ಅಲ್ ಫುರ್‌ಕಾನ್ | ترجمة سورة الفرقان

    تـرجمـة سورة الفرقان من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅಲ್ ಫುರ್‌ಕಾನ್ | ಪವಿತ್ರ ಕುರ್‌ಆನ್ ನ 25 ನೆಯ ಸೂರಃ | ಇದರಲ್ಲಿ ಒಟ್ಟು 77 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

تَبَارَكَ الَّذِي نَزَّلَ الْفُرْقَانَ عَلَىٰ عَبْدِهِ لِيَكُونَ لِلْعَالَمِينَ نَذِيرًا

ಲೋಕದ ಸಮಸ್ತ ಜನರಗೆ (ಪರಲೋಕದ ಕುರಿತು) ಎಚ್ಚರಿಕೆ ನೀಡುಲಿಕ್ಕಾಗಿ ತನ್ನ ಉಪಾಸಕನಾದ (ಪೈಗಂಬರರಿಗೆ) ಸತ್ಯ-ಮಿಥ್ಯಗಳನ್ನು ಪ್ರತ್ಯೇಕಿಸಿ ತೋರಿಸುವ (ಕುರ್‌ಆನ್ ಗ್ರಂಥವನ್ನು) ಇಳಿಸಿಕೊಟ್ಟ (ಆ ಅಲ್ಲಾಹ್ ನು) ಬಹಳ ಸಮೃದ್ಧನು! {1}

الَّذِي لَهُ مُلْكُ السَّمَاوَاتِ وَالْأَرْضِ وَلَمْ يَتَّخِذْ وَلَدًا وَلَمْ يَكُنْ لَهُ شَرِيكٌ فِي الْمُلْكِ وَخَلَقَ كُلَّ شَيْءٍ فَقَدَّرَهُ تَقْدِيرًا

ಅಕಾಶಗಳ ಮತ್ತು ಭೂಮಿಯ ಸಾರ್ವಭೌಮತ್ವ ಅವನ ಕೈಯಲ್ಲಿದೆ. ಅವನು ತನಗಾಗಿ ಎಂದೂ ಒಬ್ಬ ಪುತ್ರನನ್ನು ಪಡೆದಿಲ್ಲ. ಅವನ ಸಾರ್ವಭೌಮತ್ವದಲ್ಲಿ ಯಾರಿಗೂ ಯಾವ ಪಾಲೂ ಇಲ್ಲ. ಬದಲಾಗಿ ಸಕಲ ವಸ್ತುಗಳನ್ನು ಅವನೇ ಸೃಷ್ಟಿಸಿರುವನು, ಮಾತ್ರವಲ್ಲ, ಪ್ರತಿಯೊಂದಕ್ಕೂ ನಿಖರವಾದ ವಿಧಿ ವಿಧಾನಗಳನ್ನು ನಿಶ್ಚಯಿಸಿರುವನು. {2}

وَاتَّخَذُوا مِنْ دُونِهِ آلِهَةً لَا يَخْلُقُونَ شَيْئًا وَهُمْ يُخْلَقُونَ وَلَا يَمْلِكُونَ لِأَنْفُسِهِمْ ضَرًّا وَلَا نَفْعًا وَلَا يَمْلِكُونَ مَوْتًا وَلَا حَيَاةً وَلَا نُشُورًا

ಆದರೆ ಆ ಜನರು ಅವನನ್ನು ಬಿಟ್ಟು ಉಳಿದ (ಮಿಥ್ಯ) ದೇವರುಗಳನ್ನು ಸ್ವೀಕರಿಸಿರುವರು. ನಿಜವೆಂದರೆ ಅವರಾರೂ ಏನನ್ನೂ ಸೃಷ್ಟಿ ಮಾಡಿದವರಲ್ಲ; ಬದಲಾಗಿ ಅವರೆಲ್ಲ ಸೃಷ್ಟಿಸಲ್ಪಟ್ಟವರು! ಸ್ವತಃ ತಮಗೂ ಯಾವುದೇ ನಷ್ಟವಾಗಲಿ ಲಾಭವಾಗಲಿ ಮಾಡಿಕೊಳ್ಳುವ ಸಾಮರ್ಥ್ಯ ಅವರಿಗಿಲ್ಲ. ಮರಣದ ಮೇಲಾಗಲಿ, ಜೀವನದ ಮೇಲಾಗಲಿ ಅಥವಾ ಪುನರ್ಜನ್ಮದ ಮೇಲಾಗಲಿ (ಅವರು ನಂಬುವ ಆ ಮಿಥ್ಯ ದೇವರುಗಳಿಗೆ) ಯಾವ ಹಿಡಿತವೂ ಇಲ್ಲ. {3}

وَقَالَ الَّذِينَ كَفَرُوا إِنْ هَٰذَا إِلَّا إِفْكٌ افْتَرَاهُ وَأَعَانَهُ عَلَيْهِ قَوْمٌ آخَرُونَ ۖ فَقَدْ جَاءُوا ظُلْمًا وَزُورًا

ಈ ಕುರ್‌ಆನ್ ಒಂದು ಸುಳ್ಳಿನ ಕಂತೆ, ಇದನ್ನು ಇತರ ಕೆಲವರ ಸಹಾಯದೊಂದಿಗೆ ಸ್ವತಃ ಆತನೇ ಉಂಟುಮಾಡಿ ತಂದಿರುವನು ಎಂದು ಪೈಗಂಬರರನ್ನು ನಂಬದವರು ಹೇಳುತ್ತಿದ್ದಾರೆ. ಸತ್ಯವೆಂದರೆ ಆ ಜನರೇ ಅನ್ಯಾಯ ಮಾಡಿರುವರು; ಸುಳ್ಳಾರೋಪಗಳನ್ನು ಉಂಟುಮಾಡಿ ತಂದಿರುವರು. {4}

وَقَالُوا أَسَاطِيرُ الْأَوَّلِينَ اكْتَتَبَهَا فَهِيَ تُمْلَىٰ عَلَيْهِ بُكْرَةً وَأَصِيلًا

ಇವೆಲ್ಲ ಮುಂಚಿನವರ ಪುರಾಣ ಕಥೆಗಳು; ಆತನಿಗೆ ಸಂಜೆ ಮತ್ತು ಮುಂಜಾನೆಗಳಲ್ಲಿ ಇದನ್ನು ಯಾರೋ ಹೇಳಿಕೊಡುತ್ತಿದ್ದಾರೆ ಮತ್ತು ಆತ ಅದನ್ನು ಬರೆಯಿಸಿ ಇಟ್ಟುಕೊಂಡಿದ್ದಾನೆ ಎಂದು ಅವರು ಆರೋಪಿಸುತ್ತಿದ್ದಾರೆ. {5}

قُلْ أَنْزَلَهُ الَّذِي يَعْلَمُ السِّرَّ فِي السَّمَاوَاتِ وَالْأَرْضِ ۚ إِنَّهُ كَانَ غَفُورًا رَحِيمًا

ಪೈಗಂಬರರೇ, ನೀವು ಅವರಿಗೆ ತಿಳಿ ಹೇಳಿರಿ: ಯಾರಿಗೆ ಅಕಾಶಗಳ ಮತ್ತು ಭೂಮಿಯ ಸಕಲ ರಹಸ್ಯಗಳ ಅರಿವಿದೆಯೋ ಅವನು ಈ (ಕುರ್‌ಆನ್ ನ ವಚನಗಳನ್ನು) ಇಳಿಸುತ್ತಿದ್ದಾನಷ್ಟೆ. ಅವನು ನಿಸ್ಸಂಶಯವಾಗಿ ಹೆಚ್ಚು ಕ್ಷಮಿಸುವವನೂ ಕರುಣೆ ತೋರುತ್ತಲೇ ಇರುವವನೂ ಆಗಿರುವನು. {6}

وَقَالُوا مَالِ هَٰذَا الرَّسُولِ يَأْكُلُ الطَّعَامَ وَيَمْشِي فِي الْأَسْوَاقِ ۙ لَوْلَا أُنْزِلَ إِلَيْهِ مَلَكٌ فَيَكُونَ مَعَهُ نَذِيرًا

ಈತನು ಅದೆಂತಹ ದೂತ? (ಎಲ್ಲರಂತೆ) ಆಹಾರವನ್ನೂ ಸೇವಿಸುತ್ತಾನೆ; ಪೇಟೆಗಳಲ್ಲಿ ನಡೆದಾಡುತ್ತಲೂ ಇರುತ್ತಾನೆ! ಅದೇಕೆ ಒಬ್ಬ ಮಲಕ್ [ಅರ್ಥಾತ್ ಸ್ವರ್ಗ ಲೋಕದ ಒಬ್ಬ ಪರಿಚಾರಕನನ್ನು] ಈತನ ಸಹಾಯಕ್ಕಾಗಿ ಇಳಿಸಲಾಗಿಲ್ಲ? ಹಾಗಿದ್ದರೆ ಆತ ಈತನ ಜೊತೆಗಿದ್ದುಕೊಂಡು ಜನರಿಗೆ ಮುನ್ನೆಚ್ಚರಿಕೆ ನೀಡಬಹುದಿತ್ತಲ್ಲ - ಎಂದು ಅವರು ಕೇಳುತ್ತಿದ್ದಾರೆ. {7}

أَوْ يُلْقَىٰ إِلَيْهِ كَنْزٌ أَوْ تَكُونُ لَهُ جَنَّةٌ يَأْكُلُ مِنْهَا ۚ وَقَالَ الظَّالِمُونَ إِنْ تَتَّبِعُونَ إِلَّا رَجُلًا مَسْحُورًا

ಅಥವಾ ಈತನಿಗಾಗಿ ಒಂದು ನಿಧಿಯನ್ನಾದರೂ ಕೆಳಗಿಳಿಸಬಹುದಿತ್ತು! ಅಥವಾ ಈತನಿಗೆ ತಿಂದುಂಡುಕೊಂಡು ಇರಲು ಒಂದು ತೋಟವನ್ನಾದರೂ ನೀಡಬಹುದಿತ್ತು! ಜನರೇ, ನೀವು ಅನುಸರಿಸುತ್ತಿರುವುದು ಒಬ್ಬ ಮಾಟ ಪೀಡಿತ ವ್ಯಕ್ತಿಯನ್ನಲ್ಲದೆ ಬೇರಾರನ್ನೂ ಅಲ್ಲ ಎಂದು ಆ ದುಷ್ಟರು (ವಿಶ್ವಾಸಿಗಳ ಎದೆಗುಂದಿಸಲು) ಹೇಳುತ್ತಿದ್ದಾರೆ. {8}

انْظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا

ಪೈಗಂಬರರೇ, ನೋಡಿರಿ! ಅದೆಂತಹ ಕೆಟ್ಟ ಹೋಲಿಕೆಗಳನ್ನು ಅವರು ನಿಮಗೆ ಜೋಡಿಸುತ್ತಿದ್ದಾರೆ! ಅದರಿಂದಾಗಿ ಅವರು ದಾರಿಯನ್ನೇ ತಪ್ಪಿದರು; ಮಾತ್ರವಲ್ಲ, ಇನ್ನು ಸರಿದಾರಿ ಕಂಡುಕೊಳ್ಳಲು ಅವರಿಗೆ ಸಾಧ್ಯವಾಗದು. {9}

تَبَارَكَ الَّذِي إِنْ شَاءَ جَعَلَ لَكَ خَيْرًا مِنْ ذَٰلِكَ جَنَّاتٍ تَجْرِي مِنْ تَحْتِهَا الْأَنْهَارُ وَيَجْعَلْ لَكَ قُصُورًا

ಅವನೆಷ್ಟು ಸಮೃದ್ಧಪೂರ್ಣನು! ಅವನು ಬಯಸಿದರೆ ಅವಲ್ಲಕ್ಕಿಂತ ಮಿಗಿಲಾದುದನ್ನು ಅವನು, ಪೈಗಂಬರರೇ, ನಿಮ್ಮದಾಗಿಸುವನು. ಕೆಳಬದಿಯಲ್ಲಿ ನದಿಗಳು ಹರಿಯುತ್ತಾ ಇರುವ ಉದ್ಯಾನವನಗಳನ್ನೂ ಬೃಹತ್ ಭವನಗಳನ್ನೂ ನಿಮ್ಮದಾಗಿಸುವನು. {10}

بَلْ كَذَّبُوا بِالسَّاعَةِ ۖ وَأَعْتَدْنَا لِمَنْ كَذَّبَ بِالسَّاعَةِ سَعِيرًا

[ನಿಮ್ಮನ್ನು ಅಲ್ಲಗಳೆಯುವ ಮೂಲಕ, ಪೈಗಂಬರರೇ] ಯಥಾರ್ಥದಲ್ಲಿ ಅವರು ಅಲ್ಲಗಳೆಯುತ್ತಿರುವುದು (ಪುನರುತ್ಥಾನದ ಆ) ಘಳಿಗೆಯನ್ನು. ಹೌದು, ಧಗಧಗಿಸಿ ಉರಿಯುವ ನರಕವನ್ನು ನಾವು (ಪುನರುತ್ಥಾನದ) ಆ ಘಳಿಗೆಯನ್ನು ನಿರಾಕರಿಸಿದವರಿಗಾಗಿಯೇ ಸಿದ್ಧಗೊಳಿಸಿ ಇಟ್ಟಿದ್ದೇವೆ. {11}

إِذَا رَأَتْهُمْ مِنْ مَكَانٍ بَعِيدٍ سَمِعُوا لَهَا تَغَيُّظًا وَزَفِيرًا

ಅದು ದೂರದಿಂದ ಅವರನ್ನು ಕಾಣುವಾಗಲೇ ರೊಚ್ಚಿಗೆದ್ದು ಆರ್ಭಟಿಸುವುದನ್ನು ಅವರು ಕೇಳಿಸಿ ಕೊಳ್ಳುವರು. {12}

وَإِذَا أُلْقُوا مِنْهَا مَكَانًا ضَيِّقًا مُقَرَّنِينَ دَعَوْا هُنَالِكَ ثُبُورًا

ಸರಪಳಿಗಳಲ್ಲಿ ಬಿಗಿದು ಅದರ ಒಂದು ಇಕ್ಕಟ್ಟಾದ ಮೂಲೆಗೆ ಅವರನ್ನು ಎಸೆದು ಬಿಟ್ಟಾಗ ಅವರು ಅಲ್ಲಿಂದಲೇ ಮರಣವನ್ನು ಕರೆಯ ತೊಡಗುವರು. {13}

لَا تَدْعُوا الْيَوْمَ ثُبُورًا وَاحِدًا وَادْعُوا ثُبُورًا كَثِيرًا

ಇಂದು ನೀವು ಒಂದು ಮರಣವನ್ನು ಕರೆದರೆ ಸಾಲದು; ಬದಲಾಗಿ, ಹಲವಾರು ಮರಣಗಳನ್ನು ಕರೆಯಿರಿ [ಏಕೆಂದರೆ ಇಂದಿನ ಶಿಕ್ಷೆ ಅಷ್ಟು ಕಠಿಣವಾಗಿರುವುದು - ಎಂದು ಅವರೊಂದಿಗೆ ಹೇಳಲಾಗುವುದು]. {14}

قُلْ أَذَٰلِكَ خَيْرٌ أَمْ جَنَّةُ الْخُلْدِ الَّتِي وُعِدَ الْمُتَّقُونَ ۚ كَانَتْ لَهُمْ جَزَاءً وَمَصِيرًا

ಆ ಜನರೊಂದಿಗೆ ಕೇಳಿರಿ, ನಿಮಗೆ ಅಂತಹ ಕೆಟ್ಟ ಸ್ಥಿತಿ ಒಳ್ಳೆಯದೋ ಅಥವಾ ಧರ್ಮ ನಿಷ್ಠರಿಗೆ ವಾಗ್ದಾನ ಮಾಡಲಾದ ಶಾಶ್ವತ ಸ್ವರೂಪದ ಸ್ವರ್ಗೀಯ ಉದ್ಯಾನಗಳೋ? ಅದು ಧರ್ಮ ನಿಷ್ಠರಿಗಿರುವ ಪ್ರತಿಫಲವೂ ಅವರ ಯಾತ್ರೆಯ ತಲುಪುದಾಣವೂ ಆಗಿದೆ. {15}

لَهُمْ فِيهَا مَا يَشَاءُونَ خَالِدِينَ ۚ كَانَ عَلَىٰ رَبِّكَ وَعْدًا مَسْئُولًا

ಅವರು ಅದರಲ್ಲಿ ಸದಾ ಕಾಲ ನೆಲೆಸುವಾಗ, ಏನನ್ನು ಬಯಸಿದರೂ ಅದು ಅವರಿಗೆ ಲಭ್ಯವಿರುವುದು. ಪೈಗಂಬರರೇ, ನಿಮ್ಮ ಪರಿಪಾಲಕನಾದ (ಅಲ್ಲಾಹ್ ನು) ಪೂರ್ತಿಗೊಳಿಸಲೇ ಬೇಕಾದ ಒಂದು ವಾಗ್ದಾನವದು. {16}

وَيَوْمَ يَحْشُرُهُمْ وَمَا يَعْبُدُونَ مِنْ دُونِ اللَّهِ فَيَقُولُ أَأَنْتُمْ أَضْلَلْتُمْ عِبَادِي هَٰؤُلَاءِ أَمْ هُمْ ضَلُّوا السَّبِيلَ

ಅವರನ್ನೂ ಮತ್ತು ಅವರು ಅಲ್ಲಾಹ್ ನ ಬದಲಿಗೆ ದೇವರನ್ನಾಗಿ ಮಾಡಿಕೊಂಡು ಪೂಜಿಸುತ್ತಿದ್ದರನ್ನೂ, ಅಲ್ಲಾಹ್ ನು ಒಟ್ಟು ಸೇರಿಸಲಿರುವ ಆ ದಿನದ (ಬಗ್ಗೆ ಅವರು ಸ್ವಲ್ಪ ಚಿಂತಿಸಲಿ). ಈ ನನ್ನ ದಾಸರನ್ನು ದಾರಿಗೆಡಿಸಿದವರು ನೀವೋ ಅಥವಾ ಸ್ವಯಂ ಅವರೇ ದಾರಿ ತಪ್ಪಿದರೋ ಎಂದು ಅಲ್ಲಾಹ್ ನು (ಆ ಹುಸಿ ದೇವರುಗಳನ್ನು) ಪ್ರಶ್ನಿಸಲಿರುವನು. {17}

قَالُوا سُبْحَانَكَ مَا كَانَ يَنْبَغِي لَنَا أَنْ نَتَّخِذَ مِنْ دُونِكَ مِنْ أَوْلِيَاءَ وَلَٰكِنْ مَتَّعْتَهُمْ وَآبَاءَهُمْ حَتَّىٰ نَسُوا الذِّكْرَ وَكَانُوا قَوْمًا بُورًا

ನೀನಾದರೋ ಪರಮ ಪವಿತ್ರನು! ನಿನ್ನನ್ನು ಬಿಟ್ಟು ಉಳಿದ ಯಾರನ್ನೂ ಹಿತರಕ್ಷಕನನ್ನಾಗಿ ಮಾಡಿಗೊಳ್ಳುವುದು ನಮಗೆ ಸರಿಹೊಂದುವ ವಿಷಯವೇ ಅಲ್ಲ! ಆದರೆ, ನಿನ್ನ ಸ್ಮರಣೆಯನ್ನೇ ಮರೆತು ಬಿಡುವಷ್ಟು ಜೀವನದ ಸವಲತ್ತುಗಳನ್ನು ನೀನು ಅವರಿಗೂ ಅವರ ಪೂರ್ವಜರಿಗೂ (ಒಂದು ದೀರ್ಘ ಕಾಲದ ತನಕ) ದಯಪಾಲಿಸಿದೆ; ಮತ್ತು ಅವರು ನಶಿಸಿ ಹೋಗುವ ಒಂದು ಜನಕೂಟವಾದರು - ಎಂದು (ಅವರು ಪೂಜಿಸುತ್ತಿದ್ದ ಆ ಮಿಥ್ಯ ದೇವರುಗಳು) ಹೇಳುವರು. {18}

فَقَدْ كَذَّبُوكُمْ بِمَا تَقُولُونَ فَمَا تَسْتَطِيعُونَ صَرْفًا وَلَا نَصْرًا ۚ وَمَنْ يَظْلِمْ مِنْكُمْ نُذِقْهُ عَذَابًا كَبِيرًا

ನಿಮ್ಮ ಎಲ್ಲಾ ಹೇಳಿಕೆಗಳನ್ನು (ನೀವು ಪೂಜಿಸುತ್ತಿದ್ದ ಆ ಹುಸಿ ದೇವರುಗಳು) ನಿರಾಕರಿಸಿ ಬಿಟ್ಟಾಗಿದೆ. ಇನ್ನು ನಿಮಗಿರುವ ಶಿಕ್ಷೆಯನ್ನು ನಿವಾರಿಸಲಾಗಲಿ ಯಾವುದೇ ಸಹಾಯ ಪಡೆದುಕೊಳ್ಳುವುದಾಗಲಿ ನಿಮಗೆ ಸಾಧ್ಯವಿಲ್ಲದ ವಿಷಯ. ಮತ್ತು ನಿಮ್ಮ ಪೈಕಿ ಯಾರು ಅನ್ಯಾಯ ಮಾಡಿರುವನೋ ಅವನಿಗೆ ದೊಡ್ಡ ಪ್ರಮಾಣದಲ್ಲಿ ಶಿಕ್ಷೆಯಾಗಲಿದೆ. {19}

وَمَا أَرْسَلْنَا قَبْلَكَ مِنَ الْمُرْسَلِينَ إِلَّا إِنَّهُمْ لَيَأْكُلُونَ الطَّعَامَ وَيَمْشُونَ فِي الْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا

ಪೈಗಂಬರರೇ, ನಿಮಗಿಂತ ಮುಂಚೆಯೂ ಸಹ ನಾವು ಕಳುಹಿಸುತ್ತಿದ್ದುದು ಆಹಾರ ಸೇವಿಸುತ್ತಿದ್ದ ಹಾಗೂ (ಅಗತ್ಯವಿದ್ದರೆ) ಪೇಟೆಗಳಲ್ಲಿ ನಡೆದಾಡುತ್ತಿದ್ದ ದೂತರುಗಳನ್ನೇ! ಹಾಗಿರುವಾಗ (ವಿಶ್ವಾಸಿಗಳೇ), ನಿಮ್ಮ ತಾಳ್ಮೆಯನ್ನು ನೋಡಲು ನಾವು ನಿಮ್ಮನ್ನು ಪರಸ್ಪರರ ಪಾಲಿಗೆ ಒಂದು ಪರೀಕ್ಷೆಯನ್ನಾಗಿ ಮಾಡಿದ್ದೇವೆ. ಹಾಗಿರುವಾಗ, ಪೈಗಂಬರರೇ, (ನೀವೇನೂ ಚಿಂತಿಸದಿರಿ; ಏಕೆಂದರೆ) ನಿಮ್ಮ ಒಡೆಯನು ಎಲ್ಲವನ್ನೂ ನೋಡುತ್ತಿದ್ದಾನೆ. {20}

وَقَالَ الَّذِينَ لَا يَرْجُونَ لِقَاءَنَا لَوْلَا أُنْزِلَ عَلَيْنَا الْمَلَائِكَةُ أَوْ نَرَىٰ رَبَّنَا ۗ لَقَدِ اسْتَكْبَرُوا فِي أَنْفُسِهِمْ وَعَتَوْا عُتُوًّا كَبِيرًا

✽19✽ ಅಂತೆಯೇ, ನಮ್ಮನ್ನು ಭೇಟಿಯಾಗಲಿಕ್ಕಿದೆ ಎಂಬ ವಿಷಯದಲ್ಲಿ ಅನುಮಾನವಿರುವವರು, ನಮ್ಮ ಮಾರ್ಗದರ್ಶನಕ್ಕಾಗಿ ಮಲಕ್ ಗಳನ್ನೇಕೆ (ಆಕಾಶದಿಂದ) ಇಳಿಸಲಾಗಿಲ್ಲ; ಅಥವಾ ನಮ್ಮ ದೇವರನ್ನು ನಮಗೇಕೆ ನೋಡಲಾಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ! ಯಥಾರ್ಥದಲ್ಲಿ ಅವರು ತಮ್ಮ ಮನದಲ್ಲಿ ಒಳಗೊಳಗೇ ದುರಹಂಕಾರ ಪಡುತ್ತಿದ್ದಾರೆ; ಮಿತಿ ಮೀರಿದ ದಾರ್ಷ್ಟ್ಯ ತೋರುತ್ತಿದ್ದಾರೆ. {21}

يَوْمَ يَرَوْنَ الْمَلَائِكَةَ لَا بُشْرَىٰ يَوْمَئِذٍ لِلْمُجْرِمِينَ وَيَقُولُونَ حِجْرًا مَحْجُورًا

ಅವರು ಆ ಮಲಕ್ ಗಳನ್ನು ನೋಡಲಿರುವ ದಿನ! ಅಂದು ಆ ಅಪರಾಧಿಗಳಿಗೆ ಸಂತೋಷದ ಯಾವ ಸುದ್ದಿಯೂ ಇರಲಾರದು! ಬದಲಾಗಿ (ಮಲಕ್ ಗಳನ್ನು ಕಂಡಾಗ) ಅವರು 'ರಕ್ಷಿಸಿ, ರಕ್ಷಿಸಿ' ಎಂದು ಚೀರಾಡುವರು! {22}

وَقَدِمْنَا إِلَىٰ مَا عَمِلُوا مِنْ عَمَلٍ فَجَعَلْنَاهُ هَبَاءً مَنْثُورًا

ಮತ್ತು ನಾವು ಅವರು ಮಾಡಿದ ಕರ್ಮಗಳೆಡೆಗೆ ಗಮನ ಹರಿಸುವೆವು; ನಂತರ ಅದನ್ನು ಛಿದ್ರಗೊಳಿಸಿ ಧೂಳೀಪಟ ಮಾಡಿ ಬಿಡುವೆವು. {23}

أَصْحَابُ الْجَنَّةِ يَوْمَئِذٍ خَيْرٌ مُسْتَقَرًّا وَأَحْسَنُ مَقِيلًا

(ತಮ್ಮ ಕರ್ಮಗಳಿಗೆ ಪ್ರತಿಫಲವಾಗಿ) ಸ್ವರ್ಗೋದ್ಯಾನ ಪಡೆಯಲಿರುವವರ ತಂಗುದಾಣವು ಅಂದು ಬಹಳ ಉತ್ತಮವಾಗಿರುವುದು; ಅವರ ವಿಶ್ರಾಂತಿಯ ಸ್ಥಳವೂ ಬಹಳ ಸೊಗಸಾಗಿರುವುದು. {24}

وَيَوْمَ تَشَقَّقُ السَّمَاءُ بِالْغَمَامِ وَنُزِّلَ الْمَلَائِكَةُ تَنْزِيلًا

ಮೇಘರಾಶಿಗಳೊಂದಿಗೆ ಆಕಾಶವು ಬಿರಿಯುವ ಮತ್ತು ಮಲಕ್ ಗಳನ್ನು ಗುಂಪು ಗುಂಪುಗಳಾಗಿ ಆಕಾಶದಿಂದ ಇಳಿಸಲಾಗುವ ದಿನವದು. {25}

الْمُلْكُ يَوْمَئِذٍ الْحَقُّ لِلرَّحْمَٰنِ ۚ وَكَانَ يَوْمًا عَلَى الْكَافِرِينَ عَسِيرًا

ನ್ಯಾಯಯುತವಾಗಿಯೇ ಅಂದು ಸಾರ್ವಭೌಮತ್ವವು ಆ ದಯಾಮಯನ ಕೈಯಲ್ಲಿರುವುದು. ಆ ದಿನವು ಸತ್ಯವನ್ನು ನಿರಾಕರಿಸಿದವರ ಪಾಲಿಗಂತು ಒಂದು ದುರ್ಭರ ದಿನವಾಗಲಿದೆ. {26}

وَيَوْمَ يَعَضُّ الظَّالِمُ عَلَىٰ يَدَيْهِ يَقُولُ يَا لَيْتَنِي اتَّخَذْتُ مَعَ الرَّسُولِ سَبِيلًا

ಪ್ರತಿಯೊಬ್ಬ ದುಷ್ಟನು ಅಂದು ಅತ್ಯಂತ ಹತಾಶನಾಗಿ ತನ್ನದೇ ಕೈಗಳನ್ನು ಕಚ್ಚಿಕೊಳ್ಳುವನು; ಅಯ್ಯೋ, ನಾನು ಸಹ ದೂತರ ಸಹವಾಸದಲ್ಲಿದ್ದುಕೊಂಡು ಅವರು ತೋರಿದ ದಾರಿಯಲ್ಲಿ ನಡೆದಿರುತ್ತಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಎಂದು (ನಿರಾಶಾಭಾವದೊಂದಿಗೆ) ಹೇಳುವನು. {27}

يَا وَيْلَتَىٰ لَيْتَنِي لَمْ أَتَّخِذْ فُلَانًا خَلِيلًا

ಅಕಟಾ, ಓ ನನ್ನ ದುರದೃಷ್ಟವೇ, ಆ ಒಬ್ಬನನ್ನು ನಾನು ಮಿತ್ರನನ್ನಾಗಿ ಮಾಡಿಕೊಳ್ಳದಿರುತ್ತಿದ್ದರೆ ಅದೆಷ್ಟು ಒಳ್ಳೆಯದಿತ್ತು! {28}

لَقَدْ أَضَلَّنِي عَنِ الذِّكْرِ بَعْدَ إِذْ جَاءَنِي ۗ وَكَانَ الشَّيْطَانُ لِلْإِنْسَانِ خَذُولًا

ನಿಜವೇನೆಂದರೆ, ಕುರ್‌ಆನ್ ನ ಉಪದೇಶ ನನ್ನ ಬಳಿಗೆ ಬಂದ ಬಳಿಕ, ಅದನ್ನು ಸ್ವೀಕರಿಸದಂತೆ ಅವನೇ ನನ್ನನ್ನು ದಾರಿಗೆಡಿಸಿದನು. ಹೌದು, ಸೈತಾನನು ಮನುಷ್ಯರ ಪಾಲಿಗೆ ದ್ರೋಹ ಬಗೆಯುವವನೇ ಆಗಿರುವನು! {29}

وَقَالَ الرَّسُولُ يَا رَبِّ إِنَّ قَوْمِي اتَّخَذُوا هَٰذَا الْقُرْآنَ مَهْجُورًا

ಓ ನನ್ನ ಒಡೆಯನಾದ ದೇವನೇ, ಈ ನನ್ನ ಸಮುದಾಯವು (ಉಪದೇಶ ಭರಿತವಾದ) ಈ ಕುರ್‌ಆನ್ ಅನ್ನು ಸಂಪೂರ್ಣವಾಗಿ ಕಡೆಗಣಿಸಿ, ಒಂದು ಹಾಸ್ಯಾಸ್ಪದ ವಸ್ತುವೆಂಬಂತೆ ಅದರೊಂದಿಗೆ ವರ್ತಿಸಿತು ಎಂದು ಪೈಗಂಬರರು ನುಡಿಯುವರು. {30}

وَكَذَٰلِكَ جَعَلْنَا لِكُلِّ نَبِيٍّ عَدُوًّا مِنَ الْمُجْرِمِينَ ۗ وَكَفَىٰ بِرَبِّكَ هَادِيًا وَنَصِيرًا

ಪೈಗಂಬರರೇ, ಈ ರೀತಿಯಲ್ಲಿ ಪ್ರತಿಯೊಬ್ಬ ಪ್ರವಾದಿಗೂ ನಾವು ದುಷ್ಟರನ್ನು ಶತ್ರುಗಳನ್ನಾಗಿ ಮಾಡಿರುತ್ತೇವೆ. ಸರಿದಾರಿ ತೋರಲು ಮತ್ತು ಸಹಾಯ ನೀಡಲು ನಿಮ್ಮ ಒಡೆಯನಾದ (ಆಲ್ಲಾಹ್ ನು) ಮಾತ್ರವೇ ಸಾಕು! {31}

وَقَالَ الَّذِينَ كَفَرُوا لَوْلَا نُزِّلَ عَلَيْهِ الْقُرْآنُ جُمْلَةً وَاحِدَةً ۚ كَذَٰلِكَ لِنُثَبِّتَ بِهِ فُؤَادَكَ ۖ وَرَتَّلْنَاهُ تَرْتِيلًا

ಆತನ ಮೇಲೆ ಇಡೀ ಕುರ್‌ಆನನ್ನು ಒಂದೇ ಬಾರಿಗೆ ಏಕೆ ಇಳಿಸಿ ಕೊಡಲಾಗಲಿಲ್ಲ ಎಂದು ವಿಶ್ವಾಸಿಗಳಾಗದ (ಆ ದುಷ್ಟ) ಜನರು ಆಕ್ಷೇಪಿಸುತ್ತಾರೆ. ಪೈಗಂಬರರೇ, ಅದನ್ನು ಹಾಗೆಯೇ ಇಳಿಸಲಾಗುವುದು! ನಿಮ್ಮ ಹೃದಯವನ್ನು ಅದರ ಮೂಲಕ ದೃಢಗೊಳಿಸಲು ಹಾಗೆ ಮಾಡಲಾಗಿದೆ. ಹೌದು, ನಾವು ಅದನ್ನು (ಅಗತ್ಯಕ್ಕೆ ತಕ್ಕಂತೆ ನಿಮಗೆ) ಸ್ವಲ್ಪ ಸ್ವಲ್ಪವೇ ಒದಿಸುತ್ತಾ ಬರುವೆವು. {32}

وَلَا يَأْتُونَكَ بِمَثَلٍ إِلَّا جِئْنَاكَ بِالْحَقِّ وَأَحْسَنَ تَفْسِيرًا

ಅವರು ಎಂತಹ ಆಕ್ಷೇಪಗಳೊಂದಿಗೆ ನಿಮ್ಮಲ್ಲಿಗೆ ಬಂದರೂ ನಾವು ಅದಕ್ಕೆ ಬಹಳ ನಿಖರವಾದ ಮತ್ತು ಉತ್ತಮವಾದ ವಿವರಣೆಯನ್ನು (ಈ ಕುರ್‌ಆನ್ ನ ಮೂಲಕವೇ) ನೀಡಲಿಕ್ಕಾಗಿಯೂ (ಅದು ಸ್ವಲ್ಪ ಸ್ವಲ್ಪವೇ ಇಳಿಯುವುದು)! {33}

الَّذِينَ يُحْشَرُونَ عَلَىٰ وُجُوهِهِمْ إِلَىٰ جَهَنَّمَ أُولَٰئِكَ شَرٌّ مَكَانًا وَأَضَلُّ سَبِيلًا

(ಆ ದುಷ್ಟ) ಜನರನ್ನು ಅಧೋಮುಖವಾಗಿ ಬಿದ್ದ ಸ್ಥಿತಿಯಲ್ಲಿ ಒಂದುಗೂಡಿಸಿ ನರಕದೆಡೆಗೆ ಅಟ್ಟಲಾಗುವುದು. ಅವರು ಅತ್ಯಂತ ನೀಚ ಸ್ಥಳದಲ್ಲಿರುವರು; ಎಲ್ಲಕ್ಕಿಂತ ಹೆಚ್ಚು ದಾರಿಗೆಟ್ಟವರು. {34}

وَلَقَدْ آتَيْنَا مُوسَى الْكِتَابَ وَجَعَلْنَا مَعَهُ أَخَاهُ هَارُونَ وَزِيرًا

(ನಿಮ್ಮಂತೆಯೇ) ನಾವು ಪ್ರವಾದಿ ಮೂಸಾರಿಗೆ ಸಹ ಒಂದು ಗ್ರಂಥ ದಯಪಾಲಿಸಿದ್ದೆವು ಮತ್ತು ಅವರ ಸಹೋದರ ಹಾರೂನ್ ರನ್ನು ಅವರ ಸಹಾಯಕ್ಕಾಗಿ ನೇಮಿಸಿ ಅವರ ಜೊತೆಗಿರುವಂತೆ ಮಾಡಿದ್ದೆವು. {35}

فَقُلْنَا اذْهَبَا إِلَى الْقَوْمِ الَّذِينَ كَذَّبُوا بِآيَاتِنَا فَدَمَّرْنَاهُمْ تَدْمِيرًا

ನಮ್ಮ ದೃಷ್ಟಾಂತಗಳಿಗೆ ಧಿಕ್ಕಾರ ತೋರಿದ (ಫಿರ್‌ಔನ್ ನ) ಸಮುದಾಯದತ್ತ ನೀವಿಬ್ಬರೂ ಹೋಗಿರಿ ಎಂದು ನಾವು (ಮೂಸಾ ಮತ್ತು ಹಾರೂನ್ ರಿಗೆ) ಆದೇಶಿಸಿದೆವು. ಕೊನೆಗೆ [ಆ ಇಬ್ಬರು ಪ್ರವಾದಿಗಳ ಉಪದೇಶವನ್ನೂ ಅವರು ತಿರಸ್ಕರಿಸಿದ ಕಾರಣ] ಆ ಸಮುದಾಯವನ್ನು ನಾವು ಸರ್ವ ಸಂಪೂರ್ಣವಾಗಿ ಧ್ವಂಸಮಾಡಿ ಬಿಟ್ಟೆವು. {36}

وَقَوْمَ نُوحٍ لَمَّا كَذَّبُوا الرُّسُلَ أَغْرَقْنَاهُمْ وَجَعَلْنَاهُمْ لِلنَّاسِ آيَةً ۖ وَأَعْتَدْنَا لِلظَّالِمِينَ عَذَابًا أَلِيمًا

ಹಾಗೆಯೇ ಪ್ರವಾದಿ ನೂಹ್ ರ ಸಮುದಾಯದ ಸಂಗತಿ. ಯಾವಾಗ ಅವರು ನಮ್ಮ ದೂತರುಗಳನ್ನು ತಿರಸ್ಕರಿಸಿದರೋ ನಾವು ಅವರನ್ನು ಮುಳುಗಿಸಿ ಶಿಕ್ಷಿಸಿದೆವು. ಮಾತ್ರವಲ್ಲ, ಉಳಿದ ಜನರಿಗೆ ನಾವು ಅವರನ್ನು ಒಂದು ನಿದರ್ಶನವಾಗಿಸಿ ಬಿಟ್ಟೆವು. ಹೌದು, ಅಂತಹ ದುಷ್ಟ ಜನರಿಗೆ (ಪರಲೋಕದಲ್ಲೂ) ನಾವು ಯಾತನಾಮಯ ಶಿಕ್ಷೆ ಸಿದ್ಧಗೊಳಿಸಿ ಇಟ್ಟಿದ್ದೇವೆ. {37}

وَعَادًا وَثَمُودَ وَأَصْحَابَ الرَّسِّ وَقُرُونًا بَيْنَ ذَٰلِكَ كَثِيرًا

ಆದ್ ಮತ್ತು ತಮೂದ್ ಸಮುದಾಯಕ್ಕೆ ಸೇರಿದವರನ್ನು ಸಹ. ಹಾಗೆಯೇ ರಸ್ಸ್ ಸಮುದಾಯದ ಜನರನ್ನೂ. ಮಾತ್ರವಲ್ಲ ಆ ಸಮುದಾಯಗಳ ನಡುವಿನ ಇತರ ಹಲವಾರು ಪೀಳಿಗೆಗಳನ್ನೂ (ನಮ್ಮ ಉಜ್ವಲ ನಿದರ್ಶನಗಳನ್ನು ನಿರಾಕರಿಸಿದ ಕಾರಣಕ್ಕಾಗಿ ನಾಶಗೊಳಿಸಿದೆವು)! {38}

وَكُلًّا ضَرَبْنَا لَهُ الْأَمْثَالَ ۖ وَكُلًّا تَبَّرْنَا تَتْبِيرًا

(ಈಗ ನಿಮಗೆ ಉದಾಹರಿಸುತ್ತಿರುವಂತೆ) ಪ್ರತಿಯೊಂದು ಸಮದಾಯಕ್ಕೂ ನಾವು (ನಾಶವಾದ ಹಿಂದಿನ ಸಮುದಾಯಗಳನ್ನು) ಉದಾಹರಿಸಿ ಉಪದೇಶಿಸಿದ್ದೆವು. ಮತ್ತು (ಅವರು ನಿರಾಕರಿಸಿದಾಗ) ಅವರನ್ನೂ ನಾವು ಹೇಳ ಹೆಸರಿಲ್ಲದೆ ಅಳಿಸಿ ಹಾಕಿದೆವು. {39}

وَلَقَدْ أَتَوْا عَلَى الْقَرْيَةِ الَّتِي أُمْطِرَتْ مَطَرَ السَّوْءِ ۚ أَفَلَمْ يَكُونُوا يَرَوْنَهَا ۚ بَلْ كَانُوا لَا يَرْجُونَ نُشُورًا

ನಿಜವಾಗಿ, (ಪೈಗಂಬರರೇ, ಈಗ ನಿರಾಕರಿಸುತ್ತಿರುವ) ಆ ಜನರು, (ಉರಿಯುವ ಕೆಂಡದಿಂದ ಕೂಡಿದ) ವಿನಾಶಕಾರೀ ಮಳೆ ಸುರಿಯಲ್ಪಟ್ಟ ನಾಡಿನ ಮೂಲಕವೇ ಅತ್ತಿತ್ತ ಹಾದುಹೋಗುತ್ತಿದ್ದಾರೆ! ಅದೇನು ಅವರಿಗೆ ಅದು ಕಾಣಿಸುತ್ತಿಲ್ಲವೇ? ಕಾಣಿಸುತ್ತದೆ, ಆದರೆ ಅವರಿಗೆ ಪುನರುತ್ಥಾನದ ಬಗ್ಗೆ ನಿರೀಕ್ಷೆಯೇ ಇಲ್ಲ. {40}

وَإِذَا رَأَوْكَ إِنْ يَتَّخِذُونَكَ إِلَّا هُزُوًا أَهَٰذَا الَّذِي بَعَثَ اللَّهُ رَسُولًا

ಪೈಗಂಬರರೇ, ಅವರು ನಿಮ್ಮನ್ನು ಯಾವಾಗ ಕಂಡರೂ ಹೀಯಾಳಿಸದೆ ಬಿಡುವುದಿಲ್ಲ; ಈತನನ್ನೇ ಅಲ್ಲಾಹ್ ನು ದೂತನನ್ನಾಗಿ ಮಾಡಿ ಕಳುಹಿಸಿರುವುದು? - ಎಂದು ಗೇಲಿ ಮಾಡುತ್ತಾರೆ. {41}

إِنْ كَادَ لَيُضِلُّنَا عَنْ آلِهَتِنَا لَوْلَا أَنْ صَبَرْنَا عَلَيْهَا ۚ وَسَوْفَ يَعْلَمُونَ حِينَ يَرَوْنَ الْعَذَابَ مَنْ أَضَلُّ سَبِيلًا

ನಾವು ಈ ದೇವರುಗಳ (ಆರಾಧನೆಯ) ವಿಷಯದಲ್ಲಿ ಒಂದು ವೇಳೆ ಸ್ಥೈರ್ಯ ಪಾಲಿಸದೇ ಇದ್ದಿದ್ದರೆ, ಈತನಂತು ನಮ್ಮನ್ನು ದಾರಿ ತಪ್ಪಿಸಿಯೇ ತೀರುತ್ತಿದ್ದನು (ಎಂದು ಅವರು ಹೇಳುತ್ತಿದ್ದಾರೆ). ಬಹುಬೇಗನೇ, ಅಂದರೆ ಶಿಕ್ಷೆಯನ್ನು ಕಾಣುವಾಗಲೇ, ನಿಜವಾಗಿ ದಾರಿತಪ್ಪಿ ದೂರ ಹೋದವರು ಯಾರೆಂಬುದು ಅವರಿಗೆ ತಿಳಿಯಲಿದೆ. {42}

أَرَأَيْتَ مَنِ اتَّخَذَ إِلَٰهَهُ هَوَاهُ أَفَأَنْتَ تَكُونُ عَلَيْهِ وَكِيلًا

ಪೈಗಂಬರರೇ, ತನ್ನದೇ ಮನಸ್ಸಿನ ಇಚ್ಚೆಗಳನ್ನು ಆರಾಧ್ಯ ದೇವನನ್ನಾಗಿ ಮಾಡಿಕೊಂಡವನನ್ನು ನೀವು ಕಂಡಿಲ್ಲವೇ? ಇನ್ನು ಅಂತಹವನ (ಪರಲೋಕದ ವಿಜಯದ) ಹೊಣೆಯನ್ನೂ ನೀವು ವಹಿಸಿಸುವಿರೇನು? {43}

أَمْ تَحْسَبُ أَنَّ أَكْثَرَهُمْ يَسْمَعُونَ أَوْ يَعْقِلُونَ ۚ إِنْ هُمْ إِلَّا كَالْأَنْعَامِ ۖ بَلْ هُمْ أَضَلُّ سَبِيلًا

ಅವರ ಪೈಕಿ ಹೆಚ್ಚಿನ ಜನರು ಕಿವಿಗೊಡುತ್ತಾರೆ ಮತ್ತು ಬುದ್ಧಿ ಉಪಯೋಗಿಸುತ್ತಾರೆ ಎಂದು ನೀವು ಭಾವಿಸಿರುವಿರಾ? ಇಲ್ಲ, ಅವರು ನಿಜವಾಗಿ ಜಾನುವಾರುಗಳ ಹಾಗೆ! ಅಲ್ಲ, (ಉಪದೇಶ ಅರ್ಥಮಾಡಿಕೊಳ್ಳುವ ವಿಷಯದಲ್ಲಿ) ಅದಕ್ಕಿಂತಲೂ ಕಡೆ. {44}

أَلَمْ تَرَ إِلَىٰ رَبِّكَ كَيْفَ مَدَّ الظِّلَّ وَلَوْ شَاءَ لَجَعَلَهُ سَاكِنًا ثُمَّ جَعَلْنَا الشَّمْسَ عَلَيْهِ دَلِيلًا

ನಿಮ್ಮ ಕರ್ತಾರನಾದ ದೇವನು ನೆರಳನ್ನು ಹೇಗೆ ವೃದ್ಧಿಸುತ್ತಾ ಬರುತ್ತಾನೆ ಎಂಬುದನ್ನು ನೀವು ಗಮನಿಸುವುದಿಲ್ಲವೇ? ಅವನು ಇಚ್ಛಿಸಿದ್ದರೆ ಅದನ್ನು ಅದೇ ಸ್ಥಿತಿಯಲ್ಲಿ ನಿಲ್ಲಿಸಿ ಬಿಡುತ್ತಿದ್ದನು! ಮತ್ತು (ಜನರೇ), ಆ ಸೂರ್ಯನನ್ನು ಅದರ ಮಾರ್ಗ ನಿರ್ದೇಶಕನನ್ನಾಗಿ ನಾವೇ ಮಾಡಿದೆವು! {45}

ثُمَّ قَبَضْنَاهُ إِلَيْنَا قَبْضًا يَسِيرًا

ತರುವಾಯ ಆ ನೆರಳನ್ನು ಸ್ವಲ್ಪ ಸ್ವಲ್ಪವೇ ಮುದುಡುತ್ತಾ ನಮ್ಮತ್ತ ಎಳೆದುಕೊಳ್ಳುತ್ತೇವೆ. {46}

وَهُوَ الَّذِي جَعَلَ لَكُمُ اللَّيْلَ لِبَاسًا وَالنَّوْمَ سُبَاتًا وَجَعَلَ النَّهَارَ نُشُورًا

ರಾತ್ರಿಯನ್ನು ನಿಮಗೆ ಹೊದಿಕೆಯನ್ನಾಗಿ ಮಾಡಿದವನು ಆ ದೇವನೇ! ಮತ್ತು ನಿದ್ದೆಯನ್ನು ವಿಶ್ರಾಂತಿಯ ಸಾಧನವಾಗಿಯೂ ಹಗಲನ್ನು ಎಚ್ಚರವಾಗಿರುವ (ಅರ್ಥಾತ್ ದುಡಿಮೆಯ) ಸಮಯವಾಗಿಯೂ ಅವನೇ ಮಾಡಿರುವನು. {47}

وَهُوَ الَّذِي أَرْسَلَ الرِّيَاحَ بُشْرًا بَيْنَ يَدَيْ رَحْمَتِهِ ۚ وَأَنْزَلْنَا مِنَ السَّمَاءِ مَاءً طَهُورًا

ತನ್ನ ಅನುಗ್ರಹವಾದ (ಮಳೆಗೆ) ಮುನ್ನವೇ ಅದರ ಶುಭವಾರ್ತೆಯಾಗಿ ಬೀಸುವ ತಂಗಾಳಿಯನ್ನು ಕಳುಹಿಸುವವನು ಆ ದೇವನೇ! (ಜನರೇ, ತಿಳಿಯಿರಿ), ನಾವೇ ಅಕಾಶದಿಂದ ಶುದ್ಧ ನೀರನ್ನು ಇಳಿಸುತ್ತೇವೆ. {48}

لِنُحْيِيَ بِهِ بَلْدَةً مَيْتًا وَنُسْقِيَهُ مِمَّا خَلَقْنَا أَنْعَامًا وَأَنَاسِيَّ كَثِيرًا

ಏಕೆಂದರೆ, ನಿರ್ಜೀವವಾದ ನಾಡುಗಳನ್ನು ನಾವು ಅದರ ಮೂಲಕ ಜೀವಂತಗೊಳಿಸಲಿಕ್ಕಾಗಿ; ಮತ್ತು ನಾವು ಸೃಷ್ಟಿಸಿದ ಹಲವಾರು ಜಾನುವಾರುಗಳು ಹಾಗೂ ಮನುಷ್ಯ ಜಾತಿಗೆ ನೀರು ಕುಡಿಸಲಿಕ್ಕಾಗಿ! {49}

وَلَقَدْ صَرَّفْنَاهُ بَيْنَهُمْ لِيَذَّكَّرُوا فَأَبَىٰ أَكْثَرُ النَّاسِ إِلَّا كُفُورًا

ಹೌದು, ನಾವು ಮತ್ತೆ ಮತ್ತೆ, ವಿವಿಧ ರೀತಿಯಲ್ಲಿ, ಈ ಕುರ್‌ಆನ್ ನ ಬೋಧನೆಗಳನ್ನು ಅವರ ಮಧ್ಯೆ ಪ್ರಸ್ತಾಪಿಸಿದ ಉದ್ದೇಶವಾದರೋ ಅವರು ಬುದ್ಧಿವಾದ ಸ್ವೀಕರಿಸಲೆಂದು! ಆದರೆ ಅವರು ತಿರಸ್ಕಾರವನ್ನೇ ತೋರಿದರು. ಜನರಲ್ಲಿ ಹೆಚ್ಚಿನವರು ಕೃತಘ್ನರಾಗಿದ್ದಾರೆ. {50}

وَلَوْ شِئْنَا لَبَعَثْنَا فِي كُلِّ قَرْيَةٍ نَذِيرًا

ಒಂದು ವೇಳೆ ನಾವು ಬಯಸಿದ್ದರೆ [ಹಿಂದೆ ಕಳುಹಿಸುತ್ತಿದ್ದಂತೆ] ಅವರ ಪ್ರತಿಯೊಂದು ನಾಡಿನಲ್ಲೂ (ಪರಲೋಕದ ಕುರಿತು) ಎಚ್ಚರಿಕೆ ನೀಡುವ ಒಬ್ಬ ದೂತನನ್ನು ನಿಯೋಗಿಸುತ್ತಿದ್ದೆವು. [ನಿಜವೆಂದರೆ, ಆಗಲೂ ಅವರು ಒಪ್ಪುತ್ತಿರಲಿಲ್ಲ!] {51}

فَلَا تُطِعِ الْكَافِرِينَ وَجَاهِدْهُمْ بِهِ جِهَادًا كَبِيرًا

ಆದ್ದರಿಂದ (ಪೈಗಂಬರರೇ), ಸತ್ಯವನ್ನು ತಿರಸ್ಕರಿಸುತ್ತಿರುವ ಆ ಜನರ ಮಾತನ್ನು ನೀವು ಕೇಳದಿರಿ. ಬದಲಾಗಿ ಇದೇ ಕುರ್‌ಆನ್ ನ ಮೂಲಕ ಅವರಿಗೆ (ಎಚ್ಚರಿಕೆ, ಉಪದೇಶಗಳನ್ನು ನೀಡಲು) ದೊಡ್ಡ ಪ್ರಮಾಣದಲ್ಲಿ ಪ್ರಯತ್ನ ನಡೆಸಿರಿ. {52}

وَهُوَ الَّذِي مَرَجَ الْبَحْرَيْنِ هَٰذَا عَذْبٌ فُرَاتٌ وَهَٰذَا مِلْحٌ أُجَاجٌ وَجَعَلَ بَيْنَهُمَا بَرْزَخًا وَحِجْرًا مَحْجُورًا

(ಪೈಗಂಬರರೇ, ಅವರಿಗೆ ತಿಳಿಸಿರಿ), ಆ ಅಲ್ಲಾಹ್ ನೇ ಎರಡು ಸಮುದ್ರಗಳನ್ನು ಒಟ್ಟೊಟ್ಟಿಗೆ ಹರಿಯಬಿಟ್ಟಿದ್ದಾನೆ; ಇದರಲ್ಲಿ ರುಚಿಕರವಾದ ಸಿಹಿ ನೀರಿದ್ದರೆ ಅದರಲ್ಲಿ ಉಪ್ಪು ಹೆಚ್ಚಿರುವ ಕಹಿ ನೀರಿದೆ! ಅವೆರಡರ ನಡುವೆ ಪರಸ್ಪರ ಉಲ್ಲಂಘಿಸಲಾಗದ ಗಟ್ಟಿಯಾದ ತಡೆಯೊಂದನ್ನು ಅವನು ನಿರ್ಮಿಸಿರುವನು! {53}

وَهُوَ الَّذِي خَلَقَ مِنَ الْمَاءِ بَشَرًا فَجَعَلَهُ نَسَبًا وَصِهْرًا ۗ وَكَانَ رَبُّكَ قَدِيرًا

ಮನುಷ್ಯ ಜಾತಿಯನ್ನು ನೀರಿನಿಂದ (ಅರ್ಥಾತ್ ವೀರ್ಯದಿಂದ) ಸೃಷ್ಟಿಸಿದವನೂ ಅವನೇ! ನಂತರ ಅವನು ಮನುಷ್ಯನಿಗೆ ಮನೆತನದ ಬಂಧ ಮತ್ತು ವೈವಾಹಿಕ ಸಂಬಂಧಗಳನ್ನು ನೀಡಿದನು. ಹೌದು, ನಿಮ್ಮ ಕರ್ತಾರನು ಬಹಳ ಸಾಮರ್ಥ್ಯವುಳ್ಳವನಾಗಿರುವನು. {54}

وَيَعْبُدُونَ مِنْ دُونِ اللَّهِ مَا لَا يَنْفَعُهُمْ وَلَا يَضُرُّهُمْ ۗ وَكَانَ الْكَافِرُ عَلَىٰ رَبِّهِ ظَهِيرًا

ಅದಾಗ್ಯೂ, ಆ ಜನರು ಅಲ್ಲಾಹ್ ನಿಗೆ ಬದಲು ತಮಗೆ ಲಾಭವಾಗಲಿ ನಷ್ಟವಾಗಲಿ ಮಾಡಲು ಸಾಧ್ಯವಿಲ್ಲದ ವಸ್ತುಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ! ನಿಜವಾಗಿ, (ಅಲ್ಲಾಹ್ ನ ಮತ್ತು ಪೈಗಂಬರರ ಉಪದೇಶವನ್ನು) ತಿರಸ್ಕರಿಸಿದವನು ತನ್ನ ಕರ್ತಾರನಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾನೆ. {55}

وَمَا أَرْسَلْنَاكَ إِلَّا مُبَشِّرًا وَنَذِيرًا

ಪೈಗಂಬರರೇ, ಈಗ ನಿಮ್ಮನ್ನೂ (ಆ ಜನರ ಮಧ್ಯೆ) ನಾವು ಕಳುಹಿಸಿರುವುದು (ಒಳಿತು ಮಾಡಿದವರಿಗೆ) ಶುಭ ಸಂದೇಶ ನೀಡುವವರಾಗಿ ಮತ್ತು (ಕೆಡುಕು ಮಾಡಿದವರಿಗೆ) ಮುನ್ನೆಚ್ಚರಿಕೆ ನೀಡುವವರಾಗಿ ಮಾತ್ರ! {56}

قُلْ مَا أَسْأَلُكُمْ عَلَيْهِ مِنْ أَجْرٍ إِلَّا مَنْ شَاءَ أَنْ يَتَّخِذَ إِلَىٰ رَبِّهِ سَبِيلًا

(ಜನರೇ), ಆ ಕೆಲಸಕ್ಕಾಗಿ ನಾನು ನಿಮ್ಮಿಂದ ಯಾವುದೇ ರೀತಿಯ ಪ್ರತಿಫಲವನ್ನು ಯಾಚಿಸುತ್ತಿಲ್ಲ. ಇನ್ನು ಯಾರಿಗಾದರೂ ಇಷ್ಟವಿದ್ದರೆ ಅವನು ತನ್ನ ಕರ್ತಾರನೆಡೆಗಿರುವ ದಾರಿಯನ್ನು ಸ್ವೀಕರಿಸಲಿ - ಎಂದು ಸಾರಿರಿ. {57}

وَتَوَكَّلْ عَلَى الْحَيِّ الَّذِي لَا يَمُوتُ وَسَبِّحْ بِحَمْدِهِ ۚ وَكَفَىٰ بِهِ بِذُنُوبِ عِبَادِهِ خَبِيرًا

ಜೀವಂತವಿರುವ, ಎಂದಿಗೂ ಮರಣ ಹೊಂದದ (ಅಲ್ಲಾಹ್ ನ) ಮೇಲೆ ಭರವಸೆ ಇಡಿರಿ. ಅವನ ಪಾವಿತ್ರ್ಯವನ್ನು ಜಪಿಸುತ್ತಲಿರಿ; ಜೊತೆಗೆ ಅವನ ಕೀರ್ತನೆ ಮಾಡಿರಿ. ಅವನು ತನ್ನ ದಾಸರು ಮಾಡಿದ ಪಾಪಗಳನ್ನು ಚೆನ್ನಾಗಿಯೇ ಬಲ್ಲನು. {58}

الَّذِي خَلَقَ السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۚ الرَّحْمَٰنُ فَاسْأَلْ بِهِ خَبِيرًا

ಆಕಾಶಗಳನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವ ಸಕಲವನ್ನೂ ಆರು ಹಂತಗಳಲ್ಲಿ ಸೃಷ್ಟಿಸಿದವನು ಆ ಅಲ್ಲಾಹ್ ನೇ! ನಂತರ ಅವನು ವಿಶ್ವದ ಅಧಿಕಾರ ಗದ್ದುಗೆಯನ್ನೇರಿದನು. ಅವನು ಕರುಣಾಮಯಿ! ಅವನ ಕಾರುಣ್ಯದ ಕುರಿತು ತಿಳಿದುಕೊಳ್ಳಲು ತಿಳಿದವರನ್ನು (ಅರ್ಥಾತ್ ಪೈಗಂಬರರನ್ನು) ಕೇಳಿ. {59}

۩ وَإِذَا قِيلَ لَهُمُ اسْجُدُوا لِلرَّحْمَٰنِ قَالُوا وَمَا الرَّحْمَٰنُ أَنَسْجُدُ لِمَا تَأْمُرُنَا وَزَادَهُمْ نُفُورًا

ನೀವು ಆ ಪರಮ ದಯಾಮಯನಿಗೆ ಸಾಷ್ಟಾಂಗ ನಮಿಸಿರಿ ಎಂದು ಅವರೊಡನೆ ಹೇಳಲಾದಾಗ, ಪರಮ ದಯಾಮಯ ಎಂದರೇನು; ನೀನು ಯಾರಿಗಾದರೂ ನಮಿಸಬೇಕೆಂದು ಹೇಳಿದಾಕ್ಷಣ ನಾವು ನಮಿಸಬೇಕೇ ಎಂದು ಅವರು [ಪೈಗಂಬರರಿಗೆ ಮರುಪ್ರಶ್ನೆ ಹಾಕಿದರು]! ಅವರ ತಿರಸ್ಕಾರ ಹೆಚ್ಚೇ ಆಯಿತು. {60} ۩

تَبَارَكَ الَّذِي جَعَلَ فِي السَّمَاءِ بُرُوجًا وَجَعَلَ فِيهَا سِرَاجًا وَقَمَرًا مُنِيرًا

(ಜನರೇ), ಆಕಾಶದಲ್ಲಿ ಭದ್ರಕೋಟೆಗಳನ್ನು ರಚಿಸಿದ, ಮತ್ತು ಪ್ರಜ್ವಲಿಸುವ ದೀಪವಾದ (ಸೂರ್ಯನನ್ನು) ಹಾಗೂ ಪ್ರಕಾಶಿಸುವ ಚಂದ್ರನನ್ನು ನಿರ್ಮಿಸಿದ ಆ ಅಲ್ಲಾಹ್ ನು ಸಮೃದ್ಧಪೂರ್ಣನು! {61}

وَهُوَ الَّذِي جَعَلَ اللَّيْلَ وَالنَّهَارَ خِلْفَةً لِمَنْ أَرَادَ أَنْ يَذَّكَّرَ أَوْ أَرَادَ شُكُورًا

ರಾತ್ರಿ ಮತ್ತು ಹಗಲುಗಳು ಒಂದನ್ನೊಂದು ಹಿಂಬಾಲಿಸುತ್ತಿರುವಂತೆ ಮಾಡಿದವನೂ ಅವನೇ! ವಿಚಾರ ಮಾಡುವ ಅಥವಾ ಕೃತಜ್ಞರಾಗಿರಲು ಬಯಸುವ ಜನರಿಗಾಗಿ (ಆ ಪ್ರಕ್ರಿಯೆಯಲ್ಲೂ ಒಂದು ದೃಷ್ಟಾಂತವಿದೆ)! {62}

وَعِبَادُ الرَّحْمَٰنِ الَّذِينَ يَمْشُونَ عَلَى الْأَرْضِ هَوْنًا وَإِذَا خَاطَبَهُمُ الْجَاهِلُونَ قَالُوا سَلَامًا

ಹೌದು, ಆ ಕರುಣಾಮಯಿಯ ಉಪಾಸಕರು ಯಾರೆಂದರೆ, ಭೂಮಿಯ ಮೇಲೆ ನಡೆಯುವಾಗ ಬಹಳ ಸೌಜನ್ಯದಿಂದ ನಡೆಯುವವರು! ಒಂದು ವೇಳೆ ಅವಿವೇಕಿಗಳು ಅವರೊಂದಿಗೆ ಮಾತಿಗಿಳಿದರೆ ಅವರಿಗೆ ಸಮಾಧಾನವನ್ನಷ್ಟೇ ಹಾರೈಸಿ ಮುಂದೆ ಸಾಗುವವರು! {63}

وَالَّذِينَ يَبِيتُونَ لِرَبِّهِمْ سُجَّدًا وَقِيَامًا

ತಮ್ಮ ಕರ್ತಾರನಾದ (ಅಲ್ಲಾಹ್ ನಿಗಾಗಿ) ಶಿರಬಾಗಿದ ಸ್ಥಿತಿಯಲ್ಲೂ ನಿಂತ ಸ್ಥಿತಿಯಲ್ಲೂ ನಮಾಝ್ ಮಾಡುತ್ತಾ ರಾತ್ರಿ ಕಳೆಯುವವರು! {64}

وَالَّذِينَ يَقُولُونَ رَبَّنَا اصْرِفْ عَنَّا عَذَابَ جَهَنَّمَ ۖ إِنَّ عَذَابَهَا كَانَ غَرَامًا

ಓ ನಮ್ಮ (ಕರುಣಾಮಯಿ) ಪರಿಪಾಲಕನೇ, ನರಕದ ಶಿಕ್ಷೆಯನ್ನು ನಮ್ಮಿಂದ ದೂರವಾಗಿಸು; ಅದರ ಶಿಕ್ಷೆಯಂತೂ ಬಿಟ್ಟಗಲದ ದುರಂತವಾಗಿದೆ - ಎಂದು ಅವರು ಪ್ರಾರ್ಥಿಸುತ್ತಲಿರುವರು. {65}

إِنَّهَا سَاءَتْ مُسْتَقَرًّا وَمُقَامًا

ನಿಜವಾಗಿ, ಆ ನರಕವು ತಂಗಲು ಅತ್ಯಂತ ಕೆಟ್ಟ ಸ್ಥಳವಾಗಿದೆ; ವಾಸಿಸಲು ನಿಕೃಷ್ಟ ನೆಲೆಯಾಗಿದೆ. {66}

وَالَّذِينَ إِذَا أَنْفَقُوا لَمْ يُسْرِفُوا وَلَمْ يَقْتُرُوا وَكَانَ بَيْنَ ذَٰلِكَ قَوَامًا

ಆ ಕರುಣಾಮಯಿಯ ಉಪಾಸಕರು, (ತಮ್ಮ ಅಗತ್ಯಗಳಿಗಾಗಿ) ಖರ್ಚು ಮಾಡುವಾಗ ದುಂದುವೆಚ್ಚ ಮಾಡುವವರಲ್ಲ; ಅಂತೆಯೇ ಜಿಪುಣತೆ ತೋರುವವರೂ ಅಲ್ಲ. ಬದಲಾಗಿ ಅವೆರಡರ ನಡುವಿನ ಮಧ್ಯಮ ದಾರಿ ಪಾಲಿಸುತ್ತಾರೆ. {67}

وَالَّذِينَ لَا يَدْعُونَ مَعَ اللَّهِ إِلَٰهًا آخَرَ وَلَا يَقْتُلُونَ النَّفْسَ الَّتِي حَرَّمَ اللَّهُ إِلَّا بِالْحَقِّ وَلَا يَزْنُونَ ۚ وَمَنْ يَفْعَلْ ذَٰلِكَ يَلْقَ أَثَامًا

ಅವರು ಪ್ರಾರ್ಥಿಸುವಾಗ ಅಲ್ಲಾಹ್ ನ ಜೊತೆ ಇತರ (ಇಲ್ಲಸಲ್ಲದ) ದೇವರುಗಳನ್ನು ಸೇರಿಸಿಕೊಳ್ಳುವುದಿಲ್ಲ; ಕೊಲ್ಲಬಾರದೆಂದು ಅಲ್ಲಾಹ್ ನು ನಿಷೇಧ ಹೇರಿದ ಯಾವ ಜೀವವನ್ನೂ ಅವರು ಅನ್ಯಾಯವಾಗಿ ಕೊಲ್ಲುವುದಿಲ್ಲ; ವ್ಯಭಿಚಾರ ಮಾಡುವುದಿಲ್ಲ. ಇನ್ನು ಯಾರು ಅಂತಹ ಪಾಪಕರ್ಮ ಮಾಡುತ್ತಾನೋ ಅವನು ಪರಿಣಾಮವಾಗಿ ಶಿಕ್ಷೆ ಅನುಭವಿಸುತ್ತಾನೆ. {68}

يُضَاعَفْ لَهُ الْعَذَابُ يَوْمَ الْقِيَامَةِ وَيَخْلُدْ فِيهِ مُهَانًا

ಪುನರುತ್ಥಾನ ದಿನ ಅಂತಹವನಿಗಿರುವ ಶಿಕ್ಷೆಯು ಹೆಚ್ಚುತ್ತಲೇ ಹೋಗುವುದು ಮತ್ತು ಅವನು ಅಪಮಾನಿತನಾಗಿ ಸದಾ ಅದೇ ಸ್ಥಿತಿಯಲ್ಲಿ ಬಿದ್ದಿರುವನು. {69}

إِلَّا مَنْ تَابَ وَآمَنَ وَعَمِلَ عَمَلًا صَالِحًا فَأُولَٰئِكَ يُبَدِّلُ اللَّهُ سَيِّئَاتِهِمْ حَسَنَاتٍ ۗ وَكَانَ اللَّهُ غَفُورًا رَحِيمًا

ಆದರೆ ಪಶ್ಚಾತ್ತಾಪ ಪಟ್ಟು, ವಿಶ್ವಾಸಿಯಾಗಿ, ಸತ್ಕರ್ಮಗಳನ್ನು ಮಾಡಿದವನ ಹೊರತು! ಅಂತಹವರ ದುಷ್ಕರ್ಮಗಳನ್ನೂ ಅಲ್ಲಾಹ್ ನು ಸತ್ಕರ್ಮವಾಗಿ ಮಾರ್ಪಡಿಸುತ್ತಾನೆ. ಹೌದು, (ಹಾಗೆ ಪಶ್ಚಾತ್ತಾಪ ಪಟ್ಟವರ ಪಾಲಿಗೆ) ಅಲ್ಲಾಹ್ ನು ಕ್ಷಮಿಸುವವನೂ ಕರುಣೆ ತೋರುವವನೂ ಆಗಿರುವನು. {70}

وَمَنْ تَابَ وَعَمِلَ صَالِحًا فَإِنَّهُ يَتُوبُ إِلَى اللَّهِ مَتَابًا

ಪಶ್ಚಾತ್ತಾಪ ಪಟ್ಟು ಪುಣ್ಯ ಕಾರ್ಯಗಳನ್ನು ಮಾಡುವವನು ನಿಜವಾಗಿ ಅಲ್ಲಾಹ್ ನೆಡೆಗೆ ಹೇಗೆ ಮರಳಬೇಕೋ ಹಾಗೆ (ಪ್ರಾಮಾಣಿಕತೆಯೊಂದಿಗೆ) ಮರಳಿದ್ದಾನೆ! {71}

وَالَّذِينَ لَا يَشْهَدُونَ الزُّورَ وَإِذَا مَرُّوا بِاللَّغْوِ مَرُّوا كِرَامًا

(ದಯಾಮಯಿ ಅಲ್ಲಾಹ್ ನ ನಿಜವಾದ ಉಪಾಸಕರು) ಯಾವತ್ತೂ ಸತ್ಯವಲ್ಲದ ಸಂಗತಿಗಳಲ್ಲಿ ತಮನ್ನು ತೊಡಗಿಸಲಾರರು. ಇನ್ನು ನಿರರ್ಥಕವಾದ ಯಾವುದಾದರೂ ಸಂಗತಿಯ ಸಮೀಪದಿಂದ ಹಾದು ಹೋಗುವ ಅಗತ್ಯ ಬಂದರೆ ಅವರು ಬಹಳ ಸಭ್ಯತೆಯೊಂದಿಗೆ ಅಲ್ಲಿಂದ ಹಾದು ಹೋಗುವರು. {72}

وَالَّذِينَ إِذَا ذُكِّرُوا بِآيَاتِ رَبِّهِمْ لَمْ يَخِرُّوا عَلَيْهَا صُمًّا وَعُمْيَانًا

ತಮ್ಮ ಪರಿಪಾಲಕನಾದ (ಅಲ್ಲಾಹ್ ನ) ದೃಷ್ಟಾಂತಗಳನ್ನು ಅವರ ಮುಂದೆ ಪ್ರಸ್ತಾಪಿಸಿದಾಗ ಅವರು ಕಿವುಡರಂತೆ ಹಾಗೂ ಕುರುಡರಂತೆ ಅವುಗಳೊಂದಿಗೆ ವರ್ತಿಸುವುದಿಲ್ಲ. {73}

وَالَّذِينَ يَقُولُونَ رَبَّنَا هَبْ لَنَا مِنْ أَزْوَاجِنَا وَذُرِّيَّاتِنَا قُرَّةَ أَعْيُنٍ وَاجْعَلْنَا لِلْمُتَّقِينَ إِمَامًا

ಮಾತ್ರವಲ್ಲ, ಅವರು, ಓ ನಮ್ಮ ಪರಿಪಾಲಕನಾದ ಪ್ರಭುವೇ, ನಮ್ಮ ಪತ್ನಿಯರ ಮತ್ತು ನಮ್ಮ ಸಂತತಿಯ ಮೂಲಕ ನಮ್ಮ ಹೃದಯಗಳಿಗೆ ಆನಂದವನ್ನು ನೀಡು; ಮತ್ತು (ನಮ್ಮ ಸಂತತಿಯ ಪೈಕಿ) ಭಯಭಕ್ತಿ ಪಾಲಿಸುವ ಧರ್ಮನಿಷ್ಠರ ಪಾಲಿಗೆ ನಮ್ಮನ್ನು ನೇತಾರರನ್ನಾಗಿ ಮಾಡು - ಎಂದು ಪ್ರಾರ್ಥಿಸುತ್ತಲೂ ಇರುತ್ತಾರೆ. {74}

أُولَٰئِكَ يُجْزَوْنَ الْغُرْفَةَ بِمَا صَبَرُوا وَيُلَقَّوْنَ فِيهَا تَحِيَّةً وَسَلَامًا

ಅಂತಹ ಉಪಾಸಕರಿಗೆ, ಅವರು ಸಹನೆಯಿಂದ ವರ್ತಿಸಿದ ಕಾರಣಕ್ಕಾಗಿ, ಸ್ವರ್ಗದಲ್ಲಿಯ ಅತ್ಯುನ್ನತ ನಿವಾಸವನ್ನು ಪ್ರತಿಫಲವಾಗಿ ನೀಡಿ ಪುರಸ್ಕರಿಸಲಾಗುವುದು. ಅಲ್ಲಿ ಅವರನ್ನು ಶುಭಾಶಯಗಳು ಮತ್ತು ಶಾಂತಿಯ ಪ್ರಣಾಮಗಳೊಂದಿಗೆ ಬರಮಾಡಿಕೊಳ್ಳಲಾಗುವುದು! {75}

خَالِدِينَ فِيهَا ۚ حَسُنَتْ مُسْتَقَرًّا وَمُقَامًا

ಅವರು ಸದಾ ಕಾಲ ಅಲ್ಲಿಯೇ ಇರುವರು. ತಂಗಲು ಎಷ್ಟೊಂದು ಉತ್ತಮವಾದ ಆಶ್ರಯಸ್ಥಾನವದು; ಅತ್ಯಂತ ಶ್ರೇಷ್ಠವಾದ ಆ ನೆಲೆವೀಡು! {76}

قُلْ مَا يَعْبَأُ بِكُمْ رَبِّي لَوْلَا دُعَاؤُكُمْ ۖ فَقَدْ كَذَّبْتُمْ فَسَوْفَ يَكُونُ لِزَامًا

[ಕೊನೆಯ ತನಕ ಧಿಕ್ಕಾರವನ್ನೇ ತೋರಿದ ಜನರೊಂದಿಗೆ, ಪೈಗಂಬರರೇ, ನೀವು] ಹೇಳಿರಿ: ನನ್ನ ಪರಿಪಾಲಕನಾದ ಅಲ್ಲಾಹ್ ನ ಆರಾಧನೆ ನೀವು ಮಾಡದಿದ್ದರೆ ಅವನೂ ನಿಮ್ಮನ್ನು ಪರಿಗಣಿಸಲಾರ! ನಿಜವೇನೆಂದರೆ ಈಗ ನೀವು ನಿರಾಕರಿಸಿಯಾಗಿದೆ; ಆದ್ದರಿಂದ ಅದಕ್ಕಿರುವ ಶಿಕ್ಷೆ ಬಹುಬೇಗನೇ ನಿಮಗೆ ಅಂಟಿಕೊಳ್ಳುವುದು! {77}


---

ಅನುವಾದಿತ ಸೂರಃ ಗಳು

    Featured post

    ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...