ಅಲ್ ಅಹ್‌ಝಾಬ್ | ترجمة سورة الأحزاب

    تـرجمـة سورة الأحزاب من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅಲ್ ಅಹ್‌ಝಾಬ್  | ಪವಿತ್ರ ಕುರ್‌ಆನ್ ನ 33 ನೆಯ ಸೂರಃ | ಇದರಲ್ಲಿ ಒಟ್ಟು 73 ಆಯತ್ ಗಳು ಇವೆ |

ಅಪಾರ ದಯಾಳುವೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹನ ನಾಮದೊಂದಿಗೆ (ಆರಂಭಿಸುತ್ತೇನೆ)!

يَا أَيُّهَا النَّبِيُّ اتَّقِ اللَّهَ وَلَا تُطِعِ الْكَافِرِينَ وَالْمُنَافِقِينَ ۗ إِنَّ اللَّهَ كَانَ عَلِيمًا حَكِيمًا

ಓ ಪೈಗಂಬರರೇ, ನೀವು ಅಲ್ಲಾಹ್ ನಿಗೆ ಭಯಭಕ್ತಿ ತೋರಿರಿ; ಅಧರ್ಮಿಗಳ ಮತ್ತು ಮುಸ್ಲಿಮರಂತೆ ನಟನೆ ಮಾಡುವ ಕಪಟಿಗಳ ಮಾತು ಕೇಳದಿರಿ. ಹೌದು, ಅಲ್ಲಾಹ್ ನು ಎಲ್ಲವನ್ನೂ ತಿಳಿದಿರುವನು; ಅವನು ವಿವೇಕಪೂರ್ಣನೂ ಆಗಿರುವನು. {1}

وَاتَّبِعْ مَا يُوحَىٰ إِلَيْكَ مِنْ رَبِّكَ ۚ إِنَّ اللَّهَ كَانَ بِمَا تَعْمَلُونَ خَبِيرًا

ನೀವು ಅನುಸರಿಸಬೇಕಾದುದು ನಿಮ್ಮ ಒಡೆಯನ ಕಡೆಯಿಂದ ನಿಮ್ಮತ್ತ ವಹೀ (ಅರ್ಥಾತ್ ದಿವ್ಯಜ್ಞಾನ) ಮೂಲಕ ಕಳುಹಿಸಲಾದುದನ್ನು ಮಾತ್ರ! ಜನರು ಏನೆಲ್ಲ ಮಾಡುತ್ತಿದ್ದಾರೆಂದು ಅಲ್ಲಾಹ್ ನಿಗೆ ಚೆನ್ನಾಗಿ ತಿಳಿದಿದೆ. {2}

وَتَوَكَّلْ عَلَى اللَّهِ ۚ وَكَفَىٰ بِاللَّهِ وَكِيلًا

ಮತ್ತು ಅಲ್ಲಾಹ್ ನ ಮೇಲೆ ಸಂಪೂರ್ಣ ಭರವೆಸೆಯಿಡಿ. ಏಕೆಂದರೆ ನಿಮ್ಮ ಕಾರ್ಯಗಳನ್ನು ಸಾಧಿಸಲು ಅಲ್ಲಾಹ್ ನು ಮಾತ್ರವೇ ಸಾಕು. {3}

مَا جَعَلَ اللَّهُ لِرَجُلٍ مِنْ قَلْبَيْنِ فِي جَوْفِهِ ۚ وَمَا جَعَلَ أَزْوَاجَكُمُ اللَّائِي تُظَاهِرُونَ مِنْهُنَّ أُمَّهَاتِكُمْ ۚ وَمَا جَعَلَ أَدْعِيَاءَكُمْ أَبْنَاءَكُمْ ۚ ذَٰلِكُمْ قَوْلُكُمْ بِأَفْوَاهِكُمْ ۖ وَاللَّهُ يَقُولُ الْحَقَّ وَهُوَ يَهْدِي السَّبِيلَ

ಜನರೇ, ಅಲ್ಲಾಹ್ ನು ಯಾವ ವ್ಯಕ್ತಿಯ ಎದೆಗೂಡಿನಲ್ಲೂ [ತದ್ವಿರುದ್ಧವಾಗಿ ಚಿಂತಿಸುವ] ಎರಡು ಹೃದಯಗಳನ್ನು ಇರಿಸಿಲ್ಲ! [ಅರಬರ ಅನಾಗರಿಕ ಸಂಪ್ರದಾಯದಂತೆ 'ಝಿಹಾರ್' ಅರ್ಥಾತ್] ತನ್ನ ಪತ್ನಿಯೊಡನೆ 'ಇನ್ನು ಮುಂದೆ ನೀನು ನನಗೆ ತಾಯಿಯ ಹಾಗೆ' ಎಂದು ಸಾರಿದ ಮಾತ್ರಕ್ಕೆ ಅಲ್ಲಾಹ್ ನು ಆಕೆಯನ್ನು ನಿಮ್ಮ ತಾಯಿಯನ್ನಾಗಿ ಮಾಡುವುದಿಲ್ಲ. ನಿಮ್ಮ ದತ್ತುಪುತ್ರರರನ್ನು 'ಸ್ವಂತ ಪುತ್ರ' ಎಂದು ನೀವು ಕರೆದ ಮಾತ್ರಕ್ಕೆ ಅಲ್ಲಾಹ್ ನು ಆತನನ್ನು ನಿಮ್ಮ ನಿಜವಾದ ಪುತ್ರನನ್ನಾಗಿ ಮಾಡುವುದಿಲ್ಲ. ಅವೆಲ್ಲ ನಿಮ್ಮ ಬಾಯಿಮಾತಿನ ಹೇಳಿಕೆಗಳಷ್ಟೆ! ಆದರೆ ಅಲ್ಲಾಹ್ ನು ಯಥಾರ್ತವನ್ನೇ ಹೇಳುತ್ತಾನೆ ಮತ್ತು ಜನರಿಗೆ ಸರಿದಾರಿಯನ್ನೇ ತೋರುತ್ತಾನೆ. {4}

ادْعُوهُمْ لِآبَائِهِمْ هُوَ أَقْسَطُ عِنْدَ اللَّهِ ۚ فَإِنْ لَمْ تَعْلَمُوا آبَاءَهُمْ فَإِخْوَانُكُمْ فِي الدِّينِ وَمَوَالِيكُمْ ۚ وَلَيْسَ عَلَيْكُمْ جُنَاحٌ فِيمَا أَخْطَأْتُمْ بِهِ وَلَٰكِنْ مَا تَعَمَّدَتْ قُلُوبُكُمْ ۚ وَكَانَ اللَّهُ غَفُورًا رَحِيمًا

ದತ್ತು ಪುತ್ರರನ್ನು ಅವರವರ ತಂದೆಯರ ಗುರುತು ಸೇರಿಸಿ ಕರೆಯಿರಿ; ಅದುವೇ ಅಲ್ಲಾಹ್ ನ ದೃಷ್ಟಿಯಲ್ಲಿ ಹೆಚ್ಚು ನ್ಯಾಯಯುತವಾದ ರೀತಿ. ಇನ್ನು ಅವರ ತಂದೆಯರ ಬಗ್ಗೆ ನಿಮಗೆ ತಿಳಿದಿರದಿದ್ದರೆ ನೀವು ಅವರನ್ನು ನಿಮ್ಮ ಧಾರ್ಮಿಕ ಸಹೋದರರಾಗಿಯೂ ಮಿತ್ರರಾಗಿಯೂ ಪರಿಗಣಿಸಿರಿ. ಈ ವಿಷಯದಲ್ಲಿ ನಿಮ್ಮಿಂದ ಪ್ರಮಾದವೇನಾದರೂ ಸಂಭವಿಸಿದ್ದರೆ ನಿಮ್ಮ ಮೇಲೆ ದೋಷವಿಲ್ಲ; ಆದರೆ ಉದ್ದೇಶಪೂರ್ವಕವಾಗಿ (ತಪ್ಪು ಮಾಡಿದರೆ ಮಾತ್ರ ಖಂಡಿತ ದೋಷವಿದೆ)! ಅಲ್ಲಾಹ್ ನು ಹೆಚ್ಚು ಕ್ಷಮಿಸುವವನೂ ಅತಿಯಾಗಿ ದಯೆ ತೋರುವವನೂ ಆಗಿರುವನು (ಎಂಬುದು ನಿಮಗೆ ತಿಳಿದಿರಲಿ). {5}

النَّبِيُّ أَوْلَىٰ بِالْمُؤْمِنِينَ مِنْ أَنْفُسِهِمْ ۖ وَأَزْوَاجُهُ أُمَّهَاتُهُمْ ۗ وَأُولُو الْأَرْحَامِ بَعْضُهُمْ أَوْلَىٰ بِبَعْضٍ فِي كِتَابِ اللَّهِ مِنَ الْمُؤْمِنِينَ وَالْمُهَاجِرِينَ إِلَّا أَنْ تَفْعَلُوا إِلَىٰ أَوْلِيَائِكُمْ مَعْرُوفًا ۚ كَانَ ذَٰلِكَ فِي الْكِتَابِ مَسْطُورًا

ಹೌದು, ವಿಶ್ವಾಸಿಗಳು ಸ್ವತಃ ತಮ್ಮ ಅಸ್ತಿತ್ವಕ್ಕಿಂತಲೂ ಮಿಗಿಲಾದ ಪ್ರಾಶಸ್ತ್ಯ ಪೈಗಂಬರರಿಗೆ ನೀಡುತ್ತಾರೆ! ಮತ್ತು ಪೈಗಂಬರರ ಪತ್ನಿಯರು ವಿಶ್ವಾಸಿಗಳ ಪಾಲಿಗೆ ಮಾತೆಯರ ಸ್ಥಾನದಲ್ಲಿದ್ದಾರೆ! ಹಾಗೆಯೇ, ಅಲ್ಲಾಹ್ ನ ನಿಯಮದ ಪ್ರಕಾರ, [ವಾರಸು ಹಕ್ಕಿನ ವಿಷಯದಲ್ಲಿ] ವಿಶ್ವಾಸಿ ರಕ್ತಸಂಬಂಧಿಗಳು ಪರಸ್ಪರರ ಪಾಲಿಗೆ ಉಳಿದ ವಿಶ್ವಾಸಿಗಳಿಗಿಂತ ಮತ್ತು (ಮದೀನಾ ನಾಡಿಗೆ) ವಲಸೆ ಬಂದವರಿಗಿಂತ ಹೆಚ್ಚಿನ ಹಕ್ಕುದಾರರಾಗಿರುವರು. ಆದರೆ, ನಿಮ್ಮ ಆಪ್ತರಿಗೆ ನೀವೇನಾದರೂ ಒಳಿತು ಮಾಡಿದರೆ ಆ ವಿಷಯ ಬೇರೆ! ಅದು ಅಲ್ಲಾಹ್ ನ ನಿಯಮದಲ್ಲಿ ನಮೂದಿಸಲ್ಪಟ್ಟ ವಿಷಯವೇ ಆಗಿದೆ. {6}

وَإِذْ أَخَذْنَا مِنَ النَّبِيِّينَ مِيثَاقَهُمْ وَمِنْكَ وَمِنْ نُوحٍ وَإِبْرَاهِيمَ وَمُوسَىٰ وَعِيسَى ابْنِ مَرْيَمَ ۖ وَأَخَذْنَا مِنْهُمْ مِيثَاقًا غَلِيظًا

ಪೈಗಂಬರರೇ, ಎಲ್ಲಾ ದೂತರುಗಳಿಂದ ಅವರವರ (ಜನತೆಯ ಪರವಾಗಿ) ನಾವು ಕರಾರನ್ನು ಪಡೆದಿರುವುದನ್ನು ಸ್ಮರಿಸಿರಿ. ನಿಮ್ಮಿಂದ, ಹಾಗೆಯೇ ನೂಹ್, ಇಬ್ರಾಹೀಮ್, ಮೂಸಾ ಹಾಗೂ ಮರ್‌ಯಮ್ ರ ಪುತ್ರ ಈಸಾ ರಿಂದ ಪಡೆದ ಕರಾರು! ಹೌದು, ಅವರೆಲ್ಲರಿಂದ ನಾವು ಅತ್ಯಂತ ಬಲಿಷ್ಟವಾದ ಕರಾರನ್ನು ಪಡೆದಿದ್ದೆವು. {7}

لِيَسْأَلَ الصَّادِقِينَ عَنْ صِدْقِهِمْ ۚ وَأَعَدَّ لِلْكَافِرِينَ عَذَابًا أَلِيمًا

ಅದೇಕೆಂದರೆ, ಆ ಸತ್ಯವಂತ ದೂತರೊಡನೆ (ಅವರವರ ಜನತೆಯ) ಸತ್ಯವಂತಿಕೆಯ ಕುರಿತು ವಿಚಾರಿಸಲಿಕ್ಕಾಗಿ! ಹೌದು, (ದೂತರುಗಳನ್ನು) ಧಿಕ್ಕರಿಸಿದವರಿಗಾಗಿ ನೋವುಭರಿತ ಶಿಕ್ಷೆಯನ್ನು ಅವನು ಸಜ್ಜುಗೊಳಿಸಿರುತ್ತಾನೆ. {8}

يَا أَيُّهَا الَّذِينَ آمَنُوا اذْكُرُوا نِعْمَةَ اللَّهِ عَلَيْكُمْ إِذْ جَاءَتْكُمْ جُنُودٌ فَأَرْسَلْنَا عَلَيْهِمْ رِيحًا وَجُنُودًا لَمْ تَرَوْهَا ۚ وَكَانَ اللَّهُ بِمَا تَعْمَلُونَ بَصِيرًا

ಓ ವಿಶ್ವಾಸಿಗಳೇ, ಆ ಸೇನಾಪಡೆಗಳು ನಿಮ್ಮ ಮೇಲೆ [ಬನೀ ಕುರೈಝಾ ಹಾಗೂ ಅಹ್‌ಝಾಬ್ ಯುದ್ಧದ ಸಂದರ್ಭಗಳಲ್ಲಿ] ದಂಡೆತ್ತಿ ಬರುತ್ತಿದ್ದಾಗ ಅವರಿಗೆ ವಿರುದ್ಧವಾಗಿ ಭಯಂಕರವಾದ ಬಿರುಗಾಳಿಯನ್ನು ಹಾಗೂ ನಿಮ್ಮ ಕಣ್ಣಿಗೆ ಕಾಣಿಸದಂತಹ (ಮಲಕ್ ಗಳ) ಸೇನೆಗಳನ್ನು ಕಳುಹಿಸುವ ಮೂಲಕ ಅಲ್ಲಾಹ್ ನು ನಿಮಗೆ ಮಾಡಿದ ಅನುಗ್ರಹವನ್ನು ನೆನಪಿಸಿರಿ. ಅಲ್ಲಾಹ್ ನು ನೀವು ಮಾಡುವ ಎಲ್ಲವನ್ನೂ ಚೆನ್ನಾಗಿ ವೀಕ್ಷಿಸುತ್ತಿರುತ್ತಾನೆ! {9}

إِذْ جَاءُوكُمْ مِنْ فَوْقِكُمْ وَمِنْ أَسْفَلَ مِنْكُمْ وَإِذْ زَاغَتِ الْأَبْصَارُ وَبَلَغَتِ الْقُلُوبُ الْحَنَاجِرَ وَتَظُنُّونَ بِاللَّهِ الظُّنُونَا

ಅವರು ಮೇಲಿನ ಪ್ರದೇಶದಿಂದಲೂ ಕೆಳಗಿನ ಪ್ರದೇಶದಿಂದಲೂ ನಿಮ್ಮ ಮೇಲೆ ದಂಡೆತ್ತಿ ಬರುತ್ತಿದ್ದಾಗ ನಿಮ್ಮ ಕಣ್ಣುಗಳು ಭಯದಿಂದ ಹೊರಳಿದವು ಮತ್ತು ಹೃದಯಗಳು ಗಂಟಲಿನ ತನಕ ಏರಿಬಂದವು! ಆಗ ನೀವು ಅಲ್ಲಾಹ್ ನ ಬಗ್ಗೆ ಹಲವು ವಿಧವಾಗಿ ಸಂಶಯಕ್ಕೊಳಗಾದ ಸಂದರ್ಭವನ್ನೂ ನೆನಪಿಸಿರಿ. {10}

هُنَالِكَ ابْتُلِيَ الْمُؤْمِنُونَ وَزُلْزِلُوا زِلْزَالًا شَدِيدًا

ಆ ಸಂದರ್ಭದಲ್ಲಿ ನಿಜವಾದ ವಿಶ್ವಾಸಿಗಳನ್ನು ಪರೀಕ್ಷೆಗೆ ಒಡ್ಡಲಾಯಿತು ಮತ್ತು ಅವರನ್ನು ತೀವ್ರವಾಗಿ ಕುಲುಕಿ ಬಿಡಲಾಯಿತು. {11}

وَإِذْ يَقُولُ الْمُنَافِقُونَ وَالَّذِينَ فِي قُلُوبِهِمْ مَرَضٌ مَا وَعَدَنَا اللَّهُ وَرَسُولُهُ إِلَّا غُرُورًا

ಆಗ ವಿಶ್ವಾಸಿಗಳಂತೆ ನಟಿಸುತ್ತಿದ್ದವರು ಹಾಗೂ ಹೃದಯಗಳಲ್ಲಿ (ಸಂಶಯ, ಕಾಪಟ್ಯ ಮುಂತಾದ) ರೋಗವನ್ನು ಹೊಂದಿದ್ದವರು, ಅಲ್ಲಾಹ್ ಮತ್ತು ಅವನ ಪೈಗಂಬರರು ನಮ್ಮೊಂದಿಗೆ ಮಾಡಿದ್ದ [ಸಹಾಯ ಮತ್ತು ರಕ್ಷಣೆಯ] ವಾಗ್ದಾನವು ಕೇವಲ ಒಂದು ವಂಚನೆಯಲ್ಲದೆ ಬೇರೇನೂ ಆಗಿರಲಿಲ್ಲ ಎಂದು ಗೊಣಗತೊಡಗಿದರು. {12}

وَإِذْ قَالَتْ طَائِفَةٌ مِنْهُمْ يَا أَهْلَ يَثْرِبَ لَا مُقَامَ لَكُمْ فَارْجِعُوا ۚ وَيَسْتَأْذِنُ فَرِيقٌ مِنْهُمُ النَّبِيَّ يَقُولُونَ إِنَّ بُيُوتَنَا عَوْرَةٌ وَمَا هِيَ بِعَوْرَةٍ ۖ إِنْ يُرِيدُونَ إِلَّا فِرَارًا

ಓ ಯತ್ರಿಬ್ [ಅರ್ಥಾತ್ ಮದೀನಾ ಪಟ್ಟಣದ] ಜನರೇ, ಇನ್ನು ನಿಮಗೆ ಉಳಿಗಾಲವಿಲ್ಲ, ಆದ್ದರಿಂದ ನೀವು ಯುದ್ಧದಿಂದ ಹಿಂದಿರುಗಿ ಹೋಗಿರಿ ಎಂದು ಅವರಲ್ಲಿನ ಒಂದು ಗುಂಪು ಹೇಳಿದ್ದನ್ನು ನೆನಪಿಸಿರಿ. ಅವರಲ್ಲಿನ ಮತ್ತೊಂದು ಗುಂಪು, ನಮ್ಮ ಮನೆಗಳು ಅಭದ್ರ ಸ್ಥಿತಿಯಲ್ಲಿವೆ (ಎಂಬ ನೆಪವೊಡ್ಡಿ) ಯುದ್ಧದಲ್ಲಿ ಪಾಲ್ಗೊಳ್ಳದಿರಲು ನಮಗೆ ಅನುಮತಿ ನೀಡಬೇಕು ಎಂದು ಪೈಗಂಬರರೊಂದಿಗೆ ಬೇಡತೊಡಗಿದರು. ನಿಜವಾಗಿ ಅವರ ಮನೆಗಳು ಅಭದ್ರ ಸ್ಥಿತಿಯಲ್ಲಿ ಇರಲಿಲ್ಲ; ಬದಲಾಗಿ ಅವರು ಪಲಾಯನವನ್ನು ಬಯಸುತ್ತಿದ್ದರಷ್ಟೆ! {13}

وَلَوْ دُخِلَتْ عَلَيْهِمْ مِنْ أَقْطَارِهَا ثُمَّ سُئِلُوا الْفِتْنَةَ لَآتَوْهَا وَمَا تَلَبَّثُوا بِهَا إِلَّا يَسِيرًا

ಒಂದು ವೇಳೆ (ಮದೀನಾ ಪಟ್ಟಣದ) ಸುತ್ತಮುತ್ತಲಿಂದ ಅವರ ಮೇಲೆ (ಶತ್ರು ಸೇನೆ) ನುಗ್ಗಿರುತ್ತಿದ್ದರೆ, ಹಾಗೂ (ವಿಶ್ವಾಸಿಗಳ ವಿರುದ್ದ) ಆಂತರಿಕ ಕಲಹ ಹಬ್ಬಲು ಶತ್ರುಗಳು ಅವರನ್ನು ಪ್ರಚೋದಿಸಿರುತ್ತಿದ್ದರೆ, ಅವರು ಹೆಚ್ಚು ವಿಳಂಬಿಸದೆ ಅದನ್ನು ಮಾಡಿಯೇ ಬಿಡುತ್ತಿದ್ದರು! {14}

وَلَقَدْ كَانُوا عَاهَدُوا اللَّهَ مِنْ قَبْلُ لَا يُوَلُّونَ الْأَدْبَارَ ۚ وَكَانَ عَهْدُ اللَّهِ مَسْئُولًا

ಆದರೆ ನಿಜವಾಗಿ, ಯುದ್ಧದಿಂದ ನಾವು ಪಲಾಯನ ಮಾಡುವುದಿಲ್ಲ ಎಂದು ಅವರು ಈ ಮೊದಲು ಅಲ್ಲಾಹ್ ನೊಂದಿಗೆ ಕರಾರು ಮಾಡಿದ್ದರು. ಹೌದು, ಅಲ್ಲಾಹ್ ನೊಂದಿಗೆ ಮಾಡಲಾದ ಕರಾರಿನ ಬಗ್ಗೆ ಪ್ರಶ್ನಿಸಲಾಗುವುದು! {15}

قُلْ لَنْ يَنْفَعَكُمُ الْفِرَارُ إِنْ فَرَرْتُمْ مِنَ الْمَوْتِ أَوِ الْقَتْلِ وَإِذًا لَا تُمَتَّعُونَ إِلَّا قَلِيلًا

ಅಂತಹ ಪಲಾಯನದಿಂದ ನಿಮಗೆ ಯಾವುದೇ ಲಾಭವಾಗದು. ಇನ್ನು ನೀವು ಮರಣದಿಂದ ಅಥವಾ ಹತ್ಯೆಯಿಂದ ತಪ್ಪಿಸಿಕೊಂಡು ಓಡಿದರೆ ಅಲ್ಪ ಸಮಯದ ಹೊರತು (ಜೀವನದಲ್ಲಿ) ಬೇರಾವ ಲಾಭವೂ ನಿಮಗೆ ಸಿಗದು ಎಂದು ಪೈಗಂಬರರೇ, ಅವರೊಡನೆ ಹೇಳಿರಿ. {16}

قُلْ مَنْ ذَا الَّذِي يَعْصِمُكُمْ مِنَ اللَّهِ إِنْ أَرَادَ بِكُمْ سُوءًا أَوْ أَرَادَ بِكُمْ رَحْمَةً ۚ وَلَا يَجِدُونَ لَهُمْ مِنْ دُونِ اللَّهِ وَلِيًّا وَلَا نَصِيرًا

ಒಂದು ವೇಳೆ ನಿಮ್ಮ ಪಾಲಿಗೆ ಅಲ್ಲಾಹ್ ನು ಕೆಟ್ಟದ್ದನ್ನು ಬಯಸಿದರೆ ಯಾರು ತಾನೆ ನಿಮ್ಮನ್ನು ಅವನಿಂದ ರಕ್ಷಿಸಿಯಾರು? ಅಥವಾ ಕರುಣೆ ತೋರಬೇಕೆಂದು ಬಯಸಿದರೆ (ಅದನ್ನು ಯಾರು ತಾನೆ ತಡೆದಾರು) ಎಂದು, ಪೈಗಂಬರರೇ, ಅವರೊಡನೆ ಕೇಳಿರಿ. ಹೌದು, ಅವರಿಗೆ ಅಲ್ಲಾಹ್ ನ ಹೊರತು ಬೇರಾವ ರಕ್ಷಕನಾಗಲಿ ಸಹಾಯಕನಾಗಲಿ ಸಿಗಲು ಸಾಧ್ಯವಿಲ್ಲ. {17}

قَدْ يَعْلَمُ اللَّهُ الْمُعَوِّقِينَ مِنْكُمْ وَالْقَائِلِينَ لِإِخْوَانِهِمْ هَلُمَّ إِلَيْنَا ۖ وَلَا يَأْتُونَ الْبَأْسَ إِلَّا قَلِيلًا

ನಿಮ್ಮಲ್ಲಿ ಯಾರು ಇತರರನ್ನು ಹೋರಾಟದಿಂದ ತಡೆಯುತ್ತಿದ್ದಾರೆ ಎಂದು ಅಲ್ಲಾಹ್ ನಿಗೆ ತಿಳಿದಿದೆ. ಅವರು ತಮ್ಮ ಸಹೋದರರೊಡನೆ ನೀವು ನಮ್ಮೊಂದಿಗೆ ಸೇರಿರಿ ಎಂದು (ರಹಸ್ಯವಾಗಿ) ಹೇಳುತ್ತಿದ್ದಾರೆ. ಮತ್ತು ಅಂತಹವರು (ಅಲ್ಲಾಹ್ ನ ಮಾರ್ಗದಲ್ಲಿ) ಹೋರಾಟ ನಡೆಸುವುದಕ್ಕಾಗಿ ಹೊರಟು ಬರುವುದು ಬಹಳ ಕಡಿಮೆ. {18}

أَشِحَّةً عَلَيْكُمْ ۖ فَإِذَا جَاءَ الْخَوْفُ رَأَيْتَهُمْ يَنْظُرُونَ إِلَيْكَ تَدُورُ أَعْيُنُهُمْ كَالَّذِي يُغْشَىٰ عَلَيْهِ مِنَ الْمَوْتِ ۖ فَإِذَا ذَهَبَ الْخَوْفُ سَلَقُوكُمْ بِأَلْسِنَةٍ حِدَادٍ أَشِحَّةً عَلَى الْخَيْرِ ۚ أُولَٰئِكَ لَمْ يُؤْمِنُوا فَأَحْبَطَ اللَّهُ أَعْمَالَهُمْ ۚ وَكَانَ ذَٰلِكَ عَلَى اللَّهِ يَسِيرًا

(ಪೈಗಂಬರರೇ, ನಿಮ್ಮ ಜೊತೆಗೆ ನಿಲ್ಲುವ ವಿಷಯದಲ್ಲಿ) ಕಟು ಜಿಪುಣತೆ ತೋರುತ್ತಾ ಅವರು ಹಾಗೆ ಮಾಡುತ್ತಾರೆ. ಭಯದ ಸನ್ನಿವೇಶವುಂಟಾದಾಗ ಅವರು, ಸಾವಿನ ದವಡೆಗೆ ಸಿಲಿಕಿದವನು ಕಣ್ಣುಗಳನ್ನು ಹೊರಳಿಸಿ ನೋಡುವಂತೆ (ಸಹಾಯಕ್ಕಾಗಿ) ನಿಮ್ಮತ್ತ ದೃಷ್ಟಿಸುವುದನ್ನು ನೀವು ಕಾಣುವಿರಿ! ಇನ್ನು ಭಯದ ಸನ್ನಿವೇಶ ದೂರವಾದಾಗ, ಸಂಪತ್ತಿನ ಮೇಲಿನ ಅತಿಯಾದ ಮೋಹದ ಕಾರಣ ತಮ್ಮ ಹರಿತವಾದ ನಾಲಗೆಯ ಮೂಲಕ ಅವರು ನಿಮ್ಮ ಮೇಲೆ ವಾಗ್ದಾಳಿ ನಡೆಸುತ್ತಾರೆ. ಅವರು ಎಂದಿಗೂ ನಿಜವಾದ ವಿಶ್ವಾಸಿಗಳಾಗುವ ಜನರಲ್ಲ; ಆದ್ದರಿಂದ ಅಲ್ಲಾಹ್ ನು ಸಹ ಅವರ ಕರ್ಮಗಳನ್ನು ವ್ಯರ್ಥಗೊಳಿಸಲಿರುವನು. ಅಲ್ಲಾಹ್ ನ ಪಾಲಿಗೆ ಅದೊಂದು ಸುಲಭವಾದ ಕೆಲಸವೇ ಆಗಿದೆ! {19}

يَحْسَبُونَ الْأَحْزَابَ لَمْ يَذْهَبُوا ۖ وَإِنْ يَأْتِ الْأَحْزَابُ يَوَدُّوا لَوْ أَنَّهُمْ بَادُونَ فِي الْأَعْرَابِ يَسْأَلُونَ عَنْ أَنْبَائِكُمْ ۖ وَلَوْ كَانُوا فِيكُمْ مَا قَاتَلُوا إِلَّا قَلِيلًا

(ವಿಶ್ವಾಸಿಗಳ ವಿರುದ್ಧ ಯುದ್ಧಕ್ಕೆಂದು ಬಂದ) ಆ ಗುಂಪುಗಳು ಹಿಂದಿರುಗಿ ಹೋಗಿಲ್ಲವೆಂದೇ ಅವರು ಭಾವಿಸುತ್ತಿದ್ದರು. ಎಲ್ಲಾದರೂ ಆ ಗುಂಪುಗಳು ಮರಳಿ ದಾಳಿ ಮಾಡಿದರೆ ತಾವು ದೂರದ ಗ್ರಾಮೀಣ ಪ್ರದೇಶದ ಜನರೊಂದಿಗೆ ಉಳಿದುಕೊಂಡು ನಿಮ್ಮ ಬಗ್ಗೆ (ಅರ್ಥಾತ್ ಪೈಗಂಬರರ ಹಾಗೂ ವಿಶ್ವಾಸಿಗಳ ಪರಿಸ್ಥಿತಿಯ ಬಗ್ಗೆ) ವಿಚಾರಿಸಿ ತಿಳಿದುಕೊಳ್ಳುವಂತೆ ಇದ್ದಿದ್ದರೆ ಅದೆಷ್ಟು ಒಳ್ಳೆಯದಿತ್ತು ಎಂಬುದೇ ಅವರ ಉತ್ಕಟ ಬಯಕೆಯಾಗಿರುತ್ತದೆ! ಇನ್ನು, ಅವರು ನಿಮ್ಮ ನಡುವೆ ಇದ್ದರೂ ಸಹ ಸ್ವಲ್ಪವೇ ಜನರ ಹೊರತು ಉಳಿದವರು ಯುದ್ಧಕ್ಕೆ ಬರುತ್ತಿರಲಿಲ್ಲ. {20}

لَقَدْ كَانَ لَكُمْ فِي رَسُولِ اللَّهِ أُسْوَةٌ حَسَنَةٌ لِمَنْ كَانَ يَرْجُو اللَّهَ وَالْيَوْمَ الْآخِرَ وَذَكَرَ اللَّهَ كَثِيرًا

ನಿಜವಾಗಿಯೂ ನಿಮ್ಮೆಲ್ಲರಿಗೂ, ಅಂದರೆ, ಅಲ್ಲಾಹನ ಮೇಲೆ ಭರವಸೆ ಇಟ್ಟು, ಪುನರುತ್ಥಾನ ದಿನದಲ್ಲಿ ನಿರೀಕ್ಷೆಯಿಟ್ಟು, ಅಲ್ಲಾಹ್ ನನ್ನು ಹೆಚ್ಚು ಹೆಚ್ಚು ಸ್ಮರಿಸುವ ಪ್ರತಿಯೊಬ್ಬರಿಗೂ ಅಲ್ಲಾಹ್ ನ ಪೈಗಂಬರರ (ಜೀವನದಲ್ಲಿ) ಅತ್ಯುತ್ತಮವಾದ ಅನುಕರಣೀಯ ಮಾದರಿ ಇದೆ. {21}

وَلَمَّا رَأَى الْمُؤْمِنُونَ الْأَحْزَابَ قَالُوا هَٰذَا مَا وَعَدَنَا اللَّهُ وَرَسُولُهُ وَصَدَقَ اللَّهُ وَرَسُولُهُ ۚ وَمَا زَادَهُمْ إِلَّا إِيمَانًا وَتَسْلِيمًا

[ಕಪಟಿಗಳ ಧೋರಣೆಗೆ ವ್ಯತಿರಿಕ್ತವಾಗಿ] ನಿಜವಾದ ವಿಶ್ವಾಸಿಗಳು ಶತ್ರುಗಳ ಆ ಗುಂಪುಗಳನ್ನು ಕಂಡಾಗ, ನಮ್ಮೊಂದಿಗೆ ಅಲ್ಲಾಹ್ ಮತ್ತು ಅವನ ಪೈಗಂಬರರು ಇದನ್ನೇ [ಅರ್ಥಾತ್ ಸತ್ಯದ ಹಾದಿಯಲ್ಲಿ ಎದುರಾಗುವ ಸಂಕಷ್ಟ ಮತ್ತು ಅದನ್ನು ತಾಳ್ಮೆಯಿಂದ ಎದುರಿಸುವವರಿಗೆ ಲಭಿಸುವ ವಿಜಯದ] ವಾಗ್ದಾನವನ್ನೇ ಮಾಡಿದ್ದರು; ಅಲ್ಲಾಹ್ ಮತ್ತು ಅವನ ಪೈಗಂಬರರು ಹೇಳಿದ್ದು ಸತ್ಯವೇ ಆಗಿತ್ತು ಎಂದು ಹೇಳಿದ್ದರು . ಹಾಗೆ ಆ ಘಟನೆಯು ಅವರ ವಿಶ್ವಾಸವನ್ನೂ ಅನುಸರಣಾ ಮನೋಭಾವವನ್ನೂ ಮತ್ತಷ್ಟು ಹೆಚ್ಚಿಸಿತು! {22}

مِنَ الْمُؤْمِنِينَ رِجَالٌ صَدَقُوا مَا عَاهَدُوا اللَّهَ عَلَيْهِ ۖ فَمِنْهُمْ مَنْ قَضَىٰ نَحْبَهُ وَمِنْهُمْ مَنْ يَنْتَظِرُ ۖ وَمَا بَدَّلُوا تَبْدِيلًا

ವಿಶ್ವಾಸಿಗಳ ಪೈಕಿ ಕೆಲವು ಶೂರ ಜನರಿವರು. ಅಲ್ಲಾಹ್ ನೊಂದಿಗೆ ತಾವು ಮಾಡಿದ ಕರಾರು ಸತ್ಯವಾದ ಕರಾರಾಗಿತ್ತು ಎಂದು ಅವರು ಸಾಬೀತು ಪಡಿಸಿರುವರು. ಇನ್ನು ಕೆಲವರು ತಾವು ಮಾಡಿದ ಶಪಥವನ್ನು (ಅಲ್ಲಾಹ್ ನ ಮಾರ್ಗದಲ್ಲಿ ಹುತಾತ್ಮರಾಗುವ ಮೂಲಕ) ಪೂರ್ಣಗೊಳಿಸಿ ತೋರಿಸಿದರೆ ಮತ್ತೆ ಕಲವರು ತಮ್ಮ ಸರದಿಗಾಗಿ ಕಾಯುತ್ತಿರುವರು! ತಮ್ಮ ಶಪಥದಲ್ಲಿ ಯಾವ ಬದಲಾವಣೆಯನ್ನೂ ಅವರು ಮಾಡಿಲ್ಲ. {23}

لِيَجْزِيَ اللَّهُ الصَّادِقِينَ بِصِدْقِهِمْ وَيُعَذِّبَ الْمُنَافِقِينَ إِنْ شَاءَ أَوْ يَتُوبَ عَلَيْهِمْ ۚ إِنَّ اللَّهَ كَانَ غَفُورًا رَحِيمًا

ಹೌದು, ಅಲ್ಲಾಹ್ ನು ಆ ಸತ್ಯಸಂಧ ಜನರ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲವನ್ನು ನೀಡಲು ಹಾಗೂ (ಸತ್ಯಸಂಧರಲ್ಲದ) ಕಪಟಿ ಜನರನ್ನು ತಾನು ಬಯಸಿದರೆ ಶಿಕ್ಷೆಗೊಳಪಡಿಸಲು ಅಥವಾ ಅವರು (ಪಶ್ಚಾತ್ತಾಪ ಪಟ್ಟರೆ) ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲು (ಶತ್ರುಗಳ ಗುಂಪುಗಳನ್ನು ಒಂದು ಪರೀಕ್ಷೆಯಾಗಿ ಅವರ ಮೇಲೆ ಹೇರಿದನು). ನಿಜವೇನೆಂದರೆ (ಪಶ್ಚಾತ್ತಾಪ ಪಡುವವರನ್ನು) ಅಲ್ಲಾಹ್ ನು ಕ್ಷಮಿಸುವವನಾಗಿದ್ದಾನೆ; ಅವನು ಸದಾ ಕರುಣೆ ತೋರುವವನಾಗಿದ್ದಾನೆ. {24}

وَرَدَّ اللَّهُ الَّذِينَ كَفَرُوا بِغَيْظِهِمْ لَمْ يَنَالُوا خَيْرًا ۚ وَكَفَى اللَّهُ الْمُؤْمِنِينَ الْقِتَالَ ۚ وَكَانَ اللَّهُ قَوِيًّا عَزِيزًا

(ಮುಸ್ಲಿಮರ ಮೇಲೆ ಆಕ್ರೋಶಿತರಾಗಿ ಯುದ್ಧಕ್ಕೆಂದು ಬಂದಿದ್ದ) ಆ ಸತ್ಯವಿರೋಧಿ ಜನರು ತಮ್ಮ ಆ ಆಕ್ರೋಶ ಸಮೇತ ಅಲ್ಲಿಂದ ಮರಳಿ ಹೋಗುವಂತೆ ಅಲ್ಲಾಹ್ ನು ಮಾಡಿದನು! ಅವರಿಗೆ ಯಾವ ಪ್ರಯೋಜನವೂ ಆಗಲಿಲ್ಲ! ಹೌದು, ಯುದ್ಧಗಳಲ್ಲಿ ವಿಶ್ವಾಸಿಗಳಿಗೆ ಅಲ್ಲಾಹ್ ನು ಮಾತ್ರವೇ ಸಾಕು! ಅಲ್ಲಾಹ್ ನು ಬಹಳ ಶಕ್ತಿಶಾಲಿಯೂ ಅತ್ಯಂತ ಪ್ರಬಲನೂ ಆಗಿರುವನು! {25}

وَأَنْزَلَ الَّذِينَ ظَاهَرُوهُمْ مِنْ أَهْلِ الْكِتَابِ مِنْ صَيَاصِيهِمْ وَقَذَفَ فِي قُلُوبِهِمُ الرُّعْبَ فَرِيقًا تَقْتُلُونَ وَتَأْسِرُونَ فَرِيقًا

ಇನ್ನು ಗ್ರಂಥದವರ ಪೈಕಿ [ಅರ್ಥಾತ್ ನಿಮ್ಮೊಂದಿಗೆ ಒಡಂಬಡಿಕೆಯಲ್ಲಿದ್ದ ಬನೂ ಕುರೈಝಾ ಗೋತ್ರಕ್ಕೆ ಸೇರಿದ ಯಹೂದಿಗಳ ಪೈಕಿ] ಆ ಸತ್ಯವಿರೋಧಿಗಳಿಗೆ ಬೆಂಬಲ ನೀಡಿದ್ದವರನ್ನು ಅಲ್ಲಾಹ್ ನು ಅವರ ಭದ್ರಕೋಟೆಗಳಿಂದ ಕೆಳಗಿಳಿಸಿ ತಂದನು! ಅವರ ಹೃದಯಗಳಲ್ಲಿ ಭಯವನ್ನು ಬಿತ್ತಿದನು! ವಿಶ್ವಾಸಿಗಳೇ, ಅವರಲ್ಲಿನ ಕೆಲವರನ್ನು ನೀವು [ರಾಜ್ಯದ್ರೋಹದ ಅಪರಾಧಕ್ಕಾಗಿ ಯುದ್ಧದಲ್ಲಿ] ವಧಿಸಿದಿರಿ, ಇನ್ನು ಕೆಲವರನ್ನು ಬಂಧಿಸಿ ಕೈದಿಗಳನ್ನಾಗಿ ಮಾಡಿದಿರಿ! {26}

وَأَوْرَثَكُمْ أَرْضَهُمْ وَدِيَارَهُمْ وَأَمْوَالَهُمْ وَأَرْضًا لَمْ تَطَئُوهَا ۚ وَكَانَ اللَّهُ عَلَىٰ كُلِّ شَيْءٍ قَدِيرًا

ಹಾಗೆ ಅಲ್ಲಾಹ್ ನು ಅವರ ಜಮೀನುಗಳಿಗೂ ನಿವಾಸಗಳಿಗೂ ಆಸ್ತಿಪಾಸ್ತಿಗಳಿಗೂ ನಿಮ್ಮನ್ನು ವಾರಸುದಾರರನ್ನಾಗಿ ಮಾಡಿದನು. ಮಾತ್ರವಲ್ಲ, ನೀವು ಯಾವತ್ತೂ ಕಾಲಿರಿಸದ ಒಂದು (ಬೃಹತ್) ಭೂಭಾಗಕ್ಕೂ ಅವನು ನಿಮ್ಮನ್ನು ವಾರಸುದಾರರನ್ನಾಗಿ ಮಾಡಿ ಬಿಟ್ಟನು! ಹೌದು, ಅಲ್ಲಾಹ್ ನಿಗೆ ಏನು ಬೇಕಾದರೂ ಮಾಡುವ ಸಾಮರ್ಥ್ಯವಿದೆ! {27}

يَا أَيُّهَا النَّبِيُّ قُلْ لِأَزْوَاجِكَ إِنْ كُنْتُنَّ تُرِدْنَ الْحَيَاةَ الدُّنْيَا وَزِينَتَهَا فَتَعَالَيْنَ أُمَتِّعْكُنَّ وَأُسَرِّحْكُنَّ سَرَاحًا جَمِيلًا

[ಹಾಗೆ ಹೀನಾಯವಾಗಿ ಸೋತು ಹಿಂದಿರುಗಿದ ಆ ಸತ್ಯವಿರೋಧಿಗಳು ಹಾಗೂ ಕಪಟಿಗಳು ಈಗ, ಪೈಗಂಬರರೇ, ನಿಮ್ಮ ಮನೆಯವರ ಮೇಲೆ ಕಳಂಕ ಹೊರಿಸುತ್ತಿದ್ದಾರೆ. ಆದ್ದರಿಂದ] ಓ ಪೈಗಂಬರರೇ, ನೀವೀಗ ನಿಮ್ಮ ಪತ್ನಿಯರೊಡನೆ ಹೇಳಿರಿ: ನೀವೇನಾದರೂ ಈ ಲೋಕದ ಬದುಕು ಮತ್ತು ಅದರ ಬೆಡಗು ಬಿನ್ನಾಣಗಳನ್ನು ಇಷ್ಟಪಡುವವರಾದರೆ, ಬನ್ನಿರಿ, ನಿಮಗೆ ಒಂದಷ್ಟು ಸಂಪತ್ತನ್ನು ನೀಡಿ ಬಹಳ ಉತ್ತಮ ರೀತಿಯಲ್ಲಿ ನಿಮ್ಮನ್ನು (ನನ್ನ ದಾಂಪತ್ಯದಿಂದ) ಬಿಡುಗಡೆಗೊಳಿಸಿ ಬಿಡುವೆನು... {28}

وَإِنْ كُنْتُنَّ تُرِدْنَ اللَّهَ وَرَسُولَهُ وَالدَّارَ الْآخِرَةَ فَإِنَّ اللَّهَ أَعَدَّ لِلْمُحْسِنَاتِ مِنْكُنَّ أَجْرًا عَظِيمًا

ಇನ್ನು, ನೀವು ಅಲ್ಲಾಹ್ ಮತ್ತು ಅವನ ದೂತ (ಮುಹಮ್ಮದ್ ರನ್ನು) ಹಾಗೂ ಪರಲೋಕದ ಶಾಶ್ವತ ವಾಸ್ತವ್ಯವನ್ನು ಹೆಚ್ಚು ಇಷ್ಟಪಡುವವರಾದರೆ ಖಂಡಿತವಾಗಿ ನಿಮ್ಮ ಪೈಕಿ ಉತ್ತಮವಾಗಿ ನಡೆದುಕೊಳ್ಳುವವರಿಗೆ ಅಲ್ಲಾಹ್ ನು ದೊಡ್ಡ ಪ್ರತಿಫಲನ್ನು ಸಜ್ಜುಗೊಳಿಸಿ ಇಟ್ಟಿರುವನು (ಎಂದೂ ಅವರೊಡನೆ ಹೇಳಿರಿ)! {29}

يَا نِسَاءَ النَّبِيِّ مَنْ يَأْتِ مِنْكُنَّ بِفَاحِشَةٍ مُبَيِّنَةٍ يُضَاعَفْ لَهَا الْعَذَابُ ضِعْفَيْنِ ۚ وَكَانَ ذَٰلِكَ عَلَى اللَّهِ يَسِيرًا

ಪೈಗಂಬರರ ಪತ್ನಿಯರೇ, ನಿಮ್ಮ ಪೈಕಿ ಯಾರಾದರೂ ವ್ಯಕ್ತವಾದಂತಹ ನಾಚಿಕೆಗೇಡಿನ ಕೃತ್ಯವನ್ನೆಸಗಿದರೆ ಆಕೆಗೆ ಇಮ್ಮಡಿ ಶಿಕ್ಷೆ ಕೊಡಲಾಗುವುದು. ಅಲ್ಲಾಹ್ ನ ಮಟ್ಟಿಗೆ ಅದು ಸುಲಭದ ವಿಷಯವೇ ಆಗಿದೆ. {30}

وَمَنْ يَقْنُتْ مِنْكُنَّ لِلَّهِ وَرَسُولِهِ وَتَعْمَلْ صَالِحًا نُؤْتِهَا أَجْرَهَا مَرَّتَيْنِ وَأَعْتَدْنَا لَهَا رِزْقًا كَرِيمًا

ಇನ್ನು, ನಿಮ್ಮ ಪೈಕಿ ಯಾರಾದರೂ ಅಲ್ಲಾಹ್ ಮತ್ತು ಅವನ ದೂತರಿಗೆ ವಿಧೇಯತೆಯೊಂದಿಗೆ ಜೀವಿಸಿದರೆ ಮತ್ತು ಸತ್ಕರ್ಮಗಳನ್ನು ಮಾಡಿದರೆ ಆಕೆಗೆ ಅದಕ್ಕಿರುವ ಪ್ರತಿಫಲವನ್ನು ನಾವು ದುಪ್ಪಟ್ಟಾಗಿಸಿ ನೀಡಲಿದ್ದೇವೆ. ಮಾತ್ರವಲ್ಲ, ಅಕೆಗೆ ಬಹಳ ಶ್ರೇಷ್ಠವಾದ ಜೀವನಾವಶ್ಯಕತೆಗಳನ್ನು ಸಿದ್ಧಪಡಿಸಿ ಇಟ್ಟಿರುತ್ತೇವೆ. {31}

يَا نِسَاءَ النَّبِيِّ لَسْتُنَّ كَأَحَدٍ مِنَ النِّسَاءِ ۚ إِنِ اتَّقَيْتُنَّ فَلَا تَخْضَعْنَ بِالْقَوْلِ فَيَطْمَعَ الَّذِي فِي قَلْبِهِ مَرَضٌ وَقُلْنَ قَوْلًا مَعْرُوفًا

ಪೈಗಂಬರರ ಪತ್ನಿಯರೇ, ನೀವು ಇತರೆಲ್ಲ ಸ್ತ್ರೀಯರಂತೆ ಅಲ್ಲ; (ಅಲ್ಲಾಹ್ ನ ಭಯವಿರಿಸಿಕೊಂಡು) ನೀವು ಜಾಗರೂಕತೆಯೊಂದಿಗೆ ಇರಬಯಸುವವರಾದರೆ (ಅನ್ಯ ಪುರುಷರೊಂದಿಗೆ) ಮೃದುಧ್ವನಿಯಲ್ಲಿ ನೀವು ಮತನಾಡದಿರಿ. ಅನ್ಯಥಾ, ಹೃದಯದಲ್ಲಿ (ಕಾಪಟ್ಯದ) ರೋಗವಿರುವವರು [ನಿಮ್ಮ ಮೇಲೆ ಇಲ್ಲಸಲ್ಲದ ಕಳಂಕ ಹೊರಿಸಲು] ದುರಾಸೆ ಪಡಬಹುದು. ಆದ್ದರಿಂದ ಮಾತನಾಡುವಾಗ ನೀವು ತಕ್ಕುದಾದ ಧಾಟಿಯಲ್ಲೇ ಮಾತನಾಡಿರಿ. {32}

وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ وَأَقِمْنَ الصَّلَاةَ وَآتِينَ الزَّكَاةَ وَأَطِعْنَ اللَّهَ وَرَسُولَهُ ۚ إِنَّمَا يُرِيدُ اللَّهُ لِيُذْهِبَ عَنْكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا

ಮತ್ತು ನಿಮ್ಮ ಮನೆಗಳಲ್ಲೇ ಇದ್ದುಕೊಳ್ಳಿ. ಗತಿಸಿ ಹೋದ, ತಿಳುವಳಿಕೆ ಇಲ್ಲದ (ಜಾಹಿಲಿಯ್ಯಃ) ಕಾಲದವರು ಮಾಡುತ್ತಿದ್ದಂತೆ ನೀವು ಸೌಂದರ್ಯ ಪ್ರದರ್ಶನ ಮಾಡುತ್ತಾ ನಡೆದಾಡದಿರಿ! ನಮಾಝ್ ಗಳನ್ನು ಸ್ಥಿರವಾಗಿ ಪಾಲಿಸಿರಿ ಮತ್ತು ಝಕಾತ್ ಅನ್ನು ನೀಡುತ್ತಲಿರಿ. ಜೊತೆಗೆ ಅಲ್ಲಾಹ್ ನ ಮತ್ತು ಅವನ ದೂತರ ಆದೇಶಗಳ ಅನುಸರಣೆ ಮಾಡುವವರಾಗಿರಿ. [ಪೈಗಂಬರರ ಮನೆಯವರಾದ ಮಹಿಳೆಯರೇ, ಹೃದಯಗಳಲ್ಲಿ ರೋಗವಿರುವ ಕಪಟಿ ಜನರು ನಿಮ್ಮ ಮೇಲೆ ಹೊರಿಸಿದ] ಕಳಂಕವನ್ನು ನಿಮ್ಮಿಂದ ದೂರೀಕರಿಸಿ ನಿಮ್ಮನ್ನು ಪರಿಶುದ್ಧರನ್ನಾಗಿಸುವುದಷ್ಟೇ ಅಲ್ಲಾಹ್ ನ ಉದ್ದೇಶವಾಗಿದೆ! {33}

وَاذْكُرْنَ مَا يُتْلَىٰ فِي بُيُوتِكُنَّ مِنْ آيَاتِ اللَّهِ وَالْحِكْمَةِ ۚ إِنَّ اللَّهَ كَانَ لَطِيفًا خَبِيرًا

ಹಾಗಿರುವಾಗ, ನಿಮ್ಮ ಮನೆಗಳಲ್ಲಿ ಬೋಧಿಸಲ್ಪಡುವ ಜಾಣ್ಮೆ ತುಂಬಿದ ಮಾತುಗಳನ್ನೂ ಅಲ್ಲಾಹ್ ನ ವಚನಗಳನ್ನೂ ನೀವು ಸ್ಮರಿಸುತ್ತಲಿರಿ. ನಿಸ್ಸಂಶಯವಾಗಿ ಅಲ್ಲಾಹ್ ನು ಸೂಕ್ಶ್ಮತೆಯುಳ್ಳವನೂ ಎಲ್ಲಾ ವಿಷಯಗಳಲ್ಲಿ ಅರಿವುಳ್ಳವನೂ ಆಗಿರುವನು. {34}

إِنَّ الْمُسْلِمِينَ وَالْمُسْلِمَاتِ وَالْمُؤْمِنِينَ وَالْمُؤْمِنَاتِ وَالْقَانِتِينَ وَالْقَانِتَاتِ وَالصَّادِقِينَ وَالصَّادِقَاتِ وَالصَّابِرِينَ وَالصَّابِرَاتِ وَالْخَاشِعِينَ وَالْخَاشِعَاتِ وَالْمُتَصَدِّقِينَ وَالْمُتَصَدِّقَاتِ وَالصَّائِمِينَ وَالصَّائِمَاتِ وَالْحَافِظِينَ فُرُوجَهُمْ وَالْحَافِظَاتِ وَالذَّاكِرِينَ اللَّهَ كَثِيرًا وَالذَّاكِرَاتِ أَعَدَّ اللَّهُ لَهُمْ مَغْفِرَةً وَأَجْرًا عَظِيمًا

ಖಂಡಿತವಾಗಿ, (ಅಲ್ಲಾಹ್ ನಿಗೆ ಸಂಪೂರ್ಣವಾಗಿ) ಶರಣಾದ ಪುರುಷರು ಮತ್ತು ಸ್ತ್ರೀಯರು, ವಿಶ್ವಾಸಿಗಳಾದ ಪುರುಷರು ಮತ್ತು ಸ್ತ್ರೀಯರು, ವಿಧೇಯತೆಯೊಂದಿಗೆ ನಡೆದುಕೊಳ್ಳುವ ಪುರುಷರು ಮತ್ತು ಸ್ತ್ರೀಯರು, ಸತ್ಯವಂತರಾದ ಪುರುಷರು ಮತ್ತು ಸ್ತ್ರೀಯರು, ಸಹನೆ ಪಾಲಿಸುವ ಪುರುಷರು ಮತ್ತು ಸ್ತ್ರೀಯರು, ವಿನಮ್ರರಾದ ಪುರುಷರು ಮತ್ತು ಸ್ತ್ರೀಯರು, ದಾನಧರ್ಮಗಳನ್ನು ಮಾಡುವ ಪುರುಷರು ಮತ್ತು ಸ್ತ್ರೀಯರು, ಉಪವಾಸ ಆಚರಿಸುವ ಪುರುಷರು ಮತ್ತು ಸ್ತ್ರೀಯರು, ತಮ್ಮ ಚಾರಿತ್ರ್ಯವನ್ನು ಕಾಪಾಡಿಕೊಳ್ಳುವ ಪುರುಷರು ಮತ್ತು ಸ್ತ್ರೀಯರು, ಧಾರಾಳವಾಗಿ ಅಲ್ಲಾಹ್ ನನ್ನು ಸ್ಮರಿಸುವ ಪುರುಷರು ಮತ್ತು ಸ್ತ್ರೀಯರು - ಇವರೆಲ್ಲರಿಗೆ ಅಲ್ಲಾಹ್ ನು ಕ್ಷಮಾದಾನ ಹಾಗೂ ದೊಡ್ಡ ಪ್ರಮಾಣದಲ್ಲಿ ಪ್ರತಿಫಲವನ್ನು ಸಿದ್ಧಪಡಿಸಿ ಇಟ್ಟಿರುವನು. {35}

وَمَا كَانَ لِمُؤْمِنٍ وَلَا مُؤْمِنَةٍ إِذَا قَضَى اللَّهُ وَرَسُولُهُ أَمْرًا أَنْ يَكُونَ لَهُمُ الْخِيَرَةُ مِنْ أَمْرِهِمْ ۗ وَمَنْ يَعْصِ اللَّهَ وَرَسُولَهُ فَقَدْ ضَلَّ ضَلَالًا مُبِينًا

ಅಲ್ಲಾಹ್ ಮತ್ತು ಅವನ ಪೈಗಂಬರರು, ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರಿಗೆ ಸಂಬಂಧಿಸಿದ ಯಾವುದಾದರೂ ವಿಷಯದಲ್ಲಿ ಒಂದು ತೀರ್ಮಾನ ನೀಡಿದರೆ, ನಂತರ ಅವರಿಗೆ ತಮ್ಮ ವಿಚಾರದಲ್ಲಿ ಬೇರೆ ಯಾವ ಆಯ್ಕೆಯೂ ಉಳಿಯುವುದಿಲ್ಲ. [ಆದರೆ ಮುಸ್ಲಿಮರಂತೆ ನಟಿಸುತ್ತಿರುವ ಕಪಟಿಗಳು ಮಾತ್ರ ಅಲ್ಲಾಹ್ ಮತ್ತು ಅವನ ಪೈಗಂಬರರ ತೀರ್ಮಾನವನ್ನು ಒಪ್ಪದೆ ಅದನ್ನು ಟೀಕಿಸುತ್ತಿದ್ದಾರೆ]! ಹೌದು, ಯಾರಾದರೂ ಅಲ್ಲಾಹ್ ನ ಮತ್ತು ಅವನ ಪೈಗಂಬರರ ಮಾತು ಮೀರಿ ನಡೆದರೆ ನಿಜವಾಗಿಯೂ ಅವನು ದಾರಿ ತಪ್ಪಿರುತ್ತಾನೆ; ಸ್ಪಷ್ಟವಾದ ದುರ್ಮಾರ್ಗದಲ್ಲಿದ್ದಾನೆ! {36}

وَإِذْ تَقُولُ لِلَّذِي أَنْعَمَ اللَّهُ عَلَيْهِ وَأَنْعَمْتَ عَلَيْهِ أَمْسِكْ عَلَيْكَ زَوْجَكَ وَاتَّقِ اللَّهَ وَتُخْفِي فِي نَفْسِكَ مَا اللَّهُ مُبْدِيهِ وَتَخْشَى النَّاسَ وَاللَّهُ أَحَقُّ أَنْ تَخْشَاهُ ۖ فَلَمَّا قَضَىٰ زَيْدٌ مِنْهَا وَطَرًا زَوَّجْنَاكَهَا لِكَيْ لَا يَكُونَ عَلَى الْمُؤْمِنِينَ حَرَجٌ فِي أَزْوَاجِ أَدْعِيَائِهِمْ إِذَا قَضَوْا مِنْهُنَّ وَطَرًا ۚ وَكَانَ أَمْرُ اللَّهِ مَفْعُولًا

(ಪೈಗಂಬರರೇ), ಅಲ್ಲಾಹ್ ನು ಅನುಗ್ರಹಿಸಿದ ಮತ್ತು ನೀವೂ ಔದಾರ್ಯ ತೋರಿದ ಒಬ್ಬ ವ್ಯಕ್ತಿಯೊಂದಿಗೆ [ಅರ್ಥಾತ್ ಗುಲಾಮತನದಿಂದ ವಿಮೋಚಿಸಿ ನೀವು ನಿಮ್ಮ ದತ್ತು ಪುತ್ರನನ್ನಾಗಿ ಸ್ವೀಕರಿಸಿದ 'ಝೈದ್ ಬಿನ್ ಹಾರಿಸ್' ರೊಂದಿಗೆ], ನಿಮ್ಮ ಪತ್ನಿಯನ್ನು ನೀವು ವಿಚ್ಛೇದಿಸದೆ ನಿಮ್ಮ ಬಳಿಯೇ ಇರಿಸಿಕೊಳ್ಳಿ; ಮತ್ತು (ಪತ್ನಿಯ ವಿಷಯದಲ್ಲಿ) ಅಲ್ಲಾಹ್ ನ ಭಯವಿರಿಸಿಕೊಳ್ಳಿ ಎಂದು ನೀವು (ಬುದ್ದಿವಾದ) ಹೇಳುತ್ತಿದ್ದ ಸಂದರ್ಭವನ್ನು ನೆನಪಿಸಿರಿ. ಅಲ್ಲಾಹ್ ನು ಏನನ್ನು ಬಹಿರಂಗಪಡಿಸಲು ಉದ್ದೇಷಿಸಿರುವನೋ ಅದನ್ನು (ಪೈಗಂಬರರೇ) ನೀವು, ನಿಮ್ಮ ಹೃದಯದಲ್ಲಿ ಗೌಪ್ಯವಾಗಿ ಇರಿಸುತ್ತಿರುವಿರಿ. ಭಯಪಡಲು ಅಲ್ಲಾಹ್ ನು ಹೆಚ್ಚು ಅರ್ಹನಾಗಿರುವಾಗ ನೀವು ಜನರ (ಟೀಕೆಗಳಿಗೆ) ಭಯಪಡುತ್ತಿರುವಿರಿ! ಯಾವಾಗ ಝೈದ್ ರಿಗೆ [ತಮ್ಮ ಪತ್ನಿಯಾದ ಝೈನಬ್ ಬಿಂತ್ ಜಹಷ್ ರಲ್ಲಿ] ಆಸಕ್ತಿ ಇಲ್ಲದಾಗಿ (ತಲಾಕ್ ನೀಡಿದರೋ) ಆಗ ಆಕೆಯನ್ನು ಪೈಗಬರರೇ, ನಾವು ನಿಮಗೆ ವಿವಾಹ ಮಾಡಿಸಿದೆವು. ತಮ್ಮ ದತ್ತು ಪುತ್ರರು ಪತ್ನಿಯರನ್ನು (ಅವರಲ್ಲಿ ಆಸಕ್ತಿ ಇಲ್ಲದವರಾಗಿ) ವಿಚ್ಛೇದಿಸಿದಾಗ ಅವರನ್ನು ವರಿಸುವುದಕ್ಕೆ ಅಭ್ಯಂತರವಿಲ್ಲ ಎಂಬ (ನಿಯಮವನ್ನು) ವಿಶ್ವಾಸಿಗಳಾದ ಜನರಿಗೆ ತೋರಿಸಿ ಕೊಡಲು (ಅಲ್ಲಾಹ್ ನು ಹಾಗೆ ಮಾಡಿದನು). ಹೌದು, ಅಲ್ಲಾಹ್ ನ ಫರ್ಮಾನು ಜಾರಿಯಾಗಿಯೇ ತೀರುತ್ತದೆ. {37}

مَا كَانَ عَلَى النَّبِيِّ مِنْ حَرَجٍ فِيمَا فَرَضَ اللَّهُ لَهُ ۖ سُنَّةَ اللَّهِ فِي الَّذِينَ خَلَوْا مِنْ قَبْلُ ۚ وَكَانَ أَمْرُ اللَّهِ قَدَرًا مَقْدُورًا

ಪೈಗಂಬರರಿಗೆ ಅಲ್ಲಾಹ್ ನು ಏನನ್ನಾದರೂ ನಿರ್ದೇಶಿಸಿದರೆ ಅದನ್ನು ಕಾರ್ಯಗತಗೊಳಿಸುವ ವಿಷಯದಲ್ಲಿ ಅವರಿಗೆ ಯಾವ ಮುಜುಗರವೂ ಆಗಬಾರದು. ಈ ಹಿಂದೆ ಗತಿಸಿದ ದೂತರುಗಳೊಂದಿಗೆ ಸಹ ಅಲ್ಲಾಹ್ ನ ಧೋರಣೆ ಅದುವೇ ಆಗಿತ್ತು. ಅಲ್ಲಾಹ್ ನ ನಿರ್ದೇಶಗಳು ಖಚಿತವಾಗಿ ನಿರ್ಧರಿಲ್ಪಟ್ಟ (ಏರುಪೇರಾಗದ) ನಿಯಮಗಳಾಗಿವೆ! {38}

الَّذِينَ يُبَلِّغُونَ رِسَالَاتِ اللَّهِ وَيَخْشَوْنَهُ وَلَا يَخْشَوْنَ أَحَدًا إِلَّا اللَّهَ ۗ وَكَفَىٰ بِاللَّهِ حَسِيبًا

[ಪೈಗಂಬರರೇ, ಜನರ ಟೀಕೆಗಳನ್ನು ನೀವು ಲೆಕ್ಕಿಸದಿರಿ]. ಅಲ್ಲಾಹ್ ನ ಸಂದೇಶಗಳನ್ನು (ಹಿಂದಿನ ಆ ಎಲ್ಲ ದೂತರುಗಳು) ಜನರಿಗೆ ತಲುಪಿಸುತ್ತಿದ್ದರು ಹಾಗೂ ಅವನಿಗೆ ಮಾತ್ರ ಭಯಭಕ್ತಿ ತೋರುತ್ತಿದ್ದರು. ಅಲ್ಲಾಹ್ ನೊಬ್ಬನ ಹೊರತು ಬೇರೆ ಯಾರನ್ನೂ ಅವರು ಭಯಪಡುತ್ತಿರಲಿಲ್ಲ. ಏನಿದ್ದರೂ ಅಂತಿಮ ವಿಚಾರಣೆಗಾಗಿ ಅಲ್ಲಾಹ್ ನು ಮಾತ್ರವೇ ಸಾಕು! {39}

مَا كَانَ مُحَمَّدٌ أَبَا أَحَدٍ مِنْ رِجَالِكُمْ وَلَٰكِنْ رَسُولَ اللَّهِ وَخَاتَمَ النَّبِيِّينَ ۗ وَكَانَ اللَّهُ بِكُلِّ شَيْءٍ عَلِيمًا

ಜನರೇ, ಮುಹಮ್ಮದ್ ಪೈಗಂಬರರು [ಝೈದ್ ಬಿನ್ ಹಾರಿಸ್ ಎಂಬ ವ್ಯಕ್ತಿಗಾಗಲಿ, ಅಥವಾ] ನಿಮ್ಮ ಪೈಕಿಯ ಯಾವುದೇ ಪುರುಷನಿಗಾಗಲಿ ತಂದೆಯಾಗಿಲ್ಲ! ಬದಲಾಗಿ ಅವರು ಅಲ್ಲಾಹ್ ನ ಒಬ್ಬ ದೂತ ಹಾಗೂ ಪ್ರವಾದಿಗಳ ಸರಣಿಯನ್ನು ಕೊನೆಗೊಳಿಸಲಿರುವ (ಅಂತ್ಯ ಪ್ರವಾದಿಯಾಗಿರುವರು)! ಹೌದು, ಅಲ್ಲಾಹ್ ನಿಗೆ ಎಲ್ಲಾ ವಿಷಯಗಳ ಬಗ್ಗೆ ಸಮಗ್ರವಾದ ಜ್ಞಾನವಿರುತ್ತದೆ. {40}

يَا أَيُّهَا الَّذِينَ آمَنُوا اذْكُرُوا اللَّهَ ذِكْرًا كَثِيرًا

ಓ ವಿಶ್ವಾಸಿಗಳೇ, ನೀವು ಹೆಚ್ಚು ಹೆಚ್ಚಾಗಿ ಅಲ್ಲಾಹ್ ನ ಸ್ಮರಣೆಯನ್ನು ಮಾಡುತ್ತಲಿರಿ. {41}

وَسَبِّحُوهُ بُكْرَةً وَأَصِيلًا

(ವಿಶೇಷವಾಗಿ) ಮುಂಜಾನೆ ಮತ್ತು ಸಂಜೆಗಳಲ್ಲಿ ಅವನ ಪಾವಿತ್ರ್ಯತೆಯ ಸಂಕೀರ್ತನೆಯನ್ನೂ ಮಾಡುವವರಾಗಿರಿ. {42}

هُوَ الَّذِي يُصَلِّي عَلَيْكُمْ وَمَلَائِكَتُهُ لِيُخْرِجَكُمْ مِنَ الظُّلُمَاتِ إِلَى النُّورِ ۚ وَكَانَ بِالْمُؤْمِنِينَ رَحِيمًا

ಅಲ್ಲಾಹ್ ನೇ ನಿಮ್ಮನ್ನು ಅನುಗ್ರಹಿತ್ತಿರುವವನು; ಅವನ ಮಲಕ್ ಗಳು ಸಹ ನಿಮ್ಮ ಮೇಲೆ ಕೃಪೆ ತೋರುತ್ತಿರುವರು - ನಿಮ್ಮನ್ನು (ಅಜ್ಞಾನ ಅಧರ್ಮಗಳ) ಅಂಧಕಾರಗಳಿಂದ ಹೊರತೆಗೆದು (ವಿಸ್ವಾಸ ಮತ್ತು ಧಾರ್ಮಿಕತೆಯ) ಪ್ರಕಾಶದತ್ತ ಕೊಂಡೊಯ್ಯವ ಸಲುವಾಗಿ! ಅಲ್ಲಾಹ್ ನು ವಿಶ್ವಾಸಿಗಳ ಪಾಲಿಗೆ ಯಾವತ್ತೂ ಕರುಣಾಮಯಿಯಾಗಿರುವನು. {43}

تَحِيَّتُهُمْ يَوْمَ يَلْقَوْنَهُ سَلَامٌ ۚ وَأَعَدَّ لَهُمْ أَجْرًا كَرِيمًا

ವಿಶ್ವಾಸಿಗಳು ಅವನನ್ನು ಭೇಟಿಯಾಗಲಿವ ದಿನ ಅವರಿಗಿರುವುದು ಶಾಂತಿ ನೆಮ್ಮದಿಗಳ ಉಡುಗೊರೆಗಳು! ಅವರಿಗಾಗಿ ಅವನು ತಯಾರಿಟ್ಟಿರುವುದು ಅತ್ಯಂತ ಗೌರವಯುತವಾದ ಧಾರಾಳ ಪುರಸ್ಕಾರಗಳು! {44}

يَا أَيُّهَا النَّبِيُّ إِنَّا أَرْسَلْنَاكَ شَاهِدًا وَمُبَشِّرًا وَنَذِيرًا

ಓ ಪೈಗಂಬರರೇ, ನಾವು ನಿಮ್ಮನ್ನು (ಈ ಜನರ ವಿಷಯದಲ್ಲಿ) ಒಬ್ಬ ಸಾಕ್ಷಿದಾರನಾಗಿ, (ಸಜ್ಜನರಿಗೆ) ಶುಭಸುದ್ದಿ ನೀಡುವವರಾಗಿ ಮತ್ತು (ದುರ್ಜನರಿಗೆ) ಎಚ್ಚರಿಕೆ ತಿಳಿಸುವವರಾಗಿ ಕಳುಹಿಸಿರುತ್ತೇವೆ. {45}

وَدَاعِيًا إِلَى اللَّهِ بِإِذْنِهِ وَسِرَاجًا مُنِيرًا

ಹಾಗೆಯೇ, ಅಲ್ಲಾಹ್ ನ ಅಪ್ಪಣೆಯಂತೆ ಜನರನ್ನು ಅವನೆಡೆಗೆ ಕರೆಯುವವರಾಗಿಯೂ, ಬೇಳಕು ನೀಡುವ ಒಂದು ಜ್ಯೋತಿಯಾಗಿಯೂ ಕಳುಹಿಸಿರುತ್ತೇವೆ. {46}

وَبَشِّرِ الْمُؤْمِنِينَ بِأَنَّ لَهُمْ مِنَ اللَّهِ فَضْلًا كَبِيرًا

ಹಾಗಿರುವಾಗ, ಪೈಗಂಬರರೇ, ಅಲ್ಲಾಹ್ ನ ವತಿಯಿಂದ ಇರುವ ಮಹತ್ತರವಾದ ಕೃಪಾನುಗ್ರಹಗಳ ಬಗ್ಗೆ ನೀವು ವಿಶ್ವಾಸಿಗಳಿಗೆ ಶುಭಸುದ್ದಿ ತಿಳಿಸಿರಿ. {47}

وَلَا تُطِعِ الْكَافِرِينَ وَالْمُنَافِقِينَ وَدَعْ أَذَاهُمْ وَتَوَكَّلْ عَلَى اللَّهِ ۚ وَكَفَىٰ بِاللَّهِ وَكِيلًا

ನೀವು ಧರ್ಮವಿರೋಧಿಳ ಹಾಗೂ ಧಾರ್ಮಿಕರಂತೆ ನಟಿಸುವ ಕಪಟಿಗಳ ಮಾತನ್ನು ಎಂದೂ ಅನುಸರಿಸದಿರಿ; ಅವರು ನೀಡುತ್ತಿರುವ ಕಿರುಕುಳಗಳನ್ನು ನೀವು ಕಡೆಗಣಿಸುತ್ತಲಿರಿ ಮತ್ತು ಅಲ್ಲಾಹ್ ನ ಮೇಲೆ ಸಂಪೂರ್ಣವಾದ ಭರವಸೆಯನ್ನಿಡಿರಿ. (ನಿಮಗೆ ವಹಿಸಲಾದ ದೌತ್ಯವನ್ನು) ಕಾರ್ಯಗತಗೊಳಿಸುವ ವಿಷಯದಲ್ಲಿ ಅಲ್ಲಾಹ್ ನ ಸಹಾಯ ಮಾತ್ರವೇ ನಿಮಗೆ ಸಾಕಾಗುವುದು. {48}

يَا أَيُّهَا الَّذِينَ آمَنُوا إِذَا نَكَحْتُمُ الْمُؤْمِنَاتِ ثُمَّ طَلَّقْتُمُوهُنَّ مِنْ قَبْلِ أَنْ تَمَسُّوهُنَّ فَمَا لَكُمْ عَلَيْهِنَّ مِنْ عِدَّةٍ تَعْتَدُّونَهَا ۖ فَمَتِّعُوهُنَّ وَسَرِّحُوهُنَّ سَرَاحًا جَمِيلًا

ವಿಶ್ವಾಸಿಗಳಾದ ಓ ಜನರೇ, [ಝೈನಬ್ ಬಿನ್ತ್ ಜಹಷ್ ರ ಪುನರ್ವಿವಾಹದ ವಿಷಯದಲ್ಲಿ 'ಇದ್ದತ್' ಆಚರಿಸದೇ ಇದ್ದುದಕ್ಕಾಗಿ ನೀವು ಕಳವಳ ಪಡಬೇಡಿ; ಏಕೆಂದರೆ]; ವಿಶ್ವಾಸಿ ಸ್ತ್ರೀಯರನ್ನು ನೀವು ವಿವಾಹವಾಗಿ, ನಂತರ ಸ್ಪರ್ಷಿಸುವ ಮುನ್ನವೇ ಅವರನ್ನು (ಕಾರಣಾಂತರಗಳಿಂದ) ವಿಚ್ಛೇದಿಸಬೇಕಾದ ಅಗತ್ಯ ಬಂದಲ್ಲಿ 'ಇದ್ದತ್' [ಅರ್ಥಾತ್ ಮೂರು ಋತುಚಕ್ರಗಳಷ್ಟು ಕಾಲ ಕಾಯಬೇಕಾದ ನಿಯಮ ಅವರಿಗೆ ಅನ್ವಯಿಸುವುದಿಲ್ಲ; ಅವರು 'ಇದ್ದತ್' ನ ಸಮಯವನ್ನು] ಎಣಿಕೆಯಂತೆ ಪೂರ್ತಿಗೊಳಿಸಲೇ ಬೇಕು ಎಂದು ಹೇಳಲು (ವಿಶ್ವಾಸಿಗಳಾದ) ನಿಮಗೂ ಅಧಿಕಾರವಿಲ್ಲ! ಆದ್ದರಿಂದ ಅವರಿಗೆ ಏನಾದರೂ ಜೀವನಾಂಶ ನೀಡಿ ಕೂಡಲೇ ಅವರನ್ನು ಅತ್ಯಂತ ಸೊಗಸಾದ ರೀತಿಯಲ್ಲಿ ಬೀಳ್ಕೊಡಬೇಕು. {49}

يَا أَيُّهَا النَّبِيُّ إِنَّا أَحْلَلْنَا لَكَ أَزْوَاجَكَ اللَّاتِي آتَيْتَ أُجُورَهُنَّ وَمَا مَلَكَتْ يَمِينُكَ مِمَّا أَفَاءَ اللَّهُ عَلَيْكَ وَبَنَاتِ عَمِّكَ وَبَنَاتِ عَمَّاتِكَ وَبَنَاتِ خَالِكَ وَبَنَاتِ خَالَاتِكَ اللَّاتِي هَاجَرْنَ مَعَكَ وَامْرَأَةً مُؤْمِنَةً إِنْ وَهَبَتْ نَفْسَهَا لِلنَّبِيِّ إِنْ أَرَادَ النَّبِيُّ أَنْ يَسْتَنْكِحَهَا خَالِصَةً لَكَ مِنْ دُونِ الْمُؤْمِنِينَ ۗ قَدْ عَلِمْنَا مَا فَرَضْنَا عَلَيْهِمْ فِي أَزْوَاجِهِمْ وَمَا مَلَكَتْ أَيْمَانُهُمْ لِكَيْلَا يَكُونَ عَلَيْكَ حَرَجٌ ۗ وَكَانَ اللَّهُ غَفُورًا رَحِيمًا

ಓ ಪೈಗಂಬರರೇ, [ಝೈನಬ್ ಬಿನ್ತ್ ಜಹಷ್ ಗೆ ಬದಲಾಗಿ ಯಾವ ಪತ್ನಿಯನ್ನೂ ವಿಚ್ಛೇದಿಸಬೇಕಾಗಿಲ್ಲ]. ನೀವು ಅದಾಗಲೇ 'ಮಹರ್' ನೀಡಿದ ನಿಮ್ಮ ಪತ್ನಿಯರನ್ನು ಹಾಗೂ ಅಲ್ಲಾಹ್ ನು ನಿಮಗೆ ಒದಗಿಸಿರುವ ನಿಮ್ಮ ಅಧೀನದಲ್ಲಿರುವ ನಿಮ್ಮ ದಾಸಿಯರನ್ನು ನಾವು ನಿಮ್ಮ ಪಾಲಿಗೆ ಸಿಂಧು ಗೊಳಿಸಿರುವೆವು. ಹಾಗೆಯೇ, (ಸರ್ವಸ್ವವನ್ನೂ ತ್ಯಾಗ ಮಾಡಿ ಮದೀನಾ ಪಟ್ಟಣಕ್ಕೆ) ನಿಮ್ಮೊಂದಿಗೆ ವಲಸೆ ಬಂದ ನಿಮ್ಮ ತಂದೆಯ ಸಹೋದರ ಸಹೋದರಿಯರ ಪುತ್ರಿಯರು; ತಾಯಿಯ ಸಹೋದರ ಸಹೋದರಿಯರ ಪುತ್ರಿಯರು; ಅಂತೆಯೇ ಪೈಗಂಬರಿರಿಗಾಗಿ ತನ್ನನ್ನೇ ಅರ್ಪಿಸಿಕೊಂಡಿರುವ ಒಬ್ಬ ವಿಸ್ವಾಸಿ ಸ್ತ್ರೀಯುನ್ನು - ಪೈಗಂಬರರಿಗೂ ಆಕೆಯನ್ನು ವರಿಸುವುದು ಇಷ್ಟವಾದರೆ ಮಾತ್ರ - ಪೈಗಂಬರರ ಪಾಲಿಗೆ ಸಿಂಧುಗೊಳಿಸಲಾಗಿದೆ! ಪೈಗಂಬರರೇ, ಈ (ವಿಶೇಷ ವೈವಾಹಿಕ ನಿಯಮ) ನಿಮಗೆ ಮಾತ್ರ ಅನ್ವಯಿಸುತ್ತದೆ; ಇತರ ಯಾವ ವಿಸ್ವಾಸಿಗೂ ಈ (ವಿಶೇಷ ಕಾನೂನು) ಅನ್ವಯಿಸುವುದಿಲ್ಲ! ವಿಶ್ವಾಸಿಗಳ ಪತ್ನಿಯರ ಹಾಗೂ ಅವರ ಅಧೀನದಲ್ಲಿರುವ ದಾಸಿಯರ ವಿಷಯದಲ್ಲಿ ನಾವು ವಿಧಿಸಿರುವ ನಿಯಮವೇನೆಂಬುದು ನಮಗೆ ತಿಳಿದಿರುತ್ತದೆ! ಪೈಗಂಬರರೇ, ನಿಮಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕಾಗಿ [ನಿಮಗೆ ಮಾತ್ರವಾಗಿರುವ ಈ ಕಾನೂನನ್ನು ಎಲ್ಲರಿಗೂ ಅರ್ಥವಾಗುವಂತೆ ನಾವು ವಿವರಿಸಿದ್ದೇವೆ]. ಅಲ್ಲಾಹ್ ನು (ವಿಶ್ವಾಸಿಗಳ ಪ್ರಮಾದಗಳನ್ನು) ಕ್ಷಮಿಸುವವನಾಗಿದ್ದಾನೆ ಮತ್ತು ಅವನು ಅಪಾರವಾಗಿ ಕರುಣೆ ತೋರುತ್ತಾನೆ! {50}

تُرْجِي مَنْ تَشَاءُ مِنْهُنَّ وَتُؤْوِي إِلَيْكَ مَنْ تَشَاءُ ۖ وَمَنِ ابْتَغَيْتَ مِمَّنْ عَزَلْتَ فَلَا جُنَاحَ عَلَيْكَ ۚ ذَٰلِكَ أَدْنَىٰ أَنْ تَقَرَّ أَعْيُنُهُنَّ وَلَا يَحْزَنَّ وَيَرْضَيْنَ بِمَا آتَيْتَهُنَّ كُلُّهُنَّ ۚ وَاللَّهُ يَعْلَمُ مَا فِي قُلُوبِكُمْ ۚ وَكَانَ اللَّهُ عَلِيمًا حَلِيمًا

[ಇನ್ನು, ಪೈಗಂಬರರೇ, ಪತ್ನಿಯರನ್ನು ಸಮೀಪಿಸುವ ವಿಷಯದಲ್ಲಿ ಸರದಿ ಹೇಗೆ ಪಾಲಿಸಬೇಕು ಎಂಬ ಯಾವ ನಿರ್ಬಂಧವೂ ನಿಮ್ಮ ಮೇಲೆ ಇರುವುದಿಲ್ಲ! ಆದ್ದರಿಂದ] ಅವರಲ್ಲಿ ಯಾರನ್ನು ಬೇಕಾದರೂ ನಿಮ್ಮಿಷ್ಟದಂತೆ ದೂರವಿರಿಸ ಬಹುದು ಮತ್ತು ಯಾರನ್ನು ಬೇಕಾದರೂ ನಿಮ್ಮಿಷ್ಟದಂತೆ ಹತ್ತಿರಕ್ಕೆ ಕರೆಸಿಕೊಳ್ಳ ಬಹುದು. ಇನ್ನು, ದೂರವಿರಿಸಿದವರ ಪೈಕಿ ನೀವು ಬಯಸಿದಂತೆ ಯಾರನ್ನು ಬೇಕಾದರೂ ಹತ್ತಿರಕ್ಕೆ ಕರೆಸಿಕೊಳ್ಳುವುದರಲ್ಲಿ ನಿಮಗೆ ಅಭ್ಯಂತರವಿಲ್ಲ! ಅವರ ಕಣ್ಮನ ತಣಿಯಲು, ಅವರು ದುಃಖಿಸದಿರಲು ಹಾಗೂ ಅವರೆಲ್ಲರೂ ನೀವು ನೀಡಿದುದರಲ್ಲಿ ಸಂತೃಪ್ತರಾಗಿ ಜೀವಿಸಲು ಅದು ಬಹಳ ಸೂಕ್ತವಾದ ಕ್ರಮವಾಗಿದೆ. ನಿಮ್ಮಲ್ಲರ ಹೃದಯಗಳಲ್ಲಿ ಏನಿದೆಯೆಂದು ಅಲ್ಲಾಹ್ ನು ತಿಳಿದಿರುವನು. ಹೌದು, ಅಲ್ಲಾಹ್ ನಿಗೆ ಸಕಲ ವಿಷಯಗಳ ಜ್ಞಾನವಿದೆ; ಅವನು ಸಹಾನುಭೂತಿ ಉಳ್ಳವನೂ ಆಗಿರುವನು. {51}

لَا يَحِلُّ لَكَ النِّسَاءُ مِنْ بَعْدُ وَلَا أَنْ تَبَدَّلَ بِهِنَّ مِنْ أَزْوَاجٍ وَلَوْ أَعْجَبَكَ حُسْنُهُنَّ إِلَّا مَا مَلَكَتْ يَمِينُكَ ۗ وَكَانَ اللَّهُ عَلَىٰ كُلِّ شَيْءٍ رَقِيبًا

ಅದರ ನಂತರ ಬೇರೆ ಯಾವ ಸ್ತ್ರೀಯನ್ನೂ ವರಿಸಲು, ಪೈಗಂಬರರೇ, ನಿಮಗೆ ಅನುಮತಿ ಇಲ್ಲ! ಅವರಲ್ಲಿ ಯಾರ ಬದಲಿಗೂ ಮತ್ತೊಬ್ಬ ಸ್ತ್ರೀಯನ್ನು - ಆಕೆಯ ಸೌಂದರ್ಯವು ನಿಮಗೆ ಅದೆಷ್ಟು ಇಷ್ಟವಾದರೂ ಸಹ - ವರಿಸಲು ನಿಮಗೆ ಅನುಮತಿ ಸರ್ವಥಾ ಇಲ್ಲ! ಆದರೆ ನಿಮ್ಮ ಅಧೀನದಲ್ಲಿರುವ ದಾಸಿಯರು ಈ ನಿಯಮಕ್ಕೆ ಹೊರತಾಗಿರುವರು. ಹೌದು, ಅಲ್ಲಾಹ್ ನು ಎಲ್ಲಾ ವಿಷಯಗಳನ್ನು ಗಮನಿಸುತ್ತಿರುತ್ತಾನೆ. {52}

يَا أَيُّهَا الَّذِينَ آمَنُوا لَا تَدْخُلُوا بُيُوتَ النَّبِيِّ إِلَّا أَنْ يُؤْذَنَ لَكُمْ إِلَىٰ طَعَامٍ غَيْرَ نَاظِرِينَ إِنَاهُ وَلَٰكِنْ إِذَا دُعِيتُمْ فَادْخُلُوا فَإِذَا طَعِمْتُمْ فَانْتَشِرُوا وَلَا مُسْتَأْنِسِينَ لِحَدِيثٍ ۚ إِنَّ ذَٰلِكُمْ كَانَ يُؤْذِي النَّبِيَّ فَيَسْتَحْيِي مِنْكُمْ ۖ وَاللَّهُ لَا يَسْتَحْيِي مِنَ الْحَقِّ ۚ وَإِذَا سَأَلْتُمُوهُنَّ مَتَاعًا فَاسْأَلُوهُنَّ مِنْ وَرَاءِ حِجَابٍ ۚ ذَٰلِكُمْ أَطْهَرُ لِقُلُوبِكُمْ وَقُلُوبِهِنَّ ۚ وَمَا كَانَ لَكُمْ أَنْ تُؤْذُوا رَسُولَ اللَّهِ وَلَا أَنْ تَنْكِحُوا أَزْوَاجَهُ مِنْ بَعْدِهِ أَبَدًا ۚ إِنَّ ذَٰلِكُمْ كَانَ عِنْدَ اللَّهِ عَظِيمًا

[ಮುಸ್ಲಿಮರಂತೆ ಸೋಗು ಹಾಕುವ ಕಪಟಿಗಳು ಪೈಗಂಬರರಿಗೂ ಅವರ ಕುಟುಂಬದವರಿಗೂ ಕಿರುಕುಳ ನೀಡಲು ಸದಾ ಪ್ರಯತ್ನಿಸುತ್ತಿರುತ್ತಾರೆ. ಆದ್ದರಿಂದ] ವಿಶ್ವಾಸಿಗಳಾದ ಓ ಜನರೇ, ನೀವು, ಪ್ರವಾದಿ ಮುಹಮ್ಮದ್ ರಿಗೆ ಸೇರಿದ ಮನೆಗಳೊಳಗೆ, ಊಟಕ್ಕಾಗಿ ಆಮಂತ್ರಿಸಲ್ಪಟಾಗ ಮಾತ್ರವಲ್ಲದೆ (ನಿಮ್ಮಿಷ್ಟದಂತೆ ಇತರ ಸಮಯಗಳಲ್ಲಿ) ಪ್ರವೇಶಿಸಬಾರದು! ಆಗಲೂ ನೀವು ಮೊದಲೇ ಪ್ರವೇಶಿಸಿ ಊಟ ತಯಾರಾಗುವುದನ್ನು ಕಾಯುತ್ತಾ ಕುಳಿತಿರಬಾರದು! ಬದಲಾಗಿ, ಆಹ್ವಾನಿಸಲ್ಪಟ್ಟಾಗ ಪ್ರವೇಶಿಸಿರಿ; ಊಟವಾದ ಕೂಡಲೇ ಅಲ್ಲಿಂದ ಹೊರಟು ಹೋಗಿರಿ! ಅಲ್ಲಿಯೇ ಕುಳಿತು ಹರಟೆ ಹೊಡೆಯುವುದರಲ್ಲಿ ಮಗ್ನರಾಗದಿರಿ. ಅವೆಲ್ಲ ಖಂಡಿವಾಗಿ ಪೈಗಂಬರರಿಗೆ ತೊಂದರೆ ಕೊಡುವಂತಹ ಅಂಶಗಳಾಗಿದ್ದು, ಸಂಕೋಚದ ಕಾರಣ ಅವರು ನಿಮ್ಮೊಂದಿಗೆ ಅದನ್ನು ಹೇಳಿಕೊಳ್ಳುವುದಿಲ್ಲ. ಆದರೆ ಅಲ್ಲಾಹ್ ನಿಗೆ ಸತ್ಯವನ್ನು ತೆರೆದು ಹೇಳುವುದರಲ್ಲಿ ದಾಕ್ಷಿಣ್ಯವಿಲ್ಲ! ಇನ್ನು, ವಿಶ್ವಾಸಿ ಜನರೇ, ಪೈಗಂಬರರ ಪತ್ನಿಯರಿಂದ ಏನನ್ನಾದರೂ ನೀವು ಕೇಳುವುದಾದರೆ ಪರದೆಯ ಹಿಂದಿನಿಂದ ಕೇಳಿರಿ. ಅದು ನಿಮ್ಮ ಹೃದಯಗಳನ್ನು ಹಾಗೂ ಅವರ ಹೃದಯಗಳನ್ನು ಹೆಚ್ಚು ಪರಿಶುದ್ಧವಾಗಿಡುವ ಶಿಷ್ಟಾಚಾರವಾಗಿದೆ. ಅಲ್ಲಾಹ್ ನ ದೂತರಿಗೆ ಕಿರುಕುಳವಾಗ ಬಹುದಾದ ಏನನ್ನೂ ನೀವು ಮಾಡಬಾರದು. ಅವರ ಮರಣಾನಂತರ ನೀವು ಅವರ ಪತ್ನಿಯರನ್ನು ಎಂದೆಂದಿಗೂ ವಿವಾಹವಾಗುವಂತಿಲ್ಲ! ನಿಜವಾಗಿಯೂ ಅಲ್ಲಾಹ್ ನ ಬಳಿ ಇವೆಲ್ಲ ಅತ್ಯಂತ ಗಹನವಾದ ಗಂಭೀರವಾದ ವಿಷಯವಾಗಿದೆ. {53}

إِنْ تُبْدُوا شَيْئًا أَوْ تُخْفُوهُ فَإِنَّ اللَّهَ كَانَ بِكُلِّ شَيْءٍ عَلِيمًا

ಒಂದು ವಿಷಯವನ್ನು ನೀವು ಮನದೊಳಗೇ ಅವತಿಟ್ಟರೂ ಅಥವಾ ಅದನ್ನು ಬಹಿರಂಗ ಪಡಿಸಿದರೂ ಅಲ್ಲಾಹ್ ನಿಗೆ ಮಾತ್ರ ಸಕಲ ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. {54}

لَا جُنَاحَ عَلَيْهِنَّ فِي آبَائِهِنَّ وَلَا أَبْنَائِهِنَّ وَلَا إِخْوَانِهِنَّ وَلَا أَبْنَاءِ إِخْوَانِهِنَّ وَلَا أَبْنَاءِ أَخَوَاتِهِنَّ وَلَا نِسَائِهِنَّ وَلَا مَا مَلَكَتْ أَيْمَانُهُنَّ ۗ وَاتَّقِينَ اللَّهَ ۚ إِنَّ اللَّهَ كَانَ عَلَىٰ كُلِّ شَيْءٍ شَهِيدًا

ತಮ್ಮ ತಂದೆಯರು, ಪುತ್ರರು, ಸಹೋದರರು, ಸಹೋದರರ ಪುತ್ರರು, ಸಹೋದರಿಯರ ಪುತ್ರರು, ತಮ್ಮ ಒಡನಾಟದಲ್ಲಿರುವ ಸ್ತ್ರೀಯರು ಹಾಗೂ ತಮ್ಮ ಕೈಕೆಳಗಿರುವ ಗುಲಾಮರುಗಳ ಮುಂದೆ ಕಾಣಿಸಿಕೊಂಡರೆ ಅದು ಪೈಗಂಬರರ ಪತ್ನಿಯರ ಪಾಲಿಗೆ ಆಕ್ಷೇಪಾರ್ಹವಲ್ಲ! ಹಾಗಿರುವಾಗ [ಪೈಗಂಬರರ ಪತ್ನಿಯರೇ, ನೀವು ಇತರ ಸ್ತ್ರೀಯರಂತಲ್ಲ; ನಿಮ್ಮ ನಿಮ್ಮ ಮನೆಯಲ್ಲಿದ್ದುಕೊಂಡೇ] ನೀವೆಲ್ಲ ಅಲ್ಲಾಹ್ ನ (ನಿರ್ದೆಶಗಳನ್ನು) ಭಯಭಕ್ತಿಯೊಂದಿಗೆ ಪಾಲಿಸಿರಿ. ಯಥಾರ್ಥದಲ್ಲಿ ಅಲ್ಲಾಹ್ ನು ಪ್ರತಿಯೊಂದು ವಿಷಯವನ್ನೂ ವೀಕ್ಷಿಸುತ್ತಿದ್ದಾನೆ. {55}

إِنَّ اللَّهَ وَمَلَائِكَتَهُ يُصَلُّونَ عَلَى النَّبِيِّ ۚ يَا أَيُّهَا الَّذِينَ آمَنُوا صَلُّوا عَلَيْهِ وَسَلِّمُوا تَسْلِيمًا

[ಒಂದೆಡೆ ವಿಶ್ವಾಸಿಗಳಂತೆ ನಟಿಸುವ ಕಪಟಿಗಳು ಪೈಗಂಬರರಿಗೆ ಕಿರುಕುಳ ಕೊಡಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ] ಅಲ್ಲಾಹ್ ನು ಪೈಗಂಬರರ ಮೇಲೆ ಕೃಪಾನುಗ್ರಹಗಳನ್ನು ಮಾಡುತ್ತಾನೆ; ಅವನ ಮಲಕ್ ಗಳ ಸಮೂಹವು ಅವರಿಗೆ ಒಳಿತಾಗುವಂತೆ ಹಾರೈಸುತ್ತವೆ! ಓ ವಿಶ್ವಾಸಿಗಳೇ, ನೀವೂ ಸಹ ಪೈಗಂಬರರ ಮೇಲೆ ಅನುಗ್ರಹ ಮತ್ತು ಶಾಂತಿ ನೆಮ್ಮದಿಗಳು ವರ್ಷಿಸುವಂತಾಗಲು ಪ್ರಾರ್ಥಿಸಿರಿ. {56}

إِنَّ الَّذِينَ يُؤْذُونَ اللَّهَ وَرَسُولَهُ لَعَنَهُمُ اللَّهُ فِي الدُّنْيَا وَالْآخِرَةِ وَأَعَدَّ لَهُمْ عَذَابًا مُهِينًا

ಅಲ್ಲಾಹ್ ನಿಗೆ ಮತ್ತು ಅವನ ದೂತ (ಮುಹಮ್ಮದ್ ಪೈಗಂಬರರಿಗೆ) ತೊಂದರೆ ಕೊಡಲು ಯಾರು ಯತ್ನಿಸುತ್ತಾರೋ, ನಿಶ್ಚಿತವಾಗಿ ಅಲ್ಲಾಹ್ ನು ಇಹಲೋಕದಲ್ಲೂ ಪರಲೋಕದಲ್ಲೂ [ಅವರ ಪಾಲಿಗೆ ತನ್ನ ಅನುಗ್ರಹವನ್ನು ನಿಲ್ಲಿಸುವ ಮೂಲಕ] ಶಾಪವಾಗುವಂತೆ ಮಾಡುತ್ತಾನೆ ಹಾಗೂ ಅಪಮಾನಕ್ಕೀಡು ಮಾಡುವ ಶಿಕ್ಷೆಯನ್ನು ಅವರಿಗಾಗಿ ಸಿದ್ಧಗೊಳಿಸಿ ಇಟ್ಟಿರುತ್ತಾನೆ. {57}

وَالَّذِينَ يُؤْذُونَ الْمُؤْمِنِينَ وَالْمُؤْمِنَاتِ بِغَيْرِ مَا اكْتَسَبُوا فَقَدِ احْتَمَلُوا بُهْتَانًا وَإِثْمًا مُبِينًا

ಇನ್ನು ವಿಶ್ವಾಸಿಗಳಾದ ಸ್ತ್ರೀಪುರುಷರಿಗೆ, ಅವರು ಮಾಡಿಯೇ ಇರದ (ತಪ್ಪಿಗಾಗಿ, ಅಂದರೆ, ವಿನಾ ಕಾರಣ) ತೊಂದರೆ ಕೊಡುತ್ತಿರುವ (ಧರ್ಮವಿರೋಧಿ ಕಪಟಿಗಳು) ಸುಳ್ಳಾರೋಪದ ಹಾಗೂ ವ್ಯಕ್ತವಾದ ಪಾಪವೆಸಗಿದಂತಹ ಅಪರಾಧಗಳ ಹೊರೆಯನ್ನು ಹೊತ್ತಿರುವರು. {58}

يَا أَيُّهَا النَّبِيُّ قُلْ لِأَزْوَاجِكَ وَبَنَاتِكَ وَنِسَاءِ الْمُؤْمِنِينَ يُدْنِينَ عَلَيْهِنَّ مِنْ جَلَابِيبِهِنَّ ۚ ذَٰلِكَ أَدْنَىٰ أَنْ يُعْرَفْنَ فَلَا يُؤْذَيْنَ ۗ وَكَانَ اللَّهُ غَفُورًا رَحِيمًا

ಓ ಪೈಗಂಬರರೇ, [ನಿಮ್ಮ ಕುಟುಂಬದವರ ಮತ್ತು ಇತರ ಮುಸ್ಲಿಮ್ ಸ್ತ್ರೀಯರ ವಿರುದ್ಧ ಇಲ್ಲಸಲ್ಲದ ಅಪವಾದಗಳನ್ನು ಹೊರಿಸುವ, ವದಂತಿಗಳನ್ನು ಹಬ್ಬುವ ಕಪಟಿ ಜನರ ಉಪಟಳದಿಂದ ಅವರನ್ನು ರಕ್ಷಿಸುವ ಸಲುವಾಗಿ] ಇದೀಗ ನೀವು, ನಿಮ್ಮ ಪತ್ನಿಯರೊಡನೆ, ಪುತ್ರಿಯರೊಡನೆ ಮತ್ತು ಮುಸ್ಲಿಮ್ ಸ್ತ್ರೀಯರೊಡನೆ [ಅವರು ಅನಿವಾರ್ಯ ಅಗತ್ಯಗಳಿಗಾಗಿ ಮನೆಗಳಿಂದ ಹೊರಹೋಗುವ ಸಂದರ್ಭಗಳಲ್ಲಿ] ತಮ್ಮ ಮೇಲುಹೊದಿಕೆಗಳಲ್ಲಿ ಒಂದನ್ನು ತಮ್ಮ ಮೈಮೇಲೆ ಚೆನ್ನಾಗಿ ಹೊದ್ದುಕೊಳ್ಳುವಂತೆ ಹೇಳಿರಿ. ಆ ಕ್ರಮವು [ಅವರು ಕುಲೀನ ಮನೆತನಕ್ಕೆ ಸೇರಿದ ಸ್ತ್ರೀಯರೆಂದು] ಗುರುತಿಸಲ್ಪಡಲು ಹಾಗೂ (ಕಪಟಿಗಳ) ಉಪಟಳಕ್ಕೆ ಒಳಗಾಗದಿರಲು ಹೆಚ್ಚು ಸಮಂಜಸವಾದ ಕ್ರಮವಾಗಿದೆ! (ಇನ್ನು ಮುಂಜಾಗ್ರತೆವಹಿಸುವಲ್ಲಿ ಅವರಿಂದ ಪ್ರಮಾದವೇನಾದರೂ ಸಂಭವಿಸಿದರೆ) ಅಲ್ಲಾಹ್ ನು ಕ್ಷಮಿಸುವವನೂ ಕರುಣೆತೋರುವವನೂ ಆಗಿರುತ್ತಾನೆ. {59}

لَئِنْ لَمْ يَنْتَهِ الْمُنَافِقُونَ وَالَّذِينَ فِي قُلُوبِهِمْ مَرَضٌ وَالْمُرْجِفُونَ فِي الْمَدِينَةِ لَنُغْرِيَنَّكَ بِهِمْ ثُمَّ لَا يُجَاوِرُونَكَ فِيهَا إِلَّا قَلِيلًا

ಇನ್ನು, (ಮುಸ್ಲಿಮರಂತೆ ನಟಿಸುವ) ಈ ಕಪಟಿಗಳು, ಹೃದಯಗಳಲ್ಲಿ (ದ್ವೇಷ ಮತ್ಸರಗಳಂತಹ) ರೋಗವುಳ್ಳವರು ಮತ್ತು (ನಿಮ್ಮ ಸ್ತ್ರೀಯರ ವಿರುದ್ಧ) ಇಲ್ಲಸಲ್ಲದ ವದಂತಿಗಳನ್ನು ಮದೀನಾ ಪಟ್ಟಣದಲ್ಲಿ ಹಬ್ಬುವವರು ತಮ್ಮ ದುಷ್ಕೃತ್ಯಗಳನ್ನು ನಿಲ್ಲಿಸದಿದ್ದರೆ, ಪೈಗಂಬರರೇ, ನಾವು ಅವಶ್ಯಕವಾಗಿ ನಿಮಗೆ ಅವರ ವಿರುದ್ದ (ಕಾರ್ಯಾಚರಣೆ ಮಾಡುವಂತೆ) ಪ್ರೇರೇಪಣೆ ನೀಡುವೆವು. ಹಾಗಾದರೆ ಅವರು ಮದೀನಾ ಪಟ್ಟಣದಲ್ಲಿ ನಿಮ್ಮ ಆಸುಪಾಸಿನಲ್ಲಿ ಹೆಚ್ಚು ಕಾಲ ಉಳಿಯಲಾರರು! {60}

مَلْعُونِينَ ۖ أَيْنَمَا ثُقِفُوا أُخِذُوا وَقُتِّلُوا تَقْتِيلًا

[ಮಾತ್ರವಲ್ಲ, ನಾಡಿನಲ್ಲಿ ವಿಧ್ವಂಸಕಾರಿ ಚಟುವಟಿಕೆಗಳನ್ನು ನಿಲ್ಲಿಸದಿದ್ದರೆ] ಅವರ ಮೇಲೆ ಶಾಪವಾಗಲಿದೆ. ಆಗ ಎಲ್ಲಿ ಕಂಡರೂ ಅವರನ್ನು ಹಿಡಿಯಲಾಗುವುದು; ಮತ್ತು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಗುವುದು! {61}

سُنَّةَ اللَّهِ فِي الَّذِينَ خَلَوْا مِنْ قَبْلُ ۖ وَلَنْ تَجِدَ لِسُنَّةِ اللَّهِ تَبْدِيلًا

ಹಿಂದೆ ಗತಿಸಿ ಹೋದ (ವಿಧ್ವಂಸಕಾರಿಗಳ ಶಿಕ್ಷೆಗೆ) ಸಂಬಂಧಿಸಿದಂತೆ ಅಲ್ಲಾಹ್ ನ ಕ್ರಮ ಅದೇ ರೀತಿಯದ್ದಾಗಿತ್ತು! ಹೌದು, ಅಲ್ಲಾಹ್ ನ ಕ್ರಮದಲ್ಲಿ ನೀವು ಯಾವ ಬದಲಾವಣೆಯನ್ನೂ ಕಾಣಲಾರಿರಿ. {62}

يَسْأَلُكَ النَّاسُ عَنِ السَّاعَةِ ۖ قُلْ إِنَّمَا عِلْمُهَا عِنْدَ اللَّهِ ۚ وَمَا يُدْرِيكَ لَعَلَّ السَّاعَةَ تَكُونُ قَرِيبًا

[ಪ್ರಯಳಯದಿನದ ಬಗ್ಗೆ ನೀವು ಅವರಿಗೆ ಎಚ್ಚರಿಕೆ ನೀಡಿದರೆ, ಪೈಗಂಬರರೇ] ಆ ಘಳಿಗೆ ಯಾವಾಗ ಸಂಭವಿಸುತ್ತದೆಂದು ಅವರು ನಿಮ್ಮನ್ನು (ಅಣಕಿಸಿ) ಪ್ರೆಶ್ನಿಸುತ್ತಾರೆ! ಆ ಘಳಿಗೆಯ ಬಗೆಗಿನ ಜ್ಞಾನ ಅಲ್ಲಾಹ್ ನ ಬಳಿ ಮಾತ್ರ ಇದೆ ಎಂದಷ್ಟೇ ನೀವು ಉತ್ತರಿಸಿರಿ. (ಹೌದು ಪೈಗಂಬರರೇ), ಅದರ ಬಗ್ಗೆ ನಿಮಗೇನು ತಿಳಿದಿದೆ? ಆ ಘಳಿಗೆಯು ಬಹಳ ಹತ್ತಿರದಲ್ಲೇ ಇದ್ದರೂ ಇರಬಹುದು! {63}

إِنَّ اللَّهَ لَعَنَ الْكَافِرِينَ وَأَعَدَّ لَهُمْ سَعِيرًا

[ಸತ್ಯ ಧರ್ಮವನ್ನು ಹತ್ತಿಕ್ಕಲು ಪಣತೊಟ್ಟಿರುವ] ಅಂತಹ ಧರ್ಮವಿರೋಧಿಗಳನ್ನು ಅಲ್ಲಾಹ್ ನು ನಿಜವಾಗಿಯೂ ಶಪಿಸಿ ಬಿಟ್ಟಿರುವನು; ಮತ್ತು ಅಂತಹವರಿಗಾಗಿ ಧಗಧಗಿಸುವ ನರಕವನ್ನು ಅಣಿಗೊಳಿಸಿರುವನು. {64}

خَالِدِينَ فِيهَا أَبَدًا ۖ لَا يَجِدُونَ وَلِيًّا وَلَا نَصِيرًا

ಸದಾಕಾಲ ಅವರೆಲ್ಲ ಅದರಲ್ಲಿ ಬಿದ್ದಿರಬೇಕಾಗಿದೆ! ಅವರನ್ನು (ಅಲ್ಲಿಂದ ರಕ್ಷಿಸುವಂತಹ) ಹಿತೈಷಿಗಳಾಗಲಿ ಸಹಾಯಕರಾಗಲಿ ಅಲ್ಲಿ ಅವರಿಗೆ ಸಿಗಲಾರರು! {65}

يَوْمَ تُقَلَّبُ وُجُوهُهُمْ فِي النَّارِ يَقُولُونَ يَا لَيْتَنَا أَطَعْنَا اللَّهَ وَأَطَعْنَا الرَّسُولَا

ಬೆಂಕಿಯಲ್ಲಿ ಅವರ ಮುಖಗಳನ್ನು ಮಗುಚಿ ಹಾಕಲಾಗುವ ಆ ದಿನ, ಅಯ್ಯೋ, ನಾವು ಅಲ್ಲಾಹ್ ನ ಮತ್ತು ಪೈಗಂಬರರ ಮಾತುಗಳನ್ನು ಅನುಸರಿಸಿರುತ್ತಿದ್ದರೆ ಅದೆಷ್ಟು ಒಳ್ಳೆಯದಿತ್ತು ಎಂದು ರೋದಿಸಲಿರುವರು. {66}

وَقَالُوا رَبَّنَا إِنَّا أَطَعْنَا سَادَتَنَا وَكُبَرَاءَنَا فَأَضَلُّونَا السَّبِيلَا

ಅವರು ಹೇಳುವರು: ಓ ನಮ್ಮ ಒಡಯನೇ, ನಾವು ನಮ್ಮ ಮುಖಂಡರ ಮತ್ತು ನಮ್ಮ ಹಿರಿಯರ ಮಾತು ಕೇಳಿದೆವು ಮತ್ತು ಅವರು ನಮ್ಮನ್ನು ದಾರಿತಪ್ಪಿಸಿ ಬಿಟ್ಟರು. {67}

رَبَّنَا آتِهِمْ ضِعْفَيْنِ مِنَ الْعَذَابِ وَالْعَنْهُمْ لَعْنًا كَبِيرًا

ಆದ್ದರಿಂದ ನಮ್ಮೊಡೆಯಾ, ಅವರಿಗುವ ಶಿಕ್ಷೆಯನ್ನು ನೀನು ಇಮ್ಮಡಿಗೊಳಿಸಿ ನೀಡು, ಮಾತ್ರವಲ್ಲ ಅತ್ಯುಗ್ರವಾದ ಶಾಪದಿಂದಿಗೆ ನೀನು ಅವರನ್ನು ಶಪಿಸು. {68}

يَا أَيُّهَا الَّذِينَ آمَنُوا لَا تَكُونُوا كَالَّذِينَ آذَوْا مُوسَىٰ فَبَرَّأَهُ اللَّهُ مِمَّا قَالُوا ۚ وَكَانَ عِنْدَ اللَّهِ وَجِيهًا

ವಿಶ್ವಾಸಿಗಳಾದ ಓ ಜನರೇ, ನೀವು [ನಮ್ಮ ಪೈಗಂಬರರೊಂದಿಗೆ ವರ್ತಿಸುವಾಗ] ಪ್ರವಾದಿ ಮೂಸಾ ರಿಗೆ ತೊಂದರೆ ನೀಡುತ್ತಿದ್ದ ಜನರು ವರ್ತಿಸಿದಂತೆ ವರ್ತಿಸದಿರಿ. ನಾವು ಮೂಸಾ ರನ್ನು ಎಲ್ಲ ವಿಧ ಆರೋಪಗಳಿಂದ ಮುಕ್ತಗೊಳಿಸಿರುವೆವು; ಮತ್ತು ನಮ್ಮ ದೃಷ್ಟಿಯಲ್ಲಿ ಅವರು ಬಹಳ ಗೌರವಾನ್ವಿತರಾಗಿರುವರು! {69}

يَا أَيُّهَا الَّذِينَ آمَنُوا اتَّقُوا اللَّهَ وَقُولُوا قَوْلًا سَدِيدًا

ಓ ವಿಶ್ವಾಸಿಗಳೇ, ನೀವು ಅಲ್ಲಾಹ್ ನಿಗೆ ಭಯಭಕ್ತಿ ತೋರುವವರಾಗಿರಿ ಮತ್ತು ಮಾತನಾಡುವಾಗ ಅತ್ಯಂತ ಸಮಂಜಸವಾದ ಮಾತನ್ನೇ ಆಡಿರಿ. {70}

يُصْلِحْ لَكُمْ أَعْمَالَكُمْ وَيَغْفِرْ لَكُمْ ذُنُوبَكُمْ ۗ وَمَنْ يُطِعِ اللَّهَ وَرَسُولَهُ فَقَدْ فَازَ فَوْزًا عَظِيمًا

ಹಾಗಾದರೆ, ನೀವು ಮಾಡಿದ ಕರ್ಮಗಳನ್ನು ಅವನು ನಿಮಗಾಗಿ ಸರಿಪಡಿಸುವನು ಹಾಗೂ ನಿಮ್ಮ ಪಾಪಗಳನ್ನು ಅವನು ನಿಮಗಾಗಿ ಕ್ಷಮಿಸುವನು. ಹೌದು, ಯಾರು ಅಲ್ಲಾಹ್ ಮತ್ತು ಅವನ ಪೈಗಂಬರರನ್ನು ಅನುಸರಿಸಿದರೋ ಅವರು ಅತಿ ದೊಡ್ಡದೆನಿಸಿದ ಒಂದು ವಿಜಯವನ್ನು ಸಾಧಿಸಿದರು! {71}

إِنَّا عَرَضْنَا الْأَمَانَةَ عَلَى السَّمَاوَاتِ وَالْأَرْضِ وَالْجِبَالِ فَأَبَيْنَ أَنْ يَحْمِلْنَهَا وَأَشْفَقْنَ مِنْهَا وَحَمَلَهَا الْإِنْسَانُ ۖ إِنَّهُ كَانَ ظَلُومًا جَهُولًا

ನಿಜವಾಗಿ ನಾವು [ಇಚ್ಛಾಶಕ್ತಿ ಮಾತು ಆಯ್ಕೆಯ ಅಧಿಕಾರವನ್ನು] ಒಂದು ದೊಡ್ಡ ಹೊಣೆಗಾರಿಕೆಯನ್ನಾಗಿಸಿ ಆಕಾಶಗಳ, ಭೂಮಿಯ ಹಾಗೂ ಪರ್ವತಗಳ ಮುಂದೆ ಇರಿಸಿದೆವು! ಆಗ ಅವು (ಅದರ ಪರಿಣಾಮಕ್ಕೆ) ಅಂಜಿ ಆ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಒಪ್ಪದೆ ಹಿಂಜರಿದವು! ಆದರೆ ಅದನ್ನು ಮನುಷ್ಯನು ಹೊತ್ತುಕೊಂಡನು! ನಿಜವಾಗಿ ಅವನು (ತನಗೆ ತಾನೇ) ಅನ್ಯಾಯ ಮಾಡಿಕೊಂಡನು; (ಅದರ ಪರಿಣಾಮವನ್ನು ಮುಂಚಿತವಾಗಿ ಅರಿಯದೆ) ತಿಳಿಗೇಡಿತನ ತೋರಿದನು! {72}

لِيُعَذِّبَ اللَّهُ الْمُنَافِقِينَ وَالْمُنَافِقَاتِ وَالْمُشْرِكِينَ وَالْمُشْرِكَاتِ وَيَتُوبَ اللَّهُ عَلَى الْمُؤْمِنِينَ وَالْمُؤْمِنَاتِ ۗ وَكَانَ اللَّهُ غَفُورًا رَحِيمًا

(ಆಜ್ಞಾನುಸರಣೆಯ ವಿಷಯದಲ್ಲಿ) ಕಪಟತನ ತೋರುವ ಸ್ತ್ರೀ ಪುರುಷರನ್ನು ಹಾಗೂ (ಅಲ್ಲಾಹ್ ನ ದೇವತ್ವದಲ್ಲಿ) ಇತರರನ್ನು ಸೇರ್ಪಡೆ ಮಾಡಿಕೊಳ್ಳುವ ಸ್ತ್ರೀ ಪುರುಷರನ್ನು ಶಿಕ್ಷಿಸುವ ಸಲುವಾಗಿ ಅಲ್ಲಾಹ್ ನು ಹಾಗೆ ಮಾಡಿದನು. ಅಂತೆಯೇ ಧರ್ಮ ವಿಶ್ವಾಸಿಗಳಾದ ಸ್ತ್ರೀ ಪುರುಷರ ಮೇಲೆ ದಯೆ ತೋರುವ ಸಲುವಾಗಿಯೂ! ಹೌದು, [ಆ ಹೊಣೆಗಾರಿಕೆಯನ್ನು ಹೊತ್ತು ಅದಕ್ಕೆ ಬದ್ಧರಾಗಿ ಬದುಕುವ ಸ್ತ್ರೀ ಪುರುಷರನ್ನು] ಅಲ್ಲಾಹ್ ನು ಕ್ಷಮಿಸುವವನೂ ಅವರ ಮೇಲೆ ಸದಾ ಕರುಣೆ ತೋರುವವನೂ ಆಗಿರುವನು. {73}

-----

 ಅನುವಾದಿತ ಸೂರಃ ಗಳು


Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...