تـرجمـة سورة مريم من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت
سـهل الفهـم من غيـر الـرجـوع إلى كتاب التفسيـر
| ಸೂರಃ ಮರ್‌ಯಮ್ | ಪವಿತ್ರ ಕುರ್‌ಆನ್ ನ 19 ನೆಯ ಸೂರಃ | ಇದರಲ್ಲಿ ಒಟ್ಟು 98 ಆಯತ್ ಗಳು ಇವೆ |
ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!
كهيعص
ಕಾಫ್ ಹಾ ಯಾ 'ಐನ್ ಸಾದ್! {1}
ذِكْرُ رَحْمَتِ رَبِّكَ عَبْدَهُۥ زَكَرِيَّآ
ಇದು ನಿಮ್ಮ ಒಡೆಯನಾದ (ಅಲ್ಲಾಹ್ ನು) ತನ್ನ ದಾಸನಾದ (ಪ್ರವಾದಿ) ಝಕರಿಯ್ಯಾ ರವರ ಮೇಲೆ ಮಾಡಿದ ಅನುಗ್ರಹದ ಪ್ರಸ್ತಾಪವಾಗಿದೆ! {2}
إِذْ نَادَىٰ رَبَّهُ نِدَاءً خَفِيًّا
ಅವರು ಗೌಪ್ಯವಾಗಿ ತನ್ನ ಒಡೆಯನಿಗೆ ಮೊರೆಯಿಟ್ಟ ಸಂದರ್ಭವನ್ನು ನೆನಪಿಸಿರಿ! {3}
قَالَ رَبِّ إِنِّي وَهَنَ الْعَظْمُ مِنِّي وَاشْتَعَلَ الرَّأْسُ شَيْبًا وَلَمْ أَكُنْ بِدُعَائِكَ رَبِّ شَقِيًّا
ನನ್ನೊಡೆಯಾ! ನನ್ನ ದೇಹದ ಮೂಳೆಗಳೆಲ್ಲಾ ಬಲಗುಂದಿವೆ; ವೃದ್ಧಾಪ್ಯದಿಂದಾಗಿ ನನ್ನ ತಲೆಯ (ಕೂದಲು ಕೆಂಡದಂತೆ) ಹೊಳೆಯುತ್ತಿದೆ. ಆದರೂ ನನ್ನೊಡೆಯಾ, ನಿನಗೆ ಮೊರೆಯಿಟ್ಟು ನಾನೆಂದೂ ಹತಾಶನಾಗಿಲ್ಲ ಎಂದು (ಪ್ರವಾದಿ ಝಕರಿಯ್ಯಾ) ಪ್ರಾರ್ಥಿಸಿಕೊಂಡರು. {4}
وَإِنِّي خِفْتُ الْمَوَالِيَ مِنْ وَرَائِي وَكَانَتِ امْرَأَتِي عَاقِرًا فَهَبْ لِي مِنْ لَدُنْكَ وَلِيًّا
ನನ್ನ ನಂತರ ಈ ನನ್ನ ಸಂಬಂಧಿಕರ ವರ್ತನೆಯ ಕುರಿತಂತೆ ನಾನು ಆತಂಕ ಪಡುತ್ತಿದ್ದೇನೆ. ನನ್ನ ಪತ್ನಿಯೂ ಬಂಜೆಯಾಗಿದ್ದಾಳೆ. ಆದ್ದರಿಂದ (ಒಡೆಯಾ), ನಿನ್ನ ವತಿಯಿಂದ ನನಗೊಬ್ಬ ಉತ್ತರಾಧಿಕಾರಿಯನ್ನು ದಯಪಾಲಿಸು. {5}
يَرِثُنِي وَيَرِثُ مِنْ آلِ يَعْقُوبَ ۖ وَاجْعَلْهُ رَبِّ رَضِيًّا
ಅವನು ನನ್ನ [ಪ್ರವಾದಿತ್ವ ಮತ್ತು ಇತರ ಧಾರ್ಮಿಕ ಕಾರ್ಯಭಾರಗಳಿಗೆ] ವಾರೀಸುದಾರನಾಗಲಿ; ಅಂತೆಯೇ (ಪ್ರವಾದಿ) ಯಾಕೂಬ್ ರ ಮನೆತನದಲ್ಲಿ [ನಡೆದು ಬರುತ್ತಿರುವ ಪ್ರವಾದಿತ್ವದ] ವಾರೀಸುದಾರನೂ ಆಗಲಿ. ನನ್ನೊಡೆಯಾ, ಅವನನ್ನು ಒಬ್ಬ ನೆಚ್ಚಿನ ವ್ಯಕ್ತಿಯನ್ನಾಗಿ ಮಾಡು. {6}
يَا زَكَرِيَّا إِنَّا نُبَشِّرُكَ بِغُلَامٍ اسْمُهُ يَحْيَىٰ لَمْ نَجْعَلْ لَهُ مِنْ قَبْلُ سَمِيًّا
[ಕೂಡಲೇ ಪ್ರವಾದಿ ಝಕರಿಯ್ಯಾ ರವರ ಪ್ರಾರ್ಥನೆ ಸ್ವೀಕೃತವಾಯಿತು. ಅವರಿಗೆ ಹೀಗೆ ಉತ್ತರಿಸಲಾಯಿತು]: ಓ ಝಕರಿಯ್ಯಾ! ನಾವು ನಿಮಗೆ ಒಂದು ಗಂಡು ಮಗುವಿನ ಕುರಿತು ಶುಭಸುದ್ದಿ ನೀಡುತ್ತಿದ್ದೇವೆ; ಅವನ ಹೆಸರು ಯಹ್ಯಾ ಎಂದಾಗಿರುವುದು. ಇದಕ್ಕಿಂತ ಮುಂಚೆ ನಾವು ಆ ಹೆಸರನ್ನು ಯಾರಿಗೂ ನೀಡಿಲ್ಲ. {7}
قَالَ رَبِّ أَنَّىٰ يَكُونُ لِي غُلَامٌ وَكَانَتِ امْرَأَتِي عَاقِرًا وَقَدْ بَلَغْتُ مِنَ الْكِبَرِ عِتِيًّا
ಓ ನನ್ನ ಒಡೆಯಾ! ನನ್ನ ಪತ್ನಿ ಬಂಜೆಯಾಗಿರುವಾಗ, ಮತ್ತು ನಾನು ವೃದ್ಧಾಪ್ಯದ ಎಲ್ಲಾ ಹಂತಗಳನ್ನು ದಾಟಿರುವಾಗ ನನಗೊಬ್ಬ ಪುತ್ರನು ಜನಿಸುವುದಾದರೂ ಹೇಗೆ ಎಂದು ಝಕರಿಯ್ಯಾ (ಅಚ್ಚರಿಗೊಂಡು) ಕೇಳಿದರು! {8}
قَالَ كَذَٰلِكَ قَالَ رَبُّكَ هُوَ عَلَيَّ هَيِّنٌ وَقَدْ خَلَقْتُكَ مِنْ قَبْلُ وَلَمْ تَكُ شَيْئًا
ಹಾಗೆಯೇ ಸಂಭವಿಸಲಿದೆ ಎಂದು ಆಜ್ಞಾಪಿಸಲಾಯಿತು. ಅದು ನನ್ನ ಪಾಲಿಗೆ ಅತ್ಯಂತ ಸುಲಭವಾದ ಕೆಲಸವೆಂದೂ ಈ ಹಿಂದೆ ನಿಮಗೆ ಅಸ್ತಿತ್ವವೇ ಇಲ್ಲದಿದ್ದಾಗ ನಾನು ನಿಮ್ಮನ್ನು ಸೃಷ್ಟಿಸಿದ್ದೇನೆ ಎಂದು ನಿಮ್ಮ ಒಡೆಯನು ಹೇಳಿದ್ದಾನೆ (ಎಂದೂ ಹೇಳಲಾಯಿತು)! {9}
قَالَ رَبِّ اجْعَلْ لِي آيَةً ۚ قَالَ آيَتُكَ أَلَّا تُكَلِّمَ النَّاسَ ثَلَاثَ لَيَالٍ سَوِيًّا
ಓ ನನ್ನ ಕರ್ತಾರನೇ, [ಪತ್ನಿ ಗರ್ಭಿಣಿಯಾಗಲಿರುವ ಬಗ್ಗೆ] ನನಗೆ ಏನಾದರೊಂದು ಸುಳಿವನ್ನು ನೀಡು ಎಂದು ಝಕರಿಯ್ಯಾ ಬೇಡಿದರು. ಆರೋಗ್ಯ ಸರಿಯಾಗಿದ್ದರೂ ಸಹ ಮೂರು ದಿನಗಳ ಕಾಲ ಜನರೊಡನೆ ಮಾತನಾಡಲು ನಿಮಗೆ ಸಾಧ್ಯವಾಗದು - ಅದೇ ನಿಮಗೆ ನೀಡಲಾಗುತ್ತಿರುವ ಸುಳಿವು ಎಂದು (ಅಲ್ಲಾಹ್ ನು) ಹೇಳಿದನು. {10}
فَخَرَجَ عَلَىٰ قَوْمِهِ مِنَ الْمِحْرَابِ فَأَوْحَىٰ إِلَيْهِمْ أَنْ سَبِّحُوا بُكْرَةً وَعَشِيًّا
ಅದರಂತೆ ಅವರು ತಮ್ಮ ಪ್ರಾರ್ಥನಾ ಕೊಠಡಿಯಿಂದ ಹೊರಟು ತಮ್ಮ ಜನತೆಯ ಬಳಿಗೆ ಬಂದರು ಮತ್ತು ನೀವು ಮುಂಜಾನೆ ಹಾಗೂ ಸಜೆಯ ಹೊತ್ತುಗಳಲ್ಲಿ ಅಲ್ಲಾಹ್ ನ ಗುಣಗಾನ ಮಾಡಿರಿ ಎಂದು ಅವರಿಗೆ ಸನ್ನೆಯ ಮೂಲಕ ಸಾರಿದರು. {11}
يَا يَحْيَىٰ خُذِ الْكِتَابَ بِقُوَّةٍ ۖ وَآتَيْنَاهُ الْحُكْمَ صَبِيًّا
[ಪ್ರವಾದಿ ಝಕರಿಯ್ಯಾ ರ ಪ್ರಾರ್ಥನೆ ಸ್ವೀಕೃತವಾಗಿ ಅವರ ಮನೆಯಲ್ಲಿ ಪ್ರವಾದಿತ್ವದ ಉತ್ತರಾಧಿಕಾರಿಯಾಗಿ ಒಬ್ಬ ಸುಪುತ್ರನ ಜನನವಾದಾಗ] ಓ ಯಹ್‌ಯಾ! ಈ ಗ್ರಂಥದ (ಅರ್ಥಾತ್ ತೋರಾ ದ ಬೋಧನೆಗಳನ್ನು) ಭದ್ರವಾಗಿ ಹಿಡಿದುಕೊಳ್ಳಿ (ಎಂದು ನಾವು ಆಜ್ಞಾಪಿಸಿದೆವು). ಮತ್ತು ನಿರ್ಧಾರ ತೆಗೆದುಕೊಳ್ಳಲು ಅಗತ್ಯವಾದ ಬುದ್ಧಿವಂತಿಕೆಯನ್ನೂ ನಾವು ಅವರಿಗೆ ನೀಡಿದೆವು. {12}
وَحَنَانًا مِنْ لَدُنَّا وَزَكَاةً ۖ وَكَانَ تَقِيًّا
ನಮ್ಮ ವತಿಯಿಂದ ವಿಶೇಶವಾದ ಅನುಕಂಪಶೀಲತೆ ಮತ್ತು ಪರಿಶುದ್ಧತೆಯನ್ನು ನಾವು ಅವರಿಗೆ ನೀಡಿದೆವು. ಅವರೊಬ್ಬ ಧರ್ಮಶ್ರದ್ಧೆಯುಳ್ಳ ವ್ಯಕ್ತಿಯಾಗಿದ್ದರು! {13}
وَبَرًّا بِوَالِدَيْهِ وَلَمْ يَكُنْ جَبَّارًا عَصِيًّا
ಮಾತಾಪಿತರಿಗೆ ಅತ್ಯಂತ ವಿಧೇಯರಾಗಿದ್ದರು. ಅವರು ದುರಹಂಕಾರ ತೋರುವವರಾಗಲಿ, ಮಾತು ಮೀರುವವರಾಗಲಿ ಆಗಿರಲಿಲ್ಲ. {14}
وَسَلَامٌ عَلَيْهِ يَوْمَ وُلِدَ وَيَوْمَ يَمُوتُ وَيَوْمَ يُبْعَثُ حَيًّا
ಯಹ್‌ಯಾರು ಹುಟ್ಟಿದ ದಿನ, ಅವರ ಮರಣದ ದಿನ ಮತ್ತು ಅವರನ್ನು ಪುನಹ ಜೀವಂತಗೊಳಿಸಿ ಎಬ್ಬಿಸಲಾಗುವ ದಿನಗಳು ಅವರ ಪಾಲಿಗೆ ಶಾಂತಿಯ, ನೆಮ್ಮದಿಯ ದಿನಗಳಾಗಿವೆ! {15}
وَاذْكُرْ فِي الْكِتَابِ مَرْيَمَ إِذِ انْتَبَذَتْ مِنْ أَهْلِهَا مَكَانًا شَرْقِيًّا
ಪೈಗಂಬರರೇ, ಇನ್ನು ಮರ್‌ಯಮ್ ರ ವಿಷಯವನ್ನು ಈ ಗ್ರಂಥದಲ್ಲಿ ಪ್ರಸ್ತಾಪಿಸಿರಿ; ಆಕೆ ತಮ್ಮ ಮನೆಯವರಿಂದ ಬೇರ್ಪಟ್ಟು ಪೂರ್ವ ದಿಕ್ಕಿನ ಸ್ಥಳವೊಂದರಲ್ಲಿ [ಅಲ್ಲಾಹ್ ನ ಧ್ಯಾನದ ನಿಮಿತ್ತ ಬೈತ್ ಅಲ್-ಮಕ್ದಿಸ್ ನಲ್ಲಿ ಏಕಾಂತವಾಗಿ] ತಂಗಿದ್ದ ವಿಷಯ! {16}
فَاتَّخَذَتْ مِنْ دُونِهِمْ حِجَابًا فَأَرْسَلْنَا إِلَيْهَا رُوحَنَا فَتَمَثَّلَ لَهَا بَشَرًا سَوِيًّا
ಅವರು ಎಲ್ಲರಿಂದ [ದೂರವಾಗಿ ಯಾರ ಕಣ್ಣಿಗೂ ಬೀಳದಂತೆ] ತಮ್ಮನ್ನು ಒಂದು ಪರದೆಯ ಮರೆಯಲ್ಲಿ ಇರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ನಾವು ನಮ್ಮ ಮಲಕ್ (ಅರ್ಥಾತ್ ಜಿಬ್ರೀಲ್ ರನ್ನು) ಅವರ ಬಳಿಗೆ ಕಳುಹಿಸಿದೆವು. ಅವರು ಸಾಕ್ಷಾತ್ ಒಬ್ಬ ಮನುಷ್ಯನ ರೂಪದಲ್ಲಿ ಮರ್‌ಯಮ್ ರ ಮುಂದೆ ಪ್ರತ್ಯಕ್ಷರಾದರು! {17}
قَالَتْ إِنِّي أَعُوذُ بِالرَّحْمَٰنِ مِنْكَ إِنْ كُنْتَ تَقِيًّا
ಆಗ ಮರ್‌ಯಮ್ ರು ಹೇಳಿದರು: ನಿನ್ನ (ಪೀಡನೆಯಿಂದ) ರಕ್ಷಣೆ ಕೊಡುವಂತೆ ನಾನು ಅತ್ಯಂತ ದಯಾಮಯನಾದ [ಅಲ್ಲಾಹ್ ನಲ್ಲಿ] ಬೇಡುತ್ತಿದ್ದೇನೆ. ನಿನಗೇನಾದರೂ ದೇವಭಯ ಇದೆಯೆಂದಾದರೆ (ಇಲ್ಲಿಂದ ದೂರ ಸರಿ)! {18}
قَالَ إِنَّمَا أَنَا رَسُولُ رَبِّكِ لِأَهَبَ لَكِ غُلَامًا زَكِيًّا
ಅದಕ್ಕೆ (ಜಿಬ್ರೀಲ್ ರು) ಉತ್ತರಿಸಿದರು: ನಾನು ನಿಮ್ಮ ಒಡೆಯನ ಕಡೆಯಿಂದ ಕಳುಹಿಸಲ್ಪಟ್ಟ ಒಬ್ಬ ದೂತನಾಗಿರುವೆನು; ನಿಮಗೆ ಒಬ್ಬ ಪಾವನ ಪುತ್ರನನ್ನು ಕೊಡುಗೆಯಾಗಿ ನೀಡಲು ಕಳುಹಿಸಲ್ಪಟ್ಟಿರುವೆನು! {19}
قَالَتْ أَنَّىٰ يَكُونُ لِي غُلَامٌ وَلَمْ يَمْسَسْنِي بَشَرٌ وَلَمْ أَكُ بَغِيًّا
ಮರ್‌ಯಮ್ ರು ಕೇಳಿದರು: ಯಾವ ಪುರುಷನೂ ನನ್ನನ್ನು ಸ್ಪರ್ಶಿಸಿಲ್ಲ, ನಾನು ಶೀಲಗೆಟ್ಟ ಸ್ತ್ರೀಯೂ ಅಲ್ಲ; ಹಾಗಿರುವಾಗ ಒಂದು ಗಂಡುಮಗುವನ್ನು ನಾನು ಪಡೆಯುವುದಾದರೂ ಹೇಗೆ? {20}
قَالَ كَذَٰلِكِ قَالَ رَبُّكِ هُوَ عَلَيَّ هَيِّنٌ ۖ وَلِنَجْعَلَهُ آيَةً لِلنَّاسِ وَرَحْمَةً مِنَّا ۚ وَكَانَ أَمْرًا مَقْضِيًّا
ಹಾಗೆಯೇ ಸಂಭವಿಸಲಿರುವುದು! ಆ ಮಗುವನ್ನು ಜನರ ಪಾಲಿಗೆ ಒಂದು ದೃಷ್ಟಾಂತವಾಗಿಯೂ ನಮ್ಮ ವತಿಯಿಂದ ಒಂದು ಅನುಗ್ರಹವಾಗಿಯೂ ಮಾಡಲು ಹಾಗೆ ಮಾಡಲಾಗುವುದು; ಮತ್ತು ನಮ್ಮ ಪಾಲಿಗೆ ಅದು ಅತ್ಯಂತ ಸುಲಭವಾದ ಕೆಲಸವಾಗಿದೆ ಎಂದು ನಿಮ್ಮ ಒಡೆಯನು ಹೇಳಿರುವನು! ಅದೆಲ್ಲ ಈಗಾಗಲೇ ತೀರ್ಮಾನಗೊಂಡ ವಿಷಯವಾಗಿದೆ ಎಂದು ಜಿಬ್ರೀಲ್ ರು (ಮರ್‌ಯಮ್ ರಿಗೆ ಅಲ್ಲಾಹ್ ನ ತೀರ್ಮಾನ) ತಿಳಿಸಿದರು. {21}
فَحَمَلَتْهُ فَانْتَبَذَتْ بِهِ مَكَانًا قَصِيًّا
ಕೂಡಲೇ ಅವರಿಗೆ ಆ ಮಗುವಿನ ಗರ್ಭವಾಯಿತು; ಅದರೊಂದಿಗೆ ಅವರು ದೂರದ [ಬೆಥ್‌ಲೆಹೆಮ್] ಪ್ರದೇಶಕ್ಕೆ ಹೋಗಿ ನೆಲೆಸಿದರು. {22}
فَأَجَاءَهَا الْمَخَاضُ إِلَىٰ جِذْعِ النَّخْلَةِ قَالَتْ يَا لَيْتَنِي مِتُّ قَبْلَ هَٰذَا وَكُنْتُ نَسْيًا مَنْسِيًّا
ಹಾಗಿರುವಾಗ (ಒಂದು ದಿನ) ಹೆರಿಗೆಯ ನೋವು ಅವರನ್ನು ಒಂದು ಖರ್ಜೂರದ ಮರದತ್ತ ಎಳೆದೊಯ್ಯಿತು! ಆಗ ಅಯ್ಯೋ, ಇದಕ್ಕಿಂತ ಮುಂಚೆಯೇ ನಾನು ಸತ್ತು ಹೇಳಹೆಸರಿಲ್ಲದಂತೆ ಅಳಿದು ಹೋಗಿದ್ದಿದ್ದರೆ ಅದೆಷ್ಟು ಒಳ್ಳೆಯದಿತ್ತು ಎಂದು ಅವರು ರೋದಿಸಿದರು! {23}
فَنَادَاهَا مِنْ تَحْتِهَا أَلَّا تَحْزَنِي قَدْ جَعَلَ رَبُّكِ تَحْتَكِ سَرِيًّا
ಕೂಡಲೇ ಮರದ ಕೆಳಗಿನಿಂದ (ಧ್ವನಿಯೊಂದು) ಆಕೆಯನ್ನು ಕರೆದು, ನೀವು ದುಃಖಿಸಬೇಡಿ, ನಿಮ್ಮ ಒಡೆಯನು ನಿಮ್ಮ ಕಾಲಡಿಯಲ್ಲಿ ಚಿಲುಮೆಯೊಂದನ್ನು ನಿಮಗಾಗಿ ಹರಿಸಿ ಬಿಟ್ಟಿರುವನು ಎಂದು ಸಂತೈಸಿತು. {24}
وَهُزِّي إِلَيْكِ بِجِذْعِ النَّخْلَةِ تُسَاقِطْ عَلَيْكِ رُطَبًا جَنِيًّا
ಈಗ ನೀವು ಆ ಖರ್ಜೂರದ ಮರವನ್ನು ಹಿಡಿದು ತಮ್ಮೆಡೆಗೆ ಅಲುಗಾಡಿಸಿಕೊಳ್ಳಿ. ಪಕ್ವವಾದ ತಾಜಾ ಖರ್ಜೂರದ ಹಣ್ಣುಗಳನ್ನು ಅದು ನಿಮ್ಮ ಮೇಲೆ ಉದುರಿಸುವುದು. {25}
فَكُلِي وَاشْرَبِي وَقَرِّي عَيْنًا ۖ فَإِمَّا تَرَيِنَّ مِنَ الْبَشَرِ أَحَدًا فَقُولِي إِنِّي نَذَرْتُ لِلرَّحْمَٰنِ صَوْمًا فَلَنْ أُكَلِّمَ الْيَوْمَ إِنْسِيًّا
ನೀವೀಗ ತಿನ್ನಿರಿ, ಕುಡಿಯಿರಿ, (ಮಗುವನ್ನು ನೋಡಿ) ನಿಮ್ಮ ಕಣ್ಮನಗಳನ್ನು ತಣಿಸಿಕೊಳ್ಳಿರಿ. ಒಂದು ವೇಳೆ ಯಾರನ್ನಾದರೂ ನೀವು ಕಂಡರೆ ದಯಾಮಯನಾದ ಅಲ್ಲಾಹ್ ನಿಗಾಗಿ ನಾನು ಮೌನವ್ರತವನ್ನು ಆಚರಿಸುತ್ತಿರುವುದರಿಂದ ಇಂದು ಯಾರಲ್ಲಿಯೂ ನಾನು ಮಾತನ್ನಾಡಲಾರೆ ಎಂದು ತಿಳಿಸಿ ಬಿಡಿರಿ. {26}
فَأَتَتْ بِهِ قَوْمَهَا تَحْمِلُهُ ۖ قَالُوا يَا مَرْيَمُ لَقَدْ جِئْتِ شَيْئًا فَرِيًّا
ತರುವಾಯ ಮರ್‌ಯಮ್ ರು ಆ ಮಗುವನ್ನು (ಅಂದರೆ ಶಿಶು ಈಸಾ ರನ್ನು) ಎತ್ತಿಕೊಂಡು ತಮ್ಮ ಜನರೆಡೆಗೆ ಹಿಂದಿರುಗಿ ಬಂದರು. ಆಗ ಜನರು (ಅಘಾತಗೊಂಡು) ಓ ಮರ್‌ಯಮ್, ನೀನು ಬಹಳ ಕೆಟ್ಟದ್ದನ್ನೇ ಮಾಡಿ ಬಂದಿರುವೆ ಎಂದು ಹೇಳಿದರು. {27}
يَا أُخْتَ هَارُونَ مَا كَانَ أَبُوكِ امْرَأَ سَوْءٍ وَمَا كَانَتْ أُمُّكِ بَغِيًّا
ಹಾರೂನ್ ರ (ಪ್ರಶಂಸನೀಯ ಮನೆತನಕ್ಕೆ) ಸೇರಿದ ಓ ಸಹೋದರಿಯೇ, ನಿನ್ನ ತಂದೆ ಒಬ್ಬ ಕೆಟ್ಟ ವ್ಯಕ್ತಿಯಾಗಿರಲಿಲ್ಲ; ಹಾಗೆಯೇ ನಿನ್ನ ತಾಯಿಯೂ ಶೀಲಗೆಟ್ಟ ಸ್ತ್ರೀಯಾಗಿರಲಿಲ್ಲ. {28}
فَأَشَارَتْ إِلَيْهِ ۖ قَالُوا كَيْفَ نُكَلِّمُ مَنْ كَانَ فِي الْمَهْدِ صَبِيًّا
ಅದಕ್ಕೆ ಉತ್ತರವಾಗಿ ಮರ್‌ಯಮ್ ರು (ಆ ಮಗುವನ್ನೇ ಪ್ರಶ್ನಿಸಿರಿ ಎಂದು ಸುಮ್ಮನೆ) ಮಗುವಿನತ್ತ ಸನ್ನೆ ಮಾಡಿದರು. ತೊಟ್ಟಿಲಲ್ಲಿರುವ ಪುಟ್ಟ ಮಗುವಿನೊಂದಿಗೆ ನಾವು ಮಾತನ್ನಾಡುವುದು ಹೇಗೆ ಎಂದು ಜನರು ಪ್ರಶ್ನಿಸಿದರು. {29}
قَالَ إِنِّي عَبْدُ اللَّهِ آتَانِيَ الْكِتَابَ وَجَعَلَنِي نَبِيًّا
ಆಗ ಆ (ಪುಟ್ಟ ಮಗು ಈಸಾ ಅಲ್ಲಿ ನೆರೆದಿದ್ದ ಜನರೊಂದಿಗೆ ತೊಟ್ಟಿಲಿಂದಲೇ) ಹೇಳಿತು: ನಿಜವಾಗಿಯೂ ನಾನು ಅಲ್ಲಾಹ್ ನ ಸೇವಕನಾಗಿರುವೆ. ಅಲ್ಲಾಹ್ ನು ನನಗೆ ಧರ್ಮಗ್ರಂಥವನ್ನು ಸಹ ನೀಡೀದ್ದಾನೆ ಹಾಗೂ ನನ್ನನ್ನು ಒಬ್ಬ ಪ್ರವಾದಿಯನ್ನಾಗಿ ಮಾಡಿದ್ದಾನೆ. {30}
وَجَعَلَنِي مُبَارَكًا أَيْنَ مَا كُنْتُ وَأَوْصَانِي بِالصَّلَاةِ وَالزَّكَاةِ مَا دُمْتُ حَيًّا
ಅಷ್ಟೇ ಅಲ್ಲ, ನಾನು ಎಲ್ಲಿದ್ದರೂ ಸರಿ, ಅವನು ನನ್ನನ್ನು ಅನುಗ್ರಹೀತ ಗೊಳಿಸಿರುವನು. ಮತ್ತು ಜೀವಿಸಿರುವಷ್ಟೂ ಕಾಲ ನಮಾಝ್ ನಿರ್ವಹಿಸುವ ಮತ್ತು ಝಕಾತ್ ನೀಡುವ ಕುರಿತು [ಜನರಿಗೆ ಬೋಧಿಸುತ್ತಿರಲು] ಅವನು ನನಗೆ ಆದೇಶ ನೀಡುರುವನು. {31}
وَبَرًّا بِوَالِدَتِي وَلَمْ يَجْعَلْنِي جَبَّارًا شَقِيًّا
ಅವನು ನನ್ನನ್ನು ನನ್ನ ತಾಯಿಗೆ ವಿಧೇಯನನ್ನಾಗಿ ಮಾಡಿರುವನು; ದುರಹಂಕಾರ ತೋರುವ ಒಬ್ಬ ದುಷ್ಟನನ್ನಾಗಿ ಅವನು ನನ್ನನ್ನು ಮಾಡಲಿಲ್ಲ . {32}
وَالسَّلَامُ عَلَيَّ يَوْمَ وُلِدْتُ وَيَوْمَ أَمُوتُ وَيَوْمَ أُبْعَثُ حَيًّا
ನಾನು ಜನಿಸಿದ ದಿನವು ನನಗೆ ಶುಭದಿನವಾಯಿತು. ನಾನು ಮರಣ ಹೊಂದಲಿರುವ ದಿನವೂ, (ಪುನರುತ್ಥಾನದ ದಿನ) ಪುನಃ ನನ್ನನ್ನು ಜೀವಂತವಾಗಿ ಎಬ್ಬಿಸಲಾಗುವ ದಿನವೂ ನನಗೆ ಶುಭವಾಗಲಿದೆ. {33}
ذَٰلِكَ عِيسَى ابْنُ مَرْيَمَ ۚ قَوْلَ الْحَقِّ الَّذِي فِيهِ يَمْتَرُونَ
ಹಾಗಿತ್ತು ಮರ್‌ಯಮ್ ರ ಪುತ್ರನಾದ ಈಸಾ ರವರ ವಿಷಯ. (ನಿಮ್ಮೀ ಜನರು ಈಗ ಅವರ ಕುರಿತಂತೆ) ಜಗಳವಾಡುತ್ತಿರುವ ವಿಷಯಗಳ ನಿಜ ಸಂಗತಿಯಿದು! {34}
مَا كَانَ لِلَّهِ أَنْ يَتَّخِذَ مِنْ وَلَدٍ ۖ سُبْحَانَهُ ۚ إِذَا قَضَىٰ أَمْرًا فَإِنَّمَا يَقُولُ لَهُ كُنْ فَيَكُونُ
ಪುತ್ರರನ್ನು ಪಡಕೊಳ್ಳುವುದು ಅಲ್ಲಾಹ್ ನಿಗೆ ಯೋಗ್ಯವಾದ ವಿಷಯವಲ್ಲ. ಅವನು (ಅಂತಹ ದೌರ್ಬಲ್ಯಗಳನ್ನು ಹೊಂದಿರದ) ಪರಮ ಪಾವನನು! ಏನನ್ನಾದರೂ ಮಾಡಬೇಕೆಂದು ಅಲ್ಲಾಹ್ ನು ತೀರ್ಮಾನಿಸಿದರೆ [ಅವನಿಗೆ ಪುತ್ರರ ಸಹಾಯ ಪಡೆಯುವ ಅಗತ್ಯವಿಲ್ಲ, ಬದಲಾಗಿ] ಅವನು 'ಆಗಿ ಬಿಡು' ಎಂದಷ್ಟೇ ಅದಕ್ಕೆ ಹೇಳುತ್ತಾನೆ; ಅದು ಕೂಡಲೇ ಸಂಭವಿಸಿ ಬಿಡುತ್ತದೆ! {35}
وَإِنَّ اللَّهَ رَبِّي وَرَبُّكُمْ فَاعْبُدُوهُ ۚ هَٰذَا صِرَاطٌ مُسْتَقِيمٌ
ಹೌದು, ಅಲ್ಲಾಹ್ ನೇ ನನ್ನ ಮತ್ತು ನಿಮ್ಮೆಲ್ಲರ ದೇವನಾಗಿರುವನು. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಅದು ಮಾತ್ರವೇ ನೇರವಾದ ಮಾರ್ಗವಾಗಿರುತ್ತದೆ. {36}
فَاخْتَلَفَ الْأَحْزَابُ مِنْ بَيْنِهِمْ ۖ فَوَيْلٌ لِلَّذِينَ كَفَرُوا مِنْ مَشْهَدِ يَوْمٍ عَظِيمٍ
ಆದರೆ (ಪ್ರವಾದಿ ಈಸಾ ರ ಬೋಧನೆಗಳ ಕುರಿತಂತೆ ಅವರ ಅನುಯಾಯಿಗಳ) ವಿವಿಧ ಪಂಗಡಗಳು ಪರಸ್ಪರರನ್ನು ವಿರೋಧಿಸುವುದರಲ್ಲಿ ನಿರತರಾದವು. ಮುಂದೆ, ತಾವು ಎದುರಿಸಲಿರುವ (ಪುನರುತ್ಥಾನದ ಆ) ಮಹತ್ತರವಾದ ದಿನದಂದು (ಬೋಧನೆಗಳನ್ನು) ಧಿಕ್ಕರಿಸಿದವರಿಗೆ ವಿನಾಶವಿರುವುದು. {37}
أَسْمِعْ بِهِمْ وَأَبْصِرْ يَوْمَ يَأْتُونَنَا ۖ لَٰكِنِ الظَّالِمُونَ الْيَوْمَ فِي ضَلَالٍ مُبِينٍ
ನಮ್ಮ ಬಳಿಗೆ ಬರಲಿರುವ ಆ ದಿನ ಅವರು ಅದೆಷ್ಟು ಸರಿಯಾಗಿ ಕೇಳಿಸಿಕೊಳ್ಳುತ್ತಾರೆ; ಎಷ್ಟು ಸಮರ್ಪಕವಾಗಿ ನೋಡಲಿದ್ದಾರೆ! ಆದರೆ ಇಂದು ಆ ದುಷ್ಟರು [ಕಿವಿ-ಕಣ್ಣುಗಳು ಸರಿಯಾಗಿದ್ದೂ] ತಪ್ಪುದಾರಿಯಲ್ಲಿ ಬಿದ್ದಿರುವರು! {38}
وَأَنْذِرْهُمْ يَوْمَ الْحَسْرَةِ إِذْ قُضِيَ الْأَمْرُ وَهُمْ فِي غَفْلَةٍ وَهُمْ لَا يُؤْمِنُونَ
ಪೈಗಂಬರರೇ, ವಿಷಯಗಳು ತೀರ್ಮಾನಗೊಳ್ಳಲಿರುವ ಯಾತನೆಯ ಆ ದಿನದ ಕುರಿತು ಅವರನ್ನು ಈಗಲೇ ಎಚ್ಚರಿಸಿರಿ. ಅವರು ಅದರ ಬಗ್ಗೆ ಅಶ್ರದ್ಧರಾಗಿದ್ದಾರೆ; ವಿಶ್ವಾಸಿಗಳಾಗಲು ಅವರಂತೂ ಸಿದ್ಧರಿಲ್ಲ! {39}
إِنَّا نَحْنُ نَرِثُ الْأَرْضَ وَمَنْ عَلَيْهَا وَإِلَيْنَا يُرْجَعُونَ
ನಿಜವಾಗಿ ಭೂಮಿ ಮತ್ತು ಭೂಮಿಯ ಮೇಲಿರುವ ಎಲ್ಲರನ್ನೂ ನಾವೇ ಮರುಪಡೆಯಲಿರುವೆವು. ಕೊನೆಯದಾಗಿ ನಮ್ಮ ಬಳಿಗೇ ಎಲ್ಲರನ್ನೂ ಮರಳಿಸಲಾಗುವುದು. {40}
وَاذْكُرْ فِي الْكِتَابِ إِبْرَاهِيمَ ۚ إِنَّهُ كَانَ صِدِّيقًا نَبِيًّا
ಪೈಗಂಬರರೇ, ಪ್ರವಾದಿ ಇಬ್ರಾಹೀಮ್ ರ ವಿಷಯವನ್ನೂ ಈ ಗ್ರಂಥದಲ್ಲಿ ಪ್ರಸ್ತಾಪಿಸಿರಿ; ಸಂಶಯಾತೀತವಾಗಿ ಅವರೊಬ್ಬ ಸತ್ಯಸಂಧ ವ್ಯಕ್ತಿಯೂ ಅಲ್ಲಾಹ್ ನ ಪ್ರವಾದಿಯೂ ಆಗಿದ್ದರು. {41}
إِذْ قَالَ لِأَبِيهِ يَا أَبَتِ لِمَ تَعْبُدُ مَا لَا يَسْمَعُ وَلَا يُبْصِرُ وَلَا يُغْنِي عَنْكَ شَيْئًا
ಅವರು ತಮ್ಮ ತಂದೆಯವರೊಡನೆ ಪ್ರಶ್ನಿಸಿದ ಸಂದರ್ಭವನ್ನು ಪೈಗಂಬರರೇ (ನೀವೀಗ ಜನರಿಗೆ ನೆನಪಿಸಿಕೊಡಿರಿ): ನನ್ನ ಪ್ರಿಯ ತಂದೆಯವರೇ! ಏನನ್ನೂ ಕೇಳಿಸಿಕೊಳ್ಳದ, ಏನನ್ನೂ ನೋಡಲು ಶಕ್ತರಲ್ಲದ ಮತ್ತು ನಿಮಗೆ ಯಾವ ಉಪಕಾರವನ್ನೂ ಮಾಡಲು ಸಾಧ್ಯವಾಗದ ವಸ್ತುಗಳನ್ನು ನೀವು ಏತಕ್ಕಾಗಿ ಆರಾಧಿಸುತ್ತಿರುವಿರಿ? {42}
يَا أَبَتِ إِنِّي قَدْ جَاءَنِي مِنَ الْعِلْمِ مَا لَمْ يَأْتِكَ فَاتَّبِعْنِي أَهْدِكَ صِرَاطًا سَوِيًّا
ತಂದೆಯವರೇ! ನಿಮ್ಮ ಬಳಿಗೆ ಬಾರದ (ದಿವ್ಯ) ಸುಜ್ಞಾನವೊಂದು ನಿಜವಾಗಿಯೂ ನನ್ನ ಬಳಿಗೆ ಬಂದಿರುತ್ತದೆ. ಆದ್ದರಿಂದ ನೀವು ನನ್ನನ್ನು ಅನುಸರಿಸಿರಿ; ನಿಮಗೆ ನೇರವಾದ ಮಾರ್ಗವನ್ನು ನಾನು ತೋರಿಸಿ ಕೊಡುವೆನು. {43}
يَا أَبَتِ لَا تَعْبُدِ الشَّيْطَانَ ۖ إِنَّ الشَّيْطَانَ كَانَ لِلرَّحْمَٰنِ عَصِيًّا
ತಂದೆಯವರೇ! ನೀವು ಸೈತಾನನ ಸೇವೆ ಮಾಡಬೇಡಿರಿ. ಯಥಾರ್ಥದಲ್ಲಿ ಸೈತಾನನು ಕರುಣಾಸಂಪನ್ನನಾದ ಅಲ್ಲಾಹ್ ನಿಗೆ ಎದುರು ನಿಂತವನಾಗಿರುವನು. {44}
يَا أَبَتِ إِنِّي أَخَافُ أَنْ يَمَسَّكَ عَذَابٌ مِنَ الرَّحْمَٰنِ فَتَكُونَ لِلشَّيْطَانِ وَلِيًّا
ಪ್ರಿಯ ತಂದೆಯವರೇ! ದಯಾಮಯನಾದ ಅಲ್ಲಾಹ್ ನ ಘೋರ ಶಿಕ್ಷೆಗೆ ನೀವು ಗುರಿಯಾಗಲಿರುವ ಕುರಿತು ನನಗೆ ಭಯವಾಗುತ್ತಿದೆ. ಹೌದು, (ನನ್ನ ಮಾತನ್ನು ನೀನು ಅನುಸರಿಸದೇ ಹೋದರೆ) ಆ ಸೈತಾನನು ನಿಮಗೆ (ನರಕದಲ್ಲಿ) ಒಡನಾಡಿಯಾಗಲಿರುವನು! {45}
قَالَ أَرَاغِبٌ أَنْتَ عَنْ آلِهَتِي يَا إِبْرَاهِيمُ ۖ لَئِنْ لَمْ تَنْتَهِ لَأَرْجُمَنَّكَ ۖ وَاهْجُرْنِي مَلِيًّا
ತಂದೆ ಹೇಳಿದನು: ಓ ಇಬ್ರಾಹೀಮ್! ನೀನೇನು ನನ್ನೀ ದೇವರುಗಳಿಂದ ದೂರ ಸರಿಯುತ್ತಿರುವೆಯಾ? ನೀನು ಆ ನಿಲುವನ್ನು ಉಪೇಕ್ಷಿಸದಿದ್ದರೆ ಖಂಡಿತವಾಗಿ ನಿನ್ನನ್ನು ನಾನು ಕಲ್ಲೆಸೆದು ಕೊಲ್ಲುವೆನು. ಅನ್ಯಥಾ ನೀನು ನನ್ನನ್ನು ಬಿಟ್ಟು ಶಾಶ್ವತವಾಗಿ ದೂರವಾಗಬೇಕು. {46}
قَالَ سَلَامٌ عَلَيْكَ ۖ سَأَسْتَغْفِرُ لَكَ رَبِّي ۖ إِنَّهُ كَانَ بِي حَفِيًّا
(ಹೊರಡಲನುವಾಗುತ್ತಾ) ಇಬ್ರಾಹೀಮ್ ರು ತಂದೆಗೆ ಹೇಳಿದರು: ನಿಮಗೆ ಸಮಾಧಾನ ಸಿಗಲಿ; ನಿಮ್ಮ ಪಾಪವನ್ನು ಕ್ಷಮಿಸುವಂತೆ ನಾನು ನನ್ನ ಒಡಯನೊಂದಿಗೆ ಬೇಡುತ್ತೇನೆ. ನಿಜವೇನೆಂದರೆ ಅವನು ನನ್ನ ಪಾಲಿಗೆ ಬಹಳಷ್ಟು ದಯೆ ತೋರುವವನಾಗಿರುವನು. {47}
وَأَعْتَزِلُكُمْ وَمَا تَدْعُونَ مِنْ دُونِ اللَّهِ وَأَدْعُو رَبِّي عَسَىٰ أَلَّا أَكُونَ بِدُعَاءِ رَبِّي شَقِيًّا
ನಾನೀಗ ನಿಮ್ಮನ್ನು ಬಿಟ್ಟು ಹೊರಡುತ್ತಿದ್ದೇನೆ; ಅಲ್ಲಾಹ್ ನ ಹೊರತು ನೀವು ಸಹಾಯಕ್ಕಾಗಿ ಕರೆಯುವ ಎಲ್ಲಾ (ಹುಸಿ) ದೇವರುಗಳನ್ನೂ ಬಿಟ್ಟು ಹೊರಡುತ್ತಿದ್ದೇನೆ. ನಾನಾದರೋ ನನ್ನ ಒಡೆಯನೊಂದಿಗೆ ಮಾತ್ರ ಬೇಡುವವನು! ಅವನೊಂದಿಗೆ ಬೇಡಿ ನಾನೆಂದೂ ನಿರಾಶನಾಗಲಾರೆ ಎಂದು ಭರವಸೆ ಇಡುತ್ತೇನೆ. {48}
فَلَمَّا اعْتَزَلَهُمْ وَمَا يَعْبُدُونَ مِنْ دُونِ اللَّهِ وَهَبْنَا لَهُ إِسْحَاقَ وَيَعْقُوبَ ۖ وَكُلًّا جَعَلْنَا نَبِيًّا
ಕೊನೆಗೆ ಇಬ್ರಾಹೀಮ್ ರು ಅವರೆಲ್ಲರನ್ನೂ, ಅಲ್ಲಾಹ್ ನ ಹೊರತು ಅವರು ಪೂಜಿಸುತ್ತಿದ್ದ (ಎಲ್ಲಾ ಹುಸಿ ದೇವರುಗಳನ್ನೂ) ತ್ಯಜಿಸಿ ಹೊರಟಾಗ ನಾವು ಅವರಿಗೆ ಇಸ್‌ಹಾಕ್ ಮತ್ತು ಯಅಕೂಬ್ ರಂತಹ ಪುತ್ರರನ್ನು ದಯಪಾಲಿಸಿದೆವು; ಅವರಲ್ಲಿ ಪ್ರತಿಯೊಬ್ಬನನ್ನೂ ಪ್ರವಾದಿಯನ್ನಾಗಿ ಮಾಡಿದೆವು. {49}
وَوَهَبْنَا لَهُمْ مِنْ رَحْمَتِنَا وَجَعَلْنَا لَهُمْ لِسَانَ صِدْقٍ عَلِيًّا
ಹಾಗೆಯೇ ನಮ್ಮ ವತಿಯಿಂದ ಅವರಿಗೆ ವಿಶೇಷ ಅನುಗ್ರಹಗಳನ್ನು ಪ್ರದಾನಿಸಿದೆವು; ಮತ್ತು ಉನ್ನತವಾದ ಖ್ಯಾತಿಯನ್ನೂ ಕರುಣಿಸಿದೆವು. {50}
وَاذْكُرْ فِي الْكِتَابِ مُوسَىٰ ۚ إِنَّهُ كَانَ مُخْلَصًا وَكَانَ رَسُولًا نَبِيًّا
ಪೈಗಂಬರರೇ! ಪ್ರವಾದಿ ಮೂಸಾ ರ ವಿಷಯವನ್ನೂ ಈ ಗ್ರಂಥದಲ್ಲಿ ಪ್ರಸ್ತಾಪಿಸಿರಿ. ಸಂಶಯಾತೀತವಾಗಿ ಅವರೊಬ್ಬ ಆಯ್ದ ವ್ಯಕ್ತಿಯಾಗಿದ್ದರು; ನಮ್ಮಿಂದ ಕಳುಹಿಸಲ್ಪಟ್ಟ ದೂತರೂ ಒಬ್ಬ ಪ್ರವಾದಿಯೂ ಆಗಿದ್ದರು. {51}
وَنَادَيْنَاهُ مِنْ جَانِبِ الطُّورِ الْأَيْمَنِ وَقَرَّبْنَاهُ نَجِيًّا
ನಾವು ಅವರನ್ನು ಪವಿತ್ರವಾದ (ಸೀನಾಯ್) ಪರ್ವತದ ಒಂದು ಬದಿಯಿಂದ ಕರೆದೆವು; ಮತ್ತು ಅವರಿಗೆ ದಿವ್ಯ ಜ್ಞಾನ (ಅರ್ಥಾತ್ ವಹೀ ನೀಡುವ ಮೂಲಕ) ನಮ್ಮ ಸಾಮೀಪ್ಯ ಒದಗಿಸಿದೆವು. {52}
وَوَهَبْنَا لَهُ مِنْ رَحْمَتِنَا أَخَاهُ هَارُونَ نَبِيًّا
ಮತ್ತು ನಮ್ಮ ವಿಶೇಷ ಅನುಗ್ರಹದಿಂದ ಅವರ ಸಹೋದರನಾದ ಹಾರೂನ್ ರನ್ನು ಪ್ರವಾದಿಯನ್ನಾಗಿ ಮಾಡಿ (ಅವರ ಸಹಾಯಕ್ಕಾಗಿ) ನೇಮಿಸಿದೆವು. {53}
وَاذْكُرْ فِي الْكِتَابِ إِسْمَاعِيلَ ۚ إِنَّهُ كَانَ صَادِقَ الْوَعْدِ وَكَانَ رَسُولًا نَبِيًّا
ಪೈಗಂಬರರೇ, ಪ್ರವಾದಿ ಇಸ್ಮಾಈಲ್ ರ ವಿಷಯವನ್ನೂ ಈ ಗ್ರಂಥದಲ್ಲಿ ಪ್ರಸ್ತಾಪಿಸಿರಿ; ಅವರಾದರೋ ಕೊಟ್ಟ ಮಾತಿಗೆ ಸರಿಯಾಗಿ ನಡೆದುಕೊಳ್ಳುವವರೂ, ನಮ್ಮಿಂದ ಕಳುಹಿಸಲ್ಪಟ್ಟ ಒಬ್ಬ ದೂತರೂ ಪ್ರವಾದಿಯೂ ಆಗಿದ್ದರು. {54}
وَكَانَ يَأْمُرُ أَهْلَهُ بِالصَّلَاةِ وَالزَّكَاةِ وَكَانَ عِنْدَ رَبِّهِ مَرْضِيًّا
ನಮಾಝ್ ಪಾಲಿಸುವಂತೆ ಹಾಗೂ ಝಕಾತ್ ನೀಡುವಂತೆ ಅವರು ತಮ್ಮ ಜನರನ್ನು ಆದೇಶಿಸುತ್ತಿದ್ದರು, ಮತ್ತು ತಮ್ಮ ಒಡೆಯನ ಪ್ರೀತಿಗೆ ಅವರು ಪಾತ್ರರಾಗಿದ್ದರು. {55}
وَاذْكُرْ فِي الْكِتَابِ إِدْرِيسَ ۚ إِنَّهُ كَانَ صِدِّيقًا نَبِيًّا
ಪೈಗಂಬರರೇ, ಪ್ರವಾದಿ ಇದ್ರೀಸ್ ರ ವಿಷಯವನ್ನೂ ಈ ಗ್ರಂಥದಲ್ಲಿ ಪ್ರಸ್ತಾಪಿಸಿರಿ. ಸಂಶಯಾತೀತವಾಗಿ ಅವರೊಬ್ಬ ಸತ್ಯಸಂಧ ವ್ಯಕ್ತಿಯೂ ಅಲ್ಲಾಹ್ ನ ಪ್ರವಾದಿಯೂ ಆಗಿದ್ದರು. {56}
وَرَفَعْنَاهُ مَكَانًا عَلِيًّا
ನಾವು ಅವರನ್ನು ಬಹಳ ಉನ್ನತವಾದ ಸ್ಥಾನಕ್ಕೆ ಏರಿಸಿದ್ದೆವು. {57}
أُولَٰئِكَ الَّذِينَ أَنْعَمَ اللَّهُ عَلَيْهِمْ مِنَ النَّبِيِّينَ مِنْ ذُرِّيَّةِ آدَمَ وَمِمَّنْ حَمَلْنَا مَعَ نُوحٍ وَمِنْ ذُرِّيَّةِ إِبْرَاهِيمَ وَإِسْرَائِيلَ وَمِمَّنْ هَدَيْنَا وَاجْتَبَيْنَا ۚ إِذَا تُتْلَىٰ عَلَيْهِمْ آيَاتُ الرَّحْمَٰنِ خَرُّوا سُجَّدًا وَبُكِيًّا
ಅವರೆಲ್ಲರೂ ಅಲ್ಲಾಹ್ ನ ವಿಶೇಷ ಅನುಗ್ರಹಕ್ಕೆ ಪಾತ್ರರಾದ ಪ್ರವಾದಿಗಳಾಗಿದ್ದರು. ಆದಮ್ ರ ಸಂತತಿಯ ಸಾಲಿಗೆ ಸೇರಿದವರು; ನೂಹ್ ರ ನೌಕೆಯಲ್ಲಿ ಯಾರನ್ನು ನಾವು ಹತ್ತಿಸಿಕೊಂಡಿದ್ದೆವೋ ಅವರ ಪೀಳಿಗೆಯಿಂದ ಬಂದವರು; ಇಬ್ರಾಹೀಮ್ ಮತ್ತು ಇಸ್ರಾಈಲ್ ರ ವಂಶಕ್ಕೆ ಸೇರಿದವರು. ಯಾರಿಗೆ ನಾವು ಸರಿದಾರಿ ತೋರಿದ್ದೆವೋ ಮತ್ತು ಯಾರನ್ನು ನಾವು (ವಿಶೇಷ ದೌತ್ಯಕ್ಕಾಗಿ) ಆರಿಸಿಕೊಂಡಿದ್ದೆವೋ ಅಂತಹ ಪ್ರವಾದಿಗಳು! ದಯಾಸಂಪನ್ನನಾದ (ಅಲ್ಲಾಹ್ ನ) ವಚನಗಳನ್ನು ಅವರ ಮುಂದೆ ಓದಿ ಕೇಳಿಸಲಾದಾಗ ಆ ಕೂಡಲೇ ಅವರು ಅಳುತ್ತಾ ಅಲ್ಲಾಹ್ ನಿಗೆ ಸಾಷ್ಟಾಂಗವೆರಗುತ್ತಿದ್ದರು! {58} ۩
فَخَلَفَ مِنْ بَعْدِهِمْ خَلْفٌ أَضَاعُوا الصَّلَاةَ وَاتَّبَعُوا الشَّهَوَاتِ ۖ فَسَوْفَ يَلْقَوْنَ غَيًّا
ಅವರ ನಂತರ ಬಂದ ಅವರ ಮುಂದಿನ ಪೀಳಿಗೆಯವರು ತಮ್ಮ ನಮಾಝ್ ಗಳನ್ನು (ಕಡೆಗಣಿಸಿ) ವ್ಯರ್ಥಗೊಳಿಸಿದರು; ಅವರು ಸ್ವೇಚ್ಛಾಚಾರದ ಹಾದಿಯನ್ನು ಅನುಸರಿಸಿದರು. ಆದ್ದರಿಂದ ಅವರು ತಮ್ಮ ದುಷ್ಕರ್ಮದ ಪ್ರತಿಫಲವನ್ನು ಶೀಘ್ರದಲ್ಲೇ ಕಾಣಲಿರುವರು. {59}
إِلَّا مَنْ تَابَ وَآمَنَ وَعَمِلَ صَالِحًا فَأُولَٰئِكَ يَدْخُلُونَ الْجَنَّةَ وَلَا يُظْلَمُونَ شَيْئًا
ಆದರೆ (ಅವರ ಪೈಕಿ) ಪಶ್ಚಾತ್ತಾಪ ಪಟ್ಟವರು, ವಿಶ್ವಾಸಿಗಳಾದವರು ಹಾಗೂ ಸತ್ಕರ್ಮಗಳನ್ನು ಕೈಗೊಂಡವರು ಅದಕ್ಕೆ ಹೊರತಾಗಿರುವರು. ಅಂತಹವರು ಸ್ವರ್ಗವನ್ನು ಪ್ರವೇಶಿಸಲಿರುವರು; ಕಿಂಚಿತ್ತೂ ಅವರಿಗೆ ಅನ್ಯಾಯವಾಗದು. {60}
جَنَّاتِ عَدْنٍ الَّتِي وَعَدَ الرَّحْمَٰنُ عِبَادَهُ بِالْغَيْبِ ۚ إِنَّهُ كَانَ وَعْدُهُ مَأْتِيًّا
(ಅಂತಹವರು ಪ್ರವೇಶಿಸಲಿರುವುದು) ಶಾಶ್ವತವಾದ ಸ್ವರ್ಗೋದ್ಯಾನಗಳನ್ನು. ತನ್ನ ಉಪಾಸಕರಿಗೆ ದಯಾಸಂಪನ್ನನಾದ ದೇವನು ವಾಗ್ದಾನ ಮಾಡಿದ, ಆದರೆ ಅವರು ಕಂಡಿರದಂತಹ ಸ್ವರ್ಗೋದ್ಯಾನಗಳನ್ನು! ಹೌದು, ಅಲ್ಲಾಹ್ ನ ವಾಗ್ದಾನವು ಪೂರ್ಣಗೊಂಡೇ ತೀರುವುದು. {61}
لَا يَسْمَعُونَ فِيهَا لَغْوًا إِلَّا سَلَامًا ۖ وَلَهُمْ رِزْقُهُمْ فِيهَا بُكْرَةً وَعَشِيًّا
ಶಾಂತಿ-ಸಮಾಧಾನದ ಮಾತುಗಳ ಹೊರತು ನಿರರ್ಥಕವಾದ ಯಾವ ಮಾತನ್ನೂ ಅವರು ಅಲ್ಲಿ ಕೇಳಿಸಲಾರರು. ಅವರಿಗೆ [ಸ್ವರ್ಗಲೋಕದ ಸುಖಜೀವನಕ್ಕೆ] ಅವಶ್ಯಕವಾದ ವಸ್ತುಗಳು ಸಂಜೆಯಲ್ಲೂ ಮುಂಜಾನೆಯಲ್ಲೂ ಅಲ್ಲಿ ಲಭಿಸುತ್ತಿರುವುದು. {62}
تِلْكَ الْجَنَّةُ الَّتِي نُورِثُ مِنْ عِبَادِنَا مَنْ كَانَ تَقِيًّا
ನಮ್ಮ ಉಪಾಸಕರ ಪೈಕಿ ಯಾರು ಭಯಭಕ್ತಿ ಪಾಲಿಸುವರೋ ಅಂತಹವರಿಗೆ ನಾವು ಆ ಸ್ವರ್ಗೋದ್ಯಾನವನ್ನು ವಾರೀಸಾಗಿ ನೀಡಲಿರುವೆವು. {63}
وَمَا نَتَنَزَّلُ إِلَّا بِأَمْرِ رَبِّكَ ۖ لَهُ مَا بَيْنَ أَيْدِينَا وَمَا خَلْفَنَا وَمَا بَيْنَ ذَٰلِكَ ۚ وَمَا كَانَ رَبُّكَ نَسِيًّا
[ವಹೀ ಯ ಬರುವಿಕೆಗಾಗಿ ಆತುರ ಪಡುತ್ತಿದ್ದ ಪೈಗಂಬರರಿಗೆ ಜಿಬ್ರೀಲ್ ರು ಹೇಳಿದರು]: ನಿಮ್ಮ ಒಡೆಯನ ಅಪ್ಪಣೆ ಹೊರತು ಇಳಿದು ಬರಲು ನಮಗೆ ಸಾಧ್ಯವಿಲ್ಲ. ನಮ್ಮ ಮುಂದೆ, ನಮ್ಮ ಹಿಂದೆ ಹಾಗೂ ಅವುಗಳ ಮಧ್ಯೆ ಇರುವ ಸಕಲ ಕಾರ್ಯಗಳ ಅಧಿಕಾರವು ಅಲ್ಲಾಹ್ ನ ಕೈಯಲ್ಲಿದೆ. [ಪೈಗಂಬರರೇ, ನೀವು ಆತುರ ಪಡದಿರಿ, ಏಕೆಂದರೆ] ನಿಮ್ಮ ಒಡೆಯನು ಏನನ್ನೂ ಮರೆಯುವುದಿಲ್ಲ! {64}
رَبُّ السَّمَاوَاتِ وَالْأَرْضِ وَمَا بَيْنَهُمَا فَاعْبُدْهُ وَاصْطَبِرْ لِعِبَادَتِهِ ۚ هَلْ تَعْلَمُ لَهُ سَمِيًّا
ಅವನು ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಅಧಿಪತಿ! ಆದ್ದರಿಂದ ನೀವು ಅವನನ್ನು ಮಾತ್ರ ಆರಾಧಿಸಿರಿ ಮತ್ತು ಅವನ ಆರಾಧನೆಯ ವಿಷಯದಲ್ಲಿ ಸ್ಥಿರತೆ ಪಾಲಿಸಿರಿ. ಅವನಿಗೆ ಸರಿಸಾಟಿಯಾದ ಯಾರಾದರೂ ಇರುವುದು ನಿಮಗೆ ತಿಳಿದಿದೆಯೇ!? {65}
وَيَقُولُ الْإِنْسَانُ أَإِذَا مَا مِتُّ لَسَوْفَ أُخْرَجُ حَيًّا
ಏನು? ಒಮ್ಮೆ ಸತ್ತ ನಂತರ ಪುನಃ ನನ್ನನ್ನು ಜೀವಂತವಾಗಿ ಹೊರತರಲಾಗುವುದೇ ಎಂದು ಮಾನವನು ಪ್ರಶ್ನಿಸುತ್ತಿದ್ದಾನೆ! {66}
أَوَلَا يَذْكُرُ الْإِنْسَانُ أَنَّا خَلَقْنَاهُ مِنْ قَبْلُ وَلَمْ يَكُ شَيْئًا
ಈ ಹಿಂದೆ, ಅವನಿಗೆ ಅಸ್ತಿತ್ವವೇ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ ವಿಷಯ ಮನುಷ್ಯನಿಗೆ ಮರೆತು ಹೋಯಿತೇ? {67}
فَوَرَبِّكَ لَنَحْشُرَنَّهُمْ وَالشَّيَاطِينَ ثُمَّ لَنُحْضِرَنَّهُمْ حَوْلَ جَهَنَّمَ جِثِيًّا
ಹೌದು, (ಪೈಗಂಬರರೇ) ನಿಮ್ಮೊಡೆಯನಾಣೆ! ನಾವು ಅವರನ್ನೂ ಅವರ ಆ ದುಷ್ಟ ಸೈತಾನರುಗಳನ್ನೂ (ಪುನಃ ಜೀವಂತಗೊಳಿಸಿ ವಿಚಾರಣೆಗಾಗಿ) ಒಂದೆಡೆ ಒಟ್ಟುಗೂಡಿಸಿಯೇ ತೀರುವೆವು. ನಂತರ ಅವರನ್ನೆಲ್ಲ ಮಂಡಿಯೂರಿದ ಸ್ಥಿತಿಯಲ್ಲಿ ನಾವು ನರಕದ ಸುತ್ತಲೂ ಹಾಜರುಪಡಿಸಲಿರುವೆವು. {68}
ثُمَّ لَنَنْزِعَنَّ مِنْ كُلِّ شِيعَةٍ أَيُّهُمْ أَشَدُّ عَلَى الرَّحْمَٰنِ عِتِيًّا
ತರುವಾಯ, ಅವರ ಪ್ರತಿಯೊಂದು ಗುಂಪಿನಿಂದ, ದಯಾಸಂಪನ್ನನಾದ (ಅಲ್ಲಾಹ್ ನಿಗೆ) ಅತ್ಯಂತ ಹೆಚ್ಚು ಧೂರ್ತತನ ತೋರಿದವರನ್ನು ನಾವು ಪ್ರತ್ಯೇಕಿಸಿ ಹೊರಗೆಳೆಯಲಿರುವೆವು. {69}
ثُمَّ لَنَحْنُ أَعْلَمُ بِالَّذِينَ هُمْ أَوْلَىٰ بِهَا صِلِيًّا
ಮತ್ತು ಆ ನರಕದಲ್ಲಿ ಸುಡಲ್ಪಡಲು ಹೆಚ್ಚು ಅರ್ಹತೆ ಪಡಕೊಂಡವರು ಯಾರು ಎಂಬುದು ನಮಗೆ ಚೆನ್ನಾಗಿ ತಿಳಿದೇ ಇದೆ. {70}
وَإِنْ مِنْكُمْ إِلَّا وَارِدُهَا ۚ كَانَ عَلَىٰ رَبِّكَ حَتْمًا مَقْضِيًّا
ನಿಮ್ಮ ಪೈಕಿಯ ಪ್ರತಿಯೊಬ್ಬನೂ ಅಲ್ಲಿಂದ ಹಾದು ಹೋಗಲೇ ಬೇಕಾಗಿದೆ. ಅದೊಂದು ತೀರ್ಮಾನಿಸಲಾದ ವಿಷಯವಾಗಿದ್ದು ಅದನ್ನು ಪೂರ್ಣಗೊಳಿಸ ಬೇಕಾದುದು, (ಓ ಪೈಗಂಬರರೇ) ನಿಮ್ಮ ಒಡೆಯನ ಮೇಲೆ ಕಡ್ಡಾಯವಾಗಿದೆ. {71}
ثُمَّ نُنَجِّي الَّذِينَ اتَّقَوْا وَنَذَرُ الظَّالِمِينَ فِيهَا جِثِيًّا
ತರುವಾಯ, (ಭೂಲೋಕ ಜೀವನದಲ್ಲಿ) ಭಯಭಕ್ತಿ ಪಾಲಿಸಿದವರನ್ನು ನಾವು ಅದರಿಂದ ಪಾರು ಮಾಡುವೆವು ಮತ್ತು ದುಷ್ಕರ್ಮಿಗಳನ್ನು ಮುಗ್ಗರಿಸಿ ಮಂಡಿಯೂರಿದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟುಬಿಡೂವೆವು. {72}
وَإِذَا تُتْلَىٰ عَلَيْهِمْ آيَاتُنَا بَيِّنَاتٍ قَالَ الَّذِينَ كَفَرُوا لِلَّذِينَ آمَنُوا أَيُّ الْفَرِيقَيْنِ خَيْرٌ مَقَامًا وَأَحْسَنُ نَدِيًّا
ಅವರ ಮುಂದೆ ಬಹು ಸ್ಪಷ್ಟವಾದ ನಮ್ಮ ವಚನಗಳನ್ನು ಓದಿ ಕೇಳಿಸಲಾಗುತ್ತಿದ್ದಾಗ (ಪೈಗಂಬರರನ್ನು) ತಿರಸ್ಕರಿಸಿದವರು ವಿಸ್ವಾಸಿಗಳಾದ ಜನರೊಂದಿಗೆ, ನಮ್ಮಿಬ್ಬರ ಪೈಕಿ ಯಾರ ಗುಂಪು ಸ್ಥಾನಮಾನದಲ್ಲಿ ಉತ್ತಮವೆನಿಸಿದೆ; ಮತ್ತು ಯಾವ ಕೂಟವು ಹೆಚ್ಚು ವೈಭವಯುತವಾಗಿದೆ ಎಂದು (ಅಣಕಿಸುತ್ತಾ) ಕೇಳುತ್ತಿದ್ದರು. {73}
وَكَمْ أَهْلَكْنَا قَبْلَهُمْ مِنْ قَرْنٍ هُمْ أَحْسَنُ أَثَاثًا وَرِئْيًا
ವಾಸ್ತವದಲ್ಲಿ, ಜೀವನದ ಸವಲತ್ತು ಹಾಗೂ ತೋರ್ಪಡಿಕೆಯ ಆಡಂಬರಗಳಲ್ಲಿ ಇವರಿಗಿಂತ ಮಿಗಿಲಾಗಿದ್ದ ಅದೆಷ್ಟು ತಲೆಮಾರುಗಳನ್ನು ನಾವು ಇವರಿಗಿಂತ ಮುಂಚೆ ಧ್ವಂಸಗೊಳಿಯಾಗಿದೆ!? {74}
قُلْ مَنْ كَانَ فِي الضَّلَالَةِ فَلْيَمْدُدْ لَهُ الرَّحْمَٰنُ مَدًّا ۚ حَتَّىٰ إِذَا رَأَوْا مَا يُوعَدُونَ إِمَّا الْعَذَابَ وَإِمَّا السَّاعَةَ فَسَيَعْلَمُونَ مَنْ هُوَ شَرٌّ مَكَانًا وَأَضْعَفُ جُنْدًا
(ಪೈಗಂಬರರೇ), ಅವರಿಗೆ ತಿಳಿಸಿರಿ: ದುರ್ಮಾರ್ಗದಲ್ಲಿ ನಡೆಯುವವರಿಗೆ ದಯಾಸಂಪನ್ನನಾದ (ಅಲ್ಲಾಹ್ ನು) ಕಾಲಾವಕಾಶವನ್ನು ನೀಡುತ್ತಾನೆ ಮತ್ತು ಅದನ್ನು ಮತ್ತಷ್ಟು ದೀರ್ಘಗೊಳಿಸುತ್ತಾನೆ. [ಆ ಅವಧಿಯಲ್ಲಿ ತಮ್ಮನ್ನು ತಿದ್ದಿಕೊಳ್ಳದವರಿಗೆ] ಅದಾಗಲೇ ಯಾವುದರ ಕುರಿತು ಮುನ್ನೆಚ್ಚರಿಕೆ ನೀಡಲಾಗಿತ್ತೋ ಆ ಶಿಕ್ಷೆ ಅಥವಾ ಅಂತಿಮ ಘಳಿಗೆ ಬಂದೆರಗುತ್ತದೆ; ಆಗ ಕೆಟ್ಟ ಸ್ಥಾನ ಯಾರದ್ದಾಗಿತ್ತು ಮತ್ತು ಹೆಚ್ಚು ದುರ್ಬಲವಾದ ತಂಡ ಯಾರದ್ದಾಗಿತ್ತು ಎಂದು [ವಿಶ್ವಾಸಿಗಳನ್ನು ಅಣಕಿಸುತ್ತಿದ್ದ] ಅವರು ಸ್ವತಃ ನೋಡಲಿರುವರು. {75}
وَيَزِيدُ اللَّهُ الَّذِينَ اهْتَدَوْا هُدًى ۗ وَالْبَاقِيَاتُ الصَّالِحَاتُ خَيْرٌ عِنْدَ رَبِّكَ ثَوَابًا وَخَيْرٌ مَرَدًّا
ಸರಿದಾರಿಯಲ್ಲಿ ಸಾಗಿದವರಿಗೆ ಅಲ್ಲಾಹ್ ನು ಧಾರಾಳವಾಗಿ ಸರಿದಾರಿ ತೋರುವನು. ವಾಸ್ತವದಲ್ಲಿ, ಶಾಶ್ವತವಾಗಿ ಉಳಿಯುವಂತಹ ಸತ್ಕಾರ್ಯಗಳೇ ನಿಮ್ಮ ಒಡೆಯನ ಬಳಿ ಪ್ರತಿಫಲ ಮತ್ತು ಫಲಿತಾಂಶದ ದೃಷ್ಟಿಯಿಂದ ಉತ್ತಮವಾದುದು. {76}
أَفَرَأَيْتَ الَّذِي كَفَرَ بِآيَاتِنَا وَقَالَ لَأُوتَيَنَّ مَالًا وَوَلَدًا
ನಮ್ಮ ವಚನಗಳನ್ನು ಒಪ್ಪಲು ನಿರಾಕರಿಸಿದಾತನನ್ನು (ಪೈಗಂಬರರೇ), ನೀವು ನೋಡಿದಿರಿ ತಾನೆ? ಅದಾಗಿಯೂ, ಖಂಡಿತವಾಗಿ ಸಂಪತ್ತು ಮತ್ತು ಸಂತಾನವು ನನಗೆ ಇನ್ನಷ್ಟು ನೀಡಲ್ಪಡುತ್ತದೆ ಎಂದು ಅವನು ಹೇಳುತ್ತಿದ್ದಾನೆ! {77}
أَطَّلَعَ الْغَيْبَ أَمِ اتَّخَذَ عِنْدَ الرَّحْمَٰنِ عَهْدًا
ಏನು, ಇನ್ನೂ ಅಗೋಚರವಾದ ವಿಷಯಗಳ ಮಾಹಿತಿ ಆತನಿಗೆ ಸಿಕ್ಕಿದೆಯೇ? ಅಥವಾ ದಯಾಮಯಿ (ಅಲ್ಲಾಹ್ ನ) ಜೊತೆ ಆತನು ಅಂತಹ ಒಂದು ಕರಾರು ಮಾಡಿಕೊಂಡಿರುವನೇ?! {78}
كَلَّا ۚ سَنَكْتُبُ مَا يَقُولُ وَنَمُدُّ لَهُ مِنَ الْعَذَابِ مَدًّا
ಸರ್ವಥಾ ಇಲ್ಲ! ಆತ ಹೇಳಿದ್ದನ್ನು ನಾವು ದಾಖಲಿಸಿಡುತ್ತೇವೆ; ಮತ್ತು ಆತನಿಗಿರುವ ಶಿಕ್ಷೆಯನ್ನು ನಾವು ಮತ್ತಷ್ಟು ಹೆಚ್ಚಿಸಿ ಕೊಡುತ್ತೇವೆ. {79}
وَنَرِثُهُ مَا يَقُولُ وَيَأْتِينَا فَرْدًا
ಆತ (ಜಂಬ ಕೊಚ್ಚುತ್ತಾ) ಹೇಳಿದ ಎಲ್ಲವನ್ನೂ ನಾವು ಪಡೆದುಕೊಳ್ಳುವೆವು; ನಂತರ ಆತ ಏಕಾಂಗಿಯಾಗಿಯೇ ನಮ್ಮಲ್ಲಿಗೆ ಬರಬೇಕಾಗಿದೆ. {80}
وَاتَّخَذُوا مِنْ دُونِ اللَّهِ آلِهَةً لِيَكُونُوا لَهُمْ عِزًّا
ಹೌದು, ಈ ಜನರು ತಮ್ಮ ಪ್ರತಿಷ್ಠೆಗಾಗಿ ಅಲ್ಲಾಹ್ ನನ್ನು ಬಿಟ್ಟು ಇತರ (ಹುಸಿ) ದೇವರುಗಳ ಮೊರೆ ಹೋಗಿರುವರು. {81}
كَلَّا ۚ سَيَكْفُرُونَ بِعِبَادَتِهِمْ وَيَكُونُونَ عَلَيْهِمْ ضِدًّا
ಎಂದಿಗೂ ಇಲ್ಲ! ಶೀಘ್ರದಲ್ಲೇ [ಅರ್ಥಾತ್ ವಿಚಾರಣೆಯ ದಿನ] ಇವರು ಮಾಡಿದ ಎಲ್ಲ ಉಪಾಸನೆಗಳನ್ನು ಆ ಹುಸಿ ದೇವರುಗಳು ಅಲ್ಲಗಳೆಯಲಿರುವರು; ಮಾತ್ರವಲ್ಲ, ಇವರ ವಿರುದ್ಧ ತಿರುಗಿ ಬೀಳಲಿರುವರು. {82}
أَلَمْ تَرَ أَنَّا أَرْسَلْنَا الشَّيَاطِينَ عَلَى الْكَافِرِينَ تَؤُزُّهُمْ أَزًّا
(ಮಾರ್ಗದರ್ಶಕವಾದ ನಮ್ಮ ವಚನಗಳನ್ನು ಸ್ವೀಕರಿಸುವ ಬದಲು) ಧಿಕ್ಕರಿಸಿದವರ ವಿರುದ್ಧ ನಾವು ಸೈತಾನರುಗಳನ್ನು ಬಿಟ್ಟಿರುವ ವಿಷಯ, ಪೈಗಂಬರರೇ, ನಿಮಗೆ ತಿಳಿದೇ ಇದೆ ತಾನೆ! ಅವು (ಸತ್ಯವನ್ನು ವಿರೋಧಿಸುವಂತೆ) ಅವರನ್ನು ಅತಿ ಶಕ್ತವಾಗಿ ಹುರಿದುಂಬಿಸುತ್ತಿರುತ್ತವೆ! {83}
فَلَا تَعْجَلْ عَلَيْهِمْ ۖ إِنَّمَا نَعُدُّ لَهُمْ عَدًّا
ಆದ್ದರಿಂದ ಪೈಗಂಬರರೇ, ನೀವು ಅವರ ವಿರುದ್ಧ ಯಾವುದಕ್ಕೂ ಆತುರ ಪಡದಿರಿ; ನಾವು ಅವರಿಗೆ (ನಿಗದಿ ಪಡಿಸಲಾದ) ಸಮಯವನ್ನು ಎಣಿಸುತ್ತಿರುವೆವಷ್ಟೆ! {84}
يَوْمَ نَحْشُرُ الْمُتَّقِينَ إِلَى الرَّحْمَٰنِ وَفْدًا
ಆ ದಿನ ಬಂದಾಗ ಭಯಭಕ್ತಿ ಪಾಲಿಸಿದವರನ್ನು ನಾವು (ವಿಚಾರಣೆಗಾಗಿ) ಒಂದುಗೂಡಿಸಲಿದ್ದೇವೆ; ದಯಾಮಯಿ ದೇವನ ಸನ್ನಿಧಿಗೆ ಅತಿಥಿಗಳಂತೆ (ಅವರು ಬರಲಿರುವರು). {85}
وَنَسُوقُ الْمُجْرِمِينَ إِلَىٰ جَهَنَّمَ وِرْدًا
ಮತ್ತು ಅಪರಾಧಿಗಳನ್ನು ಬಾಯಾರಿದ ಸ್ಥಿತಿಯಲ್ಲಿ ನರಕದೆಡೆಗೆ ನಾವು ಅಟ್ಟಲಿರುವೆವು. {86}
لَا يَمْلِكُونَ الشَّفَاعَةَ إِلَّا مَنِ اتَّخَذَ عِنْدَ الرَّحْمَٰنِ عَهْدًا
ಆ ದಯಾಸಂಪನ್ನ ದೇವನಿಂದ ಅನುಮತಿ ಪಡೆದವನಿಗಲ್ಲದೆ ಬೇರೆ ಯಾರಿಗೂ ಅಂದು (ಮತ್ತೊಬ್ಬರಿಗಾಗಿ) ಶಿಫಾರಸ್ಸು ಮಾಡುವ ಅಧಿಕಾರವಿರದು. {87}
وَقَالُوا اتَّخَذَ الرَّحْمَٰنُ وَلَدًا
ದಯಾಮಯಿ ದೇವನು (ತನಗಾಗಿ) ಒಬ್ಬ ಪುತ್ರನನ್ನು ಪಡೆದಿರುವನು ಎಂದು ಅವರು ವಾದಿಸುತ್ತಿದ್ದಾರೆ. {88}
لَقَدْ جِئْتُمْ شَيْئًا إِدًّا
(ಹಾಗೆ ವಾದಿಸುವ ಜನರೇ), ನಿಜವಾಗಿಯೂ ನೀವು ಅತಿ ಘೋರವಾದ ಮಾತನ್ನೇ ಹೇಳಿರುವಿರಿ. {89}
تَكَادُ السَّمَاوَاتُ يَتَفَطَّرْنَ مِنْهُ وَتَنْشَقُّ الْأَرْضُ وَتَخِرُّ الْجِبَالُ هَدًّا
ಅದೆಂತಹ ಮಾತೆಂದರೆ, ಅದರಿಂದಾಗಿ ಆಕಾಶವು ಸಿಡಿದು ಹೋದೀತು; ಭೂಮಿಯು ಒಡೆದು ಹೋದೀತು ಮತ್ತು ಪರ್ವತಗಳು ನುಚ್ಚುನೂರಾಗಿ ಬಿದ್ದೀತು! {90}
أَنْ دَعَوْا لِلرَّحْمَٰنِ وَلَدًا
ಹೌದು! ದಯಾಮಯಿ ದೇವನಿಗೆ ಒಬ್ಬ ಪುತ್ರನಿದ್ದಾನೆ ಎಂದು ಅವರು ವಾದಿಸಿದ ಕಾರಣಕ್ಕಾಗಿ! {91}
وَمَا يَنْبَغِي لِلرَّحْمَٰنِ أَنْ يَتَّخِذَ وَلَدًا
ಪುತ್ರನನ್ನು ಮಾಡಿಕೊಳ್ಳುವುದು ಆ ದಯಾಮಯನಿಗೆ ಎಂದಿಗೂ ತರವಲ್ಲ. {92}
إِنْ كُلُّ مَنْ فِي السَّمَاوَاتِ وَالْأَرْضِ إِلَّا آتِي الرَّحْمَٰنِ عَبْدًا
(ವಿಚಾರಣೆಯ ದಿನವಂತು) ಭೂಮಿ ಆಕಾಶಗಳಲ್ಲಿರುವ ಪ್ರತಿಯೊಬ್ಬರೂ ಆ ದಯಾಮಯಿ ದೇವನ ಮುಂದೆ ದಾಸರಾಗಿಯೇ ಬರಲಿರುವರು. {93}
لَقَدْ أَحْصَاهُمْ وَعَدَّهُمْ عَدًّا
ಅಂತಹವರನ್ನು ಖಂಡಿತವಾಗಿ ಅವನು ಆವರಿಸಿಕೊಂಡಿರುವನು. ಮಾತ್ರವಲ್ಲ, ಅವರನ್ನು ಚೆನ್ನಾಗಿ ಎಣಿಕೆ ಮಾಡಿಯೂ ಆಗಿದೆ! {94}
وَكُلُّهُمْ آتِيهِ يَوْمَ الْقِيَامَةِ فَرْدًا
ಪುನರುತ್ಥಾನದ ದಿನ ಅವರೆಲ್ಲರೂ ಅವನ ಬಳಿಗೆ ಒಬ್ಬೊಬ್ಬರಾಗಿಯೇ ಬರಬೇಕಾಗಿದೆ. {95}
إِنَّ الَّذِينَ آمَنُوا وَعَمِلُوا الصَّالِحَاتِ سَيَجْعَلُ لَهُمُ الرَّحْمَٰنُ وُدًّا
ಹೌದು, ವಿಶ್ವಾಸಿಗಳಾಗಿದ್ದು ಕೊಂಡು ಒಳ್ಳೆಯ ಕೆಲಸಗಳನ್ನೂ ಮಾಡಿದವರಿಗಾಗಿ (ಜನರ ಹೃದಯಗಳಲ್ಲಿ) ದಯಾಸಂಪನ್ನ ದೇವನು ವಾತ್ಸಲ್ಯ ತುಂಬಲಿರುವನು. {96}
فَإِنَّمَا يَسَّرْنَاهُ بِلِسَانِكَ لِتُبَشِّرَ بِهِ الْمُتَّقِينَ وَتُنْذِرَ بِهِ قَوْمًا لُدًّا
ಹೌದು ಪೈಗಂಬರರೇ, ಈ (ಕುರ್‌ಆನ ನ) ಮೂಲಕವೇ ನೀವು, ಭಯಭಕ್ತಿ ತೋರುವ ಜನರಿಗೆ ಶುಭಸುದ್ದಿಯನ್ನೂ, ಜಗಳಗಂಟಿಗಳಾದ ಈ ಜನರಿಗೆ ಮುನ್ನೆಚ್ಚರಿಕೆನ್ನೂ ನೀಡಬೇಕೆಂದು ನಾವು ಈ ಗ್ರಂಥವನ್ನು ಅತ್ಯಂತ ಸುಲಭಗೊಳಿಸಿ, ನಿಮ್ಮ (ಮತ್ತು ನಿಮ್ಮ ಜನರ) ಭಾಷೆಯಲ್ಲೇ ಇಳಿಸಿರುವೆವು. {97}
وَكَمْ أَهْلَكْنَا قَبْلَهُمْ مِنْ قَرْنٍ هَلْ تُحِسُّ مِنْهُمْ مِنْ أَحَدٍ أَوْ تَسْمَعُ لَهُمْ رِكْزًا
ಇವರಿಗಿಂತ ಮುಂಚಿನ ಅದೆಷ್ಟೋ ತಲೆಮಾರುಗಳನ್ನು ನಾವು ಧ್ವಂಸಗೊಳಿಸಿಯಾಗಿದೆ! ಪೈಗಂಬರರೇ, ಇಂದು ನಿಮಗೆ ಅವರಲ್ಲಿನ ಯಾರಾದರೂ ಕಾಣುತ್ತಾರೆಯೇ? ಅಥವಾ ಅವರ ಸಪ್ಪಳವೇನಾದರೂ ಕೇಳುತ್ತಿದೆಯೇ?! {98}
------