ಅಲ್ ಬಕರಃ | ترجمة سـورة البقـرة

ಅಲ್ ಬಕರಃ | سـورة البقـرة
ترجمة سورة البقرة من القرآن الكريم إلى اللغة الكنادية من قبل المترجم / إقبال صوفي – الكويت

*  سهل الفهم من غير الرجوع إلى كتاب التفسير *

| ಸೂರಃ ಅಲ್-ಬಕರಃ | ಪವಿತ್ರ್ ಕುರ್‌ಆನ್ ನ 2 ನೆಯ ಸೂರಃ | ಇದರಲ್ಲಿ ಒಟ್ಟು 286 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ)! ಅವನು ಮಹಾ ಕಾರುಣ್ಯವಂತನು; ಶಾಶ್ವತವಾಗಿ ಕೃಪೆ ತೋರುವವನು!

✽1✽ ಅಲಿಫ್ – ಲಾಮ್ – ಮೀಮ್!

ಇದುವೇ ಆ (ದಿವ್ಯ) ಗ್ರಂಥ ಎಂಬ ವಿಷಯದಲ್ಲಿ ಸಂದೇಹವಿಲ್ಲ! (ಅನ್ಯಾಯ-ಅನೀತಿಗಳಿಂದ ತಮ್ಮನ್ನು ದೂರವಿರಿಸಿಕೊಂಡ) ಧರ್ಮಶ್ರಧ್ಧೆಯುಳ್ಳ ಜನರಿಗೆ ಇದು ಮಾರ್ಗದರ್ಶನವಾಗಿದೆ. ತೆರೆಮರೆಯಲ್ಲಿರುವ [ಕೆಲವು ವಾಸ್ತವಿಕತೆಗಳಲ್ಲಿ] ಅವರು ನಂಬಿಕೆಯುಳ್ಳವರಾಗಿದ್ದಾರೆ. (ದಿನ ನಿತ್ಯದ) ನಮಾಝ್ ನ್ನು ಅವರು ಬಹಳ ಶ್ರದ್ಧೆಯಿಂದ ಪಾಲಿಸುತ್ತಾರೆ. ನಾವು ಅವರಿಗೆ ಏನನ್ನು ದಯಪಾಲಿಸಿರುವೆವೋ ಅದರಿಂದ (ನಮ್ಮ ಮಾರ್ಗದಲ್ಲಿ) ಅವರು ಖರ್ಚು ಮಾಡುತ್ತಿರುತ್ತಾರೆ. (ಮುಹಮ್ಮದ್ ಪೈಗಂಬರರೇ), ನಿಮ್ಮತ್ತ ಕಳಿಸಲಾದ [ಈ ದಿವ್ಯ ಗ್ರಂಥ ಕುರ್‌ಆನ್ ನಲ್ಲಿ] ಹಾಗೂ ನಿಮಗಿಂತ ಮುಂಚಿತವಾಗಿ [ಗತ ಪ್ರವಾದಿಗಳಿಗೆ] ಕಳಿಸಿ ಕೊಡಲಾದ (ಎಲ್ಲ ದಿವ್ಯ ಗ್ರಂಥಗಳಲ್ಲಿ) ಅವರು ವಿಶ್ವಾಸವುಳ್ಳವರಾಗಿದ್ದಾರೆ. ಮಾತ್ರವಲ್ಲ, ಪರಲೋಕದಲ್ಲಿ [ನಡೆಯಲಿರುವ ಕರ್ಮಗಳ ವಿಚಾರಣೆ, ತಕ್ಕ ಪ್ರತಿಫಲವೇ ಮುಂತಾದ ವಿಷಯಗಳಲ್ಲಿಯೂ] ಅವರು ಬಲವಾದ ವಿಶ್ವಾಸವನ್ನು ಹೊಂದಿರುತ್ತಾರೆ. ತಮ್ಮ ಕರ್ತಾರನಾದ ಒಡೆಯನು ನಿರ್ದೇಶಿಸಿದ ನೇರ ಮಾರ್ಗದಲ್ಲಿರುವವರು ಅಂತಹ ಜನರೇ ಆಗಿರುವರು; ಮತ್ತು [ಪರಲೋಕದಲ್ಲಿ ಶಾಶ್ವತವಾದ] ಯಶಸ್ವಿ ಸಾಧಿಸುವವರೂ ಸಹ ಅವರೇ ಆಗಿರುವರು. {1-5}

[ಪೈಗಂಬರರೇ, ನೀವು ಸಾರುತ್ತಿರುವ ಸಂದೇಶವನ್ನು] ಉದ್ದೇಶಪೂರ್ವಕವಾಗಿ ಧಿಕ್ಕರಿಸಿ ಬಿಡುವವರಿಗೆ, (ಪರಲೋಕದಲ್ಲಿರುವ ವಿಚಾರಣೆಯ ಬಗ್ಗೆ) ನೀವು ಮುನ್ನೆಚ್ಚರಿಕೆ ನೀಡಿದರೂ ಸರಿ, ನೀಡದಿದ್ದರೂ ಸರಿ; ಅವರಂತೂ (ಅದನ್ನು ನಂಬಿಕೊಂಡು) 'ಮೂಮಿನ್' ಗಳಾಗುವವರಲ್ಲ. [ಅಂತಹ ಧಿಕ್ಕಾರದ ಕಾರಣದಿಂದಾಗಿ] ಅವರ ಹೃದಯಗಳನ್ನೂ ಕಿವಿಗಳನ್ನೂ ಅಲ್ಲಾಹ್ ನು ಮುಚ್ಚಿ ಬಿಟ್ಟಿರುವನು. ಅವರ ಕಣ್ಣುಗಳಿಗೂ ಪರದೆ ಬಿದ್ದು ಕೊಂಡಿದೆ. ಮಾತ್ರವಲ್ಲ, ಅವರಿಗೆ ಘೋರವಾದ ಶಿಕ್ಷೆ ಕಾದಿದೆ. {6-7}

ಜನರ ಪೈಕಿ ಇನ್ನು ಕೆಲವರು, ನಾವು ಅಲ್ಲಾಹ್ ನನ್ನೂ ಅಂತ್ಯ ದಿನವನ್ನೂ ನಂಬುತ್ತೇವೆ ಎಂದು ಹೇಳಿಕೊಳ್ಳುವವರಿದ್ದಾರೆ. ಆದರೆ (ಯಥಾರ್ಥದಲ್ಲಿ) ಅವರಾರೂ ‘ಮೂಮಿನ್’ ಗಳಲ್ಲ. ಅಲ್ಲಾಹ್ ನನ್ನು ಮತ್ತು ಮೂಮಿನ್ ಗಳನ್ನು (ಹಾಗೆ ಹೇಳಿಕೊಂಡು) ಅವರು ವಂಚಿಸಲು ಬಯಸುತ್ತಾರೆ. ಅವರಾದರೋ ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಿದ್ದಾರೆ, ಆದರೆ ಅದನ್ನು ತಾವರಿಯರು. ಅವರ ಹೃದಯಗಳಲ್ಲಿ ಒಂದು ರೋಗವಿದೆ, ಆದ್ದರಿಂದಲೇ ಅಲ್ಲಾಹ್ ನು ಅವರ ಪಾಲಿಗೆ ಆ ರೋಗವನ್ನು ಮತ್ತಷ್ಟು ಹೆಚ್ಚಿಸಿದನು. ಹಾಗೆ ಸುಳ್ಳಾಡುತ್ತಿದ್ದ ಕಾರಣದಿಂದಾಗಿ ಅವರಿಗೆ ನೋವುಭರಿತ ಶಿಕ್ಷೆಯೂ ಕಾದಿದೆ. {8-10}

ನೀವು ಭೂಮಿಯಲ್ಲಿ ಭ್ರಷ್ಟಾಚಾರ-ಕ್ಷೋಭೆಗಳನ್ನು ಹರಡದಿರಿ ಎಂದು ಅವರೊಂದಿಗೆ ಸಾರಲಾದಾಗ, ನಾವಾದರೋ ಕೇವಲ ಸುಧಾರಕರು ಮಾತ್ರ – ಎಂದವರು ಹೇಳಿಕೊಳ್ಳುವರು. ಜೋಕೆ! ನಿಸ್ಸಂಶಯವಾಗಿ ಅವರೇ (ಭೂಮಿಯಲ್ಲಿ) ಅಶಾಂತಿ ಹರಡುವವರು, ಆದರೆ ಅವರಿಗೆ ಅದರ ಪರಿವೆಯಿಲ್ಲ! ನೀವು (ಕುರ್‌ಆನ್ ನ ಸತ್ಯ ಸಂದೇಶದಲ್ಲಿ) ಇತರ ಜನರು ವಿಶ್ವಾಸವಿಟ್ಟಂತೆಯೇ ವಿಶ್ವಾಸವಿಡಬೇಕು ಎಂದು ಅವರೊಡನೆ ಹೇಳಲಾದಾಗ, ಅವಿವೇಕಿಗಳಾದ ತಿಳಿಗೇಡಿಗಳು ವಿಶ್ವಾಸವಿಟ್ಟಂತೆ ನಾವೂ ವಿಶ್ವಾಸವಿಡಬೇಕೇನು? – ಎಂದು ಅವರು ಕೇಳುತ್ತಾರೆ. ಸರಿಯಾಗಿ ತಿಳಿದುಕೊಳ್ಳಿ, (ಹಾಗೆ ಕೇಳುವ) ಅವರೇ ತಿಳಿಗೇಡಿಗಳು, ಆದರೆ ಅದನ್ನು ಅವರು ತಿಳಿದುಕೊಂಡಿಲ್ಲ. {11-13}

[ಮುಹಮ್ಮದ್ ಪೈಗಂಬರರು ಸಾರಿದ ಸಂದೇಶದಲ್ಲಿ ವಿಶ್ವಾಸವಿಟ್ಟ] ‘ಮೂಮಿನ್’ ಗಳನ್ನು ಕಂಡಾಗ ನಾವೂ ವಿಶ್ವಾಸವಿಟ್ಟವರು ಎಂದು ಅವರು ಹೇಳಿಕೊಳ್ಳುವರು. ನಂತರ ತಮ್ಮ ಸೈತಾನರೊಂದಿಗೆ [ಅರ್ಥಾತ್ ಧೂರ್ತ ಮುಖಂಡರೊಂದಿಗೆ] ಏಕಾಂತತೆಯಲ್ಲಿ ಭೇಟಿಯಾದಾಗ ನಾವು ನಿಜವಾಗಿ ನಿಮ್ಮೊಂದಿಗೇ ಇರುವವರು, ಅವರೊಂದಿಗೆ ನಾವು ಕೇವಲ ತಮಾಷೆ ಮಾಡುತ್ತೇವಷ್ಟೇ ಎನ್ನುತ್ತಾರೆ. ಯಥಾರ್ಥದಲ್ಲಿ [ಅವರ ಆ ದ್ವಂದ್ವ ಸ್ವಭಾವದ ಕಾರಣ] ಅಲ್ಲಾಹ್ ನೂ ಅವರೊಂದಿಗೆ ಅಂತಹದೇ ‘ತಮಾಷೆ’ ಮಾಡುತ್ತಾನೆ, ಅವರ ಉಲ್ಲಂಘನಾ ಮನೋವೃತ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಾನೆ; ಅವರು (ಕಣ್ಣಿದ್ದೂ) ಕುರುಡರಾಗುತ್ತಿದ್ದಾರೆ. ಸನ್ಮಾರ್ಗವನ್ನು ಭ್ರಷ್ಟತೆಯೊಂದಿಗೆ ವಿಕ್ರಯಿಸಿ ಕೊಂಡವರವರು! ಅವರ ಈ ವ್ಯಾಪಾರವು ಅವರಿಗೆ ಲಾಭದಾಯಕವಲ್ಲ; ಅವರು ಸರಿದಾರಿಯಲ್ಲಿ ನಡೆಯುವವರಾಗಿರಲಿಲ್ಲ. {14-16}

ಅಂಥವರ ಉದಾಹರಣೆಯನ್ನು ಈ ಉಪಮೆಯೊಂದಿಗೆ (ಹೋಲಿಸಬಹುದು): ಒಬ್ಬಾತನು [ಕತ್ತಲನ್ನು ನೀಗಿಸಿ ಜನರಿಗೆ ಬೆಳಕು ನೀಡುವ ಸಲುವಾಗಿ] ಬೆಂಕಿ ಉರಿಸುವನು; ಮತ್ತು ಆ ಬೆಂಕಿಯು ಅವನ ಸುತ್ತಮುತ್ತಲಿನ ಪ್ರದೇಶವನ್ನೆಲ್ಲಾ ಚೆನ್ನಾಗಿ ಬೆಳಗಿಸಿ ಬಿಟ್ಟಾಗ [ಅಲ್ಲಿಯ ಜನರು ಆ ಬೆಳಕಿನ ಪ್ರಯೋಜನ ಪಡೆದುಕೊಳ್ಳುವ ಬದಲು ಅದನ್ನು ಕಡೆಗಣಿಸಿಬಿಟ್ಟಾಗ] ಅಲ್ಲಾಹ್ ನು ಅವರ (ಕಣ್ಣಿನ) ಪ್ರಕಾಶವನ್ನು ಕಿತ್ತುಕೊಂಡು ಅವರನ್ನು ಕಗ್ಗತ್ತಲೆಯಲ್ಲಿ ಬಿಟ್ಟು ಬಿಡುತ್ತಾನೆ, ಆಗ ಅವರು ಏನನ್ನೂ ನೋಡಲಾರರು! [ಕಿವಿ ಬಾಯಿ ಕಣ್ಣುಗಳಿದ್ದೂ] ಅವರು ಕಿವುಡರೂ ಮೂಕರೂ ಕುರುಡರೂ ಆಗಿ ಬಿಟ್ಟಿದ್ದಾರೆ. ಅವರಂತು (ಸತ್ಯದ ಬೆಳಕಿನೆಡೆಗೆ) ಮರಳುವವರಲ್ಲ! {17-18}

ಅಥವಾ ಕಾರ್ಮೋಡ, ಗುಡುಗು, ಮಿಂಚುಗಳಿಂದ ಕೂಡಿದ [ಭಯಾನಕ ರಾತ್ರಿಯಲ್ಲಿ] ಅಕಾಶದಿಂದ ಜಡಿಮಳೆ ಸುರಿಯುತ್ತಿರುವಾಗ ಸಿಡಿಲಿನ ಆರ್ಭಟ ಮತ್ತು ಮರಣದ ಭಯದಿಂದ (ತಮ್ಮನ್ನು ರಕ್ಷಿಸಿಕೊಳ್ಳಲು) ಕಿವಿಗಳಿಗೆ ತಮ್ಮ ಬೆರಳು ತುರುಕಿಸಿ ಕೊಂಡು (ಸಮಾಧಾನ ಪಟ್ಟುಕೊಳ್ಳುವ ಜನರೊಂದಿಗೆ ಅಂಥವರನ್ನು ಹೋಲಿಸಬಹುದು)! ಅಲ್ಲಾಹ್ ನಾದರೋ ತಿಳಿದೂ ತಿಳಿದೂ ಧಿಕ್ಕರಿಸುವವರನ್ನು ಎಲ್ಲ ಕಡೆಗಳಿಂದ ಸುತ್ತುವರಿದುಕೊಂಡಿದ್ದಾನೆ.

ಮಿಂಚಿನ (ತೀಕ್ಷ್ಣತೆಯು) ಅವರ ದೃಷ್ಟಿಗಳನ್ನು ಕಸಿದುಕೊಳ್ಳುವುದೇನೋ ಎಂಬಂತಿದೆ! ಅದು ಮಿಂಚಿಕೊಂಡಾಗಲೆಲ್ಲಾ (ಅದರ ಬೆಳಕಿನ ಸಹಾಯದಿಂದ) ಅವರು ಸ್ವಲ್ಪ ದೂರ ನಡೆದುಕೊಳ್ಳುವರು, ಮತ್ತು ಕತ್ತಲಾವರಿಸಿಕೊಂಡಾಗ ಅವರು (ದಿಕ್ಕು ತೋಚದೆ) ನಿಂತು ಬಿಡುವರು. ಒಂದು ವೇಳೆ ಅಲ್ಲಾಹ್ ನು ಬಯಸಿದ್ದೇ ಆದರೆ ಅವರ ಶ್ರವಣಶಕ್ತಿ ಮತ್ತು ದೃಷ್ಟಿಯನ್ನು ಕಸಿದುಕೊಂಡೇ ಬಿಡುತ್ತಿದ್ದನು. ನಿಜವಾಗಿ, ಅಲ್ಲಾಹ್ ನು ಎಲ್ಲಾ ಕಾರ್ಯಗಳನ್ನು (ತನ್ನ ಇಚ್ಛೆಯನುಸಾರ) ಮಾಡಿ ಮುಗಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. {19-20}

ಓ ಜನರೇ! ನಿಮ್ಮನ್ನೂ ನಿಮಗಿಂತ ಹಿಂದೆ ಗತಿಸಿ ಹೋದವರನ್ನೂ ಸೃಷ್ಟಿಸಿದ ನಿಮ್ಮ ಸೃಷ್ಟಿಕರ್ತನನ್ನೇ ಆರಾಧಿಸಿರಿ; ಏಕೆಂದರೆ (ಅವನ ಅರಾಧನೆಯು) ನಿಮ್ಮನ್ನು (ನರಕದ ಯಾತನೆಯಿಂದ) ಕಾಪಾಡುವುದು. ಅವನೇ ಭೂಮಿಯನ್ನು ನಿಮ್ಮ ಪಾಲಿಗೆ ಹಾಸುಗೆಯನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿದವನು; ಮತ್ತು ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ಬೆಳೆಗಳನ್ನು ಹಣ್ಣುಹಂಪಲುಗಳನ್ನು ನಿಮ್ಮ ಆಹಾರಕ್ಕಾಗಿ (ಭೂಮಿಯಿಂದ) ಉತ್ಪಾದಿಸಿದವನು. ನಿಮಗದು ತಿಳಿದೇ ಇದೆ, ಆದ್ದರಿಂದ (ಅದನ್ನೆಲ್ಲ ತಿಳಿದಿರುವ ನೀವು) ಅಲ್ಲಾಹ್ ನೊಂದಿಗೆ ಯಾರನ್ನೂ ಸರಿತೂಗಿಸಬೇಡಿ. {21-22}

ಇನ್ನು ನಮ್ಮ ಉಪಾಸಕನಾದ (ಮುಹಮ್ಮದ್ ರಿಗೆ) ನಾವು ಕಳುಹಿಸಿಕೊಟ್ಟ (ಈ ಕುರ್‌ಆನ್ ನ) ಬಗ್ಗೆ ನೀವು ಸಂದೇಹದಲ್ಲಿ ಸಿಲುಕಿರುವಿರಿ ಎಂದಾದರೆ ಅದರಲ್ಲಿರುವಂತಹ (ಕೇವಲ) ಒಂದು ಸೂರಃ (ಅರ್ಥಾತ್ ಕುರ್‌ಆನ್ ನ ಒಂದು ಅಧ್ಯಾಯ) ವನ್ನಾದರೂ ರಚಿಸಿ ತನ್ನಿ. ನೀವು (ಅದನ್ನು ಸಾಧಿಸಲು) ಅಲ್ಲಾಹ್ ನೊಬ್ಬನನ್ನು ಹೊರತುಪಡಿಸಿ ನಿಮ್ಮೆಲ್ಲ ಸಹಾಯಕರನ್ನೂ ಕರೆದುಕೊಳ್ಳಿ! ನೀವು ಸತ್ಯವಂತರಾದರೆ (ಅದನ್ನು ಸಾಧಿಸಿ ತೋರಿಸಿ). ಇನ್ನು ನಿಮಗದು ಅಸಾಧ್ಯವಾಗಿದ್ದರೆ, ಎಂದಿಗೂ ಸಾಧ್ಯವೇ ಇಲ್ಲ ಎಂದಾದರೆ, ಸತ್ಯದ ಧಿಕ್ಕಾರಿಗಳಿಗಾಗಿ ಸಿದ್ಧಗೊಳಿಸಿಟ್ಟ ನರಕಾಗ್ನಿಯಿಂದ ನೀವು ನಿಮ್ಮನ್ನು ಕಾಪಾಡಿಕೊಳ್ಳಿ. (ಸತ್ಯವನ್ನು ಅರಿತೂ ಧಿಕ್ಕರಿಸುತ್ತಿರುವ) ಅಂತಹ ಜನರು ಮತ್ತು (ಅವರು ಪೂಜಿಸುವ) ಆ ಶಿಲೆಗಳು ಆ ನರಕವನ್ನು ಉರಿಸುವ ಇಂಧನಗಳಾಗಿರುವರು. {23-24}

ಇನ್ನು ಯಾರೆಲ್ಲ [ಅಲ್ಲಾಹ್ ನ ಏಕತೆ, ಪ್ರವಾದಿತ್ವ, ಪುನರುತ್ಥಾನ ಮುಂತಾದ ವಿಷಯಗಳಲ್ಲಿ] ಧೃಡವಾದ ವಿಶ್ವಾಸ ಹೊಂದಿರುವರೋ, ಜೊತೆಗೆ ನಿಷ್ಕಪಟವಾಗಿ ಸತ್ಕಾರ್ಯಗಳನ್ನು ಮಾಡುತ್ತಿರುತ್ತಾರೋ, ಅಂಥವರಿಗೆ ನದಿಗಳು ಹರಿಯುತ್ತಿರುವ ಸ್ವರ್ಗೀಯ ಉದ್ಯಾನಗಳ ಶುಭ ಸಂದೇಶವನ್ನು (ಪೈಗಂಬರರೇ) ನೀವು ನೀಡಿರಿ. ಸ್ವರ್ಗದ ಫಲಗಳನ್ನು ಅವರಿಗೆ ಅಹಾರವನ್ನಾಗಿ ನೀಡಲಾಗುವಾಗ ಈ ಹಿಂದೆಯೂ ನಮಗೆ ಇದನ್ನೇ ನೀಡಲಾಗಿತ್ತು ಎಂದು ಅವರು (ಮನದಲ್ಲೇ) ಹೇಳಿಕೊಳ್ಳುವರು. ವಾಸ್ತವದಲ್ಲಿ ಅವುಗಳೊಂದಿಗೆ ಹೋಲುವ ಫಲಗಳನ್ನೇ ಅವರಿಗೆ ಅಲ್ಲಿ ನೀಡಲಾಗುವುದು. ಮತ್ತು ಅಲ್ಲಿ ಅವರಿಗಾಗಿ ನಿರ್ಮಲ ಸಂಗಾತಿಗಳ ಏರ್ಪಾಡು ಇರುವುದು. ಅದರಲ್ಲಿ ಅವರೆಲ್ಲ ಸದಾಕಾಲ ವಾಸಿಸುವರು. {25}

ಕೇವಲ ಒಂದು ಸೊಳ್ಳೆ ಅಥವಾ ಅದಕ್ಕೂ ಮೀರಿದ ಉಪಮೆಗಳನ್ನು ಉದಾಹರಿಸಲು ಅಲ್ಲಾಹ್ ನಿಗೆ ಯಾವುದೇ ಸಂಕೋಚವಿಲ್ಲ. ಯಾರಿಗೆ ವಿಶ್ವಾಸವಿದೆಯೋ ಅವರು ಅದನ್ನು ತಮ್ಮ ಸೃಷ್ಟಿಕರ್ತನ/ಒಡೆಯನ ಕಡೆಯಿಂದ ಬಂದ ಪರಮ ಸತ್ಯವೆಂದು ಗುರುತಿಸಿಕೊಳ್ಳುತ್ತಾರೆ. ಆದರೆ ಧಿಕ್ಕಾರಿಗಳಾದವರು, ಇಂತಹ ಉಪಮೆಗಳನ್ನು ನೀಡುವುದರ ಮೂಲಕ ಅಲ್ಲಾಹ್ ನು ಉದ್ದೇಶಿಸುವುದಾದರೂ ಏನನ್ನು – ಎಂದು ಕೇಳತೊಡಗುತ್ತಾರೆ. ಅಲ್ಲಾಹ್ ನು ಅನೇಕರನ್ನು ಇದರ ಮೂಲಕ ದಾರಿಗೆಡಿಸಿ ಬಿಡುತ್ತಾನೆ ಮತ್ತು ಅನೇಕರನ್ನು ಇದರ ಮೂಲಕವೇ ಸರಿದಾರಿಯಲ್ಲಿ ನಡೆಸುತ್ತಾನೆ. (ಅಲ್ಲಾಹ್ ನ ಮಾತುಗಳನ್ನು ಮೀರುವ) ‘ಫಾಸಿಕ್’ ಗಳನ್ನಲ್ಲದೆ ಬೇರೆ ಯಾರನ್ನೂ ಅವನು ಹಾಗೆ ದಾರಿಗೆಡಿಸುವುದಿಲ್ಲ. [26]

ಯಾರು ಅಲ್ಲಾಹ್ ನೊಂದಿಗೆ ಕರಾರು ಮಾಡಿ, ಅದನ್ನು ಧೃಡಪಡಿಸಿಕೊಂಡು, ಅನಂತರ ಅದನ್ನು ಉಲ್ಲಂಘಿಸಿ ಬಿಡುತ್ತಾರೋ; ಹಾಗೂ ಅಲ್ಲಾಹ್ ನು ಬಲಪಡಿಸಿಕೊಳ್ಳಲು ಆದೇಶಿಸಿದ ಸಂಬಂಧಗಳನ್ನು ಕಡಿದು ಬಿಡುತ್ತಾರೋ; ಮತ್ತು ಭೂಮಿಯಲ್ಲಿ ಅಶಾಂತಿ/ಪ್ರಕ್ಷೋಭೆಗಳನ್ನು ಹರಡುತ್ತಾರೋ; ಅವರೇ ಘೋರ ನಷ್ಟದಲ್ಲಿರುವವರು. [27]

(ಓ ಜನರೇ)! ಅಲ್ಲಾಹ್ ನನ್ನು ನೀವು ನಿರಾಕರಿಸಿ ಬಿಡುವುದಾದರೂ ಅದು ಹೇಗೆ? ಒಂದೊಮ್ಮೆ ನೀವು ನಿರ್ಜೀವಿಗಳಾಗಿದ್ದಿರಿ, ನಿಮಗವನು ಜೀವ ನೀಡಿದನು. ಮುಂದೆ ನಿಮಗವನು ಮರಣ ನೀಡಲಿರುವನು, ಅನಂತರ ನಿಮ್ಮನ್ನು ಅವನು ಪುನಃ ಜೀವಂತಗೊಳಿಸುವನು; ತದನಂತರ ನಿಮ್ಮನ್ನು (ವಿಚಾರಣೆಯ ಸಲುವಾಗಿ) ಅವನೆಡೆಗೇ ಮರಳಿಸಲಾಗುವುದು. [28]

ಭೂಮಿಯಲ್ಲಿ ಏನೆಲ್ಲ ಇವೆಯೋ ಅವೆಲ್ಲವನ್ನೂ (ಓ ಜನರೇ,) ನಿಮ್ಮ ಉಪಯೋಗಕ್ಕಾಗಿ ಸೃಷ್ಟಿಸಿದವನು ಅವನೇ. ನಂತರ ಅವನು ಆಕಾಶದೆಡೆಗೆ ತಿರುಗಿ ಅಲ್ಲಿ ಏಳು ಅಕಾಶಗಳನ್ನು ಯಥೋಚಿತವಾಗಿ ಸಂಯೋಜಿಸಿದನು. ಅವನಿಗಾದರೋ ಸಕಲ ವಿಷಯಗಳ ಕುರಿತ ಜ್ಞಾನವಿರುವುದು. [29]

(ಭೂಮಿಗೆ ಕಳುಹಿಸಲು ಮನುಷ್ಯ ವರ್ಗವನ್ನು ಸೃಷ್ಟಿಸುವಾಗ,) ನಾನು ಭೂಮಿಯಲ್ಲಿ ‘ಖಲೀಫಃ’ ನನ್ನು ನೇಮಕ ಮಾಡಲಿರುವೆನು ಎಂದು ನಿಮ್ಮ ಒಡೆಯನು ‘ಮಲಕ್’ ಗಳೊಡನೆ ಹೇಳಿದ್ದ ಸಂದರ್ಭವನ್ನು ನೆನಪಿಸಿಕೊಳ್ಳಿ. ಅಲ್ಲಿ ಕಲಹ, ಅಶಾಂತಿ ಹರಡುವ ಮತ್ತು ರಕ್ತಪಾತ ಉಂಟುಮಾಡುವ (ಖಲೀಫಃ) ನನ್ನು ನೀನು ಸೃಷ್ಟಿಸಲಿರುವೆಯೇ? ಎಂದು ‘ಮಲಕ್’ ಗಳು ಕೇಳಿದ್ದರು. ನಾವಾದರೋ ಕೀರ್ತನೆಯ ಜೊತೆಗೆ ನಿನ್ನ ಪಾವಿತ್ರ್ಯವನ್ನು ಜಪಿಸುತ್ತೇವೆ, ನಿನ್ನ ಪರಮ ಪಾವನ ಗುಣಗಾನ ಮಾಡುತ್ತೇವೆ (ಎಂದು ಮಲಕ್ ಗಳು ಅಂದು ಹೇಳಿದ್ದರು). ನಿಮಗೆ ತಿಳಿಯದೇ ಇರುವ ವಿಷಯಗಳ ಅರಿವು ನನಗಿದೆ (ಎಂದು ನಿಮ್ಮ ಒಡೆಯನು ಮಲಕ್ ಗಳೊಂದಿಗೆ ಆ ಸಂದರ್ಭದಲ್ಲಿ) ಹೇಳಿದ್ದನು. [30]

ತರುವಾಯ (ಮಾನವರ ಮಹಾಪಿತನೂ ಪ್ರಥಮ ಮನುಷ್ಯನೂ ಆದ) ‘ಆದಮ್’ ರಿಗೆ ಸಕಲ ವಸ್ತುಗಳ ಹೆಸರನ್ನು (ಅಲ್ಲಾಹ್ ನು) ಕಲಿಸಿದನು. ನಂತರ ಅವುಗಳನ್ನು ‘ಮಲಕ್’ ಗಳ ಮುಂದೆ ಪ್ರತ್ಯಕ್ಷ ಪಡಿಸಿ, (ನಿಮ್ಮ ಗುಮಾನಿಯಲ್ಲಿ ಏನಾದರೊ) ಸತ್ಯಾಂಶ ಇದೆ ಎಂದಾದರೆ ಇವುಗಳ ಹೆಸರುಗಳನ್ನು ನನಗೆ ತಿಳಿಸಿ ಎಂದು (ಅಲ್ಲಾಹ್ ನು ಆ ಮಲಕ್ ಗಳೊಡನೆ) ಹೇಳಿದನು. ನೀನು ಪರಮ ಪಾವನನು, ನೀನು ನಮಗೆ ಕಲಿಸಿ ಕೊಟ್ಟಿರುವ ವಿಧ್ಯೆಯ ಹೊರತು ಬೇರೇನೂ ನಮಗೆ ತಿಳಿಯದು; ನೀನಾದರೋ ಸಕಲವನ್ನೂ ಬಲ್ಲವನೂ ಅತಿಹೆಚ್ಚು ಜಾಣ್ಮೆಯುಳ್ಳವನೂ ಆಗಿರುವೆ ಎಂದು ‘ಮಲಕ್’ ಗಳು ಹೇಳಿದ್ದರು. [31-32]

ಓ ‘ಆದಮ್’! ಇವುಗಳ ಹೆಸರುಗಳನ್ನು ನೀನೀಗ ‘ಮಲಕ್’ ಗಳಿಗೆ ಹೇಳಿ ತೋರಿಸು ಎಂದು ಅಲ್ಲಾಹ್ ನು ಆದೇಶಿಸಿದನು. ಹಾಗೆ ‘ಮಲಕ್’ ಗಳಿಗೆ ಅವುಗಳ ಹೆಸರುಗಳನ್ನು ‘ಆದಮ್’ ರು ಹೇಳಿ ಕೇಳಿಸಿದಾಗ; ಭೂಮಿ ಮತ್ತು ಆಕಾಶಗಳಲ್ಲಿ (ನಿಮ್ಮ ಪಾಲಿಗೆ) ಅಗೋಚರವಾಗಿರುವ ಎಲ್ಲ ವಿಷಯಗಳೂ ನನಗೆ ತಿಳಿದಿದೆ ಎಂದು ನಾನು ನಿಮಗೆ ಹೇಳಿರಲಿಲ್ಲವೇ? ನೀವು ವ್ಯಕ್ತ ಪಡಿಸುವ ಮತ್ತು ನೀವು ಬಚ್ಚಿಡುವ ಎಲ್ಲಾ ವಿಷಯಗಳನ್ನು ನಾನು ಚೆನ್ನಾಗಿ ಬಲ್ಲೆನು ಎಂದು ಅಲ್ಲಾಹ್ ನು ತಿಳಿಸಿದನು. [33]

ನೀವಿನ್ನು ‘ಆದಮ್’ ರಿಗೆ ತಲೆಬಾಗಿರಿ ಎಂದು ‘ಮಲಕ್’ ಗಳಿಗೆ ನಾವು ಆಜ್ಞಾಪಿಸಿದ ಆ ಸಂದರ್ಭವನ್ನು ನೆನಪಿಸಿಕೊಳ್ಳಿ. ಆಗ ಅವರೆಲ್ಲ (ಆಜ್ಞೆಯನ್ನು ಅನುಸರಿಸಿ ಆದಮ್ ರ ಮುಂದೆ) ಬಾಗಿ ಕೊಂಡರು; ಆದರೆ (ಜಿನ್ನ್ ವರ್ಗಕ್ಕೆ ಸೇರಿದ) ‘ಇಬ್ಲೀಸ್’ ಒಬ್ಬನ ಹೊರತು! ಅವನು ನಿರಾಕರಿಸಿದನು ನಂತರ ಅಹಂಕಾರ ಮೆರೆದನು, ಮತ್ತು (ಅಲ್ಲಾಹ್ ನ ಆಜ್ಞೆಯನ್ನು ನಿರಾಕರಿಸಿದ ಕಾರಣ) ‘ಕಾಫಿರ್’ ಗಳ ಸಾಲಿಗೆ ಸೇರಿಹೋದನು. [34]

(ಸ್ವರ್ಗಲೋಕದಲ್ಲಿ ‘ಆದಮ್’ ರಿಗಾಗಿ ಒಂದು ಸಂಗಾತಿ ಹಾಗೂ ಪ್ರಥಮ ಮಹಿಳೆಯಾದ ‘ಹವ್ವಾ’ ರ ಸೃಷ್ಟಿಕಾರ್ಯವು ನಡೆದ ನಂತರ) ಓ ಆದಮ್, ನೀನು ಮತ್ತು ನಿನ್ನ ಪತ್ನಿಯು ಇನ್ನು ಸ್ವರ್ಗದ ಉದ್ಯಾನದಲ್ಲಿ ತಂಗಿಕೊಳ್ಳಿ, ಮತ್ತು ಅಲ್ಲಿ ನೀವಿಬ್ಬರೂ ನಿಮಗಿಷ್ಟ ಬಂದಂತೆ, ಬೇಕಾದಾಗ, ಬೇಕಾದಷ್ಟನ್ನು ತಿಂದುಕೊಳ್ಳಿ, ಆದರೆ ಈ ನಿರ್ಧಿಷ್ಟ ಮರವೊಂದರ ಸಮೀಪವೂ ಸುಳಿಯಬಾರದು; ಅನ್ಯಥಾ ನೀವು ತಪ್ಪಿತಸ್ಥರ ಸಾಲಿಗೆ ಸೇರಿ ಬಿಡುವಿರಿ – ಎಂದು ನಾವು (ಆದಮ್ ರನ್ನು) ಎಚ್ಚರಿಸಿದೆವು. [35]

ಆದರೆ (ಜಿನ್ನ್ ವರ್ಗಕ್ಕೆ ಸೇರಿದವನಾದ) ಸೈತಾನನು ಅವರಿಬ್ಬರನ್ನೂ ಅಲ್ಲಿಂದ ಹೊರಹಾಕಿಸುವಂತೆ (ತನ್ನ ಸವಿ ಮಾತಿನಿಂದ) ಪುಸಲಾಯಿಸಿದನು, ಮತ್ತು ಅವರನ್ನು ತಾವಿದ್ದಲ್ಲಿಂದ (ಅರ್ಥಾತ್: ಸ್ವರ್ಗದ ತೋಟದಿಂದ) ಹೊರ ಹಾಕಿಸಿ ಬಿಟ್ಟನು. ನೀವಿನ್ನು (ಸ್ವರ್ಗದ ತೋಟದಿಂದ) ಹೊರನಡೆಯಿರಿ; ನೀವು (ಅರ್ಥಾತ್: ಮನುಷ್ಯರು ಮತ್ತು ಸೈತಾನರು) ಪರಸ್ಪರ ಶತ್ರುಗಳಾಗುವಿರಿ. ನಿಮಗೆ ಭೂಮಿಯಲ್ಲಿ ಒಂದು ನಿರ್ಧಿಷ್ಟ ಕಾಲದ ತನಕ ವಾಸ್ತವ್ಯ ಹೂಡಲು ನೆಲೆ ಮತ್ತು ಜೀವನ ಸಾಗಿಸಲು ಬೇಕಾದ ಎಲ್ಲ ಅವಶ್ಯಕತೆಗಳು ಇರುವುವು – ಎಂದು ನಾವು ಆಗ ಆಜ್ಞಾಪಿಸಿದೆವು. [36]

(ತದನಂತರ, ಪಶ್ಚಾತಾಪ ಪಟ್ಟುಕೊಳ್ಳಲು ಬೇಕಾದಂತಹ) ಕೆಲವು ವಚನಗಳನ್ನು ಆದಮ್ ರು ತನ್ನ ಒಡೆಯನಿಂದ ಪಡೆದುಕೊಂಡು (ಅದರಂತೆ ಪ್ರಾಯಶ್ಚಿತ್ತ ಮಾಡಿಕೊಂಡಾಗ ಅವರ ಒಡೆಯನು) ಅವರ ಮೇಲೆ ಕೃಪೆ ತೋರಿದನು. ಆ ಒಡೆಯನಾದರೋ ಮಹಾ ಕ್ಷಮಾಶೀಲನೂ ಪರಮ ಕಾರುಣ್ಯವಂತನೂ ಆಗಿರುವನು. [37]

ನೀವೆಲ್ಲರೂ (ಸ್ವರ್ಗಲೋಕದಿಂದ) ಕೆಳಗಿಳಿದು ಹೋಗಿರಿ. (ಮತ್ತು ಭೂಮಿಯಲ್ಲಿ ವಾಸ ಮಾಡಿಕೊಂಡಿರುವಾಗ) ನನ್ನ ಬಳಿಯಿಂದ ಮಾರ್ಗದರ್ಶನವು ನಿಮ್ಮೆಡೆಗೆ ಯಾವಾಗೆಲ್ಲ ಬರುವುದೋ ಆಗೆಲ್ಲ ಅದನ್ನು ಅನುಸರಿಸಿ ಅದರಂತೆ ನಡೆದು ಕೊಂಡವರು ಅಳುಕಬೇಕಾಗಿಲ್ಲ; ಅವರು ವ್ಯಥೆ ಪಡುವ ಅವಶ್ಯಕತೆಯೂ ಇಲ್ಲ. ಇನ್ನು ನಾವು ಕಳಿಸುವ ಅದ್ಭುತ ನಿದರ್ಶನಗಳನ್ನು ಯಾರು ನಿರಾಕರಿಸಿ ತಳ್ಳಿ ಹಾಕುತ್ತಾರೋ ಅವರೇ ನರಕಾಗ್ನಿಯ ಸಂಗಾತಿಗಳು, ಎಂದೆಂದಿಗೂ ಅದರಲ್ಲೇ ಬಿದ್ದುಕೊಂಡಿರುವವರು. [38-39]

ಓ ಇಸ್ರಾಈಲ್ ವಂಶಜರೇ (ಅರ್ಥಾತ್: ಮದೀನಃ ಪಟ್ಟಣದಲ್ಲಿ ವಾಸವಾಗಿರುವ ಯಹೂದ್ಯರೇ)! ನಾನು ನಿಮಗೆ ದಯಪಾಲಿಸಿರುವ ಅನುಗ್ರಹಗಳನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿ; ಮತ್ತು ನೀವು ನನ್ನೊಂದಿಗೆ ಮಾಡಿದ್ದ ಒಪ್ಪಂದವನ್ನು ಪಾಲಿಸುವವರಾಗಿರಿ, ನಾನೂ ನಿಮ್ಮೊಂದಿಗಿನ ಒಪ್ಪಂದವನ್ನು ಪೂರ್ತಿಗೊಳಿಸುವೆನು. ನೀವು ನನ್ನೊಬ್ಬನನ್ನು ಮಾತ್ರವೇ ಭಯಪಡಿರಿ. ಇನ್ನು ನಾನು ಏನನ್ನು (ಮುಹಮ್ಮದ್ ರಿಗೆ) ಕಳುಹಿಸಿ ಕೊಟ್ಟಿರುವೆನೋ (ಆ ಕುರ್‌ಆನ್ ನಲ್ಲಿ) ಧೃಡವಾದ ವಿಶ್ವಾಸ ಇಟ್ಟುಕೊಳ್ಳಿ. ಅದು ನಿಮ್ಮ ಬಳಿ ಈಗಾಗಲೇ ಇರುವ (ತೋರಾ/ತೌರಾತ್ ನ ನಿರ್ದೇಶಗಳನ್ನು) ಸ್ಥಿರೀಕರಿಸುತ್ತದೆ. (ಮುಹಮ್ಮದ್ ರು ನಿಮಗೆ ಓದಿ ಕೇಳಿಸುತ್ತಿರುವ ಕುರ್‌ಆನ್ ಅನ್ನು) ನಿರಾಕರಿಸಿ ಬಿಡುವವರಲ್ಲಿ ನೀವೇ ಮೊದಲಿಗರಾಗದಿರಿ. ಮತ್ತು ನನ್ನ ವಚನಗಳನ್ನು ತುಚ್ಛವಾದ ಬೆಲೆಗೆ ಮಾರಿಕೊಳ್ಳ ಬೇಡಿ. ನನ್ನೊಬ್ಬನಿಗೆ ಮಾತ್ರವೇ ನೀವು ಭಯ ಭಕ್ತಿ ತೋರಿರಿ. (ಯಹೂದ್ಯರೇ,) ನೀವಿನ್ನು ಅಸತ್ಯವನ್ನು ಸತ್ಯದ ಮೇಲೆ ಹೊದಿಸಿ ಬಿಟ್ಟು, ಸತ್ಯವು (ವ್ಯಕ್ತವೇ ಆಗದ ರೀತಿಯಲ್ಲಿ) ಮರೆಮಾಚಿಸಿ ಬಿಡಬೇಡಿ, ನೀವು ತಿಳಿದೂ ತಿಳಿದೂ (ಹಾಗೆ ಮಾಡದಿರಿ). [40-42]

ನೀವು ‘ಸಲಾತ್’ (ಅರ್ಥಾತ ದೈನಂದಿನ ನಮಾಝ್) ಅನ್ನು ಸ್ಥಿರವಾಗಿ ಪಾಲಿಸಿರಿ ಮತ್ತು ‘ಝಕಾತ್’ (ಅರ್ಥಾತ್: ಕಡ್ಡಾಯಗೊಳಿಸಲಾದ ದಾನ) ಅನ್ನು ನೀಡುತ್ತಲಿರಿ. ಮತ್ತು (ಅಲ್ಲಾಹ್ ನ ಮುಂದೆ) ಶಿರ ಬಾಗುವವರ ಜೊತೆ ಸೇರಿಕೊಂಡು ನೀವೂ ಶಿರ ಬಾಗಿರಿ. [43]

ನೀವು ಸ್ವತಃ ತಮ್ಮನ್ನೇ ಕಡೆಗಣಿಸಿಕೊಂಡು ಇತರ ಜನರಿಗೆ (ಒಳಿತನ್ನು ಮೈಗೂಡಿಸಿಕೊಳ್ಳುವಂತೆ) ಆದೇಶ ನೀಡುತ್ತಿರುವಿರೇನು? ಮಾತ್ರವಲ್ಲ, ನೀವು (ಅಲ್ಲಾಹ್ ನ) ಗ್ರಂಥವನ್ನೂ ಓದಿಕೊಳ್ಳುತ್ತಿದ್ದೀರಿ! (ನೀವು ಮಾಡುತ್ತಿರುವುದಾದರೂ ಏನು ಎಂಬುದು) ನಿಮಗೆ ಅರ್ಥವಾಗುತ್ತಿಲ್ಲವೇ? [44]

ಪರಮಾವಧಿ ಸಹಿಷ್ಣುತೆ ಮತ್ತು ಪ್ರಾರ್ಥನೆಗಳ ಮೂಲಕ (ಅಲ್ಲಾಹ್ ನ) ಸಹಾಯವನ್ನು ಬಯಸಿರಿ. ತಮ್ಮ ಒಡೆಯ (ಅಲ್ಲಾಹ್) ನನ್ನು ಖಂಡಿತವಾಗಿಯೂ ಭೇಟಿಯಾಗಲಿದ್ದೇವೆ ಮತ್ತು ಅವನೆಡೆಗೇ ನಾವು ಮರಳಲಿದ್ದೇವೆ ಎಂದು ನಂಬುವ ವಿನಮ್ರ ಸ್ವಭಾವವುಳ್ಳವರ ಹೊರತು ಇತರಿರಿಗೆ ಹಾಗೆ (ಪರಮಾವಧಿಯ ಸಹಿಷ್ಣುತೆಯೊಂದಿಗೂ ಪ್ರಾರ್ಥನೆಗಳ ಮೂಲಕವೂ ಅಲ್ಲಾಹ್ ನ ಸಹಾಯವನ್ನು ಬಯಸುವುದು) ಕಠಿಣ ಕಾರ್ಯವೇ ಆಗಿದೆ. [45-46]

ಓ ಇಸ್ರಾಈಲ್ ವಂಶಸ್ಥರೇ (ಅರ್ಥಾತ್ ‘ನಬಿ ಯಾಕೂಬ್’ ರ ಸಂತತಿಯಾದ ಯಹೂದಿ ಜನಾಂಗದವರೇ)! ನಿಮ್ಮ ಮೇಲೆ ನಾನು ತೋರಿದ ಆ ಅನುಗ್ರಹವನ್ನು ನೆನಪಿಸಿಕೊಳ್ಳಿ; ಜಗತ್ತಿನ ಇತರ ಜನರ ಮೇಲೆ ನಿಮಗೆ ಶ್ರೇಷ್ಠತೆಯನ್ನು ದಯಪಾಲಿಸಿದ ನನ್ನ ಆ ಅನುಗ್ರಹ! ಯಾವೊಬ್ಬ ವ್ಯಕ್ತಿಯೂ ಮತ್ತೊಬ್ಬನಿಗೆ ಯಾವುದೇ ರೀತಿಯಲ್ಲಿ ನೆರವಾಗಲು ಅಸಾಧ್ಯವಾದ (ಪುನರುತ್ಥಾನದ) ಆ ದಿನದ ಕುರಿತು ನೀವು ಜಾಗರೂಕರಾಗಿರಿ! ಅಂದು ಯಾರ ಶಿಫಾರಸ್ಸನ್ನೂ ಸ್ವೀಕರಿಸಲಾಗದು; ಪರಿಹಾರ ಪಡೆದುಕೊಂಡು ದೋಷಮುಕ್ತಗೊಳಿಸಿ ಬಿಡುವ ಏರ್ಪಾಡೂ ಇರುವುದಿಲ್ಲ; ಮತ್ತು (ಅಪರಾಧಿಗಳು ಅಂದು) ಯಾರ/ಯಾವ ಸಹಾಯವನ್ನೂ ಪಡೆಯಲಾರರು. [47-48]

(ಯಹೂದ್ಯರೇ, ಹಿಂದೆ ಈಜಿಪ್ತ್ ಪ್ರದೇಶದಲ್ಲಿ ನೀವು ವಾಸ ಹೂಡಿದ್ದಾಗ ಅಲ್ಲಿ ಸರ್ವಾಧಿಕಾರಿಗಳಂತೆ ಮೆರೆದಿದ್ದ) ‘ಫಿರ್‍ಔನ್’ ಮತ್ತು ಬಳಗದವರ ದಾಸ್ಯದಿಂದ ನಿಮ್ಮನ್ನು ನಾವು ವಿಮೋಚನೆಗೊಳಿಸಿದ (ಆ ಘಟನೆಯನ್ನು) ಸ್ವಲ್ಪ ನೆನಪಿಸಿಕೊಳ್ಳಿ. ಅವರಾದರೋ ನಿಮ್ಮನ್ನು ಹೀನಾಯ ಸ್ವರೂಪದ ದಾರುಣ ಪೀಡನೆಗೆ ಗುರಿಪಡುಸುತ್ತಿದ್ದರು. ನಿಮ್ಮ ಗಂಡು ಮಕ್ಕಳನ್ನು ಕೊಂದು ಹಾಕುತ್ತಿದ್ದರು, ಮತ್ತು ನಿಮ್ಮ ಸ್ತ್ರೀಯರನ್ನು ಜೀವಿಸಿಕೊಳ್ಳಲು ಬಿಡುತ್ತಿದ್ದರು. ಆ ಸನ್ನಿವೇಶವು ನಿಮ್ಮ ಒಡೆಯನ ಕಡೆಯಿಂದ ನಿಮಗೊಂದು ಭಯಂಕರ ಪರೀಕ್ಷೆಯಾಗಿ ಎದುರಾಗಿತ್ತು. [49]

ನಿಮಗೋಸ್ಕರ ನಾವು ಸಮುದ್ರವನ್ನು ಸೀಳಿ (ದಾಟಿಕೊಳ್ಳಲು ದಾರಿ ಮಾಡಿಕೊಟ್ಟು ಆ ಮೂಲಕ) ನಿಮ್ಮನ್ನು ಪಾರು ಮಾಡಿ ರಕ್ಷಿಸಿದೆವು. ನಂತರ (ನಿಮ್ಮನ್ನು ಬೆನ್ನತ್ತಿ ಬಂದ) ಫಿರ್‍ಔನ್ ಮತ್ತು ಬಳಗದವರನ್ನು (ಸಮುದ್ರವನ್ನು ಕೂಡಿಕೊಳ್ಳುವಂತೆ ಮಾಡಿ) ಮುಳುಗಿಸಿ ಬಿಟ್ಟ ಆ ಸಂದರ್ಭವನ್ನು ನೆನಪಿಸಿಕೊಳ್ಳಿ. (ಆ ಪವಾಡವು ನಿಮ್ಮ ಕಣ್ಮುಂದೆಯೇ ಸಂಭವಿಸುತ್ತಿದ್ದಾಗ) ನೀವು ಅದನ್ನು ನೋಡುತ್ತಲೇ ಇದ್ದಿರಿ. [50]

(ನಬಿ) ‘ಮೂಸಾ’ ರನ್ನು ನಲ್ವತ್ತು ರಾತ್ರಿಗಳ ಕರಾರಿನ ಮೇಲೆ ನಾವು (ತೂರ್ ಬೆಟ್ಟಕ್ಕೆ ಕರೆಸಿಕೊಂಡ) ಸಂದರ್ಭವನ್ನೂ ಸಹ ನೆನಪಿಸಿಕೊಳ್ಳಿ. ‘ಮೂಸಾ’ ರವರು (ಕರಾರಿನಂತೆ ತೂರ್ ಬೆಟ್ಟಕ್ಕೆ) ಹೊರಟ ನಂತರ ನೀವು ಪುನಃ ಒಂದು ಕರುವನ್ನು ತಂದು (ಪೂಜಿಸತೊಡಗಿದಿರಿ)! ಹಾಗೆ ನೀವು ಮಹಾ ತಪ್ಪಿತಸ್ಥರಾಗಿ ಹೋದಿರಿ. ಆ ಕೃತ್ಯವನ್ನೆಸಗಿದ ಬಳಿಕವೂ, ನೀವು ನನಗೆ ಕೃತಜ್ಞತೆ ತೋರಿಕೊಳ್ಳಲೆಂದು, ಮತ್ತೊಮ್ಮೆ ನಾವು ನಿಮ್ಮನ್ನು ಕ್ಷಮಿಸಿ ಬಿಟ್ಟೆವು. [51-52]

(ಹಾಗೆ ಕರುವನ್ನು ಪೂಜಿಸಿ ಅಕ್ರಮಿಗಳಾಗಿಬಿಟ್ಟ) ನೀವು ನೇರ ಮಾರ್ಗವನ್ನು ಅನುಸರಿಸುವಂತಾಗಲು ನಾವು ‘ಮೂಸಾ’ ರಿಗೆ ಒಂದು ಗ್ರಂಥವನ್ನು, ಅಂದರೆ (ಸತ್ಯ – ಅಸತ್ಯಗಳನ್ನು ಸ್ಪಷ್ಟವಾಗಿ ಗುರುತಿಸಿ ಕೊಳ್ಳಲು ಅವಶ್ಯಕವಾದ ಮಾನದಂಡ) ‘ಫುರ್ಕಾನ್’ ಅನ್ನು ನೀಡಿದ ಸಂದರ್ಭವನ್ನು ಸ್ಮರಿಸಿಕೊಳ್ಳಿ. ಹಾಗೆಯೇ, ಮೂಸಾ ರು ತಮ್ಮ ಜನರನ್ನುದ್ದೇಶಿಸಿ, ಓ ನನ್ನ ಜನಾಂಗದವರೇ! ಕರುವನ್ನು ತಂದು (ಪೂಜಿಸಿಕೊಳ್ಳುವುದರ ಮೂಲಕ) ನೀವು ಸ್ವತಃ ನಿಮ್ಮ ಮೇಲೆಯೇ ಅಕ್ರಮವನ್ನೆಸಗಿಕೊಂಡಿದ್ದೀರಿ, ನೀವಿನ್ನು ನಿಮ್ಮ ಸೃಷ್ಟಿಕರ್ತನತ್ತ ತಿರುಗಿ (ಕ್ಷಮೆಯಾಚಿಸಿಕೊಳ್ಳಿರಿ), ಜೊತೆಗೇ (ಪ್ರಾಯಶ್ಚಿತ್ತಕ್ಕಾಗಿ) ನಿಮ್ಮಲ್ಲಿನ (ಅಕ್ರಮಿಗಳನ್ನು) ಸ್ವತಃ ನೀವೇ ವಧಿಸಿಬಿಡಿ, ಹಾಗೆ ಮಾಡಿಕೊಳ್ಳುವುದೇ ನಿಮ್ಮ ಸೃಷ್ಟಿಕರ್ತನ ದೃಷ್ಟಿಯಲ್ಲಿ ನಿಮಗೆ ಉತ್ತಮವಾದುದು – ಎಂದು ಹೇಳಿದ ಸಂದರ್ಭವನ್ನು ನೆನಪು ಮಾಡಿಕೊಳ್ಳಿ. (ಅದರಂತೆ ನೀವು ನಡೆದುಕೊಂಡಾಗ, ಅಲ್ಲಾಹ್ ನು) ನಿಮ್ಮ ಮೇಲೆ ಕೃಪೆ ತೋರಿದನು. ಅವನಾದರೋ ಅತಿಹೆಚ್ಚು ಕ್ಷಮಿಸುವವನೂ ಮಹಾ ಕರುಣಾಮಯಿಯೂ ಆಗಿರುವನು. [53-54]

ಓ ಮೂಸಾ! ಅಲ್ಲಾಹ್ ನನ್ನು ಪ್ರತ್ಯಕ್ಷವಾಗಿ (ಮುಖಾಮುಖಿ) ನೋಡಿಕೊಳ್ಳುವ ತನಕ ನಾವು ನಿಮ್ಮನ್ನು ನಂಬುವುದು ಸಾಧ್ಯವೇ ಇಲ್ಲ – ಎಂದು ನೀವು (ಮೂಸಾ ರೊಂದಿಗೆ ಖಡಾಖಂಡಿತ) ಹೇಳಿದ (ಆ ನಿಮಿಷವನ್ನು) ನೆನಪಿಸಿಕೊಳ್ಳಿ. ಆಗ, ನೀವು ನೋಡು-ನೋಡುತ್ತಿಂದ್ದಂತೆ ಭೀಕರ ಸ್ವರೂಪದ ಸಿಡಿಲೊಂದು ಬಂದು ನಿಮ್ಮನ್ನು ಬಲಿತೆಗೆದುಕೊಂಡಿತ್ತು! ತರುವಾಯ ನೀವು ನಮಗೆ ಕೃತಜ್ಞರಾಗಿರಲೆಂದು ಮರಣದ ನಂತರ ನಾವು ನಿಮ್ಮನ್ನು ಪುನಃ ಜೀವಂತಗೊಳಿಸಿದ್ದೆವು. [55-56]

(ನೆರಳಾಗಲೀ ಆಹಾರೋತ್ಪನ್ನಗಳಾಗಲೀ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದ ‘ಸೀನಾಯಿ’ ಪ್ರದೇಶದಲ್ಲಿ ನೀವು ನೆಲೆಸಿದ್ದಾಗ, ಓ ಯಹೂದ್ಯರೇ,) ನಾವು ನಿಮಗೆ ಮೋಡಗಳ ನೆರಳನ್ನು ನೀಡಿದೆವು; ‘ಮನ್ನ್’ ಹಾಗೂ ‘ಸಲ್ವಾ’ (ಎಂಬ ಎರಡು ಬಗೆಯ ಭೋಜನ) ವನ್ನು ನಿಮಗೆ ಕಳುಹಿಸಿಕೊಟ್ಟು, ನಾವು ದಯಪಾಲಿಸಿದ ಪಾವನ ತಿನಿಸುಗಳನ್ನು ತಿಂದುಕೊಳ್ಳಿ (ಎಂದೆವು). ಆದರೆ (ಓ ಯಹೂದ್ಯರೇ, ನಿಮ್ಮ ಪೂರ್ವಜರು) ಅನ್ಯಾಯ ಮಾಡಿರುವುದು ನಮಗಲ್ಲ, ಬದಲಾಗಿ ಅವರು (ನಮಗೆ ಅವಿಧೇಯತೆ ತೋರಿ) ಸ್ವತಃ ತಮಗೆ ತಾವೇ ಕೇಡನ್ನು ಮಾಡಿಕೊಂಡವರು. [57]

ನೀವು ಇನ್ನು ಆ ನಾಡಿನೊಳಗೆ (ಅರ್ಥಾತ್: ಇಂದಿನ ಜೆರುಸಲೇಮ್ ಪ್ರದೇಶ) ಪ್ರವೇಶಿಸಿಕೊಂಡು, ನಿಮ್ಮ ಇಚ್ಛೆಯನುಸಾರ ಧಾರಾಳವಾಗಿ ಅಲ್ಲಿಯ (ಆಹಾರೋತ್ಪನ್ನಗಳನ್ನು) ತಿಂದುಂಡುಕೊಂಡು ಇರಿ. (ನಾಡಿನ) ಪ್ರವೇಶದ್ವಾರವನ್ನು (ವಿನಯಪೂರ್ವಕವಾಗಿ) ತಲೆಬಾಗಿಕೊಂಡು, ‘ಹಿತ್ತಃ’ (ಅರ್ಥಾತ್ ನಮ್ಮೊಡೆಯಾ, ನಮ್ಮನ್ನು ಕ್ಷಮಿಸಬೇಕು) ಎಂದು ಪ್ರಾರ್ಥಿಸುತ್ತಾ ದಾಟಿಕೊಳ್ಳಿ. ನಿಮ್ಮ ಪಾಪಕೃತ್ಯಗಳನ್ನು ನಾವು ಮನ್ನಿಸಿ ಬಿಡುವೆವು ಹಾಗೂ ಉತ್ತಮ ನಡವಳಿಕೆಯುಳ್ಳವರಿಗೆ ನೀಡುತ್ತಿರುವುದನ್ನು ಮತ್ತಷ್ಟು ಹೆಚ್ಚಿಸುವೆವು – ಎಂದು ನಾವು ಹೇಳಿದ್ದನ್ನು ಜ್ಞಾಪಿಸಿಕೊಳ್ಳಿ. [58]

ಆದರೆ, (ನಿಮ್ಮಲ್ಲಿನ) ಅಕ್ರಮವೆಸಗಿದ ಜನರು ಅವರಿಗೆ ನೀಡಲಾಗಿದ್ದ ಆದೇಶಗಳನ್ನು (ತಾವು ಬಯಸಿಕೊಂಡ ಅರ್ಥ ಬರುವಂತೆ) ಬೇರೆಯೇ ಮಾತಿನೊಂದಿಗೆ ಬದಲಿಸಿಕೊಂಡರು! ಮಾತು ಮೀರುತ್ತಿದ್ದ ಕಾರಣ ಅಕ್ರಮವೆಸಗಿದ ಅವರ ಮೇಲೆ ಆಕಾಶದಿಂದ ಶಿಕ್ಷೆಯೊಂದನ್ನು ನಾವು ಎರಗಿಸಿಬಿಟ್ಟೆವು. [59]

ಮೂಸಾ ತಮ್ಮ ಜನಾಂಗದವಿರಿಗಾಗಿ (ನಮ್ಮೊಂದಿಗೆ) ನೀರನ್ನು ಬಯಸಿಕೊಂಡಾಗ, ನಿಮ್ಮ (ಕೈಯಲ್ಲಿರುವ) ಊರುಗೋಲನ್ನು ಆ ಬಂಡೆಗೆ ಹೊಡೆಯಿರಿ ಎಂದು ನಾವು ಹೇಳಿದ್ದ ಸಂದರ್ಭವನ್ನು ನೆನಪಿಸಿಕೊಳ್ಳಿ. ಆ ಕೂಡಲೇ ಬಂಡೆಯಿಂದ ನೀರಿನ ಹನ್ನೆರಡು ಚಿಲುಮೆಗಳು (ಪವಾಡ ಸದೃಶ) ಹೊರಚಿಮ್ಮಿ ಹರಿಯತೊಡಗಿದ್ದವು. (ಮೂಸಾ ರ ಜನಾಂಗಕ್ಕೆ ಸೇರಿದ) ಪ್ರತಿಯೊಂದು ಗೋತ್ರದವರೂ ತಾವು ನೀರು ಪಡೆದುಕೊಳ್ಳ ಬೇಕಾದ ಚಿಲುಮೆಯನ್ನು ಗುರುತಿಸಿಕೊಂಡಿದ್ದರು. ಅಲ್ಲಾಹ್ ನು ದಯಪಾಲಿಸಿದ ಆಹಾರ ಪದಾರ್ಥಗಳಿಂದ ತಿನ್ನಿರಿ ಹಾಗೂ ಕುಡಿಯಿರಿ; ಮತ್ತು ಭೂಮಿಯಲ್ಲಿ ವಿನಾಶಕಾರಿ ಕ್ಷೋಭೆಯನ್ನು ಹರಡುವವರಾಗಿ ನಡೆಯದಿರಿ – (ಎಂದು ನಾವು ಆಗ ಆದೇಶಿಸಿದ್ದೆವು.) [60]

ಓ ಮೂಸಾ, ಒಂದೇ ಬಗೆಯ ಆಹಾರ ಸೇವನೆಯನ್ನು ನಾವು ಸಹಿಸಿಕೊಳ್ಳಲಾರೆವು. ಆದ್ದರಿಂದ ಭೂಮಿಯ ಬೆಳೆಗಳಾದ ಸೊಪ್ಪು, ಸೌತೆ, ಬೆಳ್ಳುಳ್ಳಿ/ಗೋಧಿ, ತೊಗರಿ ಬೇಳೆ ಮತ್ತು ಈರುಳ್ಳಿ (ಮುಂತಾದವುಗಳನ್ನು) ನಮಗಾಗಿ ಭೂಮಿಯು ಉತ್ಪಾದಿಸುವಂತಾಗಲು ನಿಮ್ಮ ಒಡೆಯನನ್ನು ಪ್ರಾರ್ಥಿಸಿಕೊಳ್ಳಿ – ಎಂದು ನೀವು ಹೇಳಿದಾಗ, ನೀವು ಉತ್ತಮವಾದ (ಅಹಾರ ಪದಾರ್ಥ) ವನ್ನು ಕೆಳಮಟ್ಟದವುಗಳೊಂದಿಗೆ ಬದಲಿಸಿಕೊಳ್ಳಲು ಇಚ್ಛಿಸುತ್ತಿರುವಿರೇನು? ಹಾಗಾದರೆ ನೀವು (ಯಾವುದಾದರೊಂದು) ಪಟ್ಟಣವನ್ನು ಪ್ರವೇಶಿಸಿ ವಾಸ ಮಾಡಿಕೊಳ್ಳಿ, ಅಲ್ಲಿ ನಿಮಗೆ ನೀವು ಕೇಳಿದ ವಸ್ತುಗಳೆಲ್ಲವೂ ಇರುವುದು ಎಂದು (ಆಗ ಮೂಸಾ) ಉತ್ತರಿಸಿದ್ದುದನ್ನು ನೆನಪಿಸಿಕೊಳ್ಳಿ. ಕೊನೆಗೆ ಅಪಮಾನ ಮತ್ತು ದಾರಿದ್ರ್ಯವನ್ನು ಅವರ ಮೇಲೆರಗಿಸಿ ಬಿಡಲಾಯಿತು, ಮತ್ತು ಅವರು ಅಲ್ಲಾಹ್ ನ ಪ್ರಕೋಪಕ್ಕೆ ತುತ್ತಾಗಿ ಬಿಟ್ಟರು. ಏಕೆಂದರೆ ಅವರು ಅಲ್ಲಾಹ್ ನ ‘ಆಯತ್’ ಗಳನ್ನು ಧಿಕ್ಕರಿಸುವವರಾಗಿದ್ದರು, ಅನ್ಯಾಯವಾಗಿ ಪ್ರವಾದಿಗಳನ್ನು ಕೊಲ್ಲುತ್ತಿದ್ದರು ಹಾಗೂ ಅಲ್ಲಾಹ್ ನಿಗೆ ಅವಿಧೇಯರೂ (ಅವನ) ಆಜ್ಞೆ ಮೀರುವವರೂ ಅಗಿದ್ದ ಕಾರಣಕ್ಕಾಗಿ (ಅಪಮಾನ ಮತ್ತು ದಾರಿದ್ರ್ಯದ ಹೊಡೆತವು ಅವರಿಗೆ ಬಿದ್ದಿತ್ತು). [61]

ಇನ್ನು ‘ಮೂಮಿನ್’ ಗಳಾದವರು, ಯಹೂದಿಗಳಾದವರು, ಕ್ರೈಸ್ತರು ಮತ್ತು ಸಾಬಿಯನ್ನರ ಪೈಕಿ ಅಲ್ಲಾಹ್ ನಲ್ಲಿಯೂ ಅಂತಿಮ ದಿನದಲ್ಲಿಯೂ ಧೃಡವಾದ ವಿಶ್ವಾಸವಿರಿಸಿಕೊಂಡು ಒಳ್ಳೆಯದನ್ನೇ ಮಾಡಿಕೊಂಡಿದ್ದವರಿಗೆ ಖಂಡಿತವಾಗಿಯೂ ಅವರ ಒಡೆಯನ/ಪರಿಪಾಲಕನ ಬಳಿ ಅವರಿಗೆ ಸಂಭಾವನೆಗಳು ಇರುವುದು. ಅಂಥವರು ಅಂಜಿಕೊಳ್ಳಬೇಕಾಗಿಲ್ಲ; ದುಃಖಿಸುವ ಅವಶ್ಯಕತೆಯೂ ಅವರಿಗೆ ಇರುವುದಿಲ್ಲ. [62]

(ಓ ಇಸ್ರಾಈಲ್ ವಂಶಸ್ಥರೇ,) ನಾವು ‘ತೂರ್’ ಬೆಟ್ಟವನ್ನು ನಿಮ್ಮ ಮೇಲಕ್ಕೆ ಎತ್ತಿ ಹಿಡಿದುಕೊಂಡು ನಿಮ್ಮಿಂದ ಕರಾರನ್ನು ಪಡೆದುಕೊಂಡ (ಆ ಭವ್ಯ ಸನ್ನಿವೇಶವನ್ನು ಒಮ್ಮೆ) ನೆನಸಿಕೊಳ್ಳಿ. ನಾವು ನಿಮಗೆ ನೀಡುತ್ತಿರುವ (ಗ್ರಂಥ ತೌರಾತ್/ತೋರಾ ವನ್ನು) ಭದ್ರವಾಗಿ ಹಿಡಿದುಕೊಂಡು, ಅದರಲ್ಲಿರುವ ನಿರ್ದೇಶಗಳನ್ನು ಮನದಟ್ಟುಮಾಡಿಕೊಂಡು (ಅದರಂತೆ ನಡೆದುಕೊಂಡರೆ) ನೀವು ಧರ್ಮದ ವಿಷಯದಲ್ಲಿ ಭಯ-ಭಕ್ತಿ ಉಳ್ಳವರಾಗಬಹುದು (ಎಂದಿದ್ದೆವು). ಆದರೆ, (ಅಂತಹ ಮಹತ್ವದ ಕರಾರಿನ) ನಂತರ ನೀವು ಅದರಿಂದ ಮುಖ ತಿರುಗಿಸಿಕೊಂಡಿರಿ! ಒಂದು ವೇಳೆ ಅಲ್ಲಾಹ್ ನ ಕೃಪೆ ಮತ್ತು ಅವನ ಅನುಗ್ರಹ ನಿಮ್ಮ ಮೇಲೆ ಇರದೇ ಹೋಗಿದ್ದರೆ ನಷ್ಟಹೊಂದಿದವರ ಪೈಕಿ ನೀವು ಸೇರಿಬಿಡುತ್ತಿದ್ದುದು ಖಚಿತ. [63-64]

(ಇಸ್ರಾಈಲ್ ಸಂತತಿಯವರೇ,) ನಿಮ್ಮ ಪೈಕಿ ‘ಸಬ್ತ್’ (ಅರ್ಥಾತ್: ಬೈಬಲ್ ನಲ್ಲಿ ‘ಸಬ್ಬತ್’ ಎಂದು ಉಲ್ಲೇಖಿಸಲಾದ ಶನಿವಾರ) ದಿನದ ಕಾನೂನು-ಕಾಯ್ದೆಗಳನ್ನು ಮೀರಿ ನಡೆದವರ ವಿಷಯವನ್ನು ನೀವು ತಿಳಿದುಕೊಂಡೇ ಇದ್ದೀರಿ. ನೀವಿನ್ನು (ಎಲ್ಲೆಡೆಗಳಿಂದಲೂ/ಎಲ್ಲರಿಂದಲೂ) ನಿಂದಿಸಲ್ಪಡುವ/ಧಿಕ್ಕರಿಸಲ್ಪಡುವ ನಿಕೃಷ್ಟ ಕೋತಿಗಳಾಗಿ ಬಿಡಿರಿ ಎಂದು ನಾವು ಅವರಿಗೆ ಹೇಳಿದ್ದೆವು. (ಹಾಗೆ ಶಪಿಸಲ್ಪಟ್ಟ ಅವರನ್ನು) ಅವರ ಕಾಲದಲ್ಲಿದ್ದ ಜನರಿಗೂ ನಂತರ ಬರಲಿರುವವರಿಗೂ ಒಂದು ದೃಷ್ಟಾಂತವನ್ನಾಗಿಯೂ; ಅಲ್ಲಾಹ್ ನ ಭಕ್ತಿಯುಳ್ಳವರಿಗೆ ಒಂದು ನೀತಿಪಾಠವಾಗಿಯೂ ಮಾಡಿದೆವು. [65-66]

ನೀವೀಗ ಹಸುವೊಂದನ್ನು (ಯಹೂದಿ ಧರ್ಮವಿಧಿ ಪ್ರಕಾರ ಕತ್ತು ಕೊಯ್ಯುವ ಮೂಲಕ) ವಧಿಸಬೇಕು ಎಂದು ಅಲ್ಲಾಹ್ ನು ನಿಮ್ಮನ್ನು ಆಜ್ಞಾಪಿಸಿದ್ದಾನೆ ಎಂದು ಮೂಸಾ ತಮ್ಮ ಜನಾಂಗದವರೊಂದಿಗೆ ಹೇಳಿದಾಗ, (ಯಾವ ನಿರ್ಧಿಷ್ಟ ಹಸುವಿನ ಕುರಿತಾಗಿತ್ತು ಅಲ್ಲಾಹ್ ನ ಆ ಆದೇಶ ಎಂಬುದು ಚೆನ್ನಾಗಿ ತಿಳಿದುಕೊಂಡಿದ್ದ) ಇಸ್ರೇಲಿಯರು, ನೀವು ನಮ್ಮನ್ನು ಗೇಲಿ ಮಾಡುತ್ತಿರುವಿರೇನು? ಎಂದು (ಮೂಸಾ ರೊಡನೆ) ಕೇಳಿದರು. ಆಗ ಮೂಸಾ, (ನಿಮ್ಮಂತಹ) ತಿಳಿಗೇಡಿಗಳ ಸಾಲಿಗೆ ನಾನು ಸೇರಿ ಹೋಗದಂತೆ ಅಲ್ಲಾಹ್ ನ ಮೊರೆಹೋಗುತ್ತೇನೆ ಎಂದು ಉತ್ತರಿಸಿದರು. [67]

ಆ ಹಸು ಹೇಗಿದೆ ಎಂಬುದನ್ನು ನಮಗೆ ಸ್ವಲ್ಪ ವಿವರವಾಗಿ ತಿಳಿಸುವಂತೆ ನಮಗೋಸ್ಕರ ನೀವು ನಿಮ್ಮ ಒಡೆಯನನ್ನು ಕೇಳಬೇಕು ಎಂದು ಮೂಸಾ ರೊಡನೆ ಇಸ್ರೇಲಿಯರು ಹೇಳಿದರು. ಅದು ಮುದಿವಯಸ್ಸಿನ ದನವೋ ಅಥವಾ ತೀರಾ ಎಳೆಯ ಕರುವೋ ಅಲ್ಲ; ಬದಲಾಗಿ ಅವೆರಡರ ನಡುವಿನ, ತಾರುಣ್ಯದಲ್ಲಿರುವ, ಹಸುವಾಗಿದೆ ಎಂದು ಅಲ್ಲಾಹ್ ನು ಹೇಳುತ್ತಾನೆ; ಇನ್ನಾದರೂ ಏನನ್ನು ನಿಮಗೆ ಆಜ್ಞಾಪಿಸಲಾಗಿದೆಯೋ ಅದನ್ನು ನೀವು ಪಾಲಿಸುವವರಾಗಿರಿ ಎಂದು ಮೂಸಾ ಹೇಳಿದರು. [68]

(ಹಸುವಿನ ಬಗ್ಗೆ ಅಷ್ಟೊಂದು ನಿಖರವಾದ ಮಾಹಿತಿ ಸಿಕ್ಕ ಬಳಿಕವೂ ಇಸ್ರೇಲಿಯರು ಮೂಸಾ ರೊಂದಿಗೆ) ಆ ಹಸುವಿನ ಮೈಬಣ್ಣ ಯಾವುದು ಎಂದು ನಮಗೆ ಸರಿಯಾಗಿ ತಿಳಿಯಪಡಿಸುವಂತೆ ನಿಮ್ಮ ಒಡೆಯನನ್ನು ನಮ್ಮ ಪರವಾಗಿ ಕೇಳಿಕೊಳ್ಳಿ ಎಂದರು. ನಿಜವಾಗಿಯೂ ಆ ಹಸು ಹಳದಿ ಬಣ್ಣದ್ದಾಗಿದೆ, ನೋಡುವವರ ಮನಸ್ಸಿಗೆ ಮುದ ನೀಡುವ ಸುಂದರ ಹಳದಿ ಮೈಬಣ್ಣ ಹೊಂದಿರುವ ಹಸುವದು ಎಂದು ಅವನು (ಅಲ್ಲಾಹ್ ನು) ಹೇಳುತ್ತಾನೆ ಎಂದು ಮೂಸಾ ವಿವರಿಸಿದರು. [69]

(ಓ ಮೂಸಾ!) ನಿಜವಾಗಿಯೂ ಹಸುಗಳು (ಪರಸ್ಪರ ಹೋಲುವುದರಿಂದ ಅದರ ಅಯ್ಕೆಯಲ್ಲಿ) ನಾವು ಗೊಂದಲದಲ್ಲಿ ಸಿಲುಕಿದ್ದೇವೆ; ಆದ್ದರಿಂದ ಆ ಹಸು ಯಾವುದು ಎಂದು (ಮತ್ತಷ್ಟು) ವಿವರಣೆ ನೀಡುವಂತೆ ನಿಮ್ಮ ಒಡೆಯನನ್ನು (ಮತ್ತೊಮ್ಮೆ) ನಮ್ಮ ಪರವಾಗಿ ನೀವು ಕೇಳಿಕೊಳ್ಳಿ, ಅಲ್ಲಾಹ್ ನು ಇಚ್ಛಿಸಿದರೆ ನಾವು ಖಂಡಿತ ಆ (ನಿರ್ಧಿಷ್ಟ ಹಸುವನ್ನು ಗುರುತಿಸಿಕೊಳ್ಳುವ) ದಾರಿ ಕಂಡುಕೊಳ್ಳುವೆವು, ಎಂದು ಇಸ್ರೇಲಿಯರು ಹೇಳಿದರು. [70]

ಆ ಹಸುವು ಭೂಮಿಯನ್ನು ಉಳಲು ದುಡಿಯದ, ವ್ಯವಸಾಯಕ್ಕಾಗಿ ನೀರೆತ್ತುವ ಕೆಲಸ ಮಾಡಿರದ, ಸುಸ್ಥಿತಿಯಲ್ಲಿರುವ, ಒಂದೇ ಬಣ್ಣದಿಂದ ಕೂಡಿದ, ಕಲೆರಹಿತ ಮೈಯನ್ನು ಹೊಂದಿರುವ ಹಸುವಾಗಿದೆ ಎಂದು ಅಲ್ಲಾಹ್ ನು ಹೇಳುತ್ತಾನೆ – ಎಂದು ಮೂಸಾ ಹೇಳಿದರು. (ನುಣುಚಿಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಬಂದು ಬಿಟ್ಟಾಗ,) ಈಗ ನೀವು ಸರಿಯಾದ ಮಾಹಿತಿಯೊಂದಿಗೆ ಬಂದಿರುವಿರಿ ಎಂದು ಹೇಳಿದ ಇಸ್ರೇಲಿಯರು (ತಾವು ಅದುವರೆಗೂ ಪೂಜಿಸುತ್ತಿದ್ದ ಆ ನಿರ್ಧಿಷ್ಟ) ಹಸುವನ್ನು ಕೊನೆಗೂ ಕತ್ತು ಕೊಯ್ಯುವ ಮೂಲಕ ವಧಿಸಿಬಿಟ್ಟರು, ಆದರೆ (ಮನಸ್ಸಾರೆ ಅಲ್ಲಾಹ್ ನ ಆಜ್ಞಾನುಸರಣೆ) ಮಾಡುತ್ತಿರುವವರಂತೆ ಅವರು ತೋರುತ್ತಿರಲಿಲ್ಲ. [71]

(ಇಸ್ರೇಲಿಯರೇ,) ನೀವು ಒಬ್ಬಾತನನ್ನು ಕೊಲೆಗೈದು ನಂತರ ಅದರ ದೋಷಾರೋಪಣೆಯನ್ನು ಪರಸ್ಪರ ಹೊರಿಸುತ್ತಿದ್ದ ಸಂದರ್ಭವು ನಿಮಗೆ ನೆನಪಿದೆ. (ಆ ಕುರಿತು) ನೀವು ಬಚ್ಚಿಟ್ಟಿದ್ದ ಗುಟ್ಟನ್ನು ಅಲ್ಲಾಹ್ ನು ಬಹಿರಂಗ ಪಡಿಸಲೇ ಬೇಕಿತ್ತು. ಅದಕ್ಕಾಗಿ, ನೀವಿನ್ನು (ವಧಿಸಲ್ಪಟ್ಟ ಹಸುವಿನ ಮಾಂಸದ) ತುಂಡೊಂದರಿಂದ (ಕೊಲೆಯಾದ ವ್ಯಕ್ತಿಯ) ಮೃತದೇಹಕ್ಕೆ ಬಡಿಯಿರಿ ಎಂದು ನಾವು ಆಜ್ಞಾಪಿಸಿದ್ದೆವು. ಮೃತಪಟ್ಟವರನ್ನು ಅಲ್ಲಾಹ್ ನು ಇದೇ ರೀತಿ ಜೀವಂತಗೊಳಿಸುತ್ತಾನೆ, ಹಾಗೂ ನಿಮಗೆ ಚೆನ್ನಾಗಿ ಮನವರಿಕೆಯಾಗಲು ಅಲ್ಲಾಹ್ ನು ತನ್ನ (ಅಂತಹ) ಕುರುಹು/ಸಂಕೇತಗಳನ್ನು ನಿಮಗೆ ತೋರಿಸಿಕೊಡುತ್ತಾನೆ. [72-73]

(ಅಂತಹ ದಿವ್ಯ ಕುರುಹುಗಳನ್ನು ಕಣ್ಣಾರೆ ಕಂಡುಕೊಂಡ) ಬಳಿಕ ನಿಮ್ಮ ಹೃದಯಗಳು ಕಠೋರವಾಗಿ ಹೋದವು. ಕಲ್ಲಿನಂತೆ ಕಠೋರ; ಅಲ್ಲ, ಕಲ್ಲಿಗಿಂತಲೂ ಹೆಚ್ಚು ಕಠೋರ! ಏಕೆಂದರೆ, ಕಲ್ಲುಗಳ ಪೈಕಿ ಕೆಲವು ಕಲ್ಲುಗಳಿಂದ ಚಿಲುಮೆಗಳು ಹೊರ ಚಿಮ್ಮುತ್ತವೆ. ಇನ್ನು ಕೆಲವು ಕಲ್ಲುಗಳು ಸೀಳಿಕೊಂಡು ಅದರಿಂದ ನೀರು ಹರಿಯ ತೊಡಗುತ್ತದೆ, ಮತ್ತೆ ಕೆಲವು ಕಲ್ಲುಗಳು ಅಲ್ಲಾಹ್ ನ ಭೀತಿಯಿಂದ ಕುಸಿದು ಬೀಳುವುದುಂಟು! (ಇಸ್ರೇಲಿಯರೇ, ನಿಮಗೆ ನೆನಪಿರಲಿ) ನೀವು ಏನೆಲ್ಲಾ ಮಾಡುತ್ತಿರುವಿರೋ ಅದರ ಬಗ್ಗೆ ಅಲ್ಲಾಹ್ ನಿಗೆ ತಿಳಿಯದೇ ಹೋಗಿಲ್ಲ! [74]

(ಮುಸ್ಲಿಮರೇ,) ಯಹೂದ್ಯರು ನಿಮ್ಮ ಮಾತನ್ನು ನಂಬಿ ಬಿಡುತ್ತಾರೆ ಎಂಬ ನಿರೀಕ್ಷೆಯಲ್ಲಿ ನೀವಿರುವಿರೇನು? ಅವರಲ್ಲಿಯ ಒಂದು ಪಂಗಡಕ್ಕೆ ಸೇರಿದವರಂತು (ಅರ್ಥಾತ್ ರಬ್ಬಿಗಳು) ಅಲ್ಲಾಹ್ ನ ವಚನಗಳನ್ನು ಕೇಳಿ, ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅನಂತರ ಅದರ ತಾತ್ಪರ್ಯವನ್ನು ಬೇರೆಯೇ ರೀತಿಯ ಅರ್ಥ ಕೊಡುವಂತೆ ಪರಿವರ್ತಿಸಿ ಬಿಡುತ್ತಿದ್ದಾರೆ. ಮತ್ತು ಅವರಿಗೆ (ತಾವು ಅರ್ಥವನ್ನು ತಿರುಚಿತ್ತಿದ್ದೇವೆ ಎಂಬುದು ಚೆನ್ನಾಗಿ) ತಿಳಿದೇ ಇದೆ. [75]

(ಮುಹಮ್ಮದ್ ಪೈಗಂಬರರಲ್ಲಿ) ವಿಶ್ವಾಸವಿಟ್ಟವರನ್ನು ಸಂಧಿಸಿದಾಗ ನಾವೂ (ಮುಹಮ್ಮದ್ ರನ್ನೂ, ಕುರ್‌ಆನ್ ಅನ್ನೂ) ನಂಬುತ್ತೇವೆ ಎಂದು ಯಹೂದ್ಯರು ಹೇಳಿಕೊಳ್ಳುತ್ತಾರೆ. ಆದರೆ ಅವರು ರಹಸ್ಯವಾಗಿ ಪರಸ್ಪರರನ್ನು ಭೇಟಿಯಾದಾಗ, ನಿಮಗೆ ಅಲ್ಲಾಹ್ ನು (ತೋರಾ/ತೌರಾತ್ ನಲ್ಲಿ ಮುಹಮ್ಮದ್ ಪೈಗಂಬರರ ಬಗ್ಗೆ, ಇಸ್ಲಾಮ್ ನ ಬಗ್ಗೆ) ತಿಳಿಯಬಡಿಸಿರುವ ಅಂಶಗಳನ್ನು ನೀವು (ಮುಹಮ್ಮದ್ ಪೈಗಂಬರರ ಅನುಯಾಯಿಗಳಿಗೆ) ಬಹಿರಂಗಪಡಿಸಿ, ಅವರು ಅದನ್ನೇ ನಿಮ್ಮ ವಿರುದ್ಧ ನಿಮ್ಮ ಒಡೆಯನ ಸನ್ನಿಧಿಯಲ್ಲಿ ಪ್ರಮಾಣವಾಗಿ ಬಳಸುವಂತೆ ಮಾಡುವಿರೇನು? ನೀವು ಬುದ್ಧಿ ಉಪಯೋಗಿಸುವುದಿಲ್ಲವೇಕೆ? (ಎಂದು ಪರಸ್ಪರರನ್ನು ದೂಷಿಸಿಕೊಳ್ಳುತ್ತಾರೆ). ಅವರು ಬಚ್ಚಿಡುವ ವಿಷಯಗಳನ್ನೂ ಬಹಿರಂಗ ಪಡಿಸಿಕೊಳ್ಳುವುದನ್ನೂ ಅಲ್ಲಾಹ್ ನು ಚೆನ್ನಾಗಿ ಬಲ್ಲನು ಎಂಬುದು ಆ ಯಹೂದ್ಯರಿಗೆ ತಿಳಿಯದೇನು? [76-77]

ಅವರಲ್ಲಿನ ಇನ್ನೊಂದು ಗುಂಪಿಗೆ (ಅರ್ಥಾತ್ ಯಹೂದ್ಯರ ಸಮಾನ್ಯ ಜನರಿಗೆ) ಓದು ಬರಹ ಬಾರದು. ಕೇವಲ ಕೆಲವು ಪೊಳ್ಳು ಕಾಮನೆಗಳ/ನಿರೀಕ್ಷೆಗಳ ಹೊರತು ಅವರಿಗೆ ಗ್ರಂಥದ (ಅರ್ಥಾತ್ ತೋರಾ ದಲ್ಲಿ ನಿರ್ದೇಶಿಸಲಾದ ಶರೀಅತ್ ನ ಬಗೆಗಿನ ನಿಜವಾದ) ಜ್ಞಾನವಿಲ್ಲ. (ಧಾರ್ಮಿಕ ವಿಧಿಗಳ ನಿರ್ಣಯದಲ್ಲಿ ರಬ್ಬಿಗಳು ನಂಬಿಸಿ ಬಿಟ್ಟ) ಊಹಾಪೋಹಗಳನ್ನಷ್ಟೇ ಅವರು ಆಶ್ರಯಿಸಿ ಕೊಂಡಿರುವರು. [78]

ಧಾರ್ಮಿಕ ನಿಯಮಗಳನ್ನು (ಅರ್ಥಾತ್: ಶರೀಅತ್/ಕಿತಾಬ್) ತಾವೇ ಸ್ವತಃ ಬರೆದು ಅದರ ಮೂಲಕ ಒಂದಿಷ್ಟು ಸಂಪಾದಿಸಿಕೊಳ್ಳುವ ಸಲುವಾಗಿ, ಇದು ಸಾಕ್ಷಾತ್ ಅಲ್ಲಾಹ್ ನ ವತಿಯಿಂದಲೇ ಬಂದ ನಿಯಮ/ಶರೀಅತ್ ಆಗಿದೆ ಎಂದು ಹೇಳಿ (ಜನಸಾಮಾನ್ಯರನ್ನು ನಂಬಿಸುವ ರಬ್ಬಿಗಳಿಗೆ) ಕೇಡು ಕಾದಿದೆ. ಅವರ ಕೈಗಳು ಏನನ್ನು ಬರೆದಿವೆಯೋ ಅದರಿಂದಲೂ ಅವರಿಗೆ ಕೆಡುಕಿದೆ, ಅವರ ಆ ಸಂಪಾದನೆಯಿಂದಲೂ ಅವರಿಗೆ ಕೇಡು ಕಾದಿದೆ. [79]

ಕೇವಲ ಎಣಿಕೆಯ ಕೆಲವು ದಿನಗಳ ಹೊರತು ನರಕದ ಬೆಂಕಿಯು ನಮ್ಮನ್ನು (ಸದಾಕಾಲ) ಸುಡಲಾರದು ಎಂದು ಯಹೂದ್ಯರು (ತಮ್ಮ ಪೊಳ್ಳು ಕಾಮನೆಗಳ/ನಿರೀಕ್ಷೆಗಳ ಅಧಾರದಲ್ಲಿ) ವಾದಿಸುತ್ತಾರೆ. (ಆದರೆ, ಓ ಮುಹಮ್ಮದ್,) ನೀವು ಕೇಳಿರಿ; (ಯಹೂದ್ಯರೇ,) ಅಲ್ಲಾಹ್ ನಿಂದ ಅಂತಹ ಒಂದು ಕರಾರನ್ನು – ಅವನಿಗೆ ಮುರಿಯಲು ಸಾಧ್ಯವೇ ಇರದಂತಹ ಒಂದು ಕರಾರನ್ನು – ನೀವು ಅವನಿಂದ ಪಡೆದುಕೊಂಡಿರುವಿರೇನು? ಅಲ್ಲಾಹ್ ನ ಬಗ್ಗೆ ನಿಮಗೆ ತಿಳಿಯದೇ ಇರುವುದನ್ನು ಅವನ ಮೇಲೆ ಆರೋಪಿಸಿ ಬಿಡುವಿರೇನು? ಏಕೆ ಸುಡಲಾರದು? ದುಷ್ಕೃತ್ಯಗಳನ್ನು ಮಾಡುವವನನ್ನು ಅವನದೇ ಪಾಪಗಳು (ಎಲ್ಲೆಡೆಗಳಿಂದ) ಆವರಿಸಿಕೊಳ್ಳುತ್ತದೆ. ಅಂಥವರೇ ನರಕದ ಬೆಂಕಿಯ ಸಂಗಾತಿಗಳು; ಅವರು ಸದಾಕಾಲ ಅದರಲ್ಲೇ ಬಿದ್ದುಕೊಂಡಿರುವರು. ಇನ್ನು ಯಾರು (ಅಲ್ಲಾಹ್ ನ ಏಕತೆ ಮತ್ತು ಅವನ ಪ್ರಭುತ್ವ, ಕುರ್‌ಆನ್ ಸಾರುವ ಸಂದೇಶ, ಮುಹಮ್ಮದ್ ರ ದೌತ್ಯವೇ ಮುಂತಾದ ವಿಷಯಗಳಲ್ಲಿ) ಪ್ರಬಲವಾದ ವಿಶ್ವಾಸವನ್ನು ಹೊಂದಿರುತ್ತಾರೋ ಹಾಗೂ (ಎಲ್ಲರಿಗೂ) ಒಳ್ಳೆಯದನ್ನೇ ಮಾಡುತ್ತಿರುತ್ತಾರೋ ಅವರೇ ಸ್ವರ್ಗೋದ್ಯಾನದ ಒಡನಾಡಿಗಳು, ಎಂದೆಂದಿಗೂ ಅದರಲ್ಲೇ ನೆಲೆಸುವವರು. [80-82]

ನಾವು ಇಸ್ರಾಈಲರ ಸಂತತಿಯಿಂದ ಸಧೃಡವಾದ ಒಂದು ಕರಾರನ್ನು ಪಡೆದುಕೊಂಡ ಸಂದರ್ಭವನ್ನು ಸ್ವಲ್ಪ ನೆನಪಿಸಿಕೊಳ್ಳಿ. ನೀವು ಅಲ್ಲಾಹ್ ನ ಹೊರತು ಮತ್ತಾರನ್ನೂ ಆರಾಧನೆ/ಉಪಾಸನೆ ಮಾಡಕೂಡದು; ಮಾತಾಪಿತರೊಂದಿಗೆ ಸೌಜನ್ಯಪೂರ್ಣವಾಗಿ ನಯವಿನಯದೊಂದಿಗೆ ವರ್ತಿಸಬೇಕು; ಹತ್ತಿರದ ಸಂಬಂಧಿಕರೊಂದಿಗೂ, ಅನಾಥ ಮಕ್ಕಳೊಂದಿಗೂ, ಬಡಬಗ್ಗರೊಂದಿಗೂ ಸೌಜನ್ಯಪೂರ್ಣವಾಗಿ ವ್ಯವಹರಿಸಿಕೊಳ್ಳಬೇಕೆಂದೂ; ಜನಸಾಮಾನ್ಯರೊಂದಿಗೆ ಅತ್ಯುತ್ತಮ ರೀತಿಯಲ್ಲಿ ಮಾತನಾಡಬೇಕೆಂದೂ (ಕರಾರಿನಲ್ಲಿ ಸೂಚಿಸಲಾಗಿತ್ತು). (ದೈನಂದಿನ) ಆರಾಧನೆಯನ್ನು ನಿಷ್ಠೆಯಿಂದ ಪಾಲಿಸಬೇಕೆಂದೂ, ‘ಝಕಾತ್’ ಅನ್ನು ಪಾವತಿ ಮಾಡಬೇಕೆಂದೂ (ಸಹ ಆ ಕರಾರಿನಲ್ಲಿ ಹೇಳಲಾಗಿತ್ತು). (ಆದರೆ ಅಂತಹ ಒಂದು ಮಹತ್ತರವಾದ ಕರಾರಿನ) ನಂತರ ನಿಮ್ಮ ಪೈಕಿಯ ಕೇವಲ ಕೆಲವೇ ಜನರ ಹೊರತು ನೀವೆಲ್ಲರೂ ಆ ಕರಾರಿನಿಂದ ವಿಮುಖರಾಗಿ ಬಿಟ್ಟಿರಿ. ನೀವಾದರೋ (ಕರಾರನ್ನು ಮಾಡಿಕೊಂಡ ನಂತರ ಅದರಿಂದ) ಹಿಂದಿರುಗುವವರೇ ಆಗಿದ್ದೀರಿ. [83]

ನೀವು ಪರಸ್ಪರರ ರಕ್ತಪಾತದಲ್ಲಿ ತೊಡಗಬಾರದೆಂದೂ, ನಾಡಿನಿಂದ ನಿಮ್ಮವರನ್ನೇ ನೀವು ಒಕ್ಕಲೆಬ್ಬಿಸಬಾರದೆಂದೂ ನಾವು ನಿಮ್ಮಿಂದ ಒಂದು ಪ್ರಬಲ ಕರಾರನ್ನು ಪಡೆದ ಸಂದರ್ಭವನ್ನೂ ಸ್ಮರಿಸಿಕೊಳ್ಳಿ. ತರುವಾಯ ನೀವು ಅದನ್ನು ಧೃಡೀಕರಿಸಿದ್ದು ಮಾತ್ರವಲ್ಲದೆ ಸ್ವತಹ ಆ (ಕರಾರಿಗೆ) ಸಾಕ್ಷಿಗಳೂ ಆದಿರಿ. ಅದಾದ ನಂತರ ಸ್ವತಃ ನಿಮ್ಮ ಜನರನ್ನೇ ನೀವು ವಧಿಸಲು ತೊಡಗಿದಿರಿ; ನಿಮ್ಮ ಪೈಕಿಯ ಒಂದು ವರ್ಗವನ್ನು ಅವರ ವಾಸಸ್ಥಳಗಳಿಂದ ನೀವು ಹೊರಗಟ್ಟಿದಿರಿ. [ಶತ್ರುಗಳೊಂದಿಗೆ ಸೇರಿಕೊಂಡು] ಸ್ವತಃ ನಿಮ್ಮದೇ ಜನರ ವಿರುದ್ಧ ಪಾತಕ ಕೃತ್ಯಗಳನ್ನು ಮತ್ತು ಮಿತಿಮೀರಿದ ಅಕ್ರಮಗಳನ್ನು ಎಸಗಿದವರೂ ನೀವೇ. ಇನ್ನು ಅವರನ್ನು ಕೈದಿಗಳನ್ನಾಗಿಸಿ ನಿಮ್ಮಲ್ಲಿಗೆ ತರಲಾದಾಗ [ತೌರಾತ್ ನ ನಿಯಮದಂತೆ] ವಿಮೋಚನಾ ಶುಲ್ಕ ತೆತ್ತು ನೀವು ಅವರನ್ನು ವಿಮೋಚಿಸುವವರೂ ಆದಿರಿ. ಆದರೆ (ಕರಾರಿನ ಪ್ರಕಾರ) ಅವರನ್ನು ಒಕ್ಕಲೆಬ್ಬಿಸಿ ಹೊರದಬ್ಬುವುದನ್ನೇ ನಿಮ್ಮ ಪಾಲಿಗೆ ನಿಷೇಧಿಸಲಾಗಿತ್ತು! ನೀವು (ಅಲ್ಲಾಹ್ ನ) ನಿಯಮಗಳ ಕೆಲವು ಭಾಗವನ್ನು ಒಪ್ಪಿಕೊಂಡು ಉಳಿದ ಕೆಲವು ಭಾಗವನ್ನು ನಿರಾಕರಿಸುವಿರಾ?! ನಿಮ್ಮ ಪೈಕಿ ಹಾಗೆ ವರ್ತಿಸಿದವರಿಗೆ ಇಹಲೋಕ ಜೀವನದಲ್ಲಿ ಅಪಮಾನ ಅಪಕೀರ್ತಿಗೆ ಗುರಿಯಾಗಿ ಜೀವಿಸುವುದಲ್ಲದೆ ತಕ್ಕುದಾದ ಬೇರೆ ಶಿಕ್ಷೆ ಇದೆಯೇ? ಮಾತ್ರವಲ್ಲ ಪುನರುತ್ಥಾನ ದಿನವಂತೂ ಕಠೋರವಾದ ಶಿಕ್ಷೆಯತ್ತ ಅಂಥವರನ್ನು ದಬ್ಬಿ ಬಿಡಲಾಗುವುದು! ನೀವು ಏನೆಲ್ಲ ಮಾಡುತ್ತಿರುವಿರೋ ಅದು ಅಲ್ಲಾಹ್ ನಿಗೆ ತಿಳಿಯದೇ ಹೋಗಿಲ್ಲ! {84-85}

ಭೂಲೋಕದ (ನಶ್ವರವಾದ) ಜೀವನಕ್ಕೆ, ಇನ್ನೊಂದು ಲೋಕದ (ಶಾಶ್ವತ ಜೀವನಕ್ಕಿಂತ) ಹೆಚ್ಚಿನ ಮಹತ್ವವನ್ನು ನೀಡಿದವರು ಇದೇ ಜನರಾಗಿದ್ದಾರೆ. ಆದ್ದರಿಂದಲೇ ಅವರಿಗೆ ನೀಡಲಾಗುವ ಶಿಕ್ಷೆಯನ್ನು ಕಿಂಚಿತ್ತೂ ಕಡಿಮೆ ಗೊಳಿಸಲಾಗದು; (ಹಾಗೆ ಶಿಕ್ಷಿಸಲ್ಪಡುವಾಗ) ಅವರು ನಿಸ್ಸಹಾಯಕರಾಗಿರುವರು. [86]

ಹಾಗೆ, ನಾವು ಮೂಸಾ ರಿಗೆ ಗ್ರಂಥವನ್ನು ನೀಡಿದ್ದೆವು. ಮತ್ತು ಅವರ ನಂತರವೂ ಸತತವಾಗಿ ನಾವು ದೂತರನ್ನು (ಅರಬಿ: ರಸೂಲ್) ಕಳಿಸುತ್ತಲೇ ಇದ್ದೆವು. (ಕೊನೆಯದಾಗಿ) ಮರ್ಯಮ್ ರ ಪುತ್ರ ಈಸಾ (ಯೇಸು/ಜೀಸಸ್) ರಿಗೆ ಸುಸ್ಪಷ್ಟ ಪುರಾವೆಗಳು/ನಿದರ್ಶನಗಳನ್ನು ನೀಡಿ ಕಳಿಸಿದೆವು ಮತ್ತು ಜಿಬ್ರೀಲ್ (ಗೆಬ್ರಿಯಲ್/ ಅರಬಿ: ರೂಹ್ ಅಲ್ ಕುದುಸ್) ರ ಮೂಲಕ ಈಸಾ ರ ಕೈ ಬಲಪಡಿಸಿದೆವು. (ಆದರೆ ಯಹೂದ್ಯರೇ,) ನಿಮ್ಮ ಮನಸ್ಸಿಗೆ ಒಲ್ಲದ ಸಂದೇಶದೊಂದಿಗೆ ರಸೂಲ್/ದೂತರು ನಿಮ್ಮ ಬಳಿಗೆ ಬಂದಾಗಲೆಲ್ಲಾ ನೀವು (ಅವರನ್ನು ತಿರಸ್ಕರಿಸಿ ಬಿಡುವ) ಅಹಂಕಾರ ಮೆರೆಯುವಿರೇನು? (ನಾವು ಕಳಿಸಿದ ರಸೂಲರಲ್ಲಿ) ಕೆಲವರನ್ನು ನೀವು ಸುಳ್ಳರು ಎಂದು ಸಾರಿದಿರಿ; ಇನ್ನು ಕೆಲವರನ್ನು ವಧಿಸಿಯೇ ಬಿಟ್ಟಿರಿ. ನಮ್ಮದು ಮುಚ್ಚಿದ ಹೃದಯಗಳಾಗಿವೆ ಎಂದು (ಯಹೂದ್ಯರು) ಹೇಳುತ್ತಾರೆ. ಹಾಗಲ್ಲ, ವಾಸ್ತವದಲ್ಲಿ ಅವರ (ನಿರಂತರವಾದ) ಧಿಕ್ಕಾರದ ಕಾರಣ ಅವರಿಗೆ ಅಲ್ಲಾಹ್ ನ ಶಾಪ ತಟ್ಟಿದೆ, ಆದ್ದರಿಂದ ಅವರು ತೀರಾ ಕಡಿಮೆ ನಂಬುವವರಾಗಿದ್ದಾರೆ. [87-88]

ಅಲ್ಲಿಯವರೆಗೆ ಧರ್ಮದ ಧಿಕ್ಕಾರಿಗಳ ವಿರುದ್ಧ ಗೆಲುವು ಸಾಧಿಸಿಕೊಳ್ಳಲು (ಅಲ್ಲಾಹ್ ನ ಸಹಾಯಕ್ಕಾಗಿ) ಪ್ರಾರ್ಥಿಸಿಕೊಂಡಿದ್ದ ಯಹೂದ್ಯರು, ಅದಾಗಲೇ ಅವರ ಬಳಿ ಇದ್ದ (ತೋರಾ/ತೌರಾತ್) ಅನ್ನು ಧೃಡೀಕರಿಸುವ ಗ್ರಂಥವೊಂದು (ಅರ್ಥಾತ್: ಕುರ್‌ಆನ್) ಅಲ್ಲಾಹ ನ ಬಳಿಯಿಂದ ಅವರೆಡೆಗೆ ಬಂದುಬಿಟ್ಟಾಗ – ಅಂದರೆ ಸತ್ಯವೆಂದು ಅವರಿಗೆ ಗುರುತಿಸಿಕೊಳ್ಳಲು ಸಾಧ್ಯವಾದ (ಕುರ್‌ಆನ್) ಅವರ ಬಳಿಗೆ ಬಂದುಬಿಟ್ಟಾಗ – ಅವರು ಅದನ್ನು ಧಿಕ್ಕರಿಸಿ ಬಿಟ್ಟರು. (ಸತ್ಯವನ್ನು ಅರಿತೂ ಧಿಕ್ಕರಿಸಿ ಬಿಡುವ) ‘ಕಾಫಿರ್’ ಗಳ ಮೇಲೆ ಅಲ್ಲಾಹ್ ನ ಶಾಪವಿದೆ. [89]

ತಮ್ಮ ಮನಸ್ಸಾಕ್ಷಿಯನ್ನು ಅದೆಂತಹ ನೀಚ ವಸ್ತುವಿನೊಂದಿಗೆ ಅವರು ವಿಕ್ರಯಿಸಿ ಕೊಂಡಿದ್ದಾರೆ! ಅಲ್ಲಾಹ್ ನು ತನ್ನ ಅನುಗ್ರಹವನ್ನು [ಈ ಕುರ್‌ಆನ್ ನ ರೂಪದಲ್ಲಿ] ತನ್ನಿಚ್ಛೆಯನುಸಾರ ತನ್ನ ಸೇವಕರ ಪೈಕಿ ಒಬ್ಬಾತನಿಗೆ [ಅರ್ಥಾತ್ ಪೈಗಂಬರ್ ಮುಹಮ್ಮದ್ ರಿಗೆ] ಕಳಿಸಿದನೆಂಬ ಕಾರಣಕ್ಕಾಗಿ ಅಸೂಯೆ ಹಗೆತನದಿಂದ ಅದನ್ನು ಅವರು ಧಿಕ್ಕರಿಸಿ ಬಿಟ್ಟರು. ಆದ ಕಾರಣ ಅವರು ಮೇಲಿಂದ ಮೇಲೆ (ಅಲ್ಲಾಹ್ ನ) ಕ್ರೋಧಕ್ಕೆ, ಕಡುಕ್ರೋಧಕ್ಕೆ ತುತ್ತಾದರು! [ಮನದಟ್ಟಾದ ನಂತರವೂ ಸತ್ಯಕ್ಕೆ] ಧಿಕ್ಕಾರಿಗಳಾಗಿ ನಿಲ್ಲುವವರಿಗೆ ಅಪಮಾನದಾಯಕ ಶಿಕ್ಷೆ ಕಾದಿರುತ್ತದೆ. [90]

ನೀವಿನ್ನು ಅಲ್ಲಾಹ್ ನು ಕಳಿಸಿರುವ (ಕುರ್‌ಆನ್) ನಲ್ಲಿ ನಂಬಿಕೆ ಇಡಬೇಕು ಎಂದು ಯಹೂದ್ಯರೊಂದಿಗೆ ಹೇಳಲಾದಾಗ, ನಮಗೆ ಕಳಿಸಿದ (ತೋರಾ/ತೌರಾತ್) ನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಅವರು ಹೇಳುತ್ತಾರೆ. ಆದರೆ ಅದರ ಬೆನ್ನಿಗೇ ಬಂದ (ಬೇರೆ ಗ್ರಂಥಗಳನ್ನು) ಅವರು ನಿಷೇಧಿಸುತ್ತಾರೆ. ವಸ್ತುತಃ (ನಂತರ ಬಂದ ಗ್ರಂಥಗಳು) ಸತ್ಯವಾದುದೇ ಆಗಿದ್ದು, ಅದಾಗಲೇ ಅವರ ಕೈಯಲ್ಲಿರುವ (ಗ್ರಂಥವನ್ನೂ) ಸತ್ಯವೆಂದು ಸಾರುತ್ತದೆ. ಒಂದು ವೇಳೆ ನೀವು (ನಿಮ್ಮ ಗ್ರಂಥವೆಂದು ಹೇಳಿಕೊಳ್ಳುವ ತೋರಾ ದಲ್ಲಿ) ನಂಬಿಕೆ ಇಟ್ಟವರಾದರೆ ಈ ಹಿಂದೆ ಅಲ್ಲಾಹ್ ನು ಕಳಿಸಿದ್ದ ದೂತರನ್ನು ಅದೇಕೆ ನೀವು ಕೊಂದು ಬಿಡುತ್ತಿದ್ದಿರಿ – ಎಂದು (ಓ ಮುಹಮ್ಮದ್) ನೀವು ಕೇಳಿರಿ. [91]

ಮೂಸಾ (ಅರ್ಥಾತ್: ನಬಿ ಮೋಸೆಸ್) ರು ನಿಮ್ಮ ಬಳಿಗೆ ಅತ್ಯಂತ ಸ್ಪಷ್ಟವಾದ ಪುರಾವೆಗಳೊಂದಿಗೆ/ಪವಾಡಗಳೊಂದಿಗೆ ಬಂದಿದ್ದರು. (ಅದನ್ನೆಲ್ಲಾ ಕಣ್ಣಾರೆ ಕಂಡಿದ್ದ ನೀವು) ಅವರ ಅನುಪಸ್ಥಿತಿಯಲ್ಲಿ ದನದ ಕರುವೊಂದನ್ನು ತಂದುಕೊಂಡು (ಪೂಜಿಸ ತೊಡಗಿದಿರಿ). ಹಾಗೆ ನೀವು ಅನ್ಯಾಯವೆಸಗಿ ಅಕ್ರಮಿಗಳಾಗಿ ಹೋದಿರಿ. [92]

ಇನ್ನು, (ಸೀನಾಯ್) ಬೆಟ್ಟವನ್ನು ನಿಮ್ಮ ಮೇಲಕ್ಕೆ ಎತ್ತಿ ಹಿಡಿದುಕೊಂಡು ಬಲಿಷ್ಠವಾದ ಒಂದು ಕರಾರನ್ನು ನಿಮ್ಮಿಂದ ಪಡೆದುಕೊಂಡ ಸನ್ನಿವೇಶವನ್ನು ಒಮ್ಮೆ ನೆನಪಿಗೆ ತಂದುಕೊಳ್ಳಿ. (ಈ ಕರಾರಿನ ಮೂಲಕ ನಿಮಗೆ) ನೀಡಲಾಗುತ್ತಿರುವುದನ್ನು ಭದ್ರವಾಗಿ ಅಪ್ಪಿಕೊಳ್ಳಿ ಮತ್ತು ಅದನ್ನು ಕೇಳಿ/ಅನುಸರಿಸಿರಿ (ಎಂದು ಆಗ ಆದೇಶಿಸಲಾಗಿತ್ತು). ನಾವು ಕೇಳಿಕೊಂಡೆವು ಆದರೆ ಅನುಸರಿಸುವುದಿಲ್ಲ (ಎಂದು ನಿಮ್ಮ ಪೂರ್ವಿಕರು) ಹೇಳಿದ್ದರು. (ಅಂತಹ ನಿರಂತರವಾದ) ಧಿಕ್ಕಾರಿ ಸ್ವಭಾವದ ನಿಮಿತ್ತ ಅವರ ಹೃದಯಗಳು ಸಂಪೂರ್ಣವಾಗಿ (ಅವರು ಪೂಜಿಸುತ್ತಿದ್ದ) ಕರುವಿನ ಬಗೆಗಿನ ಅದಮ್ಯ ಪ್ರೀತಿಯಿಂದ ತುಂಬಿ ಹೋಗಿತ್ತು. ನಿಮ್ಮ (ತಪ್ಪಾದ) ವಿಶ್ವಾಸವು ಅದೆಂತಹ ನಿಕೃಷ್ಟ ಆದೇಶಗಳನ್ನು ನಿಮಗೆ ನೀಡುತ್ತಿತ್ತು! ನೀವು ನಿಜವಾದ ವಿಶ್ವಾಸಿಗಳಾಗಿದ್ದರೆ (ಸ್ವಲ್ಪ ಚಿಂತಿಸಿ ನೋಡಿ) – ಎಂದು (ಓ ಮುಹಮ್ಮದ್, ನೀವು ಅವರೊಂದಿಗೆ) ಹೇಳಿರಿ. [93]

ಒಂದು ವೇಳೆ ಪರಲೋಕದಲ್ಲಿರುವ (ಶಾಶ್ವತ) ನಿವಾಸವು (ಯಹೂದ್ಯರಾದ) ನಿಮಗೆ ಮಾತ್ರವಾಗಿ ಅಲ್ಲಾಹ್ ನ ಬಳಿ ಮೀಸಲಿರಿಸಲಾಗಿದೆ, ಮನುಷ್ಯರಲ್ಲಿ ಬೇರಾರಿಗೂ ಅದು ಸಿಗದು (ಎಂಬ ನಿಮ್ಮ ತರ್ಕದಲ್ಲಿ) ನೀವು ಸತ್ಯವಂತರಾಗಿದ್ದರೆ, ಮರಣವನ್ನು ಬಯಸಿ ನೋಡಿ – ಎಂದು ಅವರೊಡನೆ ಹೇಳಿರಿ. ಇಲ್ಲ! ಅವರ ಕೈಗಳು ಮುಂಚಿತವಾಗಿಯೇ (ಪರಲೋಕಕ್ಕೆ) ಕಳಿಸಿಬಿಟ್ಟ (ದುಷ್ಕೃತ್ಯಗಳ) ಕಾರಣ ಅವರೆಂದೂ ಮರಣವನ್ನು ಬಯಸಿಕೊಳ್ಳಲಾರರು. ಅಂತಹ ದುಷ್ಕೃತ್ಯವೆಸಗಿದವರ ಕುರಿತು ಅಲ್ಲಾಹ್ ನು ಚೆನ್ನಾಗಿ ಬಲ್ಲವನಾಗಿದ್ದಾನೆ. [94-95]

(ಮರಣವನ್ನು ಬಯಸಿಕೊಳ್ಳುವುದು ಬಿಡಿ,) ಮನುಷ್ಯರ ಪೈಕಿ ಭೂಲೋಕದ ಬದುಕನ್ನು ಅತಿಯಾಗಿ ಮೋಹಿಸಿಕೊಂಡವರಾಗಿ ನೀವು (ಯಹೂದ್ಯರನ್ನು) ಕಾಣುವಿರಿ. ಆ ವ್ಯಾಮೋಹದಲ್ಲಿ ಅವರು ‘ಮುಶ್ರಿಕ್’ (ಅರ್ಥಾತ್: ಅನೇಕರನ್ನು ದೇವರೆಂದು ಬಗೆದು ಪೂಜಿಸಿಕೊಳ್ಳುವ ಜನರು) ಗಳನ್ನೂ ಹಿಮ್ಮೆಟ್ಟಿಸಿ ಬಿಟ್ಟಿದ್ದಾರೆ! ಅವರ ಪೈಕಿ ಪ್ರತಿಯೊಬ್ಬನೂ ತಾನು ಸಾವಿರ ವರ್ಷದ ಆಯುಷ್ಯ ಪಡೆದುಕೊಳ್ಳಬೇಕೆಂದು ಬಯಸುತ್ತಾನೆ. (ತಿಳಿದಿರಿ,) ಒಂದು ವೇಳೆ ಅವರ ಆಯುಷ್ಯವನ್ನು ಅಷ್ಟು ದೀರ್ಘಗೊಳಿಸಿಬಿಟ್ಟರೂ ಅದು ಅವರಿಗಿರುವ ಶಿಕ್ಷೆಯನ್ನು ಕಿಂಚಿತ್ತೂ ವ್ಯತ್ಯಾಸ ಗೊಳಿಸದು. ಅಲ್ಲಾಹ್ ನಾದರೋ ಅವರೇನು ಮಾಡುತ್ತಿದ್ದಾರೋ ಅದನ್ನು ವೀಕ್ಷಿಸುತ್ತಿದ್ದಾನೆ. [96]

ಜಿಬ್ರೀಲ್ (ಅರ್ಥಾತ್: ಗೇಬ್ರಿಯಲ್) ರು ಅಲ್ಲಾಹ್ ನ ಆದೇಶ/ಅನುಮತಿಯ ಪ್ರಕಾರವೇ ಈ ಕುರ್‌ಆನ್ ಅನ್ನು ನಿಮ್ಮ ಹೃದಯದೊಳಕ್ಕೆ ಇಳಿಸಿದ್ದಾರೆ ಎಂದು (ಮುಹಮ್ಮದ್ ಪೈಗಂಬರರೇ,) ನೀವು ಜಿಬ್ರೀಲ್ ರನ್ನು ವೈರತ್ವದಿಂದ ಕಾಣುವವರೊಂದಿಗೆ ಹೇಳಿರಿ. ಅದಾಗಲೇ ಅವರ ಬಳಿ ಇರುವ (ತೋರಾ/ತೌರಾತ್) ಅನ್ನು ಅದು ಅಂಗೀಕರಿಸುತ್ತದಲ್ಲದೆ, ಅದರಲ್ಲಿ ವಿಶ್ವಾಸ ಇಟ್ಟುಕೊಳ್ಳುವವರಿಗೆ ಮಾರ್ಗದರ್ಶನವನ್ನೂ ಶುಭವಾರ್ತೆಯನ್ನೂ ನೀಡುತ್ತದೆ. ಇನ್ನು ಯಾರಾದರೂ ಅಲ್ಲಾಹ್ ನೊಂದಿಗೆ, ಅವನ ಮಲಕ್ ಗಳೊಂದಿಗೆ, ಅವನ ದೂತರೊಂದಿಗೆ, ಜಿಬ್ರೀಲ್ ಹಾಗೂ ಮೀಕಾಈಲ್ ರೊಂದಿಗೆ ವೈರತ್ವ ಹೊಂದಿದರೆ (ಅವರು ತಿಳಿದಿರಲಿ) ಅಂತಹ ಧಿಕ್ಕಾರಿಗಳಿಗೆ ಅಲ್ಲಾಹ್ ನೂ ವೈರಿಯಾಗಿದ್ದಾನೆ. [97-98]

ನಾವು ನಿಮಗೆ ಬಹಳ ಸ್ಪಷ್ಟವಾದ ನಿದರ್ಶನಗಳಾಗಿರುವ (ಕುರ್‌ಆನ್ ನ) ವಚನಗಳನ್ನು ಕಳಿಸಿ ಕೊಟ್ಟಿದ್ದೇವೆ. ತಮ್ಮ ಹದ್ದನ್ನು ಮೀರಿದ ಅವಿಧೇಯರಲ್ಲದೆ ಬೇರೆ ಯಾರೂ ಅದನ್ನು ಧಿಕ್ಕರಿಸಲಾರರು. [99]

ಏನದು (ಅವರ ಅಂತಹ ಧೋರಣೆ)? ಕರಾರನ್ನು ಮಾಡಿಕೊಂಡ ಪ್ರತಿ ಸಲವೂ ಅವರ ಪೈಕಿಯ ಒಂದಲ್ಲ ಒಂದು ಗುಂಪಿನವರು ಅದನ್ನು ಎತ್ತಿ ಮೂಲೆಗೆಸೆದು ಬಿಡುವುದೇನು? ನಿಜವೇನೆಂದರೆ ಅವರಲ್ಲಿ ಹೆಚ್ಚಿನವರಿಗೆ ವಿಶ್ವಾಸವೇ ಇರಲಿಲ್ಲ. [100]

(ಮುಹಮ್ಮದ್ ರ ಆಗಮನದ ಕುರಿತಾದ ಸ್ಪಷ್ಟ ಭವಿಷ್ಯ ನುಡಿಗಳನ್ನು ಹೊಂದಿರುವ, ಅಂದರೆ,) ಅವರ ಬಳಿ ಅದಾಗಲೇ ಇರುವ (ಗ್ರಂಥ ತೋರಾ) ವನ್ನು ಧೃಡೀಕರಿಸುವವನಾಗಿ ಅಲ್ಲಾಹ್ ನ ವತಿಯಿಂದ ಒಬ್ಬ ದೂತ (ಮುಹಮ್ಮದ್) ರು ಅವರ ಬಳಿಗೆ ಬಂದು ಬಿಟ್ಟಾಗ, ಗ್ರಂಥದವರಾದ (ಯಹೂದ್ಯರ) ಒಂದು ಗುಂಪಿನವರು ಅಲ್ಲಾಹ್ ನ ಗ್ರಂಥ (ಕುರ್‌ಆನ್) ಅನ್ನು ತಮ್ಮ ಬೆನ್ನ ಹಿಂದಕ್ಕೆ ಎಸೆದು ಬಿಟ್ಟರು, (ತೋರಾ ದಲ್ಲಿ ಇದ್ದ ಮುನ್ಸೂಚನೆಗಳ ಬಗ್ಗೆ) ಅವರಿಗೆ ಏನೂ ತಿಳಿಯದೇ ಇದ್ದವರಂತೆ! ಮಾತ್ರವಲ್ಲ, ನಬಿ ಸುಲೈಮಾನ್ (ಅರ್ಥಾತ್: ಸೊಲೊಮನ್) ರ ಸಮ್ರಾಜ್ಯವನ್ನು ಪ್ರಸ್ತಾಪಿಸಿಕೊಂಡು ಸೈತಾನರು ಓದುತ್ತಾ/ಕಲಿಸುತ್ತಾ ಇದ್ದುದನ್ನು ಯಹೂದ್ಯರು ಅನುಸರಿಸ ತೊಡಗಿದರು. (ನೆನಪಿರಲಿ,) ನಬಿ ಸುಲೈಮಾನ್ ರು ಸತ್ಯವನ್ನು ಧಿಕ್ಕರಿಸಿರಲಿಲ್ಲ; ಬದಲಾಗಿ, ಜನರಿಗೆ ಮಾಟ-ಮಂತ್ರಗಳನ್ನು ಕಲಿಸುತ್ತಿದ್ದ ಸೈತಾನರೇ (ಧಿಕ್ಕರಿಸಿದ) ‘ಕಾಫಿರ್’ ಗಳಾಗಿದ್ದರು. (ಹಿಂದೆ) ಬ್ಯಾಬಿಲೋನ್ ನಲ್ಲಿ ‘ಹಾರೂತ್’ ಮತ್ತು ‘ಮಾರೂತ್’ ಎಂಬ ಎರಡು ‘ಮಲಕ್’ ಗಳಿಗೆ ನೀಡಲಾಗಿದ್ದ (ಜಾದೂಗಾರಿಕೆಯ ವಿಧ್ಯೆಯ) ಹಿಂದೆಯೂ ಅವರು ಬಿದ್ದು ಕೊಂಡರು. ಆದರೆ, ನಾವು (ಕಲಿಸುವ ವಿಧ್ಯೆಯು ನಿಮ್ಮ ಪಾಲಿಗೆ ನಿಮ್ಮ ಸತ್ಯನಿಷ್ಠೆಯನ್ನು ಪರೀಕ್ಷಿಗೆ ಹಚ್ಚುವ) ಒಂದು ಒರೆಕಲ್ಲು; ನೀವು (ಅದನ್ನು ಕಲಿತುಕೊಳ್ಳುವ ಮೂಲಕ) ‘ಕಾಫಿರ್’ ಗಳಾಗಬೇಡಿರಿ ಎಂದು ಸಾರದೆ ಅವರು ಅದನ್ನು ಯಾರಿಗೊ ಕಲಿಸುತ್ತಿರಲಿಲ್ಲ. ಅದಾಗಿಯೂ, ಪತಿ ಪತ್ನಿಯರನ್ನು ಬೇರ್ಪಡಿಸಿ ಬಿಡುವ (ಜಾದೂಗಾರಿಕೆ) ಯನ್ನು ಯಹೂದ್ಯರು ಆ ಇಬ್ಬರು ಮಲಕ್ ಗಳಿಂದ ಕಲಿಯುತ್ತಿದ್ದರು; ಅಲ್ಲಾಹ್ ನ ಅನುಮತಿಯ ವಿನಾ ಯಾರಿಗೂ ಅವರು ಅವರ ಆ ವಿಧ್ಯೆಯಿಂದ ಉಪದ್ರವ ಮಾಡುವಂತಿರಲಿಲ್ಲ. ಯಾವುದರಿಂದ ತಮಗೆ ಲಾಭವಿದೆಯೋ ಅದನ್ನು ಕಲಿಯದೆ ಯಾವುದು ನಷ್ಟದಾಯಕವೋ ಅದನ್ನೇ ಅವರು ಕಲಿಯುತ್ತಾರೆ. ಆದರೆ, ಯಾರು ಈ ವ್ಯವಹಾರದಲ್ಲಿ ತೊಡಗಿದರೋ ಅವರಿಗೆ ಪರಲೋಕದಲ್ಲಿ ಯಾವ ಪ್ರಯೋಜನವೂ ಇಲ್ಲವೆಂದು ಅವರು ತಿಳಿದೇ ಇದ್ದರು. ಅದೆಷ್ಟು ಕೆಟ್ಟ ವಿಷಯಕ್ಕಾಗಿತ್ತು ಅವರು ತಮ್ಮನ್ನೇ ಮಾರಿಕೊಂಡಿರುವುದು! ಒಂದು ವೇಳೆ ತಾವದನ್ನು ಅರಿತುಕೊಂಡು ಇದ್ದಿದ್ದರೆ (ಅದೆಷ್ಟು ಚೆನ್ನಾಗಿರುತ್ತಿತ್ತು)! [101-102]

ಇನ್ನು, ಒಂದು ವೇಳೆ ಅವರು ಸತ್ಯವನ್ನು ನಂಬುವವರಾಗಿದ್ದು (ಕೆಡುಕಿನಿಂದ) ತಮ್ಮನ್ನು ಕಾಪಾಡಿ ಕೊಳ್ಳುವವರು ಆಗಿದ್ದಿದ್ದರೆ ಖಂಡಿತವಾಗಿಯೂ ಅಲ್ಲಾಹ್ ನ ಬಳಿ ಅವರಿಗೆ ಉತ್ತಮ ಪ್ರತಿಫಲವು ಸಿಗುತ್ತಿತ್ತು. ಅವರದನ್ನು ಅರಿತು ಕೊಂಡಿದ್ದರೆ (ಅದೆಷ್ಟು ಚೆನ್ನಾಗಿರುತ್ತಿತ್ತು)! [103]

(ಮುಹಮ್ಮದ್ ರನ್ನೂ ಅವರ ಸಂದೇಶವನ್ನೂ ಸತ್ಯವೆಂದು ನಂಬಿ ಅದರಲ್ಲಿ ವಿಶ್ವಾಸವಿಟ್ಟ) ‘ಮೂಮಿನ್’ ಗಳೇ, (ನೀವು ನಬಿ ಮುಹಮ್ಮದ್ ರೊಂದಿಗೆ ಸಂಭಾಷಣೆಯಲ್ಲಿರುವಾಗ ನಬಿಯವರ ಗಮನ ನಿಮ್ಮತ್ತ ಸೆಳೆಯಲು) ‘ರಾಇನಾ’ ಎಂಬ ಪದವನ್ನು ಬಳಸದಿರಿ; ಬದಲಾಗಿ ‘ಉನ್ಲುರ್ನಾ’ ಎಂದೇ ಹೇಳಿಕೊಳ್ಳಿ ಹಾಗೂ (ನಬಿ ಮುಹಮ್ಮದ್ ರ ಮಾತುಗಳನ್ನು) ತುಂಬಾ ಶ್ರದ್ಧೆಯೊಂದಿಗೆ ಆಲಿಸಿರಿ. ಧಿಕ್ಕಾರಿಗಳಿಗೆ ನೋವು ಭರಿತ ಶಿಕ್ಷೆಯು ಕಾದುಕೊಂಡಿದೆ. [104]

ಗ್ರಂಥವನ್ನು ಹೊಂದಿರುವವರ ಮತ್ತು ಅನೇಕ ದೇವರುಗಳನ್ನು ಪೂಜಿಸುವವರ ಪೈಕಿ (ಮುಹಮ್ಮದ್ ರೇ ನಿಮ್ಮನ್ನು) ಧಿಕ್ಕರಿಸಿ ಬಿಟ್ಟವರು ನಿಮ್ಮ ಬಳಿಗೆ ನಿಮ್ಮ ಒಡೆಯನ ಕಡೆಯಿಂದ ಒಳಿತೇನಾದರೂ ಬಂದರೆ ಅದನ್ನು ಮೆಚ್ಚಿಕೊಳ್ಳುವುದಿಲ್ಲ. ಆದರೆ, ಅಲ್ಲಾಹ್ ನಾದರೋ ತಾನಿಚ್ಛಿಸಿದವರನ್ನು ತನ್ನ ಅನುಗ್ರಹದಿಂದ ಆರಿಸಿಕೊಳ್ಳುತ್ತಾನೆ; ಅವನು ಅತ್ಯಂತ ಹೆಚ್ಚು ಕೃಪೆಯುಳ್ಳವನೂ ಆಗಿದ್ದಾನೆ. [105]

ನಾವು ರದ್ದು ಗೊಳಿಸುವ ಅಥವಾ ಮರೆಯಿಸಿ ಬಿಡುವ (ಗತ ಗ್ರಂಥಗಳಲ್ಲಿನ) ‘ಆಯತ್’ ಗಳಿಗೆ ಬದಲಾಗಿ ಅದಕ್ಕಿಂತಲೂ ಉತ್ತಮವಾದ ಅಥವಾ ಅಂತಹದೇ ಆದ ‘ಆಯತ್’ ಗಳನ್ನು ತರುತ್ತೇವೆ. ಎಲ್ಲಾ ವಿಷಯಗಳ ಮೇಲೆ ಅಲ್ಲಾಹ್ ನಿಗೆ ಸರ್ವ ರೀತಿಯ ಶಕ್ತಿ-ಸಾಮರ್ಥ್ಯಗಳಿವೆ ಎಂದು ನಿಮಗೆ ತಿಳಿಯದೇ? ಭೂಮಿ ಮತ್ತು ಆಕಾಶಗಳ ಸಾರ್ವಭೌಮ ಅಧಿಕಾರವು ಖಂಡಿತವಾಗಿಯೂ ಅಲ್ಲಾಹ್ ನಿಗೆ ಮಾತ್ರ ಸಲ್ಲುತ್ತದೆಂದು ನಿಮಗೆ ತಿಳಿಯದೇನು? ಅಲ್ಲಾಹ್ ನ ಹೊರತು ಬೇರಾರೂ ನಿಮಗೆ ಸಂರಕ್ಷಕರೋ ಸಹಾಯಕರೋ ಇರುವುದಿಲ್ಲ! [106-107]

ಹಿಂದೆ ನಬಿ ಮೂಸಾ ರನ್ನು (ಅವರ ಅನುಯಾಯಿಗಳು) ಪ್ರಶ್ನಿಸಿ (ತರಾಟೆಗೆ ತೆಗೆದು ಕೊಂಡ) ಹಾಗೆ ನೀವೂ ನಿಮ್ಮತ್ತ ಕಳಿಸಲ್ಪಟ್ಟ ದೂತ (ಮುಹಮ್ಮದ್) ರನ್ನು ಪ್ರಶ್ನಿಸ ಬಯಸುವಿರೇನು? (ಹಾಗೆ ಮಾಡಿ) ‘ಈಮಾನ್’ ಗೆ ಬದಲು ಧಿಕ್ಕಾರದ ಸ್ವಭಾವವನ್ನು ತನ್ನದಾಗಿಸಿಕೊಂಡವರು ನಿಸ್ಸಂದೇಹವಾಗಿಯೂ ನೇರಮಾರ್ಗದಿಂದ ವ್ಯತಿಚಲಿಸಿ ಬಹು ದೂರ ಸಾಗಿಬಿಟ್ಟವರು. [108]

(ಮದೀನಃ ಪಟ್ಟಣದಲ್ಲಿ ನೆಲೆಸಿರುವ ಮುಹಮ್ಮದ್ ರ ಅನುಯಾಯಿಗಳೇ, ತೋರಾ) ಗ್ರಂಥದ ಅನುಯಾಯಿಗಳಲ್ಲಿ ಹೆಚ್ಚಿನವರು (ಮುಹಮ್ಮದ್ ರ ಸಂದೇಶದಲ್ಲಿ) ವಿಶ್ವಾಸವಿರಿಸಿಕೊಂಡ ನಿಮ್ಮನ್ನು ಮತ್ತೆ ಧರ್ಮ-ಧಿಕ್ಕಾರದತ್ತ ಮರಳಿಸಿ ಬಿಡಲು ಹಾತೊರೆಯುತ್ತಾರೆ. ಅವರಿಗೆ ಸತ್ಯವೇನೆಂಬುದು ಸರಿಯಾಗಿ ವ್ಯಕ್ತವಾದ ನಂತರವೂ ಕೇವಲ ತಮ್ಮ ಹೃದಯಗಳ ಒಳಗಿರುವ ಅಸೂಯೆಯ ನಿಮಿತ್ತ (ಅವರು ಹಾಗೆ ಬಯಸುತ್ತಾರೆ). (ಅವರ ಆ ನಿಲುವಿನ ಕುರಿತು) ಅಲ್ಲಾಹ್ ನ ಆಜ್ಞೆಯು ಬರುವ ತನಕ ನೀವು ಅವರನ್ನು ಕ್ಷಮಿಸಿರಿ ಮತ್ತು ಅವರತ್ತ ಗಮನ ಹರಿಸದಿರಿ. ಖಂಡಿತವಾಗಿಯೂ ಎಲ್ಲಾ ವಿಷಯಗಳ ಮೇಲೆ ಅಲ್ಲಾಹ್ ನು ಸರ್ವ ರೀತಿಯ ಶಕ್ತಿ-ಸಾಮರ್ಥ್ಯವನ್ನು ಹೊಂದಿದ್ದಾನೆ. ‘ಸಲಾತ್’ (ಅರ್ಥಾತ್: ನಮಾಝ್) ಅನ್ನು ಸ್ಥಿರವಾಗಿ ಪಾಲಿಸಿರಿ ಮತ್ತು ‘ಝಕಾತ್’ ಅನ್ನು ನೀಡುತ್ತಲಿರಿ. ನೀವು ನಿಮಗಾಗಿ ಕೂಡಿಟ್ಟ ಎಲ್ಲಾ ಪುಣ್ಯಕಾರ್ಯಗಳನ್ನು ಅಲ್ಲಾಹ್ ನ ಬಳಿ ಪಡೆದು ಕೊಳ್ಳುವಿರಿ. ನೀವು ಏನೆಲ್ಲ ಮಾಡುತ್ತಿರುವಿರೋ ಅಲ್ಲಾಹ್ ನು ಅದನ್ನು ನೋಡುತ್ತಿದ್ದಾನೆ. [109-110]

ಯಹೂದ್ಯರೋ ಅಥವಾ ಕ್ರೈಸ್ತರೋ ಆಗದೆ ಇರುವವರು ಸ್ವರ್ಗವನ್ನು ಪ್ರವೇಶಿಸಿ ಕೊಳ್ಳುವುದು ಸಾಧ್ಯವೇ ಅಲ್ಲ ಎಂದು (ಯಹೂದ್ಯರು ಹಾಗೂ ಕ್ರೈಸ್ತರು) ಹೇಳುತ್ತಿದ್ದಾರೆ. ಅದೆಲ್ಲ ಕೇವಲ ಅವರ ಪೊಳ್ಳು ಕಾಮನೆಗಳು ಮಾತ್ರ. ನಿಮ್ಮ ಮಾತಿನಲ್ಲಿ ಸತ್ಯಾಂಶ ಇದೆ ಎಂದಾದರೆ ಅದನ್ನು ಧೃಡೀಕರಿಸುವ ಪುರಾವೆಯನ್ನು ಹಾಜರು ಪಡಿಸಿ ಎಂದು ಅವರೊಡನೆ ಹೇಳಿರಿ. ಏಕೆ ಪ್ರವೇಶಿಸ ಬಾರದು? ಅಲ್ಲಾಹ್ ನಿಗೆ ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಂಡ ಮತ್ತು ಒಳಿತನ್ನು ಮೈಗೂಡಿಸಿಕೊಂಡ ಸದ್ವ್ಯಕ್ತಿಗೆ ಅವನ ಒಡೆಯನ ಬಳಿ ಪ್ರತಿಫಲವಿರುವುದು. ಅಂಥವರು ಅಂಜಬೇಕಾಗಿಲ್ಲ, ದುಃಖಿತರಾಗುವ ಅಗತ್ಯವೂ ಇಲ್ಲ. [111-112]

ಕ್ರೈಸ್ತರು (ಸತ್ಯ ಧರ್ಮದಲ್ಲಿ ಇರುವವರಲ್ಲ) ಎಂದು ಯಹೂದ್ಯರು ಆರೋಪಿಸುತ್ತಾರೆ; ಅಂತೆಯೇ, ಯಹೂದ್ಯರು (ಸತ್ಯ ಧರ್ಮದಲ್ಲಿ ಇರುವವರಲ್ಲ) ಎಂದು ಕ್ರೈಸ್ತರೂ ಆರೋಪಿಸುತ್ತಾರೆ. (ಹಾಗೆ ಪರಸ್ಪರ ಆರೋಪಿಸುವ) ಅವರೀರ್ವರೂ (ತೋರಾ/ತೌರಾತ್) ಗ್ರಂಥವನ್ನೂ ಓದುತ್ತಲಿದ್ದಾರೆ! ಇನ್ನು (ದಿವ್ಯ ಗ್ರಂಥದ) ಜ್ಞಾನ ತೀರಾ ಇಲ್ಲದ (ಮುಶ್ರಿಕ್) ಜನರೂ ಅಂಥದ್ದೇ ಮಾತನ್ನು ಹೇಳುತ್ತಿದ್ದಾರೆ. ಅವರು ಯಾವ ವಿಷಯದಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಹೊಂದಿರುವರೋ ಅಲ್ಲಾಹ್ ನು ಪುನರುತ್ಥಾನ ದಿನದಂದು (ಅದರ ಬಗ್ಗೆ) ಅವರ ನಡುವೆ ತೀರ್ಮಾನ ಮಾಡುವನು. [113]

ಅಲ್ಲಾಹ್ ನ ಮಸೀದಿಗಳಲ್ಲಿ ಅಲ್ಲಾಹ್ ನ ನಾಮದ ಸ್ಮರಣೆ ಮಾಡಿಕೊಳ್ಳುವುದರಿಂದ (ಜನರನ್ನು) ತಡೆಯುವ ಮತ್ತು ಮಸೀದಿಗಳನ್ನು ಪಾಳು ಗೆಡಹಲು ಪಣತೊಟ್ಟವನಿಗಿಂತ ದೊಡ್ಡ ಅಕ್ರಮಿಯು ಯಾರಿದ್ದಾನೆ? ಯಥಾರ್ಥದಲ್ಲಿ, ಭಯ-ಭಕ್ತಿಯೊಂದಿಗಲ್ಲದೆ ಮಸೀದಿಗಳನ್ನು ಅವರು ಪ್ರವೇಶಿಸಿಕೊಳ್ಳುವುದೇ ಸರಿಯಲ್ಲ. ಅಂಥವರಿಗೆ ಭೂಲೋಕದ ಜೀವನದಲ್ಲಿ ಅಪಮಾನವು ಮಾತ್ರ ಕಾದಿದ್ದು, ಪರಲೋಕದಲ್ಲಿ ಅವರನ್ನು ಘೋರ ಶಿಕ್ಷೆಗೆ ಒಳಪಡಿಸಲಾಗುವುದು. [114]

ಪೂರ್ವವಿರಲಿ, ಪಶ್ಚಿಮವೇ ಇರಲಿ, ಎಲ್ಲವೂ ಅಲ್ಲಾಹ್ ನಿಗೇ ಸೇರಿದವುಗಳು. ನೀವು ಯಾವ ದಿಕ್ಕಿಗೆ ತಿರುಗಿಕೊಂಡರೂ ಅಲ್ಲಿ ಅಲ್ಲಾಹ್ ನನ್ನು ಪಡೆಯುವಿರಿ. ಅಲ್ಲಾಹ್ ನಾದರೋ ಸರ್ವವ್ಯಾಪಿಯೂ ಎಲ್ಲಾ ವಿಷಯಗಳ ಜ್ಞಾನವಿರುವವನೂ ಅಗಿರುವನು. [115]

ಅಲ್ಲಾಹ್ ನು ಒಬ್ಬನನ್ನು ತನ್ನ ಪುತ್ರನಾಗಿಸಿಕೊಂಡಿದ್ದಾನೆ ಎಂದು (ಗ್ರಂಥದ ಅನುಯಾಯಿಗಳಾದ) ಅವರು ವಾದಿಸುತ್ತಾರೆ. ಅಲ್ಲಾಹ ನಾದರೋ (ಅಂತಹ ದೌರ್ಬಲ್ಯಗಳಿಲ್ಲದ) ಪರಮ ಪಾವನನು. ವಾಸ್ತವವೇನೆಂದರೆ, ಭೂಮಿ ಮತ್ತು ಆಕಾಶಗಳಲ್ಲಿ ಇರುವ ಸಕಲವೂ ಅವನದ್ದೇ ಆಗಿದ್ದು, ಎಲ್ಲವೂ ಅವನ ಆಜ್ಞೆಗೆ ವಿಧೇಯವಾಗಿವೆ. [116]

ಭೂಮಿ ಮತ್ತು ಆಕಾಶಗಳನ್ನು ಉಂಟು ಮಾಡಿದವನವನು. ಒಂದು ಕಾರ್ಯವನ್ನು ಮಾಡಬೇಕು ಎಂದವನು ತೀರ್ಮಾನಿಸಿದಾಗ ಅದಕ್ಕೆ ‘ಆಗು’ ಎಂದು ಮಾತ್ರ ಹೇಳುತ್ತಾನೆ, ಆ ಕೂಡಲೆ ಅದು ಆಗಿ ಬಿಡುತ್ತದೆ / ಅಸ್ತಿತ್ವ ಪಡೆದುಕೊಳ್ಳುತ್ತದೆ. [117]

ನಮ್ಮೊಂದಿಗೆ ಅಲ್ಲಾಹ್ ನು ಖುದ್ದಾಗಿ ಏಕೆ ಮಾತನಾಡುವುದಿಲ್ಲ? ಅಥವಾ ನಮ್ಮ ಬಳಿಗೆ ಸ್ಪಷ್ಟವಾದ ಒಂದು ದೃಷ್ಟಾಂತವು ಏಕೆ ಬರುವುದಿಲ್ಲ? ಎಂದು ತಿಳುವಳಿಕೆ ಇಲ್ಲದ ಜನರು ಕೇಳುತ್ತಾರೆ. ಹಾಗೆಯೇ, ಇವರಿಗಿಂತ ಮುಂಚಿನವರೂ ಇವರು ಕೇಳಿದಂತಹ ಪ್ರಶ್ನೆಗಳನ್ನೇ ಕೇಳಿದ್ದರು. ಅವರೆಲ್ಲರ ಮನಸ್ಸು/ಚಿಂತೆ ಒಂದೇ ರೀತಿಯದ್ದಾಗಿದೆ. ಖಚಿತವಾದ ವಿಶ್ವಾಸವನ್ನು ಹೊಂದಿರುವವರಿಗೆ ನಾವು ಅದ್ಭುತ ದೃಷ್ಟಾಂತಗಳನ್ನು ಅದಾಗಲೇ ಪ್ರಕಟ ಪಡಿಸಿ ಬಿಟ್ಟಿದ್ದೇವೆ! [118]

(ಓ ಮುಹಮ್ಮದ್,) ನಿಮ್ಮನ್ನು ಸತ್ಯವಾದ ಸಂದೇಶದೊಂದಿಗೆ (ಜನರೆಡೆಗೆ) ಕಳುಹಿಸಿರುವುದು ನಾವೇ. (ಸಜ್ಜನರಿಗೆ ಸ್ವರ್ಗದ) ಶುಭ ವಾರ್ತೆಯನ್ನು ತಲುಪಿಸುವವರಾಗಿಯೂ (ದುರ್ಜನರಿಗೆ ನರಕದ ಕುರಿತು) ಮುನ್ನೆಚ್ಚರಿಕೆಯನ್ನು ನೀಡುವವರಾಗಿಯೂ (ನಿಮ್ಮನ್ನು ಕಳುಹಿಸಿದ್ದೇವೆ). (ಅದಾಗಿಯೂ, ನಿಮ್ಮನ್ನು ಕಡೆಗಣಿಸಿ) ನರಕವನ್ನು ಸೇರುವವರ ಕುರಿತು ನಿಮ್ಮನ್ನು ಪ್ರಶ್ನಿಸಲಾಗುವುದಿಲ್ಲ. [119]

ಯಹೂದ್ಯರಾಗಲಿ ಅಥವಾ ಕ್ರೈಸ್ತರೇ ಆಗಲಿ, ಅವರ ರೀತಿ-ರಿವಾಜನ್ನು ನೀವು ಅನುಸರಿಸಿಕೊಳ್ಳುವ ತನಕವೂ ನಿಮ್ಮ ಬಗ್ಗೆ ಅವರು ಸ್ವಲ್ಪವೂ ತೃಪ್ತಿ ಪಟ್ಟುಕೊಳ್ಳಲಾರರು. ಅಲ್ಲಾಹ್ ನು ತೋರಿದ ಮಾರ್ಗವು ಮಾತ್ರವೇ ನಿಜವಾದ (ಅನುಸರಿಸಿಕೊಳ್ಳಲು ಯೋಗ್ಯವಾದ) ಮಾರ್ಗವಾಗಿದೆ ಎಂದು ಅವರಿಗೆ ಸ್ಪಷ್ಟವಾಗಿ ಸಾರಿಬಿಡಿ. ಇನ್ನು, ಸತ್ಯದ ಅರಿವು ನಿಮ್ಮ ಬಳಿಗೆ ಬಂದ ಬಳಿಕವೂ ಒಂದು ವೇಳೆ ಅವರ ಸ್ವೇಚ್ಛಾಚಾರವನ್ನು ನೀವು ಅನುಸರಿಸತೊಡಗಿದರೆ ಅಲ್ಲಾಹ್ ನ ಕಡೆಯಿಂದ ನಿಮಗಾರೂ ಮಿತ್ರನಾಗಲೀ, ನೆರವು ನೀಡುವವನಾಗಲೀ ಇರಲಾರನು. [120]

ನಾವು ಯಾರಿಗೆ ಗ್ರಂಥವನ್ನು (ಅರ್ಥಾತ್: ಕುರ್‌ಆನ್ ಅನ್ನು) ನೀಡಿದ್ದೇವೆಯೋ ಮತ್ತು ಅವರು ಅದನ್ನು ಓದಿಕೊಳ್ಳಬೇಕಾದ/ಕಲಿತುಕೊಳ್ಳಬೇಕಾದ ರೀತಿಯಲ್ಲಿ ಕಲಿತು (ಅನುಸರಿಸಿ) ಕೊಳ್ಳುತ್ತಾರೆಯೋ, ಅವರೇ ಅದರಲ್ಲಿ ಸರಿಯಾದ ನಂಬಿಕೆ ಇಟ್ಟವರು. ಮತ್ತು ಗ್ರಂಥವನ್ನು ಧಿಕ್ಕರಿಸಿ ಬಿಟ್ಟವರು ಸೋಲುಂಡವರ ಸಾಲಿಗೆ ಸೇರಿದವರು. [121]

ಇಸ್ರಾಈಲ್ ಸಂತತಿಗೆ ಸೇರಿದ ಜನರೇ! ನಿಮ್ಮ ಮೇಲೆ ನಾನು ತೋರಿದ ಆ ಅನುಗ್ರಹವನ್ನು ಸ್ಮರಿಸಿಕೊಳ್ಳಿ; ಅಂದರೆ, ಜಗತ್ತಿನ ಇತರ ಜನತೆಯ ಮೇಲೆ ನಿಮಗೆ ಹಿರಿಮೆಯನ್ನು ನಾನು ದಯಪಾಲಿಸಿದ್ದೆನು. ಮತ್ತು ಯಾವೊಬ್ಬ ವ್ಯಕ್ತಿಯೂ ಮತ್ತೊಬ್ಬನಿಗೆ ಯಾವುದೇ ರೀತಿಯಲ್ಲಿ ನೆರವಾಗಲು ಸಾಧ್ಯವಾಗದ (ಪುನರುತ್ಥಾನದ) ಆ ದಿನದ ಕುರಿತು ನೀವು ಜಾಗರೂಕರಾಗಿರಿ! ಆ ದಿನ (ಪಾಪ ವಿಮುಕ್ತಿಗಾಗಿ) ಪ್ರಾಯಶ್ಚಿತ್ತವನ್ನು ಸ್ವೀಕರಿಸಲಾಗದು, (ಅಪರಾಧಿಗಳಿಗೆ ಯಾರ) ಶಿಫಾರಸ್ಸೂ ಫಲಕಾರಿಯಾಗದು ಮತ್ತು ಅವರಿಗೆ ಯಾರ ಸಹಾಯವೂ ಇರಲಾರದು. [122-123]

ನಬಿ ಇಬ್ರಾಹೀಮ್ (ಅಂದರೆ ಬೈಬಲ್ ನಲ್ಲಿ ಉಲ್ಲೇಖಿಸಲಾದ ಪ್ರವಾದಿ ಅಬ್ರಹಾಮ್) ರನ್ನು ಅವರ ಒಡೆಯ (ಅಲ್ಲಾಹ್) ನು ಕೆಲವೊಂದು ವಿಷಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದ ಸಮಯವನ್ನು ನೆನಪಿಗೆ ತಂದುಕೊಳ್ಳಿ. ಅವರು ಅದರಲ್ಲಿ ಸಂಪೂರ್ಣವಾದ ಯಶಸ್ಸು ಸಾಧಿಸಿಕೊಂಡರು. (ಆಗ ಅಲ್ಲಾಹ್ ನು,) ನಾನು ನಿಮ್ಮನ್ನು ಮನುಕುಲಕ್ಕೆ ಒಬ್ಬ ನಾಯಕನನ್ನಾಗಿ ನೇಮಿಸಲಿರುವೆನು ಎಂದು ಹೇಳಿದನು. ನನ್ನ ಸಂತಾನದಿಂದಲೂ (ಹಾಗೆ ನಾಯಕರನ್ನು ನೇಮಿಸುವೆಯಾ? ಎಂದು ನಬಿ ಇಬ್ರಾಹೀಮ್ ರು) ಕೇಳಿದರು. ನನ್ನ ಈ ಭರವಸೆಯು (ನಿಮ್ಮ ಸಂತತಿಯ) ಭ್ರಷ್ಟ ಜನರಿಗೆ ಅನ್ವಯವಾಗದು – ಎಂದು ಅಲ್ಲಾಹ್ ನು ಸ್ಪಷ್ಟಪಡಿಸಿದನು. [124]

ಆ ಭವನ (ಅಂದರೆ ಮಕ್ಕಃ ಪಟ್ಟಣದಲ್ಲಿರುವ ಕಅಬಃ) ವನ್ನು ಜನರು ಪುನಃ ಪುನಃ ಸಂದರ್ಶಿಸುವ ಕೇಂದ್ರವನ್ನಾಗಿಯೂ ನೆಮ್ಮದಿಯ ಒಂದು ತಾಣವನ್ನಾಗಿಯೂ ನಾವು ನಿಶ್ಚಯಿಸಿದ ಸಂದರ್ಭವನ್ನು ಸ್ಮರಿಸಿಕೊಳ್ಳಿ. ಇಬ್ರಾಹೀಮ್ ರು ನಿಂತು (ಪ್ರಾರ್ಥಿಸುತ್ತಿದ್ದ) ಪ್ರದೇಶವನ್ನು ನೀವು ನಮಾಝ್ ನಿರ್ವಹಿಸುವ ಪ್ರದೇಶವನ್ನಾಗಿ ಮಾಡಿಕೊಳ್ಳಿ ಎಂದು (ಜನರಿಗೆ ನಾವು ಆದೇಶ ನೀಡಿದೆವು). ನನ್ನ ಕಅಬಃ ಭವನವನ್ನು ಅದಕ್ಕೆ ಪ್ರದಕ್ಷಿಣೆ ಬರುವವರಿಗೆ, ಅಲ್ಲಿ (ನನ್ನ) ಧ್ಯಾನದಲ್ಲಿ ಕುಳಿತುಕೊಳ್ಳುವವರಿಗೆ, ಶಿರಬಾಗುವವರಿಗೆ ಮತ್ತು ಸಾಷ್ಟಾಂಗವೆರಗುವವರಿಗಾಗಿ (ಎಲ್ಲಾ ರೀತಿಯ ಮಾಲಿನ್ಯ ಮತ್ತು ಅನಾಚಾರಗಳಿಂದ) ಶುದ್ಧವಾಗಿರಿಸಿರಿ ಎಂದು ಇಬ್ರಾಹೀಮ್ ಮತ್ತು ಇಸ್ಮಾಈಲ್ ರಿಗೆ ನಾವು ಆದೇಶ ನೀಡಿದೆವು. [125]

ಒಡೆಯಾ! ಈ ಮಕ್ಕಃ ಪಟ್ಟಣವನ್ನು ಸುರಕ್ಷಿತವಾದ ಶಾಂತವಾದ ಪಟ್ಟಣವನ್ನಾಗಿ ಮಾಡು; ಮತ್ತು ಇಲ್ಲಿಯ ನಿವಾಸಿಗಳ ಪೈಕಿ ಅಲ್ಲಾಹ್ ನಲ್ಲಿ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿರಿಸುವವರಿಗೆ ಹಣ್ಣು-ಹಂಪಲನ್ನು ಆಹಾರವಾಗಿ ದಯಪಾಲಿಸು – ಎಂದು ನಬಿ ಇಬ್ರಾಹೀಮ್ ರು ಪ್ರಾರ್ಥಿಸಿಕೊಂಡಾಗ, ಅದನ್ನು ಧಿಕ್ಕರಿಸಿದವನಿಗೂ ಭೂಲೋಕದಲ್ಲಿ ಸ್ವಲ್ಪ ಕಾಲ ಜೀವಿಸಿಕೊಳ್ಳಲು ಬೇಕಾದ ಸೌಲಭ್ಯವನ್ನು ಕೊಡುವೆನು. ಅನಂತರ ಅವನನ್ನು ನರಕದ ಶಿಕ್ಷೆಯತ್ತ ಬಲವಂತವಾಗಿ ದಬ್ಬಿ ಬಿಡುವೆನು. ಅದು ಅತ್ಯಂತ ನಿಕೃಷ್ಟವಾದ ನೆಲೆಯಾಗಿರುವುದು – ಎಂದು ಅಲ್ಲಾಹ್ ನು ಉತ್ತರಿಸಿದನು. [126]

ಇಬ್ರಾಹೀಮ್ ಮತ್ತು ಇಸ್ಮಾಈಲ್ ರವರು (ಜೊತೆಗೂಡಿ) ಕಅಬಃ ಭವನದ ಅಡಿಪಾಯವನ್ನು (ಗೋಡೆ ನಿರ್ಮಿಸುವ ಮೂಲಕ) ಮೇಲೇರಿಸುತ್ತಿರುವಾಗ, ಓ ನಮ್ಮ ಪರಿಪಾಲಕನಾದ ಒಡೆಯನೇ, ನಮ್ಮೀರ್ವರ ಈ ಸೇವೆಯನ್ನು ಸ್ವೀಕರಿಸು, ನೀನಾದರೋ ಎಲ್ಲವನ್ನೂ ಕೇಳುವವನೂ ಎಲ್ಲವನ್ನೂ ಬಲ್ಲವನೂ ಆಗಿರುವೆ. ನಮ್ಮ ಸಂರಕ್ಷಕನಾದ ಒಡೆಯನೇ, ನಮ್ಮೀರ್ವರನ್ನು ನಿನಗೆ ವಿಧೇಯರಾದ (ಮುಸ್ಲಿಮರಾಗಿ) ನಡೆದುಕೊಳ್ಳುವಂತೆ ಮಾಡು, ನಮ್ಮ ಸಂತಾನದಿಂದ ನಿನಗೆ ವಿಧೇಯರಾದ (ಮುಸ್ಲಿಮರಾದ) ಒಂದು ಜನಾಂಗವನ್ನು ಉಂಟು ಮಾಡು, ನಿನ್ನನ್ನು ಆರಾಧಿಸುವ ವಿಧಿ ವಿಧಾನಗಳನ್ನು ನಮಗೆ ತೋರಿಸಿ ಕೊಡು, ನಮ್ಮ ಮೇಲೆ ದಯೆ ತೋರು; ನೀನಾದರೋ ದಯೆ ತೋರುತ್ತಲೇ ಇರುವವನೂ ಅತಿ ಹೆಚ್ಚು ಕರುಣೆಯುಳ್ಳವನೂ ಆಗಿರುವೆ. ನಮ್ಮೊಡೆಯಾ, ನಮ್ಮ ಸಂತಾನದಲ್ಲಿ ಅವರಿಂದಲೇ ಆದ ಒಬ್ಬನನ್ನು ನಿನ್ನ ದೂತ (ಅರ್ಥಾತ್: ರಸೂಲ್) ಆಗಿ ಅವರಿಗೆ ನಿಯುಕ್ತಗೊಳಿಸು. (ಆ ದೂತನು) ಅವರಿಗೆ ನಿನ್ನ ವತಿಯಿಂದ ದಿವ್ಯ ವಚನಗಳನ್ನು ಓದಿ ಹೇಳುವವನೂ, ಗ್ರಂಥದ ಜ್ಞಾನ ಮತ್ತು ಯುಕ್ತಿಯನ್ನು ಅವರಿಗೆ ಕಲಿಸಿಕೊಡುವವನೂ ಮತ್ತು ಅವರನ್ನು ಸಂಸ್ಕರಿಸುವವನೂ ಆಗಲಿ. ನೀನಾದರೋ ಪ್ರತಾಪಶಾಲಿಯೂ ಮಹಾ ಜ್ಞಾನಿಯೂ ಅಗಿರುವೆ – (ಎಂದು ಪ್ರಾರ್ಥಿಸಿಕೊಂಡಿದ್ದರು). [127-129]

ಸ್ವತಃ ತನ್ನನ್ನೇ ವಂಚಿಸಿಕೊಂಡ ಮೂರ್ಖನಲ್ಲದೆ ಬೇರೆ ಯಾರು ತಾನೇ ನಬಿ ಇಬ್ರಾಹೀಮ್ ರು ಅನುಸರಿಸಿಕೊಂಡ (ಅಂದರೆ, ಅಲ್ಲಾಹ್ ನಿಗೆ ಮಾತ್ರ ಸಂಪೂರ್ಣವಾಗಿ ವಿಧೇಯನಾಗಿರುವ) ಮಾರ್ಗದಿಂದ ವಿಮುಖನಾದಾನು?! ಪ್ರಾಪಂಚಿಕ ಜೀವನದಲ್ಲಿ ನಾವು ಇಬ್ರಾಹೀಮ್ ರನ್ನು ಆಯ್ದು ಕೊಂಡಿದ್ದೆವು ಮತ್ತು ಇನ್ನೊಂದು ಲೋಕದಲ್ಲಿ ಸಹ ಅವರು ಖಂಡಿತ ಸಜ್ಜನರ ಕೂಟದಲ್ಲಿ ಇರುವರು. [130]

ನನಗೆ ವಿಧೇಯನಾಗು ಎಂದು ಇಬ್ರಾಹೀಮ್ ರಿಗೆ ಅವರ ಒಡೆಯನು ಹೇಳಿದ ತಕ್ಷಣ ನಾನು ನನ್ನನ್ನೇ ಲೋಕಗಳ ಒಡೆಯನಿಗಾಗಿ ಅರ್ಪಿಸಿಕೊಂಡು ಮುಸ್ಲಿಮನಾದೆ ಎಂದು ಉತ್ತರಿಸಿದರು. ತನ್ನ ಸಂತತಿಗೂ (ಅಲ್ಲಾಹ್ ನಿಗೆ ಮಾತ್ರ ತಮ್ಮನ್ನು ವಿಧೇಯಗೊಳಿಸಿ ಕೊಂಡ) ಮುಸ್ಲಿಮರಾಗಿ ನಡೆದುಕೊಳ್ಳುವಂತೆ ಇಬ್ರಾಹೀಮ್ ರು ತಾಕೀತು ಮಾಡಿದ್ದರು. ಅವರಂತೆಯೇ ನಬಿ ಯಅಕೂಬ್ ರು ಕೂಡ ಅವರ ಸಂತತಿಗೆ ಅದನ್ನೇ ತಾಕೀತು ಮಾಡಿದ್ದರು. ಓ ನನ್ನ ಮಕ್ಕಳೇ, ಅಲ್ಲಾಹ್ ನು ಇದನ್ನೇ ನಿಮ್ಮ ಪಾಲಿಗೆ ಧರ್ಮವಾಗಿ ಮೆಚ್ಚಿಕೊಂಡಿದ್ದಾನೆ, ಹಾಗಿರುವಾಗ ನೀವು ಮುಸ್ಲಿಮರು ಆಗಿರದ ಅವಸ್ಥೆಯಲ್ಲಿ ನಿಮಗೆ ಮರಣವು ಬರಲೇ ಬಾರದು, (ಅರ್ಥಾತ್: ಕೊನೆಯುಸಿರಿನ ತನಕ ಮುಸ್ಲಿಮರಾಗಿರಬೇಕು) – ಎಂದಾಗಿತ್ತು ಅವರೀರ್ವರ ತಾಕೀತು! [131-132]

ನಬಿ ಯಅಕೂಬ್ ರಿಗೆ ಮರಣವು ಸನ್ನಿಹಿತವಾದಾಗ ನೀವು ಅಲ್ಲಿ ಇದ್ದಿರೇನು? ನನ್ನ ಮರಣದ ನಂತರ ನೀವು ಏನನ್ನು/ಯಾರನ್ನು ಆರಾಧಿಸುವಿರಿ ಎಂದು ತನ್ನ ಮಕ್ಕಳೊಡನೆ ಅವರು ಕೇಳಿದಾಗ – ನಾವು ನಿಮ್ಮ ಆರಾಧ್ಯ (ಅಲ್ಲಾಹ್) ನನ್ನೇ ಆರಾಧಿಸುತ್ತೇವೆ; ನಿಮ್ಮ ಪೂರ್ವಜರಾದ ಇಬ್ರಾಹೀಮ್, ಇಸ್ಮಾಈಲ್ ಮತ್ತು ಇಸ್ಹಾಕ್ ರ ಆರಾಧ್ಯನನ್ನು; ಏಕ ಮಾತ್ರನಾದ ಆರಾಧ್ಯನವನು! ನಾವೆಲ್ಲಾ ಅವನಿಗೆ ಮಾತ್ರವೇ ನಮ್ಮನ್ನು ಸಮರ್ಪಿಸಿಕೊಂಡು ಮುಸ್ಲಿಮರಾಗಿರುತ್ತೇವೆ – ಎಂದು (ಯಅಕೂಬ್ ರ ಮಕ್ಕಳು) ಉತ್ತರಿಸಿದರು. [133]

(ಯಹೂದ್ಯರೇ, ನೀವು ಹೆಮ್ಮೆ ಪಟ್ಟುಕೊಳ್ಳುವ ನಿಮ್ಮ ಪೂರ್ವಜರಾದ) ಆ ಜನರು ಗತಿಸಿ ಹೋದರು. ಅವರು ಸಂಪಾದಿಸಿದ್ದು ಅವರಿಗೆ ಸಿಗುವುದು ಮತ್ತು ನೀವು ಸಂಪಾದಿಸುವುದು ನಿಮಗೆ ಸಿಗುವುದು. ಅವರೇನು ಮಾಡುತ್ತಿದ್ದರೋ ಅದರ ಬಗ್ಗೆ ನಿಮ್ಮನ್ನು ವಿಚಾರಣೆಗೆ ಒಳಪಡಿಸಲಾಗುವುದಿಲ್ಲ. [134]

ನೀವು ಯಹೂದ್ಯರಾದರೆ ಅಥವಾ ಕ್ರೈಸ್ತರಾದರೆ ಮಾತ್ರ ಸರಿದಾರಿಯನ್ನು ಪಡೆಯುವಿರಿ ಎಂದು (ಯಹೂದ್ಯರು ಮತ್ತು ಕ್ರೈಸ್ತರು) ಹೇಳುತ್ತಾರೆ. ಹೌದಾ? ಆದರೆ (ಅಲ್ಲಾಹ್ ನಲ್ಲಿ) ಮಾತ್ರ ತನ್ಮಯನಾದ ಇಬ್ರಾಹೀಮ್ ರ ಧರ್ಮವನ್ನು (ನಾವು ಅನುಸರಿಸುತ್ತೇವೆ), ಅವರು (ಅನೇಕರನ್ನು ಪೂಜಿಸುವ) ಮುಶ್ರಿಕ್ ಗಳ ಸಾಲಿಗೆ ಸೇರಿದವರಾಗಿರಲಿಲ್ಲ – ಎಂದು (ಓ ಮುಹಮ್ಮದ್) ನೀವು ಸಾರಿರಿ. [135]

ನಾವು ಅಲ್ಲಾಹ್ ನಲ್ಲಿ ವಿಶ್ವಾಸವಿಡುತ್ತೇವೆ; ನಮ್ಮತ್ತ ಕಳಿಸಲಾದ ದಿವ್ಯಸಂದೇಶದಲ್ಲಿ ವಿಶ್ವಾಸವಿಡುತ್ತೇವೆ; (ನಬಿಗಳಾದ) ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅಕೂಬ್ ಮತ್ತು ಯಅಕೂಬ್ ರ ಸಂತತಿಗೆ ಕಳಿಸಲಾದ (ದಿವ್ಯಸಂದೇಶದಲ್ಲಿ) ವಿಶ್ವಾಸವಿಡುತ್ತೇವೆ; ನಬಿ ಮೂಸಾ ಮತ್ತು ಈಸಾ ರಿಗೆ ನೀಡಲಾದ (ದಿವ್ಯಸಂದೇಶದಲ್ಲಿ) ವಿಶ್ವಾಸವಿಡುತ್ತೇವೆ; ಮತ್ತು ಯಾವ ದಿವ್ಯಸಂದೇಶವನ್ನು ಇತರೆಲ್ಲ ನಬಿಗಳಿಗೆ/ಪ್ರವಾದಿಗಳಿಗೆ ಅವರ ಒಡೆಯನ ಕಡೆಯಿಂದ ನೀಡಲಾಗಿತ್ತೋ ಅದರಲ್ಲಿ ವಿಶ್ವಾಸವಿಡುತ್ತೇವೆ; ಮತ್ತು ನಾವು ನಬಿಗಳ/ಪ್ರವಾದಿಗಳ ನಡುವೆ (ಯಹೂದ್ಯರು ಮಾಡುವಂತೆ) ತಾರತಮ್ಯ ಮಾಡುವವರಲ್ಲ, ಬದಲಾಗಿ (ಅವರೆಲ್ಲರಿಗೆ ನೀಡಲಾದ ದಿವ್ಯಸಂದೇಶದಲ್ಲಿ ವಿಶ್ವಾಸವಿಡುವ ಮೂಲಕ) ನಾವು ಅಲ್ಲಾಹ್ ನಿಗೆ ಸಂಪೂರ್ಣವಾಗಿ ವಿಧೇಯರಾಗಿ/ಮುಸ್ಲಿಮರಾಗಿ ನಡೆದು ಕೊಳ್ಳುತ್ತೇವೆ – ಎಂದು (ಓ ಮುಸ್ಲಿಮರೇ,) ನೀವಿನ್ನು ಘೋಷಿಸಿರಿ. [136]

(ಅಲ್ಲಾಹ್ ನು ಮುಹಮ್ಮದ್ ರಿಗೆ ಕಳಿಸುವ ದಿವ್ಯಸಂದೇಶದಲ್ಲಿ) ನೀವು ವಿಶ್ವಾಸವಿಡುವಂತೆಯೇ ಇನ್ನು ಅವರೂ ವಿಶ್ವಾಸವಿಡುತ್ತಾರೆ ಎಂದಾದರೆ ಅವರು ಖಂಡಿತ ಸರಿಯಾದ ದಾರಿಯಲ್ಲಿದ್ದಾರೆ. ಒಂದು ವೇಳೆ ಅವರು (ಆ ದಿವ್ಯಸಂದೇಶದಿಂದ) ವಿಮುಖರಾಗಿದ್ದಾರೆ ಎಂದಾದರೆ ಅವರು ನಿಜಕ್ಕೂ ಒಡಕು ಉಂಟು ಮಾಡುವವರೇ ಆಗಿರುವರು. ಆಗ, ಅವರಿಗೆ ವಿರುದ್ಧವಾಗಿ ನಿಮಗೆ ಸಹಾಯ ನೀಡಲು ಅಲ್ಲಾಹ್ ನೇ ಸಾಕು. ಅವನಾದರೋ ಎಲ್ಲವನ್ನೂ ಕೇಳುವವನೂ ಎಲ್ಲವನ್ನೂ ಬಲ್ಲವನೂ ಆಗಿರುವನು. [137]

(ಗ್ರಂಥ ನೀಡಲ್ಪಟ್ಟ ಜನರೇ, ಇನ್ನು ದೀಕ್ಷೆ ಸ್ವೀಕರಿಸಿ ಕೊಳ್ಳುವಿರಾದರೆ) ಅಲ್ಲಾಹ್ ನ ದೀಕ್ಷೆ ಸ್ವೀಕರಿಸಿಕೊಳ್ಳಿ! ದೀಕ್ಷೆ ನೀಡುವುದರಲ್ಲಿ ಅಲ್ಲಾಹ್ ನಿಗಿಂತ ಮಿಗಿಲಾದವರು ಯಾರಿದ್ದಾರೆ? ನಾವಾದರೋ ಅವನಿಗೆ ಮಾತ್ರ ಉಪಾಸನೆ ಮಾಡುವವರಾಗಿರುವೆವು. ನಮ್ಮ ನಿಮ್ಮೆಲ್ಲರ ಒಡೆಯನು/ಪರಿಪಾಲಕನು ಅಲ್ಲಾಹ್ ನೇ ಆಗಿರುವಾಗ ಅವನ ಕುರಿತು ನೀವು ನಮ್ಮೊಡನೆ ವಾದವಿವಾದದಲ್ಲಿ ತೊಡಗಿರುವುದಾದರೂ ಏಕೆ? ಎಂದು (ಗ್ರಂಥದ ಅನುಯಾಯಿಗಳೊಡನೆ) ಕೇಳಿರಿ. ನಾವು ಮಾಡಿದ ಒಳಿತು-ಕೆಡುಕುಗಳ ಪ್ರತಿಫಲವು ನಮಗೂ ನೀವು ಮಾಡಿದ ಕರ್ಮಗಳ ಫಲವು ನಿಮಗೂ ಸಿಗಲಿರುವುದು. ನಾವಾದರೋ ಅಲ್ಲಾಹ್ ನಿಗೆ ಪ್ರಾಮಾಣಿಕರಾಗಿದ್ದೇವೆ. [138-139]

(ಗ್ರಂಥದ ಅನುಯಾಯಿಗಳೇ,) ನಬಿ ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅಕೂಬ್ ಮತ್ತು ಯಅಕೂಬ್ ರ ಸಂತತಿಯವರು ಯಹೂದ್ಯರೋ ಅಥವಾ ಕ್ರೈಸ್ತರೋ ಆಗಿದ್ದರು ಎಂದು ನೀವು ವಾದಿಸುತ್ತಿರುವಿರೇನು? (ಆ ಬಗ್ಗೆ) ಹೆಚ್ಚು ತಿಳುವಳಿಕೆ ಇರುವುದು ನಿಮಗೋ ಅಥವಾ ಅಲ್ಲಾಹ್ ನಿಗೋ? ಎಂದು ಅವರೊಡನೆ ಕೇಳಿರಿ. ಅಲ್ಲಾಹ್ ನ ವತಿಯಿಂದ ನಿಮ್ಮ ಬಳಿಗೆ ಬಂದ (ಸತ್ಯ ಧರ್ಮದ ಕುರಿತ) ಸಾಕ್ಷ್ಯವನ್ನು (ಬಹಿರಂಗ ಪಡಿಸುವ ಬದಲು ಅದನ್ನು) ಬಚ್ಚಿಡುವವನಿಗಿಂತ ದೊಡ್ಡ ಅಕ್ರಮಿ/ಅಧರ್ಮಿ ಯಾರಿರಬಹುದು?! ನೀವೆಸಗುತ್ತಿರುವ ಕೃತ್ಯಗಳ ಕುರಿತು ಅಲ್ಲಾಹ್ ನಿಗೆ ತಿಳಿಯದೇ ಹೋಗಿಲ್ಲ. (ಯಹೂದ್ಯರೇ, ನೀವು ಹೆಮ್ಮೆ ಪಟ್ಟುಕೊಳ್ಳುವ ನಿಮ್ಮ ಪೂರ್ವಜರಾದ) ಆ ಜನರು ಗತಿಸಿ ಹೋದ ಸಮುದಾಯಕ್ಕೆ ಸೇರಿಕೊಂಡರು. ಅವರು ಸಂಪಾದಿಸಿದ್ದು ಅವರಿಗೆ ಸಿಗುವುದು ಮತ್ತು ನೀವು ಸಂಪಾದಿಸುವುದು ನಿಮಗೂ ಸಿಗುವುದು. ಅವರೇನು ಮಾಡುತ್ತಿದ್ದರೋ ಅದರ ಬಗ್ಗೆ ನಿಮ್ಮನ್ನು ವಿಚಾರಣೆಗೆ ಒಳಪಡಿಸಲಾಗುವುದಿಲ್ಲ. [140-141]

✽2✽ (ಮುಹಮ್ಮದ್ ರ ಅನುಯಾಯಿಗಳು ನಮಾಝ್ ನಿರ್ವಹಿಸುವಾಗ) ಇದುವರೆಗೂ ಅವರು ಅಭಿಮುಖರಾಗುತ್ತಿದ್ದ ಕಿಬ್ಲಃ/ದಿಕ್ಕು (ಅಂದರೆ ಜೆರುಸಲೇಮ್ ನಲ್ಲಿರುವ ಬೈತ್ ಅಲ್-ಮಕ್ದಿಸ್) ನಿಂದ ಅದಾವ ಅಂಶವು ಅವರನ್ನು ಇದೀಗ (ಒಮ್ಮಿಂದೊಮ್ಮೆಲೇ) ಬೇರೆ ದಿಕ್ಕಿಗೆ ತಿರುಗಿಕೊಳ್ಳುವಂತೆ ಮಾಡಿತು? ಎಂದು ಜನರ ಪೈಕಿಯ ಮೂರ್ಖರು (ಅರ್ಥಾತ್: ಗ್ರಂಥದವರು) ಕೇಳುವರು. ಪೂರ್ವ ಪಶ್ಚಿಮಗಳು ಅಲ್ಲಾಹ್ ನದ್ದೇ ಆಗಿವೆ ಎಂದು ಅವರಿಗೆ ಹೇಳಿ ಬಿಡಿರಿ. ತಾನು ಇಚ್ಛಿಸಿದವರನ್ನು ಅವನು ನೇರವಾದ ಮಾರ್ಗದಲ್ಲಿ ನಡೆಸುತ್ತಾನೆ. ಅಂತೆಯೇ, ಅಲ್ಲಾಹ್ ನ ದೂತ (ಮುಹಮ್ಮದ್ ರು) ನಿಮಗೆ ಸಾಕ್ಷಿಯಾಗುವಂತೆ ಮತ್ತು ನೀವು ಇತರ ಜನರಿಗೆ ಸಾಕ್ಷಿಯಾಗುವಂತೆ, (ಮುಹಮ್ಮದ್ ರ ಅನುಯಾಯಿಗಳಾದ) ನಿಮ್ಮನ್ನು ಒಂದು ಮಧ್ಯಸ್ಥ ಸಮುದಾಯವನ್ನಾಗಿ ನಾವು ನೇಮಿಸಿದ್ದೇವೆ. ಅಲ್ಲಾಹ್ ನ ದೂತ (ಮುಹಮ್ಮದ್) ರನ್ನು ಅನುಸರಿಸಿಕೊಳ್ಳುವವರನ್ನು, ಅವರ ಬೆನ್ನ ಹಿಂದೆ ಅವರಿಂದ ವಿಮುಖರಾಗಿ ಓಡಿ ಬಿಡುವ ಜನರಿಂದ ಪ್ರತ್ಯೇಕಿಸಿ ಗುರುತಿಸಿಕೊಳ್ಳುವ ಸಲುವಾಗಿಯೇ ಈ ಹಿಂದೆ ನೀವು (ನಮಾಝ್ ನಿರ್ವಹಿಸಲು) ಅಭಿಮುಖರಾಗುತ್ತಿದ್ದ ಕಿಬ್ಲಃ ವನ್ನು ನಾವು ಗೊತ್ತುಪಡಿಸಿದ್ದೆವು! ಅಲ್ಲಾಹ್ ನು ಯಾರಿಗೆ ಸರಿದಾರಿ ತೋರಿಸಿದನೋ ಅವರ ಹೊರತು ಇತರರಿಗೆ ನಿಜವಾಗಿ ಈ (ಕಿಬ್ಲಃ ಬದಲಾವಣೆ ಕಾರ್ಯವು) ಒಂದು ಬಲು ಕಠಿಣ ಪರೀಕ್ಷೆಯೇ ಆಗಿದೆ. ಅಲ್ಲಾಹ್ ನಾದರೋ ನಿಮ್ಮ ‘ಈಮಾನ್’ ಅನ್ನು ವ್ಯರ್ಥಗೊಳಿಸಿ ಬಿಡುವವನಲ್ಲ. ನಿಜವೇನೆಂದರೆ ಜನರ ಪಾಲಿಗೆ ಅಲ್ಲಾಹ್ ನು ಪರಮ ಔದಾರ್ಯವಂತನೂ ಕಾರುಣ್ಯವಂತನೂ ಆಗಿರುವನು. [142-143]

(ಪೈಗಂಬರರೇ,) ನೀವು ಪದೇ ಪದೇ ಆಕಾಶದೆಡೆಗೆ (ಹಂಬಲಿಸಿ) ಮುಖವೆತ್ತುತ್ತಿರುವುದನ್ನು ನಾವು ನೋಡುತ್ತಿದ್ದೇವೆ. (ನಮಾಝ್ ನಿರ್ವಹಿಸಲು) ನೀವು ಬಯಸಿತ್ತಿರುವ ದಿಕ್ಕಿನ/ಕಿಬ್ಲಃ ದ ಕಡೆಗೇ ನಾವು ನಿಮ್ಮನ್ನು ಇದೋ ತಿರುಗಿಸಲಿರುವೆವು. ಆದ್ದರಿಂದ, ನೀವಿನ್ನು (ನಮಾಝ್ ಗಾಗಿ) ‘ಮಸ್ಜಿದ್ ಅಲ್-ಹರಾಮ್’ (ಅರ್ಥಾತ್: ಮಕ್ಕಃ ದಲ್ಲಿರುವ ಕಅಬಃ) ದ ಕಡೆಗೆ ನಿಮ್ಮನ್ನು ತಿರುಗಿಸಿಕೊಳ್ಳಿ. ಮತ್ತು (ಮುಸ್ಲಿಮರೇ,) ನೀವು ಎಲ್ಲಿದ್ದರೂ (ಇನ್ನು ಮುಂದೆ ನಮಾಝ್ ನಿರ್ವಹಿಸುವುದಕ್ಕಾಗಿ ಜೆರುಸಲೇಮ್ ನ ಕಡೆಗೆ ತಿರುಗಿಕೊಳ್ಳುವ ಬದಲು) ಕಅಬಃ ದ ಕಡೆಗೇ ತಿರುಗಿಕೊಳ್ಳಿ. ಇದು ಅವರ ಒಡೆಯನ ಕಡೆಯಿಂದ ಬಂದ ಸತ್ಯವಾದ (ಆದೇಶವೆಂದು) ಗ್ರಂಥವನ್ನು ಹೊಂದಿದವರು ಚೆನ್ನಾಗಿ ಅರಿತು ಕೊಂಡಿದ್ದಾರೆ. (ಆ ಸತ್ಯವನ್ನು ಅರಿತೂ) ಅವರು ಏನು ಮಾಡುತ್ತಿದ್ದಾರೋ ಆ ಕುರಿತು ಅಲ್ಲಾಹ್ ನಿಗೆ ತಿಳಿಯದೇ ಹೋಗಿಲ್ಲ! [144]

(ಸಲಾತ್/ನಮಾಝ್ ಸಂಬಂಧಿತ ಕಿಬ್ಲಃ ಬದಲಾವಣೆಯ ಕುರಿತಂತೆ) ಸಕಲ ರೀತಿಯ ಪುರಾವೆಗಳನ್ನು ಒಂದು ವೇಳೆ ನೀವು (ಅವರ ಮುಂದೆ) ತಂದಿರಿಸಿದರೂ ಗ್ರಂಥವನ್ನು ಹೊಂದಿರುವ (ಯಹೂದ್ಯರು ಮತ್ತು ಕ್ರೈಸ್ತರು) ನಿಮ್ಮ ಕಿಬ್ಲಃ ವನ್ನು ಅನುಸರಿಸುವವರಲ್ಲ. ಮತ್ತು ನೀವೂ ಸಹ ಅವರ ಕಿಬ್ಲಃ ವನ್ನು ಅನುಸರಿಸುವುದಿಲ್ಲ. (ಯಹೂದ್ಯರು ಮತ್ತು ಕ್ರೈಸ್ತರು) ಒಬ್ಬರ ಕಿಬ್ಲಃ ವನ್ನು ಮತ್ತೊಬ್ಬರು ಅನುಸರಿಕೊಳ್ಳಲಾರರು. ನಿಮಗೆ ಈ ತಿಳುವಳಿಕೆ ನೀಡಲ್ಪಟ್ಟ ನಂತರವೂ ನೀವು ಅವರ ಸ್ವೇಚ್ಛಾಚಾರವನ್ನು ಅನುಕರಿಸಿದರೆ ನಿಜವಾಗಿಯೂ ನೀವಿದೋ ತಪ್ಪಿತಸ್ಥರ ಸಾಲಿಗೆ ಸೇರುವಿರಿ. [145]

ಯಾರಿಗೆ ನಾವು ಗ್ರಂಥ (ತೋರ/ಬೈಬಲ್) ನೀಡಿರುವೆವೋ ಅವರು ಇದನ್ನು (ಅಂದರೆ ಕುರ್‌ಆನ್ ನ ಈ ಅದೇಶವನ್ನು) ಸ್ವತಃ ತಮ್ಮ ಮಕ್ಕಳನ್ನು ಗುರುತಿಸಿಕೊಂಡಂತೆ (ನಿಖರವಾಗಿ) ಗುರುತಿಸುತ್ತಾರೆ. ಆದರೂ ಅವರಲ್ಲಿಯ ಒಂದು ಪಂಗಡವಂತು ತಿಳಿದೂ ತಿಳಿದೂ ಸತ್ಯವನ್ನು ಬಚ್ಚಿಡುತ್ತದೆ. ಇದಾದರೋ ನಿಮ್ಮ ಒಡೆಯನ/ಪಾಲಕನ ಕಡೆಯಿಂದಲೇ ಬಂದ ಪರಮ ಸತ್ಯವಾಗಿದೆ. ಹಾಗಿರುವಾಗ ನೀವೆಂದೂ ಸಂಶಯಿಸುವವರ ಸಾಲಿಗೆ ಸೇರದಿರಿ. [146-147]

ಪ್ರತಿಯೊಬ್ಬರಿಗೂ ಮುಖ ಮಾಡಿಕೊಳ್ಳಲು ಒಂದೊಂದು ದಿಕ್ಕು ಇರುತ್ತದೆ. ಆದರೆ ನೀವು ಒಳಿತಿನ ಮಾರ್ಗದಲ್ಲಿ ಸ್ಪರ್ಧಿಸಿ (ಇತರರಿಗಿಂತ) ಮುಂದೆ ಸಾಗಿರಿ. ನೀವೆಲ್ಲ ಎಲ್ಲೇ ಇದ್ದರೂ ಅಲ್ಲಾಹ್ ನು ನಿಮ್ಮನ್ನು ಒಂದುಗೂಡಿಸಿ ಕೊಳ್ಳುವನು. ಅಲ್ಲಾಹ್ ನಾದರೋ ಪ್ರತಿಯೊಂದು ವಿಷಯದ ಮೇಲೂ ಎಲ್ಲ ರೀತಿಯ ಸಾಮರ್ಥ್ಯ ಹೊಂದಿರುವನು. [148]

ನೀವು ಎಲ್ಲಿಂದ ಹೊರಟಿದ್ದರೂ (ಯಾತ್ರೆಯಲ್ಲಿರುವಾಗ ಸಲಾತ್/ನಮಾಝ್ ನಿರ್ವಹಿಸಲು) ಮಸ್ಜಿದ್ ಅಲ್-ಹರಾಮ್ (ಅಂದರೆ ಮಕ್ಕಃ ದಲ್ಲಿರುವ ಕಅಬಃ) ದ ಕಡೆಗೆ ಮುಖ ಮಾಡಿಕೊಳ್ಳಿ. ಖಂಡಿತವಾಗಿ (ಈ ಆದೇಶವು) ನಿಮ್ಮ ಒಡೆಯನ ಕಡೆಯಿಂದ ಬಂದ ಪರಮ ಸತ್ಯ ಸಂಗತಿಯಾಗಿದೆ. ನೀವು ಏನೆಲ್ಲ ಮಾಡುತ್ತಿರುವಿರೋ ಅದು ಅಲ್ಲಾಹ್ ನಿಗೆ ತಿಳಿಯದೇ ಹೋಗಿಲ್ಲ! [149]

(ಯಾತ್ರೆಯಲ್ಲಿ ಸಾಗಿರುವಾಗ) ನೀವು ಎಲ್ಲಿಂದ ಹೊರಟಿದ್ದರೂ (ನಮಾಝ್ ನ ವೇಳೆ) ಮಸ್ಜಿದ್ ಅಲ್-ಹರಾಮ್ ನ ಕಡೆಗೇ ಮುಖ ಮಾಡಿಕೊಳ್ಳಿ. ಮಾತ್ರವಲ್ಲ ನಿಮ್ಮ ವಾಸ್ತವ್ಯ ಎಲ್ಲಿದ್ದರೂ (ನಮಾಝ್ ಗಾಗಿ) ನೀವೆಲ್ಲರೂ ಅದರ ಕಡೆಗೇ ಮುಖ ಮಾಡಿಕೊಳ್ಳಬೇಕು. ಜನರ ಪೈಕಿ (ಅರ್ಥಾತ್: ಯಹೂದ್ಯರ ಪೈಕಿ) ಅಕ್ರಮಿಗಳ ಹೊರತು ಇತರರಿಗೆ ನಿಮ್ಮ ವಿರುದ್ಧ ವಾದಿಸಿಕೊಳ್ಳಲು ಪುರಾವೆಗಳು ಸಿಗದಿರಲು (ನೀವು ನಮಾಝ್ ನ ವೇಳೆ ಒಂದೇ ಕಿಬ್ಲಃ ದ ಕಡೆಗೆ ತಿರುಗಿ ಕೊಳ್ಳಬೇಕು). (ನೀವೇನು ಮಾಡಿದರೂ ಟೀಕಿಸದೆ ಬಿಡದ) ಅಕ್ರಮಿಗಳನ್ನು ಭಯಪಡದಿರಿ, ಬದಲಾಗಿ ನನ್ನ ಅನುಗ್ರಹಗಳನ್ನು ನಿಮ್ಮ ಮೇಲೆ ಪೂರ್ತಿಗೊಳಿಸಲು ಮತ್ತು ನೀವು ಸರಿದಾರಿ ಪಡೆದುಕೊಳ್ಳುವಂತಾಗಲು ನನಗೆ ಮಾತ್ರವೇ ಭಯಭಕ್ತಿ ತೋರಿರಿ. ಹಾಗೆಯೇ, ನಿಮ್ಮವರೇ ಆದ ಒಬ್ಬ ರಸೂಲ್ (ಅರ್ಥಾತ್: ಅಲ್ಲಾಹ್ ನ ದೂತ ಮುಹಮ್ಮದ್) ರನ್ನು ನಾವು ನಿಮ್ಮೆಡೆಗೆ ಕಳಿಸಿದೆವು. ಅವರು (ನಿದರ್ಶನಗಳಂತಿರುವ) ನನ್ನ ವಚನಗಳನ್ನು ನಿಮಗೆ ವಿವರಿಸುತ್ತಾರೆ; ನಿಮ್ಮನ್ನು ನಿಷ್ಕಳಂಕ ಗೊಳಿಸುತ್ತಾರೆ, ಗ್ರಂಥದಲ್ಲಿನ ಆದೇಶಗಳನ್ನೂ ಜಾಣ್ಮೆಯುಕ್ತ ವಿಚಾರಗಳನ್ನೂ ನಿಮಗೆ ಕಲಿಸಿಕೊಡುತ್ತಾರೆ. ನೀವು ತಿಳಿದುಕೊಂಡೇ ಇರದ ವಿಚಾರಗಳನ್ನೂ ನಿಮಗೆ ತಿಳಿಯಪಡಿಸುತ್ತಾರೆ. ಆದಕಾರಣ ನೀವು ನನ್ನನ್ನು ಸ್ಮರಿಸಿಕೊಳ್ಳುವವರಾಗಿರಿ, ನಾನೂ ನಿಮ್ಮನ್ನು ಸ್ಮರಿಸುವೆನು. ನನಗೆ ಕೃತಜ್ಞತೆ ಸಲ್ಲಿಸುವವರಾಗಿರಿ, ಎಂದೂ ಕೃತಘ್ನರಾಗದಿರಿ. [150-152]

(ಅಲ್ಲಾಹ್ ನಲ್ಲಿ ಧೃಡವಾದ ನಂಬಿಕೆಯುಳ್ಳ) ವಿಶ್ವಾಸಿಗಳೇ, ಪರಮಾವಧಿ ಸಹನೆ ಮತ್ತು ಪ್ರಾರ್ಥನೆಯ ಮೂಲಕ (ಅಲ್ಲಾಹ್ ನ) ಸಹಾಯವನ್ನು ಬಯಸಿರಿ. ಅಲ್ಲಾಹ್ ನಾದರೋ ಸಹನಶೀಲ ಜನರೊಂದಿಗೆ ಇದ್ದಾನೆ. ಇನ್ನು ಅಲ್ಲಾಹ್ ನ ಮಾರ್ಗದಲ್ಲಿ ಪ್ರಾಣ ತೆತ್ತವರನ್ನು ಮೃತರಾಗಿದ್ದಾರೆ ಎಂದು ನೀವು ಹೇಳ ಬೇಡಿರಿ; ಅವರು ಮೃತರಾಗಿಲ್ಲ, ಬದಲಾಗಿ ಜೀವಂತವಾಗಿದ್ದಾರೆ. ಆದರೆ ನೀವು (ಅವರ ಆ ಜೀವನಾವಸ್ಥೆಯನ್ನು) ಗ್ರಹಿಸಿಕೊಳ್ಳಲಾರಿರಿ. [153-154]

ಕೆಲವೊಂದು ವಿಷಯಗಳಲ್ಲಿ ಖಂಡಿತವಾಗಿ ನಿಮ್ಮ (ಸಹನೆಯನ್ನು) ನಾವು ಪರೀಕ್ಷಿಸಿಯೇ ತೀರುತ್ತೇವೆ. ನಿಮ್ಮನ್ನು ಭಯಾತಂಕಕ್ಕೆ ಒಳಪಡಿಸಿ, ಹಸಿವೆಯಿಂದ ಬಳಲುವಂತೆ ಮಾಡಿ, ನಿಮ್ಮ ಸೊತ್ತು-ವಿತ್ತ, ಜೀವ, ಬೆಳೆ-ಉತ್ಪನ್ನಗಳಿಗೆ ನಷ್ಟ ಸಂಭವಿಸುವಂತೆ ಮಾಡಿ (ಪರೀಕ್ಷೆಗೊಳಪಡಿಸಿದಾಗ) ತಾಳ್ಮೆವಹಿಸಿಕೊಂಡವನಿಗೆ, (ಪೈಗಂಬರರೇ, ನೀವು) ಶುಭ ವಾರ್ತೆಯನ್ನು ನೀಡಿರಿ. ಆ (ಸಹನಶೀಲ) ಜನರು ತಮ್ಮ ಮೇಲೆ ಏನಾದರೂ ವಿಪತ್ತು ಬಂದೆರಗಿದಾಗ (ಸಹನೆಯನ್ನು ಕಳೆದು ಕೊಳ್ಳುವ ಬದಲು), ನಾವಾದರೋ ಅಲ್ಲಾಹ್ ನಿಗಾಗಿಯೇ ಇರುವವರು ಮತ್ತು ಅವನ ಕಡೆಗೇ ಮರಳಿ ಹೋಗಲಿರುವವರು ಆಗಿದ್ದೇವೆ – ಎಂದು ಹೇಳಿ ಕೊಳ್ಳುವರು. ಅಂಥವರಿಗೆ ಅವರ ಒಡೆಯನ ಕಡೆಯಿಂದ ಹೆಚ್ಚು ಪುರಸ್ಕಾರಗಳು ಮತ್ತು ಅನುಗ್ರಹಗಳು ಸಿಗಲಿವೆ. ಮತ್ತು ಅವರೇ ಸರಿಯಾದ ದಾರಿಯಲ್ಲಿರುವವರು! [155-157]

'ಸಫಾ' ಮತ್ತು 'ಮರ್ವಾ' ಗಳು ಖಂಡಿತವಾಗಿ ಅಲ್ಲಾಹ್ ನು (ಹಜ್ಜ್ ಸಂಬಂಧಿತವಾಗಿ ನಿಶ್ಚಯಿಸಿರುವ) ಸಂಕೇತಗಳಲ್ಲಿ ಸೇರಿವೆ. ಆದ್ದರಿಂದ ಯಾರಾದರೂ ಅಲ್ಲಾಹ್ ನ ಭವನವಾದ (ಕಅಬಾ) ಕ್ಕೆ ಹೋಗಿ 'ಹಜ್ಜ್' ಅಥವಾ 'ಉಮ್ರಾ' ನಿರ್ವಹಿಸುವುದಾದರೆ 'ಸಫಾ' ಮತ್ತು 'ಮರ್ವಾ' ಗಳ ನಡುವೆ (ಸ'ಈ ಮಾಡಲು) ಅತ್ತಿತ್ತ ನಡೆಯುವುದು [ನಿಮ್ಮ ಪೈಕಿಯ ಕೆಲವರು ಊಹಿಸಿಕೊಂಡಂತೆ] ತಪ್ಪು ಕೆಲಸವಲ್ಲ. ಹೌದು, ಯಾರಾದರೂ ಒಂದು ಪುಣ್ಯ ಕಾರ್ಯವನ್ನು ಸ್ವಇಚ್ಛೆಯಿಂದ ಮಾಡಿದರೆ ಅಲ್ಲಾಹ್ ನು ಅದನ್ನು ಮೆಚ್ಚಿಕೊಳ್ಳುವನು; ಅವನು ಎಲ್ಲವನ್ನೂ ಬಲ್ಲ ಜ್ಞಾನಿಯಾಗಿರುವನು. [158]

ಸುಸ್ಪಷ್ಟ ದೃಷ್ಟಾಂತ ಮತ್ತು ಮಾರ್ಗದರ್ಶನಗಳನ್ನು ನಾವು ಕಳಿಸಿಕೊಟ್ಟು, ಎಲ್ಲಾ ಜನರಿಗೆ ತಿಳಿಯುವಂತೆ ಈ ಗ್ರಂಥದಲ್ಲಿ ವಿವರಿಸಿಕೊಟ್ಟ ನಂತರವೂ ಅದನ್ನು ಬಚ್ಚಿಡುವವರನ್ನು ಅಲ್ಲಾಹ್ ನು ಶಪಿಸುತ್ತಾನೆ, ಮತ್ತು ಶಪಿಸುವ ಇತರರೂ ಅವರನ್ನು ಶಪಿಸುವರು. ಆದರೆ ಪಶ್ಚಾತ್ತಾಪ ಪಟ್ಟುಕೊಂಡು ತಮ್ಮನ್ನು ತಿದ್ದಿ ಸರಿಪಡಿಸಿಕೊಂಡು, (ಯಾವ ಸತ್ಯವನ್ನು ಬಚ್ಚಿಡುತ್ತಿದ್ದರೋ ಅದನ್ನು ಜನರಿಗೆ) ಬಹಿರಂಗ ಪಡಿಸುವವರು ಇದರಿಂದ ಹೊರತಾಗಿದ್ದಾರೆ. ಅಂಥವರನ್ನು ನಾನು ಕ್ಷಮಿಸುವೆನು; ನಾನು ಅತಿ ಹೆಚ್ಚು ಕ್ಷಮಿಸುವವನೂ ಮಹಾ ಕಾರುಣ್ಯವಂತನೂ ಆಗಿರುವೆನು. ಅದಕ್ಕೆ ವ್ಯತಿರಿಕ್ತವಾಗಿ ಯಾರು ಸತ್ಯವನ್ನು ಧಿಕ್ಕರಿಸುತ್ತಾರೋ ಮತ್ತು ಸತ್ಯವನ್ನು ಧಿಕ್ಕರಿಸುತ್ತಿದ್ದ ಸ್ಥಿತಿಯಲ್ಲೇ ಮರಣವನ್ನಪ್ಪುತ್ತಾರೋ ಅಂತಹವರ ಮೇಲೆ ಅಲ್ಲಾಹ್ ನ ಶಾಪವಿರುವುದು, ಅಲ್ಲಾಹ್ ನ ಮಲಕ್ ಗಳ ಶಾಪವೂ ಇರುವುದು, ಮಾತ್ರವಲ್ಲ ಮನುಜರೆಲ್ಲರ ಶಾಪವೂ ಅವರಿಗೆ ತಗುಲಲಿದೆ! ಅಂಥವರು ಶಾಪಕ್ಕೊಳಗಾದ ಸ್ಥಿತಿಯಲ್ಲಿ ಎಂದೆಂದಿಗೂ (ನರಕದಲ್ಲಿ) ಬಿದ್ದಿರುವರು. ಅವರ ಶಿಕ್ಷೆಯನ್ನು ಕಿಂಚಿತ್ತೂ ಕಡಿಮೆಗೊಳಿಸಲಾಗದು ಮತ್ತು ಅವರಿಗೆ (ಬೇರಾವುದಕ್ಕೂ) ಕಾಲಾವಕಾಶ ನೀಡಲಾಗದು. [159-162]

ನೀವು ಆರಾಧಿಸಬೇಕಾದ ಆರಾಧ್ಯನು ಏಕಮಾತ್ರನು! ಆ ಅರಾಧ್ಯನ ಹೊರತು ಆರಾಧನೆಗೆ ಅರ್ಹರಾದವರು ಯಾರೂ ಇಲ್ಲ. ಅವನು ಅತ್ಯಂತ ದಯವುಳ್ಳವನು, ಪರಮ ಕಾರುಣ್ಯವಂತನು. (ಅವನ ಮಹಿಮೆಯನ್ನು ಅರಿತುಕೊಳ್ಳಲು) ಭೂಮಿ-ಆಕಾಶಗಳ ಸೃಷ್ಟಿ ವೈಖರಿಯಲ್ಲಿ, ಹಗಲು-ಇರುಳುಗಳ ನಿರಂತರ ಪರಿವರ್ತನೆಯಲ್ಲಿ, ಜನರ ಉಪಯುಕ್ತ ವಸ್ತುಗಳೊಂದಿಗೆ ಸಮುದ್ರದಲ್ಲಿ ಚಲಿಸುವ ಹಡಗುಗಳಲ್ಲಿ, ಆಕಾಶದಿಂದ ಅಲ್ಲಾಹ್ ನು ಮಳೆನೀರು ಸುರಿಸಿ ನಿರ್ಜೀವ ಭೂಮಿಗೆ ಮತ್ತೆ ಜೀವಕಳೆ ನೀಡುವ ಪ್ರಕ್ರಿಯೆಯಲ್ಲಿ, ಎಲ್ಲ ರೀತಿಯ ಜೀವಿಗಳನ್ನು ಭೂಮಿಯಲ್ಲಿ ಹರಡಿ ಬಿಡುವುದರಲ್ಲಿ, ಮಾರುತಗಳು ಮಾರ್ಪಾಡಿಗೆ ಒಳಪಡುವ ಕ್ರಿಯೆಯಲ್ಲಿ, ಭೂಮ್ಯಾಕಾಶಗಳ ನಡುವೆ (ಅಲ್ಲಾಹ್ ನ) ನಿಯಂತ್ರಣಕ್ಕೊಳಪಟ್ಟು ಚಲಿಸುವ ಮೋಡಗಳಲ್ಲಿ, ವಿವೇಚನೆ ನಡೆಸುವ ಬುದ್ಧಿವಂತರಿಗೆ ಖಂಡಿತವಾಗಿ ಸಾಕಷ್ಟು ದೃಷ್ಟಾಂತಗಳಿವೆ. (ಅಂತಹ ದೃಷ್ಟಾಂಗಳನ್ನು ಕಣ್ಣಾರೆ ಕಂಡುಕೊಂಡ ಬಳಿಕವೂ) ಜನರ ಪೈಕಿ ಕೆಲವರು ಅಲ್ಲಾಹ್ ನ ಬದಲು ಬೇರೆಯವರನ್ನು (ಅಲ್ಲಾಹ್ ನಿಗೆ) ಸಮನಾಗಿಸಿ ಕೊಂಡವರಿದ್ದಾರೆ; ಅಲ್ಲಾಹ್ ನನ್ನು ಪ್ರೀತಿಸ ಬೇಕಾದ ರೀತಿಯಲ್ಲಿ ಆ ಜನರು ಅವರನ್ನು ಪ್ರೀತಿಸುತ್ತಾರೆ. ಆದರೆ (ಅಲ್ಲಾಹ್ ನಲ್ಲಿ) ಧೃಡ ವಿಶ್ವಾಸವಿಟ್ಟು ಕೊಂಡವರು ಅಲ್ಲಾಹ್ ನನ್ನು ಹೆಚ್ಚು ಗಾಢವಾಗಿ ಪ್ರೀತಿಸುವವರಾಗಿದ್ದಾರೆ. ಅಕ್ರಮವೆಸಗಿದವರು (ಅವರಿಗೆ ಸಿಗಲಿರುವ) ಶಿಕ್ಷೆಯನ್ನು ಒಂದು ವೇಳೆ (ಇಂದೇ) ಕಂಡು ಕೊಳ್ಳುತ್ತಿದ್ದರೆ, ಶಕ್ತಿ-ಸಾಮರ್ಥ್ಯಗಳೆಲ್ಲವೂ ಅಲ್ಲಾಹ್ ನಲ್ಲಿಯೇ ಇರುವುದು ಮತ್ತು ಅಲ್ಲಾಹ್ ನು ಅತ್ಯಂತ ಕಠಿಣವಾಗಿ ಶಿಕ್ಷಿಸುವವನು ಎಂಬ (ವಾಸ್ತವಿಕತೆ) ಅವರಿಗೆ ಮನವರಿಕೆಯಾಗುತ್ತಿತ್ತು! [163-165]

(ಪ್ರಾಪಂಚಿಕ ಜೀವನದಲ್ಲಿ ಯಾರನ್ನು ಅಲ್ಲಾಹ್ ನಿಗೆ ಸಮನಾಗಿಸಲಾಗಿತ್ತೋ) ಆ ಮುಖಂಡರು ಅವರ ಹಿಂಬಾಲಕರನ್ನು (ಪರಲೋಕದಲ್ಲಿ) ನಿರಾಕರಿಸಿ ಬಿಡುವರು! ಆದರೂ ಅವರು ಶಿಕ್ಷೆಯನ್ನು ಕಂಡೇ ತೀರುವರು. (ಮುಖಂಡರ ಮತ್ತು ಅವರನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದ ಅವರ ಹಿಂಬಾಲಕರ ನಡುವಿನ) ಬಾಂಧವ್ಯ/ಸಂಬಂಧಗಳೆಲ್ಲ ಒಮ್ಮೆಲೇ ಕಡಿದು ಹೋಗುವುದು. (ಆಗ ಆ ಮುಖಂಡರ) ಹಿಂಬಾಲಕರು ಹೇಳುವರು: ಒಂದು ವೇಳೆ ನಮಗೆ (ಭೂಮಿಗೆ) ಹಿಂದಿರುಗಲು ಒಂದು ಅವಕಾಶ ಸಿಕ್ಕಿ ಬಿಟ್ಟರೆ (ಆ ಮುಖಂಡರನ್ನು) ಅವರು ನಮ್ಮನ್ನು ನಿರಾಕರಿಸಿ ಬಿಟ್ಟಂತೆಯೇ ನಾವೂ ಅವರನ್ನು ನಿರಾಕರಿಸಿ ತೋರಿಸುತ್ತಿದ್ದೆವು! ಹಾಗೆ ಅವರು ಅತಿಯಾಗಿ ಖೇದಿಸಿ ಕೊಳ್ಳುವ ರೀತಿಯಲ್ಲಿ ಅಲ್ಲಾಹ್ ನು ಅವರ ದುಷ್ಕೃತ್ಯಗಳನ್ನು ಅವರಿಗೆ ತೋರಿಸುವನು; ಮತ್ತು ನರಕಾಗ್ನಿಯಿಂದ ಹೊರಬರಲು ಅವರಿಗೆ ಎಂದಿಗೂ ಸಾಧ್ಯವಾಗದು. [166-167]

ಓ ಜನರೇ! ಭೂಮಿಯಲ್ಲಿರುವ, ತಿಂದು ಕೊಳ್ಳಲು ನಿಮಗೆ ಸಮ್ಮತಿಸಲಾದ (ಅರ್ಥಾತ್: ಹಲಾಲ್ ಎಂದು ಪರಿಗಣಿಸಲಾದ) ಹಸನಾದ/ಶುದ್ಧವಾದ (ಆಹಾರವನ್ನು) ತಿಂದುಂಡು ಕೊಳ್ಳಿ. ಸೈತಾನನ ಹೆಜ್ಜೆಗುರುತನ್ನು ಅನುಸರಿಸಿ ನಡೆಯಬೇಡಿ. ಅವನಾದರೋ ನಿಮ್ಮ ಶುದ್ಧ ವೈರಿಯಾಗಿದ್ದಾನೆ. ಕೇವಲ ಕೆಡುಕು ಮತ್ತು ಲಜ್ಜಾಸ್ಪದ ಕೃತ್ಯಗಳನ್ನು ಎಸಗುವಂತೆ, ಮತ್ತು ಅಲ್ಲಾಹ್ ನ ಬಗ್ಗೆ ನಿಮಗೆ ಅರಿವೇ ಇಲ್ಲದ ವಿಚಾರಗಳನ್ನು ಹೇಳಿಕೊಳ್ಳುವಂತೆ ಸೈತಾನನು ನಿಮ್ಮನ್ನು ಪ್ರೇರೇಪಿಸುತ್ತಿರುತ್ತಾನೆ. [168-169]

ಅಲ್ಲಾಹ್ ನು ಕಳಿಸಿ ಕೊಟ್ಟ (ಕುರ್‌ಆನ್ ನ ನಿರ್ದೇಶಗಳನ್ನು) ಪಾಲಿಸಿರಿ ಎಂದು ಜನರೊಡನೆ ಹೇಳಲಾದಾಗ, ನಮ್ಮ ಪೂರ್ವಜರು ಯಾವ ಮಾರ್ಗವನ್ನು (ಧರ್ಮವನ್ನು) ಅನುಸರಿಸುತ್ತಿದ್ದುದಾಗಿ ನಾವು ಕಂಡಿರುವೆಯೋ ಅದನ್ನೇ ನಾವು ಅನುಸರಿಸಿ ಕೊಳ್ಳುತ್ತೇವೆ ಎಂದು ಅವರು ಹೇಳುತ್ತಾರೆ. ಹೌದೇನು? ಅವರ ಪೂರ್ವಜರು ಸ್ವಲ್ಪವೂ ವಿವೇಕಮತಿಗಳೇ ಆಗಿರದಿದ್ದರೂ, ಸರಿದಾರಿಯಲ್ಲಿ ನಡೆಯದೇ ಹೋಗಿದ್ದರೂ ಅವರನ್ನೇ ಅನುಸರಿಸಿ ಕೊಳ್ಳುವುದೇನು? ಅಲ್ಲಾಹ್ ನನ್ನು ಧಿಕ್ಕರಿಸಿ ಬಿಟ್ಟ (ಕಾಫಿರ್ ಗಳ) ಉದಾಹರಣೆಯು, ಬೊಬ್ಬೆ ಹೊಡೆಯುವ ಮತ್ತು ಕಿರುಚಿ ಕೊಳ್ಳುವ ಸದ್ದನ್ನು ಮಾತ್ರ ಕೇಳಿಸಿಕೊಳ್ಳುವ ಹೊರತು ಬೇರೇನನ್ನೂ ಅರ್ಥ ಮಾಡಿ ಕೊಳ್ಳಲು ಸಾಧ್ಯವಿರದ (ಪ್ರಾಣಿಗಳನ್ನು) ಕೂಗಿ ಕರೆಯುವವರಂತೆ ಇದೆ. ಅವರು ಕಿವುಡರೂ ಮೂಕರೂ ಕುರುಡರೂ ಆಗಿರುವರು, ಆದ್ದರಿಂದ ಅವರಿಗೇನೂ ಅರ್ಥವಾಗುವುದಿಲ್ಲ. [170-171]

ಓ ವಿಶ್ವಾಸಿಗಳೇ! ನೀವು ಅಲ್ಲಾಹ್ ನನ್ನು ಮಾತ್ರವೇ ಉಪಾಸಿಸುವವರು ಹೌದಾದರೆ ನಿಮಗಾಗಿ ನಾವು ದಯಪಾಲಿಸಿದ ನಿರ್ಮಲವಾದ ಶುದ್ಧಾಹಾರಗಳನ್ನು (ಮಾತ್ರ) ಸೇವಿಸಿರಿ ಮತ್ತು (ಅದಕ್ಕಾಗಿ) ನೀವು ಅವನಿಗೆ ಕೃತಜ್ಞತೆ ಸಲ್ಲಿಸುತ್ತಿಲಿರಿ. ಅಲ್ಲಾಹ್ ನು ನಿಮಗೆ ಕಟ್ಟುನಿಟ್ಟಾಗಿ ನಿಷೇಧಿಸಿರುವುದು (ಪ್ರಾಣಿ-ಪಕ್ಷಿಗಳ) ಶವದ ಮಾಂಸ, ರಕ್ತ, ಹಂದಿಮಾಂಸ ಹಾಗೂ ಅಲ್ಲಾಹ್ ನಿಗೆ ಬದಲು ಬೇರೆಯವರಿಗೆ ಅರ್ಪಿಸಲಾದ ಆಹಾರ ವಸ್ತುಗಳನ್ನು ಮಾತ್ರ. ಆದರೆ ಒಬ್ಬಾತನು ಗತ್ಯಂತರವಿಲ್ಲದ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಾಗ ಆತನು ಧಿಕ್ಕಾರದ ಇರಾದೆ ಹೊಂದಿರದೆ, ಮಿತಿಯನ್ನು ಮೀರದೆ (ನಿಷೇಧಿತ ವಸ್ತುಗಳನ್ನು ತಿಂದು ಬಿಟ್ಟರೆ) ಅದು ಆತನಿಗೆ ಪಾಪವಾಗುವುದಿಲ್ಲ. ನಿಜವಾಗಿಯೂ ಅಲ್ಲಾಹ್ ನು ಕ್ಷಮಾಶೀಲನೂ ನಿತ್ಯ ಕರುಣೆಯುಳ್ಳವನೂ ಆಗಿರುವನು [ಎಂಬುದನ್ನು ಮರೆಯದಿರಿ]! {172-173}

ಅಲ್ಲಾಹ್ ನು ಕಳಿಸಿಕೊಟ್ಟಿರುವ ಗ್ರಂಥ (ತೋರ/ಬೈಬಲ್) ನ ನಿರ್ದೇಶಗಳನ್ನು ಬಲು ತುಚ್ಛವಾದ (ಲೌಕಿಕ) ಲಾಭವನ್ನು ಪಡೆದು ಕೊಳ್ಳುವುದಕ್ಕಾಗಿ ಅವರು ಬಚ್ಚಿಡುತ್ತಾರೆ. ಅಂಥವರು ತಮ್ಮ ಹೊಟ್ಟೆಯೊಳಗೆ ತುಂಬಿಸಿ ಕೊಳ್ಳುತ್ತಿರುವುದು ನರಕದ ಬೆಂಕಿಯೇ ಹೊರತು ಬೇರೇನೂ ಅಲ್ಲ. ಪುನರುತ್ಥಾನ ದಿನ ಅಲ್ಲಾಹ್ ನು ಅವರೊಂದಿಗೆ ಮಾತನಾಡುವುದಿಲ್ಲ, (ಪಾಪ ಮುಕ್ತ ಗೊಳಿಸಿ) ಅವರನ್ನು ಶುದ್ಧೀಕರಿಸುವುದಿಲ್ಲ, ಬದಲಾಗಿ ಅವರಿಗೆ (ಅಂದು) ಯಾತನಾಮಯವಾದ ಶಿಕ್ಷೆ ಕಾದಿದೆ. ಅವರೇ ಮಾರ್ಗದರ್ಶನ ಪಡೆದು ಕೊಳ್ಳುವ ಬದಲು ಭ್ರಷ್ಟತೆಯ ದಾರಿಯನ್ನು ಆರಿಸಿಕೊಂಡವರು, ಕ್ಷಮೆಯನ್ನು ಶಿಕ್ಷೆಗೆ ವಿಕ್ರಯಿಸಿ ಕೊಂಡವರು! ನರಕದ ಬೆಂಕಿಯನ್ನು ಎದುರಿಸಲು ಅವರಿಗೆ ಅದೆಂತಹ ವಿಚಿತ್ರ ಛಲ! ಅಲ್ಲಾಹ್ ನಾದರೋ ಪರಮ ಸತ್ಯವನ್ನೊಳಗೊಂಡ ಗ್ರಂಥವನ್ನು ಕಳಿಸಿ ಕೊಟ್ಟಿದ್ದಾನೆ, ಆದರೆ ಆ ಕುರಿತು ಭಿನ್ನತೆಯಲ್ಲಿ ತೊಡಗಿರುವವರು ಹಠಮಾರಿತನದಲ್ಲಿ ಬಲು ದೂರ ಸಾಗಿದ್ದಾರೆ. ಅವರಿಗೆ (ಶಿಕ್ಷೆ ಕಾದಿರುವುದು) ಆ ಕಾರಣಕ್ಕಾಗಿಯೇ ಆಗಿದೆ. [174-176]

(ಪ್ರಾರ್ಥನೆಯ ಸಮಯವಾದಾಗ) ನೀವು ಪೂರ್ವದ ಕಡೆಗೋ ಪಶ್ಚಿಮದ ಕಡೆಗೋ ಮುಖ ಮಾಡಿಕೊಂಡರಷ್ಟೇ ಅದು ಸದಾಚಾರವಲ್ಲ. ಬದಲಾಗಿ, ಅಲ್ಲಾಹ್ ನಲ್ಲಿ, ಅಂತ್ಯ ದಿನದಲ್ಲಿ, (ಅಲ್ಲಾಹ್ ನ) ಮಲಕ್ ಗಳಲ್ಲಿ ಮತ್ತು ಗ್ರಂಥಗಳಲ್ಲಿ, (ಸತ್ಯದ ಕಡೆಗೆ ನಿಮ್ಮನ್ನು ಅಹ್ವಾನಿಸಲು ಬಂದ ಅಲ್ಲಾಹ್ ನ) ದೂತರು/ನಬಿ ಗಳಲ್ಲಿ ಯಾರು ದೃಢವಾದ ವಿಶ್ವಾಸವಿರಿಸಿದನೋ ಮತ್ತು (ಅಲ್ಲಾಹ್ ನ ಸಂಪ್ರೀತಿಗಾಗಿ) ತನ್ನ ಅಚ್ಚುಮೆಚ್ಚಿನ ಸಂಪತ್ತಿನಿಂದ ನಿಕಟ ಸಂಬಂಧಿಕರಿಗಾಗಿ, ಅನಾಥರಿಗಾಗಿ, ಬಡವರಿಗಾಗಿ, ದಾರಿಹೋಕರಿಗಾಗಿ, ಯಾಚಕರಿಗಾಗಿ, ಗುಲಾಮರ ವಿಮೋಚನೆಗಾಗಿ ಖರ್ಚು ಮಾಡುವನೋ; ಅಲ್ಲದೆ ಸಲಾತ್/ನಮಾಝ್ ನಿರ್ವಹಣೆ, ಝಕಾತ್ ನ ಪಾವತಿ; ಮತ್ತು (ಇತರರೊಂದಿಗೆ) ಕರಾರನ್ನು ಮಾಡಿ ಕೊಂಡಿದ್ದರೆ ಅದರ ಸಂಪೂರ್ಣ ಪಾಲನೆ; ಮತ್ತು ಧಾರಿದ್ರ್ಯ, ಸಂಕಷ್ಟಗಳ ಸಮಯದಲ್ಲಿ ಸಹನೆ; ಹಾಗೂ ಯುದ್ಧಾವಸ್ಥೆಯಲ್ಲಿ ಸ್ಥೈರ್ಯ ತೋರುವವನ ಆಚಾರವೇ ಯಥಾರ್ಥದಲ್ಲಿ ಧಾರ್ಮಿಕ ಸದಾಚಾರವಾಗಿದೆ. ಆ ಅಚಾರವನ್ನು ಹೊಂದಿರುವವರೇ ಸತ್ಯವಂತರು, ಅವರೇ ನಿಜವಾದ ಭಯಭಕ್ತಿ ಉಳ್ಳವರು ಆಗಿರುವರು. [177]

ಓ ವಿಶ್ವಾಸಿ ಸಮುದಾಯವೇ, ಕೊಲೆ ಪ್ರಕರಣದ (ಇತ್ಯರ್ಥಕ್ಕೆ) ಸಂಬಂಧಿಸಿದಂತೆ ‘ನ್ಯಾಯಬದ್ಧ-ಪ್ರತೀಕಾರ ಸಂಹಿತೆ’ [ಅರಬಿ: ಕಿಸಾಸ್] ಯನ್ನು ನಿಮಗಿದೋ ಅನುಶಾಸನ ಗೊಳಿಸಲಾಗಿದೆ. (ಅಪರಾಧಿಯು) ಸ್ವತಂತ್ರ ವ್ಯಕ್ತಿ ಆಗಿದ್ದರೆ ಅದೇ ಸ್ವತಂತ್ರ ವ್ಯಕ್ತಿಯನ್ನು, ಗುಲಾಮನಾಗಿದ್ದರೆ ಆ ಗುಲಾಮನನ್ನು ಮಾತ್ರ, ಮತ್ತು ಸ್ತ್ರೀ ಆಗಿದ್ದರೆ ಆ ಸ್ತ್ರೀಯನ್ನೇ (‘ಕಿಸಾಸ್ ದಂಡ ಸಂಹಿತೆ’ ಪ್ರಕಾರ ಶಿಕ್ಷೆಗೆ ಗುರಿ ಪಡಿಸಬೇಕು). ಇನ್ನು ಅಪರಾಧಿಗೆ ಅವನ ಸಹೋದರನ [ಅಂದರೆ ವಧಿಸಲ್ಪಟ್ಟವನ ವಾರೀಸುದಾರನ] ಕಡೆಯಿಂದ (ವಧೆ ಶಿಕ್ಷೆ ವಿಧಿಸದಂತೆ) ರಿಯಾಯಿತಿ ಏನಾದರೂ ದೊರೆತರೆ, ಆಗ ಸಮಂಜಸವಾದ ಶಿಷ್ಟಾಚಾರವನ್ನು ಪಾಲಿಸಿಕೊಂಡು ಪರಿಹಾರಧನವನ್ನು (ವಾರೀಸುದಾರರಿಗೆ) ಉದಾತ್ತ ಮನಸ್ಸಿನೊಂದಿಗೆ ಪಾವತಿಸಬೇಕು. ಇದು ನಿಮ್ಮ ಒಡೆಯನ ಕಡೆಯಿಂದ ನಿಮಗಿರುವ ರಿಯಾಯಿತಿಯೂ ದಯೆಯೂ ಆಗಿದೆ. ಇನ್ನು (ಪರಿಹಾರಧನ ಪಡೆದುಕೊಂಡ) ಬಳಿಕವೂ ಯಾರಾದರೂ ಅತಿಕ್ರಮವೆಸಗಿದರೆ ಅವನಿಗೆ ಸಂಕಟದಾಯಕ ಶಿಕ್ಷೆ ಕಾದಿದೆ. ಹಾಗೆ, ‘ಕಿಸಾಸ್’ ನ [ಅಂದರೆ ಸಾಮಾಜಿಕ ಜೀವನದಲ್ಲಿ ‘ನ್ಯಾಯಬದ್ಧ-ಪ್ರತೀಕಾರ’ ಆಧರಿತ ದಂಡ ನಿಯಮದ] ಪಾಲನೆಯಲ್ಲಿ ಓ ವಿವೇಚಿಸುವ ಜನರೇ, ನಿಮಗೆ ಜೀವನದ (ಭರವಸೆ) ಇದೆ; ಏಕೆಂದರೆ ನೀವು [ಅದರ ಮೂಲಕ ನಿಮ್ಮ ಸಮಾಜವನ್ನು ನಿರಂತರ ರಕ್ತಪಾತದಂತಹ ಅನಿಷ್ಟಗಳಿಂದ] ಕಾಪಾಡಿ ಕೊಳ್ಳಬಹುದು. {178-179}

ಇನ್ನು ನಿಮ್ಮಲ್ಲಿ ಯಾರಿಗಾದರೂ ಮರಣವು ಸಮೀಪಿಸಿ ಬಿಟ್ಟರೆ, ಮತ್ತು ಅವನು ಸಿರಿ-ಸಂಪತ್ತನ್ನು ಬಿಟ್ಟು ಹೋಗುತ್ತಿದ್ದಾನೆ ಎಂದಾದರೆ, ಆತನು (ತನ್ನ) ತಂದೆ-ತಾಯಂದಿರಿಗೆ ಹಾಗೂ ನಿಕಟ ಸಂಬಂಧಿಕರಿಗೆ, ಸೂಕ್ತವಾದ/ಸಮಂಜಸವಾದ ರೀತಿಯಲ್ಲಿ (ತನ್ನ ಸೊತ್ತಿನಿಂದ ಪಾಲು ಸಿಗುವಂತೆ) ‘ವಸಿಯ್ಯತ್’ (ಅರ್ಥಾತ್: ಉಯಿಲು ಯಾ ಮೃತ್ಯುಪತ್ರ) ಮಾಡಬೇಕಾದುದು ನಿಮಗೆ ನಿಬಂಧನೆ ಗೊಳಿಸಲಾಗಿದೆ. ಹಾಗೆ (ಉಯಿಲು) ಮಾಡುವುವುದು ಜಾಗರೂಕತನ ಪಾಲಿಸುವವರ ಹೊಣೆಗಾರಿಕೆಯಾಗಿದೆ. ಇನ್ನು ಉಯಿಲನ್ನು ಆಲಿಸಿ ಕೊಂಡು ಅನಂತರ ಯರಾದರೂ ಅದನ್ನು ಬದಲಾಯಿಸಿ/ತಿರುಚಿ ಬಿಟ್ಟರೆ ಅದರ ಪಾಪವು (ಉಯಿಲು ಮಾಡಿದವನ ಮೇಲೆ ಇರದೆ) ಅದನ್ನು ತಿರುಚಿ ಬಿಟ್ಟಾತನ ಮೇಲೆ ಮಾತ್ರವಾಗಿದೆ. ಅಲ್ಲಾಹ್ ನಾದರೋ ಎಲ್ಲವನ್ನೂ ಕೇಳಿಸಿ ಕೊಳ್ಳುವವನೂ ಎಲ್ಲವನ್ನೂ ತಿಳಿದಿರುವವನೂ ಆಗಿದ್ದಾನೆ. ಇನ್ನು, ಉಯಿಲು ಮಾಡಿದವನ ಕಡೆಯಿಂದ ಯಾರಾದರೂ (ಅವನು ಮಾಡಿದ ಉಯಿಲಿನಲ್ಲಿ) ತಾರತಮ್ಯ ಅಥವಾ ದೋಷದ (ಇರುವಿಕೆಯನ್ನು) ಶಂಕಿಸಿಕೊಂಡರೆ, ಮತ್ತು (ಅದರ ನಿವಾರಣೆಗಾಗಿ ಸಂಬಂಧಿತ) ಕಕ್ಷಿಗಳ ನಡುವೆ ಸಂಧಾನ ಮಾಡಿಸಿ ಬಿಟ್ಟರೆ ಅದರಲ್ಲೇನೂ ತಪ್ಪಿಲ್ಲ. ಅಲ್ಲಾಹ್ ನು ನಿಜವಾಗಿ ಕ್ಷಮಿಸುವವನೂ ಕಾರುಣ್ಯವಂತನೂ ಆಗಿರುವನು. [180-182]

ಓ ವಿಶ್ವಾಸಿಗಳಾದ ಜನರೇ, ನೀವು (ಧರ್ಮದ ವಿಷಯದಲ್ಲಿ) ಜಾಗರೂಕತೆಯನ್ನು ಪಾಲಿಸಿವವರಾಗಲೆಂದು, ನಿಮಗಿಂತ ಹಿಂದಿನ (ನಬಿಗಳ ಅನುಯಾಯಿಗಳಿಗೆ) ವಿಧಿಸಲಾಗಿದ್ದಂತೆಯೇ ನಿಮಗೂ ಉಪವಾಸ ವ್ರತವನ್ನು ವಿಧಿಸಲಾಗಿದೆ. ನಿಗದಿ ಪಡಿಸಲಾದ ಕೆಲವೇ ದಿನಗಳ ಉಪವಾಸವದು. ನಿಮ್ಮಲ್ಲಿ ಯಾರದರೂ (ಆ ನಿಗದಿತ ದಿನಗಳಲ್ಲಿ) ರೋಗಿಯಾಗಿದ್ದರೆ ಅಥವಾ ಯಾತ್ರೆಯಲ್ಲಿದ್ದರೆ ನಂತರದ ದಿನಗಳಲ್ಲಿ (ಉಪವಾಸದ) ಸಂಖ್ಯೆಯನ್ನು ಪೂರ್ತಿ ಗೊಳಿಸಲಿ. (ಉಪವಾಸವಿರಲು ದೈಹಿಕವಾಗಿ ಅಸಮರ್ಥನಾಗಿದ್ದು,) ಪ್ರಾಯಶ್ಚಿತ್ತವನ್ನು ನೀಡುವ ಸಾಮರ್ಥ್ಯವಿದ್ದವನು (ಒಂದು ದಿನದ ಉಪವಾಸದ ಬದಲಿಗೆ) ಒಬ್ಬ ಬಡವನಿಗೆ ಆಹಾರ ನೀಡಲಿ. ಇನ್ನು ಯಾರಾದರೂ ಹೆಚ್ಚು ಒಳಿತನ್ನು ಮಾಡಿ ಕೊಳ್ಳಲು ಇಷ್ಟಪಟ್ಟು ಕೊಂಡರೆ ಅದು ಅವನಿಗೇ ಒಳಿತು. ಆದರೆ ನೀವು ಅರಿತು ಕೊಂಡವರಾಗಿದ್ದರೆ ಉಪವಾಸವನ್ನು ಆಚರಿಸಿಕೊಳ್ಳುವುದೇ ನಿಮ್ಮ ಪಾಲಿಗೆ ಅತ್ಯುತ್ತಮ! [183-184]

ಕುರ್‌ಆನ್ ಅನ್ನು (ಭೂಮಿಗೆ) ಇಳಿಸಿ ಕೊಡಲಾದ ತಿಂಗಳೇ ‘ರಮದಾನ್’ ತಿಂಗಳು! ಸಕಲ ಮನುಷ್ಯರಿಗೆ ಮಾರ್ಗದರ್ಶನ ಮಾಡುವ ಕುರ್‌ಆನ್! ಅದರಲ್ಲಿ ಮಾರ್ಗದರ್ಶನ ಮತ್ತು ಸತ್ಯ-ಅಸತ್ಯ ಗಳನ್ನು ಬೇರ್ಪಡಿಸಲು ಬೇಕಾದ ಖಚಿತ ಪುರಾವೆಗಳಿವೆ. ಆದ್ದರಿಂದ, ನಿಮ್ಮಲ್ಲಿ ಯಾರಾದರೂ ರಮದಾನ್ ತಿಂಗಳನ್ನು ಪಡೆದು ಕೊಂಡರೆ (ಇಡೀ ತಿಂಗಳು) ಉಪವಾಸ ವ್ರತ ಆಚರಿಸಲಿ. ಇನ್ನು, (ರಮದಾನ್ ದಿನಗಳಲ್ಲಿ) ಯಾರಾದರೂ ರೋಗ ಪೀಡಿತನಾಗಿ ಬಿಟ್ಟರೆ ಅಥವಾ ಪ್ರಯಾಣದಲ್ಲಿದ್ದರೆ ನಂತರದ ದಿನಗಳಲ್ಲಿ (ಬಿಟ್ಟು ಹೋದ ಉಪವಾಸದ) ಸಂಖ್ಯೆಯನ್ನು ಪೂರ್ಣಗೊಳಿಸಲಿ. (ಹಾಗೆ) ಅಲ್ಲಾಹ್ ನು ನಿಮ್ಮ ಪಾಲಿಗೆ ಸೌಲಭ್ಯವನ್ನು ಬಯಸುತ್ತಾನೆ, ಅಲ್ಲದೆ, ನಿಮಗೆ ತೊಂದರೆನ್ನು ಬಯಸುವುದಿಲ್ಲ. ಉಪವಾಸ ವ್ರತದ ಸಂಖ್ಯೆಯನ್ನು ನೀವು (ಸುಲಭವಾಗಿ) ಪೂರ್ಣಗೊಳಿಸಲು (ಈ ಸೌಲಭ್ಯ ನೀಡಲಾಗಿದೆ). ಅಲ್ಲದೆ, ನಿಮ್ಮನ್ನು ನೇರ ಮಾರ್ಗದಲ್ಲಿ ನಡೆಯುವಂತೆ ಮಾಡಿದ್ದಕ್ಕಾಗಿ ನೀವು (ಅವನಿಗೆ) ಕೃತಜ್ಞರಾಗಿರಲು; ಮತ್ತು ನೀವು ಅಲ್ಲಾಹ್ ನ ಮಹಿಮೆಯ ಗುಣಗಾನ ಮಾಡುವವರಾಗಿರಲು (ರಮದಾನ್ ತಿಂಗಳ ಉಪವಾಸ ವ್ರತವನ್ನು ವಿಧಿಸಲಾಗಿದೆ). [185]

(ನಬಿ ಮುಹಮ್ಮದ್ ರೇ,) ನಿಮ್ಮೊಡನೆ ನನ್ನ ಉಪಾಸಕರು/ಸೇವಕರು ನನ್ನ ಬಗ್ಗೆ ಕೇಳಿಕೊಂಡರೆ, ನಾನು ಹತ್ತಿರದಲ್ಲೇ ಇದ್ದೇನೆ (ಎಂದು ಅವರಿಗೆ ಹೇಳಿ). ಪ್ರಾರ್ಥಿಸುವವನು ನನ್ನೊಂದಿಗೆ ಪ್ರಾರ್ಥಿಸುತ್ತಿರುವಾಗ ಅವನ ಪ್ರಾರ್ಥನೆಗೆ ನಾನು ಉತ್ತರಿಸುತ್ತೇನೆ. ಆದ್ದರಿಂದಲೇ, ಅವರು ಸರಿದಾರಿಯನ್ನು ಪಡೆದು ಕೊಳ್ಳಲು ನನ್ನ ಕರೆಗೆ ಓಗೊಡಲಿ (ಅರ್ಥಾತ್: ನನ್ನ ಆಜ್ಞೆಗಳನ್ನು ಪಾಲಿಸಲಿ) ಮತ್ತು ನನ್ನನ್ನು (ಮಾತ್ರವೇ) ನಂಬಿ ಕೊಂಡಿರಲಿ. [186]

ಉಪವಾಸ ಕಾಲದ ರಾತ್ರಿಗಳಲ್ಲಿ ನೀವು ಪತ್ನಿಯರ ಬಳಿಗೆ ಹೋಗುವುದನ್ನು ನಿಮಗೆ ಸಮ್ಮತಿಸಲಾಗಿದೆ. ಅವರು ನಿಮಗೆ ವಸ್ತ್ರಗಳಂತೆ, ಮತ್ತು ನೀವು ಅವರ ಪಾಲಿಗೆ ವಸ್ತ್ರಗಳಂತೆ ಇರುವವರು. ನೀವು (ಉಪವಾಸದ ದಿನಗಳಲ್ಲಿ ರಾತ್ರಿಯ ವೇಳೆ ರಹಸ್ಯವಾಗಿ) ಸ್ವತಃ ನಿಮ್ಮನ್ನೇ ವಂಚಿಸಿ ಕೊಳ್ಳುತ್ತಿದ್ದುದು ಅಲ್ಲಾಹ್ ನು ಅರಿತಿರುವನು. ಆದರೆ, ಅಲ್ಲಾಹ್ ನು ನಿಮ್ಮ ಮೇಲೆ ಕರುಣೆ ತೋರಿದನು; ನಿಮ್ಮನ್ನು ಕ್ಷಮಿಸಿ ಬಿಟ್ಟನು. ಇನ್ನು (ಮುಂದೆ) ನೀವು ನಿಮ್ಮ ಪತ್ನಿಯರನ್ನು (ಉಪವಾಸದ ರಾತ್ರಿಗಳಲ್ಲಿ) ಶಾರೀರಿಕವಾಗಿ ಸಮೀಪಿಸಬಹುದು; ಅಲ್ಲಾಹ್ ನು ನಿಮಗಾಗಿ ನಿಶ್ಚಯಿಸಿರುವುದನ್ನು ನೀವು (ಅವರಿಂದ) ಬಯಸಿ ಕೊಳ್ಳಬಹುದು. (ಕತ್ತಲೆಯ) ಕಪ್ಪು ಎಳೆಯಿಂದ ಮುಂಜಾವಿನ (ಮೊದಲ ಬೆಳಕಿನ) ಬಿಳಿಯ ಎಳೆಯು ಬೇರ್ಪಟ್ಟು ನಿಮಗೆ ಕಾಣುವ ತನಕವೂ ನೀವು ತಿನ್ನಬಹುದು, ಕುಡಿಯಬಹುದು. ತದನಂತರ ರಾತ್ರಿಯಾಗುವ ತನಕ ಉಪವಾಸವನ್ನು ನೀವು (ಮುಂದುವರಿಸಿ) ಪೂರ್ಣಗೊಳಿಸಿ. ಇನ್ನು, ಮಸೀದಿಗಳಲ್ಲಿ (ಅಲಾಹ್ ನ ಧ್ಯಾನ ನಿಮಿತ್ತ) ಇ’ತಿಕಾಫ್ ನ ಸ್ಥಿತಿಯಲ್ಲಿ ನೀವಿದ್ದರೆ ಪತ್ನಿಯರನ್ನು ನೀವು ಸಮೀಪಿಸ ಬಾರದು. ಇವೆಲ್ಲ ಅಲ್ಲಾಹ್ ನು ನಿಗದಿ ಪಡಿಸಿದ ಇತಿಮಿತಿಗಳು, ಆದ್ದರಿಂದ ಆ ಮಿತಿಗಳ ಬಳಿ ಹೋಗದಿರಿ. ಹಾಗೆ, ಜನರು (ಧಾರ್ಮಿಕ, ಆಧ್ಯಾತ್ಮಿಕ ವಿಷಯಗಳಲ್ಲಿ) ಜಾಗರೂಕರಾಗಿರಲೆಂದು, ಅಲ್ಲಾಹ್ ನು ಅವರಿಗೆ ತನ್ನ ನಿರ್ದೇಶಗಳನ್ನು ಸವಿವರ ತಿಳಿಯ ಪಡಿಸುತ್ತಾನೆ. [187]

ನಿಮ್ಮ ಸಂಪತ್ತನ್ನು ನೀವು ಪರಸ್ಪರ ಅನುಚಿತವಾಗಿ/ಅನೈತಿಕವಾಗಿ (ಕಬಳಿಸಿ) ತಿಂದು ಹಾಕಬೇಡಿ. (ಅದು ತಪ್ಪೆಂದು ಚೆನ್ನಾಗಿ) ತಿಳಿದು ಕೊಂಡಿದ್ದರೂ, ಜನರ ಸಂಪತ್ತಿನ ಒಂದು ಭಾಗವನ್ನು ಅನ್ಯಾಯವಾಗಿ ಕಬಳಿಸುವ ಸಲುವಾಗಿ ನೀವು ಅದನ್ನು (ಅದರ ವಿವಾದವನ್ನು ಯಾ ಲಂಚದ ಮೊತ್ತವನ್ನು) ತೀರ್ಪುಗಾರರ/ಅಧಿಕಾರಿಗಳ ಬಳಿಗೆ ಕೊಂಡೊಯ್ಯ ಬೇಡಿರಿ. [188]

(ಓ ಪೈಗಮಬರ್ ಮುಹಮ್ಮದ್,) ಅವರು ನಿಮ್ಮೊಡನೆ ಚಂದ್ರನ ವೃದ್ಧಿ-ಕ್ಷಯಗಳ (ಅಥವಾ ಅರಬ್ ಜನರು ಗೌರವಿಸುವ ಪವಿತ್ರ ತಿಂಗಳುಗಳ) ಕುರಿತು ಕೇಳುತ್ತಿದ್ದಾರೆ. ಅದು ಜನರ ಪಾಲಿಗೆ ಕಾಲಗಣನೆ ಮತ್ತು ಹಜ್ಜ್ ನ ಸಮಯ ಸೂಚಕವಾಗಿದೆ ಎಂದು ಹೇಳಿರಿ. (ಕುರೈಶರೇ, ನಿಮ್ಮ ಪೊಳ್ಳು ಸಂಪ್ರದಾಯದಂತೆ ಹಜ್ಜ್ ದಿನಗಳಲ್ಲಿ ನೀವು) ನಿಮ್ಮ ಮನೆಗಳನ್ನು ಹಿಂಬದಿಯಿಂದ ಪ್ರವೇಶಿಸಿ ಕೊಳ್ಳುವುದು (ನೀವು ಗ್ರಹಿಸಿ ಕೊಂಡಂತೆ) ಪುಣ್ಯದಾಯಕ ಕಾರ್ಯವೇನಲ್ಲ, ಬದಲಾಗಿ (ಅಲ್ಲಾಹ್ ನ ಆಜ್ಞೋಲ್ಲಂಘನೆ ಸಂಭವಿಸದಂತೆ) ಜಾಗರೂಕತೆ ಪಾಲಿಸುವವನ ಆಚಾರವೇ ಪುಣ್ಯಕಾರ್ಯ. ಇನ್ನು ಮನೆಗಳೊಳಗೆ ಪ್ರವೇಶಿಸುವಾಗ ಬಾಗಿಲುಗಳ ಮೂಲಕವೇ ಪ್ರವೇಶಿಸಿಕೊಳ್ಳಿ. ನೀವು ವಿಜಯಶಾಲಿಗಳು ಆಗಲಿಕ್ಕಾಗಿ ಅಲ್ಲಾಹ್ ನ ಭಯಭಕ್ತಿಯನ್ನು ಮೈಗೂಡಿಸಿಕೊಳ್ಳಿ (ಎಂದೂ ಅವರೊಡನೆ ಹೇಳಿರಿ). [189]

ನಿಮ್ಮ ವಿರುದ್ಧ ಯುದ್ಧ ಮಾಡುವವರೊಡನೆ ನೀವೂ ಸಹ ಅಲ್ಲಾಹ್ ನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ (ಜೋಕೆ, ಯುದ್ಧದ ಸನ್ನಿವಿವೇಶದಲ್ಲೂ ಶತ್ರುವಿನೊಂದಿಗೆ) ಅತಿಕ್ರಮ ಮಾಡದಿರಿ! ಅಲ್ಲಾಹ್ ನು ಅತಿಕ್ರಮವೆಸಗುವ ಜನರನ್ನು ಮೆಚ್ಚುವುದಿಲ್ಲ. ಹೌದು, (ನಿಮ್ಮೊಡನೆ ಯುದ್ಧ ಸಾರಿರುವ ಆ ನಮ್ಮ ದುಷ್ಟರನ್ನು) ಕಂಡಲ್ಲಿ ಹೋರಾಡಿ ವಧಿಸಿರಿ. ಅವರು ನಿಮ್ಮನ್ನು ಎಲ್ಲಿಂದ ಹೊರಗಟ್ಟಿದ್ದರೋ ನೀವೂ ಸಹ ಈಗ ಅವರನ್ನು ಅಲ್ಲಿಂದ ಹೊರ ಹಾಕಿರಿ. (ಜನರನ್ನು ಅವರ ಮನೆಗಳಿಂದ, ನಾಡುಗಳಿಂದ ಹೊರದಬ್ಬಿ ಸಮಾಜದಲ್ಲಿ) ಶಾಂತಿಭಂಗ ಉಂಟು ಮಾಡುವುದು ಕೊಲೆಗಿಂತಲೂ ಹೆಚ್ಚು ಕಠೋರ (ಅಪರಾಧವಾಗಿದೆ). ಆದರೆ ಮಸ್ಜಿದ್-ಅಲ್-ಹರಾಮ್ (ಅಂದರೆ ಮಕ್ಕಾ ಪಟ್ಟಣದಲ್ಲಿರುವ ಪವಿತ್ರ ಕಅಬಾ ದ) ಬಳಿ ಅವರೊಡನೆ ಹೋರಾಡ ಬಾರದು – ಅವರೇ ನಿಮ್ಮ ವಿರುದ್ಧ ಅಲ್ಲಿ ಕದನಕ್ಕಿಳಿಯುವ ತನಕ. ಇನ್ನು, ಅವರೇ ಎದುರು ಬಿದ್ದು ಅಲ್ಲಿ ನಿಮ್ಮನ್ನು ಕೊಲ್ಲಲು ತೊಡಗಿದರೆ (ಆ ಪ್ರದೇಶದಲ್ಲಿಯೂ ಸಹ) ನೀವು ಅವರನ್ನು ವಧಿಸಬಹುದು. ಸತ್ಯವನ್ನು ಧಿಕ್ಕರಿಸಿದವರಿಗೆ ಅದುವೇ ತಕ್ಕ ಶಾಸ್ತಿ. ಒಂದು ವೇಳೆ ಅವರು (ಹೋರಾಟದಿಂದ) ತಮ್ಮನ್ನು ತಡೆದು (ಸಮಾಜದ ಶಾಂತಿಗೆ ಭಂಗ ತರುವುದನ್ನು ನಿಲ್ಲಿಸಿ ಬಿಟ್ಟರೆ), ಖಂಡಿತ ಅಲ್ಲಾಹ್ ನು ಅತಿ ಹೆಚ್ಚು ಕ್ಷಮಿಸುವವನೂ ಪರಮ ಕಾರುಣ್ಯವಂತನೂ ಆಗಿರುವನು. (ನಾಡಿನಲ್ಲಿ) ಪ್ರಕ್ಷೋಭೆಯ ಸ್ಥಿತಿ ಇಲ್ಲದಂತಾಗಿ, (ನೀವು ಪಾಲಿಸ ಬೇಕಾದ) ‘ದೀನ್’ ಸಂಪೂರ್ಣವಾಗಿ ಅಲ್ಲಾಹ್ ನದ್ದೇ ಆಗುವ ತನಕವೂ ಅವರೊಡನೆ ಹೋರಾಡಿರಿ. ಇನ್ನು ಅವರು ಹಿಮ್ಮೆಟ್ಟಿ (ಯುದ್ಧ ನಿಲ್ಲಿಸಿ) ಬಿಟ್ಟರೆ, (ನೀವು ತಿಳಿದಿರಿ,) ಕ್ಷೋಭೆ ಉಂಟುಮಾಡುವ ದುಷ್ಕರ್ಮಿಗಳ ವಿರುದ್ಧವಲ್ಲದೆ (ಇತರರೊಂದಿಗೆ) ಅತಿಕ್ರಮಣ ಸಲ್ಲದು. [190-193]

ಆದರಣೀಯ ತಿಂಗಳಲ್ಲಿ [ಯುದ್ಧ ಘೋಷಿಸಿ ಅದರ ಪಾವಿತ್ರ್ಯಕ್ಕೆ ಭಂಗ ತಂದಾಗ] ಆ ಅದರಣೀಯ ತಿಂಗಳಲ್ಲೇ (‘ಕಿಸಾಸ್’ ಅನುಷ್ಠಾನ ಗೊಳಿಸಿರಿ), ಮಾತ್ರವಲ್ಲ, (ಇತರೆಲ್ಲ) ಆದರಣೀಯ ವಿಷಯಗಳಲ್ಲಿ (ಅವುಗಳ ಪಾವಿತ್ರ್ಯಕ್ಕೆ ಧಕ್ಕೆ ಬರಿಸಿದಾಗ) ‘ಕಿಸಾಸ್’ [ಅರ್ಥಾತ್ ‘ನ್ಯಾಯಬದ್ಧ-ಪ್ರತೀಕಾರ ಆಧರಿತ ದಂಡಸಂಹಿತೆ’] ಅನ್ವಯಿಸುತ್ತದೆ. ಆದ್ದರಿಂದ ನಿಮ್ಮ ಮೇಲೆ ಯಾರಾದರೂ ಅತಿಕ್ರಮವೆಸಗಿದರೆ (ಪ್ರತಿಯಾಗಿ) ಅವರ ವಿರುದ್ಧ ಅದಕ್ಕೆ ತುಲ್ಯವಾದ ಪ್ರತಿಕ್ರಮ ಕೈಗೊಳ್ಳಿರಿ. (ಹಾಗೆ ಪ್ರತಿಕ್ರಮ ಕೈಗೊಳ್ಳುವಾಗಲೂ) ಅಲ್ಲಾಹ್ ನ ಭಯಭಕ್ತಿ ಇರಿಸಿ ಕೊಳ್ಳಿ. ನಿಸ್ಸಂದೇಹವಾಗಿಯೂ ಅಲ್ಲಾಹ್ ನು ತನ್ನನ್ನು ಭಯ ಪಟ್ಟುಕೊಳ್ಳುವವರ ಜೊತೆಗಿದ್ದಾನೆ ಎಂಬುದು ನಿಮಗೆ ತಿಳಿದಿರಲಿ. {194}

ಇನ್ನು ಅಲ್ಲಾಹ್ ನ ಮಾರ್ಗದಲ್ಲಿ (ಅವನು ನಿಮಗೆ ನೀಡಿದ ಸಂಪತ್ತಿನಿಂದ) ಖರ್ಚು ಮಾಡಿ. (ಅದಕ್ಕೆ ಬದಲಾಗಿ ಜಿಪುಣರಂತೆ ವರ್ತಿಸಿ ಕೊಂಡು) ಸ್ವತಃ ನಿಮ್ಮನ್ನೇ ವಿನಾಶದೆಡೆಗೆ ಕಯ್ಯಾರೆ ತಳ್ಳಿ ಬಿಡಬೇಡಿ. (ಅಲ್ಲಾಹ್ ನ ಮಾರ್ಗದಲ್ಲಿ ವ್ಯಯಿಸುವಾಗ) ಉದಾರತನವನ್ನು ಮೈಗೂಡಿಸಿಕೊಳ್ಳಿ. ಅಲ್ಲಾಹ್ ನು ಖಂಡಿತವಾಗಿ ಉದಾರಶೀಲರನ್ನು ಮೆಚ್ಚುತ್ತಾನೆ. [195]

ನೀವು ‘ಹಜ್ಜ್’ ಅಥವಾ ‘ಉಮ್ರಃ’ ಗಳ (ಸಂಕಲ್ಪ ಮಾಡಿದ್ದರೆ) ಅದನ್ನು ಅಲ್ಲಾಹ್ ನಿಗೋಸ್ಕರ ಮಾತ್ರವಾಗಿ ಪೂರ್ತಿ ಗೊಳಿಸಿ. ಒಂದು ವೇಳೆ (ಮಕ್ಕಃ ತಲುಪುವುದಕ್ಕಿಂತ ಮೊದಲು ದಾರಿಯಲ್ಲೇ ಶತ್ರು ಸೇನೆಯಿಂದ) ನೀವು ತಡೆಯಲ್ಪಟ್ಟರೆ, ಆಗ ಸುಲಭವಾಗಿ ಲಭ್ಯವಿರುವ ಬಲಿಮೃಗವನ್ನು ಅಲ್ಲಾಹ್ ನಿಗೆ ಅರ್ಪಿಸಿಕೊಳ್ಳಿ. ಅಂತಹ ಬಲಿಮೃಗವು ಬಲಿ ತಾಣವನ್ನು ತಲುಪುವ ತನಕ ನೀವು ತಲೆ ಬೋಳಿಸಿ ಕೊಳ್ಳಬಾರದು. ಆದರೆ ನಿಮ್ಮಲ್ಲಿ ಯಾರಾದರೂ ರೋಗಿಯಾಗಿದ್ದರೆ ಅಥವಾ ಅವನ ತಲೆಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡು (ತನ್ನಿಮಿತ್ತ ಮುಂಚಿತವಾಗಿಯೇ ತಲೆ ಬೋಳಿಸಿಕೊಂಡರೆ) ಅದಕ್ಕೆ ಪ್ರಾಯಶ್ಚಿತ್ತವು ಉಪವಾಸ ಮಾಡುವುದು, ಅಥವಾ ದಾನ ನೀಡುವುದು, ಅಥವಾ ಮೃಗಬಲಿ ಅರ್ಪಿಸುವುದಾಗಿದೆ. ಇನ್ನು (‌ಯಾತ್ರೆಯಲ್ಲಿ ದಾರಿಯುದ್ದಕ್ಕೂ) ನಿಮಗೆ ಶಾಂತಿ ಸ್ಥಿತಿ ಪ್ರಾಪ್ತಿಯಾಗಿ (ಸಮಯಕ್ಕೆ ಮೊದಲೇ ಹರಮ್ ಗೆ ತಲುಪಿಕೊಂಡ ಸಂದರ್ಭದಲ್ಲಿ) ಯಾರಾದರೂ ‘ಹಜ್ಜ್’ ಗಿಂತ ಮುಂಚಿತವಾಗಿ (ಅದೇ ಯಾತ್ರೆಯಲ್ಲಿ) ‘ಉಮ್ರಃ’ ನಿರ್ವಹಣೆಯ ಪ್ರಯೋಜನ ಪಡೆದುಕೊಳ್ಳ ಬಯಸಿದರೆ, ಅದಕ್ಕೆ (ಪ್ರಾಯಶ್ಚಿತ್ತವಾಗಿ) ಸುಲಭವಾಗಿ ಲಭ್ಯವಿರುವ ಬಲಿಮೃಗವನ್ನು (ಅಲ್ಲಾಹ್ ನಿಗಾಗಿ) ಅರ್ಪಿಸಿ ಕೊಳ್ಳಲಿ. ಇನ್ನು ಬಲಿಮೃಗ ಲಭ್ಯವಿರದವನು ಹಜ್ಜ್ ನ ಅವಧಿಯಲ್ಲೇ ಮೂರು ದಿನಗಳ ಉಪವಾಸ ಮತ್ತು (ಮನೆಗೆ/ಊರಿಗೆ) ಮರಳಿ ಬಂದಾಗ ಏಳು ದಿನಗಳ ಉಪವಾಸ – ಹಾಗೆ ಒಟ್ಟಿನಲ್ಲಿ ಹತ್ತು ದಿನಗಳು – ಉಪವಾಸವನ್ನು (ಪ್ರಾಯಶ್ಚಿತ್ತವಾಗಿ) ಆಚರಿಸಿ ಕೊಳ್ಳಲಿ. (ಒಂದೇ ಯಾತ್ರೆಯಲ್ಲಿ ಹಜ್ಜ್ ಮತ್ತು ಉಮ್ರಃ ಗಳೆರಡನ್ನೂ ನಿರ್ವಹಿಸಬಹುದಾದ) ಈ ರಿಯಾಯಿತಿಯು ಯಾರು ‘ಮಸ್ಜಿದ್-ಅಲ್-ಹರಾಮ್’ ಪ್ರದೇಶದಲ್ಲಿ ಸಕುಟುಂಬ ನೆಲೆಸಿಲ್ಲವೋ (ಅಂದರೆ ಯಾರು ಹರಮ್ ನ ನಿವಾಸಿಯು ಅಲ್ಲವೋ) ಅಂಥವಿರಿಗೆ ಮಾತ್ರವೇ ಇರುವುದು. ಅಲ್ಲಾಹ್ ನ (ನಿಯಮಗಳ ಉಲ್ಲಂಘನೆಯಾಗದಂತೆ) ಜಾಗರೂಕತೆ ವಹಿಸಿಕೊಳ್ಳಿ; ಅಲ್ಲಾಹ್ ನು ಕಠಿಣವಾಗಿ ಶಿಕ್ಷಿಸುವವನೂ ಆಗಿರುವನು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಿ. [196]

ಹಜ್ಜ್ ಗೆ (ಸಂಬಂಧಿಸಿದಂತೆ ಯಾತ್ರೆ ಕೈಗೊಳ್ಳಲು) ಕೆಲ ತಿಂಗಳುಗಳನ್ನು (ಅಂದರೆ ಶವ್ವಾಲ್, ದೀ-ಅಲ್-ಕಅದಃ ಮತ್ತು ದೀ-ಅಲ್-ಹಜ್ಜಃ ದ ಮೊದಲ ಹತ್ತು ದಿನಗಳನ್ನು) ಗೊತ್ತು ಪಡಿಸಲಾಗಿದೆ. ಆ ಸಮಯದಲ್ಲಿ ಯಾರಾದರೂ (ಹಜ್ಜ್ ಯಾತ್ರೆ ಕೈಗೊಳ್ಳುವ) ಧೃಡ ಸಂಕಲ್ಪ ಮಾಡಿ ಕೊಂಡರೆ ಹಜ್ಜ್ ನ ಕಾಲಾವಧಿಯಲ್ಲಿ (ಪತ್ನಿಯರೊಂದಿಗೆ) ಚಕ್ಕಂದದ ಮಾತು ಸಲ್ಲದು, ದೋಷ ಕೃತ್ಯಗಳು ಮಾಡ ಬಾರದು ಮತ್ತು ಜಗಳಗಂಟಿತನ ಮಾಡ ಕೂಡದು. ಯಾವುದೇ ಒಳಿತನ್ನು ನೀವು ಮಾಡಿಕೊಂಡರೂ ಅಲ್ಲಾಹ್ ನು ಅದನ್ನು ಅರಿತು ಕೊಳ್ಳುತ್ತಾನೆ. (ಹಜ್ಜ್ ಪ್ರಯಾಣಕ್ಕಾಗಿ) ನೀವು ತಮ್ಮನ್ನು ಸುಸಜ್ಜಿತ ಗೊಳಿಸಿಕೊಳ್ಳಿ. ಆದರೆ (ನೀವು ತಿಳಿದುಕೊಳ್ಳಿ) ಅತ್ಯುತ್ತಮವಾದ ಯಾತ್ರಾ ಸಿದ್ಧತೆಯು ಅಲ್ಲಾಹ್ ನ ಭಯಭಕ್ತಿಯನ್ನು (ಯಾತ್ರೆಯಲ್ಲಿ) ಜೊತೆಗಿರಿಸಿ ಕೊಳ್ಳುವುದೇ ಆಗಿದೆ. ಓ ವಿವೇಚನಾಶೀಲ ಜನರೇ ನೀವು ನನಗೆ ಭಯಭಕ್ತಿ ತೋರಿರಿ. [197]

(ಹಜ್ಜ್ ಯಾತ್ರೆಯ ಸಮಯದಲ್ಲಿ) ನಿಮ್ಮ ಒಡೆಯನಿಂದ ಸಮೃದ್ಧತೆಯನ್ನು ಅರಸಿ ಕೊಂಡರೆ (ಅಂದರೆ ಲಾಭದಾಯಕ ವ್ಯಾಪಾರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡರೆ) ಅದು ನಿಮಗೆ ದೋಷದಾಯಕವಲ್ಲ. ಇನ್ನು ‘ಅರಫಾತ್’ ನಿಂದ ನೀವು ಹೊರಟು ಬರುವಾಗ ‘ಮಶ್‍ಅರ್-ಅಲ್-ಹರಾಮ್’ ನ ಬಳಿ (ಅಂದರೆ ‘ಅರಫಾತ್’ ಮತ್ತು ‘ಮಿನಾ’ ಗಳ ನಡುವೆ ಇರುವ ‘ಮುಝ್ದಲಿಫಃ’ ದಲ್ಲಿ ತಂಗಿಕೊಂಡು) ಅಲ್ಲಾಹ್ ನ ಸ್ಮರಣೆಯಲ್ಲಿ ತೊಡಗಿರಿ. ನಿಮಗೆ (ಅಲ್ಲಾಹ್ ನು) ತೋರಿಸಿ ಕೊಟ್ಟ ರೀತಿಯಲ್ಲೇ ಅವನ ಸ್ಮರಣೆ ಮಾಡಬೇಕು. ವಾಸ್ತವದಲ್ಲಿ ಇದಕ್ಕಿಂತ ಮುಂಚೆ ನೀವು (ಹಜ್ಜ್ ಗೆ ಸಂಬಂಧಿಸಿದ ಆಚಾರ-ವಿಚಾರಗಳಲ್ಲಿ) ಸ್ಪಷ್ಟವಾಗಿ ದಾರಿತಪ್ಪಿದವರ ಸಾಲಿಗೆ ಸೇರಿದ್ದಿರಿ. ತರುವಾಯ, (ಓ ಕರೈಶ್ ಗೋತ್ರಕ್ಕೆ ಸೇರಿದ ಜನರೇ), ಇತರೆಲ್ಲ ಜನರು ಎಲ್ಲಿಂದ ತೆರಳುತ್ತಾರೋ ನೀವೂ ಸಹ ಅಲ್ಲಿಂದಲೇ ತೆರಳಬೇಕು. ಮತ್ತು ಅಲ್ಲಾಹ್ ನಿಂದ ಕ್ಷಮೆಯಾಚಿಸಿ ಕೊಳ್ಳಿ. ಅಲ್ಲಾಹ್ ನಾದರೋ ಅತಿ ಹೆಚ್ಚು ಕ್ಷಮಿಸುವವನೂ ಪರಮ ಕಾರುಣ್ಯವಂತನೂ ಆಗುರುವನು. [198-199]

ನೀವು (ಹಜ್ಜ್ ಗೆ ಸಂಬಂಧಿಸಿದ) ವಿಧಿಯುಕ್ತ ಕರ್ಮಗಳನ್ನೆಲ್ಲ (ಅರಬಿ: ಮನಾಸಿಕ್-ಅಲ್-ಹಜ್ಜ್) ನಿರ್ವಹಿಸಿ ಕೊಂಡರೆ (ಈ ಮೊದಲು ‘ಮಿನಾ’ ದಲ್ಲಿ ಕುಳಿತುಕೊಂಡು) ನೀವು ನಿಮ್ಮ ಪೂರ್ವಜರನ್ನು (ಹೆಚ್ಚು ಆಸಕ್ತಿಯೊಂದಿಗೆ) ಸ್ಮರಿಸಿ ಕೊಳ್ಳುತ್ತಿದ್ದಂತೆ ಅಥವಾ ಅದಕ್ಕಿಂತಲೂ ಮಿಗಿಲಾದ ರೀತಿಯಲ್ಲಿ (ಇನ್ನು ಮುಂದೆ) ಅಲ್ಲಾಹ್ ನ ಸ್ಮರಣೆ ಮಾಡಿ ಕೊಳ್ಳಿ. ಜನರ ಪೈಕಿ, ಓ ನಮ್ಮ ಒಡೆಯನೇ! ಈ ಲೋಕದಲ್ಲಿ (ಸುಖ-ಸೌಭಾಗ್ಯಗಳನ್ನು) ನಮಗೆ ದಯಪಾಲಿಸು ಎಂದು (ಮಾತ್ರ) ಯಾರು ಪ್ರಾರ್ಥಿಸಿ ಕೊಳ್ಳುತ್ತಾರೋ ಅವರಿಗೆ ಇನ್ನೊಂದು ಲೋಕದಲ್ಲಿ ಏನೂ ಪಾಲು ಸಿಗದು. (ಅದಕ್ಕೆ ಬದಲಾಗಿ) ಓ ನಮ್ಮ ಒಡೆಯಾ! ನಮಗೆ ಈ ಲೋಕದಲ್ಲೂ ಅತ್ಯುತ್ತಮವಾದುದನ್ನು ದಯಪಾಲಿಸ ಬೇಕು; ಪರಲೋಕದಲ್ಲೂ ಅತ್ಯುತ್ತಮವಾದುದನ್ನೇ ದಯಪಾಲಿಸಬೇಕು; ಮಾತ್ರಲ್ಲ, ನರಕದ ಯಾತನೆಯಿಂದಲೂ ನಮ್ಮನ್ನು ಕಾಪಾಡ ಬೇಕು – ಎಂದು ಪ್ರಾರ್ಥಿಸಿ ಕೊಳ್ಳುವವರೂ ಅವರಲ್ಲಿದ್ದಾರೆ. ಅಂಥವರೇ ತಾವು ಸಂಪಾದಿಸಿ ಕೊಂಡ (ಒಳಿತುಗಳ) ಪಾಲನ್ನು (ಇಹ-ಪರಲೋಕಗಳಲ್ಲಿ) ಪಡೆದು ಕೊಳ್ಳುವವರು. ಅಲ್ಲಾಹ್ ನಾದರೋ ತ್ವರಿತವಾಗಿ ಲೆಕ್ಕ ಮುಗಿಸಿ ಬಿಡುವವನಾಗಿದ್ದಾನೆ. [200-202]

ಗೊತ್ತು ಪಡಿಸಲಾದ ಕೆಲ ದಿನಗಳಲ್ಲಿ ನೀವು (ಮಿನಾ ದಲ್ಲಿ ತಂಗಿಕೊಂಡು) ಅಲ್ಲಾಹ್ ನ ಸ್ಮರಣೆ ಮಾಡಿರಿ. (ಮಿನಾ ದಲ್ಲಿ ಕೈಗೊಳ್ಳ ಬೇಕಾದ ಹಜ್ಜ್ ಗೆ ಸಂಬಂಧಿಸಿದ ಕಾರ್ಯಗಳನ್ನು ಮುಗಿಸಿ ಕೊಂಡು) ಯಾರಾದರೂ ಆತುರಪಟ್ಟು ಎರಡೇ ದಿನಗಳಲ್ಲಿ (ಅಲ್ಲಿಂದ) ಮರಳಿದರೆ ಅವನ ಮೇಲೆ ದೋಷವಿಲ್ಲ. ಇನ್ನು ಯಾರಾದರೂ ತಡಮಾಡಿ ಕೊಂಡು ಮರಳಿದರೆ ಅವನ ಮೇಲೆ ಕೂಡ ದೋಷವಿಲ್ಲ. (ಹಜ್ಜ್ ನಲ್ಲಿ ಸಾದ್ಯಂತ) ಅಲ್ಲಾಹ್ ನ ಭಯಭಕ್ತಿಯನ್ನು ಪಾಲಿಸಿ ಕೊಂಡವನಿಗೆ (ಇರುವ ಸೌಲಭ್ಯವಿದು). ನೀವು ಅಲ್ಲಾಹ್ ನ ಭಯ-ಭಕ್ತಿ ಮೈಗೂಡಿಸಿಕೊಳ್ಳಿ. ನಿಮ್ಮನ್ನೆಲ್ಲ ಅವನ ಸನ್ನಿಧಿಯಲ್ಲಿ (ಒಂದು ದಿನ) ಒಟ್ಟು ಸೇರಿಸಲಾಗುವುದು ಎಂಬುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ. [203]

(ಓ ಪೈಗಂಬರರೇ,) ಪ್ರಾಪಂಚಿಕ ಜೀವನದ ಕುರಿತಂತೆ ನಿಮಗೆ ಬಹಳವಾಗಿ ಮೆಚ್ಚುಗೆಯಾಗುವ ಮಾತುಗಾರಿಕೆಯೊಂದಿಗೆ, ಮತ್ತು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು (ಮಂಡಿಸುವಾಗ ನಿಮಗೆ ನಂಬಿಕೆ ಬರಿಸುವ ಸಲುವಾಗಿ ಪದೇ ಪದೇ) ಅಲ್ಲಾಹ್ ನನ್ನು ಸಾಕ್ಷಿ ನಿಲ್ಲಿಸಿಕೊಳ್ಳುವ (‘ಮುನಾಫಿಕ್’ ಗಳೂ) ಜನರ ಪೈಕಿ ಇದ್ದಾರೆ. (ಆದರೆ ಅಂತಹ ಮಾತಿನ ಮಲ್ಲನು ನಿಮಗೆ/ನೀವು ಸಾರುವ ಸಂದೇಶಕ್ಕೆ) ಅತ್ಯಂತ ಕೆಟ್ಟ ಶತ್ರುವಾಗಿದ್ದಾನೆ. (ಪೈಗಂಬರರೇ, ನಿಮ್ಮ ಸನ್ನಿಧಿಯಿಂದ) ಮರಳಿದ ಬಳಿಕ ಅಂಥವನು ನಾಡಿನ ಶಾಂತಿಭಂಗಕ್ಕಾಗಿ ಅತಿಯಾಗಿ ಶ್ರಮಿಸುತ್ತಾನೆ. ಹೊಲ-ಬೆಳೆಗಳು ಮತ್ತು ಪಶುಗಳ ವಂಶ ನಾಶಕ್ಕಾಗಿ ಓಡಾಡುತ್ತಾನೆ. ಅಲ್ಲಾಹ್ ನಾದರೋ ಅಶಾಂತಿ/ಕ್ಷೋಭೆಯನ್ನು ಇಷ್ಟಪಡುವುದಿಲ್ಲ. ಅಲ್ಲಾಹ್ ನನ್ನು ಭಯ ಪಟ್ಟುಕೋ ಎಂದು ಅವನೊಡನೆ ಹೇಳಲಾದಾಗ, ಅವನ ದುರಭಿಮಾನವು (ಇನ್ನಷ್ಟು ಹೆಚ್ಚು) ಪಾಪಕೃತ್ಯಗಲ್ಲಿ ಅವನನ್ನು ಸಿಲುಕಿಸುತ್ತದೆ. ಅಂಥವನಿಗೆ ನೆರಕವೇ ಗತಿ! ನಿಜವಾಗಿ ಅದು ಅತ್ಯಂತ ಕೆಟ್ಟ ನೆಲೆ! ಇನ್ನು, ಅಲ್ಲಾಹ್ ನ ಪ್ರೀತಿ/ಮೆಚ್ಚುಗೆಯನ್ನು ಗಳಿಸಿ ಕೊಳ್ಳುವ ಸಲುವಾಗಿ ತಮ್ಮನ್ನೇ ಮಾರಿ ಕೊಳ್ಳುವ (ಕೆಲವರೂ) ಜನರ ಪೈಕಿ ಇರುವರು! ಅಲ್ಲಾಹ್ ನು ತನ್ನ (ಅಂತಹ) ಆಪ್ತಸೇವಕರ ಪಾಲಿಗೆ ಹೆಚ್ಚು ಕೃಪೆಯುಳ್ಳವನಾಗಿದ್ದಾನೆ. [204-207]

(ಇಸ್ಲಾಮ್ ಸಾರುವ ಸಂದೇಶದಲ್ಲಿ) ವಿಶ್ವಾಸವಿರಿಸಿ ಕೊಂಡ ಜನರೇ, ನೀವೆಲ್ಲರೂ ಸರ್ವ-ಸಂಪೂರ್ಣವಾಗಿ ‘ಇಸ್ಲಾಮ್’ ನ ಪರಿಧಿಯ ಒಳಕ್ಕೆ ಪ್ರವೇಶಿಸಿ ಕೊಳ್ಳಿ. ಸೈತಾನನ ಹೆಜ್ಜೆಗುರುತನ್ನು ಅನುಸರಿಸ ಬೇಡಿ. ಸೈತಾನನಾದರೋ ನಿಮ್ಮ ಸ್ಪಷ್ಟವಾದ ವೈರಿಯಾಗಿದ್ದಾನೆ. ನಿಮ್ಮ ಬಳಿಗೆ ಸುವ್ಯಕ್ತ ದೃಷ್ಟಾಂತಗಳು ಬಂದ ಬಳಿಕವೂ ನೀವಿನ್ನು ತಪ್ಪಿ ನಡೆದರೆ, ಅಲ್ಲಾಹ್ ನು ಪ್ರತಾಪಶಾಲಿಯೂ ಅತ್ಯಂತ ಜಾಣ್ಮೆಯುಳ್ಳವನೂ ಆಗಿರುವನು ಎಂಬುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ. (ಇಷ್ಟೊಂದು ಸುಲಲಿತವಾದ ಉಪದೇಶವನ್ನು ಅರ್ಥ ಮಾಡಿಕೊಳ್ಳದ ಆ ಅವಿಶ್ವಾಸಿ ಜನರು) ನಿರೀಕ್ಷಿಸುತ್ತಿರುವುದು, ಮೋಡಗಳನ್ನು ನೆರಳಾಗಿಸಿ ಕೊಂಡು ಸಾಕ್ಷಾತ್ ಅಲ್ಲಾಹ್ ನೇ ಮಲಕ್ ಗಳ ಜೊತೆಗೂಡಿ ಅವರ ಬಳಿಗೆ ಬಂದು ಎಲ್ಲ ವಿಷಯಗಳನ್ನು ಇತ್ಯರ್ಥ ಮಾಡಿ ಬಿಡಬೇಕು ಎಂದಲ್ಲವೇ? (ತಿಳಿದಿರಿ, ಕೊನೆಗಂತೂ ಇತ್ಯರ್ಥಕ್ಕಾಗಿ) ಎಲ್ಲಾ ವಿಷಯಗಳು ಅವನೆಡೆಗೇ ಮರಳಿಸಲ್ಪಡುವುದು. [208-210]

ಅದೆಷ್ಟು ಸುಸ್ಪಷ್ಟ ಪುರಾವೆಗಳನ್ನು/ದೃಷ್ಟಾಂತಗಳನ್ನು ನಾವು ಅವರಿಗೆ ನೀಡಿದ್ದೆವು ಎಂಬುದನ್ನು ‘ಬನೀ ಇಸ್ರಾಈಲ್’ ರೊಂದಿಗೆ ನೀವು ವಿಚಾರಿಸಿ ಕೊಳ್ಳಿ. ಅಲ್ಲಾಹ್ ನ ಅನುಗ್ರಹವು ತನಗೆ ತಲುಪಿದ ಬಳಿಕ ಯಾರಾದರೂ ಅದನ್ನು ಬದಲಾಯಿಸಿ ಬಿಟ್ಟರೆ, ಅಲ್ಲಾಹ್ ನು ಕಠಿಣವಾಗಿ ಶಿಕ್ಷಿಸುವವನಾಗಿದ್ದನೆ (ಎಂಬುದನ್ನು ಅರಿತಿರಲಿ). [211]

(ಅಲ್ಲಾಹ್ ನ ಏಕತ್ವ, ಮುಹಮ್ಮದ್ ರ ದೌತ್ಯ ಮತ್ತು ಪರಲೋಕವನ್ನು) ಧಿಕ್ಕರಿಸಿ ಬಿಟ್ಟವರಿಗೆ ಪ್ರಾಪಂಚಿಕ ಜೀವನನ್ನು ಶೃಂಗಾರಗೊಳಿಸಿ ತೋರಿಸಲಾಗಿದೆ. ಅಂತಹ ದಿಕ್ಕಾರಿಗಳು (ಮರಣೋತ್ತರ ಜೀವನತಲ್ಲಿ ನಂಬಿಕೆ ಇಡುವ) ವಿಶ್ವಾಸಿಗಳನ್ನು ಗೇಲಿ ಮಾಡುತ್ತಾರೆ. ಆದರೆ ಅಲ್ಲಾಹ್ ನ ಭಯಭಕ್ತಿ ಮೈಗೂಡಿಸಿಕೊಂಡವರು ಪುನರುತ್ಥಾನದ ದಿನ ಅವರಿಗಿಂತ ಉಚ್ಛಮಟ್ಟದಲ್ಲಿರುತ್ತಾರೆ. ಅಲ್ಲಾಹ್ ನಾದರೋ ತಾನಿಚ್ಛಿಸಿದವರಿಗೆ ಅಮಿತವಾಗಿ/ಹೇರಳವಾಗಿ ದಯಪಾಲಿಸುತ್ತಾನೆ. [212]

(ಆರಂಭದಲ್ಲಿ) ಮನುಷ್ಯರೆಲ್ಲಾ ಒಂದೇ ಉಮ್ಮತ್ ಗೆ/ಧರ್ಮಕ್ಕೆ ಸೇರಿದ್ದರು. (ಕ್ರಮೇಣ ಅವರು ಧಾರ್ಮಿಕವಾಗಿ ಚಿನ್ನಭಿನ್ನರಾದಾಗ, ಸ್ವರ್ಗಲೋಕದ ಕುರಿತು) ಶುಭವಾರ್ತೆ ಕೊಡುವ ಹಾಗೂ (ನರಕ ಶಿಕ್ಷೆಯ ಬಗ್ಗೆ) ಮುನ್ನೆಚ್ಚರಿಕೆ ನೀಡುವ ದೂತರನ್ನು ಅಲ್ಲಾಹ್ ನು ನಿಯೋಗಿಸಿದನು. ಯಾವ ವಿಷಯದಲ್ಲಿ ಜನರು ಪರಸ್ಪರ ವಿಭಿನ್ನರಾಗಿದ್ದರೋ ಅದನ್ನು ಇತ್ಯರ್ಥ ಗೊಳಿಸುವ ಸಲುವಾಗಿ ಅಂತಹ ದೂತರ ಜೊತೆಜೊತೆಗೇ ಸತ್ಯದ ಬೋಧನೆ ಇರುವ (ದಿವ್ಯ) ಗ್ರಂಥವನ್ನೂ ಇಳಿಸಿ ಕೊಟ್ಟನು. ಆದರೆ ಸ್ಪಷ್ಟವಾದ ದೃಷ್ಟಾಂತಗಳು ಅವರ ಬಳಿಗೆ ಬಂದ ಬಳಿಕವಷ್ಟೇ ಆ ದೃಷ್ಟಾಂತಗಳು ನೀಡಲ್ಪಟ್ಟ ಜನರು ಪರಸ್ಪರ ವಿದ್ವೇಷ/ಅಸೂಯೆಯ ಕಾರಣ, ಅದರಲ್ಲಿ ಭಿನ್ನಾಭಿಪ್ರಾಯ ತಾಳಿದರು. ಕೊನೆಗೆ, ಸತ್ಯದ ಕುರಿತಾದ ಅವರ ಭಿನ್ನಭಿಪ್ರಾಯದಲ್ಲಿ ಅಲ್ಲಾಹ್ ನು ತಾನಿಚ್ಛಿಸಿದಂತೆ ವಿಶ್ವಾಸಿಗಳಿಗೆ ಮಾರ್ಗದರ್ಶನ ಮಾಡಿದನು. ಅಲ್ಲಾಹ್ ನು ತಾನು ಇಚ್ಚಿಸಿದವರಿಗೆ ನೇರವಾದ ಮಾರ್ಗ ತೋರಿಸಿ ಕೊಡುತ್ತಾನೆ. [213]

ಗತಿಸಿ ಹೋದ ನಿಮ್ಮ ಪೂರ್ವಿಕ (ವಿಶ್ವಾಸಿ) ಗಳಿಗೆ ಬಂದೆರಗಿದ್ದ (ಸತ್ವಪರೀಕ್ಷೆಗಳು) ನಿಮಗಿನ್ನೂ ಎದುರಾಗಿಲ್ಲದೇ ಇರುವ ಸ್ಥಿತಿಯಲ್ಲಿ (ನಿರಾಯಾಸವಾಗಿ) ಸ್ವರ್ಗೋದ್ಯಾನವನ್ನು ಪ್ರವೇಶಿಸಿ ಕೊಳ್ಳುವಿರಿ ಎಂದು ನೀವು ಬಗೆದಿರುವಿರೇನು? ಕಷ್ಟಕಾರ್ಪಣ್ಯಗಳು ಮತ್ತು ವಿಪತ್ತು/ಆಘಾತಗಳ ಹೊಡೆತ ಅವರಿಗೆ ಬಿದ್ದಿತ್ತು. (ಅಂತಹ ಸಂದಿಗ್ಧ ಅವಸ್ಥೆಯಲ್ಲಿರುವಾಗ,) ಅಲ್ಲಾಹ್ ನ ಸಹಾಯ ಯಾವಾಗ ಬರುವುದೋ? – ಎಂದು (ಆ ಕಾಲದ ನಮ್ಮ) ದೂತ ಮತ್ತು ದೂತರ ಜೊತೆಗಿಗಿದ್ದ ವಿಶ್ವಾಸಿಗಳು ರೋದಿಸಿಕೊಳ್ಳುವಷ್ಟು (ಅವರಿಗೆದುರಾಗಿದ್ದ ಸಂಕಷ್ಟಗಳು) ಅವರ (ಅಸ್ತಿತ್ವವನ್ನೇ) ನಡುಗಿಸಿ ಬಿಟ್ಟಿತ್ತು. ತಿಳಿಯಿರಿ, ಖಚಿತವಾಗಿಯೂ ಅಲ್ಲಾಹ್ ನ ಸಹಾಯವು ಬಲು ಹತ್ತಿರದಲ್ಲೇ ಇದೆ (ಎಂದು ಆಗ ಸಾಂತ್ವನ ನೀಡಲಾಗಿತ್ತು). [214]

ಅದೇನನ್ನು ನಾವು ಖರ್ಚು ಮಾಡಬೇಕು? – ಎಂದು (ಓ ನಬಿ ಮುಹಮ್ಮದ್ ರೇ,) ಜನರು ನಿಮ್ಮೊಡನೆ ಕೇಳುತ್ತಿದ್ದಾರೆ. ನೀವು (ನಿಮ್ಮ) ಸಂಪತ್ತಿನಿಂದ ಸಾಧ್ಯವಿರುವಷ್ಟನ್ನು ಮಾತಾಪಿತರಿಗಾಗಿ, ನಿಕಟ ಸಂಬಂಧಿಕರಿಗಾಗಿ, ಅನಾಥ ಮಕ್ಕಳಿಗಾಗಿ, ಬಡಬಗ್ಗರಿಗಾಗಿ ಮತ್ತು ದಾರಿಹೋಕರಿಗಾಗಿ ಖರ್ಚು ಮಾಡಿಕೊಳ್ಳಿ – ಎಂದು ಉತ್ತರಿಸಿ. ನೀವು ಏನೆಲ್ಲ ಒಳಿತನ್ನು ಮಾಡಿಕೊಳ್ಳುವಿರೋ, ಖಂಡಿತವಾಗಿ, ಅಲ್ಲಾಹ್ ನು ಅದನ್ನು ಅರಿತುಕೊಳ್ಳುತ್ತಾನೆ. [215]

ನೀವು ಇಷ್ಟಪಡದೇ ಇದ್ದರೂ ಸಹ (ಅನಿವಾರ್ಯತೆ ಎದುರಾದಾಗ) ಹೋರಾಟವನ್ನು/ಯುದ್ಧವನ್ನು ನಿಮಗೆ ಅನುಶಾಸನ ಮಾಡಲಾಗಿದೆ. ನೀವು ಇಷ್ಟಪಡದೇ ಇರುವ ವಿಷಯವೊಂದು ನಿಮ್ಮ ಪಾಲಿಗೆ ಗುಣಕರವಾಗಿರಲೂ ಬಹುದು; (ಅಂತೆಯೇ,) ನೀವು ಬಹಳವಾಗಿ ಇಷ್ಟಪಟ್ಟು ಕೊಳ್ಳುವ ವಿಷಯವೊಂದು ನಿಮ್ಮ ಪಾಲಿಗೆ ದೋಷಪೂರ್ಣವಾಗಿರಲೂ ಬಹುದು. ಅಲ್ಲಾಹ್ ನಿಗೆ (ಅವೆಲ್ಲದರ ಪೂರ್ಣವಾದ) ತಿಳಿವಳಿಕೆ ಇದೆ ಆದರೆ ನೀವು ತಿಳಿದವರಲ್ಲ. [216]

(ಓ ಪೈಗಂಬರರೇ,) ಆದರಣೀಯ ತಿಂಗಳಲ್ಲಿ ಯುದ್ಧ ಮಾಡುವ ಕುರಿತು ಜನರು ನಿಮ್ಮೊಡನೆ ವಿಚಾರಿಸುತ್ತಿದ್ದಾರೆ. ಆ ತಿಂಗಳುಗಳಲ್ಲಿ ಯುದ್ಧದಲ್ಲಿ ತೊಡಗುವುದು ದೊಡ್ಡ ಅಪರಾಧವಾಗಿದೆ ಎಂದು (ಅವರಿಗೆ) ಹೇಳಿರಿ. ಆದರೆ, ಅಲ್ಲಾಹ್ ನ ಮಾರ್ಗದಿಂದ (ಜನರನ್ನು) ತಡೆಯುವುದು, ಅಲ್ಲಾಹ್ ನನ್ನೇ ಧಿಕ್ಕರಿಸಿ ಬಿಡುವುದು, (ಅವನ ಆರಾಧಕರನ್ನು) ಮಸ್ಜಿದ್-ಅಲ್-ಹರಾಮ್ (ಪ್ರವೇಶಿಸದಂತೆ) ತಡೆಯುವುದು, ಅದರ (ಅರ್ಹ ಮೇಲ್ವಿಚಾರಕರನ್ನು/ಅಲ್ಲಿಯ ಸ್ವಾಭಾವಿಕ) ನಿವಾಸಿಗಳನ್ನು ಅಲ್ಲಿಂದ ಹೊರದಬ್ಬುವುದು – (ಇವೆಲ್ಲ) ಅಲ್ಲಾಹ್ ನ ದೃಷ್ಟಿಯಲ್ಲಿ (ಆದರಣೀಯ ತಿಂಗಳುಗಳ ಗೌರವಕ್ಕೆ ಚ್ಯುತಿ ಬರಿಸುವಿದಕ್ಕಿಂತ) ಹೆಚ್ಚು ಘೋರ ಸ್ವರೂಪದ ಅಪರಾಧವಾಗಿದೆ. (ನಾಡಿನಲ್ಲಿ ಅವರು ಉಂಟುಮಾಡುವ) ಕ್ಷೋಭೆ/ಅಶಾಂತಿಯು (ಅರಬಿ: ಫಿತ್ನಃ) ಕೊಲೆಗಿಂತಲೂ ಹೆಚ್ಚು ಕಠೋರವಾದ ಅಪರಾಧವಾಗಿದೆ. ಒಂದು ವೇಳೆ ಅವರಿಗೆ ಸಾಧ್ಯವಿದ್ದಿದ್ದರೆ, (ನೀವು ಆಚರಿಸುತ್ತಿರುವ) ನಿಮ್ಮ ಧರ್ಮದಿಂದ ನಿಮ್ಮನ್ನು ಹಿಂದಿರುಗಿಸಿ ಬಿಡುವ ವರೆಗೂ ಅವರು ನಿಮ್ಮೊಡನೆ ಕಾದಾಡುತ್ತಲೇ ಇರುತ್ತಿದ್ದರು. ಇನ್ನು ನಿಮ್ಮ ಪೈಕಿ ಯಾರಾದರೂ (ಇಸ್ಲಾಮ್) ಧರ್ಮದಿಂದ ಹಿಂದಿರುಗಿ ಹೋದರೆ, ಮತ್ತು ಧರ್ಮಧಿಕ್ಕಾರದ ಅದೇ ಸ್ಥಿತಿಯಲ್ಲಿ ಸಾವನ್ನಪ್ಪಿದರೆ, ಅಂಥವರ ಕರ್ಮಗಳೆಲ್ಲ ಈ ಲೋಕದಲ್ಲಿಯೂ ಮತ್ತು ಇನ್ನೊಂದು ಲೋಕದಲ್ಲಿದಲ್ಲಿಯೂ ವ್ಯರ್ಥವಾಗಿ ಹೋಗುವುದು. (ಹಾಗೆ ‘ಮುರ್ತದ್’ ಗಳಾದ) ಅವರೇ ನರಕಾಗ್ನಿಯ ಸಂಗಾತಿಗಳು; ಎಂದೆಂದೂ ಅದರಲ್ಲೇ ಬಿದ್ದು ಕೊಂಡಿರುವವರು. (ಆದರೆ ಅಲ್ಲಾಹ್ ನಲ್ಲಿ ಅಚಲವಾದ) ವಿಶ್ವಾಸವಿರಿಸಿದವರು, (ಮತ್ತು ಆ ಕಾರಣಕ್ಕಾಗಿ ತಮ್ಮ) ನಾಡನ್ನೂ ತ್ಯಜಿಸಿದವರು, ಅಲ್ಲಾಹ್ ನ ಮಾರ್ಗದಲ್ಲಿ ತೀವ್ರ ಹೆಣಗಾಟ (ಅರಬಿ: ಜಿಹಾದ್) ನಡೆಸಿದವರು ಅಲ್ಲಾಹ್ ನ ಕೃಪೆ-ಕಾರುಣ್ಯದ ನಿರೀಕ್ಷೆಯಲ್ಲಿರುವ ಜನರಾಗಿದ್ದಾರೆ. ಅಲ್ಲಾಹ್ ನು ಪಾಪಗಳನ್ನು ಯಥೇಚ್ಛವಾಗಿ ಕ್ಷಮಿಸುವವನೂ ಅತ್ಯಂತ ಕರುಣಾಮಯಿಯೂ ಆಗಿರುವನು. [217-218]

(ಪೈಗಂಬರರೇ,) ಮದ್ಯಪಾನ ಮತ್ತು ಜೂಜಾಟದ ಕುರಿತಂತೆ ಅವರು ನಿಮ್ಮೊಂದಿಗೆ ವಿಚಾರಿಸುತ್ತಿದ್ದಾರೆ. ಅವೆರಡರಲ್ಲೂ ಜನರ ಪಾಲಿಗೆ ದೊಡ್ಡ ಪ್ರಮಾಣದ ಪಾಪವಿದೆ, ಸ್ವಲ್ಪ ಲಾಭವೂ ಇರುವುದು; ಆದರೆ ಅವುಗಳ ಪಾಪವು ಅವುಗಳಿಂದುಂಟಾಗುವ ಪ್ರಯೋಜನಕ್ಕಿಂತ ಬಹು ದೊಡ್ಡದು – ಎಂದು ನೀವು ಉತ್ತರಿಸಿರಿ. ಹಾಗೆಯೇ, ಅದೇನನ್ನು, ಎಷ್ಟನ್ನು ದಾನ ಮಾಡಬೇಕೆಂದು ಅವರು ವಿಚಾರಿಸುತ್ತಿದ್ದಾರೆ. ನಿಮ್ಮ ಅವಶ್ಯಕತೆಗಿಂತ ಹೆಚ್ಚುವರಿ ಇರುವುದನ್ನು – ಎಂದು ತಿಳಿಸಿ ಬಿಡಿ. ಅಲ್ಲಾಹ್ ನು ತನ್ನ ಆದೇಶಗಳನ್ನು ಈ ರೀತಿ ನಿಮಗೆ ವಿವರಿಸಿ ಕೊಡುವುದು ನೀವು ಈ ಲೋಕ ಮತ್ತು ಇದರ ನಂತರದ ಲೋಕದ ಬಗ್ಗೆ ಚಿಂತನೆಶೀಲರು ಆಗಬೇಕೆಂಬ ಕಾರಣಕ್ಕಾಗಿ! (ಪೈಗಂಬರರೇ,) ಅನಾಥ ಮಕ್ಕಳ ಬಗ್ಗೆ ಅವರು ನಿಮ್ಮೊಡನೆ ವಿಚಾರಿಸುತ್ತಿದ್ದಾರೆ. ಅವರ ಯೋಗಕ್ಷೇಮ ನೋಡೀಕೊಳ್ಳುವುದೇ ಅತ್ಯುತ್ತಮವಾದುದು, ಇನ್ನು ನೀವು ಅವರನ್ನು ನಿಮ್ಮೊಂದಿಗೆ ಬೆರೆತುಕೊಳ್ಳುವಂತೆ ಮಾಡಿದರೆ (ಅದೂ ಸರಿಯೇ, ಏಕೆಂದರೆ) ಅವರು ನಿಮಗೆ ಸಹೊದರರಂತೆ ಇರುವವರು. ಅನಾಥ ಮಕ್ಕಳಿಗೆ ಕೇಡು ಬಗೆಯುವವರನ್ನು ಅವರ ಕ್ಷೇಮ-ಕಲ್ಯಾಣ ಬಯಸುವವರಿಂದ ಅಲ್ಲಾಹ್ ನು ಪ್ರತ್ಯೇಕಿಸಿ ಗುರುತಿಸಿ ಕೊಳ್ಳುವನು! ಅಲ್ಲಾಹ್ ನು ಬಯಸಿರುತ್ತಿದ್ದರೆ (ಅನಾಥ ಮಕ್ಕಳ ವಿಷಯದಲ್ಲಿ) ನಿಮ್ಮ ಮೇಲೆ ಹೆಚ್ಚು ಕಠಿಣ (ಜವಾಬ್ದಾರಿಯನ್ನು ಹೊರಿಸ ಬಹುದಿತ್ತು)! ಅಲ್ಲಾಹ್ ನು ಪ್ರಚಂಡ ಸಾಮರ್ಥ್ಯವುಳ್ಳವನೂ ಜೊತೆಗೇ ಸೂಕ್ಷ್ಮಮತಿಯೂ ಆಗಿರುವನು. [219-220]

ಬಹುದೇವಾರಾಧಕಿಯರು ಆದ (ಕುಲೀನ) ಸ್ತ್ರೀಯರನ್ನು, (ಅವರು ಅಲ್ಲಾಹ್ ನ ಏಕತೆಯಲ್ಲಿ ವಿಶ್ವಾಸವಿರಿಸಿ ಕೊಂಡು) ಮುಸ್ಲಿಮರಾಗುವ ತನಕ ನೀವು ವಿವಾಹವಾಗಬಾರದು. ನಿಜವಾಗಿಯೂ ಮುಸ್ಲಿಮಳಾದ ದಾಸಿಯೊಬ್ಬಳು, ಅನೇಕ ದೇವ-ದೇವತೆಯರನ್ನು ಪೂಜಿಸುವ (ಕುಲೀನ) ಸ್ತ್ರೀಗಿಂತ ಉತ್ತಮಳು; ನಿಮಗೆ ಆ ಕುಲೀನಳು ಅದೆಷ್ಟು ಮೆಚ್ಚುಗೆಯಾಗಿದ್ದರೂ ಸರಿಯೇ! (ಹಾಗೆಯೀ, ಮುಸ್ಲಿಮ್ ಸ್ತ್ರೀಯರನ್ನು) ಬಹುದೇವಾರಾಧಕರಿಗೆ ಅವರು ಮುಸ್ಲಿಮರಾಗುವ ತನಕ ವರಿಸಿ ಕೊಡಬಾರದು. ಮುಸ್ಲಿಮನಾದ ದಾಸನೊಬ್ಬನು ಬಹುದೇವವಿಶ್ವಾಸಿಗಿಂತ (ಮುಸ್ಲಿಮ್ ಸ್ತ್ರೀಯರನ್ನು ವಿವಾಹ ಮಾಡಿ ಕೊಡಲು) ಹೆಚ್ಚು ಯೋಗ್ಯನು; ನಿಮಗೆ ಆ ಬಹುದೇವಾರಾಧಕ ಗಂಡು ಅದೆಷ್ಟು ಇಷ್ಟವಾಗಿದ್ದರೂ ಸರಿಯೇ. ಬಹುದೇವಾರಾಧಕರು ನಿಮ್ಮನ್ನು ನರಕದತ್ತ ಕರೆದೊಯ್ಯುತ್ತಾರೆ; ಅಲ್ಲಾಹ್ ನಾದರೋ ನಿಮ್ಮನ್ನು ಸ್ವರ್ಗದತ್ತ ಕರೆಯುತ್ತಿದ್ದಾನೆ; ತನ್ನ ಇಚ್ಛೆಯಿಂದ (ನಿಮ್ಮ) ಪಾಪಗಳನ್ನು ಕ್ಷಮಿಸುವವನಾಗಿದ್ದಾನೆ; ನೀವು ಬೋಧನೆ ಸ್ವೀಕರಿಸಿ ಕೊಳ್ಳುವವರಾಗಲು ತನ್ನ ಆದೇಶಗಳನ್ನು ಜನರಿಗೆ ವಿವರಿಸುತ್ತಾನೆ. [221]

ಆರ್ತವ/ಋತುಸ್ರಾವದ ಕುರಿತು ಅವರು ನಿಮ್ಮೊಡನೆ ವಿಚಾರಿಸುತ್ತಿದ್ದಾರೆ; (ಸ್ತ್ರೀಯರಿಗೆ) ಅದೊಂದು ಮಾಲಿನ್ಯದ/ಅಸ್ವಸ್ಥತೆಯ ಅವಸ್ಥೆಯಾಗಿದೆ, ಆದ್ದರಿಂದ ಋತುಸ್ರಾವದ ಕಾಲದಲ್ಲಿ ನೀವು ಸ್ತ್ರೀಯರಿಂದ ದೂರವಿರಬೇಕು, ಅವರು ಶುದ್ಧಿಯಾಗುವ ತನಕ ಅವರನ್ನು (ಲೈಂಗಿಕವಾಗಿ) ಸಮೀಪಿಸ ಬೇಡಿ ಎಂದು (ನಬಿ ಮುಹಮ್ಮದ್ ರೇ, ನೀವು ಅವರಿಗೆ) ಹೇಳಿರಿ. ಇನ್ನು ಅವರು (ಮಿಂದು) ಶುದ್ಧಿಯಾದರೆ ಅಲ್ಲಾಹ್ ನು ನಿಮಗೆ ಅನುಮತಿಸಿದ ರೀತಿಯಲ್ಲಿ ನೀವು ಅವರ ಬಳಿಗೆ ಹೋಗಿರಿ. ಅಲ್ಲಾಹ್ ನಾದರೋ ಪಶ್ಚಾತ್ತಾಪ ಪಡುವವರನ್ನು ಇಷ್ಟಪಡುತ್ತಾನೆ; ಹಾಗೂ ಸ್ವಯಂ ಶುದ್ಧವಾಗಿರಿಸಿ ಕೊಳ್ಳುವವರನ್ನು ಮೆಚ್ಚಿಕೊಳ್ಳುತ್ತಾನೆ. ನಿಮ್ಮ ಪತ್ನಿಯರಾದರೋ ನಿಮಗಾಗಿ ಕೃಷಿಭೂಮಿಯಂತೆ ಇರುವವರು. ನೀವು ಬಯಸಿ ಕೊಂಡಂತೆ ನಿಮ್ಮ ಕೃಷಿಸ್ಥಳಕ್ಕೆ ಹೋಗಿರಿ. ಸ್ವಂತಕ್ಕಾಗಿ ಮುಂಗಡ (ಯೋಜನೆ) ಮಾಡಿಕೊಳ್ಳಿ; ಅಲ್ಲಾಹ್ ನ ಭಯವಿರಿಸಿ ಕೊಳ್ಳಿ, ಮತ್ತು ಅವನನ್ನು ಭೇಟಿಯಾಗಲಿರುವಿರಿ ಎಂಬುದನ್ನು ಚೆನ್ನಾಗಿ ತಿಳಿದು ಕೊಳ್ಳಿ. ಧರ್ಮವಿಶ್ವಾಸಿಗಳಿಗೆ ಶುಭ ಸಂದೇಶವನ್ನು ಕೊಡಿರಿ. [222-223]

ಸತ್ಕಾರ್ಯ, ಧರ್ಮನಿಷ್ಠೆ ಮತ್ತು ಜನರ ನಡುವೆ ಸಂಧಾನ ಮಾಡಿಸುವ ಕಾರ್ಯಗಳಿಂದ ದೂರ ಉಳಿದುಕೊಳ್ಳುಲು ಮಾಡುವ ಪ್ರತಿಜ್ಞೆಗಾಗಿ ನೀವು ಅಲ್ಲಾಹ್ ನ (ಪವಿತ್ರ ಹೆಸರನ್ನು) ಗುರಿಪಡಿಸಬೇಡಿ. ಅಲ್ಲಾಹ್ ನಾದರೋ ಎಲ್ಲವನ್ನೂ ಆಲಿಸುವವನೂ ಸಕಲವನ್ನೂ ಅರಿತಿರುವವನೂ ಆಗಿದ್ದಾನೆ. ನಿಮ್ಮ ನಿರರ್ಥಕ/ಉದ್ದೇಶರಹಿತ ಶಪಥಗಳಿಗಾಗಿ ಅಲ್ಲಾಹ್ ನು ನಿಮ್ಮನ್ನು ಹಿಡಿಯುವುದಿಲ್ಲ, ಆದರೆ ನಿಮ್ಮ ಹೃದಯಗಳು (ಉದ್ದೇಶಪೂರ್ವಕವಾಗಿ) ಮಾಡಿಕೊಂಡ (ಶಪಥಗಳಿಗಾಗಿ) ನಿಮ್ಮನ್ನು ಅಲ್ಲಾಹ್ ನು ಹಿಡಿಯುವನು/ಶಿಕ್ಷಿಸುವನು. ಅಲ್ಲಾಹ್ ನು ಹೆಚ್ಚು ಕ್ಷಮಿಸುವವನೂ ಸಂಯಮಶೀಲನೂ ಆಗಿದ್ದಾನೆ. {224-225}

(ಅಂತೆಯೇ) ತಮ್ಮ ಪತ್ನಿಯರನ್ನು ಸಮೀಪಿಸುವುದಿಲ್ಲ ಎಂದು [ಕಿರಾತ ಸಂಪ್ರದಾಯದಂತೆ] ಪ್ರತಿಜ್ಞೆ ಮಾಡಿಕೊಂಡವರಿಗೆ (ತಮ್ಮ ಪ್ರತಿಜ್ಞೆ ಮುರಿಯಲು ಗರಿಷ್ಠ) ನಾಲ್ಕು ತಿಂಗಳ ಕಾಲಾವಧಿ ಇರುವುದು. ಒಂದು ವೇಳೆ ಅವರು [ಹೊಂದಾಣಿಕೆ ಮಾಡಿಕೊಂಡು ಪ್ರತಿಜ್ಞೆಯನ್ನು] ಹಿಂತೆಗೆದು ಕೊಂಡರೆ, ಅಲ್ಲಾಹ್ ನು ಖಂಡಿತವಾಗಿ (ಅವರ ಪಾಲಿಗೆ) ಕ್ಷಮಿಸುವವನೂ ಹೆಚ್ಚು ಕರುಣೆ ತೋರುವವನೂ ಆಗಿರುವನು. ಇನ್ನು, ಅವರ ಧೃಡವಾದ ನಿರ್ಧಾರವು ವಿವಾಹ-ವಿಚ್ಛೇದನವೇ ಆಗಿದ್ದರೆ, (ಅವರು ತಿಳಿದಿರಲಿ) ಅಲ್ಲಾಹ್ ನು ಎಲ್ಲವನ್ನೂ ಕೇಳಿಸಿಕೊಳ್ಳುವವನೂ ಎಲ್ಲವನ್ನೂ ಬಲ್ಲವನೂ ಆಗಿರುವನು. {226-227}

ವಿವಾಹ-ವಿಚ್ಛೇದಿತ ಸ್ತ್ರೀಯರು ಮೂರು ಋತುಚಕ್ರದ ಅವಧಿಯ ವರೆಗೆ ತಮ್ಮನ್ನು (ಮರು ವಿವಾಹ ಮಾಡಿಕೊಳ್ಳದಂತೆ) ತಡೆದಿರಿಸಿ ಕೊಳ್ಳಬೇಕು. ಅಲ್ಲಾಹ್ ನಲ್ಲಿ ಮತ್ತು ಅಂತ್ಯದಿನದಲ್ಲಿ ಅವರು ಧೃಡ ವಿಶ್ವಾಸ ಇಟ್ಟುಕೊಂಡವರಾದರೆ ತಮ್ಮ ಗರ್ಭಾಶಯದಲ್ಲಿ ಅಲ್ಲಾಹ್ ನು ಸೃಷ್ಟಿರುವುದನ್ನು [ಅರ್ಥಾತ್: ಅವರು ಗರ್ಭವತಿಯರಾಗಿದ್ದರೆ ಅದನ್ನು ಪ್ರಕಟಪಡಿಸದೆ] ಬಚ್ಚಿಟ್ಟುಕೊಳ್ಳಲು ಅವರಿಗೆ ಅನುಮತಿ ಇಲ್ಲ. ಇನ್ನು, ಅವರ ಪತಿಯಂದಿರು ಒಂದು ವೇಳೆ (ಹದಗೆಟ್ಟಿದ್ದ ದಾಂಪತ್ಯವನ್ನು) ಸುಧಾರಿಸಿಕೊಳ್ಳ ಬಯಸಿದರೆ, ಆ ಅವಧಿಯೊಳಗೆ (ಅವರನ್ನು ಪತ್ನಿಯರಾಗಿ) ಮರಳಿ ಪಡೆದುಕೊಳ್ಳಲು ಅವರೇ ಹೆಚ್ಚು ಅರ್ಹತೆಯುಳ್ಳವರಾಗಿದ್ದರೆ. ಪತಿಯಂದಿರಿಗೆ ಪತ್ನಿಯರ ಮೇಲೆ (ಕೆಲವು) ಹಕ್ಕುಗಳಿರುವಂತೆಯೇ ಪತ್ನಿಯರಿಗೂ ನ್ಯಾಯೋಚಿತವಾಗಿಯೇ ಪತಿಯರ ಮೇಲೆ (ಕೆಲವು) ಹಕ್ಕುಗಳಿವೆ. ಅದರೆ ಪುರುಷರಿಗೆ [ಪತಿಯೆಂಬ ನೆಲೆಯಲ್ಲಿ] ಪತ್ನಿಯರ ಮೇಲೆ ಒಂದು ದರ್ಜೆಯಷ್ಟು (ಹೆಚ್ಚುವರಿ ಹಕ್ಕು) ಇರುವುದು. ಅಲ್ಲಾಹ್ ನು ಪ್ರತಾಪಶಾಲಿಯೂ ಅತ್ಯಂತ ವಿವೇಕಪೂರ್ಣನೂ ಆಗಿರುವನು (ಎಂದು ನೀವು ಮನದಟ್ಟು ಮಾಡಿಕೊಳ್ಳಿ). {228}

ಅಂತಹ ತಲಾಕ್ [ಅರ್ಥಾತ್ ಹಿಂಪಡೆಯಬಹುದಾದ ತಲಾಕ್ ನ ಅವಕಾಶ ಕೇವಲ] ಎರಡು ಬಾರಿ ಮಾತ್ರ! ಇನ್ನು [ಪತ್ನಿಗೆ ಒಮ್ಮೆ ತಲಾಕ್ ನೀಡಿ ಅದರ ಕಾಲಾವಧಿಯೊಳಗೆ ಹಿಂಪಡೆದುಕೊಂಡರೆ ಅವಳನ್ನು] ರೂಢಿಯಲ್ಲಿರುವ ಉತ್ತಮ ರೀತಿ-ರಿವಾಜಿನ ಪ್ರಕಾರ (ಪತ್ನಿಯಾಗಿ) ಉಳಿಸಿಕೊಳ್ಳಬಹುದು. ಅಥವಾ [ವಿಚ್ಚೇದನವೇ ತೀರ್ಮಾನವಾಗಿದ್ದರೆ] ತುಂಬಾ ಸೊಗಸಾದ ರೀತಿಯಲ್ಲಿ (ಅವಳನ್ನು ದಾಂಪತ್ಯ ಬಂಧನದಿಂದ) ವಿಮುಕ್ತ ಗೊಳಿಸಬೇಕು. ಆದರೆ ಪತ್ನಿಯರಿಗೆ ಕೊಟ್ಟಿರುವುದರಿಂದ ಸ್ವಲ್ಪವನ್ನೂ (ವಿಚ್ಛೇದಿಸುವಾಗ) ಮರಳಿ ಪಡೆದುಕೊಳ್ಳಲು ನಿಮಗೆ ಅನುಮತಿ ಇಲ್ಲ.

ಆದರೆ ಅಲ್ಲಾಹ್ ನು [ನಿಶ್ಚಯಿಸಿರುವ ದಾಂಪತ್ಯದ ಹಕ್ಕು-ಬಾಧ್ಯತೆಯ] ಕಟ್ಟಳೆಗಳನ್ನು ಸರಿಯಾಗಿ ಪಾಲಿಸಿ ಕೊಳ್ಳುವ ಬಗ್ಗೆ ಆ ಪತಿ-ಪತ್ನಿಯರಲ್ಲಿ ಆತಂಕವಿದ್ದರೆ (ಅದು ಈ ನಿಯಮಕ್ಕೆ) ಹೊರತಾಗಿದೆ. ಅಲ್ಲಾಹ್ ನು (ನಿಶ್ಚಯಿಸಿದ ದಾಂಪತ್ಯದ) ನಿಯಮಗಳನ್ನು ಅವರೀರ್ವರು ಸರಿಯಾಗಿ ಪಾಲಿಸಿ ಕೊಳ್ಳಲಾರು ಎಂದು (ಓ ವಿಶ್ವಾಸಿಗಳೇ) ನೀವು ಸಹ ಭಯಪಟ್ಟುಕೊಂಡರೆ, ಪತ್ನಿಯು (ಹಿಂದೆ ತನ್ನ ಪತಿಯಿಂದ ಪಡೆದು ಕೊಂಡಿದ್ದ ಸಂಪತ್ತಿನಿಂದ) ಏನನ್ನಾದರೂ ಪರಿಹಾರವಾಗಿ ಪತಿಗೆ ನೀಡಿ [ವಿವಾಹ-ವಿಚ್ಚೇದನ ಪಡೆದುಕೊಂಡರೆ] ಅವರಿಬ್ಬರಿಗೂ ಅದು ದೋಷಕರವಲ್ಲ. ಇವು ಅಲ್ಲಾಹ್ ನು ನಿಶ್ಚಯಿಸಿರುವ (ತಲಾಕ್/ವಿವಾಹ-ವಿಚ್ಚೇದನೆಯ) ಕಟ್ಟಳೆಗಳು; ಆದ್ದರಿಂದ ಅವನ್ನು ಉಲ್ಲಂಘಿಸಬೇಡಿ. ಅಲ್ಲಾಹ್ ನು ನಿಶ್ಚಯಿಸಿದ ಕಟ್ಟಳೆಗಳನ್ನು ಯಾರಾದರೂ ಉಲ್ಲಂಘಿಸಿದರೆ (ತಿಳಿದು ಕೊಳ್ಳಿ) ಅವರೇ ಅಕ್ರಮಿಗಳು. {229}

ಹಾಗೆ [ಹಿಂದೆ ಎರಡು ಬಾರಿ ತಲಾಕ್ ನೀಡಿ ಅದನ್ನು ಹಿಂಪಡೆದಿದ್ದು] ಈಗ ಅವಳಿಗೆ (ಮೂರನೆಯ ಬಾರಿಗೆ) ತಲಾಕ್ ನೀಡಿದರೆ ಅವಳು ಅವನ ಪಾಲಿಗೆ (ಹಿಂಪಡೆಯಲು) ನಿಷಿದ್ಧವಾಗುವಳು – ಎಲ್ಲಿಯ ತನಕವೆಂದರೆ, (ವಿಚ್ಚೇದಿತೆಯಾದ) ಅವಳು ಬೇರೊಬ್ಬ ಪತಿಯನ್ನು ವಿವಾಹವಾಗಿ ನಂತರ ಅವನೂ ಸಹ (ಅವಳನ್ನು ಸಹಜವಾಗಿಯೇ) ತ್ಯಜಿಸಿ ಬಿಡುವ ತನಕ. ಹಾಗೆ (ಆ ಎರಡನೆಯ ಪತಿಯೂ) ಅವಳನ್ನು ತ್ಯಜಿಸಿದರೆ, ಅನಂತರ (ಹಿಂದೊಮ್ಮೆ ದಂಪತಿಗಳಾಗಿದ್ದ) ಅವರಿಬ್ಬರಿಗೂ ಅಲ್ಲಾಹ್ ನ ನಿಯಮಗಳನ್ನು (ದಾಂಪತ್ಯದಲ್ಲಿ) ಪಾಲಿಸಿ ಕೊಳ್ಳುವ ಬಗ್ಗೆ ಭರವಸೆ ಇದ್ದರೆ, ಅವರಿಬ್ಬರೂ ಮರಳಿ ವಿವಾಹ ಮಾಡಿಕೊಂಡರೆ ಇಬ್ಬರ ಮೇಲೂ ಪಾಪವಿಲ್ಲ. ಇವು ಅಲ್ಲಾಹ್ ನು (ನಿಯಮ ಪಡಿಸಿದ) ಕಟ್ಟಳೆಗಳಾಗಿದ್ದು ವಿವೇಚಿಸುವ ಜನರಿಗೆ ಅವನು ಅವನ್ನು ಸವಿವರ ತಿಳಿಸುತ್ತಾನೆ. {230}

ನೀವು ಪತ್ನಿಯರಿಗೆ ತಲಾಕ್ ನೀಡಿದ ನಂತರ ಅವರು (ತಲಾಕ್ ಗೆ ಸಂಬಂಧಿಸಿದ ಇದ್ದಃ ದ) ಅವಧಿಯನ್ನು ತಲುಪಿದರೆ, ಒಂದೋ (ಶರೀಅತ್ ನ) ಶಿಷ್ಟಾಚಾರದ ಪ್ರಕಾರ ಅವರನ್ನು [ಪತ್ನಿಯ ಸ್ಥಾನದಲ್ಲಿ ನಿಮ್ಮ ಬಳಿ] ಉಳಿಸಿಕೊಳ್ಳಿ ಅಥವಾ ಅವರನ್ನು (ನಿಮ್ಮ ದಾಂಪತ್ಯದಿಂದ) ಅಂದವಾಗಿ ಬಿಡುಗಡೆ ಗೊಳಿಸಿ. ಅತಿಕ್ರಮವೆಸಗುವ ಮತ್ತು ತೊಂದರೆ/ಕಿರುಕುಳ ನೀಡುವ ಸಲುವಾಗಿ ನೀವು ಅವರನ್ನು ನಿಮ್ಮ ಬಳಿ ತಡೆದು ನಿಲ್ಲಿಸಬಾರದು. ಇನ್ನು ಯಾರಾದರೂ ಹಾಗೆ ಮಾಡಿದರೆ ಆತನು ಸ್ವತಃ ತನ್ನ ಮೇಲೆಯೇ ಅತಿಕ್ರಮವೆಸಗಿ ಕೊಂಡನು (ಎಂಬುದು ತಿಳಿದಿರಲಿ). ಅಲ್ಲಾಹ್ ನ ವಚನಗಳನ್ನು ಒಂದು ತಮಾಷೆಯಂತೆ ತೆಗೆದು ಕೊಳ್ಳಬೇಡಿ. ನಿಮ್ಮ ಮೇಲೆ ಅಲ್ಲಾಹ್ ನು ಮಾಡಿರುವ ಅನುಗ್ರಹಗಳನ್ನೂ, ಇಳಿಸಿ ಕೊಟ್ಟಿರುವ ಕಾನೂನು ಕಟ್ಟಳೆಗಳನ್ನೂ ಮತ್ತು (ಅದನ್ನು ಅರ್ಥೈಸಲು ನಿಮಗೆ ದಯಪಾಲಿಸಿದ) ಜಾಣ್ಮೆತನವನ್ನೂ ಸ್ಮರಿಸಿಕೊಳ್ಳಿ; ಅವುಗಳ ಬಗ್ಗೆ ಅವನು ನಿಮಗೆ ಉಪದೇಶ ನೀಡಿರುವನು. ಅಲ್ಲಾಹ್ ನ (ಎಲ್ಲ ನಿರ್ದೇಶಗಳನ್ನು) ಜಾಗರೂಕತೆಯಿಂದ ಪಾಲಿಸಿಕೊಳ್ಳಿ. ಅಲ್ಲಾಹ್ ನಿಗೆ ಸಕಲ ವಿಷಯಗಳ ಬಗೆಗಿನ ಸಂಪೂರ್ಣ ಜ್ಞಾನವಿದೆ ಎಂಬುದನ್ನು ನೀವು ತಿಳಿದಿರಿ. {231}

ಇನ್ನು ನೀವು ಸ್ತ್ರೀಯರಿಗೆ ತಲಾಕ್ ನೀಡಿದ ಬಳಿಕ ಅವರು ತಮ್ಮ (ಇದ್ದಃ ದ) ಅವಧಿಯನ್ನು ಪೂರ್ತಿಗೊಳಿಸಿ ಕೊಂಡರೆ, ಪರಸ್ಪರರ ಒಪ್ಪಿಗೆಯನುಸಾರ ಅವರು ತಮ್ಮ (ಅಯ್ಕೆಯ ಭಾವಿ) ಪತಿಯರನ್ನು ವಿಧಿವತ್ತಾಗಿ ವಿವಾಹ ಮಾಡಿಕೊಳ್ಳುವುದರಿಂದ ನೀವು ಅವರನ್ನು ತಡೆಯ ಬೇಡಿರಿ. ನಿಮ್ಮ ಪೈಕಿ ಅಲ್ಲಾಹ್ ನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರಿಸಿಕೊಂಡವರಿಗಾಗಿ ಈ ಬಗ್ಗೆ ಉಪದೇಶ ನೀಡಲಾಗಿದೆ. ಇದು ನಿಮ್ಮ ಪಾಲಿಗೆ ಹೆಚ್ಚು ಅನುಗ್ರಹಿತವೂ ಪುನೀತವೂ ಆಗಿರುವ ಕ್ರಮ! ಅಲ್ಲಾಹ್ ನು ಎಲ್ಲವನ್ನೂ ಅರಿತಿರುವನು; ನೀವಾದರೋ (ಬಹಳಷ್ಟು ವಿಷಯಗಳನ್ನು) ತಿಳಿದು ಕೊಂಡವರಲ್ಲ. {232}

[ದಂಪತಿಗಳು ವಿಧಿವತ್ತಾಗಿ ಬೇರ್ಪಟ್ಟುಕೊಂಡಾಗ, ಶಿಶುಗಳ] ಪೂರ್ಣಾವಧಿಯ ಸ್ತನ್ಯಪಾನವನ್ನು (ತಂದೆಯು) ಬಯಸಿದರೆ ತಾಯಂದಿರು ತಮ್ಮ ಶಿಶುಗಳಿಗೆ ಎರಡು ವರ್ಷಗಳ ಕಾಲ ಪೂರ್ಣವಾಗಿ ಎದೆಹಾಲು ಕುಡಿಸಬೇಕು. (ಆ ಅವಧಿಯಲ್ಲಿ) ತಾಯಂದಿರ ಊಟೋಪಚಾರ ಮತ್ತು ಉಡುಪು-ವಸ್ತ್ರಗಳ ಹೊಣೆಯು ವಾಡಿಕೆಯನುಸಾರ ತಂದೆಯ ಮೇಲೆಯೇ ಇರುವುದು. ಅವರವರ ಸಾಮರ್ಥ್ಯಕ್ಕೆ ಮಿಗಿಲಾದ ಹೊರೆಯನ್ನು ಯಾರ ಮೇಲೂ ಹೊರಿಸಲಾಗದು. ತಾಯಿಗೆ ಅವಳ ಮಗುವಿನ ಕಾರಣದಿಂದಾಗಿ ತೊಂದರೆ ಕೊಡ ಕೂಡದು; ಅಂತೆಯೇ ತಂದೆಗೂ ಮಗು ಅವನದಾದ ಕಾರಣದಿಂದಾಗಿ (ತೊಂದರೆ ಕೊಡ ಬಾರದು). ಇದೇ ನಿಲುವು (ತಂದೆಯು ಮರಣವನ್ನಪ್ಪಿದ್ದರೆ) ವಾರಸುದಾರರಿಗೆ ಅನ್ವಯಿಸುತ್ತದೆ. ಒಂದು ವೇಳೆ (ಎರಡು ವರ್ಷಕ್ಕಿಂತ ಮುಂಚಿತವಾಗಿ) ಪರಸ್ಪರ ಸಮಾಲೋಚನೆ ನಡೆಸಿ ಪರಸ್ಪರರ ಒಪ್ಪಿಗೆಯೊಂದಿಗೆ ಎದೆ ಹಾಲುಣಿಸುವುದನ್ನು ಬಿಡಿಸ ಬಯಸಿದರೆ ಇಬ್ಬರ ಮೇಲೂ ದೋಷವಿಲ್ಲ. ಇನ್ನು ನಿಮ್ಮ ಮಕ್ಕಳಿಗೆ ಎದೆಹಾಲು ಕುಡಿಸಲು (ದಾದಿಯರನ್ನು ನೇಮಿಸಿ ಕೊಳ್ಳಲು) ನೀವು ಬಯಸಿದರೆ ವಾಡಿಕೆಯ ಪ್ರಕಾರ ನೀವು ಅವರಿಗೆ (ಪ್ರತಿಫಲವಾಗಿ) ನಿಷ್ಚಯಿಸಿ ಕೊಂಡಿದ್ದನ್ನು ಕೊಟ್ಟರೆ (ಹಾಗೆ ಹಾಲುಣಿಸುವುದು) ದೋಷಕರವಲ್ಲ. ಅಲ್ಲಾಹ್ ನ (ಇಂತಹ ಆದೇಶಗಳ ಪಾಲನೆಯ) ಬಗ್ಗೆ ಜಾಗ್ರತೆ ವಹಿಸಿಕೊಳ್ಳಿ; ಮತ್ತು ನೀವು ಏನೆಲ್ಲ ಮಾಡುತ್ತಿರುವಿರೋ ಅವು ಅಲ್ಲಾಹ್ ನ ನಿರೀಕ್ಷಣೆಯಲ್ಲಿದೆ ಎಂದು ಚೆನ್ನಾಗಿ ಬಲ್ಲವರಾಗಿರಿ. [233]

ನಿಮ್ಮ ಪೈಕಿ ಯಾರಾದರೂ ಮೃತಪಟ್ಟು ಪತ್ನಿಯರನ್ನು ಅಗಲಿ ಹೋಗಿದ್ದರೆ (ಅವರ ವಿಧವೆಯರು) ಸ್ವತಃ ತಮ್ಮನ್ನು ನಾಲ್ಕು ತಿಂಗಳು ಮತ್ತು ಹತ್ತು ದಿನಗಳ ಕಾಲ (ವಿವಾಹ ಮುಂತಾದ ಸಡಗರಗಳಿಂದ) ತಡೆದಿರಿಸಿ ಕೊಳ್ಳಲಿ. ಹಾಗೆ, ಅವರು ತಮ್ಮ (ಇದ್ದಃ ದ) ಅವಧಿಯನ್ನು ಪೂರ್ತಿಯಾಗಿಸಿ ಕೊಂಡರೆ ಮತ್ತು ತಮ್ಮ ವಿಷಯದಲ್ಲಿ ಅಂಗೀಕರಿಸಲ್ಪಟ್ಟ ರೀತಿಯಲ್ಲಿ ವರ್ತಿಸಿ ಕೊಳ್ಳುವುದಾದರೆ, ಹೊಣೆ ನಿಮ್ಮ ಮೇಲಿಲ್ಲ. ನೀವು ಮಾಡುವುದನ್ನೆಲ್ಲ ಅಲ್ಲಾಹ್ ನು ಅರಿತುಕೊಳ್ಳುತ್ತಾನೆ. [234]

(ಇನ್ನೂ ಇದ್ದಃ ದ ಅವಧಿಯಲ್ಲಿ ಇರುವಾಗಲೇ ಅಂತಹ) ವಿಧವೆಯರೊಂದಿಗೆ ನೀವು ವಿವಾಹ ಪ್ರಸ್ತಾಪವನ್ನು ಸೂಚ್ಯವಾಗಿ/ಪರೋಕ್ಷವಾಗಿ (ಅವರಲ್ಲಿಗೆ) ಕಳಿಸಿದರೋ, ಅಥವಾ (ಆ ವಿಚಾರವನ್ನು) ನಿಮ್ಮ ಮನಸ್ಸಿನಲ್ಲಿಯೇ ಗೌಪ್ಯವಾಗಿ ಇರಿಸಿ ಕೊಂಡರೋ, (ಎರಡೂ ಸನ್ನಿವೇಷಗಳಲ್ಲಿ) ನಿಮ್ಮ ಮೇಲೆ ಆಪಾದನೆ ಇಲ್ಲ. ನೀವಾದರೋ ಕೂಡಲೇ ಅವರೊಡನೆ ಅದನ್ನು ಪ್ರಸ್ತಾಪಿಸಲಿರುವಿರಿ ಎಂಬುದು ಅಲ್ಲಾಹ್ ನಿಗೆ ಅರಿವಿದೆ. ಆದರೆ ಮಾನ್ಯವಾದ ರೀತಿಯಲ್ಲಿ ನೀವು ಮಾತುಕತೆ ನಡೆಸಬೇಕೇ ಹೊರತು ರಹಸ್ಯವಾಗಿ ಒಪ್ಪಂದ/ವಾಗ್ದಾನ ಮಾಡಿಕೊಳ್ಳ ಬಾರದು. (ಇದ್ದಃ ದ) ಅವಧಿಯು ಮುಗಿಯುವ ತನಕ ಪಕ್ವವಾದ ವಿವಾಹದ ಒಪ್ಪಂದವನ್ನು ಮಾಡಿಕೊಳ್ಳಬಾರದು. ನಿಮ್ಮ ಮನಸ್ಸಿಲ್ಲಿ ಇರುವ ವಿಷಯಗಳನ್ನು ಅಲ್ಲಾಹ್ ನು ಬಲ್ಲನೆಂದು ನೀವು ತಿಳಿದು ಕೊಳ್ಳಿರಿ ಜೊತೆಗೇ ಅವನ ಭಯರಿವಿಸಿ ಕೊಳ್ಳಿ. ಅಲ್ಲಾಹ್ ನಾದರೋ ಅತಿ ಹೆಚ್ಚು ಕ್ಷಮಿಸುವವನೂ ಅತ್ಯಂತ ಸಂಯಮಶೀಲನೂ ಅಗಿರುವನೆಂದು ಚೆನ್ನಾಗಿ ತಿಳಿದು ಕೊಳ್ಳಿ. [235]

ಒಂದು ವೇಳೆ ನೀವು (ವರಿಸಿಕೊಂಡ) ಸ್ತ್ರೀಯರನ್ನು ಸ್ಪರ್ಶಿಸುವುದಕ್ಕಿಂತ ಮುಂಚಿತವಾಗಿಯೋ ಅಥವಾ ಇನ್ನೂ ‘ಮಹರ್’ (ಅರ್ಥಾತ್: ಸ್ತ್ರೀಯರಿಗೆ ನೀಡಬೇಕಾದ ವಿವಾಹಧನ) ನಿಗದಿ ಪಡಿಸುವುದಕ್ಕಿಂತ ಮುಂಚಿತವಾಗಿಯೋ ವಿಚ್ಛೇದಿಸಿಕೊಂಡರೆ (ಅಂತಹ ಸಂದರ್ಭರದಲ್ಲಿ) ನಿಮ್ಮ ಮೇಲೆ (ಮಹರ್ ನ) ಹೊಣೆಗಾರಿಕೆ ಇಲ್ಲ. ಆದರೆ ಅವರಿಗೆ (ಪರಿಹಾರದ ರೂಪದಲ್ಲಿ) ಒಂದು ಮೊತ್ತವನ್ನು ಕೊಡಿ. ಸಂಪನ್ನನು ಅವನ ಸಾಮರ್ಥ್ಯಕ್ಕನುಸಾರ ಮತ್ತು ಬಡವನು ಅವನ ಸಾಮರ್ಥ್ಯಕ್ಕನುಸಾರ ಮಾನ್ಯವಾದ ಮೊತ್ತವನ್ನು ನೀಡಲಿ. ಇದು ಸದಾಚಾರಿ ಸಜ್ಜನರ ಮೇಲಿರುವ ಒಂದು ಹೊಣೆಗಾರಿಕೆಯಾಗಿದೆ. [236]

ಒಂದು ವೇಳೆ ಅವರಿಗೆ ‘ಮಹರ್’ ನಿಗದಿ ಪಡಿಸಿಕೊಂಡ ನಂತರ, ಆದರೆ ಇನ್ನೂ ಅವರನ್ನು ಸ್ಪರ್ಶಿಸುವುದಕ್ಕಿಂತ ಮುಂಚಿತವಾಗಿ ನೀವು ಅವರನ್ನು ವಿಚ್ಛೇದಿಸಿದರೆ (ಅಂತಹ ಸಂದರ್ಭದಲ್ಲಿ) ನಿಗದಿ ಪಡಿಸಿದ ‘ಮಹರ್’ ನ ಅರ್ಧವನ್ನು ನೀಡಬೇಕು. ಇನ್ನು, ಅವಳು (ಆ ಅರ್ಧ ಮಹರ್ ಅನ್ನು ಅವನಿಗೆ) ಕ್ಷಮಿಸಿ ಬಿಟ್ಟರೆ ಅಥವಾ ವಿವಾಹ ಬಂಧನದ ಮೇಲೆ ಹತೋಟಿ ಹೊಂದಿರುವ ಅವನು ಔದಾರ್ಯ ತೋರಿ (ಮಹರ್ ಅನ್ನು ಪೂರ್ಣವಾಗಿ ಅವಳಿಗೆ ಪಾವತಿಸಿದರೆ) ಅದು ಬೇರೆ ವಿಷಯ. ಇನ್ನು ಅವನು ಉದಾರತೆಯೊಂದಿಗೆ ವರ್ತಿಸಿಕೊಳ್ಳುವುದಾದರೆ ಅದು ಧರ್ಮನಿಷ್ಠೆಗೆ ಹೆಚ್ಚು ನಿಕಟವಾಗಿದೆ. (ಇಂತಹ ಸೂಕ್ಷ್ಮ ಸಂದರ್ಭದಲ್ಲೂ) ಪರಸ್ಪರ ಔದಾರ್ಯ ತೋರುವುದನ್ನು ಮರಯಬಾರದು. ನೀವು ಏನೆಲ್ಲ ಮಾಡುತ್ತಿರುವಿರೋ ಅದು ಅಲ್ಲಾಹ್ ನ ವೀಕ್ಷಣೆಯಲ್ಲಿದೆ. [237]

ನೀವು (ಎಲ್ಲ) ‘ಸಲಾತ್’ ಗಳನ್ನೂ ಮತ್ತು (ಮುಖ್ಯವಾಗಿ) ಮಧ್ಯಾವಧಿ ‘ಸಲಾತ್’ ಅನ್ನು ಜಾಗರೂಕತೆಯೊಂದಿಗೆ ಪಾಲಿಸಿರಿ. ಮತ್ತು (ಸಲಾತ್ ನಿರ್ವಹಿಸುವಾಗ) ಅಲ್ಲಾಹ್ ನ ಮುಂದೆ ಅತ್ಯಂತ ವಿಧೇಯತೆಯೊಂದಿಗೆ ನಿಲ್ಲುವವರಾಗಿರಿ. ನಿಮಗೆ ಆತಂಕದ ಸ್ಥಿತಿಯು ಎದುರಾಗಿದ್ದರೆ ನಡೆಯುತ್ತಿರುವಾಗಲೋ ಅಥವಾ ಸವಾರರಾಗಿಯೋ (ಸಲಾತ್ ನಿರ್ವಹಿಸಿಕೊಳ್ಳಿ). ನಂತರ ಸುರಕ್ಷತೆ ಒದಗಿ ಬಂದಾಗ, (ಈ ಹಿಂದೆ) ನಿಮಗೆ ತಿಳಿಯದಿದ್ದಾಗ ಅಲ್ಲಾಹ್ ನು ನಿಮಗೆ ಕಲಿಸಿ ಕೊಟ್ಟ ರೀತಿಯಲ್ಲಿ ಅವನ ಸ್ಮರಣೆ ಮಾಡಿರಿ. [238-239]

ನಿಮ್ಮ ಪೈಕಿ ಮೃತಪಟ್ಟು ಪತ್ನಿಯರನ್ನು ಅಗಲಲಿರುವವರು, ಅವರನ್ನು ಮನೆಯಿಂದ ಹೊರಕಳಿಸದೆಯೇ (ಅರ್ಥಾತ್: ಮನೆಯಲ್ಲಿಯೇ ಇರಿಸಿ ಕೊಂಡು) ಒಂದು ವರ್ಷದ ವರೆಗಿನೆ ನಿರ್ವಹಣಾ ವೆಚ್ಛವನ್ನು (ತಮ್ಮ ವಿಧವೆಯರಿಗೆ) ನೀಡುವಂತೆ (ಮರಣಕ್ಕೆ ಮುಂಚಿತವಾಗಿ) ವಸಿಯ್ಯತ್/ಉಯಿಲು ಮಾಡಬೇಕು. ಇನ್ನು, ಅವರು ಸ್ವತಃ ತಮ್ಮ ಬಗ್ಗೆ ಸಮಂಜಸವೆನಿಸಿದ ರೀತಿಯಲ್ಲಿ ಒಂದು ನಿಲುವಿಗೆ ಬಂದು ತಾವಾಗಿಯೇ (ಪತಿಯ) ಮನೆಯಿಂದ ಹೊರಹೋದರೆ ಅದು ನಿಮಗೆ ಬಾಧಕವಲ್ಲ. ಅಲ್ಲಾಹ್ ನಾದರೋ ಪ್ರತಾಪಶಾಲಿಯೂ ಅತ್ಯಂತ ಜಾಣ್ಮೆಯುಳ್ಳವನೂ ಆಗಿರುವನು. ಹಾಗೆಯೇ, ವಿವಾಹ ವಿಚ್ಛೇದಿತ ಸ್ತ್ರೀಯರಿಗೆ ಸೂಕ್ತವಾದ/ನ್ಯಾಯೋಚಿತವಾದ ಖರ್ಚುವೆಚ್ಚ (ಕೊಡಬೇಕಾದುದು) ನಿಷ್ಠಾವಂತ ಜನರ ಮೇಲೆ ಕಡ್ಡಾಯವಾಗಿದೆ. ಈ ರೀತಿ ತನ್ನ ಆದೇಶಗಳನ್ನು ನಿಮಗೆ ತಿಳಿಯಪಡಿಸುವ ಸಲುವಾಗಿ ಅಲ್ಲಾಹ್ ನು ವಿವರಿಸಿ ಕೊಡುತ್ತಾನೆ. [240-242]

ಸಾವಿರಗಟ್ಟಲೆಯ ಪ್ರಮಾಣದಲ್ಲಿ ಇದ್ದುಕೊಂಡೂ (ಕೇವಲ) ಮರಣಕ್ಕೆ ಭಯಪಟ್ಟು ತಮ್ಮ ನಾಡುಗಳಿಂದ ಹೊರಗೋಡಿದ (ಇಸ್ರಾಈಲ್ ಸಂತತಿಗೆ ಸೇರಿದ ಆ ಹೇಡಿ) ಜನರ ಬಗ್ಗೆ (ನಬಿಯವರೇ) ನೀವು ಅರಿತು ಕೊಂಡಿದ್ದೀರಲ್ಲ?! ಆದ್ದರಿಂದಲೇ, ನೀವು ಅಳಿದು ಹೋಗಿರಿ ಎಂದು ಅಲ್ಲಾಹ್ ನು ಅವರಿಗೆ ಹೇಳಿದನು. (ಹಾಗೆ ಅವರು ನಶಿಸಿ ಹೋದ ನಂತರ) ಅಲ್ಲಾಹ್ ನು ಅವರನ್ನು ಮತ್ತೊಮ್ಮೆ ಜೀವಂತ (ಸಮುದಾಯವನ್ನಾಗಿ) ಮಾಡಿದನು. ಅಲ್ಲಾಹ್ ನಾದರೋ ಜನರ ಪಾಲಿಗೆ ನಿಜವಾಗಿಯೂ ಅತ್ಯಂತ ಕೃಪಾಶೀಲನಾಗಿರುವನು. ಆದರೂ ಜನರ ಪೈಕಿ ಹೆಚ್ಚಿನವರು (ಅಲ್ಲಾಹ್ ನಿಗೆ) ಕೃತಜ್ಞತೆ ಸಲ್ಲಿಸುವುದಿಲ್ಲ. [243]

(ಮುಸ್ಲಿಮ್ ಸಮುದಾಯದವರೇ,) ನೀವು ಅಲ್ಲಾಹ್ ನ ಮಾರ್ಗದಲ್ಲಿ ಹೋರಾಟ ನಡೆಸಿರಿ, ಅಲ್ಲಾಹ್ ನಾದರೋ ನಿಜವಾಗಿ ಸಕಲವನ್ನೂ ಕೇಳಿಸಿಕೊಳ್ಳುವವನು ಮತ್ತು ಎಲ್ಲವನ್ನೂ ಅರಿತಿರುವವನು ಅಗಿದ್ದಾನೆ ಎಂದು ಚೆನ್ನಾಗಿ ತಿಳಿದಿರಿ. (ಅಲ್ಲಾಹ್ ನೇ ನಿಮಗೆ ನೀಡಿದ ಸಂಪತ್ತಿನಿಂದ) ಅಲ್ಲಾಹ್ ನಿಗೆ ‘ಶ್ರೇಷ್ಠವಾದ ಎರವಲು’ ನೀಡುವವರು ಯಾರಾದರೂ ಇದ್ದಾರೆಯೇ? ಹಾಗೆ ನೀಡಿದರೆ ಅಲ್ಲಾಹ್ ನು ಅದನ್ನು ಆತನಿಗಾಗಿ ಹಲವು ಪಟ್ಟು ಹೆಚ್ಚಿಸಿ (ಹಿಂದಿರುಗಿಸುವನು). (ನೀವು ಅದನ್ನು ನೀಡಲು ಅಂಜಿಕೊಂಡರೆ, ತಿಳಿದಿರಿ, ನಿಮ್ಮ ಸಂಪತ್ತನ್ನು) ಕ್ಷಯ ಅಥವಾ ವೃದ್ಧಿಗೊಳಿಸುವಾತನು ಅಲ್ಲಾಹ್ ನೇ ಆಗಿದ್ದಾನೆ! (ಮಾತ್ರವಲ್ಲ, ಕೊನೆಯದಾಗಿ) ನಿಮ್ಮ ಮರಳುವಿಕೆಯು ಅವನೆಡೆಗೇ ಆಗಿರುವುದು. [244-245]

(ಪೈಗಂಬರರೇ,) ಪ್ರವಾದಿ ಮೂಸಾ ರ ಕಾಲದ ನಂತರ, ಇಸ್ರಾಈಲ್ ವಂಶಕ್ಕೆ ಸೇರಿದ ಆ ಧುರೀಣರ ಕುರಿತು ನಿಮೆಗೆ ತಿಳಿದಿದೆಯಲ್ಲವೇ?! ನಮಗಾಗಿ ಒಬ್ಬಾತನನ್ನು ಅರಸನನ್ನಾಗಿ ನಿಯುಕ್ತಗೊಳಿಸಿದರೆ ನಾವು [ಅವನ ನೇತ್ರತ್ವದಲ್ಲಿ ಸಂಘಟಿತರಾಗಿ] ಅಲ್ಲಾಹ್ ನ ಮಾರ್ಗದಲ್ಲಿ ಹೋರಾಡುವೆವು ಎಂದು ಅವರು ತಮ್ಮ (ಕಾಲದ) ಪ್ರವಾದಿಯೊಡನೆ ಬೇಡಿಕೊಂಡರು. ನಿಮ್ಮ ಮೇಲೆ ಹೋರಾಟವನ್ನು ಖಡ್ಡಾಯಗೊಳಿಸಿ ಬಿಟ್ಟರೆ ಆಗ ನೀವು ಹೋರಾಡದೆ ಇರುವುದಿಲ್ಲ ತಾನೆ – ಎಂದು (ಅವರ) ಪ್ರವಾದಿಯವರು ಕೇಳಿದರು. ನಮ್ಮನ್ನು ನಮ್ಮ ಮನೆ/ನಾಡುಗಳಿಂದ ಮತ್ತು ನಮ್ಮ ಸಂತಾನದವರಿಂದ ಹೊರದೂಡಲಾಗಿರುವಾಗ ನಾವು (ನಮ್ಮ ಹಕ್ಕಿಗಾಗಿ) ಅಲ್ಲಾಹ್ ನ ಮಾರ್ಗದಲ್ಲಿ ಹೋರಾಡದೆ ಇರುವುದಾದರೂ ಹೇಗೆ?! – ಎಂದು ಆ ಧುರೀಣರು (ಪ್ರವಾದಿಯೊಡನೆ) ಕೇಳಿದರು. ಕೊನೆಗೆ, [ದಬ್ಬಾಳಿಕೆ ಮತ್ತು ಆಕ್ರಮಣದ ವಿರುದ್ಧ] ಹೋರಾಟ ನಡೆಸುವಂತೆ ಅವರಿಗೆ ವಿಧಿಸಲಾದಾಗ ಅವರ ಪೈಕಿಯ ಕೆಲವೇ ಜನರ ಹೊರತು (ಉಳಿದವರೆಲ್ಲ ಹೋರಾಡದೆ) ಬೆನ್ನು ತೋರಿಸಿದರು. ಅಲ್ಲಾಹ್ ನಿಗೆ ಅಂತಹ ಅಕ್ರಮಿಗಳ ಕುರಿತು ಸಂಪೂರ್ಣವಾದ ಜ್ಞಾನವಿದೆ. {246}

[ನಿಮ್ಮ ಬೇಡಿಕೆಯನ್ನು ಮನ್ನಿಸಿ] ಅಲ್ಲಾಹ್ ನು ‘ತಾಲೂತ್’ ನನ್ನು ನಿಮಗೆ ಅರಸನನ್ನಾಗಿ ನೇಮಕ ಮಾಡಿರುತ್ತಾನೆ ಎಂದು ಅವರ ಪ್ರವಾದಿಯವರು ಅವರೊಡನೆ ಹೇಳಿದರು. (ಅದನ್ನು ಕೇಳಿದಾಗ) ಅಂತಹ ಅರಸೊತ್ತಿಗೆಗೆ ನಾವೇ ಹೆಚ್ಚಿನ ಅರ್ಹತೆಯನ್ನು ಹೊಂದಿರುವಾಗ ನಮ್ಮ ಮೇಲೆ ಅವನು ಆಧಿಪತ್ಯಕ್ಕೆ ಹಕ್ಕುದಾರನಾಗುವುದಾದರೂ ಹೇಗೆ? ಅವನು ಸೊತ್ತು-ವಿತ್ತಗಳನ್ನೂ ಹೇರಳವಾಗಿ ಹೊಂದಿಲ್ಲವಲ್ಲ – ಎಂದು [ಬನೀ ಇಸ್ರಾಈಲ್ ನ ಆ ಗಣ್ಯ ಜನರು ಅವರ ಪ್ರವಾದಿಯೊಡನೆ] ಹೇಳಿ ಕೊಂಡರು. ನಿಜವಾಗಿಯೂ ಅಲ್ಲಾಹ್ ನೇ ‘ತಾಲೂತ್’ ನನ್ನು ನಿಮ್ಮ (ಅರಸನಾಗಲು) ಆಯ್ಕೆ ಮಾಡಿದ್ದಾನೆ, ಮಾತ್ರವಲ್ಲ, ಅವನಿಗೆ (ಆಡಳಿತದ) ಪರಿಜ್ಞಾನ ಮತ್ತು (ಹೋರಾಟಕ್ಕೆ ಅವಶ್ಯಕವಾದ) ದೇಹಧಾರ್ಡ್ಯವನ್ನು ನೀಡಿದ್ದಾನೆ. ಅಲ್ಲಾಹ್ ನು ತಾನು ಇಚ್ಛಿಸಿದವರಿಗೆ ತನ್ನ ವತಿಯಿಂದ (ನಾಡಿನ) ಅಧಿಕಾರವನ್ನು ದಯಪಾಲಿಸುತ್ತಾನೆ. ಅಲ್ಲಾಹ್ ನು ಬಲು ಉದಾರಿಯೂ ಸರ್ವಜ್ಞನೂ ಆಗಿರುವನು – ಎಂದು (ಅವರ ಪ್ರವಾದಿ) ಹೇಳಿದರು. {247}

ನಿಮ್ಮ ಒಡೆಯನ ವತಿಯಿಂದ ನಿಮ್ಮ ಪಾಲಿಗೆ ನೆಮ್ಮದಿಯನ್ನು ತರಲಿರುವ, ಹಾಗೂ (ನಿಮ್ಮ ನಬಿಗಳಾದ) ಮೂಸಾ ಮತ್ತು ಹಾರೂನ್ ರ ಸಂತತಿಯವರು (ನಿಮಗಾಗಿ) ಬಿಟ್ಟು ಹೋದವುಗಳ (ಅಮೂಲ್ಯವಾದ) ಅವಶಿಷ್ಟಗಳನ್ನು ಹೊಂದಿರುವ ಆ ಪೆಟ್ಟಿಗೆಯು ಮರಳಿ ನಿಮ್ಮ ಕೈ ಸೇರಲಿರುವುದು ‘ತಾಲೂತ್’ ನ ಆಧಿಪತ್ಯವು (ಅಲ್ಲಾಹ್ ನ ವತಿಯಿಂದಲೇ ಆಗಿರುವುದಕ್ಕೆ) ಒಂದು ಸಾಕ್ಷಿಯಾಗಿದೆ. (ಆ ಪೆಟ್ಟಿಗೆಯನ್ನು) ಮಲಕ್ ಗಳು ಹೊತ್ತಿರುವರು! ನೀವು ವಿಶ್ವಾಸಿಗಳು ಎಂದಾದರೆ ಅದರಲ್ಲಿ ನಿಮಗೆ ಖಂಡಿತವಾಗಿ ಸಾಕ್ಷ್ಯಾಧಾರಗಳು ಇರುವುವು – ಎಂದು ಅವರ ಪ್ರವಾದಿಯು ಅವರಿಗೆ (ತಾಲೂತ್ ನ ಆಡಳಿತ ವೈಖರಿಯ ಬಗ್ಗೆ ಹೆಚ್ಚಿನ) ಮಾಹಿತಿ ನೀಡಿದರು. [248]

[ಇಸ್ರಾಈಲ್ ಜನಾಂಗಕ್ಕೆ ಅರಸನಾಗಿ ನೇಮಕಗೊಂಡ] ನಂತರ ತಾಲೂತ್ ನು ತನ್ನ ಸೇನೆಯೊಂದಿಗೆ (ಸಜ್ಜಿತನಾಗಿ ಶತ್ರುವಿನತ್ತ) ಹೊರಟು ನಿಂತಾಗ, ಅಲ್ಲಾಹ್ ನು ನದಿಯೊಂದರ ಮೂಲಕ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಲಿರುವನು, ಯಾವೊಬ್ಬನು ಆ ನದಿಯ ನೀರನ್ನು ಕುಡಿಯುತ್ತಾನೋ ಅವನು ನನ್ನ ಜೊತೆಗಾರನಲ್ಲ; ಬದಲಾಗಿ ಅದರ ರುಚಿ ನೋಡದವನೇ (ಅಲ್ಲಾಹ್ ನ ಮಾರ್ಗದಲ್ಲಿ) ನನ್ನ ಸಂಗಾತಿ; ಆದರೆ ಯಾರಾದರೂ ತನ್ನ ಒಂದು ಕೈಯಲ್ಲಿ ಹಿಡಿಸುವಷ್ಟನ್ನು ಮಾತ್ರ ಸೇವಿಸಿಕೊಂಡರೆ ಆಕ್ಷೇಪವಿಲ್ಲ – ಎಂದು [ತನ್ನೊಂದಿಗೆ ಹೊರಟು ನಿಂತ ಸೈನ್ಯವನ್ನುದ್ದೇಶಿಸಿ ಅಲ್ಲಾಹ್ ನ ವತಿಯಿಂದ ಬರಲಿರುವ ಪರೀಕ್ಷೆಯ ಬಗ್ಗೆ] ಹೇಳಿದನು. ಆದರೆ ಅವರ ಪೈಕಿಯ ಸ್ವಲ್ಪವೇ ಜನರ ಹೊರತು ಉಳಿದವರೆಲ್ಲರೂ ಆ ನದಿಯ ನೀರನ್ನು (ಧಾರಾಳವಾಗಿ) ಕುಡಿದೇ ಬಿಟ್ಟರು. ಹಾಗೆ ತಾಲೂತ್ ಮತ್ತು ಅವನ ಜೊತೆಗಿದ್ದ ವಿಶ್ವಾಸಿಗಳು ಆ ನದಿಯನ್ನು ದಾಟಿ ಮುಂದೆ ಸಾಗಿದಾಗ [ಶತ್ರು ಸೈನ್ಯವನ್ನು ಕಂಡು] ಈ ದಿನ ಜಾಲೂತ್ ಮತ್ತು ಅವನ ಸೈನ್ಯವನ್ನು ಎದುರಿಸುವ ಶಕ್ತಿ ನಮ್ಮ ಬಳಿ ಇಲ್ಲ ಎಂದು [ನದಿಯ ಪರೀಕ್ಷೆಯಲ್ಲಿ ವಿಫಲರಾದವರು] ಹೇಳಿಕೊಂಡರು. ಆದರೆ ತಮಗೆ ಅಲ್ಲಾಹ್ ನನ್ನು ನಿಶ್ಚಿತವಾಗಿ ಸಂಧಿಸಲಿಕ್ಕಿದೆ ಎಂದು ನಂಬಿದ್ದ [ನದಿಯ ನೀರನ್ನು ಕುಡಿಯದ ವಿಶ್ವಾಸಿಗಳು], ಅದೆಷ್ಟೋ ಬಾರಿ ಚಿಕ್ಕ ಚಿಕ್ಕ ಗುಂಪುಗಳು ಅಲ್ಲಾಹ್ ನ ವಿಧಿಯಂತೆ ದೊಡ್ಡ ದೊಡ್ಡ ಗುಂಪುಗಳ ಮೇಲೆ ವಿಜಯ ಸಾಧಿಸಿ ಕೊಂಡಿವೆ; ಅಲ್ಲಾಹ್ ನಾದರೋ ಸಹನಶೀಲರ ಜೊತೆಗೇ ಇರುವನು – ಎಂದು [ಉಳಿದವರನ್ನು ಹುರಿದುಂಬಿಸುವ ಸಲುವಾಗಿ] ಹೇಳಿದರು. ಹಾಗೆ, ಅವರು ಜಾಲೂತ್ ಮತ್ತು ಆತನ ಸೇನೆಯನ್ನು ಎದುರಿಸುವಾಗ, ಓ ನಮ್ಮ ಒಡೆಯನೇ, ನಮಗೆ ಅಪಾರವಾದ ಸಹನೆಯನ್ನು ದಯಪಾಲಿಸು; (ಯುದ್ಧ ಭೂಮಿಯಲ್ಲಿ) ನಮ್ಮ ಪಾದಗಳು ಕದಲದಂತೆ ಸ್ಥೈರ್ಯವನ್ನು ನೀಡು ಮತ್ತು (ನಿನ್ನ) ಧಿಕ್ಕಾರಿಗಳನ್ನು ಜಯಿಸಲು ನಮಗೆ ನೆರವಾಗು – ಎಂದು (ಅಲ್ಲಾಹ್ ನೊಡನೆ) ಪ್ರಾರ್ಥಿಸಿಕೊಂಡರು. ಹಾಗೆ [ಅವರ ಪ್ರಾರ್ಥನೆ ಸ್ವೀಕೃತವಾಯಿತು ಮತ್ತು] ಅಲ್ಲಾಹ್ ನ ಒಪ್ಪಿಗೆಯಂತೆ ಅವರು ಶತ್ರುವನ್ನು ಪರಾಜಯ ಗೊಳಿಸಿದರು. ನಂತರ ಜಾಲೂತ್ ನನ್ನು [ತಾಲೂತ್ ನ ಸೇನೆಯಲ್ಲಿದ್ದ ಒಬ್ಬ ಯೋಧ] ದಾವೂದ್ ರು ವಧಿಸಿ ಬಿಟ್ಟರು. ಮುಂದೆ ಅಲ್ಲಾಹ್ ನು ದಾವೂದ್ ರಿಗೆ (ಇಸ್ರೇಲರ) ಸಾಮ್ರಾಜ್ಯದ ಆಧಿಪತ್ಯವನ್ನೂ ವ್ಯವಹಾರ-ಚತುರತೆಯನ್ನೂ ನೀಡುವುದರ ಜೊತೆಗೆ ಅವರಿಗೆ ತಾನು ಬಯಸಿದ ವಿಷಯಗಳಲ್ಲಿ ಪರಿಜ್ಞಾನವನ್ನೂ ದಯಪಾಲಿಸಿದನು. ಈ ರೀತಿ ಅಲ್ಲಾಹ್ ನು ಜನರ ಒಂದು ಗುಂಪಿನ ಮೂಲಕ ಮತ್ತೊಂದು ಗುಂಪನ್ನು ನೀಗಿಸದೇ ಇರುತ್ತಿದ್ದರೆ ಖಂಡಿತವಾಗಿಯೂ ಭೂಮಿಯು ಭ್ರಷ್ಟತೆಯ ಪಾಲಾಗುತ್ತಿತ್ತು. ಆದರೆ ಅಲ್ಲಾಹ್ ನು [ಹಾಗೆ ಮಾಡುವುದರ ಮೂಲಕ] ಲೋಕ ವಾಸಿಗಳ ಪಾಲಿಗೆ ತುಂಬಾ ಉದಾರಿಯಾಗಿರುವನು. {249-251}

(ಓ ಮುಹಮ್ಮದ್ ಪೈಗಂಬರರೇ,) ಈ ವಚನಗಳು ಅಲ್ಲಾಹ್ ನ (ವತಿಂದ ನಿಮ್ಮ ಬಳಿಗೆ ಬಂದಿರುವ) ದೃಷ್ಟಾಂತಗಳು! ಅವುಗಳನ್ನು ವಿವರಸಬೇಕಾದ ರೀತಿಯಲ್ಲಿ ನಾವು ನಿಮಗೆ ವಿವರಿಸಿ ಕೊಡುತ್ತಿದ್ದೇವೆ. ನಿಜವಾಗಿಯೂ ನೀವು (ಅಲ್ಲಾಹ್ ನ ಸಂದೇಶವನ್ನು ಜನರಿಗೆ ತಲುಪಿಸಿ ಕೊಡಲು ನೇಮಿಸಲಾದ ರಸೂಲ್ ಗಳ ಪೈಕಿ) ಒಬ್ಬ ‘ರಸೂಲ್’ ಆಗಿರುವಿರಿ! [252]

✽3✽ (ಜನರ ಮಾರ್ಗದರ್ಶನಕ್ಕಾಗಿ ನಿಯೋಗಿಸಲ್ಪಟ್ಟ) ಅಂತಹ ರಸೂಲ್ ಗಳ ಪೈಕಿ ಕೆಲವೊಬ್ಬರಿಗೆ ನಾವು ಉಳಿದ ಕೆಲವರಿಗಿಂತ ಶ್ರೇಷ್ಠತೆ/ಮಹತ್ವವನ್ನು ನೀಡಿದ್ದೇವೆ. ಅವರಲ್ಲಿ ಕೆಲವೊಬ್ಬರೊಂದಿಗೆ ಅಲ್ಲಾಹ್ ನು (ಸ್ವತಃ) ಮಾತನಾಡಿದ್ದಾನೆ; ಕೆಲವರ ಸ್ಥಾನಮಾನವನ್ನು ಉನ್ನತ ಗೊಳಿಸಲಾಗಿದೆ. ‘ಮರ್ಯಮ್’ (ಅಥವಾ ಮೇರಿ) ಯವರ ಮಗನಾದ ‘ಈಸಾ’ (ಅಥವಾ ಜೀಸಸ್/ಏಸು ಕ್ರಿಸ್ತ) ರಿಗೆ ಸ್ಪಷ್ಟವಾದ ಪವಾಡಗಳನ್ನು ನೀಡುವುದರ ಜೊತೆಗೆ ನಾವು ‘ರೂಹ್-ಅಲ್-ಕುದುಸ್’ (ಅರ್ಥಾತ್: ಜಿಬ್ರೀಲ್/ಗೇಬ್ರಿಯಲ್) ನ ಮೂಲಕ ಅವರಿಗೆ ಸಹಾಯ ಹಸ್ತ ನೀಡಿದ್ದೆವು. ಒಂದು ವೇಳೆ ಅಲ್ಲಾಹ್ ನು (ಸತ್ಯವನ್ನು ಜನರ ಮೇಲೆ ಹೇರಲು) ಇಚ್ಛಿಸಿದ್ದರೆ, ರಸೂಲ್ ಗಳ ನಂತರ ಬಂದ (ಅವರ ಅನುಯಾಯಿಗಳು) ಸ್ಪಷ್ಟವಾದ ಪುರಾವೆಗಳು ತಮಗೆ ತಲುಪಿದ ಬಳಿಕ (ಆ ವಿಷಯದಲ್ಲಿ) ಪರಸ್ಪರ ಹೊಡೆದಾಡುತ್ತಿರಲಿಲ್ಲ! ಆದರೆ, ಅವರು (ಸುಸ್ಪಷ್ಟ ಪುರಾವೆಗಳನ್ನು ಕಂಡೂ ಸಹ) ಪರಸ್ಪರ ವಿಭಿನ್ನರಾಗಿ ಬಿಟ್ಟರು. ಅವರಲ್ಲಿ ಕೆಲವರು (ಸತ್ಯವನ್ನು ಅರಿತು ಅದನ್ನು) ನಂಬಿಕೊಂಡರು; ಇನ್ನುಳಿದ ಕೆಲವರು (ಅದನ್ನು) ಧಿಕ್ಕರಿಸಿ ಬಿಟ್ಟರು! (ಒಂದು ವೇಳೆ ಸತ್ಯವನ್ನು ಹೇರಲು) ಅಲ್ಲಾಹ್ ನು ಇಚ್ಛಿಸಿದ್ದರೆ ಅವರು ಪರಸ್ಪರ ಹೊಡೆದಾಟ ನಡೆಸುತ್ತಿರಲಿಲ್ಲ. ಅಲ್ಲಾಹ್ ನಾದರೋ (ಜನರ ಮೇಲೆ ಬಲವಂತವಾಗಿ ಏನನ್ನೂ ಹೇರದೆ) ತಾನು ಇಚ್ಛಿಸಿದ ರೀತಿಯಲ್ಲಿ (ಪ್ರಾಜ್ಞನಾಗಿ) ವರ್ತಿಸುತ್ತಾನೆ! [253]

[ಪೈಗಂಬರರ ಸಂದೇಶದಲ್ಲಿ] ವಿಶ್ವಾಸ ವ್ಯಕ್ತಪಡಿಸಿರುವ ಓ ಜನರೇ! ಕೊಡು-ಕೊಳ್ಳುವಿಕೆ ನಡೆಯದ, ಸ್ನೇಹಪರತೆ ಕೆಲಸಕ್ಕೆ ಬಾರದ ಹಾಗೂ ಮಧ್ಯಸ್ಥಿಕೆ/ಶಿಫಾರಸ್ಸುಗಳು ಫಲಕಾರಿಯಾಗದ (ಆ ನಿರ್ಣಾಯಕ) ದಿನವು ಬಂದೆರಗುವುದಕ್ಕಿಂತ ಮುಂಚಿತವಾಗಿ ನಿಮಗೆ ನಾವು ದಯಪಾಲಿಸಿದ [ಸಂಪತ್ತಿನಿಂದ ನಮ್ಮ ಮಾರ್ಗದಲ್ಲಿ] ದಾನ ನೀಡಿರಿ. (ಯಥಾರ್ಥದಲ್ಲಿ ನಿರ್ಣಾಯಕ ದಿನವನ್ನು) ನಿರಾಕರಿಸದವರೇ ಆಗಿರುವರು (ಸ್ವತಃ ತಮ್ಮ ಮೇಲೆಯೇ) ಅಕ್ರಮವೆಸಗಿ ಕೊಂಡವರು. {254}

ಅಲ್ಲಾಹ್! ಅವನ ಹೊರತು (ಬೇರೆ ಯಾರೂ) ಆರಾಧಿಸಿಕೊಳ್ಳಲು ಅರ್ಹನಲ್ಲ. ಅವನು ಸ್ವಯಂ ಚೇತನವುಳ್ಳ ಚಿರಂತನನೂ [ವಿಶ್ವ ವ್ಯವಸ್ಥೆಯನ್ನು ತನ್ನ ಯೋಜನೆಗಳ ಅನುಸಾರ] ನೆಲೆನಿಲ್ಲಿಸುವ ನಿಯಾಮಕನೂ ಆಗಿರುವನು. ಅವನಿಗೆ ನಿದ್ದೆಯ ಜೊಂಪು ಹತ್ತುವುದಾಗಲಿ ಅಥವಾ ನಿದ್ದೆಯು ಅವನನ್ನು ಬಂದು ಆವರಿಸಿಕೊಳ್ಳುವುದಾಗಲಿ ಸಾಧ್ಯವಲ್ಲ. ಭೂಲೋಕ ಮತ್ತು ಆಕಾಶಗಳಲ್ಲಿ ಇರುವ ಸಕಲವೂ ಅವನ ಮಾತ್ರ ಒಡೆತನಕ್ಕೆ ಸೇರಿವೆ. ಅವನ ಆಣತಿ/ಅನುಮತಿಯ ಹೊರತು ಅವನ ಸನ್ನಿಧಿಯಲ್ಲಿ [ಪುನರುತ್ಥಾನ ದಿನದಂದು ಯಾವುದೇ] ಶಿಫಾರಸ್ಸು ಮಾಡಲು ಯಾರಿಗೆ ತಾನೇ ಸಾಧ್ಯವಾದೀತು?! ಜನರ ಮುಂದಿರುವ ಹಾಗೂ ಅವರಿಗೆ ಮುಂದೆ ಸಂಭವಿಸಲಿರುವ ಎಲ್ಲ ವಿಷಯಗಳ ಸಂಪೂರ್ಣ ಜ್ಞಾನ ಅವನಿಗಿದೆ. ಅವನು ಸ್ವತಃ ತಿಳಿಯಪಡಿಸಲು ಬಯಸಿದ್ದರ ಹೊರತು, (ಅನಂತವಾದ) ಅವನ ಜ್ಞಾನಭಂಡಾರದಿಂದ ಕಿಂಚಿತ್ತನ್ನೂ ಅರಿತುಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ (ಆಧಿಪತ್ಯ, ಶಕ್ತಿ-ಸಾಮರ್ಥ್ಯ ಮತ್ತು ಅಧಿಕಾರದ) ಗದ್ದುಗೆಯು ಭೂಮಿ-ಆಕಾಶಗಳ ಪರಿಧಿಯನ್ನು ಮೀರಿ ನಿಂತಿದೆ. ಅವುಗಳ ವ್ಯವಸ್ಥೆಯ ನಿರ್ವಹಣಾ ಕಾರ್ಯವು ಅವನನ್ನು ದಣಿಯುವಂತೆ ಮಾಡಲಾರದು. ಅವನು ಪರಮೋನ್ನತನೂ ಅತ್ಯಂತ ಪ್ರಬಲನೂ ಆಗಿರುವನು. {255}

[‘ಸತ್ಯ ಧರ್ಮ’ ಅಥವಾ] 'ದೀನ್' ಗೆ ಸಂಬಂಧಿಸಿದಂತೆ (ಅಲ್ಲಾಹ್ ನ ಕಡೆಯಿಂದ) ಯಾವ ರೀತಿಯ ಬಲವಂತಿಕೆಯೂ ಇರುವುದಿಲ್ಲ. ಇದೀಗ ಅಜ್ಞಾನದ ಅಂಧಕಾರದಿಂದ ಸತ್ಯದೆಡೆಗೆ ಇರುವ ಮಾರ್ಗವನ್ನು ಬೇರ್ಪಡಿಸಿ ತೋರಿಸಿ ಕೊಡಲಾಗಿದೆ. ಆದ್ದರಿಂದ, ಯಾರಾದರೂ ಮಿಥ್ಯ ಶಕ್ತಿಗಳನ್ನು [ಅರಬಿ: ತಾಘೂತ್] ತಿರಸ್ಕರಿಸಿ ಅಲ್ಲಾಹ್ ನಲ್ಲಿಯ ವಿಶ್ವಾಸವನ್ನು ಭದ್ರಪಡಿಸಿ ಕೊಂಡರೆ ಆತನು ಬಲಿಷ್ಟವಾದ ಆಸರೆಯೊಂದನ್ನು ಹಿಡಿದುಕೊಂಡಂತೆ! ಎಂದಿಗೂ ಮುರಿದು ಬೀಳದ ಆಸರೆಯದು! [ಆತನು ತನಗೆ ಆಸರೆಯಾಗಿಸಿ ಕೊಂಡ] ಅಲ್ಲಾಹ್ ನಾದರೋ ಎಲ್ಲವನ್ನೂ ಕೇಳಿಸಿ ಕೊಳ್ಳುವವನು; ಸಕಲ ವಿಷಯಗಳನ್ನು ಬಲ್ಲವನು. {256}

ಅಲ್ಲಾಹ್ ನು (ಧರ್ಮದ ವಿಶ್ವಾಸಿಗಳಾದ) ‘ಮೂಮಿನ್’ ಗಳಿಗೆ ಹಿತರಕ್ಷಕನಾಗಿರುವನು! ಅವನು ಎಲ್ಲ ರೀತಿಯ ಅಂಧಕಾರದಿಂದ ಅವರನ್ನು ಹೊರತಂದು ಬೆಳಕಿನೆಡೆಗೆ ನಡೆಸುತ್ತಾನೆ. [ಅದಕ್ಕೆ ತದ್ವಿರುದ್ಧವಾಗಿ ಧರ್ಮವನ್ನು] ಯಾರು ತಿರಸ್ಕರಿಸಿ ಬಿಟ್ಟರೋ ದುಷ್ಟ-ಶಕ್ತಿಗಳು [ಅರ್ಥಾತ್ ಮನುಷ್ಯ/ಜಿನ್ನ್ ವರ್ಗಕ್ಕೆ ಸೀರಿದ ಸೈತಾನರು] ಅಂಥವರಿಗೆ ಆಪ್ತಮಿತ್ರರಾಗುವರು; ಬೆಳಕಿನಿಂದ ಅವರನ್ನು ಹೊರತೆಗೆದು (ಅಧರ್ಮದ) ಕಗ್ಗತ್ತಲೆಯತ್ತ ಕೊಂಡೊಯ್ಯುವುವು. ಅಂಥವರೇ ಆಗಿರುವರು ನರಕದ ಸಂಗಾತಿಗಳು, ಸದಾಕಾಲ ಅವರು ಅದರಲ್ಲೇ ಬಿದ್ದಿರುವರು. {257}

ಅಲ್ಲಾಹ್ ನು ಒಬ್ಬಾತನಿಗೆ (ಅರ್ಥಾತ್: ನಮ್ರೂದ್ – ಪ್ರವಾದಿ ಇಬ್ರಾಹೀಮ್ ರ ಸಮಕಾಲೀನ ಚಕ್ರವರ್ತಿ) ಸಾಮ್ರಾಜ್ಯದ ಆಧಿಪತ್ಯ ನೀಡಿದ್ದರಿಂದ (ಸೊಕ್ಕಿ ಹೋಗಿದ್ದ) ಆತನು ಪ್ರವಾದಿ ಇಬ್ರಾಹೀಮ್ ರೊಂದಿಗೆ ಅವರ ಒಡೆಯನು (ಯಾರೆಂಬ) ವಿಷಯದಲ್ಲಿ ತರ್ಕಕ್ಕಿಳಿದ ವಿಚಾರ (ಪೈಗಂಬರ್ ಮುಹಮ್ಮದ್ ರೇ,) ನಿಮಗೆ ಗೊತ್ತಿದೆಯಲ್ಲವೇ! (ಸಕಲ ಜೀವರಾಶಿಗೆ) ಜೀವ ನೀಡುವ ಹಾಗೂ ಮರಣ ನೀಡುವಾತನೇ ನನ್ನ ಒಡೆಯನು/ಸೃಷ್ಟಿಕರ್ತನು – ಎಂದು ಇಬ್ರಾಹೀಮ್ ರು ಹೇಳಿದಾಗ, ನಾನೂ ಸಹ ಜೀವ ನೀಡುವುದನ್ನೂ ಸಾಯಿಸಿ ಬಿಡುವುದನ್ನೂ ಮಾಡಬಲ್ಲೆನು ಎಂದು (ಅವನು ಅಧಿಕಾರದ ಮತ್ತಿನಿಂದ) ಉತ್ತರಿಸಿದನು. ಹೌದೇನು, ಹಾಗಾದರೆ ಅಲ್ಲಾಹ್ ನು ಸೂರ್ಯನನ್ನು ಪೂರ್ವದಿಂದ ಉದಯಿಸಿ ತರುತ್ತಾನೆ, ನೀನು ಅದನ್ನು ಪಶ್ಚಿಮದಿಂದ ಉದಯಿಸಿ ತೋರಿಸು ಎಂದು ಪ್ರವಾದಿ ಇಬ್ರಾಹೀಮ್ ರು ವಾದಿಸಿದಾಗ ಧಿಕ್ಕಾರಿಯಾಗಿದ್ದ ಆತನಿಗೆ ದಿಗಿಲು ಬಡಿದಂತಾಯಿತು. ಹೌದು! ಅಲ್ಲಾಹ್ ನು ಅನ್ಯಾಯವೆಸಗುವ ಸಮುದಾಯಕ್ಕೆ (ಸತ್ಯದೆಡೆಗೆ) ಮಾರ್ಗದರ್ಶನ ಮಾಡುವುದಿಲ್ಲ. [258]

ಅಥವಾ, (ಕಟ್ಟಡಗಳು ಬುಡಮೇಲಾಗಿ ಸ್ವತಃ ತಮ್ಮ) ಛಾವಣಿಗಳ ಮೇಲೆ ಉರುಳಿ ಬಿದ್ದಿದ್ದ ಆ ಗ್ರಾಮದ ಮೂಲಕ ಹಾದು ಹೋದ ವ್ಯಕ್ತಿಯ [ಪ್ರಾಯಶಃ ಪ್ರವಾದಿ ಎಝಕೀಲ್] ಬಗ್ಗೆ ನೀವು ತಿಳಿದಿರುವಿರಲ್ಲ?! (ಇದರ ನಿವಾಸಿಗಳೆಲ್ಲ ಸಾರಾಸಗಟಾಗಿ) ಮರಣವನ್ನಪ್ಪಿದ ಬಳಿಕ ಅಲ್ಲಾಹ್ ನು ಹೇಗೆ ತಾನೆ ಇದನ್ನು (ಪುನಃ) ಜೀವಂತಗೊಳಿಸುವನು – ಎಂದು ಆ ವ್ಯಕ್ತಿಯು (ಚಕಿತಗೊಂಡು) ಉದ್ಗರಿಸಿದಾಗ, ಅಲ್ಲಾಹ್ ನು ಆ ಕ್ಷಣದಲ್ಲೇ ಆತನಿಗೆ ಮರಣ ನೀಡಿ ನೂರು ವರ್ಷಗಳ [ಸುದೀರ್ಘ ಕಾಲ ಮೃತಾವಸ್ಥೆಯಲ್ಲಿ] ಇರಿಸಿದನು. ತದನಂತರ ಆತನನ್ನು ಜೀವಂತಗೊಳಿಸಿ ನೀನೆಷ್ಟು ಸಮಯ (ಮರಣಹೊಂದಿದ ಸ್ಥಿತಿಯಲ್ಲಿ) ಬಿದ್ದು ಕೊಂಡಿದ್ದೆ – ಎಂದು ಕೇಳಿದನು. ನಾನು ಕೇವಲ ಒಂದು ದಿನವೋ ಅಥವಾ ದಿನದ ಒಂದು ಚಿಕ್ಕ ಭಾಗವೋ (ಮರಣಹೊಂದಿದ ಸ್ಥಿತಿಯಲ್ಲಿ) ಬಿದ್ದುಕೊಂಡು ಇದ್ದಿರಬಹುದು – ಎಂದು ಆತ ಉತ್ತರಿಸಿದರು. ಅಲ್ಲ! ನಿಜವಾಗಿ ನೀನು ನೂರು ವರ್ಷಗಳ ಕಾಲ (ಮೃತಾವಸ್ಥೆಯಲ್ಲಿ) ಬಿದ್ದುಕೊಂಡಿದ್ದೆ [ಎಂದು ಅಲ್ಲಾಹ್ ನು ಸ್ಪಷ್ಟ ಪಡಿಸಿದನು]. ಈಗ [ನೀನು ಜೊತೆಯಲ್ಲಿ ಇರಿಸಿಕೊಂಡಿದ್ದ] ನಿನ್ನ ಆಹಾರ ಹಾಗೂ ಪಾನೀಯದ ಕಡೆಗೆ ನೋಡು, ಅವು ಸ್ವಲ್ಪವಾದರೂ ಹಳಸಿಲ್ಲ! ಇನ್ನೊಂದೆಡೆ, [ಸತ್ತು ಎಲುಬುಗಳೂ ಶಿಥಿಲಗೊಂಡ ಸ್ಥಿತಿಯಲ್ಲಿ ಬಿದ್ದುಕೊಂಡಿರುವ] ಆ ನಿನ್ನ ಕತ್ತೆಯ ಕಡೆಗೊ ಒಮ್ಮೆ ದೃಷ್ಟಿ ಹಾಯಿಸು! ನಿನ್ನನು (ಇಸ್ರಾಈಲ್) ಜನರ ಪಾಲಿಗೆ [ನಮ್ಮ ಅದ್ಭುತ ಶಕ್ತಿ-ಸಾಮರ್ಥ್ಯಗಳ ಒಂದು ಜೀವಂತ] ನಿದರ್ಶನವನ್ನಾಗಿ ಮಾಡಲು (ಇದನ್ನೆಲ್ಲ ನಿನಗೆ ತೋರಿಸಲಾಗಿದೆ). (ಕತ್ತೆಯ ಆ ಶಿಥಿಲಗೊಂಡ) ಎಲುಬುಗಳನ್ನು ಎಬ್ಬಿಸಿ ನಿಲ್ಲಿಸಿ, ಅದನ್ನು ಸಂಯೋಜಿಸಿ, ಅದಕ್ಕೆ ಮಾಂಸದ ಹೊದಿಕೆಯನ್ನು ನಾವು ಹೊದಿಸುವುದು ಹೇಗೆಂದು (ಇದೀಗ) ಕಣ್ಣಾರೆ ನೋಡು! ಹಾಗೆ ಆತನಿಗೆ [ಸತ್ತ ನಂತರ ಪುನರುಜ್ಜೀವನ ಗೊಳಿಸುವ ಬಗೆ ಹೇಗೆಂದು] ಚೆನ್ನಾಗಿ ಮನವರಿಕೆಯಾದಾಗ, ಖಂಡಿತವಾಗಿಯೂ ಅಲ್ಲಾಹ್ ನು ತಾನು ಬಯಸುವುದನ್ನೆಲ್ಲ ಮಾಡಿಯೇ ತೀರುವಂತಹ ಸರ್ವಸಮರ್ಥನು ಆಗಿರುವನು ಎಂಬುದನ್ನು ನಾನು ಮನಗಂಡಿದ್ದೇನೆ – ಎಂದು (ಆ ವ್ಯಕ್ತಿ) ಉದ್ಗರಿಸಿದರು. {259}

ಅಂತೆಯೇ, ಸತ್ತು ಶವವಾದವರನ್ನು ನೀನು (ಪುನಃ) ಜೀವಂತ ಗೊಳಿಸುವ ಪರಿ ಹೇಗೆಂದು ನನಗೆ ತೋರಿಸಿ ಕೊಡು ನನ್ನ ಪ್ರಭುವೇ – ಎಂದು ಪ್ರವಾದಿ ಇಬ್ರಾಹೀಮ್ ರು (ಅಲ್ಲಾಹ್ ನ ಸನ್ನಿಧಿಯಲ್ಲಿ) ಬೇಡಿಕೊಂಡ ಸಂದರ್ಭವನ್ನು (ಮುಹಮ್ಮದ್ ಪೈಗಂಬರರರೇ ನೀವು) ನೆನಪಿಸಿ ಕೊಳ್ಳಿ. ಏನು! ಅದನ್ನು ನಿನಗೆ ನಂಬಲಾಗದೇ – ಎಂದು ಅಲ್ಲಾಹ್ ನು ಕೇಳಿದಾಗ, ಏಕಿಲ್ಲ? ನಾನು ನಂಬಿಕೊಂಡಿದ್ದೇನೆ; ಆದರೆ ನನ್ನ ಚಿತ್ತದ ಸಾಂತ್ವನಕ್ಕಾಗಿ (ಪುನರುಜ್ಜೀವನ ಗೊಳಿಸುವ ಪ್ರಕ್ರಿಯೆಯನ್ನು ಕಂಡು ಕೊಳ್ಳಲು ಬಯಸುತ್ತೇನೆ) – ಎಂದು (ಇಬ್ರಾಹೀಮ್ ರು) ಉತ್ತರಿಸಿದರು. ಹಾಗಾದರೆ, ನಾಲ್ಕು ಪಕ್ಷಿಗಳನ್ನು ಹಿಡಿದು ತಂದು ಅವುಗಳನ್ನು ನಿಮ್ಮತ್ತ ಚೆನ್ನಾಗಿ ಒಲಿಯುವಂತೆ (ಪಳಗಿಸಿ), ಅನಂತರ ಅವುಗಳನ್ನು (ತುಂಡರಿಸಿ) ಪ್ರತಿಯೊಂದು ತುಂಡನ್ನು ಬೇರೆ ಬೇರೆ ಬೆಟ್ಟಗಳಲ್ಲಿ ಇಡಿ. ಅದಾದ ಮೇಲೆ ಅವನ್ನು ಕೂಗಿ ಕರೆದರೆ ಅವು (ಜೀವಂತ ಪಕ್ಷಿಗಳಾಗಿ) ನಿಮ್ಮತ್ತ ಧಾವಿಸಿ ಬರುವುವು; (ಅದನ್ನು ಕಣ್ಣಾರೆ ಕಂಡುಕೊಂಡಾಗ) ಅಲ್ಲಾಹ್ ನು (ಸಕಲ ವಿಷಯಗಳ ಮೇಲೆ) ಸಂಪೂರ್ಣ ಹತೋಟಿ ಇರುವ ಮಹಾ ಪ್ರಾಜ್ಞನಾಗಿದ್ದಾನೆ ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಿ – ಎಂದು ಅಲ್ಲಾಹ್ ನು ವಿವರಿಸಿದನು. [260]

ತಮ್ಮ ಸಂಪತ್ತನ್ನು ಅಲ್ಲಾಹ್ ನ ಮಾರ್ಗದಲ್ಲಿ ವ್ಯಯಿಸುವವರ (ಸತ್ಕರ್ಮದ) ಉದಾಹರಣೆಯನ್ನು (ನೆಲದಲ್ಲಿ ಬಿತ್ತನೆ ಗೈದ) ಬೀಜವೊಂದು ಏಳು ತೆನೆಗಳಾಗಿ ಕದಿರೊಡೆದು, ಪ್ರತಿ ತೆನೆಯಲ್ಲಿ ತಲಾ ನೂರು ಕಾಳುಗಳನ್ನು ಹೊಂದಿರುವಂಥ ಉಪಮೆಗೆ (ಹೋಲಿಸಬಹುದು). ಅಲ್ಲಾಹ್ ನು ಯಾರಿಗೆಲ್ಲ (ಹಾಗೆ ಹೆಚ್ಚಿಸಿ ಕೊಡಲು) ಇಚ್ಛಿಸುತ್ತಾನೋ ಅಂಥವರಿಗೆ (ಅವರ ಸತ್ಕರ್ಮಗಳ ಪ್ರತಿಫಲವನ್ನು ಹೀಗೆ) ಹಲವು ಪಟ್ಟು ಅಧಿಕ ಗೊಳಿಸಿ ಕೊಡುತ್ತಾನೆ. ಅಲ್ಲಾಹ್ ನಾದರೋ ಧಾರಾಳವಾಗಿ ದಯಪಾಲಿಸುವವನೂ, ಎಲ್ಲ ವಿಷಯಗಳ ಅಂತಿಮ ಜ್ಞಾನವುಳ್ಳವನೂ ಆಗಿರುವನು. ಅಲ್ಲಾಹ್ ನ ಮಾರ್ಗದಲ್ಲಿ ತನ್ನ ಸಂಪತ್ತನ್ನು (ದಾನದ ರೂಪದಲ್ಲಿ) ವ್ಯಯಿಸಿ, ನಂತರ ತಾನು ಮಾಡಿದ ಆ ದಾನವನ್ನು ಒಂದು ಔದಾರ್ಯವೆಂದು ಬಗೆಯದೆ, (ಪದೇ ಪದೇ ದಾನ ಪಡಕೊಂಡವರ ಮುಂದೆ ಅದನ್ನು ಪ್ರಸ್ತಾಪಿಸಿ ಅವರ) ಮನನೋಯಿಸದೆ ಇರುವವರಿಗಾಗಿ, ತಕ್ಕ ಸಂಭಾವನೆಗಳು ಅವರ ಒಡೆಯನ ಬಳಿ ಕಾದಿದೆ. ಅಂಥವರು ಎಂದೂ ಅಂಜಿ ಕೊಳ್ಳಬೇಕಾಗಿಲ್ಲ; ವ್ಯಥೆ ಪಡುವ ಅವಶ್ಯಕತೆಯೂ ಅವರಿಗಿಲ್ಲ. (ತನ್ನಿಂದ ಪಡೆದವರೊಡನೆ ವ್ಯವಹರಿಸುವಾಗ) ಸೌಮ್ಯತೆಯಿಂದ ಮಾತನಾಡುವುದು ಹಾಗೂ (ಋಣಭಾರ ಹೊರಿಸುವ ಬದಲು) ಕ್ಷಮಾದಾನ ನೀಡುವುದು – ಇವು ದಾನವಿತ್ತು ನಂತರ ಮನನೋಯುವಂತೆ ವರ್ತಿಸುವುದಕ್ಕಿಂತ ಅದೆಷ್ಟೋ ಉತ್ತಮ. ಅಲ್ಲಾಹ್ ನಾದರೋ ಯಾವ ಅಗತ್ಯಗಳೂ ಇಲ್ಲದವನು; ಅತಿ ಹೆಚ್ಚು ಸಂಯಮ ತೋರುವವನು. [261-263]

ಅಲ್ಲಾಹ್ ನಲ್ಲಿ ಮತ್ತು ಅಂತ್ಯದಿನದಲ್ಲಿ ನಂಬಿಕೆ ಇಲ್ಲದೆ ಕೇವಲ ಜನರಿಗೆ ತೋರಿಸುವ ಸಲುವಾಗಿ ಮಾತ್ರ ತಮ್ಮ ಸೊತ್ತನ್ನು ದಾನ ಮಾಡುವವರಂತೆ, ಮೂಮಿನ್ ಗಳಾದವರೇ, ನೀವೂ ಸಹ ದಾನ ನೀಡಿದ ನಂತರ (ಅದನ್ನು ನಿಮ್ಮ) ಔದಾರ್ಯವೆಂಬಂತೆ ಆಡಿಕೊಂಡು ಜನರ ಮನ ನೋಯಿಸಿ, ನಿಮ್ಮ ದಾನಧರ್ಮದ (ಪ್ರತಿಫಲವನ್ನು) ವ್ಯರ್ಥಗೊಳಿಸಬೇಡಿ. (ಡಂಬಾಚಾರಕ್ಕಾಗಿ) ದಾನ ನೀಡುವವರ ಉಪಮೆಯು, ಮಣ್ಣು ಮೆತ್ತಿದ ನುಣ್ಣಗಿನ ಕಲ್ಲುಬಂಡೆಯೊಂದರ ಮೇಲೆ ಜಡಿಮಳೆ ಸುರಿದಾಗ ಅದರ (ಮೇಲಿನಿಂದ ಮಣ್ಣೆಲ್ಲ ಕಳಚಿ ಹೋಗಿ) ಬರಿಯ ಬಂಡೆ ಮಾತ್ರ ಉಳಿದು ಕೊಳ್ಳುವಂತೆ ಆಗಿದೆ. (ದಾನ ಮಾಡುವುದರ ಮೂಲಕ ತಾವು ಪುಣ್ಯ ಗಳಿಸಿ ಕೊಂಡಿರುವೆವು ಎಂಬ ಭ್ರಮೆಯಲ್ಲಿರುವ) ಅವರ ಸಂಪಾದನೆಯು ಅವರ ಯಾವ ಲಾಭಕ್ಕೂ ಬರಲಾರದು. (ಡಂಬಾಚಾರಿಗಳಾದ) ಅಂತಹ ಧಿಕ್ಕಾರಿಗಳ ಕೂಟಕ್ಕೆ ಅಲ್ಲಾಹ್ ನು (ಗೆಲುವಿನ) ದಾರಿ ತೋರಲಾರನು. [264]

ಇನ್ನೊಂದೆಡೆ, ಅಲ್ಲಾಹ್ ನ ಮೆಚ್ಚುಗೆಯನ್ನು ಮಾತ್ರ ಬಯಸಿ ತಮ್ಮ ಸಂಪತ್ತನ್ನು ಖರ್ಚು ಮಾಡಿ (ಡಂಬಾಚಾರದೆಡೆಗೆ ವಾಲಿಕೊಳ್ಳದಂತೆ) ತಮ್ಮ ಮನಸ್ಸನ್ನು ಹಿಡಿತದಲ್ಲಿ ಇರಿಸಿದವರ ಉಪಮೆಯು, ಎತ್ತರ ಪ್ರದೇಶದಲ್ಲಿ ಮಾಡಿದ ತೋಟಗಾರಿಕೆಯಂತೆ ಆಗಿದೆ. ಸುರಿಮಳೆ ಬಿದ್ದರೆ ಅದು ನೀಡುವ ಫಲವು ಇಮ್ಮಡಿಗೊಳ್ಳುವುದು; ಇನ್ನು ಸುರಿಮಳೆ ಬೀಳದೇ ಹೋದರೆ ಕೇವಲ ತುಂತುರು ಮಳೆಯೂ (ಫಲ ನೀಡುವಂತಾಗಲು ಅದಕ್ಕೆ) ಸಾಕಾಗುವುದು. ನೀವು ಅದೆಂತಹ ಕೃತ್ಯಗಳನ್ನು ಎಸಗುತ್ತಿದ್ದೀರಿ ಎಂಬುದನ್ನು ಅಲ್ಲಾಹ್ ನು ಗಮನಿಸುತ್ತಿದ್ದಾನೆ (ಎಂದು ನೆನಪಿಟ್ಟು ಕೊಳ್ಳಿ). [265]

ನಿಮ್ಮ ಪೈಕಿ ಒಬ್ಬಾತನು ಖರ್ಜೂರ-ದ್ರಾಕ್ಷಿಗಳಿಂದ ಕೂಡಿದ ತೋಟವೊಂದನ್ನು ಹೊಂದಿದ್ದು, ಅದರಲ್ಲಿ ನೀರಿನ ಕಾಲುವೆಗಳು ಹರಿಯುತ್ತಲಿದ್ದು, ಅದರಿಂದ ಆತನು ಸಕಲ ರೀತಿಯ ಫಲಗಳನ್ನು ಪಡೆಯುತ್ತಿರುವನು. ಹಾಗಿರುವಾಗ, ವೃದ್ಧಾಪ್ಯವು ಆತನನ್ನು ಅಪ್ಪಿಕೊಳ್ಳುವುದು ಮತ್ತು ಆತನ ಮಕ್ಕಳು (ಇನ್ನೂ ಎಳೆಯ ಬಾಲರಾಗಿದ್ದು) ಅತಿ ದುರ್ಬಲ ಅವಸ್ಥೆಯಲ್ಲಿ ಇರುವರು. ಆಗಲೇ ಬೆಂಕಿಯಿಂದ ಕೂಡಿದ ರಭಸದ ಸುಂಟರಗಾಳಿಯೊಂದು ಬಂದಪ್ಪಳಿಸಿ ಆತನ ತೋಟವನ್ನು ಸುಟ್ಟು ಕರಕಲಾಗಿಸಿ ಬಿಡುವುದನ್ನು ಆತನು ಇಷ್ಟ ಪಡುವನೇ? ನೀವು (ಬುದ್ಧಿ ಉಪಯೋಗಿಸಿ) ಚಿಂತನೆ ನಡೆಸುವವರು ಆಗಲೆಂದು ಅಲ್ಲಾಹ್ ನು ದೃಷ್ಟಾಂತಗಳನ್ನು ನಿಮಗೆ ಹೀಗೆ ವಿವರಿಸಿ ಕೊಡುತ್ತಾನೆ. [266]

ಓ ವಿಶ್ವಾಸಿಗಳೇ, ನೀವು ದುಡಿದು ಸಂಪಾದಿಸಿದ ಹಾಗೂ ನಿಮಗೋಸ್ಕರ ಭೂಮಿಯಿಂದ ನಾವು ಉತ್ಪಾದಿಸಿದ ವಸ್ತುಗಳಿಂದ ಅತ್ಯಂತ ಉತ್ತಮವಾದ ನಿಮ್ಮ ಗಳಿಕೆಯ (ಒಂದು ಭಾಗವನ್ನು ಅಲ್ಲಾಹ್ ನ ಮಾರ್ಗದಲ್ಲಿ) ದಾನವಾಗಿ ನೀಡಿರಿ. ನಿಮ್ಮ ಗಳಿಕೆಯಲ್ಲಿನ ಕೆಳಮಟ್ಟದ/ಕಳಪೆ ವಸ್ತುಗಳನ್ನು (ಅಲ್ಲಾಹ್ ನ ಮಾರ್ಗದಲ್ಲಿ) ದಾನ ಕೊಡುವ ಬಗ್ಗೆ ಯೋಚಿಸಲೂ ಬೇಡಿ. (ಯಾರಾದರೂ ಅಂತಹ ಕಳಪೆಯನ್ನು ಎಂದಾದರೂ ನಿಮಗೆ ನೀಡಿದರೆ) ಅದನ್ನು ಕಂಡೂ ಕಾಣದಂತೆ ಮಾಡಿಕೂಳ್ಳುವ ಹೊರತು ನೀವದನ್ನು ಸ್ವೀಕರಿಸಲಾರಿರಿಯಷ್ಟೆ! (ದಾನಧರ್ಮಗಳು ನಿಮ್ಮ ವಿಶ್ವಾಸದ ಸತ್ವಪರೀಕ್ಷೆಗಾಗಿದೆಯೇ ಹೊರತು ಅಲ್ಲಾಹ್ ನಿಗೆ ಅದರ ಅಗತ್ಯವಿಲ್ಲ!) ಅಲ್ಲಾಹ್ ನು ಯಾವ ಅಗತ್ಯಗಳೂ ಇಲ್ಲದವನು – ಸ್ವಯಂಪರಿಪೂರ್ಣನು; ಸಕಲ ಪ್ರಶಂಸೆಗಳಿಗೆ ಸ್ವಯಂಯೋಗ್ಯನಾದವನು ಎಂಬುದು ನಿಮಗೆ ಸದಾ ತಿಳಿದಿರಲಿ. [267]

ಸೈತಾನನು ನಿಮ್ಮಲ್ಲಿ ಬಡತನದ ಕುರಿತು ಭಯ ಹುಟ್ಟಿಸಿ (ದಾನಧರ್ಮಗಳಿಂದ ನಿಮ್ಮನ್ನು ತಡೆದು, ಹಣ ಪೋಲಾಗಿ ಹೋಗುವಂತಹ) ಅಶ್ಲೀಲ ಕೃತ್ಯಗಳತ್ತ ನಿಮ್ಮನ್ನು ಪ್ರೋತ್ಸಾಹಿಸುವನು. ಅಲ್ಲಾಹ್ ನಾದರೋ ತನ್ನ ವತಿಯಂದ ನಿಮಗೆ ಕ್ಷಮಾದಾನ ಮತ್ತು ಅಪಾರ ಅನುಗ್ರಹಗಳ ಭರವಸೆ ನೀಡುತ್ತಾನೆ. ಮತ್ತು ಅಲ್ಲಾಹ್ ನು ಧಾರಾಳವಾಗಿ ಕೊಡುವವನೂ ಎಲ್ಲ ವಿಷಯಗಳ ಜ್ಞಾನವಿರುವವನೂ ಆಗಿರುವನು. (ತನ್ನದೇ ಕಾನೂನಿನ ಪ್ರಕಾರ) ಅಲ್ಲಾಹ್ ನು ತಾನು ಬಯಸಿದವರಿಗೆ ‘ವಿಶೇಷ ಬುದ್ಧಿವಂತಿಕೆ’ (ಅರಬಿ: ಹಿಕ್ಮಃ) ಯನ್ನು ನೀಡುತ್ತಾನೆ. ಯಾರಿಗೆ ಅಂತಹ ‘ವಿಶೇಷ ಬುದ್ಧಿವಂತಿಕೆ’ ನೀಡಲ್ಪಡುತ್ತದೋ ಆತನಿಗೆ ಒಳಿತುಗಳ ಒಂದು ಮಹಾ ಸಂಪತ್ತೇ ಸಿಕ್ಕಿದಂತೆ! ಪ್ರಜ್ಞಾವಂತ ಜನರ ಹೊರತು ಬೇರಾರೂ (ಇಂತಹ) ಉಪದೇಶಗಳಿಂದ ಪಾಠ ಕಲಿಯಲಾರರು! [268-269]

ನೀವು (ಅಲ್ಲಾಹ್ ನ ಮಾರ್ಗದಲ್ಲಿ) ದಾನದ ರೂಪದಲ್ಲಿ ಖರ್ಚು ಮಾಡುವುದನ್ನು ಅಥವಾ (ಅಲ್ಲಾಹ್ ನಿಗಾಗಿ) ಹರಕೆಯ ಸಂಕಲ್ಪ ಮಾಡುವುದನ್ನು ಖಂಡಿತವಾಗಿಯೂ ಅಲ್ಲಾಹ್ ನು ತಿಳಿದಿರುತ್ತಾನೆ. (ದಾನಧರ್ಮಗಳಿಂದ ಸ್ವತಃ ತಮ್ಮನ್ನು ತಡೆದುಕೊಂಡು ತಮ್ಮ ಮೇಲೆ ತಾವೇ) ಅನ್ಯಾಯವೆಸಗಿ ಕೊಂಡ ಜನರಿಗೆ (ಪ್ರತಿಫಲದ ದಿನ) ಸಹಾಯ ಮಾಡಲು ಯಾರೂ ಇರಲಾರರು. ನೀವು ದಾನ ಮಾಡುವಾಗ ವ್ಯಕ್ತವಾಗುವಂತೆ ಮಾಡಿಕೊಂಡರೂ ಅದು ಉತ್ತಮ ಕಾರ್ಯವೇ ಆಗಿದೆ. ಆದರೆ ನೀವದನ್ನು ಗೌಪ್ಯವಾಗಿ ಬಡಬಗ್ಗರಿಗೆ ತಲುಪಿಸಿ ಕೊಟ್ಟರೆ ಅದು ನಿಮ್ಮ ಪಾಲಿಗೆ ಅತ್ಯಂತ ಉತ್ತಮವಾಗಿದೆ; ಮಾತ್ರವಲ್ಲ, (ಹಾಗೆ ಮಾಡಿದ ಕಾರಣಕ್ಕಾಗಿ) ಅಲ್ಲಾಹ್ ನು ನಿಮ್ಮ ಕೆಲವು ದೋಷಗಳನ್ನೂ ನೀಗಿಸಿ ಬಿಡುವನು. (ಬಹಿರಂಗವಾಗಿ ಮಾಡಿದರೂ ಗೌಪ್ಯವಾಗಿ ಮಾಡಿದರೂ) ನೀವು ಮಾಡುವ ಎಲ್ಲ ಕಾರ್ಯಗಳು ಅಲ್ಲಾಹ್ ನ ಅರಿವಿನಲ್ಲಿ ಇರುವುದು. [270-271]

(ಮುಹಮ್ಮದ್ ಪೈಗಂಬರರೇ,) ಆ ಜನರನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವ ಹೊಣೆಯನ್ನು ನಿಮ್ಮ ಮೇಲೆ ಹೊರಿಸಲಾಗಿಲ್ಲ; ಬದಲಾಗಿ, ಅಲ್ಲಾಹ್ ನು (ತನ್ನದೇ ನಿಯಮದಂತೆ) ತಾನು ಬಯಸಿದವರಿಗೆ ಸನ್ಮಾರ್ಗ ತೋರಿಸಿ ಕೊಡುತ್ತಾನೆ. (ಜನರೇ,) ನಿಮ್ಮ ಸಂಪತ್ತಿನಿಂದ ನೀವು ಏನನ್ನು ದಾನ ಮಾಡುತ್ತೀರೋ ಅದರ ಪ್ರತಿಫಲವು ನಿಮಗೇ ಸಿಗುವುದು, (ಏಕೆಂದರೆ) ಅಲ್ಲಾಹ್ ನ ಸಂಪ್ರೀತಿ ಗಳಿಸುವುದರ ಹೊರತು (ಬೇರೆ ಉದ್ದೇಶಕ್ಕಾಗಿ) ನೀವು ಖರ್ಚು ಮಾಡುತ್ತಿಲ್ಲವಷ್ಟೆ! ನಿಮ್ಮ ಸಂಪತ್ತಿನಿಂದ ನೀವು ನೀಡಿದ ದಾನಕ್ಕೆ (ಪ್ರತಿಫಲವನ್ನು) ಪೂರ್ತಿಯಾಗಿ ನಿಮಗೆ ಮರಳಿಸಲಾಗುವುದು! (ಪ್ರತಿಫಲ ನೀಡಲಾಗುವ ದಿನ) ನಿಮಗೆ (ಕಿಂಚಿತ್ತೂ) ಅನ್ಯಾಯವಾಗಲಾರದು. [272]

ಅಲ್ಲಾಹ್ ನ ಮಾರ್ಗದಲ್ಲಿ (ತಮ್ಮನ್ನೇ ತೊಡಗಿಸಿ ಕೊಂಡ ನಿಮಿತ್ತ ಜೀವನೋಪಾಯದ ಗಳಿಕೆಗಾಗಿ) ನಾಡಿನಲ್ಲಿ ಸಂಚರಿಸಿಕೊಳ್ಳಲು ಸಾಧ್ಯವಾಗದೆ, (ಕೆಲಸ-ಕಾರ್ಯಗಳಿಂದ) ಸುತ್ತುವರಿಯಲ್ಪಟ್ಟ ಬಡಪಾಯಿಗಳಿಗೆ (ವಿಶೇಷವಾಗಿ ನಿಮ್ಮ ಗೌಪ್ಯವಾದ ದಾನವು ತಲುಪಬೇಕು). ಅವರು ತೋರುವ ಸ್ವಾಭಿಮಾನದ ಕಾರಣದಿಂದಾಗಿ ತಿಳಿಗೇಡಿಯಾದವನು ಅಂಥವರನ್ನು ಧನಿಕರೆಂದು ಭಾವಿಸಿ ಕೊಳ್ಳುತ್ತಾನೆ. ನೀವು ಅವರ (ನಿಜಸ್ಥಿತಿಯನ್ನು) ಅವರ ಮುಖಭಾವದಿಂದ ಅರಿತುಕೊಳ್ಳ ಬಲ್ಲಿರಿ! ಅವರಂತೂ ಜನರೊಂದಿಗೆ ಪಟ್ಟು ಹಿಡಿದು ಯಾಚಿಸುವವರಲ್ಲ! (ಅಂಥವರನ್ನು ನೀವು ಸ್ವತಃ ಗುರುತಿಸಿಕೊಂಡು) ನಿಮ್ಮ ಸೊತ್ತಿನಿಂದ ದಾನ ನೀಡಿದರೆ ಖಂಡಿತವಾಗಿಯೂ (ನಿಮ್ಮ ಆ ಸತ್ಕರ್ಮವು) ಅಲ್ಲಾಹ್ ನ ಅರಿವಿನಲ್ಲಿರುತ್ತದೆ. [273]

ಹಗಲಲ್ಲೂ ಇರುಳಲ್ಲೂ, ಗೌಪ್ಯವಾಗಿಯೂ ಜನರಿಗೆ ತಿಳಿಯುವಂತೆಯೂ, ತಮ್ಮ (ಸ್ವಾಮಿತ್ವದಲ್ಲಿರುವ) ಸಿರಿಸಂಪತ್ತನ್ನು ದಾನಧರ್ಮದ ರೂಪದಲ್ಲಿ ವ್ಯಯಿಸುವವರಿಗೆ ಅವರ ಒಡೆಯನ/ಸೃಷ್ಟಿಕರ್ತನ ಬಳಿ ಸಂಭಾವನೆಯು ಸಿದ್ಧವಿದೆ. ಆದ್ದರಿಂದ ಅಂಥವರು ಅಂಜಿಕೊಳ್ಳ ಬೇಕಾಗಿಲ್ಲ; ವ್ಯಥೆಪಡುವ ಅಗತ್ಯವೂ ಅವರಿಗಿಲ್ಲ. [274]

[ದಾನಧರ್ಮ ಮಾಡುವುದನ್ನು ಮೈಗೂಡಿಸಿಕೊಳ್ಳುವ ಬದಲು] ಬಡ್ಡಿ ತಿನ್ನುವ ವ್ಯವಹಾರದಲ್ಲಿ ತೊಡಗಿದವರು, ಸೈತಾನನ ಸ್ಪರ್ಶಕ್ಕೊಳಗಾಗಿ ಹುಚ್ಚನಾಗಿ ಹೋದವನು ಎದ್ದೇಳುವ ಹಾಗಲ್ಲದೆ (ಪುನರುತ್ಥಾನ ದಿನದಂದು) ಎದ್ದು ನಿಲ್ಲಲಾರರು. ವ್ಯಾಪಾರವೂ ಸಹ ಬಡ್ಡಿಯ ಒಂದು ನಮೂನೆಯೇ ಆಗಿದೆ ಎಂದು ವಾದಿಸಿ (ತಮ್ಮ ಬಡ್ಡಿಕೋರತನವನ್ನು ಸಮರ್ಥಿಸಿಕೊಳ್ಳುವ) ಕಾರಣ ಅವರಿಗೆ (ಅಂದು) ಹಾಗಾಗುವುದು. (ನೀವು ತಿಳಿದಿರಿ), ಅಲ್ಲಾಹ್ ನು ವ್ಯಾಪಾರವನ್ನು ಅನುಮತಿಸಿದ್ದಾನೆ ಆದರೆ ಬಡ್ಡಿಯನ್ನು ನಿಷೇಧಗೊಳಿಸಿದ್ದಾನೆ. ಇನ್ನು, ಯಾರಾದರೂ ತನ್ನ ಸೃಷ್ಟಿಕರ್ತನ/ಒಡೆಯನ ವತಿಯಿಂದ (ಈ) ಉಪದೇಶವು ಬಂದ ತಕ್ಷಣ (ಬಡ್ಡಿ ಪಡೆಯುವುದನ್ನು) ನಿಲ್ಲಿಸಿ ಬಿಟ್ಟರೆ, ಹಿಂದೆ ಪಡಕೊಂಡದ್ದನ್ನು ಆತನಿಗೆ (ಮನ್ನಿಸಲಾಗಿದೆ ಎಂದು ತಿಳಿದು ಕೊಳ್ಳಲಿ); ಆತನನ್ನು (ಕ್ಷಮಿಸುವ) ಕಾರ್ಯವು ಅಲ್ಲಾಹ್ ನಿಗೆ ಬಿಟ್ಟಿದೆ! ಆದರೆ (ಈ ಎಚ್ಚರಿಕೆಯ ಬಳಿಕವೂ ಬಡ್ಡಿ ವ್ಯವಹಾರದೆಡೆಗೇ) ಮರಳುವವರು ನರಕದ ಬೆಂಕಿಯ ಸಂಗಾತಿಗಳು! ಅದರಲ್ಲೇ ಬಿದ್ದುಕೊಂಡಿರುವವರು! [275]

ಬಡ್ಡಿಯ (ಗಳಿಕೆ)ಯನ್ನು ಅಲ್ಲಾಹ್ ನು (ಆ ದಿನ) ನಾಶಪಡಿಸುವನು ಹಾಗೂ ದಾನಧರ್ಮದ (ಪ್ರತಿಫಲವನ್ನು) ಹೆಚ್ಚಿಸಿ ಕೊಡುವನು. ಕೃತಜ್ಞತಾಭಾವ ಇಲ್ಲದ ಯಾವೊಬ್ಬ ಪಾತಕಿಯನ್ನೂ ಅಲ್ಲಾಹ್ ನು ಇಷ್ಟ ಪಡುವುದಿಲ್ಲ. [276]

ಹೌದು, (ಧಾರ್ಮಿಕ ಸತ್ಯವನ್ನು) ದೃಢವಾಗಿ ನಂಬಿಕೊಂಡವರು, ಸತ್ಕರ್ಮಗಳನ್ನು ಮಾಡಿದವರು, ನಿಷ್ಠೆಯೊಂದಿಗೆ ನಮಾಝ್ ನಿರ್ವಹಿಸಿದವರು ಮತ್ತು ಝಕಾತ್ ನೀಡಿದವರಿಗೆ ಅವರ ಸೃಷ್ಟಿಕರ್ತನ/ಒಡೆಯನ ಬಳಿ ಪ್ರತಿಫಲವಿದೆ. ಅವರಿಗೆ (ಆ ದಿನ) ಭಯವಿರದು; ಅವರು ವ್ಯಥೆ ಪಡುವುದೂ ಇಲ್ಲ. [277]

ವಿಶ್ವಾಸಿಗಳಾದವರೇ, ನೀವು ನಿಜವಾದ ವಿಶ್ವಾಸಿಗಳು ಹೌದಾದರೆ ಅಲ್ಲಾಹ್ ನ ಭಯಭಕ್ತಿಯನ್ನು ಮೈಗೂಡಿಸಿಕೊಳ್ಳಿ; ನಿಮಗೆ ಸಿಗಲು ಬಾಕಿ ಇರುವ ಬಡ್ಡಿಯನ್ನು (ಸಾಲಗಾರರಿಗೆ) ಬಿಟ್ಟು ಕೊಡಿ. ನೀವು (ಈ ಆಜ್ಞೆಯ ಪಾಲನೆ) ಮಾಡುವುದಿಲ್ಲ ಎಂದಾದರೆ ಅಲ್ಲಾಹ್ ಮತ್ತು ಅವನ ರಸೂಲ್‍/ದೂತನ ವತಿಯಿಂದ (ನಿಮ್ಮ ವಿರುದ್ಧ) ಸಾರಲಾದ ಯುದ್ಧದ ಕುರಿತು ಎಚ್ಚೆತ್ತುಕೊಳ್ಳಿ. ಒಂದು ವೇಳೆ ನೀವು (ಬಡ್ಡಿ ವ್ಯವಹಾರವನ್ನು ಬಿಟ್ಟು) ಪಶ್ಚಾತ್ತಾಪ ಮಾಡಿಕೊಂಡರೆ (ಸಾಲಗಾರನಿಗೆ ಕೊಟ್ಟ) ಮೂಲಧನವು ನಿಮಗೆ ಸೇರುತ್ತದೆ. ನೀವು ಸುಲಿಗೆ ಮಾಡುವವರಾಗಬಾರದು, ಮಾತ್ರವಲ್ಲ, ನೀವು ಸುಲಿಗೆಗೆ ಒಳಗಾಗಲೂ ಬಾರದು. [278-279]

ಒಂದು ವೇಳೆ (ನಿಮ್ಮಿಂದ ಸಾಲ ಪಡೆದುಕೊಂಡಾತನು) ಸಂಕಷ್ಟದಲ್ಲಿ ಸಿಲುಕಿದ್ದರೆ (ಆತನಿಗೆ ನಿಮ್ಮ ಸಾಲ ತೀರಿಸಲು) ಸುಲಭವಾಗಿ ಸಾಧ್ಯವಾಗುವ ವರೆಗೆ ಕಾಲಾವಕಾಶ ನೀಡಿರಿ. ಇನ್ನು (ಸಾಲದ ಮೊತ್ತವನ್ನು ಆತನಿಗೆ) ದಾನದ ರೂಪದಲ್ಲಿ ಮನ್ನಿಸಿ ಬಿಟ್ಟರೆ ಅದು ನಿಮ್ಮ ಪಾಲಿಗೆ ಹೆಚ್ಚು ಉತ್ತಮವಾಗಿರುವುದು. (ಹಾಗೆ ಮಾಡಿಕೊಳ್ಳುವುದರ ಮಹತ್ವವನ್ನು) ನೀವು ಒಂದು ವೇಳೆ ಅರಿತುಕೊಂಡವರು ಆಗಿದ್ದಿದ್ದರೆ! [280]

ನಿಮ್ಮನ್ನೆಲ್ಲ ಅಲ್ಲಾಹ್ ನ ಸನ್ನಿಧಿಗೆ ಮರಳಿಸಲಾಗುವ ಆ ದಿನದ ಕುರಿತು ಜಾಗರೂಕರಾಗಿ ಇರಿ. ಅಂದು ಪ್ರತಿಯೊಬ್ಬ ವ್ಯಕ್ತಿಗೂ ತಾನು ಸಂಪಾದಿಸಿಕೊಂಡದನ್ನು ಪೂರ್ಣವಾಗಿ ನೀಡಲಾಗುವುದು; ಯಾರಿಗೂ ಸೊಲ್ಪವೂ ಅನ್ಯಾಯವಾಗಲಾರದು. [281]

ಓ ಧರ್ಮ ವಿಶ್ವಾಸಿಗಳೇ, ಒಂದು ನಿರ್ಧಿಷ್ಟ ಅವಧಿಯನ್ನು ನಿರ್ಣಯಿಸಿಕೊಂಡು ಮಾಡಲಾಗುವ ಸಾಲದ ವ್ಯವಹಾರದಲ್ಲಿ ನೀವು ಪರಸ್ಪರ ತೊಡಗುವುದಾದರೆ (ಅದನ್ನು ಲಿಖಿತ ರೂಪದಲ್ಲಿ) ದಸ್ತಾವೇಜುಗೊಳಿಸಬೇಕು. ಒಬ್ಬ ಬರವಣಿಗೆಗಾರನು ಅದನ್ನು ನಿಮಗಾಗಿ ಪ್ರಾಮಾಣಿಕವಾಗಿ ದಸ್ತಾವೇಜುಗೊಳಿಸಲಿ. ಅಲ್ಲಾಹ್ ನು ಆತನಿಗೆ (ಬರಹ ವಿದ್ಯೆ) ಕಲಿಸಿದ ಕಾರಣಕ್ಕಾಗಿ ಬರವಣಿಗೆಗಾರನು ಅದನ್ನು ಬರೆಯಲು ನಿರಾಕರಿಸಬಾರದು; ಅವನು ಬರೆಯಲೇ ಬೇಕು.

ಸಾಲದ ಬಾಧ್ಯತೆ ಹೊರಲಿರುವವನು [ಪರಸ್ಪರ ಒಪ್ಪಿಕೊಳ್ಳಲಾದ ಅಂಶಗಳನ್ನು ಬರೆಯುವಾತನಿಗೆ] ಹೇಳಿಕೊಟ್ಟು ಬರೆಯಿಸಲಿ. (ಹಾಗೆ ಬರೆಯಿಸುವಾಗ) ಅವನು ತನ್ನ ಒಡೆಯನಾದ ಅಲ್ಲಾಹ್ ನ ಭಯವಿಸಿರಿಕೊಳ್ಳಲಿ, ಬರೆಯುವಾಗ ಏನನ್ನೂ ಮೊಟಕುಗೊಳಿಸದಿರಲಿ. ಒಂದು ವೇಳೆ ಸಾಲ ಪಡೆದುಕೊಳ್ಳುವಾತನು ಪೆದ್ದನೋ ದುರ್ಬಲನೋ ಆಗಿದ್ದರೆ, [ಅಥವಾ ದಸ್ತಾವೇಜಿನ ನಿಬಂಧನೆಗಳನ್ನು] ಹೇಳಿ ಬರೆಯಿಸುವ ಸಾಮರ್ಥ್ಯವಿಲ್ಲದವನೋ ಆಗಿದ್ದರೆ, ಆಗ ಆತನ ಮೇಲ್ವಿಚಾರಕನು/ಪೋಷಕನು ಅದನ್ನು (ಆತನ ಪರವಾಗಿ) ಪ್ರಾಮಾಣಿಕವಾಗಿ ಬರೆಯಿಸಲಿ.

[ಇಂತಹ ಒಪ್ಪಂದಗಳನ್ನು ಮಾಡುವಾಗಲೆಲ್ಲ ಅದಕ್ಕೆ] ನಿಮ್ಮ ಪೈಕಿಯ ಇಬ್ಬರು ಪುರುಷರನ್ನು ಸಾಕ್ಷಿಗಳನ್ನಾಗಿ ಮಾಡಿಕೊಳ್ಳಬೇಕು. ಇನ್ನು, ಇಬ್ಬರು ಪುರುಷರು ಸಿಗದೇ ಹೋದ ಪಕ್ಷದಲ್ಲಿ ನಿಮಗೆ ಒಪ್ಪಿಗೆಯಾಗುವ ಒಬ್ಬ ಪುರುಷ ಮತ್ತು ಇಬ್ಬರು ಸ್ತ್ರೀಯರನ್ನು ಸಾಕ್ಷಿಗಳನ್ನಾಗಿ ಮಾಡಿಕೊಳ್ಳ ಬಹುದು. ಅದೇಕೆಂದರೆ, ಆ ಇಬ್ಬರಲ್ಲಿ ಒಬ್ಬಳೇನಾದರೂ ಮರೆತರೆ, ಗೊಂದಲಕ್ಕೊಳಗಾದರೆ, ಮತ್ತೊಬ್ಬಳು ನೆನಪಿಸಿ ಕೊಡಲಿಕ್ಕಾಗಿ. ಒಂದು ವೇಳೆ ಸಾಕ್ಷಿದಾರರನ್ನು ಕರೆಯಿಸಲಾದರೆ ಅವರು (ಹಾಜರಾಗಲು) ನಿರಾಕರಿಸ ಬಾರದು.

ಸಾಲದ ವ್ಯವಹಾರವು ಚಿಕ್ಕದಾಗಿರಲಿ ಅಥವಾ ದೊಡ್ದದೇ ಆಗಿರಲಿ, ಸಾಲದ ಕಲಾವಧಿಯ ವರೆಗೆ ನೀವು ಅದನ್ನು ಬರೆದಿಡುವಲ್ಲಿ ಸೋಮಾರಿತನ ತೋರಿಸಬಾರದು. ಅದು ಅಲ್ಲಾಹ್ ನ ದೃಷ್ಟಿಯಲ್ಲಿ ಹೆಚ್ಚು ನ್ಯಾಯಪರ ವಿಧಾನವಾಗಿದೆ, ಸಾಕ್ಷ್ಯಕ್ಕೆ ಹೆಚ್ಚು ಸರಿಯೆನಿಸಿದ ಕ್ರಮವಾಗಿದೆ, ಮಾತ್ರವಲ್ಲ ನೀವು ಸಂದೇಹಕ್ಕೀಡಾಗಬಹುದಾದ (ಸನ್ನಿವೇಶಗಳನ್ನು) ಕಡಿಮೆಗೊಳಿಸುತ್ತದೆ. ಆದರೆ ನಿಮ್ಮ ಮಧ್ಯೆ ಸಾಧಾರಣವಾಗಿ ನಡೆದುಹೋಗುವ ನೇರವಾದ ವ್ಯಾಪಾರ-ವಹಿವಾಟುಗಳು ಇದಕ್ಕೆ ಹೊರತಾಗಿದೆ; ಅದನ್ನು ನೀವು ದಾಖಲಿಸದೇ ಹೋದರೂ ನಿಮ್ಮ ಮೇಲೆ ಆಕ್ಷೇಪವಿಲ್ಲ.

ಹಾಗೆಯೇ, ನೀವು ವ್ಯವಹಾರವೊಂದನ್ನು ಪರಸ್ಪರ ಇತ್ಯರ್ಥಗೊಳಿಸುವ ಸಂದರ್ಭದಲ್ಲೂ ಸಾಕ್ಷಿಗಳನ್ನು ಗೊತ್ತುಪಡಿಸಿಕೊಳ್ಳಿ. [ಆದರೆ ನೆನಪಿರಲಿ], ದಸ್ತಾವೇಜನ್ನು ದಾಖಲಿಸುವವನಿಗಾಗಲಿ ಅಥವಾ ಸಾಕ್ಷಿದಾರನಿಗಾಗಲಿ ತೊಂದರೆ ಕೊಡಕೂಡದು; ಹಾಗೇನಾದರೂ ನೀವು ಮಾಡಿದರೆ ಖಂಡಿತವಾಗಿ ಅದೊಂದು ಪಾಪವಾಗಿ ನಿಮಗೆ ಅಂಟಿಕೊಳ್ಳುತ್ತದೆ. [ಈ ವಿಷಯಗಳಲ್ಲಿ] ಅಲ್ಲಾಹ್ ನ (ಆಜ್ಞೆಗಳ ಉಲ್ಲಂಘನೆಯಾಗದಂತೆ) ಎಚ್ಚರಿಕೆಯೊಂದಿಗೆ ವ್ಯವಹರಿಸಿರಿ. ಅಲ್ಲಾಹ್ ನು ಸ್ವತಹ ನಿಮಗೆ (ಇದರ ಕುರಿತು) ಕಲಿಸುತ್ತಿದ್ದಾನೆ ಮತ್ತು ಅಲ್ಲಾಹ್ ನು ಎಲ್ಲಾ ವಿಷಯಗಳನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ. [282]

ಇನ್ನು ನೀವು ಪ್ರಯಾಣದಲ್ಲಿದ್ದಾಗ (ಸಕಾಲದಲ್ಲಿ) ನಿಮಗೆ ದಸ್ತಾವೇಜು ಬರೆಯಲು ಯಾರೂ ಸಿಗದೇ ಹೋದ ಪಕ್ಷದಲ್ಲಿ (ಭದ್ರತೆಗಾಗಿ) ಅಡಮಾನ ಇಟ್ಟುಕೊಳ್ಳುವ ಮೂಲಕ (ಸಾಲದ ವ್ಯವಹಾರ ನಡೆಸಬಹುದು). ನಂತರ ನೀವು ಪರಸ್ಪರರ ವಿಶ್ವಾಸವನ್ನು ಗೆದ್ದುಕೊಂಡರೆ ಯಾರ ಬಳಿ ಅಡಮಾನ ಇರಿಸಲಾಗಿತ್ತೋ ಆತನು ಅದನ್ನು (ಯಥಾವತ್ತಾಗಿ) ಹಿಂದಿರುಗಸಬೇಕು; ಆತನು ತನ್ನನ್ನು ಪರಿಪಾಲಿಸುವ ಅಲ್ಲಾಹ್ ನ ಭಯವಿರಿಸಿಕೊಳ್ಳ ಬೇಕು. ನೀವು (ಇಂತಹ ವ್ಯವಹಾರದ) ಸಾಕ್ಷ್ಯವನ್ನು ಬಚ್ಚಿಡಬಾರದು; (ಸಾಕ್ಷಿ ನುಡಿಯುವ ಬದಲು) ಅದನ್ನು ಬಚ್ಚಿಡುವಾತನ ಹೃದಯವು ಕಡು ಪಾಪಿ ಹೃದಯವಾಗಿದೆ. ಹೌದು! ನೀವು ಏನೆಲ್ಲ ಮಾಡುತ್ತಿರುವಿರೋ ಅಲ್ಲಾಹ್ ನಿಗೆ ಅದು ಚೆನ್ನಾಗಿ ತಿಳಿದಿದೆ. [283]

ಭೂಮಿ-ಆಕಾಶಗಳಲ್ಲಿ ಏನೆಲ್ಲ ಇವೆಯೋ ಅವೆಲ್ಲವೂ ಅಲ್ಲಾಹ್ ನ ಮಾತ್ರ ಒಡೆತನಕ್ಕೆ ಸೇರಿವೆ. ಹಾಗಿರುವಾಗ ನಿಮ್ಮ ಹೃದಯಗಳಲ್ಲಿರುವ ವಿಚಾರಗಳನ್ನು ನೀವು ವ್ಯಕ್ತಪಡಿಸಿದರೂ ಗೌಪ್ಯವಾಗಿರಿಸಿದರೂ, ಅಲ್ಲಾಹ್ ನು ಅವುಗಳಿಗೆ ಸಂಬಂಧಿಸಿದಂತೆ ನಿಮ್ಮನ್ನು ವಿಚಾರಣೆ ಮಾಡಿಯೇ ತೀರುವನು. ತರುವಾಯ, ತಾನು ಕ್ಷಮಿಸಲು ಬಯಸಿದವರನ್ನು ಕ್ಷಮಿಸುವನು ಮತ್ತು ಶಿಕ್ಷಿಸಲು ಬಯಸಿದವರನ್ನು [ತನ್ನದೇ ನಿಯಮದ ಪ್ರಕಾರ] ಶಿಕ್ಷೆಗೆ ಗುರಿಪಡಿಸುವನು. ಹೌದು, ಅಲ್ಲಾಹ್ ನು ಎಲ್ಲಾ ಕಾರ್ಯಗಳನ್ನು (ತನ್ನಿಚ್ಛೆಯಂತೆ) ಮಾಡಿ ಮುಗಿಸುವ ಸಾಮರ್ಥ್ಯವುಳ್ಳವನು! {284}

[ಇಸ್ರಾಈಲ್ ವಂಶಜರೇ,] ಈ ಪೈಗಂಬರರು ತನ್ನ ಒಡೆಯನ ವತಿಯಿಂದ ತನಗೆ ಯಾವ (ದಿವ್ಯ ಸಂದೇಶ) ಇಳಿಸಿಕೊಡಲಾಗಿದೆಯೋ ಅದರಲ್ಲಿ ದೃಢ ವಿಶ್ವಾಸವಿರಿಸಿರುವರು; ಅಂತೆಯೇ [ಅವರನ್ನು ಹಿಂಬಾಲಿಸುವ] ಎಲ್ಲ ವಿಶ್ವಾಸಿ ಜನರೂ ಸಹ! ಅವರೆಲ್ಲರೂ ಅಲ್ಲಾಹ್ ನಲ್ಲಿ, ಅವನ ಮಲಕ್ ಗಳಲ್ಲಿ, ಅವನು [ಇಳಿಸಿಕೊಟ್ಟ ಇತರೆಲ್ಲ ದಿವ್ಯ] ಗ್ರಂಥಗಳಲ್ಲಿ ಮತ್ತು ಅವನ [ಸಂದೇಶವನ್ನು ತಲುಪಿಸಲು ಬಂದ ಎಲ್ಲಾ] ದೂತರುಗಳಲ್ಲಿ ದೃಢವಾದ ವಿಶ್ವಾಸವನ್ನು ಹೊಂದಿರುವರು!

ಅಲ್ಲಾಹ್ ನ ದೂತರುಗಳ ನಡುವೆ [ಇಸ್ರೇಲಿಯರು ತೋರಿದಂತೆ] ನಾವು ಭೇದಭಾವ ತೋರುವುದಿಲ್ಲ; ನಾವು (ನಿನ್ನ ಸಂದೇಶವನ್ನು) ಆಲೈಸಿಕೊಂಡೆವು ಮತ್ತು ಆ ಕೂಡಲೇ ಅನುಸರಿಸುವವರಾದೆವು! ನಾವು ನಿನ್ನ ಕ್ಷಮೆ ಕೋರುತ್ತೇವೆ ನಮ್ಮೊಡೆಯಾ, ನಮ್ಮ (ಅಂತಿಮ) ಮರಳುವಿಕೆಯು ನಿನ್ನೆಡೆಗೇ ಆಗಿರುವುದು – ಎಂದು ಅವರೆಲ್ಲ ಪ್ರಾರ್ಥಿಸುವವರಾಗಿರುವರು. {285}

(ಯಥಾರ್ಥದಲ್ಲಿ) ಯಾವೊಬ್ಬನ ಮೇಲೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾದ ಹೊರೆಯನ್ನು ಅಲ್ಲಾಹ್‍ ನು ಹೊರಿಸುವುದಿಲ್ಲ. ಸಂಪಾದಿಸಿದ್ದು (ಒಳಿತಾಗಿದ್ದರೆ ಅದರ ಪ್ರತಿಫಲವು) ಅವನಿಗೆ ಸಲ್ಲುವುದು; ಇನ್ನು ಸಂಪಾದಿಸಿದ್ದು (ಕೆಡುಕಾಗಿದ್ದರೆ ಅದರ) ಹೊಣೆಗಾರಿಕೆಯೂ ಅವನದೇ ಹೆಗಲ ಮೇಲೆ!

ಓ ನಮ್ಮ ಪ್ರಭುವೇ, ನಮಗೆ [ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಏನಾದರೂ] ಮರೆವು ಬಾಧಿಸಿದ್ದರೆ ಅಥವಾ ನಮ್ಮಿಂದ ದೋಷವೇನಾದರೂ ಸಂಭವಿಸಿದ್ದರೆ ಅದಕ್ಕಾಗಿ ನಮ್ಮನ್ನು ಹಿಡಿದು ದಂಡಿಸಬೇಡ; ನಮ್ಮೊಡೆಯಾ, ನಮ್ಮ ಪೂರ್ವಿಕ ಸಮುದಾಯಗಳ ಮೇಲೆ ಹೊರಿಸಲಾದಂತಹ ದುರ್ಭರವಾದ ಭಾರವನ್ನು ನೀನು ನಮ್ಮ ಮೇಲೆ ಹೊರಿಸದಿರು; ನಮ್ಮೊಡೆಯಾ, ನಮಗೆ ಹೊರಲು ಸಾಧ್ಯವಿರದಂತಹ ಹೊರೆಯನ್ನು ನಮ್ಮ ಮೇಲೆ ಹಾಕಬೇಡ; ನಮ್ಮನ್ನು ಕ್ಷಮಿಸು; ನಮ್ಮ ಪ್ರಮಾದಗಳನ್ನು ಮರೆಮಾಚಿಸು; ನಮ್ಮ ಮೇಲೆ ಕರುಣೆ ತೋರು; ನೀನಾದರೋ ನಮ್ಮ ರಕ್ಷಕನಾಗಿರುವೆ, ಆದ್ದರಿಂದ [ನಮ್ಮೊಂದಿಗೆ ಶತ್ರುತ್ವ ಸಾರಿರುವ] ಈ ಧರ್ಮಧಿಕ್ಕಾರಿಗಳ ವಿರುದ್ಧ ನಮಗೆ ಸಹಾಯವನ್ನು ದಯಪಾಲಿಸು (- ಎಂದು ವಿಶ್ವಾಸಿಗಳೇ ನೀವೂ ಪ್ರಾರ್ಥಿಸುತ್ತಲಿರಿ). {286}

ಅನುವಾದಿತ ಸೂರಃ ಗಳು


Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...