ಆಲಿ ಇಮ್ರಾನ್ | ترجمة سورة آل عمران

ಆಲಿ ಇಮ್ರಾನ್ | سورة آل عمران
ترجمة سورة آل عمـران من القرآن الكريم إلى اللغة الكنادية من قبل المترجم / إقبال صوفي – الكويت

* سهل الفهم من غير الرجوع إلى كتاب التفسير *

| ಸೂರಃ ಆಲಿ ಇಮ್ರಾನ್ | ಪವಿತ್ರ್ ಕುರ್‍ಆನ್ ನ 3 ನೆಯ ಸೂರಃ | ಇದರಲ್ಲಿ ಒಟ್ಟು 200 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ, ಅವನು ತುಂಬಾ ಕರುಣೆ ತೋರುವವನೂ ಸದಾ ಕರುಣೆ ತೋರುತ್ತಲೇ ಇರುವವನೂ ಆಗಿರುವನು!

ಅಲಿಫ್ – ಲಾಮ್ – ಮೀಮ್. {1}

ಅಲ್ಲಾಹ್! ಅವನ ಹೊರತು ಆರಾಧಿಸಿಕೊಳ್ಳಲು ಅರ್ಹರಾದವರು ಬೇರೆ ಯಾರೂ ಇಲ್ಲ. ಅವನು ಸ್ವಯಂ ಚೇತನವುಳ್ಳ ಸ್ವಯಂಭು, ಸದಾ ನೆಲೆಸಿರುವ ಚಿರಂತನ! ಸ್ವಯಂ ನೆಲೆನಿಂತು (ವಿಶ್ವದ ವ್ಯವಸ್ಥೆಯನ್ನು ತನ್ನ ಯೋಜನೆಗಳನುಸಾರ ನಿಯಂತ್ರಿಸುತ್ತಿರುವ) ಏಕೈಕ ನಿಯಾಮಕ. {2}

(ಪೈಗಂಬರರೇ,) ಪರಮ ಸತ್ಯವನ್ನು ಹೊಂದಿರುವ ಈ ಗ್ರಂಥವನ್ನು ಅವನೇ ನಿಮಗೆ ಇಳಿಸಿ ಕೊಟ್ಟಿರುವನು. ಇದಕ್ಕಿಂತ ಮುಂಚಿತವಾಗಿ ಇಳಿಸಿಕೊಡಲಾದ (ಎಲ್ಲ ಗ್ರಂಥಗಳನ್ನು) ಈ ಗ್ರಂಥವು ಸಮರ್ಥಿಸುತ್ತದೆ. ಈ ಮೊದಲು ಅವನು ತೋರಾ ಮತ್ತು ಬೈಬಲ್ (ಅರಬಿ: ತೌರಾತ್ ಮತ್ತು ಇಂಜೀಲ್) ಗಳನ್ನು ಜನರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಇಳಿಸಿ ಕೊಟ್ಟಿದ್ದನು. ಈಗ ಅಲ್-ಫುರ್‍ಕಾನ್ (ಅರ್ಥಾತ್: ಸತ್ಯ ಮತ್ತು ಅಸತ್ಯಗಳನ್ನು ಪ್ರತ್ಯೇಕಿಸಿ ತೋರಿಸುವ ಗ್ರಂಥವಾದ ಈ ಕುರ್‍ಆನ್) ಅನ್ನು ಸಹ ಅವನೇ ಇಳಿಸಿ ಕೊಟ್ಟಿದ್ದಾನೆ. (- ಇವೆಲ್ಲವೂ ಜನರ ಪಾಲಿಗೆ ಅಲ್ಲಾಹ್ ನ ದೃಷ್ಟಾಂತಗಳಾಗಿವೆ). ಅಲ್ಲಾಹ್ ನ ದೃಷ್ಟಾಂತಗಳನ್ನು ಉದ್ದೇಶಪೂರ್ವಕವಾಗಿ ಧಿಕ್ಕರಿಸಿ ಬಿಡುವವರಿಗೆ ಖಂಡಿತವಾಗಿಯೂ ಕಠಿಣ ಸ್ವರೂಪದ ಶಿಕ್ಷೆ ಕಾದಿದೆ. ಅಲ್ಲಾಹ್ ನು ಪ್ರತಾಪಶಾಲಿಯಾಗಿದ್ದು (ಅಂತಹ ಧಿಕ್ಕಾರಿಗಳೊಂದಿಗೆ) ಪ್ರತೀಕಾರ ತೀರಿಸಿಕೊಳ್ಳಲು ಶಕ್ತನಾಗಿದ್ದಾನೆ. {3-4}

ಅವನೇ ಅಲ್ಲಾಹ್ ನು! ಯಾವೊಂದು ವಸ್ತುವೂ – ಅದು ಭೂಮಿಯಲ್ಲಿರಲಿ ಅಥವಾ ಆಕಾಶಗಳಲ್ಲೇ ಇರಲಿ – ಅವನಿಂದ ಖಂಡಿತ ಮರೆಯಾಗಿಲ್ಲ. ತಾಯಂದಿರ ಗರ್ಭದಲ್ಲೇ ನಿಮಗೆ ತಾನು ಬಯಸಿದ ರೂಪ ಕೊಡುವವನು ಅವನೇ; ಅವನ ಹೊರತು ಬೇರಾರೂ ಆರಾಧನೆಗೆ ಅರ್ಹರಲ್ಲ. ಅವನು ಪ್ರಭಾವಶಾಲಿಯೂ ಅತ್ಯಂತ ನಿಷ್ಣಾತನೂ ಹೌದು. {5-6}

(ಪೈಗಂಬರರೇ), ಅವನೇ ನಿಮಗೆ ಈ ಗ್ರಂಥವನ್ನು ಇಳಿಸಿ ಕೊಟ್ಟವನು. ಇದರಲ್ಲಿ ಖಚಿತ ನಿರ್ದೇಶಗಳಿರುವ (ಅರಬಿ: ಮುಹ್ಕಮಾತ್) ವಚನಗಳಿವೆ, ಅವು ಗ್ರಂಥದ ಮೂಲವಿಷಯವನ್ನು ನಿರೂಪಿಸುತ್ತವೆ. ಮತ್ತು ರೂಪಕಗಳ (ಅರಬಿ: ಮುತಶಾಬಿಹಾತ್) ಸ್ವರೂಪದ ಕೆಲವು ವಚನಗಳೂ ಇವೆ. ವಕ್ರ ಮನಸ್ಸಿನ ಜನರು (ಇದರಲ್ಲಿನ ಖಚಿತ ನಿರ್ದೇಶಗಳಿರುವ ವಚನಗಳನ್ನು ಕಡೆಗಣಿಸಿ) ರೂಪಕಗಳಂತಿರುವ ವಚನಗಳ (ಮರ್ಮವನ್ನು ಬೇಧಿಸಲು ಅದರ) ಬೆಂಬತ್ತಿ ಹೋಗುತ್ತಾರೆ, ಹಾಗೂ ಗೊಂದಲವುಂಟು ಮಾಡುವ ಸಲುವಾಗಿಯೇ (ಅವುಗಳಿಗೆ ತಮ್ಮದೇ ಆದ ರೀತಿಯಲ್ಲಿ) ಅರ್ಥ ಕಲ್ಪಿಸುತ್ತಾರೆ. ಯಥಾರ್ಥದಲ್ಲಿ ಅವುಗಳ ಸರಿಯಾದ ವ್ಯಾಖ್ಯಾನ ಬಲ್ಲವರು ಅಲ್ಲಾಹ್ ನ ಹೊರತು ಯಾರೂ ಇಲ್ಲ! ಆದರೆ, ಅವುಗಳಲ್ಲಿ ನಮಗೆ ಬಲವಾದ ವಿಶ್ವಾಸವಿದೆ, ಅವೆಲ್ಲವೂ ನಮ್ಮ ಪರಿಪಾಲಕನಾದ ಒಡೆಯನ ವತಿಯಿಂದಲೇ ಬಂದವುಗಳಾಗಿವೆ – ಎಂದು ಜ್ಞಾನದಲ್ಲಿ ಪರಿಣತಿ ಸಾಧಿಸಿದವರು ಹೇಳುವರು. (ಯಥಾರ್ಥದಲ್ಲಿ) ತಿಳುವಳಿಕೆ ಇರುವ ಜನರಲ್ಲದೆ ಇತರರು (ಇಂತಹ ಉಪದೇಶಗಳಿಂದ) ಪಾಠ ಕಲಿಯುವುದಿಲ್ಲ. {7}

(ನಮ್ಮನ್ನು ಪರಿಪಾಲಿಸುವ) ಒಡೆಯಾ, ಒಮ್ಮೆ ಸರಿದಾರಿಯಲ್ಲಿ ನಮ್ಮನ್ನು ನಡೆಸಿದ ನಂತರ ನಮ್ಮ ಹೃದಯಗಳು ಅದರಿಂದ ವಿಚಲಿಸುವಂತೆ ಮಾಡದಿರು; ನಿನ್ನ ಸನ್ನಿಧಿಯಿಂದ ನಮಗೆ ಅನುಗ್ರಹವನ್ನು ದಯಪಾಲಿಸು, ನೀನಾದರೋ (ಅನುಗ್ರಹಗಳನ್ನು) ಪ್ರದಾನಿಸುವವನಾಗಿರುವೆ. ನಮ್ಮ ಪರಿಪಾಲಕನೇ, ನೀನಾದರೋ ಎಲ್ಲಾ ಮನುಷ್ಯರನ್ನು (ಬರಲಿರುವ) ಒಂದು ದಿನ ಒಟ್ಟುಗೂಡಿಸಲಿರುವೆ, ಅದರಲ್ಲೇನೂ ಸಂಶಯವಿಲ್ಲ. ಹೌದು, (ಸತ್ಯವೇನೆಂದರೆ) ಅಲ್ಲಾಹ್ ನು ಎಂದೂ ಮಾತು ತಪ್ಪುವುದಿಲ್ಲ (- ಎಂದು ಅಂಥವರು ಪ್ರಾರ್ಥಿಸುತ್ತಾರೆ). {8-9}

ಖಂಡಿತವಾಗಿಯೂ ಧಿಕ್ಕಾರದ ನಿಲುವು ತಾಳಿದವರಿಗೆ ಅವರ ಸಂಪತ್ತಾಗಲಿ ಸಂತಾನವಾಗಲಿ ಅಲ್ಲಾಹ್ ನ (ಶಿಕ್ಷೆಯಿಂದ ತಪ್ಪಿಸಿಕೊಳ್ಳಲು) ಕಿಂಚಿತ್ತೂ ಪ್ರಯೋಜನಕಾರಿಯಾಗದು, ಬದಲಾಗಿ ನರಕದ ಇಂಧನ ಅವರೇ ಆಗಿದ್ದಾರೆ. ಫಿರ್‌ಔನ್ ನ ಬಳಗದವರು ಮತ್ತು ಅವರಿಗಿಂತಲೂ ಮುಂಚಿನ (ಅಂತಹದೇ ಧಿಕ್ಕಾರಿ) ಜನರಿಗೆ ಬಂದ ಗತಿಯೇ (ಈ ಧಿಕ್ಕಾರಿಗಳಿಗೂ) ಬರಲಿರುವುದು. ಅವರೆಲ್ಲರೂ ನಮ್ಮ ದೃಷ್ಟಾಂತಗಳನ್ನು ಸುಳ್ಳೆಂದು ನಿರಾಕರಿಸಿದವರಾಗಿದ್ದರು. ಅವರು ಮಾಡಿದ ಪಾಪಗಳ ಕಾರಣ ಅಲ್ಲಾಹ್ ನು ಅವರನ್ನು ಹಿಡಿದು ಶಿಕ್ಷಿಸಿದನು. ಹೌದು, ಅಲ್ಲಾಹ್ ನು ಕಠಿಣವಾಗಿ ಶಿಕ್ಷೆ ಕೊಡುವವನೂ ಆಗಿದ್ದಾನೆ. {10-11}

ಶೀಘ್ರದಲ್ಲೇ (ಅವರಂತೆಯೇ) ನೀವೂ ಸಹ ಸೋಲುಣ್ಣಲಿರುವಿರಿ ಮತ್ತು ನಿಮ್ಮನ್ನೂ ಸಾರಾಸಗಟಾಗಿ ನರಕದೆಡೆಗೆ ಅಟ್ಟಲಾಗುವುದು – ಎಂದು (ಮುಹಮ್ಮದ್ ಪೈಗಂಬರರೇ) ಧಿಕ್ಕರಿಸಿದರವರನ್ನು ನೀವು ಎಚ್ಚರಿಸಿರಿ. ಹೌದು, ನರಕವು ಅದೆಂತಹ ಕೆಟ್ಟ ತಾಣವಾಗಿದೆ! {12}

(‘ಬದ್ರ್’ ಪ್ರದೇಶದಲ್ಲಿ) ಎರಡು ಗುಂಪುಗಳು ಪರಸ್ಪರ ಎದುರುಬದುರಾಗಿ ನಿಂತು ಮಾಡಿದ ಯುದ್ಧದ (ಆ ಘಟನೆಯಲ್ಲಿ) ನಿಮಗೆ ಸ್ಪಷ್ಟವಾದ ಒಂದು ಪಾಠವಿದೆ. ಒಂದು ಗುಂಪು ಅಲ್ಲಾಹ್ ನ ಮಾರ್ಗದಲ್ಲಿ ಯುದ್ಧ ಮಾಡುತ್ತಿತ್ತು ಮತ್ತು ಇನ್ನೊಂದು ಗುಂಪು ಧಿಕ್ಕಾರಿಗಳದ್ದಾಗಿತ್ತು. (ಧಿಕ್ಕಾರಿಗಳ ಗುಂಪು ಗಾತ್ರದಲ್ಲಿ) ತಮಗಿಂತ ಎರಡು ಪಟ್ಟು ದೊಡ್ಡದಾಗಿರುವುದನ್ನು (ವಿಶ್ವಾಸಿಗಳ ಗುಂಪು) ಕಣ್ಣಾರೆ ನೋಡಿತ್ತು. ಹಾಗಿದ್ದರೂ, ಅಲ್ಲಾಹ್ ನು ತಾನು ಮೆಚ್ಚಿಕೊಂಡಂತೆ ಯಾರಿಗೆ ಬೇಕೋ ಅವರಿಗೆ ಅವರ ಶಕ್ತಿಯನ್ನು ಹೆಚ್ಚಿಸಿಕೊಟ್ಟು (ಗೆಲ್ಲಲು) ನೆರವಾಗುತ್ತಾನೆ. ನಿಜವಾಗಿಯೂ ಕಣ್ಣುಳ್ಳವರಿಗೆ ಈ ನಿದರ್ಶನದಲ್ಲಿ ದೊಡ್ಡದಾದ ಒಂದು ಪಾಠ ಇದೆ. {13}

ಪುರುಷರ ಪಾಲಿಗೆ ಅವರು ಅತಿಯಾಗಿ ಇಷ್ಟಪಡುವ ಲೌಕಿಕ ಸುಖಭೋಗಗಳನ್ನು ಅತ್ಯಂತ ಮೋಹಕವಾಗಿ ಕಾಣುವಂತೆ ಮಾಡಿರಿಸಲಾಗಿದೆ. ಅವುಗಳಲ್ಲಿ ಸ್ತ್ರೀಯರು, ಗಂಡು ಸಂತಾನ, ಚಿನ್ನ-ಬೆಳ್ಳಿಯ ಬೃಹತ್ ಭಂಡಾರ, ಅಂಕಿತಗೊಂಡ ಜಾತಿ ಕುದುರೆಗಳು, ಜಾನುವಾರುಗಳು, ಕೃಷಿ ಭೂಮಿ – ಇವು ಸೇರಿವೆ. (ನಿದರ್ಷನಗಳಿಂದ ಪಾಠ ಕಲಿಯದ ಜನರೇ), ಇವೆಲ್ಲ (ನಶ್ವರವಾದ) ಲೌಕಿಕ ಜೀವನದ ಸುಖಸಾಮಗ್ರಿಗಳು ಮಾತ್ರ! ನಿಜಕ್ಕೂ ಅಲ್ಲಾಹ್ ನ ಬಳಿ ಇರುವುದೇ ಶ್ರೇಷ್ಠವಾದ ನಿವಾಸವಾಗಿದೆ. {14}

(ಪೈಗಂಬರರೇ, ನೀವು ಅವರೊಂದಿಗೆ) ಹೇಳಿರಿ: ಅಂತಹ (ಲೌಕಿಕ ಸುಖ ಭೋಗಗಳಾದಿ) ವಸ್ತುಗಳಿಗಿಂತಲೂ ಹೆಚ್ಚು ಉತ್ತಮವಾದುದರ ಬಗ್ಗೆ ನಾನು ನಿಮಗೆ ಮಾಹಿತಿ ನೀಡಲೇ? ಅಲ್ಲಾಹ್ ನ ಭಯವಿರಿಸಿಕೊಂಡು ಜೀವಿಸಿದವರಿಗಾಗಿ ನೀರಿನ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳು ಅವರ ಪರಿಪಾಲಕನಾದ ಪ್ರಭುವಿನ ಬಳಿ ಸಿದ್ಧವಿದೆ. ಅದರಲ್ಲಿ ಅವರು ಸದಾಕಾಲ ನೆಲೆಸುವರು. ಅಲ್ಲಿ ಅವರಿಗೆ ಪಾವನ ಪತ್ನಿಯರ ಸಾಂಗತ್ಯ ದೊರಕುವುದು. (ಎಲ್ಲಕ್ಕಿಂತ ಮಿಗಿಲಾಗಿ) ಅವರಿಗೆ ಅಲ್ಲಿ ಅಲ್ಲಾಹ್ ನ ಸಂಪ್ರೀತಿಯೂ ಪ್ರಾಪ್ತವಾಗುವುದು. ಹೌದು, ಅಲ್ಲಾಹ್ ನು ತನ್ನ ಆಪ್ತ ಸೇವಕರ (ಚಲನವಲನಗಳನ್ನು) ಚೆನ್ನಾಗಿ ಗಮನಿಸುತ್ತಿದ್ದಾನೆ. {15}

ನಮ್ಮ ಪಾಲಕನಾದ ಒಡೆಯನೇ, ನಾವಿದೋ (ನಿನ್ನಲ್ಲಿ) ವಿಶ್ವಾಸವಿರಿಸಿದ್ದೇವೆ. ಆದ್ದರಿಂದ ನಮ್ಮ ಪಾಪಗಳನ್ನು ಮನ್ನಿಸು, ನಮ್ಮನ್ನು ನರಕದ ಬೆಂಕಿಯ ಶಿಕ್ಷೆಯಿಂದ ಕಾಪಾಡು – ಎಂದೆಲ್ಲ (ಅಲ್ಲಾಹ್ ನ ಆಪ್ತ ಸೇವಕರು) ಪ್ರಾರ್ಥಿಸುತ್ತಿರುತ್ತಾರೆ. ಅವರು ಸಹನೆಯುಳ್ಳವರಾಗಿದ್ದಾರೆ; ಸತ್ಯವಂತರಾಗಿದ್ದಾರೆ; ವಿನೀತ ಸ್ವಭಾವದವರಾಗಿದ್ದಾರೆ; ಅಲ್ಲಾಹ್ ನ ಮಾರ್ಗದಲ್ಲಿ (ತಮ್ಮ ಸಂಪತ್ತನ್ನು) ಖರ್ಚು ಮಾಡುವವರಾಗಿದ್ದಾರೆ; ಅವೆಲ್ಲದರ ಜೊತೆಗೆ ಅವರು ರಾತ್ರಿಯ ಕೊನೆಯ ಜಾವಗಳಲ್ಲಿ (ನಿದ್ದೆಯಿಂದ ಎದ್ದು, ಅಲ್ಲಾಹ್ ನೊಡನೆ) ತಮ್ಮ ಪಾಪವಿಮೋಚನೆಗಾಗಿ ಬೇಡುವವರಾಗಿದ್ದಾರೆ. {16-17}

ತನ್ನ ಹೊರತು ಬೇರಾರೂ ಆರಾಧನೆಗೆ ಅರ್ಹರಾದವರು ಇಲ್ಲವೆಂದು ಅಲ್ಲಾಹ್ ನು ಸ್ವತಃ ಸಾಕ್ಷ್ಯ ವಹಿಸಿದ್ದಾನೆ. ಮಲಕ್ ಗಳು ಮತ್ತು (ಮನುಷ್ಯರಲ್ಲಿ) ತಿಳುವಳಿಕೆಯುಳ್ಳವರು ಸಹ (ಅದಕ್ಕೆ ಸಾಕ್ಷಿಗಳಾಗಿದ್ದಾರೆ). ಅವನು ನ್ಯಾಯಬದ್ಧವಾಗಿ ನೆಲೆಗೊಂಡಿರುವನು. ಅವನ ಹೊರತು ಅರಾಧನೆಗೆ ಅರ್ಹರಾದವರು ಯಾರೂ ಇಲ್ಲ. ಅವನು ಪ್ರತಾಪಶಾಲಿಯೂ ಜಾಣ್ಮೆತನವುಳ್ಳವನೂ ಆಗಿರುವನು. {18}

ಅಲ್ಲಾಹ್ ನ ಸನ್ನಿಧಿಯಲ್ಲಿ (ಸ್ವೀಕಾರಾರ್ಹವಾದ) ಧರ್ಮವು ಖಂಡಿತವಾಗಿ ಇಸ್ಲಾಮ್ (ಅರ್ಥಾತ್: ಅಲ್ಲಾಹ್ ನಿಗೆ ಸಂಪೂರ್ಣವಾಗಿ ಶರಣಾಗುವಿಕೆ) ಮಾತ್ರವೇ ಆಗಿದೆ. ಆದರೆ ಅಂತಹ ಜ್ಞಾನ ಲಭಿಸಿದ ಬಳಿಕವೇ ಗ್ರಂಥ ನೀಡಲ್ಪಟ್ಟ (ಯಹೂದ್ಯರು ಮತ್ತು ಕ್ರೈಸ್ತರು, ಅದನ್ನು ಒಪ್ಪಿಕೊಳ್ಳುವಲ್ಲಿ) ಭಿನ್ನತೆ ತಾಳಿದರು, ಅವರೊಳಗಿನ ಅಸೂಯೆ/ದ್ವೇಷ ಮಾತ್ರವೇ ಅದಕ್ಕೆ ಕಾರಣವಾಗಿತ್ತು. ಹಾಗೆ ಅಲ್ಲಾಹ್ ನು ನೀಡುವ ಸ್ಪಷ್ಟವಾದ ಸೂಚನೆಗಳನ್ನು ತಿರಸ್ಕರಿಸಿ ಬಿಟ್ಟವರು (ತಿಳಿದಿರಲಿ) ಅಲ್ಲಾಹ್ ನು ಬಲು ಬೇಗನೆ (ಅವರೊಂದಿಗಿನ) ಲೆಕ್ಕ ಚುಕ್ತಗೊಳಿಸಿ ಬಿಡುವನು. {19}

ಒಂದು ವೇಳೆ ಅವರು ನಿಮ್ಮೊಂದಿಗೆ ತರ್ಕಕ್ಕೆ ನಿಂತರೆ, ನಾನು ಮತ್ತು ನನ್ನನ್ನು ಅನುಸರಿಸುತ್ತಿರುವವರು ಅಲ್ಲಾಹ್ ನಿಗೆ ಸಂಪೂರ್ಣವಾಗಿ ಶರಣಾಗಿದ್ದೇವೆ – ಎಂದು (ಓ ಪೈಗಂಬರರೇ) ನೀವು ಹೇಳಿರಿ. ಮತ್ತು ನೀವೂ ಸಹ ಹಾಗೆಯೇ ಸಂಪೂರ್ಣವಾಗಿ ಅಲ್ಲಾಹ್ ನಿಗೆ ಶರಣಾಗುವಿರಾ? – ಎಂದು ಗ್ರಂಥದವರೊಡನೆ ಹಾಗೂ ನಿರಕ್ಷರಿಗಳಾದ (ಅರಬರೊಡನೆ) ಕೇಳಿರಿ. ಅವರೂ ಸಹ (ನಿಮ್ಮಂತೆಯೇ) ಅಲ್ಲಾಹ್ ನಿಗೆ ಶರಣಾದರೆ ಸನ್ಮಾರ್ಗದಲ್ಲಿರುವರು (ಎಂದು ತಿಳಿಯಿರಿ); ಅಥವಾ ಅದರಿಂದ ಮುಖ ತಿರುಗಿಸಿಕೊಂಡವರಾದರೆ, (ನೀವು ತಿಳಿದಿರಿ), ನಿಮ್ಮ ಮೇಲಿರುವ ಹೋಣೆಗಾರಿಕೆಯು (ನಮ್ಮ) ಸಂದೇಶವನ್ನು ಅವರಿಗೆ ತಲುಪಿಸಿ ಬಿಡುವುದು ಮಾತ್ರ! ಅಲ್ಲಾಹ್ ನಾದರೋ (ತನ್ನೆಲ್ಲ) ಸೇವಕರನ್ನು ಗಮನಿಸುತ್ತಿದ್ದಾನೆ. {20}

(ನಿದರ್ಶನಗಳಂತಿದ್ದ) ಅಲ್ಲಾಹ್ ನ ಸ್ಪಷ್ಟೋಕ್ತಿಗಳನ್ನು ಧಿಕ್ಕರಿಸಿದವರು; ಪ್ರವಾದಿಗಳನ್ನು ಅನ್ಯಾಯವಾಗಿ ವಧಿಸಿದವರು ಮತ್ತು (ಸಮಾಜದಲ್ಲಿ) ನ್ಯಾಯ-ನೀತಿಗಳನ್ನು ಪಾಲಿಸುವಂತೆ ಕರೆಕೊಡುತ್ತಿದ್ದ ಜನರನ್ನೂ ಸಹ ವಧಿಸಿ ಬಿಟ್ಟವರಿಗೆ ನೋವುಭರಿತ ಶಿಕ್ಷೆ ಕಾದಿರುವ ಕುರಿತು (ಪೈಗಂಬರರೇ,) ನೀವು “ಶುಭವಾರ್ತೆ” ನೀಡಿರಿ. ಅವರು ಮಾಡಿದ್ದ ಸತ್ಕರ್ಮಗಳು ಇಹಲೋಕ ಮತ್ತು ಪರಲೋಕಗಳೆರಡರಲ್ಲೂ ವ್ಯರ್ಥವಾಗಿ ಹೋದವು! ಮಾತ್ರವಲ್ಲ ಅವರಿಗೆ (ಪರಲೋಕದಲ್ಲಿ ಶಿಕ್ಷೆಯಿಂದ ರಕ್ಷಿಸಲು) ಯಾರ ನೆರವೂ ಸಿಗಲಾರದು. {21-22}

ಗ್ರಂಥ ಪಡೆಯುವ ಅವಕಾಶ ನೀಡಲಾದ ಜನರನ್ನು ನೀವು ನೋಡಿದಿರಲ್ಲ?! ಅವರ ನಡುವಿನ (ವ್ಯಾಜ್ಯಗಳ) ನ್ಯಾಯಯುತವಾದ ಇತ್ಯರ್ಥಕ್ಕಾಗಿ ಅವರನ್ನು ಅಲ್ಲಾಹ್ ನ ಗ್ರಂಥದೆಡೆಗೆ ಆಹ್ವಾನಿಸಲಾಗಿತ್ತು. ಹಾಗೆ (ಆಹ್ವಾನಿಸಿದಾಗ) ಅವರ ಪೈಕಿಯ ಒಂದು ಗುಂಪು ಮುಖ ತಿರುಗಿಸಿ (ಬೇರೆ ದಾರಿ ಹಿಡಿದು) ಕೊಂಡಿತು. ಅವರು ಒಲವಿಲ್ಲದವರಾಗಿದ್ದರು. ಬೆರಳೆಣಿಕೆಯ ಕೆಲವೇ ದಿನಗಳ ಹೊರತು ನರಕದ ಬೆಂಕಿಯು (ಸದಾಕಾಲ) ನಮ್ಮನ್ನು ಸುಡಲಾರದು ಎಂದೇ ಅವರು ಹೇಳಿಕೊಳ್ಳುತ್ತಿದ್ದುದರ ಫಲವಾಗಿತ್ತು (ಅವರ ಅಂತಹ ನಿಲುವು). ಅವರ ಕಪೋಲ ಕಲ್ಪಿತ ನಂಬಿಕೆಗಳು ಅವರನ್ನು ಧರ್ಮದ ವಿಷಯದಲ್ಲಿ ವಂಚಿಸಿ ಬಿಟ್ಟಿವೆ. ಸಂಶಯಕ್ಕೆ ಆಸ್ಪದವೇ ಇಲ್ಲದ ಆ ದಿನ ಅವರನ್ನೆಲ್ಲ ಒಟ್ಟು ಸೇರಿಸಲಾಗುವಾಗ ಅವರಿಗೆ ಹೇಗಾಗಬಹುದು! ಅಂದು ಪ್ರತಿಯೊಬ್ಬನಿಗೂ ಆತನ ಸಂಪಾದನೆಯನ್ನು, ಸ್ವಲ್ಪವೂ ಅನ್ಯಾಯವಾಗದ ರೀತಿಯಲ್ಲಿ, ಪೂರ್ತಿಯಾಗಿ ನೀಡಲಾಗುವುದು. {23-25}

(ಆದ್ದರಿಂದ ಓ ಪೈಗಂಬರರೇ, ನೀವು ಹೀಗೆ) ಸಾರಿರಿ: ಓ ಅಲ್ಲಾಹ್! ವಿಷ್ವ-ಚಕ್ರಾಧಿಪತ್ಯದ ಸಾರ್ವಭೌಮ ಅಧಿಪತಿಯೇ! ಯಾರಿಗೆ ನೀನು ನೀಡಬಯಸುವೆಯೋ ಅವರಿಗೆ ಅಧಿಕಾರವನ್ನು ನೀಡುವವನು ನೀನು; ಯಾರಿಂದ ನೀನು ಕಸಿದುಕೊಳ್ಳ ಬಯಸುವೆಯೋ ಅವರಿಂದ ಅಧಿಕಾರವನ್ನು ಕಸಿದುಕೊಳ್ಳುವವನೂ ನೀನೇ. ಯಾರಿಗೆ ನೀಡಬಯಸುವೆಯೋ ಅವರಿಗೆ ಘನತೆ-ಗೌರವಗಳನ್ನು ನೀಡುವವನು ನೀನು; ಯಾರನ್ನು ನಿಂದಿಸಲಿಚ್ಛಿಸುವೆಯೋ ಅವರನ್ನು ನಿಂದಿಸುವವನೂ ನೀನೇ. ಒಳಿತುಗಳಲ್ಲವೂ ನಿನ್ನ ಕೈಯಲ್ಲೇ ಇರುವುದು. ಸಕಲ ವಿಷಯಗಳ ಮೆಲೆ ಸಂಪೂರ್ಣವಾದ ಸಾಮರ್ಥ್ಯವನ್ನು ಹೊಂದಿರುವವನು ನೀನೊಬ್ಬನೇ! ರಾತ್ರಿಯನ್ನು ಹಗಲಿಗೆ ಪೋಣಿಸಿ ಮತ್ತು ಹಗಲನ್ನು ರಾತ್ರಿಗೆ ಪೋಣಿಸಿ (ತರುವವನು) ನೀನು. ನಿರ್ಜೀವಿಯಿಂದ ಜೀವಿಯು ಹೊರಬರುವಂತೆ ಮಾಡುವವನು ಮತ್ತು ಜೀವಿಯಿಂದ ನಿರ್ಜೀವಿಯು ಹೊರಬರುವಂತೆ ಮಾಡುವವನೂ ನೀನೇ! ಮಾತ್ರವಲ್ಲ ನಿನಗಿಷ್ಟ ಬಂದವರಿಗೆ ಬದುಕಿನ ಅವಶ್ಯಕತೆಗಳನ್ನು ಅಪರಿಮಿತವಾಗಿ ದಯಪಾಲಿಸುವವನು ಸಹ ನೀನೇ ಆಗಿರುವೆ. {26-27}

ಮೂಮಿನ್ ಗಳ (ಮೈತ್ರಿಯು ಲಭ್ಯವಿರುವಾಗ ಅದನ್ನು) ಬಿಟ್ಟು, ಸತ್ಯವನ್ನು ನಿಷೇಧಿಸಿದವರೊಂದಿಗೆ ಮೂಮಿನ್ ಗಳಾದವರು ಮೈತ್ರಿ ಬೆಳಸಿಕೊಳ್ಳ ಬಾರದು. ಯಾರಾದರೂ ಅದನ್ನು ಮಾಡಿಕೊಂಡರೆ (ತಿಳಿದುಕೊಳ್ಳಿ) ಅಲ್ಲಾಹ್ ನಿಗೆ ಅವರೊಂದಿಗೆ ಯಾವ ನಂಟೂ ಉಳಿಯದು! (ಆದ್ದರಿಂದ ಮೂಮಿನ್ ಗಳೇ,) ನೀವು ಅವರಿಂದ ತಮ್ಮನ್ನು ಕಾಪಾಡಿಕೊಂಡು ದೂರ ಉಳಿಯುವ ಹೊರತು ನಿರ್ವಾಹವಿಲ್ಲ. ಅಲ್ಲಾಹ್ ನು ಸ್ವತಃ ತನ್ನ ಅಸ್ತಿತ್ವದ ಕುರಿತು ಜ್ಞಾಪಿಸಿ ನಿಮಗೆ ಮುನ್ನೆಚ್ಚರಿಕೆ ನೀಡುತ್ತಾನೆ. (ಏಕೆಂದರೆ ನೀವು ಕೊನೆಗೆ) ಮರಳಬೇಕಾಗಿರುವುದು (ಅದೇ) ಅಲ್ಲಾಹ್ ನೆಡೆಗೆ! {28}

(ಹಾಗಿರುವಾಗ,) ನಿಮ್ಮ ಹೃದಯದೊಳಗಿರುವ ವಿಷಯಗಳನ್ನು ನೀವು ಗುಟ್ಟಾಗಿರಿಸಿದರೂ ಅಥವಾ ಪ್ರಕಟಪಡಿಸಿಕೊಂಡರೂ ಅಲ್ಲಾಹ್ ನು ಅದನ್ನು ಅರಿತಿರುತ್ತಾನೆ; ಅಷ್ಟೇ ಅಲ್ಲ, ಅಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವ ಸಕಲವೂ ಅವನ ಅರಿವಿನಲ್ಲಿದೆ. ಹಾಗೆ ಸಮಸ್ತ ವಿಷಯಗಳ ಮೇಲೆ ಸಂಪೂರ್ಣವಾದ ಸಾಮರ್ಥ್ಯವನ್ನು ಅಲ್ಲಾಹ್ ನು ಹೊಂದಿರುವನು – ಎಂದು (ಓ ಪೈಗಂಬರರೇ ಅಂತಹ ಮೂಮಿನ್ ಗಳಿಗೆ) ನೀವು ಎಚ್ಚರಿಕೆ ನೀಡಿರಿ. {29}

(ಕಿಯಾಮತ್ ಅಥವಾ ಪುನರುತ್ಥಾನದ) ಆ ದಿನ ಪ್ರತಿಬ್ಬನೂ ತಾನು ಮಾಡಿದ ಪುಣ್ಯ ಕಾರ್ಯಗಳನ್ನು ತನ್ನ ಮುಂದೆ ಪ್ರತ್ಯಕ್ಷವಾಗಿ ಕಂಡುಕೊಳ್ಳುವನು; ಅಂತೆಯೇ, ತಾನು ಮಾಡಿದ ಪಾಪ ಕೃತ್ಯಗಳನ್ನೂ ಸಹ (ಪ್ರತ್ಯಕ್ಷವಾಗಿ ಕಂಡುಕೊಳ್ಳುವನು). ಆಗ, ಅಯ್ಯೋ, ತನಗೂ ಈ ಪಾಪಕೃತ್ಯಗಳಿಗೂ ಇರುವ ಅಂತರವು (ಇನ್ನಷ್ಟು ಹೆಚ್ಚಾಗಿ) ದೂರ, ಬಲು ದೂರವಾಗಿ ಹೋದರೆ (ಅದೆಷ್ಟು ಚೆನ್ನಾಗಿರುತ್ತಿತ್ತು) ಎಂದು ಬಯಸುವನು! ಅಲ್ಲಾಹ್ ನು ಸ್ವತಃ ತನ್ನ (ಸಾಮರ್ಥ್ಯ, ಪ್ರತಾಪಗಳ) ಕುರಿತು ನಿಮ್ಮನ್ನು ಎಚ್ಚರಿಸುತ್ತಾನೆ. ಹಾಗೆ (ಎಚ್ಚೆತ್ತುಕೊಂಡ) ತನ್ನ ಆಪ್ತ ಸೇವಕರ ಪಾಲಿಗೆ ಅಲ್ಲಾಹ್ ನು ತುಂಬಾ ವಾತ್ಸಲ್ಯಮಯಿಯಾಗಿದ್ದಾನೆ. {30}

ಒಂದು ವೇಳೆ ನೀವು ನಿಜವಾಗಿಯೂ ಅಲ್ಲಾಹ್ ನನ್ನು ಇಷ್ಟ ಪಡುವವರು ಎಂದಾದರೆ ನನ್ನನ್ನು ಅನುಸರಿಸುವವರಾಗಿರಿ; ಆಗ ಮಾತ್ರ ಅಲ್ಲಾಹ್ ನು ನಿಮ್ಮನ್ನು ಇಷ್ಟ ಪಡುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸಿ ಬಿಡುವನು – ಎಂದು (ಪೈಗಂಬರರೇ ಅವರೊಂದಿಗೆ) ನೀವು ಹೇಳಿ. ಅಲ್ಲಾಹ್ ನಾದರೋ ಪಾಪಗಳನ್ನು ಧಾರಾಳವಾಗಿ ಕ್ಷಮಿಸುವವನು, ಅವನು ಚಿರಂತನ ಕರುಣೆಯುಳ್ಳವನು! (ಪೈಗಂಬರರೇ,) ಅಲ್ಲಾಹ್ ನ ಮತ್ತು ಅವನ ಪೈಗಂಬರರ ಮಾತನ್ನು ಅನುಸರಿಸಿ ನಡೆಯುವವರಾಗಿರಿ ಎಂದೂ ನೀವು (ಈಗ ಅವರಿಗೆ) ಸಾರಿ ಹೇಳಿ. ಅದಾಗಿಯೂ ಅವರು (ನಿಮ್ಮಿಂದ) ಮುಖ ತಿರುಗಿಸಿಕೊಂಡು (ಬೇರೆ ದಾರಿ ಹಿಡಿದರೆ ಅವರು ತಿಳಿದಿರಲಿ) ಅಲ್ಲಾಹ್ ನು ಅಂತಹ ಧಿಕ್ಕಾರಿಗಳನ್ನು ಸರ್ವಥಾ ಇಷ್ಟ ಪಡುವುದಿಲ್ಲ. {31-32}

(ಇಸ್ರಾಈಲ್ ವಂಶಸ್ಥರಾದ ಯಹೂದ್ಯರೇ, ಸತ್ಯವೇನೆಂದರೆ) ಇತರೆಲ್ಲ ಜನರ ಪೈಕಿ, ಆದಮ್ ರನ್ನು ಮತ್ತು ನೂಹ್ ರನ್ನು ಅಂತೆಯೇ ಇಬ್ರಾಹೀಮ್ ರ ಮನೆತನವನ್ನು ಹಾಗೂ ಇಮ್ರಾನ್ ರ ಕುಟುಂಬವನ್ನು (ಜನರ ಮಾರ್ಗದರ್ಶನಕ್ಕಾಗಿ ನಿಯೋಗಿಸಲು) ಅಲ್ಲಾಹ್ ನೇ ಸ್ವತಃ ಆಯ್ದುಕೊಂಡಿದ್ದನು ಎಂಬುದು ಸಂದೇಹಾತೀತ ವಿಷಯ. ಅವರೆಲ್ಲ ಪರಸ್ಪರರ ಮನೆತನಕ್ಕೆ ಸೇರಿದವರಾಗಿದ್ದರು. (ಹಾಗಿರುವಾಗ, ಯಹೂದ್ಯರೇ, ನೀವು ಆಡಿಕೊಳ್ಳುತ್ತಿರುವುದು ಏನೆಂದು) ಅಲ್ಲಾಹ್ ನು ಕೇಳಿಸಿಕೊಳ್ಳುತ್ತಾನೆ; (ಸತ್ಯಾಂಶವನ್ನು) ಅವನು ಚೆನ್ನಾಗಿ ಬಲ್ಲವನು. {33-34}

ಇಮ್ರಾನ್ ರ (ಕುಟುಂಬಕ್ಕೆ ಸೇರಿದ) ಸ್ತ್ರೀಯು ಪ್ರಾರ್ಥಿಸಿಕೊಂಡ ಸಂದರ್ಭವನ್ನು (ಯಹೂದ್ಯರೇ/ಕ್ರೈಸ್ತರೇ ಸೊಲ್ಪ) ನೆನಪಿಸಿಕೊಳ್ಳಿ: ನನ್ನೊಡೆಯಾ, ನನ್ನ ಗರ್ಭದಲ್ಲಿರುವ (ಈ ಶಿಶುವನ್ನು ಸಮಸ್ತ ಪ್ರಾಪಂಚಿಕ ಹೊಣೆಗಾರಿಕೆಯಿಂದ) ಸ್ವತಂತ್ರಗೊಳಿಸಿ ನಿನ್ನ ಸೇವೆಗೆ ಮಾತ್ರವಾಗಿ ಅರ್ಪಿಸಿಕೊಂಡಿದ್ದೇನೆ; ಆದ್ದರಿಂದ (ನನ್ನೊಡೆಯಾ), ನನ್ನ ವತಿಯಿಂದ (ಈ ಹರಕೆಯನ್ನು) ಸ್ವೀಕರಿಸು. ನೀನಾದರೋ (ಪ್ರಾರ್ಥನೆಗಳನ್ನು) ಆಲಿಸುವವನೂ (ನನ್ನ ಮನಸ್ಸಿನ ಸಂಕಲ್ಪವನ್ನು) ಚೆನ್ನಾಗಿ ಬಲ್ಲವನೂ ಅಗಿರುವೆ. {35}

ಅನಂತರ ಆಕೆ ಆ ಮಗುವನ್ನು ಪ್ರಸವಿಸಿದಾಗ, ಓ ನನ್ನ ಒಡೆಯಾ, ನಾನಿದೋ ಹೆತ್ತಿರುವುದು ಹೆಣ್ಣಾಗಿದೆಯಲ್ಲ! ಎಂದು ಉದ್ಗರಿಸಿದರು. ಅಲ್ಲಾಹ್ ನಿಗಾದರೋ ಆಕೆ ಹೆತ್ತಿರುವುದು ಏನೆಂದು ಚೆನ್ನಾಗಿ ತಿಳಿದೇ ಇತ್ತು. (ನಾನು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಿದ್ದರೆ!) ಗಂಡು ಹೆಣ್ಣಿನಂತೆ ಅಲ್ಲವಲ್ಲ! (ಒಡೆಯಾ), ಅದೇನಿದ್ದರೂ ನಾನಿದೋ ಇವಳಿಗೆ ಮರ್ಯಮ್ ಎಂದು ನಾಮಕರಣ ಮಾಡಿದ್ದೇನೆ; ಇವಳು ಮತ್ತು ಇವಳ ಸಂತಾನವು ದುಷ್ಟ ಸೈತಾನನ ಉಪದ್ರವದಿಂದ ಸುರಕ್ಷಿತವಾಗಿರಲು ನಿನ್ನ ರಕ್ಷಣೆಯನ್ನು ಕೋರಿದ್ದೇನೆ – ಎಂದು ಪ್ರಾರ್ಥಿಸಿಕೊಂಡರು. ಆಗ ಆಕೆಯ ಕರ್ತಾರನಾದ ಒಡೆಯನು ಮಗು ಮರ್ಯಮ್ ಳನ್ನು ಬಹಳ ಉದಾತ್ತವಾಗಿ ಸಂತೋಷದಿಂದ ಸ್ವೀಕರಿಸಿದನು. ಅವಳ ಆರೈಕೆಯು ಅತ್ಯುತ್ತಮ ರೀತಿಯಲ್ಲಿ ಸಾಗುವಂತೆ ಮಾಡಿದನು ಮತ್ತು ನಬಿ ಝಕರಿಯ್ಯಾ ರ ಸಂರಕ್ಷಣೆಯನ್ನು ಅವಳಿಗೆ ಒದಗಿಸಿದನು.

ನಬಿ ಝಕರಿಯ್ಯಾ ರವರು (ಬೈತ್ ಅಲ್-ಮಕ್ದಿಸ್ ನ ಮಿಹ್ರಾಬ್, ಅರ್ಥಾತ್) ಪ್ರಾರ್ಥನಾ ಕೊಠಡಿಯಲ್ಲಿರುವ (ಬಾಲೆ) ಮರ್ಯಮ್ ಳ ಬಳಿಗೆ ಹೋದಾಗಲೆಲ್ಲಾ ಅವಳ ಬಳಿ ಏನಾದರೂ ತಿನಿಸು ಇರುವುದನ್ನು ಕಾಣುತ್ತಿದ್ದರು. (ಹಾಗಿರುವಾಗ ಅದೊಂದು ದಿನ ಅವರು ಚಕಿತಗೊಂಡು), ಓ ಮರ್ಯಮ್ ಳೇ, ಇದೆಲ್ಲ ನಿನ್ನ ಬಳಿಗೆ ಎಲ್ಲಿಂದ/ಹೇಗೆ ತಾನೇ ಬರುತ್ತಿದೆ ಎಂದು ಪ್ರಶ್ನಿಸಿದರು. ಇದು ಅಲ್ಲಾಹ್ ನ ಬಳಿಯಿಂದ ಬರುತ್ತಿದೆ ಎಂದವಳು ಉತ್ತರಿಸಿದಳು. ನಿಜವಾಗಿ ಅಲ್ಲಾಹ್ ನು ತಾನು ಬಯಸಿದವರಿಗೆ (ಮರ್ಯಮ್ ಳಿಗೆ ದಯಪಾಲಿಸಿದಂತೆಯೇ) ಅನುಗ್ರಹಗಳನ್ನು ಅಪರಿಮಿತವಾಗಿ ದಯಪಾಲಿಸುತ್ತಾನೆ. {36-37}

ಅದೇ ಆಗಿತ್ತು (ಸಂತಾನ ರಹಿತರಾಗಿದ್ದ ವಯೋವೃದ್ಧ ನಬಿ) ಝಕರಿಯ್ಯಾ ರವರು ತಮ್ಮ ಸೃಷ್ಟಿಕರ್ತನೊಂದಿಗೆ (ಸಂತಾನಕ್ಕಾಗಿ) ಮೊರೆಯಿಟ್ಟ ಸಂದರ್ಭ. ನನ್ನ ಪರಿಪಾಲಕನಾದ ಒಡೆಯನೇ, ನಿನ್ನ ಸನ್ನಿಧಿಯಿಂದ ನನಗೆ (ಮರ್‍ಯಮ್ ಳಂತಹ) ಸತ್-ಸಂತಾನವನ್ನು ನೀಡಿ ಅನುಗ್ರಹಿಸು; ನೀನಾದರೋ ಪ್ರಾರ್ಥನೆಗಳನ್ನು ಆಲೈಸುವವನು ಆಗಿರುವೆ – ಎಂದವರು ಪ್ರಾರ್ಥಿಸಿಕೊಂಡರು. ಅವರಿನ್ನೂ ಪ್ರಾರ್ಥನಾ ಕೊಠಡಿ (ಮಿಹ್ರಾಬ್) ನಲ್ಲಿ ನಿಂತುಕೊಂಡು ಪ್ರಾರ್ಥಿಸುತ್ತಲೇ ಇದ್ದಾಗ ಮಲಕ್‍ಗಳು ಅವರನ್ನು ಕರೆದು, ಅಲ್ಲಾಹ್‍ನು ಇದೋ ನಿಮಗೆ ‘ಯಹ್‍ಯಾ’ (ಎಂಬ ಹೆಸರಿನ ಒಬ್ಬ ಸುಪುತ್ರನ) ಕುರಿತು ಶುಭವಾರ್ತೆ ನೀಡುತ್ತಿದ್ದಾನೆ. ಅವನು ‘ಅಲ್ಲಾಹ್ ನ ವಚನ’ (ಅರ್ಥಾತ್ ಅಲ್ಲಾಹ್ ನ ‘ಕುನ್’ ಅಥವಾ ‘ಆಗು’ ಎಂಬ ವಚನ ನಿಮಿತ್ತ ಪಿತೃ ರಹಿತವಾಗಿ ಮರ್‍ಯಮ್ ಳ ಗರ್ಭದಲ್ಲಿ ಜನಿಸಲಿರುವ ಪ್ರವಾದಿ ಈಸಾ/ಜೀಸಸ್ ರ ಪ್ರವಾದಿತ್ವ) ವನ್ನು ಸಮರ್ಥಿಸುವನು. ಅವನು (ಇಸ್ರಾಈಲ್ ಸಂತತಿಯ ಜನರ) ನಾಯಕನಾಗುವನು, ಆತ್ಮಸಂಯಮವುಳ್ಳ ಚಾರಿತ್ರ್ಯವಂತನೂ ಸಜ್ಜನರ ಸಾಲಿಗೆ ಸೇರಿದ ಓರ್ವ ಪ್ರವಾದಿಯೂ ಆಗಿರುವನು. {38-39}

(ಶುಭವಾರ್ತೆ ಕೇಳಿ ಚಕಿತಗೊಂಡು ಪ್ರವಾದಿ) ಝಕರಿಯ್ಯಾ ಉದ್ಗರಿಸಿದರು: ನನಗೊಬ್ಬ ಪುತ್ರನು ಜನಿಸುವುದಾದರೂ ಅದು ಹೇಗೆ?! ನಾನಿದೋ ವೃದ್ಧಾಪ್ಯವನ್ನು ತಲುಪಿರುವೆ. (ಸಾಲದಕ್ಕೆ) ನನ್ನ ಮಡದಿ ಬಂಜೆ ಬೇರೆ! ಆಗ ಅಲ್ಲಾಹ್ ನು ಹೇಳಿದನು: ಅದು ಹಾಗೆಯೇ ಸಂಭವಿಸುವುದು, ಅಲ್ಲಾಹ್ ನು ತಾನು ಬಯಸುವುದನ್ನು ಮಾಡಿ ತೀರುತ್ತಾನೆ. {40}

ಹಾಗಾದರೆ ನನ್ನೊಡೆಯಾ, ನನಗೆ (ಅದರ) ಒಂದು ಸೂಚನೆಯನ್ನು ತೋರಿಸಿ ಕೊಡು (ಎಂದು ನಬಿ ಝಕರಿಯ್ಯಾ ಬೇಡಿಕೊಂಡಾಗ) ಅಲ್ಲಾಹ್ ನು ಹೇಳಿದನು: ಸನ್ನೆಗಳ ಮೂಲಕವಲ್ಲದೆ ಜನರೊಡನೆ ಮೂರು ದಿನಗಳ ಕಾಲ ನಿಮಗೆ ಮಾತನಾಡಲು ಸಾಧ್ಯವಾಗದೆ ಇರುವುದೇ (ಅದರ ಕುರಿತಾದ) ಸೂಚನೆ ಆಗಿದೆ. (ಆ ಅವಧಿಯಲ್ಲಿ) ನೀವು ನಿಮ್ಮ ಒಡೆಯನನ್ನು ಹೆಚ್ಚು ಹೆಚ್ಚು ಸ್ಮರಿಸಬೇಕು. ಜೊತೆಗೆ ಸಂಜೆ ಮುಂಜಾನೆಗಳಲ್ಲಿ (ವಿಷೇಶವಾಗಿ ಅವನ) ಮಹಿಮೆಯ ಕೀರ್ತನೆಯನ್ನೂ ಮಾಡಬೇಕು. {41}

(ಪೈಗಂಬರರೇ, ಹಿಂದೆ ನಡೆದು ಹೋದ ಇನ್ನೊಂದು ಘಟನೆಯತ್ತ ಕೂಡ ನೀವೀಗ ಯಹೂದ್ಯರ/ಕ್ರೈಸ್ತರ ಗಮನ ಸೆಳೆಯಿರಿ): ಮಲಕ್‍ಗಳು (ಕನ್ಯೆ) ಮರ್‍ಯಮ್ ರ ಬಳಿಗೆ ಬಂದು, ಓ ಮರ್‍ಯಮ್‍ ರೇ, ಅಲ್ಲಾಹ್ ನು ನಿಮ್ಮನ್ನು ಪುನೀತಗೊಳಿಸಿರುವನು; ಪರಿಶುದ್ಧಗೊಳಿಸಿರುವನು; ಇಡೀ ಲೋಕದ ಸ್ತ್ರೀಯರ ಪೈಕಿ ನಿಮ್ಮನ್ನು (ಒಂದು ಮಹತ್ತರವಾದ ಕಾರ್ಯಕ್ಕಾಗಿ) ಆಯ್ದುಕೊಂಡಿರುವನು; (ಆದ್ದರಿಂದ) ಓ ಮರ್‍ಯಮ್‍ ರೇ, ನೀವು ನಿಮ್ಮ ಸೃಷ್ಟಿಕರ್ತನಾದ ಒಡೆಯನಿಗೆ ವಿನೀತರಾಗಿರಿ; ಅವನಿಗೆ ಸಾಷ್ಟಾಂಗವೆರಗುತ್ತಲಿರಿ ಹಾಗೂ (ನಮಾಝ್ ನಲ್ಲಿ) ಶಿರಬಾಗುವವರ ಜೊತೆ ಸೇರಿಕೊಂಡು ನೀವೂ ಸಹ ಶಿರಬಾಗಿರಿ – ಎಂದು ಹೇಳಿದ ಸಂದರ್ಭವನ್ನು (ಯಹೂದ್ಯರೇ/ಕ್ರೈಸ್ತರೇ ನೀವೀಗ ಸ್ವಲ್ಪ) ನೆನಪಿಸಿಕೊಳ್ಳಿ. {42-43}

(ಪೈಗಂಬರರೇ,) ಈ ಘಟನೆಗಳೆಲ್ಲ (ನಿಮ್ಮ ಪಾಲಿಗೆ) ಅದೃಷ್ಯವಾದ ಸಮಾಚಾರವಾಗಿದ್ದು ‘ದಿವ್ಯಜ್ಞಾನ’ (ಅರಬಿ: ವಹೀ) ನಿಮ್ಮತ್ತ ಕಳಿಸುವ ಮೂಲಕ ಇದನ್ನು ನಾವು ನಿಮಗೆ ತಿಳಿಯಪಡಿಸುತ್ತಿದ್ದೇವೆ.

(ಬಾಲೆ) ಮರ್‍ಯಮ್ ಳ ಪಾಲನೆ-ಪೋಷಣೆಯ, ಸಂರಕ್ಷಣೆಯ ಹೊಣೆಗಾರಿಕೆ ಯಾರಿಗೆ ಪ್ರಾಪ್ತವಾಗಬೇಕು ಎಂಬುದನ್ನು (ಹೈಕಲ್ ಅಥವಾ ಬೈತ್ ಅಲ್-ಮಕ್ದಿಸ್ ನ ಮೇಲ್ವಿಚಾರಕರಾದ) ಅವರು ಬಾಣಗಳನ್ನು ಹಾಕಿ (ಸೋಡ್ತಿಯ ಮೂಲಕ) ತೀರ್ಮಾನಿಸಿಕೊಳ್ಳುವಾಗ (ಓ ಪೈಗಂಬರರೇ,) ನೀವು ಅವರ ನಡುವೆ ಇರಲಿಲ್ಲ. ಅಷ್ಟೇ ಅಲ್ಲ, (ಮರ್‍ಯಮ್ ಳಿಗಾಗಿ) ಅವರು ತಮ್ಮೊಳಗೆ ಜಗಳವಾಡಿದ್ದ ಸಂದರ್ಭದಲ್ಲೂ ನೀವು ಅವರ ಮಧ್ಯೆ ಇರಲಿಲ್ಲ. {44}

(ಹಾಗೆಯೇ, ಪೈಗಂಬರರೇ, ಇನ್ನೊಂದು ಅದೃಷ್ಯ ವಿಷಯದತ್ತ ಸಹ ಜನರ ಗಮನ ಸೆಳೆಯಿರಿ): ಓ ಮರ್‍ಯಮ್ ರೇ, ಅಲ್ಲಾಹ್ ನು ತನ್ನ (ವಿಶೇಷ) ‘ವಚನ’ ದ ಕುರಿತಾದ ಶುಭವಾರ್ತೆಯನ್ನು ನಿಮಗೆ ನೀಡಿದ್ದಾನೆ; (ಆ ‘ವಚನ’ ವು ಸಿದ್ಧಿಸಿ ಭೌತಿಕ ರೂಪ ಪಡೆದಾಗ) ಅದರ ಹೆಸರು ‘ಈಸಾ ಅಲ್-ಮಸೀಹ್ – ಮರ್‍ಯಮ್ ರ ಪುತ್ರ’ ಎಂದಾಗಿರುವುದು. ಮುಂದೆ ಅವನು ಭೂಲೋಕದಲ್ಲೂ ಪರಲೋಕದಲ್ಲೂ ಘನತೆ-ಗಾಂಭೀರ್ಯಗಳಿಂದ ಕೂಡಿದ ವ್ಯಕ್ತಿತ್ವವನ್ನು ಪಡೆಯುವುದರ ಜೊತೆಗೆ ಅಲ್ಲಾಹ್ ನ ಸಾಮೀಪ್ಯ ಸಿದ್ಧಿಸಿದವರ ಸಾಲಿಗೆ ಸೇರಿದವನಾಗುವನು – ಎಂದು ಮಲಕ್‍ಗಳು (ಕನ್ಯೆ ಮರ್‍ಯಮ್ ರಿಗೆ) ಹೇಳಿದ ಸಂದರ್ಭವನ್ನು (ಯಹೂದ್ಯರೇ/ಕ್ರೈಸ್ತರೇ ನೀವೀಗ ಸ್ವಲ್ಪ) ಸ್ಮರಿಸಿಕೊಳ್ಳಿ. {45}

ತೊಟ್ಟಿಲಿನಲ್ಲಿ ಇರುವಾಗಲೂ ಹಿರಿವಯಸ್ಸಿನಲ್ಲಿಯೂ (ತಾನೊಬ್ಬ ಪ್ರವಾದಿಯೂ ಮೆಸ್ಸೀಯನೂ ಆಗಿ ಇಸ್ರೇಲಿಯರಿಗೆ ನಿಯುಕ್ತಗೊಂಡಿರುವುದರ ಕುರಿತು) ಅವನು ಜನರೊಂದಿಗೆ ಮಾತನಾಡುವನು, ಹಾಗೂ ಅವನು ಸಜ್ಜನರ ಕೂಟಕ್ಕೆ ಸೇರಿದವನಾಗಿರುವನು (-ಎಂದೆಲ್ಲ ಮಲಕ್‍ಗಳು ಮರ್‍ಯಮ್ ರಿಗೆ ಹೇಳಿದ್ದರು). {46}

(ಇದನ್ನು ಆಲಿಸಿ ಚಕಿತಗೊಂಡು) ಮರ್‍ಯಮ್ ರು ಕೇಳಿದರು: ನನ್ನೊಡೆಯಾ! ಯಾವೊಬ್ಬ ಪುರುಷನೂ ನನ್ನನ್ನು ಸ್ಪರ್ಷಿಸಿಯೂ ಇಲ್ಲದಿರುವಾಗ ನನಗೊಬ್ಬ ಪುತ್ರನು ಜನಿಸುವುದಾದರೂ ಅದು ಹೇಗೆ ಸಾಧ್ಯ?! ಅಲ್ಲಾಹ್ ನು ಹೇಳಿದನು: ಹಾಗೆಯೇ ಆಗುವುದು, ಅಲ್ಲಾಹ್ ನು ತಾನು ಬಯಸಿದ್ದನ್ನು ಸೃಷ್ಟಿ ಮಾಡುವ ಬಗೆಯೇ ಹಾಗೆ! ಅವನು ಒಂದು ವಿಷಯದ ಕುರಿತು ತೀರ್ಮಾನಿಸಿಕೊಂಡರೆ ಅದಕ್ಕೆ “ಆಗು” ಎಂದು ಮಾತ್ರವೇ ಹೇಳುವನು; ಆಗಲೇ ಅದು ಅಸ್ತಿತ್ವ ಪಡೆದುಕೊಳ್ಳುವುದು. {47}

(ಮಲಕ್‍ಗಳು ಶುಭವಾರ್ತೆ ಹೀಗೆ ಮುಂದುವರಿಸಿದ್ದರು:) ನಂತರ ಅಲ್ಲಾಹ್ ನು ಈಸಾ/ಜೀಸಸ್ ರಿಗೆ ಧರ್ಮಸಂಹಿತೆ ಹಾಗೂ ನೀತಿಸಂಹಿತೆಗಳನ್ನು ಅರ್ಥಾತ್ ತೋರಾ ಮತ್ತು ಬೈಬಲ್ ಗಳನ್ನು ಕಲಿಸುವನು. ಇಸ್ರೇಲಿಯರತ್ತ ಅವನನ್ನು ಒಬ್ಬ ರಸೂಲ್ (ಅರ್ಥಾತ್: ಅಲ್ಲಾಹ್ ನ ಸಂದೇಶವನ್ನು ಜನರಿಗೆ ತಲುಪಿಸಿಕೊಡುವ ದೂತ) ನಾಗಿ ನೇಮಕ ಮಾಡುವನು.

(ಹಾಗೆಯೇ ಸಂಭವಿಸಿತು. ಮುಂದೆ ಇಸ್ರೇಲಿಯರಿಗೆ ದೂತರಾಗಿ ನೇಮಕಗೊಂಡಾಗ ಈಸಾ/ಜೀಸಸ್ ರು ಸಾರಿದರು): ನಿಮ್ಮ ಒಡೆಯನ ಕಡೆಯಿಂದ (ವಿಶೇಷವಾದ) ದೃಷ್ಟಾಂತದೊಂದಿಗೆ ನಾನು ನಿಮ್ಮಲ್ಲಿಗೆ ಬಂದಿರುವೆನು. ನಿಮ್ಮೆದುರು ಹಸಿಮಣ್ಣಿನಿಂದ ಹಕ್ಕಿಯಂತಹ ಆಕೃತಿಯೊಂದನ್ನು ರಚಿಸಿ ನಂತರ ಅದರಲ್ಲಿ ಊದಿದಾಗ ಅದು ಅಲ್ಲಾಹ್ ನ ಆದೇಶಾನುಸಾರ (ಜೀವ ಪಡೆದು ಹಾರಾಡುವ) ಒಂದು ಹಕ್ಕಿಯಾಗುವುದು. ಹಾಗೆಯೇ, ಹುಟ್ಟು ಕುರುಡರನ್ನೂ ಕುಷ್ಟರೋಗಿಗಳನ್ನೂ ಗುಣಪಡಿಸುವೆನು; ಅಲ್ಲದೆ ಮೃತಪಟ್ಟವರನ್ನು ಅಲ್ಲಾಹ್ ನ ಅನುಮತಿಯೊಂದಿಗೆ ಜೀವಂತಗೊಳಿಸುವೆನು. ಅಷ್ಟೇ ಅಲ್ಲ, ನೀವು ಏನನ್ನು ತಿಂದಿರುವಿರಿ ಹಾಗೂ ನಿಮ್ಮ ಮನೆಗಳಲ್ಲಿ ಏನೆಲ್ಲ ದಾಸ್ತಾನುಗೊಳಿಸಿ ಬಂದಿರುವಿರಿ ಎಂಬುದನ್ನೂ ನಾನು ನಿಮಗೆ ತಿಳಿಸ ಬಲ್ಲೆನು. ನೀವು ನಂಬಿಕೆಯುಳ್ಳವರಾದರೆ (ಓ ಇಸ್ರೇಲಿಯರೇ) ಈ ಎಲ್ಲ ವಿಷಯಗಳಲ್ಲಿ ನಿಮಗೊಂದು ದೊಡ್ಡ ದೃಷ್ಟಾಂತವೇ ಇದೆ. ನನ್ನ ಮುಂದೆ ಈಗಾಗಲೇ ಇರುವ ತೋರಾ (ಎಂಬ ಗ್ರಂಥದ ದಿವ್ಯತೆಯನ್ನು) ಸಮರ್ಥಿಸಲಿಕ್ಕಾಗಿ ನಾನು ಬಂದಿರುವೆನು; ಮತ್ತು ನಿಮಗೆ ನಿಷೇಧಿಸಲಾಗಿರುವ ಕೆಲವು ವಿಷಯಗಳನ್ನು ಕಾನೂನು ಬದ್ಧಗೊಳಿಸುವ ಸಲುವಾಗಿ, ನಿಮ್ಮೊಡೆಯನ ವತಿಯಿಂದ ಬಂದ ಪುರಾವೆಗಳ ಸಹಿತ ನಿಮ್ಮಲ್ಲಿಗೆ ನಾನು ಬಂದಿರುವೆನು. ಆದ್ದರಿಂದ ಅಲ್ಲಾಹ್ ನ (ಅಜ್ಞಾಪಾಲನೆಯ ವಿಷಯದಲ್ಲಿ) ಭಯಭಕ್ತಿ ತೋರಿರಿ, ಜೊತೆಗೆ ನಾನು ಹೇಳಿದಂತೆ ನಡೆಯಿರಿ. (ನಾನು ಹೇಳುವುದಿಷ್ಟೆ): ಅಲ್ಲಾಹ್ ನೇ ನನ್ನ ಒಡೆಯನೂ ನಿಮ್ಮ ಒಡೆಯನೂ ಆಗಿರುವನು; ಆದ್ದರಿಂದ ನೀವೆಲ್ಲ ಅವನನ್ನು ಮಾತ್ರ ಅರಾಧಿಸಿರಿ, ಅದೇ ಸರಳ/ನೇರ ಮಾರ್ಗವಾಗಿದೆ. {48-51}

ಆದರೆ ಇಸ್ರೇಲಿಯರು (ತನ್ನನ್ನು) ನಿರಾಕರಿಸಿಬಿಡುವರು ಎಂಬುದನ್ನು ಗ್ರಹಿಸಿಕೊಂಡಾಗ ಈಸಾ ರವರು, ಅಲ್ಲಾಹ್ ನ (ಮಾರ್ಗದಲ್ಲಿ) ನನಗೆ ನೆರವಾಗಬಲ್ಲವರು ಯಾರಿದ್ದಾರೆ ಎಂದು (ತನ್ನ ಶಿಷ್ಯರಲ್ಲಿ) ಕೇಳಿಕೊಂಡರು. ನಾವಿದೋ ಅಲ್ಲಾಹ್ ನ (ಮಾರ್ಗದಲ್ಲಿ) ಸಹಾಯಕರಾಗಿದ್ದೇವೆ; ಅಲ್ಲಾಹ್ ನಲ್ಲಿ ಪರಮ ವಿಶ್ವಾಸವಿರಿಸಿದ್ದೇವೆ, ಹಾಗೂ ಅಲ್ಲಾಹ್ ನಿಗೆ ಸಂಪೂರ್ಣ ವಿಧೇಯರಾಗಿ (ಮುಸ್ಲಿಮರಾಗಿದ್ದೇವೆ) ಎಂಬುದಕ್ಕೆ ನೀವು ಸಾಕ್ಷಿಯಾಗಿರಿ – ಎಂದು (ಈಸಾರ ನಿಷ್ಠ ಅನುಯಾಯಿಗಳಾದ) ‘ಹವಾರಿ’ಗಳು ಉತ್ತರಿಸಿದರು. ಓ ನಮ್ಮ ಪರಿಪಾಲಕನೇ, ನೀನು (ನಮ್ಮ ಮಾರ್ಗದರ್ಶನಕ್ಕಾಗಿ) ಇಳಿಸಿಕೊಟ್ಟಿರುವ (ಗ್ರಂಥಗಳಲ್ಲಿ) ನಂಬಿಕೆಯುಳ್ಳವರು ನಾವಾಗಿದ್ದೇವೆ; ಜೊತೆಗೆ ಈ (ನಿನ್ನ) ದೂತನನ್ನು ಅನುಸರಿಸುತ್ತಿದ್ದೇವೆ; ಆದ್ದರಿಂದ (ನೊಮ್ಮೊಡೆಯಾ), ನಮ್ಮ ಹೆಸರನ್ನು ಸಾಕ್ಷಿನೀಡಿದವರ ಪೈಕಿ ನೀನು ನಮೂದಿಸು – (ಎಂತಲೂ ಹವಾರಿ ಗಳು ಪ್ರಾರ್ಥಿಸಿಕೊಂಡರು). {52-53}

(ಇನ್ನೊಂದೆಡೆ, ಈಸಾ ಅಲ್-ಮಸೀಹ್ ರನ್ನು ನಿರಾಕರಿಸಿದ ಇಸ್ರೇಲಿಯರು ಅವರನ್ನು ವಧಿಸಲು) ಸಂಚು ಹೂಡಿದರು. ಅತ್ತ ಅಲ್ಲಾಹ್ ನೂ ತನ್ನ ಯೋಜನೆ ರೂಪಿಸಿದನು. ಹಾಗೆ ಯೋಜನೆಗಳನ್ನು ರೂಪಿಸುವುದರಲ್ಲಿ ಅಲ್ಲಾಹ್ ನೇ ಎಲ್ಲರಿಗಿಂತ ಮಿಗಿಲಾದವನು! {54}

(ಯೋಜನೆ ಏನೆಂದು ಈಸಾ ಅಲ್-ಮಸೀಹ್ ರಿಗೆ) ಅಲ್ಲಾಹ್ ನು ಹೇಳಿ ಕೊಟ್ಟ (ಆ ಸಂದರ್ಭವನ್ನು ನೆನಪಿಸಿಕೊಳ್ಳಿ): ಓ ಈಸಾ, ನಾನು ನಿಮ್ಮನ್ನು (ಕೂಡಲೇ) ಹಿಂದಕ್ಕೆ ಕರೆಸಿಕೊಳ್ಳಲಿದ್ದೇನೆ; ನನ್ನೆಡೆಗೆ ನಿಮ್ಮನ್ನು ಎತ್ತಿಕೊಳ್ಳಲಿದ್ದೇನೆ; ಧಿಕ್ಕಾರಿ ಜನರ (ಸಹವಾಸದಿಂದ) ನಿಮ್ಮನ್ನು (ಮುಕ್ತಗೊಳಿಸಿ) ನಿರ್ಮಲಗೊಳಿಸಲಿದ್ದೇನೆ. ಅಷ್ಟೇ ಅಲ್ಲ, ನಿಮ್ಮ ಹಿಂಬಾಲಕರಾದವರಿಗೆ ನಿಮ್ಮನ್ನು ಧಿಕ್ಕರಿಸಿದ (ಇಸ್ರೇಲಿಯರ) ವಿರುದ್ಧ ಅಂತ್ಯದಿನವು ಬರುವ ತನಕವೂ ಮೇಲುಗೈ ಹೊಂದಿರುವಂತೆ ಮಾಡಲಿದ್ದೇನೆ. ಕೊನೆಗೆ ನೀವೆಲ್ಲರೂ ನನ್ನಲ್ಲಿಗೇ ಮರಳಿ ಬರಲಿರುವಿರಿ. ನೀವು ಜಗಳದಲ್ಲಿ ತೊಡಗಿದ್ದ ಎಲ್ಲ ವಿಷಯಗಳನ್ನು ಆಗ ನಾನು ನಿಮ್ಮ ಮಧ್ಯೆ ಇತ್ಯರ್ಥ ಮಾಡಿ ಬಿಡುವೆನು. {55}

ಇನ್ನು ಯಾರು ಧಿಕ್ಕಾರಿಗಳಾದರೋ ಅವರಿಗೆ ಭೂಲೋಕ ಮತ್ತು ಪರಲೋಕಗಳಲ್ಲಿ ನಾನು ಅತ್ಯಂತ ಕಠಿಣವಾದ ಶಿಕ್ಷೆಯನ್ನು ಕೊಡಲಿರುವೆನು; ಆಗ ಅವರಿಗೆ ಯಾರೂ ಸಹಾಯಕರು ಇರಲಾರರು. ಆದರೆ ವಿಶ್ವಾಸವಿರಿಸಿಕೊಂಡು ಸತ್ಕರ್ಮಗಳನ್ನು ಮಾಡಿಕೊಂಡವರಿಗೆ (ಪರಲೋಕದಲ್ಲಿ ಅಲ್ಲಾಹ್ ನು) ಸಂಪೂರ್ಣವಾದ ಪ್ರತಿಫಲವನ್ನು ನೀಡುವನು. ವಾಸ್ತವದಲ್ಲಿ ದುಷ್ಕರ್ಮಿಗಳನ್ನು ಅಲ್ಲಾಹ್ ನು ಇಷ್ಟಪಡುವುದಿಲ್ಲ. (ಓ ಪೈಗಂಬರರೇ), ನಾವು ನಿಮಗೆ ಓದಿ ಕೇಳಿಸುತ್ತಿರುವ (ಕುರ್‍ಆನ್ ನ) ಈ ವಚನಗಳು ವಿವೇಕಪೂರ್ಣವಾದ ಬೋಧನೆಯಿಂದ ಕೂಡಿದೆ. {56-58}

ವಾಸ್ತವದಲ್ಲಿ ಈಸಾ ರ ಉದಾಹರಣೆಯು ಅಲ್ಲಾಹ್ ನ ಬಳಿ ಆದಮ್ ರ ಉದಾಹರಣೆಯಂತಿದೆ. ಆದಮ್ ರನ್ನು ಅವನು ಮಣ್ಣಿನಿಂದ ಉಂಟುಮಾಡಿದನು, ನಂತರ ಅದಕ್ಕೆ/ಅವರಿಗೆ “ಆಗು” ಎಂದು ಆಜ್ಞಾಪಿಸಿದನು. ಆ ಕೂಡಲೇ ಅವರು ಆಗಿ ಬಿಟ್ಟರು! (ನಿಮಗೆ ದಿವ್ಯ ಪ್ರೇರಣೆಯ ಮೂಲಕ ತಿಳಿಸಲಾಗುತ್ತಿರುವ ಈ ವೃತ್ತಾಂತವು) ಪರಮ ಸತ್ಯವಾಗಿದೆ; ನಿಮ್ಮೊಡೆಯನ ವತಿಯಿಂದಲೇ ಬಂದುದಾಗಿದೆ. ಆದ್ದರಿಂದ (ಪೈಗಂಬರರೇ) ನೀವು ಸಂಶಯಗ್ರಸ್ಥರಾಗದಿರಿ. ನಿಮ್ಮ ಬಳಿಗೆ (ಈಸಾ ರ ಕುರಿತಂತೆ ಇಷ್ಟೊಂದು) ಸರಿಯಾದ ಮಾಹಿತಿ ಬಂದ ಬಳಿಕವೂ ಯಾರಾದರೂ ನಿಮ್ಮೊಡನೆ ಅವರ ವಿಷಯದಲ್ಲಿ ತರ್ಕಕ್ಕೆ ಬಂದರೆ ಅವರೊಂದಿಗೆ (ಹೀಗೆ) ಹೇಳಿರಿ: ಬನ್ನಿ, ನಾವೀರ್ವರೂ ನಮ್ಮ ಮಕ್ಕಳನ್ನೂ ನಿಮ್ಮ ಮಕ್ಕಳನ್ನೂ, ನಮ್ಮ ಸ್ತ್ರೀಯರನ್ನೂ ನಿಮ್ಮ ಸ್ತ್ರೀಯರನ್ನೂ ಮತ್ತು ನಮ್ಮ ಪರಿವಾರವನ್ನೂ ನಿಮ್ಮ ಪರಿವಾರವನ್ನೂ (ಒಂದೆಡೆ) ಕರೆದು ಸೇರಿಸೋಣ. ನಂತರ (ಈಸಾ ರ ಕುರಿತಂತೆ) ಸುಳ್ಳಾಡಿಕೊಂಡವರ ಮೇಲೆ ಅಲ್ಲಾಹ್ ನ ಶಾಪವು ಎರಗಿ ಬೀಳಲಿ ಎಂದು ಕಳಕಳಿಯಿಂದ ಪ್ರಾರ್ಥಿಸಿಕೊಳ್ಳೋಣ (ಎಂದು ಪಂಥಾಹ್ವಾನ ನೀಡಿರಿ). {59-61}

ಹೌದು, ಖಂಡಿತವಾಗಿಯೂ ನಡೆದ ನಿಜ ಘಟನೆಯು ಇದೇ ಆಗಿರುತ್ತದೆ. ಅಲ್ಲಾಹ್ ನ ಹೊರತು ಆರಾಧನೆಗೆ ಅರ್ಹನಾದವನು ಯಾರೂ ಇಲ್ಲ! ನಿಜವಾಗಿಯೂ ಅಲ್ಲಾಹ್ ನು ಅತ್ಯಂತ ಪ್ರಚಂಡನೂ ಅಗಾಧ ಜ್ಞಾನವುಳ್ಳವನೂ ಆಗಿರುವನು. (ಇದನ್ನೆಲ್ಲ ವಿಷದಪಡಿಸಿದ ನಂತರವೂ) ಅವರು ವಿಮುಖರಾಗಿ ಹೋದರೆ (ಅವರು ನೆನಪಿಟ್ಟುಕೊಳ್ಳಲಿ,) ಗೊಂದಲ ಸೃಷ್ಟಿಸುವವರ ಕುರಿತಂತೆ ಅಲ್ಲಾಹ್ ನು ಚೆನ್ನಾಗಿ ಬಲ್ಲವನಾಗಿದ್ದಾನೆ. {62-63}

(ಪೈಗಂಬರರೇ, ಅವರಿಗೆ ಇನ್ನು ಹೀಗೆ) ಸಾರಿರಿ: ದಿವ್ಯಗ್ರಂಥವನ್ನು ಹೊಂದಿರುವ ಜನರೇ, (ಕನಿಷ್ಟ ಪಕ್ಷ) ನಮ್ಮೀರ್ವರ ಮಧ್ಯೆ ಒಮ್ಮತವಿರುವ ಸಮಾನವಾದ ವಿಷಯಗಳನ್ನು (ಒಪ್ಪಿಕೊಳ್ಳಲು) ಬನ್ನಿರಿ. ಅವೆಂದರೆ, ಅಲ್ಲಾಹ್ ನ ಹೊರತು ಬೇರೆಯವರನ್ನು ನಾವು ಆರಾಧಿಸುವುದಿಲ್ಲ, ಯಾರನ್ನೂ ಅವನಿಗೆ ಸಹಭಾಗಿಯಾಗಿ ಮಾಡುವುದಿಲ್ಲ ಮತ್ತು ಅಲ್ಲಾಹ್ ನನ್ನು ಬಿಟ್ಟು ನಮ್ಮವರೇ ಆದ ಕೆಲವೊಬ್ಬರನ್ನು ನಮ್ಮ ಒಡೆಯರಂತೆ ನಾವು ಪರಿಗಣಿಸುವುದಿಲ್ಲ (- ಇವೇ ಆ ಸಮಾನ ವಿಚಾರಗಳು). (ಇದನ್ನು ಸಾರಿದ) ಬಳಿಕವೂ ಅವರು ಬೆನ್ನು ತೋರಿಸಿದರೆ, ನಾವಂತು (ಅಲ್ಲಾಹ್ ನಿಗೆ ವಿಧೇಯರಾದ) ಮುಸ್ಲಿಮರು ಆಗಿರುವ ವಾಸ್ತವಿಕತೆಗೆ ನೀವು ಸಾಕ್ಷಿಗಳಾಗಿ ಇರಿ ಎಂದು ಘೋಷಿಸಿರಿ. {64}

ಗ್ರಂಥದವರೇ, ಇಬ್ರಾಹೀಮ್ ರು (ಯಹೂದ್ಯನೋ ಅಥವಾ ಕ್ರೈಸ್ತ ಮತಸ್ಥನೋ ಎಂಬ ವಿಷಯದಲ್ಲಿ) ನೀವು ಏಕೆ ವಿವಾದದಲ್ಲಿ ತೊಡಗಿರುವಿರಿ? ತೋರಾ ಮತ್ತು ಬೈಬಲ್ ಗಳನ್ನು ಅವರ ಕಾಲ ಕಳೆದುಹೋಗುವ ತನಕ (ನಾವು ನಿಮ್ಮತ್ತ) ಕಳಿಸಿರಲೇ ಇಲ್ಲವಲ್ಲ! (ಕನಿಷ್ಟ ಪಕ್ಷ) ಅಷ್ಟು ಬುದ್ಧಿಯಾದರೂ ನೀವು ಉಪಯೋಗಿಸುವುದಿಲ್ಲವೇನು? ಹೌದು, ನಿಮಗೆ (ಅಲ್ಪಸ್ವಲ್ಪ) ತಿಳುವಳಿಕೆ ಇದ್ದ ವಿಷಯಗಳಲ್ಲಿ ನೀವು ಸಾಕಷ್ಟು ತರ್ಕ ಮಾಡಿಕೊಂಡಿರುವಿರಿ. ಈಗ ನಿಮಗೆ ಸ್ವಲ್ಪವೂ ತಿಳುವಳಿಕೆ ಇಲ್ಲದ ವಿಷಯದ ಕುರಿತು ನೀವು ತರ್ಕಿಸುವುದಾದರೂ ಏಕೆ? ಅಲ್ಲಾಹ್ ನಿಗೆ (ಎಲ್ಲ ವಿಷಯಗಳ) ಜ್ಞಾನವಿದೆ, ನೀವಾದರೋ ತಿಳಿಗೇಡಿಗಳಾಗಿರುವಿರಿ. {65-66}

ಇಬ್ರಾಹೀಮ್ ರು ಯಹೂದ್ಯನಾಗಿರಲಿಲ್ಲ; ಅಂತೆಯೇ ಅವರು ಕ್ರೈಸ್ತ ಮತಸ್ಥನೂ ಅಗಿರಲಿಲ್ಲ! ಬದಲಾಗಿ ಅವರು (ಸದಾ ಸತ್ಯದ ಬಗ್ಗೆ ಒಲವು ಬೆಳೆಸಿಕೊಂಡಿದ್ದ) ಒಬ್ಬ ನಿಷ್ಠಾವಂತ ಮುಸ್ಲಿಮ್ ಆಗಿದ್ದರು. (ನಿಮ್ಮ ಪೈಕಿಯ) ಈ ಬಹುದೇವಾರಧಕರ ಸಾಲಿಗಂತು ಅವರು ಸೇರಿಯೇ ಇರಲಿಲ್ಲ. ನಿಜವಾಗಿ ಇಬ್ರಾಹೀಮ್ ರಿಗೆ ಹೆಚ್ಚು ನಿಕಟವಾಗಿರುವವರು ಅವರ (ಧರ್ಮವನ್ನು) ಅನುಸರಿಸಿಕೊಂಡವರು, ಅಂದರೆ (ನಿಮ್ಮ ಮಧ್ಯೆಯಿರುವ) ಈ ನಮ್ಮ ದೂತ (ಮುಹಮ್ಮದ್) ಹಾಗೂ ಅವರಲ್ಲಿ ವಿಶ್ವಾಸವಿರಿಸಿಕೊಂಡವರು. ಅಲ್ಲಾಹ್ ನಾದರೋ ವಿಶ್ವಾಸಿಗಳ ಹಿತರಕ್ಷಕನಾಗಿರುವನು. {67-68}

(ವಿಶ್ವಾಸಿಗಳೇ), ಗ್ರಂಥವನ್ನು ಹೊಂದಿದವರ ಪೈಕಿಯ ಒಂದು ಗುಂಪಂತು ಹೇಗಾದರೂ ಮಾಡಿ ನಿಮ್ಮನ್ನು ದಾರಿತಪ್ಪಿಸಿ ಬಿಡಲು ಅತಿಯಾಗಿ ಹಂಬಲಿಸುತ್ತಿದೆ. ನಿಜವಾಗಿ ಅವರು ದಾರಿತಪ್ಪಿಸುತ್ತಿರುವುದು ಸ್ವತಃ ತಮ್ಮನ್ನೇ (ಹೊರತು ಬೇರೆ ಯಾರನ್ನೂ ಅಲ್ಲ). ಆದರೆ ಅವರಿಗೆ ಅದರ ಪ್ರಜ್ಞೆಯಿಲ್ಲ. {69}

ಗ್ರಂಥವನ್ನು ಪಡಕೊಂಡಿರುವ ಓ ಜನರೇ, ಅಲ್ಲಾಹ್ ನ ವಚನಗಳು (ಸತ್ಯವಾದುದು ಎಂಬುದಕ್ಕೆ) ಪ್ರತ್ಯಕ್ಷ ಸಾಕ್ಷಿಗಳಾಗಿದ್ದುಕೊಂಡು ನೀವು ಅದನ್ನು ಏಕೆ ನಿರಾಕರಿಸುತ್ತಲಿದ್ದೀರಿ? ಗ್ರಂಥದವರೇ, ನೀವು ತಿಳಿದೂ ತಿಳಿದೂ ಅಸತ್ಯವನ್ನು ಸತ್ಯದ ಮೇಲೆ ಏಕೆ ಹೊದಿಸಿ ಬಿಡುತ್ತೀರಿ ಮತ್ತು ಸತ್ಯವು (ಸ್ವಲ್ಪವೂ ಪ್ರಕಟವಾಗದಂತೆ) ಬಚ್ಚಿಡುತ್ತಿದ್ದೀರಿ? {70-71}

ಗ್ರಂಥವನ್ನು ಹೊಂದಿದವರ ಪೈಕಿಯ ಒಂದು ಗುಂಪಿಗೆ ಸೇರಿದವರು (ತಮ್ಮ ಅನುಯಾಯಿಗಳಿಗೆ ಉಪಾಯವೊಂದನ್ನು) ಹೇಳಿದರು: ದಿನದ ಆರಂಭದಲ್ಲಿ ನೀವು ಆ ಮುಸ್ಲಿಮರಿಗೆ ಇಳಿಸಿಕೊಡಲಾದ (ಕುರ್‍ಆನ್ ನಲ್ಲಿ ಮಿಥ್ಯ) ನಂಬಿಕೆ ಪ್ರಕಟಿಸಿಕೊಳ್ಳಿ, ಮತ್ತು ಅದೇ ದಿನದ ಕೊನೆಯಲ್ಲಿ (ನಮಗೆ ಅದರಲ್ಲಿ ನಂಬಿಕೆ ಇಲ್ಲವೆಂದು ಹೇಳಿ) ಅದನ್ನು ನಿರಾಕರಿಸಿ ಬಿಡಿ. ನೀವು ಹಾಗೆ ಮಾಡಿದರೆ ಮುಸ್ಲಿಮರಾಗಿರುವ ಅವರು (ಪ್ರಾಯಶಃ ತಮ್ಮ ಧರ್ಮವನ್ನು ತೊರೆದು) ಹಿಂದಿರುಗಿ ಬರಲೂ ಬರಬಹುದು. ನಿಮ್ಮದೇ ಧರ್ಮದ ಅನುಯಾಯಿಗಳನ್ನು ಬಿಟ್ಟು ಬೇರೆ ಯಾರನ್ನೂ ನಂಬಲೇ ಬೇಡಿ (ಎಂದೂ ಅವರು ಹೇಳಿದರು).

(ಪೈಗಂಬರರೇ), ಅಲ್ಲಾಹ್ ನು ತೋರಿದ ಮಾರ್ಗವು ಮಾತ್ರವೇ ನಿಜವಾದ ನೇರ ಮಾರ್ಗವಾಗಿದೆ ಎಂದು (ಅವರೊಂದಿಗೆ) ಹೇಳಿರಿ.

(ಗ್ರಂಥದರ ಪೈಕಿಯ ಆ ಗುಂಪು ತಮ್ಮ ಜನರೊಂದಿಗೆ), ನಿಮಗೆ ನೀಡಲ್ಪಟ್ಟಂತಹ (ಗ್ರಂಥವು) ಬೇರೆಯವರಿಗೂ ನೀಡಲ್ಪಪಡುವುದು, ಅಥವಾ ಬೇರೆಯವರು ನಿಮ್ಮ ಒಡೆಯನ ಸನ್ನಿಧಿಯಲ್ಲಿ ನಿಮಗೆ ವಿರುದ್ಧವಾಗಿ ವಾದಿಸುವರು (ಎಂಬುದನ್ನೊ ನೀವು ನಂಬದಿರಿ) ಎಂದೂ ಹೇಳಿದರು.

ಖಂಡಿತವಾಗಿಯೂ ಅನುಗ್ರಹಗಳೆಲ್ಲವೂ ಅಲ್ಲಾಹ್ ನ ಕೈಯಲ್ಲಿವೆ, ತಾನು ಯಾರಿಗೆ ನೀಡಲು ಬಯಸುವನೋ ಅವರಿಗೆ ಅದನ್ನು ನೀಡುವನು; ಅಲ್ಲಾಹ್ ನು ಅತ್ಯಂತ ಉದಾರವಾಗಿ ನೀಡುವವನೂ ಎಲ್ಲವನ್ನೂ ಬಲ್ಲವನೂ ಆಗಿರುವನು – ಎಂದು (ಪೈಗಂಬರರೇ, ಗ್ರಂಥದವರಿಗೆ ನೀವು) ಹೇಳಿರಿ. ಅವನು ತಾನು ಇಚ್ಛಿಸಿಕೊಂಡಂತೆ ತನ್ನ ಅನುಗ್ರಹಕ್ಕಾಗಿ (ಕೆಲವರನ್ನು) ವಿಶೇಷವಾಗಿ ಆಯ್ದುಕೊಳ್ಳುತ್ತಾನೆ. ಅಲ್ಲಾಹ್ ನಾದರೋ ಮಹಾ ಔದಾರ್ಯವಂತನಾಗಿದ್ದಾನೆ. {72-74}

ಸಂಪತ್ತಿನ ಒಂದು ದೊಡ್ಡ ರಾಶಿಯನ್ನೇ ನೀವು ಅಡವು ಇಟ್ಟರೆ ಅದನ್ನು (ನೀವು ಬಯಸಿಕೊಂಡಾಗ ಯಥಾವತ್ತಾಗಿ ಅಡವಿನ ಕರಾರಿನಂತೆ) ನಿಮಗೆ ಹಿಂದಿರುಗಿಸುವ ಜನರೂ ಗ್ರಂಥದವರ ಪೈಕಿ ಇದ್ದಾರೆ. ಆದರೆ ಅವರ ಪೈಕಿಯ ಇನ್ನು ಕೆಲವರು ಕೇವಲ ಒಂದು ದೀನಾರಿನ ಅಡವನ್ನೂ ನೀವು ಕಾಡಿ ಬೇಡಿ ಕೇಳುವ ತನಕ ಅದನ್ನು ನಿಮಗೆ ಹಿಂದಿರುಗಿಸುವುದಿಲ್ಲ. ಅಜ್ಞಾನಿಗಳಾದ ಈ (ಅರಬರ) ವಿಷಯದಲ್ಲಿ (ಯಾವ ಕರಾರನ್ನೂ ಪಾಲಿಸಿಕೊಳ್ಳಬೇಕೆಂಬ ನಿಯಮಕ್ಕೆ) ನಾವು ಬಾಧ್ಯಸ್ಥರಲ್ಲ ಎಂದು ಹೇಳಿಕೊಳ್ಳುವ ಕಾರಣದಿಂದಲೇ ಅವರು ಹಾಗೆ ಮಾಡುತ್ತಾರೆ. ಅವರು ಚೆನ್ನಾಗಿ ತಿಳಿದುಕೊಂಡೇ ಅಲ್ಲಾಹ್ ನ ಮೇಲೆ ಸುಳ್ಳು ಮಾತು ಹೇಳುತ್ತಿದ್ದಾರೆ. ಏಕೆ ಬಾಧ್ಯಸ್ಥರಲ್ಲ? ಯಾರು ತಮ್ಮ ಕರಾರುಗಳನ್ನು ಪೂರ್ತಿಯಾಗಿ ಪಾಲಿಸುತ್ತಾರೋ ಹಾಗೂ (ಅಲ್ಲಾಹ್ ನ ಆಜ್ಞಾಪಾಲನೆಯ ವಿಷಯದಲ್ಲಿ) ಜಾಗರೂಕತೆ ವಹಿಸುತ್ತಾರೋ, ಅಲ್ಲಾಹ್ ನು ಅಂತಹ ಭಯಭಕ್ತಿಯಿರುವ ಜನರನ್ನು ಇಷ್ಟ ಪಡುತ್ತಾನೆ. {75-76}

(ಅದಕ್ಕೆ ತದ್ವಿರುದ್ಧವಾಗಿ), ಅಲ್ಲಾಹ್ ನ ಜೊತೆ ಮಾಡಿಕೊಂಡ ಕರಾರನ್ನೂ ಮತ್ತು ತಮ್ಮ ಪ್ರತಿಜ್ಞೆಗಳನ್ನೂ ತುಚ್ಛವಾದ ಬೆಲೆಗೆ (ಮಾರಿಕೊಂಡು ಲೌಕಿಕ ಲಾಭ) ಪಡೆಯುವವರಿಗೆ ಪರಲೋಕದಲ್ಲಿ ಯಾವ ಪಾಲೂ ಸಿಗದು. ಪುನರುತ್ಥಾನದ ಆ ದಿನ ಅಲ್ಲಾಹ್ ನು ಅವರೊಡನೆ ಮಾತನಾಡುವುದಿಲ್ಲ; ಅವರತ್ತ ದೃಷ್ಟಿ ಹಾಯಿಸುವುದೂ ಇಲ್ಲ; ಅವರನ್ನು (ಪಾಪಮುಕ್ತಗೊಳಿಸಿ) ಶುದ್ಧೀಕರಿಸುವುದೂ ಇಲ್ಲ. (ಬದಲಾಗಿ, ಆ ದಿನ) ಅವರಿಗೆ ಯಾತನಾಮಯ ಶಿಕ್ಷೆಯು ಕಾದಿದೆ. ನಿಜವಾಗಿಯೂ ಅವರಲ್ಲಿಯ ಒಂದು ಪಂಗಡದ ಜನರು (ತಮ್ಮಲ್ಲಿರುವ) ಗ್ರಂಥವನ್ನು (ಓದುವಾಗ ಬೇರೆಯೇ ಅರ್ಥ ಬರುವಂತೆ) ತಮ್ಮ ನಾಲಗೆ ತಿರುಚಿಕೊಳ್ಳುತ್ತಾರೆ. (ಓದುತ್ತಿರುವುದು) ಗ್ರಂಥದ ಒಂದು ಭಾಗವೇ ಅಗಿದೆಯೆಂದು ನೀವು ಭಾವಿಸುವುದಕ್ಕಾಗಿ (ಅವರು ಹಾಗೆ ಮಾಡುತ್ತಾರಷ್ಟೆ). ಆದರೆ ಅದು ಗ್ರಂಥದ ಭಾಗವಾಗಿರುವುದಿಲ್ಲ! ಇದು ಅಲ್ಲಾಹ್ ನ ಕಡೆಯಿಂದಲೇ ಬಂದುದಾಗಿದೆ ಎಂದು ಅವರು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅದು ಅಲ್ಲಾಹ್ ನ ಕಡೆಯಿಂದ ಬಂದುದಲ್ಲ. (ತಾವು ಮಾಡುತ್ತಿರುವುದು ಏನು ಎಂಬುದನ್ನು) ಚೆನ್ನಾಗಿ ಅರಿತುಕೊಂಡೇ ಅವರು ಅಲ್ಲಾಹ್ ನ ಮೇಲೆ ಸುಳ್ಳಾರೋಪಿಸುತ್ತಾರೆ. {77-78}

(ಮಾತ್ರವಲ್ಲ, ಅವರು ಅಲ್ಲಾಹ್ ನ ಪ್ರವಾದಿಗಳ ಮೇಲೂ ಸುಳ್ಳಾರೋಪ ಮಾಡುತ್ತಾರೆ). ಒಬ್ಬ ವ್ಯಕ್ತಿಗೆ ಅಲ್ಲಾಹ್ ನು ತನ್ನ ಗ್ರಂಥ, ತೀರ್ಪು ನೀಡುವ ಸಾಮರ್ಥ್ಯ ಮತ್ತು ಪ್ರವಾದಿತ್ವವನ್ನು ದಯಪಾಲಿಸಿದ ಮೇಲೆ ಆತ ಜನರೊಡನೆ ನೀವಿನ್ನು ಅಲ್ಲಾಹ್ ನನ್ನು ಬಿಟ್ಟು ನನ್ನ ದಾಸರಾಗಿ ಜೀವಿಸಿರಿ ಎಂದು ಆದೇಶಿಸುವುದು ಸಾಧ್ಯವಲ್ಲ. ಬದಲಾಗಿ, ದಿವ್ಯಗ್ರಂಥವನ್ನು ನೀವು ಸ್ವತಃ ಕಲಿಯುವವರೂ ಇತರರಿಗೆ ಕಲಿಸುವವರೂ ಆಗಿರುವುದರಿಂದ (ಓ ಜನರೇ) ನೀವು ಅಲ್ಲಾಹ್ ನಿಗೆ ಮಾತ್ರವೇ ನಿಷ್ಠಾವಂತರಾಗಿ ಜೀವಿಸಿರಿ ಎಂದೇ ಆತ ಹೇಳುವನು. ಮಲಕ್ ಗಳನ್ನಾಗಲಿ ಪ್ರವಾದಿಗಳನ್ನಾಗಲಿ ನೀವು ದೇವರನ್ನಾಗಿ ಸ್ವೀಕರಿಸಬೇಕು ಎಂತಲೂ ಆತ ಆದೇಶಿಸಲಾರ. ನೀವು ಒಮ್ಮೆ ಮುಸ್ಲಿಮರಾದ ನಂತರ ಧಿಕ್ಕಾರಿಗಳಾಗುವಂತೆ ಆತ ನಿಮಗೆ ಆದೇಶಿಸುವುದುಂಟೆ? {79-80}

ಅಲ್ಲಾಹ್ ನು ಪ್ರವಾದಿಗಳ ಮೂಲಕ (ನಿಮ್ಮಿಂದ) ಕರಾರೊಂದನ್ನು ಪಡೆದುಕೊಂಡ (ಸಂದರ್ಭವನ್ನು ಗ್ರಂಥದವರೇ ನೀವು) ನೆನಪಿಸಿಕೊಳ್ಳಿ: ನಾನು ದಿವ್ಯಗ್ರಂಥ ಮತ್ತು ವಿವೇಚನೆಯನ್ನು ನಿಮಗೆ ನೀಡಿ, ತರುವಾಯ ಅದಾಗಲೇ ನಿಮ್ಮ ಬಳಿ ಇರುವ (ಆ ದಿವ್ಯ ಗ್ರಂಥವನ್ನು) ದೃಢೀಕರಿಸುತ್ತಾ ಪ್ರವಾದಿಯೊಬ್ಬರು ನಿಮ್ಮ ಬಳಿಗೆ ಬಂದಾಗ ನೀವು ಅವರನ್ನು ಅಗತ್ಯವಾಗಿ ನಂಬಲೇ ಬೇಕು ಹಾಗೂ (ದೌತ್ಯ ನಿರ್ವಹಣೆಯ ಕಾರ್ಯದಲ್ಲಿ) ಅವರಿಗೆ ಸಹಾಯ ಒದಗಿಸಲೇ ಬೇಕು (ಎಂಬುದಾಗಿತ್ತು ಆ ಕರಾರು). ಬಳಿಕ, ನೀವು ಒಪ್ಪಿಕೊಂಡಿರುವಿರೇನು? ನನ್ನೊಂದಿಗಿನ ಈ ಮಹತ್ತರವಾದ ಕರಾರನ್ನು ನಿಭಾಯಿಸುವ ಹೋಣೆಗಾರಿಕೆ ಸ್ವೀಕರಿಸಿರುವಿರೇನು? ಎಂದು (ಅಲ್ಲಾಹ್ ನು) ಕೇಳಿದನು. ಹೌದು, ನಾವು ಕರಾರನ್ನು ಅಂಗೀಕರಿಸಿದ್ದೇವೆ ಎಂದವರು ಉತ್ತರಿಸಿದರು. (ಪ್ರವಾದಿಗಳೇ) ಈಗ ನೀವು ಅದಕ್ಕೆ ಸಾಕ್ಷಿಗಳಾಗಿರಿ, ನಿಮ್ಮ ಜೊತೆ (ಈ ಮಹತ್ತರವಾದ ಕರಾರಿಗೆ) ನಾನೂ ಸಾಕ್ಷಿಯಾಗಿರುವೆನು ಎಂದು (ಅಲ್ಲಾಹ್ ನು) ಹೇಳಿದನು. ಅಂತಹ ಕರಾರಿನ ಬಳಿಕವೂ ಯಾರಾದರೂ (ಅದನ್ನು ಪಾಲಿಸದೆ) ಹಿಂದಿರುಗಿ ಹೋದರೆ ಅವರೇ ಪಾಪಿಗಳಾಗಿರುವರು (ಎಂದೂ ಸಹ ಅಲ್ಲಾಹ್ ನು ಹೇಳಿದನು). {81-82}

ಅಲ್ಲಾಹ್ ನ ಧರ್ಮವಲ್ಲದೆ ಬೇರೆ ಧರ್ಮವನ್ನು ಅವರು ಬಯಸುತ್ತಿದ್ದಾರೆಯೇ? ನಿಜವೇನೆಂದರೆ ಭೂಮಿ-ಆಕಾಶಗಳಲ್ಲಿರುವ ಎಲ್ಲರೂ – ಇಷ್ಟವಿದ್ದರೂ ಇಲ್ಲದಿದ್ದರೂ – ಅವನ ಮುಂದೆ ತಲೆಬಾಗಿ ಕೊಂಡಿರುತ್ತಾರೆ. ಕೊನೆಗೆ (ವಿಚಾರಣೆಯ ನಿಮಿತ್ತ) ಅವನೆಡೆಗೇ ಅವರೆಲ್ಲ ಹಿಂದಿರುಗಿಸಲ್ಪಡುವರು. {83}

ನಾವು ಅಲ್ಲಾಹ್ ನಲ್ಲಿ ವಿಶ್ವಾಸವಿರಿಸಿದ್ದೇವೆ; ನಮಗೆ ಯಾವ (ದಿವ್ಯ ಸಂದೇಶವನ್ನು) ಇಳಿಸಿಕೊಡಲಾಗಿದೆಯೋ ಅದರಲ್ಲಿ ವಿಶ್ವಾಸವಿರಿಸಿದ್ದೇವೆ; ಇಬ್ರಾಹೀಮ್ ರಿಗೆ, ಇಸ್ಮಾಈಲ್ ರಿಗೆ, ಇಸ್‍ಹಾಕ್ ರಿಗೆ, ಯಾಕೂಬ್ ಮತ್ತವರ ಮಕ್ಕಳಿಗೆ ಇಳಿಸಿ ಕೊಡಲಾದ (ದಿವ್ಯ ಸಂದೇಶದಲ್ಲಿ) ನಾವು ವಿಶ್ವಾಸವಿರಿಸಿದ್ದೇವೆ. ಮಾತ್ರವಲ್ಲ, ಮೂಸಾ, ಈಸಾ ಮತ್ತಿತರ ಪ್ರವಾದಿಗಳಿಗೆ ಅವರ ಪಾಲಕನ/ಒಡೆಯನ ವತಿಯಿಂದ ನೀಡಲ್ಪಟ್ಟ (ದಿವ್ಯ ಸಂದೇಶದಲ್ಲಿ) ವಿಶ್ವಾಸವಿರಿಸಿದ್ದೇವೆ. ಅಂತಹ (ಪ್ರವಾದಿಗಳ) ಸಮೂಹಕ್ಕೆ ಸೇರಿದ ಯಾವೊಬ್ಬರ ಬಗ್ಗೆಯೂ ನಾವು ತಾರತಮ್ಯ ಮಾಡಲು ಬಯಸುವುದಿಲ್ಲ. ನಾವೆಲ್ಲರೂ ಆ ಅಲ್ಲಾಹ್ ನಿಗೆ ಸಂಪೂರ್ಣವಾಗಿ ಶರಣಾದ (ಮುಸ್ಲಿಮರು) ಆಗಿದ್ದೇವೆ ಎಂದು (ಓ ಪೈಗಂಬರರೇ, ನೀವು) ಸಾರಿರಿ. (ಅಲ್ಲಾಹ್ ನಿಗೆ ಸಂಪೂರ್ಣವಾದ ಶರಣಾಗತಿಯ ಧರ್ಮವಾದ) ಇಸ್ಲಾಮ್ ನ ಹೊರತು ಬೇರೆ ಯಾವುದೇ ಧರ್ಮವನ್ನು ಪಾಲಿಸಲು ಯಾರಾದರೂ ಬಯಸಿದರೆ (ಆತನು ತಿಳಿದಿರಲಿ), ಎಂದಿಗೂ ಅದನ್ನು ಆತನಿಂದ ಸ್ವೀಕರಿಸಲಾಗದು. ಅಂಥವರು ಪರಲೋಕದಲ್ಲಿ ನಷ್ಟ ಹೊಂದಿದವರ ಸಾಲಿಗೆ ಸೇರುವರು. {84-85}

ಒಮ್ಮೆ ವಿಶ್ವಾಸಿಗಳಾಗಿ/ಮುಸ್ಲಿಮರಾಗಿ ನಂತರ (ಉದ್ದೇಶಪೂರ್ವಕವಾಗಿ) ಧರ್ಮಧಿಕ್ಕಾರಿಗಳಾದ ಜನರಿಗೆ ಅಲ್ಲಾಹ್ ನು ಹೇಗೆ ತಾನೆ (ಪುನಃ) ಮಾರ್ಗದರ್ಶನ ಮಾಡಿಯಾನು? ದೂತರಾದ (ಮುಹಮ್ಮದ್ ರು ಅಲ್ಲಾಹ್ ನ) ನಿಜವಾದ ದೂತರೆಂಬುದಕ್ಕೆ (ಅವರ ಆತ್ಮವು) ಸಾಕ್ಷಿ ನುಡಿದಿದ್ದು, (ಅವರ ಸತ್ಯತೆಯನ್ನು ದೃಢೀಕರಿಸುವ) ಸ್ಪಷ್ಟ ಪುರಾವೆಗಳೂ ಸಹ ಅವರಲ್ಲಿಗೆ ಬಂದಿದ್ದವು. (ನಿಜವೇನೆಂದರೆ) ಅಲ್ಲಾಹ್ ನು ಅಂಥ ಅಕ್ರಮಿ ಜನಾಂಗಕ್ಕೆ ಮಾರ್ಗದರ್ಶನ ಮಾಡುವುದಿಲ್ಲ. (ಅಷ್ಟೇ ಅಲ್ಲ,) ಅಲ್ಲಾಹ್ ನು, ಮಲಕ್ ಗಳು ಮತ್ತು ಜನರು – ಎಲ್ಲ ಒಟ್ಟಿಗೆ ಅವರನ್ನು ಶಪಿಸುತ್ತಾರೆ. ಅಂತಹ ಶಾಪಗ್ರಸ್ತ ಸ್ಥಿತಿಯಲ್ಲಿ ಅವರು ಸದಾಕಾಲ ಇರುವರು; ಅವರ ಶಿಕ್ಷೆಯನ್ನು ಸ್ವಲ್ಪವೂ ಕಡಿಮೆಗೊಳಿಸಲಾಗದು ಮತ್ತು ಅವರಿಗೆ (ಯಾವುದಕ್ಕೂ) ಕಾಲಾವಕಾಶ ನೀಡಲಾಗದು – ಇದುವೇ ಅಂಥವರಿಗಿರುವ ತಕ್ಕ ಪ್ರತಿಫಲ! ಆದರೆ, (ಅಂತಹ ಪ್ರಮಾದ) ಸಂಭವಿಸಿದ ನಂತರ ಪಶ್ಚಾತಾಪ ಪಟ್ಟುಕೊಂಡು ತಮ್ಮನ್ನು ಸರಿಪಡಿಸಿಕೊಂಡವರು ಇದಕ್ಕೆ ಹೊರತಾಗಿದ್ದಾರೆ. ಅಲ್ಲಾಹ್ ನು ಖಂಡಿತವಾಗಿಯೂ (ಅವರ ಪಾಪಗಳನ್ನು) ಕ್ಷಮಿಸುವವನೂ ಹೆಚ್ಚು ಕರುಣೆ ತೋರುವವನೂ ಆಗಿರುವನು. {86-89}

ಆದರೆ, ಒಮ್ಮೆ (ಇಸ್ಲಾಮ್ ಅನ್ನು) ಒಪ್ಪಿಕೊಂಡು ತದನಂತರ (ಉದ್ದೇಶಪೂರ್ವಕ) ಅದನ್ನು ಧಿಕ್ಕರಿಸಿ, ತಮ್ಮ ಧಿಕ್ಕಾರದ ನಿಲುವನ್ನು ಹೆಚ್ಚು ತೀವ್ರವಾಗಿಸಿಕೊಂಡವರು (ಮರಣವನ್ನು ಕಣ್ಣೆದುರು ಕಂಡಾಗ ಪಶ್ಚಾತಾಪ ಪಡಲು ಬಯಸಿದರೆ) ಆಗ ಅವರ ಪಶ್ಚಾತಾಪವನ್ನು ಎಷ್ಟು ಮಾತ್ರಕ್ಕೂ ಸ್ವೀಕರಿಸಲಾಗದು. ಸರಿದಾರಿಯಲ್ಲಿ ನಡೆಯದೇ ಹೋದವರು ಅವರೇ! ಖಂಡಿತವಾಗಿಯೂ, ಧಿಕ್ಕಾರದ ನಿಲುವನ್ನು ಹೊಂದಿ ಅದೇ ಸ್ಥಿತಿಯಲ್ಲಿ ಮರಣವನ್ನಪ್ಪಿದವರು, ಇಡೀ ಭೂಮಿಯ ಗಾತ್ರದಷ್ಟು ಪ್ರಮಾಣದ ಚಿನ್ನವನ್ನೇ ಪ್ರಾಯಶ್ಚಿತ್ತವಾಗಿ ನೀಡ ಬಯಸಿದರೂ ಅದನ್ನು ಅವರಿಂದ ಸ್ವೀಕರಿಸುವುದು ಸಾಧ್ಯವೇ ಅಲ್ಲ. ಬದಲಾಗಿ, ಅಂಥವರಿಗೆ ಅತ್ಯಂತ ಯಾತನಾಮಯ ಶಿಕ್ಷೆ ಕಾದಿದೆ, (ಅದರಿಂದ ರಕ್ಷಿಸಲು) ಯಾರೂ ಅವರಿಗೆ ಸಹಾಯ ನೀಡುವವರು ಇರಲಾರರು. {90-91}

✽4✽ (ಕೇವಲ ಕೆಲವು ಆಚಾರಗಳನ್ನು ಪಾಲಿಸಿಕೊಂಡ ಮಾತ್ರಕ್ಕೆ ತಮ್ಮನ್ನು ಮಹಾ ಧರ್ಮಿಷ್ಠರು ಎಂದು ಭಾವಿಸಿಕೊಳ್ಳ ಬೇಡಿ). ನೀವು ಅತಿಯಾಗಿ ಮೆಚ್ಚಿಕೊಳ್ಳುವ ವಸ್ತುಗಳ (ಒಂದಂಶವನ್ನು ಅಲ್ಲಾಹ್ ನ ಮಾರ್ಗದಲ್ಲಿ) ಖರ್ಚು ಮಾಡಿಕೊಳ್ಳುವ ತನಕ ನೀವು ಧರ್ಮಶೀಲತೆಯ ಮಟ್ಟವನ್ನು ತಲುಪುವುದು ಸಾಧ್ಯವೇ ಇಲ್ಲ. ನೀವು ಏನನ್ನು ಖರ್ಚು ಮಾಡುವಿರೋ ಅಲ್ಲಾಹ್ ನು ಅದನ್ನು ಚೆನ್ನಾಗಿ ಅರಿಯುವನು. {92}

(ಯಹೂದ್ಯರ ಆ ಆಕ್ಷೇಪವು ಸರಿಯಲ್ಲ. ಮುಹಮ್ಮದ್ ಪೈಗಂಬರರಿಗೆ ನೀಡಲಾದ ಶರೀಅತ್ ನಲ್ಲಿ ಅನುಮತಿಸಲಾದ) ಎಲ್ಲಾ ಆಹಾರ ಪದಾರ್ಥಗಳು ಇಸ್ರೇಲಿಯರಿಗೂ ಧರ್ಮಬದ್ಧವೇ ಆಗಿತ್ತು. ಆದರೆ ತೋರಾ ವನ್ನು ಕಳಿಸುವುದಕ್ಕಿಂತ ಮುಂಚೆ (ವೈಯಕ್ತಿಕ ಕಾರಣಗಳ ನಿಮಿತ್ತ) ನಬಿ ಯಅಕೂಬ್ (ಇಸ್ರಾಈಲ್ ಎಂಬುದು ಇವರ ಇನ್ನೊಂದು ಹೆಸರು) ರು ತನ್ನ ಮೇಲೆ ಸ್ವಯಂ ನಿಷೇಧಿಸಿಕೊಂಡ (ಕೆಲವು ತಿನಿಸುಗಳ) ವಿಷಯ ಅದಕ್ಕೆ ಹೊರತಾಗಿದೆ. ನೀವು ಸತ್ಯವಂತರೆಂದಾದರೆ ತೋರಾ ವನ್ನು ತನ್ನಿ, (ನಿಮ್ಮ ಆಕ್ಷೇಪವನ್ನು ರುಜುವಾತುಪಡಿಸಲು) ಅದನ್ನು ಓದಿ ತೋರಿಸಿರಿ – ಎಂದು (ಪೈಗಂಬರರೇ ನೀವು ಯಹೂದ್ಯರಿಗೆ) ಹೇಳಿರಿ. ಅದರ ನಂತರವೂ ಯಾರು ಅಲ್ಲಾಹ್ ನ ಮೇಲೆ ಸುಳ್ಳನ್ನೇ ಆರೋಪಿಸುತ್ತಾರೋ ಅವರೇ ಅಕ್ರಮವೆಸಗಿದವರು. {93-94}

ಅಲ್ಲಾಹ್ ನು ಸತ್ಯವನ್ನು ನುಡಿದಿದ್ದಾನೆ. ಆದ್ದರಿಂದ, ಸದಾ ಸತ್ಯದೆಡೆಗೆ ವಾಲಿಕೊಂಡಿದ್ದ ಇಬ್ರಾಹೀಮ್ ರು ಪಾಲಿಸಿದ ಧರ್ಮವನ್ನು ನೀವೂ ಅನುಸರಿಸಿ; ಅವರಾದರೋ ಬಹುದೇವೋಪಾಸಕರ ಸಾಲಿಗೆ ಸೇರಿದವರು ಆಗಿರಲಿಲ್ಲ ಎಂದು ಸಾರಿರಿ. {95}

(ಕಿಬ್ಲಾ ಕುರಿತಾದ ಯಹೂದ್ಯರ ಅಕ್ಷೇಪವೂ ಸಹ ಸರಿಯಲ್ಲ). ಸಕಲ ಮಾನವರಿಗಾಗಿ ಸ್ಥಾಪನೆಗೊಂಡಂತಹ ಮೊಟ್ಟಮೊದಲ ಅರಾಧನಾಲಯವು ನಿಜವಾಗಿಯೂ ಬಕ್ಕಃ (ಅರ್ಥಾತ್ ಮಕ್ಕಃ ಪಟ್ಟಣ) ದಲ್ಲಿರುವ ಆ ಆಲಯವೇ ಆಗಿದೆ. ಅದು ಅನುಗ್ರಹೀತವೂ ಮನುಜರೆಲ್ಲರ ಮಾರ್ಗದರ್ಶನದ (ಕೇಂದ್ರವೂ) ಆಗಿದೆ. ಅದರಲ್ಲಿ (ನಿಮಗೆ) ಸ್ಪಷ್ಟವಾದ ನಿದರ್ಶನಗಳಿವೆ. (ಅಂದರೆ) ಇಬ್ರಾಹೀಮ್ ರು ತಂಗಿದ/ಪ್ರಾರ್ಥನೆಗೆ ನಿಂತ ಸ್ಥಳವಿದೆ. ಅದನ್ನು ಪ್ರವೇಶಿಸಿಕೊಂಡವರು ಸುರಕ್ಷಿತರಾಗುತ್ತಾರೆ/ನಿರ್ಭೀತರಾಗುತ್ತಾರೆ. ಯಾರಿಗೆ ದಾರಿಯುದ್ದಕ್ಕೂ (ಯಾತ್ರೆಯ ಖರ್ಚು ವೆಚ್ಚಗಳನ್ನು ಭರಿಸುವ) ಸಾಮರ್ಥ್ಯವಿದೆಯೋ ಅವರು (ಮಕ್ಕಃ ದಲ್ಲಿರುವ ಕಅಬಃ ಎಂಬ) ಆ ಆರಾಧನಾಲಯಕ್ಕೆ ಹಜ್ಜ್ ಯಾತ್ರೆಯನ್ನು ಕೈಗೊಳ್ಳಬೇಕೆಂಬುದು ಅಲ್ಲಾಹ್ ನಿಗೆ ಸಲ್ಲಬೇಕಾದ ಹಕ್ಕಾಗಿದ್ದು, ಅದು ಮನುಷ್ಯರ ಮೇಲಿರುವ ಬಾಧ್ಯತೆಯಾಗಿದೆ. (ಸ್ಪಷ್ಟವಾದ ನಿದರ್ಶನಗಳು ಅಲ್ಲಿ ಇರುವಾಗ) ಅದನ್ನು ನಿರಾಕರಿಸಿದವರು (ತಿಳಿದಿರಲಿ), ಅಲ್ಲಾಹ್ ನು ಪ್ರಪಂಚದಲ್ಲಿ ಯಾರನ್ನೂ ಸ್ವಲ್ಪವೂ ಆಶ್ರಯಿಸಿಕೊಂಡಿಲ್ಲ. ಓ ಗ್ರಂಥದವರೇ, ಅಲ್ಲಾಹ್ ನ ವಚನಗಳನ್ನು ಅದೇಕೆ ನೀವು ನಿರಾಕರಿಸುತ್ತಿದ್ದೀರಿ? ಅಲ್ಲಾಹ್ ನು ನಿಮ್ಮ ಚಟುವಟಿಕೆಗಳನ್ನೆಲ್ಲ ವೀಕ್ಷಿಸುತ್ತಿದ್ದಾನೆ – ಎಂದು (ಪೈಗಂಬರರೇ, ನೀವು ಅವರೊಂದಿಗೆ) ಹೇಳಿರಿ. {96-98}

ದಿವ್ಯ ಗ್ರಂಥದ ಅನುಯಾಯಿಗಳೇ, (ಅಲ್ಲಾಹ್ ನ ವಚನಗಳಲ್ಲಿ) ನಂಬಿಕೆಯನ್ನು ಹೊಂದಿರುವ ಜನರನ್ನು ನೀವು ಅಲ್ಲಾಹ್ ನ ಮಾರ್ಗದಿಂದ ತಡೆಯುತ್ತಿರುವುದು ಯಾವ ಕಾರಣಕ್ಕಾಗಿ? (ಅದು ನೇರವಾದ ಮಾರ್ಗವೆಂಬುದಕ್ಕೆ) ನಿಮ್ಮನ್ನೇ ಸಾಕ್ಷಿಗಳನ್ನಾಗಿ ಮಾಡಲಾಗಿರುವಾಗ ನೀವು ಅದರಲ್ಲಿ ವಕ್ರತೆಯನ್ನು ಬಯಸುವುದೇಕೆ? ನೀವು ಅದೇನೆಲ್ಲ ಮಾಡುತ್ತಿರುವೋ ಅಲ್ಲಾಹ್ ನಿಗೆ ಅದು ತಿಳಿಯದೇ ಹೋಗಿಲ್ಲ – ಎಂದು (ಪೈಗಂಬರರೇ ನೀವು ಅವರಿಗೆ) ತಿಳಿಸಿರಿ. {99}

(ಅಲ್ಲಾಹ್ ನ ವಚನಗಳಲ್ಲಿ) ವಿಶ್ವಾಸವಿರಿಸಿಕೊಂಡ ಓ ಜನರೇ, ದಿವ್ಯ ಗ್ರಂಥವು ನೀಡಲ್ಪಟ್ಟವರ ಸಾಲಿಗೆ ಸೇರಿದ ಯಾವೊಂದು ಗುಂಪಿನವರ ಮಾತನ್ನು ಅನುರಿಸಿದರೂ, (ಈಗ) ವಿಶ್ವಾಸಿಗಳಾದ/ಮುಸ್ಲಿಮರಾದ ನಿಮ್ಮನ್ನು ಅವರು ಪುನಃ ಧಿಕ್ಕಾರಿಗಳನ್ನಾಗಿ ಮಾಡಿ (ಹಿಂದಿನ ಸ್ಥಿತಿಗೆ) ಮರಳಿಸಿ ಬಿಡುತ್ತಾರೆ. (ಆದರೆ ಈಗ) ಅಲ್ಲಾಹ್ ನ ವಚನಗಳನ್ನು ನಿಮ್ಮ ಮುಂದೆ ಓದಿ ಹೇಳಲಾಗಿತ್ತಿದೆ; ಮಾತ್ರವಲ್ಲ, ಅಲ್ಲಾಹ್ ನ ದೂತರೂ ನಿಮ್ಮ ನಡುವೆ ಉಪಸ್ಥಿತರಿದ್ದಾರೆ. ಹಾಗಿರುವಾಗ, ನೀವು ಧಿಕ್ಕಾರದ ನಿಲುವನ್ನು ಕೈಗೊಳ್ಳುವುದಾದರೂ ಹೇಗೆ? ಯಾರು ಅಲ್ಲಾಹ್ ನ (ಗ್ರಂಥವನ್ನು) ಬಿಗಿಯಾಗಿ ಹಿಡಿದುಕೊಂಡರೋ ಅವರು ನೇರವಾದ ಮಾರ್ಗದತ್ತ ನಡೆಸಲ್ಪಟ್ಟರು (ಎಂದೇ ತಿಳಿಯಿರಿ). ಓ ವಿಶ್ವಾಸಿಗಳೇ, ಅಲ್ಲಾಹ್ ನ ಭಯವಿರಿಸಿ ಕೊಳ್ಳಬೇಕಾದ ರೀತಿಯಲ್ಲೇ ನೀವು ಅವನ ಭಯವಿರಿಸಿಕೊಳ್ಳಿ. (ಸಂಪೂರ್ಣವಾಗಿ ಅಲ್ಲಾಹ್ ನಿಗೆ ಶರಣಾಗಿ) ಮುಸ್ಲಿಮರಾದ ಸ್ಥಿತಿಯಲ್ಲಿರುವ ಹೊರತು ನೀವು ಮರಣವನ್ನಪ್ಪಲೇ ಬಾರದು. {100-102}

ನೀವೆಲ್ಲರೂ ಒಂದುಗೂಡಿ ಅಲ್ಲಾಹ್ ನ ಜೊತೆಗಿರುವ ಕರಾರನ್ನು ಭದ್ರವಾಗಿ ಹಿಡಿದುಕೊಳ್ಳಿ ಮತ್ತು (ಆ ವಿಷಯದಲ್ಲಿ) ಛಿನ್ನ-ಭಿನ್ನರಾಗದಿರಿ. ಅಲ್ಲಾಹ್ ನು ನಿಮಗೆ ನೀಡಿದ ಅನುಗ್ರಹಗಳನ್ನು ಸ್ಮರಿಸಿಕೊಳ್ಳಿ. ನೀವು (ಒಬ್ಬರಿಗೊಬ್ಬರು) ಶತ್ರುಗಳಾಗಿದ್ದಿರಿ, ಆದರೆ ಅವನು ನಿಮ್ಮ ಹೃದಯಗಳಲ್ಲಿ (ಪರಸ್ಪರರಿಗೆ) ವಾತ್ಸಲ್ಯ ಮೂಡಿಸಿದನು. ಅವನ ಅನುಗ್ರಹದ ಕಾರಣ ನೀವು ಪರಸ್ಪರ ಸಹೋದರರಾದಿರಿ. (ನಿಮ್ಮಲ್ಲಿದ್ದ ಶತೃತ್ವದ ಕಾರಣ) ನೀವು ಒಂದು ಅಗ್ನಿಕುಂಡದ ಅಂಚಿನಲ್ಲಿ ಇದ್ದಿರಿ, ಆದರೆ (ಅಲ್ಲಾಹ್ ನು) ನಿಮ್ಮನ್ನು ಅದರಿಂದ ರಕ್ಷಿಸಿದನು. ನೀವು ನೇರಮಾರ್ಗ ಪಡೆಯುವಂತಾಗಲು ಹೀಗೆ ಅಲ್ಲಾಹ್ ನು ತನ್ನ ದೃಷ್ಟಾಂತಗಳನ್ನು ನಿಮಗೆ ವಿವರಿಸುತ್ತಾನೆ. {103}

ಒಳಿತೆನೆಡೆಗೆ (ಜನರನ್ನು) ಆಹ್ವಾನಿಸುವಂಥವರ ಗುಂಪೊಂದು ಅಗತ್ಯವಾಗಿ ನಿಮ್ಮ (ಸಮಾಜದಲ್ಲಿ) ಇರಲೇ ಬೇಕಾಗಿದೆ. ಅವರು ಸದಾಚಾರ-ಸತ್ಕರ್ಮಗಳ ಕುರಿತು ಆದೇಶಿಸುತ್ತಿರಬೇಕು ಹಾಗೂ ದುರಾಚಾರ-ದುಷ್ಕರ್ಮಗಳಿಂದ (ಜನರನ್ನು) ತಡೆಯುತ್ತಿರಬೇಕು. ಹಾಗೆ ಮಾಡುವವರೇ ವಿಜಯಶಾಲಿಗಳಾವರು. {104}

(ಅಲ್ಲಾಹ್ ನ ವತಿಯಿಂದ) ಬಹಳ ಸ್ಪಷ್ಟವಾದ ಪುರಾವೆಗಳು ತಮ್ಮಲ್ಲಿಗೆ ಬಂದ ಬಳಿಕವೂ ಗುಂಪುಗಾರಿಕೆಯಲ್ಲಿ ತೊಡಗಿಕೊಂಡು ಪರಸ್ಪರ ಭಿನ್ನತೆ ತಾಳಿದ ಜನರಂತೆ ನೀವಾಗಬೇಡಿ. ಅಂಥವರಿಗಾಗಿ ಭಯಂಕರವಾದ ಶಿಕ್ಷೆಯಿದೆ. {105}

(ಪುನರುತ್ಥಾನದ) ಆ ದಿನ ಕೆಲವು ಮುಖಗಳು ಕಾಂತಿಯುತವಾಗಿರುವುವು ಮತ್ತು ಕೆಲವು ಮುಖಗಳು (ಕಾಂತಿಹೀನವಾಗಿ) ಕಪ್ಪಿಟ್ಟಿರುವುವು. ಯಾರ ಮುಖವು ಕಪ್ಪಿಟ್ಟಿರುವುದೋ ಅವರೊಡನೆ, ಒಮ್ಮೆ ವಿಶ್ವಾಸಿಗಳಾಗಿದ್ದು ಕೊಂಡು ಅನಂತರ ನೀವು ಧಿಕ್ಕಾರಿಗಳಾಗಿ ಬಿಟ್ಟಿರಾ? ಹಾಗಾದರೆ ನಿಮ್ಮ ಆ ಧಿಕ್ಕಾರದ ಕಾರಣ ಈಗ ಶಿಕ್ಷೆ ಅನುಭವಿಸಿರಿ (ಎಂದು ಹೇಳಲಾಗುವುದು). ಇನ್ನು, ಯಾರ ಮುಖವು ಕಾಂತಿಯುತವಾಗಿರುವುದೋ ಅವರು (ಅಂದು) ಅಲ್ಲಾಹ್ ನ ಅನುಗ್ರಹದಲ್ಲಿ ಇರುವರು; ಅವರು ಸದಾ ಕಾಲ ಅದೇ ಸ್ಥಿತಿಯಲ್ಲಿ ನೆಲೆಸುವರು. ಇವೆಲ್ಲ ಅಲ್ಲಾಹ್ ನ ಅತ್ಯಂತ ಸತ್ಯಪೂರ್ಣವಾದ ವಚನಗಳಾಗಿದ್ದು, ನಿಮಗೆ ನಾವೇ ಓದಿಸಿ ಕೇಳಿಸುತ್ತಿದ್ದೇವೆ. ಅಲ್ಲಾಹ್ ನು ಭೂಲೋಕ ವಾಸಿಗಳಿಗೆ ಅನ್ಯಾಯವಾಗುವುದು ಬಯಸುವುದಿಲ್ಲ. ಭೂಮಿ-ಆಕಾಶಗಳಲ್ಲಿ ಇರುವ ಸಕಲವೂ ಅಲ್ಲಾಹ್ ನ ಒಡೆತನಕ್ಕೆ ಸೇರಿದ್ದು ಎಲ್ಲಾ ವಿಷಯಗಳು (ತೀರ್ಮಾನಕ್ಕಾಗಿ ಅಂತಿಮವಾಗಿ) ಅಲ್ಲಾಹ್ ನೆಡೆಗೇ ಹಿಂದಿರುಗಿಸಲ್ಪಡುತ್ತವೆ. {106-109}

(ವಿಶ್ವಾಸಿಗಳೇ), ಈ ಜನರ (ಮೇಲೆ ಸಾಕ್ಷ್ಯಕ್ಕಾಗಿ) ನಿಯೋಜಿಸಲಾದ ಒಂದು ಉತ್ತಮವಾದ ಸಮುದಾಯವು ನೀವಾಗಿದ್ದೀರಿ. ನೀವು ಸದಾಚಾರ/ಸತ್ಕರ್ಮಗಳ ಉಪದೇಶ ನೀಡುತ್ತೀರಿ ಹಾಗೂ ದುರಾಚಾರ/ದುಷ್ಕರ್ಮಗಳಿಂದ (ಅವರನ್ನು) ತಡೆಯುತ್ತೀರಿ, ಜೊತೆಗೆ ಅಲ್ಲಾಹ್ ನಲ್ಲಿ ನಿಜವಾದ ವಿಶ್ವಾಸವನ್ನು ಇಡುತ್ತೀರಿ. ಒಂದು ವೇಳೆ ದಿವ್ಯಗ್ರಂಥವನ್ನು ಹೊಂದಿರುವ (ಈ ಜನರೂ) ಸಹ ನಿಜವಾದ ವಿಶ್ವಾಸವನ್ನು ಇಟ್ಟುಕೊಂಡಿದ್ದರೆ ಅದು ಅವರಿಗೇ ಹೆಚ್ಚು ಗುಣಕರವಾಗಿರುತ್ತಿತ್ತು. ಅವರಲ್ಲಿ ಕೆಲವರು ನಿಜವಾದ ವಿಶ್ವಾಸಿಗಳೂ ಇದ್ದಾರೆ, ಆದರೆ ಅವರ ಪೈಕಿ ಹೆಚ್ಚಿನವರು ಮಿತಿಮೀರಿದ (ಫಾಸಿಕ್) ಗಳಾಗಿದ್ದಾರೆ. ಅಲ್ಪಸ್ವಲ್ಪ ತೊಂದರೆಯುಂಟು ಮಾಡುವ ಹೊರತು ನಿಮಗೆ ದೊಡ್ಡ ಪ್ರಮಾಣದ ದುರಂತವುಂಟು ಮಾಡಲು ಅವರಿಗೆಂದೂ ಸಾಧ್ಯವಿಲ್ಲ. ಒಂದು ವೇಳೆ ಅವರು ನಿಮ್ಮೊಂದಿಗೆ ಯುದ್ಧಕ್ಕೆ ಬಂದರೆ ನಿಮಗೆ ಬೆನ್ನು ತೋರಿಸಿ (ಸೋತು) ಪಲಾಯನ ಮಾಡುವರು, ಅನಂತರ ಅವರಿಗೆ (ಎಲ್ಲಿಂದಲೂ) ನೆರವು ಸಿಗಲಾರದು. {110-111}

ಅವರು (ಭೂಮಿಯಲ್ಲಿ) ಎಲ್ಲಿ ಕಾಣಿಸಿಕೊಳ್ಳುವರೋ ಅಲ್ಲೆಲ್ಲ ಅವರು ಅಪಮಾನದ ಬಡಿತಕ್ಕೆ ಗುರಿಯಾಗುವರು; ಅಲ್ಲಾಹ್ ನೊಂದಿಗಿದ್ದ ಕರಾರು ಪಾಲಿಸುವ ಅಥವಾ ಜನರೊಂದಿಗೆ (ಆಶ್ರಯಕ್ಕಾಗಿ) ಕರಾರು ಮಾಡಿಕೊಳ್ಳುವುದಲ್ಲದೆ (ಬೇರೆ ನಿರ್ವಾಹವಿಲ್ಲ). ಅವರು ಅಲ್ಲಾಹ್ ನ ಕ್ರೋಧಕ್ಕೆ ಗುರಿಯಾಗಿದ್ದಾರೆ. ಅವರಿಗೆ ದಾರಿದ್ರ್ಯ/ಪರಾವಲಂಬನೆಯ ಶಾಪ ತಗುಲಿಕೊಂಡಿದೆ. ಅಲ್ಲಾಹ್ ನ ದೃಷ್ಟಾಂತಗಳನ್ನು/ವಚನಗಳನ್ನು (ನಿರಂತರವಾಗಿ) ನಿರಾಕರಿಸಿದ ಮತ್ತು ಅಲ್ಲಾಹ್ ನ ದೂತರನ್ನು ಅನ್ಯಾಯವಾಗಿ ವಧಿಸುತ್ತಿದ್ದ ಕಾರಣ ಅವರಿಗೆ ಹಾಗೆ ಸಂಭವಿಸಿದೆ. ಅವರು (ನಿರಂತರ) ಅವಿಧೇಯತೆ ತೋರುತ್ತಿದ್ದ ಹಾಗೂ ಆಜ್ಞೋಲ್ಲಂಘನೆಯಲ್ಲಿ ತೊಡಗಿದ್ದ ಕಾರಣ (ಅವರಿಗೆ ಅಂತಹ ಗತಿ ಬಂದೊದಗಿದೆ). {112}

ಆದರೆ, ಅವರೆಲ್ಲರೂ ಒಂದೇ ರೀತಿಯವರಲ್ಲ; ಗ್ರಂಥದವರ ಪೈಕಿ ಒಂದು ಗುಂಪು (ಅಲ್ಲಾಹ್ ನ ಜೊತೆಗಿದ್ದ ಕರಾರನ್ನು) ಪಾಲಿಸಿಕೊಂಡಿದ್ದಾರೆ. ರಾತ್ರಿಯ ವೇಳೆಯಲ್ಲಿ ಅವರು (ನಮಾಝ್ ನಲ್ಲಿ ನಿಂತು) ಅಲ್ಲಾಹ್ ನ ವಚನಗಳನ್ನು ಓದುತ್ತಾರೆ ಹಾಗೂ (ಅವನಿಗೆ) ಸಾಷ್ಟಾಂಗವೆರಗುತ್ತಾರೆ. ಅವರು ಅಲ್ಲಾಹ್ ನಲ್ಲಿ ಮತ್ತು ಪುನರುತ್ಥಾನ ದಿನದಲ್ಲಿ ನಿಜವಾದ ವಿಶ್ವಾಸವನ್ನು ಹೊಂದಿದ್ದಾರೆ, ಜೊತೆಗೆ ಸದಾಚಾರ/ಸತ್ಕರ್ಮಗಳನ್ನು (ಜನರಿಗೆ) ಉಪದೇಶಿಸುತ್ತಾರೆ ಹಾಗೂ ದುರಾಚಾರ/ದುಷ್ಕರ್ಮಗಳಿಂದ (ಅವರನ್ನು) ತಡೆಯುತ್ತಾರೆ. ಒಳಿತಿನ ವಿಷಯಗಳಲ್ಲಿ ಪರಸ್ಪರ ಸ್ಪರ್ಧಿಸುತ್ತಾರೆ. ಅಂಥವರೇ ಧರ್ಮನಿಷ್ಠ ಸಜ್ಜನರ ಸಾಲಿಗೆ ಸೇರಿದವರು; ಅವರ ಯಾವ ಸತ್ಕಾರ್ಯವನ್ನೂ ಎಂದೂ ನಿರ್ಲಕ್ಷಿಸಲಾಗುವುದಿಲ್ಲ. ಅಂತಹ ಧರ್ಮನಿಷ್ಠರ ಕುರಿತು ಅಲ್ಲಾಹ್ ನು ಚೆನ್ನಾಗಿ ಬಲ್ಲವನಾಗಿದ್ದಾನೆ. {113-115}

(ಅದಕ್ಕೆ ತದ್ವಿರುದ್ಧವಾಗಿ) ಯಾರು ಧಿಕ್ಕಾರದ ನಿಲುವು ತಾಳಿರುವರೋ ಅವರಿಗೆ (ಪರಲೋಕದಲ್ಲಿ) ಅವರ ಸಂಪತ್ತಾಗಲಿ ಸಂತಾನವಾಗಲಿ ಅಲ್ಲಾಹ್ ನ (ಶಿಕ್ಷೆಯಿಂದ ರಕ್ಷಿಸುವಲ್ಲಿ) ಯಾವ ರೀತಿಯಲ್ಲೂ ಪ್ರಯೋಜನಕಾರಿಯಾಗದು. ಅಂಥವರು ನರಕಾಗ್ನಿಯ ಸಂಗಾತಿಗಳಾಗಿರುವರು; ಸದಾ ಅದರಲ್ಲೇ ಬಿದ್ದುಕೊಂಡಿರುವರು. ಇಹಲೋಕದಲ್ಲಿ ಜೀವಿಸಿರುವಾಗ ಅಂಥವರು ಮಾಡುವ ಖರ್ಚನ್ನು, ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡ ಜನಾಂಗವೊಂದರ ಕೃಷಿಭೂಮಿಗೆ ರಭಸದಿಂದ ಬೀಸಿ ಅದನ್ನು ಸಂಪೂರ್ಣವಾಗಿ ನಾಶಪಡಿಸಿ ಬಿಡುವ ಹಿಮಭರಿತ ಬಿರುಗಾಳಿಯೊಂದಿಗೆ ಹೋಲಿಸಬಹುದು! (ನರಕಾಗ್ನಿ ಸೇರಲಿರುವ) ಅವರ ಮೇಲೆ ಅಕ್ರಮವೆಸಗಿರುವುದು ಅಲ್ಲಾಹ್ ನು ಅಲ್ಲ; ಬದಲಾಗಿ ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗಿರುವರು. {116-117}

ವಿಶ್ವಾಸಿಗಳಾದ ಜನರೇ, ನಿಮ್ಮ ಒಡನಾಡಿಗಳ ಹೊರತು ಅನ್ಯರನ್ನು (ಆಂತರಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು) ನಿಕಟವಾದ ವಿಶ್ವಸ್ಥರನ್ನಾಗಿ ನೀವು ಮಾಡಿಟ್ಟುಕೊಳ್ಳಬೇಡಿ. (ಹಾಗೆ ಮಾಡಿಕೊಂಡಲ್ಲಿ) ನಿಮ್ಮನ್ನು ನಷ್ಟಕ್ಕೆ ಸಿಲುಕಿಸುವಂತೆ ಮಾಡುವಲ್ಲಿ ಏನನ್ನೂ ಅವರು ಬಾಕಿ ಉಳಿಸಲಾರರು. ನೀವು ತೊಂದರೆಗೀಡಾಗುವುದು ಅವರಿಗೆ ಬಹಳ ಇಷ್ಟವಾದ ವಿಷಯ. (ನಿಮ್ಮ ವಿರುದ್ಧ ಅವರಿಗಿರುವ) ವಿದ್ವೇಷವು ಅದಾಗಲೇ ಅವರ ಬಾಯಿಯಿಂದ ಹೊರಬಿದ್ದಾಗಿದೆ. ಇನ್ನು ಅವರ ಹೃದಯಗಳಲ್ಲಿ ಅಡಗಿರುವುದಾದರೂ ಅದಕ್ಕಿಂತಲೂ ಹೆಚ್ಚು ಕಠೋರವಾದುದು! ನೀವು (ಅರ್ಥ ಮಾಡಿಕೊಳ್ಳುವಷ್ಟು) ಬುದ್ಧಿವಂತರು ಎಂದಾದರೆ ನಾವು ನಿಮಗೆ ಸ್ಪಷ್ಟ ಸೂಚನೆಗಳನ್ನು ಕೊಟ್ಟಾಗಿದೆ; (ಆದ್ದರಿಂದ ಎಚ್ಚೆತ್ತುಕೊಳ್ಳಿ)! {118}

(ಚಿಂತಿಸಿ ನೋಡಿ), ನೀವಾದರೋ ಅಂಥವರನ್ನು ಇಷ್ಟ ಪಡುವವರಾಗಿದ್ದೀರಿ. ಆದರೆ ನಿಮ್ಮನ್ನು ಅವರು ಇಷ್ಟ ಪಡುವುದಿಲ್ಲ! (ಅಲ್ಲಾಹ್ ನ) ಗ್ರಂಥದಲ್ಲಿ ನಿಮಗೆ ಪೂರ್ಣವಾದ ವಿಶ್ವಾಸವಿದೆ. (ಆದ್ದರಿಂದ) ಅವರು ನಿಮ್ಮನ್ನು ಸಂಧಿಸಿದಾಗ ನಾವೂ ಸಹ (ಗ್ರಂಥದಲ್ಲಿ) ವಿಶ್ವಾಸವುಳ್ಳವರು ಎಂದೇ ಹೇಳುತ್ತಾರೆ. ಆದರೆ ನಿಮ್ಮನ್ನು ಅಗಲಿದ ಕೂಡಲೇ (ನಿಮ್ಮ ಮೇಲಿರುವ ಕೋಪದ ಕಾರಣ) ರೊಚ್ಚಿಗೆದ್ದು ತಮ್ಮ ತುದಿಬೆರಳನ್ನು ಕಚ್ಚಿಕೊಳ್ಳುತ್ತಾರೆ! (ಆದ್ದರಿಂದ) ನಿಮ್ಮ ಕೋಪದಲ್ಲಿ ನೀವೇ ಸಾಯಿರಿ ಎಂದು ಹೇಳಿಕೊಳ್ಳಿ. ವಸ್ತುತಃ ಅಲ್ಲಾಹ್ ನಿಗೆ ಹೃದಯಗಳೊಳಗೆ ಇರುವ ರಹಸ್ಯಗಳ ಜ್ಞಾನವೂ ಇರುವುದು! {119}

ನಿಮಗೆ (ಯುದ್ಧದಲ್ಲಿ) ಒಳ್ಳೆಯದೇನಾದರೂ ಸಂಭವಿಸಿದರೆ ಅವರು ದುಃಖಿತರಾಗುತ್ತಾರೆ; ಮತ್ತು ನಿಮಗೇನಾದರೂ ಕೇಡು ಸಂಭವಿಸಿದರೆ ಅವರು ಅದಕ್ಕಾಗಿ ಖುಷಿ ಪಡುತ್ತಾರೆ. ಆದರೆ ನೀವು ಅತ್ಯಂತ ತಾಳ್ಮೆಯೊಂದಿಗೆ ಮತ್ತು ಭಯಭಕ್ತಿಯೊಂದಿಗೆ ವರ್ತಿಸಿಕೊಂಡರೆ ಅವರು ಹೂಡುವ ಸಂಚುಗಳು ನಿಮಗೆ ಒಂದಿಷ್ಟೂ ಹಾನಿ ಮಾಡಲಾರವು. (ಏಕೆಂದರೆ) ಅಲ್ಲಾಹ್ ನು ಅವರ ಎಲ್ಲ ಚಟುವಟಿಕೆಗಳನ್ನು ಸುತ್ತುಗಟ್ಟಿರುವನು. {120}

(ಪೈಗಂಬರರೇ, ಉಹುದ್ ಯುದ್ಧ ನಡೆದ ಆ ದಿನ) ವಿಶ್ವಾಸಿಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಯುದ್ಧಕ್ಕೆ ಅಣಿಗೊಳಿಸಿ ನಿಲ್ಲಿಸಲು ನೀವು ಮನೆಯಿಂದ ನಸುಕಿನಲ್ಲೇ ತೆರೆಳಿದ್ದ ಸಂದರ್ಭವನ್ನು (ಅವರಿಗೆ) ನೆನಪಿಸಿಕೊಡಿ. ಅಲ್ಲಾಹ್ ನಾದರೋ ಎಲ್ಲವನ್ನೂ ಆಲಿಸುವವನೂ ಸರಿಯಾಗಿ ಬಲ್ಲವನೂ ಆಗಿದ್ದಾನೆ. {121}

ನಿಮ್ಮಲ್ಲಿಯ ಎರಡು ತಂಡಗಳು – ಅವರ ಸಹಾಯಕನಾಗಿ ಸ್ವತಃ ಅಲ್ಲಾಹ್ ನೇ ಇದ್ದಾಗಲೂ – ಎದೆಗುಂದಿ (ಯುದ್ಧ ಭೂಮಿಯಿಂದ ವಿಮುಖರಾಗಲು) ಆಲೋಚಿಸುತ್ತಿದ್ದ ಸಂದರ್ಭವನ್ನೂ (ಅವರಿಗೆ) ನೆನಪಿಸಿ. ವಿಶ್ವಾಸಿಗಳ ಕರ್ತವ್ಯವಾದರೋ ಅಲ್ಲಾಹ್ ನಲ್ಲಿ ಭರವಸೆಯಿಡುವುದಾಗಿದೆ! (ಈ ಹಿಂದೆ) ನೀವು ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದ ಬದ್ರ್ ಯುದ್ಧದಲ್ಲಿಯೂ ನಿಮಗೆ ಅಲ್ಲಾಹ್ ನು ಸಹಾಯವನ್ನು ಒದಗಿಸಿದ್ದನು. ಹಾಗಿರುವಾಗ, ನೀವು (ಕೃತಘ್ನರಾಗದೆ) ಕೃತಜ್ಞತೆಯುಳ್ಳವರಾಗಲು ಅಲ್ಲಾಹ್ ನಿಗೆ ಭಯಭಕ್ತಿ ತೋರುತ್ತಲಿರಿ. {122-123}

ಮೂರು ಸಾವಿರ ಮಲಕ್ ಗಳ (ಸೇನೆಯನ್ನು ವಿಶೇಷವಾಗಿ ಮೇಲಿನಿಂದ) ಇಳಿಸಿ ನಿಮ್ಮ ಸೃಷ್ಟಿಕರ್ತನು/ಒಡೆಯನು ನಿಮಗೆ ಸಹಾಯ ಮಾಡಿದರೆ ಸಾಲದೇ – ಎಂದು (ಪೈಗಂಬರರೇ,) ನೀವು ವಿಶ್ವಾಸಿಗಳಿಗೆ ಸಾಂತ್ವನ ಹೇಳಿದ ಆ ಸಂದರ್ಭವನ್ನು ಸಹ ನೆನಪಿಸಿ. ಯಾಕೆ ಸಾಲದು? ನೀವು ಸಹನೆ ತೋರಿದರೆ, ಜೊತೆಗೆ ಜಾಗರೂಕರಾಗಿ ಭಯಭಕ್ತಿಯಿಂದ ವರ್ತಿಸಿಕೊಂಡರೆ, ಶತ್ರುಗಳು ನಿಮ್ಮ ಮೇಲೆ ಹಠಾತ್ತನೆ ಎರಗಿ ಬಂದರೂ (ಮೂರು ಸಾವಿರವಲ್ಲ, ಬದಲಾಗಿ) ಐದು ಸಾವಿರ ಅಸಾಮಾನ್ಯ ಮಲಕ್ ಗಳ ಮೂಲಕ ನಿಮ್ಮೊಡೆಯನು ನಿಮಗೆ ನೆರವು ಒದಗಿಸುವನು. ಅಲ್ಲಾಹ್ ನು (ಈ ವಿಷಯ ತಿಳಿಸಿರುವುದು) ನಿಮಗೆ ಹಿತವೆನಿಸುವಂತಾಗಲು ಹಾಗೂ ಆ ಮೂಲಕ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವಂತಾಗಲು ಮಾತ್ರವಲ್ಲದೆ ಬೇರೇನಕ್ಕೂ ಅಲ್ಲ. ವಾಸ್ತವದಲ್ಲಿ, ಅತ್ಯಂತ ಪ್ರಚಂಡನೂ ಜ್ಞಾನಿಯೂ ಆದ ಅಲ್ಲಾಹ್ ನ ಸನ್ನಿಧಿಯಿಂದ ಹೊರತು ಬೇರೆಲ್ಲಿಂದಲೂ ನೆರವು ಸಿಗಲಾರದು. (ಆ ನೆರವಿನ ಕಾರಣ) ಧಿಕ್ಕಾರಿಗಳಿಗೆ ಸೇರಿದ ಒಂದು ವಿಭಾಗವು ಅವರಿಂದ ಕಡಿದು ಬೇರ್ಪಟ್ಟು ಹೋಗುವುದು; ಅಥವಾ (ಧಿಕ್ಕಾರಿಗಳು) ಅತ್ಯಂತ ನಿಂದ್ಯರಾಗಿ ಹತಾಶರಾದ ಸ್ಥಿತಿಯಲ್ಲಿ ಹಿಂದಿರುಗಿ ಹೋಗುವರು. {124-127}

ಅಲ್ಲಾಹ್ ನು (ತಾನಿಚ್ಛಿಸಿದರೆ) ಅವರ ಮೇಲೆ ಕರುಣೆ ತೋರಬಹುದು ಅಥವಾ ಅವರನ್ನು ಶಿಕ್ಷಿಸಬಹುದು; (ಪೈಗಂಬರರೇ), ಅದು ನಿಮಗೆ ಸಂಬಂಧ ಪಟ್ಟ ವಿಷಯವೇ ಅಲ್ಲ. ಅವರು ನಿಜವಾಗಿ ಅನ್ಯಾಯ ಎಸಗಿದವರಾದ್ದರಿಂದ (ಅದನ್ನು ಅಲ್ಲಾಹ್ ನ ತೀರ್ಮಾನಕ್ಕೆ ಬಿಡಿ). ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಏನೆಲ್ಲ ಇವೆಯೋ ಅವೆಲ್ಲವೂ ಅಲ್ಲಾಹ್ ನ ಮಾತ್ರ ಒಡೆತನಕ್ಕೆ ಸೇರಿವೆ; ಯಾರನ್ನು ಅವನು ಕ್ಷಮಿಸಲು ಇಚ್ಛಿಸುವನೋ ಅವರನ್ನು ಕ್ಷಮಿಸುವನು ಹಾಗೂ ಯಾರನ್ನು ಶಿಕ್ಷಿಸ ಬಯಸುವನೋ ಅವರನ್ನು ಅವನು ಶಿಕ್ಷಿಸುವನು. (ವಾಸ್ತವದಲ್ಲಿ) ಅಲ್ಲಾಹ್ ನು ಮಹಾ ಕ್ಷಮಾಶೀಲನು; ನಿತ್ಯ ಕಾರುಣ್ಯವಂತನು. {128-129}

ವಿಶ್ವಾಸಿಗಳಾದ (ಮುಸ್ಲಿಮರೇ), ಇಮ್ಮಡಿಯಾಗಿ ಮಗದಿಮ್ಮಡಿಯಾಗಿ ಬೆಳೆದುಕೊಳ್ಳುವ ಬಡ್ಡಿಯನ್ನು ನೀವು ತಿನ್ನಬಾರದು. (ಪರಲೋಕದ) ಗೆಲುವನ್ನು ಸಾಧಿಸುವಂತಾಗಲು ನೀವು ಅಲ್ಲಾಹ್ ನ ಭಯಭಕ್ತಿಯನ್ನು ಮೈಗೂಡಿಸಿಕೊಳ್ಳಿ. ಧಿಕ್ಕಾರಿಗಳಿಗಾಗಿಯೇ ಸಜ್ಜುಗೊಳಿಸಿಟ್ಟ (ನರಕದ) ಬೆಂಕಿಯಿಂದ ತಮ್ಮನ್ನು ಕಾಪಾಡಿಕೊಳ್ಳಿ. ನಿಮ್ಮ ಮೇಲೆ ದಯೆ ತೋರುವಂತಾಗಲು ನೀವು ಅಲ್ಲಾಹ್ ನ ಮತ್ತು (ಅಲ್ಲಾಹ್ ನ) ದೂತರ ಆಜ್ಞಾನುಸರಣೆ ಮಾಡುವವರಾಗಿರಿ. {130-132}

ನಿಮ್ಮ ಸೃಷ್ಟಿಕರ್ತ/ಒಡೆಯನು ನೀಡುವ ಕ್ಷಮಾದಾನದತ್ತ ಧಾವಿಸಲು ಪರಸ್ಪರ ಸ್ಪರ್ಧಿಸಿರಿ. ಅಂತೆಯೇ, ಭೂಮಿ-ಆಕಾಶಗಳಷ್ಟು ವಿಶಾಲವಾಗಿರುವ ಸ್ವರ್ಗಲೋಕದತ್ತ ಸಹ (ಧಾವಿಸಲು ಸ್ಪರ್ಧಿಸಿರಿ). ಅದನ್ನು ಸಜ್ಜುಗೊಳಿಸಿಟ್ಟಿರುವುದು ಧರ್ಮನಿಷ್ಠರಿಗಾಗಿಯೇ ಆಗಿದೆ. ಅಂಥ (ಧರ್ಮನಿಷ್ಠರು) ಅನುಕೂಲ ಸ್ಥಿತಿಯಲ್ಲೂ ಪ್ರತಿಕೂಲ ಸ್ಥಿತಿಯಲ್ಲೂ (ಅಲ್ಲಾಹ್ ನ ಮಾರ್ಗದಲ್ಲಿ ತಮ್ಮ ಸಂಪತ್ತಿನಿಂದ) ಖರ್ಚು ಮಾಡುತ್ತಿರುತ್ತಾರೆ; ತಮ್ಮ ಕೋಪವನ್ನು ನುಂಗಿಕೊಳ್ಳುತ್ತಾರೆ ಹಾಗೂ ಜನಸಾಮಾನ್ಯರನ್ನು (ಅವರ ತಪ್ಪಿಗಾಗಿ) ಕ್ಷಮಿಸುತ್ತಾರೆ. ಅಂಥ ಉತ್ತಮ ಗುಣನಡತೆನ್ನು ತಮ್ಮದಾಗಿಸಿಕೊಂಡ ಜನರನ್ನು ಅಲ್ಲಾಹ್ ನು ಇಷ್ಟಪಡುತ್ತಾನೆ. ಒಂದು ವೇಳೆ ಅಸಭ್ಯವೆನಿಸಿದ ವರ್ತನೆಯು ಅವರಿಂದ ಸಂಭವಸಿ ಹೋದರೆ ಅಥವಾ (ಏನಾದರೂ ಪಾಪವೆಸಗುವ ಮೂಲಕ) ಅವರು ಸ್ವತಃ ತಮ್ಮ ಮೇಲೆಯೇ ಅನ್ಯಾಯವೆಸಗಿಕೊಂಡರೆ (ಕೂಡಲೇ) ಅಲ್ಲಾಹ್ ನನ್ನು ನೆನಪಿಸಿಕೊಂಡು ತಾವೆಸಗಿದ ಪಾಪಕೃತ್ಯಕ್ಕಾಗಿ ಕ್ಷಮೆಯಾಚಿಸುತ್ತಾರೆ. ಅಲ್ಲಾಹ್ ನ ಹೊರತು ಪಾಪ ಕೃತ್ಯಗಳನ್ನು ಕ್ಷಮಿಸುವವರು ಯಾರಿದ್ದಾರೆ!? ತಾವೆಸಗಿದ (ಪಾಪ ಕೃತ್ಯಗಳ ಬಗ್ಗೆ) ಅರಿತುಕೊಂಡೇ ಹಠಮಾರಿತನ ತೋರಿಸುವವರು ಅವರಲ್ಲ. {133-135}

ಅಂಥವರಿಗಿರುವ ಪ್ರತಿಫಲವಾದರೋ ಅವರ ಸೃಷ್ಟಿಕರ್ತನ/ಒಡೆಯನ ಕಡೆಯಿಂದ ಸಿಗಲಿರುವ ಪಾಪವಿಮೋಚನೆ, ಜೊತೆಗೆ ತಳದಲ್ಲಿ ನೀರಿನ ಕಾಲುವೆಗಳು ಹರಿಯುತ್ತಲಿರುವ ಉದ್ಯಾನಗಳು! ಅವರು ಅದರಲ್ಲಿ ಚಿರಕಾಲ ನೆಲೆಸಲಿರುವರು. ಸತ್ಕರ್ಮಿಗಳಿಗಿರುವ ಪ್ರತಿಫಲವು ಅದೆಷ್ಟು ಉತ್ಕೃಷ್ಟವಾದುದು! {136}

(ವಿಶ್ವಾಸಿಗಳೇ), ನಿಮಗಿಂತ ಮುಂಚೆ (ನೆಲೆಸಿದ್ದ ಸಮುದಾಯಗಳ) ಹಲವು ಉದಾಹರಣೆಗಳು ಗತಿಸಿ ಹೋಗಿವೆ. ಹಾಗಿರುವಾಗ, ಸತ್ಯವನ್ನು ತಿರಸ್ಕರಿಸಿದ (ಸಮುದಾಯಗಳ) ಅಂತಿಮ ಪರಿಣಾಮವು ಏನಾಯಿತೆಂದು (ಅವರು ನೆಲೆಸಿದ್ದ) ನೆಲದಲ್ಲಿ ಸೊಲ್ಪ ಸುತ್ತಾಡಿ ನೋಡಿಕೊಳ್ಳಿ. ಮಾನವರ ಪಾಲಿಗೆ ಈ (ಕುರ್‍ಆನ್) ಸ್ಪಷ್ಟ ಉದ್ಘೋಷಣೆಯಾಗಿದ್ದು, ಎಚ್ಚೆತ್ತುಕೊಂಡವರಿಗೆ ಒಂದು ದಾರಿ-ದೀವಿಗೆಯಾಗಿದೆ; ಒಂದು ಸದ್ಬೋಧನೆಯಾಗಿದೆ. {137-138}

ನೀವು ಧೈರ್ಯಗೆಡದಿರಿ, ವ್ಯಥೆ ಪಡುವುದೂ ಬೇಡ; ಸತ್ಯವಾದ ವಿಶ್ವಾಸಿಗಳು ನೀವೆಂದಾದರೆ ಮೇಲುಗೈ ನೀವು ಸಾಧಿಸಿಯೇ ತೀರುವಿರಿ. {139}

(ಈಗ ಉಹದ್ ನಲ್ಲಿ) ನಿಮಗೆ ಹಾನಿಯೇನಾದರೂ ಸಂಭವಿಸಿದೆ ಎಂದಾದರೆ ಹಿಂದೆ (ಬದ್ರ್ ನಲ್ಲಿ ನಿಮ್ಮ ಶತ್ರು) ಸಮುದಾಯಕ್ಕೂ ಅಂಥದ್ದೇ ಹಾನಿಯಾಗಿರುತ್ತದೆ (ಎಂಬ ವಿಷಯ ನಿಮಗೆ ನೆನಪಿರಲಿ). ಇಂತಹ (ಸೋಲು-ಗೆಲುವುಗಳ) ದಿನಗಳನ್ನು ನಾವು ಜನರ ನಡುವೆ (ಒಬ್ಬರ ನಂತರ ಮತ್ತೊಬ್ಬರಿಗೆ ಬರುವಂತೆ) ಬದಲಾಯಿಸುತ್ತಲೇ ಇರುತ್ತೇವೆ. ನಿಜವಾದ ವಿಶ್ವಾಸಿಗಳನ್ನು (ಇತರರಿಂದ ಪ್ರತ್ಯೇಕಿಸಿ) ಅರಿಯುವಂತಾಗಲು; ಹಾಗೂ ನಿಮ್ಮ ಪೈಕಿಯ ಕೆಲವರನ್ನು (ಪರೀಕ್ಷೆಗೊಳಪಡಿಸಿ, ಹುತಾತ್ಮರನ್ನಾಗಿಸಿ) ಸತ್ಯಕ್ಕೆ ಸಾಕ್ಷಿಗಳನ್ನಾಗಿ ಮಾಡಿಕೊಳ್ಳಲು ಹಾಗೆ ಮಾಡಲಾಗುತ್ತದೆ. ವಾಸ್ತವದಲ್ಲಿ ಅಲ್ಲಾಹ್ ನು ಅತಿಕ್ರಮವೆಸಗುವವರನ್ನು ಇಷ್ಟಪಡುವುದಿಲ್ಲ. ಹಾಗೆ ಮಾಡಿ, ಅಲ್ಲಾಹ್ ನು ವಿಶ್ವಾಸಿಗಳನ್ನು (ಆರಿಸಿ) ನಿರ್ಮಲಗೊಳಿಸವನು ಹಾಗೂ ಸತ್ಯದ ನಿಷೇಧಿಗಳನ್ನು ಅಳಿಸಿ ಹಾಕುವನು. {140-141}

ನಿಮ್ಮ ಪೈಕಿ (ಅಲ್ಲಾಹ್ ನ ಮಾರ್ಗದಲ್ಲಿ) ಕಠಿಣ ಹೋರಾಟ ನಡೆಸುವವರ ಹಾಗೂ (ಅದರಲ್ಲಿ) ಸ್ಥೈರ್ಯ ತೋರುವವರ ಕುರಿತು ಅಲ್ಲಾಹ್ ನು (ಪರೀಕ್ಷಿಸಿ) ತಿಳಿದುಕೊಳ್ಳದೆಯೇ, ನೀವು ಸ್ವರ್ಗವನ್ನು ಹಾಗೆಯೇ ಪ್ರವೇಶಿಸಿ ಕೊಳ್ಳಬಹುದೆಂಬ ಭ್ರಮೆಯಲ್ಲಿರುವಿರೇನು? ಇನ್ನೂ (ಮರಣವನ್ನು) ಎದುರುಗೊಳ್ಳುವುದಕ್ಕೆ ಮುನ್ನ (ಅಲ್ಲಾಹ್ ನ ಮಾರ್ಗದಲ್ಲಿ ಹುತಾತ್ಮರಾಗಿ) ಮರಣವಪ್ಪಲು ನೀವು ಹಂಬಲಿಸುತ್ತಿದ್ದಿರಿ. ಆದರೆ ಈಗ (ಅಂತಹ ಮರಣವು) ನಿಮ್ಮ ಮುಂದೆ ಬಂದು ನಿಂತಿದೆ; ನೀವದನ್ನು ಕಣ್ಣಾರೆ ಕಾಣುತ್ತಲೂ ಇರುವಿರಿ! {142-143}

ಮುಹಮ್ಮದ್ ರಾದರೋ ಒಬ್ಬ ಪೈಗಂಬರರೇ ಹೊರತು ಬೇರೇನೂ ಅಲ್ಲ. (ಅವರ ಮರಣದ ಹುಸಿವಾರ್ತೆಯಿಂದ ಯುದ್ಧ ಸಮಯದಲ್ಲಿ ನೀವು ಗಾಬರಿಗೊಂಡಿರಿ!). ವಾಸ್ತವದಲ್ಲಿ ಅವರಿಗಿಂತ ಹಿಂದೆಯೂ (ಅಲ್ಲಾಹ್ ನು ಕಳುಹಿಸಿದ) ಹಲವು ದೂತರು ಗತಿಸಿ ಹೋಗಿರುವರು! ಹಾಗಿರುವಾಗ, ಒಂದು ವೇಳೆ ಮುಹಮ್ಮದ್ ರು ಮೃತರಾಗಿ ಹೋದರೆ ಅಥವಾ (ಯುದ್ಧದಲ್ಲಿ) ವಧಿಸಲ್ಪಟ್ಟರೆ ನೀವು (ಅವಿಶ್ವಾಸಿಗಳಾಗಿ ನಿಮ್ಮ ಹಿಂದಿನ ಸ್ಥಿತಿಗೆ) ಹಿಂದಿರುಗಿ ಹೋಗುವುದೇನು? ಹಾಗೆ ಯಾರಾದರೂ (ಇಸ್ಲಾಮ್ ನಿಂದ ಅವಿಶ್ವಾಸದೆಡೆಗೆ) ಹಿಂದಿರುಗಿ ಹೋದದ್ದೇ ಆದರೆ ಆತನು ಅಲ್ಲಾಹ್ ನಿಗೆ ಏನೂ ಹಾನಿ ಮಾಡಲಾರನು (ಎಂಬುದನ್ನು ನೀವು ಚೆನ್ನಾಗಿ ತಿಳಿದಿರಿ). (ಸಂಕಷ್ಟದ ಸ್ಥಿತಿಯಲ್ಲಿ ಸಹನೆ ಪಾಲಿಸುವ ಮೂಲಕ) ಕೃತಜ್ಞತೆ ತೋರುವವರಿಗೆ ಅಲ್ಲಾಹ್ ನು ಖಂಡಿತ ಪ್ರತಿಫಲ ನೀಡುತ್ತಾನೆ. ಅಲ್ಲಾಹ್ ನ ಅನುಮತಿಯೊಂದಿಗಲ್ಲದೆ ಯಾವೊಬ್ಬ ಜೀವಿಗೂ ಸಾವು ಬರುವುದು ಸಾಧ್ಯವಲ್ಲ – ಅದರ ಸಮಯವನ್ನು ನಿಗದಿಪಡಿಸಿಲಾಗಿದೆ.

ಇನ್ನು ಯಾರಾದರೂ ಭೂಲೋಕದಲ್ಲೇ ಸಿಗಲಿರುವ ಪ್ರತಿಫಲವನ್ನು ಬಯಸಿದರೆ ನಾವು ಆತನಿಗೆ ಅದನ್ನು ಕೊಡುತ್ತೇವೆ; (ಅಲ್ಲದೆ) ಯಾರಾದರೂ ಪರಲೋಕದಲ್ಲಿ ಸಿಗಲಿರುವ ಪ್ರತಿಫಲವನ್ನು ಬಯಸಿಕೊಂಡರೆ ನಾವು ಆತನಿಗೆ ಅದನ್ನು ಕೊಡುತ್ತೇವೆ. ಶೀಘ್ರದಲ್ಲೇ ನಾವು ಕೃತಜ್ಞತಾ ಭಾವ ಹೊಂದಿದವರನ್ನು ಪುರಸ್ಕರಿಸಲಿದ್ದೇವೆ! {144-145}

(ಹಿಂದೆಯೂ) ಅದೆಷ್ಟೋ ಪ್ರವಾದಿಗಳು ಮತ್ತು ಅವರ ಜೊತೆ ಸೇರಿಕೊಂಡು (ಅಲ್ಲಾಹ್ ನ) ಪರಮ ಭಕ್ತರಾದ ಅನೇಕರು (ಸತ್ಯಕ್ಕಾಗಿ) ಯುದ್ಧ ಮಾಡಿರುವರು. ಹೌದು, ಅಲ್ಲಾಹ್ ನ ಮಾರ್ಗದಲ್ಲಿ ತಮಗೆದುರಾದ ಸಂಕಷ್ಟಗಳ ಕಾರಣ ಅವರು ಎದೆಗುಂದಲಿಲ್ಲ; ದೌರ್ಬಲ್ಯ ತೋರಲಿಲ್ಲ, (ಶತ್ರುಗಳ ಮುಂದೆ) ಶರಣಾಗಲೂ ಇಲ್ಲ! ಅಲ್ಲಾಹ್ ನು ಅಂಥ ಸ್ಥೈರ್ಯವಂತರನ್ನು ಇಷ್ಟ ಪಡುತ್ತಾನೆ. {146}

ಅಂಥವರ ಪ್ರಾರ್ಥನೆಯಾದರೋ – ಓ ನಮ್ಮ ಕರ್ತಾರನೇ! ನಮ್ಮ ಪಾಪಕೃತ್ಯಗಳನ್ನು ನಮಗಾಗಿ ಮನ್ನಿಸು, ಕರ್ತವ್ಯ ನಿರ್ವಹಣೆಯಲ್ಲಿ (ನಮ್ಮಿಂದ ಸಂಭವಿಸಿರಬಹುದಾದ) ಅತಿರೇಕಗಳನ್ನು ಕ್ಷಮಿಸು; ನಮ್ಮ ಕಾಲುಗಳು (ಸತ್ಯದ ಮಾರ್ಗದಿಂದ) ಕದಲದಂತೆ ಮಾಡು ಹಾಗೂ ಸತ್ಯದ ಧಿಕ್ಕಾರಿಗಳ ವಿರುದ್ಧ (ನಮ್ಮೀ ಹೋರಾಟದಲ್ಲಿ) ನಮಗೆ ಸಹಾಯ ಒದಗಿಸು – ಎಂಬುದೇ ಹೊರತು ಬೇರೇನೂ ಆಗಿರಲಿಲ್ಲ. {147}

ಆಗ ಅಲ್ಲಾಹ್ ನು ಅವರಿಗೆ ಸಿಗಬೇಕಾದ ಭೂಲೋಕದಲ್ಲಿನ ಪುರಸ್ಕಾರವನ್ನೂ, (ಅದಕ್ಕಿಂತಲೂ) ಉತ್ಕೃಷ್ಟವಾದ ಪರಲೋಕದಲ್ಲಿನ ಪ್ರತಿಫಲಗಳನ್ನೂ ದಯಪಾಲಿಸಿದನು. ಸಜ್ಜನಿಕೆಯನ್ನು ಮೈವೆತ್ತ ಅಂಥವರನ್ನು ಅಲ್ಲಾಹ್ ನು ಇಷ್ಟ ಪಡುತ್ತಾನೆ. {148}

ಓ ವಿಶ್ವಾಸಿಗಳಾದ (ಮುಸ್ಲಿಮರೇ), ಆ ಧಿಕ್ಕಾರಿಗಳು ಹೇಳಿದಂತೆ ನೀವು ಕೇಳ ತೊಡಗಿದರೆ ಅವರು ನಿಮ್ಮನ್ನು ನಿಮ್ಮ ಹಿಂದಿನ ಸ್ಥಿತಿಗೆ ಮರಳಿಸಿಯೇ ತೀರುವರು. ಆಗ ನಷ್ಟಕ್ಕೊಳಗಾದ ಸ್ಥಿತಿಯಲ್ಲಿ ನೀವು (ಅವರತ್ತ) ಮರಳಿ ಹೋಗುವಿರಿ! (ಅವರಲ್ಲ), ಬದಲಾಗಿ ನಿಮಗೆ (ಸಹಾಯ ಮಾಡುವ) ನಿಮ್ಮ ಆಪ್ತ ರಕ್ಷಕನು ಅಲ್ಲಾಹ್ ನಾಗಿದ್ದಾನೆ. ಸಹಾಯ ಹಸ್ತ ನೀಡುವವರಲ್ಲಿ ಅವನೇ ಅತ್ಯುತ್ತಮನು. {149-150}

ಧಿಕ್ಕಾರಿಗಳು ಅಲ್ಲಾಹ್ ನೊಂದಿಗೆ (ಇತರರನ್ನು) ಸಹಭಾಗಿಗಳಾಗಿ ಸೇರಿಸಿದ ಕಾರಣಕ್ಕಾಗಿ ಅವರ ಹೃದಯಗಳಲ್ಲಿ ನಾವು ಶೀಘ್ರವೇ ಭಯಭೀತಿಯನ್ನು ತುಂಬಲಿದ್ದೇವೆ. (ಅವರ ಅಂತಹ ವರ್ತನೆಗೆ ನಾವು) ಯಾವ ಆಧಾರಪ್ರಮಾಣವನ್ನೂ (ಅವರಿಗೆ ಪುರಾವೆಯಾಗಿ) ಇಳಿಸಿರಲಿಲ್ಲ. (ಆದ್ದರಿಂದ) ಅವರ ಅಂತಿಮ ತಾಣವು (ನರಕದ) ಬೆಂಕಿಯಾಗಿದೆ; ಅಕ್ರಮಿಗಳಿಗಿರುವ ನೆಲೆಯು ಅತಿ ನಿಕೃಷ್ಟವಾದುದು! {151}

(ಉಹುದ್ ಯುದ್ಧಕ್ಕೆ ಸಂಬಂಧಿಸಿದಂತೆ) ಅಲ್ಲಾಹ್ ನು (ನಿಮ್ಮೊಂದಿಗೆ ಮಾಡಿದ್ದ ಸಹಾಯದ) ವಾಗ್ದಾನವನ್ನು ಅವನ ಅದೇಶಾನುಸಾರ (ಯುದ್ಧಭೂಮಿಯಲ್ಲಿ) ನೀವು ಶತ್ರುವನ್ನು ಸದೆಬಡಿಯುತ್ತಿರುವಾಗಲೇ ನೆರವೇರಿಸಿ ತೋರಿಸಿದ್ದನು! ನೀವು ಅತಿಯಾಗಿ ಇಷ್ಟಪಡುತ್ತಿದ್ದ (ವಿಜಯವನ್ನು ಅಲ್ಲಿ) ನಿಮಗೆ ತೋರಿಸಿ ಕೊಟ್ಟಾಗ (ಯುದ್ಧದ ಮಧ್ಯೆ) ನೀವು ದುರ್ಬಲರಂತೆ ವರ್ತಿಸಿ, (ಪ್ರವಾದಿಯ) ಆದೇಶ ಪಾಲನೆಯ ವಿಷಯದಲ್ಲಿ ಪರಸ್ಪರ ವಿವಾದದಲ್ಲಿ ತೊಡಗುವ ಹಾಗೂ (ಅವರಿಗೆ) ಅವಿಧೇಯತೆ ತೋರುವ ತನಕವೂ (ಅಲ್ಲಾಹ್ ನ ಆ ವಾಗ್ದಾನವು ಸಾಗಿತ್ತು). ವಾಸ್ತವದಲ್ಲಿ ನಿಮ್ಮ ಪೈಕಿ ಕೆಲವರು ಭೂಲೋಕದ ಜೀವನವನ್ನು ಹೆಚ್ಚು ಇಷ್ಟಪಡುತ್ತಿದ್ದರು ಮತ್ತು ಇನ್ನು ಕೆಲವರು ಪರಲೋಕವನ್ನು ಅತಿಯಾಗಿ ಬಯಸುವವರಾಗಿದ್ದರು. ಆ ಬಳಿಕ ನಿಮ್ಮನ್ನು ಪರೀಕ್ಷೆಗೊಳಪಡಿಸುವ ಸಲುವಾಗಿ ಅವರಿಂದ ನೀವು (ಸೋತು) ಹಿಂದಿರುಗುವಂತೆ ಮಾಡಿದನು. ನಿಜವೇನೆಂದರೆ ಅವನು ನಿಮ್ಮನ್ನು ಕ್ಷಮಿಸಿರುವನು. ಅಲ್ಲಾಹ್ ನು ವಿಶ್ವಾಸಿಗಳ ಪಾಲಿಗೆ ಮಹಾ ಔದಾರ್ಯಪೂರ್ಣನು ಆಗಿರುವನು. {152}

ನಿಮ್ಮ ಹಿಂದೆ (ಸ್ಥಿರಚಿತ್ತತೆಯೊಂದಿಗೆ ಉಳಿದಿದ್ದವರ ಗುಂಪಿನಲ್ಲಿ ನಿಂತು) ಪ್ರವಾದಿಯವರು ನಿಮ್ಮನ್ನು ಕೂಗಿ ಕರೆಯುತ್ತಿದ್ದಾಗ ನೀವು ಯಾರ ಕಡೆಗೂ ತಿರುಗಿಯೇ ನೋಡದೆ (ದಿಕ್ಕೆಟ್ಟು) ಓಡಿಹೋಗುತ್ತಿದ್ದ ಸಂದರ್ಭವನ್ನು ನೆನಪಿಸಿಕೊಳ್ಳಿ. (ನಿಮ್ಮ ಅಂತಹ ವರ್ತನೆಗಾಗಿ) ದುಃಖದ ಮೇಲೆ ದುಃಖವು ನಿಮ್ಮ ಮೇಲೆ ಮುಗಿಬೀಳುವಂತೆ ಅವನು ಮಾಡಿದನು. ತನ್ನಿಮಿತ್ತ, ಮುಂದೆ ನೀವು ಏನನ್ನು ಕಳೆದುಕೊಂಡರೂ ಹಾಗೂ ನಿಮಗೆ ಯಾವ ಆಪತ್ತು ಬಂದೆರಗಿದರೂ ನೀವು ದುಃಖಿತರಾಗದಂತೆ (ನಿಮ್ಮನ್ನು ಸಿದ್ಧಪಡಿಸಲು ಹಾಗೆ ಮಾಡಿದನು). ನಿಮ್ಮ ಎಲ್ಲಾ ಚಟುವಟಿಕೆಗಳನ್ನು ಅಲ್ಲಾಹ್ ನು ಚೆನ್ನಾಗಿ ಬಲ್ಲನು. {153}

ಆ ಮೇಲೆ, ಅಂಥ ಒಂದು ದುಃಖಾವಸ್ಥೆಯ ನಂತರ ಅಲ್ಲಾಹ್ ನು ನಿಮ್ಮತ್ತ ನೆಮ್ಮದಿಯನ್ನು ಕಳಿಸಿ ಕೊಟ್ಟಾಗ, ನಿಮ್ಮಲ್ಲಿಯ ಒಂದು ಗುಂಪಿಗೆ (ನೆಮ್ಮದಿಯ ರೂಪದಲ್ಲಿ) ನಿದ್ದೆಯ ಜೊಂಪು ಆವರಿಸಿಕೊಳ್ಳ ತೊಡಗಿತ್ತು; ಆದರೆ ಮತ್ತೊಂದು ಗುಂಪಿನವರಿಗೆ ಸ್ವತಃ ತಮ್ಮ ಬಗೆಗಿನ ಚಿಂತೆಯೇ ಹೆಚ್ಚು ಪ್ರಧಾನವಾದ ವಿಷಯವಾಗಿತ್ತು! ಅಲ್ಲಾಹ್ ನ ಕುರಿತು ವಾಸ್ತವಕ್ಕೆ ವಿರುದ್ಧವಾದ ಪೂರ್ವಗ್ರಹಗಳನ್ನು ಅವರು ಹೊಂದಿದ್ದರು; ಅಜ್ಞಾನ ಕಾಲಕ್ಕೆ ಸೇರಿದ ಪೋರ್ವಗ್ರಹಗಳವು! ಇಂತಹ ವಿಷಯದಲ್ಲಿ ನಮಗೆ ಕಿಂಚಿತ್ ಅಧಿಕಾರವಾದರೂ ಇದೆಯೇ – ಎಂದು (ಮುನಾಫಿಕ್ ಗಳ ಆ ಗುಂಪಿನವರು) ಪ್ರಶ್ನಿಸುತ್ತಿದ್ದರು. ಅಧಿಕಾರವೆಲ್ಲವೂ ಕೇವಲ ಅಲ್ಲಾಹ್ ನಿಗೆ ಮಾತ್ರ ಸಲ್ಲುತ್ತದೆ ಎಂದು (ಪೈಗಂಬರರೇ ನೀವು) ಉತ್ತರಿಸಿರಿ. ನಿಮ್ಮ ಮುಂದೆ ಪ್ರಕಟಿಸಿಕೊಳ್ಳದ (ಹಲವು) ವಿಚಾರಗಳನ್ನು ಅಂಥವರು ತಮ್ಮ ಮನಸ್ಸಿನೊಳಗೆ ಅವಿತಿಟ್ಟಿದ್ದಾರೆ! ಒಂದು ವೇಳೆ ಇಂತಹ ವಿಷಯಗಳಲ್ಲಿ ನಮಗೂ (ತೀರ್ಮಾನಿಸುವ) ಅಧಿಕಾರವಿರುತ್ತಿದ್ದರೆ ನಾವಿಲ್ಲಿ ಹೀಗೆ ವಧಿಸಲ್ಪಡುತ್ತಿರಲಿಲ್ಲ – ಎಂದು (ಪೈಗಂಬರರೇ, ಈ ಮುನಾಫಿಕ್ ಗಳು ತಮ್ಮೊಳಗೇ) ಹೇಳಿ ಕೊಳ್ಳುತ್ತಿದ್ದಾರೆ. ಒಂದು ವೇಳೆ ನೀವು ನಿಮ್ಮ ನಿವಾಸಗಳೊಳಗೇ ಉಳಿದುಕೊಂಡಿದ್ದರೂ ಯಾರ ಪಾಲಿಗೆ ಕೊಲ್ಲಲ್ಪಡುವುದು ವಿಧಿಗೊಳಿಸಲಾಗಿದೆಯೋ ಅವರು ತಾವು ಸಾಯಲಿರುವ ಸ್ಥಳದತ್ತ ಸ್ವತಃ ಹೊರಟು ಬರುತ್ತಿದ್ದರು – ಎಂದು (ಪೈಗಂಬರರೇ ನೀವು) ಸ್ಪಷ್ಟಪಡಿಸಿರಿ. ಹಾಗೆ, (ಈ ಎಲ್ಲ ಘಟನೆಯು) ನಿಮ್ಮ ಹೃದಯಗಳೊಳಗೆ ಇರುವ (ವಿಶ್ವಾಸದ) ಸತ್ವಪರೀಕ್ಷೆ ನಡೆಸಿ ನಿಮ್ಮ ಮನಸ್ಸುಗಳಲ್ಲಿರುವ (ವಿಚಾರಗಳನ್ನು) ಶುದ್ಧೀಕರಿಸಿ (ನಿಮ್ಮನ್ನು ಮುನಾಫಿಕ್ ಗಳಿಂದ) ಬೇರ್ಪಡಿಸುವ ಸಲುವಾಗಿ ನಡೆದಿದೆ. ಹೌದು, ಅಲ್ಲಾಹ್ ನು ಹೃದಯಗಳೊಳಗಿರುವ ಸಂಗತಿಗಳನ್ನೂ ಚೆನ್ನಾಗಿ ಅರಿಯುವವನಾಗಿರುವನು. {154}

[ಉಹುದ್ ಯುದ್ಧದ ಸಂದರ್ಭದಲ್ಲಿ] ಎರಡು ಸೈನ್ಯಗಳು ಮುಖಾಮುಖಿಯಾದ ದಿನ ನಿಮ್ಮ ಪೈಕಿಯ (ಕೆಲವರು) ಮುಖ ತಿರುಗಿಸಿ (ಪಲಾಯನ ಮಾಡುವಂತಾದುದು), ಅವರೆಸಗಿದ್ದ ಕೆಲವು ಕೃತ್ಯಗಳ ಕಾರಣ ಸೈತಾನನು ಅವರ ಹೆಜ್ಜೆಗಳನ್ನು ಅಸ್ಥಿರಗೊಳಿಸಿದ್ದೇ ಆಗಿದೆ. ಆದರೊ ಸಹ ಅಲ್ಲಾಹ್ ನು ಅವರ (ದೋಷಗಳನ್ನು) ಕ್ಷಮಿಸಿ ಬಿಟ್ಟನು! ಅಲ್ಲಾಹ್ ನಾದರೋ ಧಾರಾಳ ಕ್ಷಮಿಸುವವನೂ ಅತ್ಯಂತ ವಾತ್ಸಲ್ಯಮಯಿಯೂ ಆಗಿರುವನು. {155}

ವಿಶ್ವಾಸಿಗಳಾದ ಜನರೇ, ತಮ್ಮ ಒಡನಾಡಿಗಳು ಭೂಮಿಯಲ್ಲಿ ಪ್ರಯಾಣಕ್ಕಾಗಿ ಅಥವಾ ಯುದ್ಧ ನಿಮಿತ್ತ ಹೊರಟಾಗ (ಮತ್ತು ಅವರು ಅಲ್ಲಿ ಮೃತರಾದರೆ), ಒಂದು ವೇಳೆ ಈ ಜನರು ನಮ್ಮ ಜೊತೆಯಲ್ಲಿ ಇರುತಿದ್ದಿದ್ದರೆ (ಹೀಗೆ) ಮೃತರಾಗುತ್ತಿರಲಿಲ್ಲ; ವಧಿಸಲ್ಪಡುತ್ತಲೂ ಇರಲಿಲ್ಲ – ಎಂದು ಹೇಳಿಕೊಳ್ಳುವ ಧಿಕ್ಕಾರಿ ಜನರಂತೆ ನೀವು ಆಗಬೇಡಿರಿ. ಅಂತಹ (ವಿಚಾರವು ಧಿಕ್ಕಾರಿಗಳ) ಹೃದಯಗಳಲ್ಲಿ ಒಂದು ಕಾಮನೆಯಾಗಿ ಉಳಿಯುವಂತೆ ಅಲ್ಲಾಹ್ ನೇ ಮಾಡಿರುವನು! ವಾಸ್ತವದಲ್ಲಿ ಜೀವನವನ್ನು ನೀಡುವವನೂ ಹಾಗೂ ಮರಣವನ್ನು ನೀಡುವವನೂ ಅಲ್ಲಾಹ್ ನೇ ಆಗಿರುವನು. ಹೌದು, ನೀವು ಯಾವೆಲ್ಲ ಚಟುವಟಿಕೆಗಳಲ್ಲಿ ತೊಡಗಿರುವಿರೋ ಅಲ್ಲಾಹ್ ನು (ಅದನ್ನೆಲ್ಲಾ) ಚೆನ್ನಾಗಿ ನೋಡುತ್ತಿರುವನು. ಹಾಗಿರುವಾಗ, ಒಂದು ವೇಳೆ ಅಲ್ಲಾಹ್ ನ ಮಾರ್ಗದಲ್ಲಿ ನೀವು ವಧಿಸಲ್ಪಟ್ಟರೆ ಅಥವಾ ಮೃತರಾದರೆ ಅಲ್ಲಾಹ್ ನ ವತಿಯಿಂದ (ನಿಮಗೆ) ಸಿಗಲಿರುವ ಖಚಿತವಾದ ಕ್ಷಮಾದಾನ ಮತ್ತು (ಅವನ) ಅನುಗ್ರಹವು (ಧಿಕ್ಕಾರಿಗಳು) ಒಟ್ಟುಗೂಡಿಸುತ್ತಿರುವ (ಸೊತ್ತುಗಳಿಗಿಂತ/ಪಾಪ ಕರ್ಮಗಳಿಗಿಂತ) ಅದೆಷ್ಟೋ ಉತ್ತಮವಾದುದು. ಇನ್ನು ನೀವು (ಸಹಜವಾದ) ಮರಣವನ್ನಪ್ಪಿದರೂ ವಧಿಸಲ್ಪಟ್ಟರೂ (ಅದೇನಿದ್ದರೂ) ಅಲ್ಲಾಹ್ ನ ಸನ್ನಿಧಿಯಲ್ಲೇ ನಿಮ್ಮೆಲ್ಲರನ್ನು ಒಟ್ಟುಗೂಡಿಸಲಾಗುವುದು [ಎಂಬುದು ವಾಸ್ತವ]. {156-158}

(ಓ ಪೈಗಂಬರರೇ,) ಅಲ್ಲಾಹ್ ನ ಕಾರುಣ್ಯದ ಕಾರಣವಾಗಿ ನೀವು ಅವರೊಂದಿಗೆ ಅತ್ಯಂತ ಸೌಮ್ಯವಾಗಿ ವರ್ತಿಸುತ್ತಿರುವಿರಿ! ಒಂದು ವೇಳೆ ಕಠಿಣವಾಗಿ ವರ್ತಿಸುವ ಕಠೋರ ಹೃದಯಿಯು ನೀವಾಗಿರುತ್ತಿದ್ದರೆ ನಿಮ್ಮ ಆಸುಪಾಸಿನಿಂದ ಅವರೆಲ್ಲ ದೂರ ಸರಿದುಕೊಳ್ಳುತ್ತಿದ್ದರು. ಆದ್ದರಿಂದ (ಪೈಗಂಬರರೇ,) ಅವರಿಂದ (ಸಂಭಸಿದಂತಹ ಪ್ರಮಾದಗಳನ್ನು) ಕ್ಷಮಿಸುವವರಾಗಿರಿ; ಅವರಿಗೆ ಕ್ಷಮಾದಾನ ನೀಡುವಂತೆ (ಅಲ್ಲಾಹ್ ನಲ್ಲಿ) ಪ್ರಾರ್ಥಿಸುವವರಾಗಿರಿ; ಜೊತೆಗೆ ಪ್ರಧಾನವಾದ ವಿಷಯಗಳಲ್ಲಿ ಅವರೊಂದಿಗೆ ಸಮಾಲೋಚನೆ ನಡೆಸುವವರಾಗಿರಿ. ಆ ಬಳಿಕ ನೀವು (ಅಂತಹ ವಿಷಯಗಳಲ್ಲಿ) ಒಂದು ನಿರ್ಧಾರ ತೆಗೆದುಕೊಂಡರೆ ಅಲ್ಲಾಹ್ ನ ಮೇಲೆ ಸಂಪೂರ್ಣವಾದ ಭರವಸೆ ಇಡಿರಿ. ಅಲ್ಲಾಹ್‍ ನಾದರೋ ತನ್ನ ಮೇಲೆ ಭರವಸೆಯಿಡುವ ಜನರನ್ನು ಇಷ್ಟಪಡುತ್ತಾನೆ. {159}

(ವಿಶ್ವಾಸಿಗಳೇ,) ಅಲ್ಲಾಹ್ ನು ನಿಮಗೆ ಸಹಾಯ ಒದಗಿಸಿದರೆ ನಿಮ್ಮ ಮೇಲೆ ಮೇಲುಗೈ ಸಾಧಿಸಲು ಯಾರಿಗೂ ಸಾಧ್ಯವಿಲ್ಲ. ಇನ್ನು, ಅವನು ನಿಮ್ಮನ್ನು ಕೈಬಿಟ್ಟರೆ ಆಗ ನಿಮಗೆ ಸಹಾಯ ಮಾಡಬಲ್ಲವರು ಯಾರಿದ್ದಾರೆ? ಆದ್ದರಿಂದ ವಿಶ್ವಾಸಿಗಳಾದವರು ಭರವಸೆಯನ್ನು ಕೇಂದ್ರೀಕರಿಸಬೇಕಾದುದು ಅಲ್ಲಾಹ್ ನಲ್ಲಿಯೇ ಆಗಿದೆ. {160}

ಮೋಸದ ಪ್ರವೃತ್ತಿಯನ್ನು ಹೊಂದಿರುವುದು ಯಾವೊಬ್ಬ ಪ್ರವಾದಿಗೂ ಭೂಷಣವಲ್ಲ. ಒಬ್ಬನು ಮೋಸವೆಸಗಿದರೆ ಆತನು ತಾನೆಸಗಿದ ಮೋಸ ಸಮೇತ ವಿಚಾರಣೆಯ ದಿನ ಬರಲಿವನು; ಆಗ ಪ್ರತಿಯೊಬ್ಬನಿಗೂ ತನ್ನ (ಭೂಲೋಕದ) ಸಂಪಾದನೆಯ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗಲಾರದು. {161}

ಏನು? ಅಲ್ಲಾಹ್ ನ ಅತೀವ ಪ್ರೀತಿಯನ್ನು ಅರಸಿಕೊಂಡು (ಕಾರ್ಯ ಪ್ರವೃತ್ತನಾಗುವ) ಒಬ್ಬಾತನು ಅಲ್ಲಾಹ್ ನ ಪ್ರಕೋಪಕ್ಕೆ ತುತ್ತಾಗಿ ಮರಳಿದವನಂತೆ ಆಗುವನೇನು? (ಅಲ್ಲಾಹ್ ನ ಪ್ರಕೋಪಕ್ಕೆ ತುತ್ತಾದವನ) ನೆಲೆಯು ನರಕವಾಗಿದೆ; ಅದೆಂತಹ ನಿಕೃಷ್ಟವಾದ ನೆಲೆಯದು! ಅಲ್ಲಾಹ್ ನ ಬಳಿ (ಆ ಇಬ್ಬರ) ಸ್ಥಾನವು ಬೇರೆ ಬೇರೆಯಾಗಿದೆ. ಅಲ್ಲಾಹ್ ನು ಅವರೇನು ಮಾಡುತ್ತಿರುವರೋ ಅದನ್ನು ಚೆನ್ನಾಗಿ ನೋಡುತ್ತಿದ್ದಾನೆ. {162-163}

ಅಲ್ಲಾಹ್ ನು ಮುಸ್ಲಿಮರ ನಡುವೆ ಅವರಿಗೆ ಸೇರಿದವನೇ ಆದ ಒಬ್ಬನನ್ನು ದೂತನನ್ನಾಗಿ ನಿಯೋಗಿಸುವ ಮೂಲಕ (ಮುಸ್ಲಿಮರ) ಮೇಲೆ ನಿಜವಾಗಿ ಕೃಪೆಯನ್ನು ತೋರಿರುವನು. (ಆ ದೂತನು) ಅವರಿಗೆ ಅಲ್ಲಾಹ್ ನ ವಚನಗಳನ್ನು ಓದಿ ಕೇಳಿಸುತ್ತಾರೆ; (ಆ ಮೂಲಕ) ಅವರನ್ನು ಸುಸಂಸ್ಕೃತರನ್ನಾಗಿ ಮಾಡುತ್ತಾರೆ; ಅವರಿಗೆ ಧಾರ್ಮಿಕ ನಿಯಮಗಳನ್ನೂ ನೀತಿಪಾಠವನ್ನೂ ಕಲಿಸುತ್ತಾರೆ. ಅದಲ್ಲದಿದ್ದರೆ ಅದಕ್ಕಿಂತ ಮುಂಚೆ ಅವರು ಸ್ಪಷ್ಟವಾದ ಭ್ರಷ್ಟತೆಯಲ್ಲಿ ಸಾಗಿದ್ದರು. {164}

[ನಿಮ್ಮ ಈ ನಿಲುವು ಸರಿಯಲ್ಲ], ಈಗ ನಿಮಗೆ ಒಂದು ವಿಪತ್ತು [ಉಹುದ್ ಯುದ್ಧದಲ್ಲಿ] ಬಂದೆರಗಿದೆ ಎಂದಾದರೆ [ಇದಕ್ಕಿಂತ ಮುಂಚೆ ಬದ್ರ್ ಯುದ್ಧದಲ್ಲಿ ಇದರ] ಇಮ್ಮಡಿಯಷ್ಟು ನಷ್ಟವು (ಶತ್ರುಗಳಿಗೆ) ನಿಮ್ಮಿಂದ ಸಂಭವಿಸಿದ ಸಂದರ್ಭದಲ್ಲೂ ನೀವು ಅದು ಹೇಗೆ ಸಂಭವಿಸಿತು – ಎಂದು ಕೇಳಿದ್ದಿರೇನು? ಇದು ಸ್ವತಃ ನೀವಾಗಿಯೇ ತಂದುಕೊಂಡ ಆಪತ್ತಾಗಿದೆ – ಎಂದು (ಪೈಗಂಬರರೇ, ನೀವು ಅವರಿಗೆ) ತಿಳಿಸಿರಿ. ಅಲ್ಲಾಹ್ ನಿಗೆ ಖಂಡಿತ (ಅಂತಹ) ಎಲ್ಲಾ ವಿಷಯಗಳಲ್ಲಿಯೂ ಸಂಪೂರ್ಣವಾದ ಸಾಮರ್ಥ್ಯವಿದೆ. {165}

ಎರಡು ಸೇನೆಗಳು ಪರಸ್ಪರ ಮುಖಾಮುಖಿಯಾದ ದಿನ ನಿಮಗೆ ಬಂದೆರಗಿದ ಆಪತ್ತು (ನಿಮ್ಮ ಪೈಕಿ) ಯಾರು ನಿಜವಾದ ವಿಶ್ವಾಸಿಯಾಗಿರುವರು ಎಂಬುದನ್ನು ತಿಳಿದುಕೊಳ್ಳಲು ಅಲ್ಲಾಹ್ ನ ಅಪ್ಪಣೆಯ ಪ್ರಕಾರವೇ (ಒಂದು ಪರೀಕ್ಷೆಯಂತೆ) ನಿಮಗೆ ಬಂದಿತ್ತು. ಅಂತೆಯೇ, (ಮುಸ್ಲಿಮರಂತೆ ನಟಿಸುವ) ಕಪಟಿಗಳು ಯಾರೆಂದು ತಿಳಿದುಕೊಳ್ಳಲೂ ಸಹ (ಆ ವಿಪತ್ತು ಎರಗಿತ್ತು). ಅಲ್ಲಾಹ್ ನ ಮಾರ್ಗದಲ್ಲಿ ಹೋರಾಡಲು ಅಥವಾ (ಕನಿಷ್ಟಪಕ್ಷ ಶತ್ರುವಿನ ಆಕ್ರಮಣವನ್ನು) ತಡೆಗಟ್ಟಲಾದರೂ ಬನ್ನಿರಿ – ಎಂದು ಅವರೊಂದಿಗೆ ಹೇಳಲಾದಾಗ, ಈ ಯುದ್ಧವು ನಡೆಯಲಿರುವ ಕುರಿತು ನಮಗೆ (ಮೊದಲೇ) ತಿಳಿದಿರುತ್ತಿದ್ದರೆ ನಾವು ಖಂಡಿತವಾಗಿಯೂ ನಿಮ್ಮನ್ನು ಅನುಸರಿಸಿ (ನಿಮ್ಮ ಜೊತೆ) ಬರುತ್ತಿದ್ದೆವು – ಎಂದವರು ಹೇಳಿದರು. ಅಂದು ವಿಶ್ವಾಸಕ್ಕಿಂತಲೂ ಅವರ ನಿಲುವು ಧಿಕ್ಕಾರಕ್ಕೆ ಹೆಚ್ಚು ನಿಕಟವಾಗಿತ್ತು. ಹೃದಯಗಳಲ್ಲಿ ಇಲ್ಲದಿದ್ದ ವಿಚಾರವನ್ನು ಅವರು ಕೇವಲ ಬಾಯಿ ಮೂಲಕ ಹೇಳುತ್ತಿದ್ದಾರಷ್ಟೆ! ಆದರೆ ಅವರು (ಹೃದಯಗಳಲ್ಲಿ) ಬಚ್ಚಿಟ್ಟಿರುವ ವಿಚಾರವೇನು ಎಂಬುದು ಅಲ್ಲಾಹ್ ನು ಚೆನ್ನಾಗಿ ತಿಳಿದಿರುವನು. {166-167}

ತಾವು ಸ್ವತಃ [ಅಲ್ಲಾಹ್ ನ ಮಾರ್ಗದಲ್ಲಿ ಹೊರಡದೆ ತಮ್ಮ ಮನೆಗಳಲ್ಲೇ] ಕುಳಿತುಕೊಂಡು (ಯುದ್ಧಕ್ಕೆ ಹೊರಟ) ತಮ್ಮ ಸಹೋದರರ ಕುರಿತು, ಒಂದು ವೇಳೆ ಅವರು ನಮ್ಮ ಮಾತನ್ನು ಅನುಸರಿಸುತ್ತಿದ್ದರೆ ಕೊಲ್ಲಲ್ಪಡುತ್ತಿರಲಿಲ್ಲ – ಎಂದು ಅವರು ಹೇಳುತ್ತಿದ್ದಾರೆ. [ಅದರಲ್ಲಿ ಏನೂ ಸತ್ಯವಿಲ್ಲ.] ನೀವು ಸತ್ಯವಂತರು ಹೌದಾದರೆ ಮರಣವು ನಿಮಗೆ ಬರುವಾಗ ಅದರಿಂದ ನೀವು ಸ್ವತಃ ತಪ್ಪಿಸಿಕೊಂಡು ತೋರಿಸಿ – ಎಂದು (ಓ ಪೈಗಂಬರರೇ,) ನೀವು (ಆ ಕಪಟಿಗಳಿಗೆ) ಸವಾಲೊಡ್ಡಿರಿ. {168}

(ಪೈಗಂಬರರೇ,) ಅಲ್ಲಾಹ್ ನ ಮಾರ್ಗದಲ್ಲಿ ವಧಿಸಲ್ಪಟ್ಟವರನ್ನು ಮೃತರಾಗಿದ್ದಾರೆ ಎಂದು ನೀವು ಭಾವಿಸಲೂ ಬೇಡಿ; (ಅವರು ಮೃತರಲ್ಲ!) ಬದಲಾಗಿ ಅವರು ತಮ್ಮ ಒಡೆಯ (ಅಲ್ಲಾಹ್) ನ ಸನ್ನಿಧಿಯಲ್ಲಿ ಜೀವಂತವಿದ್ದಾರಲ್ಲದೆ ಅವರಿಗೆ (ಅಲ್ಲಿ ಆ ಬದುಕಿಗೆ) ಬೇಕಾದುದೆಲ್ಲವನ್ನೂ ಪೂರೈಸಲಾಗುತ್ತಿದೆ. ಅಲ್ಲಾಹ್ ನು ತನ್ನ ಅನುಗ್ರಹದಿಂದ ಅವರಿಗೆ ಏನೆಲ್ಲ ದಯಪಾಲಿಸಿರುವನೋ ಅದರಿಂದಾಗಿ ಅವರು (ಅಲ್ಲಿ) ಸಂಭ್ರಮದಲ್ಲಿರುವರು. ಮಾತ್ರವಲ್ಲ, (ಹುತಾತ್ಮರಾಗಿ) ತಮ್ಮನ್ನು ಬಂದು ಸೇರದೆ ಇನ್ನೂ ಹಿಂದೆಯೇ [ಅರ್ಥಾತ್ ಭೂಲೋಕದಲ್ಲೇ] ಉಳಿದುಕೊಂಡಿರುವ (ನಿಜವಾದ ವಿಶ್ವಾಸಿಗಳ) ಬಗ್ಗೆ ಸಹ ಅವರು ಸಂತೋಷ ಪಡುತ್ತಿರುವರು. ಏಕೆಂದರೆ, ಅವರಿಗೂ ಯಾವ ಅಂಜಿಕೆಯೂ ಇರಲಾರದು ಮತ್ತು ಅವರು ವ್ಯಥೆ ಪಡುವ ಅವಶ್ಯಕತೆಯೂ ಇಲ್ಲ (ಎಂಬುದು ಅದಾಗಲೇ ಅವರಿಗೆ ಮನವರಿಕೆಯಾಗಿದೆ). ಅಲ್ಲಾಹ್ ನ ಅನುಗ್ರಹ ಹಾಗೂ ಕೃಪೆಯ ಕಾರಣ ಅವರೆಲ್ಲ ಆನಂದಿಸುತ್ತಿರುವರು; ಮತ್ತು ವಿಶ್ವಾಸಿಗಳಿಗಿರುವ ಪ್ರತಿಫಲವನ್ನು ಅಲ್ಲಾಹ್ ನು ಎಂದೂ ವ್ಯರ್ಥಗೊಳಿಸುವುದಿಲ್ಲ ಎಂಬ ಕಾರಣಕ್ಕಾಗಿಯೂ (ಅವರು ಆನಂದತುಂದಿಲರಾಗಿರುವರು). {169-171}

ತಾವು ಗಾಯಗೊಂಡ ಬಳಿಕವೂ ಅಲ್ಲಾಹ್ ನ ಹಾಗೂ ಪೈಗಂಬರರ ಕರೆಗೆ [ಉಹುದ್ ನ ಸಂದರ್ಭದಲ್ಲಿ] ಓಗೊಟ್ಟವರ, ಮತ್ತು ಅವರ ಪೈಕಿ ಯಾರು ಉತ್ತಮ ರೀತಿಯಲ್ಲಿ ವರ್ತಿಸಿಕೊಂಡರೋ ಜೊತೆಗೆ (ಅಲ್ಲಾಹ್ ನ) ಭಯವಿರಿಸಿಕೊಂಡರೋ ಅಂಥವರಿಗೆಲ್ಲ (ಪರಲೋಕದಲ್ಲಿ) ಅಪಾರವಾದ ಪ್ರತಿಫಲವು ಸಿದ್ಧವಿದೆ. ನಿಮ್ಮ ವಿರುದ್ಧ ಹೋರಾಡಲು ದೊಡ್ಡದೊಂದು ಜನಕೂಟವೇ (ಎಲ್ಲ ರೀತಿಯ ಯುದ್ಧ ಸಾಮಗ್ರಿಗಳನ್ನು ಜಮಾಯಿಸಿಕೊಂಡು) ಸುಸಜ್ಜಿತವಾಗಿ ನಿಂತಿದೆ, ಆದ್ದರಿಂದ ಅವರ ಕುರಿತು ನಿಮಗೆ ಭಯವಿರಲಿ – ಎಂದು ಜನರು ಬಂದು ಅಂಥವರೊಂದಿಗೆ ಹೇಳಿದಾಗ ಅವರಲ್ಲಿದ್ದ ವಿಶ್ವಾಸವು ಇನ್ನಷ್ಟು ಹೆಚ್ಚಾಯಿತು. ನಮಗೆ ಅಲ್ಲಾಹ್ ನ (ಸಹಾಯ ಮಾತ್ರವೇ) ಸಾಕು; ಅವನೇ (ನಮ್ಮ ಪಾಲಿಗೆ) ಅತ್ಯುತ್ತಮ ಕಾರ್ಯಸಾಧಕನಾಗಿರುವನು – ಎಂದು ಅವರು ಉತ್ತರಿಸಿದರು. {172-173}

ಕೊನೆಗೆ, ಅಲ್ಲಾಹ್ ನ ಅನುಗ್ರಹ ಮತ್ತು ಕೃಪೆಯಿಂದಾಗಿ ಯಾವುದೇ ರೀತಿಯ ಹಾನಿಯೂ ತಟ್ಟದ ಸ್ಥಿತಿಯಲ್ಲಿ (ಆ ದಂಡಯಾತ್ರೆಯಿಂದ) ಅವರು ಮರಳಿ ಬಂದರು. ಅವರು ಅಲ್ಲಾಹ್ ನ ಅಪಾರವಾದ ಮೆಚ್ಚುಗೆಯನ್ನು ಅರಸಿದವರಾಗಿದ್ದರು. ಹೌದು, ಅಲ್ಲಾಹ್ ನು (ಅಂತಹ ಜನರ ಪಾಲಿಗೆ) ಮಹಾ ಕೃಪಾವಂತನಾಗಿರುವನು. {174}

ನಿಮ್ಮಲ್ಲಿ (ಭೀತಿಯುಂಟು ಮಾಡಲು ಪ್ರಯತ್ನಿಸಿದವನು) ಆ ಸೈತಾನನೇ ಆಗಿದ್ದನು (ಎಂಬುದು ಈಗಷ್ಟೆ ನಿಮಗೆ ಮನವರಿಕೆಯಾಗಿದೆ). ಅವನು ತನ್ನ ಸಂಗಾತಿಗಳನ್ನು ಮಾತ್ರ ಹೆದರಿಸಬಲ್ಲನು, ಆದ್ದರಿಂದ (ವಿಶ್ವಾಸಿಗಳೇ,) ನೀವು ಅವರಾರಿಗೂ ಹೆದರಬೇಡಿರಿ; ನಿಜವಾದ ವಿಶ್ವಾಸಿಗಳು ನೀವು ಹೌದಾದರೆ ನನಗೆ ಮಾತ್ರ ಭಯಪಡಬೇಕು. {175}

ಹಾಗೆಯೇ, ಅಧರ್ಮದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಆ ಜನರು (ಓ ಪೈಗಂಬರರೇ,) ನಿಮ್ಮನ್ನು ದುಃಖಿತರನ್ನಾಗಿ ಮಾಡದಿರಲಿ; ಖಂಡಿತವಾಗಿಯೂ ಅಲ್ಲಾಹ್ ನಿಗೆ ಹಾನಿಯುಂಟು ಮಾಡುಲು ಅವರಿಗೆ ಸರ್ವಥಾ ಸಾಧ್ಯವಿಲ್ಲ. [ಅವರು ಅಧರ್ಮಿಗಳು, ಆದ್ದರಿಂದ] ಪರಲೋಕದಲ್ಲಿ [ಸಜ್ಜನರಿಗೆ ಸಿಗಲಿರುವಂತಹ] ಯಾವ ಪಾಲನ್ನೂ ಅವರಿಗೆ ಕೊಡದಿರಲು ಅಲ್ಲಾಹ್ ನು ಬಯಸುತ್ತಾನೆ; ಮಾತ್ರವಲ್ಲ, ಅವರಿಗೆ ಭಯಂಕರ ಸ್ವರೂಪದ ಶಿಕ್ಷೆಯೂ ಕಾದಿದೆ. {176}

ವಾಸ್ತವದಲ್ಲಿ ವಿಶ್ವಾಸದ ನಿಲುವಿಗೆ ಬದಲಾಗಿ ಅವಿಶ್ವಾಸವನ್ನು ಖರೀದಿಸಿಕೊಂಡವರು ಅಲ್ಲಾಹ್ ನಿಗೆ ಯಾವ ಕೇಡನ್ನೂ ಮಾಡುತ್ತಿಲ್ಲ; [ಬದಲಾಗಿ ಅಂಥವರು ತಿಳಿದಿರಲಿ, ಪರಲೋಕದಲ್ಲಿ] ಅವರಿಗೆ ಯಾತನಾಮಯವಾದ ಶಿಕ್ಷೆಯನ್ನು ತಯಾರಿಡಲಾಗಿದೆ. ಅಂಥ ಅವಿಶ್ವಾಸಿಗಳಿಗೆ ನಾವು (ಭೂಮಿಯಲ್ಲಿ) ನೀಡುತ್ತಿರುವ ಕಾಲಾವಕಾಶವು ಅವರ ಪಾಲಿಗೆ ಒಳ್ಳೆಯದೆಂದು ಅವರು ಭಾವಿಸದಿರಲಿ. ನಾವು ಹಾಗೆ ಅವರನ್ನು ಸಡಿಲ ಬಿಟ್ಟ (ಪರಿಣಾಮವಾಗಿ ಅವರು ತಮ್ಮ) ಪಾಪಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವರಷ್ಟೆ! ಅವರಿಗಾಗಿ ಅತ್ಯಂತ ಅಪಮಾನಗೊಳಿಸುವಂತಹ ಶಿಕ್ಷೆಯು (ಪರಲೋಕದಲ್ಲಿ) ಸಿದ್ಧವಿದೆ. {177-178}

[ಈ ಯುದ್ಧದಲ್ಲಿ ಎದುರಾದ ಪರೀಕ್ಷೆಯ ಬಗ್ಗೆ ಇವರು ತಿಳಿದಂತಿಲ್ಲ; ಆದ್ದರಿಂದ ಪೈಗಂಬರರೇ, ಇವರಿಗೆ ವಾಸ್ತವವೇನೆಂದು ತಿಳಿಸಿ]: ಒಳಿತಿನಿಂದ ಕೆಡುಕನ್ನು ಶೋಧಿಸಿ ಬೇರ್ಪಡಿಸುವ ತನಕ ನೀವಿದ್ದ ಅವಸ್ಥೆಯಲ್ಲೇ ವಿಶ್ವಾಸಿಗಳನ್ನು ಬಿಟ್ಟು ಬಿಡುವುದು ಅಲ್ಲಾಹ್ ನ ಕ್ರಮವಲ್ಲ; ಹಾಗೆಯೇ ಗುಟ್ಟಾಗಿರಿಸಿದ ವಿಷಯಗಳನ್ನು ನಿಮ್ಮ ಮುಂದೆ ಬಹಿರಂಗ ಪಡಿಸಿ [ಆ ಮೂಲಕ ಸ್ವತಃ ನೀವೇ ಒಳಿತು ಕೆಡುಕುಗಳನ್ನು ಬೇರ್ಪಡಿಸಿ ತಿಳಿದುಕೊಳ್ಳುವಂತೆ ಮಾಡುವುದು ಸಹ] ಅಲ್ಲಾಹ್ ನ ರೀತಿಯಲ್ಲ. ಬದಲಾಗಿ, (ಆ ಉದ್ದೇಶಕ್ಕಾಗಿ) ತನ್ನ ದೂತರ ಪೈಕಿ ತಾನು ಬಯಸಿದ ಒಬ್ಬನನ್ನು ಆರಿಸಿಕೊಳ್ಳುವುದೇ ಅಲ್ಲಾಹ್ ನ ಕ್ರಮವಾಗಿದೆ! ಆದ್ದರಿಂದ (ಮುಸ್ಲಿಮರೇ,) ನೀವು ಅಲ್ಲಾಹ್ ನಲ್ಲಿ ಮತ್ತವನ ದೂತರಲ್ಲಿ ಬಲವಾದ ನಂಬಿಕೆಯುಳ್ಳವರಾಗಿರಿ. ಹಾಗೆ ನೀವು ನಂಬಿಕೆಯುಳ್ಳವರಾಗಿ ಭಯ-ಭಕ್ತಿಯ (ಮಾರ್ಗವನ್ನೂ) ತಮ್ಮದಾಗಿಸಿಕೊಂಡರೆ ನಿಮಗೆ (ಪರಲೋಕದಲ್ಲಿ) ಬಹು ದೊಡ್ಡ ಪ್ರತಿಫಲವು ಇರುವುದು. {179}

ಅಲ್ಲಾಹ್ ನು ತನ್ನ ಅನುಗ್ರಹದಿಂದ ಅವರಿಗೆ ದಯಪಾಲಿಸಿದ (ಸಂಪತ್ತನ್ನು ಅಲ್ಲಾಹ್ ನ ಮಾರ್ಗದಲ್ಲಿ ಖರ್ಚು ಮಾಡುವ ವಿಷಯದಲ್ಲಿ) ಜಿಪುಣತನ ತೋರುವವರಾರೋ ಅವರು, (ಆ ನಿಲುವು) ತಮ್ಮ ಪಾಲಿಗೆ ಒಳ್ಳೆಯದಾಗುವುದು ಎಂದು ಭ್ರಮಿಸದಿರಲಿ. ಅಲ್ಲ; ಬದಲಾಗಿ, ಅದು ಅವರ ಪಾಲಿಗೆ ದೋಷಕರವಾಗಿ ಸಾಬೀತಾಗುವುದು. ಯಾವ (ಸಂಪತ್ತನ್ನು ಖರ್ಚು ಮಾಡಲು) ಅವರು ಜಿಪುಣತನ ತೋರಿದ್ದರೋ ಅದನ್ನೇ ಪುನರುತ್ಥಾನದ ದಿನ ಅವರ ಕೊರಳಿಗೆ ಕೋಳದಂತೆ ತೊಡಿಸಲಾಗುವುದು. ಭೂಮಿ-ಆಕಾಶಗಳಲ್ಲಿ ಇರುವ (ಸಕಲ ಸಂಪತ್ತು ಅಂತಿಮವಾಗಿ) ಅಲ್ಲಾಹ್ ನ ಮಾತ್ರ ಒಡೆತನಕ್ಕೆ ಸೇರಿಕೊಳ್ಳುತ್ತದೆ [- ಎಂಬ ವಾಸ್ತವವನ್ನು ಅವರು ತಿಳಿದಿರಲಿ]. ಹೌದು, ನೀವು ಯಾವೆಲ್ಲ ಚಟುವಟಿಕೆಗಳಲ್ಲಿ ತೊಡಗಿರುವಿರೋ ಅಲ್ಲಾಹ್ ನು ಅದನ್ನು ಚೆನ್ನಾಗಿ ಬಲ್ಲನು. {180}

[ಧಾನ-ಧರ್ಮಗಳ ಕುರಿತು ನೆನಪಿಸುವಾಗ] ಅಲ್ಲಾಹ್ ನು ಅತಿ ಬಡವನಾಗಿದ್ದಾನೆ ಮತ್ತು ನಾವು ಶ್ರೀಮಂತಿಕೆ ಮೆರೆದಿದ್ದೇವೆ – ಎಂದು (ಅಣಕಿಸಿ) ಹೇಳಿದವರ ಮಾತನ್ನು ಅಲ್ಲಾಹ್ ನು ಇದೋ ಕೇಳಿಸಿ ಕೊಂಡಿರುವನು. ಅವರು ಹೇಳಿದ ಮಾತನ್ನು ನಾವು ಬರೆದಿಡುತ್ತೇವೆ; ಮಾತ್ರವಲ್ಲ, [ಈ ಹಿಂದೆ] ಪ್ರವಾದಿಗಳನ್ನು ಅವರು ಅನ್ಯಾಯವಾಗಿ ವಧಿಸಿರುವುದನ್ನೂ ಸಹ ಬರೆದಿಡಲಾಗಿದೆ. ಇದೀಗ ಸುಡುವ ಬೆಂಕಿಯ ಶಿಕ್ಷೆಯ ಸವಿಯುಣ್ಣಿರಿ – ಎಂದು [ಪ್ರತಿಫಲ ನೀಡಲಾಗುವ ದಿನ ಅವರೊಡನೆ] ನಾವು ಹೇಳಲಿದ್ದೇವೆ. ನೀವು ಸ್ವತಃ ಕೈಯಾರೆ ಎಸಗಿ ನಿಮ್ಮ ಭಾವಿಗಾಗಿ ಕಳಿಸಿದ ಕೃತ್ಯಗಳ ಫಲವೇ ಆಗಿದೆ ಆ ಶಿಕ್ಷೆ; ಅದಲ್ಲದಿದ್ದರೆ ಅಲ್ಲಾಹ್ ನು ತನ್ನ ಸೃಷ್ಟಿಗಳೊಂದಿಗೆ ಸ್ವಲ್ಪವೂ ಅನೀತಿಯಿಂದ ವ್ಯವಹರಿಸುವುದಿಲ್ಲ. {181-182}

ಮೃಗವೊಂದನ್ನು ಬಲಿ ನೀಡಿ ಅದನ್ನು (ಆಕಾಶದಿಂದ ಬಂದ) ಬೆಂಕಿಯು ನುಂಗಿ ಹಾಕುವ (ಪವಾಡವನ್ನು) ನಮ್ಮ ಮುಂದೆ ಹಾಜರು ಪಡಿಸುವ ತನಕ ಯಾರನ್ನೂ (ಅಲ್ಲಾಹ್ ನ) ದೂತನು ಎಂದು ನಂಬಿಕೊಳ್ಳ ಬಾರದೆಂದು ನಿಜವಾಗಿಯೂ ಅಲ್ಲಾಹ್ ನು ನಮ್ಮಿಂದ ವಾಗ್ದಾನ ಪಡೆದಿರುವನು – ಎಂದು ಅವರು (ಕುಂಟು ನೆಪ) ಹೇಳುತ್ತಾರೆ. ನನಗಿಂತ ಮುಂಚೆ, ಹಲವು ಉಜ್ವಲ ನಿದರ್ಶಗಳೊಂದಿಗೂ, ನೀವೀಗ ಕೇಳುತ್ತಿರುವ (ಆ ಪವಾಡದೊಂದಿಗೂ) ಹಲವು ದೂತರು ನಿಮ್ಮ ಬಳಿಗೆ ಬಂದಿದ್ದರು; ನೀವು ಸತ್ಯವಂತರಾಗಿದ್ದರೆ ಆಗ ಆ ದೂತರನ್ನು ವಧಿಸಿ ಬಿಟ್ಟಿದ್ದೇಕೆ? – ಎಂದು (ಓ ಪೈಗಂಬರರೇ, ಅವರೊಡನೆ ನೀವು) ಕೇಳಿರಿ. {183}

ಅದಾಗಿಯೂ, (ಓ ಪೈಗಂಬರರೇ,) ಅವರು ನಿಮ್ಮನ್ನು ಅಲ್ಲಗಳೆಯುತ್ತಾರೆ ಎಂದಾದರೆ [ಅದರಲ್ಲಿ ಆಶ್ಚರ್ಯವೇನಿದೆ], ನಿಮಗಿಂತ ಮುಂಚೆಯೂ ಹಲವು ದೂತರು (ನಿಮ್ಮಂತೆಯೇ ಇವರಿಂದ) ನಿರಾಕರಿಸಲ್ಪಟ್ಟಿದ್ದಾರೆ. ಸುಸ್ಪಷ್ಟ ಪುರಾವೆಗಳು, ದಿವ್ಯೋಪದೇಶ ಪುಸ್ತಿಕೆಗಳು ಹಾಗೂ ಪ್ರಜ್ವಲ ಗ್ರಂಥದೊಂದಿಗೆ [ಆ ದೂತರೆಲ್ಲಾ ಇವರ ಬಳಿಗೆ] ಆಗಮಿಸಿದ್ದರು. {184}

(ಕಟ್ಟಕಡೆಗೆ) ಪ್ರತಿಯೊಬ್ಬ ಜೀವಿಗೂ ಮರಣದ ರುಚಿಯನ್ನು ಸವಿಯಲೇ ಬೇಕಾಗಿದೆ; ಮತ್ತು ನಿಮ್ಮ ಕರ್ಮಗಳಿಗೆ ಸಂಪೂರ್ಣವಾದ ಪ್ರತಿಫಲವನ್ನು ಕೇವಲ ‘ಕಿಯಾಮತ್’ ನ ದಿನ [ಅರ್ಥಾತ್ ಪುನರುತ್ಥಾನದ ದಿನ] ಮಾತ್ರ ನೀಡಲಾಗುವುದು. (ಆ ದಿನ) ಯಾರನ್ನು ನರಕಾಗ್ನಿಯಿಂದ ದೂರಗೊಳಿಸಿ ಸ್ವರ್ಗೋದ್ಯಾನದಲ್ಲಿ ಪ್ರವೇಶಿಸುವಂತೆ ಮಾಡಲಾಗುವುದೋ ಆತನೇ ಆಗಿರುವನು ನಿಜವಾದ ವಿಜಯಿ! ಪ್ರಾಪಂಚಿಕ ಜೀವನದ (ಸುಖ-ಸಂಪತ್ತು) ಕೇವಲ ಒಂದು ನಶ್ವರ/ಭ್ರಾಮಕ ವಸ್ತುವಲ್ಲದೆ ಬೇರೇನೂ ಅಲ್ಲ. {185}

(ವಿಶ್ವಾಸಿಗಳೇ), ನಿಮ್ಮ ಸೊತ್ತುವಿತ್ತ ಮತ್ತು ನಿಮ್ಮ ಜೀವಕ್ಕೆ ಸಂಬಂಧಿಸಿದಂತೆ ಖಂಡಿತವಾಗಿ ನೀವು ಪರೀಕ್ಷೆಗೆ ಒಳಪಡಲಿರುವಿರಿ. ನಿಮಗಿಂತಲೂ ಮುಂಚಿತವಾಗಿ ಗ್ರಂಥ ನೀಡಲ್ಪಟ್ಟ [ಯಹೂದಿ ಮತ್ತು ಕ್ರೈಸ್ತ] ಜನರಿಂದಲೂ ಬಹುದೇವಾರಾಧಕರಿಂದಲೂ (ಮನ ನೋಯುವಂಥ) ಬಹಳಷ್ಟು ಚುಚ್ಚುಮಾತುಗಳನ್ನು ನೀವು ಕೇಳಿಯೇ ತೀರುವಿರಿ. ಆಗ ನೀವು ಅತ್ಯಂತ ತಾಳ್ಮೆಯಿಂದಲೂ (ಅಲ್ಲಾಹ್ ನ ಆದೇಶಗಳನ್ನು ಪಾಲಿಸುವ ವಿಷಯದಲ್ಲಿ) ಜಾಗರೂಕತೆಯಿಂದಲೂ ವರ್ತಿಸಿಕೊಂಡರೆ ಅದುವೇ ಇಂತಹ (ಪರೀಕ್ಷೆಗಳಲ್ಲಿ) ನಿರ್ಣಾಯಕವೆನಿಸಿದ ವಿಷಯಗಳಾಗಿವೆ. {186}

ಯಾರಿಗೆ (ತೋರಃ) ಗ್ರಂಥವನ್ನು ನೀಡಲಾಗಿತ್ತೋ ಅವರಿಂದ, ಇದನ್ನು ಜನರಿಗೆ ಸ್ಪಷ್ಟವಾಗಿ (ಅರ್ಥವಾಗುವಂತೆ) ವಿವರಿಸಬೇಕೆಂದೂ (ಇದರ ಯಾವ ಅಂಶವನ್ನೂ) ಅವರಿಂದ ಬಚ್ಚಿಡಬಾರದೆಂದೂ ಕಟ್ಟುನಿಟ್ಟಾದ ಕರಾರನ್ನು ಅಲ್ಲಾಹ್ ನು ಪಡೆದುಕೊಂಡ ಸಂದರ್ಭವನ್ನು (ಅವರಿಗೆ ನೆನಪಿಸಿ ಕೊಡಿ). ಆದರೆ ಅವರು ಅದನ್ನು ತಮ್ಮ ಬೆನ್ನ ಹಿಂದಕ್ಕೆ ಎಸೆದು ಬಿಟ್ಟರು; ಹಾಗೂ ತುಚ್ಛವಾದ ಬೆಲೆಗೆ ಅದನ್ನು ವಿಕ್ರಯಿಸಿ ಕೊಂಡರು. ಅದೆಷ್ಟು ಹೀನಾಯವಾಗಿತ್ತು ಅವರ (ಆ) ವ್ಯಾಪಾರ! {187}

ತಾವೆಸಗಿದ ಕೃತ್ಯಗಳ ಬಗ್ಗೆ ಅತಿಯಾಗಿ ಸಂಭ್ರಮಿಸುವವರು ಮತ್ತು ತಾವಿನ್ನೂ ಮಾಡಿರದ ಕೆಲಸಗಳಿಗಾಗಿ (ಜನರಿಂದ) ಹೊಗಳಿಸಿಕೊಳ್ಳುವುದನ್ನು ಇಷ್ಟಪಡುವವರು ಶಿಕ್ಷೆಯಿಂದ ಪಾರಾಗಿರುವರು ಎಂದು ನೀವೆಣಿಸಬೇಡಿ; (ಅವರ ಬೆಗ್ಗೆ) ನೀವು ಹಾಗೆ ಭಾವಿಸಲೂ ಬೇಡಿ. ಬದಲಾಗಿ, ಅಂಥವರಿಗಾಗಿ ಯಾತನಾಮಯವಾದ ಶಿಕ್ಷೆ ಕಾದಿದೆ. {188}

[ಅವರು ತಪ್ಪಿಸಿಕೊಂಡು ಎಲ್ಲಿಗೆ ಹೋದಾರು? ಯಥಾರ್ಥದಲ್ಲಿ] ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅಲ್ಲಾಹ್ ನಿಗೇ ಸೇರುತ್ತದೆ. ಹೌದು, ಅಲ್ಲಾಹ್ ನು ಎಲ್ಲಾ ವಿಷಯಗಳಲ್ಲೂ ಸಂಪೂರ್ಣವಾದ ಸಾಮರ್ಥ್ಯವನ್ನು ಹೊಂದಿರುವನು. {189}

ಖಂಡಿತವಾಗಿಯೂ ಭೂಮಿ-ಆಕಾಶಗಳ ಸೃಷ್ಟಿ ವೈಖರಿಯಲ್ಲಿ ಹಾಗೂ ರಾತ್ರಿ ಮತ್ತು ಹಗಲುಗಳು ಒಂದರ ಹಿಂದೆ ಮತ್ತೊಂದರಂತೆ (ವೈರುಧ್ಯತೆಗಳೊಂದಿಗೆ ಮರುಕಳಿಸುವ) ಪ್ರಕ್ರಿಯೆಯಲ್ಲಿ, ಚಿಂತಿಸುವ ಜನರಿಗೆ (ಸಾಕಷ್ಟು) ದೃಷ್ಟಾಂತಗಳು ಇದ್ದೇ ಇವೆ. ನಿಂತಿರುವಾಗಲೂ ಕುಳಿತಿರುವಾಗಲೂ ಮತ್ತು ಮಗ್ಗಲು ಒರಗಿಸಿ ಮಲಗಿರುವಾಗಲೂ [ಅರ್ಥಾತ್ ಎಲ್ಲಾ ಸ್ಥಿತಿಯಲ್ಲೂ, ಚಿಂತಿಸುವ] ಅವರು ಅಲ್ಲಾಹ್ ನ (ಮಹಿಮೆಯನ್ನು ನಿರಂತರ) ಸ್ಮರಿಸಿಕೊಳ್ಳುತ್ತಾರೆ, ಮತ್ತು ಭೂಮಿ ಆಕಾಶಗಳ ಸೃಷ್ಟಿ ವೈಖರಿಯ ಬಗ್ಗೆ ಚಿಂತನೆ ನಡೆಸುತ್ತಾರೆ. ಓ ನಮ್ಮ ಒಡೆಯನೇ, ಇದನ್ನೆಲ್ಲಾ ನೀನು ನಿರರ್ಥಕವಾಗಿ ಸೃಷ್ಟಿ ಮಾಡಿರುವುದಲ್ಲ, ನೀನು ಪರಮ ಪಾವನನಾಗಿರುವೆ. ಆದ್ದರಿಂದ (ನಮ್ಮೊಡೆಯಾ), ನರಕದ ಶಿಕ್ಷೆಯಿಂದ ನಮ್ಮನ್ನು ಕಾಪಾಡು. ಇನ್ನು, ಯಾರನ್ನಾದರೂ ನರಕ ಸೇರುವಂತೆ ನೀನು ಮಾಡಿಬಿಟ್ಟರೆ ನಿಜವಾಗಿಯೂ ಅವನನ್ನು ನೀನು ಅಪಮಾನಕ್ಕೀಡು ಮಾಡಿರುವೆ ನಮ್ಮೊಡೆಯಾ! [ನರಕ ಸೇರಿದ] ಆ ದುಷ್ಕರ್ಮಿಗಳಿಗೆ (ಅಲ್ಲಿಂದ ಪಾರಾಗಲು) ಸಹಾಯ ಮಾಡುವವರು ಯಾರೂ ಇರುವುದಿಲ್ಲ (ಎಂದು ಅವರು ಪ್ರಾರ್ಥಿಸುವವರಾಗಿದ್ದಾರೆ). {190-192}

(ಓ ಜನರೇ), ನಿಮ್ಮ ಸೃಷ್ಟಿಕರ್ತನಲ್ಲಿ/ಒಡೆಯನಲ್ಲಿ ವಿಶ್ವಾಸವಿಡುವವರಾಗಿರಿ – ಎಂದು (ಜನರನ್ನು) ವಿಶ್ವಾಸಿಗಳಾಗಿಸಲು ಸಾರುವವನೊಬ್ಬನು ಉಪದೇಶಿಸುವುದನ್ನು ನಾವು ದಿಟವಾಗಿಯೂ ಕೇಳಿಸಿಕೊಂಡಿದ್ದೇವೆ ನಮ್ಮೊಡೆಯಾ! ಹಾಗೆ (ಆ ಕರೆಗೆ ಓಗೊಟ್ಟು) ನಾವು ವಿಶ್ವಾಸಿಗಳೂ ಆಗಿದ್ದೇವೆ. (ಆದ್ದರಿಂದ) ಓ ನಮ್ಮ ಸೃಷ್ಟಿಕರ್ತನೇ, ನಮಗೋಸ್ಕರ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ದೋಷಗಳನ್ನು ಮರೆಮಾಚಿಸು; ಮತ್ತು (ಅಂತಿಮವಾಗಿ) ಸತ್ಯಸಂಧರೊಂದಿಗೆ ಸೇರಿದ ಸ್ಥಿತಿಯಲ್ಲಿ ನಮಗೆ ಮರಣವು ಬರುವಂತೆ ಮಾಡು, ನಮ್ಮೊಡೆಯಾ! ನಿನ್ನ ದೂತರ ಮುಖಾಂತರ ನಮ್ಮೊಂದಿಗೆ ನೀನು ವಾಗ್ದಾನ ಮಾಡಿರುವುದನ್ನು ನಮಗೆ ದಯಪಾಲಿಸು; ಕಿಯಾಮತ್ ನ ದಿನ [ಅರ್ಥಾತ್ ಪುನರುತ್ಥಾನದ ದಿನ] ನಾವು ಅವಮಾನಿತರಾಗುವಂತೆ ಮಾಡದಿರು ನಮ್ಮೊಡೆಯಾ! ನೀನಾದರೋ ವಾಗ್ದಾನ ಮುರಿಯುವವನಲ್ಲ; [ಎಂದೂ ಅವರು ಪ್ರಾರ್ಥಿಸುತ್ತಾರೆ]. {193-194}

ಆಗ ಅವರ ಸೃಷ್ಟಿಕರ್ತನು/ಒಡೆಯನು ಅವರ ಪ್ರಾರ್ಥನೆಗೆ (ಹೀಗೆ) ಉತ್ತರಿಸಿದನು: ನಿಮ್ಮ ಪೈಕಿಯ ಪುರುಷನಾಗಿರಲಿ ಅಥವಾ ಸ್ತ್ರೀಯೇ ಆಗಿರಲಿ, (ಯಥಾರ್ಥದಲ್ಲಿ) ನೀವೆಲ್ಲ ಒಂದೇ ಆಗಿದ್ದು, ನಿಮ್ಮ ಪೈಕಿ ಸತ್ಕರ್ಮವೆಸಗಿದ ಯಾವೊಬ್ಬನ ಕಾಯಕವನ್ನೂ ನಾನು ನಿರರ್ಥಕ ಗೊಳಿಸಲಾರೆ. ಆದ್ದರಿಂದ [ನನಗೋಸ್ಕರ ಮನೆಮಠ ನಾಡು ಬೀಡುಗಳನ್ನು ತೊರೆದು] ವಲಸೆ ಹೋದವರು, ತಮ್ಮ ನಾಡುಗಳಿಂದ (ಬಲವಂತವಾಗಿ) ಹೊರದಬ್ಬಲ್ಪಟ್ಟವರು, ನನ್ನ ಮಾರ್ಗದಲ್ಲಿ ದೌರ್ಜನ್ಯಗಳನ್ನು ಸಹಿಸಿದವರು, ಹೋರಾಟ ಮಾಡಿದವರು ಹಾಗೂ ಹೋರಾಡಿ ಮಡಿದವರೆಲ್ಲಾ (ತಿಳಿದಿರಲಿ), ಅವರ ದೋಷಗಳನ್ನು ಖಂಡಿತ ನಾನು ನೀಗಿಸಿರುವೆನು; ಮಾತ್ರವಲ್ಲ, ಕಾಲುವೆಗಳು ಹರಿಯುತ್ತಿರುವ ಸ್ವರ್ಗೀಯ ತೋಟಗಳಲ್ಲಿ ಅವರು ಪ್ರವೇಶಿಸಿಕೊಳ್ಳುವಂತೆ ಮಾಡಿಯೇ ನಾನು ತೀರುವೆನು. ಇದೇ ಆಗಿರುವುದು ಅಲ್ಲಾಹ್ ನ ವತಿಯಿಂದ (ಅವರಿಗೆ) ಇರುವ ಪ್ರತಿಫಲ! ನಿಜವಾಗಿಯೂ ಅತಿ ಸುಂದರವಾದ ಪ್ರತಿಫಲವು ಇರುವುದು ಅಲ್ಲಾಹ್ ನ ಬಳಿಯೇ! {195}

(ಓ ಪೈಗಂಬರರೇ), ಧರ್ಮಧಿಕ್ಕಾರಿಗಳು [ಸ್ವಚ್ಛಂದವಾಗಿ ನಿಮ್ಮ] ಊರುಗಳಲ್ಲಿ ಅತ್ತಿತ್ತ ಓಡಾಡುತ್ತಿರುವುದು ನಿಮ್ಮನ್ನು ಮೋಸಗೊಳಿಸದಿರಲಿ. ಅವು ಅತ್ಯಲ್ಪವಾದ (ಕ್ಷಣಿಕ) ಸುಖ ಸವಲತ್ತುಗಳಷ್ಟೆ. ಅದಾದ ನಂತರ ನರಕವು ಅವರಿಗೆ ಬೀಡಾಗುವುದು. ಎಷ್ಟೊಂದು ಹೀನಾಯವಾದ ನೆಲೆಯದು! {196-197}

ಆದರೆ (ಇನ್ನೊಂದೆಡೆ), ತಮ್ಮೊಡೆಯ (ಅಲ್ಲಾಹ್ ನ ಆದೇಶ-ನಿರ್ದೇಶಗಳನ್ನು) ಜಾಗರೂಕತೆಯಿಂದ ಪಾಲಿಸಿಕೊಂಡವರಿಗೆ ಕಾಲುವೆಗಳು ಸದಾ ಹರಿಯುವ ಸ್ವರ್ಗೀಯ ಉದ್ಯಾನಗಳು ಸಿದ್ಧವಿದೆ. ಅವುಗಳಲ್ಲಿ ಅವರು ಸದಾ ಕಾಲ ವಾಸಿಸುವರು. ಅದು ಅಲ್ಲಾಹ್ ನ ವತಿಯಿಂದ (ಅವರಿಗಾಗಿ ಇರುವ) ಆತಿಥ್ಯವಾಗಿದೆ. ಸತ್ಯಸಂಧರಾದ ಸಜ್ಜನರಿಗಾಗಿ ಅಲ್ಲಾಹ್ ನ ಸನ್ನಿಧಿಯಲ್ಲಿ ಏನಿದೆಯೋ ಅದೇ ಅತಿ ಉತ್ಕೃಷ್ಟವಾದುದು. {198}

[ಅಂತಹ ಸತ್ಯಸಂಧ ಸಜ್ಜನರು ಹಿಂದೆ ಗ್ರಂಥ ಪಡೆದವರ ಪೈಕಿ ಇಲ್ಲವೆಂದಿಲ್ಲ]. ನಿಜಾರ್ಥದಲ್ಲಿ ಅಲ್ಲಾಹ್ ನಲ್ಲಿ ಸದೃಢ ವಿಶ್ವಾಸವನ್ನು ಹೊಂದಿರುವ, ನಿಮಗೆ ಇಳಿಸಿಕೊಡಲಾದ [ಕುರ್‍ಆನ್] ನಲ್ಲಿಯೂ [ನಿಮಗಿಂತ ಮುಂಚಿತವಾಗಿ] ಅವರತ್ತ ಕಳಿಸಲಾದ [ತೋರಾ ಮತ್ತು ಇಂಜೀಲ್/ಬೈಬಲ್] ಗಳಲ್ಲಿಯೂ ವಿಶ್ವಾಸವಿಡುವ ಕೆಲವರು ಗ್ರಂಥದವರ ಪೈಕಿ ಖಂಡಿತವಾಗಿಯೂ ಇರುವರು. ಅವರು ಅಲ್ಲಾಹ್ ನ ಮುಂದೆ ವಿನೀತರಾಗಿ ನಡೆದುಕೊಳ್ಳುತ್ತಾರೆ. ಅಲ್ಲಾಹ್ ನ ವಚನಗಳನ್ನು ತುಚ್ಛವಾದ ಬೆಲೆಗೆ ಮಾರಿಕೊಳ್ಳುವವರು ಅವರಲ್ಲ. ಅಂಥವರಿಗಾಗಿ ಅಲ್ಲಾಹ್ ನ ಬಳಿ ಸೂಕ್ತ ಪ್ರತಿಫಲರುವುದು. ಅಲ್ಲಾಹ್ ನಾದರೋ ಖಂಡಿತ ತ್ವರಿತವಾಗಿ ಲೆಕ್ಕ ತೀರಿಸುವವನು! {199}

ಓ ವಿಶ್ವಾಸಿ ಸಮುದಾಯವೇ! ನೀವು ಸಹನಶೀಲತೆಯನ್ನು ಮೈಗೂಡಿಸಿಕೊಳ್ಳಿ; ಹೆಚ್ಚು ಸ್ಥೈರ್ಯವಂತರಾಗಿ; (ಪ್ರತಿರೋಧವನ್ನೆದುರಿಸಲು) ಸದಾ ಸನ್ನದ್ಧರಾಗಿರಿ ಮತ್ತು ಅಲ್ಲಾಹ್ ನ ವಿಷಯದಲ್ಲಿ ಸದಾ ಎಚ್ಚರಿಕೆಯಿಂದ ಇರುವವರಾಗಿರಿ. ಹಾಗಾದರೆ (ಅಂತಿಮವಾಗಿ) ಗೆಲುವು ನಿಮಗೆ ಪ್ರಾಪ್ತವಾಗುವುದು. {200}

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...