ಅನ್-ನಿಸಾ | ترجمة سورة النساء

ಅನ್-ನಿಸಾ | سورة النساء
تـرجمـة سـورة النسـاء من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

* سهل الفهم من غير الرجوع إلى كتاب التفسير *

| ಸೂರಃ ಅನ್ - ನಿಸಾ | ಪವಿತ್ರ್ ಕುರ್‌ಆನ್ ನ 4 ನೆಯ ಸೂರಃ | ಇದರಲ್ಲಿ ಒಟ್ಟು 176 ಆಯತ್ ಗಳು ಇವೆ | 

ಅಲ್ಲಾಹ್ ನ ಹೆಸರಿನೊಂದಿಗೆ, ಅವನು ತುಂಬಾ ಕರುಣೆ ತೋರುವವನೂ ಸದಾ ಕರುಣೆ ತೋರುತ್ತಲೇ ಇರುವವನೂ ಆಗಿರುವನು!

ಓ ಮಾನವ ಸಮುದಾಯವೇ, ನಿಮ್ಮನ್ನು ಕೇವಲ ಒಂದು ಜೀವಾತ್ಮದಿಂದ ಸೃಷ್ಟಿಸಿದ; ಅನಂತರ ಅದರಿಂದಲೇ ಅದರ ಸಂಗಾತಿಯನ್ನೂ ಅಸ್ತಿತ್ವಕ್ಕೆ ತಂದ, ಹಾಗೂ ಆ ಇಬ್ಬರ [ಅರ್ಥಾತ್ ಆ ಆದಿ ದಂಪತಿಗಳ] ಮೂಲಕ ಭಾರೀ ಪ್ರಮಾಣದಲ್ಲಿ ಪುರುಷರನ್ನೂ ಸ್ತ್ರೀಯರನ್ನೂ (ಸೃಷ್ಟಿಸಿ ಭೂಮಿಯಲ್ಲಿ) ಹರಡಿ ಬಿಟ್ಟ ನಿಮ್ಮ ಸೃಷ್ಟಿಕರ್ತನ ವಿಷಯದಲ್ಲಿ ನೀವು ಭಯ-ಭಕ್ತಿ ಜಾಗರೂಕತೆಗಳನ್ನು ಪಾಲಿಸುವವರಾಗಿರಿ. ಯಾವ ಅಲ್ಲಾಹ್ ನ ಹೆಸರೆತ್ತಿ [ಹಕ್ಕು-ಬಾಧ್ಯತೆಗಳನ್ನು, ಸಹಾಯ-ಸಹಕಾರಗಳನ್ನು] ನೀವು ಪರಸ್ಪರರಿಂದ ಯಾಚಿಸಿಕೊಳ್ಳುವಿರೋ ಅವನ ವಿಷಯದಲ್ಲಿ ಎಚ್ಚರಿಕೆಯಿಂದಿರಿ; (ವಿಶೇಷವಾಗಿ) ರಕ್ತ ಸಂಬಂಧಿಕರ ವಿಷಯವಾಗಿಯೂ (ಅಲ್ಲಾಹ್ ನ ಭಯವಿರಿಸಿಕೊಳ್ಳಿ). ನಿಜವಾಗಿಯೂ ಅಲ್ಲಾಹ್ ನು ನಿಮ್ಮ (ನಡವಳಿಕೆಯ) ಮೇಲೆ ನಿಗಾ ಇಟ್ಟಿರುವನು. {1}

ಹಾಗಿರುವಾಗ, [ಪೋಷಕರು ಯುದ್ಧಗಳಲ್ಲಿ ಮಡಿದ ಕಾರಣ ಈಗ ನಿಮ್ಮ ಸಂರಕ್ಷಣೆಯಲ್ಲಿರುವ] ಅನಾಥ ಮಕ್ಕಳಿಗೆ ಸೇರಿದ ಸೊತ್ತನ್ನು [ಸೂಕ್ತ ಸಮಯದಲ್ಲಿ] ಅವರಿಗೆ ಹಿಂದಿರುಗಿಸಿರಿ. ಆದರೆ (ಹಿಂದಿರುಗಿಸುವಾಗ ಅವರಿಗೆ ಸೇರಿದ) ಒಳ್ಳೆಯವುಗಳನ್ನು (ನಿಮ್ಮ) ಕೆಟ್ಟವುಗಳಿಂದ ಬದಲಾಯಿಸದಿರಿ. ಅವರ ಸೊತ್ತನ್ನು (ಕಬಳಿಸಿ) ನಿಮ್ಮ ಸೊತ್ತಿನೊಂದಿಗೆ ಸೇರಿಸಿ ನುಂಗಲೂ ಬೇಡಿ. ಅದು ನಿಜವಾಗಿಯೂ ಘನಘೋರ ಪಾಪಕಾರ್ಯವಾಗಿದೆ. ಒಂದು ವೇಳೆ ಅಂತಹ ಅನಾಥ ಮಕ್ಕಳ ವಿಷಯದಲ್ಲಿ (ಸ್ವತಃ ನಿಮ್ಮದೇ ಮಕ್ಕಳೆಂಬಂತೆ) ನೀತಿ ಪಾಲಿಸಲಾರಿರಿ ಎಂಬ ಆತಂಕವು ನಿಮಗುಂಟಾದಲ್ಲಿ, ನೀವು ಆ ಸ್ತ್ರೀಯರ [ಅರ್ಥಾತ್ ಅನಾಥ ಮಕ್ಕಳಿರುವ ಆ ವಿಧವೆಯರ] ಪೈಕಿ ನಿಮಗೆ ಸಮ್ಮತವಾದ ಇಬ್ಬರನ್ನೋ ಮೂವರನ್ನೋ (ಹೆಚ್ಚೆಂದರೆ) ನಾಲ್ವರನ್ನೋ ವರಿಸಬಹುದು. ಆದರೆ [ಪತ್ನಿಯರು ಒಬ್ಬರಿಗಿಂತ ಹೆಚ್ಚಿದ್ದರೆ ಅವರ ನಡುವೆ] ನ್ಯಾಯ ಪಾಲಿಸುವ ಕುರಿತು ನಿಮಗೆ ಭಯವುಂಟಾದರೆ [ನೀವು ಪತ್ನಿಯಾಗಿಸ ಬೇಕಾದುದು] ಕೇವಲ ಒಬ್ಬಳನ್ನು ಮಾತ್ರ! ಅಥವಾ ನಿಮ್ಮ ಕೈಕೆಳಗಿರುವ ದಾಸಿಯರನ್ನು (ಬೇಕಾದರೆ ಪತ್ನಿಯಾಗಿಸಬಹುದು). ನೀವು ಅನೀತಿಯಿಂದ (ದೂರವಿರಲು) ಇವೆಲ್ಲ ಹೆಚ್ಚು ನಿಕಟ ಮಾರ್ಗಗಳಾಗಿವೆ. ಆದರೆ ಅಂತಹ ಸ್ತ್ರೀಯರನ್ನು (ವರಿಸುವಾಗಲೂ) ವಧುದಕ್ಷಿಣೆಯನ್ನು ತುಂಬು ಹೃದಯದಿಂದ ಅವರಿಗೆ ಪಾವತಿಸಬೇಕು. ಇನ್ನು ಅವರು ತಾವಾಗಿಯೇ ಅದರಿಂದ ಏನಾದರೂ ನಿಮಗೆ ರಿಯಾಯಿತಿ ನೀಡಲು ಮೆಚ್ಚಿಕೊಂಡರೆ ಸಂತೋಷ-ಪ್ರಸನ್ನತೆಗಳೊಂದಿಗೆ ನೀವು ಅದನ್ನು ಅನುಭವಿಸಬಹುದು. {2-4}

ನೀವುಗಳು [ಅರ್ಥಾತ್ ನಿಮ್ಮ ಸಮಾಜವು] ನೆಲೆನಿಲ್ಲುವಂತಾಗಲು ಅಲ್ಲಾಹ್ ನು ನಿಮಗೆ ಒದಗಿಸಿರುವ ಸಂಪತ್ತನ್ನು ಇನ್ನೂ ಬುದ್ಧಿ ಪಕ್ವತೆ ಹೊಂದಿರದ (ಅನಾಥರ) ವಶಕ್ಕೆ ಕೊಡದಿರಿ. ಆದರೆ ಆ ಸೊತ್ತಿನಿಂದ ಅವರಿಗೆ ಚೆನ್ನಾಗಿ ಉಣಿಸಿರಿ ಮತ್ತು ತೊಡಿಸಿರಿ; ಜೊತೆಗೆ ಅವರೊಂದಿಗೆ ನೀವು ಮಾತನಾಡುವಾಗ ಒಳ್ಳೆಯ ರೀತಿಯಲ್ಲಿ ಮಾತನಾಡಿರಿ. {5}

[ನಿಮ್ಮ ಪೋಷಣೆಯಲ್ಲಿರುವ] ಅನಾಥ ಮಕ್ಕಳು ವಿವಾಹಯೋಗ್ಯ ವಯಸ್ಸಿಗೆ ತಲುಪುವ ತನಕವೂ ನೀವು ಅವರನ್ನು ಪರಿಶೀಲಿಸುತ್ತಲಿರಿ. ಅವರಲ್ಲಿ [ಸ್ವಯಂ ವ್ಯವಹಾರ ನಡೆಸಲು ಅಗತ್ಯವಾದ] ಪ್ರಬುದ್ಧತೆಯನ್ನು ನೀವು ಕಂಡುಕೊಂಡಾಗ ಅವರ ಸೊತ್ತನ್ನು ಅವರ ವಶಕ್ಕೆ ಒಪ್ಪಿಸಿರಿ. ನೀವು ಆ ಸೊತ್ತನ್ನು ಅಮಿತವಾಗಿಯೂ ಹಾಗೂ ಅವರು (ಬೇಗನೇ ಬೆಳೆದು) ದೊಡ್ಡವರಾದಾರು ಎಂದು ಅಂಜಿ ಆತುರಾತುರವಾಗಿಯೂ ಕಬಳಿಸಬಾರದು. ಇನ್ನು (ಅವರ ಸಂರಕ್ಷಕನು) ಧನಿಕನಾಗಿದ್ದರೆ ಅವನು (ಆ ಸೊತ್ತಿನಿಂದ) ತನ್ನನ್ನು ದೂರ ಇರಿಸಲಿ; ಹಾಗೂ ಅವನು ಬಡವನಾಗಿದ್ದರೆ ಸೂಕ್ತವೆನಿಸಿದ ರೀತಿಯಲ್ಲಿ ಮಾತ್ರ ಅದರಿಂದ ಬಳಸಿಕೊಳ್ಳಲಿ. ಕಡೆಗೆ ಅವರ ಸೊತ್ತನ್ನು ಅವರಿಗೆ ಒಪ್ಪಿಸುವ ಸಂದರ್ಭದಲ್ಲಿ ನೀವು ಅದಕ್ಕೆ ಸಾಕ್ಷಿಗಳನ್ನು ಗೊತ್ತುಮಾಡಿಕೊಳ್ಳಿ. (ಅಂತಿಮ) ಲೆಕ್ಕಾಚಾರಕ್ಕಾಗಿ ಅಲ್ಲಾಹ್ ನು ಮಾತ್ರವೇ ಸಾಕು (ಎಂಬುದನ್ನು ಚೆನ್ನಾಗಿ ತಿಳಿದಿರಿ). {6}

ಮಾತಾಪಿತರು ಹಾಗೂ ನಿಕಟ ಸಂಬಂಧಿಕರು ಬಿಟ್ಟಗಲಿದ ಸೊತ್ತಿನಲ್ಲಿ ಪುರುಷರಿಗೆ ಅವರ ಪಾಲಿದೆ; ಹಾಗೆಯೇ, ಮಾತಾಪಿತರು ಹಾಗೂ ನಿಕಟ ಸಂಬಂಧಿಕರು ಬಿಟ್ಟಗಲಿದ ಸೊತ್ತಿನಲ್ಲಿ ಸ್ತ್ರೀಯರಿಗೂ ಅವರ ಪಾಲಿರುವುದು. ಅದು ಕಡಿಮೆಯಿರಲಿ ಅಥವಾ ಹೆಚ್ಚೇ ಆಗಿರಲಿ [ಅಲ್ಲಾಹ್ ನ ವತಿಯಿಂದ] ನಿಶ್ಚಯಿಸಲ್ಪಟ್ಟ ಒಂದು ಪಾಲು ಆಗಿರುವುದು. ಆದರೆ [ಆ ಸೊತ್ತನ್ನು] ಪಾಲು ಮಾಡುವ ಸಂದರ್ಭದಲ್ಲಿ (ವಾರೀಸುದಾರರಲ್ಲದ ಇತರ) ನಿಕಟ ಸಂಬಂಧಿಕರೋ ಅನಾಥರೋ ನಿರ್ಗತಿಕರೋ ಹಾಜರಾದರೆ ಅದರಿಂದ ಅವರಿಗೂ ಏನನ್ನಾದರೂ ಒದಗಿಸಿರಿ ಹಾಗೂ ಅವರೊಂದಿಗೆ ಉಚಿತವೆನಿಸಿದ ರೀತಿಯಲ್ಲೇ ಮಾತನಾಡಿಕೊಳ್ಳಿರಿ. {7-8}

(ಇನ್ನೂ) ದುರ್ಬಲಾವಸ್ಥೆಯಲ್ಲಿರುವ ಸಂತಾನವನ್ನು ತಮ್ಮ ಹಿಂದೆ ಬಿಟ್ಟಗಲುವುದಾದರೆ ಅಂಥವರು [ತಮ್ಮ ಸಂತಾನದ ಭಾವಿಯ ಕುರಿತು ಹೇಗೆ] ಚಿಂತಿತರಾಗುವರೋ ಹಾಗೆಯೇ [ಅನಾಥ ಮಕ್ಕಳ ಮೇಲ್ವಿಚಾರಕರು ಅನಾಥರ ಭಾವಿಯ ಬಗ್ಗೆಯೂ] ಅಂಜುತ್ತಲಿರಬೇಕು. ಆದ್ದರಿಂದಲೇ ಅವರು [ಅನಾಥರ ಕುರಿತು ವ್ಯವಹರಿಸುವಾಗ] ಅಲ್ಲಾಹ್ ನನ್ನು ಭಯಪಡುತ್ತಾ (ಯಾವ ವಕ್ರತೆಯಿಂದಲೂ ಕೂಡಿರದ) ನೇರವಾದ ಮಾತನ್ನೇ ಆಡಬೇಕು. ಯಾರು ಅನಾಥ ಮಕ್ಕಳಿಗೆ ಸೇರಿದ ಸೊತ್ತನ್ನು ಅನ್ಯಾಯವಾಗಿ (ಕಬಳಿಸಿ) ನುಂಗುತ್ತಾರೆಯೋ ಅವರು ವಾಸ್ತವದಲ್ಲಿ ತಮ್ಮ ಹೊಟ್ಟೆಯೊಳಕ್ಕೆ ತಿಂದು ಸೇರಿಸುತ್ತಿರುವುದು ಬೆಂಕಿಯನ್ನೇ! ಅವರು ಶೀಘ್ರದಲ್ಲೇ ಧಗಧಗಿಸಿ ಉರಿಯುವ (ನರಕದ ಬೆಂಕಿಯಲ್ಲಿ) ದಹಿಸಲ್ಪಡುವರು. {9-10}

ನಿಮ್ಮ ಮಕ್ಕಳ [ವಾರೀಸು ಹಕ್ಕಿನ] ವಿಷಯವಾಗಿ ಅಲ್ಲಾಹ್ ನು ನಿಮಗೆ (ಹೀಗೆ) ತಾಕೀತು ಮಾಡುತ್ತಿರುವನು:

[ಮೃತನು ಬಿಟ್ಟಗಲಿದ ಆಸ್ತಿಯಲ್ಲಿ] ಒಬ್ಬ ಗಂಡಿನ (ಪಾಲು) ಇಬ್ಬರು ಹೆಣ್ಣುಮಕ್ಕಳ ಪಾಲಿಗೆ ಸಮವಾಗಿರುವುದು. (ಮೃತನಿಗೆ) ಕೇವಲ ಹೆಣ್ಣುಮಕ್ಕಳು ಮಾತ್ರವೇ ಇದ್ದು ಅವರು (ಇಬ್ಬರು ಅಥವಾ) ಇಬ್ಬರಿಗಿಂತ ಹೆಚ್ಚಿದ್ದರೆ ಬಿಟ್ಟು ಹೋದ ಆಸ್ತಿಯ ಮೂರನೇ ಎರಡು ಭಾಗ ಅವರಿಗೆ ಸಂದಬೇಕು. ಹೆಣ್ಣು ಒಬ್ಬಳೇ (ವಾರೀಸುದಾರಳು) ಆಗಿರುವ ಪಕ್ಷದಲ್ಲಿ ಅವಳಿಗೆ (ಆಸ್ತಿಯ) ಅರ್ಧ ಭಾಗ ಸಂದುತ್ತದೆ.

(ಮೃತ ವ್ಯಕ್ತಿಗೆ) ಸಂತಾನವಿರುವ ಪಕ್ಷದಲ್ಲಿ, ಆತನ ತಂದೆತಾಯಂದಿರಲ್ಲಿ ಪ್ರತಿಯೊಬ್ಬರಿಗೂ ಆತನು ಬಿಟ್ಟಗಲಿದ ಆಸ್ತಿಯ ಆರನೆಯ ಒಂದು ಭಾಗವನ್ನು [ಆತನ ಮಕ್ಕಳ ಪಾಲು ವಿಭಜಿಸುವುದಕ್ಕಿಂತ ಮುಂಚಿತವಾಗಿ] ಕೊಡಬೇಕಾಗುವುದು.

(ಮೃತನು) ಸಂತಾನರಹಿತನಾಗಿದ್ದು, ಕೇವಲ ಮಾತಾಪಿತರೇ ಆತನ ವಾರೀಸುದಾರರು ಆಗಿರುವಾಗ ಆತನ ತಾಯಿಗೆ (ಒಟ್ಟು ಆಸ್ತಿಯ) ಮೂರನೇ ಒಂದು ಭಾಗ ಸಂದುವುದು; [ಅರ್ಥಾತ್ ಉಳಿದ ಮೂರನೇ ಎರಡು ಭಾಗಕ್ಕೆ ಆತನ ತಂದೆಯು ಹಕ್ಕುದಾರನಾಗುವನು].

ಆದರೆ (ಮೃತನಿಗೆ) ಸಹೋದರ-ಸಹೋದರಿಯರು ಇರುವ ಪಕ್ಷದಲ್ಲಿ ಆತನ ತಾಯಿಗೆ ಸಂದಬೇಕಾದ ಪಾಲು ಅದೇ ಆರನೇ ಒಂದು ಭಾಗವಾಗಿದೆ; [ಅರ್ಥಾತ್ ತಂದೆಗೂ ಸಹ ಆರನೇ ಒಂದಂಶ].

ಮೃತ ವ್ಯಕ್ತಿಯು ಮಾಡಿದ ಉಯಿಲು ಮತ್ತು ಆತನ ಸಾಲವನ್ನು (ಸಂದಾಯ ಮಾಡಿದ) ನಂತರವಷ್ಟೇ (ಹೀಗೆ ಆತನ ಆಸ್ತಿಯ ವಿಭಜನೆಯಾಗಬೇಕು).

ನಿಮ್ಮ ಪಾಲಿಗೆ ಪ್ರಯೋಜನಕಾರಿಯಾಗಿ ಪರಿಣಮಿಸುವ ದೃಷ್ಟಿಯಿಂದ – ನಿಮ್ಮ ಹೆತ್ತವರು ಮತ್ತು ನಿಮ್ಮ ಮಕ್ಕಳು – ಇವರಲ್ಲಿ ನಿಮಗೆ ಹೆಚ್ಚು ಹತ್ತಿರದವರು ಯಾರು ಎಂಬುದು ನೀವು ತಿಳಿದುಕೊಳ್ಳಲಾರಿರಿಯಷ್ಟೆ! [ಆದ್ದರಿಂದಲೇ ಈ ನಿಯಮ] ಅಲ್ಲಾಹ್ ನ ವತಿಯಿಂದ ನಿಗದಿತವಾಗಿದೆ. ಅಲ್ಲಾಹ್ ನು ನಿಸ್ಸಂಶಯವಾಗಿಯೂ ಅಗಾಧ ಅರಿವುಳ್ಳವನೂ ಅತ್ಯಂತ ವಿವೇಕಶಾಲಿಯೂ ಆಗಿರುವನು! {11}

ಇನ್ನು ನಿಮ್ಮ ಪತ್ನಿಯರು ಬಿಟ್ಟಗಲಿದ ಸೊತ್ತಿನಲ್ಲಿ – ಅವರು ಸಂತಾನರಹಿತರಾಗಿದ್ದರೆ – ಅದರ ಅರ್ಧ ನಿಮಗೆ ಸಿಗುವುದು; ಆದರೆ ಅವರು ಸಂತಾನವಿರುವವರು ಆಗಿದ್ದರೆ ಅವರು ಬಿಟ್ಟಗಲಿದ ಸೊತ್ತಿನಲ್ಲಿ ನಾಲ್ಕನೆ ಒಂದು ಭಾಗ ನಿಮ್ಮದಾಗುವುದು; ಅವರು ಮಾಡುವ ಉಯಿಲು ಅಥವಾ ಸಾಲದ ಬಾಧ್ಯತೆ (ಇದ್ದರೆ) ಅವುಗಳನ್ನು ಪಾವತಿಸಿದ ನಂತರವೇ (ಆಸ್ತಿಯನ್ನು ಹೀಗೆ ಪಾಲು ಮಾಡಬೇಕು).

ಹಾಗೆಯೇ, ನಿಮಗೆ ಸಂತಾನವಿಲ್ಲದ ಪಕ್ಷದಲ್ಲಿ ನೀವು ಬಿಟ್ಟಗಲಿದ ಸೊತ್ತಿನ ನಾಲ್ಕನೆ ಒಂದು ಭಾಗ ನಿಮ್ಮ ಪತ್ನಿಯರಿಗೆ ಸಲ್ಲುತ್ತದೆ; ಆದರೆ ನಿಮಗೆ ಸಂತಾನವಿದ್ದರೆ ನೀವು ಬಿಟ್ಟಗಲಿದ ಸೊತ್ತಿನ ಎಂಟನೆ ಒಂದು ಭಾಗ (ಮಾತ್ರ) ಪತ್ನಿಯರಿಗೆ ಸಲ್ಲುವುದು; (ಇದೂ ಸಹ) ನೀವು ಉಯಿಲು (ಮಾಡಿದ್ದರೆ) ಅಥವಾ ಸಾಲದ ಬಾಧ್ಯತೆ (ಇದ್ದರೆ) ಅವುಗಳ ಪಾವತಿಯ ನಂತರವೇ.

ಕಲಾಲಃ [ಅರ್ಥಾತ್ ವಾರೀಸುದಾರರಾಗಲು ಮಾತಾಪಿತರೋ ಮಕ್ಕಳೋ ಇಲ್ಲದ] ಪುರುಷನಾಗಲಿ ಅಥವಾ ಸ್ತ್ರೀಯಾಗಲಿ – (ತನ್ನ ತಾಯಿಯ ಕಡೆಯಿಂದಿರುವ) ಒಬ್ಬ ಸಹೋದರ ಅಥವಾ ಒಬ್ಬಳು ಸಹೋದರಿಯನ್ನು ಮಾತ್ರ ಹೊಂದಿದ್ದರೆ – ಅವರಲ್ಲಿ ಪ್ರತಿಯೊಬ್ಬರಿಗೂ ಅವನು ಅಗಲಿದ ಸೊತ್ತಿನ ಆರನೆ ಒಂದು ಭಾಗ ಕೊಡಲಾಗುವುದು. ಒಂದು ವೇಳೆ ಅದಕ್ಕಿಂತಲೂ ಹೆಚ್ಚು (ಅಂತಹ ಸಹೋದರ ಸಹೋದರಿಯರನ್ನು) ಅವನು ಹೊಂದಿದ್ದರೆ ಅವರೆಲ್ಲ ಅವನ ಸೊತ್ತಿನ ಮೂರನೆ ಒಂದು ಭಾಗಕ್ಕೆ (ಸಮಾನವಾದ) ಭಾಗೀದಾರರಾಗುವರು. (ವಾರೀಸುದಾರರಿಗೆ) ಅನ್ಯಾಯವಾಗದಂತಹ ಉಯಿಲೇನಾದರೂ ಮಾಡಿದ್ದರೆ ಅದರ ಅನುಷ್ಠಾನ; ಹಾಗೆಯೇ ಸಾಲವೇನಾದರೂ ಇದ್ದರೆ ಅದರ ಪಾವತಿಯ ನಂತರವೇ (ಆ ಅಸ್ತಿಯ ವಿಭಜನೆಯಾಗಬೇಕು). ಇದು ಅಲ್ಲಾಹ್ ನ ವತಿಯಿಂದಿರುವ ತಾಕೀತಾಗಿರುವುದು; ಅಲ್ಲಾಹ್ ನು ಅಗಾಧ ಅರಿವುಳ್ಳವನೂ ಹೌದು ಅತೀವ ಸಂಯಮಿಯೂ ಹೌದು! {12}

ಇವೆಲ್ಲ ಅಲ್ಲಾಹ್ ನು ನಿಗದಿಪಡಿಸಿದ ಇತಿಮಿತಿಗಳು. ಯಾರು (ಜೀವನದಲ್ಲಿ) ಅಲ್ಲಾಹ್ ಮತ್ತು ಅವನ ಪೈಗಂಬರರ ಅನುಸರಣೆ ಮಾಡುವರೋ ಅಲ್ಲಾಹ್ ನು ಅಂಥವರನ್ನು ತಳದಲ್ಲಿ ಹೊನಲುಗಳು ಹರಿಯುತ್ತಲಿರುವ ಸ್ವರ್ಗೀಯ ಉದ್ಯಾನಗಳೊಳಗೆ ಸೇರಿಸುವನು; ಅಲ್ಲಿ ಅವರು ಶಾಶ್ವತವಾಗಿ ನೆಲೆಸುವರು. ಹೌದು, ಅದೊಂದು ಮಹತ್ತರವಾದ ವಿಜಯವೇ ಸರಿ. {13}

ಅಲ್ಲಾಹ್ ನ ಮತ್ತು ಅವನ ಪೈಗಂಬರರ ಮಾತುಮೀರಿದ ಹಾಗೂ ಅವನು ನಿಗದಿಪಡಿಸಿದ ಪರಿಮಿತಿಗಳನ್ನು ಅತಿಕ್ರಮಿಸಿದವನನ್ನು ಅಲ್ಲಾಹ್ ನು (ನರಕದ) ಅಗ್ನಿಗೆ ಸೇರಿಸುವನು, ಅದರಲ್ಲಿ ಅವನು ಸದಾ ಕಾಲ ಬಿದ್ದುಕೊಂಡಿರುವನು; ಅಪಮಾನಕ್ಕೀಡಾಗಿಸುವ ಶಿಕ್ಷೆ (ಅಲ್ಲಿ) ಅವನಿಗಿರುವುದು. {14}

ನಿಮ್ಮ (ಸಮಾಜಕ್ಕೆ) ಸೇರಿದ ಸ್ತ್ರೀಯರ ಪೈಕಿ ಅಶ್ಲೀಲ ವೃತ್ತಿಯಲ್ಲಿ ತೊಡಗಿದವರ ವಿರುದ್ಧ ನಿಮ್ಮವರಾದ ನಾಲ್ವರ ಸಾಕ್ಷ್ಯವನ್ನು ಪಡೆಯಿರಿ. ತರುವಾಯ, ಅವರು ಸಾಕ್ಷ್ಯ ನುಡಿದರೆ ಮೃತ್ಯುವಶವಾಗುವ ತನಕ ಅಥವಾ ಅಲ್ಲಾಹ್ ನು [ಹೊಸ ಕಾನೂನನ್ನು ನೀಡಿ] ಬೇರೆ ದಾರಿ ಕಾಣಿಸುವ ತನಕ ಅಂಥವರನ್ನು ಮನೆಗಳಲ್ಲೇ ತಡೆದಿರಿಸಿ ಕೊಳ್ಳಿ. {15}

ಹಾಗೆಯೇ, ನಿಮ್ಮ (ಸಮಾಜಕ್ಕೆ) ಸೇರಿದ ಇಬ್ಬರು [ಅರ್ಥಾತ್ ಗಂಡು-ಹೆಣ್ಣಿನ ಜೋಡಿಯು] ಅಶ್ಲೀಲ ಕೃತ್ಯವೆಸಗಿದಾಗ [ದಂಡನಾರ್ಥ] ಆ ಇಬ್ಬರನ್ನೂ ಪೀಡನೆಗೆ ಗುರಿಪಡಿಸಿ. ತರುವಾಯ, ಅವರಿಬ್ಬರೂ ಪಶ್ಚಾತ್ತಾಪಪಟ್ಟು ತಮ್ಮನ್ನು ಸುಧಾರಿಸಿ ಸಂಸ್ಕರಿಸಿಕೊಂಡರೆ ಮತ್ತೆ ಅವರ ಹಿಂದೆ ಬೀಳದಿರಿ. ನಿಜವಾಗಿಯೂ ಅಲ್ಲಾಹ್ ನು ಬಹಳವಾಗಿ ಕನಿಕರ ತೋರುವವನಾಗಿದ್ದಾನೆ; ಸದಾ ಕರುಣೆಯುಳ್ಳವನಾಗಿದ್ದಾನೆ! {16}

ಅವಿವೇಕಿತನಕ್ಕೆ ಬಲಿಯಾಗಿ ಪಾಪ-ಕೃತ್ಯವನ್ನೆಸಗಿ ಆ ಕೂಡಲೇ (ಮನವರಿತು) ಅದಕ್ಕಾಗಿ ಪಶ್ಚಾತ್ತಾಪ ಪಡುವವರ ಪಶ್ಚಾತ್ತಾಪವನ್ನು ಮಾತ್ರವೇ ಸ್ವೀಕರಿಸುವ ಹೊಣೆಯನ್ನು ಅಲ್ಲಾಹ್ ನು ಹೊತ್ತಿರುವನು (ಎಂಬುದು ತಿಳಿದಿರಲಿ). ಅಂಥ ಜನರೇ ಅಲ್ಲಾಹ್ ನ ಕಾರುಣ್ಯಕ್ಕೆ ಪಾತ್ರರಾಗುವವರು! ಅಲ್ಲಾಹ್ ನು ಅಗಾಧ ಅರಿವುಳ್ಳವನೂ ಮಹಾ ವಿವೇಕಶಾಲಿಯೂ ಆಗಿರುವನು. {17}

ಅದಲ್ಲದೆ ಪಾಪ ಕೃತ್ಯಗಳನ್ನು ಎಸಗುತ್ತಲೇ ಇದ್ದು ಕೊನೆಗೆ ಮರಣವನ್ನು ತನ್ನೆದುರು ಕಂಡುಕೊಂಡಾಗ ನಾನಿದೋ ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಹೇಳುವವನ ಪಶ್ಚಾತ್ತಾಪವನ್ನು ಸ್ವೀಕರಿಸಲಾಗದು. ಹಾಗೆಯೇ ಧಿಕ್ಕಾರದ ಸ್ಥಿತಿಯಲ್ಲೇ ಸಾವನ್ನಪ್ಪಿದವರಿಗೂ (ಕರುಣೆ ತೋರಿಸಲಾಗದು). ಅತ್ಯಂತ ಯಾತನಾಮಯವಾದ ಶಿಕ್ಷೆಯನ್ನು ನಾವು ಸಿದ್ಧಪಡಿಸಿಟ್ಟಿರುವುದು ಅಂಥವರಿಗಾಗಿಯೇ! {18}

ವಿಶ್ವಾಸ ಸ್ವೀಕರಿಸಿದ ಓ ಜನರೇ, ಸ್ತ್ರೀಯರನ್ನು [ಅವರು ವಿಧವೆಯರಾದಾಗ ಕಿರಾತ ಸಂಪ್ರದಾಯದಂತೆ] ಬಲವಂತವಾಗಿ ನಿಮ್ಮ ವಾರೀಸು ಸೊತ್ತನ್ನಾಗಿ ಮಾಡಿಕೊಳ್ಳಲು ನಿಮಗೆ ಅನುಮತಿ ಇರುವುದಿಲ್ಲ.

ಹಾಗೆಯೇ, [ನೀವು ಮದುವೆಯಾದ ಪತ್ನಿಯರು] ಸ್ಪಷ್ಟವಾದ ಅಶ್ಲೀಲ ಕೃತ್ಯವನ್ನೆಸಗಿದ ಕಾರಣಕ್ಕಾಗಿಯಲ್ಲದೆ (ಕೇವಲ) ಅವರಿಗೆ ನೀವು ಏನನ್ನು ಕೊಟ್ಟಿರುವಿರೋ ಅದರಿಂದ ಸ್ವಲ್ಪವನ್ನು ಹಿಂತೆಗೆದುಕೊಳ್ಳುವ ಸಲುವಾಗಿ ಅವರನ್ನು (ನಿಮ್ಮ ಮನೆಗಳಲ್ಲಿ) ತಡೆದಿರಿಸಿ ಕಿರುಕುಳ ನೀಡದಿರಿ. ಬದಲಾಗಿ ನೀವು ಅವರೊಂದಿಗೆ ಅತ್ಯುತ್ತಮವಾಗಿ ಸಾಮಾಜಿಕ ಸಭ್ಯತೆಯೊಂದಿಗೆ ವ್ಯವಹರಿಸುವವರಾಗಿರಿ. ಕೆಲವೊಂದು ಸಲ ನೀವು ಅವರನ್ನು ಇಷ್ಟಪಡದೇ ಇರಬಹುದು; ಆದರೆ ನಿಮಗೆ ಇಷ್ಟವಿಲ್ಲದ ಒಂದು ವಿಷಯದಲ್ಲಿ ಅಲ್ಲಾಹ್ ನು ಧಾರಾಳವಾಗಿ ಒಳಿತುಗಳನ್ನು ಇಟ್ಟಿರಲೂ ಬಹುದು. {19}

ಒಂದು ಪತ್ನಿಯ ಸ್ಥಾನದಲ್ಲಿ ಅವಳಿಗೆ ಬದಲಾಗಿ ನೀವು ಇನ್ನೊಬ್ಬಳನ್ನು ವರಿಸಿ ತರುವ ನಿರ್ಧಾರವನ್ನೇ ಮಾಡಿದ್ದರೆ (ಪತ್ನಿಯರಲ್ಲಿ) ಒಬ್ಬಳಿಗೆ ಧನ-ಕನಕಗಳ ರಾಶಿಯನ್ನೇ ನೀವು ಕೊಟ್ಟಿದ್ದರೂ ಸಹ ಅದರಿಂದ ಸ್ವಲ್ಪವನ್ನೂ ನೀವು ಮರಳಿಪಡೆಯಬಾರದು. (ಅವರ ಮೇಲೆ) ಸುಳ್ಳಾರೋಪಗಳನ್ನು ಹೊರಿಸಿ (ಆ ಮೂಲಕ) ಸ್ಪಷ್ಟವಾದ ಪಾಪವನ್ನೆಸಗಿ ನೀವು ಅದನ್ನು ಹಿಂದಕ್ಕೆ ಪಡೆಯುವಿರೇನು!? ನೀವು (ದಂಪತಿಗಳಾಗಿ) ಒಬ್ಬರು ಮತ್ತೊಬ್ಬರ ಮುಕ್ತ ಒಡನಾಟದಲ್ಲಿ ತೊಡಗಿಸಿಕೊಂಡಿದ್ದ ನಂತರ, ಸಾಲದಕ್ಕೆ ಅವರು (ವಿವಾಹ ಸಮಯದಲ್ಲಿ) ನಿಮ್ಮಿಂದ ಕಟ್ಟುನಿಟ್ಟಾದ ಕರಾರನ್ನೂ ಪಡಕೊಂಡಿರುವಾಗ, ನೀವು ಅದನ್ನು ಹಿಂದಿರುಗಿ ಪಡೆಯುವುದಾದರೂ ಹೇಗೆ? {20-21}

ನಿಮ್ಮ ತಂದೆ-ತಾತಂದಿರು ವಿವಾಹವಾಗಿದ್ದ ಸ್ತ್ರೀಯರನ್ನು ನೀವು ಎಂದೂ ವರಿಸಬಾರದು; ಆದರೆ ಈ ಹಿಂದೆ ಹಾಗೆ ಮಾಡಿದುದನ್ನು ಹೊರತುಪಡಿಸಲಾಗಿದೆ. ನಿಜವಾಗಿಯೂ ಅದೊಂದು ಅಶ್ಲೀಲ ಪ್ರವೃತ್ತಿಯೂ ತೀರಾ ಅಸಹ್ಯ ಕಾರ್ಯವೂ ಅತ್ಯಂತ ಹೀನ ಸಂಪ್ರದಾಯವೂ ಆಗಿದೆ. {22}

ನಿಮ್ಮ ತಾಯಂದಿರು, ನಿಮ್ಮ ಪುತ್ರಿಯರು, ನಿಮ್ಮ ಸಹೋದರಿಯರು, ನಿಮ್ಮ ತಂದೆಯ ಸಹೋದರಿಯರು, ನಿಮ್ಮ ತಾಯಿಯ ಸಹೋದರಿಯರು, ನಿಮ್ಮ ಸಹೋದರರ ಪುತ್ರಿಯರು, ನಿಮ್ಮ ಸಹೋದರಿಯರ ಪುತ್ರಿಯರು, ನಿಮಗೆ ಮೊಲೆಯುಣಿಸಿದ ನಿಮಿತ್ತ ನಿಮಗೆ ಸಾಕುತಾಯಿಯಾದವರು, ನಿಮ್ಮೊಂದಿಗೆ ಸಹ-ಸ್ತನ್ಯಪಾನ ಮಾಡಿದ ನಿಮಿತ್ತ ನಿಮಗೆ ಸಹೋದರಿಯಾದವರು, ನಿಮ್ಮ ಪತ್ನಿಯರ ತಾಯಂದಿರು, ಹಾಗೆಯೇ ನೀವು ಅದಾಗಲೇ ಸಂಯೋಗ ನಡೆಸಿರುವ ನಿಮ್ಮ ಪತ್ನಿಯರ [ಪೂರ್ವ ಪತಿಯಿಂದ ಜನಿಸಿ ಈಗ] ನಿಮ್ಮ ಉಸ್ತುವಾರಿಯಲ್ಲಿರುವ ನಿಮ್ಮ ಮಲಪುತ್ರಿಯರು – ಇವರೆಲ್ಲ ವಿವಾಹ ಸಂಬಂಧ ಸ್ಥಾಪಿಸಲು ನಿಮ್ಮ ಪಾಲಿಗೆ ಸಂಪೂರ್ಣವಾಗಿ ನಿಷಿದ್ಧರಾಗಿರುವರು. ಆದರೆ, ನೀವಿನ್ನೂ ಸಂಯೋಗ ನಡೆಸದೆ [ಪತ್ನಿಯನ್ನು ತೊರೆದಿದ್ದರೆ ಅವರ ಪುತ್ರಿಯರನ್ನು] ವಿವಾಹವಾಗುವುದು ನಿಮಗೆ ದೋಷಕರವಲ್ಲ.

ಅಂತೆಯೇ, ನಿಮ್ಮ ಸ್ವಪುತ್ರರ ಪತ್ನಿಯರಾಗಿದ್ದವರೂ (ನಿಮ್ಮ ಪಾಲಿಗೆ ವಿವಾಹವಾಗಲು ನಿಷಿದ್ಧರಾಗಿದ್ದಾರೆ). ಹಾಗೆಯೇ, ಇಬ್ಬರು ಸಹೋದರಿಯರನ್ನು ಏಕಕಾಲದಲ್ಲಿ (ವಿವಾಹ ಬಂಧನದಲ್ಲಿರಿಸುವುದನ್ನೂ ನಿಷೇಧಿಸಲಾಗಿದೆ). ಆದರೆ ಈ ಹಿಂದೆ (ಅನಾಗರಿಕತೆಯ ಕಾರಣ) ಹಾಗೆ ಸಂಭವಿಸಿರುವುದನ್ನು ಹೊರತು ಪಡಿಸಲಾಗಿದೆ. ಅಲ್ಲಾಹ್ ನು ನಿಜವಾಗಿ ಧಾರಾಳವಾಗಿ ಕ್ಷಮಿಸುವವನೂ ಅತಿಹೆಚ್ಚು ಕರುಣೆ ತೋರುವವನೂ ಆಗಿರುವನು. {23}

✽5✽ ಅದೇ ಪ್ರಕಾರ, (ಇತರರ) ವಿವಾಹ ಬಂಧನದಲ್ಲಿರುವ ಸ್ತ್ರೀಯರನ್ನೂ (ವರಿಸುವುದು ನಿಮಗೆ ನಿಷೇಧಿಸಲಾಗಿದೆ); ಆದರೆ [ಯುದ್ಧ ಕೈದಿಗಳಾಗಿ ನಿಮಗೆ ಸೆರೆ ಸಿಕ್ಕಿ] ನಿಮ್ಮ ಕೈಕೆಳಗಿರುವ ಅಂತಹ ಸ್ತ್ರೀಯರನ್ನು (ವರಿಸುವುದು) ಇದಕ್ಕೆ ಹೊರತಾಗಿದೆ. ಇವು ನಿಮ್ಮ ಮೇಲೆ ಅಲ್ಲಾಹ್ ನು ಜ್ಯಾರಿಗೊಳಿಸಿದ (ವಿವಾಹ ನಿಷೇಧ) ಕಾಯ್ದೆಗಳು.

ಇವರನ್ನು ಹೊರತು ಪಡಿಸಿ ಮಿಕ್ಕುಳಿದ ಯಾವ ಸ್ತ್ರೀಯನ್ನಾದರೂ ನಿಮ್ಮ ಧನದಿಂದ [ನಿಗದಿ ಪಡಿಸಿದ ಒಂದು ಮೊತ್ತವನ್ನು ನೀಡಿ], ವಿವಾಹ ಮಾಡಿಕೊಳ್ಳಲು ಅರಸಿ ಹೋಗುವುದನ್ನು ನಿಮಗೆ ಅನುಮತಿಸಲಾಗಿದೆ. (ಆದರೆ ಅದು) ಯಾವ ಅನೈತಿಕತೆಯಿಂದಲೂ ಕೂಡಿರದೆ ವೈವಾಹಿಕವಾಗಿ ಏರ್ಪಡುವ ಶುದ್ಧ ಸಂಬಂಧವಾಗಿರಬೇಕು. (ನಿಗದಿತ ಧನದ ಆ ಮೊತ್ತಕ್ಕೆ) ಪ್ರತಿಯಾಗಿ ಅವರಿಂದ ನೀವು ಪಡೆದ (ದಾಂಪತ್ಯದ) ಪ್ರಯೋಜನಕ್ಕಾಗಿ [ಇನ್ನೂ ಆ ಮೊತ್ತವನ್ನು ಪಾವತಿಸದೇ ಇದ್ದರೆ] ಕೂಡಲೇ ಅವರಿಗೆ ಸಂದಬೇಕಾದ [ನಿಗದಿಪಡಿಸಲಾದ ‘ಮಹರ್’ ನ] ಮೊತ್ತವನ್ನು, ಒಂದು ನಿರ್ಬಂಧವೆಂದು ತಿಳಿದು ಪಾವತಿಸಿರಿ. ಕಡ್ಡಾಯವಾಗಿರುವ [‘ಮಹರ್’ ನ ಮೊತ್ತವನ್ನು ನಿಗದಿಪಡಿಸಿಕೊಂಡ] ಬಳಿಕ ಅದರ [ಪಾವತಿಯ ಸಮಯ ಅಥವಾ ರಿಯಾಯಿತಿ ಏನಾದರೂ ತೋರುವ] ಬಗ್ಗೆ ನೀವು ಪರಸ್ಪರ ಏನಾದರೂ ಒಪ್ಪಿಕೊಂಡಿದ್ದರೆ ಅದರಲ್ಲಿ ನಿಮಗೆ ದೋಷವೇನೂ ಇರುವುದಿಲ್ಲ. ನಿಜವಾಗಿಯೂ ಅಲ್ಲಾಹ್ ನು ಬಹುದೊಡ್ಡ ಜ್ಞಾನಿಯೂ ಮಹಾ ಪ್ರಾಜ್ಞನೂ ಆಗಿರುವನು. {24}

ನಿಮ್ಮ ಪೈಕಿ ಯಾರಿಗಾದರೂ ವಿಶ್ವಾಸಿನಿಯರಾದ ಕುಲೀನ ಸ್ತ್ರೀಯರನ್ನು ವರಿಸಿ ತರುವಷ್ಟು ಆರ್ಥಿಕ ಸಾಮರ್ಥ್ಯ ಇಲ್ಲದೇ ಹೋದಲ್ಲಿ ಅಂಥವರು ತಮ್ಮ (ಸಮಾಜದ) ಸ್ವಾಧೀನದಲ್ಲಿರುವ ಮುಸ್ಲಿಮರಾದ ದಾಸಿಯರೊಂದಿಗೆ ವಿವಾಹ ಮಾಡಿಕೊಳ್ಳಲಿ. ಅಲ್ಲಾಹ್ ನು ನಿಮ್ಮ (ಅಂತರಾತ್ಮದ) ವಿಶ್ವಾಸದ ಮಟ್ಟವನ್ನು ಚೆನ್ನಾಗಿಯೇ ಬಲ್ಲನು. [ದಾಸಿಯರಾದರೇನು? ಮನುಷ್ಯರೇ ಆದ್ದರಿಂದ] ನೀವೆಲ್ಲರೂ ಪರಸ್ಪರರ ವರ್ಗಕ್ಕೇ ಸೇರಿದವರು. ಆದ್ದರಿಂದ ಅವರ ಪೋಷಕರ ಅನುಮತಿಯೊಂದಿಗೆ ಅವರನ್ನು ವಿವಾಹವಾಗಿರಿ. ಅವರಿಗೆ ಸಲ್ಲಬೇಕಾದ ವಧು-ದಕ್ಷಿಣೆಯನ್ನು ರಿವಾಜಿನ ಪ್ರಕಾರ ಪಾವತಿಸಿರಿ. (ಆದರೆ) ಅವರು ಸುಶೀಲೆಯರಾಗಿರಬೇಕು! ಅಶ್ಲೀಲತೆ ಮೆರೆಯುವವರೋ ಗುಪ್ತವಾಗಿ ಅನೈತಿಕ ಸಂಬಂಧ ಇರಿಸಿಕೊಂಡವರೋ ಆಗಿರಬಾರದು. ಹಾಗೆ ವಿವಾಹ ಬಂಧನದಲ್ಲಿ ಏರ್ಪಟ್ಟ ನಂತರ ಅವರು ಅಶ್ಲೀಲ ಕೃತ್ಯಕ್ಕೇನಾದರೂ ಇಳಿದರೆ, ಅವರಿಗಿರುವ ಶಿಕ್ಷೆಯು ಕುಲೀನ ಸ್ತ್ರೀಯರಿಗೆ ನಿಗದಿ ಪಡಿಸಿದ ಶಿಕ್ಷೆಯ ಅರ್ಧದಷ್ಟು ಮಾತ್ರ. ನಿಮ್ಮ ಪೈಕಿ [ಅವಿವಾಹಿತನಾಗಿ ಉಳಿದರೆ] ಪಾಪ ಸಂಭವಿಸೀತೆಂಬ ಭಯವುಳ್ಳವರಿಗೆ [ದಾಸಿಯರನ್ನು ವರಿಸಬಹುದಾದ] ಈ ಸವಲತ್ತು ನೀಡಲಾಗಿದೆ. ಆದರೆ ನೀವು [ಕುಲೀನ ಸ್ತ್ರೀಯೊಬ್ಬಳನ್ನು ವರಿಸಿಕೊಳ್ಳಲು ಸಾಮರ್ಥ್ಯ ಹೊಂದುವ ತನಕ] ಆತ್ಮ ನಿಯಂತ್ರಣ ಮಾಡಿಕೊಂಡರೆ ಅದುವೇ ನಿಮ್ಮ ಪಾಲಿಗೆ ಹೆಚ್ಚು ಉತ್ತಮ. ಅಲ್ಲಾಹ್ ನು ತುಂಬಾ ಕ್ಷಮಿಸುವವನೂ ನಿರಂತರ ಕರುಣೆಯುಳ್ಳವನೂ ಆಗಿರುವನು. {25}

ನಿಮ್ಮ ಪೂರ್ವಿಕರ ಉತ್ತಮವಾದ ರೀತಿ-ರಿವಾಜುಗಳನ್ನು ನಿಮಗೆ ವಿವರಿಸಿ ಕೊಡಲು, ನಿಮ್ಮನ್ನು ಆ ಮಾರ್ಗದಲ್ಲಿ ಮುನ್ನಡೆಸಲು ಹಾಗೂ ನಿಮ್ಮೊಂದಿಗೆ ಕರುಣೆಯೊಂದಿಗೆ ವ್ಯವಹರಿಸಲು ಅಲ್ಲಾಹ್ ನು ಇಚ್ಛಿಸುತ್ತಿರುವನು. ಅಲ್ಲಾಹ್ ನು ಎಲ್ಲಾ ವಿಷಯಗಳ ಅಗಾಧ ಜ್ಞಾನವುಳ್ಳವನೂ ಅತ್ಯಂತ ವಿವೇಕಪೂರ್ಣನೂ ಆಗಿರುವನು. ಹೌದು, ನಿಮ್ಮೊಂದಿಗೆ ಕರುಣೆ ತೋರಬೇಕೆಂಬುದೇ ಅಲ್ಲಾಹ್ ನ ಇಚ್ಛೆಯಾಗಿದೆ. ಆದರೆ ಸ್ವೇಚ್ಛಾಚಾರವನ್ನು ಬೆಂಬತ್ತಿ ಹೋದವರು ನೀವು ಅಡ್ಡದಾರಿ ಹಿಡಿಯಬೇಕೆಂದೂ ಅದರಲ್ಲಿ ಬಹು ದೂರ ಸರಿಯಬೇಕೆಂದೂ ಬಯಸುತ್ತಾರೆ. ನಿಮ್ಮ ಮೇಲಿನ ಹೊರೆಯನ್ನು ಹಗುರಗೊಳಿಸಲು ಅಲ್ಲಾಹ್ ನು ಬಯಸುತ್ತಾನೆ. ಏಕೆಂದರೆ ಮನುಷ್ಯನು ಅತ್ಯಂತ ದುರ್ಬಲನಾಗಿ ಸೃಷ್ಟಿಸಲ್ಪಟ್ಟಿರುವನು. {26-28}

ವಿಶ್ವಾಸಿಗಳಾದ ಓ ಜನರೇ! ಪರಸ್ಪರ ಒಪ್ಪಿಗೆಯೊಂದಿಗೆ ನಡೆಸುವ ವ್ಯಾಪಾರ ವ್ಯವಹಾರಗಳ ಮೂಲಕವಲ್ಲದೆ ಅನುಚಿತ ರೀತಿಯಲ್ಲಿ ನೀವು ಪರಸ್ಪರರ ಸೊತ್ತನ್ನು ಕಬಳಿಸಿ ತಿನ್ನುವವರಾಗದಿರಿ; ಪರಸ್ಪರರನ್ನು ಕೊಲ್ಲುವವರೂ ಆಗದಿರಿ. ಅಲ್ಲಾಹ್ ನು ನಿಜವಾಗಿ ನಿಮ್ಮೊಂದಿಗೆ ಅತಿ ಹೆಚ್ಚು ಕರುಣೆಯುಳ್ಳವನಾಗಿರುವನು. ಇನ್ನು ಯಾರಾದರೂ ದಬ್ಬಾಳಿಕೆ ನಡೆಸಿ ಅನ್ಯಾಯವೆಸಗಿ ಅದನ್ನು ಮಾಡಿದರೆ ಆತನನ್ನು ನಾವಿದೋ ಶೀಘ್ರವೇ ನರಕಾಗ್ನಿಯಲ್ಲಿ ಸುಡಲಿರುವೆವು. ಅದು ಅಲ್ಲಾಹ್ ನ ಮಟ್ಟಿಗೆ ಅತ್ಯಂತ ಸುಲಭವಾದ ಕಾರ್ಯವೇ ಸರಿ! {29-30}

ಯಾವೆಲ್ಲ ಮಹಾ ಪಾಪಕೃತ್ಯಗಳನ್ನು ಮಾಡಬಾರದೆಂದು ನಿಮ್ಮನ್ನು ತಡೆಯಲಾಗಿದೆಯೋ ಅವುಗಳಿಂದ ನೀವು ದೂರ ಉಳಿದುಕೊಂಡರೆ, ನಿಮ್ಮ ಇತರ ಲೋಪದೋಷಗಳನ್ನು ನಾವು (ಅವಗಣಿಸಿ) ನಿಮ್ಮಿಂದ ನೀಗಿಸಿ ಬಿಡುವೆವು! ಮಾತ್ರವಲ್ಲ, ಅತ್ಯಂತ ಸನ್ಮಾನಿತವಾದ ನೆಲೆಯೊಂದನ್ನು ನೀವು ಪ್ರವೇಶಿಸಿಕೊಳ್ಳುವಂತೆ ಮಾಡುವೆವು. {31}

ಅಲ್ಲಾಹ್ ನು ನಿಮ್ಮಲ್ಲಿನ ಕೆಲವರಿಗಿಂತ ನಿಮ್ಮ ಇತರ ಕೆಲವರಿಗೆ ಏನನ್ನು ವರ್ಧಿಸಿ ಕೊಟ್ಟಿರುವನೋ ಅದು ತಮಗೂ ಸಿಗಬೇಕೆಂದು ದುರಾಸೆ ಪಡದಿರಿ. ಪುರುಷರು (ತಮ್ಮ ಸಾಮರ್ಥ್ಯಕ್ಕನುಸಾರ) ಏನನ್ನು ಸಂಪಾದಿಸಿರುವರೋ ಅದರ ಪಾಲು ಅವರಿಗೂ ಸ್ತ್ರೀಯರು (ತಮ್ಮ ಸಾಮರ್ಥ್ಯಕ್ಕನುಸಾರ) ಏನನ್ನು ಸಂಪಾದಿಸಿರುವರೋ ಅದರ ಪಾಲು ಅವರಿಗೂ (ಖಂಡಿತಾ) ಸಿಗಲಿರುವುದು. ನೀವು ಅಲ್ಲಾಹ್ ನೊಡನೆ ಅವನ ಅನುಗ್ರಹಗಳನ್ನು ಬೇಡುತ್ತಲಿರಿ. ಅಲ್ಲಾಹ್ ನು ನಿಜವಾಗಿಯೂ ಎಲ್ಲ ವಿಷಯಗಳ ಕುರಿತು ಅಗಾಧ ಅರಿವುಳ್ಳವನಾಗಿರುವನು. {32}

ಪ್ರತಿಯೊಬ್ಬರಿಗೂ (ಅರ್ಥಾತ್ ಕುಟುಂಬದಲ್ಲಿನ ಹೆಣ್ಣಿಗೂ ಗಂಡಿಗೂ) ಅವರ ಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟಗಲಿದ ಸೊತ್ತಿನಲ್ಲಿ ವಾರಸು ಹಕ್ಕನ್ನು ನಾವು ನಿಶ್ಚಯಿಸಿ ಬಿಟ್ಟಿದ್ದೇವೆ! ಇನ್ನು ಯಾರಾದರೂ ನಿಮ್ಮೊಡನೆ ಒಡಂಬಡಿಕೆಯಲ್ಲಿ ಇದ್ದರೆ ಅವರಿಗೂ ಅವರ ಪಾಲನ್ನು ಕೊಡಿರಿ. [ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಿ, ಏಕೆಂದರೆ] ಅಲ್ಲಾಹ್ ನು ಖಂಡಿತವಾಗಿ ಎಲ್ಲದಕ್ಕೂ ನೇರ ಸಾಕ್ಷಿಯಾಗಿದ್ದಾನೆ. {33}

[ಅದೇ ಪ್ರಕಾರ ಸ್ತ್ರೀವರ್ಗ ಮತ್ತು ಪುರುಷವರ್ಗಕ್ಕೆ ಸಂಬಂಧಿಸಿದಂತೆ] ಒಂದು ವರ್ಗಕ್ಕಿಂತ ಮತ್ತೊಂದು ವರ್ಗಕ್ಕೆ ಅಲ್ಲಾಹ್ ನು (ವಿವಿಧ ವಿಷಯಗಳಲ್ಲಿ) ಪ್ರಾಶಸ್ತ್ಯ ನೀಡಿರುವ ಕಾರಣಕ್ಕಾಗಿ ಹಾಗೂ ತಮ್ಮ ಸಂಪತ್ತನ್ನು [ಪತ್ನಿಯರಿಗಾಗಿ ಮತ್ತು ಕುಟುಂಬ ನಿರ್ವಹಣೆಗಾಗಿ] ವ್ಯಯಿಸಬೇಕಾದ ಕಾರಣಕ್ಕಾಗಿ, (ಕುಟುಂಬ ವ್ಯವಸ್ಥೆಯಲ್ಲಿ) ಪುರುಷರನ್ನು ಸ್ತ್ರೀಯರ ಪಾಲಿಗೆ 'ಕವ್ವಾಮ್' [ಅರ್ಥಾತ್ ನಿರ್ವಾಹಕ, ವ್ಯವಸ್ಥಾಪಕ ಮತ್ತು ಸಂರಕ್ಷಕರನ್ನಾಗಿ] ಮಾಡಲಾಗಿದೆ! ಆದ್ದರಿಂದ ವಿನಯಶೀಲತೆಯನ್ನು ಮೈಗೂಡಿಸಿಕೊಂಡು, ಅಲ್ಲಾಹ್ ನು ಗೌಪ್ಯವಾಗಿ ಇರಿಸಿದಂತೆ [ದಾಂಪತ್ಯದ ಎಲ್ಲ] ರಹಸ್ಯಗಳನ್ನು ಕಾಪಾಡಿಕೊಳ್ಳುವವರೇ ಸನ್ನಡತೆಯುಳ್ಳ ಪತ್ನಿಯರಾಗಿರುವರು. [ವಿನಯಶೀಲತೆಗೆ ಬದಲು ಪತ್ನಿಯರು] ತಿರಸ್ಕಾರದ ಮನೋಭಾವದಿಂದ ವರ್ತಿಸುತ್ತಿರುವ ಕುರಿತು ನಿಮಗೆ ಆತಂಕವುಂಟಾದರೆ ಅವರನ್ನು ಮೊದಲಿಗೆ ಉಪದೇಶಿರಿ; (ಅದು ಫಲಕಾರಿಯಾಗದಿದ್ದರೆ) ಮಲಗುವ ಕೋಣೆಯಲ್ಲಿ ಅವರನ್ನು ನಿಮ್ಮಿಂದ ಬೇರ್ಪಡಿಸಿಕೊಳ್ಳಿ; [ಅದೂ ವ್ಯರ್ಥವಾದರೆ ನೇರವಾಗಿ ತಲಾಕ್ ಅಥವಾ ವಿಚ್ಛೇದನದ ಮೊರೆ ಹೋಗುವ ಬದಲು] ಅವರನ್ನು ದಂಡನೆಗೆ ಗುರಿಪಡಿಸಿ ನೋಡಿ. ಒಂದು ವೇಳೆ ಅವರು ನಿಮ್ಮನ್ನು ಅನುಸರಿಸಿಕೊಳ್ಳಲು ಅನುವಾದರೆ ಅವರ ಮೇಲೆ (ಇಲ್ಲಸಲ್ಲದ ಅಪವಾದ ಹೊರಿಸಲು) ಇತರ ಮಾರ್ಗಗಳನ್ನು ನೀವು ಹುಡುಕದಿರಿ. ಹೌದು, ಅಲ್ಲಾಹ್ ನು ಅತ್ಯುನ್ನತನೂ ಅತಿ ಮಹಾನನೂ ಆಗಿರುವನು (ಎಂಬುದನ್ನು ನೆನಪಿಟ್ಟುಕೊಳ್ಳಿ). {34}

[ಅದಾಗಿಯೂ ಸಂಬಂಧ ಸುಧಾರಿಸದೆ] ಅವರಿಬ್ಬರ ನಡುವೆ ಬಿರುಕುಂಟಾಗುವುದರ ಕುರಿತು ನೀವು ಭಯಪಟ್ಟುಕೊಂಡರೆ ಗಂಡಿನ ಕುಟುಂಬಕ್ಕೆ ಸೇರಿದ ಒಬ್ಬ ಮಧ್ಯಸ್ಥ ಹಾಗೂ ಹೆಣ್ಣಿನ ಕುಟುಂಬಕ್ಕೆ ಸೀರಿದ ಒಬ್ಬ ಮಧ್ಯಸ್ಥನನ್ನು (ನ್ಯಾಯ ಸಂಧಾನ ನಡೆಸಲು ಆ ದಂಪತಿಗಳತ್ತ) ನಿಯುಕ್ತಗೊಳಿಸಿ. ಇನ್ನು ಅವರೀರ್ವರು [ತಮ್ಮೊಳಗಿನ ಬಿಕ್ಕಟ್ಟನ್ನು ನಿವಾರಿಸಿಕೊಂಡು ಸಂಬಂಧವನ್ನು] ಸುಧಾರಿಸಿಕೊಳ್ಳ ಬಯಸಿದರೆ ಅವರಿಬ್ಬರ ನಡುವಿನ ಹೊಂದಾಣಿಕೆಗೆ ಅಲ್ಲಾಹ್ ನ ಸಮ್ಮತಿಯೂ ಪ್ರಾಪ್ತವಾಗುವುದು! ಅಲ್ಲಾಹ್ ನಾದರೋ ಅಗಾಧ ಅರಿವುಳ್ಳವನೂ ಎಲ್ಲವನ್ನೂ ತಿಳಿದವನೂ ಆಗಿರುವನು. {35}

ಆದ್ದರಿಂದ ನೀವು ಅಲ್ಲಾಹ್ ನ ಆರಾಧನೆ ಕೈಗೊಳ್ಳಿರಿ; ಅವನೊಂದಿಗೆ (ಅವನ ದೇವತ್ವದಲ್ಲಿ) ಏನನ್ನೂ ಜೊತೆಗೂಡಿಸಬೇಡಿ; ಜೊತೆಗೆ ಮಾತಾಪಿತರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವರ್ತಿಸಿಕೊಳ್ಳಿ. (ಹಾಗೆಯೇ) ಸಂಬಂಧಿಕರೊಂದಿಗೂ ಅನಾಥ ಮಕ್ಕಳೊಂದಿಗೂ ಬಡಬಗ್ಗರೊಂದಿಗೂ (ಸೌಜನ್ಯದಿಂದ ನಡೆದುಕೊಳ್ಳಿ); ಮತ್ತು ಅಕ್ಕಪಕ್ಕದಲ್ಲಿರುವ ಸಂಬಂಧಿಕರೊಂದಿಗೂ ಸಂಬಂಧವೇ ಇಲ್ಲದ ನೆರೆಹೊರೆಯವರೊಂದಿಗೂ ಸಹವರ್ತಿಗಳೊಂದಿಗೂ ದಾರಿಹೋಕರೊಂದಿಗೂ ನಿಮ್ಮ ಕೈವಶವಿರುವ ದುಡಿಮೆಗಾರರೊಂದಿಗೂ (ಅತ್ಯುತ್ತಮವಾಗಿ ವ್ಯವಹರಿಸಿ). [ಅದನ್ನೆಲ್ಲ ಕಡೆಗಣಿಸಿ ಕೇವಲ] ಜಂಭ ಕೊಚ್ಚಿಕೊಳ್ಳುವ ದುರಭಿಮಾನಿಯು ಯಾರೇ ಆಗಿರಲಿ, ಅಲ್ಲಾಹ್ ನು ಅಂಥವರನ್ನು ಮೆಚ್ಚುವುದಿಲ್ಲ. {36}

ಅಂಥವರು [ತಮ್ಮ ಸಂಪತ್ತಿನಿಂದ ಆ ಕಾರ್ಯಗಳಿಗೆ ವ್ಯಯಿಸುವ ಬದಲು] ಸ್ವತಃ ಜಿಪುಣತನ ತೋರುವವರಾಗಿದ್ದು ಇತರ ಜನರಿಗೂ ಜಿಪುಣತೆಯನ್ನು ಬೋಧಿಸುತ್ತಿರುತ್ತಾರೆ. ಮಾತ್ರವಲ್ಲ, ಅಲ್ಲಾಹ್ ನು ತನ್ನ ಔದಾರ್ಯದಿಂದ ಅವರಿಗೆ ಏನೆಲ್ಲ ಅನುಗ್ರಹಿಸಿರುವನೋ ಅವನ್ನು ಅವರು ಬಚ್ಚಿಟ್ಟುಕೊಳ್ಳುತ್ತಾರೆ. ಅಂತಹ ಕೃತಘ್ನರಿಗಾಗಿ ನಾವಿದೋ ಅಪಮಾನಕ್ಕೀಡು ಮಾಡುವ ಶಿಕ್ಷೆಯನ್ನು ಸಿದ್ಧಗೊಳಿಸಿ ಇಟ್ಟಿರುವೆವು. ಮತ್ತು ಅವರು ತಮ್ಮ ಸಂಪತ್ತನ್ನು ಖರ್ಚು ಮಾಡುವುದು ಜನರಿಗೆ ತೋರಿಸುವ ಸಲುವಾಗಿಯೇ ಹೊರತು ಅವರಿಗೆ ಅಲ್ಲಾಹ್ ನ ವಿಷಯದಲ್ಲಾಗಲಿ ಅಂತ್ಯದಿನದ ಬೆಗ್ಗೆಯಾಗಲಿ ವಿಶ್ವಾಸವಿರುವುದಿಲ್ಲ. [ಅಂಥವರಿಗೆ ಸೈತಾನನು ಸಂಗಾತಿಯಾಗುವನು!] ಇನ್ನು ಯಾರಿಗೆ ಸೈತಾನನು ಸಂಗಾತಿಯಾದನೋ ಆತನಿಗೆ ಲಭಿಸಿರುವುದು ಅದೆಷ್ಟು ಕೆಟ್ಟದಾದ ಸಾಂಗತ್ಯ! {37-38}

ಒಂದು ವೇಳೆ ಅಲ್ಲಾಹ್ ನ ವಿಷಯದಲ್ಲೂ ಅಂತ್ಯದಿನದ ಬಗ್ಗೆಯೂ ದೃಢ ವಿಶ್ವಾಸವನ್ನು ಹೊಂದಿದ್ದು, ಅಲ್ಲಾಹ್ ನು ಅವರಿಗೆ ದಯಪಾಲಿಸಿದ್ದ (ಸಂಪತ್ತಿನಿಂದ) ಸ್ವಲ್ಪವನ್ನು ದಾನದ ರೂಪದಲ್ಲಿ ಖರ್ಚು ಮಾಡಿರುತ್ತಿದ್ದರೆ ಅವರಿಗೆ ನಷ್ಟವಾಗುತ್ತಿದ್ದುದಾದರೂ ಏನು?! (ಯಥಾರ್ಥದಲ್ಲಿ) ಅಲ್ಲಾಹ್ ನು ಅವರ ಕುರಿತಂತೆ ಚೆನ್ನಾಗಿ ಬಲ್ಲವನಾಗಿದ್ದಾನೆ. ಖಂಡಿತವಾಗಿಯೂ ಅಲ್ಲಾಹ್ ನು (ಯಾರಿಗೂ) ಕಿಂಚಿತ್ತೂ ಅನ್ಯಾಯ ಮಾಡುವುದಿಲ್ಲ! ಇನ್ನು ಒಳಿತೇನಾದರೂ ಇದ್ದರೆ ಅದನ್ನು ಇಮ್ಮಡಿಗೊಳಿಸಿ, ತನ್ನ ವತಿಯಿಂದ ದೊಡ್ಡದಾದ ಪ್ರತಿಫಲವನ್ನು (ಸೇರಿಸಿ) ನೀಡುವನು. {39-40}

ನಾವು ಪ್ರತಿಯೊಂದು (ಗತ)ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ಕರೆಯುವ; ಮತ್ತು (ಧಿಕ್ಕಾರಿಗಳಾದ) ಈ ಜನರ ವಿರುದ್ಧ (ಓ ಪೈಗಂಬರರೇ,) ನಿಮ್ಮನ್ನೇ ಸಾಕ್ಷಿಯನ್ನಾಗಿ ಕರೆಯುವ (ಆ ದಿನ) ಇವರ ಸ್ಥಿತಿ ಹೇಗಾದೀತು! ಧಿಕ್ಕಾರದ ನಿಲುವನ್ನೂ ತಾಳಿ ಜೊತೆಗೆ ಪೈಗಂಬರರ ಮಾತನ್ನೂ ಮೀರಿದವರು – ಅಯ್ಯೋ, ಭೂಮಿಯಾದರೂ ನಮ್ಮ ಸಮೇತ [ನಾವು ಹೂತು ಹೋಗುವಂತೆ ನಮ್ಮನ್ನೆಳೆದುಕೊಂಡು] ಸಮತಟ್ಟಾಗಿ ಬಿಡಬಾರದೇ – ಎಂದು ಆ ದಿನ ಹಾತೊರೆಯುವರು. (ಅಂದು) ಯಾವೊಂದು ವಿಷಯವನ್ನೂ ಅಲ್ಲಾಹ್ ನಿಂದ ಬಚ್ಚಿಡಲು ಅವರಿಗೆ ಸಾಧ್ಯವಾಗದು. {41-42}

ಓ ವಿಶ್ವಾಸಿಗಳೇ! ಪಾನಮತ್ತರಾಗಿರುವ ಸ್ಥಿತಿಯಲ್ಲಿ ನೀವು ನಮಾಝ್ [ಗೆ ಮೀಸಲಾದ ಸ್ಥಳವನ್ನೂ] ಸಮೀಪಿಸ ಬಾರದು – ನೀವು ಹೇಳುತ್ತಿರುವುದು ಏನೆಂದು ನೀವು (ಸ್ವತಃ) ತಿಳಿದುಕೊಳ್ಳುವಂತಾಗುವ ತನಕ. ಹಾಗೆಯೇ, ಜನಾಬತ್ [ಅರ್ಥಾತ್: ಸಂಭೋಗ/ಸ್ಖಲನಾನಂತರದ ದೈಹಿಕ ಅಶುದ್ಧ] ಸ್ಥಿತಿಯಲ್ಲಿಯೂ – ನೀವು ಸ್ನಾನ ಮಾಡಿಕೊಳ್ಳುವ ತನಕ (ನಮಾಝ್ ಅನ್ನು ಸಮೀಪಿಸ ಬಾರದು); ಆದರೆ [ಉದ್ದೇಶವು ಮಸೀದಿಯ] ಮೂಲಕ ಕೇವಲ ಹಾದು ಹೋಗುವುದು [ಮಾತ್ರವಾದರೆ ಅಭ್ಯಂತರವಿಲ್ಲ].

ಇನ್ನು ನೀವು ರೋಗಿಯಾಗಿದ್ದರೆ, ಅಥವಾ ಪ್ರಯಾಣದಲ್ಲಿದ್ದರೆ, ಅಥವಾ ನಿಮ್ಮ ಪೈಕಿ ಯಾರಾದರೂ ಶೌಚಾಲಯವನ್ನು ಉಪಯೋಗಿಸಿ ಬಂದಿದ್ದರೆ, ಅಥವಾ ಪತ್ನಿಯರನ್ನು ಸ್ಪರ್ಶಿಸಿ ಬಂದಿದ್ದರೆ, ತರುವಾಯ (ಶುಚೀಕರಿಸಲು) ನಿಮಗೆ ನೀರು ಸಿಗದೇ ಹೋದರೆ ಆಗ ನೀವು [ನಮಾಝ್ ನಿರ್ವಹಿಸಲು] ಶುದ್ಧವಾದ ನೆಲದ ಮೇಲ್ಮೈಯನ್ನು ಸ್ಪರ್ಷಿಸಿ (ಅದರಿಂದ) ನಿಮ್ಮ ಮುಖಗಳನ್ನೂ ಕೈಗಳನ್ನೂ ಸವರಿಕೊಂಡು ‘ತಯಮ್ಮಮ್’ ಮಾಡಿಕೊಳ್ಳ ಬೇಕು. ಅಲ್ಲಾಹ್ ನು ಖಂಡಿತವಾಗಿಯೂ ಅತ್ಯಧಿಕ ರಿಯಾಯಿತಿ ನೀಡುವವನೂ ಅತ್ಯಂತ ಕ್ಷಮಾಶೀಲನೂ ಆಗಿರುತ್ತಾನೆ. {43}

(ಓ ಪೈಗಂಬರರೇ!) (ಮೂಲ) ಗ್ರಂಥದ ಒಂದು ಭಾಗವನ್ನು ಯಾವ ಜನರಿಗೆ ನೀಡಲ್ಪಟ್ಟಿದೆಯೋ ಅವರು ತಪ್ಪು ದಾರಿಯನ್ನೇ ಖರೀದಿಸುತ್ತಿರುವುದನ್ನು ನೀವು ನೋಡಿದಿರಲ್ಲವೇ! ನೀವೂ ಕೂಡ ದಾರಿ ತಪ್ಪಿದವರಾಗಬೇಕೆಂದು ಅವರು ಹಂಬಲಿಸುತ್ತಿದ್ದಾರೆ. ಈ ನಿಮ್ಮ ಶತ್ರುಗಳ ಕುರಿತು ಅಲ್ಲಾಹ್ ನು ಚೆನ್ನಾಗಿ ಬಲ್ಲನು. [ಆದ್ದರಿಂದ ಆ ಬಗ್ಗೆ ಚಿಂತಿಸದಿರಿ]. ನಿಮ್ಮ ಸಂರಕ್ಷಣೆಗೆ ಅಲ್ಲಾಹ್ ನು ಮಾತ್ರವೇ ಸಾಕು; ಮಾತ್ರವಲ್ಲ, ನಿಮಗೆ ಸಹಾಯಕನಾಗಿಯೂ ಅಲ್ಲಾಹ್ ನೇ ಸಾಕು. {44-45}

ಯಹೂದಿಗಳಿಗೆ ಸೇರಿದ ಒಂದು ಗುಂಪಿನವರು [ಪೈಗಂಬರರೇ, ನಿಮ್ಮೊಂದಿಗೆ ಸಂಭಾಷಣೆಯಲ್ಲಿರುವಾಗ ಉಚ್ಚರಿಸುವ] ಶಬ್ಧಗಳನ್ನು ಅವರು ಅದರ ಸ್ಥಾನದಿಂದ ಪಲ್ಲಟಗೊಳಿಸಿ [ಅಪಾರ್ಥ ಬರುವಂತೆ ಮಾತನಾಡುತ್ತಾರೆ]. ಧರ್ಮವನ್ನು ಲೇವಡಿ ಮಾಡುವ ಸಲುವಾಗಿ, [ನಿಮ್ಮ ಸಂದೇಶವನ್ನು] ನಾವು ಕೇಳಿದೆವು ಆದರೆ ತಿರಸ್ಕರಿಸಿದೆವು; ನಮ್ಮಿಂದ ಕೇಳಿಸುವಂತೆ ಮಾಡದೆ (ಸುಮ್ಮನೆ) ಕೇಳಿರಿ ಎಂದೂ, ನಾಲಿಗೆಯನ್ನು ತಿರುಚಿಕೊಂಡು ‘ರಾಇನಾ’ ಎಂದೂ (ಅವರು) ಹೇಳುತ್ತಿದ್ದಾರೆ. ಅದಕ್ಕೆ ಬದಲಾಗಿ ಅವರು (ಪೈಗಂಬರರೇ,) ನಾವು ಆಲಿಸಿದೆವು ಮತ್ತು ಅನುಸರಿಸುವವರಾದೆವು; (ನಮ್ಮ ಅರಿಕೆಯನ್ನೂ) ನೀವು ಕೇಳಿರಿ; ನಮ್ಮತ್ತ ಗಮನ ಹರಿಸಿರಿ – ಎಂದು ಹೇಳಿರುತ್ತಿದ್ದರೆ ಅದು ಅವರ ಪಾಲಿಗೇ ಉತ್ತಮ ಮತ್ತು ಹೆಚ್ಚು ಸರಿಯಾದ ಪ್ರಯೋಗವಾಗುತ್ತಿತ್ತು. ಆದರೆ ಅವರು ತಾಳಿದ (ಅಂಥ) ಧಿಕ್ಕಾರದ ನಿಲುವಿಗಾಗಿ ಅಲ್ಲಾಹ್ ನು ಅವರನ್ನು ಶಪಿಸಿರುವನು. ಆದ್ದರಿಂದ ಅವರೆಂದೂ ವಿಶ್ವಾಸಿಗಳಾಗುವವರಲ್ಲ; (ಅವರಲ್ಲಿನ) ಸ್ವಲ್ಪವೇ ಜನರ ಹೊರತು! {46}

ದಿವ್ಯಗ್ರಂಥವು ನೀಡಲ್ಪಟ್ಟ ಓ ಜನರೇ, ನಿಮ್ಮ ಬಳಿ ಅದಾಗಲೇ ಇರುವಂಥ (ಗ್ರಂಥದ ಸಂದೇಶವನ್ನು) ದೃಢೀಕರಿಸುತ್ತಾ ನಾವು [ಈಗ ಮುಹಮ್ಮದ್ ರಿಗೆ] ಇಳಿಸಿಕೊಟ್ಟಿರುವ [ಗ್ರಂಥ ಕುರ್‌ಆನ್ ಅನ್ನು] ನೀವು ನಂಬುವವರಾಗಿರಿ. ನಾವು (ನಿಮ್ಮಲ್ಲಿಯ ಕೆಲವು) ಮೋರೆಗಳನ್ನು ವಿಕೃತಗೊಳಿಸುವ, ಅವನ್ನು ಬೆನ್ನ ಹಿಂದಕ್ಕೆ ತಿರುಚಿ ಬಿಡುವ; ಅಥವಾ ‘ಸಬ್ಬತ್’ ನ (ದಿನದ ಶಿಷ್ಟಾಚಾರವನ್ನು ಪಾಲಿಸದ)ವರನ್ನು ನಾವು ಶಪಿಸಿದಂತೆಯೇ ಅವರನ್ನೂ ನಾವು ಶಪಿಸುವುದಕ್ಕಿಂತ ಮುಂಚಿತವಾಗಿ (ಮುಹಮ್ಮದ್ ರ ಸಂದೇಶದಲ್ಲಿ ವಿಶ್ವಾಸವಿಡಿರಿ). ಅಲ್ಲಾಹ್ ನ ಆಜ್ಞೆಯಾದರೋ ಕಾರ್ಯಗತವಾಗಿಯೇ ತೀರುವುದು! {47}

ಅಲ್ಲಾಹ್ ನು ತನ್ನ ದೇವತ್ವದಲ್ಲಿ (ಇತರರಿಗೆ) ಸಹಭಾಗಿತ್ವವನ್ನು ಕಲ್ಪಿಸುವ (ಅಪರಾಧವನ್ನು) ಎಂದೂ ಕ್ಷಮಿಸಲಾರನು. ಆದರೆ ಅದಕ್ಕಿಂತ ಕಡಿಮೆ ದರ್ಜೆಯ (ಇತರ ಪಾಪಗಳನ್ನು) ಕ್ಷಮಿಸಲು ತಾನಿಚ್ಛಿಸಿದರೆ ಕ್ಷಮೆ ನೀಡುವನು. ಇನ್ನು ಯಾರು (ದೇವತ್ವದಲ್ಲಿ) ಅಲ್ಲಾಹ್ ನೊಂದಿಗೆ ಇತರರನ್ನು ಸೇರಿಸಿದರೋ ಅವರು ಮಾಡಿಕೊಂಡಿರುವುದು ಘನಘೋರವಾದ ಪಾಪಕಾರ್ಯವಾಗಿದೆ. {48}

[ಶಿರ್ಕ್ ನಂತಹ ಪಾಪವೆಸಗಿಯೂ] ತಮ್ಮನ್ನು ಪರಿಶುದ್ಧರೆಂದು ಭಾವಿಸಿಕೊಳ್ಳುವ ಇವರನ್ನು (ಓ ಪೈಗಂಬರರೇ), ನೀವು ನೋಡಲಿಲ್ಲವೇ?! ಹಾಗಲ್ಲ, ಯಾರನ್ನು ಪರಿಶುದ್ಧಗೊಳಿಸಲು ಅಲ್ಲಾಹ್ ನು ಇಚ್ಛಿಸುವನೋ ಅವರನ್ನು (ಪಾಪಗಳಿಂದ) ಪರಿಶುದ್ಧರನ್ನಾಗಿ ಮಾಡುವನು. [ಪರಲೋಕದಲ್ಲಿ ಶಿಕ್ಷೆ ನೀಡುವಾಗ] ಇವರೊಂದಿಗೆ ಕಿಂಚಿತ್ತೂ ಅನ್ಯಾಯದೊಂದಿಗೆ ವರ್ತಿಸಲಾಗುವುದಿಲ್ಲ. ನೋಡಿರಿ! ಅಲ್ಲಾಹ್ ನ ವಿಷಯವಾಗಿ ಅವರು ಅದೆಂತಹ ಮಿಥ್ಯ ಸಂಗತಿಗಳನ್ನು ಹೆಣೆಯುತ್ತಿರುವರು! ಅತ್ಯಂತ ಸ್ಪಷ್ಟವಾದ ಆ ಪಾಪ ಮಾತ್ರವೇ [ಅವರನ್ನು ಶಿಕ್ಷಿಸಲು ಪುರಾವೆಯಾಗಿ] ಸಾಕಾಗುವುದು. {49-50}

ಮೂಲ ಗ್ರಂಥದ ಒಂದು ಭಾಗವನ್ನು ಯಾವ ಜನರಿಗೆ ನೀಡಲಾಗಿದೆಯೋ ಅವರ (ಆಚಾರ ವಿಚಾರಗಳನ್ನು, ಓ ಪೈಗಂಬರರೇ, ನೀವು) ನೋಡುತ್ತಿರುವಿರಿ ತಾನೆ?! ಸಕಲ ವಿಧ ಕಂದಾಚಾರಗಳು ಹಾಗೂ ಮಿಥ್ಯ ದೇವರುಗಳನ್ನು ಅವರು ನಂಬಿಕೊಂಡಿದ್ದಾರೆ! [ಅಲ್ಲಾಹ್ ನು ಮಾತ್ರವೇ ನಿಜವಾದ ದೇವನು ಎಂದು] ನಂಬಿದವರಿಗಿಂತಲೂ ಹೆಚ್ಚು ಸರಿದಾರಿಯಲ್ಲಿರುವವರು ಇವರೇ ಆಗಿರುವರು ಎಂದು [ಅಲ್ಲಾಹ್ ನ ಏಕತ್ವವನ್ನು] ಒಪ್ಪಲು ನಿರಾಕರಿಸಿದವರ ಕುರಿತು ಅವರು ಹೇಳುತ್ತಿದ್ದಾರೆ. ಹೌದು, ಅಲ್ಲಾಹ್ ನು ಶಪಿಸಿರುವುದು ಹಾಗೆ ಹೇಳುವವರನ್ನೇ! ಇನ್ನು ಯಾರನ್ನು ಅಲ್ಲಾಹ್ ನು ಶಪಿಸಿರುವನೋ ಅವರಿಗೆ ಸಹಾಯ ಒದಗಿಸುವವನಾಗಿ ನೀವು ಯಾರನ್ನೂ ಕಾಣಲಾರಿರಿ. {51-52}

(ಅಲ್ಲಾಹ್ ನ) ಅಧಿಕಾರದಲ್ಲಿ ಇವರಿಗೂ ಏನಾದರೂ ಪಾಲು ಇರುವುದೇನು? ಹಾಗೇನಾದರೂ ಇದ್ದಿದ್ದರೆ ಇವರು ತೃಣಮಾತ್ರವನ್ನೂ ಜನರಿಗೆ ಕೊಡುತ್ತಿರಲಿಲ್ಲ! {53}

ಅಥವಾ, ಅಲ್ಲಾಹ್ ನು ತನ್ನ ಅನುಗ್ರಹದಿಂದ (ಇತರ) ಜನರಿಗೆ ಏನನ್ನು ಕರುಣಿಸಿರುವನೋ ಅದಕ್ಕಾಗಿದೆಯೇ ಇವರು ಅಸೂಯೆ ಪಡುತ್ತಿರುವುದು? [ಹಾಗಿದ್ದರೆ ಇವರು ಚೆನ್ನಾಗಿ ತಿಳಿಯಲಿ] (ಪ್ರವಾದಿ) ಇಬ್ರಾಹೀಮ್ ರ ಸಂತತಿಗೆ ಖಂಡಿತವಾಗಿ ನಾವು ದಿವ್ಯಗ್ರಂಥವನ್ನೂ ಸುಜ್ಞಾನವನ್ನೂ [ಅರ್ಥಾತ್: ಪ್ರವಾದಿತ್ವವನ್ನು] ನೀಡಿದ್ದೆವು. ಮಾತ್ರವಲ್ಲ, ಭವ್ಯವಾದ ಒಂದು ಸಾಮ್ರಾಜ್ಯವನ್ನೂ ನಾವು ಅವರಿಗೆ ಕರುಣಿಸಿದ್ದೆವು. ಆದರೆ ಅವರ ಪೈಕಿಯ ಕೆಲವರು (ದಿವ್ಯಗ್ರಂಥದಲ್ಲಿ) ವಿಶ್ವಾಸವಿರಿಸಿದರು. ಇನ್ನು ಕೆಲವರು ಅದರಿಂದ ವಿಮುಖರಾಗಿ ಹೋದರು. ಧಗಧಗಿಸುವ ನರಕ ಮಾತ್ರವೇ [ಅವರನ್ನು ಶಿಕ್ಷಿಸಲು] ಸಾಕಾಗುವುದು. {54-55}

ನಿಜವಾಗಿಯೂ, ಯಾರು ನಮ್ಮ ವಚನಗಳೊಂದಿಗೆ ಧಿಕ್ಕಾರದ ನಿಲುವು ತಾಳಿದರೋ ಅವರನ್ನು ನಾವು ಶೀಘ್ರವೇ ನರಕಾಗ್ನಿಯಲ್ಲಿ ಸುಡಲಿದ್ದೇವೆ. ಅವರು ಆ ಶಿಕ್ಷೆಯನ್ನು (ನಿರಂತರ) ಸವಿಯುವಂತಾಗಲು ಅವರ ಚರ್ಮವು ಬೆಂದು ಕರಟಿದಾಗಲೆಲ್ಲಾ ಅದಕ್ಕೆ ಬದಲಾಗಿ ಬೇರೆಯೇ ಚರ್ಮವನ್ನು ನಾವು ಅವರಿಗೆ (ಕೊಡುವೆವು). ನಿಸ್ಸಂಶಯವಾಗಿಯೂ ಅಲ್ಲಾಹ್ ನು ಮಹಾ ಪ್ರತಾಪಶಾಲಿ, ಅತ್ಯಂತ ವಿವೇಕಪೂರ್ಣನು [ಎಂಬುದು ತಿಳಿದಿರಲಿ]! {56}

ಮತ್ತು [ನಮ್ಮ ವಚನಗಳಲ್ಲಿ] ನಂಬಿಕೆ ಇರಿಸಿಕೊಂಡು ಸತ್ಕರ್ಮಗಳನ್ನು ಮಾಡುತ್ತಲಿದ್ದವರನ್ನು ಶೀಘ್ರವೇ ತಳದಲ್ಲಿ ಹೊನಲುಗಳು ಹರಿಯುತ್ತಲಿರುವ ಸ್ವರ್ಗೀಯ ಉದ್ಯಾನಗಳನ್ನು ಪ್ರವೇಶಿಸಿಕೊಳ್ಳುವಂತೆ ನಾವು ಮಾಡುವೆವು, ಅದರಲ್ಲಿ ಅವರು ಸದಾಕಾಲ ನೆಲೆಸುವರು. ನಿರ್ಮಲರಾದ ಬಾಳ ಸಂಗಾತಿಗಳು ಅವರಿಗಾಗಿ ಅದರಲ್ಲಿ ಇರುವರು ಮತ್ತು ದಟ್ಟವಾದ ನೆರಳಿನೊಳಕ್ಕೆ ನಾವು ಅವರಿಗೆ ಪ್ರವೇಶ ನೀಡುವೆವು. {57}

[ವಿಶ್ವಾಸಿಗಳೇ, ಭರವಸೆಯೊಂದಿಗೆ] ನಿಮಗೆ ಒಪ್ಪಿಸಲಾದ (ವಸ್ತು/ಹೊಣೆಗಾರಿಕೆಗಳ) ಅಮಾನತ್ತುಗಳನ್ನು ಅವುಗಳ ಸರಿಯಾದ ಹಕ್ಕುದಾರರಿಗೆ ಹಿಂದಿರುಗಿಸಬೇಕೆಂದೂ, ಜನರ ನಡುವೆ ತೀರ್ಪು ನೀಡಬೇಕಾದಂತಹ ಸಂದರ್ಭಗಳಲ್ಲಿ ನ್ಯಾಯಾಧಾರಿತವಾದ ತೀರ್ಪುಗಳನ್ನು ನೀವು ನೀಡಬೇಕೆಂದೂ ಅಲ್ಲಾಹ್ ನು ನಿಮಗೆ ಕಟ್ಟಾಜ್ಞೆ ನೀಡುತ್ತಾನೆ. ನಿಜವಾಗಿಯೂ ಅಲ್ಲಾಹ್ ನು ನಿಮಗೆ ನೀಡುತ್ತಿರುವುದು ಬಹಳ ಉತ್ತಮವಾದ ಉಪದೇಶವಾಗಿದೆ. ಅಲ್ಲಾಹ್ ನಾದರೋ ಎಲ್ಲವನ್ನೂ ಆಲಿಸುವವನೂ ಸಕಲವನ್ನೂ ಕಾಣುವವನೂ ಆಗಿರುವನು. {58}

ಓ ವಿಶ್ವಾಸಿಗಳ ಸಮುದಾಯವೇ, ಅಲ್ಲಾಹ್ ನಿಗೆ ಸಂಪೂರ್ಣ ವಿಧೇಯರಾಗಿರಿ ಮತ್ತು (ಅಲ್ಲಾಹ್ ನ) ದೂತರ ಅನುಸರಣೆ ಕೈಗೊಳ್ಳಿರಿ. ಅಂತೆಯೇ, [ಸಾಮುದಾಯಿಕ ವಿಷಯಗಳಲ್ಲಿ] ನಿಮ್ಮ ವತಿಯಿಂದ [ನಿಯುಕ್ತಗೊಂಡ] ಕಾರ್ಯ ನಿರ್ವಹಣಾಧಿಕಾರಿಯ [ಅರಬಿ: ಉಲು-ಅಲ್-ಅಮ್ರ್] ಆದೇಶಗಳನ್ನೂ ಪಾಲಿಸಿರಿ. ಇನ್ನು ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮೊಳಗೆ ವಿವಾದವುಂಟಾದರೆ – ಮತ್ತು ನೀವು ಅಲ್ಲಾಹ್ ನಲ್ಲಿ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿಟ್ಟವರು ಹೌದಾದರೆ – ಅದನ್ನು (ಇತ್ಯರ್ಥಕ್ಕಾಗಿ) ಅಲ್ಲಾಹ್ ಮತ್ತು ಅವನ ದೂತರೆಡೆಗೆ ಒಯ್ಯಿರಿ. ಅದೊಂದು ಉತ್ತಮ ವಿಧಾನವಾಗಿದ್ದು, ಅದರ ಪರಿಣಾಮವೂ ಅತ್ಯುತ್ತಮವಾಗಿರುವುದು. {59}

ನಿಮ್ಮತ್ತ ಕಳಿಸಲಾದ (ಕುರ್‌ಆನ್ ನ ಆದೇಶಗಳಲ್ಲಿ) ಹಾಗೂ ನಿಮಗಿಂತ ಮುಂಚಿನ (ಪ್ರವಾದಿಗಳಿಗೆ) ಇಳಿಸಿಕೊಡಲಾದ (ತೌರಾತ್ ಮತ್ತು ಇಂಜೀಲ್)ಗಳಲ್ಲಿ ತಾವು ವಿಶ್ವಾಸವಿಟ್ಟವರು ಎಂದು ಕಟುವಾಗಿ ವಾದಿಸುತ್ತಿರುವವರ ಧೋರಣೆಯನ್ನು ನೀವು ನೋಡಿದಿರೇನು?! ಅವರು ತಮ್ಮ (ವ್ಯವಹಾರಗಳನ್ನು) ದುಷ್ಟ-ಅಧಿಕಾರಿಗಳಿಗೆ [ಅರಬಿ: ತಾಘೂತ್] ಒಪ್ಪಿಸಿ (ಅವರಿಂದ) ಇತ್ಯರ್ಥ ಮಾಡಿಸಿಕೊಳ್ಳಲು ಇಚ್ಛಿಸುತ್ತಿರುವರು. ಆದರೆ ಯಥಾರ್ಥದಲ್ಲಿ ದುಷ್ಟಶಕ್ತಿಗಳನ್ನು ನಿರಾಕರಿಸುವಂತೆ ಅವರಿಗೆ ಆಜ್ಞಾಪಿಸಲಾಗಿತ್ತು. ಅವರನ್ನು ದಾರಿ ತಪ್ಪಿಸಿ, ತಪ್ಪಿದ ದಾರಿಯಲ್ಲಿ ಅವರು ದೂರ ಬಹುದೂರ ಸಾಗಬೇಕೆಂಬುದೇ ಸೈತಾನನು ಬಯಸುತ್ತಿರುವನು. ಅಲ್ಲಾಹ್ ನು ಇಳಿಸಿದ (ಕುರ್‌ಆನ್) ನೆಡೆಗೆ ಹಾಗೂ ಪೈಗಂಬರರೆಡೆಗೆ ನೀವು ಬನ್ನಿರಿ ಎಂದು ಅವರೊಂದಿಗೆ ಹೇಳಲಾದಾಗ (ಮುಸ್ಲಿಮರಂತೆ ಸೋಗು ಹಾಕುತ್ತಿದ್ದ) ಆ ಕಪಟಿಗಳು ಜುಗುಪ್ಸೆಪಟ್ಟು ನಿಮ್ಮಿಂದ ದೂರ ಸರಿದು ಹೋಗುವುದನ್ನು (ಓ ಪೈಗಂಬರರೇ) ನೀವು ಕಾಣುತ್ತಿರುವಿರಿ. {60-61}

ಅವರ ಸ್ವಕರಗಳು ಎಸಗಿದ (ದುಷ್ಕೃತ್ಯಗಳ) ಕಾರಣದಿಂದಾಗಿ ಅವರ ಮೇಲೆ (ಈಗ) ವಿಪತ್ತು ಬಂದೆರಗಿದಾಗ ಅದೇ ಜನರು ನಿಮ್ಮ ಬಳಿಗೆ ಬಂದು ಅಲ್ಲಾಹ್ ನ ಮೇಲೆ ಆಣೆ ಹಾಕುತ್ತಾ ನಾವಾದರೋ ಕೇವಲ ಒಳಿತನ್ನು ಮತ್ತು ಸಾಮರಸ್ಯವನ್ನಲ್ಲದೆ ಬೇರೇನನ್ನೂ ಬಯಸಿದವರಾಗಿರಲಿಲ್ಲ – ಎಂದು (ಗೋಗೆರೆಯುವ ದುಃಸ್ಥಿತಿ) ಹೇಗಿದೆ ನೋಡಿ! ಆ ಕಪಟಿಗಳು ತಮ್ಮ ಹೃದಯಗಳಲ್ಲಿ ಅದೆಂತಹ (ವಿಚಾರವನ್ನು ಬಚ್ಚಿಟ್ಟಿದ್ದಾರೆ) ಎಂಬುದನ್ನು ಅಲ್ಲಾಹ್ ನು ಚೆನ್ನಾಗಿಯೇ ಬಲ್ಲನು. ಆದ್ದರಿಂದ (ಪೈಗಂಬರರೇ) ನೀವಿನ್ನು ಅವರಿಂದ ವಿಮುಖರಾಗಿ ಬೇರೆಡೆಗೆ ತಿರುಗಿಕೊಳ್ಳಿ. ಆದರೆ ಅವರನ್ನು ಉಪದೇಶಿಸುತ್ತಲಿರಿ; ಮತ್ತು ಅವರ (ಧೋರಣೆಗೆ ಸಂಬಂಧಿಸಿದಂತೆ) ಮನಸ್ಸಿಗೆ ನಾಟುವ ರೀತಿಯಲ್ಲಿ ಅವರೊಡನೆ ಮಾತನಾಡಿರಿ. {62-63}

ನಾವು ದೂತರನ್ನು [ಅರ್ಥಾತ್ ರಸೂಲ್ ಗಳನ್ನು] ಕಳಿಸಿರುವುದು ಅಲ್ಲಾಹ್ ನ ಆದೇಶದಂತೆ (ಜನರು) ಅವರನ್ನು ಅನುಸರಿಸಬೇಕು ಎಂಬುದಲ್ಲದೆ ಬೇರಾವ ಉದ್ದೇಶಕ್ಕಾಗಿಯೂ ಅಲ್ಲ (ಎಂದು ಅವರು ತಿಳಿದಿರಲಿ). ಒಂದು ವೇಳೆ ಆ ಕಪಟಿಗಳು ತಮ್ಮೊಂದಿಗೆ ತಾವೇ ಅನ್ಯಾಯವೆಸಗಿದ್ದಾಗಲೇ ನಿಮ್ಮ ಸನ್ನಿಧಿಯಲ್ಲಿ ಹಾಜರಾಗಿ ಅಲ್ಲಾಹ್ ನ ಕ್ಷಮೆಯಾಚಿಸಿರುತ್ತಿದ್ದರೆ; ಅದರ ಜೊತೆಗೇ ಪೈಗಂಬರರೂ ಸಹ ಅವರಿಗಾಗಿ ಕ್ಷಮೆಯಾಚಿಸಿರುತ್ತಿದ್ದರೆ; ಅಲ್ಲಾಹ್ ನು ಬಹಳವಾಗಿ ಕ್ಷಮಿಸುವವನೂ ಅತಿ ಹೆಚ್ಚು ಕರುಣೆ ತೋರುವವನೂ ಆಗಿರುವುದನ್ನು ಅವರು ಖಂಡಿತ ಕಂಡುಕೊಳ್ಳುತ್ತಿದ್ದರು. {64}

ಎಂದಿಗೂ ಇಲ್ಲ! ನಿಮ್ಮೊಡೆಯನ ಆಣೆ! ತಮ್ಮ ನಡುವೆ ತಲೆದೋರುವ ವಿವಾದಗಳ ಅಂತಿಮ ತೀರ್ಪುಗಾರನಾಗಿ (ಓ ಪೈಗಂಬರರೇ) ನಿಮ್ಮನ್ನು ಅಂಗೀಕರಿಸುವ ತನಕ; ಮತ್ತು ನೀವು ನೀಡಿದ ತೀರ್ಪನ್ನು ಮನಸ್ಸಿನಲ್ಲಿಯೂ ಸಂಕೋಚ ಪಡದೆ ತುಂಬುಹೃದಯದಿಂದ ಒಪ್ಪಿಕೊಳ್ಳುವ ತನಕ ಅವರು ವಿಶ್ವಾಸಿಗಳಾಗುವುದು [ಅರ್ಥಾತ್: ಮೂಮಿನ್ ಗಳಾಗುವುದು] ಖಂಡಿತಾ ಸಾಧ್ಯವಿಲ್ಲ. {65}

ನಿಮ್ಮ ಪೈಕಿಯ (ಪಾಪಿಗಳನ್ನು) ಸ್ವತಃ ನೀವೇ ವಧಿಸಿ ಬಿಡಿರಿ ಎಂದೋ ಅಥವಾ ನಿಮ್ಮ ಮನೆಮಠಗಳನ್ನು ಬಿಟ್ಟು ತೊಲಗಿರಿ ಎಂದೋ ಆ (ಮುನಾಫಿಕ್ ರಿಗೆ) ನಾವು ಆಜ್ಞಾಪಿಸಿದ್ದೇ ಆಗಿದ್ದರೆ ಅವರಲ್ಲಿ ಕೇವಲ ಕೆಲವರ ಹೊರತು ಬೇರಾರೂ ಅದನ್ನು ಪಾಲಿಸುತ್ತಿರಲಿಲ್ಲ. ಅವರಿಗೆ ಏನನ್ನು (ಈಗ) ತಿಳಿ ಹೇಳಲಾಗುತ್ತಿದೆಯೋ ಅದನ್ನು ಅವರು ಪಾಲಿಸಿಕೊಂಡರೆ ಅದು ಅವರ ಪಾಲಿಗೆ ಉತ್ತಮವಾಗಿ ಪರಿಣಮಿಸುತ್ತಿತ್ತು; ಮಾತ್ರವಲ್ಲ (ವಿಶ್ವಾಸದ ವಿಷಯದಲ್ಲಿ) ಅವರು ಹೆಚ್ಚಿನ ಸ್ಥಿರಚಿತ್ತತೆ ಹೊಂದುತ್ತಿದ್ದರು. {66}

(ಅವರ ಧೋರಣೆಯು) ಹಾಗಿರುತ್ತಿದ್ದರೆ ನಮ್ಮ ವತಿಯಿಂದ ಅವರಿಗೆ ನಾವು ಭಾರೀ ಪ್ರತಿಫಲವನ್ನು ದಯಪಾಲಿಸುತ್ತಿದ್ದೆವು; ಹಾಗೂ ನೇರವಾದ ಮಾರ್ಗದಲ್ಲಿ ನಾವು ಅವರನ್ನು ನಡೆಸಿಯೇ ತೀರುತ್ತಿದ್ದೆವು. {67-68}

ಯಾರೆಲ್ಲ ಅಲ್ಲಾಹ್ ಮತ್ತು (ಅಲ್ಲಾಹ್ ನ) ಈ ಪೈಗಂಬರರ ಅನುಸರಣೆ ಮಾಡುವರೋ ಅಂಥವರು ಅಲ್ಲಾಹ್ ನು ಅನುಗ್ರಹಿಸಿದವರ ಸಾಲಿಗೆ ಸೇರುವರು – ಅಂದರೆ ಪ್ರವಾದಿಗಳ, ಸತ್ಯಸಂಧರ, ಹುತಾತ್ಮರ ಮತ್ತು ಸಜ್ಜನರ (ಸಾಲಿಗೆ ಸೇರಿಕೊಳ್ಳುವರು). ಸಂಗಾತಿಗಳೆಂಬ ನೆಲೆಯಲ್ಲಿ ಎಷ್ಟೊಂದು ಉತ್ತಮವಾದವರು ಅವರೆಲ್ಲ! {69}

ಇವೆಲ್ಲ ಅಲ್ಲಾಹ್ ನ ವತಿಯಿಂದ (ಅವರಿಗಾಗಿ ಇರುವ ವಿಶೇಷ) ಅನುಗ್ರಹವಾಗಿದೆ. (ಅದನ್ನು ತೀರ್ಮಾನಿಸಲು) ಅಲ್ಲಾಹ್ ನ ಜ್ಞಾನ ಮಾತ್ರವೇ ಸಾಕು. {70}

ವಿಶ್ವಾಸಿಗಳಾದ ಓ ಜನರೇ! ನೀವು (ಸರ್ವವಿಧ ಸನ್ನದ್ಧತೆಯೊಂದಿಗೆ ಈಗ) ಅಗತ್ಯವಾದ ಮುನ್ನೆಚ್ಚರಿಕೆ ವಹಿಸಿಕೊಳ್ಳಿ. ತದನಂತರ [ಪೀಡನೆಗೆ ಒಳಗಾಗುತ್ತಿರುವವರ ಸಹಾಯಕ್ಕಾಗಿ] ಪ್ರತ್ಯೇಕ ತುಕಡಿಗಳಾಗಿ ಹೊರಡಿರಿ ಅಥವಾ (ಉಚಿತವೆನಿಸಿದರೆ) ಎಲ್ಲರೂ ಒಟ್ಟಾಗಿಯೇ ಹೊರಡಿರಿ. ಆದರೆ ಹೌದು, [ಇಂತಹ ಸಂದರ್ಭಗಳಲ್ಲಿ ಹೊರಡಲಣಿಯಾಗದೆ] ಹಿಂದೆಯೇ ಉಳಿದುಕೊಳ್ಳುವವನೂ ನಿಮ್ಮೊಳಗೆ ಖಂಡಿತಾ ಇರುತ್ತಾನೆ. ನಿಮಗೇನಾದರೂ (ಅಲ್ಲಿ) ತೊಂದರೆ ಉಂಟಾದರೆ ಅವರ ಗುಂಪಿನಲ್ಲಿ ನನ್ನ ಉಪಸ್ಥಿತಿ ಇಲ್ಲದೇ ಇದ್ದುದು ನಿಜವಾಗಿ ನನ್ನ ಮೇಲೆ ಅಲ್ಲಾಹ್ ನು ತೋರಿದ ಕೃಪೆಯಾಗಿದೆ ಎಂದು ಹೇಳುತ್ತಾನೆ. ಇನ್ನು [ಅಲ್ಲಿ ನೀವು ವಿಜಯಿಗಳಾಗುವ ಮೂಲಕ] ನಿಮಗೆ ಅಲ್ಲಾಹ್ ನ ಅನುಗ್ರಹ ಪ್ರಾಪ್ತವಾದರೆ ನಿಮಗೂ ಆತನಿಗೂ ಯಾವ ನಂಟೂ ಇರಲೇ ಇಲ್ಲವೆಂಬಂತೆ, ಅಯ್ಯೋ! ನಾನೂ ಸಹ ಅವರೊಂದಿಗೆ ಇದ್ದಿದ್ದರೆ ಮಹತ್ತರವಾದ ವಿಜಯವು ನನಗೂ ಪ್ರಾಪ್ತವಾಗುತ್ತಿತ್ತಲ್ಲ ಎಂದವನು ಹೇಳಿಯೇ ಹೇಳುತ್ತಾನೆ. {71-73}

[ಅಲ್ಲಾಹ್ ನಿಗೆ ಅಂಥವರ ಅಗತ್ಯವೇ ಇಲ್ಲ]. ಆದ್ದರಿಂದ ಯಾರು ಪರಲೋಕದ (ವಿಜಯಕ್ಕಾಗಿ) ಇಹಲೋಕದ ಜೀವನವನ್ನು ವಿಕ್ರಯಿಸುವರೋ ಅಂಥವರು (ಮಾತ್ರ) ಅಲ್ಲಾಹ್ ನ ಮಾರ್ಗದಲ್ಲಿ ಹೋರಾಡಲಿ. ಇನ್ನು ಅಲ್ಲಾಹ್ ನ ಮಾರ್ಗದಲ್ಲಿ ಹೋರಾಡುವವನು ವಧಿಸಲ್ಪಟ್ಟರೂ ಮೇಲುಗೈ ಸಾಧಿಸಿದರೂ ಶೀಘ್ರದಲ್ಲೇ ನಾವು ಅವನಿಗೆ ಮಹತ್ತರವಾದ ಪ್ರತಿಫಲವನ್ನು ಕೊಡಲಿದ್ದೇವೆ.{74}

(ವಿಶ್ವಾಸಿಗಳೇ,) ನಿಮಗೆ ಸಂಭವಿಸಿರುವುದಾದರೂ ಏನು? ಅಲ್ಲಾಹ್ ನ ಮಾರ್ಗದಲ್ಲಿ ನೀವು ಏಕೆ ಹೋರಾಡುವುದಿಲ್ಲ?! ಅಲ್ಲಿ ದೌರ್ಜನ್ಯಕ್ಕೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳು – ಓ ನಮ್ಮೊಡೆಯಾ! ದಬ್ಬಾಳಿಕೆ ನಡೆಸುವವರು ವಾಸ ಹೂಡಿರುವ ಈ ನಾಡಿನಿಂದ ನಮ್ಮನ್ನು ಹೊರತೆಗೆದು ವಿಮೋಚಿಸು; ನಿನ್ನ ಸನ್ನಿಧಿಯಿಂದ ಒಬ್ಬಾತನನ್ನು ನಮಗೆ ಹಿತೈಷಿಯಾಗಿ ಕಳಿಸು; ನಿನ್ನ ವತಿಯಿಂದ ಒಬ್ಬನನ್ನು ನಮಗೆ ಸಹಾಯಕನಾಗಿ ನೇಮಿಸು – ಎಂದು ಮೊರೆಯಿಡುತ್ತಿರುವಾಗ [ನೀವು ಅವರ ಪರವಾಗಿ ಹೋರಾಡುವುದಿಲ್ಲವೇಕೆ]? {75}

ವಿಶ್ವಾಸಿಗಳಾದ ಜನರು ಅಲ್ಲಾಹ್ ನ ಮಾರ್ಗದಲ್ಲಿ [ಅರ್ಥಾತ್ ದೌರ್ಜನ್ಯದ ವಿರುದ್ಧ] ಹೋರಾಡುತ್ತಾರೆ. ಆದರೆ ಧರ್ಮಧಿಕ್ಕಾರಿಗಳು ಸತ್ಯವಿರೋಧಿ ಶಕ್ತಿಗಳ [ಅರಬಿ: ತಾಘೂತ್] ಮಾರ್ಗದಲ್ಲಿ ಹೋರಾಡುತ್ತಾರೆ. ಆದ್ದರಿಂದ (ವಿಶ್ವಾಸಿಗಳೇ) ನೀವು ಅಂಥ ಸೈತಾನರ ಸಂಗಾತಿಗಳ ವಿರುದ್ಧ ಹೋರಾಟ ನಡೆಸಿರಿ. ನಿಜವೇನೆಂದರೆ ಸೈತಾನರ ಷಡ್ಯಂತ್ರವು (ವಾಸ್ತವದಲ್ಲಿ) ಬಹಳ ದುರ್ಬಲವಾದುದು! {76}

[ಇದು ಯುದ್ಧಕ್ಕೆ ತಕ್ಕ ಸಮಯವಲ್ಲ, ಆದ್ದರಿಂದ] ನಿಮ್ಮ ಕೈಗಳನ್ನು ಹತೋಟಿಯಲ್ಲಿರಿಸಿಕೊಳ್ಳಿರಿ; ಆದರೆ ನಮಾಝ್ ಅನ್ನು ಸ್ಥಿರವಾಗಿ ಪಾಲಿಸುವವರಾಗಿರಿ ಮತ್ತು ಝಕಾತ್ ನೀಡುತ್ತಲಿರಿ ಎಂದು ಆದೇಶಿಸಲ್ಪಟ್ಟ ಜನರ ಸ್ಥಿತಿಯನ್ನು ನೀವು ನೋಡಿದಿರಲ್ಲ?! ನಂತರ ಯಾವಾಗ ಯುದ್ಧವನ್ನು ಅವರ ಮೇಲೆ ವಿಧಿಗೊಳಿಸಲಾಯಿತೋ ಆಗ ಅವರ ಪೈಕಿಯ ಒಂದು ಗುಂಪಂತು ಅಲ್ಲಾಹ್ ನಿಗೆ ಹೆದರಬೇಕಾದಂತೆ ಅಥವಾ ಅದಕ್ಕಿಂತಲೂ ಹೆಚ್ಚಾಗಿ (ಶತ್ರು) ಜನರಿಗೆ ಹೆದರ ತೊಡಗಿತು. ನಮ್ಮ ಮೇಲೆ ಈ ಯುದ್ಧವನ್ನು ನಿರ್ಬಂಧಗೊಳಿಸಿದ್ದಾದರೂ ಏತಕ್ಕೆ ನಮ್ಮೊಡೆಯಾ? ಇನ್ನೊಂದಷ್ಟು ಕಾಲಾವಧಿಯನ್ನು ನೀನು ನಮಗೆ ನೀಡಬಾರದಿತ್ತೇ? – ಎಂದವರು ಕೇಳತೊಡಗಿದರು. (ಓ ಪೈಗಂಬರರೇ,) ಪ್ರಾಪಂಚಿಕ ಸುಖ-ಸಂಪತ್ತುಗಳು ಅತ್ಯಲ್ಪವಾದುದೆಂದೂ ಭಯಭಕ್ತಿ ಪಾಲಿಸುವವರಿಗೆ ಪರಲೋಕವೇ ಅತ್ಯುತ್ತಮವಾದುದೆಂದೂ ಮತ್ತು (ಅಲ್ಲಿ) ನಿಮಗೆ ಲವಲೇಶ ಅನ್ಯಾಯವೂ ಆಗದು ಎಂದೂ ನೀವು (ಅವರೊಡನೆ) ಹೇಳಿರಿ. {77}

[ಹೆದರಿ ಹಿಂದೆಯೇ ಉಳಿದುಕೊಳ್ಳುವವರೇ,] ನೀವೆಲ್ಲೇ ಇದ್ದರೂ ಮರಣವಂತು ನಿಮ್ಮನ್ನು ಬಂದಪ್ಪಿಯೇ ತೀರುವುದು; ಅತ್ಯಂತ ಭದ್ರಗೊಳಿಸಿ ನಿರ್ಮಿಸಿದ ಕೋಟೆಗಳೊಳಗೆ ನೀವಿದ್ದರೂ ಸರಿಯೇ. (ಪೈಗಂಬರರೇ,) ಅವರಿಗೇನಾದರೂ ಒಳ್ಳೆಯದಾದರೆ ಇದು ಅಲ್ಲಾಹ್ ನ ವತಿಯಿಂದ ಬಂದಿದೆ ಎಂದು ಹೇಳುತ್ತಾರೆ; ಮತ್ತು ಅವರಿಗೇನಾದರೂ ಅಹಿತ ಸಂಭವಿಸಿದರೆ ಇದಕ್ಕೆ ನೀವೇ ಕಾರಣ ಎಂದು ಗೊಣಗುತ್ತಾರೆ. ಎಲ್ಲವೂ ಬರುವುದು ಅಲ್ಲಾಹ್ ನ ವತಿಯಿಂದಲೇ ಆಗಿದೆ ಎಂದು (ನೀವು ಅವರಿಗೆ) ತಿಳಿ ಹೇಳಿರಿ. ಈ ಜನರಿಗೆ ಅದೇನಾಗಿದೆಯೋ! ಯಾವ ವಿಷಯವನ್ನೂ ಅವರು ಅರ್ಥ ಮಾಡಿಕೊಳ್ಳುವ ಗೋಜಿಗೂ ಹೋಗುತ್ತಿಲ್ಲವಲ್ಲ! {78}

[ವಾಸ್ತವದಲ್ಲಿ ಓ ಮಾನವನೇ,] ಯಾವೆಲ್ಲ ಒಳಿತು ನಿನಗೆ ಬಂದೊದಗುವುದೋ ಅದು ಅಲ್ಲಾಹ್ ನ ವತಿಯಿಂದ ಬಂದಿರುತ್ತದೆ; ಮತ್ತು ಏನೆಲ್ಲ ಕೇಡು ನಿನಗೆ ಬಾಧಿಸುವುದೋ ಅದು ಸ್ವಯಂ ನಿನ್ನ (ಕೃತ್ಯಗಳ ಕಾರಣದಿಂದ) ಬಾಧಿಸುವುದು. ಹಾಗಿರುವಾಗ [ಪೈಗಂಬರರೇ, ನೀವು ಅವರ ಬಗ್ಗೆ ಚಿಂತಿತರಾಗದಿರಿ;] ನಿಮ್ಮನ್ನು ಜನರಿಗೆ ಒಬ್ಬ ದೂತನನ್ನಾಗಿ ನಾವು ಕಳಿಸಿರುತ್ತೇವೆ ಮತ್ತು (ಈ ವಾಸ್ತವಿಕತೆಗೆ) ಸಾಕ್ಷಿಯಾಗಿ ಅಲ್ಲಾಹ್ ನು ಮಾತ್ರವೇ ಸಾಕು. {79}

ಯಾರು (ಅಲ್ಲಾಹ್ ನ) ದೂತರನ್ನು ಅನುಸರಿಸಿದರೋ ಅವರು ವಾಸ್ತವದಲ್ಲಿ ಅಲ್ಲಾಹ್ ನ ಅನುಸರಣೆ ಮಾಡಿರುವರು. ಇನ್ನು ಯಾರಾದರೂ (ನಿಮ್ಮ ಅನುಸರಣೆಯಿಂದ) ವಿಮುಖರಾದರೆ [ಪೈಗಂಬರರೇ ನೀವು ಚಿಂತಿತರಾಗಬೇಡಿ, ಏಕೆಂದರೆ] ನಿಮ್ಮನ್ನು ಆ ಜನರ ಮೇಲೆ ಕಾವಲುಭಟನಾಗಿ ನಾವು ಕಳಿಸಿರುವುದಿಲ್ಲ. {80}

(ನಾವಾದರೋ ಪರಮ) ಅನುಸರಣಾಶೀಲರು ಎಂದವರು ಹೇಳುತ್ತಾರೆ. ಅನಂತರ ನಿಮ್ಮ ಸನ್ನಿಧಿಯಿಂದ ಅವರು ಹೊರಟು ಹೋದರೆ ಅವರಲ್ಲಿಯ ಒಂದು ಗುಂಪು ನೀವೇನು ಹೇಳಿರುವಿರೋ ಅದರ ವಿರುದ್ಧ (ರಾತ್ರಿ ವೇಳೆಯಲ್ಲಿ ಸೇರಿ) ಗುಪ್ತಾಲೋಚನೆಗಳನ್ನು ನಡೆಸುತ್ತದೆ. ಹೌದು, ಅವರ ಎಲ್ಲ ಗೂಢಾಲೋಚನೆಗಳನ್ನು ಅಲ್ಲಾಹ್ ನು ದಾಖಲಿಸುತ್ತಿದ್ದಾನೆ. ಆದ್ದರಿಂದ (ಪೈಗಂಬರರೇ,) ಅವರಿಂದ ನೀವಿನ್ನು ವಿಮುಖರಾಗಿರಿ ಮತ್ತು ಭರವಸೆಯನ್ನು ಅಲ್ಲಾಹ್ ನ ಮೇಲೆ ಸ್ಥಾಪಿಸಿರಿ. ಎಲ್ಲ ಕಾರ್ಯಗಳನ್ನೂ ಸಾಧಿಸುವವನಾಗಿ ಅಲ್ಲಾಹ್ ನು ಮಾತ್ರವೇ (ನಿಮಗೆ) ಸಾಕು. {81}

ಅವರು ಈ ಕುರ್‌ಆನ್ ಅನ್ನು ಗಂಭೀರ ಮಂಥನಕ್ಕೆ ಹಚ್ಚುತ್ತಿಲ್ಲವೇನು? ಒಂದು ವೇಳೆ ಇದು ಅಲ್ಲಾಹ್ ನ ಹೊರತು ಇತರರ ವತಿಯಿಂದ ಬಂದಿರುತ್ತಿದ್ದರೆ ಇದರಲ್ಲಿ ಹಲವಾರು ವೈರುಧ್ಯಗಳನ್ನು ಅವರು ಕಾಣುತ್ತಿದ್ದರು! {82}

[ವಿಶ್ವಾಸಿಗಳೇ, ಮುಸ್ಲಿಮರಂತೆ ತೋರ್ಪಡಿಸಿಕೊಳ್ಳುತ್ತಿರುವ ಆ ಕಪಟಿಗಳ ಬಗ್ಗೆ ಎಚ್ಚರಿಕೆಯಿಂದಿರಿ.] ಶಾಂತಿಯ ಅಥವಾ ಯುದ್ಧಭೀತಿಗೆ ಸಂಬಂಧಿಸಿದ ಯಾವುದೇ ಸುದ್ದಿ ಅವರಲ್ಲಿಗೆ ಬಂದ ಕೂಡಲೇ ಅದನ್ನವರು (ವ್ಯಾಪಕವಾಗಿ) ಹಬ್ಬಿಸುತ್ತಾರೆ. ಒಂದು ವೇಳೆ ಅವರು (ಅಲ್ಲಾಹ್ ನ) ದೂತರಿಗೂ ಮತ್ತು ಅವರ ಪೈಕಿಯ ಅಂತಹ ವಿಷಯಗಳ ಹೊಣೆಗಾರಿಕೆ ವಹಿಸಿಕೊಡಲಾದವರಿಗೂ ಅದನ್ನು ತಲುಪಿಸಿರುತ್ತಿದ್ದರೆ, ಅವರಲ್ಲಿನ ಪರಿಶೀಲನಾ ಸಾಮರ್ಥ್ಯ ಹೊಂದಿದವರು (ಆ ಸುದ್ದಿಯ) ನಿಜಾಂಶವನ್ನು ಅರಿತುಕೊಳ್ಳುತ್ತಿದ್ದರು. [ಆದರೆ ಅವರು ಸೈತಾನನ ಹಿಂಬಾಲಕರಾದರು.] ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹ್ ನ ಅನುಗ್ರಹ ಮತ್ತು ಅವನ ಕಾರುಣ್ಯ ಇರದೇ ಹೋಗಿದ್ದರೆ ಕೇವಲ ಕೆಲವರನ್ನು ಹೊರತುಪಡಿಸಿ ನೀವೆಲ್ಲರೂ ಸಹ ಖಂಡಿತ ಸೈತಾನನ ಹಿಂಬಾಲಕರಾಗಿರುತ್ತಿದ್ದಿರಿ! {83}

ಆದ್ದರಿಂದ [ಪೈಗಂಬರರೇ ಅವರನ್ನು ಕಡೆಗಣಿಸಿ] ನೀವು ಅಲ್ಲಾಹ್ ನ ಮಾರ್ಗದಲ್ಲಿ ಯುದ್ಧ ಮಾಡಿರಿ. ಸ್ವಯಂ ನಿಮ್ಮ ಹೊರತು (ಇತರರ) ಹೊಣೆಗಾರಿಕೆ ನಿಮ್ಮ ಮೇಲಿಲ್ಲ. ಜೊತೆಗೆ ವಿಶ್ವಾಸಿಗಳನ್ನು (ಹೋರಾಡುವಂತೆ) ಪ್ರೇರೇಪಿಸುತ್ತಲಿರಿ; ಅಲ್ಲಾಹ್ ನು ಧರ್ಮಧಿಕ್ಕಾರಿಗಳ ಯುದ್ಧ ಸಾಮರ್ಥ್ಯವನ್ನು (ನಿಮಗೋಸ್ಕರ) ದಮನಿಸಬಹುದು. ಹೋರಾಟದ ಸಾಮರ್ಥ್ಯದಲ್ಲಿ ಅಲ್ಲಾಹ್ ನು ಅತಿ ಬಲಾಢ್ಯ ಮತ್ತು [ಅಂತಹ ಧಿಕ್ಕಾರಿಗಳನ್ನು ಹಿಡಿದು] ಶಿಕ್ಷಿಸುವುದರಲ್ಲಿ ಅತ್ಯಂತ ಶಕ್ತಿಶಾಲಿ. {84}

[ಯುದ್ಧಕ್ಕೆ ಹೊರಡುವಾಗ] ಯಾರಾದರೂ ಒಂದು ಒಳಿತಿನ ಶಿಫಾರಸು ಮಾಡಿದರೆ ಅದರ (ಪುಣ್ಯದಲ್ಲಿ) ಆತನಿಗೂ ಪಾಲು ಸಿಗುವುದು. ಅಂತೆಯೇ ಯಾರಾದರೂ ಒಂದು ಕೆಡುಕಿನ ಶಿಫಾರಸು ಮಾಡಿದರೆ ಅದರ (ಪಾಪದ) ಹೊರೆಯು ಆತನಿಗೂ ಸಿಗುವುದು. ಅಲ್ಲಾಹ್ ನಾದರೋ ಸಕಲ ವಿಷಯಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವನು. [ಹಾಗೆ ಹೊರಡಲಣಿಯಾದಾಗ ಯಾರಿಂದಲಾದರೂ] ನೀವು ಶುಭ ಹಾರೈಸಲ್ಪಟ್ಟರೆ ಅದಕ್ಕಿಂತಲೂ ಉತ್ತಮವಾದ ರೀತಿಯಲ್ಲಿ ಅವರನ್ನು ಹರಸಿರಿ; ಅಥವಾ ಪ್ರತಿಯಾಗಿ (ಕನಿಷ್ಟ) ಅಷ್ಟನ್ನಾದರೂ ಹರಸುವವರಾಗಿರಿ. ಅಲ್ಲಾಹ್ ನಾದರೋ ಪ್ರತಿಯೊಂದು ವಿಷಯವನ್ನು ಚೆನ್ನಾಗಿ ಪರಿಶೀಲಿಸುವನು [ಎಂಬುದು ನಿಮಗೆ ನೆನಪಿರಲಿ]. {85-86}

ಅಲ್ಲಾಹ್! ಅವನ ಹೊರತು ಆರಾಧಿಸಿಕೊಳ್ಳಲು ಅರ್ಹರಾದವರು ಯಾರೂ ಇಲ್ಲ. ಪುನರುತ್ಥಾನ ದಿನ ಅವನು ನಿಮ್ಮೆಲ್ಲರನ್ನು ಖಂಡಿತಾ ಒಟ್ಟುಗೂಡಿಸಿಯೇ ತೀರುವನು; ಅದರಲ್ಲಿ ಯಾವ ಸಂಶಯವೂ ಇಲ್ಲ. ಮಾತಿನಲ್ಲಿ ಅಲ್ಲಾಹ್ ನಿಗಿಂತ ಹೆಚ್ಚು ಸತ್ಯವಂತನು ಯಾರಿದ್ದಾನೆ? {87}

[ಮುಸ್ಲಿಮರಂತೆ ಸೋಗುಹಾಕುವ] ಆ ಕಪಟಿಗಳ ವಿಷಯವಾಗಿ ಎರಡು ಪಂಗಡಗಳಾಗಿ ಬಿಡುವಂಥದ್ದು ನಿಮಗೇನಾಗಿದೆ? ಅವರೆಸಗಿದ ಕೃತ್ಯಗಳ ಕಾರಣ ಅಲ್ಲಾಹ್ ನೇ ಅವರನ್ನು [ಹಿಂದಿನ ಸ್ಥಿತಿಗೆ] ಮರಳಿಸಿ ಬಿಟ್ಟಿರುವನು. [ಶಿಕ್ಷಿಸುವ ಸಲುವಾಗಿ] ಯಾರನ್ನು ಅಲ್ಲಾಹ್ ನು ದಾರಿತಪ್ಪಿಸಿ ಬಿಟ್ಟಿರುವನೋ ಅವರನ್ನು ಸರಿದಾರಿಗೆ ತರಲು ನೀವು ಹಂಬಲಿಸುತ್ತಿರುವಿರೇನು? ಯಾರನ್ನಾದರೂ ಅಲ್ಲಾಹ್ ನೇ ದಾರಿತಪ್ಪಿಸಿ ಬಿಟ್ಟರೆ ನೀವೆಂದೂ ಅಂಥವನಿಗೆ (ಬೇರೊಂದು) ದಾರಿಯನ್ನು ಕಾಣಲಾರಿರಿ. {88}

[ಪೈಗಂಬರರನ್ನು] ಅವರು ಧಿಕ್ಕರಿಸಿದಂತೆಯೇ ನೀವೂ ಸಹ ಧಿಕ್ಕಾರದ ನಿಲುವು ತಾಳಿರುತ್ತಿದ್ದರೆ, ಹಾಗೂ (ಆ ಮೂಲಕ) ಅವರೂ ನೀವೂ ಸರಿಸಮರಾಗಿರುತ್ತಿದ್ದರೆ (ಅದೆಷ್ಟು ಚೆನ್ನಾಗಿರುತ್ತಿತ್ತು) ಎಂದು (ಆ ಕಪಟಿಗಳು) ಹಂಬಲಿಸುತ್ತಿರುವರು. ಆದ್ದರಿಂದ ಅವರು ಅಲ್ಲಾಹ್ ನ ಮಾರ್ಗದಲ್ಲಿ [ತಮ್ಮ ಮನೆ-ಮಠಗಳನ್ನು ತೊರೆದು ನಿಮ್ಮಲ್ಲಿಗೆ] ವಲಸೆ ಬರುವ ತನಕ ಅವರಿಗೆ ಸೇರಿದ ಯಾರನ್ನೂ ನೀವು ಮಿತ್ರರನ್ನಾಗಿ ಮಾಡಿಕೊಳ್ಳದಿರಿ. ಅದರ ನಂತರವೂ ಅವರು ತಿರುಗಿ ಬಿದ್ದರೆ [ಯುದ್ಧ ನಡೆಯುತ್ತಿರುವಾಗ] ಅವರನ್ನು ಎಲ್ಲಿ ಕಂಡರಲ್ಲಿ ಹಿಡಿಯಿರಿ ಮತ್ತು ವಧಿಸಿರಿ; ಹಿತೈಷಿಗಳೆಂದೋ ಸಹಾಯಕರೆಂದೋ ನೀವು ಅವರನ್ನು ಪರಿಗಣಿಸಬಾರದು. ಆದರೆ ನಿಮ್ಮೊಂದಿಗೆ ಪರಸ್ಪರ ಮೈತ್ರಿ ಒಪ್ಪಂದದಲ್ಲಿ ಏರ್ಪಟ್ಟಿರುವ ಬೇರೊಂದು ಸಮುದಾಯದೊಂದಿಗೆ ಅವರು ಹೋಗಿ ಸೇರಿಕೊಂಡರೆ; ಅಥವಾ ನಿಮ್ಮ ವಿರುದ್ಧ ಯುದ್ಧ ಮಾಡಲೋ ಸ್ವತಃ ತಮ್ಮದೇ ಜನರ ವಿರುದ್ಧ ಯುದ್ಧ ಮಾಡಲೋ ಒಲ್ಲದ ಮನಸ್ಸಿನವರಾಗಿ (ಪ್ರಾಮಾಣಿಕವಾಗಿ) ನಿಮ್ಮ ಜೊತೆ ಅವರು ಬಂದು ಸೇರಿಕೊಂಡರೆ ಅಂಥವರನ್ನು (ಈ ನಿಯಮದಿಂದ) ಹೊರತುಪಡಿಸಲಾಗಿದೆ. ಅಲ್ಲಾಹ್ ನು ಅವರಿಗೆ ನಿಮ್ಮ ಮೇಲೆರಗುವ ಶಕ್ತಿ ನೀಡಲು ಬಯಸಿರುತ್ತಿದ್ದರೆ ಅವರು ಖಂಡಿತಾ ನಿಮ್ಮೊಂದಿಗೆ ಯುದ್ಧ ಮಾಡುತ್ತಿದ್ದರು. ಆದರೆ ಅವರು (ಇದೀಗ ನಿಮ್ಮ ತಂಟೆಗೆ ಬಾರದೆ) ನಿಮ್ಮಿಂದ ದೂರ ಉಳಿದುಕೊಂಡು; ನಿಮ್ಮ ವಿರುದ್ಧ ಯುದ್ಧಕ್ಕಿಳಿಯದೇ ಇರುವುದು ಮಾತ್ರವಲ್ಲ ನಿಮ್ಮ ಜೊತೆ ಶಾಂತಿ ಒಪ್ಪಂದಕ್ಕೆ ಮುಂದಾಗಿರುವ ಸ್ಥಿತಿಯಲ್ಲಿ ಅವರ ವಿರುದ್ಧ (ಕೈ ಮಾಡುವ) ಯಾವ ದಾರಿಯನ್ನೂ ಅಲ್ಲಾಹ್ ನು ನಿಮಗೆ ತೆರೆದಿಟ್ಟಿಲ್ಲ (ಎಂಬುದು ನೆನಪಿಡಿರಿ). {89-90}

(ವಿಶ್ವಾಸಿಗಳೇ), ನಿಮ್ಮಿಂದಲೂ ಸುರಕ್ಷಿತರಾಗಿದ್ದುಕೊಂಡು ಸ್ವತಃ ತಮ್ಮ ಜನರಿಂದಲೂ ಸುರಕ್ಷಿತರಾಗಿ ಉಳಿಯಬೇಕು ಎಂದು ಬಯಸುವ (ಕಪಟಿಗಳ) ಬೇರೊಂದು ವರ್ಗವನ್ನೂ ನೀವು ಶೀಘ್ರದಲ್ಲೇ ಕಾಣುವಿರಿ. ಯಾವಾಗೆಲ್ಲ ಅಂಥವರನ್ನು [ನಿಮ್ಮ ವಿರುದ್ಧ] ದಂಗೆಯತ್ತ ಹೊರಳಿಸಲಾಗುವುದೋ ಆಗೆಲ್ಲ ಅವರು (ಮುಂದಾಲೋಚನೆ ಇಲ್ಲದೆ) ಅದರಲ್ಲಿ ಧುಮುಕಿ ಬಿಡುವರು. ಅವರು ನಿಮ್ಮ (ತಂಟೆಗೆ ಬಾರದೆ) ದೂರ ಉಳಿಯದಿದ್ದರೆ, ಮತ್ತು ಶಾಂತಿಯ ಪ್ರಸ್ತಾಪವನ್ನು ನಿಮ್ಮ ಮುಂದಿಡದಿದ್ದರೆ, ಹಾಗೂ ತಮ್ಮ ಕೈಗಳನ್ನು ಹತೋಟಿಯಲ್ಲಿಡದೇ ಹೋದರೆ [ಯುದ್ಧ ನಡೆಯುತ್ತಿರುವಾಗ] ಅಂಥವರನ್ನು ಸಿಕ್ಕಸಿಕ್ಕಲ್ಲೆಲ್ಲ ಹಿಡಿಯಿರಿ ಮತ್ತು ವಧಿಸಿರಿ. ಅಂಥ ಜನರ ವಿರುದ್ಧ ಕಾರ್ಯಾಚರಿಸಲು ನಾವಿದೋ ನಿಮಗೆ ಸ್ಪಷ್ಟವಾದ ಅಧಿಕಾರ ಬಲ ಒದಗಿಸಿರುವೆವು. {91}

[ಆದರೆ ನೀವು ಯುದ್ಧ ನಿರತರಾಗಿರುವಾಗ ಶತ್ರುಗಳನ್ನು ಗುರುತಿಸುವ ವಿಷಯದಲ್ಲಿ ಎಚ್ಚರಿಕೆ ವಹಿಸಿಕೊಳ್ಳಿರಿ. ಏಕೆಂದರೆ] ಒಬ್ಬ ವಿಶ್ವಾಸಿಯು ಇನ್ನೊಬ್ಬ ವಿಶ್ವಾಸಿಯನ್ನು ವಧಿಸುವುದು ಸಮಂಜಸವಲ್ಲ – ಪ್ರಮಾದ ವಶಾತ್ (ರಣರಂಗದಲ್ಲಿ ಹಾಗೆ ಸಂಭವಿಸುವುದರ) ಹೊರತು. ಇನ್ನು ಯಾರಾದರೂ ಒಬ್ಬ ವಿಶ್ವಾಸಿಯನ್ನು ಪ್ರಮಾದದಿಂದ ವಧಿಸಿ ಬಿಟ್ಟರೆ (ಅದಕ್ಕೆ ಪ್ರಾಯಶ್ಚಿತ್ತವಾಗಿ) ವಿಶ್ವಾಸಿಯಾದ ಒಬ್ಬ ಗುಲಾಮನನ್ನು ವಿಮೋಚಿಸಬೇಕು ಹಾಗೂ (ಸೂಕ್ತ) ಪರಿಹಾರಧನವನ್ನು (ಮಡಿದವನ) ಕುಟುಂಬದವರಿಗೆ ಒಪ್ಪಿಸಬೇಕು – ಅವರು ದಾನವೆಂದು ಬಗೆದು (ಪರಿಹಾರಧನವನ್ನು ನಿಮಗೆ ಕ್ಷಮಿಸುವುದರ) ಹೊರತು. ಒಂದು ವೇಳೆ (ಹತನಾದ ವ್ಯಕ್ತಿಯು) ನಿಮ್ಮ ಶತ್ರು ಸಮುದಾಯಕ್ಕೆ ಸೇರಿದವನಾಗಿದ್ದು ವಿಶ್ವಾಸಿಯೂ ಆಗಿದ್ದರೆ (ಪ್ರಾಯಶ್ಚಿತ್ತವಾಗಿ) ವಿಶ್ವಾಸಿಯಾದ ಒಬ್ಬ ಗುಲಾಮನನ್ನು ಬಿಡುಗಡೆಗೊಳಿಸಿದರೆ ಸಾಕು. ಇನ್ನು (ಹತನಾದವನು) ನಿಮ್ಮೊಂದಿಗೆ ಪರಸ್ಪರ ಮೈತ್ರಿ ಒಪ್ಪಂದದಲ್ಲಿರುವ ಒಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದರೆ (ಪ್ರಾಯಶ್ಚಿತ್ತವಾಗಿ) ಪರಿಹಾರಧನವನ್ನು ಆತನ ಕುಟುಂಬದವರಿಗೆ ಒಪ್ಪಿಸಬೇಕು, ಮಾತ್ರವಲ್ಲ ವಿಶ್ವಾಸಿಯಾದ ಒಬ್ಬ ಗುಲಾಮನನ್ನು ವಿಮೋಚಿಸಲೂ ಬೇಕು. ಇನ್ನು [ಪ್ರಮಾದ ಸಂಭವಿಸಿದವನು ಗುಲಾಮರನ್ನು] ಹೊಂದಿಲ್ಲದವನಾಗಿದ್ದರೆ ನಿರಂತರವಾಗಿ ಎರಡು ತಿಂಗಳ ಕಾಲ ಉಪವಾಸ ಆಚರಿಸಬೇಕು – [ಇದು ಆ ಪ್ರಮಾದಕ್ಕಾಗಿ] ಅಲ್ಲಾಹ್ ನ ವತಿಯಿಂದ ನಿಶ್ಚಿತಗೊಂಡ ಪಶ್ಚಾತ್ತಾಪವಾಗಿದೆ. ಅಲ್ಲಾಹ್ ನಾದರೋ ಎಲ್ಲಾ ಬಲ್ಲವನೂ ಮಹಾ ಜ್ಞಾನಿಯೂ ಆಗಿರುವನು. {92}

ಇನ್ನು ಯಾರಾದರೂ ಒಬ್ಬ ವಿಶ್ವಾಸಿಯನ್ನು ಉದ್ದೇಶಪೂರ್ವಕವಾಗಿ ವಧಿಸಿದರೆ ಆತನಿಗಿರುವ ಶಿಕ್ಷೆಯು ನರಕವಾಗಿದ್ದು, ಅದರಲ್ಲಿ ಅವನು ಸದಾಕಾಲ ಬಿದ್ದಿರುವನು. ಅಲ್ಲಾಹ್ ನು ಅವನೊಂದಿಗೆ ಕುಪಿತನಾಗುವನು ಮತ್ತು ಅವನನ್ನು ಶಪಿಸುವನು ಜೊತೆಗೆ ಒಂದು ಘನಘೋರವಾದ ಶಿಕ್ಷೆಯನ್ನು ಅಂಥವನಿಗೆ ತಯಾರಿಸಿಟ್ಟಿರುವನು. {93}

ಓ ವಿಶ್ವಾಸಿಗಳೇ, ನೀವು ಅಲ್ಲಾಹ್ ನ ಮಾರ್ಗದಲ್ಲಿ ಯುದ್ಧಕ್ಕೆ ಹೊರಟಾಗ (ಯಾರು ಶತ್ರು , ಯಾರು ಮಿತ್ರರು ಎಂಬುದನ್ನು) ಸ್ಪಷ್ಟವಾಗಿ ಅರಿತುಕೊಳ್ಳಿ. [ತಮ್ಮನ್ನು ಮುಸ್ಲಿಮರೆಂದು ಗುರುತಿಸುವಂತಾಗಲು] ನಿಮಗೆ ‘ಸಲಾಮ್’ ಹೇಳಿದವರನ್ನು ನೀನು ವಿಶ್ವಾಸಿಯಲ್ಲ ಎಂದು ಹೇಳಿ (ಅವರ ಮೇಲೆ ಕೈ ಮಾಡದಿರಿ). ನೀವು (ಹಾಗೆ ಮಾಡುವುದು) ಪ್ರಾಪಂಚಿಕ ಜೀವನದ ಸಾಮಗ್ರಿಗಳನ್ನು ಬಯಸಿಯಷ್ಟೆ; ಆದರೆ ಅಪಾರವಾದ ಸಂಪತ್ತು ಅಲ್ಲಾಹ್ ನ ಬಳಿ ಇದೆ (ಎಂಬ ವಾಸ್ತವವನ್ನು ತಿಳಿಯಿರಿ)! ಇದಕ್ಕಿಂತ ಮುಂಚೆ ನೀವೂ ಸಹ ಅಂಥದ್ದೇ ಸ್ಥಿತಿಯಲ್ಲಿದ್ದಿರಿ; ಆದರೆ ಅಲ್ಲಾಹ್ ನು ನಿಮ್ಮನ್ನು (ವಿಶ್ವಾಸಿಗಳನ್ನಾಗಿಸಿ) ಅನುಗ್ರಹಿಸಿದನು. ಆದ್ದರಿಂದ ನೀವು (ಪರಿಸ್ಥಿತಿಯನ್ನು) ಚೆನ್ನಾಗಿ ಪರಿಶೀಲಿಸಿಕೊಳ್ಳಿ. ನಿಜವಾಗಿ ನೀವು ಏನೆಲ್ಲ ಮಾಡುತ್ತಿರುವಿರೋ ಅದನ್ನು ಅಲ್ಲಾಹ್ ನು ಚೆನ್ನಾಗಿ ಬಲ್ಲವನಾಗಿದ್ದಾನೆ. {94}

[ನೀವಿನ್ನು ಅಲ್ಲಾಹ್ ನ ಮಾರ್ಗದಲ್ಲಿ ಹೊರಡುವ ಸಿದ್ಧತೆ ನೆಡೆಸಿಕೊಳ್ಳಿರಿ; ಏಕೆಂದರೆ] ವಿಶ್ವಾಸಿಗಳ ಪೈಕಿ ತೊಂದರೆಗೊಳಗಾದ/ಗಾಯಗೊಂಡವರ ಹೊರತು (ಯುದ್ಧಕ್ಕೆ ಹೋಗದೆ ಮನೆಯಲ್ಲೇ) ಕುಳಿತುಕೊಂಡವರು ಹಾಗೂ ಸ್ವಯಂ ತಮ್ಮನ್ನೂ ತಮ್ಮ ಸಂಪತ್ತನ್ನೂ ಅಲ್ಲಾಹ್ ನ ಮಾರ್ಗದಲ್ಲಿ ತೊಡಗಿಸಿ ಹೋರಾಡುವವರು ಸರಿಸಮಾನರಾಗುವುದಿಲ್ಲ. ತಮ್ಮ ತನು-ಧನಗಳ ಮೂಲಕ ಹೋರಾಡುವವರಿಗೆ (ಮನೆಗಳಲ್ಲೇ) ಕುಳಿತಿರುವವರಿಗಿಂತ ಸ್ಥಾನದಲ್ಲಿ ಅಲ್ಲಾಹ್ ನು ಔನ್ನತ್ಯ ನೀಡಿರುವನು. (ವಿಶ್ವಾಸಿಗಳಾದ) ಎಲ್ಲರಿಗೂ ಅಲ್ಲಾಹ್ ನು ಒಳ್ಳೆಯದನ್ನೇ ವಾಗ್ದಾನ ಮಾಡಿರುವನಾದರೂ (ಅಲ್ಲಾಹ್ ನ ಮಾರ್ಗದಲ್ಲಿ) ಹೋರಾಡುವವರಿಗೆ (ಮನೆಗಳಲ್ಲೇ) ಕುಳಿತವರಿಗಿಂತ ಮಹತ್ತರವಾದ ಪ್ರತಿಫಲವನ್ನು ನೀಡಿ ಅಲ್ಲಾಹ್ ನು ಅನುಗ್ರಹಿಸಿರುವನು, ಜೊತೆಗೆ ಹೆಚ್ಚಿನ ಸ್ಥಾನ-ಮಾನ, ಕ್ಷಮಾದಾನ ಮತ್ತು ಕಾರುಣ್ಯವೂ ಅವನ ಕಡೆಯಿಂದ ಸಿಗಲಿರುವುದು. ಅಲ್ಲಾಹ್ ನಾದರೋ ಹೆಚ್ಚು ಕ್ಷಮಿಸುವವನೂ ಧಾರಾಳ ದಯೆ ತೋರುವವನೂ ಆಗಿರುವನು. {95-96}

[ಅವಕಾಶವಿದ್ದೂ ವಲಸೆ ಹೋಗದೆ ಮರ್ದಕರ ನಾಡಿನಲ್ಲಿ ತುಳಿತಕ್ಕೊಳಗಾಗಿ ದಲಿತರಾಗಿ ಬದುಕುವ ಮೂಲಕ] ತಮ್ಮ ಮೇಲೆ ತಾವೇ ಅನ್ಯಾಯವೆಸಗಿದ ಜನರ ಆತ್ಮಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ನೀವು ಅದೆಂತಹ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದಿರಿ – ಎಂದು ಮಲಕ್‍ ಗಳು ಖಂಡಿತ ಕೇಳುವರು. ನಾವು ಈ ನಾಡಿನಲ್ಲಿ ಶೋಷಣೆಗೊಳಪಟ್ಟು ಮರ್ದಿತರಾಗಿ ಜೀವಿಸಿದ್ದೆವು ಎಂದವರು ಉತ್ತರಿಸುವರು. ಅಲ್ಲಾಹ್ ನ ಭೂಮಿಯು ವಿಶಾಲವಾಗಿತ್ತಲ್ಲವೇ? [ಮರ್ದಕರ ನಾಡನ್ನು ತ್ಯೆಜಿಸಿ ಬೇಕಾದಲ್ಲಿಗೆ] ವಲಸೆ ಹೋಗಬಹುದಿತ್ತಲ್ಲವೇ - ಎಂದು (ಮಲಕ್ ಗಳು ಅವರನ್ನು) ಪ್ರಶ್ನಿಸಲಿರುವರು [ಎಂದು ಪೈಗಂಬರರೇ ನೀವು ವಲಸೆಗೆ ಇನ್ನೂ ತಯಾರಾಗದ ಈ ಜನರನ್ನು ಎಚ್ಚರಿಸಿರಿ]. ಹಾಗೆ ಅಂಥವರ ಅಂತಿಮ ತಾಣವು ನರಕವಾಗಲಿರುವುದು; ಅದೆಷ್ಟು ಕೆಟ್ಟದಾಗಿದೆ ಆ ತಲುಪುದಾಣ! {97}

ಆದರೆ ಯಾವ ತಂತ್ರೋಪಾಯವನ್ನೂ ಕಂಡುಕೊಳ್ಳುವ ಸಾಮರ್ಥ್ಯವನ್ನು ಹೊಂದಿರದೆ (ಅಲ್ಲಿಂದ ಹೊರನಡೆಯಲು) ಬೇರಾವ ದಾರಿಯೂ ತೋಚದೆ (ಅನಿವಾರ್ಯವಾಗಿ) ದೌರ್ಜನ್ಯಕ್ಕೊಳಗಾಗಿ ಜೀವಿಸಬೇಕಾಗಿ ಬಂದ ಆ ಕೆಲವು ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಅದಕ್ಕೆ ಹೊರತಾಗಿರುವರು. ಅಂಥವರ ಪ್ರಮಾದಗಳನ್ನು ಅಲ್ಲಾಹ್ ನು ಮನ್ನಿಸಲೂ ಬಹುದು. ಅಲ್ಲಾಹ್ ನಾದರೋ (ಪಾಪಗಳನ್ನು) ಬಹಳವಾಗಿ ಮನ್ನಿಸುವವನೂ ಹೆಚ್ಚು ಕ್ಷಮಿಸುವವನೂ ಆಗಿರುವನು. {98-99}

[ಇನ್ನು ವಲಸೆಯ ಸಿದ್ಧತೆ ಮಾಡಿಕೊಂಡವನು ಭಯಪಡಬೇಕಾಗಿಲ್ಲ. ಏಕೆಂದರೆ] ಯಾರು ಅಲ್ಲಾಹ್ ನ ಮಾರ್ಗದಲ್ಲಿ (ತನ್ನ ಮನೆಮಾರು ತೊರೆದು) ವಲಸೆ ಹೋಗುವನೋ ಆತನು (ವಾಸ್ತವ್ಯಯೋಗ್ಯವಾದ) ಸಾಕಷ್ಟು ನೆಲೆಗಳನ್ನೂ (ಅಲ್ಲಿ) ಸಮೃದ್ಧತೆಯನ್ನೂ ಕಂಡುಕೊಳ್ಳುವನು. ಅಲ್ಲಾಹ್ ಮತ್ತು ಅವನ ದೂತನೆಡೆಗೆ ಒಬ್ಬನು ವಲಸಿಗನಾಗಿ ತನ್ನ ಮನೆ ಬಿಟ್ಟು ಹೊರನಡೆದು ತರುವಾಯ (ದಾರಿಯಲ್ಲೇ) ಮರಣವು ಅವನನ್ನು ಬಂದಪ್ಪಿದರೆ ಆತನಿಗಿರುವ ಪ್ರತಿಫಲವು ಅಲ್ಲಾಹ್ ನ ಮೇಲೆ ಕಡ್ಡಾಯವಾಯಿತು! ಅಲ್ಲಾಹ್ ನಾದರೋ ಬಹಳ ಕ್ಷಮಿಸುವವನೂ ನಿರಂತರ ಕರುಣೆ ತೋರುವವನೂ ಆಗಿರುವನು. {100}

ಇನ್ನು ನೀವು ನಾಡಿನಲ್ಲಿ ಪ್ರಯಾಣದಲ್ಲಿರುವಾಗ ಧರ್ಮವಿರೋಧಿಗಳು ನಿಮ್ಮನ್ನು ತೊಂದರೆಗೊಳಪಡಿಸಿಯಾರು ಎಂಬ ಭಯವು ನಿಮಗುಂಟಾದಲ್ಲಿ ನಿಮ್ಮ ನಮಾಝ್ ಗಳನ್ನು ಮೊಟಕುಗೊಳಿಸಿ [ಅರಬಿ: ಖಸ್‌ರ್] ನಿರ್ವಹಿಸಿದರೆ ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ. ನಿಮ್ಮ ಪಾಲಿಗೆ ಆ ಧರ್ಮವಿರೋಧಿಗಳು ನಿಜವಾಗಿಯೂ ಸ್ಪಷ್ಟ ವೈರಿಗಳು. {101}

(ಓ ಪೈಗಂಬರರೇ, ಯುದ್ಧದ ಸಂದರ್ಭಗಳಲ್ಲಿ) ಯೋಧರ ಜೊತೆಯಲ್ಲಿ ನೀವಿರುವಾಗ ನಮಾಝ್ ನ ನೇತೃತ್ವ ವಹಿಸಲು ಎದ್ದು ನಿಂತರೆ ಆ ಯೋಧರ ಒಂದು ತಂಡ ನಿಮ್ಮ ಜೊತೆ ನಿಂತು ನಮಾಝ್ ನಿರ್ವಹಿಸಲಿ, ಆದರೆ ಆಯುಧಗಳನ್ನು ಅವರು ಜೊತೆಗಿರಿಸಿಕೊಳ್ಳಲಿ. ಹಾಗೆ ಸುಜೂದ್ [ಅರ್ಥಾತ್ ನಮಾಝ್ ನ ಮಧ್ಯಾರ್ಧದಲ್ಲಿ ಮಾಡಬೇಕಾದ ಸಾಷ್ಟಾಂಗ] ಮಾಡಿ ಮುಗಿಸಿದ ಕೂಡಲೇ ಅವರು [ತಮ್ಮ ನಮಾಝ್ ಅನ್ನು ಅಲ್ಲಿಗೇ ಕೊನೆಗೊಳಿಸಿ] ಹಿಂದಕ್ಕೆ ಸರಿದು (ಕಾವಲು) ನಿಲ್ಲಲಿ. ಮತ್ತು ಇನ್ನೂ ನಮಾಝ್ ನಿರ್ವಹಿಸದೆ (ತಮ್ಮ ಸರದಿಗಾಗಿ ಕಾಯುತ್ತಿರುವ) ಯೋಧರ ಮತ್ತೊಂದು ತಂಡ ಮುಂದೆ ಬಂದು ನಿಮ್ಮ ನೇತೃತ್ವದಲ್ಲಿ ನಮಾಝ್ ನಿರ್ವಹಿಸಿಕೊಳ್ಳಲಿ. [ಅರ್ಥಾತ್ ಯಾವತ್ತೂ ಪೈಗಂಬರರ ನೇತೃತ್ವದಲ್ಲೇ ನಮಾಝ್ ನಿರ್ವಹಿಸಬೇಕು ಎಂದು ಹಂಬಲಿಸುವ ಸಹಾಬಿಗಳು ಹೀಗೆ ಅರ್ಧರ್ಧವಾಗಿ ನಮಾಝ್ ನಿರ್ವಹಿಸಿದರೆ ಸಾಕು ಎಂಬುದು ಇದರ ತಾತ್ಪರ್ಯ]. ಇನ್ನು ಆ ತಂಡವೂ ಮುಂಜಾಗ್ರತೆ ವಹಿಸಿಕೊಳ್ಳಬೇಕು ಮಾತ್ರವಲ್ಲ ತಮ್ಮ ಆಯುಧಗಳನ್ನು ಧರಿಸಿಕೊಂಡೇ ನಮಾಝ್ ನಿರ್ವಹಿಸಬೇಕು. ನಿಮ್ಮ ಆಯುಧಗಳು ಮತ್ತಿತರ ಸಾಮಾನು-ಸರಂಜಾಮುಗಳ ಕುರಿತು ನೀವು ಸ್ವಲ್ಪ ಅಸಡ್ಡೆ ತೋರಿದರೂ [ನಿಮ್ಮೊಂದಿಗೆ ಯುದ್ಧ ಸಾರಿರುವ] ಇಸ್ಲಾಮ್ ಧರ್ಮದ ಈ ವಿರೋಧಿಗಳು ಏಕಾಏಕಿ ನಿಮ್ಮ ಮೇಲೆ ಮುಗಿಬೀಳಲು ಅತೀವ ಹಂಬಲಿಸುತ್ತಾರೆ. ಆದರೆ ಮಳೆಯಿಂದಾಗಿ ತೊಂದರೆಯಾಗಿದ್ದರೆ ಅಥವಾ ರೋಗ ಬಾಧಿತರಾದ ಕಾರಣ ಆಯುಧಗಳನ್ನು ಕಳಚಿಡಬೇಕಾಗಿ ಬಂದರೆ ನಿಮ್ಮ ಮೇಲೆ ಏನೂ ಆಕ್ಷೇಪವಿಲ್ಲ! ಹಾಗಿದ್ದರೂ ನಿಮ್ಮ (ರಕ್ಷಣೆಗೆ ಅತ್ಯಗತ್ಯವಾದ ಎಲ್ಲ) ಮುಂಜಾಗ್ರತೆ ವಹಿಸಿಕೊಳ್ಳಿ. ನಿಜವಾಗಿಯೂ ಅಲ್ಲಾಹ್ ನು ಧರ್ಮವಿರೋಧಿಗಳಿಗಾಗಿ ಅವಹೇಳನಕಾರಿ ಶಿಕ್ಷೆ ಸಿದ್ಧಪಡಿಸಿ ಇಟ್ಟಿರುವನು. {102}

ಹಾಗೆ ನೀವು ನಮಾಝ್ ನಿರ್ವಹಿಸಿಕೊಂಡರೆ, ನಿಂತಿರುವಾಗಲೂ ಕುಳಿತಿರುವಾಗಲೂ ಮಗ್ಗಲೊರಗಿಸಿ ಮಲಗಿರುವಾಗಲೂ [ಅರ್ಥಾತ್ ಅದೇನನ್ನು ಮಾಡುತ್ತಿರುವಾಗಲೂ ಅಸಡ್ಡೆ ತೋರದೆ] ಅಲ್ಲಾಹ್ ನನ್ನು ಸ್ಮರಿಸುತ್ತಲಿರಿ. ನಂತರ ನೀವು [ಅಪಾಯದಿಂದ ಪಾರಾಗಿ] ಸುರಕ್ಷಿತ ಸ್ಥಿತಿಗೆ ತಲುಪಿದರೆ ನಮಾಝ್ ಗಳನ್ನು (ಮೊಟಕುಗೊಳಿಸದೆ, ಸಮಯಕ್ಕೆ ಸರಿಯಾಗಿ) ಪಾಲಿಸತೊಡಗಿರಿ. [ಏಕೆಂದರೆ] ಸಮಯಕ್ಕೆ ಸರಿಯಾಗಿ ನಿರ್ವಹಿಸಬೇಕೆಂಬ ನಿಬಂಧನೆಯೊಂದಿಗೆ ನಮಾಝ್ ಅನ್ನು ಮುಸ್ಲಿಮರ ಮೇಲೆ ವಿಧಿಗೊಳಿಸಲಾಗಿದೆ. {103}

ಇನ್ನು ನೀವು ಆ (ಶತ್ರು) ಸಮುದಾಯವನ್ನು ಹುಡುಕಿ ಹೋಗುವ ವಿಷಯದಲ್ಲಿ ದೌರ್ಬಲ್ಯದಿಂದ ವರ್ತಿಸದಿರಿ. [ಯುದ್ಧದ ಸಮಯದಲ್ಲಿ] ನೀವು ಸಂಕಷ್ಟ ಅನುಭವಿಸುತ್ತೀರಿ ಎಂದಾದರೆ ನೀವು ಅನುಭವಿಸಿದಂತೆಯೇ ಅವರೂ ನೋವು-ನಷ್ಟ ಅನುಭವಿಸುತ್ತಾರೆ. ನೀವಾದರೋ ಅವರು ನಿರೀಕ್ಷಿಸದ (ಮಹತ್ತರವಾದ ಅನುಗ್ರಹಗಳನ್ನು) ಅಲ್ಲಾಹ್ ನಿಂದ ನಿರೀಕ್ಷಿಸುವವರಾಗಿರುವಿರಿ! ಅಲ್ಲಾಹ್ ನು ಎಲ್ಲವನ್ನೂ ಬಲ್ಲವನೂ ಹೌದು, ಮಹಾ ಪ್ರಾಜ್ಞನೂ ಹೌದು! {104}

(ಪೈಗಂಬರರೇ), ಅಲ್ಲಾಹ್ ನು ನಿಮಗೆ ಹೇಗೆ ಕಲಿಸಿರುವನೋ ಅದರಂತೆ ನೀವು ಜನರ ನಡುವೆ (ಅವರ ವಿವಾದಗಳಲ್ಲಿ) ಅಂತಿಮ ತೀರ್ಪು ನೀಡಲೆಂದು ಸತ್ಯವನ್ನೊಳಗೊಂಡ ಈ ಗ್ರಂಥವನ್ನು ನಿಮಗೆ ನಾವು ಇಳಿಸಿ ಕೊಟ್ಟಿರುವೆವು. ನೀವು ದ್ರೋಹಿಗಳ ಪರವಾಗಿ ವಾದಿಸುವವರಾಗಬಾರದು. ಅಲ್ಲಾಹ್ ನೊಂದಿಗೆ ಕ್ಷಮೆಯಾಚಿಸಿರಿ. ಅಲ್ಲಾಹ್ ನಾದರೋ ಅತ್ಯಂತ ಕ್ಷಮಾಶೀಲನೂ ನಿರಂತರ ಕರುಣೆ ತೋರುವವನೂ ಆಗಿರುವನು. [ಜನರಿಗೆ ಮೋಸ ಮಾಡುವ ಮೂಲಕ] ಸ್ವಯಂ ತಮ್ಮ ಮೇಲೆ ತಾವೇ ದ್ರೋಹ ಬಗೆದುಕೊಂಡವರ ಪರವಾಗಿ (ಪೈಗಂಬರರೇ) ನೀವು ವಕಾಲತ್ತು ಮಾಡುವವರಾಗದಿರಿ. ವಿಶ್ವಾಸಘಾತುಕರಾದ ಮಹಾಪಾತಕಿಗಳನ್ನು ಅಲ್ಲಾಹ್ ನು ಮೆಚ್ಚುವುದಿಲ್ಲ. ಜನರಿಂದ (ತಮ್ಮ ವಾಸ್ತವ ಸ್ವರೂಪವನ್ನು) ಅಂಥವರು ಅಡಗಿಸಿಡಬಹುದು ಆದರೆ ಅಲ್ಲಾಹ್ ನಿಂದ ಅವಿತುಕೊಳ್ಳುವುದು ಅವರಿಗೆ ಸಾಧ್ಯವಲ್ಲ. ಅವನಾದರೋ ರಾತ್ರಿಗಳಲ್ಲಿ ಅಂಥವರು ಅವನಿಗೆ ಮೆಚ್ಚುಗೆಯಾಗದ ವಿಷಯಗಳ ಕುರಿತು ಗುಪ್ತಾಲೋಚನೆಗಳನ್ನು ನಡೆಸುವಾಗಲೂ ಅವರ ಜೊತೆಗೇ ಇರುತ್ತಾನೆ (ಎಂಬುದು ತಿಳಿದಿರಲಿ). ಹೌದು, ಅವರು ಎಂತಹ ಚಟುವಟಿಕೆಗಳಲ್ಲಿ ತೊಡಗಿರುವರೋ ಅಲ್ಲಾಹ್ ನು ಅದನ್ನು (ಎಲ್ಲ ಕಡೆಗಳಿಂದ) ಸುತ್ತುವರಿದಿರುತ್ತಾನೆ. {105-108}

ಹೌದು! ಐಹಿಕ ಜೀವನದಲ್ಲಿ ಅಂಥವರ ಪರವಹಿಸಿ ವಾದಿಸಿಕೊಂಡ ಜನರಾಗಿ ಹೋದಿರಿ ನೀವು; ಆದರೆ ಪುನರುತ್ಥಾನ ದಿನದಂದು ಅವರ ಪರವಹಿಸಿ ಅಲ್ಲಾಹ್ ನೊಂದಿಗೆ ವಕಾಲತ್ತಿಗೆ ಇಳಿಯುವವರು ಯಾರಿದ್ದಾರೆ? ಅಥವಾ (ಕನಿಷ್ಟ ಪಕ್ಷ ಅಂದು) ಅಂಥವರಿಗೆ ರಕ್ಷಣೆ ಒದಗಿಸಲು ಯಾರಿರುವನು? {109}

ಇನ್ನು, ಒಬ್ಬಾತನು ಕೆಟ್ಟದ್ದನ್ನು ಮಾಡಿ ಅಥವಾ ತನ್ನೊಡನೆಯೇ ದ್ರೋಹ ಬಗೆದುಕೊಂಡು ತರುವಾಯ ಅಲ್ಲಾಹ್ ನೊಡನೆ ಕ್ಷಮಾಯಾಚನೆ ಮಾಡಿಕೊಂಡರೆ ಆತನು ಅಲ್ಲಾಹ್ ನನ್ನು ಮಹಾ ಕ್ಷಮಾಶೀಲನೂ ಹೆಚ್ಚು ಕರುಣೆ ತೋರುವವನೂ ಆಗಿರುವುದನ್ನು ಕಂಡುಕೊಳ್ಳುವನು. {110}

ಒಬ್ಬಾತನು ಒಂದು ಅಪರಾಧವನ್ನೆಸಗಿದರೆ ಆತನು ನಿಜವಾಗಿಯೂ ಸ್ವತಃ ತನ್ನ ವಿರುದ್ಧವೇ ದ್ರೋಹ ಬಗೆದಿರುವನು. ಅಲ್ಲಾಹ್ ನಾದರೋ ಸರ್ವಜ್ಞನೂ ಮಹಾ ವಿವೇಕಿಯೂ ಆಗಿರುವನು. ಇನ್ನು, ಒಬ್ಬನು ಸ್ವತಃ ಒಂದು ತಪ್ಪನ್ನೆಸಗಿ ಅಥವಾ ಅಪರಾಧವೊಂದನ್ನು ಮಾಡಿ ನಂತರ ಅದನ್ನು ನಿರಪರಾಧಿಯೊಬ್ಬನ ಮೇಲೆ ಆಪಾದಿಸಿದರೆ ಆತನು ಯಥಾರ್ಥದಲ್ಲಿ ಸುಳ್ಳಾರೋಪದ ಹಾಗೂ ಒಂದು ಸ್ಪಷ್ಟವಾದ ಪಾಪದ ಹೊರೆಯನ್ನು ತನ್ನ ಮೇಲೆ ಹೊತ್ತುಕೊಂಡನು! {111-112}

(ಓ ಪೈಗಂಬರರೇ!) ಒಂದು ವೇಳೆ ಅಲ್ಲಾಹ್ ನ ಕೃಪೆ ಮತ್ತು ಅನುಗ್ರಹವು ನಿಮ್ಮ ಮೇಲೆ ಇರದೇ ಹೋಗಿದ್ದರೆ ಅವರ [ಅರ್ಥಾತ್ ಆ ವಂಚಕರ] ಪೈಕಿಯ ಒಂದು ಗುಂಪಂತು ನಿಮ್ಮನ್ನು ದಾರಿ ತಪ್ಪಿಸಿಯೇ ಬಿಡಲು ದೃಢ ನಿರ್ಧಾರ ಕೈಗೊಂಡಿತ್ತು. (ಆದರೆ ಯಥಾರ್ಥದಲ್ಲಿ) ಅವರು ಸ್ವತಃ ತಮ್ಮನ್ನಲ್ಲದೆ (ಇತರರನ್ನು) ದಾರಿ ತಪ್ಪಿಸಲಾರರು. ನಿಮಗೆ ಸ್ವಲ್ಪವಾದರೂ ಹಾನಿಯುಂಟು ಮಾಡುವುದು ಅವರಿಗೆ ಸಾಧ್ಯವಲ್ಲ. [ಹೇಗೆ ತಾನೇ ಸಾಧ್ಯವಾದೀತು? ಏಕೆಂದರೆ] ಅಲ್ಲಾಹ್ ನು ನಿಮಗೆ (ತನ್ನ) ಗ್ರಂಥವನ್ನೂ ಸುಜ್ಞಾನವನ್ನೂ ಇಳಿಸಿಕೊಟ್ಟಿರುವನು; ಮತ್ತು (ಆ ಮೂಲಕ) ನಿಮಗೆ ತಿಳಿಯದೇ ಇದ್ದ ವಿಚಾರಗಳ ಜ್ಞಾನ ನೀಡಿರುವನು. (ಆದ್ದರಿಂದ ಪೈಗಂಬರರೇ,) ನಿಮ್ಮ ಮೇಲಿರುವ ಅಲ್ಲಾಹ್ ನ ಅನುಗ್ರಹವು ಅತಿ ಮಹತ್ತರವಾದುದು! {113}

ಅವರು ನಡೆಸುತ್ತಿರುವ ಹೆಚ್ಚಿನ ರಹಸ್ಯ ಸಮಾಲೋಚನೆಗಳಲ್ಲಿ ಯಾವ ರೀತಿಯ ಹಿತವೂ ಇರುವುದಿಲ್ಲ – ದಾನಧರ್ಮಗಳನ್ನು ಪ್ರೇರೇಪಿಸಲು ಅಥವಾ (ಸಮಾಜಪರ) ಹಿತಕಾರ್ಯಗಳನ್ನು ಕೈಗೊಳ್ಳುವಂತೆ ಮಾಡಲು ಅಥವಾ ಜನರ ನಡುವೆ ಸಂಧಾನವೇರ್ಪಡಿಸಲು ಯಾರಾದರೂ (ಅಂತಹ ಸಮಾಲೋಚನೆಗಳನ್ನು ನಡೆಸುವುದರ) ಹೊರತು. ಇನ್ನು ಅಲ್ಲಾಹ್ ನ ಸಂಪ್ರೀತಿಯನ್ನು ಬಯಸಿ ಯಾರಾದರೂ ಅದನ್ನು ಮಾಡುವುದಾದರೆ ನಾವಿದೋ ಆತನಿಗೆ ಭಾರೀ ಪ್ರತಿಫಲವನ್ನು ನೀಡಲಿದ್ದೇವೆ. {114}

ಸರಿದಾರಿ ಯಾವುದೆಂದು ಸ್ಪಷ್ಟವಾಗಿ ಮನವರಿಕೆಯಾದ ನಂತರವೂ (ನಮ್ಮ) ಪೈಗಂಬರರನ್ನು ವಿರೋಧಿಸುವುದರಲ್ಲೇ ತೊಡಗಿಕೊಂಡು, ವಿಶ್ವಾಸಿಗಳಾದವರ (ದಾರಿಯನ್ನು) ಅನುಸರಿಸುವ ಬದಲು ಬೇರೆಯೇ ಹಾದಿ ಹಿಡಿದುಕೊಂಡವನನ್ನು ತಾನು (ಸ್ವತಃ ಮೆಚ್ಚಿ) ತಿರುಗಿಕೊಂಡ (ವಿನಾಶದ) ಹಾದಿಯತ್ತಲೇ ನಾವು ತಿರುಗಿಸಿ ಬಿಡುವೆವು; (ಕೊನೆಗೆ) ನರಕದೊಳಕ್ಕೆ ನಾವು ಅವನನ್ನು ತಳ್ಳಿ ಬಿಡುವೆವು. ಬಹಳ ನಿಕೃಷ್ಟ ನೆಲೆಯದು! {115}

(ತನ್ನ ದೇವತ್ವದಲ್ಲಿ) ಇತರರನ್ನು ಜೊತೆಗಾರರನ್ನಾಗಿಸುವ ಪಾಪವನ್ನು [ಅರಬಿ: ಶಿರ್ಕ್] ಅಲ್ಲಾಹ್ ನು ಖಂಡಿತ ಕ್ಷಮಿಸುವುದಿಲ್ಲ. ಅದಕ್ಕಿಂತ ಕಡಿಮೆ ಮಟ್ಟದ (ಇತರ ಪಾಪಗಳನ್ನು) ತಾನು ಕ್ಷಮಿಸಲಿಚ್ಛಿಸಿದವರ ಪಾಲಿಗೆ ಕ್ಷಮಿಸಿ ಕೊಡುವನು. ಯಾವನಾದರೂ ಅಲ್ಲಾಹ್ ನೊಂದಿಗೆ (ಅವನ ದೇವತ್ವದಲ್ಲಿ) ಇತರರಿಗೆ ಸಹಭಾಗಿತ್ವ ಕಲ್ಪಿಸಿದರೆ ಅವನು ದಾರಿತಪ್ಪಿ ಆ ತಪ್ಪುದಾರಿಯಲ್ಲಿ ದೂರ ಬಹುದೂರ ಸಾಗಿರುವನು. {116}

ಸಹಾಯಕ್ಕಾಗಿ ಅಲ್ಲಾಹ್ ನ ಹೊರತು ಅವರು ಮೊರೆಯಿಡುತ್ತಿರುವುದು ಮಿಥ್ಯ ದೇವಿ-ದೇವತೆಗಳಿಗಲ್ಲದೆ ಬೇರಾರಿಗೂ ಅಲ್ಲ; ಅಂದರೆ ಅವರು ಮೊರೆಯಿಡುತ್ತಿರುವುದು ಬಂಡಾಯವೆದ್ದ ಸೈತಾನನಿಗಲ್ಲದೆ ಬೇರಾರಿಗೂ ಅಲ್ಲ! ಸೈತಾನನನ್ನು ಅಲ್ಲಾಹ್ ನು ಶಪಿಸಿರುವನು. ನಿನ್ನ (ಸೃಷ್ಟಿಯಾದ) ಮನುಷ್ಯಜಾತಿಯಿಂದ ಒಂದು ನಿಗದಿತ ಪಾಲನ್ನು ಖಂಡಿತವಾಗಿಯೂ ನಾನು (ನನ್ನ ಅನುಚರರನ್ನಾಗಿ) ಪಡೆದೇ ತೀರುವೆನು – ಎಂದು ಅವನು (ಅಲ್ಲಾಹ್ ನೊಂದಿಗೆ ಶಪಥ ಮಾಡಿ) ಹೇಳಿದ್ದನು. ಅವರನ್ನು ನಾನು ದಾರಿಗೆಡಿಸಿಯೇ ತೀರುವೆನು, ಮತ್ತು ಅವರನ್ನು ಪೊಳ್ಳು ಕಾಮನೆಗಳಲ್ಲಿ ಸಿಲುಕಿಸಿ ಬಿಡುವೆನು! ನಂತರ ನಾನು ಅವರಿಗೆ ಪ್ರಚೋದನೆ ನೀಡುವೆನು ಆಗ ಅವರು [ದೇವಿ-ದೇವತೆಗಳಿಗೆ ಅರ್ಪಿಸಲು] ಜಾನುವಾರುಗಳ ಕಿವಿಗಳನ್ನು ಸೀಳುವರು. ನಾನು ಅವರನ್ನು ಪ್ರೇರೇಪಿಸುವೆನು ಆಗ ಅವರು ಅಲ್ಲಾಹ್ ನ ಸೃಷ್ಟಿಗಳ (ಪ್ರಕೃತಿ, ಸ್ವರೂಪಗಳನ್ನು) ಬದಲಿಸಿ ವಿರೂಪಗೊಳಿಸುವರು [ಎಂದೂ ಹೇಳಿದ್ದನು]. ಹಾಗಿರುವಾಗ ಯಾರು ಅಲ್ಲಾಹ್ ನನ್ನು ಬಿಟ್ಟು ಸೈತಾನನನ್ನು ತನ್ನ ಹಿತೈಷಿಯನ್ನಾಗಿಸಿ ಕೊಂಡನೋ ಅವನು ನಷ್ಟಕ್ಕೊಳಗಾದನು; ಬಹಳ ಸ್ಪಷ್ಟವಾದ ನಷ್ಟದಲ್ಲಿ ಸಾಗಿರುವನು. {117-119}

ಸೈತಾನನು ಅವರಿಗೆ (ಹುಸಿ) ಭರವಸೆಗಳನ್ನು ನೀಡುತ್ತಾನೆ; ಅವರನ್ನು ಆಕಾಂಕ್ಷೆ-ಅಭಿಲಾಷೆಗಳಲ್ಲಿ ಸಿಲುಕಿಸುತ್ತಾನೆ. (ಆದರೆ ತಿಳಿದಿರಿ) ಸೈತಾನನು ಅವರಿಗೆ ನೀಡುವ ಭರವಸೆಯು ಒಂದು ವಂಚನೆಯೇ ಹೊರತು ಬೇರೇನೂ ಅಲ್ಲ. (ಸೈತಾನನನ್ನು ನಂಬಿಕೊಂಡ) ಆ ಜನರೇ ಆಗಿರುವರು ನರಕವನ್ನು ತಮ್ಮ ನೆಲೆಯಾಗಿ ಹೊಂದಲಿರುವವರು. ಅದರಿಂದ ತಪ್ಪಿಸಿ ಓಡಿ ಹೋಗುವ ಯಾವ ದಾರಿಯೂ ಅವರಿಗೆ ಸಿಗಲಾರದು. [ಆದರೆ ಸೈತಾನನನ್ನು ಧಿಕ್ಕರಿಸಿ] ಯಾರು ಧರ್ಮ ವಿಶ್ವಾಸಿಗಳಾದರೋ ಜೊತೆಗೆ ಸತ್ಕರ್ಮವನ್ನು ಕೈಗೊಂಡರೋ ಅಂಥವರಿಗೆ ಶೀಘ್ರವೇ ನಾವು ಕೆಳಗಡೆ ನೀರ ಹೊನಲುಗಳು ಹರಿಯುತ್ತಿರುವ ಸ್ವರ್ಗೀಯ ತೋಟಗಳೊಳಗೆ ಪ್ರವೇಶ ನೀಡಲಿರುವೆವು. ಅದರಲ್ಲಿ ಅವರು ಎಂದೆಂದಿಗೂ ವಾಸಿಸುವರು. ಅಲ್ಲಾಹ್ ನು ಮಾಡುವ ವಾಗ್ದಾನವು ಸತ್ಯವಾದ ವಾಗ್ದಾನವಾಗಿದೆ. ಕೊಟ್ಟ ಮಾತಿನಲ್ಲಿ ಅಲ್ಲಾಹ್ ನಿಗಿಂತ ಹೆಚ್ಚು ಸತ್ಯವಂತರು ಯಾರಿರುವರು! {120-122}

ಅದಲ್ಲದೆ, (ಸ್ವರ್ಗ ಪ್ರವೇಶವು) ನಿಮ್ಮ ಮನೇಚ್ಛೆಯಂತೆಯೋ ಅಥವಾ ಗ್ರಂಥವನ್ನು ಹೊಂದಿರುವ ಜನರ ಪೊಳ್ಳು ಕಾಮನೆಗಳ ಪ್ರಕಾರವೋ ನಡೆಯುವುದಲ್ಲ. ಯಾವೊಬ್ಬನು ಕೆಟ್ಟದ್ದನ್ನು ಮಾಡುತ್ತಾನೋ ಅದರಂತೆ ಆತನಿಗೆ ಶಿಕ್ಷೆಯು ಸಿಗುವುದು; ಅಲ್ಲಾಹ್ ನ ಹೊರತು ಯಾರೂ ಆತನಿಗೆ ರಕ್ಷಕನಾಗಲಿ ಸಹಾಯಕನಾಗಲಿ ಇರಲಾರರು. ಇನ್ನು ಪುರುಷನಾಗಿರಲಿ ಅಥವಾ ಸ್ತ್ರೀಯಾಗಿರಲಿ, ಸತ್ಕರ್ಮಗಳನ್ನು ಮಾಡುತ್ತಾರಾದರೆ ಮತ್ತು ಅವರು ಧರ್ಮ-ವಿಶ್ವಾಸಿಗಳೂ ಹೌದಾದರೆ, ಅಂಥವರೇ ಆಗಿರುವರು ಸ್ವರ್ಗೋದ್ಯಾನವನ್ನು ಪ್ರವೇಶ ಮಾಡಲಿರುವವರು, ಅಂಥವರಿಗೆ ಎಳ್ಳಷ್ಟೂ ಅನ್ಯಾಯವಾಗಲಾರದು. {123-124}

ಯಾರು ಸಂಪೂರ್ಣವಾದ ಶರಣಾಗತಿಯೊಂದಿಗೆ ತನ್ನ ಅಸ್ತಿತ್ವವನ್ನು ಅಲ್ಲಾಹ್ ನಿಗೆ ಅರ್ಪಿಸಿಕೊಂಡು ಪರಮ ಸಜ್ಜನಿಕೆಯನ್ನೂ ಮೈಗೂಡಿಸಿಕೊಂಡು ಅದರ ಜೊತೆಗೆ (ನಮಗೆ) ಅತ್ಯಂತ ನಿಷ್ಠನಾದ ಇಬ್ರಾಹೀಮ್ ರ (ಧಾರ್ಮಿಕ) ಪರಂಪರೆಯನ್ನು ಅನುಸರಿಸಿ ನಡೆಯುವನೋ, ಧರ್ಮದ ಪಾಲನೆಯಲ್ಲಿ ಅವನಿಗಿಂತ ಮಿಗಿಲಾದವನು ಯಾರಿರುವನು?! ಹೌದು, ಅಲ್ಲಾಹ್ ನು ಇಬ್ರಾಹೀಮ್ ರನ್ನು ಆಪ್ತಮಿತ್ರನಾಗಿ ಸ್ವೀಕರಿಸಿದ್ದನು. ಅದೇನೆಲ್ಲ ಭೂಮಿ ಅಕಾಶಗಳಲ್ಲಿ ಇವೆಯೋ ಅವೆಲ್ಲವೂ ಅಲ್ಲಾಹ್ ನಿಗೇ ಸೇರಿದವುಗಳು. ಹೌದು, ಅಲ್ಲಾಹ್ ನು ಅವೆಲ್ಲವನ್ನೂ ಆವರಿಸಿಕೊಂಡಿರುವನು. {125-126}

ಜನರು ನಿಮ್ಮೊಂದಿಗೆ (ವಿಧವೆಯರಾದ) ಸ್ತ್ರೀಯರ ವಿಷಯದಲ್ಲಿ ತೀರ್ಪು ಏನೆಂದು ಕೇಳುತ್ತಿದ್ದಾರೆ! ಅವರ ವಿಷಯವಾಗಿ ತೀರ್ಪನ್ನು ಅಲ್ಲಾಹ್ ನು ನಿಮಗೆ ತಿಳಿಸುತ್ತಾನೆ ಎಂದು (ಪೈಗಂಬರರೇ) ನೀವು ಹೇಳಿರಿ:

ಕಡ್ಡಾಯವಾಗಿ ಅವರಿಗೆ ಕೊಡಲೇ ಬೇಕಾದ [ವಧು ದಕ್ಷಿಣೆ]ಯನ್ನು ನೀವು ಅವರಿಗೆ ಕೊಡದೆ [ಕೇವಲ ಅವರ ಸೌಂದರ್ಯ, ಸೊತ್ತು ಮುಂತಾದವುಗಳಿಗಾಗಿ] ಅವರನ್ನು ನೀವು ವರಿಸಲು ಬಯಸುತ್ತಿರುವ ಕುರಿತು (ಇದಕ್ಕೆ ಮೊದಲೇ) ಇದೇ ಗ್ರಂಥದಲ್ಲಿರುವ ವಿಧಿಯನ್ನು ನಿಮಗೆ ಮನದಟ್ಟಾಗುವಂತೆ ಓದಿ ತಿಳಿಸಲಾಗಿದೆ. ಮತ್ತು ಆ ಸ್ತ್ರೀಯರೊಂದಿಗಿರುವ (ಅವರ) ಅನಾಥ ಮಕ್ಕಳ ಕುರಿತೂ [ಸಮಾಜದಲ್ಲಿರುವ ಇತರ] ದುರ್ಬಲ ಮಕ್ಕಳ ಕುರಿತೂ (ವಿಧಿ ತಿಳಿಸಲಾಗಿದೆ). ಅನಾಥ ಮಕ್ಕಳ ವಿಷಯದಲ್ಲಿ ನೀವು (ಯಾವಾಗಲೂ) ನ್ಯಾಯ ಪಾಲನೆಗಾಗಿ ನಿಲ್ಲುವವರಾಗಬೇಕು [ಎಂದೂ ಈ ಗ್ರಂಥದಲ್ಲಿ ವಿಧಿಸಲಾಗಿದೆ] . ಇನ್ನು ಹೆಚ್ಚಿನ ಒಳಿತನ್ನೇನಾದರೂ ನೀವು (ಅವರಿಗಾಗಿ) ಮಾಡಿದರೆ ಅಲ್ಲಾಹ್ ನು ಅದನ್ನು ಚೆನ್ನಾಗಿ ಬಲ್ಲವನಾಗಿರುವನು! {127}

ಒಂದು ವೇಳೆ ಸ್ತ್ರೀಯು ತನ್ನ ಪತಿಯಿಂದ ತಿರಸ್ಕಾರ ಮತ್ತು ಅಸಡ್ಡೆತನದ ನಡವಳಿಕೆಯನ್ನು ಅಂಜಿಕೊಂಡರೆ ಅವರಿಬ್ಬರೂ ತಮ್ಮ ನಡುವೆ ಒಂದು ಒಪ್ಪಂದಕ್ಕೆ ಬಂದು (ದಾಂಪತ್ಯವನ್ನು) ಸುಧಾರಿಸಿಕೊಂಡರೆ ಅದು ಅವರಿಗೆ ದೋಷಕರವಲ್ಲ. ಸಂಧಾನವೇ ಅತ್ಯುತ್ತಮ ವಿಧಾನ! ಮನುಷ್ಯ ಮನಸ್ಸಿನಲ್ಲಿ (ಅಲ್ಪ-ಸ್ವಲ್ಪ) ಸಂಕುಚಿತತೆ ಸಹಜವಾಗಿಯೇ ಇರುತ್ತದೆ. ಹಾಗಿರುವಾಗ ನೀವು ಸೌಜನ್ಯದೊಂದಿಗೆ ನಡೆದುಕೊಂಡರೆ ಮತ್ತು (ದುರ್ವರ್ತನೆಯಿಂದ) ತಮ್ಮನ್ನು ದೂರವಿರಿಸಿಕೊಂಡರೆ ನೀವು ಮಾಡುವ ಪ್ರತಿಯೊಂದು (ಒಳಿತನ್ನೂ) ಅಲ್ಲಾಹ್ ನು ಚೆನ್ನಾಗಿ ಬಲ್ಲವನಾಗಿರುತ್ತಾನೆ. {128}

ಇನ್ನು ಪತ್ನಿಯರು [ಒಬ್ಬಳಿಗಿಂತ ಹೆಚ್ಚಿದ್ದರೆ ವ್ಯವಹರಿಸುವಾಗ] ಅವರ ನಡುವೆ ನ್ಯಾಯಯುತವಾಗಿ ನಡೆದುಕೊಳ್ಳಲು ನಿಮಗೆ ಸರ್ವಥಾ ಸಾಧ್ಯವಿಲ್ಲ. ನೀವು ಎಷ್ಟೇ ಇಚ್ಛಿಸಿದರೂ (ಅದು ನಿಮಗೆ ಸಾಧ್ಯವಾಗದು). ಹಾಗಿರುವಾಗ ನೀವು (ಒಬ್ಬಳ ಕಡೆಗೆ ಮಾತ್ರ) ಸಕಲ ರೀತಿಯಲ್ಲಿ ವಾಲಿಕೊಂಡಿದ್ದು ಮತ್ತೊಬ್ಬಳನ್ನು ಅನಿಶ್ಚಿತ ಸ್ಥಿತಿಯಲ್ಲಿ ಬಿಟ್ಟು ಬಿಡಬೇಡಿ. ಒಂದು ವೇಳೆ ನಿಮ್ಮ ನಡತೆಯನ್ನು ನೀವು ಸುಧಾರಿಸಿಕೊಂಡರೆ ಮತ್ತು [ನ್ಯಾಯ ಪಾಲಿಸುವ ವಿಷಯದಲ್ಲಿ] ಜಾಗ್ರತೆ ವಹಿಸುವವರಾದರೆ, ಅಲ್ಲಾಹ್ ನು (ಪ್ರಮಾದಗಳನ್ನು) ಬಹಳವಾಗಿ ಕ್ಷಮಿಸುವವನೂ ಅತಿ ಹೆಚ್ಚು ದಯೆ ತೋರುವವನೂ ಆಗಿರುವನು! {129}

ಅಂತೂ (ದಂಪತಿಗಳು) ಪರಸ್ಪರರಿಂದ ಬೇರ್ಪಟ್ಟುಕೊಂಡರೆ ಅಲ್ಲಾಹ್ ನು ತನ್ನ ಅಪಾರ ಸಾಮರ್ಥ್ಯದಿಂದ ಅವರಿಬ್ಬರನ್ನೂ (ಪರಸ್ಪರರ) ಅವಲಂಬನೆಯಿಂದ ಮುಕ್ತಗೊಳಿಸುವನು. ಅಲ್ಲಾಹ್ ನಾದರೋ ಅತ್ಯಂತ ಉದಾರಿಯೂ ಬಹಳ ಚಾಣಾಕ್ಷನೂ ಆಗಿರುವನು {130}

ಭೂಮಿ ಮತ್ತು ಆಕಾಶಗಳಲ್ಲಿ ಏನೆಲ್ಲ ಇವೆಯೋ ಅವೆಲ್ಲ ಅಲ್ಲಾಹ್ ನ ಮಾತ್ರ ಒಡೆತನಕ್ಕೆ ಸೇರಿದವುಗಳು; [ಆದ್ದರಿಂದಲೇ] ನೀವು ಅಲ್ಲಾಹ್ ನ ವಿಷಯದಲ್ಲಿ ಭಯ-ಭಕ್ತಿ ಪಾಲಿಸುವವರಾಗಿರಿ ಎಂದು ನಿಮಗಿಂತ ಮುಂಚೆ [ತೋರಾ ಮತ್ತು ಬೈಬಲ್ ಗಳಂತಹ] ಗ್ರಂಥ ನೀಡಲ್ಪಟ್ಟ ಜನರಿಗೆ ತಾಕೀತು ಮಾಡಲಾಗಿತ್ತು ಮತ್ತು (ಈಗ) ನಿಮಗೂ ಅದನ್ನೇ (ಈ ಕುರ್‌ಆನ್ ನಲ್ಲಿ ತಾಕೀತು ಮಾಡಲಾಗುತ್ತಿದೆ). ಅದಾಗಿಯೂ ತಿರಸ್ಕಾರವೇ ನಿಮ್ಮ ನಿಲುವಾದರೆ [ತಿಳಿಯಿರಿ, ನಷ್ಟವು ನಿಮಗಲ್ಲದೆ ಅಲ್ಲಾಹ್ ನಿಗೆ ಅಲ್ಲ]! ಏಕೆಂದರೆ ಭೂಮಿ ಮತ್ತು ಆಕಾಶಗಳಲ್ಲಿ ಇರುವ ಸಕಲವೂ ಅಲ್ಲಾಹ್ ನಿಗೆ ಸೇರಿದವುಗಳು. ಅಲ್ಲಾಹ್ ನಾದರೋ ಎಲ್ಲ ರೀತಿಯ ಅಗತ್ಯಗಳಿಂದ ಸಂಪೂರ್ಣ ಮುಕ್ತನು; ಸಕಲ ರೀತಿಯ ಪ್ರಶಂಸೆಗಳಿಗೆ (ಸಹಜವಾಗಿಯೇ) ಅರ್ಹನು! [ಮತ್ತೊಮ್ಮೆ ಮನದಟ್ಟು ಮಾಡಿಕೊಳ್ಳಿ] ಆಕಾಶಗಳಲ್ಲಿರುವ ಸಕಲವೂ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹ್ ನದ್ದೇ ಆಗಿವೆ, ಹಾಗಿರುವಾಗ ವಿಶ್ವಾಸಾರ್ಹನಾಗಿ ಅಲ್ಲಾಹ್ ನು ಮಾತ್ರವೇ ಸಾಕು. {131-132}

ಅವನು ಬಯಸಿದರೆ, ಓ ಜನರೇ, ನಿಮ್ಮನ್ನು ತೊಲಗಿಸಿ (ನಿಮ್ಮ ಸ್ಥಾನದಲ್ಲಿ) ಬೇರೆಯೇ ಜನರನ್ನು ತಂದು ನಿಲ್ಲಿಸಬಹುದು. ಹಾಗೆ ಮಾಡಲು ಅಲ್ಲಾಹ್ ನಿಗೆ ಸರ್ವ ರೀತಿಯ ಸಾಮರ್ಥ್ಯವಿದೆ (ಎಂಬುದು ಮರೆಯದಿರಿ). {133}

ಯಾವೊಬ್ಬನು ಕೇವಲ ಲೌಕಿಕ ಜೀವನದ ಪ್ರತಿಫಲವನ್ನು ಬಯಸುತ್ತಾನೋ (ಅವನು ಚೆನ್ನಾಗಿ ತಿಳಿದಿರಲಿ) ಲೋಕ ಮತ್ತು ಲೋಕಾಂತರಕ್ಕೆ ಸಂಬಂಧಿಸಿದ (ಎರಡು ರೀತಿಯ) ಪ್ರತಿಫಲಗಳು ಅಲ್ಲಾಹ್ ನ ಬಳಿ ಇವೆ. ಆಲ್ಲಾಹ್ ನು ಎಲ್ಲವನ್ನೂ ಕೇಳಿಸಿಕೊಳ್ಳುವವನೂ ಸಕಲವನ್ನೂ ವೀಕ್ಷಿಸುತ್ತಿರುವವನೂ ಆಗಿರುವನು. {134}

ಓ ಧರ್ಮ ವಿಶ್ವಾಸಿಗಳೇ! ನೀವು ಕಟ್ಟುನಿಟ್ಟಾಗಿ ನ್ಯಾಯದ ನಿತ್ಯ ಸಂರಕ್ಷಕರಾಗಿ ನಿಲ್ಲಿರಿ; [ಸಾಕ್ಷ್ಯವಹಿಸಬೇಕಾದ ಸನ್ನಿವೇಶಗಳು ಎದುರಾದರೆ ನ್ಯಾಯದ ಪರ] ಅಲ್ಲಾಹ್ ನಿಗಾಗಿ ಸಾಕ್ಷ್ಯ ನುಡಿಯುವವರಾಗಿರಿ – ಅದು ಸ್ವತಃ ನಿಮ್ಮದೇ ವಿರುದ್ಧವಾಗಿದ್ದರೂ ಅಥವಾ ನಿಮ್ಮ ಮಾತಾಪಿತರ ಮತ್ತು ನಿಮ್ಮ ನಿಕಟ ಸಂಬಂಧಿಕರ ವಿರುದ್ಧವಾಗಿದ್ದರೂ ಸರಿ. ಇನ್ನು (ಕಕ್ಷಿದಾರನು) ಧನಿಕನಾಗಿರಲಿ ಅಥವಾ ಬಡವನಾಗಿರಲಿ ಅಲ್ಲಾಹ್ ನು ಅವರ ಹಿತವನ್ನು (ನಿಮಗಿಂತ) ಹೆಚ್ಚು ಬಯಸುವವನಾಗಿದ್ದಾನೆ; ಆದ್ದರಿಂದಲೇ ನ್ಯಾಯ ಪಾಲಿಸುವ ಬದಲು (ಸಾಕ್ಷ್ಯ ನುಡಿಯುವಾಗ) ನೀವು ನಿಮ್ಮದೇ ಮನಸ್ಸಿನ ಉತ್ಕಟ ಲಾಲಸೆಗಳ ಹಿಂದೆ ಬೀಳದಿರಿ. ನೀವು ತಿರುಚಿ-ಮುರುಚಿ [ಬೇರೆಯೇ ಅರ್ಥ ಬರುವಂತೆ ಸಾಕ್ಷ್ಯ] ನುಡಿದರೆ ಅಥವಾ ನುಣುಚಿಕೊಂಡರೆ (ತಿಳಿದಿರಿ), ಅಲ್ಲಾಹ್ ನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲವನಾಗಿದ್ದಾನೆ. {135}

ವಿಶ್ವಾಸಿಗಳ ಯಾದಿಗೆ ಸೇರಿದ ಓ ಜನರೇ! ಅಲ್ಲಾಹ್ ನಲ್ಲಿ, ಅವನು ಕಳಿಸಿದ ಪೈಗಂಬರರಲ್ಲಿ, ಆ ಪೈಗಂಬರರಿಗೆ ಇಳಿಸಿಕೊಡಲಾದ ಗ್ರಂಥ (ಕುರ್‌ಆನ್) ನಲ್ಲಿ ಹಾಗೂ ಇದಕ್ಕಿಂತ ಮುಂಚೆ ಇಳಿಸಿಕೊಡಲಾದ ಎಲ್ಲ (ದಿವ್ಯ) ಗ್ರಂಥಗಳಲ್ಲಿ ನೀವು ವಿಶ್ವಾಸವನ್ನು ದೃಢಪಡಿಸಿಕೊಳ್ಳಿರಿ. [ಅದಕ್ಕೆ ವ್ಯತಿರಿಕ್ತವಾಗಿ] ಯಾರಾದರೂ ಅಲ್ಲಾಹ್ ನನ್ನು, ಅವನ ಮಲಕ್ ಗಳನ್ನು, ಅವನು (ಇಳಿಸಿದ) ಗ್ರಂಥಗಳನ್ನು, ಅವನು (ಕಳಿಸಿದ) ದೂತರನ್ನು ಮತ್ತು ಅಂತ್ಯದಿನವನ್ನು ಸುಳ್ಳೆಂದು ನಿರಾಕರಿಸಿದರೆ ಅಂಥವರು ನಿಜವಾಗಿ ದಾರಿತಪ್ಪಿರುವರು; ತಪ್ಪಿದ ದಾರಿಯಲ್ಲಿ ದೂರ ಬಹುದೂರ ಸಾಗಿರುವರು. {136}

ಯಾರಾದರೂ ಧರ್ಮವಿಶ್ವಾಸವನ್ನು ಒಮ್ಮೆ ಒಪ್ಪಿಕೊಂಡು ನಂತರ ಅದರ ಧಿಕ್ಕಾರಿಗಳಾಗಿ, ಪುನಃ ವಿಶ್ವಾಸವನ್ನು ವ್ಯಕ್ತಪಡಿಸಿ ನಂತರ ಅದನ್ನು ನಿರಾಕರಿಸುವವರಾಗಿ; ಅನಂತರ ವಿಶ್ವಾಸದ ನಿರಾಕರಣೆಯ ಸ್ಥಿತಿಯಲ್ಲೇ ಮುಂದುವರಿದರೆ ಅಂಥವರನ್ನು ಕ್ಷಮಿಸುವ ಹೊಣೆಗಾರಿಕೆಯು ಅಲ್ಲಾಹ್ ನಿಗೆ ಇರುವುದಿಲ್ಲ, ಮಾತ್ರವಲ್ಲ ಅಂಥವರಿಗೆ (ಮತ್ತೊಮ್ಮೆ) ಸರಿದಾರಿ ತೋರಿಸುವ (ಹೊಣೆಯೂ ಅಲ್ಲಾಹ್ ನ ಮೇಲೆ) ಇಲ್ಲ. {137}

[ಓ ಪೈಗಂಬರರೇ, ನಿಮ್ಮ ಮುಂದೆ ವಿಶ್ವಾಸಿಗಳಂತೆ ನಟಿಸುವ] ಆ ಕಪಟಿಗಳಿಗೆ ಅತ್ಯಂತ ನೋವುಭರಿತ ಶಿಕ್ಷೆ ಇರುವ ಬಗ್ಗೆ 'ಸಿಹಿ-ಸುದ್ದಿ' ನೀಡಿರಿ. ಅವರಾದರೋ ಧರ್ಮ-ವಿಶ್ವಾಸಿಗಳನ್ನು ಬಿಟ್ಟು ಧರ್ಮ-ಧಿಕ್ಕಾರಿಗಳನ್ನು ತಮ್ಮ ಆತ್ಮೀಯ ಮಿತ್ರರಾಗಿ ಸ್ವೀಕರಿಸಿರುವರು. ಆ (ಧರ್ಮ-ಧಿಕ್ಕಾರಿ ಗಳ) ಬಳಿ ಇವರು ಗೌರವಸ್ಥಾನವನ್ನು ಬಯಸಿ ಹೋಗಿರುವರೇನು? ಹಾಗಿದ್ದರೆ (ಅವರು ತಿಳಿದಿರಲಿ) ಗೌರವಾದರಗಳೆಲ್ಲವೂ ಸಾರಾಸಗಟಾಗಿ ಅಲ್ಲಾಹ್ ನಿಗೆ ಮಾತ್ರ ಸಲ್ಲುವುದು. {138-139}

ಅಲ್ಲಾಹ್ ನ ವಚನಗಳನ್ನು ಅಲ್ಲಗಳೆಯುವ ಮತ್ತು ಅಪಹಾಸ್ಯಕ್ಕೆ ಗುರಿಪಡಿಸುವಂತಹ ಮಾತುಗಳು ನಿಮಗೆ ಕೇಳಿಸಿದರೆ ನೀವು ಅವರ ಗುಂಪಿನಲ್ಲಿ ಕುಳಿತುಕೊಳ್ಳ ಬಾರದು – ಅವರು ಬೇರೆಯೇ ಮಾತುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ತನಕ; ಇನ್ನು ಕುಳಿತರೆ ನೀವೂ ಸಹ ಅವರಂತೆಯೇ – ಎಂದು (ಇದಕ್ಕಿಂತ ಮೊದಲೇ ಅಲ್ಲಾಹ್ ನು) ನಿಮಗೆ ಇದೇ ಗ್ರಂಥದಲ್ಲಿ ಫರಮಾನು ಇಳಿಸಿಕೊಟ್ಟಿದ್ದಾನೆ. ಅಲ್ಲಾಹ್ ನು ಈ ಕಪಟಿಗಳನ್ನು ಮತ್ತು ಆ ಧಿಕ್ಕಾರಿಗಳನ್ನು ನರಕದಲ್ಲಿ ಒಂದೇ ಕಡೆ ಒಟ್ಟು ಸೇರಿಸಲಿರುವನು! {140}

ನಿಮಗೆ [ಸಂಭವಿಸಬಹುದಾದ ಜಯಾಪಜಯಗಳನ್ನು] ಕಾತರದಿಂದ ಎದುರುನೋಡುತ್ತಿರುವ ಆ ಕಪಟಿಗಳು, ಅಲ್ಲಾಹ್ ನ ವತಿಯಿಂದ ನಿಮಗೇನಾದರೂ ವಿಜಯ ಲಭಿಸುವಂತಾದರೆ ನಾವೂ (ಈ ಹೋರಾಟದಲ್ಲಿ) ನಿಮ್ಮ ಜೊತೆಗೇ ಇರಲಿಲ್ಲವೇ ಎಂದು ಹೇಳುವರು. ಮತ್ತು ಗೆಲುವು ಧರ್ಮಧಿಕ್ಕಾರಿಗಳ ಪಾಲಿಗೆ ಸಂದರೆ, ನಾವು ನಿಮ್ಮ ಮೇಲೆ ಪ್ರಾಬಲ್ಯ ಪಡೆದಿದ್ದರೂ ಕೊನೆಗೆ ಮುಸ್ಲಿಮರಿಂದ ನಾವು ನಿಮ್ಮನ್ನು ಕಾಪಾಡಲಿಲ್ಲವೇ ಎಂದು ಹೇಳುವರು. ಪುನರುತ್ಥಾನದ ಆ ದಿನ ನಿಮ್ಮೆಲ್ಲರ ನಡುವೆ ಅಲ್ಲಾಹ್ ನು ಅಂತಿಮ ನ್ಯಾಯ ತೀರ್ಮಾನ ಮಾಡಲಿರುವನು! ಆಗ ಈ ಧಿಕ್ಕಾರಿಗಳಿಗೆ ವಿಶ್ವಾಸಿಗಳ ಮೇಲೆ (ವಿಜಯ ಸಾಧಿಸುವಂತಹ) ಯಾವೊಂದು ಮಾರ್ಗೋಪಾಯವನ್ನೂ ಅಲ್ಲಾಹ್ ನು ಉಳಿಸಿಡಲಾರನು! ಆ ಕಪಟಿಗಳು [ವಿಶ್ವಾಸಿಗಳಂತೆ ನಟಿಸಿ] ಅಲ್ಲಾಹ್ ನನ್ನು ವಂಚಿಸುತ್ತಿದ್ದಾರೆ. ಆದರೆ ಅವನು [ಅದಕ್ಕೆ ಶಿಕ್ಷೆಯಾಗಿ] ಅವರನ್ನೇ ವಂಚನೆಗೊಳಪಡಿಸಿರುವನು. ಅವರು ನಮಾಝ್ ಮಾಡಲು ನಿಲ್ಲುವಾಗ ಮನಸ್ಸಿಲ್ಲದ ಮನಸ್ಸಿನಿಂದ, ಕೇವಲ ಜನರಿಗೆ [ತಾವೂ ವಿಶ್ವಾಸಿಗಳೆಂದು] ತೋರಿಸುವ ಸಲುವಾಗಿ, ನಿಲ್ಲುತ್ತಾರೆ! ಸ್ವಲ್ಪ ಮಾತ್ರವೇ ಹೊರತು ಅವರು (ತಮ್ಮ ನಮಾಝ್ ಗಳಲ್ಲಿ) ಅಲ್ಲಾಹ್ ನ ಸ್ಮರಣೆ ಮಾಡುವುದಿಲ್ಲ. ಸಂಪೂರ್ಣವಾಗಿ ಅತ್ತ (ಧಿಕ್ಕಾರಿಗಳ) ಗುಂಪಿನಲ್ಲೂ ಇರದೆ, ಇತ್ತ (ವಿಶ್ವಾಸಿ ಮುಸ್ಲಿಮರ) ಗುಂಪಿನಲ್ಲೂ ಇರದೆ, ಅವರ ಮತ್ತು ಇವರ ನಡುವೆ (ಕಪಟಿಗಳು) ಹೊಯ್ದಾಡುತ್ತಿದ್ದಾರೆ. [ಅವರೆಸಗಿದ ದುಷ್ಕೃತ್ಯಗಳ ಪರಿಣಾಮ ಅಲ್ಲಾಹ್ ನೇ ಅವರನ್ನು ದಾರಿಗೆಡುವಂತೆ ಮಾಡಿರುವನು]; ಇನ್ನು ಯಾರನ್ನು ಅಲ್ಲಾಹ್ ನು ದಾರಿಗೆಡಿಸುವನೋ [ಓ ಪೈಗಂಬರರೇ,] ನೀವೆಂದೂ ಆತನಿಗೆ ಸರಿದಾರಿಯನ್ನು ಕಾಣಲಾರಿರಿ. {141-143}

ಓ ವಿಶ್ವಾಸಿಗಳೇ, (ಮುಸ್ಲಿಮರಾದ) ವಿಶ್ವಾಸಿಗಳ ಬಳಗವನ್ನು ಬಿಟ್ಟು (ಪೈಗಂಬರರನ್ನು) ನಿರಾಕರಿಸಿದವರನ್ನು ನೀವು ನಿಮ್ಮ ಹಿತರಕ್ಷಕರಾಗಿ ಸ್ವೀಕರಿಸಬೇಡಿರಿ. ಅಲ್ಲಾಹ್ ನಿಗೆ ನಿಮ್ಮ ವಿರುದ್ಧ ಪ್ರಬಲವಾದ ಪುರಾವೆಯೊಂದನ್ನು ಸ್ವತಃ ನೀವೇ ಮಾಡಿಕೊಡಲು ಇಚ್ಛಿಸಿರುವಿರೇನು!? (ಮುಸ್ಲಿಮರ ಸೋಗು ಹಾಕುವ) ಆ ಕಪಟಿಗಳು ಸಂಶಯ ರಹಿತವಾಗಿ ನರಕದ ಅತ್ಯಂತ ಕೆಳಗಿನ ಸ್ತರಕ್ಕೆ (ಎಸೆಯಲ್ಪಡುವರು). ಆಗ ಅವರಿಗಾಗಿ ನೀವು ಯಾವೊಬ್ಬ ಸಹಾಯಕನನ್ನೂ ಕಾಣಲಾರಿರಿ. {144-145}

ಆದರೆ [ಅವರ ಪೈಕಿ] ಪಶ್ಚಾತ್ತಾಪ ಪಟ್ಟುಕೊಂಡು ಮರಳುವವರು, ತಮ್ಮ ನಿಲುವನ್ನು ತಿದ್ದಿ ಸರಿಪಡಿಸಿಕೊಳ್ಳುವವರು, ಅಲ್ಲಾಹ್ ನ (ನಿರ್ದೇಶನಗಳನ್ನು) ಭದ್ರವಾಗಿ ಹಿಡಿದುಕೊಳ್ಳುವವರು, ಜೊತೆಗೆ ತಮ್ಮ ಧರ್ಮವನ್ನು ಸತ್ಯನಿಷ್ಠೆಯೊಂದಿಗೆ ಅಲ್ಲಾಹ್ ನಿಗೆ ಮಾತ್ರ ಮೀಸಲಾಗಿಸುವವರ ಹೊರತು. ಅಂಥವರನ್ನು ವಿಶ್ವಾಸಿಗಳ ಜೊತೆ ಪರಿಗಣಿಸಲಾಗುವುದು; ಮತ್ತು ಅಲ್ಲಾಹ್ ನು ಶೀಘ್ರವೇ ವಿಶ್ವಾಸಿಗಳಿಗೆ ಮಹತ್ತರವಾದ ಪ್ರತಿಫಲ ನೀಡಲಿರುವನು. ನೀವು ಕೃತಜ್ಞತೆ ಸಲ್ಲಿಸುವವರೂ ನಿಜಾರ್ಥದಲ್ಲಿ ವಿಶ್ವಾಸಿಗಳೂ ಆಗಿರುತ್ತಿದ್ದರೆ ನಿಮಗೆ ಶಿಕ್ಷೆ ನೀಡಿ ಅಲ್ಲಾಹ್ ನಿಗೆ ಏನಾಗಬೇಕಿದೆ?! ಅಲ್ಲಾಹ್ ನಾದರೋ (ಓ ಜನರೇ, ನಿಮ್ಮೆಲ್ಲ ಒಳಿತನ್ನು) ಶ್ಲಾಘಿಸುವವನೂ (ನಿಮ್ಮ ಅಂತರಂಗ-ಬಹಿರಂಗವನ್ನು) ಚೆನ್ನಾಗಿ ಬಲ್ಲವನೂ ಆಗಿರುವನು. {146-147}

✽6✽ [ವಿಶ್ವಾಸಿಗಳೇ, ಜನರ ಬಗ್ಗೆ] ಅನುಚಿತ ಮಾತನ್ನು ಗಟ್ಟಿಯಾಗಿ ಬಹಿರಂಗವಾಗಿ ಆಡಿಕೊಳ್ಳುವುದನ್ನು ಅಲ್ಲಾಹ್ ನು ಇಷ್ಟಪಡುವುದಿಲ್ಲ – ಆದರೆ ಅನ್ಯಾಯಕ್ಕೊಳಗಾದವನ ಹೊರತು! ಅಲ್ಲಾಹ್ ನು (ನೀವಾಡುವ) ಎಲ್ಲವನ್ನು ಕೇಳಿಸಿಕೊಳ್ಳುವವನೂ ಎಲ್ಲವನ್ನು ಬಲ್ಲವನೂ ಆಗಿರುವನು. ಆದರೆ ನೀವು (ಇತರರ) ಒಳಿತನ್ನು ಜಾಹೀರು ಮಾಡಿದರೆ ಅಥವಾ ಅದನ್ನು ಗುಟ್ಟಾಗಿರಿಸಿದರೆ; ಅಥವಾ ನೀವು (ಜನರ) ಒಂದು ತಪ್ಪನ್ನು ಕ್ಷಮಿಸುವಂತಾದರೆ ಅಲ್ಲಾಹ್ ನು ಬಹಳವಾಗಿ ಕ್ಷಮಿಸುವವನೂ ಶಕ್ತಿಶಾಲಿಯೂ ಆಗಿರುವನು (ಎಂಬುದು ಮರೆಯದಿರಿ)! {148-149}

ನಿಜವಾಗಿ ಅಲ್ಲಾಹ್ ಮತ್ತು ಅವನ ದೂತರುಗಳ ಕುರಿತು ಧಿಕ್ಕಾರದ ನಿಲುವು ತಾಳಿರುವವರು ಅಲ್ಲಾಹ್ ಮತ್ತು ಅವನ ದೂತರುಗಳ ನಡುವೆ ಅಂತರ ಕಲ್ಪಿಸ ಬಯಸುತ್ತಾರೆ; ಹಾಗೂ ನಾವು (ದೂತರುಗಳಲ್ಲಿ) ಕೆಲವರನ್ನು ಒಪ್ಪುತ್ತೇವೆ ಮತ್ತು ಇನ್ನುಳಿದ ಕೆಲವರನ್ನು ನಿರಾಕರಿಸುತ್ತೇವೆ ಎಂದು ಘೋಷಿಸುತ್ತಾರೆ. ಅವರು [ನಮ್ಮ ಪೈಗಂಬರರು ತೋರಿಸದ ದಾರಿಗೆ ಬದಲು] ಅವುಗಳ ನಡುವಿನ ದಾರಿಯೊಂದನ್ನು ಕಂಡುಕೊಳ್ಳ ಬಯಸುತ್ತಾರೆ. ಆ ಜನರೇ ಆಗಿರುವರು ಅಪ್ಪಟವಾದ ಧರ್ಮಧಿಕ್ಕಾರಿಗಳು. ಅಂತಹ ಧಿಕ್ಕಾರಿಗಳಿಗಾಗಿ ನಾವು ಅವಮಾನಗೊಳಿಸುವಂತಹ ಶಿಕ್ಷೆಯನ್ನು ತಯಾರುಗೊಳಿಸಿ ಇಟ್ಟಿದ್ದೇವೆ. (ಅದಕ್ಕೆ ತದ್ವಿರುದ್ಧವಾಗಿ) ಅಲ್ಲಾಹ್ ನನ್ನು ಮತ್ತು ಅವನ ಸಕಲ ದೂತರುಗಳನ್ನು ಒಪ್ಪಿಕೊಂಡವರು ಮತ್ತು ದೂತರುಗಳಲ್ಲಿ ಯಾರೊಂದಿಗೂ ತಾರತಮ್ಯ ಮಾಡದವರಿಗೆ ಅಲ್ಲಾಹ್ ನು ಅವರ ಸಂಭಾವನೆಯನ್ನು ಶೀಘ್ರದಲ್ಲೇ ನೀಡಲಿರುವನು. ಅಲ್ಲಾಹ್ ನು ಹೆಚ್ಚು ಕ್ಷಮಾಶೀಲನೂ ನಿರಂತರ ಕರುಣೆ ತೋರುವವನೂ ಆಗಿರುವನು. {150-152}

[ಪೈಗಂಬರರೇ, ಈ ಕುರ್‌ಆನ್ ಗೆ ಬದಲಾಗಿ] ಲಿಖಿತಗೊಳಿಸಿದ ಧರ್ಮಸಂಹಿತೆಯೊಂದನ್ನು ನೇರವಾಗಿ ಆಕಾಶದಿಂದಲೇ ಅವರ ಮೇಲೆ ಇಳಿಯುವಂತೆ ನೀವು ಮಾಡಬೇಕೆಂದು ಗ್ರಂಥದ ಜನರಾದ (ಈ ಯಹೂದ್ಯರು) ನಿಮ್ಮೊಂದಿಗೆ ಈಗ ಕೇಳುತ್ತಿರುವರೆಂದಾದರೆ, (ಹಿಂದೆ) ಪ್ರವಾದಿ ಮೂಸಾ ರೊಂದಿಗೆ ಅದಕ್ಕಿಂತಲೂ ಹೆಚ್ಚು ಘೋರವಾದುದನ್ನು ಅವರು ಅಪೇಕ್ಷಿಸಿದ್ದರು! ಅಂದರೆ ಅಲ್ಲಾಹ್ ನನ್ನೇ ಪ್ರತ್ಯಕ್ಷವಾಗಿ ನಮಗೆ ತೋರಿಸಿಕೊಡಿ ಎಂದು [ಇವರ ಪೂರ್ವಜರು ಅಂದು ಮೂಸಾ ರೊಂದಿಗೆ] ಅಪೇಕ್ಷಿಸಿದ್ದರು! ಅವರ ಅಂತಹ ಉದ್ಧಟತನಕ್ಕಾಗಿ ಆಗಲೇ ಬರಸಿಡಿಲು ಅವರನ್ನು ಬಲಿತೆಗೆದುಕೊಂಡಿತ್ತು! ತರುವಾಯ [ಅಲ್ಲಾಹ್ ನ ಏಕತ್ವಕ್ಕೆ ಸಂಬಂಧಿಸಿದಂತೆ] ಅತ್ಯಂತ ಸ್ಪಷ್ಟವಾದ ಪುರಾವೆಗಳು ತಮ್ಮಲ್ಲಿಗೆ ಬಂದ ಬಳಿಕವೂ (ಪೂಜಿಸಿಕೊಳ್ಳಲು) ಅವರು ಕರುವೊಂದನ್ನು ಗೊತ್ತುಮಾಡಿಕೊಂಡರು! ನಾವು ಅದನ್ನೂ ಸಹ ಕ್ಷಮಿಸಿ ಬಿಟ್ಟೆವು! ನಂತರ ಮೂಸಾರಿಗೆ ನಾವು (ಇಸ್ರಾಈಲ್ ಜನರ ಮೇಲೆ) ಅಧಿಕಾರದ ಪ್ರಾಬಲ್ಯ ಒದಗಿಸಿದೆವು. {153}

[ಯಹೂದ್ಯರು ತೋರಾ ದ ನಿಯಮಗಳನ್ನು ಪುನಃ ಕಡೆಗಣಿಸಿದಾಗ] ತೂರ್ ಪರ್ವತವನ್ನು ನಾವು ಅವರ ಮೇಲಕ್ಕೆ ಎತ್ತಿ, ಅವರಿಂದ ಒಂದು ಸದೃಢ ಕರಾರನ್ನು ಪಡೆದೆವು. ನೀವು [ದರ್ಪ ತೋರದೆ ವಿನಮ್ರತೆಯಿಂದ] ಬಾಗಿಕೊಂಡು ಪಟ್ಟಣದ ಹೆಬ್ಬಾಗಿಲನ್ನು ಪ್ರವೇಶಿಸಿಕೊಳ್ಳಿರಿ ಎಂದು ನಾವು ಅವರಿಗೆ ಆದೇಶಿಸಿದ್ದೆವು. ಶನಿವಾರದ [ಅರ್ಥಾತ್ ಸಬ್ಬತ್ ನ ಧಾರ್ಮಿಕ] ನಿಯಮಗಳ ಉಲ್ಲಂಘನೆ ಮಾಡಬಾರದೆಂದೂ ನಾವು ಅವರಿಗೆ ಆದೇಶ ನೀಡಿದ್ದೆವು. ಹಾಗೆ ನಾವು ಅವರಿಂದ ಅತಿ ಗಂಭೀರವಾದ ಒಂದು ಕರಾರನ್ನು ಪಡೆದೆವು! ತರುವಾಯ (ಅಂತಹ ಸಕಲ) ಕರಾರುಗಳನ್ನು ಅವರು ಮುರಿಯುತ್ತಿದ್ದ ಕಾರಣಕ್ಕಾಗಿ, ಮತ್ತು ಅಲ್ಲಾಹ್ ನ ಜ್ವಲಂತ ನಿದರ್ಶನಗಳೊಂದಿಗೆ ಧಿಕ್ಕಾರದ ನಿಲುವು ತೋರಿದುದಕ್ಕಾಗಿ, ಹಾಗೂ ಪ್ರವಾದಿಗಳನ್ನು ಅವರು ಅನ್ಯಾಯವಾಗಿ ವಧಿಸುತ್ತಿದ್ದ ಕಾರಣಕ್ಕಾಗಿ (ಅವರು ಶಪಿಸಲ್ಪಟ್ಟರು)! [ಪ್ರವಾದಿಗಳ ಉಪದೇಶವನ್ನು ಸ್ವೀಕರಿಸದೆ ಇರಲು] ನಮ್ಮದು ಕವಚ ಹೊದಿಸಲ್ಪಟ್ಟ ಹೃದಯಗಳು ಎಂದಾಗಿತ್ತು ಅವರ (ಉದ್ಧಟತನದ) ಹೇಳಿಕೆ! ಅಲ್ಲ, ಅವರ (ನಿರಂತರ) ಧಿಕ್ಕಾರದ ಕಾರಣ ಅಲ್ಲಾಹ್ ನು ಅವರ ಹೃದಯಗಳಿಗೆ ಮುದ್ರೆಯೊತ್ತಿ ಬಿಟ್ಟನಷ್ಟೆ! ಅಕೇವಲ ಕೆಲವರ ಹೊರತು (ಅವರ ಪೈಕಿ ಹೆಚ್ಚಿನವರು) ವಿಶ್ವಾಸಿಗಳಾಗುವುದಿಲ್ಲ. {154-155}

[ಅಷ್ಟೇ ಅಲ್ಲ! ಶಾಪಕ್ಕೊಳಗಾದುದು] ಅವರು ಧಿಕ್ಕಾರದ ದಾರ್ಷ್ಟ್ಯ ತೋರಿದ ಕಾರಣಕ್ಕಾಗಿ, ಮರ್‍ಯಮ್ [ಅಂದರೆ ಪ್ರವಾದಿ ಏಸು ಕ್ರಿಸ್ತರ ಮಾತೆ – ಮೇರಿಯವರ] ಮೇಲೆ ಅವರು ಹೊರಿಸಿದ ಅತಿ ಘೋರ ಸ್ವರೂಪದ ಅಪವಾದದ ಕಾರಣಕ್ಕಾಗಿ! ಮರ್‍ಯಮ್ ಳ ಪುತ್ರ ಮಸೀಹನಾದ ಈಸಾ ನನ್ನು, ಹೌದು ಅಲ್ಲಾಹ್ ನ ದೂತನನ್ನು, ನಾವಿದೋ ವಧಿಸಿರುತ್ತೇವೆ ಎಂದು (ಅಣಕಿಸಿ) ಹೇಳಿದ ಕಾರಣಕ್ಕಾಗಿ! ವಾಸ್ತವವೇನೆಂದರೆ ಈಸಾ ರನ್ನು ಅವರು ಕೊಂದಿಲ್ಲ; ಅವರನ್ನು ಶಿಲುಬೆಗೆ ಏರಿಸಿಯೂ ಇಲ್ಲ! ಬದಲಾಗಿ (ಇಡೀ ಸನ್ನಿವೇಶವನ್ನು) ಅವರಿಗೆ ಹಾಗೆ ಕಾಣುವಂತೆ ಅನುರೂಪಗೊಳಿಸಲಾಗಿತ್ತು! ಆ ವಿಷಯವಾಗಿ ಬೇರೆ ಬೇರೆ ಅಭಿಪ್ರಾಯಗಳನ್ನು ಹೊಂದಿರುವವರು ನಿಜವಾಗಿ ಆ ಬಗ್ಗೆ ಸಂಶಯಗ್ರಸ್ತರಾಗಿರುವರು. ಊಹಾಪೂಹಗಳನ್ನು ಬೆಂಬತ್ತಿ ಹೋಗುವುದರ ಹೊರತು ಅವರ ಬಳಿ ಆ ಕುರಿತು ಯಾವ (ನಿಖರ) ಅರಿವೂ ಇಲ್ಲ. ಅವರು ಈಸಾ ರನ್ನು ವಧಿಸಿಲ್ಲ ಎಂಬುದು ಮಾತ್ರ ಖಚಿತ! ಅದಕ್ಕೆ ವ್ಯತಿರಿಕ್ತವಾಗಿ, ಅಲ್ಲಾಹ್ ನು [ತನ್ನ ವಾಗ್ದಾನದಂತೆ] ಅವರನ್ನು ತನ್ನತ್ತ ಎತ್ತಿ ಕೊಂಡನು! ಅಲ್ಲಾಹ್ ನು ಅತ್ಯಂತ ಪ್ರಬಲನೂ ಹೌದು; ವಿವೇಕಪೂರ್ಣನೂ ಹೌದು. {156-158}

[ಪೈಗಂಬರರೇ, ಅವರಿಗಾಗಿ ಬೇರೆಯೇ ಒಂದು ಧರ್ಮಸಂಹಿತೆಯನ್ನು ಆಕಾಶದಿಂದ ಇಳಿಸಿ ತರುವಂತೆ ನಿಮ್ಮನ್ನು ಒತ್ತಾಯಿಸುತ್ತಿರುವ, ಈ ಯಹೂದ್ಯರಾದ] ಗ್ರಂಥದವರ ಪೈಕಿ ಪ್ರತಿಯೊಬ್ಬನೂ ತನ್ನ ಮರಣಕ್ಕೆ ಮೊದಲು ಇದೇ (ಕುರ್‌ಆನ್) ಅನ್ನು ಒಪ್ಪಿಕೊಳ್ಳುದೆ ನಿರ್ವಾಹವಿಲ್ಲ. ಮತ್ತು ಪುನರುತ್ಥಾನದ ದಿನ ಅದು ಅವರ ಮೇಲೆ ಸಾಕ್ಷಿಯಾಗಲಿರುವುದು. {159}

ಯಹೂದಿ ಮತಸ್ಥರು ಎಸಗಿದ ಅಕ್ರಮದ ಕಾರಣಕ್ಕಾಗಿಯೇ (ಅದುವರೆಗೂ) ಧರ್ಮಬದ್ಧವಾಗಿದ್ದ ಶುದ್ಧವಾದ (ಹಲವು ರೀತಿಯ ಆಹಾರವನ್ನು) ನಾವು ಅವರ ಪಾಲಿಗೆ ನಿಷಿದ್ಧಗೊಳಿಸಿದೆವು. ಅಲ್ಲಾಹ್ ನ ಮಾರ್ಗದತ್ತ ಬಾರದಂತೆ ಅವರು ಜನರನ್ನು ಅತಿಯಾಗಿ ತಡೆಯುತ್ತಿದ್ದ ಕಾರಣಕ್ಕಾಗಿಯೂ [ಅದು ಶಿಕ್ಷೆಯಾಗಿತ್ತು]. ಮತ್ತು ಅವರು ಬಡ್ಡಿ ತಿನ್ನುತ್ತಿದ್ದ ಕಾರಣಕ್ಕಾಗಿ – ಯಥಾರ್ಥದಲ್ಲಿ ಅವರನ್ನು ಬಡ್ಡಿ ವ್ಯವಹಾರದಿಂದ ತಡೆಯಲಾಗಿತ್ತು. ಮತ್ತು ಜನರ ಸೊತ್ತನ್ನು ಅವರು ಅನ್ಯಾಯವಾಗಿ ಕಬಳಿಸಿ ತಿನ್ನುತ್ತಿದ್ದ ಕಾರಣಕ್ಕಾಗಿಯೂ! ಅವರ ಪೈಕಿ (ನಮ್ಮ ಆದೇಶಗಳನ್ನು) ನಿರಾಕರಿಸಿದವರಿಗೆ ನಾವು ನೋವುಭರಿತ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವೆವು. {160-161}

ಆದರೆ (ಓ ಪೈಗಂಬರರೇ), ಅವರ ಪೈಕಿ ಧಾರ್ಮಿಕ ಜ್ಞಾನದಲ್ಲಿ ಪಾರಂಗತರಾದವರು ಹಾಗೂ ಅವರಲ್ಲಿನ ಧರ್ಮವಿಶ್ವಾಸಿಗಳು ನಿಮಗೆ ಕಳುಹಿಸಿ ಕೊಡಲಾಗುತ್ತಿರುವ (ಅದೇ ಕುರ್‌ಆನ್) ನಲ್ಲಿಯೂ, ನಿಮ್ಮ ಆಗಮನಕ್ಕಿಂತ ಮುಂಚೆ ಇಳಿಸಿಕೊಡಲಾದ ಇತರ (ಧರ್ಮಸಂಹಿತೆಗಳಲ್ಲಿಯೂ) ನಂಬಿಕೆಯುಳ್ಳವರಾಗಿದ್ದಾರೆ; ನಮಾಝ್ ಪಾಲಿಸುವವರೂ ಝಕಾತ್ ಪಾವತಿಸುವವರೂ ಆಗಿದ್ದಾರೆ; ಅವರು ಅಲ್ಲಾಹ್ ನಲ್ಲಿ ಹಾಗೂ ಪುನರುತ್ಥಾನದ ದಿನದಲ್ಲಿ ದೃಢವಿಶ್ವಾಸ ಹೊಂದಿದವರಾಗಿದ್ದಾರೆ. ಅಂಥ (ವಿಶ್ವಾಸಿ) ಜನರಿಗೆ ನಾವಿದೋ ಮಹತ್ತರವಾದ ಪ್ರತಿಫಲ ನೀಡಲಿರುವೆವು. {162}

(ಓ ಪೈಗಂಬರರೇ), ನಾವು ನೂಹ್ ಮತ್ತು ಅವರ ನಂತರದ ಪ್ರವಾದಿಗಳತ್ತ ದಿವ್ಯಸಂದೇಶವನ್ನು [ಅರಬಿ: ವಹೀ] ಕಳಿಸಿದಂತೆಯೇ ನಿಮ್ಮತ್ತಲೂ ಈಗ ದಿವ್ಯಸಂದೇಶವನ್ನು ಕಳಿಸಿರುತ್ತೇವೆ! ಹಾಗೆಯೇ [ಪೂರ್ವ ಪ್ರವಾದಿಗಳಾದ] ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಕ್, ಯಅಕೂಬ್ ಮತ್ತು ಯಅಕೂಬ್ ರ ಸಂತತಿ; ಈಸಾ, ಅಯ್ಯೂಬ್, ಯೂನುಸ್, ಹಾರೂನ್ ಮತ್ತು ಸುಲೈಮಾನ್ ರ ಕಡೆಗೂ ನಾವು ದಿವ್ಯಸಂದೇಶ ಕಳಿಸಿದ್ದೆವು; ಹಾಗೂ (ನಿಮಗೀಗ ಕುರ್‌ಆನ್ ನೀಡಿದಂತೆ) ನಾವು ದಾವೂದ್ ರಿಗೆ ಝಬೂರ್ ಗ್ರಂಥವನ್ನು ನೀಡಿದ್ದೆವು! {163}

ನಿಮ್ಮೊಂದಿಗೆ ಅದಾಗಲೇ ಪ್ರಸ್ತಾಪಿಸಲಾದ (ಎಲ್ಲ) ದೂತರುಗಳಿಗೂ ಮತ್ತು ನಿಮ್ಮೊಂದಿಗೆ ಪ್ರಸ್ತಾಪಿಸದೆ ಇರುವ ಇತರ ದೂತರುಗಳಿಗೂ ಸಹ (ಅಂತಹ ದಿವ್ಯಸಂದೇಶವನ್ನು ಕಳಿಸಿರುವುದು ನಾವೇ). ಹಾಗೆಯೇ ಮೂಸಾ ರೊಂದಿಗೆ (ಮಧ್ಯವರ್ತಿಗಳಿಲ್ಲದೆ) ಅಲ್ಲಾಹ್ ನೇ ನೇರವಾಗಿ ಮಾತನಾಡಿರುವನು! {164}

ದೂತರುಗಳನ್ನು [ಸ್ವರ್ಗದ ಸುಖ ಮತ್ತು ನರಕದ ಯಾತನೆಗಳ ಕುರಿತಂತೆ] ಸಿಹಿಸುದ್ಧಿ ಮತ್ತು ಮುನ್ನೆಚ್ಚರಿಕೆ ನೀಡುವ ವಕ್ತಾರರಾಗಿ ಕಳುಹಿಸಲು ಕಾರಣವೇನೆಂದರೆ ಅಂತಹ ದೂತರುಗಳ ಆಗಮನದ ನಂತರ ಜನರ ಬಳಿ ಅಲ್ಲಾಹ್ ನು [ನೀಡಲಿರುವ ತೀರ್ಪಿಗೆ] ಎದುರಾಗಿ ಯಾವ ಪ್ರತಿವಾದವೂ ಉಳಿಯದಂತೆ ಮಾಡುವ ಸಲುವಾಗಿ! ಅಲ್ಲಾಹ್ ನಾದರೋ ಅತ್ಯಂತ ಪ್ರಬಲನೂ ವಿವೇಕಪೂರ್ಣನೂ ಆಗಿರುವನು. {165}

[ಇದೆಲ್ಲವನ್ನು ತಿಳಿದಿರುವ ಯಹೂದ್ಯರು ಬೇರೆಯೇ ಗ್ರಂಥದ ಬೇಡಿಕೆಯಿಟ್ಟಿದ್ದಾರೆ]. ಆದರೆ ಯಾವ ಕುರ್‌ಆನ್ ಅನ್ನು ಅಲ್ಲಾಹ್ ನು ನಿಮಗೆ ಕಳುಹಿಸಿರುವನೋ ಅದಕ್ಕೆ ಅವನೇ ಸ್ವತಃ ಸಾಕ್ಷ್ಯವಹಿಸುತ್ತಿರುವನು. ಅವನು ಅದನ್ನು ತನ್ನ ಸಂಪೂರ್ಣ ಅರಿವಿನೊಂದಿಗೆ ಇಳಿಸಿಕೊಟ್ಟಿರುವನು. ಸಾಲದಕ್ಕೆ ಮಲಕ್ ಗಳೂ ಸಹ ಅದಕ್ಕೆ ಸಾಕ್ಷ್ಯವಹಿಸುತ್ತಿದ್ದಾರೆ; ಆದರೆ ಅಲ್ಲಾಹ್ ನ ಸಾಕ್ಷ್ಯ ಮಾತ್ರವೇ ಸಾಕಾಗುವುದು. {166}

ಧಿಕ್ಕಾರದ ಧೋರಣೆಯನ್ನು ತನ್ನದಾಗಿಸಿಕೊಂಡು (ಇತರರನ್ನೂ) ಅಲ್ಲಾಹ್ ನ ಮಾರ್ಗದಿಂದ ತಡೆಯುವವರು ನಿಜಕ್ಕೂ ದಾರಿ ತಪ್ಪಿದ್ದು, ತಪ್ಪು ದಾರಿಯಲ್ಲಿ ಬಹಳ ದೂರ ಸಾಗಿರುವರು. ಖಂಡಿತವಾಗಿಯೂ, ಧಿಕ್ಕಾರದ ನಿಲುವು ತಾಳಿ [ಆ ಮೂಲಕ ಸ್ವತಹ ತಮ್ಮ ಮೇಲೆಯೇ] ಅನ್ಯಾಯವೆಸಗಿಕೊಂಡವರನ್ನು ಕ್ಷಮಿಸಬೇಕೆಂಬ ಹೊಣೆ ಅಲ್ಲಾಹ್ ನ ಮೇಲೆ ಇಲ್ಲ; ಹಾಗೆಯೇ ಅವರಿಗೆ ನೇರ ದಾರಿ ತೋರಿಸಬೇಕೆಂಬ ಹೊಣೆಯೂ – ನರಕದ ದಾರಿಯ ಹೊರತು; ಅದರಲ್ಲಿ ಅವರು ಎಂದೆಂದಿಗೂ ಬಿದ್ದುಕೊಂಡಿರುವರು. ಅಲ್ಲಾಹ್ ನಿಗಾದರೋ ಅದೊಂದು ಸುಲಭ ಕಾರ್ಯವೇ ಆಗಿದೆ. {167-169}

ಓ ಜನರೇ! ನಿಮ್ಮ ಒಡೆಯನ ಕಡೆಯಿಂದ ಈ ಪೈಗಂಬರರು ನಿಮ್ಮಲ್ಲಿಗೆ ಸತ್ಯವನ್ನು ತಂದಿರುವರು. ಆದ್ದರಿಂದ ನೀವು (ಅದನ್ನು) ಒಪ್ಪಿಕೊಳ್ಳಿ, ಅದುವೇ ನಿಮಗೆ ಒಳ್ಳೆಯದು! ಇನ್ನು ನೀವು ಕಡೆಗಣಿಸಿದರೆ [ಅಲ್ಲಾಹ್ ನಿಗೆ ಯಾವ ನಷ್ಟವೂ ಸಂಭವಿಸದು. ಏಕೆಂದರೆ] ಭೂಮಿ ಮತ್ತು ಆಕಾಶಗಳಲ್ಲಿ ಏನೆಲ್ಲ ಇವೆಯೋ ಅವೆಲ್ಲ ನಿಜವಾಗಿ ಅಲ್ಲಾಹ್ ನಿಗೇ ಸೇರಿರುತ್ತದೆ. ಅಲ್ಲಾಹ್ ನು ಮಹಾ ಜ್ಞಾನಿಯೂ ಅತ್ಯಂತ ವಿವೇಕಶಾಲಿಯೂ ಆಗಿರುತ್ತಾನೆ. {170}

[ಇಂಜೀಲ್ ಅನ್ನು ಹೊಂದಿರುವ] ಓ ಗ್ರಂಥದವರೇ! ನೀವು (ವಿಶ್ವಾಸದಲ್ಲಿ) ನಿಮ್ಮ ಧರ್ಮದ ಮಿತಿ ಮೀರಿ ಹೋಗದಿರಿ. ಸತ್ಯವನ್ನಲ್ಲದೆ ಬೇರೇನನ್ನೂ ಅಲ್ಲಾಹ್ ನ ಮೇಲೆ (ಕಟ್ಟಿ) ಹೇಳದಿರಿ. ನಿಸ್ಸಂಶಯವಾಗಿ ಮರ್‍ಯಮ್ ರ ಪುತ್ರ, ಅಂದರೆ ಮಸೀಹನಾದ ಏಸು/ಈಸಾ ರು ಅಲ್ಲಾಹ್ ನ ದೂತನಾಗಿದ್ದರು; ಮರ್‍ಯಮ್ ರತ್ತ ಪೂರೈಸಲಾದ ಅಲ್ಲಾಹ್ ನ ವಚನವೂ ಅಲ್ಲಾಹ್ ನ ವತಿಯಿಂದ [ಮರ್‍ಯಮ್ ರ ಗರ್ಭಾಶಯದಲ್ಲಿ ಇರಿಸಲಾದ] ಚೇತನವೂ ಮಾತ್ರವೇ ಆಗಿದ್ದರು. ಆದ್ದರಿಂದ ಅಲ್ಲಾಹ್ ನನ್ನು ಮತ್ತವನ ದೂತರುಗಳನ್ನು ಒಪ್ಪಿಕೊಳ್ಳಿ. ಎಂದೂ (ದೇವರು) ಮೂವರು ಎಂದು ಹೇಳಿಕೊಳ್ಳದಿರಿ. (ಹಾಗೆ ಹೇಳುವುದನ್ನು) ನೀವು ತೊರೆದರೆ ನಿಮಗೇ ಒಳ್ಳೆಯದು! ಅಲ್ಲಾಹ್ ನಂತೂ ಏಕಮೇವನಾದ ದೇವನು. ಅವನಿಗೊಬ್ಬ ಪುತ್ರನು ಇರಬಹುದಾದ ವಿಷಯದಿಂದ ಅವನೆಷ್ಟು ಪಾವನನು! ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಏನೆಲ್ಲ ಇವೆಯೋ ಅವೆಲ್ಲವೂ ಅವನದೇ [ಆಗಿರುವಾಗ ಅವನಿಗೆ ಪುತ್ರನ ಅಗತ್ಯವಿಲ್ಲ]. (ಅವುಗಳ) ಕಾರ್ಯ ನಿರ್ವಹಣೆಗೆ ಅಲ್ಲಾಹ್ ನು (ಒಬ್ಬನೇ) ಸಾಕು! {171}

ಅಲ್ಲಾಹ್ ನ ಉಪಾಸಕನಾಗಿರಲು ಹಿಂಜರಿಯುವಂಥ ದಾರ್ಷ್ಟ್ಯ ಮಸೀಹರು ಎಂದೂ ತೋರಿಯೇ ಇಲ್ಲ; ಹಾಗೆಯೇ (ಅಲ್ಲಾಹ್ ನ) ಸಾಮೀಪ್ಯ ಪಡೆದಿರುವ ಮಲಕ್ ಗಳೂ ಕೂಡ! ಯಾರಾದರೂ ದಾರ್ಷ್ಟ್ಯ ತೋರಿ ಅಲ್ಲಾಹ್ ನ [ದೇವತ್ವವನ್ನು ಸ್ವೀಕರಿಸದೆ ಅವನ] ಆರಾಧನೆಯಿಂದ ಹಿಂಜರಿದರೆ ಹಾಗೂ ಅಹಂಕಾರ ಮೆರೆದರೆ ಖಂಡಿತವಾಗಿಯೂ ಅವನು ಅಂಥವರನ್ನು ಸಾರಾಸಗಟಾಗಿ ತನ್ನ ಬಳಿ ಒಟ್ಟುಸೇರಿಸಲಿರುವನು! [ಅದಕ್ಕೆ ವ್ಯತಿರಿಕ್ತವಾಗಿ] ಯಾರು ವಿಶ್ವಾಸಿಗಳಾಗಿದ್ದುಕೊಂಡು ಸತ್ಕರ್ಮಗಳಲ್ಲಿ ತೊಡಗಿರುತ್ತಾರೋ ಅಂಥವರಿಗೆ ಅವರ ಪ್ರತಿಫಲವನ್ನು ಸಂಪೂರ್ಣವಾಗಿ ಅವನು ನೀಡುವನು; ಮಾತ್ರವಲ್ಲ ತನ್ನ ಅನುಗ್ರಹದಿಂದ ಮತ್ತಷ್ಟು ಹೆಚ್ಚು ದಯಪಾಲಿಸುವನು. ದುರಭಿಮಾನ ಕಾರಣ [ಅಲ್ಲಾಹ್ ನನ್ನು ಒಪ್ಪಿಕೊಳ್ಳುವುದರಿಂದ] ಯಾರು ಹಿಮ್ಮೆಟ್ಟುವರೋ ಮತ್ತು ಅಹಂಕಾರ ಮೆರೆಯುವರೋ ಅವರನ್ನು ಅವನು ನೋವುಭರಿತ ಶಿಕ್ಷೆಗೆ ಗುರಿಪಡಿಸುವನು; (ಆಗ) ಅಲ್ಲಾಹ್ ನಿಗೆ ಬದಲು ಅವರಿಗೆ ಯಾವ ಹಿತೈಶಿಯಾಗಲಿ ಸಹಾಯಕನಾಗಲಿ ಇರಲಾರನು {172-173 }

ಓ ಮನುಷ್ಯರೇ, ಪ್ರಮಾಣೀಕರಿಸುವ ಪುರಾವೆಯೊಂದು ನಿಮ್ಮೊಡೆಯನ ಕಡೆಯಿಂದ ನಿಮ್ಮ ಬಳಿಗೆ ಇದೋ ಬಂದಿರುತ್ತದೆ. ಜೊತೆಗೇ [ಅಜ್ಞಾನದ ಅಂಧಕಾರದಿಂದ ಹೊರಬರಲು ಅಗತ್ಯವಾದ] ಒಂದು ಸುಸ್ಪಷ್ಟ ಬೆಳಕನ್ನೂ ನಿಮ್ಮತ್ತ ನಾವು ಇಳಿಸಿಕೊಟ್ಟಿರುತ್ತೇವೆ. ಹಾಗಿರುವಾಗ ಯಾರು ಅಲ್ಲಾಹ್ ನ (ದೇವತ್ವ) ದಲ್ಲಿ ಬಲವಾದ ನಂಬಿಕೆಯಿಟ್ಟು, ಅವನ (ಆದೇಶಗಳನ್ನು) ಭದ್ರವಾಗಿ ಹಿಡಿದುಕೊಳ್ಳುವರೋ ಅಂಥವರನ್ನು ಅವನು ಶೀಘ್ರವೇ ತನ್ನ ಕಾರುಣ್ಯ ಮತ್ತು ಕೃಪೆಯ (ಆಸರೆಯೊಳಕ್ಕೆ) ಪ್ರವೇಶಿಸಿಕೊಳ್ಳುವನು; ಮತ್ತು ತನ್ನೆಡೆಗಿರುವ ನೇರ ಮಾರ್ಗದಲ್ಲಿ ಮುನ್ನಡೆಸುವನು. {174-175}

[ಓ ಪೈಗಂಬರರೇ, ಕಲಾಲಃ ವ್ಯಕ್ತಿಗಳ ವಾರೀಸು ನಿಯಮದ ಕುರಿತು] ಅವರು ನಿಮ್ಮೊಂದಿಗೆ ಧಾರ್ಮಿಕ ವಿಧಿ ಏನೆಂದು ವಿಚಾರಿಸುತ್ತಿದ್ದಾರೆ. ಅಲ್ಲಾಹ್ ನು ನಿಮಗೆ ಕಲಾಲಃ [ಅರ್ಥಾತ್ ಮಾತಾಪಿತರಾಗಲಿ ಸಂತಾನವಾಗಲಿ ವಾರೀಸುದಾರರಾಗಿ ಹೊಂದಿರದ ಪುರುಷ ಅಥವಾ ಸ್ತ್ರೀಯ]ರ ಕುರಿತಂತೆ ಧಾರ್ಮಿಕ ವಿಧಿ ತಿಳಿಸಿದ್ದಾನೆ ಎಂದು ಹೇಳಿರಿ: ಸಂತಾನವಿಲ್ಲದ ಒಬ್ಬ 'ಕಲಾಲಃ ಪುರುಷನು' ಮೃತನಾದರೆ ಆತನು ಒಬ್ಬಳು ಸಹೋದರಿಯನ್ನು ಹೊಂದಿದ್ದರೆ ಅವಳಿಗೆ ಆತನು ಬಿಟ್ಟಗಲಿದ ಸೊತ್ತಿನಲ್ಲಿ ಅರ್ಧ ಭಾಗ ಸಿಗುವುದು. ಇನ್ನು ಅವಳು ('ಕಲಾಲಃ ಸ್ತ್ರೀ' ಯಾಗಿದ್ದು) ಸಂತಾನರಹಿತಳಾಗಿದ್ದರೆ ಅವಳು ಬಿಟ್ಟಗಲಿದ ಒಟ್ಟು ಸೊತ್ತಿಗೆ ಅವನು ಹಕ್ಕುದಾರನಾಗುವನು. ಒಂದು ವೇಳೆ ಆತನಿಗೆ ಇಬ್ಬರು [ಅಥವಾ ಹೆಚ್ಚು] ಸಹೋದರಿಯರು ಇದ್ದರೆ ಆತನು ಅಗಲಿದ ಸೊತ್ತಿನ ಮೂರನೆ ಎರಡಂಶಕ್ಕೆ ಅವರು ಹಕ್ಕುದಾರರಾಗುವರು. ಇನ್ನು ಆತನಿಗೆ ಸಹೋದರರೂ ಸಹೋದರಿಯರೂ ಇರುವ ಪಕ್ಷದಲ್ಲಿ ಇಬ್ಬರು ಸಹೋದರಿಯರಿಗೆ ಸಿಗುವಷ್ಟು (ಪ್ರತಿ) ಸಹೋದರನಿಗೆ ಸಿಗುವುದು. ನೀವು ಗೊಂದಲಕ್ಕೊಳಗಾಗದಿರಲು ಅಲ್ಲಾಹ್ ನು ನಿಮಗೆ [ಶರೀಅತ್ ನಿಯಮಗಳನ್ನು] ಹೀಗೆ ಸವಿವರ ತಿಳಿಸುತ್ತಾನೆ. ಅಲ್ಲಾಹ್ ನಾದರೋ ಎಲ್ಲಾ ವಿಷಯಗಳನ್ನು ಚೆನ್ನಾಗಿ ಬಲ್ಲವನಗಿರುತ್ತಾನೆ. {176}
------------ 



ಅನುವಾದಿತ ಸೂರಃ ಗಳು:


Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...