تـرجمـة سورة لقمَان من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت
سـهل الفهـم من غيـر الـرجـوع إلى كتاب التفسيـر
| ಸೂರಃ ಲುಕ್‌ಮಾನ್ | ಪವಿತ್ರ ಕುರ್‌ಆನ್ ನ 31 ನೆಯ ಸೂರಃ | ಇದರಲ್ಲಿ ಒಟ್ಟು 34 ಆಯತ್ ಗಳು ಇವೆ |
ಅಪಾರ ದಯಾಳುವೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹನ ನಾಮದೊಂದಿಗೆ (ಆರಂಭಿಸುತ್ತೇನೆ)!
الم
ಅಲಿಫ್ - ಲಾಮ್ - ಮೀಮ್! {1}
تِلْكَ آيَاتُ الْكِتَابِ الْحَكِيمِ
ಇವು ವಿವೇಕಪೂರ್ಣವಾದ ಒಂದು ಗ್ರಂಥದ ವಚನಗಳು! {2}
هُدًى وَرَحْمَةً لِلْمُحْسِنِينَ
ಸಜ್ಜನರ ಪಾಲಿಗೆ ಇದು ಮಾರ್ಗದರ್ಶನವಾಗಿದೆ; ಒಂದು ಅನುಗ್ರಹಭರಿತ ಗ್ರಂಥವಾಗಿದೆ. {3}
الَّذِينَ يُقِيمُونَ الصَّلَاةَ وَيُؤْتُونَ الزَّكَاةَ وَهُمْ بِالْآخِرَةِ هُمْ يُوقِنُونَ
ಯಾರು ಶ್ರದ್ಧಾಪೂರ್ವಕವಾಗಿ (ಸಮಯಕ್ಕೆ ಸರಿಯಾಗಿ) ನಮಾಝ್ ನಿರ್ವಹಿಸುತ್ತಾರೋ, ಝಕಾತ್ ನೀಡುತ್ತಾರೋ ಹಾಗೂ ಪರಲೋಕದ ವಿಷಯವಾಗಿ ದೃಢ ನಂಬಿಕೆ ಹೊಂದಿರುತ್ತಾರೋ ಅವರೇ ಅಂತಹ ಸಜ್ಜನರು. {4}
أُولَٰئِكَ عَلَىٰ هُدًى مِنْ رَبِّهِمْ ۖ وَأُولَٰئِكَ هُمُ الْمُفْلِحُونَ
ತಮ್ಮ ಕರ್ತಾರನ ಮಾರ್ಗದರ್ಶನ ಪಡೆದವರು ಹಾಗೂ (ಪರಲೋಕದಲ್ಲಿ) ಯಶಸ್ಸು ಸಾಧಿಸಲಿರುವವರು ಅವರೇ. {5}
وَمِنَ النَّاسِ مَنْ يَشْتَرِي لَهْوَ الْحَدِيثِ لِيُضِلَّ عَنْ سَبِيلِ اللَّهِ بِغَيْرِ عِلْمٍ وَيَتَّخِذَهَا هُزُوًا ۚ أُولَٰئِكَ لَهُمْ عَذَابٌ مُهِينٌ
ಜನರಲ್ಲಿ ಇನ್ನು ಕೆಲವರಿದ್ದಾರೆ. ಅವರು ನಿರರ್ಥಕ ವಿಷಯಗಳ ವ್ಯಾಪಾರಿಗಳು. ಆ ಮೂಲಕ ಅವರು ಅಲ್ಲಾಹ್ ನು ತೋರಿದ ನೇರ ಮಾರ್ಗದಲ್ಲಿರುವ ಜನರ ದಾರಿ ತಪ್ಪಿಸಿ ಬಿಡುತ್ತಾರೆ. ಅದರ ಪರಿಣಾಮದ ಅರಿವು ಅವರಿಗಿಲ್ಲ. ಅದನ್ನು ಒಂದು ಹಾಸ್ಯಾಸ್ಪದ ವಿಷಯವಾಗಿ ಕಾಣುತ್ತಾರೆ. ಅಂತಹವರಿಗೆ ಅಪಮಾನಕಾರಿ ಶಿಕ್ಷೆ ಕಾದಿದೆ. {6}
وَإِذَا تُتْلَىٰ عَلَيْهِ آيَاتُنَا وَلَّىٰ مُسْتَكْبِرًا كَأَنْ لَمْ يَسْمَعْهَا كَأَنَّ فِي أُذُنَيْهِ وَقْرًا ۖ فَبَشِّرْهُ بِعَذَابٍ أَلِيمٍ
(ಅವರಲ್ಲಿ) ಒಬ್ಬಾತನ ಮುಂದೆ ನಮ್ಮ ವಚನಗಳನ್ನು ಓದಿ ಕೇಳಿಸಿದಾಗ ಅವನಿಗದು ಕೇಳಿಸಿಯೇ ಇಲ್ಲವೆಂಬಂತೆ, ಅವನ ಎರಡೂ ಕಿವಿಗಳಿಗೆ ಕಿವುಡಾಗಿದೆಯೋ ಎಂಬಂತೆ ಅವನು ದುರಹಂಕಾರ ತೋರುತ್ತಾ ಮುಖ ತಿರುಗಿಸಿಕೊಳ್ಳುತ್ತಾನೆ. ಅವನಿಗೆ, ಪೈಗಂಬರರೇ, ನೀವು ವೇದನಾಯುಕ್ತ ಶಿಕ್ಷೆಯ ಬಗ್ಗೆ 'ಶುಭಸುದ್ದಿ' ತಿಳಿಸಿಬಿಡಿ. {7}
إِنَّ الَّذِينَ آمَنُوا وَعَمِلُوا الصَّالِحَاتِ لَهُمْ جَنَّاتُ النَّعِيمِ
(ಇನ್ನು ನಮ್ಮ ವಚನಗಳಲ್ಲಿ) ವಿಶ್ವಾಸವಿಟ್ಟು ಅದರ ಜೊತೆಗೆ ಸತ್ಕಾರ್ಯಗಳನ್ನು ಕೈಗೊಂಡವರಿಗೆ ಸುಖಾನಂದ ತುಂಬಿದ ಸ್ವರ್ಗೋದ್ಯಾನಗಳಿವೆ. {8}
خَالِدِينَ فِيهَا ۖ وَعْدَ اللَّهِ حَقًّا ۚ وَهُوَ الْعَزِيزُ الْحَكِيمُ
ಅದರಲ್ಲಿ ಅವರು ಸದಾಕಾಲ ನೆಲೆಸಲಿರುವರು. ಅಲ್ಲಾಹ್ ನ ವಾಗ್ದಾನವೇ ಪರಮ ಸತ್ಯ. ಅವನು ಪ್ರಬಲನೂ ವಿವೇಕಪೂರ್ಣನೂ ಆಗಿರುವನು. {9}
خَلَقَ السَّمَاوَاتِ بِغَيْرِ عَمَدٍ تَرَوْنَهَا ۖ وَأَلْقَىٰ فِي الْأَرْضِ رَوَاسِيَ أَنْ تَمِيدَ بِكُمْ وَبَثَّ فِيهَا مِنْ كُلِّ دَابَّةٍ ۚ وَأَنْزَلْنَا مِنَ السَّمَاءِ مَاءً فَأَنْبَتْنَا فِيهَا مِنْ كُلِّ زَوْجٍ كَرِيمٍ
ಆಕಾಶಗಳನ್ನು ಅವನು ಆಧಾರಸ್ತಂಭಗಳಿಲ್ಲದೆ (ನೆಲೆನಿಲ್ಲುವಂತೆ) ನಿರ್ಮಿಸಿರುವುದನ್ನು ನೀವು ನೋಡುತ್ತಿದ್ದೀರಿ! ಭೂಮಿಯು ನಿಮ್ಮನ್ನು ಹೊತ್ತುಕೊಂಡು ಅಲುಗಾಡದಿರಲೆಂದು, ಅವನು ಅದರಲ್ಲಿ ಘನ ಪರ್ವತಗಳನ್ನು ಇಳಿಬಿಟ್ಟಿದ್ದಾನೆ. ಹೌದು, ಎಲ್ಲ ವಿಧಗಳ ಜೀವಿಗಳನ್ನು ಕೂಡ ಅವನು ಅದರಲ್ಲಿ ಹರಡಿ ಬಿಟ್ಟಿದ್ದಾನೆ. ಹಾಗೆಯೇ, (ನೀವು ಗಮನಿಸಿರಿ), ಆಕಾಶದಿಂದ ಮಳೆ ನೀರನ್ನು ನಾವೇ ಇಳಿಸಿದ್ದೇವೆ; ಅದರ ಮೂಲಕ ಧಾರಾಳ ಪ್ರಮಾಣದಲ್ಲಿ ವಿವಿಧ ಬಗೆಯ ಸಸ್ಯವರ್ಗಗಳನ್ನು ನಾವೇ ಬೆಳೆಯಿಸಿದ್ದೇವೆ! {10}
هَٰذَا خَلْقُ اللَّهِ فَأَرُونِي مَاذَا خَلَقَ الَّذِينَ مِنْ دُونِهِ ۚ بَلِ الظَّالِمُونَ فِي ضَلَالٍ مُبِينٍ
ಇವೆಲ್ಲ ಅಲ್ಲಾಹ್ ನ ಸೃಷ್ಟಿಗಳು! ಅವನಲ್ಲದೆ ಇತರರು ಏನನ್ನು ಸೃಷ್ಟಿಸಿದ್ದಾರೆಂದು ನೀವು ನನಗೆ ತೋರಿಸಿ ಕೊಡಿ. ಅದು ನಿಜವೆಂದಾದರೆ (ಅವನನ್ನು ಬಿಟ್ಟು ಇತರರನ್ನು ಪೂಜಿಸುವ) ಈ ಅಪರಾಧಿಗಳು ತಪ್ಪು ದಾರಿಯಲ್ಲಿರುವುದು ಬಹಳ ಸ್ಪಷ್ಟವಾದ ವಿಷಯ. {11}
وَلَقَدْ آتَيْنَا لُقْمَانَ الْحِكْمَةَ أَنِ اشْكُرْ لِلَّهِ ۚ وَمَنْ يَشْكُرْ فَإِنَّمَا يَشْكُرُ لِنَفْسِهِ ۖ وَمَنْ كَفَرَ فَإِنَّ اللَّهَ غَنِيٌّ حَمِيدٌ
ಹೌದು, ಲುಕ್‌ಮಾನ್ ರಿಗೆ ನಾವು ವಿವೇಚನಾ ಶಕ್ತಿ ದಯಪಾಲಿಸಿದ್ದೆವು - ನೀವು ಅಲ್ಲಾಹ್ ನಿಗೆ ಕೃತಜ್ಞತೆ ಸಲ್ಲಿಸುವವರಾಗಿರಿ (ಎಂದು ಬೋಧಿಸಿದೆವು). ಒಬ್ಬಾತನು ಅಲ್ಲಾಹ್ ನಿಗೆ ಕೃತಜ್ಞನಾದರೆ ಅವನು ಸ್ವತಃ ಅವನ ಒಳಿತಿಗಾಯೇ ಹಾಗೆ ಮಾಡುತ್ತಾನೆ; ಇನ್ನು ಯಾರದರರೂ ಅವನಿಗೆ ಕೃತಘ್ನನಾದರೆ, ಅಲ್ಲಾಹು ನು ಸಾಕ್ಷಾತ್ ನಿರಪೇಕ್ಷನೂ ಸ್ವಯಂ ಸ್ತುತ್ಯನೂ ಆಗಿರುವನೆಂಬ (ವಾಸ್ತವಿಕತೆ ನಿಮಗೆ ತಿಳಿದಿರಲಿ)! {12}
وَإِذْ قَالَ لُقْمَانُ لِابْنِهِ وَهُوَ يَعِظُهُ يَا بُنَيَّ لَا تُشْرِكْ بِاللَّهِ ۖ إِنَّ الشِّرْكَ لَظُلْمٌ عَظِيمٌ
ಲುಕ್‌ಮಾನ್ ರು ತಮ್ಮ ಪುತ್ರನಿಗೆ ಉಪದೇಶ ನೀಡುತ್ತಿದ್ದ ಸಂದರ್ಭದಲ್ಲಿ ಹೇಳಿದರು: ಓ ನನ್ನ ಪುತ್ರನೇ, ನೀನು ಅಲ್ಲಾಹ್ ನ ದೇವತ್ವದಲ್ಲಿ ಯಾರನ್ನೂ ಪಾಲುಗೊಳಿಸ ಬೇಡ! ನಿಜವಾಗಿ, ಇತರರನ್ನು ಅಲ್ಲಾಹ್ ನ ದೇವತ್ವದಲ್ಲಿ ಸಹಭಾಗಿಗಳೆಂದು ಬಗೆಯುವುದು ಅತಿದೊಡ್ಡ ಪಾಪವಾಗಿದೆ! {13}
وَوَصَّيْنَا الْإِنْسَانَ بِوَالِدَيْهِ حَمَلَتْهُ أُمُّهُ وَهْنًا عَلَىٰ وَهْنٍ وَفِصَالُهُ فِي عَامَيْنِ أَنِ اشْكُرْ لِي وَلِوَالِدَيْكَ إِلَيَّ الْمَصِيرُ
ಮನುಷ್ಯರಿಗೆ ತಮ್ಮ ತಂದೆ-ತಾಯಿಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ನಾವು ಆದೇಶ ನೀಡಿದ್ದೇವೆ. ಮನುಷ್ಯನನ್ನು ಅವನ ತಾಯಿ ಸಂಕಷ್ಟದ ಮೇಲೆ ಸಂಕಷ್ಟಗಳನ್ನು ಸಹಿಸಿ ಗರ್ಭದಲ್ಲಿ ಹೊರುತ್ತಾಳೆ; ತರುವಾಯ (ಹೆತ್ತ ನಂತರ) ಹಾಲುಣಿಸುವುದನ್ನು ಬಿಡಿಸಲೂ ಎರಡು ವರ್ಷಗಳೇ ಬೇಕಾಗುತ್ತದೆ. ನೀವು ನನಗೂ ನಿಮ್ಮ ತಂದೆ-ತಾಯಿಯರಿಗೂ ಕೃತಜ್ಞರಾಗಿರಿ ಎಂಬುದು ನಮ್ಮ ಆದೇಶ. ಅಂತಿಮವಾಗಿ, ನಿಮ್ಮೆಲ್ಲರ ಮರಳುವಿಕೆ ನನ್ನೆಡೆಗೇ ಆಗಿರುತ್ತದೆ. {14}
وَإِنْ جَاهَدَاكَ عَلَىٰ أَنْ تُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۖ وَصَاحِبْهُمَا فِي الدُّنْيَا مَعْرُوفًا ۖ وَاتَّبِعْ سَبِيلَ مَنْ أَنَابَ إِلَيَّ ۚ ثُمَّ إِلَيَّ مَرْجِعُكُمْ فَأُنَبِّئُكُمْ بِمَا كُنْتُمْ تَعْمَلُونَ
ಇನ್ನು (ಜನರೇ), ನಿಮಗೆ ತಿಳಿಯದ ಯಾವುದನ್ನಾದರೂ ನನ್ನ ಜೊತೆ ಸೇರಿಸಿ ಆರಾಧಿಸುವಂತೆ ನಿಮ್ಮ ತಂದೆ-ತಾಯಂದಿರು ಒತ್ತಾಯಿಸಿದರೆ, ಅವರ ಮಾತನ್ನು ನೀವು ಅನುಸರಿಸಬಾರದು. ಆದರೆ ಇಹಲೋಕ ಜೀವನದ ವಿಷಯಗಳಲ್ಲಿ ಅವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ಒಡನಾಟ ಕಾಪಾಡಿಕೊಳ್ಳಿರಿ. ಅನುಸರಣೆಯ ವಿಷಯದಲ್ಲಿ ನನ್ನ ಕಡೆಗೆ ತಿರುಗಿದವರನ್ನೇ ಅನುಸರಿಸಿರಿ. ಕೊನೆಯಲ್ಲಿ ನಿಮ್ಮೆಲ್ಲರ ಮರಳುವಿಕೆ ನನ್ನ ಕಡೆಗೇ ಆಗುತ್ತದೆ. ಆಗ ನೀವು (ಇಹಲೋಕದಲ್ಲಿ) ಹೇಗೆ ನಡೆದುಕೊಂಡಿದ್ದಿರಿ ಎಂಬುದನ್ನು ನಾನು ನಿಮಗೆ ತಿಳಿಸಲಿರುವನು. {15}
يَا بُنَيَّ إِنَّهَا إِنْ تَكُ مِثْقَالَ حَبَّةٍ مِنْ خَرْدَلٍ فَتَكُنْ فِي صَخْرَةٍ أَوْ فِي السَّمَاوَاتِ أَوْ فِي الْأَرْضِ يَأْتِ بِهَا اللَّهُ ۚ إِنَّ اللَّهَ لَطِيفٌ خَبِيرٌ
(ಲುಕ್‌ಮಾನ್ ರು ಹೇಳಿದರು): ಓ ನನ್ನ ಮಗನೇ, ಕರ್ಮವು ಒಂದು ಸಾಸಿವೆ ಕಾಳಿನಷ್ಟು ಕಡಿಮೆ ಭಾರದ್ದಾಗಿದ್ದರೂ, ಅದು ಬಂಡೆಯೊಳಗಿರಲಿ, ಆಕಾಶದಲ್ಲಿರಲಿ ಅಥವಾ ಭೂಮಿಯಲ್ಲಿರಲಿ - ಎಲ್ಲಿ ಅಡಗಿದ್ದರೂ ಅದನ್ನು ಅಲ್ಲಾಹ್ ನು ಹೊರತರಲಿರುವನು. ಅವನು ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುವವನೂ ಸಂಪೂರ್ಣವಾಗಿ ತಿಳಿದವನೂ ಆಗಿರುವನು. {16}
يَا بُنَيَّ أَقِمِ الصَّلَاةَ وَأْمُرْ بِالْمَعْرُوفِ وَانْهَ عَنِ الْمُنْكَرِ وَاصْبِرْ عَلَىٰ مَا أَصَابَكَ ۖ إِنَّ ذَٰلِكَ مِنْ عَزْمِ الْأُمُورِ
ಓ ನನ್ನ ಮಗನೇ, ನೀನು ನಮಾಝ್ ಅನ್ನು ಶ್ರದ್ಧಾಪೂರ್ವಕವಾಗಿ ಪಾಲಿಸು, ಒಳುತುಗಳ ಬಗ್ಗೆ ಜನರಿಗೆ ಉಪದೇಶ ನೀಡುತ್ತಲಿರು, ಕೆಡುಕುಗಳಿಂದ ಜನರನ್ನು ತಡೆಯುತ್ತಲಿರು. ಆ ನಿಟ್ಟಿನಲ್ಲಿ ನಿನಗೆ ಬರುವ ಸಂಕಷ್ಟಗಳನ್ನು ಸಹನೆಯಿಂದ ಎದುರಿಸು. ನಿಜವಾಗಿ, ಇವೆಲ್ಲವೂ ನಿರ್ವಹಿಸಲೇ ಬೇಕಾದ ಕರ್ತವ್ಯಗಳಾಗಿವೆ. {17}
وَلَا تُصَعِّرْ خَدَّكَ لِلنَّاسِ وَلَا تَمْشِ فِي الْأَرْضِ مَرَحًا ۖ إِنَّ اللَّهَ لَا يُحِبُّ كُلَّ مُخْتَالٍ فَخُورٍ
ಜನರ ಮಂದೆ ನೀನು ಮುಖ ಸಿಂಡರಿಸಿಕೊಳ್ಳ ಬೇಡ. ಭೂಮಿಯ ಮೇಲೆ ನಡೆಯುವಾಗ ದರ್ಪದಿಂದ ನಡೆಯಬೇಡ. ಹೌದು, ಜಂಭ ಕೊಚ್ಚುವ ದುರಹಂಕಾರಿಗಳನ್ನು ಅಲ್ಲಾಹ್ ನು ಎಷ್ಟು ಮಾತ್ರಕ್ಕೂ ಇಷ್ಟಪಡುವುದಿಲ್ಲ. {18}
وَاقْصِدْ فِي مَشْيِكَ وَاغْضُضْ مِنْ صَوْتِكَ ۚ إِنَّ أَنْكَرَ الْأَصْوَاتِ لَصَوْتُ الْحَمِيرِ
ನಡೆಯುವಾಗ ನೀನು ವಿನಮ್ರತೆಯ ನಡತೆಯನ್ನು ಪಾಲಿಸು. ಮಾತನಾಡುವಾಗ ನೀನು ತಗ್ಗಿದ ಧ್ವನಿಯಲ್ಲೇ ಮಾತನಾಡು. ಏಕೆಂದರೆ ಧ್ವನಿಗಳಲ್ಲಿ ಅತ್ಯಂತ ಅಂದಗೆಟ್ಟ ಧ್ವನಿಯೆಂದರೆ ಅದು ಕತ್ತೆಯ ಧ್ವನಿ! {19}
أَلَمْ تَرَوْا أَنَّ اللَّهَ سَخَّرَ لَكُمْ مَا فِي السَّمَاوَاتِ وَمَا فِي الْأَرْضِ وَأَسْبَغَ عَلَيْكُمْ نِعَمَهُ ظَاهِرَةً وَبَاطِنَةً ۗ وَمِنَ النَّاسِ مَنْ يُجَادِلُ فِي اللَّهِ بِغَيْرِ عِلْمٍ وَلَا هُدًى وَلَا كِتَابٍ مُنِيرٍ
ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವ ಎಲ್ಲಾ ವಸ್ತುಗಳನ್ನು ನಿಮ್ಮ ಸೇವೆಗೆ ಒಳಪಡಿಸಿರುವುದನ್ನು ನೀವು ಕಾಣಲಿಲ್ಲವೇ? ನಿಮಗೆ ಬಾಹ್ಯ ಮತ್ತು ಆಂತರಿಕ ಅನುಗ್ರಹಗಳನ್ನು ಅವನು ಸಂಪೂರ್ಣಗೊಳಿಸಿಲ್ಲವೇ? ಆದರೂ ಮನುಷ್ಯರಲ್ಲಿ ಕೆಲವರು ಸರಿಯಾದ ಜ್ಞಾನವಿಲ್ಲದೆ, ಮಾರ್ಗದರ್ಶನವಿಲ್ಲದೆ ಅಥವಾ ಪ್ರಕಾಶ ನೀಡುವ ಒಂದು ಗ್ರಂಥವಿಲ್ಲದೆ ಅಲ್ಲಾಹ್ ಬಗ್ಗೆ (ಇಲ್ಲಸಲ್ಲದ) ವಾದ-ವಿವಾದಗಳಲ್ಲಿ ತೊಡಗುತ್ತಾರೆ! {20}
وَإِذَا قِيلَ لَهُمُ اتَّبِعُوا مَا أَنْزَلَ اللَّهُ قَالُوا بَلْ نَتَّبِعُ مَا وَجَدْنَا عَلَيْهِ آبَاءَنَا ۚ أَوَلَوْ كَانَ الشَّيْطَانُ يَدْعُوهُمْ إِلَىٰ عَذَابِ السَّعِيرِ
ನೀವು ಅಲ್ಲಾಹ್ ನು ಇಳಿಸಿಕೊಟ್ಟ (ಧರ್ಮವನ್ನು) ಅನುಸರಿಸಿರಿ ಎಂದು ಅವರೊಂದಿಗೆ ಹೇಳಲಾದಾಗ ಅವರು, ಇಲ್ಲ, ಯಾವ ಧರ್ಮವನ್ನು ನಮ್ಮ ತಂದೆ-ತಾತಂದಿರು ಅನುಸರಿಸುವುದಾಗಿ ನಾವು ಕಂಡಿರುವೆವೋ ನಾವು ಅದನ್ನೇ ಅನುಸರಿಸುತ್ತೇವೆ ಎಂದು ಉತ್ತರಿಸುತ್ತಾರೆ. ಏನು? ಸೈತಾನನು ಅವರನ್ನು ಉರಿಯುವ ನರಕದ ಬೆಂಕಿಯೆಡೆಗೆ ಕರೆದರೂ ಸಹ ಅವರು ಆ ಹಾದಿಯನ್ನೇ ಅನುಸರಿಸುವುದೇ? {21}
وَمَنْ يُسْلِمْ وَجْهَهُ إِلَى اللَّهِ وَهُوَ مُحْسِنٌ فَقَدِ اسْتَمْسَكَ بِالْعُرْوَةِ الْوُثْقَىٰ ۗ وَإِلَى اللَّهِ عَاقِبَةُ الْأُمُورِ
ನಿಜವೇನೆಂದರೆ, ಯಾರು ತನ್ನನ್ನು ಸಂಪೂರ್ಣವಾಗಿ ಅಲ್ಲಾಹ್ ನಿಗೆ ಒಪ್ಪಿಸಿಕೊಂಡು, ಸತ್ಕರ್ಮಗಳನ್ನು ಅತ್ಯುತ್ತಮವಾಗಿ ನೆರವೇರಿಸುತ್ತಾನೋ, ಅವನು ಭರವಸೆಗೆ ಅರ್ಹವಾದ ಬಲಿಷ್ಠ ಆಸರೆಯನ್ನು ಹಿಡಿದಿರುವನು. ನಿಜವಾಗಿ, ಕೊನೆಯಲ್ಲಿ ಎಲ್ಲಾ ವಿಷಯಗಳು ಅಲ್ಲಾಹ್ ನೆಡೆಗೆ ಮರಳಲಿವೆ. {22}
وَمَنْ كَفَرَ فَلَا يَحْزُنْكَ كُفْرُهُ ۚ إِلَيْنَا مَرْجِعُهُمْ فَنُنَبِّئُهُمْ بِمَا عَمِلُوا ۚ إِنَّ اللَّهَ عَلِيمٌ بِذَاتِ الصُّدُورِ
(ಆದ್ದರಿಂದ, ಪೈಗಂಬರರೇ, ಅಲ್ಲಾಹ್ ಇಳಿಸಿಕೊಟ್ಟ ಧರ್ಮವನ್ನು) ಧಿಕ್ಕರಿಸಿದವರ ಧಿಕ್ಕಾರವು ನಿಮ್ಮನ್ನು ದುಃಖಿತರನ್ನಾಗಿಸದಿರಲಿ. ಅವರ ಮರಳುವಿಕೆ ಸಹ ನಮ್ಮೆಡೆಗೇ ಆಗಿರುತ್ತದೆ. ಆಗ ನಾವು ಅವರಿಗೆ ಅವರು ಮಾಡುತ್ತಿದ್ದ ಕೃತ್ಯಗಳ ಸ್ವರೂಪವನ್ನು ತಿಳಿಸುತ್ತೇವೆ. ಖಂಡಿತವಾಗಿಯೂ ಅಲ್ಲಾಹ್ ನು ಹೃದಯಗಳಲ್ಲಿ ಅಡಗಿರುವುದನ್ನೂ ಚೆನ್ನಾಗಿ ತಿಳಿದಿರುವನು. {23}
نُمَتِّعُهُمْ قَلِيلًا ثُمَّ نَضْطَرُّهُمْ إِلَىٰ عَذَابٍ غَلِيظٍ
ಅಂತಹವರಿಗೂ ನಾವು (ಇಹಲೋಕದಲ್ಲಿನ) ಅಗತ್ಯಗಳನ್ನು ಒದಗಿಸುತ್ತೇವೆ; ಆದರೆ, ನಂತರ (ಪರಲೋಕದಲ್ಲಿ) ಅತ್ಯಂತ ಕಠೋರವಾದ ಶಿಕ್ಷೆಗೆ ತಳ್ಳಿಬಿಡಲಿದ್ದೇವೆ. {24}
وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ لَيَقُولُنَّ اللَّهُ ۚ قُلِ الْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ
ಇನ್ನು, ಆಕಾಶಗಳನ್ನೂ ಭೂಮಿಯನೂ ಸೃಷ್ಟಿ ಮಾಡಿದವನು ಯಾರು ಎಂದು (ಅಲ್ಲಾಹ್ ನು ಇಳಿಸಿಕೊಟ್ಟ ಧರ್ಮವನ್ನು ಧಿಕ್ಕರಿಸಿದ) ಜನರೊಂದಿಗೆ ನೀವು ಕೇಳಿದರೆ, ಅಲ್ಲಾಹ್ ನೇ ಸೃಷ್ಟಿ ಮಾಡಿರುವನು ಎಂದೇ ಅವರು ಹೇಳುತ್ತಾರೆ. ಆಗ, ಅಲ್ಲಾಹ್ ನಿಗೆ ಸ್ತುತಿ ಸ್ತೋತ್ರಗಳು ಸಲ್ಲುತ್ತವೆ ಎಂದು ನೀವು ಹೇಳಿರಿ. ಇಲ್ಲ, ಅವರಲ್ಲಿ ಹೆಚ್ಚಿನವರೂ (ಅಲ್ಲಾಹ್ ನಿಗೆ ಸ್ತುತಿ ಅರ್ಪಿಸಬೇಕೆಂಬುದನ್ನು) ಮನಗಂಡಿಲ್ಲ! {25}
لِلَّهِ مَا فِي السَّمَاوَاتِ وَالْأَرْضِ ۚ إِنَّ اللَّهَ هُوَ الْغَنِيُّ الْحَمِيدُ
(ಅವನೇ ಸ್ತುತ್ಯರ್ಹನು. ಏಕೆಂದರೆ) ಭೂಮಿ ಮತ್ತು ಆಕಾಶಗಳಲ್ಲಿರುವ ಸಕಲವೂ ಅಲ್ಲಾಹ್ ನಿಗೆ ಸೇರಿದ್ದಾಗಿವೆ. ಆದರೆ ನಿಜವಾಗಿ ಅಲ್ಲಾಹ್ ನು ಯಾವ ಅಗತ್ಯಗಳೂ ಇಲ್ಲದ ನಿರಪೇಕ್ಷನು! ಅವನು ಸ್ವಯಂ ಸ್ತೋತ್ರಾರ್ಹನು! {26}
وَلَوْ أَنَّمَا فِي الْأَرْضِ مِنْ شَجَرَةٍ أَقْلَامٌ وَالْبَحْرُ يَمُدُّهُ مِنْ بَعْدِهِ سَبْعَةُ أَبْحُرٍ مَا نَفِدَتْ كَلِمَاتُ اللَّهِ ۗ إِنَّ اللَّهَ عَزِيزٌ حَكِيمٌ
ಬಹಳ ಸತ್ಯವಾದ ವಿಷಯವೆಂದರೆ ಭೂಮಿಯಲ್ಲಿರುವ ಎಲ್ಲಾ ಮರಗಳು ಲೇಖನಿಗಳಾಗಿ ಮಾರ್ಪಟ್ಟು, ಎಲ್ಲಾ ಸಮುದ್ರಗಳು ಅದರ ಮಶಿಯಾಗಿ ಮಾರ್ಪಟ್ಟು, ನಂತರ ಏಳು ಹೆಚ್ಚುವರಿ ಸಮುದ್ರಗಳು ಮಶಿಯಾಗಿ ಮಾರ್ಪಟ್ಟರೂ ಸಹ ಅಲ್ಲಾಹ್ ನ ಮಾತುಗಳನ್ನು [ಅಂದರೆ ಸೃಷ್ಟಿ ಕಾರ್ಯಕ್ಕೆ ಸಂಭಂಧಿಸಿದಂತೆ ಅವನ ಹುಕುಂ ಗಳನ್ನು, ಅದರಿಂದ ಬರೆಯಲು ಹೊರಟರೆ] ಅದನ್ನು ಬರೆದು ಮುಗಿಸಲು ಸಾಧ್ಯವಿಲ್ಲ! ಅಲ್ಲಾಹ್ ನು ಬಹಳ ಶಕ್ತಿವಂತನೂ ಮಹಾ ಮೇಧಾವಿಯೂ ಆಗಿರುವನು. {27}
مَا خَلْقُكُمْ وَلَا بَعْثُكُمْ إِلَّا كَنَفْسٍ وَاحِدَةٍ ۗ إِنَّ اللَّهَ سَمِيعٌ بَصِيرٌ
ಜನರೇ, ನಿಮ್ಮೆಲ್ಲರನ್ನು (ಮೊದಲ ಬಾರಿಗೆ) ಸೃಷ್ಟಿ ಮಾಡುವುದು ಮತ್ತು ನಿಮ್ಮೆಲ್ಲರನ್ನು (ಮರಣದ ನಂತರ ಒಟ್ಟಾಗಿ ಪುನಃ) ಜೀವಂತಗೊಳಿಸಿ ಎಬ್ಬಿಸಿ ನಿಲ್ಲಿಸುದು ಅವನ ಮಟ್ಟಿಗೆ ಕೇವಲ ಒಬ್ಬ ವ್ಯಕ್ತಿಯನ್ನು (ಸೃಷ್ಟಿ ಮಾಡಿ, ಮರಣದ ನಂತರ ಪುನಃ ಎಬ್ಬಿಸುವಷ್ಟೇ ಸುಲಭ)! ಖಂಡಿತವಾಗಿ, ಅಲ್ಲಾಹ್ ನು (ನೀವಾಡುವ ಮಾತುಗಳನ್ನು ಹಾಗೂ ನಿಮ್ಮ ವರ್ತನೆಗಳನ್ನು) ಕೇಳಿಸಿ ಕೊಳ್ಳುತಾನೆ ಹಾಗೂ ನೋಡುತ್ತಿದ್ದಾನೆ! {28}
أَلَمْ تَرَ أَنَّ اللَّهَ يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ وَسَخَّرَ الشَّمْسَ وَالْقَمَرَ كُلٌّ يَجْرِي إِلَىٰ أَجَلٍ مُسَمًّى وَأَنَّ اللَّهَ بِمَا تَعْمَلُونَ خَبِيرٌ
ಅಲ್ಲಾಹ್ ನು ರಾತ್ರಿಯನ್ನು ಹಗಲಿನೊಳಗೆ ಹಾಗೂ ಹಗಲನ್ನು ರಾತ್ರಿಯೊಳಗೆ ಪೋಣಿಸಿ ಹೊರ ತರುತ್ತಿರುವುದನ್ನು ನೀವು ಕಾಣುತ್ತಿದ್ದೀರಿ ತಾನೆ? ಅವನೇ ಸೂರ್ಯನನ್ನೂ ಚಂದ್ರನನ್ನೂ ಕೆಲಸಕ್ಕೆ ಹಚ್ಚಿರುತ್ತಾನೆ! ಎಲ್ಲವೂ ಗೊತ್ತುಪಡಿಸಿದ ಒಂದು ಸಮಯದ ವರೆಗೆ ಚಲಿಸುತ್ತಿರಬೇಕಾಗಿದೆ. [ಅದನ್ನೆಲ್ಲ ನೋಡಿಕೊಳ್ಳುತ್ತಿರುವ] ಅ ಅಲ್ಲಾಹ್ ನಿಗೆ ಖಂಡಿತವಾಗಿ ನೀವೇನು ಮಾಡುತ್ತಿರುವಿರಿ ಎಂಬುದು ಸಹ ಬಹಳ ಚೆನ್ನಾಗಿ ತಿಳಿದಿರುತ್ತದೆ! {29}
ذَٰلِكَ بِأَنَّ اللَّهَ هُوَ الْحَقُّ وَأَنَّ مَا يَدْعُونَ مِنْ دُونِهِ الْبَاطِلُ وَأَنَّ اللَّهَ هُوَ الْعَلِيُّ الْكَبِيرُ
ಇವೆಲ್ಲ (ಅಷ್ಟು ಕರಾರುವಾಕ್ಕಾಗಿ ನಡೆಯುತ್ತಿರಲು) ಕಾರಣವೆಂದರೆ, ನಿಜವಾಗಿ, ಆ ಅಲ್ಲಾಹ್ ನು ಮಾತ್ರವೇ ಪರಮ ಸತ್ಯ! ಅವನನ್ನು ಬಿಟ್ಟು ಅವರು ಯಾವುದಕ್ಕೆಲ್ಲಾ ಮೊರೆಯಿಡುತ್ತಿರುವರೋ ಅವೆಲ್ಲವೂ ಮಿಥ್ಯ! ಆದ ಕಾರಣ ಅಲ್ಲಾಹ್ ನೇ ಪರಮೋನ್ನತನು! ಅವನು ಮಾತ್ರವೇ ಎಲ್ಲದಕ್ಕೂ ಮಿಗಿಲಾದವನು! {30}
أَلَمْ تَرَ أَنَّ الْفُلْكَ تَجْرِي فِي الْبَحْرِ بِنِعْمَتِ اللَّهِ لِيُرِيَكُمْ مِنْ آيَاتِهِ ۚ إِنَّ فِي ذَٰلِكَ لَآيَاتٍ لِكُلِّ صَبَّارٍ شَكُورٍ
ಹಡಗುಗಳು ಅಲ್ಲಾಹ್ ನ ಅನುಗ್ರಹದೊಂದಿಗೆ ಸಮುದ್ರದಲ್ಲಿ ಚಲಿಸುವುದನ್ನು ನೀವು ಕಣುತ್ತಿದ್ದೀರಿ ತಾನೆ! ನಿಮಗೆ ತನ್ನ ನಿದರ್ಶನಗಳನ್ನು ತೋರಿಸಲಿಕ್ಕಾಗಿ (ಅಲ್ಲಾಹ್ ನು ಅದನ್ನು ಉದ್ಧರಿಸುತ್ತಿದ್ದಾನೆ). ನಿಜವಾಗಿಯೂ, ಬಹಳ ತಾಳ್ಮೆಯೊಂದಿಗೆ ಮತ್ತು ಕೃತಜ್ಞತೆಯೊಂದಿಗೆ ಜೀವಿಸುವ ಪ್ರತಿಯೊಬ್ಬರಿಗೂ ಇದರಲ್ಲಿ ಸಾಕಷ್ಟು ಪುರಾವೆಗಳಿವೆ. {31}
وَإِذَا غَشِيَهُمْ مَوْجٌ كَالظُّلَلِ دَعَوُا اللَّهَ مُخْلِصِينَ لَهُ الدِّينَ فَلَمَّا نَجَّاهُمْ إِلَى الْبَرِّ فَمِنْهُمْ مُقْتَصِدٌ ۚ وَمَا يَجْحَدُ بِآيَاتِنَا إِلَّا كُلُّ خَتَّارٍ كَفُورٍ
ಅಲೆಗಳು ಅದರಲ್ಲಿಯ ಪ್ರಯಾಣಿಕರನ್ನು ದೈತ್ಯ ಚಪ್ಪರಗಳಂತೆ ಆವರಿಸಿಕೊಂಡಾಗ, ಅವರು (ಶಿರ್ಕ್ ಅನ್ನು ತ್ಯಜಿಸಿ) ತಮ್ಮ ಧರ್ಮವನ್ನು ನಿಷ್ಕಳಂಕವಾಗಿಸಿ ಅಲ್ಲಾಹ್ ನಿಗೆ ಮಾತ್ರ ಮೊರೆಯಿಡುತ್ತಾರೆ! ಆದರೆ, ಅವನು ಅವರನ್ನು ಸುರಕ್ಷಿತವಾಗಿ ದಡ ಸೇರಿಸಿದ ಕೂಡಲೇ ಅವರಲ್ಲಿ ಕೇವಲ ಕೆಲವರು ಮಾತ್ರ ತಟಸ್ಥರಾಗುತ್ತಾರೆ [ಅರ್ಥಾತ್ ಉಳಿದವರು ಕೂಡಲೇ ಶಿರ್ಕ್ ಗೆ ಮರಳುತ್ತಾರೆ]! ದ್ರೋಹ ಬಗೆಯುವವರ ಮತ್ತು ಕೃತಘ್ನತೆ ತೋರುವವರ ಹೊರತು ಬೇರೆ ಯಾರೂ ನಮ್ಮ ನಿದರ್ಶನಗಳನ್ನು ನಿರಾಕರಿಸುವುದಿಲ್ಲ. {32}
يَا أَيُّهَا النَّاسُ اتَّقُوا رَبَّكُمْ وَاخْشَوْا يَوْمًا لَا يَجْزِي وَالِدٌ عَنْ وَلَدِهِ وَلَا مَوْلُودٌ هُوَ جَازٍ عَنْ وَالِدِهِ شَيْئًا ۚ إِنَّ وَعْدَ اللَّهِ حَقٌّ ۖ فَلَا تَغُرَّنَّكُمُ الْحَيَاةُ الدُّنْيَا وَلَا يَغُرَّنَّكُمْ بِاللَّهِ الْغَرُورُ
ಓ ಜನರೇ, ನಿಮ್ಮ ಪರಿಪಾಲಕನಾದ (ಅಲ್ಲಾಹ್ ನ ಕೋಪಕ್ಕೆ ಬಲಿಯಾಗದಂತೆ ಜೀವನದಲ್ಲಿ) ನೀವು ಜಾಗರೂಕತೆ, ಭಯಭಕ್ತಿ ಪಾಲಿಸಿರಿ. ಯಾವ ತಂದೆಗೂ ತನ್ನ ಮಗನಿಂದ ಯಾವ ಪ್ರಯೋಜನವೂ ಆಗದ, ಯಾವ ಮಗನಿಗೂ ತನ್ನ ತಂದೆಯಿಂದ ಯಾವ ಪ್ರಯೋಜನವೂ ಆಗದ ಆ ದಿನದ (ಅರ್ಥಾತ್ ಅಂತಿಮ ವಿಚಾರಣೆ ನಡೆಯಲಿರುವ ದಿನದ) ಕುರಿತು ಭಯವಿಸಿರಿಕೊಳ್ಳಿ. ನಿಜ ಸಂಗತಿಯೆಂದರೆ ಅಲ್ಲಾಹ್ ನ ಮಾತು ಮಾತ್ರ ಪರಮ ಸತ್ಯ! ಹಾಗಿರುವಾಗ, ಇಹಲೋಕದ ಬದುಕು ನಿಮ್ಮನ್ನು ವಂಚಿಸದಿರಲಿ; ಅಂತೆಯೇ ಆ ಮಹಾ ವಂಚಕನು ಸಹ ಅಲ್ಲಾಹ್ ನ ವಿಷಯದಲ್ಲಿ ನಿಮ್ಮನ್ನು ವಂಚಿಸದಿರಲಿ! {33}
إِنَّ اللَّهَ عِنْدَهُ عِلْمُ السَّاعَةِ وَيُنَزِّلُ الْغَيْثَ وَيَعْلَمُ مَا فِي الْأَرْحَامِ ۖ وَمَا تَدْرِي نَفْسٌ مَاذَا تَكْسِبُ غَدًا ۖ وَمَا تَدْرِي نَفْسٌ بِأَيِّ أَرْضٍ تَمُوتُ ۚ إِنَّ اللَّهَ عَلِيمٌ خَبِيرٌ
ಬಲು ನಿಶ್ಚಿತವಾಗಿ, ಅಂತಿಮ ಘಳಿಗೆಯು (ಯಾವಾಗ ಸಂಭವಿಸಲಿದೆಯೆಂಬ) ಜ್ಞಾನವಿರುವುದು ಅಲ್ಲಾಹ್ ಗೆ ಮಾತ್ರ! ಅವನೇ ಮಳೆ ಸುರಿಸುವವನು; ಗರ್ಭದಲ್ಲಿ ಏನಿದೆಯೆಂಬುದು ಅವನಿಗೆ ತಿಳಿದಿರುತ್ತದೆ. ತಾನು ಏನನ್ನು ನಾಳೆ ಸಂಪಾದಿಸಲಿರುವೆನು ಎಂಬುದು ಯಾವ ವ್ಯಕ್ತಿಗೂ ತಿಳಿದಿಲ್ಲ. ಯಾವ ನೆಲದಲ್ಲಿ ತನಗೆ ಮರಣ ಬರಲಿದೆ ಎಂಬುದೂ ಯಾರೂ ತಿಳಿದವರಲ್ಲ. ಖಂಡಿತವಾಗಿ, ಅಲ್ಲಾಹ್ ನು ಸಕಲ ವಿಷಯಗಳ ಬಗ್ಗೆ ಜ್ಞಾನವಿರುವವನು ಮತ್ತು ಅವನು ಎಲ್ಲವನ್ನೂ ಸಂಪೂರ್ಣವಾಗಿ ಅರಿತವನು! {34}
ಅನುವಾದಿತ ಸೂರಃ ಗಳು