تـرجمـة سورة طه من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت
سـهل الفهـم من غيـر الـرجـوع إلى كتاب التفسيـر
| ಸೂರಃ ತಾಹಾ | ಪವಿತ್ರ ಕುರ್‌ಆನ್ ನ 20 ನೆಯ ಸೂರಃ | ಇದರಲ್ಲಿ ಒಟ್ಟು 135 ಆಯತ್ ಗಳು ಇವೆ |
ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!
طه
ತಾ ಹಾ! {1}
ما أَنزَلنا عَلَيكَ القُرآنَ لِتَشقىٰ
ಪೈಗಂಬರರೇ, ನಾವು ಈ ಕುರ್‌ಆನ್ ಅನ್ನು ನಿಮಗೆ ಇಳಿಸಿ ಕೊಟ್ಟಿರುವುದು ನೀವು ಕಷ್ಟಪಡಬೇಕೆಂಬ ಉದ್ದೇಶದಿಂದಲ್ಲ. {2}
إِلّا تَذكِرَةً لِمَن يَخشىٰ
ಅಲ್ಲ, ಬದಲಾಗಿ, ಭಯಭಕ್ತಿ ಪಾಲಿಸುವವರಿಗೆ ಇದೊಂದು ಉಪದೇಶವಾಗಿದೆ. {3}
تَنزيلًا مِمَّن خَلَقَ الأَرضَ وَالسَّماواتِ العُلَى
ಈ ಭೂಮಿ ಮುತ್ತು ಉನ್ನತವಾದ ಆಕಾಶಗಳನ್ನು ಸೃಷ್ಟಿಸಿದ (ಆ ಅಲ್ಲಾಹ್ ನ) ವತಿಯಿಂದ ಇದು ಹಂತ ಹಂತವಾಗಿ ಇಳಿಯುತ್ತಿದೆ. {4}
الرَّحمٰنُ عَلَى العَرشِ استَوىٰ
ಅವನು ಮಹಾ ದಯಾಸಂಪನ್ನನು! ವಿಶ್ವದ ಅಧಿಕಾರ ಗದ್ದುಗೆಯ ಮೇಲಿರುವನು. {5}
لَهُ ما فِي السَّماواتِ وَما فِي الأَرضِ وَما بَينَهُما وَما تَحتَ الثَّرىٰ
ಭೂಮಿಯಲ್ಲೂ ಆಕಾಶಗಳಲ್ಲೂ ಅವುಗಳ ನಡುವಿನಲ್ಲೂ ಹಾಗೂ ಮಣ್ಣಿನಡಿಯಲ್ಲೂ ಇರುವ ಎಲ್ಲವೂ ಅವನ ಮಾತ್ರ ಒಡೆತನಕ್ಕೆ ಸೇರಿವೆ. {6}
وَإِن تَجهَر بِالقَولِ فَإِنَّهُ يَعلَمُ السِّرَّ وَأَخفَى
ಪೈಗಂಬರರೇ, ನೀವು [ನಿಮ್ಮ ಮನದಲ್ಲಿರುವುದನ್ನು] ಕೇಳಿಸಿಕೊಳ್ಳುವಂತೆ ಹೇಳಿದರೂ (ಗುಟ್ಟಾಗಿ ಹೇಳಿದರೂ), ಅವನಂತು ಗುಟ್ಟಾಗಿರುವುದನ್ನೂ ಗೌಪ್ಯವಾಗುರುವುದನ್ನೂ ಖಂಡಿತವಾಗಿ ಅರಿಯುವವನಾಗಿದ್ದಾನೆ. {7}
اللَّهُ لا إِلٰهَ إِلّا هُوَ ۖ لَهُ الأَسماءُ الحُسنىٰ
ಅಲ್ಲಾಹ್ [ಎಂಬುದು ಅವನ ಅಂಕಿತನಾಮ]; ಅವನ ಹೊರತು ಬೇರೆ ದೇವರಿಲ್ಲ. ಅವನಿಗೆ ಸುಂದರವಾದ (ಬಹಳಷ್ಟು) ನಾಮಗಳಿವೆ. {8}
وَهَل أَتاكَ حَديثُ موسىٰ
ಪೈಗಂಬರರೇ, ಪ್ರವಾದಿ ಮೂಸಾರಿಗೆ ಸಂಬಂಧಿಸಿದ ವೃತ್ತಾಂತಗಳು ನಿಮಗೆ ತಲುಪಿದೆ ತಾನೆ!? {9}
إِذ رَأىٰ نارًا فَقالَ لِأَهلِهِ امكُثوا إِنّي آنَستُ نارًا لَعَلّي آتيكُم مِنها بِقَبَسٍ أَو أَجِدُ عَلَى النّارِ هُدًى
ಅವರು [ಮದ್ಯನ್ ಪ್ರದೇಶದಿಂದ ಪತ್ನಿಯೊಂದಿಗೆ ಈಜಿಪ್ಟ್ ಗೆ ಮರಳುತ್ತಿದ್ದಾಗ ದೂರದಲ್ಲಿ ಏನೋ] ಬೆಂಕಿಯಂತೆ ಕಂಡಾಗ, ತಮ್ಮ ಮನೆಯವರಿಗೆ ಹೇಳಿದರು: ನೀವು ಇಲ್ಲೇ ಇರಿ, ನಾನು ಬೆಂಕಿಯನ್ನು ಕಂಡಿರುವೆನು; ಅಲ್ಲಿಂದ ನಿಮಗಾಗಿ ಸ್ವಲ್ಪ ಕೆಂಡವನ್ನಾದರೂ ತರುವೆನು ಅಥವಾ (ಇಲ್ಲಿಂದ ಮುಂದೆ ಸಾಗಬೇಕಾದ) ದಾರಿಯನ್ನಾದರೂ ಕಂಡುಕೊಳ್ಳುವೆನು. {10}
فَلَمّا أَتاها نودِيَ يا موسىٰ
ಅವರು ಆ ಬೆಂಕಿಯಿದ್ದಲ್ಲಿಗೆ ತಲುಪಿದಾಗ (ಧ್ವನಿಯೊಂದು ಅವರನ್ನು) ಕರೆಯಿತು: ಓಮೂಸಾ! {11}
إِنّي أَنا رَبُّكَ فَاخلَع نَعلَيكَ ۖ إِنَّكَ بِالوادِ المُقَدَّسِ طُوًى
ನಾನೇ ನಿಮ್ಮ ಒಡೆಯ! ಆದ್ದರಿಂದ ನಿಮ್ಮ ಎರಡೂ ಚಪ್ಪಲಿಗಳನ್ನು ಕಳಚಿರಿ; ನೀವೀಗ ತುವಾ ಎಂಬ ಪವಿತ್ರ ಕಣಿವೆಯಲ್ಲಿರುವಿರಿ. {12}
وَأَنَا اختَرتُكَ فَاستَمِع لِما يوحىٰ
ಹೌದು, ನಾನು ನಿಮ್ಮನ್ನು (ಪ್ರವಾದಿತ್ವಕ್ಕಾಗಿ) ಆರಿಸಿಕೊಂಡಿರುವೆನು. ಆದ್ದರಿಂದ ನಿಮಗೀಗ ವಹೀ ಮೂಲಕ [ಅರ್ಥಾತ್ ದಿವ್ಯ ಸಂದೇಶದ ಮೂಲಕ ನೀಡಲಾಗುವ ಆದೇಶಗಳನ್ನು] ಗಮನವಿಟ್ಟು ಕೇಳಿರಿ: {13}
إِنَّني أَنَا اللَّهُ لا إِلٰهَ إِلّا أَنا فَاعبُدني وَأَقِمِ الصَّلاةَ لِذِكري
ಸಂಶಯಾತೀತವಾಗಿ, ಅಲ್ಲಾಹ್ ನು ನಾನೇ ಆಗಿರುವೆನು! ನನ್ನ ಹೊರತು ಬೇರೆ ದೇವರಿಲ್ಲ; ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ. ಮತ್ತು ನನ್ನ ಸ್ಮರಣೆಯ ಸಲುವಾಗಿ ನೀವು ನಮಾಝ್ ಅನ್ನು (ನಿಮ್ಮ ಜೀವನದಲ್ಲಿ) ನೆಲೆಗೊಳಿಸಿರಿ. {14}
إِنَّ السّاعَةَ آتِيَةٌ أَكادُ أُخفيها لِتُجزىٰ كُلُّ نَفسٍ بِما تَسعىٰ
ಅಂತಿಮ ಘಳಿಗೆಯು ಖಂಡಿತವಾಗಿಯೂ ಬರಲಿದೆ. ಪ್ರತಿಯೊಬ್ಬ ಮನುಷ್ಯನ ದುಡಿಮೆಗೆ ತಕ್ಕುದಾದ ಪ್ರತಿಫಲ ನೀಡುವುದಕ್ಕಾಗಿ (ಅಂತಿಮ ಘಳಿಗೆಯ ಸಮಯವನ್ನು) ನಾನು ಗೌಪ್ಯವಾಗಿಡ ಬಯಸುತ್ತೇನೆ. {15}
فَلا يَصُدَّنَّكَ عَنها مَن لا يُؤمِنُ بِها وَاتَّبَعَ هَواهُ فَتَردىٰ
ಹಾಗಿರುವಾಗ, ಅಂತಿಮ ಘಳಿಗೆಯನ್ನು ನಂಬದೆ ಸ್ವೇಚ್ಛಾಚಾರಿಯಾಗಿ ವರ್ತಿಸುತ್ತಿರುವವನು ನಿಮ್ಮನ್ನು ನಮಾಝ್ ನಿಂದ ತಡೆಯದಿರಲಿ; ಹಾಗೇನಾದರೂ ಆದರೆ ನೀವು ನಾಶಕ್ಕೊಳಗಾಗುವಿರಿ. {16}
وَما تِلكَ بِيَمينِكَ يا موسىٰ
ಓ ಮೂಸಾ! ನಿಮ್ಮ ಬಲಗೈಯಲ್ಲಿ ಅದೇನಿದೆ? (ಅಲ್ಲಾಹ್ ನು ಕೇಳಿದನು). {17}
قالَ هِيَ عَصايَ أَتَوَكَّأُ عَلَيها وَأَهُشُّ بِها عَلىٰ غَنَمي وَلِيَ فيها مَآرِبُ أُخرىٰ
ಇದು ನನ್ನ ಊರುಗೋಲು! ಇದರ ಆಸರೆ ಪಡೆದು ನಾನು ನಡೆಯುತ್ತೇನೆ; ಇದರ ಮೂಲಕ ನನ್ನ ಮೇಕೆಗಳಿಗಾಗಿ ಎಲೆಗಳನ್ನು ಉದುರಿಸುತ್ತೇನೆ; ಅಷ್ಟು ಮಾತ್ರವಲ್ಲದೆ ಇದರಿಂದ ನನಗೆ ಬೇರೆ ಹಲವು ಉಪಯೋಗಗಳೂ ಇವೆ ಎಂದು ಮೂಸಾ ರು ಉತ್ತರಿಸಿದರು. {18}
قالَ أَلقِها يا موسىٰ
ಓ ಮೂಸಾ, ನೀವು ಅದನ್ನು ಕೆಳಗೆ ಹಾಕಿಬಿಡಿ ಎಂದು ಅಲ್ಲಾಹ್ ನು ಆಜ್ಞೆಯಿತ್ತನು. {19}
فَأَلقاها فَإِذا هِيَ حَيَّةٌ تَسعىٰ
ಮೂಸಾ ಅದನ್ನು ಕೆಳಗೆ ಹಾಕಿ ಬಿಟ್ಟರು; ಆ ಕೂಡಲೇ ಅದು ಹರಿದಾಡುವ ಒಂದು ಸರ್ಪವಾಗಿ ಮಾರ್ಪಟ್ಟಿತು. {20}
قالَ خُذها وَلا تَخَف ۖ سَنُعيدُها سيرَتَهَا الأولىٰ
ಅಲ್ಲಾಹ್ ನು ಹೇಳಿದನು: ನೀವೀಗ ಅದನ್ನು ಹಿಡಿಯಿರಿ, ಮತ್ತು ಭಯಪಡದಿರಿ. ನಾವದನ್ನು ಹಿಂದಿನ ಸ್ಥಿತಿಗೆ ಮರಳಿಸಿ ಪುನಃ (ಊರುಗೋಲಾಗಿ) ಮಾಡಲಿರುವೆವು. {21}
وَاضمُم يَدَكَ إِلىٰ جَناحِكَ تَخرُج بَيضاءَ مِن غَيرِ سوءٍ آيَةً أُخرىٰ
ಈಗ ನಿಮ್ಮ ಕೈಯನ್ನು ಕಂಕುಳಕ್ಕೆ ಸೇರಿಸಿ ಹಿಡಿಯಿರಿ. ಹೊರತೆಗೆಯುವಾಗ ಅದು ಬೆಳ್ಳಗೆ ಹೊಳೆಯುತ್ತಾ, ಆದರೆ ನಿಮಗೆ ತೊಂದರೆಯಾಗದ ರೀತಿಯಲ್ಲಿ ಹೊರಬರುವುದು. ಹೌದು, ಇದು ನಿಮಗೆ ನೀಡಲಾಗುತ್ತಿರುವ ಇನ್ನೊಂದು ಪವಾಡ. {22}
لِنُرِيَكَ مِن آياتِنَا الكُبرَى
ನಮ್ಮ ಮಹಾ ದೃಷ್ಟಾಂಗಳ ಪೈಕಿ ಕೆಲವನ್ನು ನಿಮಗೆ ತೋರಿಸಲಿಕ್ಕಾಗಿ (ಇದನ್ನು ನಿಮಗೆ ನೀಡಲಾಗುತ್ತಿದೆ). {23}
اذهَب إِلىٰ فِرعَونَ إِنَّهُ طَغىٰ
ನೀವೀಗ (ಈ ಪವಾಡಗಳೊಂದಿಗೆ) ಫಿರ್‌ಔನ್ ನ ಬಳಿಗೆ ಹೋಗಿರಿ. ಆತನು (ನಮ್ಮ ಆದೇಶಗಳನ್ನು) ಉಲ್ಲಂಘಿಸಿರುವನು. {24}
قالَ رَبِّ اشرَح لي صَدري
ಆಗ ಮೂಸಾ ಪ್ರಾರ್ಥಿಸಿಕೊಂಡರು: ಓ ನನ್ನ ಒಡೆಯನೇ! (ಆ ದೌತ್ಯಕ್ಕಾಗಿ) ನನ್ನ ಹೃದಯವನ್ನು ನನಗೆ ವಿಶಾಲಗೊಳಿಸಿ ಕೊಡು. {25}
وَيَسِّر لي أَمري
ನನ್ನೀ ದೌತ್ಯವನ್ನು ನನ್ನ ಪಾಲಿಗೆ ಸುಲಭಗೊಳಿಸು. {26}
وَاحلُل عُقدَةً مِن لِساني
ನನ್ನ ಮಾತಿನಲ್ಲಿನ ತೊಡಕು-ತಡವರಿಕೆಗಳನ್ನು ನೀಗಿಸು. {27}
يَفقَهوا قَولي
ಹಾಗೆ ನನ್ನ ಮಾತು ಜನರಿಗೆ ಸರಿಯಾಗಿ ಅರ್ಥವಾಗುವಂತಾಗಲಿ. {28}
وَاجعَل لي وَزيرًا مِن أَهلي
ನನ್ನದೇ ಕುಟುಂಬಸ್ತರಲ್ಲಿ ಒಬ್ಬಾತನನ್ನು ನನಗೆ ಸಹಾಯಕನನ್ನಾಗಿ ನೀಡು. {29}
هارونَ أَخِي
ಅಂದರೆ ನನ್ನ ಸಹೋದರನಾದ ಹಾರೂನ್ ಅನ್ನು. {30}
اشدُد بِهِ أَزري
(ಕರ್ತವ್ಯ ನಿರ್ವಹಣೆಯಲ್ಲಿ) ಆತನ ಮೂಲಕ ನನಗೆ ಶಕ್ತಿಯನ್ನು ಒದಗಿಸಿದಸು. {31}
وَأَشرِكهُ في أَمري
(ನಾನು ನಿರ್ವಹಿಸಬೇಕಾದ ಪ್ರವಾದಿತ್ವದಲ್ಲಿ) ಅವನನ್ನು ನನಗೆ ಜೊತೆಗಾರನನ್ನಾಗಿ ಮಾಡು. {32}
كَي نُسَبِّحَكَ كَثيرًا
ಹಾಗೆ ನಾವು ಹೆಚ್ಚು ಹೆಚ್ಚು ನಿನ್ನ ಶ್ರೇಷ್ಠತೆಯ ಗುಣಗಾನ ಮಾಡುವಂತಾಗಲಿ. {33}
وَنَذكُرَكَ كَثيرًا
ಹಾಗೂ ನಿನ್ನನ್ನು ನಾವು ಧಾರಾಳವಾಗಿ ಸ್ಮರಿಸುವಂತಾಗಲಿ. {34}
إِنَّكَ كُنتَ بِنا بَصيرًا
ನೀನಾದರೋ ನಮ್ಮ ಸ್ಥಿತಿಗತಿಯನ್ನು ಚೆನ್ನಾಗಿ ನೋಡೂತ್ತಿರುವವನು. {35}
قالَ قَد أوتيتَ سُؤلَكَ يا موسىٰ
ಅಲ್ಲಾಹ್ ನು ಹೇಳಿದನು: ಓ ಮೂಸಾ, ನಿಮ್ಮ ಬೇಡಿಕೆಗಳನ್ನು ನಿಮಗಿದೋ ಈಡೇರಿಸಲಾಗಿದೆ! {36}
وَلَقَد مَنَنّا عَلَيكَ مَرَّةً أُخرىٰ
ಹೌದು, ಹಿಂದೊಂದು ಸಂದರ್ಭದಲ್ಲೂ ನಾವು ನಿಮಗೆ ಒಂದು ಘನ ಉಪಕಾರವನ್ನು ಮಾಡಿದ್ದೆವು. {37}
إِذ أَوحَينا إِلىٰ أُمِّكَ ما يوحىٰ
ಅದು, ನಾವು ಈಗ ನಿಮಗೆ ತಿಳಿಸುತ್ತಿರುವ ವಿಷಯವನ್ನು ನಿಮ್ಮ ತಾಯಿಗೆ (ವಹೀ ಮೂಲಕ) ಸೂಚಿಸಿದ್ದ ಸಂದರ್ಭವಾಗಿತ್ತು. {38}
أَنِ اقذِفيهِ فِي التّابوتِ فَاقذِفيهِ فِي اليَمِّ فَليُلقِهِ اليَمُّ بِالسّاحِلِ يَأخُذهُ عَدُوٌّ لي وَعَدُوٌّ لَهُ ۚ وَأَلقَيتُ عَلَيكَ مَحَبَّةً مِنّي وَلِتُصنَعَ عَلىٰ عَيني
ಅದೇನಂದರೆ, ನೀವು ಆ ಮಗುವನ್ನು ಪೆಟ್ಟಿಗೆಯಲ್ಲಿ ಇಟ್ಟು ಪೆಟ್ಟಿಗೆಯನ್ನು (ನೈಲ್) ನದಿಯಲ್ಲಿ ತೇಲಿಬಿಡಿ; ನದಿಯು ಆ ಪೆಟ್ಟಿಗೆಯನ್ನೊಯ್ದು ದಡ ಸೇರಿಸಲಿ. ಆಗ ನನ್ನ ಮತ್ತು ಆ ಮಗುವಿನ ಶತ್ರುವಾದವನು ಪೆಟ್ಟಿಗೆಯನ್ನು ಎತ್ತಿಕೊಳ್ಳುವನು - ಎಂದಾಗಿತ್ತು! ಆ ಸಂದರ್ಭದಲ್ಲಿ, [ಓ ಮೂಸಾ, ನಿಮ್ಮ ಮತ್ತು ನಮ್ಮ ಶತ್ರುವಾದ ಆ ಫಿರ್‌ಔನ್ ನ ಅರಮನೆಯಲ್ಲಿ] ನಿಮ್ಮ ಪಾಲನೆ ಪೋಷಣೆ ನಮ್ಮ ಮೇಲ್ನೋಟದಲ್ಲಿ ನಡೆಯಬೇಕೆಂದು ನಮ್ಮ ವತಿಯ ವಿಶೇಷ ಅನುರಾಗವು ನಿಮ್ಮನ್ನು ಆವರಿಸಿರುವಂತೆ ನಾವು ಮಾಡಿದ್ದೆವು! {39}
إِذ تَمشي أُختُكَ فَتَقولُ هَل أَدُلُّكُم عَلىٰ مَن يَكفُلُهُ ۖ فَرَجَعناكَ إِلىٰ أُمِّكَ كَي تَقَرَّ عَينُها وَلا تَحزَنَ ۚ وَقَتَلتَ نَفسًا فَنَجَّيناكَ مِنَ الغَمِّ وَفَتَنّاكَ فُتونًا ۚ فَلَبِثتَ سِنينَ في أَهلِ مَديَنَ ثُمَّ جِئتَ عَلىٰ قَدَرٍ يا موسىٰ
ಹಾಗಿರುವಾಗ ನಿಮ್ಮ ಸಹೋದರಿ [ಫಿರ್‌ಔನ್ ನ ಅರಮನೆಗೆ ಅಪರಿಚಿತಳಂತೆ] ಹೋಗಿ, ಈ ಮಗುವಿನ ಲಾಲನೆ ಪಾಲನೆ ಮಾಡುವಂತಹ ಒಬ್ಬರನ್ನು ನಾನು ನಿಮಗೆ ತೋರಿಸಲೇ ಎಂದು ಕೇಳಿದ್ದ ಸಂದಭವನ್ನೂ ನೆನಪಿಸಿಕೊಳ್ಳಿ. ಹಾಗೆ ನಾವು ನಿಮ್ಮ ತಾಯಿಯ ಕಣ್ಮನ ತಣಿಸಲು ಮತ್ತು ಆಕೆಯ ದುಃಖ ನಿವಾರಿಸಲು ನಿಮ್ಮನ್ನು ಪುನಃ ನಿಮ್ಮ ತಾಯಿಯ ಬಳಿಗೆ ಮರಳಿಸಿದ್ದೆವು. ಅದೂ ಅಲ್ಲದೆ ನೀವು [ಈಜಿಪ್ಟ್ ನಲ್ಲಿರುವಾಗ ಒಬ್ಬ ಜಗಳಗಂಟನನ್ನು ಪ್ರಮಾದವಶಾತ್] ಕೊಂದು ಬಿಟ್ಟಾಗ ಅದರ ಸಂಕಟದಿಂದ ನಾವು (ನಮ್ಮ ಕೃಪೆಯಿಂದ) ನಿಮ್ಮನ್ನು ಪಾರು ಮಾಡಿದೆವು. ಹೌದು, ನಾವು ವಿವಿಧ ರೀತಿಯ ಪರೀಕ್ಷೆಗಳಿಗೆ ನಿಮ್ಮನ್ನು ಒಳಪಡಿಸಿದೆವು. ನಂತರ ನೀವು ಮದ್‌ಯನ್ ಪಟ್ಟಣದ ಜನರೊಂದಿಗೆ ಹಲವಾರು ವರ್ಷಗಳ ಕಾಲ ನೆಮ್ಮದಿಯೊಂದಿಗೆ ಬಾಳಿದಿರಿ. ಆ ಬಳಿಕ, ಓ ಮೂಸಾ, ನೀವೀಗ ನಾವು ನಿರ್ಣಯಿಸಿದಂತೆ (ಸೂಕ್ತ ಸಮಯದಲ್ಲಿ ಈ ಸ್ಥಾನಕ್ಕೆ) ತಲುಪಿರುವಿರಿ. {40}
وَاصطَنَعتُكَ لِنَفسِي
ಹೌದು, (ಮೂಸಾ), ನಾನು ನನ್ನ (ಕೆಲಸ-ಕಾರ್ಯಗಳಿಗಾಗಿ) ನಿನ್ನನ್ನು ತಯಾರು ಮಾಡಿರುವೆನು. {41}
اذهَب أَنتَ وَأَخوكَ بِآياتي وَلا تَنِيا في ذِكرِي
ನೀವು ಮತ್ತು ನಿಮ್ಮ ಸಹೋದರ (ಹಾರೂನ್) ನನ್ನ ವತಿಯ ನಿದರ್ಶನಗಳೊಂದಿಗೆ ಹೊರಡಿರಿ; ಮತ್ತು ನನ್ನನ್ನು ಸ್ಮರಿಸುವ ವಿಷಯದಲ್ಲಿ ಆಲಸ್ಯ ತೋರದಿರಿ. {42}
اذهَبا إِلىٰ فِرعَونَ إِنَّهُ طَغىٰ
ಹೌದು, ಈಗ ನೀವಿಬ್ಬರೂ ಫಿರ್‌ಔನ್ ನ ಬಳಿಗೆ ತೆರಳಿರಿ; ಅವನು ಉದ್ಧಟತನದ ಎಲ್ಲಾ ಮಿತಿಗಳನ್ನು ಮೀರಿರುವನು. {43}
فَقولا لَهُ قَولًا لَيِّنًا لَعَلَّهُ يَتَذَكَّرُ أَو يَخشىٰ
ಅವನೊಂದಿಗೆ ಮಾತನಾಡುವಾಗ ನೀವಿಬ್ಬರೂ ಬಹಳ ಮೃದುವಾದ ಮಾತನ್ನೇ ಆಡಿರಿ; ಪ್ರಾಯಶಃ ಅವನು ನಿಮ್ಮ ಬೋಧನೆ ಸ್ವೀಕರಿಸಿಯಾನು ಅಥವಾ (ನನ್ನ ಶಿಕ್ಷೆಯನ್ನು) ಭಯಪಟ್ಟಾನು. {44}
قالا رَبَّنا إِنَّنا نَخافُ أَن يَفرُطَ عَلَينا أَو أَن يَطغىٰ
[ಅಲ್ಲಾಹ್ ನ ಆಜ್ಞೆಯಂತೆ ಫಿರ್‌ಔನ್ ನತ್ತ ಹೊರಟು ನಿಂತ] ಆ ಇಬ್ಬರು, ಓ ನಮ್ಮ ಒಡೆಯಾ! ಅವನು ನಮ್ಮ ಮೇಲೆ ಅತಿರೇಕವೆಸಗಬಹುದು ಅಥವಾ ಮತ್ತಷ್ಟು ಉದ್ಧಟತನದಿಂದ ವರ್ತಿಸಬಹುದು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ ಎಂದು ಹೇಳಿಗೊಂಡರು. {45}
قالَ لا تَخافا ۖ إِنَّني مَعَكُما أَسمَعُ وَأَرىٰ
ಅಲ್ಲಾಹ್ ನು ಹೇಳಿದನು: ನೀವು ಆತಂಕ ಪಡದಿರಿ; ನಾನು ಖಂಡಿತವಾಗಿ ನಿಮ್ಮ ಜೊತೆಗಿರುವೆನು; ನನಗೆ (ನಿಮ್ಮ ಪ್ರಾರ್ಥನೆಗಳು) ಕೇಳಿಸುತ್ತದೆ ಮತ್ತು ನಾನು (ನಿಮ್ಮ ಪರಿಸ್ಥಿತಿಯನ್ನು) ಚೆನ್ನಾಗಿ ವೀಕ್ಷಿಸುತ್ತಿರುವೆನು! {46}
فَأتِياهُ فَقولا إِنّا رَسولا رَبِّكَ فَأَرسِل مَعَنا بَني إِسرائيلَ وَلا تُعَذِّبهُم ۖ قَد جِئناكَ بِآيَةٍ مِن رَبِّكَ ۖ وَالسَّلامُ عَلىٰ مَنِ اتَّبَعَ الهُدىٰ
ಆದ್ದರಿಂದ ನೀವಿಬ್ಬರೂ ಅವನ ಬಳಿಗೆ ಹೋಗಿ ಹೀಗೆ ಹೇಳಿರಿ: ನಾವು ನಿನ್ನ ಒಡೆಯನಾದ (ಅಲ್ಲಾಹ್ ನ ವತಿಯಿಂದ ಕಳುಹಿಸಲ್ಪಟ್ಟ) ಸಂದೇಶವಾಹಕರಾಗಿದ್ದೇವೆ. [ಸಂದೇಶವೇನಂದರೆ, ಸದ್ಯಕ್ಕೆ ನಿನ್ನ ಹಿಡಿತದಲ್ಲಿರುವ] ಇಸ್ರಾಈಲ್ ಜನಾಂದವರನ್ನ ನಮ್ಮ ಜೊತೆ ಕಳುಹಿಸಿ ಕೊಡು; ಮತ್ತು ಅವರನ್ನು ಇನ್ನು ದಂಡಿಸದಿರು. ನಾವಿದೋ ನಿನ್ನ ಒಡೆಯನ ವತಿಯಿಂದ ಬಂದ ಈ ನಿದರ್ಶನ ಸಮೇತ ನಿನ್ನಲ್ಲಿಗೆ ಬಂದಿರುತ್ತೇವೆ. ಹೌದು, ಯಾರು ಸರಿದಾರಿ ಅನುಸರಿಸುತ್ತಾರೋ ಅವರಿಗೆ ಶಾಂತಿ ಸಿಗುವುದು. {47}
إِنّا قَد أوحِيَ إِلَينا أَنَّ العَذابَ عَلىٰ مَن كَذَّبَ وَتَوَلّىٰ
ನಮಗೆ ವಹೀ ಮೂಲಕ ತಿಳಿಸಲಾಗಿರುವ ವಿಷಯವೆಂದರೆ (ಸರಿದಾರಿಯನ್ನು) ಧಿಕ್ಕರಿಸಿದವರಿಗೆ ಮತ್ತು ಅದರಿಂದ ಮುಖ ತಿರುಗಿಸಿಕೊಂಡವರಿಗೆ ಖಂಡಿತಾಗಿ ಶಿಕ್ಷೆಯಿದೆ! {48}
قالَ فَمَن رَبُّكُما يا موسىٰ
[ಫಿರ್‌ಔನ್ ಗೆ ಸಂದೇಶ ತಲುಪಿಸಿದಾಗ ಅಣಕಿಸುತ್ತಾ] ಅವನು ಕೇಳಿದನು: ಓ ಮೂಸಾ! ಯಾರಾಗಿರುವನು ನಿಮ್ಮಿಬ್ಬರ ಆ ದೇವನು? {49}
قالَ رَبُّنَا الَّذي أَعطىٰ كُلَّ شَيءٍ خَلقَهُ ثُمَّ هَدىٰ
ಯಾರು (ಸಕಲವನ್ನೂ ಸೃಷ್ಟಿಸಿ) ಪ್ರತಿಯೊಂದು ಸೃಷ್ಟಿಗೂ ಅದರ ಆಕೃತಿಯನ್ನು ದಯಪಾಲಿಸಿ, ತರುವಾಯ ಅವುಗಳಿಗೆ (ಮುಂದೆ ಹೇಗೆ ಕಾರ್ಯ ನಿರ್ವಹಿಸಬೇಕೆಂಬ) ಮಾರ್ಗಸೂಚಿ ಒದಗಿಸಿದನೋ ಅವನೇ ನಮ್ಮ ದೇವನು ಎಂದು ಮೂಸಾ ಉತ್ತರಿಸಿದರು. {50}
قالَ فَما بالُ القُرونِ الأولىٰ
ಹಾಗಾದರೆ (ಅದನ್ನೊಪ್ಪದೆ) ಹಿಂದೆ ಗತಿಸಿ ಹೋದ ತಲೆಮಾರುಗಳ ಗತಿಯೇನು ಎಂದು ಫಿರ್‌ಔನ್ ಕೇಳಿದನು. {51}
قالَ عِلمُها عِندَ رَبّي في كِتابٍ ۖ لا يَضِلُّ رَبّي وَلا يَنسَى
ಅದರ ಬಗೆಗಿನ ಜ್ಞಾನ ನನ್ನ ದೇವನ ಬಳಿ ಒಂದು ದಸ್ತಾವೇಜಿನಲ್ಲಿ ಸುರಕ್ಷಿತವಾಗಿದೆ. ನನ್ನ ದೇವನಿಗೆ ತಪ್ಪು ಸಂಭವಿಸುವುದಿಲ್ಲ, ಅವನು ಮರೆಯುವುದೂ ಇಲ್ಲ. {52}
الَّذي جَعَلَ لَكُمُ الأَرضَ مَهدًا وَسَلَكَ لَكُم فيها سُبُلًا وَأَنزَلَ مِنَ السَّماءِ ماءً فَأَخرَجنا بِهِ أَزواجًا مِن نَباتٍ شَتّىٰ
(ಜನರೇ, ನಾವು) ಯಾರೆಂದರೆ, ಭೂಮಿಯನ್ನು ನಿಮಗಾಗಿ ಹರಡಿ ಬಿಟ್ಟು, ಅದರಲ್ಲಿ ನಿಮ್ಮ ಉಪಯೋಗಕ್ಕಾಗಿ ಹಲವಾರು ದಾರಿಗಳನ್ನು ಮಾಡಿದವರು; ಆಕಾಶದಿಂದ ಮಳೆನೀರು ಸುರಿಸಿ ಆ ಮೂಲಕ ವಿಭಿನ್ನ ರೀತಿಯ ಸಸ್ಯ ವಿಧಗಳನ್ನು ಬೆಳೆಸಿದವರು. {53}
كُلوا وَارعَوا أَنعامَكُم ۗ إِنَّ في ذٰلِكَ لَآياتٍ لِأُولِي النُّهىٰ
ನೀವೂ ಅದರಿಂದ ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳಿಗೂ ತಿನ್ನಿಸಿರಿ. ಹೌದು, ತಿಳುವಳಿಕೆಯುಳ್ಳ ಜನರಿಗೆ ಈ ಎಲ್ಲ ಪ್ರಕ್ರಿಯೆಗಳಲ್ಲಿ ನಿಜವಾಗಿಯೂ ಹಲವು ನಿದರ್ಶನಗಳಿವೆ. {54}
مِنها خَلَقناكُم وَفيها نُعيدُكُم وَمِنها نُخرِجُكُم تارَةً أُخرىٰ
(ಹೌದು ಜನರೇ), ಇದೇ ಭೂಮಿಯಿಂದ ನಾವು ನಿಮ್ಮನ್ನೂ ಸೃಷ್ಟಿಸಿದ್ದೇವೆ; ನಿಮ್ಮನ್ನು ನಾವು ಮರಳಿಸಲಿರುವುದೂ ಇದರೊಳೆಗೆಯೇ! ಮತ್ತೊಂದು ಬಾರಿ ನಾವು ನಿಮ್ಮನ್ನು (ಅಂತಿಮ ವಿಚಾರಣೆಗಾಗಿ) ಇದರಿಂದಲೇ ಹೊರತೆಗೆಯಲಿರುವವು! {55}
وَلَقَد أَرَيناهُ آياتِنا كُلَّها فَكَذَّبَ وَأَبىٰ
ನಿಜವಾಗಿಯೂ [ಫಿರ್‌ಔನ್ ನ ಮನವೊಪ್ಪಿಸಲು ನಾವು ಮೂಸಾ ಮತ್ತು ಹಾರೂನ್ ರಿಗೆ ಕೊಟ್ಟ] ಎಲ್ಲಾ ನಿದರ್ಶನಗಳನ್ನು ಅವನಿಗೆ ತೋರಿಸಿದ್ದಾಯಿತು! ಅವನಾದರೋ ಅವೆಲ್ಲವನ್ನೂ ಧಿಕ್ಕರಿಸಿದನು; ಒಪ್ಪಿಕೊಳ್ಳದೆ ತಿರಸ್ಕರಿಸಿ ಬಿಟ್ಟನು. {56}
قالَ أَجِئتَنا لِتُخرِجَنا مِن أَرضِنا بِسِحرِكَ يا موسىٰ
ಮತ್ತು ಹೇಳಿದನು: ಓ ಮೂಸಾ! ನಿನ್ನ ಜಾದೂಗಾರಿಕೆಯ ಬಲದಿಂದ ನಮ್ಮನ್ನು ನಮ್ಮ ನಾಡಿನಿಂದ ಹೊರಹಾಕಲು ನೀನು ಇಲ್ಲಿಗೆ ಬಂದಿರುವೆಯಾ? {57}
فَلَنَأتِيَنَّكَ بِسِحرٍ مِثلِهِ فَاجعَل بَينَنا وَبَينَكَ مَوعِدًا لا نُخلِفُهُ نَحنُ وَلا أَنتَ مَكانًا سُوًى
ಸರಿ, ಹಾಗಾದರೆ ಅಂತಹದ್ದೇ ಜಾದೂಗಾರಿಕೆಯನ್ನು ನಿನಗೆದುರಾಗಿ ಪ್ರಯೋಗಿಸಲು ನಾವೂ ಸಹ ತರಲಿದ್ದೇವೆ. ಅದಕ್ಕಾಗಿ ನಮ್ಮಿಬ್ಬರ ನಡುವೆ ಸರಿಹೊಂದುವ ಒಂದು ಸಮಯವನ್ನು ನೀನು ನಿಗದಿ ಪಡಿಸು; ಅದು ಯೋಗ್ಯವಾದ (ಎಲ್ಲರೂ ಕಾಣುವಂತಹ) ಒಂದು ಸ್ಥಳದಲ್ಲಿ ನಡೆಯಲಿ. ನಾವಾಗಲಿ ನೀನಾಗಲಿ ಅದಕ್ಕೆ ತಪ್ಪಬಾರದು. {58}
قالَ مَوعِدُكُم يَومُ الزّينَةِ وَأَن يُحشَرَ النّاسُ ضُحًى
ಮೂಸಾ ಹೇಳಿದರು: ಸರಿ, ನಿನಗೆ ಅದಕ್ಕಾಗಿ ನಿಗದಿ ಪಡಿಸಲಾದ ದಿನ ಉತ್ಸವದ ದಿನ. ಅಂದು ಹೊತ್ತೇರಿ ಬರುವಾಗಲೇ ಜನರೆಲ್ಲ (ಉತ್ಸವಕ್ಕಾಗಿ) ಒಟ್ಟುಸೇರುತ್ತಾರೆ. {59}
فَتَوَلّىٰ فِرعَونُ فَجَمَعَ كَيدَهُ ثُمَّ أَتىٰ
ಅದಕ್ಕೊಪ್ಪಿದ ಫಿರ್‌ಔನ್ ಅಲ್ಲಿಂದ ಹಿಂದಿರುಗಿ ಹೋದನು ಮತ್ತು ತನ್ನೆಲ್ಲಾ ತಂತ್ರ - ಕುತಂತ್ರಗಳನ್ನು ಒಟ್ಟಾಗಿಸಿಕೊಂಡು [ನಿಗದಿತ ದಿನದಂದು ನಿಗದಿತ ಸ್ಥಳಕ್ಕೆ ತನ್ನ ತಂಡದವರೊಂದಿಗೆ] ಬಂದನು. {60}
قالَ لَهُم موسىٰ وَيلَكُم لا تَفتَروا عَلَى اللَّهِ كَذِبًا فَيُسحِتَكُم بِعَذابٍ ۖ وَقَد خابَ مَنِ افتَرىٰ
ಆಗ ಫಿರ್‌ಔನ್ ಮತ್ತು ತಂಡದವರೊಂದಿಗೆ ಮೂಸಾ ಹೇಳಿದರು: ಓ ನಿಮ್ಮ ದುರ್ಗತಿಯೇ, ಸುಳ್ಳುಗಳನ್ನು ನೀವೇ ಸೃಷ್ಟಿಸಿ ಅಲ್ಲಾಹ್ ನ ಮೇಲೆ ಆರೋಪಿಸಬೇಡಿರಿ. ಅನ್ಯಥಾ ಘೋರ ಯಾತನೆಗೆ ಗುರಿಪಡಿಸಿ ಅವನು ನಿಮ್ಮನ್ನು ನಾಶಪಡಿಸಿ ಬಿಡುವನು. ಹೌದು, ಸುಳ್ಳುಂಟು ಮಾಡಿದವರು ಪರಾಭವಗೊಳ್ಳಲೇ ಬೇಕು! {61}
فَتَنازَعوا أَمرَهُم بَينَهُم وَأَسَرُّوا النَّجوىٰ
[ಫಿರ್‌ಔನ್ ನ ತಂಡದ ಜಾದೂಗಾರರು ಪ್ರವಾದಿ ಮೂಸಾ ರ ಆ ಮಾತುಗಳನ್ನು ಕೇಳಿದಾಗ] ತಾವು ಮಾಡಬೇಕಿದ್ದ ಕಾರ್ಯದ ಬಗ್ಗೆ ಪರಸ್ಪರ ಭಿನ್ನಭಿಪ್ರಾಯ ತಾಳಿದರು. ಮತ್ತು ತಮ್ಮೊಳಗೇ ರಹಸ್ಯವಾಗಿ ಸಮಾಲೋಚನೆ ನಡೆಸಿದರು. {62}
قالوا إِن هٰذانِ لَساحِرانِ يُريدانِ أَن يُخرِجاكُم مِن أَرضِكُم بِسِحرِهِما وَيَذهَبا بِطَريقَتِكُمُ المُثلىٰ
(ತರುವಾಯ ಸಹವರ್ತಿ ಜಾದೂಗಾರರೊಂದಿಗೆ) ಹೇಳತೊಡಗಿದರು: ನಿಜವಾಗಿ ಇವರೀರ್ವರೂ ಮಹಾ ಮಾಂತ್ರಿಕರಾಗಿರುವರು. ತಮ್ಮ ಮಾಂತ್ರಿಕ ವಿದ್ಯೆಯ ಮೂಲಕ ಇವರು ನಿಮ್ಮನ್ನು ಈ ನಿಮ್ಮ ನಾಡಿನಿಂದ ಹೊರಹಾಕ ಬಯಸುತ್ತಿರುವರು. ಮಾತ್ರವಲ್ಲ, ನೀವು ಹೊಂದಿರುವ ಈ ಮಾದರೀ ಜೀವನಶೈಲಿಯನ್ನು ಮುಗಿಸಿ ಬಿಡಲು ಬಯಸುತ್ತಿರುವರು. {63}
فَأَجمِعوا كَيدَكُم ثُمَّ ائتوا صَفًّا ۚ وَقَد أَفلَحَ اليَومَ مَنِ استَعلىٰ
ಆದ್ದರಿಂದ ನಿಮ್ಮೆಲ್ಲಾ ಮಾಂತ್ರಿಕ ಸಾಮರ್ಥ್ಯವನ್ನು ಒಟ್ಟುಗೂಡಿಸಿಕೊಡು ಒಂದೇ ಪಂಕ್ತಿಯಾಗಿ ಅವರನ್ನು ಎದುರಿಸಲು ಬನ್ನಿ. ಹೌದು, ಇಂದು (ಈ ಪೈಪೋಟಿಯಲ್ಲಿ) ಗೆಲ್ಲಲಿರುವವರು ಮೇಲುಗೈ ಸಾಧಿಸುವವರು ಮಾತ್ರ! {64}
قالوا يا موسىٰ إِمّا أَن تُلقِيَ وَإِمّا أَن نَكونَ أَوَّلَ مَن أَلقىٰ
(ನಂತರ ಮೂಸಾರೆಡೆಗೆ ತಿರುಗಿ) ಓ ಮೂಸಾ, ಮೊದಲು ನೀನು (ನಿನ್ನ ಜಾದೂಗಾರಿಕೆಯನ್ನು ಪ್ರದರ್ಶನಕ್ಕೆ) ಇಳಿಸುವೆಯೋ ಅಥವಾ ನಾವು ಮೊದಲು ಇಳಿಸಬೇಕೇ ಎಂದು ಸವಾಲು ಹಾಕಿದರು. {65}
قالَ بَل أَلقوا ۖ فَإِذا حِبالُهُم وَعِصِيُّهُم يُخَيَّلُ إِلَيهِ مِن سِحرِهِم أَنَّها تَسعىٰ
ಇಲ್ಲ, ನೀವೇ ಮೊದಲು ಇಳಿಸಿ ಎಂದು ಮೂಸಾ ಹೇಳಿದರು. ಕೂಡಲೇ ಆ ಜಾದೂಗಾರರು ಹಾಕಿದ ಹಗ್ಗಗಳು ಮತ್ತು ಊರುಗೋಲುಗಳು, ಅವರ ಜಾದುವಿನ ಪರಿಣಾಮವಾಗಿ ಹಾವುಗಳಂತೆ ಹರಿದಾಡುತ್ತಿರುವುದಾಗಿ ಮೂಸಾರಿಗೆ ಭಾಸವಾಯಿತು. {66}
فَأَوجَسَ في نَفسِهِ خيفَةً موسىٰ
ಆಗ ಮನದಲ್ಲಿ ಉಂಟಾದ ಲಘುವಾದ ಭಯವನ್ನು ಮೂಸಾರು ತಮ್ಮೊಳಗೇ ಅದುಮಿಟ್ಟರು! {67}
قُلنا لا تَخَف إِنَّكَ أَنتَ الأَعلىٰ
ನಾವು ಮೂಸಾರಿಗೆ ತಿಳಿಸಿದೆವು: ನೀವು ಭಯಪಡಬೇಡಿ, ಏಕೆಂದರೆ ಖಂಡಿತವಾಗಿಯೂ (ಇಂದು) ಮೇಲುಗೈ ಸಾಧಿಸಲಿರುವವರು ನೀವೇ ಆಗಿರುವಿರಿ. {68}
وَأَلقِ ما في يَمينِكَ تَلقَف ما صَنَعوا ۖ إِنَّما صَنَعوا كَيدُ ساحِرٍ ۖ وَلا يُفلِحُ السّاحِرُ حَيثُ أَتىٰ
ನೀವೀಗ ನಿಮ್ಮ ಬಲಗೈಯಲ್ಲಿರುವ (ಊರುಗೋಲನ್ನು) ಕೆಳಗೆ ಹಾಕಿರಿ. ಅದು (ನಿಜವಾದ ಸರ್ಪವಾಗಿ ಮಾರ್ಪಟ್ಟು) ಅವರು ಉಂಟುಮಾಡಿದ ಎಲ್ಲವನ್ನೂ ನುಂಗಿಬಿಡುವುದು. ಅವರು ಉಂಟುಮಾಡಿರುವುದು ಜಾದೂಗಾರರು ಉಂಟುಮಾಡುವಂತಹ ಭ್ರಮೆಯನ್ನಲ್ಲದೆ ಬೇರೇನನ್ನೂ ಅಲ್ಲ. ಹೌದು, ಈ ಜಾದೂಗಾರರು ಎಲ್ಲಿಂದ (ಅರ್ಥಾತ್ ಯಾವ ತಂತ್ರಗಳೊಂದಿಗೆ) ಬಂದರೂ ವಿಜಯಿಸಲಾರರು. {69}
فَأُلقِيَ السَّحَرَةُ سُجَّدًا قالوا آمَنّا بِرَبِّ هارونَ وَموسىٰ
ಕೊನೆಗೆ [ಮೂಸಾ ರ ಊರುಗೋಲು ನಿಜವಾದ ಸರ್ಪವಾಗಿ ಮಾರ್ಪಟ್ಟಾಗ] ಆ ಜಾದೂಗಾರರೆಲ್ಲ ಕೆಳಗೆ ಬಿದ್ದು (ಅಲ್ಲಾಹ್ ನಿಗೆ) ಸಾಷ್ಟಾಂಗ ನಮಸ್ಕರಿಸಿದರು ಹಾಗೂ ಹಾರೂನ್ ಮತ್ತು ಮೂಸಾರು ನಂಬುವ ದೇವನನ್ನು ನಾವೂ ನಂಬುವವರಾದೆವು ಎಂದು ಸಾರಿದರು. {70}
قالَ آمَنتُم لَهُ قَبلَ أَن آذَنَ لَكُم ۖ إِنَّهُ لَكَبيرُكُمُ الَّذي عَلَّمَكُمُ السِّحرَ ۖ فَلَأُقَطِّعَنَّ أَيدِيَكُم وَأَرجُلَكُم مِن خِلافٍ وَلَأُصَلِّبَنَّكُم في جُذوعِ النَّخلِ وَلَتَعلَمُنَّ أَيُّنا أَشَدُّ عَذابًا وَأَبقىٰ
ಏನು, ನಾನಿನ್ನೂ ಅನುಮತಿ ನೀಡುವುದಕ್ಕಿಂತ ಮುಂಚಿತವಾಗಿ ನೀವು ಈತನನ್ನು (ಒಬ್ಬ ಪ್ರವಾದಿಯಾಗಿ) ನಂಬಿಬಿಡುವುದೇ? ನಿಜವಾಗಿ ನಿಮಗೆ ಜಾದೂಗಾರಿಕೆಯ ವಿದ್ಯೆ ಕಲಿಸಿದ ನಿಮ್ಮ ಅತ್ಯಂತ ಹಿರಿಯನು ಈತನೇ ಆಗಿರಬೇಕು! ಆದ್ದರಿಂದ ನಿಮ್ಮ ಕೈಕಾಲುಗಳನ್ನು ಎದುರುಬದುರಾಗಿ [ಅರ್ಥಾತ್ ಬಲಗೈ ಮತ್ತು ಎಡಗಾಲನ್ನು ಅಥವಾ ಎಡಗೈ ಮತ್ತು ಬಲಗಾಲನ್ನು] ಕಡಿದು ಹಾಕುವೆನು; ಅಷ್ಟೇ ಅಲ್ಲ, ನಿಮ್ಮೆಲ್ಲರನ್ನು ಖಂಡಿತವಾಗಿ ಖರ್ಜೂರದ ಮರಗಳಲ್ಲಿ ಶಿಲುಬೆಗೇರಿಸುವೆನು; ಆಗ ನಮ್ಮ ಪೈಕಿ ಯಾರು ಅತ್ಯಂತ ಕಠಿಣ ಮತ್ತು ಹೆಚ್ಚು ದೀರ್ಘವಾದ ಶಿಕ್ಷೆ ಕೊಡಲು ಶಕ್ತರಾದವರು ಎಂಬುದು ನಿಮಗೇ ಚೆನ್ನಾಗಿ ತಿಳಿಯುತ್ತದೆ ಎಂದು ಫಿರ್‌ಔನ್ ಜಾದೂಗಾರರನ್ನು ಬೆದರಿಸಿದನು. {71}
قالوا لَن نُؤثِرَكَ عَلىٰ ما جاءَنا مِنَ البَيِّناتِ وَالَّذي فَطَرَنا ۖ فَاقضِ ما أَنتَ قاضٍ ۖ إِنَّما تَقضي هٰذِهِ الحَياةَ الدُّنيا
ಜಾದೂಗಾರರು ಉತ್ತರಿಸುತ್ತಾ ಹೇಳಿದರು: ನಮ್ಮ ಮುಂದೆ ಪ್ರತ್ಯಕ್ಷಗೊಂಡ (ದೈವಿಕ) ಪ್ರಮಾಣಗಳನ್ನು ಹಾಗೂ ನಮ್ಮನ್ನು ಸೃಷ್ಟಿಸಿದ ದೇವನನ್ನು ಕಡೆಗಣಿಸಿ ನಾವು ಎಂದೂ ನಿನಗೆ ಪ್ರಾಶಸ್ತ್ಯ ನೀಡಲಾರೆವು. ನೀನೇನು ತೀರ್ಮಾನಿಸ ಬಯಸುವೆಯೋ ಅದನ್ನೇ ಮಾಡು. ನಿನಗೇನಾದರೂ ತೀರ್ಮಾನಿಸಲು ಸಾಧ್ಯವಿದ್ದರೆ ಅದು ಕೇವಲ ಈ ಲೋಕದ ಬದುಕಿನಲ್ಲಿ ಮಾತ್ರ! {72}
إِنّا آمَنّا بِرَبِّنا لِيَغفِرَ لَنا خَطايانا وَما أَكرَهتَنا عَلَيهِ مِنَ السِّحرِ ۗ وَاللَّهُ خَيرٌ وَأَبقىٰ
ನಾವು (ಈ ಹಿಂದೆ) ಮಾಡಿದ ಪಾಪಗಳನ್ನು ಮನ್ನಿಸುವ ಸಲುವಾಗಿ ಹಾಗೂ ನೀನು ಬಲವಂತವಾಗಿ ನಮ್ಮಿಂದ (ಈಗ) ಮಾಡಿಸಿದ ಜಾದೂಗಾರಿಕೆಯನ್ನು ನಮಗಾಗಿ ಕ್ಷಮಿಸುವ ಸಲುವಾಗಿ ನಾವು ನಮ್ಮ ಪರಿಪಾಲಕನಾದ (ಅಲ್ಲಾಹ್ ನಲ್ಲಿ) ಮಾತ್ರ ವಿಶ್ವಾಸವಿರಿಸುತ್ತೇವೆ. [ನೀನಲ್ಲ, ಬದಲಾಗಿ] ಅಲ್ಲಾಹ್ ನೇ ಶ್ರೇಷ್ಠನು ಮತ್ತು ಅವನೇ ಸದಾಕಾಲ ಉಳಿಯಲಿರುವವನು. {73}
إِنَّهُ مَن يَأتِ رَبَّهُ مُجرِمًا فَإِنَّ لَهُ جَهَنَّمَ لا يَموتُ فيها وَلا يَحيىٰ
ವಾಸ್ತವದಲ್ಲಿ ಯಾರು ಅಪರಾಧಿಯಾಗಿ ತನ್ನ ಪ್ರಭುವಿನೆಡೆಗೆ ಮರಳುವನೋ ಆತನಿಗೆ ಖಂಡಿತವಾಗಿ ನರಕವಿದೆ; ಅಲ್ಲಿ ಆತನು ಸಾಯುವುದೂ ಇಲ್ಲ, ಬದುಕುಳಿಯುವುದೂ ಆತನಿಗೆ ಸಾಧ್ಯವಿಲ್ಲ. {74}
وَمَن يَأتِهِ مُؤمِنًا قَد عَمِلَ الصّالِحاتِ فَأُولٰئِكَ لَهُمُ الدَّرَجاتُ العُلىٰ
ಇನ್ನು, ಯಾರು ವಿಶ್ವಾಸಿಯಾಗಿ ಅದರ ಜೊತೆಗೆ ಸತ್ಕಾರ್ಯಗಳನ್ನೂ ಮಾಡಿ ಅಲ್ಲಾಹ್ ನೆಡೆಗೆ ಮರಳಿದರೋ ಅಂತಹವರಿಗೆ ಅತ್ಯುನ್ನತವಾದ ಸ್ಥಾನಮಾನಗಳಿವೆ. {75}
جَنّاتُ عَدنٍ تَجري مِن تَحتِهَا الأَنهارُ خالِدينَ فيها ۚ وَذٰلِكَ جَزاءُ مَن تَزَكّىٰ
ಅಂದರೆ ಕೆಳಗಡೆ ಕಾಲುವೆಗಳು ಹರಿಯುತ್ತಲಿರುವ ಮತ್ತು ಸದಾಕಾಲ ಉಳಿಯಲಿರುವ ಸ್ವರ್ಗೋದ್ಯಾನಗಳಲ್ಲಿ ಅವರು ಶಾಶ್ವತವಾಗಿ ವಾಸಿಸಲಿರುವರು. ಹೌದು, ತಮ್ಮನ್ನು ಪರಿಶುದ್ಧವಾಗಿ ಇರಿಸಿಕೊಂಡವರಿಗೆ ಅಂತಹ (ಉನ್ನತವಾದ) ಪ್ರತಿಫಲವಿದೆ. {76}
وَلَقَد أَوحَينا إِلىٰ موسىٰ أَن أَسرِ بِعِبادي فَاضرِب لَهُم طَريقًا فِي البَحرِ يَبَسًا لا تَخافُ دَرَكًا وَلا تَخشىٰ
[ನಂತರ ಸರಿಯಾದ ಸಮಯ ಬಂದಾಗ] ನಾವು ಮೂಸಾ ರಿಗೆ ದಿವ್ಯಸಂದೇಶ ಕಳುಹಿಸಿದೆವು: ನೀವು ನನ್ನೆಲ್ಲ ಉಪಾಸಕರನ್ನು [ಮುಖ್ಯವಾಗಿ ಇಸ್ರಾಈಲ್ ಜನಾಂಗವನ್ನು ಮತ್ತು ಈಜಿಪ್ಟ್ ನಲ್ಲಿ ಮೂಸಾ ರ ಕರೆಗೆ ಓಗೊಟ್ಟ ಕೆಲವು ಸ್ಥಳೀಯರನ್ನು] ರಾತೋರಾತ್ರಿ ಕರೆದೊಯ್ಯಿರಿ; ಅವರಿಗಾಗಿ ಸಮುದ್ರದಲ್ಲಿ [ತಮ್ಮ ಊರುಗೋಲು ಬಡಿಯುವ ಮೂಲಕ] ಒಂದು ಒಣ ರಸ್ತೆಯನ್ನು ಮಾಡಿಕೊಡಿ. ಆಗ ಶತ್ರುಸೇನೆ ನಿಮ್ಮನ್ನು ಹಿಂಬಾಲಿಸಿ ಬಂದು ಹಿಡಿದೀತು ಎಂಬ ಭಯವೂ ನಿಮಗೆ ಬೇಡ; ಅಂತೆಯೇ ಮುಳುಗಡೆಯಾಗುವ ಆತಂಕವೂ ನಿಮಗೆ ಅಗತ್ಯವಿಲ್ಲ. {77}
فَأَتبَعَهُم فِرعَونُ بِجُنودِهِ فَغَشِيَهُم مِنَ اليَمِّ ما غَشِيَهُم
ಆಗ ಫಿರ್‌ಔನ್ ತನ್ನ ಸೇನಾಬಲದೊಂದಿಗೆ ಅವರನ್ನು ಹಿಡಿಯಲು ಬೆನ್ನತ್ತಿ ಹೋದನು. ಕೂಡಲೇ ಸಮುದ್ರವು ಫಿರ್‌ಔನ್ ಮತ್ತು ಆತನ ಸೇನೆಯನ್ನು ಆವರಿಸಿಕೊಂಡಿತು; ಏನು ಆವರಿಸಬೇಕಿತ್ತೋ ಅದೇ ಅವರನ್ನು ಆವರಿಸಿಕೊಂಡಿತ್ತು! {78}
وَأَضَلَّ فِرعَونُ قَومَهُ وَما هَدىٰ
ವಾಸ್ತವದಲ್ಲಿ ಫಿರ್‌ಔನ್ ತನ್ನ ಜನರನ್ನು ದಾರಿತಪ್ಪಿಸಿ ಬಿಟ್ಟಿದ್ದನು; ಸರಿದಾರಿಗೆ ಅವರನ್ನು ಒಯ್ಯಲಿಲ್ಲ. {79}
يا بَني إِسرائيلَ قَد أَنجَيناكُم مِن عَدُوِّكُم وَواعَدناكُم جانِبَ الطّورِ الأَيمَنَ وَنَزَّلنا عَلَيكُمُ المَنَّ وَالسَّلوىٰ
ಇಸ್ರಾಈಲ್ ಸಂತತಿಯ ಜನರೇ, ಹಿಂದೆ ನಿಮ್ಮ ಆ ಶತ್ರುವಿನಿಂದ ನಾವು ನಿಮಗೆ ಮುಕ್ತಿ ನೀಡಿದೆವು. ಪವಿತ್ರ (ಸೀನಾಯ್) ಪರ್ವತದ ಬದಿಯಲ್ಲಿ [ತೋರಾ ನೀಡಲು] ನಿಮ್ಮೊಂದಿಗೆ ಸಮಯ ನಿಶ್ಚಯ ಮಾಡಿದೆವು; ಮತ್ತು (ವಿಷೇಶ ಆಹಾರವಾಗಿ) 'ಮನ್ನಾ' ಮತ್ತು 'ಸಲ್ವಾ' ವನ್ನು ನಿಮಗಾಗಿ ಇಳಿಸಿದೆವು. {80}
كُلوا مِن طَيِّباتِ ما رَزَقناكُم وَلا تَطغَوا فيهِ فَيَحِلَّ عَلَيكُم غَضَبي ۖ وَمَن يَحلِل عَلَيهِ غَضَبي فَقَد هَوىٰ
ನಿಮಗೆ ನಾವು ಒದಗಿಸಿದಂತಹ ಶುದ್ಧವಾದ ಆಹಾರವನ್ನು ಸೇವಿಸಿರಿ ಮತ್ತು ಅದನ್ನು ಸೇವಿಸಿ ಮಿತಿಮೀರದಿರಿ. ಅನ್ಯಥಾ ನನ್ನ ಕೋಪ ನಿಮ್ಮ ಮೇಲೆ ಎರಗಿ ಬೀಳುವುದು. ಹೌದು, ಯಾರ ಮೇಲೆ ನನ್ನ ಕೋಪವೆರಗಿತೋ ಆತನು ನಾಶವಾದನು (ಎಂದು ಅವರಿಗೆ ತಾಕೀತು ನೀಡಲಾಯಿತು). {81}
وَإِنّي لَغَفّارٌ لِمَن تابَ وَآمَنَ وَعَمِلَ صالِحًا ثُمَّ اهتَدىٰ
ಹೌದು, ಪಶ್ಚಾತ್ತಾಪ ಪಟ್ಟು ಮರಳುವವರು, ವಿಶ್ವಾಸಿಗಳಾಗಿರುವವರು, ಒಳ್ಳೆಯದನ್ನೇ ಮಾಡುವವರು ಮತ್ತು ಸರಿಯಾದ ದಾರಿಯಲ್ಲಿ ಮುಂದುವರಿಯುವವರು ಯಾರೋ ಅಂತಹವರಿಗೆ ನಾನು [ಅವರಿಂದ ಸಂಭವಿಸಬಹುದಾದ ಪಾಪಗಳನ್ನು] ಬಹಳವಾಗಿ ಕ್ಷಮಿಸುವವನೂ ಆಗಿರುವೆನು. {82}
وَما أَعجَلَكَ عَن قَومِكَ يا موسىٰ
ನಿಮ್ಮ ಜನರನ್ನು ಬಿಟ್ಟು, (ನಿಶ್ಚಿತಗೊಂಡ ಸಮಯಕ್ಕಿಂತ ಮುಂಚಿತವಾಗಿ ಇಲ್ಲಿಗೆ) ಆತುರವಾಗಿ ಬರಲು ಏನು ಕಾರಣ, ಓ ಮೂಸಾ? [ಅಲ್ಲಾಹ್ ನು ಮೂಸಾ ರನ್ನು ಪ್ರಶ್ನಿಸಿದ್ದನು]. {83}
قالَ هُم أُولاءِ عَلىٰ أَثَري وَعَجِلتُ إِلَيكَ رَبِّ لِتَرضىٰ
ಅವರು ನನ್ನನ್ನು ಅನುಸರಿಸಿ ಹಿಂದಿನಿಂದ ಬರುತ್ತಿದ್ದಾರೆ; ಆದರೆ ನಾನು, ಓ ನನ್ನೊಡೆಯಾ, ನಿನ್ನ ಸಂಪ್ರೀತಿಯನ್ನು ಬಯಸಿ ಆತುರವಾಗಿ ಬಂದುಬಿಟ್ಟೆ (ಎಂದು ಮೂಸಾರು ಉತ್ತರಿಸಿದರು). {84}
قالَ فَإِنّا قَد فَتَنّا قَومَكَ مِن بَعدِكَ وَأَضَلَّهُمُ السّامِرِيُّ
ನೀವು ಹೊರಟ ನಂತರ ನಾವು ನಿಮ್ಮ ಜನರನ್ನು ಪರೀಕ್ಷೆಗೆ ಒಳಪಡಿಸಿದೆವು; ಹಾಗಿರುವಾಗ ಆ 'ಸಾಮಿರೀ' ಎಂಬಾತನು ಅವರನ್ನು ದಾರಿತಪ್ಪಿಸಿ ಬಿಟ್ಟನು ಎಂದು ಅಲ್ಲಾಹ್ ನು ತಿಳಿಸಿದನು. {85}
فَرَجَعَ موسىٰ إِلىٰ قَومِهِ غَضبانَ أَسِفًا ۚ قالَ يا قَومِ أَلَم يَعِدكُم رَبُّكُم وَعدًا حَسَنًا ۚ أَفَطالَ عَلَيكُمُ العَهدُ أَم أَرَدتُم أَن يَحِلَّ عَلَيكُم غَضَبٌ مِن رَبِّكُم فَأَخلَفتُم مَوعِدي
ಮೂಸಾ ರು ಕುಪಿತಗೊಂಡು ಅತಿಯಾಗಿ ಮನನೊಂದು ಕೂಡಲೇ ತಮ್ಮ ಜನರ ಬಳಿಗೆ ಹಿಂದಿರುಗಿ ಹೋದರು. ಓ ನನ್ನ ಜನಾಂಗದವರೇ, ನಿಮ್ಮ ಕರ್ತಾರನು ನಿಮ್ಮೊಂದಿಗೆ ಅಷ್ಟೊಂದು ಒಳ್ಳೆಯ ವಾಗ್ದಾನಗಳನ್ನು ಮಾಡಿರಲಿಲ್ಲವೇ? ಅದಕ್ಕಾಗಿ ನಿಗದಿ ಪಡಿಸಿದ ಸಮಯ ನಿಮಗೆ ದೀರ್ಘವಾಗಿ ಕಂಡಿತೇನು? ಅಥವಾ ನಿಮ್ಮ ಕರ್ತಾರನ ಕೋಪ ನಿಮ್ಮ ಮೇಲೆ ಎರಗಿ ಬೀಳಲಿ ಎಂಬುದಾಗಿತ್ತೇ ನಿಮ್ಮ ಬಯಕೆ? ಅದಕ್ಕಾಗಿ ನನ್ನೊಂದಿಗಿನ ವಾಗ್ದಾನವನ್ನು ನೀವು ಮುರಿದು ಬಿಟ್ಟಿರಾ? ಮೂಸಾ ರು ಕೇಳಿದರು. {86}
قالوا ما أَخلَفنا مَوعِدَكَ بِمَلكِنا وَلٰكِنّا حُمِّلنا أَوزارًا مِن زينَةِ القَومِ فَقَذَفناها فَكَذٰلِكَ أَلقَى السّامِرِيُّ
ನಿಮ್ಮೊಂದಿಗಿನ ವಾಗ್ದಾನವನ್ನು ನಾವು ನಮ್ಮ ಸ್ವಂತ ಇಚ್ಛೆಯಿಂದ ಮುರಿಯಲಿಲ್ಲ; ಬದಲಾಗಿ ಇಡೀ ಸಮುದಾಯದ ಅಲಂಕಾರಾಭರಣಗಳನ್ನು ನಮ್ಮ ಮೇಲೆ ಹೊರಿಸಲಾಗಿತ್ತು ಮತ್ತು ನಾವದನ್ನು [ಸಾಮಿರೀ ಯ ಆದೇಶದಂತೆ ಆತನು ಹೊತ್ತಿಸಿದ ಬೆಂಕಿಯಲ್ಲಿ] ಹಾಕಿದೆವು. ಸಾಮಿರೀ ಹೂಡಿದ (ಕುತಂತ್ರ) ಹಾಗಿತ್ತು ಎಂದು [ಅವನ ಕುತಂತ್ರಕ್ಕೆ ಬಲಿಯಾಗಿದ್ದ] ಜನರು ನೆಪ ಹೇಳಿದರು. {87}
فَأَخرَجَ لَهُم عِجلًا جَسَدًا لَهُ خُوارٌ فَقالوا هٰذا إِلٰهُكُم وَإِلٰهُ موسىٰ فَنَسِيَ
ಹಾಗೆ (ಕರಗಿಸಿದ ಆಭರಣಗಳಿಂದ) ಕರುವಿನ ವಿಗ್ರಹವೊಂದನ್ನು ಅವರಿಗಾಗಿ ಸಾಮಿರೀ ತಯಾರಿಸಿದನು. ಅದು ಎತ್ತಿನಂತಹ ಧ್ವನಿ ಉತ್ಪಾದಿಸುತ್ತಿತ್ತು. ಆಗ [ಸಾಮಿರೀ ಯ ಕುತಂತ್ರಕ್ಕೊಳಗಾದ] ಜನರು ಹೇಳಿದರು: ಇದೇ ನಿಮ್ಮ ದೇವರು ಮತ್ತು ಮೂಸಾ ರ ದೇವರು. ಆದರೆ ಮೂಸಾ ರು ಅದನ್ನು ಮರೆತು ಬಿಟ್ಟಿದ್ದಾರೆ! {88}
أَفَلا يَرَونَ أَلّا يَرجِعُ إِلَيهِم قَولًا وَلا يَملِكُ لَهُم ضَرًّا وَلا نَفعًا
ಅವರ ಯಾವ ಮಾತಿಗೂ ಆ ವಿಗ್ರಹ ಉತ್ತರಿಸುತ್ತಿಲ್ಲ ಎಂಬುದನ್ನೂ ಅವರಿಗೆ ಯಾವುದೇ ನಷ್ಟವನ್ನಾಗಲಿ ಲಾಭವನ್ನಾಗಲಿ ಮಾಡಲು ಅದು ಸಾಮರ್ಥ್ಯ ಹೊಂದಿಲ್ಲ ಎಂಬುದನ್ನೂ ಆ ಜನರು ನೋಡುತ್ತಿಲ್ಲವೇ? {89}
وَلَقَد قالَ لَهُم هارونُ مِن قَبلُ يا قَومِ إِنَّما فُتِنتُم بِهِ ۖ وَإِنَّ رَبَّكُمُ الرَّحمٰنُ فَاتَّبِعوني وَأَطيعوا أَمري
ನಿಜವಾಗಿ ಅದಕ್ಕಿಂತ ಮುಂಚೆಯೇ ಪ್ರವಾದಿ ಹಾರೂನ್ ರು ಆ ಜನರೊಂದಿಗೆ ಹೇಳಿದ್ದರು: ಓ ನನ್ನ ಜನರೇ, ಈ ವಿಗ್ರಹದ ಕಾರಣ ನೀವು ಪರೀಕ್ಷೆಗೆ ಒಳಗಾಗಿರುವಿರಿ. ಯಥಾರ್ಥದಲ್ಲಿ (ನಾನು ಆರಾಧಿಸುವ) ಆ ಪರಮ ದಯಾಮಯನೇ ನಿಮ್ಮ ದೇವನೂ ಆಗಿರುವನು. ಆದ್ದರಿಂದ ನನ್ನನ್ನು ಅನುಸರಿಸಿರಿ ಮತ್ತು ನನ್ನ ಆದೇಶಗಳನ್ನು ಪಾಲಿಸಿರಿ. {90}
قالوا لَن نَبرَحَ عَلَيهِ عاكِفينَ حَتّىٰ يَرجِعَ إِلَينا موسىٰ
ಆದರೆ ಆ ಜನರು ಹೇಳಿದರು: ನಮ್ಮ ಬಳಿಗೆ ಮೂಸಾ ರು ಮರಳಿ ಬರುವ ತನಕ ನಾವು ಇದಕ್ಕೆ ತೋರುತ್ತಿರುವ ಭಕ್ತಿಯನ್ನು ನಿಲ್ಲಿಸುವ ವಿಷಯವೇ ಇಲ್ಲ! {91}
قالَ يا هارونُ ما مَنَعَكَ إِذ رَأَيتَهُم ضَلّوا
[ಕೋಪಗೊಂಡ ಮೂಸಾ ರು ತಮ್ಮ ಜನರತ್ತ ಮರಳಿ ಬಂದು ಸಹೋದರ ಹಾರೂನ್ ರನ್ನು] ಗದರಿಸಿದರು: ಓ ಹಾರೂನ್, ಈ ಜನರು ದಾರಿ ತಪ್ಪುತ್ತಿರುವುದನ್ನು ನೋಡಿಯೂ (ಅವರನ್ನು ಸರಿದಾರಿಗೆ ತಾರದಂತೆ) ಯಾವ ಅಂಶ ನಿಮ್ಮನ್ನು ತಡೆಯಿತು? {92}
أَلّا تَتَّبِعَنِ ۖ أَفَعَصَيتَ أَمري
ನೀವೇಕೆ ನನ್ನನ್ನು ಅನುಸರಿಸಲಿಲ್ಲ? ನನ್ನ ತಾಕೀತನ್ನು ಧಿಕ್ಕರಿಸಿ ಬಿಟ್ಟಿರೇನು? {93}
قالَ يَا ابنَ أُمَّ لا تَأخُذ بِلِحيَتي وَلا بِرَأسي ۖ إِنّي خَشيتُ أَن تَقولَ فَرَّقتَ بَينَ بَني إِسرائيلَ وَلَم تَرقُب قَولي
ಹಾರೂನ್ ಉತ್ತರಿಸಿದರು: ಓ ನನ್ನ ತಾಯಿಯ ಪುತ್ರನೇ [ಅರ್ಥಾತ್ ಓ ನನ್ನ ಪ್ರೀತಿಯ ಸಹೋದರನೇ], ನನ್ನ ಗಡ್ಡ ಮತ್ತು ನನ್ನ ತಲೆಗೂದಲಿನಿಂದ ನನ್ನನ್ನು ಹಿಡಿಯಬೇಡಿ. ನಿಜ ಸಂಗತಿಯೆಂದರೆ, ನನ್ನ ಆದೇಶಕ್ಕೆ ಕಾಯದೆ ಈ ಇಸ್ರಾಈಲ್ ಜನರ ನಡುವೆ ನೀನು ಭಿನ್ನತೆ ಹುಟ್ಟುಹಾಕಿರುವೆ ಎಂದು ನೀವು ನನ್ನ ಮೇಲೆ ಆಪಾದಿಸಬಹುದು ಎಂದು ನನಗೆ ಭಯವಾಗಿತ್ತು ಅಷ್ಟೆ! {94}
قالَ فَما خَطبُكَ يا سامِرِيُّ
ಮೂಸಾ ರು (ಸಾಮಿರೀ ಯ ಬಳಿಗೆ ಹೋಗಿ) ಓ ಸಾಮಿರೀ, ನಿನಗೇನಾಯಿತು? ಏನು ಸಮಾಚಾರ ಎಂದು ಪ್ರಶ್ನಿಸಿದರು. {95}
قالَ بَصُرتُ بِما لَم يَبصُروا بِهِ فَقَبَضتُ قَبضَةً مِن أَثَرِ الرَّسولِ فَنَبَذتُها وَكَذٰلِكَ سَوَّلَت لي نَفسي
[ಅದಕ್ಕೆ ಸಾಮಿರೀ ಯು ಸುಳ್ಳುಸ್ಪಷ್ಟನೆ ನೀಡುತ್ತಾ], ಇವರಾರಿಗೂ ನೋಡಲು ಸಾಧ್ಯವಾಗದ್ದನ್ನು ನಾನು ನೋಡಿರುವೆನು; ಆ ಕಾರಣದಿಂದಲೇ ದೇವದೂತರು ಹೆಜ್ಜೆ ಇರಿಸಿದಲ್ಲಿಂದ ಒಂದು ಹಿಡಿ ಮಣ್ಣನ್ನು ತೆಗೆದು ನಾನು ಈ (ಕರುವಿನ ವಿಗರಹಕ್ಕೆ) ಹಾಕಿದೆನು. ನಾನು ಹಾಗೆ ಮಾಡಲೆಂದೇ ನನ್ನ ಮನಸ್ಸು ನನಗೆ ಸೂಚನೆ ನೀಡಿತು ಎಂದು ಹೇಳಿದನು. {96}
قالَ فَاذهَب فَإِنَّ لَكَ فِي الحَياةِ أَن تَقولَ لا مِساسَ ۖ وَإِنَّ لَكَ مَوعِدًا لَن تُخلَفَهُ ۖ وَانظُر إِلىٰ إِلٰهِكَ الَّذي ظَلتَ عَلَيهِ عاكِفًا ۖ لَنُحَرِّقَنَّهُ ثُمَّ لَنَنسِفَنَّهُ فِي اليَمِّ نَسفًا
ಮೂಸಾ (ಕುಪಿತಗೊಂಡು) ಹೇಳಿದರು: ನೀನು ಇಲ್ಲಿಂದ ತೊಲಗು. ನನ್ನನ್ನು ಮುಟ್ಟಬೇಡಿ [ಅರ್ಥಾತ್ ನಾನು ಬಹಿಷ್ಕೃತನಾಗಿರುವೆ] ಎಂದು ಜೀವಮಾನವಿಡೀ ನೀನು ಹೇಳುತ್ತಿರಬೇಕು. ಮಾತ್ರವಲ್ಲ, ಏನೇ ಆದರೂ ತಪ್ಪಿಸಲಾಗದ (ಶಿಕ್ಷೆಗಾಗಿ) ನಿನಗೆ ಅವಧಿ ನಿಶ್ಚಿತಗೊಂಡಿದೆ. ನೀನು ಯಾವುದಕ್ಕೆ ಭಕ್ತಿ ತೋರುತ್ತಿದ್ದೆಯೋ ಆ ನಿನ್ನ (ಹುಸಿ) ದೇವನ ಕಡೆಗೊಮ್ಮೆ ನೋಡು; ನಾವದನ್ನು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿಸಿ ನಂತರ ಸಮುದ್ರಲ್ಲಿ ಚೆಲ್ಲಿಬಿಡುವೆವು. {97}
إِنَّما إِلٰهُكُمُ اللَّهُ الَّذي لا إِلٰهَ إِلّا هُوَ ۚ وَسِعَ كُلَّ شَيءٍ عِلمًا
ಜನರೇ, ಆ ಅಲ್ಲಾಹ್ ನು ಮಾತ್ರ ನಿಮ್ಮ ದೇವನಾಗಿರುವನು. ಅವನ ಹೊರತು ಬೇರೆ ದೇವನಿಲ್ಲ. ಅವನ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. {98}
كَذٰلِكَ نَقُصُّ عَلَيكَ مِن أَنباءِ ما قَد سَبَقَ ۚ وَقَد آتَيناكَ مِن لَدُنّا ذِكرًا
ಈ ರೀತಿಯಲ್ಲಿ, ಪೈಗಂಬರರೇ, ಅದಾಗಲೆ ಸಂಭವಿಸಿದ ಘಟನೆಗಳಲ್ಲಿ ಕೆಲವುದರ ವೃತ್ತಾಂತಗಳನ್ನು ನಾವು ನಿಮಗೆ ತಿಳಿಸುತ್ತಿರುತ್ತೇವೆ. ಮತ್ತು ವಿಶೇಷವಾಗಿ ನಮ್ಮ ಕಡೆಯಿಂದ ಒಂದು ಉಪದೇಶ ಗ್ರಂಥವನ್ನೂ ನಾವು ನಿಮಗೆ ನೀಡಿರುತ್ತೇವೆ. {99}
مَن أَعرَضَ عَنهُ فَإِنَّهُ يَحمِلُ يَومَ القِيامَةِ وِزرًا
ಇನ್ನು ಯಾರಾದರೂ ಆ ಉಪದೇಶದಿಂದ ಮುಖ ತಿರುಗಿಸಿಕೊಂಡರೆ ಅವನು ಪುನರುತ್ಥಾನದ ದಿನ (ಪಾಪದ) ಭಾರೀ ಹೊರೆಯನ್ನು ಹೊತ್ತಿರುವನು. {100}
خالِدينَ فيهِ ۖ وَساءَ لَهُم يَومَ القِيامَةِ حِملًا
ಅಂತಹವರು ಹೊರೆ ಹೊತ್ತ ಸ್ಥಿತಿಯಲ್ಲೇ ಸದಾಕಾಲ ಇರಬೇಕಾಗುವುದು; ಆ ಹೊರೆಯು ಪುನರುತ್ಥಾನದ ದಿನ ಅವರ ಪಾಲಿಗೆ ಅತ್ಯಂತ ಕೆಟ್ಟ ಹೊರೆಯಾಗುವುದು. {101}
يَومَ يُنفَخُ فِي الصّورِ ۚ وَنَحشُرُ المُجرِمينَ يَومَئِذٍ زُرقًا
(ಸೂರ್ ಎಂಬ) ಕಹಳೆಯನ್ನು ಊದಲಾಗುವ ಆ ದಿನ ಎಲ್ಲಾ ಅಪರಾಧಿಗಳನ್ನು ನಾವು ಒಂದೆಡೆ ಸೇರಿಸಲಿರುವೆವು; ಅಂದು (ಭಯದ ತೀವ್ರತೆಯ ಕಾರಣ) ಅವರ ಕಣ್ಣುಗಳು ನೀಲಿಗಟ್ಟಿದ ಸ್ಥಿತಿಯಲ್ಲಿರುವುವು. {102}
يَتَخافَتونَ بَينَهُم إِن لَبِثتُم إِلّا عَشرًا
ನೀವು ಒಂದು ಹತ್ತು ದಿನಗಳಷ್ಟು ಮಾತ್ರ (ಭೂಮಿಯಲ್ಲಿ) ತಂಗಿರಬಹುದಷ್ಟೆ ಎಂದು ಅವರೆಲ್ಲ ಪಿಸುಮಾತಿನಲ್ಲಿ ಒಬ್ಬರಿಗೊಬ್ಬರು ಹೇಳುತ್ತಿರುವರು. {103}
نَحنُ أَعلَمُ بِما يَقولونَ إِذ يَقولُ أَمثَلُهُم طَريقَةً إِن لَبِثتُم إِلّا يَومًا
ಅವರ ಪೈಕಿ ಅಂದಾಜು ಮಾಡುವುದ್ರಲ್ಲಿ ಹೆಚ್ಚು ಜಾಣನಾದವನು, ನೀವು ಭೂಮಿಯಲ್ಲಿ ಒಂದು ದಿನದಷ್ಟು ಮಾತ್ರ ತಂಗಿರುವಿರಿ ಎಂದು ಹೇಳುತ್ತಿರುವುದನ್ನೂ ನಾವು ಚೆನ್ನಾಗಿ ಬಲ್ಲೆವು. {104}
وَيَسأَلونَكَ عَنِ الجِبالِ فَقُل يَنسِفُها رَبّي نَسفًا
[ಯಾವುದು ನಾಶವಾದರೂ ಪರ್ವತಗಳು ಮಾತ್ರ ಎಂದಿಗೂ ನಾಶವಾಗುವುದಿಲ್ಲ ಎಂದು ನಂಬಿದ್ದ ಕುರೈಷರು], ಅಂದು ಈ ಪರ್ವತಗಳಿಗೆ ಏನು ಸಂಭವಿಸುವುದು ಎಂದು ನಿಮ್ಮೊಂದಿಗೆ (ವ್ಯಂಗ್ಯವಾಗಿ) ಕೇಳುತ್ತಿದ್ದಾರೆ. ಅವುಗಳನ್ನು ನನ್ನ ಕರ್ತಾರನಾದ (ಅಲ್ಲಾಹ್ ನು) ನುಚ್ಚುನೂರುಗೊಳಿಸಿ ಚದುರಿಸಿ ಬಿಡುವನು ಎಂದು ಪೈಗಂಬರರೇ, ನೀವು ಹೇಳಿರಿ. {105}
فَيَذَرُها قاعًا صَفصَفًا
ನಂತರ ಭೂಮಿಯನ್ನು ಒಂದು ಸಮತಟ್ಟಾದ ಮೈದಾನವನ್ನಾಗಿಸಿ ಬಿಡುವನು. {106}
لا تَرىٰ فيها عِوَجًا وَلا أَمتًا
ಅದರಲ್ಲಿ ಅಂಕುಡೊಂಕುಗಳನ್ನಾಗಲಿ ಏರುಪೇರುಗಳನ್ನಾಗಲಿ ನೀವು ಕಾಣಲಾರಿರಿ! {107}
يَومَئِذٍ يَتَّبِعونَ الدّاعِيَ لا عِوَجَ لَهُ ۖ وَخَشَعَتِ الأَصواتُ لِلرَّحمٰنِ فَلا تَسمَعُ إِلّا هَمسًا
ಅಂದು ಒಬ್ಬ ಕರೆಯುವಾತನನ್ನು ಎಲ್ಲರೂ, ಅತ್ತಿತ್ತ ತಿರುಗದೆ, ನೇರವಾಗಿ ಹಿಂಬಾಲಿಸುವರು. ದಯಾಮಯನಾದ (ಅಲ್ಲಾಹ್ ನ) ಮುಂದೆ ಧ್ವನಿಗಳು ತಗ್ಗಿರುವುವು. ಕಾಲ ಸಪ್ಪಳವೊಂದರ ಹೊರತು ನೀವು ಅಂದು ಬೇರೇನನ್ನೂ ಆಲಿಸಲಾರಿರಿ. {108}
يَومَئِذٍ لا تَنفَعُ الشَّفاعَةُ إِلّا مَن أَذِنَ لَهُ الرَّحمٰنُ وَرَضِيَ لَهُ قَولًا
ದಯಾಮಯನಾದ (ಅಲ್ಲಾಹ್ ನು) ಯಾರಿಗೆ ಅನುಮತಿ ನೀಡುವನೋ ಹಾಗೂ ಯಾರ ಪರವಾಗಿ ಮಾತನಾಡುವುದು ದಯಾಮಯನಿಗೆ ಸಮ್ಮತವೋ ಅದರ ಹೊರತು ಬೇರೆ ಯಾವುದೇ ಶಿಫಾರಸ್ಸಿನಿಂದ ಯಾರಿಗೂ ಯಾವ ಪ್ರಯೋಜನವೂ ಆಗದ ದಿನವದು. {109}
يَعلَمُ ما بَينَ أَيديهِم وَما خَلفَهُم وَلا يُحيطونَ بِهِ عِلمًا
(ಅದೇಕೆಂದರೆ) ಜನರ ಮುಂದಿನ ಮತ್ತು ಹಿಂದಿನ ಸಕಲವನ್ನೂ ದಯಾಮಯನು ಅರಿತಿರುವನು; ಆದರೆ ಅವರಿಗೆ (ಅರ್ಥಾತ್ ಶಿಫಾರಸ್ಸು ಮಾಡಲು ಹೊರಟವರಿಗೆ) ಜನರ ಬಗೆಗಿನ ಸಂಪೂರ್ಣವಾದ ಜ್ಞಾನವಿರುವುದಿಲ್ಲ. {110}
وَعَنَتِ الوُجوهُ لِلحَيِّ القَيّومِ ۖ وَقَد خابَ مَن حَمَلَ ظُلمًا
ಚಿರಂತನನೂ ಜಗನ್ನಿಯಾಮಕನೂ ಆದ ಅಲ್ಲಾಹ್ ನ ಮುಂದೆ (ನಿಲ್ಲುವಾಗ ಅಂತಹ ಜನರ) ಮೋರೆಗಳಲ್ಲಿ ಅತಿಯಾದ ಪರಿತಾಪವಿರುವುದು. ಹೌದು, ಅಧರ್ಮದ ಹೊರೆ ಹೊತ್ತವರು ಅಂದು ಖಂಡಿತ ಪರಾಜಿತರಾಗುವರು. {111}
وَمَن يَعمَل مِنَ الصّالِحاتِ وَهُوَ مُؤمِنٌ فَلا يَخافُ ظُلمًا وَلا هَضمًا
ಆದರೆ ವಿಶ್ವಾಸಿಯಾಗಿದ್ದುಕೊಂಡು ಅದರ ಜೊತೆಗೆ ಸತ್ಕರ್ಮಗಳನ್ನೂ ಮಾಡುವವರ (ಮುಖಭಾವದಲ್ಲಿ) ಅನ್ಯಾಯಕ್ಕೊಳಗಾಗುವ ಅಥವಾ ಏನನ್ನಾದರೂ ಕಳೆದುಕೊಳ್ಳುವ ಭಯವಿರಲಾರದು. {112}
وَكَذٰلِكَ أَنزَلناهُ قُرآنًا عَرَبِيًّا وَصَرَّفنا فيهِ مِنَ الوَعيدِ لَعَلَّهُم يَتَّقونَ أَو يُحدِثُ لَهُم ذِكرًا
ಹಾಗೆ ನಾವು, ಓ ಪೈಗಂಬರರೇ, [ನಮ್ಮ ಅಂತಿಮ ಸಂದೇಶವನ್ನು ಈಗ] ಅರಬಿ ಭಾಷೆಯಲ್ಲಿ ಕುರ್‌ಆನ್ ನ ರೂಪದಲ್ಲಿ ಇಳಿಸಿ ಕೊಡುತ್ತಿದ್ದೇವೆ. ಜನರು (ಪರಲೋಕದ ಶಿಕ್ಷೆಯ ವಿಷಯದಲ್ಲಿ) ಜಾಗರೂಕರಾಗಲಿ ಅಥವಾ ಅವರೊಳಗೆ (ಪರಲೋಕದ ವಿಚಾರಣೆಯ ಕುರಿತು) ಚೆನ್ನಾಗಿ ಅರಿವು ಮೂಡಲಿ ಎಂದು ಇದರಲ್ಲಿ ನಾವು ವಿವಿಧ ರೀತಿಯಲ್ಲಿ ಜನರಿಗೆ ಎಚ್ಚರಿಕೆಯನ್ನೂ ನೀಡಿರುತ್ತೇವೆ. {113}
فَتَعالَى اللَّهُ المَلِكُ الحَقُّ ۗ وَلا تَعجَل بِالقُرآنِ مِن قَبلِ أَن يُقضىٰ إِلَيكَ وَحيُهُ ۖ وَقُل رَبِّ زِدني عِلمًا
[ಈ ಕುರ್‌ಆನ್ ಅನ್ನು ನಿಮಗೆ ಹಂತಹಂತವಾಗಿ ನೀಡುತ್ತಿರುವ] ನಿಜವಾದ ಸಾರ್ವಭೌಮನಾದ ಅಲ್ಲಾಹ್ ನೇ ಅತಿ ಮಹೋನ್ನತನು! ಆದ್ದರಿಂದ ಪೈಗಂಬರರೇ, ನಿಮಗೆ ಈ ಕುರ್‌ಆನ್ ಅನ್ನು ದಿವ್ಯಸಂದೇಶವಾದ (ವಹೀ) ಮೂಲಕ ನೀಡುವ ಕಾರ್ಯವು ಮುಗಿಯುವುದಕ್ಕೆ ಮುನ್ನವೇ ನೀವು ಅದನ್ನು ಪಡಕೊಳ್ಳಲು ಆತುರ ತೋರದಿರಿ; ಬದಲಾಗಿ, ಓ ನನ್ನ ಕರ್ತಾರನೇ, ಜ್ಞಾನವನ್ನು ನನಗೆ ಇನ್ನಷ್ಟು ಹೆಚ್ಚಿಸಿ ಕೊಡು ಎಂದಷ್ಟೇ ನೀವು ಪ್ರಾರ್ಥಿಸಿರಿ. {114}
وَلَقَد عَهِدنا إِلىٰ آدَمَ مِن قَبلُ فَنَسِيَ وَلَم نَجِد لَهُ عَزمًا
ಪೈಗಂಬರರೇ, ಇದಕ್ಕಿಂತ ಮುಂಚೆ ಆದಮ್ ರಿಗೂ ಒಂದು ಆದೇಶವನ್ನು ನಾವು ನೀಡೀದ್ದೆವು; ನಂತರ ಅವರು ಅದನ್ನು ಮರೆತು ಬಿಟ್ಟರು! ಆದರೆ (ಅಂತಹ) ಇರಾದೆಯನ್ನು ನಾವು ಅವರಲ್ಲಿ ಕಾಣಲಿಲ್ಲ! {115}
وَإِذ قُلنا لِلمَلائِكَةِ اسجُدوا لِآدَمَ فَسَجَدوا إِلّا إِبليسَ أَبىٰ
ಆದಮ್ ರ ಮುಂದೆ ನೀವೆಲ್ಲರೂ ತಲೆಬಾಗಿರಿ ಎಂದು ನಾವು ಮಲಕ್ ಗಳಿಗೆ ಆದೇಶ ನೀಡಿದ ಸಂದರ್ಭವನ್ನು ನೆನಪಿಸಿರಿ. ಕೂಡಲೇ ಮಲಕ್ ಗಳೆಲ್ಲರೂ ತಲೆಬಾಗಿದರು - ಒಬ್ಬ ಇಬ್‌ಲೀಸ್ ನ ಹೊರತು! ಅವನು (ಆದೇಶ ಪಾಲಿಸಲು) ನಿರಾಕರಿಸಿದನು. {116}
فَقُلنا يا آدَمُ إِنَّ هٰذا عَدُوٌّ لَكَ وَلِزَوجِكَ فَلا يُخرِجَنَّكُما مِنَ الجَنَّةِ فَتَشقىٰ
ನಾವು ಆದಮ್ ರನ್ನು ಎಚ್ಚರಿಸಿದೆವು: ಓ ಆದಮ್, ಇವನು ನಿಜವಾಗಿಯೂ ನಿಮ್ಮ ಹಾಗೂ ನಿಮ್ಮ ಪತ್ನಿಯ ಶತ್ರುವಾಗಿದ್ದಾನೆ. ಆದ್ದರಿಂದ ಇವನು ನಿಮ್ಮಿಬ್ಬರನ್ನೂ ಈ ಉದ್ಯಾನದಿಂದ ಹೊರಗಟ್ಟಿಸಿ ಬಿಡುವ ಪ್ರಸಂಗ ಬಾರದಿರಲಿ; ಹಾಗೇನಾದರೂ ಆದರೆ ನೀವು ಸಂಕಷ್ಟಕ್ಕೀಡಾಗಲಿರುವಿರಿ. {117}
إِنَّ لَكَ أَلّا تَجوعَ فيها وَلا تَعرىٰ
ಖಂಡಿತವಾಗಿ ನಿಮಗೆ ಈ ಉದ್ಯಾನದಲ್ಲಿರುವಾಗ ಹಸಿವಿನ ಬಾಧೆಯಾಗಲಿ ನಗ್ನತೆಯ ಭಯವಾಗಲಿ ಇರಲಾರದು. {118}
وَأَنَّكَ لا تَظمَأُ فيها وَلا تَضحىٰ
ಮಾತ್ರವಲ್ಲ, ನಿಮಗಿಲ್ಲಿ ಬಾಯಾರಿಕೆಯಾಗಲಿ ಬಿಸಿಲಿನ ತಾಪವಾಗಲಿ ತಟ್ಟಲಾರದು. {119}
فَوَسوَسَ إِلَيهِ الشَّيطانُ قالَ يا آدَمُ هَل أَدُلُّكَ عَلىٰ شَجَرَةِ الخُلدِ وَمُلكٍ لا يَبلىٰ
ಹಾಗಿರುವಾಗ, ಸೈತಾನನು (ಒಂದು ದಿನ) ಆದಮ್ ರ ಬಳಿಗೆ ಹೋಗಿ, ಓ ಆದಮ್, ಶಾಶ್ವತವಾದ ಜೀವನ ಮತ್ತು ಮುಗಿಯದ ಆಧಿಪತ್ಯ ನೀಡುವ ವೃಕ್ಷವೊಂದರ ಕುರಿತು ನಾನು ನಿಮಗೆ ತಿಳಿಸಿ ಕೊಡಲೇ ಎಂದು ಅವರ ಮನದಲ್ಲಿ ಪ್ರಲೋಭನೆ ಬಿತ್ತಿದನು. {120}
فَأَكَلا مِنها فَبَدَت لَهُما سَوآتُهُما وَطَفِقا يَخصِفانِ عَلَيهِما مِن وَرَقِ الجَنَّةِ ۚ وَعَصىٰ آدَمُ رَبَّهُ فَغَوىٰ
(ಪ್ರಲೋಭನೆಗೆ ಒಳಗಾದ್ದರಿಂದ) ಅವರಿಬ್ಬರೂ ಆ ವೃಕ್ಷದ ಫಲವನ್ನು ತಿಂದರು. ಪರಿಣಾಮವಾಗಿ ಅವರ ಗುಪ್ತಾಂಗಗಳು ಪರಸ್ಪರರ ಮುಂದೆ ಪ್ರಕಟವಾದುವು. ಕೂಡಲೇ ಅವರು ಆ ಉದ್ಯಾನದ ಎಲೆಗಳನ್ನು ಸೇರಿಸಿ ತಮ್ಮ ದೇಹಗಳನ್ನು ಮುಚ್ಚತೊಡಗಿದರು. ಹಾಗೆ ಆದಮ್ ರು ತಮ್ಮ ಕರ್ತಾರನ ಮಾತು ಮೀರಿದಾಗ ತಪ್ಪುದಾರಿಗೆ ಸರಿದರು! {121}
ثُمَّ اجتَباهُ رَبُّهُ فَتابَ عَلَيهِ وَهَدىٰ
ನಂತರ ಆದಮ್ ರನ್ನು ಅವರ ಕರ್ತಾರನು [ಭೂಮಿಯಲ್ಲಿ ತನ್ನ ದೌತ್ಯಕ್ಕಾಗಿ] ಆರಿಸಿಕೊಂಡನು; ಅವರ ಮೇಲೆ ಕರುಣೆತೋರಿದನು ಮತ್ತು ಅಗತ್ಯವಾದ ಮಾರ್ಗದರ್ಶನ ನೀಡಿದನು. {122}
قالَ اهبِطا مِنها جَميعًا ۖ بَعضُكُم لِبَعضٍ عَدُوٌّ ۖ فَإِمّا يَأتِيَنَّكُم مِنّي هُدًى فَمَنِ اتَّبَعَ هُدايَ فَلا يَضِلُّ وَلا يَشقىٰ
ನಿಮ್ಮಲ್ಲಿನ ಎರಡೂ ವರ್ಗದವರು [ಅರ್ಥಾತ್ ಆದಮ್ ದಂಪತಿಗಳು ಮತ್ತು ಅವರನ್ನು ಪ್ರಲೋಭಿಸಿದ ಸೈತಾನ ನು] ಇಲ್ಲಿಂದ ಒಟ್ಟಿಗೆ ಹೊರನಡೆಯಿರಿ. ನೀವು ಒಬ್ಬರಿಗೊಬ್ಬರು ಶತ್ರುಗಳಾಗಿರುವಿರಿ. ಮುಂದೆ [ಭೂಮಿಯಲ್ಲಿ ನಿಮ್ಮ ಸಂತತಿ ಬೆಳೆದಾಗ] ನನ್ನ ವತಿಯಿಂದ ನಿಮ್ಮೆಡೆಗೆ ಮಾರ್ಗದರ್ಶನ ತಲುಪಿದಾಗಲೆಲ್ಲ ಯಾರು ಅದನ್ನು ಅನುಸರಿಸುವರೋ ಅವರು ದಾರಿಗೆಡಲಾರರು. ಅವರು (ಪರಲೋದಲ್ಲಿ) ಸಂಕಷ್ಟಕ್ಕೊಳಗಾಗಲಾರರು ಎಂದು ಅಲ್ಲಾಹ್ ನು ವಿವರಣೆ ನೀಡಿದನು. {123}
وَمَن أَعرَضَ عَن ذِكري فَإِنَّ لَهُ مَعيشَةً ضَنكًا وَنَحشُرُهُ يَومَ القِيامَةِ أَعمىٰ
ಇನ್ನು ಯಾರಾದರೂ ನನ್ನ ಸ್ಮರಣೆಯಿಂದ ಮುಖ ತಿರುಗಿಸಿಕೊಂಡರೆ ಅಂತಹವನ ಜೀವನ ಸಂಕಟಭರಿತವಾಗಿರುತ್ತದೆ. ಮುಂದೆ ಎಲ್ಲರನ್ನೂ ಒಟ್ಟುಗೂಡಿಸುವ ಪುನರುತ್ಥಾನದ ದಿನ ನಾವು ಆತನನ್ನು ಕುರುಡನಾಗಿ ಎಬ್ಬಿಸಲಿರುವೆವು. {124}
قالَ رَبِّ لِمَ حَشَرتَني أَعمىٰ وَقَد كُنتُ بَصيرًا
ಆಗ ಅವನು, ಓ ನನ್ನ ದೇವಾ! ನನ್ನನ್ನೇಕೆ ನೀನು ಕುರುಡನಾಗಿ ಎಬ್ಬಿಸಿದೆ? ಹಿಂದೆ (ಭೂಲೋಕದಲ್ಲಿ ಬದುಕಿದ್ದಾಗ) ನಾನು ನೋಡಬಲ್ಲವನಾಗಿದ್ದೆ ತಾನೆ ಎಂದು ರೋದಿಸುವನು. {125}
قالَ كَذٰلِكَ أَتَتكَ آياتُنا فَنَسيتَها ۖ وَكَذٰلِكَ اليَومَ تُنسىٰ
ಅಲ್ಲಾಹ್ ನು ಉತ್ತರಿಸುವನು: ಹಾಗೆಯೇ ಆಗಬೇಕಿತ್ತು! ನಮ್ಮ ವತಿಯಿಂದ (ಮಾರ್ಗದರ್ಶಕ) ವಚನಗಳು ನಿನ್ನ ಬಳಿಗೆ ಬಂದಿತ್ತು, ಆದರೆ ನೀನು ಅದನ್ನು ಕಡೆಗಣಿಸಿದೆ. ಅದಕ್ಕಾಗಿಯೇ ಈ ದಿನ ನಿನ್ನನ್ನು ಕಡೆಗಣಿಸಲಾಗಿದೆ. {126}
وَكَذٰلِكَ نَجزي مَن أَسرَفَ وَلَم يُؤمِن بِآياتِ رَبِّهِ ۚ وَلَعَذابُ الآخِرَةِ أَشَدُّ وَأَبقىٰ
ಹೌದು, ತನ್ನ ಹದ್ದು ಮೀರಿದ ಹಾಗೂ ತನ್ನ ಪ್ರಭುವಿನ ವಚನಗಳನ್ನು ನಂಬದ ಜನರನ್ನು ನಾವು ಹಾಗೆಯೇ ಶಿಕ್ಷಿಸುತ್ತೇವೆ. ಇನ್ನು ಪರಲೋಕದ ಶಿಕ್ಷೆಯಂತು ಅದಕ್ಕಿಂತ ಕಠಿಣವಾದುದು ಹಾಗೂ ಸದಾಕಾಲ ಉಳಿಯುವಂತಹದ್ದು. {127}
أَفَلَم يَهدِ لَهُم كَم أَهلَكنا قَبلَهُم مِنَ القُرونِ يَمشونَ في مَساكِنِهِم ۗ إِنَّ في ذٰلِكَ لَآياتٍ لِأُولِي النُّهىٰ
ಪೈಗಂಬರರೇ, ಇವರಿಗಿಂತ ಮುಂಚೆ ಅದೆಷ್ಟೋ ಜನಾಂಗಗಳನ್ನು ನಾವು (ಇವರಂತೆ ವರ್ತಿಸಿದ ಕಾರಣಕ್ಕಾಗಿ) ನಾಶಪಡಿಸಿದ ವಿಚಾರವು ಇವರನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತಿಲ್ಲವೇ? ಅವರ ನಿವಾಸಗಳ (ಭಗ್ನಾವಶೇಷಗಳ) ಮೂಲಕವೇ ಇವರು ಅತ್ತಿತ್ತ ಒಡಾಡುತ್ತಿರುತ್ತಾರೆ. ಖಂಡಿತವಾಗಿ ಇದರಲ್ಲಿ ವಿವೇಕಮತಿಗಳಿಗೆ ಸಾಕಷ್ಟು ದೃಷ್ಟಾಂತಗಳಿವೆ. {128}
وَلَولا كَلِمَةٌ سَبَقَت مِن رَبِّكَ لَكانَ لِزامًا وَأَجَلٌ مُسَمًّى
(ಇವರ ಶಿಕ್ಷೆಯ ವಿಷಯವಾಗಿ) ನಿಮ್ಮ ಒಡೆಯನ ಕಡೆಯಿಂದ ಮೊದಲೇ ನಿರ್ಧರಿಸಲ್ಪಟ್ಟ ತೀರ್ಪು ಇರದೇ ಹೋಗಿದ್ದರೆ ಹಾಗೂ ಅದಕ್ಕಾಗಿ ಒಂದು ಸಮಯವನ್ನು ನಿಶ್ಚಯ ಪಡಿಸದಿರುತ್ತಿದ್ದರೆ, ಇವರಿಗೆ ಅದಾಗಲೇ ಶಿಕ್ಷೆ ಅನಿವಾರ್ಯವಾಗಿ ಬಿಟ್ಟಿತ್ತು. {129}
فَاصبِر عَلىٰ ما يَقولونَ وَسَبِّح بِحَمدِ رَبِّكَ قَبلَ طُلوعِ الشَّمسِ وَقَبلَ غُروبِها ۖ وَمِن آناءِ اللَّيلِ فَسَبِّح وَأَطرافَ النَّهارِ لَعَلَّكَ تَرضىٰ
ಓ ಪೈಗಂಬರರೇ, ಈ ಜನರಾಡುತ್ತಿರುವ [ಆಕ್ಷೇಪಾರ್ಹ, ನಿಂದನೆಯ] ಮಾತುಗಳನ್ನು ನೀವು ಸಹಿಸಿಕೊಳ್ಳಿರಿ. ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಕರ್ತಾರನ ಕೀರ್ತನೆ ಮತ್ತು ಸ್ತುತಿಸ್ತೋತ್ರಗಳನ್ನು [ಅರ್ಥಾತ್ ಫಜ್‌ರ್ ಮತ್ತು ಅಸ್‌ರ್ ನಮಾಝ್ ಗಳನ್ನು] ಮಾಡಿರಿ. ರಾತ್ರಿಯ ಹೊತ್ತುಗಳಲ್ಲಿ [ಇಶಾ ಮತ್ತು ತಹಜ್ಜುದ್ ನಮಾಝ್ ಗಳನ್ನು ಮತ್ತು] ದಿನದ ಅಂಚುಗಳಲ್ಲಿ ಅವನ ಕೀರ್ತನೆ [ಅರ್ಥಾತ್ ಝುಹರ್ ಮತ್ತು ಮಘ್ರಿಬ್ ನಮಾಝ್ ಗಳನ್ನು] ನಿರ್ವಹಿಸಿರಿ - (ತತ್ಪರಿಣಾಮವಾಗಿ) ನಿಮಗೆ ಆತ್ಮಸಂತೃಪ್ತಿ ಪ್ರಾಪ್ತವಾಗುಗುದು. {130}
وَلا تَمُدَّنَّ عَينَيكَ إِلىٰ ما مَتَّعنا بِهِ أَزواجًا مِنهُم زَهرَةَ الحَياةِ الدُّنيا لِنَفتِنَهُم فيهِ ۚ وَرِزقُ رَبِّكَ خَيرٌ وَأَبقىٰ
ಅವರಲ್ಲಿನ ಕೆಲವು ಸ್ತರದ ಜನರಿಗೆ ಐಹಿಕ ಜೀವನಕ್ಕೆ ಸಂಬಂಧಿಸಿದ ವಿಲಾಸದ ಸಾಧನಗಳನ್ನು ನಾವು ಕೊಟ್ಟಿರುವುದು ಅವರನ್ನು ಪರೀಕ್ಷಿಸಲಿಕ್ಕಾಗಿ ಮಾತ್ರ. ಪೈಗಂಬರರೇ, ನೀವು ಅದರತ್ತ ಕಣ್ಣೆತ್ತಿ ನೋಡಲೂ ಬೇಡಿ. ಆದರೆ (ನೆನಪಿಡಿ), ನಿಮ್ಮ ಕರ್ತಾರನು ಒದಗಿಸುವ ಉಪಜೀವನವೇ (ಪರಲೋಕದ ದೃಷ್ಟಿಯಿಂದ) ಶ್ರೇಷ್ಠವಾದುದು ಮತ್ತು ಸದಾಕಾಲ ಉಳಿಯುವಂತಹದ್ದು. {131}
وَأمُر أَهلَكَ بِالصَّلاةِ وَاصطَبِر عَلَيها ۖ لا نَسأَلُكَ رِزقًا ۖ نَحنُ نَرزُقُكَ ۗ وَالعاقِبَةُ لِلتَّقوىٰ
ನಿಮ್ಮ ಜನರಿಗೆ ನಮಾಝ್ ನ ಆದೇಶ ನೀಡಿರಿ ಮತ್ತು ದೃಢತೆಯೊಂದಿಗೆ ನೀವೂ ಅದನ್ನು ಪಾಲಿಸಿರಿ. ನಿಮ್ಮಿಂದ ನಾವು ಉಪಜೀವನ ಬಯಸುತ್ತಿಲ್ಲ; ಬದಲಾಗಿ ನಾವೇ ನಿಮಗೆ ಜೀವನಾಧಾರ ದಯಪಾಲಿಸುತ್ತಿದ್ದೇವೆ. ಹೌದು, [ನಾವು ಬಯಸುವುದು ದೇವನಿಷ್ಠೆಯನ್ನು ಮಾತ್ರ; ಏಕೆಂದರೆ] ಅಂತಿಮ ವಿಜಯವು ದೇವನಿಷ್ಠೆಯನ್ನೇ ಆಧರಿಸಿದೆ. {132}
وَقالوا لَولا يَأتينا بِآيَةٍ مِن رَبِّهِ ۚ أَوَلَم تَأتِهِم بَيِّنَةُ ما فِي الصُّحُفِ الأولىٰ
ಈ ದೂತನೇಕೆ ತಮ್ಮ ಕರ್ತಾರನ ವತಿಯಿಂದ ಸಾಕ್ಷಾತ್ ಒಂದು ನಿದರ್ಶನವನ್ನು ನಮ್ಮ ಬಳಿಗೆ ತರುತ್ತಿಲ್ಲ ಎಂದು ಆ ಜನರು (ಮತ್ತೆಮತ್ತೆ) ಕೇಳುತ್ತಾರೆ. ಹಿಂದಿನ ಗ್ರಂಥಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾದ [ಮುಹಮ್ಮದ್ ಪೈಗಂಬರರು ಮತ್ತು ಕುರ್‌ಆನ್ ಗ್ರಂಥವು] ಅವರ ಬಳಿಗೆ ಈಗ ಬಂದಿರುವುದು ಒಂದು ನಿದರ್ಶನವಾಗಿ ತಾನೆ! {133}
وَلَو أَنّا أَهلَكناهُم بِعَذابٍ مِن قَبلِهِ لَقالوا رَبَّنا لَولا أَرسَلتَ إِلَينا رَسولًا فَنَتَّبِعَ آياتِكَ مِن قَبلِ أَن نَذِلَّ وَنَخزىٰ
ಒಂದು ವೇಳೆ ಅವರನ್ನು ನಾವು ಈ (ಪೈಗಂಬರರ ಆಗಮನಿಕ್ಕಿಂತ) ಮುಂಚೆಯೇ ಶಿಕ್ಷೆಗೊಳಪಡಿಸಿ ನಾಶಗೊಳಿಸಿರುತ್ತಿದ್ದರೆ ಅವರು "ನಮ್ಮೊಡೆಯಾ, ನಮ್ಮ ಬಳಿಗೂಬ್ಬ ದೂತತನನ್ನು ನೀನೇಕೆ ಕಳುಹಿಸಲಿಲ್ಲ? ಕಳುಹಿಸುರುತ್ತಿದ್ದರೆ ನಾವು ಹೀಗೆ ನಿಂದ್ಯರಾಗಿ ಅಪಮಾನಕ್ಕೊಳಗಾಗುವ ಮುನ್ನವೇ ನಿನ್ನ ವಚನಗಳನ್ನು ಅನುಸರಿಸಿ ನಡೆಯುತ್ತಿದ್ದೆವು" ಎಂದು ಹೇಳುತ್ತಿದ್ದರು. {134}
قُل كُلٌّ مُتَرَبِّصٌ فَتَرَبَّصوا ۖ فَسَتَعلَمونَ مَن أَصحابُ الصِّراطِ السَّوِيِّ وَمَنِ اهتَدىٰ
ಎಲ್ಲರೂ ಫಲಿತಾಂಶಕ್ಕಾಗಿ ಕಾದಿರುವರು; ನೀವೂ ಕಾಯಿರಿ. (ತಪ್ಪು ದಾರಿಯನ್ನು ಬಿಟ್ಟು) ಸರಿದಾರಿಯಲ್ಲಿ ನಡೆದವರಾರು ಮತ್ತು (ದಾರಿ ತಪ್ಪದೆ) ಸರಿಯಾದ ಗುರಿ ತಲುಪಿದವರಾರು ಎಂದು ನಿಮಗೆ ಸದ್ಯವೇ ತಿಳಿಯಲಿದೆ ಎಂದು ಪೈಗಂಬರರೇ ನೀವು ಸಾರಿರಿ. {135}
------