ಯೂಸುಫ್ | تـرجمـة سورة يوسـف

تـرجمـة سورة يوسـف من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಯೂಸುಫ್ | ಪವಿತ್ರ ಕುರ್‌ಆನ್ ನ 12 ನೆಯ ಸೂರಃ | ಇದರಲ್ಲಿ ಒಟ್ಟು 111 ಆಯತ್ ಗಳು ಇವೆ |

ಅತ್ಯಂತ ದಯಾಶೀಲನೂ ಸದಾ ಕರುಣೆ ತೋರುವವನೂ ಆದ ಅಲ್ಲಾಹ್ ನ ನಾಮದಿಂದ ಆರಂಭಿಸುವೆ!

ಅಲಿಫ್ - ಲಾಮ್ - ರಾ! ಬಹಳ ಸ್ಪಷ್ಟವಾದ ಒಂದು ಗ್ರಂಥದ ವಚನಗಳಿವು! {1}

(ಓ ಕುರೈಶರೇ!) ನಿಮಗೆ ಸ್ಪಷ್ಟವಾಗಿ ಅರ್ಥವಾಗಲೆಂದು ನಾವು (ಈ ವಚನಗಳನ್ನು) ಕುರ್‌ಆನ್ ನ ರೂಪದಲ್ಲಿ ಅರಬಿ ಭಾಷೆಯಲ್ಲಿ ಇಳಿಸಿದ್ದೇವೆ! {2}

(ಪೈಗಂಬರರೇ!) ನಿಮ್ಮತ್ತ ದಿವ್ಯಬೋಧನೆ ಮೂಲಕ ಕಳುಹಿಸಲಾಗುತ್ತಿರುವ ಈ ಕುರ್‌ಆನ್ ನಲ್ಲಿ ಪ್ರಶಸ್ತವಾದ ಒಂದು ಜೀವನ ಕಥನವನ್ನು ನಾವು ನಿಮಗೆ ವಿವರಿಸುತ್ತಿದ್ದೇವೆ. ಹೌದು, ಇದಕ್ಕಿಂತ ಮುಂಚೆ ನಿಮಗೆ ಅದರ ಅರಿವಿರಲಿಲ್ಲ! {3}

[ಆ ಕಥನ ಹೀಗೆ ಸಾಗಿದೆ]: ಯೂಸುಫ್ ರು ತನ್ನ ತಂದೆಯವರಾದ [ಪ್ರವಾದಿ ಯಅಕೂಬ್] ರೊಡನೆ, ಓ ನನ್ನ ತಂದೆಯೇ, ಹನ್ನೊಂದು ನಕ್ಷತ್ರಗಳು ಹಾಗೊ ಒಂದು ಸೂರ್ಯ ಮತ್ತು ಒಂದು ಚಂದ್ರನನ್ನು ನಾನು ಕನಸಿನಲ್ಲಿ ಕಂಡೆನು; ಮತ್ತು ಅವೆಲ್ಲ ನನಗೆ ಶಿರಬಾಗಿದಂತೆಯೂ ನಾನು ಕಂಡೆನು ಎಂದು ಹೇಳಿದರು. {4}

ಅದಕ್ಕೆ ಅವರು, ಓ ನನ್ನ ಪುತ್ರನೇ, ನಿನ್ನ ಕನಸಿನ ವಿಚಾರವನ್ನು ನಿನ್ನ ಸಹೋದರರಿಗೆ ನೀನು ತಿಳಿಸಬೇಡ; ತಿಳಿಸಿದರೆ ಅವರು (ಅಸೂಯೆಪಟ್ಟು) ನಿನ್ನ ವಿರುದ್ಧ ಸಂಚುಗಳನ್ನು ಹೂಡಿಯಾರು! ಹೌದು, [ಮನುಷ್ಯರ ಮನಸ್ಸಿನಲ್ಲಿ ದುಷ್ಪ್ರೇರಣೆ ಉಂಟುಮಾಡುವ] ಸೈತಾನನು ಮಾನವನ ಪಾಲಿಗೆ ಸ್ಪಷ್ಟ ಶತ್ರುವೇ ಸರಿ ಎಂದು ಉಪದೇಶಿಸಿದರು. {5}

ಹೌದು, ಆ (ಕನಸಿನ) ಪ್ರಕಾರ ನಿನ್ನ ಒಡೆಯನು (ಪ್ರವಾದಿತ್ವ ದಯಪಾಲಿಸಲಿಕ್ಕಾಗಿ) ನಿನ್ನನ್ನು ಆರಿಸಲಿರುವನು; ವಿದ್ಯಮಾನಗಳನ್ನು ವ್ಯಾಖ್ಯಾನಿಸಲು ಅಗತ್ಯವಾದ ಜ್ಞಾನವನ್ನು ನಿನಗೆ ನೀಡಲಿರುವನು. ಈ ಹಿಂದೆ ನಿನ್ನ ಪೂರ್ವಜರಾದ ಇಬ್ರಾಹೀಮ್ ಮತ್ತು ಇಸ್‌ಹಾಕ್ ರ ಪಾಲಿಗೆ (ಪ್ರವಾದಿತ್ವ ದಯಪಾಲಿಸುವ ಮೂಲಕ) ತನ್ನ ಅನುಗ್ರಹವನ್ನು ಪೂರ್ತಿಗೊಳಿಸಿದಂತೆ ನಿನಗೂ, ಮಾತ್ರವಲ್ಲ ಯಅಕೂಬ್ ರ ಸಂತತಿಗೂ ತನ್ನ ಅನುಗ್ರಹವನ್ನು ಪೂರ್ತಿಗೊಳಿಸಲಿರುವನು. (ಮಗನೇ), ಖಂಡಿತವಾಗಿ ನಿನ್ನ ಪ್ರಭು ಸರ್ವಜ್ಞನೂ ಮಹಾ ಧೀಮಂತನೂ ಆಗಿರುವನು! {6}

ಯೂಸುಫ್ ಮತ್ತು ಅವರ ಸಹೋದರರ (ಜೀವನ ಕಥನದಲ್ಲಿ) ಸತ್ಯಾನ್ವೇಷಕರ ಪಾಲಿಗೆ ನಿಜವಾಗಿಯೂ ಹಲವು ನಿದರ್ಶನಗಳಿವೆ. {7}

ಹೌದು, ನಮ್ಮ ತಂದೆಯವರಿಗೆ ಯೂಸುಫ್ ಮತ್ತು ಆತನ ತಮ್ಮ ನಮಗಿಂತಲೂ ಹೆಚ್ಚು ಪ್ರಿಯರಾಗಿ ಬಿಟ್ಟಿದ್ದಾರೆ! ಆದರೆ ನಮ್ಮದು [ಹತ್ತು ಮಂದಿ ಸಹೋದರರ] ಒಂದು ಪ್ರಬಲ ತಂಡವಾಗಿದೆ! [ಬಲಿಷ್ಠರಾದ ನಮ್ಮನ್ನು ಬಿಟ್ಟು ಆ ಇಬ್ಬರು ಕಿರಿಯರನ್ನು ಹೆಚ್ಚು ಪ್ರೀತಿಸುವ ಮೂಲಕ] ನಮ್ಮ ತಂದೆಯವರು ನಿಜವಾಗಿ ದಾರಿತಪ್ಪಿರುವರು ಎಂದು (ಯೂಸುಫ್ ರ ಹಿರಿಯ ಸಹೋದರರು) ಪರಸ್ಪರ ಮಾತನಾಡಿಕೊಂಡ ಸಂದರ್ಭವದು! {8}

[ಒಬ್ಬ ಪರಿಹಾರ ಸೂಚಿಸಿದನು]: ಯೂಸುಫ್ ನನ್ನು ನೀವು ಕೊಂದು ಬಿಡಿ ಅಥವಾ (ದೂರದ) ಯಾವುದಾದರೂ ಪ್ರದೇಶದಲ್ಲಿ ಆತನನ್ನು ಎಸೆದು ಬಿಡಿ. ಹಾಗಾದರೆ ನಿಮ್ಮ ತಂದೆಯ ಗಮನವೆಲ್ಲಾ ಪೂರ್ತಿಯಾಗಿ ನಿಮ್ಮ ಕಡೆಗಾಗುವುದು; ಅದಾದ ನಂತರ ನೀವು ಸಜ್ಜನರ ತಂಡವಾಗಿ ಬಾಳಬೇಕು. {9}

ಹಾಗೆ ಪರಿಹಾರ ಸೂಚಿಸುವವರಲ್ಲಿ ಮತ್ತೊಬ್ಬನು ಸೂಚಿಸಿದನು: ಇಲ್ಲ, ಯೂಸುಫ್ ನನ್ನು ನೀವು ಕೊಲ್ಲ ಬೇಡಿ. ಏನಾದರೂ ಮಾಡಲೇ ಬೇಕೆಂದಾದರೆ ಆತನನ್ನು ನೀವು ಆಳವಾದ ಕೂಪವೊಂದರ ತಳಕ್ಕೆ ತಳ್ಳಿ ಬಿಡಿ. ಅಲ್ಲಿ ಅಲೆದಾಡುವವರಲ್ಲಿ ಯಾರಾದರೂ ಆತನನ್ನು ಎತ್ತಿ (ತಮ್ಮೊಂದಿಗೆ) ಒಯ್ಯಬಹುದು. {10}

[ಕೊನೆಗೆ ಅವರೆಲ್ಲ ತಮ್ಮ ತಂದೆಯ ಬಳಿ ಹೋಗಿ] ನಮ್ಮ ತಂದೆಯೇ! ಯೂಸುಫ್ ನ ವಿಷಯದಲ್ಲಿ ನೀವು ನಮ್ಮನ್ನು ನಂಬದೇ ಇರಲು ಕಾರಣವೇನು? ನಾವು ನಿಜವಾಗಿಯೂ ಅವನ ಹಿತಾಕಾಂಕ್ಷಿಗಳೇ ಆಗಿರುವೆವು ಎಂದು ಹೇಳಿದರು. {11}

ನಾಳೆ ಅವನನ್ನು ನಮ್ಮ ಜೊತೆ (ಹೊರಗೆ) ಕಳುಹಿಸಿರಿ; ಅವನೂ ಸ್ವಲ್ಪ ತಿಂದುಂಡು ಆನಂದಿಸಲಿ, ಆಟೋಟ ನಡೆಸಲಿ. ನಾವು ಖಂಡಿತಾ ಅವನನ್ನು ಚೆನ್ನಾಗಿ ನೋಡಿಕೊಳ್ಳುವೆವು. {12}

ಆಗ ತಂದೆ ಹೇಳಿದರು: ನೀವು ಅವನನ್ನು ನಿಮ್ಮೊಂದಿಗೆ (ವಿಹಾರಕ್ಕಾಗಿ) ಕರೆದೊಯ್ಯುವ ವಿಚಾರ ನನ್ನನ್ನು ವಿಪರೀತವಾಗಿ ಆತಂಕಿತ ಗೊಳಿಸುತ್ತಿದೆ. ನಿಮ್ಮ ಗಮನ ಅವನಿಂದ ಬೇರೆಡೆಗೆ ಸರಿದಾಗ ಅವನನ್ನು (ಆ ಪ್ರದೇಶದ) ತೋಳವು ತಿಂದು ಬಿಡಬಹುದೆಂದು ನನಗೆ ಭಯವಾಗುತ್ತಿದೆ. {13}

ಮಕ್ಕಳು ಹೇಳಿದರು: ನಮ್ಮದು ಬಲಿಷ್ಠವಾದ ಒಂದು ತಂಡವಾಗಿರುವಾಗ ತೋಳವು ಅವನನ್ನು ಹಿಡಿದು ತಿಂದರೆ ನಿಜವಾಗಿಯೂ ನಾವು ಎಲ್ಲವನ್ನೂ ಕಳೆದುಕೊಂಡ ಅಯೋಗ್ಯರಾಗಿ ಬಿಡುತ್ತೇವೆ! {14}

ಹಾಗೆ ಅವರು ಯೂಸುಫ್ ರನ್ನು (ಒತ್ತಾಯ ಪೂರ್ವಕ) ತಮ್ಮೊಂದಿಗೆ ಕರೆದೊಯ್ಯುವಾಗ ಈತನನ್ನು ಆಳವಾದ ಕೂಪದ ತಳಕ್ಕೆ ತಿಳ್ಳಿ ಬಿಡಬೇಕೆಂದು ಅವರ ನಡುವೆ ಒಮ್ಮತದ ತೀರ್ಮಾನವಾಗಿತ್ತು! [ನಂತರ ಆ ಕೃತ್ಯವನ್ನು ಅವರು ಮಾಡಿಯೇ ಬಿಟ್ಟರು]. ಅತ್ತ ಯೂಸುಫ್ ರಿಗೆ ನಾವು ದಿವ್ಯಸಂದೇಶ ಕಳುಹಿಸಿದೆವು: ಇವರ ಈ ಕೃತ್ಯದ ಕುರಿತು [ಮುಂದೊಂದು ದಿನ] ನೀವು ಇವರಿಗೆ ನೆನಪಿಸುವವರಿದ್ದೀರಿ, ಆದರೆ ಈಗ ಇವರಿಗೆ (ಮುಂಬರುವ ದಿನಗಳ ಕುರಿತು) ಏನೂ ತಿಳಿಯದು. {15}

ತದನಂತರ ರಾತ್ರಿಯ ಹೊತ್ತು ಅವರೆಲ್ಲ ಅಳುತ್ತಾ ರೋದಿಸುತ್ತಾ ತಮ್ಮ ತಂದೆಯ ಬಳಿಗೆ ಬಂದರು. {16}

ಅವರು ತಂದೆಯೊಡನೆ ಹೇಳಿದರು: ನಮ್ಮ ತಂದೆಯೇ, ನಾವು ಯೂಸುಫ್ ನನ್ನು ನಮ್ಮ ಗಂಟು ಮೂಟೆಯ ಬಳಿ ನಿಲ್ಲಿಸಿ ಓಟದ ಸ್ಪರ್ಧೆಯಲ್ಲಿ ನಿರತರಾಗಿದ್ದಾಗ ತೋಳವೊಂದು ಅವನನ್ನು ಹಿಡಿದು ತಿಂದಿದೆ. ಹೌದು, ನಾವು ಸತ್ಯವನ್ನೇ ನುಡಿಯುತ್ತಿದ್ದೇವಾದರೂ ನೀವು ಮಾತ್ರ ನಮ್ಮನ್ನು ನಂಬುವವರಲ್ಲ! {17}

(ಅದನ್ನು ನಂಬಿಸಲಿಕ್ಕಾಗಿ) ಯೂಸುಫ್ ರು ತೊಟ್ಟದ್ದ ಅಂಗಿಗೆ ಅವರು ರಕ್ತದ ಹುಸಿ ಕಲೆಗಳನ್ನು ಮಾಡಿ ತಂದಿದ್ದರು. ತಂದೆ ಹೇಳಿದರು: ಇದು ಸತ್ಯವಲ್ಲ; ಬದಲಾಗಿ ನಿಮ್ಮ ಮನಸ್ಸುಗಳು ಈ ಕೃತ್ಯವನ್ನು ಮಾಡುವಂತೆ ನಿಮ್ಮನ್ನು ಪ್ರಚೋದಿಸಿದೆಯಷ್ಟೆ! ಆದ್ದರಿಂದ ಈಗ ನನಗೆ ಸಹನೆಯೇ ಲೇಸು! ನಿಮ್ಮೀ ಸುಳ್ಳುಸ್ಪಷ್ಟನೆಗಳ ಕುರಿತಂತೆ ಆ ಅಲ್ಲಾಹ್ ನ ಸಹಾಯ ಮಾತ್ರ ಯಾಚಿಸಬಹುದಷ್ಟೆ! {18}

ಅತ್ತ ಯಾತ್ರಾತಂಡವೊಂದು (ಯೂಸುಫ್ ರನ್ನು ಎಸೆಯಲಾಗಿದ್ದ ಕೂಪದ ಬಳಿಗೆ) ಬಂದಿತು. ನೀರು ತರುವಾತನನ್ನು (ಆ ಕೂಪದತ್ತ) ಕಳುಹಿಸಿತು. ಆತನು ನಿಧಾನವಾಗಿ ಬಿಂದಿಗೆಯನ್ನು ಕೂಪದೊಳಕ್ಕೆ ಇಳಿಸ ತೊಡಗಿದನು. (ಅಲ್ಲಿ ಯೂಸುಫ್ ರನ್ನು ಕಂಡು), ಓಹ್, ಏನಿದು ಅದೃಷ್ಟ! ಇಲ್ಲೊಬ್ಬ ಬಾಲಕನಿದ್ದಾನೆ ಎಂದು ಉದ್ಗರಿಸಿದನು. ತರುವಾಯ ಆ ತಂಡದವರು ಯೂಸುಫ್ ರನ್ನು ಒಂದು ಮಾರಾಟದ ಸರಕಿನಂತೆ [ತಮ್ಮ ಊರು ತಲುಪಿ ಮಾರಾಟ ಮಾಡುವ ಉದ್ದೇಶದಿಂದ, ಅಕ್ಕಪಕ್ಕದವರ ಕಣ್ಣಿಗೆ ಬೇಳದಂತೆ] ಬಚ್ಚಿಟ್ಟರು. ಆದರೆ ಅಲ್ಲಾಹ್ ನಿಗೆ [ಯಾತ್ರಾ ತಂಡದ ಕೃತ್ಯವೂ ತಿಳಿದಿತ್ತು; ಯೂಸುಫ್ ರ ಸಹೂದರರ ದುರುದ್ದೇಶವೂ] ತಿಳಿದಿತ್ತು. {19}

ನಂತರ ಆ ಯಾತ್ರಾತಂಡದವರು ಅತ್ಯಲ್ಪ ಬೆಲೆಗೆ ಅಂದರೆ ಕೆಲವೇ ನಾಣ್ಯಗಳನ್ನು ಪಡೆದು ಯೂಸುಫ್ ರನ್ನು ಮಾರಿಬಿಟ್ಟರು. ಹೌದು, ಅವರಿಗೆ ಯೂಸುಫ್ ರ ವಿಷಯದಲ್ಲಿ ಹೆಚ್ಚಿನ ಆಸಕ್ತಿಯೂ ಇರಲಿಲ್ಲ. {20}

ಬಾಲಕನನ್ನು ಖರೀದಿಸಿದ ಈಜಿಪ್ಟಿನವನಾದ ಆ ವ್ಯಕ್ತಿ ತನ್ನ ಪತ್ನಿಯೊಂದಿಗೆ, ಇವನನ್ನು [ಗುಲಾಮನಂತೆ ನೋಡದೆ] ಗೌರವಾದರದಿಂದ ನೋಡಿಕೋ, ಪ್ರಾಯಶಃ ಇವನಿಂದ ನಮಗೆ ಪ್ರಯೋಜನವಾದೀತು; ಅಥವಾ ನಾವು ಇವನನ್ನು ದತ್ತು ಪುತ್ರನಾಗಿ ಸ್ವೀಕರಿಸಲೂ ಬಹುದು ಎಂದು ಹೇಳಿದನು. ಹಾಗೆ, ವಿದ್ಯಮಾನಗಳ ಆಳವನ್ನು ಅರ್ಥೈಸಿಕೊಳ್ಳಲು ಅಗತ್ಯವಾದ ತಿಳುವಳಿಕೆ ನೀಡುವ ಸಲುವಾಗಿ ನಾವು ಯೂಸುಫ್ ರಿಗೆ ಆ ಭೂಪ್ರದೇಶದಲ್ಲಿ [ಅಂದರೆ ಅಂದಿನ ಸುಸಂಸ್ಕೃತ ಪ್ರದೇಶವಾದ ಈಜಿಪ್ಟ್ ನ ಒಬ್ಬ ಮುಖ್ಯಸ್ಥನ ಮನೆಯಲ್ಲಿ] ವಾಸ್ತವ್ಯದ ವ್ಯವಸ್ಥೆ ಮಾಡಿದೆವು. ಹೌದು, ಕಾರ್ಯಸಾಧನೆಯ ವಿಷಯದಲ್ಲಿ ಅಲ್ಲಾಹ್ ನು ಪ್ರಚಂಡನಾಗಿರುವನು, ಆದರೆ ಜನರಲ್ಲಿ ಹೆಚ್ಚಿನವರು ಅದನ್ನು ತಿಳಿದುಕೊಂಡಿಲ್ಲ. {21}

ಮುಂದೆ ಯೂಸುಫ್ ರು ಪ್ರೌಢಾವಸ್ಥೆಗೆ ತಲುಪಿದಾಗ ನಾವು ಅವರಿಗೆ ನ್ಯಾಯನಿರ್ಣಯ ಮಾಡುವ ಸಾಮರ್ಥ್ಯ ಮತ್ತು (ಅಗತ್ಯವಾದ ಇತರ) ಅರಿವು ನೀಡಿದೆವು. ಹೌದು, ಸಜ್ಜನಿಕೆ ಮೈಗೂಡಿಸಿ ಕೊಂಡರನ್ನು ನಾವು ಹಾಗೆಯೇ ಪುರಸ್ಕರಿಸುತ್ತೇವೆ. {22}

ಯಾವ ಮನೆಯಲ್ಲಿ ಯೂಸುಫ್ ರ ವಾಸ್ತವ್ಯವಿತ್ತೋ ಅಲ್ಲಿಯ ಮನೆಯೊಡತಿ ಯೂಸುಫ್ ರನ್ನು ಪುಸಲಾಯಿಸಿ ತನ್ನತ್ತ ಸೆಳೆಯ ತೊಡಗಿದ್ದಳು. (ಒಂದು ಸಂದರ್ಭದಲ್ಲಿ) ಅವಳು ಮನೆಯ ಬಾಗಿಲುಗಳನ್ನೆಲ್ಲ ಚೆನ್ನಾಗಿ ಮುಚ್ಚಿದಳು ಮತ್ತು "ನನ್ನ ಬಳಿ ಬಾ" ಎಂದು ಹೇಳಿಯೇ ಬಿಟ್ಟಳು. ಅಲ್ಲಾಹ್ ನೇ (ಈ ನಿನ್ನ ಷಡ್ಯಂತ್ರದಿಂದ) ಕಾಪಾಡಬೇಕು; ಈ ಮನೆಯಲ್ಲಿ ನನ್ನ ಇರುವಿಕೆಯನ್ನು ಬಹಳ ಚೆನ್ನಾಗಿ ನೋಡಿಕೊಂಡ ಅವನು (ಆ ನಿನ್ನ ಪತಿ ನನ್ನನ್ನು ಖರೀದಿಸಿದ) ನನ್ನ ಮಾಲಕನಾಗಿರುವನು! [ನಾನು ಅವನಿಗೆ ಅನ್ಯಾಯ ಮಾಡಲಾರೆ]; ಅನ್ಯಾಯ ಮಾಡುವವರು (ಇಹಲೋಕದಲ್ಲಾಗಲಿ ಪರಲೋಕದಲ್ಲಾಗಲಿ) ಎಂದಿಗೂ ಯಶಸ್ಸು ಕಾಣಲಾರರು ಎಂದು ಯೂಸುಫ್ ರು ಉತ್ತರಿಸಿದರು. {23}

(ಅವಳ ಷಡ್ಯಂತ್ರದಿಂದ ತಪ್ಪಿಸಿಕೊಳ್ಳಲು ಯೂಸುಫ್ ರು ಪ್ರಯತ್ನಿಸಿದಾಗಲೂ) ಅವಳು ಮಾತ್ರ ಯೂಸುಫ್ ರಿಂದ (ಸುಖ ಪಡೆಯುವ) ದೃಢ ನಿರ್ಧಾರ ಮಾಡಿದ್ದಳು! ಒಂದು ವೇಳೆ ತನ್ನ ಪ್ರಭುವಿನ ದೃಷ್ಟಾಂತಗಳನ್ನು ನೋಡಿರದಿದ್ದರೆ ಅವನೂ ಸಹ ಅವಳ ಪ್ರಲೋಭನೆಗೆ (ಸಹಜವಾಗಿಯೇ) ಒಳಗಾಗುತ್ತಿದ್ದನು. ಹೌದು, ಸಕಲ ವಿಧ ಕೆಡುಕು, ಅಶ್ಲೀಲತೆಗಳನ್ನು ಅವನಿಂದ ದೂರವಿಡಲು ನಾವು ಹಾಗೆ [ಅವನನ್ನು ಅಂತಹ ಒಬ್ಬ ಮಹಿಳೆಯ ಮನೆಯಲ್ಲಿರಿಸಿದ್ದೆವು]! ಅವನು ಖಂಡಿತವಾಗಿಯೂ ನಾವು ಆರಿಸಿಕೊಂಡ ಸೇವಕರಲ್ಲಿ ಒಬ್ಬನಾಗಿದ್ದನು. {24}

ಅವರಿಬ್ಬರೂ [ಅರ್ಥಾತ್ ಯೂಸುಫ್ ರು ಅವಳಿಂದ ತಪ್ಪಿಸಿಕೊಳ್ಳಲು ಮತ್ತು ಅವಳು ಯೂಸುಫ್ ರನ್ನು ಹಿಡಿಯಲು] ಒಬ್ಬರ ಹಿಂದೊಬ್ಬರಂತೆ ಬಾಗಿಲಿನತ್ತ ಧಾವಿಸಿದರು. [ಹಿಡಿದೆಳೆಯುವ ರಭಸದಲ್ಲಿ] ಅವಳು ಯೂಸುಫ್ ರ ಅಂಗಿಯ ಹಿಂಭಾಗವನ್ನು ಹರಿದು ಬಿಟ್ಟಳು. (ಬಾಗಿಲು ತೆರೆದ ಕೂಡಲೇ) ಅವಳ ಪತಿಯನ್ನು ಬಾಗಿಲ ಬಳಿ ಅವರು ಕಂಡರು. (ಬೆಚ್ಚಿ ಬಿದ್ದ) ಅವಳು, ನಿಮ್ಮ ಮನೆಯಾಕೆಯೊಂದಿಗೆ ಕೆಟ್ಟ ಉದ್ದೇಶ ಹೊಂದಿರುವ ಒಬ್ಬ ವ್ಯಕ್ತಿಗೆ ಸೆರೆವಾಸ ಅಥವಾ ಕಠಿಣ ಶಿಕ್ಷೆಯಲ್ಲದೆ ತಕ್ಕ ಶಾಸ್ತಿ ಬೇರೆ ಇದೆಯೇ ಎಂದು ಕೇಳಿದಳು. {25}

ನನ್ನನ್ನು ಪುಸಲಾಯಿಸಿ ಮನಸೆಳೆಯಲು ಪ್ರಯತ್ನಿಸಿದವಳು ಇವಳೇ ಆಗಿದ್ದಳು ಎಂದು ಯೂಸುಫ್ ರು ಹೇಳಿದರು. ಕೊನೆಗೆ, ಅವಳ ಕುಟುಂಬಕ್ಕೆ ಸೇರಿದ ಒಬ್ಬನು (ಸಾಂದರ್ಭಿಕ ಸಾಕ್ಷ್ಯದ ಮೇರೆಗೆ ತೀರ್ಪು ನೀಡುತ್ತಾ) ಹೇಳಿದನು: ಒಂದು ವೇಳೆ ಯೂಸುಫ್ ನ ಅಂಗಿಯು ಮುಂದುಗಡೆಯಿಂದ ಹರಿದಿದ್ದರೆ ಇವಳು ಹೇಳುತ್ತಿರುವುದೇ ಸತ್ಯ; ಮತ್ತು ಯೂಸುಫ್ ನು ಸುಳ್ಳುಗಾರನಾಗಿರುವನು! {26}

ಇನ್ನು ಅವನ ಅಂಗಿಯು ಹಿಂದುಗಡೆಯಿಂದ ಹರಿದಿದ್ದರೆ ಅವಳು ಹೇಳುತ್ತಿರುವುದು ಸುಳ್ಳು; ಮತ್ತು ಅವನು ಸತ್ಯವಂತನಾಗಿರುವನು! {27}

ಕೊನೆಗೆ, ಯೂಸುಫ್ ರು ತೊಟ್ಟಿದ್ದ ಅಂಗಿಯ ಹಿಂಭಾಗ ಹರಿದಿರುವುದನ್ನು ಕಂಡ (ಆಕೆಯ ಪತಿ ಕುಪಿತನಾಗಿ) ಹೇಳಿದನು: ಇದೆಲ್ಲ ನಿಮ್ಮಂತಹ ಸ್ತ್ರೀಯರು ಮಾಡುವ ವಂಚನೆಯಾಗಿದೆ; ಹೌದು, ನಿಮ್ಮಂತಹ (ಸ್ತ್ರೀವರ್ಗದ) ವಂಚನೆ ಬಹಳ ಘನಘೋರವಾದುದು! {28}

ಓ ಯೂಸುಫ್, ಈ ವಿಷಯವನ್ನು ನೀನು ಇಲ್ಲಿಗೇ ಮರೆತು ಮರೆತು ಬಿಡು. ಮತ್ತು (ಓ ಹೆಣ್ಣೇ), ನೀನು ನಿನ್ನ ತಪ್ಪಿಗಾಗಿ ಕ್ಷಮೆಯಾಚಿಸಬೇಕು. ಏಕೆಂದರೆ ನಿಜವಾದ ತಪ್ಪಿತಸ್ಥಳು ನೀನೇ ಆಗಿರುವೆ. {29}

[ಅಷ್ಟೊತ್ತಿಗೆ ವಿಷಯ ಹರಡಿತ್ತು]. ಮತ್ತು ಆ ಊರಿನ ಕೆಲವು ಮಹಿಳಾಮಣಿಗಳು, ಅಝೀಝ್ ನ ಹೆಂಡತಿಯು ತನ್ನ ಯುವ ಗುಲಾಮನನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದ್ದಾಳೆ; ನಿಜಕ್ಕೂ ಅವನ ಮೇಲಿನ ಮೋಹ ಅವಳ ಹೃದಯದಲ್ಲಿ ಬೇರೂರಿ ಬಿಟ್ಟಿದೆ! ಹೌದು, ಅವಳು ಸ್ಪಷ್ಟವಾದ ತಪ್ಪುದಾರಿಗೆ ಬಿದ್ದಿರುವುದು ನಮಗೆ ಕಂಡುಬರುತ್ತಿದೆ ಎಂದು ಆಡಿಕೊಳ್ಳ ತೊಡಗಿದರು. {30}

ಆ ಮಹಿಳೆಯರ ಅಪಹಾಸ್ಯ ಭರಿತ ಪಿಸುಮಾತುಗಳ ಬಗ್ಗೆ ಕೇಳಿಸಿಕೊಂಡ ಆಕೆ ಅವರತ್ತ ದೂತರನ್ನು ಕಳುಹಿಸಿ (ತನ್ನ ಭವನಕ್ಕೆ ಬರಮಾಡಿಕೊಂಡಳು). ಅವರಿಗಾಗಿ ಔತಣಕೂಟ; ಒರಗಿ ಕೂರುವ ಆಸನಗಳನ್ನು ಸಿದ್ಧಪಡಿಸಿದಳು. (ಹಣ್ಣು ಕತ್ತರಿಸಲು) ಪ್ರತಿಯೊಬ್ಬರಿಗೂ ಒಂದು ಚಾಕುವನ್ನೂ ಕೊಟ್ಟಳು. [ಅವರೆಲ್ಲ ಆಸೀನರಾಗಿ ತಮ್ಮ ತಮ್ಮ ಪಾಲಿನ ಹಣ್ಣುಗಳನ್ನು ಕತ್ತರಿಸತೊಡಗಿದಾಗ] ಅವರ ಮುಂದಿನಿಂದ ಹಾದು ಹೋಗುವಂತೆ ಯೂಸುಫ್ ರಿಗೆ ಸೂಚಿಸಿದಳು. ಆ ಹೆಂಗಸರ ದೃಷ್ಟಿ ಯೂಸುಫ್ ರ ಮೇಲೆ ಬಿದ್ದಾಕ್ಷಣ, [ಆತನ ಗಾಂಭೀರ್ಯ ಭರಿತ ಸೌಂದರ್ಯಕ್ಕೆ ಅವರು ಮೂಕವಿಸ್ಮಿತರಾಗಿ] ಆತನನ್ನು ಕೊಂಡಾಡಿದರು ಹಾಗೂ (ತಮಗರಿವಿಲ್ಲದಂತೆಯೇ) ತಮ್ತಮ್ಮ ಕೈಗಳನ್ನೇ ಕೊಯ್ದು (ಗಾಯ ಮಾಡಿ) ಕೊಂಡರು! ಅಲ್ಲಾಹ್ ನೇ ಕಾಪಾಡಬೇಕು! ಈತನೊಬ್ಬ ಶ್ರೇಷ್ಠ ಸ್ಪುರದ್ರೂಪಿ ಮಲಕ್ ಆಗಿರುವನೇ ಹೊರತು ಇವನು ಮನುಷ್ಯನಂತು ಅಲ್ಲ ಎಂದು [ಅಝೀಝ್ ನ ಪತ್ನಿಯನ್ನು ಈ ಹಿಂದೆ ಹಂಗಿಸಿದ್ದ] ಆ ಮಹಿಳಾಮಣಿಗಳು ಉದ್ಗರಿಸಿದರು. {31}

ಆಗ ಅಝೀಝ್ ನ ಪತ್ನಿ ಹೇಳಿದಳು: ಯಾರ ವಿಷಯದಲ್ಲಿ ನೀವು ನನ್ನನ್ನು ನಿಂದನೆಗೆ ಗುರಿಪಡಿಸಿದ್ದಿರೋ ಅವನೇ ಇವನು; [ಈಗ ಅವನ ಮೋಹಕತೆಯನ್ನು ನೀವೇ ನೋಡಿದಿರಲ್ಲ]! ಹೌದು, ಖಂಡಿತವಾಗಿ ಅವನನ್ನು ಪ್ರಲೋಭನೆಗೊಳಿಸಿ ಅವನ ಮನಸೆಳೆಯಲು ನಾನು ಪ್ರಯತ್ನಿಸಿದ್ದೆ; ಆದರೆ ಅವನು ತಪ್ಪಿಸಿಸ್ಕೊಂಡನು. (ಮುಂದೆ ನೀವು ನೋಡುತ್ತಲಿರಿ), ನಾನು ಹೇಳಿದ್ದನ್ನು ಅವನು ಮಾಡದೇ ಹೋದರೆ ನಿಶ್ಚಿತವಾಗಿ ಅವನು ಸೆರೆಮನೆ ಸೇರಲಿರುವನು, ಆಗ ಖಂಡಿತವಾಗಿ ಅವನಿಗೆ ಅವಮಾನವೂ ಆಗಲಿದೆ. {32}

ಆಗ ಯೂಸುಫ್ ರು, ಓ ನನ್ನ ಕರ್ತೃವೇ! ಯಾವ ಕೃತ್ಯದೆಡೆಗೆ ಈ ಮಹಿಳೆಯರು ನನ್ನನ್ನು ಆಹ್ವಾನಿಸುತ್ತಿರುವರೋ ಅದಕ್ಕಿಂತ ಸೆರೆಮನೆಯೇ ನನಗೆ ಲೇಸು! ಇವರ ಈ ಮೋಸದ ಜಾಲವನ್ನು ನೀನು ನನ್ನಿಂದ ದೂರವಿಡದಿದ್ದರೆ (ಪ್ರಭುವೇ, ಅವರು ಹೆಣೆದ ಜಾಲಕ್ಕೆ) ಚಿತ್ತಪರವಶನಾಗಿ ನಾನು ಅವರತ್ತ ವಾಲುವ ಸಾಧ್ಯತೆ ಇದೆ - ಎಂದು ಪ್ರಾರ್ಥಿಸಿ ಕೊಂಡರು. {33}

ಯೂಸುಫ್ ರ ಆ ಪ್ರಾರ್ಥನೆಯನ್ನು ಅವರ ಕರ್ತೃ ಸ್ವೀಕರಿಸಿದನು ಹಾಗೂ ಆ ಮಹಿಳೆಯರು ಹೂಡಿದ್ದ ಸಂಚನ್ನು ಯೂಸುಫ್ ರಿಂದ ನಿವಾರಿಸಿ ಬಿಟ್ಟನು. ಹೌದು, ಅವನು ಎಲ್ಲವನ್ನೂ ಆಲಿಸುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ. {34}

ತದನಂತರ [ಯೂಸುಫ್ ರು ನಿರಪರಾಧಿಯೆಂದೂ ಮನೆಯೊಡತಿಯೇ ತಪ್ಪಿತಸ್ಥಳೆಂದೂ ಸಾಬೀತು ಪಡಿಸುವ] ಎಲ್ಲ ಕುರುಹುಗಳನ್ನು ಕಂಡ ಬಳಿಕವೂ [ಕಳಂಕ ತಪ್ಪಿಸಿಕೊಳ್ಳಲು] ಒಂದು ನಿರ್ದಿಷ್ಟ ಅವಧಿಯ ತನಕ ಯೂಸುಫ್ ರನ್ನು ಬಂಧನದಲ್ಲಿಡಲೇ ಬೇಕು, (ಅದೇ ಉತ್ತಮ) ಎಂದು ಆ ಜನರಿಗೆ ತೋಚಿತು. {35}

[ಅದರಂತೆ ಅವರನ್ನು ಸೆರೆವಾಸಕ್ಕೆ ಕಳುಹಿಸುವ ದಿನ] ಅವರೊಂದಿಗೆ ಇನ್ನಿಬ್ಬರು ಯುವಕರು ಸಹ ಸೆರೆಮನೆ ಪ್ರವೇಶಿಸಿದರು. ಅವರಲ್ಲಿ ಒಬ್ಬನು ಹೇಳಿದನು: ನಾನು (ದ್ರಾಕ್ಷಾರಸ) ಹಿಂಡಿ ಮದಿರೆ ತಯಾರಿಸುತ್ತಿರುವುದಾಗಿ ಕನಸು ಕಂಡಿದ್ದೇನೆ! ಅಷ್ಟರಲ್ಲಿ ಇನ್ನೊಬ್ಬ ಹೇಳಿದನು: ನಾನು ತಲೆಯ ಮೇಲೆ ರೊಟ್ಟಿ ಹೊತ್ತಿರುತ್ತೇನೆ ಮತ್ತು ಹಕ್ಕಿಗಳು ಅದನ್ನು ಕುಕ್ಕಿ ತಿನ್ನುತ್ತಿರುದಾಗಿ ಕನಸು ಕಂಡಿರುವೆನು! ನೀವೊಬ್ಬ ಸಜ್ಜನ ವ್ಯಕ್ತಿಯಂತೆ ನಮಗೆ ಕಾಣುತ್ತಿದ್ದೀರಿ, ಆದ್ದರಿಂದ ನಮಗೆ ನಮ್ಮ ಕನಸಿನ ತಾತ್ಪರ್ಯ ಏನೆಂದು ತಿಳಿಸಿರಿ (ಎಂದು ಆ ಯುವಕರು ಯೂಸುಫ್ ರನ್ನು ಕೋರಿದರು). {36}

ಯೂಸುಫ್ ರು ಉತ್ತರಿಸಿದರು: ನಿಮಗೆ (ಈ ಜೈಲಿನಲ್ಲಿ ಇಂದು) ಬಡಿಸಲಾಗುವ ಆಹಾರವು ನಿಮ್ಮ ಬಳಿ ಬರುವುದಕ್ಕೆ ಮುಂಚಿತವಾಗಿ ನಿಮ್ಮ ಕನಸುಗಳ ವ್ಯಾಖ್ಯಾನವನ್ನು ನಿಮಗೆ ತಿಳಿಸಲಿದ್ದೇನೆ. ಹೌದು, ಅದು ನನ್ನ ಕರ್ತಾರನು ನನಗೆ ದಯಪಾಲಿಸಿದ ವಿದ್ಯೆಗಳಲ್ಲಿ ಒಂದು. [ನೀವು ಬಲ್ಲಿರೇನು?] ವಾಸ್ತವದಲ್ಲಿ (ಕರ್ತಾರನಾದ) ಆ ಅಲ್ಲಾಹ್ ನಲ್ಲಿ ವಿಶ್ವಾಸ ಇಡದವರ ಧರ್ಮವನ್ನು ನಾನು ತ್ಯಜಿಸಿರುತ್ತೇನೆ; ಹೌದು, ಮರಣಾನಂತರದ ಲೋಕವನ್ನು ಸಹ ಆ ಜನರು ನಿರಾಕರಿಸುತ್ತಾರೆ! {37}

ವಾಸ್ತವದಲ್ಲಿ ನಾನು ಅನುಸರಿಸಿದ ಧರ್ಮ, ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್‌ಹಾಕ್ ಮತ್ತು ಯಅಕೂಬ್ (ರಂತಹ ಪ್ರವಾದಿಗಳ) ಧರ್ಮ! ಹೌದು, (ಪ್ರಾಣಿ, ವಿಗ್ರಹ ಮುಂತಾದ) ಯಾವೊಂದು ವಸ್ತುವನ್ನೂ ಅಲ್ಲಾಹ್ ನೊಂದಿಗೆ ಜೊತೆಗೂಡಿಸುವುದು ನಮಗೆ (ಅರ್ಥಾತ್ ಪ್ರವಾದಿಗಳ ಪರಂಪರೆಗೆ) ಒಗ್ಗುವ ವಿಷಯವಲ್ಲ. ಅದು, (ಅರ್ಥಾತ್ ಪ್ರವಾದಿತ್ವವು) ನಮಗೂ ಇತರೆಲ್ಲ ಮಾನವರಿಗೂ ಅಲ್ಲಾಹ್ ನ ಒಂದು ಅನುಗ್ರಹವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು (ಅಂತಹ ಮಹತ್ತರವಾದ ಅನುಗ್ರಹಕ್ಕಾಗಿ) ಕೃತಜ್ಞತೆ ತೋರುವುದಿಲ್ಲ! {38}

ಸೆರೆಮನೆಯ ಓ ನನ್ನ ಸಹಚರರೇ, ವಿವಿಧ ಬಗೆಯ ಹಲವು ದೇವರುಗಳು ಇರುವುದೋ ಲೇಸು; ಅಥವಾ ಪರಮಶಕ್ತನಾದ ಆ ಒಬ್ಬ ಆಲ್ಲಾಹ್ ನೋ ನಿಮೆಗೆ ಲೇಸು? ನೀವೇ ವಿವೇಚಿಸಿ ನೋಡಿ! {39}

ಆ ಒಬ್ಬನನ್ನು ಬಿಟ್ಟು ಉಳಿದ ಯಾವುದನ್ನೆಲ್ಲ ನೀವು ಪೂಜಿಸುತ್ತಿರುವಿರೋ ಅವು ಕೇವಲ ಕೆಲವು ಹೆಸರುಗಳು ಮಾತ್ರ! ಹೌದು, ನೀವೂ ನಿಮ್ಮ ತಂದೆ-ತಾತಂದಿರು ಅವುಗಳಿಗೆ ಇಟ್ಟ ಕೆಲವು (ಕಾಲ್ಪನಿಕ) ಹೆಸರುಗಳು! ಅದಕ್ಕೆ ಯಾವ ಸಾಕ್ಷ್ಯಾಧಾರಗಳನ್ನೂ ಅಲ್ಲಾಹ್ ನು ನಿಮಗೆ ಇಳಿಸಿಕೊಟ್ಟಿಲ್ಲ! ಆಜ್ಞಾಪಿಸಲು ಅಧಿಕಾರ ಹೊಂದಿದವನು ಅಲ್ಲಾಹ್ ನು ಮಾತ್ರ! ಅವನೊಬ್ಬನ ಹೊರತು ಇತರ ಯಾರನ್ನೂ ಆರಾಧಿಸ ಬೇಡಿ ಎಂದೇ ಅವನು ಆದೇಶ ಕೊಟ್ಟಿದ್ದಾನೆ. ಅದು (ಅರ್ಥಾತ್ ಅವನನ್ನು ಮಾತ್ರ ಆರಾಧಿಸಿವುದು ವಕ್ರತೆಯಿಲ್ಲದ) ನೇರವಾದ ರುಜುವಾದ ಆಚಾರಧರ್ಮ. ಆದರೆ ಮನುಷ್ಯರಲ್ಲಿ ಹೆಚ್ಚಿನವರು ತಿಳಿಯ ಬಯಸುವುದಿಲ್ಲ. {40}

ಜೈಲಿನ ಓ ಒಡನಾಡಿಗಳೇ! (ಇನ್ನು ನೀವು ಕಂಡ ಕನಸಿನ ವಿಚಾರ); ನಿಮ್ಮಿಬ್ಬರಲ್ಲಿ ಒಬ್ಬನು [ಕೂಡಲೇ ಇಲ್ಲಿಂದ ಬಿಡುಗಡೆ ಹೊಂದಿ] ತನ್ನ ಯಜಮಾನನಿಗೆ [ಅಂದರೆ ನಾಡಿನ ಅರಸನಿಗೆ] ಮದಿರೆ ಕುಡಿಸುವ ಕೆಲಸದಲ್ಲಿ ತೊಡಗಲಿರುವನು. ಇನ್ನೊಬ್ಬನು [ಶಿಕ್ಷಿಸಲ್ಪಡುವನು; ಅಂದರೆ ಅವನನ್ನು] ಶಿಲುಬೆಗೇರಿಸಲಾಗುವುದು ಮತ್ತು ಹಕ್ಕಿಗಳು ಅವನ ತಲೆಯ (ಮಾಂಸವನ್ನು) ಕುಕ್ಕಿ ತಿನ್ನುವುವು. ವಾಸ್ತವದಲ್ಲಿ ನೀವಿಬ್ಬರೂ ವಿಚಾರಿಸುತ್ತಿದ್ದ ವಿಷಯದಲ್ಲಿ ಅದಾಗಲೇ ತೀರ್ಮಾನ ಆಗಿರುತ್ತದೆ. {41}

ಆ ಇಬ್ಬರು ಕೈದಿಗಳ ಪೈಕಿ ಯಾರ ಬಗ್ಗೆ ಬಿಡುಗಡೆ ಹೊಂದುವನೆಂದು ಯೂಸುಫ್ ರು ನಂಬಿದ್ದರೋ ಅವನೊಡನೆ, ನಿನ್ನ ಯಜಮಾನನೊಂದಿಗೆ [ಅರ್ಥಾತ್ ಈಜಿಪ್ಟ್ ಪ್ರದೇಶವನ್ನು ಆಳುವ ಅರಸನೊಂದಿಗೆ] ನನ್ನ ವಿಚಾರ ತಿಳಿಸಬೇಕು ಎಂದು ಕೋರಿದರು. ಆದರೆ ತನ್ನ ಯಜಮಾನನಿಗೆ (ಯೂಸುಫ್ ರ) ವಿಷಯ ತಿಳಿಸಲಿಕ್ಕಿದೆ ಎಂಬುದು ಅವನಿಗೆ ಮರೆತು ಹೋಗುವಂತೆ ಸೈತಾನನು ಮಾಡಿದನು. ಆದ್ದರಿಂದ ಯೂಸಫ್ ರು ಕೆಲವು ವರ್ಷಗಳ ಕಾಲ ಸೆರೆಮನೆಯಲ್ಲೇ ಕಳೆಯಬೇಕಾಯಿತು. {42}

[ಇದಾದ ಕೆಲವು ವರ್ಷಗಳ ನಂತರ ಒಂದು ದಿನ ತನ್ನ ಆಸ್ಥಾನಿಕರೊಂದಿಗೆ ಈಜಿಪ್ಟ್ ನ] ಅರಸನು ಹೇಳಿದನು: ದಷ್ಟಪುಷ್ಟವಾದ ಏಳು ದನಗಳನ್ನು ಬಡಕಲಾದ ಏಳು ದನಗಳು ನುಂಗುತ್ತಿರುವುದಾಗಿಯೂ, ಧಾನ್ಯದ ಏಳು ತೆನೆಗಳು ಹಚ್ಚಹಸಿರಾಗಿದ್ದು ಅವುಗಳನ್ನು ಉಳಿದ ಏಳು ಒಣಗಿ ಸುಕ್ಕುಗಟ್ಟಿದ ತೆನೆಗಳು ನುಂಗುತ್ತಿರುವುದಾಗಿಯೂ ನಾನು ಕನಸು ಕಂಡೆನು! ಓ ಆಸ್ಥಾನಿಕರೇ, ನೀವು ಕನಸುಗಳ ವ್ಯಾಖ್ಯಾನ ಬಲ್ಲವರಾದರೆ ನನ್ನೀ ಕನಸಿನ ಸರಿಯಾದ ವ್ಯಾಖ್ಯಾನ ನನಗೆ ತಿಳಿಸಿರಿ! {43}

ಆಸ್ಥಾನಿಕರು ಉತ್ತರಿಸಿದರು: ಅದು ಗೊಂದಲಮಯವಾದ ಅಸಂಬದ್ಧ ಕನಸು! ನಾವು ಅಂತಹ (ಅಸಂಬದ್ಧ) ಕನಸುಗಳ ಬಗೆಗಿನ ವ್ಯಾಖ್ಯಾನ ತಿಳಿದವರಲ್ಲ. {44}

ಇಬ್ಬರು (ಕೈದಿಗಳ ಪೈಕಿ) ಬಿಡುಗಡೆ ಪಡೆದವನಿಗೆ ಒಂದು ದೀರ್ಘ ಕಾಲಾವಧಿಯ ನಂತರ [ಒಮ್ಮಿಂದೊಮ್ಮೆಲೇ ಸೆರೆಮನೆಯಲ್ಲಿದ್ದ ಯೂಸುಫ್ ರ ಬಗ್ಗೆ] ನೆನಪಾಯಿತು. [ಅವನು ಆಸ್ಥಾನದಲ್ಲಿ ಅವರ ಕುರಿತು ವಿವರಿಸಿದ ನಂತರ] ಹೇಳಿದನು: ನಾನು ನಿಮಗೆ ಆ ಕನಸಿನ ಸರಿಯಾದ ವ್ಯಾಖ್ಯಾನ ತಿಳಿಸಬಲ್ಲೆ, ನನ್ನನ್ನು (ಯೂಸುಫ್ ರ ಬಳಿಗೆ) ಕಳುಹಿಸುವ ಏರ್ಪಾಡು ಮಾಡಿರಿ. {45}

[ಸೆರೆಮನೆಗೆ ತಲುಪಿದ ಅವನು ಹೇಳಿದನು]: ಪರಮ ಸತ್ಯವಂತನಾದ ಓ ಯೂಸುಫ್! [ನಮ್ಮ ಅರಸನು ಕಂಡ ಕನಸಿನಲ್ಲಿ] ದಷ್ಟಪುಷ್ಟವಾದ ಏಳು ದನಗಳನ್ನು ಬಡಕಲಾದ ಏಳು ದನಗಳು ನುಂಗುತ್ತಿವೆ ಮತ್ತು ಹಚ್ಚಹಸಿರಾದ ಏಳು ತೆನೆಗಳನ್ನು ಒಣಗಿ ಸುಕ್ಕುಗಟ್ಟಿದ ಏಳು ತೆನೆಗಳು (ನುಂಗುತ್ತಿವೆ). ಈ ಕನಸಿನ ವ್ಯಾಖಾನ ಏನೆಂದು ನಮಗೆ ತಿಳಿಸಿರಿ. ನಾನು ಆಸ್ಥಾನದ ಜನರತ್ತ ಮರಳಿ ಹೋದಾಗ [ಕನಸಿನ ವ್ಯಾಖ್ಯಾನ ಹಾಗೂ ನಿಮ್ಮ ಜ್ಞಾನ, ಸ್ಥಾನಮಾನವನ್ನು] ಅವರೂ ತಿಳಿಯಬಹುದು! {46}

ಯೂಸುಫ್ ರು ಉತ್ತರಿಸಿದರು: (ಎಂದಿನ ಪರಿಪಾಠದಂತೆ ಮುಂದಿನ) ಏಳು ವರ್ಷಗಳ ಕಾಲ ನಿರಂತರವಾಗಿ ನೀವು ಶ್ರಮಪಟ್ಟು ವ್ಯವಸಾಯ ಮಾಡುತ್ತಲಿರಿ. ತರುವಾಯ ಕೊಯ್ಲು ಮಾಡಿದಾಗಲೆಲ್ಲ ನಿಮಗೆ ತಿನ್ನಲು ಬೇಕಾದ ಸ್ವಲ್ಪ್ವನ್ನು ಮಾತ್ರ ತೆಗೆದು ಉಳಿದದ್ದನ್ನು (ಶೇಖರಿಸಿಡುವ ಸಲುವಾಗಿ) ಅದರ ತೆನೆಯಲ್ಲೇ ಬಿಟ್ಟು ಬಿಡಿರಿ. {47}

ಅದರ ನಂತರ ಬರಲಿರುವುದು ಏಳು ಕಠಿಣವಾದ (ಬರಗಾಲ ಪೀಡಿತ) ವರ್ಷಗಳು. (ಬಿತ್ತನೆಗಾಗಿ) ತೆಗೆದಿಡಬೇಕಾದ ಸ್ವಲ್ಪವನ್ನು ಹೊರತು ಪಡಿಸಿ, ನೀವು ಮುಂಗಡವಾಗಿ (ಬರಗಾಲದ ಉಪಯೋಗಕ್ಕಾಗಿ ದಾಸ್ತಾನುಗೊಳಿಸಿದ್ದ) ಎಲ್ಲವನ್ನೂ ಆ ವರ್ಷಗಳು ಮುಗಿಸಿ ಬಿಡುವುವು! {48}

ತದನಂತರ (ಧಾರಾಳ ಮಳೆಯಾಗುವ), ಜನರಿಗೆ ಸುಭಿಕ್ಷೆಯ ನೆಮ್ಮದಿಯ ಒಂದು ವರ್ಷವೂ ಬರಲಿದೆ. ಅದರಲ್ಲಿ ಜನರು (ಯಥೇಚ್ಛವಾಗಿ ಬೆಳೆದ ದ್ರಾಕ್ಷಾದಿ ಹಣ್ಣು ಹಂಪಲುಗಳ) ರಸ ಹಿಂಡಲಿರುವರು. {49}

[ಕನಸಿನ ವ್ಯಾಖ್ಯಾನವನ್ನು ತಿಳಿದುಕೊಂಡ] ಅರಸನು ಯೂಸುಫ್ ರನ್ನು ನನ್ನ ಬಳಿ ಕರೆತನ್ನಿರಿ ಎಂದು ಆಜ್ಞಾಪಿಸಿದನು. ಹಾಗೆ (ಸೆರೆಮನೆಯಲ್ಲಿದ್ದ) ಯೂಸುಫ್ ರ ಬಳಿಗೆ ಅರಸನ ದೂತನು ಬಂದು (ವಿಷಯ ತಿಳಿಸಿದಾಗ ಯೂಸುಫ್ ರು) ಹೇಳಿದರು: ನಿನ್ನ ಒಡೆಯನೆಡೆಗೆ ಮರಳಿ ಹೋಗು; ತಮ್ಮ ತಮ್ಮ ಹಸ್ತಗಳನ್ನು ಕತ್ತರಿಸಿ ಗಾಯ ಮಾಡಿಕೊಂಡ ಆ ಮಹಿಳೆಯರ ವಿಷಯ ಏನಾಯಿತು ಎಂದು ಅವನೊಡನೆ ಕೇಳು. ಹೌದು, (ನನ್ನನ್ನು ಸಿಲುಕಿಸಿದ) ಆ ಮಹಿಳೆಯರ ಸಂಚು ಎಂತಹದ್ದು ಎಂದು ನನ್ನ ಪ್ರಭುವಿಗೆ ಚೆನ್ನಾಗಿಯೇ ತಿಳಿದಿದೆ. {50}

ಅರಸನು (ಕೂಡಲೇ ಆ ಮಹಿಳೆಯರನ್ನು ಕರೆಯಿಸಿ), ಅಂದು ನೀವು ಯೂಸುಫ್ ನನ್ನು ಪುಸಲಾಯಿಸುತ್ತಿದ್ದಾಗ ಅವನ ಕುರಿತು ನಿಮ್ಮ ನಿಜವಾದ ಅನಿಸಿಕೆ ಏನಾಗಿತ್ತು ಎಂದು ಕೇಳಿದನು. ಆ ಅಲ್ಲಾಹ್ ನು ಕಾಪಾಡಲಿ! ಅವನಲ್ಲಿ ಒಂದಿಷ್ಟು ಕೆಡುಕನ್ನಾದರೂ ನಮಗೆ ಕಾಣಲಾಗಲಿಲ್ಲ ಎಂದು ಅವರೆಲ್ಲ (ಸಾಕ್ಷ್ಯ) ನುಡಿದರು. ಆಗ ಅಝೀಝ್ ನ ಪತ್ನಿ ಹೇಳಿದಳು: ಈಗ ಸತ್ಯವು ಬಟ್ಟಬಯಲಾಗಿದೆ; ಹೌದು, ಭೋಗಾಪೇಕ್ಷೆಯೊಂದಿಗೆ ಅವನನ್ನು ಪುಸಲಾಯಿಸಿಲು ಪ್ರಯತ್ನಿಸಿದವಳು ನಾನೇ ಆಗಿದ್ದೆ; ಅವನು ನಿಜವಾಗಿಯೂ ಒಬ್ಬ ಸತ್ಯಶೀಲ ಪ್ರಾಮಾಣಿಕ ವ್ಯಕ್ತಿಯಾಗಿದ್ದಾನೆ. {51}

(ಯೂಸುಫ್ ರು ಸ್ಪಷ್ಟಪಡಿಸಿದರು): ಹೌದು, ನಾನು [ನನ್ನನ್ನು ಖರೀದಿಸಿ ಸಾಕುತ್ತಿದ್ದ ನನ್ನ ಒಡೆಯ] ಅಝೀಝ್ ನ ಅನುಪಸ್ಥಿತಿಯಲ್ಲಿ ಆತನಿಗೆ ಎಂದೂ ದ್ರೋಹ ಬಗೆದಿಲ್ಲವೆಂದೂ, ಇನ್ನು ದ್ರೋಹ ಬಗೆಯುವವರು [ತಮ್ಮ ಅಪರಾಧವನ್ನು ಮುಚ್ಚಿಡಲು] ಹೂಡುವ ಕುತಂತ್ರಗಳು ಸಫಲವಾಗಲು ಅಲ್ಲಾಹ್ ನು ಬಿಡುವುದಿಲ್ಲವೆಂದೂ ಆತನಿಗೆ (ಅರ್ಥಾತ್ ಅಝೀಝ್ ನಿಗೆ) ಮನವರಿಕೆಯಾಗಲು ಹಾಗೆ (ಅರಸನಿಂದ ಆ ಮಹಿಳೆಯರ ವಿಚಾರಣೆ) ನಡೆಸಬೇಕಾಯಿತು. {52}

✽13✽ [ಆ ಮಹಿಳೆಯ ಬಲೆಗೆ ಬೀಳದಂತೆ] ನನ್ನನ್ನು ದೋಷಮುಕ್ತವಾಗಿ ಇರಿಸಿದವನು ಸ್ವತಃ ನಾನೇ ಎಂದು ನಾನು ಹೇಳುತ್ತಿಲ್ಲ; ನನ್ನ ಪ್ರಭುವಿನ ಕರುಣೆಯೊಂದು ಇಲ್ಲದಿದ್ದರೆ ಮಾನವ ಚಿತ್ತವಂತು ನಿರಂತರ ಕೆಟ್ಟದರತ್ತ ಪ್ರಚೋದಿಸುತ್ತಲೇ ಇರುತ್ತದೆ! ಹೌದು, ನನ್ನ ಪ್ರಭು ಮಾತ್ರ ಕ್ಷಮಾಶೀಲನೂ ಸದಾ ಕರುಣೆ ತೋರುವವನೂ ಆಗಿರುವನು. {53}

ರಾಜನು ಆಜ್ಞಾಪಿಸಿದನು: ಆತನನ್ನು ನನ್ನಲ್ಲಿಗೆ ಕರೆತನ್ನಿರಿ; ನಾನು ನನಗಾಗಿ [ಅರ್ಥಾತ್ ನಾನೇ ಸ್ವತಹ ನಡೆಸಬೇಕಾದ ರಾಜ್ಯಾಡಳಿತದ ಕಾರ್ಯಗಳಿಗಾಗಿ] ಆತನನ್ನು ಮೀಸಲಿಡುವೆನು! ನಂತರ ಅವರೊಂದಿಗೆ ಮಾತುಕತೆ ನಡೆಸಿದ ರಾಜನು (ಪ್ರಭಾವಿತನಾಗಿ), ಇಂದಿನಿಂದ ನೀವು ನಮ್ಮ (ಆಸ್ಥಾನದಲ್ಲಿ) ಉನ್ನತ ಸ್ಥಾನದಲ್ಲಿರುವಿರಿ ಮತ್ತು ಒಬ್ಬ ವಿಶ್ವಸ್ಥ ಅಧಿಕಾರಿಯಾಗಿರುವಿರಿ ಎಂದು ತಿಳಿಸಿದನು. {54}

ಯೂಸುಫ್ ರು ಹೇಳಿದರು: ಹಾಗಾದರೆ ರಾಜ್ಯದ ಬೊಕ್ಕಸ, ಗೋದಾಮುಗಳ ಉಸ್ತುವಾರಿಯನ್ನು ನನ್ನ ಸುಪರ್ದಿಗೆ ನೀಡು. ನಾನು [ಇಂತಹ ಸಂದಿಗ್ಧ ಸ್ಥಿತಿಯಲ್ಲೂ ರಾಜ್ಯದ ಹಿತಾಸಕ್ತಿಯ] ಅಭಿರಕ್ಷಣೆ ಮಾಡ ಬಲ್ಲೆನು; ನನಗೆ (ಅದರ) ಪರಿಜ್ಞಾನವೂ ಇದೆ. {55}

ಹಾಗೆ ಯೂಸುಫ್ ರಿಗೆ ನಾವು ಅಧಿಕಾರ ಸಮೇತ (ಈಜಿಪ್ಟ್) ದೇಶದಲ್ಲಿ ನೆಲೆಯೂರಲು ಅವಕಾಶ ಮಾಡಿಕೊಟ್ಟೆವು. ಅಲ್ಲಿ ತನ್ನ ಇಷ್ಟಾನುಸಾರ ಎಲ್ಲಿ ಬೇಕಾದರಲ್ಲಿ ಅವರು ಮೊಕ್ಕಾಂ ಹೂಡಬಹುದಾಗಿತ್ತು. ನಮ್ಮ ಅನುಗ್ರಹವನ್ನು ನಮ್ಮಿಚ್ಛೆಯಂತೆ ಯಾರಿಗೆ ಬೇಕೋ ಅವರಿಗೆ ನಾವು ತಲುಪಿಸುತ್ತಿರುತ್ತೇವೆ; ಹೌದು, ಸಜ್ಜನಿಕೆ ತೋರುವ ಜನರಿಗಿರುವ ಪ್ರತಿಫಲವನ್ನು ನಾವು ಎಂದೂ ವ್ಯರ್ಥಗೊಳಿಸುವುದಿಲ್ಲ. {56}

ಮಾತ್ರವಲ್ಲ, (ನಮ್ಮ ವಿಧಿ-ನಿಷೇಧಗಳ ಬಗ್ಗೆ) ಎಚ್ಚರಿಕೆ ವಹಿಸುವ ವಿಶ್ವಾಸಿಗಳ ಪಾಲಿಗೆ ಪರಲೋಕದ ಪ್ರತಿಫಲವು ಮತ್ತಷ್ಟು ಉತ್ತಮವಾದುದು! {57}

[ಅದಾಗಲೇ ಸುತ್ತಮುತ್ತಲಿನ ಪ್ರದೇಶವನ್ನು ಯೂಸುಫ್ ರು ಮುನ್ಸೂಚನೆ ನೀಡಿದ್ದ ಬರಗಾಲವು ಆವರಿಸಿತ್ತು. ಹಾಗಿರುವಾಗ ದವಸಧಾನ್ಯ ಪಡೆದುಕೊಳ್ಳಲು ಒಂದು ದಿನ] ಯೂಸುಫ್ ರ ಸಹೋದರರು ಅವರ ಮುಂದೆ ಹಾಜರಾದರು. ಕೂಡಲೇ ಯೂಸುಫ್ ರಿಗೆ ಅವರ ಗುರುತು ಸಿಕ್ಕಿತು. ಆದರೆ ಸಹೋದರರಿಗೆ ಮಾತ್ರ ಅವರ ಗುರುತು ಸಿಗದೆ ಹೋಯಿತು. {58}

ಸಹೋದರರಿಗೆ (ಅಗತ್ಯವಿದ್ದ ಆಹಾರ ಸಾಮಗ್ರಿಗಳನ್ನು) ಸಿದ್ಧಪಡಿಸಿ ಕೊಡುವ ಸಂದರ್ಭದಲ್ಲಿ ಯೂಸುಫ್ ರು ಅವರೊಂದಿಗೆ ಹೇಳಿದರು: (ಮುಂದಿನ ಸರ್ತಿ ಇಲ್ಲಿಗೆ ಬರುವಾಗ) ನಿಮ್ಮ ತಂದೆಯ ಕಡೆಯಿಂದ ನಿಮಗಿರುವ ನಿಮ್ಮ ಮಲಸಹೋದರನ್ನು [ಬೈಬಲ್ ನಲ್ಲಿ ಅವರನ್ನು ಬೆಂಜಮಿನ್ ಅಥವಾ ಬಿನ್‌ಯಾಮಿನ್ ಎಂದು ಪ್ರಸ್ತಾವಿಸಲಾಗಿದೆ] ನನ್ನ ಬಳಿಗೆ ಕರೆತನ್ನಿರಿ; [ನೀವು ಪುನಃ ಬನ್ನಿ, ಏಕೆಂದರೆ] ತೂಗುವಾಗ (ಸಾಮಗ್ರಿಗಳು ಕಡಿಮೆಯಾಗದಂತೆ) ತಕ್ಕಡಿನ್ನು ನಾನು ಪೂರ್ಣವಾಗಿ ತುಂಬಿಸಿ ವಿತರಿಸುವುದನ್ನೂ, (ಆಹಾರ ಸಾಮಗ್ರಿಗಳಿಗಾಗಿ ಇಲ್ಲಿಗೆ) ಬರುವವರನ್ನು ನಾನು ಉತ್ತಮವಾಗಿ (ಸತ್ಕರಿಸುವುದನ್ನೂ) ನೀವು ನೋಡುತ್ತಿಲ್ಲವೇ? {59}

ಇನ್ನು ನೀವು ಆತನನ್ನು ಕರೆತರದಿದ್ದರೆ ನನ್ನ (ಗೋದಾಮಿನಿಂದ) ನಿಮಗೆ ದವಸ ಧಾನ್ಯ ಸಿಗದು; ನೀವು ನನ್ನ ಹತ್ತಿರ ಬರುವ ಅಗತ್ಯವೂ ಇಲ್ಲ. {60}

ಅವರು ಉತ್ತರಿಸಿದರು: ಆತನನ್ನು ಕರೆತರುವ ವಿಷಯವಾಗಿ ನಾವು ಆತನ ತಂದೆಯ ಮನವೊಲಿಸಲು ಪ್ರಯತ್ನಿಸುವೆವು; ಹೌದು, ಆ ಕೆಲಸವನ್ನು ನಾವು ಖಚಿತವಾಗಿಯೂ ಮಾಡುವೆವು. {61}

ಅತ್ತ ತಮ್ಮ ಸೇವಕರಿಗೆ ಯೂಸುಫ್ ರು ಸೂಚಿಸಿದರು: (ಧಾನ್ಯ ಖರೀದಿಸಲು) ಅವರು ತಂದ ಹಣದ ಗಂಟನ್ನು (ರಹಸ್ಯವಾಗಿ) ಅವರ ಸರಕಿನಲ್ಲೇ ಇಟ್ಟುಬಿಡಿರಿ. ಅವರು ತಮ್ಮವರ ಬಳಿಗೆ ಮರಳಿದಾಗ ಅದನ್ನು ಗುರುತಿಸಬಹುದು; ಹಾಗೆ ಅವರು (ಅದನ್ನು ಹಿಂದಿರುಗಿಸಲು ಬಿನ್‌ಯಾಮಿನ್ ನೊಂದಿಗೆ ಇಲ್ಲಿಗೆ) ಮರಳಿ ಬರಬಹುದು! {62}

ನಂತರ ಅವರು ತಮ್ಮ ತಂದೆಯಲ್ಲಿಗೆ ಹಿಂದಿರುಗಿ ಹೋದಾಗ ಹೇಳಿದರು: ಓ ನಮ್ಮ ತಂದೆಯೇ! ನಮಗೆ [ಮುಂದಿನ ಸಲ ದವಸ ಧಾನ್ಯ] ಅಳೆದು ಕೊಡುವುದನ್ನು ನಿರಾಕರಿಸಲಾಗಿದೆ. ಅದ್ದರಿಂದ ನಮ್ಮ ತಮ್ಮನನ್ನು (ಮುಂದಿನ ಸಲ) ನಮ್ಮೊಂದಿಗೆ ಕಳುಹಿಸಿದರೆ ನಾವು ದವಸ ಧಾನ್ಯ ತರುವಂತಾಗಬಹುದು! ಅವನಿಗೆ ಏನೂ ಸಂಭವಿಸದಂತೆ ನಾವು ನೋಡಿಕೊಳ್ಳುವೆವು. {63}

ತಂದೆ ಹೇಳಿದರು: ಈ ಹಿಂದೆ ಇವನ ಅಣ್ಣ (ಯೂಸುಫ್) ನ ವಿಷಯದಲ್ಲಿ ನಿಮ್ಮನ್ನು ನಾನು ನಂಬಿದ್ದಂತೆ ತಾನೆ ಈಗ ಇವನ ವಿಷಯದಲ್ಲಿ ನಿಮ್ಮನ್ನು ನಂಬಬೇಕಾದುದು? [ನಾನು ನಂಬುವುದು ಆಲ್ಲಾಹ್ ನನ್ನು ಮಾತ್ರ!] ಹೌದು, ಅಲ್ಲಾಹ್ ನು ಅತ್ಯುತ್ತಮವಾದ ರಕ್ಷಕನಾಗಿದ್ದಾನೆ ಮತ್ತು ಅವನೇ ಎಲ್ಲರಿಗಿಂತ ಹೆಚ್ಚು ಕರುಣೆ ತೋರುವವನು! {64}

ತರುವಾಯ ಅವರು ತಮ್ಮ ಗಂಟುಮೂಟೆಗಳನ್ನು ಬಿಚ್ಚಿದಾಗ ಅದರಲ್ಲಿ [ಧಾನ್ಯ ಖರೀದಿಗೆಂದು ತಾವು ಕೊಂಡೊಯ್ದಿದ್ದ] ಹಣದ ಗಂಟನ್ನು ತಮಗೇ ಹಿಂದಿರುಗಿಸಿರುವುದನ್ನು ಕಂಡರು! ಓ ನಮ್ಮ ತಂದೆಯೇ! ನಮಗೆ ಇನ್ನೇನು ಬೇಕು; ನೋಡಿ, ಇದು ನಾವು ಕೊಂಡೊಯ್ದ ಹಣದ ಗಂಟು; ನಮಗೇ ಹಿಂದಿರುಗಿಸಲಾಗಿದೆ! ಹೌದು, (ಮುಂದಿನ ಸಾರಿ) ನಮ್ಮ ಕುಟುಂಬಕ್ಕೆಲ್ಲ ಸಾಕಾಗುವಷ್ಟು ದವಸಧಾನ್ಯ ತರುವೆವು. (ಆ ಯಾತ್ರೆಯಲ್ಲಿ) ನಮ್ಮ ತಮ್ಮನ ರಕ್ಷಣೆಯನ್ನೂ ಮಾಡುವೆವು. ಮಾತ್ರವಲ್ಲ [ಈ ಬಿನ್‌ಯಾಮಿನ್ ನಮ್ಮೊಂದಿಗೆ ಬಂದರೆ] ಒಂದು ಒಂಟೆ ಹೊರುವಷ್ಟು ಹೆಚ್ಚುವರಿ ಪಡಿತರವನ್ನು ನಾವು ತರಲಿರುವೆವು. ಅಷ್ಟು ಪ್ರಮಾಣದ ಪಡಿತರವನ್ನು (ನೀಡುವುದು ಅವರಿಗೆ) ಸುಲಭ ಕಾರ್ಯವೇ ಸರಿ ಎಂದು ಅವರು (ತಂದೆಗೆ) ವಿವರಿಸಿದರು. {65}

ನೀವು ಅವನನ್ನು ಖಂಡಿತವಾಗಿಯೂ ನನ್ನ ಬಳಿಗೆ ಕರೆತರುತ್ತೀರಿ ಎಂದು ಅಲ್ಲಾಹ್ ನನ್ನು ಸಾಕ್ಷಿಯಾಗಿಸಿ ಪ್ರತಿಜ್ಞೆ ಮಾಡುವ ತನಕ ನಾನು ಅವನನ್ನು ನಿಮ್ಮೊಂದಿಗೆ ಸರ್ವಥಾ ಕಳುಹಿಸಲಾರೆ; ಆದರೆ ಯಾವುದಾದರು ಅಪತ್ತು ನಿಮ್ಮೆಲ್ಲರನ್ನು (ಒಟ್ಟಾಗಿ) ಆವರಿಸಿ ಬಿಟ್ಟರೆ ವಿಷಯ ಬೇರೆ - ಎಂದು ತಂದೆ (ಪ್ರವಾದಿ ಯಅಕೂಬ್ ರು) ಹೇಳಿದರು. ಕೊನೆಗೆ ಅವರು (ಬಿನ್‌ಯಾಮಿನ್ ನನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಬಗ್ಗೆ) ಮಾತು ಕೊಟ್ಟಾಗ ತಂದೆ ಹೇಳಿದರು, ನಾವು ಆಡಿದ ಮಾತುಗಳೆಲ್ಲ ಅಲ್ಲಾಹ್ ನ ನಿಗಾವಣೆಯಲ್ಲಿದೆ (ಎಂಬುದು ನಿಮಗೆ ತಿಳಿದಿರಲಿ). {66}

[ಹಾಗೆ ತಮ್ಮನೊಂದಿಗೆ ಹೊರಡಲು ಸಿದ್ಧರಾದಾಗ ತಂದೆ ಅವರೊಂದಿಗೆ] ಹೇಳಿದರು: ಓ ನನ್ನ ಪುತ್ರರೇ! (ಈಜಿಪ್ಟ್ ಪಟ್ಟಣವನ್ನು) ಪ್ರವೇಶಿಸುವಾಗ ನೀವೆಲ್ಲರೂ ಒಟ್ಟಾಗಿ ಒಂದೇ ಬಾಗಿಲಿನ ಮೂಲಕ ಪ್ರವೇಶಿಸಬಾರದು; ಬದಲಾಗಿ ಬೇರೆ ಬೇರೆ ಬಾಗಿಲುಗಳ ಮೂಲಕ ಪ್ರವೇಶಿಸಿಕೊಳ್ಳಿ. [ಅದು ನಿಮ್ಮ ಸುರಕ್ಷತೆಗೆ ನನ್ನದೊಂದು ಚಿಕ್ಕ ಉಪಾಯವಾದರೂ] ಅಲ್ಲಾಹ್ ನ ಯೋಜನೆಗಳೆದುರು ನಾನು ನಿಮ್ಮ ಯಾವ ಪ್ರಯೋಜನಕ್ಕೂ ಆಗಲಾರೆ. (ಎಲ್ಲಾ ವಿಷಯಗಳಲ್ಲಿ) ಅಂತಿಮ ತೀರ್ಮಾನದ ಅಧಿಕಾರವು ಅಲ್ಲಾಹ್ ನಿಗಲ್ಲದೆ ಬೇರೆ ಯಾರಿಗೂ ಇಲ್ಲ! ಆದ್ದರಿಂದ ನಾನು ಭರಸೆಯಿಡುವುದು ಅವನ ಮೇಲೆ ಮಾತ್ರ; ಇನ್ನು ಅವಲಂಬಿಸುವವರು ಯಾರನ್ನಾದರೂ ಅವಲಂಬಿಸುವುದಿದ್ದರೆ ಅವನನ್ನು ಮಾತ್ರವೇ ಅವಲಂಬಿಸಲಿ! {67}

ಹಾಗೆ ತಂದೆಯು ಸೂಚಿಸಿದಂತೆ ಅವರು (ವಿಭಿನ್ನ ಬಾಗಿಲುಗಳ ಮೂಲ) ಪಟ್ಟಣ ಪ್ರವೇಶ ಮಾಡಿದರಾದರೂ ಆ (ಉಪಾಯ) ಅವರನ್ನು ಅಲ್ಲಾಹ್ ನ ವಿಧಿಯಿಂದ (ತಪ್ಪಿಸಲು) ಸ್ವಲ್ಪವೂ ಪ್ರಯೋಜನಕಾರಿ ಆಗಲಿಲ್ಲ. ಬದಲಾಗಿ ಯಅಕೂಬ್ ರು ತನ್ನ ಮನದಲ್ಲಿದ್ದ ಒಂದು ಅಭಿಲಾಷೆಯನ್ನು ಈಡೇರಿಸಿದರಷ್ಟೆ! [ಆದರೆ ಅದನ್ನು ಕ್ಷುಲ್ಲಕವೆಂದು ಭಾವಿಸದಿರಿ. ಏಕೆಂದರೆ] ಯಅಕೂಬ್ ರಿಗೆ ನಾವು (ಕೆಲವೊಂದು) ವಿದ್ಯೆ ಕಲಿಸಿದ್ದರಿಂದ ಅವರು ಅಪಾರವಾದ ತಿಳುವಳಿಕೆ ಹೊಂದಿದ್ದರು! ಆದರೆ ಜನರಲ್ಲಿ ಹಲವರಿಗೆ ಆ ವಿಷಯ ತಿಳಿದಿಲ್ಲ. {68}

ಯೂಸುಫ್ ರ ಮುಂದೆ ಅವರು ಹಾಜರಾದಾಗ ತಮ್ಮನಾದ (ಬಿನ್‌ಯಾಮಿನ್ ರನ್ನು ಪ್ರತ್ಯೇಕವಾಗಿ) ತಮ್ಮ ಬಳಿ ತಂಗಿಸಿದ ಯೂಸುಫ್ ರು, (ಕಾಣೆಯಾಗಿದ್ದ) ನಿನ್ನ ಆ ಅಣ್ಣ ನಾನೇ ಆಗಿರುವೆನು; ಇವರು ನಿನ್ನೊಂದಿಗೆ (ಕೆಟ್ಟದಾಗಿ) ವರ್ತಿಸುತ್ತಿದ್ದುದಕ್ಕೆ ಇನ್ನು ಸಂಕಟ ಪಡಬೇಡ ಎಂದು ತಿಳಿಸಿದರು. {69}

ತರುವಾಯ ಯೂಸುಫ್ ರು ಸಹೋದರರಿಗೆ ಬೇಕಿದ್ದ ಸರಕು ಸಾಮಾನುಗಳನ್ನು ಸಿದ್ಧಗೊಳಿಸುತ್ತಿದ್ದಾಗ ತನ್ನ (ಬೆಲೆಬಾಳುವ) ಪಾನಪಾತ್ರೆಯನ್ನು ತನ್ನ ಸಹೋದರ (ಬಿನ್‌ಯಾಮಿನ್) ನ ಗಂಟಿನೊಳಗೆ (ಆತನಿಗೆ ಅರಿವಿಲ್ಲದಂತೆ) ಸೇರಿಸಿ ಬಿಟ್ಟರು. ನಂತರ [ಆ ಯಾತ್ರಾ ತಂಡ ಅಲ್ಲಿಂದ ಹೊರಡಲನುವಾದಾಗ ಪಾನಪಾತ್ರೆ ಕಾಣೆಯಾಗಿರುವುದನ್ನು ಅರಿತ] ಒಬ್ಬಾತನು, ಓ ಯಾತ್ರಾತಂಡದವರೇ, ಖಂಡಿತವಾಗಿಯೂ ನೀವು ಕಳ್ಳರೇ ಸರಿ ಎಂದು ಕೂಗಿಹೇಳಿದನು. {70}

ಆಗ ಅವರು (ಆಸ್ಥಾನದ) ಜನರತ್ತ ಹಿಂದುರುಗಿ ನೋಡುತ್ತಾ ನೀವು ಅದಾವ ವಸ್ತುವನ್ನು ಕೆಳೆದು ಕೊಂಡಿದ್ದೀರಿ ಏಂದು ಪ್ರಶ್ನಿಸಿದರು. {71}

ರಾಜನ ಪಾನಪಾತ್ರೆಯನ್ನು ನಾವು ಕಳೆದು ಕೊಂಡಿದ್ದೇವೆ. ಅದನ್ನು (ಹುಡುಕಿ) ತರುವವರಿಗೆ ಒಂದು ಒಂಟೆ ಹೊರುವಷ್ಟು (ದವಸ ಧಾನ್ಯವನ್ನು) ಘೋಷಿಸಲಾಗಿದೆ; ಮತ್ತು ನಾನು ಈ ಕಾರ್ಯಾಚರಣೆಗೆ ಮುಖ್ಯಸ್ಥನಾಗಿರುವೆನು ಎಂದು (ಅವರಲ್ಲಿ ಒಬ್ಬಾತನು) ಹೇಳಿದನು. {72}

ಯೂಸುಫ್ ರ ಸಹೋದರರು ಹೇಳಿದರು: ಅಲ್ಲಾಹ್ ನ ಆಣೆ! ನಾವು ನಿಮ್ಮೀ ನಾಡಿನ ಶಾಂತಿ ಕೆಡಿಸಲು ಬಂದವರಲ್ಲ ಎಂಬುದು ನಿಮಗೇ ತಿಳಿದಿದೆ; ಮತ್ತು ನಾವು ಕಳ್ಳರಂತು ಅಲ್ಲವೇ ಅಲ್ಲ! {73}

ಹೌದೇನು! ಒಂದು ವೇಳೆ ನೀವು ಹೇಳುತ್ತಿರುವುದು ಸುಳ್ಳೆಂದು ಸಾಬೀತಾದರೆ ಕಳ್ಳನಿಗೆ ಯಾವ ಶಿಕ್ಷೆ ಕೊಡಬೇಕು ಎಂದು ಅವರು ಕೇಳಿದರು. {74}

ಯೂಸುಫ್ ರ ಸಹೋದರರು ಉತ್ತರಿಸಿದರು: ಅದಕ್ಕೆ ಶಿಕ್ಷೆಯೇನೆಂದರೆ ಯಾರ ಗಂಟಿನಲ್ಲಿ ಅದು ಪತ್ತೆಯಾಗುವುದೋ ಆತನನ್ನೇ (ಒತ್ತೆಯಾಗಿ) ಇರಿಸಿಕೊಳ್ಳುವುದು; ಅದುವೇ ಅದಕ್ಕೆ ತಕ್ಕ ಶಿಕ್ಷೆ! ಅಂತಹ ಅಪರಾಧಿಗಳನ್ನು ನಾವಂತು ಹಾಗೆಯೇ ಶಿಕ್ಷಿಸುತ್ತೇವೆ! {75}

[ಹಾಗೆ ಆ ತಂಡದವರನ್ನು ತಪಾಸಣೆಗೆ ಒಳಪಡಿಸಲು ನಿಲ್ಲಿಸಿಕೊಂಡ ಮುಖ್ಯಸ್ಥನು] ಯೂಸುಫ್ ರ ತಮ್ಮನಾದ (ಬಿನ್‌ಯಾಮಿನ್) ನ ಚೀಲದ ತಪಾಸಣೆಗಿಂತ ಮುಂಚಿತವಾಗಿ (ತಂಡದ ಇತರರ) ಚೀಲಗಳ ತಪಾಸಣೆ ಆರಂಭಿಸಿದನು. ಕೊನೆಗೆ ಬಿನ್‌ಯಾಮಿನ್ ಚೀಲದಿಂದ ಪಾನಪಾತ್ರೆಯನ್ನು ಹೊರತೆಗೆದನು. ಹಾಗೆ ನಾವು ಯೂಸುಫ್ ರಿಗೆ ಅನುಕೂಲಕರವಾದ ಉಪಾಯ ರೂಪಿಸಿದೆವು. ಅಲ್ಲಾಹ್ ನ ಒಪ್ಪಿಗೆ ಇಲ್ಲದೇ ಹೋಗಿದ್ದರೆ, (ಈಜಿಪ್ಟ್ ನ) ರಾಜ ನಿಯಮದ ಪ್ರಕಾರವಂತು [ಕೇವಲ ಕಳ್ಳತನದ ಅರೋಪ ಹೊರಿಸಿ] ತನ್ನ ತಮ್ಮನನ್ನು ಹಿಡಿದಿರಿಸಿ ಕೊಳ್ಳಲು ಯೂಸುಫ್ ರಿಗೆ ಸಾಧ್ಯವಿರಲಿಲ್ಲ. ಹೌದು, ನಾವು ಯಾರಿಗೆ ಔನ್ನತ್ಯ ನೀಡ ಬಯಸುವೆವೋ ಅವರಿಗೆ ಔನ್ನತ್ಯ ನೀಡುವೆವು. ವಾಸ್ತವದಲ್ಲಿ ಎಲ್ಲಾ ಜ್ಞಾನಿಗಳಿಗಳಿಗಿಂತಲೂ ಮೇಲೆ ಒಬ್ಬ ಮಹಾ ಜ್ಞಾನಿ ಇರುವನು. {76}

ಈಗ ಇವನು ಕಳ್ಳತನ ಮಾಡಿದರೆ (ಅದರಲ್ಲಿ ಅಚ್ಚರಿಯೇನಿದೆ?) ಇವನ ಸ್ವಂತ ಅಣ್ಣ (ಯೂಸುಫ್) ಸಹ ಈ ಹಿಂದೆ ಕಳ್ಳತನ ಮಾಡಿರುವನು ಎಂದು ಅವರು ಆಪಾದಿಸಿದರು. (ಅದನ್ನು ಕೇಳಿಸಿಕೊಂಡ) ಯೂಸುಫ್ ರು ವಿಷಯವನ್ನು ಮನದಲ್ಲೇ ಗುಟ್ಟಾಗಿಟ್ಟರು; ಅವರ ಮುಂದೆ ನಿಜ ಸಂಗತಿಯನ್ನು ಬಹಿರಂಗ ಪಡಿಸಲಿಲ್ಲ! ನೀವು ಅತ್ಯಂತ ಕೆಟ್ಟ ಮಟ್ಟಕ್ಕಿಳಿದಿರುವಿರಿ; ನೀವು ಮಾಡುತ್ತಿರುವ ಎಲ್ಲ ಆಪಾದನೆಗಳ ಬಗ್ಗೆ ಅಲ್ಲಾಹ್ ನು ಚೆನ್ನಾಗಿ ಬಲ್ಲನು ಎಂದು (ತಮ್ಮೊಳಗೇ) ಹೇಳಿಕೊಂಡರು. {77}

ಅವರು (ಯೂಸುಫ್ ರನ್ನು) ಕೋರಿದರು: ಮಹನೀಯರೇ, ಇವನಿಗೆ ಬಹಳ ವಯಸ್ಸಾದ ಒಬ್ಬ ಮುದಿ ತಂದೆಯಿದ್ದಾರೆ. [ನಾವು ಇವನನ್ನು ಇಲ್ಲಿಯೇ ಬಿಟ್ಟು ಹೋದರೆ ಅದು ಅವರಿಂದ ತಡೆಯಲಾಗದು!] ಆದ್ದರಿಂದ ಇವನಿಗೆ ಬದಲು ನಮ್ಮ ಪೈಕಿ ಯಾರಾದರೂ ಒಬ್ಬನನ್ನು ನೀವು ಒತ್ತೆಯಾಗಿ ಇರಿಸಿಕೊಳ್ಳಿ. ನಾವು ನಿಮ್ಮನ್ನು ಒಬ್ಬ ಸದ್ಗುಣ ಸಂಪನ್ನ ವ್ಯಕ್ತಿಯಾಗಿ ಕಾಣುತ್ತಿದ್ದೇವೆ. {78}

ಯೂಸುಫ್ ರು ಉತ್ತರಿಸಿದರು: ಯಾರ ಬಳಿಯಿಂದ ನಮ್ಮ ಸೊತ್ತನ್ನು ನಾವು ಪತ್ತೆ ಮಾಡಿರುವೆವೋ ಅವನನ್ನು ಬಿಟ್ಟು ಬೇರೊಬ್ಬನನ್ನು ಹಿಡಿಯುವಂತಹ (ತಪ್ಪಿನಿಂದ ನಮ್ಮನ್ನು) ಅಲ್ಲಾಹ್ ನೇ ಕಾಪಾಡಲಿ. ಹಾಗೆ ಮಾಡಿದರೆ ನಾವು ಖಂಡಿತಾ ತಪ್ಪಿತಸ್ಥರಾಗುವೆವು. {79}

[ಬಿನ್‌ಯಾಮಿನ್ ರನ್ನು ಬಿಡಿಸಿ ಕೊಳ್ಳುವ ವಿಷಯದಲ್ಲಿ] ಸಂಪೂರ್ಣವಾಗಿ ನಿರಾಶರಾದಾಗ ಅವರು ಏಕಾಂತಕ್ಕೆ ಸರಿದು ಪರಸ್ಪರ ಸಮಾಲೋಚನೆ ನಡೆಸಿದರು. (ಬುದ್ಧಿವಂತಿಕೆಯಲ್ಲಿ) ಅವರ ಪೈಕಿಯ ಹಿರಿಯನು ಹೇಳಿದನು: ನಿಮ್ಮ ತಂದೆಯವರು ಅಲ್ಲಾಹ್ ನನ್ನು ಸಾಕ್ಷಿಯಾಗಿಸಿ ನಿಮ್ಮಿಂದ ವಾಗ್ದಾನ ಪಡೆದುದು ನಿಮಗೆ ತಿಳಿದಿದೆ ತಾನೆ! ಹಾಗೆಯೇ ಇದಕ್ಕಿಂತ ಮುಂಚೆ ಯೂಸುಫ್ ನ ವಿಷಯದಲ್ಲಿ ಸಹ (ತಂದೆಗೆ ಕೊಟ್ಟ ಮಾತು ಪಾಲಿಸುವಲ್ಲಿ) ನೀವು ವಿಫಲರಾಗಿರುವುದೂ ನಿಮಗೆ ತಿಳಿದಿದೆಯಲ್ಲವೆ! ಹಾಗಿರುವಾಗ, ನನ್ನ ತಂದೆಯ ಕಡೆಯಿಂದ ನನಗೆ ಅನುಮತಿ ಲಭಿಸುವ ತನಕ ಅಥವಾ ಅಲ್ಲಾಹ್ ನೇ ನನ್ನ ವಿಷಯದಲ್ಲಿ ಏನಾದರೂ ತೀರ್ಪು ನೀಡುವ ತನಕ ನಾನಂತು ಈ ನೆಲದಿಂದ ಕದಲಲಾರೆ. ಹೌದು, ಅಲ್ಲಾಹ್ ನೇ ಅತ್ಯಂತ ಮಿಗಿಲಾದ ತೀರ್ಪುಗಾರನು! {80}

ನೀವೀಗ ಹಿಂದಿರುಗಿ ನಿಮ್ಮ ತಂದೆಯವರ ಬಳಿಗೆ ಹೋಗಿ ಹೇಳಿರಿ: ತಂದೆಯವರೇ, ನಿಮ್ಮ ಸುಪುತ್ರನು ನಿಜವಾಗಿ ಕಳ್ಳತನ ಮಾಡಿದ್ದಾನೆ! [ಅದಕ್ಕಾಗಿಯೇ ಅಲ್ಲಿ ಅವನನ್ನು ಬಂಧಿಸಲಾಗಿದೆ]. ನಮಗೆ ತಿಳಿದ ಒಂದು ವಿಷಯಕ್ಕೆ [ಅರ್ಥಾತ್ ಅವನ ಚೀಲದಲ್ಲಿ ಅಲ್ಲಿಯ ಅರಸನ ಪಾನಪಾತ್ರೆ ಪತ್ತೆಯಾಗಿರುವುದಕ್ಕೆ] ನಾವು ಸಾಕ್ಷಿಗಳಾಗ ಬೇಕಾಯಿತೇ ವಿನಃ ನಮ್ಮ ಕಣ್ಣಿಗೆ ಕಾಣದ ಒಂದು ಸಂಗತಿಯು ನಡೆಯದಂತೆ (ಅರ್ಥಾತ್ ಕಳ್ಳತನ ನಡೆಯದಂತೆ) ನಿಗಾ ವಹಿಸುವುದು ನಮ್ಮಿಂದ ಸಾಧ್ಯವಿರಲಿಲ್ಲ. {81}

ಬೇಕಾದರೆ ಯಾವ ನಾಡಿಗೆ ನಾವು ಹೋಗಿದ್ದೆವೋ ಅಲ್ಲಿಯ ಜನರಲ್ಲಿ ಅಥವಾ ಯಾವ ಯಾತ್ರಾತಂಡದ ಜೊತೆಗೂಡಿ ನಾವು ಮರಳಿ ಬಂದೆವೋ ಅವರೊಂದಿಗೆ ನೀವು ವಿಚಾರಿಸಿ ನೋಡಿ. ಹೌದು, (ಬಿನ್‌ಯಾಮಿನ್ ನ ಕುರಿತಾಗಿ) ನಾವು ಸತ್ಯವನ್ನೇ ನುಡಿಯುತ್ತಿದ್ದೇವೆ. {82}

(ತಂದೆ ಯಅಕೂಬ್ ರು) ಹೇಳಿದರು: ಅಲ್ಲ, ಬದಲಾಗಿ ನಿಮ್ಮ ಅಂತರಾತ್ಮವು (ಮತ್ತೊಂದು) ಕುಕೃತ್ಯವನ್ನು ನಿಮಗೆ ಅಂದಗೊಳಿಸಿ ತೋರಿಸಿತಷ್ಟೆ! ಇನ್ನು ಸಹನೆಯೇ ಲೇಸು! ಅವರೆಲ್ಲರನ್ನೂ [ಅರ್ಥಾತ್ ಯೂಸುಫ್, ಬಿನ್‌ಯಾಮಿನ್ ಮತ್ತು ಈಜಿಪ್ಟ್ ನಲ್ಲೇ ಉಳಿದುಕೊಂಡ ಇನ್ನೊಬ್ಬ ಮಗನನ್ನು] ಅಲ್ಲಾಹ್ ನು ನನ್ನ ಬಳಿಗೆ ಬೇಗನೇ ತಂದು ಸೇರಿಸಬಹುದು. ಹೌದು, ಅವನು ಎಲ್ಲದರ ಬಗ್ಗೆ ಪರಿಜ್ಞಾನವುಳ್ಳವನೂ ಮಹಾ ಮೇಧಾವಿಯೂ ಆಗಿರುವನು. {83}

ಮತ್ತು ಯಅಕೂಬ್ ರು ಅವರಿಂದ ಮುಖ ತಿರುಗಿಸಿಕೊಂಡು, ಯೂಸುಫ್ ನಿಗೆ ಸಂಭವಿಸಿದ ಓ ದುರ್ಗತಿಯೇ ಎನ್ನುತ್ತಾ (ತಮ್ಮ ರೋದನ ತೋಡಿಕೊಂಡರು). ಅತೀವ ದುಃಖದ ಕಾರಣ (ಅತ್ತು ಅತ್ತು) ಅವರ ಕಣ್ಣ ಪಾಪೆಗಳು ಬಿಳಿಚಿ ಹೋಗಿದ್ದವು. ಹೌದು, ಅವರು ತಮ್ಮ ರೋದನವನ್ನು ಅದುಮಿಡುತಿದ್ದರು. {84}

ಮಕ್ಕಳು ಹೇಳಿದರು: ಅಲ್ಲಾಹ್ ನ ಆಣೆ! ತಾವು ಕೊರಗಿ ಪೂರ್ತಿಯಾಗಿ ಕರಗಿ ಹೋಗುವ ತನಕ ಅಥವಾ ಸಂಪೂರ್ಣವಾಗಿ ನಶಿಸಿಹೋಗುವ ತನಕ ಯೂಸುಫ್ ನ ಚಿಂತೆಯಲ್ಲೇ ಮುಳುಗಿರುವಿರಿ! {85}

ತಂದೆ ಉತ್ತರಿಸಿದರು: ನನ್ನ ಸಂಕಟ ಮತ್ತು ವ್ಯಥೆಯನ್ನು ಅಲ್ಲಾಹ್ ನೊಂದಿಗೆ ಮಾತ್ರ ನಾನು ತೋಡಿಕೊಳ್ಳುತ್ತೇನೆ; ಹೌದು, ನೀವು ತಿಳಿದಿರದ ಹಲವು ವಿಷಯಗಳನ್ನು ಅಲ್ಲಾಹ್ ನ ಮೂಲಕ ನಾನು ತಿಳಿದಿರುತ್ತೇನೆ! {86}

ಓ ನನ್ನ ಮಕ್ಕಳೇ, ನೀವಿನ್ನು ಹೊರಡಿರಿ; ಯೂಸುಫ್ ಮತ್ತವನ ತಮ್ಮನನ ಬಗ್ಗೆ ಪತ್ತೆ ಹಚ್ಚಲು ಹೊರಡಿರಿ. ಅಲ್ಲಾಹ್ ನ ವತಿಯಿಂದ ಉಂಟಾಗುವ ಚಿತ್ತಸಮಾಧಾನದ ಕುರಿತು ನಿರಾಶರಾಗದಿರಿ. ನಿಜವಾಗಿ ಅಧರ್ಮಿ ಜನರ ಹೊರತು ಬೇರೆ ಯಾರೂ ಅಲ್ಲಾಹ್ ನ ಕಡೆಯಿಂದ ಬರಲಿರುವ ಚಿತ್ತಸ್ವಾಸ್ಥ್ಯದ ಬಗ್ಗೆ ಹತಾಶರಾಗುವುದಿಲ್ಲ. {87}

[ಪಡಿತರ ಪಡೆಯಲಿಕ್ಕಾಗಿ ಮುಂದಿನ ಬಾರಿ ಈಜಿಪ್ಟ್ ಪಟ್ಟಣಕ್ಕೆ ಹೋದಾಗ] ಅವರು ಯೂಸುಫ್ ರ ಸನ್ನಿಧಿಯಲ್ಲಿ ಹಾಜರಾಗಿ ಭಿನ್ನವಿಸಿದರು: ಓ ಅಧಿಕಾರಿ ಮಹಾಶಯರೇ, ನಮಗೂ ನಮ್ಮ ಪರಿವಾರಕ್ಕೂ ಸಂಕಷ್ಟದ ಸಮಯ ಬಂದಿರುತ್ತದೆ. ಹಾಗಿದ್ದರೂ ನಾವು ಒಂದು ಕ್ಷುಲ್ಲಕ ಮೊತ್ತವನ್ನು ತಂದಿರುತ್ತೇವೆ. ನೀವು (ಅದನ್ನು ಅವಗಣಿಸದೆ) ನಮಗೆ ಪಾತ್ರೆ ತುಂಬಿ ಕೊಡಬೇಕು. ಮಾತ್ರವಲ್ಲ, ನಮಗೆ ಸ್ವಲ್ಪ ದಾನವನ್ನೂ ಕೊಡಬೇಕು. ಹೌದು, ದಾನಿಗಳಿಗೆ ಪ್ರತಿಫಲವನ್ನು ಅಲ್ಲಾಹ್ ನು ನೀಡುತ್ತಾನೆ. {88}

[ಅವರ ರೋದನಕ್ಕೆ ಮರುಗಿ] ಯೂಸುಫ್ ರು ಹೇಳಿದರು: ಹಿಂದೆ ನೀವು ಅವಿವೇಕಿಗಳಾಗಿದ್ದಾಗ, ಯೂಸುಫ್ ಮತ್ತವನ ಸಹೋದರನೊಂದಿಗೆ ಹೇಗೆ ವರ್ತಿಸಿರುವಿರಿ ಎಂಬುದು ನಿಮಗೇ ತಿಳಿದಿದೆ ತಾನೆ? {89}

ಅವರು (ಗಾಬರಿಗೊಂಡು) ಕೇಳಿದರು: ನಿಜವಾಗಿಯೂ ಯೂಸುಫ್ ನೀವೇ ಏನು? ಅದಕ್ಕೆ ಯೂಸುಫ್ ರು ಉತ್ತರಿಸಿದರು: ಹೌದು, ನಾನೇ ಯೂಸುಫ್; ಮತ್ತು ಈತ ನನ್ನ ತಮ್ಮ (ಬಿನ್‍ಯಾಮಿನ್)! ಅಲ್ಲಾಹ್ ನು ನಮ್ಮನ್ನು ಧಾರಾಳವಾಗಿ ಅನುಗ್ರಹಿಸಿರುವನು. ಹೌದು, ಭಯಭಕ್ತಿ ಪಾಲಿಸುವ ಹಾಗೂ (ಸಂಕಷ್ಟದ ಸಮಯದಲ್ಲಿ) ತಾಳ್ಮೆಯಿಂದ ವರ್ತಿಸುವರಿಗೆ (ಪ್ರತಿಫಲವು ಇದ್ದೇ ಇದೆ; ಏಕೆಂದರೆ) ಅಂತಹ ಸಜ್ಜನರ ಪ್ರತಿಫಲವನ್ನು ಅಲ್ಲಾಹ್ ನು ಎಂದೂ ನಿರರ್ಥಕ ಗೊಳಿಸುವುದಿಲ್ಲ. {90}

[ಸತ್ಯಾಂಶ ತಿಳಿದಾಗ] ಸಹೋದರರು ಉದ್ಗರಿಸಿದರು: ಅಲ್ಲಾಹ್ ನ ಆಣೆ! ಖಂಡಿತವಾಗಿ ನಮಗಿಂತ ಅಲ್ಲಾಹ್ ನು ನಿಮಗೇ ಹೆಚ್ಚಿನ ಪ್ರಾಧಾನ್ಯತೆ ನೀದಿದ್ದಾನೆ. ಹೌದು, ನಿಜವಾದ ತಪ್ಪಿತಸ್ಥರು ನಾವೇ ಆಗಿದ್ದೆವು. {91}

ಯೂಸುಫ್ ರು ಹೇಳಿದರು: ಇಂದು (ನನ್ನ ಕಡೆಯಿಂದ) ನಿಮ್ಮ ಮೇಲೆ ಯಾವ ದೋಷಾರೋಪವೂ ಇಲ್ಲ. ನಿಮ್ಮ ತಪ್ಪುಗಳನ್ನು ಅಲ್ಲಾಹ್ ನು ಕ್ಷಮಿಸುವಂತಾಗಲಿ. (ನೀವೂ ಅಲ್ಲಾಹ್ ನ ಕ್ಷಮೆಯಾಚಿಸಿರಿ); ಅವನು ಎಲ್ಲರಿಗಿಂತ ಮಿಗಿಲಾದ ಕರುಣಾಮಯಿ. {92}

ಇನ್ನು ಹೊರಡಿರಿ, ಈ ನನ್ನ ಅಂಗಿಯನ್ನು ಕೊಂಡೊಯ್ದು ನನ್ನ ತಂದೆಯವರ ಮುಖದ ಮೇಲೆ ಹಾಕಿರಿ; ಅವರ ದೃಷ್ಟಿ ಮರಳಿ ಬರುವುದು. ನಂತರ ನಿಮ್ಮ ಪರಿವಾರದ ಎಲ್ಲರನ್ನೂ ನನ್ನ ಬಳಿಗೆ ಕರೆತನ್ನಿರಿ. {93}

ಹಾಗೆ, ಆ ಯಾತ್ರಾತಂಡ (ಯೂಸುಫ್ ರಿಂದ) ಬೇರ್ಪಟ್ಟು (ಈಜಿಪ್ಟ್ ನಿಂದ) ಹೊರಟಾಗ ಅವರ ತಂದೆ [ದೂರದ ಫಲಸ್ತೀನ್ ನಲ್ಲಿ ತನ್ನ ಪರಿವಾರದವರೊಂದಿಗೆ] ಹೇಳಿದರು: ನನಗೇಕೋ ಯೂಸುಫ್ ನ ಪರಿಮಳ ಬರುತ್ತಿದೆ; (ಅದು ನಿಜವೇ ಆಗಿದ್ದರೂ) ವೃದ್ಧಾಪ್ಯ ಕಾರಣ ನನಗೆ ಬುದ್ಧಿಭ್ರಮಣೆಯಾಗಿದೆ ಎಂದು ನೀವು ಭಾವಿಸಬಹುದು. {94}

ಪರಿವಾರದವರು ಹೇಳಿದರು: ಅಲ್ಲಾಹ್ ನ ಆಣೆ! ನೀವಿನ್ನೂ ಆ ನಿಮ್ಮ ಹಳೆಯ ಭ್ರಾಂತಿಯಲ್ಲೇ ಮುಳುಗಿರುವಿರಿ. {95}

[ಅಷ್ಟೊತ್ತಿಗೆ ಯಾತ್ರಾತಂಡ ಮರಳಿತು. ಯೂಸುಫ್ ರು ಇನ್ನೂ ಬದುಕಿರುವ ಬಗ್ಗೆ] ಶುಭವಾರ್ತೆ ತಂದಾತನು [ತನಗಿರುವ ಆದೇಶದಂತೆ] ಯೂಸುಫ್ ರ ಅಂಗಿಯನ್ನು ಯಅಕೂಬ್ ರ ಮುಖದ ಮೇಲೆ ಹಾಕಿದನು. ಕೂಡಲೇ ಅವರು ನೋಡುವ ಶಕ್ತಿಯನ್ನು ಮರಳಿ ಪಡೆದರು! ಆಗ, ನಿಮಗೆ ಇನ್ನೂ ತಿಳಿಯದ ಕೆಲವು ವಿಷಯಗಳು ಅಲ್ಲಾಹ್ ನ ಮೂಲಕ ನನಗೆ ತಿಳಿದಿದೆ ಎಂದು ನಾನು ಹೇಳುತ್ತಿರಲಿಲ್ಲವೇ ಎಂದು ಯಅಕೂಬ್ ರು ಕೇಳಿದರು. {96}

ಮಕ್ಕಳು ಬೇಡಿದರು: ಓ ನಮ್ಮ ತಂದೆಯೇ! ನಮ್ಮ ಪಾಪಗಳ ಕ್ಷಮಾಪಣೆಗಾಗಿ ನೀವು ಪ್ರಾರ್ಥಿಸಿರಿ; ತಪ್ಪಿತಸ್ಥರು ನಿಜವಾಗಿಯೂ ನಾವೇ ಆಗಿದ್ದೆವು. {97}

ತಂದೆ ಹೇಳಿದರು: ನೀವೆಸಗಿದ ಪಾಪವನ್ನು ಕ್ಷಮಿಸುವಂತೆ ನಾನು ನನ್ನ ಪ್ರಭುವಿನೊಡನೆ ಪ್ರಾರ್ಥಿಸುವೆ; ಪಾಪಗಳನ್ನು ಮನ್ನಿಸುವವನು ಅವನೇ; ಅವನು ಮಹಾ ಕರುಣಾಮಯಿ! {98}

[ಮಗನ ಇಚ್ಛೆಯಂತೆ ಯಅಕೂಬ್ ರು ಪರಿವಾರ ಸಮೇತ ಈಜಿಪ್ಟ್ ಗೆ ತೆರೆಳಿದಾಗ ಯೂಸುಫ್ ರು ಪಟ್ಟಣದ ಪ್ರವೇಶದ್ವಾರದ ಹೊರಗೆ ಅವರಿಗಾಗಿ ಕಾದಿದ್ದರು.] ಹಾಗೆ ಪರಿವಾರವು ಅಲ್ಲಿ ಯೂಸುಫ್ ರನ್ನು ಎದುರುಗೊಂಡಾಗ ಯೂಸುಫ್ ರು (ಮುಂದೆ ಬಂದು) ತಮ್ಮ ಮಾತಾಪಿತರನ್ನು ತನ್ನೆಡೆಗೆ ಸೆಳೆದು ಅಪ್ಪಿಕೊಂಡರು. ನೀವಿನ್ನು ಈಜಿಪ್ಟ್ ಪಟ್ಟಣವನ್ನು ಪ್ರವೇಶಿಸಿಕೊಳ್ಳಿರಿ; ಅಲ್ಲಾಹ್ ನು ಬಯಸಿದರೆ ನೀವಿಲ್ಲಿ ಬಹಳ ಸುರಕ್ಷಿತರಾಗಿ, ನಿರ್ಭೀತರಾಗಿ (ವಾಸ ಮಾಡುವಿರಿ) ಎಂದು ಯೂಸುಫ್ ರು ಹೇಳಿದರು. {99}

[ನಂತರ ಅವರೆಲ್ಲ ಯೂಸುಫ್ ರ ನಿವಾಸ ತಲುಪಿದರು.] ತಮ್ಮ ಮಾತಾಪಿತರನ್ನು ಯೂಸುಫ್ ರು (ವಿಶೇಷವಾಗಿ ಸಿದ್ಧಗೊಳಿಸಲಾದ) ಪೀಠದ ಮೇಲೇರಿಸಿಕೊಂಡರು. ಆಗ ಎಲ್ಲರೂ [ಅಂದಿನ ಸಂಪ್ರದಾಯದಂತೆ ಗೌರವಾದರಗಳೊಂದಿಗೆ] ಯೂಸುಫ್ ರ ಮುಂದೆ ಶಿರಬಾಗಿದರು. ಓ ನನ್ನ ತಂದೆಯೇ, ನಾನು ಹಿಂದೆ ಕಂಡಿದ್ದ ಕನಸಿನ ವ್ಯಾಖ್ಯಾನವಿದು; ಆ ಕನಸನ್ನು ನನ್ನ ಒಡೆಯನು (ಇಂದು) ನಿಜಗೊಳಿಸಿರುವನು. ಮಾತ್ರವಲ್ಲ ನನ್ನನ್ನು ಸೆರೆಮನೆಯಿಂದ ಬಿಡುಗಡೆ ಮಾಡಿದಾಗಲೂ, ಸೈತಾನನು ನನ್ನ ಮತ್ತು ನನ್ನ ಸಹೋದರರ ನಡುವೆ ವೈಮನಸ್ಯ ಹುಟ್ಟು ಹಾಕಿದ್ದಾಗ್ಯೂ [ಸಹೋದರರೂ ಸೇರಿದಂತೆ] ನಿಮ್ಮೆಲ್ಲರನ್ನು ಆ ಕುಗ್ರಾಮದಿಂದ ಇಲ್ಲಿಗೆ ಬರುವಂತೆ ಮಾಡಿದಾಗಲೂ ನನ್ನೊಡೆಯನು ನನಗೆ ಮಹದುಪಕಾರವನ್ನೇ ಮಾಡಿರುವನು. ವಾಸ್ತವದಲ್ಲಿ ನನ್ನ ಕರ್ತಾರನು ತಾನು ಬಯಸಿದ್ದನ್ನು ಬಹಳ ನಯವಾಗಿ ಕಾರ್ಯಗತಗೊಳಿಸುತ್ತಾನೆ. ಹೌದು, ಅವನು ಎಲ್ಲವನ್ನೂ ಬಲ್ಲವನು; ಮಹಾ ಧೀಮಂತ - ಎಂದು ಯೂಸುಫ್ ರು ಹೇಳಿದರು! {100}

ಓ ನನ್ನ ಕರ್ತೃವೇ! (ಈಜಿಪ್ಟ್ ಪ್ರದೇಶದ) ಆಡಳಿತಾಧಿಕಾರವನ್ನು ನೀನು ನನಗೆ ದಯಪಾಲಿಸಿದೆ; ಕನಸುಗಳ (ಮತ್ತು ಇತರ ಸಂಕೀರ್ಣ ಸಂಗತಿಗಳ) ಅಂತರಾರ್ಥವನ್ನು ಬೇಧಿಸುವ ವಿದ್ಯೆಯನ್ನೂ ನನಗೆ ಕಲಿಸಿಕೊಟ್ಟೆ! ಭೂಮ್ಯಾಕಾಶಗಳ ಓ ಕರ್ತಾರನೇ, ಇಹಲೋಕದಲ್ಲೂ ಪರಲೋಕದಲ್ಲೂ ನನ್ನ ಸಂರಕ್ಷಕನು ನೀನೇ ಆಗಿರುವೆ. ನಾನು ಮುಸ್ಲಿಮನಾಗಿರುವ ಸ್ಥಿತಿಯಲ್ಲೇ ನನಗೆ ಮರಣ ನೀಡು; ನಂತರದ (ಪರಲೋಕ ಜೀವನದಲ್ಲಿ) ಸಜ್ಜನರ ಸಾಲಿಗೆ ನನ್ನನ್ನು ಸೇರಿಸು (ಎಂದು ಆ ಸಂದರ್ಭದಲ್ಲಿ ಯೂಸುಫ್ ರು ಪ್ರಾರ್ಥಿಸಿದರು) {101}

(ಓ ಪೈಗಂಬರರೇ), ಇದು ನಿಮ್ಮ ಕಣ್ಣಿಗೆ ಕಾಣದಂತೆ [ಅಂದರೆ ದೂರದ ನಾಡಿನಲ್ಲಿ ಸಹಸ್ರ ವರ್ಷಗಳ ಹಿಂದೆ ನಡೆದ ಘಟನೆಯೊಂದರ] ಸಮಾಚಾರವಾಗಿದೆ. ಅದನ್ನು ನಾವೀಗ ನಿಮಗೆ (ವಹೀ ಮೂಲಕ) ತಿಳಿಯಪಡಿಸುತ್ತಿದ್ದೇವೆ. ಯೂಸುಫ್ ರ ಸಹೋದರರು ಒಟ್ಟಾಗಿ (ಯೂಸುಫ್ ರ ವಿರುದ್ಧ) ಒಮ್ಮತದೊಂದಿಗೆ ಸಂಚು ಹೂಡುತ್ತಿದ್ದಾಗ (ಪೈಗಂಬರರೇ), ನೀವು ಅವರ ಬಳಿ ಇರಲಿಲ್ಲ. {102}

[ನಮ್ಮಿಂದ ಲಭಿಸಿದ ಸಂದೇಶ ಯಥಾವತ್ತಾಗಿ ನೀವು ತಿಳಿಸುತ್ತಿದ್ದರೂ] ಈ ಜನರಲ್ಲಿ ಹೆಚ್ಚಿನವರು, ನೀವೆಷ್ಟೇ ಬಯಸಿದರೂ ಸಹ [ನಿಮ್ಮ ಬೋಧನೆಗಳನ್ನು ಸ್ವೀಕರಿಸಿ] ವಿಶ್ವಾಸಿಗಳಾಗಲು ತಯಾರಾಗುವುದಿಲ್ಲ! {103}

ನೀವು ಆ ಕಾರ್ಯಕ್ಕಾಗಿ [ಅರ್ಥಾತ್ ಕುರ್‌ಆನ್ ನ ಸಂದೇಶ ತಲುಪಿಸುವ ಕಾರ್ಯಕ್ಕಾಗಿ] ಜನರಿಂದ ಯಾವ ಪ್ರತಿಫಲವನ್ನೂ ಬೇಡುತ್ತಿಲ್ಲ! ಅದಾದರೋ ಲೋಕವಾಸಿಗಳಿಗೆ (ಪರಲೋಕದ ಬಗ್ಗೆ) ನೆನಪಿಸುವಂತಹ ಒಂದು ಉಪದೇಶವು ಮಾತ್ರ! {104}

ಆಕಾಶಗಳಲ್ಲೂ ಭೂಮಿಯಲ್ಲೂ ಎಷ್ಟೊಂದು ದೃಷ್ಟಾಂತಗಳಿವೆ! ಅವುಗಳ ಬಳಿಯಿಂದಲೀ ಅವರು ಅತ್ತಿತ್ತ ಸಂಚರಿಸುತ್ತಿರುತ್ತಾರೆ ಮತ್ತು ಆ ದೃಷ್ಟಾಂತಗಳನ್ನು ಕಂಡೂ ಕಾಣದಂತೆ ವರ್ತಿಸುತ್ತಾರೆ. {105}

ಅವರಲ್ಲಿ ಹೆಚ್ಚಿನವರು ಅಲ್ಲಾಹ್ ನ ದೇವತ್ವದಲ್ಲಿ ಇತರ ಹಲವರನ್ನು ಸೇರಿಸಿಕೊಳ್ಳದೆ ಅಲ್ಲಾಹ್ ನ (ಏಕತ್ವವನ್ನು) ಒಪ್ಪಿಕೊಳ್ಳುವುದಿಲ್ಲ! {106}

ಅಲ್ಲಾಹ್ ನ ಕಡೆಯಿಂದ ಅತ್ಯಂತ ಭಯಂಕರವಾದ ಶಿಕ್ಷೆಯೊಂದು ಅವರ ಮೇಲೆ ಎರಗಲಿರುವ ಬಗ್ಗೆ ಅಥವಾ [ಅದಾಗಲೇ ಮುನ್ನೆಚ್ಚರಿಕೆ ನೀಡಲಾದ] ಆ ಕೊನೆಘಳಿಗೆ ಅವರಿಗೆ ಪರಿವೆಯೇ ಇಲ್ಲದ ರೀತಿಯಲ್ಲಿ, ಹಠಾತ್ತನೆ, ಬಂದೆರಗುವ ಬಗ್ಗೆ ಅವರಿಗೆ ಅಭಯ ಪ್ರಾಪ್ತಿಯಾಗಿದೆಯೇ? {107}

(ಓ ಪೈಗಂಬರರೇ), ನೀವಿನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿ ಬಿಡಿ: ಇದುವೇ ನಾನು ಅನುಸರಿಸುವ ಮಾರ್ಗ! ಅಲ್ಲಾಹ್ ನ ಕೆಡೆಗೆ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಬಹಳ ಪ್ರಜ್ಞಾಪೂರ್ವಕವಾಗಿ ನಾನು ಮತ್ತು ನನ್ನನ್ನು ಅನುಸರಿಸುವ ಪ್ರತಿಯೊಬ್ಬನೂ (ಸ್ವೀಕರಿಸಿದ ಮಾರ್ಗವದು). ಹೌದು, ಅಲ್ಲಾಹ್ ನು [ಯಾವೊಬ್ಬ ಜೊತೆಗಾರನನ್ನೂ ಹೊಂದಿರದ] ಪರಮ ಪವಿತ್ರನು! (ಜನರೇ), ಅಲ್ಲಾಹ್ ನ ಜೊತೆ ಇತರ ಸಹದೇವರುಗಳೂ ಇದ್ದಾರೆಂದು ಭಾವಿಸುವ [ಮುಶ್ರಿಕ್ ಗಳೊಂದಿಗೆ] ನನಗೆ ಯಾವ ಸಂಬಂಧವೂ ಇಲ್ಲ! {108}

[ಪೈಗಂಬರರೇ, ಅವರಿಗೆ ನಿಮ್ಮೊಂದಿಗೆ ಅಷ್ಟೊಂದು ವಿರೋಧವೇಕೆ?] ನಿಮಗಿಂತ ಮುಂಚೆಯೂ ಸಹ ನಾವು ಆಯಾ ನಾಡಿನವರೇ ಆದ ವ್ಯಕ್ತಿಗಳನ್ನು (ಆರಿಸಿ ಜನರತ್ತ) ದೂತರನ್ನಾಗಿ ನೇಮಿಸಿತ್ತಿದ್ದೆವು; ಮತ್ತು ಅವರತ್ತ ನಾವು (ವಹೀ ಮೂಲಕ) ದಿವ್ಯ ಸಂದೇಶವನ್ನೂ ಕಳುಹಿಸುತ್ತಿದ್ದೆವು. ತಮಗಿಂತ ಮುಂಚೆ ಜೀವಿಸಿದ್ದವರ ಅಂತಿಮ ಗತಿ ಏನಾಯಿತೆಂದು ಅವರು [ಅರ್ಥಾತ್ ಈಗ ನಿಮ್ಮನ್ನು ತಿರಸ್ಕರಿಸುತ್ತಿರುವವರು] ಆ ನಾಡುಗಳಲ್ಲಿ ಸುತ್ತಾಡಿ ನೋಡಲಿಲ್ಲವೇ?! ಹೌದು, ಯಾರು [ನಮ್ಮ ಕರೆಗೆ ಓಗೊಟ್ಟು ಮಿಥ್ಯ ದೇವರುಗಳನ್ನು ವರ್ಜಿಸಿ ಕೇವಲ ನಮ್ಮ] ಭಯ ಇರಿಸಿಕೊಳ್ಳುವರೋ ಅಂತಹವರಿಗೆ ನಿಜವಾಗಿಯೂ ಪರಲೋಕದ ನಿವಾಸವೇ ಬಹಳ ಉತ್ತಮವಾದ ನಿವಾಸ! (ಜನರೇ, ಇನ್ನಾದರೂ) ನೀವು ಅರ್ಥ ಮಾಡಿಕೊಳ್ಳುವುದಿಲ್ಲವೇ? {109}

ಎಷ್ಟರಮಟ್ಟಿಗೆಂದರೆ [ಹಿಂದೆಯೂ ಸಹ ನಮ್ಮ] ದೂತರುಗಳು ಹತಾಶರಾಗಿ ಬಿಡುತ್ತಿದ್ದರು ಮತ್ತು ತಮಗೆ [ವಾಗ್ದಾನಿಸಲಾದ ದಿವ್ಯ ಸಹಾಯ] ನಿರಾಕರಿಸಲ್ಪಟ್ಟಿತೇ ಎಂಬ ಸಂದೇಹ ಅವರಲ್ಲಿ ಮೂಡುತ್ತಿತ್ತು. ಹಾಗಿರುವಾಗ ನಮ್ಮ ನೆರವು ಆ ದೂತರುಗಳಿಗೆ ತಲುಪುತ್ತಿತ್ತು. ಆಗ ನಾವು ಬಯಸಿದಂತೆ ಶಿಕ್ಷೆಯಿಂದ ಯಾರನ್ನೆಲ್ಲ ಕಾಪಾಡಬೇಕೋ ಅವರನ್ನು ನಾವು ಕಾಪಾಡುತ್ತಿದ್ದೆವು. ಹೌದು, ನಮ್ಮ ಶಿಕ್ಷೆಯನ್ನು ಅಪರಾಧಿಗಳಾದ ಜನರಿಂದ ವಾಪಾಸು ಪಡೆಯುವ ವಿಷಯವೇ ಇಲ್ಲ! {110}

[ಇದು ಕೇವಲ ಕಥೆಯಲ್ಲ. ಬದಲಾಗಿ] ಅವರ ಈ ವೃತ್ತಾಂತದಲ್ಲಿ ವಿವೇಚನಾಶೀಲ ಜನರಿಗೆ ಖಂಡಿತವಾಗಿ ಪಾಠವಿದೆ. (ಈ ಕುರ್‌ಆನ್, ಯಾರೋ) ಉಂಟುಮಾಡಿ ತಂದ ಸಮಾಚಾರವಲ್ಲ; ಬದಲಾಗಿ ಇದಕ್ಕಿಂತ ಮುಂಚಿನ (ದೈವಿಕ ಗ್ರಂಥಗಳ) ಸಮರ್ಥನೆ ಹಾಗೂ (ಅವುಗಳಲ್ಲಿನ) ಎಲ್ಲ ವಿಷಯಗಳ ವಿವರಣೆಯಾಗಿದೆ. ಮಾತ್ರವಲ್ಲ ವಿಶ್ವಾಸಿಗಳಾದವರಿಗೆ ಇದು ಮಾರ್ಗದರ್ಶಿಯೂ ಅನುಗ್ರಹವೂ ಆಗಿದೆ. {111}

------------------------ 



ಅನುವಾದಿತ ಸೂರಃ ಗಳು:

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...