನೀಡಿರಿ ಎಂದು ನರಕದವರು ಸ್ವರ್ಗದವರನ್ನು ಕರೆದು ಯಾಚಿಸುವರು. ಅವೆರಡನ್ನೂ ಧಿಕ್ಕಾರಿಗಳಾದವರಿಗೆ ಅಲ್ಲಾಹ್ ನು ನಿಷೇಧಿಸಿರುತ್ತಾನೆ ಎಂದವರು ಉತ್ತರಿಸುವರು. {50}

ಅಂತಹ ಧಿಕ್ಕಾರಿಗಳು ತಮ್ಮ ಧರ್ಮವನ್ನು (ಗಂಭೀರವಾಗಿ ಪರಿಗಣಿಸದೆ) ಕೇವಲ ಒಂದು ಆಟದಂತೆ ಹಾಗೂ ಒಂದು ಮನೋರಂಜನೆಯಂತೆ ಪರಿಗಣಿಸಿದವರಾಗಿದ್ದರು. ಭೂಲೋಕ ಜೀವನವೂ ಅವರನ್ನು ಮೋಸಗೊಳಿಸಿ ಬಿಟ್ಟಿತ್ತು. ಹಾಗಿರುವಾಗ, ಅವರ ಇಂದಿನ ಈ ಭೇಟಿಯನ್ನು ಅವರು ಮರೆತು ಬಿಟ್ಟಿದ್ದಂತೆ ಹಾಗೂ ನಮ್ಮ ದೃಷ್ಟಾಂತಗಳನ್ನು ಅವರು ಅಲ್ಲಗಳೆಯುತ್ತಿದ್ದಂತೆ ಇಂದು ನಾವೂ ಸಹ ಅವರನ್ನು ಮರೆತಿದ್ದೇವೆ. {51}

ಮತ್ತು [ಓ ಪೈಗಂಬರರೇ, ಈಗ] ನಾವು ಒಂದು ಗ್ರಂಥವನ್ನು [ಅರ್ಥಾತ್ ಈ ಕುರ್‌ಆನ್ ಅನ್ನು] ಜ್ಞಾನಭರಿತ ವಿವರಣೆಗಳೊಂದಿಗೆ ಇವರತ್ತ [ಅರ್ಥಾತ್ ಕುರೈಷರತ್ತ] ತಲುಪಿಸಿರುತ್ತೇವೆ. ಅದು [ನಿಮ್ಮ ಕರೆಗೆ ಓಗೊಟ್ಟು] ವಿಶ್ವಾಸಿಗಳಾದ ಜನಸಮೂಹಕ್ಕೆ ಒಂದು ಮಾರ್ಗದರ್ಶನವೂ ಒಂದು ಅನುಗ್ರಹವೂ ಆಗಿರುತ್ತದೆ. {52}

[ಸ್ವರ್ಗ ನರಕಾದಿ ವಿಷಯಗಳಲ್ಲಿ ಕುರ್‌ಆನ್ ವಿವರಿಸಿರುವ] ಆ ಪರಿಣಾಮದ ಹೊರತು ಇವರು ಬೇರೆಯೇ ಒಂದು ಪರಿಣಾಮದ ನಿರೀಕ್ಷೆಯಲ್ಲಿರುವರೇ? ಯಥಾರ್ಥ ಪರಿಣಾಮವು ಹೊರಬೀಳುವ ದಿನ, ಅದಕ್ಕಿಂತ ಮುಂಚೆ (ಭೂಲೋಕದಲ್ಲಿ) ಅದನ್ನು ಅವಗಣಿಸಿದ್ದವರು - ಹೌದು, ನಮ್ಮ ಕರ್ತಾರನ ದೂತರುಗಳು (ಭೂಲೋಕದಲ್ಲಿ ನಮ್ಮ ಬಳಿಗೆ) ತಂದಿದ್ದ (ಸಂದೇಶವು) ಸತ್ಯವಾದುದೇ ಆಗಿತ್ತು; ಛೆ! ಈಗ ನಮ್ಮ ಪರವಾಗಿ ಶಿಫಾರಸು ಮಾಡಬಹುದಾದ ಒಬ್ಬ ಶಿಫಾರಸುದಾರನಾದರೂ ಸಿಗಬಹುದೇ; ಅಥವಾ ನಾವು (ಭೂಲೋಕಕ್ಕೆ) ಹಿಂದಿರುಗಿಸಲ್ಪಡುವಂತಾಗಿ ಹಿಂದೆ ನಾವು ಎಸಗಿದ್ದ ಕೃತ್ಯಗಳಿಗಿಂತ ವಿಭಿನ್ನವಾದುದನ್ನು [ಅರ್ಥಾತ್ ಸತ್ಕರ್ಮಗಳನ್ನು] ಮಾಡುವಂತಾಗಬಹುದೇ - ಎಂದು ಗೋಗೆರೆಯುವರು. ನಿಜವಾಗಿ ಅವರು ಸ್ವತಃ ತಮ್ಮನ್ನೇ ನಷ್ಟಕ್ಕೀಡಾಗಿಸಿ ಕೊಂಡವರು! ಅವರು (ಧರ್ಮದ ಹೆಸರಲ್ಲಿ) ಅವಿಷ್ಕಕರಿಸುತ್ತಿದ್ದ ಸುಳ್ಳುಗಳು ಅವರಿಂದ ದೂರವಾಗಿ ಬಿಡುವುವು. {53}

(ಓ ಜನರೇ) ವಾಸ್ತವದಲ್ಲಿ ನಿಮ್ಮ ದೇವನು ಆ ಅಲ್ಲಾಹ್ ನೇ! ಅವನು ಭೂಮ್ಯಾಕಾಶಗಳನ್ನು ಆರು ಕಾಲಾವಧಿಗಳಲ್ಲಿ [ಅರ್ಥಾತ್ ಆರು ವಿಭಿನ್ನ ಹಂತಗಳಲ್ಲಿ] ಸೃಷ್ಟಿ ಮಾಡಿದನು. ಅನಂತರ ಸಕಲ ವಿಶ್ವದ ಅಧಿಕಾರ ಗದ್ದುಗೆಯಲ್ಲಿ ತನ್ನನ್ನು ಪ್ರತಿಷ್ಠಾಪಿಸಿಕೊಂಡನು [ಅರಬಿ: ಇಸ್ತವಾ ಅಲಾ ಅಲ್-ಅರ್‌ಶ್]. ಅವನು ರಾತ್ರಿಯನ್ನು ಹಗಲಿನ ಮೇಲೆ ಹೊದಿಸಿ ಬಿಡುತ್ತಾನೆ; ಅದು ಹಗಲನ್ನು ಬಿರುಸಿನಿಂದ ಬೆನ್ನಟ್ಟುತ್ತಿರುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳು (ಸಹ ಅವನ ಸೃಷ್ಟಿಗಳಾಗಿದ್ದು) ಅವನದೇ ಆಜ್ಞೆಗೆ ಅಧೀನವಾಗಿ ಕಾರ್ಯೋನ್ಮುಖವಾಗಿವೆ. ಚೆನ್ನಾಗಿ ಕೇಳಿರಿ, ಸೃಷ್ಟಿಯೂ ಅವನದ್ದೇ; ಆಜ್ಞಾಪಿಸುವ ಅಧಿಕಾರವೂ ಅವನದ್ದು ಮಾತ್ರವೇ! (ಇನ್ನೂ ಕೇಳಿರಿ), ಸಕಲ ವಿಶ್ವದ ಕರ್ತಾರ ಅಲ್ಲಾಹ್ ನು ಮಹಾ ಸಮೃದ್ಧನು! {54}

(ಜನರೇ) ನೀವು ನಿಮ್ಮ ಕರ್ತಾರನನ್ನು ರೋದಿಸುತ್ತಲೂ ಗೌಪ್ಯವಾಗಿಯೂ ಪ್ರಾರ್ಥಿಸುತ್ತಲಿರಿ. ಖಂಡಿತಾ ಅವನು ಹದ್ದು ಮೀರುವ ಜನರನ್ನು ಇಷ್ಟಪಡುವುದಿಲ್ಲ. {55}

ಒಮ್ಮೆ ನಾಡಿನಲ್ಲಿ ಸುಧಾರಣೆಯಾದ ಬಳಿಕ ನೀವು ಅಲ್ಲಿ ಪ್ರಕ್ಷುಬ್ಧತೆ ಉಂಟುಮಾಡದಿರಿ. ಭಯದ ಸನ್ನಿವೇಶದಲ್ಲೂ ಆಶಾದಾಯಕ ಸ್ಥಿತಿಯಲ್ಲೂ ನೀವು ಅವನಲ್ಲಿ ಮಾತ್ರ ಪ್ರಾರ್ಥಿಸುವವರಾಗಿರಿ. ನಿಜವಾಗಿ ಅಲ್ಲಾಹ್ ನ ಕೃಪೆಯು (ನಾಡಿನಲ್ಲಿ) ಒಳಿತುಗಳನ್ನು ಮಾಡುವವರ ಸಮೀಪದಲ್ಲೇ ಇರುತ್ತದೆ. {56}

ತನ್ನ ಕಾರುಣ್ಯವನ್ನು (ಮಳೆಯ ರೂಪದಲ್ಲಿ ನಾಡಿನಲ್ಲಿ ಸುರಿಸುವ) ಮುನ್ನ ಶುಭ ಸೂಚನೆಯಾಗಿ ತಂಗಾಳಿಯನ್ನು ಕಳುಹಿಸುವವನೂ ಅವನೇ! ಅದು ಭಾರವಾದ ಮೋಡಗಳನ್ನು ಹೊತ್ತು ಕೊಂಡಾಗ ನಾವದನ್ನು ನಿರ್ಜೀವ ಪ್ರದೇಶದತ್ತ ಸಾಗಿಸಿ ಬಿಡುತ್ತೇವೆ. ಮತ್ತು ನಾವು ಅದರಿಂದ ಅಲ್ಲಿ ಮಳೆ ಸುರಿಸುತ್ತೇವೆ. ತದನಂತರ ನಾವದರ ಮೂಲಕ ಎಲ್ಲ ವಿಧ ಬೆಳೆಗಳನ್ನು (ಆ ಪ್ರದೇಶದಲ್ಲಿ) ಉತ್ಪಾದಿಸುತ್ತೇವೆ. ಹೌದು, ಮೃತಪಟ್ಟವರನ್ನು ನಾವು (ಜೀವಂತವಾಗಿ) ಹೊರತರುವುದೂ ಅದರಂತೆಯೇ! [ಇಂತಹ ಉಪಮೆಗಳನ್ನು ನೀಡುತ್ತಿರುವುದು] ನೀವು ಮನನ ಮಾಡುವರು ಆಗಲೆಂದು! {57}

(ಹಾಗೆ ಮಳೆ ಸುರಿದಾಗ) ಉತ್ತಮವಾದಂತಹ ಭೂಪ್ರದೇಶವು ತನ್ನ ಕರ್ತಾರನ ಅನುಮತಿಯೊಂದಿಗೆ ಸಸ್ಯಾದಿಗಳನ್ನು ಸಮೃದ್ಧವಾಗಿ ಉತ್ಪಾದಿಸುತ್ತದೆ. ಆದರೆ ಹಾಳು ಭೂಮಿಯು (ಮಳೆ ಬಿದ್ದ ನಂತರವೂ) ನಿಶ್ಪ್ರಯೋಜಕ ಕಸಕಡ್ಡಿಗಳ ಹೊರತು ಬೇರೇನನ್ನೂ ಉತ್ಪಾದಿಸಲಾರದು! [ಜನರೇ, ನಿಮ್ಮ ಉದಾಹರಣೆಯೂ ಅದರಂತೆಯೇ]! ಕೃತಜ್ಞರಾಗಲು ಬಯಸುವ ಜನರಿಗಾಗಿ ನಾವು (ಈ ಕುರ್‌ಆನ್ ನ ವಚನಗಳಲ್ಲಿ) ದೃಷ್ಟಾಂತಗಳನ್ನು ಹೀಗೆ ವಿವಿಧ ರೀತಿಯಲ್ಲಿ ವಿವರಿಸುತ್ತಿದ್ದೇವೆ. {58}

[ಜನರೇ, ನಿಮಗೆ ಪ್ರವಾದಿ ನೂಹ್ ಮತ್ತು ಇತರ ಪ್ರವಾದಿಗಳ ಸಂದೇಶದ ಕುರಿತು ತಿಳಿದೇ ಇದೆ ತಾನೆ!] ನಾವು ನೂಹ್ ರನ್ನು ಅವರ ಸಮುದಾಯದತ್ತ (ಪ್ರವಾದಿಯನ್ನಾಗಿಸಿ) ಕಳುಹಿಸಿದ್ದೆವು. ಓ ನನ್ನ ಸಮುದಾಯವೇ! ನೀವು ಆ ಅಲ್ಲಾಹ್ ನನ್ನು ಆರಾಧಿಸುವವರಾಗಿರಿ; ಅವನ ಹೊರತು ಬೇರೆ ಯಾರೂ ನಿಮಗೆ ದೇವರಿಲ್ಲ; ನಿಮ್ಮ ಮೇಲೆ ಆ ಭಯಂಕರವಾದ ದಿನ ಶಿಕ್ಷೆಯು ಎರಗಿ ಬೀಳುವ ಕುರಿತು ನಾನು ನಿಜವಾಗಿಯೂ ಅಂಜುತ್ತಿರುವೆನು - ಎಂದು ಅವರು (ತಮ್ಮ ಸಮುದಾಯಕ್ಕೆ) ಬೋಧಿಸಿದರು. (ಆಗ) ಅವರ ಸಮುದಾಯಕ್ಕೆ ಸೇರಿದ ಮುಖ್ಯಸ್ಥರು, ನೀವು ದಾರಿದಪ್ಪಿರುವುದನ್ನು ನಾವು ಬಹಳ ಸ್ಪಷ್ಟವಾಗಿ ಕಾಣುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು. {59-60}

(ಅದಕ್ಕೆ) ಓ ನನ್ನ ಸಮುದಾಯವೇ, ನನ್ನಲ್ಲಿ ಯಾವುದೇ ವಕ್ರತೆಯಿಲ್ಲ; ಬದಲಾಗಿ ನಾನು ಜಗದೊಡೆಯನ ವತಿಯಿಂದ ನಿಯೋಜಿಸಲ್ಪಟ್ಟ ಒಬ್ಬ ದೂತನಾಗಿರುವೆನಷ್ಟೆ! ನನ್ನ ಕರ್ತಾರನ ಸಂದೇಶಗಳನ್ನು ನಿಮಗೆ ತಲುಪಿಸುವವನಾಗಿದ್ದೇನೆ ಮತ್ತು ನಿಮಗೆ ಸದುಪದೇಶ ನೀಡುವವನಾಗಿದ್ದೇನೆ. ನಿಮಗೆ ಗೊತ್ತಿಲ್ಲದ ಹಲವು ವಿಷಯಗಳನ್ನು ಅಲ್ಲಾಹ್ ನು (ನನಗೆ ತಿಳಿಸಿದ್ದರಿಂದ) ನಾನು ತಿಳಿದವನಾಗಿದ್ದೇನೆ! ನಿಮ್ಮನ್ನು (ಪರಲೋಕದ ವಿಚಾರಣೆಯ ಕುರಿತು) ಎಚ್ಚರಗೊಳಿಸುಲು ಮತ್ತು ನಿಮ್ಮನ್ನು ಧರ್ಮನಿಷ್ಠರನ್ನಾಗಿ ಮಾಡಲು ಹಾಗೂ ಆ ಮೂಲಕ (ಅಲ್ಲಾಹ್ ನ) ಕಾರುಣ್ಯಕ್ಕೆ ನೀವು ಅರ್ಹತೆ ಪಡೆಯುವಂತಾಗಲು, ನಿಮ್ಮ ಕರ್ತಾರನ ವತಿಯಿಂದಿರುವ ಬೋಧನೆಗಳು ಬಂದಿರುವುದು ನಿಮ್ಮವನೇ ಆದ ಒಬ್ಬಾತನಿಗೆ ಎಂಬ ವಾಸ್ತವವು ನಿಮ್ಮನ್ನು ನಿಬ್ಬೆರಗು ಗೊಳಿಸಿದೆಯೇ - ಎಂದು ನೂಹ್ ರು ಕೇಳಿದರು. {61-63}

ಕೊನೆಗೆ ನೂಹ್ ರನ್ನು ಅವರು ತಿರಸ್ಕರಿಸಿಯೇ ಬಿಟ್ಟರು. ನಂತರ ನಾವು ನೂಹ್ ರನ್ನು ಮತ್ತು ಆ ನೌಕೆಯಲ್ಲಿ ಅವರ ಜೊತೆಗಿದ್ದವರನ್ನು (ಜಲಪ್ರಳಯದಿಂದ) ರಕ್ಷಿಸಿದೆವು ಹಾಗೂ ನಮ್ಮ ದೃಷ್ಟಾಂತಗಳೊಂದಿಗೆ ಧಿಕ್ಕಾರದ ನಿಲುವು ತೋರಿದವರನ್ನು ನಾವು (ಆ ಪ್ರಳಯದಲ್ಲಿ) ಮುಳುಗಿಸಿ ಬಿಟ್ಟೆವು. ನಿಜವಾಗಿಯೂ (ಧಿಕ್ಕಾರದಲ್ಲಿ) ಅದು ಸಂಪೂರ್ಣವಾಗಿ ಕುರುಡಾಗಿ ಹೋಗಿದ್ದ ಸಮುದಾಯವಾಗಿತ್ತು! {64}

ಹಾಗೆಯೇ ಆದ್ ಎಂಬ ಸಮುದಾಯದೆಡೆಗೆ ಅವರದೇ ಸಹೋದರನಾದ ಹೂದ್ ರನ್ನು (ಪ್ರವಾದಿಯನ್ನಾಗಿಸಿ) ಕಳುಹಿಸಿದ್ದೆವು. ಓ ನನ್ನ ಸಮುದಾಯದ ಜನರೇ, ನೀವು ಅಲ್ಲಾಹ್ ನನ್ನು ಮಾತ್ರ ಆರಾಧಿಸುವವರಾಗಿರಿ; ಅವನ ಹೊರತು ನಿಮಗೆ ಬೇರೆ ಯಾರೂ ದೇವರಿಲ್ಲ. ನೀವು (ಆ ಅಲ್ಲಾಹ್ ನಿಗೆ) ಭಯಭಕ್ತಿ ತೋರುವುದಿಲ್ಲವೇ - ಎಂದು ಅವರು ಬೋಧಿಸಿದರು. {65}

ಆಗ, ನೀವು ಅವಿವೇಕಿತನದಲ್ಲಿ ಸಿಲುಕಿರುವುದನ್ನು ನಾವು ಕಾಣುತ್ತಿದ್ದೇವೆ; ಮತ್ತು ನೀವೊಬ್ಬ ಸುಳ್ಳುಗಾರನಿಗರಬೇಕು ಎಂಬ ಗುಮಾನಿ ನಮ್ಮದಾಗಿದೆ ಎಂದು ಅವರ ಸಮುದಾಯಕ್ಕೆ ಸೇರಿದ ಮುಖಂಡರುಗಳು ಪ್ರತಿಕ್ರಿಯಿಸಿದರು. {66}

ಓ ನನ್ನ ಸಮುದಾಯದ ಜನರೇ, ನಾನು ಅವಿವೇಕೆತನಕ್ಕೆ ಬಲಿಯಾಗಿಲ್ಲ; ಬದಲಾಗಿ ನಾನು ಜಗದೊಡೆಯನ ಕಡೆಯಿಂದ (ನಿಮ್ಮತ್ತ) ನಿಯೋಜಿಸಲ್ಪಟ್ಟ ದೂತನಾಗಿರುವೆನು! ನನ್ನ ಕರ್ತಾರನ ವತಿಯಿಂದ ಬಂದ ಸಂದೇಶಗಳನ್ನು ನಿಮಗೆ ತಲುಪಿಸುತ್ತಿದ್ದೇನೆ; ಮತ್ತು ನಿಮ್ಮ ಪಾಲಿಗೆ ನಾನೊಬ್ಬ ವಿಶ್ವಾಸಾರ್ಹ ಉಪದೇಶಕನೂ ಆಗಿರುತ್ತೇನೆ! ನಿಮ್ಮನ್ನು ಎಚ್ಚರಗೊಳಿಸುವಂತಹ ಉಪದೇಶಗಳು ನಿಮ್ಮೊಡೆಯನ ಕಡೆಯಿಂದ ನಿಮ್ಮವನೇ ಆದ ಒಬ್ಬಾತನ ಮೂಲಕ ಬಂದಿರುವುದು ನಿಮ್ಮನ್ನು ಬೆರಗುಗೊಳಿಸಿತೇ? ಹಾಗಾದರೆ (ಪ್ರವಾದಿ) ನೂಹ್ ರ ಸಮುದಾಯದ ನಂತರದ ಕಾಲದಲ್ಲಿ ನಿಮ್ಮನ್ನು ಅವನು (ನಾಡಿನಲ್ಲಿ) ಅಧಿಕಾರರೂಢರನ್ನಾಗಿ ಮಾಡಿದ ಸಂದರ್ಭವನ್ನು ನೀವು ಸ್ವಲ್ಪ ನೆನಪಿಸಿಕೊಳ್ಳಿ. ಮಾತ್ರವಲ್ಲ, ಅವನು ನಿಮ್ಮ ಸಮುದಾಯಕ್ಕೆ ದೇಹದಾರ್ಢ್ಯತೆಯನ್ನು ಮತ್ತಷ್ಟು ವೃದ್ಧಿಸಿ ಕೊಟ್ಟನು. ಹಾಗಿರುವಾಗ ನೀವು ಅಲ್ಲಾಹ್ ನ ಔದಾರ್ಯಗಳನ್ನು ಸ್ಮರಿಸುವವರಾಗಿರಿ! ಹಾಗಾದರೆ ನೀವು (ಇಹಪರಗಳಲ್ಲಿ) ಯಶಸ್ವಿಗಳಾಗಬಹುದು ಎಂದು (ಹೂದ್ ರು) ಉತ್ತರಿಸಿದರು. {67-69}

ಒಬ್ಬ ಅಲ್ಲಾಹ್ ನನ್ನು ಮಾತ್ರವೇ ನಾವು ಆರಾಧಿಸಬೇಕೆಂದೂ ನಮ್ಮ ತಾತಮುತ್ತಾತಂದಿರು ಆರಾಧಿಸುತ್ತಿದ್ದವುಗಳನ್ನು ನಾವು ವರ್ಜಿಸಬೇಕೆಂದೂ ಹೇಳಲು ನೀವು ನಮ್ಮ ಬಳಿಗೆ ಬಂದಿರುವಿರೇನು? ಹಾಗಾದರೆ, ನೀವು ಸತ್ಯವಂತರು ಹೌದಾದರೆ, ಯಾವ (ಶಿಕ್ಷೆಯ) ಕುರಿತು ನೀವು ನಮಗೆ ಮುನ್ನೆಚ್ಚರಿಕೆ ನೀಡುತ್ತಿರುವಿರೋ ಅದನ್ನು (ಈಗಲೇ) ತಂದು ಬಿಡಿ ಎಂದು ಅವರು ಹೇಳಿದರು. {70}

ನಿಮ್ಮೊಡೆಯನ ಕಡೆಯಿಂದ ಕೆಟ್ಟ ಶಿಕ್ಷೆ ಮತ್ತು ಕ್ರೋಧವು ನಿಮ್ಮ ಮೇಲಿದೋ ಎರಗಿ ಬಿದ್ದಾಯಿತು! ನೀವು ಮತ್ತು ನಿಮ್ಮ ತಾತಮುತ್ತಾತಂದಿರು ಇಟ್ಟುಕೊಂಡ ಕೆಲವು ಹೆಸರುಗಳ ಕುರಿತು [ಅರ್ಥಾತ್ ದೇವರುಗಳೆಂದು ಅವುಗಳಿಗೆ ನೀವು ಕೇವಲ ಹೆಸರಿಟ್ಟುಕೊಂಡ ಮಾತ್ರಕ್ಕೆ] ನನ್ನೊಂದಿಗೆ ಜಗಳಕ್ಕಿಳಿದಿರುವಿರೇನು? ಅವು (ದೇವರುಗಳೆಂದು) ಅಲ್ಲಾಹ್ ನು ಯಾವ ಪುರಾವೆಯನ್ನೂ ಇಳಿಸಿ ಕೊಟ್ಟಿಲ್ಲವಲ್ಲ! ಇನ್ನು ನೀವು ಆ ಶಿಕ್ಷೆಗಾಗಿ ಕಾಯಿರಿ; ನಾನು ಸಹ ನಿಮ್ಮ ಜೊತೆಯಲ್ಲಿ ಕಾಯುವೆನು ಎಂದು ಹೂದ್ ರು ಹೇಳಿದರು. {71}

ಕೊನೆಗೆ [ಅಂತಹ ಶಿಕ್ಷೆಯು ಅವರ ಮೇಲೆ ಬಂದೆರಗಿದಾಗ] ನಮ್ಮ ಕಾರುಣ್ಯದ ಮೂಲಕ ಹೂದ್ ರನ್ನು ಮತ್ತು (ವಿಶ್ವಾಸಿಗಳಾಗಿ) ಅವರ ಜೊತೆ ಸೇರಿಕೊಂಡವರನ್ನು ನಾವು ರಕ್ಷಿಸಿದೆವು. ಹಾಗೂ ನಮ್ಮ ದೃಷ್ಟಾಂತಗಳನ್ನು ಅಲ್ಲಗಳೆದವರ ಬುಡವನ್ನೇ ಕತ್ತರಿಸಿ ಹಾಕಿದೆವು. ಅವರಂತು ವಿಶ್ವಾಸವಿರಿಸುವವರು ಆಗಿರಲಿಲ್ಲ. {72}

ಮತ್ತು ಸಮೂದ್ ಜನಾಂಗದತ್ತ ಅವರದೇ ಸಹೋದರನಾದ ಸಾಲಿಹ್ ರನ್ನು (ನಾವು ಪ್ರವಾದಿಯಾಗಿಸಿ) ಕಳುಹಿಸಿದ್ದೆವು. ಓ ನನ್ನ ಸಮುದಾಯದ ಜನರೇ, ನೀವು ಅಲ್ಲಾಹ್ ನನ್ನು ಮಾತ್ರ ಆರಾಧಿಸಿರಿ; ಅವನ ಹೊರತು ನಿಮಗೆ ಬೇರೆ ಯಾರೂ ದೇವರಲ್ಲ; ನಿಮ್ಮೊಡೆಯನ ಕಡೆಯಿಂದ ಸ್ಪಷ್ಟವಾದ ಪುರಾವೆಯು ನಿಮ್ಮೆಡೆಗೆ ಬಂದಾಯಿತು. ಹೌದು, ಅಲ್ಲಾಹ್ ನ ಈ ಹೆಣ್ಣೊಂಟೆಯು ನಿಮಗೊಂದು ದೃಷ್ಟಾಂತವಾಗಿದೆ. ಆದ್ದರಿಂದ ನೀವು (ಅದರ ತಂಟೆಗೆ ಹೋಗದೆ) ಅಲ್ಲಾಹ್ ನ ಭೂಮಿಯಲ್ಲಿ ಮೇಯ್ದುಕೊಳ್ಳಲು ಅದನ್ನು ಬಿಟ್ಟು ಬಿಡಿರಿ. ಕೇಡು ಬಗೆಯುವ ಉದ್ದೇಶದಿಂದ ಅದನ್ನು ಮುಟ್ಟಲೂ ಬೇಡಿ. ಹಾಗೇನಾದರೂ ಮಾಡಿದರೆ ನೋವುಭರಿತ ಶಿಕ್ಷೆ ನಿಮ್ಮ ಮೇಲೆ ಬಂದೆರಗುವುದು ಎಂದು ಅವರು ಹೇಳಿದರು. {73}

ಆದ್ ಸಮುದಾಯದ (ಪತನದ) ನಂತರ ಅವನು ನಿಮ್ಮನ್ನು (ನಾಡಿನ) ಉತ್ತರಾಧಿಕಾರಿಗಳನ್ನಾಗಿ ಮಾಡಿದುದನ್ನು ಹಾಗೂ ನೀವು ನಾಡಿನಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿದುದನ್ನು ಸ್ಮರಿಕೊಳ್ಳಿರಿ. ಮಾತ್ರವಲ್ಲ [ಅವನು ಅನುಗ್ರಹಿಸಿದ ಕಾರಣ] ಭೂಮಿಯ ಸಮತಟ್ಟು ಪ್ರದೇಶಗಳಲ್ಲಿ ನೀವು ಭವ್ಯ ಭವನಗಳನ್ನು ಕಟ್ಟಿದಿರಿ ಹಾಗೂ ಬೆಟ್ಟಗಳನ್ನು (ವಾಸಕ್ಕಾಗಿ) ಮನೆಗಳಾಕಾರದಲ್ಲಿ ಕೊರೆದು ಕೊಂಡಿರಿ! ಆದ್ದರಿಂದ ಅಲ್ಲಾಹ್ ನ ಅಪಾರವಾದ ಕೊಡುಗೆಗಳನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿರಿ, ಅಲ್ಲದೆ ನಾಡಿನಲ್ಲಿ ಪ್ರಕ್ಷುಬ್ಧತೆ ಹರಡುತ್ತಾ ನಡೆಯದಿರಿ (ಎಂದೂ ಸಾರಿದರು). {74}

(ಪ್ರವಾದಿ ಸಾಲಿಹ್ ರ) ಸಮುದಾಯದಕ್ಕೆ ಸೇರಿದ್ದ ದುರಹಂಕಾರದಿಂದ ಮೆರೆಯುತ್ತಿದ್ದ ಮುಖಂಡರುಗಳು, ಆ ಸಮುದಾಯದಲ್ಲಿನ ತುಳಿತಕ್ಕೊಳಗಾದ ಬಡ ವಿಶ್ವಾಸಿಗಳನ್ನುದ್ದೇಶಿಸಿ, ನಿಜವಾಗಿಯೂ ಈ ಸಾಲಿಹ್ ತನ್ನೊಡೆಯನ ಕಡೆಯಿಂದ ನಿಯೋಗಿಸಲ್ಪಟ್ಟ ದೂತನೆಂದು ನೀವು ತಿಳಿದಿರುವಿರೇನು ಎಂದು ಕೇಳಿದಾಗ ಯಾವ ದೌತ್ಯದೊಂದಿಗೆ ಅವರನ್ನು ಕಳಿಸಲಾಗಿದೆಯೋ ನಮಗೆ ಅದರಲ್ಲಿ ಬಲವಾದ ನಂಬಿಕೆ ಇದೆ ಎಂದು ಅವರು (ಆ ಬಡ ವಿಶ್ವಾಸಿಗಳು) ಉತ್ತರಿಸಿದರು. ಅದಕ್ಕೆ, ನೀವು ಯಾವುದರಲ್ಲಿ ನಂಬಿಕೆ ಇಟ್ಟಿರುವಿರೋ ನಮಗೆ ನಿಜಕ್ಕೂ ಅದರ ಬಗ್ಗೆ ಧಿಕ್ಕಾರವಿದೆ ಎಂದು ಆ ದುರಹಂಕಾರಿಗಳು ಸಾರಿದರು! {75-76}

ನಂತರ ಅವರು ಆ ಹೆಣ್ಣೊಂಟೆಯನ್ನು (ಹಿಂದೊಡೆ ಕಡಿದು) ಕ್ರೂರವಾಗಿ ಕೊಂದುಬಿಟ್ಟರು. ಆ ಮೂಲಕ ತಮ್ಮ ಕರ್ತಾರನ ಆದೇಶವನ್ನು ತಿರಸ್ಕರಿಸಿದರು. ಮಾತ್ರವಲ್ಲ, ಓ ಸಾಲಿಹ್! ನೀನು (ಅಲ್ಲಾಹ್ ನಿಂದ) ಕಳಿಸಲ್ಪಟ್ಟ ದೂತನು ಹೌದಾದರೆ ಯಾವ (ಶಿಕ್ಷೆಯ ಕುರಿತು) ನಮಗೆ ಮುನ್ನೆಚ್ಚರಿಕೆ ನೀಡುತ್ತಿದ್ದೆಯೋ ಅದನ್ನು ನಮ್ಮ ಮೇಲೆ ಎರಗಿಸಿ ತೋರಿಸು ಎಂದು ಅವರು ಸವಾಲೊಡ್ಡಿದರು. {77}

ಕೂಡಲೇ (ಭಯಂಕರ ಸದ್ದಿನೊಂದಿಗೆ) ಭೀಕರ ಸ್ವರೂಪದ ಭೂಕಂಪವೊಂದು ಅವರನ್ನು ಆವರಿಸಿಕೊಂಡಿತು; ಮತ್ತು ಅವರವರ ನಿವಾಸಗಳಲ್ಲಿ (ಜೀವಲಕ್ಷಣವಿಲ್ಲದೆ) ಬೋರಲಾಗಿ ಬಿದ್ದ ಸ್ಥಿತಿಯಲ್ಲಿ ಅವರಿಗೆ ಬೆಳಗಾಯಿತು! {78}

ನಂತರ ಸಾಲಿಹ್ ರು, ಓ ನನ್ನ ಸಮುದಾಯವೇ, ನನ್ನ ಕರ್ತಾರನ ಸಂದೇಶವನ್ನು ನಾನು ಸಮರ್ಪಕವಾಗಿ ನಿಮಗೆ ತಲುಪಿಸಿ ಬಿಟ್ಟಿದ್ದೆ; ಮತ್ತು ನಿಮ್ಮನ್ನು ಉಪದೇಶಿಸಿದ್ದೆ ಕೂಡ! ಆದರೆ ಉಪದೇಶ ನೀಡುವವರು ನಿಮಗೆ ಇಷ್ಟವಾಗಲಿಲ್ಲ ಎಂದು ಹೇಳುತ್ತಾ ಅವರಿಂದ ದೂರವಾಗಿ ಹೋದರು. {79}

ಹಾಗೆಯೇ (ನಾವು ದೂತರನ್ನಾಗಿ ನಿಯೋಗಿಸಿದ್ದ) ಲೂತ್ ರು ಸಹ ತಮ್ಮ ಸಮುದಾಯವನ್ನುದ್ದೇಶಿಸಿ, ಲೋಕದ ಜನರಲ್ಲಿ ನಿಮಗಿಂತ ಮುಂಚೆ ಯಾವೊಬ್ಬನೂ ಎಸಗಿರದಂತಹ ಅಶ್ಲೀಲ ಕೃತ್ಯವನ್ನು ನೀವು ಎಸಗುತ್ತಿರುವಿರೇನು? ನೀವಾದರೋ ಸ್ತ್ರೀಯರನ್ನು (ವರಿಸಿಕೊಳ್ಳುವ) ಬದಲು ಕಾಮತೃಷೆಯನ್ನು ನೀಗಿಸಿಕೊಳ್ಳಲು ಪುರುಷರನ್ನು ಸಮೀಪಿಸುತ್ತಿರುವಿರಿ; ಹೌದು, ನೀವು ಹದ್ದುಮೀರಿ ಹೋದ ಒಂದು ಸಮುದಾಯವೇ ಸರಿ - ಎಂದು ಎಚ್ಚರಿಸಿದ್ದ ಸಂದರ್ಭವನ್ನು ನೆನಪಿಸಿರಿ. {80-81}

ಅದಕ್ಕೆ ಅವರ ಸಮುದಾಯವು ನೀಡಿದ ಮಾರುತ್ತರವು, ಇವರನ್ನೆಲ್ಲ ನಿಮ್ಮ ನಾಡಿನಿಂದ ಹೊರಕ್ಕೆ ಅಟ್ಟಿ ಬಿಡಿರಿ; ಈ ಜನರು ತುಂಬಾ ಪರಿಶುದ್ಧತೆಯನ್ನು ಪಾಲಿಸ ಬಯಸುತ್ತಾರೆ ಎಂಬ (ವ್ಯಂಗ್ಯದ) ಮಾತಲ್ಲದೆ ಬೇರೇನೂ ಆಗಿರಲಿಲ್ಲ. {82}

ಕೊನೆಗೆ ನಾವು ಲೂತ್ ರನ್ನು ಹಾಗೂ (ವಿಶ್ವಾಸಿಗಳಾದ) ಅವರ ಮನೆಮಂದಿಯನ್ನು ರಕ್ಷಿಸಿದೆವು, ಅವರ ಪತ್ನಿಯ ಹೊರತು! ಅವಳಾದರೋ [ಲೂತ್ ರ ಸಂದೇಶವನ್ನು ಸ್ವೀಕರಿಸುವ ವಿಷಯದಲ್ಲಿ] ಹಿಂಜರಿದವರ ಸಾಲಿಗೆ ಸೇರಿದ್ದಳು! {83}

ಮತ್ತು ಆ ಜನರ ಮೇಲೆ ನಾವು [ಕಲ್ಲಿನ] ಜಡಿಮಳೆ ಸುರಿಸಿದೆವು! ಪಾಪಿಗಳ ಪರ್ಯವಸಾನ ಹೇಗಾಯಿತು ಎಂಬುದನ್ನು ನೀವು ನೋಡಿರಿ. {84}

ಹಾಗೆಯೇ ಮದ್‌ಯನ್ ಸಮುದಾಯದತ್ತ ಸ್ವತಹ ಅವರದೇ ಸಹೋದರನಾದ ಶುಐಬ್ ರನ್ನು (ನಾವು ಪ್ರವಾದಿಯಾಗಿಸಿ ನಿಯುಕ್ತಗೊಳಿಸಿದ್ದೆವು). ಓ ನನ್ನ ಸಮುದಾಯವೇ, ನೀವು ಅಲ್ಲಾಹ್ ನನ್ನು ಮಾತ್ರ ಆರಾಧಿಸಿರಿ; ಅವನ ಹೊರತು ಬೇರೆ ಯಾರೂ ನಿಮಗೆ ದೇವರಿಲ್ಲ, ನಿಮ್ಮ ಬಳಿಗೆ ನಿಮ್ಮ ಕರ್ತಾರನ ಸ್ಪಷ್ಟವಾದ ಪುರಾವೆಗಳು ಬಂದಿರುತ್ತದೆ. ಆದ್ದರಿಂದ [ಓ ವರ್ತಕ ಸಮುದಾಯವೇ, ಜನರಿಗೆ] ನೀವು ಅಳೆದು ಕೊಡುವಾಗ ಸಮಗ್ರತೆ ಪಾಲಿಸಿರಿ, ಮತ್ತು ತೂಗಿ ಕೊಡುವಾಗಲೂ (ಸಮಗ್ರತೆ ಪಾಲಿಸುವವರಾಗಿರಿ). ಜನರಿಗೆ ಸೇರಿದ ಸಾಮಾನು ಸರಕುಗಳನ್ನು [ಅಳತೆ ತೂಕ ಮಾಡುವ ವೇಳೆ] ಮೊಟಕು ಗೊಳಿಸದಿರಿ. ನಾಡಿನ ಸುಧಾರಣೆಯಾದ ಬಳಿಕ ನೀವು ಅಲ್ಲಿ ಭ್ರಷ್ಟಾಚಾರ ಹಬ್ಬುವವರಾಗದಿರಿ. ನೀವು ವಿಶ್ವಾಸಿಗಳು ಹೌದಾದರೆ ನಿಮ್ಮ ಪಾಲಿಗೆ ಅದು ಉತ್ತಮ ಎಂದು ಅವರು ಸಾರಿದರು! {85}

ಅಲ್ಲಾಹ್ ನ (ಧರ್ಮದಲ್ಲಿ) ನಂಬಿಕೆ ಇಟ್ಟವರನ್ನು ಬೆದರಿಸುತ್ತಾ ಅವನ ದಾರಿಯಲ್ಲಿ ನಡೆಯುವುದರಿಂದ ಜನರನ್ನು ತಡೆಯುತ್ತಾ, ಅದರಲ್ಲಿ ವಕ್ರತೆಯನ್ನು ಹುಡುಕುತ್ತಾ, (ಒಳಿತಿನ) ಪ್ರತಿಯೊಂದು ದಾರಿಗೆ ನೀವು ಅಡ್ಡಗಟ್ಟಿ ಕುಳಿತು ಕೊಳ್ಳಬೇಡಿರಿ. ನೀವು ಕಡಿಮೆ ಸಂಖ್ಯೆಯಲ್ಲಿದ್ದಿರಿ, ಅವನು ಕ್ಷಿಪ್ರವಾಗಿ ನಿಮ್ಮ ಸಂಖ್ಯೆಯನ್ನು ವೃದ್ಧಿಸಿದಾಗಿನ (ಅವನ ಅನುಗ್ರಹವನ್ನು) ಸ್ಮರಿಸುವವರಾಗಿರಿ. ಮತ್ತು ಭ್ರಷ್ಟಾಚಾರಗಳಲ್ಲಿ ತೊಡಗಿದ್ದವರ ಪರ್ಯವಸಾನವು ಹೇಗಾಯಿತು ಎಂಬುದನ್ನು ನೋಡಿ (ಪಾಠ ಕಲಿಯಿರಿ). {86}

ನಾನು ಯಾವ ದೌತ್ಯದೊಂದಿಗೆ ನಿಯೋಜಿಸಲ್ಪಟ್ಟಿರುವೆನೋ ಅದರಲ್ಲಿ ನಂಬಿಕೆಯಿರುವ ಒಂದು ಗುಂಪು ಹಾಗೂ ಅದರಲ್ಲಿ ನಂಬಿಕೆಯಿರದ ಇನ್ನೊಂದು ಗುಂಪು ನಿಮ್ಮೊಳಗೆ ಇರುವಾಗ, ಅದರ ಕರಿತಂತೆ ಅಲ್ಲಾಹ್ ನು ನಮ್ಮ ಮಧ್ಯೆ ತೀರ್ಮಾನ ಮಾಡುವ (ಕ್ಷಣದ) ವರೆಗೂ ನೀವು ಸಹನೆಯೊಂದಿಗೆ ಕಾಯಿರಿ. ತೀರ್ಮಾನ ಮಾಡುವುದರಲ್ಲಿ ಅತ್ಯುತ್ತಮನು ಅವನೇ ಆಗಿರುವನು ಎಂದೂ (ಶುಐಬ್ ರು ಸಾರಿದರು). {87}

✽9✽ ಅದಕ್ಕೆ, ಓ ಶುಐಬ್, ನಿಮ್ಮನ್ನು ಮತ್ತು ನಿಮ್ಮ ಜೊತೆ ಸೇರಿಕೊಂಡಿರುವ ವಿಶ್ವಾಸಿಗಳನ್ನು ನಾವು ನಮ್ಮ ನಾಡಿನಿಂದ ಹೊರಗಟ್ಟಿಯೇ ತೀರುವೆವು; ಅಥವಾ (ನಾವು ಹಾಗೆ ಮಾಡದೇ ಇರಬೇಕಾದರೆ) ನೀವು ನಮ್ಮ ಕೂಟಕ್ಕೆ ಹಿಂದಿರುಗಲೇ ಬೇಕಾಗುವುದು ಎಂದು ಶುಐಬ್ ರ ಸಮುದಾಯಕ್ಕೆ ಸೇರಿದ ದುರಹಂಕಾರಿಗಳಾದ ಮುಖಂಡರುಗಳು ಉತ್ತರಿಸಿದರು. ನಮಗದು ಇಷ್ಟವಿಲ್ಲದಿದ್ದರೂ ಸಹ (ನಿಮ್ಮ ಕೂಟಕ್ಕೆ ಸೇರಬೇಕೇ)? ಅಲ್ಲಾಹ್ ನು ಒಮ್ಮೆ ನಮಗೆ ಅದರಿಂದ ವಿಮೋಚನೆ ನೀಡಿದ ನಂತರ ನಿಮ್ಮ ಆ ಕೂಟಕ್ಕೆ ಮರಳಿದರೆ ಅಲ್ಲಾಹ್ ನ ಮೇಲೆ ನಾವು ಸುಳ್ಳು ಅಪವಾದಗಳನ್ನು ಹೊರಿಸಿದಂತಾಗುವುದು. ನಮ್ಮ ಕರ್ತಾರನಾದ ಅಲ್ಲಾಹ್ ನು ಬಯಸುವ ಹೊರತು ನಾವಾಗಿ ಬಂದು (ಆ ಕೂಟಕ್ಕೆ) ಸೇರಲು ನಮ್ಮಿಂದಾಗದು! ನಮ್ಮ ಕರ್ತಾರನ ಜ್ಞಾನವಾದರೋ ಸಕಲ ವಿಷಯಗಳನ್ನು ವ್ಯಾಪಿಸಿ ಕೊಂಡಿರುವಂತಹದ್ದು! ನಾವಾದರೋ ಸಂಪೂರ್ಣವಾದ ಭರವಸೆ ಅಲ್ಲಾಹ್ ನ ಮೇಲೆ ಇಟ್ಟಿದ್ದೇವೆ! (ಆದ್ದರಿಂದ) ಓ ನಮ್ಮ ಕರ್ತಾರನೇ, ನಮ್ಮ ಮತ್ತು ನಮ್ಮೀ ಜನರ ನಡುವೆ ಸತ್ಯಾಧರಿತ ತೀರ್ಪನ್ನು ನೀಡು; ತೀರ್ಪು ನೀಡುವುದರಲ್ಲಿ ನೀನೇ ಶ್ರೇಷ್ಠನು - ಎಂದು ಶುಐಬ್ ರು ಪ್ರತಿಕ್ರಿಯಿಸಿದರು. {88-89}

ಅವರನ್ನು ಧಿಕ್ಕರಿಸಿದ ಅವರ ಸಮುದಾಯದ ಆ ಮುಖಂಡರುಗಳು (ನಾಡಿನ ಜನರನ್ನುದ್ದೇಶಿಸಿ) ನೀವೇನಾದರೂ ಶುಐಬ್ ನನ್ನು ಅನುಸರಿಸಿದರೆ ಖಂಡಿತವಾಗಿ ನಷ್ಟಕ್ಕೊಳಗಾಗಲಿರುವಿರಿ ಎಂದರು. ತರುವಾಯ ಭಯಂಕರ ಸ್ವರೂಪದ ಒಂದು ಭೂಕಂಪವು ಅವರನ್ನು ಆವರಿಸಿ ಕೊಂಡಿತು. ಮತ್ತು ಬೆಳಗಾದಾಗ ಅವರೆಲ್ಲ ತಮ್ಮ ತಮ್ಮ ನಿವಾಸಗಳಲ್ಲಿ ಬೋರಲಾಗಿ (ಸತ್ತು) ಬಿದ್ದಿದ್ದರು. ಯಾರು ಶುಐಬ್ ರನ್ನು ನಿರಾಕರಿಸಿದರೋ ಅವರ ಸ್ಥಿತಿಯು ಆ ನಾಡಿನಲ್ಲಿ ಅವರು ಎಂದೂ ನೆಲೆಸಿರಲೇ ಇಲ್ಲ ಎಂಬಂತಾಯಿತು; ಹೌದು, ಯಾರು ಶುಐಬ್ ರನ್ನು ನಿರಾಕರಿಸಿದರೋ ಅವರೇ ನಷ್ಟಕ್ಕೊಳಗಾಗಿದ್ದರು. {90-92}

ನಂತರ ಶುಐಬ್ ರು, ಓ ನನ್ನ ಸಮುದಾಯವೇ, ನಾನಾದರೋ ನನ್ನ ಕರ್ತಾರನ ಸಂದೇಶವನ್ನು ನಿಮಗೆ ಚೆನ್ನಾಗಿ ತಲುಪಿಸಿ ಬಿಟ್ಟಿದ್ದೆ; ಮಾತ್ರವಲ್ಲ, ನಿಮಗೆ ಹಿತೋಪದೇಶವನ್ನೂ ನೀಡಿದ್ದೆ; ಅದಾಗ್ಯೂ ಒಂದು ಧಿಕ್ಕಾರಿ ಸಮುದಾಯಕ್ಕಾಗಿ ನಾನು ಹೇಗೆ ತಾನೆ ಮರುಗಲಿ ಎಂದು (ತನ್ನೊಳಗೇ) ಹೇಳುತ್ತಾ ಬೇರೆಡೆಗೆ ತಿರುಗಿ ಅವರಿಂದ ದೂರವಾದರು. {93}

ಪ್ರವಾದಿಗಳನ್ನು ನಾವು ಒಂದು ನಾಡಿಗೆ ಕಳುಹಿಸಿದಾಗ ಅಲ್ಲಿಯ ಜನರನ್ನು ಸಂಕಷ್ಟ ಮತ್ತು ಯಾತನೆಗೆ ಗುರಿಪಡಿಸದೆ ಇರುವುದಿಲ್ಲ; (ಹಾಗೆ ಮಾಡುವುದು) ನಾಡಿನ ಜನರು (ಧಿಕ್ಕಾರಿಗಳಾಗದೆ) ವಿನಮ್ರತೆಯುಳ್ಳವರಾಗಲಿ ಎಂಬ ಕಾರಣಕ್ಕಾಗಿ! ಅನಂತರ ಅವರು ಚೆನ್ನಾಗಿ ಅಭಿವೃದ್ಧಿ ಹೊಂದುವಷ್ಟರ ಮಟ್ಟಿಗೆ ಅವರ ದುಃಸ್ಥಿತಿಯನ್ನು ನಾವು ಸುಸ್ಥಿತಿಯಾಗಿ ಬದಲಿಸಿದ್ದೇವೆ. ಆಗ ಅವರು, [ಇನ್ನಷ್ಟು ವಿನಮ್ರರಾಗುವ ಬದಲು] ಇಂತಹ ಕಷ್ಟ ಮತ್ತು ಸುಖದ ದಿನಗಳು ನಮ್ಮ ಪೂರ್ವಜರಿಗೂ ಬರುತ್ತಿದ್ದವು ಎಂದು (ಧಿಕ್ಕಾರದಿಂದ) ಹೇಳತೊಡಗಿದರು. ಆಗ ನಾವು ಹಠಾತ್ತನೆ ಅವರನ್ನು ಹಿಡಿದೆವು; ಅವರಿಗೆ ಅದರ ಪರಿವೆಯೂ ಇರಲಿಲ್ಲ! {94-95}

ಒಂದು ವೇಳೆ ಆ ನಾಡುಗಳಲ್ಲಿನ ಜನರು (ವಿನಮ್ರತೆ ತೋರಿ) ವಿಶ್ವಾಸಿಗಳಾಗಿದ್ದುಕೊಂಡು ಭಯಭಕ್ತಿ ಪಾಲಿಸುವವರಾಗಿದ್ದರೆ ಖಂಡಿತಾ ನಾವು ಅವರಿಗಾಗಿ ಆಕಾಶಗಳಿಂದಲೂ ಭೂಮಿಯಿಂದಲೂ ಸಮೃದ್ಧಿಯ ಬಾಗಿಲುಗಳನ್ನು ತೆರೆದಿಡುತ್ತಿದ್ದೆವು. ಆದರೆ ಅವರು [ದುರಹಂಕಾರ ಮೆರೆದು ನಮ್ಮ ಪ್ರವಾದಿಗಳನ್ನೇ] ಧಿಕ್ಕರಿಸಿ ಬಿಟ್ಟರು. ಅವರ ಅಂತಹ ದುಷ್ಕೃತ್ಯದ ಫಲವಾಗಿ ನಾವು ಅವರನ್ನು ಶಿಕ್ಷಿಸಲು ಹಿಡಿದೆವು. {96}

[ಮತ್ತು ಈಗ ಈ ಮಕ್ಕಾ ಹಾಗೂ ಆಸುಪಾಸಿನ] ನಾಡುಗಳಲ್ಲಿನ ನಿವಾಸಿಗಳು, ತಾವಿನ್ನೂ ಗಾಢ ನಿದ್ರೆಯಲ್ಲಿರುವಾಗಲೇ ನಮ್ಮ ಶಿಕ್ಷೆಯು ರಾತೋರಾತ್ರಿ ಅವರ ಮೇಲೆರಗುವ ಕುರಿತು ನಿರ್ಭಯರಾಗಿರುವರೇ? ಅಥವಾ ತಾವಿನ್ನೂ ಆಟೋಟಗಳಲ್ಲಿ ಮಗ್ನರಾಗಿರುವಾಗ ಹಗಲು ಹೊತ್ತಿನಲ್ಲೇ ನಮ್ಮ ಯಾತನೆಯು ಅವರ ಮೇಲೆರಗಿ ಬೀಳುವ ಕುರಿತು ನಿಶ್ಚಿಂತರಾಗಿರುವರೇ? ಏನು, ಅಲ್ಲಾಹ್ ನ ಕಾರ್ಯೋಪಾಯದ ಕುರಿತು ಇವರು ಭಯಮುಕ್ತರಾಗಿರುವರೇ?! [ಹಾಗಾದರೆ ಇವರು ತಿಳಿದಿರಲಿ] ನಷ್ಟಕ್ಕೊಳಗಾಗುವ ಒಂದು ಸಮುದಾಯವಲ್ಲದೆ ಬೇರಾರೂ ಅಲ್ಲಾಹ್ ನ ಕಾರ್ಯೋಪಾಯದ ಕುರಿತು ನಿರ್ಭೀತಿಯಿಂದ ವರ್ತಿಸಲಾರರು! {97-99}

ಒಂದು ವೇಳೆ ನಾವು ಬಯಸಿದರೆ ಇವರ ಪಾಪಗಳ ನಿಮಿತ್ತ ಇವರನ್ನು ಹಿಡಿದು ಶಿಕ್ಷಿಸಬಲ್ಲೆವು ಎಂಬ ವಾಸ್ತವು, ಹಿಂದೊಮ್ಮೆ ನಾಡುಗಳಲ್ಲಿ ವಾಸವಾಗಿದ್ದವರು [ದುರಹಂಕಾರ ಮೆರೆದು ಪಾಪವೆಸಗಿದ ಕಾರಣ ಶಿಕ್ಷೆಗೊಳಗಾಗಿ ನಾಶವಾಗಿ ಹೋದ] ನಂತರ ಈಗ ಅಲ್ಲಿಯ ಉತ್ತರಾಧಿಕಾರ ಪಡೆದಿರುವ ಇವರಿಗೆ ಪಾಠ ಕಲಿಸದೇ ಹೋಯಿತೇ? [ಹೌದು, ಇಂತಹ ವೃತ್ತಾಂತಗಳಿಂದ ಇವರು ಪಾಠ ಕಲಿಯುತ್ತಿಲ್ಲ. ಆದ್ದರಿಂದ] ಇವರ ಹೃದಯಗಳನ್ನು ನಾವು ಮುಚ್ಚಿ ಬಿಡುವೆವು, ಆಗ ಇವರು ಏನನ್ನೂ ಕೇಳಿಸಿಕೊಳ್ಳಲಾರರು. {100}

(ಓ ಪೈಗಂಬರರೇ), ಇವೇ ಆಗಿವೆ ಆ ಕೆಲವು ನಾಡುಗಳು! ಅವುಗಳ ವೃತ್ತಾಂತಗಳಲ್ಲಿ ಕೆಲವನ್ನು ನಾವು ನಿಮಗೆ [ಅರ್ಥಾತ್ ನಿಮ್ಮ ಮುಖಾಂತರ ಈ ಕುರೈಷರಿಗೆ] ತಿಳಿಸುತ್ತಿದ್ದೇವೆ. ಅಂತಹ ನಾಡುಗಳಿಗೆ ನಿಯೋಗಿಸಲಾಗಿದ್ದ ಎಲ್ಲ ದೂತರುಗಳು ಅವರಲ್ಲಿಗೆ ಜ್ವಲಂತ ನಿದರ್ಶನಗಳ ಸಮೇತ ಆಗಮಿಸಿದ್ದರು! ಆದರೆ ಈ ಹಿಂದೆ ಧಿಕ್ಕರಿಸುತ್ತಾ ಬಂದಿದ್ದುದರ ಫಲವಾಗಿ (ದೂತರುಗಳನ್ನೂ ನಿದರ್ಶನಗಳನ್ನೂ) ನಂಬುವವರಾಗಲು ಅವರಿಗೆ ಸಾಧ್ಯವಾಗಲಿಲ್ಲ! ಧಿಕ್ಕಾರ ತೋರುವವರ ಹೃದಯಗಳನ್ನು ಅಲ್ಲಾಹ್ ನು ಮುಚ್ಚಿ ಬಿಡುವುದು ಹಾಗೆಯೇ! [ಇನ್ನಾದರೂ ಈ ಕುರೈಷರು ಎಚ್ಚೆತ್ತುಕೊಳ್ಳಲಿ!] ಇವರಲ್ಲೂ ಹೆಚ್ಚಿನವರು ಮಾತಿಗೆ ಬದ್ಧರಾಗಿರುವುದನ್ನು ನಾವು ಕಾಣುತ್ತಿಲ್ಲ; ಬದಲಾಗಿ ಇವರಲ್ಲಿನ ಹೆಚ್ಚಿನವರು ಪಾಪಿಗಳಾಗಿರುವುದನ್ನೇ ನಾವು ನೋಡುತ್ತಿದ್ದೇವೆ! {101-102}

ಆ ಪ್ರವಾದಿಗಳ ಕಾಲದ ನಂತರದ ನಾವು ಮೂಸಾರನ್ನು ನಮ್ಮ ಸುವ್ಯಕ್ತ ದೃಷ್ಟಾಂತಗಳೊಂದಿಗೆ ಫಿರ್‌ಔನ್ ಮತ್ತು ಅವನ ಆಸ್ಥಾನದ ಮುಖ್ಯಸ್ಥರೆಡೆಗೆ ಕಳುಹಿಸಿದೆವು. ಆದರೆ ಅವರು ಅಂತಹ ದೃಷ್ಟಾಂತಗಳನ್ನು (ತಿರಸ್ಕರಿಸುವ ಮೂಲಕ) ಅನ್ಯಾಯವೆಸಗಿದರು. ಭ್ರಷ್ಟಾಚಾರಿಗಳಾದ ಅವರ ಅಂತ್ಯವು ಹೇಗೆ ಸಂಭವಿಸಿತು ಎಂಬುದನ್ನು ನೀವು ನೋಡಿ [ಪಾಠ ಕಲಿಯಿರಿ]. {103}

ಓ ಫಿರ್‌ಔನ್, ನಾನಾದರೋ ಜಗದೊಡೆಯನ ವತಿಯಿಂದ ನಿಯೋಗಿಸಲ್ಪಟ್ಟ ಒಬ್ಬ ದೂತನಾಗಿರುವೆ; ಹಾಗಿರುವಾಗ ಅಲ್ಲಾಹ್ ನ ಕುರಿತು ಸತ್ಯವನ್ನು ಹೊರತು ಬೇರೇನನ್ನೂ ಹೇಳುವುದು ನನಗೆ ತರವಲ್ಲ. ಸಾಲದಕ್ಕೆ ನಿಮ್ಮೆಲ್ಲರ ಪ್ರಭುವಿನ ಕಡೆಯಿಂದ ಬಹಳ ಸ್ಪಷ್ಟವಾದ ಪುರಾವೆಗಳನ್ನು ಸಹ ತಂದಿರುತ್ತೇನೆ! ಆದ್ದರಿಂದ [ಅನ್ಯಾಯವಾಗಿ ನೀನು ಗುಲಾಮರಂತೆ ನಡೆಸಿಕೊಳ್ಳುತ್ತಿರುವ ಆ] ಇಸ್ರಾಈಲ್ ಜನಾಂಗವನ್ನು ಮುಕ್ತಗೊಳಿಸಿ ನನ್ನ ಜೊತೆ ಕಳಿಸಿ ಬಿಡು ಎಂದು ಮೂಸಾರು ಹೇಳಿದರು. {104-105}

ಹೌದೇ, ನೀನೊಬ್ಬ ಸತ್ಯವಂತನು ಹೌದಾದರೆ, ನೀನು ಪುರಾವೆಗಳೊಂದಿಗೆ ಬಂದಿರುವುದು ನಿಜವಾದರೆ, ಅದನ್ನು ಪ್ರದರ್ಶಿಸು ಎಂದು ಫಿರ್‌ಔನ್ ಹೇಳಿದನು. {106}

ಆಗ ಮೂಸಾರು ತಮ್ಮ ಊರುಗೋಲನ್ನು ಕೆಳಕ್ಕೆ ಹಾಕಿದರು. ಕೂಡಲೇ ಅದೊಂದು ಜೀವಂತ ಸರ್ಪವಾಗಿ ಪಾರ್ಪಟ್ಟಿತು. ನಂತರ ತಮ್ಮ ಅಂಗೈಯನ್ನು ಹೊರಚಾಚಿದಾಗ ನೋಡುವವರಿಗೆಲ್ಲ ಅದು ಪ್ರಜ್ವಲಿಸುತ್ತಿರುವುದು ಕಂಡಿತು. (ಅದನ್ನು ವೀಕ್ಷಿಸಿದ) ಫಿರ್‌ಔನ್ ನ ಸಮುದಾಯಕ್ಕೆ ಸೇರಿದ ಆ ಮುಖ್ಯಸ್ಥರು, ಈತನೊಬ್ಬ ನಿಷ್ಣಾತ ಜಾದೂಗಾರನೇ ಸರಿ; ಈತನಾದರೋ ನಿಮ್ಮನ್ನು ನಿಮ್ಮ ರಾಜ್ಯದಿಂದ ಹೊರಗಟ್ಟಿ ಬಿಡಲು ಬಯಸುತ್ತಿರುವನು. ಹಾಗಿರುವಾಗ (ಈತನ ಬಗ್ಗೆ) ನೀವು ನೀಡುವ ಸಲಹೆ ಏನು ಎಂದು (ತಮ್ಮೊಳಗೇ ಅಭಿಪ್ರಾಯ) ಕೇಳಿದರು. {107-110}

[ತದನಂತರ ಆಸ್ಥಾನದ ಮುಖ್ಯಸ್ಥರು ಫಿರ್‌ಔನ್ ನನ್ನುದ್ದೇಶಿಸಿ] ಈತನೂ ಈತನ ಸಹೋದರನೂ ಸ್ವಲ್ಪ ಸಮಯ ಕಾಯಲಿ, ಅಷ್ಟೊತ್ತಿಗೆ (ರಾಜ್ಯದ) ಎಲ್ಲ ಪಟ್ಟಣಗಳಿಗೂ ಡಂಗುರ ಸಾರುವವರನ್ನು ರವಾನಿಸು; ಅವರು (ಎಲ್ಲೆಡೆಯಿಂದ) ನಿಷ್ಣಾತ ಜಾದೂಗಾರರನ್ನು ಒಂದುಗೂಡಿಸಿ ನಿನ್ನ ಬಳಿಗೆ ಕರೆತರಲಿ ಎಂದು (ತಮ್ಮ ಅಭಿಪ್ರಾಯ) ತಿಳಿಸಿದರು. {111-112}

ಹಾಗೆ (ಎಲ್ಲೆಡೆಯಿಂದ ನಿಪುಣ) ಜಾದೂಗಾರರು ಫಿರ್‌ಔನ್ ನ ಆಸ್ಥಾನಕ್ಕೆ ಬಂದು ಸೇರಿದರು. ಒಂದು ವೇಳೆ ನಾವು ಮೇಲುಗೈ ಸಾಧಿಸಿದರೆ ನಮಗೆ ಪ್ರತಫಲವಿರುವುದಂತು ಖಂಡಿತ ಎಂದು ಅವರು ಹೇಳಿಕೊಂಡರು. (ಅದನ್ನಾಲಿಸಿದ ಫಿರ್‌ಔನ್) ಖಂಡಿತಾ ಇರುವುದು; ಅಷ್ಟು ಮಾತ್ರವಲ್ಲ, ನನ್ನ ಆಪ್ತರ ಬಳಗಕ್ಕೆ ನೀವೂ ಸೇರಿಕೊಳ್ಳುವಿರಿ ಎಂದು ಹೇಳಿದನು. {113-114}

(ನಂತರ ಆ ಪಳಗಿದ ಜಾದೂಗಾರರು ಮೂಸಾ ರನ್ನುದ್ದೇಶಿಸಿ) ಓ ಮೂಸಾ, ಒಂದೋ ನೀನು (ಆ ನಿನ್ನ ಊರುಗೋಲನ್ನು) ಕೆಳಕ್ಕೆ ಹಾಕು; ಅಥವಾ (ನಮ್ಮೀ ಮಂತ್ರದಂಡಗಳನ್ನು) ಮೊದಲು ಕೆಳಕ್ಕೆ ಹಾಕುವವರು ನಾವಾಗುವೆವು ಎಂದು ಸವಾಲೊಡ್ಡಿದರು. {115}

ನೀವೇ (ಮೊದಲು) ಹಾಕಿ ಬಿಡಿರಿ ಎಂದು ಮೂಸಾರು ಹೇಳಿದರು. ಹಾಗೆ ಆ ಜಾದೂಗಾರರು (ತಮ್ಮ ಮಂತ್ರದಂಡಗಳನ್ನು) ಕೆಳಕ್ಕೆ ಹಾಕಿದಾಗ ಅವು ಜನರ ಕಣ್ಣುಗಳಿಗೆ ಭ್ರಮೆಯುಂಟು ಮಾಡಿತು; ಅವರನ್ನು ದಿಗಿಲುಗೊಳಿಸಿತು. ಅವರಾದರೋ ಒಂದು ಅಸಾಧಾರಣ ಮಂತ್ರವಿದ್ಯೆಯೊಂದಿಗೆ (ಸನ್ನದ್ಧರಾಗಿ) ಬಂದಿದ್ದರು. {116}

ಹಾಗಿರುವಾಗ, ಮೂಸಾ ರಿಗೆ ನೀವೀಗ ನಿಮ್ಮ ಊರುಗೋಲನ್ನು ಕೆಳಕ್ಕೆ ಬಿಡಿ ಎಂದು ನಾವು ದಿವ್ಯ ಸೂಚನೆ ನೀಡಿದೆವು. ಕೂಡಲೇ ಅದೊಂದು [ನಿಜವಾದ ಸರ್ಪವಾಗಿ ಮಾರ್ಪಟ್ಟು ಆ ಮಾಂತ್ರಿಕರ] ಭ್ರಾಮಕ ಸೃಷ್ಟಿಗಳನ್ನು (ಒಂದೊಂದಾಗಿ) ನುಂಗಿ ಹಾಕಿತ್ತು! ಅದರೊಂದಿಗೇ ಸತ್ಯದ ಮೇಲುಗೈ ಸಾಬೀತಾಯಿತು ಮತ್ತು ಆ ಜಾದೂಗಾರರು ಏನೆಲ್ಲ ಮಾಡಿದ್ದರೋ ಅವೆಲ್ಲ ನಿಷ್ಪ್ರಯೋಜಕವಾಗಿ ಹೋದವು! {117-118}

ಆ ಕ್ಷಣದಲ್ಲಿ ಅವರು ಸೋಲುಂಡರು ಹಾಗೂ ಅಪಮಾನಿತರಾಗಿ (ತಾವೇ ಒಡ್ಡಿದ್ದ ಪಂಥಾಹ್ವಾನದಿಂದ) ಹಿಮ್ಮೆಟ್ಟಿದರು. [ಅಲ್ಲಾಹ್ ನ ಮಹಿಮೆಯನ್ನು ಮನಗಂಡು] ಆ ಜಾದೂಗಾರರೆಲ್ಲ ಸಾಷ್ಟಾಂಗವೆರಗಿಯೇ ಬಿಟ್ಟರು. ನಾವು ಅಖಿಲ ಜಗತ್ತಿನ ಕರ್ತನನ್ನು ನಂಬುವವರಾದೆವು; ಅಂದರೆ ಮೂಸಾ ಮತ್ತು ಹಾರೂನ್ ರ ದೇವನನ್ನು (ನಾವೂ ನಂಬುತ್ತೇವೆ) ಎಂದು ಸಾರಿದರು. {119-122}

ನಾನಿನ್ನೂ ನಿಮಗೆ ಅನುಮತಿ ನೀಡುವ ಮುನ್ನವೇ ನೀವು ಅದರಲ್ಲಿ [ಅರ್ಥಾತ್ ಮೂಸಾ ರ ಪ್ರವಾದಿತ್ವದಲ್ಲಿ] ನಂಬಿಕೆಯುಳ್ಳವರು ಆಗಿ ಬಿಟ್ಟಿರಿ!? ನಿಜವಾಗಿಯೂ ಇದು ನೀವೆಲ್ಲ ಒಂದಾಗಿ ಈ ನಾಡಿನವರನ್ನು ನಾಡಿನಿಂದ ಹೊರಗಟ್ಟಲು ಹೂಡಿದ ಒಂದು ತಂತ್ರವೇ ಸರಿ. ಅದರ ಪರಿಣಾಮವನ್ನು ನೀವಿದೋ ತಿಳಿಯಲಿರುವಿರಿ. ನಿಮ್ಮ ಕೈಕಾಲುಗಳನ್ನು ಎದುರುಬದುರಾಗಿ [ಅರ್ಥಾತ್ ಎಡಗೈ ಮತ್ತು ಬಲಗಾಲು ಅಥವಾ ಬಲಗೈ ಮತ್ತು ಎಡಗಾಲನ್ನು ಒಟ್ಟೊಟ್ಟಿಗೆ] ತುಂಡರಿಸಿ ಹಾಕಲಿರುವೆನು. ಅಷ್ಟೇ ಅಲ್ಲ, ಖಂಡಿತವಾಗಿಯೂ ನಿಮ್ಮೆಲ್ಲರನ್ನು ಒಟ್ಟಾಗಿ ಶಿಲುಬೆಗೇರಿಸಿ ಬಿಡುವೆನು ಎಂದು ಫಿರ್‌ಔನ್ (ಕುಪಿತನಾಗಿ) ಹೇಳಿದನು. {123-124}

ಅದಕ್ಕೆ, ನಮಗೆ ಮರಳಿ ಹೋಗಲಿಕ್ಕಿರುವುದೂ ನಮ್ಮ ಕರ್ತನೆಡೆಗೇ! ನಮ್ಮ ಬಳಿಗೆ ನಮ್ಮ ಕರ್ತನ ಜ್ವಲಂತ ದೃಷ್ಟಾಂತಗಳು ಬಂದಿರುವಾಗ ಅದರಲ್ಲಿ ನಾವು ನಂಬಿಕೆ ಇಟ್ಟ ಕಾರಣಕ್ಕಾಗಿ ಹೊರತು ನೀನು ನಮ್ಮ ಮೇಲೆ ಸೇಡು ತೀರಿಸಲು ಬೇರೇನೂ ಕಾರಣವಿಲ್ಲ ಎಂದು ಪ್ರತಿಕ್ರಿಯಿಸಿದ ಜಾದೂಗಾರರು, ಓ ನಮ್ಮ ಕರ್ತಾರನೇ, ನಮಗೆ ಬಹಳಷ್ಟು ಸಹನೆ ದಯಪಾಲಿಸು; ನಮಗೆ ಮರಣ ಬರುವಾಗ ನಿನಗೆ ತಲೆಬಾಗಿದ ಸ್ಥಿತಿಯಲ್ಲಿ [ಅರ್ಥಾತ್ ಮುಸ್ಲಿಮರಾದ ಸ್ಥಿತಿಯಲ್ಲಿ] ನಾವು ಮರಣವಪ್ಪುವಂತೆ ಮಾಡು (ಎಂದು ಪ್ರಾರ್ಥಿಸಿದರು). {125-126}

ಫಿರ್‌ಔನ್ ನ ತಂಡದ ಮುಖ್ಯಸ್ಥರು [ತಮಗೆದುರಾಗಲಿರುವ ಅಪಾಯವನ್ನು ಮುನ್ನರಿತು], ಈ ಮೂಸಾ ಮತ್ತು ಈತನ ಸಂಗಡಿಗರನ್ನು (ನಮ್ಮೀ) ನಾಡಿನಲ್ಲಿ ಪ್ರಕ್ಷುಬ್ಧತೆಯುಂಟು ಮಾಡುತ್ತಾ ಸಾಗಲು ನೀನು ಹೀಗೆ ಸುಮ್ಮನೆ ಬಿಟ್ಟು ಬಿಡುವೆಯಾ? ಹಾಗಾದರೆ ಅವರು [ಅರ್ಥಾತ್ ನಾಡಿನ ಜನರು] ನಿನ್ನ ಮತ್ತು ಈ ನಿನ್ನ ದೇವರುಗಳ (ಆರಾಧನೆಯನ್ನು) ಕೈಬಿಡುವರು ಎಂದು ಹೇಳಿದರು. ಅದಕ್ಕೆ, ನಾನು ಅವರ [ಮೂಸಾರ ಅನುಯಾಯಿಗಳ, ಅರ್ಥಾತ್ ಇಸ್ರಾಈಲ್ ಸಂತತಿಗೆ ಸೇರಿದವರ] ಗಂಡು ಮಕ್ಕಳನ್ನೆಲ್ಲ ನಿರ್ದಯವಾಗಿ ಕೊಲ್ಲಿಸುವೆನು, ಮತ್ತು ಅವರ ಹೆಣ್ಣುಗಳನ್ನು ಕೊಲ್ಲಿಸದೆ ಬಿಟ್ಟು ಬಿಡುವೆನು. ಖಂಡಿತವಾಗಿ ನಾವು ಅವರ ಮೇಲೆ ದಮನಕಾರಿ ಪ್ರಾಬಲ್ಯ ಹೊಂದಿರುವೆವು ಎಂದು ಫಿರ್‌ಔನ್ ಉತ್ತರಿಸಿದನು. {127}

(ಆ ಸಂದರ್ಭದಲ್ಲಿ) ಮೂಸಾರು ತಮ್ಮ ಸಮುದಾಯವನ್ನುದ್ದೇಶಿಸಿ, ನೀವು ಅಲ್ಲಾಹ್ ನ ಸಹಾಯ ಯಾಚಿಸುತ್ತಲಿರಿ ಜೊತೆಗೆ ಸಹನೆಯನ್ನೂ ಮೈಗೂಡಿಸಿಕೊಳ್ಳಿ. ನಿಜವೇನೆಂದರೆ ಭೂಮಿಯ ಒಡೆತನವು [ಈ ಫಿರ್‌ಔನ್ ನಿಗೆ ಅಲ್ಲ, ಬದಲಾಗಿ] ಅಲ್ಲಾಹ್ ನಿಗೆ ಸೇರಿದ್ದಾಗಿದೆ. ತನ್ನ ಸೃಷ್ಟಿಯ [ಅರ್ಥಾತ್ ಮಾನವ ವಂಶದವರ] ಪೈಕಿ ಯಾರಿಗೆ ಅದನ್ನು ಕೊಡಬೇಕೆಂದು ಅವನು ಬಯಸುವನೋ ಅವರಿಗೆ ಅದನ್ನು [ಸ್ವಲ್ಪ ಸಮಯ] ಬಳುವಳಿಯಾಗಿ ಕೊಡುತ್ತಾನೆ. ಆದರೆ ಅಂತಿಮ ವಿಜಯವು ಸತ್ಯನಿಷ್ಠರಿಗೆ ಮಾತ್ರವಾಗಿರುತ್ತದೆ ಎಂದು ಹೇಳಿದರು. {128}

ಮೂಸಾರ ಸಮುದಾಯದ ಜನರು, ನೀವು ನಮ್ಮ ಬಳಿಗೆ (ಪ್ರವಾದಿಯಾಗಿ) ಬರುವುದಕ್ಕೆ ಮುಂಚೆಯೂ ನಾವು ದಬ್ಬಾಳಿಕೆಗೆ ಬಲಿಯಾಗಿದ್ದೆವು ಹಾಗೂ ನೀವು ನಮ್ಮ ಬಳಿಗೆ ಬಂದ ನಂತರವೂ ನಾವು (ದಬ್ಬಾಳಿಕೆಗೆ ಬಲಿಯಾಗುತ್ತಿದ್ದೇವೆ) ಎಂದು (ತಮ್ಮ ದುಃಖ) ಹೇಳಿಕೊಂಡರು. [ಅವರನ್ನು ಸಂತೈಸುತ್ತಾ,] ನಿಮ್ಮ ಕರ್ತಾರನು ನಿಮ್ಮ ಶತ್ರುಗಳನ್ನು ಧ್ವಂಸ ಮಾಡಿ ಬಿಡುವ ಹಾಗೂ ನಾಡಿನ ಆಡಳಿತಾಧಿಕಾರವನ್ನು ನಿಮಗೆ ವರ್ಗಾಯಿಸಿ ಬಿಡುವ ಸಮಯವು ಶೀಘ್ರ ಸಂಭಾವ್ಯವೆಂದು ತೋರುತ್ತಿದೆ. ಅನಂತರ ನೀವು ಹೇಗೆ (ಆ ಕರ್ತವ್ಯ) ನಿಭಾಯಿಸುತ್ತೀರಿ ಎಂಬುದರ ಬಗ್ಗೆ ಅವನು ನಿಗಾ ಇರಿಸುತ್ತಾನೆ ಎಂದು ಮೂಸಾ ರು ತಿಳಿಸಿದರು. {129}

ಫಿರ್‌ಔನ್ ನ ಜನಾಂಗವು ಸ್ವಲ್ಪ ಪಾಠ ಕಲಿಯುವಂತಾಗಲಿ ಎಂಬ ಉದ್ದೇಶದಿಂದ ನಾವು ಅವರ ಮೇಲೆ ಕೆಲವರುಷಗಳ ಬರಗಾಲ ಹೇರಿದೆವು; ಕೃಷಿ ಉತ್ಪನ್ನಗಳಲ್ಲಿ ನಾಶ-ನಷ್ಟ ಸಂಭವಿಸುವಂತೆ ಮಾಡಿದೆವು; ಆ ಮೂಲಕ ಅವರನ್ನು ಹಿಡಿದು (ಶಿಕ್ಷೆಗೆ ಸಿಲುಕಿಸಿದೆವು). ನಂತರ ಅವರ ಪಾಲಿಗೆ ಸಮೃದ್ಧಿ ಒದಗಿ ಬಂದಾಗ ನಮ್ಮ (ಯೋಗ್ಯತೆಯ ಪ್ರಕಾರ) ಇದೇ ಸ್ಥಿತಿ ನಮ್ಮದಾಗಬೇಕಿತ್ತು ಎಂದು ಅವರು (ದಾರ್ಷ್ಟ್ಯ ತೋರುತ್ತಾ) ಹೇಳಿದರು. ಇನ್ನು ಸಂಕಷ್ಟದ ದಿನಗಳೇನಾದರೂ ಅವರಿಗೆ ಬಂದೆರಗಿದರೆ ಇದಕ್ಕೆ ಮೂಸಾ ಮತ್ತು ಆತನ ಸಂಗಾತಿಗಳ ದುರ್ದೆಸೆಯೇ ಕಾರಣ ಎಂದು ದೂಷಿಸಿದರು. ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿರಿ, ಅವರಿಗೆ ದುರ್ದೆಸೆ ತಂದೊಡ್ಡುವ ಎಲ್ಲ ನಿಮಿತ್ತಗಳು ಅಲ್ಲಾಹ್ ಬಳಿ ಇವೆ; ಆದರೆ ಆ ವಾಸ್ತಿವಿಕತೆಯನ್ನು ಅವರಲ್ಲಿನ ಹೆಚ್ಚಿನವರು ಅರಿತುಕೊಂಡಿಲ್ಲ. {130-131}

ನಮ್ಮನ್ನು ವಶೀಕರಿಸುವ ಸಲುವಾಗಿ ನೀನು ಅದ್ಯಾವ ದೃಷ್ಟಾಂತಗಳನ್ನು ಪ್ರತ್ಯಕ್ಷ ಪಡಿಸಿದರೂ ನಾವಂತು ನಿನ್ನ ಮಾತನ್ನು ಒಪ್ಪಿಕೊಳ್ಳುವವರಲ್ಲ ಎಂದು ಅವರು (ಖಡಾಖಂಡಿತವಾಗಿ) ಹೇಳಿದರು. ಅದಕ್ಕೆ (ಶಿಕ್ಷೆಯಾಗಿ ಅವರ ನಾಡಿನಲ್ಲಿ) ನಾವು ಪ್ರವಾಹ ಉಂಟು ಮಾಡಿದೆವು; ಮಿಡತೆಗಳನ್ನು ಬಿಟ್ಟೆವು; ಹೇನುಗಳನ್ನು ಎರಗಿಸಿದೆವು; ಕಪ್ಪೆಗಳನ್ನು ಕಳಿಸಿದೆವು; (ಇಡೀ ನೀರನ್ನು) ರಕ್ತಮಯಗೊಳಿಸಿದೆವು - ಎಲ್ಲವೂ ಅತ್ಯಂತ ವ್ಯಕ್ತವಾದ ಪ್ರತ್ಯೇಕ ನಿಶಾನಿಗಳಾಗಿದ್ದವು. ಅದಾಗ್ಯೂ ಅವರು ಅಹಂಕಾರವನ್ನೇ ತೋರಿದರು. ನಿಜಕ್ಕೂ ಆ ಜನರು ಪಾಪಿಗಳಾಗಿದ್ದರು. {132-133}

ಹಾಗೆ ಅವರಿಗೆ ಪ್ರತಿ ಬಾರಿ ಸಂಕಷ್ಟ ಬಂದಾಗಲೂ ಅವರು, ಓ ಮೂಸಾ, ನಿನ್ನ ಕರ್ತಾರನಿಗೆ ನಿನ್ನೊಂದಿಗಿರುವ ಒಪ್ಪಂದದ ಪ್ರಕಾರ ನೀನು ನಮಗಾಗಿ ಅವನೊಂದಿಗೆ ಪ್ರಾರ್ಥಿಸು; ಆ ಮೂಲಕ ನಮ್ಮ ಸಂಕಷ್ಟವನ್ನು ನೀನು ಹೋಗಲಾಡಿಸಿದರೆ ನಾವು ಖಂಡಿತಾ ನಿನ್ನನ್ನು ಒಪ್ಪಿಕೊಳ್ಳುವೆವು, ಮಾತ್ರವಲ್ಲ ಇಸ್ರಾಈಲ್ ಸಂತತಿಯವರನ್ನು (ವಿಮೋಚಿಸಿ) ನಾವು ನಿನ್ನೊಂದಿಗೆ ಕಳಿಸಿಕೊಡುವೆವು ಎಂದು (ಮೂಸಾ ರೊಂದಿಗೆ) ಬೇಡಿಕೊಂಡರು. {134}

ನಂತರ, ಎಂತೂ ಅವರು ತಲುಪಿರಲೇ ಬೇಕಾದ ಒಂದು ಕಾಲಮಿತಿಯ ವರೆಗೆ ನಾವು ಅವರ ಸಂಕಷ್ಟಗಳನ್ನು ಅವರಿಂದ ನೀಗಿಸಿ ಬಿಟ್ಟಾಗ ಅವರು ತಾವಿತ್ತ ಮಾತಿಗೆ ಪ್ರತಿ ಬಾರಿಯೂ ತಪ್ಪುತ್ತಿದ್ದರು. ಅದಕ್ಕಾಗಿ ಕೊನೆಗೆ ನಾವು ಅವರ ಮೇಲೆ ಪ್ರತೀಕಾರ ತೀರಿಸಿದೆವು, ಮತ್ತು ಅವರನ್ನು ಸಮುದ್ರದಲ್ಲಿ ಮುಳುಗಿಸಿ ಬಿಟ್ಟೆವು! ಅವರು ನಮ್ಮ ಎಲ್ಲ ನಿಶಾನೆಗಳನ್ನು ಅಲ್ಲಗಳೆಯುತ್ತಿದ್ದರು; ಮಾತ್ರವಲ್ಲ ಅವುಗಳ ಬಗ್ಗೆ ಅವರು ಅಸಡ್ಡೆಯ ಧೋರಣೆ ತಾಳಿದ್ದರು! {135-136}

ತದನಂತರ, [ಫಿರ್‌ಔನ್ ಮತ್ತವನ ಜನರಿಂದ ನಿರಂತರ] ದಬ್ಬಾಳಿಕೆಗೊಳಗಾಗಿ ಬಳಲಿದ್ದಂತಹ (ಬನೀ ಇಸ್ರಾಈಲ್) ಜನಾಂಗವನ್ನು ನಾವು ನಾಡಿನ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳ [ಅರ್ಥಾತ್ ಇಂದಿನ ಪ್ಯಾಲೆಸ್ಟೈನ್ ಅನ್ನು ಒಳಗೊಂಡ ಅಂದಿನ ಶಾಮ್ ಪ್ರದೇಶದ] ಆಡಳಿತಕ್ಕೆ ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು. ಅದಾದರೋ ನಾವು ಅನುಗ್ರಹೀತಗೊಳಿಸಿದ ಒಂದು ಭೂಪ್ರದೇಶ! ಹಾಗೆ (ಓ ಪೈಗಂಬರರೇ), ಇಸ್ರಾಈಲ್ ಜನಾಂಗಕ್ಕೆ ನಿಮ್ಮ ಕರ್ತಾರನು ನೀಡಿದ್ದ ಶ್ರೇಷ್ಠ ವಾಗ್ದಾನವು, ಅವರು ತೋರಿದ್ದ ಸ್ಥೈರ್ಯ-ತಾಳ್ಮೆಗಳ ಫಲವಾಗಿ, ಸಂಪೂರ್ಣವಾಗಿ ನೆರವೇರಿತು! ಫಿರ್‌ಔನ್ ಮತ್ತವನ ಜನರು ಸಿದ್ಧಪಡಿಸಿದ್ದ ಸಕಲವನ್ನೂ ಅವರು ನಿರ್ಮಿಸಿ ಎತ್ತರಕ್ಕೇರಿಸಿದ್ದ ಎಲ್ಲ (ಭವ್ಯ ಕಟ್ಟಡಗಳನ್ನೂ) ನಾವು ಧ್ವಂಸ ಮಾಡಿಬಿಟ್ಟೆವು. {137}

ಅತ್ತ ಇಸ್ರಾಈಲ್ ವಂಶಜರು ಸಮುದ್ರವನ್ನು ಸುರಕ್ಷಿತವಾಗಿ ದಾಟಿ ಮುಂದೆ ಸಾಗುವಂತೆ ನಾವು ಮಾಡಿದೆವು. ತರುವಾಯ, ಕೆಲವು ವಿಗ್ರಹಗಳ ಮುಂದೆ ಆರಾಧನಾ ಭಾವದೊಂದಿಗೆ ಕುಳಿತಿದ್ದ ಒಂದು [ಅವಿವೇಕಿ] ಜನಸಮೂಹದ ಬಳಿಯಿಂದ ಅವರು ಹಾದು ಹೋದಾಗ, ಓ ಮೂಸಾ, ಆ ಜನರ ಬಳಿ ಆರಾಧನೆಗಾಗಿ ಇರುವ ಆ ವಿಗ್ರಹಗಳಂತೆಯೇ ನಮಗೂ (ಆರಾಧಿಸಿಕೊಳ್ಳಲು) ಒಂದು ವಿಗ್ರಹವನ್ನು ನೀವು ಮಾಡಿಕೊಡಿ ಎಂದು ಬೇಡಿಕೊಂಡರು. ಅದಕ್ಕೆ ಮೂಸಾ ರು, ನಿಜಕ್ಕೂ ನೀವು ಅವಿವೇಕತನ ಮೆರೆಯುವ ಒಂದು ಜನತೆಯೇ ಸರಿ; ಖಂಡಿತ ಆ ಜನರು ಯಾವ ರೀತಿರಿವಾಜು ಅನುಸರಿಸುತ್ತಿರುವರೋ ಅವೆಲ್ಲ ನಶಿಸಿ ಹೋಗಲಿರುವವು; ಮಾತ್ರವಲ್ಲ ಅವರ ಕರ್ಮಗಳೆಲ್ಲವೂ ವ್ಯರ್ಥವಾಗಿ ಹೋಗುವುವು ಎಂದು (ಕೋಪಗೊಂಡು) ನುಡಿದರು. {138-139}

ಸಮಸ್ತ ಮಾನವರ ಪೈಕಿ ನಿಮ್ಮನ್ನು [ಒಂದು ಮಹತ್ತರ ದೌತ್ಯದ ನಿರ್ವಹಣೆಗಾಗಿ ಆರಿಸುವ ಮೂಲಕ] ನಿಮಗೆ ಮಹತ್ವವನ್ನು ನೀಡಿದವನು ಅಲ್ಲಾಹ್ ನು ಆಗಿರುವಾಗ ಅವನ ಹೊರತು ಬೇರೊಬ್ಬ ದೇವನನ್ನು ನಾನು ನಿಮಗಾಗಿ ಹುಡುಕುವುದೇ?

ಅಷ್ಟೇ ಅಲ್ಲ, ಅತ್ಯಂತ ಕಠಿಣ ಸ್ವರೂಪದ ಶಿಕ್ಷೆಗಳಿಗೆ ನಿಮ್ಮನ್ನು ಗುರಿಪಡಿಸಿದ್ದ ಫಿರ್‌ಔನ್ ನ ಜನರಿಂದ ನಾವು ನಿಮ್ಮನ್ನು ವಿಮೋಚಿಸಿದ್ದ ಸಂದರ್ಭವನ್ನೂ ನೀವು ನೆನೆಪಿಸಿಕೊಳ್ಳಿ. ಅವರು ನಿಮ್ಮ ಗಂಡುಮಕ್ಕಳನ್ನು ಅತಿ ಕ್ರೂರವಾಗಿ ಕೊಲ್ಲುತ್ತಿದ್ದರು ಮತ್ತು ನಿಮ್ಮ ಹೆಣ್ಣುಗಳನ್ನು ಕೊಲ್ಲದೆ ಬಿಡುತ್ತಿದ್ದರು. ಅದರಲ್ಲಿ ನಿಮ್ಮ ಕರ್ತನ ವತಿಯಿಂದ ದೊಡ್ಡದೊಂದು ಪರೀಕ್ಷೆಯೇ ನಿಮಗೆ ಎದುರಾಗಿತ್ತು (ಎಂದು ಅಲ್ಲಾಹ್ ನೂ ನಿಮಗೆ ನೆನಪಿಸುತ್ತಾನೆ) ಎಂದೂ ಮೂಸಾ ರು ಅವರೊಂದಿಗೆ ಹೇಳಿದರು! {140-141}

[ಪ್ರವಾದಿ ಮೂಸಾ ರು ಇಸ್ರಾಈಲ್ ಜನರೊಂದಿಗೆ ಅಲ್ಲಿಂದ ಮುಂದೆ ಸಾಗಿದಾಗ] ನಾವು ಮೂಸಾ ರಿಗೆ ಮೂವತ್ತು ದಿನರಾತ್ರಿಗಳ ಅವಧಿಯನ್ನು ನಿಶ್ಚಯಿಸಿ [ಸೀನಾಯ್ ಪರ್ವತದ ಮೇಲೆ ಕರೆಸಿಕೊಂಡೆವು]. ನಂತರ ಹತ್ತು ರಾತ್ರಿಗಳನ್ನು ಹೆಚ್ಚಿಸಿ ನಮ್ಮ ವಾಗ್ದಾನ ಪೂರ್ತಿಗೊಳಿಸಿದೆವು. ಅಂದರೆ ಅವರ ಕರ್ತಾರನು ನಿಶ್ಚಯಿಸಿದ ಕಾಲಾವಧಿಯು ಒಟ್ಟು ನಲವತ್ತು ರಾತ್ರಿಗಳಲ್ಲಿ ಪೂರ್ಣಗೊಂಡಿತು! [ವಿಶೇಷ ಆಧ್ಯಾತ್ಮಿಕ ಅನುಭವಕ್ಕಾಗಿ ಸೀನಾಯ್ ಗೆ ಹೊರಡುವ ಮುನ್ನ] ತನ್ನ ಸಹೋದರ ಹಾರೂನ್ ರನ್ನುದ್ದೇಶಿಸಿ (ನನ್ನ ಅನುಪಸ್ಥಿತಿಯಲ್ಲಿ) ನನ್ನೀ ಜನರ ನಡುವೆ ನನ್ನ ಪ್ರತಿನಿಧಿಯಾಗಿ ನೀನು ಕಾರ್ಯ ನಿರ್ವಹಿಸಬೇಕು; ಅವರೊಳಗೆ ಸುಧಾರಣೆ ತರಲು ಕೆಲಸ ಮಾಡಬೇಕು ಮತ್ತು ಭ್ರಷ್ಟಾಚಾರ ಹಬ್ಬುವವರ ದಾರಿಯನ್ನು ಅನುಸರಿಸಬಾರದು ಎಂದು ಮೂಸಾರು (ಹೊಣೆಗಾರಿಕೆಯನ್ನು) ವಿವರಿಸಿದರು. {142}

ಹಾಗೆ ನಾವು ನಿರ್ಧರಿಸಿದ್ದ ಸಮಯಕ್ಕೆ ಸರಿಯಾಗಿ ನಿರ್ಧರಿತ ಸ್ಥಳಕ್ಕೆ ಮೂಸಾರು ತಲುಪಿದಾಗ ಅವರೊಂದಿಗೆ ಅವರ ಕರ್ತನು ಮಾತನಾಡಿದನು! ಆಗ ನನಗೆ ನಿನ್ನನ್ನು ತೋರಿಸಿ ಕೊಡಬೇಕು ಓ ನನ್ನ ಕರ್ತಾರನೇ; ನನಗೆ ನಿನ್ನನ್ನು ನೋಡಬೇಕಾಗಿದೆ ಎಂದು ಮೂಸಾ ರು ಬೇಡಿಕೊಂಡರು. ಇಲ್ಲ, ನೀನು ನನ್ನನ್ನು ನೋಡಲಾರೆ; ಆದರೆ ಆ ಪರ್ವತದೆಡೆಗೆ ನೋಡಿಕೋ, ಅದೇನಾದರೂ ತನ್ನ ಸ್ಥಾನದಲ್ಲಿ ಸುಸ್ಥಿರವಾಗಿ ಉಳಿದು ಕೊಂಡರೆ ನೀನು ಸಹ ನನ್ನನ್ನು ನೊಡಬಹುದು ಎಂದು ಅಲ್ಲಾಹ್ ನು ಹೇಳಿದನು. ನಂತರ ಅವರ ಕರ್ತನು ಆ ಪರ್ವತಕ್ಕೆ ತನ್ನ ತೇಜಸ್ಸನ್ನು ಪ್ರಕಟಗೊಳಿಸಿದನು! ಕೂಡಲೇ ಅದು ಆ ಪರ್ವತವನ್ನು ನುಚ್ಚುನೂರು ಗೊಳಿಸಿತು; ಮತ್ತು ಮೂಸಾ ರು ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು! ಎಚ್ಚರಗೊಂಡು ಅವರು ಎದ್ದು ನಿಂತಾಗ (ಓ ನನ್ನ ಕರ್ತಾರನೇ) ನೀನು ಪರಮ ಪಾವನನು; ನಾನಿದೋ ಪಶ್ಚಾತ್ತಾಪದೊಂದಿಗೆ ನಿನ್ನೆಡೆಗೆ ಮರಳಿರುವೆ; ಮತ್ತು ನಾನು ಪ್ರಪ್ರಥಮವಾಗಿ ಒಬ್ಬ ವಿಶ್ವಾಸಿಯಾಗಿರುವೆ ಎಂದು ಮೂಸಾ ರು ಹೇಳಿಕೊಂಡರು. {143}

ಓ ಮೂಸಾ, ನನ್ನ ಸಂದೇಶವನ್ನು ನಿಮಗೆ ನೀಡುವ ಮೂಲಕ ಹಾಗೂ ನಿಮ್ಮೊಂದಿಗೆ ನಾನು ಮಾತನಾಡುವ ಮೂಲಕ ಉಳಿದೆಲ್ಲ ಜನರ ಪೈಕಿ ನಿಮ್ಮನ್ನು ನಾನು ಆರಿಸಿಕೊಂಡಿದ್ದೇನೆ. ಆದ್ದರಿಂದ ನಾನು ನಿಮಗೆ ನೀಡಿರುವುದನ್ನು ಸ್ವೀಕರಿಸಿಕೊಳ್ಳಿ ಮತ್ತು ಕೃತಜ್ಞತೆ ಸಲ್ಲಿಸುವವರ ಸಾಲಿಗೆ ಸೇರಿಕೊಳ್ಳಿ ಎಂದು ಅಲ್ಲಾಹ್ ನು ತಿಳಿಸಿದನು. {144}

ಹಾಗೆ, ಎಲ್ಲ ರೀತಿಯ ಸದುಪದೇಶಗಳನ್ನೂ (ಧಾರ್ಮಿಕ ಅರ್ಥಾತ್ ಶರೀಅತ್ ನ) ವಿಸ್ತಾರವಾದ ವಿವರಗಳನ್ನೂ ಫಲಕಗಳಲ್ಲಿ ಅವರಿಗಾಗಿ ನಾವು ಕೆತ್ತನೆಗೊಳಿಸಿ, ನೀವು ಇದನ್ನು ಭದ್ರವಾಗಿ ಹಿಡಿದುಕೊಳ್ಳಿ; ನಿಮ್ಮ ಜನರಿಗೂ ಇದರಲ್ಲಿರುವ (ಆದೇಶಗಳನ್ನು ಜೀವನದಲ್ಲಿ) ಚೆನ್ನಾಗಿ ಅಳವಡಿಸಿಕೊಳ್ಳುವಂತೆ ಉಪದೇಶಿಸಿರಿ. [ಯಾರಾದರೂ ಇದನ್ನು ಧಿಕ್ಕರಿಸಿದರೆ] ಅಂತಹ ಪಾಪಿ ಜನರಿಗಾಗಿ ಗೊತ್ತುಪಡಿಸಿದ ನೆಲೆಯನ್ನು ನಾವು ನಿಮಗೆ ಶೀಘ್ರದಲ್ಲೇ ತೋರಿಸಿ ಕೊಡುವೆವು [ಎಂದು ತೋರಾ ದ ಕೆಲವು ಲಿಖಿತ ಭಾಗಗಳನ್ನು ನೀಡುವಾಗ ಅಲ್ಲಾಹ್ ನು ಮೂಸಾ ರಿಗೆ ಹೇಳಿದನು]. {145}

ತಮಗೆ ಯಾವತ್ತೂ ತರವಲ್ಲದ ದುರಹಂಕಾರ ಮೆರೆಯುತ್ತಾ ನಾಡಿನಲ್ಲಿ ಓಡಾಡುತ್ತಿರುವವರನ್ನು ನಾವು ಶೀಘ್ರದಲ್ಲೇ ನಮ್ಮ ದೃಷ್ಟಾಂತಗಳಿಂದ ವಿಚಲಿಸಿ ದೂರ ಹೋಗುವಂತೆ ಮಾಡಲಿರುವುದನ್ನು (ಓ ಮೂಸಾ, ನೀವು ಕಂಡುಕೊಳ್ಳುವಿರಿ). ಮುಂದೆ ಅವರು ಯಾವೆಲ್ಲ ದೃಷ್ಟಾಂತಗಳನ್ನು ಕಂಡರೂ ಅವರಿಗೆ ಅದರಲ್ಲಿ ವಿಶ್ವಾಸ ಬಾರದು; ಯಾವ ಸತ್ಪಥವನ್ನು ಕಂಡರೂ ಅದನ್ನು ಸ್ವೀಕರಿಸಿ ತಮ್ಮದಾಗಿಸಿಕೊಳ್ಳಲು ಅವರಿಗಾಗದು; ಆದರೆ ತಪ್ಪುದಾರಿಯನ್ನು ಕಂಡಾಗ ಕೂಡಲೇ ಅದನ್ನು ಅವರು ತಮ್ಮ ದಾರಿಯಾಗಿಸಿಕೊಳ್ಳುವರು! ನಮ್ಮ ದೃಷ್ಟಾಂತಗಳನ್ನು (ನಿರಂತರವಾಗಿ) ಅವರು ಅಲ್ಲಗಳೆಯುತ್ತಿದ್ದ ಕಾರಣಕ್ಕಾಗಿಯೂ ಅವುಗಳ ಕುರಿತು ಅಸಡ್ಡೆ ತೋರುತ್ತಿದ್ದ ಕಾರಣಕ್ಕಾಗಿಯೂ ಹಾಗೆ ಸಂಭವಿಸುವುದು. ನಮ್ಮ ದೃಷ್ಟಾಂತಗಳನ್ನು ಅಲ್ಲಗಳೆದವರು ಮತ್ತು ಪರಲೋಕದ ಭೇಟಿಯನ್ನು ನಿರಾಕರಿಸಿದವರು ಯಾರೋ ಅವರ ಸಕಲ ಸತ್ಕರ್ಮಗಳು ವ್ಯರ್ಥವಾಗಿ ಹೋದವು. ಅವರು ತಾವೆಸಗಿದ ಕೃತ್ಯಕ್ಕೆ ತಕ್ಕುದಾದ ಪ್ರತಿಫಲವಲ್ಲದೆ ಬೇರೇನಾದರೂ ಪ್ರತಿಫಲವಾಗಿ ಪಡೆಯುವರೇ?! {146-147}

ಅತ್ತ, ಮೂಸಾ ರು (ಅಲ್ಲಾಹ್ ನ ಕರೆಯ ಮೇರೆಗೆ ಸೀನಾಯ್ ಬೆಟ್ಟಕ್ಕೆ ಹೋದ) ಬಳಿಕ ಅವರ ಜನಾಂಗದವರು ತಮ್ಮ ಬಳಿಯಿದ್ದ ಆಭರಣಗಳಿಂದ ಒಂದು ಕರುವಿನ ಆಕೃತಿಯನ್ನು ರಚಿಸಿ ಅದನ್ನು ಪೂಜಿಸಲು ಶುರುವಿಟ್ಟರು. ಅದಕ್ಕೆ ಆಕಳ ಕೂಗಿನ ಧ್ವನಿಯನ್ನು ಅಳವಡಿಸಲಾಗಿತ್ತು. ಅದು ಅವರೊಂದಿಗೆ ಮಾತನಾಡುವುದಿಲ್ಲವೆಂದೂ, ಯಾವ ವಿಷಯದಲ್ಲೂ ಅವರಿಗೆ ದಾರಿ ತೋರುವುದಿಲ್ಲವೆಂದೂ ಅವರು ಮನಗಾಣದೇ ಹೋದರೇ! ಅಷ್ಟಾಗ್ಯೂ ಅವರು ಅದನ್ನು ಪ್ರತಿಷ್ಠಾಪಿಸಿಕೊಂಡರು! ಅವರಾದರೋ ಅಂತಹ ಅಕ್ರಮಿಗಳೇ ಆಗಿದ್ದರು! {148}

[ತರುವಾಯ ಅವರಲ್ಲಿ ಕೆಲವರು] ನಾಚಿಕೆಯಿಂದ ತಮ್ಮೊಳಗೇ ಕುಸಿದು ನಾವು ನಿಜವಾಗಿಯೂ ದಾರಿತಪ್ಪಿದ್ದೇವೆಂದು ಮನಗಂಡಾಗ, ನಮ್ಮ ಕರ್ತನು ನಮ್ಮ ಮೇಲೆ ಕರುಣೆ ತೋರದೇ ಹೋದರೆ ಹಾಗೂ ನಮ್ಮನ್ನು ಕ್ಷಮಿಸದೇ ಇದ್ದರೆ, ನಾವು ಖಂಡಿತಾ ಸೋಲುಂಡವರಾಗಿ ತೀರುವೆವು ಎಂದು ಉದ್ಗರಿಸಿದರು. {149}

ತರುವಾಯ ಮೂಸಾ ರು ತಮ್ಮ ಸಮುದಾಯದೆಡೆಗೆ ಹಿಂದಿರುಗಿ ಬಂದ ಸಂದರ್ಭದಲ್ಲಿ ಅತೀವ ಸಿಡಿಮಿಡಿಗೊಂಡರು, ಬಹಳವಾಗಿ ದುಖಿತರಾದರು. ನಾನು (ಸೀನಾಯ್ ಗೆ ಹೋದ) ನಂತರ ನನ್ನ ಅನುಪಸ್ಥಿತಿಯಲ್ಲಿ ನೀವು ಕೈಗೊಂಡಿರುವುದು ಅದೆಷ್ಟು ಕೆಟ್ಟ ಕೆಲಸ! ನಿಮ್ಮ ಕರ್ತನ ಆಜ್ಞೆಗೆ ಕಾಯದೆ ನೀವು ದುಡುಕಿ [ಕರುವಿನ ವಿಗ್ರಹವನ್ನು ಮಾಡಿಕೊಂಡಿರಿ] ಅಲ್ಲವೇ? ಮತ್ತು ಮೂಸಾ ರು [ತೋರಾ ದ ಅಂಶವಾದ] ಆ ಫಲಕಗಳನ್ನು ಕೆಳಗೆ ಹಾಕಿ ತನ್ನ ಸಹೋದರ (ಹಾರೂನ್ ರ) ತಲೆಗೂದಲು ಹಿಡಿದು ತನ್ನತ್ತ ರಭಸದಿಂದ ಎಳೆದರು. ಆಗ, ಓ ನನ್ನ ತಾಯಿಯ ಪುತ್ರನೇ [ಅರ್ಥಾತ್ ಗೌರವಕ್ಕೆ ಪಾತ್ರನಾದ ಸಹೋದರೆನೇ], ನಿಜಾವಾಗಿಯೂ ಈ ಜನರು ನನ್ನನ್ನು ಬಲಹೀನನೆಂದು ಪರಿಗಣಿಸಿ [ನನ್ನ ಬುದ್ಧಿವಾದವನ್ನು ಕಡೆಗಣಿಸುತ್ತಿದ್ದುದು ಮಾತ್ರವಲ್ಲ] ನನ್ನನ್ನು ಕೊಂದೇ ಹಾಕುವಷ್ಟರ ಮಟ್ಟಿಗೆ ತಲುಪಿದ್ದರು! ಆದ್ದರಿಂದ (ಅನ್ಯಾಯವಾಗಿ ನನ್ನ ಮೇಲೆ ಕೈಮಾಡಿ) ಈ ವೈರಿಗಳು ನನ್ನನ್ನು ನೋಡಿ ಸಂತೋಷ ಪಡುವಂತೆ ಮಾಡದಿರಿ; ದುಷ್ಟರ ಕೂಟಕ್ಕೆ ಸೇರಿದ ಒಬ್ಬನಂತೆ ನನ್ನನ್ನು ನೋಡದಿರಿ ಎಂದು (ಹಾರೂನ್ ರು) ಬೇಡಿಕೊಂಡರು. {150}

ಆಗ, ಓ ನನ್ನ ಕರ್ತಾರನೇ, ನನ್ನನ್ನೂ ನನ್ನ ಸಹೋದರನನ್ನೂ ಕ್ಷಮಿಸಿ ಬಿಡು. ನಿನ್ನ ಕಾರುಣ್ಯದ ಸನ್ನಿಧಿಯಲ್ಲಿ ನಮ್ಮನ್ನು ಸೇರಿಸಿಕೋ. ನೀನಾದರೋ ಎಲ್ಲರಿಗಿಂತ ಮಿಗಿಲಾಗಿ ಕರುಣೆ ತೋರಿಸುವವನಾಗಿರುವೆ - ಎಂದು ಮೂಸಾ ರು ಪ್ರಾರ್ಥಿಸಿಕೊಂಡರು. {151}

[ಓ ಮೂಸಾ!] ಯಾರು ಕರುವಿನ (ವಿಗ್ರಹವನ್ನು ಪೂಜಿಸುವ ಸಲುವಾಗಿ) ಇರಿಸಿಕೊಂಡರೋ ಅಂತಹವರಿಗೆ ಅವರ ಕರ್ತನ ಕ್ರೋಧ ತಟ್ಟಿಯೇ ತೀರುವುದು; ಮಾತ್ರವಲ್ಲ ಐಹಿಕ ಜೀವನದಲ್ಲಿ ಅವರಿಗೆ ಅಪಮಾನವೂ ಕಾದಿದೆ. ಹೌದು, (ವಿಗ್ರಹಾರಾಧನೆಯಂತಹ) ಹುಸಿಗಳನ್ನು ಉಂಟುಮಾಡಿಕೊಂಡ ಜನರನ್ನು ನಾವು ಹಾಗೆಯೇ ಶಿಕ್ಷಿಸುತ್ತೇವೆ. ಆದರೆ ಯಾರಾದರೂ ಕೆಟ್ಟ ಕೆಲಸವನ್ನು ಮಾಡಿ ತರುವಾಯ ಪಶ್ಚಾತ್ತಾಪ ಪಟ್ಟು ವಿಶ್ವಾಸಿಯಾಗಿ ಮುಂದುವರಿದರೆ (ಅಂತಹ ಒಂದು ಪಶ್ಚಾತ್ತಾಪದ) ನಂತರ ನಿಮ್ಮ ಕರ್ತನು ಧಾರಾಳವಾಗಿ ಕ್ಷಮಿಸುವವನೂ ಮಹಾ ಕಾರುಣ್ಯವಂತನೂ ಆಗಿರುವನು [ಎಂದು ಅಲ್ಲಾಹ್ ನು ಸ್ಪಷ್ಟಪಡಿಸಿದನು]. {152-153}

ತರುವಾಯ ಮೂಸಾ ರ ಕೋಪವು ಶಮನಗೊಂಡಾಗ ಅವರು ಆ ಫಲಕಗಳನ್ನು ಎತ್ತಿಕೊಂಡರು. ಅವುಗಳಲ್ಲಿ ಲಿಪಿಗೊಳಿಸಲಾದ ವಿಷಯಗಳಲ್ಲಿ ತಮ್ಮ ಕರ್ತನಿಗೆ ಭಯಭಕ್ತಿ ತೋರುವ ಜನರಿಗೆ ಮಾರ್ಗದರ್ಶನ ಹಾಗೂ ಕಾರುಣ್ಯದ (ವಾಗ್ದಾನವೂ) ಸೇರಿತ್ತು. {154}

ನಂತರ ನಾವು ನಿಗದಿ ಪಡಿಸಿದ ಸ್ಥಳಕ್ಕೆ [ತಪ್ಪಿತಸ್ಥರ ಪರವಾಗಿ ಹಾಜರಾತಿ ಮತ್ತು ಕ್ಷಮೆಯಾಚನೆಗಾಗಿ ತಮ್ಮೊಂದಿಗೆ ಕರೆತರಲು] ತಮ್ಮ ಸಮುದಾಯದ ಎಪ್ಪತ್ತು ಮಂದಿ ಪುರುಷರನ್ನು ಮೂಸಾ ರು ಆಯ್ದು ಕೊಂಡರು. ತರುವಾಯ ಅಲ್ಲಿ ಅವರನ್ನು ಭೂಕಂಪವು ಆವರಿಸಿಕೊಂಡಾಗ, ಓ ನನ್ನ ಕರ್ತಾರನೇ, ಒಂದು ವೇಳೆ ನೀನು ಬಯಸಿದ್ದಿದ್ದರೆ ಇದಕ್ಕಿಂತ ಮುಂಚೆಯೇ [ಅರ್ಥಾತ್ ಜನರು ಕರುವಿನ ವಿಗ್ರಹ ರಚಿಸಿ ಕೊಂಡಾಗಲೇ] ಇವರನ್ನೂ ನನ್ನನ್ನೂ ನಾಶಪಡಿಸಿ ಬಿಡಬಹುದಿತ್ತು; ನಮ್ಮ ಪೈಕಿಯ ಆ ಕೆಲವು ಮೂರ್ಖರು ಎಸಗಿದ ಕೃತ್ಯಕ್ಕಾಗಿ ನೀನು ಈಗ ನಮ್ಮೆಲ್ಲರನ್ನೂ ನಾಶಪಡಿಸಿ ಬಿಡುವೆಯಾ? ಅದಾದರೋ ನೀನು ಮಾಡಿದ ಒಂದು ಪರೀಕ್ಷೆಯಾಗಿತ್ತು; ಅದರ ಮೂಲಕ ನೀನು ಉದ್ದೇಶಿಸಿದವರನ್ನು ದಾರಿತಪ್ಪಿಸುತ್ತೀಯ ಮತ್ತು ನೀನು ಉದ್ದೇಶಿಸಿದವರನ್ನು ಸರಿದಾರಿಯಲ್ಲಿ ನಡೆಸುತ್ತೀಯ! ನೀನಾದರೋ ನಮ್ಮ ಸಂರಕ್ಷಕನಾಗಿರುವೆ! ಆದ್ದರಿಂದ ನಮ್ಮನ್ನು ಕ್ಷಮಿಸಿ ಬಿಡು; ನಮ್ಮ ಮೇಲೆ ಕರುಣೆ ತೋರು; ಕ್ಷಮೆ ನೀಡುವುದರಲ್ಲಿ ನೀನು ಉತ್ತಮನು! ಈ ಪ್ರಾಪಂಚಿಕ ಜೀವನದಲ್ಲೂ ಪಾರಮಾರ್ಥಿಕ ಜೀವನದಲ್ಲೂ ನಮ್ಮ ಪಾಲಿಗೆ ನೀನು ಒಳಿತನ್ನೇ ವಿಧಿಗೊಳಿಸು. ನಾವು (ಪಶ್ಚಾತ್ತಾಪ ಪಡುವ ಮೂಲಕ) ನಿಜವಾಗಿಯೂ ನಿನ್ನತ್ತ ಮರಳಿರುವೆವು ಎಂದು ಮೂಸಾ ರು ಬೇಡಿಕೊಂಡರು.

ನನ್ನ ಶಿಕ್ಷೆಯ ವಿಷಯ - ನಾನು ಉದ್ದೇಶಿಸಿದವರನ್ನು ಅದರ ಮೂಲಕ ದಂಡಿಸುತ್ತೇನೆ. ನನ್ನ ಕಾರುಣ್ಯದ (ನಿಯಮವು) ಸರ್ವ ವಿಷಯಗಳನ್ನು ಆವರಿಸಿಕೊಂಡಿದೆ. ಅದನ್ನು ನಾನು ಆತ್ಮನಿಗ್ರಹ ಸಾಧಿಸಿದವರಿಗೂ ಝಕಾತ್ ನೀಡುವವರಿಗೂ ನಮ್ಮ ವಚನಗಳಲ್ಲಿ ನಂಬಿಕೆ ಇರಿಸುವ ಜನರಿಗೂ ಲಿಖಿತಗೊಳಿಸುತ್ತೇನೆ ಎಂದು ಅಲ್ಲಾಹ್ ನು ಹೇಳಿದನು. {155-156}

[ಹಾಗೆಯೇ, ಈಗ ಈ ಯಹೂದ್ಯರು ಮತ್ತು ನಸಾರಾಗಳಲ್ಲಿ] ಯಾರು ತಮ್ಮ ಬಳಿ ಇರುವ ತೋರಾ ಮತ್ತು ಇಂಜೀಲ್ ಗಳಲ್ಲಿ ಪ್ರಸ್ತಾಪ ಮಾಡಲಾದ ಈ ದೂತ ಅರ್ಥಾತ್ ನಿರಕ್ಷರಿಯಾದ ಈ ಪೈಗಂಬರರನ್ನು ಅನುಸರಿಸುವರೋ ಅವರೂ ಸಹ (ಆ ಕಾರುಣ್ಯಕ್ಕೆ ಅರ್ಹರಾಗುವರು)! ಈ ಪೈಗಂಬರರು ಅವರಿಗೆ ಒಳಿತುಗಳನ್ನು ಮೈಗೂಡಿಸಿಕೊಳ್ಳುವಂತೆ ಆದೇಶಿಸುತ್ತಾರೆ ಹಾಗೂ ಕೆಡುಕುಗಳಿಂದ ಅವರನ್ನು ತಡೆಯುತ್ತಾರೆ. ಎಲ್ಲ ರೀತಿಯ ಶುದ್ಧ ವಸ್ತುಗಳನ್ನು ಅವರಿಗೆ ಅನುಮತಿಸುತ್ತಾರೆ ಹಾಗೂ ಅಶುದ್ಧವಾದವುಗಳನ್ನು ಅವರಿಗೆ ನಿಷಿದ್ಧವೆಂದು ಸಾರುತ್ತಾರೆ. ಮಾತ್ರವಲ್ಲ ಅವರ ಮೇಲೆ ಇರುವ ಅನುಚಿತ ಹೊರೆಯನ್ನೂ ಬಂಧನದ ಸಂಕೋಲೆಗಳನ್ನೂ ನೀಗಿಸುತ್ತಾರೆ. ಆದ್ದರಿಂದ ಯಾರು ಅಂತಹ ಪೈಗಂಬರರನ್ನು ಒಪ್ಪಿಕೊಳ್ಳುವರೋ, ಅವರ ಬೆಂಬಲಕ್ಕೆ ನಿಲ್ಲುವರೋ, ಅವರಿಗೆ ಸಹಾಯ ಒದಗಿಸುವರೋ ಹಾಗೂ ಅವರಿಗೆ ಇಳಿಸಿಕೊಡಲಾದ ಪ್ರಕಾಶ (ಕುರ್‌ಆನ್ ಅನ್ನು) ಅನುಸರಿಸುವರೋ ಅವರೇ ವಿಜಯಿಗಳಾಗಿ ತೀರುವವರು! {157}

ಓ ಜನರೇ, ಭೂಮಿ ಮತ್ತು ಆಕಾಶಗಳ ಸಾರ್ವಭೌಮ ಅಧಿಪತಿಯಾದ ಅಲ್ಲಾಹ್ ನ ವತಿಯಿಂದ ನಾನು ನಿಮ್ಮೆಲ್ಲರೆಡೆಗೆ ಅವನ ದೂತನಾಗಿ ನಿಯೋಗಿಸಲ್ಪಟ್ಟಿರುವೆನು ಎಂದು ಪೈಗಂಬರರೇ ನೀವು ಸಾರಿರಿ. ಆ ಅಲ್ಲಾಹ್ ನ ಹೊರತು ಬೇರೆ ಯಾರೂ ದೇವರಿಲ್ಲ; ಅವನೇ ಬದುಕು ಪ್ರದಾನಿಸುವವನು, ಮರಣ ನೀಡುವವನೂ ಅವನೇ! ಆದ್ದರಿಂದ (ಜನರೇ) ನೀವು ಅಲ್ಲಾಹ್ ನನ್ನು ಹಾಗೂ ಅವನ ದೂತನಾದ ಈ ನಿರಕ್ಷರಿ ಪೈಗಂಬರರನ್ನು ಒಪ್ಪಿಕೊಳ್ಳುವವರಾಗಿರಿ. ಅವರಾದರೋ ಅಲ್ಲಾಹ್ ನಲ್ಲಿ ಹಾಗೂ ಅವನ ವಚನಗಳಲ್ಲಿ ವಿಶ್ವಾಸ ಇರಿಸಿದವರಾಗಿದ್ದಾರೆ. ನೀವು ಆ ಪೈಗಂಬರರನ್ನೇ ಅನುಸರಿಸಿರಿ, ಹಾಗೆ ಮಾಡಿದರೆ ನೀವು ಸನ್ಮಾರ್ಗ ಪಡೆಯುವಿರಿ! {158}

ಮೂಸಾ ರ ಸಮುದಾಯದಲ್ಲಿ ಸತ್ಯವನ್ನು (ಬಚ್ಚಿಡದೆ ಅದರ ಮೂಲಕ ಜನರಿಗೆ) ಮಾರ್ಗದರ್ಶನ ನೀಡುತ್ತಿದ್ದ ಹಾಗೂ ಅದರ ಪ್ರಕಾರ ನ್ಯಾಯಯುತವಾಗಿ ನಡೆದುಕೊಳ್ಳುತ್ತಿದ್ದ ಒಂದು ಪಂಗಡವೂ ಇದ್ದಿತ್ತು. [ಅರ್ಥಾತ್ ಹೆಚ್ಚಿನವರು ಸತ್ಯವನ್ನೂ ನ್ಯಾಯವನ್ನೂ ಕೈಬಿಟ್ಟವರಾಗಿದ್ದರು]. {159}

ನಾವು ಇಸ್ರಾಈಲ್ ಸಂತತಿಯನ್ನು ಹನ್ನೆರಡು ಮನೆತನಗಳಾಗಿ ವಿಭಜಿಸಿ ಅವರು ಬೇರೆಬೇರೆ ಗೋತ್ರಗಳಾಗುವಂತೆ ಮಾಡಿದೆವು. ಮುಂದೆ ಮೂಸಾ ರ ಸಮುದಾಯವು (ಅರ್ಥಾತ್ ಇಸ್ರಾಈಲ್ ಸಂತತಿಯವರು) ಅವರೊಂದಿಗೆ ನೀರಿನ ಸೌಕರ್ಯಕ್ಕಾಗಿ ಬೇಡಿಕೆ ಇಟ್ಟಾಗ ನೀವು ನಿಮ್ಮ ಊರುಗೋಲನ್ನು ಆ ಬಂಡೆಗೆ ಹೊಡೆಯಿರಿ ಎಂದು ನಾವು ಮೂಸಾ ರಿಗೆ ದಿವ್ಯಾದೇಶ ನೀಡಿದೆವು. ಹೊಡೆದ ತಕ್ಷಣ ಅದರಿಂದ ಹನ್ನೆರಡು ಚಿಲುಮೆಗಳು ಹೊರಚಿಮ್ಮಿದವು. ನಂತರ ಪ್ರತಿಯೊಂದು ಗೋತ್ರವೂ ತಾನು ನೀರು ಪಡೆಯಬೇಕಾದ ಸ್ಥಳವನ್ನು ಗುರುತಿಸಿಕೊಂಡಿತು. ಅಷ್ಟೇ ಅಲ್ಲ, ನಾವು ಮೋಡಗಳಿಂದ ಅವರಿಗೆ ನೆರಳುಂಟು ಮಾಡಿದೆವು; 'ಮನ್ನ' ಹಾಗೂ 'ಸಲ್ವಾ' ಗಳಂತಹ (ವಿಶೇಷ ಭೋಜನಗಳನ್ನು) ಅವರಿಗಾಗಿ ಇಳಿಸಿ ಕೊಟ್ಟೆವು. ನಾವು ನಿಮಗಾಗಿ ದಯಪಾಲಿಸಿರುವ ನಿರ್ಮಲವಾದ ಆಹಾರವನ್ನು ಭಕ್ಷಿಸಿರಿ (ಎಂದು ಅರೊಂದಿಗೆ ಹೇಳಿದ್ದೂ ಆಯಿತು). ಆದರೆ [ನಮ್ಮ ಎಲ್ಲ ಅನುಗ್ರಹಗಳನ್ನು ನಿರಂತರ ಕಡೆಗಣಿಸುವ ಮೂಲಕ] ಅವರು ಅನ್ಯಾಯ ಮಾಡಿರುವುದು ನಮಗಲ್ಲ, ಬದಲಾಗಿ ಅವರು ತಮ್ಮ ಮೇಲೆ ತಾವೇ ಅನ್ಯಾಯವೆಸಗಿದವರಾದರು. {160}

ನೀವು ಆ ಪಟ್ಟಣಕ್ಕೆ (ತೆರಳಿ) ಅಲ್ಲಿ ವಾಸ ಹೂಡಿರಿ; ನಿಮಗೆ ಮನಬಂದಂತೆ ಬೇಕಾದಲ್ಲಿಂದ ಬೇಕಾದಷ್ಟನ್ನು ಅಲ್ಲಿ ತಿಂದುಂಡುಕೊಳ್ಳಿ; ಆದರೆ ಪಟ್ಟಣದ ಹೆಬ್ಬಾಗಿಲು ಪ್ರವೇಶಿಸುವಾಗ (ವಿಮ್ರತೆ ಪ್ರಕಟಿಸುತ್ತಾ) ತಲೆಬಾಗಿಕೊಂಡು, ನಮ್ಮ ಪಾಪಗಳನ್ನು ಕ್ಷಮಿಸು (ದೇವಾ) ಎಂದು ಪ್ರಾರ್ಥಿಸುತ್ತಲಿರಿ; ಹಾಗಾದರೆ ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು. ಮಾತ್ರವಲ್ಲ ಅಲ್ಲಿ ಸಜ್ಜನಿಕೆ ತೋರುವವರಿಗೆ ಮತ್ತಷ್ಟನ್ನು ಅನುಗ್ರಹಿಸುವೆವು ಎಂದು ಅವರೊಂದಿಗೆ ಹೇಳಲಾದ ಸಂದರ್ಭವನ್ನು (ಪೈಗಂಬರರೇ ನೀವೀಗ ಈ ಯಹೂದ್ಯರಿಗೆ) ನೆನಪಿಸಿ ಕೊಡಿರಿ. {161}

ಆದರೆ ಅವರ ಪೈಕಿಯ ಅಕ್ರಮಿಗಳು ತಮಗೆ ಹೇಳಿಕೊಡಲಾಗಿದ್ದ ಮಾತನ್ನು ಬದಲಿಸಿ (ವಿರುದ್ಧಾರ್ಥ ಬರುವ) ಬೇರೆಯೇ ಮಾತನ್ನು ಹೇಳಿದರು! ಅವರೆಸಗಿದ ಅಂತಹ ಅಕ್ರಮಗಳ ಕಾರಣ ನಾವು ಆಕಾಶದಿಂದ ಅವರ ಮೇಲೆ ಶಿಕ್ಷೆ ಇಳಿಸಿದೆವು. {162}

ಸಮುದ್ರದ ತೀರದಲ್ಲಿದ್ದ ಆ ಒಂದು ಊರಿನ ಬಗ್ಗೆಯೂ ನೀವು ಇವರೊಂದಿಗೆ ಸ್ವಲ್ಪ ವಿಚಾರಿಸಿ ನೋಡಿ! ಆ ಊರಿನವರು [ಶನಿವಾರದಂದು ಆಚರಿಸಬೇಕಿದ್ದ] ಸಬ್ಬತ್ ನ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿದ್ದ ವಿಷಯವನ್ನು ಇವರಿಗೆ ನೆನಪಿಸಿ ಕೊಡಿ. ದೊಡ್ಡ ಮೀನುಗಳು ಸಬ್ಬತ್ ನ ದಿನವೇ (ಗುಂಪು ಗುಂಪಾಗಿ ನೀರ ಮೇಲೆದ್ದು) ಕಾಣಿಸಿಕೊಳ್ಳುವಂತೆ ಹೊರ ಬರುತ್ತಿದ್ದ ಮತ್ತು ಅವರು ಸಬ್ಬತ್ ಆಚರಿಸ ಬೇಕಿಲ್ಲದ ಇತರ ದಿನಗಳಲ್ಲಿ ಅವು ಹಾಗೆ ಹೊರ ಬಾರದೇ ಇರುತ್ತಿದ್ದ ವಿದ್ಯಮಾನವನ್ನು ಇವರಿಗೆ ನೆನಪಿಸಿ! [ಸಬ್ಬತ್ ನ ನಿಯಮಗಳನ್ನು] ಅವರು ಉಲ್ಲಂಘಿಸುತ್ತಿದ್ದ ಕಾರಣಕ್ಕಾಗಿ ನಾವು ಅವರನ್ನು ಹಾಗೆ ಪರೀಕ್ಷಿಸುತ್ತಿದ್ದೆವು. {163}

ಅಲ್ಲಾಹ್ ನು ನಾಶಗೊಳಿಸಿ ಬಿಡಲಿರುವ ಅಥವಾ ತೀವ್ರವಾದ ಶಿಕ್ಷೆಗೆ ಒಳಪಡಿಸಲಿರುವ ಒಂದು ಜನತೆಗೆ ನೀವೇಕೆ ಉಪದೇಶಿಸುತ್ತಿದ್ದೀರಿ ಎಂದು ಆ ಸಮುದಾಯದ ಒಂದು ಗುಂಪು (ಉಪದೇಶ ನೀಡುತ್ತಿದ್ದವರನ್ನು) ಪ್ರಶ್ನಿಸಿದ ಸಂದರ್ಭವನ್ನೂ ನೆನಪಿಸಿರಿ. ನಿಮ್ಮ ಕರ್ತಾರನ ಬಳಿ (ಈ ಉಪದೇಶಿಸುವಿಕೆಯು ನಮ್ಮನ್ನು ಶಿಕ್ಷಿಸದಿರಲು) ಒಂದು ಹೇತುವಾಗಲಿ; ಹಾಗೆಯೇ ಇವರು ಭಯಭಕ್ತಿಯುಳ್ಳವರಾಗಿ ತೀರಲಿ ಎಂಬ ಕಾರಣಕ್ಕಾಗಿ ಎಂದು (ಆ ಉಪದೇಶಕರು) ಉತ್ತರಿಸಿದ್ದರು. {164}

ಯಾವಾಗ ಅವರು ತಮಗೆ ನೀಡಲಾಗಿದ್ದ ಬೋಧನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಟ್ಟರೋ ಆಗ, (ಜನಸಾಮಾನ್ಯರನ್ನು) ದುಷ್ಕೃತ್ಯಗಳಿಂದ ತಡೆಯುತ್ತಿಲಿದ್ದವರನ್ನು ಮಾತ್ರ ನಾವು (ಶಿಕ್ಷೆಗೆ ಗುರಿಪಡಿಸದೆ) ಪಾರುಮಾಡಿದೆವು. ಹಾಗೂ ಉಳಿದ ಅಕ್ರಮಿಗಳನ್ನು ಹಿಡಿದು ಅವರು ಮಾತುಮೀರುತ್ತಿದ್ದ ಕಾರಣಕ್ಕಾಗಿ ನಾವು ಅತ್ಯಂತ ಕೆಟ್ಟದಾಗಿ ಶಿಕ್ಷಿಸಿದೆವು. ಇನ್ನು, ಏನನ್ನು ಮಾಡಬಾರದೆಂದು ನಿಷೇಧ ಹೇರಲಾಗಿತ್ತೋ, ಉದ್ಧಟತನ ತೋರಿ ಅದನ್ನೇ ಮಾಡಿತ್ತಿದ್ದವರನ್ನು, ನೀವು ನಿಂದನೀಯ ಕೋತಿಗಳಾಗಿರಿ ಎಂದು ನಾವು ಶಪಿಸಿ ಬಿಟ್ಟೆವು! {165-166}

ಅಂತೆಯೇ, ಲೋಕಾಂತ್ಯ ಸಂಭವಿಸುವ ದಿವಸದ ವರೆಗೂ ಅತ್ಯಂತ ಕೆಟ್ಟ ಸ್ವರೂಪದ ಯಾತನೆ ನೀಡುವವರನ್ನು ನಾವು ಇಸ್ರಾಈಲ್ ಸಂತತಿಯವರ ಮೇಲೆ ಎರಗಿಸುತ್ತಲೇ ಇರುವೆವು ಎಂದು ನಿಮ್ಮ ಕರ್ತಾರನು ಘೋಷಿಸಿದ್ದ ಸಂದರ್ಭವನ್ನೂ (ಇವರೊಂದಿಗೆ ಉಲ್ಲೇಖಿಸಿ). ನಿಮ್ಮ ಕರ್ತನಾದರೋ ಶಿಕ್ಷಿಸುವುದರಲ್ಲಿ ವೇಗಶಾಲಿಯೇ ಸರಿ! ಇನ್ನು [ಪಶ್ಚಾತ್ತಾಪ ಪಡುವವರ ಪಾಲಿಗೆ] ಅವನು ಮಹಾ ಕ್ಷಮಾಶಾಲಿಯೂ ತುಂಬಾ ಕರುಣಾಯಿಯೂ ಆಗಿರುವನು! {167}

ನಾವು ಅವರ ಏಕತೆಯನ್ನು ಒಡೆದು ವಿವಿಧ ಪಂಗಡಗಳನ್ನಾಗಿಸಿ ಭೂಮುಖದ ಮೇಲೆ ಹರಡಿ ಬಿಟ್ಟೆವು. ಅವರಲ್ಲಿ ಕೆಲವರು ಸಜ್ಜನರಾಗಿದ್ದರು; ಅಲ್ಲದವರೂ ಅವರಲ್ಲಿದ್ದರು. ಅವರು [ಉದ್ಧಟತನ ತೊರೆದು ಧಾರ್ಮಿಕತೆಯತ್ತ] ಮರಳುವಂತಾಗಲಿ ಎಂದು ನಾವು ಸುಖವನ್ನೂ ಸಂಕಷ್ಟಗಳನ್ನೂ ನೀಡಿ ಅವರನ್ನು ಪರೀಕ್ಷಿಸುತ್ತಿದ್ದೆವು. {168}

ಅವರ ನಂತರ ಅವರನ್ನು ಹಿಂಬಾಲಿಸಿ ಬಂದ ಪೀಳಿಗೆಯು ದೇವಗ್ರಂಥ (ತೋರಾವನ್ನು ಅವರಿಂದ) ಬಳುವಳಿಯಾಗಿ ಪಡೆಯಿತು! ಅದಾಗ್ಯೂ ಅವರು ಐಹಿಕ ಲೋಕವು ನೀಡುವ ಕ್ಷಣಿಕವಾದ ಕ್ಷುಲ್ಲಕ ಸುಖಸಾಧನಗಳನ್ನು ದೋಚುತ್ತಾ 'ನಾವು (ಅಲ್ಲಾಹ್ ನಿಂದ) ಕ್ಷಮಿಸಲ್ಪಡಲಿದ್ದೇವೆ' ಎಂದು ಹೇಳಿಕೊಳ್ಳುತ್ತಿದ್ದರು. ತರುವಾಯ, ಅಂತಹ ಕ್ಷಣಿಕ ಸುಖವು ಪುನಃ ಅವರಿಗೆ ಲಭಿಸಿದರೆ [ತಿರಸ್ಕರಿಸುವ ಬದಲು] ಅವರು ಅದನ್ನು ಕಬಳಿಸುವುದರಲ್ಲಿ ಪುನಃ ನಿರತರಾಗುತ್ತಾರೆ. ಅಲ್ಲಾಹ್ ನ ಕುರಿತು ಹೇಳುವಾಗ ವಾಸ್ತವಿಕತೆಯ ಹೊರತು ಬೇರೇನನ್ನೂ ನಾವು ಹೇಳುವುದಿಲ್ಲ ಎಂದು ಅವರು ಅದೇ ಗ್ರಂಥದ ಮೂಲಕ ಸತ್ಯಪ್ರತಿಜ್ಞೆ ಮಾಡಿರಲಿಲ್ಲವೇ? ಅದರಲ್ಲಿ (ಬರೆಯಲಾದ) ವಿಷಯಗಳನ್ನು ಅವರು ಚೆನ್ನಾಗಿ ಕಲಿತಿರಲಿಲ್ಲವೇ? ಭಯಭಕ್ತಿ ಪಾಲಿಸುವವರಿಗೆ [ಕ್ಷುಲ್ಲಕ ಪ್ರಾಪಂಚಿಕ ಸುಖವು ತರವಲ್ಲ, ಬದಲಾಗಿ ಶಾಶ್ವತವಾದ] ಪರಲೋಕದ ಬದುಕೇ ಉತ್ತಮವಾದುದು [ಎಂದು ಅವರು ಕಲಿತ ಗ್ರಂಥದಲ್ಲೇ ಇತ್ತು]! ನೀವಾದರೂ ಬುದ್ಧಿ ಉಪಯೋಗಿಸುವುದಿಲ್ಲವೇ!? {169}

ಇನ್ನು ಯಾರು ಗ್ರಂಥದ ಬೋಧನೆಗಳನ್ನು ಭದ್ರವಾಗಿ ಅಪ್ಪಿಕೊಂಡರೋ ಮತ್ತು (ಪ್ರತಿನಿತ್ಯದ) ನಮಾಝ್ ಗಳನ್ನು ಸ್ಥಿರವಾಗಿ ಪಾಲಿಸಿದರೋ ಅಂತಹ ಸಜ್ಜನಿಕೆಯ ಹರಿಕಾರರ ಪ್ರತಿಫಲವನ್ನು ಎಂದಿಗೂ ನಾವು ವ್ಯರ್ಥಗೊಳಿಸುವುದಿಲ್ಲ. {170}

ನಾವು (ತೂರ್) ಪರ್ವತವನ್ನು ಎತ್ತಿ ಚಪ್ಪರದಂತೆ ಅವರ ಮೇಲೆ ನಿಲ್ಲಿಸಿದಾಗ ಅದು ಅವರ ಮೇಲೆ ಕುಸಿದು ಬೀಳುವುದೋ ಎಂದು ಅವರು ಭಾವಿಸಿದ್ದ ಸಂದರ್ಭ (ಅವರಿಗೆ ನೆನಪಿದೆಯೇ)! ನೀವು ಭಯಭಕ್ತಿಯುಳ್ಳವರಾಗಿ ತೀರಲು ನಾವು ನಿಮಗೆ ನೀಡಿದ (ತೋರಾ ಗ್ರಂಥವನ್ನು) ಗಟ್ಟಿಯಾಗಿ ಹಿಡಿದುಕೊಳ್ಳಿ ಮತ್ತು ಅದರಲ್ಲಿ ಏನಿದೆಯೋ ಅದನ್ನು ಸದಾ ನೆನಪಿಟ್ಟಕೊಳ್ಳಿ (ಎಂದು ನಾವು ಅವರಿಗೆ ಆಗ ಹೇಳಿದ್ದೆವು). {171}

[ಓ ಪೈಗಂಬರರೇ]! ಆದಮರ ಪುತ್ರರ ಬೆನ್ನಿನಿಂದ ಅವರ ಮುಂದಿನ ಪೀಳಿಗೆಗಳನ್ನು ಹೊರತೆಗೆದು, (ಆ ಘಟನೆಗೆ) ಸ್ವತಹ ಅವರನ್ನೇ ಸಾಕ್ಷಿಯಾಗಿಸಿ, ನಾನೇ ಅಲ್ಲವೇ ನಿಮ್ಮ ದೇವನು ಎಂದು ಕೇಳಿದ ಸಂದರ್ಭವನ್ನು (ಜನರಿಗೆ) ನೆನಪಿಸಿರಿ. ಹೌದು, ನೀನೇ ನಮ್ಮ ದೇವನು; ನಾವದಕ್ಕೆ ಸಾಕ್ಷ್ಯವಹಿಸುತ್ತೇವೆ ಎಂದು ಅವರೆಲ್ಲ ಉತ್ತರಿಸಿದ್ದರು. ಆ ಘಟನೆಯ ಕುರಿತು ನಾವು ಏನೇನೂ ತಿಳಿದವರಲ್ಲ ಎಂದು ಪುನರುತ್ಥಾನದ ದಿನ ನೀವು [ಅರ್ಥಾತ್ ಮನುಷ್ಯರು] ನೆಪ ಹೇಳುವಂತೆ ಆಗಬಾರದು ಎಂಬ ಕಾರಣಕ್ಕಾಗಿ (ಹಾಗೆ ನಾವು ಸಾಕ್ಷ್ಯ ಪಡೆದೆವು). ಅಥವಾ, ಶಿರ್ಕ್ [ಅರ್ಥಾತ್ ಅಲ್ಲಾಹ್ ನ ದೇವತ್ವದಲ್ಲಿ ಇತರರನ್ನು ಸೇರಿಸಿಕೊಳ್ಳುವಂತಹ ಪಾಪವನ್ನು] ಮೊದಲಿಗೆ ಪ್ರಾರಂಭಿಸಿದವರು ನಮ್ಮ ಪೂರ್ವಜರೇ (ಹೊರತು ನಾವಲ್ಲ)! ನಾವು ಅವರ ನಂತರ ಅವರ ಸಂತತಿಯಾಗಿ ಹುಟ್ಟಿರುವೆವಷ್ಟೆ! ಆ ತಪ್ಪಿತಸ್ಥರು ಪ್ರಾರಂಭಿಸಿಸಿದ ಕೃತ್ಯಕ್ಕಾಗಿ ನೀನು ನಮ್ಮನ್ನು ನಾಶ ಮಾಡುವುದೇ ಎಂದು (ಯಾವೊಬ್ಬನಿಗೂ) ಕೇಳಲು ಅವಕಾಶ ಇರಬಾರದು (ಎಂದು ನಾವು ಹಾಗೆ ಸಾಕ್ಷ್ಯ ಪಡೆದೆವು)! [ತಮ್ಮ ಉದ್ಧಟತನವನ್ನು ಇನ್ನಾದರೂ ತೊರೆದು] ಅವರು ಮರಳಿ ಬರುವಂತಾಗಲಿ ಎಂದು ನಾವು ಹೀಗೆ ದೃಷ್ಟಾಂತಗಳನ್ನು ಸವಿವರ ತಿಳಿಸುತ್ತೇವೆ! {172-174}

(ಪೈಗಂಬರರೇ)! ನಮ್ಮ ದೃಷ್ಟಾಂತಗಳ ಅರಿವನ್ನು ನಾವು ನೀಡಿದ್ದ ಒಬ್ಬಾತನ ವಿಷಯವನ್ನು ಇವರಿಗೆ ಈಗ ಹೇಳಿಕೊಡಿ. ಆತನು ಅದರಿಂದ ನುಣುಚಿಕೊಂಡು ದೂರ ಸರಿದು ಹೋದಾಗ ಸೈತಾನನು ಆತನಿಗೆ ಬೆನ್ನು ಬಿದ್ದನು! ಕೊನೆಗೆ ಆತನು ದಾರಿ ತಪ್ಪಿದವರಲ್ಲಿ ಸೇರಿ ಹೋದನು. ನಾವು ಬಯಸಿದ್ದರೆ ಆತನನ್ನು ಅವುಗಳ ಮೂಲಕ ಉನ್ನತಿಗೇರಿಸ ಬಹುದಿತ್ತು. ಆದರೆ ಆತನು (ಅವುಗಳಿಂದ ನುಣುಚಿಕೊಂಡು) ಸ್ವತಃ ನೀಚನಾಗಿ ನೆಲಕಚ್ಚಿ ತನ್ನದೇ ಸ್ವೇಚ್ಛಾಚಾರಗಳ ಬೆಂಬತ್ತಿ ಹೋದನು. ಆತನ ಉಪಮೆಯು ಒಂದು ನಾಯಿಯಂತಾಯಿತು; ನೀವು ದೂರಕ್ಕಟ್ಟಿದಾಗಲೂ ನಾಲಿಗೆ ಹೊರಚಾಚುವ, ಸುಮ್ಮನೆ ಬಿಟ್ಟಾಗಲೂ ನಾಲಿಗೆ ಹೊರಚಾಚುವ ನಾಯಿಯಂತೆ! ಇದು ನಮ್ಮ ದೃಷ್ಟಾಂತಗಳನ್ನು ತಿರಸ್ಕರಿಸಿದ ಜನರ ಉಪಮೆಯಾಗಿದೆ! (ಪೈಗಂಬರರೇ,) ನೀವು ಇಂತಹ ವೃತ್ತಾಂತಗಳನ್ನು ಈ ಜನರಿಗೆ ವಿವರಿಸುತ್ತಲಿರಿ; ಇವರು ಸ್ವಲ್ಪ ಚಿಂತಿಸುವವರಾಗಲಿ. {175-176}

ಎಷ್ಟೊಂದು ಕೆಟ್ಟ ಉಪಮೆಯಾಗಿದೆ ಅವರದು, ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸಿದವರದು! ಅವರು ತಮಗೆ ತಾವೇ ದ್ರೋಹ ಮಾಡಿಕೊಂಡರು! ಹೌದು, ಯಾರಿಗೆ ಅಲ್ಲಾಹ್ ನು ದಾರಿ ತೋರಿದನೋ ಅವನು ಮಾತ್ರವೇ ಸನ್ಮಾರ್ಗ ಪಡೆದಿದ್ದಾನೆ. ಇನ್ನು ಯಾರನ್ನು ಅವನು ದಾರಿತಪ್ಪಿಸಿದನೋ ಅಂತಹವರು [ಅರ್ಥಾತ್ ದೃಷ್ಟಾಂತಗಳನ್ನು ನೋಡಿಯೂ ಅದನ್ನು ಧಿಕ್ಕರಿಸಿದವರು] ನಷ್ಟ ಹೊಂದಿದವರಾದರು. {177-178}

[ಆದ್ದರಿಂದ ಜನರೇ! ಎಚ್ಚೆತ್ತುಕೊಳ್ಳಿ!] ಜಿನ್ನ್ ಮತ್ತು ಮಾನವ ವರ್ಗಕ್ಕೆ ಸೇರಿದ ಹೆಚ್ಚಿನವರನ್ನು ನಾವು ನರಕಕ್ಕಾಗಿಯೇ ಸೃಷ್ಟಿ ಮಾಡಿದ್ದೇವೆ! ಅವರಿಗೆ ಹೃದಯಗಳಿವೆಯಾದರೂ ಅವರು ಅದರ ಮೂಲಕ ಅರ್ಥೈಸಿಕೊಳ್ಳುವುದಿಲ್ಲ; ಅವರಿಗೆ ಕಣ್ಣುಗಳಿವೆಯಾದರೂ ಅವರು ಅದರ ಮೂಲಕ ನೋಡುವುದಿಲ್ಲ; ಅವರಿಗೆ ಕಿವಿಗಳಿವೆಯಾದರೂ ಅವರು ಅದರ ಮೂಲಕ ಆಲೈಸುವುದಿಲ್ಲ! ಅಂತಹವರ ಉಪಮೆಯು ಜಾನುವಾರುಗಳಂತಿದೆ; ಅಲ್ಲ, ಅದಕ್ಕಿಂತಲೂ ಹೆಚ್ಚು ದಾರಿಗೆಟ್ಟವರು ಅವರು! ಅವರೇ ತಿಳಿಗೇಡಿಗಳು! {179}

[ವಿಶ್ವಾಸಿಗಳೇ, ನಿಮಗೆ ತಿಳಿದಿರಲಿ.] ಅಲ್ಲಾಹ್ ನಿಗಿರುವುದಾಗಿದೆ ಸುಂದರವಾದ ಒಳ್ಳೆಯ ಹಸರುಗಳು! ಅವುಗಳ ಮೂಲಕವೇ ನೀವು ಅವನನ್ನು ಕರೆದು ಪ್ರಾರ್ಥಿಸಿರಿ. ಅವನ ಹೆಸರನ್ನು ವಿಕೃತಗೊಳಿಸುವ ಜನರನ್ನು ನೀವು ಬಿಟ್ಟು ಬಿಡಿರಿ; ಅವರೆಸಗುವ ಕೃತ್ಯಕ್ಕೆ ತಕ್ಕ ಪ್ರತಿಫಲ ಅವರು ಪಡೆಯಲಿರುವರು. {180}

ನಾವು ಸೃಷ್ಟಿಸಿದ ಜನರಲ್ಲಿ [ಎಲ್ಲರೂ ದುಷ್ಟರಲ್ಲ, ಬದಲಾಗಿ] ಸತ್ಯವನ್ನು ಆಧರಿಸಿದ ಸರಿದಾರಿಯನ್ನು ಜನರಿಗೆ ತೋರಿಸಿಕೊಡುವ ಮತ್ತು ಅದರ ಪ್ರಕಾರವೇ ನ್ಯಾಯನೀತಿ ಪಾಲಿಸುವ ಒಂದು ವರ್ಗವು (ಯಾವತ್ತೂ) ಇದ್ದಿತ್ತು. ಇನ್ನು, ನಮ್ಮ ವಚನಗಳನ್ನು ನಿರಾಕರಿಸದವರನ್ನು ಮಾತ್ರ ನಾವು ಅವರಿಗೆ ಅರಿವೇ ಅಗದಂತೆ ಹಂತಹಂತವಾಗಿ (ವಿನಾಶದತ್ತ) ತಲುಪಿಸಿ ಬಿಡುತ್ತೇವೆ. ಹೌದು, ನಾನು ಅವರಿಗೆ ಕಾಲಾವಕಾಶ ನೀಡುತ್ತೇನೆ; ಖಂಡಿತವಾಗಿಯೂ ನನ್ನ ಏರ್ಪಾಡುಗಳು ಬಹಳ ಪ್ರಚಂಡವಾದುದು! {181-183}

ಅವರ ಒಡನಾಡಿಯು (ಅಂದರೆ ಈ ಪೈಗಂಬರರು) ಬುದ್ಧಿಭ್ರಮಣೆಯಾದ ವ್ಯಕ್ತಿಯಲ್ಲ ಎಂಬುದನ್ನು ಅವರು ಆಲೋಚಿಸುತ್ತಿಲ್ಲವೇಕೆ? ಅವರಾದರೋ (ಪರಲೋಕದ ಕುರಿತು) ಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುತ್ತಿರುವ ಒಬ್ಬ (ದೂತ) ಮಾತ್ರವಾಗಿದ್ದಾರೆ. {184}

[ಕಣ್ಣುಗಳಿದ್ದೂ ಕುರುಡರಾಗಿರುವ ಆ ಧಿಕ್ಕಾರಿಗಳು] ಭೂಮಿ ಆಕಾಶಗಳ ಸಾಮ್ರಾಜ್ಯದ ಆಧಿಪತ್ಯ ವ್ಯವಸ್ಥೆಯತ್ತ ದೃಷ್ಟಿ ಹಾಯಿಸುವುದಿಲ್ಲವೇ! ಅಲ್ಲಾಹ್ ನು ಸೃಷ್ಟಿಸಿರುವ ಯಾವ ಸೃಷ್ಟಿಯಲ್ಲೂ ಅವರು (ಅಲ್ಲಾಹ್ ನ ಮಹಿಮೆಯನ್ನು ಕಾಣುವುದಿಲ್ಲವೇ)? ಅವರಿಗೆ ನೀಡಲಾದ ಕಾಲಾವಕಾಶವು (ಮುಗಿದು ಮರಣದ ಸಮಯವು) ಸಮೀಪಿಸಿರಬಹುದು ಎಂಬುದರ ಬಗ್ಗೆ (ಅವರು ಚಿಂತಿಸುವುದಿಲ್ಲವೇ)? (ಸತ್ತ) ನಂತರ ಅವರು ಇನ್ನು ನಂಬುವುದಾದರೂ ಯಾವ ಮಾತಿನಲ್ಲಿ? {185}

ಯಾರನ್ನು ಅಲ್ಲಾಹ್ ನು ಸರಿದಾರಿಯಿಂದ ದೂರವಿರಿಸುವನೋ ಅಂತಹವರಿಗೆ ದಾರಿ ತೋರಲು ಯಾರೂ ಇರಲಾರರು. [ಉದ್ಧಟತನವನ್ನೇ ತಮ್ಮ ನಿಲುವಾಗಿಸಿಕೊಂಡ] ಅಂತಹವರನ್ನು ತಮ್ಮ ಉದ್ಧಟತನದಲ್ಲೇ ಕುರುಡಾಗಿ ಅಲೆಯುತ್ತಿರಲು ಅವನು ಬಿಟ್ಟುಬಿಡುವನು. {186}

(ಲೋಕಾಂತ್ಯಗೊಳ್ಳುವ) ಆ ಘಳಿಗೆಯ ಕುರಿತು, ಅದು ಸಂಭವಿಸುವುದಾದರೂ ಯಾವಾಗ ಎಂದು ಅವರು ನಿಮ್ಮೊಂದಿಗೆ ಕೇಳುತ್ತಿದ್ದಾರೆ. ಆ ವಿಷಯದ ಕುರಿತಾದ ಅರಿವು ಇರುವುದು ನನ್ನ ಕರ್ತಾರನ ಬಳಿ ಮಾತ್ರ ಎಂದು (ಪೈಗಂಬರರೇ) ನೀವು ಅವರಿಗೆ ಹೇಳಿಬಿಡಿ. ಅದರ ಸಮಯವನ್ನು ಬಹಿರಂಗ ಪಡಿಸಲು ಅಲ್ಲಾಹ್ ನಿಗಲ್ಲದೆ ಬೇರೆ ಯಾರಿಗೂ ಸಾಧ್ಯವಲ್ಲ. ಭೂಮಿ ಆಕಾಶಗಳಲ್ಲೆಲ್ಲ ಅದು ಅತ್ಯಂತ ದುರ್ಭರವಾದ ಒಂದು ಸಂಗತಿಯೇ ಸರಿ! ಅದು ನಿಮ್ಮ ಮೇಲೆ ಒಮ್ಮಿಂದೊಮ್ಮೆಲೇ ಬಂದೆರಗುವ ಹೊರತು ಅನ್ಯ ಮಾರ್ಗವಿಲ್ಲ! (ಓ ಪೈಗಂಬರರೇ), ಅದರ ಬಗ್ಗೆ ನಿಮಗೆ ಕೂಲಂಕುಷವಾದ ಜ್ಞಾನವಿದೆಯೋ ಎಂಬಂತೆ ಅವರು [ಅದರ ಸಮಯದ ಕುರಿತು] ನಿಮ್ಮೊಂದಿಗೆ ಕೇಳುತ್ತಿದ್ದಾರೆ! ಅದರ ಬಗೆಗಿನ ಸಂಪೂರ್ಣ ಪರಿಜ್ಞಾನವಿರುವುದು ಅಲ್ಲಾಹ್ ನ ಬಳಿ ಮಾತ್ರವೇ ಎಂದು ನೀವು ಅವರೊಂದಿಗೆ ಹೇಳಿರಿ. ಆದರೆ ಜನರಲ್ಲಿ ಹೆಚ್ಚಿನವರು [ಏನನ್ನು ಕೇಳಬೇಕು ಎಂದೂ] ತಿಳಿಯದವರಾಗಿದ್ದಾರೆ! {187}

ಅಲ್ಲಾಹ್ ನು ಇಚ್ಛಿಸಿದ ಹೊರತು ನಾನು ಸ್ವತಃ ನನ್ನ ಸ್ವಂತಕ್ಕೂ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಿಕೊಳ್ಳುವುದು ನನ್ನ ಅಧಿಕಾರದಲ್ಲಿ ಇಲ್ಲದ ವಿಷಯ. ನನಗೇನಾದರೂ ಅದೃಷ್ಯವಾದ ಅಭೌತಿಕ ರಹಸ್ಯಗಳ ಅರಿವು ಇರುತ್ತಿದ್ದರೆ ನಾನು ಭಾರೀ ಅನುಕೂಲತೆಗಳನ್ನು ನನಗಾಗಿ ಸಂಗ್ರಹಿಸಿಡುತ್ತಿದ್ದೆ; ಮಾತ್ರವಲ್ಲ ಅನಿಷ್ಟವು ನನ್ನನ್ನು ಸ್ವಲ್ಪವೂ ಸ್ಪರ್ಷಿಸುತ್ತಿರಲಿಲ್ಲ. ನಾನಾದರೋ ಒಬ್ಬ ಮುನ್ನೆಚ್ಚರಿಕೆ ನೀಡುವ (ದೂತ) ಮಾತ್ರವೇ ಆಗಿರುವೆನು; ಹಾಗೆಯೇ ವಿಶ್ವಾಸಿ ಜನರ ಪಾಲಿಗೆ ಸಿಹಿಸುದ್ದಿ ನೀಡುವವನೂ ಹೌದು ಎಂದು (ಪೈಗಂಬರರೇ, ನೀವು ನಿಮ್ಮ ಯಾಥಾರ್ಥ್ಯವನ್ನು) ಅವರಿಗೆ ತಿಳಿಸಿಬಿಡಿ. {188}

ನಿಮ್ಮನ್ನು [ಅರ್ಥಾತ್ ಮಾನವ ಕುಲವನ್ನು] ಕೇವಲ ಒಂದು ಜೀವಾತ್ಮದಿಂದ ಸೃಷ್ಟಿಸಿದವನು ಆ ಅಲ್ಲಾಹ್ ನೇ! ನಂತರ ಅವನು ಅದರ ವರ್ಗದಿಂದಲೇ ಅದಕ್ಕೊಂದು ಸಂಗಾತಿಯನ್ನು ಉಂಟು ಮಾಡಿರುವುದು (ಪುರುಷನು) ಆಕೆಯಲ್ಲಿ ನೆಮ್ಮದಿ, ಪ್ರಶಾಂತತೆಯನ್ನು ಪಡೆದುಕೊಳ್ಳುವ ಸಲುವಾಗಿ! ಮುಂದೆ ಆತನು ಆಕೆಯನ್ನು ಸಮೀಪಿಸಿ ಆವರಿಸಿದಾಗ ಅವಳು ಲಘುವಾದ ಗರ್ಭವನ್ನು ಹೊತ್ತುಕೊಂಡಳು; ಅದನ್ನು ಹೊತ್ತೇ ನಡೆದಾಡಿದಳು! ನಂತರ ಆಕೆಯ ಭಾರ ಅಧಿಕವಾದಾಗ ಅವರೀರ್ವರೂ ತಮ್ಮ ಪ್ರಭುವಾದ ಅಲ್ಲಾಹ್ ನನ್ನು ಕರೆದು, ನೀನು ನಮಗೊಂದು ಆರೋಗ್ಯಕರ ಸಂತಾನ ದಯಪಾಲಿಸಿದರೆ ಖಂಡಿತವಾಗಿಯೂ ನಾವು ನಿನಗೆ ಕೃತಜ್ಞರಾಗಿ ಬದುಕುವೆವು ಎಂದು ಪ್ರಾರ್ಥಿಸಿಕೊಂಡರು. {189}

ಆದರೆ, [ಬಹಳ ಬಾರಿ ಏನಾಗುತ್ತದೆಂದರೆ] ಅಲ್ಲಾಹ್ ನು ಅವರಿಗೆ ಸುಸ್ವಸ್ಥ ಸಂತಾನವನ್ನು ದಯಪಾಲಿಸಿದಾಗ ಅವರೀರ್ವರು ಅವನು ದಯಪಾಲಿಸಿದುದರಲ್ಲಿ ಇತರ (ದೇವರುಗಳೂ) ಅವನೊಂದಿಗೆ ಭಾಗಿಯಾಗಿರುವರು ಎಂದು ಆಪಾದಿಸುತ್ತಾರೆ! ಅವರು ತೊಡಗಿರುವ ಶಿರ್ಕ್ ಗಿಂತ [ಅರ್ಥಾತ್ ಅಲ್ಲಾಹ್ ನ ದೇವತ್ವದಲ್ಲಿ ಇತರೂ ಭಾಗಿಗಳು ಎಂಬ ಕೀಳು ಕಲ್ಪನೆಗಿಂತ] ಅಲ್ಲಾಹ್ ನು ಅದೆಷ್ಟು ಮಹೋನ್ನತನು! ಏನನ್ನೂ ಸೃಷ್ಟಿಸಿರದ, ಬದಲಾಗಿ (ಅಲ್ಲಾಹ್ ನಿಂದಲೇ) ಸೃಷ್ಟಿಸಲ್ಪಟ್ಟವರನ್ನು ಅವರು ಅಲ್ಲಾಹ್ ನಿಗೆ ಸಹಭಾಗಿಗಳಾಗಿ ಮಾಡಿಕೊಳ್ಳುವುದೇ? [ಎಂತಹ ವಿಪರ್ಯಾಸ]! ಅವರಿಗೆ ಯಾವ ಸಹಾಯವನ್ನೂ ಮಾಡಲು ಅವುಗಳಿಗೆ ಸಾಧ್ಯವಿಲ್ಲ; ಮಾತ್ರವಲ್ಲ, ಸ್ವತಃ ತಮಗೇ ಸಹಾಯ ಮಾಡಿಕೊಳ್ಳಲೂ ಅವು ಸಾಮರ್ಥ್ಯ ಹೊಂದಿಲ್ಲ! {190-192}

ಇನ್ನು ನೀವು ಅಂತಹವರನ್ನು ಸರಿದಾರಿಯೆಡೆಗೆ ಆಹ್ವಾನಿಸಿದರೆ ಅವರು ನಿಮ್ಮ ಮಾತನ್ನು ಅನುಸರಿಸುವವರೂ ಅಲ್ಲ. ಅವರನ್ನು ನೀವು ಹಾಗೆ ಆಹ್ವಾನಿಸಿದರೂ ಆಹ್ವಾನಿಸದೆ ಮೌನವಹಿಸಿದರೂ ನಿಮ್ಮ ಪಾಲಿಗೆ ಅದರ ಪರಿಣಾಮ ಮಾತ್ರ ಒಂದೇ! {193}

ಅಲ್ಲಾಹ್ ನನ್ನು ಬಿಟ್ಟು ನೀವು ಬೇರೆ ಯಾರಿಗೆಲ್ಲ ಮೊರೆಯಿಡುತ್ತಿರುವಿರೋ ಅವರೆಲ್ಲ ನಿಮ್ಮಂತೆಯೇ ಇರುವ ಸೃಷ್ಟಿಗಳು ಮಾತ್ರ! ನಿಮ್ಮ ಗ್ರಹಿಕೆಯಲ್ಲಿ ಸತ್ಯಾಂಶ ಇದೆಯೆಂದಾದರೆ ನೀವು ಒಮ್ಮೆ ಅವರೊಂದಿಗೆ ಪ್ರಾರ್ಥಿಸಿ ನೋಡಿ; ಮತ್ತು ಅವರು ನಿಮಗೆ ಉತ್ತರಿಸಲಿ! [ಸ್ವಲ್ಪ ಚಿಂತಿಸಿ ನೋಡಿ], ಅವುಗಳಿಗಿರುವ ಕಾಲುಗಳ ಮೂಲಕ ನಡೆದಾಡಲು ಅವುಗಳಿಗೆ ಸಾಧ್ಯವೇ? ಅವುಗಳ ಕೈಗಳನ್ನು ಬಳಸಿ ಹಿಡಿದುಕೊಳ್ಳಲು ಅವುಗಳಿಗೆ ಸಾಧ್ಯವೇ? ಅವುಗಳ ಆ ಕಣ್ಣುಗಳಿಂದ ನೋಡಲು ಅವುಗಳಿಗೆ ಸಾಧ್ಯವೇ? ಅವುಗಳ ಕಿವಿಗಳ ಮೂಲಕ ಕೇಳಿಸಿಕೊಳ್ಳಲು ಅವುಗಳಿಗೆ ಸಾಧ್ಯವೇ?! (ಅಲ್ಲಾಹ್ ನ ದೇವತ್ವದಲ್ಲಿ) ನೀವು ಭಾಗಿಯಾಗಿಸಿಕೊಂಡ ಅವುಗಳನ್ನು ಕರೆಯಿರಿ ಮತ್ತು ನನ್ನ ವಿರುದ್ಧ ಕಾರ್ಯಾಚರಣೆ ನಡೆಸಿರಿ; ನನಗೆ ಕಿಂಚಿತ್ತೂ ಕಾಲಾವಕಾಶ ಕೊಡದಿರಿ ಎಂದು (ಪೈಗಂಬರರೇ ನೀವು) ಅವರಿಗೆ ಪಂಥಾಹ್ವಾನ ನೀಡಿರಿ. {194-195}

ಈ ಗ್ರಂಥವನ್ನು ಇಳಿಸಿದ ಆ ಅಲ್ಲಾಹ್ ನೇ ಖಂಡಿತವಾಗಿಯೂ ನನ್ನ ಸಂರಕ್ಷಕನು. ಅವನೇ ಸಜ್ಜನರಿಗೆ ಸಂರಕ್ಷಣೆ ನೀಡುವವನು. {196}

ಅಲ್ಲಾಹ್ ನನ್ನು ಬಿಟ್ಟು ಸಹಾಯಕ್ಕಾಗಿ ನೀವು ಯಾರಿಗೆಲ್ಲ ಮೊರೆಯಿಡುವಿರೋ ಅವರು ನಿಮಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ; ಸ್ವತಃ ತಮಗೇ ಸಹಾಯ ಮಾಡಿಕೊಳ್ಳಲೂ ಅವರಿಗೆ ಸಾಧ್ಯವಿಲ್ಲ. {197}

[ಅಲ್ಲಾಹ್ ನನ್ನು ಬಿಟ್ಟು ಇತರರೊಂದಿಗೆ ಸಹಾಯ ಯಾಚಿಸುವ] ಅವರನ್ನು ಸರಿದಾರಿಯೆಡೆಗೆ ನೀವು ಕರೆದರೆ ಅವರು ಅದಕ್ಕೆ ಕಿವಿಗೊಡುವುದಿಲ್ಲ! ಅವರು ನಿಮ್ಮನ್ನು ಗಮನಿಸುತ್ತಿರುವಂತೆ ನಿಮಗೆ ಭಾಸವಾಗುತ್ತದೆ. ಆದರೆ ಯಥಾರ್ಥದಲ್ಲಿ (ಪೈಗಂಬರರೇ) ಅವರು ನಿಮ್ಮನ್ನು ಲಕ್ಷಿಸುವುದಿಲ್ಲ! {198}

(ಓ ಪೈಗಂಬರರೇ, ಏನಿದ್ದರೂ) ನೀವು ಕ್ಷಮಾಶೀಲತೆಯ ವಿಧಾನವನ್ನೇ ಸ್ವೀಕರಿಸಿರಿ ಮತ್ತು ಸಾರ್ವತ್ರಿಕ ಒಳಿತನ್ನು ಜನರಿಗೆ ಬೋಧಿಸುತ್ತಲಿರಿ. ಆದರೆ ಅವಿವೇಕಿಗಳಿಂದ ಮಾತ್ರ ದೂರವಾಗಿಯೇ ಇರಿ! {199}

ಇನ್ನು ಸೈತಾನನ ಕಡೆಯಿಂದ ನಿಮಗೇನಾದರೂ ಕೆಟ್ಟ ಪ್ರಚೋದನೆಯುಂಟಾದರೆ ನೀವು ಕೂಡಲೇ ಅಲ್ಲಾಹ್ ನ ಮೊರೆ ಹೋಗಿರಿ. ಅವನು ಖಂಡಿತಾ ಎಲ್ಲವನ್ನೂ ಕೇಳುವವನೂ ಪರಿಸ್ಥಿತಿಯನ್ನು ತಿಳಿಯುವವನೂ ಆಗಿರುತ್ತಾನೆ. ವಾಸ್ತವದಲ್ಲಿ ಆತ್ಮಸಂಯಮ ಸಾಧಿಸಿಕೊಂಡವರಿಗೆ ಸೈತಾನನ ಕಡೆಯಿಂದ ಪ್ರಲೋಭನೆಯುಂಟಾದಾಗ ಅವರು (ತಮಗೆ ನೀಡಲಾದ) ಬೋಧನೆಗಳನ್ನು ಜ್ಞಾಪಿಸಿಕೊಳ್ಳುತ್ತಾರೆ ಹಾಗೂ (ನಿಜಸ್ಥಿತಿಯನ್ನು) ಅವರು ಸ್ಪಷ್ಟತೆಯೊಂದಿಗೆ ಕಂಡುಕೊಳ್ಳುತ್ತಾರೆ! {200-201}

ಇನ್ನು ಸೈತಾನರ ಸಹೋದರರ [ಅರ್ಥಾತ್ ಆ ಅವಿವೇಕಿಗಳ] ವಿಷಯ! ಅಂತಹವರನ್ನು ಆ ಸೈತಾನರು ಕೆಡುಕಿನ ಹಾದಿಯಲ್ಲಿ ದೂರ ಎಳೆದೊಯ್ಯುತ್ತಾರೆ; ಅದರಲ್ಲಿ ಯಾವ ಲೋಪವನ್ನೂ ಅವರು ಮಾಡುವುದಿಲ್ಲ. {202}

[ಆ ಅವಿವೇಕಿಗಳ ಬೇಡಿಕೆಗೆ ತಕ್ಕಂತೆ] ನೀವು ಅವರ ಮುಂದೆ ಯಾವುದೇ ಪವಾಡ, ದೃಷ್ಟಾಂತಗಳನ್ನು ತಂದಿಡದಿದ್ದಾಗ, ಅದನ್ನು ನೀವೇ ಸ್ವತಃ ಉಂಟುಮಾಡಿ ತರುವುದಿಲ್ಲವೇಕೆ ಎಂದು [ನಿಮ್ಮನ್ನು ಅಣಕಿಸಲು] ಅವರು ಕೇಳುತ್ತಾರೆ. (ಓ ಪೈಗಂಬರರೇ), ಏನನ್ನು ನನ್ನ ಕರ್ತಾರನು ನನಗೆ ದಿವ್ಯಾದೇಶಗಳ ಮೂಲಕ ತಿಳಿಸುತ್ತಾನೋ ನಾನು ಕೇವಲ ಅದನ್ನು ಮಾತ್ರ ಅನುಸರಿಸುವವನಾಗಿದ್ದೇನೆ; ಇದಾದರೋ [ಅರ್ಥಾತ್ ನಿಮ್ಮ ಮುಂದೆ ಈಗ ಓದಿ ಕೇಳಿಸಲಾಗುವ ಈ ಕುರ್‌ಆನ್] ನಿಮ್ಮ ಕರ್ತನ ಕಡೆಯಿಂದ ಬಂದಿರುವ ಕಣ್ಣು ತೆರೆಸುವ ಸಾಧವಾಗಿದೆ; ಮತ್ತು ಇದರಲ್ಲಿ ನಂಬಿಕೆ ಇರಿಸುವವರಿಗೆ ಇದೊಂದು ಮಾರ್ಗದರ್ಶನವೂ ಅನುಗ್ರಹವೂ ಆಗಿದೆ! ಆದ್ದರಿಂದ, ನೀವು (ಅಲ್ಲಾಹ್ ನ) ಕೃಪೆಗೆ ಪಾತ್ರರಾಗಲು ಕುರ್‌ಆನ್ ಓದಲ್ಪಡುವಾಗ ಅದನ್ನು ಗಮನವಿಟ್ಟು ಕೇಳಿರಿ ಮತ್ತು ಸಂಪೂರ್ಣ ನಿಶ್ಶಬ್ಧತೆ ಪಾಲಿಸಿ ಆಲಿಸುವವರಾಗಿರಿ ಎಂದು ನೀವು ಅವರೊಡನೆ ಹೇಳಿರಿ. {203-204}

ವಿನಮ್ರತೆಯೊಂದಿಗೂ ಭಯಭಕ್ತಿಯೊಂದಿಗೂ ನೀವು ನಿಮ್ಮ ಕರ್ತಾರನನ್ನು ಮನದಲ್ಲೇ ಸ್ಮರಿಸುತ್ತಲಿರಿ; ಸ್ವರ ಏರಿಸದೆ ಮೆಲುದನಿಯಲ್ಲೂ ಸ್ಮರಿಸಿರಿ; ಮುಂಜಾನೆ ಮುಸ್ಸಂಜೆಗಳಲ್ಲೂ ಸ್ಮರಿಸಿರಿ. ಎಂದಿಗೂ ನೀವು (ಆ ವಿಷಯದಲ್ಲಿ) ಅಶ್ರದ್ಧೆ ತೋರದಿರಿ. ಹೌದು, ನಿಮ್ಮ ಕರ್ತನ ಸಾಮೀಪ್ಯ ಪಡೆದಂತಹವರು ಸೊಕ್ಕು ತೋರಿ ಅವನ ಆರಾಧನೆಯಿಂದ ದೂರ ಉಳಿಯುವುದಿಲ್ಲ. ಬದಲಾಗಿ ಅವನನ್ನು ಸ್ತಿತಿಸುತ್ತಲಿರುವವರೂ ಅವನಿಗೆ ಸಾಷ್ಟಾಂಗ ಎರಗುವವರೂ ಆಗಿರುತ್ತಾರೆ. {205-206} ۩
------------------------ 


ಅನುವಾದಿತ ಸೂರಃ ಗಳು:

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...