078 ಅನ್ - ನಬಾ | ترجمة ســورة النبــأ

    تـرجمـة سورة النبــأ من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅನ್ - ನಬಾ | ಪವಿತ್ರ ಕುರ್‌ಆನ್ ನ 78 ನೆಯ ಸೂರಃ | ಇದರಲ್ಲಿ ಒಟ್ಟು 40 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

عَمَّ يَتَسَآءَلُونَ (١) عَنِ ٱلنَّبَإِ ٱلۡعَظِيمِ (٢) ٱلَّذِى هُمۡ فِيهِ مُخۡتَلِفُونَ (٣) كَلَّا سَيَعۡلَمُونَ (٤) ثُمَّ كَلَّا سَيَعۡلَمُونَ (٥)

ಅದಾವ ವಿಷಯದ ಕುರಿತು ಅವರು [ಅರ್ಥಾತ್ ದೇವನು ಏಕ ಮಾತ್ರನು ಎಂದು ನಂಬದವರು - ಮುಖ್ಯವಾಗಿ ಮಕ್ಕಾ ಪಟ್ಟಣದಲ್ಲಿನ ಕುರೈಶರು] ಪರಸ್ಪರ ಚರ್ಚೆಯಲ್ಲಿ ನಿರತರಾಗಿದ್ದಾರೆ? (ಪುನರುತ್ಥಾನ ದಿನದ) ಆ ಘನಗಂಭೀರ ಸುದ್ದಿಯ ಕುರಿತಾಗಿದೆಯೇ ಅವರ ಚರ್ಚೆ? ಅವರು ವಿಭಿನ್ನ ಅಭಿಪ್ರಾಯ ತಾಳಿರುವುದು ಆ ವಿಷಯದ ಕುರಿತೇನು? ಇಲ್ಲ, ಅವರಿಗದು ಗೊತ್ತಾಗಲಿದೆ. ಸರ್ವಥಾ ಇಲ್ಲ! ಶೀಘ್ರದಲ್ಲೇ ಅವರಿಗೆ ಗೊತ್ತಾಗಿ ಬಿಡುವುದು! {1-5}

أَلَمۡ نَجۡعَلِ ٱلۡأَرۡضَ مِهَـٰدً۬ا (٦) وَٱلۡجِبَالَ أَوۡتَادً۬ا (٧) وَخَلَقۡنَـٰكُمۡ أَزۡوَٲجً۬ا (٨) وَجَعَلۡنَا نَوۡمَكُمۡ سُبَاتً۬ا (٩) وَجَعَلۡنَا ٱلَّيۡلَ لِبَاسً۬ا (١٠) وَجَعَلۡنَا ٱلنَّہَارَ مَعَاشً۬ا (١١) وَبَنَيۡنَا فَوۡقَكُمۡ سَبۡعً۬ا شِدَادً۬ا (١٢) وَجَعَلۡنَا سِرَاجً۬ا وَهَّاجً۬ا (١٣) وَأَنزَلۡنَا مِنَ ٱلۡمُعۡصِرَٲتِ مَآءً۬ ثَجَّاجً۬ا (١٤) لِّنُخۡرِجَ بِهِۦ حَبًّ۬ا وَنَبَاتً۬ا (١٥) وَجَنَّـٰتٍ أَلۡفَافًا (١٦)

ನೆಲವನ್ನು (ನಿಮ್ಮ ಉಪಯೋಗಕ್ಕಾಗಿ) ಹಾಸುಗೆಯಂತೆ ನಾವು ಹರಡಲಿಲ್ಲವೇ? ಪರ್ವತಗಳನ್ನು (ಭೂಮಿಯ) ಗೂಟಗಳನ್ನಾಗಿ ಮಾಡಲಿಲ್ಲವೇ? ಮತ್ತು (ಗಂಡು-ಹೆಣ್ಣಿನ) ಜೋಡಿಗಳನ್ನಾಗಿ ನಿಮ್ಮನ್ನು ನಾವು ಸೃಷ್ಟಿಸಲಿಲ್ಲವೇ? ಹಾಗೆಯೇ, ನಿಮ್ಮ ನಿದ್ರೆಯನ್ನು (ಎಲ್ಲ ಚಟುವಟಿಕೆಗಳಿಂದ) ವಿರಮಿಸಲಿಕ್ಕಾಗಿಯೂ, ರಾತ್ರಿಯನ್ನು (ಸರ್ವವನ್ನೂ ಕವಿದುಕೊಳ್ಳುವ) ಹೊದಿಕೆಯನ್ನಾಗಿಯೂ, ಹಗಲನ್ನು ಜೇವನೋಪಾಯದ (ಸಿದ್ಧತೆಗಾಗಿಯೂ) ನಾವು ನಿಯುಕ್ತಗೊಳಿಸಿರುವೆವು! ಅಂತೆಯೇ ನಿಮ್ಮ ಮೇಲ್ಭಾಗದಲ್ಲಿ ಸುಭದ್ರವಾದ ಏಳು [ಗಗನ ಛಾವಣಿಗಳನ್ನು] ನಿರ್ಮಿಸಿರುವೆವು. ಹೊತ್ತಿ ಉರಿಯುವ, ಪ್ರಜ್ವಲಿಸುವ ಒಂದು ದೀಪವನ್ನೂ ನಾವು ಅಲ್ಲಿ ಇರಿಸಿರುವೆವು! ಮಾತ್ರವಲ್ಲ, ದವಸಧಾನ್ಯ, ಸಸ್ಯರಾಶಿ ಮತ್ತು ದಟ್ಟವಾಗಿ ಬೆಳೆದ ತೋಟಾದಿಗಳನ್ನು ಉತ್ಪಾದಿಸುವ ಸಲುವಾಗಿ ತೊಟ್ಟಿಕ್ಕುವ ಮೋಡಗಳಿಂದ ನಾವು ಧಾರಾಕಾರ ಮಳೆ ಸುರಿಸಿದೆವು! {6-16}

إِنَّ يَوۡمَ ٱلۡفَصۡلِ كَانَ مِيقَـٰتً۬ا (١٧) يَوۡمَ يُنفَخُ فِى ٱلصُّورِ فَتَأۡتُونَ أَفۡوَاجً۬ا (١٨) وَفُتِحَتِ ٱلسَّمَآءُ فَكَانَتۡ أَبۡوَٲبً۬ا (١٩) وَسُيِّرَتِ ٱلۡجِبَالُ فَكَانَتۡ سَرَابًا (٢٠)

[ನಿಮ್ಮ ಕರ್ಮಗಳಿಗೆ ತಕ್ಕ ಪ್ರತಿಫಲ ನೀಡಲಾಗುವ] ನಿರ್ಣಾಯಕ ದಿನದ ಸಮಯವನ್ನು ಅದಾಗಲೇ ಗೊತ್ತುಪಡಿಸಲಾಗಿದೆ! ಅಂದು ಕಹಳೆಯನ್ನು ಊದಲಾಗುವುದು ಮತ್ತು ನೀವೆಲ್ಲ ತಂಡೋಪತಂಡವಾಗಿ [ನಿಮ್ಮ ನಿಮ್ಮ ಸಮಾಧಿಗಳಿಂದ] ಎದ್ದು ಬರುವಿರಿ. ಆಕಾಶವು ಅಂದು ತೆರೆಯಲ್ಪಡುವುದು ಮತ್ತು ಅದು ಸಾಕ್ಷಾತ್ ಬಾಗಿಲುಗಳಿಂದ ತುಂಬಿಕೊಂಡಿರುವುದು. ಪರ್ವತಗಳು ಅಂದು (ತಮ್ಮ ಬುಡದಿಂದ) ಸರಿಸಲ್ಪಟ್ಟಾಗ ಒಂದು ಮರೀಚಿಕೆಯಾಗಿ ತೋರುವುದು. {17-20}

إِنَّ جَهَنَّمَ كَانَتۡ مِرۡصَادً۬ا (٢١) لِّلطَّـٰغِينَ مَـَٔابً۬ا (٢٢) لَّـٰبِثِينَ فِيہَآ أَحۡقَابً۬ا (٢٣) لَّا يَذُوقُونَ فِيہَا بَرۡدً۬ا وَلَا شَرَابًا (٢٤) إِلَّا حَمِيمً۬ا وَغَسَّاقً۬ا (٢٥) جَزَآءً۬ وِفَاقًا (٢٦)

ವಾಸ್ತವದಲ್ಲಿ ನರಕವು ಹೊಂಚು ಹಾಕುತ್ತಲಿದೆ; ಅತಿಕ್ರಮವೆಸಗಿದವರ ಅಂತಿಮ ತಾಣವದು. ಅಂತಹವರು ಅದರಲ್ಲಿ ದೀರ್ಘಕಾಲ ಬಿದ್ದುಕೊಂಡಿರುವರು. ಕುದಿಯುವ ನೀರು ಮತ್ತು ಕೀವುಗಳಂತಹ [ಅಸಹ್ಯ ವಸ್ತುಗಳ] ಹೊರತು ತಂಪಾಗಲಿ ಅಥವಾ ಯಾವುದೇ ಪಾನೀಯವಾಗಲಿ ರುಚಿ ನೋಡಲೂ ಅವರಿಗೆ ಅದರಲ್ಲಿ ಸಿಗದು. [ಅತಿಕ್ರಮಿಗಳಿಗೆ] ತಕ್ಕುದಾದ ಪ್ರತಿಫಲ!! {21-26}

إِنَّہُمۡ ڪَانُواْ لَا يَرۡجُونَ حِسَابً۬ا (٢٧) وَكَذَّبُواْ بِـَٔايَـٰتِنَا كِذَّابً۬ا (٢٨) وَكُلَّ شَىۡءٍ أَحۡصَيۡنَـٰهُ ڪِتَـٰبً۬ا (٢٩) فَذُوقُواْ فَلَن نَّزِيدَكُمۡ إِلَّا عَذَابًا (٣٠)

ವಾಸ್ತವದಲ್ಲಿ ವಿಚಾರಣೆ ನಡೆಯಲಿದೆ ಎಂದು ಅವರು ನಿರೀಕ್ಷಿಸಿಯೇ ಇರಲಿಲ್ಲ; ನಮ್ಮ ವಚನಗಳನ್ನು ಅವರು ಧಿಕ್ಕರಿಸಿ ತಳ್ಳಿಹಾಕಿದ್ದರು. ಆದರೆ ನಾವು ಅವರ ಪ್ರತಿಯೊಂದು ಕೃತ್ಯವನ್ನು ಒಂದೊಂದಾಗಿ ಎಣಿಸಿ ದಾಖಲಿಸಿಟ್ಟಿದ್ದೇವೆ! ಆದ್ದರಿಂದ ಈಗ ಸವಿಯಿರಿ, ಶಿಕ್ಷೆಯ ಕಾಠಿಣ್ಯವನ್ನಲ್ಲದೆ ಬೇರೇನನ್ನೂ ನಿಮ್ಮ ಪಾಲಿಗೆ ನಾವು ಹೆಚ್ಚಿಸುವಂತಿಲ್ಲ (ಎಂದು ಅವರಿಗೆ ಹೇಳಲಾಗುವುದು)! {27-30}

إِنَّ لِلۡمُتَّقِينَ مَفَازًا (٣١) حَدَآٮِٕقَ وَأَعۡنَـٰبً۬ا (٣٢) وَكَوَاعِبَ أَتۡرَابً۬ا (٣٣) وَكَأۡسً۬ا دِهَاقً۬ا (٣٤) لَّا يَسۡمَعُونَ فِيہَا لَغۡوً۬ا وَلَا كِذَّٲبً۬ا (٣٥) جَزَآءً۬ مِّن رَّبِّكَ عَطَآءً حِسَابً۬ا (٣٦)

ಖಂಡಿತವಾಗಿಯೂ [ಅಲ್ಲಾಹ್ ನಿಗೆ ಭಯಭಕ್ತಿ ತೋರಿ ಜೀವಿಸಿದ] ಧರ್ಮನಿಷ್ಠರಿಗೆ ಗೆಲುವು ಖಚಿತ. ಅಂತಹವರಿಗಾಗಿ (ಅಲ್ಲಿ) ಉದ್ಯಾನವನಗಳಿವೆ, ದ್ರಾಕ್ಷಿ ತೋಟಗಳಿವೆ, ಸಮವಯಸ್ಕ ತರುಣಿಯರ ಸಾಂಗತ್ಯವಿದೆ, ತುಂಬಿ ತುಳುಕುವ ಪಾನಪಾತ್ರೆಗಳೂ ಇವೆ. ಅಲ್ಲಿ ನಿರರ್ಥಕವಾದ ಮಾತಾಗಲೀ ಅಥವಾ ಹುಸಿ ನುಡಿಯಾಗಲೀ ಅವರು ಕೇಳಿಸಿ ಕೊಳ್ಳಲಾರರು. ನಿಮ್ಮ ಒಡೆಯನ ಕಡೆಯಿಂದ ಇರುವ ಸೂಕ್ತ ಪ್ರತಿಫಲವದು; ಬಹಳ ತಕ್ಕುದಾದ ಬಹುಮಾನವದು! {31-36}

رَّبِّ ٱلسَّمَـٰوَٲتِ وَٱلۡأَرۡضِ وَمَا بَيۡنَہُمَا ٱلرَّحۡمَـٰنِ‌ۖ لَا يَمۡلِكُونَ مِنۡهُ خِطَابً۬ا (٣٧) يَوۡمَ يَقُومُ ٱلرُّوحُ وَٱلۡمَلَـٰٓٮِٕكَةُ صَفًّ۬ا‌ۖ لَّا يَتَكَلَّمُونَ إِلَّا مَنۡ أَذِنَ لَهُ ٱلرَّحۡمَـٰنُ وَقَالَ صَوَابً۬ا (٣٨) ذَٲلِكَ ٱلۡيَوۡمُ ٱلۡحَقُّ‌ۖ فَمَن شَآءَ ٱتَّخَذَ إِلَىٰ رَبِّهِۦ مَـَٔابًا (٣٩) إِنَّآ أَنذَرۡنَـٰكُمۡ عَذَابً۬ا قَرِيبً۬ا يَوۡمَ يَنظُرُ ٱلۡمَرۡءُ مَا قَدَّمَتۡ يَدَاهُ وَيَقُولُ ٱلۡكَافِرُ يَـٰلَيۡتَنِى كُنتُ تُرَٲبَۢا (٤٠)

ಅವನು ಭೂಮಿ-ಆಕಾಶಗಳು ಮತ್ತು ಅವೆರಡರ ಮಧ್ಯೆ ಏನೆಲ್ಲ ಇವೆಯೋ ಅವೆಲ್ಲವುಗಳ ಒಡೆಯನು; ಮಹಾ ಕಾರುಣ್ಯವಂತನು! ಅವನ ವತಿಯಿಂದ ಏನನ್ನೂ ಹೇಳಲು ಯಾರಿಗೂ ಅಧಿಕಾರ ನೀಡಲಾಗಿಲ್ಲ. (ಪುನರುತ್ಥಾನದ) ಆ ದಿನ 'ಅರ್-ರೂಹ್' [ಅರ್ಥಾತ್: ಜಿಬ್ರೀಲ್, ಏಂಜಲ್ ಗೇಬ್ರಿಯಲ್] ಮತ್ತು ಇತರ 'ಮಲಕ್' ಗಳು ಸಾಲು ಸಾಲಾಗಿ [ಅಲ್ಲಾಹ್ ನ ಸನ್ನಿಧಿಯಲ್ಲಿ] ನಿಲ್ಲಲಿರುವರು. ಆ ಮಹಾ ಕಾರುಣ್ಯವಂತನು ಯಾರಿಗೆ ಅನುಮತಿ ನೀಡುವನೋ ಅವನ ಹೊರತು ಬೇರೆ ಯಾವೊಬ್ಬನೂ (ಅಂದು) ಮಾತನಾಡಲಾರನು; ಮತ್ತು ಅವನು ಸರಿಯಾದ ಮಾತನ್ನೇ ಹೇಳುವನು. ಅದಂತೂ (ಅನಿವಾರ್ಯವಾಗಿ) ಬಂದೇ ತೀರುವ ದಿನ; ಆದ್ದರಿಂದ ಇಷ್ಟವಿದ್ದವನು ತನ್ನ ಒಡೆಯನ ಬಳಿ ಒಂದು ಆಸರೆಯನ್ನು (ಕೂಡಲೇ) ಮಾಡಿಕೊಳ್ಳಲಿ! ಖಂಡಿತವಾಗಿಯೂ ಸನ್ನಿಹಿತವಾಗಿ ಬಿಟ್ಟಿರುವ ಶಿಕ್ಷೆಯ ಕುರಿತು ನಾವು ನಿಮಗೆ ಮುನ್ನೆಚ್ಚರಿಕೆ ನೀಡಿದ್ದೇವೆ. ಅಂದು ಮನುಷ್ಯನು ತಾನು ಕೈಯಾರೆ ಸಂಪಾದಿಸಿ ಕಳಿಸಿದ್ದೆಲ್ಲವನ್ನೂ ಕಣ್ಣಾರೆ ಕಂಡುಕೊಳ್ಳುವನು; ಮತ್ತು (ಪುನರುತ್ಥಾನ ದಿನವನ್ನು) ಧಿಕ್ಕರಿಸಿದವನು – ಅಕಟಕಟಾ! ನಾನು (ಮನುಷ್ಯನಾಗುವುದಕ್ಕಿಂತ) ಮಣ್ಣಾಗಿರುತ್ತಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಎಂದು ಗೋಳಿಡುವನು! {37-40}

---- ---

ಅನುವಾದಿತ ಸೂರಃ ಗಳು

    Featured post

    ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...