تـرجمـة سورة السجدة من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت
سـهل الفهـم من غيـر الـرجـوع إلى كتاب التفسيـر
| ಸೂರಃ ಅಸ್ ಸಜ್ದಃ | ಪವಿತ್ರ ಕುರ್‌ಆನ್ ನ 32 ನೆಯ ಸೂರಃ | ಇದರಲ್ಲಿ ಒಟ್ಟು 30 ಆಯತ್ ಗಳು ಇವೆ |
![]()
ಅಪಾರ ದಯಾಳುವೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹನ ನಾಮದೊಂದಿಗೆ (ಆರಂಭಿಸುತ್ತೇನೆ)!
الم
ಅಲಿಫ್ - ಲಾಮ್ - ಮೀಮ್! {1}
تَنْزِيلُ الْكِتَابِ لَا رَيْبَ فِيهِ مِنْ رَبِّ الْعَالَمِينَ
ಈ ಗ್ರಂಥವು, ಸಂಶಯಾತೀತವಾಗಿ, ಲೋಕಗಳ ಪರಿಪಾಲಕನಾದ (ಅಲ್ಲಾಹ್ ನ) ಕಡೆಯಿಂದ ಇಳಿದು ಬರುತ್ತಿದೆ! {2}
أَمْ يَقُولُونَ افْتَرَاهُ ۚ بَلْ هُوَ الْحَقُّ مِنْ رَبِّكَ لِتُنْذِرَ قَوْمًا مَا أَتَاهُمْ مِنْ نَذِيرٍ مِنْ قَبْلِكَ لَعَلَّهُمْ يَهْتَدُونَ
ಏನು? ಇದನ್ನು ನೀವೇ ರಚಿಸಿರುವಿರಿ ಎಂದು ಅವರು ಆರೋಪಿಸುತ್ತಿರುವರೇ? ಇಲ್ಲ, (ಪೈಗಂಬರರೇ), ಇದನ್ನು ನೀವು ರಚಿಸಲಿಲ್ಲ, ಬದಲಾಗಿ ಇದೊಂದು ಸತ್ಯವಾದ ಗ್ರಂಥವಾಗಿದೆ. ಇದು ನಿಮ್ಮ ಕರ್ತಾರನ ಕಡೆಯಿಂದ ಬಂದಿರುತ್ತಿದೆ. ಯಾವ ಜನಸಮೂಹದಲ್ಲಿ ನಿಮಗಿಂತ ಮುಂಚೆ ಎಚ್ಚರಿಕೆ ನೀಡುವಂತಹ ಪ್ರವಾದಿಗಳು ಆಗಮಿಸಲಿಲ್ಲವೋ ಆ ಜನಸಮೂಹವನ್ನು ಇದೀಗ ಎಚ್ಚರಿಸಲು, ಮತ್ತು ಅವರು ಸರಿಯಾದ ಮಾರ್ಗದರ್ಶನ ಪಡೆಯುವಂತಾಗಲು ಇದನ್ನು ಇಳಿಸಲಾಗಿತ್ತಿದೆ. {3}
اللَّهُ الَّذِي خَلَقَ السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۖ مَا لَكُمْ مِنْ دُونِهِ مِنْ وَلِيٍّ وَلَا شَفِيعٍ ۚ أَفَلَا تَتَذَكَّرُونَ
ಅಕಾಶಗಳು, ಭೂಮಿ ಮತ್ತು ಅವುಗಳ ನಡುವೆ ಇರುವ ಸಕಲವನ್ನೂ ಆರು ಯುಗಗಳಲ್ಲಿ ಸೃಷ್ಟಿಸಿದವನೇ ಅಲ್ಲಾಹ್ ನು! ಅನಂತರ ಅವನು ಅಧಿಕಾರ ಗದ್ದುಗೆಯಲ್ಲಿ (ಅರಬಿ: ಅರ್ಷ್) ತನ್ನನ್ನು ನೆಲೆಗೊಳಿಸಿದನು. ಅವನ ಹೊರತು ನಿಮಗೆ ಸಹಾಯ ಮಾಡುವವನಾಗಲಿ, ನಿಮ್ಮ ಪರವಾಗಿ ಶಿಫಾರಸ್ಸು ಮಾಡುವವನಾಗಿ ಯಾರೂ ಇರಲಾರರು. ಆದರೂ ನೀವು ಉಪದೇಶ ಪಡೆಯುವುದಿಲ್ಲವೇ?! {4}
يُدَبِّرُ الْأَمْرَ مِنَ السَّمَاءِ إِلَى الْأَرْضِ ثُمَّ يَعْرُجُ إِلَيْهِ فِي يَوْمٍ كَانَ مِقْدَارُهُ أَلْفَ سَنَةٍ مِمَّا تَعُدُّونَ
ಅವನು ಭೂಮಿಯಲ್ಲಿನ ವಿದ್ಯಮಾನಗಳ ಯೋಜನೆಗಳನ್ನು ಆಕಾಶದಿಂದ ರೂಪಿಸುತ್ತಾನೆ. ನಂತರ ಒಂದು ದಿನ - ಅಂದರೆ ನಿಮ್ಮ ಎಣಿಕೆಯ ಪ್ರಕಾರ ಒಂದು ಸಾವಿರ ವರ್ಷಗಳಷ್ಟು ದೀರ್ಘವಾದ ದಿನ - ಅವು ಅವನೆಡೆಗೆ ಮರಳಲಿದೆ! {5}
ذَٰلِكَ عَالِمُ الْغَيْبِ وَالشَّهَادَةِ الْعَزِيزُ الرَّحِيمُ
ಅವನು (ನಿಮ್ಮ ಕಣ್ಣಿಗೆ) ಗೋಚರಿಸದ ಮತ್ತು ಗೋಚರಿಸುವ ಎಲ್ಲಾ ವಿಷಯಗಳನ್ನು ಬಲ್ಲವನು. ಅವನು ಅತ್ಯಂತ ಪ್ರಬಲನೂ ಕರುಣಾಮಯಿಯೂ ಆಗಿರುವನು. {6}
الَّذِي أَحْسَنَ كُلَّ شَيْءٍ خَلَقَهُ ۖ وَبَدَأَ خَلْقَ الْإِنْسَانِ مِنْ طِينٍ
ಏನನ್ನೆಲ್ಲ ಸೃಷ್ಟಿಸಿರುವನೋ ಅವೆಲ್ಲವನ್ನೂ ಅವನು ಬಹಳ ಉತ್ತಮ ಸ್ವರೂಪದಲ್ಲಿ ಸೃಷ್ಟಿಸಿದ್ದಾನೆ; ಹೌದು, ಮನುಷ್ಯರನ್ನು ಮೊದಲಿಗೆ ಅವನು ಜೇಡಿಮಣ್ಣಿನಿಂದ ಸೃಷ್ಟಿಸಲು ಆರಂಭಿಸಿದನು. {7}
ثُمَّ جَعَلَ نَسْلَهُ مِنْ سُلَالَةٍ مِنْ مَاءٍ مَهِينٍ
ನಂತರದ ಘಟ್ಟದಲ್ಲಿ ಮನಷ್ಯರ ಸಂತತಿಯು, ತುಚ್ಛವಾದ ದ್ರವರೂಪದ ಸತ್ವದಿಂದಿ (ಸ್ವಯಂ ಸಂತಾನೋತ್ಪತ್ತಿಯ ಮೂಲಕ ಮುಂದುವರಿಯುವಂತೆ) ಅವನು ರೂಪಿಸಿದನು. {8}
ثُمَّ سَوَّاهُ وَنَفَخَ فِيهِ مِنْ رُوحِهِ ۖ وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۚ قَلِيلًا مَا تَشْكُرُونَ
ನಂತರ ಸಕಲ ರೀತಿಯಲ್ಲಿ ಅವನನ್ನು ಸರಿಪಡಿಸಿದನು. ಅನಂತರ ತನ್ನ ಚೇತನವನ್ನು (ಅರಬಿ: ರೂಹ್) ಅವನೊಳಗೆ ಊದಿದನು. ತದನಂತರ (ಇನ್ನೂ ಗರ್ಭದಲ್ಲಿರುವಾಗಲೇ) ಅವನು ನಿಮ್ಮ ಕಿವಿಗಳನ್ನೂ ಕಣ್ಣುಗಳನ್ನೂ ಹೃದಯಗಳನ್ನೂ ಮಾಡಿದನು. ಆದರೂ ಕೃತಜ್ಞತೆ ತೋರುವವರು ನಿಮ್ಮಲ್ಲಿ ಬಹಳ ಕಡಿಮೆಯೇ! {9}
وَقَالُوا أَإِذَا ضَلَلْنَا فِي الْأَرْضِ أَإِنَّا لَفِي خَلْقٍ جَدِيدٍ ۚ بَلْ هُمْ بِلِقَاءِ رَبِّهِمْ كَافِرُونَ
ನಾವು ಸತ್ತು ಮಣ್ಣಿನಲ್ಲಿ ವಿಲೀನಗೊಂಡ ಬಳಿಕ ಹೊಸದಾಗಿ ನಮ್ಮ ಸೃಷ್ಟಿಯಾಗಲಿದೆಯೇ ಎಂದು ಅವರು (ಅರ್ಥಾತ್ ವಿಶ್ವಾಸಿಗಳಲ್ಲದವರು, ವ್ಯಂಗ್ಯವಾಗಿ) ಕೇಳುತ್ತಾರೆ. ಅಲ್ಲ, ಬದಲಾಗಿ ಅವರು (ವಿಚಾರಣೆಗಾಗಿ) ತಮ್ಮ ಸೃಷ್ಟಿಕರ್ತನನ್ನು ಭೇಟಿಯಾಗುವುದನ್ನೇ (ಗೇಲಿ ಮಾಡಿ) ನಿರಾಕರಿಸುತ್ತಿರುವರು! {10}
قُلْ يَتَوَفَّاكُمْ مَلَكُ الْمَوْتِ الَّذِي وُكِّلَ بِكُمْ ثُمَّ إِلَىٰ رَبِّكُمْ تُرْجَعُونَ
ನಿಮ್ಮ (ಪ್ರಾಣಹರಣಕ್ಕಾಗಿ) ನೇಮಕಗೊಂಡ ಮೃತ್ಯುದೂತ (ಅಂದರೆ ಮಲಕ್ ಅಲ್ ಮೌತ್) ನಿಮಗೆ ಮರಣ ನೀಡಲಿದೆ; ನಂತರ ನಿಮ್ಮ ಕರ್ತಾರನೆಡೆಗೆ ನಿಮ್ಮನ್ನು ಮರಳಿಸಲಾಗುತ್ತದೆ ಎಂದು, ಪೈಗಂಬರೆರೇ, ಅವರಿಗೆ ತಿಳಿಸಿ ಬಿಡಿ. {11}
وَلَوْ تَرَىٰ إِذِ الْمُجْرِمُونَ نَاكِسُو رُءُوسِهِمْ عِنْدَ رَبِّهِمْ رَبَّنَا أَبْصَرْنَا وَسَمِعْنَا فَارْجِعْنَا نَعْمَلْ صَالِحًا إِنَّا مُوقِنُونَ
ಅಪರಾಧಿಗಳು ತಮ್ಮ ಕರ್ತಾರನ ಸನ್ನಿಧಿಯಲ್ಲಿ ತಲೆತಗ್ಗಿಸಿ ನಿಂತು, ಓ ನಮ್ಮ ಒಡೆಯಾ, (ನಮ್ಮನ್ನು ಎಚ್ಚರಿಸಲಾಗಿದ್ದ ಎಲ್ಲವನ್ನೂ) ನಾವೀಗ ಕಣ್ಣಾರೆ ಕಂಡುಕೊಂಡೆವು, ಕೇಳಿಸಿಕೊಂಡೆವು; ನಮ್ಮನ್ನೀಗ ಭೊಲೋಕಕ್ಕೆ ಹಿಂದಿರುಗಿಸು, ನಾವು ಸತ್ಕರ್ಮಗಳನ್ನೇ ಮಾಡುತ್ತೇವೆ ಮತ್ತು ನಮಗೀಗ ದೃಢವಾದ ವಿಶ್ವಾಸವಿದೆ ಎಂದು (ಆ ಅಪರಾಧಿಗಳು ಗೋಳಿಡುವ) ಸನ್ನಿವೇಶವನ್ನು ನೀವು ಒಂದು ವೇಳೆ ನೋಡಿರುತ್ತಿದ್ದರೆ...! {12}
وَلَوْ شِئْنَا لَآتَيْنَا كُلَّ نَفْسٍ هُدَاهَا وَلَٰكِنْ حَقَّ الْقَوْلُ مِنِّي لَأَمْلَأَنَّ جَهَنَّمَ مِنَ الْجِنَّةِ وَالنَّاسِ أَجْمَعِينَ
ನಾವು ಇಚ್ಚಿಸಿದ್ದರೆ, (ಜಿನ್ನ್ ಮತ್ತು ಮನುಷ್ಯರಲ್ಲಿ) ಪ್ರತಿಯೊಬ್ಬನಿಗೂ ಅವನು ಪಾಲಿಸಬೇಕಾದ ದಾರಿಯನ್ನು [ಯಾವುದೇ ಪರೀಕ್ಷೆಯ ವಿನಾ] ನೀಡಬಹುದಿತ್ತು! ಆದರೆ ಜಿನ್ನ್ ಹಾಗೂ ಮನುಷ್ಯರಿಂದ ನರಕವನ್ನು ನಾವು ತುಂಬಲಿದ್ದೇವೆ ಎಂಬ ನಮ್ಮ ಮಾತು [ಪರೀಕ್ಷೆಯಲ್ಲಿ ಅವರು ವಿಫಲರಾದ ಕಾರಣ] ನಿಜವಾಗಿ ಸಾಬೀತಾಯಿತು! {13}
فَذُوقُوا بِمَا نَسِيتُمْ لِقَاءَ يَوْمِكُمْ هَٰذَا إِنَّا نَسِينَاكُمْ ۖ وَذُوقُوا عَذَابَ الْخُلْدِ بِمَا كُنْتُمْ تَعْمَلُونَ
ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತೇ ಬಿಟ್ಟಿದ್ದ ಕಾರಣ ಈಗ ಶಿಕ್ಷೆಯ ರುಚಿಯನ್ನು ಸವಿಯಿರಿ. ನಾವು ಸಹ ನಿಮ್ಮನ್ನು ಮರೆತಿರುತ್ತೇವೆ. ನೀವು ಮಾಡುತ್ತಿದ್ದ ದುಷ್ಕರ್ಮಗಳ ಕಾರಣ ಈಗ ಶಾಶ್ವತವಾದ ಶಿಕ್ಷೆಯನ್ನು ಸವಿಯಿರಿ! {14}
إِنَّمَا يُؤْمِنُ بِآيَاتِنَا الَّذِينَ إِذَا ذُكِّرُوا بِهَا خَرُّوا سُجَّدًا وَسَبَّحُوا بِحَمْدِ رَبِّهِمْ وَهُمْ لَا يَسْتَكْبِرُونَ
ನಮ್ಮ ವಚನಗಳಲ್ಲಿ ನಿಜವಾಗಿ ನಂಬಿಕೆಯುಳ್ಳವರು ಯಾರೆಂದರೆ ಅದರ ಮೂಲಕ ಅವರನ್ನು ಉಪದೇಶಿಸಿದಾಗ ಅವರು ಆ ಕೂಡಲೇ ಸಾಷ್ಟಾಂಗವೆರಗುತ್ತಾರೆ ಮತ್ತು ತಮ್ಮ ಕರ್ತಾರನನ್ನು ಸ್ತುತಿಸುತ್ತಾ ಅವನ ಗುಣಗಾನ ಮಾಡುತ್ತಾರೆ; ಎಷ್ಟು ಮಾತ್ರಕ್ಕೂ ಅವರು ಅಹಂಕಾರ ತೋರುವುದಿಲ್ಲ. {15} ۩
تَتَجَافَىٰ جُنُوبُهُمْ عَنِ الْمَضَاجِعِ يَدْعُونَ رَبَّهُمْ خَوْفًا وَطَمَعًا وَمِمَّا رَزَقْنَاهُمْ يُنْفِقُونَ
ಅವರು (ರಾತ್ರಿಯ ಸಮಯಗಳಲ್ಲಿ) ತಮ್ಮ ಪ್ರಭುವನ್ನು ಭಯ ಮತ್ತು ನಿರೀಕ್ಷೆಗಳೊಂದಿಗೆ ಪ್ರಾರ್ಥಿಸುವ ಕಾರಣ ಅವರ ಪಾರ್ಶ್ವಗಳು ಚಾಪೆಗಳಿಂದ ಬೇರ್ಪಟ್ಟಿರುತ್ತವೆ! ಮಾತ್ರವಲ್ಲ, ಅವರಿಗೆ ಏನನ್ನು ನಾವು ಒದಗಿಸಿರುವೆವೋ ಅದರಿಂದ ಅವರು (ನಮ್ಮ ಮಾರ್ಗದಲ್ಲಿ) ಖರ್ಚು ಮಾಡುತ್ತಿರುತ್ತಾರೆ. {16}
فَلَا تَعْلَمُ نَفْسٌ مَا أُخْفِيَ لَهُمْ مِنْ قُرَّةِ أَعْيُنٍ جَزَاءً بِمَا كَانُوا يَعْمَلُونَ
ಅಂತಹವರ ಸತ್ಕರ್ಮಗಳ ಫಲವಾಗಿ ಕಣ್ಮನಗಳನ್ನು ತಣಿಸುವ ಅದೇನನ್ನು ಅವರಿಗಾಗಿ ಮರಮಾಚಿ ಇಡಲಾಗಿದೆ ಎಂಬ ವಿಚಾರ ಯಾರಿಗೂ ತಿಳಿಯದು. {17}
أَفَمَنْ كَانَ مُؤْمِنًا كَمَنْ كَانَ فَاسِقًا ۚ لَا يَسْتَوُونَ
ಏನು? (ಪರಿಣಾಮದ ದೃಷ್ಟಿಯಿಂದ) ಒಬ್ಬ ವಿಶ್ವಾಸಿಯು ಒಬ್ಬ ಅವಿಧೇಯನಂತೆ ಆದಾನೇ!? ಇಲ್ಲ, ಅವರು ಸರಿಸಮಾನರಲ್ಲ. {18}
أَمَّا الَّذِينَ آمَنُوا وَعَمِلُوا الصَّالِحَاتِ فَلَهُمْ جَنَّاتُ الْمَأْوَىٰ نُزُلًا بِمَا كَانُوا يَعْمَلُونَ
ಹೌದು, ವಿಶ್ವಾಸಿಗಳಾಗಿದ್ದುಕೊಂಡು ಸತ್ಕಾರ್ಯಗಳನ್ನೂ ಮಾಡಿದವರಿಗೆ ತಂಗಲು ಸ್ವರ್ಗೋದ್ಯಾನಗಳ ನಿವಾಸಗಳಿವೆ. ಅವರು ಮಾಡಿದ ಸತ್ಕರ್ಮಕ್ಕಾಗಿ ಅವರಿಗೆ ಸಿಗಲಿರುವ ಆರಂಭಿಕ ಆತಿಥ್ಯವದು! {19}
وَأَمَّا الَّذِينَ فَسَقُوا فَمَأْوَاهُمُ النَّارُ ۖ كُلَّمَا أَرَادُوا أَنْ يَخْرُجُوا مِنْهَا أُعِيدُوا فِيهَا وَقِيلَ لَهُمْ ذُوقُوا عَذَابَ النَّارِ الَّذِي كُنْتُمْ بِهِ تُكَذِّبُونَ
ಯಾರು ಅವಿಧೇಯತೆ ತೋರುತ್ತಾರೋ ಅವರಿಗೆ ಆ ನರಕವೇ ನೆಲೆಯಾಗಲಿದೆ. ಅದರಿಂದ ಹೊರಗೆ ಬರಲು ಅವರು ಬಯಸಿದಾಗಲೆಲ್ಲಾ ಅವರನ್ನು ಮರಳಿ ಅದರೊಳಕ್ಕೆ ದಬ್ಬಲಾಗುವುದು; ಯಾವ ನರಕಾಗ್ನಿಯ ಶಿಕ್ಷೆಯನ್ನು ನೀವು ಅಲ್ಲಗಳೆಯುತ್ತಿದ್ದಿರೋ ಈಗ ಅದನ್ನು ಸವಿಯಿರಿ ಎಂದು ಅವರೊಂದಿಗೆ ಹೇಳಲಾಗುವುದು. {20}
وَلَنُذِيقَنَّهُمْ مِنَ الْعَذَابِ الْأَدْنَىٰ دُونَ الْعَذَابِ الْأَكْبَرِ لَعَلَّهُمْ يَرْجِعُونَ
ಆ ಮಹಾ ಶಿಕ್ಷೆಗಿಂತ ಮೊದಲು ಅವರಿಗೆ ನಾವು (ಭೂಲೋಕದಲ್ಲೇ) ಕೆಲವು ಚಿಕ್ಕ ಪುಟ್ಟ ಶಿಕ್ಷೆಗಳ ರುಚಿ ತೋರಿಸುತ್ತಲೇ ಇರುವೆವು - ಅವರು ತಮ್ಮ ಅವಿಧೇಯತೆಯ ನಿಲುವಿನಿಂದ (ಸರಿದಾರಿಗೆ) ಮರಳಲಿ ಎಂಬ ಉದ್ದೇಶದಿಂದ! {21}
وَمَنْ أَظْلَمُ مِمَّنْ ذُكِّرَ بِآيَاتِ رَبِّهِ ثُمَّ أَعْرَضَ عَنْهَا ۚ إِنَّا مِنَ الْمُجْرِمِينَ مُنْتَقِمُونَ
ತನ್ನ ಒಡೆಯನು (ಕಳುಹಿಸಿದ ಗ್ರಂಥದ) ವಚನಗಳ ಮೂಲಕ ಉಪದೇಶಿಸಿದಾಗ ಅದನ್ನು ಅಲ್ಲಗಳೆದು ಮುಖ ತಿರುಗಿಸಿ ಕೊಳ್ಳುವವನಿಗಿಂತ ದೊಡ್ಡ ಪಾಪಿ ಯಾರು ತಾನೇ ಇರಬಹುದು?! ಹೌದು, ನಾವು ಅಂತಹ ಅಪರಾದಿಗಳ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುವೆವು. {22}
وَلَقَدْ آتَيْنَا مُوسَى الْكِتَابَ فَلَا تَكُنْ فِي مِرْيَةٍ مِنْ لِقَائِهِ ۖ وَجَعَلْنَاهُ هُدًى لِبَنِي إِسْرَائِيلَ
[ಅಲ್ಲಾಹ್ ನ ಗ್ರಂಥವನ್ನು ಧಿಕ್ಕರಿಸಿದವರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುವುದು ಇದು ಪ್ರಥಮ ಬಾರಿಯಲ್ಲ. ಇದಕ್ಕಿಂತ ಮುಂಚೆ ಫಿರ್‌ಔನ್ ನ ಕಾಲದಲ್ಲಿ ನಾವು ಪ್ರವಾದಿ] ಮೂಸಾ ರಿಗೂ ಒಂದು ದಿವ್ಯಗ್ರಂಥವನ್ನು ನೀಡಿದ್ದೆವು. [ಆಗಲೂ ತಪ್ಪಿತಸ್ಥರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಂಡಿದ್ದೆವು]. ಆದ್ದರಿಂದ (ತಪ್ಪಿತಸ್ಥರು ಈಗಲೂ ಪ್ರತೀಕಾರದ ಕ್ರಮವನ್ನು) ಎದುರಿಸಲಿರುವ ಬಗ್ಗೆ ನಿಮಗೆ ಯಾವುದೇ ಸಂಶಯ ಬೇಡ. ಹೌದು, ಇಸ್ರಾಈಲ್ ಸಂತತಿಯ ಜನರಿಗೆ ಆ (ತೋರಾ ಗ್ರಂಥವನ್ನು) ನಾವು ಮಾರ್ಗದರ್ಶಕವಾಗಿ ಮಾಡಿದ್ದೆವು. {23}
وَجَعَلْنَا مِنْهُمْ أَئِمَّةً يَهْدُونَ بِأَمْرِنَا لَمَّا صَبَرُوا ۖ وَكَانُوا بِآيَاتِنَا يُوقِنُونَ
ಅವರು ದೃಢಚಿತ್ತರಾಗಿ ನಮ್ಮ ವಚನಗಳಲ್ಲಿ ದೃಢವಾದ ನಂಬಿಕೆ ಇಟ್ಟಾಗ ಅವರ ಪೈಕಿ ಕೆಲವರನ್ನು ನಾವು ನಮ್ಮ ಆದೇಶದ ಪ್ರಕಾರ ಜನರಿಗೆ ಮಾರ್ಗದರ್ಶನ ನೀಡುವ ಮುಂದಾಳುಗಳನ್ನಾಗಿ ಮಾಡಿದೆವು. {24}
إِنَّ رَبَّكَ هُوَ يَفْصِلُ بَيْنَهُمْ يَوْمَ الْقِيَامَةِ فِيمَا كَانُوا فِيهِ يَخْتَلِفُونَ
(ಮುಂದೆ ಅವರು ಭಿನ್ನಮತ ತಾಳಿದಾಗ) ಅವರು ಯಾವ ವಿಷಯದಲ್ಲಿ ಪರಸ್ಪರ ಭಿನ್ನಮತ ತಾಳಿದ್ದರೋ ಅದರ ಬಗ್ಗೆ ಖಂಡಿತವಾಗಿ ನಿಮ್ಮ ಪ್ರಭು ಪುನರುತ್ಥಾನ ದಿನದಲ್ಲಿ ತೀರ್ಪು ತಿಳಿಸಲಿದ್ದಾನೆ. {25}
أَوَلَمْ يَهْدِ لَهُمْ كَمْ أَهْلَكْنَا مِنْ قَبْلِهِمْ مِنَ الْقُرُونِ يَمْشُونَ فِي مَسَاكِنِهِمْ ۚ إِنَّ فِي ذَٰلِكَ لَآيَاتٍ ۖ أَفَلَا يَسْمَعُونَ
[ಇವರಂತೆ ಧಿಕ್ಕಾರದ ನಿಲುವು ಹೊಂದಿದ್ದ] ಅದೆಷ್ಟು ಪೀಳೆಗೆಗಳನ್ನು ನಾವು ಇವರಿಗಿಂತ ಮುಂಚೆ ನಾಶಪಡಿಸಿರುತ್ತೇವೆ ಎಂಬ ವಾಸ್ತವ ಇವರನ್ನು ಇನ್ನೂ ಸರಿದಾರಿಗೆ ತರಲಿಲ್ಲವೇ? ಅವರ (ಪಾಳು ಬಿದ್ದ) ವಾಸಸ್ಥಳಗಳ ಮೂಲಕವೇ ಈ ಜನರು ಅತ್ತಿತ್ತ ಹಾದು ಹೋಗುತ್ತಾರೆ! ಇದರಲ್ಲಿ ಕಲಿಯಲು ಖಂಡಿತವಾಗಿ ಸಾಕಷ್ಟು ಪಾಠಗಳಿವೆ! ಆದರೂ ಇವರು (ಈ ಕುರ್‌ಆನ್ ನ ಉಪದೇಶಗಳಿಗೆ) ಕಿವಿ ಕೊಡುತ್ತಿಲ್ಲವೇ?! {26}
أَوَلَمْ يَرَوْا أَنَّا نَسُوقُ الْمَاءَ إِلَى الْأَرْضِ الْجُرُزِ فَنُخْرِجُ بِهِ زَرْعًا تَأْكُلُ مِنْهُ أَنْعَامُهُمْ وَأَنْفُسُهُمْ ۖ أَفَلَا يُبْصِرُونَ
ನಾವು ಬಂಜರು ಭೂಮಿಯತ್ತ ಹೇಗೆ ಮಳೆನೀರನ್ನು ಒಯ್ಯುತ್ತೇವೆ ಎಂಬುದನ್ನು ಇವರು ಕಂಡಿಲ್ಲವೇ? ಅದರ ಮೂಲಕ ನಾವು ಸಸ್ಯಾದಿಗಳನ್ನು ಉತ್ಪಾದಿಸಿದಾಗ, ಅವರ ಜಾನುವಾರುಗಳು ಅವನ್ನು ಮೇಯುತ್ತವೆ; ಸ್ವತಃ ಅವರೂ ಅದರಿಂದ ಭಕ್ಷಿಸುತ್ತಾರೆ. ಈ ಪ್ರಕ್ರಿಯೆಯನ್ನು ನೋಡಿ ಇವರು ಪಾಠ ಕಲಿಯುವುದಿಲ್ಲವೇ?! {27}
وَيَقُولُونَ مَتَىٰ هَٰذَا الْفَتْحُ إِنْ كُنْتُمْ صَادِقِينَ
ಅದಾಗ್ಯೂ ಅವರು, ನೀವು ಸತ್ಯವಂತರು ಹೌದಾದರೆ ಆ ತೀರ್ಪು ಯಾವಾಗ ಸಂಭವಿಸಲಿದೆ ಎಂದು (ಪೈಗಂಬರರೊಂದಿಗೆ) ಕೇಳುತ್ತಿದ್ದಾರೆ! {28}
قُلْ يَوْمَ الْفَتْحِ لَا يَنْفَعُ الَّذِينَ كَفَرُوا إِيمَانُهُمْ وَلَا هُمْ يُنْظَرُونَ
ಪೈಗಂಬರರೇ, ನೀವು ಹೇಳಿರಿ: ಧಿಕ್ಕಾರದ ಸ್ಥಿತಿಯಲ್ಲೇ (ಜೀವನ ಕಳೆದವರು, ತೀರ್ಪನ್ನು ನೋಡಿ) ತೀರ್ಪಿನ ದಿನ ವಿಶ್ವಾಸಿಗಳಾದರೆ ಅದರಿಂದ ಅವರಿಗೆ ಯಾವ ಪ್ರಯೋಜನವೂ ಆಗದು. (ಆ ತೀರ್ಪಿನ ನಂತರ) ಅವರಿಗೆ ಯಾವುದೇ ಕಾಲಾವಕಾಶ ನೀಡಲಾಗದು. {29}
فَأَعْرِضْ عَنْهُمْ وَانْتَظِرْ إِنَّهُمْ مُنْتَظِرُونَ
ಆದ್ದರಿಂದ (ಪೈಗಂಬರರೇ), ಇನ್ನು ಅವರನ್ನು ಕಡೆಗಣಿಸಿರಿ. (ತೀರ್ಪಿಗಾಗಿ) ನೀವೂ ಕಾಯಿರಿ; ಅವರೂ ಕಾಯುತ್ತಿದ್ದಾರೆ! {30}
-----ಅನುವಾದಿತ ಸೂರಃ ಗಳು