تـرجمـة سورة يٰسٓ من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت
سـهل الفهـم من غيـر الـرجـوع إلى كتاب التفسيـر
| ಸೂರಃ ಯಾ-ಸೀನ್ | ಪವಿತ್ರ ಕುರ್‌ಆನ್ ನ 36 ನೆಯ ಸೂರಃ | ಇದರಲ್ಲಿ ಒಟ್ಟು 83 ಆಯತ್ ಗಳು ಇವೆ |
![]()
ಅತ್ಯಂತ ದಯಾಮಯನೂ ನಿತ್ಯ ಕರುಣೆ ತೋರುವವನೂ ಆದ ಅಲ್ಲಾಹನ ನಾಮದಿಂದ (ಆರಂಭಿಸುವೆ)!
يس
ಯಾ - ಸೀನ್! {1}
وَالْقُرْآنِ الْحَكِيمِ
ಜ್ಞಾನಭರಿತವಾದ ಈ ಕುರ್‌ಆನ್ ನ ಆಣೆ! {2}
إِنَّكَ لَمِنَ الْمُرْسَلِينَ
(ಪೈಗಂಬರರೇ), ನೀವು ನಿಜವಾಗಿ ನಮ್ಮ ದೂತರುಗಳ ಸಾಲಿಗೆ ಸೇರಿರುವಿರಿ! {3}
عَلَىٰ صِرَاطٍ مُسْتَقِيمٍ
ಸರಿಯಾದ ಮಾರ್ಗದಲ್ಲೇ ಇರುವಿರಿ. {4}
تَنْزِيلَ الْعَزِيزِ الرَّحِيمِ
ಬಹಳ ಶಕ್ತಿಶಾಲಿಯಾದ, ಸದಾ ಕರುಣೆ ತೋರುವ (ಅಲ್ಲಾಹ್ ನ ವತಿಯಿಂದ ಈ ಕುರ್‌ಆನ್ ನಿಮ್ಮ ಮೇಲೆ) ಅವತೀರ್ಣಗೊಳ್ಳುತ್ತಿದೆ. {5}
لِتُنْذِرَ قَوْمًا مَا أُنْذِرَ آبَاؤُهُمْ فَهُمْ غَافِلُونَ
ನೀವು ಒಂದು ಸಮುದಾಯಕ್ಕೆ [ಅರ್ಥಾತ್ ಕುರೈಷರ ಸಮುದಾಯಕ್ಕೆ] ಮುನ್ನೆಚ್ಚರಿಕೆ ನೀಡಬೇಕಾದ ಕಾರಣಕ್ಕಾಗಿ - ಅಂದರೆ ಯಾವ ಸಮುದಾಯದ ಪೂರ್ವಜರನ್ನು ಹಿಂದೆ ಎಚ್ಚರಿಸಲಾಗಿರಲಿಲ್ಲವೋ ಅಂತಹ ಒಂದು ಸಮುದಾಯವನ್ನು ಎಚ್ಚರಿಸುವ ಸಲುವಾಗಿ! ಅವರು (ಪರಲೋಕದ ಬಗ್ಗೆ) ತೀರಾ ನಿರ್ಲಕ್ಷಿತರಾಗಿದ್ದಾರೆ. {6}
لَقَدْ حَقَّ الْقَوْلُ عَلَىٰ أَكْثَرِهِمْ فَهُمْ لَا يُؤْمِنُونَ
(ಅವರ ಅಂತಹ ನಿರ್ಲಕ್ಷ್ಯದ ಕಾರಣ) ಅವರಲ್ಲಿ ಹೆಚ್ಚಿನವರ ಕುರಿತು ನಮ್ಮ ಫರ್ಮಾನು ಸತ್ಯವಾಗಿ ಪರಿಣಮಿಸಿರುತ್ತದೆ; ಆದ್ದರಿಂದಲೇ ಅವರು ವಿಶ್ವಾಸಿಗಳಾಗುತ್ತಿಲ್ಲ. {7}
إِنَّا جَعَلْنَا فِي أَعْنَاقِهِمْ أَغْلَالًا فَهِيَ إِلَى الْأَذْقَانِ فَهُمْ مُقْمَحُونَ
ನಾವು ಅವರ ಕೊರಳುಗಳಿಗೆ ಗಲ್ಲದವರೆಗೂ ಬಿಗಿಯಲ್ಪಟ್ಟ ಉರುಳನ್ನು ತೊಡಿಸಿರುವೆವು. ಆದ್ದರಿಂದಲೇ ಅವರ ತಲೆಗಳು ಮೇಲಕ್ಕೆತ್ತಲ್ಪಟ್ಟ ಸ್ಥಿತಿಯಲ್ಲಿವೆ. {8}
وَجَعَلْنَا مِنْ بَيْنِ أَيْدِيهِمْ سَدًّا وَمِنْ خَلْفِهِمْ سَدًّا فَأَغْشَيْنَاهُمْ فَهُمْ لَا يُبْصِرُونَ
ನಾವು ಅವರ ಮುಂಭಾಗದಲ್ಲಿ ಒಂದು ತಡೆಯನ್ನೂ ಹಿಂಭಾಗದಲ್ಲಿ ಒಂದು ತಡೆಯನ್ನೂ ನಿಲ್ಲಿಸಿ ಬಿಟ್ಟೆವು. ಹಾಗೆ ಅವರನ್ನು ಮುಚ್ಚಿಬಿಟ್ಟೆವು. ಹಾಗಿರುವಾಗ ಅವರು (ಸತ್ಯವನ್ನು) ಕಂಡುಕೊಳ್ಳಲಾರರು. {9}
وَسَوَاءٌ عَلَيْهِمْ أَأَنْذَرْتَهُمْ أَمْ لَمْ تُنْذِرْهُمْ لَا يُؤْمِنُونَ
ಪೈಗಂಬರರೇ, ನೀವು ಅವರನ್ನು ಎಚ್ಚರಿಸಿದರೂ ಅಷ್ಟೇ, ಎಚ್ಚರಿಸದೆ ಬಿಟ್ಟರೂ ಅಷ್ಟೇ. ಅವರ ಮಟ್ಟಿಗೆ ಅವೆಲ್ಲ ಒಂದೇ! ಅವರಿನ್ನು ವಿಶ್ವಾಸಿಗಳಾಗಲಾರರು. {10}
إِنَّمَا تُنْذِرُ مَنِ اتَّبَعَ الذِّكْرَ وَخَشِيَ الرَّحْمَٰنَ بِالْغَيْبِ ۖ فَبَشِّرْهُ بِمَغْفِرَةٍ وَأَجْرٍ كَرِيمٍ
ಹಾಗಿರುವಾಗ, ಸದುಪದೇಶವನ್ನು ಅನುಸರಿಸುವ ಹಾಗೂ ಪರಮ ಕಾರುಣ್ಯವಂತನಾದ (ಆ ಅಲ್ಲಾಹ್ ನನ್ನು) ಕಣ್ಣಾರೆ ಕಾಣದೆಯೇ ಭಯಪಡುವಾತನನ್ನು ಮಾತ್ರ ನೀವು ಎಚ್ಚರಿಸಬಹುದಷ್ಟೆ! ಅಂತಹವನಿಗೆ (ಪರಲೋಕದಲ್ಲಿ) ಕ್ಷಮೆ ಹಾಗೂ ಗೌರವಪೂರ್ಣ ಪ್ರತಿಫಲಗಳಿರುವ ಬಗ್ಗೆ ನೀವು ಸಿಹಿಸುದ್ದಿ ನೀಡಿರಿ. {11}
إِنَّا نَحْنُ نُحْيِي الْمَوْتَىٰ وَنَكْتُبُ مَا قَدَّمُوا وَآثَارَهُمْ ۚ وَكُلَّ شَيْءٍ أَحْصَيْنَاهُ فِي إِمَامٍ مُبِينٍ
ನಿಶ್ಚಯವಾಗಿಯೂ ನಾವು ಮರಣ ಹೊಂದಿದವರನ್ನು (ವಿಚಾರಣೆಗಾಗಿ ಪುನಃ) ಜೀವಂತ ಗೊಳಿಸಲಿದ್ದೇವೆ; ಮತ್ತು ಅವರು ಮುಂದಕ್ಕೆ ಕಳುಹಿಸಿದ (ಎಲ್ಲ ಕರ್ಮಗಳನ್ನೂ) ಹಿಂದೆಯೇ ಬಿಟ್ಟು ಬರುವ ಸಕಲವನ್ನೂ ಬರೆದಿಡುತ್ತಿದ್ದೇವೆ. ಪ್ರತಿಯೊಂದನ್ನೂ ನಾವು ಸ್ಪಷ್ಟವಾದ ಒಂದು ಆಕರಗ್ರಂಥದಲ್ಲಿ ಪಟ್ಟಿಮಾಡುತ್ತಿದ್ದೇವೆ. {12}
وَاضْرِبْ لَهُمْ مَثَلًا أَصْحَابَ الْقَرْيَةِ إِذْ جَاءَهَا الْمُرْسَلُونَ
ಪೈಗಂಬರರೇ, ಅಲ್ಲಾಹ್ ನ ದೂತರುಗಳು ಆಗಮಿಸಿದ್ದ ಆ ಒಂದು ನಾಡಿನವರ ವಿಚಾರವನ್ನು ಉದಾಹರಣೆಯಾಗಿ ನೀವು ಈ ಜನರಿಗೆ ವಿವರಿಸಿರಿ. {13}
إِذْ أَرْسَلْنَا إِلَيْهِمُ اثْنَيْنِ فَكَذَّبُوهُمَا فَعَزَّزْنَا بِثَالِثٍ فَقَالُوا إِنَّا إِلَيْكُمْ مُرْسَلُونَ
ಅವರಲ್ಲಿಗೆ ಇಬ್ಬರು ದೂತರುಗಳನ್ನು ನಾವು ಕಳುಹಿಸಿದ್ದ ಸಂದರ್ಭವದು! ಆದರೆ ಆ ಇಬ್ಬರನ್ನೂ ಅವರು ತಿರಸ್ಕರಿಸಿ ಬಿಟ್ಟರು. ಆಗ ಮೂರನೆಯ ಒಬ್ಬ ದೂತನನ್ನು (ಆ ಇಬ್ಬರು ದೂತರುಗಳ) ಬೆಂಬಲಕ್ಕಾಗಿ ನಾವು ಕಳುಹಿಸಿದೆವು. ನಿಶ್ಚಯವಾಗಿಯೂ ನಾವು ನಿಮ್ಮ ಬಳಿಗೆ (ಅಲ್ಲಾಹ್ ನ ಕಡೆಯಿಂದ) ಕಳುಹಿಸಲ್ಪಟ್ಟಿದ್ದೇವೆ ಎಂದು ಅವರೆಲ್ಲರೂ ಘೋಷಿಸಿದರು. {14}
قَالُوا مَا أَنْتُمْ إِلَّا بَشَرٌ مِثْلُنَا وَمَا أَنْزَلَ الرَّحْمَٰنُ مِنْ شَيْءٍ إِنْ أَنْتُمْ إِلَّا تَكْذِبُونَ
(ತಿರಸ್ಕಾರದೊಂದಿಗೆ) ನಾಡಿವರು ಹೇಳಿದರು: ನೀವಾದರೋ ನಮ್ಮಂತಹ ಮನುಷ್ಯರೇ ಆಗಿರುವಿರಿ. ಪರಮ ಕಾರುಣ್ಯವಂತನು (ಎಂದು ನೀವು ಸಾರುವ ಅವನು ನಮಗಾಗಿ) ಏನನ್ನೂ ಇಳಿಸಿ ಕೊಟ್ಟಿಲ್ಲ. ನೀವೆಲ್ಲರೂ ಸುಳ್ಳನ್ನಲ್ಲದೆ ಇನ್ನೇನನ್ನೂ ಹೇಳುತ್ತಿಲ್ಲ. {15}
قَالُوا رَبُّنَا يَعْلَمُ إِنَّا إِلَيْكُمْ لَمُرْسَلُونَ
ನಾವೆಲ್ಲರೂ ನಿಮ್ಮೆಡೆಗೆ (ನಿಮ್ಮ ಮಾರ್ಗದರ್ಶನಕ್ಕಾಗಿ) ಕಳುಹಿಸಲ್ಪಟ್ಟ ದೂತರೇ ಆಗಿರುವೆವು ಎಂಬುದು ನಮ್ಮ ಒಡೆಯನಿಗೆ ತಿಳಿದಿದೆ ಎಂದು ದೂತರುಗಳು ಪ್ರತಿಕ್ರಿಯಿಸಿದರು. {16}
وَمَا عَلَيْنَا إِلَّا الْبَلَاغُ الْمُبِينُ
ಹಾಗಿರುವಾಗ, ವಿಷಯವನ್ನು ಸ್ಪಷ್ಟವಾಗಿ ತಲುಪಿಸಿ ಬಿಡುವ ಹೊರತು ನಮ್ಮ ಮೇಲೆ ಬೇರಾವ ಹೊಣೆಗಾರಿಕೆಯೂ ಇಲ್ಲ! {17}
قَالُوا إِنَّا تَطَيَّرْنَا بِكُمْ ۖ لَئِنْ لَمْ تَنْتَهُوا لَنَرْجُمَنَّكُمْ وَلَيَمَسَّنَّكُمْ مِنَّا عَذَابٌ أَلِيمٌ
(ಅದನ್ನು ಅಲ್ಲಗಳೆಯುತ್ತಾ) ನಾಡಿನ ಜನರು ಹೇಳಿದರು: ನಮ್ಮ ಪಾಲಿಗೆ ನೀವು ಅಪಶಕುವನವೆಂದೇ ನಾವು ಭಾವಿಸುತ್ತೇವೆ. ಇನ್ನು ನೀವು (ನಿಮ್ಮ ಉಪದೇಶವನ್ನು) ನಿಲ್ಲಿಸದಿದ್ದರೆ ನಾವು ನಿಮಗೆ ಕಲ್ಲು ಹೊಡೆಯಲಿರುವವು; ಮಾತ್ರವಲ್ಲ, ಬಹಳವಾಗಿ ನೋಯಿಸುವ ಶಿಕ್ಷೆಯನ್ನು ನೀವು ನಮ್ಮಿಂದ ಪಡೆಯಲಿರುವಿರಿ. {18}
قَالُوا طَائِرُكُمْ مَعَكُمْ ۚ أَئِنْ ذُكِّرْتُمْ ۚ بَلْ أَنْتُمْ قَوْمٌ مُسْرِفُونَ
ದೂತರುಗಳು ಉತ್ತರಿಸಿದರು: ಅಪಶಕುನವು ನಿಮಗೇ ತಗುಲಿಕೊಂಡಿದೆ; ನಿಮಗೆ ಉಪದೇಶ ನೀಡಿದ್ದಕ್ಕಾಗಿಯೇ (ನೀವು ಹಾಗೆ ವರ್ತಿಸುತ್ತಿರುವುದು)? ಇಲ್ಲ, ಬದಲಾಗಿ, ನೀವು ಮಿತಿ ಮೀರಿ ವರ್ತಿಸುತ್ತಿರುವ ಒಂದು ಜನಸಮೂಹವೇ ಸರಿ! {19}
وَجَاءَ مِنْ أَقْصَى الْمَدِينَةِ رَجُلٌ يَسْعَىٰ قَالَ يَا قَوْمِ اتَّبِعُوا الْمُرْسَلِينَ
ಅಷ್ಟರಲ್ಲಿ ಪಟ್ಟಣದ ದೂರ ಭಾಗದಿಂದ ಒಬ್ಬ ವ್ಯಕ್ತಿ ಧಾವಿಸುತ್ತಾ ಅಲ್ಲಿಗೆ ಬಂದರು. ಓ ನನ್ನ ಜನರೇ, (ಆಲ್ಲಾಹ್ ನ) ಈ ದೂತರುಗಳು ಹೇಳುತ್ತಿರುವುದನ್ನು ಕೇಳಿರಿ ಎಂದು ಜನರೊಡನೆ ಹೇಳಿದರು. {20}
اتَّبِعُوا مَنْ لَا يَسْأَلُكُمْ أَجْرًا وَهُمْ مُهْتَدُونَ
ಯಾವುದೇ ಪ್ರತಿಫಲನ್ನು ಬೇಡದ (ಈ ದೂತರನ್ನು) ನೀವು ಅನುಸರಿಸಿರಿ. ಹೌದು, ಇವರು ಸರಿದಾರಿಯಲ್ಲಿರುವವರೂ ಆಗಿರುವರು. {21}
وَمَا لِيَ لَا أَعْبُدُ الَّذِي فَطَرَنِي وَإِلَيْهِ تُرْجَعُونَ
ಇನ್ನು, ನನ್ನನ್ನು ಸೃಷ್ಟಿಸಿದ (ಆ ದೇವನನ್ನು) ಆರಾಧಿಸದೇ ಇರಲು ನನ್ನ (ಬುದ್ಧಿಗೆ) ಏನಾಗಿದೆ! ಕೊನೆಗೆ, ಆ ದೇವನ ಕಡೆಗೇ ನೀವೆಲ್ಲರೂ ಮರಳಿಸಲ್ಪಡಲಿರುವಿರಿ. {22}
أَأَتَّخِذُ مِنْ دُونِهِ آلِهَةً إِنْ يُرِدْنِ الرَّحْمَٰنُ بِضُرٍّ لَا تُغْنِ عَنِّي شَفَاعَتُهُمْ شَيْئًا وَلَا يُنْقِذُونِ
ಆ ಅಲ್ಲಾಹ್ ನನ್ನು ಬಿಟ್ಟು ಇತರರನ್ನು ನಾನು ದೇವರನ್ನಾಗಿಸಿಕೊಳ್ಳಬೇಕೇ?! ಒಂದು ವೇಳೆ ನನಗೆ ತೊಂದರೆ ಕೊಡಲು ಆ ಕಾರುಣ್ಯವಂತನು ಬಯಸಿದರೆ, ಅವರಾರ ಶಿಫಾರಸ್ಸೂ ನನ್ನ ಪಾಲಿಗೆ ಕಿಂಚಿತ್ತೂ ಪ್ರಯೋಜಕಾರಿಯಾಗದು; ನನ್ನನ್ನು ರಕ್ಷಿಸಲು ಅವರಾರಿಗೂ ಸಾಧ್ಯವಾಗದು. {23}
إِنِّي إِذًا لَفِي ضَلَالٍ مُبِينٍ
ಹಾಗೇನಾದರೂ ಆದರೆ (ಅರ್ಥಾತ್ ಇತರರನ್ನು ದೇವರನ್ನಾಗಿಸಿಕೊಂಡರೆ) ಸ್ಪಷ್ಟವಾದ ತಪ್ಪುದಾರಿಗೆ ನಾನು ಬೀಳುವೆನು. {24}
إِنِّي آمَنْتُ بِرَبِّكُمْ فَاسْمَعُونِ
ನಿಸ್ಸಂಶಯವಾಗಿ, ನಾನು ನಿಮ್ಮ ನಿಜವಾದ ಪರಿಪಾಲಕನಾದ (ಅಲ್ಲಾಹ್ ನ) ಮೇಲೆ ನಂಬಿಕೆ ಇಟ್ಟಿರುವೆನು! ಆದ್ದರಿಂದ ನಾನು ಹೇಳುತ್ತಿರುವುದನ್ನು ಕೇಳಿರಿ. {25}
قِيلَ ادْخُلِ الْجَنَّةَ ۖ قَالَ يَا لَيْتَ قَوْمِي يَعْلَمُونَ
[ಆದರೆ ನಾಡಿನವರು ಅವರ ಮಾತನ್ನು ಧಿಕ್ಕರಿಸಿ ಕೊನೆಗೆ ಅವರನ್ನು ವಧಿಸಿಯೇ ಬಿಟ್ಟರು]. ಸ್ವರ್ಗವನ್ನು ಪ್ರವೇಶಿಸು ಎಂದು ಆಗ ಆ ವ್ಯಕ್ತಿಯೊಡನೆ ಹೇಳಲಾಯಿತು! ಅಕಟಾ, ನನ್ನ ಜನರಿಗೆ (ಈ ವಿಷಯ) ತಿಳಿದಿರುತ್ತಿದ್ದರೆ ಅದೆಷ್ಟು ಒಳ್ಳೆಯದಿತ್ತು ಎಂದು ಅವರು ಉದ್ಗರಿಸಿದರು. {26}
بِمَا غَفَرَ لِي رَبِّي وَجَعَلَنِي مِنَ الْمُكْرَمِينَ
ನನ್ನ ದೇವನು ನನ್ನನ್ನು ಕ್ಷಮಿಸಿರುವ ಹಾಗೂ ನನ್ನನ್ನು ಪ್ರತಿಷ್ಠಿತರ ಸಾಲಿಗೆ ಸೇರಿಸಿರುವ ವಿಷಯ (ನನ್ನ ಜನರಿಗೆ ತಿಳಿದಿರುತ್ತಿದ್ದರೆ ಅದೆಷ್ಟು ಒಳ್ಳೆಯದಿತ್ತು ಎಂದು ಅವರು ಉದ್ಗರಿಸಿದರು)! {27}
وَمَا أَنْزَلْنَا عَلَىٰ قَوْمِهِ مِنْ بَعْدِهِ مِنْ جُنْدٍ مِنَ السَّمَاءِ وَمَا كُنَّا مُنْزِلِينَ
ಆ ವ್ಯಕ್ತಿಯ ಮರಣದ ನಂತರ ಅವರ ಸಮುದಾಯದ ಜನರನ್ನು ಶಿಕ್ಷಿಸಲು ಆಕಾಶದಿಂದ (ಮಲಕ್ ಗಳ) ಸೇನೆಯನ್ನು ನಾವು ಇಳಿಸಲಿಲ್ಲ; ನಮಗೆ ಸೇನೆ ಇಳಿಸುವ ಅಗತ್ಯವೂ ಇರಲಿಲ್ಲ. {28}
إِنْ كَانَتْ إِلَّا صَيْحَةً وَاحِدَةً فَإِذَا هُمْ خَامِدُونَ
ಅದು ಭಯಂಕರ ಸ್ವರೂಪದ ಒಂದು ಸ್ಪೋಟವಷ್ಟೇ ಆಗಿತ್ತು. ಆ ಕೂಡಲೇ ಅವರೆಲ್ಲ ನಂದಿಹೋದರು. {29}
يَا حَسْرَةً عَلَى الْعِبَادِ ۚ مَا يَأْتِيهِمْ مِنْ رَسُولٍ إِلَّا كَانُوا بِهِ يَسْتَهْزِئُونَ
ಅಯ್ಯೋ! ಅದೆಂತಹ ಶೋಚನೀಯ ಸ್ಥಿತಿಯಾಗಿದೆ ಮನುಷ್ಯ ಜಾತಿಯದ್ದು! ಅವರ ಬಳಿಗೆ ಬಂದ ಯಾವ ಪ್ರವಾದಿಯನ್ನೂ ಅವರು ಗೇಲಿ ಮಾಡದೇ ಬಿಟ್ಟಿರಲಿಲ್ಲ! {30}
أَلَمْ يَرَوْا كَمْ أَهْلَكْنَا قَبْلَهُمْ مِنَ الْقُرُونِ أَنَّهُمْ إِلَيْهِمْ لَا يَرْجِعُونَ
[ಪೈಗಂಬರರೇ, ಈಗ ನಿಮ್ಮನ್ನೂ ಈ ನಿಮ್ಮ ಜನರು ಗೇಲಿ ಮಾಡುತ್ತಿದ್ದಾರೆ ಎಂದಾದರೆ] ಇವರಿಗಿಂತ ಮುಂಚೆ ಅದೆಷ್ಟು ಪೀಳಿಗೆಗಳನ್ನು ನಾವು ನಾಶಪಡಿಸಿಯಾಗಿದೆ ಮತ್ತು ಅವರಲ್ಲಿ ಯಾರೂ ಸಹ ಇವರ ಬಳಿಗೆ ಮರಳಿ ಬರಲಾರರು ಎಂಬ (ವಾಸ್ತವವನ್ನು) ಇವರು ಅರಿತಿಲ್ಲವೇ? {31}
وَإِنْ كُلٌّ لَمَّا جَمِيعٌ لَدَيْنَا مُحْضَرُونَ
ಆದರೆ, ಖಚಿತವಾಗಿ ಎಲ್ಲರನ್ನೂ ನಮ್ಮ ಸನ್ನಿಧಿಯಲ್ಲಿ (ಒಂದು ದಿನ) ಹಾಜರು ಪಡಿಸಲಾಗುವುದು! {32}
وَآيَةٌ لَهُمُ الْأَرْضُ الْمَيْتَةُ أَحْيَيْنَاهَا وَأَخْرَجْنَا مِنْهَا حَبًّا فَمِنْهُ يَأْكُلُونَ
ನಿರ್ಜೀವ ನೆಲವನ್ನು ನಾವು (ಮಳೆ ಸುರಿಸಿ) ಜೀವಂತಗೊಳಿಸುವ ಪ್ರಕ್ರಿಯೆಯಲ್ಲಿ ಇವರಿಗೊಂದು ದೃಷ್ಟಾಂತವಿದೆ! ಅದರಲ್ಲಿ ನಾವು ದವಸ ಧಾನ್ಯಗಳನ್ನು ಬೆಳೆಸಿರುತ್ತೇವೆ; ಅದನ್ನೇ ಇವರು ತಿನ್ನುತ್ತಿದ್ದಾರೆ. {33}
وَجَعَلْنَا فِيهَا جَنَّاتٍ مِنْ نَخِيلٍ وَأَعْنَابٍ وَفَجَّرْنَا فِيهَا مِنَ الْعُيُونِ
ಖರ್ಜೂರ ಮತ್ತು ದ್ರಾಕ್ಷಿಯ ತೋಟಗಳನ್ನು ಅದರಲ್ಲಿ ನಾವು ಬೆಳೆಸಿರುತ್ತೇವೆ. ಮತ್ತು ಅಲ್ಲಿ ನೀರಿನ ಚಿಲುಮೆಗಳು ಹರಿಯುವಂತೆ ಮಾಡಿರುತ್ತೇವೆ. {34}
لِيَأْكُلُوا مِنْ ثَمَرِهِ وَمَا عَمِلَتْهُ أَيْدِيهِمْ ۖ أَفَلَا يَشْكُرُونَ
ಈ ಜನರು ಅದರ ಫಲಗಳನ್ನು ತಿನ್ನಲಿ ಎಂಬ ಕಾರಣಕ್ಕಾಗಿ. ಅದ್ಯಾವುದೂ ಅವರ ಕೈಗಳು ಮಾಡಿದ ಕೆಲಸವಲ್ಲ. (ವಾಸ್ತವ) ಹಾಗಿದ್ದರೂ ಅವರೇಕೆ ಕೃತಜ್ಞತೆ ಸಲ್ಲಿಸುವುದಿಲ್ಲ? {35}
سُبْحَانَ الَّذِي خَلَقَ الْأَزْوَاجَ كُلَّهَا مِمَّا تُنْبِتُ الْأَرْضُ وَمِنْ أَنْفُسِهِمْ وَمِمَّا لَا يَعْلَمُونَ
(ದೃಷ್ಟಾಂತವು ಅದು ಮಾತ್ರವಲ್ಲ)! ಭೂಮಿಯ ಮೇಲೆ ಬೆಳೆಯುವ ಸಸ್ಯ ಸಂಕುಲದಲ್ಲೂ, ಸ್ವತಃ ಅವರದೇ ಪ್ರಬೇಧವಾದ (ಮಾನವ ಕುಲದಲ್ಲೂ) ಮತ್ತು ಅವರ ಅರಿವಿಗೇ ಬಾರದ ಇತರೆಲ್ಲಾ ಸೃಷ್ಟಿ ವೈವಿಧ್ಯಗಳಲ್ಲೂ ಜೋಡಿಗಳನ್ನು ನಿರ್ಮಿಸಿದ ಆ (ಅಲ್ಲಾಹ್ ನೇ) ಮಹಾಮಹಿಮ! {36}
وَآيَةٌ لَهُمُ اللَّيْلُ نَسْلَخُ مِنْهُ النَّهَارَ فَإِذَا هُمْ مُظْلِمُونَ
ರಾತ್ರಿಯು ಸಹ ಈ ಜನರ ಪಾಲಿಗೆ (ಇನ್ನೊಂದು) ದೃಷ್ಟಾಂತವಾಗಿದೆ! ಹಗಲನ್ನು ನಾವು ಅದರಿಂದ ಹಿಂದೆಳೆದುಕೊಂಡಾಗ ಅದೋ ಅವರಿಗೆ ಕತ್ತಲಾಗಿ ಬಿಡುತ್ತದೆ! {37}
وَالشَّمْسُ تَجْرِي لِمُسْتَقَرٍّ لَهَا ۚ ذَٰلِكَ تَقْدِيرُ الْعَزِيزِ الْعَلِيمِ
ಹಾಗೆಯೇ ಸೂರ್ಯನೂ (ಅವರ ಪಾಲಿಗೆ ದೃಷ್ಟಾಂತವೇ)! ಅದು ತಾನು ನಿಲುಗಡೆ ಹೊಂದಲಿರುವ ಸ್ಥಾನದತ್ತ ಚಲಿಸುತ್ತಲೇ ಇರುತ್ತದೆ. ಅದು ಅತ್ಯಂತ ಬಲಶಾಲಿಯೂ ಮಹಾ ಜ್ಞಾನಿಯೂ ಆದ ಆ (ಅಲ್ಲಾಹ್ ನು) ನಿಯಮಿಸಿದ ವಿಧಿಯಾಗಿದೆ. {38}
وَالْقَمَرَ قَدَّرْنَاهُ مَنَازِلَ حَتَّىٰ عَادَ كَالْعُرْجُونِ الْقَدِيمِ
ಮತ್ತು ಚಂದ್ರನೂ ಸಹ! ನಾವದಕ್ಕೆ ಹಲವು ಹಂತಗಳನ್ನು ನಿಗದಿಪಡಿಸಿರುತ್ತೇವೆ. ಎಲ್ಲಿಯವರೆಗೆಂದರೆ (ಕೊನೆಗೊಂದು ದಿನ) ಅದು ಖರ್ಜೂರದ ಒಣ ರೆಂಬೆಯಂತಾಗಿ ಬಿಡಲಿದೆ! {39}
لَا الشَّمْسُ يَنْبَغِي لَهَا أَنْ تُدْرِكَ الْقَمَرَ وَلَا اللَّيْلُ سَابِقُ النَّهَارِ ۚ وَكُلٌّ فِي فَلَكٍ يَسْبَحُونَ
ಚಂದ್ರನನ್ನು ಹಿಡಿಯಲು ಸೂರ್ಯನಿಗೆ ಸಾಧ್ಯವಾಗದು; ಹಾಗೆಯೇ ರಾತ್ರಿಯು ಹಗಲನ್ನು ಹಿಂದಿಕ್ಕಲಾರದು. ಎಲ್ಲವೂ ತಮ್ಮ ತಮ್ಮ ಕಕ್ಷೆಯಲ್ಲಿ ತೇಲುತ್ತಿರುತ್ತವೆ. {40}
وَآيَةٌ لَهُمْ أَنَّا حَمَلْنَا ذُرِّيَّتَهُمْ فِي الْفُلْكِ الْمَشْحُونِ
ನಾವು ಅವರ (ಹಿಂದಿನ) ತಲೆಮಾರನ್ನು ತುಂಬಿ ತುಳುಕುವ ನೌಕೆಯಲ್ಲಿ ಹತ್ತಿಸಿಕೊಂಡು (ಪಾರು ಮಾಡಿದ್ದು) ಸಹ ಅವರ ಪಾಲಿಗೊಂದು ದೃಷ್ಟಾಂತವಾಗಿದೆ. {41}
وَخَلَقْنَا لَهُمْ مِنْ مِثْلِهِ مَا يَرْكَبُونَ
ಮತ್ತು ಅವರು ಪ್ರಯಾಣ ಮಾಡಲು ಬಳಸುತ್ತಿರುವ ಇತರ ಹಲವು (ನೌಕಾ ಪ್ರಕಾರಗಳನ್ನೂ) ನಾವು ಅವರಿಗಾಗಿ ನಿರ್ಮಿಸಿದೆವು! {42}
وَإِنْ نَشَأْ نُغْرِقْهُمْ فَلَا صَرِيخَ لَهُمْ وَلَا هُمْ يُنْقَذُونَ
ಒಂದು ವೇಳೆ ನಾವು ಬಯಸಿದ್ದರೆ ಅವರನ್ನು ಮುಳುಗಿಸಿ ಬಿಡಬಹುದಿತ್ತು! ಆಗ ಅವರ ಆರ್ತನಾದಕ್ಕೆ ಸ್ಪಂದಿಸುವವರು ಯಾರೂ ಇರುತ್ತಿರಲಿಲ್ಲ; ಅವರನ್ನು ರಕ್ಷಿಸುವವರೂ ಇರುತ್ತಿರಲಿಲ್ಲ. {43}
إِلَّا رَحْمَةً مِنَّا وَمَتَاعًا إِلَىٰ حِينٍ
ಕೇವಲ ನಮ್ಮ ಕರುಣೆಯಿಂದ ಮಾತ್ರ (ನಾವು ಅವರನ್ನು ರಕ್ಷಿಸಿರುತ್ತೇವೆ) ಹಾಗೂ ಸ್ವಲ್ಪ ಸಮಯದ ವರೆಗೆ ಲೌಕಿಕ ಸವಲತ್ತುಗಳನ್ನೂ ನೀಡಿರುತ್ತೇವೆ. {44}
وَإِذَا قِيلَ لَهُمُ اتَّقُوا مَا بَيْنَ أَيْدِيكُمْ وَمَا خَلْفَكُمْ لَعَلَّكُمْ تُرْحَمُونَ
ನಿಮ್ಮ ಮೇಲೆ ಕರುಣೆ ತೋರುವಂತಾಗಲು, ನಿಮ್ಮ ಮುಂದಿರುವ [ಪರಲೋಕ ಶಿಕ್ಷೆ] ಹಾಗೂ ನಿಮಗಿಂತ ಮುಂಚೆ [ನಿಮ್ಮಂತೆ ವರ್ತಿಸಿ ಅದಾಗಲೇ ಶಿಕ್ಷೆಗೊಳಗಾದ ಜನಾಂಗಗಳನ್ನು ಕಂಡು] ನೀವು ಎಚ್ಚೆತ್ತುಕೊಳ್ಳಿ ಎಂದು ಅವರೊಡನೆ ಹೇಳಿದಾಗ (ಅವರು ಮುಖ ತಿರುಗಿಸಿಕೊಳ್ಳುತ್ತಾರೆ)! {45}
وَمَا تَأْتِيهِمْ مِنْ آيَةٍ مِنْ آيَاتِ رَبِّهِمْ إِلَّا كَانُوا عَنْهَا مُعْرِضِينَ
ಅವರ ಸೃಷ್ಟಿಕರ್ತನ ದೃಷ್ಟಾಂತಗಳ ಪೈಕಿ ಅವರ ಬಳಿಗೆ ಬಂದ ಪ್ರತಿಯೊಂದು ದೃಷ್ಟಾಂತವನ್ನೂ ಅವರು (ಕಡೆಗಣಿಸಿ) ಅದರಿಂದ ಮುಖ ತಿರುಗಿಸಿಕೊಳ್ಳದೇ ಇರಲಿಲ್ಲ! {46}
وَإِذَا قِيلَ لَهُمْ أَنْفِقُوا مِمَّا رَزَقَكُمُ اللَّهُ قَالَ الَّذِينَ كَفَرُوا لِلَّذِينَ آمَنُوا أَنُطْعِمُ مَنْ لَوْ يَشَاءُ اللَّهُ أَطْعَمَهُ إِنْ أَنْتُمْ إِلَّا فِي ضَلَالٍ مُبِينٍ
ಅಲ್ಲಾಹ್ ನು ನಿಮಗೆ ಏನನ್ನು ದಯಪಾಲಿಸಿರುವನೋ ಅದರಿಂದ ಸ್ವಲ್ಪವನ್ನು (ಅಲ್ಲಾಹ್ ನ ಮಾರ್ಗದಲ್ಲಿ ಬಡಬಗ್ಗರಿಗಾಗಿ) ಖರ್ಚು ಮಾಡಿರಿ ಎಂದು ಅವರಿಗೆ ಉಪದೇಶಿಸಲಾದಾಗ, ಅಲ್ಲಾಹ್ ನು ಇಚ್ಛಿಸಿದ್ದರೆ ಯಾರಿಗೆ ಸ್ವತಃ ತಾನೇ ಆಹಾರ ನೀಡಬಹುದಿತ್ತೋ ಅಂತಹವರಿಗೆ ನಾವು ಆಹಾರ ನೀಡಬೇಕೇ? ನೀವಾದರೋ ಸ್ಪಷ್ಟವಾದ ತಪ್ಪುತನದಲ್ಲಿರುವಿರಿ ಎಂದು (ಪೈಗಂಬರರ ಬೋಧನೆಗಳನ್ನು) ಧಿಕ್ಕರಿಸಿದವರು ವಿಶ್ವಾಸಿಗಳೊಡನೆ ಹೇಳುತ್ತಾರೆ! {47}
وَيَقُولُونَ مَتَىٰ هَٰذَا الْوَعْدُ إِنْ كُنْتُمْ صَادِقِينَ
ಮಾತ್ರವಲ್ಲ, ನೀವು ಸತ್ಯವಂತರು ಹೌದಾದರೆ ನೀವು ಎಚ್ಚರಿಸುತ್ತಿರುವ ಆ (ಪ್ರಳಯ ದಿನ) ಸಂಭವಿಸುವುದಾದರೂ ಯಾವಾಗ - ಎಂದು ಅವರು ಪಂಥಾಹ್ವಾನ ನೀಡುತ್ತಾರೆ! {48}
مَا يَنْظُرُونَ إِلَّا صَيْحَةً وَاحِدَةً تَأْخُذُهُمْ وَهُمْ يَخِصِّمُونَ
(ನಿಜವೇನೆಂದರೆ) ಹಠಾತ್ತನೆ ಎರಗಿ ಬೀಳುವ ಒಂದು ಮಹಾ ಆರ್ಭಟವನ್ನಷ್ಟೇ ಅವರು ಕಾಯುತ್ತಿರುವುದು! ಅವರಿನ್ನೂ ಪರಸ್ಪರ ಜಗಳವಾಡುತ್ತಿರುವಾಗಲೇ ಅದು ಅವರನ್ನು ಬಲಿತೆಗೆದುಕೊಳ್ಳುವುದು! {49}
فَلَا يَسْتَطِيعُونَ تَوْصِيَةً وَلَا إِلَىٰ أَهْلِهِمْ يَرْجِعُونَ
ಆಗ, (ತಮ್ಮ ಸಾವಿಗೆ ಮುನ್ನ ಏನನ್ನಾದರೂ) ಉಪದೇಶಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ; ಅಂತೆಯೇ, ತಮ್ಮ ಮನೆಯವರ ಬಳಿಗೆ ಮರಳಲೂ ಸಮಯಾವಕಾಶ ಸಿಗದು! {50}
وَنُفِخَ فِي الصُّورِ فَإِذَا هُمْ مِنَ الْأَجْدَاثِ إِلَىٰ رَبِّهِمْ يَنْسِلُونَ
[ಹಾಗಿರುತ್ತಾ ಮತ್ತೊಂದು ದಿನ] ಕಹಳೆ ಊದಲ್ಪಡುವುದು. ಆ ಕೂಡಲೇ (ಮನುಷ್ಯರೆಲ್ಲರೂ) ತಮ್ಮ ತಮ್ಮ ಗೋರಿಗಳಿಂದೆದ್ದು ತಮ್ಮ ಪ್ರಭುವಿನ ಕಡೆಗೆ [ನ್ಯಾಯವಿಚಾರಣೆಗಾಗಿ ಸ್ವಾಭಾವಿಕವಾಗಿಯೇ] ಧಾವಿಸುತ್ತಲಿರುವರು. {51}
قَالُوا يَا وَيْلَنَا مَنْ بَعَثَنَا مِنْ مَرْقَدِنَا ۜ ۗ هَٰذَا مَا وَعَدَ الرَّحْمَٰنُ وَصَدَقَ الْمُرْسَلُونَ
ಅಯ್ಯೋ ನಮ್ಮ ದುರ್ಗತಿಯೇ! ನಮ್ಮ ಗೋರಿಗಳಿಂದ ನಮ್ಮನ್ನು ಎಬ್ಬಿಸಿದವರು ಯಾರು - ಎಂದು ಕೇಳುತ್ತಲಿರುವರು! ಹೌದು, ಈ (ದಿನದ ಬಗ್ಗೆಯೇ) ಪರಮ ಕಾರುಣ್ಯವಂತನಾದ (ಅಲ್ಲಾಹ್ ನು) ಎಚ್ಚರಿಕೆ ನೀಡಿದ್ದನು; ಎಲ್ಲಾ ದೂತರುಗಳು ಹೇಳಿದ್ದು ಸತ್ಯವೇ ಆಗಿತ್ತು! {52}
إِنْ كَانَتْ إِلَّا صَيْحَةً وَاحِدَةً فَإِذَا هُمْ جَمِيعٌ لَدَيْنَا مُحْضَرُونَ
ಅದು ಹಠಾತ್ತನೆ ಸಂಭವಿಸುವ (ಮತ್ತೊಂದು) ಆರ್ಭಟವಷ್ಟೆ! ಆ ಕೂಡಲೇ ಅವರೆಲ್ಲರೂ ನಮ್ಮ ಸನ್ನಿಧಿಯಲ್ಲಿ (ನ್ಯಾಯವಿಚಾರಣೆಗಾಗಿ) ಹಾಜರುಗೊಳಿಸಲ್ಪಡುವರು! {53}
فَالْيَوْمَ لَا تُظْلَمُ نَفْسٌ شَيْئًا وَلَا تُجْزَوْنَ إِلَّا مَا كُنْتُمْ تَعْمَلُونَ
ಯಾವೊಬ್ಬನಿಗೂ ಯಾವ ಅನ್ಯಾಯವೂ ಆಗದ ದಿನವದು! ಹೌದು, ನೀವು ಮಾಡಿದ ಕರ್ಮಗಳಿಗೆ ತಕ್ಕುದಾದ ಪ್ರತಿಫಲವಲ್ಲದೆ ಬೇರೇನೂ (ಅಂದು) ಸಿಗದು! {54}
إِنَّ أَصْحَابَ الْجَنَّةِ الْيَوْمَ فِي شُغُلٍ فَاكِهُونَ
ಹೌದು, ಸ್ವರ್ಗವಾಸಿಗಳು ಅಂದು ಸುಖಸಂತೋಷಗಳಲ್ಲಿ ಮಗ್ನರಾಗಿರುವರು. {55}
هُمْ وَأَزْوَاجُهُمْ فِي ظِلَالٍ عَلَى الْأَرَائِكِ مُتَّكِئُونَ
ಅವರು ಹಾಗೊ ಅವರಿಗೆ [ಸ್ವರ್ಗದಲ್ಲಿ ಪ್ರಾಪ್ತವಾದ] ಸಂಗಾತಿಗಳು ನೆರಳ ತಂಪಿನಲ್ಲಿರುವರು; ಸುಖಾಸನಗಳಲ್ಲಿ ದಿಂಬುಗಳಿಗೆ ಒರಗಿಕೊಂಡಿರುವರು. {56}
لَهُمْ فِيهَا فَاكِهَةٌ وَلَهُمْ مَا يَدَّعُونَ
ಅಲ್ಲಿ ಅವರಿಗೆ ಹಣ್ಣುಹಂಪಲುಗಳಿವೆ; ಬಯಸಿದ್ದೆಲ್ಲವೂ ಅಲ್ಲಿ ಅವರಿಗೆ ಲಭ್ಯವಿದೆ. {57}
سَلَامٌ قَوْلًا مِنْ رَبٍّ رَحِيمٍ
ನಿತ್ಯ ಕಾರುಣ್ಯವಂತನಾದ ಆ ಒಡೆಯನ ಸಮಾಧಾನದ ನೆಮ್ಮದಿಯ ಮಾತುಗಳಿವೆ. {58}
وَامْتَازُوا الْيَوْمَ أَيُّهَا الْمُجْرِمُونَ
ಓ ದುಷ್ಕರ್ಮಿಗಳೇ, ಇಂದು ನೀವು (ಈ ಸ್ವರ್ಗವಾಸಿಗಳಿಂದ) ತಮ್ಮನ್ನು ಬೇರ್ಪಡಿಸಿಕೊಂಡು ದೂರವಾಗಿರಿ. {59}
أَلَمْ أَعْهَدْ إِلَيْكُمْ يَا بَنِي آدَمَ أَنْ لَا تَعْبُدُوا الشَّيْطَانَ ۖ إِنَّهُ لَكُمْ عَدُوٌّ مُبِينٌ
ಓ ಆದಮ್ ರ ಸಂತತಿಗಳೇ, ನೀವೆಂದೂ ಸೈತಾನನನ್ನು ಆರಾಧಿಸುವವರಾಗಬಾರದೆಂದೂ ಅವನು ನಿಮಗೆ ಬಹಿರಂಗ ಶತ್ರುವಾಗಿದ್ದಾನೆಂದೂ ನಾನು ನಿಮಗೆ ಆಜ್ಞಾಪಿಸಿರಲಿಲ್ಲವೇ? {60}
وَأَنِ اعْبُدُونِي ۚ هَٰذَا صِرَاطٌ مُسْتَقِيمٌ
ಮಾತ್ರವಲ್ಲ, ನನ್ನನ್ನು ಮಾತ್ರ ಆರಾಧಿಸಬೇಕೆಂದೂ ಅದುವೇ ನೇರವಾದ ಮಾರ್ಗವೆಂದೂ (ನಾನು ನಿಮಗೆ ಆಜ್ಞಾಪಿಸಿರಲಿಲ್ಲವೇ)? {61}
وَلَقَدْ أَضَلَّ مِنْكُمْ جِبِلًّا كَثِيرًا ۖ أَفَلَمْ تَكُونُوا تَعْقِلُونَ
ಯಥಾರ್ಥ ಹಾಗಿದ್ದರೂ ನಿಮ್ಮಲ್ಲಿಯ ಅನೇಕ ಜನರನ್ನು ಆ ಸೈತಾನನು ದಾರಿ ತಪ್ಪಿಸುವಂತಾಯಿತು! ಅದೇಕೆ? ನೀವು ಬುದ್ಧಿ ಉಪಯೋಗಿಸುತ್ತಿರಲಿಲ್ಲವೇ? {62}
هَٰذِهِ جَهَنَّمُ الَّتِي كُنْتُمْ تُوعَدُونَ
ಇದುವೇ ಆ ನರಕ! ನಿಮ್ಮನ್ನು (ಭೂಲೋಕದಲ್ಲಿ ನಿರಂತರವಾಗಿ) ಎಚ್ಚರಿಸಲಾಗುತ್ತಿದ್ದುದು ಇದರ ಬಗ್ಗೆಯೇ! {63}
اصْلَوْهَا الْيَوْمَ بِمَا كُنْتُمْ تَكْفُرُونَ
ಯಾವುದನ್ನು ನೀವು ನಿರಾಕರಿಸುತ್ತಿದ್ದಿರೋ (ಅದೇ ನರಕದಲ್ಲಿ ಉರಿಯಲು) ನೀವಿಂದು ಅದರೊಳಗೆ ಸೇರಿಕೊಳ್ಳಿರಿ! {64}
الْيَوْمَ نَخْتِمُ عَلَىٰ أَفْوَاهِهِمْ وَتُكَلِّمُنَا أَيْدِيهِمْ وَتَشْهَدُ أَرْجُلُهُمْ بِمَا كَانُوا يَكْسِبُونَ
(ನ್ಯಾಯವಿಚಾರಣೆ ನಡೆಸಲಾಗುವ) ದಿನ ನಾವವರ ಬಾಯಿಗೆ ಬೀಗಮುದ್ರೆ ಜಡಿದು ಬಿಡುವೆವು! ಅವರೆಸಗಿದ ದುಷ್ಕೃತ್ಯಗಳ ಬಗ್ಗೆ ಸ್ವತಃ ಅವರ ಕೈಗಳು ನಮ್ಮೊಂದಿಗೆ ಹೇಳವಿವೆ; ಅವರ ಕಾಲುಗಳೂ ಸಾಕ್ಷ್ಯ ನುಡಿಯಲಿವೆ! {65}
وَلَوْ نَشَاءُ لَطَمَسْنَا عَلَىٰ أَعْيُنِهِمْ فَاسْتَبَقُوا الصِّرَاطَ فَأَنَّىٰ يُبْصِرُونَ
ನಾವು ಉದ್ದೇಶಿಸಿದ್ದರೆ ಅವರ ಕಣ್ಣುಗಳನ್ನು ಅಳಿಸಿ (ಅವರನ್ನು ಕುರುಡರನ್ನಾಗಿಸಿ) ಬಿಡಬಹುದಿತ್ತು. ಹಾಗಾದಲ್ಲಿ ದಾರಿಯನ್ನು ಕಂಡುಕೊಳ್ಳಲು ಕಷ್ಟಪಟ್ಟು ಧಾವಿಸಿದರೂ ಹೇಗೆ ತಾನೆ ಅವರು ದಾರಿಯನ್ನು ಕಂಡುಕೊಂಡಾರು?! {66}
وَلَوْ نَشَاءُ لَمَسَخْنَاهُمْ عَلَىٰ مَكَانَتِهِمْ فَمَا اسْتَطَاعُوا مُضِيًّا وَلَا يَرْجِعُونَ
ಇನ್ನು, ನಾವು ಉದ್ದೇಶಿಸಿದ್ದರೆ ಸ್ಥಳದಲ್ಲೇ ಅವರ ಅಸ್ತಿತ್ವವನ್ನು ಬಿಗಡಾಯಿಸಿ ಬಿಡಬಹುದಿತ್ತು. ಆಗ ಅವರಿಗೆ ಮುಂದೆ ಸಾಗಲು ಅಥವಾ ಹಿಂದಿರುಗಿ ಬರಲು ಸಾಧ್ಯವಾಗುತ್ತಿರಲಿಲ್ಲ! {67}
وَمَنْ نُعَمِّرْهُ نُنَكِّسْهُ فِي الْخَلْقِ ۖ أَفَلَا يَعْقِلُونَ
ಮತ್ತು, ಯಾರಿಗಾದರೂ ನಾವು ದೀರ್ಘಾಯುಷ್ಯ ನೀಡಿದಾಗ ಅಂತಹವರ ಶಾರೀರಿಕ (ಬೆಳವಣಿಗೆಯನ್ನು) ನಾವು ಹಿಮ್ಮುಖಗೊಳಿಸುತ್ತೇವೆ; [ಅರ್ಥಾತ್ ಬಾಲ್ಯದ ದುರ್ಬಲ ಸ್ಥಿತಿಯೆಡೆಗೆ ಮರಳಿಸುತ್ತೇವೆ. ಅದನ್ನು ನೋಡಿಯೂ ನಮ್ಮ ಸಾಮರ್ಥ್ಯವನ್ನು] ಅವರು ಅರ್ಥಮಾಡಿಕೊಳ್ಳಲಿಲ್ಲವೇ?! {68}
وَمَا عَلَّمْنَاهُ الشِّعْرَ وَمَا يَنْبَغِي لَهُ ۚ إِنْ هُوَ إِلَّا ذِكْرٌ وَقُرْآنٌ مُبِينٌ
ಜನರೇ, ನಾವು ಈ ಪೈಗಂಬರರಿಗೆ ಕಲಿಸಿರುವುದು ಕವಿತೆಯನ್ನಲ್ಲ; ಅದು ಅವರಿಗೆ (ಅರ್ಥಾತ್ ಆ ಪ್ರವಾದಿಯ ಘನತೆಗೆ) ಭೂಷಣವೂ ಅಲ್ಲ! ಬದಲಾಗಿ ಅದೊಂದು ಉಪದೇಶವಾಗಿದೆ; ಅಂದರೆ ಸ್ಪಷ್ಟವಾಗಿ (ಅರ್ಥವಾಗುವ) ಕುರ್‌ಅನ್ ಆಗಿದೆ. {69}
لِيُنْذِرَ مَنْ كَانَ حَيًّا وَيَحِقَّ الْقَوْلُ عَلَى الْكَافِرِينَ
ಯಾರ (ವಿವೇಚನಾ ಶಕ್ತಿ) ಜೀವಂತವಾಗಿದೆಯೋ ಅವರನ್ನು ಎಚ್ಚರಿಸುವ ಸಲುವಾಗಿಯೂ, ಅದನ್ನು ಧಿಕ್ಕರಿಸಿದವರ ವಿರುದ್ಧ (ಅಲ್ಲಾಹ್ ನ) ವಾದವನ್ನು ಸ್ಥಾಪಿತಗೊಳಿಸುವ ಸಲುವಾಗಿಯೂ (ಈ ಕುರ್‌ಆನ್ ಅನ್ನು ಇಳಿಸಲಾಗಿದೆ)! {70}
أَوَلَمْ يَرَوْا أَنَّا خَلَقْنَا لَهُمْ مِمَّا عَمِلَتْ أَيْدِينَا أَنْعَامًا فَهُمْ لَهَا مَالِكُونَ
ತಮ್ಮ ಮಾಲಕತ್ವದಲ್ಲಿರುವ ಜಾನುವಾರುಗಳು ಸಹ, ಅವರಿಗಾಗಿ ನಾವೇ ನಮ್ಮ ಸೃಷ್ಟಿಸಾಮರ್ಥ್ಯದಿಂದ ಸೃಷ್ಟಿಸಿದ ಇತರ ಅನೇಕ ಸೃಷ್ಟಿಗಳ ಸಾಲಿಗೆ ಸೇರಿದವುಗಳಾಗಿವೆ ಎಂಬ ವಾಸ್ತವವನ್ನು ಅವರು ಕಾಣುವುದಿಲ್ಲವೇ? {71}
وَذَلَّلْنَاهَا لَهُمْ فَمِنْهَا رَكُوبُهُمْ وَمِنْهَا يَأْكُلُونَ
ಅವುಗಳನ್ನು ನಾವು ಅವರಿಗಾಗಿ ಪಳಗಿಸಿಕೊಟ್ಟಿರುತ್ತೇವೆ. ಅವುಗಳಲ್ಲಿ ಕೆಲವನ್ನು ಅವರು ಸವಾರಿಗಾಗಿ ಬಳಸುತ್ತಾರೆ, ಇನ್ನು ಕಲವನ್ನು ಆಹಾರಕ್ಕಾಗಿ ಉಪಯೋಗಿಸುತ್ತಾರೆ. {72}
وَلَهُمْ فِيهَا مَنَافِعُ وَمَشَارِبُ ۖ أَفَلَا يَشْكُرُونَ
ಮಾತ್ರವಲ್ಲ, ಅವುಗಳಿಂದ ಅವರಿಗೆ ಇತರ ಪ್ರಯೋಜನಗಳೂ ಇವೆ. ಕುಡಿಯಬಹುದಾದ (ಹಾಲನ್ನೂ) ಪಡೆಯುತ್ತಾರೆ. ಆದರೂ ಅವರು ಕೃತಜ್ಞರಾಗುವುದಿಲ್ಲವೇ?! {73}
وَاتَّخَذُوا مِنْ دُونِ اللَّهِ آلِهَةً لَعَلَّهُمْ يُنْصَرُونَ
(ವಿಪರ್ಯಾಸವೆಂದರೆ), ತಮಗೆ ಏನಾದರೂ ನೆರವು ಸಿಕ್ಕೀತು ಎಂಬ ನಿರೀಕ್ಷೆಯಿಂದ ಅವರು ಅಲ್ಲಾಹ್ ನನ್ನು ಬಿಟ್ಟು ಇತರರನ್ನು [ಅಂದರೆ ವಿಗ್ರಹಗಳು, ಮಲಕ್ ಗಳು ಮುಂತಾದವುಗಳನ್ನು) ದೇವರುಗಳನ್ನಾಗಿ ಸ್ವೀಕರಿಸಿಕೊಂಡಿದ್ದಾರೆ! {74}
لَا يَسْتَطِيعُونَ نَصْرَهُمْ وَهُمْ لَهُمْ جُنْدٌ مُحْضَرُونَ
ಅವರಿಗೆ ಸಹಾಯ ಮಾಡಲು ಆ (ಮಿಥ್ಯ) ದೇವರುಗಳಿಗೆ ಖಂಡಿತವಾಗಿ ಸಾಧ್ಯವಿಲ್ಲ. ಆದರೂ ಸಹ, ಅವರು ಆ (ಮಿಥ್ಯ) ದೇವರುಗಳ ಮುಂದೆ (ನಿಷ್ಠಾವಂತ) ಸೈನಿಕರಂತೆ (ಸದಾ) ಹಾಜರಿರುತ್ತಾರೆ! {75}
فَلَا يَحْزُنْكَ قَوْلُهُمْ ۘ إِنَّا نَعْلَمُ مَا يُسِرُّونَ وَمَا يُعْلِنُونَ
ಹಾಗಿರುವಾಗ ಪೈಗಂಬರರೇ, ಅವರಾಡಿಕೊಳ್ಳುವ ಮಾತುಗಳು ನಿಮ್ಮನ್ನು ದುಃಖಿತರನ್ನಾಗಿ ಮಾಡದಿರಲಿ. ಅವರು ಬಚ್ಚಿಡುವ ವಿಷಯಗಳನ್ನೂ ಬಹಿರಂಗಪಡಿಸುವವುಗಳನ್ನೂ ನಾವು ಖಚಿತವಾಗಿ ಬಲ್ಲೆವು. {76}
أَوَلَمْ يَرَ الْإِنْسَانُ أَنَّا خَلَقْنَاهُ مِنْ نُطْفَةٍ فَإِذَا هُوَ خَصِيمٌ مُبِينٌ
[ಪುನರುತ್ಥಾನದ ವಿಷಯದಲ್ಲಿ ಜಗಳವೇಕೆ]? ನಾವು ಮನುಷ್ಯನನ್ನು ಒಂದು ಹನಿ ವೀರ್ಯದಿಂದ ಉಂಟುಮಾಡಿರುವುದನ್ನು ಅವನು ಕಂಡಿಲ್ಲವೇ? ಆದರೂ ಅವನು (ಪುನರುತ್ಥಾನದ ವಿಷಯದಲ್ಲಿ) ತರ್ಕಿಸುತ್ತಿದ್ದಾನೆ! {77}
وَضَرَبَ لَنَا مَثَلًا وَنَسِيَ خَلْقَهُ ۖ قَالَ مَنْ يُحْيِي الْعِظَامَ وَهِيَ رَمِيمٌ
(ಪೈಗಂಬರರೇ, ವಿಪರ್ಯಾಸವೆಂದರೆ), ತನ್ನನ್ನು ಹೇಗೆ ಸೃಷ್ಟಿಸಲಾಗಿದೆ ಎಂಬ ವಿಷಯವನ್ನೇ ಮರೆತು, ಅವನೀಗ ನಮ್ಮ ವಿರುದ್ಧ (ತರ್ಕಿಸಲು ತಪ್ಪಾದ) ಸಾದೃಶ್ಯಗಳನ್ನು ನೀಡುತ್ತಿದ್ದಾನೆ! (ನಾವು ಸತ್ತು ನಮ್ಮ) ಎಲುಬುಗಳೂ ಕೊಳೆತು ಹೋದ ನಂತರ ಅವುಗಳನ್ನು (ಪುನಃ) ಜೀವಂತಗೊಳಿಸುವವರು ಯಾರು ಎಂದು ಪ್ರಶ್ನಿಸುತ್ತಿದ್ದಾನೆ!! {78}
قُلْ يُحْيِيهَا الَّذِي أَنْشَأَهَا أَوَّلَ مَرَّةٍ ۖ وَهُوَ بِكُلِّ خَلْقٍ عَلِيمٌ
ಯಾರು ಅದನ್ನು ಮೊದಲ ಬಾರಿಗೆ ಸೃಷ್ಟಿಸಿದನೋ ಅವನೇ ಅದಕ್ಕೆ ಪುನಃ ಜೀವ ನೀಡಲಿರುವನು; ಅವನಿಗೆ (ತನ್ನ) ಎಲ್ಲಾ ಸೃಷ್ಟಿಗಳ ಬಗ್ಗೆ ಸಂಪೂರ್ಣವಾದ ಜ್ಞಾನವಿರುತ್ತದೆ ಎಂದು, ಪೈಗಂಬರರೇ, ನೀವು ಅವರೊಡನೆ ಹೇಳಿರಿ. {79}
الَّذِي جَعَلَ لَكُمْ مِنَ الشَّجَرِ الْأَخْضَرِ نَارًا فَإِذَا أَنْتُمْ مِنْهُ تُوقِدُونَ
ಅವನು ಯಾರೆಂದರೆ ಹಸಿ ಮರಗಳ ಮೂಲಕ ನಿಮಗೆ ಬೆಂಕಿಯನ್ನು ನೀಡಿದವನು; ನೀವೀಗ ಅದರಿಂದ ಬೆಂಕಿಯನ್ನು ಹೊತ್ತಿಸುತ್ತಿರುವಿರಿ! {80}
أَوَلَيْسَ الَّذِي خَلَقَ السَّمَاوَاتِ وَالْأَرْضَ بِقَادِرٍ عَلَىٰ أَنْ يَخْلُقَ مِثْلَهُمْ ۚ بَلَىٰ وَهُوَ الْخَلَّاقُ الْعَلِيمُ
ಏನು? ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದವನಿಗೆ ಇವರಂತಹ ಜನರನ್ನು [ಅವರ ಮರಣಾನಂತರ ಮತ್ತೊಮ್ಮೆ] ಸೃಷ್ಟಿಸುವ ಸಾಮರ್ಥ್ಯವಿಲ್ಲವೇ? ಖಂಡಿತ ಸಾಮರ್ಥ್ಯವಿದೆ. ಹೌದು, ಅವನು ಅಗಾಧವಾದ ಜ್ಞಾನವಿರುವ ಮಹಾನ್ ಸೃಷ್ಟಿಕರ್ತನಾಗಿದ್ದಾನೆ! {81}
إِنَّمَا أَمْرُهُ إِذَا أَرَادَ شَيْئًا أَنْ يَقُولَ لَهُ كُنْ فَيَكُونُ
ಏನನ್ನಾದರೂ ಉಂಟುಮಾಡಲು ಬಯಸಿದರೆ "ಉಂಟಾಗು" ಎಂದು ಅದಕ್ಕೆ ಆಜ್ಞಾಪಿಸುವುದಷ್ಟೇ ಅವನ ಕ್ರಮ. ಆಗ ಅದು ಉಂಟಾಗಿರುತ್ತದೆ! {82}
فَسُبْحَانَ الَّذِي بِيَدِهِ مَلَكُوتُ كُلِّ شَيْءٍ وَإِلَيْهِ تُرْجَعُونَ
ಹಾಗಿರುವಾಗ, ಸಮಸ್ತ ವಿಷಯಗಳ ಅಧಿಕಾರ - ಆಧಿಪತ್ಯಗಳು ಯಾರ ಕೈಯಲ್ಲಿದೆಯೋ ಅವನು (ಅಂದರೆ ಆ ಅಲ್ಲಾಹ್ ನು) ಅತ್ಯಂತ ಮಹಿಮಾನ್ವಿತನು. ನಿಮ್ಮೆಲ್ಲರನ್ನೂ [ನ್ಯಾಯವಿಚಾರಣೆಗಾಗಿ] ಅವನೆಡೆಗೇ ಮರಳಿಸಲಾಗುವುದು! {83}
-----ಅನುವಾದಿತ ಸೂರಃ ಗಳು