ಅನ್‌-ನೂರ್ | ترجمة سورة النور

    تـرجمـة سورة النور من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅನ್‌-ನೂರ್ | ಪವಿತ್ರ ಕುರ್‌ಆನ್ ನ 24 ನೆಯ ಸೂರಃ | ಇದರಲ್ಲಿ ಒಟ್ಟು 64 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

سُورَةٌ أَنْزَلْنَاهَا وَفَرَضْنَاهَا وَأَنْزَلْنَا فِيهَا آيَاتٍ بَيِّنَاتٍ لَعَلَّكُمْ تَذَكَّرُونَ

ಇದೊಂದು ಮಹತ್ತರವಾದ ಅಧ್ಯಾಯ! ಇದನ್ನು ನಾವೇ ಇಳಿಸಿರುತ್ತೇವೆ; ಇದರಲ್ಲಿನ ವಿಧಿಗಳನ್ನು ನಿಮಗೆ ಕಡ್ಡಾಯಗೊಳಿರುತ್ತೇವೆ; ಮತ್ತು ನೀವು ಬುದ್ಧಿವಾದದ ಮಾತುಗಳನ್ನು ಸ್ವೀಕರಿಸುವಂತಾಗಲು ಬಹಳ ಸ್ಪಷ್ಟವಾಗಿ ಅರ್ಥವಾಗುವಂತಹ ವಚನಗಳನ್ನು ಇದರಲ್ಲಿ ಇಳಿಸಲಾಗಿದೆ. {1}

الزَّانِيَةُ وَالزَّانِي فَاجْلِدُوا كُلَّ وَاحِدٍ مِنْهُمَا مِائَةَ جَلْدَةٍ ۖ وَلَا تَأْخُذْكُمْ بِهِمَا رَأْفَةٌ فِي دِينِ اللَّهِ إِنْ كُنْتُمْ تُؤْمِنُونَ بِاللَّهِ وَالْيَوْمِ الْآخِرِ ۖ وَلْيَشْهَدْ عَذَابَهُمَا طَائِفَةٌ مِنَ الْمُؤْمِنِينَ

ವ್ಯಭಿಚಾರಿಣಿಯರು ಹಾಗೂ ವ್ಯಭಿಚಾರಿಗಳು - (ಅಪರಾಧ ಖಚಿತವಾಗಿ ಬಿಟ್ಟರೆ) ಅವರಲ್ಲಿಯ ಪ್ರತಿಯೊಬ್ಬರಿಗೂ ತಲಾ ನೂರು ಲಾಠಿಯೇಟು ನೀಡಿರಿ. ಅಲ್ಲಾಹ್ ನಲ್ಲಿ ಮತ್ತು ಅಂತ್ಯದಿನದಲ್ಲಿ ನೀವು ವಿಶ್ವಾಸವಿಟ್ಟವರಾದರೆ, ಅಲ್ಲಾಹ್ ನ ಈ ಕಾನೂನು ಜಾರಿಗೊಳಿಸುವಾಗ ನೀವು ಅವರ ಮೇಲೆ ಸ್ವಲ್ಪವೂ ಅನುಕಂಪ ತೋರದಿರಿ. ಹಾಗೆ ಅವರ ಮೇಲೆ ಶಿಕ್ಷೆ ಜಾರಿಯಾಗುವಾಗ ಸಾಕ್ಷಿಯಾಗಲು ವಿಶ್ವಾಸಿಗಳ ಒಂದು ಗುಂಪು ಅಲ್ಲಿರಲಿ. {2}

الزَّانِي لَا يَنْكِحُ إِلَّا زَانِيَةً أَوْ مُشْرِكَةً وَالزَّانِيَةُ لَا يَنْكِحُهَا إِلَّا زَانٍ أَوْ مُشْرِكٌ ۚ وَحُرِّمَ ذَٰلِكَ عَلَى الْمُؤْمِنِينَ

[ಶಿಕ್ಷೆಗೆ ಗುರಿಯಾದ] ವ್ಯಭಿಚಾರಿಯು ಒಬ್ಬ ವ್ಯಭಿಚಾರಿಣಿಯನ್ನು ಅಥವಾ ಬಹುದೇವಾರಾಧಕಿಯನ್ನು ಹೊರತು [ಮುಸ್ಲಿಮ್ ಸ್ತ್ರೀಯನ್ನು] ವರಿಸಬಾರದು. ಹಾಗೆಯೇ, ವ್ಯಭಿಚಾರಿಣಿಯು ಒಬ್ಬ ವ್ಯಭಿಚಾರಿಯನ್ನು ಅಥವಾ ಬಹುದೇವಾರಾಧಕನನ್ನು ಹೊರತು [ಮುಸ್ಲಿಮ್ ಪುರುಷನನ್ನು] ವರಿಸಬಾರದು. ವಿಶ್ವಾಸಿಗಳಾದ (ಮುಸ್ಲಿಮ್ ಸ್ತ್ರೀ ಪುರುಷರಿಗೆ) ಅದನ್ನು ನಿಷಿದ್ಧಗೊಳಿಸಲಾಗಿದೆ. {3}

وَالَّذِينَ يَرْمُونَ الْمُحْصَنَاتِ ثُمَّ لَمْ يَأْتُوا بِأَرْبَعَةِ شُهَدَاءَ فَاجْلِدُوهُمْ ثَمَانِينَ جَلْدَةً وَلَا تَقْبَلُوا لَهُمْ شَهَادَةً أَبَدًا ۚ وَأُولَٰئِكَ هُمُ الْفَاسِقُونَ

ಇನ್ನು ಯಾರಾದರೂ ಸುಶೀಲೆಯರ ಮೇಲೆ ವ್ಯಭಿಚಾರದ ಆರೋಪ ಹೊರಿಸಿ ನಂತರ ಅದನ್ನು ಸಾಬೀತು ಪಡಿಸಲು ನಾಲ್ಕು ಸಾಕ್ಷಿದಾರರನ್ನು ಒದಗಿಸದಿದ್ದರೆ ಆರೋಪ ಹೊರಿಸಿದವರಿಗೆ ಎಂಬತ್ತು ಲಾಠಿಯೇಟು ಕೊಡಿರಿ. ಅಷ್ಟೇ ಅಲ್ಲ, ಮುಂದೆಂದೂ (ಯಾವ ವಿಷಯದಲ್ಲೂ) ಅಂತಹವರ ಸಾಕ್ಷ್ಯವನ್ನು ಸ್ವೀಕರಿಸದಿರಿ. ಅವರು ಹದ್ದು ಮೀರಿದ ಜನರಾಗಿರುವರು. {4}

إِلَّا الَّذِينَ تَابُوا مِنْ بَعْدِ ذَٰلِكَ وَأَصْلَحُوا فَإِنَّ اللَّهَ غَفُورٌ رَحِيمٌ

ಆದರೆ, ಆ ಬಳಿಕ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರು ಇದಕ್ಕೆ ಹೊರತಾಗಿದ್ದಾರೆ. ನಿಶ್ಚಿತವಾಗಿ ಅಲ್ಲಾಹ್ ನು ಕ್ಷಮಿಸುವವನೂ ಕರುಣೆ ತೋರುವವನೂ ಆಗಿರುವನು. {5}

وَالَّذِينَ يَرْمُونَ أَزْوَاجَهُمْ وَلَمْ يَكُنْ لَهُمْ شُهَدَاءُ إِلَّا أَنْفُسُهُمْ فَشَهَادَةُ أَحَدِهِمْ أَرْبَعُ شَهَادَاتٍ بِاللَّهِ ۙ إِنَّهُ لَمِنَ الصَّادِقِينَ

ಇನ್ನು ಯಾರಾದರೂ ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸಿದರೆ, ಮತ್ತು ಅದಕ್ಕೆ ಸ್ವತಃ ಅವರ ಹೊರತು ಬೇರೆ ಸಾಕ್ಷಿಗಳು ಇಲ್ಲದಿದ್ದರೆ, ತಾನು ಖಂಡಿತಾ ಸತ್ಯವಂತನೆಂದು ನಾಲ್ಕು ಬಾರಿ ಅಲ್ಲಾಹ್ ನ ಆಣೆ ಹಾಕಿ ಸಾಕ್ಷ್ಯ ನುಡಿಯಲಿ; {6}

وَالْخَامِسَةُ أَنَّ لَعْنَتَ اللَّهِ عَلَيْهِ إِنْ كَانَ مِنَ الْكَاذِبِينَ

ಮಾತ್ರವಲ್ಲ, ಐದನೇ ಬಾರಿಯ ಸಾಕ್ಷ್ಯವಾಗಿ, ತಾನು ಸುಳ್ಳುಗಾರನಾಗಿದ್ದರೆ ತನ್ನ ಮೇಲೆ ಅಲ್ಲಾಹ್ ನ ಶಾಪವೆರಗಲಿ ಎಂದೂ ಸೇರಿಸಲಿ. {7}

وَيَدْرَأُ عَنْهَا الْعَذَابَ أَنْ تَشْهَدَ أَرْبَعَ شَهَادَاتٍ بِاللَّهِ ۙ إِنَّهُ لَمِنَ الْكَاذِبِينَ

[ಅದು ಹುಸಿ ಆರೋಪವಾಗಿದ್ದರೆ] ಪತ್ನಿ ಸಹ ಅಲ್ಲಾಹ್ ನ ಮೇಲೆ ಆಣೆ ಹಾಕಿ, ಖಂಡಿತಾ ಅವನು ಸುಳ್ಳುಗಾರ ಎಂದು ನಾಲ್ಕು ಬಾರಿ ಸಾಕ್ಷ್ಯ ನುಡಿದರೆ ಆಕೆಯು ಶಿಕ್ಷೆಯಿಂದ ಪಾರಾಗುವಳು; {8}

وَالْخَامِسَةَ أَنَّ غَضَبَ اللَّهِ عَلَيْهَا إِنْ كَانَ مِنَ الصَّادِقِينَ

ಅಷ್ಟೇ ಅಲ್ಲ, ಐದನೆ ಬಾರಿಯ ಸಾಕ್ಷ್ಯವಾಗಿ, ಆತನು ಸತ್ಯವಂತನಾಗಿದ್ದರೆ ತನ್ನ ಮೇಲೆ ಅಲ್ಲಾಹ್ ನ ಪ್ರಕೋಪವೆರಗಲಿ ಎಂದು ಸಹ ಅವಳು ಹೇಳಬೇಕು. {9}

وَلَوْلَا فَضْلُ اللَّهِ عَلَيْكُمْ وَرَحْمَتُهُ وَأَنَّ اللَّهَ تَوَّابٌ حَكِيمٌ

ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹ್ ನ ಅನುಗ್ರಹ ಮತ್ತು ಅವನ ದಯೆ ಇರದೇ ಹೋಗಿದ್ದರೆ (ದೋಷಾರೋಪಣೆ ಮಾಡುವ ನಿಮ್ಮ ಆ ದುಃಸ್ವಭಾವವಂತು ನಿಮ್ಮ ಮೇಲೆ ಶಿಕ್ಷೆ ಬರಿಸುವಂತಹದ್ದೇ ಆಗಿತ್ತು)! ಆದರೆ ವಾಸ್ತವದಲ್ಲಿ ಅಲ್ಲಾಹ್ ನು ಕರುಣೆ ತೋರುವತ್ತ ಆಗಾಗ್ಗೆ ಮರಳುವವನೂ ವಿವೇಕಪೂರ್ಣನೂ ಆಗಿರುವನು. {10}

إِنَّ الَّذِينَ جَاءُوا بِالْإِفْكِ عُصْبَةٌ مِنْكُمْ ۚ لَا تَحْسَبُوهُ شَرًّا لَكُمْ ۖ بَلْ هُوَ خَيْرٌ لَكُمْ ۚ لِكُلِّ امْرِئٍ مِنْهُمْ مَا اكْتَسَبَ مِنَ الْإِثْمِ ۚ وَالَّذِي تَوَلَّىٰ كِبْرَهُ مِنْهُمْ لَهُ عَذَابٌ عَظِيمٌ

ಈಗ ಅಂತಹ ಒಂದು ಆಘಾತಕರವಾದ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ತಂದಿರುವುದು ನಿಮ್ಮ ಪೈಕಿಯದೇ ಆದ ಒಂದು ಗುಂಪು ಎಂಬುದು ಸಂಶಯಾತೀತ. ಅವರ ಆ ಕೃತ್ಯವು ನಿಮ್ಮ ಪಾಲಿಗೆ ಕೆಟ್ಟದಾಯಿತು ಎಂದು ನೀವು ಭಾವಿಸಬೇಡಿ. ಬದಲಾಗಿ ಅದು ನಿಮಗೆ ಒಳ್ಳೆಯದೇ ಆಗಿ ಪರಿಣಮಿಸಲಿದೆ ಎಂದೇ ತಿಳಿಯಿರಿ. ಆ ಪಾಪಕರ್ಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಆ ಗುಂಪಿನ ಪ್ರತಿಯೊಬ್ಬನಿಗೂ ತಾನು ಮಾಡಿದ ಪಾಪಕ್ಕನುಸಾರ ಶಿಕ್ಷೆಯಾಗುವುದು. ಇನ್ನು, ಅದರಲ್ಲಿ ಹಿರಿಯ ಪಾತ್ರ ವಹಿಸಿದವನಿಗಂತು ಅತಿ ಘೋರವಾದ ಶಿಕ್ಷೆ ಕಾದಿದೆ. {11}

لَوْلَا إِذْ سَمِعْتُمُوهُ ظَنَّ الْمُؤْمِنُونَ وَالْمُؤْمِنَاتُ بِأَنْفُسِهِمْ خَيْرًا وَقَالُوا هَٰذَا إِفْكٌ مُبِينٌ

ಆ (ವದಂತಿಯನ್ನು) ಕೇಳಿಸಿಕೊಂಡ ಕೂಡಲೇ ವಿಶ್ವಾಸಿ ಸ್ತ್ರೀ-ಪುರುಷರಾದ ನೀವೇಕೆ, [ಯಾರ ವಿರುದ್ಧ ಆರೋಪ ಮಾಡಲಾಗಿತ್ತೋ ಅವರೂ ಸಹ ವಿಶ್ವಾಸಿಗಳಾಗಿದ್ದ ಕಾರಣ] ನಿಮ್ಮವರೇ ಆದ ಅವರ ಕುರಿತು ಸದ್ಭಾವನೆಯನ್ನಿಟ್ಟು, ಇದೊಂದು ಭಯಂಕರವಾದ ಸುಳ್ಳಾರೋಪವಾಗಿದೆ ಎಂದು ಹೇಳಲಿಲ್ಲ? {12}

لَوْلَا جَاءُوا عَلَيْهِ بِأَرْبَعَةِ شُهَدَاءَ ۚ فَإِذْ لَمْ يَأْتُوا بِالشُّهَدَاءِ فَأُولَٰئِكَ عِنْدَ اللَّهِ هُمُ الْكَاذِبُونَ

ಆರೋಪ ಹೊರಿಸಿದವರು (ಅದನ್ನು ಸಾಬೀತು ಪಡಿಸಲು) ನಾಲ್ಕು ಸಾಕ್ಷಿದಾರರನ್ನೇಕೆ ತರಲಿಲ್ಲ? ಅಂತಹ ಸಾಕ್ಷಿದಾರರನ್ನು ತರಲು ಅವರಿಗೆ ಸಾಧ್ಯವಿಲ್ಲದ ಕಾರಣ ಅವರೇ ಅಲ್ಲಾಹ್ ನ ದೃಷ್ಟಿಯಲ್ಲಿ ಸುಳ್ಳುಗಾರರಾಗಿರುತ್ತಾರೆ! {13}

وَلَوْلَا فَضْلُ اللَّهِ عَلَيْكُمْ وَرَحْمَتُهُ فِي الدُّنْيَا وَالْآخِرَةِ لَمَسَّكُمْ فِي مَا أَفَضْتُمْ فِيهِ عَذَابٌ عَظِيمٌ

(ವಿಶ್ವಾಸಿಗಳೇ), ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹ್ ನ ಅನುಗ್ರಹ ಮತ್ತು ಅವನ ದಯೆ ಇರದೇ ಹೋಗಿದ್ದರೆ, ನೀವು ನಿಮ್ಮನ್ನು ಯಾವ (ಸುಳ್ಳು ಸುದ್ದಿಯಲ್ಲಿ) ತೊಡಗಿಸಿಕೊಂಡಿರುವಿರೋ ಅದಕ್ಕಾಗಿ ಇಹಲೋಕದಲ್ಲೂ ಪರಲೋಕದಲ್ಲೂ ಘೋರ ಶಿಕ್ಷೆಯು ನಿಮ್ಮ ಮೇಲೆ ಖಂಡಿತವಾಗಿ ಎರಗುತ್ತಿತ್ತು! {14}

إِذْ تَلَقَّوْنَهُ بِأَلْسِنَتِكُمْ وَتَقُولُونَ بِأَفْوَاهِكُمْ مَا لَيْسَ لَكُمْ بِهِ عِلْمٌ وَتَحْسَبُونَهُ هَيِّنًا وَهُوَ عِنْدَ اللَّهِ عَظِيمٌ

ನಿಮ್ಮ ನಾಲಗೆಗಳು ಅದನ್ನು ಉಚ್ಛರಿಸುತ್ತಿದ್ದಾಗ ಮತ್ತು ನಿಮಗೆ ಸ್ವಲ್ಪವಾದರೂ ತಿಳಿದಿರದ ಒಂದು ವಿಷಯವನ್ನು ನೀವು ಬಾಯಿ ಮೂಲಕ ಚರ್ಚಿಸುತ್ತಿದ್ದಾಗ ಅದೊಂದು ಲಘುವಾದ ವಿಷಯವೆಂದು ನೀವು ಭಾವಿಸಿರುವಿರಿ; ಆದರೆ ಅಲ್ಲಾಹ್ ನ ದೃಷ್ಟಿಯಲ್ಲಿ ಅದೊಂದು ಅತಿ ಗಂಭೀರ ವಿಷಯವಾಗಿದೆ! {15}

وَلَوْلَا إِذْ سَمِعْتُمُوهُ قُلْتُمْ مَا يَكُونُ لَنَا أَنْ نَتَكَلَّمَ بِهَٰذَا سُبْحَانَكَ هَٰذَا بُهْتَانٌ عَظِيمٌ

ಆ ವದಂತಿಯನ್ನು ಕೇಳಿದಾಕ್ಷಣ, ಆ ವಿಷಯದಲ್ಲಿ ನಾವು ಮಾತನಾಡುವುದು ಸರಿಯಲ್ಲ; (ಓ ಅಲ್ಲಾಹ್ ನೇ), ನೀನು ದೋಷರಹಿತನು, (ನಮ್ಮ ಬಳಿಗೆ ಬಂದಿರುವ ಈ ವದಂತಿ) ಒಂದು ಘನಘೋರ ಆರೋಪಣೆಯಾಗಿದೆ ಎಂದು ನೀವೇಕೆ ಹೇಳಲಿಲ್ಲ? {16}

يَعِظُكُمُ اللَّهُ أَنْ تَعُودُوا لِمِثْلِهِ أَبَدًا إِنْ كُنْتُمْ مُؤْمِنِينَ

ನೀವು ಯತಾರ್ಥ ವಿಶ್ವಾಸಿಗಳಾಗಿದ್ದರೆ ಮುದೆಂದೂ ಇಂತಹ ಒಂದು ಕೃತ್ಯವನ್ನು ನೀವು ಪುನರಾವರ್ತಿಸದಿರಿ ಎಂದು ಅಲ್ಲಾಹ್ ನು ನಿಮಗೆ ತಾಕೀತು ಮಾಡುತ್ತಾನೆ. {17}

وَيُبَيِّنُ اللَّهُ لَكُمُ الْآيَاتِ ۚ وَاللَّهُ عَلِيمٌ حَكِيمٌ

ಮತ್ತು ಅಲ್ಲಾಹ್ ನು ತನ್ನ ವಚನಗಳನ್ನು ನಿಮಗೆ ಅರ್ಥವಾಗುವಂತೆ ವಿವರಿಸಿ ಕೊಡುತ್ತಾನೆ. ಹೌದು, ಅಲ್ಲಾಹ್ ನು ಎಲ್ಲವನ್ನೂ ಚೆನ್ನಾಗಿ ತಿಳಿದಿರುವವನೂ ಬಹಳ ಯುಕ್ತಿಪೂರ್ಣನೂ ಆಗಿರುವನು. {18}

إِنَّ الَّذِينَ يُحِبُّونَ أَنْ تَشِيعَ الْفَاحِشَةُ فِي الَّذِينَ آمَنُوا لَهُمْ عَذَابٌ أَلِيمٌ فِي الدُّنْيَا وَالْآخِرَةِ ۚ وَاللَّهُ يَعْلَمُ وَأَنْتُمْ لَا تَعْلَمُونَ

ವಿಶ್ವಾಸಿಗಳ ಸಮಾಜದಲ್ಲಿ ಅಶ್ಲೀಲತೆ ಹಬ್ಬಬೇಕೆಂದು ಬಯಸುತ್ತಿರುವ ಜನರಿಗೆ ಖಂಡಿತವಾಗಿ ಈ ಲೋಕದಲ್ಲೂ ಪರಲೋಕದಲ್ಲೂ ಯಾತನಾಮಯ ಶಿಕ್ಷೆ ಇರುವುದು. ಅಂತಹವರ (ದುರುದ್ದೇಶಗಳ ಬಗ್ಗೆ) ಅಲ್ಲಾಹ್ ನಿಗೆ ತಿಳಿದಿದೆ; ನೀವು ಅದನ್ನು ತಿಳಿದವರಲ್ಲ. {19}

وَلَوْلَا فَضْلُ اللَّهِ عَلَيْكُمْ وَرَحْمَتُهُ وَأَنَّ اللَّهَ رَءُوفٌ رَحِيمٌ

ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹ್ ನ ಅನುಗ್ರಹ ಮತ್ತು ಅವನ ದಯೆ ಇರದೇ ಹೋಗಿದ್ದರೆ, ಮತ್ತು ಅವನು ಕನಿಕರ ತೋರುವವನೂ ಬಹಳವಾಗಿ ಕರುಣೆ ತೋರುವವನೂ ಆಗಿರದಿದ್ದರೆ (ಅವರ ದುರುದ್ದೇಶ ಪೂರಿತ ದೋಷಾರೋಪಣೆಯಲ್ಲಿ ನೀವು ಭಾಗಿಗಳಾದ ಕಾರಣ ನೀವೂ ಶಿಕ್ಷಿಸಲ್ಪಡುತ್ತಿದ್ದಿರಿ). {20}

يَا أَيُّهَا الَّذِينَ آمَنُوا لَا تَتَّبِعُوا خُطُوَاتِ الشَّيْطَانِ ۚ وَمَنْ يَتَّبِعْ خُطُوَاتِ الشَّيْطَانِ فَإِنَّهُ يَأْمُرُ بِالْفَحْشَاءِ وَالْمُنْكَرِ ۚ وَلَوْلَا فَضْلُ اللَّهِ عَلَيْكُمْ وَرَحْمَتُهُ مَا زَكَىٰ مِنْكُمْ مِنْ أَحَدٍ أَبَدًا وَلَٰكِنَّ اللَّهَ يُزَكِّي مَنْ يَشَاءُ ۗ وَاللَّهُ سَمِيعٌ عَلِيمٌ

ವಿಶ್ವಾಸಿಗಳಾದ ಜನರೇ! ನೀವು ಸೈತಾನನ ಹೆಜ್ಜೆಗುರುತುಗಳನ್ನು ಅನುಸರಿಸಿ ನಡೆಯದಿರಿ. ಇನ್ನು ಯಾರಾದರೂ ಸೈತಾನನನ್ನು ಅನುಸರಿಸಿ ನಡೆದರೆ, ಅವನಂತು ಖಂಡಿತವಾಗಿ ಅಶ್ಲೀಲತೆ ಮತ್ತು ಕೆಡುಕುತನವನ್ನು ಬೋಧಿಸುವವನಾಗಿದ್ದಾನೆ. ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹ್ ನ ಅನುಗ್ರಹ ಮತ್ತು ಅವನ ದಯೆ ಇರದೇ ಹೋಗಿದ್ದರೆ, ನಿಮ್ಮ ಪೈಕಿ (ಆ ದೋಷಾರೋಪಣೆಯ ಪ್ರಚಾರದಲ್ಲಿ ತೊಡಗಿದ್ದ) ಯಾವೊಬ್ಬನಿಗೂ ಎಂದಿಗೂ ನಿಷ್ಕಳಂಕ ವ್ಯಕ್ತಿಯಾಗಲು ಸಾಧ್ಯವಿರಲಿಲ್ಲ. ಆದರೆ ಅಲ್ಲಾಹ್ ನು ತಾನು ಬಯಸಿದವರನ್ನು ನಿಷ್ಕಳಂಕಿತನಾಗಿಸುತ್ತಾನೆ. ಹೌದು, ಅಲ್ಲಾಹ್ ನು (ನಿಮ್ಮ ಪಶ್ಚಾತ್ತಾಪವನ್ನು) ಆಲಿಸುವವನೂ (ನಿಮ್ಮ ಅಂತರಾತ್ಮವನ್ನು) ಬಲ್ಲವನೂ ಆಗಿರುತ್ತಾನೆ. {21}

وَلَا يَأْتَلِ أُولُو الْفَضْلِ مِنْكُمْ وَالسَّعَةِ أَنْ يُؤْتُوا أُولِي الْقُرْبَىٰ وَالْمَسَاكِينَ وَالْمُهَاجِرِينَ فِي سَبِيلِ اللَّهِ ۖ وَلْيَعْفُوا وَلْيَصْفَحُوا ۗ أَلَا تُحِبُّونَ أَنْ يَغْفِرَ اللَّهُ لَكُمْ ۗ وَاللَّهُ غَفُورٌ رَحِيمٌ

ನಿಮ್ಮ ಪೈಕಿಯ ಸಂಪನ್ನರು ಮತ್ತು ಆರ್ಥಿಕ ಸಮೃದ್ಧತೆ ಪಡೆದವರು (ಆ ಕೆಲವು) ನಿಕಟ ಸಂಬಂಧಿಗಳಿಗೆ, ಬಡವರಿಗೆ ಹಾಗೂ ಅಲ್ಲಾಹ್ ನ ಮಾರ್ಗದಲ್ಲಿ ತಮ್ಮ ಮನೆ ಮಠಗಳನ್ನು ತೊರೆದು (ಮದೀನಾ ನಾಡಿಗೆ) ವಲಸೆ ಬಂದವರಿಗೆ [ಅವರು ಆ ದೋಷಾರೋಪಣೆಯ ಪ್ರಚಾರದಲ್ಲಿ ಪ್ರಮಾದವಷಾತ್ ನಿರತರಾಗಿದ್ದರು ಎಂಬ ಕಾರಣಕ್ಕಾಗಿ ಇನ್ನು ಮುಂದೆ] ಏನನ್ನೂ ನೀಡುವುದಿಲ್ಲವೆಂದು ಪ್ರತಿಜ್ಞೆ ಮಾಡದಿರಲಿ. ಬದಲಾಗಿ, ಅವರನ್ನು ಕ್ಷಮಿಸಲಿ ಮತ್ತು (ಅವರ ಪ್ರಮಾದಗಳನ್ನು) ಕಡೆಗಣಿಸಲಿ. ಅಲ್ಲಾಹ್ ನು ನಿಮ್ಮ ತಪ್ಪುಗಳನ್ನು ಕ್ಷಮಿಸಬೇಕು ಎಂದು ನೀವು ಬಯಸುವುದಿಲ್ಲವೇ? ಹೌದು, ಅಲಾಹ್ ನು ಕ್ಷಮಿಸುವವನು; ಸದಾ ಕರುಣೆ ತೋರುವವನು! {22}

إِنَّ الَّذِينَ يَرْمُونَ الْمُحْصَنَاتِ الْغَافِلَاتِ الْمُؤْمِنَاتِ لُعِنُوا فِي الدُّنْيَا وَالْآخِرَةِ وَلَهُمْ عَذَابٌ عَظِيمٌ

ಸುಶೀಲೆಯರಾದ ಮುಗ್ಧ ಸ್ವಭಾವದ ವಿಶ್ವಾಸಿ ಸ್ತ್ರೀಯರ ಮೇಲೆ (ವ್ಯಭಿಚಾರದ) ಆರೋಪ ಹೊರಿಸುವವರು ಯಾರೋ ಅವರು ಇಹಲೋಕದಲ್ಲೂ ಪರಲೋಕದಲ್ಲೂ ಶಪಿತರಾಗಿ ತೀರುವರು; ಮತ್ತು ಅವರಿಗೆ ಘನಘೋರವಾದ ಶಿಕ್ಷೆಯೂ ಇದೆ. {23}

يَوْمَ تَشْهَدُ عَلَيْهِمْ أَلْسِنَتُهُمْ وَأَيْدِيهِمْ وَأَرْجُلُهُمْ بِمَا كَانُوا يَعْمَلُونَ

ಅವರೆಸಗಿದ ಪಾಪಕೃತ್ಯಗಳ ಕುರಿತು ಸ್ವತಃ ಅವರದೇ ನಾಲಗೆಗಳು, ಕೈಗಳು ಮತ್ತು ಕಾಲುಗಳು ಅವರಿಗೇ ವಿರುದ್ಧವಾಗಿ ಸಾಕ್ಷಿ ನುಡಿಯುವ ದಿನವದು! {24}

يَوْمَئِذٍ يُوَفِّيهِمُ اللَّهُ دِينَهُمُ الْحَقَّ وَيَعْلَمُونَ أَنَّ اللَّهَ هُوَ الْحَقُّ الْمُبِينُ

ಅಂದು ಅಲ್ಲಾಹ್ ನು ಅವರ ನ್ಯಾಯಯುತವಾದ ಪ್ರತಿಫಲವನ್ನು ಅವರಿಗೆ ಸಂಪೂರ್ಣವಾಗಿ ನೀಡುವನು; ಹೌದು, ಅಲ್ಲಾಹ್ ನು ಮಾತ್ರವೇ ಅತ್ಯಂತ ವ್ಯಕ್ತವಾದ ಪರಮ ಸತ್ಯ ಎಂದು ಅವರಿಗೆ ತಿಳಿಯುವುದು. {25}

الْخَبِيثَاتُ لِلْخَبِيثِينَ وَالْخَبِيثُونَ لِلْخَبِيثَاتِ ۖ وَالطَّيِّبَاتُ لِلطَّيِّبِينَ وَالطَّيِّبُونَ لِلطَّيِّبَاتِ ۚ أُولَٰئِكَ مُبَرَّءُونَ مِمَّا يَقُولُونَ ۖ لَهُمْ مَغْفِرَةٌ وَرِزْقٌ كَرِيمٌ

(ಅಂದು) ಕೆಟ್ಟ ಸ್ತ್ರೀಯರು ಕೆಟ್ಟ ಪುರುಷರಿಗೆ ಮತ್ತು ಕೆಟ್ಟ ಪುರುಷರು ಕೆಟ್ಟ ಸ್ತ್ರೀಯರಿಗೆ; ಹಾಗೆಯೇ, ಒಳ್ಳೆಯ ಸ್ತ್ರೀಯರು ಒಳ್ಳೆಯ ಪುರುಷರಿಗೆ ಮತ್ತು ಒಳ್ಳೆಯ ಪುರುಷರು ಒಳ್ಳೆಯ ಸ್ತ್ರೀಯರಿಗೆ. ಒಳ್ಳೆಯ ಸ್ತ್ರೀ ಪುರುಷರು, ಅವರ ಬಗ್ಗೆ (ಕೆಟ್ಟ) ಜನರಾಡುವ ಎಲ್ಲಾ (ಕೆಟ್ಟ) ಮಾತುಗಳಿಂದ ಅಂದು ಸಂಪೂರ್ಣವಾಗಿ ಮುಕ್ತರು. ಮಾತ್ರವಲ್ಲ, ಅವರಿಗೆ ಅಲ್ಲಿ ಪಾಪ ವಿಮೋಕ್ಷೆ ಹಾಗೂ ಬಹಳ ಉದಾತ್ತವಾದ (ಸ್ವರ್ಗೀಯ) ಪೂರೈಕೆಗಳು ಲಭ್ಯವಿದೆ. {26}

يَا أَيُّهَا الَّذِينَ آمَنُوا لَا تَدْخُلُوا بُيُوتًا غَيْرَ بُيُوتِكُمْ حَتَّىٰ تَسْتَأْنِسُوا وَتُسَلِّمُوا عَلَىٰ أَهْلِهَا ۚ ذَٰلِكُمْ خَيْرٌ لَكُمْ لَعَلَّكُمْ تَذَكَّرُونَ

ವಿಶ್ವಾಸಿಗಳಾದ ಜನರೇ, ನಿಮ್ಮ ಸ್ವಂತ ಮನೆಗಳ ಹೊರತು ಇತರರ ಮನೆಗಳನ್ನು ಪ್ರವೇಶಿಸುವಾಗ ಆ ಮನೆಯವರ ಅನುಮತಿಗಾಗಿ ಕಾದು, ನಂತರ ಅವರಿಗೆ ಸಲಾಮ್ ಹೇಳಿ (ಉತ್ತರ ಸಿಗುವ) ತನಕ ನೀವು ಪ್ರವೇಶಿಸಬಾರದು. ಇದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳವುದಾದರೆ ಉತ್ತಮವಾದ ವಿಧಾನ ನಿಮಗೆ ಇದುವೇ ಆಗಿರುತ್ತದೆ! {27}

فَإِنْ لَمْ تَجِدُوا فِيهَا أَحَدًا فَلَا تَدْخُلُوهَا حَتَّىٰ يُؤْذَنَ لَكُمْ ۖ وَإِنْ قِيلَ لَكُمُ ارْجِعُوا فَارْجِعُوا ۖ هُوَ أَزْكَىٰ لَكُمْ ۚ وَاللَّهُ بِمَا تَعْمَلُونَ عَلِيمٌ

ಅಲ್ಲಿ ಯಾರನ್ನೂ ಕಾಣದಿದ್ದರೆ, ಆಗಲೂ ಸಹ ಅನುಮತಿ ಸಿಗುವ ತನಕ ನೀವು ಅದರೊಳಗೆ ಪ್ರವೇಶಿಸ ಕೂಡದು. ಒಂದು ವೇಳೆ 'ಹಿಂದಿರುಗಿ ಹೋಗಿರಿ' ಎಂದು (ನಿಮಗೆ ಅನುಮತಿ ನಿರಾಕರಿಸಲ್ಪಟ್ಟರೆ) ನೀವು ಅಲ್ಲಿಂದ ಹೊರಟು ಹೋಗಿರಿ. ಅದುವೇ ನಿಮ್ಮ ಪಾಲಿಗೆ ಶುದ್ಧವಾದ ಕ್ರಮ. ಹೌದು, ನೀವೇನು ಮಾಡುತ್ತಿರುವಿರಿ ಎಂಬುದು ಅಲ್ಲಾಹ್ ನಿಗೆ ತಿಳಿದಿರುತ್ತದೆ. {28}

لَيْسَ عَلَيْكُمْ جُنَاحٌ أَنْ تَدْخُلُوا بُيُوتًا غَيْرَ مَسْكُونَةٍ فِيهَا مَتَاعٌ لَكُمْ ۚ وَاللَّهُ يَعْلَمُ مَا تُبْدُونَ وَمَا تَكْتُمُونَ

ಇನ್ನು ಜನವಾಸವಿಲ್ಲದ ಕಟ್ಟಡವನ್ನು, ಅದೂ ಸಹ ಅದರಲ್ಲಿ ನಿಮ್ಮ ಬಳಕೆಯ, ಉಪಯುಕ್ತತೆಯ, ಏನಾದರೂ ಇದೆಯೆಂದಾದರೆ, ನೀವು ಪ್ರವೇಶಿಸಿಕೊಳ್ಳುವುದಕ್ಕೆ ಅಭ್ಯಂತರವಿಲ್ಲ. ನೀವು ಬಹಿರಂಪಡಿಸುವ ಹಾಗೂ ಬಚ್ಚಿಡುವ ಎಲ್ಲಾ ವಿಷಯಗಳು ಅಲ್ಲಾಹ್ ನಿಗೆ ತಿಳಿದಿರುತ್ತದೆ. {29}

قُلْ لِلْمُؤْمِنِينَ يَغُضُّوا مِنْ أَبْصَارِهِمْ وَيَحْفَظُوا فُرُوجَهُمْ ۚ ذَٰلِكَ أَزْكَىٰ لَهُمْ ۗ إِنَّ اللَّهَ خَبِيرٌ بِمَا يَصْنَعُونَ

(ಪರಸ್ತ್ರೀಯರನ್ನು ಕಂಡಾಗ) ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳುವವರಾಗಿರಿ ಹಾಗೂ ಮರ್ಮಾಂಗಗಳನ್ನು ಕಾಪಾಡಿ ಕೊಳ್ಳುವವರಾಗಿರಿ ಎಂದು ವಿಶ್ವಾಸಿ ಪುರುಷರಿಗೆ, ಪೈಗಂಬರರೇ, ನೀವು ತಾಕೀತು ಮಾಡಿರಿ. ಅದು ಅವರ ಪಾಲಿಗೆ ಹೆಚ್ಚು ಚೊಕ್ಕಟವಾದ ಕ್ರಮ! ಇನ್ನು, ಅವರು ಏನು ಮಾಡಿದರೂ ಅದನ್ನು ಅಲ್ಲಾಹ್ ನು ಖಂಡಿತವಾಗಿ ತಿಳಿದಿರುತ್ತಾನೆ. {30}

وَقُلْ لِلْمُؤْمِنَاتِ يَغْضُضْنَ مِنْ أَبْصَارِهِنَّ وَيَحْفَظْنَ فُرُوجَهُنَّ وَلَا يُبْدِينَ زِينَتَهُنَّ إِلَّا مَا ظَهَرَ مِنْهَا ۖ وَلْيَضْرِبْنَ بِخُمُرِهِنَّ عَلَىٰ جُيُوبِهِنَّ ۖ وَلَا يُبْدِينَ زِينَتَهُنَّ إِلَّا لِبُعُولَتِهِنَّ أَوْ آبَائِهِنَّ أَوْ آبَاءِ بُعُولَتِهِنَّ أَوْ أَبْنَائِهِنَّ أَوْ أَبْنَاءِ بُعُولَتِهِنَّ أَوْ إِخْوَانِهِنَّ أَوْ بَنِي إِخْوَانِهِنَّ أَوْ بَنِي أَخَوَاتِهِنَّ أَوْ نِسَائِهِنَّ أَوْ مَا مَلَكَتْ أَيْمَانُهُنَّ أَوِ التَّابِعِينَ غَيْرِ أُولِي الْإِرْبَةِ مِنَ الرِّجَالِ أَوِ الطِّفْلِ الَّذِينَ لَمْ يَظْهَرُوا عَلَىٰ عَوْرَاتِ النِّسَاءِ ۖ وَلَا يَضْرِبْنَ بِأَرْجُلِهِنَّ لِيُعْلَمَ مَا يُخْفِينَ مِنْ زِينَتِهِنَّ ۚ وَتُوبُوا إِلَى اللَّهِ جَمِيعًا أَيُّهَ الْمُؤْمِنُونَ لَعَلَّكُمْ تُفْلِحُونَ

ಹಾಗೆಯೇ, ವಿಶ್ವಾಸಿ ಸ್ತ್ರೀಯರಿಗೂ ತಮ್ಮ ದೃಷ್ಟಿಗಳನ್ನು (ಪರಪುರುಷರ ಮುಂದೆ) ತಗ್ಗಿಸಿಕೊಳ್ಳಲು ಮತ್ತು ತಮ್ಮ ಮರ್ಮಾಂಗಗಳನ್ನು ಕಾಪಾಡಿಕೊಳ್ಳಲು, ಪೈಗಂಬರರೇ, ನೀವು (ಪ್ರತ್ಯೇಕವಗಿ) ತಾಕೀತು ಮಾಡಿರಿ. ತಾನಾಗಿಯೇ ಪ್ರಟವಾಗುವ ಸೌಂದರ್ಯದ ಹೊರತು ಅವರು ತಮ್ಮ ಸೌಂದರ್ಯವನ್ನು ತಾವಾಗಿಯೇ ಪ್ರಕಟಿಸದಿರಲಿ. ತಮ್ಮ ಶಿರವಸ್ತ್ರಗಳಿಂದ ತಮ್ಮ ಎದೆಭಾಗವನ್ನು ಮುಚ್ಚಿಕೊಳ್ಳಲಿ. ತಮ್ಮ ಸೌದರ್ಯವನ್ನು ತಮ್ಮ ಪತಿಯಂದಿರು, ತಮ್ಮ ತಂದೆ ತಾತಂದಿರು, ತಮ್ಮ ಪತಿಯಂದಿರ ತಂದೆ ತಾತಂದಿರು, ತಮ್ಮ ಪುತ್ರರು, ತಮ್ಮ ಪತಿಯಂದಿರ ಪುತ್ರರು, ತಮ್ಮ ಸಹೋದರರು, ತಮ್ಮ ಸಹೋದರರ ಪುತ್ರರು, ತಮ್ಮ ಸಹೋದರಿಯರ ಪುತ್ರರು, ತಮ್ಮ ಒಡನಾಟದ ಸ್ತ್ರೀಯರು, ತಮ್ಮ ದಾಸ ದಾಸಿಯರು, ತಮ್ಮ ಅಧೀನದಲ್ಲಿರುವ ವಿಷಯಾಸಕ್ತಿಯಿರದ ಪುರುಷ ಸೇವಕರು, ಸ್ತ್ರೀಯರ ಗೌಪ್ಯ ವಿಷಯಗಳನ್ನು ಇನ್ನೂ ಅರಿತಿರದ ಮಕ್ಕಳು - ಇವರ ಹೊರತು ಇತರರ ಮುಂದೆ ಪ್ರಕಟಿಸದಿರಲಿ. ತಾವು ಗೌಪ್ಯವಾಗಿರಿಸಿದ ಸೌಂದರ್ಯವು ಪ್ರಕಟವಾಗುವಂತೆ ತಮ್ಮ ಕಾಲುಗಳನ್ನು ನೆಲಕ್ಕಪ್ಪಳಿಸುತ್ತಾ ನಡೆಯದಿರಲಿ. [ಇನ್ನು ನಿಮ್ಮಿಂದ ಸಂಭವಿಸಿರಬಹುದಾದ ಪ್ರಮಾದಗಳಿಗಾಗಿ], ವಿಶ್ವಾಸಿಗಳಾದ ಓ ಸ್ತ್ರೀ ಪುರುಷರೇ, (ಪರಲೋಕದಲ್ಲಿ) ವಿಜಯಿಗಳಾಗಲು ನೀವೆಲ್ಲರೂ ಪಶ್ಚಾತ್ತಾಪ ಪಟ್ಟು ಅಲ್ಲಾಹ್ ನೆಡೆಗೆ ಮರಳಿರಿ. {31}

وَأَنْكِحُوا الْأَيَامَىٰ مِنْكُمْ وَالصَّالِحِينَ مِنْ عِبَادِكُمْ وَإِمَائِكُمْ ۚ إِنْ يَكُونُوا فُقَرَاءَ يُغْنِهِمُ اللَّهُ مِنْ فَضْلِهِ ۗ وَاللَّهُ وَاسِعٌ عَلِيمٌ

ವಿಶ್ವಾಸಿಗಳೇ, ನಿಮ್ಮ ಸಮಾಜದಲ್ಲಿಯ (ವಿವಾಹ ಯೋಗ್ಯರಾದ) ಒಬ್ಬಂಟಿಗ ಸ್ತ್ರೀ ಪುರುಷರಿಗೆ [ಅರ್ಥಾತ್ ಯುವತಿ ಯುವಕರಿಗೆ, ವಿಧವೆ ವಿಧುರರಿಗೆ ಮತ್ತು ವಿಚ್ಛೇದಿತ ಸ್ತ್ರೀ ಪುರುಷರಿಗೆ] ನೀವು ವಿವಾಹ ಮಾಡಿಸಿರಿ. ಅಂತೆಯೇ ಒಳ್ಳೆಯತನ ಮತ್ತು ಯೋಗ್ಯತೆಯಿರುವ ನಿಮ್ಮ ದಾಸರಿಗೂ ದಾಸಿಯರಿಗೂ ವಿವಾಹ ಮಾಡಿಸಿರಿ. ಇನ್ನು ಅವರು ಬಡವರಾಗಿದ್ದರೂ (ವಿವಾಹ ಮಾಡಿಸಿರಿ; ಎಕೆಂದರೆ) ಅಲ್ಲಾಹ್ ನು ತನ್ನ ಔದಾರ್ಯದಿಂದ ಅವರಿಗೆ ಹಂಗಿಲ್ಲದ ಬದುಕು ನೀಡುವನು. ಅಲ್ಲಾಹ್ ನು ಔದಾರ್ಯ ಪೂರ್ಣನೂ (ತನ್ನ ಉಪಾಸಕರನ್ನು) ಚೆನ್ನಾಗಿ ಬಲ್ಲವನೂ ಆಗಿರುವನು. {32}

وَلْيَسْتَعْفِفِ الَّذِينَ لَا يَجِدُونَ نِكَاحًا حَتَّىٰ يُغْنِيَهُمُ اللَّهُ مِنْ فَضْلِهِ ۗ وَالَّذِينَ يَبْتَغُونَ الْكِتَابَ مِمَّا مَلَكَتْ أَيْمَانُكُمْ فَكَاتِبُوهُمْ إِنْ عَلِمْتُمْ فِيهِمْ خَيْرًا ۖ وَآتُوهُمْ مِنْ مَالِ اللَّهِ الَّذِي آتَاكُمْ ۚ وَلَا تُكْرِهُوا فَتَيَاتِكُمْ عَلَى الْبِغَاءِ إِنْ أَرَدْنَ تَحَصُّنًا لِتَبْتَغُوا عَرَضَ الْحَيَاةِ الدُّنْيَا ۚ وَمَنْ يُكْرِهْهُنَّ فَإِنَّ اللَّهَ مِنْ بَعْدِ إِكْرَاهِهِنَّ غَفُورٌ رَحِيمٌ

ವಿವಾಹ ಮಾಡಿಕೊಳ್ಳಲು ಅನುಕೂಲತೆ ಹೊಂದಿರದ (ಸ್ತ್ರೀ ಪುರುಷರು), ಅಲ್ಲಾಹ್ ನು ತನ್ನ ಔದಾರ್ಯದಿಂದ ಅವರಿಗೆ ಒದಗಿಸುವ ತನಕ ತಮ್ಮ ಚಾರಿತ್ರ್ಯವನ್ನು ಕಾಪಾಡಿಕೊಳ್ಳಲಿ. ಇನ್ನು, ನಿಮ್ಮ ಒಡೆತನದಲ್ಲಿರುವ (ನೀವು ಖರೀದಿಸಿದ) ದಾಸ ದಾಸಿಯರ ಪೈಕಿ ಯಾರಾದರೂ (ದಾಸ್ಯತನದಿಂದ ಬಿಡುಗಡೆ ಪಡೆಯಲು) ನಿಮ್ಮಿಂದ ಲಿಖಿತ ಒಪ್ಪಂದ ಬಯಸಿದರೆ - ಅವರಲ್ಲಿ (ಅರ್ಹತೆ, ಸಾಮರ್ಥ್ಯ, ಪ್ರಾಮಾಣಿಕತೆಗಳಂತಹ) ಗುಣಗಳಿರುವುದನ್ನು ನೀವು ಮನಗಂಡರೆ - ಅವರೊಂದಿಗೆ ನೀವು ಅಂತಹ ಲಿಖಿತ ಒಪ್ಪಂದ ಮಾಡಿಕೊಳ್ಳ ಬೇಕು. ಅಷ್ಟು ಮಾತ್ರವಲ್ಲ, ಓ ವಿಶ್ವಾಸಿಗಳೇ, ಯಾವ ಅಲ್ಲಾಹ್ ನು ತನ್ನ ಸಂಪತ್ತನ್ನು ನಿಮಗೆ ನೀಡಿರುವನೋ, ಅದರಿಂದ ಸ್ವಲ್ಪವನ್ನು ನೀವು ಅವರಿಗೂ ನೀಡಿರಿ. ಅಂತೆಯೇ, ಸ್ವತಃ ತಮ್ಮ ಚಾರಿತ್ರ್ಯವನ್ನು ಕಾಪಾಡಿ ಕೊಳ್ಳಲು ಬಯಸುವ ನಿಮ್ಮ ದಾಸಿಯರನ್ನು ಕೇವಲ ಲೌಕಿಕವಾದ ಸುಖವನ್ನು ಬಯಸಿ ನೀವು ಬಲವಂತವಾಗಿ ಅನೈತಿಕ ಕೃತ್ಯಕ್ಕೆ ತಳ್ಳದಿರಿ. ಅದಾಗ್ಯೂ ಯಾರಾದರೂ ಅವರನ್ನು ಅಂತಹ ಕೃತ್ಯಕ್ಕೆ ಬಲವಂತಪಡಿಸಿದರೆ, ಬಲವಂತಕ್ಕೊಳಗಾದ ಕಾರಣಕ್ಕಾಗಿ ಅಲ್ಲಾಹ್ ನು ಅವರ ಪಾಲಿಗೆ ಕ್ಷಮಿಸುವವನೂ ಅಪಾರವಾಗಿ ಕರುಣೆ ತೋರುವವನೂ ಆಗಿರುವನು. {33}

وَلَقَدْ أَنْزَلْنَا إِلَيْكُمْ آيَاتٍ مُبَيِّنَاتٍ وَمَثَلًا مِنَ الَّذِينَ خَلَوْا مِنْ قَبْلِكُمْ وَمَوْعِظَةً لِلْمُتَّقِينَ

ಸ್ಪುಟವಾಗಿ ಅರ್ಥವಾಗುವಂತಹ ವಚನಗಳನ್ನೂ ನಿಮಗಿಂತ ಮುಂಚಿತವಾಗಿ ಗತಿಸಿ ಹೋದವರ (ಚರಿತ್ರೆಯಿಂದ ಕೆಲವೊಂದು) ಉದಾಹರಣೆಗಳನ್ನೂ ಧರ್ಮಪ್ರಜ್ಞೆಯುಳ್ಳ ಜನರಿಗಾಗಿ ಉಪದೇಶಗಳನ್ನೂ, ಪೈಗಂಬರರೇ, ನಾವು ನಿಮ್ಮತ್ತ ಕಳುಹಿಸಿದ್ದಾಯಿತು! {34}

اللَّهُ نُورُ السَّمَاوَاتِ وَالْأَرْضِ ۚ مَثَلُ نُورِهِ كَمِشْكَاةٍ فِيهَا مِصْبَاحٌ ۖ الْمِصْبَاحُ فِي زُجَاجَةٍ ۖ الزُّجَاجَةُ كَأَنَّهَا كَوْكَبٌ دُرِّيٌّ يُوقَدُ مِنْ شَجَرَةٍ مُبَارَكَةٍ زَيْتُونَةٍ لَا شَرْقِيَّةٍ وَلَا غَرْبِيَّةٍ يَكَادُ زَيْتُهَا يُضِيءُ وَلَوْ لَمْ تَمْسَسْهُ نَارٌ ۚ نُورٌ عَلَىٰ نُورٍ ۗ يَهْدِي اللَّهُ لِنُورِهِ مَنْ يَشَاءُ ۚ وَيَضْرِبُ اللَّهُ الْأَمْثَالَ لِلنَّاسِ ۗ وَاللَّهُ بِكُلِّ شَيْءٍ عَلِيمٌ

[ಅಧರ್ಮದ ಅಂಧಕಾರವನ್ನು ಅಲ್ಲಾಹ್ ನ ಪ್ರಕಾಶ, ಅರ್ಥಾತ್ ಅವನ ಮಾರ್ಗದರ್ಶನ ಮಾತ್ರವೇ ಬೆಳಗಿಸುತ್ತದೆ. ಹೌದು], ಅಲ್ಲಾಹ್ ನೇ ಆಕಾಶಗಳ ಮತ್ತು ಭೂಮಿಯ ಪ್ರಕಾಶ! ಅವನ ಪ್ರಕಾಶದ ಉದಾಹರಣೆಯೆಂದರೆ ಅದು ದೀಪವಿರಿಸಿದ ಒಂದು ಬೆಳಕಿನ ಕಿಂಡಿಯಂತೆ! ದೀಪವು ಗಾಜಿನ ಒಂದು ಬುರುಡೆಯೊಳಗಿದೆ; ಆ ಗಾಜು ಒಂದು ಹೊಳೆಯುವ ನಕ್ಷತ್ರದಂತಿದೆ; ದೀಪವನ್ನು ಅನುಗ್ರಹೀತವಾದ ಝೈತೂನ್ ಮರದ ತೈಲದಿಂದ ಬೆಳಗಿಸಲಾಗಿದೆ; ಅದರ ಬೆಳಕು ಪೌರ್ವಾತ್ಯವೂ ಅಲ್ಲ, ಪಾಶ್ಚಾತ್ಯವೂ ಅಲ್ಲ! ಇನ್ನೂ ಆ ತೈಲಕ್ಕೆ ಅಗ್ನಿಯ ಸ್ಪರ್ಷ ಆಗಿಯೇ ಇಲ್ಲ - ಆದರೆ ಆಗಲೇ ಅದು ಪ್ರಕಾಶಮಯವಾಗಿ ಪ್ರಜ್ವಲಿಸುತ್ತಿದೆ! ಪ್ರಕಾಶದ ಮೇಲೆ ಮತ್ತೊಂದು ಪ್ರಕಾಶವಿದ್ದಂತೆ! ಅಲ್ಲಾಹ್ ನು ಯಾರಿಗೆ ಮಾರ್ಗದರ್ಶನ ಮಾಡಲು ಬಯಸುತ್ತಾನೋ ಅವರಿಗೆ [ಅರ್ಥಾತ್ ಅದಕ್ಕೆ ಅರ್ಹತೆ ಪಡೆದವರಿಗೆ] ತನ್ನ ಪ್ರಕಾಶದೆಡೆಗೆ ಬರುವಂತೆ ದಾರಿ ತೋರುತ್ತಾನೆ! ಹೌದು, ಜನರು ಮಾರ್ಗದರ್ಶನ ಪಡೆಯಲೆಂದು ಅಲ್ಲಾಹ್ ನು ಇಂತಹ ಉಪಮೆಗಳನ್ನು ನೀಡುತ್ತಾನೆ. ಅಲ್ಲಾಹ್ ನಿಗೆ ಎಲ್ಲಾ ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. {35}

فِي بُيُوتٍ أَذِنَ اللَّهُ أَنْ تُرْفَعَ وَيُذْكَرَ فِيهَا اسْمُهُ يُسَبِّحُ لَهُ فِيهَا بِالْغُدُوِّ وَالْآصَالِ

ಅಲ್ಲಾಹ್ ನ ನಾಮಸ್ಮರಣೆ ನಡೆಯುವ ಭವನಗಳಲ್ಲಿ, ಅಂದರೆ ಅಲ್ಲಾಹ್ ನು ನಿರ್ಮಿಸಲು ಆಜ್ಞಾಪಿಸಿದ ಮಸೀದಿಗಳಲ್ಲಿ (ಆ ಪ್ರಕಾಶ ಬೆಳಗುತ್ತದೆ)! ಅಲ್ಲಿ (ಅವನ ಉಪಾಸಕರು) ಸಂಜೆ ಮುಂಜಾನೆಗಳಲ್ಲಿ ಅವನ ಕೀರ್ತನೆಯಲ್ಲಿ ತೊಡಗಿರುತ್ತಾರೆ. {36}

رِجَالٌ لَا تُلْهِيهِمْ تِجَارَةٌ وَلَا بَيْعٌ عَنْ ذِكْرِ اللَّهِ وَإِقَامِ الصَّلَاةِ وَإِيتَاءِ الزَّكَاةِ ۙ يَخَافُونَ يَوْمًا تَتَقَلَّبُ فِيهِ الْقُلُوبُ وَالْأَبْصَارُ

ಅಂತಹ ಉಪಾಸಕರನ್ನು ಅವರ ವ್ಯಾಪಾರ ವಹಿವಾಟುಗಳು, ಕ್ರಯ ವಿಕ್ರಯಗಳು ಅಲ್ಲಾಹ್ ನ ನಾಮಸ್ಮರಣೆಯಿಂದಾಗಲಿ, ನಮಾಝ್ ನ ವ್ಯವಸ್ಥಾಪನೆಯಿಂದಾಗಲಿ ಮತ್ತು ಝಕಾತ್ ನ ಪಾವತಿಯಿಂದಾಗಲಿ ವಿಚಲಿಸುವಂತೆ ಮಾಡಲಾರದು. ಹೃದಯಗಳು ಮತ್ತು ಕಣ್ಣುಗಳು ಮಗುಚಿ ಬೀಳಲಿರುವ ಆ ಒಂದು ದಿನದ ಕುರಿತು ಅವರು (ವ್ಯಾಪಾರ ವಹಿವಾಟುಗಳ ನಡುವೆಯೂ) ಭಯ ಪಡುತ್ತಿರುತ್ತಾರೆ. {37}

لِيَجْزِيَهُمُ اللَّهُ أَحْسَنَ مَا عَمِلُوا وَيَزِيدَهُمْ مِنْ فَضْلِهِ ۗ وَاللَّهُ يَرْزُقُ مَنْ يَشَاءُ بِغَيْرِ حِسَابٍ

ಅದೇಕೆಂದರೆ ತಾವು ಮಾಡಿದ ಪುಣ್ಯಕರ್ಮಗಳಿಗಾಗಿ ಅಲ್ಲಾಹ್ ನು ಅತ್ಯುತ್ತಮವಾದ ಪ್ರತಿಫಲವನ್ನು ನೀಡಲು ಹಾಗೂ ಅವನ ಔದಾರ್ಯದಿಂದ ಮತ್ತಷ್ಟು ಹೆಚ್ಚು ಪ್ರತಿಫಲ ನೀಡಲು (ಅವರು ತಮ್ಮನ್ನು ಅಂತಹ ಪುಣ್ಯ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುತ್ತಾರೆ). ನಿಜ, ಅಲ್ಲಾಹ್ ನು ಯಾರಿಗೆ ದಯಪಾಲಿಸಲು ಬಯಸುವನೋ ಅವರಿಗೆ ಇತಿಮಿತಿಯಿಲ್ಲದೆ ದಯಪಾಲಿಸುತ್ತಾನೆ! {38}

وَالَّذِينَ كَفَرُوا أَعْمَالُهُمْ كَسَرَابٍ بِقِيعَةٍ يَحْسَبُهُ الظَّمْآنُ مَاءً حَتَّىٰ إِذَا جَاءَهُ لَمْ يَجِدْهُ شَيْئًا وَوَجَدَ اللَّهَ عِنْدَهُ فَوَفَّاهُ حِسَابَهُ ۗ وَاللَّهُ سَرِيعُ الْحِسَابِ

(ಅಲ್ಲಾಹ್ ನ ಪ್ರಕಾಶವನ್ನು) ಧಿಕ್ಕರಿಸಿದವರ ಕರ್ಮಗಳು ನಿರ್ಜಲ ಮರುಭೂಮಿಯಲ್ಲಿ ಉಂಟಾಗುವ ಮರೀಚಿಕೆಯಂತೆ! ಬಾಯಾರಿದವನು ಅದನ್ನು ನೀರೆಂದು ಭ್ರಮಿಸಿ ಅಲ್ಲಿಗೆ ಧಾವಿಸಿದಾಗ ನಿಜವಾಗಿ ಅಲ್ಲಿ ಏನೂ ಇರಲಿಲ್ಲವೆಂಬ ವಾಸ್ತಿವಿಕತೆಯನ್ನು ಅರಿಯುವನು. ಮತ್ತು ಅವನು ತನ್ನ (ಆ ಕರ್ಮಗಳ) ಬಳಿ ಸರ್ವಸಂಪೂರ್ಣವಾಗಿ ಲೆಕ್ಕ ತೀರಿಸುವ ಅಲ್ಲಾಹ್ ನನ್ನು ಕಾಣುವನು! ಹೌದು, ಅಲ್ಲಾಹ್ ನು ತ್ವರಿತವಾಗಿ ಲೆಕ್ಕ ತೀರಿಸುವವನಾಗಿದ್ದಾನೆ. {39}

أَوْ كَظُلُمَاتٍ فِي بَحْرٍ لُجِّيٍّ يَغْشَاهُ مَوْجٌ مِنْ فَوْقِهِ مَوْجٌ مِنْ فَوْقِهِ سَحَابٌ ۚ ظُلُمَاتٌ بَعْضُهَا فَوْقَ بَعْضٍ إِذَا أَخْرَجَ يَدَهُ لَمْ يَكَدْ يَرَاهَا ۗ وَمَنْ لَمْ يَجْعَلِ اللَّهُ لَهُ نُورًا فَمَا لَهُ مِنْ نُورٍ

ಅಥವಾ (ಅಲ್ಲಾಹ್ ನ ಪ್ರಕಾಶವನ್ನು ಧಿಕ್ಕರಿಸಿದವನ ದುರ್ಗತಿಯು) ಆಳ ಸಮುದ್ರದಲ್ಲಿನ ಕಗ್ಗತ್ತಲಿನಂತೆ! ತೆರೆಯೊಂದು ಅದರ ಮೇಲೆ ಕವಿದಿರುತ್ತದೆ; ಅದರ ಮೇಲೆ (ಕಗ್ಗತ್ತೆಲೆಯ) ಮತ್ತೊಂದು ತೆರೆ, ಅದರ ಮೇಲೊಂದು ಕಾರ್ಮೋಡ. ಹೌದು, ಕಗ್ಗತ್ತಲೆಯ ಮೇಲೆ ಕಗ್ಗತ್ತಲೆಯ ಮತ್ತಷ್ಟು ಪದರಗಳು! ಅಲ್ಲಿ ಅವನು ತನ್ನ ಕೈ ಹೊರತೆಗೆದರೆ ಸ್ವತಃ ತಾನೇ ಅದನ್ನು ಕಾಣಲಾರ. ನಿಜ, ಯಾರಿಗೆ ಅಲ್ಲಾಹ್ ನು (ಮಾರ್ಗದರ್ಶನವೆಂಬ) ಪ್ರಕಾಶ ನೀಡಲಿಲ್ಲವೋ ಅವನಿಗೆ (ಅಂಧಕಾರದಿಂದ ಹೊರಬರಲು) ಯಾವೊಂದು ಪ್ರಕಾಶವೂ ಲಭಿಸಲಾರದು! {40}

أَلَمْ تَرَ أَنَّ اللَّهَ يُسَبِّحُ لَهُ مَنْ فِي السَّمَاوَاتِ وَالْأَرْضِ وَالطَّيْرُ صَافَّاتٍ ۖ كُلٌّ قَدْ عَلِمَ صَلَاتَهُ وَتَسْبِيحَهُ ۗ وَاللَّهُ عَلِيمٌ بِمَا يَفْعَلُونَ

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ಜೀವಿಯೂ, ಗರಿ ಬಿಚ್ಚಿ ಹಾರಾಡುವ ಪ್ರತಿಯೊಂದು ಪಕ್ಷಿಯೂ ನಿಜವಾಗಿ ಅಲ್ಲಾಹ್ ನ ಮಹಿಮೆಯ ಗುಣಗಾನ ಮಾಡುತ್ತಿರುವುದನ್ನು ನೀವು ಗಮನಿಸುವುದಿಲ್ಲವೇ?! ಪ್ರತಿಯೊಂದು ಜೀವಿಗೂ ತಾನು ಮಾಡಬೇಕಾದ ಉಪಾಸನೆಯ ಮತ್ತು ಕೀರ್ತನೆಯ ಬಗ್ಗೆ ತಿಳುವಳಿಕೆ ಇರುತ್ತದೆ. ಇನ್ನು ಈ ಜನರೇನು ಮಾಡುತ್ತಿದ್ದಾರೆ ಎಂದು ಅಲ್ಲಾಹ್ ನಿಗೆ ಚೆನಾಗಿಯೇ ತಿಳಿದಿರುತ್ತದೆ. {41}

وَلِلَّهِ مُلْكُ السَّمَاوَاتِ وَالْأَرْضِ ۖ وَإِلَى اللَّهِ الْمَصِيرُ

(ಜನರೇನು ಮಾಡಿದರೂ) ಅಕಾಶಗಳ ಮತ್ತು ಭೂಮಿಯ ಸಂಪೂರ್ಣ ಆಧಿಪತ್ಯ ಅಲ್ಲಾಹ್ ನ ಕೈಯಲ್ಲಿದೆ. ಎಲ್ಲರೂ (ಕೊನೆಯದಾಗಿ) ಅಲ್ಲಾಹ್ ನ ಕಡೆಗೇ ಮರಳಬೇಕಾಗಿದೆ. {42}

أَلَمْ تَرَ أَنَّ اللَّهَ يُزْجِي سَحَابًا ثُمَّ يُؤَلِّفُ بَيْنَهُ ثُمَّ يَجْعَلُهُ رُكَامًا فَتَرَى الْوَدْقَ يَخْرُجُ مِنْ خِلَالِهِ وَيُنَزِّلُ مِنَ السَّمَاءِ مِنْ جِبَالٍ فِيهَا مِنْ بَرَدٍ فَيُصِيبُ بِهِ مَنْ يَشَاءُ وَيَصْرِفُهُ عَنْ مَنْ يَشَاءُ ۖ يَكَادُ سَنَا بَرْقِهِ يَذْهَبُ بِالْأَبْصَارِ

ಅಲ್ಲಾಹ್ ನು ಮೋಡಗಳನ್ನು ಸ್ವಲ್ಪ ಸ್ವಲ್ಪವೇ ಸರಿಸುತ್ತಾ ತರುವುದನ್ನು, ನಂತರ ಅವುಗಳನ್ನು ಒಟ್ಟು ಸೇರಿಸುವುದನ್ನು, ಅನಂತರ ಅದನ್ನು ಪದರಗಳಿರುವ ರಾಶಿಯನ್ನಾಗಿ ಮಾಡುವುದನ್ನು (ಜನರೇ) ನೀವು ಗಮನಿಸುವುದಿಲ್ಲವೇ? ಅದರ ಮಧ್ಯದಿಂದಲೇ ಅವನು ಮಳೆಯ ಹನಿಗಳನ್ನು ಹೊರತರುವುದನ್ನೂ, ಆಕಾಶದಿಂದ ಬೆಟ್ಟಗಳಂತಹ ಮೋಡದ ರಾಶಿಯಿಂದ ಅವನು ಆಲಿಕಲ್ಲುಗಳನ್ನು ಸುರಿಸುವುದನ್ನೂ ನೀವು ಕಾಣುತ್ತೀರಿ! ನಂತರ ಯಾರ ಮೇಲೆ ಅದನ್ನು ಬೀಳಿಸಬೇಕೋ ಬೀಳಿಸುತ್ತಾನೆ; ಯಾರಿಂದ ಅದನ್ನು ತಪ್ಪಿಸಬೇಕೋ ತಪ್ಪಿಸುತ್ತಾನೆ. ಹೌದು, ಮೋಡಗಳ ಮಿಂಚಿನ ಹೊಳಪು ಇನ್ನೇನು ದೃಷ್ಟಿಗಳನ್ನು ಕಿತ್ತುಕೊಳ್ಳುವುದೋ ಎಂಬಂತಿರುತ್ತದೆ. {43}

يُقَلِّبُ اللَّهُ اللَّيْلَ وَالنَّهَارَ ۚ إِنَّ فِي ذَٰلِكَ لَعِبْرَةً لِأُولِي الْأَبْصَارِ

ರಾತ್ರಿ ಮತ್ತು ಹಗಲುಗಳು (ಮರುಕಳಿಸಿ ಬರುವಂತೆ ಅದನ್ನು) ಹೊರಳಿಸುತ್ತಿರುವವನೂ ಅಲ್ಲಾಹ್ ನೇ ಆಗಿರುವನು. ಬುದ್ಧಿಯುಳ್ಳವರಿಗೆ ಈ ಸಂಗತಿಗಳಲ್ಲಿ ಖಂಡಿತವಾಗಿ ಸಾಕಷ್ಟು ಪಾಠವಿದೆ. {44}

وَاللَّهُ خَلَقَ كُلَّ دَابَّةٍ مِنْ مَاءٍ ۖ فَمِنْهُمْ مَنْ يَمْشِي عَلَىٰ بَطْنِهِ وَمِنْهُمْ مَنْ يَمْشِي عَلَىٰ رِجْلَيْنِ وَمِنْهُمْ مَنْ يَمْشِي عَلَىٰ أَرْبَعٍ ۚ يَخْلُقُ اللَّهُ مَا يَشَاءُ ۚ إِنَّ اللَّهَ عَلَىٰ كُلِّ شَيْءٍ قَدِيرٌ

ಮತ್ತು ಅಲ್ಲಾಹ್ ನು ನೀರಿನಿಂದಲೇ ಪ್ರತಿಯೊಂದು ಜೀವಿಯನ್ನು ಸೃಷ್ಟಿ ಮಾಡಿರುವನು. ಅವುಗಳಲ್ಲಿ ಕೆಲವು ಹೊಟ್ಟೆಯೆಳೆದು ಚಲಿಸುವ ಜೀವಿಗಳಿವೆ; ಕೆಲವು ಜೀವಿಗಳು ಎರಡು ಕಾಲುಗಳ ಮೂಲಕ ಚಲಿಸುತ್ತವೆ; ಇನ್ನು ಕೆಲವು ನಾಲ್ಕು ಕಾಲುಗಳಲ್ಲಿ ಚಲಿಸುತ್ತವೆ. ಅಲ್ಲಾಹ್ ನು ತಾನು ಏನನ್ನು ಸೃಷ್ಟಿಸಬೇಕೆಂದು ಬಯಸುತ್ತಾನೋ ಅದನ್ನು ಸೃಷ್ಟಿಸುತ್ತಾನೆ. ಹೌದು, ಖಂಡಿತವಾಗಿಯೂ ಅಲ್ಲಾಹ್ ಸಕಲ ವಿಷಯಗಳಲ್ಲಿ ಸರ್ವ ಸಂಪೂರ್ಣವಾದ ಸಾಮರ್ಥ್ಯ ಹೊಂದಿರುವನು. {45}

لَقَدْ أَنْزَلْنَا آيَاتٍ مُبَيِّنَاتٍ ۚ وَاللَّهُ يَهْدِي مَنْ يَشَاءُ إِلَىٰ صِرَاطٍ مُسْتَقِيمٍ

ನಾವು (ನಿಮಗೆ ಸರಿಯಾದ ಮಾರ್ಗವನ್ನು) ನಿಖರವಾಗಿ ವ್ಯಕ್ತಪಡಿಸುವ ವಚನಗಳನ್ನು ಇಳಿಸಿ ಕೊಟ್ಟಿರುತ್ತೇವೆ. (ಏಕೆಂದರೆ) ಯಾರಿಗೆ ಸರಿದಾರಿ ತೋರಬೇಕೆಂದು ಅಲ್ಲಾಹ್ ನು ಬಯಸುತ್ತಾನೋ ಅವರಿಗೆ ಅವನು ಸರಿದಾರಿ ತೋರಿಸುತ್ತಾನೆ. {46}

وَيَقُولُونَ آمَنَّا بِاللَّهِ وَبِالرَّسُولِ وَأَطَعْنَا ثُمَّ يَتَوَلَّىٰ فَرِيقٌ مِنْهُمْ مِنْ بَعْدِ ذَٰلِكَ ۚ وَمَا أُولَٰئِكَ بِالْمُؤْمِنِينَ

[ಸರಿದಾರಿ ಯಾವುದೆಂದು ತಿಳಿದುಕೊಂಡವರು] ನಾವು ಅಲ್ಲಾಹ್ ನ ಮತ್ತು ಪೈಗಂಬರರ ವಿಶ್ವಾಸಿಗಳಾಗಿರುವೆವು ಮತ್ತು (ಸರಿದಾರಿಯನ್ನು) ಅನುಸರಿಸುವ ಜನರಾಗಿರುವೆವು ಎಂದು ಸಾರುತ್ತಾರೆ. ಆದರೆ ಅದಾದ ನಂತರ ಅವರ ಪೈಕಿಯ ಒಂದು ಗುಂಪು (ಆ ಹೇಳಿಕೆಯಿಂದ) ಮುಖ ತಿರುಗಿಸಿಕೊಳ್ಳುತ್ತದೆ; ಯಥಾರ್ಥದಲ್ಲಿ ಅಂತಹವರು ವಿಶ್ವಾಸಿಗಳ ಸಾಲಿಗೆ ಸೇರಿಯೇ ಇರಲಿಲ್ಲ! {47}

وَإِذَا دُعُوا إِلَى اللَّهِ وَرَسُولِهِ لِيَحْكُمَ بَيْنَهُمْ إِذَا فَرِيقٌ مِنْهُمْ مُعْرِضُونَ

[ಅಲ್ಲಾಹ್ ನಲ್ಲಿ ಮತ್ತು ಪೈಗಂಬರರಲ್ಲಿ ವಿಶ್ವಾಸವಿದೆ ಎಂದು ಸಾರಿದ ಕಾರಣ] ಪೈಗಂಬರರು ಅವರ ನಡುವಿನ ವ್ಯಾಜ್ಯದ ತೀರ್ಮಾನಕ್ಕಾಗಿ ಅಲ್ಲಾಹ್ ನೆಡೆಗೆ ಮತ್ತು ಪೈಗಂಬರರೆಡೆಗೆ ಅವರನ್ನು ಕರೆದಾಗ ಅವರ ಪೈಕಿಯ ಮತ್ತೊಂದು ಗುಂಪು ಮುಖ ತಿರುಗಿಸಿಕೊಂಡು ಪಲಾಯನ ಮಾಡುತ್ತದೆ. {48}

وَإِنْ يَكُنْ لَهُمُ الْحَقُّ يَأْتُوا إِلَيْهِ مُذْعِنِينَ

ಇನ್ನು ಅವರಿಗೆ ಲಭಿಸಬೇಕಾದುದು ಏನಾದರೂ ಇದ್ದರೆ ಮಾತ್ರ (ನ್ಯಾಯ ದೊರಕಿಸಿಕೊಳ್ಳಲು) ಪೈಗಂಬರರ ಸನ್ನಿಧಿಗೆ ಅವರು ವಿನಮ್ರತೆಯೊಂದಿಗೆ ಹಾಜರಾಗುತ್ತಾರೆ! {49}

أَفِي قُلُوبِهِمْ مَرَضٌ أَمِ ارْتَابُوا أَمْ يَخَافُونَ أَنْ يَحِيفَ اللَّهُ عَلَيْهِمْ وَرَسُولُهُ ۚ بَلْ أُولَٰئِكَ هُمُ الظَّالِمُونَ

ಅದೇಕೆ ಹಾಗೆ? ಅವರ ಹೃದಯಗಳಿಗೆ (ಕಾಪಟ್ಯದ) ರೋಗ ತಗುಲಿದೆಯೇ? ಅಥವಾ ಅವರು ಸಂಶಯ ಪೀಡಿತರಾಗಿರುವರೇ? ಅಥವಾ ಅಲ್ಲಾಹ್ ಮತ್ತು ಅವನ ದೂತರು ಅವರಿಗೆ ಅನ್ಯಾಯ ಮಾಡಿಯಾರು ಎಂಬ ಭಯ ಅವರನ್ನು ಕಾಡುತ್ತಿದೆಯೇ? ಅಲ್ಲ, ಬದಲಾಗಿ ಸ್ವತಃ ಅವರೇ ಅನ್ಯಾಯ ಮಾಡುವ ಜನರಾಗಿರುವರು. {50}

إِنَّمَا كَانَ قَوْلَ الْمُؤْمِنِينَ إِذَا دُعُوا إِلَى اللَّهِ وَرَسُولِهِ لِيَحْكُمَ بَيْنَهُمْ أَنْ يَقُولُوا سَمِعْنَا وَأَطَعْنَا ۚ وَأُولَٰئِكَ هُمُ الْمُفْلِحُونَ

ಪೈಗಂಬರರು, ನಿಜವಾದ ವಿಶ್ವಾಸಿಗಳ ನಡುವಿನ ವ್ಯಾಜ್ಯವನ್ನು ಇತ್ಯರ್ಥಿಸಲು ಅಲ್ಲಾಹ್ ನೆಡೆಗೆ ಮತ್ತು ಪೈಗಂಬರರೆಡೆಗೆ ಕರೆದಾಗ ಅವರು (ಯಾವ ನೆಪವನ್ನೂ ಒಡ್ಡದೆ) 'ನಮಗೆ ಮನವರಿಕೆಯಾಗಿದೆ; ನಾವು ಆದೇಶ ಪಾಲಿಸುವೆವು' ಎಂದಷ್ಟೇ ಹೇಳುವರು! ಹೌದು, ನಿಜವಾಗಿ ಸಫಲರಾಗುವವರು ಅವರೇ ಆಗಿರುವರು. {51}

وَمَنْ يُطِعِ اللَّهَ وَرَسُولَهُ وَيَخْشَ اللَّهَ وَيَتَّقْهِ فَأُولَٰئِكَ هُمُ الْفَائِزُونَ

ಯಾರು ಅಲ್ಲಾಹ್ ಮತ್ತು ಅವನ ದೂತನ ಆದೇಶ ಪಾಲಿಸುವರೋ, ಅಲ್ಲಾಹ್ ನ (ಶಿಕ್ಷೆಯ) ಭಯವಿರಿಸಿಕೊಳ್ಳುವರೋ ಮತ್ತು ಅಲ್ಲಾಹ್ ನ ವಿಷಯದಲ್ಲಿ ಜಾಗರೂಕತೆಯಿಂದ ನಡೆದುಕೊಳ್ಳುವರೋ, ವಿಜಯಿಗಳಾಗುವವರು ಅವರೇ ಆಗಿರುವರು. {52}

وَأَقْسَمُوا بِاللَّهِ جَهْدَ أَيْمَانِهِمْ لَئِنْ أَمَرْتَهُمْ لَيَخْرُجُنَّ ۖ قُلْ لَا تُقْسِمُوا ۖ طَاعَةٌ مَعْرُوفَةٌ ۚ إِنَّ اللَّهَ خَبِيرٌ بِمَا تَعْمَلُونَ

ಪೈಗಂಬರರೇ, ಒಂದು ವೇಳೆ ನೀವು ಅವರಿಗೆ (ಅಂದರೆ ವಿಶ್ವಾಸಿಗಳಂತೆ ನಟಿಸುವವರಿಗೆ) ಏನಾದರೂ ಆದೇಶ ನೀಡಿದರೆ 'ನಾವು (ಆದೇಶ ಪಾಲಿಸಲು) ಖಂಡಿತವಾಗಿ ಹೊರಟು ಬರುವೆವು' ಎಂದು (ಆ ಕಪಟಿಗಳು) ಅಲ್ಲಾಹ್ ನ ಹೆಸರಲ್ಲಿ ಆಣೆಗಳನ್ನು ಹಾಕಿ ದೃಢ ಪ್ರತಿಜ್ಞೆಗಳನ್ನು ಮಾಡಿ (ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ)! ಪೈಗಂಬರರೇ, ಅವರೊಡನೆ - ನೀವು ಅಷ್ಟೊಂದು ಆಣೆ ಹಾಕುವ ಅಗತ್ಯವಿಲ್ಲ; ಎಲ್ಲರೂ ತೋರುವಂತಹ ವಿಧೇಯತೆ ತೋರಿದರೆ ಸಾಕು; ನೀವು ಎಸಗುತ್ತಿರುವ ಕೃತ್ಯಗಳ ಬಗ್ಗೆ ಅಲ್ಲಾಹ್ ನು ಚೆನ್ನಾಗಿಯೇ ತಿಳಿದಿದ್ದಾನೆ - ಎಂದು ಹೇಳಿರಿ. {53}

قُلْ أَطِيعُوا اللَّهَ وَأَطِيعُوا الرَّسُولَ ۖ فَإِنْ تَوَلَّوْا فَإِنَّمَا عَلَيْهِ مَا حُمِّلَ وَعَلَيْكُمْ مَا حُمِّلْتُمْ ۖ وَإِنْ تُطِيعُوهُ تَهْتَدُوا ۚ وَمَا عَلَى الرَّسُولِ إِلَّا الْبَلَاغُ الْمُبِينُ

(ಪೈಗಂಬರರೇ, ಈ ಜನರಿಗೆ) ನೀವು ತಾಕೀತು ಮಾಡಿ: ಜನರೇ, ಅಲ್ಲಾಹ್ ನ ಆದೇಶಗಳ ಅನುಸರಣೆ ಮಾಡಿರಿ; ಹಾಗೆಯೇ ಅಲ್ಲಾಹ್ ನ ದೂತನಾದ (ಈ ಪೈಗಂಬರರನ್ನೂ) ಅನುಸರಿಸಿರಿ. ಇನ್ನು ನೀವು ಕಡಗಣಿಸಿ ಮುಖ ತಿರುಗಿಸಿಕೊಂಡರೆ (ನಿಮಗೆ ತಿಳಿದಿರಲಿ), ದೂತರಿಗೆ ವಹಿಸಲಾದ ಕರ್ತವ್ಯಕ್ಕೆ ಮಾತ್ರ ದೂತರು ಹೊಣೆಗಾರರು; ಮತ್ತು ನಿಮಗೆ ವಹಿಸಲಾದ ಕರ್ತವ್ಯಕ್ಕೆ ನೀವೇ ಹೊಣೆಗಾರರು! ಇನ್ನು ದೂತರನ್ನು ನೀವು ಅನುಸರಿಸಿದರೆ ಸರಿದಾರಿ ಪಡೆಯುವಿರಿ. (ನಿಮಗೆ ತಿಳಿದಿರಬೇಕಾದ ಅಂಶವೆಂದರೆ, ಜನರಿಗೆ) ತಲುಪಿಸಬೇಕಾದ ವಿಷಯವನ್ನು ಬಹಳ ಸ್ಪಷ್ಟವಾಗಿ ತಲುಪಿಸಿ ಬಿಡುವುದು ಮಾತ್ರವೇ ಹೊರತು ದೂತರ ಮೇಲೆ ಬೇರಾವ ಹೊಣೆಗಾರಿಕೆಯೂ ಇರುವುದಿಲ್ಲ! {54}

وَعَدَ اللَّهُ الَّذِينَ آمَنُوا مِنْكُمْ وَعَمِلُوا الصَّالِحَاتِ لَيَسْتَخْلِفَنَّهُمْ فِي الْأَرْضِ كَمَا اسْتَخْلَفَ الَّذِينَ مِنْ قَبْلِهِمْ وَلَيُمَكِّنَنَّ لَهُمْ دِينَهُمُ الَّذِي ارْتَضَىٰ لَهُمْ وَلَيُبَدِّلَنَّهُمْ مِنْ بَعْدِ خَوْفِهِمْ أَمْنًا ۚ يَعْبُدُونَنِي لَا يُشْرِكُونَ بِي شَيْئًا ۚ وَمَنْ كَفَرَ بَعْدَ ذَٰلِكَ فَأُولَٰئِكَ هُمُ الْفَاسِقُونَ

ಜನರೇ, ನಿಮ್ಮ ಪೈಕಿ ವಿಶ್ವಾಸಿಗಳಾಗಿದ್ದುಕೊಂಡು ಸತ್ಕರ್ಮಗಳಲ್ಲಿ ನಿರತರಾದವರಿಗೆ ಅಲ್ಲಾಹ್ ನು (ಪೈಗಂಬರ ಮೂಲಕ) ಒಂದು ವಾಗ್ದಾನ ಮಾಡಿರುತ್ತಾನೆ. ಅದೇನೆಂದರೆ ಅವರಿಗಿಂತ ಮುಂಚಿನವರಿಗೆ ನೀಡಿದಂತೆಯೇ ಅವರಿಗೂ ಸಹ ಆ ಭೂಪ್ರದೇಶದ ಆಧಿಪತ್ಯ (ಆಡಳಿತ) ನೀಡಲಿದ್ದಾನೆ; ಮಾತ್ರವಲ್ಲ, ಅಲ್ಲಾಹ್ ನು ತಾನು ಅವರಿಗಾಗಿ ಬಯಸಿದ (ಇಸ್ಲಾಮ್) ಧರ್ಮವನ್ನು ಅವರ ಪಾಲಿಗೆ ಸುಸ್ಥಿರ ಮತ್ತು ಸಶಕ್ತಗೊಳಿಸಲಿದ್ದಾನೆ; ಅವರು ಈಗ ಎದುರಿಸುತ್ತಿರುವ ಆತಂಕದ ಸ್ಥಿತಿಯನ್ನು ಮುಂದು ಅವರ ಪಾಲಿಗೆ ಸುಭದ್ರತೆಯ, ನೆಮ್ಮದಿಯ ದಿನಗಳಾಗಿ ಮಾರ್ಪಡಿಸಲಿದ್ದಾನೆ (ಎಂಬುದಾಗಿತ್ತು ಆ ವಾಗ್ದಾನ)! [ಅದನ್ನು ಉಳಿಸಿಕೊಳ್ಳಲು ಪಾಲಿಸ ಬೇಕಾದ ಷರತ್ತೆಂದರೆ] ಅವರು ನನ್ನನ್ನು ಮಾತ್ರವೇ ಆರಾಧಿಸುತ್ತಿರಬೇಕು ಮತ್ತು ನನ್ನ ದೇವತ್ವದಲ್ಲಿ ಬೇರೆ ಯಾವ (ಮಿಥ್ಯ ದೇವರುಗಳನ್ನೂ) ಸೇರಿಸಬಾರದು! ಇನ್ನು (ಆ ವಾಗ್ದಾನ ಪೂರ್ಣಗೊಂಡ) ನಂತರ ಯಾರಾದರೂ ಧಿಕ್ಕಾರದ ನಿಲುವು ತಾಳಿದರೆ ಅವರೇ ಭ್ರಷ್ಟ ಜನರಾಗಿರುವರು. {55}

وَأَقِيمُوا الصَّلَاةَ وَآتُوا الزَّكَاةَ وَأَطِيعُوا الرَّسُولَ لَعَلَّكُمْ تُرْحَمُونَ

(ಹೃದಯಗಳಲ್ಲಿ ಕಾಪಟ್ಯದ ರೋಗವಿರುವ ಜನರೇ, ಇತರ ವಿಶ್ವಾಸಿಗಳಂತೆ) ನೀವೂ ಸಹ ನಮಾಝ್ ಗಳನ್ನು ಶ್ರದ್ಧೆಯಿಂದ ಪಾಲಿಸಿರಿ ಮತ್ತು ಝಕಾತ್ ಪಾವತಿಸಿರಿ; ಮತ್ತು ನಮ್ಮ ದೂತರಾದ (ಈ ಪೈಗಂಬರರ ಆದೇಶಗಳನ್ನು ಇತರ ವಿಶ್ವಾಸಿಗಳು ಅನುಸರಿಸುವಂತೆಯೇ) ನೀವೂ ಸಹ ಅನುಸರಿಸಿರಿ. ಹಾಗಾದರೆ ನೀವು ಕರುಣೆಗೆ ಪಾತ್ರರಾಗಲೂ ಬಹುದು. {56}

لَا تَحْسَبَنَّ الَّذِينَ كَفَرُوا مُعْجِزِينَ فِي الْأَرْضِ ۚ وَمَأْوَاهُمُ النَّارُ ۖ وَلَبِئْسَ الْمَصِيرُ

ಧಿಕ್ಕಾರ ತೋರಿದವರು (ಅಲ್ಲಾಹ್ ನ ಧರ್ಮವನ್ನು) ಈ ನೆಲದಲ್ಲಿ ಸೋಲಿಸಿ ಬಿಡುತ್ತಾರೆಂದು ಗುಮಾನಿಸುವುದೂ ಬೇಡ, [ಏಕೆಂದರೆ ಅದು ಅಲ್ಲಾಹ್ ನ ವಾಗ್ದಾನದಂತೆ ತಲೆ ಎತ್ತಿ ನಿಲ್ಲಲಿದೆ. ಇಲ್ಲಿ ಸೋಲಲಿರುವವರು ಅವರೇ]! ಮುಂದೆ ಸಹ ಅವರಿಗೆ ಅಂತಿಮ ನೆಲೆಯಾಗಿ ನರಕವೇ ಗತಿ! ಎಷ್ಟೊಂದು ನಿಕೃಷ್ಟ ನೆಲೆಯದು! {57}

يَا أَيُّهَا الَّذِينَ آمَنُوا لِيَسْتَأْذِنْكُمُ الَّذِينَ مَلَكَتْ أَيْمَانُكُمْ وَالَّذِينَ لَمْ يَبْلُغُوا الْحُلُمَ مِنْكُمْ ثَلَاثَ مَرَّاتٍ ۚ مِنْ قَبْلِ صَلَاةِ الْفَجْرِ وَحِينَ تَضَعُونَ ثِيَابَكُمْ مِنَ الظَّهِيرَةِ وَمِنْ بَعْدِ صَلَاةِ الْعِشَاءِ ۚ ثَلَاثُ عَوْرَاتٍ لَكُمْ ۚ لَيْسَ عَلَيْكُمْ وَلَا عَلَيْهِمْ جُنَاحٌ بَعْدَهُنَّ ۚ طَوَّافُونَ عَلَيْكُمْ بَعْضُكُمْ عَلَىٰ بَعْضٍ ۚ كَذَٰلِكَ يُبَيِّنُ اللَّهُ لَكُمُ الْآيَاتِ ۗ وَاللَّهُ عَلِيمٌ حَكِيمٌ

ವಿಶ್ವಾಸಿಗಳಾದ ಜನರೇ! ನಿಮ್ಮ ಮನೆಯಾಳುಗಳು ಮತ್ತು ಇನ್ನೂ ಪ್ರೌಢಾವಸ್ಥೆಗೆ ತಲುಪಿರದ ಚಿಕ್ಕ ಮಕ್ಕಳು ನಿಮ್ಮ (ಕೊಠಡಿಗಳಿಗೆ) ಪ್ರವೇಶಿಸುವಾಗ ಮೂರು ವೇಳೆಗಳಲ್ಲಿ ನಿಮ್ಮಿಂದ ಅನುಮತಿ ಪಡೆಯುವುದು ಅಗತ್ಯ. ಅವೆಂದರೆ ಫಜ್‍ರ್ ನಮಾಝ್ ಗಿಂತ ಮುಂಚಿನ ಸಮಯ, ನೀವು ಉಡುಪುಗಳನ್ನು ಕಳಚಿಡುವ (ಬಿಸಿಲ ಬೇಗೆಯ) ಮಧ್ಯಾಹ್ನದ ಸಮಯ ಹಾಗೂ ಇಶಾ ನಮಾಝ್ ನ ನಂತರದ ಸಮಯ. ಅವು ಮೂರು ನಿಮ್ಮ ಖಾಸಗಿ ಸಮಯಗಳು. ಅವುಗಳ ಹೊರತು ಇತರ ಸಮಯಗಳಲ್ಲಿ (ನಿಮ್ಮ ಸೇವಕ ಸೇವಕಿಯರು ಹಾಗೂ ಚಿಕ್ಕ ಮಕ್ಕಳು ಅನುಮತಿ ಪಡೆಯದೆ ನಿಮ್ಮ ಕೊಠಡಿಗಳಿಗೆ ಪ್ರವೇಶಿಸಿದರೆ) ಅವರಿಗಾಗಲಿ ನಿಮಗಾಗಲಿ ದೋಷವಿಲ್ಲ. [ಒಂದೇ ಮನೆಯವರಾದ್ದರಿಂದ ಸಹಜವಾಗಿಯೇ] ನೀವೆಲ್ಲರೂ ಪರಸ್ಪರ ಒಬ್ಬರ ಬಳಿಗೊಬ್ಬರು ಹೋಗುತ್ತಾ ಬರುತ್ತಾ ಇರಬೇಕಾಗುತ್ತದೆ. ಅಲ್ಲಾಹ್ ನು ನಿಮಗೆ ತನ್ನ ಆದೇಶಗಳನ್ನು ಹಾಗೆ ಸ್ಪಷ್ಟಪಡಿಸುತ್ತಾ ಇರುತ್ತಾನೆ. ಅಲ್ಲಾಹ್ ನು ಎಲ್ಲಾ ತಿಳಿದವನೂ, ವಿವೇಕಪೂರ್ಣನೂ ಅಗಿರುವನು. {58}

وَإِذَا بَلَغَ الْأَطْفَالُ مِنْكُمُ الْحُلُمَ فَلْيَسْتَأْذِنُوا كَمَا اسْتَأْذَنَ الَّذِينَ مِنْ قَبْلِهِمْ ۚ كَذَٰلِكَ يُبَيِّنُ اللَّهُ لَكُمْ آيَاتِهِ ۗ وَاللَّهُ عَلِيمٌ حَكِيمٌ

ಇನ್ನು, ನಿಮ್ಮ ಮಕ್ಕಳು ಪ್ರೌಢಾವಸ್ಥೆಗೆ ತಲುಪಿದರೆ ಅವರೂ ಸಹ ಅವರಿಗಿಂತ ದೊಡ್ಡವರು ಅನುಮತಿ ಪಡೆಯುತಿದ್ದಂತೆಯೇ ಪ್ರವೇಶಿಸಲು (ಎಲ್ಲಾ ವೇಳೆಗಳಲ್ಲಿ) ಅನುಮತಿ ಪಡೆಯಲಿ. ಅಲ್ಲಾಹ್ ನು ನಿಮಗೆ ತನ್ನ ಆದೇಶಗಳನ್ನು ಹಾಗೆ ಸ್ಪಷ್ಟಪಡಿಸುತ್ತಾ ಇರುತ್ತಾನೆ. ಅಲ್ಲಾಹ್ ನು ಎಲ್ಲಾ ತಿಳಿದವನೂ, ವಿವೇಕಪೂರ್ಣನೂ ಅಗಿರುವನು. {59}

وَالْقَوَاعِدُ مِنَ النِّسَاءِ اللَّاتِي لَا يَرْجُونَ نِكَاحًا فَلَيْسَ عَلَيْهِنَّ جُنَاحٌ أَنْ يَضَعْنَ ثِيَابَهُنَّ غَيْرَ مُتَبَرِّجَاتٍ بِزِينَةٍ ۖ وَأَنْ يَسْتَعْفِفْنَ خَيْرٌ لَهُنَّ ۗ وَاللَّهُ سَمِيعٌ عَلِيمٌ

ವಿವಾಹದ ಬಯಕೆ ಹೊಂದಿರದ ಹಿರಿಯ ಮಹಿಳೆಯರು, ಸೌಂದರ್ಯ ಪ್ರದರ್ಶನದ ಉದ್ದೇಶವಿಲ್ಲದೆ, ತಮ್ಮ [ಎದೆಭಾಗಗಳನ್ನು ಮುಚ್ಚಲು ಉಪಯೋಗಿಸುವ] ಮೇಲ್ಹೊದಿಕೆಗಳನ್ನು ಕಳಚಿಟ್ಟರೆ ಅದರಲ್ಲಿ ಅವರಿಗೆ ದೋಷವಿಲ್ಲ. ಇನ್ನು ಅವರು ಸೂಕ್ಷ್ಮತೆ ಪಾಲಿಸಿದರೆ ಅದುವೇ ಅವರ ಪಾಲಿಗೆ ಉತ್ತಮ! ಅಲ್ಲಾಹ್ ನು (ತಪ್ಪಿತಸ್ಥರ ಪ್ರಾರ್ಥನೆಗಳನ್ನು) ಆಲಿಸುವವನೂ ಎಲ್ಲಾ ವಿಷಯಗಳನ್ನು ಬಲ್ಲವನೂ ಆಗಿರುವನು. {60}

لَيْسَ عَلَى الْأَعْمَىٰ حَرَجٌ وَلَا عَلَى الْأَعْرَجِ حَرَجٌ وَلَا عَلَى الْمَرِيضِ حَرَجٌ وَلَا عَلَىٰ أَنْفُسِكُمْ أَنْ تَأْكُلُوا مِنْ بُيُوتِكُمْ أَوْ بُيُوتِ آبَائِكُمْ أَوْ بُيُوتِ أُمَّهَاتِكُمْ أَوْ بُيُوتِ إِخْوَانِكُمْ أَوْ بُيُوتِ أَخَوَاتِكُمْ أَوْ بُيُوتِ أَعْمَامِكُمْ أَوْ بُيُوتِ عَمَّاتِكُمْ أَوْ بُيُوتِ أَخْوَالِكُمْ أَوْ بُيُوتِ خَالَاتِكُمْ أَوْ مَا مَلَكْتُمْ مَفَاتِحَهُ أَوْ صَدِيقِكُمْ ۚ لَيْسَ عَلَيْكُمْ جُنَاحٌ أَنْ تَأْكُلُوا جَمِيعًا أَوْ أَشْتَاتًا ۚ فَإِذَا دَخَلْتُمْ بُيُوتًا فَسَلِّمُوا عَلَىٰ أَنْفُسِكُمْ تَحِيَّةً مِنْ عِنْدِ اللَّهِ مُبَارَكَةً طَيِّبَةً ۚ كَذَٰلِكَ يُبَيِّنُ اللَّهُ لَكُمُ الْآيَاتِ لَعَلَّكُمْ تَعْقِلُونَ

[ಖಾಸಗಿ ಸಮಯವನ್ನು ಗೌರವಿಸುವ ಹಾಗೂ ಮನೆಗಳನ್ನು ಪ್ರವೇಶಿಸುವ ಕಾನೂನು ಹಾಗಿದ್ದರೂ], ಕುರುಡರು, ಕುಂಟರು ಹಾಗೂ ರೋಗಿಗಳು (ಅಂದರೆ ಅಸಹಾಯಕ ಸ್ಥಿತಿಯಲ್ಲಿರುವವರು) ನಿಮ್ಮ ಮನೆಗಳಲ್ಲಿ ಆಹಾರ ಸೇವನೆ ಮಾಡಿದರೆ ಅವರಿಗಾಗಲಿ ನಿಮಗಾಗಲಿ ಯಾವುದೇ ದೋಷವಿಲ್ಲ. ಅಂತೆಯೇ, ನೀವು ನಿಮ್ಮ (ಮಕ್ಕಳ) ಮನೆಗಳಲ್ಲಿ, ನಿಮ್ಮ ತಂದೆ ತಾತಂದಿರ ಮನೆಗಳಲ್ಲಿ, ನಿಮ್ಮ ತಾಯಂದಿರ ಮನೆಗಳಲ್ಲಿ, ನಿಮ್ಮ ಸಹೋದರ ಸಹೋದರಿಯರ ಮನೆಗಳಲ್ಲಿ, ನಿಮ್ಮ ತಂದೆಯ ಸಹೋದರ ಸಹೋದರಿಯರ ಮನೆಗಳಲ್ಲಿ, ನಿಮ್ಮ ತಾಯಿಯ ಸಹೋದರ ಸಹೋದರಿಯರ ಮನೆಗಳಲ್ಲಿ, ಮತ್ತು ಯಾರ ಮನೆಯ ಕೀಲಿಕೈಗಳನ್ನು (ಸಕಲ ಅನುಮತಿಗಳೊಂದಿಗೆ) ನಿಮ್ಮ ಸುಪರ್ದಿಗೆ ಒಪ್ಪಿಸಲಾಗಿದೆಯೋ ಅಂತಹವರ ಮನೆಗಳಲ್ಲಿ ಹಾಗೂ ನಿಮ್ಮ ಆಪ್ತ ಮಿತ್ರರ ಮನೆಗಳಲ್ಲಿ ಆಹಾರ ಸೇವಿಸಿದರೆ ಅದು ನಿಮಗೆ ಪಾಪವಲ್ಲ. ಹಾಗೆ ಆಹಾರ ಸೇವಿಸುವಾಗ ನೀವು (ಆ ಮನೆಯವರೊಂದಿಗೆ) ಒಟ್ಟಾಗಿ ಕುಳಿತು ತಿಂದರೂ ಪ್ರತ್ಯೇಕವಾಗಿ ಕುಳಿತು ತಿಂದರೂ ಅಭ್ಯಂತರವಿಲ್ಲ. ಆದರೆ ಮನೆಗಳನ್ನು ಪ್ರವೇಶಿಸುವಾಗ ನಿಮ್ಮವರಿಗೆ (ಅಂದರೆ ಮನೆಯಲ್ಲಿರುವ ನಿಮ್ಮ ನೆಂಟರಿಷ್ಟರಿಗೆ) ಶುಭ ಕೋರಿರಿ - (ಎಂತಹ ಶುಭಕೋರಿಕೆಯೆಂದರೆ) ಅಲ್ಲಾಹ್ ನ ಕಡೆಯಿಂದಿರುವ ಅನುಗ್ರಹೀತವಾದ ನಿರ್ಮಲವಾದ ಹಾರೈಕೆಗಳೊಂದಿಗಿನ ಶುಭ ಕೋರಿಕೆ! ಹೌದು, ನೀವು ಚಿಂತಿಸುವವರಾಗಲು ಅಲ್ಲಾಹ್ ನು ಹೀಗೆ ತನ್ನ ವಚನಗಳನ್ನು ನಿಮಗೆ ವಿವರಿಸುತ್ತಾನೆ. {61}

إِنَّمَا الْمُؤْمِنُونَ الَّذِينَ آمَنُوا بِاللَّهِ وَرَسُولِهِ وَإِذَا كَانُوا مَعَهُ عَلَىٰ أَمْرٍ جَامِعٍ لَمْ يَذْهَبُوا حَتَّىٰ يَسْتَأْذِنُوهُ ۚ إِنَّ الَّذِينَ يَسْتَأْذِنُونَكَ أُولَٰئِكَ الَّذِينَ يُؤْمِنُونَ بِاللَّهِ وَرَسُولِهِ ۚ فَإِذَا اسْتَأْذَنُوكَ لِبَعْضِ شَأْنِهِمْ فَأْذَنْ لِمَنْ شِئْتَ مِنْهُمْ وَاسْتَغْفِرْ لَهُمُ اللَّهَ ۚ إِنَّ اللَّهَ غَفُورٌ رَحِيمٌ

ಅಲ್ಲಾಹ್ ನಲ್ಲಿ ಮತ್ತು ಅವನ ದೂತರಲ್ಲಿ ದೃಢ ವಿಶ್ವಾಸವಿಟ್ಟು, ಯಾವುದಾದರೂ ಸಾಮೂಹಿಕವಾದ ಕೆಲಸದಲ್ಲಿ ಪೈಗಂಬರರ ಜೊತೆಯಲ್ಲಿದ್ದಾಗ ಪೈಗಂಬರರ ಅನುಮತಿ ಪಡೆಯದೆ ಅಲ್ಲಿಂದ ಹೊರಹೋಗದವರೇ ಯಥಾರ್ಥ ವಿಶ್ವಾಸಿಗಳು! ಓ ಪೈಗಂಬರರೇ, (ಹೊರಹೋಗಲು) ಈಗ ನಿಮ್ಮ ಅನುಮತಿ ಕೋರುತ್ತಿರುವವರು ಅಲ್ಲಾಹ್ ನಲ್ಲಿ ಹಾಗೂ ಅವನ ದೂತರಲ್ಲಿ ವಿಶ್ವಾಸ ಇರುವವರೇ ಆಗಿರುವರು. ಆದ್ದರಿಂದ, ಪೈಗಂಬರರೇ, ಅವರಲ್ಲಿ ಯಾರಾದರೂ ತಮ್ಮ ಖಾಸಗಿ ಕೆಲಸಕ್ಕಾಗಿ ನಿಮ್ಮ ಅನುಮತಿ ಕೋರಿದರೆ, ನೀವು ಯಾರಿಗೆ ಅನುಮತಿ ನೀಡಲು ಬಯಸುವಿರೋ ಅನುಮತಿ ನೀಡಿರಿ. ಆದರೆ ಅಂತಹವರ ತಪ್ಪನ್ನು ಕ್ಷಮಿಸಿ ಬಿಡಲು ಅಲ್ಲಾಹ್ ನೊಂದಿಗೆ ಪ್ರಾರ್ಥಿಸಿರಿ. ಖಂಡಿತವಾಗಿ, ಅಲ್ಲಾಹ್ ನು ಕ್ಷಮೆ ನೀಡುವವನೂ ನಿರಂತರ ಕರುಣೆ ತೋರುವವನೂ ಆಗಿರುವನು. {62}

لَا تَجْعَلُوا دُعَاءَ الرَّسُولِ بَيْنَكُمْ كَدُعَاءِ بَعْضِكُمْ بَعْضًا ۚ قَدْ يَعْلَمُ اللَّهُ الَّذِينَ يَتَسَلَّلُونَ مِنْكُمْ لِوَاذًا ۚ فَلْيَحْذَرِ الَّذِينَ يُخَالِفُونَ عَنْ أَمْرِهِ أَنْ تُصِيبَهُمْ فِتْنَةٌ أَوْ يُصِيبَهُمْ عَذَابٌ أَلِيمٌ

(ಜನರೇ), ಅಲ್ಲಾಹ್ ನ ದೂತರು ನಿಮ್ಮ ನಡುವೆ ಕರೆ ನೀಡಿದರೆ ಅದನ್ನು ನೀವು ಪರಸ್ಪರರಿಗೆ ನೀಡುವ ಕರೆಯಂತೆ ಭಾವಿಸ ಬೇಡಿರಿ. ನಿಮ್ಮ ಪೈಕಿ ಜನರ ಮರೆಯಲ್ಲಿ ಗೌಪ್ಯವಾಗಿ ನುಣುಚಿಕೊಂಡು ಹೋಗುವವರ ಬಗ್ಗೆ ಅಲ್ಲಾಹ್ ನಿಗೆ ತಿಳಿದಿದೆ. ದೂತರ ಆದೇಶಕ್ಕೆ ವಿರುದ್ಧವಾಗಿ ನಡೆಯುವವರು ತಮ್ಮ ಮೇಲೆ ಯಾವುದಾದರೂ ಸಂಕಷ್ಟವೆರಗುವ ಬಗ್ಗೆ ಅಥವಾ ಬಹಳ ಯಾತನಾಮಯ ಶಿಕ್ಷೆಗೆ ಗುರಿಯಾಗುವ ಬಗ್ಗೆ ಎಚ್ಚೆತ್ತುಕೊಳ್ಳಲಿ. {63}

أَلَا إِنَّ لِلَّهِ مَا فِي السَّمَاوَاتِ وَالْأَرْضِ ۖ قَدْ يَعْلَمُ مَا أَنْتُمْ عَلَيْهِ وَيَوْمَ يُرْجَعُونَ إِلَيْهِ فَيُنَبِّئُهُمْ بِمَا عَمِلُوا ۗ وَاللَّهُ بِكُلِّ شَيْءٍ عَلِيمٌ

ಇನ್ನು ಜಾಗೃತರಾಗಿರಿ! ನಿಜವೇನೆಂದರೆ ಅಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲವೂ ಅಲ್ಲಾಹ್ ನ ಒಡೆತನದಲ್ಲಿದೆ. ಇಂದು ನೀವು ಯಾವ ಸ್ಥಿತಿಯಲ್ಲಿರುವಿರಿ ಎಂಬುದು ಅಲ್ಲಾಹ್ ನಿಗೆ ತಿಳಿದಿದೆ. ಅವನೆಡೆಗೆ ಹಿಂದಿರುಗಿ ಹೋಗಲಿರುವ ದಿನ ಅವರು ಏನೆಲ್ಲ ಕರ್ಮವೆಸಗಿದವರು ಎಂಬುದು ಅವರಿಗೆ ಅಲ್ಲಾಹ್ ನೇ ತಿಳಿಸಲಿರುವನು. ಹೌದು, ಅಲ್ಲಾಹ್ ನು ಎಲ್ಲಾ ವಿಷಯಗಳ ಕುರಿತು ಚೆನ್ನಾಗಿ ತಿಳಿದಿರುವನು. {64}


---

ಅನುವಾದಿತ ಸೂರಃ ಗಳು

    Featured post

    ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...