ಅಲ್ ಮು'ಮಿನೂನ್ | ترجمة سورة المؤمنون‎

    تـرجمـة سورة المؤمنون من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅಲ್ ಮು'ಮಿನೂನ್ | ಪವಿತ್ರ ಕುರ್‌ಆನ್ ನ 23 ನೆಯ ಸೂರಃ | ಇದರಲ್ಲಿ ಒಟ್ಟು 118 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

قَدْ أَفْلَحَ الْمُؤْمِنُونَ

✽18✽ ಅಂತಹ ವಿಶ್ವಾಸಿಗಳು ಖಂಡಿತ ವಿಜಯಶಾಲಿಗಳಾದರು. {1}

الَّذِينَ هُمْ فِي صَلَاتِهِمْ خَاشِعُونَ

ಎಂತಹವರೆಂದರೆ, ತಮ್ಮ ನಮಾಝ್ ಗಳಲ್ಲಿ ವಿನಮ್ರತೆ ಪಾಲಿಸುವವರು; {2}

وَالَّذِينَ هُمْ عَنِ اللَّغْوِ مُعْرِضُونَ

ನಿರರ್ಥಕವಾದ (ಕಾಲಹರಣದ) ಮಾತು-ಕೃತ್ಯಗಳಿಂದ ದೂರವಿರುವವರು; {3}

وَالَّذِينَ هُمْ لِلزَّكَاةِ فَاعِلُونَ

ಝಕಾತ್ ನ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವವರು; {4}

وَالَّذِينَ هُمْ لِفُرُوجِهِمْ حَافِظُونَ

ತಮ್ಮ ಗುಪ್ತಾಂಗಗಳನ್ನು ಕಾಪಾಡಿಕೊಳ್ಳುವವರು; {5}

إِلَّا عَلَىٰ أَزْوَاجِهِمْ أَوْ مَا مَلَكَتْ أَيْمَانُهُمْ فَإِنَّهُمْ غَيْرُ مَلُومِينَ

ತಮ್ಮ ಪತ್ನಿಯರು ಹಾಗೂ (ಕರಾರಿನ ಮುಖಾಂತರ) ತಮ್ಮ ಅಧೀನವಿರುವ ದಾಸಿಯರ ಹೊರತು - ಏಕೆಂದರೆ ಆ ವಿಷಯದಲ್ಲಿ ಅವರು ದೂಷಣೀಯರಲ್ಲ. {6}

فَمَنِ ابْتَغَىٰ وَرَاءَ ذَٰلِكَ فَأُولَٰئِكَ هُمُ الْعَادُونَ

ಇನ್ನು ಯಾರಾದರೂ ಅದಕ್ಕಿಂತ ಆಚಿನದ್ದು ಬಯಸಿದರೆ ಅವರೇ ಹದ್ದು ಮೀರುವವರು. {7}

وَالَّذِينَ هُمْ لِأَمَانَاتِهِمْ وَعَهْدِهِمْ رَاعُونَ

(ವಿಜಯಶಾಲಿಗಳಾದ ವಿಶ್ವಾಸಿಗಳು ತಮ್ಮಲ್ಲಿರುವ) ಇತರರ ನ್ಯಾಸಗಳು ಹಾಗೂ ಇತರರೊಂದಿಗಿನ ಕರಾರುಗಳನ್ನು ಕಾಪಾಡುವವರು. {8}

وَالَّذِينَ هُمْ عَلَىٰ صَلَوَاتِهِمْ يُحَافِظُونَ

ತಮ್ಮ ನಮಾಝ್ ಗಳನ್ನು (ಸಮಯಕ್ಕೆ ಸರಿಯಾಗಿ) ಪಾಲಿಸುವ ವಿಷಯದಲ್ಲಿ ಬಹಳ ಶ್ರದ್ಧೆ ವಹಿಸುತ್ತಾರೆ. {9}

أُولَٰئِكَ هُمُ الْوَارِثُونَ

ಅಂತಹವರೇ (ಸ್ವರ್ಗವನ್ನು) ಬಳುವಳಿಯಾಗಿ ಪಡೆಯಲಿರುವವರು - {10}

الَّذِينَ يَرِثُونَ الْفِرْدَوْسَ هُمْ فِيهَا خَالِدُونَ

ಅಂದರೆ ಅವರು ಫಿರ್ದೌಸ್ ಎಂಬ ಸ್ವರ್ಗವನ್ನು ಬಳುವಳಿಯಾಗಿ ಪಡೆಯುಲಿರುವರು ಮತ್ತು ಅವರು ಅದರಲ್ಲಿ ಸದಾಕಾಲ ನೆಲೆಸುವರು! {11}

وَلَقَدْ خَلَقْنَا الْإِنْسَانَ مِنْ سُلَالَةٍ مِنْ طِينٍ

ಹೌದು, ಹಸಿಮಣ್ಣಿನ ಸಾರದಿಂದ ನಾವು ಮನುಷ್ಯರ ಸೃಷ್ಟಿಯನ್ನು (ಆರಂಭಿಸಿದೆವು). {12}

ثُمَّ جَعَلْنَاهُ نُطْفَةً فِي قَرَارٍ مَكِينٍ

ನಂತರದ ಹಂತದಲ್ಲಿ ನಾವು ಅದನ್ನು ಹನಿವೀರ್ಯವನ್ನಾಗಿ ಮಾಡಿ ಒಂದು ಸುಭದ್ರ ಜಾಗದಲ್ಲಿ ನಿಯತಗೊಳಿಸಿದೆವು. {13}

ثُمَّ خَلَقْنَا النُّطْفَةَ عَلَقَةً فَخَلَقْنَا الْعَلَقَةَ مُضْغَةً فَخَلَقْنَا الْمُضْغَةَ عِظَامًا فَكَسَوْنَا الْعِظَامَ لَحْمًا ثُمَّ أَنْشَأْنَاهُ خَلْقًا آخَرَ ۚ فَتَبَارَكَ اللَّهُ أَحْسَنُ الْخَالِقِينَ

ತದನಂತರ ನಾವು ಆ ಹನಿವೀರ್ಯವನ್ನು ಅಂಟಿಕೊಳ್ಳುವ ಪದಾರ್ಥವನ್ನಾಗಿ ಮಾಡಿದೆವು; ನಂತರ ಅಂಟಿಕೊಳ್ಳುವ ಪದಾರ್ಥವನ್ನು ಮಾಂಸಪಿಂಡವನ್ನಾಗಿ ಮಾಡಿದೆವು; ನಂತರ ಮಾಂಸಪಿಂಡವನ್ನು ಎಲುಬುಗಳನ್ನಾಗಿ ಮಾಡಿದೆವು; ನಂತರ ಎಲುಬುಗಳ ಮೇಲೆ ಮಾಂಸವನ್ನು ಹೊದಿಸಿದೆವು; ಆ ಮೇಲೆ ಅದನ್ನು ಬೇರೆಯೇ ರೂಪದ ಒಂದು ಹೊಸ ಸೃಷ್ಟಿಯನ್ನಾಗಿ ಮಾರ್ಪಡಿಸಿ ಬೆಳೆಸಿದೆವು! ಹೌದು, ಸ್ವಯಂಸಮೃದ್ಧನಾದ ಅಲ್ಲಾಹ್ ನು ಸೃಷ್ಟಿಕಾರ್ಯದಲ್ಲಿ ಅತ್ಯುತ್ತಮನು! {14}

ثُمَّ إِنَّكُمْ بَعْدَ ذَٰلِكَ لَمَيِّتُونَ

ಅದಾದ ನಂತರ, ಹಾಗೆ (ವಿವಿಧ ಹಂತಗಳಲ್ಲಿ ವಿವಿಧ ರೂಪ ಪಡೆಯುತ್ತಾ ಜನಿಸಿದ) ನೀವು ಖಂಡಿತವಾಗಿ ಸಾಯಲಿರುವಿರಿ. {15}

ثُمَّ إِنَّكُمْ يَوْمَ الْقِيَامَةِ تُبْعَثُونَ

ಆ ಬಳಿಕ ಪುನರುತ್ಥಾನದ ದಿನ ಅಗತ್ಯವಾಗಿ ನೀವು ಎಬ್ಬಿಸಲ್ಪಡುವಿರಿ. {16}

وَلَقَدْ خَلَقْنَا فَوْقَكُمْ سَبْعَ طَرَائِقَ وَمَا كُنَّا عَنِ الْخَلْقِ غَافِلِينَ

ಮಾತ್ರವಲ್ಲ, ಜನರೇ, ನಿಮ್ಮ ಮೆಲ್ಭಾಗದಲ್ಲಿ (ಒಂದರ ಮೇಲೊಂದರಂತೆ ಪದರ ಪದರವಾಗಿ) ಏಳು ಗಗನ ಮಾರ್ಗಗಳನ್ನು ನಾವು ಸೃಷ್ಟಿಸಿರುತ್ತೇವೆ. ಹೌದು, (ಒಮ್ಮೆ ಸೃಷ್ಟಿ ಮಾಡಿದ ನಂತರ) ಯಾವ ಸೃಷ್ಟಿಯ ಬಗ್ಗೆಯೂ ನಾವು ನಿರ್ಲಕ್ಷ್ಯರಾಗಿ ಬಿಟ್ಟಿಲ್ಲ! {17}

وَأَنْزَلْنَا مِنَ السَّمَاءِ مَاءً بِقَدَرٍ فَأَسْكَنَّاهُ فِي الْأَرْضِ ۖ وَإِنَّا عَلَىٰ ذَهَابٍ بِهِ لَقَادِرُونَ

ಬದಲಾಗಿ, ಒಂದು ಅಳತೆಯ ಪ್ರಕಾರ ನಿರ್ದಿಷ್ಟ ಪ್ರಮಾಣದಲ್ಲಿ ನಾವು ಮಳೆ ನೀರನ್ನು ಆಕಾಶದಿಂದ ಇಳಿಸಿದ್ದೇವೆ. ನಂತರ ಅದು ಭೂಮಿಯಲ್ಲಿ ಉಳಿಯುವಂತೆ ವ್ಯವಸ್ಥೆ ಮಾಡಿದ್ದೇವೆ. ಇನ್ನು (ನಾವು ಬಯಸಿದರೆ) ಅದನ್ನು ಹೋಗಲಾಡಿಸಲೂ ನಾವು ಶಕ್ತರಾಗಿದ್ದೇವೆ. {18}

فَأَنْشَأْنَا لَكُمْ بِهِ جَنَّاتٍ مِنْ نَخِيلٍ وَأَعْنَابٍ لَكُمْ فِيهَا فَوَاكِهُ كَثِيرَةٌ وَمِنْهَا تَأْكُلُونَ

ಅದರ ಮೂಲಕವೇ ನಾವು ನಿಮಗಾಗಿ ಖರ್ಜೂರದ ಹಾಗೂ ದ್ರಾಕ್ಷೆಯ ತೋಟಗಳನ್ನು ರೂಪಿಸಿರುತ್ತೇವೆ. ನಿಮಗಾಗಿ ಅತ್ಯಧಿಕ ಪ್ರಮಾಣದಲ್ಲಿ ಹಣ್ಣುಹಂಪಲುಗಳನ್ನೂ ಉಂಟುಮಾಡಿರುತ್ತೇವೆ. ಅವುಗಳನ್ನು ತಿನ್ನುತ್ತಿರುವಿರಿ. {19}

وَشَجَرَةً تَخْرُجُ مِنْ طُورِ سَيْنَاءَ تَنْبُتُ بِالدُّهْنِ وَصِبْغٍ لِلْآكِلِينَ

ಹಾಗೆಯೇ ನಾವು ಸೀನಾಯ್ ಬೆಟ್ಟದಲ್ಲಿ ಹುಟ್ಟುವ ಆ ಝೈತೂನ್ ಮರವನ್ನೂ ಬೆಳೆಸಿರುತ್ತೇವೆ. ಅವು ಎಣ್ಣೆಯನ್ನು ಮತ್ತು ತಿನ್ನುವವರಿಗಾಗಿ (ಎಣ್ಣೆಯ ರೂಪದಲ್ಲಿ) ಸ್ವಾದಿಷ್ಟ ಪದಾರ್ಥವನ್ನು ಉತ್ಪಾದಿಸುತ್ತವೆ. {20}

وَإِنَّ لَكُمْ فِي الْأَنْعَامِ لَعِبْرَةً ۖ نُسْقِيكُمْ مِمَّا فِي بُطُونِهَا وَلَكُمْ فِيهَا مَنَافِعُ كَثِيرَةٌ وَمِنْهَا تَأْكُلُونَ

(ನೀವು ಬಳಸುವ) ಈ ಜಾನುವಾರುಗಳಲ್ಲೂ ನಿಮಗೆ ಖಂಡಿತವಾಗಿ ಕಲಿಯಲು ಪಾಠವಿದೆ. ಅವುಗಳ ಉದರಗಳಲ್ಲಿರುವ ವಸ್ತುಗಳಿಂದ (ಹಾಲನ್ನು ತಯಾರಿಸಿ) ನಾವು ನಿಮಗೆ ಕುಡಿಸುತ್ತೇವೆ. ಮತ್ತು ಅವುಗಳಿಂದ ನಿಮಗೆ ಇನ್ನೂ ಹಲವಾರು ಉಪಯೋಗಗಳಿವೆ. ಅವುಗಳಲ್ಲಿ (ಕೆಲವುದರ ಮಾಂಸವನ್ನೂ) ನೀವು ತಿನ್ನುತ್ತೀರಿ. {21}

وَعَلَيْهَا وَعَلَى الْفُلْكِ تُحْمَلُونَ

ಅವುಗಳ ಮೇಲೂ ಮತ್ತು (ಸಮುದ್ರಗಳಲ್ಲಿ ಚಲಿಸುವ) ನೌಕೆಗಳಲ್ಲೂ ಕುಳಿತು ನೀವು ಸಂಚರಿಸುತ್ತೀರಿ. {22}

وَلَقَدْ أَرْسَلْنَا نُوحًا إِلَىٰ قَوْمِهِ فَقَالَ يَا قَوْمِ اعْبُدُوا اللَّهَ مَا لَكُمْ مِنْ إِلَٰهٍ غَيْرُهُ ۖ أَفَلَا تَتَّقُونَ

[ಪ್ರವಾದಿ ನೂಹ್ ರು ನಿರ್ಮಿಸಿದ ನೌಕೆ ನಿಮಗೆ ತಿಳಿದಿದೆ ತಾನೆ!] ಹೌದು, ನಾವು ನೂಹ್ ರನ್ನು ದೂತರನ್ನಾಗಿ ಮಾಡಿ ಅವರ ಸಮುದಾಯದ (ಮಾರ್ಗದರ್ಶನಕ್ಕಾಗಿ) ನಿಯೋಗಿಸಿದ್ದೆವು. ಓ ನನ್ನ ಸಮುದಾಯದ ಜನರೇ, ನೀವು ಅಲ್ಲಾಹ್ ನನ್ನು ಮಾತ್ರ ಆರಾಧಿಸಿರಿ. ಏಕೆಂದರೆ ಅವನ ಹೊರತು ನಿಮಗೆ ಬೇರೆ ಯಾರೂ ಆರಾಧ್ಯರಿಲ್ಲ. (ಇತರರನ್ನು ಪೂಜಿಸುತ್ತಿರುವ) ನೀವು ಅವನಿಗೆ ಹೆದರುವುದಿಲ್ಲವೇ? ಎಂದು ನೂಹ್ ರು ಕೇಳಿದರು. {23}

فَقَالَ الْمَلَأُ الَّذِينَ كَفَرُوا مِنْ قَوْمِهِ مَا هَٰذَا إِلَّا بَشَرٌ مِثْلُكُمْ يُرِيدُ أَنْ يَتَفَضَّلَ عَلَيْكُمْ وَلَوْ شَاءَ اللَّهُ لَأَنْزَلَ مَلَائِكَةً مَا سَمِعْنَا بِهَٰذَا فِي آبَائِنَا الْأَوَّلِينَ

(ಪ್ರವಾದಿ ನೂಹ್ ರ ಬುದ್ಧಿವಾದದ ಮಾತುಗಳನ್ನು) ಸಂಪೂರ್ಣವಾಗಿ ಧಿಕ್ಕರಿಸಿದ ಅವರ ಸಮುದಾಯ ಮುಖಂಡರು ಜನರೊಡನೆ ಹೇಳಿದರು: ಈತನು ನಿಮ್ಮಂತೆಯೇ ಕೇವಲ ಒಬ್ಬ ಮನುಷ್ಯನಾಗಿರುವನು, ಆದರೆ ನಿಮ್ಮ ಮೇಲೆ ತನ್ನ ಶ್ರೇಷ್ಠತೆಯನ್ನು ಸ್ಥಾಪಿಸಲು ಬಯಸುತ್ತಿದ್ದಾನೆ; ಒಂದು ವೇಳೆ ಅಲ್ಲಾಹ್ ನು ಹಾಗೆ ಯಾರನ್ನಾದರೂ ಕಳುಹಿಸಲು ಬಯಸಿದ್ದಿದ್ದರೆ ನಿಜವಾಗಿ ಒಬ್ಬ ಮಲಕ್ ಅನ್ನು ಕಳುಹಿಸುತ್ತಿದ್ದನು! [ಇನ್ನು ಮನುಷ್ಯರೇ ಮನುಷ್ಯರಿಗೆ ಮಾರ್ಗದರ್ಶಕರಾಗಿ ಬರುವ] ವಿಷಯವನ್ನು ನಾವಂತೂ ನಮ್ಮ ಹಿರಿಯರಾದ ನಮ್ಮ ಪೂರ್ವಜರಿಂದ ಕೇಳಿಸಿಕೊಂಡಿಲ್ಲ! {24}

إِنْ هُوَ إِلَّا رَجُلٌ بِهِ جِنَّةٌ فَتَرَبَّصُوا بِهِ حَتَّىٰ حِينٍ

ವಿಷಯವೇನೆಂದರೆ ಈತನಿಗೆ ಹುಚ್ಚು ಹಿಡಿದಿದೆಯಷ್ಟೆ! ಆದ್ದರಿಂದ ನೀವು ಸ್ವಲ್ಪ ಸಮಯ ಕಾದು ನೋಡಿರಿ. {25}

قَالَ رَبِّ انْصُرْنِي بِمَا كَذَّبُونِ

ಆಗ ನೂಹ್ ರು ಪ್ರಾರ್ಥಿಸಿಕೊಂಡರು: ಓ ನನ್ನ ಕರ್ತಾರನೇ, ಈ ಜನರು ನನ್ನನ್ನು ತಿರಸ್ಕರಿಸಿರುವ ವಿಷಯದಲ್ಲಿ ಈಗ ನೀನೇ ನನಗೆ ಸಹಾಯ ಮಾಡು! {26}

فَأَوْحَيْنَا إِلَيْهِ أَنِ اصْنَعِ الْفُلْكَ بِأَعْيُنِنَا وَوَحْيِنَا فَإِذَا جَاءَ أَمْرُنَا وَفَارَ التَّنُّورُ ۙ فَاسْلُكْ فِيهَا مِنْ كُلٍّ زَوْجَيْنِ اثْنَيْنِ وَأَهْلَكَ إِلَّا مَنْ سَبَقَ عَلَيْهِ الْقَوْلُ مِنْهُمْ ۖ وَلَا تُخَاطِبْنِي فِي الَّذِينَ ظَلَمُوا ۖ إِنَّهُمْ مُغْرَقُونَ

ಹಾಗೆ ನೂಹ್ ರಿಗೆ ನಾವು ವಹೀ (ಅಂದರೆ ದಿವ್ಯಸಂದೇಶದ ಮೂಲಕ) ತಿಳಿಸಿದೆವು: ಏನೆಂದರೆ, ನೀವೀಗ ನಮ್ಮ ಆದೇಶದ ಪ್ರಕಾರ ಮತ್ತು ನಮ್ಮ ಮೇಲ್ನೋಟದಲ್ಲಿ ಒಂದು ನೌಕೆಯನ್ನು ತಯಾರಿಸಿರಿ. (ದುಷ್ಟರಿಗೆ ಶಿಕ್ಷೆಯ ಕುರಿತು) ನಮ್ಮ ಆಜ್ಞೆ ಹೊರಟ ಕೂಡಲೇ ಅಂದರೆ ಒಲೆಗಳಿಂದ (ನೀರು) ಉಕ್ಕಿಹರಿಯ ತೊಡಗಿದ ಕೂಡಲೇ ನಿಮ್ಮನ್ನು ನಂಬಿದ ಜನರನ್ನು ಹಾಗೂ (ನಿಮ್ಮ ಅಗತ್ಯದ ಜಾನುವಾರುಗಳ ಪೈಕಿ ಹೆಣ್ಣು - ಗಂಡೆಂಬ) ಒಂದೊಂದು ಜೊತೆಯನ್ನು ಆ ನೌಕೆಯಲ್ಲಿ ಹತ್ತಿಸಿಕೊಳ್ಳಿ. ಆದರೆ ಯಾರ ಬಗ್ಗೆ ಅದಾಗಲೇ ನಮ್ಮ ಶಿಕ್ಷೆಯ ಆದೇಶ ಹೊರಡಿಸಲಾಗಿದೆಯೋ ಅವರ ಹೊರತು! (ಅವರೆಲ್ಲ ದುಷ್ಕರ್ಮಿಗಳು; ಅದ್ದರಿಂದ) ಅಂತಹ ದುಷ್ಕರ್ಮಿಗಳ ಪರವಾಗಿ ನಮ್ಮೊಂದಿಗೆ ಯಾವ ಶಿಫಾರಸ್ಸನ್ನೂ ಮಾಡದಿರಿ! ಅವರನ್ನಂತು ಮುಳುಗಿಸಿ ನಾಶಪಡಿಸಲಾಗುವುದು! {27}

فَإِذَا اسْتَوَيْتَ أَنْتَ وَمَنْ مَعَكَ عَلَى الْفُلْكِ فَقُلِ الْحَمْدُ لِلَّهِ الَّذِي نَجَّانَا مِنَ الْقَوْمِ الظَّالِمِينَ

ಹಾಗೆ, ನೀವು ಮತ್ತು ನಿಮ್ಮೊಂದಿಗೆ ಇರುವವರು ನೌಕೆಯಲ್ಲಿ ಸವಾರಾದ ಕೂಡಲೇ, ಯಾವ ಅಲ್ಲಾಹ್ ನು ನಮ್ಮನ್ನು ಈ ದುಷ್ಕರ್ಮಿಗಳಿಂದ ಪಾರು ಮಾಡಿದನೋ ಆ ಅಲ್ಲಾಹ್ ನಿಗೆ ಸರ್ವವಿಧ ಕೃತಜ್ಞತೆಗಳು ಎಂದು ಹೇಳಿರಿ. {28}

وَقُلْ رَبِّ أَنْزِلْنِي مُنْزَلًا مُبَارَكًا وَأَنْتَ خَيْرُ الْمُنْزِلِينَ

ಮತ್ತು ಪ್ರಾರ್ಥಿಸಿರಿ: ಓ ನಮ್ಮ ದೇವನೇ, ನಮ್ಮನ್ನು ಒಂದು ಅನುಗ್ರಹೀತ ಸ್ಥಳದಲ್ಲಿ ಇಳಿಸಿಬಿಡು; ಏಕೆಂದರೆ ನೀನು ಮಾತ್ರವೇ (ಅಂತಹ ಒಂದು ಸ್ಥಳದಲ್ಲಿ) ಅತ್ಯುತ್ತಮ ರೀತಿಯಲ್ಲಿ ಇಳಿಸುವವನು! {29}

إِنَّ فِي ذَٰلِكَ لَآيَاتٍ وَإِنْ كُنَّا لَمُبْتَلِينَ

ಹೌದು, ಈ ವೃತ್ತಾಂತದಲ್ಲಿ ನಿಮಗೆ ಖಂಡಿತವಾಗಿ ಪಾಠವಿದೆ; ನಿಜವಾಗಿ ನಾವು ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿರುತ್ತೇವೆ. {30}

ثُمَّ أَنْشَأْنَا مِنْ بَعْدِهِمْ قَرْنًا آخَرِينَ

ಅವರ ನಂತರ ನಾವು ಬೇರೆ ಸಮುದಾಯಗಳನ್ನು ಸೃಷ್ಟಿಸಿದೆವು. {31}

فَأَرْسَلْنَا فِيهِمْ رَسُولًا مِنْهُمْ أَنِ اعْبُدُوا اللَّهَ مَا لَكُمْ مِنْ إِلَٰهٍ غَيْرُهُ ۖ أَفَلَا تَتَّقُونَ

ನಂತರ ಅವರೊಳಗಿನಿಂದಲೇ ನಾವು ದೂತರುಗಳನ್ನು ಆರಿಸಿ ಅವರ (ಮಾರ್ಗದರ್ಶನಕ್ಕಾಗಿ) ಕಳುಹಿಸಿದೆವು. ಜನರೇ ನೀವು ಅಲ್ಲಾಹ್ ನನ್ನು ಮಾತ್ರ ಅರಾಧಿಸಿರಿ; ಏಕೆಂದರೆ ಅವನ ಹೊರತು ಬೇರೆ ಯಾರೂ ನಿಮ್ಮ ದೇವರಲ್ಲ; (ಅವನನ್ನು ಬಿಟ್ಟು ಬೇರೆಯವರನ್ನು ಅರಾಧಿಸುವ) ನೀವು ಅವನನ್ನು ಭಯಪಡುವುದಿಲ್ಲವೇ - ಎಂದು ಆ ದೂತರುಗಳು ಬೋಧಿಸಿದರು. {32}

وَقَالَ الْمَلَأُ مِنْ قَوْمِهِ الَّذِينَ كَفَرُوا وَكَذَّبُوا بِلِقَاءِ الْآخِرَةِ وَأَتْرَفْنَاهُمْ فِي الْحَيَاةِ الدُّنْيَا مَا هَٰذَا إِلَّا بَشَرٌ مِثْلُكُمْ يَأْكُلُ مِمَّا تَأْكُلُونَ مِنْهُ وَيَشْرَبُ مِمَّا تَشْرَبُونَ

ಆ ಸಮುದಾಯದ ಮುಖಂಡರುಗಳು, ಅಂದರೆ ಯಾರಿಗೆ ನಾವು ಲೌಕಿಕ ಜೀವನದ ಶ್ರೀಮಂತಿಕೆ ದಯಪಾಲಿಸಿದ್ದೆವೋ ಅವರು, ದೂತರ ಬೋಧನೆಯನ್ನು ಧಿಕ್ಕರಿಸಿದರು ಮತ್ತು ಪರಲೋಕದ ಭೇಟಿಯನ್ನೂ ನಿರಾಕರಿಸಿದರು, ಮತ್ತು (ಜನಸಾಮಾನ್ಯರೊಡನೆ ಅಲ್ಲಾಹ್ ನ ಪ್ರವಾದಿಯ ಕುರಿತು) ಹೇಳಿದರು: ಜನರೇ, ಈತ ನಿಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಬೇರೇನೂ ಅಲ್ಲ; ನೋಡಿ, ನೀವು ತಿನ್ನುತ್ತಿರುವುದನ್ನೇ ಈತನೂ ತಿನ್ನುತ್ತಿರುವನು ಮತ್ತು ನೀವು ಕುಡಿಯುವುದನ್ನೇ ಈತನೂ ಕುಡಿಯುತ್ತಿರುವನು! {33}

وَلَئِنْ أَطَعْتُمْ بَشَرًا مِثْلَكُمْ إِنَّكُمْ إِذًا لَخَاسِرُونَ

ಹಾಗಿರುವಾಗ ನಿಮ್ಮಂತೆಯೇ ಇರುವ ಒಬ್ಬ ಮನುಷ್ಯನನ್ನು ಅನುಸರಿಸಿದರೆ ಬಹು ದೊಡ್ಡ ನಷ್ಟಕ್ಕೆ ನೀವು ಬೀಳಲಿರುವಿರಿ. {34}

أَيَعِدُكُمْ أَنَّكُمْ إِذَا مِتُّمْ وَكُنْتُمْ تُرَابًا وَعِظَامًا أَنَّكُمْ مُخْرَجُونَ

ನೀವು ಸತ್ತು, ಆ ಮೇಲೆ ಮಣ್ಣು ಮತ್ತು ಮೂಳೆಗಳಾಗಿ ಮಾರ್ಪಟ್ಟ ನಂತರ ನಿಮ್ಮನ್ನು ಪುನಃ (ಜೀವಂತಗೊಳಿಸಿ ಗೋರಿಗಳಿಂದ) ಹೊರತೆಗೆಯಲಾಗುವುದು ಎಂದು ಈತನು ನಿಮಗೆ ವಾಗ್ದಾನ ಮಾಡಿರುವನೇ? {35}

هَيْهَاتَ هَيْهَاتَ لِمَا تُوعَدُونَ

ಹಾಗಾದರೆ ನಿಮಗೆ ಮಾಡಲಾದ ವಾಗ್ದಾನ ಸತ್ಯಕ್ಕೆ ದೂರವಾದ, ಬಹು ದೂರವಾದ ವಾಗ್ದಾನ! {36}

إِنْ هِيَ إِلَّا حَيَاتُنَا الدُّنْيَا نَمُوتُ وَنَحْيَا وَمَا نَحْنُ بِمَبْعُوثِينَ

ಏನಿದ್ದರೂ ನಮ್ಮದು ಈ ಲೋಕದಲ್ಲಿನ ಬದುಕು ಮಾತ್ರ! ನಾವು ಜೀವಿಸುವುದೂ ಇಲ್ಲೇ; ಸಾಯುವುದೂ ಇಲ್ಲೇ! (ಒಮ್ಮೆ ಸತ್ತ ನಂತರ) ನಮ್ಮನ್ನು ಪುನಃ ಜೀವಂತಗೊಳಿಸುವ ವಿಷಯವೇ ಇಲ್ಲ. {37}

إِنْ هُوَ إِلَّا رَجُلٌ افْتَرَىٰ عَلَى اللَّهِ كَذِبًا وَمَا نَحْنُ لَهُ بِمُؤْمِنِينَ

ಈ ವ್ಯಕ್ತಿಯು ಸುಳ್ಳುಗಳನ್ನು ಹೆಣೆದು ಅಲ್ಲಾಹ್ ನ ಮೇಲೆ ಆಪಾದಿಸುತ್ತಿರುವನಷ್ಟೆ. ಅದನ್ನು ನಾವಂತು ನಂಬುವವರಲ್ಲ. {38}

قَالَ رَبِّ انْصُرْنِي بِمَا كَذَّبُونِ

ಅದಕ್ಕೆ ದೂತರು ಹೇಳಿದರು: ಓ ನನ್ನ ಪ್ರಭುವೇ, ಈ ಜನರು ನನ್ನನ್ನು ಸುಳ್ಳನೆಂದು ತಿರಸ್ಕರಿಸಿರುವ ಕಾರಣ ಈಗ ನೀನೇ ನನಗೆ ನೆರವಾಗು! {39}

قَالَ عَمَّا قَلِيلٍ لَيُصْبِحُنَّ نَادِمِينَ

ಅಲ್ಲಾಹ್ ನು ಉತ್ತರಿಸಿದನು: [ಸ್ವಲ್ಪ ತಾಳ್ಮೆಯಿಂದ ಇರಿ]; ಇವರು ಬಹು ಬೇಗನೇ ಪರಿತಪಿಸಲಿರುವರು. {40}

فَأَخَذَتْهُمُ الصَّيْحَةُ بِالْحَقِّ فَجَعَلْنَاهُمْ غُثَاءً ۚ فَبُعْدًا لِلْقَوْمِ الظَّالِمِينَ

ಹಾಗಿರುವಾಗ ಒಮ್ಮಿಂದೊಮ್ಮೆಲೆ ಬಹಳ ನ್ಯಾಯಯುತವಾಗಿಯೇ ಬಿರುಸಾದ ಆಸ್ಫೋಟವೊಂದು ಅವರನ್ನು ಬಲಿತೆಗೆದುಕೊಂಡಿತ್ತು ಮತ್ತು ನಾವು ಅವರನ್ನು ಕಸಕಡ್ಡಿಗಳಾಗಿ ಮಾರ್ಪಡಿಸಿ ಬಿಟ್ಟೆವು. ದೂರವಾಯಿತು - ದುಷ್ಟರ ಆ ಸಮೂಹ! {41}

ثُمَّ أَنْشَأْنَا مِنْ بَعْدِهِمْ قُرُونًا آخَرِينَ

ಅವರಾದ ನಂತರ, ನಾವು ಬೇರೆ ಪೀಳಿಗೆಗಳನ್ನು ಅಸ್ತಿತ್ವಕ್ಕೆ ತಂದೆವು! {42}

مَا تَسْبِقُ مِنْ أُمَّةٍ أَجَلَهَا وَمَا يَسْتَأْخِرُونَ

ಯಾವ ಸಮುದಾಯವೂ ತನ್ನಅವಧಿಗಿಂತ ಮುಂಚಿತವಾಗಿ (ಶಿಕ್ಷೆಗೊಳಗಾಗಿ) ಮುಗಿಯದು; (ಶಿಕ್ಷೆಯ) ಅವಧಿಯನ್ನು ಮುಂದೂಡಲೂ ಅವರಿಗೆ ಸಾಧ್ಯವಾಗದು. {43}

ثُمَّ أَرْسَلْنَا رُسُلَنَا تَتْرَىٰ ۖ كُلَّ مَا جَاءَ أُمَّةً رَسُولُهَا كَذَّبُوهُ ۚ فَأَتْبَعْنَا بَعْضَهُمْ بَعْضًا وَجَعَلْنَاهُمْ أَحَادِيثَ ۚ فَبُعْدًا لِقَوْمٍ لَا يُؤْمِنُونَ

ತರುವಾಯ ನಾವು ನಮ್ಮ ದೂತರುಗಳನ್ನು ಒಬ್ಬರ ನಂತರ ಮತ್ತೊಬ್ಬರಂತೆ ನಿರಂತರವಾಗಿ ಕಳುಹಿಸಿದೆವು. ಆದರೆ ಪ್ರತಿ ಬಾರಿಯೂ ಪ್ರತಿ ಸಮುದಾಯವು ತನ್ನತ್ತ ಬಂದ ದೂತನನ್ನು ಧಿಕ್ಕರಿಸಿ ಬಿಡುತ್ತಿತ್ತು. ಆದ್ದರಿಂದ ನಾವು ಆ ಎಲ್ಲ ಸಮುದಾಯಗಳನ್ನು ಒಂದರ ನಂತರ ಒಂದರಂತೆ (ನಾಶಪಡಿಸಿ) ಅವರನ್ನು ಕೇವಲ ಇತಿಹಾಸದ ಕಥೆಗಳನ್ನಾಗಿ ಮಾರ್ಪಡಿಸಿದೆವು! (ಸಂದೇಶವಾಹಕರ ಉಪದೇಶಗಳ ನಂತರವೂ) ವಿಶ್ವಾಸಿಗಳಾಗದ ದುಷ್ಟ ಸಮುದಾಯಗಳು ತೊಲಗಿ ಹೋದವು! {44}

ثُمَّ أَرْسَلْنَا مُوسَىٰ وَأَخَاهُ هَارُونَ بِآيَاتِنَا وَسُلْطَانٍ مُبِينٍ

ನಂತರ ನಾವು ಮೂಸಾ ಮತ್ತು ಅವರ ಸಹೋದರ ಹಾರೂನ್ ರನ್ನು ನಮ್ಮ ನಿದರ್ಶನಗಳೊಂದಿಗೆ ಹಾಗೂ ಬಹಳ ಸ್ಪಷ್ಟವಾದ ಪ್ರಬಲ ಪೆರಾವೆಗಳೊಂದಿಗೆ ಕಳುಹಿಸಿದೆವು. {45}

إِلَىٰ فِرْعَوْنَ وَمَلَئِهِ فَاسْتَكْبَرُوا وَكَانُوا قَوْمًا عَالِينَ

ಅವರು ಫಿರ್‌ಔನ್ ಮತ್ತು ಆತನ ಆಸ್ಥಾನದ ಸರದಾರರ ಬಳಿಗೆ ಬಂದಾಗ, ಅವರು ದುರಹಂಕಾರದಿಂದ ವರ್ತಿಸಿದರು! ಅವರದು ದೊಡ್ಡಸ್ತಿಕೆ ಮೆರೆಯುತ್ತಿದ್ದ ಸಮುದಾಯವಾಗಿತ್ತು. {46}

فَقَالُوا أَنُؤْمِنُ لِبَشَرَيْنِ مِثْلِنَا وَقَوْمُهُمَا لَنَا عَابِدُونَ

ಏನು? ನಾವು ನಮ್ಮಂತಹ ಮನುಷ್ಯರಾದ ಈ ಇಬ್ಬರ ಬೋಧನೆಗಳನ್ನು ನಂಬಬೇಕೇ? ಅದೂ ಸಹ ಅವರು ನಮ್ಮ ಗುಲಾಮರ ಸಮುದಾಯಕ್ಕೆ ಸೇರಿರುವಾಗ - ಎಂದು ಪ್ರಶ್ನಿಸಿದರು. {47}

فَكَذَّبُوهُمَا فَكَانُوا مِنَ الْمُهْلَكِينَ

ಹಾಗೆ ಅವರು ಮೂಸಾ ಮತ್ತು ಹಾರೂನ್ ರ ಉಪದೇಶಗಳನ್ನು ನಿರಾಕರಿಸಿದರು; ಮತ್ತು ನಾಶವಾಗಿ ಹೋದವರ ಸಾಲಿಗೆ ಸೇರಿಕೊಂಡರು! {48}

وَلَقَدْ آتَيْنَا مُوسَى الْكِتَابَ لَعَلَّهُمْ يَهْتَدُونَ

ಹೌದು, ಜನರು ಮಾರ್ಗದರ್ಶನ ಪಡೆಯಲೆಂದು ನಾವು ಮೂಸಾ ರಿಗೆ (ತೋರಾ) ಗ್ರಂಥವನ್ನು ನೀಡಿದ್ದೆವು. {49}

وَجَعَلْنَا ابْنَ مَرْيَمَ وَأُمَّهُ آيَةً وَآوَيْنَاهُمَا إِلَىٰ رَبْوَةٍ ذَاتِ قَرَارٍ وَمَعِينٍ

ಮುಂದೆ ನಾವು ಮರ್‌ಯಮ್ ರ ಪುತ್ರ ಈಸಾ ಮತ್ತು ಈಸಾ ರ ಮಾತೆ ಮರ್‌ಯಮ್ - ಈರ್ವರನ್ನೂ (ಇಸ್ರಾಈಲ್ ಜನತೆಗೆ) ದೃಷ್ಟಾಂತಗಳನ್ನಾಗಿ ಮಾಡಿದೆವು! ಮತ್ತು ಈರ್ವರನ್ನೂ ಚಿಲುಮೆ ಹರಿಯುವ ಪ್ರಶಾಂತವಾದ ಎತ್ತರದ ಪ್ರದೇಶವೊಂದರಲ್ಲಿ ಆಶ್ರಯ ಒದಗಿಸಿ ಅಲ್ಲಿ ನೆಲೆಸುವಂತೆ ಮಾಡಿದೆವು. {50}

يَا أَيُّهَا الرُّسُلُ كُلُوا مِنَ الطَّيِّبَاتِ وَاعْمَلُوا صَالِحًا ۖ إِنِّي بِمَا تَعْمَلُونَ عَلِيمٌ

ಓ ಪ್ರವಾದಿಗಳೇ, [ಈ ನಿಮ್ಮ ಜನರು, ಅವರು ತಿನ್ನುವಂತಹ ಅದೇ ಆಹಾರಗಳನ್ನು ನೀವೂ ತಿನ್ನುತ್ತಿರುವಿರಿ ಎಂದು ಆಪಾದಿಸುತ್ತಿರುವರು; ಅದನ್ನು ಲೆಕ್ಕಿಸದಿರಿ, ಬದಲಾಗಿ] ನೀವು ಶುದ್ಧವಾದ ಆಹಾರ ಪದಾರ್ಥಗಳನ್ನು ತಿನ್ನಿರಿ, ಜೊತೆಗೆ ಸತ್ಕರ್ಮಗಳನ್ನೂ ಮಾಡುತ್ತಲಿರಿ. ಖಂಡಿತವಾಗಿಯೂ ನೀವು ಏನೆಲ್ಲ ಮಾಡುವಿರೋ ಅದನ್ನು ನಾನು ತಿಳಿದಿರುತ್ತೇನೆ. {51}

وَإِنَّ هَٰذِهِ أُمَّتُكُمْ أُمَّةً وَاحِدَةً وَأَنَا رَبُّكُمْ فَاتَّقُونِ

ಪೈಗಂಬರರೇ, ಯಥಾರ್ಥದಲ್ಲಿ ನಿಮ್ಮ ಮುಂದಿರುವ ಈ ಜನತೆಯು [ವಿವಿಧ ಧರ್ಮದ ಅನುಯಾಯಿಗಳಲ್ಲ. ಬದಲಾಗಿ ಧಾರ್ಮಿಕವಾಗಿ] ಒಂದೇ ಜನತೆಯಾಗಿದೆ; ಹಾಗೆಯೇ ನಿಮ್ಮೆಲ್ಲರಿಗೆ [ಪಾಲಿಸಲು ಇಸ್ಲಾಮ್ ಎಂಬ ಧರ್ಮವನ್ನು ನೀಡಿದ] ದೇವನು ನಾನೇ ಆಗಿರುವೆನು! ಆದ್ದರಿಂದ ನೀವು ನನಗೆ ಮಾತ್ರ ಭಯಭಕ್ತಿ ತೋರಿರಿ. {52}

فَتَقَطَّعُوا أَمْرَهُمْ بَيْنَهُمْ زُبُرًا ۖ كُلُّ حِزْبٍ بِمَا لَدَيْهِمْ فَرِحُونَ

ನಿಜವೇನೆಂದರೆ (ನಂತರದ ದಿನಗಳಲ್ಲಿ) ಜನರು ಧರ್ಮದ ಆದೇಶಗಳನ್ನು (ಪಾಲಿಸುವ ವಿಷಯದಲ್ಲಿ ಭಿನ್ನಮತ ತಾಳಿ ಅದನ್ನು) ತಮ್ಮೊಳಗೆ ಹರಿದು ಹಂಚಿಕೊಂಡರು; ಅವರಲ್ಲಿನ ಪ್ರತಿ ಪಂಗಡವೂ ಈಗ ತನ್ನ ಬಳಿ ಏನಿದೆಯೋ ಅದರಲ್ಲೇ ತನ್ಮಯರಾಗಿದ್ದಾರೆ. {53}

فَذَرْهُمْ فِي غَمْرَتِهِمْ حَتَّىٰ حِينٍ

ಆದ್ದರಿಂದ ಪೈಗಂಬರರೇ, (ನಿಮ್ಮ ಬೋಧನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಈ ಜನರನ್ನು) ಸ್ವಲ್ಪ ಸಮಯದ ವರೆಗೆ ಅವರ ಅಜ್ಞಾನದಲ್ಲಿ ಮುಳುಗಿರಲು ಬಿಡಿ. {54}

أَيَحْسَبُونَ أَنَّمَا نُمِدُّهُمْ بِهِ مِنْ مَالٍ وَبَنِينَ

ಧನ ಸಂಪತ್ತು ಮತ್ತು ಸಂತಾನವನ್ನು ನಾವು ಹೀಗೆಯೇ ಅವರಿಗೆ ನೀಡುತ್ತಿರುತ್ತೇವೆ ಎಂದ ಅವರು ಭಾವಿಸಿದ್ದಾರೆಯೇ? {55}

نُسَارِعُ لَهُمْ فِي الْخَيْرَاتِ ۚ بَلْ لَا يَشْعُرُونَ

ಅವರಿಗೆ ಶ್ರೀಮಂತಿಕೆ ಒದಗಿಸುವುದರಲ್ಲೇ ನಾವು ನಿರತರಾಗಿ ಬಿಟ್ಟಿದ್ದೇವೆಯೇ? ಇಲ್ಲ, ಅವರಿಗೆ ಯಥಾರ್ಥ ತಿಳಿಯದು. {56}

إِنَّ الَّذِينَ هُمْ مِنْ خَشْيَةِ رَبِّهِمْ مُشْفِقُونَ

ನಿಶ್ಚಿತವಾಗಿ, ಯಾರು ತಮ್ಮ ಕರ್ತಾರನ (ಶಿಕ್ಷೆಗೆ) ಹೆದರಿ ಅವನ ಭಯ ಇರಿಸಿಕೊಳ್ಳುತ್ತಾರೋ - {57}

وَالَّذِينَ هُمْ بِآيَاتِ رَبِّهِمْ يُؤْمِنُونَ

ಯಾರು ತಮ್ಮ ಕರ್ತಾರನ ವಚನಗಳಲ್ಲಿ ನಂಬಿಕೆ ಇರಿಸಿಕೊಳ್ಳುತ್ತಾರೋ - {58}

وَالَّذِينَ هُمْ بِرَبِّهِمْ لَا يُشْرِكُونَ

ಅವರು ತಮ್ಮ ಕರ್ತಾರನ (ದೇವತ್ವದಲ್ಲಿ) ಯಾರನ್ನೂ ಸೇರಿಸುವುದಿಲ್ಲ! {59}

وَالَّذِينَ يُؤْتُونَ مَا آتَوْا وَقُلُوبُهُمْ وَجِلَةٌ أَنَّهُمْ إِلَىٰ رَبِّهِمْ رَاجِعُونَ

ಅವರು ತಾವು (ದಾನವಾಗಿ) ಕೋಡಬೇಕಾದಷ್ಟನ್ನು ಕೊಡುತ್ತಲೇ ಇರುತ್ತಾರೆ; (ಹಾಗೆ ಕೊಡುವಾಗ) ತಮ್ಮ ಕರ್ತಾರನೆಡೆಗೆ ಮರಳಿಕ್ಕಿದೆಯೆಂಬ ಚಿಂತೆಯು ಅವರ ಹೃದಯಗಳನ್ನು ನಡುಗಿಸಿ ಬಿಡುತ್ತದೆ. {60}

أُولَٰئِكَ يُسَارِعُونَ فِي الْخَيْرَاتِ وَهُمْ لَهَا سَابِقُونَ

ಹೌದು, ಅಂತಹವರು ಒಳಿತುಗಳನ್ನು ಮಾಡುವ ವಿಷಯದಲ್ಲಿ ತಮ್ಮೊಳಗೆ ಸ್ಪರ್ಧಿಸುತ್ತಿರುತ್ತಾರೆ ಮತ್ತು ಅದರ ಸಾಧನೆಗಾಗಿ ಮುಚೂಣಿಯಲ್ಲಿರುತ್ತಾರೆ. {61}

وَلَا نُكَلِّفُ نَفْسًا إِلَّا وُسْعَهَا ۖ وَلَدَيْنَا كِتَابٌ يَنْطِقُ بِالْحَقِّ ۚ وَهُمْ لَا يُظْلَمُونَ

ವಿಷಯವೇನೆಂದರೆ ನಾವು ಯಾವೊಬ್ಬನ ಮೇಲೂ ಆತನ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ. ಹೌದು, ನಮ್ಮ ಬಳಿ (ಜನರ ಚಟುವಟಿಕೆಗಳ ಸಂಪೂರ್ಣವಾದ) ದಾಖಲೆಯಿರುತ್ತದೆ; ಮತ್ತು ಅದು ಸತ್ಯವನ್ನೇ ಹೇಳುತ್ತದೆ! ಯಾರ ಮೇಲೂ (ಅಂದು) ಅನ್ಯಾಯವಾಗಲಾರದು. {62}

بَلْ قُلُوبُهُمْ فِي غَمْرَةٍ مِنْ هَٰذَا وَلَهُمْ أَعْمَالٌ مِنْ دُونِ ذَٰلِكَ هُمْ لَهَا عَامِلُونَ

ವಿಷಯ ಹಾಗಿದ್ದರೂ (ನಮ್ಮ ಪ್ರವಾದಿಗಳನ್ನು ಅಲ್ಲಗಳೆದವರ) ಹೃದಯಳು ಆ ಯಥಾರ್ಥವನ್ನು ಮರೆತು ಬಿಟ್ಟಿದೆ. (ಒಳಿತುಗಳಲ್ಲ; ಬದಲಾಗಿ) ಅವರಿಗೆ ಮಾಡಲು ಬೇರೆಯೇ ಕೆಲಸಗಳಿವೆ! ಅವರ ಅದರಲ್ಲೇ ಮಗ್ನರಾಗಿದ್ದಾರೆ. {63}

حَتَّىٰ إِذَا أَخَذْنَا مُتْرَفِيهِمْ بِالْعَذَابِ إِذَا هُمْ يَجْأَرُونَ

ಎಲ್ಲಿಯ ತನಕವೆಂದರೆ, ನಾವು ಅವರ ಪೈಕಿಯ ಶ್ರೀಮಂತರನ್ನು ಶಿಕ್ಷಿಸಲು ಹಿಡಿಯುವ ತನಕ. ಆಗ ಅವರು ಸಹಾಯಕ್ಕಾಗಿ ಚೀರಾಡುವರು. {64}

لَا تَجْأَرُوا الْيَوْمَ ۖ إِنَّكُمْ مِنَّا لَا تُنْصَرُونَ

ಇಂದು ನೀವು ಚೀರಾಡಬೇಡಿ. ನಿಜವಾಗಿ ಇಂದು ನಿಮಗೆ ನಮ್ಮಿಂದ ಯಾವ ಸಹಾಯವೂ ಸಿಗದು. {65}

قَدْ كَانَتْ آيَاتِي تُتْلَىٰ عَلَيْكُمْ فَكُنْتُمْ عَلَىٰ أَعْقَابِكُمْ تَنْكِصُونَ

ನಿಮಗೆ (ಉಪದೇಶವಾಗಿ) ನಮ್ಮ ವಚನಗಳನ್ನು ಓದಿ ಕೇಳಿಸಲಾಗುತ್ತಿತ್ತು, ಆದರೆ ನೀವು [ಪೈಗಂಬರರನ್ನು ಅಪಹಾಸ್ಯಮಾಡುತ್ತಾ ಅಲ್ಲಿಂದ ಕಾಲ್ಕಿತ್ತು] ಹಿಂದಿರುಗಿ ಓಡುತ್ತಿದ್ದಿರಿ. {66}

مُسْتَكْبِرِينَ بِهِ سَامِرًا تَهْجُرُونَ

(ನಮ್ಮ ವಚನಗಳನ್ನೂ ಪೈಗಂಬರರನ್ನೂ ಧಿಕ್ಕರಿಸಿ) ಅವರೊಂದಿಗೆ ನೀವು ದುರಹಂಕಾರದಿಂದ ವರ್ತಿಸುತ್ತಿದ್ದಿರಿ; ರಾತ್ರಿ ಕೂಟಗಳಲ್ಲಿ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ, ಅವರ ಕುರಿತು ಕೆಟ್ಟ ಕೆಟ್ಟದಾಗಿ ಮಾತಾಡುತ್ತಿದ್ದಿರಿ! {67}

أَفَلَمْ يَدَّبَّرُوا الْقَوْلَ أَمْ جَاءَهُمْ مَا لَمْ يَأْتِ آبَاءَهُمُ الْأَوَّلِينَ

ಪೈಗಂಬರರೇ, ಅವರು ಈ ಉಪನ್ಯಾಸದ (ಅಂದರೆ ಕುರ್‌ಆನ್ ನ) ಬಗ್ಗೆ ಆಳವಾಗಿ ವಿಚಾರ ಮಾಡುವುದಿಲ್ಲವೇ? ಅಥವಾ ಅವರ ತಾತ ಮುತ್ತಾತಂದಿರ ಬಳಿಗೆ ಬಾರದ ಹೊಸ ವಿಷಯವೇನಾದರೂ ಅವರ ಬಳಿಗೆ ಬಂದಿದೆಯೇ?! {68}

أَمْ لَمْ يَعْرِفُوا رَسُولَهُمْ فَهُمْ لَهُ مُنْكِرُونَ

ಅಥವಾ ಅವರಿಗೆ ತಮ್ಮತ್ತ ಕಳುಹಿಸಲ್ಪಟ್ಟ ದೂತರುಗಳ ಪರಿಚಯವಿಲ್ಲದ ಕಾರಣ ಅವರು ದೂತರುಗಳನ್ನು ತಿರಸ್ಕರಿಸುತ್ತಿರುವರೇ?! {69}

أَمْ يَقُولُونَ بِهِ جِنَّةٌ ۚ بَلْ جَاءَهُمْ بِالْحَقِّ وَأَكْثَرُهُمْ لِلْحَقِّ كَارِهُونَ

ಅಥವಾ ದೂತರಿಗೆ ಹುಚ್ಚು ಹಿಡಿದಿದೆ ಎಂದು ಅವರು ವಾದಿಸುತ್ತಿರುವರೇ? ಇಲ್ಲ, ಹುಚ್ಚು ಹಿಡಿದಿಲ್ಲ; ಬದಲಾಗಿ ದೂತರು ಅವರ ಬಳಿಗೆ ಸತ್ಯವಾದುದನ್ನು ತಂದಿರುತ್ತಾರೆ; ಆದರೆ ಅವರಲ್ಲಿ ಹೆಚ್ಚಿನವರಿಗೆ ಸತ್ಯವು ಒಂದು ಅನಿಷ್ಟ ಸಂಗತಿಯಾಗಿದೆ. {70}

وَلَوِ اتَّبَعَ الْحَقُّ أَهْوَاءَهُمْ لَفَسَدَتِ السَّمَاوَاتُ وَالْأَرْضُ وَمَنْ فِيهِنَّ ۚ بَلْ أَتَيْنَاهُمْ بِذِكْرِهِمْ فَهُمْ عَنْ ذِكْرِهِمْ مُعْرِضُونَ

ಹೌದು, ಸತ್ಯವು ಅವರ ಬಯಕೆಗಳಿಗೆ ಅನುಗುಣವಾಗಿರುತ್ತಿದ್ದರೆ ಈ ಅಕಾಶಗಳು, ಭೂಮಿ ಮತ್ತು ಅವುಗಳಲ್ಲಿರುವ ಎಲ್ಲವೂ ಅಸ್ತವ್ಯಸ್ತವಾಗಿ ಬಿಡುತ್ತಿತ್ತು! ಇಲ್ಲ, ನಿಜವೇನೆಂದರೆ ನಾವು ಅವರಿಗಾಗಿಯೇ ಇರುವ ಒಂದು ಉಪದೇಶ (ಅಂದರೆ ಈ ಕುರ್‌ಆನ್ ಅನ್ನು) ಅವರ ಬಳಿಗೆ ಕಳುಹಿಸಿರುತ್ತೇವೆ; ಆದರೆ ಅವರು ತಮಗಾಗಿಯೇ ಬಂದ ಉಪದೇಶದಿಂದ ಮುಖ ತಿರುಗಿಸಿ ಕೊಳ್ಳುವವರಾದರು! {71}

أَمْ تَسْأَلُهُمْ خَرْجًا فَخَرَاجُ رَبِّكَ خَيْرٌ ۖ وَهُوَ خَيْرُ الرَّازِقِينَ

ಅಥವಾ, ಪೈಗಂಬರರೇ, ನೀವು ಅವರಿಂದ ಏನಾದರೂ ಸಂಭಾವನೆ ಕೇಳುತ್ತಿರುವಿರಾ! ನಿಮ್ಮ ಕರ್ತಾರನು ನೀಡುವ ಸಂಭಾವನೆಯೇ ನಿಮಗೆ ಉತ್ತಮ (ಎಂದು ಅವರಿಗೆ ತಿಳಿಯದೇ?); ಹೌದು, ನೀಡುವುದರಲ್ಲಿ ಅವನೇ ಅತ್ಯುತ್ತಮನು! {72}

وَإِنَّكَ لَتَدْعُوهُمْ إِلَىٰ صِرَاطٍ مُسْتَقِيمٍ

ಖಂಡಿತವಾಗಿ ನೀವು ಅವರನ್ನು ಸರಿಯಾದ ದಾರಿಯೆಡೆಗೆ ಆಹ್ವಾನಿಸುತ್ತಿರುವಿರಿ. {73}

وَإِنَّ الَّذِينَ لَا يُؤْمِنُونَ بِالْآخِرَةِ عَنِ الصِّرَاطِ لَنَاكِبُونَ

ಆದರೆ ಪರಲೋಕದ ವಿಷಯದಲ್ಲಿ ನಂಬಿಕೆ ಇಲ್ಲದ ಜನರು ಸರಿಯಾದ ದಾರಿಯಿಂದ ಸರಿದು (ತಮ್ಮಿಚ್ಛೆಯಂತೆ) ನಡಯಲು ಬಯಸುತ್ತಾರೆ. {74}

وَلَوْ رَحِمْنَاهُمْ وَكَشَفْنَا مَا بِهِمْ مِنْ ضُرٍّ لَلَجُّوا فِي طُغْيَانِهِمْ يَعْمَهُونَ

ಅದಾಗಿಯೂ, ನಾವು ಅವರ ಮೇಲೆ ದಯೆ ತೋರಿ ಅವರಿಗೆ ತಗುಲಿದ ಸಂಕಷ್ಟಗಳನ್ನು ಅವರಿಂದ ನೀಗಿಸಿ ಬಿಟ್ಟರೆ (ಪಶ್ಚಾತ್ತಾಪ ಪಡುವ ಬದಲು) ಅವರು ಹಠಮಾರಿತನದಿಂದ ಮತ್ತಷ್ಟು ಅತಿರೇಕವೆಸಗುತ್ತಾ ಅಂಧರಾಗಿ ಅಲೆಯುವ ಜನರಾಗಿದ್ದಾರೆ. {75}

وَلَقَدْ أَخَذْنَاهُمْ بِالْعَذَابِ فَمَا اسْتَكَانُوا لِرَبِّهِمْ وَمَا يَتَضَرَّعُونَ

[ಹಿಂದಿನವರ ವಿಷಯವೂ ಅಷ್ಟೆ. ಎಚ್ಚರಿಸುವ ಸಲುವಾಗಿ] ಅವರನ್ನು ಹಿಡಿದು ನಾವು (ಲಘು) ಶಿಕ್ಷೆಗೆ ಗುರಿಪಡಿಸಿದೆವು. ಆದರೂ ಅವರು ತಮ್ಮ ಪರಿಪಾಲಕನಾದ (ಅಲ್ಲಾಹ್ ನ) ಮುಂದೆ ತಮ್ಮನ್ನು ತಗ್ಗಿಸಿಕೊಳ್ಳಲಿಲ್ಲ, ವಿನಮ್ರತೆಯೊಂದಿಗೆ ಕ್ಷಮೆಯಾಚಿಸಲೂ ಇಲ್ಲ! {76}

حَتَّىٰ إِذَا فَتَحْنَا عَلَيْهِمْ بَابًا ذَا عَذَابٍ شَدِيدٍ إِذَا هُمْ فِيهِ مُبْلِسُونَ

ಎಲ್ಲಿಯ ತನಕವೆಂದರೆ, ನಾವು ಬಹಳ ಕಠಿಣ ಸ್ವರೂಪದ ಶಿಕ್ಷೆಯ ಬಾಗಿಲನ್ನು ಅವರ ಮೇಲೆ ತೆರೆದು ಬಿಟ್ಟೆವು; ಆಗ ಅವರು ನಿರಾಶೆಗೊಳ್ಳಬೇಕಾಯಿತು! {77}

وَهُوَ الَّذِي أَنْشَأَ لَكُمُ السَّمْعَ وَالْأَبْصَارَ وَالْأَفْئِدَةَ ۚ قَلِيلًا مَا تَشْكُرُونَ

ಜನರೇ, ನಿಮಗೆ ಶ್ರವಣಶಕ್ತಿ, ನೋಡುವ ಸಾಮರ್ಥ್ಯ ಮತ್ತು (ಚಿಂತಿಸಲು) ಹೃದಯಗಳನ್ನು ನೀಡಿದವನು ಆ ಅಲ್ಲಾಹ್ ನೇ! ಆದರೆ ನೀವು ಕೃತಜ್ಞತೆ ತೋರುವುದು ತೀರಾ ಕಡಿಮೆ. {78}

وَهُوَ الَّذِي ذَرَأَكُمْ فِي الْأَرْضِ وَإِلَيْهِ تُحْشَرُونَ

ಅವನೇ ನಿಮ್ಮನ್ನು ಭೂಮಿಯ ಮೇಲೆ ಹರಡಿಬಿಟ್ಟವನು. ಕೊನೆಗೆ ನಿಮ್ಮೆಲ್ಲರನ್ನು ಅವನೆಡೆಗೆ ಒಟ್ಟುಗೂಡಿಸಲಾಗುವುದು. {79}

وَهُوَ الَّذِي يُحْيِي وَيُمِيتُ وَلَهُ اخْتِلَافُ اللَّيْلِ وَالنَّهَارِ ۚ أَفَلَا تَعْقِلُونَ

ಜೀವನ ನೀಡುವವನೂ ಮರಣ ನೀಡುವವನೂ ಅವನೇ. ರಾತ್ರಿ ಮತ್ತು ಹಗಲುಗಳ ಮರುಕಳಿಸುವಿಕೆ ಅವನದೇ ನಿಯಂತ್ರಣಕ್ಕೆ ಒಳಪಟ್ಟಿದೆ. ಅದಾಗ್ಯೂ ನೀವು ಚಿಂತಿಸುವುದಿಲ್ಲವೇ? {80}

بَلْ قَالُوا مِثْلَ مَا قَالَ الْأَوَّلُونَ

ಆದರೆ ಪೈಗಂಬರರೇ, ಅವರೂ ಅಷ್ಟೆ, ಹಿಂದಿನವರು ಹೇಳಿದಂತೆಯೇ ಹೇಳುತ್ತಿದ್ದಾರೆ. {81}

قَالُوا أَإِذَا مِتْنَا وَكُنَّا تُرَابًا وَعِظَامًا أَإِنَّا لَمَبْعُوثُونَ

ಏನು? ನಾವು ಸತ್ತು, ಮಣ್ಣು ಮತ್ತು ಮೂಳೆಗಳಾಗಿ ಮಾರ್ಪಟ್ಟ ನಂತರ ಪುನಃ ನಮ್ಮನ್ನು ಜೀವಂತಗೊಳಿಸಿ ಎಬ್ಬಿಸಲಾಗುವುದೇ? ಎಂದು ಪ್ರಶ್ನಿಸಿಸುತ್ತಿದ್ದಾರೆ. {82}

لَقَدْ وُعِدْنَا نَحْنُ وَآبَاؤُنَا هَٰذَا مِنْ قَبْلُ إِنْ هَٰذَا إِلَّا أَسَاطِيرُ الْأَوَّلِينَ

ಈಗ ನಮಗೆ ನೀಡಲಾಗುತ್ತಿರುವ ಇಂತಹ ಎಚ್ಚರಿಕೆಯನ್ನೇ ಹಿಂದೆ ನಮ್ಮ ಪೂರ್ವಜರಿಗೂ ನೀಡಲಾಗಿತ್ತು! ಇವೆಲ್ಲ ಹಿಂದಿನವರ ಕಟ್ಟು ಕಥೆಗಳಲ್ಲದೆ ಬೇರೇನೂ ಅಲ್ಲ. {83}

قُلْ لِمَنِ الْأَرْضُ وَمَنْ فِيهَا إِنْ كُنْتُمْ تَعْلَمُونَ

ಪೈಗಂಬರರೇ, ಅವರೊಂದಿಗೆ ಕೇಳಿರಿ: ಜನರೇ, ನಿಮಗೆ ತಿಳಿದಿದೆಯೆಂದಾದರೆ ಈಗ ಹೇಳಿ - ಈ ಭೂಮಿ ಮತ್ತು ಅದರಲ್ಲಿ ವಾಸಿಸುತ್ತಿರುವ ಎಲ್ಲರೂ ಯಾರಿಗೆ ಸೇರಿದವರು? {84}

سَيَقُولُونَ لِلَّهِ ۚ قُلْ أَفَلَا تَذَكَّرُونَ

ಎಲ್ಲರೂ ಅಲ್ಲಾಹ್ ನಿಗೆ ಸೇರಿದವರು ಎಂದು ಅವರು ಕೂಡಲೇ ಉತ್ತರಿಸುವರು! ಮತ್ತೇಕೆ ನೀವು (ಅವನ) ಉಪದೇಶ ಸ್ವೀಕರಿಸುತ್ತಿಲ್ಲ ಎಂದು ಅವರನ್ನು ಪ್ರಶ್ನಿಸಿರಿ. {85}

قُلْ مَنْ رَبُّ السَّمَاوَاتِ السَّبْعِ وَرَبُّ الْعَرْشِ الْعَظِيمِ

ಪೈಗಂಬರರೇ, ಏಳು ಆಕಾಶಗಳ ಯಜಮಾನ ಹಾಗೂ [ಇಡೀ ವಿಶ್ವವನ್ನು ನಿಯಂತ್ರಿಸುವ] ಅತಿ ಭವ್ಯವಾದ ಆಡಳಿತ-ಗದ್ದುಗೆಯ (ಅಂದರೆ ವೈಭವಯುತವಾದ ಅರ್ಷ್ ನ) ಯಜಮಾನ ಯಾರು ಎಂದು ಅವರನ್ನು ಕೇಳಿರಿ. {86}

سَيَقُولُونَ لِلَّهِ ۚ قُلْ أَفَلَا تَتَّقُونَ

ಅವೆಲ್ಲದರ ಯಜಮಾನಿಕೆ ಅಲ್ಲಾಹ್ ನಿಗೆ ಸೇರಿದೆ ಎಂದು ಅವರು ಉತ್ತರಿಸುವರು. ಹಾಗಾದರೆ ನೀವು ಅವನಿಗೆ ಭಯಭಕ್ತಿ ತೋರುವುದಿಲ್ಲವೇ ಎಂದು ಅವರೊಂದಿಗೆ ಕೇಳಿರಿ. {87}

قُلْ مَنْ بِيَدِهِ مَلَكُوتُ كُلِّ شَيْءٍ وَهُوَ يُجِيرُ وَلَا يُجَارُ عَلَيْهِ إِنْ كُنْتُمْ تَعْلَمُونَ

ಯಾರ ಕೈಯಲ್ಲಿ (ವಿಶ್ವದ) ಸಕಲ ವಸ್ತುಗಳ ಸರ್ವಭೌಮತ್ವ ಅಡಕವಾಗಿದೆ? ಯಾರು ಎಲ್ಲರಿಗೂ ರಕ್ಷಣೆ ನೀಡುತ್ತಾನೆ ಮತ್ತು ಯಾರ ವಿರುದ್ಧ ರಕ್ಷಣೆ ನೀಡಲು ಸಾಧ್ಯವಿಲ್ಲ? ನೀವು ತಿಳಿದವರಾದರೆ ಉತ್ತರಿಸಿ ಎಂದು ಪೈಗಂಬರರೇ, ಅವರೊಂದಿಗೆ ಕೇಳಿರಿ. {88}

سَيَقُولُونَ لِلَّهِ ۚ قُلْ فَأَنَّىٰ تُسْحَرُونَ

ಆ ಎಲ್ಲ ಗುಣಗಳು ಅಲ್ಲಾಹ್ ನಿಗೆ ಸೇರಿದ್ದಾಗಿವೆ ಎಂದು ಅವರು (ಸಹಜವಾಗಿಯೇ) ಹೇಳುವರು. ಹಾಗಾದರೆ ನೀವು ಎಲ್ಲಿಂದ ಹೇಗೆ ವಂಚಿಸಲ್ಪಡುತ್ತಿರುವಿರಿ ಎಂದು ಅವರನ್ನು ಪ್ರಶ್ನಿಸಿರಿ. {89}

بَلْ أَتَيْنَاهُمْ بِالْحَقِّ وَإِنَّهُمْ لَكَاذِبُونَ

ಇಲ್ಲ! ನಾವು ಅವರ ಬಳಿಗೆ ಸಾಕ್ಷಾತ್ ಸತ್ಯವನ್ನೇ ಕಳುಹಿಸಿರುತ್ತೇವೆ. ಆದರೆ (ಆ ವಿಗ್ರಹಾರಾಧಕರು) ಅಪ್ಪಟ ಸುಳ್ಳರಾಗಿರುತ್ತಾರೆ! {90}

مَا اتَّخَذَ اللَّهُ مِنْ وَلَدٍ وَمَا كَانَ مَعَهُ مِنْ إِلَٰهٍ ۚ إِذًا لَذَهَبَ كُلُّ إِلَٰهٍ بِمَا خَلَقَ وَلَعَلَا بَعْضُهُمْ عَلَىٰ بَعْضٍ ۚ سُبْحَانَ اللَّهِ عَمَّا يَصِفُونَ

ಅಲ್ಲಾಹ್ ನು ತನಗಾಗಿ ಯಾರನ್ನೂ ಪುತ್ರನನ್ನಾಗಿ ಮಾಡಿಕೊಂಡಿಲ್ಲ; ಅಂತೆಯೇ ಅವನ ಜೊತೆಗೆ ಬೇರೆ ದೇವರುಗಳೂ ಇಲ್ಲ. ಇರುತ್ತಿದ್ದರೆ ಆ ದೇವರುಗಳು ಖಂಡಿತವಾಗಿ ತಮ್ಮ ತಮ್ಮ ಸೃಷ್ಟಿಗಳೊಂದಿಗೆ ಬೇರೆ ಬೇರೆಯಾಗಿ ಹೋಗುತ್ತಿದ್ದರು. ಮಾತ್ರವಲ್ಲ, (ಒಬ್ಬರಿಗಿಂತ ಒಬ್ಬರು ಮೇಲುಗೈ ಸಾಧಿಸಲು) ಪರಸ್ಪರ ಹೊಡೆದಾಟ ನಡೆಸುತ್ತಿದ್ದರು. ಅಲ್ಲಾಹ್ ನ ಮೇಲೆ ಅವರು ಮಾಡುತ್ತಿರುವ ಸುಳ್ಳಾರೋಪಗಳು (ಅವನಿಗೆ ಅನ್ವಯಿಸುವುದಿಲ್ಲ; ಏಕೆಂದರೆ ಅವುಗಳಿಂದ ಮುಕ್ತನಾದ ಅವನು) ಪರಮ ಪಾವನನು! {91}

عَالِمِ الْغَيْبِ وَالشَّهَادَةِ فَتَعَالَىٰ عَمَّا يُشْرِكُونَ

ಅವರ ಕಣ್ಣಿಗೆ ಅಗೋಚರವಾದ ವಿಷಯಗಳನ್ನೂ ಕಣ್ಣ ಮುಂದಿರುವವುಗಳನ್ನೂ ಅವನು ಚೆನ್ನಾಗಿ ತಿಳಿದವನು. ಹೌದು, ಅವರು ಯಾರನ್ನೆಲ್ಲ ಅವನ ದೇವತ್ವದಲ್ಲಿ ಭಾಗಿಗೊಳಿಸುತ್ತಿರುವರೋ ಅವುಗಳಿಗಿಂತ ಅವನು ಬಹಳ ಮೇಲಾದವನು. {92}

قُلْ رَبِّ إِمَّا تُرِيَنِّي مَا يُوعَدُونَ

ಪೈಗಂಬರರೇ, ನೀವು ಪ್ರಾರ್ಥಿಸಿರಿ: ಓ ನನ್ನ ಒಡೆಯನೇ, ಯಾವ ಶಿಕ್ಷೆಯ ಕುರಿತು ಅವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆಯೋ ಅದನ್ನು (ನನ್ನ ಜೀವಿತಕಾಲದಲ್ಲೇ) ನನಗೆ ತೋರಿಸುವುದಾದರೆ - {93}

رَبِّ فَلَا تَجْعَلْنِي فِي الْقَوْمِ الظَّالِمِينَ

ಶಿಕ್ಷೆಗೊಳಗಾಗಲಿರುವ ಆ ದುಷ್ಟರ ಸಂಘದಲ್ಲಿ ನನ್ನನ್ನು ಮಾತ್ರ ಸೇರಿಸ ಬೇಡ! {94}

وَإِنَّا عَلَىٰ أَنْ نُرِيَكَ مَا نَعِدُهُمْ لَقَادِرُونَ

ಪೈಗಂಬರೇ, ಹೌದು, ನಾವು ಅವರಿಗೆ ಯಾವ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಿರುವೆವೋ ಅದನ್ನು ನೀವೂ ಸಹ ಕಾಣುವಂತೆ ಮಾಡುವ [ಅರ್ಥಾತ್ ನಿಮ್ಮ ಜೀವಿತಕಾಲದಲ್ಲೇ ಅವರನ್ನು ಶಿಕ್ಷಿಸುವ] ಶಕ್ತಿ ಖಂಡಿತವಾಗಿ ನಮಗಿದೆ! {95}

ادْفَعْ بِالَّتِي هِيَ أَحْسَنُ السَّيِّئَةَ ۚ نَحْنُ أَعْلَمُ بِمَا يَصِفُونَ

[ಅದಾಗ್ಯೂ ಅವರು ಕೆಟ್ಟದ್ದನ್ನೇ ಮಾಡುತ್ತಾರೆ. ಆದರೆ ಪೈಗಂಬರರೇ, ನೀವು] ಆ ಕೆಟ್ಟದ್ದನ್ನು ಬಹಳ ಉದಾತ್ತ ರೀತಿಯಲ್ಲಿ ದೂರವಾಗಿಸಿರಿ. ಅವರು ಏನು ಆಡಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಬಹಳ ಚೆನ್ನಾಗಿ ತಿಳಿದವರಾಗಿದ್ದೇವೆ. {96}

وَقُلْ رَبِّ أَعُوذُ بِكَ مِنْ هَمَزَاتِ الشَّيَاطِينِ

ಹಾಗಿರುವಾಗ ನೀವು (ಅಲ್ಲಾಹ್ ನೊಂದಿಗೆ) ಪ್ರಾರ್ಥಿಸಿರಿ: ಓ ನನ್ನ ದೇವಾ, (ಜಿನ್ನ್ ಮತ್ತು ಮನುಷ್ಯಲ್ಲಿನ) ಧೂರ್ತರ ಪ್ರಲೋಭನೆಗಳಿಗೆ ಒಳಗಾಗದಂತೆ ನೀನು ನನಗೆ ರಕ್ಷಣೆ ಒದಗಿಸು; {97}

وَأَعُوذُ بِكَ رَبِّ أَنْ يَحْضُرُونِ

ನನ್ನ ದೇವಾ, ಅಂತಹ ಧೂರ್ತರು ನನ್ನ ಹತ್ತಿರವೂ ಸುಳಿಯದಂತೆ ಅವರಿಂದ ನನ್ನನ್ನು ರಕ್ಷಿಸು! {98}

حَتَّىٰ إِذَا جَاءَ أَحَدَهُمُ الْمَوْتُ قَالَ رَبِّ ارْجِعُونِ

[ಅವರು ಕೆಟ್ಟದ್ದನ್ನೇ ಮಾಡುವುದರಲ್ಲಿ ತೊಡಗಿರುತ್ತಾರೆ]. ಎಲ್ಲಿಯವರೆಗೆಂದರೆ ಅಂತಹ ಧೂರ್ತರಲ್ಲಿ ಯಾರಿಗಾದರೂ ಮರಣದ ಸಮಯ ಬಂದಾಗ, ನನ್ನ ಪ್ರಭುವೇ, ನನ್ನನ್ನು ಮರಳಿ (ಭೂಲೋಕಕ್ಕೆ) ಕಳುಹಿಸು ಎಂದು ಗೋಳಿಡುತ್ತಾನೆ! {99}

لَعَلِّي أَعْمَلُ صَالِحًا فِيمَا تَرَكْتُ ۚ كَلَّا ۚ إِنَّهَا كَلِمَةٌ هُوَ قَائِلُهَا ۖ وَمِنْ وَرَائِهِمْ بَرْزَخٌ إِلَىٰ يَوْمِ يُبْعَثُونَ

ಏಕೆಂದರೆ ನಾನು ಬಿಟ್ಟು ಬಂದ ಆ (ಭೂಲೋಕದಲ್ಲಿದ್ದುಕೊಂಡು) ಸ್ವಲ್ಪ ಸತ್ಕರ್ಮಗಳನ್ನು ಮಾಡುವಂತಾಗಲು (ನನ್ನನ್ನು ಪುನಃ ಭೂಲೋಕಕ್ಕೆ ಮರಳಿಸು ಎನ್ನುವನು)! ಸರ್ವಥಾ ಸಾಧ್ಯವಿಲ್ಲ. ಅದೆಲ್ಲ ಕೇವಲ ಅವನಾಡುವ ಮಾತುಗಳಷ್ಟೆ. ಪುನರುತ್ಥಾನದ ದಿನದ ವರೆಗೂ (ಭೂಮಿಗೆ ಹಿಂದಿರುಗಲು ಸಾಧ್ಯವೇ ಆಗದಂತಹ) ಒಂದು ತಡೆ ಅವನ ಮುಂದೆ ಇರುವುದು! {100}

فَإِذَا نُفِخَ فِي الصُّورِ فَلَا أَنْسَابَ بَيْنَهُمْ يَوْمَئِذٍ وَلَا يَتَسَاءَلُونَ

ನಂತರ (ಪುನರುತ್ಥಾನದ ದಿನ ಪುನಃ) ಕಹಳೆಯನ್ನು ಊದಲಾದಾಗ ಅವರ ನಡುವೆ ಅಂದು (ಭೂಲೋಕಲ್ಲಿ ಇದ್ದಂತಹ) ಯಾವ ಸಂಬಂಧಗಳೂ ಇರಲಾರದು; ಅವರು ಪರಸ್ಪರ ಸಹಾಯ ಯಾಚಿಸುವ ಸ್ಥಿತಿಯಲ್ಲೂ ಇರುವುದಿಲ್ಲ. {101}

فَمَنْ ثَقُلَتْ مَوَازِينُهُ فَأُولَٰئِكَ هُمُ الْمُفْلِحُونَ

ಯಾರ ಸತ್ಕರ್ಮಗಳ ತಕ್ಕಡಿ ಭಾರವಾಗಿರುವುದೋ ಅವರು ಮಾತ್ರ ಅಂದು ವಿಜಯಿಗಳಾಗುವರು. {102}

وَمَنْ خَفَّتْ مَوَازِينُهُ فَأُولَٰئِكَ الَّذِينَ خَسِرُوا أَنْفُسَهُمْ فِي جَهَنَّمَ خَالِدُونَ

ಮತ್ತು ಯಾರ ಸತ್ಕರ್ಮಗಳ ತಕ್ಕಡಿ ಹಗುರವಾಗಿರುವುದೋ ಅವರು ತಮ್ಮನ್ನು ತಾವೇ ನಷ್ಟಕ್ಕೆ ಗುರಿಪಡಿಸಿಕೊಂಡವರು; ನರಕದಲ್ಲಿ ಸದಾ ಕಾಲ ಬಿದ್ದಿರಬೇಕಾದವರು. {103}

تَلْفَحُ وُجُوهَهُمُ النَّارُ وَهُمْ فِيهَا كَالِحُونَ

ನರಕದ ಬೆಂಕಿ ಅವರ ಮುಖಗಳನ್ನು ಸುಟ್ಟು ಬಿಡುವುದು; ಅದರಲ್ಲಿ ಅವರು [ತುಟಿಗಳು ಸುಟ್ಟು ಕರಗಿದ ಕಾರಣ] ಕಿಸಿದ ಹಲ್ಲಿನ ಕುರೂಪಿಗಳಾಗಿ ಬಿದ್ದಿರುವರು. {104}

أَلَمْ تَكُنْ آيَاتِي تُتْلَىٰ عَلَيْكُمْ فَكُنْتُمْ بِهَا تُكَذِّبُونَ

ನನ್ನ ವಚನಗಳನ್ನು ಓದಿ ಕೇಳಿಸುತ್ತಿದ್ದಾಗ ಧಿಕ್ಕಾರ ತೋರಿ ಅದನ್ನು ತಿರಸ್ಕರಿಸಿ ಬಿಟ್ಟವರು ನೀವೇ ತಾನೆ? (ಎಂದು ಅವರೊಂದಿಗೆ ಕೇಳಲಾಗುವುದು) {105}

قَالُوا رَبَّنَا غَلَبَتْ عَلَيْنَا شِقْوَتُنَا وَكُنَّا قَوْمًا ضَالِّينَ

ಓ ನಮ್ಮ ಒಡೆಯನೇ, ನಮ್ಮ ದೌರ್ಭಾಗ್ಯವು ನಮ್ಮ ಮೇಲೆ ಹಿಡಿತ ಸಾಧಿಸಿತ್ತು. ನಾವಾದರೋ ತಪ್ಪು ದಾರಿಗೆ ಬಿದ್ದ ಜನರಾಗಿದ್ದೆವು ಎಂದು ಅವರು ಹೇಳುವರು. {106}

رَبَّنَا أَخْرِجْنَا مِنْهَا فَإِنْ عُدْنَا فَإِنَّا ظَالِمُونَ

ನಮ್ಮ ಕರ್ತಾರನೇ, ನಮ್ಮನ್ನು ಈ ನರಕದಿಂದ (ಒಮ್ಮೆ) ಹೊರತೆಗೆದು ನೋಡು. ಮತ್ತೇನಾದರೂ ನಾವು ನಮ್ಮ ಹಳೆಯ ಸ್ವಭಾವಕ್ಕೆ ಮರಳಿದರೆ ಖಂಡಿತವಾಗಿ ನಾವು ದುಷ್ಕರ್ಮಿಗಳೇ ಸರಿ! {107}

قَالَ اخْسَئُوا فِيهَا وَلَا تُكَلِّمُونِ

ನೀವೆಲ್ಲ ಅಪಮಾನಿತರಾಗಿ ಅದರಲ್ಲೇ ಬಿದ್ದುಕೊಂಡಿರಿ; ನನ್ನ ಜೊತೆ ಮಾನಾಡಬಾರದು ಎಂದು ಅವರಿಗೆ ಹುಕುಂ ಮಾಡಲಾಗುವುದು. {108}

إِنَّهُ كَانَ فَرِيقٌ مِنْ عِبَادِي يَقُولُونَ رَبَّنَا آمَنَّا فَاغْفِرْ لَنَا وَارْحَمْنَا وَأَنْتَ خَيْرُ الرَّاحِمِينَ

ಇನ್ನೊಂದೆಡೆ, ನಮ್ಮ ಉಪಾಸಕರ ಪೈಕಿಯ ಒಂದು ಗುಂಪಂತು, ಓ ನಮ್ಮ ಒಡೆಯಾ, ನಾವು (ನಿನ್ನನ್ನು ನಂಬಿ) ನಿನ್ನ ವಿಶ್ವಾಸಿಗಳಾದೆವು; ಆದ್ದರಿಂದ ನಮ್ಮ ತಪ್ಪುಗಳನ್ನು ನಮಗಾಗಿ ಕ್ಷಮಿಸು; ನಮ್ಮ ಮೇಲೆ ದಯೆ ತೋರು; ದಯೆ ತೋರುವುದರಲ್ಲಿ ನೀನು ಮಾತ್ರವೇ ಮಿಗಿಲಾದವನು ಎಂದು (ಭೂಲೋಕದಲ್ಲಿ ಜೀವಿಸುತ್ತಿದ್ದಾಗ ನಿರಂತರವಾಗಿ) ಪ್ರಾರ್ಥಿಸುತ್ತಿತ್ತು! {109}

فَاتَّخَذْتُمُوهُمْ سِخْرِيًّا حَتَّىٰ أَنْسَوْكُمْ ذِكْرِي وَكُنْتُمْ مِنْهُمْ تَضْحَكُونَ

ಆದರೆ ನೀವು ಒಂದೇ ಸಮನೆ ಅವರನ್ನು ಅಪಹಾಸ್ಯಕ್ಕೆ ಗುರಿಪಡಿಸಿದಿರಿ. ಎಲ್ಲಿಯ ತನಕವೆಂದರೆ ಆ ನಿಮ್ಮ ಅಪಹಾಸ್ಯವು ನಿಮಗೆ ನನ್ನ ನೆನಪನ್ನೇ ಮರೆಯಿಸಿ ಬಿಟ್ಟಿತು! ಅದರೆ ನೀವು ಅವರನ್ನು (ಅಪಹಾಸ್ಯ ಮಾಡಿ) ನಗುವುದರಲ್ಲೇ ಮಗ್ನರಾಗಿದ್ದಿರಿ. {110}

إِنِّي جَزَيْتُهُمُ الْيَوْمَ بِمَا صَبَرُوا أَنَّهُمْ هُمُ الْفَائِزُونَ

ಆದರೆ ಅವರು (ನಿಮ್ಮ ನಗೆಪಾಟಲಿಗೆ ಗುರಿಯಾಗಿಯೂ) ಸಹನೆಯಿಂದ ವರ್ತಿಸಿದ ಕಾರಣ ಇಂದು ನಾನು ಅವರಿಗೆ ಅದರ ಪ್ರತಿಫಲವನ್ನು ನೀಡಿದ್ದೇನೆ. ಹಾಗಾಗಿ ಅವರು ಖಂಡಿತಾ ವಿಜಯಿಗಳಾಗಿ ತೀರುವರು! {111}

قَالَ كَمْ لَبِثْتُمْ فِي الْأَرْضِ عَدَدَ سِنِينَ

ವರ್ಷಗಳ ಎಣಿಕೆಯ ಪ್ರಕಾರ, ಭೂಲೋಕದಲ್ಲಿ ನೀವು ವಾಸವಿದ್ದ ಕಾಲವೆಷ್ಟು ಎಂದು (ಅವರ ಪೈಕಿ) ಒಬ್ಬನು ಕೇಳುವನು. {112}

قَالُوا لَبِثْنَا يَوْمًا أَوْ بَعْضَ يَوْمٍ فَاسْأَلِ الْعَادِّينَ

ನಾವಲ್ಲಿ ವಾಸವಿದ್ದ ಕಾಲ ಒಂದು ದಿನವರಬಹುದು; ಅಥವಾ ದಿನದ ಒಂದು ಚಿಕ್ಕ ಭಾಗದಷ್ಟಿರಬಹುದು! (ನಮಗಂತು ಹಾಗೆ ಭಾಸವಾಗುತ್ತಿದೆ)! ಆದರೆ ನೀನು ಲೆಕ್ಕವಿಡುವವರನ್ನು ಕೇಳಿ ನೋಡು ಎಂದು ಅವರು ಹೇಳುವರು. {113}

قَالَ إِنْ لَبِثْتُمْ إِلَّا قَلِيلًا ۖ لَوْ أَنَّكُمْ كُنْتُمْ تَعْلَمُونَ

ನೀವು ಕೇವಲ ಸ್ವಲ್ಪ ಸಮಯ ಮಾತ್ರ ಅಲ್ಲಿ ಬದುಕಿದ್ದಿರಿ. ಒಂದು ವೇಳೆ ಮೊದಲೇ ನೀವು ಅದನ್ನು ಅರ್ಥಮಾಡಿ ಕೊಂಡಿದ್ದಿದ್ದರೆ (ಈ ಗತಿ ಬರುತ್ತಿರಲಿಲ್ಲ) ಎಂದು ಆತನು ಹೇಳುವನು! {114}

أَفَحَسِبْتُمْ أَنَّمَا خَلَقْنَاكُمْ عَبَثًا وَأَنَّكُمْ إِلَيْنَا لَا تُرْجَعُونَ

ಓ ಜನರೇ! ನಾವು ನಿಮ್ಮನ್ನು ಹೀಗೆಯೇ ನಿರರ್ಥಕವಾಗಿ ಸೃಷ್ಟಿಸಿರುವೆವೆಂದೂ, ನಮ್ಮಲ್ಲಿಗೆ ನಿಮ್ಮನ್ನು ಮರಳಿಸಲಿಕ್ಕೆ ಸರ್ವಥಾ ಇಲ್ಲವೆಂದೂ ನೀವು ಭಾವಿಸಿ ಕೊಂಡಿರುವಿರೇನು? {115}

فَتَعَالَى اللَّهُ الْمَلِكُ الْحَقُّ ۖ لَا إِلَٰهَ إِلَّا هُوَ رَبُّ الْعَرْشِ الْكَرِيمِ

ನಿಜವಾದ ಸಾರ್ವಭೌಮನಾದ ಅಲ್ಲಾಹ್ ನು (ನಿರರ್ಥಕವಾಗಿ ಏನನ್ನೂ ಸೃಷ್ಟಿಸಲಾರ)! ಅವನಾದರೋ ಪರಮೋನ್ನತನು! ಅವನಲ್ಲದೆ ಬೇರೆ ಯಾರೂ ಆರಾಧನೆಗೆ ಯೋಗ್ಯತೆ ಪಡೆದವರಿಲ್ಲ. ಅವನು ವಿಶ್ವದ ಗೌರವಪೂರಿತ ಅಧಿಕಾರ-ಗದ್ದುಗೆಯ ಅಧಿಪತಿಯಾಗಿರುವನು! {116}

وَمَنْ يَدْعُ مَعَ اللَّهِ إِلَٰهًا آخَرَ لَا بُرْهَانَ لَهُ بِهِ فَإِنَّمَا حِسَابُهُ عِنْدَ رَبِّهِ ۚ إِنَّهُ لَا يُفْلِحُ الْكَافِرُونَ

ಅಲ್ಲಾಹ್ ನ ಜೊತೆ ಬೇರೆ (ಮಿಥ್ಯ) ದೇವರುಗಳಿಗೆ ಮೊರೆಯಿಟ್ಟವನ ಬಳಿ ಅದಕ್ಕೆ ಯಾವ ಪುರಾವೆಯೂ ಇಲ್ಲ! ಸಂಶಯಾತೀತವಾಗಿ ಅವನ ವಿಚಾರಣೆ ಅಲ್ಲಾಹ್ ನ ಸನ್ನಿಧಿಯಲ್ಲೇ ನಡೆಯಲಿದೆ. (ಅಂತಹವನು ಅಲ್ಲಾಹ್ ನ ಏಕತ್ವವನ್ನು ಧಿಕ್ಕರಿಸಿರುವನು; ಹಾಗಿರುವಾಗ) ಖಂಡಿತಾವಾಗಿ ಅಂತಹ ಧಿಕ್ಕಾರ ತೋರಿದವರು (ಅಂದು) ಸಫಲವಾಗಲಾರರು. {117}

وَقُلْ رَبِّ اغْفِرْ وَارْحَمْ وَأَنْتَ خَيْرُ الرَّاحِمِينَ

ಹಾಗಿರುವಾಗ [ಪೈಗಂಬರರೇ, ನೀವಿನ್ನು ಅವರನ್ನು ಅವರದೇ ಪಾಡಿಗೆ ಬಿಟ್ಟು, ನಿಮಗಾಗಿ] ಪ್ರಾರ್ಥಿಸಿರಿ: ಓ ನನ್ನ ಒಡೆಯನೇ, ನನ್ನನ್ನು ಕ್ಷಮಿಸು; ನನ್ನ ಮೇಲೆ ದಯೆ ತೋರು; ನೀನು ಮಾತ್ರವೇ ಎಲ್ಲರಿಗಿಂತ ಮಿಗಿಲಾದ ದಯಾಮಯಿ! {118}

---

ಅನುವಾದಿತ ಸೂರಃ ಗಳು

    Featured post

    ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...