ಹೂದ್ | تـرجمـة سورة هـــود

تـرجمـة سورة هود من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಹೂದ್ | ಪವಿತ್ರ್ ಕುರ್‌ಆನ್ ನ 11 ನೆಯ ಸೂರಃ | ಇದರಲ್ಲಿ ಒಟ್ಟು 123 ಆಯತ್ ಗಳು ಇವೆ |

ದಯಾಮಯಿಯೂ ಅತ್ಯಂತ ಕಾರುಣ್ಯವಂತನೂ ಆದ ಅಲ್ಲಾಹ್ ನ ನಾಮದಿಂದ!

ಅಲಿಫ್ - ಲಾಮ್ - ರಾ! ಈ ಗ್ರಂಥದ ಆಯತ್ ಗಳನ್ನು [ಅರ್ಥಾತ್ ವಚನಗಳನ್ನು] ಮೊದಲಿಗೆ ಸದೃಢವಾಗಿಸಿ, ಪ್ರಬುದ್ಧಗೊಳಿಸಿ, ತದನಂತರ (ಹಂತಹಂತವಾಗಿ) ಮಹಾ ಧೀಮಂತನೂ ಪ್ರಾಜ್ಞನೂ ಆದ (ಅಲ್ಲಾಹ್) ನಿಂದಲೇ ಅದು ವಿವರಿಸಲ್ಪಟ್ಟಿದೆ. {1}

ಆ ಅಲ್ಲಾಹ್ ನೊಬ್ಬನ ಹೊರತು ಇನ್ನಾರನ್ನೂ ನೀವು ಆರಾಧಿಸಬಾರದೆಂಬ ಕಾರಣಕ್ಕಾಗಿಯೇ! ಹೌದು, ನಾನು ಎಚ್ಚರಿಸುವವನಾಗಿ ಮತ್ತು ಶುಭವಾರ್ತೆ ತಿಳಿಸುವವನಾಗಿ ನಿಮ್ಮತ್ತ ಅವನಿಂದಲೇ ನಿಯೋಜಿಸಲ್ಪಟ್ಟಿದ್ದೇನೆ! {2}

ನೀವು ನಿಮ್ಮ ಸೃಷ್ಟಿಕರ್ತನೊಂದಿಗೆ ಕ್ಷಮೆಯಾಚಿಸಿ, ತರುವಾಯ ಪಶ್ಚಾತ್ತಾಪದೊಂದಿಗೆ ಅವನತ್ತ ಮರಳುವವರಾದರೆ ಗೊತ್ತುಪಡಿಸಿದ ಒಂದು ಸಮಯದ ತನಕ (ಅರ್ಥಾತ್ ಮರಣ ಬರುವ ತನಕ) ಅವನು ನಿಮಗೆ ಉತ್ಕೃಷ್ಟವಾದ ಜೀವನಾವಶ್ಯಕತೆಗಳನ್ನು ದಯಪಾಲಿಸುವನು. ಉದಾರ ಮನಸ್ಕರಿಗೆ ತನ್ನ ಕೊಡುಗೆಗಳನ್ನೂ ನೀಡುವನು. ಆದರೆ ನೀವು ಅಲಕ್ಷ್ಯ ತೋರಿ ಮುಖ ತಿರುಗಿಸಿ ಕೊಂಡರೆ ಒಂದು ಘೋರವಾದ ದಿನ ನಿಮ್ಮ ಮೇಲೆರಗಲಿರುವ ಶಿಕ್ಷೆಯ ಕುರಿತು ನಾನು ಭಯ ಪಡುತ್ತಿದ್ದೇನೆ. {3}

ನೀವೆಲ್ಲ ಅಲ್ಲಾಹ್ ನ ಬಳಿಗೇ ಹಿಂದಿರುಗಿ ಹೋಗಲಿಕ್ಕಿರುವಿರಿ. ಅವನಿಗೆ ಎಲ್ಲಾ ವಿಷಯಗಳಲ್ಲಿ ಅಗಾಧ ಸಾಮರ್ಥ್ಯವಿದೆ (ಎಂಬುದನ್ನು ಮರೆಯದಿರಿ). {4}

ನೋಡಿದಿರೇನು? ಈ ಜನರು [ಇಂತಹ ಉಪದೇಶ ಕೇಳಿಸುವಾಗಲೆಲ್ಲಾ] ಕರ್ತಾರನಿಂದ ಅವಿತುಕೊಂಡು [ಹೊರನಡೆಯಲು] ತಮ್ಮೆದೆಗಳ (ಸುತ್ತ ಹೊದಿಕೆ) ಸುತ್ತಿಕೊಳ್ಳುತ್ತಾರೆ! ನಿಮಗೆ ತಿಳಿದಿರಲಿ, [ಅಲ್ಲಿಂದ ತಪ್ಪಿಸಿಕೊಳ್ಳಲು] ವಸ್ತ್ರ ಹೊದ್ದು ಕೊಳ್ಳುವಾಗಲೇ ಅವರು ಏನನ್ನು (ತಮ್ಮ ಹೃದಯಗಳಲ್ಲಿ) ಚ್ಚಿಡುತ್ತಿದ್ದಾರೆ ಮತ್ತು ಏನನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಅಲ್ಲಾಹ್ ನಿಗೆ ತಿಳಿದಿರುತ್ತದೆ! ಅವನು ಇವರ ಅಂತರಂಗದ ರಹಸ್ಯಗಳನ್ನೂ ಚೆನ್ನಾಗಿ ಬಲ್ಲವನು! {5}

✽12✽ [ಅಷ್ಟೇ ಏಕೆ,] ಜೀವನಾವಶ್ಯಕತೆಗಳ ಪೂರೈಕೆಯ ಜವಾಬ್ದಾರಿಯು ಅಲ್ಲಾಹ್ ನ ಮೇಲೆ ಇಲ್ಲದಂತಹ ಯಾವೊಂದು ಜೀವಿಯೂ ಭೋಮುಖದ ಮೇಲೆ ಚಲಿಸುವುದಿಲ್ಲ! ಅವುಗಳ ವಾಸಸ್ಥಳವೂ ಅವು ಕೊನೆಯದಾಗಿ ಸೇರಬೇಕಾದ ತಾಣವೂ ಅವನ ಅರಿವಿನಲ್ಲಿರುತ್ತದೆ. ಪ್ರತಿಯೊಂದು ವಿಷಯವೂ ಒಂದು ಸ್ಪಷ್ಟವಾದ ಶಾಸನದಲ್ಲಿ ನಮೂದಿತವಾಗಿದೆ. {6}

ಆಕಾಶಗಳನ್ನು ಹಾಗೂ ಭೂಮಿಯನ್ನು ಆರು ಕಾಲಘಟ್ಟಗಳಲ್ಲಿ (ಹಂತಹಂತವಾಗಿ) ಸೃಷ್ಟಿ ಮಾಡಿದವನೂ ಅವನೇ! [ಮನುಷ್ಯರ ಸೃಷ್ಟಿಗಿಂತ ಮುಂಚೆ] ಅವನ ದೇವಾಧಿಪತ್ಯವು ಜಲಲೋಕದ ಮೇಲಿತ್ತು! ನಿಮ್ಮಲ್ಲಿ ಅತ್ಯುತ್ತಮವಾಗಿ ನಡೆದುಕೊಳ್ಳುವರು ಯಾರು ಎಂಬುದನ್ನು ಪರೀಕ್ಷಿಸಲಿಕ್ಕಾಗಿಯೇ (ನಿಮ್ಮನ್ನು ಸೃಷ್ಟಿ ಮಾಡಲಾಗಿದೆ)! ಪೈಗಂಬರರೇ, [ಜೀವಿತ ಕಾಲದ ಮಾತು-ಕೃತಿಗಳಿಗೆ ಪ್ರತಿಫಲ ನೀಡಲು] ಮರಣದ ನಂತರ ನಿಮ್ಮನ್ನು ಪುನಃ ಎಬ್ಬಿಸಲಾಗುವುದು ಎಂದು ನೀವು ಇವರೊಂದಿಗೆ ಹೇಳಿದರೆ, ಅದೆಲ್ಲ ಕೇವಲ (ನಿಮ್ಮ ಮಾತಿನ) ಮೋಡಿಯಲ್ಲದೆ ಮತ್ತೇನೂ ಅಲ್ಲ ಎಂದೇ ನಿಮ್ಮನ್ನು ಧಿಕ್ಕರಿಸಿದವರು ಹೇಳಲಿರುವರು. {7}

(ಇಹಲೋಕದಲ್ಲೇ) ಅವರ ಮೇಲೆರಗಬೇಕಾದ ಶಿಕ್ಷೆಯನ್ನು ಒಂದು ನಿರ್ಧಿಷ್ಟ ಅವಧಿಗಾಗಿ ನಾವು ಮುಂದೂಡಿ [ಅವರಿಗೆ ಕಾಲಾವಕಾಶ ಮಾಡಿ] ಕೊಟ್ಟರೆ, ಯಾವ ಅಂಶ ಶಿಕ್ಷೆಯನ್ನು ತಡೆಯುತ್ತಿದೆಯೋ - ಎಂದು ಅವರು (ಅಣಕಿಸಿ) ಪ್ರಶ್ನಿಸುತ್ತಾರೆ. ಜೋಕೆ! ಅದು ಯಾವ ದಿನ ಅವರ ಮೇಲೆ ಎರಗಲಿದೆಯೋ ಅಂದು ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ; ಯಾವುದನ್ನು ಅವರು ಗೇಲಿ ಮಾಡುತ್ತಿದ್ದಾರೋ ಅದೇ ಅವರನ್ನು ಆವರಿಸಿಕೊಳ್ಳಲಿರುವುದು. {8}

(ಮನುಷ್ಯರ ಮನಃಸ್ಥಿತಿ ಹೇಗಿದೆಯೆಂದರೆ) ನಮ್ಮ ಅನುಗ್ರಹದ ರುಚಿಯನ್ನು ಒಮ್ಮೆ ಮನುಷ್ಯನಿಗೆ ತೋರಿಸಿ ನಂತರ ಅದನ್ನು ಅವನಿಂದ ನೀಗಿಸಿ ಬಿಟ್ಟರೆ ಅವನು, ಖಂಡಿತವಾಗಿ ಬಹಳ ಹತಾಶನಾಗಿ ಉಪಕಾರ ಸ್ಮರಣೆಯಿಲ್ಲದ ಕೃತಘ್ನನಾಗಿ ಬಿಡುತ್ತಾನೆ! {9}

ಹಾಗೆಯೇ ಸಂಕಷ್ಟ ಅವನನ್ನು ಒಮ್ಮೆ ಆವರಿಸಿದ ನಂತರ ನಾವು ಅವನಿಗೆ ಸುಖ ಸಂಪತ್ತಿನ ಸವಿಯುಣಿಸಿದರೆ, ನನ್ನ ಪಾಪಗಳೆಲ್ಲವೂ ನನ್ನಿಂದ ದೂರವಾಗಿ ಬಿಟ್ಟಿತು ಎಂದು ಸಾರುತ್ತಾನೆ; ಅವನು ಹರ್ಷದಿಂದ ಹಿಗ್ಗುತ್ತಾನೆ, ಬಡಾಯಿ ಕೊಚ್ಚುತ್ತಾನೆ! {10}

ಆದರೆ ಯಾರು (ಕಷ್ಟ ಸುಖಗಳೆರಡರಲ್ಲೂ) ಸ್ಥೈರ್ಯಗೆಡದೆ ತಾಳ್ಮೆ ವಹಿಸಿ ಸತ್ಕಾರ್ಯಗಳಲ್ಲಿ ಮುಂದುವರಿಯುತ್ತಾರೋ ಅಂತಹ ಜನರು ಇದಕ್ಕೆ ಹೊರತಾಗಿರುವರು. ಅವರಿಗೆ ಪಾಪ ಮೋಕ್ಷವೂ ಮಹತ್ತರವಾದ ಪ್ರತಿಫಲವೂ ಇರುವುದು. {11}

ಆತನಿಗೆ ಒಂದು ನಿಧಿಯನ್ನೇಕೆ [ಪ್ರವಾದಿತ್ವದ ಸಂಕೇತವಾಗಿ ಅಲ್ಲಾಹ್ ನು] ಕಳುಹಿಸಿ ಕೊಡುತ್ತಿಲ್ಲ, ಅಥವಾ ಆತನ ಜೊತೆ ಒಬ್ಬ ಮಲಕ್ ಏಕೆ ಬರುತ್ತಿಲ್ಲ ಎಂದು ಆ ಜನರು ಪ್ರಶ್ನಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಪ್ರಾಯಶಃ ನಿಮ್ಮ ಅಂತರಾತ್ಮದಲ್ಲಿ ಸಂಕುಚಿತತೆ ತಲೆದೋರಿ, ನಿಮ್ಮತ್ತ ಕಳುಹಿಸಲಾಗುವ ವಹೀ (ಅಂದರೆ ದಿವ್ಯ ಸಂದೇಶದ) ಸ್ವಲ್ಪ ಭಾಗವನ್ನು ನೀವು (ಜನರಿಗೆ ತಲುಪಿಸದೆ) ಕೈಬಿಡುವಂತಹ ಸ್ಥಿತಿ ಎದುರಾಗಬಹುದು! ಪೈಗಂಬರರೇ, ನೀವು ಅವರಿಗೆ ಮುನ್ನೆಚ್ಚರಿಕೆ ನೀಡುವವರು ಮಾತ್ರ! [ನೀವು ದೈವಿಕ ಸಂದೇಶವನ್ನು ಯಥಾವತ್ತಾಗಿ ಅವರಿಗೆ ತಲುಪಿಸಿ ಬಿಟ್ಟರೆ ನಂತರದ] ಎಲ್ಲ ವಿಷಯಗಳಿಗೆ ನಿಯಾಮಕನು ಸ್ವತಃ ಅಲ್ಲಾಹ್ ನೇ ಆಗಿರುವನು! {12}

ಅಥವಾ [ಕುರ್‌ಆನ್ ನ ಅಧ್ಯಾಯಗಳನ್ನು] ಆತನೇ ಸ್ವತಃ ರಚಿಸಿರುತ್ತಾನೆ ಎಂದು ಆ ಜನರು ಆರೋಪಿಸುತ್ತಿದ್ದಾರೆಯೇ!? ಹಾಗಾದರೆ ನೀವು ಅದರಂತಹ ಹತ್ತು ಅಧ್ಯಾಯಗಳನ್ನು ರಚಿಸಿ ತನ್ನಿ; ಅಲ್ಲಾಹ್ ನೊಬ್ಬನ ಹೊರತು ನಿಮಗೆ ಸಾಧ್ಯವಾದ ಎಲ್ಲರನ್ನೂ (ಸಹಾಯಕ್ಕಾಗಿ) ಕರೆದುಕೊಳ್ಳಿ; ನಿಮ್ಮ ಆಪಾದನೆಯಲ್ಲಿ ಏನಾದರೂ ಸತ್ಯಾಂಶ ಇದ್ದರೆ (ಅದನ್ನು ಮಾಡಿ ತೋರಿಸಿ) ಎಂದು ಪೈಗಂಬರರೇ ನೀವು ಅವರಿಗೆ ಸವಾಲು ಹಾಕಿ. {13}

ಇನ್ನು ಅವರಾರೂ ನಿಮ್ಮ ಕರೆಗೆ ಸ್ಪಂದಿಸದಿದ್ದರೆ, ಜನರೇ, ಖಂಡಿತವಾಗಿ ಅಲ್ಲಾಹ್ ನ ಅರಿವನ್ನೊಳಗೊಂಡ (ಆ ಅಧ್ಯಾಯಗಳು ಪೈಗಂಬರರ ಎದೆಯೊಳಗೆ) ಇಳಿಸಲ್ಪಡುತ್ತಿವೆ ಎಂದೂ ಆ ಅಲ್ಲಾಹ್ ನ ಹೊರತು ಬೇರಾರೂ ಆರಾಧನೆಗೆ ಅರ್ಹಲ್ಲವೆಂದೂ ನೀವು ಚೆನ್ನಾಗಿ ಅರಿತುಕೊಳ್ಳಿ. ಇನ್ನಾದರೂ ನೀವು ಒಪ್ಪಿ ಶರಣಾಗುವಿರಾ?! {14}

ಯಾರು [ಅಲ್ಲಾಹ್ ನಿಗೆ ಶರಣಾಗಿ ಪರಲೋಕ ಪ್ರಾಪ್ತಿ ಬಯಸುವ ಬದಲು] ಕೇವಲ ಇಹಲೋಕ ಜೀವನದ ಸುಖ ಸೌಂದರ್ಯಗಳನ್ನು ಮಾತ್ರ ಬಯಸುತ್ತಾರೋ ಅಂತಹವರಿಗೆ ಅವರ ಕರ್ಮಗಳ ಪ್ರತಿಫಲವನ್ನು ಸಂಪೂರ್ಣವಾಗಿ ನಾವು ಭೂಲೋಕದಲ್ಲೇ, ಸ್ವಲ್ಪವೂ ಕಡಿತಗೊಳಿಸದೆ, ಕೊಟ್ಟುಬಿಡುತ್ತೇವೆ. {15}

ಮತ್ತು ಪರಲೋಕದಲ್ಲಿ ಅಂತಹ ಜನರಿಗೆ ನರಕಾಗ್ನಿಯ ಹೊರತು ಬೇರೇನೂ ಸಿಗಲಾರದು! ಅವರು ಇಹಲೋಕದಲ್ಲಿ ತಮಗಾಗಿ ಮಾಡಿದ್ದೆಲ್ಲವೂ ವ್ಯರ್ಥವಾಗಿ ಬಿಟ್ಟಿತು; ಅವರ ಕರ್ಮಗಳೆಲ್ಲವೂ ನಿರರ್ಥಕಗೊಂಡವು. {16}

ಒಬ್ಬಾತನ ನಿಲುವು ತನ್ನ ಕರ್ತಾರನಿಂದ ದೊರೆತಂತಹ ಸ್ಪಷ್ಟತೆಯನ್ನು ಆಧರಿಸಿದೆ; ಮತ್ತು ಅದನ್ನು ಪ್ರಮಾಣೀಕರಿಸುವ ಸಾಕ್ಷಿಯಾಗಿ ಕರ್ತಾರನಿಂದ (ಈ ಕುರ್‌ಆನ್ ಕೂಡ) ಆತನಿಗೆ ಲಭಿಸುತ್ತದೆ; ಸಾಲದಕ್ಕೆ ಅದಾಗಲೇ ಮೂಸಾ ರಿಗೆ ನೀಡಲಾದ ಗ್ರಂಥವು ಮಾರ್ಗದರ್ಶಿಯಾಗಿಯೂ ಅನುಗ್ರಹವಾಗಿಯೂ ಇರುವಾಗ ಅಂತಹವನು (ಪೈಗಂಬರರು ಸ್ವತಃ ಇದನ್ನು ರಚಿಸುತ್ತಿದ್ದಾರೆ ಎಂದು ಆಪಾದಿಸುವುದು) ಸಂಭಾವ್ಯವೇ?! (ಎಂದಿಗೂ ಇಲ್ಲ!) ಅಂತಹ ಜನರು ಈ ಕುರ್‌ಆನ್ ನ (ದೈವಿಕತೆಯನ್ನು) ಖಂಡಿತಾ ಒಪ್ಪಿಕೊಳ್ಳುತ್ತಾರೆ! ಇನ್ನು (ಪೈಗಂಬರರೇ, ನಿಮ್ಮ ಸಮುದಾಯಕ್ಕೆ ಸೇರಿದ) ಕೆಲವು ಗುಂಪುಗಳು ಅದನ್ನು (ಅರ್ಥಾತ್ ಕುರ್‌ಆನ್ ನ ದೈವಿಕತೆಯನ್ನು) ನಿರಾಕರಿಸುತ್ತಿವೆ ಎಂದಾದರೆ ಅಂತಹವರಿಗೆ ಇರುವ ನಿಗದಿತ ಸ್ಥಳವೇ ನರಕ! ಪೈಗಂಬರರೇ, ಆ ವಿಷಯದಲ್ಲಿ ನಿಮಗೆ ಸಂಶಯವೇ ಬೇಡ! ಇದು (ಅರ್ಥಾತ್ ಈ ಕುರ್‌ಆನ್ ನ ಅಧ್ಯಾಯಗಳು) ನಿಮ್ಮ ಕರ್ತಾರನಿಂದ ಬಂದಂತಹ ಪರಮ ಸತ್ಯವಾಗಿದೆ! ಹಾಗಿದ್ದರೂ ಬಹಳಷ್ಟು ಜನ ಅದನ್ನು ಒಪ್ಪಿಕೊಳ್ಳಲು ತಯಾರಾಗುವುದಿಲ್ಲ. {17}

ಸುಳ್ಳುಗಳನ್ನು ಸ್ವತಃ ಸೃಷ್ಟಿಸಿ ಅಲ್ಲಾಹ್ ನ ಮೇಲೆ ಆಪಾದಿಸಿದವರಿಗಿಂತ ದೊಡ್ಡ ದುಷ್ಟರು ಯಾರಿರಬಹುದು! ಅಂತಹವರನ್ನು ಅವರ ಕರ್ತಾರನ ಸನ್ನಿಧಿಯಲ್ಲಿ ಹಾಜರು ಪಡಿಸಲಾಗುವುದು. ತಮ್ಮ ಕರ್ತಾರನ ಹೆಸರಲ್ಲಿ ಸುಳ್ಳುಗಳನ್ನು ಸೃಷ್ಟಿ ಮಾಡುತ್ತಿದ್ದವರು ಇವರೇ ಆಗಿದ್ದರೆಂದು ಸಾಕ್ಷಿಗಳೆಲ್ಲರೂ (ಅಂದು) ಸಾಕ್ಷಿ ನುಡಿಯಲಿರುವರು. ಚೆನ್ನಾಗಿ ತಿಳಿದಿರಿ, ಅಂತಹ ದುಷ್ಟ ಜನರ ಮೇಲೆ ಅಲ್ಲಾಹ್ ನ ಶಾಪವಿದೆ. {18}

ಅಲ್ಲಾಹ್ ನ ಮಾರ್ಗದತ್ತ ಬಾರದಂತೆ ಅವರು ಜನರನ್ನು ತಡೆಯುತ್ತಾರೆ; ಅಷ್ಟೇ ಅಲ್ಲ, ಅಲ್ಲಾಹ್ ನ ಮಾರ್ಗವು ವಕ್ರವಾಗಿರಬೇಕೆಂದು ಆ (ದುಷ್ಟರು) ಬಯಸುತ್ತಾರೆ. ಮತ್ತವರು ಪರಲೋಕ ಜೀವನವನ್ನು ಅಲ್ಲಗಳೆಯುವವರಾಗಿದ್ದರೆ. {19}

ಭೂಲೋಕದಲ್ಲಿಯ (ದೈವಿಕ ಯೋಜನೆಗಳನ್ನು ತಾವು ಬಯಸಿದಂತೆ) ಮಣಿಸಲು ಅವರಿಗೆ ಎಂದೂ ಸಾಧ್ಯವಿಲ್ಲ. ಮತ್ತು ಅಲ್ಲಾಹ್ ನ ಹೊರತು ಅವರಿಗೆ ರಕ್ಷಣೆ ನೀಡಬಲ್ಲವರು ಯಾರೂ ಸಹ ಇಲ್ಲ. ಅವರಿಗಿರುವ ಶಿಕ್ಷೆಯನ್ನು ಇಮ್ಮಡಿ ಗೊಳಿಸಿ ಬಿಡಲಾಗುವುದಷ್ಟೆ. [ನಿರಂತರ ದುಷ್ಟತನ ಮೆರೆದ ಕಾರಣ ದೈವಿಕ ಆದೇಶಗಳನ್ನು] ಕೇಳಿಸಿಕೊಳ್ಳವ ಯೋಗ್ಯತೆಯೂ ಅವರಿಗೆ ಇಲ್ಲದಾಯಿತು; ಮತ್ತು ನೋಡಿ ಗ್ರಹಿಸುವುದೂ ಅವರಿಗೆ ಅಸಾಧ್ಯವಾಯಿತು! {20}

ತಮ್ಮನ್ನು ತಾವೇ ನಷ್ಟಕ್ಕೀಡು ಮಾಡಿಕೊಂಡವರು ಅವರೇ! ಏನೆಲ್ಲ ಸುಳ್ಳುಗಳನ್ನು ಅವರು ಹೆಣೆದಿದ್ದರೋ ಅವೆಲ್ಲ ಅವರಿಂದ ತೊಲಗಿ ಬಿಟ್ಟಿತು. {21}

ಹೌದು, ಪರಲೋಕದಲ್ಲಿ ದೊಡ್ಡ ನಷ್ಟ ಅನುಭವಿಸಲಿರುವವರೂ ಅವರೇ ಎಂಬ ವಿಷಯ ಸಂಶಯಾತೀತ! {22}

[ಅಂತಹ ಜನರ ನಿಲುವಿಗೆ ತದ್ವಿರುದ್ಧವಾಗಿ, ದೈವಿಕ ಆದೇಶಗಳಿಗೆ ಮಣಿದು] ವಿಶ್ವಾಸಿಗಳಾಗಿ, ಸತ್ಕಾರ್ಯಗಳನ್ನೂ ಮಾಡಿ, ಅಲ್ಲಾಹ್ ನ ಮುಂದೆ ತಮ್ಮನ್ನು ತಗ್ಗಿಸಿಕೊಂಡು ಜೀವಿಸಿದವರು ಯಾರೋ ಅವರೇ ಸ್ವರ್ಗೋದ್ಯಾನಕ್ಕೆ ಸಂಗಾತಿಗಳಾಗಲಿರುವವರು. ಅದರಲ್ಲಿ ಸರ್ವಕಾಲ ನೆಲೆಸಲಿರುವರು. {23}

ಆ ಎರಡು ಗುಂಪಿನ ಉದಾಹರಣೆ ಹೇಗಿದೆಯೆಂದರೆ, ಒಬ್ಬ ಕುರುಡನೂ ಕಿವುಡನೂ ಅಗಿದ್ದು ಮತ್ತೊಬ್ಬ ನೋಡಬಲ್ಲವನೂ ಕೇಳಬಲ್ಲವನೂ ಆಗಿದ್ದರೆ ಆ ಇಬ್ಬರು ಒಂದೇ ತರ ಆಗುವರೇ? ಪಾಠ ಕಲಿಯಲು ನೀವು ವಿಚಾರ ಮಾಡುವುದಿಲ್ಲವೇ? {24}

[ಹಿಂದೆ ಇಂತಹದ್ದೇ ಪರಿಸ್ಥಿತಿಯಲ್ಲಿ] ನಾವು ನೂಹ್ ರನ್ನು ಅವರ ಜನತೆಯೆಡೆಗೆ ಪ್ರವಾದಿಯಾಗಿ ನಿಯೋಗಿಸಿದೆವು. ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ (ಎಂದವರು ತಮ್ಮ ಜನತೆಗೆ ಸಾರಿದರು). {25}

ನೀವು ಅಲ್ಲಾಹ್ ನ ಹೊರತು ಬೇರೆ ಏನನ್ನೂ ಆರಾಧಿಸದಿರಿ, ಅನ್ಯಥಾ ಒಂದು ಯಾತನಾಮಯ ದಿನ ನಿಮ್ಮ ಮೇಲೆ ಶಿಕ್ಷೆ ಎರಗಲಿರುವ ಕುರಿತು ನನಗೆ ಭಯವಾಗುತ್ತಿದೆ (ಎಂದು ಅವರು ಬೋಧಿಸಿದರು). {26}

(ಪ್ರವಾದಿ ನೂಹ್ ರ ಬೋಧನೆಯನ್ನು ಸಂಪೂರ್ಣವಾಗಿ) ತಿರಸ್ಕರಿಸಿದ ಅವರ ಜನಾಂಗದ ಮುಖಂಡರು ಅದಕ್ಕುತ್ತರವಾಗಿ ಹೇಳಿದರು: ನಾವು ನಿಮ್ಮನ್ನು ನಮ್ಮಂತಹ ಒಬ್ಬ ಮನುಷ್ಯನಾಗಿ ಮಾತ್ರ ಕಾಣುತ್ತೇವೆ ಹೊರತು ಬೇರೇನೂ ಅಲ್ಲ; ನಿಮ್ಮ ಅನುಯಾಯಿಗಳಲ್ಲಿ ನಮ್ಮ ಸಮಾಜದ ಕೆಳವರ್ಗದವರು ಹಾಗೂ ಅಭಿಪ್ರಾಯ ತಾಳುವ ವಿಷಯದಲ್ಲಿ ಪಕ್ವತೆಯಿಲ್ಲದವರು ಮಾತ್ರ ಇರುವುದನ್ನೂ ನಾವು ನೋಡುತ್ತಿದ್ದೇವೆ; ಇನ್ನು ನಿಮ್ಮನ್ನು ನಮಗಿಂತ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ನಾವು ಕಾಣುವುದೂ ಇಲ್ಲ; ಮಾತ್ರವಲ್ಲ ನೀವು ಸುಳ್ಳುಗಾರರ ಯಾದಿಗೆ ಸೇರಿದವರೆಂದೇ ನಾವು ತಿಳಿಯುತ್ತೇವೆ! {27}

(ಆ ಮುಖಂಡರ ಧಿಕ್ಕಾರದ ಮಾತುಗಳಿಗೆ) ನೂಹ್ ರು ಉತ್ತರಿಸಿದರು: ಓ ನನ್ನ ಜನರೇ! ನೀವೇಕೆ ವಿವೇಚಿಸುವುದಿಲ್ಲ? ನನ್ನ ಕರ್ತಾರನ (ಕೃಪೆಯಿಂದ ಸ್ವಭಾವಿಕವಾಗಿಯೇ) ಸ್ಪಷ್ಟತೆಯಿಂದ ಕೂಡಿದ್ದ ನಿಲುವು ನನ್ನದಾಗಿತ್ತು. ಈಗ ಅವನು ತನ್ನ ಸನ್ನಿಧಿಯಿಂದ (ಪ್ರವಾದಿತ್ವವೆಂಬ ವಿಶೇಷ) ಅನುಗ್ರಹವನ್ನೂ ನನಗೆ ದಯಪಾಲಿರುತ್ತಾನೆ. ಆದರೆ ಅದಾವುದನ್ನೂ ನೀವು ಕಾಣುವಂತಿಲ್ಲ ತಾನೆ! ಇನ್ನು ಅದೆಲ್ಲ ನಿಮಗೆ ಬಹಳ ಅಪ್ರಿಯವಾಗಿರುವಾಗ ನಾನದನ್ನು ನಿಮ್ಮ ಮೇಲೆ ಹೇರ ಬೇಕೇ? {28}

ಓ ನನ್ನ ಸಮುದಾಯವೇ, ಈ (ಉಪದೇಶಗಳಿಗಾಗಿ) ನಾನು ನಿಮ್ಮಿಂದ ಯಾವ ಸಂಪತ್ತನ್ನೂ ಕೇಳುತ್ತಿಲ್ಲ. ಏಕೆಂದರೆ ನನಗೆ ಪ್ರತಿಫಲ ನೀಡಬೇಕಾದುದು ಅಲ್ಲಾಹ್ ನಲ್ಲದೆ ಬೇರಾರೂ ಅಲ್ಲ. (ನೀವು ಬಯಸಿದಂತೆ, ನನ್ನ ಅನುಯಾಯಿಗಳಾದ) ಈ ವಿಶ್ವಾಸಿಗಳನ್ನು ನಾನು ದೂರ ಅಟ್ಟುವುದೂ ಇಲ್ಲ. [ಸಮಾಜದ ಕೆಳವರ್ಗದವರೆಂದು ನೀವು ಜರೆಯುವ] ಈ ಜನರು ಖಂಡಿತವಾಗಿಯೂ ತಮ್ಮ ಕರ್ತಾರನನ್ನು ಭೇಟಿ ಮಾಡಲಿರುವವರು! ನಾನಂತು ಮೌಢ್ಯ ಬಾಧಿಸಿದ ಜನರಾಗಿ (ಇವರನ್ನಲ್ಲ; ಬದಲಾಗಿ) ನಿಮ್ಮನ್ನೇ ಕಾಣುತ್ತಿದ್ದೇನೆ. {29}

ನನ್ನ ಸಮುದಾಯದ ಜನರೇ! ಇನ್ನು ನಾನು ಅವರನ್ನು ದೂರಕ್ಕೆ ಅಟ್ಟಿಬಿಟ್ಟರೆ ಅಲ್ಲಾಹ್ ನ (ಪ್ರಕೋಪಕ್ಕೆ ತುತ್ತಾಗುವೆನು. ಆಗ) ನನಗೆ ಸಹಾಯ ಮಾಡುವವರು ಯಾರಿದ್ದಾರೆ! ಅಷ್ಟಾದರೂ ನೀವು ಯೋಚಿಸಬಾರದೇ? {30}

ನನ್ನ ಬಳಿ ಅಲ್ಲಾಹ್ ನ ಖಜಾನೆಗಳಿವೆಯೆಂದು ನಾನು ನಿಮಗೆ ಹೇಳಿಲ್ಲ; ಅಗೋಚರ ವಿಷಯಗಳ ಜ್ಞಾನವೂ ನನಗಿಲ್ಲ. ನಾನು (ಅತಿಮಾನುಷ ಗುಣಗಳುಳ್ಳ) ಒಬ್ಬ ಮಲಕ್ ಆಗಿರುವೆನೆಂದು ನಿಮ್ಮೊಂದಿಗೆ ವಾದಿಸುತ್ತಿಲ್ಲ. ನಿಮ್ಮ ಕಣ್ಣುಗಳಿಗೆ ತುಚ್ಛವಾಗಿ ಕಾಣುತ್ತಿರುವ ಆ ಜನರ ಕುರಿತು, ಅವರಿಗೆ ಅಲ್ಲಾಹ್ ನು ಶ್ರೇಯಸ್ಸು ನೀಡಿಲ್ಲ ಎಂದು ನಾನು ಹೇಳುತ್ತಿಲ್ಲ. ಅವರ ಅಂತರಾತ್ಮದಲ್ಲಿರುವ ವಿಚಾರಗಳನ್ನು ಚೆನ್ನಾಗಿ ಬಲ್ಲವನು ಅಲ್ಲಾಹ್ ನು ಮಾತ್ರ. ಇನ್ನು [ನೀವು ಬಯಸುತ್ತಿರುವಂತೆ ಅವರೊಂದಿಗೆ ಕೆಟ್ಟದಾಗಿ] ನಾನು ವರ್ತಿಸತೊಡಗಿದರೆ ಖಂಡಿತಾವಾಗಿ ದುಷ್ಟರ ಕೂಟಕ್ಕೆ ಸೇರಿದವನಾಗುವೆನು! {31}

ಅದಕ್ಕೆ ಅವರು ಉತ್ತರಿಸಿದರು: ಓ ನೂಹ್, ನಮ್ಮೊಂದಿಗೆ ನೀವು ವಾದ ಮಾಡಿದ್ದಾಯಿತು; ಬಹಳಷ್ಟು ವಾಗ್ವಾದ ನಮ್ಮೊಂದಿಗೆ ಮಾಡಿದ್ದೀರಿ! ಸಾಕು, ನೀವು ನಮ್ಮನ್ನು ಬೆದರಿಸುತ್ತಿರುವ ಆ ಶಿಕ್ಷೆಯನ್ನು ನಮ್ಮ ಮೇಲೆ ಎರಗಿಸಿ ತೋರಿಸಿ; ನೀವು ಸತ್ಯವಂತರು ಹೌದಾದರೆ ಅದನ್ನು ಸಾಧಿಸಿ ತೋರಿಸಿ! {32}

ಪ್ರವಾದಿ ನೂಹ್ ಹೇಳಿದರು: ತಾನಿಚ್ಛಿಸಿದರೆ ಅದನ್ನೂ ಸಹ ಅಲ್ಲಾಹ್ ನೇ ನಿಮ್ಮ ಮೇಲೆ ಎರಗಿಸುವನು! ಆಗ ಅದಕ್ಕೆ ಭಂಗ ತರಲು ನಿಮ್ಮಿಂದ ಸಾಧ್ಯವಾಗದು. {33}

[ನಿಮ್ಮ ಅಪಹಾಸ್ಯದ ಮಾತುಗಳು ಮತ್ತು ನೀವು ತೋರಿದ ನಿರಂತರ ಧಿಕ್ಕಾರದ ಕಾರಣ] ಒಂದು ವೇಳೆ ಅಲ್ಲಾಹ್ ನು ನಿಮ್ಮನ್ನು ತಪ್ಪು ದಾರಿಗೆ ದೂಡಲು ತೀರ್ಮಾಸಿದ್ದರೆ, ನಿಮಗೆ ಹಿತವಾಗಬೇಕೆಂದು ನಾನೆಷ್ಟು ಬಯಸಿದರೂ ಅದು ನಿಮಗೆ ಪ್ರಯೋಜನಕಾರಿಯಾಗದು. ಅವನೇ ನಿಮ್ಮೆಲ್ಲರ ಸೃಷ್ಟಿಕರ್ತನು! ಹೌದು (ಕೊನೆಯದಾಗಿ) ಅವನಲ್ಲಿಗೇ ನಿಮ್ಮನ್ನು ಮರಳಿಸಲಾಗುವುದು. {34}

ಪೈಗಂಬರರೇ, [ಈಗ ನಿಮ್ಮ ಸಮುದಾಯದ ಜನರೂ ಕೂಡ] ಇದನ್ನೆಲ್ಲಾ ಆತನೇ ಸ್ವತಃ ಉಂಟು ಮಾಡಿದ್ದಾನೆ ಎಂದು ಹೇಳುತ್ತಿರುವರೇ? ನೀವು ಅವರೊಂದಿಗೆ ಹೇಳಿರಿ, ಒಂದು ವೇಳೆ ನಾನೇ ಇದನ್ನು ರಚಿಸಿದ್ದರೆ ಆ ಅಪರಾಧದ (ಶಿಕ್ಷೆ) ನನಗಿರಲಿ; ಇನ್ನು ನೀವೆಸಗುತ್ತಿರುವ ಅಪರಾಧ ಕೃತ್ಯಗಳಿಂದ ನಾನಂತೂ ದೋಷಮುಕ್ತನಾಗಿದ್ದೇನೆ. {35}

ಹಾಗಿರುವಾಗ ನೂಹ್ ರಿಗೆ [ನಮ್ಮ ವತಿಯಿಂದ ವಹೀ, ಅರ್ಥಾತ್] ದಿವ್ಯ ಸಂದೇಶ ನೀಡಲಾಯಿತು: ನಿಮ್ಮ ಸಮುದಾಯಕ್ಕೆ ಸೇರಿದವರ ಪೈಕಿ ಈಗಾಗಲೇ ವಿಶ್ವಾಸಿಗಳಾದ ಜನರ ಹೊರತು ಹೆಚ್ಚಿನ ಯಾರೂ ವಿಶ್ವಾಸಿಗಳಾಗಲಾರರು! ಆದ್ದರಿಂದ (ಇನ್ನು ಮುಂದೆ) ಅಂತಹವರೆಸಗುವ ಕೃತ್ಯಗಳ ಕುರಿತು ನೀವು ದುಃಖಿಸ ಬೇಕಾದ ಅಗತ್ಯವಿಲ್ಲ. {36}

(ಓ ನೂಹ್,) ನೀವೀಗ ನಮ್ಮ ಮೇಲ್ನೋಟದಲ್ಲಿ ಮತ್ತು ನಮ್ಮ ನಿರ್ದೇಶನದ ಪ್ರಕಾರ ಒಂದು ನಾವೆಯನ್ನು ನಿರ್ಮಿಸಿರಿ. [ದುಷ್ಟ ಜನರಿಗಿರುವ ಶಿಕ್ಷೆಯ ಬಗ್ಗೆ ತೀರ್ಮಾನವಾಗಿರುತ್ತದೆ. ಆದ್ದರಿಂದ] ಆ ಪಾಪಿಗಳ ಕುರಿತಂತೆ ನೀವಿನ್ನು ನಮ್ಮೊಂದಿಗೆ ಮೊರೆಯಿಡಬೇಡಿ. (ಜಲಪ್ರಳಯದ ಶಿಕ್ಷೆಯಲ್ಲಿ) ಅವರೆಲ್ಲ ಖಂಡಿತವಾಗಿ ಮುಳುಗಡೆಯಾಗುವರು. {37}

ಹಾಗೆ ನೂಹ್ ರು ಆ ನಾವೆಯ ನಿರ್ಮಾಣಕ್ಕೆ ತೊಡಗಿದರು. ಅವರ ಸಮುದಾಯದ ಮುಖಂಡರು ಅದರ ಬಳಿಯಿಂದ ಹಾದು ಹೋಗುವಾಗಲೆಲ್ಲ ಅವರ ನಿರ್ಮಾಣಕಾರ್ಯವನ್ನು ಲೇವಡಿ ಮಾಡುತ್ತಿದ್ದರು. ನೂಹ್ ರು ಅವರೊಂದಿಗೆ ಹೇಳಿದರು: ನೀವೀಗ ನಮ್ಮನ್ನು ಅಪಹಾಸ್ಯ ಮಾಡಿದರೆ, ನೀವು ಮಾಡಿದಂತೆಯೇ ನಾವು ಸಹ ನಿಮ್ಮನ್ನು ಅಪಹಾಸ್ಯ ಮಾಡಲಿರುವೆವು! {38}

ಯಾರಿಗೆ ಆ ಶಿಕ್ಷೆ ಬರಲಿದೆ ಮತ್ತು ಯಾರನ್ನು ಅದು ಅಪಮಾನಕ್ಕೀಡು ಮಾಡಲಿದೆ ಎಂದು ಶೀಘ್ರದಲ್ಲೇ ನೀವು ತಿಳಿಯಲಿರುವಿರಿ. ಹೌದು, ಆ ಶಿಕ್ಷೆ ಎರಗಿದಾಗ [ಪಾಪಿಗಳೆಲ್ಲ ಮುಳುಗಡೆಯಾಗುವ ತನಕ] ಅದು ಕದಲದೆ ನಿಲ್ಲುವುದು! {39}

[ನಾವೆಯು ನಿರ್ಮಾಣಗೊಂಡಿತು]. ಅಷ್ಟೊತ್ತಿಗೆ (ಸಾಮೂಹಿಕ ಶಿಕ್ಷೆಯೆರಗಿಸುವ) ನಮ್ಮ ಆದೇಶ ಕಾರ್ಯರೂಪಕ್ಕೆ ಬಂತು. ಕೂಡಲೇ [ಮಹಾ ಪ್ರಳಯದ ಸಂಕೇತವಾಗಿ] ಒಲೆಗಳಿಂದ ನೀರು ಉಕ್ಕಿ ಹರಿಯಿತು. ಆಗ ನಾವು (ನೂಹ್ ರಿಗೆ) ಆಜ್ಞಾಪಿಸಿದೆವು: (ಅಗತ್ಯದ ಪ್ರಾಣಿಗಳಲ್ಲಿ) ಪ್ರತಿಯೊಂದರ ಪೈಕಿ ಒಂದು ಜೊತೆಯನ್ನು (ಅರ್ಥಾತ್ ಒಂದು ಗಂಡು ಒಂದು ಹೆಣ್ಣನ್ನು) ಈಗ ನಾವೆಯೊಳಗೆ ಹತ್ತಿಸಿಕೊಳ್ಳಿ; ಹಾಗೆಯೇ ನಿಮ್ಮ ಕುಟುಂಬದವರ ಪೈಕಿ ಯಾರ ಬಗ್ಗೆ ಅದಾಗಲೇ ಶಿಕ್ಷೆಯ ತೀರ್ಮಾನವಾಗಿದೆಯೋ ಅವರ ಹೊರತು ಉಳಿದವರನ್ನು ಹತ್ತಿಸಿಕೊಳ್ಳಿ; ಜೊತೆಗೆ ಎಲ್ಲಾ ವಿಶ್ವಾಸಿಗಳನ್ನೂ ಹತ್ತಿಸಿಕೊಳ್ಳಿ (ಎಂದು ಆದೇಶ ನೀಡಿದೆವು). ನಿಜವೇನೆಂದರೆ ನೂಹ್ ರ ಜೊತೆ ಸ್ವಲ್ಪವೇ ಜನ ವಿಶ್ವಾಸಿಗಳಿದ್ದರು. {40}

ನೂಹ್ ರು ಹೇಳಿದರು: ಈ ನಾವೆಯನ್ನೇರಿರಿ; ಇದು ಚಲಿಸಿವುದೂ ಚಲನೆ ನಿಲ್ಲಿಸುವುದೂ ಅಲ್ಲಾಹ್ ನ ನಾಮದಿಂದ; [ಆದ್ದರಿಂದ ಭಯಪಡುವ ಅಗತ್ಯವಿಲ್ಲ], ನನ್ನ ಕರ್ತಾರನು ನಿಜವಾಗಿ ಕ್ಷಮಾಶೀಲನೂ ನಿರಂತರ ಕರುಣೆ ತೋರುವವನೂ ಆಗಿರುತ್ತಾನೆ! {41}

[ಹಾಗೆ ವಿಶ್ವಾಸಿಗಳೆಲ್ಲರೂ ನಾವೆಯನ್ನೇರಿದಾಗ] ಅದು ಅವರನ್ನು ಹೊತ್ತು ಪರ್ವತಗಳಂತಹ ತೆರೆಗಳ ನಡುವೆ ಚಲಿಸತೊಡಗಿತು. ಅಷ್ಟೊತ್ತಿಗೆ ಪ್ರತ್ಯೇಕವಾಗಿ ದೂರದಲ್ಲಿ ನಿಂತಿದ್ದ ತನ್ನ ಮಗನನ್ನು ನೂಹ್ ರು ಕೂಗಿ ಕರೆದರು: ಓ ನನ್ನ ಮಗನೇ, ನಮ್ಮ ಜೊತೆ (ಈ ನೌಕೆಯನ್ನು) ಹತ್ತುವವನಾಗು; [ಅಲ್ಲಾಹ್ ಮತ್ತವನ ದೂತನ ಅಂತಿಮ ಕರೆಯನ್ನು ಸಹ] ಧಿಕ್ಕರಿಸಿದವರ ಸಾಲಿಗೆ ನೀನು ಸೇರದಿರು. {42}

ಅವನು ಉತ್ತರಿಸಿದನು: ಈ ಪ್ರವಾಹದಲ್ಲಿ (ಕೊಚ್ಚಿ ಹೋಗದಂತೆ) ನನ್ನನ್ನು ರಕ್ಷಿಸುವ ಒಂದು ಪರ್ವತದ ಕಡೆ ಹೋಗಿ ನಾನು ಆಸರೆ ಪಡೆಯುವೆನು! ಅದಕ್ಕೆ ನೂಹ್ ಹೇಳಿದರು: ಅಲ್ಲಾಹ್ ನು ಕೃಪೆ ತೋರಿದವನಿಗೆ ಮಾತ್ರ ಹೊರತು, ಇಂದು ಅಲ್ಲಾಹ್ ನ ಅಪ್ಪಣೆಗೆ ಎದುರಾಗಿ ರಕ್ಷಣೆ ಎಂಬುದು ಯಾರಿಗೂ ಇಲ್ಲ! [ಸಂಭಾಷಣೆ ಇನ್ನೂ ನಡೆಯುತ್ತಿತ್ತು, ಅಷ್ಟೊತ್ತಿಗೆ] ಆ ಇಬ್ಬರ ನಡುವೆ ಎದ್ದ ತೆರೆಯೊಂದು ಅವರಿಗೆ ಅಡ್ಡವಾಯಿತು; ಮುಳುಗಡೆಯಾದವರ ಪೈಕಿ ಆತನೂ ಮುಳುಗಿ ಹೋದನು. {43}

[ಅಲ್ಲಿಗೆ ಪಾಪಿಗಳೆಲ್ಲರ ಮುಳುಗಡೆಯಾಯಿತು! ಆಗ] ಹೇ ಭೂಮಿಯೇ, ನೀನು ಹೊರಹಾಕಿದ ನೀರನ್ನು ಹೀರಿಬಿಡು; ಓ ಆಕಾಶವೇ, ಸುರಿಸುವುದನ್ನೀಗ ತಡೆದುಕೋ ಎಂದು ಆದೇಶಲ್ಪಟ್ಟಿತು! ನೀರು ಬತ್ತಿ ಹೋಯಿತು ಮತ್ತು ವಿಷಯದ ತೀರ್ಮಾನವಾಗಿತ್ತು! ಅಷ್ಟರಲ್ಲಿ ನೌಕೆಯು ಜೂದಿ ಪರ್ವರ್ತದಲ್ಲಿ ತಳವೂರಿತ್ತು! ಪಾಪಿಗಳ ಕೂಟ ತೊಲಗಲಿ ಎನ್ನಲಾಗಿತ್ತು! {44}

ನೂಹ್ ರು ತನ್ನ ಕರ್ತಾರನನ್ನು ಕರೆದು (ತಮ್ಮ ದುಃಖ) ಹೇಳಿಕೊಂಡರು: ಪ್ರಭುವೇ, ನನ್ನ ಮಗನೂ ಸಹ ನನ್ನ ಕುಟುಂಬದವನೇ ಆಗಿದ್ದನು! ಮತ್ತು [ನನ್ನ ಕುಟುಂಬದವರ ಬಗ್ಗೆ] ನಿನ್ನ ವಾಗ್ದಾನವೂ ಸತ್ಯವೇ ಆಗಿತ್ತು! ಇನ್ನು ತೀರ್ಪು ನೀಡುವ ವಿಷಯದಲ್ಲಿ ನೀನು ಸರ್ವೋತ್ತಮನು! {45}

ಅಲ್ಲಾಹ್ ನು ಹೇಳಿದನು: ಓ ನೂಹ್! ಆತನು ನಿಮ್ಮ ಕುಟುಂಬದವನಲ್ಲ; ಆತನೊಬ್ಬ ಸಾತ್ವಿಕನಲ್ಲದ ದುಷ್ಕರ್ಮಿಯೇ ಸರಿ. ಆದ್ದರಿಂದ ನಿಮಗೆ ಅರಿವಿಲ್ಲದ ವಿಷಯದಲ್ಲಿ ನೀವು ನನ್ನೊಂದಿಗೆ ಕೇಳಬಾರದು! ಇನ್ನು ತಿಳಿಗೇಡಿಗಳ ಸಾಲಿಗೆ ಸೇರಿದವರಂತೆ ನೀವು ವರ್ತಿಸದಿರಿ ಎಂದು ನಾನು ನಿಮ್ಮನ್ನು ಉಪದೇಶಿಸುತ್ತೇನೆ. {46}

ನೂಹ್ ರು ಕೂಡಲೇ ಪ್ರಾರ್ಥಿಸಿದರು: ನನ್ನೊಡೆಯಾ, ನಿಜಸ್ಥಿತಿಯ ಅರಿವಿಲ್ಲದ ಒಂದು ವಿಷಯದಲ್ಲಿ ನಾನು ನಿನ್ನೊಡನೆ ಬೇಡಿದ್ದಕ್ಕಾಗಿ ನಿನ್ನ ಅಭಯ ಯಾಚಿಸಿತ್ತಿದ್ದೇನೆ. ಇನ್ನು ನೀನು ನನ್ನನ್ನು ಕ್ಷಮಿಸದಿದ್ದರೆ, ನನ್ನ ಮೇಲೆ ಕನಿಕರ ತೋರದಿದ್ದರೆ ನಾನಂತು ಸೋತವನಾಗಿ ಬಿಡುವೆನು. {47}

ಅವರೊಂದಿಗೆ ಹೇಳಲಾಯಿತು: ಓ ನೂಹ್! ನೀವಿನ್ನು ಕೆಳಗೆ ಇಳಿಯಿರಿ. ನಮ್ಮ ವತಿಯಿಂದ ಶಾಂತಿ ಸಮಾಧಾನಗಳು ನಿಮ್ಮ ಮೇಲಿರಲಿ. ನಿಮ್ಮ ಮತ್ತು [ಈ ನೌಕೆಯಲ್ಲೂ ವಿಶ್ವಾಸದ ವಿಷಯದಲ್ಲೂ] ನಿಮ್ಮ ಜೊತೆಗಿರುವವರ ಪೀಳಿಗೆಗಳು (ಭೂಮುಖದಲ್ಲಿ) ಸಂವೃದ್ಧವಾಗಿ ಬೆಳೆಯಲಿ. ಇನ್ನು (ವಿಶ್ವಾಸಿಗಳಲ್ಲದ) ಸಮುದಾಯಗಳಿಗೂ ನಾವು ಜೀವನಾವಶ್ಯಕತೆಯ ಸಾಧನಗಳನ್ನು ಒದಗಿಸಲಿದ್ದೇವೆ. ನಂತರ (ಪರಲೋಕಲ್ಲಿ) ನಾವು ನೀಡುವ ಯಾತನಾಮಯ ಶಿಕ್ಷೆ ಅವರಿಗೆ ತಟ್ಟಲಿದೆ. {48}

[ಪೈಗಂಬರರೇ! ನಿಮ್ಮ ಮಟ್ಟಿಗೆ ನೂಹ್ ರ ಕುರಿತಾದ] ಇಂತಹ ಸಮಾಚಾರಗಳು ತೆರೆಮರೆಯ [ಅರಬಿ: ಅಲ್ ಘೈಬ್, ಅಂದರೆ ಪ್ರತ್ಯಕ್ಷವಲ್ಲದ] ಸಮಾಚಾರಗಳು; ಅದನ್ನು ನಾವೀಗ ನಿಮಗೆ ವಹೀ [ಅರ್ಥಾತ್ ದೈವಿಕಬೋಧನೆಯ] ಮೂಲಕ ತಿಳಿಸುತ್ತಿದ್ದೇವೆ! (ಪೈಗಂಬರರೇ), ಇದಕ್ಕಿಂತ ಮುಂಚೆ ನಿಮಗಾಗಲಿ ನಿಮ್ಮ ಜನರಿಗಾಗಲಿ ಇದರ ಕುರಿತು ಯಾವ ತಿಳುವಕೆಯೂ ಇರಲಿಲ್ಲ. [ನಿಮ್ಮನ್ನು ಧಿಕ್ಕರಿಸಿದ ಜನರ ಬಗ್ಗೆ ಅಲ್ಲಾಹ್ ನ ತೀರ್ಪು ಬರುವ ತನಕ] ನೀವು ಸಹನೆಯಿಂದ ವರ್ತಿಸಿರಿ. ಕಡೆಯ ಗೆಲುವು ಪ್ರಾಪ್ತವಾಗುವುದು ಯಾವಾಗಲೂ ಭಯಭಕ್ತಿಯಿಂದ ವರ್ತಿಸುವ ಜನರಿಗೇ. {49}

ಹಾಗೆಯೇ [ನಿಮಗೆ ತಿಳಿದೇ ಇರುವ ಪುರಾತನ ಅರಬ್ ಜನಾಂಗವಾದ] ಆದ್ ಸಮುದಾಯಕ್ಕೆ ನಾವು (ಪ್ರವಾದಿಯಾಗಿ) ಅವರದೇ ಬಂಧು ಹೂದ್ ರನ್ನು ನಿಯೋಗಿಸಿದೆವು. ಅವರು ಸಾರಿದರು: ಓ ನನ್ನ ಜನಾಂಗದವರೇ, ನೀವು ಅಲ್ಲಾಹ್ ನನ್ನೇ ಆರಾಧಿಸಿರಿ. ಅವನಲ್ಲದೆ ಬೇರೆ ಯಾರೂ ನಿಮಗೆ ದೇವರಲ್ಲ. ನೀವು ಮಾತ್ರ [ಇತರನ್ನು ಆರಾಧಿಸುವುದಕ್ಕೋಸ್ಕರ] ಇಲ್ಲ ಸಲ್ಲದ ಕಥೆಗಳನ್ನು ಹೆಣೆಯುತ್ತಿರುವಿರಿ. {50}

ಓ ನನ್ನ ಬಾಂಧವರೇ, ಈ ಉಪದೇಶಕ್ಕಾಗಿ ನಾನೇನೂ ನಿಮ್ಮಿಂದ ಪ್ರತಿಫಲ ಬೇಡುತ್ತಿಲ್ಲ. ನನಗೆ ಪ್ರತಿಫಲ ನೀಡಬೇಕಾದುದು ನನ್ನನ್ನು ಸೃಷ್ಟಿಸಿದವನಲ್ಲದೆ ಬೇರೆ ಯಾರೂ ಅಲ್ಲ. ನೀವು ಸ್ವಲ್ಪ ಆಲೋಚಿಸಬಾರದೇ? {51}

ಓ ನನ್ನ ಬಾಂಧವರೇ, ನಿಮ್ಮ ಒಡೆಯನೊಂದಿಗೆ ಪಾಪ ವಿಮುಕ್ತಿಗಾಗಿ ಪ್ರಾರ್ಥಿಸಿರಿ, ಮತ್ತು ಪಶ್ಚಾತ್ತಾಪ ಪಡುತ್ತಾ ಅವನೆಡೆಗೆ ಮರಳಿರಿ. ಹಾಗಾದರೆ ಧಾರಾಳವಾಗಿ (ಮಳೆ ಸುರಿಸುವ) ವರ್ಷಮೇಘಗಳನ್ನು ಅವನು ನಿಮ್ಮತ್ತ ಕಳುಹಿಸುವನು; ನಿಮ್ಮ (ಸಾಮೂಹಿಕ) ಶಕ್ತಿಗೆ ಅವನು ಮತ್ತಷ್ಟು ಶಕ್ತಿಯನ್ನು ಸೇರಿಸುವನು. ನೀವು ದುಷ್ಕರ್ಮಿಗಳಾಗಿ ಮುಖ ತಿರುಗಿಸಿ ಹೋಗುವವರಾಗದಿರಿ. {52}

ಆ ಜನರು ಉತ್ತರಿಸಿದರು: ಓ ಹೂದ್! ನೀವು ನಮ್ಮಲ್ಲಿಗೆ [ನಿಮ್ಮ ಪ್ರವಾದಿತ್ವವನ್ನು ದೃಢೀಕರಿಸುವ] ಯಾವ ಸ್ಪಷ್ಟ ನಿದರ್ಶನವನ್ನೂ ತಂದಿಲ್ಲ; ಇನ್ನು ನೀವು ಹೇಳಿದ ಮಾತ್ರಕ್ಕೆ ನಮ್ಮ ಆರಾಧ್ಯ ದೇವರಗಳನ್ನು ನಾವು ವರ್ಜಿಸುವುದೂ ಇಲ್ಲ! ನಿಮ್ಮ ಮಾತುಗಳನ್ನು ನಾವು ನಂಬುವ ವಿಷಯವೇ ಇಲ್ಲ. {53}

ಏನಂದರೆ ನಮ್ಮ ದೇವರುಗಳಲ್ಲಿ ಯಾರೋ ಒಬ್ಬರ ಕೆಟ್ಟ ಶಾಪ ನಿಮಗೆ ತಗುಲಿರಬೇಕು ಎಂದೇ ನಾವು ಹೇಳುತ್ತೇವೆ. ಅದಕ್ಕೆ ಪ್ರವಾದಿ ಹೂದ್ ಉತ್ತರಿಸಿದರು: ನೀವು (ಅಲ್ಲಾಹ್ ನ ಹೊರತು) ಇತರರಿಗೂ ದೇವತ್ವ ಕಲ್ಪಿಸುತ್ತಿರುವಂತಹ ದುಷ್ಕೃತ್ಯ [ಅರಬಿ: ಶಿರ್ಕ್] ದಿಂದ ನಾನಂತು ಪಾಪಮುಕ್ತನು; ಅದಕ್ಕೆ ನಾನು ಅಲ್ಲಾಹ್ ನನ್ನು ಸಾಕ್ಷಿಯಾಗಿಸುತ್ತೇನೆ. ನೀವೂ ಅದಕ್ಕೆ ಸಾಕ್ಷಿಯಾಗಿರಿ. {54}

ಅವನೊಬ್ಬನನ್ನು ಹೊರತು ಪಡಿಸಿ, ನೀವೆಲ್ಲರೂ ಒಟ್ಟಾಗಿ ನನ್ನ ವಿರುದ್ಧ ಸಂಚುಗಳನ್ನು ಹೂಡಿರಿ! ನನಗೆ ಕಾಲಾವಕಾಶ ಕೊಡಲೇ ಬೇಡಿ. {55}

ಹೌದು, ನನ್ನ ಮತ್ತು ನಿಮ್ಮಲ್ಲರ ಒಡೆಯನಾದ ಅಲ್ಲಾಹ್ ನ ಮೇಲೆ ನಾನು ಸಂಪೂರ್ಣ ಭರವಸೆ ಇಟ್ಟಿದ್ದೇನೆ. (ಏಕೆಂದರೆ ಭೂಮಿಯ ಮೇಲೆ) ನಡೆದಾಡುವ ಸಕಲ ಜೀವಿಗಳ ಜುಟ್ಟು (ಅರ್ಥಾತ್ ನಿಯಂತ್ರಣ) ಸಂಪೂರ್ಣವಾಗಿ ಅವನ ಹಿಡಿತದಲ್ಲಿದೆ. [ಹಾಗಿರುವಾಗ ಶಿರ್ಕ್ ಎಂದಿಗೂ ನೇರ ಮಾರ್ಗವಲ್ಲ; ನೇರ ಮಾರ್ಗದಲ್ಲಿ ನಡೆಯಿರಿ. ಏಕೆಂದರೆ] ನನ್ನ ಕರ್ತಾರನು ನಿಜವಾಗಿ ತನ್ನನ್ನು ನೇರ ಮಾರ್ಗದಲ್ಲಿ ಇರಿಸಿದ್ದಾನೆ. {56}

ಅಷ್ಟಾಗಿಯೂ ನೀವು (ಕಡೆಗಣಿಸಿ) ಮುಖ ತಿರುಗಿಸಿ ಕೊಂಡರೆ, ಯಾವ ಉಪದೇಶ ಸಮೇತ ನನ್ನನ್ನು ನಿಮ್ಮ ಬಳಿಗೆ ಕಳುಹಿಸಲಾಗಿತ್ತೋ ಅದನ್ನು ನಾನಂತು ನಿಮಗೆ ತಲುಪಿಸಿ ಬಿಟ್ಟಿದ್ದೇನೆ; ಇನ್ನು ನನ್ನ ಒಡೆಯನು (ನಿಮ್ಮನ್ನು ಅಳಿಸಿ) ಬೇರೊಂದು ಜನತೆಯನ್ನು ನಿಮ್ಮ ಸ್ಥಾನದಲ್ಲಿ ತಂದು ನಿಲ್ಲಿಸುವನು! ಅವನಿಗೆ ಯಾವ ಹಾನಿಯನ್ನೂ ನೀವು ಮಾಡಲಾರಿರಿ. ಹೌದು, ಸಕಲ ವಿದ್ಯಮಾನಗಳ ಉಸ್ತುವಾರಿ ನನ್ನ ಕರ್ತಾರನು ನೋಡಿಕೊಳ್ಳುತ್ತಾನೆ. {57}

ಮುಂದೆ ನಾವು ಶಿಕ್ಷೆಯ ಆದೇಶವಿತ್ತಾಗ, ನಮ್ಮ ವಿಶೇಷ ಕೃಪೆಯೊಂದಿಗೆ ಪ್ರವಾದಿ ಹೂದ್ ಮತ್ತು ಅವರ ಜೊತೆಯಲ್ಲಿದ್ದ ವಿಶ್ವಾಸಿಗಳನ್ನು ರಕ್ಷಿಸಿದೆವು. ಪ್ರಚಂಡವಾದ ಒಂದು ಶಿಕ್ಷೆಯಿಂದ ನಾವು ಅವರನ್ನು ಪಾರು ಮಾಡಿ ಬಿಟ್ಟೆವು. {58}

ಅದಾಗಿತ್ತು (ಅಳಿಸಲ್ಪಟ್ಟ) ಆದ್ ಸಮುದಾಯ! ತಮ್ಮ ಕರ್ತಾರನ ದೃಷ್ಟಾಂತಗಳನ್ನು ಅಲ್ಲಗಳೆದ ಮತ್ತು ಅವನ ದೂತರನ್ನು ತಿರಸ್ಕರಿಸಿದ ಸಮುದಾಯ! (ವಾಸ್ತವವೇನೆಂದರೆ) ದರ್ಪದೊಂದಿಗೆ ಅಧಿಕಾರ ಚಲಾಯಿಸಿದ ಎಲ್ಲ ದುರಹಂಕಾರಿಗಳ ಆಜ್ಞೆಗಳನ್ನು ಅವರು ಅನುಸರಿಸುತ್ತಿದ್ದರು. {59}

ಈ ಲೋಕದಲ್ಲಿ ಅವರನ್ನು ಹಿಂಬಾಲಿಸುವಂತೆ ಅವರ ಹಿಂದೆ ಶಾಪ ತಗುಲಿಸಲಾಯಿತು, ಪುನರುತ್ಥಾನದ ದಿನವೂ ಅದು ಅವರ ಬೆನ್ನು ಹತ್ತುವುದು. ಹೌದು, ಆದ್ ಸಮುದಾಯವು ತನ್ನ ಒಡೆಯನಿಗೆ ಕೃತಘ್ನತೆ ತೋರಿದ ಸಮುದಾಯವಾಯಿತು - ನೀವು ಎಚ್ಚರವಾಗಿರಿ! ಹೌದು, ಹೂದ್ ರ ಸಮುದಾಯವಾದ ಆದ್ ಸಮುದಾಯವನ್ನು ದೂರ ಮಾಡಿ ಬಿಡಲಾಯಿತು - ನೀವು ಜೋಪಾನ! {60}

ನಂತರ [ಅರಬರರ ಮತ್ತೊಂದು ಪುರಾತನ ಸಮುದಾಯವಾದ] ತಮೂದ್ ನ ಕಡೆಗೆ ನಾವು ಅವರದೇ ಬಂಧು ಸಾಲಿಹ್ ರನ್ನು (ಪ್ರವಾದಿಯಾಗಿ) ನಿಯೋಗಿಸಿದೆವು. ಅವರು ಸಾರಿದರು: ಓ ನನ್ನ ಸಮುದಾಯದ ಜನರೇ! ನೀವು ಅಲ್ಲಾಹ್ ನನ್ನು ಮಾತ್ರವೇ ಆರಾಧಿಸಿರಿ; ಏಕೆಂದರೆ ಅವನ ಹೊರತು ಬೇರೆ ಯಾರೂ ನಿಮ್ಮನ್ನು (ಸೃಷ್ಟಿಸಿದ) ದೇವರಲ್ಲ. ನಿಮ್ಮನ್ನು ಮಣ್ಣಿನಿಂದ ರೂಪಿಸಿದವನೂ ಆ ಮಣ್ಣಿನ ಮೇಲೆಯೇ ನೀವು ನೆಲೆಸುವಂತೆ ಮಾಡಿದವನೂ ಆ ಅಲ್ಲಾಹ್ ನೇ! ಹಾಗಿರುವಾಗ [ಇತರರಿಗೆ ತಲೆಬಾಗುತ್ತಿರುವ ನೀವು ಈಗ] ಅವನೊಂದಿಗೆ ಕ್ಷಮೆಯಾಚಿಸಿರಿ ಮತ್ತು ಪಶ್ಚಾತ್ತಾಪ ಪಟ್ಟು ಅವನೆಡೆಗೆ ಮರಳಿರಿ. ಹೌದು, ನನ್ನ ಕರ್ತಾರನು (ಕ್ಷಮೆ ಯಾಚುಸುವವರ) ಸಮೀಪದಲ್ಲೇ ಇರುವನು; ಪ್ರಾರ್ಥನೆಗಳಿಗೆ ಅವನು ಸ್ಪಂದಿಸುವನು. {61}

ಆ ಜನರು ಉತ್ತರಿಸಿದರು: ಓ ಸಾಲಿಹ್! ಇದಕ್ಕಿಂತ ಮುಂಚೆ ನಾವು ಅಪಾರವಾಗಿ ಭರಸೆ ಇಟ್ಟದ್ದ ಮತ್ತು ನಮ್ಮವರೇ ಆದ ಒಬ್ಬ ವ್ಯಕ್ತಿ ನೀವಾಗಿದ್ದಿರಿ. ನಮ್ಮ ಪೂರ್ವಜರು ಏನನ್ನು ಪೂಜಿಸುತ್ತಿದ್ದರೋ ಅದನ್ನು ನಾವು ಪೂಜಿಸಬಾರದೆಂದು ನೀವೀಗ ನಮ್ಮನ್ನು ತಡೆಯಲು ಹೊರಟಿದ್ದೀರಿ. ನೀವು ಯಾವ ಮಾರ್ಗದೆಡೆಗೆ ನಮ್ಮನ್ನು ಕರೆಯುತ್ತಿರುವಿರೋ ಅದರ ಬಗ್ಗೆ ನಮಗಂತು ತುಂಬಾ ಗೊಂದಲವಾಗಿದೆ; ನಾವು (ನಿಮ್ಮ ಬಗ್ಗೆ) ಸಂದೇಹ ಪಡುವಂತಾಗಿದೆ! {62}

ಸಾಲಿಹ್ ಹೇಳಿದರು: ಓ ನನ್ನ ಜನರೇ, ನೀವೇ ಸ್ವಲ್ಪ ಆಲೋಚಿಸಿ ನೋಡಿರಿ. ನಾನು ನನ್ನ ಕರ್ತಾರನಿಂದ ಸಿಕ್ಕಿದ ಸ್ಪಷ್ಟವಾದ (ಸರಿದಾರಿಯಲ್ಲಿ) ನಡೆಯುತ್ತಿದ್ದು, ತನ್ನ ವತಿಯಿಂದ ಅವನು ನನಗೆ [ಪ್ರವಾದಿತ್ವ ದಯಪಾಲಿಸುವ ಮೂಲಕ] ಮತ್ತಷ್ಟು ಅನುಗ್ರಹಿಸಿರುವಾಗ, ನಾನು ಅವನ ಮಾತು ಮೀರಿದರೆ ಅವನ ಕೋಪದಿಂದ ನನ್ನನ್ನು ರಕ್ಷಿಸುವವರು ಯಾರು? [ನಿಮ್ಮನ್ನು ಅನುಸರಿಸಿದರೆ] ನನ್ನ ಪಾಲಿಗೆ ನಷ್ಟವನ್ನಲ್ಲದೆ ಬೇರೇನನ್ನೂ ನೀವು ಹೆಚ್ಚಿಸಲಾರಿರಿ. {63}

ಓ ನನ್ನ ಜನರೇ, ಇದನ್ನು ನೋಡಿ, ಇದು ಅಲ್ಲಾಹ್ ನು ಕಳುಹಿಸಿರುವ ಹೆಣ್ಣೊಂಟೆ! ಇದು ನಿಮ್ಮ ಪಾಲಿಗೊಂದು ದೃಷ್ಟಾಂತವಾಗಿದೆ! ಆದ್ದರಿಂದ ಅಲ್ಲಾಹ್ ನ ಭೂಮಿಯಲ್ಲಿ ಎಲ್ಲಿ ಬೇಕಾದರಲ್ಲಿ ಮೇಯ್ದುಕೊಳ್ಳಲು ಅದನ್ನು ಬಿಟ್ಟು ಬಿಡಿ. ಕೆಟ್ಟ ಉದ್ದೇಶದೊಂದಿಗೆ ಅದನ್ನು ನೀವು ಮುಟ್ಟದಿರಿ. ಹಾಗೇನಾದರೂ ನೀವು ಮಾಡಿದರೆ ಹೆಚ್ಚು ತಡವಾಗದೆ ನಿಮ್ಮ ಮೇಲೆ ಶಿಕ್ಷೆ ಎರಗಿ ಬೀಳುವುದು. {64}

[ಅಂತಹ ಎಚ್ಚರಿಕೆಯ ಹೊರತಾಗಿಯೂ ಹಿಂದೊಡೆ ಕಡಿದು ಕ್ರೂರವಾಗಿ] ಆ ಹೆಣ್ಣೊಂಟಯನ್ನು ಜನರು ಕೊಂದೇ ಬಿಟ್ಟರು. ಸಾಲಿಹ್ ರು [ತನ್ನ ಕರ್ತಾರನ ಅಪ್ಪಣೆಯಂತೆ ಆ ದುಷ್ಟರಿಗೆ ಶಿಕ್ಷೆಯ] ಎಚ್ಚರಿಕೆ ನೀಡಿದರು: ಇನ್ನು ಕೇವಲ ಮೂರು ದಿನಗಳ ಕಾಲ ಮಾತ್ರ ನೀವು ನಿಮ್ಮ ನಿಮ್ಮ ಮನೆಗಳಲ್ಲಿ ಆನಂದಿಸ ಬಹುದಷ್ಟೆ! ಹೌದು, ಇದು ಸುಳ್ಳಾಗುವಂಹ ಎಚ್ಚರಿಕೆಯಲ್ಲ. {65}

ಕೊನೆಗೆ (ಅವರನ್ನು ಶಿಕ್ಷಿಸುವ) ನಮ್ಮ ಅದೇಶ ಜ್ಯಾರಿಗೊಂಡಾಗ ನಾವು ಪ್ರವಾದಿ ಸಾಲಿಹ್ ರನ್ನೂ ಅವರ ಜೊತೆಗಿದ್ದ ವಿಶ್ವಾಸಿಗಳನ್ನೂ ನಮ್ಮ ವಿಶೇಷ ಕೃಪೆಗೆ ಪಾತ್ರರಾಗಿಸಿ ರಕ್ಷಿಸಿದೆವು; ಶಿಕ್ಷೆಯ ದಿನದ ಅವಮಾನದಿಂದಲೂ ಅವರನ್ನು ರಕ್ಷಿಸಿ ಪಾರು ಮಾಡಿದೆವು! ಪೈಗಂಬರರೇ, ನಿಮ್ಮ ಕರ್ತಾರನು ನಿಜವಾಗಿ ಬಹಳ ಶಕ್ತಿಶಾಲಿಯೂ ಪ್ರಚಂಡನೂ ಆಗಿದ್ದಾನೆ. {66}

ಸಿಡಿಲಿನಂತಹ ಭಯಾನಕ ಶಬ್ಧವೊಂದು ಆ ದುಷ್ಟ ಜನರನ್ನು (ರಾತೋರಾತ್ರಿ) ಬಲಿ ತೆಗೆದುಕೊಂಡಿತು; ಹಾಗೆ ತಮ್ಮದೇ ನಿವಾಸಗಳಲ್ಲಿ ಬೋರಲಾಗಿ (ಸತ್ತು) ಬಿದ್ದ ಸ್ಥಿತಿಯಲ್ಲಿ ಅವರಿಗೆ ಬೆಳಗಾಯಿತು! {67}

ಅಲ್ಲಿ ಅವರು ನೆಲೆಸಿರಲೇ ಇಲ್ಲವೋ ಎಂಬಂತೆ (ನಾಶವಾದರು)! ಹೌದು, ತಮೂದ್ ಸಮುದಾಯವು ತನ್ನ ಒಡೆಯನಿಗೆ ಕೃತಘ್ನತೆ ತೋರಿದ ಸಮುದಾಯವಾಯಿತು - ನೀವು ಎಚ್ಚರವಾಗಿರಿ! ಹೌದು, ತಮೂದ್ ಸಮುದಾಯವನ್ನು ದೂರ ಮಾಡಿ ಬಿಡಲಾಯಿತು - ನೀವು ಜೋಪಾನ! {68}

ನಮ್ಮ ದೂತರುಗಳು [ಅರ್ಥಾತ್ ಮನುಷ್ಯರ ರೂಪ ತಾಳಿದ್ದ ಮಲಕ್ ಗಳು] ಪ್ರವಾದಿ ಇಬ್ರಾಹೀಮ್ ರ ಬಳಿಗೆ ಒಂದು ಶುಭ ಸಮಾಚಾರದೊಂದಿಗೆ ಆಗಮಿಸಿದರು; ನಿಮಗೆ ಶಾಂತಿ ಇರಲಿ ಎಂದು ಅವರು ಹರಸಿದರು. ನಿಮಗೂ ಶಾಂತಿಯಿರಲಿ ಎಂದು ಇಬ್ರಾಹೀಮ್ ರು ಉತ್ತರಿಸಿ, ಹೆಚ್ಚು ತಡಮಾಡದೆ ಬೇಯಿಸಿದ ಕರುವಿನ (ಮಾಂಸವನ್ನು ಅತಿಥಿಗಳಿಗೆ) ಅವರು ಬಡಿಸಿದರು. {69}

ಆದರೆ ಆಗಂತುಕರ ಕೈಗಳು ಭೋಜನದತ್ತ ತಲುಪದಿರುವುದನ್ನು ಕಂಡಾಗ ಇಬ್ರಾಹೀಮ್ ರಿಗೆ ಅಸಹಜವಾದ ಸಂದೇಹ ಮೂಡಿತು; ಮನದೊಳಗೇ ಅವರ ಬಗ್ಗೆ ಭಯವಾಗ ತೊಡಗಿತು. (ಅದನ್ನು ಮನಗಂಡ ಮಲಕ್ ಗಳು) ಹೆದರ ಬೇಡಿ, ನಿಜವಾಗಿ ನಮ್ಮನ್ನು ಕಳುಹಿಸಲಾಗಿರುವುದು ಪ್ರವಾದಿ ಲೂತ್ [ಬೈಬಲ್ ನ ಲೋಟ್] ರ ಜನಾಂಗದ ಕಡೆಗೆ ಎಂದು ಸಂತೈಸಿದರು. {70}

ಆಗ ಅಲ್ಲೇ ಪಕ್ಕದಲ್ಲಿ ಪ್ರವಾದಿ ಇಬ್ರಾಹೀಮ್ ರ ಪತ್ನಿ ನಿಂತಿದ್ದರು; [ಮಲಕ್ ಗಳಿಗೆ ಆಹಾರ ಬಡಿಸುವ ಪ್ರಮಾದ ಸಂಭವಿಸಿದ್ದಕ್ಕಾಗಿ] ಅವರು ನಕ್ಕು ಬಿಟ್ಟರು. ಆ ಸಂದರ್ಭದಲ್ಲಿ ನಾವು ಇಬ್ರಾಹೀಮ್ ರ ಪತ್ನಿಗೆ (ಜನಿಸಲಿರುವ ಮಗು) ಇಸ್‌ಹಾಕ್ ರ ಕುರಿತು ಮತ್ತು ಮುಂದೆ ಇಸ್‌ಹಾಕ್ ರಿಗೆ ಜನಿಸಲಿರುವ (ಮಗು) ಯಾಕೂಬ್ ರ ಕುರಿತು ಶುಭ ಸಮಾಚಾರವನ್ನು [ನಮ್ಮ ಆ ಪರಿಚಾರಕ ಮಲಕ್ ಗಳ ಮೂಲಕ] ಅರುಹಿದೆವು. {71}

(ಇಬ್ರಾಹೀಮ್ ರ ಪತ್ನಿ) ಉದ್ಗರಿಸಿದರು: ಇದೆಂತಹ ಪಾಡು ನನ್ನದು! ನಾನೂ ಮುದುಕಿಯಾರುವಾಗ, ಮತ್ತು ಈ ನನ್ನ ಪತಿಯೂ ಮುದಿ ವಯಸ್ಸಿನಲ್ಲಿರುವಾಗ ನನಗೆ ಮಗು ಹುಟ್ಟುವುದೇ!? ನಿಜವಾಗಿ ಇದೊಂದು ಆಶ್ಚರ್ಯದ ವಿಷಯವೇ ಸರಿ! {72}

ಮಲಕ್ ಗಳು ಹೇಳಿದರು: ಅಲ್ಲಾಹ್ ನ ಆದೇಶದ ಬಗ್ಗೆ ನೀವು ಆಶ್ಚರ್ಯ ಪಡುತ್ತಿರುವಿರೇನು?! ಅಲ್ಲಾಹ್ ನ ಕೃಪೆ ಮತ್ತು ಅವನ ಅಪಾರ ಅನುಗ್ರಹವು (ಇಬ್ರಾಹೀಮ್ ರ) ಮನೆಯವರಾದ ನಿಮ್ಮೆಲ್ಲರ ಮೇಲಿದೆ! ಅವನು ಮಾತ್ರವೇ ಸ್ತುತ್ಯರ್ಹನು, ಮಹಾಮಹಿಮನು! {73}

ಹಾಗೆ ಇಬ್ರಾಹೀಮ್ ರಿಗೆ ಉಂಟಾಗಿದ್ದ ಭಯ ದೂರವಾಗಿ (ತಮ್ಮ ಸಂತತಿ ಮುಂದುವರಿಯಲಿವ ಬಗ್ಗೆ) ಶುಭ ಸಮಾಚಾರ ಸಿಕ್ಕಾಗ ಅವರು ಪ್ರವಾದಿ ಲೂತ್ ರ ಜನತೆಗೆ [ನಾವು ಆ ಮಲಕ್ ಗಳ ಮೂಲಕ ನೀಡಲಿದ್ದ ಶಿಕ್ಷೆಯ] ಬಗ್ಗೆ ನಮ್ಮೊಂದಿಗೆ ವಾದಿಸತೊಡಗಿರು. {74}

ಯಥಾರ್ಥದಲ್ಲಿ ಇಬ್ರಾಹೀಮ್ ರು ಬಹಳ ಸೌಮ್ಯಸ್ವಭಾವದವರು; (ಜನರ ಬಗ್ಗೆ) ಹೆಚ್ಚು ಅನುಕಂಪವುಳ್ಳವರು ಮತ್ತು ನಮ್ಮತ್ತ ಅಪಾರ ಒಲವುಳ್ಳವರಾಗಿದ್ದರು. {75}

ಇಬ್ರಾಹೀಮ್ ರೇ, ನಿಮ್ಮ ಈ ವಾದವನ್ನು ಬಿಟ್ಟು ಬಿಡಿರಿ. (ಈ ವಿಷಯದಲ್ಲಿ) ನಿಮ್ಮ ಪ್ರಭುವಿನ ವಿಧಿ ಅದಾಗಲೇ ಬಂದು ಬಿಟ್ಟಿದೆ. ಯಾರಿಂದಲೂ ರದ್ದು ಪಡಿಸಲು ಸಾಧ್ಯವಿಲ್ಲದ ಒಂದು ಶಿಕ್ಷೆ ಪ್ರವಾದಿ ಲೂತ್ ರ ಜನತೆಯ ಮೇಲೆ ಎರಗಿಯೇ ತೀರುವುದು [ಎಂದು ಮಲಕ್ ಗಳು ಸ್ಪಷ್ಟ ಪಡಿಸಿ ಅಲ್ಲಿಂದ ಹೊರಟರು]. {76}

ಅನಂತರ ಆ ನಮ್ಮ ಪರಿಚಾರಕ ಮಲಕ್ ಗಳು ಲೂತ್ ರ ಬಳಿಗೆ ತಲುಪಿದಾಗ ಅವರ ಆಗಮನದ ಕಾರಣ [ಅರ್ಥಾತ್ ಮಲಕ್ ಗಳು ಸ್ಪುರದ್ರೂಪಿ ತರುಣರ ರೂಪದಲ್ಲಿ ಆಗಮಿಸಿದ್ದ ಕಾರಣ] ಪ್ರವಾದಿ ಲೂತ್ ರು ಕಳವಳಗೊಂಡರು; [ನಾಡಿನ ಲಂಪಟ ಜನರ ಕಣ್ಣಿಗೆ ಬಿದ್ದಾರು ಎಂಬ ಕಾರಣಕ್ಕಾಗಿ] ಅವರು ಆತಂಕಗೊಂಡು ಮನೋವ್ಯಾಕುಲತೆಗೆ ಒಳಗಾದರು. ಇಂದಿನ ದಿನ ಸಂಕಟದ ದಿನವಾಯಿತು ಎಂದು (ತಮ್ಮೊಳಗೇ) ಹೇಳಿಕೊಂಡರು! {77}

[ಪ್ರವಾದಿ ಲೂತ್ ರ ಮನೆಯಲ್ಲಿ ಹರೆಯದ ತರುಣರಿರುವುದನ್ನು ಅರಿತು] ಅವರ ಸಮುದಾಯದ ಜನರು ಅವರ ಮನೆಯತ್ತ ಧಾವಿಸಿ ಬರತೊಡಗಿದರು. ಮುಂಚಿನಿಂದಲೂ ಅವರು ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದವರೇ ಆಗಿದ್ದರು. (ಆತಂಕಗೊಂಡಿದ್ದ ಲೂತ್ ರು) ಅವರೊಂದಿಗೆ ಹೇಳಿದರು: ಓ ನನ್ನ ಸಮುದಾಯವೇ, [ನೀವು ಇಲ್ಲಿಗೇಕೆ ಧಾವಿಸುತ್ತಿರುವಿರಿ? ಮನೆಗಳಲ್ಲಿ ನಿಮಗೆ ಮಡದಿಯರಿದ್ದಾರೆ ತಾನೆ?] ಆ ನನ್ನ ಸುಪುತ್ರಿಯರೇ ನಿಮ್ಮ ಪಾಲಿಗೆ ಹೆಚ್ಚು ಪರಿಶುದ್ಧರು! ಆದ್ದರಿಂದ ನೀವು ಅಲ್ಲಾಹ್ ನನ್ನು ಭಯಪಡಿರಿ. ನನ್ನೀ ಅತಿಥಿಗಳ ವಿಷಯದಲ್ಲಿ ನನ್ನನ್ನು ತಲೆತಗ್ಗಿಸುವಂತೆ ಮಾಡಬೇಡಿರಿ; ವಿವೇಕಿಯಾದವನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೇನು?! {78}

ಅವರು ಉತ್ತರಿಸಿದರು: ಆ ನಿಮ್ಮ ಸುಪುತ್ರಿಯರಲ್ಲಿ ನಮಗೆ ಆಸಕ್ತಿ ಇಲ್ಲವೆಂಬುದು ನಿಮಗೆ ಗೊತ್ತಿರುವ ವಿಷಯ; ಮಾತ್ರವಲ್ಲ ನಾವು ಬಯಸಿತ್ತಿರುವುದು ಏನೆಂದು ನಿಮಗೆ ತಿಳಿದೇ ಇದೆ. {79}

[ಬಹಳವಾಗಿ ಆತಂಕಿತರಾಗಿದ್ದ] ಪ್ರವಾದಿ ಲೂತ್ ರು, ಅಕಟಾ! ನಿಮ್ಮನ್ನು ತಡೆದು ನಿಲ್ಲಿಸುವ ಶಕ್ತಿ ನನ್ನ ಬಳಿ ಇರುತ್ತಿದ್ದರೆ! ಅಥವಾ ಒಂದು ಶಕ್ತಿಯುತ ಅಶ್ರಯವಾದರೂ ನನಗೆ ಸಿಕ್ಕಿರುತ್ತಿದ್ದರೆ! ಎಂದು (ಅತ್ಯಂತ ಅಸಹಾಯಕರಾಗಿ) ಉದ್ಗರಿಸಿದರು. {80}

(ಅವರ ಅಸಹಾಯಕತೆಯನ್ನು ಕಂಡು) ಅತಿಥಿಗಳು ಹೇಳಿದರು: ಓ ಲೂತ್ ರೇ! ನಾವು (ನಿಜವಾಗಿ ಮಾನವರಲ್ಲ, ಬದಲಾಗಿ) ನಿಮ್ಮ ಕರ್ತಾರನಿಂದ ಕಳುಹಿಸಲ್ಪಟ್ಟ ಮಲಕ್ ಗಳಾಗಿರುವೆವು! ಹಾಗಿರುವಾಗ ಆ (ದುಷ್ಟ) ಜನರು ನಿಮ್ಮನ್ನು ಸಮೀಪಿಸಲು ಸಾಧ್ಯವಿಲ್ಲ. ನೀವು ರಾತೋರಾತ್ರಿ ನಿಮ್ಮ ಕುಟುಂಬದವರೊಂದಿಗೆ - (ದುಷ್ಟಳಾದ) ಆ ನಿಮ್ಮ ಮಡದಿಯನ್ನು ಹೊರತು ಪಡಿಸಿ - ಇಲ್ಲಿಂದ ಹೊರಟು ಹೋಗಿರಿ. ನಿಮ್ಮಲ್ಲಿ ಒಬ್ಬರೂ ಹಿಂದಿರುಗಿ ನೋಡ ಬಾರದು. ಅವರನ್ನು (ಅರ್ಥಾತ್ ನಾಡಿನ ಆ ಲಂಪಟ ಜನರನ್ನು) ಯಾವ ಶಿಕ್ಷೆ ಆವರಿಸಲಿದೆಯೋ ಅದು ಅವಳನ್ನೂ ಆವರಿಸುವುದು. ಮುಂಜಾನೆಯ ಸಮಯ ಅವರ ಶಿಕ್ಷೆಗಾಗಿ ನಿಗದಿ ಪಡಿಸಲಾಗಿದೆ; ಮುಂಜಾನೆಯು ಸನಿಹದಲ್ಲೇ ಇದೆ ತಾನೆ! {81}

ತರುವಾಯ, ನಮ್ಮಿಂದ ಯಾವಾಗ ಶಿಕ್ಷೆಯ ಆದೇಶ ಹೊರಟಿತೋ ಆ ನಾಡನ್ನು ನಾವು ಬುಡುಮೇಲು ಮಾಡಿ ಬಿಟ್ಟೆವು; ಆ ನಾಡಿನ ಮೇಲೆ ಬೆಂದ ಆವೆಮಣ್ಣಿನ ಹೆಂಟೆಗಳನ್ನು ಮಳೆಯಾಗಿ ಸುರಿಸಿದೆವು; ಅದು (ಅವರ ಮೇಲೆ) ಎಡೆಬಿಡದೆ ಸುರಿಯಿತು! {82}

[ಓ ಪೈಗಂಬರರೇ, ಶಿಕ್ಷೆಯ ಹೊಡೆತಕ್ಕೊಳಗಾದ ಆ ನಾಡು] ನಿಮ್ಮ ಒಡೆಯನ ವತಿಯಿಂದ ಒಂದು ಸಂಕೇತವಾಯಿತು. ಅದು (ನಿಮ್ಮ ಸಮುದಾಯದ) ಈ ದುಷ್ಟ ಜನರಿಗೆ ಹೆಚ್ಚು ದೂರದಲ್ಲಿಲ್ಲ! {83}

ಹಾಗೆಯೇ ಮದ್‌ಯನ್ ಸಮುದಾಯಕ್ಕೆ ಅವರ ಬಂಧುವಾದ ಶುಐಬ್ ರನ್ನು ನಾವು (ನಮ್ಮ ದೂತನಾಗಿ) ನೇಮಿಸಿದೆವು. ಅವರು ಕರೆಯಿತ್ತರು: ಒ ನನ್ನ ಸಮುದಾಯ ಬಾಂಧವರೇ, ನೀವು ಅಲ್ಲಾಹ್ ನನ್ನೇ ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ಯಾರೂ ದೇವರಾಗುವುದಿಲ್ಲ. ನೀವು (ವ್ಯಾಪಾರ ನಡೆಸುವಾಗ) ಅಳತೆ ಮತ್ತು ತೂಕಗಳಲ್ಲಿ ಕಡಿತಗೊಳಿಸದಿರಿ. ಈಗ ನೀವು ಒಳ್ಳೆಯ ಸ್ಥಿತಿಯಲ್ಲಿರುವುದನ್ನು ನಾನು ಕಾಣುತ್ತಿರುವೆನು. ಆದರೆ (ನೀವು ಹೀಗೆಯೇ ಅನ್ಯಾಯ ಮುಂದುವರಿಸಿದರೆ) ಎಲ್ಲವನ್ನೂ ಆವರಿಸಿಕೊಳ್ಳುವಂತಹ ಶಿಕ್ಷೆಯ ದಿನವೊಂದು ನಿಮ್ಮ ಮೇಲೆರಗಿಲಿರುವ ಬಗ್ಗೆ ನಾನು ಆತಂಕಿತನಾಗಿದ್ದೇನೆ. {84}

ಓ ನನ್ನ ಜನರೇ, ನೀವು ಪೂರ್ತಿಯಾಗಿ ಹಾಗೂ ನ್ಯಾಯಯುತವಾಗಿ ಅಳೆತೆ ಮತ್ತು ತೂಕ ಮಾಡುವವರಾಗಿರಿ. ನೀವೆಂದೂ ಜನರಿಗೆ (ಅವರು ಖರೀದಿಸಿದ) ವಸ್ತುಗಳನ್ನು ಕೊಡುವಾಗ ಕುಂಠಿತಗೊಳಿಸದಿರಿ. ನಾಡಿನಲ್ಲಿ ಕೇಡುಂಟು ಮಾಡುವ, ಅಶಾಂತಿಯುಂಟು ಮಾಡುವ ಜನರು ನೀವಾಗದಿರಿ. {85}

ನೀವು ನಿಜವಾದ ವಿಶ್ವಾಸಿಗಳು ಹೌದಾದರೆ ಅಲ್ಲಾಹ್ ನು ಒದಗಿಸುವ (ನ್ಯಾಯಯುತ) ಉಳಿತಾಯ ಮಾತ್ರವೇ ನಿಮಗೆ ಲೇಸು. [ಇನ್ನು ನೀವು ಜನರಿಗೆ ಅನ್ಯಾಯವನ್ನೇ ಮಾಡುವಿರಾದರೆ] ನಾನು ನಿಮ್ಮ ಮೇಲೆ ಕಾವಲುಗಾರನಂತೂ ಅಲ್ಲ. {86}

[ಅದಕ್ಕೆ ಮದ್‌ಯನ್ ನ ಜನರು ಸ್ವಲ್ಪ ವ್ಯಂಗ್ಯವಾಗಿ] ಉತ್ತರಿಸದರು: ಓ ಶುಐಬ್ ರೇ, ನಮ್ಮ ತಂದೆ-ತಾತಂದಿರು ಪೂಜಿಸುತ್ತಿದ್ದ (ವಿಗ್ರಹಾದಿಗಳನ್ನು) ನಾವು ಪೂಜಿಸಬಾರದೆಂದೂ ನಮ್ಮ ಸಂಪತ್ತನ್ನು ನಾವೇ ನಮ್ಮಿಚ್ಛೆಯಂತೆ ನಿರ್ವಹಿಸಬಾರದೆಂದೂ ಈ ನಿಮ್ಮ ನಮಾಝ್ [ಅರ್ಥಾತ್ ಈ ನಿಮ್ಮ ಧಾರ್ಮಿಕತೆ] ನಿಮಗೆ ಹುಕುಂ ಕೊಡುತ್ತಿದೆಯೇನು? ನಿಜವಾದ ಸಂಯಮಿ ಮತ್ತು ಸೀದಾತನ ಮೆರೆಯುತ್ತಿರುವವರು ನೀವೊಬ್ಬರು ಮಾತ್ರ ತಾನೆ! {87}

ಪ್ರವಾದಿ ಶುಐಬ್ ರು ಹೇಳಿದರು: ಓ ನನ್ನ ಜನರೇ! ನೀವೇಕೆ ವಿವೇಚಿಸುತ್ತಿಲ್ಲ? ನನ್ನೊಡೆಯನಿಂದ ಪ್ರಾಪ್ತವಾದ ಪ್ರಬಲ ಪುರಾವೆಗಳನ್ನು ನಾನು ಆಧರಿಸುರುವಾಗ, ಜೊತೆಗೆ ಅವನು ನನಗೆ ಉತ್ತಮವಾದ (ಅಧ್ಯಾತ್ಮಿಕ ಮತ್ತು ಲೌಕಿಕ) ಜೀವನಾಗತ್ಯಗಳನ್ನೂ ನೀಡಿರುವಾಗ (ನಾನು ಇತರರಿಗೆ ಹೇಗೆ ತಾನೆ ತಲೆಬಾಗಲಿ)! ಯಾವ ಕೆಡುಕಿನಿಂದ ನಿಮ್ಮನ್ನು ನಾನು ತಡೆಯುತ್ತಿರುವೆನೋ, ಅದಕ್ಕೆ ತದ್ವಿರುದ್ಧವಾಗಿ, ಅದನ್ನು ಸ್ವತಃ ನಾನೇ ಮಾಡಲು ಎಂದೂ ಇಷ್ಟಪಡಲಾರೆ. ನನ್ನ ಕೈಲಾಗುವಷ್ಟು ಸುಧಾರಣೆ ಮಾಡಲು ಬಯಸುವೆನಲ್ಲದೆ ಬೇರೇನೂ ನನಗೆ ಉದ್ದೇಶವಿಲ್ಲ. ಯಶಸ್ಸು ಅಲ್ಲಾಹ್ ನ ಮೂಲಕ ಮಾತ್ರ ಬರಬೇಕಲ್ಲದೆ ನನಗೆ ಯಾವ ಸಾಮರ್ಥ್ಯವೂ ಇಲ್ಲ. ಅವನಲ್ಲಿ ಮಾತ್ರ ನಾನು ಭರವಸೆ ಇಟ್ಟರುತ್ತೇನೆ; ಅವನಿಗೆ ಮಾತ್ರವೇ ನಾನು ಸಂಪೂರ್ಣ ಒಲವು ತೋರುತ್ತೇನೆ! {88}

ಓ ನನ್ನ ಜನೆರೇ, ಪ್ರವಾದಿ ನೂಹ್ ರ ಸಮುದಾಯ, ಪ್ರವಾದಿ ಹೂದ್ ರ ಸಮುದಾಯ ಅಥವಾ ಪ್ರವಾದಿ ಸಾಲಿಹ್ ರ ಸಮುದಾಯಗಳಿಗೆ ಬಂದೆರಗಿದಂತಹದ್ದೇ ಶಿಕ್ಷೆಯು ನಿಮ್ಮ ಮೇಲೂ ಎರಗಿ ಬೀಳಲು ಹೇತುವಾಗುವಂತಹ ಅಪರಾಧಗಳನ್ನು, ನಿಮಗೆ ನನ್ನ ಮೇಲಿರುವ ದ್ವೇಷವು ನಿಮ್ಮಿಂದ ಮಾಡಿಸದಿರಲಿ. [ಅತಿ ಭಯಾನಕ ಸ್ವರೂಪದ ಶಿಕ್ಷೆಗೊಳಗಾದ] ಪ್ರವಾದಿ ಲೂತ್ ರವರ ಸಮುದಾಯವು ನಿಮ್ಮಿಂದ ಹೆಚ್ಚು ದೂರದಲ್ಲಿರಲಿಲ್ಲ ತಾನೆ! {89}

ಆದ್ದರಿಂದ (ಮಾಡಿದ ಅನ್ಯಾಯಕ್ಕಾಗಿ ಇನ್ನಾದರೂ) ನೀವು ನಿಮ್ಮ ಕರ್ತಾರನೊಂದಿಗೆ ಕ್ಷಮೆಯಾಚಿಸಿರಿ ಮತ್ತು ಪಶ್ಚಾತ್ತಾಪ ಪಡುತ್ತಾ ಅವನೆಡೆಗೆ ತಿರುಗಿರಿ. ಖಂಡಿತವಾಗಿಯೂ ಆ ನನ್ನ ಪ್ರಭು ಬಹಳ ಕರುಣಾಮಯಿ; ಅತಿ ಹೆಚ್ಚು ಪ್ರೀತಿಸುವವನು. {90}

ಆ ಜನರು ಉತ್ತರಿಸಿದರು: ಓ ಶುಐಬ್, ನೀವು ಬೋಧಿಸುತ್ತಿರುವುದರಲ್ಲಿ ಹೆಚ್ಚಿನವು ನಮಗೆ ಅರ್ಥವಾಗದ ವಿಷಯ. ನಿಮ್ಮನ್ನು ನಮ್ಮ ಸಮುದಾಯದ ಒಬ್ಬ ದುರ್ಬಲ ವ್ಯಕ್ತಿಯಾಗಿ ಮಾತ್ರ ನಾವು ಕಾಣುತ್ತೇವೆ. ಇನ್ನು ನಿಮ್ಮ ಮನೆತನಕ್ಕೆ (ನಮ್ಮ ಬಳಿ ಗೌರವ) ಇಲ್ಲದಿರುತ್ತಿದ್ದರೆ ನಾವು ನಿಮ್ಮನ್ನು ಕಲ್ಲು ಹೊಡೆದು ಮುಗಿಸಿಬಿಡುತ್ತಿದ್ದೆವು. ನಮ್ಮ ಮೇಲೆ ಮೇಲುಗೈ ಸಾಧಿಸಿದ ಬಲಾಢ್ಯ ವ್ಯಕ್ತಿಯೂ ನೀವಲ್ಲ. {91}

ಶುಐಬ್ ರು ಉತ್ತರಿಸಿದರು: ಓ ನನ್ನ ಜನರೇ, ನನ್ನ ಮನೆತನವು ನಿಮಗೆ ಅಲ್ಲಾಹ್ ನಿಗಿಂತ ಹೆಚ್ಚು ಮಹತ್ವದ್ದಾಯಿತೇ? ಅವನ (ಆದೇಶಗಳನ್ನು) ನೀವು ಬೆನ್ನ ಹಿಂದಕ್ಕೆ ಎಸೆದಿರುವಿರಿ! ಹೌದು, ನನ್ನ ಕರ್ತಾರನು ನೀವೆಸಗುವ ಕೃತ್ಯಗಳನ್ನು ಚೆನ್ನಾಗಿ ಗಮನಿಸುತ್ತಿರುವನು. {92}

ಓ ನನ್ನ ಜನರೇ, ನಿಮ್ಮ ಶಕ್ತಿ ಸಾಮರ್ಥ್ಯದಂತೆ ನೀವೂ ಪ್ರಯತ್ನಿಸುತ್ತಲಿರಿ; ನಾನೂ ಸಹ ನನ್ನ ಕೆಲಸದಲ್ಲಿ ಮುಂದುವರಿಯುತ್ತೇನೆ. ನಮ್ಮ ಪೈಕಿ ಯಾರ ಮೇಲೆ ಅವಹೇಳನಕಾರಿ ಶಿಕ್ಷೆ ಎರಗಲಿದೆ ಮತ್ತು ಯಾರು ಸುಳ್ಳುಗಾರರು ಎಂಬುದನ್ನು ನೀವು ಶೀಘ್ರದಲ್ಲೇ ತಿಳಿಯಲಿರುವಿರಿ. ಹೌದು, ನೀವೂ ನೋಡುತ್ತಲಿರಿ; ನಿಮ್ಮೊಂದಿಗೆ ನಾನೂ ಸಹ ನೋಡುವೆನು. {93}

[ಇಡೀ ಸಮುದಾಯವೇ ಪ್ರವಾದಿ ಶುಐಬ್ ರ ಬೋಧನೆಯನ್ನು ಉದ್ದೇಶಪೂರ್ವಕವಾಗಿ ಧಿಕ್ಕರಿಸಿ ನಿಂತಾಗ ಸಾಮೂಹಿಕ ಶಿಕ್ಷೆ ಅನಿವಾರ್ಯವಾಯಿತು]. ಅದರಂತೆ ನಮ್ಮಿಂದ ಶಿಕ್ಷೆಯ ಆದೇಶ ಜ್ಯಾರಿಗೊಂಡಾಗ ನಾವು ಪ್ರವಾದಿ ಶುಐಬ್ ರನ್ನೂ ವಿಶ್ವಾಸಿಗಳಾಗಿ ಅವರ ಜೊತೆಗಿದ್ದವರನ್ನೂ ನಮ್ಮ ಕರುಣೆಗೆ ಪಾತ್ರರಾಗಿಸಿದೆವು; ಮತ್ತು ಅವರಿಗೆ ಶಿಕ್ಷೆ ತಗುಲದಂತೆ ರಕ್ಷಿಸಿದೆವು. ಕೂಡಲೇ ಸಿಡಿಲಿನಂತಹ ಸ್ಪೋಟವೊಂದು ಅನ್ಯಾಯವೆಸಗಸಗಿದ್ದ ಅಧರ್ಮಿಗಳನ್ನು ಬಲಿ ತೆಗೆದುಕೊಂಡಿತ್ತು; ನಂತರ (ಸತ್ತು) ಮಕಾಡೆಯಾಗಿ ಬಿದ್ದುಕೊಂಡ ಸ್ಥಿತಿಯಲ್ಲಿ ಅವರ ನಾಡಿಗೆ ಬೆಳಗಾಯಿತು. {94}

ಆ ನಾಡಿನಲ್ಲಿ ಅವರು ನೆಲೆಸಿರಲೇ ಇಲ್ಲವೋ ಎಂಬಂತಾಯಿತು ಅವರ ಸ್ಥಿತಿ. ನೀವು ಎಚ್ಚೆತ್ತುಕೊಳ್ಳಿ! ಹೇಗೆ ತಮೂದ್ ಸಮುದಾಯವನ್ನು ದೂರ ಮಾಡಲಾಯಿತೋ ಹಾಗೆಯೇ ಮದ್‌ಯನ್ ಸಮುದಾಯವನ್ನೂ ದೂರ ಮಾಡಲಾಯಿತು. {95}

ಹಾಗೆಯೇ ನಾವು ಮೂಸಾ ರಿಗೆ (ಪ್ರವಾದಿತ್ವದ ಸಂಕೇತವಾಗಿ) ಕೆಲವು ನಿದರ್ಶನಗಳನ್ನೂ ಒಂದು ಸ್ಪಷ್ಟ ಹಾಗೂ ಸಶಕ್ತ ಪುರಾವೆಯನ್ನೂ ನೀಡಿ ಕಳುಹಿಸಿದೆವು. {96}

ಅವರನ್ನು ಫಿರ್‌ಔನ್ ಮತ್ತು ಆತನ ಆಸ್ಥಾನದ ಮುಖ್ಯಸ್ಥರೆಡೆಗೆ (ಸಶಕ್ತ ಪುರಾವೆಗಳ ಸಹಿತ) ಕಳುಹಿಸಿದೆವು. ಆದರೆ (ಮೂಸಾರನ್ನು ಕಡೆಗಣಿಸಿ) ಅವರೆಲ್ಲ ಫಿರ್‌ಔನ್ ನ ಆದೇಶಗಳನ್ನು ಮಾತ್ರ ಪಾಲಿಸುವವರಾದರು. ಇನ್ನು ಫಿರ್‌ಔನ್ ಅವರಿಗೆ ನೀಡುತ್ತಿದ್ದುದು ಸೀದಾತನದ ಋಜು ಆದೇಶಗಳಾಗಿರಲಿಲ್ಲ! {97}

ಪುನರುತ್ಥಾನದ ದಿನ ಫಿರ್‌ಔನ್ ತನ್ನ ಗುಂಪಿನವರ ಮುಂದೆ ಮುಂದೆ ಸಾಗುತ್ತಾ ಅವರನ್ನೆಲ್ಲ (ಆಕಳನ್ನು ನೀರು ಕುಡಿಸಲು ಕರೆದೊಯ್ಯುವಂತೆ) ನರಕದೊಳಕ್ಕೆ ಒಯ್ಯುವನು. ಅತ್ಯಂತ ಕೆಟ್ಟ ಕೂಪವದು; ಅತ್ಯಂತ ಕೆಟ್ಟವರು ಅದರೊಳಕ್ಕೆ ಒಯ್ಯಲ್ಪಡುವವರು! {98}

ಇಹಲೋಕದಲ್ಲೂ ಶಾಪ ಅವರವನ್ನು ಹಿಂಬಾಲಿಸುವಂತಾಯಿತು; ಪುನರುತ್ಥಾನದ ದಿನವೂ ಅದು ಅವರ ಬೆನ್ನು ಬಿಡದು. ಅತ್ಯಂತ ಕೆಟ್ಟ ಪ್ರತಿಫಲವದು; ಅವರಿಗೆ ಲಭಿಸಿರುವಂತಹದ್ದು! {99}

ಇವು (ಶಿಕ್ಷೆಗೊಳಗಾದ) ನಾಡುಗಳ ಸಮಾಚಾರಗಳ ಪೈಕಿ ಕೆಲವು ಮಾತ್ರ. [ಮಕ್ಕಾ ಪ್ರದೇಶದ ನಿವಾಸಿಗಳು ಪಾಠ ಕಲಿಯಲೆಂದು] ಪೈಗಂಬರರೇ, ನಾವಿದನ್ನು ನಿಮಗೆ ವಿವರಿಸುತ್ತಿದ್ದೇವೆ. ಅವುಗಳ ಪೈಕಿ ಕೆಲವು ನಾಡುಗಳು ಇಂದಿಗೂ ನೆಲೆನಿಂತಿವೆ; ಕೆಲವು ನಾಮಾವಶೇಷವಾಗಿವೆ. {100}

ಅವರ ಮೇಲೆ ಅನ್ಯಾಯ ಮಾಡಿದವರು ನಾವಲ್ಲ; ಬದಲಾಗಿ ಅವರು ತಮ್ಮ ಮೇಲೆ ತಾವೇ ಅನ್ಯಾಯ ಮಾಡಿಕೊಂಡರು! ಪೈಗಂಬರರೇ, ನಿಮ್ಮ ಒಡೆಯನಿಂದ ಶಿಕ್ಷೆಯ ಆದೇಶ ಜ್ಯಾರಿಗೊಂಡಾಗ, ಅಲ್ಲಾಹ್ ನನ್ನು ಉಪೇಕ್ಷಿಸಿ ಅವರು ಮೊರೆಯಿಡುತ್ತಿದ್ದ ಆ ಮಿಥ್ಯ ದೇವರುಗಳು ಅವರ ಯಾವ ಪ್ರಯೋಜನಕ್ಕೂ ಬರಲಿಲ್ಲ. [ಅವರು ಭರವಸೆ ಇಟ್ಟು ಪೂಜಿಸುತ್ತಿದ್ದ ಆ ಮಿಥ್ಯ] ದೇವರುಗಳು ವಿನಾಶವನ್ನಲ್ಲದೆ ಅವರ ಪಾಲಿಗೆ ಬೇರೇನನ್ನೂ ಹೆಚ್ಚಿಸಲಿಲ್ಲ! {101}

ನಾಡಿಗೆ ನಾಡೇ ಅನ್ಯಾಯದಲ್ಲಿ ತೊಡಗಿರುವಾಗ ನಿಮ್ಮ ಪ್ರಭು ಅಂತಹ ನಾಡನ್ನು ಶಿಕ್ಷಿಸಲು ಹಿಡಿಯುವ ರೀತಿ ಹಾಗೆಯೇ! ಹೌದು, ಅವನ ಹಿಡಿತವು ಬಹಳವಾಗಿ ನೋಯಿಸುವಂತಹದ್ದು; ಅತ್ಯಂತ ಕಠಿಣವಾದುದು. {102}

ಪರಲೋಕದ ಶಿಕ್ಷೆಯ ಭಯವುಳ್ಳ ಪ್ರತಿಯೊಬ್ಬರಿಗೂ ಈ ಕಥೆಗಳಲ್ಲಿ ಖಂಡಿತವಾಗಿ ದೃಷ್ಟಾಂತವಿದೆ. ಅದು ಸಕಲ ಮಾನವರನ್ನು ಒಟ್ಟೂಗೋಓಡಿಸಲಾಗುವ ಒಂದು ದಿನ; ಆ ದಿನಕ್ಕೆ ಪ್ರತಿಯೊಬ್ಬರೂ ಸಾಕ್ಷಿಯಾಗಲಿರುವರು. {103}

ನಾವು ಅದರ ಬರುವಿಕೆಯನ್ನು ಒಂದು ನಿರ್ಧಿಷ್ಟ ಸಮಯದ ವರೆಗೆ ಮಾತ್ರವೇ ಹೊರತು ಹೆಚ್ಚು ವಿಳಂಬಿಸುವುದಿಲ್ಲ. {104}

ಆ ದಿನವು ಬಂದೆರಗಿದರೆ ಅಲ್ಲಾಹ್ ನ ಅನುಮತಿಯಿಲ್ಲದೆ ಯಾವೊಬ್ಬನೂ ಮಾತನಾಡಲಾರ! ಹೌದು, ಅವರಲ್ಲಿ ಕೆಲವರು ಸಂಕಟಕ್ಕೀಡಾದವರೂ ಉಳಿದವರು ಸಂತೋಷಭರಿತರಾಗಿಯೂ ಇರುವರು. {105}

ಸಂಕಟಕ್ಕೀಡಾದ (ದರಿದ್ರರು ಅಂದು) ನರಕದಲ್ಲಿ ಬಿದ್ದಿರುವರು; ಅವರಿಗೆ ಅಲ್ಲಿ ಚೀರಾಟ ಮತ್ತು ಅರಚಾಟಗಳು ಮಾತ್ರವೇ ಗತಿ. {106}

ಭೂಮ್ಯಾಕಾಶಗಳು [ಅರ್ಥಾತ್ ಪರಲೋಕದ ಭೂಮ್ಯಾಕಾಶಗಳು] ಅಸ್ತಿತ್ವದಲ್ಲಿರುವ ತನಕ ಅವರು ಅದರಲ್ಲೇ ಬಿದ್ದುಕೊಂಡಿರ ಬೇಕಾಗಿದೆ. ಆದರೆ ನಿಮ್ಮ ಒಡೆಯನು ಬೇರೇನಾದರೂ ಬಯಸಿದರೆ ಆ ವಿಷಯ ಬೇರೆ! ಹೌದು, ನಿಮ್ಮ ಒಡೆಯನು ತಾನು ಬಯಸಿದ್ದನ್ನು ಕಾರ್ಯಗತ ಗೊಳಿಸುತ್ತಾನೆ. {107}

ಇನ್ನು ಸಂತೋಷ ಭರಿತರಾಗಿರುವವರ ವಿಷಯ! ಅವರಂತು ಸ್ವರ್ಗೀಯ ತೋಟಗಳಲ್ಲಿರುವರು. ಭೂಮ್ಯಾಕಾಶಗಳ ಅಸ್ತಿತ್ವ ಉಳಿದಿರುವ ತನಕ ಅಂತಹವರು ಅದರಲ್ಲಿ ನೆಲೆಸುವರು. ನಿಮ್ಮ ಒಡೆಯನು ಬೇರೇನಾದರೂ ಬಯಸುವ ಹೊರತು. (ಬಯಸುವುದಿಲ್ಲ, ಏಕೆಂದರೆ ಸ್ವರ್ಗವು) ಅಡೆತಡೆಯಿಲ್ಲದೆ ನಿರಂತರವಾಗಿ ಸಾಗುವ ಒಂದು ಉಡುಗೊರೆಯಾಗಿದೆ! {108}

ಹಾಗಿರುವಾಗ ಪೈಗಂಬರರೇ, ಈ ಜನರು ಯಾವುದನ್ನೆಲ್ಲಾ ಪೂಜಿಸುತ್ತಿರುವರೊ ಅವುಗಳ ಕುರಿತಂತೆ ನೀವು ಆತಂಕ ಪಡದಿರಿ. ಇದಕ್ಕಿಂತ ಮುಂಚೆ ಇವರ ತಾತ ಮುತ್ತಾತಂದಿರು ಪೂಜಿಸುತ್ತಿದ್ದಂತೆಯೇ ಇವರೂ ಸಹ ಅವುಗಳನ್ನು ಪೂಜಿಸುತ್ತಿದ್ದಾರೆ. ಸ್ವಲ್ಪವೂ ಕಡಿತಗೊಳಿಸದೆ ಇವರಿಗೆ ಸಲ್ಲಬೇಕಾದುದನ್ನು ನಾವು ಸಂಪೂರ್ಣವಾಗಿಯೇ ಪಾವತಿಸಲಿದ್ದೇವೆ. {109}

ಹೌದು, (ಈ ಹಿಂದೆ) ನಾವು ಪ್ರವಾದಿ ಮೂಸಾ ರಿಗೆ (ನೀತಿ ನಿಯಮಗಳನ್ನೊಳಗೊಂಡ ಒಂದು) ಗ್ರಂಥವನ್ನು ನೀಡಿದ್ದೆವು. (ಈಗಿನಂತೆ ಆಗಲೂ ಸಹ ಜನರು) ಗ್ರಂಥದ ವಿಷಯದಲ್ಲಿ ಭಿನ್ನಾಭಿಪ್ರಾಯಗಳನ್ನು ತಾಳಿದರು. ಒಂದು ವೇಳೆ ನಿಮ್ಮ ಸೃಷ್ಟಿಕರ್ತನಿಂದ ಅದಾಗಲೇ ನಿರ್ಣಯಿತ ಮಾತೊಂದು [ಅರ್ಥಾತ್ ಅಂತಿಮ ತೀರ್ಮಾನಕ್ಕಾಗಿ ಪರಲೋಕವಿರುವುದು ಎಂಬ ಮಾತು] ಇಲ್ಲದಿರುತ್ತಿದ್ದರೆ (ಭಿನ್ನಾಭಿಪ್ರಾಯ ತಾಳಿದ) ಜನರ ಮಧ್ಯೆ ಎಂದೋ ತೀರ್ಮಾನವಾಗಿ ಬಿಡುತ್ತಿತ್ತು! ಯಥಾರ್ಥದಲ್ಲಿ ಈ ಜನರು ಅದರ ಬಗ್ಗೆ ಗೊಂದಲಮಯ ಅಪನಂಬಿಕೆಯಲ್ಲಿದ್ದಾರೆ. {110}

ಅವರಲ್ಲಿ ಪ್ರತಿಯೊಬ್ಬರಿಗೂ ಅವರವರ ಕರ್ಮದ ಫಲವನ್ನು ನಿಮ್ಮ ಒಡೆಯನು [ಪ್ರತಿಫಲದ ದಿನ ಅವರನ್ನು ಹಾಜರು ಪಡಿಸಲಾದಾಗ] ಸಂಪೂರ್ಣವಾಗಿ ಪಾವತಿಸಿಯೇ ತೀರುವನು. ಹೌದು, ಅವರೆಸಗುವ ಎಲ್ಲಾ ಕರ್ಮಗಳ ಬಗ್ಗೆ ಅವನು [ಅದು ಪಾಪವಾಗಿರಲಿ ಪುಣ್ಯವಾಗಿರಲಿ] ಚೆನ್ನಾಗಿ ಅರಿತಿರುವನು. {111}

ಆದ್ದರಿಂದ ಓ ಪೈಗಂಬರರೇ, ನಿಮಗೆ ಆದೇಶಿಲಾದದಂತೆ ನೀವು ಹಾಗೂ (ಪಶ್ಚತ್ತಾಪ ಪಟ್ಟು ಅಲ್ಲಾಹ್ ನೆಡೆಗೆ) ಮರಳಿ ನಿಮ್ಮ ಜೊತೆಗಿರುವವರು - ಸತ್ಪಥದಲ್ಲಿ ಅಚಲವಾಗಿ ನಿಲ್ಲಿರಿ. ಆದೇಶ ಮೀರದಿರಿ. ನಿಮ್ಮ ಚಟುವಟಿಕೆಗಳನ್ನು ಅವನು ನೋಡುತ್ತಿರುತ್ತಾನೆ. {112}

ಅನ್ಯಾಯವೆಸಗುವ ಜನರೆಡೆಗೆ ಸ್ವಲ್ಪವೂ ಒಲವು ತೋರದಿರಿ. ಹಾಗೇನಾದರೂ ಮಾಡಿದರೆ ನರಕಾಗ್ನಿ ನಿಮಗೂ ತಗುಲುವುದು! ಅಲ್ಲಾಹ್ ನಲ್ಲದೆ ನಿಮಗೆ ಯಾರೂ ರಕ್ಷಕರಿಲ್ಲ; (ಶಿಕ್ಷೆಯಿಂದ ರಕ್ಷಿಸಿಕೊಳ್ಳುವಂತೆ ಅಂದು) ನಿಮಗೆ ಯಾರ ಸಹಾಯವೂ ಸಿಗದು. {113}

ಹಗಲು ಹೊತ್ತಿನ ಆಚೀಚಿನ ಎರಡೂ ಭಾಗಗಳಲ್ಲಿ [ಅರ್ಥಾತ್ ಮುಂಜಾವದಲ್ಲಿ ಫಜ್ರ್ ಹಾಗೂ ಅಪರಾಹ್ನದಲ್ಲಿ ಝುಹರ್ ಮತ್ತು ಅಸ್ರ್], ಹಾಗೂ ರಾತ್ರಿಯ ಆರಂಭಿಕ ಸಮಯದಲ್ಲಿ [ಮಘ್ರಿಬ್ ಮತ್ತು ಇಶಾ] ನಮಾಝ್ ಗಳನ್ನು ನೀವು ವ್ಯವಸ್ಥಿತವಾಗಿ ಪಾಲಿಸುತ್ತಲಿರಿ. ಹೌದು, ಅಂತಹ ಸತ್ಕಾರ್ಯಗಳು ಖಂಡಿತವಾಗಿ ಸಣ್ಣಪುಟ್ಟ ಪಾಪಗಳನ್ನು ನಿವಾರಿಸುತ್ತಿರುತ್ತವೆ! ಅಲ್ಲಾಹ್ ನನ್ನು ಸ್ಮರಿಸುವ ಜನರಿಗಾಗಿ ಆಂತಹ (ನಮಾಝ್ ಗಳು) ಒಂದು ಸ್ಮರಣಾ ಸಾಧನವಾಗಿದೆ. {114}

ಮತ್ತು [ಸತ್ಪಥದಲ್ಲಿ ಸಂಕಷ್ಟಗಳು ಎದುರಾಗುವಾಗ] ತಾಳ್ಮೆ ವಹಿಸಿರಿ. ಹೌದು, ಸಜ್ಜನರಿಗಿರುವ ಪ್ರತಿಫಲವನ್ನು ಅಲ್ಲಾಹ್ ನು ಎಂದೂ ವ್ಯರ್ಥಗೊಳಿಸುವುದಿಲ್ಲ. {115}

(ಜನರೇ), ನಿಮಗಿಂತ ಮೊದಲು ಗತಿಸಿ ಹೋದ ತಲೆಮಾರುಗಳಲ್ಲಿ ಶ್ರೀಮಂತಿಕೆ ಮೆರೆಯುತ್ತಿದ್ದ ಜನರು ನಾಡಿನಲ್ಲಿ ತಲೆದೋರಿದ್ದ ಭ್ರಷ್ಟಾಚಾರವನ್ನು ತಡೆಯುತ್ತಿರಲಿಲ್ಲವೇಕೆ? ಅವರ ಪೈಕಿ ನಮ್ಮ ರಕ್ಷಣೆ ಪಡೆದ [ಅಂದರೆ ಶಿಕ್ಷೆಗೊಳಗಾಗದ] ಕೇವಲ ಕೆಲವು (ಸಜ್ಜನರ) ಹೊರತು?! ಹೌದು, ಅಕ್ರಮಗಳಲ್ಲಿ ತೊಡಗಿದ್ದ ಆ ಜನರು, ತಮಗೆ ಯಥೇಚ್ಛವಾಗಿ ಲಭ್ಯವಿದ್ದ ಸುಖಭೋಗಗಳ ಬೆನ್ನು ಹತ್ತುವುದರಲ್ಲಿ ಮಾತ್ರ ನಿರತರಾಗಿದ್ದರು! (ಶ್ರೀಮಂತಿಕೆ ಮೆರೆಯುತ್ತಿದ್ದ) ಆ ಜನರು ದುಷ್ಟರೇ ಆಗಿದ್ದರು! {116}

ಪೈಗಂಬರರೇ, ನಾಡಿನ ನಿವಾಸಿಗಳು (ತಮ್ಮ ಹಾಗೂ ತಮ್ಮ ಸಮಾಜದ) ಸುಧಾರಣೆಯಲ್ಲಿ ತೊಡಗಿರುವಾಗ (ಕೆಲವರೆಸಗುವ) ಅನ್ಯಾಯಕ್ಕಾಗಿ ನಿಮ್ಮ ಪ್ರಭು ನಾಡನ್ನೇ ಶಿಕ್ಷೆಗೊಳಪಡಿಸಿ ನಾಶಪಡಿಸುವುದಿಲ್ಲ. {117}

ಪೈಗಂಬರರೇ, ನಿಮ್ಮ ಪ್ರಭು ಬಯಸಿರುತ್ತಿದ್ದರೆ ಮನುಷ್ಯರನ್ನು [ತಮ್ಮ ಮಧ್ಯೆ ಅಭಿಪ್ರಾಯ ಭಿನ್ನತೆ ತಲೆದೋರದ] ಒಂದು ಸಮುದಾಯವನ್ನಾಗಿ ಮಾಡಿ ಬಿಡುತ್ತಿದ್ದನು. [ಆದರೆ ಅವರಿಗೆ ಅವನು ಅಭಿಪ್ರಾಯ ಸ್ವಾತಂತ್ರ್ಯ ನೀಡಿದ್ದರಿಂದ] ಅವರು ವ್ಯತ್ಯಸ್ತ ಅಭಿಪ್ರಾಯಗಳನ್ನು ಹೊಂದಿ ವಿವಾದಗಳಲ್ಲಿ ತೊಡಗುವರು. {118}

ಹೌದು, ಯಾರ ಮೇಲೆ ನಿಮ್ಮ ಪ್ರಭುವಿನ ಕೃಪೆ ಇರುವುದೋ ಅವರ ಹೊರತು! (ಅವನ ಕೃಪೆಗೆ ಪಾತ್ರರಾಗಬೇಕೆಂಬ) ಉದ್ದೇಶಕ್ಕಾಗಿಯೇ ಅವನು ಮನುಷ್ಯರನ್ನು ಸೃಷ್ಟಿ ಮಾಡಿರುವನು. [ಆದರೆ ಆ ಅಭಿಪ್ರಾಯ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿ ವಿವಾದಗಳಲ್ಲೇ ಮುಳುಗಿದ ಕಾರಣ] ಅವನ ಆ ಮಾತು - ಅಂದರೆ ಮನುಷ್ಯರು ಮತ್ತು ಜಿನ್ನ್ ಗಳನ್ನು ಒಟ್ಟುಗೂಡಿಸಿ ನರಕವನ್ನು ನಾನು ತುಂಬಿ ಬಿಡುವೆನು ಎಂಬ ನಿಮ್ಮ ಪ್ರಭು ಆ ಮಾತು - ಸತ್ಯವಾಗಿ ಪರಿಣಮಿಸುವಂತಾಯಿತು! {119}

ಪೈಗಂಬರರೇ, ಗತ ಪ್ರವಾದಿಗಳ ವೃತ್ತಾಂತಗಳಿಗೆ ಸಂಬಂಧಿಸಿದಂತೆ ಯಾವುದು ನಿಮ್ಮ ಹೃದಯಕ್ಕೆ ಸ್ಥೈರ್ಯ ನೀಡುವುದೋ ಅದೆಲ್ಲವನ್ನು ನಾವು ನಿಮಗೆ ವಿವರಿಸುತ್ತಿದ್ದೇವೆ; ಆ ಮೂಲಕ ಯಥಾರ್ಥ ವಿಷಯ ನಿಮಗೆ ತಲುಪಿರುತ್ತದೆ. ಮಾತ್ರವಲ್ಲ, ವಿಶ್ವಾಸಿಗಳಿಗೆ ಅದರಲ್ಲಿ ಉಪದೇಶ ಮತ್ತು ಬುದ್ಧಿವಾದವಿದೆ. {120}

ಅದನ್ನು ನಂಬದ ಅವಿಶ್ವಾಸಿಗಳೊಡನೆ, ನಿಮ್ಮ ಕಾರ್ಯಸಾಮರ್ಥ್ಯದ ಪ್ರಕಾರ ನೀವೇನು ಮಾಡಬೇಕೋ ಅದನ್ನು ನೀವು ಮಾಡುತ್ತಲಿರಿ; ನಾವು ನಮಗೆ (ಆಜ್ಞಾಪಿಸಲಾದಂತೆ) ಮಾಡುತ್ತಿದ್ದೇವೆ. ಪರಿಣಾಮಕ್ಕಾಗಿ ನೀವೂ ಕಾಯುತ್ತಿರಿ; ನಾವೂ ಕಾಯುತ್ತಲಿದ್ದೇವೆ ಎಂದು ತಿಳಿಸಿ ಬಿಡಿ. {121-122}

ಭೂಮಿ ಆಕಾಶಗಳಲ್ಲಿ (ನಿಮಗೆ) ಅಗೋಚರವಾದ ಸಕಲವೂ ಅಲ್ಲಾಹ್ ನಿಗೆ ಸೇರಿದ್ದಾಗಿವೆ; ಸಕಲ ಸಂಗತಿಗಳೂ (ಅಂತಿಮ ತೀರ್ಮನಕ್ಕಾಗಿ) ಅವನತ್ತ ಮರಳಿಸಲ್ಪಡುತ್ತವೆ! ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ ಮತ್ತು ಭರವಸೆ ಅವನ ಮೇಲೆ ಮಾತ್ರವಿಡಿ. ನೀವು ಏನೆಲ್ಲ ಮಾಡುತ್ತಿರುವಿರೋ ಅದರ ಕುರಿತು ನಿಮ್ಮ ಒಡೆಯನು ಅಜ್ಞನಾಗಿಲ್ಲ! {123} 

----------- 


ಅನುವಾದಿತ ಸೂರಃ ಗಳು:

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...