ಅಲ್ ಅನ್ಆಮ್ | ترجمة سورة الأنـعام

تـرجمـة سـورة الأنـعام من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

* سهل الفهم من غير الرجوع إلى كتاب التفسير *

| ಸೂರಃ ಅಲ್ ಅನ್ಆಮ್ | ಪವಿತ್ರ್ ಕುರ್‌ಆನ್ ನ 6 ನೆಯ ಸೂರಃ | ಇದರಲ್ಲಿ ಒಟ್ಟು 165 ಆಯತ್ ಗಳು ಇವೆ |

ಅತ್ಯಂತ ದಯಾಮಯನೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹ್ ನ ಹೆಸರಿನೊಂದಿಗೆ!

ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದ ಹಾಗೂ ಕತ್ತಲನ್ನೂ ಬೆಳಕನ್ನೂ ಉಂಟುಮಾಡಿದ ಅಲ್ಲಾಹ್ ನಿಗೆ ಸಕಲ ಸ್ತುತಿಸ್ತೋತ್ರಗಳು! ಅದಾಗ್ಯೂ (ಅಚ್ಚರಿಯೇನೆಂದರೆ ಸತ್ಯವನ್ನು) ಧಿಕ್ಕರಿಸಿರುವ ಇವರು ತಮ್ಮ ಒಡೆಯನೊಂದಿಗೆ (ಇತರರನ್ನು) ಸರಿದೂಗಿಸುತ್ತಿದ್ದಾರೆ! {1}

ನಿಮ್ಮನ್ನು ಹಸಿಮಣ್ಣಿನಿಂದ ಸೃಷ್ಟಿಸಿ, ಅನಂತರ [ನಿಮ್ಮ ಭೂಲೋಕದ ಬದುಕಿಗೊಂದು] ಕಾಲಾವಧಿಯನ್ನು ನಿರ್ಣಯಿಸಿದವನೂ ಅವನೇ! ಹಾಗೆಯೇ (ಲೋಕಾಂತ್ಯಕ್ಕೆ) ಒಂದು ಸಮಯವೂ ಅವನ ಬಳಿ ನಿಗದಿತವಾಗಿದೆ. ಅದಾಗ್ಯೂ [ಅಚ್ಚರಿಯೆಂದರೆ ಮರಣಾನಂತರ ಪುನಃ ಸೃಷ್ಟಿಸಲ್ಪಡುವ ವಿಷಯದಲ್ಲಿ] ನೀವು ಸಂಶಯದಲ್ಲಿ ಮುಳುಗಿರುವಿರಿ. {2}

ಆಕಾಶಗಳಲ್ಲೂ ಭೂಲೋಕದಲ್ಲೂ ಅವನು ಮಾತ್ರವೇ ಅಲ್ಲಾಹ್ ನು! ನೀವು ಅಡಗಿಸಿಡುವುದನ್ನೂ ಬಹಿರಂಗ ಪಡಿಸುವುದನ್ನೂ ಅವನು ಅರಿಯುತ್ತಾನೆ. ಮಾತ್ರವಲ್ಲ, ನೀವು ಅದೆಂತಹ ದುಡಿಮೆಯಲ್ಲಿ ತೊಡಗಿರುವಿರಿ ಎಂಬುದನ್ನೂ ಅವನು ತಿಳಿಯುತ್ತಾನೆ. {3}

[ಜನರ ಮನಃಸ್ಥಿತಿ ಹೇಗಿದೆಯೆಂದರೆ] ತಮ್ಮ ಒಡೆಯನ ದೃಷ್ಟಾಂತಗಳ ಪೈಕಿ ಯಾವೊಂದು ದೃಷ್ಟಾಂತವು ಅವರಲ್ಲಿಗೆ ಬಂದಾಗಲೂ ಅದರಿಂದ ಅವರು ಮುಖ ತಿರುಗಿಸಿಕೊಳ್ಳದೇ ಇರಲಿಲ್ಲ! {4}

ಹಾಗೆಯೇ [ಇದೀಗ ಒಂದು ದೃಷ್ಟಾಂತವೆಂಬಂತೆ ಕುರ್‌ಆನ್ ನ ರೂಪದಲ್ಲಿ] ಸತ್ಯವು ಇವರಲ್ಲಿಗೆ ಬಂದಾಗಲೂ ಇವರು ಅದನ್ನು ಅಲ್ಲಗಳೆದಿದ್ದಾರೆ. ಆದ್ದರಿಂದ ಯಾವ ವಿಷಯದ ಬಗ್ಗೆ ಅವರು ಅಪಹಾಸ್ಯದಲ್ಲಿ ತೊಡಗಿರುವರೋ ಅದರ ಬಗೆಗಿನ ವೃತ್ತಾಂತವನ್ನು ಶೀಘ್ರದಲ್ಲೇ ಅವರಿಗೆ ತಿಳಿಸಲಾಗುವುದು. {5}

ಇವರಿಗಿಂತ ಮುಂಚಿನ ಅದೆಷ್ಟು ಜನಾಂಗಗಳನ್ನು ನಾವು ನಾಶ ಪಡಿಸಿಯಾಗಿದೆ ಎಂಬುದನ್ನು ಈ ಜನರು ನೋಡುತ್ತಿಲ್ಲವೇನು?! ನಿಮಗಿನ್ನೂ ನೀಡದಂತಹ ಸುಭದ್ರ ವಾಸ್ತವ್ಯವನ್ನು ನಾವು ಅವರ ನಾಡಿನಲ್ಲಿ ಅವರಿಗೆ ದಯಪಾಲಿಸಿದ್ದೆವು! ಸಾಲದಕ್ಕೆ ಧಾರಾಕಾರವಾಗಿ ಮಳೆ ಸುರಿಸುವ ಮೋಡಗಳನ್ನು ನಾವು ಅವರ ಮೇಲೆ ಕಳುಹಿಸುತ್ತಿದ್ದೆವು ಮತ್ತು ಕೆಳಭಾಗದಲ್ಲಿ ಅವರಿಗಾಗಿ ನದಿಗಳು ಹರಿಯುವಂತೆ ನಾವು ಮಾಡಿದ್ದೆವು! ಕೊನೆಗೆ [ನಮ್ಮ ಅಂತಹ ನಿದರ್ಶನಗಳಿಗೆ ಧಿಕ್ಕಾರ ತೋರುವ ಮೂಲಕ] ಅವರೆಸಗಿದ ಪಾಪಕೃತ್ಯಕ್ಕಾಗಿ ನಾವು ಅವರನ್ನು ಭೂಮಿಯಿಂದ ಅಳಿಸಿ ಹಾಕಿದೆವು; ಹೌದು, ಅವರ ನಂತರ ಬೇರೊಂದು ಜನಾಂಗವನ್ನು ನಾವು ಎಬ್ಬಿಸಿ ತಂದೆವು. {6}

[ಓ ಪೈಗಂಬರರೇ, ಇವರ ಬೇಡಿಕೆಯಂತೆ] ಒಂದು ವೇಳೆ ಹಾಳೆಗಳಲ್ಲಿ ಬರೆಯಲ್ಪಟ್ಟ ಒಂದು ಫರಮಾನನ್ನು ನಾವು ನಿಮಗೆ ಇಳಿಸಿ ಕೊಡುವಂತಾಗಿ, ಮತ್ತು ಅದನ್ನು ಇವರು ತಮ್ಮ ಕೈಗಳಿಂದ ಮುಟ್ಟಿ ನೋಡಿ (ದೃಢೀಕರಿಸುವಂತೆ) ಆದರೂ ಸಹ (ಸತ್ಯವನ್ನು) ನಿರಾಕರಿಸುವವರಾದ ಈ ಜನರು ಅದೊಂದು ಶುದ್ಧ ಜಾದೂಗಾರಿಕೆಯಲ್ಲದೆ ಬೇರೇನೂ ಅಲ್ಲವೆಂದೇ ಹೇಳಿರುತ್ತಿದ್ದರು! {7}

ಈ ಪೈಗಂಬರರ ಬಳಿಗೆ ಒಂದು ಮಲಕ್ ಅನ್ನು (ನಮಗೆ ಗೋಚರವಾಗುವಂತೆ) ಏಕೆ ಇಳಿಸಲಾಗಿಲ್ಲ ಎಂದು ಇವರು ಕೇಳುತ್ತಿದ್ದಾರೆ. ಒಂದು ವೇಳೆ ನಾವು ಮಲಕ್ ಅನ್ನು ಇಳಿಸಿರುತ್ತಿದ್ದರೆ ಅದಾಗಲೇ ತೀರ್ಮಾನವಾಗಿ (ಇವರ ಕತೆ) ಮುಗಿದಿರುತ್ತಿತ್ತು! ಮತ್ತು ಇವರಿಗೆ (ತಮ್ಮನ್ನು ತಿದ್ದಿಕೊಳ್ಳಲು) ಕಾಲಾವಕಾಶವೂ ಸಿಗುತ್ತಿರಲಿಲ್ಲ. {8}

ಒಂದು ವೇಳೆ [ಇವರ ಕೋರಿಕೆಯಂತೆ ಮನುಷ್ಯನಿಗೆ ಬದಲು ಪೈಗಂಬರರ ಹೊಣೆಗಾರಿಕೆ ನಿರ್ವಹಿಸಲು] ಒಂದು ಮಲಕ್ ಅನ್ನು ನಿಯೋಜಿಸಿರುತ್ತಿದ್ದರೆ ನಾವು ಅದನ್ನು ಸಹ ಒಬ್ಬ ಮನುಷ್ಯನ ರೂಪದಲ್ಲೇ ನಿಯೋಜಿಸಿರುತ್ತಿದ್ದೆವು. ಆಗಲೂ ಇವರು ಈಗ ಅದೆಂತಹ ಸಂದಿಗ್ಧತೆಯಲ್ಲಿ ಸಿಲುಕಿರುವರೋ ಅಂತಹದ್ದೇ ಸಂದಿಗ್ಧತೆಯಲ್ಲಿ ಸಿಲುಕುವಂತೆ ನಾವು ಮಾಡುತ್ತಿದ್ದೆವು! {9}

(ಓ ಪೈಗಂಬರರೇ,) ಯಥಾರ್ಥದಲ್ಲಿ ನಿಮಗಿಂತ ಮುಂಚೆಯೂ ದೂತರುಗಳು ಅಪಹಾಸ್ಯಕ್ಕೆ ಒಳಗಾಗಿರುವರು! ಆದರೆ ಯಾವುದನ್ನು ಅವರು ಗೇಲಿ ಮಾಡುತ್ತಿದ್ದರೋ ಅದುವೇ [ಅರ್ಥಾತ್ ಯಾವುದರ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿತ್ತೋ ಆ ಶಿಕ್ಷೆಯೇ] ಗೇಲಿ ಮಾಡಿದವರನ್ನು ಬಂದು ಆವರಿಸಿಕೊಂಡಿತು! {10}

ನೀವು ಭೂಮಿಯಲ್ಲಿ ಸಂಚರಿಸಿರಿ ಮತ್ತು (ನಮ್ಮ ದೊತರುಗಳು ನೀಡುತ್ತಿದ್ದ ಮುನ್ನೆಚ್ಚರಿಕೆಯನ್ನು ಸುಳ್ಳೆಂದು) ಅಲ್ಲಗಳೆದ ಜನರ ಅಂತಿಮ ಗತಿ ಹೇಗಿತ್ತು ಎಂಬುದನ್ನು ನೀವು ಸ್ವತಃ ನೋಡಿಕೊಳ್ಳಿರಿ ಎಂದು (ಪೈಗಂಬರರೇ ನೀವು ಇವರೊಂದಿಗೆ) ಹೇಳಿರಿ. {11}

ಆಕಾಶಗಳಲ್ಲಿ ಮತ್ತು ಭೂಲೋಕದಲ್ಲಿ ಇರುವುದೆಲ್ಲ ಯಾರಿಗೆ ಸೇರಿರುತ್ತದೆ ಎಂದು (ಇವರೊಂದಿಗೆ) ಕೇಳಿರಿ. ಆ ಅಲ್ಲಾಹ್ ನಿಗೆ ಎಂದೂ ಹೇಳಿರಿ. ಅವನಾದರೋ ಕಾರುಣ್ಯವನ್ನು ಸ್ವತಃ ತನ್ನ ಮೇಲೆ ಕಡ್ಡಾಯಗೊಳಿಸಿರುವನು. ನಿಮ್ಮನ್ನೆಲ್ಲ ಒಟ್ಟುಗೂಡಿಸಿ ಪುನರುತ್ಥಾನದ ದಿನದತ್ತ ಅವನು ನಿಶ್ಚಿತವಾಗಿ ಕೊಂಡೊಯ್ಯಲಿರುವನು; ಅದರಲ್ಲಿ ಯಾವ ಸಂಶಯವೂ ಇಲ್ಲ. (ಆದರೆ) ತಮ್ಮನ್ನು ತಾವೇ ನಷ್ಟಕ್ಕೊಳಪಡಿಸಿ ಕೊಂಡವರಾರೋ ಅವರು ಇದನ್ನು ಒಪ್ಪುವವರಲ್ಲ. {12}

ರಾತ್ರಿಯಲ್ಲಿ ವಿರಮಿಸುವ ಮತ್ತು ಹಗಲಿನಲ್ಲಿ (ಚಟುವಟಿಕೆಗಳಲ್ಲಿ ನಿರತವಾಗುವ) ಸಕಲವೂ ಅವನಿಗೆ ಮಾತ್ರ ಸೇರಿರುತ್ತದೆ. ಅವನಾದರೋ ಎಲ್ಲವನ್ನೂ ಕೇಳಿಸಿಕೊಳ್ಳುವವನು; ಸಕಲವನ್ನೂ ಬಲ್ಲವನು! {13}

ಆಕಾಶಗಳ ಮತ್ತು ಭೂಲೋಕದ ಕರ್ತಾರನಾದ ಅಲ್ಲಾಹ್ ನನ್ನು ಬಿಟ್ಟು ಬೇರೆಯವರನ್ನು ನಾನು ನನ್ನ ಸಂರಕ್ಷಕನಾಗಿ ಸ್ವೀಕರಿಸಬೇಕೇನು? ಎಂದು (ಇವರೊಂದಿಗೆ ಪೈಗಂಬರರೇ) ನೀವು ಕೇಳಿರಿ. ಅವನು ಎಲ್ಲರಿಗೆ ಉಣಿಸುವವನು, ಆದರೆ ಅವನು ಯಾರಿಂದಲೂ ಉಣಿಸಲ್ಪಡುವುದಿಲ್ಲ [ಎಂಬುದು ನಿಮಗೆ ತಿಳಿದಿರಲಿ]! ನನಗಾದರೋ, ಅಲ್ಲಾಹ್ ನಿಗೆ ಶರಣಾಗುವವರಲ್ಲಿ ಮೊದಲಿಗನಾಗಿರು ಮತ್ತು ಬಹುದೇವಾರಾಧಕರ ಸಾಲಿಗೆ ಸೇರಿದವನಾಗದಿರು ಎಂಬ ಆದೇಶ ನೀಡಲಾಗಿದೆ ಎಂದು ನೀವು (ಇವರೊಂದಿಗೆ) ಹೇಳಿರಿ. ನನ್ನ ಒಡೆಯನ ಅಪ್ಪಣೆ ಮೀರಿದರೆ (ಬರಲಿರುವ ಆ) ಘನಘೋರ ದಿನದ ಶಿಕ್ಷೆಯ ಕುರಿತು ನಾನು ನಿಜವಾಗಿ ಭಯಪಡುತ್ತೇನೆ ಎಂದೂ (ಇವರೊಂದಿಗೆ) ಹೇಳಿರಿ. {14-15}

ಆ ದಿನ ಶಿಕ್ಷೆಯನ್ನು ಯಾರಿಂದ ನೀಗಿಸಿ ಬಿಡಲಾಗುವುದೋ ಅವನ ಮೇಲೆ ನಿಜವಾಗಿ (ಅಲ್ಲಾಹ್ ನು) ಕೃಪೆ ತೋರಿದನು! ಮತ್ತು ಅದುವೇ ಆಗಿರುವುದು ಸ್ಪಷ್ಟವಾದ ವಿಜಯ! {16}

ಇನ್ನು (ಓ ಪೈಗಂಬರರೇ) ಅಲ್ಲಾಹ್ ನು ನಿಮಗೆ ಸಂಕಷ್ಟವುಂಟಾಗುವಂತೆ ಮಾಡಿದರೆ ಅದನ್ನು ಅವನಲ್ಲದೆ ಬೇರೆ ಯಾರೂ ನೀಗಿಸಲಾರರು; ಹಾಗೆಯೇ ನಿಮಗೆ ಹಿತವಾಗುವಂತೆ ಮಾಡಿದರೆ ಅವನು ಸಕಲ ವಿಷಯಗಳಲ್ಲಿ ಸಾಮರ್ಥ್ಯ ಹೊಂದಿರುವವನು. ಅವನು ತನ್ನ ಸೃಷ್ಟಿಗಳ [ಅರ್ಥಾತ್ ಮನುಷ್ಯರ] ಮೇಲೆ ಸರ್ವಸಂಪೂರ್ಣವಾದ ನಿಯಂತ್ರಣವನ್ನು ಹೊಂದಿರುತ್ತಾನೆ; ಅವನು ಮಹಾ ಜ್ಞಾನಿಯೂ ಎಲ್ಲವನ್ನು ಬಲ್ಲವನೂ ಆಗಿರುತ್ತಾನೆ. {17-18}

ಸಾಕ್ಷ್ಯಗಳಲ್ಲಿ ಅತ್ಯಂತ ಮಿಗಿಲಾದ ಸಾಕ್ಷ್ಯವು ಯಾವುದೆಂದು (ಪೈಗಂಬರರೇ, ಈ ಜನರೊಡನೆ) ಕೇಳಿರಿ. ಅದು ಅಲ್ಲಾಹ್ ನ (ಸಾಕ್ಷ್ಯ)! ಅವನು ನನ್ನ ಮತ್ತು ನಿಮ್ಮ ಮಧ್ಯೆ ಸಾಕ್ಷಿಯಾಗಿರುವನು ಎಂದು ಹೇಳಿರಿ. ಈ ಕುರ್‌ಆನ್ ಅನ್ನು ನನ್ನತ್ತ ಇಳಿಸಿ ಕೊಡಲಾಗಿರುವುದು ಅದರ ಮೂಲಕ ನಿಮ್ಮನ್ನು ಎಚ್ಚರಿಸಿ ಬಿಡುವ ಸಲುವಾಗಿ, ಮತ್ತು ಅದರ ಸಂದೇಶ ತಲುಪುವ ಪ್ರತಿಯೊಬ್ಬನನ್ನು ಎಚ್ಚರಿಸಲಿಕ್ಕಾಗಿ! ಅಲ್ಲಾಹ್ ನ ಜೊತೆಗೆ ಇತರ ದೇವರುಗಳೂ ಇರುವರೆಂದು ನಿಜಾರ್ಥದಲ್ಲಿ ನೀವು ಸಾಕ್ಷ್ಯ ವಹಿಸಬಲ್ಲಿರೇನು? ನಾನಂತು [ಆ ತಪ್ಪು ಸಂಗತಿಗೆ] ಸಾಕ್ಷಿಯಾಗಲಾರೆ ಎಂದೂ ಹೇಳಿರಿ. ಏಕಮೇವನಾದ ದೇವನು ಅವನು ಮಾತ್ರ; ಇನ್ನು ಅದೆಂತಹ ಬಹುದೇವಾರಾಧನೆಯಲ್ಲಿ ನೀವು ತೊಡಗಿರುವಿರೋ ನಾನು ನಿಜಕ್ಕೂ ಅದರಿಂದ ಮುಕ್ತನಾಗಿದ್ದೇನೆ ಎಂದೂ ಸಾರಿರಿ. {19}

ನಾವು ಯಾವ ಜನಾಂಗಕ್ಕೆ [ತೌರಾತ್ ಮತ್ತು ಇಂಜೀಲ್ ಗಳಂತಹ] ಧರ್ಮಗ್ರಂಥವನ್ನು ದಯಪಾಲಿಸಿರುವೆವೋ ಅವರು ಈ [ಕುರ್‌ಆನ್ ಮತ್ತು ಈ ಪೈಗಂಬರರನ್ನು] ತಮ್ಮದೇ ಮಕ್ಕಳನ್ನು ಗುರುತಿಸಿ ಕೊಂಡಷ್ಟು (ಸುಲಭವಾಗಿ) ಗುರುತಿಸಿಕೊಳ್ಳುತ್ತಾರೆ! ಆದರೆ (ಅದನ್ನು ಒಪ್ಪಿಕೊಳ್ಳದೆ) ಸ್ವತಃ ತಮ್ಮನ್ನೇ ನಷ್ಟಕ್ಕೀಡು ಮಾಡಿಕೊಂಡವರು ಮಾತ್ರ ವಿಶ್ವಾಸಿಗಳಾಗುವವರಲ್ಲ! {20}

ಅಲ್ಲಾಹ್ ನ ಬಗ್ಗೆ ಸುಳ್ಳು ವಿಷಯಗಳನ್ನು ಸ್ವಯಂ ಹೆಣೆಯುವ ಅಥವಾ ಅಲ್ಲಾಹ್ ನ [ಏಕತ್ವದ] ಪುರಾವೆಗಳನ್ನು ಅಲ್ಲಗಳೆಯುವವನಿಗಿಂತ ದೊಡ್ಡ ಅಧರ್ಮಿ ಯಾರು ತಾನೆ ಇರಬಹುದು! ನಿಜಕ್ಕೂ ಅಂತಹ ಅಧರ್ಮಿಗಳು ಎಂದೂ ಯಶಸ್ಸು ಪಡೆಯಲಾರರು. ಅವರೆನ್ನೆಲ್ಲ ಒಟ್ಟು ಸೇರಿಸಿದ ನಂತರ 'ಶಿರ್ಕ್' ನಲ್ಲಿ [ಅರ್ಥಾತ್ ಇತರರ ಆರಾಧನೆಯಲ್ಲಿ] ತೊಡಗಿದ್ದವರನ್ನು ಉದ್ದೇಶಿಸಿ, ನೀವು ಯಾರನ್ನು (ಅಲ್ಲಾಹ್ ನ ದೇವತ್ವದಲ್ಲಿ) ಸಹಭಾಗಿಗಳು ಎಂದು ಪ್ರತಿಪಾದಿಸುತ್ತಿದ್ದಿರೋ ಆ ನಿಮ್ಮ ದೇವರುಗಳು ಈಗೆಲ್ಲಿ - ಎಂದು ನಾವು ಕೇಳಲಿರುವ ಒಂದು ದಿನವಿದೆ! ಆಗ, ನಮ್ಮ ದೇವನಾದ ಅಲ್ಲಾಹ್ ನ ಆಣೆ, ನಾವು ಬಹುದೇವಾರಾಧಕರು ಆಗಿರಲಿಲ್ಲ ಎಂಬ (ಸುಳ್ಳಿನ) ಹೊರತು ಅವರ ಬಳಿ ಬೇರಾವ ಷಡ್ಯಂತ್ರವೂ ಉಳಿದಿರಲಾರದು! {21-23}

[ಅಂತಹ ಅಧರ್ಮಿಗಳು] ಸ್ವತಃ ತಮ್ಮ ಕುರಿತೇ ಹೇಗೆ ಸುಳ್ಳಾಡುತ್ತಾರೆಂಬುದನ್ನು ನೋಡಿರಿ! (ಅಲ್ಲಾಹ್ ನ ಕುರಿತಂತೆ) ಅವರು ಹೆಣೆಯುತ್ತಿದ್ದುದೆಲ್ಲವೂ ಅವರಿಗೆ [ಸಹಾಯಕಾರಿಯಾಗದೆ] ಹೋದವು! {24}

ಅವರಲ್ಲಿ ಕೆಲವರಂತು (ಪೈಗಂಬರರೇ) ನೀವು [ಓದಿ ಕೇಳಿಸುತ್ತಿರುವ ಕುರ್‌ಆನ್ ಗೆ] ಕಿವಿಯೊಡ್ಡಿರುತ್ತಾರೆ! ಆದರೆ ಅದು ಅವರಿಗೆ ಅರ್ಥವಾಗದಂತೆ ನಾವು ಅವರ ಹೃದಯಗಳಿಗೆ ತೆರೆ ಎಳೆದಿರುತ್ತೇವೆ; ಮತ್ತು ಅವರ ಕಿವಿಗಳಿಗೆ ಕಿವುಡು ಹೇರಿರುತ್ತೇವೆ! (ಏಕೆಂದರೆ) ಸಕಲ ಪುರಾವೆ-ನಿದರ್ಶನಗಳನ್ನು ನೋಡಿಯೂ ಅವರು ಅವನ್ನು ಒಪ್ಪಿಕೊಂಡು ವಿಶ್ವಾಸಿಗಳಾಗುವುದಿಲ್ಲ! ಎಷ್ಟರ ಮಟ್ಟಿಗೆಂದರೆ ಅವರು ನಿಮ್ಮ ಬಳಿಗೆ ಬಂದು ಕುತರ್ಕಗಳಲ್ಲಿ ತೊಡಗುತ್ತಾರೆ; ಇವೆಲ್ಲ ಗತಕಾಲದವರ ಕಟ್ಟುಕಥೆಗಳೇ ಹೊರತು ಬೇರೇನೂ ಅಲ್ಲವೆಂದು ಆ ಧಿಕ್ಕಾರಿಗಳು (ನಿಮ್ಮೊಂದಿಗೆ) ವಾದಿಸುತ್ತಾರೆ! {25}

ಅವರು (ಈ ಕುರ್‌ಆನ್ ನತ್ತ) ಬಾರದಂತೆ ಇತರರನ್ನು ತಡೆಯುತ್ತಾರೆ; ಸ್ವತಃ ತಮ್ಮನ್ನೂ ಅದರಿಂದ ದೂರವಿರಿಸಿ ಕೊಳ್ಳುತ್ತಾರೆ. (ಆ ಮೂಲಕ) ಅವರು ವಿನಾಶದತ್ತ ತಳ್ಳುತ್ತಿರುವುದು ಸ್ವತಃ ತಮ್ಮನ್ನೇ! ಆದರೆ ಅದು ಅವರ ಗ್ರಹಿಕೆಗೆ ಬರುತ್ತಿಲ್ಲ! {26}

ನೆರಕಾಗ್ನಿಯ ಅಂಚಿನಲ್ಲಿ ಅವರು ನಿಲ್ಲಿಸಲ್ಪಡುವುದನ್ನು ನೀವು ನೋಡುವಂತೆ ಒಂದು ವೇಳೆ ಆಗಿರುತ್ತಿದ್ದರೆ! ಅಕಟಾ, ನಮ್ಮನ್ನು (ಪುನಃ ಭೂಲೋಕಕ್ಕೆ) ಮರಳಿಸಿರುತ್ತಿದ್ದರೆ ನಾವು ನಮ್ಮ ಒಡೆಯನಿಂದ ಬಂದಿದ್ದ ವಚನ-ನಿದರ್ಶನಗಳನ್ನು ಎಂದೂ ತಿರಸ್ಕರಿಸುತ್ತಿರಲಿಲ್ಲ; ಮಾತ್ರವಲ್ಲ, ನಾವು ವಿಶ್ವಾಸಿಗಳ ಯಾದಿಗೆ ಸೇರಿರುತ್ತಿದ್ದೆವು! ಎಂದೆಲ್ಲ ಅವರು ಗೋಗೆರೆಯುವುದನ್ನು [ನೀವು ನೋಡುವಂತಾಗಿದ್ದರೆ]! {27}

(ಅವರು ಹೇಳುತ್ತಿರುವುದು ಸರಿಯಲ್ಲ)! ಆದರೆ ಹಿಂದೆ [ಭೂಲೋಕದಲ್ಲಿ] ಯಾವ (ಸತ್ಯವನ್ನು) ಅವರು ಬಚ್ಚಿಟ್ಟಿದ್ದರೋ ಅದನ್ನೇ [ಒಂದು ವಾಸ್ತವವಾಗಿಸಿ ಪುನರುತ್ಥಾನದ ದಿನ] ಅವರಿಗೆ ಕಾಣಿಸಲಾಗುವುದಷ್ಟೆ! ಒಂದು ವೇಳೆ [ಅವರು ಬಯಸುವಂತೆ ಭೂಲೋಕಕ್ಕೆ] ಅವರನ್ನು ಮರಳಿ ಕಳಿಸಲಾದರೂ ಯಾವುದರಿಂದ ದೂರವಿರುವಂತೆ ಅವರಿಗೆ ಆದೇಶಿಲಾಗಿತ್ತೋ ಅವರು ಖಂಡಿತ ಅದರತ್ತ ಪುನಃ ಮರಳುವವರಾಗಿದ್ದಾರೆ. ನಿಜವಾಗಿ ಅವರು ಸುಳ್ಳುಗಾರರೇ ಆಗಿರುವರು! {28}

ಜೀವನವೊಂದಿದ್ದರೆ ಅದು ಈ ಲೋಕದಲ್ಲಿ ನಮಗಿರುವ ಜೀವನ ಮಾತ್ರವೇ ಹೊರತು ಮರಣಾನಂತರ ನಾವು ಎಬ್ಬಿಸಲ್ಪಡುವ ವಿಷಯವೇ ಇಲ್ಲವೆಂದು ಅವರು ವಾದಿಸುತ್ತಿದ್ದಾರೆ! ಆದರೆ ಅವರು (ಪುನಃ ಎಬ್ಬಿಸಲ್ಪಟ್ಟು) ಅವರ ಒಡೆಯನ ಸನ್ನಿಧಿಯಲ್ಲಿ ನಿಲ್ಲಿಸಲ್ಪಡುವ ಸನ್ನಿವೇಶವನ್ನು ನೀವು ನೋಡುವಂತೆ ಆಗಿರುತ್ತಿದ್ದರೆ! ಇದಲ್ಲವೇ ವಾಸ್ತವಿಕತೆ ಎಂದು ಆಗ ಅವನು ಕೇಳಲಿರುವನು! ನಮ್ಮೊಡೆಯನಾಣೆ, ಹೌದು (ಇದೇ ವಾಸ್ತವಿಕತೆ) ಎಂದವರು ಉತ್ತರಿಸುವರು. ಹಾಗಾದರೆ (ಇದನ್ನು) ಅಲ್ಲಗಳೆದಿದ್ದ ಕಾರಣ ಈಗ ನೀವು ಶಿಕ್ಷೆಯ ಸವಿಯುಣ್ಣಿರಿ ಎಂದು (ಅಲ್ಲಾಹ್ ನು) ಹೇಳಲಿರುವನು. {29-30}

ಯಾರು ಅಲ್ಲಾಹ್ ನನ್ನು ಭೇಟಿಯಾಗಲಿರುವುದನ್ನು ನಿರಾಕರಿಸಿದರೋ ಅವರು ನಿಶ್ಚಿತವಾಗಿಯೂ ನಷ್ಟದಲ್ಲಿರುವರು. ಆ ಘಳಿಗೆ ಹಠಾತ್ತಾಗಿ ಅವರಿಗೆ ಎದುರಾದಾಗ, ಅಯ್ಯೋ ನಮ್ಮ ದುರ್ಗತಿಯೇ, ನಾವು ಇದರ ಬಗ್ಗೆ ಎಂತಹ ಅಸಡ್ಡೆ ತೋರಿದ್ದೆವು ಎಂದು ಅವರು ಗೋಗೆರೆಯುವರು. ಅವರು ತಮ್ಮ ಬೆನ್ನ ಮೇಲೆ ಪಾಪದ ಹೊರೆ ಹೊತ್ತುಕೊಂಡಿರುವರು. ಛೆ! ಅದೆಷ್ಟು ನಿಕೃಷ್ಟವಾದುದು ಅವರ ಆ ಹೊರೆ! {31}

ಐಹಿಕ ಜೀವನದ (ಸುಖಭೋಗಗಳು) ಕೇವಲ ಒಂದು ಆಟ, ಒಂದು ವಿನೋದವೇ ಹೊರತು ಬೇರೇನೂ ಅಲ್ಲ! ಭಯಭಕ್ತಿಯೊಂದಿಗೆ ಜೀವಿಸುವವರಿಗೆ ಪರಲೋಕದ ನಿವಾಸವೇ ಅತ್ಯುತ್ತಮವಾದ ನಿವಾಸ; (ವಾಸ್ತವ) ಹಾಗಿರುವಾಗ ನೀವು ಯೋಚಿಸುತ್ತಿಲ್ಲವೇಕೆ?! {32}

ಅವರಾಡಿಕೊಳ್ಳುವ ಮಾತುಗಳು ನಿಮ್ಮನ್ನು ನಿಜವಾಗಿ ದುಃಖಿತರನ್ನಾಗಿ ಮಾಡುತ್ತಿದೆ ಎಂಬ ವಿಚಾರವು ನಮಗೆ ತಿಳಿದೇ ಇದೆ. (ಪೈಗಂಬರರೇ ನೀವು ಸಹಿಸುವವರಾಗಿ), ಏಕೆಂದರೆ ಅವರು ನಿರಾಕರಿಸುತ್ತಿರುವುದು ನಿಮ್ಮನ್ನಲ್ಲ; ಬದಲಾಗಿ ಆ ದುಷ್ಟರು ಸಾಕ್ಷಾತ್ ಅಲ್ಲಾಹ್ ನ ದೃಷ್ಟಾಂತಗಳನ್ನು ಅಲ್ಲಗಳೆಯುತ್ತಿದ್ದಾರಷ್ಟೆ! ನಿಮಗಿಂತ ಮುಂಚೆಯೂ ದೂತರುಗಳು ತಿರಸ್ಕರಿಸಲ್ಪಟ್ಟಿದ್ದಾರೆ. ಆದರೆ ತಾವು ತಿರಸ್ಕಾರಕ್ಕೊಳಗಾದಾಗ ಮತ್ತು ತೊಂದರೆಗಳಿಗೀಡಾದಾಗ ನಮ್ಮ ಸಹಾಯವು ಅವರಲ್ಲಿಗೆ ತಲುಪುವ ತನಕವೂ ಅವರು ತಾಳ್ಮೆ ವಹಿಸುತ್ತಿದ್ದರು. ಅಲ್ಲಾಹ್ ನು ನೀಡಿದ ಮಾತನ್ನು ಬದಲಿಸುವವರು ಯಾರೂ ಇಲ್ಲ! (ಪೈಗಂಬರರೇ), ಅಂತಹ ದೂತರುಗಳಿಗೆ ಸಂಬಂಧಿಸಿದಂತೆ ಕೆಲವೊಂದು ವೃತ್ತಾಂತಗಳು ನಿಮ್ಮ ಬಳಿಗೆ ಅದಾಗಲೇ ತಲುಪಿರುತ್ತದೆ! {33-34}

ಇನ್ನು ಈ ಜನರು (ನಿಮ್ಮಿಂದ) ಮುಖ ತಿರುಗಿಸಿಕೊಳ್ಳುತ್ತಿರುವುದು ನಿಮಗೆ ಅಷ್ಟೊಂದು ತ್ರಾಸದಾಯಕವಾಗಿ ಪರಿಣಮಿಸಿದೆ ಎಂದಾದರೆ, ನಿಮಗೆ ಸಾಧ್ಯವಿದ್ದರೆ ಭೂಮಿಯೊಳಕ್ಕೆ ಒಂದು ಸುರಂಗವನ್ನೋ ಅಥವಾ ಆಕಾಶಕ್ಕೇರಲು ಒಂದು ಏಣಿಯನ್ನೋ ಹುಡುಕಿ; ಮತ್ತು (ಅವರ ಬೇಡಿಕೆಯಂತೆ) ಒಂದು ದೃಷ್ಟಾಂತವನ್ನು (ನಿಮಗೆ ಸಾಧ್ಯವಿದ್ದರೆ) ಅವರಿಗೆ ತಂದು ತೋರಿಸಿ! (ಪೈಗಂಬರರೇ), ಒಂದು ವೇಳೆ ಅಲ್ಲಾಹ್ ನು ಬಯಸಿದ್ದಿದ್ದರೆ ಇವರನ್ನೆಲ್ಲ (ಬಲವಂತವಾಗಿ) ನೇರ ಮಾರ್ಗದಲ್ಲಿ ಒಂದುಗೂಡಿಸಿ ಬಿಡುತ್ತಿದ್ದನು! ಆದ್ದರಿಂದ (ಜೋಕೆ!) ನೀವು ವಿವೇಚನೆ ಇಲ್ಲದವರ ಸಾಲಿಗೆ ಸೇರಿದವರಾಗದಿರಿ. {35}

ಕಿವಿಗೊಟ್ಟು ಆಲಿಸುವವರು ಮಾತ್ರವೇ (ನಿಮ್ಮ ಕರೆಗೆ) ಓಗೊಡಬಲ್ಲರು. ಇನ್ನು (ಆಲಿಸಲು ತಯಾರಿಲ್ಲದ) ಈ ಹೆಣಗಳ ವಿಚಾರ - ಅವರನ್ನು ಅಲ್ಲಾಹ್ ನು (ಅವರ ಸಮಾಧಿಗಳಿಂದಲೇ) ಎಬ್ಬಿಸಿ ತರಲಿರುವನು; ಕೊನೆಗೆ ಅವರು (ವಿಚಾರಣೆಗಾಗಿ) ಮರಳಿಸಲ್ಪಡುವುದು ಅವನೆಡೆಗೇ. {36}

[ಸದಾ ಜೊತೆಗಿರುವಂತಹ] ಒಂದು ದೃಷ್ಟಾಂತವಾದರೂ ಆತನಿಗೆ ಆತನ ಒಡೆಯನ ಕಡೆಯಿಂದ ಏಕೆ ಇಳಿಸಿಕೊಡಲಾಗಿಲ್ಲ ಎಂದು ಇವರು ಪ್ರಶ್ನಿಸುತ್ತಿದ್ದಾರೆ. ಅಂತಹ ಒಂದು ದೃಷ್ಟಾಂತವನ್ನು ಇಳಿಸಿಕೊಡಲು ದಿಟವಾಗಿಯೂ ಅಲ್ಲಾಹ್ ನು ಸಂಪೂರ್ಣ ಸಮರ್ಥನಾಗಿದ್ದಾನೆ ಎಂದು (ಓ ಪೈಗಂಬರರೇ) ನೀವು ಹೇಳಿರಿ. ಆದರೆ ಅವರ ಪೈಕಿಯ ಹೆಚ್ಚಿನವರು ಅದನ್ನು ಅರಿತವರಲ್ಲ! {37}

ಭೂಮಿಯಲ್ಲಿ ನಡೆದಾಡುವ ಪ್ರಾಣಿವರ್ಗವಾಗಲಿ ಅಥವಾ (ಆಕಾಶದಲ್ಲಿ) ತಮ್ಮೆರಡು ರೆಕ್ಕೆಗಳ ಮೂಲಕ ಹಾರಾಡುವ ಪಕ್ಷಿವರ್ಗವಾಗಲಿ - ನಿಮ್ಮಂತಹ ಸಮುದಾಯಗಳಾಗಿ ಅಲ್ಲದೆ (ಸೃಷ್ಟಿಸಲ್ಪಟ್ಟಿಲ್ಲ)! ನಾವು ಆ ದಾಖಲೆಪುಸ್ತಕದಲ್ಲಿ ಯಾವ ಅಂಶವನ್ನೂ ಅವಗಣಿಸಿಲ್ಲ. ಕಡೆಗೆ ಅವರ ಒಡೆಯನ ಸನ್ನಿಧಿಯಲ್ಲೇ ಅವರೆಲ್ಲ ಒಂದುಗೂಡಿಸಲ್ಪಡುವರು. {38}

ಇನ್ನು, ನಮ್ಮ ನಿದರ್ಶನಗಳೊಂದಿಗೆ ತಿರಸ್ಕಾರದ ನಿಲುವು ಹೊಂದಿರುವವರು ಅಂಧಕಾರದಲ್ಲಿ ಬಿದ್ದಿರುವ ಕಿವಿಡರು ಮತ್ತು ಮೂಗರಾಗಿರುತ್ತಾರೆ. ಅಲ್ಲಾಹನು ಯಾರನ್ನು ಬೇಕಾದರೂ ತಾನು ಬಯಸಿದರೆ ದಾರಿಗೆಡಲು ಬಿಡುವನು; ಯಾರನ್ನು ಬೇಕಾದರೂ ತಾನು ಬಯಸಿದರೆ ಸರಿದಾರಿಯಲ್ಲಿ ನಡೆಯುವಂತೆ ಮಾಡುವನು. {39}

ಅಲ್ಲಾಹ್ ನ ಕಡೆಯಿಂದ ಯಾವುದಾದರೂ ಶಿಕ್ಷೆ ನಿಮ್ಮ ಮೇಲೆ ಬಂದು ಬಿಟ್ಟರೆ ಅಥವಾ ಲೋಕಾಂತ್ಯದ ಆ ಘಳಿಗೆ ನಿಮಗೆ ಬಂದೆರಗಿದರೆ, ನೀವು ಸತ್ಯವಂತರಾಗಿದ್ದರೆ (ಅದರಿಂದ ಪಾರಾಗಲು) ಅಲ್ಲಾಹ್ ನನ್ನು ಬಿಟ್ಟು ಬೇರೆಯವರಿಗೆ ನೀವು ಮೊರೆಯಿಡುವಿರೇನು? ಸ್ವಲ್ಪ ಚಿಂತಿಸಿ ನೋಡಿ - ಎಂದು (ಪೈಗಂಬರರೇ) ನೀವು ಇವರೊಂದಿಗೆ ಕೇಳಿರಿ. {40}

ಸರ್ವಥಾ ಇಲ್ಲ! (ಅಂತಹ ಸಂದರ್ಭದಲ್ಲಿ) ನೀವು ಮೊರೆಯಿಡುವುದು ಅವನೊಬ್ಬನಿಗೆ ಮಾತ್ರವೇ! ನಂತರ, ಯಾವ ವಿಪತ್ತಿನ ನಿವಾರಣೆಗಾಗಿ ನೀವು ಪ್ರಾರ್ಥಿಸುತ್ತೀರೋ ಅದನ್ನು ಅವನು ನಿವಾರಿಸಲು ಬಯಸಿದರೆ ನಿವಾರಿಸಿ ಬಿಡುವನು. [ಸತ್ಯವೇನೆಂದರೆ ವಿಪತ್ತುಗಳು ಬಂದೆರಗಿದಾಗ] ನೀವೇ ಮಾಡಿಕೊಂಡ ದೇವರುಗಳನ್ನು ಮರೆತು ಬಿಡಿತ್ತೀರಿ! {41}

(ಪೈಗಂಬರರೇ) ನಿಮಗಿಂತ ಮುಂಚಿನ ಜನಾಂಗಗಳೆಡೆಗೂ ನಾವು ದೂತರುಗಳನ್ನು ಕಳುಹಿಸಿದ್ದೆವು. ಆದರೆ [ಅವರು ಇವರಂತೆಯೇ ಧಿಕ್ಕರಿಸಿ ನಡೆದಾಗ] ಅವರಲ್ಲಿ ವಿಮ್ರತಾ ಸ್ವಭಾವ ಉಂಟಾಗಲೆಂದು ನಾವು ಅವರನ್ನು ವಿಪತ್ತು ಮತ್ತು ಸಂಕಷ್ಟಗಳಿಗೆ ಸಿಲುಕಿಸಿದೆವು. {42}

ಹಾಗೆ, ನಮ್ಮ ಕಡೆಯಿಂದ ಅವರ ಮೇಲೆ ಕಷ್ಟಕಾರ್ಪಣ್ಯಗಳು ಎರಗಿ ಬಿದ್ದಾಗ ಯಾಕಾಗಿಯಾದರೂ ಅವರು ವಿನಮ್ರರಾಗಲಿಲ್ಲ?! ಬದಲಾಗಿ ಅವರ ಹೃದಯಗಳು (ಮತ್ತಷ್ಟು) ಕಠೋರವಾದವು! ನಂತರ ಸೈತಾನನು ಅವರಿಗೆ ತಾವೆಸಗುತ್ತಿದ್ದ ಕೃತ್ಯಗಳನ್ನು ಚಂದಗಾಣಿಸಿಕೊಟ್ಟನು. {43}

ನಾವು ಅವರಿಗೆ ಯಾವುದರ ಬಗ್ಗೆ ಉಪದೇಶಿಸಿದ್ದೆವೋ ಅದನ್ನು ಅವರು ಮರೆತು ಬಿಟ್ಟಾಗ (ಸುಖಸಂಪತ್ತಿನ) ಸಕಲ ವಿಷಯಗಳ ಬಾಗಿಲುಗಳನ್ನು ನಾವು ಅವರ ಪಾಲಿಗೆ ತೆರೆದು ಬಿಟ್ಟೆವು. ಎಷ್ಟರ ವರೆಗೆಂದರೆ ಅವರಿಗೆ ದಯಪಾಲಿಸಲಾದುದರಲ್ಲಿ ಅವರು ಪರಮಾನಂದದಿಂದ ಮೈಮರೆತಿದ್ದಾಗ ಹಠಾತ್ತನೆ ನಾವು ಅವರನ್ನು ಹಿಡಿದೆವು! ಆಗ ಅವರು ಸಂಪೂರ್ಣವಾಗಿ ಹತಾಷರಾದರು. {44}

ಹಾಗೆ, (ಸ್ವಯಂ ತಮ್ಮ ಮೇಲೆಯೇ) ಅನ್ಯಾಯವೆಸಗಿದ ಆ ಜನಾಂಗವು ಬುಡದಿಂದಲೇ ಕಿತ್ತೊಗೆಯಲ್ಪಟ್ಟಿತು! ಅದಕ್ಕಾಗಿ ಜಗತ್ತಿನೊಡೆಯನಾದ ಅಲ್ಲಾಹ್ ನಿಗೇ ಸಮಸ್ತ ಸಂಕೀರ್ತನೆಗಳು! {45}

ಒಂದು ವೇಳೆ ಅಲ್ಲಾಹ್ ನು ನಿಮ್ಮ ಶ್ರವಣ ಮತ್ತು ದೃಷ್ಟಿಗಳನ್ನು ಕಿತ್ತುಕೊಂಡರೆ ಮತ್ತು ನಿಮ್ಮ ಹೃದಯಗಳಿಗೆ ಮುದ್ರೆಯೊತ್ತಿ ಬಿಟ್ಟರೆ ಅಲ್ಲಾಹ್ ನ ಹೊರತು (ನೀವೇ ಮಾಡಿಕೊಂಡ) ಬೇರೆ ಯಾವ ದೇವರಿಗೆ ತಾನೆ ಅದನ್ನು ನಿಮಗೆ ತಂದು ಕೊಡಲು ಸಾಧ್ಯ ಎಂಬುದನ್ನು ನೀವೇ ಯೋಚಿಸಿ ನೋಡಿ - ಎಂದು (ಪೈಗಂಬರರೇ ನೀವು) ಇವರೊಂದಿಗೆ ಹೇಳಿರಿ. ನೋಡಿ, (ಇವರಿಗೆ ಅರ್ಥವಾಗಲೆಂದು) ನಾವು ಪುರಾವೆಗಳನ್ನು ಹೇಗೆ ವಿವಿಧ ರೀತಿಯಲ್ಲಿ ವಿವರಿಸುತ್ತಿದ್ದೇವೆ! ಅಷ್ಟಾಗ್ಯೂ ಇವರು ದೂರ ಸರಿಯುತ್ತಿದ್ದಾರೆ. {46}

ಇನ್ನು [ದೂತರುಗಳು ನೀಡುವ ಮುನ್ನೆಚ್ಚರಿಕೆಯಂತೆ] ಅಲ್ಲಾಹ್ ನ ಶಿಕ್ಷೆಯು ನಿಮ್ಮ ಮೇಲೆ ಹಠಾತ್ತನೆ ಅಥವಾ (ಹಾಡುಹಗಲಲ್ಲೇ) ಘಂಟಾಘೋಷವಾಗಿ ಬಂದೆರಗಿದರೆ ಅಧರ್ಮ-ಅನ್ಯಾಯಗಳಲ್ಲಿ ತಲ್ಲೀನವಾದ ಜನಸಮೂಹವನ್ನಲ್ಲದೆ ಬೇರೆಯವರನ್ನು ನಾಶಪಡಿಸಲಾಗುವುದೇನು? ಸ್ವಲ್ಪ ಚಿಂತಿಸಿ ನೋಡಿ - ಎಂದು (ಪೈಗಂಬರರೇ, ಇವರೊಂದಿಗೆ) ಕೇಳಿರಿ. {47}

[ಜನರಿಗೆ ಸ್ವರ್ಗಲೋಕದ] ಶುಭವಾರ್ತೆ ತಿಳಿಸುವವರಾಗಿ ಮತ್ತು [ನರಕ ಯಾತನೆಯ ಕುರಿತಾದ] ಮುನ್ನೆಚ್ಚರಿಕೆ ನೀಡುವವರಾಗಿ ಹೊರತು ನಾವು ದೂತರುಗಳನ್ನು ಕಳುಹಿಸುವುದಿಲ್ಲ. ಹಾಗಿರುವಾಗ ಯಾರು ವಿಶ್ವಾಸಿಗಳಾಗಿ ತಮ್ಮ (ನಿಲುವು ನಡತೆಗಳನ್ನು) ಸುಧಾರಿಸಿಕೊಳ್ಳುವರೋ ಅಂತಹವರಿಗೆ ಯಾವ ಭಯವೂ ಇರುವುದಿಲ್ಲ; ಅವರು ವ್ಯಥೆ ಪಡುವುದೂ ಇಲ್ಲ. {48}

ಆದರೆ ಯಾರು ನಮ್ಮ ವಚನಗಳನ್ನು ಅಲ್ಲಗಳೆಯುತ್ತಾರೋ ಅಂತಹವರಿಗೆ - ತಾವು ತೋರಿದ ಉಲ್ಲಂಘನೆಯ ಕಾರಣ - ಶಿಕ್ಷೆಯು ಬಂದು ತಟ್ಟಿಯೇ ತೀರುವುದು. {49}

ನನ್ನ ಬಳಿ ಅಲ್ಲಾಹ್ ನ ಖಜಾನೆಗಳಿವೆ ಎಂದು ನಾನು ನಿಮ್ಮೊಡನೆ ಹೇಳಿಕೊಂಡಿಲ್ಲ; ಕಣ್ಣಿಗೆ ಕಾಣದ ವಿಷಯಗಳ ಅರಿವೂ ನನಗಿಲ್ಲ; ನಾನೊಬ್ಬ 'ಮಲಕ್' ಆಗಿರುವೆ ಎಂದೂ ನಾನು ನಿಮ್ಮೊಡನೆ ವಾದಿಸುತ್ತಿಲ್ಲ. ನನಗೆ 'ವಹೀ' [ಅರ್ಥಾತ್ ದೈವಿಕ ಪ್ರೇರೇಪಣೆಯ] ಮೂಲಕ ತಿಳಿಸಲಾಗುವುದನ್ನು ಮಾತ್ರವಷ್ಟೆ ನಾನು ಅನುಸರಿಸುತ್ತಿದ್ದೇನೆ - ಎಂದು (ಪೈಗಂಬರರೇ, ಇವರಿಗೆ) ನೀವು ಸ್ಪಷ್ಟಪಡಿಸಿರಿ. ಕುರುಡರು ಮತ್ತು ಕಣ್ಣುಳ್ಳವರು ಸರಿಸಮಾನರಾಗುವರೇನು, ನೀವು ಚಿಂತಿಸುವುದಿಲ್ಲವೇಕೆ? ಎಂದು ಕೇಳಿರಿ {50}

ತಮ್ಮ ಕರ್ತನ ಸನ್ನಿಧಿಯಲ್ಲಿ, ಅವನೊಬ್ಬನ ಹೊರತು ಬೇರೆ ಯಾವ ಸಹಾಯಕನಾಗಲಿ ಶಿಫಾರಸುದಾರನಾಗಲಿ ಇಲ್ಲದಂತಹ ಸ್ಥಿತಿಯಲ್ಲಿ ಎಲ್ಲರನ್ನು ಒಟ್ಟು ಸೇರಿಸಲಾಗುವ ಕುರಿತು ಭಯವಿರಿಸಿಕೊಂಡವರಿಗೆ - ಅವರು (ಇನ್ನಷ್ಟು) ಧರ್ಮಶ್ರದ್ಧೆಯುಳ್ಳವರಾಗಲು - ಈ (ಕುರ್‌ಆನ್ ನ) ಮೂಲಕ ನೀವು ಎಚ್ಚರಿಸಿರಿ. {51}

ತಮ್ಮ ಕರ್ತನ ಸಂಪ್ರೀತಿಯನ್ನು ಅರಸುತ್ತಾ ಮುಂಜಾನೆ ಮುಸ್ಸಂಜೆಗಳಲ್ಲಿ ಅವನೊಂದಿಗೆ ಪ್ರಾರ್ಥನೆಯಲ್ಲಿ ತೊಡಗಿರುವ ಅಂತಹ ಕೆಲವರನ್ನು [ಕುರೈಷರ ಗಣ್ಯರ ಇಚ್ಛೆಯಂತೆ] ನೀವು ಎಂದಿಗೂ ದೂರಕ್ಕಟ್ಟದಿರಿ. ಅವರ ಲೆಕ್ಕಪತ್ರ ವಿಚಾರಣೆಗೆ ಸಂಬಂಧಿಸಿದಂತೆ ಯಾವ ಹೊಣೆಯೂ ನಿಮಗಿಲ್ಲ; ಹಾಗೆಯೇ ನಿಮ್ಮ ಲೆಕ್ಕಪತ್ರ ವಿಚಾರಣೆಗೆ ಸಂಬಂಧಿಸಿದಂತೆ ಯಾವುದಕ್ಕೂ ಅವರೂ ಬಾಧ್ಯಸ್ತರಲ್ಲ! ಹಾಗಿರುವಾಗ ಅವರನ್ನು ನೀವು ದೂರಕ್ಕಟ್ಟಿ ಬಿಟ್ಟರೆ [ಜೋಕೆ! ನಿಮ್ಮಿಂದ ಕರ್ತವ್ಯಚ್ಯುತಿ ಸಂಭವಿಸಿದಂತಾಗಿ] ನೀವು ತಪ್ಪಿತಸ್ಥರ ಸಾಲಿಗೆ ಸೇರಿದವರಾಗುವಿರಿ. {52}

ನಮ್ಮ ಜನರ ಪೈಕಿ ಅಲ್ಲಾಹ್ ನ ಕೃಪಾನುಗ್ರಹಗಳಿಗೆ ಪಾತ್ರರಾಗಲು ಯೋಗ್ಯತೆಯುಳ್ಳವರು (ದರಿದ್ರರಾದ, ಬಡವರಾದ) ಈ ಜನರೇನು? ಎಂದು (ಕುರೈಷರ ಗಣ್ಯರು) ಪ್ರಶ್ನಿಸುವಂತಾಗಲು, ಇವರ ಪೈಕಿ ಕೆಲವರನ್ನು ಇತರ ಕೆಲವರ ಮೂಲಕ ನಾವು ಹೀಗೆ ಪರೀಕ್ಷೆಗೆ ಹಚ್ಚಿರುತ್ತೇವೆ. ಕೃತಜ್ಞತೆಯುಳ್ಳವರ ಕುರಿತು ಅಲ್ಲಾಹ್ ನು ಇವರಿಗಿಂತ ಹೆಚ್ಚು ಅರಿತವನಲ್ಲವೇ? {53}

ಇನ್ನು ನಮ್ಮ ವಚನ-ನಿದರ್ಶನಗಳನ್ನು ಒಪ್ಪಿ ವಿಶ್ವಾಸಿಗಳಾದ ಅಂತಹ ಜನರು ನಿಮ್ಮಲ್ಲಿಗೆ ಬಂದಾಗ [ದೂರಕ್ಕಟ್ಟುವ ಬದಲು], ನಿಮಗೆ ಶಾಂತಿಯಾಗಲಿ; ನಿಮ್ಮ ಕರ್ತಾರನು ಕಾರುಣ್ಯವನ್ನು ಸ್ವತಃ ತನ್ನ ಮೇಲೆ ವಿಧಿಗೊಳಿಸಿರುವನು; ಹಾಗಿರುವಾಗ ನಿಮ್ಮ ಪೈಕಿ ಯಾರಾದರೂ ಅವಿವೇಕಿತನಕ್ಕೆ ಬಲಿಯಾಗಿ ಕೆಟ್ಟದ್ದನ್ನು ಮಾಡಿಬಿಟ್ಟರೆ ತದನಂತರ ಪಶ್ಚಾತ್ತಾಪಪಟ್ಟು ತನ್ನನ್ನು ಸರಿಪಡಿಸಿಕೊಂಡರೆ ಅಲ್ಲಾಹ್ ನು ಬಹು ಕ್ಷಮಾಶೀಲನೂ ನಿರಂತರ ಕರುಣೆ ತೋರುವವನೂ ಆಗಿರುವನೆಂದು (ಅವರಿಗೆ ಸಮಾಧಾನದ) ಮಾತು ಹೇಳಿರಿ. {54}

ಹೀಗೆ ಪಾಪಿ ಜನರ ಧೋರಣೆಯನ್ನು [ಸಜ್ಜನರ ರೀತಿ-ರಿವಾಜಿನಿಂದ] ಪ್ರತ್ಯೇಕಿಸಿ ತಿಳಿಯುವಂತಾಗಲು ನಾವು ವಚನಗಳನ್ನು ಸವಿವರ ತಿಳಿಸುತ್ತಿರುತ್ತೇವೆ. {55}

ಅಲ್ಲಾಹ್ ನನ್ನು ಬಿಟ್ಟು ನೀವು ಮೊರೆಯಿಡುತ್ತಿರುವ ಇತರ (ಮಿಥ್ಯ ದೇವರುಗಳ)ನ್ನು ಪ್ರಾರ್ಥಿಸದಂತೆ ನನ್ನನ್ನು ತಡೆಯಲಾಗಿದೆಯೆಂದು (ಅವರಿಗೆ) ತಿಳಿಸಿರಿ. ನಾನಂತು ನಿಮ್ಮ ಇಚ್ಚೆ-ಅಪೇಕ್ಷೆಗಳನ್ನು ಅನುಸರಿಸಲಾರೆ; ಹಾಗೇನಾದರೂ ಮಾಡಿದರೆ ನಾನು ತಪ್ಪು ದಾರಿಗೆ ಬಿದ್ದವನಾದೇನು, ಮಾತ್ರವಲ್ಲ ಸರಿದಾರಿಯಲ್ಲಿರುವವರ ಸಾಲಿಗೆ ಸೇರದೇ ಹೋದೇನು - ಎಂದು (ಅವರಿಗೆ) ಸ್ಪಷ್ಟ ಪಡಿಸಿರಿ. {56}

ನನ್ನ ನಿಲುವು ನನ್ನೊಡೆಯನ ಸುಸ್ಪಷ್ಟ ಪ್ರಮಾಣಗಳನ್ನು ಆಧರಿಸಿರುತ್ತದೆ. ನೀವು ಅದನ್ನು ನಿರಾಕರಿಸಿದವರಾಗಿರುವಿರಿ. [ಈಗಲೇ ತಂದು ತೋರಿಸಿರೆಂದು] ನೀವು ಯಾವುದಕ್ಕೆ ಆತುರ ಪಡಿಸುತ್ತಿರುವಿರೋ ಅದು ನನ್ನ ಅಧಿಕಾರದಲ್ಲಿರುವ ವಿಷಯವಲ್ಲ. ತೀರ್ಮಾನಿಸುವ ಅಧಿಕಾರವು ಅಲ್ಲಾಹ್ ನೊಬ್ಬನ ಹೊರತು ಯಾರಿಗೂ ಇಲ್ಲ. ವಸ್ತುಸ್ಥಿತಿಯನ್ನು ಅವನೇ ತಿಳಿಸುತ್ತಾನೆ; (ಏಕೆಂದರೆ) ಅವನು ಅತ್ಯುತ್ತಮ ತೀರ್ಪುಗಾರನಾಗಿದ್ದಾನೆ - ಎಂದು (ಪೈಗಂಬರರೇ ನೀವು ಅವರಿಗೆ) ಹೇಳಿರಿ. {57}

ನೀವು [ಸವಾಲೊಡ್ಡಿ] ಆತುರಪಡಿಸುತ್ತಿರುವ ವಿಷಯವು ಒಂದು ವೇಳೆ ನನ್ನ ಕೈಯಲ್ಲಿ ಇದ್ದಿದ್ದರೆ ನನ್ನ ಮತ್ತು ನಿಮ್ಮ ನಡುವೆ ಅದಾಗಲೇ ತೀರ್ಮಾನವಾಗಿ (ಕತೆ ಮುಗಿದು ಹೋಗುತ್ತಿತ್ತು)! ಅಲ್ಲಾಹ್ ನಿಗಾದರೋ ದುಷ್ಟ ಜನರೊಂದಿಗೆ ಹೇಗೆ ವ್ಯವಹರಿಸಬೇಕೆಂಬ ಸಂಪೂರ್ಣ ಜ್ಞಾನವಿದೆ ಎಂದು [ಪೈಗಂಬರರೇ, ನಿಮಗೆ ಸಾಧ್ಯವಿದ್ದರೆ ನಮ್ಮನ್ನು ಈಗಲೇ ಶಿಕ್ಷೆಗೆ ಗುರಿಪಡಿಸಿರಿ ಎಂದು ನಿಮಗೆ ಸವಾಲೊಡ್ಡುವ ಈ ದುಷ್ಟರೊಂದಿಗೆ] ಹೇಳಿರಿ. {58}

ಅದೃಶ್ಯ ಸ್ಥಿತಿಯಲ್ಲಿರುವ [ಸಕಲ ಖಜಾನೆಗಳ] ಕೀಲಿಕೈಗಳು ಇರುವುದು ಅವನ ಬಳಿ ಮಾತ್ರವೇ. ಅವನ ಹೊರತು ಯಾವೊಬ್ಬನಿಗೂ ಅವುಗಳ ಬಗ್ಗೆ ತಿಳಿದಿಲ್ಲ. ನೆಲದಲ್ಲಿ ಮತ್ತು ಜಲದಲ್ಲಿ ಇರುವ ಎಲ್ಲವನ್ನೂ ಅವನು ಬಲ್ಲನು. ಅವನ ಅರಿವಿಗೆ ಬಾರದೆ ಒಂದು ಎಲೆಯಾದರೂ ಉದುರಿ ಬೀಳದು. ನೆಲದೊಳಗಿನ ಕತ್ತಲೆಯಲ್ಲಿ ಹುದುಗಿರುವ ಒಂದೊಂದು ಕಾಳು; ಹಸಿಯಾದುದಾಗಿರಲಿ ಅಥವಾ ಒಣಗಿ ಹೋದುದಾಗಿರಲಿ ಯಾವುದೂ [ಅವನ ಬಳಿಯಿರುವ] ಸುಸ್ಪಷ್ಟ ದಾಖಲೆಯಿಂದ ಹೊರತಾಗಿಲ್ಲ! {59}

ರಾತ್ರಿಯ (ನಿದ್ರಾವಸ್ಥೆಯಲ್ಲಿ) ನಿಮ್ಮನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವವನು ಅವನೇ. ನೀವು ಹಗಲಲ್ಲಿ ಯಾವೆಲ್ಲ ಕೃತ್ಯಗಳಲ್ಲಿ ತೊಡಗಿದ್ದಿರಿ ಎಂಬುದರ ಅರಿವು ಅವನಿಗಿರುತ್ತದೆ. ಅದಾಗ್ಯೂ ನಿರ್ಧಿಷ್ಟ ಜೀವಿತಾವಧಿಯನ್ನು ಪೂರ್ಣಗೊಳಿಸಲು ಅವನು ನಿಮ್ಮನ್ನು ಹಗಲಲ್ಲಿ (ಪುನಃ) ಎಬ್ಬಿಸುತ್ತಾನೆ. ಅನಂತರ ನಿಮ್ಮ (ಅಂತಿಮ) ಮರಳುವಿಕೆ ಅವನೆಡೆಗೇ ಆಗಿರುತ್ತದೆ. ತರುವಾಯ ನೀವು ಅದಾವ ಕೃತ್ಯಗಳಲ್ಲಿ ತೊಡಗಿದ್ದಿರಿ ಎಂಬುದರ ಬಗ್ಗೆ ಅವನು ನಿಮಗೆ ತಿಳಿಸಲಿರುವನು! {60}

ತನ್ನ ಸೃಷ್ಟಿಗಳ ಮೇಲೆ ಸರ್ವಸಂಪೂರ್ಣವಾದ ಹತೋಟಿ ಹೊಂದಿರುವನು ಅವನು; ಮತ್ತು ಕಾವಲುಗಾರ (ಮಲಕ್ ಗಳನ್ನು) ನಿಮ್ಮತ್ತ ಅವನೇ ಕಳಿಸಿರುತ್ತಾನೆ. ಎಷ್ಟರ ವರೆಗೆಂದರೆ ನಿಮ್ಮಲ್ಲೊಬ್ಬನಿಗೆ ಮರಣವು ಸನ್ನಿಹಿತವಾದಾಗ ನಮ್ಮ ದೂತ (ಮಲಕ್ ಗಳು) ಆತನ ಆತ್ಮವನ್ನು ವಶಪಡಿಸಿಕೊಳ್ಳುತ್ತಾರೆ; ಮತ್ತು ಅವರು ಕಿಂಚಿತ್ತೂ ಕರ್ತವ್ಯಚ್ಯುತಿ ಮಾಡುವವರಲ್ಲ. {61}

ನಂತರ ಅವರನ್ನು ಅವರ ನಿಜವಾದ ಅಧಿಪತಿಯಾದ ಅಲ್ಲಾಹ್ ನೆಡೆಗೆ ಹಿಂದಿರುಗಿಸಲಾಗುವುದು. ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ, (ಅಂದು) ತೀರ್ಪು ನೀಡುವ ಅಧಿಕಾರವಿರುವುದು ಅವನೊಬ್ಬನಿಗೆ ಮಾತ್ರ; ಮತ್ತು ಅವನು ಅತ್ಯಂತ ಕ್ಷಿಪ್ರವಾಗಿ ಲೆಕ್ಕ ಮುಗಿಸಿ ಬಿಡುವವನಾಗಿದ್ದಾನೆ. {62}

ನೀವು ಭೂಮಿಯಲ್ಲೂ ಮತ್ತು ಸಮುದ್ರಗಳಲ್ಲೂ (ಆಪತ್ತಿಗೆ ಸಿಲುಕಿ ದಿಕ್ಕು ತೋಚದೆ) ಕಾರ್ಗತ್ತಲೆಯಲ್ಲಿರುವಾಗ ಅವನನ್ನು ದೈನ್ಯತೆಯಿಂದ ಅಂಗಲಾಚುತ್ತಲೂ ಮತ್ತು ಗೌಪ್ಯವಾಗಿಯೂ, ಈ (ಆಪತ್ತಿನ ಪರಿಸ್ಥಿತಿಯಿಂದ) ಅವನು ನಮ್ಮನ್ನು ಪಾರು ಮಾಡಿ ಬಿಟ್ಟರೆ ನಾವು ಖಂಡಿತಾ ಅವನ ಕೃತಜ್ಞತೆಯುಳ್ಳ ಜನರಾಗಿ ತೀರುವೆವು ಎಂದು ನೀವು ಮೊರೆಯಿಡುವಾಗ ನಿಮ್ಮನ್ನು ಅದರಿಂದ ರಕ್ಷಿಸುವವನು ಯಾರು ಎಂದು (ಪೈಗಂಬರರೇ ಆ ದುಷ್ಟರೊಂದಿಗೆ) ಕೇಳಿರಿ. {63}

ಆ ಆಪತ್ತಿನಿಂದ ಅಲ್ಲಾಹ್ ನೇ ನಿಮ್ಮನ್ನು ವಿಮೋಚಿಸುತ್ತಾನೆ; ಮತ್ತು ಇತರೆಲ್ಲ ಸಂಕಟ-ಸಂಕಷ್ಟಗಳಿಂದಲೂ! ಆದರೂ ನೀವು (ಇತರರನ್ನು) ದೇವರನ್ನಾಗಿಸಿ ಕೊಳ್ಳುತ್ತೀರಿ ಎಂದೂ ಹೇಳಿರಿ. {64}

ನಿಮ್ಮ ಮೇಲಿನಿಂದ ಅಥವಾ ನಿಮ್ಮ ಕಾಲಡಿಯಿಂದ ಒಂದು ಶಿಕ್ಷೆಯನ್ನು ನಿಮ್ಮ ಮೇಲೆರಗಿಸಿ ಬಿಡಲು; ಅಥವಾ ನಿಮ್ಮನ್ನು ವಿವಿಧ ಪಂಗಡಗಳಾಗಿ ಒಡೆದು ನಿಮ್ಮ ಒಂದು ಪಂಗಡವು ನಡೆಸುವ ಹಿಂಸೆ-ದೌರ್ಜನ್ಯಗಳ ರುಚಿಯನ್ನು ಇನ್ನೊಂದು ಪಂಗಡವು ಸವಿಯುತ್ತಿರುವಂತೆ ಮಾಡಲು ಅವನು ಸರ್ವ ಸಮರ್ಥನಾಗಿರುವನು ಎಂದು (ಅವರಿಗೆ) ತಿಳಿಸಿರಿ. ನೋಡಿ, ಅವರಿಗೆ ಚೆನ್ನಾಗಿ ಮನದಟ್ಟಾಗಲು ನಾವು ಹೇಗೆ ವಿವಿಧ ರೀತಿಯಲ್ಲಿ (ನಮ್ಮ) ವಚನಗಳನ್ನು ವಿವರಿಸುತ್ತಿದ್ದೇವೆ. {65}

ಅದು ಅಪ್ಪಟ ಸತ್ಯವೇ ಆಗಿದ್ದರೂ (ಪೈಗಂಬರರೇ) ನಿಮ್ಮ ಜನಾಂಗವು ಅದನ್ನು ನಿರಾಕರಿಸಿ ಬಿಟ್ಟಿದೆ! ಆದ್ದರಿಂದ (ನಂಬಿಸಿಯೇ ತೀರುವ) ಹೊಣೆಗಾರಿಕೆಯೊಂದಿಗೆ ನಾನು ನಿಮ್ಮ ಮೇಲೆ ನಿಯೋಜಿಸಲ್ಪಟ್ಟಿಲ್ಲ ಎಂದು (ಅವರೊಡನೆ) ಹೇಳಿ ಬಿಡಿರಿ. {66}

[ದೈವಿಕ ಶಿಕ್ಷೆ-ರಕ್ಷೆಗಳ ಕುರಿತು ಪ್ರವಾದಿಗಳು ನೀಡುವ] ಪ್ರತಿಯೊಂದು ಭವಿಷ್ಯನುಡಿಗೂ (ಅದು ಘಟಿಸಲು) ಒಂದು ಸಮಯವು ನಿಶ್ಚಿತವಾಗಿದೆ. (ಸವಾಲೊಡ್ಡುತ್ತಿರುವ) ನೀವು ಸದ್ಯದಲ್ಲೇ ತಿಳಿದುಕೊಳ್ಳಲಿರುವಿರಿ {67}

[ಪೈಗಂಬರರೇ,] ನಮ್ಮ ವಚನಗಳ ಕುರಿತು ಆ ಜನರು ಅಸಂಬದ್ಧ ವಿಮರ್ಶೆಯಲ್ಲಿ ತೊಡಗಿರುವುದನ್ನು ನೀವು ಕಂಡಾಗ ಅವರು ಬೇರೆ ಮಾತುಕತೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ತನಕ ನೀವು ಅವರಿಂದ ದೂರ ಉಳಿಯಬೇಕು. ಇನ್ನು ಸೈತಾನನು ನಿಮಗೆ ಮರೆವು ಬಾಧಿಸುವಂತೆ ಮಾಡಿದರೆ ಜ್ಞಾಪಕವಾದ ನಂತರವಂತು ನೀವು ಆ ದುಷ್ಟರ ಸಮೂಹದಲ್ಲಿ ಕುಳಿತುಕೊಳ್ಳಬಾರದು. {68}

ಅಂತಹ ಜನರ (ದುಷ್ಕೃತ್ಯಗಳ) ಅಂತಿಮ ವಿಚಾರಣೆಯ ಕುರಿತಂತೆ ಯಾವ ಹೊಣೆಗಾರಿಕೆಯೂ ದೇವ ಪ್ರಜ್ಞೆಯುಳ್ಳ ಜನರ ಮೇಲೆ ಇರುವುದಿಲ್ಲ; ಆದರೆ ದೇವಾದೇಶಗಳನ್ನು ಮೈವೆತ್ತು ನಡೆಯುವಂತಾಗಲು ಅಂತಹವರನ್ನು ಉಪದೇಶಿಸುವ ಹೊಣೆಗಾರಿಕೆ ಮಾತ್ರ ಇದೆ! {69}

ಇನ್ನು, ತಮ್ಮ ಧರ್ಮವನ್ನು ಆಟದಂತೆ ಮತ್ತು ಒಂದು ತಮಾಷೆಯಂತೆ ಮಾಡಿಕೊಂಡವರನ್ನೂ ಲೌಕಿಕ ಜೀವನದ ವಂಚನೆಗೆ ಗುರಿಯಾದವರನ್ನೂ ಅವರ ಪಾಡಿಗೆ ಬಿಟ್ಟು ಬಿಡಿರಿ. ಯಾವೊಬ್ಬನೂ ತಾನು ಸಂಪಾದಿಸಿದ (ಕೆಡುಕಿನ) ಕಾರಣದಿಂದಾಗಿ ವಿನಾಶದೆಡೆಗೆ ತಳ್ಳಲ್ಪಡದಿರಲು ಈ ಕುರ್‌ಆನ್ ನ ಮೂಲಕ ನೀವು (ಉಳಿದವರಿಗೆ) ಉಪದೇಶ ನೀಡುತ್ತಲಿರಿ. (ಅಂದು) ಯಾವೊಂದು ಆತ್ಮಕ್ಕೂ ಅಲ್ಲಾಹ್ ನ ಹೊರತು ಯಾವ ರಕ್ಷಕನಾಗಲಿ ಶಿಫಾರಸ್ಸುದಾರನಾಗಲಿ ಇರಲಾರರು! ಮಾತ್ರವಲ್ಲ, ಸಕಲವನ್ನೂ ವಿಮೋಚನಾ ಶುಲ್ಕವಾಗಿ ನೀಡಿದರೂ ಅದನ್ನು ಸ್ವೀಕರಿಸಲಾಗದು. ತಾವೆಸಗಿದ್ದ ಪಾಪಕೃತ್ಯಗಳ ಫಲವಾಗಿ ವಿನಾಶದೆಡೆಗೆ ತಳ್ಳಲ್ಪಡುವವರು ಅಂತಹವರೇ! ತಾವು ತೋರಿದ ಧಿಕ್ಕಾರದ ಕಾರಣ, ಅಂತಹವರಿಗೆ ಕುಡಿಯಲು ಕುದಿಯುವ ನೀರು ಮತ್ತು ಯಾತನಾಮಯ ಶಿಕ್ಷೆ ಕಾದಿದೆ. {70}

ಅಲ್ಲಾಹ್ ನನ್ನು ಬಿಟ್ಟು, ನಮಗೆ ಯಾವ ಪ್ರಯೋಜನವಾಗಲಿ ಹಾನಿಯಾಗಲಿ ಉಂಟು ಮಾಡಲು ಸಾಧ್ಯವಿಲ್ಲದವರನ್ನು ನಾವು ಸಹಾಯಕ್ಕಾಗಿ ಕರೆಯಬೇಕೇ? ಅಲ್ಲಾಹ್ ನು ಸರಿಯಾದ ದಾರಿಯನ್ನು ಒಮ್ಮೆ ನಮಗೆ ತೋರಿಸಿಕೊಟ್ಟ ನಂತರ ನಾವು ನಮ್ಮ ಪೂರ್ವ ಸ್ಥಿತಿಗೆ [ಅರ್ಥಾತ್ ಅಜ್ಞಾನದ ಸ್ಥಿತಿಗೆ] ಮರಳಿ ಹೋಗಬೇಕೇ? 'ನಮ್ಮತ್ತ ಬನ್ನಿ' ಎಂದು ಕೆಲವು ಹಿತೈಷಿಗಳು ಸನ್ಮಾರ್ಗದತ್ತ ಕರೆಯುತ್ತಿರುವಾಗಲೂ ಸೈತಾನರು ದಿಕ್ಕೆಡಿಸಿದ ಕಾರಣ ಕಂಗಾಲಾಗಿ ಭೂಮಿಯಲ್ಲಿ ಅಲೆಯುತ್ತಿರುವವನಂತೆ ನಾವಾಗಬೇಕೇ? ಎಂದು ಅವರೊಡನೆ ಕೇಳಿರಿ. ಸರಿಯಾದ ದಾರಿಯು ಸಂಶಯಾತೀತವಾಗಿ ಅಲ್ಲಾಹ್ ನು ತೋರಿದ ಆ ದಾರಿ ಮಾತ್ರ! ಸರ್ವಲೋಕದ ಅಧಿಪತಿಯಾದ ಅಲ್ಲಾಹ್ ನಿಗೆ ಸಂಪೂರ್ಣವಾಗಿ ಶರಣಾಗಿರುವಂತೆ ನಮ್ಮನ್ನು ಆಜ್ಞಾಪಿಸಲಾಗಿದೆಯಷ್ಟೆ ಎಂದೂ ಅವರಿಗೆ ತಿಳಿಸಿರಿ. {71}

ಹಾಗೆಯೇ, ನಮಾಝ್ ಅನ್ನು ಸರಿಯಾಗಿ ವ್ಯವಸ್ಥೆಗೊಳಿಸಬೇಕು ಹಾಗೂ ಅವನ (ಆದೇಶಗಳ ಉಲ್ಲಂಘನೆಯಾಗದಂತೆ) ಜಾಗೃತೆ ವಹಿಸಬೇಕು (ಎಂಬುದನ್ನೂ ನಮಗೆ ಆಜ್ಞಾಪಿಸಲಾಗಿದೆ). ಅವನ ಸನ್ನಿಧಿಯಲ್ಲೇ (ಕೊನೆಯದಾಗಿ) ನಮ್ಮೆಲ್ಲರನ್ನು ಒಟ್ಟುಸೇರಿಸಲಾಗುವುದು! {72}

ಆಕಾಶಗಳನ್ನು ಮತ್ತು ಭೂಮಿಯನ್ನು ಯಥೋಚಿತವಾಗಿ ಅಸ್ತಿತ್ವಕ್ಕೆ ತಂದವನು ಅವನೇ. ಮತ್ತು [ಲೋಕಾಂತ್ಯದ] ಆ ದಿನ 'ಸಂಭವಿಸು' ಎಂದು ಅವನು ಹೇಳಿದ ಮಾತ್ರಕ್ಕೆ ಅದು ಸಂಭವಿಸಿ ಬಿಡಲಿದೆ. ಅವನ ಮಾತೇ ಪರಮಾರ್ಥ. 'ಸೂರ್' (ಎಂಬ ಕಹಳೆ) ಊದಲ್ಪಡುವ ಆ ದಿನದ ಪರಮಾಧಿಪತ್ಯವು ಅವನಿಗೆ ಮಾತ್ರ! ಮರೆಯಲ್ಲಿರುವ ಮತ್ತು ಪ್ರತ್ಯಕ್ಷವಾಗಿರುವ ಸಕಲ ವಿಷಯಗಳ ಜ್ಞಾನ ಅವನಿಗಿದೆ. ಅವನು ಅತ್ಯಂತ ವಿವೇಕಶಾಲಿಯೂ ಮಹಾ ಪ್ರಾಜ್ಞನೂ ಆಗಿರುವನು. {73}

ಇಬ್ರಾಹೀಮ್ ರು ತನ್ನ ತಂದೆ ಆಝರ್ ನೊಂದಿಗೆ - ಈ ವಿಗ್ರಹಗಳನ್ನು ನೀವು ದೇವರುಗಳನ್ನಾಗಿ ಮಾಡಿಕೊಂಡಿರುವಿರೇನು? ನಾನಂತು ನೀವು ಮತ್ತು ನಿಮ್ಮ ಜನಾಂಗದವರು ಸ್ಪಷ್ಟವಾದ ತಪ್ಪುದಾರಿಯಲ್ಲಿ ಸಾಗಿರುವುದನ್ನು ಕಾಣುತ್ತಿದ್ದೇನೆ - ಎಂದು ಹೇಳಿದ ಸಂದರ್ಭವನ್ನು [ಪೈಗಂಬರರೇ, ಇಬ್ರಾಹೀಮ್ ರ ಸಂತತಿಯಾದ ಇವರಿಗೆ] ನೆನಪಿಸಿ ಕೊಡಿ. {74}

ಹಾಗೆ, ಇಬ್ರಾಹೀಮ್ ರಿಗೆ, ಅವರು ಖಚಿತವಾದ ವಿಶ್ವಾಸವುಳ್ಳವರಾಗಲು ನಾವು ಭೂಮಿ ಮತ್ತು ಆಕಾಶಗಳಲ್ಲಿನ ನಮ್ಮ ಚಕ್ರಾಧಿಪತ್ಯ ವ್ಯವಸ್ಥೆಯನ್ನು ತೋರಿಸಿ ಕೊಟ್ಟೆವು! ತದನಂತರ (ಒಮ್ಮೆ) ರಾತ್ರಿಯ ಕತ್ತಲು ಅವರ ಮೇಲೆ ಕವಿದಾಗ ಅವರು ಒಂದು ನಕ್ಷತ್ರವನ್ನು ನೋಡಿ [ಅದರ ಆರಾಧಕರ ಗಮನ ಸೆಳೆಯುವ ಸಲುವಾಗಿ] ಅದು ನನ್ನ ದೇವರು ಎಂದು ಹೇಳಿದರು. ನಂತರ ಅದು ಅಸ್ತಮಿಸಿದಾಗ, ನಾನು ಅಸ್ತಮಿಸುವವುಗಳನ್ನು (ದೇವರನ್ನಾಗಿಸಿ ಕೊಳ್ಳಲು) ಇಷ್ಟ ಪಡುವುದಿಲ್ಲ ಎಂದು ಸಾರಿದರು. ಹಾಗೆಯೇ, ಉದಯಿಸುತ್ತಿದ್ದ ಚಂದ್ರನನ್ನು ನೋಡಿ ಅದು ನನ್ನ ದೇವರು ಎಂದು [ಅಂತಹವುಗಳ ಆರಾಧಕರೊಂದಿಗೆ] ಹೇಳಿದರು. ಅದೂ ಅಸ್ತಮಿಸಿದಾಗ, ನನಗೆ ನನ್ನ ಕರ್ತಾರ (ಅಲ್ಲಾಹ್ ನು) ಸರಿಯಾದ ದಾರಿ ತೋರಿಸದೇ ಹೋಗಿದ್ದರೆ ನಾನೂ ಸಹ (ನಿಮ್ಮಂತೆ) ತಪ್ಪುದಾರಿ ಹಿಡಿದವರ ಸಾಲಿಗೆ ಸೇರುವವನಾಗುತ್ತಿದ್ದೆ - ಎಂದು ಹೇಳಿದರು. (ಇನ್ನೊಮ್ಮೆ) ಅವರು ಉದಯಿಸಿದ ಸೂರ್ಯನನ್ನು ನೋಡಿ ಇದೇ ನನ್ನ ದೇವನು; ಇದು ಎಲ್ಲಕ್ಕಿಂತ ದೊಡ್ಡದು, ಎಂದು (ಆ ಜನರೊಂದಿಗೆ) ಹೇಳಿದರು. ನಂತರ ಅದೂ ಸಹ ಮುಳುಗಿದಾಗ, ಓ ನನ್ನ ಜನಾಂಗದವರೇ! ನೀವು ಯಾವುದನ್ನೆಲ್ಲ ದೇವರುಗಳನ್ನಾಗಿ ಮಾಡಿಕೊಂಡಿರುವಿರೋ, ನಾನು (ಅಂತಹ ಪಾಪದಿಂದ) ನನ್ನನ್ನು ಸಂಪೂರ್ಣವಾಗಿ ಮುಕ್ತವಾಗಿಸಿದ್ದೇನೆ ಎಂದು [ಏಕದೇವತ್ವದ ಬುನಾದಿಯನ್ನು] ಘೋಷಿಸಿದರು! {75-78}

ನಾನಂತು ಭೂಮಿ-ಆಕಾಶಗಳನ್ನು ಅಸ್ತಿತ್ವಕ್ಕೆ ತಂದವನೆಡೆಗೆ ಅತ್ಯಂತ ನಿಷ್ಠೆಯೊಂದಿಗೆ ತನ್ಮಯನಾಗಿ ನನ್ನ ಮುಖವನ್ನು ತಿರುಗಿಸಿ ಕೊಂಡಿರುವೆನು. (ಅವನ ದೇವತ್ವದಲ್ಲಿ) ಇತರರನ್ನೂ ಸೇರಿಸಿಕೊಂಡವರ ಪೈಕಿಯವನು ನಾನಲ್ಲ [ಎಂದು ಸಾರಿ ಬಿಟ್ಟರು]. {79}

(ಆ ಕಾರಣಕ್ಕಾಗಿ) ಅವರ ಜನಾಂಗವು ಅವರೊಂದಿಗೆ ಜಗಳಕ್ಕಿಳಿಯಿತು! ನೀವು ನನ್ನೊಂದಿಗೆ ಜಗಳಕ್ಕಿಳಿದಿರುವುದು ಅಲ್ಲಾಹ್ ನ ವಿಷಯದಲ್ಲೇನು? ವಾಸ್ತವದಲ್ಲಿ ಅವನೇ ನನಗೆ ನೇರಮಾರ್ಗ ತೋರಿಸಿಕೊಟ್ಟಿರುವನು! ಅವನ ದೇವತ್ವದಲ್ಲಿ ನೀವು ಯಾವುದನ್ನೆಲ್ಲ ಸೇರಿಸಿಕೊಂಡಿರುವಿರೋ ಅವುಗಳ ಬಗ್ಗೆ ನನಗೆ ಭಯವಿಲ್ಲ. ನನ್ನ ಕರ್ತಾರನು ಬಯಸದ ಹೊರತು ನನಗೆ ಯಾವ (ಹಾನಿಯೂ) ಉಂಟಾಗದು. ನನ್ನ ಕರ್ತನಾದರೋ ತನ್ನ ಜ್ಞಾನದ ಮೂಲಕ ಸರ್ವವ್ಯಾಪಿಯಾಗಿರುವನು. (ಇನ್ನಾದರೂ) ನೀವು ಪಾಠ ಕಲಿಯುವುದಿಲ್ಲವೇ? ಎಂದು (ಇಬ್ರಾಹೀಮ್ ರು) ಕೇಳಿದರು. {80}

ಅಲ್ಲಾಹ್ ನು ಅಂತಹ ಯಾವುದೇ ಪುರಾವೆಯನ್ನು ನಿಮಗೆ ಒದಗಿಸಿ ಕೊಡದಿದ್ದರೂ ನೀವು ಅವನ ದೇವತ್ವದಲ್ಲಿ ಇತರರನ್ನು ಸೇರಿಸಿಕೊಳ್ಳಲು ಹೆದರದಿರುವಾಗ, ನೀವೇ ಮಾಡಿಕೊಂಡಿರುವ ಈ (ಮಿಥ್ಯ) ದೇವರುಗಳಿಗೆ ನಾನು ಹೇಗೆ ತಾನೇ ಹೆದರಲಿ? ವಸ್ತುಸ್ಥಿತಿ ಹಾಗಿರುವಾಗ (ನಾನು ಮತ್ತು ನೀವೆಂಬ) ಈ ಎರಡು ಗುಂಪಿನಲ್ಲಿ ಯಾರು [ದೈವಿಕ ಶಿಕ್ಷೆಯಿಂದ] ಹೆಚ್ಚು ಸುರಕ್ಷಿತರು? ನೀವು ಒಂದು ವೇಳೆ ಬಲ್ಲವರು ಆಗಿರುತ್ತಿದ್ದರೆ?! {81}

ಇನ್ನು (ಅಲ್ಲಾಹ್ ನ ಏಕತ್ವದಲ್ಲಿ) ಯಾರೆಲ್ಲ ವಿಶ್ವಾಸವಿರಿಸುತ್ತಾರೋ, ತರುವಾಯ ಅವರು ತಮ್ಮ ಆ ವಿಶ್ವಾಸದಲ್ಲಿ [ಹುಸಿ ದೇವರುಗಳನ್ನು ಸೇರಿಸಿಕೊಳ್ಳುವಂತಹ] ಅನ್ಯಾಯವನ್ನು ಬೆರೆಸುವುದಿಲ್ಲವೋ, ಅಂತಹವರಿಗೆ ಖಂಡಿತಾ ಶಾಂತಿ-ಸುರಕ್ಷೆಗಳಿವೆ; ಮತ್ತು ಅವರು ಸರಿದಾರಿಯಲ್ಲಿ ಇರುವವರಾಗಿದ್ದಾರೆ! {82}

ಇದು ಇಬ್ರಾಹೀಮ್ ರಿಗೆ ಅವರ ಜನಾಂಗದ ವಿರುದ್ಧ ಅಂತಿಮವಾಗಿ ಸ್ಥಾಪಿಸಲು ನಾವು ನೀಡಿದ್ದ ನಿರ್ಣಾಯಕ ವಾದವಾಗಿತ್ತು. ನಾವು ಯಾರಿಗೆ ಬಯಸುವೆವೋ ಸ್ಥಾನಮಾನಗಳನ್ನು ಮೇಲೇರಿಸಿ ಕೊಡುತ್ತೇವೆ. ನಿಮ್ಮ ಕರ್ತಾರನಾದರೋ (ಪೈಗಂಬರರೇ,) ಅತ್ಯಂತ ವಿವೇಕಶಾಲಿಯೂ ಮಹಾ ಜ್ಞಾನಿಯೂ ಆಗಿರುವನು. {83}

ನಂತರ ಇಬ್ರಾಹೀಮ್ ರಿಗೆ ನಾವು ಇಸ್‌ಹಾಕ್ ರನ್ನು [ಮಗನಾಗಿ] ಮತ್ತು ಯಅಕೂಬ್ ರನ್ನು [ಮೊಮ್ಮಗನಾಗಿ] ನೀಡಿದೆವು. ಅವರಲ್ಲಿ ಪ್ರತಿಯೂಬ್ಬರಿಗೂ [ಏಕದೇವತ್ವದ] ನೇರವಾದ ಮಾರ್ಗವನ್ನು ನಾವು ತೋರಿಸಿಕೊಟ್ಟೆವು. ಅದಕ್ಕಿಂತ ಮುಂಚೆ ನಾವು (ಅದೇ) ನೇರ ಮಾರ್ಗವನ್ನು ನೂಹ್ ರಿಗೆ ತೋರಿಸಿಕೊಟ್ಟಿದ್ದೆವು. ಹಾಗೆಯೇ ಇಬ್ರಾಹೀಮ್ ರ ಸಂತತಿಯಲ್ಲಿ ದಾವೂದ್ ರಿಗೆ, ಸುಲೈಮಾನ್ ರಿಗೆ, ಅಯ್ಯೂಬ್ ರಿಗೆ, ಯೂಸುಫ್ ರಿಗೆ, ಮೂಸಾ ರಿಗೆ ಮತ್ತು ಹಾರೂನ್ ರಿಗೆ ಸಹ (ನಾವು ಅದೇ ನೇರಮಾರ್ಗವನ್ನು ನೀಡಿದ್ದೆವು). ಹೌದು, ನಾವು ಸದಾಚಾರ ಸಂಪನ್ನರನ್ನು ಹಾಗೆಲ್ಲ ಪುರಸ್ಕರಿಸುತ್ತೇವೆ. {84}

ಹಾಗೆಯೇ ಝಕರಿಯ್ಯಾ ರಿಗೆ, ಯಹ್ಯಾ ರಿಗೆ, ಈಸಾ ರಿಗೆ ಮತ್ತು ಇಲ್ಯಾಸ್ ರಿಗೆ ಸಹ! ಅವರೆಲ್ಲರೂ ಸಜ್ಜನರ ಸಾಲಿಗೆ ಸೇರಿದವರಾಗಿದ್ದರು. ಮತ್ತು ಇಸ್ಮಾಈಲ್ ರಿಗೆ, ಅಲ್‌ಯಸಅ ರಿಗೆ, ಯೂನುಸ್ ರಿಗೆ ಹಾಗೂ ಲೂತ್ ರಿಗೆ ಸಹ! ಅವರಲ್ಲಿ ಪ್ರತಿಯೊಬ್ಬರಿಗೂ ಲೋಕದ ಜನರ ಪೈಕಿ ಶ್ರೇಷ್ಠತೆಯನ್ನು ನಾವು ನೀಡಿದ್ದೆವು. ಹಾಗೆಯೇ ಅವರ ಪೂರ್ವಜರಿಂದ, ಅವರ ಸಂತತಿಯಿಂದ ಮತ್ತು ಅವರ ಸಹೋದರ ಸಂಬಂಧಿಗಳಿಂದ ಕೆಲವರನ್ನು ಆರಿಸಿ ನಂತರ (ಅದೇ ಏಕದೇವತ್ವದ) ನೇರಮಾರ್ಗದಲ್ಲಿ ನಾವು ಮುನ್ನಡೆಸಿದ್ದೆವು. {85-87}

ಅದು ಅಲ್ಲಾಹ್ ನ ದಾರಿಯಾಗಿದ್ದು ತನ್ನ ಉಪಾಸಕರಲ್ಲಿ ತಾನಿಚ್ಛಿಸಿದವರಿಗೆ ಅವನು ಅದನ್ನು ತೋರಿಸಿಕೊಡುತ್ತಾನೆ. ಆದರೆ ಅವರೂ ಸಹ ಇತರರನ್ನು ಆರಾಧಿಸಿರುತ್ತಿದ್ದರೆ ಖಂಡಿತವಾಗಿ ಅವರು ಮಾಡಿದ್ದ ಸತ್ಕರ್ಮಗಳೂ ವ್ಯರ್ಥವಾಗಿ ಹೋಗುತ್ತಿತ್ತು! {88}

ಆ (ನಮ್ಮ ದೂತರು)ಗಳಿಗೆ ನಾವು ಗ್ರಂಥವನ್ನು, (ಅದರ ಪ್ರಕಾರ) ತೀರ್ಪು ನೀಡಲು ಅಗತ್ಯವಾದ ಜಾಣ್ಮೆಯನ್ನು ಮತ್ತು ಪ್ರವಾದಿ ಪದವಿಯನ್ನು ದಯಪಾಲಿಸಿದ್ದೆವು. ಇನ್ನು [ಓ ಪೈಗಂಬರರೇ, ನಿಮ್ಮ ಅಭಿಸಂಬೋಧಿತರಾದ] ಈ ಜನರು ಅದನ್ನು ನಿರಾಕರಿಸುತ್ತಿದ್ದಾರೆ ಎಂದಾದರೆ (ನಿರಾಕರಿಸಲಿ ಬಿಡಿ, ಅವರಿಗೆ ಬದಲು) ನಾವು ಆ ವಾಸ್ತವವನ್ನು ನಿರಾಕರಿಸದ ಬೇರೆಯೇ ಒಂದು ಜನಸಮೂಹಕ್ಕೆ [ಅರ್ಥಾತ್ ಅದಾಗಲೇ ವಿಶ್ವಾಸಿಗಳಾದ ಜನರಿಗೆ] ಅದನ್ನು ಒಪ್ಪಿಸಿಯಾಗಿದೆ. {89}

ಅಲ್ಲಾಹ್ ನು ನೇರಮಾರ್ಗವನ್ನು ತೋರಿಸಿದ್ದುದು ಅಂತಹ (ದೂತರುಗಳಿಗೇ) ಆಗಿತ್ತು. ಅದ್ದರಿಂದ (ಓ ಪೈಗಂಬರರೇ) ಅವರು ನಡೆದ ಮಾರ್ಗವನ್ನು ನೀವೂ ಅನುಸರಿಸಿರಿ! [ಏಕದೇವೋಪಾಸನೆಯ ಕುರಿತು ನೀಡುತ್ತಿರುವ ಈ ಬೋಧನೆಗಾಗಿ] ನಾನು ನಿಮ್ಮಿಂದ ಯವುದೇ ಪ್ರತಿಫಲವನ್ನು ಕೇಳುತ್ತಿಲ್ಲ; ಇದು [ಅರ್ಥಾತ್ ಈ ಕುರ್‌ಆನ್ ನ ಬೋಧನೆಯು] ಲೋಕ ವಾಸಿಗಳಿಗಾಗಿ ಇರುವಂತಹ ಒಂದು ಉಪದೇಶ ಮಾತ್ರವಾಗಿದೆ ಎಂದು ನೀವು ಸಾರಿರಿ. {90}

ಮನುಷ್ಯರಲ್ಲಿ ಯಾರಿಗೂ ಅಲ್ಲಾಹ್ ನು ಏನನ್ನೂ ಇಳಿಸಿ ಕೊಟ್ಟಿಲ್ಲವೆಂದು ಹೇಳಿ [ಈ ಕುರ್‌ಆನ್ ಅನ್ನು ಅಲ್ಲಗಳೆದವರು] ಅಲ್ಲಾಹ್ ನ ಮಹತ್ವವನ್ನು ಮನಗಾಣಬೇಕಾದ ರೀತಿಯಲ್ಲಿ ಮನಗಂಡಿಲ್ಲ! ಮನುಷ್ಯರಿಗೆಲ್ಲ ಒಂದು ಬೆಳಕಾಗಿ, ಒಂದು ಮಾರ್ಗದರ್ಶನವಾಗಿ (ಪ್ರವಾದಿ) ಮೂಸಾ ರು ತನ್ನೊಂದಿಗೆ ತಂದಿದ್ದ ಆ (ತೋರಾ) ಗ್ರಂಥವನ್ನು ಇಳಿಸಿಕೊಟ್ಟವರು ಯಾರು ಎಂದು ಕೇಳಿರಿ. ಆದರೆ (ಯಹೂದ್ಯರೇ) ನೀವದನ್ನು ಹಾಳೆ ಹಾಳೆಗಳನ್ನಾಗಿ ವಿಂಗಡಿಸಿ ಸ್ವಲ್ಪವನ್ನು ಮಾತ್ರ ಸಾರ್ವಜನಿಕವಾಗಿ ತೋರಿಸಿ ಅದರ ಹೆಚ್ಚಿನ ಭಾಗವನ್ನು ಅಡಗಿಸಿ ಇಡುವವರಾಗಿರುವಿರಿ; ನಿಮಗಾಗಲಿ ನಿಮ್ಮ ತಂದೆ-ತಾತಂದಿರಿಗಾಗಲಿ ತಿಳಿಯದೇ ಇದ್ದುದನ್ನು (ಅದರ ಮೂಲಕ) ನಿಮಗೆ ತಿಳಿಸಿ ಕೊಡಲಾಗಿತ್ತು [ಎಂದೂ ಅವರಿಗೆ ನೆನಪಿಸಿರಿ]! (ಅದನ್ನು ಇಳಿಸಿದವನು) ಅಲ್ಲಾಹ್ ನು ಎಂದಷ್ಟೇ ಹೇಳಿ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ. ತಮ್ಮ ನಿರರ್ಥಕ ವಾದಗಳಲ್ಲಿ ಅವರು ಮಗ್ನರಾಗಿರಲಿ, ಅವರು ವಿನೋದಿಸಲಿ. {91}

ಹಾಗೆಯೇ ಈ ಗ್ರಂಥವನ್ನು ಅನುಗ್ರಹೀತವೂ ಇದಕ್ಕಿಂತ ಮುಂಚಿನ ಗ್ರಂಥಗಳನ್ನು ಸಮರ್ಥಿಸುವ ಗ್ರಂಥವಾಗಿಯೂ; ಹಾಗೂ ಉಮ್ಮುಲ್ ಕುರಾ [ಅರ್ಥಾತ್ ಮಕ್ಕಃ ಪಟ್ಟಣ] ಮತ್ತು ಅದರ ಸುತ್ತಮುತ್ತ ವಾಸವಿರುವವರನ್ನು ನೀವು (ಇದರ ಮೂಲಕ) ಎಚ್ಚರಿಸುವ ಸಲುವಾಗಿಯೂ ನಾವು ಇದನ್ನು ಇಳಿಸಿರುತ್ತೇವೆ. ಇನ್ನು ಯಾರಿಗೆ ಪರಲೋಕದಲ್ಲಿ ವಿಶ್ವಾಸವಿದೆಯೋ ಅವರು ಇದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಅವರು ತಮ್ಮ (ದೈನಂದಿನ) ನಮಾಝ್ ಗಳನ್ನು ಕಾಪಾಡಿ ಕೊಳ್ಳುತ್ತಾರೆ. {92}

ಅಲ್ಲಾಹ್ ನ ಕುರಿತಂತೆ ಸುಳ್ಳುಗಳನ್ನು ಹೆಣೆಯುವವನಿಗಿಂತ ಅಥವಾ ಯಾವುದೇ ದಿವ್ಯಸಂದೇಶ ನೀಡಲ್ಪಡದಿದ್ದರೂ [ಪ್ರವಾದಿಗಳಿಗೆ ನೀಡಲ್ಪಡುವಂತಹ] ದಿವ್ಯಸಂದೇಶ ನನಗೆ ನೀಡಲ್ಪಟ್ಟಿದೆ ಎಂದು ವಾದಿಸುವವನಿಗಿಂತ; ಹಾಗೆಯೇ ಅಲ್ಲಾಹ್ ನು ಇಳಿಸಿರುವ (ಆ ಕುರ್‌ಆನ್) ಗೆ ಸರಿಸಮವಾದುದನ್ನು ಶೀಘ್ರದಲ್ಲೇ ನಾನೂ ಇಳಿಸಲಿದ್ದೇನೆ ಎಂದು ಹೇಳುವವನಿಗಿಂತ ದೊಡ್ಡ ಅಕ್ರಮಿ ಯಾರು ತಾನೇ ಇರುವನು? ಅಂತಹ ದುಷ್ಟರು ಮರಣ ಸಂಕಟದಲ್ಲಿ ಒದ್ದಾಡುವಾಗ ಮಲಕ್ ಗಳು ಅವರೊಂದಿಗೆ ನಿಮ್ಮ ಆತ್ಮಗಳನ್ನು ಈಗ ಹೊರಕ್ಕೆ ತಳ್ಳಿರಿ ಎಂದು ಕೈ ಚಾಚುತ್ತಾ ಹೇಳುವುದನ್ನು (ಪೈಗಂಬರರೇ) ನೀವು ಕಾಣುವಂತೆ ಆಗಿರುತ್ತಿದ್ದರೆ! ಅಲ್ಲಾಹ್ ನ ಮೇಲೆ ತರವಲ್ಲದ್ದನ್ನು ನೀವು ಆಪಾದಿಸಿದ್ದ ಕಾರಣಕ್ಕಾಗಿ, ಮತ್ತು ಅಹಂಕಾರ ಮೆರೆದು ಅವನ ವಚನಗಳನ್ನು ಅಲ್ಲಗಳೆದ ಕಾರಣಕ್ಕಾಗಿ ಪ್ರತಿಫಲವಾಗಿ ಇಂದು ಅಪಮಾನ ಭರಿತ ಶಿಕ್ಷೆ ನಿಮಗೆ ನೀಡಲಾಗುವುದು [ಎಂದು ಹೇಳುತ್ತಾ ಅವರ ಜೀವಹರಣ ಮಾಡುವುದನ್ನು ನೀವು ನೋಡಬೇಕಿತ್ತು]! {93}

[ಅಂದು ಆ ಅಕ್ರಮಿಗಳೊಂದಿಗೆ ಹೇಳಲಾಗುವುದು:] ಕೊನೆಗೂ ನೀವೆಲ್ಲ ಪ್ರತ್ಯೇಕ ಪ್ರತ್ಯೇಕವಾಗಿ - ಹೇಗೆ ನಿಮ್ಮನ್ನು ಮೊದಲ ಬಾರಿಗೆ ನಾವು ಸೃಷ್ಟಿಸಿದ್ದೆವೋ ಹಾಗೆ - ಈಗ ನಮ್ಮ ಮುಂದೆ ಹಾಜರಾಗುವಂತಾಗಿದೆ! ನಾವು ನಿಮಗೆ ದಯಪಾಲಿಸಿದ್ದ ಎಲ್ಲವನ್ನು ನೀವು ನಿಮ್ಮ ಹಿಂದೆಯೇ (ಭೂಲೋಕದಲ್ಲಿ) ಬಿಟ್ಟು ಬಂದಿರುವಿರಿ. ಯಾರನ್ನೆಲ್ಲ ನೀವು ಅಲ್ಲಾಹ್ ನ ಸಹಭಾಗಿಗಳೆಂದು ವಾದಿಸಿ ನಿಮ್ಮ ಪರವಾಗಿ (ಅಲ್ಲಾಹ್ ಸನ್ನಿಧಿಯಲ್ಲಿ) ಮಧ್ಯಸ್ಥಿಕೆ ವಹಿಸುವರು ಎಂದು ಬಗೆದಿದ್ದಿರೋ ಅವರು ಈಗ ನಿಮ್ಮ ಜೊತೆಯಲ್ಲಿರುವುದು ನಾವು ಕಾಣುತ್ತಿಲ್ಲವಲ್ಲ! ನಿಮ್ಮ ನಡುವಿನ ನಂಟು ಕಡಿದೇ ಹೋಯಿತು! ಮತ್ತು ನಿಮ್ಮ ಆ ವಾದವು ನಿಮ್ಮನ್ನು ಬಿಟ್ಟಗಲಿಯಾಯಿತು! {94}

ವಾಸ್ತವದಲ್ಲಿ ಕಾಳು ಮತ್ತು ಬೀಜಗಳು ಮೊಳಕೆಯೊಡೆಯುವಂತೆ ಮಾಡುವವನು ಅಲ್ಲಾಹ್ ನು! ಅವನು ಜೀವಿಯನ್ನು ನಿರ್ಜೀವಿಯಿಂದ ಹೊರತರುವನು ಮತ್ತು ನಿರ್ಜೀವಿಯನ್ನು ಜೀವಿಯಿಂದ ಹೊರತರುವನು. ಹಾಗೆ ಮಾಡುವವನೇ ಅಲ್ಲಾಹ್ ನು! ಅದಾಗ್ಯೂ ನೀವು ಎಲ್ಲಿ ದಾರಿ ತಪ್ಪಿ ಅಲೆಯುತ್ತಿರುವಿರಿ?! {95}

(ಕತ್ತಲನ್ನು) ಸೀಳಿ ಮುಂಜಾವು ಹೊರಬರುವಂತೆ ಮಾಡಿರುವನು; ರಾತ್ರಿಯನ್ನು ವಿಶ್ರಾಂತಿಗಾಗಿ ಮಾಡಿರುವನು; ಸೂರ್ಯ ಚಂದ್ರರನ್ನು (ಕಾಲ)ಗಣನೆಗಾಗಿ ನಿಯೋಗಿಸಿರುವನು. ಇವೆಲ್ಲ ಪ್ರಚಂಡನೂ ಸರ್ವಜ್ಞನೂ ವಿಧಿಗೊಳಿಸಿರುವ ವಿಷಯಗಳು. {96}

ನಕ್ಷತ್ರಗಳನ್ನು ಬಳಸಿ ನೀವು ಭೂಮಿ ಮತ್ತು ಸಮುದ್ರಗಳ ಗಾಢಾಂಧಕಾರದಲ್ಲಿಯೂ ದಾರಿಯನ್ನು ಕಂಡುಕೊಳ್ಳುವಂತಾಗಲು, ನಿಮಗಾಗಿ ಅದನ್ನು ಸಜ್ಜುಗೊಳಿಸಿದವನು ಅವನೇ! ತಿಳಿದು ಕೊಳ್ಳುವ ಜನರಿಗಾಗಿ ನಾವು ಪುರಾವೆಗಳನ್ನು ಸ್ಪಷ್ಟವಾಗಿ ವಿವರಿಸಿದ್ದೇವೆ! {97}

ಅವನೇ ನಿಮ್ಮೆಲ್ಲರನ್ನು ಕೇವಲ ಒಂದು ಜೀವಾತ್ಮದಿಂದ ಅಸ್ತಿತ್ವಕ್ಕೆ ತಂದಿರುವನು; ಮತ್ತು ಪ್ರತಿಯೊಂದು ಆತ್ಮಕ್ಕೂ ಒಂದು ವಾಸ್ತವ್ಯ ಮತ್ತು ಒಂದು ಕೂಡುವಿಕೆ ನಿಶ್ಚಿತವಾಗಿದೆ. ಅರ್ಥೈಸಿಕೊಳ್ಳುವ ಜನರಿಗಾಗಿ ನಾವು ನಿದರ್ಶನಗಳನ್ನು ಚೆನ್ನಾಗಿ ವಿವರಿಸಿದ್ದೇವೆ! {98}

ಅವನೇ ಮೋಡಗಳಿಂದ ಮಳೆ ಸುರಿಸುವವನು! ತರುವಾಯ ಅದರ ಮೂಲಕ ಸಕಲ ರೀತಿಯ ಸಸಿಗಳನ್ನೂ ನಾವು ಚಿಗುರಿಸುತ್ತೇವೆ. ನಂತರ ಅದರಿಂದ ಹಚ್ಚೆ ಹಸಿರು ಹೊಲಗಳನ್ನು ಬೆಳೆಸುತ್ತೇವೆ. ಅದರಿಂದಲೇ ನಾವು ಒಂದಕ್ಕೊಂದು ಸೇರಿಕೊಂಡಿರುವ ಸ್ಥಿತಿಯಲ್ಲಿ ಧಾನ್ಯಗಳನ್ನು ಹೊರಹೊಮ್ಮಿಸುತ್ತೇವೆ. ಹಾಗೆಯೇ ಖರ್ಜೂರದ ಮರಗಳ ಪಾಳೆಯಿಂದ ಕೆಳಕ್ಕೆ ಬಾಗಿ ನಿಂತ ಖರ್ಜೂರದ ಗೊನೆಗಳನ್ನು ಬೆಳೆಸುತ್ತೇವೆ. ಅಂತೆಯೇ ದ್ರಾಕ್ಷೆಯ, ಆಲಿವ್ ಹಣ್ಣಿನ ಮತ್ತು ದಾಳಿಂಬೆಯ ತೋಪುಗಳನ್ನೂ ಬೆಳೆಸುತ್ತೇವೆ! (ಅವುಗಳ ಹಣ್ಣುಗಳು) ಪರಸ್ಪರ ಹೋಲಿಕೆ ಇರುವಂತಹದ್ದೂ ಇವೆ; ವಿಭಿನ್ನವಾದುದೂ ಇವೆ! ಫಲಬಿಡುವ ಸಮಯದಲ್ಲಿ ನೀವು ಅವುಗಳ ಫಲವನ್ನೂ ಮತ್ತು ಅವು ಬಲಿತು ಮಾಗುವುದನ್ನೂ ಗಮನಿಸಿರಿ. [ನಮ್ಮ ದೇವತ್ವದಲ್ಲಿ] ನಂಬಿಕೆ ಇರುವ ಜನಸಮೂಹಕ್ಕೆ ಇವೆಲ್ಲದರಲ್ಲಿ ಖಂಡಿತಾ ದೃಷ್ಟಾಂತಗಳು ಇವೆ! {99}

ಇಷ್ಟಾಗಿಯೂ ಜನರು ಅಲ್ಲಾಹ್ ನ ದೇವತ್ವದಲ್ಲಿ ಯಕ್ಷಗಳನ್ನು ಸೇರಿಸಿಕೊಂಡಿದ್ದಾರೆ. ಅವನಾದರೋ ಅವುಗಳನ್ನು ಸೃಷ್ಟಿಸಿದವನು! ಯಾವ ಅರಿವೂ ಇಲ್ಲದೆ ಆ ಜನರು ಅವನಿಗೆ ಪುತ್ರರೂ ಪುತ್ರಿಯರೂ ಇರುವರೆಂದು ವಾದಿಸುತ್ತಿದ್ದಾರೆ. ಅವನಾದರೋ ಪರಮ ಪಾವನನು ಮತ್ತು ಅವರು ನೀಡುತ್ತಿರುವ ವರ್ಣನೆಗಿಂತ ಎಷ್ಟೋ ಮಿಗಿಲಾದವನು. {100}

ಅವನೇ ಭೂಮಿ ಆಕಾಶಗಳನ್ನು ಶೂನ್ಯದಿಂದ ಅಸ್ತಿತ್ವಕ್ಕೆ ತಂದವನು. ಅವನಿಗೆ ಪತ್ನಿಯೇ ಇಲ್ಲದಿರುವಾಗ ಒಬ್ಬ ಮಗನಿರುವುದು ಹೇಗೆ ಸಾಧ್ಯ! ಸಕಲವನ್ನೂ ಸೃಷ್ಟಿ ಮಾಡಿದವನು ಮತ್ತು ಅವನು ಎಲ್ಲ ವಿಷಯಗಳ ಕುರಿತಂತೆ ಅಪ್ರತಿಮ ಜ್ಞಾನಿಯಾಗಿದ್ದಾನೆ. {101}

ಅಂತಹ ಅಲ್ಲಾಹ್ ನೇ ನಿಮ್ಮ ದೇವನು! ಅವನ ಹೊರತು ಬೇರೆ ಯಾವ ದೇವರೂ ಇಲ್ಲ. ಸರ್ವವನ್ನೂ ಸೃಷ್ಟಿಸಿದವನು ಅವನು. ಆದ್ದರಿಂದ ಅವನನ್ನೇ ಆರಾಧಿಸಿರಿ. ಸಮಸ್ತ ವಿಷಯಗಳ ಮೇಲುಸ್ತುವಾರಿ ಅವನಿಗೇ ಸೇರಿರುತ್ತದೆ. {102}

ಅವನನ್ನು ಗ್ರಹಿಸುವುದು ದೃಷ್ಟಿಗಳಿಗೆ ಸಾಧ್ಯವಿಲ್ಲ ಬದಲಾಗಿ ಎಲ್ಲ ದೃಷ್ಟಿಗಳು ಅವನ ಗ್ರಹಿಕೆಗೆ ಒಳಪಟ್ಟಿರುತ್ತದೆ. ಅವನು ಸೂಕ್ಷ್ಮಮತಿಯೂ ಎಲ್ಲಾ ಅರಿತವನೂ ಆಗಿರುವನು. {103}

ನಿಮ್ಮೊಡೆಯನ ವತಿಯಿಂದ ನಿಮ್ಮ ಬಳಿಗೆ [ಒಳಿತು ಕೆಡುಕನ್ನು ಅರಿಯಲು ಬೇಕಾದ] ಅಂತಃದೃಷ್ಟಿ ಇದೀಗ ಬಂದು ಬಿಟ್ಟಿದೆ. ಹಾಗಿರುವಾಗ ಯಾರು (ಅದರ ಮೂಲಕ) ನೋಡುವರೋ ಅದರ ಪ್ರಯೋಜನ ಸ್ವತಃ ಅವರಿಗೇ. ಯಾರಾದರೂ ಕುರುಡುತನ ತೋರಿದರೆ ಅದರ ನಷ್ಟವೂ ಸ್ವತಃ ಅವರಿಗೇ. [ತೀರ್ಮಾನವು ನಿಮ್ಮ ಕೈಲ್ಲಿರುವಾಗ] ನಾನು ನಿಮಗೆ ರಕ್ಷಕನಾಗಿ ನಿಲ್ಲಲಾರೆ! {104}

ನೀವು ನಮಗೆ (ಅರ್ಥವಾಗುವಂತೆ) ಬೋಧನೆ ಮಾಡಿಯಾಗಿದೆ ಎಂದು ಅವರು (ಕನಿಷ್ಟ ತಮ್ಮೋಳಗೇ) ಹೇಳುವಂತಾಗಲೂ; ಹಾಗೂ ತಿಳಿದು ಕೊಳ್ಳುವಂತಹ ಜನರಿಗೆ ಸ್ಪಷ್ಟವಾಗಿ ವಿಶದಪಡಿಸುವ ಸಲುವಾಗಿಯೂ ನಾವು (ನಮ್ಮ) ವಚನಗಳನ್ನು ಹೀಗೆ ನಾನಾ ರೀತಿಯಲ್ಲಿ ವಿವರಿಸುತ್ತಿರುತ್ತೇವೆ. {105}

(ಪೈಗಂಬರರೇ), ನಿಮಗೆ ನಿಮ್ಮ ಕರ್ತನ ವತಿಯಿಂದ ದಿವ್ಯಬೋಧನೆಯ ಮೂಲಕ ಯಾವ (ಕುರ್‌ಆನ್) ಅನ್ನು ನೀಡಲಾಗಿತ್ತಿದೆಯೋ ನೀವು ಅದನ್ನು ಅನುಸರಿಸಿ ನಡೆಯಿರಿ; ಅವನ ಹೊರತು ಬೇರಾರೂ ದೇವರಲ್ಲ! (ಸತ್ಯಾಂಶ ಅರ್ಥವಾಗಿಯೂ) ಬೇರೆಯವರನ್ನು ದೇವರನ್ನಾಗಿಸಿಕೊಂಡ ಜನರಿಂದ ಇನ್ನು ನೀವು ದೂರ ಸರಿದುಕೊಳ್ಳಿ. ಏಕೆಂದರೆ ಅಲ್ಲಾಹ್ ನು (ಬಲವಂತ ಪಡಿಸಲು) ಬಯಸಿದ್ದರೆ ಅನ್ಯರನ್ನು ಅರಾಧಿಸುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಮತ್ತು (ಪೈಗಂಬರರೇ) ನಿಮ್ಮನ್ನು ಅವರ ಉಸ್ತುವಾರಿ ನೋಡಿಕೊಳ್ಳಲು ನಾವು ನೇಮಿಸಿಲ್ಲ. ಹಾಗೆಯೇ ನಿಮಗೆ ಅವರ ಮೇಲಿನ ಹೋಣೆಗಾರಿಕೆಯೂ ಇಲ್ಲ. {106-107}

(ಓ ಮುಸ್ಲಿಮ್ ಸಮುದಾಯವೇ), ಅಲ್ಲಾಹ್ ನನ್ನು ಬಿಟ್ಟು ಅವರು ಮೊರೆಯಿಡುತ್ತಿರುವ [ಮೂರ್ತಿ ಮುಂತಾದ ಮಿಥ್ಯ ಆರಾಧ್ಯರನ್ನು] ನೀವು ನಿಂದಿಸಬಾರದು. ಹಾಗೆ ಮಾಡಿದರೆ ಅವರೂ ಸಹ ತಿಳುವಳಿಕೆ ಇಲ್ಲದ ಕಾರಣ ಅತಿಕ್ರಮವೆಸಗಿ ಅಲ್ಲಾಹ್ ನನ್ನು ನಿಂದಿಸಬಹುದು. ಪ್ರತಿಯೊಂದು ಜನಾಂಗಕ್ಕೂ ಅವರವರು ಮಾಡುವ ಕರ್ಮಗಳನ್ನು ನಾವು ಹಾಗೆ ಚಂದಗಾಣಿಸಿ ಕೊಟ್ಟಿರುತ್ತೇವೆ. ಕೊನೆಗೆ ಅವರೆಲ್ಲ ಮರಳ ಬೇಕಾದುದು ಅವರ ಕರ್ತೃವಿನ ಕಡೆಗೇ! ಆಗ ಅವನು ಅವರೆಸಗಿದ ಕರ್ಮಗಳ ಪರಿಣಾಮದ ಕುರಿತು ಅವರಿಗೆ ತಿಳಿಸಲಿರುವನು. {108}

ತಮ್ಮ ಬಳಿಗೆ ಒಂದು ನಿದರ್ಶನವಾದರೂ ಬರುವಂತಾಗಿದ್ದರೆ ಖಂಡಿತಾ ಅದನ್ನು ಒಪ್ಪಿಕೊಳ್ಳುವೆವು ಎಂದು ಅವರು ಅಲ್ಲಾಹ್ ನ ಹೆಸರಿನಲ್ಲಿ ಆಣೆಯ ಮೇಲೆ ಆಣೆ ಹಾಕಿ ಹೇಳುತ್ತಿದ್ದಾರೆ. (ಪೈಗಂಬರರೇ,) ನಿದರ್ಶನಗಳೆಲ್ಲ ಇರುವುದು ಅಲ್ಲಾಹ್ ನ ಬಳಿ ಮಾತ್ರ ಎಂದು ಅವರಿಗೆ ಹೇಳಿ ಬಿಡಿ. ಇನ್ನು ಅದು ಅವರ ಬಳಿಗೆ ಬಂದ ಬಳಿಕವೂ ಅವರು ಅದನ್ನು ಒಪ್ಪಿಕೊಳ್ಳದಿರುವ ಒಂದು ಪರಿಸ್ಥಿತಿಯನ್ನು (ವಿಶ್ವಾಸಿಗಳೇ) ನೀವು ಏನೆಂದು ಅರ್ಥಮಾಡಿಕೊಳ್ಳುವಿರಿ?! {109}

ಅವರು (ನಿದರ್ಶವನ್ನು) ಪ್ರಥಮ ಬಾರಿಗೆ ಕಂಡಾಗ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿದಂತೆ, ನಾವು ಅವರ ಹೃದಯಗಳನ್ನೂ ಕಣ್ಣುಗಳನ್ನೂ ತಿರುಗಿಸಿ ಬಿಡುವೆವು. [ಆದ್ದರಿಂದ ಅವರಿನ್ನು ನಿದರ್ಶನಗಳನ್ನು ಕಂಡರೂ ವಿಶ್ವಾಸಿಗಳಾಗಲಾರರು]; ಮತ್ತು ತಮ್ಮದೇ ಉದ್ಧಟತನದಲ್ಲಿ ಅಂಧರಾಗಿ ಅಲೆದಾಡಲು ನಾವು ಅವರನ್ನು ಬಿಟ್ಟುಬಿಡುವೆವು. {110}

✽8✽ ಒಂದು ವೇಳೆ ಅವರತ್ತ ಮಲಕ್ ಗಳನ್ನು ಇಳಿಸಿರುತ್ತಿದ್ದರೂ, (ಅವರ ಬೇಡಿಕೆತಂತೆ) ಮೃತರು ಅವರೊಡನೆ ಮಾತನಾಡಲು ತೊಡಗಿದ್ದರೂ, ಸಕಲ ಸೃಷ್ಟಿಗಳನ್ನು ಅವರ ಮುಂದೆ ನಾವು ಗುಂಪು ಗುಂಪಾಗಿ ಒಟ್ಟು ಸೇರಿಸಿದ್ದರೂ, ಅಲ್ಲಾಹ್ ನ ಇಚ್ಛೆಯೊಂದಿಲ್ಲದಿದ್ದರೆ ಅವರು ವಿಶ್ವಾಸಿಗಳಾಗುತ್ತಿರಲಿಲ್ಲ. ಆದರೆ ಅವರ ಪೈಕಿಯ ಹೆಚ್ಚಿನವರು ಅಜ್ಞಾನದಿಂದ ವರ್ತಿಸುತ್ತಿದ್ದಾರೆ. {111}

ಹಾಗೆಯೇ ಪ್ರತಿಯೊಬ್ಬ ಪ್ರವಾದಿಗೂ ನಾವು ಮನುಷ್ಯ ವರ್ಗಕ್ಕೆ ಸೇರಿದ ಮತ್ತು ಜಿನ್ನ್ (ಅರ್ಥಾತ್ ಯಕ್ಷ) ಸಮೂಹಕ್ಕೆ ಸೇರಿದ ಧೂರ್ತ ಜನರನ್ನು ಶತ್ರುಗಳನ್ನಾಗಿ ಮಾಡಿರುವೆವು. ಅವರು ಪರಸ್ಪರರನ್ನು ಮನಮೋಹಕ ಮಾತುಗಳಿಂದ ಪ್ರೇರೇಪಿಸಿ (ಒಬ್ಬರನ್ನೊಬ್ಬರು) ವಂಚಿಸುತ್ತಿರುತ್ತಾರೆ. (ಅವರು ಹಾಗೆ ಮಾಡಬಾರದೆಂದು) ನಿಮ್ಮ ಕರ್ತಾರನು ಇಚ್ಚಿಸಿರುತ್ತಿದ್ದರೆ ಹಾಗೆ ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ (ಪೈಗಂಬರರೇ) ನೀವಿನ್ನು ಅವರನ್ನೂ ಅವರ ಪಾಡಿಗೆ ಬಿಟ್ಟು ಬಿಡಿ; ಅಂತೆಯೇ [ಪರಸ್ಪರರನ್ನು ವಂಚಿಸಲು] ಅವರು ಕಟ್ಟುತ್ತಿರುವ ಕಥೆಗಳನ್ನೂ! {112}

(ಅಷ್ಟೇ ಅಲ್ಲ), ಪರಲೋಕವನ್ನು ಒಪ್ಪಿಕೊಳ್ಳಲು ತಯಾರಿಲ್ಲದವರ ಹೃದಯಗಳು (ವಂಚನೆಯ ಆ ಮನಮೋಹಕ ಮಾತುಗಳತ್ತ) ವಾಲುವಂತಾಗಲು; ಮತ್ತು ಅವರು ಅದನ್ನು ಮೆಚ್ಚಿಕೊಳ್ಳುವಂತಾಗಲು; ಹಾಗೂ ಯಾವ (ಪಾಪವನ್ನು) ಸಂಪಾದಿಸಿಕೊಳ್ಳಬೇಕೋ ಅದನ್ನು ಅವರು ಸಂಪಾದಿಸಿಕೊಳ್ಳುವಂತಾಗಲು (ನಾವು ಅದನ್ನು ಮಾಡಿರುವೆವು)! {113}

ಅಲ್ಲಾಹ್ ನನ್ನು ಬಿಟ್ಟು ಬೇರೊಬ್ಬ ತೀರ್ಪುಗಾರನಿಗಾಗಿ ನಾನು ಹುಡುಕಬೇಕೇ? ಅದೂ ಸಹ (ನಿಯಮಗಳನ್ನು) ಸವಿವರವಾಗಿ ತಿಳಿಸುತ್ತಿರುವ ಈ ಗ್ರಂಥವನ್ನು ಇಳಿಸಿದವನು ಅವನೇ ಆಗಿರುವಾಗ - (ಎಂದು ಅವರೊಂದಿಗೆ ಕೇಳಿ). ಯಾರಿಗೆ (ಈ ಹಿಂದೆ) ನಾವು ಗ್ರಂಥವನ್ನು ದಯಪಾಲಿಸಿದ್ದೆವೋ ಅವರಿಗೆ ಇದು ನಿಮ್ಮ ಕರ್ತೃವಿನ ವತಿಯಿಂದ ವಸ್ತುನಿಷ್ಠವಾಗಿ ಇಳಿಸಲಾಗಿದೆ ಎಂಬುದು ಖಂಡಿತ ತಿಳಿದಿದೆ! ಆದ್ದರಿಂದ ನೀವು (ಆ ವಿಷಯದಲ್ಲಿ) ಸಂಶಯವಿರುವರಾಗ ಬೇಡಿ. {114}

ನಿಮ್ಮ ಕರ್ತಾರನು [ದುಷ್ಟ ಜನರ ಬಗ್ಗೆ ಅಂದು ಹೇಳಿದ್ದ] ಮಾತು ವಸ್ತುನಿಷ್ಠವಾಗಿಯೂ ನ್ಯಾಯಬದ್ಧವಾಗಿಯೂ ಪರಿಪೂರ್ಣತೆಯನ್ನು ತಲುಪಿರುತ್ತದೆ! ಅವನ ಮಾತನ್ನು ಬದಲಾಯಿಸುವವರು ಯಾರೂ ಇಲ್ಲ. ಅವನು ಎಲ್ಲವನ್ನು ಕೇಳಿಸಿಕೊಳ್ಳುವವನೂ ಅರಿತವನೂ ಆಗಿರುವನು. {115}

ಭೂಮಿಲ್ಲಿರುವ ಹೆಚ್ಚಿನವರು (ಹೇಗಿರುತ್ತಾರೆಂದರೆ) ಒಂದು ವೇಳೆ ನೀವು ಅವರನ್ನು ಅನುಸರಿಸಿದರೆ ನಿಮ್ಮನ್ನು ಅವರು ಅಲ್ಲಾಹ್ ನ ಮಾರ್ಗದಿಂದ ವಿಮುಖರಾಗುವಂತೆ ಮಾಡಿ ಬಿಡುವರು! ಅವರು ಊಹಾಪೋಹಗಳ ಹೊರತು ಬೇರೇನನ್ನೂ ಅನುಸರಿಸುವುದಿಲ್ಲ; ಕೇವಲ ಭ್ರಮೆ ಗುಮಾನಿಗಳನ್ನು ಆಧರಿಸಿರುತ್ತಾರಷ್ಟೆ! ವಾಸ್ತವದಲ್ಲಿ ಯಾರು ಅವನ ದಾರಿಯಿಂದ ತಪ್ಪಿರುವರು ಎಂಬುದು ನಿಮ್ಮ ಕರ್ತೃವಿಗೆ ಬಹಳ ಚೆನ್ನಾಗಿ ತಿಳಿದಿದೆ. ಮಾತ್ರವಲ್ಲ, ನೇರವಾದ ದಾರಿಯಲ್ಲಿರುವವರ ಬಗ್ಗೆಯೂ ಅವನಿಗೆ ಸರಿಯಾದ ಜ್ಞಾನವಿದೆ. {116-117}

ಆದ್ದರಿಂದ (ಓ ಜನರೇ) ನೀವು ಅಲ್ಲಾಹ್ ನ ವಚನಗಳಲ್ಲಿ ನಂಬಿಕೆ ಇಟ್ಟವರಾದರೆ ಯಾವ (ಮೃಗ ಪಕ್ಷಿಗಳನ್ನು) ಅವನ ಹೆಸರು ಉಚ್ಛರಿಸಿ (ಹಲಾಲ್ ಮಾಡಲಾಗಿದೆಯೋ) ಅದರಿಂದ ತಿನ್ನಿರಿ. ಅಲ್ಲಾಹ್ ನ ಹೆಸರು ಉಚ್ಛರಿಸಿ ಯಾವುದನ್ನು (ಹಲಾಲ್ ಮಾಡಲಾಗಿದೆಯೋ) ಅದನ್ನು ನೀವು ತಿನ್ನದೇ ಇರಲು ನಿಮಗೇನಾಗಿದೆ? [ಪ್ರಾಣಸಂಕಟದಂತಹ ಸಂದಿಗ್ಧ ಸ್ಥಿತಿಗಳಲ್ಲಿ ನಿಷಿದ್ಧವಾದವುಗಳನ್ನೂ ತಿನ್ನಲು ಸ್ವಾಭಾವಿಕವಾಗಿ] ನೀವು ನಿರ್ಬಂಧಿತರಾಗಿ ಹೋಗುವ ಹೊರತು, ಉಳಿದಂತೆ ಯಾವುದನ್ನೆಲ್ಲ ಅವನು ನಿಮ್ಮ ಪಾಲಿಗೆ ನಿಷೇಧಿಸಿದ್ದಾನೆ ಎಂಬುದನ್ನು (ಇದೇ ಕುರ್‌ಆನ್ ನಲ್ಲಿ) ನಿಮಗೆ ವಿವರಿಸಿದ್ದಾನೆ! ಹೆಚ್ಚಿನವರು ಯಾವುದೇ ಜ್ಞಾನವಿಲ್ಲದೆ ಕೇವಲ ತಮ್ಮ ಮನಸ್ಸಿಗೆ ತೋಚುವ ವಿಚಾರಗಳ ಮೂಲಕ (ಜನರನ್ನು) ದಾರಿಗೆಡಿಸುತ್ತಿದ್ದಾರೆ. ನಿಶ್ಚಯವಾಗಿಯೂ (ಓ ಪೈಗಂಬರರೇ) ನಿಮ್ಮ ಕರ್ತಾರನು ಅಕ್ರಮವೆಸಗುತ್ತಿರುವವರ ಬಗ್ಗೆ ಚೆನ್ನಾಗಿ ತಿಳಿದವನಾಗಿದ್ದಾನೆ. {118-119}

ಪಾಪ ಕೃತ್ಯಗಳ ಪೈಕಿ ಗೋಚರವಾಗುವುದನ್ನೂ ಗೌಪ್ಯವಾಗಿರುವುದನ್ನೂ (ಜನರೇ) ನೀವು ತ್ಯಜಿಸಿರಿ. ಪಾಪಕಾರ್ಯಗಳನ್ನು ಮಾಡುತ್ತಿರುವವರಿಗೆ ಅವರು ಸಂಪಾದಿಸಿಕೊಂಡ (ಪಾಪಕ್ಕೆ) ತಕ್ಕ ಪ್ರತಿಫಲ ಸದ್ಯವೇ ನೀಡಲಾಗುವುದು. {120}

ಅಲ್ಲಾಹ್ ನ ಹೆಸರು ಉಚ್ಛರಿಸದ ಸ್ಥಿತಿಯಲ್ಲಿ (ಕೊಯ್ಯಲ್ಪಟ್ಟ; ಅಥವಾ ಸ್ವಯಂ ಸತ್ತ ಜಾನುವಾರುಗಳ ಮಾಂಸವನ್ನು) ನೀವು ತಿನ್ನ ಬಾರದು. ಅದು ಸಾಕ್ಷಾತ್ ಪಾಪವಾಗಿರುವುದು. [ಈ ವಿಷಯದಲ್ಲಿ] ನಿಮ್ಮೊಡನೆ ತರ್ಕಕ್ಕಿಳಿಯುವಂತೆ ಧೂರ್ತ ಸೈತಾನರು ತಮ್ಮ ಮಿತ್ರ ಜನರಿಗೆ ಖಂಡಿತಾ ದುಷ್ಪ್ರೇರಣೆ ಮಾಡುತ್ತಿರುವರು. ಒಂದು ವೇಳೆ ಅಂತಹವರ ಮಾತುನ್ನು ನೀವು ಅನುಸರಿಸಿದರೆ [ಅಲ್ಲಾಹ್ ನಿಗೆ ಬದಲು ಅವರನ್ನು ತೀರ್ಪುಗಾರರಾಗಿ ಅಂಗೀಕರಿಸಿದ ಕಾರಣ] ನೀವೂ 'ಮುಶ್ರಿಕ್' ಗಳಾಗಿ ತೀರುವಿರಿ! {121}

(ಆಧ್ಯಾತ್ಮಿಕವಾಗಿ) ಸತ್ತು ಹೋಗಿದ್ದ ಒಬ್ಬಾತನನ್ನು ನಾವು ನಂತರ ಜೀವದಾನ ಮಾಡಿ (ಜ್ಞಾನದ) ಪ್ರಕಾಶವನ್ನು ನೀಡಿ ಅದರ ಸಹಾಯದಿಂದ ಆತನು ಜನರ ನಡುವೆ ನಡೆದಾಡುವಂತೆ ಮಾಡಿದಾಗ, ಆ ವ್ಯಕ್ತಿಯ ಉದಾಹರಣೆಯು (ಅಜ್ಞಾನದ) ಅಂಧಕಾರಗಳಲ್ಲಿ ಮುಳುಗಿ ಅದರಿಂದ ಹೊರಬರಲು ತಯಾರಿಲ್ಲದ ಒಬ್ಬನಂತೆ ಆಗಿರುವುದೇ?! ಹಾಗೆಯೇ (ಅಂಧಕಾರಗಳಿಂದ ಹೊರಬರಲು ತಯಾರಿಲ್ಲದ) ಈ ಧಿಕ್ಕಾರಿಗಳಿಗೆ ತಾವು ಮಾಡುತ್ತಿರುವ (ಪಾಪಕೃತ್ಯಗಳನ್ನು ಸದ್ಯ) ಚಂದಗಾಣಿಸಲಾಗುತ್ತಿದೆ. {122}

ಹಾಗೆಯೇ, ನಾವು ಪ್ರತಿಯೊಂದು ನಾಡಿನಲ್ಲೂ ಅಲ್ಲಿಯ ದುಷ್ಟರುಗಳ ಪೈಕಿ ದೊಡ್ಡ ದೊಡ್ಡವರನ್ನು (ಪ್ರವಾದಿಗಳ ವಿರುದ್ಧ) ಅಲ್ಲಿ ಪಿತೂರಿಗಳಲ್ಲಿ ತೊಡಗಿರುವಂತೆ ಮಾಡಿರುವೆವು. ಆದರೆ ವಾಸ್ತವದಲ್ಲಿ ಸ್ವತಃ ತಮ್ಮ ವಿರುದ್ಧವಲ್ಲದೆ ಅವರು ಪಿತೂರಿ ನಡೆಸುತ್ತಿಲ್ಲ! ನಿಜವಾಗಿ ಅವರಿಗೆ ಅದರ ಪರಿಜ್ಞಾನವಿಲ್ಲ. ಅಂತಹವರ ಬಳಿ ಯಾವುದಾದರೊಂದು (ಎಚ್ಚರಿಸುವಂತಹ) ದೃಷ್ಟಾಂತವು ಬಂದಾಗ, ಅಲ್ಲಾಹ್ ನ ದೂತರುಗಳಿಗೆ [ಅರ್ಥಾತ್ ಪ್ರವಾದಿಗಳಿಗೆ] ಏನನ್ನು ನೀಡಲಾಗುತ್ತದೆಯೋ ನಮಗೂ ಅಂತಹದ್ದನ್ನೇ ನೀಡುವ ತನಕ ನಾವು ವಿಶ್ವಾಸಿಗಳಾಗಲಾರೆವು ಎಂದು ಹೇಳುತ್ತಾರೆ. ಪ್ರವಾದಿತ್ವದ ದೌತ್ಯವನ್ನು ಯಾರಿಗೆ ನೀಡಬೆಕೆಂಬುದು ಅಲ್ಲಾಹ್ ನಿಗೆ ಚೆನ್ನಾಗಿ ತಿಳಿದಿದೆ! ದುಷ್ಟರಾದ ಅವರಿಗೆ ತಾವು ನಡೆಸುತ್ತಿದ್ದ ಪಿತೂರಿಗಳ ಕಾರಣ ಅಲ್ಲಾಹ್ ನಿಂದ ಅಪಮಾನವೂ ಕಠಿಣ ಸ್ವರೂಪದ ಶಿಕ್ಷೆಯೂ ಸಿಗಲಿರುವುದು. {123-124}

ಇನ್ನು ಯಾರಿಗಾದರೂ ಸನ್ಮಾರ್ಗ ತೋರಬೇಕೆಂದು ಅಲ್ಲಾಹ್ ನು ಬಯಸಿದರೆ ಆತನ ಹೃದಯವನ್ನು ಇಸ್ಲಾಮ್ ಗಾಗಿ ಅವನು ತೆರೆದು ವಿಶಾಲಗೊಳಿಸುವನು. ಮತ್ತು ಯಾರನ್ನಾದರೂ ತಪ್ಪು ದಾರಿಯಲ್ಲೇ ಮುನ್ನಡೆಸಲು ಬಯಸಿದರೆ ಆತನ ಹೃದಯವನ್ನು ಸಂಕುಚಿತಗೊಳಿಸಿ ಮತ್ತಷ್ಟು ಬಿಗಿಯಾಗಿಸಿ ಬಿಡುವನು; [ಸನ್ಮಾರ್ಗದಲ್ಲಿ ನಡೆಯುವುದು] ಆತನಿಗೆ ಆಕಾಶಕ್ಕೆ ಏರಿ ಹೋಗುವಂತೆ ಕಷ್ಟಕರವಾಗಿ ಭಾಸವಾಗುದು! ಹಾಗೆ [ನಿದರ್ಶನಗಳ ಹೊರತಾಗಿಯೂ] ವಿಶ್ವಾಸಿಗಳಾಗಲು ತಯಾರಿಲ್ಲದವರ ಮೇಲೆ ಅಲ್ಲಾಹ್ ನು ಕಳಂಕವನ್ನು ಹೇರುವನು. {125}

(ಪೈಗಂಬರರೇ), ಇದು [ಅರ್ಥಾತ್ ಈ ಕುರ್‌ಆನ್] ನಿಮ್ಮ ಕರ್ತಾರನ (ಕಡೆಗಿರುವ) ಸರಿಯಾದ ಮಾರ್ಗವಾಗಿದೆ; ಮತ್ತು ಉಪದೇಶ ಸ್ವೀಕರಿಸುವ ಜನಸಮೂಹಕ್ಕೆ ನಾವು (ಇದರಲ್ಲಿ) ವಚನಗಳನ್ನು ವಿವರಿಸಿ ಕೊಟ್ಟಿದ್ದೇವೆ. ಅಂತಹವರಿಗೆ ಅವರ ಕರ್ತೃವಿನ ಬಳಿ ಶಾಂತಿಧಾಮವು ಸಿದ್ಧವಿದೆ. ಅವರು ಮಾಡುತ್ತಿದ್ದ (ಸತ್ಕರ್ಮಗಳ) ಕಾರಣ ಅವನು ಅವರಿಗೆ ರಕ್ಷಕನಾಗುವನು. {126-127}

ಅವರೆಲ್ಲರನ್ನು [ಅರ್ಥಾತ್ ಎಲ್ಲ ವರ್ಗದ ದುಷ್ಟರನ್ನು, ಅಂತಿಮ ವಿಚಾರಣೆಗಾಗಿ] ಒಟ್ಟು ಸೇರಿಸಲಾಗುವ ದಿನವನ್ನು ನೆನಪಿಸಿಕೊಳ್ಳಿ. ಓ ಜಿನ್ನ್ ವರ್ಗಕ್ಕೆ ಸೇರಿದವರೇ, ಮನುಷ್ಯರ ಪೈಕಿ ಬಹಳ ಮಂದಿಯನ್ನು ನೀವು ನಿಮ್ಮಂತೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಿರುವಿರಿ (ಎಂದು ಅಲ್ಲಾಹ್ ನು ಹೇಳುವನು). ಆಗ ಮನುಷ್ಯವರ್ಗಕ್ಕೆ ಸೇರಿದ ಅವರ ಆಪ್ತರು ಹೇಳುವರು: ಓ ನಮ್ಮ ದೇವನೇ, ನಾವು (ಭೂಲೋಕದಲ್ಲಿ) ಪರಸ್ಪರರಿಂದ ಸಾಕಷ್ಟು ಪ್ರಯೋಜನವನ್ನು ಪಡೆದವರಾಗಿದ್ದೇವೆ; ಮತ್ತು (ಈಗ) ನೀನು ನಮಗೆ ಗೊತ್ತು ಪಡಿಸಿದ ಸಮಯಾವಧಿಯನ್ನು ನಾವು ಮೀರಿಯಾಗಿದೆ! ಅಲ್ಲಾಹ್ ನು ಹೇಳುವನು: ನಿಮ್ಮ ನೆಲೆಯು ನರಕಾಗ್ನಿಯಾಗಿರುತ್ತದೆ; ನೀವು ಅದರಲ್ಲಿ ಶಾಶ್ವತವಾಗಿ ಬಿದ್ದುಕೊಳ್ಳುವಿರಿ. ಆದರೆ ಅಲ್ಲಾಹ್ ನು ಬೇರೇನಾದರೂ ಬಯಸಿದರೆ ಆ ವಿಷಯ ಬೇರೆ! ನಿಜವಾಗಿ (ಪೈಗಂಬರರೇ) ನಿಮ್ಮ ದೇವನು ಮಹಾ ಮತ್ಸದ್ದಿಯೂ ಅಗಾಧ ಅರಿವುಳ್ಳವನೂ ಆಗಿರುವನು. {128}

ಹಾಗೆ [ಎರಡೂ ವರ್ಗಕ್ಕೆ ಸೇರಿದ] ಈ ದುಷ್ಕರ್ಮಿಗಳನ್ನು, ಅವರು (ಒಟ್ಟಾಗಿ) ಎಸಗುತ್ತಿದ್ದ ಕೃತ್ಯಗಳ ಕಾರಣ, ಒಬ್ಬರಿಗೊಬ್ಬರು ಮಿತ್ರರಾಗುವಂತೆ ನಾವು ಮಾಡುವೆವು. {129}

ಓ ಜಿನ್ನ್ ಮತ್ತು ಮನುಷ್ಯರ ಸಮೂಹವೇ! ನನ್ನ ವಚನ-ದೃಷ್ಟಾಂತಗಳನ್ನು ನಿಮ್ಮ ಮುಂದೆ ವಿವರಿಸಿಕೊಡುವ ಮತ್ತು ನಿಮಗೆ ಎದುರಾಗಲಿದ್ದ ಈ (ಪುನರುತ್ಥಾನ) ದಿವಸದ ಬಗ್ಗೆ ನಿಮಗೆ ಮುನ್ನೆಚ್ಚರಿಕೆ ನೀಡುವ, ನಿಮ್ಮ ನಿಮ್ಮ ವರ್ಗಕ್ಕೆ ಸೇರಿದ ನಮ್ಮ ದೂತರುಗಳು ನಿಮ್ಮ ಬಳಿಗೆ ಬಂದಿರಲಿಲ್ಲವೇ - (ಎಂದು ಅಲ್ಲಾಹ್ ನು ಅಂದು ಕೇಳುವನು). ಹೌದು, ನಾವಿದೋ ಸ್ವತಃ ನಮ್ಮ ವಿರುದ್ಧವೇ (ಇಂದು) ಸಾಕ್ಷ್ಯವಹಿಸುತ್ತೇವೆ - ಎಂದು ಅವರು ಉತ್ತರಿಸುವರು. ಲೌಕಿಕ ಜೀವನವು ಇವರನ್ನು ವಂಚಿಸಿ ಬಿಟ್ಟಿತು! ನಾವು (ಮುನ್ನೆಚ್ಚೆರಿಕೆಗಳ ಹೊರತಾಗಿಯೂ) ಧಿಕ್ಕಾರಿಗಳಾಗಿಯೇ ಜೀವಿಸಿದ್ದೆವು ಎಂದು ಅವರು ಸ್ವತಃ ತಮ್ಮ ವಿರುದ್ಧವೇ ಸಾಕ್ಷಿಗಳಾಗುತ್ತಾರೆ! [ಛೆ, ಎಂತಹ ವಿಪರ್ಯಾಸ]! {130}

ಹಾಗೆ (ದೂತರುಗಳನ್ನು ಕಳುಹಿಸಿರುವುದು) ನಾಡಿನವರಿಗೆ (ಸತ್ಯಾಸತ್ಯತೆಯ ಬಗ್ಗೆ) ತಿಳಿವಳಿಕೆಯೇ ಇರದ ಸ್ಥಿತಿಯಲ್ಲಿ ನಿಮ್ಮ ಪ್ರಭು ಅನ್ಯಾಯವಾಗಿ ನಾಡುಗಳನ್ನು ನಾಶಪಡಿಸುವವನು ಆಗಬಾರದು (ಎಂಬ ಕಾರಣಕ್ಕಾಗಿಯೂ)! {131}

ಮತ್ತು ಪ್ರತಿಯೂಬ್ಬರಿಗೂ ಅವರವರ ಕೃತ್ಯ-ಕಾಯಕಗಳಿಗೆ ತಕ್ಕಂತೆ (ಅವನ ಬಳಿ ವಿಭಿನ್ನ) ದರ್ಜೆಗಳಿವೆ; ಹಾಗಿರುವಾಗ ಅವರೆಸಗುವ ಕರ್ಮಗಳ ಕುರಿತಂತೆ ನಿಮ್ಮ ಒಡೆಯನು ಅಜ್ಞನಲ್ಲ! {132}

ಎಲ್ಲ ರೀತಿಯ ಅಗತ್ಯಗಳಿಂದ ಸಂಪೂರ್ಣವಾಗಿ ಮುಕ್ತನಾಗಿರುವ [ಅರಬಿ: ಅಲ್ ಘನೀ] ನಿಮ್ಮ ಕರ್ತಾರನಾದರೋ ಕಾರುಣ್ಯವಂತನು! ಅವನು ಬಯಸಿದರೆ ನಿಮ್ಮನ್ನು (ನಾಡಿನಿಂದ) ತೊಲಗಿಸಿ, ನಿಮ್ಮ ನಂತರ ತಾನು ಇಚ್ಛಿಸುವ ಇನ್ನೊಂದು ಜನಾಂಗವನ್ನು ನಿಮ್ಮ ಉತ್ತರಾಧಿಕಾರಿಗಳಾಗಿ ನೇಮಿಸ ಬಲ್ಲನು - ಬೇರೊಂದು ಜನಾಂಗದ ಸಂತತಿಯಿಂದ ಅವನು ನಿಮ್ಮನ್ನು ಹೇಗೆ ಬೆಳೆಸಿದನೋ ಹಾಗೆ! {133}

ಯಾವ (ಶಿಕ್ಷೆಯ) ಕುರಿತು ನಿಮ್ಮನ್ನು ಎಚ್ಚರಿಸಲಾಗಿದೆಯೋ ಅದಂತು ಬಂದೇ ತೀರುವುದು; ಮತ್ತು ಅಲ್ಲಾಹ್ ನನ್ನು ಸ್ವಾಧೀನ ಪಡಿಸುವುದು ನಿಮಗೆ ಸಾಧ್ಯವಾಗುವ ವಿಷಯವಲ್ಲ. {134}

[ಇಷ್ಟಾಗಿಯೂ ತಮ್ಮನ್ನು ಸುಧಾರಿಸಿಕೊಳ್ಳಲು ತಯಾರಿಲ್ಲದ ಇವರಿಗೆ], ಓ ನನ್ನ ಜನರೇ! ಇನ್ನು ನೀವು ನಿಮ್ಮ ನಿಲುವಿನ ಪ್ರಕಾರ ಕಾರ್ಯನಿರತರಾಗಿ; ನಾನೂ ಸಹ (ನನಗೆ ಆದೇಶಿಲಾದಂತೆ) ಕಾರ್ಯವೆಸಗುತ್ತಿದ್ದೇನೆ. ಅಂತಿಮ ನೆಲೆವೀಡು ಯಾರ ಪಾಲಿಗೆ ಹಿತಕರವಾಗಿ ಪರಿಣಮಿಸುವುದು ಎಂಬುದನ್ನು ನೀವು ಸದ್ಯವೇ ತಿಳಿಯಲಿರುವಿರಿ - ಎಂದು (ಪೈಗಂಬರರೇ) ನೀವು ಎಚ್ಚಿರಿಸಿರಿ. ಅಕ್ರಮವೆಸಗುವ ಜನರು ಎಂದಿಗೂ ವಿಜಯಿಗಳಾಗಲಾರರು. {135}

[ಅಕ್ರಮದ ಮಟ್ಟವೆಷ್ಟೆಂದರೆ] ಸ್ವತಃ ಅಲ್ಲಾಹ್ ನೇ ಸೃಷ್ಟಿಸಿದ ಕೃಷಿಸ್ಥಳ ಮತ್ತು ಜಾನುವಾರುಗಳ ಪೈಕಿ ಒಂದಂಶವನ್ನು ಅವರು (ಮೊದಲು) ಅಲ್ಲಾಹ್ ನಿಗಾಗಿ ನಿಗದಿಪಡಿಸುತ್ತಾರೆ. ಅನಂತರ ಅವರು ತಮ್ಮ ಆಧಾರ ರಹಿತ ವಾದದ ಪ್ರಕಾರ ಇದು ಅಲ್ಲಾಹ್ ನಿಗೆ ಮತ್ತು ಇದು ನಮ್ಮ (ಇತರ) ದೇವರುಗಳಿಗೆ ಎನ್ನುತ್ತಾರೆ. ಯಾವುದನ್ನು ತಮ್ಮ (ಸ್ವಯಂ ಕೃತ) ದೇವರುಗಳಿಗೆ ನಿಗದಿಪಡಿಸುತ್ತಾರೋ ಅದು ಎಂದೂ ಅಲ್ಲಾಹ್ ನಿಗೆ ತಲುಪುವುದಿಲ್ಲ; ಆದರೆ ಯಾವುದನ್ನು ಅಲ್ಲಾಹ್ ನಿಗಾಗಿ ನಿಗಪಡಿಸುತ್ತಾರೋ ಅದು ಕೊನೆಗೆ ಅವರ ಮಿಥ್ಯ ದೇವರುಗಳ ಪಾಲಿಗೆ ಸೇರಿ ಹೋಗುತ್ತದೆ! ಎಷ್ಟು ಕೆಟ್ಟ ತೀರ್ಮಾನವಾಗಿದೆ ಅವರದು! {136}

ಹಾಗೆಯೇ, ಆ ಬಹುದೇವಾರಾಧಕರಲ್ಲಿ ಹಲವರಿಗೆ ಸ್ವತಃ ತಮ್ಮದೇ ಮಕ್ಕಳನ್ನು ವಧಿಸಿ ಬಿಡುವಂತಹ (ಪಾಪ ಕೃತ್ಯವನ್ನು) ಅವರ 'ಸ್ವಯಂ ಕೃತ ಆರಾಧ್ಯರು' ಸುಂದರವಾಗಿ ಕಾಣುವಂತೆ ಮಾಡಿರುವರು. ಅದು ಅವರನ್ನು ನಾಶವಾಗಿಸಿ ಬಿಡುವುದಕ್ಕೂ ಮತ್ತು [ಅದೊಂದು ಧಾರ್ಮಿಕ ಆಚರಣೆಯೆಂದು ಅವರನ್ನು ನಂಬಿಸಿ, ಅಳಿದುಳದ] ಅವರ ಧರ್ಮವನ್ನು ಗೊಂದಲಮಯವಾಗಿ ಮಾಡುವುದಕ್ಕೂ ಆಗಿರುತ್ತದೆ. (ಅವರು ಹಾಗೆ ಮಾಡಬಾರದೆಂದು) ಅಲ್ಲಾಹ್ ನು ಬಯಸಿದರೆ ಅವರಿಗೆ ಹಾಗೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ (ಪೈಗಂಬರರೇ) ನೀವೂ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ; ಮತ್ತು ಅವರ ಕಪೋಲಕಲ್ಪಿತ (ಆಚಾರಗಳನ್ನೂ)! {137}

ಈ ನಿರ್ಧಿಷ್ಟ ಜಾನುವಾರುಗಳನ್ನು ಮತ್ತು ಕೃಷಿಗಳನ್ನು (ಉಪಯೋಗಿಸುವುದು) ನಿಷಿದ್ಧವಾಗಿದೆ; ಯಾರು ಇದನ್ನು ತಿನ್ನಬಹುದೆಂದು ನಾವು ಬಯಸುವೆವೋ ಅವರ ಹೊರತು ಬೇರೆ ಯಾರೂ ಇದನ್ನು ತಿನ್ನುವಂತಿಲ್ಲ ಎಂದು ಅವರು ತಮ್ಮ ಪೊಳ್ಳು ವಾದಗಳ ಆಧಾರದಲ್ಲಿ ಹೇಳುತ್ತಿದ್ದಾರೆ. ತಮ್ಮದೇ ಆದ ಕಪೋಲ ಕಲ್ಪಿತ ಕಟ್ಟಲೆಗಳನ್ನು ಅಲ್ಲಾಹ್ ನ (ನಿಯಮಗಳೆಂದು) ವಾದಿಸುತ್ತಾ ಕೆಲವು ಜಾನುವಾರುಗಳ ಬೆನ್ನು (ಸವಾರಿ ಮತ್ತು ಸರಕು ಸಾಗಾಟಕ್ಕಾಗಿ) ನಿಷಿದ್ಧವಾಗಿದೆ ಎನ್ನುತ್ತಾರೆ; ಹಾಗೆಯೇ ಇನ್ನು ಕೆಲವು ಜಾನುವಾರುಗಳನ್ನು (ಕೊಯ್ಯುವಾಗ) ಅವರು ಅಲ್ಲಾಹ್ ನ ಹೆಸರು ಉಚ್ಛರಿಸುವುದಿಲ್ಲ! ಅಂತಹ ಸುಳ್ಳುಗಳನ್ನು ಕಟ್ಟಿದ್ದಕ್ಕಾಗಿ ಸದ್ಯದಲ್ಲೇ ಅವನು ಅವರಿಗೆ ತಕ್ಕ ಶಿಕ್ಷೆ ನೀಡಲಿರುವನು. {138}

ಮತ್ತು ಈ ಕೆಲವು ನಿರ್ಧಿಷ್ಟ ಜಾನುವಾರುಗಳ ಗರ್ಭಾಶಯಗಳಲ್ಲಿ ಏನಿದೆಯೋ ಅದು ನಮ್ಮ ಪೈಕಿಯ ಪುರುಷರಿಗೆ ಮಾತ್ರ ಮೀಸಲಾಗಿದ್ದು ನಮ್ಮ ಪತ್ನಿಯರಿಗೆ ಅದರ (ಸೇವನೆಯು) ನಿಷಿದ್ಧವಾಗಿದೆ; ಆದರೆ ಅದು (ಜನಿಸುವಾಗ) ಮೃತವಾಗಿದ್ದರೆ (ಅದರ ಮಾಂಸಕ್ಕೆ) ಎಲ್ಲರೂ ಪಾಲುದಾರರಾಗುವರು ಎಂದೂ ಅವರು ವಾದಿಸುತ್ತಾರೆ! ಅವರ ಕಪೋಲ ಕಲ್ಪಿತ ವಿಚಾರಗಳಿಗಾಗಿ ಅವನು ಅವರನ್ನು ಶೀಘ್ರದಲ್ಲೇ ಶಿಕ್ಷಿಸಲಿರುವನು. ಅವನಾದರೋ ಅತ್ಯಂತ ವಿವೇಕಶಾಲಿಯೂ ಎಲ್ಲವನ್ನು ತಿಳಿದವನೂ ಆಗಿರುವನು. {139}

ಸರಿಯಾದ ತಿಳುವಳಿಕೆಯ ವಿನಾ, ಕೇವಲ ಮೂರ್ಖತನದಿಂದ ವರ್ತಿಸುತ್ತಾ ತಮ್ಮ ಮಕ್ಕಳನ್ನು [ಮಿಥ್ಯ ದೇವಿದೇವತೆಗಳಿಗೆ, ಮೂರ್ತಿಗಳಿಗೆ ಬಲಿ ಕೊಡುಲು] ವಧಿಸಿದವರು ಹಾಗೂ [ತಾವೇ ಮಾಡಿಕೊಂಡ ಕೆಲವು ಕಟ್ಟಲೆಗಳ ಹೊಣೆಗಾರಿಕೆಯನ್ನು] ಅಲ್ಲಾಹ್ ನ ಮೇಲೆ ಆಪಾದಿಸುತ್ತಾ ಅವನು ದಯಪಾಲಿಸಿದ (ಕೆಲವು ಅನ್ನಾಹಾರವನ್ನು ತಮ್ಮ ಮೇಲೆ) ನಿಷೇಧಿಸಿಕೊಂಡವರು ನಿಜಕ್ಕೂ ನಷ್ಟಕ್ಕೊಳಗಾಗಿರುವರು. ಅವರು ಖಂಡಿತ ದಾರಿ ತಪ್ಪಿರುವರು ಮತ್ತು ನೇರ ದಾರಿಯಲ್ಲಿ ನಡೆಯುವವರು ಅವರಾಗಿರಲಿಲ್ಲ. {140}

ಚಪ್ಪರಗಳ ಮೇಲೇರಿಸಲ್ಪಡುವ ಮತ್ತು ಚಪ್ಪರಗಳ ಆಸರೆಯ ಅಗತ್ಯವಿಲ್ಲದ, ಬಗೆಬಗೆಯ (ಬಳ್ಳಿ) ತೋಟಗಳನ್ನು ಬೆಳೆಸಿರುವುದು [ಮಿಥ್ಯ ದೇವಿ-ದೇವತೆಗಳಾಗಲಿ ಮೂರ್ತಿಗಳಾಗಲಿ ಅಲ್ಲ; ಬದಲಾಗಿ] ಆ ಅಲ್ಲಾಹ್ ನೇ ಆಗಿರುವನು! ಖರ್ಜೂರದ ಮರಗಳನ್ನೂ ವಿವಿಧ ರೀತಿಯ ಫಲವನ್ನು ನೀಡುವ ಕೃಷಿಗಳನ್ನೂ, ಪರಸ್ಪರ ಹೋಲುವ ಹಾಗೂ ಹೋಲಿಕೆ ಇಲ್ಲದ ಆಲಿವ್ ಮತ್ತು ದಾಳಿಂಬೆ ಹಣ್ಣುಗಳನ್ನೂ (ಸೃಷ್ಟಿಸಿದವನು ಅವನೇ). ಅವು ಫಲ ಬಿಟ್ಟಾಗ ನೀವು ಅವುಗಳ ಫಲಗಳನ್ನು ತಿನ್ನಿರಿ; ಹಾಗೂ ಕೊಯ್ಲಿನ ದಿವಸ ಅವನ ಋಣ [ಅರ್ಥಾತ್ ಕೃಷ್ಯುತ್ಪನ್ನಗಳಿಗೆ ಅಲ್ಲಾಹ್ ನು ನಿಗದಿಪಡಿಸಿದ ಉಶ್ರ್ ಎಂಬ ಝಕಾತ್] ನೀಡಿರಿ. ಆದರೆ ನೀವು ಅಪವ್ಯಯ ಮಾಡುವವರಾಗದಿರಿ; ಅವನು ಅಪವ್ಯಯ ಮಾಡುವವರನ್ನು ಇಷ್ಟಪಡುವುದಿಲ್ಲ. {141}

ಭಾರ ಹೊರುವ (ದೊಡ್ಡ ಗಾತ್ರದ) ಹಾಗೂ ನೆಲಕಚ್ಚಿಕೊಳ್ಳುವ (ಮಾಂಸಕ್ಕಾಗಿ ಉಪಯೋಗವಾಗುವ, ಚಿಕ್ಕ ಗಾತ್ರದ) ಜಾನುವಾರುಗಳನ್ನು (ಸೃಷ್ಟಿಸಿದವನೂ ಅವನೇ)! ಅಲ್ಲಾಹ್ ನು ನಿಮಗೆ ಜೀವನಾಧಾರವಾಗಿ ಏನನ್ನು ಒದಗಿಸಿರುವನೋ ಅದರ ಪ್ರಯೋಜನ ಪಡೆಯಿರಿ. ಅಲ್ಲದೆ, ಸೈತಾನನ ಹೆಜ್ಜೆ ಗುರತನ್ನು ಅನುಸರಿಸಿ ನಡೆಯುವವರು ನೀವಾಗಿದಿರಿ; ದಿಟವಾಗಿಯೂ ಆತನು ನಿಮಗೆ ಸಷ್ಟ ವೈರಿಯಾಗಿರುವನು. {142}

[ಅವರು ಸ್ವಯಂ ನಿಷೇಧ ಹೇರಿಕೊಂಡ ಜಾನುವಾರುಗಳದ್ದು] ಒಟ್ಟು ಎಂಟು ವಿಧ. ಕುರಿಗಳ ವರ್ಗಕ್ಕೆ ಸೇರಿದ (ಹೆಣ್ಣೂ ಗಂಡೂ ಸೇರಿ) ಎರಡು ಹಾಗೂ ಮೇಕೆಗಳ ವರ್ಗಕ್ಕೆ ಸೇರಿದ (ಹೆಣ್ಣೂ ಗಂಡೂ ಸೇರಿ) ಇನ್ನೆರಡು. ಅದರಲ್ಲಿ ಅಲ್ಲಾಹ್ ನು ನಿಷೇಧಿಸಿರುವುದು (ಎರಡೂ ವರ್ಗದ) ಗಂಡುಗಳನ್ನೋ ಅಥವಾ ಹೆಣ್ಣುಗಳನ್ನೋ; ಅಥವಾ ಅವನು ನಿಷೇಧಿಸಿರುವುದು ಆ ಹೆಣ್ಣುಗಳ ಹೊಟ್ಟೆಯಲ್ಲಿರುವ (ಮರಿ) ಗಳನ್ನೋ - ಎಂದು (ಪೈಗಂಬರರೇ ನೀವು ಅವರನ್ನು) ಪ್ರಶ್ನಿಸಿರಿ; ನೀವು ಸತ್ಯವಂತರು ಹೌದಾದರೆ ಖಚಿತವಾದ ಜ್ಞಾನದ ಆಧಾರದಲ್ಲಿ ನನಗೆ ತಿಳಿಸಿಕೊಡಿ (ಎಂದೂ ಹೇಳಿರಿ). {143}

ಹಾಗೆಯೇ, ಒಂಟೆಗಳ ವರ್ಗಕ್ಕೆ ಸೇರಿದ (ಹೆಣ್ಣೂ ಗಂಡೂ ಸೇರಿ) ಮತ್ತೆರಡು ಹಾಗೂ ಗೋವುಗಳ ವರ್ಗಕ್ಕೆ ಸೇರಿದ (ಹೆಣ್ಣೂ ಗಂಡೂ ಸೇರಿ) ಮಗದೆರಡು. ಅದರಲ್ಲಿ ಅಲ್ಲಾಹ್ ನು ನಿಷೇಧಿಸಿರುವುದು (ಎರಡೂ ವರ್ಗದ) ಗಂಡುಗಳನ್ನೋ ಅಥವಾ ಹೆಣ್ಣುಗಳನ್ನೋ; ಅಥವಾ ಅವನು ನಿಷೇಧಿಸಿರುವುದು ಆ ಹೆಣ್ಣುಗಳ ಹೊಟ್ಟೆಯಲ್ಲಿರುವ (ಮರಿ) ಗಳನ್ನೋ - ಎಂದು (ಪೈಗಂಬರರೇ ಅವರನ್ನು) ಪ್ರಶ್ನಿಸಿರಿ; ಅಲ್ಲಾಹ್ ನೇ (ಆದೇಶಿಸಿದ್ದು ನಿಜವಾಗಿದ್ದರೆ) ಅದನ್ನು ಆದೇಶಿಸುತ್ತಿರುವಾಗ ನೀವು ಅಲ್ಲಿ ಉಪಸ್ಥಿತರಿದ್ದಿರೇನು - (ಎಂದೂ ಕೇಳಿರಿ). ಯಾವ ಜ್ಞಾನವೂ ಇಲ್ಲದೆ, ಕೇವಲ ಜನರನ್ನು ತಪ್ಪು ದಾರಿಗೆಳೆಯುವುದಕ್ಕಾಗಿ ಅಲ್ಲಾಹ್ ನ ಮೇಲೆ ಇಂತಹ ಸುಳ್ಳು ವಿಚಾರಗಳನ್ನು ಆಪಾದಿಸುವವರಿಗಿಂತ ದೊಡ್ಡ ಅಕ್ರಮಿಗಳು ಯಾರಿರಬಹುದು?! ಖಂಡಿತಾ ಇಂತಹ ಅಕ್ರಮಿಗಳ ಸಮೂಹವನ್ನು ಅಲ್ಲಾಹ್ ನು ಎಂದೂ ನೇರ ದಾರಿಯತ್ತ ತರಲಾರ! {144}

ವಾಸ್ತವದಲ್ಲಿ, ಮಲಿನವಾದುದು ಎಂಬ ಕಾರಣಕ್ಕಾಗಿ ಸತ್ತ ಶವ, ಹರಿದ ರಕ್ತ ಮತ್ತು ಹಂದಿ ಮಾಂಸ; ಹಾಗೂ ಪಾಪ ಕೃತ್ಯವಾದ್ದರಿಂದ ಅಲ್ಲಾಹ್ ನಿಗೆ ಬದಲು ಇತರರ ಹೆಸರಿನಲ್ಲಿ ಕೊಯ್ಯಲ್ಪಟ್ಟವು (ಮತ್ತು ಅರ್ಪಿಸಲ್ಪಟ್ಟವುಗಳು) - ಇವುಗಳ ಹೊರತು ನನ್ನತ್ತ ಕಳಿಸಲಾದ ದಿವ್ಯಸಂದೇಶದಲ್ಲಿ ಬೇರೇನನ್ನೂ ಒಬ್ಬ ತಿನ್ನುವಾತನಿಗೆ ತಿನ್ನಲು ನಿಷೇಧಿಸಿರುವುದು ನಾನು ಕಾಣುವುದಿಲ್ಲ ಎಂದು (ಪೈಗಂಬರರೇ) ನೀವು ಅವರಿಗೆ ಸ್ಪಷ್ಟಪಡಿಸಿರಿ. ಹಾಗಿದ್ದರೂ ಒಬ್ಬಾತನು (ಪ್ರಾಣಸಂಕಟದಿಂದ ಅವುಗಳಲ್ಲಿ ಯಾವುದನ್ನಾದರೂ ತಿನ್ನಲು) ನಿರ್ಬಂಧಿತನಾದರೆ ಮತ್ತು ಅವನು ನಿಯಮೋಲ್ಲಂಘನೆ ಮಾಡುವ ಅಥವಾ ಹದ್ದುಮೀರುವ ಮಾನಸಿಕತೆಯವನು ಆಗಿರದಿದ್ದರೆ, ನಿಮ್ಮ ಒಡೆಯನು ಕ್ಷಮಾಶೀಲನೂ ಕಾರುಣ್ಯವಂತನೂ ಆಗಿರುವನು (ಎಂಬ ಸತ್ಯವು ನಿಮಗೆ ನೆನಪಿರಲಿ). {145}

[ಆದರೆ ಹೌದು!] ಯಹೂದ್ಯರಾದವರ ಪಾಲಿಗೆ ಉಗುರುಗಳನ್ನು ಹೊಂದಿದ ಸಕಲ ಮೃಗಗಳನ್ನು ನಾವು ನಿಷೇಧಿಸಿದ್ದುದು (ನಿಜ ಸಂಗತಿ). ಮಾತ್ರವಲ್ಲ ಬೆನ್ನಿಗೆ ಮತ್ತು ಕರುಳಿಗೆ ತಗುಲಿಕೊಂಡ ಹಾಗೂ ಎಲುಬಿನೊಂದಿಗೆ ಬೆರೆತುಕೊಂಡ ಕೊಬ್ಬಿನ ಹೊರತು ಗೋವು ಮತ್ತು ಆಡು-ಕುರಿಗಳ ಎಲ್ಲ ಕೊಬ್ಬನ್ನೂ ನಾವು ಅವರಿಗೆ ನಿಷೇಧಿಸಿದ್ದೆವು. ಆ ನಿಷೇಧವು ಅವರ ಉಲ್ಲಂಘನಾ ಮನೋವೃತ್ತಿಗೆ ನಾವು ಕೊಟ್ಟ ಶಿಕ್ಷೆಯಾಗಿತ್ತು. ಹೌದು, (ಹಾಗೆ ಶಿಕ್ಷಿಸುವಾಗಲೂ ಅತಿಕ್ರಮವೆಸಗುವುದಿಲ್ಲ; ಬದಲಾಗಿ) ನಾವು ಖಂಡಿತಾ ಸತ್ಯತೆಯಲ್ಲಿ ಇರುತ್ತೇವೆ! {146}

(ಇಷ್ಟು ವಿವರಣೆಯ) ನಂತರವೂ ಅವರು ನಿಮ್ಮನ್ನು ಸುಳ್ಳುಗಾರನೆಂದೇ ಸಾರಿದರೆ, ನಿಮ್ಮ ಕರ್ತಾರನು ಸರ್ವವ್ಯಾಪಿಯಾದ ಕರುಣೆಯುಳ್ಳವನಾಗಿರುವನು; ಆದರೂ ಸಹ ಪಾತಕಿಗಳಾದ ಜನಸಮೂಹಕ್ಕಿರುವ ಅವನ ಶಿಕ್ಷೆಯನ್ನು ಅವರಿಂದ ನೀಗಿಸಿ ಬಿಡುವುದು (ಯಾರಿಂದಲೂ) ಸಾಧ್ಯವಲ್ಲ ಎಂದು (ಪೈಗಂಬರರೇ) ನೀವು ಅವರನ್ನು ಎಚ್ಚರಿಸಿರಿ. {147}

ಕೂಡಲೇ, ಒಂದು ವೇಳೆ ಅಲ್ಲಾಹ್ ನು (ನಾವು ಹಾಗೆ ಮಾಡಬಾರದೆಂದು) ಬಯಸಿದ್ದಿದ್ದರೆ ನಾವಾಗಲಿ ನಮ್ಮ ಪೂರ್ವಜರಾಗಲಿ 'ಶಿರ್ಕ್' [ಅರ್ಥಾತ್ ಅಲ್ಲಾಹ್ ನಿಗೆ ಮಾತ್ರವಿರುವ ದೇವತ್ವದಲ್ಲಿ ಇತರರನ್ನೂ ಸೇರಿಸಿಕೊಳ್ಳೂವುದು] ಮಾಡುತ್ತಿರಲಿಲ್ಲ; ಹಾಗೆಯೇ ನಾವು ಯಾವುದನ್ನೂ (ಆಧಾರರಹಿತವಾಗಿ ನಮ್ಮ ಮೇಲೆ) ನಿಷೇಧಿಸಿಕೊಳ್ಳುತ್ತಲೂ ಇರಲಿಲ್ಲ ಎಂದೇ ಆ ಬಹುದೇವಾರಾಧಕರು ವಾದಿಸತೊಡಗುವರು. ವಾಸ್ತವದಲ್ಲಿ ಇವರಿಗಿಂತ ಮುಂಚಿನವರೂ ನಮ್ಮ ಶಿಕ್ಷೆಯ ರುಚಿ ಸವಿಯುವ ತನಕ ಹೀಗೆಯೇ (ವಾದಿಸಿ ನಮ್ಮ ಆದೇಶಗಳನ್ನು) ಧಿಕ್ಕರಿಸಿದ್ದರು. [ನಿಮ್ಮ ಅಂತಹ ವಾದವನ್ನು ಸಮರ್ಥಿಸುವ] ಯಾವುದೇ ಖಚಿತ ಜ್ಞಾನ ನಿಮ್ಮ ಬಳಿ ಇದೆಯೇ? ಇದ್ದರೆ ಅದನ್ನು ನಮ್ಮ ಮುಂದೆ ತಂದು ತೋರಿಸಿ - ಎಂದು (ಪೈಗಂಬರರೇ) ನೀವು ಅವರಿಗೆ ಸವಾಲೊಡ್ಡಿರಿ. ನೀವು ನಿಮ್ಮ ಊಹೆಗಳನ್ನೇ ಹೊರತು (ಅಲ್ಲಾಹ್ ನು ನೀಡಿದ ಧರ್ಮವನ್ನು) ಅನುಸರಿಸುತ್ತಿಲ್ಲ; ನೀವಾದರೋ ತಪ್ಪು ಲೆಕ್ಕಾಚಾರಗಳಲ್ಲಿ ತೊಡಗಿರುವಿರಿ (ಎಂದೂ ಅವರಿಗೆ ತಿಳಿಸಿರಿ). {148}

ನಿರ್ಣಾಯಕ ಸಾಕ್ಷ್ಯಾಧಾರಗಳು (ನಿಮ್ಮದಲ್ಲ; ಬದಲಾಗಿ) ಅಲ್ಲಾಹ್ ನದ್ದಾಗಿದೆ. ಇನ್ನು, ಅವನು (ನಿಮ್ಮನ್ನು ಸರಿದಾರಿಯಲ್ಲಿ ಬಲವಂತವಾಗಿ ನಡೆಸಲು) ಬಯಸಿದ್ದರೆ ಖಂಡಿತವಾಗಿಯೂ ನಿಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ನಡೆಸುತ್ತಿದ್ದನು - ಎಂದು ಅವರಿಗೆ ಹೇಳಿ. {149}

ಅಲ್ಲಾಹ್ ನೇ ಅವುಗಳನ್ನು ನಿಷೇಧಿಸಿದ್ದಾನೆ ಎಂದು ಪ್ರಮಾಣ ಮಾಡಿ ಹೇಳಲು ತಯಾರಿರುವ ನಿಮ್ಮ ಸಾಕ್ಷಿಗಳನ್ನು ತಂದು ನಿಲ್ಲಿಸಿ ಎಂದು ಅವರೊಂದಿಗೆ ಹೇಳಿರಿ; ನಂತರ ಅವರು (ದಾರ್ಷ್ಟ್ಯ ಮೆರೆದು ಸುಳ್ಳು) ಪ್ರಮಾಣ ಮಾಡಿದರೂ, ಅವರ ಜೊತೆಯಲ್ಲಿ ನೀವಂತು ಸಾಕ್ಷಿಯಾಗಬಾರದು. ನಮ್ಮ ವಚನ-ನಿದರ್ಶನಗಳನ್ನು ಸುಳ್ಳೆಂದು ತಳ್ಳಿಹಾಕಿದವರ ಹಾಗೂ (ಮುಂಬರಲಿರುವ) ಪರಲೋಕವನ್ನು ನಂಬದಿರುವ ಜನರ ಮನದಾಕಾಂಕ್ಷೆಗಳನ್ನು ಅನುಸರಿಸುವವರು ನೀವಾಗಬಾರದು. ಅವರಾದರೋ ತಮ್ಮ ಕರ್ತಾರನೊಂದಿಗೆ ಇತರರನ್ನು ಸರಿದೂಗಿಸುವ ಜನರಾಗಿದ್ದಾರೆ! {150}

(ಓ ಜನರೇ) ಬನ್ನಿ, ನಿಮ್ಮ ಕರ್ತನು ನಿಮಗೆ ಏನನ್ನು ನಿಷೇಧಿಸಿರುವನು ಎಂಬುದನ್ನು ನಾನು ನಿಮಗೆ ಹೇಳಿಕೊಡುತ್ತೇನೆ ಎಂದು (ಪೈಗಂಬರರೇ) ನೀವು ಅವರೊಂದಿಗೆ ಹೇಳಿರಿ. ಅವೇನೆಂದರೆ, (ದೇವತ್ವದಲ್ಲಿ) ಅವನೊಂದಿಗೆ ಏನನ್ನೂ ಜೊತೆಗೂಡಿಸಬಾರದು ಮತ್ತು ಮಾತಾಪಿತರೊಂದಿಗೆ ನೀವು ಅತ್ಯುತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು [ಅರ್ಥಾತ್ ಅನುಚಿತವಾಗಿ ವರ್ತಿಸುವುದು ನಿಷಿದ್ಧ]; ಬಡತನಕ್ಕೆ ಹೆದರಿ ನಿಮ್ಮ ಮಕ್ಕಳನ್ನು ಕೊಲ್ಲಬಾರದು - (ಏಕೆಂದರೆ) ನಿಮಗೂ ಅವರಿಗೂ ಅನ್ನಾಹಾರವನ್ನು ಒದಗಿಸುವವರು ನಾವಾಗಿರುವೆವು; ಅಶ್ಲೀಲ ಕೃತ್ಯಗಳ ಹತ್ತಿರವೂ ನೀವು ಸುಳಿಯಬಾರದು - ಅದು ಪ್ರಕಟವಾಗುವಂತಹ ಅಶ್ಲೀಲತೆಯಾಗಿರಲಿ ಅಥವಾ ಗೌಪ್ಯ ಸ್ವರೂಪದ್ದಾಗಿರಲಿ; ಅಲ್ಲಾಹ್ ನು ಗೌರವಾರ್ಹವನ್ನಾಗಿ ಮಾಡಿದ ಯಾವ ಜೀವವನ್ನೂ ನೀವು ಅನ್ಯಾಯವಾಗಿ ಕೊಲೆ ಮಾಡಬಾರದು. ನೀವು ವಿವೇಚಿಸುವವರಾಗಲು ಅವನು ನಿಮಗೆ ನೀಡಿದ ಆದೇಶಗಳಾಗಿವೆ ಇವು. {151}

ಮಾತ್ರವಲ್ಲ, ಅನಾಥರಿಗೆ ಸೇರಿದ ಸೊತ್ತನ್ನು ಅವರು ಪ್ರಬುದ್ಧಾವಸ್ಥೆಗೆ ತಲುಪುವ ವರೆಗೂ ಅತ್ಯುತ್ತಮವಾಗಿ ನಿಭಾಯಿಸುವ ಉದ್ದೇಶದಿಂದ ಹೊರತು ನೀವು ಸಮೀಪಿಸಲೂ ಬಾರದು; ಇನ್ನು, ಅಳತೆ ಮತ್ತು ತೂಕದ ವಿಷಯದಲ್ಲಿ ನೀವು ಸಂಪೂರ್ಣವಾಗಿ ನ್ಯಾಯ ಪಾಲಿಸಬೇಕು - [ಇವೆಲ್ಲ ಸುಲಭ ಕಾರ್ಯವೇ ಆಗಿವೆ, ಏಕೆಂದರೆ] ನಾವು ಯಾವೊಬ್ಬನ ಮೇಲೂ ಆತನ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಹೊರಿಸುವುದಿಲ್ಲ! ಹಾಗೆಯೇ, ಒಂದು ವೇಳೆ ನಿಮಗೆ ಮಾತನಾಡಬೇಕಾದ (ಸನ್ನಿವೇಶ) ಎದುರಾದರೆ, ಅದು ನಿಮ್ಮ ನಿಕಟ ಸಂಬಂಧಿಕರಿಗೆ ಸೇರಿದ ವಿಷಯವಾಗಿದ್ದರೂ ಸರಿ, ನೀವು ನ್ಯಾಯೋಚಿತವಾದುದನ್ನೇ ಹೇಳಬೇಕು; ಹಾಗೂ ಅಲ್ಲಾಹ್ ನೊಂದಿಗಿನ ಕರಾರನ್ನು ನೀವು ಪೂರ್ತಿಯಾಗಿ ಪಾಲಿಸುವವರಾಗ ಬೇಕು. ನೀವು ನೆನಪಿಟ್ಟುಕೊಳ್ಳುವವರಾಗಲು ಅವನು ನಿಮಗೆ ನೀಡಿದ ತಾಕೀತುಗಳಾಗಿವೆ ಇವು. {152}

ಇದುವೇ ನನ್ನೆಡೆಗಿರುವ ಮಾರ್ಗವಾಗಿದೆ; ನೇರವಾದ ಮಾರ್ಗ! ಆದ್ದರಿಂದ ನೀವು ಇದನ್ನು ಅನುಸರಿಸಿರಿ. ಬೇರೆ ದಾರಿಗಳನ್ನು ಅನುಸರಿಸಬೇಡಿರಿ; ಅವು ನಿಮ್ಮನ್ನು (ನೇರವಾದ) ಅವನ ಮಾರ್ಗದಿಂದ ದೂರ ಸರಿಸಿ ಬಿಡುವುವು. ನೀವು (ತಪ್ಪು ದಾರಿ ಹಿಡಿಯದಂತೆ) ಜಾಗೃತರಾಗಿರಲು ಅವನು ನಿಮಗೆ ನೀಡಿದ ನಿರ್ದೇಶಗಳಾಗಿವೆ ಇವು. {153}

[ಇಂತಹ ಶರೀಅತ್ ನಿಮ್ಮ ಪಿತಾಮಹ ಇಬ್ರಾಹೀಮ್ ರಿಗೆ ನೀಡಿದ] ನಂತರ ನಾವು ಮೂಸಾ ರಿಗೂ ಒಂದು ಗ್ರಂಥ [ಅರ್ಥಾತ್ ಶರೀಅತ್ ನಿಯಮಗಳಿರುವ ತೋರಾ] ವನ್ನು ನೀಡಿದೆವು. (ಜನರ ಪೈಕಿ) ಚೆನ್ನಾಗಿ ನಡೆದುಕೊಂಡವನಿಗೆ (ನಮ್ಮ ಅನುಗ್ರಹವನ್ನು) ಪರಿಪೂರ್ಣಗೊಳಿಸುವ ಮತ್ತು ಎಲ್ಲ (ಧಾರ್ಮಿಕ) ವಿಷಯಗಳ ವಿವರಣೆಯನ್ನೊಳಗೊಂಡ; ಮಾರ್ಗದರ್ಶನವೂ ಸಾಕ್ಷಾತ್ ಅನುಗ್ರಹವೂ ಆದ ಗ್ರಂಥ! (ಮುಂದೆ) ತಮ್ಮ ಕರ್ತೃವನ್ನು ಸಂಧಿಸಲಿರುವುದನ್ನು ಅವರು ನಂಬುವಂತಾಗಲೂ (ಅದನ್ನು ನೀಡಿದೆವು). {154}

ಮತ್ತು (ಈಗ) ನಾವು ಅನುಗ್ರಹದಾಯಕವಾದ ಈ ಗ್ರಂಥವನ್ನು [ಅರ್ಥಾತ್ ನಿಮ್ಮ ಮುಂದಿರುವ ಈ 'ಕುರ್‌ಆನ್' ಅನ್ನು] ಇಳಿಸಿರುತ್ತೇವೆ. ಆದ್ದರಿಂದ ಇದನ್ನು ಅನುಸರಿಸಿರಿ ಜೊತೆಗೆ ಭಯಭಕ್ತಿ ಮೈಗೂಡಿಸಿಕೊಳ್ಳಿರಿ; ಹಾಗಾದರೆ ನೀವು ಕೃಪಾನುಗ್ರಹಕ್ಕೆ ಪಾತ್ರರಾಗುವಿರಿ. {155}

(ಈ ಕುರ್‌ಆನ್ ಅನ್ನು ಒಂದು ವೇಳೆ ನಾವು ಇಳಿಸದೇ ಇರುತ್ತಿದ್ದರೆ), ನಮಗಿಂತ ಮುಂಚಿನ ಎರಡು ಸಮುದಾಯಗಳಿಗೆ ಮಾತ್ರವಾಗಿ ಗ್ರಂಥವನ್ನು ಇಳಿಸಲಾಗಿತ್ತೆಂದೂ, ಅವರು (ಅದರಿಂದ) ಕಲಿತ ಕಲಿಸುತ್ತಿದ್ದ ವಿಷಯದ ಬಗ್ಗೆ ನಾವಂತು ತೀರಾ ಅಜ್ಞರಾಗಿದ್ದೆವು ಎಂದೂ ನೀವು ಹೇಳಬಹುದಿತ್ತು. {156}

ಅಥವಾ, ನಮಗೂ ಒಂದು ಗ್ರಂಥವನ್ನು ಇಳಿಸಿ ಕೊಟ್ಟಿರುತ್ತಿದ್ದರೆ ಸನ್ಮಾರ್ದಲ್ಲಿ ನಡೆಯುವ ವಿಷಯದಲ್ಲಿ ನಾವು ಅವರಿಗಿಂತಲೂ ಮಿಗಿಲಾದವರು ಆಗುತ್ತಿದ್ದೆವು (ಎಂದು ನೀವು ಹೇಳುತ್ತಿದ್ದಿರಿ)! ಹಾಗಾಗದಿರಲು ಇದೀಗ ನಿಮ್ಮ ಕರ್ತೃವಿನ ವತಿಯಿಂದ ಒಂದು ಸುಸ್ಪಷ್ಟವಾದ ದೃಷ್ಟಾಂತವಾಗಿ, ಮಾರ್ಗದರ್ಶನವಾಗಿ ಹಾಗೂ ಕಾರುಣ್ಯವಾಗಿ (ಈ ಕುರ್‌ಆನ್) ನಿಮ್ಮ ಬಳಿಗೆ ಬಂದು ಬಿಟ್ಟಿದೆ! ಅದಾಗ್ಯೂ ಅಲ್ಲಾಹ್ ನ ವಚನ-ದೃಷ್ಟಾಂತಗಳನ್ನು ಸುಳ್ಳೆಂದು ತಳ್ಳಿಹಾಕಿ ಅದರಿಂದ ದೂರ ಉಳಿಯುವವನಿಗಿಂತ ದೊಡ್ಡ ಅಕ್ರಮಿ ಯಾರಿರಬಹುದು! ನಮ್ಮ ವಚನಗಳಿಂದ ತಮ್ಮನ್ನು ದೂರವಾಗಿಸಿ ಕೊಂಡವರಿಗೆ ತಾವು ಹಾಗೆ (ಉದ್ದೇಶಪೂರ್ವಕವಾಗಿ ಅದರಿಂದ) ವಿಮುಖರಾದ ಕಾರಣಕ್ಕಾಗಿ ಶೀಘ್ರವೇ ನಾವು ಬಹಳ ಕೆಟ್ಟ ರೀತಿಯ ಶಿಕ್ಷೆ ಕೊಡಲಿದ್ದೇವೆ. {157}

[ಯಾವ ಪುರಾವೆಯನ್ನು ಕಂಡಾಗಲೂ ಇವಲ್ಲ ಕೇವಲ ಜಾದೂಗಾರಿಕೆ ಎಂದು ಸಾರಿ ತಿರಸ್ಕರಿಸುತ್ತಿರುವ] ಅವರ ಬಳಿಗೆ ಸಾಕ್ಷಾತ್ ಮಲಕ್ ಗಳೇ ಇಳಿದು ಬರಬೇಕು ಅಥವಾ ನಿಮ್ಮ ಕರ್ತಾರನೇ ಸ್ವತಃ ಪ್ರತ್ಯಕ್ಷವಾಗಬೇಕು ಅಥವಾ ನಿಮ್ಮ ಕರ್ತಾರನ ಕಡೆಯಿಂದ ಪ್ರತ್ಯೇಕವಾದ ದೃಷ್ಟಾಂತವೇನಾದರೂ ಆಗಮಿಸಬೇಕು ಎಂಬುದಕ್ಕಾಗಿಯೇ ಅವರು ಕಾಯುತ್ತಿರುವುದು? ಮೋದಲೇ ವಿಶ್ವಾಸಿಯಾಗಿದ್ದವನ ಅಥವಾ ವಿಶ್ವಾಸಿಯಾಗಿದ್ದು ಕೊಂಡು ಸತ್ಕಾರ್ಯಗಳನ್ನು ಮಾಡಿದವನ ಹೊರತು, ನಿಮ್ಮ ಕರ್ತಾರನಿಂದ ಅಂತಹ ಪ್ರತ್ಯೇಕ ದೃಷ್ಟಾಂತವು ಪ್ರತ್ಯಕ್ಷಪಡುವ ದಿನವು ಯಾವೊಬ್ಬನಿಗೂ ಅವನು (ಆಗ ಸ್ವೀಕರಿಸುವ) ವಿಶ್ವಾಸವು ಲಾಭಕರವಾಗದು! (ಪೈಗಂಬರರೇ), ಅವರು ಕಾಯುತ್ತಲಿರಲಿ; ನಾವೂ ಕಾಯುತ್ತಿದ್ದೇವೆ ಎಂದು ನೀವು ಅವರಿಗೆ ತಿಳಿಸಿ ಬಿಡಿ. {158}

ತಮ್ಮ ಧರ್ಮವನ್ನು (ಮನಸ್ಸಿಗೆ ತೋಚಿದಂತೆ) ಛಿನ್ನ-ಭಿನ್ನ ಮಾಡಿ ಗುಂಪುಗಳಲ್ಲಿ ಹಂಚಿ ಹೋದವರೊಂದಿಗೆ (ಪೈಗಂಬರರೇ) ನಿಮಗೆ ಯಾವ ರೀತಿಯ ಸಂಬಂಧವೂ ಇಲ್ಲ! ಅವರ ಪ್ರಕರಣವಂತು ಅಲ್ಲಾಹ್ ನಿಗೆ ಬಿಟ್ಟ ವಿಷಯವಾಗಿದೆ. ನಂತರ, ಅವರೇನು ಮಾಡುತ್ತಿದ್ದರು ಎಂದು ಅವನೇ ಅವರಿಗೆ ತಿಳಿಸಲಿರುವನು. {159}

ಯಾರಾದರೂ ಒಂದು ಒಳಿತಿನೊಂದಿಗೆ (ನಮ್ಮಲ್ಲಿಗೆ) ಬಂದರೆ ಆತನಿಗೆ ಅದರ ಹತ್ತು ಪಟ್ಟು ಪ್ರತಿಫಲವಿರುವುದು; ಇನ್ನು ಒಬ್ಬಾತನು ಕೆಡುಕು ಸಂಪಾದಿಸಿ ಬಂದರೆ ಆತನಿಗಿರುವುದು ಆ ಕೆಡುಕಿಗೆ ಸಮಾನವಾದ ಪ್ರತಿಫಲ ಮಾತ್ರ. ಮತ್ತು (ಅಂದು) ಜನರು ಅನ್ಯಾಯಕ್ಕೆ ಒಳಗಾಗಲಾರರು. {160}

ನಿಜಕ್ಕೂ ನನ್ನ ಕರ್ತಾರನು ನನ್ನನ್ನು ನೇರವಾದ ಮಾರ್ಗದೆಡೆಗೆ ಮುನ್ನಡೆಸಿರುತ್ತಾನೆ. ಅಂದರೆ ವಕ್ರತೆಗಳಿಲ್ಲದ ಸರಳವಾದ ಋಜುವಾದ ಧರ್ಮದೆಡೆಗೆ! ಅದು (ಅಲ್ಲಾಹ್ ನಲ್ಲಿ ಮಾತ್ರ) ನಿಷ್ಠೆಯೊಂದಿಗೆ ತನ್ಮಯನಾಗಿದ್ದ ಇಬ್ರಾಹೀಮ್ ರು ಅನುಸರಿಸಿದ ಮಾರ್ಗ! ಅವರಾದರೋ [ಅನೇಕರನ್ನು ಪೂಜಿಸುವ] ಮುಶ್ರಿಕ್ ಗಳ ಯಾದಿಗೆ ಸೇರಿದವರಾಗಿರಲಿಲ್ಲ - ಎಂದು (ಪೈಗಂಬರರೇ) ನೀವು ಅವರಿಗೆ ಸಾರಿರಿ. {161}

ನಿಸ್ಸಂಶಯವಾಗಿ ನನ್ನ ನಮಾಝ್, ನನ್ನ ಬಲಿ-ಉಪಾಸನಾದಿಗಳು, ನನ್ನು ಜೀವನ ಮತ್ತು ನನ್ನ ಮರಣ - ಎಲ್ಲವೂ ಸಕಲ ಲೋಕದ ಪರಿಪಾಲಕನಾದ ಅಲ್ಲಾಹ್ ನಿಗೆ ಮಾತ್ರ ಮೀಸಲು; ಅವನಿಗೆ ಯಾರೂ ಜೊತೆಗಾರರಿಲ್ಲ. ನನಗೆ ಇದನ್ನೇ ಆದೇಶಿಸಲಾಗಿದೆ ಮತ್ತು ನಾನು ಎಲ್ಲದಕ್ಕಿಂತ ಮೊದಲು (ಆ ಅದೇಶಗಳಿಗೆ) ಶರಣಾಗಿ ಮುಸ್ಲಿಮನಾಗಿರುತ್ತೇನೆ - ಎಂದು (ಪೈಗಂಬರರೇ) ನೀವು ಸ್ಪಷ್ಟ ಪಡಿಸಿರಿ. {162-163}

ಸಕಲ ವಸ್ತುಗಳ ದೇವನು ಅಲ್ಲಾಹ್ ನೇ ಆಗಿರುವಾಗ ನಾನು ಅವನ ಹೊರತು ದೇವನಾಗಿಸಿಕೊಳ್ಳಲು ಬೇರೊಬ್ಬನನ್ನು ಹುಡುಕಬೇಕೇ? ಪ್ರತಿಯೊಬ್ಬನೂ ತಾನು ಮಾಡಿದ ಕರ್ಮಕ್ಕೆ ಸ್ವತಃ ತಾನೇ ಹೊಣೆಗಾರನಾಗಿರುವನು. ಯಾವೊಬ್ಬನೂ ಮತ್ತೊಬ್ಬನ ಪಾಪಭಾರ ಹೊರುವುದಿಲ್ಲ! ಕೊನೆಯದಾಗಿ ನೀವೆಲ್ಲರೂ ಮರಳ ಬೇಕಾದುದು ನಿಮ್ಮ ಕರ್ತಾರನ ಬಳಿಗೆ. ಆಗ ನೀವು (ಪರಸ್ಪರ) ಭಿನ್ನರಾಗಿದ್ದ ವಿಷಯದ ವಾಸ್ತವಿಕತೆಯನ್ನು ಅವನು ನಿಮಗೆ ತಿಳಿಸಲಿರುವನು - ಎಂದೂ ಅವರಿಗೆ ತಿಳಿಸಿ ಬಿಡಿ. {164}

ನಿಮ್ಮನ್ನು [ಅರ್ಥಾತ್ ಮನುಷ್ಯ ವರ್ಗವನ್ನು, ಪೀಳಿಗೆಗಳ ನಂತರ ಪೀಳೆಗೆಗಳು] ಅನುಕ್ರಮವಾಗಿ ಭೂಮಿಯ ಉತ್ತರಾಧಿಕಾರ ಪಡೆಯುವಂತೆ ಮಾಡಿದವನು ಅವನೇ! ಬಳಿಕ ನಿಮ್ಮ ಪೈಕಿ ಕೆಲವರನ್ನು ಕೆಲವರಿಗಿಂತ ಅಂತಸ್ತಿನಲ್ಲಿ ಮಿಗಿಲಾಗಿಸಿದನು - ನಿಮಗೆ ಎಂತಹ (ಅಧಿಕಾರ-ಅಂತಸ್ತುಗಳನ್ನು) ನೀಡಲಾಗಿದೆಯೋ ಅದರಲ್ಲಿ ನಿಮ್ಮನ್ನು ಪರೀಕ್ಷಿಸುವ ಸಲುವಾಗಿ! ಖಂಡಿತಾ ನಿಮ್ಮ ದೇವನು (ಶಿಕ್ಷಾರ್ಹರನ್ನು) ಕ್ಷಿಪ್ರವಾಗಿ ಶಿಕ್ಷಿಸುವವನಾಗಿರುವನು; ಮತ್ತು (ಕ್ಷಮಾರ್ಹರ ಪಾಲಿಗೆ) ಖಂಡಿತಾ ಅವನು ಕ್ಷಮಾದಾನಿಯೂ ಮಹಾ ಕಾರುಣ್ಯವಂತನೂ ಹೌದು. {165}
------------- 


ಅನುವಾದಿತ ಸೂರಃ ಗಳು:

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...