079 ಅನ್ - ನಾಝಿಆತ್ | ترجمة سورة الـنازعات

    تـرجمـة سورة الـنازعات من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅನ್ - ನಾಝಿಆತ್ | ಪವಿತ್ರ ಕುರ್‌ಆನ್ ನ 79 ನೆಯ ಸೂರಃ | ಇದರಲ್ಲಿ ಒಟ್ಟು 46 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

وَٱلنَّـٰزِعَـٰتِ غَرۡقً۬ا (١) وَٱلنَّـٰشِطَـٰتِ نَشۡطً۬ا (٢) وَٱلسَّـٰبِحَـٰتِ سَبۡحً۬ا (٣) فَٱلسَّـٰبِقَـٰتِ سَبۡقً۬ا (٤) فَٱلۡمُدَبِّرَٲتِ أَمۡرً۬ا (٥)

[ಮರಣದ ವೇಳೆ ದುರ್ಜನರ ಆತ್ಮವನ್ನು] ಹಿಂಸಾತ್ಮಕವಾಗಿ ಹಿಂಡಿ ಹೊರಗೆಳೆಯುವ; [ಸಜ್ಜನರ ಆತ್ಮವನ್ನು] ಮೃದುವಾಗಿ ಬಿಡಿಸಿ ತರುವ; ಮತ್ತು (ಆಕಾಶಗಳಲ್ಲಿ) ರಭಸವಾಗಿ ತೇಲುತ್ತಾ ಚಲಿಸುವ (ಮಲಕ್ ಗಳು) ಸಾಕ್ಷಿಯಾಗಿವೆ! [ಅಲ್ಲಾಹನ ಆಜ್ಞಾಪಾಲನೆಯಲ್ಲಿ ಅಂತಹ ಮಲಕ್ ಗಳು] ಪರಸ್ಪರ ಸ್ಪರ್ಧೆಯಲ್ಲಿ ತೊಡಗಿರುವರು; (ಪ್ರತಿಯೊಂದು) ವಿಷಯದ ವ್ಯವಹಾರವನ್ನು ನೋಡಿಕೊಳ್ಳುತ್ತಿರುವರು. {1-5}

يَوۡمَ تَرۡجُفُ ٱلرَّاجِفَةُ (٦) تَتۡبَعُهَا ٱلرَّادِفَةُ (٧) قُلُوبٌ۬ يَوۡمَٮِٕذٍ۬ وَاجِفَةٌ (٨) أَبۡصَـٰرُهَا خَـٰشِعَةٌ۬ (٩)

[ಲೋಕಾಂತ್ಯಗೊಳ್ಳುವ] ಆ ದಿನ (ಭೂಮಿಯು) ಭಯಂಕರವಾಗಿ ಕಂಪಿಸುವುದು. ಅದರ ಬೆನ್ನಿಗೇ ಮತ್ತೊಂದು ಭಯಾನಕ ನಡುಕ ಸಂಭವಿಸುವುದು. ಕೆಲವು ಹೃದಯಗಳು (ಅಂದು) ಭಯದಿಂದ ನಡುಗುವುವು; ದೃಷ್ಟಿಗಳು ದೀನತೆಯಿಂದ ತಗ್ಗಿರುವುವು. {6-9}

يَقُولُونَ أَءِنَّا لَمَرۡدُودُونَ فِى ٱلۡحَافِرَةِ (١٠) أَءِذَا كُنَّا عِظَـٰمً۬ا نَّخِرَةً۬ (١١) قَالُواْ تِلۡكَ إِذً۬ا كَرَّةٌ خَاسِرَةٌ۬ (١٢) فَإِنَّمَا هِىَ زَجۡرَةٌ۬ وَٲحِدَةٌ۬ (١٣) فَإِذَا هُم بِٱلسَّاهِرَةِ (١٤)

[ಸಾವು ಸನ್ನಿಹಿತವಾದ ಆ ಸಂದರ್ಭದಲ್ಲಿ] ಅವರು ಕೇಳತೊಡಗುವರು: [ಒಮ್ಮೆ ಸತ್ತು ಮಣ್ಣಾದ ನಂತರ] ನಮ್ಮನ್ನು ಪುನಃ ಹಿಂದಿನ ಸ್ಥಿತಿಗೆ ಮರಳಿಸಲಾಗುವುದೇ? ನಾವು ಟೊಳ್ಳಾದ, ಕೆಲಸಕ್ಕೆ ಬಾರದ ಮೂಳೆಗಳಾಗಿ ಬಿಟ್ಟ ನಂತರವೂ (ಹಾಗೆ ಮಾಡುವುದು ಸಾಧ್ಯವೇ)? ಪುನಃ ಹೇಳುವರು: ಹಾಗೆ (ನಮ್ಮನ್ನು ಜೀವಂತಗೊಳಿಸಿ ಹಿಂದಿನ ಸ್ಥಿತಿಗೆ) ಮರಳಿಸಲಾದರೆ ಅದೊಂದು ನಷ್ಟದಾಯಕ ವ್ಯವಹಾರವೇ ಸರಿ! ನಿಜವಾಗಿಯೂ ಅದು ಒಮ್ಮಿಂದಮ್ಮೆಲೇ ಸಂಭವಿಸಿ ಬಿಡುವ ಒಂದು ಘನಘೋರ ಘರ್ಜನೆ, ಆ ಕೂಡಲೇ ಅವರೆಲ್ಲರೂ ಒಂದು ಮೈದಾನದಲ್ಲಿರುವರು! {10-14}

هَلۡ أَتَٮٰكَ حَدِيثُ مُوسَىٰٓ (١٥) إِذۡ نَادَٮٰهُ رَبُّهُ ۥ بِٱلۡوَادِ ٱلۡمُقَدَّسِ طُوًى (١٦) ٱذۡهَبۡ إِلَىٰ فِرۡعَوۡنَ إِنَّهُ ۥ طَغَىٰ (١٧) فَقُلۡ هَل لَّكَ إِلَىٰٓ أَن تَزَكَّىٰ (١٨) وَأَهۡدِيَكَ إِلَىٰ رَبِّكَ فَتَخۡشَىٰ (١٩)

(ಪ್ರವಾದಿ) ಮೂಸಾ ರವರ ವೃತ್ತಾಂತವು ನಿಮಗೆ ತಲುಪಿದೆಯಲ್ಲವೇ? ಪವಿತ್ರವಾದ 'ತುವಾ' ಕಣಿವೆಯಲ್ಲಿ ಅವರನ್ನು ಅವರ ಒಡೆಯನಾದ (ಅಲ್ಲಾಹ್ನು ನು) ಕರೆದ ಆ ಸಂದರ್ಭವನ್ನು ನೆನಪಿಸಿಕೊಳ್ಳಿ! (ಅಲ್ಲಿ ಮೂಸಾ ರಿಗೆ ಆಜ್ಞಾಪಿಸಲಾಯಿತು): ನೀವಿನ್ನು 'ಫಿರ್‌ಔನ್' ನ ಬಳಿಗೆ ಹೋಗಬೇಕು, ಅವನು ಉಲ್ಲಂಘನೆಯ ಹಾದಿ ಹಿಡಿದಿದ್ದಾನೆ. ಮತ್ತು ಹೇಳಬೇಕು: ನಿನಗೆ ಸ್ವತಃ ತನ್ನನ್ನು ತಿದ್ದಿಕೊಂಡು ಸುಧಾರಣೆಯ ಹಾದಿ ಹಿಡಿಯುವ ಮನಸ್ಸಿದೆಯೇ? ನಾನು ನಿನಗೆ ನಿನ್ನ ಒಡೆಯನ ಕಡೆಗಿರುವ ಹಾದಿಯನ್ನು ತೋರಿಸಿ ಕೊಡಲೇ? ಹಾಗಾದರೆ (ನಿನ್ನಲ್ಲಿ ಅವನ) ಭಯ ಉಂಟಾದೀತೇ? {15-19}

فَأَرَٮٰهُ ٱلۡأَيَةَ ٱلۡكُبۡرَىٰ (٢٠) فَكَذَّبَ وَعَصَىٰ (٢١) ثُمَّ أَدۡبَرَ يَسۡعَىٰ (٢٢) فَحَشَرَ فَنَادَىٰ (٢٣) فَقَالَ أَنَا۟ رَبُّكُمُ ٱلۡأَعۡلَىٰ (٢٤) فَأَخَذَهُ ٱللَّهُ نَكَالَ ٱلۡأَخِرَةِ وَٱلۡأُولَىٰٓ (٢٥) إِنَّ فِى ذَٲلِكَ لَعِبۡرَةً۬ لِّمَن يَخۡشَىٰٓ (٢٦)

(ಪ್ರವಾದಿ) ಮೂಸಾರವರು ಫಿರ್‌ಔನ್ ನಿಗೆ ಅತಿ ಮಹತ್ತರವಾದ ಪವಾಡಗಳನ್ನು ತೋರಿಸಿದರು. ಆದರೆ ಅವನು ಅವುಗಳನ್ನು ಧಿಕ್ಕಾರದೊಂದಿಗೆ ತಿರಸ್ಕರಿಸಿದನು. ಮಾತ್ರವಲ್ಲ ಅವನು (ತಿರಸ್ಕಾರದೊಂದಿಗೆ) ಬೆನ್ನುತಿರುಗಿಸಿ ಓಡಿ ಹೋದನು. [ತನ್ನ ಸಮುದಾಯದ ಜನರನ್ನು] ಒಟ್ಟುಗೂಡಿಸಿದನು ಮತ್ತು ಅವರಿಗೆ ಸಾರಿದನು; ನಿಮ್ಮೆಲ್ಲರ ಅತ್ಯುನ್ನತನಾದ ಪ್ರಭು ನಾನೇ ಆಗಿರುವೆನು ಎಂದು ಘೋಷಿಸಿದನು. ಪರಿಣಾಮವಾಗಿ ಅಲ್ಲಾಹನು ಅವನನ್ನು ಪರಲೋಕದಲ್ಲಿಯೂ ಇಹಲೋಕದಲ್ಲಿಯೂ ಶಿಕ್ಷಿಸುವ ಸಲುವಾಗಿ ಹಿಡಿದುಬಿಟ್ಟನು. ಖಂಡಿತವಾಗಿಯೂ ಈ ವೃತ್ತಾಂತದಲ್ಲಿ ಅಲ್ಲಾಹನ ಭಯವಿರುವವರಿಗೆ ಪಾಠವಿದೆ. {20-26}

ءَأَنتُمۡ أَشَدُّ خَلۡقًا أَمِ ٱلسَّمَآءُ‌ۚ بَنَٮٰهَا (٢٧) رَفَعَ سَمۡكَهَا فَسَوَّٮٰهَا (٢٨) وَأَغۡطَشَ لَيۡلَهَا وَأَخۡرَجَ ضُحَٮٰهَا (٢٩) وَٱلۡأَرۡضَ بَعۡدَ ذَٲلِكَ دَحَٮٰهَآ (٣٠) أَخۡرَجَ مِنۡہَا مَآءَهَا وَمَرۡعَٮٰهَا (٣١) وَٱلۡجِبَالَ أَرۡسَٮٰهَا (٣٢) مَتَـٰعً۬ا لَّكُمۡ وَلِأَنۡعَـٰمِكُمۡ (٣٣)

[ಸೃಷ್ಟಿಗಳಲ್ಲಿ] ಪ್ರಬಲವೂ ಪ್ರಚಂಡವೂ ಆದ ಸೃಷ್ಟಿಯು ನೀವೋ ಅಥವಾ ಆ ಅಕಾಶವೋ? ಅಲ್ಲಾಹನು ಆಕಾಶವನ್ನು ನಿರ್ಮಿಸಿರುವನು! ಅದರ ಮೇಲ್ಛಾವಣಿಯನ್ನು ಎತ್ತರಕ್ಕೆ ಏರಿಸಿ, ಅದನ್ನು ಸಕಲ ರೀತಿಯಲ್ಲಿ ಸರಿಪಡಿಸಿರುವನು. ಅದರ ರಾತ್ರಿಯನ್ನು (ಕತ್ತಲೆಯಲ್ಲಿ) ಮರೆಗೊಳಿಸಿದನು; ಮತ್ತು ಹಗಲನ್ನು ಅದರಿಂದ ಹೊರಹೊಮ್ಮಿಸಿದನು. ಅದಾದ ನಂತರ ಭೂಮಿಯನ್ನು ಹರಡಿದನು. ಅದರೊಳಗಿಂದ ನೀರನ್ನೂ ಹುಲ್ಲು-ಮೇವುಗಳನ್ನೂ ಹೊರತೆಗೆದನು. ಅದರಲ್ಲಿ ಪರ್ವತಗಳನ್ನು (ಗೂಟಗಳಂತೆ) ನೆಟ್ಟನು. ಇವೆಲ್ಲಾ ನಿಮಗೂ ನಿಮ್ಮ ಜಾನುವಾರುಗಳಿಗೂ ಜೀವನ ಸಾಗಿಸಲು ಬೇಕಾದ ಸಾಧನವನ್ನು ಒದಗಿಸಲಿಕ್ಕಾಗಿಯೇ (ಆಗಿದೆ). {27-33}

فَإِذَا جَآءَتِ ٱلطَّآمَّةُ ٱلۡكُبۡرَىٰ (٣٤) يَوۡمَ يَتَذَكَّرُ ٱلۡإِنسَـٰنُ مَا سَعَىٰ (٣٥) وَبُرِّزَتِ ٱلۡجَحِيمُ لِمَن يَرَىٰ (٣٦) فَأَمَّا مَن طَغَىٰ (٣٧) وَءَاثَرَ ٱلۡحَيَوٰةَ ٱلدُّنۡيَا (٣٨) فَإِنَّ ٱلۡجَحِيمَ هِىَ ٱلۡمَأۡوَىٰ (٣٩) وَأَمَّا مَنۡ خَافَ مَقَامَ رَبِّهِۦ وَنَهَى ٱلنَّفۡسَ عَنِ ٱلۡهَوَىٰ (٤٠) فَإِنَّ ٱلۡجَنَّةَ هِىَ ٱلۡمَأۡوَىٰ (٤١)

ಮುಂದೆ, ಆ ಭಯಾನಕ ವಿಪತ್ತು [ಅರ್ಥಾತ್: ಪುನರುತ್ಥಾನ ದಿನ] ಬಂದೆರಗಿದಾಗ, ಮನುಷ್ಯನು (ಭೂಮಿಯಲ್ಲಿ) ತಾನೆಸಗಿದ ಕೃತ್ಯಗಳನ್ನು ಸ್ಮರಿಸಿಕೊಳ್ಳುವನು. ಅಂದು (ಧಗಧಗಿಸಿ ಉರಿಯುವ) ನರಕಾಗ್ನಿಯನ್ನು ಪ್ರತಿಯೊಬ್ಬ ನೋಡುವವನ ಮುಂದೆ ಪ್ರತ್ಯಕ್ಷಗೊಳಿಸಲಾಗುವುದು. ಯಾರು (ಅಲ್ಲಾಹನ) ಆಜ್ಞೆಗಳನ್ನು ಉಲ್ಲಂಘಿಸಿದ್ದನೋ ಮತ್ತು (ಪರಲೋಕಕ್ಕಿಂತ) ಇಹಲೋಕ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದನೋ ನರಕವೇ ಅಂಥವನಿಗೆ ಅಂತಿಮ ತಾಣವಾಗಿರುವುದು. ಯಾರು ತನ್ನ ಒಡೆಯನ ಮುಂದೆ (ಲೆಕ್ಕ ಸಮರ್ಪಣೆಗಾಗಿ) ನಿಲ್ಲಬೇಕಾದ ಸಂದರ್ಭದ ಕುರಿತು ಭಯವಿರಿಸಿಕೊಂಡಿದ್ದನೋ; ಮತ್ತು ಸ್ವೇಚ್ಛಾಚಾರದಿಂದ ತನ್ನನ್ನು ತಡೆದುಕೊಂಡಿದ್ದನೋ – ಅಂಥವನಿಗೆ ಸ್ವರ್ಗೋದ್ಯಾನವಿದೆ ಮತ್ತು ಅದುವೇ ಅವನ ಶಾಶ್ವತ ನಿವಾಸವಾಗಿರುವುದು. {34-41}

يَسۡـٴَـلُونَكَ عَنِ ٱلسَّاعَةِ أَيَّانَ مُرۡسَٮٰهَا (٤٢) فِيمَ أَنتَ مِن ذِكۡرَٮٰهَآ (٤٣) إِلَىٰ رَبِّكَ مُنتَہَٮٰهَآ (٤٤) إِنَّمَآ أَنتَ مُنذِرُ مَن يَخۡشَٮٰهَا (٤٥) كَأَنَّہُمۡ يَوۡمَ يَرَوۡنَہَا لَمۡ يَلۡبَثُوٓاْ إِلَّا عَشِيَّةً أَوۡ ضُحَٮٰهَا (٤٦)

(ಲೋಕಾಂತ್ಯಗೊಳ್ಳುವ) ಆ ಘಳಿಗೆಯು ಯಾವಾಗ ಬಂದುಬಿಡುತ್ತದೆ? - ಎಂದು (ಓ ಪೈಗಂಬರರೇ) ಅವರು ನಿಮ್ಮೊಡನೆ ವಿಚಾರಿಸುತ್ತಿದ್ದಾರೆ. ಅದರ ವಿಷಯವಾಗಿ ನಿಮಗೆ ಏನು ತಾನೆ ತಿಳಿದಿದೆ? ಅದರ ಕುರಿತಾದ ಅಂತಿಮ ಜ್ಞಾನವಿರುವುದು ನಿಮ್ಮ ಒಡೆಯನಾದ (ಅಲ್ಲಾಹ್ ನ) ಬಳಿ ಮಾತ್ರ. ನೀವಾದರೋ ಅದನ್ನು ಭಯಪಡುವವರಿಗೆ ಎಚ್ಚರಿಕೆ ನೀಡುವವರು ಮಾತ್ರ! ಇನ್ನು ಅದನ್ನು ಕಣ್ಣಾರೆ ಕಂಡುಕೊಂಡಾಗ ನಾವು (ಭೂಮಿಯಲ್ಲಿ) ಬದುಕಿದ್ದುದು ಕೇವಲ ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರ ಎಂದು ಅವರಿಗೆ ಭಾಸವಗುವುದು. {42-46}

---

ಅನುವಾದಿತ ಸೂರಃ ಗಳು

    Featured post

    ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...