ಫಾತಿರ್| ترجمة سورة فاطر

    تـرجمـة سورة فاطر من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಫಾತಿರ್  | ಪವಿತ್ರ ಕುರ್‌ಆನ್ ನ 35 ನೆಯ ಸೂರಃ | ಇದರಲ್ಲಿ ಒಟ್ಟು 45 ಆಯತ್ ಗಳು ಇವೆ |

ಅತ್ಯಂತ ದಯಾಮಯನೂ ನಿತ್ಯ ಕರುಣೆ ತೋರುವವನೂ ಆದ ಅಲ್ಲಾಹನ ನಾಮದಿಂದ (ಆರಂಭಿಸುವೆ)!

الْحَمْدُ لِلَّهِ فَاطِرِ السَّمَاوَاتِ وَالْأَرْضِ جَاعِلِ الْمَلَائِكَةِ رُسُلًا أُولِي أَجْنِحَةٍ مَثْنَىٰ وَثُلَاثَ وَرُبَاعَ ۚ يَزِيدُ فِي الْخَلْقِ مَا يَشَاءُ ۚ إِنَّ اللَّهَ عَلَىٰ كُلِّ شَيْءٍ قَدِيرٌ

ಭೂಮಿ ಮತ್ತು ಆಕಾಶಗಳನ್ನು ಅಸ್ತಿತ್ವಕ್ಕೆ ತಂದ ಹಾಗೂ ಎರಡೆರಡು, ಮೂರುಮೂರು, ನಾಲ್ಕುನಾಲ್ಕು ರೆಕ್ಕೆಗಳನ್ನು ಹೊಂದಿದ ಮಲಕ್ ಗಳನ್ನು ತನ್ನ ದೂತರುಗಳನ್ನಾಗಿ ನೇಮಿಸಿದ ಅಲ್ಲಾಹ್ ನಿಗೆ ಸಕಲ ಸ್ತುತಿಸ್ತೋತ್ರಗಳು. ತಾನು ಬಯಸಿದ್ದನ್ನು ಅವನು ಸೃಷ್ಟಿಗಳ ಯಾದಿಗೆ ಸೇರಿಸುತ್ತಾನೆ. ನಿಜವಾಗಿಯೂ ಅಲ್ಲಾಹ್ ನು ಎಲ್ಲಾ ವಿಷಯಗಳಲ್ಲಿ ಸರ್ವವಿಧ ಸಾಮರ್ಥ್ಯ ಹೊಂದಿದ್ದಾನೆ. {1}

مَا يَفْتَحِ اللَّهُ لِلنَّاسِ مِنْ رَحْمَةٍ فَلَا مُمْسِكَ لَهَا ۖ وَمَا يُمْسِكْ فَلَا مُرْسِلَ لَهُ مِنْ بَعْدِهِ ۚ وَهُوَ الْعَزِيزُ الْحَكِيمُ

ತನ್ನ ಅನುಗ್ರಹಗಳ ಪೈಕಿ ಅಲ್ಲಾಹ್ ನು ಏನನ್ನಾದರೂ ಜನರಿಗಾಗಿ ತೆರೆದು ಕೊಟ್ಟರೆ ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅವನು ಏನನ್ನಾದರೂ ತಡೆಹಿಡಿದರೆ, ಅವನಲ್ಲದೆ ಬೇರೆ ಯಾರಿಗೂ ಅದನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ. ಅವನಾದರೋ ಅತ್ಯಂತ ಪ್ರಬಲನೂ ವಿವೇಕವಂತನೂ ಆಗಿರುವನು. {2}

يَا أَيُّهَا النَّاسُ اذْكُرُوا نِعْمَتَ اللَّهِ عَلَيْكُمْ ۚ هَلْ مِنْ خَالِقٍ غَيْرُ اللَّهِ يَرْزُقُكُمْ مِنَ السَّمَاءِ وَالْأَرْضِ ۚ لَا إِلَٰهَ إِلَّا هُوَ ۖ فَأَنَّىٰ تُؤْفَكُونَ

ಓ ಜನರೇ, ನಿಮಗೆ ಅಲ್ಲಾಹ್ ನು ದಯಪಾಲಿಸಿರುವ ಅನುಗ್ರಹಗಳನ್ನು ಸ್ಮರಿಸಿರಿ. ಅಲ್ಲಾಹ್ ನಲ್ಲದೆ ನಿಮಗೆ ಆಕಾಶ ಮತ್ತು ಭೂಮಿಯಿಂದ ಅನ್ನಾಹಾರ ಒದಗಿಸುವ ಬೇರೊಬ್ಬ ಸೃಷ್ಟಿಕರ್ತನು ಇರುವನೇ?! ಅವನಲ್ಲದೆ ಬೇರೆ ಯಾರೂ ಆರಾಧನೆಗೆ ಅರ್ಹರಲ್ಲ. ಹಾಗಿರುವಾಗ ನೀವು ಹೇಗೆ ತಾನೆ ದಾರಿ ತಪ್ಪುತ್ತಿರುವಿರಿ?! {3}

وَإِنْ يُكَذِّبُوكَ فَقَدْ كُذِّبَتْ رُسُلٌ مِنْ قَبْلِكَ ۚ وَإِلَى اللَّهِ تُرْجَعُ الْأُمُورُ

ಪೈಗಂಬರರೇ, ಅವರು [ಅಂದರೆ ಮಕ್ಕಾ ಮತ್ತು ಆಸುಪಾಸಿನ ಜನರು ಈಗ] ನಿಮ್ಮನ್ನು ತಿರಸ್ಕರಿಸುತ್ತಿದ್ದಾರೆ ಎಂದಾದರೆ, ನಿಮಗಿಂತ ಮುಂಚೆಯೂ ನಮ್ಮ ದೂತರುಗಳು (ಆಯಾ ಕಾಲದ ಜನರಿಂದ) ತಿರಸ್ಕರಿಸಲ್ಪಟ್ಟಿದ್ದರು! (ಚಿಂತಿಸಬೇಡಿ), ಎಲ್ಲಾ ವಿಷಯಳನ್ನು (ಅಂತಿಮ ತೀರ್ಪಿಗಾಗಿ) ಅಲ್ಲಾಹ್ ನ ಬಳಿಗೇ ಮರಳಿಸಲಾಗಿವುದು! {4}

يَا أَيُّهَا النَّاسُ إِنَّ وَعْدَ اللَّهِ حَقٌّ ۖ فَلَا تَغُرَّنَّكُمُ الْحَيَاةُ الدُّنْيَا ۖ وَلَا يَغُرَّنَّكُمْ بِاللَّهِ الْغَرُورُ

ಓ ಜನರೇ, ಖಂಡಿತವಾಗಿ ಅಲ್ಲಾಹ್ ನ ವಾಗ್ದಾನವು ಸತ್ಯವಾದ ವಾಗ್ದಾನವೇ ಆಗಿದೆ. ಹಾಗಿರುವಾಗ ಇಹಲೋಕದ ಜೀವನವು ನಿಮ್ಮನ್ನು ಮೋಸಗೊಳಿಸದಿರಲಿ. ಅಂತೆಯೇ ಮಹಾ ಮೋಸಗಾರನಾದ ಆ (ಸೈತಾನನು) ನಿಮ್ಮನ್ನು ಅಲ್ಲಾಹ್ ನ ವಿಷಯದಲ್ಲಿ ಮೋಸಗೊಳಿಸದಿರಲಿ. {5}

إِنَّ الشَّيْطَانَ لَكُمْ عَدُوٌّ فَاتَّخِذُوهُ عَدُوًّا ۚ إِنَّمَا يَدْعُو حِزْبَهُ لِيَكُونُوا مِنْ أَصْحَابِ السَّعِيرِ

ನಿಜವಾಗಿಯೂ ಆ ಸೈತಾನನು ನಿಮ್ಮ ಶತ್ರುವಾಗಿದ್ದಾನೆ. ಆದ್ದರಿಂದ ನೀವೂ ಸಹ ಅವನನ್ನು ಶತ್ರುವಾಗಿಯೇ ಕಾಣಿರಿ. ತನ್ನ ತಂಡಕ್ಕೆ ಸೇರಿದ (ಜನರನ್ನು) ಅವನು ಆಹ್ವಾನಿಸುವ ಉದ್ದೇಶವು ಅವರನ್ನು ನರಕದ ಸಂಗಾತಿಗಳನ್ನಾಗಿ ಮಾಡುವುದು ಮಾತ್ರವಾಗಿದೆ! {6}

الَّذِينَ كَفَرُوا لَهُمْ عَذَابٌ شَدِيدٌ ۖ وَالَّذِينَ آمَنُوا وَعَمِلُوا الصَّالِحَاتِ لَهُمْ مَغْفِرَةٌ وَأَجْرٌ كَبِيرٌ

(ಪೈಗಂಬರರ ಬೋಧನೆಗಳನ್ನು) ತಿರಸ್ಕರಿಸಿದವರಿಗೆ ಕಠಿಣ ಸ್ವರೂಪದ ಶಿಕ್ಷೆಯಿದೆ. ಮತ್ತು ವಿಶ್ವಾಸಿಗಳಾಗಿದ್ದುಕೊಂಡು ಜೊತೆಗೆ ಸತ್ಕರ್ಮಗಳನ್ನೂ ಮಾಡಿದವರಿಗೆ ಕ್ಷಮಾದಾನವಿದೆ ಹಾಗೂ ಮಹತ್ತರವಾದ ಪ್ರತಿಫಲವೂ ಇದೆ. {7}

أَفَمَنْ زُيِّنَ لَهُ سُوءُ عَمَلِهِ فَرَآهُ حَسَنًا ۖ فَإِنَّ اللَّهَ يُضِلُّ مَنْ يَشَاءُ وَيَهْدِي مَنْ يَشَاءُ ۖ فَلَا تَذْهَبْ نَفْسُكَ عَلَيْهِمْ حَسَرَاتٍ ۚ إِنَّ اللَّهَ عَلِيمٌ بِمَا يَصْنَعُونَ

[ಪಣತೊಟ್ಟು ಕೆಟ್ಟದ್ದನ್ನೇ ಮಾಡುವವನು ಸನ್ಮಾರ್ಗದಿಂದ ವಂಚಿತನಾಗುವನು; ಆತನಿಗೆ ಆತನ ದುಷ್ಕರ್ಮಗಳನ್ನೇ ಸುಂದರಗೊಳಿಸಿ ತೋರಿಸುವುದು ನಿಯಮ. ಅದರಂತೆ] ಒಬ್ಬನಿಗೆ ಆತನ ದುಷ್ಕರ್ಮಗಳನ್ನು ಸುಂದರಗೊಳಿಸಿ ತೋರಿಸಿದಾಗ ಆತನು ಅದನ್ನೇ ಸತ್ಕರ್ಮವಾಗಿ ಕಾಣತೊಡಗಿದರೆ (ಅನಂತರ ಆತನು ಸರಿದಾರಿ ಸ್ವೀಕರಿಸುವನೇ) ?! ಹೌದು, ಯಾರನ್ನಾದರೂ ತಪ್ಪುದಾರಿಯಲ್ಲೇ ಬಿಡಲು ಅಲ್ಲಾಹ್ ನು ಬಯಸಿದರೆ ಅದರಲ್ಲೇ ಬಿಟ್ಟು ಬಿಡುವನು; ಇನ್ನು, ಯಾರನ್ನಾದರೂ ಸರಿದಾರಿಯಲ್ಲಿ ಮುನ್ನಡೆಸಲು ಬಯಸಿದರೆ ಹಾಗೆ ಮಾಡುವನು. ಆದ್ದರಿಂದ, ಪೈಗಂಬರರೇ, ಅವರಿಗಾಗಿ ವ್ಯಥೆಪಡುತ್ತಾ ನಿಮ್ಮನ್ನು ನೀವೇ ನಾಶಪಡಿಸಬೇಡಿ. ಅವರು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹ್ ನಿಗೆ ಸಂಪೂರ್ಣವಾದ ಅರಿವು ಇದೆ. {8}

وَاللَّهُ الَّذِي أَرْسَلَ الرِّيَاحَ فَتُثِيرُ سَحَابًا فَسُقْنَاهُ إِلَىٰ بَلَدٍ مَيِّتٍ فَأَحْيَيْنَا بِهِ الْأَرْضَ بَعْدَ مَوْتِهَا ۚ كَذَٰلِكَ النُّشُورُ

(ಓ ಜನರೇ)! ಮೋಡಗಳನ್ನು ಎತ್ತಿ ಸಾಗಿಸುವ ಮಾರುತಗಳನ್ನು ಕಳುಹಿಸುವವನು ಸಹ ಅಲ್ಲಾಹ್ ನೇ (ಎಂಬುದು ನಿಮಗೆ ತಿಳಿದಿರಲಿ)! ಹೌದು, ಅದನ್ನು ನಾವು ಬರಡಾದ ಭೂಪ್ರದೇಶಗಳ ಕಡೆಗೆ ಒಯ್ಯುತ್ತೇವೆ. ಅದರ ಮೂಲಕ ನಾವು ಭೂಮಿಗೆ ಅದರ ಮರಣದ ನಂತರ ಮರುಜೀವ ನೀಡುತ್ತೇವೆ. (ಮಾನವರನ್ನು ಸಹ ಪರಲೋಕಕ್ಕಾಗಿ) ಪುನಃ ಜೀವಂತಗೊಳಿಸುವುದು ಹಾಗೆಯೇ! {9}

مَنْ كَانَ يُرِيدُ الْعِزَّةَ فَلِلَّهِ الْعِزَّةُ جَمِيعًا ۚ إِلَيْهِ يَصْعَدُ الْكَلِمُ الطَّيِّبُ وَالْعَمَلُ الصَّالِحُ يَرْفَعُهُ ۚ وَالَّذِينَ يَمْكُرُونَ السَّيِّئَاتِ لَهُمْ عَذَابٌ شَدِيدٌ ۖ وَمَكْرُ أُولَٰئِكَ هُوَ يَبُورُ

(ಅಲ್ಲಿ) ತನಗೆ ಗೌರವಾದರಗಳು ದೊರೆಯಬೇಕೆಂದು ಬಯಸುವಾತನು ತಿಳಿದಿರಲಿ, ಗೌರವಾದರಗಳೆಲ್ಲವೂ ಅಲ್ಲಾಹ್ ನಿಗೆ ಸಲ್ಲುತ್ತವೆ. [ಅಲ್ಲಾಹ್ ನ ಹೊರತು ಬೇರೆ ದೇವರಿಲ್ಲ ಎಂಬಂತಹ] ಪವಿತ್ರ ವಚನವು ಅಲ್ಲಾಹ್ ನ ಕಡೆಗೆ ಏರಿ ಹೋಗುತ್ತದೆ; ಹೌದು, ನಿಷ್ಕಲ್ಮಶವಾದ ಸತ್ಕರ್ಮಗಳು ಅದನ್ನು ಮೇಲಕ್ಕೇರಿಸುತ್ತದೆ. (ಅದಕ್ಕೆ ವ್ಯತಿರಿಕ್ತವಾಗಿ) ಕೆಟ್ಟ ಷಡ್ಯಂತ್ರಗಳನ್ನು ರೂಪಿಸುತ್ತಿರುವವರಿಗೆ ಕಠೋರವಾದ ಶಿಕ್ಷೆ ಕಾದಿದೆ. ಅಂತಹವರ ಕುತಂತ್ರಗಳು ನಾಶವಾಗಿ ಹೋಗುವುವು. {10}

وَاللَّهُ خَلَقَكُمْ مِنْ تُرَابٍ ثُمَّ مِنْ نُطْفَةٍ ثُمَّ جَعَلَكُمْ أَزْوَاجًا ۚ وَمَا تَحْمِلُ مِنْ أُنْثَىٰ وَلَا تَضَعُ إِلَّا بِعِلْمِهِ ۚ وَمَا يُعَمَّرُ مِنْ مُعَمَّرٍ وَلَا يُنْقَصُ مِنْ عُمُرِهِ إِلَّا فِي كِتَابٍ ۚ إِنَّ ذَٰلِكَ عَلَى اللَّهِ يَسِيرٌ

(ಜನರೇ), ಅಲ್ಲಾಹ್ ನೇ ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದನು. ನಂತರದ ಘಟ್ಟದಲ್ಲಿ ಹನಿ ವೀರ್ಯದಿಂದ ಸೃಷ್ಟಿಸಿದನು. ಅನಂತರ ನಿಮ್ಮನ್ನು (ಗಂಡು ಹೆಣ್ಣುಗಳ) ಜೋಡಿಗಳಾಗಿ ಮಾಡಿದನು. ಅವನ ಅರಿವಿನ ಹೊರತು ಯಾವ ಹೆಣ್ಣು ಸಹ ಗರ್ಭವತಿಯಾಗುವುದಿಲ್ಲ; ಮಗುವನ್ನು ಹೆರುವುದೂ ಇಲ್ಲ. ದೀರ್ಘಾಯುಷ್ಯ ಪಡೆದ ಒಬ್ಬ ವ್ಯಕ್ತಿಯ ಜೀವಿತಾವಧಿಯನ್ನು ಹೆಚ್ಚಿಸುವುದಾಗಲಿ ಅಥವಾ ಕಡಿಮೆಗೊಳಿಸುವುದಾಗಲಿ ಒಂದು ಗ್ರಂಥದಲ್ಲಿ ದಾಖಲೆಗೊಳಿಸಿದ ಪ್ರಕಾರವಲ್ಲದೆ ಸಂಭವಿಸುವುದಿಲ್ಲ! ಖಂಡಿತವಾಗಿ ಅದೆಲ್ಲಾ ಅಲ್ಲಾಹ್ ನಿಗೆ ಬಹಳ ಸುಲಭವಾದ ವಿಷಯವಾಗಿದೆ. {11}

وَمَا يَسْتَوِي الْبَحْرَانِ هَٰذَا عَذْبٌ فُرَاتٌ سَائِغٌ شَرَابُهُ وَهَٰذَا مِلْحٌ أُجَاجٌ ۖ وَمِنْ كُلٍّ تَأْكُلُونَ لَحْمًا طَرِيًّا وَتَسْتَخْرِجُونَ حِلْيَةً تَلْبَسُونَهَا ۖ وَتَرَى الْفُلْكَ فِيهِ مَوَاخِرَ لِتَبْتَغُوا مِنْ فَضْلِهِ وَلَعَلَّكُمْ تَشْكُرُونَ

ಎರಡು ಜಲರಾಶಿಗಳು ಒಂದೇ ರೀತಿಯದ್ದಾಗಿ ಇರುವುದಿಲ್ಲ. ಒಂದು ಸಿಹಿಯಾದ, ದಾಹ ತಣಿಸಬಲ್ಲ ಹಾಗೂ ಕುಡಿಯಲಿಕ್ಕೆ ರುಚಿಕರವಾದ ನೀರಾಗಿದ್ದರೆ ಇನ್ನೊಂದು ಕಡುಕಹಿಯಾದ ಉಪ್ಪು ನೀರಿನಿಂದ ಕೂಡಿದೆ. ಎರಡರಿಂದಲೂ ನೀವು ತಜಾ (ಮೀನುಗಳನ್ನು ಹಿಡಿದು ಅದರ) ಮಾಂಸವನ್ನು ತಿನ್ನುತ್ತೀರಿ. ನೀವು ಧರಿಸುವ ಆಭರಣಗಳನ್ನು (ಅಂದರೆ ಮುತ್ತು ಹವಳಗಳನ್ನು) ಹೊರತೆಗೆಯುತ್ತೀರಿ. ನೀರನ್ನು ಸೀಳುತ್ತಾ ಚಲಿಸುವ ನೌಕೆಗಳನ್ನೂ ನೀವು ಅದರಲ್ಲಿ ಕಾಣುತ್ತೀರಿ. ಅವಲ್ಲ ನೀವು ಅಲ್ಲಾಹ್ ನ ಅನುಗ್ರಹಗಳನ್ನು ಅರಸಲಿಕ್ಕಾಗಿಯೂ ಅವನಿಗೆ ಕೃತಜ್ಞತೆ ತೋರಲಿಕ್ಕಾಗಿಯೂ ಆಗಿರುತ್ತದೆ. {12}

يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ وَسَخَّرَ الشَّمْسَ وَالْقَمَرَ كُلٌّ يَجْرِي لِأَجَلٍ مُسَمًّى ۚ ذَٰلِكُمُ اللَّهُ رَبُّكُمْ لَهُ الْمُلْكُ ۚ وَالَّذِينَ تَدْعُونَ مِنْ دُونِهِ مَا يَمْلِكُونَ مِنْ قِطْمِيرٍ

ಅವನು ರಾತ್ರಿಯನ್ನು ಹಗಲಿನೊಳಗೆ ಪೋಣಿಸುತ್ತಾನೆ ಮತ್ತು ಹಗಲನ್ನು ರಾತ್ರಿಯೊಳಗೆ ಪೋಣಿಸುತ್ತಾನೆ. ಸೂರ್ಯ-ಚಂದ್ರರನ್ನು ನಿಯಂತ್ರಿತವಾದ ಚಾಲನೆಗೆ ಒಳಪಡಿಸಿದ್ದಾನೆ. ಒಂದು ನಿಶ್ಚಿತವಾದ ಕಾಲದ ವರೆಗೆ ಎಲ್ಲವೂ ಚಲಿಸುತ್ತಿರುತ್ತವೆ. ಅವನೇ ಆಗಿರುವನು ಅಲ್ಲಾಹ್ ನು - ನಿಮ್ಮ ಸೃಷ್ಟಿಕರ್ತನಾದ ದೇವನು! ಸಾರ್ವಭೌಮತೆಯು ಅವನಿಗೆ ಮಾತ್ರವಾಗಿದೆ. ಅವನನ್ನು ಬಿಟ್ಟು ನೀವು ಮೊರೆಯಿಡುವ (ಮಿಥ್ಯ ದೇವರುಗಳ) ಮಾಲಕತ್ವದಲ್ಲಿ ಲವಲೇಶವೂ ಇಲ್ಲ! {13}

إِنْ تَدْعُوهُمْ لَا يَسْمَعُوا دُعَاءَكُمْ وَلَوْ سَمِعُوا مَا اسْتَجَابُوا لَكُمْ ۖ وَيَوْمَ الْقِيَامَةِ يَكْفُرُونَ بِشِرْكِكُمْ ۚ وَلَا يُنَبِّئُكَ مِثْلُ خَبِيرٍ

ನೀವು (ಸಹಾಯಕ್ಕಾಗಿ) ಅವರಿಗೆ ಮೊರೆಯಿಟ್ಟರೆ ಅವರು ನಿಮ್ಮ ಮೊರೆಯನ್ನು ಕೇಳಿಸಲಾರರು. ಇನ್ನು ಕೇಳಿಸಿಕೊಂಡರೂ ಅದಕ್ಕೆ ಸ್ಪಂದಿಸಿ ನಿಮಗೆ ಸಹಾಯ ಮಾಡಲು ಅವರಿಂದ ಸಾಧ್ಯವಾಗದು. ಅವರನ್ನು ಅಲ್ಲಾಹ್ ನ ಜೊತೆ ಸೇರಿಸಿ [ಅವರಿಗೆ ನೀವು ಕಲ್ಪಿಸಿದ್ದ ದೇವತ್ವವನ್ನು] ಪುನರುತ್ಥಾನದ ದಿನ ಅವರು ನಿರಾಕರಿಸಿ ಬಿಡುವರು. ಎಲ್ಲಾ ವಿಷಯಗಳನ್ನು ಬಲ್ಲವನು ನಿಮಗೆ ತಿಳಿಸುವಂತೆ, ಪೈಗಂಬರರೇ, ಬೇರೆ ಯಾರೂ ನಿಮಗೆ (ಈ ಯಥಾರ್ಥವನ್ನು) ತಿಳಿಸಲಾರರು. {14}

يَا أَيُّهَا النَّاسُ أَنْتُمُ الْفُقَرَاءُ إِلَى اللَّهِ ۖ وَاللَّهُ هُوَ الْغَنِيُّ الْحَمِيدُ

ಓ ಜನರೇ, ಯಥಾರ್ಥದಲ್ಲಿ ನೀವೆಲ್ಲ ನಿಮ್ಮ ಅಗತ್ಯಗಳಿಗಾಗಿ ಅಲ್ಲಾಹ್ ನನ್ನು ಆಶ್ರಯಿಸ ಬೇಕಾದವರು; ಆದರೆ ಅಲ್ಲಾಹ್ ನು (ಯಾವ ಅಗತ್ಯಗಳೂ ಇಲ್ಲದ) ನಿರಪೇಕ್ಷನೂ ಸ್ವಯಂ ಪ್ರಶಂಸನೀಯನೂ ಆಗಿರುವನು. {15}

إِنْ يَشَأْ يُذْهِبْكُمْ وَيَأْتِ بِخَلْقٍ جَدِيدٍ

ಅವನು ಬಯಸಿದರೆ ನಿಮ್ಮನ್ನು ಹೋಗಲಾಡಿಸಿ ನಿಮ್ಮ ಬದಲಿಗೆ ಹೊಸದೊಂದು ಸೃಷ್ಟಿಯನ್ನು ತರಬಲ್ಲನು! {16}

وَمَا ذَٰلِكَ عَلَى اللَّهِ بِعَزِيزٍ

ಹಾಗೆ ಮಾಡುವುದು ಅಲ್ಲಾಹ್ ನ ಮಟ್ಟಿಗೆ ದುಸ್ತರವಾದ ಕೆಲಸವೇನೂ ಅಲ್ಲ. {17}

وَلَا تَزِرُ وَازِرَةٌ وِزْرَ أُخْرَىٰ ۚ وَإِنْ تَدْعُ مُثْقَلَةٌ إِلَىٰ حِمْلِهَا لَا يُحْمَلْ مِنْهُ شَيْءٌ وَلَوْ كَانَ ذَا قُرْبَىٰ ۗ إِنَّمَا تُنْذِرُ الَّذِينَ يَخْشَوْنَ رَبَّهُمْ بِالْغَيْبِ وَأَقَامُوا الصَّلَاةَ ۚ وَمَنْ تَزَكَّىٰ فَإِنَّمَا يَتَزَكَّىٰ لِنَفْسِهِ ۚ وَإِلَى اللَّهِ الْمَصِيرُ

ಪಾಪದ ಹೊರೆಯನ್ನು ಹೊತ್ತ ಯಾವೊಬ್ಬನೂ (ಪುನರುತ್ಥಾನದ ದಿನ) ಬೇರೊಬ್ಬನ ಪಾಪವನ್ನು ಹೊರುವ ಸ್ಥಿತಿಯಲ್ಲಿ ಇರಲಾರನು. ಇನ್ನು, ತಾನು ಹೊತ್ತ ಪಾಪದ ಭಾರವನ್ನು (ಸ್ವಲ್ಪ ಕಡಿಮೆಗೊಳಿಸಲು) ಇನ್ನೊಬ್ಬನಿಗೆ ಮೊರೆಯಿಟ್ಟರೆ ಅವನು ಅದರಿಂದ ಸ್ವಲ್ಪವನ್ನೂ ಹೊರಲಾರನು; ಅವನು ಅತ್ಯಂತ ಹತ್ತಿರದ ಸಂಬಂಧಿಯಾದರೂ ಸಹ! (ಆದ್ದರಿಂದ ಪೈಗಂಬರರೇ), ಯಾರು ತಮ್ಮ ಪ್ರಭುವಿನ ಬಗ್ಗೆ ಕಣ್ಣಾರೆ ಕಾಣದೆಯೇ ಭಯವಿರಿಸಿಕೊಳ್ಳುತ್ತಾರೋ, ಮತ್ತು ನಮಾಝ್ ಅನ್ನು ಸ್ಥಿರವಾಗಿ ನಿರ್ವಹಿಸುತ್ತಿರುತ್ತಾರೋ ಅಂತಹವರನ್ನು ಮಾತ್ರ ನೀವು ಎಚ್ಚರಿಸ ಬಲ್ಲಿರಿ. (ನಿಮ್ಮ ಉಪದೇಶ ಸ್ವೀಕರಿಸಿ ತಮ್ಮ ಅಂತರಂಗ ಬಹಿರಂಗಗಳನ್ನು) ಶುದ್ಧೀಕರಿಸಿಕೊಂಡವರು ಸ್ವತಃ ತಮ್ಮ ಹಿತಕ್ಕಾಗಿಯೇ ಹಾಗೆ ಮಾಡಿರುತ್ತಾರೆ. (ಅಂತಿಮವಾಗಿ ಎಲ್ಲರ) ಮರಳುವಿಕೆ ಅಲ್ಲಾಹ್ ನ ಬಳಿಗೇ ಆಗಿರುತ್ತದೆ. {18}

وَمَا يَسْتَوِي الْأَعْمَىٰ وَالْبَصِيرُ

ಕುರುಡರು ಹಾಗೂ ಕಣ್ಣುಳ್ಳವರು ಸರಿಸಮಾನರಲ್ಲ. {19}

وَلَا الظُّلُمَاتُ وَلَا النُّورُ

ಕತ್ತಲು ಹಾಗೂ ಬೆಳಕು ಸಹ ಸಮಾನವಲ್ಲ. {20}

وَلَا الظِّلُّ وَلَا الْحَرُورُ

ಹಾಗೆಯೇ ತಂಪಾದ ನೆರಳು ಹಾಗೂ ಉರಿಯುವ ಬಿಸಿಲು ಒಂದೇ ಅಲ್ಲ. {21}

وَمَا يَسْتَوِي الْأَحْيَاءُ وَلَا الْأَمْوَاتُ ۚ إِنَّ اللَّهَ يُسْمِعُ مَنْ يَشَاءُ ۖ وَمَا أَنْتَ بِمُسْمِعٍ مَنْ فِي الْقُبُورِ

ಬದುಕಿರುವವರು ಹಾಗೂ ಸತ್ತವರು (ಅರ್ಥಾತ್ ಬೋಧನೆಗೆ ಸ್ಪಂಧಿಸದವರು) ಸರಿಸಮಾನರಲ್ಲ. ಅಲ್ಲಾಹ್ ನು ತಾನು ಕೇಳಿಸಲು ಇಚ್ಛಿಸುವವರಿಗೆ ಖಂಡಿತ ಕೇಳಿಸುತ್ತಾನೆ. ಆದರೆ ಪೈಗಂಬರರೇ, ಗೋರಿಗಳಲ್ಲಿರುವವರನ್ನು (ಅರ್ಥಾತ್ ಸ್ಪಂಧಿಸದವರನ್ನು) ಕೇಳಿಸುವಂತೆ ಮಾಡಲು ನಿಮಗೆ ಸಾಧ್ಯವಾಗದು. {22}

إِنْ أَنْتَ إِلَّا نَذِيرٌ

ನೀವಾದರೋ (ಪರಲೋಕ, ನರಕ, ಸ್ವರ್ಗ ಮುಂತಾದವುಗಳ ಬಗ್ಗೆ ಜನರಿಗೆ) ಎಚ್ಚರಿಕೆ ನೀಡುವವರು ಮಾತ್ರವಾಗಿರುವಿರಿ! {23}

إِنَّا أَرْسَلْنَاكَ بِالْحَقِّ بَشِيرًا وَنَذِيرًا ۚ وَإِنْ مِنْ أُمَّةٍ إِلَّا خَلَا فِيهَا نَذِيرٌ

ಪೈಗಂಬರರೇ, ನಾವು ನಿಮಗೆ ಸತ್ಯವನ್ನಿತ್ತು (ಜನರೆಡೆಗೆ) ಕಳುಹಿಸಿದ್ದೇವೆ; (ಸತ್ಕರ್ಮಿಗಳಿಗೆ) ಶುಭಸುದ್ದಿ ಹಾಗೂ (ದುಷ್ಕರ್ಮಿಗಳಿಗೆ) ಮುನ್ನೆಚ್ಚರಿಕೆ ನೀಡುವ ಸಲುವಾಗಿ! ಮುನ್ನೆಚ್ಚರಿಕೆ ನೀಡುವ ಪ್ರವಾದಿಗಳು ಬರದೆ ಯಾವ ಸಮುದಾಯವೂ ಗತಿಸಿ ಹೋಗಿಲ್ಲ. {24}

وَإِنْ يُكَذِّبُوكَ فَقَدْ كَذَّبَ الَّذِينَ مِنْ قَبْلِهِمْ جَاءَتْهُمْ رُسُلُهُمْ بِالْبَيِّنَاتِ وَبِالزُّبُرِ وَبِالْكِتَابِ الْمُنِيرِ

ಪೈಗಂಬರರೇ, ಈಗ ಈ ಜನರು ನಿಮ್ಮನ್ನು ನಿರಾಕರಿಸುತ್ತಿದ್ದಾರೆ ಎಂದಾದರೆ ಇವರಿಗಿಂತ ಮುಂಚೆ ಗತಿಸಿದ ಜನರೂ (ಅವರತ್ತ) ಕಳುಹಿಸಲಾದ ದೂತರುಗಳನ್ನು ನಿರಾಕರಿಸಿದ್ದರು! ಅಂದರೆ ಸ್ಪಷ್ಟವಾದ ಪುರಾವೆಗಳು, ಧರ್ಮ ಶಾಸನಗಳು ಹಾಗೂ (ಧಾರ್ಮಿಕತೆಯ) ಬೆಳಕನ್ನೀಯುವ ಗ್ರಂಥಗಳ ಸಮೇತ ಅವರಲ್ಲಿಗೆ ಬಂದಿದ್ದ ದೂತರುಗಳನ್ನು ನಿರಾಕರಿಸಿದ್ದರು! {25}

ثُمَّ أَخَذْتُ الَّذِينَ كَفَرُوا ۖ فَكَيْفَ كَانَ نَكِيرِ

ತದನಂತರ (ನನ್ನ ದೊತರುಗಳೊಡನೆ) ಧಿಕ್ಕಾರದಿಂದ ವರ್ತಿಸಿದ (ದುಷ್ಕರ್ಮಿಗಳಾದ) ಜನರನ್ನು ಶಿಕ್ಷಿಸಲು ನಾನು ಹಿಡಿದೆನು. ಅದೆಷ್ಟು ಕಠಿಣವಾಗಿತ್ತು ಆ ಶಿಕ್ಷೆ! {26}

أَلَمْ تَرَ أَنَّ اللَّهَ أَنْزَلَ مِنَ السَّمَاءِ مَاءً فَأَخْرَجْنَا بِهِ ثَمَرَاتٍ مُخْتَلِفًا أَلْوَانُهَا ۚ وَمِنَ الْجِبَالِ جُدَدٌ بِيضٌ وَحُمْرٌ مُخْتَلِفٌ أَلْوَانُهَا وَغَرَابِيبُ سُودٌ

ಅಲ್ಲಾಹ್ ನು ಆಕಾಶಗಳಿಂದ ಮಳೆನೀರು ಸುರಿಸುವುದನ್ನು ನೀವು ಕಾಣುತ್ತಿಲ್ಲವೇ? ಅದರ ಮೂಲಕ ವಿವಿಧ ಬಣ್ಣಗಳ ಹಣ್ಣುಹಂಪಲುಗಳನ್ನು ನಾವು (ನಿಮಗಾಗಿ) ಉತ್ಪಾದಿಸಿದೆವು. ಪರ್ವತಗಳಲ್ಲೂ ಬಿಳಿ, ಕೆಂಪು ಮತ್ತು ವಿವಿಧ ಬಣ್ಣಗಳ ಪಟ್ಟಿಗಳನ್ನು ನೀವು ಕಾಣುತ್ತಿಲ್ಲವೇ? ಕೆಲವಂತು ಕಪ್ಪಾಗಿ, ಗಾಢ ಕಪ್ಪಾಗಿರುತ್ತವೆ. {27}

وَمِنَ النَّاسِ وَالدَّوَابِّ وَالْأَنْعَامِ مُخْتَلِفٌ أَلْوَانُهُ كَذَٰلِكَ ۗ إِنَّمَا يَخْشَى اللَّهَ مِنْ عِبَادِهِ الْعُلَمَاءُ ۗ إِنَّ اللَّهَ عَزِيزٌ غَفُورٌ

ಅದು ಹೇಗೆಂದರೆ, ಮನುಷ್ಯರಲ್ಲೂ ಇತರ ಜೀವಜಂತುಗಳಲ್ಲೂ ಜಾನವಾರುಗಳಲ್ಲೂ ಬಣ್ಣಗಳ ವೈವಿಧ್ಯತೆ ಇರುವ ಹಾಗೆಯೇ! ಅಲ್ಲಾಹ್ ನ ದಾಸರುಗಳ ಪೈಕಿ (ಅರ್ಥಾತ್ ಮನುಷ್ಯರ ಪೈಕಿ) ಜ್ಞಾನವಂತರು ಮಾತ್ರ ಅವನಿಗೆ ಭಯಭಕ್ತಿ ತೋರುತ್ತಾರೆ. ನಿಜವಾಗಿ ಅಲ್ಲಾಹ್ ನು ಮಹಾ ಪ್ರತಾಪಿಯೂ (ಅದರ ಜೊತೆಗೇ) ಕ್ಷಮಾಶೀಲನೂ ಆಗಿರುವನು! {28}

إِنَّ الَّذِينَ يَتْلُونَ كِتَابَ اللَّهِ وَأَقَامُوا الصَّلَاةَ وَأَنْفَقُوا مِمَّا رَزَقْنَاهُمْ سِرًّا وَعَلَانِيَةً يَرْجُونَ تِجَارَةً لَنْ تَبُورَ

ಯಾರು ಅಲ್ಲಾಹ್ ನ ಗ್ರಂಥವನ್ನು ಓದುತ್ತಾರೋ, ನಮಾಝ್ ಅನ್ನು ನಿಷ್ಠೆಯಿಂದ ಪಾಲಿಸುತ್ತಾರೋ, ರಹಸ್ಯವಾಗಿಯೂ ಬಹಿರಂಗವಾಗಿಯೂ ನಾವು ದಯಪಾಲಿಸಿದ ಸಂಪತ್ತಿನಿಂದ (ಸತ್ಕಾರ್ಯಗಳಿಗಾಗಿ) ವ್ಯಯಿಸುತ್ತಾರೋ ಅಂತಹವರು ನಷ್ಟ ಸಂಭವಿಸದ ಒಂದು ವ್ಯವಹಾರವನ್ನು ನಿರೀಕ್ಷಿಸುತ್ತಿರುತ್ತಾರೆ. {29}

لِيُوَفِّيَهُمْ أُجُورَهُمْ وَيَزِيدَهُمْ مِنْ فَضْلِهِ ۚ إِنَّهُ غَفُورٌ شَكُورٌ

ಅಲ್ಲಾಹ್ ನು ಅವರ (ಎಲ್ಲಾ ಸತ್ಕಾರ್ಯಗಳಿಗೆ) ಸಂಪೂರ್ಣವಾದ ಪ್ರತಿಫಲ ನೀಡಬೇಕೆಂದೂ, ತನ್ನ ವಿಶೇಷ ಔದಾರ್ಯದಿಂದ ಅದಕ್ಕಿಂತಲೂ ಹೆಚ್ಚಿನದ್ದನ್ನು ದಯಪಾಲಿಸಬೇಕೆಂದೂ ಅವರು ನಿರೀಕ್ಷಿಸುತ್ತಾರೆ. ನಿಜವೇನೆಂದರೆ ಅಲ್ಲಾಹ್ ನು ಕ್ಷಮಾಶೀಲನೂ (ಸತ್ಕಾರ್ಯಗಳನ್ನು) ಮೆಚ್ಚುವವನೂ ಆಗಿರುವನು. {30}

وَالَّذِي أَوْحَيْنَا إِلَيْكَ مِنَ الْكِتَابِ هُوَ الْحَقُّ مُصَدِّقًا لِمَا بَيْنَ يَدَيْهِ ۗ إِنَّ اللَّهَ بِعِبَادِهِ لَخَبِيرٌ بَصِيرٌ

ಪೈಗಂಬರರೇ, ನಿಮಗೆ ವಹೀ (ಅಂದರೆ ದಿವ್ಯ ಸಂದೇಶದ) ಮೂಲಕ ನೀಡಲಾದ ಈ ಗ್ರಂಥವು ಪರಮ ಸತ್ಯವಾದ ಗ್ರಂಥವಾಗಿದೆ. ಅದು ತನ್ನ ಮುಂದಿರುವ (ಹಿಂದಿನ) ದೇವಗ್ರಂಥಗಳನ್ನು ಸಮರ್ಥಿಸುತ್ತದೆ. ಹೌದು, ತನ್ನ ದಾಸರ ಕುರಿತು ಅಲ್ಲಾಹ್ ನು ಚೆನ್ನಾಗಿ ಬಲ್ಲವನಾಗಿದ್ದಾನೆ; ಅವರನ್ನು ನೋಡುತ್ತಿರುತ್ತಾನೆ. {31}

ثُمَّ أَوْرَثْنَا الْكِتَابَ الَّذِينَ اصْطَفَيْنَا مِنْ عِبَادِنَا ۖ فَمِنْهُمْ ظَالِمٌ لِنَفْسِهِ وَمِنْهُمْ مُقْتَصِدٌ وَمِنْهُمْ سَابِقٌ بِالْخَيْرَاتِ بِإِذْنِ اللَّهِ ۚ ذَٰلِكَ هُوَ الْفَضْلُ الْكَبِيرُ

ಅನಂತರ ನಾವು ನಮ್ಮ ದಾಸರ ಪೈಕಿ (ಅರ್ಥಾತ್ ಮಾನವರ ಪೈಕಿ) ನಾವು ಆಯ್ದ (ಒಂದು ಜನತೆಗೆ) ಈ ಗ್ರಂಥವನ್ನು ಬಳುವಳಿಯಾಗಿ ನೀಡಿದೆವು. ಆದರೆ ಅವರಲ್ಲಿ ಕೆಲವರು (ನಮ್ಮ ಗ್ರಂಥವನ್ನು ಕಡೆಗಣಿಸಿ) ಸ್ವತಃ ತಮ್ಮ ಮೇಲೆಯೇ ಅನ್ಯಾಯ ಮಾಡಿಕೊಂಡರು; ಕೆಲವರು ಮಧ್ಯಮ ಮಾರ್ಗವನ್ನು ಅನುಸರಿಸಿದರು; ಇನ್ನು ಕೆಲವರು ಅಲ್ಲಾಹ್ ನ ಅನುಜ್ಞೆಯ ಪ್ರಕಾರ (ಗ್ರಂಥವನ್ನು ಅನುಸರಿಸಿ) ಸತ್ಕಾರ್ಯಗಳಿಗೆ ಆದ್ಯತೆ ನೀಡಿದರು. ಅದು (ಅರ್ಥಾತ್ ದೇವಗ್ರಂಥವನ್ನು ಬಳುವಳಿಯಾಗಿ ನೀಡಿದುದು) ಅತ್ಯಂತ ದೊಡ್ಡ ಔದಾರ್ಯವಾಗಿದೆ. {32}

جَنَّاتُ عَدْنٍ يَدْخُلُونَهَا يُحَلَّوْنَ فِيهَا مِنْ أَسَاوِرَ مِنْ ذَهَبٍ وَلُؤْلُؤًا ۖ وَلِبَاسُهُمْ فِيهَا حَرِيرٌ

ಅಂತಹವರು ಶಾಶ್ವತವಾದ ಸ್ವರ್ಗೋದ್ಯಾನಗಳನ್ನು ಪ್ರವೇಶಿಸಲಿರುವರು. ಅಲ್ಲಿ ಅವರಿಗೆ ಚಿನ್ನದ ಹಾಗೂ ಮುತ್ತಿನ ಕಡಗಗಳನ್ನು ಆಭರಣವಾಗಿ ತೊಡಿಸಲಾಗುವುದು. ಅಲ್ಲಿ ಅವರು ತೊಡಲಿರುವ ಪೋಷಾಕು ರೇಶ್ಮೆಯದ್ದಾಗಿರುವುದು! {33}

وَقَالُوا الْحَمْدُ لِلَّهِ الَّذِي أَذْهَبَ عَنَّا الْحَزَنَ ۖ إِنَّ رَبَّنَا لَغَفُورٌ شَكُورٌ

ನಮ್ಮಿಂದ ಎಲ್ಲಾ ವ್ಯಥೆಗಳನ್ನು ನೀಗಿಸಿದ ಆ ಅಲ್ಲಾಹ್ ನಿಗೆ ಸಕಲ ಪ್ರಶಂಸೆಗಳು; ಹೌದು, ನಮ್ಮ ದೇವನು ಬಹಳವಾಗಿ ಕ್ಷಮಿಸುವವನೂ (ಸತ್ಕಾರ್ಯಗಳನ್ನು) ಶ್ಲಾಘಿಸುವವನೂ ಆಗಿರುವನು ಎಂದು (ಆ ಸ್ವರ್ಗವಾಸಿಗಳು) ಹೇಳುವರು. {34}

الَّذِي أَحَلَّنَا دَارَ الْمُقَامَةِ مِنْ فَضْلِهِ لَا يَمَسُّنَا فِيهَا نَصَبٌ وَلَا يَمَسُّنَا فِيهَا لُغُوبٌ

ಅವನೇ ನಮ್ಮನ್ನು ತನ್ನ ಔದಾರ್ಯದಿಂದ ಶಾಶ್ವತ ಸ್ವರೂಪದ ಈ ನಿವಾಸಗಳಲ್ಲಿ ನೆಲೆಸುವಂತೆ ಮಾಡಿರುವನು. ಇಲ್ಲಿ ಯಾವುದೇ ರೀತಿಯ ತೊಂದರೆ ಸಂಕಷ್ಟಗಳು ನಮ್ಮನ್ನು ಬಾಧಿಸಲಾರದು; ಒಂದಿಷ್ಟು ದಣಿವಾಗಲಿ ಬಳಲಿಕೆಯಾಗಲಿ ಇಲ್ಲಿ ನಮಗೆ ತಟ್ಟಲಾರದು. {35}

وَالَّذِينَ كَفَرُوا لَهُمْ نَارُ جَهَنَّمَ لَا يُقْضَىٰ عَلَيْهِمْ فَيَمُوتُوا وَلَا يُخَفَّفُ عَنْهُمْ مِنْ عَذَابِهَا ۚ كَذَٰلِكَ نَجْزِي كُلَّ كَفُورٍ

ಇನ್ನು, (ಧರ್ಮ ಹಾಗೂ ಧಾರ್ಮಿಕತೆಯನ್ನು) ನಿರಾಕರಿಸಿದವರಿಗೆ ನರದ ಬೆಂಕಿ ಇದೆ. (ಅಲ್ಲಿ) ಅವರ ಪಾಲಿಗೆ ಸಾವನ್ನೂ ವಿಧಿಸಲಾಗುವುದಿಲ್ಲ; ಹಾಗಿದ್ದಿದ್ದರೆ ಅವರಿಗೆ (ಕನಿಷ್ಟ ಪಕ್ಷ) ಸಾಯಬಹುದಿತ್ತು! ಅವರು ಅನುಭವಿಸಲಿರುವ ನರಕ ಶಿಕ್ಷೆಯನ್ನು ಸ್ವಲ್ಪವೂ ಕಡಿತಗೊಳಿಸಲಾಗದು! ಹೌದು, ಹಾಗೆಯೇ ಇರುವುದು ಪ್ರತಿಯೊಬ್ಬ ಕೃತಘ್ನನಿಗೂ ನಾವು ನೀಡುವ ಶಿಕ್ಷೆ! {36}

وَهُمْ يَصْطَرِخُونَ فِيهَا رَبَّنَا أَخْرِجْنَا نَعْمَلْ صَالِحًا غَيْرَ الَّذِي كُنَّا نَعْمَلُ ۚ أَوَلَمْ نُعَمِّرْكُمْ مَا يَتَذَكَّرُ فِيهِ مَنْ تَذَكَّرَ وَجَاءَكُمُ النَّذِيرُ ۖ فَذُوقُوا فَمَا لِلظَّالِمِينَ مِنْ نَصِيرٍ

ಅದರಲ್ಲಿ ಅವರು ಸಹಾಯಕ್ಕಾಗಿ ಚೀರಾಡುವರು: ಓ ನಮ್ಮ ದೇವನೇ, ನಮ್ಮನ್ನು ಒಮ್ಮೆ ಇಲ್ಲಿಂದ ಹೊರತೆಗೆದು ಬಿಡು; ನಾವು ಈ ಹಿಂದೆ ಮಾಡುತ್ತಿದ್ದ ಕರ್ಮಗಳಿಗಿಂತ ಭಿನ್ನವಾದ, ಅಂದರೆ, ಸತ್ಕರ್ಮಗಳನ್ನು ಮಾಡುವೆವು ಎಂದು (ಅವರು ಗೋಳಿಡುವರು)! ಸದ್ಬೋಧನೆಗಳನ್ನು ಸ್ವೀಕರಿಸ ಬಯಸುವ ಒಬ್ಬನಿಗೆ ಸದ್ಬೋಧನೆ ಸ್ವೀಕರಿಸಿ (ಸತ್ಕರ್ಮಗಳನ್ನು ಮಾಡಲು ಸಾಕಾಗುವಷ್ಟು) ದೀರ್ಘವಾದ ಆಯುಷ್ಯವನ್ನು ನಾವು ನಿಮಗೆ ನೀಡಿರಲಿಲ್ಲವೇ? ಸಾಲದಕ್ಕೆ ನಿಮ್ಮ ಬಳಿಗೆ ಎಚ್ಚಸುವ ಪ್ರವಾದಿಗಳೂ ಬಂದಿದ್ದರು ತಾನೆ ಎಂದು (ಆಗ ಅವರೊಡನೆ ಹೇಳಲಾಗುವುದು)! ಆದ್ದರಿಂದ ಈಗ ಸವಿಯಿರಿ - ಅಧರ್ಮಿಗಳಿಗೆ ಯಾವ ಸಹಾಯಕನೂ ಇರುವುದಿಲ್ಲ! {37}

إِنَّ اللَّهَ عَالِمُ غَيْبِ السَّمَاوَاتِ وَالْأَرْضِ ۚ إِنَّهُ عَلِيمٌ بِذَاتِ الصُّدُورِ

ನಿಜವಾಗಿಯೂ ಅಲ್ಲಾಹ್ ನಿಗೆ ಭೂಮಿ ಆಕಾಶಗಳಲ್ಲಿ (ನಿಮ್ಮ ಮಟ್ಟಿಗೆ) ಅಗೋಚರವಾದ ಎಲ್ಲವೂ ತಿಳಿದಿರುತ್ತದೆ. ಮಾತ್ರವಲ್ಲ, ಹೃದಯಾಂತರಾಳದಲ್ಲಿ ಇರುವ ವಿಷಯಗಳನ್ನೂ ಸಹ ಅವನು ಚೆನ್ನಾಗಿ ಅರಿತಿರುತ್ತಾನೆ! {38}

هُوَ الَّذِي جَعَلَكُمْ خَلَائِفَ فِي الْأَرْضِ ۚ فَمَنْ كَفَرَ فَعَلَيْهِ كُفْرُهُ ۖ وَلَا يَزِيدُ الْكَافِرِينَ كُفْرُهُمْ عِنْدَ رَبِّهِمْ إِلَّا مَقْتًا ۖ وَلَا يَزِيدُ الْكَافِرِينَ كُفْرُهُمْ إِلَّا خَسَارًا

ಅವನೇ ನಿಮ್ಮನ್ನು ನಾಡಿನ ಉತ್ತರಾಧಿಕಾರಿಗಳನ್ನಾಗಿ ಮಾಡಿರುವನು. ಸತ್ಯಧರ್ಮವನ್ನು ತಿರಸ್ಕರಿಸುವವರು ಅದರ ಪರಿಣಾಮವನ್ನು ತಾವೇ ಅನುಭವಿಸಬೇಕು. ಧರ್ಮವನ್ನು ಧಿಕ್ಕರಿಸಿದವರ ಧಿಕ್ಕಾರದ ನಿಲುವು ಅವರ ಒಡೆಯನ ಬಳಿ ಕೋಪವನ್ನಲ್ಲದೆ ಬೇರೇನನ್ನೂ ಹೆಚ್ಚಿಸದು. ಹೌದು, ಧಿಕ್ಕರಿಸಿದವರ ಧಿಕ್ಕಾರವು ನಷ್ಟವನ್ನಲ್ಲದೆ ಅವರಿಗೆ ಬೇರೇನನ್ನೂ ಹೆಚ್ಚಿಸುವುದಿಲ್ಲ! {39}

قُلْ أَرَأَيْتُمْ شُرَكَاءَكُمُ الَّذِينَ تَدْعُونَ مِنْ دُونِ اللَّهِ أَرُونِي مَاذَا خَلَقُوا مِنَ الْأَرْضِ أَمْ لَهُمْ شِرْكٌ فِي السَّمَاوَاتِ أَمْ آتَيْنَاهُمْ كِتَابًا فَهُمْ عَلَىٰ بَيِّنَتٍ مِنْهُ ۚ بَلْ إِنْ يَعِدُ الظَّالِمُونَ بَعْضُهُمْ بَعْضًا إِلَّا غُرُورًا

ಅಲ್ಲಾಹ್ ನನ್ನು ಬಿಟ್ಟು ನೀವು ಪ್ರಾರ್ಥಿಸುತ್ತಿರುವ ಇತರ ಹುಸಿ-ದೇವರುಗಳ ಬಗ್ಗೆ ನೀವೇನಾದರೂ ಚಿಂತನೆ ನಡೆಸಿರುವಿರಾ - ಎಂದು ಪೈಗಂಬರರೇ, ನೀವು ಅವರೊಡನೆ ಕೇಳಿರಿ. ಈ (ವಿಶಾಲ) ಭೂಮಿಯ ಯಾವ ಭಾಗವನ್ನು ಅವರು ಸೃಷ್ಟಿಸಿರುವರು ಎಂಬುದನ್ನು ನನಗೂ ಸ್ವಲ್ಪ ತೋರಿಸಿಕೊಡಿರಿ; ಅಥವಾ ಆಕಾಶಗಳ ಸೃಷ್ಟಿಯಲ್ಲಿ ಅವರು ಭಾಗಿಯಾಗಿರುವರೇ? ಅಥವಾ, ಅವರಿಗೆ ನಾವು (ಪ್ರತ್ಯೇಕವಾದ) ಒಂದು ಗ್ರಂಥ ನೀಡಿ, (ಅವರ ಆ ಬಹುದೇವತ್ವದ ನಿಲುವು) ಆ ಗ್ರಂಥದಲ್ಲಿರುವ ಪುರಾವೆಯ ಮೇಲೆ ಆಧಾರಿತವಾಗಿದೆಯೇ ಎಂದೂ ಅವರೊಡನೆ ಕೇಳಿರಿ! ಇಲ್ಲ, ಬದಲಾಗಿ, ಆ ಅಧರ್ಮಿಗಳು ಪರಸ್ಪರರಿಗೆ ನೀಡುತ್ತಿರುವ ಭರವಸೆಯು ಕೇವಲ ಒಂದು ವಂಚನೆಯಲ್ಲದೆ ಬೇರೇನೂ ಅಲ್ಲ! {40}

إِنَّ اللَّهَ يُمْسِكُ السَّمَاوَاتِ وَالْأَرْضَ أَنْ تَزُولَا ۚ وَلَئِنْ زَالَتَا إِنْ أَمْسَكَهُمَا مِنْ أَحَدٍ مِنْ بَعْدِهِ ۚ إِنَّهُ كَانَ حَلِيمًا غَفُورًا

ನಿಜ ಸಂಗತಿಯೆಂದರೆ, ಭೂಮಿ ಮತ್ತು ಆಕಾಶಗಳು ತಮ್ಮ ಸ್ಥಾನದಿಂದ ಸರಿಯದಂತೆ ಹಿಡಿದಿರಿಸಿದವನು ಆ ಅಲ್ಲಾಹ್ ನು! ಒಂದು ವೇಳೆ ಅವು ತಮ್ಮ ಸ್ಥಾನದಿಂದ ಸರಿದು ಹೋದರೆ ಅವುಗಳನ್ನು ಹಿಡಿದಿರಿಸಲು ಆ ಅಲ್ಲಾಹ್ ನಿಗಲ್ಲದೆ ಬೇರೆ ಯಾರಿಗೂ ಸಾಧ್ಯವಿಲ್ಲ. ವಾಸ್ತವದಲ್ಲಿ ಅವನು ಬಹಳವಾಗಿ ಸಹಾಭೂತಿಯುಳ್ಳವನೂ ಕ್ಷಮಾಶೀಲನೂ ಆಗಿರುವನು. {41}

وَأَقْسَمُوا بِاللَّهِ جَهْدَ أَيْمَانِهِمْ لَئِنْ جَاءَهُمْ نَذِيرٌ لَيَكُونُنَّ أَهْدَىٰ مِنْ إِحْدَى الْأُمَمِ ۖ فَلَمَّا جَاءَهُمْ نَذِيرٌ مَا زَادَهُمْ إِلَّا نُفُورًا

ಎಚ್ಚರಿಕೆ ನೀಡುವಂತಹ ಒಬ್ಬ ಪ್ರವಾದಿಯೇನಾದರೂ ತಮ್ಮ ಬಳಿಗೆ ಬಂದಿರುತ್ತಿದ್ದರೆ, ತಾವು ನಿಜವಾಗಿ ಇತರೆಲ್ಲ ಸಮುದಾಯಗಳಿಗಿಂತ ಮಿಗಿಲಾಗಿ ನೇರ ಮಾರ್ಗವನ್ನು ಸ್ವೀಕರಿಸುತ್ತಿದ್ದೆವು ಎಂದು ಅವರು (ಈ ಹಿಂದೆ) ಅಲ್ಲಾಹ್ ನ ಮೇಲೆ ಅತಿ ಗಂಭೀರ ಸ್ವರೂಪದ ಆಣೆಗಳನ್ನು ಹಾಕಿ ಹೇಳುತ್ತಿದ್ದರು. ಕೊನೆಗೆ, ಮುನ್ನೆಚ್ಚರಿಕೆ ನೀಡುವ ಒಬ್ಬ ಪ್ರಾದಿಯು ಅವರ ಬಳಿಗೆ ಬಂದಾಗ ಅದು ಅವರಲ್ಲಿ (ಸತ್ಯದ ಬಗೆಗಿರುವ) ದ್ವೇಷವನ್ನಲ್ಲದೆ ಬೇರೇನನ್ನೂ ಹೆಚ್ಚಿಸಲಿಲ್ಲ! {42}

اسْتِكْبَارًا فِي الْأَرْضِ وَمَكْرَ السَّيِّئِ ۚ وَلَا يَحِيقُ الْمَكْرُ السَّيِّئُ إِلَّا بِأَهْلِهِ ۚ فَهَلْ يَنْظُرُونَ إِلَّا سُنَّتَ الْأَوَّلِينَ ۚ فَلَنْ تَجِدَ لِسُنَّتِ اللَّهِ تَبْدِيلًا ۖ وَلَنْ تَجِدَ لِسُنَّتِ اللَّهِ تَحْوِيلًا

ಅವರು ನಾಡಿನಲ್ಲಿ ದುರಹಂಕಾರ ಮೆರೆಯುತ್ತಿದ್ದ ಹಾಗೂ (ಸತ್ಯದ ವಿರುದ್ಧ) ದುಷ್ಟ ಸಂಚುಗಳನ್ನು ರೂಪಿಸುತ್ತಿದ್ದ ಕಾರಣದಿಂದ ಹಾಗಾಯಿತು. ಯಥಾರ್ಥದಲ್ಲಿ, ದುಷ್ಟ ಸಂಚುಗಳು ಅದನ್ನು ರೂಪಿಸಿದವರಿಗೇ ತಿರುಗೇಟಾಗಿ ಪರಿಣಮಿಸುತ್ತದೆ. ಅವರಿಗಿಂತ ಮುಂಚಿನವರೊಂದಿಗೆ ಹೇಗೆ ವರ್ತಿಸಲಾಗಿತ್ತೋ ಅದಕ್ಕಿಂತ ಭಿನ್ನವಾದುದ ಏನನ್ನಾದರೂ ಅವರು ನಿರೀಕ್ಷಿಸುತ್ತಿರುವರೇ? ಆದರೆ ಅಲ್ಲಾಹ್ ನ ಕಾರ್ಯವಿಧಾದಲ್ಲಿ ಯಾವ ಬದಲಾವಣೆಯನ್ನೂ ನೀವು ಕಾಣಲಾರಿರಿ. ಹಾಗೆಯೇ ಅಲ್ಲಾಹ್ ನ ವ್ಯವಹಿರಿಸುವ ರೀತಿಯಲ್ಲಿ ಬಳಸುದಾರಿಗಳನ್ನೂ ನೀವು ನೋಡಲಾರಿರಿ. {43}

أَوَلَمْ يَسِيرُوا فِي الْأَرْضِ فَيَنْظُرُوا كَيْفَ كَانَ عَاقِبَةُ الَّذِينَ مِنْ قَبْلِهِمْ وَكَانُوا أَشَدَّ مِنْهُمْ قُوَّةً ۚ وَمَا كَانَ اللَّهُ لِيُعْجِزَهُ مِنْ شَيْءٍ فِي السَّمَاوَاتِ وَلَا فِي الْأَرْضِ ۚ إِنَّهُ كَانَ عَلِيمًا قَدِيرًا

ಅವರು ನಾಡಿನಲ್ಲಿ ಅತ್ತಿತ್ತ ಸಂಚರಿಸಿ, ತಮಗಿಂತ ಮುಂಚೆ ಗತಿಸಿದಂತಹ (ಅಧರ್ಮಿ) ಜನಾಂಗಗಳ ಅಂತ್ಯ ಹೇಗಾಯಿತೆಂದು ನೋಡುತ್ತಿಲ್ಲವೇ?! ಅವರಾದರೋ ಇವರಿಗಿಂತ ಹೆಚ್ಚು ಬಲಿಷ್ಟರೂ ಆಗಿದ್ದರು. ಭೂಮಿ ಆಕಾಶಗಳಲ್ಲಿರುವ ಯಾವ ಶಕ್ತಿಗೂ ಅಲ್ಲಾಹ್ ನು (ರೂಪಿಸುವ ಯೋಜನೆಗಳನ್ನು) ಮಣಿಸಲು ಸಾದ್ಯವಿಲ್ಲ. ಅವನು ಸರ್ವಜ್ಞನೂ ಸರ್ವಸಮರ್ಥನೂ ಆಗಿರುವನು. {44}

وَلَوْ يُؤَاخِذُ اللَّهُ النَّاسَ بِمَا كَسَبُوا مَا تَرَكَ عَلَىٰ ظَهْرِهَا مِنْ دَابَّةٍ وَلَٰكِنْ يُؤَخِّرُهُمْ إِلَىٰ أَجَلٍ مُسَمًّى ۖ فَإِذَا جَاءَ أَجَلُهُمْ فَإِنَّ اللَّهَ كَانَ بِعِبَادِهِ بَصِيرًا

ಒಂದು ವೇಳೆ ಜನರೆಸಗುವ ದುಷ್ಕರ್ಮಗಳಿಗಾಗಿ ಅಲ್ಲಾಹ್ ನು ಅವರನ್ನು ತಕ್ಷಣವೇ ಹಿಡಿದು ಶಿಕ್ಷಿಸುವುದಾಗಿದ್ದರೆ, ಭೂಮುಖದ ಮೇಲೆ ಒಂದೇ ಒಂದು ಜೀವಿಯನ್ನೂ ಅವನು ಉಳಿಸುತ್ತಿರಲಿಲ್ಲ. ಆದರೆ ಅವನು ಒಂದು ನಿಶ್ಚಿತ ಸಮಯದ ವರೆಗೆ ಅವರಿಗೆ ಕಾಲಾವಕಾಶ ನೀಡುತ್ತಾನೆ. ಇನ್ನು ಅವರ (ಶಿಕ್ಷೆಗೆ) ನಿಶ್ಚಿತಗೊಂಡ ಸಮಯವು ಬಂದು ಬಿಟ್ಟರೆ, ಅಲ್ಲಾಹ್ ನು ಖಂಡಿತವಾಗಿ ತನ್ನ ದಾಸರ ನಡವಳಿಕೆಯ ಬಗ್ಗೆ ಗಮನಿಸುತ್ತಿದ್ದನು (ಎಂಬುದು ಅವರಿಗೆ ಖಚಿತವಾಗುತ್ತದೆ)! {45}

-----

 ಅನುವಾದಿತ ಸೂರಃ ಗಳು


Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...