ಅತ್-ತೌಬಃ | تـرجمـة سورة التوبة

تـرجمـة سورة التوبة من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت


* سهل الفهم من غير الرجوع إلى كتاب التفسير *

| ಸೂರಃ ಅತ್-ತೌಬಃ | ಪವಿತ್ರ್ ಕುರ್‌ಆನ್ ನ 9 ನೆಯ ಸೂರಃ | ಇದರಲ್ಲಿ ಒಟ್ಟು 129 ಆಯತ್ ಗಳು ಇವೆ |

ನೀವು ಶಾಂತಿ ಒಪ್ಪಂದದಲ್ಲಿ ಏರ್ಪಟ್ಟಿದ್ದ (ಮಕ್ಕಾ ಪ್ರದೇಶದ) ಮುಶ್ರಿಕ್ ಗಳಿಗೆ [ಅವರು ಪದೇ ಪದೇ ಒಪ್ಪಂದ ಮುರಿದ ಕಾರಣ], ಅಲ್ಲಾಹ್ ಮತ್ತು ಅವನ ಪೈಗಂಬರರ ವತಿಯಿಂದ (ಸಕಲ ವಿಧ) ಹೊಣೆ ರಾಹಿತ್ಯದ ಘೋಷಣೆಯಿದು! {1}

ಆದ್ದರಿಂದ ನೀವು [ಅರ್ಥಾತ್ ಮಕ್ಕಾ ಪ್ರದೇಶದ ಮುಶ್ರಿಕ್ ಗಳು, ಕೇವಲ] ನಾಲ್ಕು ತಿಂಗಳ ಕಾಲವಷ್ಟೆ ನಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಬಹುದು. [ರಿಯಾಯತಿಯ ಆ ಕಾಲಾವಧಿ ಮುಗಿದಾಕ್ಷಣ ಯುದ್ಧದ ಘೋಷಣೆ ಆಗಲಿದೆ]! ಆಗ ಅಲ್ಲಾಹ್ ನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿಮ್ಮಿಂದಾಗದು ಎಂಬುದನ್ನು [ಒಪ್ಪಂದ ಭಂಜಕರಾದ ಕುರೈಶರೇ], ನೀವು ತಿಳಿದಿರಿ! ಮಾತ್ರವಲ್ಲ (ಪೈಗಂಬರರನ್ನು) ಧಿಕ್ಕರಿಸಿದವರನ್ನು ಸ್ವತಃ ಅಲ್ಲಾಹ್ ನೇ [ಆ ಯುದ್ಧದಲ್ಲಿ ಸೋಲಿಸಿ] ಅಪಮಾನಿಸಲಿದ್ದಾನೆ ಎಂಬುದೂ ನಿಮಗೆ ತಿಳಿದಿರಲಿ! {2}

ಹೌದು, ಅಲ್ಲಾಹ್ ಮತ್ತು ಅವನ ಪೈಗಂಬರರಿಗೆ ಈ ಮುಶ್ರಿಕ್ ಸಮುದಾಯದ ಜನರೊಂದಿಗೆ, ಒಪ್ಪಂದದ ಯಾವ ಹೊಣೆಗಾರಿಕೆಯೂ ಇಲ್ಲವೆಂದು [ಶೀಘ್ರದಲ್ಲೇ ನಡೆಯಲಿರುವ] ಬೃಹತ್ ಹಜ್ಜ್ ನ ದಿನ (ನಾಡಿನ) ಸಮಸ್ತ ಜನರ ಅವಗಾಹನೆಗಾಗಿ, (ಪುನಃ) ಅಲ್ಲಾಹ್ ಮತ್ತು ಅವನ ಪೈಗಂಬರರ ವತಿಯಿಂದ (ಸಾರ್ವಜನಿಕವಾಗಿ) ಘೋಷಿಸಲಾಗುವುದು! ಆದ್ದರಿಂದ (ಮುಶ್ರಿಕ್ ಸಮುದಾಯಕ್ಕೆ ಸೇರಿದವರೇ) ನೀವು ಪಶ್ಚಾತ್ತಾಪ ಪಟ್ಟು ಸರಿದಾರಿಗೆ ಮರಳಿದರೆ ಅದು ನಿಮಗೇ ಒಳ್ಳೆಯದು. ಇನ್ನು ನೀವು ಮುಖ ತಿರುಗಿಸಿಕೊಂಡರೆ ಅಲ್ಲಾಹ್ ನನ್ನು (ಸಂಘರ್ಷದಲ್ಲಿ) ಸೋಲಿಸುವುದು ನಿಮಗೆ ಸಾಧ್ಯವಾಗದು ಎಂಬುದನ್ನು ಚೆನ್ನಾಗಿ ಅರಿತುಕೊಳ್ಳಿ. [ಪೈಗಂಬರರೇ, ನಮ್ಮೀ ಎಚ್ಚರಿಕೆಗೆ] ಧಿಕ್ಕಾರ ತೋರಿದವರಿಗೆ (ಇಹಪರಗಳಲ್ಲಿ) ಇರುವ ನೋವುಭರಿತ ಶಿಕ್ಷೆಯ ಕುರಿತು 'ಸಿಹಿಸುದ್ದಿ' ತಿಳಿಸಿ ಬಿಡಿ. {3}

ಆದರೆ ಮುಶ್ರಿಕ್ ಜನಾಂಗಗಳ ಪೈಕಿ ಯಾರೊಂದಿಗೆ ನೀವು ಶಾಂತಿ ಒಪ್ಪಂದ ಮಾಡಿಕೊಂಡಿರುವಿರೋ ಅವರು (ಒಪ್ಪಂದ ಪಾಲಿಸುವಲ್ಲಿ) ನಿಮ್ಮೊಂದಿಗೆ ಯಾವುದೇ ರೀತಿಯ ಲೋಪವೆಸಗದಿದ್ದರೆ, ಮತ್ತು ನಿಮ್ಮ ವಿರುದ್ಧ ಇತರರ ಬೆಂಬಲಕ್ಕೆ ನಿಲ್ಲದಿದ್ದರೆ, (ನಮ್ಮೀ ಹೊಣೆ ರಾಹಿತ್ಯದ ಘೋಷಣೆ) ಅಂತಹವರಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ನೀವು ಅವರೊಂದಿಗಿನ ಕರಾರನ್ನು ಅದರ ಅವಧಿಯ ವರೆಗೂ ಪೂರ್ಣವಾಗಿ ಪಾಲಿಸಿರಿ. ಹೌದು, ಅಲ್ಲಾಹ್ ನು (ಅವನ ಆಜ್ಞೆಯ ಉಲ್ಲಂಘನೆಯಾಗದಂತೆ) ಜಾಗರೂಕತೆ ಪಾಲಿಸುವವರನ್ನು ಮೆಚ್ಚುತ್ತಾನೆ. {4}

[ಯುದ್ಧಕ್ಕೆ ನಿಷೇಧ ಹೇರಲಾದ] ಅನುಲ್ಲಂಘನೀಯ ತಿಂಗಳುಗಳು ಕಳೆದಾಕ್ಷಣ [ನಮ್ಮ ಎಚ್ಚಿರಿಕೆಯನ್ನು ಅವಗಣಿಸಿದ] ಮುಶ್ರಿಕ್ ಗಳನ್ನು ಸಿಕ್ಕ ಸಿಕ್ಕಲ್ಲಿ ವಧಿಸಿರಿ! ಅದಕ್ಕಾಗಿ ಅವರನ್ನು ಹಿಡಿಯಿರಿ; ಅವರಿಗೆ ಮುತ್ತಿಗೆ ಹಾಕಿರಿ; ಪ್ರತಿಯೊಂದು ಆಯಕಟ್ಟಿನ ಸ್ಥಳಗಳಲ್ಲಿ ಅವರಿಗಾಗಿ ಹೊಂಚುಹಾಕಿರಿ. ಇನ್ನು ಅವರೇನಾದರೂ ಪಶ್ಚಾತ್ತಾಪ ಪಟ್ಟು, ನಮಾಝ್ ಪಾಲಿಸಲು ಮತ್ತು ಝಕಾತ್ ಪಾವತಿಸಲು ಮುಂದಾದರೆ ಅವರನ್ನು ಅವರ ಪಾಡಿಗೆ ಬದುಕಲು ಬಿಡಿ. ಖಂಡಿತವಾಗಿಯೂ ಅಲ್ಲಾಹ್ ನು (ಪಶ್ಚಾತ್ತಾಪ ಪಟ್ಟವರನ್ನು) ಕ್ಷಮಿಸಿ ಬಿಡುವವನೂ ನಿರಂತರ ಕರುಣೆ ತೋರುವವನೂ ಆಗಿರುವನು. {5}

ಇನ್ನು ಮುಶ್ರಿಕ್ ಗಳ ಕೂಟಕ್ಕೆ ಸೇರಿದ ಯಾರಾದರೂ [ರಿಯಾಯತಿಯ ಕಾಲಾವಧಿ ಮುಗಿಯುವ ಮುನ್ನ] ನಿಮ್ಮ ಅಭಯ ಯಾಚಿಸಿದರೆ ನೀವು ಆತನಿಗೆ, ಅಲ್ಲಾಹ್ ನ ಮಾತುಗಳನ್ನು ಆತನು ಆಲಿಸಿ ಅರ್ಥೈಸಿಕೊಳ್ಳುವ ತನಕವೂ ಅಭಯ ನೀಡಿರಿ. ತರುವಾಯ ಆತನನ್ನು ಆತನಿಗೆ ಸುರಕ್ಷಿತವೆನಿಸಿದ ಸ್ಥಳವೊಂದಕ್ಕೆ ತಲುಪಿಸಿರಿ. ಈ ಜನರು (ಅಲ್ಲಾಹ್ ನ ವಿಷಯವಾಗಿ ಹೆಚ್ಚು) ಬಲ್ಲವರಲ್ಲದ ಕಾರಣಕ್ಕಾಗಿ ಹಾಗೆ ಮಾಡಬೇಕಾಗುತ್ತದೆ. {6}

ಪೈಗಂಬರರೇ, ಮಸ್ಜಿದ್ ಅಲ್ ಹರಾಮ್ ನ ಬಳಿ (ಅಂದರೆ ಹುದೈಬಿಯಾದಲ್ಲಿ) ನೀವು ಯಾರೊಂದಿಗೆ ಒಪ್ಪಂದ ಮಾಡಿಕೊಂಡಿರುವಿರೋ ಅವರ ಹೊರತು, ಉಳಿದ ಮುಶ್ರಿಕ್ ಗಳಿಗೆ ಅಲ್ಲಾಹ್ ನೊಂದಿಗಾಗಲಿ ಅವನ ಪೈಗಂಬರರೊಂದಿಗಾಗಲಿ ಯಾವುದೇ ಕರಾರು ಇರುವುದು ಹೇಗೆ ತಾನೆ ಸಾಧ್ಯ? ಹಾಗಿರುವಾಗ (ಹುದೈಬಿಯಾ ದ ಕರಾರಿನಲ್ಲಿರುವ ಜನರು) ನಿಮ್ಮೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸುತ್ತಿರುವ ತನಕ ನೀವೂ ಅವರೊಂದಿಗೆ ಸರಿಯಾಗಿಯೇ ವ್ಯವಹರಿಸಿರಿ. ಯಥಾರ್ಥದಲ್ಲಿ ಅಲ್ಲಾಹ್ ನು (ಇಂತಹ ವಿಷಯಗಳಲ್ಲಿ) ಜಾಗರೂಕತೆ ಪಾಲಿಸುವವರನ್ನು ಮೆಚ್ಚುತ್ತಾನೆ. {7}

ಹೇಗೆ ತಾನೇ ಕರಾರು ಬಾಕಿ ಉಳಿದೀತು?! ನಿಮ್ಮ ಮೇಲೆ ಅವರೇನಾದರೂ ಪ್ರಾಬಲ್ಯ ಸಾಧಿಸಿದರೆ ನಿಮ್ಮೊಂದಿಗಿರುವ ಸಂಬಂಧವನ್ನಾಗಲೀ ಕರಾರಿನ ಹೊಣೆಗಾರಿಕೆಯನ್ನಾಗಲೀ ನಿಭಾಯಿಸುವವರು ಅವರಲ್ಲ. ಕೇವಲ ಬಾಯಿ ಮಾತಿನ ಮೂಲಕ ನಿಮ್ಮನ್ನು ತೃಪ್ತಿಪಡಿಸಲು ಯತ್ನಿಸುತ್ತಾರೆಯೇ ಹೊರತು ಅವರ ಹೃದಯಗಳು ಅದನ್ನು ಅಲ್ಲಗಳೆಯುತ್ತಿರುತ್ತವೆ! ಅವರಲ್ಲಿ ಹೆಚ್ಚಿನವರು ಒಪ್ಪಂದ ಭಂಜಕರಾಗಿದ್ದಾರೆ. {8}

ಅವರಾದರೋ ಅಲ್ಲಾಹ್ ನ ವಚನಗಳನ್ನು ಕ್ಷುಲ್ಲಕ ಲಾಭಕ್ಕಾಗಿ ವಿಕ್ರಯಿಸಿಕೊಂಡವರು ಮತ್ತು ಅವನು ತೋರಿದ ದಾರಿಯತ್ತ ಬಾರದಂತೆ ಜನರನ್ನು ತಡೆಯುವವರು. ನಿಜವಾಗಿಯೂ ಅದೆಂತಹ ಕೆಟ್ಟ ಕೆಲಸವಾಗಿದೆ ಅವರು ಮಾಡುತ್ತಿರುವುದು! {9}

ವಿಶ್ವಾಸಿಗಳ ವಿಷಯದಲ್ಲಂತು (ಹಗೆತನ ತೋರುವಾಗ) ಅವರು ಸಂಬಂಧಗಳನ್ನಾಗಲೀ ಕರಾರಿನ ಹೊಣೆಗಾರಿಕೆಯನ್ನಾಗಲೀ ಲೆಕ್ಕಿಸುವುದೇ ಇಲ್ಲ. (ಅನ್ಯಾಯವೆಸಗುವುದರಲ್ಲಿ) ಅವರು ಮಿತಿಮೀರಿ ಹೋಗಿರುವರು. {10}

(ಯಥಾರ್ಥ ಹಾಗಿದ್ದರೂ ಸಹ) ಅವರು ಪಶ್ಚಾತ್ತಾಪ ಪಟ್ಟುಕೊಂಡು ನಮಾಝ್ ಪಾಲಿಸುವವರಾಗಿ ಝಕಾತ್ ಪಾವತಿಸ ತೊಡಗಿದರೆ [ನೀವು ಅವರ ಹಿಂದೆ ಬೀಳದಿರಿ. ಏಕೆಂದರೆ] ಆಗ ಧಾರ್ಮಿಕವಾಗಿ ಅವರು ನಿಮಗೆ ಸಹೋದರರಾಗುತ್ತಾರೆ! ತಿಳಿಯ ಬಯಸುವ ಜನರಿಗಾಗಿ ದಿವ್ಯಾದೇದೇಶಗಳನ್ನು ನಾವು ವಿವರಿಸುತ್ತಿದ್ದೇವೆ. {11}

ಇನ್ನು ಅಂತಹ ಒಪ್ಪಂದದ ನಂತರ [ಅಂದರೆ ಮಹತ್ತರವಾದ ಹುದೈಬಿಯಾ ಸಂಧಿಯ ನಂತರ] ಅವರು ತಮ್ಮ ಪ್ರತಿಜ್ಞೆಯನ್ನು ಮುರಿದರೆ, ಮತ್ತು ನಿಮ್ಮನ್ನು ನಿಮ್ಮ ಧರ್ಮದ ಕಾರಣ ನಿಂದಿಸ ತೊಡಗಿದರೆ, ಧರ್ಮವಿರೋಧಿ ಕೃತ್ಯಗಳ ಮುಂಚೂಣಿಯ ನಾಯಕರೊಂದಿಗೇ ನೀವು ಯುದ್ಧ ಮಾಡಿರಿ! ಅವರ ಬಳಿ ಪ್ರತಿಜ್ಞೆಗಳಿಗೆ ಪ್ರಾಮುಖ್ಯತೆಯೇ ಇಲ್ಲ! (ನೀವು ಮುನ್ನುಗ್ಗಿದರೆ) ಅದು ಅವರನ್ನು ಹಿಮ್ಮೆಟ್ಟಿಸಬಹುದು. {12}

(ವಿಶ್ವಾಸಿಗಳೇ), ತಾವು ಮಾಡಿದ ಪ್ರಮಾಣಗಳನ್ನು ತಾವೇ ಉಲ್ಲಂಘಿಸಿತ್ತಿರುವ ಹಾಗೂ ಪೈಗಂಬರರನ್ನು (ಮಕ್ಕಾ ಪಟ್ಟಣದಿಂದ) ಹೊರಗಟ್ಟಲು ಪಿತೂರಿ ನಡೆಸಿದ್ದ, ಸಾಲದಕ್ಕೆ ನಿಮ್ಮೊಂದಿಗೆ (ಅತಿರೇಕವೆಸಗಲು) ಮೊದಲುಮಾಡಿದವರೂ ಅವರೇ ಆಗಿರುವಾಗ ಅಂತಹ ಒಂದು ಜನತೆಯೊಂದಿಗೆ ನೀವೇಕೆ ಯುದ್ಧ ಮಾಡಬಾರದು? ನಿಮಗೆ ಅವರ ಬಗ್ಗೆ ಭಯವಿದೆಯೇ? ನೀವು ಯಥಾರ್ಥ ವಿಶ್ವಾಸಿಗಳು ಹೌದಾದರೆ ನಿಮ್ಮ ಭಯಕ್ಕೆ ಹೆಚ್ಚು ಅರ್ಹನಾದವನು ಅಲ್ಲಾಹ್ ನು! {13}

(ನಿಜವಾದ ವಿಶ್ವಾಸಿಗಳೇ), ಅವರೊಂದಿಗೆ ಯುದ್ಧ ಮಾಡಿರಿ. ಅಲ್ಲಾಹ್ ನು ನಿಮ್ಮ ಕೈಗಳ ಮೂಲಕ ಅವರಿಗೆ ಶಿಕ್ಷೆ ಕೊಡಲಿರುವನು; (ಸೋಲುಣಿಸಿ) ಅವರನ್ನು ಅಪಮಾನಿಸಲಿರುವನು. ಅವರ ವಿರುದ್ಧ ಅವನು ನಿಮಗೆ (ಸತ್ಯಾಸತ್ಯತೆಯ ಸಂಘರ್ಷದಲ್ಲಿ) ವಿಜಯ ಸಾಧಿಸಲು ನೆರವಾಗಲಿರುವನು. ಹಾಗೆ ವಿಶ್ವಾಸಿಗಳಾದ ಜನರ ಹೃದಯಕ್ಕೆ ಅವನು ನೆಮ್ಮದಿ ಒದಗಿಸಲಿರುವನು ಹಾಗೂ ಅವರ ಹೃದಯಗಳಲ್ಲಿನ ಕೋಪೋದ್ರೇಕಗಳನ್ನು ಅವನು ಶಮನಗೊಳಿಸುವನು. ಇನ್ನು (ಮುಶ್ರಿಕ್ ಗಳ ಪೈಕಿಯ) ಯಾರ ಪಶ್ಚಾತ್ತಾಪವನ್ನು ಸ್ವೀಕರಿಸಲು ಅವನು ಬಯಸುವನೋ ಅಂತಹವರ ಪಶ್ಚಾತ್ತಪವನ್ನೂ ಸ್ವೀಕರಿಸುವನು. ನಿಜವಾಗಿಯೂ ಅಲ್ಲಾಹ್ ನು ಸರ್ವಜ್ಞನೂ ಮಹಾನ್ ವಿವೇಕಶಾಲಿಯೂ ಆಗಿರುವನು {14-15}

[ಹೊಸದಾಗಿ ಮುಸ್ಲಿಮರಾದ ಜನರೇ, ಅಲ್ಲಾಹ್ ನು ಯುದ್ಧಕ್ಕೆ ಕರೆಯಿತ್ತಾಗ] ನಿಮ್ಮ ಪೈಕಿ ನಿಜವಾಗಿ ಹೋರಾಡಿದವರು ಯಾರು, ಹಾಗೆಯೇ ಅಲ್ಲಾಹ್ ನ ಅವನ ಪೈಗಂಬರರ ಮತ್ತು ನೈಜ ವಿಶ್ವಾಸಿಗಳ ಹೊರತು ಇತರರನ್ನು ಆತ್ಮೀಯರನ್ನಾಗಿ ಮಾಡಿಕೊಳ್ಳದೆ ಇದ್ದವರು ಯಾರು ಎಂಬುದನ್ನು ಅಲ್ಲಾಹ್ ನು (ಪರೀಕ್ಷಿಸಿ) ನೋಡದೆ ನಿಮ್ಮನ್ನು ಹಾಗೆಯೇ ಸುಮ್ಮನೆ ಬಿಟ್ಟು ಬಡಲಾಗುವುದು ಎಂದು ನೀವು ಭಾವಿಸಿರುವಿರಾ? ಅಲ್ಲಾಹ್ ನಾದರೋ ನೀವು ಮಾಡುತ್ತಿದ್ದುದನ್ನು ಚೆನ್ನಾಗಿಯೇ ಬಲ್ಲವನು! {16}

[ವಿಶ್ವಾಸಿಗಳೇ, ಮಸ್ಜಿದ್ ಅಲ್ ಹರಾಮ್ ನ ಮೇಲ್ವಿಚಾರಕರು ಎಂಬ ಕಾರಣಕ್ಕಾಗಿ ನೀವು ಅವರೊಂದಿಗೆ ಅನುಕಂಪ ತೋರುತ್ತಿರುವಿರಾ? ಬೇಡ. ಏಕೆಂದರೆ] ಈ ಮುಶ್ರಿಕ್ ಗಳು ತಮ್ಮ ಧಿಕ್ಕಾರದ ಬಗ್ಗೆ ಸ್ವತಹ ತಾವೇ ಸಾಕ್ಷ್ಯ ಹೇಳಿಕೊಳ್ಳುತ್ತಿರುವಾಗ ಅಲ್ಲಾಹ್ ನ ಮಸೀದಿಗಳ ವ್ಯವಸ್ಥಾಪನೆ ನೋಡಿಕೊಳ್ಳಲು ಅವರು ಅರ್ಹತೆ ಪಡೆಯುವುದಿಲ್ಲ! (ಅಲ್ಲಾಹ್ ನಿಗೆ ಧಿಕ್ಕಾರ ತೋರಿ) ತಮ್ಮ ಸತ್ಕರ್ಮಗಳೆಲ್ಲವನ್ನೂ ವ್ಯರ್ಥವಾಗಿಸಿ ಕೊಂಡ ಜನರು ಇವರೇ ಆಗಿರುವರು; ಮತ್ತವರು ಸದಾ ಕಾಲ ನರಕದಲ್ಲಿಯೇ ಬಿದ್ದಿರುವರು. {17}

ನಿಜವಾಗಿ ಯಾರು ಅಲ್ಲಾಹ್ ನಲ್ಲಿ ಮತ್ತು ಅಂತ್ಯ ದಿನದಲ್ಲಿ ನಂಬಿಕೆ ಇಟ್ಟಿರುವರೋ ಹಾಗೂ ಅದರ ಜೊತೆಗೆ ನಮಾಝ್ ನಿರ್ವಹಿಸುವರೋ ಮತ್ತು ಝಕಾತ್ ಪಾವತಿಸುವರೋ; ಮತ್ತು ಅಲ್ಲಾಹ್ ನ ಹೊರತು ಬೇರೆ ಯಾರಿಗೂ ಭಯಪಡುವುದಿಲ್ಲವೋ ಅಂತಹವರು ಮಾತ್ರ ಅಲ್ಲಾಹ್ ನಿಗಾಗಿ ಇರುವ [ಮಸ್ಜಿದ್ ಅಲ್ ಹರಾಮ್ ಮತ್ತು ಇತರೆಲ್ಲ] ಮಸೀದಿಗಳ ವ್ಯವಸ್ಥಾಪನೆ ನೋಡಿಕೊಳ್ಳ ಬೇಕಾದವರು. ಅಂತಹ ಜನರು ಸರಿ ದಾರಿಯಲ್ಲಿ ನಡೆಯುತ್ತಾರೆ ಎಂದು ಭಾವಿಸಬಹುದು. {18}

ಹಜ್ಜ್ ಯಾತ್ರಿಕರಿಗೆ ಕುಡಿಯಲು ನೀರು ಒದಗಿಸುವುದು ಹಾಗೂ ಮಸ್ಜಿದ್ ಅಲ್ ಹರಾಮ್ ನ ಉಸ್ತುವಾರಿ ನೋಡಿಕೊಳ್ಳುವುದು - ಇವನ್ನು ಅಲ್ಲಾಹ್ ನಲ್ಲೂ ಅಂತ್ಯ ದಿನದಲ್ಲೂ ವಿಶ್ವಾಸವಿಟ್ಟು ಜೊತೆಗೆ ಅಲ್ಲಾಹ್ ನ ಮಾರ್ಗದಲ್ಲಿ ಸತತ ಪರಿಶ್ರಮ ನಡೆಸಿದಾತನ ಕರ್ಮಕ್ಕೆ ಸರಿಸಮವಾಗಿ ನೀವು (ಅರ್ಥಾತ್ ಮುಶ್ರಿಕ್ ಜನರು) ಮಾಡಿಕೊಂಡಿರುವಿರೇನು? ಅಲ್ಲ, ಅಲ್ಲಾಹ್ ನ ದೃಷ್ಟಿಯಲ್ಲಿ ಅವು ಸರಿಸಮವಾದ ಕರ್ಮಗಳಲ್ಲ! ಅಲ್ಲಾಹ್ ನು ಅನ್ಯಾಯವೆಸಗಿದ ಜನರಿಗೆ ಮಾರ್ಗದರ್ಶನ ಮಾಡುವುದಿಲ್ಲ. {19}

(ಪೈಗಂಬರರ ಬೋಧನೆಗಳನ್ನು ಸ್ವೀಕರಿಸಿ) ವಿಶ್ವಾಸಿಗಳಾಗಿ, ಅದಕ್ಕಾಗಿ (ನಾಡನ್ನೇ ಬಿಡಬೇಕಾಗಿ ಬಂದಾಗ) ನಾಡುಬಿಟ್ಟವರು, ಅಲ್ಲಾಹ್ ನ ಮಾರ್ಗದಲ್ಲಿ ತಮ್ಮ ಸಂಪತ್ತನ್ನೂ ಜೀವನವನ್ನೂ ತೊಡಗಿಸಿ ಅತಿಯಾಗಿ ಶ್ರಮಿಸಿದವರು ಯಾರೋ ಅವರಿಗೆ ಅಲ್ಲಾಹ್ ನ ಬಳಿ ಮಹತ್ತರವಾದ ಸ್ಥಾನಮಾನಗಳಿವೆ! ನಿಜವಾದ ವಿಜಯಿಗಳು ಅವರೇ ಆಗಿರುವರು! ಅವರ ಕರ್ತಾರನು ಅವರಿಗೆ ತನ್ನ ಅನುಗ್ರಹದ, ಮೆಚ್ಚುಗೆಯ ಹಾಗೂ ಸದಾ ಕಾಲ ಉಳಿಯುವ ಆನಂದದಾಯಕ ಸ್ವರ್ಗೋದ್ಯಾನಗಳ ಸಿಹಿ ಸುದ್ದಿ ನೀಡುತ್ತಿದ್ದಾನೆ. ಅದರಲ್ಲಿ ಅವರು ಎಂದೆಂದಿಗೂ ನೆಲೆಸಲಿರುವರು! ಹೌದು, ಮಹತ್ತರವಾದ ಪ್ರತಿಫಲಗಳು ಇರುವುದು ಯಥಾರ್ಥದಲ್ಲಿ ಆ ಅಲ್ಲಾಹ್ ನ ಬಳಿಯೇ! {20-22}

ವಿಶ್ವಾಸಿಗಳಾದ ಜನರೇ, ನಿಮ್ಮ ಪಿತರಾಗಲಿ ನಿಮ್ಮ ಸಹೋದರರಾಗಲಿ ಧರ್ಮವಿಶ್ವಾಸಕ್ಕೆ ಬದಲು ಧಿಕ್ಕಾರದ ಮನೋವೃತ್ತಿಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂದಾದರೆ ನೀವು (ರಕ್ತಸಂಬಂಧದ ಹೊರತಾಗಿಯೂ) ಅವರನ್ನು ಆಪ್ತರನ್ನಾಗಿ ಇರಿಸಿ ಕೊಳ್ಳಬಾರದು. ಇನ್ನು ನಿಮ್ಮಲ್ಲಿ ಯಾರಾದರೂ ಅವರನ್ನು ಆಪ್ತರನ್ನಾಗಿ ಸ್ವೀಕರಿಸಿದರೆ ಅಂತಹವರು ಅಕ್ರಮಿಗಳಾಗುವರು. {23}

ಒಂದು ವೇಳೆ ನಿಮ್ಮ ತಂದೆ ತಾತಂದಿರು, ನಿಮ್ಮ ಮಕ್ಕಳು, ನಿಮ್ಮ ಅಣ್ಣ ತಮ್ಮಂದಿರು, ನಿಮ್ಮ ಮಡದಿಯರು, ನಿಮ್ಮ ಒಡನಾಟದಲ್ಲಿರುವ ನೆಂಟರಿಷ್ಟರು, ನೀವು ಸಂಪಾದಿಸಿಟ್ಟ ನಿಮ್ಮ ಸಂಪತ್ತು, ನಷ್ಟ ಸಂಭವಿಸೀತು ಎಂದು ನೀವು ಆತಂಕ ಪಡುವ ನಿಮ್ಮ ವ್ಯಾಪಾರ-ವಹಿವಾಟು, ನೀವು ಅತ್ಯಂತ ಇಷ್ಟಪಡುವ ನಿಮ್ಮ ಮನೆಗಳು - ಇವೆಲ್ಲ ನಿಮಗೆ ಅಲ್ಲಾಹ್ ಮತ್ತು ಅವನ ದೂತ ಹಾಗೂ ಅವನ ಮಾರ್ಗದಲ್ಲಿ ಯುದ್ಧ ಮಾಡುವುದಕ್ಕಿಂತ ಹೆಚ್ಚು ಇಷ್ಟಕರ ಸಂಗತಿಗಳಾದರೆ ನಿಮ್ಮ ಕುರಿತಂತೆ ಅಲ್ಲಾಹ್ ನು ತನ್ನ ಆದೇಶ ಪ್ರಕಟಿಸುವ ತನಕ ಕಾಯಿರಿ ಎಂದು (ಪೈಗಂಬರರೇ) ನೀವು ಅವರಿಗೆ (ಎಚ್ಚರಿಕೆಯ) ಸೂಚನೆ ನೀಡಿರಿ. ಅಲ್ಲಾಹ್ ನು ಅವಿಧೇಯರಾದ ಒಂದು ಜನವರ್ಗಕ್ಕೆ ಸರಿದಾರಿ ತೋರಿಸಲಾರ (ಎಂಬುದನ್ನೂ ತಿಳಿಸಿ ಬಿಡಿ). {24}

(ವಿಶ್ವಾಸಿಗಳೇ), ಯಥಾರ್ಥವೇನೆಂದರೆ ಅನೇಕ ಯುದ್ಧರಂಗಗಳಲ್ಲಿ ಅಲ್ಲಾಹ್ ನೇ ನಿಮಗೆ ಸಹಾಯ ಮಾಡಿದ್ದನು. (ಇದೀಗ ತಾನೇ ನಡೆದ) ಹುನೈನ್ ಯುದ್ಧದ ದಿನವೂ ಸಹ! ನಿಮ್ಮ ಸಂಖ್ಯಾಬಲ ನಿಮ್ಮನ್ನು ಪುಳಕಿತರನ್ನಾಗಿ ಮಾಡಿದ್ದರೂ ಸಹ ಅದು ನಿಮ್ಮ ಯಾವ ಪ್ರಯೋಜನಕ್ಕೂ ಬಾರದಾಯಿತು! ಮಾತ್ರವಲ್ಲ ಆ ಪ್ರದೇಶವು ಅದರ ವಿಶಾಲತೆಯ ಹೊರತಾಗಿಯೂ ನಿಮ್ಮ ಪಾಲಿಗೆ ಇಕ್ಕಟ್ಟಾಗಿ ಪರಿಣಮಿಸಿತು! ಮತ್ತು ನೀವು ಹಿಮ್ಮೆಟ್ಟಿ ಬೆನ್ನು ತಿರುಗಿಸಿ ಪಲಾಯನ ಮಾಡತೊಡಗಿದ್ದಿರಿ. ತದನಂತರ ಅಲ್ಲಾಹ್ ನು ತನ್ನ ದೂತ (ಮುಹಮ್ಮದ್ ಪೈಗಂಬರರಿಗೆ) ಹಾಗೂ ವಿಶ್ವಾಸಿಗಳ ತಂಡಕ್ಕೆ ತನ್ನ ವತಿಯಿಂದ ಒಂದು ರೀತಿಯ ಪ್ರಶಾಂತತೆಯನ್ನು ಇಳಿಸಿ ಕೊಟ್ಟನು. ಜೊತೆಗೆ ನಿಮ್ಮ ಕಣ್ಣಿಗೆ ಅಗೋಚರವಾದ ಅದೃಶ ದಂಡುಗಳನ್ನು ಇಳಿಸಿ (ಪೈಗಂಬರರ ಬೋಧನೆಯನ್ನು) ಉದ್ಧಟತನದಿಂದ ಧಿಕ್ಕರಿಸಿದ ಜನರನ್ನು ಶಿಕ್ಷಿಸಿದನು. ಹೌದು, ಧಿಕ್ಕಾರ ತೋರಿದ ಜನರಿಗೆ ಅದೇ ತಕ್ಕ ಶಾಸ್ತಿಯಾಗಿತ್ತು. {25-26}

ಅದಾದ ನಂತರವೂ ಸಹ ಅಲ್ಲಾಹ್ ನು ಯಾರಿಗೆ ಕೃಪೆತೋರ ಬಯಸುತ್ತಾನೋ ಅವರಿಗೆ ಕೃಪೆ ತೋರುತ್ತಾನೆ. ಅಲ್ಲಾಹ್ ನಾದರೋ ಬಹಳವಾಗಿ ಕ್ಷಮಿಸುವವನೂ ನಿರಂತರ ಕರುಣೆ ತೋರುವವನೂ ಆಗಿರುವನು. {27}

ಓ ವಿಶ್ವಾಸಿಗಳೇ! [ಅಲ್ಲಾಹ್ ನ ಏಕತ್ವವನ್ನು ಎಷ್ಟುಮಾತ್ರಕ್ಕೂ ಒಪ್ಪದ, ಅರೇಬಿಯಾ ಪ್ರದೇಶದ] ಈ ಮುಶ್ರಿಕ್ ಜನರು (ಆಧ್ಯಾತ್ಮಿಕವಾಗಿ) ಸಂಪೂರ್ಣ ಮಲಿನ ಗೊಂಡಿರುವರು. ಆದ್ದರಿಂದ ಅವರಿಗೆ (ರಿಯಾಯಿತಿ ನೀಡಲಾದ) ಈ ವರ್ಷದ ನಂತರ ಅವರು ಮಸ್ಜಿದ್ ಅಲ್ ಹರಾಮ್ ನ ಸಮೀಪಕ್ಕೂ ಬರುವಂತಿಲ್ಲ! ಇನ್ನು [ಅವರ ಮೇಲೆ ಹೇರಲಾದ ನಿಷೇಧದ ಕಾರಣ ವ್ಯಾಪಾರ ವಹಿವಾಟು ಕುಂಠಿತವಾಗಿ] ದಾರಿದ್ರ್ಯಕ್ಕೆ ತುತ್ತಾಗುವ ಭೀತಿ ನಿಮಗುಂಟಾದರೆ (ಅಂಜಬೇಡಿ), ಅಲ್ಲಾಹ್ ನು ಇಚ್ಛಿಸಿದರೆ ಶೀಘ್ರದಲ್ಲೆ ನಿಮ್ಮನ್ನು ತನ್ನ ಕೃಪೆಯಿಂದ ಸಂಪನ್ನಗೊಳಿಸುವನು. ಅಲ್ಲಾಹ್ ನು ಎಲ್ಲಾ ತಿಳಿದವನೂ ಬಹಳ ವಿವೇಕಪೂರ್ಣನೂ ಆಗಿರುವನು. {28}

[ವಿಶ್ವಾಸಿಗಳೇ, ನೀವು ಈ ಮುಶ್ರಿಕ್ ಜನರೊಡನೆ ಯುದ್ಧ ಮಾಡುವುದರ ಜೊತೆಜೊತೆಗೇ] ಯಾರಿಗೆ ದಿವ್ಯಗ್ರಂಥ ನೀಡಲ್ಪಟ್ಟಿತ್ತೋ ಅವರ ಪೈಕಿ ಅಲ್ಲಾಹ್ ನನ್ನೂ ಅಂತ್ಯದಿನವನ್ನೂ ಒಪ್ಪದ, ಅಲ್ಲಾಹ್ ಮತ್ತು ಅವನ ದೂತ (ಮುಹಮ್ಮದ್ ಪೈಗಂಬರರು) ಏನನ್ನು ನಿಷೇಧಿಸಿರುವರೋ ಅವನ್ನು ತಮ್ಮ ಮೇಲೆ ನಿಷೇಧಿಸಿಕೊಳ್ಳದ, (ಪೈಗಂಬರರು ಬೋಧಿಸಿದ) ನಿಜಧರ್ಮವನ್ನು ತಮ್ಮ ಆಚಾರ ಧರ್ಮವಾಗಿ ಮಾಡಿಕೊಳ್ಳದವರೊಡನೆ ಸಹ, ಅವರು [ಮದೀನಾ ರಾಜ್ಯದ ಆಡಳಿತ ವ್ಯವಸ್ಥೆಗೆ ತಲೆಬಾಗಿ] ಜಿಝಿಯಾ ತೆರಿಗೆಯನ್ನು ದೈನ್ಯೆತೆಯಿಂದ ಕೈಯ್ಯಾರೆ ಪಾವತಿಸುವ ತನಕ ಯುದ್ಧ ಮಾಡಿರಿ. {29}

[ತಮ್ಮ ಧರ್ಮವನ್ನು ಈ ಜನರು ಎಷ್ಟರ ಮಟ್ಟಿಗೆ ವಿಕೃತಗೊಳಿಸಿದ್ದಾರೆಂದರೆ] ಉಝೈರ್ [ಬೈಬಲ್ ನ ಎಝ್ರಾ] ಎಂಬವರನ್ನು ಅಲ್ಲಾಹ್ ನ ಪುತ್ರನೆಂದು [ಮದೀನಾ ದ ಅರಬ್] ಯಹೂದಿಗಳು ಹೇಳುತ್ತಿದ್ದಾರೆ ಮತ್ತು ಏಸು ಕ್ರಿಸ್ತರನ್ನು ಅಲ್ಲಾಹ್ ನ ಪುತ್ರನೆಂದು ಕ್ರೈಸ್ತರೂ ಸಾರಿದ್ದಾರೆ! ಅದೆಲ್ಲ ಕೇವಲ ಬಾಯಿ ಮೂಲಕ ಅವರಾಡುವ (ಆಧಾರ ರಹಿತ) ಮಾತುಗಳಷ್ಟೆ. ಇದಕ್ಕಿಂತ ಮೊದಲು ಸತ್ಯವನ್ನು ಧಿಕ್ಕರಿಸಿದವರ ಹಾದಿಯನ್ನು ಇವರೂ ಅನುಕರಿಸುತ್ತಿದ್ದಾರಷ್ಟೆ! ಅವರು ಅಲ್ಲಾಹ್ ನ ಶಾಪಕ್ಕೆ ಗುರಿಯಾದರು. ಅದು ಹೇಗೆ (ಜನರು) ದಾರಿ ತಪ್ಪುತ್ತಾರೋ! {30}

ತಮ್ಮಲ್ಲಿಯ ರಬ್ಬಿಗಳನ್ನೂ ಪಾದ್ರಿಗಳನ್ನೂ ಈ ಜನರು ಅಲ್ಲಾಹ್ ನಿಗೆ ಹೊರತಾಗಿ ದೇವರಂತೆ ಸ್ವೀಕರಿಸಿದ್ದಾರೆ; ಮತ್ತು ಮರ್‌ಯಮ್ ರ ಪುತ್ರರಾದ ಏಸುವನ್ನು ಕೂಡ! ನಿಜವೇನೆಂದರೆ ಆ ಒಬ್ಬ ದೇವನ ಹೊರತು ಉಳಿದ ಯಾರನ್ನೂ ಆರಾಧಿಸಬಾರದು; ಅವನೊಬ್ಬನ ಹೊರತು ಬೇರೆ ಯಾರೂ ಪೂಜನೀಯರಲ್ಲ ಎಂಬುದನ್ನೇ ಅವರಿಗೆ ಸಹ [ಅವರ ಗ್ರಂಥಗಳಲ್ಲಿ] ಬೋಧಿಸಲಾಗಿತ್ತು. ಅವನ ದೇವತ್ವದಲ್ಲಿ ಅವರು ಯಾರನ್ನೆಲ್ಲ ಸೇರಿಸಿಕೊಂಡಿದ್ದಾರೋ ಅದರಿಂದ ಅವನು ಸಂಪೂರ್ಣ ಮುಕ್ತನು! {31}

ಅಲ್ಲಾಹ್ ನ ಪ್ರಕಾಶವನ್ನು ತಮ್ಮ ಬಾಯಿ ಮೂಲಕ ಊದಿ ನಂದಿಸಲು ಅವರು ಹವಣಿಸುತ್ತಿದ್ದಾರೆ! ಆದರೆ ಅಲ್ಲಾಹ್ ನು ತನ್ನ ಪ್ರಕಾಶವನ್ನು [ಅರ್ಥಾತ್ ಇಸ್ಲಾಮ್ ಧರ್ಮವನ್ನು ನಾಡಿನಲ್ಲಿ] ಪರಿಪೂರ್ಣಗೊಳಿಸದೆ ಬಿಡಲಾರ; ಸತ್ಯದ ಈ ವಿರೋಧಿಗಳಿಗೆ ಅದು ಎಷ್ಟೇ ಅಸಹ್ಯವಾದರೂ ಸರಿ! {32}

[ಈ ಪ್ರದೇಶದಲ್ಲಿ ಆಚರಣೆಯಲ್ಲಿರುವ] ಸಕಲ ಧರ್ಮಗಳನ್ನು ಮೀರಿ ನಿಲ್ಲುಲು ಸೂಕ್ತ ಮಾರ್ಗದರ್ಶನ ಮತ್ತು ಸತ್ಯವಾದ ಧರ್ಮದೊಂದಿಗೆ ತನ್ನ ದೂತ (ಮುಹಮ್ಮದ್ ಪೈಗಂಬರರನ್ನು) ಕಳುಹಿಸಿರುವವನು ಆ ಅಲ್ಲಾಹ್ ನೇ (ಎಂಬುದು ನಿಮಗೆ ತಿಳಿದಿರಲಿ)! ಅದು ಈ ಮುಶ್ರಿಕ್ ಗಳಿಗೆ [ಅರ್ಥಾತ್ ಅಲ್ಲಾಹ್ ನ ದೇವತ್ವದಲ್ಲಿ ಇತರರನ್ನೂ ಸೇರಿಸಿಕೊಂಡಿರುವ ಈ ಅರಬರಿಗೆ] ಎಷ್ಟು ಅಪ್ರಿಯವಾದರೂ ಸರಿ! {33}

ಓ ವಿಶ್ವಾಸಿಗಳೇ! [ಗ್ರಂಥಾಧಾರಿತ ಧರ್ಮಕ್ಕೆ ಸೇರಿದ] ರಬ್ಬಿಗಳು ಮತ್ತು ಪುರೋಹಿತರುಗಳಲ್ಲಿ ಹೆಚ್ಚಿನವರು ಜನಸಾಮಾನ್ಯರ ಸಂಪತ್ತನ್ನು ಅನುಚಿತ ವಿಧಾನಗಳ ಮೂಲಕ ಕಬಳಿಸುತ್ತಾರೆ ಹಾಗೂ ಜನರು ಅಲ್ಲಾಹ್ ನ ಮಾರ್ಗದತ್ತ ಬಾರದಂತೆ ಅಡ್ಡಿ ಪಡಿಸುತ್ತಾರೆ. (ಅವರಿಗೂ, ಮತ್ತು) ಯಾರೆಲ್ಲ ಚಿನ್ನ ಬೆಳ್ಳಿಗಳನ್ನು ಕೂಡಿಟ್ಟು ಕೊಳ್ಳುತ್ತಾರೋ ಮತ್ತು ಅದನ್ನು ಅಲ್ಲಾಹ್ ನ ಮಾರ್ಗದಲ್ಲಿ ವಿನಿಯೋಗಿಸುವುದಿಲ್ಲವೋ ಅಂತಹವರಿಗೂ ಇರುವ ನೋವುಭರಿತ ಶಿಕ್ಷೆಯ ಕುರಿತು (ಪೈಗಂಬರರೇ ನೀವು) ಮುನ್ನೆಚ್ಚರಿಕೆ ನೀಡಿರಿ. {34}

ಚಿನ್ನ ಬೆಳ್ಳಿಯ ಆ ಸಂಗ್ರಹವನ್ನೇ ನರಕದ ಬೆಂಕಿಯಲ್ಲಿ ಕಾಯಿಸಿ ಅಂತಹವರ ಹಣೆ, ಮಗ್ಗಲು ಮತ್ತು ಬೆನ್ನುಗಳ ಮೇಲೆ ಬರೆ ಹಾಕಲ್ಪಡುವ ಆ ದಿನ! ನೀವು ನಿಮಗಾಗಿ ದಾಸ್ತಾನು ಗೊಳಿಸುತ್ತಿದ್ದುದು ಇದನ್ನೇ! ನೀವು ನಿಮಗಾಗಿ ದಾಸ್ತಾನುಗೊಳಿಸಿದ್ದುದರ ರುಚಿಯನ್ನು (ಇಂದು) ನೀವೇ ಸವಿಯಿರಿ (ಎಂದು ಹೇಳಲಾಗುವ ದಿನವದು)! {35}

[ವಿಶ್ವಾಸಿಗಳೇ, ಅಂತಹವರೊಂದಿಗೆ ನೀವು ಹೋರಾಡಿರಿ. ಮತ್ತು ವರ್ಷದ ತಿಂಗಳುಗಳ ಸಂಖ್ಯೆ ಅರಬರ ಮೂಢ ಸಂಪ್ರದಾಯದಂತೆ ಹದಿಮೂರೋ ಹದಿನಾಲ್ಕೋ ಖಂಡಿತಾ ಅಲ್ಲ! ಬದಲಾಗಿ] ಅಲ್ಲಾಹ್ ನ ನಿಯಮದ ಪ್ರಕಾರ ತಿಂಗಳುಗಳ ಸಂಖ್ಯೆ ಭೂಮಿ ಆಕಾಶಗಳನ್ನು ಸೃಷ್ಟಿಸಿದ ದಿನದಿಂದಲೇ ಹನ್ನೆರಡು ಆಗಿರುತ್ತದೆ. ಅದರಲ್ಲಿ ನಾಲ್ಕು ಯುದ್ಧ ನಿಷೇಧಿಸಲ್ಪಟ್ಟ ಪವಿತ್ರ ತಿಂಗಳುಗಳು. ಅದುವೇ ಋಜುವಾದ ಧಾರ್ಮಿಕ ನಿಯಮವಾಗಿದೆ. [ಅನುಲ್ಲಂಘನೀಯವಾದ ಆ ತಿಂಗಳುಗಳಲ್ಲಿ ಯುದ್ಧಕ್ಕೆ ಮೊದಲು ಮಾಡಿ] ನೀವು ಸ್ವತಃ ನಿಮ್ಮ ಮೇಲೆಯೇ ಅನ್ಯಾಯವೆಸಗದಿರಿ. ಮುಶ್ರಿಕ್ ಗಳು ಎಲ್ಲರೂ ಒಟ್ಟಾಗಿ ನಿಮ್ಮ ಮೇಲೆ ಯುದ್ಧ ಮಾಡುವಂತೆಯೇ ನೀವೆಲ್ಲರೂ ಒಟ್ಟಾಗಿಯೇ ಅವರೊಂದಿಗೆ ಯುದ್ಧ ಮಾಡಿರಿ. ಆದರೆ ನಿಮಗೆ ತಿಳಿದಿರಲಿ, ಅಲ್ಲಾಹ್ ನು ಅನ್ಯಾಯದಿಂದ ದೂರ ಉಳಿಯುವವರ ಜೊತೆಗಿರುವನು. {36}

ನಿಜವಾಗಿ [ಹಜ್ಜ್ ಹಾಗೂ ಯುದ್ಧ ನಿಷೇಧಿತ ತಿಂಗಳುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ] ಹಿಂದೆ ಮುಂದೆ ಸರಿಸಿ ಕೊಳ್ಳುವುದು ಅಧಾರ್ಮಿಕ ಆಚಾರಗಳ ಸಾಲಿಗೆ ಮತ್ತೊಂದು ಸೇರ್ಪಡೆಯಷ್ಟೆ! ಯುದ್ಧ ಸಲ್ಲದು ಎಂದು ಅಲ್ಲಾಹ್ ನು ಸಾರಿದ ತಿಂಗಳುಗಳ ಸಂಖ್ಯೆಯನ್ನು ಸರಿ ಹೊಂದಿಸಲಿಕ್ಕೂ, ಜೊತೆಗೇ ಅಲ್ಲಾಹ್ ನು ನಿಷೇಧಿಸಿರುವುದನ್ನು ಧರ್ಮಬದ್ಧಗೊಳಿಸಲಿಕ್ಕೂ, ಯುದ್ಧ ನಿಷೇಧಿತ ತಿಂಗಳುಗಳನ್ನು ಒಂದು ವರ್ಷ ಯುದ್ಧಕ್ಕೂ ಮತ್ತೊಂದು ವರ್ಷ ಯುದ್ಧ ವಿರಾಮಕ್ಕೂ ಬಳಸಿಕೊಳ್ಳುವ ಮೂಲಕ ಆ ಅಧರ್ಮೀಯರು ತಪ್ಪುದಾರಿಗೆ ಎಳೆಯಲ್ಪಟ್ಟಿರುವರು. ಅವರೆಸಗುವ ಅಂತಹ ಕೆಟ್ಟ ಕೃತ್ಯಗಳನ್ನು ಅವರ ಪಾಲಿಗೆ (ಸೈತಾನನು) ಅಲಂಕೃತಗೊಳಿಸಿ ತೋರಿಸಿದ್ದಾನೆ. ಹೌದು, ಧಿಕ್ಕಾರವನ್ನೇ ಮೈವೆತ್ತ ಅಧರ್ಮಿ ಜನರಿಗೆ ಅಲ್ಲಾಹ್ ನು ಸರಿದಾರಿ ತೋರಿಸಲಾರ! {37}

ವಿಶ್ವಾಸಿಗಳಾದ ಓ ಜನರೇ! ಅದೇನಾಗಿ ಬಿಟ್ಟಿದೆ ನಿಮಗೆ?! ಅಲ್ಲಾಹ್ ನ ಮಾರ್ಗದಲ್ಲಿ ಕಾರ್ಯಾಚರಣೆಗೆ ಹೊರಡಿರಿ ಎಂದು ನಿಮಗೆ ಆದೇಶಿಸಲಾದಾಗ ನೀವು (ಹೊರಟು ನಿಲ್ಲುವ ಬದಲು) ನೆಲವನ್ನು ಕಚ್ಚಿ ಹಿಡಿದು ಕೊಳ್ಳುತ್ತೀರಿ! ಪರಲೋಕಕ್ಕೆ ಬದಲು ನೀವು ಇಹಲೋಕದ ಜೀವನನನ್ನೇ ಮೆಚ್ಚಿ ಕೊಂಡಿರುವಿರೇನು? ಪರಲೋಕ ಜೀವನದ ಮುಂದೆ ಐಹಿಕ ಜೀವನದ ಸುಖ ಸೌಲಭ್ಯಗಳೆಲ್ಲವೂ ಬಹಳ ತುಚ್ಛ! ಇನ್ನು ನೀವು ಕಾರ್ಯಾಚರಣೆಗೆ ಹೊರಡದಿದ್ದರೆ ಅಲ್ಲಾಹ್ ನು ಬಹಳವಾಗಿ ನೋವಿಸುವ ಶಿಕ್ಷೆಯನ್ನು ನಿಮಗೆ ನೀಡುವನು ಮಾತ್ರವಲ್ಲ ನಿಮ್ಮನ್ನು ಕೈಬಿಟ್ಟು ಬೇರೊಂದು ಜನವರ್ಗವನ್ನು ನಿಮ್ಮ ಸ್ಥಾನದಲ್ಲಿ ತಂದು ನಿಲ್ಲಿಸುವನು; ಅವನಿಗೆ ಯಾವ ನಷ್ಟವನ್ನು ಮಾಡಲೂ ನಿಮ್ಮಿಂದಾಗದು! ಅಲ್ಲಾಹ್ ನು ಸಕಲ ವಿಷಯಗಳಲ್ಲೂ ಸಂಪೂರ್ಣವಾದ ಸಾಮರ್ಥ್ಯವನ್ನು ಹೊಂದಿದವನು. {38-39}

ಇನ್ನು ನೀವು ಪೈಗಂಬರರಿಗೆ ನೆರವಾಗದಿದ್ದರೆ [ಚಿಂತಿಲ್ಲ. ಆದರೆ ನಿಮಗೆ ತಿಳಿದಿರಲಿ, ಮಕ್ಕಾ ದಲ್ಲಿ ಅವರ ಸಂದೇಶವನ್ನು] ಧಿಕ್ಕರಿಸಿದವರು ಅವರನ್ನು ನಾಡಿನಿಂದ ಹೊರಗಟ್ಟಿದ್ದ ಸಂದರ್ಭದಲ್ಲೂ ಅವರಿಗೆ ಅಲ್ಲಾಹ್ ನು ಸಹಾಯ ಮಾಡಿದ್ದನು! ಆಗ ಅವರು ಗುಹೆಯೊಳಗೆ (ಅವಿತಿದ್ದ) ಇಬ್ಬರಲ್ಲಿ ಎರಡನೆಯವರಾಗಿದ್ದರು! ನೀವು ಅಂಜಬೇಡಿ; ನಮ್ಮೊಂದಿಗೆ ಅಲ್ಲಾಹ್ ನು ಇದ್ದಾನೆ ಎಂದು ತಮ್ಮ ಸಂಗಾತಿಗೆ ಪೈಗಂಬರರು (ಗುಹೆಯಲ್ಲಿ) ಸಾಂತ್ವನ ಹೇಳುತ್ತಿದ್ದ ಸಂದರ್ಭವದು! ನಂತರ ಅಲ್ಲಾಹ್ ನು ಅವರಿಗೆ ತನ್ನ ವತಿಯಿಂದ ಮನಃಶಾಂತಿಯನ್ನು ಇಳಿಸಿಕೊಡುವುದರ ಜೊತೆಗೆ ನಿಮ್ಮ ಕಣ್ಣಿಗೆ ಕಾಣಿಸದಂತಹ ಅದೃಶ ದಂಡುಗಳ ಮೂಲಕ ನೆರವು ಒದಗಿಸಿದ್ದನು. ಮಾತ್ರವಲ್ಲ, (ಅವರನ್ನು) ತಿರಸ್ಕರಿಸಿದ ಆ ಜನರ ಮಾತನ್ನು ಕೀಳಾಗಿಸಿ ಬಿಟ್ಟನು. ಅಲ್ಲಾಹ್ ನ ಮಾತೇ ಮೇಲಾಯಿತು. ಅಲ್ಲಾಹ್ ನಾದರೋ ಅತ್ಯಂತ ಪ್ರಬಲನು ಮತ್ತು ಮಹಾ ಧೀಮಂತನು. {40}

ಹಗುರವೆನಿಸಿದರೂ ಭಾರವೆನಿಸಿದರೂ [ಅರ್ಥಾತ್ ಸುಲಭವಾದರೂ ಕಷ್ಟವಾದರೂ, ಯುದ್ಧ ಸಾಮಗ್ರಿಗಳು ಕಡಿಮೆ ಇದ್ದರೂ ಹೆಚ್ಚಿದ್ದರೂ ಹಿಂದೇಟು ಹಾಕದೆ] ಕಾರ್ಯಾಚರಣೆಗೆ ನೀವು ಹೊರಡಿರಿ; ಮತ್ತು ಅಲ್ಲಾಹ್ ನ ಮಾರ್ಗದಲ್ಲಿ ನಿಮ್ಮ ಸಂಪತ್ತನ್ನೂ ಸ್ವತಃ ನಿಮ್ಮನ್ನೂ ತೊಡಗಿಸಿ ಹೋರಾಡಿರಿ. ನೀವು ತಿಳಿದವರಾದರೆ ಹಾಗೆ ಮಾಡುವುದೇ ನಿಮ್ಮ ಪಾಲಿಗೆ ಒಳ್ಳೆಯದು. {41}

ಪೈಗಂಬರರೇ, ಒಂದು ವೇಳೆ ಲಾಭವು ಕೂಡಲೇ ಸಿಗುವಂತಿದ್ದರೆ ಹಾಗೂ ಯಾತ್ರೆಯು ತ್ರಾಸದಾಯಕವಾಗಿ ಇರದಿದ್ದರೆ ಈ ಜನರು ನಿಮ್ಮನ್ನು ಹಿಂಬಾಲಿಸಿ ಯುದ್ಧಕ್ಕೆ ಹೊರಟೇ ಬಿಡುತ್ತಿದ್ದರು. ಆದರೆ ಅವರಿಗೆ ಅದು ದೂರದ ದುಸ್ತರವಾದ ಯಾತ್ರೆಯಾಗಿ ಕಂಡಿತು! ಒಂದು ವೇಳೆ ನಮಗದು ಸಾಧ್ಯವಾಗಿದ್ದರೆ ನಾವು ಖಂಡಿತಾ ನಿಮ್ಮೊಂದಿಗೆ ಯುದ್ಧಕ್ಕೆ ಹೊರಡುತ್ತಿದ್ದೆವು ಎಂದು ಅವರೀಗ ಅಲ್ಲಾಹ್ ನ ಮೇಲೆ ಆಣೆ ಹಾಕಿ ಹೇಳಲಿದ್ದಾರೆ! ಅವರು ತಮ್ಮನ್ನು ತಾವೇ ನಾಶ ಮಾಡಿಕೊಂಡರು! ಹೌದು, ಅವರು ಸುಳ್ಳುಗಾರರೆಂದು ಅಲ್ಲಾಹ್ ನಿಗೆ ತಿಳಿದೇ ಇದೆ! {42}

ಪೈಗಂಬರರೇ, ನಿಮ್ಮಿಂದ ಸಂಭವಿಸಿದ (ಪ್ರಮಾದವನ್ನು) ಅಲ್ಲಾಹ್ ನು ಕ್ಷಮಿಸಲಿ! ಸತ್ಯ ಹೇಳುವವರು ಯಾರು ಎಂದು ನಿಮಗೆ ಸ್ಪಷ್ಟವಾಗುವ ತನಕ ಹಾಗೂ ಸುಳ್ಳು ಹೇಳುವವರು ಯಾರು ಎಂದು ನೀವೇ ತಿಳಿದುಕೊಳ್ಳೂವ ತನಕ [ಅವರೊಡ್ಡಿದ ನೆಪವನ್ನು ನಂಬಿ ಯುದ್ಧಯಾತ್ರೆಯಲ್ಲಿ ಪಾಲ್ಗೊಳ್ಳದಿರಲು] ನೀವು ಅವರಿಗೆ ಅನುಮತಿ ನೀಡಿದ್ದೇಕೆ? ಅಲ್ಲಾಹ್ ನಲ್ಲಿ ಹಾಗೂ ಅಂತ್ಯದಿನದಲ್ಲಿ ನಂಬಿಕೆ ಇಟ್ಟವರು ತಮ್ಮ ತನು ಧನಗಳನ್ನು ಹೋರಾಟಕ್ಕೆ ಬಳಸದೆ ಇರಲು ನಿಮ್ಮೊಂದಿಗೆ ಎಂದೂ ಅನುಮತಿ ಕೋರುವುದಿಲ್ಲ! ಇನ್ನು ನಿಜವಾದ ಧರ್ಮನಿಷ್ಠರ ಬಗ್ಗೆ ಅಲ್ಲಾಹ್ ನಿಗೆ ತಿಳಿದೇ ಇದೆ. {43-44}

ಅಲ್ಲಾಹ್ ನಲ್ಲಿ ಮತ್ತು ಅಂತ್ಯದಿನದಲ್ಲಿ ನಂಬಿಕೆ ಇರದವರು ಮಾತ್ರವೇ ವಿನಾಯಿತಿ ನೀಡುವಂತೆ ನಿಮ್ಮೊಂದಿಗೆ ಕೇಳುವರು. ಅಂತಹವರ ಹೃದಯಗಳು ಅನಿಶ್ಚಿತತೆಗೆ ತುತ್ತಾಗಿರುತ್ತವೆ. ಅಂತಹವರು ಸಂದಿಗ್ಧತೆಯಲ್ಲಿ ತೊಳಲಾಡುತ್ತಿರುತ್ತಾರೆ. {45}

ಕಾರ್ಯಾಚರಣೆಗೆ ಹೊರಡುವ ನಿಜವಾದ ಉದ್ದೇಶವು ಅವರಿಗೆ ಇದ್ದಿದ್ದರೆ ಅವರು ಅದಕ್ಕಾಗಿ ಏನಾದರೂ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು! ಹಾಗಿರುವಾಗ ಅಂತಹವರು ತೆರಳುವುದು ಅಲ್ಲಾಹ್ ನಿಗೆ ಇಷ್ಟವಾಗಲಿಲ್ಲ. ಆದ್ದರಿಂದ ಅವರು ಹಿಂದುಳಿಯುವಂತೆ ಅವನು ಮಾಡಿದನು; (ಹೊರಡಲಾಗದೆ ಮನೆಯಲ್ಲೇ) ಕುಳಿತವರ ಜೊತೆ ನೀವೂ ಕುಳಿತಿರಿ ಎಂದು ಹೇಳಲಾಯಿತು. {46}

ಒಂದು ವೇಳೆ ಅವರು ನಿಮ್ಮ ಜೊತೆಗೂಡಿ ಹೊರಟಿರುತ್ತಿದ್ದರೆ ಅವರು ನಿಮ್ಮ ಪಾಲಿಗೆ ತೊಂದರೆಯನ್ನಲ್ಲದೆ ಬೇರೇನನ್ನೂ ಹೆಚ್ಚಿಸುತ್ತಿರಲಿಲ್ಲ! ನಿಮ್ಮನ್ನು ಗೊಂದಲಗಳಲ್ಲಿ ಸಿಲುಕಿಸಲೆಂದೇ ಬಹಳ ಚುರುಕಾಗಿ ಅವರು ನಿಮ್ಮ ನಡುವೆ ಅತ್ತಿತ್ತ ಓಡಾಡುವರಿದ್ದರು. ಸಾಲದಕ್ಕೆ ನಿಮ್ಮೊಳಗೆ ಅಂತಹವರ ಮಾತುಗಳಿಗೆ ಕಿವಿಯೊಡ್ಡುವವರೂ ಇದ್ದಾರೆ. ಅಲ್ಲಾಹ್ ನಿಗಾದರೋ ದುಷ್ಕರ್ಮಿಗಳ ಬಗ್ಗೆ ಚೆನ್ನಾಗಿ ತಿಳಿದಿದೆ. {47}

(ಪೈಗಂಬರರೇ,) ಇದಕ್ಕಿಂತ ಮುಂಚೆಯೂ ಈ ಜನರು ಪ್ರಕ್ಷುಬ್ಧತೆಯನ್ನುಂಟು ಮಾಡಲು ಪ್ರಯತ್ನಿಸಿದ್ದರು ಮತ್ತು ಅದಕ್ಕಾಗಿ ನಿಮ್ಮ ಮುಂದಿನ ವಿಷಯಗಳನ್ನು ಇವರು ಬುಡಮೇಲಾಗಿಸಿ ಬಿಡುತ್ತಿದ್ದರು! ಕೊನೆಗೂ, ಅವರಿಗೆ ಇಷ್ಟವಾಗದೇ ಇದ್ದರೂ, ಸತ್ಯವು ಬಂದೇ ಬಿಟ್ಟಿತು ಮತ್ತು ಅಲ್ಲಾಹ್ ನ ತೀರ್ಮಾನವು ಮೇಲುಗೈ ಪಡೆಯಿತು. {48}

ನನಗೆ (ಯುದ್ಧಕ್ಕೆ ಹೊರಡದೆ ಇರಲು) ಅನುಮತಿ ದಯಪಾಲಿಸಿ; ನನ್ನನ್ನು ನೀವು ಪರೀಕ್ಷೆಗೆ ಸಿಲಿಕಿಸಬೇಡಿ ಎಂದು ಹೇಳಿದವನೂ ಅವರಿಲ್ಲಿದ್ದಾನೆ. ಆದರೆ ನೀವು ತಿಳಿದಿರಿ, (ಹಾಗೆ ಹೇಳಿದಾಗಲೇ) ಅಂತಹವರು ಪರೀಕ್ಷೆಯಲ್ಲಿ ಸಿಲುಕಿ ಕೊಂಡಿರುವರು. ಅಷ್ಟೇ ಅಲ್ಲ, ನಿಜವಾವಾಗಿಯೂ ಅಧರ್ಮಿಗಳನ್ನು ನರಕವು ಆವರಿಸಿಕೊಂಡಿದೆ! {49}

ಇನ್ನು ನಿಮಗೇನಾದರೂ ಹಿತ ಸಂಭವಿಸಿದರೆ ಅದು ಅವರನ್ನು ದುಃಖಿತರನ್ನಾಗಿ ಮಾಡಿ ಬಿಡುತ್ತದೆ. ಹಾಗೂ ನಿಮಗೇನಾದರೂ ಆಪತ್ತು ಎದುರಾದರೆ ನಾವು ನಮ್ಮ ವಿಚಾರದಲ್ಲಿ ಮೊದಲೇ ಮುಂಜಾಗ್ರತೆ ವಹಿಸಿದ್ದೆವು ಎಂದು ಹೇಳಿ ಅವರು ಖುಷಿಪಡುತ್ತಾ ಅಲ್ಲಿಂದ ಮರಳಿ ಹೋಗುತ್ತಾರೆ. {50}

(ಪೈಗಂಬರರೇ,) ಅಲ್ಲಾಹ್ ನು ನಮ್ಮ ಪಾಲಿಗೆ ಏನು ವಿಧಿಗೊಳಿಸಿರುತ್ತಾನೋ ಅದರ ಹೊರತು ಬೇರಾವ ಆಪತ್ತೂ ನಮ್ಮನ್ನು ಬಾಧಿಸಲಾರದು. ಅವನೇ ನಮಗೆ ಸಂರಕ್ಷಕನು! ಹಾಗಿರುವಾಗ ವಿಶ್ವಾಸಿಗಳಾದವರು ಭರವಸೆ ಇಡಬೇಕಾಗಿರುವುದು ಅಲ್ಲಾಹ್ ನ ಮೇಲೆ ಮಾತ್ರ ಎಂದು ನೀವು (ಜನರಿಗೆ) ಹೇಳಿರಿ. {51}

ಎರಡು ಉತ್ಕೃಷ್ಟವಾದ ಸಂಗತಿಗಳಲ್ಲಿ ಯಾವುದಾದರೂ ಒಂದರ ಹೊರತು [ಅರ್ಥಾತ್ ವಿಜಯ ಅಥವಾ ಹುತಾತ್ಮತೆಯ ಹೊರತು] ಇನ್ನೇನಾದರೂ ನಮಗೆ ಸಂಭವಿಸೀತು ಎಂಬುದು ನಿಮ್ಮ ನಿರೀಕ್ಷೆಯೇ? ಆದರೆ ನಾವು ನಿರೀಕ್ಷಿಸುತ್ತಿರುವುದು ಅಲ್ಲಾಹ್ ನೇ ನೇರವಾಗಿ ನಿಮ್ಮನ್ನು ಶಿಕ್ಷಿಸುತ್ತಾನೋ ಅಥವಾ ನಮ್ಮ ಕೈಗಳ ಮೂಲಕ ನಿಮ್ಮನ್ನು ಶಿಕ್ಷಿಸುತ್ತಾನೋ ಎಂಬುದು ಮಾತ್ರ! ಇನ್ನು ನೀವೂ ಕಾಯುತ್ತಲಿರಿ; ನಿಮ್ಮೊಂದಿಗೆ ನಾವು ಸಹ ಕಾಯುವವರಿದ್ದೇವೆ ಎಂದೂ (ಮುಶ್ರಿಕ್ ಗಳಿಗೆ) ತಿಳಿಸಿ. {52}

[ಈ ಜನರು ತಮ್ಮ ಕಾಪಟ್ಯವನ್ನು ಬಚ್ಚಿಟ್ಟು ಸಜ್ಜನಿಕೆಯನ್ನು ಅಭಿನಯಿಸಲು ಕೆಲವೊಮ್ಮೆ ದಾನ ಮಾಡುವುದಿದೆ. ಹಾಗಿರುವಾಗ] ನೀವಿನ್ನು ಮನಸ್ಸಾರೆ ಖರ್ಚು ಮಾಡಿದರೂ ಒಲ್ಲದ ಮನಸ್ಸಿನೊಂದಿಗೆ ಖರ್ಚು ಮಾಡಿದರೂ ನಿಮ್ಮಿಂದ ಅದನ್ನು ಸ್ವೀಕರಿಸುವ ವಿಷಯವೇ ಇಲ್ಲ; ಕಾರಣ ನೀವು ಅವಿಧೇಯತೆ ತೋರಿದ ಜನವರ್ಗಕ್ಕೆ ಸೇರಿದವರಾಗಿರುವಿರಿ ಎಂದು ಅವರಿಗೆ ಸ್ಪಷ್ಟ ಪಡಿಸಿರಿ. {53}

ಅಲ್ಲಾಹ್ ಮತ್ತು ಅವನ ದೂತ (ಮುಹಮ್ಮದ್ ಪೈಗಂಬರರನ್ನು) ಅವರು ಉದ್ಧಟತನದಿಂದ ತಿರಸ್ಕರಿಸುತ್ತಿರುವುದು; ಅತಿಯಾದ ಅಲಸ್ಯದೊಂದಿಗೆ ಮಾತ್ರ ಅವರು ನಮಾಝ್ ಗೆ ಹಾಜರಾಗುವುದು ಹಾಗೂ ತೀರಾ ಒಲ್ಲದ ಮನಸ್ಸಿನಿಂದ ಮಾತ್ರ ಅವರು (ಅಲ್ಲಾಹ್ ನ ಮಾರ್ಗದಲ್ಲಿ) ಖರ್ಚು ಮಾಡುವುದು - ಇವೇ ಹೊರತು ಅವರಿಂದ ದಾನಗಳನ್ನು ಸ್ವೀಕರಿಸದೇ ಇರಲು ಬೇರೇನೂ ಕಾರಣವಿಲ್ಲ. {54}

ಅವರ ಸಂತಾನದ ಮತ್ತು ಸಂಪತ್ತಿನ ಆಧಿಕ್ಯವು ನಿಮ್ಮನ್ನು ಬೆರಗುಗೊಳಿಸದಿರಲಿ! ಏಕೆಂದರೆ ಅವುಗಳ ಮೂಲಕವೇ ಅಲ್ಲಾಹ್ ನು ಲೌಕಿಕ ಜೀವನದಲ್ಲೇ ಅವರನ್ನು ಶಿಕ್ಷಿಸಲು ಬಯಸುತ್ತಾನೆ ಮತ್ತು ಅವರಿನ್ನೂ ಉದ್ಧಟತನ ತೋರುತ್ತಿರುವ ಸ್ಥಿತಿಯಲ್ಲೇ ಅವರ ಪ್ರಾಣ ಹೊರಟು ಹೋಗಬೇಕೆಂದು ಬಯಸುತ್ತಾನೆ. {55}

ನಾವು ಖಂಡಿತವಾಗಿಯೂ ನಿಮ್ಮೊಳಗಿನವರೇ ಎಂದು (ನಿಮ್ಮನ್ನೊಪ್ಪಿಸಲು) ಅವರು ಅಲ್ಲಾಹ್ ನ ಮೇಲೆ ಆಣೆ ಹಾಕುತ್ತಾರೆ; ಆದರೆ (ವಿಶ್ವಾಸಿಗಳೇ ನಿಮಗೆ ತಿಳಿದಿರಲಿ) ಅವರು ನಿಮ್ಮವರಲ್ಲ! ಯಥಾರ್ಥದಲ್ಲಿ ಅವರು (ನಿಮ್ಮ ಕಾರ್ಯಾಚರಣೆಗೆ) ಹೆದರಿಕೊಂಡ ಜನರಾಗಿದ್ದಾರಷ್ಟೆ. ಯಾವುದಾದರೊಂದು ಆಶ್ರಯಸ್ಥಾನ, ನೆಲಗವಿ ಅಥವಾ ಒಳಹೊಕ್ಕಿ ಅವಿತುಕೊಳ್ಳುವ ಸ್ಥಳವನ್ನು ಕಂಡುಕೊಂಡರೆ ಅದರೆಡೆಗೆ ಅವರು ರಭಸದಿಂದ ಧಾವಿಸಲಿರುವರು! {56-57}

(ಓ ಪೈಗಂಬರರೇ,) ಭತ್ಯೆಗಳ ವಿತರಣೆಗೆ ಸಂಬಂಧಿಸಿದಂತೆ ನಿಮ್ಮನ್ನು ಟೀಕಿಸುವ ಕೆಲವರೂ ಅವರ ಪೈಕಿ ಇರುವರು. ಅದರಿಂದ ಅವರಿಗೆ ಏನಾದರೂ ಕೊಟ್ಟು ಬಿಟ್ಟರೆ ಅವರು ಸಂತುಷ್ಟರಾಗುತ್ತಾರೆ. ಆದರೆ ಅದರಿಂದ ಅವರಿಗೆ ಏನೂ ಕೊಡದಿದ್ದರೆ ಕೂಡಲೇ ಅವರು ಕೆರಳಿ ವರ್ತಿಸುತ್ತಾರೆ. {58}

ಅಲ್ಲಾಹ್ ಮತ್ತು ಅವನ ಪೈಗಂಬರರು ಕೊಟ್ಟದುದರಲ್ಲಿ ಸಂತೃಪ್ತರಾಗಿ, ನಮಗೆ ಅಲ್ಲಾಹ್ ನೇ ಸಾಕು, ತನ್ನ ಕೃಪೆಯಿಂದ ಅವನು ನಮಗೆ ಇನ್ನೂ ದಯಪಾಲಿಸಲಿರುವನು; ಹಾಗೆಯೇ ಅವನ ಪೈಗಂಬರರೂ ಸಹ ಕೊಡಲಿರುವರು; ನಾವು ಅವನೆಡೆಗೇ ಒಲವು ತೋರುವವರಾಗಿದ್ದೇವೆ ಎಂದು ಅವರು ಹೇಳಿರುತ್ತಿದ್ದರೆ ಅದೆಷ್ಟು ಒಳ್ಳೆಯದಿತ್ತು! {59}

[ವಿಶ್ವಾಸಿಗಳೇ, ಝಕಾತ್ ನ ಮೂಲಕ ಸಂಗ್ರಹಿಸಲಾದುದನ್ನು ಈ ಜನರು ಬಯಸಿದಂತೆ ವಿತರಿಸಲಾಗದು! ಬದಲಾಗಿ] ಅಂತಹ ಭತ್ಯೆಗಳನ್ನು ಬಡ-ಬಗ್ಗರಿಗಾಗಿ, ದೀನ-ದಲಿತರಿಗಾಗಿ, ಅದರ (ಸಂಗ್ರಹ ಮತ್ತು ವಿತರಣೆ) ನಿರ್ವಹಿಸುವ ಕಾರ್ಯಕರ್ತರುಗಳ ಅಗತ್ಯಕ್ಕಾಗಿ, (ತಲ್ಲಣಗೊಂಡ) ಹೃದಯಗಳನ್ನು ಬೆಸೆಯುವ ಸಲುವಾಗಿ, ಗುಲಾಮರುಗಳ ವಿಮೋಚನಾ ಕಾರ್ಯಕ್ಕಾಗಿ, ಸಾಲದ ಹೊರೆಯಿಂದ ಬಳಲುತ್ತಿರುವವರಿಗಾಗಿ, ಅಲ್ಲಾಹ್ ನ ಮಾರ್ಗದಲ್ಲಿ ಮತ್ತು ದಾರಿಹೋಕರ ಅಗತ್ಯಗಳಿಗಾಗಿ ವ್ಯಯಿಸಬೇಕಾಗಿದೆ. ಇದನ್ನು ವಿಧಿಗೊಳಿಸಲಾಗಿರುವುದು ಅಲ್ಲಾಹ್ ನ ವತಿಯಿಂದ. ಅಲ್ಲಾಹ್ ನು ಎಲ್ಲವನ್ನೂ ಬಲ್ಲವನೂ ಅತ್ಯಂತ ವಿವೇಕಪೂರ್ಣನೂ ಆಗಿರುವನು. {60}

ಅವರಲ್ಲಿ (ತಮ್ಮ ಮಾತುಗಳ ಮೂಲಕ) ಪೈಗಂಬರರ ಮನ ನೋಯಿಸುವ ಇನ್ನು ಕೆಲವರಿದ್ದಾರೆ. ಇವರಾದರೋ ಹಿತ್ತಾಳೆ ಕಿವಿಯವರು ಎಂದು ಅವರು (ಪೈಗಂಬರರನ್ನು) ಮೂದಲಿಸುತ್ತಾರೆ. ಅವರು ಹಾಗಿರುವುದು ನಿಮ್ಮ ಒಳ್ಳೆಯದಕ್ಕೇ ಎಂದು ಉತ್ತರಿಸಿರಿ! ಅವರಿಗೆ ಅಲ್ಲಾಹ್ ನಲ್ಲಿ ವಿಶ್ವಾಸವಿದೆ; ಅವರು ವಿಶ್ವಾಸಿಗಳನ್ನೂ ನಂಬುತ್ತಾರೆ ಮತ್ತು ನಿಮ್ಮ ಪೈಕಿ ಯಾರು ಅವರನ್ನು ನಂಬಿರುವರೋ ಅಂತಹವರ ಪಾಲಿಗೆ ಅವರು ಅನುಗ್ರಹವೇ ಸರಿ! ಅಷ್ಟಾಗಿಯೂ ಯಾರು ಅಲ್ಲಾಹ್ ನ ದೂತನನ್ನು ನೋಯಿಸುವರೋ ಅಂತಹವರಿಗೆ ಯಾತನಾಮಯ ಶಿಕ್ಷೆ ಸಿದ್ಧವಿದೆ! {61}

(ವಿಶ್ವಾಸಿಗಳೇ), ನಿಮ್ಮನ್ನು ಮೆಚ್ಚಿಸಲು ಅವರು ಅಲ್ಲಾಹ್ ನ ಮೇಲೆ ಆಣೆ ಹಾಕುತ್ತಾರೆ. ಆದರೆ ಅವರು ನಿಜವಾದ ವಿಶ್ವಾಸಿಗಳು ಹೌದಾದರೆ, ಅಂತಹ ಮೆಚ್ಚುಗೆಗೆ ಹೆಚ್ಚು ಅರ್ಹರಾದವರು (ನೀವಲ್ಲ, ಬದಲಾಗಿ) ಅಲ್ಲಾಹ್ ನು ಮತ್ತು ಅವನ ಪೈಗಂಬರರು (ಎಂದವರು ತಿಳಿದಿರಬೇಕು)! {62}

ಯಾರು ಅಲ್ಲಾಹ್ ನಿಗೆ ಮತ್ತವನ ದೂತನಿಗೆ ಎದುರು ನಿಲ್ಲುವನೋ ಅಂತಹವನಿಗೆ ಸದಾಕಾಲ ಬಿದ್ದಿರಲು ನರಕದ ಬೆಂಕಿಯಿದೆ ಎಂಬ ವಿಚಾರವು ಅವರಿಗೆ ತಿಳಿಯದೇ ಹೋಯಿತೇ!? ಅದಾದರೋ ಬಹು ದೊಡ್ಡ ಅಪಮಾನವೇ ಸರಿ. {63}

[ಅಲ್ಲಾಹ್ ನ ಮೇಲೆ ಆಣೆ ಹಾಕಿ ಮುಸ್ಲಿಮರಂತೆ ನಟಿಸುವ] ಈ ಕಪಟಿಗಳು ತಮ್ಮ ಹೃದಯಗಳಲ್ಲಿ ವಾಸ್ತವದಲ್ಲಿ ಏನಿದೆ ಎಂಬುದನ್ನು ತಮಗೇ ಓದಿ ಕೇಳಿಸಲು ಅಧ್ಯಾಯವೊಂದು [ಅರ್ಥಾತ್ ಕುರ್‌ಆನ್ ನ ಒಂದು ಸೂರಃ ವು] ಬರಲಿದೆಯೇನೋ ಎಂದು ಅಂಜುತ್ತಲಿದ್ದಾರೆ! ನೀವು (ಪೈಗಂಬರರನ್ನು) ಹೀಯಾಳಿಸುವುದನ್ನು ಇನ್ನೂ ಸ್ವಲ್ಪ ಮುಂದುವರಿಸಿ; ಯಾವ ವಿಷಯ ಬಹಿರಂಗವಾಗಿ ಬಿಡುವ ಬಗ್ಗೆ ನೀವು ಅಂಜುತ್ತಿರುವಿರೋ ಅಲ್ಲಾಹ್ ನು ಅದನ್ನು ಬಹಿರಂಗ ಪಡಿಸಿಯೇ ತೀರುವನು ಎಂದು (ಓ ಪೈಗಂಬರರೇ) ನೀವು ಆ ಕಪಟಿಗಳಿಗೆ ತಿಳಿಸಿ ಬಿಡಿ. {64}

ಇನ್ನು (ಅವರಾಡುತ್ತಿದ್ದ ಮಾತುಗಳ ಬಗ್ಗೆ) ನೀವು ಅವರೊಂದಿಗೆ ವಿಚಾರಿಸಿದರೆ, ನಾವಾದರೋ ಕೇವಲ ಹರಟೆ ಹೊಡೆಯುತ್ತಾ ವಿನೋದಿಸುತ್ತಾ ಇದ್ದೆವಷ್ಟೆ ಎಂದೇ ಅವರು ಉತ್ತರಿಸುತ್ತಾರೆ. ನೀವು ಅಲ್ಲಾಹ್ ನ, ಅವನ ವಚನಗಳ ಮತ್ತವನ ಪೈಗಂಬರರ ಕುರಿತಲ್ಲವೇ ಲೇವಡಿಯ ಮಾತುಗಳನ್ನು ಆಡುತ್ತಿದ್ದುದು ಎಂದೂ ಅವರೊಂದಿಗೆ ಕೇಳಬೇಕು. {65}

ನೀವು ನೆಪಗಳನ್ನು ಹುಡುಕಬೇಡಿ. ನೀವಾದರೋ ಒಮ್ಮೆ ವಿಶ್ವಾಸಿಗಳಾದ ನಂತರ ಸತ್ಯವನ್ನು ನಿರಾಕರಿಸಿ ಬಿಟ್ಟವರು. ಇನ್ನು ನಿಮ್ಮ ಪೈಕಿಯ ಒಂದು ಗುಂಪನ್ನು ನಾವು ಕ್ಷಮಿಸಿದರೂ ಉಳಿದ ಗುಂಪನ್ನು ನಾವು (ಭೂಲೋಕದಲ್ಲೂ) ಶಿಕ್ಷಿಸಲಿರುವೆವು. ನಿಸ್ಸಂಶಯವಾಗಿಯೂ ಅವರು ತಪ್ಪಿತಸ್ಥರೇ. {66}

(ಮುಸ್ಲಿಮರಂತೆ ನಟಿಸುತ್ತಿರುವ) ಕಪಟಿಗಳಾದ ಈ ಪುರುಷರು ಮತ್ತು ಈ ಸ್ತ್ರೀಯರು ಒಬ್ಬರಿಗೊಬ್ಬರು ಸಹಕಾರಿಗಳಾಗಿರುವರು. ಅವರಾದರೋ ಅನಿಷ್ಟಗಳನ್ನು ಬೋಧಿಸುವವರು ಹಾಗೂ ಒಳಿತುಗಳಿಗೆ ಅಡ್ಡಿಪಡಿಸುವವರು; ತಮ್ಮ ಕೈಗಳನ್ನು (ಸಕಲ ರೀತಿಯ ಧಾರ್ಮಿಕತೆಯಿಂದ) ತಡೆದಿಟ್ಟು ಕೊಂಡವರು. ಅಲ್ಲಾಹ್ ನನ್ನೇ ಅವರು ಮರೆತು ಬಿಟ್ಟಿದ್ದಾರೆ, ಆದ್ದರಿಂದ ಅಲ್ಲಾಹ್ ನೂ ಈಗ ಅವರನ್ನು ಮರೆತಿರುವನು. ಹೌದು, ಯಥಾರ್ಥದಲ್ಲಿ ಈ ಕಪಟಿಗಳೇ ನಿಜವಾಗಿ ಅವಿಧೇಯತೆ ತೋರಿದವರು! {67}

(ವಿಶ್ವಾಸಿಗಳಂತೆ ಅಭಿನಯಿಸುವ) ಕಪಟಿಗಳಾದ ಈ ಪುರುಷರಿಗೂ ಸ್ತ್ರೀಯರಿಗೂ, ಹಾಗೆಯೇ (ಪೈಗಂಬರರನ್ನು ಬಹಿರಂಗವಾಗಿಯೇ ತಿರಸ್ಕರಿಸಿದ) ಈ ಕುಫ್ಫಾರ್ ಗಳಿಗೂ ಸದಾಕಾಲ ಬಿದ್ದಿರಲು ನರಕದ ಬೆಂಕಿ ಇದೆ ಎಂದು ಅಲ್ಲಾಹ್ ನು ಎಚ್ಚರಿಕೆ ನೀಡಿದ್ದಾನೆ! ಅವರಿಗೆ ನರಕವೇ ತಕ್ಕುದಾದುದು! ಅವರಿಗೆ ಅಲ್ಲಾಹ್ ನ ಶಾಪವಿದೆ; ಮತ್ತವರಿಗೆ ನಿರಂತರ ಮುಂದುವರಿಯುವ ಶಿಕ್ಷೆಯೂ ಕಾದಿದೆ. {68}

[ವಿಶ್ವಾಸಿಗಳಂತೆ ಸೋಗು ಹಾಕುವ ಕಪಟಿ ಜನರೇ, ಪ್ರವೃತ್ತಿಯಲ್ಲಿ ನೀವು] ನಿಮಗಿಂತ ಮುಂಚಿನವರಂತೆಯೇ ಆಗಿರುವಿರಿ! ಅವರಾದರೋ ಬಲಾಢ್ಯತೆಯಲ್ಲಿ ನಿಮಗಿಂತ ಗಟ್ಟಿಗರಾಗಿದ್ದರು; ಸಂಪತ್ತು ಮತ್ತು ಸಂತಾನದ ವಿಷಯದಲ್ಲಿ ನಿಮಗಿಂತಲೂ ಮಿಗಿಲಾದವರಾಗಿದ್ದರು. ತಮ್ಮ ಪಾಲಿನ ಸುಖಭೋಗಗಳನ್ನು (ಭೂಲೋಕದಲ್ಲೇ) ಅನುಭವಿಸಿ ಮುಗಿಸಿದ್ದರು. ನೀವೂ ಸಹ ನಿಮ್ಮ ಪಾಲಿನ ಸುಖಭೋಗಗಳನ್ನು ನಿಮಗಿಂತ ಮುಂಚಿನವರು ತಮ್ಮ ಪಾಲಿನ ಸುಖಭೋಗಗಳನ್ನು ಅನುಭವಿಸಿದಂತೆಯೇ ಅನುಭವಿಸುತ್ತಿರುವಿರಿ. ಆ ಜನರು ಅರ್ಥಹೀನ ಕುತರ್ಕಗಳಲ್ಲಿ ತೊಡಗಿದ್ದಂತೆಯೇ ನೀವೂ ಸಹ (ನಿಮ್ಮದೇ) ಕುತರ್ಕಗಳಲ್ಲಿ ತೊಡಗಿರುವಿರಿ. (ಹಾಗೆ ಮಾಡುವ ಮೂಲಕ) ಅವರು ತಮ್ಮ ಸತ್ಕರ್ಮಗಳು ಇಹಪರಲೋಕಗಳಲ್ಲಿ ವ್ಯರ್ಥವಾಗುವಂತೆ ಮಾಡಿಕೊಂಡವರು! ಹೌದು, ನಷ್ಟದಲ್ಲಿ ಸಾಗಿದ ಜನರು ಅವರೇ ಆಗಿರುತ್ತಾರೆ. {69}

ಇವರಿಗಿಂತ ಮುಂಚೆ ಗತಿಸಿಹೋದವರ ಸಮಾಚಾರಗಳು ಇವರಿಗೆ ತಲುಪಲಿಲ್ಲವೇ?! ಅಂದರೆ ನೂಹ್, ಆದ್ ಮತ್ತು ತಮೂದ್ ಜನತೆಯ ಸಮಾಚಾರ; ಇಬ್ರಾಹೀಮ್ ರ ಜನತೆಯ ಮತ್ತು ಮದ್‌ಯನ್ ನಿವಾಸಿಗಳ ಸಮಾಚಾರ! ಹಾಗೆಯೇ ಬುಡಮೇಲುಗೊಳಿಸಲಾದ ಆ ನಾಡುಗಳ ಸಮಾರ! ಆ ಜನರೆಡೆಗೆ ನಿಯೋಗಿಸಲಾದ ದೂತರುಗಳು ಸ್ಪುಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಅವರಿಗೆ ಅನ್ಯಾಯ ಮಾಡುವುದು ಅಲ್ಲಾಹ್ ನ ಕೆಲಸವಾಗಿರಲಿಲ್ಲ; ಬದಲಾಗಿ [ದೂತರುಗಳನ್ನು ಧಿಕ್ಕರಿಸಿದ ಕಾರಣ ಶಿಕ್ಷೆಗೆ ಗುರಿಯಾದ] ಅವರು ತಮಗೆ ತಾವೇ ಅನ್ಯಾಯ ಮಾಡಿಕೊಂಡಿದ್ದರು. {70}

ಇನ್ನು ವಿಶ್ವಾಸಿಗಳಾದ ಪುರುಷರು ಮತ್ತು ಸ್ತ್ರೀಯರೂ ಪರಸ್ಪರರಿಗೆ ಹಿತೈಷಿಗಳಾಗಿರುತ್ತಾರೆ. (ಆದರೆ ಅಭಿರುಚಿಯಲ್ಲಿ ಇವರು ಕಪಟಿ ಜನರಂತಲ್ಲ.) ಇವರು (ಪರಸ್ಪರ) ಒಳಿತುಗಳನ್ನು ಬೋಧಿಸುತ್ತಿರುತ್ತಾರೆ ಮತ್ತು ಎಲ್ಲಾ ವಿಧ ಕೆಡುಕುಗಳಿಂದ ತಡೆಯುತ್ತಿರುತ್ತಾರೆ. ನಮಾಝ್ ಗಳನ್ನು ನಿಷ್ಠೆಯೊಂದಿಗೆ ಪಾಲಿಸುವವರೂ ಝಕಾತ್ ಅನ್ನು ಪಾವತಿಸುವವರೂ ಆಗಿರುತ್ತಾರೆ. ಜೊತೆಗೆ ಅಲ್ಲಾಹ್ ನನ್ನು ಮತ್ತು ಅವನ ದೂತನಾದ (ಪೈಗಂಬರರನ್ನು) ಅನುಸರಿಸುವವರೂ ಆಗಿರುತ್ತಾರೆ. ಅಲ್ಲಾಹ್ ನು ಅಂತಹವರಿಗೆ ಅತಿಶೀಘ್ರದಲ್ಲೇ ತನ್ನ ಕೃಪೆ ದಯಪಾಲಿಸಲಿದ್ದಾನೆ! ಹೌದು, ಅಲ್ಲಾಹ್ ನು ಅತ್ಯಂತ ಪ್ರಬಲನೂ ವಿವೇಕಪೂರ್ಣನೂ ಆಗಿರುವನು. {71}

ವಿಶ್ವಾಸಿಗಳಾದ ಅಂತಹ ಪುರುಷರಿಗೂ ಸ್ತ್ರೀಯರಿಗೂ ಸ್ವರ್ಗೋದ್ಯಾನಗಳನ್ನು ಅಲ್ಲಾಹ್ ನು ವಾಗ್ದಾನ ಮಾಡಿರುತ್ತಾನೆ. ಅದರಲ್ಲಿ ಕೆಳಗಡೆ ಹೊನಲುಗಳು ಹರಿಯುತ್ತಿರುತ್ತವೆ. ಅವರು ಸದಾಕಾಲ ಅಲ್ಲಿ ನೆಲಸಲಿರುವರು. ಹರ್ಷದಾಯಕವಾದ ಶಾಶ್ವತ ಉದ್ಯಾನಗಳಲ್ಲಿ ಅವರಿಗಾಗಿ ಚೊಕ್ಕದಾದ ಭವನಗಳಿರುವುವು. ಅವೆಲ್ಲಕ್ಕಿಂತ ಮಿಗಿಲಾಗಿ ಅಲ್ಲಾಹ್ ನ ಸಂಪ್ರೀತಿ-ಮೆಚ್ಚುಗೆಗಳು ಅವರಿಗೆ ದೊರಕುವುದು. ಹೌದು, ಮಹತ್ತರವಾದ ಗೆಲುವು ಅದುವೇ ಆಗಿರುವುದು. {72}

ಓ ಪೈಗಂಬರರೇ, (ನನ್ನ ಕರೆಗೆ ಓಗೊಡುವ ಬದಲು ಅದನ್ನು) ತಿರಸ್ಕರಿಸಿದವರೊಂದಿಗೂ (ನಿಮ್ಮೊಂದಿಗೆ) ಕಾಪಟ್ಯ ತೋರಿದವರೊಂದಿಗೂ ನೀವು ಉಗ್ರ ಹೋರಾಟ ನಡೆಸಿರಿ. ಅವರ ವಿರುದ್ಧ ಕಠೋರವಾದ ನಿಲುವು ತಾಳಿರಿ. ಹೌದು, ಅವರಿಗಿರುವ ಅಂತಿಮ ಬಿಡಾರವವು ನರಕವೇ ಸರಿ; ಎಷ್ಟೊಂದು ಕೆಟ್ಟದಾದ ತಾಣವದು! {73}

ನಾವು (ಅಂತಹ ಯಾವ ಮಾತನ್ನೂ) ಹೇಳಿಯೇ ಇಲ್ಲವೆಂದು ಅವರು ಅಲ್ಲಾಹ್ ನ ಹೆಸರಿನಲ್ಲಿ ಪ್ರಮಾಣ ಮಾಡುತ್ತಿದ್ದಾರೆ. ಆದರೆ ನಿಜವಾಗಿ ಅವರು ಹೇಳಿರುವುದು ಧಿಕ್ಕಾರದ ಮಾತುಗಳನ್ನು! ಒಮ್ಮೆ ಇಸ್ಲಾಮನ್ನು ಒಪ್ಪಿಕೊಂಡು ನಂತರ ಅದನ್ನು ತಿರಸ್ಕರಿಸಿರುವರು. ತಮ್ಮಿಂದ ಕಾರ್ಯಗತಗೊಳಿಸಲು ಎಂದೂ ಸಾಧ್ಯವಿರದ [ಅಂದರೆ ತಬೂಕ್ ಯುದ್ಧದ ಸಂದರ್ಭದಲ್ಲಿ ಇಸ್ಲಾಮನ್ನು ನಿರ್ನಾಮಗೊಳಿಸಲು ಮತ್ತು ಪೈಗಂಬರರನ್ನು ಮುಗಿಸಿ ಬಿಡಲು ಅವರು] ಸಂಚು ಹೂಡಿದ್ದರು! ತನ್ನ ಕೃಪೆಯಿಂದ ಅಲ್ಲಾಹ್ ನು ಮತ್ತು ಅವನ ಪೈಗಂಬರರು ಅವರನ್ನು ಸಂಪನ್ನರನ್ನಾಗಿ ಮಾಡಿರುವುದು ಮಾತ್ರವಾಗಿತ್ತು ಅವರ ತಳಮಳಕ್ಕೆ ಕಾರಣ! ಇನ್ನಾದರೂ ಅವರು ಪಶ್ಚಾತ್ತಾಪ ಪಟ್ಟರೆ ಅದು ಅವರಿಗೆ ಒಳ್ಳೆಯದು. ಅವರು ಮುಖ ತಿರುಗಿಸಿಕೊಂಡರೆ ಬಹಳವಾಗಿ ನೋಯಿಸುವ ಶಿಕ್ಷೆಯನ್ನು ಅಲ್ಲಾಹ್ ನು ಅವರಿಗೆ ಈ ಲೋಕದಲ್ಲೂ ಪರಲೋಕದಲ್ಲೂ ಕೊಡಲಿದ್ದಾನೆ. ಆಗ ಭೂಮಿಯಲ್ಲಿ ಯಾರೂ ಅವರಿಗೆ ಹಿತೈಶಿಗಳಾಗಲಿ ಸಹಾಯಕರಾಗಲಿ ಇರಲಾರರು. {74}

ತನ್ನ ಕೃಪೆಯಿಂದ ಅಲ್ಲಾಹ್ ನು ನಮಗೆ ಧಾರಾಳವಾಗಿ ನೀಡಿದರೆ ನಾವು ಖಂಡಿತವಾಗಿ ದಾನಧರ್ಮಗಳನ್ನು ಮಾಡುವೆವು ಹಾಗೂ ಸಜ್ಜನರಾಗಿ ಬಾಳುವೆವು ಎಂದು ಅಲ್ಲಾಹ್ ನಿಗೆ ಮಾತು ಕೊಟ್ಟ ಕೆಲವರೂ [ಈಗ ಸಂಪನ್ನರಾದ ಕಪಟಿಗಳ] ಪೈಕಿ ಇರುವರು. {75}

ಆದರೆ ಅಲ್ಲಾಹ್ ನು ತನ್ನ ಕೃಪೆಯಿಂದ ಅವರಿಗೆ ಸಂಪತ್ತು ನೀಡಿದಾಗ ಅವರು ಜಿಪುಣತೆಯಿಂದ ವರ್ತಿಸಿದರು ಮತ್ತು ಅಲಕ್ಷ್ಯ ತೋರುವವರಾದರು; ಮಾತ್ರವಲ್ಲ (ತಾವು ಮಾಡಿದ್ದ ವಾಗ್ದಾನದಿಂದ) ಮುಖ ತಿರುಗಿಸಿಕೊಂಡರು. {76}

ಅದಕ್ಕಾಗಿ ಅಲ್ಲಾಹ್ ನನ್ನು ಅವರು ಸಂಧಿಸಲಿರುವ ದಿನದ ತನಕವೂ ಅವರ ಹೃದಯಗಳಲ್ಲಿ ಕಾಪಟ್ಯ ತುಂಬಿರುವಂತೆ ಅವನು ಮಾಡಿದನು. ಅಲ್ಲಾಹ್ ನೊಂದಿಗೆ ಮಾಡಿದ್ದ ವಾಗ್ದಾನವನ್ನು ಮುರಿಯುತ್ತಿದ್ದ ಹಾಗೂ ಅವರು ಸತತವಾಗಿ ಸುಳ್ಳನ್ನೇ ಹೇಳುತ್ತಿದ್ದ ಕಾರಣಕ್ಕಗಿಯೂ ಆಗಿತ್ತು ಅಂತಹ (ಶಿಕ್ಷೆ). {77}

ಅವರ ಎಲ್ಲ ರಹಸ್ಯಗಳನ್ನೂ ಗುಪ್ತ ಸಮಾಲೋಚನೆಗಳನ್ನೂ ಹಾಗೂ ಅಗೋಚರವಾದ ಇತರೆಲ್ಲಾ ವಿಷಯಗಳನ್ನೂ ಅಲ್ಲಾಹ್ ನು ಚೆನ್ನಾಗಿ ತಿಳಿದಿರುವನು ಎಂಬುದನ್ನು ಈ ಜನರು ಅರಿಯದಾದರೇ! {78}

ಸ್ವಯಂ ಪ್ರೇರಿತರಾಗಿ (ಹೆಚ್ಚು ಹೆಚ್ಚು) ದಾನಧರ್ಮಗಳನ್ನು ಮಾಡುವ (ಧನಿಕ) ವಿಶ್ವಾಸಿಗಳನ್ನು ಅವರು ದೂಷಿಸುತ್ತಾರೆ ಮತ್ತು (ದಾನವಾಗಿ ನೀಡಲು) ತಮ್ಮ ದೈಹಿಕ ಶ್ರಮದ ಹೊರತು ಬೇರೇನನ್ನೂ ಹೊಂದಿರದ (ಬಡ) ವಿಶ್ವಾಸಿಗಳನ್ನು ಗೇಲಿ ಮಾಡುತ್ತಾರೆ. ಅಲ್ಲಾಹ್ ನು ಗೇಲಿ ಮಾಡುವವರನ್ನು ಗೇಲಿ ಮಾಡುತ್ತಾನೆ ಮತ್ತು ಅವರಿಗೆ ಯಾತನಾಮಯ ಶಿಕ್ಷೆಯೂ ಇದೆ. {79}

(ಓ ಪೈಗಂಬರರೇ, ವಿಶ್ವಾಸಿಗಳಂತೆ ನಟಿಸುವ ಈ ಕಪಟಿಗಳ) ಪಾಪವಿಮೋಚನೆಗಾಗಿ ನೀವು ಪ್ರಾರ್ಥಿಸಿದರೂ ಪ್ರಾರ್ಥಿಸದಿದ್ದರೂ (ಅಲ್ಲಾಹ್ ನು ಅವರನ್ನು ಕ್ಷಮಿಸುವುದಿಲ್ಲ). ಇನ್ನು ನೀವು ಅವರನ್ನು ಕ್ಷಮಿಸುವಂತೆ ಎಪ್ಪತ್ತು ಬಾರಿ ಪ್ರಾರ್ಥಿಸಿದರೂ ಅಲ್ಲಾಹ್ ನು ಅವರನ್ನು ಕ್ಷಮಿಸುವ ವಿಷಯವೇ ಇಲ್ಲ. ಅವರು ಅಲ್ಲಾಹ್ ನ ಮತ್ತು ಅವನ ದೂತ (ಮುಹಮ್ಮದ್ ಪೈಗಂಬರರ) ಮಾತನ್ನು ತಿರಸ್ಕರಿಸಿರುವುದೇ ಅದಕ್ಕೆ ಕಾರಣ! ಹೌದು, ಮಾತುಮೀರಿದ ಜನಸಮೂಹಕ್ಕೆ ಅಲ್ಲಾಹ್ ನು ಮಾರ್ಗದರ್ಶನ ನೀಡುವುದಿಲ್ಲ. {80}

[ತಬೂಕ್ ಪ್ರದೇಶಕ್ಕೆ ಹೊರಡದೆ] ಹಿಂದೆ ಉಳಿದವರು ಅಲ್ಲಾಹ್ ನ ಪೈಗಂಬರರು ಹೊರಟ ನಂತರ ತಮ್ಮ ನಿವಾಸಗಳಲ್ಲೇ ಕುಳಿತು ಅವರ ಬೆನ್ನ ಹಿಂದೆ ಸಂಭ್ರಮಿಸಿದರು. ತಮ್ಮನ್ನೂ ತಮ್ಮ ಸಂಪತ್ತನ್ನೂ ತೊಡಗಿಸಿ ಅಲ್ಲಾಹ್ ನ ಮಾರ್ಗದಲ್ಲಿ ಹೋರಾಟ ನಡೆಸುವುದು ಅವರಿಗೆ ಇಷ್ಟವಿರಲಿಲ್ಲ. ಈ ಉರಿ ಬಿಸಿಲಿಗೆ ನೀವಾರೂ ಯುದ್ಧಕ್ಕೆ ಹೊರಡ ಬೇಡಿರಿ ಎಂದು ಅವರು (ಪರಸ್ಪರ) ಹೇಳುತ್ತಿದ್ದರು. ಪೈಗಂಬರರೇ, ನರಕದ ಬೆಂಕಿಯ ಬಿಸಿಯು ಇದಕ್ಕಿಂತಲೂ ಹೆಚ್ಚು ತೀಕ್ಷಣವಾದುದು ಎಂದು ನೀವು ಅವರಿಗೆ ತಿಳಿಸಿರಿ. ಅಕಟಾ, ಅವರಿಗೆ ಅದು ತಿಳಿದಿರುತ್ತಿದ್ದರೆ! {81}

ಅವರ ನಗು ಇನ್ನು ಕಡಿಮಯಾಗಲಿ, ತಮ್ಮ ದುಷ್ಕೃತ್ಯಗಳ ಪರಿಣಾಮವಾಗಿ ಅವರ ಅಳುವೇ ಹೆಚ್ಚಾಗ ಬೇಕು! {82}

ನಿಮ್ಮನ್ನೇನಾದರೂ ಅಲ್ಲಾಹ್ ನು (ಈ ಯುದ್ಧದ ನಂತರ ಆ ಕಪಟಿಗಳ) ಯಾವುದಾದರೂ ಗುಂಪಿನೆಡೆಗೆ ಮರಳಿಸಿದರೆ ಅವರು (ಮುಂಬರುವ) ಯುದ್ಧದಲ್ಲಿ ನಿಮ್ಮ ಜೊತೆ ಸೇರಿ ಹೊರಡಲು ನಿಮ್ಮ ಅನುಮತಿ ಬೇಡುವರು. ಇನ್ನೆಂದೂ ನನ್ನ ಜೊತೆ ನೀವು ಹೊರಡ ಬಾರದು; ಮಾತ್ರವಲ್ಲ ನನ್ನ ಜೊತೆ ಸೇರಿ ನೀವು ಶತ್ರುಗಳ ವಿರುದ್ಧ ಹೋರಾಡುವ ವಿಷಯವಂತು ಇಲ್ಲವೇ ಇಲ್ಲ ಎಂದು (ಪೈಗಂಬರರೇ) ನೀವು ಅವರಿಗೆ ತಿಳಿಸಿ ಬಿಡಿ. ಮೊದಲ ಬಾರಿ (ನಿಮ್ಮನ್ನು ಕರೆದಾಗ ಬಾರದೆ) ಮನೆಯಲ್ಲೇ ಕುಳಿತಿರಲು ಇಷ್ಟ ಪಟ್ಟವರು ನೀವು. ಆದ್ದರಿಂದ ಹಿಂಜರಿದು ಮನೆಯಲ್ಲೇ ಕುಳಿತವರೊಂದಿಗೆ ನೀವು ಕುಳಿತಿರಿ ಎಂದು (ಪೈಗಂಬರರೇ) ಅವರಿಗೆ ಉತ್ತರಿಸಿರಿ. {83}

ಮುಂದೆ ಕಪಟಿಗಳ ಪೈಕಿ ಯಾರಾದರೂ ಮೃತಪಟ್ಟರೆ ನೀವು ಆತನಿಗೆ (ಕ್ಷಮೆ ಕೋರಿ ಜನಾಝ) ನಮಾಝ್ ಮಾಡಬಾರದು. ಅಷ್ಟೇ ಅಲ್ಲ, ಅಂತಹವನ ಗೋರಿಯ ಬಳಿ ನಿಲ್ಲಲೂ ಬಾರದು. ಏಕೆಂದರೆ ಅವರು ಅಲ್ಲಾಹ್ ಮತ್ತು ಅವನ ದೂತ (ಮುಹಮ್ಮದ್) ರನ್ನು ಒಪ್ಪಿಕೊಳ್ಳದೆ ಧಿಕ್ಕರಿಸಿದವರು; ಅವಿಧೇಯಿಗಳಾಗಿರುವ ಸ್ಥಿತಿಯಲ್ಲಿ ಮೃತ್ಪಟ್ಟವರು. {84}

ಅವರ ಸಂಪತ್ತು ಮತ್ತು ಸಂತಾನಗಳ ಆಧಿಕ್ಯ ನಿಮ್ಮನ್ನು ಬೆರಗುಗೊಳಿಸದಿರಲಿ. ಅವುಗಳ ಮೂಲಕ ಅಲ್ಲಾಹ್ ನು ಅವರನ್ನು ಭೂಲೋಕದಲ್ಲೇ ಶಿಕ್ಷಿಸಲು ಬಯಸಿರುತ್ತಾನೆ. ಮತ್ತು ಅವರಿನ್ನೂ ತಿರಸ್ಕಾರಿಗಳಾಗಿರುವ ಸ್ಥಿತಿಯಲ್ಲೇ ಅವರ ಪ್ರಾಣಪಕ್ಷಿಯು ಅವರ ದೇಹಗಳನ್ನು ಬಿಟ್ಟಗಲಬೇಕು ಎಂದೂ ಬಯಸುತ್ತಾನೆ. {85}

ನೀವು ಅಲ್ಲಾಹ್ ನನ್ನು ನಂಬುವವರಾಗಿರಿ ಮತ್ತು ಅವನ ದೂತ (ಮುಹಮ್ಮದ್ ಪೈಗಂಬರರ) ಜೊತೆ ಸೇರಿ ಹೋರಾಟ ನಡೆಸಿರಿ ಎಂದು ಆದೇಶಿಸುವ ಒಂದು ಅಧ್ಯಾಯವನ್ನು ನಾವು ಇಳಿಸಿದಾಗ ಅವರ ಪೈಕಿಯ ಶ್ರೀಮಂತ ಜನರು, ನಮ್ಮನ್ನು ಬಿಟ್ಟು ಬಿಡಿ; ಹಿಂದೆ ಉಳಿಯಲಿರುವ ಜನರೊಂದಿಗೆ ನಾವೂ ಇದ್ದು ಬಿಡುವೆವು ಎಂದು ಹೇಳುತ್ತಾ (ಯುಧ್ಧದಲ್ಲಿ ಪಾಲ್ಗೊಳ್ಳದಿರಲು) ನಿಮ್ಮೊಂದಿಗೆ ವಿನಾಯಿತಿ ಕೋರುತ್ತಾರೆ. {86}

ಹಿಂದೆ ಉಳಿದ (ಅಂದರೆ ಮನೆಯೊಳಗೆ ಕುಳಿತ ಹೆಂಗಸರ) ಜೊತೆ ಕುಳಿತಿರುವುದರಲ್ಲಿ ಅವರು ಸಂತೃಪ್ತಿ ಕಂಡರು. ಆದ್ದರಿಂದ ಅವರ ಹೃದಯಗಳು ಮುಚ್ಚಲ್ಪಟ್ಟಿತು. ಈಗ ಅವರು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. {87}

ಇನ್ನೊಂದೆಡೆ ಪೈಗಂಬರರು ಹಾಗೂ ಅವರ ಜೊತೆಗಿರುವ ವಿಶ್ವಾಸಿಗಳು ತಮ್ಮ ತನು ಧನಗಳನ್ನು ತೊಡಗಿಸಿ (ಅಧರ್ಮದ ಅಳಿವಿಗಾಗಿ) ಕಠಿಣ ಪರಿಶ್ರಮ ನಡೆಸುತ್ತಾರೆ. ಆದ್ದರಿಂದ ಸಕಲ ಒಳಿತುಗಳು ಅವರದ್ದಾಗಿವೆ. ಹೌದು, (ಇಹಪರಗಳಲ್ಲಿ) ವಿಜಯಿಗಳಾದವರು ಅವರೇ! {88}

ತಳದಿಂದ ಹೊನಲುಗಳು ಚಿಮ್ಮಿ ಹರಿಯುವ ಸ್ವರ್ಗೀಯ ಉದ್ಯಾನಗಳನ್ನು ಅಲ್ಲಾಹ್ ನು ಅವರಿಗಾಗಿ ಸಿದ್ಧಗೊಳಿಸಿದ್ದಾನೆ. ಅದರಲ್ಲಿ ಅವರು ಚಿರಕಾಲ ಬಾಳುವರು. ಮಹತ್ತರವಾದ ಯಶಸ್ಸು ಅದೇ ಆಗಿರುವುದು. {89}

ಗ್ರಾಮೀಣ ಅರಬಿಗಳಾದ ಕೆಲವರು ನೆಪಗಳನ್ನು ಒಡ್ಡುತ್ತಾ [ತಬೂಕ್ ದಂಡಯಾತ್ರೆಯಲ್ಲಿ ಭಾಗವಹಿಸದಿರಲು] ಅನುಮತಿ ಬಯಸಿ (ಪೈಗಂಬರರ ಬಳಿಗೆ) ಬಂದರು. ಇತ್ತ ಅಲ್ಲಾಹ್ ನಿಗೂ ಪೈಗಂಬರರಿಗೂ (ತಾವೂ ಮುಸ್ಲಿಮರೆಂದು) ಸುಳ್ಳು ಹೇಳಿ (ಯುದ್ಧಕ್ಕೆ ಹೊರಡಲು ಮುಂದಾಗದೆ) ಹಿಂದೆ ಉಳಿದು ಕೊಂಡರು. ಅವರ ಪೈಕಿ ದಿಕ್ಕಾರ ತೋರಿದವರ ಮೇಲೆ ಯಾತನಾಮಯ ಶಿಕ್ಷೆ ಶೀಘ್ರವೇ ಎರಗಿ ಬೀಳುವುದು.{90}

ಇನ್ನು ಬಲಹೀನರು, ರೋಗಿಗಳು ಹಾಗೂ ಏನನ್ನೂ ಖರ್ಚು ಮಾಡುವ ಸ್ಥಿತಿಯಲ್ಲಿಲ್ಲದವರು - ಅವರು ಅಲ್ಲಾಹ್ ನ ಮತ್ತು ಪೈಗಂಬರರ ವಿಷಯದಲ್ಲಿ ನಿಷ್ಕಪಟ ಮನೋಭಾವವುಳ್ಳ ಜನರಾಗಿದ್ದರೆ (ಯುದ್ಧಕ್ಕೆ ಹೊರಡದಿದ್ದಲ್ಲಿ) ಅಭ್ಯಂತರವಿಲ್ಲ. ಅಂತಹ ಸಜ್ಜನರ ಮೇಲೆ ದೋಷಾರೋಪಣೆಗೆ ಯಾವ ಅವಕಾಶವೂ ಇಲ್ಲ. ನಿಶ್ಚಯವಾಗಿ ಅಲ್ಲಾಹ್ ನು ಹೆಚ್ಚು ಕ್ಷಮಿಸುವವನೂ ಮಹಾ ಕರುಣಾಮಯಿಯೂ ಆಗಿರುವನು. {91}

ಹಾಗೆಯೇ, ತಾವಾಗಿಯೇ ನಿಮ್ಮ ಬಳಿ ಬಂದು (ಯುದ್ಧದಲ್ಲಿ ಪಾಲ್ಗೊಳ್ಳಲು) ನಮ್ಮನ್ನೂ ಸವಾರಿಗಳಲ್ಲಿ ಹತ್ತಿಸಿಕೊಳ್ಳಿ ಎಂದು ಕೇಳಿಕೊಂಡವರ ಮೇಲೂ ಯಾವ ದೋಷಾರೋಪಣೆಯೂ ಸಲ್ಲದು. ನಿಮಗೆ ಒದಗಿಸಲು ಯಾವ ಸವಾರಿಯನ್ನೂ ನಾನು ಕಾಣುತ್ತಿಲ್ಲ ಎಂದು ನೀವು ಅವರಿಗೆ ಹೇಳಿದ್ದಿರಿ. ಅವರು ತಮ್ಮ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡು ಅಲ್ಲಿಂದ ಹೊರಟು ಹೋಗಿದ್ದರು. ತಮ್ಮ (ಸವಾರಿಗಳ ಏರ್ಪಾಡಿಗಾಗಿ) ವ್ಯಯಿಸಲು ಸ್ವತಃ ತಮಗೇ ಸಾಧ್ಯವಿರದ ಕಾರಣ ಅವರು ಅತೀವ ದುಃಖಿತರಾಗಿ ಮರಳಿದ್ದರು. {92}

ನಿಜವಾದ ಆಕ್ಷೇಪವಿರುವುದು ಸ್ಥಿತಿವಂತರಾಗಿದ್ದು ಸಹ (ಯುದ್ಧಕ್ಕೆ ಬಾರದೇ ಇರಲು) ನಿಮ್ಮ ಅನುಮತಿ ಕೋರಿದವರ ಮೇಲೆ! ಅವರು (ಮನೆಯಲ್ಲಿ) ಕುಳಿತುರುವ ಹೆಂಗಸರ ಜೊತೆ ಕುಳಿತಿರಲು ಇಷ್ಟಪಟ್ಟರು. ಆದ್ದರಿಂದ ಅಲ್ಲಾಹ್ ನು ಅವರ ಹೃದಯಗಳಿಗೆ ಮುದ್ರೆಯೊತ್ತಿದನು. ಅವರಿಗೆ (ಅದರ ಪರಿಣಾಮದ ಕುರಿತು) ಜ್ಞಾನವಿಲ್ಲ. {93}

✽11✽ [ವಿಶ್ವಾಸಿಗಳೇ, ತಬೂಕ್ ಯುದ್ಧ ಮುಗಿದು] ನೀವು ಅವರ ಬಳಿಗೆ ಮರಳಿ ಬಂದಾಗ ಅವರು ವಿವಿಧ ರೀತಿಯ ನೆಪಗಳನ್ನು ನಿಮ್ಮ ಮುಂದಿಡುವರು. ನೀವು ನೆಪಗಳನ್ನೊಡ್ಡುವ ಅಗತ್ಯವಿಲ್ಲ; ನಾವು ನಿಮ್ಮ ಮಾತುಗಳನ್ನು ನಂಬುವುದೂ ಇಲ್ಲ; ಅಲ್ಲಾಹ್ ನು ನಿಮ್ಮ ಕುರಿತಾದ ನಿಜ ಸಂಗತಿಯನ್ನು [ಪೈಗಂಬರರ ಮುಖಾಂತರ] ನಮಗೆ ತಿಳಿಸಿಯಾಗಿದೆ! ಇನ್ನು ಮುಂದೆ ನಿಮ್ಮ ಕೃತ್ಯಗಳನ್ನು ಅಲ್ಲಾಹ್ ನು ಮತ್ತವನ ಪೈಗಂಬರರು ವೀಕ್ಷಿಸಲಿರುವರು. ತದನಂತರ ಗೋಚರ ಮತ್ತು ಅಗೋಚರ ವಿಷಯಗಳೆಲ್ಲವನ್ನೊ ಬಲ್ಲ (ಅಲ್ಲಾಹ್ ನೆಡೆಗೆ ವಿಚಾರಣೆಗಾಗಿ) ನಿಮ್ಮನ್ನು ಮರಳಿಸಲಾಗುವುದು. ನೀವೆಸಗುತ್ತಿದ್ದ ಕೃತ್ಯಗಳ ಕುರಿತು ಆಗ ಅವನು ನಿಮಗೇ ತಿಳಿಸಲಿರುವನು - ಎಂದು ನೀವು ಅವರಿಗೆ ಹೆಳಿರಿ. {94}

ಇನ್ನು (ಜಯಗಳಿಸಿದ) ನೀವು ಮರಳಿ ಅವರಲ್ಲಿಗೆ ಬಂದಾಗ, ನೀವು ಅವರನ್ನು ಸುಮ್ಮನೆ ಬಿಟ್ಟು ಬಿಡಲಿಕ್ಕಾಗಿ ನಿಮ್ಮ ಮುಂದೆ ಅವರು ಅಲ್ಲಾಹ್ ನ ಹೆಸರಿನಲ್ಲಿ ಆಣೆ ಮಾಡಲಿರುವರು. ಆಗ ನೀವು ಅವರನ್ನು ಸುಮ್ಮನೆ ಬಿಟ್ಟು ಬಿಡಿರಿ. [ಯುದ್ಧದಲ್ಲಿ ನಿಮ್ಮೊಂದಿಗೆ ಸೇರಿಕೊಳ್ಳದ] ಅವರು ಸಾಕ್ಷಾತ್ ಹೊಲಸು ಜೀವಿಗಳು! ಅವರ ತಾಣವು ನರಕವಾಗಿದೆ; ಅವರೆಸಗಿದ ಕೃತ್ಯಕ್ಕೆ ತಕ್ಕುದಾದ ಪ್ರತಿಫಲವದು. {95}

ನೀವು ಅವರ ವಿಷಯದಲ್ಲಿ ಸಂತೃಪ್ತರಾಗಿರಲು ನಿಮ್ಮ ಮುಂದೆ ಬಂದು ಅವರು ಪ್ರಮಾಣಗಳನ್ನು ಮಾಡುತ್ತಾರೆ. ಒಂದು ವೇಳೆ ನೀವು ಅವರ ಬೆಗ್ಗೆ ಸಂತೃಪ್ತರಾದರೂ ಸಹ ಅಲ್ಲಾಹ್ ನಂತು ಅಂತಹ ವಿದ್ರೋಹಿಗಳನ್ನು ಎಂದೂ ಮೆಚ್ಚಲಾರ. {96}

ಈ ಗ್ರಾಮೀಣ ಜನರು ಧರ್ಮವನ್ನು ಧಿಕ್ಕರಿಸುವ ವಿಷಯದಲ್ಲಿ ಮತ್ತು ತಮ್ಮ ಕಾಪಟ್ಯದ ನಿಲುವಿನಲ್ಲಿ ಬಹಳ ಕಠಿಣ ಧೋರಣೆ ಹೊಂದಿದ್ದಾರೆ. ಅಲ್ಲಾಹ್ ನು ತನ್ನ ಪೈಗಂಬರರಿಗೆ ಇಳಿಸಿಕೊಟ್ಟ ಧಾರ್ಮಿಕ ಇತಿಮಿತಿಗಳನ್ನು ಇವರು [ತಮ್ಮ ದುಷ್ಟ ಮನೋಭಾವದ ಕಾರಣ] ತಿಳಿಯದಿರುವ ಸಾಧ್ಯತೆಯೇ ಹೆಚ್ಚು. ಅಲ್ಲಾಹ್ ನು ಎಲ್ಲವನ್ನು ತಿಳಿದವನು; ಮಹಾ ವಿವೇಕಶಾಲಿ. {97}

(ಅಲ್ಲಾಹ್ ನ ಮಾರ್ಗದಲ್ಲಿ ಮಾಡಲಾಗುವ) ಖರ್ಚನ್ನು ಸಾಕ್ಷಾತ್ ನಷ್ಟವೆಂದೇ ಭಾವಿಸುವ ಕೆಲವರೂ ಗ್ರಾಮೀಣ ಜನರಲ್ಲಿದ್ದಾರೆ. ಕಾಲಚಕ್ರ ಉರುಳಿದಾಗ ನಿಮಗೆ ಕೇಡಾಗಬೇಕೆಂದು ಅವರು ಕಾತರಿಸುತ್ತಾರೆ. ಆದರೆ ನಿಜವಾಗಿ ಕೇಡು ಅವರ ಮೇಲೆಯೇ ಉರುಳಲಿರುವುದು! (ನೀವು ನಿಶ್ಚಿಂತರಾಗಿರಿ), ಅಲ್ಲಾಹ್ ನು ಎಲ್ಲವನ್ನೂ ಕೇಳಿಸಿಕೊಳ್ಳುವವನು; ಅವನಿಗೆ ಸಕಲ ವಿದ್ಯಮಾನಗಳ ಜ್ಞಾನವಿರುತ್ತದೆ. {98}

ಅಲ್ಲಾಹ್ ನಲ್ಲಿ ಮತ್ತು ಅಂತ್ಯದಿನದಲ್ಲಿ ಪ್ರಬಲ ವಿಶ್ವಾಸ ಇರಿಸಿಕೊಂಡ ಕೆಲವರೂ ಗ್ರಾಮೀಣ ಅರಬರಲ್ಲಿದ್ದಾರೆ. ತಾವು ಮಾಡುವ ದಾನಧರ್ಮಗಳು ಮತ್ತು ಅದರ ಜೊತೆಗೆ ಪೈಗಂಬರರು ತಮಗೋಸ್ಕರ ಮಾಡುವ ಪ್ರಾರ್ಥನೆಗಳು ತಮಗೆ ಅಲ್ಲಾಹ್ ನ ಸಾಮೀಪ್ಯ ದೊರಕಿಸುವುದೆಂದು ಅವರು ಬಗೆಯುತ್ತಾರೆ. ನೀವು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ, ನಿಸ್ಸಂಶಯವಾಗಿ ಅದು ಅವರಿಗೆ ಅಲ್ಲಾಹ್ ನ ಸಾಮೀಪ್ಯ ದೊರಕಿಸುತ್ತದೆ. ಅಲ್ಲಾಹ್ ನು ಅಂತಹವರನ್ನು ಸಧ್ಯದಲ್ಲೇ ತನ್ನ ಕಾರುಣ್ಯದ (ಪ್ರತೀಕವಾದ ಸ್ವರ್ಗದೊಳಗೆ) ಸೇರಿಸಿಕೊಳ್ಳುವನು. ಅಲ್ಲಾಹ್ ನಾದರೋ ತುಂಬಾ ಕ್ಷಮಿಸುವವನೂ ನಿರಂತರ ಕರುಣೆ ತೋರುವವನೂ ಆಗಿರುವನು. {99}

[ಪೈಗಂಬರರ ಕರೆಗೆ ಓಗೊಟ್ಟು ಮುಸ್ಲಿಮರಾಗಿ ಹುಟ್ಟೂರು ಮಕ್ಕಾ ತ್ಯಜಿಸುವಲ್ಲಿ] ಮೊದಲಿಗರಾದ ಮುಹಾಜಿರ್ ಗಳು ಹಾಗೆಯೇ [ಮದೀನಾ ನಿವಾಸಿಗಳಾಗಿದ್ದು ಮುಹಾಜಿರ್ ಗಳಿಗೆ ನೆರವಾಗುವಲ್ಲಿ ಮತ್ತು ಇಸ್ಲಾಮ್ ಸ್ವೀಕರಿಸುವಲ್ಲಿ] ಮುಚೂಣಿಯಲ್ಲಿದ್ದ ಅನ್ಸಾರ್ ಗಳು; ಹಾಗೂ ಅವರನ್ನು ಸಮರ್ಪಕ ರೀತಿಯಲ್ಲಿ ಹಿಂಬಾಲಿಸಿದವರು - ಇವರೆಲ್ಲರ ಬಗ್ಗೆ ಅಲ್ಲಾಹ್ ನು ಸಂಪೂರ್ಣ ಸಂತೃಪ್ತನಾಗಿರುವನು. ಅಲ್ಲಾಹ್ ನ [ವಾಗ್ದಾನ, ಕೊಡುಗೆಗಳ] ಬಗ್ಗೆ ಇವರೂ ಸಂಪೂರ್ಣ ಸಂತೃಪ್ತರಾಗಿರುವರು. ಅಂತಹವರಿಗಾಗಿ ಕೆಳಭಾಗದಲ್ಲಿ ಹೊನಲುಗಳು ಚಿಮ್ಮುತ್ತಿರುವ ಸ್ವರ್ಗೀಯ ಉದ್ಯಾನಗಳನ್ನು ಅವನು ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲೇ ಸದಾಕಾಲ ನೆಲೆಸಲಿರುವರು. ಅದೇ ನಿಜಕ್ಕೂ ಅತಿ ದೊಡ್ಡ ವಿಜಯವಾಗಿದೆ. {100}

(ವಿಶ್ವಾಸಿಗಳೇ), ನಿಮ್ಮ ಸುತ್ತಮುತ್ತಲಿರುವ ಈ ಅನಾಗರಿಕ ಅರಬರಲ್ಲಿಯೂ ಕೆಲವರು ಕಪಟಿಗಳಿದ್ದಾರೆ. ಹಾಗೆಯೇ ಕೆಲವು ಮದೀನಾ ನಿವಾಸಿಗಳೂ ಕಪಟಿಗಳಾಗಿರುವರು. ಸೋಗಲಾಡಿತನ ಮಾಡುವಲ್ಲಿ ಅವರು ಪಟ್ಟು ಬಿಡದವರು. ನೀವು ಅವರನ್ನು ಗುರುತಿಸಲಾರಿರಿ ಆದರೆ ನಮಗೆ ಅವರ ಬಗ್ಗೆ ತಿಳಿದಿದೆ. ಶೀಘ್ರದಲ್ಲೇ ಅವರನ್ನು ನಾವು ಎರಡು ಬಾರಿ ಶಿಕ್ಷಿಸಲಿದ್ದೇವೆ; ಅನಂತರ ಅವರನ್ನು ಘನಘೋರ ಶಿಕ್ಷೆಯತ್ತ ತಳ್ಳಿ ಬಿಡಲಾಗುವುದು. {101}

ಅವರಲ್ಲಿ ಇನ್ನು ಕೆಲವರು ತಾವು ಮಾಡಿದ್ದ ತಪ್ಪುಗಳನ್ನು ಒಪ್ಪಿಕೊಂಡವರೂ ಇದ್ದಾರೆ. ಅವರು ಕೆಲವು ಪಾಪಗಳನ್ನೂ ಮಾಡಿ ಅದನ್ನು ತಮ್ಮ ಸತ್ಕರ್ಮಗಳ ಜೊತೆ ಬೆರೆಸಿ ಕೊಂಡಿರುವರು. (ಅಂತಹವರು ಕ್ಷಮೆ ಯಾಚಿಸಿದರೆ) ಅಲ್ಲಾಹ್ ನು ಅವರನ್ನು ಕ್ಷಮಿಸುವ ಸಾಧ್ಯತೆ ಇದೆ. (ಏಕೆಂದರೆ) ಅಲ್ಲಾಹ್ ನು ಕ್ಷಮೆ ನೀಡುವವನೂ ಕರುಣೆ ತೋರುವವನೂ ಆಗಿರುವನು. {102}

(ಓ ಪೈಗಂಬರರೇ), ಅಂತಹವರನ್ನು ಶುದ್ಧೀಕರಿಸುವ ಸಲುವಾಗಿ ಅವರ ಸೊತ್ತಿನಿಂದ (ಇತರ ಅರ್ಹರಿಗೆ ನೀಡುವುದಕ್ಕಾಗಿ) ನೀವು ದಾನದ ಮೊತ್ತವನ್ನು ಸಂಗ್ರಹಿಸಿರಿ. ಆ ಮೂಲಕ ಅವರನ್ನು ಸಂಸ್ಕರಿಸಿರಿ. ಅವರ (ಪಾಪ ವಿಮೋಚನೆಗಾಗಿ ಅಲ್ಲಾಹ್ ನಲ್ಲಿ) ಪ್ರಾರ್ಥಿಸಿರಿ. ನಿಶ್ಚಿತವಾಗಿ ಅದು ಅವರಿಗೆ ನೆಮ್ಮದಿ ತಂದು ಕೊಡುವುದು. ಅಲ್ಲಾಹ್ ನು (ಪ್ರಾರ್ಥನೆಗಳನ್ನು) ಆಲಿಸುವವನೂ (ಅಂತರಂಗ ಬಹಿರಂಗಗಳನ್ನು) ತಿಳಿದವನೂ ಆಗಿರುವನು. {103}

ತನ್ನ ಸೇವಕರು (ಅರ್ಥಾತ್ ಮಾನವ ವರ್ಗ) ಮಾಡುವ ಪಶ್ಚಾತ್ತಾಪವನ್ನು ಅಲ್ಲಾಹ್ ನು ಸ್ವೀಕರಿಸುತ್ತಾನೆ; ಅವರು ಮಾಡುವ ದಾನಧರ್ಮಗಳಿಗೆ ಸ್ವೀಕಾರ ನೀಡುತ್ತಾನೆ; ಮಾತ್ರವಲ್ಲ ಅವನು ಧಾರಾಳವಾಗಿ ಕ್ಷಮಿಸುವವನೂ ನಿರಂತರ ಕರುಣೆ ತೋರುವವನೂ ಅಗಿರುವನೆಂದು ಈ ಜನರು ತಿಳಿದುಕೊಂಡಿಲ್ಲವೇ? {104}

ಇನ್ನು ಮುಂದೆ ನೀವು ಸತ್ಕರ್ಮಗಳನ್ನು ಮಾಡುವವರಾಗಿರಿ. ನೀವು ಮಾಡುವ ಸತ್ಕರ್ಮಗಳನ್ನು ಅಲ್ಲಾಹ್ ನು ನೋಡುವನು; ಪೈಗಂಬರರೂ ವಿಶ್ವಾಸಿಗಳೂ ನೋಡುವಂತಾಗಲಿ. ನಂತರ ಕಣ್ಣಿಗೆ ಕಾಣಿಸುವ ಮತ್ತು ಕಾಣಿಸದ ಸಕಲ ವಿಷಯಗಳನ್ನೂ ಬಲ್ಲ (ಅಲ್ಲಾಹ್ ನ) ಕೆಡೆಗೆ ನಿಮ್ಮನ್ನು ಕೊಂಡೊಯ್ಯಲಾಗುವುದು. ಆಗ (ಇಹಲೋಕದಲ್ಲಿ) ನೀವು ಎನೆಲ್ಲ ಮಾಡುತ್ತಿದ್ದಿರಿ ಎಂದು ಸ್ವತಃ ಅವನೇ ನಿಮಗೆ ತಿಳಿಸಲಿರುವನು ಎಂದು (ಪೈಗಂಬರರೇ) ನೀವು ಅವರಿಗೆ ತಿಳಿಸಿರಿ. {105}

ಇನ್ನುಳಿದ ಕೆಲವರ ವಿಷಯದಲ್ಲಿ ತೀರ್ಮಾನವನ್ನು ಅಲ್ಲಾಹ್ ನ ಆಜ್ಞೆಗಾಗಿ ಕಾದಿರಿಸಲಾಗಿದೆ. ಅವನು ಅವರನ್ನು ಶಿಕ್ಷಿಸಲೂ ಬಹುದು ಅಥವಾ ಅವರ ಮೇಲೆ ಕರುಣೆ ತೋರಲೂ ಬಹುದು. ಅಲ್ಲಾಹ್ ನು ಎಲ್ಲಾ ಬಲ್ಲವನು, ವಿವೇಕಶಾಲಿಯೂ ಹೌದು. {106}

(ವಿಶ್ವಾಸಿಗಳಿಗೆ) ಹಾನಿಯುಂಟು ಮಾಡಲು, ಧರ್ಮವಿರೋಧಿ ಚಟುವಟಿಕೆಗಳಲ್ಲಿ ತೊಡಗಿರಲು, ವಿಶ್ವಾಸಿಗಳ ಮಧ್ಯೆ ಒಡಕನ್ನು ಉಂಟುಮಾಡಲು ಹಾಗೂ ಅಲ್ಲಾಹ್ ಮತ್ತು ಪೈಗಂಬರರೊಂದಿಗೆ ಈ ಹಿಂದೆಯೇ ಯುದ್ಧ ಸಾರಿದವರಿಗೆ ಒಂದು ನೆಲೆಯನ್ನು ಒದಗಿಸಿ ಕೊಡಲು 'ಮಸೀದಿ'ಯೊಂದನ್ನು ಕಟ್ಟಿಕೊಂಡ ಇನ್ನು ಕೆಲವು ಕಪಟಿಗಳಿದ್ದಾರೆ! ಅವರು (ನಿಮ್ಮ ಮುಂದೆ ಬಂದು ನಿಂತು) ಖಂಡಿತವಾಗಿ ಒಳಿತನ್ನು ಮಾತ್ರವಲ್ಲದೆ ಬೇರಾವ ಉದ್ದೇಶದಿಂದಲೂ (ಆ ಮಸೀದಿಯನ್ನು ಕಟ್ಟಿಸಿದ್ದಲ್ಲ) ಎಂದು ಪ್ರಮಾಣ ಮಾಡಿ ಹೇಳುತ್ತಾರೆ. ಆದರೆ ಅವರೆಲ್ಲ ಸುಳ್ಳುಗಾರರೆಂದು ಅಲ್ಲಾಹ್ ನು ಸಾಕ್ಷಿ ಹೆಳುತ್ತಾನೆ. {107}

(ಪೈಗಂಬರರೇ), ಆ ಮಸೀದಿಯಲ್ಲಿ ಎಷ್ಟು ಮಾತ್ರಕ್ಕೂ ನೀವು ನಮಾಝ್ ಮಾಡಲು ನಿಲ್ಲಬಾರದು. ಅಲ್ಲಾಹ್ ನ ಭಯಭಕ್ತಿಯನ್ನು ಮೊದಲ ದಿನದಿಂದಲೇ ಬುನಾದಿಯಾಗಿರಿಸಿ ಕೊಂಡು ನಿರ್ಮಿಸಲಾದ [ಹತ್ತಿರದ ಕುಬಾ] ಮಸೀದಿಯು ನಮಾಝ್ ಮಾಡಲು ಹೆಚ್ಚು ಅರ್ಹವಾದ ಮಸೀದಿ! ತಾವು ಆತ್ಮಶುದ್ಧಿಯನ್ನು ಪಡೆಯಬೇಕೆಂದು ಬಯಸಿ (ನಮಾಝ್ ಗಾಗಿ ಬರುವ) ಜನರು ಅಲ್ಲಿರುವರು. ಹೌದು, ತಮ್ಮನ್ನು ಪರಿಶುದ್ಧವಾಗಿ ಇರಿಸಿಕೊಳ್ಳುವ ಜನರನ್ನು ಅಲ್ಲಾಹ್ ನು ಇಷ್ಟಪಡುತ್ತಾನೆ. {108}

ಅಲ್ಲಾಹ್ ನ ಭಕ್ತಿ ಮತ್ತು ಸಂಪ್ರೀತಿಯನ್ನು ಬುನಾದಿಯಾಗಿಸಿ ನಿರ್ಮಾಣ ಕಾರ್ಯ ಮಾಡುವವನು ಉತ್ತಮನೋ ಅಥವಾ ಕಡಿದಾದ ಪ್ರಪಾತದ ಅಂಚಿನಲ್ಲಿ ಕಟ್ಟಡ ನಿರ್ಮಿಸಿ, ಅದು ಉರುಳಿ ಬೀಳುವಾಗ ತಾನೂ ಅದರೊಂದಿಗೆ ಉರುಳಿ ನೇರವಾಗಿ ನರಕದ ಬೆಂಕಿಯೊಳಕ್ಕೆ ಬೀಳುವವನು ಉತ್ತಮನೋ (ನೀವೇ ಯೋಚಿಸಿ)! ಅಂತಹ ಅಕ್ರಮಿಗಳನ್ನು ಅಲ್ಲಾಹ್ ನು ಸರಿದಾರಿಗೆ ತರಲಾರ! {109}

ಆ ಕಪಟಿಗಳು (ಮಸೀದಿಯೆಂದು) ನಿರ್ಮಿಸಿಕೊಂಡ ಆ ಕಟ್ಟಡವು ಅವರ ಹೃದಯಗಳಲ್ಲಿ ಅವಿಶ್ವಾಸ, ಅಪನಂಬಿಕೆಗಳನ್ನು ಬಿತ್ತುತ್ತಲೇ ಇರುತ್ತದೆ. (ಅದು ನಿಲ್ಲಬೇಕಾದರೆ) ಅವರ ಹೃದಯಗಳೇ ಒಡೆದು ಚೂರು ಚೂರಾಗಬೇಕಷ್ಟೆ! ಅಲ್ಲಾಹ್ ನು ಎಲ್ಲಾ ಬಲ್ಲವನು; ಅತ್ಯಂತ ವಿವೇಕಶಾಲಿ. {110}

ವಾಸ್ತವದಲ್ಲಿ ವಿಶ್ವಾಸಿ ಜನರ ತನು ಧನಗಳನ್ನು (ಅವರಿಗೆ ವಾಗ್ದಾನ ಮಾಡಲಾದ) ಸ್ವರ್ಗೋದ್ಯಾನದ ಬದಲಿಗೆ ಅಲ್ಲಾಹ್ ನು ಖರೀದಿಸಿರುವನು. ಅಲ್ಲಾಹ್ ನ ಮಾರ್ಗದಲ್ಲಿ ಅವರು ಯುಧ್ದ ಮಾಡುತ್ತಾರೆ ಮತ್ತು (ಶತ್ರುಗಳನ್ನು) ವಧಿಸುತ್ತಾರೆ; (ಕೆಲವೊಮ್ಮೆ) ತಾವೇ ವಧಿಸಲ್ಪಡುತ್ತಾರೆ! ತೌರಾತ್, ಇಂಜೀಲ್ ಮತ್ತು ಈ ಕುರ್‌ಆನ್ ನಲ್ಲಿ ಮಾಡಲಾಗಿರುವ (ಸ್ವರ್ಗದ ಕುರಿತಾದ) ವಾಗ್ದಾನವು ಅಲ್ಲಾಹ್ ನ ಮೇಲಿರುವ ಒಂದು ಹೊಣೆ! ಕೊಟ್ಟ ಮಾತು ಪಾಲಿಸುವುದರಲ್ಲಿ ಅಲ್ಲಾಹ್ ನಿಗೆ ಮಿಗಿಲಾದವರು ಯಾರಿದ್ದಾರೆ! ಆದ್ದರಿಂದ ನೀವು ಅವನೊಂದಿಗೆ ಮಾಡಿಕೊಂಡ ಒಪ್ಪಂದಕ್ಕಾಗಿ ಸಂತೋಷ ಪಡಿರಿ. (ನಿಮಗೆ ನೆನಪಿರಲಿ) ಅದು ವಿಜಯಗಳಲ್ಲಿ ಅತ್ಯಂತ ದೊಡ್ಡ ವಿಜಯ. {111}

ಅಲ್ಲಾಹ್ ನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುವವರು, ಅವನ ಆರಾಧನೆಯಲ್ಲಿ ತೊಡಗಿರುವವರು, ಅವನ ಗುಣಗಾನ ಮಾಡುವವರು, ಅವನಿಗಾಗಿ ವಲಸೆ-ಉಪವಾಸಗಳನ್ನು ಕೈಗೊಳ್ಳುವವರು, ಅವನಿಗೆ ತಲೆಬಾಗುವವರು, ಅವನ ಮುಂದೆ ಸಾಷ್ಟಾಂಗ ನಮಿಸುವವರು, ಹಾಗೆಯೇ ಜನರಿಗೆ ಒಳಿತನ್ನು ಬೋಧಿಸುವ ಮತ್ತು ಕೆಡುಕಿನಿಂದ ಅವರನ್ನು ತಡೆಯುವವರು, ಅಲ್ಲಾಹ್ ನು ನಿಗದಿಪಡಿಸಿದ ಮಿತಿ ಮೇರೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು - (ಇವರೇ ನಿಜವಾದ ವಿಶ್ವಾಸಿಗಳು. ಆದ್ದರಿಂದ ಪೈಗಂಬರರೇ, ಆ ಮಹಾ ವಿಜಯಕ್ಕೆ ಅರ್ಹರಾದ) ವಿಶ್ವಾಸಿಗಳಿಗೆ ನೀವು ಶುಭವಾರ್ತೆ ನೀಡಿರಿ. {112}

ಮುಶ್ರಿಕ್ ಗಳು ತಮ್ಮ ನಿಕಟ ಸಂಬಂಧಿಕರೇ ಆಗಿದ್ದರೂ, ಅವರು (ಅಲ್ಲಾಹ್ ನನ್ನು ಧಿಕ್ಕರಿಸಿ) ನರಕವಾಸಿಗಳು ಆಗಿರುವರು ಎಂಬುದು ಸ್ಪಷ್ಟವಾದ ಬಳಿಕ ಅವರ ಪಾಪವಿಮೋಚನೆಗಾಗಿ ಅಲ್ಲಾಹ್ ನಲ್ಲಿ ಪ್ರಾರ್ಥಿಸುವುದು ಪೈಗಂಬರರಿಗಾಗಲಿ, ಪೈಗಂಬರರನ್ನು ಒಪ್ಪಿಕೊಂಡ ವಿಶ್ವಾಸಿಗಳಿಗಾಗಲಿ ತರವಲ್ಲ! {113}

ಪ್ರವಾದಿ ಇಬ್ರಾಹೀಮರು ತಮ್ಮ ತಂದೆಯ ಪಾಪವಿಮೋಚನೆಗಾಗಿ ಪ್ರಾರ್ಥಿಸಲು ಕಾರಣ ಅವರು ಆತನೊಂದಿಗೆ ಮಾಡಿದ್ದ ಒಂದು ವಾಗ್ದಾನವಾಗಿತ್ತು. ಆದರೆ ಆತನು ಅಲ್ಲಾಹ್ ನ ಶತ್ರುವೆಂದು ಅವರಿಗೆ ಸ್ಪಷ್ಟವಾದ ಕೂಡಲೇ ಅವರು ಆತನೊಂದಿಗಿನ ಸಂಬಂಧ ಕಡಿದುಕೊಂಡರು! ವಾಸ್ತವದಲ್ಲಿ ಇಬ್ರಾಹೀಮರು ಕೋಮಲ ಹೃದಯಿ ಮತ್ತು ಸಂಯಮಶೀಲ ವ್ಯಕ್ತಿತ್ವ ಹೊಂದಿದ್ದರು. {114}

ಒಂದು ಜನ ಸಮೂಹಕ್ಕೆ ಸರಿದಾರಿ ತೋರಿ, ಅನಂತರ ಯಾವೆಲ್ಲ ವಿಷಯಗಳಲ್ಲಿ ಅವರು ಜಾಗರೂಕರಾಗಿ ಇರಬೇಕೆಂದು ಅವರಿಗೆ ಸ್ಪಷ್ಟಪಡಿಸಿ (ಅದಕ್ಕೆ ಅವರು ಬದ್ಧರಾಗಿರುವ) ತನಕ ಅವರನ್ನು ದಾರಿತಪ್ಪಿಸುವುದು ಅಲ್ಲಾಹ್ ನ ಕ್ರಮವಲ್ಲ. ಅಲ್ಲಾಹ್ ನಿಗೆ ಸಕಲ ವಿಷಯಗಳ ಪರಿಜ್ಞಾನವಿದೆ. {115}

ಅಕಾಶಗಳ ಮತ್ತು ಭೂಮಿಯ ಆಧಿಪತ್ಯ ಯಾರಿಗೆ ಸೇರಿದೆಯೋ ಅವನೇ ಅಲ್ಲಾಹ್ ನು! ಅವನೇ ಜೀವನ ಮತ್ತು ಮರಣ ನೀಡುವವನು. ಆ ಅಲ್ಲಾಹ್ ನ ಹೊರತು ನಿಮಗೆ ಹಿತೈಷಿಗಳಾಗಲಿ ಸಹಾಯಕರಾಗಲಿ ಯಾರೂ ಇಲ್ಲ! {116}

ಪೈಗಂಬರರ ಮೇಲೆ ಮತ್ತು ಸಂಕಷ್ಟದ ಕಾಲದಲ್ಲಿ ಪೈಗಂಬರರನ್ನು ಅನುಸರಿಸಿ (ಅವರ ಜೊತೆಗೆ ನಿಂತಿದ್ದ) ಮುಹಾಜಿರ್ ಮತ್ತು ಅನ್ಸಾರ್ ಗಳ ಮೇಲೆ ಅಲ್ಲಾಹ್ ನು ಕೃಪಾದೃಷ್ಟಿ ಬೀರಿದನು. ಮುಹಾಜಿರ್ ಮತ್ತು ಅನ್ಸಾರ್ ಗಳ ಒಂದು ಗುಂಪಿನವರ ಮನಸ್ಸಂತು ವಿಚಲಿತ ಗೊಳ್ಳುವುದರಲ್ಲಿತ್ತು. ಆದರೆ ಅವನು ಪುನಃ ಅವರತ್ತ ಕೃಪೆ ಮಾಡಿದನು. ಅವರ ಪಾಲಿಗಂತು ಅವನು ಬಹಳ ವಾತ್ಸಲ್ಯಮಯಿ; ತುಂಬಾ ಕರುಣೆಯುಳ್ಳವನು. {117}

(ತಬೂಕ್ ಪ್ರಯಾಣದಿಂದ ನುಣುಚಿಕೊಂಡು) ಮನೆಯಲ್ಲೇ ಉಳಿದುಕೊಂಡ ಯಾವ ಮೂವರ [ಬಗ್ಗೆ ತೀರ್ಪುನ್ನು ಕಾದಿರಿಸಲಾಗಿತ್ತೋ, ಅವರ ಪಶ್ಚಾತ್ತಾಪವನ್ನೂ ಅಲ್ಲಾಹ್ ನು ಸ್ವೀಕರಿಸಿ] ಅವರಿಗೂ ಕೃಪೆ ತೋರಿದನು. ಅವರ ಪಾಲಿಗೆ ಭೂಮಿಯು ಅದರ ವೈಶಾಲ್ಯದ ಹೊರತಾಗಿಯೂ ಇಕ್ಕಟ್ಟಾಗಿ ಪರಿಣಮಿಸಿದಾಗ, ಸ್ವತಃ ಅವರ ಜೀವನವೇ ಅವರಿಗೆ ಜಿಗುಪ್ಸೆಯಾದಾಗ, ಅಲ್ಲಾಹ್ ನ ರಕ್ಷಣೆ ಸಿಗಬೇಕಾದರೆ ಅವನತ್ತ ತಿರುಗುವುದಲ್ಲದೆ ಬೇರಾವ ದಾರಿಯೂ ಇಲ್ಲವೆಂದು ಅವರಿಗೆ ಮನವರಿಕೆಯಾದಾಗ, ನಿಜಾರ್ಥದಲ್ಲಿ ಪಶ್ಚಾತ್ತಾಪ ಪಡಲು ಅಲ್ಲಾಹ್ ನು ಆ ಮೂವರ ಮೇಲೂ ಕೃಪಾದೃಷ್ಟಿ ಬೀರಿದನು. ನಿಜವಾಗಿ ಹೆಚ್ಚು ಕೃಪೆ ತೋರುವವನೂ ಮಹಾ ಕರುಣಾಮಯಿಯೂ ಆಗಿರುವನು ಆ ಅಲ್ಲಾಹ್ ನು. {118}

ವಿಶ್ವಾಸಿಗಳೇ ನೀವು ಅಂತಹ ಅಲ್ಲಾಹ್ ನಿಗೆ ಭಯಭಕ್ತಿ ತೋರುವವರಾಗಿರಿ. [ಸೋಗಲಾಡಿಗಳಿಂದ ದೂರವಿದ್ದು] ಸತ್ಯಸಂಧರ ಸಹವಾಸದಲ್ಲಿರಿ. {119)

ಅಲ್ಲಾಹ್ ನ ಪೈಗಂಬರರ ಜೊತೆ ಹೊರಡಲು ಹಿಂಜರಿದು ಮನೆಯಲ್ಲೇ ಕುಳಿತಿದ್ದುದು ಮತ್ತು ಪೈಗಂಬರರ ಸುರಕ್ಷತೆಯನ್ನು ಲೆಕ್ಕಿಸದೆ ಸ್ವತಃ ತಮ್ಮದೇ ಅಸ್ತಿತ್ವಕ್ಕೆ ಹೆಚ್ಚು ಆದ್ಯತೆ ನೀಡಿದುದು - ಮದೀನಾ ನಿವಾಸಿಗಳಿಗೂ ಆಸುಪಾಸಿನ ಹಳ್ಳಿಗರಿಗೂ ಎಷ್ಟುಮಾತ್ರಕ್ಕೂ ಅದು ಭೂಷಣವಲ್ಲ. ಏಕೆಂದರೆ, ಅಲ್ಲಾಹ್ ನ ಮಾರ್ಗದಲ್ಲಿ ಅವರು ಅನುಭವಿಸುವ ದಾಹವಾಗಲಿ, ಪಡುವ ಪ್ರಯಾಸವಾಗಲಿ, ಸಹಿಸುವ ಹಸಿವಾಗಲಿ; ಅಂತೆಯೇ ವಿರೋಧಿಗಳನ್ನು ಕುಪಿತಗೊಳಿಸುವ ಅವರ ಯಾವುದೇ ಕ್ರಮವಾಗಲಿ, ಶತ್ರುಗಳನ್ನು ಘಾಸಿಗೊಳಿಸಲು ಅವರು ಹೂಡುವ ತಂತ್ರವಾಗಲಿ - ಅವುಗಳಿಗೆ ಬದಲಾಗಿ ಒಂದು ಸತ್ಕರ್ಮವನ್ನು ಅವರ ಖಾತೆಗೆ ಬರೆಯಲಾಗದೆ ಇರದು! ಹೌದು, ಸಚ್ಚರಿತ ಜನರಿಗಿರುವ ಪ್ರತಿಫಲವು ಅಲ್ಲಾಹ್ ಬಳಿ ವ್ಯರ್ಥವಾಗುವುದಿಲ್ಲ! {120}

ಅದೇ ಪ್ರಕಾರ ಅವರು (ಅಲ್ಲಾಹ್ ನ ಮಾರ್ಗದಲ್ಲಿ) ಮಾಡಿದ ಖರ್ಚುಗಳು - ಅದು ಸಣ್ಣದಾಗಿರಲಿ ದೊಡ್ಡದಾಗಿರಲಿ; ಹಾಗೂ (ಅಲ್ಲಾಹ್ ನಿಗಾಗಿ) ಕಣಿವೆ ಕಂದರಗಳಲ್ಲಿ ಅವರು ಮಾಡಿದ ಪ್ರಯಾಣಗಳು - ಯಾವುದನ್ನೂ ಅವರ ಖಾತೆಯಲ್ಲಿ ದಾಖಲಿಸದೆ ಬಿಟ್ಟಿಲ್ಲ. ಅವರು ಮಾಡಿದ ಪ್ರತಿ ಸತ್ಕರ್ಮಕ್ಕೂ ಬಹಳಷ್ಟು ಉತ್ತಮ ರೀತಿಯಲ್ಲಿ ಪ್ರತಿಫಲ ನೀಡುವುದಕ್ಕಾಗಿ (ಹಾಗೆ ದಾಖಲಿಸಲಾಗುತ್ತದೆ). {121}

ಇನ್ನು [ಆಸುಪಾಸಿನ ಆ ಹಳ್ಳಿಗರಿಗೂ ಧಾರ್ಮಿಕ ತಿಳುವಳಿಕೆ ನೀಡುವ ಅಗತ್ಯವಿದೆ. ಆ ಉದ್ದೇಶಕ್ಕಾಗಿ ಪೈಗಂಬರರ ಸಂಗಡವಿರುವ] ವಿಶ್ವಾಸಿಗಳೆಲ್ಲರೂ ಒಟ್ಟಾಗಿ ಹೊರಟು ಹೋಗುವುದು ಸಾಧ್ಯವಾಗುವ ವಿಷಯವಲ್ಲ. (ಸುತ್ತಮುತ್ತ ನೆಲೆಸಿರುವ ಗ್ರಾಮೀಣರ) ಪ್ರತಿಯೊಂದು ಜನಾಂಗದಿಂದ ಒಂದೊಂದು ತಂಡವು ಬಂದು ಧರ್ಮದ ವಿಷಯದಲ್ಲಿ ಸರಿಯಾದ ತಿಳುವಳಿಕೆ ಪಡೆದು, ಹಿಂದಿರುಗಿ ಹೋಗಿ ತಮ್ಮ ತಮ್ಮ ಜನರಿಗೆ (ಪರಲೋಕ, ಸ್ವರ್ಗ, ನರಕಗಳ ಬಗ್ಗೆ) ಮುನ್ನೆಚ್ಚರಿಕೆ ನೀಡುವಂತೆ ಆಗಲಿಲ್ಲವೇಕೆ? ಅವರೂ ಸಹ [ಅಧರ್ಮ, ಸೋಗಲಾಡಿತನಗಳಿಗೆ ಬಲಿಯಾಗದೆ] ಜಾಗರೂಕರಾಗಿರಲು (ಹಾಗೆ ಮಾಡುವ ಅಗತ್ಯವಿದೆ). {122}

ಓ ವಿಶ್ವಾಸಿಗಳೇ (ಇನ್ನು ಎದ್ದೇಳಿ); ನಿಮ್ಮ ಹತ್ತಿರದ ಪ್ರದೇಶಗಳಲ್ಲಿರುವ ಅಂತಹ ಅಧರ್ಮಿಗಳ ವಿರುದ್ಧ ಈಗ ಯುದ್ಧ ಮಾಡಿರಿ. ನಿಮ್ಮಲ್ಲಿ (ದೈಹಿಕ ಮತ್ತು ಮಾನಸಿಕ) ದಾರ್ಢ್ಯತೆ ಇರುವುದನ್ನು ಅವರು ಮನಗಾಣಲಿ! ಆದರೆ ಚೆನ್ನಾಗಿ ತಿಳಿದಿರಿ, [ಯುದ್ಧದಂತಹ ಸಂದರ್ಭದಲ್ಲೂ ಅನ್ಯಾಯ ಸಂಭವಿಸದಂತೆ] ತಮ್ಮನ್ನು ನಿಯಂತ್ರಿಸಿ ಕೊಳ್ಳುವವರ ಜೊತೆಗೆ ಮಾತ್ರವೇ ಅಲ್ಲಾಹ್ ನು ಇರುತ್ತಾನೆ. {123}

ಯಾವುದಾದರೂ ಒಂದು ಹೊಸ ಸೂರಃ [ಅರ್ಥಾತ್ ಅಲ್ಲಾಹ್ ನು ಕಳಿಸುವ ವಚನಗಳ ಸಮೂಹವನ್ನು ಪೈಗಂಬರರಿಗೆ] ಇಳಿಸಿಕೊಟ್ಟಾಗ ಆ ಕಪಟಿಗಳಲ್ಲಿ ಕೆಲವರು, ನಿಮ್ಮಲ್ಲಿ ಯಾರ ವಿಶ್ವಾಸವನ್ನು ಇದು ಹೆಚ್ಚಿಸಿತು ಎಂದು ಅಣಕಿಸಿ ಕೇಳುತ್ತಾರೆ. ಯಥಾರ್ಥದಲ್ಲಿ ಯಾರು ನಿಜವಾಗಿ ವಿಶ್ವಾಸಿಗಳಾಗಿದ್ದಾರೋ ಅವರ ವಿಶ್ವಾಸವನ್ನು ಅದು ಮತ್ತಷ್ಟು ಹೆಚ್ಚಿಸಿದೆ ಮತ್ತು ಅವರು ಸಂತೋಷ ಪಡುತ್ತಿದ್ದಾರೆ. {124}

ಇನ್ನು ಯಾರ ಹೃದಯಗಳಲ್ಲಿ (ಅಧರ್ಮ, ಕಾಪಟ್ಯಗಳಂತಹ) ರೋಗ ತಿಂಬಿಕೊಂಡಿದೆಯೋ ಅಂತಹವರ ವಿಷಯ! ಅಂತಹವರಲ್ಲಿ ಇರುವ ದುಷ್ಟತನಕ್ಕೆ ಅದು ಮತ್ತಷ್ಟು ದುಷ್ಟತನವನ್ನಷ್ಟೆ ಸೇರಿಸುತ್ತದೆ. ಅವರು ಅಧರ್ಮಿಗಳಾಗುರುವ ಸ್ಥಿತಿಯಲ್ಲೇ ಅವರಿಗೆ ಸಾವು ಬರುವುದು. {125}

ಪ್ರತಿ ವರ್ಷ ಒಂದು ಅಥವಾ ಎರಡು ಬಾರಿ ತಮ್ಮನ್ನು ಪರೀಕ್ಷೆಗೆ ಗುರಿ ಪಡಿಸಲಾಗುತ್ತಿರುವ ಯಥಾರ್ಥವನ್ನು ಈ ಸೋಗಲಾಡಿಗಳು ಮನಗಾಣುತ್ತಿಲ್ಲವೇ?! ಅಷ್ಟಾಗ್ಯೂ ಅವರು ಪಶ್ಚಾತ್ತಾಪ ಪಡುವುದೂ ಇಲ್ಲ; ಅದರಿಂದ ಪಾಠ ಕಲಿಯುತ್ತಲೂ ಇಲ್ಲ! {126}

ಇನ್ನು (ಯಾವುದಾದರೂ ಕಾರ್ಯಕ್ಕಾಗಿ ಹೊಸ) ಒಂದು ಸೂರಃ ವನ್ನು ಇಳಿಸಿದಾಗ 'ನೀವು ಯಾರ ಕಣ್ಣಿಗೂ ಬೀಳಲಿಲ್ಲ ತಾನೆ' ಎಂದು ಖಚಿತಪಡಿಸಲು ಆ ಕಪಟಿಗಳು ಪರಸ್ಪರ ಒಬ್ಬರನ್ನೊಬ್ಬರು ನೋಡಿ (ಯಾರೂ ತಮ್ಮನ್ನು ನೋಡುತ್ತಿಲ್ಲವೆಂಬುದು ಖಚಿತವಾದಾಗ) ಸುಮ್ಮನೆ ಅಲ್ಲಿಂದ ಕಾಲ್ಕೀಳುತ್ತಾರೆ. (ಅಷ್ಟೊಂದು ತಾಕೀತಿನ ನಂತರವೂ) ಮನನ ಮಾಡಿಕೊಳ್ಳಲು ಅವರು ತಯಾರಿಲ್ಲದ ಜನರಾದ್ದರಿಂದ ಅಲ್ಲಾಹ್ ನೂ ಅವರ ಹೃದಯಗಳನ್ನು ತಿರುಚಿ ಬಿಟ್ಟನು. {127}

[ಜನರೇ, ಇನ್ನಾದರೂ ತಿಳಿಯಿರಿ,] ನಿಮ್ಮ ಜನಾಂಗದಿಂದಲೇ ನಿಮ್ಮ ಕಡೆಗೆ ಒಬ್ಬ ದೂತನ ಆಗಮನವಾಗಿರುತ್ತದೆ! ನೀವು ಪಡುವ ಬವಣೆ ಅವರಿಗೆ ಬಹಳ ತ್ರಾಸದಾಯಕವಾಗಿ ಪರಿಣಮಿಸುತ್ತದೆ; ನಿಮ್ಮ ಒಳಿತಿಗಾಗಿ ಅವರು ತವಕಿಸುತ್ತಿರುತ್ತಾರೆ! ವಿಶ್ವಾಸಿಗಳ ಪಾಲಿಗಂತು ಅವರು ಬಹಳ ಮೃದು ಸ್ವಭಾವದವರೂ ಅನುಕಂಪವುಳ್ಳವರೂ ಆಗಿದ್ದಾರೆ! {128}

ಓ ಪೈಗಂಬರರೇ, ಅಷ್ಟಾಗಿಯೂ ಅವರು ನಿಮ್ಮಿಂದ ಮುಖ ತಿರುಗಿಸಿಕೊಂಡರೆ, ಅಲ್ಲಾಹ್ ನು ಮಾತ್ರವೇ ನನಗೆ ಸಾಕು; ಅವನಲ್ಲದೆ ಬೇರೆ ಯಾರೂ ದೇವನಿಲ್ಲ; ನಾನು ಸಂಪೂರ್ಣ ಭರವಸೆ ಇಡುವುದು ಅವನ ಮೇಲೆ ಮಾತ್ರ; ಅವನಾದರೋ ವಿಶ್ವದ ಅಧಿಕಾರ ಗದ್ದುಗೆಯ ಅಧಿಪತಿಯಾಗಿರುವವನು ಎಂದು ಅವರೊಂದಿಗೆ ಹೇಳಿ (ಅವರಿಂದ ದೂರವಾಗಿರಿ). {129}

-------------------------


ಈ ಸೂರಃ ದಲ್ಲಿ ಉಪಯೋಗಿಸಲಾದ ಪಾರಿಭಾಷಿಕ ಪದಾವಳಿ:

  • ಮುಶ್ರಿಕ್: ಏಕಮೇವನಾದ ಅಲ್ಲಾಹ್ ನ ಏಕತ್ವಕ್ಕೆ ಧಕ್ಕೆ ತರುವ ಸಕಲ ರೀತಿಯ ಭಾವನೆ, ವರ್ತನೆ, ಆಚಾರ, ವಿಚಾರ ಇತ್ಯಾದಿಗಳನ್ನು 'ಶಿರ್ಕ್' ಎಂದೂ ಅಂತಹ ಪ್ರಕ್ರಿಯೆಗಳಲ್ಲಿ ತೊಡಗಿರುವವರನ್ನು 'ಮುಶ್ರಿಕ್' ಎಂದೂ ಕುರ್‌ಆನ್ ನ ಪಾರಿಭಾಷಿಕೆಯಲ್ಲಿ ಹೇಳಲಾಗುತ್ತದೆ. ಕುರ್‌ಆನ್ ನ ಪ್ರಕಾರ ಅದು ಗುರುತರವಾದ ಪಾಪ, ಅಪರಾಧ ಹಾಗೂ ಅತಿ ದೊಡ್ಡ ವೈಚಾರಿಕ ಅತಿಕ್ರಮ. ಆದ್ದರಿಂದಲೇ ಕುರ್‌ಆನ್ ಅದನ್ನು ಅಕ್ಷಮ್ಯವೆಂದು ಸಾರುತ್ತದೆ.

  • ಝಕಾತ್: ಝಕಾತ್ ಇಸ್ಲಾಮ್ ಧರ್ಮದ ಬುನಾದಿಗಳಲ್ಲೊಂದು. ಆರಾಧನೆಗಳಲ್ಲಿ ನಮಾಝ್ ನ ನಂತರ ಬರುವುದೇ ಝಕಾತ್. ಇದು ಧನಿಕ ಮುಸ್ಲಿಮರು ಕಡ್ಡಾಯವಾಗಿ ಬಡ ಮತ್ತು ಅರ್ಹ ಜನರಿಗೆ ನೀಡಬೇಕಾದ ಸಹಾಯ. ಮುಸ್ಲಿಮರು ಒಂದು ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದ್ದರೆ ಝಕಾತ್ ನ ಸಂಗ್ರಹ ಮತ್ತು ವಿತರಣಾ ಕಾರ್ಯ ಸರಕಾರೀ ಮಟ್ಟದಲ್ಲಿ ನಡೆಯುತ್ತದೆ. ಅಂತಹ ವ್ಯವಸ್ಥೆ ಇಲ್ಲದಿರುವಾಗ ಮುಸ್ಲಿಮರು ವೈಯಕ್ತಿಕವಾಗಿ ಅದನ್ನು ಅನುಷ್ಠಾನಿಸಬೇಕು. ಝಕಾತ್ ಮೂಲಕ ಸಂಗರಹವಾದ ಮೊತ್ತವನ್ನು ಭತ್ಯೆ ರೂಪದಲ್ಲಿ ಪೈಗಂಬರರ ಆಡಳಿತವು ಹೇಗೆ ವಿತರಿಸಬೇಕು ಎಂಬುದನ್ನು ಈ ಸೂರಃ ದ ಅರವತ್ತನೆಯ ವಚನದಲ್ಲಿ ವಿವರಿಸಲಾಗಿದೆ. ಉಳಿತಾಯ, ಚಿನ್ನಬೆಳ್ಳಿ, ಜಾನುವಾರುಗಳು, ಕೃಷ್ಯುತ್ಪನ್ನ ಮುಂತಾದವುಗಳ ಮೇಲಿನ ಝಕಾತ್ ದರವನ್ನು ಪೈಗಂಬರರು ತಮ್ಮ ಅನುಯಾಯಿಗಳಿಗೆ ಬೋಧಿಸಿರುತ್ತಾರೆ. ಮುಸ್ಲಿಮರು ಅದನ್ನೇ ಅನುಸರಿಸಬೇಕು.

  • ಕುಫ್ಫಾರ್: ಸತ್ಯವು ಚೆನ್ನಾಗಿ ಮನವರಿಕೆಯಾದ ನಂತರವೂ ಅದನ್ನು ತಿರಸ್ಕರಿಸಿದವರು; ಸತ್ಯವನ್ನು ಬೇಕಂತಲೇ ಬಚ್ಚಿಟ್ಟವರು; ಅಲ್ಲಾಹ್ ನ ಪ್ರವಾದಿಗಳ ಕರೆಯನ್ನು ಧಿಕ್ಕರಿಸಿದವರು; ಸೃಷ್ಟಿಕರ್ತನಿಗೇ ಎದುರು ನಿಲ್ಲುವ ದಾರ್ಷ್ಟ್ಯ ತೋರಿದವರು; ಪೈಗಂಬರರ ಬೋಧನೆಗಳನ್ನು ಉದ್ಧಟತನದಿಂದ ಹಂಗಿಸಿದವರು ಎಂಬೀ ಅರ್ಥಗಳಲ್ಲಿ ಕುರ್‌ಆನ್ ಈ ಪಾರಿಭಾಷಿಕೆಯನ್ನು ಬಳಸಿದೆ. ಇದು ಅಲ್ ಕಾಫಿರ್ ಎಂಬ ಪದದ ಬಹುವಚನ ರೂಪ. ಕೇವಲ ಮುಸ್ಲಿಮೇತರರು ಎಂಬ ಅರ್ಥದಲ್ಲಿ ಕಾಫಿರ್ ಮತ್ತು ಕುಫ್ಫಾರ್ ಪದಗಳನ್ನು ಇಲ್ಲಿ ಬಳಸಲಾಗಿಲ್ಲ.  

  • ತಬೂಕ್ ಯುದ್ಧ: ಟಿಪ್ಪಣಿ ನೀಡಲಾಗುವುದು.  
    • ಮುಹಾಜಿರ್: ಟಿಪ್ಪಣಿ ನೀಡಲಾಗುವುದು.  
    • ಅನ್ಸಾರ್: ಟಿಪ್ಪಣಿ ನೀಡಲಾಗುವುದು.  

    ಅನುವಾದಿತ ಸೂರಃ ಗಳು:


    Featured post

    ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...