ಅರ್ ರೂಮ್ | ترجمة سورة الروم

    تـرجمـة سورة الروم من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅರ್ ರೂಮ್  | ಪವಿತ್ರ ಕುರ್‌ಆನ್ ನ 30 ನೆಯ ಸೂರಃ | ಇದರಲ್ಲಿ ಒಟ್ಟು 60 ಆಯತ್ ಗಳು ಇವೆ |

ಅಪಾರ ದಯಾಳುವೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹನ ನಾಮದೊಂದಿಗೆ (ಆರಂಭಿಸುತ್ತೇನೆ)!

الم

ಅಲಿಫ್ - ಲಾಮ್ - ಮೀಮ್! {1}

غُلِبَتِ الرُّومُ

ರೋಮನ್ನರು (ಪರ್ಶಿಯನ್ನರಿಂದ) ಸೋಲುಂಡರು! {2}

فِي أَدْنَى الْأَرْضِ وَهُمْ مِنْ بَعْدِ غَلَبِهِمْ سَيَغْلِبُونَ

(ಅವರು ಸೋತಿರುವುದು ಭೂಮಿಯ ಅತ್ಯಂತ ತಗ್ಗು ಪ್ರದೇಶದಲ್ಲಿ, ಅಂದರೆ ನಿಮ್ಮ) ಹತ್ತಿರದ ನೆಲದಲ್ಲಿ! ತಮ್ಮ ಈ ಸೋಲುವಿಕೆಯ ನಂತರ ಅವರು ಶೀಘ್ರದಲ್ಲೇ ವಿಜಯ ಸಾಧಿಸಲಿರುವರು! {3}

فِي بِضْعِ سِنِينَ ۗ لِلَّهِ الْأَمْرُ مِنْ قَبْلُ وَمِنْ بَعْدُ ۚ وَيَوْمَئِذٍ يَفْرَحُ الْمُؤْمِنُونَ

(ಅದೂ ಸಹ) ಕೆಲವೇ ವರ್ಷಗಳಲ್ಲಿ! ಯಥಾರ್ಥದಲ್ಲಿ ಮೊದಲಿನ (ಸೋಲು) ಮತ್ತು ಅನಂತರದ (ಗೆಲುವು) - ಎಲ್ಲವೂ ಅಲ್ಲಾಹ್ ನ ಆದೇಶದ ಪ್ರಕಾರವೇ ಸಂಭವಿಸುವುದು. ಅವರ ಗೆಲುವಿನ ದಿನ ವಿಶ್ವಾಸಿಗಳು (ಅರ್ಥಾತ್ ಅರೇಬಿಯಾ ಪ್ರದೇಶದ ಮುಸ್ಲಿಮರು) ಸಂಭ್ರಮಿಸಲಿರುವರು! {4}

بِنَصْرِ اللَّهِ ۚ يَنْصُرُ مَنْ يَشَاءُ ۖ وَهُوَ الْعَزِيزُ الرَّحِيمُ

ಅಲ್ಲಾಹ್ ನ ನೆರವಿನಿಂದ (ಪುನಃ ರೋಮನ್ನರಿಗೆ ಅರ್ಥಾತ್ ಕ್ರೈಸ್ತ ಸಾಮ್ರಾಜ್ಯಕ್ಕೆ ಗೆಲುವಾಗಲಿದೆ). ಅಲ್ಲಾಹ್ ನು, ತಾನು ನೆರವು ನೀಡಬೇಕೆಂದು ಬಯಸಿದವರಿಗೆ ನೆರವು ನೀಡುವನು. ಅವನು ಪ್ರತಾಪಶಾಲಿಯೂ ಹೌದು, ನಿರಂತರ ಕರುಣೆ ತೋರುವವನೂ ಹೌದು! {5}

وَعْدَ اللَّهِ ۖ لَا يُخْلِفُ اللَّهُ وَعْدَهُ وَلَٰكِنَّ أَكْثَرَ النَّاسِ لَا يَعْلَمُونَ

ಇದು ಅಲ್ಲಾಹ್ ನು ಮಾಡಿದ ವಾಗ್ದಾನ. ಅಲ್ಲಾಹ್ ನು ತಾನು ಮಾಡಿದ ವಾಗ್ದಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವ ಗೋಜಿಗೆ ಹೋಗುವುದಿಲ್ಲ. {6}

يَعْلَمُونَ ظَاهِرًا مِنَ الْحَيَاةِ الدُّنْيَا وَهُمْ عَنِ الْآخِرَةِ هُمْ غَافِلُونَ

ಅವರು ಈ ಲೋಕದ ಬದುಕಿಗೆ ಸಂಬಂಧಿಸಿದಂತೆ ಬಾಹ್ಯ ವಿಚಾರಗಳನ್ನು ಮಾತ್ರ ಬಲ್ಲರಷ್ಟೆ; ಪರಲೋಕಕ್ಕೆ ಸಂಬಂಧಿಸಿದಂತೆ ಅವರು ಪೂರ್ಣವಾಗಿ ಅಸಡ್ಡೆಯ ಮನೋಭಾವ ಹೊಂದಿರುವರು. {7}

أَوَلَمْ يَتَفَكَّرُوا فِي أَنْفُسِهِمْ ۗ مَا خَلَقَ اللَّهُ السَّمَاوَاتِ وَالْأَرْضَ وَمَا بَيْنَهُمَا إِلَّا بِالْحَقِّ وَأَجَلٍ مُسَمًّى ۗ وَإِنَّ كَثِيرًا مِنَ النَّاسِ بِلِقَاءِ رَبِّهِمْ لَكَافِرُونَ

ತಮ್ಮ ಮನದೊಳಗೇ ಅವರು ಚಿಂತನೆ ನಡೆಸುವುದಿಲ್ಲವೇ? ಆಕಾಶಗಳು, ಭೂಮಿ ಹಾಗೂ ಅವೆರಡರ ನಡುವೆ ಇರುವ ಸಕಲವನ್ನೂ ಅಲ್ಲಾಹ್ ನು ನ್ಯಾಯಯುತವಾಗಿ, ಒಂದು ನಿಶ್ಚಿತ ಅವಧಿಗಾಗಿ ಸೃಷ್ಟಿಸಿರುವನು. ಅದರೆ ನಿಜವೇನೆಂದರೆ ಮನುಷ್ಯರಲ್ಲಿ ಹೆಚ್ಚಿನವರು ತಮ್ಮ ಪರಿಪಾಲಕನಾದ (ಪ್ರಭುವನ್ನು) ಭೇಟಿಯಾಗಲಿರುವ ಬಗ್ಗೆ ಧಿಕ್ಕಾರ ತೋರುತ್ತಿದ್ದಾರೆ! {8}

أَوَلَمْ يَسِيرُوا فِي الْأَرْضِ فَيَنْظُرُوا كَيْفَ كَانَ عَاقِبَةُ الَّذِينَ مِنْ قَبْلِهِمْ ۚ كَانُوا أَشَدَّ مِنْهُمْ قُوَّةً وَأَثَارُوا الْأَرْضَ وَعَمَرُوهَا أَكْثَرَ مِمَّا عَمَرُوهَا وَجَاءَتْهُمْ رُسُلُهُمْ بِالْبَيِّنَاتِ ۖ فَمَا كَانَ اللَّهُ لِيَظْلِمَهُمْ وَلَٰكِنْ كَانُوا أَنْفُسَهُمْ يَظْلِمُونَ

ಭೂಮಿಯಲ್ಲಿ ಅತ್ತಿತ್ತ ಪ್ರಯಾಣ ನಡೆಸುವಾಗ ಈ ಜನರು ತಮಗಿಂತ ಮುಂಚಿನವರ ಗತಿ ಏನಾಯಿತೆಂದು ನೋಡುವುದಿಲ್ಲವೇ? ಬಲಾಢ್ಯತನದಲ್ಲಿ ಇವರಿಂತ ಅವರು ಮಿಗಿಲಾಗಿದ್ದರು. ಭೂಮಿಯನ್ನು ಸಹ ಅವರು ಚೆನ್ನಾಗಿ ಹದಗೊಳಿಸಿದ್ದರು. (ಮಕ್ಕಾ ಪ್ರದೇಶದವರಾದ) ಇವರು ಭೂಮಿಯನ್ನು ಅಭಿವೃದ್ಧಿಗೊಳಿಸಿದ್ದಕ್ಕಿಂತ ಅದೆಷ್ಟೋ ದೊಡ್ಡ ಪ್ರಮಾಣದಲ್ಲಿ ಅವರು ಅಭಿವೃದ್ಧಿಗೊಳಿಸಿದ್ದರು. ಆ ಜನರ ಬಳಿಗೂ ಅವರತ್ತ ನಿಯೋಜಿತರಾದ ದೂತರುಗಳು ಬಹಳ ಸ್ಪಷ್ಟವಾದ ನಿದರ್ಶನಗಳೊಂದಿಗೆ ಬರುತ್ತಿದ್ದರು. [ಆದರೆ ದೂತರುಗಳನ್ನು ಅಲ್ಲಗಳೆದ ಕಾರಣ ಇಹಲೋಕದಲ್ಲೇ ಅವರು ಶಿಕ್ಷೆಗೆ ಬಲಿಯಾದರು]! ಅಲ್ಲಾಹ್ ನು ಅವರ ಮೇಲೆ ಅನ್ಯಾಯ ಮಾಡಿರುವುದಲ್ಲ; ಆ ಜನರು (ಅಲ್ಲಾಹ್ ನ ಆದೇಶಗಳನ್ನು ಧಿಕ್ಕರಿಸುವ ಮೂಲಕ) ತಮ್ಮ ಮೇಲೆ ತಾವೇ ಅನ್ಯಾಯ ಮಾಡಿಕೊಂಡವರು! {9}

ثُمَّ كَانَ عَاقِبَةَ الَّذِينَ أَسَاءُوا السُّوأَىٰ أَنْ كَذَّبُوا بِآيَاتِ اللَّهِ وَكَانُوا بِهَا يَسْتَهْزِئُونَ

ನಂತರ ಕೆಟ್ಟದ್ದನ್ನು ಮಾಡಿದವರ ಪರಿಣಾಮವೂ ಬಹಳ ಕೆಟ್ಟದ್ದೇ ಆಯಿತು! ಏಕೆಂದರೆ ಅಲ್ಲಾಹ್ ನ ವಚನಗಳನ್ನು ಅವರು ತಿರಸ್ಕರಿಸುತ್ತಿದ್ದರು, ಮಾತ್ರವಲ್ಲ ಅವುಗಳನ್ನು ಅಪಹಾಸ್ಯಕ್ಕೆ ಗುರಿಪಡಿಸುತ್ತಿದ್ದರು. {10}

اللَّهُ يَبْدَأُ الْخَلْقَ ثُمَّ يُعِيدُهُ ثُمَّ إِلَيْهِ تُرْجَعُونَ

ಸೃಷ್ಟಿ ಕಾರ್ಯವನ್ನು ಆರಂಭಿಸಿದವನು ಅಲ್ಲಾಹ್ ನೇ. ತರುವಾಯ ಅವನೇ (ನಂತರದ ಘಟ್ಟದಲ್ಲಿ) ಪುನಃ ಸೃಷ್ಟಿಸಲಿದ್ದಾನೆ. ನಂತರ (ಅಂತಿಮ ವಿಚಾರಣೆಗಾಗಿ) ನಿಮ್ಮೆಲ್ಲರನ್ನು ಅವನೆಡೆಗೇ ಹಿಂದಿರುಗಿಸಲಾಗುವುದು. {11}

وَيَوْمَ تَقُومُ السَّاعَةُ يُبْلِسُ الْمُجْرِمُونَ

ತರುವಾಯ, ಅಂದಿನ ದಿನ (ನ್ಯಾಯತೀರ್ಪಿನ) ಸಮಯ ಬಂದೆರಗಿದಾದ ಈ ಅಪರಾಧಿಗಳೆಲ್ಲ ಹತಾಶಗೊಳ್ಳಲಿರುವರು. {12}

وَلَمْ يَكُنْ لَهُمْ مِنْ شُرَكَائِهِمْ شُفَعَاءُ وَكَانُوا بِشُرَكَائِهِمْ كَافِرِينَ

ಯಾರನ್ನು ಅಲ್ಲಾಹ್ ನಿಗೆ ಪಾಲುದಾರರಾಗಿ ಅವರು ಕಲ್ಪಿಸಿಕೊಂಡಿದ್ದರೋ ಅವರಲ್ಲಿ ಯಾರೂ ಅವರಿಗಾಗಿ ಅಂದು ಶಿಫಾರಸ್ಸು ಮಾಡಲಾರರು. ಆಗ ಅವರು ಅಲ್ಲಾಹ್ ನ ಪಾಲುದಾರರೆಂದು ಕಲ್ಪಿಸಿಕೊಂಡಿದ್ದ (ಆ ಎಲ್ಲ ಕಾಲ್ಪನಿಕ ದೇವರುಗಳನ್ನು) ನಿರಾಕರಿಸಿ ಬಿಡುವರು. {13}

وَيَوْمَ تَقُومُ السَّاعَةُ يَوْمَئِذٍ يَتَفَرَّقُونَ

ಹೌದು, ಅಂದಿನ ದಿನ (ನ್ಯಾಯತೀರ್ಪಿನ) ಸಮಯ ಬಂದೆರಗುವುದು; ಆಗ (ಸಜ್ಜನರು ಮತ್ತು ದುರ್ಜನರು) ಬೇರೆಬೇರೆಯಾಗಿ ಅಂದು ವಿಭಜಿಸಲ್ಪಡುವರು. {14}

فَأَمَّا الَّذِينَ آمَنُوا وَعَمِلُوا الصَّالِحَاتِ فَهُمْ فِي رَوْضَةٍ يُحْبَرُونَ

ಮತ್ತು ಯಾರು (ಭೂಲೋಕದಲ್ಲಿ) ವಿಶ್ವಾಸಿಗಳಾಗಿ, ಸತ್ಕರ್ಮಗಳಲ್ಲಿ ನಿರತರಾಗಿದ್ದರೋ ಅವರು ವೈಭವಯುತ ಉದ್ಯಾನದಲ್ಲಿ ಹರ್ಷೋಲ್ಲಾಸದಿಂದ ಸಂಭ್ರಮ ಪಡುತ್ತಿರುವರು. {15}

وَأَمَّا الَّذِينَ كَفَرُوا وَكَذَّبُوا بِآيَاتِنَا وَلِقَاءِ الْآخِرَةِ فَأُولَٰئِكَ فِي الْعَذَابِ مُحْضَرُونَ

ಇನ್ನು, ಯಾರು ಧಿಕ್ಕಾರ ತೋರಿದ್ದರೋ, ನಮ್ಮ ವಚನಗಳನ್ನೂ ಪರಲೋಕದಲ್ಲಿನ ಭೇಟಿಯನ್ನೂ ನಿರಾಕರಿಸಿದ್ದರೋ ಅಂತಹವರನ್ನು ಶಿಕ್ಷೆಯ ಸ್ಥಿತಿಯಲ್ಲಿ ಹಿಡಿದಿಡಲಾಗುವುದು. {16}

فَسُبْحَانَ اللَّهِ حِينَ تُمْسُونَ وَحِينَ تُصْبِحُونَ

ಆದ್ದರಿಂದ (ಜನರೇ), ಸಂಜೆಯಾಗುವಾಗಲೂ ಮುಂಜಾನೆಯಾಗುವಾಗಲೂ ನೀವು ಅಲ್ಲಾಹ್ ನ ಮಹಿಮೆಯ ಪ್ರಶಂಸೆ, ಗುಣಗಾನಗಳಲ್ಲಿ [ಅರ್ಥಾತ್ ನಮಾಝ್ ನಲ್ಲಿ] ತೊಡಗಿರಿ. {17}

وَلَهُ الْحَمْدُ فِي السَّمَاوَاتِ وَالْأَرْضِ وَعَشِيًّا وَحِينَ تُظْهِرُونَ

ಅಕಾಶಗಳಲ್ಲೂ ಭೂಮಿಯಲ್ಲೂ ಅವನನ್ನೇ ಸ್ತುತಿಸಲಾಗುತ್ತದೆ; ಆದ್ದರಿಂದ ರಾತ್ರಿಯಾಗುವಾಗಲೂ ಮಧ್ಯಾಹ್ನವಾಗುವಾಗಲೂ [ನೀವು ಸಹ ನಿಮ್ಮ ನಮಾಝ್ ಗಳಲ್ಲಿ] ಅವನನ್ನು ಸ್ತುತಿಸಿರಿ. {18}

يُخْرِجُ الْحَيَّ مِنَ الْمَيِّتِ وَيُخْرِجُ الْمَيِّتَ مِنَ الْحَيِّ وَيُحْيِي الْأَرْضَ بَعْدَ مَوْتِهَا ۚ وَكَذَٰلِكَ تُخْرَجُونَ

ಅವನು ಜಡವಸ್ತುಗಳಿಂದ ಜೀವಿಗಳನ್ನು ಸೃಷ್ಟಿಸಿ ಹೊರತರುತ್ತಾನೆ ಹಾಗೂ ಜೀವಿಗಳಿಂದ ಜಡವಸ್ತುಗಳನ್ನು ಹೊರತರುತ್ತಾನೆ! ಹಾಗೆಯೇ ಭೂಮಿಯನ್ನು ಅದು ಜಡಾವಸ್ಥೆಗೆ ತಲುಪಿದ ನಂತರ ಪುನಃ ಜೀವಂತಗೊಳಿಸುತ್ತಾನೆ! ಜನರೇ, ನೀವೂ ಸಹ ಹಾಗೆಯೇ ಪುನಃ ಸೃಷ್ಟಿಸಲ್ಪಡುವಿರಿ! {19}

وَمِنْ آيَاتِهِ أَنْ خَلَقَكُمْ مِنْ تُرَابٍ ثُمَّ إِذَا أَنْتُمْ بَشَرٌ تَنْتَشِرُونَ

ನಿಮ್ಮನ್ನು ಅವನು (ಮೊದಲಿಗೆ) ಮಣ್ಣಿನಿಂದ ಸೃಷ್ಟಿಸಿ, ನಂತರ, ನೋಡು ನೋಡುತ್ತಿದ್ದಂತೆ ನೀವು ಮನುಷ್ಯರಾಗಿ [ಸ್ವಯಂ ಸಂತಾನೋತ್ಪತ್ತಿ ಮಾಡುತ್ತಾ ಭೂಮಿಯಲ್ಲಿ] ಹರಡುತ್ತಾ ಹೋದುದು ಅವನ ದೈವಿಕ ದೃಷ್ಟಾಂತಗಳಲ್ಲಿ ಒಂದು! {20}

وَمِنْ آيَاتِهِ أَنْ خَلَقَ لَكُمْ مِنْ أَنْفُسِكُمْ أَزْوَاجًا لِتَسْكُنُوا إِلَيْهَا وَجَعَلَ بَيْنَكُمْ مَوَدَّةً وَرَحْمَةً ۚ إِنَّ فِي ذَٰلِكَ لَآيَاتٍ لِقَوْمٍ يَتَفَكَّرُونَ

ಅವನು ನಿಮಗಾಗಿ, ನಿಮ್ಮ ವರ್ಗದಿಂದಲೇ ನಿಮಗೆ ಜೀವನ ಸಂಗಾತಿಗಳನ್ನು ಸೃಷ್ಟಿಸಿದುದು, ನೀವು ಅಕೆಯ ಬಳಿಯಿಂದ ಶಾಂತಿ ನೆಮ್ಮದಿಗಳನ್ನು ಪಡೆಯುವಂತೆ ಮಾಡಿರುವುದು, ಮತ್ತು ನಿಮ್ಮಿಬ್ಬರ ನಡುವೆ ಪ್ರೀತಿ ವಾತ್ಸಲ್ಯಗಳನ್ನು, ಪರಸ್ಪರರಿಗೆ ದಯೆ ಅನುಕಂಪಗಳನ್ನು ಇಟ್ಟಿರುವುದು ಸಹ ಅವನ ದೃಷ್ಟಾಂತಗಳಲ್ಲಿ ಒಂದು! ಚಿಂತನೆ ನಡೆಸುವಂತಹ ಜನರಿಗೆ ಇದರಲ್ಲಿ ಸಾಕಷ್ಟು ನಿದರ್ಶನಗಳಿವೆ. {21}

وَمِنْ آيَاتِهِ خَلْقُ السَّمَاوَاتِ وَالْأَرْضِ وَاخْتِلَافُ أَلْسِنَتِكُمْ وَأَلْوَانِكُمْ ۚ إِنَّ فِي ذَٰلِكَ لَآيَاتٍ لِلْعَالِمِينَ

ಆಕಾಶಗಳ ಮತ್ತು ಭೂಮಿಯ ಸೃಷ್ಟಿ, ನಿಮ್ಮ ಭಾಷೆ ಮತ್ತು ಬಣ್ಣಗಳಲ್ಲಿನ ವೈವಿಧ್ಯತೆಗಳು ಸಹ ಅವನ ದೃಷ್ಟಾಂತಗಳಲ್ಲಿ ಒಂದು! ತಿಳುವಳಿಕೆ ಇರುವ ಜನರಿಗೆ ಖಂಡಿತವಾಗಿ ಇದರಲ್ಲಿ ಸಾಕಷ್ಟು ಸೂಚನೆಗಳಿವೆ. {22}

وَمِنْ آيَاتِهِ مَنَامُكُمْ بِاللَّيْلِ وَالنَّهَارِ وَابْتِغَاؤُكُمْ مِنْ فَضْلِهِ ۚ إِنَّ فِي ذَٰلِكَ لَآيَاتٍ لِقَوْمٍ يَسْمَعُونَ

ರಾತ್ರಿಯಲ್ಲಿ ನೀವು ಮಾಡುವ ನಿದ್ರೆ ಹಾಗೂ ಹಗಲಲ್ಲಿ ಅವನ ಔದಾರ್ಯವನ್ನು ನೀವು ಹುಡುಕುತ್ತಾ ಹೋಗುವ ಪ್ರಕ್ರಿಯೆ ಸಹ ಅವನ ದೃಷ್ಟಾಂತಗಳಲ್ಲಿ ಒಂದು! ಕಿವಿಗೊಟ್ಟು ಕೇಳುವ ಜನರಿಗೆ ನಿಜವಾಗಿ ಇದರಲ್ಲಿ ಸಾಕಷ್ಟು ಪಾಠವಿದೆ. {23}

وَمِنْ آيَاتِهِ يُرِيكُمُ الْبَرْقَ خَوْفًا وَطَمَعًا وَيُنَزِّلُ مِنَ السَّمَاءِ مَاءً فَيُحْيِي بِهِ الْأَرْضَ بَعْدَ مَوْتِهَا ۚ إِنَّ فِي ذَٰلِكَ لَآيَاتٍ لِقَوْمٍ يَعْقِلُونَ

ಭಯ ಹುಟ್ಟಿಸುವ ಹಾಗೂ ನಿರೀಕ್ಷೆ ಉಂಟುಮಾಡುವ ಮಿಂಚನ್ನು ಅವನು ನಿಮಗೆ ತೋರಿಸಿಕೊಡುವ, ಆಕಾಶದಿಂದ ಮಳೆನೀರು ಸುರಿಸಿ ತನ್ಮೂಲಕ ನೆಲವನ್ನು ಅದರ ಜಡಾವಸ್ಥೆಯ ನಂತರ ಪುನಃ ಜೀವಂತಗೊಳಿಸುವ ಪ್ರಕ್ರಿಯೆಗಳು ಕೂಡ ಅವನ ದೃಷ್ಟಾಂತಗಳ ಸಾಲಿಗೆ ಸೇರಿದ್ದಾಗಿವೆ. ಬುದ್ಧಿ ಉಪಯೋಗಿಸುವ ಜನರಿಗೆ ನಿಜವಾಗಿ ಇದರಲ್ಲಿ ಸಹ ಪುರಾವೆಗಳಿವೆ. {24}

وَمِنْ آيَاتِهِ أَنْ تَقُومَ السَّمَاءُ وَالْأَرْضُ بِأَمْرِهِ ۚ ثُمَّ إِذَا دَعَاكُمْ دَعْوَةً مِنَ الْأَرْضِ إِذَا أَنْتُمْ تَخْرُجُونَ

ಆಕಾಶ ಮತ್ತು ಭೂಮಿಯು ಅವನ ಅಪ್ಪಣೆಯ ಮೇರೆಗೆ ನೆಲೆನಿಂತಿರುವುದು ಸಹ ಅವನ ದೃಷ್ಟಾಂತಗಳ ಪೈಕಿ ಒಂದು. ಕೊನೆಗೆ, ಭೂಮಿಯಿಂದ ಹೊರಬರುವಂತೆ ಅವನು ನಿಮಗೆ ಕರೆಕೊಟ್ಟರೆ ಆ ಕೂಡಲೇ ನೀವೆಲ್ಲ (ಜೀವಂತವಾಗಿ) ಹೊರಬರಲಿರುವಿರಿ. {25}

وَلَهُ مَنْ فِي السَّمَاوَاتِ وَالْأَرْضِ ۖ كُلٌّ لَهُ قَانِتُونَ

(ಏಕೆಂದರೆ) ಭೂಮಿ ಮತ್ತು ಆಕಾಶಗಳಲ್ಲಿರುವ ಎಲ್ಲರೂ ಅವನಿಗೇ ಸೇರಿರುತ್ತಾರೆ. (ಆದ್ದರಿಂದ) ಅವನ ಆದೇಶಕ್ಕೆ ಎಲ್ಲರೂ ತಲೆಬಾಗಬೇಕಾಗುತ್ತದೆ. {26}

وَهُوَ الَّذِي يَبْدَأُ الْخَلْقَ ثُمَّ يُعِيدُهُ وَهُوَ أَهْوَنُ عَلَيْهِ ۚ وَلَهُ الْمَثَلُ الْأَعْلَىٰ فِي السَّمَاوَاتِ وَالْأَرْضِ ۚ وَهُوَ الْعَزِيزُ الْحَكِيمُ

ಸೃಷ್ಟಿಕಾರ್ಯವನ್ನು ಆರಂಭಿಸಿದವನು ಅವನೇ; (ಎಲ್ಲವನ್ನೂ ನಾಶಪಡಿಸಿದ) ನಂತರ ಮತ್ತೊಮ್ಮೆ ಸೃಷ್ಟಿ ಮಾಡುವವನೂ ಅವನೇ! ಅದೆಲ್ಲ ಅವನ ಪಾಲಿಗೆ ಅತ್ಯಂತ ಸಲೀಸಾದ ಸಂಗತಿ! ಭೂಮಿ ಮತ್ತು ಆಕಾಶಗಳಲ್ಲಿ (ಯಾವ ಹೋಲಿಕೆಗಳೂ ಇಲ್ಲದಂತಹ) ಬಹಳ ಮಹತ್ತರವಾದ ಗುಣವಿಶೇಷಗಳು ಅವನದ್ದು ಮಾತ್ರ! ಅವನಾದರೋ ಸರ್ವಶಕ್ತನೂ ವಿವೇಕಪೂರ್ಣನೂ ಆಗಿರುವನು. {27}

ضَرَبَ لَكُمْ مَثَلًا مِنْ أَنْفُسِكُمْ ۖ هَلْ لَكُمْ مِنْ مَا مَلَكَتْ أَيْمَانُكُمْ مِنْ شُرَكَاءَ فِي مَا رَزَقْنَاكُمْ فَأَنْتُمْ فِيهِ سَوَاءٌ تَخَافُونَهُمْ كَخِيفَتِكُمْ أَنْفُسَكُمْ ۚ كَذَٰلِكَ نُفَصِّلُ الْآيَاتِ لِقَوْمٍ يَعْقِلُونَ

[ಕೆಲಸಕ್ಕೆ ಬಾರದ ಮಿಥ್ಯ ದೇವರುಗಳನ್ನು ಅಲ್ಲಾಹ್ ನಿಗೆ ಸರಿದೂಗಿಸುವ] ನಿಮಗೆ ನಿಮ್ಮ ಸ್ವಂತ ಜೀವನದಿಂದಲೇ ಒಂದು ಉದಾಹರಣೆಯನ್ನು ಅಲ್ಲಾಹ್ ನು ನೀಡುತ್ತಾನೆ! ನಿಮ್ಮ ಕೈಕೆಳಗಿರುವ ದಾಸದಾಸಿಯರ ಪೈಕಿ ಯಾರಾದರೂ, ಅಲ್ಲಾಹ್ ನು ನಿಮಗೆ ದಯಪಾಲಿಸಿದ ಸಂಪತ್ತಿನಲ್ಲಿ ನಿಮಗೆ ಸರಿಸಮವಾದ ಪಾಲುದಾರರು ಆಗುವರೇ? ನಿಮ್ಮವರ ಬಗ್ಗೆ ನೀವು ಕಳವಳಪಟ್ಟಂತೆ ನಿಮ್ಮ ದಾಸದಾಸಿಯರ ಬಗ್ಗೆಯೂ ನೀವು ಕಳವಳ ಪಡುವುದಿದೆಯೇ? ಬುದ್ಧಿ ಉಪಯೋಗಿಸುವ ಜನರಿಗೆ ಹೀಗೆ ನಾವು ನಿದರ್ಶನಗಳನ್ನು ವಿವರಿಸುತ್ತೇವೆ! {28}

بَلِ اتَّبَعَ الَّذِينَ ظَلَمُوا أَهْوَاءَهُمْ بِغَيْرِ عِلْمٍ ۖ فَمَنْ يَهْدِي مَنْ أَضَلَّ اللَّهُ ۖ وَمَا لَهُمْ مِنْ نَاصِرِينَ

ಎಂದಿಗೂ ಇಲ್ಲ; [ಜನರು ಬುದ್ಧಿ ಉಪಯೋಗಿಸುವುದಿಲ್ಲ. ಬದಲಾಗಿ ಬಹುದೇವಾರಾಧನೆ, ವಿಗ್ರಹಾರಾಧನೆಗಳಂತಹ] ಅನಾಚಾರ ಅನ್ಯಾಯಗಳನ್ನು ಮಾಡುವವರು ಏನೂ ತಿಳಿಯದೆ ತಮ್ಮ ಮನಸ್ಸಿನ ಅಭಿಲಾಷೆ ಹಿಂದೆ ಬೀಳುತ್ತಾರೆ. (ಅಂತಹವರು ಸ್ವಯಂ ತಪ್ಪು ದಾರಿಗೆ ಬಿದ್ದ ಕಾರಣ ಅಲ್ಲಾಹ್ ನೂ ಅವರನ್ನು ಹಾಗೆಯೇ ಬಿಡುತ್ತಾನೆ). ಇನ್ನು ಅಲ್ಲಾಹ್ ನು ಯಾರನ್ನಾದರೂ ದಾರಿಗೆಡಲು ಬಿಟ್ಟರೆ ಅಂತಹವನಿಗೆ ಸರಿದಾರಿ ತೋರುವರು ಯಾರಿದ್ದಾರೆ?! ಅಂತಹವರಿಗೆ ಸಹಾಯಕರಾಗಿ ಯಾರೂ ಇರಲಾರರು! {29}

فَأَقِمْ وَجْهَكَ لِلدِّينِ حَنِيفًا ۚ فِطْرَتَ اللَّهِ الَّتِي فَطَرَ النَّاسَ عَلَيْهَا ۚ لَا تَبْدِيلَ لِخَلْقِ اللَّهِ ۚ ذَٰلِكَ الدِّينُ الْقَيِّمُ وَلَٰكِنَّ أَكْثَرَ النَّاسِ لَا يَعْلَمُونَ

ಆದ್ದರಿಂದ (ಪೈಗಂಬರರೇ), ನೀವು ನಿಮ್ಮ ನಿಷ್ಠೆಯನ್ನು ತುಂಬು ಏಕಾಗ್ರತೆಯೊಂದಿಗೆ (ಅಲ್ಲಾಹ್ ನ) ಧರ್ಮದಲ್ಲಿ ಕೇಂದ್ರೀಕರಿಸಿರಿ. ಅದುವೇ ಅಲ್ಲಾಹ್ ನು ರೂಪಿಸಿದ ಸಹಜ ಧರ್ಮ! ಆ ಸಹಜ ಧರ್ಮದಲ್ಲೇ ಅಲ್ಲಾಹ್ ನು ಮನುಷ್ಯವರ್ಗವನ್ನು ಸೃಷ್ಟಿಸಿರುವನು. ಅಲ್ಲಾಹ್ ನ ಸೃಷ್ಟಿ ವಿನ್ಯಾಸದಲ್ಲಿ ಯಾವುದೇ ರೀತಿಯ ಬದಲಾವಣೆ ಸಾಧ್ಯವಿಲ್ಲ. ಅದುವೇ ನೆಲೆನಿಲ್ಲಬೇಕಾದ ನೇರವಾದ ಧರ್ಮ! ಆದರೆ ಜನರಲ್ಲಿ ಹೆಚ್ಚಿನವರು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. {30}

مُنِيبِينَ إِلَيْهِ وَاتَّقُوهُ وَأَقِيمُوا الصَّلَاةَ وَلَا تَكُونُوا مِنَ الْمُشْرِكِينَ

(ಆದ್ದರಿಂದ ಜನರೇ, ಉಳಿದ ಎಲ್ಲದರಿಂದ ಸಂಪೂರ್ಣವಾಗಿ ವಿಮುಖರಾಗಿ) ನೀವು ಅವನೆಡೆಗೆ ಮುಖ ಮಾಡಿಕೊಳ್ಳಿರಿ. ಅವನ ವಿಷಯದಲ್ಲಿ ಜಾಗರೂಕತೆ ವಹಿಸಿರಿ. ನಮಾಝ್ ಗಳನ್ನು ಶ್ರದ್ಧೆಯೊಂದಿಗೆ ಪಾಲಿಸಿರಿ. ಎಂದಿಗೂ ಅಲ್ಲಾಹ್ ನ ದೇವತ್ವದಲ್ಲಿ (ಇತರರಿಗೆ ಪಾಲುದಾರಿಕೆ) ಕಲ್ಪಿಸಬೇಡಿ. {31}

مِنَ الَّذِينَ فَرَّقُوا دِينَهُمْ وَكَانُوا شِيَعًا ۖ كُلُّ حِزْبٍ بِمَا لَدَيْهِمْ فَرِحُونَ

ಹಾಗೆಯೇ (ಯಹೂದಿ ಮತ್ತು ನಸಾರಾಗಳಂತೆ) ತಮ್ಮ ಧರ್ಮದಲ್ಲಿ ಒಡಕುಂಟು ಮಾಡಿ ಪಂಗಡಗಳಾಗಿ ವಿಭಜಿಸಲ್ಪಟ್ಟವರ (ಸಾಲಿಗೆ ನೀವು ಸೇರದಿರಿ). ಅವರಲ್ಲಿನ ಪ್ರತಿಯೊಂದು ಪಂಗಡ ಸಹ ತಾನಿರುವ ಪಂಗಡದ ಬಗ್ಗೆ ಹಿಗ್ಗುತ್ತಿದೆ! {32}

وَإِذَا مَسَّ النَّاسَ ضُرٌّ دَعَوْا رَبَّهُمْ مُنِيبِينَ إِلَيْهِ ثُمَّ إِذَا أَذَاقَهُمْ مِنْهُ رَحْمَةً إِذَا فَرِيقٌ مِنْهُمْ بِرَبِّهِمْ يُشْرِكُونَ

ಮತ್ತು ಆಂತಹ ಜನರಿಗೆ ಏನಾದರೂ ಕೆಟ್ಟದ್ದು ಸಂಭವಿಸಿದಾಗ ಅವರು (ಇತರೆಲ್ಲ ಮಿಥ್ಯ ದೇವರುಗಳನ್ನು ಬದಿಯಲ್ಲಿಟ್ಟು) ಸಹಾಯಕ್ಕಾಗಿ ಕೇವಲ ತಮ್ಮ ಸೃಷ್ಟಿಕರ್ತನೆಡೆಗೆ ತಿರುಗಿ ಮೊರೆಯಿಡುತ್ತಾರೆ. ನಂತರ, ತನ್ನ ಅನುಗ್ರಹದ ರುಚಿಯನ್ನು ಅವನು ಅವರಿಗೆ ಸ್ವಲ್ಪ ಸವಿಸಿದರೆ ಆ ಕೂಡಲೇ ಅವರ ಪೈಕಿಯ ಒಂದು ಗುಂಪು ತಮ್ಮ ಸೃಷ್ಟಿಕರ್ತನ (ದೇವತ್ವದಲ್ಲಿ ಇತರರಿಗೆ) ಪಾಲುದಾರಿಕೆ ಕಲ್ಪಿಸುತ್ತಾರೆ! {33}

لِيَكْفُرُوا بِمَا آتَيْنَاهُمْ ۚ فَتَمَتَّعُوا فَسَوْفَ تَعْلَمُونَ

ಅದೇಕೆಂದರೆ ಅವರಿಗೆ ಏನನ್ನು ನಾವು ಅನುಗ್ರಹಿಸಿರುವೆವೋ ಅದಕ್ಕೆ ಕೃತಘ್ನತೆ ತೋರಲು! ಹಾಗಾದರೆ ಸರಿ, ಸ್ವಲ್ಪ ದಿನದ ಲೌಕಿಕ ಪ್ರಯೋಜನವನ್ನು ಪಡೆದುಕೊಳ್ಳಿರಿ, ಸದ್ಯದಲ್ಲೇ ನೀವು ತಿಳಿಯಲಿರುವಿರಿ! {34}

أَمْ أَنْزَلْنَا عَلَيْهِمْ سُلْطَانًا فَهُوَ يَتَكَلَّمُ بِمَا كَانُوا بِهِ يُشْرِكُونَ

ಅಥವಾ... ನಾವು ಅವರಿಗೆ ಬಲಿಷ್ಟವಾದ ಒಂದು ಪುರಾವೆಯನ್ನು ಯನ್ನು (ಆಕಾಶದಿಂದ) ಇಳಿಸಿ ಕೊಟ್ಟಿದ್ದು, ಅದು ಅವರು ಎಸಗುತ್ತಿರುವ ಶಿರ್ಕ್ (ಅಂದರೆ, ಅಲ್ಲಾಹ್ ನ ದೇವತ್ವದಲ್ಲಿ ಅವರು ಕಲ್ಪಿಸುವ ಇತರರ ಸಹಭಾಗಿತ್ವವನ್ನು) ಸಮರ್ಥಿಸುತ್ತಿದೆಯೇ?! {35}

وَإِذَا أَذَقْنَا النَّاسَ رَحْمَةً فَرِحُوا بِهَا ۖ وَإِنْ تُصِبْهُمْ سَيِّئَةٌ بِمَا قَدَّمَتْ أَيْدِيهِمْ إِذَا هُمْ يَقْنَطُونَ

ಹೌದು, ಜನರಿಗೆ ನಾವು ನಮ್ಮ ಅನುಗ್ರಹಗಳ ರುಚಿಯನ್ನು ಸವಿಯಲು ಬಿಟ್ಟರೆ ಅವರು ಅದಕ್ಕಾಗಿ ಹರ್ಷಿಸುತ್ತಾರೆ! ಇನ್ನು, ತಾವೇ ಕೈಯಾರೆ ಮಾಡಿದ ದುಷ್ಕೃತ್ಯಗಳ ಕಾರಣ ಅವರಿಗೆ ಕೆಟ್ಟದ್ದೇನಾದರೂ ಸಂಭವಿಸಿದರೆ ಅವರು ಕೂಡಲೇ ತೀವ್ರ ಹತಾಶೆಗೆ ಒಳಗಾಗುತ್ತಾರೆ. {36}

أَوَلَمْ يَرَوْا أَنَّ اللَّهَ يَبْسُطُ الرِّزْقَ لِمَنْ يَشَاءُ وَيَقْدِرُ ۚ إِنَّ فِي ذَٰلِكَ لَآيَاتٍ لِقَوْمٍ يُؤْمِنُونَ

ಅಲ್ಲಾಹ್ ನು ತಾನು ಬಯಸಿದರೆ ಉಪಜೀವನದ ವ್ಯವಸ್ಥೆಗಳನ್ನು (ಕೆಲವರಿಗೆ) ಧಾರಾಳ ಪ್ರಮಾಣದಲ್ಲಿ ನೀಡುವುದನ್ನೂ ಇನ್ನು (ಕೆಲವರಿಗೆ) ಮಿತವಾಗಿ ನೀಡುವುದನ್ನೂ ಅವರು ಗಮನಿಸುವುದಿಲ್ಲವೇ? ಅಂತಹ ನೀಡುವಿಕೆಯಲ್ಲಿ ನಿಜವಾಗಿಯೂ ವಿಶ್ವಾಸಿ ಜನರಿಗೆ ಕಲಿಯಲು ಸಾಕಷ್ಟು ಪಾಠವಿದೆ. {37}

فَآتِ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ ۚ ذَٰلِكَ خَيْرٌ لِلَّذِينَ يُرِيدُونَ وَجْهَ اللَّهِ ۖ وَأُولَٰئِكَ هُمُ الْمُفْلِحُونَ

ಹಾಗಿರುವಾಗ, ನಿಕಟ ಸಂಬಂಧಿಕರಿಗೂ, ಬಡಬಗ್ಗರಿಗೂ, ದಾರಿಹೋಕರಿಗೂ ಅವರವರ ಹಕ್ಕನ್ನು ಕೊಟ್ಟುಬಿಡಿರಿ. ಅಲ್ಲಾಹ್ ನ ಮೆಚ್ಚುಗೆಯನ್ನು ಗಳಿಸ ಬಯಸುವವರ ಪಾಲಿಗೆ ಅದುವೇ ಉತ್ತಮ ಮತ್ತು ವಿಜಯಿಗಳಾಗುವವರು ಸಹ ಅವರೇ. {38}

وَمَا آتَيْتُمْ مِنْ رِبًا لِيَرْبُوَ فِي أَمْوَالِ النَّاسِ فَلَا يَرْبُو عِنْدَ اللَّهِ ۖ وَمَا آتَيْتُمْ مِنْ زَكَاةٍ تُرِيدُونَ وَجْهَ اللَّهِ فَأُولَٰئِكَ هُمُ الْمُضْعِفُونَ

ಇನ್ನು, ನಿಮ್ಮ ಸಂಪತ್ತು ಹೆಚ್ಚುತ್ತಾ ಇರಲಿ ಎಂಬ ಉದ್ದೇಶದಿಂದ ಅದನ್ನು ನೀವು ಬಡ್ಡಿಯ ಮೇಲೆ ಜನರಿಗೆ ನೀಡಿದರೆ, ಅಲ್ಲಾಹ್ ನ ಬಳಿಯಂತು ಅದು ಹೆಚ್ಚಾಗಲಾರದು! ಬದಲಾಗಿ, ಅಲ್ಲಾಹ್ ನ ಮೆಚ್ಚುಗೆಯನ್ನು ಅರಸುತ್ತಾ ನೀವು ಅದರಿಂದ (ಬಡಬಗ್ಗರಿಗೆ) ದಾನ ಮಾಡಿದರೆ, ಹಾಗೆ ಮಾಡುವವರು (ಅದರ ಪುಣ್ಯವನ್ನು ಅಲ್ಲಾಹ್ ನ ಬಳಿ) ಹಲವು ಪಟ್ಟು ಹೆಚ್ಚಾಗಿಸಿ ಕೊಳ್ಳುತ್ತಾರೆ! {39}

اللَّهُ الَّذِي خَلَقَكُمْ ثُمَّ رَزَقَكُمْ ثُمَّ يُمِيتُكُمْ ثُمَّ يُحْيِيكُمْ ۖ هَلْ مِنْ شُرَكَائِكُمْ مَنْ يَفْعَلُ مِنْ ذَٰلِكُمْ مِنْ شَيْءٍ ۚ سُبْحَانَهُ وَتَعَالَىٰ عَمَّا يُشْرِكُونَ

ನಿಮ್ಮನ್ನು ಸೃಷ್ಟಿ ಮಾಡಿದವನು, ನಂತರ ನಿಮಗೆ ಉಪಜೀವನವನ್ನು ಒದಗಿಸಿದವನು, ನಂತರ ನಿಮಗೆ ಮರಣ ನೀಡುವವನು, ನಂತರ ನಿಮ್ಮನ್ನು ಪುನಃ ಜೀವಂತಗೊಳಿಸುವವನು ಆ ಅಲ್ಲಾಹ್ ನೇ ಆಗಿರುತ್ತಾನೆ. ಈ ಕೆಲಸಗಳಲ್ಲಿ ಯಾವುದನ್ನಾದರೂ ಅಲ್ಲಾಹ್ ನ ಸಹವರ್ತಿಗಳೆಂದು ನೀವು ಬಗೆದ ಆ (ನಿಮ್ಮ ಕಾಲ್ಪನಿಕ ದೇವರುಗಳು) ಮಾಡಮಾಡಬಲ್ಲರೇ? ಅವನೇ ಪರಮ ಪಾವನನು; ಅವನೊಂದಿಗೆ ಅವರು ಸೇರಿಸಿಕೊಳ್ಳುವ ಎಲ್ಲರಿಗಿಂತಲೂ ಅವನು ಬಹಳ ಉನ್ನತ ಸ್ಥಾನದಲ್ಲಿರುವವನು! {40}

ظَهَرَ الْفَسَادُ فِي الْبَرِّ وَالْبَحْرِ بِمَا كَسَبَتْ أَيْدِي النَّاسِ لِيُذِيقَهُمْ بَعْضَ الَّذِي عَمِلُوا لَعَلَّهُمْ يَرْجِعُونَ

ಜನರ ಸ್ವಯಂ ಕೃತ ಅಪರಾಧಗಳ ಕಾರಣ ನೆಲದಲ್ಲೂ ಜಲದಲ್ಲೂ ವಿನಾಶದ ಸ್ಥಿತಿ ತಲೆದೋರಿದೆ! ಅವರೆಸಗಿದ ಕೆಲವು ದುಷ್ಕೃತ್ಯಗಳ ರುಚಿ ಸವಿಯಲಿ ಮತ್ತು ಆ ಮೂಲಕ ಅವರು ಸರಿದಾರಿಗೆ ಮರಳಿ ಬರಲಿ ಎಂದು ಹಾಗೆ ಮಾಡಲಾಗಿದೆ. {41}

قُلْ سِيرُوا فِي الْأَرْضِ فَانْظُرُوا كَيْفَ كَانَ عَاقِبَةُ الَّذِينَ مِنْ قَبْلُ ۚ كَانَ أَكْثَرُهُمْ مُشْرِكِينَ

ನೆಲದಲ್ಲಿ ಅತ್ತಿತ್ತ ಸಂಚರಿಸಿರಿ, ಮತ್ತು ನಿಮಗಿಂತ ಮುಂಚೆ ವಾಸವಾಗಿದ್ದ ಜನರ ಅಂತಿಮ ಗತಿ ಏನಾಯಿತೆಂದು (ಕುರೈಷರೇ) ನೀವು ಕಣ್ಣಾರೆ ನೋಡಿರಿ ಎಂದು ಪೈಗಂಬರರೇ ಅವರಿಗೆ ಕರೆ ಕೊಡಿರಿ. (ಹಾಗೆ ನಾಶವಾದವರಲ್ಲಿ) ಹೆಚ್ಚಿನವರು (ಏಕಮೇವನಾದ ಅಲ್ಲಾಹ್ ನಿಗೆ ಸಹವರ್ತಿಗಳನ್ನು ಕಲ್ಪಿಸಿಕೊಂಡ) ಬಹುದೇವಾರಾಧಕರೇ ಆಗಿದ್ದರು. {42}

فَأَقِمْ وَجْهَكَ لِلدِّينِ الْقَيِّمِ مِنْ قَبْلِ أَنْ يَأْتِيَ يَوْمٌ لَا مَرَدَّ لَهُ مِنَ اللَّهِ ۖ يَوْمَئِذٍ يَصَّدَّعُونَ

ಆದ್ದರಿಂದ, ಅಲ್ಲಾಹ್ ನ ಕಡೆಯಿಂದ ಬರಲಿರುವ, ಮತ್ತು ರದ್ದುಗೊಳಿಸಲು ಯಾವ ರೀತಿಯಲ್ಲೂ ಸಾಧ್ಯವಿಲ್ಲದ ಆ ದಿನವು ಬಂದೆರಗುವ ಮುನ್ನ ನೀವು ನಿಮ್ಮೆಲ್ಲಾ ಶ್ರದ್ಧೆಯನ್ನು ಸತ್ಯವಾದ (ಇಸ್ಲಾಮ್) ಧರ್ಮದೆಡೆಗೆ ಕೇಂದ್ರೀಕರಿಸಿರಿ. (ಸಜ್ಜನರನ್ನು ಮತ್ತು ದುರ್ಜನರನ್ನು) ಬೇರೆಬೇರೆಯಾಗಿ ವಿಂಗಡಿಸಲಾಗುವ ದಿನವದು! {43}

مَنْ كَفَرَ فَعَلَيْهِ كُفْرُهُ ۖ وَمَنْ عَمِلَ صَالِحًا فَلِأَنْفُسِهِمْ يَمْهَدُونَ

(ಸತ್ಯಧರ್ಮವನ್ನು) ಧಿಕ್ಕರಿಸಿದವರು ಅದರ ಶಿಕ್ಷೆಯನ್ನು ಸ್ವತಃ ಅನುಭವಿಸಬೇಕು; ಹಾಗೆಯೇ, ಸತ್ಕರ್ಮಗಳನ್ನು ಮಾಡಿದವರು ಸ್ವತಃ ತಮ್ಮದೇ (ಒಳಿತಿಗಾಗಿ) ಸಿದ್ಧತೆ ನಡೆಸುತ್ತಿದ್ದಾರೆ. {44}

لِيَجْزِيَ الَّذِينَ آمَنُوا وَعَمِلُوا الصَّالِحَاتِ مِنْ فَضْلِهِ ۚ إِنَّهُ لَا يُحِبُّ الْكَافِرِينَ

(ಅಂದು ಜನರನ್ನು ವಿಂಗಡಿಸುವುದು) ಏಕೆಂದರೆ ವಿಶ್ವಾಸಿಗಳಾಗಿದ್ದುಕೊಂಡು ಸತ್ಕರ್ಮಗಳನ್ನೂ ಮಾಡಿದವರಿಗೆ ಅಲ್ಲಾಹ್ ನು ತನ್ನ ವಿಶೇಷ ಕೃಪೆಯಿಂದ ಪ್ರತಿಫಲಗಳನ್ನು ನೀಡುವುದಕ್ಕಾಗಿ! ಸತ್ಯವೇನೆಂದರೆ ಧಿಕ್ಕಾರ ತೋರಿದವರನ್ನು ಅವನು ಇಷ್ಟಪಡುವುದೇ ಇಲ್ಲ! {45}

وَمِنْ آيَاتِهِ أَنْ يُرْسِلَ الرِّيَاحَ مُبَشِّرَاتٍ وَلِيُذِيقَكُمْ مِنْ رَحْمَتِهِ وَلِتَجْرِيَ الْفُلْكُ بِأَمْرِهِ وَلِتَبْتَغُوا مِنْ فَضْلِهِ وَلَعَلَّكُمْ تَشْكُرُونَ

(ಜನರೇ), ಅವನ ದೃಷ್ಟಾಂತಗಳಲ್ಲಿ ಮತ್ತೊಂದೆಂದರೆ (ಮಳೆಯಾಗಲಿದೆ ಎಂಬ) ಶುಭ ಸುದ್ದಿಯೊಂದಿಗೆ ಅವನು ಕಳುಹಿಸುವ ಆ ಗಾಳಿ! ತನ್ನ ಅನುಗ್ರಹಗಳ ರುಚಿಯನ್ನು ನಿಮಗೆ ಸವಿಸಲು, ತನ್ನ ಅಪ್ಪಣೆಯ ಮೇರೆಗೆ (ಆ ಗಾಳಿಯು ಸಮುದ್ರದಲ್ಲಿ) ಹಡಗುಗಳನ್ನು ಚಲಿಸುವಂತೆ ಮಾಡಲು, ಅವನ ಕೃಪೆಯಿಂದ ನೀವು ಉಪಜೀವನವನ್ನು ಅರಸಲು ಹಾಗೂ ನೀವು ಅವನಿಗೆ ಕೃತಜ್ಞರಾಗಿ ಜೀವಿಸಲು (ಅವನು ಹಾಗೆ ಮಾಡಿರುವನು)! {46}

وَلَقَدْ أَرْسَلْنَا مِنْ قَبْلِكَ رُسُلًا إِلَىٰ قَوْمِهِمْ فَجَاءُوهُمْ بِالْبَيِّنَاتِ فَانْتَقَمْنَا مِنَ الَّذِينَ أَجْرَمُوا ۖ وَكَانَ حَقًّا عَلَيْنَا نَصْرُ الْمُؤْمِنِينَ

ಪೈಗಂಬರರೇ, ನಿಮಗಿಂತ ಮುಂಚೆ ನಾವು ಹಲವು ದೂತರುಗಳನ್ನು ಅವರವರ ಜನಾಂಗಗಳೆಡೆಗೆ ಕಳುಹಿಸಿದ್ದೆವು; ಅವರೆಲ್ಲರೂ ಬಹಳ ಸ್ಪಷ್ಟವಾದ ಪುರಾವೆಗಳ ಸಮೇತ ಜನರೆಡೆಗೆ ಬಂದಿದ್ದರು. ಕೊನೆಗೆ (ನಮ್ಮ ದೂತರುಗಳನ್ನೂ ಪುರಾವೆಗಳನ್ನೂ ಧಿಕ್ಕರಿಸುವಂತಹ) ಅಪರಾಧವನ್ನು ಮಾಡಿದವರ ಮೇಲೆ ನಾವು ಸೇಡಿನ ಕ್ರಮ ಕೈಗೊಂಡೆವು. ಅದೇಕೆಂದರೆ ವಿಶ್ವಾಸಿಗಳ ಸಹಾಯಕ್ಕೆ ನಿಲ್ಲುವುದು ನಮ್ಮ ಕರ್ತವ್ಯವಾಗಿತ್ತು. {47}

اللَّهُ الَّذِي يُرْسِلُ الرِّيَاحَ فَتُثِيرُ سَحَابًا فَيَبْسُطُهُ فِي السَّمَاءِ كَيْفَ يَشَاءُ وَيَجْعَلُهُ كِسَفًا فَتَرَى الْوَدْقَ يَخْرُجُ مِنْ خِلَالِهِ ۖ فَإِذَا أَصَابَ بِهِ مَنْ يَشَاءُ مِنْ عِبَادِهِ إِذَا هُمْ يَسْتَبْشِرُونَ

ಹಾಗೆಯೇ, ಮೋಡಗಳನ್ನು ಎತ್ತಿಕೊಳ್ಳುವ ಗಾಳಿಯನ್ನು ಕಳುಹಿಸುವವನು ಆ ಅಲ್ಲಾಹ್ ನೇ ಆಗಿರುವನು! ತರುವಾಯ ಅದನ್ನು ಆಕಾಶದಲ್ಲಿ ತಾನಿಚ್ಚಿಸುವಂತೆ ಹರಡುವವನೂ ಅವನೇ! ನಂತರ ಅವನು ಅದನ್ನು ತುಣುಕುಗಳನ್ನಾಗಿ ಮಾಡುತ್ತಾನೆ! ಇದ್ದಕ್ಕಿದ್ದಂತೆ ಅವುಗಳ ಮಧ್ಯದಿಂದ ಮಳೆನೀರು ಹೊರಸುರಿಯುವುದನ್ನು ನೀವು ಕಾಣುತ್ತೀರಿ! ಅನಂತರ ತನ್ನ ಉಪಾಸಕರಲ್ಲಿ ಯಾರಿಗೆ ಬೇಕೋ ಅವರಿಗೆ ತನ್ನ ಇಚ್ಚೆಯನುಸಾರ ಅವನು ಅದನ್ನು ತಲುಪಿಸುವಾಗ ಅವರು ಹರ್ಷಿತರಾಗುತ್ತಾರೆ! {48}

وَإِنْ كَانُوا مِنْ قَبْلِ أَنْ يُنَزَّلَ عَلَيْهِمْ مِنْ قَبْلِهِ لَمُبْلِسِينَ

ಹಾಗೆ ಅವರು ಹರ್ಷಿತರಾಗುವುದಕ್ಕಿಂತ ಮುಂಚೆ, ಅಂದರೆ ಅವರ ಮೇಲೆ ಮಳೆಯಾಗುವುದಕ್ಕಿಂತ ಸ್ವಲ್ಪ ಮುಂಚೆ ಅವರು ಬಹಳವಾಗಿ ನಿರಾಶೆಗೊಂಡವರು ಆಗಿದ್ದರು. {49}

فَانْظُرْ إِلَىٰ آثَارِ رَحْمَتِ اللَّهِ كَيْفَ يُحْيِي الْأَرْضَ بَعْدَ مَوْتِهَا ۚ إِنَّ ذَٰلِكَ لَمُحْيِي الْمَوْتَىٰ ۖ وَهُوَ عَلَىٰ كُلِّ شَيْءٍ قَدِيرٌ

ಅಲ್ಲಾಹ್ ನ ಕೊಡುಗೆಗಳ ಕುರುಹುಗಳತ್ತ ದೃಷ್ಟಿ ಹರಿಸಿರಿ - ಅಂದರೆ ನಿರ್ಜೀವಾವಸ್ಥೆಗೆ ತಲುಪಿದ್ದ ನೆಲವನ್ನು ಪುನಃ ಹೇಗೆ ಅವನು ಜೀವಂತಗೊಳಿಸುತ್ತಾನೆಂದು ನೋಡಿರಿ. ಮೃತಪಟ್ಟವರನ್ನು ಸಹ ಅವನು ಹಾಗೆಯೇ ಜೀವಂತಗೊಳಿಸಲಿರುವನು. ಅವನು ಏನನ್ನು ಬೇಕಾದರೂ ಸಾಧಿಸಲು ಸಾಮರ್ಥ್ಯ ಹೊಂದಿರುವನು! {50}

وَلَئِنْ أَرْسَلْنَا رِيحًا فَرَأَوْهُ مُصْفَرًّا لَظَلُّوا مِنْ بَعْدِهِ يَكْفُرُونَ

ಅನಂತರದಲ್ಲಿ, ಒಂದು ವೇಳೆ ನಾವು ಬಿರುಗಾಳಿಯನ್ನು ಕಳುಹಿಸಿದರೆ ಮತ್ತು ಅದರಿಂದಾಗಿ (ಹೊಲಗಳು) ಒಣಗಿ ಹಳದಿ ಬಣ್ಣಕ್ಕೆ ತಿರುಗುವುದನ್ನು ಅವರು ಕಂಡರೆ (ಹಿಂದೆ ಸವಿದ ಎಲ್ಲಾ ಅನುಗ್ರಹಗಳನ್ನು) ಅವರು ಧಿಕ್ಕರಿಸುತ್ತಾರೆ. {51}

فَإِنَّكَ لَا تُسْمِعُ الْمَوْتَىٰ وَلَا تُسْمِعُ الصُّمَّ الدُّعَاءَ إِذَا وَلَّوْا مُدْبِرِينَ

ಆದ್ದರಿಂದ ಪೈಗಂಬರರೇ, [ನಿಮ್ಮ ಉಪದೇಶವನ್ನು ಧಿಕ್ಕರಿಸಿದ ಅವರು ಇನ್ನು ನಿಮ್ಮ ಪಾಲಿಗೆ ಸತ್ತಂತೆಯೇ]! ಆದ್ದರಿಂದ ಸತ್ತವರಿಗೆ (ಉಪದೇಶವನ್ನು) ಕೇಳಿಸಲು ನಿಮಗೆ ಖಂಡಿತಾ ಸಾಧ್ಯವಿಲ್ಲ. ಹಾಗೆಯೇ, ಬೆನ್ನು ತಿರುಗಿಸಿ ಓಡಿ ಹೋಗುವ ಕಿವುಡರಿಗೂ ನೀವು ನಿಮ್ಮ ಕರೆಯನ್ನು ಕೇಳಿಸಲಾರಿರಿ. {52}

وَمَا أَنْتَ بِهَادِ الْعُمْيِ عَنْ ضَلَالَتِهِمْ ۖ إِنْ تُسْمِعُ إِلَّا مَنْ يُؤْمِنُ بِآيَاتِنَا فَهُمْ مُسْلِمُونَ

ಅಂತೆಯೇ, ಕುರುಡರನ್ನು ಸಹ ಅವರ ತಪ್ಪುದಾರಿಯಿಂದ ನೀವು ಸರಿಯಾದ ದಾರಿಯೆಡೆಗೆ ತರಲಾರಿರಿ. ಯಾರು ನಮ್ಮ ದೃಷ್ಟಾಂತಗಳಲ್ಲಿ ಬಲವಾದ ವಿಶ್ವಾಸ ಹೊಂದಿರುವರೋ ಅವರಿಗೆ ಮಾತ್ರ ನೀವು (ನಿಮ್ಮ ಉಪದೇಶಗಳು) ಕೇಳಿಸುವಂತೆ ಮಾಡಬಹುದು. ಅವರೇ ಯಥಾರ್ಥದಲ್ಲಿ ಮುಸ್ಲಿಮರು (ಅಂದರೆ ಅಲ್ಲಾಹ್ ನ ಆದೇಶಗಳನ್ನು ಜೀವನದಲ್ಲಿ ಅನುಸರಿಸುವವರು)! {53}

اللَّهُ الَّذِي خَلَقَكُمْ مِنْ ضَعْفٍ ثُمَّ جَعَلَ مِنْ بَعْدِ ضَعْفٍ قُوَّةً ثُمَّ جَعَلَ مِنْ بَعْدِ قُوَّةٍ ضَعْفًا وَشَيْبَةً ۚ يَخْلُقُ مَا يَشَاءُ ۖ وَهُوَ الْعَلِيمُ الْقَدِيرُ

ಸೃಷ್ಟಿ ಮಾಡುವಾಗ ಬಹಳ ದುರ್ಬಲರನ್ನಾಗಿ ನಿಮ್ಮೆಲ್ಲರನ್ನು ಸೃಷ್ಟಿ ಮಾಡಿದವನು ಆ ಅಲ್ಲಾಹ್ ನೇ! ಅಂತಹ ದೌರ್ಬಲ್ಯದ ಸ್ಥಿತಿಯ ನಂತರದ ಘಟ್ಟದಲ್ಲಿ ಅವನು ನಿಮಗೆ ಶಕ್ತಿಯನ್ನು ನೀಡಿದನು. ಹಾಗೆ ಶಕ್ತಿ ನೀಡಿದ ನಂತರ ಪುನಃ ಅವನು ನಿಮಗೆ ದೌರ್ಬಲ್ಯವನ್ನೂ ನೆರೆತ ಕೂದಲಿನ ವೃದ್ಧಾಪ್ಯವನ್ನೂ ನೀಡಿದನು. ತಾನು ಬಯಸಿದ್ದನ್ನು ಅವನು ಸೃಷ್ಟಿ ಮಾಡುತ್ತಾನೆ. ಅವನು ಸರ್ವಜ್ಞನೂ ಹೌದು; ಸರ್ವಸಮರ್ಥನೂ ಹೌದು! {54}

وَيَوْمَ تَقُومُ السَّاعَةُ يُقْسِمُ الْمُجْرِمُونَ مَا لَبِثُوا غَيْرَ سَاعَةٍ ۚ كَذَٰلِكَ كَانُوا يُؤْفَكُونَ

ಪುನರುತ್ಥಾನದ ದಿನದಂದು, ನಾವು ಕೇವಲ ಒಂದು ತಾಸಿಗಿಂತ ಹೆಚ್ಚು (ನಮ್ಮ ಗೋರಿಗಳಲ್ಲಿ) ಮಲಗಿರಲಿಲ್ಲ ಎಂದು ಅಪರಾಧಿಗಳು ಶಪಥಪೂರ್ವಕವಾಗಿ ಹೇಳುವರು. (ಇಹಲೋಕ ಜೀವನದಲ್ಲಿಯೂ) ಅವರು ಹಾಗೆಯೇ ಮೋಸ ಹೋಗಿದ್ದರು. {55}

وَقَالَ الَّذِينَ أُوتُوا الْعِلْمَ وَالْإِيمَانَ لَقَدْ لَبِثْتُمْ فِي كِتَابِ اللَّهِ إِلَىٰ يَوْمِ الْبَعْثِ ۖ فَهَٰذَا يَوْمُ الْبَعْثِ وَلَٰكِنَّكُمْ كُنْتُمْ لَا تَعْلَمُونَ

ಆದರೆ ಯಾರಿಗೆ (ಪುನರುತ್ಥಾನದ ಕುರಿತಂತೆ) ಸರಿಯಾದ ಅರಿವು ಮತ್ತು ಹಾಗೂ ಸರಿಯಾದ ನಂಬಿಕೆಯನ್ನು ದಯಪಾಲಿಸಲಾಗಿತ್ತೋ ಅವರು ಹೇಳುವರು: ನೀವು (ಕೇವಲ ಒಂದು ತಾಸು ಮಲಗಿದ್ದಲ್ಲ, ಬದಲಾಗಿ) ಆಲ್ಲಾಹ್ ನ ಕಟ್ಟಳೆಯ ಪ್ರಕಾರ ಪುನರುತ್ಥಾನದ ದಿನ ಸಂಭವಿಸುವ ತನಕವೂ ಮಲಗಿಯೇ ಇದ್ದಿರಿ! ಹೌದು, ಇದುವೇ ಪುನರುತ್ಥಾನದ (ಅರ್ಥಾತ್ ಎದ್ದೇಳಿಸಲ್ಪಡುವ ಆ) ದಿನ! ಆದರೆ (ನಿದ್ರಾವಸ್ಥೆಯಲ್ಲಿ ಬಿದ್ದುಕೊಂಡಿದ್ದ) ನಿಮಗೆ ವಾಸ್ತವಿಕತೆ ತಿಳಿದಿರಲಿಲ್ಲ. {56}

فَيَوْمَئِذٍ لَا يَنْفَعُ الَّذِينَ ظَلَمُوا مَعْذِرَتُهُمْ وَلَا هُمْ يُسْتَعْتَبُونَ

ಅನ್ಯಾಯ ಅನಾಚಾರಗಳನ್ನು ಮಾಡಿದವರು ಒಡ್ಡುವ ಯಾವ ನೆಪವೂ ಅಂದು ಅವರಿಗೆ ಪ್ರಯೋಜನಕಾರಿ ಆಗಲಾರದು. ಮತ್ತು ಅಲ್ಲಾಹ್ ನನ್ನು ಮೆಚ್ಚಿಸಿ ಕೊಳ್ಳಲು ಅವರಿಗೆ ಅವಕಾಶವನ್ನೂ ನೀಡಲಾಗದು! {57}

وَلَقَدْ ضَرَبْنَا لِلنَّاسِ فِي هَٰذَا الْقُرْآنِ مِنْ كُلِّ مَثَلٍ ۚ وَلَئِنْ جِئْتَهُمْ بِآيَةٍ لَيَقُولَنَّ الَّذِينَ كَفَرُوا إِنْ أَنْتُمْ إِلَّا مُبْطِلُونَ

[ಎಲ್ಲದಕ್ಕೂ ಅವರು ಪುರಾವೆಗಳನ್ನು ಕೇಳುತ್ತಿದ್ದಾರೆ]! ಆದರೆ ಮನುಷ್ಯ ವರ್ಗವು (ಪಾಠ ಕಲಿಯಲೆಂದು) ನಾವು ಈ ಕುರ್‌ಆನ್ ನಲ್ಲಿ ಸಕಲ ವಿಧ ದೃಷ್ಟಾಂತಗಳನ್ನು ವಿವರಿಸಿದ್ದೇವೆ. ಅವರ ಬಳಿಗೆ ನೀವು ಯಾವುದಾದರೂ ಒಂದು ದೃಷ್ಟಾಂತವನ್ನು ಕೊಂಡೊಯ್ದರೆ, ಧಿಕ್ಕಾರದ ಮನೋಭಾವ ಹೊಂದಿದ ಅವರು, ನೀವು ತಪ್ಪು ನಿರೂಪಣೆಯನ್ನಲ್ಲದೆ ಬೇರೇನೂ ಮಾಡುವವರಲ್ಲ ಎಂದು (ನಿಮ್ಮನ್ನುದ್ದೇಶಿಸಿ) ಹೇಳುತ್ತಾರೆ! {58}

كَذَٰلِكَ يَطْبَعُ اللَّهُ عَلَىٰ قُلُوبِ الَّذِينَ لَا يَعْلَمُونَ

[ಜನರೇ, ನೀವು ಜಾಗರೂಕರಾಗಿ ವರ್ತಿಸಿರಿ. ಏಕೆಂದರೆ] ಸತ್ಯವನ್ನು ತಿಳಿದುಕೊಳ್ಳಲು ಬಯಸದವರ ಹೃದಯಗಳನ್ನು ಮುದ್ರೆಯೊತ್ತಿ ಅಲ್ಲಾಹ್ ನು ಮುಚ್ಚಿಬಿಡುವ ರೀತಿ ಹಾಗೆಯೇ! {59}

فَاصْبِرْ إِنَّ وَعْدَ اللَّهِ حَقٌّ ۖ وَلَا يَسْتَخِفَّنَّكَ الَّذِينَ لَا يُوقِنُونَ

ಹಾಗಿರುವಾಗ ಪೈಗಂಬರರೇ, ನೀವು ತಾಳ್ಮೆಯಿಂದ ವರ್ತಿಸಿರಿ. ಏಕೆಂದರೆ ಅಲ್ಲಾಹ್ ನ ವಾಗ್ದಾನವು ಪರಮ ಸತ್ಯವಾದುದು. (ಅವನ ಮಾತಿನಲ್ಲಿ) ಬಲವಾದ ನಂಬಿಕೆ ಇಲ್ಲದ ಜನರ (ತಿರಸ್ಕಾರದ ನಡತೆಯು) ನಿಮ್ಮನ್ನು ಕೆಳಗುಂದಿಸದಿರಲಿ. {60}

---  

ಅನುವಾದಿತ ಸೂರಃ ಗಳು


        Featured post

        ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...