ಅಲ್ ಕಹ್‌ಫ್ | تـرجمـة سورة الكهف

    تـرجمـة سورة الكهف من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅಲ್ ಕಹ್‌ಫ್ | ಪವಿತ್ರ ಕುರ್‌ಆನ್ ನ 18 ನೆಯ ಸೂರಃ | ಇದರಲ್ಲಿ ಒಟ್ಟು 110 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)! 

ٱلْحَمْدُ لِلَّهِ ٱلَّذِىٓ أَنزَلَ عَلَىٰ عَبْدِهِ ٱلْكِتَـٰبَ وَلَمْ يَجْعَل لَّهُۥ عِوَجَاۜ

ತನ್ನ ಉಪಾಸಕನಾದ (ಮುಹಮ್ಮದ್ ಪೈಗಂಬರರಿಗೆ ಈ ಕುರ್‌ಆನ್) ಗ್ರಂಥವನ್ನು ಇಳಿಸಿಕೊಟ್ಟ, ಮತ್ತು ಅದನ್ನು ಮಣಿತಕ್ಕೆ ಒಳಗಾಗದಂತೆ ಮಾಡಿದ ಆ ಅಲ್ಲಾಹ್ ನಿಗೆ ಸಕಲ ಸ್ತುತಿ ಸ್ತೋತ್ರಗಳು! {1}

قَيِّمًۭا لِّيُنذِرَ بَأْسًۭا شَدِيدًۭا مِّن لَّدُنْهُ وَيُبَشِّرَ ٱلْمُؤْمِنِينَ ٱلَّذِينَ يَعْمَلُونَ ٱلصَّـٰلِحَـٰتِ أَنَّ لَهُمْ أَجْرًا حَسَنًۭا

ಋಜುವಾದ ಗ್ರಂಥ! ಧಿಕ್ಕರಿಸಿದವರಿಗೆ ಅಲ್ಲಾಹ್ ನ ಕಡೆಯಿಂದಿರುವ ಕಠಿಣ ಶಿಕ್ಷೆಯ ಕುರಿತು ಎಚ್ಚರಿಕೆ ಹಾಗೂ ಸತ್ಕರ್ಮ ನಿರತ ವಿಶ್ವಾಸಿಗಳಿಗೆ ಅತ್ಯುತ್ತಮ ಪ್ರತಿಫಲವಾದ (ಸ್ವರ್ಗೋದ್ಯಾನಗಳ) ಕುರಿತು ಶುಭಸುದ್ದಿ ನೀಡುವ ಸಲುವಾಗಿ ಬಂದ ಗ್ರಂಥ! {2}

مَّـٰكِثِينَ فِيهِ أَبَدًۭا

ಸತ್ಕರ್ಮ ನಿರತ ವಿಶ್ವಾಸಿಗಳು (ಅಂತಹ ಸ್ವರ್ಗೋದ್ಯಾನಗಳಲ್ಲಿ) ಸದಾ ಕಾಲ ನೆಲೆಸಲಿರುವರು. {3}

وَيُنذِرَ ٱلَّذِينَ قَالُوا۟ ٱتَّخَذَ ٱللَّهُ وَلَدًۭا

ಅಲ್ಲಾಹ್ ನು ತನಗೊಬ್ಬ ಪುತ್ರನನ್ನು ಪಡೆದಿರುವನು ಎಂದು ಹೇಳುತ್ತಿರುವ ಜನರಿಗೂ (ಕಠಿಣ ಶಿಕ್ಷೆಯ ಕುರಿತು) ಎಚ್ಚರಿಕೆ ನೀಡುವ ಸಲುವಾಗಿ ಬಂದ ಗ್ರಂಥ! {4}

مَّا لَهُم بِهِۦ مِنْ عِلْمٍۢ وَلَا لِـَٔابَآئِهِمْ ۚ كَبُرَتْ كَلِمَةًۭ تَخْرُجُ مِنْ أَفْوَٰهِهِمْ ۚ إِن يَقُولُونَ إِلَّا كَذِبًۭا

ಅವರಿಗಾಗಲಿ ಅವರ ತಂದೆ ತಾತಂದಿರಿಗಾಗಲಿ ಆ ವಿಷಯದಲ್ಲಿ ಯಾವುದೇ ಜ್ಞಾನವಿಲ್ಲ. ಅವರ ಬಾಯಿಯಿಂದ ಹೊರಡುವ ಅಂತಹ ಮಾತು ಅತಿ ಘೋರವಾದುದು. ಅವರು ಹೇಳುತ್ತಿರುವುದು ಸುಳ್ಳಲ್ಲದೆ ಬೇರೇನೂ ಅಲ್ಲ. {5}

فَلَعَلَّكَ بَـٰخِعٌۭ نَّفْسَكَ عَلَىٰٓ ءَاثَـٰرِهِمْ إِن لَّمْ يُؤْمِنُوا۟ بِهَـٰذَا ٱلْحَدِيثِ أَسَفًا

ಪೈಗಂಬರರೇ, ಈ ಗ್ರಂಥದ ಮಾತನ್ನು ಅವರು ನಂಬುತ್ತಿಲ್ಲ ಎಂಬ ಕಾರಣಕ್ಕಾಗಿ ಅವರ ಹಿಂದಿನಿಂದ, ಅವರಿಗಾಗಿ ಅತಿಯಾಗಿ ದುಃಖಿಸುತ್ತಾ, ಪ್ರಾಯಶಃ ನಿಮ್ಮ ಜೀವಕ್ಕೆ ನೀವೇ ಹಾನಿ ಮಾಡುತ್ತಿರುವಿರಾ? {6}

إِنَّا جَعَلْنَا مَا عَلَى ٱلْأَرْضِ زِينَةًۭ لَّهَا لِنَبْلُوَهُمْ أَيُّهُمْ أَحْسَنُ عَمَلًۭا

ವಾಸ್ತವದಲ್ಲಿ ಭೂಮಿಯ ಮೇಲಿರುವ ಸಕಲ ವಸ್ತುಗಳನ್ನು ನಾವು ಸೃಷ್ಟಿಸಿರುವುದು ಭೂಮಿಯ ಅಲಂಕಾರಕ್ಕಾಗಿ. ಜನರಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವವರು ಯಾರೆಂದು ಆ ಮೂಲಕ ಪರೀಕ್ಷಿಸಲಿಕ್ಕಾಗಿ. {7}

وَإِنَّا لَجَـٰعِلُونَ مَا عَلَيْهَا صَعِيدًۭا جُرُزًا

[ಆದರೆ ಜನರು ಅದರಲ್ಲಿಯೇ ಮೈಮರೆತಿದ್ದಾರೆ! ವಾಸ್ತವದಲ್ಲಿ] ನಾವು ಭೂಮಿಯ ಮೇಲಿರುವ ಎಲ್ಲವನ್ನೂ (ಮುಂದೊಂದು ದಿನ ನಾಶ ಪಡಿಸಿ) ಅದನ್ನೊಂದು ಸಮತಟ್ಟಾದ ಮೈದಾನವಾಗಿ ಮಾರ್ಪಡಿಸಲಿದ್ದೇವೆ! {8}

أَمْ حَسِبْتَ أَنَّ أَصْحَـٰبَ ٱلْكَهْفِ وَٱلرَّقِيمِ كَانُوا۟ مِنْ ءَايَـٰتِنَا عَجَبًا

ಕಹ್‌ಫ್ ನವರು, ಅಂದರೆ ರಕೀಮ್ ನವರು [ಅರ್ಥಾತ್ ರಕೀಮ್ ನವರೆಂದು ಅರಬರಲ್ಲಿ ಪ್ರಸಿದ್ಧಿ ಪಡೆದಿದ್ದ ಮತ್ತು ಗುಹೆಯಲ್ಲಿ ಆಶ್ರಯ ಪಡೆದಿದ್ದ ಅ ಕೆಲವು ಕ್ರೈಸ್ತ ಯುವಕರು] ನಮ್ಮ ಅದ್ಭುತವಾದ ದೃಷ್ಟಾಂತಗಳ ಸಾಲಿಗೆ ಸೇರಿದವರಾಗಿದ್ದರು ಎಂದು ನೀವೂ ಭಾವಿಸುತ್ತಿರುವಿರಾ? {9}

إِذْ أَوَى ٱلْفِتْيَةُ إِلَى ٱلْكَهْفِ فَقَالُوا۟ رَبَّنَآ ءَاتِنَا مِن لَّدُنكَ رَحْمَةًۭ وَهَيِّئْ لَنَا مِنْ أَمْرِنَا رَشَدًۭا

ಗುಹೆಯಲ್ಲಿ ಆ ಕೆಲವು ಯುವಕರು ಆಶ್ರಯ ಪಡೆಯುವಾಗ, ಓ ನಮ್ಮ ಒಡೆಯಾ, ನಿನ್ನ ವತಿಯಿಂದ ವಿಶೇಷ ಕಾರುಣ್ಯವನ್ನು ನಮಗೆ ದಯಪಾಲಿಸು ಮತ್ತು ನಮಗೆ ಎದುರಾಗಿರುವ ಈ ಸನ್ನಿವೇಶದಲ್ಲಿ ನಮ್ಮನ್ನು ಋಜುವಾದ ಮಾರ್ಗದಲ್ಲಿರಿಸು ಎಂದು ಪ್ರಾರ್ಥಿಸಿದರು. {10}

فَضَرَبْنَا عَلَىٰٓ ءَاذَانِهِمْ فِى ٱلْكَهْفِ سِنِينَ عَدَدًۭا

ಅದಕ್ಕುತ್ತರವಾಗಿ ನಾವವರ ಕಿವಿ ತಟ್ಟಿ ಅವರನ್ನು ಆ ಗುಹೆಯಲ್ಲಿ ಹಲವು ವರುಷಗಳ ಕಾಲ ನಿದ್ದೆಗೆ ಜಾರಿಸಿದೆವು. {11}

ثُمَّ بَعَثْنَـٰهُمْ لِنَعْلَمَ أَىُّ ٱلْحِزْبَيْنِ أَحْصَىٰ لِمَا لَبِثُوٓا۟ أَمَدًۭا

ತಾವು ನಿದ್ದೆಯಲ್ಲಿ ಕಳೆದ ಕಾಲಾವಧಿಯನ್ನು ಅವರ ಎರಡು ಗುಂಪುಗಳಲ್ಲಿ ಯಾವ ಗುಂಪು ಸರಿಯಾಗಿ ಅಂದಾಜು ಮಾಡುತ್ತದೆ ಎಂಬುದನ್ನು ತಿಳಿಯಲು ಮುಂದೆ ಅವರನ್ನು ನಾವು ನಿದ್ದೆಯಿಂದ ಎಬ್ಬಿಸಿ ನಿಲ್ಲಿಸಿದೆವು. {12}

نَّحْنُ نَقُصُّ عَلَيْكَ نَبَأَهُم بِٱلْحَقِّ ۚ إِنَّهُمْ فِتْيَةٌ ءَامَنُوا۟ بِرَبِّهِمْ وَزِدْنَـٰهُمْ هُدًۭى

ಪೈಗಂಬಬರೇ! ಅವರ ಕುರಿತಂತೆ ನಿಜವಾದ ಸಮಾಚಾರವನ್ನು ನಾವು ನಿಮಗೆ ವಿವರಿಸುತ್ತಿದ್ದೇವೆ. ವಾಸ್ತವದಲ್ಲಿ ಅವರು ತಮ್ಮ ಕರ್ತಾರನ ಮೇಲೆ ದೃಢ ವಿಶ್ವಾಸವಿಟ್ಟ ಕೆಲವು ಯುವಕರಾಗಿದ್ದರು; ಸತ್ಪಥದಲ್ಲೇ ಸಾಗಿದ್ದ ಅವರಿಗೆ ನಾವು ಹೆಚ್ಚಿನ ಮಾರ್ಗದರ್ಶನ ನೀಡಿದೆವು. {13}

وَرَبَطْنَا عَلَىٰ قُلُوبِهِمْ إِذْ قَامُوا۟ فَقَالُوا۟ رَبُّنَا رَبُّ ٱلسَّمَـٰوَٰتِ وَٱلْأَرْضِ لَن نَّدْعُوَا۟ مِن دُونِهِۦٓ إِلَـٰهًۭا ۖ لَّقَدْ قُلْنَآ إِذًۭا شَطَطًا

ಕೊನೆಗೆ ಅವರು ಎದ್ದು ನಿಂತು, ಭೂಮಿ ಆಕಾಶಗಳ ಪರಿಪಾಲಕನಾದ (ಆ ಅಲ್ಲಾಹ್ ನೇ) ನಮ್ಮ ದೇವನು; ಅವನ ಹೊರತು ಬೇರೆ ಯಾರನ್ನೂ ನಾವು ದೇವನೆಂದು ಕರೆಯಲಾರೆವು, ಅನ್ಯಥಾ ನಾವು ಸತ್ಯಕ್ಕೆ ದೂರವಾದ ಮಾತನ್ನು ಹೇಳಿದಂತಾಗುವುದು ಎಂದು ಅವರು ಘೋಷಿಸಿದಾಗ ನಾವು ಅವರ ಹೃದಯಗಳನ್ನು ಬಲಪಡಿಸಿದ್ದೆವು. {14}

هَـٰٓؤُلَآءِ قَوْمُنَا ٱتَّخَذُوا۟ مِن دُونِهِۦٓ ءَالِهَةًۭ ۖ لَّوْلَا يَأْتُونَ عَلَيْهِم بِسُلْطَـٰنٍۭ بَيِّنٍۢ ۖ فَمَنْ أَظْلَمُ مِمَّنِ ٱفْتَرَىٰ عَلَى ٱللَّهِ كَذِبًۭا

ನಮ್ಮ ಜನಾಂಗಕ್ಕೆ ಸೇರಿದ ಈ ಜನರು ಅವನ ಹೊರತು ಇತರರನ್ನು ದೇವರುಗಳನ್ನಾಗಿ ಮಾಡಿ ಕೊಂಡಿರುವರು. ಅವರು ದೇವರುಗಳಾದ ಬಗ್ಗೆ ಈ ಜನರು ಒಂದು ಬಲಿಷ್ಟ ಪುರಾವೆನ್ನಾದರೂ ಏಕೆ ತರುತ್ತಿಲ್ಲ? ಅಲ್ಲಾಹ್ ನ ಮೇಲೆ ಸುಳ್ಳುಗಳನ್ನು ಆರೋಪಿಸುವ ಜನರಿಗಿಂತ ದೊಡ್ಡ ಅಪರಾಧಿಗಳು ಯಾರಾದರೂ ಇದ್ದಾರೆಯೇ?! (ಎಂದು ಆ ಯುವಕರು ತಮ್ಮೊಳಗೇ ಹೇಳಿಕೊಂಡರು). {15}

وَإِذِ ٱعْتَزَلْتُمُوهُمْ وَمَا يَعْبُدُونَ إِلَّا ٱللَّهَ فَأْوُۥٓا۟ إِلَى ٱلْكَهْفِ يَنشُرْ لَكُمْ رَبُّكُم مِّن رَّحْمَتِهِۦ وَيُهَيِّئْ لَكُم مِّنْ أَمْرِكُم مِّرْفَقًۭا

ಇದೀಗ ನೀವು (ಮುಶ್ರಿಕ್ ಗಳಾದ) ಆ ಜನರನ್ನೂ, ಮತ್ತು ಅಲ್ಲಾಹ್ ನನ್ನು ಬಿಟ್ಟು ಅವರು ಆರಾಧಿಸುತ್ತಿದ್ದ ಅವರ ಎಲ್ಲ (ಹುಸಿ) ದೇವರುಗಳನ್ನೂ ತ್ಯಜಿಸಿ ಅವರಿಂದ ದೂರವಾಗಿರುವಾಗ, [ನಿಮಗಾಗಿ ಹುಡುಕಾಡುತ್ತಿರುವ ಆ ಜನರಿಂದ] ರಕ್ಷಣೆ ಪಡೆಯಲು ಈ ಗುಹೆಯನ್ನು ಪ್ರವೇಶಿಸಿರಿ. ನಿಮ್ಮ ಕರ್ತಾರನು ತನ್ನ ಕೃಪೆಯನ್ನು ನಿಮ್ಮತ್ತ ವಿಸ್ತರಿಸುವನು ಹಾಗೂ ನಿಮಗೆ ಎದುರಾಗಿರುವ ಈ ಸನ್ನಿವೇಶದಲ್ಲಿ ನಿಮಗೆ ಅನುಕೂಲವಾಗುವಂತೆ ಅವನು ಮಾಡುವನು. {16}

وَتَرَى ٱلشَّمْسَ إِذَا طَلَعَت تَّزَٰوَرُ عَن كَهْفِهِمْ ذَاتَ ٱلْيَمِينِ وَإِذَا غَرَبَت تَّقْرِضُهُمْ ذَاتَ ٱلشِّمَالِ وَهُمْ فِى فَجْوَةٍۢ مِّنْهُ ۚ ذَٰلِكَ مِنْ ءَايَـٰتِ ٱللَّهِ ۗ مَن يَهْدِ ٱللَّهُ فَهُوَ ٱلْمُهْتَدِ ۖ وَمَن يُضْلِلْ فَلَن تَجِدَ لَهُۥ وَلِيًّۭا مُّرْشِدًۭا

ಮತ್ತು ಸೂರ್ಯನು ಉದಯಿಸಿದಾಗ ಅದು ಅವರ ಗುಹೆಯಿಂದ ಓರೆಯಾಗುತ್ತಾ ಬಲಕ್ಕೆ ಸಾಗುವುದನ್ನೂ, ಅಸ್ತಮಿಸುವಾಗ ಎಡಕ್ಕೆ ಇಳಿಮುಖವಾಗುವುದನ್ನೂ ನೀವು (ಅಲ್ಲಿರುತ್ತಿದ್ದರೆ) ನೋಡಿರುತ್ತಿದ್ದಿರಿ. ಆಗೆಲ್ಲಾ ಅವರು ಆ ಗುಹೆಯ ವಿಶಾಲ ಭಾಗದಲ್ಲಿ (ನಿದ್ರಾವಸ್ಥೆಯಲ್ಲಿ) ಇರುತ್ತಿದ್ದರು. ಅವೆಲ್ಲ ಅಲ್ಲಾಹ್ ನ ದೃಷ್ಟಾಂತಗಳಿಗೆ ಸೇರಿದ ವಿಷಯ! ಅಲ್ಲಾಹ್ ನು ಯಾರಿಗಾದರೂ ಮಾರ್ಗದರ್ಶನ ಮಾಡಿದರೆ ಅವನು ಸರಿದಾರಿಯಲ್ಲಿರುತ್ತಾನೆ. ಇನ್ನು ಅವನು ಯಾರನ್ನಾದರೂ ದಾರಿ ತಪ್ಪಿಸಿದರೆ ಅಂತಹವನಿಗೆ [ಅರ್ಥಾತ್ ಸರಿದಾರಿಯನ್ನು ನಿರಂತರ ಕಡೆಗಣಿಸಿ ಮಾರ್ಗದರ್ಶನ ಪಡೆಯುವ ಅರ್ಹತೆ ಕಳಕೊಂಡವನಿಗೆ] ಸಹಾಯಕನಾಗಲಿ ಸರಿದಾರಿ ತೋರುವವನಾಗಲಿ ಯಾರೂ ಇರಲಾರರು. {17}

وَتَحْسَبُهُمْ أَيْقَاظًۭا وَهُمْ رُقُودٌۭ ۚ وَنُقَلِّبُهُمْ ذَاتَ ٱلْيَمِينِ وَذَاتَ ٱلشِّمَالِ ۖ وَكَلْبُهُم بَـٰسِطٌۭ ذِرَاعَيْهِ بِٱلْوَصِيدِ ۚ لَوِ ٱطَّلَعْتَ عَلَيْهِمْ لَوَلَّيْتَ مِنْهُمْ فِرَارًۭا وَلَمُلِئْتَ مِنْهُمْ رُعْبًۭا

ಅವರು ಎಚ್ಚರವಿದ್ದಾರೆಂದು ನೀವು ಗ್ರಹಿಸುತ್ತಿದ್ದಿರಿ; ವಾಸ್ತವದಲ್ಲಿ ಅವರು ದೀರ್ಘಾವಧಿಯ ನಿದ್ದೆಗೆ ಜಾರಿದ್ದರು. ನಾವು ಅವರನ್ನು (ಸಮಯ ಸಮಯಕ್ಕೆ) ಎಡಕ್ಕೂ ಬಲಕ್ಕೂ ಹೊರಳಿಸುತ್ತಿದ್ದೆವು. ಅವರ ನಾಯಿಯು ಮುಂದಿನ ಎರಡೂ ಕಾಲುಗಳನ್ನು ಚಾಚಿ ಗುಹೆಯ ಬಾಗಿಲಲ್ಲೇ ಕುಳಿತಿರುವುದನ್ನೂ (ನೀವು ಕಾಣುತ್ತಿದ್ದಿರಿ). ಒಂದು ವೇಳೆ ನೀವು ಗುಹೆಯೊಳಗೆ ಇಣುಕಿ ಅವರತ್ತ ನೋಡಿರುತ್ತಿದ್ದರೆ ನಿಮ್ಮೊಳಗೆ ಭಯ ತುಂಬಿ ನೀವು ಅಲ್ಲಿಂದ ಪರಾರಿಯಾಗಿ ಬಿಡುತ್ತಿದ್ದಿರಿ. {18}

وَكَذَٰلِكَ بَعَثْنَـٰهُمْ لِيَتَسَآءَلُوا۟ بَيْنَهُمْ ۚ قَالَ قَآئِلٌۭ مِّنْهُمْ كَمْ لَبِثْتُمْ ۖ قَالُوا۟ لَبِثْنَا يَوْمًا أَوْ بَعْضَ يَوْمٍۢ ۚ قَالُوا۟ رَبُّكُمْ أَعْلَمُ بِمَا لَبِثْتُمْ فَٱبْعَثُوٓا۟ أَحَدَكُم بِوَرِقِكُمْ هَـٰذِهِۦٓ إِلَى ٱلْمَدِينَةِ فَلْيَنظُرْ أَيُّهَآ أَزْكَىٰ طَعَامًۭا فَلْيَأْتِكُم بِرِزْقٍۢ مِّنْهُ وَلْيَتَلَطَّفْ وَلَا يُشْعِرَنَّ بِكُمْ أَحَدًا

(ಅವರನ್ನು ಮಲಗಿಸಿದಷ್ಟೇ) ಅದ್ಭುತವಾಗಿ ನಾವು ಅವರನ್ನು ಎಬ್ಬಿಸಿದೆವು. ಅವರು ಪರಸ್ಪರ ವಿಚಾರಿಸಿಕೊಳ್ಳುವ ಹಂತಕ್ಕೆ ತಲುಪಿದರು. ಇಲ್ಲಿ ನೀವು ಎಷ್ಟು ಕಾಲ ತಂಗಿರಬಹುದು ಎಂದು ಅವರ ಪೈಕಿಯ ಒಬ್ಬ ಕೇಳುವಾತನು ಕೇಳಿದನು. ಒಂದು ದಿನದಷ್ಟು ಅಥವಾ ಅದಕ್ಕಿಂತಲೂ ಸ್ವಲ್ಪ ಕಡಿಮೆ ಸಮಯ ತಂಗಿರಬಹುದು ಎಂದು ಅವರು ಉತ್ತರಿಸಿದರು. ವಾಸ್ತವದಲ್ಲಿ ನೀವೆಷ್ಟು ಕಾಲ ತಂಗಿದ್ದಿರಿ ಎಂಬುದನ್ನು ಸರಿಯಾಗಿ ಬಲ್ಲವನು ನಿಮ್ಮ ಕರ್ತಾರನು ಮಾತ್ರ ಎಂದೂ ಅವರು ಹೇಳಿದರು. ಈಗ ಈ ಬೆಳ್ಳಿ ನಾಣ್ಯಗಳೊಂದಿಗೆ ನಿಮ್ಮಲ್ಲೊಬ್ಬನನ್ನು ಪೇಟೆಯತ್ತ ಕಳುಹಿಸಿರಿ; ಎಲ್ಲಿ ಶುದ್ಧವಾದ (ಅರ್ಥಾತ್ ಧರ್ಮಬದ್ಧವಾದ ಹಲಾಲ್) ಆಹಾರ ಲಭ್ಯವಿದೆಯೆಂದು ಅವನು ನೋಡಲಿ ಮತ್ತು ಅದರಿಂದ ಸ್ವಲ್ಪವನ್ನು ನಿಮಗಾಗಿ ತರಲಿ. ಆದರೆ (ಪೇಟೆಯಲ್ಲಿ) ಅವನು ಸೂಕ್ಷ್ಮತೆಯಿಂದ ವರ್ತಿಸಲಿ; ನೀವಿಲ್ಲಿ ತಂಗಿರುವ ಬಗ್ಗೆ ಯಾರಿಗೂ ಸುಳಿವು ಸಿಗದಿರಲಿ. {19}

إِنَّهُمْ إِن يَظْهَرُوا۟ عَلَيْكُمْ يَرْجُمُوكُمْ أَوْ يُعِيدُوكُمْ فِى مِلَّتِهِمْ وَلَن تُفْلِحُوٓا۟ إِذًا أَبَدًۭا

ಒಂದು ವೇಳೆ ನಿಮ್ಮ ಕುರಿತು ಅವರು ತಿಳಿದರೆ ಖಂಡಿತವಾಗಿಯೂ ಅವರು ನಿಮ್ಮನ್ನು ಕಲ್ಲೆಸೆದು ಕೊಲ್ಲುವರು. ಅಥವಾ (ವಿಗ್ರಹಾರಾಧಕರಾದ) ಅವರು ನಿಮ್ಮನ್ನು ಬಲವಂತವಾಗಿ ತಮ್ಮ ಮತಕ್ಕೆ ಎಳೆದೊಯ್ಯುವರು. ಹಾಗೇನಾದರೂ ಆದರೆ ನೀವೆಂದೂ ಯಶಸ್ಸು ಕಾಣಲಾರಿರಿ. {20}

وَكَذَٰلِكَ أَعْثَرْنَا عَلَيْهِمْ لِيَعْلَمُوٓا۟ أَنَّ وَعْدَ ٱللَّهِ حَقٌّۭ وَأَنَّ ٱلسَّاعَةَ لَا رَيْبَ فِيهَآ إِذْ يَتَنَـٰزَعُونَ بَيْنَهُمْ أَمْرَهُمْ ۖ فَقَالُوا۟ ٱبْنُوا۟ عَلَيْهِم بُنْيَـٰنًۭا ۖ رَّبُّهُمْ أَعْلَمُ بِهِمْ ۚ قَالَ ٱلَّذِينَ غَلَبُوا۟ عَلَىٰٓ أَمْرِهِمْ لَنَتَّخِذَنَّ عَلَيْهِم مَّسْجِدًۭا

ಹಾಗೆ (ಅವರಲ್ಲೊಬ್ಬನನ್ನು ಪೇಟೆಗೆ ಕಳುಹಿಸುವ ಮೂಲಕ) ನಾವು ಊರಿನವರಿಗೆ ಗುಹೆಯಲ್ಲಿದ್ದವರ ಬಗ್ಗೆ ಸುಳಿವು ನೀಡಿದೆವು. ಅದು ಅಲ್ಲಾಹ್ ನು (ಪರಲೋಕದ ಬಗ್ಗೆ) ಮಾಡಿದ ವಾಗ್ದಾನವು ಸತ್ಯವಾದುದೆಂದೂ ಲೋಕಾಂತ್ಯದ ಆ ಘಳಿಗೆ ಬರಲಿರುವುದರಲ್ಲಿ ಸಂದೇಹವಿಲ್ಲವೆಂದೂ ಊರ ಜನರಿಗೆ ತಿಳಿಯಪಡಿಸುವ ಸಲುವಾಗಿ ಆಗಿತ್ತು. [ಕೊನೆಗೆ ಗುಹೆಯಲ್ಲಿದ್ದವರು ಮರಣ ಹೊಂದಿದಾಗ] ಊರ ಜನರು ತಾವು ಮಾಡಬೇಕಾದ ಕರ್ತವ್ಯದ ಬಗ್ಗೆ ಪರಸ್ಪರ ವಾದ-ವಿವಾದಕ್ಕೆ ತೊಡಗಿದರು. ಅವರಿದ್ದಲ್ಲಿ (ಸ್ಮಾರಕ) ಕಟ್ಟಡವೊಂದನ್ನು ನಿರ್ಮಿಸಿರಿ; ಅವರ ಬಗ್ಗೆ ಚೆನ್ನಾಗಿ ತಿಳಿದವನು ಅವರ ಕರ್ತಾರನು ಮಾತ್ರ ಎಂದು ಕೆಲವರು ಹೇಳಿದರು. ಅವರ ಪೈಕಿ ವಾದವನ್ನು ಗೆದ್ದವರು, ನಾವು ಖಂಡಿತವಾಗಿಯೂ ಅವರಿದ್ದಲ್ಲಿ ಒಂದು ಆರಾಧನಾಲಯವನ್ನು ನಿರ್ಮಿಸಿಕೊಳ್ಳುತ್ತೇವೆ ಎಂದು ಹೇಳಿದರು. {21}

سَيَقُولُونَ ثَلَـٰثَةٌۭ رَّابِعُهُمْ كَلْبُهُمْ وَيَقُولُونَ خَمْسَةٌۭ سَادِسُهُمْ كَلْبُهُمْ رَجْمًۢا بِٱلْغَيْبِ ۖ وَيَقُولُونَ سَبْعَةٌۭ وَثَامِنُهُمْ كَلْبُهُمْ ۚ قُل رَّبِّىٓ أَعْلَمُ بِعِدَّتِهِم مَّا يَعْلَمُهُمْ إِلَّا قَلِيلٌۭ ۗ فَلَا تُمَارِ فِيهِمْ إِلَّا مِرَآءًۭ ظَـٰهِرًۭا وَلَا تَسْتَفْتِ فِيهِم مِّنْهُمْ أَحَدًۭا

ಪೈಗಂಬರರೇ, ಇದೀಗ ಕೆಲವು ಜನರು, ಅವರು ಮೂವರಾಗಿದ್ದು ನಾಲ್ಕನೆಯದು ಅವರ ನಾಯಿಯಾಗಿತ್ತು ಎಂದು ಹೇಳಲಿರುವರು; ಇನ್ನು ಕೆಲವರು, ಅವರು ಐವರಾಗಿದ್ದು ಆರನೆಯದು ಅವರ ನಾಯಿಯಾಗಿತ್ತು ಎಂದು ಹೇಳಲಿರುವರು. ಅವೆಲ್ಲವೂ ಕತ್ತಲಲ್ಲಿ ಕಲ್ಲು ಹೊಡೆದಂತೆ, ಊಹೆಗಳು ಮಾತ್ರ! ಇನ್ನು ಕೆಲವರು, ಅವರು ಏಳು ಮಂದಿಯಾಗಿದ್ದು ಎಂಟನೆಯದು ಅವರ ನಾಯಿಯಾಗಿತ್ತು ಎಂದೂ ಹೇಳಿಕೊಳ್ಳುವರು. ಪೈಗಂಬರರೇ, ಅವರ ಸಂಖ್ಯೆಯ ಬಗ್ಗೆ ಚೆನ್ನಾಗಿ ಬಲ್ಲವನು ನನ್ನ ಕರ್ತಾರನು ಮಾತ್ರ ಎಂದು ನೀವು ಹೇಳಿರಿ. ಅವರ ಬಗ್ಗೆ ಸ್ವಲ್ಪವೇ ಜನರಿಗೆ ತಿಳಿದಿದೆಯಷ್ಟೆ! ಆದ್ದರಿಂದ ಪೈಗಂಬರರೇ, (ಅವರ ಬಗ್ಗೆ ಸ್ಪಷ್ಟವಾದ ತಿಳುವಕೆಯಿಲ್ಲದೆ ಈ ಜನರು ನಿಮ್ಮೊಂದಿಗೆ) ವಾದಿಸುವಾಗ ನೀವು ಅವರ ವಿಚಾರದಲ್ಲಿ ವಿವಾದಕ್ಕಿಳಿಯಬೇಡಿ. ಅವರ ವಿಷಯವಾಗಿ ಯಾವನೊಂದಿಗೂ ಏನನ್ನೂ ವಿಚಾರಿಸಲೂ ಬೇಡಿ. {22}

وَلَا تَقُولَنَّ لِشَا۟ىْءٍ إِنِّى فَاعِلٌۭ ذَٰلِكَ غَدًا

ಪೈಗಂಬರರೇ, ಯಾವುದೇ ವಿಷಯದಲ್ಲೂ 'ನಾನು ಖಂಡಿತ ಅದನ್ನು ನಾಳೆ ಮಾಡುವೆನು' ಎಂದು ನಿಷ್ಚಯಪೂರ್ವಕ ಹೇಳಬೇಡಿ. {23}

إِلَّآ أَن يَشَآءَ ٱللَّهُ ۚ وَٱذْكُر رَّبَّكَ إِذَا نَسِيتَ وَقُلْ عَسَىٰٓ أَن يَهْدِيَنِ رَبِّى لِأَقْرَبَ مِنْ هَـٰذَا رَشَدًۭا

ಅಲ್ಲಾಹ್ ನು ಇಚ್ಛಿಸಿದರೆ ಮಾತ್ರ (ನೀವು ಅದನ್ನು ಮಾಡಬಹುದಷ್ಟೆ)! ನೀವು ಅದನ್ನು ಎಂದಾದರೂ ಮರೆತರೆ ಕೂಡಲೇ ನಿಮ್ಮ ಕರ್ತಾರನನ್ನು ನೆನಪಿಸಿಕೊಳ್ಳಿ: ನನ್ನ ಕರ್ತಾರನು (ನಾಳೆಯಾಗುವ) ಮುಂಚೆಯೇ ಸರಿಯಾದ ವಿಷಯದತ್ತ ನನಗೆ ಮಾರ್ಗದರ್ಶನ ಮಾಡಲೂ ಬಹುದು ಎಂದು ಹೇಳಿಕೊಳ್ಳಿ. {24}

وَلَبِثُوا۟ فِى كَهْفِهِمْ ثَلَـٰثَ مِا۟ئَةٍۢ سِنِينَ وَٱزْدَادُوا۟ تِسْعًۭا

(ಜನರ ಊಹೆಯಂತೆ) ಅವರು ತಮ್ಮ ಗುಹೆಯಲ್ಲಿ ಮುನ್ನೂರು ವರ್ಷಗಳ ಕಾಲ ಮಲಗಿದ್ದರು! (ಇನ್ನು ಕೆಲವರು) ಅದಕ್ಕೆ ಒಂಬತ್ತು ವರ್ಷಗಳನ್ನು ಸೇರಿಸಿಕೊಳ್ಳುತ್ತಾರೆ. {25}

قُلِ ٱللَّهُ أَعْلَمُ بِمَا لَبِثُوا۟ ۖ لَهُۥ غَيْبُ ٱلسَّمَـٰوَٰتِ وَٱلْأَرْضِ ۖ أَبْصِرْ بِهِۦ وَأَسْمِعْ ۚ مَا لَهُم مِّن دُونِهِۦ مِن وَلِىٍّۢ وَلَا يُشْرِكُ فِى حُكْمِهِۦٓ أَحَدًۭا

ಅವರು ಗುಹೆಯಲ್ಲಿ ತಂಗಿದ ಕಾಲವೆಷ್ಟು ಎಂಬುದರ ಕುರಿತು ಸರಿಯಾದ ತಿಳುವಳಿಕೆ ಇರುವುದು ಅಲ್ಲಾಹ್ ನಿಗೆ ಮಾತ್ರ ಎಂದು ಹೇಳಿರಿ. ಭೂಮಿ ಆಕಾಶಗಳಲ್ಲಿ ಅಡಗಿರುವ ಎಲ್ಲ ಅಗೋಚರ ಅಂಶಗಳ ಜ್ಞಾನ ಇರುವುದು ಅವನಿಗೆ ಮಾತ್ರ! ಅದೆಷ್ಟು ಪರಿಪೂರ್ಣವಾಗಿ ಅವನು ನೋಡಬಲ್ಲನು; ಕೇಳಿಸಿಕೊಳ್ಳುವನು! ಅವನ ಹೊರತು ಅವರಿಗೆ ಯಾರೂ ರಕ್ಷಕರಿಲ್ಲ; ತನ್ನ ಅಧಿಕಾರದಲ್ಲಿ ಅವನು ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. {26}

وَٱتْلُ مَآ أُوحِىَ إِلَيْكَ مِن كِتَابِ رَبِّكَ ۖ لَا مُبَدِّلَ لِكَلِمَـٰتِهِۦ وَلَن تَجِدَ مِن دُونِهِۦ مُلْتَحَدًۭا

ಪೈಗಂಬರರೇ, ನೀವೀಗ ನಿಮ್ಮ ಕರ್ತಾರನ ಗ್ರಂಥದಿಂದ ನಿಮಗೆ 'ವಹೀ' ಮೂಲಕ ನೀಡಲ್ಪಟ್ಟದ್ದನ್ನು ಜನರಿಗೆ ಓದಿ ತಿಳಿಸಿರಿ. ಅವನ ವಚನಗಳನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಅವನ ಆಶ್ರಯವಲ್ಲದೆ ಬೇರೆ ಆಶ್ರಯವೂ ನಿಮಗಿಲ್ಲ. {27}

وَٱصْبِرْ نَفْسَكَ مَعَ ٱلَّذِينَ يَدْعُونَ رَبَّهُم بِٱلْغَدَوٰةِ وَٱلْعَشِىِّ يُرِيدُونَ وَجْهَهُۥ ۖ وَلَا تَعْدُ عَيْنَاكَ عَنْهُمْ تُرِيدُ زِينَةَ ٱلْحَيَوٰةِ ٱلدُّنْيَا ۖ وَلَا تُطِعْ مَنْ أَغْفَلْنَا قَلْبَهُۥ عَن ذِكْرِنَا وَٱتَّبَعَ هَوَىٰهُ وَكَانَ أَمْرُهُۥ فُرُطًۭا

ಯಾರು ತಮ್ಮ ಕರ್ತಾರನಾದ ಅಲ್ಲಾಹ್ ನ ಸಂಪ್ರೀತಿಯನ್ನು ಅರಸುತ್ತಾ ಮುಂಜಾನೆಯೂ ಸಂಜೆಯೂ ಅವನಿಗೆ ಮೊರೆಯಿಡುತ್ತಿರುವರೋ ಅಂತಹ ಜನರ ಜೊತಗಿರುವುದರಲ್ಲಿ, ಪೈಗಂಬರರೇ, ನೀವು ಸಂತೃಪ್ತರಾಗಿರಿ. ಅವರಿಂದ ಎಂದೂ ಮುಖ ತಿರುಗಿಸಿಕೊಳ್ಳಬೇಡಿ. ನೀವು ಲೌಕಿಕ ಬದುಕಿನ ಸೊಬಗನ್ನು ಬಯಸುತ್ತಿರುವಿರೇನು? ಯಾರ ಹೃದಯವನ್ನು ನಮ್ಮ ಸ್ಮರಣೆಯಿಂದ ನಾವು ದೂರವಿಟ್ಟಿರುವೆವೋ, ಯಾರು ತನ್ನ ಸ್ವೇಚ್ಛೆಚಾರದ ಗುಲಾಮನಾಗಿರುವನೋ, ಮತ್ತು ಯಾರು ತನ್ನ ವ್ಯವಹಾರಗಳಲ್ಲಿ ಎಲ್ಲಾ ಮಿತಿಗಳನ್ನು ಮೀರಿರುವನೋ ಅಂತಹವನ [ಅರ್ಥಾತ್ ಕುರೈಷರ ಶ್ರೀಮಂತ ಮತ್ತು ಪ್ರಮುಖ ವ್ಯಕ್ತಿಗಳ] ಹಿಂದೆ ನೀವು ಹೋಗದಿರಿ. {28}

وَقُلِ ٱلْحَقُّ مِن رَّبِّكُمْ ۖ فَمَن شَآءَ فَلْيُؤْمِن وَمَن شَآءَ فَلْيَكْفُرْ ۚ إِنَّآ أَعْتَدْنَا لِلظَّـٰلِمِينَ نَارًا أَحَاطَ بِهِمْ سُرَادِقُهَا ۚ وَإِن يَسْتَغِيثُوا۟ يُغَاثُوا۟ بِمَآءٍۢ كَٱلْمُهْلِ يَشْوِى ٱلْوُجُوهَ ۚ بِئْسَ ٱلشَّرَابُ وَسَآءَتْ مُرْتَفَقًا

ಜನರೇ, ಇದು ನಿಮ್ಮ ಒಡೆಯನ ಬಳಿಯಿಂದ ಬಂದಂತಹ ಸತ್ಯ! ಆದ್ದರಿಂದ ನಂಬಲು ಇಷ್ಟವಿದ್ದವರು ಇದನ್ನು ನಂಬಲಿ; ಇನ್ನು ತಿರಸ್ಕರಿಸಲು ಬಯಸುವವರು ಇದನ್ನು ತಿರಸ್ಕರಿಸಲಿ ಎಂದು ಪೈಗಂಬರರೇ ನೀವು ಸಾರಿರಿ. ಹೌದು, ತಿರಸ್ಕರಿಸಿದ ದುಷ್ಟ ಜನರಿಗೆ ನಾವು ನರಕಾಗ್ನಿಯನ್ನು ಸಿದ್ಧಗೊಳಿಸಿ ಇಟ್ಟಿರುವೆವು; ಅದರ ಜ್ವಾಲೆಗಳು ಡೇರೆಗಳಂತೆ ಆ ದುಷ್ಟರನ್ನು ಸುತ್ತುವರಿಯಲಿವೆ. ಅವರೇನಾದರೂ ಕುಡಿಯಲು ನೀರು ಕೇಳಿದರೆ ಅವರಿಗೆ ತಾಮ್ರದ ಕುದಿಯುವ ದ್ರವದಂತಹ ಪಾನೀಯ ಕುಡಿಸಲಾಗುವುದು; ಅದು ಅವರ ಮುಖಗಳನ್ನೂ ಸುಟ್ಟು ಬಿಡುವುದು. ಎಷ್ಟು ಕೆಟ್ಟ ಪಾನೀಯವದು! ಆ ತಂಗುದಾಣವೂ ತೀರಾ ಕೆಟ್ಟದ್ದೇ! {29}

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ إِنَّا لَا نُضِيعُ أَجْرَ مَنْ أَحْسَنَ عَمَلًا

ಇನ್ನು (ಅಂತಹ ಸತ್ಯವನ್ನು) ನಂಬಿದವರ ಮತ್ತು ಅದರ ಜೊತೆಗೆ ಸತ್ಕರ್ಮಗಳನ್ನು ಮಾಡಿದವರ ವಿಷಯ. ಖಂಡಿತವಾಗಿ ಸತ್ಕರ್ಮ ಮಾಡಿದ ವ್ಯಕ್ತಿಯ ಪ್ರತಿಫಲವನ್ನು ನಾವು ವ್ಯರ್ಥ ಗೊಳಿಸುವುದಿಲ್ಲ. {30}

أُو۟لَـٰٓئِكَ لَهُمْ جَنَّـٰتُ عَدْنٍۢ تَجْرِى مِن تَحْتِهِمُ ٱلْأَنْهَـٰرُ يُحَلَّوْنَ فِيهَا مِنْ أَسَاوِرَ مِن ذَهَبٍۢ وَيَلْبَسُونَ ثِيَابًا خُضْرًۭا مِّن سُندُسٍۢ وَإِسْتَبْرَقٍۢ مُّتَّكِـِٔينَ فِيهَا عَلَى ٱلْأَرَآئِكِ ۚ نِعْمَ ٱلثَّوَابُ وَحَسُنَتْ مُرْتَفَقًۭا

ಅಂತಹ ಜನರಿಗಾಗಿ, ತಳದಲ್ಲಿ ಕಾಲುವೆಗಳು ಹರಿಯುವ ಶಾಶ್ವತವಾದ ಸ್ವರ್ಗೋದ್ಯಾನಗಳಿವೆ. ಅದರಲ್ಲಿ ಅವರಿಗೆ ಚಿನ್ನದ ಕಡಗಗಳನ್ನು ತೊಡಿಸಲಾಗುವುದು. ಉತ್ಕೃಷ್ಟವಾದ ರೇಶ್ಮೆ ಮತ್ತು ಜರಿಯಿಂದ ತಯಾರಿಸಲಾದ ಹಸಿರು ಬಣ್ಣದ ಉಡುಗೆಗಳನ್ನು ಅವರಿಗೆ ಉಡಿಸಲಾಗುವುದು. ಎತ್ತರದ ಪೀಠಗಳಲ್ಲಿ ದಿಂಬುಗಳಿಗೊರಗಿ ಅವರು ವಿಶ್ರಮಿಸಲಿರುವರು. ಎಷ್ಟು ಒಳ್ಳೆಯ ಪ್ರತಿಫಲವದು! ಆ ತಂಗುದಾಣವೂ ಬಹಳ ಒಳ್ಳೆಯದೇ! {31}

وَٱضْرِبْ لَهُم مَّثَلًۭا رَّجُلَيْنِ جَعَلْنَا لِأَحَدِهِمَا جَنَّتَيْنِ مِنْ أَعْنَـٰبٍۢ وَحَفَفْنَـٰهُمَا بِنَخْلٍۢ وَجَعَلْنَا بَيْنَهُمَا زَرْعًۭا

ಪೈಗಂಬರರೇ, ನೀವೀಗ ಜನರ ಮುಂದೆ ಆ ಇಬ್ಬರು ವ್ಯಕ್ತಿಗಳ ಉದಾಹರಣೆಯನ್ನು ಇಡಿರಿ. ಅವರಲ್ಲಿ ಒಬ್ಬಾತನಿಗೆ ನಾವು ದ್ರಾಕ್ಷೆಯ ಎರಡು ತೊಟಗಳನ್ನು ನೀಡಿದೆವು. ಎರಡೂ ತೋಟಗಳ ಸುತ್ತ ಖರ್ಜೂರದ ಮರಗಳನ್ನು ಬೆಳೆಸಿದೆವು. ಅವರಡರ ಮಧ್ಯೆ (ವಿವಿಧ ಬಗೆಯ) ಬೆಳೆಗಳ ಕೃಷಿಭೂಮಿಯನ್ನು ಇರಿಸಿದೆವು. {32}

كِلْتَا ٱلْجَنَّتَيْنِ ءَاتَتْ أُكُلَهَا وَلَمْ تَظْلِم مِّنْهُ شَيْـًۭٔا ۚ وَفَجَّرْنَا خِلَـٰلَهُمَا نَهَرًۭا

ಎರಡೂ ತೋಟಗಳು ಏನೂ ಕೊರತೆಯಾಗದಂತೆ ಅತ್ಯಂತ ಸಮೃದ್ಧವಾಗಿ ಫಸಲು ನೀಡುತ್ತಿದ್ದವು. ಸಾಲದಕ್ಕೆ ಅವೆರಡು ತೋಟಗಳ ನಡುವೆ ಒಂದು ನದಿಯನ್ನು ನಾವು ಹರಿಸಿ ಬಿಟ್ಟಿದ್ದೆವು. {33}

وَكَانَ لَهُۥ ثَمَرٌۭ فَقَالَ لِصَـٰحِبِهِۦ وَهُوَ يُحَاوِرُهُۥٓ أَنَا۠ أَكْثَرُ مِنكَ مَالًۭا وَأَعَزُّ نَفَرًۭا

(ಆ ಇಬ್ಬರಲ್ಲಿ ಯಾರು ಹೆಚ್ಚು ಹೆಚ್ಚು) ಫಸಲು ಪಡೆಯುತ್ತಿದ್ದನೋ ಅವನು ತನ್ನ (ಬಡ) ಸ್ನೇಹಿತನೊಂದಿಗೆ, ನಿನಗಿಂತ ಸಂಪತ್ತಿನಲ್ಲಿ ನಾನು ಮಿಗಿಲಾಗಿರುವೆನು ಹಾಗೂ ನನ್ನಲ್ಲಿ ಜನಬಲವೂ ನಿನಗಿಂತ ಅಧಿಕವಿದೆ ಎಂದು ಮಾತು ಮಾತಿನಲ್ಲೇ ಹೇಳಿಬಿಟ್ಟನು! {34}

وَدَخَلَ جَنَّتَهُۥ وَهُوَ ظَالِمٌۭ لِّنَفْسِهِۦ قَالَ مَآ أَظُنُّ أَن تَبِيدَ هَـٰذِهِۦٓ أَبَدًۭا

ಹಾಗೆ (ಹೇಳಿ) ತನಗೆ ತಾನೇ ಅನ್ಯಾಯ ಮಡಿಕೊಂಡ ಸ್ಥಿತಿಯಲ್ಲಿ ಆತ ತನ್ನ ತೋಟವನ್ನು ಪ್ರವೇಶಿಸಿ, ಈ ತೋಟವು ಎಂದಾದರೂ ನಶಿಸಿ ಹೋಗುವುದೆಂದು ನಾನು ಭಾವಿಸಲಾರೆ ಎಂದು (ತನ್ನೊಳಗೇ) ಹೇಳಿಕೊಂಡನು. {35}

وَمَآ أَظُنُّ ٱلسَّاعَةَ قَآئِمَةًۭ وَلَئِن رُّدِدتُّ إِلَىٰ رَبِّى لَأَجِدَنَّ خَيْرًۭا مِّنْهَا مُنقَلَبًۭا

ಲೋಕಾಂತ್ಯದ ಘಳಿಗೆಯೊಂದು ಬರಲಿದೆ ಎಂದೂ ನಾನು ಭಾವಿಸುವುದಿಲ್ಲ. ಒಂದು ವೇಳೆ ನನ್ನ ಕರ್ತಾರನೆಡೆಗೆ ನನ್ನನ್ನು ಮರಳಿಸಲಾದರೆ ಅಲ್ಲಿಯೂ ಇದಕ್ಕಿಂತ ಹೆಚ್ಚು ಸೌಭಾಗ್ಯವನ್ನು ನಾನು ಖಂಡಿತ ಪಡೆಯಲಿರುವನು (ಎಂದೂ ಹೇಳಿದನು). {36}

قَالَ لَهُۥ صَاحِبُهُۥ وَهُوَ يُحَاوِرُهُۥٓ أَكَفَرْتَ بِٱلَّذِى خَلَقَكَ مِن تُرَابٍۢ ثُمَّ مِن نُّطْفَةٍۢ ثُمَّ سَوَّىٰكَ رَجُلًۭا

ಆತನ ಸ್ನೇಹಿತನು ಆತನೊಂದಿಗೆ ಮಾತು ಬೆಳೆಸುತ್ತಾ, ಯಾವ (ಅಲ್ಲಾಹ್ ನು) ಮೊದಲಿಗೆ ನಿನ್ನನ್ನು ಮಣ್ಣಿನಿಂದ ನಂತರ ವೀರ್ಯದ ಹನಿಯಿಂದ ನಂತರ ನಿನ್ನನ್ನು ಒಬ್ಬ ಪರಿಪೂರ್ಣವಾದ ಮನುಷ್ಯನನ್ನಾಗಿ ಮಾಡಿದನೋ ಅವನನ್ನೇ ನೀನು ನಿರಾಕರಿಸಿ ಬಿಟ್ಟೆಯಾ ಎಂದು ಕೇಳಿದನು. {37}

لَّـٰكِنَّا۠ هُوَ ٱللَّهُ رَبِّى وَلَآ أُشْرِكُ بِرَبِّىٓ أَحَدًۭا

ಆದರೆ ನಾನು ಹೇಳುವುದೇನೆಂದರೆ, ಆ ಅಲ್ಲಾಹ್ ನೇ ನನ್ನ ಕರ್ತಾರನು; ಮತ್ತು ನಾನು ನನ್ನ ಆ ಕರ್ತಾರನ ದೇವತ್ವದಲ್ಲಿ ಯಾವೊಬ್ಬನನ್ನೂ ಸೇರಿಸಿಕೊಳ್ಳುವುದಿಲ್ಲ (ಎಂದು ಉಪದೇಶಿಸಿದನು). {38}

وَلَوْلَآ إِذْ دَخَلْتَ جَنَّتَكَ قُلْتَ مَا شَآءَ ٱللَّهُ لَا قُوَّةَ إِلَّا بِٱللَّهِ ۚ إِن تَرَنِ أَنَا۠ أَقَلَّ مِنكَ مَالًۭا وَوَلَدًۭا

ನೀನು ನಿನ್ನ ತೋಟದೊಳಗೆ ಪ್ರವೇಶಿಸುವಾಗ, ಇದೆಲ್ಲ ಅಲ್ಲಾಹ್ ನ ಇಚ್ಛೆಯಂತೆ ಸಂಭವಿಸಿದೆ; ಅಲ್ಲಾಹ್ ನಿಗಲ್ಲದೆ ಬೇರೆ ಯಾರಿಗೂ ಯಾವ ಶಕ್ತಿಯೂ ಇಲ್ಲ [ಅರಬಿ: ಮಾ ಶಾ ಅಲ್ಲಾಹ್! ಲಾ ಕುವ್ವತ ಇಲ್ಲಾ ಬಿಲ್ಲಾಹ್!] ಎಂದೇಕೆ ಹೇಳಲಿಲ್ಲ? ಸಂಪತ್ತು ಮತ್ತು ಸಂತಾನದಲ್ಲಿ ನೀನು ನನ್ನನ್ನು ನಿನಗಿಂತ ಸಣ್ಣವನಾಗಿ ಕಂಡರೂ (ಹಾಗೆ ಹೇಳ ಬಹುದಿತ್ತು ತಾನೆ?) {39}

فَعَسَىٰ رَبِّىٓ أَن يُؤْتِيَنِ خَيْرًۭا مِّن جَنَّتِكَ وَيُرْسِلَ عَلَيْهَا حُسْبَانًۭا مِّنَ ٱلسَّمَآءِ فَتُصْبِحَ صَعِيدًۭا زَلَقًا

ನನ್ನ ಕರ್ತಾರನು ನನಗೆ ನಿನ್ನ ತೋಟಕ್ಕಿಂತ ಉತ್ತಮವಾದುದನ್ನು ಕೊಡಲೂ ಬಹುದು; ಮತ್ತು ನಿನ್ನ ತೋಟದ ಮೇಲೆ ಆಕಾಶದಿಂದ ಏನಾದರೂ ಅನಾಹುತವನ್ನು ಕಳುಹಿಸಿದರೆ ಅದು ಕೇವಲ ಮಣ್ಣಿನ ಮೈದಾನವಾಗಿ ಬಿಡುವುದು ಅಸಂಭವನೀಯ ವಿಷಯವೂ ಅಲ್ಲ! {40}

أَوْ يُصْبِحَ مَآؤُهَا غَوْرًۭا فَلَن تَسْتَطِيعَ لَهُۥ طَلَبًۭا

ಅಥವಾ ನಿನಗೆ ಹುಡುಕಿ ತರಲು ಸಾಧ್ಯವಾಗಷ್ಟು ಆಳಕ್ಕೆ ಅದರಲ್ಲಿನ ನೀರು ಇಳಿದು ಹೋಗಲೂ ಬಹುದು. {41}

وَأُحِيطَ بِثَمَرِهِۦ فَأَصْبَحَ يُقَلِّبُ كَفَّيْهِ عَلَىٰ مَآ أَنفَقَ فِيهَا وَهِىَ خَاوِيَةٌ عَلَىٰ عُرُوشِهَا وَيَقُولُ يَـٰلَيْتَنِى لَمْ أُشْرِكْ بِرَبِّىٓ أَحَدًۭا

ಕೊನೆಗೆ ಆಪತ್ತು ಆತನ ತೋಟದ ಫಸಲನ್ನು ಸಂಪೂರ್ಣವಾಗಿ ಅವರಿಸಿಕೊಂದಾಗ ಅದಕ್ಕೆ ತಾನು ಮಾಡಿದ ಖರ್ಚಿಗಾಗಿ ಕೈ ಕೈ ಹಿಸುಕಿ ಕೊಂಡನು. ಅದು ಅದರ ಚಪ್ಪರ ಸಮೇತ ಮಗುಚಿ ಬಿದ್ದಿತ್ತು. ನಾನು ನನ್ನ ಕರ್ತಾರನ ಜೊತಗೆ ಯಾರನ್ನೂ ಸೇರಿಸದಿರುತ್ತಿದ್ದರೆ ಅದೆಷ್ಟು ಒಳ್ಳೆಯದಿತ್ತು, ಓ ನನ್ನ ದುರದೃಷ್ಟವೇ, ಎಂದು ಆತ ರೋದಿಸಿದನು. {42}

وَلَمْ تَكُن لَّهُۥ فِئَةٌۭ يَنصُرُونَهُۥ مِن دُونِ ٱللَّهِ وَمَا كَانَ مُنتَصِرًا

ಅಲ್ಲಾಹ್ ನ ಹೊರತಾಗಿ ಸಹಾಯ ಮಾಡಲು (ಆತನು ಕೊಚ್ಚಿಕೊಳ್ಳುತ್ತಿದ್ದಂತಹ) ಯಾವ ಜನಬಲವೂ ಆತನ ಬಳಿ ಉಳಿಯಲಿಲ್ಲ; ಆತನು ಸ್ವತಃ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ. {43}

هُنَالِكَ ٱلْوَلَـٰيَةُ لِلَّهِ ٱلْحَقِّ ۚ هُوَ خَيْرٌۭ ثَوَابًۭا وَخَيْرٌ عُقْبًۭا

ಅಧಿಕಾರವು (ಸಂಪೂರ್ಣವಾಗಿ) ಸಾಕ್ಷಾತ್ ಸತ್ಯವಾದ ಆ ಅಲ್ಲಾಹನಿಗೇ ಸೇರಿದೆಯೆಂದು ಆ ಸಂದರ್ಭದಲ್ಲಿ (ತಿಳಿಯಿತು). ಅವನು ಪ್ರತಿಫಲದ ವಿಷಯದಲ್ಲೂ ಪರಿಣಾಮದ ದೃಷ್ಟಿಯಲ್ಲೂ ಅತ್ಯುತ್ತಮನು! {44}

وَٱضْرِبْ لَهُم مَّثَلَ ٱلْحَيَوٰةِ ٱلدُّنْيَا كَمَآءٍ أَنزَلْنَـٰهُ مِنَ ٱلسَّمَآءِ فَٱخْتَلَطَ بِهِۦ نَبَاتُ ٱلْأَرْضِ فَأَصْبَحَ هَشِيمًۭا تَذْرُوهُ ٱلرِّيَـٰحُ ۗ وَكَانَ ٱللَّهُ عَلَىٰ كُلِّ شَىْءٍۢ مُّقْتَدِرًا

ಪೈಗಂಬರರೇ, ಜನರ ಮುಂದೆ ಈಗ ಐಹಿಕ ಜೀವನದ ಉದಾಹರಣೆಯನ್ನು ಪ್ರಸ್ತುತಪಡಿಸಿರಿ. ಅದು ಆಕಾಶದಿಂದ ನಾವು ಮಳೆ ಸುರಿಸಿದಾಗ ಭೂಮಿಯಲ್ಲಿನ ಸಸ್ಯವರ್ಗವು ಅದರ ಜೊತೆ ಬೆರೆತು ಕೊಳ್ಳುವಂತೆ ಆಗಿದೆ. ತದನಂತರ ಅದು ಒಣಗಿ ಚೂರು ಚೂರಾಗಿ ಬಿಡುತ್ತದೆ; ಬಿರುಗಾಳಿಯು ಬೀಸಿ ಅದನ್ನು ಚದುರಿಸಿ ಬಿಡುತ್ತದೆ. ಹೌದು, ಅಲ್ಲಾಹ್ ನು ಸಕಲ ವಿಷಯಗಳಲ್ಲೂ ಸಂಪೂರ್ಣವಾದ ಸಾಮರ್ಥ್ಯ ಹೊಂದಿರುತ್ತಾನೆ. {45}

ٱلْمَالُ وَٱلْبَنُونَ زِينَةُ ٱلْحَيَوٰةِ ٱلدُّنْيَا ۖ وَٱلْبَـٰقِيَـٰتُ ٱلصَّـٰلِحَـٰتُ خَيْرٌ عِندَ رَبِّكَ ثَوَابًۭا وَخَيْرٌ أَمَلًۭا

(ಜನರು ಅತ್ಯಂತ ಹೆಮ್ಮೆ ಪಡುವ) ಸಂಪತ್ತು ಮತ್ತು ಗಂಡು ಸಂತಾನವು ಪ್ರಾಪಂಚಿಕ ಜೀವನದ ಒಂದು ಭೂಷಣವಷ್ಟೆ. ಆದರೆ ಶಾಶ್ವತವಾಗಿ ಬಾಕಿ ಉಳಿಯುವಂತಹ ಸತ್ಕರ್ಮಗಳು ಪುಣ್ಯದ ದೃಷ್ಟಿಯಿಂದಲೂ ಭರವಸೆಯ ದೃಷ್ಟಿಯಿಂದಲೂ ನಿಮ್ಮ ಕರ್ತಾರನ ಬಳಿ (ಆ ಸಂಪತ್ತು ಸಂತಾನಗಳಿಗಿಂತ) ಹೆಚ್ಚು ಶ್ರೇಷ್ಠವಾಗಿದೆ! {46}

وَيَوْمَ نُسَيِّرُ ٱلْجِبَالَ وَتَرَى ٱلْأَرْضَ بَارِزَةًۭ وَحَشَرْنَـٰهُمْ فَلَمْ نُغَادِرْ مِنْهُمْ أَحَدًۭا

ಈ ಪರ್ವತಗಳನ್ನೆಲ್ಲ ನಾವು ತೊಡೆದು ಹಾಕಲಿರುವ ಆ ದಿನದ ಕುರಿತು ಚಿಂತಿಸಿರಿ. ಭೂಮಿಯು ಒಂದು ನಗ್ನ ಮೈದಾನವಾಗಿ ಮಾರ್ಪಟ್ಟಿರುವುದನ್ನು ನೀವು ನೋಡುವಿರಿ. ಮಾನವರಲ್ಲಿ ಯಾವೊಬ್ಬನನ್ನೂ ಬಿಡದೆ ಪ್ರತಿಯೊಬ್ಬನನ್ನೂ (ವಿಚಾರಣೆಗಾಗಿ ಅಂದು) ನಾವು ಒಟ್ಟು ಸೇರಿಸಲಿರುವೆವು. {47}

وَعُرِضُوا۟ عَلَىٰ رَبِّكَ صَفًّۭا لَّقَدْ جِئْتُمُونَا كَمَا خَلَقْنَـٰكُمْ أَوَّلَ مَرَّةٍۭ ۚ بَلْ زَعَمْتُمْ أَلَّن نَّجْعَلَ لَكُم مَّوْعِدًۭا

ಎಲ್ಲರನ್ನೂ ಅಂದು ನಿಮ್ಮ ಒಡೆಯನಾದ (ಅಲ್ಲಾಹ್ ನ) ಸನ್ನಿಧಿಯಲ್ಲಿ ಸಾಲು ಸಾಲಾಗಿ ನಿಲ್ಲಿಸಲಾಗುವುದು. ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿ ನಿಲ್ಲಿಸಿದಂತೆಯೇ ಈಗ (ಪುನಃ ನಮ್ಮ ಮುಂದೆ) ನೀವು ಬಂದು ನಿಂತಿರುವಿರಿ; ಆದರೆ, ನಾವು ನಿಮಗಾಗಿ ನಿಶ್ಚಿತಗೊಳಿಸಿದ (ಈ ಪುನರುತ್ಥಾನ) ಸಮಯ ನಿಮಗೆ ಎಂದಿಗೂ ಬರಲಾರದು ಎಂದೇ ನೀವು ಆಲೋಚಿಸುತ್ತಿದ್ದಿರಿ (ಎಂದು ಅವರೊಂದಿಗೆ ಹೇಳಲಾಗುವುದು). {48}

وَوُضِعَ ٱلْكِتَـٰبُ فَتَرَى ٱلْمُجْرِمِينَ مُشْفِقِينَ مِمَّا فِيهِ وَيَقُولُونَ يَـٰوَيْلَتَنَا مَالِ هَـٰذَا ٱلْكِتَـٰبِ لَا يُغَادِرُ صَغِيرَةًۭ وَلَا كَبِيرَةً إِلَّآ أَحْصَىٰهَا ۚ وَوَجَدُوا۟ مَا عَمِلُوا۟ حَاضِرًۭا ۗ وَلَا يَظْلِمُ رَبُّكَ أَحَدًۭا

ಮತ್ತು ಅವರ ಕರ್ಮಗಳ ದಾಖಲೆಯನ್ನು ಅವರ ಮುಂದೆ ತೆರೆದಿಡಲಾದಾಗ ಅದರಲ್ಲಿ ಏನನ್ನು ದಾಖಲಿಸಲಾಗಿದೆಯೋ ಅದಕ್ಕಾಗಿ ಅಪರಾಧಿಗಳು ಭಯಭೀತರಾಗಿರುವುದನ್ನು ನೀವು ಕಾಣುವಿರಿ. ಅಯ್ಯೋ! ನಮ್ಮದೆಂತಹ ದುರ್ಗತಿ! ಇದೆಂತಹ ವಿಶಿಷ್ಠ ದಾಖಲೆ! ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಯಾವೊಂದು ವಿಷಯವನ್ನೂ ಇದರಲ್ಲಿ ಪಟ್ಟಿಮಾಡದೆ ಬಿಟ್ಟಿಲ್ಲವಲ್ಲ ಎಂದು ಅವರು ಗೋಳಿಡುವರು! ತಾವು ಮಾಡಿದ ಎಲ್ಲಾ ಕರ್ಮಗಳನ್ನು ಅವರು ಅದರಲ್ಲಿ ಪ್ರತ್ಯಕ್ಷವಾಗಿ ಕಂಡುಕೊಳ್ಳುವರು. ಹೌದು, ನಿಮ್ಮ ಕರ್ತಾರನು ಯಾರೊಂದಿಗೂ ಯಾವ ಅನ್ಯಾಯವನ್ನೂ ಮಾಡುವುದಿಲ್ಲ. {49}

وَإِذْ قُلْنَا لِلْمَلَـٰٓئِكَةِ ٱسْجُدُوا۟ لِـَٔادَمَ فَسَجَدُوٓا۟ إِلَّآ إِبْلِيسَ كَانَ مِنَ ٱلْجِنِّ فَفَسَقَ عَنْ أَمْرِ رَبِّهِۦٓ ۗ أَفَتَتَّخِذُونَهُۥ وَذُرِّيَّتَهُۥٓ أَوْلِيَآءَ مِن دُونِى وَهُمْ لَكُمْ عَدُوٌّۢ ۚ بِئْسَ لِلظَّـٰلِمِينَ بَدَلًۭا

ಇನ್ನು ನೀವೆಲ್ಲ ಆದಮ್ ರ ಮುಂದೆ ತಲೆಬಾಗಿರಿ ಎಂದು ನಾವು ಮಲಕ್ ಗಳಿಗೆ ಆದೇಶವಿತ್ತಾಗ ಅವರೆಲ್ಲ ತಲೆಬಾಗಿದರು - ಆದರೆ ಒಬ್ಬ ಇಬ್ಲೀಸ್ ನ ಹೊರತು! ಅವನು ಜಿನ್ನ್ ವರ್ಗಕ್ಕೆ ಸೇರಿದವನಾಗಿದ್ದನು; ಮತ್ತು ತನ್ನ ಒಡೆಯನ ಆದೇಶವನ್ನು ಉಲ್ಲಂಘಿಸಿದನು. ಜನರೇ, ನೀವು ನನ್ನ ಬದಲು ಆ ಇಬ್ಲೀಸ್ ಮತ್ತು ಆತನ ಸಂತಾನದವರನ್ನು ನಿಮ್ಮ ಹಿತೈಷಿಗಳನ್ನಾಗಿ ಮಾಡಿಕೊಳ್ಳುವುದೇ? ಅದೂ ಅವರು ನಿಮ್ಮ (ಅರ್ಥಾತ್ ಮನುಷ್ಯರ) ಶತ್ರುಗಳಾಗಿರುವಾಗ? ಅದೆಷ್ಟು ಕೆಟ್ಟದ್ದಾಗಿದೆ (ಅಲ್ಲಾಹ್ ನಿಗೆ ಬದಲಾಗಿ) ಈ ದುಷ್ಟ ಜನರು ಮಾಡಿಕೊಂಡ ಆಯ್ಕೆ! {50}

مَّآ أَشْهَدتُّهُمْ خَلْقَ ٱلسَّمَـٰوَٰتِ وَٱلْأَرْضِ وَلَا خَلْقَ أَنفُسِهِمْ وَمَا كُنتُ مُتَّخِذَ ٱلْمُضِلِّينَ عَضُدًۭا

ಈ ಭೂಮಿ ಮತ್ತು ಆಕಾಶಗಳನ್ನು ಸೃಷ್ಟಿಸುತ್ತಿರುವಾಗ ಅದಕ್ಕೆ ಪ್ರೇಕ್ಷಕರಾಗಲು ನಾವು ಅವರನ್ನು (ಅರ್ಥಾತ್ ಜಿನ್ನ್ ವರ್ಗದವರನ್ನು) ಕರೆದಿಲ್ಲ; ಸ್ವತಃ ಅವರನ್ನು ಸೃಷ್ಟಿಸುವಾಗಲೂ! ಜನರ ದಾರಿಗೆಡಿಸುವವರನ್ನು ಸಹಾಯಕ್ಕಾಗಿ ನೇಮಿಸುವವರು ನಾವಲ್ಲ! {51}

وَيَوْمَ يَقُولُ نَادُوا۟ شُرَكَآءِىَ ٱلَّذِينَ زَعَمْتُمْ فَدَعَوْهُمْ فَلَمْ يَسْتَجِيبُوا۟ لَهُمْ وَجَعَلْنَا بَيْنَهُم مَّوْبِقًۭا

ದೇವತ್ವದಲ್ಲಿ ಯಾರೆಲ್ಲ ನನ್ನ ಜೊತೆಗಾರರೆಂದು ನೀವು ತಿಳಿದಿರುವಿರೋ ಅವರನ್ನೆಲ್ಲಾ ಈಗ ಸಹಾಯಕ್ಕಾಗಿ ಕರೆಯಿರಿ ಎಂದು ಅಲ್ಲಾಹ್ ನು ಹೇಳಲಿರುವ ದಿನ (ಇವರೇನು ಮಾಡಿಯಾರು)! ಆಗ ಅವರನ್ನು ಇವರು ಸಹಾಯಕ್ಕಾಗಿ ಕರೆಯುವರಾದರೂ, ಇವರ ಕರೆಗೆ ಅವರು ಓಗೊಡಲಾರರು! ಏಕೆಂದರೆ ನಾವು ಅವರೀರ್ವರ ನಡುವೆ ಮಾರಕ ಕಂದರವೊಂದನ್ನು ಸೃಷ್ಟಿಸಲಿರುವೆವು. {52}

وَرَءَا ٱلْمُجْرِمُونَ ٱلنَّارَ فَظَنُّوٓا۟ أَنَّهُم مُّوَاقِعُوهَا وَلَمْ يَجِدُوا۟ عَنْهَا مَصْرِفًۭا

ಅಂತಹ ಅಪರಾಧಿಗಳು (ಆ ಕಂದರದಲ್ಲಿನ) ಅಗ್ನಯನ್ನು ಕಣ್ಣಾರೆ ಕಂಡಾಗ ಅದರೊಳಗೆ ಅವರು ಬೀಳಲಿರುವರೆಂದು ಅವರಿಗೆ ಮನವರಿಕೆಯಾಗುವುದು. ಆದರೆ ಅದರಿಂದ ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಅವರಿಗೆ ಸಿಗಲಾರದು! {53}

وَلَقَدْ صَرَّفْنَا فِى هَـٰذَا ٱلْقُرْءَانِ لِلنَّاسِ مِن كُلِّ مَثَلٍۢ ۚ وَكَانَ ٱلْإِنسَـٰنُ أَكْثَرَ شَىْءٍۢ جَدَلًۭا

ಜನರಿಗೆ ಮನವರಿಕೆ ಆಗಲೆಂದು ನಾವು ಈ ಕುರ್‌ಆನ್ ನಲ್ಲಿ ಸಕಲ ವಿಧ ಉಪಮೆಗಳನ್ನು ವಿವಿಧ ರೀತಿಯಲ್ಲಿ ಉಲ್ಲೇಖಿಸಿರುವೆವು. ವಿಪರ್ಯಾಸವೆಂದರೆ ಮನುಷ್ಯನು ಮಾತ್ರ (ಒಪ್ಪಿಕೊಕೊಳ್ಳುವ ಬದಲು) ಹೆಚ್ಚಿನ ವಿಷಯಗಳಲ್ಲಿ ಹಠಮಾರಿತನವನ್ನೇ ತೋರುತ್ತಾನೆ! {54}

وَمَا مَنَعَ ٱلنَّاسَ أَن يُؤْمِنُوٓا۟ إِذْ جَآءَهُمُ ٱلْهُدَىٰ وَيَسْتَغْفِرُوا۟ رَبَّهُمْ إِلَّآ أَن تَأْتِيَهُمْ سُنَّةُ ٱلْأَوَّلِينَ أَوْ يَأْتِيَهُمُ ٱلْعَذَابُ قُبُلًۭا

ತಮಗಿಂತ ಮುಂಚಿನವರಿಗೆ ಬಂದ ಗತಿ ತಮಗೂ ಬರಲಿ ಅಥವಾ ಅಂತಹ ಶಿಕ್ಷೆಯನ್ನು ನಮ್ಮ ಕಣ್ಣ ಮುಂದೆ ತಂದು ತೋರಿಸಿ ಎಂಬ (ಇವರ ಹಠಮಾರಿತನದ) ಹೊರತು, ಈ ಜನರ ಬಳಿಗೆ ಮಾರ್ಗದರ್ಶನವು (ಪೈಗಂಬರರ ಮತ್ತು ಕುರ್‌ಆನ್ ನ ರೂಪದಲ್ಲಿ) ಬಂದಾಗ ಅದನ್ನು ಸ್ವೀಕರಿಸಿ ತಮ್ಮ ಕರ್ತಾರನೊಂದಿಗೆ ಕ್ಷಮೆಯಾಚಿಸುವುದರಿಂದ ಬೇರಾವ ಅಂಶವೂ ಇವರನ್ನು ತಡೆದಿಟ್ಟಿಲ್ಲ! {55}

وَمَا نُرْسِلُ ٱلْمُرْسَلِينَ إِلَّا مُبَشِّرِينَ وَمُنذِرِينَ ۚ وَيُجَـٰدِلُ ٱلَّذِينَ كَفَرُوا۟ بِٱلْبَـٰطِلِ لِيُدْحِضُوا۟ بِهِ ٱلْحَقَّ ۖ وَٱتَّخَذُوٓا۟ ءَايَـٰتِى وَمَآ أُنذِرُوا۟ هُزُوًۭا

ಇನ್ನು, ನಾವು ದೂತರುಗಳನ್ನು ಕಳುಹಿಸುವ ಉದ್ದೇಶವು (ನಮ್ಮನ್ನು ನಂಬುವವರಿಗೆ ಸ್ವರ್ಗದ ಬಗೆಗಿನ) ಶುಭಸುದ್ದಿ ಮತ್ತು (ನಂಬದವರಿಗೆ ನರಕದ ಕುರಿತು) ಮುನ್ನೆಚ್ಚರಿಕೆ ನೀಡುವುದರ ಹೊರತು ಬೇರೇನೂ ಅಲ್ಲ! ಆದರೆ (ನಮ್ಮ ದೂತರುಗಳ ಸಂದೇಶವನ್ನು) ತಿರಸ್ಕರಿಸಿದ ಜನರು ಅಸತ್ಯವಾದುದನ್ನು ಆಧಾರವಾಗಿಸಿ ಸತ್ಯವನ್ನು ಹತ್ತಿಕ್ಕಲು ವಾದ-ವಿವಾದಗಳಲ್ಲಿ ತೊಡಗಿದ್ದಾರೆ; ನಮ್ಮ ದೃಷ್ಟಾಂತಗಳನ್ನೂ ನಾವು ನೀಡಿದ ಮುನ್ನೆಚ್ಚರಿಕೆಗಳನ್ನೂ ನಗೆಪಾಟಲಿಗೆ ಗುರಿಪಡಿಸಿದ್ದಾರೆ! {56}

وَمَنْ أَظْلَمُ مِمَّن ذُكِّرَ بِـَٔايَـٰتِ رَبِّهِۦ فَأَعْرَضَ عَنْهَا وَنَسِىَ مَا قَدَّمَتْ يَدَاهُ ۚ إِنَّا جَعَلْنَا عَلَىٰ قُلُوبِهِمْ أَكِنَّةً أَن يَفْقَهُوهُ وَفِىٓ ءَاذَانِهِمْ وَقْرًۭا ۖ وَإِن تَدْعُهُمْ إِلَى ٱلْهُدَىٰ فَلَن يَهْتَدُوٓا۟ إِذًا أَبَدًۭا

ತನ್ನ ಒಡೆಯನ ದೃಷ್ಟಾಂತಗಳನ್ನು ನೆನಪಿಸಿ ಉಪದೇಶ ನೀಡಿದಾಗ ಅದನ್ನು ಅವಗಣಿಸಿ ಮುಖ ತಿರುಗಿಸಿ ಕೊಂಡವನಿಗಿಂತ; ಮತ್ತು ತನ್ನ ಕೈಗಳು ಸ್ವತಃ ಸಂಪಾದಿಸಿ ಕೂಡಿಟ್ಟ ಪಾಪ ಕಾರ್ಯಗಳನ್ನು ಮರೆತು ಬಿಟ್ಟವನಿಗಿಂತ ದೊಡ್ಡ ದುಷ್ಕರ್ಮಿ ಯಾರಿದ್ದಾನೆ? (ಆ ಕಾರಣಕ್ಕಾಗಿಯೇ) ನಾವು ಅಂತಹವರ ಹೃದಯಗಳಿಗೆ ಉಪದೇಶವು ಅರ್ಥವಾಗದಂತೆ ತೆರೆ ಎಳೆದೆವು ಮತ್ತು ಅವರ ಕಿವಿಗಳಿಗೆ ಕಿವುಡು ನೀಡಿದೆವು. ಆದ್ದರಿಂದ, ಪೈಗಂಬರರೇ, ಈಗ ನೀವು ಅವರನ್ನು ಸರಿದಾರಿಯತ್ತ ಎಷ್ಟು ಕರೆದರೂ ಅವರೆಂದೂ ಸರಿದಾರಿಯನ್ನು ಕಂಡುಕೊಳ್ಳಲಾರರು - ಅದೇ ಸ್ಥಿತಿಯಲ್ಲಿ ಅವರು ಮುಂದುವರಿದರೆ! {57}

وَرَبُّكَ ٱلْغَفُورُ ذُو ٱلرَّحْمَةِ ۖ لَوْ يُؤَاخِذُهُم بِمَا كَسَبُوا۟ لَعَجَّلَ لَهُمُ ٱلْعَذَابَ ۚ بَل لَّهُم مَّوْعِدٌۭ لَّن يَجِدُوا۟ مِن دُونِهِۦ مَوْئِلًۭا

ನಿಜವಾಗಿ ನಿಮ್ಮ ಕರ್ತಾರನು ಬಹಳ ಕ್ಷಮಾಶೀಲನೂ ಕರುಣೆಯುಳ್ಳವನೂ ಆಗಿರುವನು. ಒಂದು ವೇಳೆ ಅವರು ಮಾಡಿದ ಪಾಪಗಳಿಗಾಗಿ ಕೂಡಲೇ ಶಿಕ್ಷಿಸಲು ಬಯಸಿದ್ದಿದ್ದರೆ ಖಂಡಿತವಾಗಿ ಅವನು ಅವರನ್ನು ತ್ವರಿತವಾಗಿ ಶಿಕ್ಷಿಸುಸುತ್ತಿದ್ದನು. ಆದರೆ ಒಂದು ಸಮಯವನ್ನು ಅವನು ಅವರಿಗೆ ನಿಶ್ಚಯಗೊಳಿಸಿರುವನು; ಅದು ಬಂದು ಬಿಟ್ಟರೆ ಅದರಿಂದ ಪಾರಾಗಿ ಆಶ್ರಯ ಪಡೆದುಕೊಳ್ಳಲು ಬೇರೆ ಸ್ಥಳವು ಅವರಿಗೆ ಎಂದೂ ಸಿಗಲಾರದು. {58}

وَتِلْكَ ٱلْقُرَىٰٓ أَهْلَكْنَـٰهُمْ لَمَّا ظَلَمُوا۟ وَجَعَلْنَا لِمَهْلِكِهِم مَّوْعِدًۭا

ಹೌದು, [ಶಿಕ್ಷೆಗೊಳಗಾಗಿ ಭಗ್ನಾವಶೇಷಗೊಂಡ] ಇವೇ ಕೆಲವು ನಾಡುಗಳು (ಉದಾಹರಣೆಯಂತೆ ನಿಮ್ಮ ಮುಂದಿವೆ)! ಅವರು ಅನ್ಯಾಯಗಳಲ್ಲಿ ತೊಡಗಿದಾಗಿ ನಾವು ಆ ನಾಡುಗಳನ್ನು ನಾಶಗೊಳಿಸಿ ಬಿಟ್ಟೆವು. ಅವುಗಳ ನಾಶಕ್ಕೂ ನಾವು ಒಂದು ಸಮಯವನ್ನು ನಿಗದಿ ಪಡಿಸಿದ್ದೆವು. {59}

وَإِذْ قَالَ مُوسَىٰ لِفَتَىٰهُ لَآ أَبْرَحُ حَتَّىٰٓ أَبْلُغَ مَجْمَعَ ٱلْبَحْرَيْنِ أَوْ أَمْضِىَ حُقُبًۭا

[ಅಸ್‌ಹಾಬುಲ್ ಕಹ್‌ಫ್ ರ ಅಥವಾ ಗುಹೆಯವರ ಕಥೆಯಂತೆಯೇ ಪ್ರವಾದಿ ಮೂಸಾ ಮತ್ತು ಖಿದ್‌ರ್ ರವರ ನಿಜವಾದ ಕಥೆಯನ್ನೂ, ಪೈಗಂಬರರೇ, ನೀವು ಇವರಿಗೆ ತಿಳಿಸಿರಿ]. ಎರಡು ಸಮುದ್ರಗಳು ಪರಸ್ಪರ ಕೂಡುವ ಸಂಗಮ ಸ್ಥಳ ತಲುಪುವ ತನಕ [ಮತ್ತು ಅಲ್ಲಿ ಖಿದ್‌ರ್ ರನ್ನು ಭೇಟಿಯಾಗುವ ತನಕ] ನಾನು ಈ ಪ್ರಯಾಣ ನಿಲ್ಲಿಸಲಾರೆ; ಅಥವಾ (ಅವರನ್ನು ಭೇಟಿಯಾಗಲು) ಯುಗಯುಗಗಳು ಕಳೆದರೂ ನಡೆಯುತ್ತಲೇ ಇರುವೆ ಎಂದು ಪ್ರವಾದಿ ಮೂಸಾ ರು ತಮ್ಮ ಯುವ ಶಿಷ್ಯನೊಂದಿಗೆ ಹೇಳಿದ್ದ ಸಂದರ್ಭವನ್ನು ನೆನಪಿಸಿರಿ. {60}

فَلَمَّا بَلَغَا مَجْمَعَ بَيْنِهِمَا نَسِيَا حُوتَهُمَا فَٱتَّخَذَ سَبِيلَهُۥ فِى ٱلْبَحْرِ سَرَبًۭا

ಹಾಗೆ, ಎರಡು ಸಮುದ್ರಗಳ ಮಧ್ಯೆ, ಅವು ಪರಸ್ಪರ ಕೂಡುವ ಸ್ಥಳವನ್ನು ಅವರೀರ್ವರು ತಲುಪಿದಾಗ (ಉಪಹಾರಕ್ಕಾಗಿ ಸಿದ್ಧಪಡಿಸಿ) ತಮ್ಮ ಜೊತೆ ತಂದಿದ್ದ ಮೀನನ್ನು ಅವರು ಮರೆತೇ ಬಿಟ್ಟರು; ಮತ್ತು (ಆ ಪ್ರದೇಶದಲ್ಲಿ) ಅದು ನುಸುಳಿಕೊಂಡು ಸಮುದ್ರದೊಳಕ್ಕೆ ತನ್ನ ದಾರಿಯನ್ನು ಕಂಡುಕೊಂಡಿತ್ತು. {61}

فَلَمَّا جَاوَزَا قَالَ لِفَتَىٰهُ ءَاتِنَا غَدَآءَنَا لَقَدْ لَقِينَا مِن سَفَرِنَا هَـٰذَا نَصَبًۭا

ಅವರೀರ್ವರೂ ಅಲ್ಲಿಂದ ಮುಂದೆ ಸಾಗಿದಾಗ ಪ್ರವಾದಿ ಮೂಸಾ ರು ತನ್ನ ಯುವ ಶಿಷ್ಯನೊಂದಿಗೆ, ಈಗ ನಮ್ಮ ಉಪಹಾರವನ್ನು ನಮ್ಮ ಮುಂದಿಡು; ನಮ್ಮ ಈ ಪ್ರಯಾಣವು ನಮ್ಮನ್ನು ಅಪಾರವಾಗಿ ದಣಿಯುವಂತೆ ಮಾಡಿದೆ ಎಂದು ಹೇಳಿದರು. {62}

قَالَ أَرَءَيْتَ إِذْ أَوَيْنَآ إِلَى ٱلصَّخْرَةِ فَإِنِّى نَسِيتُ ٱلْحُوتَ وَمَآ أَنسَىٰنِيهُ إِلَّا ٱلشَّيْطَـٰنُ أَنْ أَذْكُرَهُۥ ۚ وَٱتَّخَذَ سَبِيلَهُۥ فِى ٱلْبَحْرِ عَجَبًۭا

ಶಿಷ್ಯ ಉತ್ತರಿಸಿದನು: ನೋಡಿದಿರಾ?! ದಣಿವಾರಿಸಲು ಆ ಬಂಡೆಯ ಬಳಿ ನಾವು ತಂಗಿದ್ದಾಗ ಮೀನಿನ ಬಗ್ಗೆ ನನಗೆ ಮರೆವು ಬಾಧಿಸಿತ್ತು. ಅದು ನನ್ನ ಜ್ಞಾಪಕದಲ್ಲಿರದಂತೆ ಮಾಡಿದ್ದು ಆ ಸೈತಾನನಲ್ಲದೆ ಬೇರಾರೂ ಅಲ್ಲ. ಅಲ್ಲಿ ಮೀನು ಬಹಳ ವಿಚಿತ್ರ ರೀತಿಯಲ್ಲಿ ಸಮುದ್ರದೊಳಕ್ಕೆ ತನ್ನ ದಾರಿ ಕಂಡುಕೊಂಡಿತ್ತು! {63}

قَالَ ذَٰلِكَ مَا كُنَّا نَبْغِ ۚ فَٱرْتَدَّا عَلَىٰٓ ءَاثَارِهِمَا قَصَصًۭا

ನಾವು ಹುಡುಕುತ್ತಿರುವುದು ಅದೇ ಸ್ಥಳವನ್ನು ಎಂದು ಮೂಸಾ ಹೇಳಿದರು; ತಕ್ಷಣ ಅವರಿಬ್ಬರೂ ತಮ್ಮ ಹೆಜ್ಜೆಗುರುತನ್ನು ಅನುಸರಿಸುತ್ತಾ (ಬಂದ ದಾರಿಯಲ್ಲೇ) ಮರಳಿ ಹೋದರು. {64}

فَوَجَدَا عَبْدًۭا مِّنْ عِبَادِنَآ ءَاتَيْنَـٰهُ رَحْمَةًۭ مِّنْ عِندِنَا وَعَلَّمْنَـٰهُ مِن لَّدُنَّا عِلْمًۭا

ಹಾಗೆ ಅವರಿಬ್ಬರೂ (ಸಂಗಮ ಸ್ಥಳವನ್ನು ತಲುಪಿದಾಗ) ನಮ್ಮ ದಾಸರ ಪೈಕಿ ಓರ್ವ ವಿಶಿಷ್ಠ ದಾಸನನ್ನು ಅಲ್ಲಿ ಭೇಟಿಯಾದರು. ಆತನಿಗೆ ನಮ್ಮ ವತಿಯಿಂದ ವಿಶೇಷ ಅನುಗ್ರಹವನ್ನೂ ಅಸಾಮಾನ್ಯ ಜ್ಞಾನವನ್ನೂ ನಾವು ದಯಪಾಲಿಸಿದ್ದೆವು. {65}

قَالَ لَهُۥ مُوسَىٰ هَلْ أَتَّبِعُكَ عَلَىٰٓ أَن تُعَلِّمَنِ مِمَّا عُلِّمْتَ رُشْدًۭا

ಮೂಸಾ ಅವರೊಂದಿಗೆ, ನಿಮಗೆ ನೀಡಲಾಗಿರುವ ಆ ಋಜುವಾದ ತಿಳುವಳಿಕೆಯಿಂದ ಸೊಲ್ಪವನ್ನು ನನಗೂ ಕಲಿಸುವುದಾದರೆ ನಾನು ನಿಮ್ಮ ಜೊತೆ ನಿಮ್ಮನ್ನು ಹಿಂಬಾಲಿಸಿ ಬರಬಹುದೇ? ಎಂದು ವಿಜ್ಞಾಪಿಸಿದರು. { 66}

قَالَ إِنَّكَ لَن تَسْتَطِيعَ مَعِىَ صَبْرًۭا

ನನ್ನ ಜೊತಗಿರಲು ಬೇಕಾದಷ್ಟು ತಾಳ್ಮೆ ನಿಮಗೆ ಖಂಡೀತಾ ಇರದು ಎಂದು ಅವರು [ಅರ್ಥಾತ್ ಖಿದ್‌ರ್ ರವರು] ಉತ್ತರಿಸಿದರು. {67}

وَكَيْفَ تَصْبِرُ عَلَىٰ مَا لَمْ تُحِطْ بِهِۦ خُبْرًۭا

ನಿಮ್ಮ ತಿಳುವಕೆಯ ಪ್ಯಾಪ್ತಿಗೆ ಒಳಪಡದ ವಿಷಯಗಳಲ್ಲಿ ನೀವು ತಾಳ್ಮೆಯಿಂದ ವರ್ತಿಸುವುದಾದರೂ ಹೇಗೆ ಎಂದು ಅವರು ಮರುಪ್ರಶ್ನಿಸಿದರು. {68}

قَالَ سَتَجِدُنِىٓ إِن شَآءَ ٱللَّهُ صَابِرًۭا وَلَآ أَعْصِى لَكَ أَمْرًۭا

ಅಲ್ಲಾಹ್ ನು ಇಚ್ಛಿಸಿದರೆ, ನನ್ನನ್ನು ಒಬ್ಬ ತಾಳ್ಮೆಯುಳ್ಳ ವ್ಯಕ್ತಿಯಾಗಿ ನೀವು ಕಾಣುವಿರಿ; ಮಾತ್ರವಲ್ಲ, (ನಿಮ್ಮ ಜೊತೆಗಿರುವಾಗ) ನಿಮ್ಮ ಯಾವ ಮಾತನ್ನೂ ನಾನು ಮೀರಲಾರೆ ಎಂದು ಮೂಸಾರು ಭರವಸೆಯಿತ್ತರು. {69}

قَالَ فَإِنِ ٱتَّبَعْتَنِى فَلَا تَسْـَٔلْنِى عَن شَىْءٍ حَتَّىٰٓ أُحْدِثَ لَكَ مِنْهُ ذِكْرًۭا

ಅದಕ್ಕೆ ಅವರು, ನೀವು ನನ್ನ ಜೊತೆ ಬರುವುದಾದರೆ ನಾನು ಏನು ಮಾಡಿದರೂ ಸ್ವತಃ ನಾನೇ ಅದನ್ನು ನಿಮಗೆ ವಿರಿಸುವ ತನಕ ನೀವು ಅದರ ಬಗ್ಗೆ ಏನೂ ಕೇಳಬಾರದು ಎಂದು ಹೇಳಿದರು. {70}

فَٱنطَلَقَا حَتَّىٰٓ إِذَا رَكِبَا فِى ٱلسَّفِينَةِ خَرَقَهَا ۖ قَالَ أَخَرَقْتَهَا لِتُغْرِقَ أَهْلَهَا لَقَدْ جِئْتَ شَيْـًٔا إِمْرًۭا

ಹಾಗೆ ಅವರಿಬ್ಬರೂ ಪ್ರಯಾಣ ಹೊರಟರು. ಮುಂದೆ ಅವರು ಒಂದು ನಾವೆಯನ್ನೇರಿದಾಗ ಆ ಮಹಾಶಯರು ಅದರಲ್ಲಿ ಒಂದು ಬಿರುಕನ್ನು ಉಂಟುಮಾಡಿದರು. ಆಗ, ನಾವೆಯಲ್ಲಿರುವವರನ್ನು ಮುಳುಗಿಸಿ ಬಿಡುವ ಉದ್ದೇಶದಿಂದ ನೀವು ಇದರಲ್ಲಿ ಬಿರುಕನ್ನು ಉಂಟು ಮಾಡಿದಿರಾ? ನೀವು ಭಯಂಕರವಾದುದನ್ನೇ ಮಾಡಿರುವಿರಿ ಎಂದು ಮೂಸಾ ಹೇಳಿದರು. {71}

قَالَ أَلَمْ أَقُلْ إِنَّكَ لَن تَسْتَطِيعَ مَعِىَ صَبْرًۭا

ನನ್ನ ಜೊತೆಗಿರುವಾಗ ನಿಮಗೆ ತಾಳ್ಮೆ ವಹಿಸಲು ಸಾಧ್ಯವಾಗದು ಎಂದು ನಾನು ನಿಮಗೆ ಮೊದಲೇ ಹೇಳಿರಲಿಲ್ಲವೇ ಎಂದು ಆ ವ್ಯಕ್ತಿ ಕೇಳಿದರು. {72}

قَالَ لَا تُؤَاخِذْنِى بِمَا نَسِيتُ وَلَا تُرْهِقْنِى مِنْ أَمْرِى عُسْرًۭا

ನಾನು ನಿಮ್ಮ ಉಪದೇಶ ಮರೆತು ಬಿಟ್ಟ ಕಾರಣಕ್ಕಾಗಿ ನನ್ನನ್ನು ಹಾಗೆ ದಂಡಿಸಬೇಡಿ; ಮತ್ತು ನನ್ನ ವಿಷಯದಲ್ಲಿ ಅಷ್ಟೊಂದು ಕಠೋರವಾಗಿ ವರ್ತಿಸಬೇಡಿ ಎಂದು ಮೂಸಾ ಭಿನ್ನವಿಸಿದರು. {73}

فَٱنطَلَقَا حَتَّىٰٓ إِذَا لَقِيَا غُلَـٰمًۭا فَقَتَلَهُۥ قَالَ أَقَتَلْتَ نَفْسًۭا زَكِيَّةًۢ بِغَيْرِ نَفْسٍۢ لَّقَدْ جِئْتَ شَيْـًۭٔا نُّكْرًۭا

ನಂತರ ಅವರಿಬ್ಬರೂ ಪ್ರಯಾಣ ಮುಂದುವರಿಸಿದರು. ಮುಂದೆ ಒಬ್ಬ ಬಾಲಕನನ್ನು ಅವರು ಭೇಟಿಯಾದಾಗ, ಆ ಮಹಾಶಯರು ಆತನನ್ನು ಕೊಂದು ಬಿಟ್ಟರು! ಆಗ ಮೂಸಾ ರು ಅವರೊಡನೆ, ಏನು? ಯಾರನ್ನೂ ಕೊಲ್ಲದ ಒಬ್ಬ ಅಮಾಯಕ ಜೀವಿಯನ್ನು ನೀವು ಹೀಗೆ ಕೊಂದು ಬಿಡುವುದೇ? ಬಹಳ ನಿಕೃಷ್ಟವಾದ ಕೆಲಸವನ್ನೇ ನೀವು ಮಾಡಿರುವಿರಿ ಎಂದು ಹೇಳಿದರು. {74}.

قَالَ أَلَمْ أَقُل لَّكَ إِنَّكَ لَن تَسْتَطِيعَ مَعِىَ صَبْرًۭا

✽16✽ ನನ್ನ ಜೊತೆಗಿರುವಾಗ ನಿಮಗೆ ತಾಳ್ಮೆ ವಹಿಸಲು ಸಾಧ್ಯವಾಗದು ಎಂದು ನಾನು ನಿಮಗೆ ಮೊದಲೇ ಹೇಳಿರಲಿಲ್ಲವೇ ಎಂದು ಆ ವ್ಯಕ್ತಿ ಪುನಃ ಕೇಳಿದರು. {75}

قَالَ إِن سَأَلْتُكَ عَن شَىْءٍۭ بَعْدَهَا فَلَا تُصَـٰحِبْنِى ۖ قَدْ بَلَغْتَ مِن لَّدُنِّى عُذْرًۭا

ಇನ್ನು ಮುಂದೆ ಯಾವುದೇ ವಿಷಯದ ಬಗ್ಗೆ ನಾನು ನಿಮ್ಮೊಡನೆ ಏನನ್ನಾದರೂ ಪ್ರಶ್ನಿಸಿದರೆ ನೀವು ನನ್ನನ್ನು ಜೊತೆಗಿರಿಸಿಕೊಳ್ಳ ಬೇಡಿ; ನನ್ನನ್ನು (ನಿಮ್ಮಿಂದ ಬೇರ್ಪಡಿಸಲು) ಸಾಕಷ್ಟು ಕಾರಣ ನಿಮಗೆ ಅದಾಗಲೇ ಸಿಕ್ಕಿಯಾಗಿದೆ ಎಂದು ಮೂಸಾ ಹೇಳಿದರು. {76}

فَٱنطَلَقَا حَتَّىٰٓ إِذَآ أَتَيَآ أَهْلَ قَرْيَةٍ ٱسْتَطْعَمَآ أَهْلَهَا فَأَبَوْا۟ أَن يُضَيِّفُوهُمَا فَوَجَدَا فِيهَا جِدَارًۭا يُرِيدُ أَن يَنقَضَّ فَأَقَامَهُۥ ۖ قَالَ لَوْ شِئْتَ لَتَّخَذْتَ عَلَيْهِ أَجْرًۭا

ತರುವಾಯ ಅವರಿಬ್ಬರೂ ಮುಂದೆ ನಡೆದರು. ಕೊನೆಗೆ ಅವರು ಒಂದು ನಾಡನ್ನು ತಲುಪಿದಾಗ, ಆ ನಾಡಿನ ಜನರೊಡನೆ ಆಹಾರ ನೀಡುವಂತೆ ಕೇಳಿಕೊಂಡರು. ಆದರೆ ಅವರಿಗೆ ಆತಿಥ್ಯ ನೀಡಲು ನಾಡಿನವರು ನಿರಾಕರಿಸಿ ಬಿಟ್ಟರು! ಅಲ್ಲಿ ಅವರು ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಒಂದು ಗೋಡೆಯನ್ನು ಕಂಡರು. ತಕ್ಷಣ ಆ ಮಹಾಶಯರು ಅದನ್ನು ದುರಸ್ತಿಕೊಳಿಸಿ ನೆಟ್ಟಗೆ ನಿಲ್ಲಿಸಿದರು. ಆಗ ಮೂಸಾ ರು, ನೀವು ಬಯಸಿದ್ದರೆ ಈ ಕೆಲಸಕ್ಕಾಗಿ ಪ್ರತಿಫಲ ಪಡೆಯಬಹುದಿತ್ತು ಎಂದು ಹೇಳಿದರು. {77}

قَالَ هَـٰذَا فِرَاقُ بَيْنِى وَبَيْنِكَ ۚ سَأُنَبِّئُكَ بِتَأْوِيلِ مَا لَمْ تَسْتَطِع عَّلَيْهِ صَبْرًا

ಇದು (ನಿಮ್ಮ ಈ ಮಾತು) ನಮ್ಮಿಬ್ಬರ ಒಡನಾಟವನ್ನು ಬೇರ್ಪಡಿಸಿ ಬಿಟ್ಟಿದೆ! ನಿಮಗೆ ತಡಕೊಳ್ಳಲಾಗದ ವಿಷಯಗಳ ಮರ್ಮವನ್ನು ನಾನೀಗ ನಿಮಗೆ ತಿಳಿಸುವೆ ಎಂದು ಆ ಮಹಾಶಯರು ಹೇಳಿದರು. {78}

أَمَّا ٱلسَّفِينَةُ فَكَانَتْ لِمَسَـٰكِينَ يَعْمَلُونَ فِى ٱلْبَحْرِ فَأَرَدتُّ أَنْ أَعِيبَهَا وَكَانَ وَرَآءَهُم مَّلِكٌۭ يَأْخُذُ كُلَّ سَفِينَةٍ غَصْبًۭا

ಆ ನಾವೆಯ ವಿಷಯವೆಂದರೆ, ಅದು ಸಮುದ್ರದಲ್ಲಿ ದುಡಿಯುತ್ತಿದ್ದ ಕೆಲವು ಬಡ ವ್ಯಕ್ತಿಗಳಿಗೆ ಸೇರಿದ ನಾವೆಯಾಗಿತ್ತು. ನಾನು ಅದನ್ನು ದೋಷಪೂರಿತ ಗೊಳಿಸಲು ಬಯಸಿದೆನು. ಏಕೆಂದರೆ ಅವರನ್ನು ಒಬ್ಬ (ದುಷ್ಟ) ದೊರೆ ಹಿಂಬಾಲಿಸುತ್ತಿದ್ದು, (ಸುಸ್ಥಿತಿಯಲ್ಲಿರುವ) ಎಲ್ಲಾ ನಾವೆಗಳನ್ನು ಆತನು ಬಲಂತವಾಗಿ ವಶಪಡಿಸಿಕೊಳ್ಳುತ್ತಿದ್ದನು. {79}

وَأَمَّا ٱلْغُلَـٰمُ فَكَانَ أَبَوَاهُ مُؤْمِنَيْنِ فَخَشِينَآ أَن يُرْهِقَهُمَا طُغْيَـٰنًۭا وَكُفْرًۭا

ಆ ಬಾಲಕನ ವಿಷಯವೆಂದರೆ, ಆತನ ಮಾತಾಪಿತರಿಬ್ಬರೂ ವಿಶ್ವಾಸಿಗಳಾಗಿದ್ದರು. (ದೊಡ್ಡವನಾಗಿ) ಆತ ವಿದ್ರೋಹ ಮತ್ತು ಕೃತಘ್ನತೆ ತೋರಿ ಅವರೊಂದಿಗೆ ಕಠೋರವಾಗಿ ವರ್ತಿಸಲಿರುವ ಬಗ್ಗೆ ನಮಗೆ ಆತಂಕ ಕಾಡಿತ್ತು. {80}

فَأَرَدْنَآ أَن يُبْدِلَهُمَا رَبُّهُمَا خَيْرًۭا مِّنْهُ زَكَوٰةًۭ وَأَقْرَبَ رُحْمًۭا

ಆದ್ದರಿಂದ ಅವರ ಕರ್ತಾರನು, ಆತನ ಬದಲಿಗೆ ಅವರಿಗೆ ಆತನಿಗಿಂತ ಹೆಚ್ಚು ಸಚ್ಚರಿತನೂ, ದಯೆ ತೋರುವ ವಿಷಯದಲ್ಲಿ ಆತನಿಗಿಂತ ಮಿಗಿಲಾದವನೂ ಆದ ಬೇರೆ ಸಂತಾನವನ್ನು ದಯಪಾಲಿಸಲಿ ಎಂದು ನಾವು ಬಯಸಿದೆವು. {81}

وَأَمَّا ٱلْجِدَارُ فَكَانَ لِغُلَـٰمَيْنِ يَتِيمَيْنِ فِى ٱلْمَدِينَةِ وَكَانَ تَحْتَهُۥ كَنزٌۭ لَّهُمَا وَكَانَ أَبُوهُمَا صَـٰلِحًۭا فَأَرَادَ رَبُّكَ أَن يَبْلُغَآ أَشُدَّهُمَا وَيَسْتَخْرِجَا كَنزَهُمَا رَحْمَةًۭ مِّن رَّبِّكَ ۚ وَمَا فَعَلْتُهُۥ عَنْ أَمْرِى ۚ ذَٰلِكَ تَأْوِيلُ مَا لَمْ تَسْطِع عَّلَيْهِ صَبْرًۭا

ಆ ಗೋಡೆಯ ವಿಷಯವೆಂದರೆ, ಅದು ಆ ನಾಡಿನವರಾದ ಇಬ್ಬರು ಅನಾಥ ಬಾಲಕರಿಗೆ ಸೇರಿದ್ದಾಗಿತ್ತು. ಅದರಡಿಯಲ್ಲಿ ಅವರಿಗೆ ಸಿಗಬೇಕಿದ್ದ ಒಂದು ನಿಧಿಯನ್ನು ಇರಿಸಲಾಗಿತ್ತು. (ಆ ನಿಧಿಯಯನ್ನು ಅವರಿಗಾಗಿ ಇರಿಸಿದ್ದ) ಅವರ ತಂದೆ ಓರ್ವ ಸಜ್ಜನ ವ್ಯಕ್ತಿಯಾಗಿದ್ದರು. ಆ ಅನಾಥರಿಬ್ಬರೂ ಪ್ರಬುದ್ಧ ವಯಸ್ಸಿಗೆ ತಲುಪಿ ಆ ನಿಧಿಯನ್ನು ಸ್ವತಃ ಹೊರತೆಗೆಯ ಬೇಕೆಂಬುದು ನಿಮ್ಮ ಕರ್ತಾರನ ಇರಾದೆಯಾಗಿತ್ತು. ಎಲ್ಲವೂ ನಿಮ್ಮ ಕರ್ತಾರನ ಕೃಪೆಯಾಗಿದೆ. ಇವ್ಯಾವುದನ್ನೂ ನಾನು ನನಗೆ ತೋಚಿದಂತೆ ಮಾಡಿರಲಿಲ್ಲ, [ಬದಲಾಗಿ ನಿಮ್ಮ ಕರ್ತಾರನ ಇಚ್ಚೆಯಂತೆ ಮಾಡಿರುವೆನು]. ಇದಿಷ್ಟೇ ನಿಮಗೆ ತಡಕೊಳ್ಳಲು ಸಾಧ್ಯವಾಗದ ವಿಷಯಗಳ ಹಿಂದಿನ ವಾಸ್ತವಿಕತೆ! {82}

وَيَسْـَٔلُونَكَ عَن ذِى ٱلْقَرْنَيْنِ ۖ قُلْ سَأَتْلُوا۟ عَلَيْكُم مِّنْهُ ذِكْرًا

ಪೈಗಂಬರರೇ, ಜನರು ನಿಮ್ಮೊಂದಿಗೆ ದುಲ್‌-ಕರ್ನೈನ್ (ದೊರೆಯ) ಬಗ್ಗೆ ತಿಳಿಸುವಂತೆ ಕೇಳುತ್ತಿದ್ದಾರೆ. ಅವರಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ನಾನು ನಿಮಗೆ ತಿಳಿಸಿ ಬಿಡುತ್ತೇನೆ ಎಂದು ಅವರೊಂದಿಗೆ ಹೇಳಿರಿ. {83}

إِنَّا مَكَّنَّا لَهُۥ فِى ٱلْأَرْضِ وَءَاتَيْنَـٰهُ مِن كُلِّ شَىْءٍۢ سَبَبًۭا

ನಾವು ಅವರಿಗೆ ಸಕಲ ರೀತಿಯ ಅಧಿಕಾರ ನೀಡಿ ಭೂಮಿಯಲ್ಲಿ ನೆಲೆಗೊಳಿಸಿದ್ದೆವು; ಮಾತ್ರವಲ್ಲ ಸಿರಿ, ಸಂಪತ್ತು, ಸಂಪನ್ಮೂಲಗಳೆಲ್ಲವನ್ನೂ ನಾವು ಅವರಿಗೆ ದಯಪಾಲಿಸಿದ್ದೆವು. {84}

فَأَتْبَعَ سَبَبًا

ಹಾಗೆ (ಒಂದು ದಿನ) ಅವರು ಒಂದು ಪರ್ಯಟನೆಗೆ ಹೊರಟರು. {85}

حَتَّىٰٓ إِذَا بَلَغَ مَغْرِبَ ٱلشَّمْسِ وَجَدَهَا تَغْرُبُ فِى عَيْنٍ حَمِئَةٍۢ وَوَجَدَ عِندَهَا قَوْمًۭا ۗ قُلْنَا يَـٰذَا ٱلْقَرْنَيْنِ إِمَّآ أَن تُعَذِّبَ وَإِمَّآ أَن تَتَّخِذَ فِيهِمْ حُسْنًۭا

ಸೂರ್ಯನು ಅಸ್ತಮಿಸುವಲ್ಲಿಗೆ ತಲುಪಿದಾಗ ಅವರು ಅದನ್ನು ಒಂದು ಕೆಸರುಮಯ ಗಾಢ ನೀರಿನಲ್ಲಿ ಮುಳುಗುತ್ತಿರುವುವಂತೆ ಕಂಡರು; ಮತ್ತು ಅದರ ಸಮೀಪದಲ್ಲೇ ಒಂದು ಜನಸಮೂಹ ಬೀಡುಬಿಟ್ಟಿರುವುದನ್ನು ಕಂಡರು. ಆಗ ನಾವು ಹೇಳಿದೆವು: ಓ ದುಲ್-ಕರ್ನೈನ್, [ಆ ಜನರ ಮೇಲೆ ನಿಮಗೆ ಅಧಿಕಾರ ದೊರಕಿದೆ. ಹಾಗಿರುವಾಗ] ಬೇಕಾದರೆ ನೀವು ಅವರನ್ನು ಶಿಕ್ಷೆಗೆ ಗುರಿಪಡಿಸಬಹುದು ಅಥವಾ ಅವರೊಂದಿಗೆ ನೀವು ಉತ್ತಮ ರೀತಿಯಲ್ಲಿ ವರ್ತಿಸಬಹುದು. (ನೀವೇನು ಮಾಡುವಿರಿ?) {86}

قَالَ أَمَّا مَن ظَلَمَ فَسَوْفَ نُعَذِّبُهُۥ ثُمَّ يُرَدُّ إِلَىٰ رَبِّهِۦ فَيُعَذِّبُهُۥ عَذَابًۭا نُّكْرًۭا

ದುಲ್-ಕರ್ನೈನ್ ಉತ್ತರಿಸಿದರು: ಅವರ ಪೈಕಿ ಯಾರು ಅನ್ಯಾಯ ಮಾಡುವನೋ ಅವನನ್ನು ನಾವು ಶಿಕ್ಷೆಗೆ ಗುರಿಪಡಿಸುವೆವು. ತರುವಾಯ ಅವನ ಕರ್ತಾರನ ಸನ್ನಿಧಿಗೆ ಅವನನ್ನು ಮರಳಿಸಲಾದಾಗ ಆ ಕರ್ತಾರನೂ ಆತನನ್ನು ಕೆಟ್ಟದಾಗಿ ಶಿಕ್ಷಿಸಲಿರುವನು. {87}

وَأَمَّا مَنْ ءَامَنَ وَعَمِلَ صَـٰلِحًۭا فَلَهُۥ جَزَآءً ٱلْحُسْنَىٰ ۖ وَسَنَقُولُ لَهُۥ مِنْ أَمْرِنَا يُسْرًۭا

ಮತ್ತು ಅವರ ಪೈಕಿ ವಿಶ್ವಾಸಿಯಾಗಿದ್ದುಕೊಂಡು ಸತ್ಕಾರ್ಯಗಳನ್ನೂ ಮಾಡುವವನಿಗೆ (ಅವನ ಕರ್ತಾರನ ಬಳಿ) ಉತ್ತಮವಾದ ಪ್ರತಿಫಲ ಲಬಿಸಲಿದೆ. ನಾವೂ ಸಹ ಅಂತಹವನೊಂದಿಗೆ ವ್ಯವಹರಿಸುವಾಗ ನಮ್ಮ ಆದೇಶಗಳಲ್ಲಿ ಸುಲಭವಾದುದನ್ನೇ ಆದೇಶಿಸುತ್ತೇವೆ. {88}

ثُمَّ أَتْبَعَ سَبَبًا

ತರುವಾಯ ದುಲ್‌-ಕರ್ನೈನ್ ರು ಬೇರೊಂದು ಪರ್ಯಟನೆಗೆ ಹೊರಟರು! {89}

حَتَّىٰٓ إِذَا بَلَغَ مَطْلِعَ ٱلشَّمْسِ وَجَدَهَا تَطْلُعُ عَلَىٰ قَوْمٍۢ لَّمْ نَجْعَل لَّهُم مِّن دُونِهَا سِتْرًۭا

ಕೊನೆಗೆ ಅವರು ಸೂರ್ಯನು ಉದಯಿಸುವಲ್ಲಿಗೆ ತಲುಪಿದಾಗ, ಸೂರ್ಯನಿಂದ ರಕ್ಷಣೆ ಪಡೆಯಲು ನಾವು ಸೂರು ಒದಗಿಸದ ಒಂದು ಜನಾಂಗದ ಮೇಲೆ ಅದು ಉದಯಿಸುತ್ತಿರುವುದನ್ನು ಕಂಡರು. {90}

كَذَٰلِكَ وَقَدْ أَحَطْنَا بِمَا لَدَيْهِ خُبْرًۭا

ಹಾಗಿತ್ತು ದುಲ್‌-ಕರ್ನೈನ್ ರ ಪರ್ಯಟನೆ. ಅವರ ಬಳಿಯಿದ್ದ ಎಲ್ಲಾ ಅರಿವಿನ ಬಗ್ಗೆ ನಮಗೆ ಚೆನ್ನಾಗಿ ತಿಳಿದಿತ್ತು. {91}

ثُمَّ أَتْبَعَ سَبَبًا

ನಂತರ ದುಲ್‌-ಕರ್ನೈನ್ ರು ಮತ್ತೊಂದು ಪರ್ಯಟನೆಗೆ ಹೊರಟರು! {92}

حَتَّىٰٓ إِذَا بَلَغَ بَيْنَ ٱلسَّدَّيْنِ وَجَدَ مِن دُونِهِمَا قَوْمًۭا لَّا يَكَادُونَ يَفْقَهُونَ قَوْلًۭا

ಸಂಚರಿಸುತ್ತಾ ಅವರು ಎರಡು ಬೆಟ್ಟಗಳ ನಡುವಿನ (ಕಣಿವೆ ಪ್ರದೇಶಕ್ಕೆ) ತಲುಪದಾಗ ಅಲ್ಲಿ ಯಾವ ಮಾತೂ ಸುಲಭವಾಗಿ ಅರ್ಥವಾಗದ ಒಂದು ಜನಾಂಗವನ್ನು ಕಂಡರು. {93}

قَالُوا۟ يَـٰذَا ٱلْقَرْنَيْنِ إِنَّ يَأْجُوجَ وَمَأْجُوجَ مُفْسِدُونَ فِى ٱلْأَرْضِ فَهَلْ نَجْعَلُ لَكَ خَرْجًا عَلَىٰٓ أَن تَجْعَلَ بَيْنَنَا وَبَيْنَهُمْ سَدًّۭا

ಅವರು ನಿವೇದಿಸಿದರು: ಓ ದುಲ್‌-ಕರ್ನೈನ್, ನಿಜವಾಗಿಯೂ ಈ ಯಅಜೂಜ್ ಮತ್ತು ಮಅಜೂಜ್ ನ ವಂಶಸ್ಥರು ಈ ನೆಲಕ್ಕೆ ಲಗ್ಗೆಯಿಟ್ಟು ಅಶಾಂತಿಯನ್ನು ಉಂಟುಮಾಡುತ್ತಿದ್ದಾರೆ. ನಾವು ನಿಮಗೇನಾದರೂ ಕಪ್ಪಕಾಣಿಕೆ ಕೊಟ್ಟರೆ ನಮ್ಮ ಹಾಗೂ ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸಲು ನಿಮಗೆ ಸಾಧ್ಯವೇ? {94}

قَالَ مَا مَكَّنِّى فِيهِ رَبِّى خَيْرٌۭ فَأَعِينُونِى بِقُوَّةٍ أَجْعَلْ بَيْنَكُمْ وَبَيْنَهُمْ رَدْمًا

ಅವರು ಉತ್ತರಿಸಿದರು: ನೀವು ಕೊಡುವ ಕಪ್ಪಕಾಣಿಕೆಗಿಂತ ನನ್ನ ಕರ್ತಾರನು ನನ್ನ ಸ್ವಾಧೀನಕ್ಕೆ ಏನೆಲ್ಲ ಕೊಟ್ಟಿರುವನೋ ಅದುವೇ ನನಗೆ ಲೇಸು! ಆದ್ದರಿಂದ ನೀವು ತೋಳ್ಬಲದ ಮೂಲಕ ನನಗೆ ನೆರವಾದರೆ ಸಾಕು; ನಿಮ್ಮ ಮತ್ತು ಆ ಜನರ ನಡುವೆ ಬಲಿಷ್ಟವಾದ ಒಂದು ಅಡ್ಡಗೋಡೆಯನ್ನು ನಾನು ನಿರ್ಮಿಸಿ ಕೊಡುವೆನು. {95}

ءَاتُونِى زُبَرَ ٱلْحَدِيدِ ۖ حَتَّىٰٓ إِذَا سَاوَىٰ بَيْنَ ٱلصَّدَفَيْنِ قَالَ ٱنفُخُوا۟ ۖ حَتَّىٰٓ إِذَا جَعَلَهُۥ نَارًۭا قَالَ ءَاتُونِىٓ أُفْرِغْ عَلَيْهِ قِطْرًۭا

ನನಗೀಗ ಕಬ್ಬಿಣದ ತುಂಡುಗಳನ್ನು ತಂದು ಕೊಡಿರಿ ಎಂದರು. ಹಾಗೆ (ಕಬ್ಬಿಣದ ಆ ಗೋಡೆಯ ಎತ್ತರ) ಎರಡೂ ಬೆಟ್ಟಗಳ ಎತ್ತರಕ್ಕೆ ಸಮವಾದಾಗ ಈಗ (ಬೆಂಕಿಯುರಿಸಿ) ಗಾಳಿ ಹಾಕಿರಿ ಎಂದು ಆದೇಶಿಸಿದರು. ಆ ಗೋಡೆಯು ಉರಿದು ಕೆಂಡವಾದಾಗ, ಈಗ ಕುದಿಯುವ ತಾಮ್ರವನ್ನು ತನ್ನಿರಿ, ಇದರ ಮೇಲೆ ಸುರಿಯುತ್ತೇನೆ ಎಂದು ಹೇಳಿದರು. {96}

فَمَا ٱسْطَـٰعُوٓا۟ أَن يَظْهَرُوهُ وَمَا ٱسْتَطَـٰعُوا۟ لَهُۥ نَقْبًۭا

(ತಡೆಗೋಡೆ ಸಿದ್ಧವಾದಾಗ ದುಷ್ಟರಾದ ಯಅಜೂಜ್ ಮತ್ತು ಮಅಜೂಜ್ ವಂಶಜರಿಗೆ) ಅದನ್ನು ಏರಿ ಇತ್ತ ದಾಟಲು ಸಾಧ್ಯವಿರಲಿಲ್ಲ; ಅದರಲ್ಲಿ ಕನ್ನ ಕೊರೆಯುವುದಂತು ಅವರಿಗೆ ಸಾಧ್ಯವೇ ಇಲ್ಲದ ವಿಷಯವಾಗಿತ್ತು. {97}

قَالَ هَـٰذَا رَحْمَةٌۭ مِّن رَّبِّى ۖ فَإِذَا جَآءَ وَعْدُ رَبِّى جَعَلَهُۥ دَكَّآءَ ۖ وَكَانَ وَعْدُ رَبِّى حَقًّۭا

ಇದು [ಅರ್ಥಾತ್ ಯಅಜೂಜ್ ಮಅಜೂಜ್ ರ ಉಪಟಳವನ್ನು ತಡೆಯಲು ನಿರ್ಮಿಸಲಾದ ಈ ಗೋಡೆಯು] ನನ್ನ ಕರ್ತಾರನ ಕೃಪೆಯಾಗಿದೆ! ನನ್ನ ಕರ್ತಾರನು (ಇದರ ಬಗ್ಗೆ) ಮಾಡಿದ ವಾಗ್ದಾನದ ಸಮಯ ಪೂರ್ತಿಯಾದಾಗ ಅವನು ಇದನ್ನು ನುಚ್ಚುನೂರು ಗೊಳಿಸಲಿರುವನು. ನನ್ನ ಕರ್ತಾರನು ಮಾಡುವ ವಾಗ್ದಾನವು ಸದಾ ಸತ್ಯವೇ ಆಗಿರುತ್ತದೆ ಎಂದು ದುಲ್‌-ಕರ್ನೈನ್ ಹೇಳಿದರು! {98}

وَتَرَكْنَا بَعْضَهُمْ يَوْمَئِذٍۢ يَمُوجُ فِى بَعْضٍۢ ۖ وَنُفِخَ فِى ٱلصُّورِ فَجَمَعْنَـٰهُمْ جَمْعًۭا

ಅಂದು [ಅರ್ಥಾತ್ ಆ ತಡೆಗೋಡೆ ನುಚ್ಚುನೂರಾಗಿ ಯಅಜೂಜ್ ಮಅಜೂಜ್ ಗಳ ಬಿಡುಗಡೆಯಾದಾಗ] ಮನುಷ್ಯರ ಗುಂಪುಗಳು ಕಡಲ ತೆರೆಗಳಂತೆ ಪರಸ್ಪರ ಅಪ್ಪಳಿಸಿ ಒಂದರೊಳಗೆ ಮತ್ತೊಂದು [ಆಕ್ರಮಣ ಮಾಡುತ್ತಾ] ನುಗ್ಗಲು ನಾವು ಬಿಟ್ಟು ಬಿಡುವೆವು. ಕೊನೆಗೆ (ವಿಚಾರಣೆಯ ದಿನ ಬಂದಾಗ) ಕಹಳೆ ಊದಲಾಗುವುದು; ಹಾಗೂ (ವಿಚಾರಣೆಗಾಗಿ) ಎಲ್ಲರನ್ನೂ ಒಟ್ಟು ಸೇರಿಸಲಾಗುವುದು. {99}

وَعَرَضْنَا جَهَنَّمَ يَوْمَئِذٍۢ لِّلْكَـٰفِرِينَ عَرْضًا

(ನರಕ ಶಿಕ್ಷೆಯನ್ನು) ನಿರಾಕರಿಸಿದವರ ಮುಂದೆ ನಾವು ಅಂದು ಸಾಕ್ಷಾತ್ ನರಕವವನ್ನೇ ತಂದಿಡುವೆವು. {100}

ٱلَّذِينَ كَانَتْ أَعْيُنُهُمْ فِى غِطَآءٍ عَن ذِكْرِى وَكَانُوا۟ لَا يَسْتَطِيعُونَ سَمْعًا

ಅವರು ಯಾರೆಂದರೆ, ನನ್ನ ಉಪದೇಶಗಳನ್ನು [ಅಲ್ಲಗಳೆದು ಕಣ್ಣು ಮುಚ್ಚಿಕೊಂಡ ಕಾರಣ] ಕಣ್ಣಿಗೆ ಪರದೆ ಬಿದ್ದವರು; ಉಪದೇಶಗಳನ್ನು ಆಲಿಸಿ (ಅರ್ಥಮಾಡಿಕೊಳ್ಳುವುದೂ) ಅವರಿಗೆ ಸಾಧ್ಯವಿರಲಿಲ್ಲ. {101}

أَفَحَسِبَ ٱلَّذِينَ كَفَرُوٓا۟ أَن يَتَّخِذُوا۟ عِبَادِى مِن دُونِىٓ أَوْلِيَآءَ ۚ إِنَّآ أَعْتَدْنَا جَهَنَّمَ لِلْكَـٰفِرِينَ نُزُلًۭا

ನನ್ನನ್ನು ಬಿಟ್ಟು (ನನ್ನದೇ ಸೃಷ್ಟಿಗಳಾದ) ನನ್ನ ದಾಸರನ್ನು ತಮ್ಮ ರಕ್ಷಕರನ್ನಾಗಿ ಮಾಡಿಕೊಳ್ಳಬಹುದೆಂದು (ನಮ್ಮ ಉಪದೇಶವನ್ನು) ನಿರಾಕರಿಸಿದವರು ಭಾವಿಸಿರುವರೇ? [ಅದು ಕೇವಲ ಅವರ ಭ್ರಮೆಯಷ್ಟೆ]. ಧಿಕ್ಕಾರ ತೋರುವ ಅಂತಹವರ ಆಥಿತ್ಯಕ್ಕಾಗಿ ನರಕವನ್ನು ನಾವು ಸಜ್ಜುಗೊಳಿಸಿ ಇಟ್ಟಿರುವವು. {102}

قُلْ هَلْ نُنَبِّئُكُم بِٱلْأَخْسَرِينَ أَعْمَـٰلًا

ಕರ್ಮಗಳ ವಿಷಯದಲ್ಲಿ ಹೆಚ್ಚು ನಷ್ಟದಲ್ಲಿರುವವರ ಕುರಿತು ನಾವು ನಿಮಗೆ ತಿಳಿಸಿ ಕೊಡಲೇ ಎಂದು ಪೈಗಂಬರರೇ, ನೀವು ಅವರನ್ನು ಕೇಳಿರಿ. {103}

ٱلَّذِينَ ضَلَّ سَعْيُهُمْ فِى ٱلْحَيَوٰةِ ٱلدُّنْيَا وَهُمْ يَحْسَبُونَ أَنَّهُمْ يُحْسِنُونَ صُنْعًا

ಅಂತಹವರು ಯಾರೆಂದರೆ, ತಮ್ಮೆಲ್ಲಾ ಶ್ರಮಗಳನ್ನು ಕೇವಲ ಲೌಕಿಕವಾದ ಬುದುಕಿಗೆ ಬೇಕಾಗಿ ವ್ಯರ್ಥಗೊಳಿಸಿಯೂ ತಾವು ಮಾಡುತ್ತಿರುವುದು ಅತ್ಯಂತ ಒಳ್ಳೆಯ ಕೆಲಸವೆಂಬ ಭ್ರಮೆಯಲ್ಲಿರುವವರು! {104}

أُو۟لَـٰٓئِكَ ٱلَّذِينَ كَفَرُوا۟ بِـَٔايَـٰتِ رَبِّهِمْ وَلِقَآئِهِۦ فَحَبِطَتْ أَعْمَـٰلُهُمْ فَلَا نُقِيمُ لَهُمْ يَوْمَ ٱلْقِيَـٰمَةِ وَزْنًۭا

ತಮ್ಮ ಒಡೆಯನ ವಚನಗಳನ್ನು ಹಾಗೂ ಅವನನ್ನು ಭೇಟಿಯಾಗಲಿರುವ ವಾಸ್ತವವನ್ನು ನಿರಾಕರಿಸಿದವರೂ ಅವರೇ ಆಗಿರುವರು! ಆದ್ದರಿಂದಲೇ ಅವರು ಮಾಡಿದ ಸತ್ಕರ್ಮಗಳೂ ನಿರರ್ಥಕವಾಗಿ ಹೋದವು. ನಾವು ಅವರಿಗಾಗಿ ಪುನರುತ್ಥಾನ ದಿನ ಯಾವ ಪ್ರಾಮುಖ್ಯತೆಯನ್ನೂ ನೀಡಲಾರೆವು. {105}

ذَٰلِكَ جَزَآؤُهُمْ جَهَنَّمُ بِمَا كَفَرُوا۟ وَٱتَّخَذُوٓا۟ ءَايَـٰتِى وَرُسُلِى هُزُوًا

ಆ ನರಕ! ಧಿಕ್ಕಾರ ತೋರಿದ್ದಕ್ಕಾಗಿ ಹಾಗೂ ನಮ್ಮ ವಚನಗಳನ್ನೂ ದೂತರುಗಳನ್ನೂ ಗೇಲಿ ಮಾಡಿದ್ದಕ್ಕಾಗಿ ಅದುವೇ ಅವರಿಗಿರುವ ಪ್ರತಿಫಲ! {106}

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ كَانَتْ لَهُمْ جَنَّـٰتُ ٱلْفِرْدَوْسِ نُزُلًا

[ಅದಕ್ಕೆ ವ್ಯತಿರಿಕ್ತವಾಗಿ, ಅಲ್ಲಾಹ್ ನ ವಚನಗಳ ಮುಂದೆ ತಲೆ ತಗ್ಗಿಸಿ, ಅದರಲ್ಲಿ] ವಿಶ್ವಾಸವಿಟ್ಟು, ಜೊತೆಗೆ ಸತ್ಕರ್ಮಗಳನ್ನೂ ಮಾಡಿದವರ ಆಥಿತ್ಯಕ್ಕಾಗಿ ಫಿರ್‌ದೌಸ್ ಎಂಬ ಸ್ವರ್ಗೋದ್ಯಾನಗಳು ಖಂಡಿತವಾಗಿ ಸಿದ್ಧವಿದೆ. {107}

خَـٰلِدِينَ فِيهَا لَا يَبْغُونَ عَنْهَا حِوَلًۭا

ಅವರು ಅಲ್ಲಿ ಸದಾಕಾಲ ನೆಲೆಸಲಿರುವರು; ಅಲ್ಲಿಂದ (ತಮ್ಮ ನೆಲೆಯನ್ನು) ಬೇರೆಡೆಗೆ ಬದಲಿಸಿಕೊಳ್ಳಲು ಅವರು ಬಯಸಲಾರರು! {108}

قُل لَّوْ كَانَ ٱلْبَحْرُ مِدَادًۭا لِّكَلِمَـٰتِ رَبِّى لَنَفِدَ ٱلْبَحْرُ قَبْلَ أَن تَنفَدَ كَلِمَـٰتُ رَبِّى وَلَوْ جِئْنَا بِمِثْلِهِۦ مَدَدًۭا

ಪೈಗಂಬರರೇ, ಅವರೊಂದಿಗೆ ಹೇಳಿರಿ: ನನ್ನ ಕರ್ತಾರನ ಮಾತುಗಳನ್ನು [ಅರ್ಥಾತ್ ಸಮಸ್ತ ವಿಶ್ವದ ಸೃಷ್ಟಿ, ಪರಿಪಾಲನೆ, ವಿಶ್ವ ವ್ಯವಸ್ಥೆಗೆ ಸಂಬಂಧಿಸಿದ ಸಕಲ ದೈವಿಕ ಆದೇಶಗಳನ್ನು ಬರೆಯಲು] ಒಂದು ವೇಳೆ ಇಡೀ ಸಮುದ್ರವನ್ನೇ ಶಾಯಿಯಾಗಿ ಮಾಡಿಕೊಂಡರೂ, ನನ್ನ ಕರ್ತಾರನ ಮಾತುಗಳು ಮುಗಿಯುವ ಮುನ್ನವೇ ಅದು ಬತ್ತಿ ಹೋಗುತ್ತಿತ್ತು; ಮಾತ್ರವಲ್ಲ, ಅಂತಹದ್ದೇ ಮತ್ತೊಂದು ಸಮುದ್ರವನ್ನು ನೆರವಿಗಾಗಿ ನಾವು ಒದಗಿಸಿದರೂ ಸರಿಯೇ! {109}

قُلْ إِنَّمَآ أَنَا۠ بَشَرٌۭ مِّثْلُكُمْ يُوحَىٰٓ إِلَىَّ أَنَّمَآ إِلَـٰهُكُمْ إِلَـٰهٌۭ وَٰحِدٌۭ ۖ فَمَن كَانَ يَرْجُوا۟ لِقَآءَ رَبِّهِۦ فَلْيَعْمَلْ عَمَلًۭا صَـٰلِحًۭا وَلَا يُشْرِكْ بِعِبَادَةِ رَبِّهِۦٓ أَحَدًۢا

(ಓ ಜನರೇ), ನಾನೂ ಸಹ ನಿಮ್ಮಂತಿರುವ ಕೇವಲ ಒಬ್ಬ ಮನುಷ್ಯನಾಗಿರುವೆ. ನೀವು ಆರಾಧಿಸಬೇಕಾದುದು ಒಬ್ಬನೇ ಒಬ್ಬನಾದ ಆ ದೇವನನ್ನು ಮಾತ್ರ. ಇನ್ನು ಯಾರು ತನ್ನ ಒಡೆಯನನ್ನು ಭೇಟಿಯಾಗುವ ನಿರೀಕ್ಷೆಯಲ್ಲಿರುವನೋ ಅವನು (ತನ್ನ ಜೀವಿತ ಕಾಲದಲ್ಲಿ) ಒಳ್ಳೆಯ ಕೆಲಸಗಳನ್ನೇ ಮಾಡುತ್ತಿರಲಿ, ಆ ಒಬ್ಬ ಒಡೆಯನ ಹೊರತು ತನ್ನ ಆರಾಧನೆಗಳಲ್ಲಿ ಬೇರೆ ಯಾರನ್ನೂ ಸೇರಿಸಿಕೊಳ್ಳದಿರಲಿ ಎಂಬ ವಿಷಯವು 'ವಹೀ' ಮೂಲಕ ನನಗೆ ತಿಳಿಸಲಾಗಿದೆ ಎಂದು ಪೈಗಂಬರರೇ, ನೀವು ಸಾರಿರಿ. {110}

------

 ಅನುವಾದಿತ ಸೂರಃ ಗಳು

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...