تـرجمـة سورة الحِجْر من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت
سـهل الفهـم من غيـر الـرجـوع إلى كتاب التفسيـر
| ಸೂರಃ ಅಲ್ ಹಿಜ್‌ರ್ | ಪವಿತ್ರ್ ಕುರ್‌ಆನ್ ನ 15 ನೆಯ ಸೂರಃ | ಇದರಲ್ಲಿ ಒಟ್ಟು 99 ಆಯತ್ ಗಳು ಇವೆ |
ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!
الر ۚ تِلْكَ آيَاتُ الْكِتَابِ وَقُرْآنٍ مُبِينٍ
ಅಲಿಫ್ - ಲಾಮ್ - ರಾ! ಇವು ಆ ದಿವ್ಯ ಗ್ರಂಥದ, (ಅಂದರೆ) ಸ್ಪಷ್ಟವಾದ ಕುರ್‌ಆನ್ ನ ವಚನಗಳಾಗಿವೆ! {1}
٢ رُبَمَا يَوَدُّ الَّذِينَ كَفَرُوا لَوْ كَانُوا مُسْلِمِينَ
✽14✽ [ಭೂಲೋಕದಲ್ಲಿ ಪೈಗಂಬರರ ಬೋಧನೆಗಳನ್ನು] ಧಿಕ್ಕರಿಸಿದ ಜನರು, ತಾವು [ಪೈಗಂಬರರನ್ನು ಅನುಸರಿಸಿ] ಮುಸ್ಲಿಮರಾಗಿದ್ದಿದ್ದರೆ ಅದೆಷ್ಟು ಒಳ್ಳೆಯದಿತ್ತು ಎಂದು ಖೇದ ಪಡುವ ಸಮಯವೂ ಬರಲಿದೆ. {2}
٣ ذَرْهُمْ يَأْكُلُوا وَيَتَمَتَّعُوا وَيُلْهِهِمُ الْأَمَلُ ۖ فَسَوْفَ يَعْلَمُونَ
ಪೈಗಂಬರರೇ, ಇನ್ನು ಅವರನ್ನು ಬಿಟ್ಟು ಬಿಡಿರಿ; ಅವರು ತಿನ್ನುತ್ತಾ ಕುಡಿಯುತ್ತಾ ಮೋಜು ಮಾಡುತ್ತಿರಲಿ. [ಪರಲೋಕದ ಕುರಿತಾದ] ಹುಸಿ ನಿರೀಕ್ಷೆಗಳಲ್ಲಿ ಅವರು ಮೈಮರೆತಿರಲಿ ಬಿಡಿ. ಶೀಘ್ರದಲ್ಲೇ ಅವರಿಗೆ ಗೊತ್ತಾಗಲಿದೆ! {3}
٤ وَمَا أَهْلَكْنَا مِنْ قَرْيَةٍ إِلَّا وَلَهَا كِتَابٌ مَعْلُومٌ
ಒಂದು ನಿರ್ಧಿಷ್ಟ ಕಾನೂನಿನ ಪ್ರಕಾರವಲ್ಲದೆ ನಾವು ಯಾವ ನಾಡನ್ನೂ [ಈ ಹಿಂದೆ] ನಾಶ ಪಡಿಸಿದ್ದಿಲ್ಲ. {4}
٥ مَا تَسْبِقُ مِنْ أُمَّةٍ أَجَلَهَا وَمَا يَسْتَأْخِرُونَ
ಅದರಂತೆ, ತನ್ನ ನಿಗದಿತ ಅವಧಿಗಿಂತ ಮುಂಚಿತವಾಗಿ ನಾಶವಾಗಲು ಅಥವಾ ಅದಕ್ಕಿಂತ ಹೆಚ್ಚು ಕಾಲ ಬದುಕುಳಿಯಲು ಯಾವ ಜನತೆಗೂ ಸಾಧ್ಯವಾಗದು. {5}
٦ وَقَالُوا يَا أَيُّهَا الَّذِي نُزِّلَ عَلَيْهِ الذِّكْرُ إِنَّكَ لَمَجْنُونٌ
ಅವರು ಹೇಳ ತೊಡಗಿದರು: ಕುರ್‌ಆನ್ ನೀಡಲ್ಪಟ್ಟಿದೆ (ಎಂಬ ಭ್ರಮೆಯಲ್ಲಿರುವ) ಓ ಮನುಷ್ಯನೇ, ನೀನೊಬ್ಬ ಹುಚ್ಚನೇ ಸರಿ. {6}
٧ لَوْ مَا تَأْتِينَا بِالْمَلَائِكَةِ إِنْ كُنْتَ مِنَ الصَّادِقِينَ
ಒಂದು ವೇಳೆ ನೀನು ಸತ್ಯವಂತನಾಗಿದ್ದರೆ ಮಲಕ್ ಗಳನ್ನು ನಮ್ಮ ಬಳಿಗೆ ಏಕೆ ಕರೆತಂದಿಲ್ಲ? {7}
٨ مَا نُنَزِّلُ الْمَلَائِكَةَ إِلَّا بِالْحَقِّ وَمَا كَانُوا إِذًا مُنْظَرِينَ
ಸರಿಯಾದ ಕಾರಣವಿಲ್ಲದೆ ನಾವು ಯಾವತ್ತೂ ಧರೆಗೆ ಮಲಕ್ ಗಳನ್ನು ಇಳಿಸುವುದಿಲ್ಲ; ಹಾಗೆ ಇಳಿಸಿದಾಗ ಈ ಜನರಿಗೆ (ಮಲಕ್ ಗಳನ್ನು ನೋಡಲು) ಕಾಲಾವಕಾಶವೂ ಇರಲಾರದು. {8}
٩ إِنَّا نَحْنُ نَزَّلْنَا الذِّكْرَ وَإِنَّا لَهُ لَحَافِظُونَ
ಹೌದು, ಈ ಬೋಧನಾ ಗ್ರಂಥವನ್ನು ನಿಮಗೆ ಇಳಿಸಿ ಕೊಟ್ಟವರೂ ಮತ್ತದನ್ನು ಕಾಪಾಡುವವರೂ ನಾವೇ ಆಗಿರುವೆವು. {9}
١٠ وَلَقَدْ أَرْسَلْنَا مِنْ قَبْلِكَ فِي شِيَعِ الْأَوَّلِينَ
ಪೈಗಂಬರರೇ, ನಿಮಗಿಂತ ಮುಂಚಿನ ಕಾಲದಲ್ಲಿ ಗತಿಸಿಹೋದ ಹಲವು ಜನವಿಭಾಗಗಳತ್ತ ಸಹ ನಾವು ದೂತರುಗಳನ್ನು ಕಳುಹಿಸಿದ್ದೆವು. {10}
١١ وَمَا يَأْتِيهِمْ مِنْ رَسُولٍ إِلَّا كَانُوا بِهِ يَسْتَهْزِئُونَ
ಆದರೆ ಅಂತಹ ದೂತರುಗಳು ಅವರ ಬಳಿಗೆ ಬಂದಾಗಲೆಲ್ಲ ಅವರು ಆ ದೂತರುಗಳನ್ನು ಗೇಲಿ ಮಾಡದೆ ಬಿಟ್ಟಿರಲಿಲ್ಲ. {11}
١٢ كَذَٰلِكَ نَسْلُكُهُ فِي قُلُوبِ الْمُجْرِمِينَ
ಹಾಗೆ ನಾವು ಅದನ್ನು (ಕುರ್‌ಆನ್ ನ ಬೋಧನೆಯನ್ನು) ಈ ದುಷ್ಕರ್ಮಿಗಳ ಹೃದಯಗಳ ಮುಖಾಂತರ ಹಾದು ಹೋಗುವಂತೆ ಮಾಡಿದೆವು! [ಅರ್ಥಾತ್ ಗೇಲಿ ಮಾಡುವ ಹೃದಯಗಳಿಗೆ ಅದರಿಂದ ಯಾವ ಪ್ರಯೋಜವೂ ಆಗದು.] {12}
١٣ لَا يُؤْمِنُونَ بِهِ ۖ وَقَدْ خَلَتْ سُنَّةُ الْأَوَّلِينَ
ಇವರಂತೂ ಅದನ್ನು (ಅರ್ಥಾತ್ ಕುರ್‌ಆನ್ ನ ಬೋಧನೆಯನ್ನು) ನಂಬುವವರಲ್ಲ. ಇವರ ಪೂರ್ವಜರ ಆಚಾರ-ವಿಚಾರವೂ ಅದೇ ರೀತಿಯಲ್ಲಿ ಕಳೆದು ಹೂಗಿತ್ತು. {13}
١٤ وَلَوْ فَتَحْنَا عَلَيْهِمْ بَابًا مِنَ السَّمَاءِ فَظَلُّوا فِيهِ يَعْرُجُونَ
[ಕುರ್‌ಆನ್ ನ ಸತ್ಯತೆಯನ್ನು ಮನವರಿಕೆ ಮಾಡಲು] ಒಂದು ವೇಳೆ ಆಕಾಶದ ಬಾಗಿಲುಗಳಲ್ಲಿ ಒಂದನ್ನು ನಾವು ಅವರಿಗಾಗಿ ತೆರೆದು ಬಿಟ್ಟರೆ ಅವರು ಅದರಲ್ಲಿ ಮೇಲೇರುತ್ತಾ ಸಾಗುತ್ತಿದ್ದರು... {14}
١٥ لَقَالُوا إِنَّمَا سُكِّرَتْ أَبْصَارُنَا بَلْ نَحْنُ قَوْمٌ مَسْحُورُونَ
[ಆದರೆ ಆಗಲೂ ಅವರು ಸತ್ಯವನ್ನು ಬಿಚ್ಚಿಡುತ್ತಾ] ಖಂಡಿತವಾಗಿ ನಮ್ಮ ಕಣ್ಣುಗಳಿಗೆ ಮಂಕು ಕವಿದಿದೆ; ಮಾತ್ರವಲ್ಲ, ನಮ್ಮ ಇಡೀ ಸಮೂಹವನ್ನು ಮಂತ್ರಮುಗ್ಧಗೊಳಿಸಲಾಗಿದೆ ಎಂದೇ ಹೇಳುತ್ತಿದ್ದರು. {15}
١٦ وَلَقَدْ جَعَلْنَا فِي السَّمَاءِ بُرُوجًا وَزَيَّنَّاهَا لِلنَّاظِرِينَ
ಹೌದು, ಆಕಾಶದಲ್ಲಿ ನಾವು ಹಲವು ಭದ್ರಕೋಟೆಗಳನ್ನು ನಿರ್ಮಿಸಿದ್ದೇವೆ ಹಾಗೂ ನೋಡುವವರಿಗಾಗಿ ಅದನ್ನು ಅಲಂಕೃತಗೊಳಿಸಿದ್ದೇವೆ. {16}
١٧ وَحَفِظْنَاهَا مِنْ كُلِّ شَيْطَانٍ رَجِيمٍ
ಮಾತ್ರವಲ್ಲ, [ನಮ್ಮಿಂದ ಶಪಿಸಲ್ಪಟ್ಟು] ತಿರಸ್ಕೃತನಾದ ಪ್ರತಿಯೂಬ್ಬ ಸೈತಾನನ (ಉಪಟಳದಿಂದ) ನಾವು ಅದಕ್ಕೆ ಕಾವಲು ಏರ್ಪಡಿಸಿದ್ದೇವೆ. {17}
١٨ إِلَّا مَنِ اسْتَرَقَ السَّمْعَ فَأَتْبَعَهُ شِهَابٌ مُبِينٌ
ಆದರೆ (ಸೈತಾನರಲ್ಲಿ) ಯಾರಾದರೂ ಕದ್ದಾಲಿಸಲು ಪ್ರಯತ್ನಿಸುವ ಹೊರತು; ಅವರನ್ನೂ ಪ್ರಜ್ವಲಿಸುವ ಬೆಂಕಿಯುಂಡೆಗಳು ಹಿಂಬಾಲಿಸುತ್ತವೆ. {18}
١٩ وَالْأَرْضَ مَدَدْنَاهَا وَأَلْقَيْنَا فِيهَا رَوَاسِيَ وَأَنْبَتْنَا فِيهَا مِنْ كُلِّ شَيْءٍ مَوْزُونٍ
ಇನ್ನು ಭೂಮಿಯ ವಿಷಯ! [ಗೋಳಾಕಾರದ ಹೊರತಾಗಿಯೂ ಮನುಷ್ಯರ ಉಪಯೋಗಕ್ಕಾಗಿ] ನಾವದನ್ನು ಸವಿಸ್ತಾರವಾಗಿ ಹರಡಿದೆವು; ಭದ್ರವಾದ ಪರ್ವತಗಳನ್ನು ಅದರಲ್ಲಿ ಇಳಿಬಿಟ್ಟೆವು; ಸಕಲ ವಸ್ತುಗಳು ಅದರಲ್ಲಿ ಸಂತುಲಿತವಾಗಿ ಬೆಳೆಯುವಂತೆ ಮಾಡಿದೆವು. {19}
٢٠ وَجَعَلْنَا لَكُمْ فِيهَا مَعَايِشَ وَمَنْ لَسْتُمْ لَهُ بِرَازِقِينَ
ನಿಮಗಾಗಿ ಭೂಮಿಯಲ್ಲಿ ಜೀವನೋಪಾಯದ ಆಕರಗಳನ್ನು ಉಂಟು ಮಾಡಿದೆವು. ಮಾತ್ರವಲ್ಲ, ಯಾರಿಗೆ ನೀವು ಅನ್ನ ಕೊಡುವುದಿಲ್ಲವೋ ಅಂತಹವರಿಗೂ ಅದರಲ್ಲಿ ಅನ್ನದ ವ್ಯವಸ್ಥೆ ಉಂಟು ಮಾಡಿದೆವು. {20}
٢١ وَإِنْ مِنْ شَيْءٍ إِلَّا عِنْدَنَا خَزَائِنُهُ وَمَا نُنَزِّلُهُ إِلَّا بِقَدَرٍ مَعْلُومٍ
(ಜೀವನೋಪಾಯದ ಸಾಧನಗಳೂ ಸೇರಿದಂತೆ) ವಸ್ತು ಯಾವುದೇ ಆಗಿರಲಿ, ಅದು ದೊಡ್ಡ ಭಂಡಾರದ ರೂಪದಲ್ಲಲ್ಲದೆ ನಮ್ಮ ಬಳಿ ಇರುವುದಿಲ್ಲ. ಹಾಗಿದ್ದರೂ ಒಂದು ಗೊತ್ತುಪಡಿಸಿದ ಅಳತೆಯ ಪ್ರಕಾರ ಮಾತ್ರ ನಾವು ಅದನ್ನು ಒದಗಿಸುತ್ತಿರುತ್ತೇವೆ! {21}
٢٢ وَأَرْسَلْنَا الرِّيَاحَ لَوَاقِحَ فَأَنْزَلْنَا مِنَ السَّمَاءِ مَاءً فَأَسْقَيْنَاكُمُوهُ وَمَا أَنْتُمْ لَهُ بِخَازِنِينَ
ಪರಾಗ ಸಾಗಿಸುವ ಗಾಳಿನ್ನು ನಾವೇ ಕಳುಹಿಸುತ್ತೇವೆ. ನಾವೇ ಆಕಾಶದಿಂದ ಮಳೆ ಸುರಿಸುತ್ತೇವೆ. ನಂತರ [ನಿಮ್ಮ ಕೃಷಿಭೂಮಿಗೂ ಜಾನುವಾರುಗಳಿಗೂ] ನಿಮಗೂ ಅದನ್ನು ನಾವೇ ಕುಡಿಸುತ್ತೇವೆ. ಆದರೆ [ಅಷ್ಟು ದೊಡ್ಡ ಪ್ರಮಾಣದಲ್ಲಿ] ಅದನ್ನು ದಾಸ್ತಾನುಗೊಳಿಸುವವರು ನೀವಲ್ಲ! {22}
٢٣ وَإِنَّا لَنَحْنُ نُحْيِي وَنُمِيتُ وَنَحْنُ الْوَارِثُونَ
ಹೌದು, ಜೀವನ ನೀಡುವವರು ನಾವೇ ಎಂಬುದು ಸಂಶಯಾತೀತ; ನಾವೇ ಮೃತಪಡಿಸುವವರೂ ಸಹ. ಮಾತ್ರವಲ್ಲ, ಮರುಪಡೆಯುವವರೂ ಸಹ ನಾವೇ ಆಗಿರುವೆವು! {23}
٢٤ وَلَقَدْ عَلِمْنَا الْمُسْتَقْدِمِينَ مِنْكُمْ وَلَقَدْ عَلِمْنَا الْمُسْتَأْخِرِينَ
ನಿಮಗಿಂತ ಮುಂಚೆ ಗತಿಸಿದವರನ್ನೂ ನಾವು ಬಲ್ಲೆವು; ನಿಮ್ಮ ನಂತರ ಬರಲಿರುವವರ ಬಗ್ಗೆಯೂ ನಮಗೆ ತಿಳಿದಿದೆ. {24}
٢٥ وَإِنَّ رَبَّكَ هُوَ يَحْشُرُهُمْ ۚ إِنَّهُ حَكِيمٌ عَلِيمٌ
ಅವರೆಲ್ಲರನ್ನೂ ಈ ನಿಮ್ಮ ಒಡೆಯನು [ನಿರ್ಣಾಯಕ ದಿನ ವಿಚಾರಣೆಗಾಗಿ] ಒಟ್ಟುಗೂಡಿಸಲಿರುವನು. ಹೌದು, ಅವನು ಮಹಾ ಮೇಧಾವಿಯೂ ಎಲ್ಲಾ ಬಲ್ಲವನೂ ಆಗಿರುವನು. {25}
٢٦ وَلَقَدْ خَلَقْنَا الْإِنْسَانَ مِنْ صَلْصَالٍ مِنْ حَمَإٍ مَسْنُونٍ
ಹೌದು, ಹಳಸಿದ ಕಪ್ಪು ಕೆಸರುಮಣ್ಣಿನ ಒಣಗಾರೆಯಿಂದ ನಾವು ಮನುಷ್ಯ ವರ್ಗವನ್ನು ಸೃಷ್ಟಿಸಿದೆವು. {26}
٢٧ وَالْجَانَّ خَلَقْنَاهُ مِنْ قَبْلُ مِنْ نَارِ السَّمُومِ
ಮತ್ತು ಅದಕ್ಕಿಂತ ಮುಂಚೆಯೇ ಬೆಂಕಿಯ (ಹೊಗೆರಹಿತ) ಪ್ರಖರ ಜ್ವಾಲೆಯಿಂದ ನಾವು ಜಿನ್ನ್ ವರ್ಗವನ್ನು ಸೃಷ್ಟಿಸಿದ್ದೆವು. {27}
٢٨ وَإِذْ قَالَ رَبُّكَ لِلْمَلَائِكَةِ إِنِّي خَالِقٌ بَشَرًا مِنْ صَلْصَالٍ مِنْ حَمَإٍ مَسْنُونٍ
ಮತ್ತು (ಓ ಪೈಗಂಬರರೇ), ಹಳಸಿದ ಕಪ್ಪು ಕೆಸರುಮಣ್ಣಿನ ಒಣಗಾರೆಯಿಂದ ನಾನು ಮನುಷ್ಯನನ್ನು ಸೃಷ್ಟಿ ಮಾಡಲಿದ್ದೇನೆ ಎಂದು ಮಲಕ್ ಗಳೊಂದಿಗೆ ನಿಮ್ಮ ಪ್ರಭು ಹೇಳಿದ್ದ ಸಂದರ್ಭವನ್ನು (ಇವರಿಗೆ ನೆನಪಿಸಿ ಕೊಡಿ). {28}
٢٩ فَإِذَا سَوَّيْتُهُ وَنَفَخْتُ فِيهِ مِنْ رُوحِي فَقَعُوا لَهُ سَاجِدِينَ
ಹಾಗೆ [ಮನುಷ್ಯನನ್ನು ಸೃಷ್ಟಿಸಿ] ಸಕಲ ರೀತಿಯಲ್ಲಿ ಅವನನ್ನು ಪರಿಪೂರ್ಣಗೊಳಿಸಿ, ಅವನೊಳಗೆ ನಾನು ನನ್ನ ಚೇತನವನ್ನು ಊದಿದಾಕ್ಷಣ ನೀವೆಲ್ಲರೂ ಅವನ ಮುಂದೆ ಗೌರವಾರ್ಥ ಶಿರಬಾಗಬೇಕೆಂದೂ (ನಾವು ಮಲಕ್ ಗಳಿಗೆ ಆಜ್ಞಾಪಿಸಿದ ಸಂದರ್ಭವನ್ನೂ ನೆನಪಿಸಿರಿ). {29}
٣٠ فَسَجَدَ الْمَلَائِكَةُ كُلُّهُمْ أَجْمَعُونَ
ಅದರಂತೆ ಎಲ್ಲಾ ಮಲಕ್ ಗಳು (ಅಲ್ಲಾಹ್ ನ ಆಜ್ಞೆ ಪಾಲಿಸುತ್ತಾ) ಒಟ್ಟಾಗಿ ಶಿರಬಾಗಿದವು. {30}
٣١ إِلَّا إِبْلِيسَ أَبَىٰ أَنْ يَكُونَ مَعَ السَّاجِدِينَ
ಆದರೆ [ಜಿನ್ನ್ ವರ್ಗಕ್ಕೆ ಸೇರಿದ ಆ ಒಬ್ಬ] ಇಬ್ಲೀಸ್ ನ ಹೊರತು! ಶಿರಬಾಗುವವರ ಜೊತೆ ಸೇರಿಕೊಳ್ಳುಲು ಅವನು ಸಂಪೂರ್ಣವಾಗಿ ನಿರಾಕರಿಸಿದನು. {31}
٣٢ قَالَ يَا إِبْلِيسُ مَا لَكَ أَلَّا تَكُونَ مَعَ السَّاجِدِينَ
ಅಲ್ಲಾಹ್ ನು ಕೇಳಿದನು: ಓ ಇಬ್ಲೀಸ್, ನಿನಗೇನಾಯಿತು? ಶಿರಬಾಗಿದವರ ಜೊತೆ ನೀನೇಕೆ ಸೇರಲಿಲ್ಲ? {32}
٣٣ قَالَ لَمْ أَكُنْ لِأَسْجُدَ لِبَشَرٍ خَلَقْتَهُ مِنْ صَلْصَالٍ مِنْ حَمَإٍ مَسْنُونٍ
ಹಳಸಿದ ಕಪ್ಪು ಕೆಸರುಮಣ್ಣಿನಂತಹ [ಕೆಳದರ್ಜೆಯ ವಸ್ತುವಿನಿಂದ] ಉಂಟಾದ ಒಣಗಾರೆ ಬಳಸಿ ನೀನು ಸೃಷ್ಟಿಸಿದ ಈ ಮನುಷ್ಯನಿಗೆ ಶಿರಬಾಗುವವನು ನಾನಂತೂ ಅಲ್ಲ ಎಂದು ಇಬ್ಲೀಸ್ (ಅಹಂಕಾರದಿಂದ) ಉತ್ತರಿಸಿದನು. {33}
٣٤ قَالَ فَاخْرُجْ مِنْهَا فَإِنَّكَ رَجِيمٌ
ಅಲ್ಲಾಹ್ ನು ಹೇಳಿದನು: ಅಲ್ಲಿಂದ ಹೊರಬೀಳು! ನೀನು ಖಂಡೀತಾ ತಿರಸ್ಕೃತನಾಗಿರುವೆ! {34}
٣٥ وَإِنَّ عَلَيْكَ اللَّعْنَةَ إِلَىٰ يَوْمِ الدِّينِ
ಅಷ್ಟೇ ಅಲ್ಲ, ಕರ್ಮಗಳಿಗೆ ಪ್ರತಿಫಲ ನೀಡಲಾಗುವ ಆ ದಿನ ಬರುವ ತನಕವೂ ನಿನ್ನ ಮೇಲೆ ಶಾಪವು ಇದ್ದೇ ಇದೆ! {35}
٣٦ قَالَ رَبِّ فَأَنْظِرْنِي إِلَىٰ يَوْمِ يُبْعَثُونَ
ಇಬ್ಲೀಸ್ ಅಲ್ಲಾಹ್ ನೊಂದಿಗೆ ವಿನಂತಿಸಿಕೊಂಡನು: ನನ್ನ ಒಡೆಯನೇ, ಮನುಷ್ಯನು (ಮರಣಾನಂತರ) ಪುನರುತ್ಥಾನಗೊಳ್ಳುವ ದಿನದ ತನಕ ನನಗೆ [ಜೀವಿಸಿರಲು] ಕಾಲಾವಕಾಶ ನೀಡು. {36}
٣٧ قَالَ فَإِنَّكَ مِنَ الْمُنْظَرِينَ
ಅಲ್ಲಾಹ್ ನು ಉತ್ತರಿಸಿದನು: ನಿನಗೆ ಖಂಡೀತಾ ಕಾಲಾವಕಾಶ ನೀಡಲಾಗಿದೆ. {37}
٣٨ إِلَىٰ يَوْمِ الْوَقْتِ الْمَعْلُومِ
ಆದರೆ ಒಂದು ನಿರ್ಧಿಷ್ಟ ಅವಧಿಯ [ಅರ್ಥಾತ್ ಕಿಯಾಮತ್ ನ] ದಿನದ ವರೆಗೆ ಮಾತ್ರ (ನಿನಗೆ ಕಾಲಾವಕಾಶ ನೀಡಲಾಗಿದೆ)! {38}
٣٩ قَالَ رَبِّ بِمَا أَغْوَيْتَنِي لَأُزَيِّنَنَّ لَهُمْ فِي الْأَرْضِ وَلَأُغْوِيَنَّهُمْ أَجْمَعِينَ
ಇಬ್ಲೀಸ್ ಹೇಳಿದನು: ನನ್ನ ಒಡೆಯನೇ, ನೀನು ನನ್ನನ್ನು ದಾರಿಗೆಡಿಸಿದ ಕಾರಣಕ್ಕಾಗಿ ಭೂಮಿಯಲ್ಲಿ ನಾನು ಅವರಿಗೆ [ಅರ್ಥಾತ್ ಮನುಷ್ಯರಿಗೆ, ಎಲ್ಲ ಕೆಟ್ಟ ದಾರಿಯನ್ನು] ಅತ್ಯಂತ ಸುಂದರಗೊಳಿಸಿ ತೋರಿಸಲಿರುವೆನು; ಮಾತ್ರವಲ್ಲ ಅವರೆಲ್ಲರನ್ನು (ಆ ಮೂಲಕ) ದಾರಿಗೆಡಿಸಿ ಬಿಡುವೆನು. {39}
٤٠ إِلَّا عِبَادَكَ مِنْهُمُ الْمُخْلَصِينَ
ಆದರೆ ಅವರ ಪೈಕಿ ನಿನ್ನ ಪ್ರಾಮಣಿಕ ಉಪಾಸಕರ ಹೊರತು! {40}
٤١ قَالَ هَٰذَا صِرَاطٌ عَلَيَّ مُسْتَقِيمٌ
ಅಲ್ಲಾಹ್ ನು ಹೇಳಿದನು: ಅದುವೇ [ಅರ್ಥಾತ್ ಆ ಪ್ರಾಮಾಣೆಕತೆಯ] ಮಾರ್ಗವೇ ನನ್ನೆಡೆಗೆ ಇರುವ ನೇರವಾದ ಮಾರ್ಗ. {41}
٤٢ إِنَّ عِبَادِي لَيْسَ لَكَ عَلَيْهِمْ سُلْطَانٌ إِلَّا مَنِ اتَّبَعَكَ مِنَ الْغَاوِينَ
ನಿಜವೇನೆಂದರೆ, ನನ್ನ (ಪ್ರಾಮಾಣಿಕ) ಉಪಾಸಕರ ಮೇಲೆ ನಿನ್ನ ಯಾವ ಗಟ್ಟಿತನವೂ ನಡೆಯಲಾರದು - ಹೌದು, ದಾರಿಗೆಟ್ಟು ನಿನ್ನ ಅನುಯಾಯಿಗಳಾದವರ ಮೇಲೆ ಹೊರತು! {42}
٤٣ وَإِنَّ جَهَنَّمَ لَمَوْعِدُهُمْ أَجْمَعِينَ
ನಿಜವಾಗಿ ಅವರೆಲ್ಲರೂ ಒಟ್ಟಾಗಿ ಸಂಧಿಸಲಿರುವ ಸ್ಥಳವೇ ನರಕ! {43}
٤٤ لَهَا سَبْعَةُ أَبْوَابٍ لِكُلِّ بَابٍ مِنْهُمْ جُزْءٌ مَقْسُومٌ
ಅದಕ್ಕೆ ಏಳು ಬಾಗಿಲುಗಳಿವೆ. ಪ್ರತಿ ಬಾಗಿಲಿಗೂ ಅವರ ಒಂದು ವಿಭಾಗವನ್ನು ಗೊತ್ತುಪಡಿಸಲಾಗಿದೆ. {44}
٤٥ إِنَّ الْمُتَّقِينَ فِي جَنَّاتٍ وَعُيُونٍ
ಹೌದು, [ನನ್ನ ಆದೇಶಗಳ ಉಲ್ಲಂಘನೆಯಾಗದಂತೆ ಜೀವನದಲ್ಲಿ] ಜಾಗರೂಕತೆ ಪಾಲಿಸಿದವರು ಉದ್ಯಾನಗಳೂ ಕಾರಂಜಿಗಳೂ ಇರುವ (ಸ್ವರ್ಗವನ್ನು) ಪ್ರವೇಶಿಸಲಿರುವರು. {45}
٤٦ ادْخُلُوهَا بِسَلَامٍ آمِنِينَ
ನೀವು ಭಯಮುಕ್ತರಾಗಿ ಶಾಂತಿ-ಸಮಾಧಾನದೊಂದಿಗೆ ಅದರೊಳಗೆ ಪ್ರವೇಶಿಸಿಕೊಳ್ಳಿರಿ (ಎಂದು ಅವರೊಂದಿಗೆ ಹೇಳಲಾಗುವುದು). {46}
٤٧ وَنَزَعْنَا مَا فِي صُدُورِهِمْ مِنْ غِلٍّ إِخْوَانًا عَلَىٰ سُرُرٍ مُتَقَابِلِينَ
ಅವರ ಹೃದಯಗಳಲ್ಲಿ ಈರ್ಷೆ ಅಸೂಯೆಗಳೇನಾದರೂ ಉಳಿದಿದ್ದರೆ ನಾವದನ್ನು ನಿವಾರಿಸಿ ಬಿಡುವೆವು; ಮತ್ತು ಆಸನಗಳಲ್ಲಿ ಅವರೆಲ್ಲ ಮುಖಾಮುಖಿಯಾಗಿ (ಏಕೋದರ) ಸಹೋದರರಂತೆ ಅಲ್ಲಿ ಕುಳಿತುಕೊಳ್ಳಲಿರುವರು. {47}
٤٨ لَا يَمَسُّهُمْ فِيهَا نَصَبٌ وَمَا هُمْ مِنْهَا بِمُخْرَجِينَ
ಅಲ್ಲಿ ಯಾವುದೇ ರೀತಿಯ ಆಯಾಸ ದಣಿವುಗಳು ಅವರನ್ನು ಬಾಧಿಸಲಾರದು; ಅಲ್ಲಿಂದ ಹೊರ ಹಾಕಲ್ಪಡುವ ಸನ್ನಿವೇಶವೂ ಅವರಿಗೆ ಬರುವುದಿಲ್ಲ. {48}
٤٩ نَبِّئْ عِبَادِي أَنِّي أَنَا الْغَفُورُ الرَّحِيمُ
ಪೈಗಂಬರರೇ, ನಿಜವಾಗಿ ನಾನು ಬಹಳವಾಗಿ ಕ್ಷಮಿಸುವವನೂ ಅವಿರತವಾಗಿ ಸಹಾನುಭೂತಿ ತೋರುವವನೂ ಆಗಿರುತ್ತೇನೆ ಎಂದು ನನ್ನ ಎಲ್ಲಾ ಉಪಾಸಕರಿಗೂ ನೀವು ತಿಳಿಸಿರಿ. {49}
٥٠ وَأَنَّ عَذَابِي هُوَ الْعَذَابُ الْأَلِيمُ
ಅಂತೆಯೇ, (ತಪ್ಪಿತಸ್ಥರಿಗೆ) ನನ್ನ ಶಿಕ್ಷೆಯೂ ಸಹ ಖಂಡಿತವಾಗಿ ತುಂಬಾ ನೋವುಂಟು ಮಾಡುವ ಶಿಕ್ಷೆಯಾಗಿರುತ್ತದೆ! {50}
٥١ وَنَبِّئْهُمْ عَنْ ضَيْفِ إِبْرَاهِيمَ
ಇನ್ನು ಪೈಗಂಬರರೇ, [ಇವರು ಆಗಾಗ್ಗೆ ಮಲಕ್ ಗಳ ಕುರಿತು ಕೇಳುತ್ತಿದ್ದಾರೆ. ಆದ್ದರಿಂದ] ಪ್ರವಾದಿ ಇಬ್ರಾಹೀಮ್ ರ ಬಳಿಗೆ ಬಂದ [ಮಲಕ್ ಗಳಾದ ಆ] ಅತಿಥಿಗಳ ಬಗ್ಗೆಯೂ ನೀವು ಇವರಿಗೆ ತಿಳಿಸಿ ಬಿಡಿ. {51}
٥٢ إِذْ دَخَلُوا عَلَيْهِ فَقَالُوا سَلَامًا قَالَ إِنَّا مِنْكُمْ وَجِلُونَ
ಅತಿಥಿಗಳು ಪ್ರವೇಶಿಸಿ 'ಸಲಾಮಾ' [ಅರ್ಥಾತ್ ನಿಮಗೆಲ್ಲ ಶಾಂತಿಯಾಗಲಿ] ಎಂದು ಹೇಳಿದಾಗ, [ಆ ಆಗಂತುಕರ ಅಪರಿಚಿತ ವರ್ತನೆಯ ಕಾರಣ ಅತಂಕಿತರಾಗಿ] ಇಬ್ರಾಹೀಮ್ ರು ನಮಗಂತೂ ನಿಮ್ಮಿಂದ ಗಾಬರಿಯಾಗಿದೆ ಎಂದು ಹೇಳಿದರು. {52}
٥٣ قَالُوا لَا تَوْجَلْ إِنَّا نُبَشِّرُكَ بِغُلَامٍ عَلِيمٍ
ಅವರು ಹೇಳಿದರು: ನೀವು ಗಾಬರಿಯಾಗುವ ಅಗತ್ಯವಿಲ್ಲ. ನಾವು ನಿಮಗೆ ಒಬ್ಬ ವಿಶೇಷವಾದ ಅರಿವುಳ್ಳ ಪುತ್ರನುಂಟಾಗುವ ಬಗ್ಗೆ ಶುಭ ಸಮಾಚಾರ ನೀಡಲು ಬಂದಿರುವೆವು. {53}
٥٤ قَالَ أَبَشَّرْتُمُونِي عَلَىٰ أَنْ مَسَّنِيَ الْكِبَرُ فَبِمَ تُبَشِّرُونَ
ಇಬ್ರಾಹೀಮ್ ರು ಪ್ರತಿಕ್ರಿಯಿಸಿದರು: ನನಗೆ ವೃದ್ಧಾಪ್ಯ ಬಾಧಿಸಿರಿವಾಗ ನೀವು ನನಗೆ (ಪತ್ರ ಜನಿಸಲಿರುವ ಬಗ್ಗೆ) ಶುಭ ಸಮಾಚಾರ ನೀಡುವುದೇ? ಯಾವ ಆಧಾರದಲ್ಲಿ ನೀವು ಶುಭ ಸಮಾಚಾರ ನೀಡುತ್ತಿರುವಿರಿ! {54}
٥٥ قَالُوا بَشَّرْنَاكَ بِالْحَقِّ فَلَا تَكُنْ مِنَ الْقَانِطِينَ
[ಅತಿಥಿಗಳ ರೂಪದಲ್ಲಿ ಬಂದ ಮಲಕ್ ಗಳು] ಉತ್ತರಿಸಿದರು: ನಾವು ಒಂದು ವಾಸ್ತವ್ಯದ ಕುರಿತು ನಿಮಗೆ ಶುಭ ಸುದ್ದಿ ನೀಡಿರುತ್ತೇವೆ; ಆದ್ದರಿಂದ ನಿರಾಶರಾದವರ ಯಾದಿಗೆ ನೀವು ಸೇರದಿರಿ! {55}
٥٦ قَالَ وَمَنْ يَقْنَطُ مِنْ رَحْمَةِ رَبِّهِ إِلَّا الضَّالُّونَ
ಇಬ್ರಾಹೀಮ್ ರು ಹೇಳಿದರು: [ಛೆ! ನಾನೇಕೆ ನಿರಾಶನಾಗಬೇಕು?!] ದಾರಿಗೆಟ್ಟವರನ್ನು ಬಿಟ್ಟು ಬೇರೆ ಯಾರಾದರೂ ತನ್ನ ಒಡೆಯನ ಅನುಗ್ರಹದ ಬೆಗ್ಗೆ ನಿರಾಶೆ ಹೊಂದುವನೇ? {56}
٥٧ قَالَ فَمَا خَطْبُكُمْ أَيُّهَا الْمُرْسَلُونَ
ಇಬ್ರಾಹೀಮ್ ರು (ಮಲಕ್ ಗಳೊಡನೆ ಪುನಃ) ಕೇಳಿದರು: ದೂತರುಗಳೇ, (ಆ ಶುಭ ಸುದ್ಧಿಯನ್ನು ಬಿಟ್ಟರೆ) ಬೇರೆ ಯಾವ ದೌತ್ಯದೊಂದಿಗೆ ನೀವು ಬಂದಿರುವಿರಿ? {57}
٥٨ قَالُوا إِنَّا أُرْسِلْنَا إِلَىٰ قَوْمٍ مُجْرِمِينَ
ಮಲಕ್ ಗಳು ಉತ್ತರಿಸಿದರು: ಒಂದು ಮಹಾ ತಪ್ಪಿತಸ್ಥ ಜನಾಂಗವನ್ನು [ಅಲ್ಲಾಹ್ ನ ಅಪ್ಪಣೆಯಂತೆ ನಾಶಪಡಿಸುವುದಕ್ಕಾಗಿ] ನಮ್ಮನ್ನು ಅವರೆಡೆಗೆ ಕಳುಹಿಸಲಾಗಿದೆ. {58}
٥٩ إِلَّا آلَ لُوطٍ إِنَّا لَمُنَجُّوهُمْ أَجْمَعِينَ
[ಆ ಜನಾಂಗದವರ ಪ್ರವಾದಿಯಾದ] ಲೂತ್ ರ ಮನೆಯವರು ಅದಕ್ಕೆ ಹೊರತಾಗಿದ್ದಾರೆ. ಅವರೆಲ್ಲರನ್ನು ಖಂಡಿತವಾಗಿ ನಾವು ರಕ್ಷಿಸಲಿದ್ದೇವೆ. {59} ((ಟಿಪ್ಪಣಿ 59 ನೋಡಿ))
٦٠ إِلَّا امْرَأَتَهُ قَدَّرْنَا ۙ إِنَّهَا لَمِنَ الْغَابِرِينَ
ಆದರೆ ಪ್ರವಾದಿ ಲೂತ್ ರ ಪತ್ನಿಯ ಹೊರತು! [ಅಪರಾಧಿಗಳೊಂದಿಗೆ ಆಕೆ ಕೈಜೋಡಿಸಿದ್ದ ಕಾರಣಕ್ಕಾಗಿ] ಆಕೆಯು ಹಿಂದುಳಿದವರಲ್ಲಿ [ಅರ್ಥಾತ್ ನಾಶವಾಗಲಿರುವವರ ಜೊತೆ ಉಳಿದು ನಾಶವಾಗಬೇಕೆಂಬುದು] ನಮ್ಮ ತೀರ್ಮಾನವಾಗಿದೆ [ಎಂದು ಅಲ್ಲಾಹ್ ನ ತೀರ್ಮಾನವನ್ನೂ ಮಲಕ್ ಗಳು ಇಬ್ರಾಹೀಮ್ ರಿಗೆ ತಿಳಿಸಿದರು]. {60}
٦١ فَلَمَّا جَاءَ آلَ لُوطٍ الْمُرْسَلُونَ
ನಂತರ ಆ ಮಲಕ್ ಗಳು ಪ್ರವಾದಿ ಲೂತ್ ರ ಜನತೆಯ ಬಳಿಗೆ ತಲುಪಿದರು. {61}
٦٢ قَالَ إِنَّكُمْ قَوْمٌ مُنْكَرُونَ
ಆಗ ಲೂತ್ ರು, ನಿಮ್ಮನ್ನು ಒಂದು ಅಪರಿಚಿತರ ಗುಂಪಿನಂತೆ ಕಾಣುತ್ತಿದೆ ಎಂದು ಹೇಳಿದರು. {62}
٦٣ قَالُوا بَلْ جِئْنَاكَ بِمَا كَانُوا فِيهِ يَمْتَرُونَ
ಅದಕ್ಕೆ ಮಲಕ್ ಗಳು ಉತ್ತರಿಸಿದರು: ಇಲ್ಲ, ಈ (ನಿಮ್ಮ) ಜನರು ಯಾವುದರ ಕುರಿತು ಸಂದೇಹ ಪಡುತ್ತಿದ್ದರೋ ಅದನ್ನೇ [ಅರ್ಥಾತ್ ಆ ವಾಗ್ದಾನಿತ ಶಿಕ್ಷೆಯನ್ನೇ] ನಾವು ನಿಮ್ಮಲ್ಲಿಗೆ ತಂದಿರುವೆವು! {63}
٦٤ وَأَتَيْنَاكَ بِالْحَقِّ وَإِنَّا لَصَادِقُونَ
ಹೌದು, ನಾವು ಸರಿಯಾದುದನ್ನೇ ನಿಮ್ಮ ಬಳಿಗೆ ತಂದಿರುವೆವು; ಮತ್ತು ನಾವು ನುಡಿಯುತ್ತಿರುವುದೂ ಸತ್ಯವೇ! {64}
٦٥ فَأَسْرِ بِأَهْلِكَ بِقِطْعٍ مِنَ اللَّيْلِ وَاتَّبِعْ أَدْبَارَهُمْ وَلَا يَلْتَفِتْ مِنْكُمْ أَحَدٌ وَامْضُوا حَيْثُ تُؤْمَرُونَ
ಆದ್ದರಿಂದ ನೀವು ರಾತ್ರಿಯ (ಅಂತಿಮ) ಯಾಮದಲ್ಲಿ ನಿಮ್ಮ ಮನೆಯವರೊಂದಿಗೆ ಇಲ್ಲಿಂದ ಹೊರಟು ಹೋಗಿರಿ. ಮತ್ತು ನೀವು ಅವರ ಹಿಂದೆ ಹಿಂದೆ ನಡೆಯಿರಿ. ನಿಮ್ಮಲ್ಲಿ ಒಬ್ಬರೂ ಸಹ ಹಿಂದಿರುಗಿ ನೋಡಬಾರದು. ಯಾವ ಕಡೆಗೆ ಹೋಗಲು ನಿಮಗೆ ಆದೇಶಿಸಲಾಗಿದೆಯೋ, ನೇರವಾಗಿ ಅತ್ತವೇ ಸಾಗಿರಿ. {65}
٦٦ وَقَضَيْنَا إِلَيْهِ ذَٰلِكَ الْأَمْرَ أَنَّ دَابِرَ هَٰؤُلَاءِ مَقْطُوعٌ مُصْبِحِينَ
(ಅಪರಾಧಿಗಳಾದ ಈ ನಾಡಿನ) ಜನರ ಮೂಲವನ್ನೇ ಬೆಳಗಾಗುವ ಹೊತ್ತಿಗೆ ಕಿತ್ತೊಗೆಯಲಾಗುವುದು ಎಂಬ ನಮ್ಮ ತೀರ್ಮಾನವನ್ನು ಪ್ರವಾದಿ ಲೂತ್ ರಿಗೆ ನಾವು (ವಹೀ ಮೂಲಕ) ತಿಳಿಸಿದೆವು! {66}
٦٧ وَجَاءَ أَهْلُ الْمَدِينَةِ يَسْتَبْشِرُونَ
[ಇದಕ್ಕಿಂತ ಮುಂಚೆ] ನಾಡಿನ ಜನರು [ಲೂತ್ ರ ಮನೆಗೆ ಆಗಮಿಸಿದ್ದ ಹರೆಯದ ತರುಣರತ್ತ ಆಕರ್ಷಿತರಾಗಿ ಹುಚ್ಚೆದ್ದು] ಸಂಭ್ರಮಿಸುತ್ತಾ ಧಾವಿಸಿ ಬಂದರು. {67}
٦٨ قَالَ إِنَّ هَٰؤُلَاءِ ضَيْفِي فَلَا تَفْضَحُونِ
ಲೂತ್ ರು ಹೇಳಿದರು: ಜನರೇ, ನಿಜ ಸಂಗತಿಯೆಂದರೆ ಇವರೆಲ್ಲ ನನ್ನ ಅತಿಥಿಗಳಾಗಿರುವರು. [ಹಾಗಿರುವಾಗ, ನಿಮ್ಮ ಇಂತಹ ದುರ್ನಡತೆಯಿಂದ] ನನ್ನನ್ನು ಮುಜುಗರಕ್ಕೆ ಒಳಪಡಿಸಬೇಡಿರಿ. {68}
٦٩ وَاتَّقُوا اللَّهَ وَلَا تُخْزُونِ
ನೀವು ಅಲ್ಲಾಹ್ ನ ಭಯವಿರಿಸಿಕೊಳ್ಳಿರಿ. ಮತ್ತು ನನಗೆ ಅವಮಾನವಾಗುವಂತೆ ವರ್ತಿಸದಿರಿ. {69}
٧٠ قَالُوا أَوَلَمْ نَنْهَكَ عَنِ الْعَالَمِينَ
[ಲಂಪಟರಾದ] ನಾಡಜನರು ಪ್ರವಾದಿ ಲೂತ್ ರನ್ನು ಪ್ರಶ್ನಿಸತೊಡಗಿದರು: (ನಾಡು-ಹೊರನಾಡಿನ) ಸಕಲ ಜನರ ಪರ ವಕಾಲತ್ತಿಗೆ ನಿಲ್ಲ ಬಾರದೆಂದು ನಾವು ನಿಮ್ಮುನ್ನು ಈ ಮೊದಲೇ ತಡೆದಿರಲಿಲ್ಲವೇ? {70}
٧١ قَالَ هَٰؤُلَاءِ بَنَاتِي إِنْ كُنْتُمْ فَاعِلِينَ
ಅದಕ್ಕೆ ಲೂತ್ ರು ವಿನಂತಿಸಿದರು: [ಜನರೇ, ಈ ನನ್ನ ಅತಿಥಿಗಳೊಂದಿಗೆ ಲಂಪಟತನ ತೋರದಿರಿ]. ಹಾಗೇನಾದರೂ ಮಾಡಲೇ ಬೇಕಾದರೆ ಇಲ್ಲಿ (ಅರ್ಥಾತ್ ಈ ನಾಡಿನಲ್ಲಿ ವರಿಸಿಕೊಳ್ಳಲು) ನನ್ನ ಸುಪುತ್ರಿಯರಿದ್ದಾರೆ! {71} ((ಟಿಪ್ಪಣಿ 71 ನೋಡಿ))
٧٢ لَعَمْرُكَ إِنَّهُمْ لَفِي سَكْرَتِهِمْ يَعْمَهُونَ
(ಹೌದು, ಓ ಪೈಗಂಬರರೇ), ನಿಮ್ಮ ಜೀವಮಾನದಾಣೆ! ಈ ನಿಮ್ಮ ಜನರೂ ಸಹ (ಅವರಂತೆಯೇ) ತಮ್ಮದೇ ಉನ್ಮತ್ತತೆಯಲ್ಲಿ ಕುರುಡರಾಗಿ ಅಲೆಯುತ್ತಿದ್ದಾರೆಷ್ಟೆ! {72}
٧٣ فَأَخَذَتْهُمُ الصَّيْحَةُ مُشْرِقِينَ
ಹಾಗಿರುವಾಗ, ಬೆಳಗಾಗುತ್ತಿದ್ದಂತೆ ಪ್ರಚಂಡವಾದ ಸ್ಪೋಟನೆಯೊಂದು ಆ ಜನರನ್ನು ಹಿಡಿದೇ ಬಿಟ್ಟಿತು. {73}
٧٤ فَجَعَلْنَا عَالِيَهَا سَافِلَهَا وَأَمْطَرْنَا عَلَيْهِمْ حِجَارَةً مِنْ سِجِّيلٍ
ನಾವು ಆ ನಾಡನ್ನೇ ಬುಡಮೇಲುಗೊಳಿಸಿದೆವು; ಅವರ ಮೇಲೆ ಸುಡುವ ಆವೆಮಣ್ಣಿನ ಹೆಂಟೆಗಳ ಸುರಿಮಳೆಗೈದೆವು! {74}
٧٥ إِنَّ فِي ذَٰلِكَ لَآيَاتٍ لِلْمُتَوَسِّمِينَ
ನಿಜವಾಗಿ ನೋಡಿದರೆ ವಿವೇಚಿಸುವ ಜನರಿಗೆ ಇಂತಹ ವೃತ್ತಾಂತದಲ್ಲಿ ಸಾಕಷ್ಟು ದೃಷ್ಟಾಂತಗಳಿವೆ. {75}
٧٦ وَإِنَّهَا لَبِسَبِيلٍ مُقِيمٍ
ಮತ್ತು ಆ ಘಟನೆ ನಡೆದ ಪ್ರದೇಶವು (ಈ ಜನರು ಅತ್ತಿತ್ತ ಸಾಗುವ, ಇನ್ನೂ) ನೆಲೆನಿಂತಿತಿರುವ ಹೆದ್ದಾರಿಯಲ್ಲೇ ಇದೆ. {76}
٧٧ إِنَّ فِي ذَٰلِكَ لَآيَةً لِلْمُؤْمِنِينَ
ವಾಸ್ತವದಲ್ಲಿ ವಿಶ್ವಾಸಿಗಳಿಗೂ ಈ ಘಟನೆಯಲ್ಲಿ ಖಂಡಿತಾ ದೃಷ್ಟಾಂತವಿದೆ. {77}
٧٨ وَإِنْ كَانَ أَصْحَابُ الْأَيْكَةِ لَظَالِمِينَ
ಹಾಗೆಯೇ, ಐಕಃ ದ ನಿವಾಸಿಗಳು ಸಹ ಅನ್ಯಾಯವನ್ನೇ ಮಾಡಿದ್ದರು. {78}
٧٩ فَانْتَقَمْنَا مِنْهُمْ وَإِنَّهُمَا لَبِإِمَامٍ مُبِينٍ
ಅವರೊಂದಿಗೂ ನಾವು ಸೇಡಿನ ಕ್ರಮ ಕೈಗೊಂಡೆವು. (ಅನ್ಯಾಯವೆಸಗಿ ನಾಶಕ್ಕೀಡಾಗಿ ನಿರ್ಜನವಾದ) ಆ ಎರಡೂ ನಾಡುಗಳು ಎಲ್ಲರೂ ಬಲ್ಲ ಹೆದ್ದಾರಿಯಲ್ಲಿ (ಇಂದಿಗೂ) ಇವೆ. {79}
٨٠ وَلَقَدْ كَذَّبَ أَصْحَابُ الْحِجْرِ الْمُرْسَلِينَ
ಹಾಗೆಯೇ ಹಿಜ್‌ರ್ ನ ಜನರು ಸಹ (ನಮ್ಮಿಂದ ನಿಯೋಗಿಸಲ್ಪಟ್ಟ) ದೂತರನ್ನು ತಿರಸ್ಕರಿಸಿ ಬಿಟ್ಟಿದ್ದರು. {80}
٨١ وَآتَيْنَاهُمْ آيَاتِنَا فَكَانُوا عَنْهَا مُعْرِضِينَ
ಅವರಿಗೆ ನಾವು ಸಾಕಷ್ಟು ದೃಷ್ಟಾಂತಗಳನ್ನು ಒದಗಿಸಿದ್ದರೂ ಅವರು ತಾತ್ಸಾರ ತೋರಿ ಮುಖ ತಿರುಗಿಸಿಕೊಳ್ಳುತ್ತಿದ್ದರು. {81}
٨٢ وَكَانُوا يَنْحِتُونَ مِنَ الْجِبَالِ بُيُوتًا آمِنِينَ
ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸಿ ಅವುಗಳಲ್ಲಿ ನಿರ್ಭೀತರಾಗಿ ಅವರು ವಾಸ ಮಾಡುತ್ತಿದ್ದರು. {82}
٨٣ فَأَخَذَتْهُمُ الصَّيْحَةُ مُصْبِحِينَ
ಹಾಗಿರುವಾಗ, (ಒಂದು ದಿನ) ಅವರಿಗಿನ್ನೂ ಬೆಳಗಾಗುತ್ತಿದ್ದಂತೆ ಭಯಂಕರವಾಗಿ ಅಬ್ಬರಿಸಿದ ಆರ್ಭಟವೊಂದು ಅವರನ್ನು ವಶಕ್ಕೆ ತೆಗೆದುಕೊಂಡಿತ್ತು! {83}
٨٤ فَمَا أَغْنَىٰ عَنْهُمْ مَا كَانُوا يَكْسِبُونَ
ಆಗ ಅವರು ಸಂಪಾದಿಸಿಟ್ಟಿದ್ದ ಯಾವುದೂ ಅವರ ಯಾವ ಪ್ರಯೋಜನಕ್ಕೂ ಬಾರದೆ ಹೋಯಿತು. {84}
٨٥ وَمَا خَلَقْنَا السَّمَاوَاتِ وَالْأَرْضَ وَمَا بَيْنَهُمَا إِلَّا بِالْحَقِّ ۗ وَإِنَّ السَّاعَةَ لَآتِيَةٌ ۖ فَاصْفَحِ الصَّفْحَ الْجَمِيلَ
ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ನಡುವ ಇರುವ ಸಕಲ ಸೃಷ್ಟಿಜಾಲವನ್ನೂ ನಾವು ಅತ್ಯಂತ ಕರಾರುವಾಕ್ಕಾಗಿ ಸೃಷ್ಟಿ ಮಾಡಿರುವೆವು. (ಅದರ ಪ್ರಕಾರ ಈ ಭೂಮಿಗೆ) ಅಂತಿಮ ಘಳಿಗೆಯೊಂದು ಬಂದೇ ತೀರುವುದು. ಆದ್ದರಿಂದ (ಓ ಪೈಗಂಬರರೇ, ನಿಮ್ಮ ವತಿಯಿಂದ) ನೀವು ಜನರಿಗೆ ಕ್ಷಮೆ ನೀಡುತ್ತಲಿರಿ; ಅದು ಅತ್ಯಂತ ಸೊಗಸಾದ ಕ್ಷಮೆಯಾಗಿರಲಿ. {85}
٨٦ إِنَّ رَبَّكَ هُوَ الْخَلَّاقُ الْعَلِيمُ
ಹೌದು, ನಿಮ್ಮ ಒಡೆಯನು ನಿಷ್ಣಾತ ಸೃಷ್ಟಿಕರ್ತನೂ (ತನ್ನ ಸೃಷ್ಟಿಯ ಬಗ್ಗೆ ಎಲ್ಲವನ್ನೂ) ಚೆನ್ನಾಗಿ ಬಲ್ಲವನೂ ಆಗಿರುವನು. {86}
٨٧ وَلَقَدْ آتَيْنَاكَ سَبْعًا مِنَ الْمَثَانِي وَالْقُرْآنَ الْعَظِيمَ
ನಿಶ್ಚಯವಾಗಿಯೂ, ಪುರಾವರ್ತಿಸಲ್ಪಡುವ [ಸೂರಃ ಅಲ್ ಫಾತಿಹಃ ದ] ಏಳು ವಚನಗಳನ್ನು ಹಾಗೂ (ಯಥೇಚ್ಛವಾಗಿ ಓದಲ್ಪಡುವ) ಒಂದು ವೈಭವಪೂರ್ಣ ಕುರ್‌ಆನ್ ಅನ್ನೂ ನಾವು ನಿಮಗೆ ಕೊಟ್ಟಿರುತ್ತೇವೆ. {87}
٨٨ لَا تَمُدَّنَّ عَيْنَيْكَ إِلَىٰ مَا مَتَّعْنَا بِهِ أَزْوَاجًا مِنْهُمْ وَلَا تَحْزَنْ عَلَيْهِمْ وَاخْفِضْ جَنَاحَكَ لِلْمُؤْمِنِينَ
ಪೈಗಂಬರರೇ, ಈ ಜನರ ವಿವಿಧ ವರ್ಗಗಳಿಗೆ ನಾವು ದಯಪಾಲಿಸಿದ ಲೌಕಿಕವಾದ ತಾತ್ಕಾಲಿಕ ಸುಖಭೋಗದ ಸಾಧನಗಳತ್ತ ನೀವು ಕಣ್ಣೆತ್ತಿ ನೋಡಲೂ ಬೇಡಿ. ಅವರ (ಕೆಟ್ಟ ನಡತೆಗಾಗಿ) ನೀವು ದುಃಖಿಸುವ ಅಗತ್ಯವೂ ಇಲ್ಲ. ಅವರನ್ನು ಬಿಟ್ಟು ಈ ವಿಶ್ವಾಸಿ ಜನರತ್ತ ನೀವು ಸಹಾನುಭೂತಿಯೊಂದಿಗೆ ಒಲವು ತೋರುತ್ತಲಿರಿ. {88}
٨٩ وَقُلْ إِنِّي أَنَا النَّذِيرُ الْمُبِينُ
ಜೊತೆಗೆ, ನಾನೊಬ್ಬ ಸ್ಪಷ್ಟವಾದ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ ಎಂದು [ನಿಮ್ಮನ್ನು ಒಪ್ಪದ ಈ ಜನರಿಗೆ] ಸಾರಿರಿ. {89}
٩٠ كَمَا أَنْزَلْنَا عَلَى الْمُقْتَسِمِينَ
(ಇವರಿಗಿಂತ ಮುಂಚೆ) ಒಡಕುಂಟು ಮಾಡಿದ್ದ ಜನರರತ್ತ ಸಹ ಇಂತಹದ್ದೇ (ಮುನ್ನೆಚ್ಚರಿಕೆಯನ್ನು) ನಾವು ಕಳುಹಿಸಿದ್ದೆವು. {90}
٩١ الَّذِينَ جَعَلُوا الْقُرْآنَ عِضِينَ
ಅವರು ತಮ್ಮ ಅಲ್ ಕುರ್‌ಆನ್ ಅನ್ನು [ಅರ್ಥಾತ್ ತೌರಾತ್ ಮತ್ತು ಇಂಜೀಲ್ ಗಳನ್ನು, ತಮಗೆ ಬೇಕಾದಂತೆ] ಹರಿದು ಹಂಚಿಕೊಂಡಿದ್ದರು. {91}
٩٢ فَوَرَبِّكَ لَنَسْأَلَنَّهُمْ أَجْمَعِينَ
ಪೈಗಂಬರರೇ, ನಿಮ್ಮ ಒಡೆಯನಾಣೆ! ಅವರೆಲ್ಲರನ್ನು ನಾವು ಖಂಡಿತವಾಗಿ ವಿಚಾರಣೆಗೆ ಒಳಪಡಿಸಲಿರುವೆವು. {92}
٩٣ عَمَّا كَانُوا يَعْمَلُونَ
ಅವರು (ಭೂಲೋಕದಲ್ಲಿ) ಏನೆಲ್ಲ ಕರ್ಮಕಾಂಡ ಮಾಡುತ್ತಿದ್ದರೋ ಅದರ ಕುರಿತು! {93}
٩٤ فَاصْدَعْ بِمَا تُؤْمَرُ وَأَعْرِضْ عَنِ الْمُشْرِكِينَ
ಅದ್ದರಿಂದ ಪೈಗಂಬರರೇ, ನಿಮಗೇನನ್ನು ಆದೇಶಿಸಲಾದೆಯೋ ನೀವದನ್ನು ಘಂಟಾಘೋಷವಾಗಿ ಸಾರಿರಿ; ಮತ್ತು ಅಲ್ಲಾಹ್ ನ ಏಕತ್ವವನ್ನು ಒಪ್ಪದ (ಮುಶ್ರಿಕ್ ಜನರೊಡ್ಡುವ ಅಡೆತಡೆಗಳನ್ನು) ಲೆಕ್ಕಿಸದಿರಿ. {94}
٩٥ إِنَّا كَفَيْنَاكَ الْمُسْتَهْزِئِينَ
ನಿಮ್ಮನ್ನು ಗೇಲಿ ಮಾಡುತ್ತಿರುವ (ಜನರೊಂದಿಗೆ ವ್ಯವಹರಿಸಲು) ಖಂಡಿತವಾಗಿ ನಾವು ಮಾತ್ರವೇ ಸಾಕು! {95}
٩٦ الَّذِينَ يَجْعَلُونَ مَعَ اللَّهِ إِلَٰهًا آخَرَ ۚ فَسَوْفَ يَعْلَمُونَ
ಅವರು ಅಲ್ಲಾಹ್ ನ ಜೊತೆ ಬೇರೆಯವರನ್ನು ಸಹ ದೇವರನ್ನಾಗಿ ಮಾಡಿಕೊಂಡಿರುವರು! ಹೌದು, ಅದರ ಪರಿಣಾಮವನ್ನು ಅವರು ಬಹು ಬೇಗನೇ ಅರಿಯಲಿರುವರು. {96}
٩٧ وَلَقَدْ نَعْلَمُ أَنَّكَ يَضِيقُ صَدْرُكَ بِمَا يَقُولُونَ
ಇನ್ನು, ಅವರಾಡುವ ಮಾತುಗಳ ಕಾರಣ ನಿಮಗೆ ಹೃದಯದಲ್ಲಿ ಸಂಕಟವಾಗಿದೆ ಎಂಬ ವಾಸ್ತವಿಕತೆ ನಮಗೆ ತಿಳಿದೇ ಇದೆ. {97}
٩٨ فَسَبِّحْ بِحَمْدِ رَبِّكَ وَكُنْ مِنَ السَّاجِدِينَ
ಆದರೆ ನೀವು (ಅದಾವುದನ್ನೂ ಲೆಕ್ಕಿಸದೆ) ನಿಮ್ಮ ಪ್ರಭುವನ್ನು ಸ್ತುತಿಸುವುದರ ಜೊತೆಗೆ ಅವನ ಶ್ರೇಷ್ಠತೆಯ ಗುಣಗಾನ ಮಾಡುತ್ತಲಿರಿ; ಹಾಗೂ ಅವನಿಗೆ ಸಾಷ್ಟಾಂಗವೆರಗುವವರ ಜೊತೆ ಸೇರಿಕೊಳ್ಳಿ. {98}
٩٩ وَاعْبُدْ رَبَّكَ حَتَّىٰ يَأْتِيَكَ الْيَقِينُ
ಹೌದು, ಆ ಖಚಿತ ಘಳಿಗೆ ನಿಮ್ಮಲ್ಲಿಗೆ ಬರುವ ತನಕವೂ ನೀವು ನಿಮ್ಮ ಪ್ರಭುವಿನ ಆರಾಧೆನಯಲ್ಲಿ ತೊಡಗಿರಿ! {99}
ooooo
ಲಘು ಟಿಪ್ಪಣಿ:
ಟಿಪ್ಪಣಿ {59}: ಪ್ರವಾದಿ ಲೂತ್ ರನ್ನು ಬೈಬಲ್ ನಲ್ಲಿ ಲೋಟ್ (Lot) ಎಂದು ಹೆಸರಿಸಲಾಗಿದೆ. ಬೈಬಲ್ ನ ಆದಿಕಾಂಡ ಮತ್ತಿತರ ಪುಸ್ತಕಗಳಲ್ಲಿ ಪ್ರವಾದಿ ಲೋಟ್ ನ ಬಗ್ಗೆ ಉಲ್ಲೇಖಗಳಿವೆ.
ಟಿಪ್ಪಣಿ {71}: ಅರ್ಥಾತ್ ಒಬ್ಬ ಪ್ರವಾದಿಯು ತನ್ನ ಜನತೆಗೆ ಆಧ್ಯಾತ್ಮಿಕ ತಂದೆಯಿದ್ದಂತೆ. ಆದ್ದರಿಂದ ಲೂತ್ ರು ತನ್ನ ಜನಾಂಗದ ಹೆಮ್ಮಕ್ಕಳನ್ನು ಸಹಜವಾಗಿಯೇ ಪುತ್ರಿಯರೆಂದು ಸಾರಿ ಅವರನ್ನು ವರಿಸುವಂತೆ ವಿನಂತಿಸಿದ್ದರು.