ಅಲ್ ಅಂಬಿಯಾ | ترجمة سورة الأنبياء

    تـرجمـة سورة الأنبياء من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅಲ್ ಅಂಬಿಯಾ | ಪವಿತ್ರ ಕುರ್‌ಆನ್ ನ 21 ನೆಯ ಸೂರಃ | ಇದರಲ್ಲಿ ಒಟ್ಟು 112 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

اقْتَرَبَ لِلنَّاسِ حِسَابُهُمْ وَهُمْ فِي غَفْلَةٍ مُعْرِضُونَ

✽17✽ ಈ ಜನರಿಗೆ (ಅರ್ಥಾತ್ ಈ ಕುರೈಷರಿಗೆ) ಅವರ ಲೆಕ್ಕ ಚುಕ್ತಗೊಳಿಸುವ ಸಮಯ ಸಮೀಪಿಸಿಯಾಗಿದೆ! ಆದರೆ ಅವರು ಅದರ ಪರಿವೆಯಿಲ್ಲದೆ ಮುಖ ತಿರುಗಿಸಿ ಕೊಂಡಿದ್ದಾರೆ. {1}

مَا يَأْتِيهِمْ مِنْ ذِكْرٍ مِنْ رَبِّهِمْ مُحْدَثٍ إِلَّا اسْتَمَعُوهُ وَهُمْ يَلْعَبُونَ

ಅವರ ಪರಿಪಾಲಕನಾದ (ಅಲ್ಲಾಹ್ ನ) ವತಿಯಿಂದ ಹೊಸ ಉಪದೇಶಗಳು ಅವರ ಬಳಿಗೆ ಬಂದಾಗ ಹುಡುಗಾಟಿಕೆಯಿಂದಲೇ ಅವರು ಅದನ್ನು ಆಲಿಸುತ್ತಾರೆ. {2}

لَاهِيَةً قُلُوبُهُمْ ۗ وَأَسَرُّوا النَّجْوَى الَّذِينَ ظَلَمُوا هَلْ هَٰذَا إِلَّا بَشَرٌ مِثْلُكُمْ ۖ أَفَتَأْتُونَ السِّحْرَ وَأَنْتُمْ تُبْصِرُونَ

ಅವರ ಹೃದಯಗಳಿಗೆ ಅಸಡ್ಡೆತನದ ರೋಗ ಬಾಧಿಸಿದೆ. ಅವರಲ್ಲಿನ ದುಷ್ಟರು ಬಹಳ ರಹಸ್ಯವಾಗಿ ತಮ್ಮೊಳಗೇ ಪಿಸುಮಾತಿನಲ್ಲಿ ಸಮಾಲೋಚಿಸಿ (ಪೈಗಂಬರರತ್ತ ಬೊಟ್ಟು ಮಾಡುತ್ತಾ) ಈತ ನಿಮ್ಮಂತಿರುವ ಕೇವಲ ಒಬ್ಬ ಮನುಷ್ಯನಲ್ಲವೇ? ಅದನ್ನು ಕಣ್ಣಾರೆ ಕಂಡೂ ಈತನ ಮೋಡಿಗೆ ನೀವೇಕೆ ಬಲಿಯಾಗುತ್ತಿರುವಿರಿ ಎಂದು ಜನರನ್ನು ಕೆಣಕುತ್ತಾರೆ. {3}

قَالَ رَبِّي يَعْلَمُ الْقَوْلَ فِي السَّمَاءِ وَالْأَرْضِ ۖ وَهُوَ السَّمِيعُ الْعَلِيمُ

ಅದಕ್ಕೆ ಪೈಗಂಬರು ಪ್ರತಿಕ್ರಯಿಸಿದರು. [ಏನದು ರಹಸ್ಯವಾದ ಆ ಪಿಸುಮಾತಿನ ಮಂತ್ರಾಲೋಚನೆ?] ನನ್ನ ಕರ್ತಾರನು ಈ ಭೂಮಿ ಮತ್ತು ಆಕಾಶಗಳಲ್ಲಿ ಆಡಲ್ಪಡುವ ಪ್ರತಿಯೊಂದು ಮಾತನ್ನೂ ಚೆನ್ನಾಗಿ ಅರಿಯುತ್ತಾನೆ. ಏಕೆಂದರೆ ಅವನು ಸಕಲವನ್ನೂ ಕೇಳಿಸಿಕೊಳ್ಳುವವನು ಹಾಗೂ ಅಗಾಧ ಪ್ರಾಜ್ಞನೂ ಆಗಿರುವವನು! {4}

بَلْ قَالُوا أَضْغَاثُ أَحْلَامٍ بَلِ افْتَرَاهُ بَلْ هُوَ شَاعِرٌ فَلْيَأْتِنَا بِآيَةٍ كَمَا أُرْسِلَ الْأَوَّلُونَ

(ಈ ಕುರ್‌ಆನ್) ಗಲಿಬಿಲಿ ಕನಸುಗಳ ಸಮೂಹ ಎಂದು (ಆ ದುಷ್ಟರು) ಹೇಳುತ್ತಾರೆ. ಅಲ್ಲ, ಕೆಲವರು ಇದನ್ನು ಈತನೇ ರಚಿಸಿರುವನು ಎನ್ನುತ್ತಾರೆ. ಅದೂ ಅಲ್ಲ, ಇನ್ನು ಕೆಲವರು ಈತನೂಬ್ಬ ಕವಿ ಎಂದು ಆರೋಪಿಸುತ್ತಾರೆ. ಅದಲ್ಲದಿದ್ದರೆ ಹಿಂದಿನ ದೂತರುಗಳಂತೆ ಈತನೂ ಒಂದು ಪವಾಡವನ್ನು ತಂದು ನಮಗೆ ತೋರಿಸಲಿ ಎಂದು ಮತ್ತೆ ಕೆಲವರು ವಾದಿಸುತ್ತಾರೆ. {5}

مَا آمَنَتْ قَبْلَهُمْ مِنْ قَرْيَةٍ أَهْلَكْنَاهَا ۖ أَفَهُمْ يُؤْمِنُونَ

ಇವರಿಗಿಂತ ಮುಂಚೆ ಸಹ ನಾವು ನಾಶಪಡಿಸಿದ ಯಾವೊಂದು ನಾಡಿನವರೂ (ಅಂತಹ ಪವಾಡಗಳನ್ನು ಕಂಡೂ) ವಿಶ್ವಾಸಿಗಳಾಗಿರಲಿಲ್ಲ! ಹಾಗಿರುವಾಗ ಇವರು ವಿಶ್ವಾಸಿಗಳಾದಾರೇ!? {6}

وَمَا أَرْسَلْنَا قَبْلَكَ إِلَّا رِجَالًا نُوحِي إِلَيْهِمْ ۖ فَاسْأَلُوا أَهْلَ الذِّكْرِ إِنْ كُنْتُمْ لَا تَعْلَمُونَ

(ಇವರು ನಿಮ್ಮನ್ನು ನಮ್ಮಿಂತಿರುವ ಮನುಷ್ಯ ಎಂದು ಆರೋಪಿಸುತ್ತಿರುವರು). ಪೈಗಂಬರರೇ, ನಿಮಗಿಂತ ಮುಂಚೆಯೂ ನಾವು ದೂತರನ್ನಾಗಿಸಿ ವಹೀ (ಅಂದರೆ ದಿವ್ಯಸಂದೇಶ) ನೀಡಿ ಕಳುಹಿಸುತ್ತಿದ್ದುದು ಮನುಷ್ಯರನ್ನಲ್ಲದೆ ಬೇರಾರನ್ನೂ ಅಲ್ಲ! ಜನರೇ, ನಿಮಗೆ ಅಂತಹ ತಿಳುವಳಿಕೆ ಇಲ್ಲದಿದ್ದರೆ ಗ್ರಂಥ ಹೊಂದಿದ ಜನರೊಂದಿಗೆ ವಿಚಾರಿಸಿ ತಿಳಿದುಕೊಳ್ಳಿ. {7}

وَمَا جَعَلْنَاهُمْ جَسَدًا لَا يَأْكُلُونَ الطَّعَامَ وَمَا كَانُوا خَالِدِينَ

ಆಹಾರ ಸೇವನೆಯ ಅಗತ್ಯವಿಲ್ಲದಂತಹ ಒಂದು ಶರೀರವನ್ನು ನಾವು ದೂತರುಗಳಿಗೆ ನೀಡಿರಲಿಲ್ಲ. ಅವರು (ಭೂಮಿಯಲ್ಲಿ) ಅನಂತ ಕಾಲ ಬದುಕುವವರೂ ಆಗಿರಲಿಲ್ಲ. {8}

ثُمَّ صَدَقْنَاهُمُ الْوَعْدَ فَأَنْجَيْنَاهُمْ وَمَنْ نَشَاءُ وَأَهْلَكْنَا الْمُسْرِفِينَ

ನಂತರ, ನಾವು ಅವರಿಗೆ ಕೊಟ್ಟ ಎಲ್ಲಾ ಮಾತನ್ನು ನೆರವೇರಿಸಿದ್ದೇವೆ. ಅವರನ್ನೂ, ಮತ್ತು ನಾವು ರಕ್ಷಿಸಬೇಕೆಂದು ಬಯಸಿದ ಇತರರನ್ನೂ ರಕ್ಷಿಸಿದ್ದೇವೆ. ಮಾತ್ರವಲ್ಲ, ಎಲ್ಲೆ ಮೀರಿ ವರ್ತಿಸಿದವರನ್ನು ನಾಶ ಮಾಡಿದ್ದೇವೆ. {9}

لَقَدْ أَنْزَلْنَا إِلَيْكُمْ كِتَابًا فِيهِ ذِكْرُكُمْ ۖ أَفَلَا تَعْقِلُونَ

ಹೌದು, ಜನರೇ, ಇದೀಗ ನಿಮಗೂ ನಾವು ಒಂದು ಗ್ರಂಥವನ್ನು ಇಳಿಸಿ ಕೊಟ್ಟಿರುತ್ತೇವೆ ಮತ್ತು ಅದರಲ್ಲಿ ನಿಮ್ಮ ಪಾಲಿನ ಉಪದೇಶವನ್ನೂ ಇರಿಸಿದ್ದೇವೆ. ಇನ್ನಾದರೂ ನೀವು ಬುದ್ಧಿ ಉಪಯೋಗಿಸಬಾರದೇ? {10}

وَكَمْ قَصَمْنَا مِنْ قَرْيَةٍ كَانَتْ ظَالِمَةً وَأَنْشَأْنَا بَعْدَهَا قَوْمًا آخَرِينَ

ಅನ್ಯಾಯವೆಸಗುತ್ತಿದ್ದ ಅದೆಷ್ಟು ನಾಡುಗಳನ್ನು ನಾವು ಧ್ವಂಸಗೊಳಿಸಿ ಬಿಟ್ಟೆವು! ತದನಂತರ ಬೇರೆಯೇ ಜನಸಮೂಹಗಳನ್ನು ನಾವು ಎಬ್ಬಿಸಿ ಬೆಳೆಸಿದೆವು. {11}

فَلَمَّا أَحَسُّوا بَأْسَنَا إِذَا هُمْ مِنْهَا يَرْكُضُونَ

ಹಾಗೆ ಅವರಿಗೆ ನಮ್ಮ ಶಿಕ್ಷೆಯ ಬಗೆಗಿನ ಸುಳಿವು ಸಿಕ್ಕಿದಾಗ, ಆ ಕೂಡಲೇ ಅವರು ಅಲ್ಲಿಂದ ಓಡ ತೊಡಗಿದರು. {12}

لَا تَرْكُضُوا وَارْجِعُوا إِلَىٰ مَا أُتْرِفْتُمْ فِيهِ وَمَسَاكِنِكُمْ لَعَلَّكُمْ تُسْأَلُونَ

ಓಡ ಬೇಡಿರಿ; ನಿಮ್ಮನ್ನು ವಿಚಾರಣೆಗೆ ಒಳಪಡಿಸಲಿಕ್ಕಾಗಿ ಯಾವ ವಿಲಾಸೀ ಜೀವನದಲ್ಲಿ ನೀವು ಮುಳುಗಿದ್ದಿರೋ ಅದರತ್ತ, ಅಂದರೆ ನಿಮ್ಮ ನಿವಾಸಗಳತ್ತ ಹಿಂದಿರುಗಿರಿ (ಎಂದು ಅವರೊಂದಿಗೆ ಹೇಳಲಾಯಿತು). {13}

قَالُوا يَا وَيْلَنَا إِنَّا كُنَّا ظَالِمِينَ

ಓ ನಮ್ಮ ದುರ್ಗತಿಯೇ! ನಿಜವಾಗಿಯೂ ಅನ್ಯಾಯ ಮಾಡುತ್ತಿದ್ದವರು ನಾವೇ ಆಗಿದ್ದೆವು ಎಂದು (ಆ ದುಷ್ಟ ಜನರು) ರೋದಿಸಿದರು! {14}

فَمَا زَالَتْ تِلْكَ دَعْوَاهُمْ حَتَّىٰ جَعَلْنَاهُمْ حَصِيدًا خَامِدِينَ

ನಾವು ಅವರನ್ನು ಬುಡ ಕೊಯ್ದ ತೆನೆಗಳಂತೆ ನೆಲಕ್ಕುರುಳಿಸುವ ತನಕ ಅವರ ಆ ರೋದನೆ ಮುಂದುವರಿದಿತ್ತು. ಕೊನೆಗೆ ಅವರು ಬೆಂಕಿಯಾರಿದ ಬೂದಿಯಂತೆ ರಾಶಿ ಬಿದ್ದರು. {15}

وَمَا خَلَقْنَا السَّمَاءَ وَالْأَرْضَ وَمَا بَيْنَهُمَا لَاعِبِينَ

ಈ ಆಕಾಶ ಮತ್ತು ಭೂಮಿ ಮತ್ತು ಅವುಗಳ ನಡುವೆ ಏನೆಲ್ಲ ಇವೆಯೋ ಅವೆಲ್ಲವನ್ನು ನಾವು ವಿನೋದಕ್ಕಾಗಿ ಸೃಷ್ಟಿ ಮಾಡಿರುವುದು ಅಲ್ಲ! {16}

لَوْ أَرَدْنَا أَنْ نَتَّخِذَ لَهْوًا لَاتَّخَذْنَاهُ مِنْ لَدُنَّا إِنْ كُنَّا فَاعِلِينَ

ಒಂದು ವೇಳೆ ನಮ್ಮ ಉದ್ದೇಶವು ಮೋಜು ಮಜಾ ಮಾಡುವುದು ಆಗಿದ್ದಿದ್ದರೆ, (ಈ ಭೂಮಿ ಆಕಾಶಗಳನ್ನು ಸೃಷ್ಟಿಸದೆ) ನಮ್ಮಲ್ಲೇ ಅದರ ಏರ್ಪಾಡನ್ನು ಮಾಡಿಕೊಳ್ಳುತ್ತಿದ್ದೆವು; ನಿಜಕ್ಕೂ ಅದೇ ನಮ್ಮ ಇಚ್ಚೆ ಆಗಿರುತ್ತಿದ್ದರೆ! {17}

بَلْ نَقْذِفُ بِالْحَقِّ عَلَى الْبَاطِلِ فَيَدْمَغُهُ فَإِذَا هُوَ زَاهِقٌ ۚ وَلَكُمُ الْوَيْلُ مِمَّا تَصِفُونَ

ಹಾಗಲ್ಲ! (ಮುಂದೊಂದು ದಿನ ಬರಲಿದೆ. ಅಂದು) ನಾವು ಸತ್ಯವನ್ನೆತ್ತಿ ಅಸತ್ಯದ ಮೇಲೆ ಬಡಿಯುವೆವು. ಆಗ ಅಸತ್ಯದ ತಲೆ ನುಜ್ಜುಗುಜ್ಜಾಗಿ ಬಿಡುವುದು. ಅದೇ ಕ್ಷಣದಲ್ಲಿ ಅಸತ್ಯವು ಅಳಿದು ಹೋಗುವುದು. ಜನರೇ, (ಅಲ್ಲಾಹ್ ನ ಬಗ್ಗೆ ಇಲ್ಲಸಲ್ಲದ್ದನ್ನು) ಆರೋಪಿಸಿದ ಕಾರಣಕ್ಕಾಗಿ ನಿಮಗೆ ವಿನಾಶವಿದೆ. {18}

وَلَهُ مَنْ فِي السَّمَاوَاتِ وَالْأَرْضِ ۚ وَمَنْ عِنْدَهُ لَا يَسْتَكْبِرُونَ عَنْ عِبَادَتِهِ وَلَا يَسْتَحْسِرُونَ

ಭೂಮಿ ಆಕಾಶಗಳಲ್ಲಿರುವ ಎಲ್ಲರಿಗೂ ಅಲ್ಲಾಹ್ ನೇ ಒಡೆಯನಾಗಿರುವನು. ಇನ್ನು ಅವನ ಸಾನಿಧ್ಯದಲ್ಲಿರುವ (ಮಲಕ್ ವರ್ಗದವರಂತೂ) ಅಹಂಕಾರ ತೋರಿ ಅವನನ್ನು ಆರಾಧಿಸದೆ ಇರುವುದಿಲ್ಲ; ಮತ್ತು (ಸತತವಾದ ಆರಾಧನೆ) ಅವರನ್ನು ದಣಿಸುವುದೂ ಇಲ್ಲ. {19}

يُسَبِّحُونَ اللَّيْلَ وَالنَّهَارَ لَا يَفْتُرُونَ

ಹಗಲಲ್ಲೂ ಇರುಳಲ್ಲೂ ಅವರೆಲ್ಲ ಅಲ್ಲಾಹ್ ನ ಗುಣಗಾನ ಮಾಡುತ್ತಿರುತ್ತಾರೆ ಮತ್ತು ಅವರಿಗೆ ಅದರಿಂದ ಯಾವ ಆಯಾಸವೂ ಅಗುವುದಿಲ್ಲ. {20}

أَمِ اتَّخَذُوا آلِهَةً مِنَ الْأَرْضِ هُمْ يُنْشِرُونَ

ಹೌದೇನು? ಈ ದುಷ್ಟರು ಭೂಮಿಯಲ್ಲಿನ (ವಸ್ತುಗಳಿಂದಲೇ) ಕೆಲವನ್ನು ದೇವರನ್ನಾಗಿ ಮಾಡಿಕೊಂಡಿರುವರೇ? ಹೌದಾದರೆ ಅವು (ನಿರ್ಜೀವಿಗಳಿಗೆ) ಜೀವನ ನೀಡಲು ಶಕ್ತರಾಗಿವೆಯೇ? {21}

لَوْ كَانَ فِيهِمَا آلِهَةٌ إِلَّا اللَّهُ لَفَسَدَتَا ۚ فَسُبْحَانَ اللَّهِ رَبِّ الْعَرْشِ عَمَّا يَصِفُونَ

ಒಂದು ವೇಳೆ ಭೂಮಿ ಮತ್ತು ಆಕಾಶಗಳಲ್ಲಿ ಅಲ್ಲಾಹ್ ನ ಹೊರತು ಇತರ ದೇವರುಗಳು ಇದ್ದಿದ್ದರೆ, ಅವುಗಳ (ವ್ಯವಸ್ಥೆಯು) ಅಸ್ತವ್ಯಸ್ತವಾಗಿ ಬಿಡುತ್ತಿತ್ತು. ವಿಶ್ವ ಗದ್ದುಗೆಯ ಅಧಿಪತಿಯಾದ ಅಲ್ಲಾಹ್ ನು ಇವರು ಆರೋಪಿಸುತ್ತಿರುವ ಎಲ್ಲಾ ವಿಷಯಗಳಿಗಿಂತ ಪರಿಶುದ್ಧನಾಗಿರುವನು! {22}

لَا يُسْأَلُ عَمَّا يَفْعَلُ وَهُمْ يُسْأَلُونَ

ಅವನೇನು ಮಾಡಿದರೂ ಯಾರಿಗೂ ಉತ್ತರಿಸಬೇಕಾಗಿಲ್ಲ; ಆದರೆ ಈ (ಮುಶ್ರಿಕ್) ಜನರನ್ನು ವಿಚಾರಣೆಗೆ ಒಳಪಡಿಸಲಾಗುವುದು. {23}

أَمِ اتَّخَذُوا مِنْ دُونِهِ آلِهَةً ۖ قُلْ هَاتُوا بُرْهَانَكُمْ ۖ هَٰذَا ذِكْرُ مَنْ مَعِيَ وَذِكْرُ مَنْ قَبْلِي ۗ بَلْ أَكْثَرُهُمْ لَا يَعْلَمُونَ الْحَقَّ ۖ فَهُمْ مُعْرِضُونَ

ಅಥವಾ, ಇವರು ಅಲ್ಲಾಹ್ ನ ಹೊರತು ಇತರರನ್ನೂ ದೇವರುಗಳನ್ನಾಗಿ ಮಾಡಿಕೊಂಡಿರುವರೇ? ಹಾಗಾದರೆ ಅದಕ್ಕಿರುವ ನಿಮ್ಮ ಪುರಾವೆಯನ್ನು ತನ್ನಿರಿ; ಅದಕ್ಕಾಗಿ ನನ್ನ ಕಾಲದವರಿಗೆ ಬೋಧನೆಯಾದ (ಈ ಕುರ್‌ಆನ) ಇಲ್ಲಿದೆ, ನನಗಿಂತ ಮುಂಚಿನವರ ಬೋಧನೆಯೂ ಇಲ್ಲಿದೆ ಎಂದು ಪೈಗಂಬರರೇ ನೀವು ಇವರೊಂದಿಗೆ ಹೇಳಿರಿ. ಆದರೆ [ಯಾರ ಬಳಿಯೂ ಪುರಾವೆಗಳಿಲ್ಲ, ಏಕೆಂದರೆ] ಅವರಲ್ಲಿ ಹೆಚ್ಚಿನವರು ಸತ್ಯವನ್ನು ತಿಳಿಯುವ ಗೋಜಿಗೆ ಹೋಗುವುದಿಲ್ಲ. ಇವರು (ಸತ್ಯವನ್ನು ಅರಿಯುವ ಬದಲು ಅದರಿಂದ) ಮುಖ ತಿರುಗಿಸಿಕೊಂಡಿರುವರು. {24}

وَمَا أَرْسَلْنَا مِنْ قَبْلِكَ مِنْ رَسُولٍ إِلَّا نُوحِي إِلَيْهِ أَنَّهُ لَا إِلَٰهَ إِلَّا أَنَا فَاعْبُدُونِ

ನಿಜವಾಗಿಯೂ ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ; ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ ಎಂಬ ವಹೀ (ಅಂದರೆ ದಿವ್ಯಸಂದೇಶ) ಕಳುಹಿಸದೆ ನಿಮಗಿಂತ ಮುಂಚೆಯೂ ಯಾವ ದೂತನನ್ನೂ ನಾವು ಕಳುಹಿಸಿಲ್ಲ! {25}

وَقَالُوا اتَّخَذَ الرَّحْمَٰنُ وَلَدًا ۗ سُبْحَانَهُ ۚ بَلْ عِبَادٌ مُكْرَمُونَ

ದಯಾಮಯನಾದ ಅಲ್ಲಾಹ್ ನು ಪುತ್ರರನ್ನು ಪಡೆದಿರುವನು ಎಂದು ಇವರು ಆರೋಪಿಸುತ್ತಿದ್ದಾರೆ! [ಅಂತಹ ಆರೋಪಗಳು ಅಲ್ಲಾಹ್ ನಿಗೆ ತಕ್ಕುದಲ್ಲ] ಅವನು ಪರಮ ಪಾವನನು! ಅವರು ಪುತ್ರರಲ್ಲ, ಬದಲಾಗಿ (ಅಲ್ಲಾಹ್ ನ ಬಳಿ) ಮಾನ್ಯತೆ ಪಡೆದಿರುವ ಪರಿಚಾರಕ (ಮಲಕ್ ಗಳು). {26}

لَا يَسْبِقُونَهُ بِالْقَوْلِ وَهُمْ بِأَمْرِهِ يَعْمَلُونَ

ಅವರು ಅಲ್ಲಾಹ್ ನೊಂದಿಗೆ ಮುನ್ನುಗ್ಗಿ ಮಾತನಾಡಲಾರರು. ಬದಲಾಗಿ ಅವರು ಅವನ ಆಜ್ಞೆಗಳಂತೆ ಮಾತ್ರ ವರ್ತಿಸುವರು! {27}

يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يَشْفَعُونَ إِلَّا لِمَنِ ارْتَضَىٰ وَهُمْ مِنْ خَشْيَتِهِ مُشْفِقُونَ

ಅವರ ಮುಂದಿರುವ ವಿಷಯಗಳನ್ನೂ ಅವರಿಗೆ ಮುಂದೆ ಎದುರಾಗಲಿರುವ ವಿಷಯಗಳನ್ನೂ ಅವನು ಅರಿತಿರುವನು! ಯಾರ ಬಗ್ಗೆ ಅವನಿಗೆ ತೃಪ್ತಿ ಇದೆಯೋ ಅವರ ಪರವಾಗಿ ಹೊರತು ಇತರರ ವಿಚಾರದಲ್ಲಿ ಅವರು ಅವನೊಂದಿಗೆ ಶಿಫಾರಸ್ಸು ಮಾಡಲಾರರು. ಅವರು ಸ್ವತಃ ಅವನ ಭಯದಿಂದ ನಡುಗುತ್ತಿರುತ್ತಾರೆ! {28}

وَمَنْ يَقُلْ مِنْهُمْ إِنِّي إِلَٰهٌ مِنْ دُونِهِ فَذَٰلِكَ نَجْزِيهِ جَهَنَّمَ ۚ كَذَٰلِكَ نَجْزِي الظَّالِمِينَ

ಅವರಲ್ಲಿ ಯಾರಾದರೂ, ಅಲ್ಲಾಹ್ ನ ಜೊತೆಗೆ ನಾನೂ ಒಬ್ಬ ದೇವನಾಗಿರುವೆನು ಎಂದು ವಾದಿಸುವ (ಧೈರ್ಯ ತೋರಿದರೆ) ನಾವು ಅವನಿಗೆ ನರಕದ ಶಿಕ್ಷೆ ನೀಡುವೆವು. ದುಷ್ಟರಿಗೆ ನಾವು ಪ್ರತಿಫಲ ನೀಡುವುದು ಹಾಗೆಯೇ! {29}

أَوَلَمْ يَرَ الَّذِينَ كَفَرُوا أَنَّ السَّمَاوَاتِ وَالْأَرْضَ كَانَتَا رَتْقًا فَفَتَقْنَاهُمَا ۖ وَجَعَلْنَا مِنَ الْمَاءِ كُلَّ شَيْءٍ حَيٍّ ۖ أَفَلَا يُؤْمِنُونَ

ವಿಷಯವೇನೆಂದರೆ ಭೂಮಿ ಮತ್ತು ಆಕಾಶಗಳು ಮೊದಲಿಗೆ ಒಟ್ಟೊಟ್ಟಿಗೆ ಸೇರಿಕೊಂಡಿದ್ದವು; ನಂತರ ನಾವು ಅವುಗಳನ್ನು ಹರಿದು ಬೇರ್ಪಡಿಸಿದೆವು! (ಪೈಗಂಬರರ ಬೋಧನೆಗಳನ್ನು) ನಿರಾಕರಿಸುವ ಜನರು ಅದನ್ನು ನೋಡುವುದಿಲ್ಲವೇ?! ಹಾಗೆಯೇ ನಾವು ಪ್ರತಿಯೊಂದು ಜೀವಂತ ವಸ್ತುವನ್ನು ನೀರಿನಿಂದ ಉಂಟುಮಾಡಿರುವೆವು. ಹಾಗಿದ್ದರೂ ಇವರು ನಂಬುವುದಿಲ್ಲವೇ?! {30}

وَجَعَلْنَا فِي الْأَرْضِ رَوَاسِيَ أَنْ تَمِيدَ بِهِمْ وَجَعَلْنَا فِيهَا فِجَاجًا سُبُلًا لَعَلَّهُمْ يَهْتَدُونَ

(ಜನರನ್ನು ಹೊತ್ತ ಈ) ಭೂಮಿಯು ಅವರ ಸಮೇತ ಅಲುಗಾಡದಿರಲು ನಾವು ಅದರಲ್ಲಿ ಸದೃಢ ಪರ್ವತಗಳನ್ನು ನೆಟ್ಟಿದ್ದೇವೆ; ಮತ್ತು ಅವರು ತಮ್ಮ ದೆಸೆಯತ್ತ ಸಾಗಲು ನಾವು ಅದರಲ್ಲಿ ವಿಶಾಲ ದಾರಿಗಳನ್ನು ಮಾಡಿದ್ದೇವೆ. {31}

وَجَعَلْنَا السَّمَاءَ سَقْفًا مَحْفُوظًا ۖ وَهُمْ عَنْ آيَاتِهَا مُعْرِضُونَ

ಮತ್ತು ಆಕಾಶವನ್ನು ನಾವು ನಿಮಗೊಂದು ಸುರಕ್ಷಿತ ಮೇಲ್ಚಪ್ಪರವಾಗಿ ಮಾಡಿದ್ದೇವೆ. ಆದರೆ ಜನರು ಅದರಲ್ಲಿನ ಪುರಾವೆಗಳನ್ನು ಕಡೆಗಣಿಸಿ ಬಿಡುತ್ತಾರೆ. {32}

وَهُوَ الَّذِي خَلَقَ اللَّيْلَ وَالنَّهَارَ وَالشَّمْسَ وَالْقَمَرَ ۖ كُلٌّ فِي فَلَكٍ يَسْبَحُونَ

ಅವನೇ ರಾತ್ರಿಯನ್ನೂ ಹಗಲನ್ನೂ ಸೃಷ್ಟಿ ಮಾಡಿದವನು! ಸೂರ್ಯ ಮತ್ತು ಚಂದ್ರನ ಸೃಷ್ಟಿಯನ್ನೂ - ಎಲ್ಲವೂ ಒಂದೊಂದು ಕಕ್ಷೆಯಲ್ಲಿ ತೇಲಿ ಚಲಿಸುತ್ತಿವೆ. {33}

وَمَا جَعَلْنَا لِبَشَرٍ مِنْ قَبْلِكَ الْخُلْدَ ۖ أَفَإِنْ مِتَّ فَهُمُ الْخَالِدُونَ

[ಪೈಗಂಬರರೇ, ನಿಮಗೆ ಮೃತ್ಯು ಬರಲಿರುವ ಕಾರಣಕ್ಕಾಗಿ ಇವರು ನಿಮ್ಮನ್ನು ನಂಬದಿದ್ದರೆ ಇವರು ತಿಳಿಯಲಿ] ನಿಮಗಿಂತ ಮುಂಚೆಯೂ ನಾವು ಮನುಷ್ಯ ವರ್ಗಕ್ಕೆ ಅಮರತ್ವ ನೀಡಿರಲಿಲ್ಲ. ಇನ್ನು ನೀವು ಮರಣ ಹೊಂದಿದರೆ, ಇವರೇನು (ಭೂಮಿಯಲ್ಲಿ) ಶಾಶ್ವತವಾಗಿ ಉಳಿಯುವವರೇ? {34}

كُلُّ نَفْسٍ ذَائِقَةُ الْمَوْتِ ۗ وَنَبْلُوكُمْ بِالشَّرِّ وَالْخَيْرِ فِتْنَةً ۖ وَإِلَيْنَا تُرْجَعُونَ

ಪ್ರತಿಯೊಬ್ಬ ಜೀವಿಯೂ ಮರಣದ ರುಚಿಯನ್ನು ಸವಿಯಲೇ ಬೇಕು! ಯಥಾರ್ಥದಲ್ಲಿ, ನಿಮ್ಮನ್ನು ದುಸ್ಥಿತಿ ಮತ್ತು ಸುಸ್ಥಿತಿಯಲ್ಲಿರಿಸಿ ನಾವು ಪರೀಕ್ಷಿಸುತ್ತಿರುತ್ತೇವೆ. ಕೊನೆಗೆ ನಿಮ್ಮೆಲ್ಲರನ್ನೂ (ಅಂತಿಮ ವಿಚಾರಣೆಗಾಗಿ) ನಮ್ಮ ಬಳಿಗೇ ಮರಳಿಸಲಾಗುತ್ತದೆ. {35}

وَإِذَا رَآكَ الَّذِينَ كَفَرُوا إِنْ يَتَّخِذُونَكَ إِلَّا هُزُوًا أَهَٰذَا الَّذِي يَذْكُرُ آلِهَتَكُمْ وَهُمْ بِذِكْرِ الرَّحْمَٰنِ هُمْ كَافِرُونَ

ಪೈಗಂಬರರೇ, ಸತ್ಯವನ್ನು ತಿರಸ್ಕರಿಸಿ ಬಿಟ್ಟ ಈ ಜನರು ನಿಮ್ಮನ್ನು ಕಂಡಾಗಲೆಲ್ಲಾ ಏನಾದರೂ ಅಪಹಾಸ್ಯ ಮಾಡದೆ ಬಿಡುವುದಿಲ್ಲ! ನೀವು ಪೂಜಿಸುವ ದೇವರುಗಳ ಬಗ್ಗೆ (ನಿರಾಕರಣೆಯ) ಮಾತನಾಡುವವನು ಇವನೇ ತಾನೆ ಎಂದು ಅವರು (ತಮ್ಮವರೊಂದಿಗೆ) ಹೇಳುತ್ತಾರೆ; ವಾಸ್ತವದಲ್ಲಿ ಇವರು ನಿಜವಾದ ದಯಾಮಯನಾದ ಅಲ್ಲಾಹ್ ನ ಪ್ರಸ್ತಾಪ ಬಂದ ಕೂಡಲೇ ಅದಕ್ಕೆ ತಿರಸ್ಕಾರ ತೋರುತ್ತಾರೆ! {36}

خُلِقَ الْإِنْسَانُ مِنْ عَجَلٍ ۚ سَأُرِيكُمْ آيَاتِي فَلَا تَسْتَعْجِلُونِ

ವಾಸ್ತವದಲ್ಲಿ ಮನುಷ್ಯನು ಅತುರದ ಜೀವಿಯಾಗಿ ಸೃಷ್ಟಿಸಲ್ಪಟ್ಟಿರುವನು! [ಆದ್ದರಿಂದ ಅವನು ನಮ್ಮಿಂದ ಶಿಕ್ಷೆಯ ಒಂದು ನಿದರ್ಶನಕ್ಕಾಗಿ ಅಣಕಿಸುತ್ತಾ ಆತುರ ಪಡಿಸುತ್ತಾ ಇದ್ದಾನೆ]. ಹೌದು, ಬೇಗನೇ ನಾನು ನಿಮಗೆ ನನ್ನ ನಿದರ್ಶನ ತೋರಿಸಲಿರುವೆನು; (ಅದನ್ನು ಒಮ್ಮೆ ನೋಡಿದರೆ) ನಂತರ ನೀವು ಅದಕ್ಕಾಗಿ ಆತುರ ಪಡಲಾರಿರಿ! {37}

وَيَقُولُونَ مَتَىٰ هَٰذَا الْوَعْدُ إِنْ كُنْتُمْ صَادِقِينَ

ನೀವು ಸತ್ಯವಂತರು ಹೌದಾದರೆ ನೀವು ಎಚ್ಚರಿಸುತ್ತಿದ್ದ (ಶಿಕ್ಷೆಯ ಘಳಿಗೆ) ಯಾವಾಗ ಬಂದೆರಗಲಿದೆ ಎಂದು (ವಿಶ್ವಾಸಿಗಳನ್ನು ಅಣಕಿಸುತ್ತಾ) ಇವರು ಕೇಳುತ್ತಿದ್ದಾರೆ. {38}

لَوْ يَعْلَمُ الَّذِينَ كَفَرُوا حِينَ لَا يَكُفُّونَ عَنْ وُجُوهِهِمُ النَّارَ وَلَا عَنْ ظُهُورِهِمْ وَلَا هُمْ يُنْصَرُونَ

ತಮ್ಮ ಮುಖ ಮತ್ತು ಬೆನ್ನುಗಳನ್ನು ನರಕಾಗ್ನಿಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದ ಹಾಗೂ ತಮಗೆ (ಆ ನರಕದಿಂದ ಹೊರಬರಲು ಯಾರ) ಸಹಾಯವೂ ಸಿಗದ ಆ ಒಂದು ಸಮಯದ ಬಗ್ಗೆ (ಅಲ್ಲಾಹ್ ನ ಶಿಕ್ಷೆಯನ್ನು) ನಿರಾಕರಿಸಿದವರು ತಿಳಿದಿರುತ್ತಿದ್ದರೆ! [ಶಿಕ್ಷೆಗಾಗಿ ಇವರು ಹಾಗೆ ಆತುರಪಡಿಸಿ ಅಣಕಿಸುತ್ತಿರಲಿಲ್ಲ]! {39}

بَلْ تَأْتِيهِمْ بَغْتَةً فَتَبْهَتُهُمْ فَلَا يَسْتَطِيعُونَ رَدَّهَا وَلَا هُمْ يُنْظَرُونَ

ಇಲ್ಲ! ಆ ಶಿಕ್ಷೆಯ ಘಳಿಗೆ ಇವರ ಮೇಲೆ ದಿಢೀರನೆ ಬಂದೆರಗುವುದು, ಆಗ ಇವರು ಆಘಾತಕ್ಕೊಳಗಾಗುವರು! ಅದನ್ನು ರದ್ದುಪಡಿಸಲು ಈ ಜನರಿಗೆ ಸಾಧ್ಯವಾಗದು ಮಾತ್ರವಲ್ಲ ಇವರಿಗೆ ಕಾಲಾವಕಾಶ ನೀಡುವ ವಿಷಯವೂ ಇಲ್ಲ. {40}

وَلَقَدِ اسْتُهْزِئَ بِرُسُلٍ مِنْ قَبْلِكَ فَحَاقَ بِالَّذِينَ سَخِرُوا مِنْهُمْ مَا كَانُوا بِهِ يَسْتَهْزِئُونَ

ಹೌದು, [ಪೈಗಂಬರರೇ, ಶಿಕ್ಷೆಯ ಕುರಿತು ಮುನ್ನೆಚ್ಚರಿಕೆ ನೀಡಿದ್ದಕ್ಕಾಗಿ ಈಗ ನಿಮ್ಮನ್ನು ಗೇಲಿ ಮಾಡಿದಂತೆಯೇ] ನಿಮಗಿಂತ ಮುಂಚಿನ ದೂತರುಗಳನ್ನೂ ಗೇಲಿ ಮಾಡಲಾಗಿದೆ. ಯಾವುದರ ಕುರಿತು ಅವರು ಗೇಲಿ ಮಾಡುತ್ತಿದ್ದರೋ ಕೊನಗೆ ಅದುವೇ (ಅರ್ಥಾತ್ ಆ ಶಿಕ್ಷೆಯೇ) ಬಂದು ಅವರನ್ನು ಆವರಿಸಿ ಬಿಟ್ಟಿತು! {41}

قُلْ مَنْ يَكْلَؤُكُمْ بِاللَّيْلِ وَالنَّهَارِ مِنَ الرَّحْمَٰنِ ۗ بَلْ هُمْ عَنْ ذِكْرِ رَبِّهِمْ مُعْرِضُونَ

(ಆ ಶಿಕ್ಷೆ ದಿಢೀರನೆ ನಿಮ್ಮ ಮೇಲೆ ಬಂದೆರಗದಂತೆ) ದಯಾಮಯನಾದ ಅಲ್ಲಾಹ್ ನಿಂದ ನಿಮ್ಮನ್ನು ಹಗಲಲ್ಲೂ ರಾತ್ರಿಯಲ್ಲೂ ಕಾಪಾಡಲು ಯಾರಿಗೆ ಸಾಧ್ಯವಿದೆ ಎಂದು, ಪೈಗಂಬರರೇ, ನೀವು ಇವರನ್ನು ಕೇಳಿರಿ. ಇಲ್ಲ, (ಯಾರಿಗೂ ಸಾಧ್ಯವಿಲ್ಲ); ಹಾಗಿದ್ದರೂ ತಮ್ಮ ಕರ್ತಾರನ ಪ್ರಸ್ತಾಪ ಬಂದಾಗಲೆಲ್ಲ ಇವರು ಮುಖ ಬೇರೆಡೆಗೆ ತಿರುಗಿಸಿಕೊಳ್ಳುತ್ತಾರೆ. {42}

أَمْ لَهُمْ آلِهَةٌ تَمْنَعُهُمْ مِنْ دُونِنَا ۚ لَا يَسْتَطِيعُونَ نَصْرَ أَنْفُسِهِمْ وَلَا هُمْ مِنَّا يُصْحَبُونَ

ಅಥವಾ, (ಅಂತಹ ಶಿಕ್ಷೆಯಿಂದ) ಇವರನ್ನು ಕಾಪಾಡಲು, ನಮ್ಮ ಹೊರತು ಬೇರೆ ದೇವರುಗಳು ಇವರ ಬಳಿ ಇದ್ದಾರೆಯೇ? ಸ್ವತಃ ತಮ್ಮನ್ನೇ ಕಾಪಾಡಿಕೊಳ್ಳಲು ಅವರಿಗೆ ಸಾಧ್ಯವಿಲ್ಲ; ಮಾತ್ರವಲ್ಲ, ಅವರಿಗೆ ನಮ್ಮ ಸಹಾಯವೂ ಸಿಗಲಾರದು. {43}

بَلْ مَتَّعْنَا هَٰؤُلَاءِ وَآبَاءَهُمْ حَتَّىٰ طَالَ عَلَيْهِمُ الْعُمُرُ ۗ أَفَلَا يَرَوْنَ أَنَّا نَأْتِي الْأَرْضَ نَنْقُصُهَا مِنْ أَطْرَافِهَا ۚ أَفَهُمُ الْغَالِبُونَ

ಇಲ್ಲ, ವಾಸ್ತವದಲ್ಲಿ ನಾವು ಇವರಿಗೂ ಇವರ ತಾತ-ಮುತ್ತಾತಂದಿರಿಗೂ ಲೌಕಿಕ ಸುಖಭೋಗಗಳನ್ನು ಧಾರಾಳವಾಗಿ ಕೊಟ್ಟಿದ್ದೆವು; ಅವರೆಲ್ಲ ಅದೇ ಸ್ಥಿತಿಯಲ್ಲಿ ದೀರ್ಘಕಾಲದ ವರೆಗೆ ಬದುಕಿದರು; ಅವರ ಆಯುಷ್ಯವೂ ದೀರ್ಘವಾಯಿತು. ಆದರೆ ಈಗ ಭೂಮಿಯನ್ನು ಅದರ ಅಂಚುಗಳಿಂದ ಇವರ ಪಾಲಿಗೆ ನಾವು ಕುಗ್ಗಿಸುತ್ತಾ ಬರುತ್ತಿರುವುದನ್ನು ಇವರು ನೋಡುವುದಿಲ್ಲವೇ?! ಇನ್ನು ಇವರು ವಿಜಯ ಸಾಧಿಸುವುದುಂಟೇ?! {44}

قُلْ إِنَّمَا أُنْذِرُكُمْ بِالْوَحْيِ ۚ وَلَا يَسْمَعُ الصُّمُّ الدُّعَاءَ إِذَا مَا يُنْذَرُونَ

ನಾನು ಅಲ್ಲಾಹ್ ನ ಸಂದೇಶದ [ಅಂದರೆ ವಹೀ ಯ] ಆಧಾರದಲ್ಲಿ ಮಾತ್ರ ನಿಮ್ಮನ್ನು ಎಚ್ಚರಿಸುತ್ತಿರುವೆನು ಎಂದು, ಪೈಗಂಬರರೇ, ನೀವು ಸಾರಿರಿ! [ಇವರು ಕಿವುಡರಂತೆ ವರ್ತಿಸುತ್ತಿದ್ದಾರೆ, ಏಕೆಂದರೆ] ಎಚ್ಚರಿಸುವಾಗ ಕಿವುಡರು ಮಾತ್ರ ಎಚ್ಚರಕೆಯ ಕರೆಯನ್ನು ಕೇಳಿಸಿಕೊಳ್ಳಲಾರರು! {45}

وَلَئِنْ مَسَّتْهُمْ نَفْحَةٌ مِنْ عَذَابِ رَبِّكَ لَيَقُولُنَّ يَا وَيْلَنَا إِنَّا كُنَّا ظَالِمِينَ

ಒಂದು ವೇಳೆ ನಿಮ್ಮ ಕರ್ತಾರನಾದ (ಅಲ್ಲಾಹ್ ನ) ಶಿಕ್ಷೆಯ ಗಾಳಿ ಸೋಂಕಿದರೂ ಸಾಕು, ಓ ನಮ್ಮ ದುರ್ಗತಿಯೇ! ನಾವು ನಿಜವಾಗಿಯೂ ತಪ್ಪಿತಸ್ಥರೇ ಆಗಿದ್ದೆವು ಎಂದು ಇವರು ಗೋಳಿಡಲಿರುವರು. {46}

وَنَضَعُ الْمَوَازِينَ الْقِسْطَ لِيَوْمِ الْقِيَامَةِ فَلَا تُظْلَمُ نَفْسٌ شَيْئًا ۖ وَإِنْ كَانَ مِثْقَالَ حَبَّةٍ مِنْ خَرْدَلٍ أَتَيْنَا بِهَا ۗ وَكَفَىٰ بِنَا حَاسِبِينَ

ಇನ್ನು ಪುನರುತ್ಥಾನದ ದಿನಕ್ಕಾಗಿ ನಾವು ನ್ಯಾಯದ ತಕ್ಕಡಿಯನ್ನು ಇಟ್ಟಿರುತ್ತೇವೆ; ಆಗ ಯಾರ ಮೇಲೂ ಕಿಂಚಿತ್ತೂ ಅನ್ಯಾಯವಾಗದು. ಕರ್ಮವು ಒಂದು ಸಾಸಿವೆ ಕಾಳಿನಷ್ಟಿದ್ದರೂ ನಾವದನ್ನು ಮುಂದೆ ತರುವೆವು! (ಕರ್ಮಗಳ) ಪರಿಶೀಲನೆಗೆ ನಾವು ಮಾತ್ರವೇ ಸಾಕು! {47}

وَلَقَدْ آتَيْنَا مُوسَىٰ وَهَارُونَ الْفُرْقَانَ وَضِيَاءً وَذِكْرًا لِلْمُتَّقِينَ

ಯಥಾರ್ಥದಲ್ಲಿ (ಈ ಹಿಂದೆ, ಇಸ್ರಾಈಲ್ ಸಂತತಿಯ ಪ್ರವಾದಿಗಳಾದ) ಮೂಸಾ ಮತ್ತು ಹಾರೂನ್ ರವರಿಗೆ ನಾವು ಸತ್ಯಾಸತ್ಯಗಳ ವ್ಯತ್ಯಾಸ ತೋರಿಸಬಲ್ಲ ಹಾಗೂ ಸಾಕ್ಷಾತ್ ಪ್ರಕಾಶವಾದ (ಒಂದು ಗ್ರಂಥ ತೋರಾ) ವನ್ನು ನೀಡೀದ್ದೆವು; ಅಲ್ಲಾಹ್ ನ ಭಯಭಕ್ತಿ ಪಾಲಿಸುವ ಧರ್ಮನಿಷ್ಠರಿಗೆ ಅದೊಂದು ಉಪದೇಶವೂ ಆಗಿತ್ತು! {48}

الَّذِينَ يَخْشَوْنَ رَبَّهُمْ بِالْغَيْبِ وَهُمْ مِنَ السَّاعَةِ مُشْفِقُونَ

ಅವರು ಕಣ್ಣಾರೆ ಕಾಣದೆಯೇ ತಮ್ಮನ್ನು ಪರಿಪಾಲುಸುತ್ತಿರುವ ಪ್ರಭುವಿಗೆ ಭಯಭಕ್ತಿ ತೋರುತ್ತಾರೆ. (ಅಂತಿಮ ವಿಚಾರಣೆಯ) ಆ ಘಳಿಗೆಯ ಬಗ್ಗೆ ಅವರಿಗೆ ಹೆದರಿಕೆ ಇರುತ್ತದೆ. {49}

وَهَٰذَا ذِكْرٌ مُبَارَكٌ أَنْزَلْنَاهُ ۚ أَفَأَنْتُمْ لَهُ مُنْكِرُونَ

ಹಾಗೆಯೇ ಅನುಗ್ರಹೀತವಾದ ಈ ಉಪದೇಶ (ಅಂದರೆ ಈ ಕುರ್‌ಆನ್ ಸಹ ನಿಮ್ಮ ಮಾರ್ಗದರ್ಶನಕ್ಕಾಗಿ ಈಗ) ಅಲ್ಲಾಹ್ ನು ಇಳಿಸಿರುವನು. ಜನರೇ, ನೀವು ಅದನ್ನು (ಸ್ವೀಕರಿಸುವ ಬದಲು) ಧಿಕ್ಕರಿಸಲು ನಿಂತಿರುವಿರಾ? {50}

وَلَقَدْ آتَيْنَا إِبْرَاهِيمَ رُشْدَهُ مِنْ قَبْلُ وَكُنَّا بِهِ عَالِمِينَ

ಬಹಳ ಹಿಂದೆಯೇ ನಾವು (ನಿಮ್ಮೆಲ್ಲರ ಪೂರ್ವಜನಾದ) ಪ್ರವಾದಿ ಇಬ್ರಾಹೀಮ್ ರಿಗೆ ಸಹ ಅವರ (ಸ್ಥಾನಕ್ಕನುಸಾರವಾಗಿ) ಸದ್ವಿವೇಕವನ್ನು ನೀಡಿದ್ದೆವು. ಹೌದು, ಅವರ ಕುರಿತು ನಮಗೆ (ನಿಮಗಿಂತ) ಚೆನ್ನಾಗಿಯೇ ತಿಳಿದಿತ್ತು. {51}

إِذْ قَالَ لِأَبِيهِ وَقَوْمِهِ مَا هَٰذِهِ التَّمَاثِيلُ الَّتِي أَنْتُمْ لَهَا عَاكِفُونَ

ನೀವು ಇಷ್ಟೊಂದು ಭಯಭಕ್ತಿ ತೋರುತ್ತಾ ಮುಂದೆ ಕುಳಿತಿರುವ ಈ ವಿಗ್ರಹಗಳ ವಿಷಯವೇನು ಎಂದು ಪ್ರವಾದಿ ಇಬ್ರಾಹೀಮ್ ರು ತಮ್ಮ ತಂದೆ ಹಾಗೂ ತಮ್ಮ ಜನರೊಡನೆ ಪ್ರಶ್ನಿಸಿದ್ದನ್ನು ನೆನಪಿಸಿರಿ. {52}

قَالُوا وَجَدْنَا آبَاءَنَا لَهَا عَابِدِينَ

ನಮ್ಮ ತಾತ-ಮುತ್ತಾತಂದಿರು ಇದೇ ಮೂರ್ತಿಗಳಿಗೆ ಪೂಜೆ ಸಲ್ಲಿಸುತ್ತಿದ್ದುದನ್ನು ನಾವು ಕಂಡಿದ್ದೇವೆ ಎಂದು ಅವರೆಲ್ಲ ಉತ್ತರಿಸಿದ್ದರು. {53}

قَالَ لَقَدْ كُنْتُمْ أَنْتُمْ وَآبَاؤُكُمْ فِي ضَلَالٍ مُبِينٍ

ನಿಜ ಸಂಗತಿಯೆಂದರೆ ನೀವು ಮತ್ತು ಆ ನಿಮ್ಮ ತಾತ-ಮುತ್ತಾತಂದಿರು ಸ್ಪಷ್ಟವಾದ ತಪ್ಪು ದಾರಿಯಲ್ಲಿ ಸಾಗಿರುತ್ತೀರಿ ಎಂದು ಇಬ್ರಾಹೀಮ್ ರು ಉತ್ತರಿಸಿದರು. {54}

قَالُوا أَجِئْتَنَا بِالْحَقِّ أَمْ أَنْتَ مِنَ اللَّاعِبِينَ

ನೀವು ಸಾಕ್ಷಾತ್ ಸತ್ಯ ಸಂಗತಿಯನ್ನು ನಮ್ಮ ಬಳಿಗೆ ತಂದಿರುವಿರಾ ಅಥವಾ (ನಮ್ಮೊಂದಿಗೆ) ಕೇವಲ ತಮಾಷೆ ಮಾಡುತ್ತಿರುವಿರಾ ಎಂದು ಆ ಜನರು ಕೇಳಿದರು. {55}

قَالَ بَلْ رَبُّكُمْ رَبُّ السَّمَاوَاتِ وَالْأَرْضِ الَّذِي فَطَرَهُنَّ وَأَنَا عَلَىٰ ذَٰلِكُمْ مِنَ الشَّاهِدِينَ

ಇಲ್ಲ, ತಮಾಷೆಯಲ್ಲ; ಬದಲಾಗಿ ಅಕಾಶಗಳ ಹಾಗೂ ಭೂಮಿಯ ದೇವನೇ ನಿಮ್ಮ ದೇವನೂ ಆಗಿರುವನು; ಅವನೇ ಅವುಗಳನ್ನು ಅಸ್ತಿತ್ವಕ್ಕೆ ತಂದವನು! ಈ ಸತ್ಯ ಸಂಗತಿಗೆ ಸಾಕ್ಷಿಯಾಗುವವರಲ್ಲಿ ನಾನೂ ಒಬ್ಬನು ಎಂದು ಇಬ್ರಾಹೀಮ್ ರು ಉತ್ತರಿಸಿದರು. {56}

وَتَاللَّهِ لَأَكِيدَنَّ أَصْنَامَكُمْ بَعْدَ أَنْ تُوَلُّوا مُدْبِرِينَ

ಹೌದು, ಅಲ್ಲಾಹ್ ನ ಆಣೆ! ನೀವು ಇಲ್ಲಿಂದ ಹಿಂದಿರುಗಿ ಹೊರಟ ನಂತರ ಈ ನಿಮ್ಮ ವಿಗ್ರಹಗಳ ಕುರಿತಂತೆ ನಾನೊಂದು ಉಪಾಯ ಮಾಡಿಯೇ ತೀರುವೆನು ಎಂದು ಇಬ್ರಾಹೀಮ್ ರು (ಮನದಲ್ಲಿ ಹೇಳಿಕೊಂಡರು). {57}

فَجَعَلَهُمْ جُذَاذًا إِلَّا كَبِيرًا لَهُمْ لَعَلَّهُمْ إِلَيْهِ يَرْجِعُونَ

ಹಾಗೆ, (ಯಾರೂ ಅಲ್ಲಿ ಇಲ್ಲದ ಸಮಯದಲ್ಲಿ) ದೊಡ್ಡ ವಿಗ್ರಹವೊಂದನ್ನು ಬಿಟ್ಟು ಉಳಿದೆಲ್ಲ ವಿಗ್ರಹಗಳನ್ನು ಇಬ್ರಾಹೀಮ್ ರು ತುಂಡುಮಾಡಿ ಹಾಕಿದರು. ಜನರು ಮರಳಿ ಬಂದಾಗ (ಆ ತುಂಡುಗಳ ಬಗ್ಗೆ ಅರಿಯಲು) ದೊಡ್ಡ ವಿಗ್ರಹದತ್ತ ಮರಳಲಿ ಎಂದು ಹಾಗೆ ಮಾಡಿದರು. {58}

قَالُوا مَنْ فَعَلَ هَٰذَا بِآلِهَتِنَا إِنَّهُ لَمِنَ الظَّالِمِينَ

(ಊರ ಜನರು ಮರಳಿ ಬಂದಾಗ ವಿಗ್ರಹಗಳ ದುರವಸ್ಥೆಯನ್ನು ಕಂಡು) ನಮ್ಮ ದೇವರುಗಳೊಂದಿಗೆ ಹೀಗೆ ವರ್ತಿಸಿದವನು ಯಾರಿರಬಹುದು? ಅವನು ಯಾರಾದರೂ ಒಬ್ಬ ದುಷ್ಟನೇ ಆಗಿರಬೇಕು ಎಂದರು. {59}

قَالُوا سَمِعْنَا فَتًى يَذْكُرُهُمْ يُقَالُ لَهُ إِبْرَاهِيمُ

ಅವರಲ್ಲಿನ ಕೆಲವರು, ಇಬ್ರಾಹೀಮ್ ಎಂದು ಕರೆಯಲ್ಪಡುವ ಒಬ್ಬ ಯುವಕನು ಈ ವಿಗ್ರಹಗಳ ಬಗ್ಗೆ (ವಿಮರ್ಶಿಸಿ) ಪ್ರಸ್ತಾಪಿಸುತ್ತಾ ಇದ್ದುದನ್ನು ನಾವು ಕೇಳಿರುತ್ತೇವೆ ಎಂದು ಹೇಳಿಕೊಂಡರು. {60}

قَالُوا فَأْتُوا بِهِ عَلَىٰ أَعْيُنِ النَّاسِ لَعَلَّهُمْ يَشْهَدُونَ

ಆಗ (ಅವರಲ್ಲಿನ ಮುಖಂಡರು) ಹೇಳಿದರು: ಅವನನ್ನು ಹಿಡಿದು ಜನರ ಕಣ್ಣೆದುರಿಗೆ ತನ್ನಿರಿ; (ನಾವು ಅವನೊಂದಿಗೆ ಹೇಗೆ ವರ್ತಿಸಲಿದ್ದೇವೆಂದು) ಎಲ್ಲರೂ ನೋಡುವಂತಾಗಲಿ. {61}

قَالُوا أَأَنْتَ فَعَلْتَ هَٰذَا بِآلِهَتِنَا يَا إِبْرَاهِيمُ

[ಇಬ್ರಾಹೀಮ್ ರು ಅಲ್ಲಿಗೆ ಬಂದಾಗ ವಿಗ್ರಹಾರಾಧಕರ ಮುಖಂಡರು], ಓ ಇಬ್ರಾಹೀಮ್! ಈ ನಮ್ಮ ದೇವರುಗಳೊಂದಿಗೆ ಹೀಗೆ ವರ್ತಿಸಿರುವುದು ನೀವೇನು? ಎಂದು ಇಬ್ರಾಹೀಮ್ ರನ್ನು ಪ್ರಶ್ನಿಸಿದರು. {62}

قَالَ بَلْ فَعَلَهُ كَبِيرُهُمْ هَٰذَا فَاسْأَلُوهُمْ إِنْ كَانُوا يَنْطِقُونَ

ಇಲ್ಲ; ಇವುಗಳ ಪೈಕಿ ಅತ್ಯಂತ ದೊಡ್ಡವನಾದ ಈತನೇ ಹಾಗೆ ಮಾಡಿರಬೇಕು! ಇವುಗಳಿಗೆ ಮಾತನಾಡಲು ಸಾಧ್ಯವಿದ್ದರೆ ನೀವು ಇವುಗಳನ್ನೇ ಕೇಳಿ ನೋಡಿರಿ ಎಂದು ಇಬ್ರಾಹೀಮ್ ರು ಉತ್ತರಿಸಿದರು. {63}

فَرَجَعُوا إِلَىٰ أَنْفُسِهِمْ فَقَالُوا إِنَّكُمْ أَنْتُمُ الظَّالِمُونَ

ಆಗ [ವಿಗ್ರಹಗಳ ಅಸಹಾಯಕತೆಯನ್ನು ಮನಗಂಡ] ಅವರು ತಮ್ಮವರತ್ತ ತಿರುಗಿ, ನಿಜವಾಗಿಯೂ (ಇವುಗಳನ್ನು ಆರಾಧಿಸುವಂತಹ) ಅನ್ಯಾಯ ಮಾಡಿದವರು ನೀವೇ ಆಗಿರುವಿರಿ ಎಂದು ಹೇಳಿಕೊಂಡರು! {64}

ثُمَّ نُكِسُوا عَلَىٰ رُءُوسِهِمْ لَقَدْ عَلِمْتَ مَا هَٰؤُلَاءِ يَنْطِقُونَ

ನಂತರ ಅವರು ಉಲ್ಟಾ ಹೊಡೆದು, ಇವು ಮಾತನಾಡುವುದಿಲ್ಲ ಎಂಬುದು ನಿಮಗೇ ತಿಳಿದಿದೆ ತಾನೆ? ಎಂದು ವಾದಿಸತೊಡಗಿದರು. {65}

قَالَ أَفَتَعْبُدُونَ مِنْ دُونِ اللَّهِ مَا لَا يَنْفَعُكُمْ شَيْئًا وَلَا يَضُرُّكُمْ

ಪ್ರವಾದಿ ಇಬ್ರಾಹೀಮ್ ರು [ತಮ್ಮ ಬೋಧನೆ ಮುಂದುವರಿಸುತ್ತಾ], ಅಲ್ಲಾಹ್ ನನ್ನು ಆರಾಧಿಸುವುದು ಬಿಟ್ಟು ನಿಮಗೆ ಯಾವುದೇ ರೀತಿಯ ಲಾಭವಾಗಲಿ ನಷ್ಟವಾಗಲಿ ಮಾಡಲು ಸಾಧ್ಯವಿಲ್ಲದ ಈ (ವಿಗ್ರಹಗಳನ್ನೇ) ನೀವು ಪೂಜಿಸುವುದು ಎಂದು ಕೇಳಿದರು. {66}

أُفٍّ لَكُمْ وَلِمَا تَعْبُدُونَ مِنْ دُونِ اللَّهِ ۖ أَفَلَا تَعْقِلُونَ

ನಾನು ಬೇಸತ್ತಿರುವೆನು; ನಿಮ್ಮ ಬಗ್ಗೆಯೂ, ಅಲ್ಲಾಹ್ ನನ್ನು ಬಿಟ್ಟು ನೀವು ಪೂಜಿಸುತ್ತಿರುವ ಆ ವಿಗ್ರಹಗಳ ಬಗ್ಗೆಯೂ! ಏನು - ನೀವು ಸ್ವಲ್ಪವಾದರೂ ಬುದ್ಧಿ ಉಪಯೋಗಿಸುವುದಿಲ್ಲವೇ?! {67}

قَالُوا حَرِّقُوهُ وَانْصُرُوا آلِهَتَكُمْ إِنْ كُنْتُمْ فَاعِلِينَ

ಆಗ [ಅಲ್ಲಿಯ ವಿಗ್ರಹಾರಾಧಕರ ಮುಖಂಡರು ಕುಪಿತಗೊಂಡು] ಆಜ್ಞಾಪಿಸಿದರು: ನಿಮ್ಮ ದೇವರುಗಳಿಗೆ ಬೆಂಬಲ ತೋರಲು ನೀವು ಈತನನ್ನು ಸುಟ್ಟು ಹಾಕಿರಿ; ನೀವೇನಾದರೂ ಮಾಡುವವರಿದ್ದರೆ ಅದನ್ನೇ ಮಾಡಿರಿ. {68}

قُلْنَا يَا نَارُ كُونِي بَرْدًا وَسَلَامًا عَلَىٰ إِبْرَاهِيمَ

[ಹಾಗೆ ದೊಡ್ಡದಾದ ಅಗ್ನಿಕೂಪದಲ್ಲಿ ಪ್ರವಾದಿ ಇಬ್ರಾಹೀಮ್ ರನ್ನು ಸುಡಲು ಸಿದ್ಧತೆಗಳು ನೆಡೆಯುತ್ತಿದ್ದಾಗ] ನಾವು ಬೆಂಕಿಗೆ ಆದೇಶವಿತ್ತೆವು: ಓ ಬೆಂಕಿಯೇ! ಇಬ್ರಾಹೀಮ್ ರ ಪಾಲಿಗೆ ನೀನು ತಂಪಾಗಿ ಮಾರ್ಪಡು ಹಾಗೂ ಪ್ರಶಾಂತನಾಗು! {69}

وَأَرَادُوا بِهِ كَيْدًا فَجَعَلْنَاهُمُ الْأَخْسَرِينَ

ಹೌದು, ಅವರು ಇಬ್ರಾಹೀಮ್ ರಿಗೆ ಹಾನಿಯುಂಟು ಮಾಡುವ ಯೋಜನೆ ಹಾಕಿದ್ದರು. ಆದರೆ ನಾವು ಅವರನ್ನು ಅತ್ಯಂತ ದಯನೀಯವಾಗಿ ಸೋಲಿಸಿ ಬಿಟ್ಟೆವು. {70}

وَنَجَّيْنَاهُ وَلُوطًا إِلَى الْأَرْضِ الَّتِي بَارَكْنَا فِيهَا لِلْعَالَمِينَ

ನಂತರ ನಾವು ಪ್ರವಾದಿ ಇಬ್ರಾಹೀಮ್ ಮತ್ತು (ಅವರ ಸಹೋದರ ಪುತ್ರ) ಪ್ರವಾದಿ ಲೂತ್ ರನ್ನು ಶತ್ರುಗಳಿಂದ ಪಾರುಮಾಡಿ, ಲೋಕದ ಜನರಿಗಾಗಿ ಅನುಗ್ರಹೀತಗೊಳಿಸಿದ ಭೂಭಾಗಕ್ಕೆ [ಅಂದರೆ ಜನರಿಗೆ ಏಕದೇವತ್ವದ ಸಂದೇಶ ತಲುಪಿಸುವ ಸಲುವಾಗಿ ಇಂದಿನ ಪ್ಯಾಲಸ್ಟೈನ್ ಮತ್ತು ಇಸ್ರೇಲ್ ನ ಪ್ರದೇಶಕ್ಕೆ] ಕಳುಹಿಸಿದೆವು. {71}

وَوَهَبْنَا لَهُ إِسْحَاقَ وَيَعْقُوبَ نَافِلَةً ۖ وَكُلًّا جَعَلْنَا صَالِحِينَ

ತರುವಾಯ ಇಬ್ರಾಹೀಮ್ ರಿಗೆ ನಾವು (ಇನ್ನೊಬ್ಬ ಪುತ್ರನಾದ) ಪ್ರವಾದಿ ಇಸ್‌ಹಾಕ್ ರನ್ನು ನೀಡಿದೆವು. ಮಾತ್ರವಲ್ಲ, ಹೆಚ್ಚುವರಿಯಾಗಿ (ಮೊಮ್ಮಗನಾದ) ಪ್ರವಾದಿ ಯಾಕೂಬ್ ರನ್ನೂ ದಯಪಾಲಿಸಿದೆವು. ಅವರಲ್ಲಿ ನಾವು ಪ್ರತಿಯೊಬ್ಬರನ್ನೂ ಸಜ್ಜನರನ್ನಾಗಿ ಮಾಡಿದೆವು. {72}

وَجَعَلْنَاهُمْ أَئِمَّةً يَهْدُونَ بِأَمْرِنَا وَأَوْحَيْنَا إِلَيْهِمْ فِعْلَ الْخَيْرَاتِ وَإِقَامَ الصَّلَاةِ وَإِيتَاءَ الزَّكَاةِ ۖ وَكَانُوا لَنَا عَابِدِينَ

ಅವರನ್ನು ನಮ್ಮ ಆದೇಶದ ಪ್ರಕಾರ ಜನರಿಗೆ ಮಾರ್ಗದರ್ಶನ ನೀಡುವ ನಾಯಕರನ್ನಾಗಿ ನಾವು ಮಾಡಿದೆವು. ಸತ್ಕಾರ್ಯಗಳನ್ನು ಮಾಡುವವರಾಗಬೇಕು, ನಮಾಝ್ ನಿರ್ವಹಿಸಬೇಕು ಮತ್ತು ಝಕಾತ್ ಪಾವತಿಸಬೇಕು ಎಂದು ನಾವು ಅವರಿಗೆ (ವಹೀ ಮೂಲಕ) ಆದೇಶ ನೀಡಿದೆವು. ಅವರೆಲ್ಲರೂ ನಮ್ಮ ಉಪಾಸನೆ ಮಾಡುವವರಾಗಿದ್ದರು. {73}

وَلُوطًا آتَيْنَاهُ حُكْمًا وَعِلْمًا وَنَجَّيْنَاهُ مِنَ الْقَرْيَةِ الَّتِي كَانَتْ تَعْمَلُ الْخَبَائِثَ ۗ إِنَّهُمْ كَانُوا قَوْمَ سَوْءٍ فَاسِقِينَ

ಮತ್ತು ಪ್ರವಾದಿ ಲೂತ್ ರಿಗೆ ನಾವು ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಸುಜ್ಞಾನ ನೀಡಿದ್ದೆವು. ಅಶ್ಲೀಲ ಕೃತ್ಯಗಳಲ್ಲಿ ನಿರತರಾಗಿದ್ದ ಒಂದು ನಾಡಿನಿಂದ ನಾವು ಅವರನ್ನು ಪಾರುಮಾಡಿದ್ದೆವು. ನಿಜವಾಗಿಯೂ ಅಲ್ಲಿಯವರು ಅತ್ಯಂತ ಕೆಟ್ಟವರು ಮತ್ತು ಮಾತು ಮೀರಿ ವರ್ತಿಸುವ ಜನರಾಗಿದ್ದರು. {74}

وَأَدْخَلْنَاهُ فِي رَحْمَتِنَا ۖ إِنَّهُ مِنَ الصَّالِحِينَ

ಮತ್ತು ಲೂತ್ ರನ್ನು ನಾವು ನಮ್ಮ ವಿಶೇಷ ಕಾರುಣ್ಯದೊಳಗೆ ಸೇರಿಸಿಕೊಂಡೆವು. ಅವರು ಸಹ ಒಬ್ಬ ಸಜ್ಜನರಾಗಿದ್ದರು. {75}

وَنُوحًا إِذْ نَادَىٰ مِنْ قَبْلُ فَاسْتَجَبْنَا لَهُ فَنَجَّيْنَاهُ وَأَهْلَهُ مِنَ الْكَرْبِ الْعَظِيمِ

ಪೈಗಂಬರರೇ, ಇವೆಲ್ಲಕ್ಕಿಂತ ಮುಂಚೆ ನೀವು ಪ್ರವಾದಿ ನೂಹ್ ರ ಪ್ರಾರ್ಥನೆಯನ್ನು ನೋಡಿರಿ. ನಾವು ಅವರ ಪ್ರಾರ್ಥನೆಗೆ ಓಗೊಟ್ಟು ಅವರನ್ನೂ ಅವರ ಪರಿವಾರದವರನ್ನೂ ಒಂದು ಮಹಾ ಸಂಕಷ್ಟದಿಂದ ಪಾರುಮಾಡಿದೆವು. {76}

وَنَصَرْنَاهُ مِنَ الْقَوْمِ الَّذِينَ كَذَّبُوا بِآيَاتِنَا ۚ إِنَّهُمْ كَانُوا قَوْمَ سَوْءٍ فَأَغْرَقْنَاهُمْ أَجْمَعِينَ

ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದ ಒಂದು ಜನಾಂಗದ ವಿರುದ್ಧ ನಾವು ನೂಹ್ ರಿಗೆ ಸಹಾಯ ಮಾಡಿದೆವು. ನಿಜವಾಗಿ ಅದೊಂದು ಕೆಟ್ಟ ಜನಾಂಗವಾಗಿತ್ತು; ಮತ್ತು ನಾವು ಅವರನ್ನು ಸಾರಾಸಗಟಾಗಿ ಮುಳುಗಿಸಿ ಸಾಯಿಸಿದೆವು. {77}

وَدَاوُودَ وَسُلَيْمَانَ إِذْ يَحْكُمَانِ فِي الْحَرْثِ إِذْ نَفَشَتْ فِيهِ غَنَمُ الْقَوْمِ وَكُنَّا لِحُكْمِهِمْ شَاهِدِينَ

ಇನ್ನು ಪ್ರವಾದಿಗಳಾದ ದಾವೂದ್ ಮತ್ತು (ಅವರ ಪುತ್ರ) ಸುಲೈಮಾನ್ ರ ಬಗ್ಗೆ ಹೇಳುವುದಾದರೆ, ಒಂದು ಸಮುದಾಯಕ್ಕೆ ಸೇರಿದವರ ಮೇಕೆಗಳು ರಾತ್ರಿ ವೇಳೆ ಒಂದು ಹೊಲವನ್ನು ಮೇಯ್ದಿದ್ದ ಮೊಕದ್ದಮೆಯೊಂದರಲ್ಲಿ ಅವರಿಬ್ಬರು ತೀರ್ಪು ನೀಡುತ್ತಿದ್ದಾಗ, ಅವರು ನೀಡಿದ ಆ ತೀರ್ಪಿಗೆ ನಾವು ಸಾಕ್ಷಿಯಾಗಿದ್ದೆವು. {78}

فَفَهَّمْنَاهَا سُلَيْمَانَ ۚ وَكُلًّا آتَيْنَا حُكْمًا وَعِلْمًا ۚ وَسَخَّرْنَا مَعَ دَاوُودَ الْجِبَالَ يُسَبِّحْنَ وَالطَّيْرَ ۚ وَكُنَّا فَاعِلِينَ

(ತೀರ್ಮಾನ ಹೇಗಿರಬೇಕೆಂದು) ನಾವು ಸುಲೈಮಾನ್ ರಿಗೆ ಅರಿವು ನೀಡಿದ್ದೆವು. ಇಬ್ಬರಿಗೂ ನಾವು ತೀರ್ಪುಗಾರಿಕೆಯ ಸಾಮರ್ಥ್ಯ ಹಾಗೂ ಸುಜ್ಞಾನವನ್ನು ದಯಪಾಲಿಸಿದ್ದೆವು. ಪ್ರವಾದಿ ದಾವೂದ್ ರು ನಮ್ಮ ಕೀರ್ತನೆ ಮಾಡುವಾಗ ಅವರ ಜೊತೆಜೊತೆಗೇ ಪರ್ವತಗಳೂ ಪಕ್ಷಿಗಳೂ ಕೀರ್ತನೆ ಮಾಡುವಂತೆ, ನಾವು ಅವುಗಳನ್ನು ದಾವೂದ್ ರಿಗೆ ಅಣಿಗೊಳಿಸಿ ಕೊಟ್ಟಿದ್ದೆವು. ಹೌದು, ಅದನ್ನೆಲ್ಲಾ ಮಾಡಿದವರು ನಾವೇ ಆಗಿದ್ದೆವು. {79}

وَعَلَّمْنَاهُ صَنْعَةَ لَبُوسٍ لَكُمْ لِتُحْصِنَكُمْ مِنْ بَأْسِكُمْ ۖ فَهَلْ أَنْتُمْ شَاكِرُونَ

ಜನರೇ, (ಈಗ) ನಿಮ್ಮ ಯುದ್ಧಗಳಲ್ಲಿ ನಿಮಗೆ ರಕ್ಷಣೆ ಒದಗಿಸುವ (ಉಕ್ಕಿನ) ಕವಚಗಳನ್ನು ತಯಾರಿಸುವ ಕಲೆಯನ್ನು ನಾವೇ (ಅಂದು) ದಾವೂದ್ ರಿಗೆ ಕಲಿಸಿದ್ದೆವು. (ದಾವೂದ್ ರು ಎಲ್ಲದಕ್ಕೂ ನಮಗೆ ಕೃತಜ್ಞರಾಗಿದ್ದರು; ಆದರೆ) ಜನರೇ, ನೀವು ಕೃತಜ್ಞರಾಗುವುದಿಲ್ಲವೇ? {80}

وَلِسُلَيْمَانَ الرِّيحَ عَاصِفَةً تَجْرِي بِأَمْرِهِ إِلَى الْأَرْضِ الَّتِي بَارَكْنَا فِيهَا ۚ وَكُنَّا بِكُلِّ شَيْءٍ عَالِمِينَ

ಇನ್ನು, [ಸಮುದ್ರಗಳಲ್ಲಿ ಹಡಗುಗಳನ್ನು ಚಲಾಯಿಸಲು] ರಭಸದಿಂದ ಬೀಸುವ ಗಾಳಿಯನ್ನು ನಾವು ಪ್ರವಾದಿ ಸುಲೈಮಾನ್ ರ ನಿರ್ದೇಶನಗಳಿಗೆ ಅಧೀನಪಡಿಸಿದ್ದೆವು. ಅದು ಅವರ ಆದೇಶಕ್ಕನುಗುಣವಾಗಿ, ನಾವು ಅನುಗ್ರಹೀತಗೊಳಿಸಿದ ನಾಡು (ಜರುಸಲೆಮ್) ಕಡೆಗೆ ಚಲಿಸುತ್ತಿತ್ತು. [ಹೌದು, ಯಾರಿಗೆ ಏನು ಕೊಡಬೇಕೆಂಬುದನ್ನು] ನಾವು ಚೆನ್ನಾಗಿ ಬಲ್ಲವರಾಗಿದ್ದೇವೆ. {81}

وَمِنَ الشَّيَاطِينِ مَنْ يَغُوصُونَ لَهُ وَيَعْمَلُونَ عَمَلًا دُونَ ذَٰلِكَ ۖ وَكُنَّا لَهُمْ حَافِظِينَ

ಅಂತೆಯೇ, ಸೈತಾನರ ವರ್ಗಕ್ಕೆ ಸೇರಿದ ಕೆಲವರು ಅವರಿಗಾಗಿ ಸಮುದ್ರಗಳಲ್ಲಿ ಮುಳುಗುವ ಕೆಲಸ ನಿರ್ವಹಿಸುತ್ತಿದ್ದರು. ಮಾತ್ರವಲ್ಲ ಇತರ ಕೆಲವು ಕೆಲಸಗಳನ್ನೂ ಅವರು ಮಾಡುತ್ತಿದ್ದರು. ಆದರೆ (ಸೈತಾನರುಗಳು ಸುಲೈಮಾನ್ ರವರ ಆಜ್ಞೆಯನ್ನು ಮೀರದಂತೆ) ಅವರ ಮೇಲೆ ನಾವೇ ನಿಗಾ ಇಡುತ್ತಿದ್ದೆವು. {82}

وَأَيُّوبَ إِذْ نَادَىٰ رَبَّهُ أَنِّي مَسَّنِيَ الضُّرُّ وَأَنْتَ أَرْحَمُ الرَّاحِمِينَ

ಇನ್ನು ಪ್ರವಾದಿ ಅಯ್ಯೂಬ್ ರ (ವಿಷಯವನ್ನೂ ಇವರಿಗೆ ನೆನಪಿಸಿಕೊಡಿ). ಅವರು ತಮ್ಮ ಪರಿಪಾಲಕನಾದ (ಅಲ್ಲಾಹ್ ನನ್ನ) ಕರೆದು, ನನಗೆ ಯಾತನಾಮಯ ರೋಗ ತಗುಲಿದೆ, (ಪ್ರಭುವೇ, ನನ್ನ ಮೇಲೆ ಕರುಣೆ ತೋರು, ಏಕೆಂದರೆ) ನೀನೇ ಎಲ್ಲಕ್ಕಿಂತ ಹೆಚ್ಚು ಕರುಣೆ ತೋರುವವನಾಗಿರುವೆ ಎಂದು ಪ್ರಾರ್ಥಿಸಿದ್ದರು. {83}

فَاسْتَجَبْنَا لَهُ فَكَشَفْنَا مَا بِهِ مِنْ ضُرٍّ ۖ وَآتَيْنَاهُ أَهْلَهُ وَمِثْلَهُمْ مَعَهُمْ رَحْمَةً مِنْ عِنْدِنَا وَذِكْرَىٰ لِلْعَابِدِينَ

ಆಗ ನಾವು ಅವರ ಪ್ರಾರ್ಥನೆಗೆ ಓಗೊಟ್ಟೆವು ಮತ್ತು ಅವರಿಗೆ ತಗುಲಿದ್ದ ಯಾತನೆಯನ್ನು ಅವರಿಂದ ದೂರೀಕರಿಸಿದೆವು. ನಂತರ ಅವರ ಕುಟುಂಬವನ್ನು ಅವರಿಗೆ ಮರಳಿ ನೀಡಿದೆವು. ಮಾತ್ರವಲ್ಲ, ಅದರೊಂದಿಗೆ ನಮ್ಮ ವತಿಯಿಂದ ವಿಶೇಷ ಅನುಗ್ರಹವೆಂಬಂತೆ ಅಂತಹದ್ದೇ ಮತ್ತೊಂದು ಪರಿವಾರವನ್ನೂ ಅವರಿಗೆ ನೀಡಿದೆವು. ಅದರಲ್ಲಿ ನಮ್ಮ ಇತರ ಉಪಾಸಕರಿಗೂ ಬುದ್ಧಿವಾದವಿದೆ. {84}

وَإِسْمَاعِيلَ وَإِدْرِيسَ وَذَا الْكِفْلِ ۖ كُلٌّ مِنَ الصَّابِرِينَ

ಹೌದು, ಪ್ರವಾದಿಗಳಾದ ಇಸ್ಮಾಈಲ್, ಇದ್ರೀಸ್ ಮತ್ತು ದುಲ್-ಕಿಫ್ಲ್ ರವರ ವಿಷಯವೂ ಅಂತಹದ್ದೇ. ಅವರೆಲ್ಲರೂ (ಎಂತಹ ಸಂಕಷ್ಟದ ಸ್ಥಿತಿಯಲ್ಲೂ) ದೃಢಚಿತ್ತತೆ ಮತ್ತು ತಾಳ್ಮೆಯುಳ್ಳವರಾಗಿದ್ದರು. {85}

وَأَدْخَلْنَاهُمْ فِي رَحْمَتِنَا ۖ إِنَّهُمْ مِنَ الصَّالِحِينَ

ನಾವು ಆ ಪ್ರವಾದಿಗಳನ್ನೂ ಸಹ ನಮ್ಮ ವಿಶೇಷ ಕಾರುಣ್ಯದೊಳಗೆ ಸೇರಿಸಿಕೊಂಡಿದ್ದೆವು; ಸಂಶಯಾತೀತವಾಗಿ ಅವರೆಲ್ಲರೂ ಸಜ್ಜನರಾಗಿದ್ದರು. {86}

وَذَا النُّونِ إِذْ ذَهَبَ مُغَاضِبًا فَظَنَّ أَنْ لَنْ نَقْدِرَ عَلَيْهِ فَنَادَىٰ فِي الظُّلُمَاتِ أَنْ لَا إِلَٰهَ إِلَّا أَنْتَ سُبْحَانَكَ إِنِّي كُنْتُ مِنَ الظَّالِمِينَ

ಇನ್ನು, ದುನ್-ನೂನ್ [ಅಂದರೆ ಒಂದು ಬೃಹತ್ ಮೀನಿನ ಹೊಟ್ಟೆಯಲ್ಲಿ ಶಿಕ್ಷಾರ್ಥ ಸ್ವಲ್ಪ ಸಮಯ ಕಳೆದ ಪ್ರವಾದಿ ಯೂನುಸ್] ರವರ ವಿಷಯ! [ತಮ್ಮ ನಾಡಿನ ಜನರು ಅಲ್ಲಾಹ್ ನ ಉಪದೇಶವನ್ನು ನಿರಂತರ ಧಿಕ್ಕರಿಸಿದ್ದ ಕಾರಣಕ್ಕಾಗಿ ಅವರು ಅಲ್ಲಾಹ್ ನ ಅನುಮತಿ ಲಭಿಸುವುದಕ್ಕಿಂತ ಮುಂಚಿತವಾಗಿ] ಕುಪಿತಗೊಂಡು ತಮ್ಮ ನಾಡಿನಿಂದ ಹೊರಟು ಹೋದ ಸಂದರ್ಭವನ್ನು ಸ್ಮರಿಸಿರಿ! (ಆ ತಪ್ಪಿಗಾಗಿ) ನಾವು ಅವರನ್ನು ಹಿಡಿಯಲಿಕ್ಕಿಲ್ಲ ಎಂದೇ ಅವರು ಭ್ರಮಿಸಿದ್ದರು! ನಂತರ [ಮೀನಿನ ಹೊಟ್ಟೆಯಲ್ಲಿ ಸಿಲುಕಿಕೊಂಡ] ಅವರು ಆ ಅಂಧಕಾರದೊಳಗಿನಿಂದ, ಪ್ರಭುವೇ, ನಿನ್ನ ಹೊರತು ಬೇರೆ ಯಾರೂ ದೇವನಿಲ್ಲ; ನೀನು ಪರಮ ಪಾವನನಾಗಿರುವೆ; ನಿಜವಾಗಿಯೂ ನಾನೊಬ್ಬ ತಪ್ಪಿತಸ್ಥನಾಗಿರುವೆ - ಎಂದು ಪ್ರಾರ್ಥಿಸಿದರು. {87}

فَاسْتَجَبْنَا لَهُ وَنَجَّيْنَاهُ مِنَ الْغَمِّ ۚ وَكَذَٰلِكَ نُنْجِي الْمُؤْمِنِينَ

ಆಗ ನಾವು ಅವರ ಪ್ರಾರ್ಥನೆಗೆ ಓಗೊಟ್ಟೆವು ಮತ್ತು ಅವರನ್ನು ವ್ಯಥೆಮುಕ್ತ ಗೊಳಿಸಿದೆವು. ನಾವು ವಿಶ್ವಾಸಿ ಜನರನ್ನು ಹಾಗೆಯೇ (ಸಂಕಷ್ಟಗಳಿಂದ) ಪಾರುಮಾಡುತ್ತೇವೆ. {88}

وَزَكَرِيَّا إِذْ نَادَىٰ رَبَّهُ رَبِّ لَا تَذَرْنِي فَرْدًا وَأَنْتَ خَيْرُ الْوَارِثِينَ

ಇನ್ನು ಪ್ರವಾದಿ ಝಕರಿಯ್ಯಾ ರ ಬಗ್ಗೆ ಹೇಳುವುದಾದರೆ, ಅವರು ತನ್ನ ಪರಿಪಾಲಕನಾದ (ಅಲ್ಲಾಹ್ ನೊಂದಿಗೆ), ಓ ನನ್ನ ಪರಿಪಾಲಕನೇ, ನೀನು ನನ್ನನ್ನು ಒಬ್ಬಂಟಿಗನಾಗಿ ಬಿಡಬೇಡ; [ನನಗೆ ಸಂತಾನವನ್ನು ದಯಪಾಲಿಸು]; ಉತ್ತರಾಧಿಕಾರತ್ವದ (ನಿರ್ಣಯದ) ವಿಷಯದಲ್ಲಿ ಉತ್ತಮವಾದವನು ನೀನೇ ಆಗಿರುವೆ - ಎಂದು ಪ್ರಾರ್ಥಿಸಿದ್ದುದನ್ನು ನೆನಪಿಸಿರಿ. {89}

فَاسْتَجَبْنَا لَهُ وَوَهَبْنَا لَهُ يَحْيَىٰ وَأَصْلَحْنَا لَهُ زَوْجَهُ ۚ إِنَّهُمْ كَانُوا يُسَارِعُونَ فِي الْخَيْرَاتِ وَيَدْعُونَنَا رَغَبًا وَرَهَبًا ۖ وَكَانُوا لَنَا خَاشِعِينَ

ಆಗ ನಾವು ಅವರ ಪ್ರಾರ್ಥನೆಗೆ ಒಗೊಟ್ಟೆವು ಮತ್ತು ಅವರಿಗೆ (ಪುತ್ರನನ್ನಾಗಿ) ಯಹ್ಯಾ ರನ್ನು ನೀಡಿದೆವು; ಅವರಿಗಾಗಿ ಅವರ ಪತ್ನಿಯ (ಜಂಜೆತನವನ್ನು) ಗುಣಪಡಿಸಿದೆವು. ಹೌದು, ಆ ಎಲ್ಲ ಪ್ರವಾದಿಗಳೂ ಸತ್ಕಾರ್ಯಗಳ ವಿಷಯದಲ್ಲಿ ಸ್ಪರ್ಧಿಸುವವರಾಗಿದ್ದರು; ನಿರೀಕ್ಷೆಗಳೊಂದಿಗೂ ಭಯಭಕ್ತಿಯೊಂದಿಗೂ ಅವರೆಲ್ಲ ನಮಗೆ ಪ್ರಾರ್ಥನೆ (ಅರ್ಥಾತ್ ನಮಾಝ್) ಸಲ್ಲಿಸುತ್ತಿದ್ದರು. ಹೌದು, ಸಂಪೂರ್ಣವಾದ ವಿನಮ್ರತಾಭಾವದೊಂದಿಗೆ ನಮ್ಮ ಮುಂದೆ (ನಮಾಝ್ ನಿರ್ವಹಿಸಲು) ನಿಲ್ಲುತ್ತಿದ್ದರು. {90}

وَالَّتِي أَحْصَنَتْ فَرْجَهَا فَنَفَخْنَا فِيهَا مِنْ رُوحِنَا وَجَعَلْنَاهَا وَابْنَهَا آيَةً لِلْعَالَمِينَ

ಅಂತೆಯೇ, ತನ್ನ ಚಾರಿತ್ರ್ಯವನ್ನು ಕಾಪಾಡಿಕೊಂಡ ಆ ಶೀಲವಂತೆ ಸ್ತ್ರೀ (ಅಂದರೆ ಕನ್ಯೆ ಮರ್ಯಮ್) ರನ್ನೂ ಪ್ರಸ್ತಾಪಿಸಿರಿ. ನಮ್ಮ ಚೇತನದ ಒಂದಂಶವನ್ನು ನಾವು ಅವರೊಳಗೆ ಊದಿದೆವು, ನಂತರ ಅವರನ್ನೂ ಅವರ ಪುತ್ರ (ಈಸಾ) ರನ್ನೂ ನಾವು ಲೋಕದ ಜನರಿಗೆ ಒಂದು ದೃಷ್ಟಾಂತವನ್ನಾಗಿ ಮಾಡಿದೆವು. {91}

إِنَّ هَٰذِهِ أُمَّتُكُمْ أُمَّةً وَاحِدَةً وَأَنَا رَبُّكُمْ فَاعْبُدُونِ

ಹೌದು, ನೀವೆಲ್ಲರೂ [ಅಂದರೆ ವಿವಿಧ ಕಾಲಗಳಲ್ಲಿ ಬಂದ ವಿವಿಧ ಪ್ರವಾದಿಗಳ ಅನುಯಾಯಿಗಳು] ಯಥಾರ್ಥದಲ್ಲಿ ಒಂದೇ ಧರ್ಮಕ್ಕೆ [ಅರ್ಥಾತ್ ಏಕದೇವೋಪಾಸನೆಯ ಧರ್ಮಕ್ಕೆ] ಸೇರಿದವರಾಗಿದ್ದೀರಿ. ಮತ್ತು ನಿಮ್ಮೆಲ್ಲರ ದೇವನು (ಎಲ್ಲಾ ಕಾಲದಲ್ಲೂ) ನಾನೇ ಆಗಿದ್ದೆನು; ಆದ್ದರಿಂದ ನೀವು ನನ್ನನ್ನು ಮಾತ್ರ ಆರಾಧಿಸಿರಿ. {92}

وَتَقَطَّعُوا أَمْرَهُمْ بَيْنَهُمْ ۖ كُلٌّ إِلَيْنَا رَاجِعُونَ

[ಆರಂಭದಿಂದಲೇ ಒಂದೇ ಆಗಿದ್ದ] ಧರ್ಮವಿಧಿಯನ್ನು ನಂತರ ಜನರು ತುಂಡು ತುಂಡಾಗಿ ಮಾಡಿ ಬಿಟ್ಟರು. (ನೆನಪಿರಲಿ, ಕೊನೆಗೊಂದು ದಿನ) ಎಲ್ಲರಿಗೂ ನಮ್ಮ ಕಡೆಗೇ ಮರಳಿ ಬರಬೇಕಾಗಿದೆ! {93}

فَمَنْ يَعْمَلْ مِنَ الصَّالِحَاتِ وَهُوَ مُؤْمِنٌ فَلَا كُفْرَانَ لِسَعْيِهِ وَإِنَّا لَهُ كَاتِبُونَ

ಇನ್ನು, ಒಬ್ಬಾತನು ಧರ್ಮವಿಶ್ವಾಸ ಹೊಂದಿದ್ದು ಆತನು ಸತ್ಕಾರ್ಯಗಳನ್ನೂ ಮಾಡಿದವನಾಗಿದ್ದರೆ ಆತನ ಶ್ರಮವು ತಿರಸ್ಕರಿಸಲ್ಪಡುವುದಿಲ್ಲ. ನಾವದನ್ನು ಆತನಿಗಾಗಿ ಬರೆದಿಡುತ್ತೇವೆ. {94}

وَحَرَامٌ عَلَىٰ قَرْيَةٍ أَهْلَكْنَاهَا أَنَّهُمْ لَا يَرْجِعُونَ

ನಾವು (ಶಿಕ್ಷಾರ್ಥ) ಧ್ವಂಸಗೊಳಿಸಿದ ಒಂದು ನಾಡಿನ ಜನರು ಅಲ್ಲಿಗೆ ಮರಳಿ ಬರಬಾರದು ಎಂಬ ನಿಷೇಧ ಜಾರಿಯಲ್ಲಿರುತ್ತದೆ; {95}

حَتَّىٰ إِذَا فُتِحَتْ يَأْجُوجُ وَمَأْجُوجُ وَهُمْ مِنْ كُلِّ حَدَبٍ يَنْسِلُونَ

ಎಲ್ಲಿಯ ತನಕವೆಂದರೆ, ಯಅಜೂಜ್ ಮತ್ತು ಮಅಜೂಜ್ ಗಳ ವಂಶಸ್ಥರನ್ನು ತೆರೆದು ಬಿಡಲಾಗುವ ತನಕ! ಆಗ ಅವರು ಪ್ರತಿಯೊಂದು ದಿಣ್ಣೆ, ದಿಬ್ಬಗಳಿಂದಿಳಿದು ನುಸುಳಿ ಬರುವರು! {96}

وَاقْتَرَبَ الْوَعْدُ الْحَقُّ فَإِذَا هِيَ شَاخِصَةٌ أَبْصَارُ الَّذِينَ كَفَرُوا يَا وَيْلَنَا قَدْ كُنَّا فِي غَفْلَةٍ مِنْ هَٰذَا بَلْ كُنَّا ظَالِمِينَ

ರುಜುವಾದ ಆ ವಾಗ್ದಾನಿತ ಸಮಯ (ಅಂದರೆ ಲೋಕವು ಅಂತ್ಯಗೊಳ್ಳುವ ಆ ಘಳಿಗೆ) ಹತ್ತಿರವಾಗುತ್ತಿದ್ದಂತೆ ಅದನ್ನು ಅಲ್ಲಗಳೆದವರ ಕಣ್ಣುಗಳು (ದಿಗ್ಭ್ರಮೆಗೊಂಡು) ಎವೆಯಿಕ್ಕದೆ ದಿಟ್ಟಿಸಿ ನೋಡುತ್ತಿರುವುವು. ಆಗ, ಅಯ್ಯಯ್ಯೋ, ನಮ್ಮ ಪ್ರಾರಬ್ಧವೇ, ಈ ಘಳಿಗೆಯ ಬಗ್ಗೆ ನಾವು ಅಸಡ್ಡೆ ತೋರಿದ್ದೆವು; ಅಲ್ಲ, ಬದಲಾಗಿ ನಾವು ಅನ್ಯಾಯವನ್ನೇ ಮಾಡುತ್ತಿದ್ದೆವು - (ಎಂದು ಅವರು ವ್ಯಥೆಪಡುವರು)! {97}

إِنَّكُمْ وَمَا تَعْبُدُونَ مِنْ دُونِ اللَّهِ حَصَبُ جَهَنَّمَ أَنْتُمْ لَهَا وَارِدُونَ

ಅಲ್ಲಾಹ್ ನನ್ನು ಬಿಟ್ಟು ನೀವು ಪೂಜಿಸುವ (ವಿಗ್ರಹಗಳು) ಹಾಗೂ (ಅವುಗಳನ್ನು ಪೂಜಿಸುವ) ನೀವು - ಎಲ್ಲರೂ ನರಕದ ಇಂಧನಗಳಾಗಿರುವಿರಿ! ಹೌದು, ನಿಶ್ಚಿತವಾಗಿ ನೀವೆಲ್ಲರೂ ನರಕವನ್ನು ತಲುಪಲಿರುವಿರಿ. {98}

لَوْ كَانَ هَٰؤُلَاءِ آلِهَةً مَا وَرَدُوهَا ۖ وَكُلٌّ فِيهَا خَالِدُونَ

ಒಂದು ವೇಳೆ ಅವುಗಳು ನಿಜವಾದ ದೇವರುಗಳಾಗಿದ್ದರೆ ನರಕವನ್ನು ಅವು ತಲುಪುತ್ತಲೇ ಇರಲಿಲ್ಲ; ಹೌದು, ಅವರೆಲ್ಲರೂ [ಅಂದರೆ ಪೂಜಿಸಿದವರೂ ಪೂಜಿಸಲ್ಪಟ್ಟವರೂ] ಎಂದೆಂದಿಗೂ ನರಕದಲ್ಲೇ ಬಿದ್ದಿರುವರು. {99}

لَهُمْ فِيهَا زَفِيرٌ وَهُمْ فِيهَا لَا يَسْمَعُونَ

ಅವರಿಗೆ (ಅಂದರೆ ವಿಗ್ರಹಗಳ ಪೂಜಕರಿಗೆ) ಅಲ್ಲಿ ನರಳುವಿಕೆಯೇ ಗತಿ; ಮತ್ತು (ಪೂಜಿಸಲ್ಪಟ್ಟ ವಿಗ್ರಹಗಳಿಗೆ) ಅಲ್ಲಿ ಏನನ್ನೂ ಕೇಳಿಸಿಕೊಳ್ಳಲು ಸಧ್ಯವಾಗದು. {100}

إِنَّ الَّذِينَ سَبَقَتْ لَهُمْ مِنَّا الْحُسْنَىٰ أُولَٰئِكَ عَنْهَا مُبْعَدُونَ

ನಿಜವಾಗಿ, ಯಾರ ಬಗ್ಗೆ ಅದಾಗಲೇ ನಮ್ಮ ವತಿಯಿಂದ ಒಳ್ಳೆಯ (ಅಂದರೆ ಸ್ವರ್ಗದ) ತೀರ್ಮಾನವಾಗಿ ಬಿಟ್ಟಿದೆಯೋ ಅವರನ್ನು ಮಾತ್ರ ನರಕದಿಂದ ದೂರ ಇರಿಸಲಾಗುವುದು. {101}

لَا يَسْمَعُونَ حَسِيسَهَا ۖ وَهُمْ فِي مَا اشْتَهَتْ أَنْفُسُهُمْ خَالِدُونَ

ಅಂದರೆ, ಅವರು ನರಕದಲ್ಲಿನ ರೋದನ ಕೇಳಿಸಿಕೊಳ್ಳಲಾರರು. ಬದಲಾಗಿ ತಮ್ಮ ಮನಸ್ಸುಗಳು ಅತಿಯಾಗಿ ಬಯಸುವ (ಐಷಾರಾಮಗಳ ನಡುವೆ) ಅವರು ಸದಾಕಾಲ ಜೀವಿಸಲಿರುವರು. {102}

لَا يَحْزُنُهُمُ الْفَزَعُ الْأَكْبَرُ وَتَتَلَقَّاهُمُ الْمَلَائِكَةُ هَٰذَا يَوْمُكُمُ الَّذِي كُنْتُمْ تُوعَدُونَ

(ಆ ಘಳಿಗೆಯ) ಅತ್ಯಂತ ಘೋರ ಭಯಾನಕತೆ ಅವರನ್ನು ಸ್ವಲ್ಪವೂ ವ್ಯಾಕುಲಗೊಳಿಸದು. ಬದಲಾಗಿ ಮಲಕ್ ಗಳ ತಂಡವು ಅವರನ್ನು ಭೇಟಿಯಾಗಿ, ಇದುವೇ ನಿಮ್ಮೊಂದಿಗೆ ವಾಗ್ದಾನ ಮಾಡಲಾಗಿದ್ದ ಆ ನಿಮ್ಮ ದಿನ ಎಂದು ಹೇಳಲಿರುವರು. {103}

يَوْمَ نَطْوِي السَّمَاءَ كَطَيِّ السِّجِلِّ لِلْكُتُبِ ۚ كَمَا بَدَأْنَا أَوَّلَ خَلْقٍ نُعِيدُهُ ۚ وَعْدًا عَلَيْنَا ۚ إِنَّا كُنَّا فَاعِلِينَ

ದಾಖಲೆಗಳ ಹಾಳೆಗಳನ್ನು ಸುರುಳಿಯಾಗಿ ಸುತ್ತುವಂತೆ ಆ ದಿನ ನಾವು ಆಕಾಶವನ್ನು ಸುರುಳಿ ಸುರುಳಿಯಾಗಿ ಸುತ್ತಿ ಬಿಡುವೆವು. ನಂತರ, ಸೃಷ್ಟಿಕಾರ್ಯವನ್ನು ಮೊದಲ ಬಾರಿಗೆ ಆರಂಭಿಸಿದಂತೆ ನಾವು ಅದನ್ನು ಪುನರಾವರ್ತಿಸಲಿರುವೆವು. ಅದು ನಾವು ಪೂರ್ತಿಗೊಳಿಸಲೇ ಬೇಕಾದ ಒಂದು ವಾಗ್ದಾನವಾಗಿದೆ. ಅದನ್ನು ನಾವು ನಿಶ್ಚಿತವಾಗಿ ಮಾಡಿಯೇ ತೀರುವೆವು. {104}

وَلَقَدْ كَتَبْنَا فِي الزَّبُورِ مِنْ بَعْدِ الذِّكْرِ أَنَّ الْأَرْضَ يَرِثُهَا عِبَادِيَ الصَّالِحُونَ

[ಇಸ್ರಾಈಲ್ ವಂಶಸ್ಥರ ರಾಜಪ್ರವಾದಿಯಾದ ದಾವೂದ್ ರಿಗೆ ನೀಡಲಾದ] ಝಬೂರ್ ಗ್ರಂಥದಲ್ಲಿ (ಕೆಲವು) ಉಪದೇಶಗಳನ್ನು ನೀಡಿದ ನಂತರ, ಈ ನಾಡನ್ನು [ಅಂದರೆ ಜೆರುಸಲೆಮ್ ಮತ್ತು ಪರಿಸರವನ್ನು] ನಮ್ಮ ನೀತಿವಂತ ಉಪಾಸಕರು ಮಾತ್ರ ಬಳುವಳಿ ಪಡೆಯಬಹುದು ಎಂದು ನಾವು ಅದಾಗಲೇ ಬರೆದಿದ್ದೆವು! {105}

إِنَّ فِي هَٰذَا لَبَلَاغًا لِقَوْمٍ عَابِدِينَ

ಹೌದು, ಈಗ ಈ ಕುರ್‌ಆನ್ ನಲ್ಲಿಯೂ [ಝಬೂರ್ ನ ಅಂತಹ ಸಂದೇಶವನ್ನು] ಅಗತ್ಯವಾಗಿ ನಮ್ಮ ಉಪಾಸಕರಿಗಾಗಿ ತಲುಪಿಸಬೇಕಾಗಿತ್ತು. {106}

وَمَا أَرْسَلْنَاكَ إِلَّا رَحْمَةً لِلْعَالَمِينَ

ಪೈಗಂಬರರೇ! ಸಮಸ್ತ ಲೋಕವಾಸಿಗಳಿಗೆ ಒಂದು ಅನುಗ್ರಹವಾಗಿ ಮಾತ್ರ ನಾವು ನಿಮನ್ನು (ಒಬ್ಬ ಪ್ರವಾದಿಯನ್ನಾಗಿ ಮಾಡಿ) ಕಳುಹಿಸಿರುತ್ತೇವೆ. {107}

قُلْ إِنَّمَا يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ ۖ فَهَلْ أَنْتُمْ مُسْلِمُونَ

ಜನರೇ, ನಿಮ್ಮೆಲ್ಲರ ದೇವನು ಆ ಒಬ್ಬ ದೇವನು ಮಾತ್ರ ಎಂದು ನನಗೆ ವಹೀ (ಅರ್ಥಾತ್ ದಿವ್ಯಸಂದೇಶದ) ಮೂಲಕ ತಿಳಿಸಲಾಗಿದೆ; ಆದ್ದರಿಂದ ಇನ್ನಾದರೂ ನೀವು (ಅವನಿಗೆ) ತಲೆಬಾಗುವುದಿಲ್ಲವೇ ಎಂದು (ಪೈಗಂಬರರೇ ನೀವು ಸಮಸ್ತ ಜನರೊಂದಿಗೆ) ಕೇಳಿರಿ. {108}

فَإِنْ تَوَلَّوْا فَقُلْ آذَنْتُكُمْ عَلَىٰ سَوَاءٍ ۖ وَإِنْ أَدْرِي أَقَرِيبٌ أَمْ بَعِيدٌ مَا تُوعَدُونَ

ಒಂದು ವೇಳೆ ಅವರು (ಧಿಕ್ಕಾರ ತೋರುತ್ತಾ) ಮುಖ ಬೇರೆಡೆಗೆ ತಿರುಗಿಸಿಕೊಂಡರೆ, ಪೈಗಂಬರರೇ, ನೀವು ಅವರೊಂದಿಗೆ, ನಿಮ್ಮೆಲ್ಲರಿಗೂ ಸಮಾನವಾದ ರೀತಿಯಲ್ಲಿ ಅರ್ಥವಾಗುವಂತೆ ನಾನು ಎಚ್ಚರಿಕೆ ನೀಡುರುತ್ತೇನೆ; ಇನ್ನು ನಿಮ್ಮೊಂದಿಗೆ ವಾಗ್ದಾನಿಸಲಾದ ಸಂಗತಿ (ಶಿಕ್ಷೆ) ಹತ್ತಿರದಲ್ಲಿದೆಯೋ ಅಥವಾ ದೂರದಲ್ಲಿದೆಯೋ ನನಗಂತು ತಿಳಿಯದು ಎಂದು ಹೇಳಿರಿ! {109}

إِنَّهُ يَعْلَمُ الْجَهْرَ مِنَ الْقَوْلِ وَيَعْلَمُ مَا تَكْتُمُونَ

ನಿಜವೇನೆಂದರೆ ಜೋರಾಗಿ ಆಡುವ ಮಾತನ್ನೂ ಅಲ್ಲಾಹ್ ನು ಅರಿತಿರುತ್ತಾನೆ ಹಾಗೂ ನೀವು ಗುಟ್ಟಾಗಿ ಆಡುವ ಮಾತನ್ನೂ ಅರಿತಿರುತ್ತಾನೆ. {110}

وَإِنْ أَدْرِي لَعَلَّهُ فِتْنَةٌ لَكُمْ وَمَتَاعٌ إِلَىٰ حِينٍ

[ದುಷ್ಟರಿಗೆ ಇರುವ ಶಿಕ್ಷೆಯಂತೂ ಪರಮ ಸತ್ಯ! ಆದರೆ ಈ ವಿಳಂಬವು] ನಿಮಗೊಂದು ಪರೀಕ್ಷೆಯೇ ಅಥವಾ ಸ್ವಲ್ಪ ಸಮಯಕ್ಕಾಗಿ ಸುಖಿಸಿಕೊಳ್ಳಲು ನಿಮಗೊಂದು ಅವಕಾಶವೇ ಎಂಬುದು ಮಾತ್ರ ನನಗೆ ತಿಳಿಯದ ವಿಷಯ! {111}

قَالَ رَبِّ احْكُمْ بِالْحَقِّ ۗ وَرَبُّنَا الرَّحْمَٰنُ الْمُسْتَعَانُ عَلَىٰ مَا تَصِفُونَ

(ಕೊನೆಯದಾಗಿ) ಪೈಗಂಬರರು ಹೀಗೆ ಪ್ರಾರ್ಥಿಸಿದರು: ಓ ನನ್ನ ಪರಿಪಾಲಕನಾದ ಪ್ರಭುವೇ, ಸತ್ಯದ ಬುನಾದಿಯ ಮೇಲೆ (ನಮ್ಮ ನಡುವೆ) ನೀನೇ ತೀರ್ಪು ನೀಡು; ಜನರೇ, ನಮ್ಮ ಪರಿಪಾಲಕನಾದ ಆ ಪ್ರಭು ಅತ್ಯಂತ ಹೆಚ್ಚು ದಯೆವುಳ್ಳವನು; ಅವನ ಕುರಿತು ನೀವು ಆಡುತ್ತಿರುವುದರ ವಿರುದ್ಧ ಅವನಿಂದಲೇ ನೆರವು ಪಡೆಯಬಹುದು. {112}

------

 ಅನುವಾದಿತ ಸೂರಃ ಗಳು

      Featured post

      ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...