تـرجمـة سورة سَبَأ من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت
سـهل الفهـم من غيـر الـرجـوع إلى كتاب التفسيـر
| ಸೂರಃ ಸಬಅ | ಪವಿತ್ರ ಕುರ್‌ಆನ್ ನ 34 ನೆಯ ಸೂರಃ | ಇದರಲ್ಲಿ ಒಟ್ಟು 54 ಆಯತ್ ಗಳು ಇವೆ |
![]()
ಅಪಾರ ದಯಾಮಯನೂ ನಿತ್ಯ ಕರುಣೆ ತೋರುವವನೂ ಆದ ಅಲ್ಲಾಹನ ನಾಮದೊಂದಿಗೆ (ಆರಂಭಿಸುತ್ತೇನೆ)!
الْحَمْدُ لِلَّهِ الَّذِي لَهُ مَا فِي السَّمَاوَاتِ وَمَا فِي الْأَرْضِ وَلَهُ الْحَمْدُ فِي الْآخِرَةِ ۚ وَهُوَ الْحَكِيمُ الْخَبِيرُ
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳು ಯಾರಿಗೆ ಸೇರಿವೆಯೋ ಆ ಅಲ್ಲಾಹ್ ನಿಗೇ ಸಕಲ ವಿಧ ಸ್ತುತಿಸ್ತೋತ್ರಗಳು! ಹಾಗೆಯೇ ಪರಲೋಕದಲ್ಲಿ ಸಹ ಎಲ್ಲ ರೀತಿಯ ಪ್ರಶಂಸೆಗಳು ಅವನಿಗೇ ಸಲ್ಲುತ್ತದೆ. ಅವನು ಅತ್ಯಂತ ವಿವೇಕಪೂರ್ಣನೂ ಅಗಾಧ ಅರಿವುಳ್ಳವವನೂ ಆಗಿರುವನು. {1}
يَعْلَمُ مَا يَلِجُ فِي الْأَرْضِ وَمَا يَخْرُجُ مِنْهَا وَمَا يَنْزِلُ مِنَ السَّمَاءِ وَمَا يَعْرُجُ فِيهَا ۚ وَهُوَ الرَّحِيمُ الْغَفُورُ
ಭೂಮಿಯೊಳಗೆ ಏನೆಲ್ಲಾ ಪ್ರವೇಶಿಸುತ್ತವೆ, ಏನೆಲ್ಲಾ ಅದರಿಂದ ಹೊರಹೊಮ್ಮುತ್ತವೆ; ಹಾಗೆಯೇ ಆಕಾಶಗಳಿಂದ ಏನೆಲ್ಲಾ ಕೆಳಗೆ ಇಳಿಯುತ್ತವೆ ಮತ್ತು ಏನೆಲ್ಲಾ ಆಕಾಶಕ್ಕೆ ಏರಿ ಹೋಗುತ್ತವೆ ಎಂದು ಅವನಿಗೆ ಚೆನ್ನಾಗಿ ತಿಳಿದಿರುತ್ತದೆ. ಅವನು ನಿರಂತರ ಕರುಣೆ ತೋರುವವನೂ ಬಹಳ ಕ್ಷಮಿಸುವವನೂ ಆಗಿರುವನು. {2}
وَقَالَ الَّذِينَ كَفَرُوا لَا تَأْتِينَا السَّاعَةُ ۖ قُلْ بَلَىٰ وَرَبِّي لَتَأْتِيَنَّكُمْ عَالِمِ الْغَيْبِ ۖ لَا يَعْزُبُ عَنْهُ مِثْقَالُ ذَرَّةٍ فِي السَّمَاوَاتِ وَلَا فِي الْأَرْضِ وَلَا أَصْغَرُ مِنْ ذَٰلِكَ وَلَا أَكْبَرُ إِلَّا فِي كِتَابٍ مُبِينٍ
(ಪೈಗಂಬರರೇ, ನಿಮ್ಮ ಪ್ರವಾದಿತ್ವವನ್ನು) ಧಿಕ್ಕರಿಸುತ್ತಿರುವವರು, ಪುನರುತ್ಥಾನದ ಘಳಿಗೆ ನಮ್ಮ ಮೇಲೆ ಬರಲಾರದು ಎಂದೇ ವಾದಿಸುತ್ತಾರೆ. ಅವರೊಡನೆ ಹೇಳಿ: ಏಕೆ ಬರಲಾರದು? ಅಗೋಚರ ವಿಷಯಗಳೆಲ್ಲವನ್ನೂ ಬಲ್ಲ ಆ ನನ್ನ ಪರಿಪಾಲಕನ ಆಣೆ! ಖಂಡಿತವಾಗಿಯೂ ಆ ಘಳಿಗೆ ನಿಮ್ಮ ಪಾಲಿಗೆ ಬಂದೇ ತೀರುವುದು! ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ, ಕೇವಲ ಒಂದು ಅಣುವಿನಷ್ಟು ಮಾತ್ರ ತೂಗುವ ಅಥವಾ ಅದಕ್ಕಿಂತ ಚಿಕ್ಕದಾದ ಅಥವಾ ದೊಡ್ಡದಾದ ಯಾವೊಂದು ವಸ್ತು ಸಹ ಅವನಿಂದ ಮರೆಯಾಗಿಲ್ಲ - ಒಂದು ಸ್ಪಷ್ಟವಾದ ಗ್ರಂಥದಲ್ಲಿ ದಾಖಲಿಸದೆ ಏನನ್ನೂ ಬಿಟ್ಟಿಲ್ಲ! {3}
لِيَجْزِيَ الَّذِينَ آمَنُوا وَعَمِلُوا الصَّالِحَاتِ ۚ أُولَٰئِكَ لَهُمْ مَغْفِرَةٌ وَرِزْقٌ كَرِيمٌ
ವಿಶ್ವಾಸಿಗಳಾಗಿದ್ದುಕೊಂಡು ತಮ್ಮನ್ನು ನಿರ್ಮಲವಾದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಪ್ರತಿಫಲವನ್ನು ನೀಡಲಿಕ್ಕಾಗಿಯೂ (ಪುನರುತ್ಥಾನವು ಸಂಭವಿಸಲಿದೆ)! ಅಂತಹವರಿಗೆ (ಅಂದು) ಕ್ಷಮಾದಾನ ನೀಡಲಾಗುವುದು ಹಾಗೂ ಅತ್ಯಂತ ಶ್ರೇಷ್ಠವಾದ ಜೀವನಾವಶ್ಯಕತೆಗಳನ್ನು ಒದಗಿಸಲಾಗುವುದು. {4}
وَالَّذِينَ سَعَوْا فِي آيَاتِنَا مُعَاجِزِينَ أُولَٰئِكَ لَهُمْ عَذَابٌ مِنْ رِجْزٍ أَلِيمٌ
ಹಾಗೂ ನಮ್ಮ ವಚನಗಳನ್ನು ಕೀಳಾಗಿ ಕಾಣಿಸಲು ಹೆಣಗಾಡಿದವರನ್ನು (ಶಿಕ್ಷಿಸಲು ಸಹ ಪುನರುತ್ಥಾನದ ದಿನ ಬರಲೇ ಬೇಕಾಗಿದೆ)! ಅಂತಹವರಿಗೆ ಅತ್ಯಂತ ಕೆಟ್ಟ ಸ್ವರೂಪದ ನೋವುಭರಿತ ಶಿಕ್ಷೆಯಾಗಲಿದೆ. {5}
وَيَرَى الَّذِينَ أُوتُوا الْعِلْمَ الَّذِي أُنْزِلَ إِلَيْكَ مِنْ رَبِّكَ هُوَ الْحَقَّ وَيَهْدِي إِلَىٰ صِرَاطِ الْعَزِيزِ الْحَمِيدِ
ಆದರೆ ಪೈಗಂಬರರೇ, ನಿಮ್ಮ ಕರ್ತಾರನ ವತಿಯಿಂದ ನಿಮಗೆ ಇಳಿಸಿ ಕೊಡಲಾದ ವಚನಗಳೆಲ್ಲವೂ ಪರಮ ಸತ್ಯವಾದವು ಮತ್ತು ಅತ್ಯಂತ ಪ್ರಬಲನೂ ಸ್ತುತ್ಯರ್ಹನೂ ಆದ ಅಲ್ಲಾಹ್ ಮಾರ್ಗದೆಡೆಗೆ ಅವು ಮುನ್ನಡೆಸುವವೂ ಆಗಿವೆ ಎಂಬ ವಾಸ್ತವಿಕತೆಯನ್ನು ಜ್ಞಾನ ನೀಡಲ್ಪಟ್ಟವರು ಮನಗಾಣುತ್ತಾರೆ. {6}
وَقَالَ الَّذِينَ كَفَرُوا هَلْ نَدُلُّكُمْ عَلَىٰ رَجُلٍ يُنَبِّئُكُمْ إِذَا مُزِّقْتُمْ كُلَّ مُمَزَّقٍ إِنَّكُمْ لَفِي خَلْقٍ جَدِيدٍ
ನೀವು (ಸತ್ತು) ಸಂಪೂರ್ಣವಾಗಿ ಛಿದ್ರ ವಿಚ್ಛಿದ್ರವಾಗಿ ಹೋದ ನಂತರ ಹೊಸದಾಗಿ ಸೃಷ್ಟಿಸಲ್ಪಡುವಿರಿ ಎಂದು ತಿಳಿಸಿತ್ತಿರುವ ಒಬ್ಬ ವ್ಯಕ್ತಿಯ ಬಗ್ಗೆ ನಾವು ನಿಮಗೆ ತಿಳಿಸಲೇ ಎಂದು (ಇಸ್ಲಾಮ್ ಧರ್ಮದ ಬೋಧನೆಗಳಿಗೆ) ತಿರಸ್ಕಾರ ತೋರಿದವರು (ವ್ಯಂಗ್ಯವಾಗಿ ಜನರೊಡನೆ) ಹೇಳ್ತುತ್ತಿದ್ದಾರೆ! {7}
أَفْتَرَىٰ عَلَى اللَّهِ كَذِبًا أَمْ بِهِ جِنَّةٌ ۗ بَلِ الَّذِينَ لَا يُؤْمِنُونَ بِالْآخِرَةِ فِي الْعَذَابِ وَالضَّلَالِ الْبَعِيدِ
ಅಲ್ಲಾಹ್ ನ ವಿಷಯದಲ್ಲಿ ಆತ ಇಲ್ಲಸಲ್ಲದ ಮಾತುಗಳನ್ನು ಉಂಟುಮಾಡಿ ಹೇಳುತ್ತಿದ್ದಾನೆಯೇ ಅಥವಾ ಆತನಿಗೆ ಬುದ್ಧಿಭ್ರಮಣೆ ಆಗಿರಬಹುದೇ ಎಂದು ಅವರು ಕೇಳುತ್ತಿದ್ದಾರೆ. ಅದಾವುದೂ ಅಲ್ಲ; ನಿಜವಾಗಿ, ಪರಲೋಕದ ಬಗ್ಗೆ ನಂಬಿಕೆ ಇಲ್ಲದ ಅವರು ಶಿಕ್ಷೆಗೆ ಗುರಿಯಾಗಿರುವರು; ಅಂದರೆ ಅವರು ತಪ್ಪಾದ ದಾರಿಯಲ್ಲಿ (ಹಿಂದಿರುಗಿ ಬರಲಾಗದಷ್ಟು) ದೂರ ಸಾಗಿರುವರು! {8}
أَفَلَمْ يَرَوْا إِلَىٰ مَا بَيْنَ أَيْدِيهِمْ وَمَا خَلْفَهُمْ مِنَ السَّمَاءِ وَالْأَرْضِ ۚ إِنْ نَشَأْ نَخْسِفْ بِهِمُ الْأَرْضَ أَوْ نُسْقِطْ عَلَيْهِمْ كِسَفًا مِنَ السَّمَاءِ ۚ إِنَّ فِي ذَٰلِكَ لَآيَةً لِكُلِّ عَبْدٍ مُنِيبٍ
ಮುಂದಿನಿಂದಲೂ ಹಿಂದಿನಿಂದಲೂ ಅವರನ್ನು ಸುತ್ತುವರಿದು ನಿಂತಿರುವ ಈ ಆಕಾಶವನ್ನು ಹಾಗೂ ಈ ಭೂಮಿಯನ್ನು ಅವರು ಕಂಡೇ ಇಲ್ಲವೇ?! ನಾವು ಬಯಸಿದರೆ ಭೂಮಿಯು ಅವರನ್ನೆಳೆದುಕೊಂಡು ತನ್ನೊಳಗೇ ಕುಸಿಯಬಹುದು; ಅಥವಾ ತುಣುಕು ತುಣುಕಾಗಿ (ವಿಪತ್ತುಗಳು) ಅವರ ಮೇಲೆ ಆಕಾಶದಿಂದ ಸುರಿಯುವಂತೆ ಮಾಡಬಹುದು. ಅಲ್ಲಾಹ್ ನೆಡೆಗೆ (ಪ್ರಾಮಾಣಿಕವಾಗಿ) ಒಲವು ತೋರುವ ಪ್ರತಿಯೊಬ್ಬ ಉಪಾಸಕನಿಗೂ ಇದರಲ್ಲಿ ನಿದರ್ಶನವಿದೆ. {9}
وَلَقَدْ آتَيْنَا دَاوُودَ مِنَّا فَضْلًا ۖ يَا جِبَالُ أَوِّبِي مَعَهُ وَالطَّيْرَ ۖ وَأَلَنَّا لَهُ الْحَدِيدَ
ಹೌದು, ನಾವು ಪ್ರವಾದಿ ದಾವೂದ್ ರಿಗೆ ನಮ್ಮ ವತಿಯಿಂದ ವಿಶೇಷವಾದ ಔದಾರ್ಯಗಳನ್ನು ದಯಪಾಲಿಸಿದ್ದೆವು. ಓ ಪರ್ವತಗಳೇ, ಪ್ರವಾದಿ ದಾವೂದ್ ನಮ್ಮ ಕೀರ್ತನೆ ಮಾಡುವಾಗ ಅವರೊಂದಿಗೆ ನೀವೂ ಕೀರ್ತನೆಗಳನ್ನು ಪುವರಾವರ್ತಿಸಿರಿ; ಮತ್ತು ಓ ಪಕ್ಷಿಗಳೇ, ನೀವೂ ಸಹ - (ಎಂದು ನಾವು ಆದೇಶಿಸಿದ್ದೆವು)! ಮಾತ್ರವಲ್ಲ ಕಬ್ಬಿಣವನ್ನು ಕೂಡ ಅವರ ಪಾಲಿಗೆ ಮೃದುಗೊಳಿಸಿದ್ದೆವು. {10}
أَنِ اعْمَلْ سَابِغَاتٍ وَقَدِّرْ فِي السَّرْدِ ۖ وَاعْمَلُوا صَالِحًا ۖ إِنِّي بِمَا تَعْمَلُونَ بَصِيرٌ
ನೀವೀಗ ಕಬ್ಬಿಣದಿಂದ ಯುದ್ಧಕವಚಗಳನ್ನು ತಯಾರಿಸಿರಿ; ಅದರ ಕೊಂಡಿಗಳನ್ನು ನಿಖರ ಪ್ರಮಾಣದಲ್ಲಿ ಪೋಣಿಸಿರಿ. ನೀವೆಲ್ಲರೂ ಸತ್ಕರ್ಮಗಳನ್ನು ಮಾಡುವವರಾಗಿರಿ. ನೀವು ಮಾಡುವ ಕರ್ಮಗಳನ್ನು ನಾನು ಖಂಡಿತವಾಗಿ ವೀಕ್ಷಿಸುತ್ತಿರುತ್ತೇನೆ ಎಂದೂ ಆದೇಶಿಸಿದ್ದೆವು. {11}
وَلِسُلَيْمَانَ الرِّيحَ غُدُوُّهَا شَهْرٌ وَرَوَاحُهَا شَهْرٌ ۖ وَأَسَلْنَا لَهُ عَيْنَ الْقِطْرِ ۖ وَمِنَ الْجِنِّ مَنْ يَعْمَلُ بَيْنَ يَدَيْهِ بِإِذْنِ رَبِّهِ ۖ وَمَنْ يَزِغْ مِنْهُمْ عَنْ أَمْرِنَا نُذِقْهُ مِنْ عَذَابِ السَّعِيرِ
ಹಾಗೆಯೇ ಗಾಳಿಯ ನಿಯಂತ್ರಣವನ್ನು ನಾವು ಸುಲೈಮಾನ್ ರಿಗೆ ಅಧೀನ ಪಡಿಸಿದೆವು! ಅದು (ಅವರ ನೌಕೆಗಳ ಸಂಚಾರವನ್ನು) ಬೆಳಿಗ್ಗೆ ಒಂದು ತಿಂಗಳಿನಷ್ಟು ಮತ್ತು ಸಂಜೆ ಮತ್ತೊಂದು ತಿಂಗಳಿನಷ್ಟು ದೂರವನ್ನು ಕ್ರಮಿಸುವಂತೆ ಮಾಡುತ್ತಿತ್ತು! ಹಾಗೂ ಕರಗಿ ದ್ರವವಾದ ತಾಮ್ರದ ನಾಲೆಗಳನ್ನು ನಾವು ಅವರಿಗಾಗಿ [ಅರ್ಥಾತ್ ಅವರ ನಿರ್ಮಾಣ ಕಾರ್ಯಗಳಲ್ಲಿ ಅವರ ಉಪಯೋಗಕ್ಕಾಗಿ] ಹರಿಸಿದೆವು. ಅವರ ಕರ್ತಾರನ ಆಜ್ಞೆಯ ಪ್ರಕಾರ, ಜಿನ್ನ್ ವರ್ಗಕ್ಕೆ ಸೇರಿದ ಕೆಲವರು ಅವರ ಸಮ್ಮುಖದಲ್ಲಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುತ್ತಿದ್ದವು. (ಸುಲೈಮಾನ್ ರ ಆಜ್ಞೆಯನ್ನು ನೀವು ಪಾಲಿಸಬೇಕು ಎಂಬ) ನಮ್ಮ ಅಪ್ಪಣೆಯನ್ನು ಯಾರಾದರೂ ಮೀರಿದರೆ ನಾವು ಅಂತಹವರಿಗೆ ಉರಿಯುವ ನರಕ ಶಿಕ್ಷೆಯ ರುಚಿ ತೋರಿಸುವೆವು (ಎಂದು ಎಚ್ಚರಿಕೆಯನ್ನೂ ನೀಡಿದ್ದೆವು)! {12}
يَعْمَلُونَ لَهُ مَا يَشَاءُ مِنْ مَحَارِيبَ وَتَمَاثِيلَ وَجِفَانٍ كَالْجَوَابِ وَقُدُورٍ رَاسِيَاتٍ ۚ اعْمَلُوا آلَ دَاوُودَ شُكْرًا ۚ وَقَلِيلٌ مِنْ عِبَادِيَ الشَّكُورُ
ಸುಲೈಮಾನ್ ರು ನಿರ್ಮಿಸಲು ಬಯಸಿದಂತಹ ಭವ್ಯ ಕಟ್ಟಡಗಳು, ವಿವಿಧ ಕಲಾಕೃತಿಗಳು, ಕೊಳಗಳೋಪಾದಿಯ ಹಂಡೆಗಳು, (ಅಲುಗದಂತೆ) ಒಲೆಗಳಿಗೆ ಜೋಡಿಸಲಾದ ಬೃಹತ್ ಬಾಣಲೆಗಳು ಮುಂತಾದವುಗಳನ್ನು ಅವರು ಸುಲೈಮಾನ್ ರಿಗಾಗಿ ನಿರ್ಮಿಸಿ ಕೊಡುತ್ತಿದ್ದರು. (ಆದ್ದರಿಂದ), ದಾವೂದ್ ರ ಮನೆತನಕ್ಕೆ ಸೇರಿದ ಓ ಜನರೇ, (ನಿಮ್ಮ ಮೇಲೆ ಮಾಡಲಾದ ಔದಾರ್ಯಕ್ಕಾಗಿ) ಕೃತಜ್ಞತೆ ತೋರುವಂತಹ ಕೆಲಸಕಾರ್ಯಗಳನ್ನೇ ನೀವು ಮಾಡಿರಿ. ಏಕೆಂದರೆ ಕೃತಜ್ಞತೆಯುಳ್ಳವರ ಸಂಖ್ಯೆ ನನ್ನ ಉಪಾಸಕರಲ್ಲಿ ಬಹಳ ಕಡಿಮೆ; (ನೀವು ಹಾಗಾಗದಿರಿ)! {13}
فَلَمَّا قَضَيْنَا عَلَيْهِ الْمَوْتَ مَا دَلَّهُمْ عَلَىٰ مَوْتِهِ إِلَّا دَابَّةُ الْأَرْضِ تَأْكُلُ مِنْسَأَتَهُ ۖ فَلَمَّا خَرَّ تَبَيَّنَتِ الْجِنُّ أَنْ لَوْ كَانُوا يَعْلَمُونَ الْغَيْبَ مَا لَبِثُوا فِي الْعَذَابِ الْمُهِينِ
[ಅಗೋಚರ ವಿಷಯಗಳನ್ನು ಕಂಡುಕೊಳ್ಳುವ ಶಕ್ತಿ ಜಿನ್ನ್ ಗಳಿಗೆ ಇದೆ ಎಂದು ಭಾವಿಸಿ ಈ ಕುರೈಷರು ಅವುಗಳನ್ನು ಪೂಜಿಸುತ್ತಿದ್ದಾರೆ! ಆದರೆ ಅಂತಹ ಕೆಲವು ಜಿನ್ನ್ ಗಳ ಎದುರೇ ನಿಂತು ಕೆಲಸ ಮಾಡಿಸುತ್ತಿದ್ದ ಪ್ರವಾದಿ] ಸುಲೈಮಾನ್ ರಿಗೆ ನಾವು (ಅದೇ ಸ್ಥಿತಿಯಲ್ಲಿ) ಮರಣ ವಿಧಿಸಿದಾಗ, ಅವರ ಸಾವಿನ ಸುದ್ದಿ ಆ ಜಿನ್ನ್ ಗಳಿಗೆ ತಲುಪಿದ್ದು ಸುಲೈಮಾನ್ ರ ಊರುಗೋಲನ್ನು (ಕೆಳಭಾಗದಿಂದ) ತಿಂದು ಹಾಕಿದ ಭೂಚರ ಕೀಟಗಳಾದ (ಗೆದ್ದಲು ಹುಳುಗಳ) ಮೂಲಕವೇ ಹೊರತು ಅವರ ಸ್ವಂತ ಸಾಮರ್ಥ್ಯದಿಂದಲ್ಲ! ಹಾಗೆ ಅವರ ಮೃತದೇಹವು ನೆಲಕ್ಕುರುಳಿದಾಗ, ಅಗೋಚರ ವಿಷಯಗಳ ಅರಿವು ನಮಗೇನಾದರೂ ಇದ್ದಿದ್ದರೆ (ಈ ಸುಲೈಮಾನ್ ರ ಅಧೀನದಲ್ಲಿ) ಇಂತಹ ಅವಮಾನಕಾರಕ ಯಾತನೆಯಲ್ಲಿ ಬಿದ್ದಿರಬೇಕಾದ ಅಗತ್ಯ ನಮಗೆ ಬರುತ್ತಿರಲಿಲ್ಲ ಎಂಬ ವಾಸ್ತವಿಕತೆಯನ್ನು ಅವರು ಮನಗಂಡರು. {14}
لَقَدْ كَانَ لِسَبَإٍ فِي مَسْكَنِهِمْ آيَةٌ ۖ جَنَّتَانِ عَنْ يَمِينٍ وَشِمَالٍ ۖ كُلُوا مِنْ رِزْقِ رَبِّكُمْ وَاشْكُرُوا لَهُ ۚ بَلْدَةٌ طَيِّبَةٌ وَرَبٌّ غَفُورٌ
[ಕುರೈಷ್ ನ ಜನರೇ, ಸಬಾ ಪ್ರದೇಶದ ಜನರೂ ನಿಮ್ಮಂತಹ ಕೃತಘ್ನರೇ ಆಗಿದ್ದರು]! ಸಬಾ ಜನತೆಗಾಗಿ ಅವರು ವಾಸವಿದ್ದ ನಾಡಿನಲ್ಲೇ ಒಂದು ಜ್ವಲಂತ ದೃಷ್ಟಾಂತವಿತ್ತು! ಅಂದರೆ ಆ ನಾಡಿನ ಬಲಭಾಗದಲ್ಲೂ ಎಡಭಾಗದಲ್ಲೂ (ಸಾಲುಸಾಲಾಗಿ ನಿಂತ ಫಲದಾಯಕವಾದ) ಎರಡು ತೋಟಗಳಿದ್ದವು. ನಿಮಗೆ ನಿಮ್ಮ ಒಡೆಯನು ಒದಗಿಸಿದ ಅನ್ನ ಪಾನೀಯಗಳನ್ನು ತಿನ್ನಿರಿ ಕುಡಿಯಿರಿ ಹಾಗೂ ಆ ಒಡಯನಿಗೆ ಕೃತಜ್ಞತೆ ಸಲ್ಲಿಸುವವರಾಗಿರಿ [ಎಂಬ ಸಂದೇಶವನ್ನು ಅವು ಅಲ್ಲಿಯ ಜನರಿಗೆ ನಿರಂತರವಾಗಿ ಸಾರುತ್ತಿತ್ತು]! ಹೌದು, ಆ ನಾಡು ಬಹಳ ಉತ್ಕೃಷ್ಟವಾದ ನಾಡು ಮತ್ತು ಪ್ರಭು ಬಹಳ ಕ್ಷಮಾಶೀಲನಾದ ಪ್ರಭು! {15}
فَأَعْرَضُوا فَأَرْسَلْنَا عَلَيْهِمْ سَيْلَ الْعَرِمِ وَبَدَّلْنَاهُمْ بِجَنَّتَيْهِمْ جَنَّتَيْنِ ذَوَاتَيْ أُكُلٍ خَمْطٍ وَأَثْلٍ وَشَيْءٍ مِنْ سِدْرٍ قَلِيلٍ
ಆದರೆ ಅವರು ತಿರಸ್ಕಾರದೊಂದಿಗೆ ಮುಖ ತಿರುಗಿಸಿಕೊಂಡರು! ಆದ್ದರಿಂದ ಅವರ ಮೇಲೆ ಪ್ರಚಂಡವಾದ ಜಲಪ್ರವಾಹವನ್ನು ನಾವು ಹರಿಸಿದೆವು. ಅವರ ಎರಡೂ ತೋಟಗಳನ್ನು ಕಹಿಯಾದ ಹಣ್ಣುಗಳು, ಫಲದಾಯಕವಲ್ಲದ ಪೊದೆಗಳು ಮತ್ತು ಬೋರೆಹಣ್ಣಿನ ಕೆಲವು ಗಿಡಗಳು ಮಾತ್ರವಿರುವ ತೋಟಗಳಾಗಿ ನಾವು ಮಾರ್ಪಡಿಸಿ ಬಿಟ್ಟೆವು. {16}
ذَٰلِكَ جَزَيْنَاهُمْ بِمَا كَفَرُوا ۖ وَهَلْ نُجَازِي إِلَّا الْكَفُورَ
ಅದಾಗಿತ್ತು ಕೃತಘ್ನರಾದ ಕಾರಣಕ್ಕಾಗಿ ನಾವು ಅವರಿಗೆ ನೀಡಿದ ಶಿಕ್ಷೆ! ಮಹಾ ಕೃತಘ್ನರನ್ನು ಮಾತ್ರವಲ್ಲದೆ ಬೇರೆ ಯಾರನ್ನಾದರೂ ನಾವು (ಹಾಗೆ) ಶಿಕ್ಷಿಸುತ್ತೇವೆಯೇ?! {17}
وَجَعَلْنَا بَيْنَهُمْ وَبَيْنَ الْقُرَى الَّتِي بَارَكْنَا فِيهَا قُرًى ظَاهِرَةً وَقَدَّرْنَا فِيهَا السَّيْرَ ۖ سِيرُوا فِيهَا لَيَالِيَ وَأَيَّامًا آمِنِينَ
ಅಲ್ಲದೆ, ಅವರ (ನಾಡಾದ ಯಮನ್) ಹಾಗೂ ನಾವು ಅನುಗ್ರಹೀತಗೊಳಿಸಿದ (ಶಾಮ್ - ಫಲಸ್ತೀನ್ ಪ್ರದೇಶದ) ನಡುವೆ ಎದ್ದು ಕಾಣುವಂತಹ ಹಲವಾರು ನಾಡುಗಳನ್ನು ನೆಲೆಗೊಳಿಸಿದ್ದೆವು. ನಾವು ಅವುಗಳ ನಡುವೆ (ಹಾದಿಯುದ್ದಕ್ಕೂ ಪ್ರಯಾಣದ) ಸುಲಭ ಹಂತಗಳನ್ನು ನಿಗದಿಪಡಿಸಿದ್ದೆವು. ಅದರ ಮೂಲಕ ರಾತ್ರಿಗಳಲ್ಲೂ ಹಗಲುಗಳಲ್ಲೂ ಸುರಕ್ಷಿತರಾಗಿ ಪಯಣಿಸಿರಿ (ಎಂದು ಅವು ಸಾರುವಂತಿತ್ತು)! {18}
فَقَالُوا رَبَّنَا بَاعِدْ بَيْنَ أَسْفَارِنَا وَظَلَمُوا أَنْفُسَهُمْ فَجَعَلْنَاهُمْ أَحَادِيثَ وَمَزَّقْنَاهُمْ كُلَّ مُمَزَّقٍ ۚ إِنَّ فِي ذَٰلِكَ لَآيَاتٍ لِكُلِّ صَبَّارٍ شَكُورٍ
ಆದರೆ ಅವರು ಮಾತ್ರ, ಓ ನಮ್ಮ ಪ್ರಭುವೇ, ನಮ್ಮ ಪ್ರಯಾಣದ ಹಂತಗಳ ಅಂತರವನ್ನು ಮತ್ತಷ್ಟು ದೂರಗೊಳಿಸು ಎಂದು ಹೇಳುವ ಮೂಲಕ [ಒಡೆಯನಿಗೆ ಕೃತಘ್ನತೆಯನ್ನೇ ತೋರಿದರು]! ಆ ಮೂಲಕ ಅವರು ತಮಗೆ ತಾವೇ ಅನ್ಯಾಯ ಮಾಡಿಕೊಂಡರು. ಆದ್ದರಿಂದ ನಾವು ಅವರನ್ನು ಕೇವಲ ದಂತಕತೆಗಳನ್ನಾಗಿ ಮಾಡಿಬಿಟ್ಟೆವೆ; ಅವರನ್ನೆಲ್ಲ ವಿಚ್ಛಿದ್ರಗೊಳಿಸಿ ದಿಕ್ಕಾಪಾಲಾಗಿಸಿ ಬಿಟ್ಟವು. ತಾಳ್ಮೆ ಹಾಗೂ ಕೃತಜ್ಞತಾಭಾವ ಹೊಂದಿದ ಪ್ರತಿಯೊಬ್ಬರಿಗೂ ಈ ವೃತ್ತಾಂತದಲ್ಲಿ ನಿಜವಾಗಿಯೂ ಕಲಿಯಲು ಪಾಠಗಳಿವೆ. {19}
وَلَقَدْ صَدَّقَ عَلَيْهِمْ إِبْلِيسُ ظَنَّهُ فَاتَّبَعُوهُ إِلَّا فَرِيقًا مِنَ الْمُؤْمِنِينَ
ಹಾಗೆ, ಸೈತಾನನು ಅವರ ಬಗ್ಗೆ ತಾನಿಟ್ಟಿದ್ದ ನಿರೀಕ್ಷೆಯನ್ನು ನಿಜವಾಗಿಸಿ ಕೊಂಡನು! ಅವರ ಪೈಕಿ ನಿಜವಾಗಿ ವಿಶ್ವಾಸಿಗಳಾದ ಕೆಲವರ ಹೊರತು ಉಳಿದವರು ಅವನ ಹಾದಿಯನ್ನೇ ಅನುಸರಿಸಿದರು! ! {20}
وَمَا كَانَ لَهُ عَلَيْهِمْ مِنْ سُلْطَانٍ إِلَّا لِنَعْلَمَ مَنْ يُؤْمِنُ بِالْآخِرَةِ مِمَّنْ هُوَ مِنْهَا فِي شَكٍّ ۗ وَرَبُّكَ عَلَىٰ كُلِّ شَيْءٍ حَفِيظٌ
ಯಥಾರ್ಥದಲ್ಲಿ ಸೈತಾನನಿಗೆ ಅವರ ಮೇಲೆ ಯಾವ ಅಧಿಕಾರವೂ ಇರಲಿಲ್ಲ. ಆದರೆ (ಆ ಪರೀಕ್ಷೆಯು) ಅವರ ಪೈಕಿ ಪರಲೋಕದಲ್ಲಿ ನಂಬಿಕೆ ಇಡುವವರನ್ನು, ಪರಲೋಕದ ಬಗ್ಗೆ ಸಂದೇಹದಲ್ಲಿರುವವರಿಂದ ಬೇರ್ಪಡಿಸಿ ತಿಳಿಯುವುದಕ್ಕೆ ಮಾತ್ರವಾಗಿತ್ತು! ಹೌದು, ಪೈಗಂಬರರೇ, ನಿಮ್ಮ ಪ್ರಭು ಎಲ್ಲಾ ವಿಷಯಗಳನ್ನು ಗಮನಿಸುತ್ತಿರುತ್ತಾನೆ. {21}
قُلِ ادْعُوا الَّذِينَ زَعَمْتُمْ مِنْ دُونِ اللَّهِ ۖ لَا يَمْلِكُونَ مِثْقَالَ ذَرَّةٍ فِي السَّمَاوَاتِ وَلَا فِي الْأَرْضِ وَمَا لَهُمْ فِيهِمَا مِنْ شِرْكٍ وَمَا لَهُ مِنْهُمْ مِنْ ظَهِيرٍ
ಪೈಗಂಬರರೇ, ನೀವು (ಈ ಕುರೈಷರೊಂದಿಗೆ) ಹೇಳಿರಿ: ಅಲ್ಲಾಹ್ ನ ಹೊರತು ಬೇರೆ ಯಾರನ್ನೆಲ್ಲ ನೀವು ದೇವರೆಂದು ತಿಳಿದಿರುವಿರೋ ಅವರನ್ನು ಕರೆದು ನೋಡಿರಿ. ಭೂಮಿ ಮತ್ತು ಆಕಾಶಗಳಲ್ಲಿ ಕೇವಲ ಒಂದು ಅಣುವಿನಷ್ಟು ತೂಗುವ ವಸ್ತು ಸಹ ಅವರ ಒಡೆತನದಲ್ಲಿ ಇಲ್ಲ! ಅವುಗಳಲ್ಲಿ ಅವರಿಗೆ ಯಾವ ಪಾಲುದಾರಿಕೆ ಕೂಡ ಇರುವುದಿಲ್ಲ. ಅವರಲ್ಲಿ ಯಾರೂ ಅಲ್ಲಾಹ್ ನ ಸಹಾಯಕರು ಸಹ ಅಲ್ಲ! {22}
وَلَا تَنْفَعُ الشَّفَاعَةُ عِنْدَهُ إِلَّا لِمَنْ أَذِنَ لَهُ ۚ حَتَّىٰ إِذَا فُزِّعَ عَنْ قُلُوبِهِمْ قَالُوا مَاذَا قَالَ رَبُّكُمْ ۖ قَالُوا الْحَقَّ ۖ وَهُوَ الْعَلِيُّ الْكَبِيرُ
ಮತ್ತು [ಯಾರನ್ನಾದರೂ ನೀವು ದೇವರೆಂದು ಬಗೆದು ಅವರು ಅಲ್ಲಾಹ್ ನ ಬಳಿ ನಿಮಗಾಗಿ ಶಿಫಾರಸ್ಸು ಮಾಡಿಯಾರು ಎಂದು ನೀವು ನಂಬಿದ್ದರೆ ತಿಳಿದಿರಿ], ಅಲ್ಲಾಹ್ ನ ಸನ್ನಿಧಿಯಲ್ಲಿ ಅವನು ಅನುಮತಿಸಿದವರ ಹೊರತು ಬೇರೆ ಯಾರ ಶಿಫಾರಸ್ಸೂ ಪ್ರಯೋಜನಕ್ಕೆ ಬಾರದು! (ಅಂದು) ಜನರ ಹೃದಯಗಳಿಂದ ಭೀತಿಯು ದೂರವಾದಾಗ ಅವರು, ನಿಮ್ಮ ಪ್ರಭು ಏನು ಹೇಳಿದನೆಂದು ವಿಚಾರಿಸುವರು. ಅವರು ಉತ್ತರಿಸುವರು, ಸತ್ಯವಾದುದನ್ನೇ ಹೇಳಿದ್ದಾನೆ, ಅವನು ಬಹಳ ಉನ್ನತನೂ ಅತಿ ಮಹಾನನೂ ಆಗಿದ್ದಾನೆ! {23}
قُلْ مَنْ يَرْزُقُكُمْ مِنَ السَّمَاوَاتِ وَالْأَرْضِ ۖ قُلِ اللَّهُ ۖ وَإِنَّا أَوْ إِيَّاكُمْ لَعَلَىٰ هُدًى أَوْ فِي ضَلَالٍ مُبِينٍ
ಆಕಾಶಗಳಿಂದಲೂ ಭೂಮಿಯಿಂದಲೂ ಜೀವನಾವಶ್ಯಕತೆಗಳನ್ನು ನಿಮಗೆ ಒದಗಿಸುತ್ತಿರುವವರು ಯಾರು ಎಂದು, ಪೈಗಂಬರರೇ, ನೀವು ಅವರೊಂದಿಗೆ ಕೇಳಿರಿ. ಹೌದು, ಅಲ್ಲಾಹ್ ನೇ ಒದಗಿಸುತ್ತಿದ್ದಾನೆ; ಹಾಗಿರುವಾಗ, [ಅವನನ್ನು ಮಾತ್ರ ಆರಾಧಿಸುವಂತಹ] ಸರಿಯಾದ ದಾರಿಯನ್ನು ಹಿಡಿದವರು, ಅಥವಾ [ಬಹುದೇವತ್ವದ] ಅತ್ಯಂತ ಸ್ಪಷ್ಟವಾದ ತಪ್ಪು ದಾರಿಗೆ ಬಿದ್ದವರು ಒಂದೋ ನಾವಾಗಿದ್ದೇವೆ ಅಥವಾ ನೀವಾಗಿರಬೇಕು (ಎಂದು ಹೇಳಿರಿ)! {24}
قُلْ لَا تُسْأَلُونَ عَمَّا أَجْرَمْنَا وَلَا نُسْأَلُ عَمَّا تَعْمَلُونَ
ನಾವು ಮಾಡಿದ ಪಾಪಕೃತ್ಯಗಳ ಬಗ್ಗೆ ನಿಮ್ಮನ್ನು ಪ್ರಶ್ನಿಸಲಾಗದು; ಅಂತೆಯೇ ನಿಮ್ಮ ಕೃತ್ಯಗಳ ಬಗ್ಗೆ ನಮ್ಮನ್ನೂ ಪ್ರಶ್ನಿಸಲಾಗದು ಎಂದೂ ಅವರೊಂದಿಗೆ ಹೇಳಿರಿ! {25}
قُلْ يَجْمَعُ بَيْنَنَا رَبُّنَا ثُمَّ يَفْتَحُ بَيْنَنَا بِالْحَقِّ وَهُوَ الْفَتَّاحُ الْعَلِيمُ
ನಮ್ಮ ಒಡೆಯನು (ಅಂತಿಮ ವಿಚಾರಣೆಗಾಗಿ) ನಮ್ಮೆಲ್ಲರನ್ನು ಒಟ್ಟುಗೂಡಿಸಲಿರುವನು. ಹಾಗೂ ನಮ್ಮ ನಡುವೆ ನ್ಯಾಯೋಚಿತವಾಗಿ ತೀರ್ಪು ನೀಡಲಿರುವನು. ಹೌದು, ಅವನು ಸಕಲವನ್ನೂ ತಿಳಿದ ಅತಿದೊಡ್ಡ ನ್ಯಾಯಾಧೀಶನಾಗಿರುವನು ಎಂದೂ ಅವರಿಗೆ ತಿಳಿಸಿರಿ! {26}
قُلْ أَرُونِيَ الَّذِينَ أَلْحَقْتُمْ بِهِ شُرَكَاءَ ۖ كَلَّا ۚ بَلْ هُوَ اللَّهُ الْعَزِيزُ الْحَكِيمُ
ನೀವು ಅಲ್ಲಾಹ್ ನ ಜೊತೆಗೆ ಅವನ ಸಹಭಾಗಿಗಳಾಗಿ ಸೇರಿಸಿಕೊಂಡ ಆ (ದೇವರುಗಳನ್ನು) ನನಗೊಮ್ಮೆ ತೋರಿಸಿ ಕೊಡಿರಿ ಎಂದು ಅವರೊಂದಿಗೆ ಹೇಳಿರಿ. ಇಲ್ಲ, ಎಂದಿಗೂ ಸಾಧ್ಯವಿಲ್ಲ! ಅವನು ಅತಿ ಪ್ರಬಲನು, ವಿವೇಕಪೂರ್ಣನಾದ ಅಲ್ಲಾಹ್ ನು! {27}
وَمَا أَرْسَلْنَاكَ إِلَّا كَافَّةً لِلنَّاسِ بَشِيرًا وَنَذِيرًا وَلَٰكِنَّ أَكْثَرَ النَّاسِ لَا يَعْلَمُونَ
ಮತ್ತು ಪೈಗಂಬರರೇ, ನಿಮ್ಮನ್ನು ನಾವು ಸಂಪೂರ್ಣ ಮಾನವ ಕುಲಕ್ಕೆ (ಸ್ವರ್ಗಲೋಕದ ಪ್ರತಿಫಲಗಳ ಕುರಿತಾದ) ಶುಭಸುದ್ದಿ ಹಾಗೂ (ನರಕಯಾತನೆಯ ಬಗೆಗಿನ) ಮುನ್ನೆಚ್ಚರಿಕೆಯನ್ನು ನೀಡುವುದಕ್ಕಾಗಿ ಮಾತ್ರ ಕಳುಹಿಸಿರುತ್ತೇವೆ. ಆದರೆ ಮಾನವರಲ್ಲಿ ಹೆಚ್ಚಿನವರು ಅದನ್ನು ತಿಳಿಯುವ ಗೋಜಿಗೆ ಹೋಗುವುದಿಲ್ಲ! {28}
وَيَقُولُونَ مَتَىٰ هَٰذَا الْوَعْدُ إِنْ كُنْتُمْ صَادِقِينَ
ಮತ್ತು, ನೀವು ಸತ್ಯವಂತರು ಹೌದಾದರೆ ಈ ನಿಮ್ಮ ವಾಗ್ದಾನವು ಯಾವಾಗ ಕಾರ್ಯಗತಗೊಳ್ಳಲಿದೆ ಎಂದು ಅವರು ಕೇಳುತ್ತಾರೆ. {29}
قُلْ لَكُمْ مِيعَادُ يَوْمٍ لَا تَسْتَأْخِرُونَ عَنْهُ سَاعَةً وَلَا تَسْتَقْدِمُونَ
ಅವರಿಗೆ ಹೇಳಿರಿ: ನಿಮಗೆ ಅದಾಗಲೇ ದಿನವೊಂದನ್ನು ನಿಶ್ಚಯಿಸಲಾಗಿದೆ; ಅದರಿಂದ ಒಂದು ತಾಸಿಗಾದರೂ ಹಿಂದೆ ಸರಿಯುವುದು ಅಥವಾ ಮುಂದೆ ಸಾಗುವುದು ನಿಮ್ಮಿಂದ ಸಾಧ್ಯವಾಗದ ವಿಷಯ! {30}
وَقَالَ الَّذِينَ كَفَرُوا لَنْ نُؤْمِنَ بِهَٰذَا الْقُرْآنِ وَلَا بِالَّذِي بَيْنَ يَدَيْهِ ۗ وَلَوْ تَرَىٰ إِذِ الظَّالِمُونَ مَوْقُوفُونَ عِنْدَ رَبِّهِمْ يَرْجِعُ بَعْضُهُمْ إِلَىٰ بَعْضٍ الْقَوْلَ يَقُولُ الَّذِينَ اسْتُضْعِفُوا لِلَّذِينَ اسْتَكْبَرُوا لَوْلَا أَنْتُمْ لَكُنَّا مُؤْمِنِينَ
ಈ ಕುರ್‌ಆನ್ ಅನ್ನಾಗಲಿ ಅಥವಾ ಅದು ಮುಂದಿಡುವ [ಪುನರುತ್ಥಾನ, ಅಂತಿಮ ವಿಚಾರಣೆ, ಸ್ವರ್ಗ, ನರಕ ಮುಂತಾದ] ವಿಷಯಗಳನ್ನಾಗಲಿ ನಾವಂತೂ ನಂಬುವುದಿಲ್ಲ ಎಂದು (ಪೈಗಂಬರರೇ, ನಿಮ್ಮನ್ನು) ನಿರಾಕರಿಸಿದವರು ಹೇಳುತ್ತಿದ್ದಾರೆ! ಆ ಅಧರ್ಮಿಗಳನ್ನು ಅವರ ಪ್ರಭುವಿನ ಸನ್ನಿಧಿಯಲ್ಲಿ ನಿಲ್ಲಿಸಲಾಗುವ ದೃಷ್ಯವನ್ನು ನೀವು (ಈಗಲೇ) ಕಂಡಿರುತ್ತಿದ್ದರೆ...! ಇಹಲೋಕದಲ್ಲಿ (ತಾವೇ ಆಡಿದ) ಮಾತುಗಳನ್ನು ಆಗ ಅವರು ಇತರರ ಮೇಲೆ ಆರೋಪಿಸುತ್ತಿರುವರು. ಮರ್ದಿತರು, ದರ್ಪದಿಂದ ವರ್ತಿಸುತ್ತಿದ್ದವರೊಡನೆ ನೀವಿರದೇ ಹೋಗಿದ್ದರೆ ನಾವು ವಿಶ್ವಾಸಿಗಳಾಗಿರುತ್ತಿದ್ದೆವು ಎಂದು ಗೋಳಿಡುವರು. {31}
قَالَ الَّذِينَ اسْتَكْبَرُوا لِلَّذِينَ اسْتُضْعِفُوا أَنَحْنُ صَدَدْنَاكُمْ عَنِ الْهُدَىٰ بَعْدَ إِذْ جَاءَكُمْ ۖ بَلْ كُنْتُمْ مُجْرِمِينَ
ಆಗ, ದರ್ಪದಿಂದ ವರ್ತಿಸುತ್ತಿದ್ದ (ನೇತಾರರು, ತಮ್ಮ ಹಿಂಬಾಲಕರಾಗಿದ್ದ) ಮರ್ದಿತರೊಡನೆ, ಸರಿಯಾದ ಮಾರ್ಗದರ್ಶನ ನಿಮ್ಮ ಮುಂದೆ ಬಂದಾಗ ನಿಮ್ಮನ್ನು ಅದರಿಂದ ತಡೆದವರು ನಾವೇನು? ಅಲ್ಲ, ನೀವೂ ಸಹ ಅಪರಾಧಿಗಳೇ ಆಗಿರುವಿರಿ ಎಂದು ಹೇಳುವರು. {32}
وَقَالَ الَّذِينَ اسْتُضْعِفُوا لِلَّذِينَ اسْتَكْبَرُوا بَلْ مَكْرُ اللَّيْلِ وَالنَّهَارِ إِذْ تَأْمُرُونَنَا أَنْ نَكْفُرَ بِاللَّهِ وَنَجْعَلَ لَهُ أَنْدَادًا ۚ وَأَسَرُّوا النَّدَامَةَ لَمَّا رَأَوُا الْعَذَابَ وَجَعَلْنَا الْأَغْلَالَ فِي أَعْنَاقِ الَّذِينَ كَفَرُوا ۚ هَلْ يُجْزَوْنَ إِلَّا مَا كَانُوا يَعْمَلُونَ
ದರ್ಪದಿಂದ ವರ್ತಿಸುತ್ತಿದ್ದವರೊಡನೆ ಮರ್ದಿತರು, ನೀವು ಆಹೋರಾತ್ರಿ ಪಿತೂರಿ ನಡೆಸಿ ನಾವು ಅಲ್ಲಾಹ್ ನನ್ನು ಧಿಕ್ಕರಿಸಬೇಕೆಂದೂ ಅವನಿಗೆ ಬೇರೆಯವರನ್ನು ಸರಿಸಮಾನರನ್ನಾಗಿ ಮಾಡಿಕೊಳ್ಳಬೇಕೆಂದೂ ನಮಗೆ ಆದೇಶ ನೀಡುತ್ತಿದ್ದ ಸಂದರ್ಭವನ್ನು ನೆನಪಿಸಿರಿ ಎಂದು ಹೇಳುವರು. ನಂತರ ಶಿಕ್ಷೆಯನ್ನು ಕಂಡಾಗ ಅವರೆಲ್ಲ ತಮ್ಮ ವ್ಯಥೆಗಳನ್ನು ಬಚ್ಚಿಡುವರು. ಮತ್ತು ನಾವು (ಪೈಗಂಬರರನ್ನು) ಧಿಕ್ಕರಿಸಿದವರ ಕೊರಳುಗಳಿಗೆ ಸಂಕೋಲೆಗಳನ್ನು ಬಿಗಿಯುವೆವು. ಮಾಡಿದ ಕರ್ಮಕ್ಕಲ್ಲದೆ ಅವರಿಗೆ ಯಾವುದಾದರೂ ಬೇರೆ ಪ್ರತಿಫಲ ಸಿಗುವುದೇ?! {33}
وَمَا أَرْسَلْنَا فِي قَرْيَةٍ مِنْ نَذِيرٍ إِلَّا قَالَ مُتْرَفُوهَا إِنَّا بِمَا أُرْسِلْتُمْ بِهِ كَافِرُونَ
ಯಾವುದಾದರೂ ನಾಡಿಗೆ ಮುನ್ನೆಚ್ಚರಿಕೆ ನೀಡುವ (ಪ್ರವಾದಿಗಳನ್ನು) ನಾವು ಕಳುಹಿಸಿದಾಗಲೆಲ್ಲ ಅಲ್ಲಿಯ ಸಂಪನ್ನ ಜನರು ಅವರೊಡನೆ, ನಿಮ್ಮನ್ನು ಯಾವ ಸಂದೇಶದೊಂದಿಗೆ ಕಳುಹಿಸಲಾಗಿದೆಯೋ ಅದನ್ನು ನಾವು ಧಿಕ್ಕರಿಸಿತ್ತೇವೆ ಎಂದು ಹೇಳದೆ ಬಿಟ್ಟಿಲ್ಲ! {34}
وَقَالُوا نَحْنُ أَكْثَرُ أَمْوَالًا وَأَوْلَادًا وَمَا نَحْنُ بِمُعَذَّبِينَ
ನಾವು ನಿಮಗಿಂತ ಹೆಚ್ಚಿನ ಸಂಪತ್ತು ಮತ್ತು ಸಂತಾನವನ್ನು ಹೊಂದಿರುವೆವು; ನಾವು ಶಿಕ್ಷಿಸಲ್ಪಡುವವರಲ್ಲ ಎಂದೂ ಅವರು ಹೇಳಿದ್ದರು. {35}
قُلْ إِنَّ رَبِّي يَبْسُطُ الرِّزْقَ لِمَنْ يَشَاءُ وَيَقْدِرُ وَلَٰكِنَّ أَكْثَرَ النَّاسِ لَا يَعْلَمُونَ
ಜೀವನಾಧಾರವನ್ನು ನನ್ನ ಪ್ರಭು ಯಾರಿಗೆ ವಿಶಾಲವಾಗಿ ಕೊಡಲು ಬಯಸುವನೋ ಖಂಡಿತವಾಗಿ ವಿಶಾಲಗೊಳಿಸುವನು; ಹಾಗೆಯೇ ಯಾರಿಗೆ ಅದನ್ನು ಕುಂಠಿತಗೊಳಿಸಲು ಬಯಸುವನೋ ಕುಂಠಿತಗೊಳಿಸುವನು ಎಂದು ಪೈಗಂಬರರೇ ನೀವು ತಿಳಿಸಿರಿ. ಆದರೆ ಜನರಲ್ಲಿ ಹಚ್ಚಿನವರು (ಆ ಯಥಾರ್ಥವನ್ನು) ತಿಳಿಯುವ ಗೋಜಿಗೆ ಹೋಗುವುದಿಲ್ಲ. {36}
وَمَا أَمْوَالُكُمْ وَلَا أَوْلَادُكُمْ بِالَّتِي تُقَرِّبُكُمْ عِنْدَنَا زُلْفَىٰ إِلَّا مَنْ آمَنَ وَعَمِلَ صَالِحًا فَأُولَٰئِكَ لَهُمْ جَزَاءُ الضِّعْفِ بِمَا عَمِلُوا وَهُمْ فِي الْغُرُفَاتِ آمِنُونَ
ನಿಮ್ಮ ಸಂಪತ್ತಾಗಲಿ ಸಂತಾನವಾಗಲಿ ನಿಮಗೆ ಉನ್ನತಿ ನೀಡಿ ನಿಮ್ಮನ್ನು ನಮಗೆ ಹತ್ತಿರಗೊಳಿಸುವ ಸಾಧನಗಳಾಗಲಾರವು. ಬದಲಾಗಿ, ಯಾರು ವಿಶ್ವಾಸಿಗಳಾಗಿ ಸತ್ಕರ್ಮಗಳನ್ನು ಮಾಡುವರೋ ಅಂತಹವರಿಗೆ ಅವರು ಮಾಡಿದ ಕರ್ಮಕ್ಕೆ ಇಮ್ಮಡಿಯಾದ ಪ್ರತಿಫಲ ಸಿಗಲಿದೆ. ಅಂತಹವರು (ಸ್ವರ್ಗಲೋಕದ) ಉನ್ನತವಾದ ಭವನಗಳಲ್ಲಿ ಹಾಯಾಗಿರುವರು. {37}
وَالَّذِينَ يَسْعَوْنَ فِي آيَاتِنَا مُعَاجِزِينَ أُولَٰئِكَ فِي الْعَذَابِ مُحْضَرُونَ
(ಅದಕ್ಕೆ ವ್ಯತಿರಿಕ್ತವಾಗಿ), ನಮ್ಮ ವಚನಗಳನ್ನು ಮಣಿಸಲು ಪ್ರಯತ್ನಿಸುವ ಜನರನ್ನು ಶಿಕ್ಷೆಯ ಮುಂದೆ ಹಾಜರು ಪಡಿಸಲಾಗುವುದು. {38}
قُلْ إِنَّ رَبِّي يَبْسُطُ الرِّزْقَ لِمَنْ يَشَاءُ مِنْ عِبَادِهِ وَيَقْدِرُ لَهُ ۚ وَمَا أَنْفَقْتُمْ مِنْ شَيْءٍ فَهُوَ يُخْلِفُهُ ۖ وَهُوَ خَيْرُ الرَّازِقِينَ
ಖಂಡಿತವಾಗಿ, ತನ್ನ ದಾಸರ ಪೈಕಿ ಯಾರಿಗಾದರೂ ನನ್ನ ಪ್ರಭು ಹೆಚ್ಚು ಒದಗಿಸಬೇಕೆಂದು ಬಯಸಿದರೆ ಹೆಚ್ಚು ಒದಗಿಸುವನು, ಹಾಗೆಯೇ ಕಡಿಮೆ ಕೊಡಲು ಬಯಸಿದರೆ ಕಡಿಮೆ ಕೊಡುವನು; ಮತ್ತು ನಿಮ್ಮಲ್ಲಿ ಯಾರಾದರೂ (ತನ್ನ ಸಂಪತ್ತನ್ನು ಅಲ್ಲಾಹ್ ನ ಮಾರ್ಗದಲ್ಲಿ) ವ್ಯಯಿಸಿದರೆ ಅವನು ಅದಕ್ಕೆ ಪ್ರತಿಫಲ ನೀಡುವನು. ಉಪಜೀವನ ಒದಗಿಸುವುದರಲ್ಲಿ ಅವನೇ ಅತಿಶ್ರೇಷ್ಠನು. {39}
وَيَوْمَ يَحْشُرُهُمْ جَمِيعًا ثُمَّ يَقُولُ لِلْمَلَائِكَةِ أَهَٰؤُلَاءِ إِيَّاكُمْ كَانُوا يَعْبُدُونَ
ಅವರೆಲ್ಲರನ್ನೂ (ವಿಚಾರಣೆ ನಡೆಯಲಿರುವ ಆ) ದಿನ ಅವನು ಒಟ್ಟು ಸೇರಿಸಲಿರುವನು. ನಂತರ, ಅವನು ಮಲಕ್ ಗಳನ್ನುದ್ದೇಶಿಸಿ, ನಿಮ್ಮನ್ನಾಗಿತ್ತೇ ಈ ಜನರು ಆರಾಧಿಸುತ್ತಿದ್ದುದು ಎಂದು ಕೇಳಲಿರುವನು. {40}
قَالُوا سُبْحَانَكَ أَنْتَ وَلِيُّنَا مِنْ دُونِهِمْ ۖ بَلْ كَانُوا يَعْبُدُونَ الْجِنَّ ۖ أَكْثَرُهُمْ بِهِمْ مُؤْمِنُونَ
ನೀನು ಪರಮ ಪಾವನನು! ನಮ್ಮ ರಕ್ಷಕನು ನೀನೇ ಹೊರತು ಅವರಲ್ಲ. ಅವರು ಆರಾಧಿಸುತ್ತಿದ್ದುದು ನಮ್ಮನ್ನಲ್ಲ; ಬದಲಾಗಿ ಆ ಜಿನ್ನ್ ಗಳನ್ನು! ಅವರಲ್ಲಿ ಹೆಚ್ಚಿನವರು ಜಿನ್ನ್ ಗಳನ್ನೇ ನಂಬಿದವರಾಗಿದ್ದರು. ಎಂದು ಮಲಕ್ ಗಳು ಉತ್ತರಿಸಲಿರುವರು. {41}
فَالْيَوْمَ لَا يَمْلِكُ بَعْضُكُمْ لِبَعْضٍ نَفْعًا وَلَا ضَرًّا وَنَقُولُ لِلَّذِينَ ظَلَمُوا ذُوقُوا عَذَابَ النَّارِ الَّتِي كُنْتُمْ بِهَا تُكَذِّبُونَ
ಇಂದು ಪರಸ್ಪರರಿಗೆ ಲಾಭವಾಗಲಿ ನಷ್ಟವಾಗಲಿ ಮಾಡುವ ಸಾಮರ್ಥ್ಯವು ನಿಮ್ಮಲ್ಲಿ ಯಾರಿಗೂ ಇರುವುದಿಲ್ಲ. ಯಾವ ನರಕ ಶಿಕ್ಷೆಯನ್ನು ನೀವು ಅಲ್ಲಗಳೆಯುತ್ತಿದ್ದಿರೋ ಈಗ ಅದೇ ನರಕ ಶಿಕ್ಷೆಯ ರುಚಿಯನ್ನು ಸವಿಯಿರಿ ಎಂದು ಅನ್ಯಾಯ ಮಾಡಿದವರೊಡನೆ ನಾವು ಹೇಳಲಿದ್ದೇವೆ. {42}
وَإِذَا تُتْلَىٰ عَلَيْهِمْ آيَاتُنَا بَيِّنَاتٍ قَالُوا مَا هَٰذَا إِلَّا رَجُلٌ يُرِيدُ أَنْ يَصُدَّكُمْ عَمَّا كَانَ يَعْبُدُ آبَاؤُكُمْ وَقَالُوا مَا هَٰذَا إِلَّا إِفْكٌ مُفْتَرًى ۚ وَقَالَ الَّذِينَ كَفَرُوا لِلْحَقِّ لَمَّا جَاءَهُمْ إِنْ هَٰذَا إِلَّا سِحْرٌ مُبِينٌ
ಅತ್ಯಂತ ಸ್ಪಷ್ಟವಾದಂತಹ ನಮ್ಮ ವಚನಗಳನ್ನು ಅವರ ಮುಂದೆ ಓದಿ ಕೇಳಿಸಲಾದಾಗ, ನಿಮ್ಮ ತಾತ-ಮುತ್ತಾತಂದಿರು ಏನನ್ನು ಆರಾಧಿಸುತ್ತಿದ್ದರೋ ಅದರಿಂದ ಈ ವ್ಯಕ್ತಿಯು ನಿಮ್ಮನ್ನು ತಡೆಯಲು ಬಯಸುತ್ತಿದ್ದಾನೆ ಎಂದು ಅವರು ಹೇಳುತ್ತಾರೆ. ಇದು ಆತ ಸ್ವಯಂ ರಚಿಸಿ ತರುವ ಕಟ್ಟು ಕಥೆಗಳಾಗಿವೆ ಎಂದೂ ಹೇಳುತ್ತಾರೆ. ಸತ್ಯವು ಅವರ ಮುಂದೆ ಬಂದಾಗ ಇವೆಲ್ಲ ಸ್ಪಷ್ಟವಾದ ಮೋಡಿ-ಮಾಂತ್ರಿಕತೆ್ಯ ಹೊರತು ಬೇರೇನೂ ಅಲ್ಲ ಎಂದು ಸತ್ಯವನ್ನು ನಿರಾಕರಿಸಿದವರು ಹೇಳುತ್ತಾರೆ. {43}
وَمَا آتَيْنَاهُمْ مِنْ كُتُبٍ يَدْرُسُونَهَا ۖ وَمَا أَرْسَلْنَا إِلَيْهِمْ قَبْلَكَ مِنْ نَذِيرٍ
[ಹಿಂದೆ ಇಸ್ರಾಈಲ್ ಜನತೆಗೆ ಕೊಟ್ಟಂತೆ ಮಕ್ಕ ನಿವಾಸಿಗಳಾದ] ಇವರಿಗೆ ಓದಿ ಕಲಿತುಕೊಳ್ಳುವಂತಹ ದಿವ್ಯ ಗ್ರಂಥಗಳನ್ನು ನಾವು ಕೊಟ್ಟಿಲ್ಲ; ಹಾಗೆಯೇ ಪೈಗಂಬರರೇ, ನಿಮಗಿಂತ ಮುಂಚೆ ಮುನ್ನೆಚ್ಚರಿಕೆ ನೀಡುವಂತಹ ಒಬ್ಬ ಪ್ರವಾದಿಯನ್ನು ಇವರ ಬಳಿಗೆ ನಾವು ಕಳುಹಿಸಿಲ್ಲ. {44}
وَكَذَّبَ الَّذِينَ مِنْ قَبْلِهِمْ وَمَا بَلَغُوا مِعْشَارَ مَا آتَيْنَاهُمْ فَكَذَّبُوا رُسُلِي ۖ فَكَيْفَ كَانَ نَكِيرِ
ಇವರಿಗಿಂತ ಮುಂಚೆ ಗತಿಸಿದವರೂ ಸಹ (ಪ್ರವಾದಿಗಳ ಸಂದೇಶವನ್ನು) ನಿರಾಕರಿಸಿದವರೇ ಆಗಿದ್ದರು. (ಜೀವನಾನುಕೂಲತೆಗಳಲ್ಲಿ) ನಾವು ಅವರಿಗೆ ದಯಪಾಲಿಸಿದ್ದುದರ ಹತ್ತನೇ ಒಂದಂಶದಷ್ಟೂ ಇವರಿಗೆ ತಲುಪಿಲ್ಲ. ಆದರೂ ನಾನು ಕಳುಹಿಸಿದ್ದ ಪ್ರವಾದಿಯನ್ನು ಅವರು ಅಲ್ಲಗಳೆದಿದ್ದರು. ಆಗ ನನ್ನ ಹೊಡೆತದ (ತೀಕ್ಷ್ಣತೆ) ಎಂತಹ ಮಟ್ಟದ್ದಾಗಿತ್ತು! {45}
قُلْ إِنَّمَا أَعِظُكُمْ بِوَاحِدَةٍ ۖ أَنْ تَقُومُوا لِلَّهِ مَثْنَىٰ وَفُرَادَىٰ ثُمَّ تَتَفَكَّرُوا ۚ مَا بِصَاحِبِكُمْ مِنْ جِنَّةٍ ۚ إِنْ هُوَ إِلَّا نَذِيرٌ لَكُمْ بَيْنَ يَدَيْ عَذَابٍ شَدِيدٍ
(ಕೊನೆಯದಾಗಿ, ಪೈಗಂಬರರೇ) ನೀವು ಅವರೊಡನೆ ಹೇಳಿರಿ: ಜನರೇ, ನಾನೀಗ ಒಂದೇ ಒಂದು ವಿಷಯವನ್ನು ನಿಮಗೆ ಉಪದೇಶಿಸುತ್ತಿದ್ದೇನೆ. ನೀವು ಇಬ್ಬಿಬ್ಬರಾಗಿ ಅಥವಾ ಒಬ್ಬೊಬ್ಬರೇ ಅಲ್ಲಾಹ್ ನಿಗಾಗಿ ಸ್ವಲ್ಪ ಚಿಂತನೆ ನಡೆಸಿರಿ. ಹಾಗಾದರೆ, ನಿಮ್ಮ ಈ ಒಡನಾಡಿ (ಅಂದರೆ ಪೈಗಂಬರರು) ಭ್ರಾಂತಿಗೆ ಒಳಗಾದವರಲ್ಲ; ಬದಲಾಗಿ, ಮುಂದೆ ನಿಮಗೆ ಬರಲಿರುವ ಕಠಿಣವಾದ ಒಂದು ಶಿಕ್ಷೆಯ ಕುರಿತು ಎಚ್ಚರಿಕೆ ನೀಡುವ ಪ್ರವಾದಿಯಗಿದ್ದಾರೆ (ಎಂಬ ವಾಸ್ತವಿಕತೆಯು ನಿಮಗೆ ಮನವರಿಕೆಯಾದೀತು)! {46}
قُلْ مَا سَأَلْتُكُمْ مِنْ أَجْرٍ فَهُوَ لَكُمْ ۖ إِنْ أَجْرِيَ إِلَّا عَلَى اللَّهِ ۖ وَهُوَ عَلَىٰ كُلِّ شَيْءٍ شَهِيدٌ
ಪ್ರತಿಫಲವಾಗಿ ನಾನು ನಿಮ್ಮಿಂದ ಏನನ್ನೂ ಕೇಳುತ್ತಿಲ್ಲ. (ನೀವು ಹಾಗೇನಾದರೂ ಭಾವಿಸಿದ್ದರೆ) ಅದು ನಿಮಗೇ ಇರಲಿ! ನನಗೆ ಪ್ರತಿಫಲ ನೀಡಬೇಕಾದವನು ಆ ಅಲ್ಲಾಹ್ ನಲ್ಲದೆ ಬೇರೆ ಯಾರೂ ಅಲ್ಲ. ಅವನು ಎಲ್ಲವನ್ನೂ ಪ್ರತ್ಯಕ್ಷವಾಗಿ ವೀಕ್ಷಿಸುವವನು! {47}
قُلْ إِنَّ رَبِّي يَقْذِفُ بِالْحَقِّ عَلَّامُ الْغُيُوبِ
ಅವರಿಗೆ ತಿಳಿಸಿರಿ: (ಅಸತ್ಯವನ್ನು ನೀಗಿಸಲು) ನನ್ನ ದೇವನು ಸತ್ಯದ ಹೊಡೆತ ನೀಡುತ್ತಾನೆ. (ನಿಮ್ಮ ಪಾಲಿಗೆ) ಅದೃಷ್ಯವಾದಂತಹ ಎಲ್ಲವನ್ನೂ ಬಹಳ ಚೆನ್ನಾಗಿ ತಿಳಿದಿರುತ್ತಾನೆ. {48}
قُلْ جَاءَ الْحَقُّ وَمَا يُبْدِئُ الْبَاطِلُ وَمَا يُعِيدُ
ಈಗ ಸತ್ಯವು ಬಂದು ಬಿಟ್ಟಿದೆ ಎಂದು ಅವರೊಡನೆ ಹೇಳಿರಿ. ಅಸತ್ಯವು [ಅರ್ಥಾತ್ ನಿಮ್ಮ ಮಿಥ್ಯ ದೇವರುಗಳು] ಏನನ್ನೂ ಸೃಷ್ಟಿಸಿಲ್ಲ; ಪುನಃ ಸೃಷ್ಟಿಸಲೂ ಅವರಿಗೆ ಸಾಧ್ಯವಿಲ್ಲ. {49}
قُلْ إِنْ ضَلَلْتُ فَإِنَّمَا أَضِلُّ عَلَىٰ نَفْسِي ۖ وَإِنِ اهْتَدَيْتُ فَبِمَا يُوحِي إِلَيَّ رَبِّي ۚ إِنَّهُ سَمِيعٌ قَرِيبٌ
ಒಂದು ವೇಳೆ ನಾನು ತಪ್ಪು ದಾರಿಯಲ್ಲಿದ್ದೇನೆ ಎಂದಾದರೆ ಅದು ನನಗೇ ದೋಷಕರವಾಗಿದೆ. ಇನ್ನು, ನಾನು ಸರಿದಾರಿಯಲ್ಲಿದ್ದೇನೆ ಎಂದಾದರೆ ಅದಕ್ಕೆ ಕಾರಣ ನನ್ನ ದೇವನು ನನಗೆ ನೀಡಿದ ದಿವ್ಯ ಮಾರ್ಗದರ್ಶನವಾಗಿದೆ. ಅವನು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾನೆ; ಹತ್ತಿರವೇ ಇರುವವನಾಗಿದ್ದಾನೆ. {50}
وَلَوْ تَرَىٰ إِذْ فَزِعُوا فَلَا فَوْتَ وَأُخِذُوا مِنْ مَكَانٍ قَرِيبٍ
ಒಂದು ವೇಳೆ (ಪೈಗಂಬರರೇ, ಪರಲೋಕದಲ್ಲಿ) ಅವರು ಭಯದಿಂದ ತತ್ತರಿಸುತ್ತಿರುವುದನ್ನು ನೀವು ಕಂಡಿರುತ್ತಿದ್ದರೆ... ! ಆಗ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಿರದು. ಹತ್ತಿರದ ಸ್ಥಳದಿಂದಲೇ ಅವರೆಲ್ಲ ಹಿಡಿಯಲ್ಪಡುವರು. {51}
وَقَالُوا آمَنَّا بِهِ وَأَنَّىٰ لَهُمُ التَّنَاوُشُ مِنْ مَكَانٍ بَعِيدٍ
ನಾವೀಗ (ಪೈಗಂಬರರು ಬೋಧಿಸುತ್ತಿದ್ದ ಕುರ್‌ಆನ್ ನಿನಲ್ಲಿ) ವಿಶ್ವಾಸವಿರಿಸುತ್ತೇವೆ ಎಂದು ಆಗ ಅವರು ಹೇಳುವರು. ಅದರೆ (ಪರಲೋಕದಂತಹ) ದೂರದ ಸ್ಥಳ ತುಲುಪಿದ ನಂತರ ವಿಶ್ವಾಸವನ್ನು ತಮ್ಮದಾಗಿಸಿಕೊಳ್ಳಲು ಅವರಿಗೆ ಹೇಗೆ ತಾನೆ ಸಾಧ್ಯ?! {52}
وَقَدْ كَفَرُوا بِهِ مِنْ قَبْلُ ۖ وَيَقْذِفُونَ بِالْغَيْبِ مِنْ مَكَانٍ بَعِيدٍ
ಈ ಮೊದಲು [ಅಂದರೆ ಭೂಲೋಕದಲ್ಲಿರುವಾಗ] ಅವರು ಅದನ್ನು ಧಿಕ್ಕರಿಸಿ ಬಿಟ್ಟಿದ್ದರು. ಮತ್ತು (ಹತ್ತಿರದಿಂದ ಅರಿಯುವ ಬದಲು) ದೂರದಲ್ಲಿದ್ದುಕೊಂಡು ಅಂದಾಜು ಮಾಡುತ್ತಾ ಊಹಾಪೋಹಗಳ ಮೂಲಕ (ಸತ್ಯಕ್ಕೆ) ಪ್ರಹಾರ ನಡೆಸುತ್ತಿದ್ದರು. {53}
وَحِيلَ بَيْنَهُمْ وَبَيْنَ مَا يَشْتَهُونَ كَمَا فُعِلَ بِأَشْيَاعِهِمْ مِنْ قَبْلُ ۚ إِنَّهُمْ كَانُوا فِي شَكٍّ مُرِيبٍ
ಇದಕ್ಕಿಂತ ಹಿಂದೆ ಇವರಂತಹ ಜನರ ಗುಂಪುಗಳೊಂದಿಗೆ ವ್ಯವಹರಿಸಿದಂತೆ ಅವರ ಹಾಗೂ ಅವರು ಈಗಿನ ಬಯಕೆಗಳ ನಡುವೆ ತಡೆಗೋಡೆ ಉಂಟುಮಾಡಲಾಗುವುದು. ಈ ವಿಷಯದಲ್ಲಿ ಅವರಿಗಂತು ಗೊಂದಲಕ್ಕೀಡು ಮಾಡುವ ಸಂಶಯವಿತ್ತು! {54}
-----ಅನುವಾದಿತ ಸೂರಃ ಗಳು