ಯೂನುಸ್ | تـرجمـة سورة يونـس

تـرجمـة سورة يونـس من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت 

سهل الفهم من غير الرجوع إلى كتاب التفسير

| ಸೂರಃ ಯೂನುಸ್ | ಪವಿತ್ರ್ ಕುರ್‌ಆನ್ ನ 10 ನೆಯ ಸೂರಃ | ಇದರಲ್ಲಿ ಒಟ್ಟು 109 ಆಯತ್ ಗಳು ಇವೆ | 

ಅಲ್ಲಾಹ್ ನ ಹೆಸರಿನೊಂದಿಗೆ ಆರಂಭಿಸುವೆ, ಅವನು ಕರುಣಾಮಯಿ; ಅವನ ವಾತ್ಸಲ್ಯ ಚಿರಂತನ!

ಅಲಿಫ್ - ಲಾಮ್ - ರಾ! ಒಂದು ಸದೃಢ, ತತ್ವನಿಷ್ಠ ಹಾಗೂ ಜ್ಞಾನಭರಿತ ಗ್ರಂಥದ ವಚನಗಳಿವು! {1}

ಜನರನ್ನು ಎಚ್ಚರಗೊಳಿಸಲು ಹಾಗೂ (ಎಚ್ಚೆತ್ತುಕೊಂಡು) ವಿಶ್ವಾಸಿಗಳಾದ ಜನರಿಗೆ ಅವರ ಸೃಷ್ಟಿಕರ್ತನ ಬಳಿ ಗೌರವಾನ್ವಿತ ಸ್ಥಾನ ಲಭಿಸಲಿದೆಯೆಂಬ ಸಿಹಿ ಸುದ್ದಿ ತಿಳಿಸಲು ನಾವು ಅವರೊಳಗಿನಿಂದಲೇ ಒಬ್ಬನನ್ನು (ಆರಿಸಿ ಪ್ರವಾದಿಯನ್ನಾಗಿ ಮಾಡಿ ಅವರಿಗೆ) ದಿವ್ಯಸಂದೇಶ ನೀಡಿದುದಕ್ಕೆ ಈ ಜನರಿಗೆ ಅಷ್ಟು ಆಶ್ಚರ್ಯವೇಕೆ!? ಖಂಡಿತವಾಗಿ ಈತನೊಬ್ಬ ಸ್ಪಷ್ಟ ಜಾದೂಗಾರನೆಂದು (ಪೈಗಂಬರರನ್ನು) ಧಿಕ್ಕರಿಸಿದವರು ಆಪಾದಿಸಿ ಬಿಟ್ಟರು! {2}

ವಾಸ್ತವದಲ್ಲಿ ನಿಮ್ಮೆಲ್ಲರ ಸೃಷ್ಟಿಕರ್ತನು ಆ ಅಲ್ಲಾಹ್ ನು! ಅವನು ಈ ಆಕಾಶಗಳನ್ನು ಹಾಗೂ ಭೂಮಿಯನ್ನು ಆರು ಹಂತಗಳಲ್ಲಿ ಸೃಷ್ಟಿ ಮಾಡಿದನು; ನಂತರ ವಿಶ್ವದ ಅಧಿಕಾರ ಪೀಠವನ್ನೇರಿದನು. ವಿಶ್ವದ ಕಾರ್ಯಯೋಜನೆಗಳನ್ನು ನಿರ್ವಹಿಸುವವನೂ ಅವನೇ! ಅವನು ಅನುಮತಿ ನೀಡಿದ ಬಳಿಕವಲ್ಲದೆ ಯಾರೂ ಅವನ ಬಳಿ ಶಿಫಾರಸ್ಸು ಮಾಡುವಂತಿಲ್ಲ. ನಿಮ್ಮ ಸೃಷ್ಟಿಕರ್ತನಾದ ಅಲ್ಲಾಹ್ ನು ಅವನೇ ಆದ್ದರಿಂದ ಅವನನ್ನೇ ಆರಾಧಿಸಿರಿ. ಇನ್ನಾದರೂ ನೀವು ಪಾಠ ಕಲಿಯಬಾರದೇ? {3}

ನೀವೆಲ್ಲರೂ (ಒಂದು ದಿನ) ಅವನೆಡೆಗೇ ಮರಳಲಿರುವಿರಿ. ಅಲ್ಲಾಹ್ ನ ಈ ವಾಗ್ದಾನ ಕಟು ಸತ್ಯವಾದುದು. ಸೃಷ್ಟಿ ಕಾರ್ಯವನ್ನು ಆರಂಭಿಸಿದವನೂ ಅವನೇ. ಅವನಲ್ಲಿ ನಂಬಿಕೆ ಇರಿಸಿ ಸತ್ಕಾರ್ಯಗಳಲ್ಲಿ ಮಗ್ನರಾದವರಿಗೆ ನ್ಯಾಯಯುತ ಪ್ರತಿಫಲಗಳನ್ನು ನೀಡುವುದಕ್ಕಾಗಿ (ಮರಣದ) ನಂತರ ಸೃಷ್ಟಿ ಕಾರ್ಯವನ್ನು ಪುನರಾರಂಭಿಸುವವನೂ ಅವನೇ! ಅವನಿಗೆ ಧಿಕ್ಕಾರ ತೋರಿದವರಿಗೆ ಕುಡಿಯಲು (ಅಂದು) ಕುದಿಯುವ ಪಾನಕ ಮತ್ತು ನೋಯಿಸುವ ಶಿಕ್ಷೆ ಲಭಿಸುವುದು. ಧಿಕ್ಕಾರ ತೋರಿದ ಕಾರಣಕ್ಕಾಗಿ ಅವರಿಗೆ (ಅಂತಹ ಕಠಿಣ ಶಿಕ್ಷೆ)! {4}

ಸೂರ್ಯನನ್ನು ಪ್ರಕಾಶಿಸುವಂತೆ ಮತ್ತು ಚಂದ್ರನನ್ನು ಹೊಳೆಯುವಂತೆ ಮಾಡಿದವನು ಅವನೇ. ಚಂದ್ರನಿಗೆ ಅವನು ವಿವಿಧ ಘಟ್ಟಗಳನ್ನು ನಿಶ್ಚಯಿಸಿರುವುದು ನೀವು ಅದರ ಮೂಲಕ ವರ್ಷಗಳ ಎಣಿಕೆ ಮತ್ತು ಕಾಲಗಣನೆ ಮಾಡುವುದನ್ನು ಕಲಿಯಲೆಂದು. ಅಲ್ಲಾಹ್ ನು ಅವುಗಳನ್ನೆಲ್ಲ ನ್ಯಾಯಯುತವಾಗಿಯೇ ಸೃಷ್ಟಿಸಿರುವನು. ಅರಿತುಕೊಳ್ಳಲು ಇಚ್ಛಿಸುವ ಜನತೆಗೆ ಅವನು ತನ್ನ ನಿದರ್ಶನಗಳನ್ನು ಹೀಗೆ ವಿವರಿಸುವನು! {5}

ರಾತ್ರಿ ಮತ್ತು ಹಗಲುಗಳು ಒಂದನ್ನೊಂದು ಹಿಂಬಾಲಿಸುತ್ತಿರುವ ಪ್ರಕ್ರಿಯೆಯಲ್ಲಿ, ಹಾಗೂ ಅಲ್ಲಾಹ್ ನು ಆಕಾಶ ಮತ್ತು ಭೂಮಿಯಲ್ಲಿ ಏನೆಲ್ಲ ಸೃಷ್ಟಿಸಿರುವನೋ ಅವುಗಳಲ್ಲಿ ಖಂಡಿತವಾಗಿ (ತಪ್ಪು ದಾರಿಗೆ ಬೀಳದಂತೆ) ಎಚ್ಚರ ವಹಿಸುವ ಜನರಿಗೆ ಧಾರಾಳ ದೃಷ್ಟಾಂತಗಳಿವೆ. {6}

ಹೌದು, (ಮರಣಾನಂತರ) ನಮ್ಮನ್ನು ಭೇಟಿಯಾಗಲಿರುವ ವಿಷಯದಲ್ಲಿ ನಂಬಿಕೆ ಹೊಂದಿರದವರು; ಪ್ರಾಪಂಚಿಕ ಜೀವನವನ್ನೇ ಮೆಚ್ಚಿಕೊಂಡು ಅದರಲ್ಲೇ ಸಂತೃಪ್ತಿ ಕಂಡುಕೊಂಡವರು; ಹಾಗೆಯೇ ನಮ್ಮ ದೃಷ್ಟಾಂತಗಳಿಗೆ ಅಸಡ್ಡೆ ತೋರಿದವರು - ಅಂತಹ ಜನರ ಅಂತಿಮ ತಾಣ ನರಕಾಗ್ನಿ ಆಗಲಿದೆ, ಏಕೆಂದರೆ ಅದನ್ನು ಅವರು ಸ್ವತಃ ಗಳಿಸಿರುವರು. {7-8}

ಹೌದು, (ಅದಕ್ಕೆ ಬದಲು) ಯಾರು ವಿಶ್ವಾಸ ಇರಿಸುತ್ತಾರೋ, ಹಾಗೆಯೇ ಸತ್ಕಾರ್ಯಗಳಲ್ಲಿ ತೊಡಗುತ್ತಾರೋ, ಅಂತಹವರನ್ನು ಅವರ ಸೃಷ್ಟಿಕರ್ತನು ಅವರ ವಿಶ್ವಾಸದ ಕಾರಣ ಸರಿದಾರಿಯಲ್ಲಿ ಮುನ್ನಡೆಸುತ್ತಾನೆ. ಮುದನೀಡುವ ಸ್ವರ್ಗೋದ್ಯಾನಗಳಲ್ಲಿ ಅವರ ಕೆಳಭಾಗದಲ್ಲಿ ಹರಿಯುವ ಹೊನಲುಗಳಿರುವುವು. {9}

'ಸುಬ್‌ಹಾನಕ ಅಲ್ಲಾಹುಮ್ಮ' (ಅರ್ಥಾತ್ ಓ ಅಲ್ಲಾಹ್ ನೇ, ನೀನು ಪರಮಪವಿತ್ರನು) ಎಂಬುದು ಅಲ್ಲಿ ಅವರ ಕೀರ್ತನೆಯಾಗಿರುವುದು. ಮತ್ತು 'ಸಲಾಮ್' (ಅರ್ಥಾತ್ ಶಾಂತಿ) ಎಂಬುದು ಅವರ ಅಭಿವಂದನೆ ಆಗಿರುವುದು. ಅವರು ತಮ್ಮ ಮಾತುಗಳನ್ನು ಅಂತ್ಯಗೊಳಿಸುವಾಗ 'ಅಲ್ ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್' (ಅರ್ಥಾತ್ ನಮ್ಮ ಸ್ತುತಿ ಸ್ತೋತ್ರಗಳು ಜಗದೊಡೆಯನಾದ ಅಲ್ಲಾಹ್ ನಿಗೆ) ಎಂದು ಹೇಳುತ್ತಿರುವರು. {10}

ಒಳಿತು ಮಾಡುವಲ್ಲಿ ಅಲ್ಲಾಹ್ ನು ಆತುರ ಪಡುವಂತೆ, ಒಂದು ವೇಳೆ (ಮಕ್ಕಾ ದ ದುಷ್ಕರ್ಮಿ) ಜನರಿಗೆ ಶಿಕ್ಷೆ ನೀಡುವಲ್ಲಿ ಅಲ್ಲಾಹ್ ನು ಆತುರ ಪಟ್ಟಿರುತ್ತಿದ್ದರೆ ಅವರಿಗೆ ನಿಶ್ಚಯಿಸಲಾದ ಕಾಲಾವಧಿ ಅದಾಗಲೇ ಮುಗಿದಿರುತ್ತಿತ್ತು! (ಆದರೆ ನಾವು ಹಾಗೆ ಮಾಡುವುದಿಲ್ಲ), ಆದ್ದರಿಂದ ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ನಂಬಿಕೆ ಇರಿಸದ ಜನರನ್ನು ತಮ್ಮದೇ ಉದ್ಧಟತನದಲ್ಲಿ ಅಲೆದಾಡಿತ್ತಿರಲು ನಾವು ಬಿಟ್ಟು ಬಿಡುತ್ತೇವೆ! {11}

ಮನುಷ್ಯನ ಮನಸ್ಥಿತಿ ಹೇಗಿದೆಯೆಂದರೆ ಅವನಿಗೆ ಕಷ್ಟಕಾಲ ಬಂದೆರಗಿದಾಗ ಅವನು ಮಲಗಿದಲ್ಲಿಂದಲೂ ಕುಳಿತಲ್ಲಿಂದಲೂ ನಿಂತಲ್ಲಿಂದಲೂ ನಮ್ಮನ್ನು ಕರೆದು ಮೊರೆಯಿಡುತ್ತಾನೆ! ಇನ್ನು ನಾವು ಅವನಿಂದ ಅವನ ಆ ಸಂಕಷ್ಟವನ್ನು ನೀಗಿಸಿದೊಡನೆ ಆತನು, ತನಗೆ ಕಷ್ಟ ಕಾರ್ಪಣ್ಯಗಳು ಬಾಧಿಸಿದಾಗ ನಮಗೆ ಮೊರೆಯಿಟ್ಟರಲೇ ಇಲ್ಲವೆಂಬಂತೆ ಹಿಂದಿನ ಸ್ಥಿತಿಗೆ ಮರಳಿ ಬಿಡುತ್ತಾನೆ! ಮಿತಿಮೀರುವ ಜನರಿಗೆ ಹಾಗೆ ಅವರ ಕೃತ್ಯಗಳು ಚಂದವಾಗಿ ಕಾಣುವಂತೆ ಮಾಡಲಾಗಿದೆ. {12}

ನಿಮಗಿಂತ ಮುಂಚಿನ ಪೀಳಿಗೆಗಳೂ (ನಿಮ್ಮಂತೆ) ಅನ್ಯಾಯ ಅಕ್ರಮಗಳಲ್ಲಿ ತೊಡಗಿದಾಗ ನಾವು ಅವರನ್ನು ನಾಶಪಡಿಸಿ ಬಿಟ್ಟಿದ್ದೇವೆ. ಅವರ ಬಳಿಗೆ ಅವರಿಗಾಗಿ ಕಳಿಸಲ್ಪಟ್ಟಿದ್ದ ಪ್ರವಾದಿಗಳು ಸುವ್ಯಕ್ತ ಪುರಾವೆಗಳೊಂದಿಗೆ ಬಂದಿದ್ದರು; ಆದರೆ ಅವರು ಎಷ್ಟು ಮಾತ್ರಕ್ಕೂ ನಂಬುವವರಾಗಿರಲಿಲ್ಲ. ಅವರನ್ನು ಶಿಕ್ಷಿಸಿದಂತೆಯೇ ಅಪರಾಧಿಗಳಾದ ಪ್ರತಿ ಜನಸಮೂಹವನ್ನೂ ನಾವು ಶಿಕ್ಷಿಸಲಿರುವೆವು. {13}

ಅವರ ಕಾಲ ಗತಿಸಿದ ನಂತರ, ಈಗ ನೀವು ಹೇಗೆ ವರ್ತಿಸುತ್ತೀರಿ ಎಂಬುದನ್ನು ನೋಡಲಿಕ್ಕಾಗಿ ನಾವು ಭೂಮಿಯಲ್ಲಿ ನಿಮ್ಮನ್ನು ಅವರ ಉತ್ತರಾಧಿಕಾರಿಗಳಾಗಿ ಮಾಡಿರುವೆವು. {14}

ಆದರೆ ಅತ್ಯಂತ ಸ್ಪಷ್ಟವಾದ ನಮ್ಮ ವಚನಗಳನ್ನು ಈ ಜನರ ಮುಂದೆ ಓದಿ ಕೇಳಿಸಲಾದಾಗ, ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ಭರವಸೆ ಹೊಂದಿರದವರು, ಈ ಕುರ್‌ಆನ್ ಗೆ ಬದಲು ಬೇರೊಂದು ಕುರ್‌ಆನ್ ಅನ್ನು ನಮಗೆ ಕೊಡಿ ಅಥವಾ (ಕನಿಷ್ಟ ಪಕ್ಷ) ಇದನ್ನೇ ತಿದ್ದಿ ಬದಲಾಯಿಸಿ ಎಂದು ಪೈಗಂಬರರೊಡನೆ ಹೇಳಿದರು! ನನ್ನ ಇಷ್ಟಾನುಸಾರ ಇದನ್ನು ತಿದ್ದಿ ಬದಲಾಯಿಸುವುದು ನನಗೆ ಸಾಧ್ಯವಾದ ವಿಷಯವಲ್ಲ; ಏನನ್ನು ದಿವ್ಯಾದೇಶದ ಮೂಲಕ ನನಗೆ ಸೂಚಿಸಲಾಗಿದೆಯೋ ನಾನು ಅದನ್ನು ಮಾತ್ರ ಅನುಸರಿಸುವೆ; ನನ್ನ ಪ್ರಭುವಿನ ಆಜ್ಞೆಯನ್ನು ನಾನು ಮೀರಿದರೆ ಆ ಭೀಕರ ದಿನದ ಶಿಕ್ಷೆಯ ಕುರಿತು ನನಗೆ ಭಯವಾಗುತ್ತದೆ ಎಂದು (ಪೈಗಂಬರರೇ ನೀವು ಅವರಿಗೆ) ತಿಳಿಸಿ ಬಿಡಿರಿ. {15}

ಅಲ್ಲಾಹ್ ನು ಹಾಗೆ ಬಯಸಿರುತ್ತಿದ್ದರೆ [ಅರ್ಥಾತ್ ಈ ಕುರ್‌ಆನ್ ನ ಬದಲು ಬೇರಾವುದೇ ಅಧ್ಯಾಯ ಕಳಿಸಲು ಬಯಸಿರುತ್ತಿದ್ದರೆ] ನಾನು ನಿಮ್ಮ ಮುಂದೆ ಇದನ್ನು ಓದಿ ಕೇಳಿಸುತ್ತಿರಲಿಲ್ಲ, ಮಾತ್ರವಲ್ಲ ಅಲ್ಲಾಹ್ ನು ಇದನ್ನು ನಿಮಗೆ ಪರಿಚಯಿಸುತ್ತಲೂ ಇರಲಿಲ್ಲ. (ನೀವೇ ಆಲೋಚಿಸಿ) ಇದಕ್ಕಿಂತ ಮುಂಚೆ ನಾನು ನಿಮ್ಮ ಒಡನಾಟದಲ್ಲಿ ಒಂದು ದೀರ್ಘಕಾಲ ಕಳೆದಿರುತ್ತೇನೆ; [ಎಂದಾದರೂ ಇಂತಹದ್ದನ್ನು ನಿಮ್ಮ ಮುಂದೆ ಪ್ರತಿಪಾಸಿದ್ದೇನೆಯೇ?] ನೀವು ಸ್ವಲ್ಪ ಬುದ್ಧಿ ಉಪಯೋಗಿಸಬಾರದೇ? ಎಂದು ಪೈಗಂಬರರೇ ಅವರೊಡನೆ ಕೇಳಿರಿ. {16}

ಹಾಗಿರುವಾಗ ಸುಳ್ಳನ್ನು ಹೆಣೆದು ಅಲ್ಲಾಹ್ ನ ಮೇಲೆ ಆರೋಪಿಸುವವನಿಗಿಂತ ಅಥವಾ ಅವನ ವಚನಗಳನ್ನು ಸುಳ್ಳೆಂದು ಸಾರುವವನಿಗಿಂತ ದೊಡ್ಡ ಅಕ್ರಮಿ ಯಾರಾದರೂ ಇರಬಹುದೇ? ಅಂತಹ ಅಪರಾಧಿಗಳು ಎಂದಿಗೂ ಯಶಸ್ಸು ಕಾಣಲಾರರು. {17}

ಅವರು ಅಲ್ಲಾಹ್ ನಿಗೆ ಬದಲು, ತಮಗೆ ನಷ್ಟವನ್ನಾಗಲಿ ಲಾಭವನ್ನಾಗಲಿ ಮಾಡಲು ಸಾಧ್ಯವಿಲ್ಲದ [ಮೂರ್ತಿ ಮುಂತಾದವುಗಳನ್ನು] ಆರಾಧಿಸುತ್ತಿದ್ದಾರೆ; ಮಾತ್ರವಲ್ಲ ಇವು ಅಲ್ಲಾಹ್ ನ ಸನ್ನಿಧಿಯಲ್ಲಿ ನಮ್ಮ ಪರವಾಗಿ ಶಿಫಾರಸ್ಸು ಮಾಡುವುವು ಎಂದೂ ವಾದಿಸುತ್ತಿದ್ದರೆ. ಭೂಮಿ ಮತ್ತು ಆಕಾಶಗಳ (ಸಕಲ ವಿಷಯವನ್ನೂ ಬಲ್ಲ) ಅಲ್ಲಾಹ್ ನಿಗೇ ತಿಳಿದಿರದ ಒಂದು ಹೊಸ ವಿಚಾರವನ್ನು ನೀವು ಅವನಿಗೆ ತಿಳಿಸುತ್ತಿರುವಿರಾ ಎಂದು ಪೈಗಂಬರರೇ, ನೀವು ಅವರನ್ನು ಕೇಳಿರಿ. ಅವನಾದರೋ ಪರಮ ಪಾವನನು! ಅವನ ದೇವತ್ವದಲ್ಲಿ ಇತರರನ್ನೂ ಸೇರಿಸಿಕೊಳ್ಳುವ (ಶಿರ್ಕ್ ನಂತಹ ದುರಾಚಾರಕ್ಕಿಂತ) ಅವನ ಸ್ಥಾನವು ಅದೆಷ್ಟು ಉನ್ನತದಲ್ಲಿದೆ! {18}

ಆರಂಭದಲ್ಲಿ ಇಡೀ ಮನುಕುಲವು (ಧಾರ್ಮಿಕವಾಗಿ) ಒಂದೇ ಸಮುದಾಯವಾಗಿತ್ತು. ನಂತರ ಅವರು ಪರಸ್ಪರ ವ್ಯತ್ಯಸ್ತ ಅಭಿಪ್ರಾಯಗಳನ್ನು ತಾಳಿದರು. ಒಂದು ವೇಳೆ ನಿಮ್ಮ ಸೃಷ್ಟಿಕರ್ತನಿಂದ ಇದಕ್ಕೆ ಮೊದಲೇ ನಿರ್ಣಯಿಸಲಾದ ಒಂದು ಮಾತು [ಅರ್ಥಾತ್ ಅಂತಿಮ ಶಿಕ್ಷೆಗಾಗಿ ಪರಲೋಕವಿರುವುದು ಎಂಬ ತೀರ್ಮಾನ] ಇರದೇ ಹೋಗಿದ್ದರೆ ಈ ಜನರು ಪರಸ್ಪರ ವಿರುದ್ಧಾಭಿಪ್ರಾಯ ತೆಳೆದಿರುವ ವಿಷಯದ ಇತ್ಯರ್ಥ ಈಗಾಗಲೇ ಮುಗಿದಿರುತ್ತಿತ್ತು! {19}

[ತಾನು ಅಲ್ಲಾಹ್ ನ ದೂತನೆಂದು ಸಾರುವ] ಆತನಿಗೆ ಒಂದು ಪವಾಡ ಸದೃಶ ನಿದರ್ಶನವನ್ನು ಏಕೆ ಆತನ ಪ್ರಭುವಿನ ವತಿಯಿಂದ ಇಳಿಸಿ ಕೊಡಲಾಗಿಲ್ಲ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಪೈಗಂಬರರೇ, ಅಂತಹ ಎಲ್ಲ ಅಗೋಚರ ವಿಷಯಗಳು ಅಲ್ಲಾಹ್ ನಿಗೆ ಮಾತ್ರ ಸೇರಿದವು; ಆದ್ದರಿಂದ ನೀವು ಅದಕ್ಕಾಗಿ ಕಾಯಿರಿ, ನಾನೂ ನಿಮ್ಮೊಂದಿಗೆ ಕಾಯುವವನಿದ್ದೇನೆ ಎಂದು ಅವರಿಗೆ ತಿಳಿಸಿಬಿಡಿ. {20}

ಮನುಷ್ಯರ ಮನಃಸ್ಥಿತಿ ಹೇಗಿದೆಯೆಂದರೆ, ಅವರಿಗೆ ಬಂದೆರಗಿದ್ದ ಪ್ರತಿಕೂಲ ಸ್ಥಿತಿಯ ನಂತರ ನಾವು ಅವರಿಗೆ ನಮ್ಮ ಕೃಪಾನುಗ್ರಹದ ಸವಿಯುಣಿಸಿದರೆ ಆ ಕೂಡಲೇ ಅವರು ನಮ್ಮ ವಚನ ದೃಷ್ಟಾಂತಗಳ ವಿರುದ್ಧ ಕುತಂತ್ರಗಳನ್ನು ಹೂಡತೊಡಗುತ್ತಾರೆ! ಪೈಗಂಬರರೇ, ತಂತ್ರಗಾರಿಕೆಯಲ್ಲಿ ಅವರಿಗಿಂತ ಹೆಚ್ಚು ವೇಗ ಅಲ್ಲಾಹ್ ನಿಗಿದೆ ಎಂದು ಅವರಿಗೆ ತಿಳಿಸಿ ಬಿಡಿ. ಜನರೇ, ನೀವು ಹೂಡುತ್ತಿರುವ ಕುತಂತ್ರಗಳನ್ನು ನಮ್ಮ ದೂತರಾದ ಮಲಕ್ ಗಳು ಬರೆದಿಡುತ್ತಿದ್ದಾರೆ (ಎಂಬುದು ನಿಮಗೆ ತಿಳಿದಿರಲಿ). {21}

ನೀವು ನೆಲ ಮತ್ತು ಜಲಗಳಲ್ಲಿ ಸಂಚರಿಸಲು ಸೌಲಭ್ಯ ಒದಗಿಸಿದವನು ಅವನೇ. ನೌಕೆಯಲ್ಲಿ ನೀವು ಪ್ರಯಾಣಿಸುವಾಗ ಅದು ಅನುಕೂಲಕರ ಗಾಳಿಯ ಸಹಾಯದಿಂದ ಮುಂದೆ ಸಾಗುತ್ತಿರುವಾಗ ಅದರಲ್ಲಿರುವ ಪ್ರಯಾಣಿಕರು ಹರ್ಷಿಸುತ್ತಾರೆ. ಆದರೆ ಇದ್ದಕ್ಕಿದ್ದಂತೆ ಚಂಡಮಾರುತ ಬೀಸತೊಡಗಿ, ಎಲ್ಲ ದಿಕ್ಕುಗಳಿಂದ ತೆರೆಗಳು ಏರಿ ಬಂದು ಅವರನ್ನು ಅಪ್ಪಳಿಸ ತೊಡಗಿದಾಗ 'ನಾವೀಗ ತೆರೆಗಳಿಂದ ಸುತ್ತುವರಿಯಲ್ಪಟ್ಟಿದ್ದೇವೆ' ಎಂಬುದು ಅವರಿಗೆ ಖಾತರಿಯಾಗಿ ಬಿಡುತ್ತದೆ. ಆಗ ತಮ್ಮ ನಿಷ್ಠೆಯನ್ನು ಅವರು ಅಲ್ಲಾಹ್ ನಿಗೆ ಮಾತ್ರ ಸೇಮಿತವಾಗಿಸಿಕೊಂಡು, 'ನೀನು ನಮ್ಮನ್ನು ಈ (ಸಂಕಷ್ಟದಿಂದ) ಪಾರು ಮಾಡಿದರೆ ಮುಂದೆ ನಾವು ಖಂಡಿತ ನಿನಗೆ ಕೃತಜ್ಞತೆಯಿಂದ ನಡೆದುಕೊಳ್ಳುತ್ತೇವೆ' ಎಂದು ಅಲ್ಲಾಹ್ ನಿಗೆ ಮೊರೆಯಿಡುತ್ತಾರೆ. {22}

ಆದರೆ ಯಾವಾಗ ಅವನು ಅವರನ್ನು (ಆ ಸಂಕಷ್ಟದಿಂದ) ಪಾರು ಮಾಡಿದನೋ, ಅದೋ ನೋಡಿ, ಅವರು ನಾಡಿನಲ್ಲಿ ಅನ್ಯಾಯವಾಗಿ ಅತಿಕ್ರಮವೆಸಗ ತೊಡಗುತ್ತಾರೆ. ಓ ಜನರೇ [ಅರ್ಥಾತ್ ಓ ಕುರೈಷರೇ] ನೀವೆಸಗುತ್ತಿರುವ ಎಲ್ಲಾ ಅತಿಕ್ರಮಗಳು ನಿಮ್ಮ ವಿರುದ್ಧವೇ ತಿರುಗಲಿದೆ! [ನೀವು ಅನುಭಸುವುದು ಸ್ವಲ್ಪ ದಿನಗಳ] ಲೌಕಿಕ ಸುಖಭೋಗಗಳನ್ನಷ್ಟೆ! ನಂತರ ನೀವು ಮರಳಲಿಕ್ಕಿರುವುದು ನಮ್ಮ ಬಳಿಗೆ! ನೀವು (ಲೌಕಿಕ ಜೀವನವದಲ್ಲಿ) ಏನೆಲ್ಲ ಮಾಡಿದ್ದಿರಿ ಎಂಬುದನ್ನು ನಾವು ಆಗ ನಿಮೆಗ (ಒಂದೊಂದಾಗಿ) ತಿಳಿಸಲಿದ್ದೇವೆ. {23}

[ನಮ್ಮ ವಚನಗಳನ್ನು ಕಡೆಗಣಿಸಿ ನೀವು ಸಂಪೂರ್ಣವಾಗಿ ಮೈಮರೆತಿರುವ] ಈ ಲೌಕಿಕ ಜೀವನದ ಉದಾಹರಣೆ ಇಂತಿದೆ: ನಾವು ಆಕಾಶದಿಂದ ಮಳೆ ಸುರಿಯುವಂತೆ ಮಾಡಿದಾಗ ಭೂಮಿಯ ಸಸ್ಯೋತ್ಪನ್ನಗಳು ಅದನ್ನು ಹೀರಿ ಚೆನ್ನಾಗಿ ಬೆಳೆದು, ಮನುಷ್ಯರೂ ಜಾನುವಾರುಗಳೂ ಅದನ್ನು ಭಕ್ಷಿಸುವಂತಾಗುತ್ತದೆ; ಮಾತ್ರವಲ್ಲ ಭೂಮಿಯು (ದಟ್ಟವಾಗಿ ಬೆಳೆದು ನಿಂತ ಸಸ್ಯಾದಿಗಳನ್ನು) ಸಿಂಗಾರವಾಗಿ ತೊಟ್ಟು ಸುಂದರವಾಗಿ ಕಾಣತೊಡಗಿದಾಗ ಅಲ್ಲಿಯ ನಿವಾಸಿಗಳು ತಮಗೆ ಇದರ ಮೇಲೆ ಸಂಪೂರ್ಣ ನಿಯಂತ್ರಣವಿದೆ ಎಂದು ಭಾವಿಸುತ್ತಿರುವಾಗಲೇ ಇದ್ದಕಿದ್ದಂತೆ ನಮ್ಮ ಆದೇಶ ಜಾರಿಯಾಗಿ ಹಗಲು ಅಥವಾ ರಾತ್ರಿಯ (ಯಾವುದಾದರೂ ಒಂದು ಕ್ಷಣದಲ್ಲಿ) ಅವೆಲ್ಲವನ್ನು ನಾವು ತೊಡೆದುಹಾಕಿದಾಗ, ಒಂದು ದಿನ ಮೊದಲು ಅಲ್ಲಿ ಏನೂ ಬೆಳೆದೇ ಇರಲಿಲ್ಲವೆಂಬಂತೆ ಭಾಸವಾಗುತ್ತದೆ! ಹೌದು, ಪರ್ಯಾಲೋಚನೆ ನಡೆಸಿ (ಪಾಠ ಕಲಿಯುವ) ಜನಸಮೂಹಕ್ಕೆ ನಾವು ದೃಷ್ಟಾಂತಗಳನ್ನು ಹೀಗೆ ವಿವರಿಸುತ್ತಿದ್ದೇವೆ! {24}

[ಜನರೇ, ನೀವು ನಶ್ವರವಾದ ಐಹಿಕ ಸುಖಭೋಗಗಳಲ್ಲಿ ಮೈಮರೆತಿರುವಿರಿ], ಆದರೆ ಅಲ್ಲಾಹ್ ನು ನಿಮ್ಮನ್ನು (ಶಾಶ್ವತವಾದ) ಶಾಂತಿಯ ನೆಲೆವೀಡಿನತ್ತ ಕರೆಯುತ್ತಾನೆ; ಮತ್ತು ತನ್ನ ಮೆಚ್ಚುಗೆಗೆ ಪಾತ್ರರಾದವರನ್ನು ನೇರವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ. {25}

ಯಾರು ಸತ್ಕರ್ಮ ಮಾಡಿರುತ್ತಾರೋ ಅವರಿಗೆ ಸತ್ಫಲ ಪ್ರಾಪ್ತಿಯಾಗಲಿದೆ; ಮಾಡಿರುವುದಕ್ಕಿಂತ ಹೆಚ್ಚಿನ ಸತ್ಫಲ! ಕರಾಳತೆಯ ಛಾಯೆ ಅವರ ಮುಖದ ಮೇಲೆ ಇರಲಾರದು; ಅವರಿಗೆ ಮುಖಭಂಗವಾಗಲಾರದು. ಅವರೇ ಸ್ವರ್ಗೀಯ ಉದ್ಯಾನದ ಒಡನಾಡಿಗಳು; ಅದರಲ್ಲಿ ಸದಾ ಕಾಲ ಬಾಳಲಿರುವರು. {26}

ಇನ್ನು [ಇಹಲೋಕದಲ್ಲೇ ಮೈಮರೆತು] ಕೆಡುಕನ್ನು ಯಾರು ಸಂಪಾದಿಸಿರುತ್ತಾರೋ ಅವರಿಗಿರುವ ಪ್ರತಿಫಲವು ತಾವು ಸಂಪಾದಿಸಿದಷ್ಟೇ ಪ್ರಮಾಣದ ಕೆಡುಕು. ಅಪಮಾನವು ಅವರನ್ನು ಆವರಿಸಿ ಕೊಂಡಿರುತ್ತದೆ. ಅಲ್ಲಾಹ್ ನ ಶಿಕ್ಷೆಯಿಂದ ಅವರನ್ನು ರಕ್ಷಿಸುವವರು (ಅಂದು) ಯಾರೂ ಇರಲಾರರು. ಅವರ ಮುಖಗಳ ಮೇಲೆ ಇರುಳ ಕತ್ತೆಲೆಯ ತುಣುಕಿನಿಂದ ತೇಪೆ ಹಾಕಿದಂತೆ ಕಾರ್ಗತ್ತಲೆ ಕವಿದಿರುವುದು. ಅವರು ನರಕಲೋಕದ ಸಂಗಾತಿಗಳು. ಅದರಲ್ಲೇ ಸದಾಕಾಲ ಬಿದ್ದಿರುವವರು. {27}

ನಾವು ಅವರನ್ನೆಲ್ಲ [ಅರ್ಥಾತ್ ಅಲ್ಲಾಹ್ ನ ಹೊರತು ಇತರ ಮಿಥ್ಯ ದೇವರುಗಳನ್ನು ಸೃಷ್ಟಿಸಿ ಆರಾಧಿಸಿದವರನ್ನು ಮತ್ತು ಆರಾಧಿಸಲ್ಪಟ್ಟ ಅವರ ದೇವರುಗಳನ್ನು, ವಿಚಾರಣೆಗಾಗಿ] ಒಟ್ಟುಗೂಡಿಸುವ ಆ ದಿನ, ನೀವೂ ನಿಮ್ಮ ದೇವರುಗಳೂ ಅದೇ ಸ್ಥಿತಿಯಲ್ಲಿ ಅಲ್ಲೇ ನಿಲ್ಲಿರಿ - ಎಂದು ಆಜ್ಞಾಪಿಸಲಿದ್ದೇವೆ! ನಂತರ ನಾವು ಅವರನ್ನು (ಎರಡು ಗುಂಪುಗಳಾಗಿ) ಬೇರ್ಪಡಿಸುವೆವು. ಆ ಸಂದರ್ಭದಲ್ಲಿ ಅವರ ಆ 'ದೇವರುಗಳು' (ತಮ್ಮನ್ನು ಆರಾಧಿಸುತ್ತಿದ್ದವರೊಡನೆ) ನೀವು ಆರಾಧಿಸುತ್ತಿದ್ದುದು ನಮ್ಮನ್ನಲ್ಲವಲ್ಲ - ಎಂದು ಹೇಳಲಿರುವರು. {28}

ನಮ್ಮ ಮತ್ತು ನಿಮ್ಮ ನಡುವೆ ಸಾಕ್ಷ್ಯಕ್ಕಾಗಿ ಅಲ್ಲಾಹ್ ನು ಮಾತ್ರವೇ ಸಾಕು. ಇನ್ನು ನೀವು ನಮ್ಮನ್ನು ಆರಾಧಿಸುತ್ತಿದ್ದುದು ಹೌದಾದರೂ ನಮಗೆ ಅದರ ಯಾವ ಅರಿವೂ ಇರಲಿಲ್ಲ - (ಎಂದೂ ಅವರು ಹೇಳುವರು). {29}

ತಾನು ಹಿಂದೆ ಮಾಡಿದ್ದ ಕೃತ್ಯಗಳು ಎಂತಹದ್ದು ಎಂದು ಆ ಸಮಯದಲ್ಲಿ ಪ್ರತಿಯೊಬ್ಬನಿಗೂ ಮನವರಿಕೆಯಾಗುವುದು. ನಂತರ ಅವರನ್ನೆಲ್ಲ ತಮ್ಮ ನಿಜವಾದ ಒಡೆಯ (ಅಲ್ಲಾಹ್ ನೆಡೆಗೆ) ಕಳಿಸಲಾಗುವುದು. ಆಗ ಅವರೇ ಸ್ವತಃ ಸೃಷ್ಟಿಸಿಕೊಂಡಿದ್ದ ಮಿಥ್ಯಗಳೆಲ್ಲವೂ [ಅವರ ಪ್ರಯೋಜನಕ್ಕೆ ಬಾರದೆ] ಮಾಯವಾಗುವುವು. {30}

ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಅನ್ನಾಹಾರಗಳನ್ನು ಒದಗಿಸುವವನು ಯಾರು? ನಿಮ್ಮ ಶ್ರವಣ ಶಕ್ತಿ ಮತ್ತು ದೃಷ್ಟಿ ಸಾಮರ್ಥ್ಯಗಳು ಯಾರ ನಿಯಂತ್ರಣದಲ್ಲಿದೆ? ಒಂದು ನಿರ್ಜೀವಿಯಿಂದ ಜೀವಿಯು ಹೊರಬರುವಂತೆ ಮಾಡುವವನು ಮತ್ತು ಒಂದು ಜೀವಿಯಿಂದ ನಿರ್ಜೀವಿಯು ಹೊರಬರುವಂತೆ ಮಾಡುವವನು ಯಾರು? ವಿಶ್ವವ್ಯವಸ್ಥೆಯನ್ನು ನಿರೂಪಿಸುವವನು ಯಾರು ಎಂದು ಓ ಪೈಗಂಬರರೇ ನೀವು ಇವರೊಂದಿಗೆ ಕೇಳಿರಿ. ಆ ಕೂಡಲೇ ಅವರು 'ಅಲ್ಲಾಹ್' ಎಂದೇ ಹೇಳುವರು! ಹಾಗಾದರೆ ನೀವು (ಆ ಅಲ್ಲಾಹ್ ನಿಗೆ) ಏಕೆ ಭಯಭಕ್ತಿ ತೋರುವುದಿಲ್ಲ ಎಂದೂ ಕೇಳಿರಿ. {31}

ಹೌದು, ಅವನೇ ಅಲ್ಲಾಹ್ ನು! ಪರಮ ಸತ್ಯವಾದ ನಿಮ್ಮ ದೇವನು! ಪರಮಸತ್ಯವನ್ನು ಬಿಟ್ಟರೆ ಉಳಿಯುವುದು ಭ್ರಷ್ಟತೆಯಲ್ಲದೆ ಇನ್ನೇನು? ಹಾಗಿರುವಾಗ (ಸತ್ಯವನ್ನು ಬಿಟ್ಟು) ನೀವು ಅದೆತ್ತ ತಿರುಗಿರುವಿರಿ!? {32}

(ಪೈಗಂಬರರೇ ನೀವು ನೋಡಿ,) ಹಾಗೆ, 'ಸತ್ಯವನ್ನು ಅವರು ಒಪ್ಪಲಾರರು' ಎಂದು ನಿಮ್ಮ ಕರ್ತಾರನು ಹೇಳಿದ್ದ ಮಾತು ಅವಿಧೇಯರಾದ ಈ ಜನರ ಕುರಿತಂತೆ ಸತ್ಯವಾಗಿ ಸಾಬೀತಾಗಿದೆ! {33}

ನೀವು ಯಾರಿಗೆ (ಅಲ್ಲಾಹ್ ನ ದೇವತ್ವದಲ್ಲಿ) ಪಾಲುದಾರಿಕೆ ಕಲ್ಪಿಸಿರುವಿರೋ ಅವರಲ್ಲಿ ಯಾರಾದರೂ ಸೃಷ್ಟಿ ಕಾರ್ಯವನ್ನು ಆರಂಭಿಸುವ ಮತ್ತು ಅದನ್ನು ಮುಂದುವರಿಸುವ ಸಾಮರ್ಥ್ಯ ಪಡೆದಿರುವರೇ ಎಂದು ಅವರೊಡನೆ ಕೇಳಿರಿ. ಅಲ್ಲಾಹ್ ನು (ಶೂನ್ಯದಿಂದ) ಸೃಷ್ಟಿ ಕಾರ್ಯಕ್ಕೆ ಮೊದಲುಮಾಡುತ್ತಾನೆ; ಮತ್ತು ಸೃಷ್ಟಿಸುವುದನ್ನು ಮುಂದುವರಿಸುತ್ತಾನೆ, ಪುನರಾರಂಭಿಸುತ್ತಾನೆ! [ಸೃಷ್ಟಿಕರ್ತನಾದ ಅಲ್ಲಾಹ್ ನ ವಿಷಯದಲ್ಲಿ] ನೀವು ಮೋಸ ಹೋದುದಾದರೂ ಹೇಗೆ ಎಂದು ಪೈಗಂಬರರೇ ನೀವು ಅವರನ್ನು ಕೇಳಿರಿ. {34}

ನೀವೇ ಮಾಡಿಕೊಂಡಿರುವ ಈ ಎಲ್ಲ (ಮಿಥ್ಯ) ಸಹಾಯಕ ದೇವರುಗಳಲ್ಲಿ ಯಾರಾದರೂ ನಿಮ್ಮನ್ನು ಸತ್ಯದೆಡೆಗೆ ಕೊಂಡೊಯ್ಯುತ್ತಾರೆಯೇ ಎಂದೂ ಅವರನ್ನು ಪ್ರಶ್ನಿಸಿ. ಅಲ್ಲಾಹ್ ನು ಮಾತ್ರ ಜನರನ್ನು ಸತ್ಯದೆಡೆಗೆ ಮಾರ್ಗದರ್ಶನ ಮಾಡುತ್ತಾನೆ ಎಂಬ (ವಾಸ್ತವಿಕತೆಯನ್ನು, ಪೈಗಂಬರರೇ) ನೀವು ಅವರಿಗೆ ತಿಳಿಸಿ. ಮಾತ್ರವಲ್ಲ, ಅನುಸರಣೆಗೆ ಹೆಚ್ಚು ಅರ್ಹನಾದವನು ಅನುಯಾಯಿಗಳನ್ನು ಸತ್ಯದೆಡೆಗೆ ಮಾರ್ಗದರ್ಶನ ಮಾಡಲು ಸಮರ್ಥನಾದವನೋ ಅಥವಾ ಇನ್ನೊಬ್ಬರು ಮಾರ್ಗದರ್ಶನ ಮಾಡದಿದ್ದರೆ ಸ್ವಯಂ ಸರಿದಾರಿ ಕಂಡುಕೊಳ್ಳಲು ಸಾಧ್ಯವಿಲ್ಲದವನೋ - ನೀವೇ ಹೇಳಿ! ನಿಮಗೇನಾಗಿದೆ? ನಿಮ್ಮದು ಅದು ಯಾವ ರೀತಿಯ ತೀರ್ಮಾನ?! {35}

ಅವರಲ್ಲಿ ಹೆಚ್ಚಿನವರು ಅನುಸರಿಸುತ್ತಿರುವುದು ಕೇವಲ ಊಹಾಪೋಹಗಳನ್ನಲ್ಲದೆ ಮತ್ತೇನನ್ನೂ ಅಲ್ಲ. ಖಂಡಿತವಾಗಿ ಊಹಾಪೋಹಗಳು ವಾಸ್ತವಿಕತೆಯನ್ನು ಕಂಡುಕೊಳ್ಳಲು ಕಿಂಚಿತ್ತೂ ಪ್ರಯೋಜನಕಾರಿಯಾಗದು. ಅವರೆಸಗುತ್ತಿರುವ ಎಲ್ಲ ಕೃತ್ಯಗಳ ಬಗ್ಗೆ ಅಲ್ಲಾಹ್ ನು ಬಹಳ ಚೆನ್ನಾಗಿ ಬಲ್ಲನು. {36}

ಆ ಅಲ್ಲಾಹ್ ನಲ್ಲದೆ ಬೇರೆ ಯಾರಾದರೂ ರಚಿಸಬಹುದಾದ ಒಂದು ಕೃತಿಯಲ್ಲ ಈ ಕುರ್‌ಆನ್! ಅದೂ ಅಲ್ಲದೆ ಇದಕ್ಕಿಂತ ಮುಂಚಿನ [ದಿವ್ಯಗ್ರಂಥಗಳಲ್ಲಿ ಇದರ ಬಗೆಗಿರುವ ಭವಿಷ್ಯವಾಣಿಯನ್ನು] ಇದು ನಿಜಗೊಳಿಸಿದೆ ಹಾಗೂ ದೇವಾದೇಶಗಳನ್ನೂ ಇದು ವಿವರಿಸುತ್ತಿದೆ. ಇದು ಸಕಲ ಲೋಕ ವಾಸಿಗಳ ದೇವನಾದ ಅಲ್ಲಾಹ್ ನ ಕಡೆಯಿಂದ ಬಂದಿದೆ ಎಂಬ ವಿಷಯದಲ್ಲಿ ಸಂಶಯವೇ ಇಲ್ಲ. {37}

ಇನ್ನು ಇದನ್ನು ಪೈಗಂಬರರು ಸ್ವತಃ ರಚಿಸಿರುತ್ತಾರೆ ಎಂದು ಅವರು ಹೇಳುತ್ತಿದ್ದಾರೆಯೇ? ಹಾಗಾದರೆ, ಇಂತಹ ಒಂದು ಅಧ್ಯಾಯವನ್ನು ನೀವೂ ರಚಿಸಿ ತನ್ನಿ; ಅದನ್ನು ಸಾಧಿಸಲು ಆ ಅಲ್ಲಾಹ್ ನನ್ನು ಬಿಟ್ಟು ನಿಮ್ಮಿಂದ ಸಾಧ್ಯವಾಗುವ ಎಲ್ಲರನ್ನೂ ಕರೆದು ಕೊಳ್ಳಿ; ನೀವು ಸತ್ಯವಂತರು ಹೌದಾದರೆ (ಅದನ್ನು ಮಾಡಿ ತೋರಿಸಿ) ಎಂದು ಪೈಗಂಬರರೇ ಅವರಿಗೆ ಪಂಥಾಹ್ವಾನ ನೀಡಿರಿ. {38}

ಆದರೆ ಅವರು ನಿರಾಕರಿಸುತ್ತಿರುವುದು ತಮ್ಮ ಅರಿವಿನಿಂದ ಸಂಪೂರ್ಣವಾಗಿ ಗ್ರಹಿಸಿಕೊಳ್ಳಲಾಗದ ವಿಚಾರಗಳನ್ನು; ಯಾವುದರ ಯಾತಾರ್ಥ್ಯವನ್ನು ಅವರ ಮುಂದೆ ಇನ್ನೂ ವ್ಯಕ್ತಪಡಿಸಲಾಗಿಲ್ಲವೋ ಅಂತಹವುಗಳನ್ನು! ಅವರಿಗಿಂತ ಮೊದಲು ಗತಿಸಿಹೋದವರೂ ಅವರ ಹಾಗೆಯೇ ನಿರಾಕರಿಸಿ ಬಿಟ್ಟಿದ್ದರು! [ತಮ್ಮ ಅರಿವಿನಿ ಇತಿಮಿತಿಗಳನ್ನು ತಿಳಿಯದ] ಅಂತಹ ದುಷ್ಟ ಜನರ ಪರಿಣಾಮ ಏನಾಯಿತು ಎಂದು ನೀವೇ ನೋಡಿ. {39}

ಅವರಲ್ಲಿ ಕೆಲವರು (ಕ್ರಮೇಣ) ಈ ಕುರ್‌ಆನ್ ಅನ್ನು ಒಪ್ಪಿಕೊಳ್ಳುವರು; ಇನ್ನು ಕೆಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ [ಮಾತ್ರವಲ್ಲ, ಜನರ ಮನಸ್ಸನ್ನು ಕೆಡಿಸಲಿರುವರು]. ಅಂತಹ ಕಿಡಿಗೇಡಿಗಳ ಕುರಿತು ಪೈಗಂಬರರೇ ನಿಮ್ಮ ಕರ್ತನಿಗೆ ಚೆನ್ನಾಗಿ ತಿಳಿದಿದೆ. {40}

ಅದಾಗ್ಯೂ ಅವರು ನಿಮ್ಮನ್ನು ಅಲ್ಲಗಳೆದರೆ, ನಾನು ನನ್ನ ಕೆಲಸ ಮಾಡುತ್ತಿರುತ್ತೇನೆ ಮತ್ತು ನೀವು ನಿಮ್ಮದೇ ಕೃತ್ಯಗಳನ್ನು ಮಾಡುತ್ತಲಿರಿ; ನಾನು ಮಾಡುವುದರ ಹೊಣೆಗಾರಿಕೆ ನಿಮ್ಮ ಮೇಲಿಲ್ಲ, ಹಾಗೆಯೇ ನೀವೆಸಗುವ ಕೃತ್ಯಗಳಿಗೆ ನಾನೂ ಹೊಣೆಗಾರನಲ್ಲ ಎಂದು ಪೈಗಂಬರರೇ ನೀವು (ಹೊಣೆವಿಮುಕ್ತತೆಯನ್ನು) ಅವರಿಗೆ ಘೋಷಿಸಿ ಬಿಡಿ. {41}

[ಪೈಗಂಬರರೇ, ನೀವು ನಿಶ್ಚಿಂತರಾಗಿ ದೌತ್ಯವನ್ನು ಮುಂದುವರಿಸಿ. ಏಕೆಂದರೆ] ಅವರಲ್ಲಿ ಕೆಲವರು ನಿಮ್ಮ ಮಾತಿಗೆ ಕಿವಿಗೊಡುತ್ತಲಿದ್ದಾರೆ. ಹಾಗಿರುವಾಗ ನೀವೇನು ಅರ್ಥಮಾಡಿಕೊಳ್ಳಲು ತಯಾರಿಲ್ಲದ ಕಿವುಡರನ್ನು ಕೇಳಿಸುವಿರಾ? {42}

ಹಾಗೆಯೇ ಅವರಲ್ಲಿ ಕೆಲವರು ನಿಮ್ಮತ್ತ ನೋಡುತ್ತಲೂ ಇದ್ದಾರೆ. ಹಾಗಿರುವಾಗ ನೀವೇನು ನೋಡಲು ಸರ್ವಥಾ ಸಿದ್ಧರಿಲ್ಲದ ಕುರುಡರಿಗೆ ದಾರಿ ತೋರಿಸುವಿರಾ? {43}

ಅಲ್ಲಾಹ್ ನು ಜನರಿಗೆ ಕಿಂಚಿತ್ತೂ ಅನ್ಯಾಯ ಮಾಡುವುದಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಜನರು ಮಾತ್ರ ತಮಗೆ ತಾವೇ ಅನ್ಯಾಯ ಮಾಡಿಕೊಳ್ಳುತ್ತಾರೆ. {44}

(ವಿಚಾರಣೆಗಾಗಿ) ಅವರನ್ನೆಲ್ಲ ಅಲ್ಲಾಹ್ ನು ಒಟ್ಟು ಸೇರಿಸಲಿರುವ ದಿನ (ಭೂಲೋಕದಲ್ಲಿ ನಾವು) ತಂಗಿದ್ದುದು ಒಂದು ಹಗಲಿನ ತುಸು ಸಮಯ ಮಾತ್ರ (ಎಂದು ಅವರಿಗೆ ಭಾಸವಾಗುವುದು). ಅವರಿಗೆ ಪರಸ್ಪರರ (ಒಡನಾಟದಲ್ಲಿದ್ದವರ) ಪರಿಚಯ ಸಿಗುವುದು. ಅಲ್ಲಾಹ್ ನನ್ನು ಭೇಟಿಯಾಗಲಲಿಕ್ಕಿದೆ ಎಂಬ ವಾಸ್ತವವನ್ನು ಅಲ್ಲಗಳೆದವರು ವಿಜಕ್ಕೂ ನಷ್ಟಕ್ಕೀಡಾದರು! ಅವರು ಮಾರ್ಗದರ್ಶನ ಪಡೆಯುವವರಾಗಿರಲಿಲ್ಲ. {45}

ನಾವು ಅವರಿಗೆ ಮುನ್ನೆಚ್ಚರಿಕೆ ನೀಡಿದುದರಲ್ಲಿ ಕೆಲವನ್ನು (ಪೈಗಂಬರರೇ) ನೀವು ಕಾಣಲೂ ಬಹುದು; ಅಥವಾ ಅದಕ್ಕಿಂತ ಮುಂಚೆಯೇ ನಾವು ನಿಮಗೆ ಮರಣ ನೀಡಬಹುದು! ಹೇಗಿದ್ದರೂ ಅವರಿಗೆ ಮರಳಲಿಕ್ಕಿರುವುದು ಮಾತ್ರ ನಮ್ಮ ಬಳಿಗೆ. ನಿಮ್ಮ ನಂತರ ಸ್ವತಃ ಅಲ್ಲಾಹ್ ನೇ ಅವರೆಸಗುವ ಕೃತ್ಯಗಳಿಗೆ ಸಾಕ್ಷಿಯಾಗಲಿರುವನು! {46}

[ಇವರಿಗೆ ಮಾತ್ರವಲ್ಲ! ಯಥಾರ್ಥದಲ್ಲಿ] ಪ್ರತಿಯೊಂದು ಸಮುದಾಯಕ್ಕೂ ಒಬ್ಬ ನಿಯುಕ್ತಗೊಂಡ ದೂತನಿರುತ್ತಾನೆ! ಅಂತಹ ದೂತನು ಆಯಾ ಸಮುದಾಯತ್ತ ಬಂದು (ತನ್ನ ದೌತ್ಯವನ್ನು ಪೂರ್ಣಗೊಳಿಸಿ) ಬಿಟ್ಟರೆ ಅತ್ಯಂತ ನ್ಯಾಯಯುತವಾಗಿ ಅವರ ವಿಷಯದಲ್ಲಿ (ಭೂಲೋಕದಲ್ಲೇ) ತೀರ್ಮಾನ ಮಾಡಿ ಬಿಡುವುದು (ನಮ್ಮ ಸಂಪ್ರದಾಯ)! ಅವರ ಮೇಲೆ ಸ್ವಲ್ಪವೂ ಅನ್ಯಾಯವಾಗಲಾರದು. {47}

(ಹೌದೇನು?) ನೀವು ಹೇಳುತ್ತಿರುವುದರಲ್ಲಿ ಸತ್ಯವಿದ್ದರೆ ನಿಮ್ಮ ಆ ಬೆದರಿಕೆ ನಮ್ಮ ಮೇಲೆ (ಶಿಕ್ಷೆಯಾಗಿ) ಪರಿಣಮಿಸುವುದು ಯಾವಾಗ ಎಂದು [ಅಲ್ಲಗಳೆಯುತ್ತಾ] ಅವರು ಕೇಳುತ್ತಾರೆ! {48}

(ನಾನೇನು ಹೇಳಲಿ)! ಅಲ್ಲಾಹ್ ನು ಬಯಸದೆ ಸ್ವತಃ ನನ್ನ ಜೀವಕ್ಕೂ ಯಾವುದೇ ಲಾಭವಾಗಲಿ ನಷ್ಟವಾಗಲಿ ಮಾಡಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ. [ನೀವು ಆತುರ ಪಡಬೇಡಿ. ಏಕೆಂದರೆ ಅಲ್ಲಾಹ್ ನ ಬಳಿ] ಪ್ರತಿಯೊಂದು ಸಮುದಾಯಕ್ಕೂ ಒಂದು ಸಮಯಾವಧಿ ನಿಶ್ಚಿತವಾಗಿದೆ. ಆ ಸಮಯ ಬಂದು ಬಿಟ್ಟರೆ ಅದನ್ನು ಒಂದು ಘಳಿಗೆ ಹಿಂದೆ ಮುಂದೆ ಸರಿಸಿಕೊಳ್ಳಲು ಅವರಿಗೆ ಸಾಧ್ಯವಾಗದು ಎಂದು ಪೈಗಂಬರರೇ [ಈ ವಿಷಯದಲ್ಲಿ ನಿಮ್ಮ ಅಸಹಾಯಕತೆ] ಅವರಿಗೆ ಸ್ಪಷ್ಟವಾಗಿ ತಿಳಿಸಿರಿ. {49}

ಒಂದು ವೇಳೆ ಅಲ್ಲಾಹ್ ನ ಶಿಕ್ಷೆ ಹಠಾತ್ತಾಗಿ ರಾತ್ರಿಯ ಹೊತ್ತು ಅಥವಾ ಹಾಡುಹಗಲಲ್ಲೇ ನಿಮ್ಮ ಮೇಲೆ ಬಂದೆರಗಿದರೆ ಅದನ್ನು ಹೇಗೆ ಎದುರಿಸಬೇಕೆಂದು ನೀವು ಕಂಡುಕೊಂಡಿರುವಿರಾ ಎಂದು ಅವರೊಂದಿಗೆ ಕೇಳಿರಿ. ಈ ಕಿಡಿಗೇಡಿಗಳು ಅದಕ್ಕಾಗಿ ಅತುರ ಪಡಲು ಅದೇನು ಕಾರಣವೋ! {50}

ಅದು ಬಂದೆರಗಿದ ಮೇಲಷ್ಟೇ ನೀವು (ನಮ್ಮ ಮುನ್ನೆಚ್ಚರಿಕೆಯನ್ನು) ನಂಬುವಿರಾ? [ಮುಂದೆ ಅವರನ್ನು ಶಿಕ್ಷೆ ಆವರಿಸಿಕೊಂಡಾಗ ಅವರು ಅನಿವಾರ್ಯವಾಗಿ ನಂಬಬೇಕಾಗುತ್ತದೆ]. ಈಗ ನೀವು ನಂಬುವುದೇ? ಅದು ಬೇಗನೆ ಬಂದು ಬಿಡಲಿ ಎಂದು ಈ ಮೊದಲು ನೀವು ಆತುರ ಪಡುತ್ತಿದ್ದಿರಿ! {51}

ಈಗ ಎಂದೂ ಮುಗಿಯದ ಶಿಕ್ಷೆಯ ಸವಿಯುಣ್ಣಿರಿ; ನಿಮ್ಮ ದುಡಿತಕ್ಕೆ ತಕ್ಕ ಫಲವಲ್ಲದೆ ಬೇರೇನಾದರೂ ನಿಮಗೆ ಸಿಗಲಿದೆಯೇನು ಎಂದು ಅಕ್ರಮವೆಸಗಿದ ಜನರಿಗೆ (ಅಂದು) ಹೇಳಲಾಗುವುದು. {52}

ಅದು ನಿಜವಾದ ವಿಷಯವೇ ಎಂದು (ವ್ಯಂಗ್ಯವಾಗಿ) ಅವರು ನಿಮ್ಮೊಂದಿಗೆ ವಿಚಾರಿಸುತ್ತಿದ್ದಾರೆ! ಹೌದು, ನನ್ನ ಕರ್ತನಾಣೆ ಅದು ಅತ್ಯಂತ ದಿಟವಾದ ಸಂಗತಿಯೇ ಸರಿ; ಮಾತ್ರವಲ್ಲ (ನಿಮ್ಮ ಈ ವ್ಯಂಗ್ಯದಿಂದ) ನೀವು ಅದನ್ನು ಮಣಿಸಲಾರಿರಿ ಎಂದು (ಪೈಗಂಬರರೇ) ಅವರಿಗೆ ತಿಳಿಸಿ ಬಿಡಿ. {53}

ಅನ್ಯಾಯವೆಸಗಿದ್ದ ಪ್ರತಿಯೊಬ್ಬ ವ್ಯಕ್ತಿಗೂ (ಅಂದು) ಭೂಲೋಕದ ಸಕಲ ಸಂಪತ್ತು ಲಭ್ಯವಿರುತ್ತಿದ್ದರೆ, ಶಿಕ್ಷೆಯನ್ನು ಕಣ್ಣಾರೆ ಕಾಣುವಾಗ ಅದೆಲ್ಲವನ್ನೂ ಪ್ರಾಯಶ್ಚಿತ್ತವಾಗಿ ನೀಡಿ ತನಗಾಗಲಿರುವ ಅವಹೇಳನವನ್ನು ಅವನು ಬಚ್ಚಿಡುತ್ತಿದ್ದನು. [ಆದರೆ ಅಂದು ಅದು ಸಾಧ್ಯವಾಗದು]. ಅವರ ವಿಷಯದಲ್ಲಿ ಅತ್ಯಂತ ನ್ಯಾಯೋಚಿತವಾದ ತೀರ್ಪನ್ನು ನೀಡಲಾಗುವುದು; ಅಂದರೆ ಅವರೊಂದಿಗೆ ನ್ಯಾಯ ತಪ್ಪಿ ವರ್ತಿಸಲಾಗದು. {54}

ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ, ಈ ಭೂಮಿ ಮತ್ತು ಆಕಾಶಗಳಲ್ಲಿರುವ ಸಕಲವೂ ಅಲ್ಲಾಹ್ ನದಾಗಿದೆ. ಅಲ್ಲಾಹ್ ನ ವಾಗ್ದಾನವು ಪರಮ ಸತ್ಯವಾದುದು ಎಂಬ ವಾಸ್ತವವನ್ನೂ ಚೆನ್ನಾಗಿ ಅರಿತುಕೊಳ್ಳಿ. ಆದರೆ ಅವರಲ್ಲಿ ಹೆಚ್ಚಿನ ಜನರು ತಿಳಿಯುವವರಲ್ಲ. {55}

ಅವನೇ ಜೀವನ ನೀಡುವವನು; ಮರಣ ನೀಡುವವನೂ ಅವನೇ. ನೀವೆಲ್ಲ ಕೊನೆಯದಾಗಿ ಮರಳಲಿರುವುದು ಅವನೆಡೆಗೇ. {56}

ಓ ಜನರೇ, ನಿಮ್ಮ ಕರ್ತನ ಕಡೆಯಿಂದ ಬರಬೇಕಾದ ಉಪದೇಶವು (ಈ ಕುರ್‌ಆನ್ ನ ರೂಪದಲ್ಲಿ) ನಿಮ್ಮೆಡೆಗೆ ಬಂದು ಬಿಟ್ಟಿದೆ; ಅದು ಹೃದಯಳಿಗೆ ತಗುಲುವ [ದರ್ಪ, ಅಹಂಕಾರ, ಧಿಕ್ಕಾರಗಳಂತಹ ಎಲ್ಲ] ವ್ಯಾಧಿಗಳಿಗೆ ಪರಿಹಾರವಾಗಿದೆ. ವಿಶ್ವಾಸಿಗಳಿಗೆ ಅದು ಮಾರ್ಗದರ್ಶಿಯೂ ಹೌದು, ಒಂದು ಅನುಗ್ರಹವೂ ಹೌದು. {57}

ಅದನ್ನು ಕಳುಹಿಸಿರುವುದು ಅಲ್ಲಾಹ್ ನ ಕೃಪೆಯೂ ಅನುಗ್ರಹವೂ ಆಗಿದೆ ಎಂದು ಪೈಗಂಬರರೇ ನೀವು ಅವರಿಗೆ ತಿಳಿಸಿ ಬಿಡಿ. ಅವರು ಅದಕ್ಕಾಗಿ ಸಂತೋಷ ಪಡಲಿ. ಅವರು ಸಂಗ್ರಹಿಸುತ್ತಿರುವ (ಭೂಲೋಕದ) ಸಕಲ ವಸ್ತುಗಳಿಗಿಂತ ಅದು ಶ್ರೇಷ್ಠವಾದುದು. {58}

ಪೈಗಂಬರರೇ, ಅವರೊಂದಿಗೆ ಕೇಳಿ; ನಿಮಗಾಗಿ ಅಲ್ಲಾಹ್ ನು ಒದಗಿಸಿಕೊಟ್ಟ ಅನ್ನಾಹಾರಗಳಲ್ಲಿ ಕೆಲವನ್ನು ನಿಷಿದ್ಧವೆಂದೂ ಕೆಲವನ್ನು ಸಮ್ಮತವೆಂದೂ ನೀವೇ ತೀರ್ಮಾನಿಸಿ ಕೊಂಡಿರುವ ವಿಷಯ ನಿಮ್ಮ ಗಮನದಲ್ಲಿದೆ ತಾನೆ? ಹಾಗೆ ಮಾಡಲು ನಿಮಗೆ ಅಲ್ಲಾಹ್ ನು ಆದೇಶ ನೀಡಿದ್ದನೋ ಅಥವಾ (ಅಂತಹ ಕಟ್ಟಳೆಯನ್ನು) ಸ್ವತಃ ರೂಪಿಸಿ ಅದನ್ನು ಅಲ್ಲಾಹ್ ನ ಮೇಲೆ ನೀವು ಆರೋಪಿಸಿತ್ತಿರುವಿರೋ ಎಂದೂ ಅವರನ್ನು ಪ್ರಶ್ನಿಸಿ. {59}

ಸುಳ್ಳುಗಳನ್ನು ಸ್ವತಃ ಸೃಷ್ಟಿಸಿ ಅಲ್ಲಾಹ್ ನ ಮೇಲೆ ಆಪಾದಿಸಿ ಬಿಡುವ ಇವರು ಕಿಯಾಮತ್ [ಅರ್ಥಾತ್ ವಿಚಾರಣೆ ಮತ್ತು ಪ್ರತಿಫಲದ] ದಿನದ ಕುರಿತು ಅದೇನೆಂದು ಭಾವಿಸುರುವರೋ! [ಅಂತಹ ಘೋರ ಅಪರಾಧಕ್ಕಾಗಿ ಇವರ ಕತೆ ಈಗಿಂದೀಗಲೇ ಮುಗಿಯಬೇಕಿತ್ತು. ಆದರೆ] ನಿಜವಾಗಿ ಅಲ್ಲಾಹ್ ನು ಜನರ ಪಾಲಿಗೆ ಬಹಳ ದಯೆವುಳ್ಳವನಾಗಿರುವನು; ಹಾಗಿದ್ದರೂ ಹೆಚ್ಚಿನವರು ಅವನಿಗೆ ಕೃತಜ್ಞತೆ ತೋರುವುದಿಲ್ಲ! {60}

[ಪೈಗಂಬರರೇ, ನೀವು ಅಂತಹ ದುಷ್ಟರನ್ನು ಸಂಪೂರ್ಣವಾಗಿ ಕಡೆಗಣಿಸಿ ನಿಮ್ಮ ದೌತ್ಯದಲ್ಲಿ ಮುಂದೆ ಸಾಗುತ್ತಲಿರಿ. ಏಕೆಂದರೆ] ನೀವು ಎಂತಹ ಸ್ಥಿತಿಯಲ್ಲಿರುವಾಗಲೂ - ಅಂದರೆ ಅಲ್ಲಾಹ್ ನಿಂದ ಬಂದ ಕುರ್‌ಆನ್ ನ ಭಾಗವನ್ನು ಓದಿ ಕೇಳಿಸುವುದಾಗಲಿ ಅಥವಾ ನೀವು (ಮತ್ತು ನಿಮ್ಮ ಸಂಗಾತಿಗಳು) ಇನ್ನಾವುದೇ ಕೆಲಸಗಳಲ್ಲಿ ತೊಡಗಿರುವುದಾಗಲಿ - ನೀವು ಕಾರ್ಯ ನಿರತರಾಗಿರುವಾಗ ನಾವು ಅದಕ್ಕೆ ಸಾಕ್ಷಿಯಾಗದೆ ಇರಲಾರೆವು! ಅಣುವಿನ ಒಂದಂಶದಷ್ಟು ತೂಗುವ ವಸ್ತು ಕೂಡ ನಿಮ್ಮ ಒಡೆಯನಿಂದ ಅವಿತಿರಲಾರದು; ಮಾತ್ರವಲ್ಲ, ಅದಕ್ಕಿಂತ ಚಿಕ್ಕದಿರಲಿ ದೊಡ್ಡದಿರಲಿ, ಭೂಮಿ-ಆಕಾಶಗಳಲ್ಲಿರುವ ಯಾವುದೂ ಒಂದು ಸ್ಪಷ್ಟವಾದ ದಾಖಲೆಯಿಂದ ಹೊರತಾಗಿಲ್ಲ. {61}

(ಜನರೇ) ನಿಮಗೆ ತಿಳಿದಿರಲಿ, ನಿಜವಾಗಿ ಅಲ್ಲಾಹ್ ನ ಮಿತ್ರರಿಗೆ [ಅರ್ಥಾತ್ ಪೈಗಂಬರರು ಮತ್ತು ಅವರ ಸಂಗಾತಿಗಳಿಗೆ] ಭಯಾತಂಕಗಳು ಎದುರಾಗುವುದಿಲ್ಲ; ಅವರು ವ್ಯಥೆಪಡಬೇಕಾದ ಸನ್ನಿವೇಶವೂ ಇಲ್ಲ. {62}

ಅವರು ವಿಶ್ವಾಸಿಗಳಾಗಿಯೂ, ಭಯಭಕ್ತಿ ಪಾಲಿಸುವವರಾಗಿಯೂ ಜೀವಿಸಿದವರು. {63}

ಅಂತಹವರಿಗೆ ಇಹಲೋಕ ಜೀವನ ಮತ್ತು ಪರಲೋಕ ಜೀವನಗಳಿಗೆ ಸಂಬಂಧಿಸಿದಂತೆ ಶುಭವಾರ್ತೆ ಇದೆ. (ಹೌದು, ಇದು ಅಲ್ಲಾಹ್ ನು ಕೊಟ್ಟ ಮಾತು). ಅಲ್ಲಾಹ್ ನ ಮಾತುಗಳು ಬಾದಲಾಗುವುದಿಲ್ಲ. ವಿಜಯಗಳಲ್ಲಿ ಅದೇ ಅತ್ಯಂತ ಮಹತ್ತರವಾದ ವಿಜಯ. {64}

(ಪೈಗಂಬರರೇ,) ಆ ಜನರು ಆಡಿಕೊಳ್ಳುವ ಮಾತುಗಳು ನಿಮ್ಮನ್ನು ಸಂಕಟಕ್ಕೀಡು ಮಾಡದಿರಲಿ. ಸಕಲ ರೀತಿಯ ಪ್ರತಾಪ-ಘನತೆಗಳು ಅಲ್ಲಾಹ್ ನದ್ದಾಗಿದೆ (ಎಂಬುದು ನಿಮಗೆ ತಿಳಿದೇ ಇದೆ). ಅವನು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾನೆ; ಅವನಿಗೆ ಸಕಲ ವಿಷಯಗಳ ಜ್ಞಾನವಿದೆ. {65}

ನೀವು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ, [ಅಲ್ಲಾಹ್ ನ ದೇವತ್ವದಲ್ಲಿ ಯಾರೂ ಭಾಗಿಗಳಲ್ಲ]! ಆಕಾಶಗಳಲ್ಲಾಗಲಿ ಭೊಮಿಯಲ್ಲಾಗಲಿ ಇರುವ ಎಲ್ಲರೂ ಅಲ್ಲಾಹ್ ನ ಒಡೆತನಕ್ಕೆ ಸೇರಿರುವರು! ಅಲ್ಲಾಹ್ ನನ್ನು ಬಿಟ್ಟು (ಅವನಿಗೆ ತಾವೇ ಕಲ್ಪಿಸಿಕೊಂಡ) ಸಹಭಾಗಿಗಳಿಗೆ ಮೊರೆಯಿಡುವ ಈ ಜನರು ಅನುಸರಿಸುವ ಮಾರ್ಗವಾದರೂ ಯಾವುದು!? ಇವರು ಅನುಸರಿಸುತ್ತಿರುವುದು ತಮ್ಮದೇ ಊಹೆಗಳನ್ನಲ್ಲದೆ ಬೇರೇನನ್ನೂ ಅಲ್ಲ. ಈ ಜನರು ಕೇವಲ ಊಹಾಪೋಹಗಳಲ್ಲಿ ನಿರತರಾಗಿದ್ದಾರಷ್ಟೆ! {66}

ನೀವು ವಿಶ್ರಾಂತಿ ಪಡೆಯಲೆಂದು ನಿಮಗಾಗಿ ರಾತ್ರಿಯನ್ನು ಸೃಷ್ಟಿಸಿದವನು ಮತ್ತು (ಚಟುವಟಿಕೆಗಳಿಂದ ಕೂಡಿರಲು ನಿಮಗಾಗಿ) ಹಗಲನ್ನು ಬೆಳಗಿಸಿದವನು ಆ ಅಲ್ಲಾಹ್ ನೇ! ಕಿವಿಗೊಟ್ಟು ಆಲಿಸುವ ಒಂದು ಜನತೆಗೆ ಇದರಲ್ಲಿ ಖಂಡಿತವಾಗಿಯೂ ದೃಷ್ಟಾಂತಗಳಿವೆ. {67}

ಅಲ್ಲಾಹ್ ನು ತನಗೊಬ್ಬ ಪುತ್ರನನ್ನು ಮಾಡಿಕೊಂಡಿರುವನು ಎಂದು ಅವರು ಆಪಾದಿಸಿದ್ದಾರೆ. [ಛೆ! ಎಂತಹ ಅಪವಿತ್ರ ಮಾತದು!] ಅವನು ಅದೆಷ್ಟು ಪಾವನನು! ಅವನು ಅಂತಹ ಯಾವ ಅನಿವಾರ್ಯತೆಗಳೂ ಇಲ್ಲದವನು; ಸ್ವಯಂ ಪರಿಪೂರ್ಣನು. ಆಕಾಶಗಳಲ್ಲಿ ಮತ್ತು ಭೊಮಿಯಲ್ಲಿ ಇರುವ ಸಮಸ್ತವೂ ಅವನದ್ದಾಗಿವೆ. ಅಂತಹ [ಅಪವಿತ್ರ ಮಾತು ಹೇಳಲು] ನಿಮ್ಮ ಬಳಿ ಪ್ರಮಾಣವೇನಾದರೂ ಇದೆಯೇ? ಯಾವುದರ ಬಗ್ಗೆ ನಿಮಗೆ ಜ್ಞಾನವಿಲ್ಲವೋ ಅಂತಹ ವಿಷಯವನ್ನು ನೀವು ಅಲ್ಲಾಹ್ ನ ಮೇಲೆ ಆಪಾದಿಸಿ ಬಿಡುವುದೇ?! {68}

ಸುಳ್ಳುಗಳನ್ನು ಹೆಣೆದು ಅಲ್ಲಾಹ್ ನ ಮೇಲೆ ಆಪಾದಿಸುವವರು ಯಾವತ್ತೂ ಯಶಸ್ಸು ಕಾಣಲಾರರು ಎಂದು ಪೈಗಂಬರರೇ ನೀವು ಅವರಿಗೆ ತಿಳಿಸಿ ಬಿಡಿ. {69}

ಭೂಲೋಕ ಜೀವನದಲ್ಲಿ ಸ್ವಲ್ಪ ಸವಲತ್ತುಗಳು ಅವರಿಗೆ ಲಭ್ಯವಿದೆಯಷ್ಟೆ; ನಂತರ ಅವರು ಮರಳಿ ಬರಬೇಕಿರುವುದು ನಮ್ಮ ಬಳಿಗೆ! ಸತ್ಯವನ್ನು ನಿರಾಕರಿಸುತ್ತಿದ್ದ ಕಾರಣಕ್ಕಾಗಿ ನಾವು ಆಗ ಅವರಿಗೆ ಅತಿ ಕಠಿಣ ಸ್ವರೂಪದ ಶಿಕ್ಷೆಯ ಸವಿಯುಣಿಸಲಿದ್ದೇವೆ! {70}

ಪೈಗಂಬರರೇ, ಪ್ರವಾದಿ ನೂಹ್ [ಅರ್ಥಾತ್ ಬೈಬಲ್ ನ ನೋವಾ] ರ ವೃತ್ತಾಂತವನ್ನು ನೀವು ಅವರ ಮುಂದೆ ವಿವರಿಸಿ. ತಮ್ಮ ಜನಾಂಗವನ್ನು ಉದ್ದೇಶಿಸಿ ಅವರು ಹೇಳಿದ್ದುದನ್ನು ನೆನಪಿಸಿ ಕೊಡಿ: ಓ ನನ್ನ ಜನಾಂಗದವರೇ, ನನ್ನ ಸ್ಥಾನಮಾನ, ನನ್ನ ಸಾನಿಧ್ಯ ಹಾಗೂ ಅಲ್ಲಾಹ್ ನ ವಚನಗಳ ಮೂಲಕ ನಾನು ನಿಮಗೆ ನೀಡುತ್ತಿರುವ ಉಪದೇಶವು ನಿಮಗೆ ದುರ್ಭರವಾಗಿ ಪರಿಣಮಿಸುತ್ತಿದೆ ಎಂದಾದರೆ, (ನಿಮಗೆ ತಿಳಿದಿರಲಿ) ನಾನು ಅಲ್ಲಾಹ್ ನ ಮೇಲೆ ಸಂಪೂರ್ಣವಾದ ಭರವಸೆ ಇಟ್ಟಿರುತ್ತೇನೆ! ಆದ್ದರಿಂದ ನೀವು (ನೀವೇ ಮಾಡಿಕೊಂಡ) ನಿಮ್ಮ ದೇವರುಗಳನ್ನೂ ಸೇರಿಸಿಕೊಂಡು (ನನ್ನ ವಿರುದ್ಧ) ತಂತ್ರೋಪಾಯಗಳನ್ನು ರೂಪಿಸಬಹುದು. ನಿಮ್ಮ ಆ ತಂತ್ರೋಪಾಯಗಳು (ಕಾರ್ಯಗತಗೊಳ್ಳುವ ಬಗ್ಗೆ) ನಿಮಗೆ ಸಂದೇಹವಿರದಂತೆ ನೋಡಿಕೊಳ್ಳಿ. ಆ ಬಳಿಕ ಅದನ್ನು ನನ್ನ ವಿರುದ್ಧ ಬಳಸಿ; ನನಗೆ ನೀವು ಕಾಲಾವಕಾಶ ಕೊಡಲೇ ಬೇಡಿ! {71}

ಇನ್ನು ನೀವು ತಿರಸ್ಕರಿಸಿ ಮುಖ ತಿರುಗಿಸಿಕೊಂಡರೆ (ನಿಮಗೆ ಗೊತ್ತಿರಲಿ, ಉಪದೇಶಿಸಿದ್ದಕ್ಕಾಗಿ) ನಾನು ನಿಮ್ಮಿಂದ ಯಾವ ಸಂಭಾವನೆಯನ್ನೂ ಬೇಡುತ್ತಿಲ್ಲ. ನನಗೆ ಪ್ರತಿಫಲ ಸಿಗಬೇಕಾದುದುದು ಅಲ್ಲಾಹ್ ನಿಂದಲ್ಲದೆ ಬೇರೆ ಯಾರಿಂದಲೂ ಅಲ್ಲ. ಇನ್ನು ನನಗಿರುವ ಆದೇಶವೆಂದರೆ ನಾನು ಅಲ್ಲಾಹ್ ನಿಗೆ ಮಾತ್ರ ವಿಧೇಯನಾಗಿ, ಮುಸ್ಲಿಮನಾಗಿ ಬಾಳಬೇಕು ಎಂಬುದಾಗಿದೆ. {72}

ಅಷ್ಟಾಗಿಯೂ ಅವರು ನೂಹ್ ರನ್ನು ತಿರಸ್ಕರಿಸಿಯೇ ಬಿಟ್ಟರು. ನಂತರ ನಾವು ನೂಹ್ ರನ್ನು (ಆ ಜಲಪ್ರಳಯದಿಂದ) ರಕ್ಷಿಸಿದೆವು; ಮತ್ತು ನೌಕೆಯಲ್ಲಿ ಅವರ ಜೊತೆಗಿದ್ದವರನ್ನು ಸಹ ರಕ್ಷಿಸಿದೆವು. ತದನಂತರ ಅವರನ್ನು ನಾವು ಭೂಮಿಯ ಉತ್ತರಾಧಿಕಾರ ಪಡೆವ ಪೀಳಿಗೆಗಳನ್ನಾಗಿ ಮಾಡಿದೆವು. ಅಷ್ಟೇ ಅಲ್ಲ, ನಮ್ಮ ವಚನಗಳನ್ನು ತಿರಸ್ಕರಿಸಿದವರನ್ನು ನಾವು ಮುಳುಗಿಸಿಬಿಟ್ಟೆವು! (ನಮ್ಮ ಶಿಕ್ಷೆಯ ಕುರಿತು ಅದಾಗಲೇ) ಮುನ್ನೆಚರಿಕೆ ನೀಡಲ್ಪಟ್ಟವರ ಅಂತಿಮ ಪರಿಣಾಮವು ಏನಾಯಿತೆಂದು ನೀವು ನೋಡಿರಿ. {73}

ನೂಹ್ ರ ಕಾಲದ ನಂತರವೂ ನಾವು ದೂತರುಗಳನ್ನು ಅವರವರ ಸಮುದಾಯಗಳೆಡೆಗೆ ಕಳುಹಿಸುತ್ತಿದ್ದೆವು. ಆ ದೂತರುಗಳೆಲ್ಲ ಬಹಳ ಸ್ಪಷ್ಟವಾದ ನಿದರ್ಶನಗಳ ಸಹಿತ ಅವರೆಡೆಗೆ ಬಂದಿದ್ದರು. ಆದರೆ ಯಾವುದನ್ನು ಅವರು ಹಿಂದೆ ತಿರಸ್ಕರಿಸಿ ಬಿಟ್ಟಿದ್ದರೋ ಅದನ್ನು ಸತ್ಯವೆಂದು ಅವರು ಒಪ್ಪುವವರಾಗಲಿಲ್ಲ! (ಉದ್ದೇಶಪೂರ್ವಕವಾಗಿ ಸತ್ಯದ) ಉಲ್ಲಂಘನೆಯಲ್ಲಿ ತೊಡಗಿದವರ ಹೃದಯಗಳಿಗೆ ನಾವು ಮುದ್ರೆಯೊತ್ತಿ ಬಿಡುವುದು ಹಾಗೆಯೇ! {74}

ಅವರ ನಂತರದ ಕಾಲದಲ್ಲಿ ನಾವು (ನಮ್ಮ ದೂತರುಗಳಾದ) ಮೂಸಾ ಮತ್ತು ಹಾರೂನ್ ರನ್ನು ನಮ್ಮ ದೃಷ್ಟಾಂತಗಳ ಸಹಿತ ಫಿರ್‌ಔನ್ ಮತ್ತು ಆತನ (ಆಸ್ಥಾನದ) ಮುಖ್ಯಸ್ಥರ ಬಳಿಗೆ ಕಳುಹಿಸಿದೆವು. ಅವರೂ ಸಹ ಅಹಂಕಾರವನ್ನೇ ತೋರಿದರು; ಅವರು ಪಾಪಿಗಳ ಗುಂಪಿಗೆ ಸೇರಿದವರಾಗಿದ್ದರು. {75}

ನಮ್ಮ ಬಳಿಯಿಂದ ಸತ್ಯವು ಅವರಲ್ಲಿಗೆ ತಲುಪಿದಾಗಲೆಲ್ಲ, ನಿಜವಾಗಿಯೂ ಈ (ದೃಷ್ಟಾಂತಗಳು) ಶುದ್ಧ ಜಾದೂಗಾರಿಕೆ ಮಾತ್ರ ಎಂದು ಅವರು ದೂಷಿಸಿದರು. {76}

ಸತ್ಯವು ನಿಮ್ಮ ಬಳಿಗೆ ಬಂದಾಗ ನೀವು ಅಂತಹ ಮಾತು ಹೇಳುವುದೇ? ಇದು ಜಾದೂಗಾರಿಕೆಯೇ? ಜಾದೂಗಾರರು (ಸತ್ಯದ ವಿರುದ್ಧ) ಎಂದಿಗೂ ಜಯಗಳಿಸಲಾರರು ಎಂದು ಮೂಸಾ ಅವರೊಂದಿಗೆ ಹೇಳಿದರು. {77}

ನಮ್ಮ ಪೂರ್ವಜರನ್ನು ಯಾವ ರೀತಿಯ ಆಚಾರ-ವಿಚಾರಗಳಲ್ಲಿ ನಾವು ಕಂಡಿರುವೆವೋ ಅದರಿಂದ ನಮ್ಮನ್ನು ದಾರಿಗೆಡಿಸಲು ಮತ್ತು ಈ ನಾಡಿನಲ್ಲಿ ನಿಮ್ಮಿಬ್ಬರ ಹಿರಿಮೆ ಸ್ಥಾಪಿಸಿಕೊಳ್ಳಲು ನೀವು ನಮ್ಮಲ್ಲಿಗೆ ಬಂದಿರುವಿರಿ ತಾನೆ? ನಾವಂತು ನಿಮ್ಮಿಬ್ಬರ ಮಾತನ್ನು ಸ್ವಲ್ಪವೂ ಒಪ್ಪುವುದಿಲ್ಲ ಎಂದು (ಫಿರ್‌ಔನ್ ಮತ್ತು ಆತನ ಆಸ್ಥಾನದ ಮುಖ್ಯಸ್ಥರು) ಉತ್ತರಿಸಿದರು. {78}

ನಂತರ, ನಿಷ್ಣಾತನಾದ ಪ್ರತಿಯೊಬ್ಬ ಜಾದೂಗಾರನನ್ನು ನನ್ನ ಬಳಿಗೆ ಕರೆತನ್ನಿರಿ ಎಂದು (ಆಸ್ಥಾನಿಗರಿಗೆ) ಫಿರ್‌ಔನ್ ಆಜ್ಞಾಪಿಸಿದನು. {79}

ಅಂತಹ ನಿಷ್ಣಾತ ಜಾದೂಗಾರರು ಅಲ್ಲಿಗೆ ಬಂದು ಸೇರಿದಾಗ, ನೀವು ಏನನ್ನು (ನನ್ನ ಮುಂದೆ) ಪ್ರಯೋಗಿಸಬೇಕೆಂದು ಬಯಸಿರುವಿರೋ ಅದನ್ನು ಪ್ರಯೋಗಿಸಬಹುದು ಎಂದು ಮೂಸಾ ಆಹ್ವಾನಿಸಿದರು. {80}

ಯಾವಾಗ ಆ ಜಾದೂಗಾರರು ಅದನ್ನು ಪ್ರಯೋಗಿಸಿದರೋ, ಮೂಸಾ ಅವರೊಂದಿಗೆ ಹೇಳಿದರು: [ಇವು ನಾನು ತೋರಿದಂತಹ ದಿವ್ಯ ಪವಾಡಗಳಲ್ಲ! ಬದಲಾಗಿ] ನೀವು ತಂದಿರುವುದು ಅಪ್ಪಟ ಮಾಂತ್ರಿಕ ವಿದ್ಯೆಯಾಗಿದೆ; ಅಲ್ಲಾಹ್ ನು ಈಗಿಂದೀಗಲೆ ಇದನ್ನು ನಿಷ್ಪ್ರಯೋಜಕ ಗೊಳಿಸಲಿದ್ದಾನೆ. ಮಾತ್ರವಲ್ಲ, ಪಾಪಿಗಳೆಸಗುವ ಕೃತ್ಯಗಳನ್ನು ಅಲ್ಲಾಹ್ ನು ಎಂದೂ ಸರಿಪಡಿಸಲಾರ! {81}

ಸತ್ಯವಾದುದನ್ನು ಅಲ್ಲಾಹ್ ನು ತನ್ನ ಆದೇಶಗಳ ಮೂಲಕ ಸತ್ಯವೆಂದು (ಕೂಡಲೇ) ಸಾಬೀತು ಪಡಿಸಲಿದ್ದಾನೆ; ಪಾಪಿಗಳಾದ ಈ ಜನರಿಗೆ ಅದು ಎಷ್ಟು ಅಸಹ್ಯವಾದರೂ ಸರಿ! {82}

ವಾಸ್ತವದಲ್ಲಿ ಮೂಸಾ ರನ್ನು ಅವರದೇ ವಂಶಸ್ಥರಾದ ಕೆಲವು ಯುವಕರ ಹೊರತು ಬೇರಾರೂ ನಂಬಲಿಲ್ಲಿ; ಅದೂ ಸಹ ಫಿರ್‌ಔನ್ ಮತ್ತು ತಮ್ಮದೇ ಜನಾಂಗದ ಹಿರಿಯರು ಎಲ್ಲಿ ತಮ್ಮನ್ನು ಪೀಡನೆಗೆ ಗುರಿಪಡಿಸುವರೋ ಎಂಬ ಭಯದೊಂದಿಗೆ! ಹೌದು, ಫಿರ್‌ಔನ್ ಆ ನಾಡಿನಲ್ಲಿ ಅಧಿಕಾರದ ದರ್ಪ ತೋರುತ್ತಿದ್ದನು. ಅವನು ನಿಜವಾಗಿ ಮಿತಿಮೀರಿದ (ಪ್ರಜಾಪೀಡಕರ) ಯಾದಿಗೆ ಸೇರಿದ್ದನು. {83}

ಓ ನನ್ನ ಜನತೆಯೇ, ನೀವು ಅಲ್ಲಾಹ್ ನಲ್ಲಿ ನಂಬಿಕೆ ಇರಿಸಿದವರಾದರೆ, ಮತ್ತು ಅಲ್ಲಾಹ್ ನಿಗೆ ತಮ್ಮನ್ನು ನಿಜಾರ್ಥದಲ್ಲಿ ಸಮರ್ಪಿಸಿದವರು ಹೌದಾದರೆ ಅವನ ಮೇಲೆ ಸಂಪೂರ್ಣವಾದ ಭರವಸೆಯನ್ನೂ ಇಡಿರಿ ಎಂದು ಮೂಸಾ ತಮ್ಮ ಜನತೆಗೆ ಬೋಧಿಸಿದರು. {84}

ನಾವೆಲ್ಲ ಅಲ್ಲಾಹ್ ನಲ್ಲಿ ಸಂಪೂರ್ಣ ಭರವಸೆ ಇಟ್ಟವರೇ ಆಗಿರುವೆವು! (ಆದ್ದರಿಂದ) ಓ ನಮ್ಮ ಕರ್ತಾರನೇ, ಪೀಡಕರಾದ ಈ ಜನರು ತಮ್ಮ ಪೀಡನೆಗೆ ನಮ್ಮನ್ನು ಗುರಿಪಡಿಸದಂತೆ ನೋಡಿಕೋ ಎಂದು ಅವರು ಪ್ರಾರ್ಥಿಸಿದರು. {85}

ಮಾತ್ರವಲ್ಲ, ನಿನ್ನ ಕಾರುಣ್ಯದಿಂದ ಈ ಅಧರ್ಮಿ ಜನರ (ಕಪಿಮುಷ್ಟಿಯಿಂದ) ನಮಗೆ ಮುಕ್ತಿಯನ್ನು ನೀಡು (ಎಂದೂ ಪ್ರಾರ್ಥಿಸಿದರು). {86}

ಹಾಗಿರುವಾಗ ಮೂಸಾ ಮತ್ತು ಅವರ ಸಹೋದರ (ಹಾರೂನ್) ರಿಗೆ ನಾವು ದಿವ್ಯಸಂದೇಶ ಕಳುಹಿಸಿದೆವು: ನೀವೀಗ ನಿಮ್ಮ ಜನರಿಗಾಗಿ ಮಿಸ್ರ್ ಪಟ್ಟಣದಲ್ಲಿ (ಪ್ರತ್ಯೇಕ) ವಾಸಸ್ಥಳಗಳನ್ನು ಗೊತ್ತುಮಾಡಿಕೊಳ್ಳಿ; [ಸಾರ್ವಜನಿಕವಾಗಿ ನಮಾಝ್ ನ ಪಾಲನೆ ಸದ್ಯಕ್ಕೆ ದುಸ್ತರವಾದ್ದರಿಂದ] ನಿಮ್ಮ ನಿಮ್ಮ ಮನೆಗಳನ್ನೇ ಪ್ರಾರ್ಥನೆಯ ಕೇಂದ್ರಗಳಾಗಿಸಿ ಅಲ್ಲಿ ನಮಾಝ್ ನ ಏರ್ಪಾಡು ಮಾಡಿರಿ; ಮತ್ತು [ಫಿರ್‌ಔನ್ ನ ಪೀಡನೆಯಿಂದ ಷೀಘ್ರದಲ್ಲೇ ಮುಕ್ತಿ ದೊರಕಲಿರುವ ಬಗ್ಗೆ] ವಿಶ್ವಾಸಿಗಳಿಗೆ ಶುಭವಾರ್ತೆಯನ್ನೂ ನೀಡಿರಿ (ಎಂದು ತಿಳಿಸಿದೆವು). {87}

[ದುರಹಂಕಾರ ತೋರಿದ ಫಿರ್‌ಔನ್ ಮೂಸಾರ ಉಪದೇಶವನ್ನು ಸಂಪೂರ್ಣವಾಗಿ ತಿರಸ್ಕರಿಸಿದಾಗ, ಕೊನೆಯದಾಗಿ] ಮೂಸಾ ಅಲ್ಲಾಹ್ ನೊಂದಿಗೆ ಪ್ರಾರ್ಥಿಸಿದರು: ನಮ್ಮೊಡೆಯಾ, ಫಿರ್‌ಔನ್ ಮತ್ತು ಆತನ ಆಸ್ಥಾನದ ಮುಖ್ಯಸ್ಥರಿಗೆ ನೀನು ಭೂಲೋಕ ಜೀವನದ ಸಕಲ ಬೆಡಗು-ಬಿನ್ನಾಣ ಹಾಗೂ ಸಿರಿಸಂಪತ್ತನ್ನು ಕೊಟ್ಟಿರುವೆ. ನಿನ್ನ ಮಾರ್ಗದಿಂದ ಜನರನ್ನು ದಾರಿಗೆಡಿಸಲಿಕ್ಕಾಗಿ (ಮಾತ್ರ ಅದನ್ನು ಅವರು ಬಳಸಿದರು) ನಮ್ಮೊಡೆಯಾ! ಆದ್ದರಿಂದ ಓ ನಮ್ಮ ಕರ್ತಾರನೇ, ಅವರ ಸಿರಿಸಂಪತ್ತನ್ನು ಅಳಿಸಿ ಹಾಕು; ಘೋರ ಶಿಕ್ಷೆಯನ್ನು ಕಣ್ಣಾರೆ ಕಂಡುಕೊಳ್ಳುವ ತನಕವೂ ಅವರು ವಿಶ್ವಾಸಿಗಳಾಗದಂತೆ ಅವರ ಹೃದಯಗಳನ್ನು ಕಠೋರ ಗೊಳಿಸು (ಎಂದು ಮೂಸಾ ಬೇಡಿದರು)! {88}

ನಿಮ್ಮ ಮತ್ತು ನಿಮ್ಮ ಸಹೋದರನ ಅರಿಕೆಯನ್ನು ಸ್ವೀಕರಿಸಲಾಗಿದೆ; ಆದ್ದರಿಂದ ನೀವಿಬ್ಬರೂ ಸ್ಥೈರ್ಯದಿಂದ ವರ್ತಿಸಿರಿ ಮತ್ತು ಅರಿವಿಲ್ಲದ ಜನರ ಹಾದಿಯನ್ನು ಅನುಸರಿಸಬೇಡಿರಿ ಎಂದು ಅಲ್ಲಾಹ್ ನು ಉತ್ತರಿಸಿದನು. {89}

ತರುವಾಯ (ಮೂಸಾ ಮತ್ತು ಅವರ ಜೊತೆ ನಿಂತ ವಿಶ್ವಾಸಿಗಳಾದ) ಇಸ್ರಾಈಲ್ ವಂಶಸ್ಥರನ್ನು ನಾವು ಸಮುದ್ರ ದಾಟಿಸಿ ಅತ್ತಕಡೆ ಕೊಂಡೊಯ್ದೆವು. ಕೂಡಲೇ ಆಕ್ರಮಣ ಮತ್ತು ಹಗೆತನ ಸಾಧಿಸಿಕೊಳ್ಳುವ ಉದ್ದೇಶದಿಂದ ಫಿರ್‌ಔನ್ ಮತ್ತು ಆತನ ಸೈನ್ಯದವರು ಅವರ ಬೆನ್ನಟ್ಟಿದರು. [ಅದುವರೆಗೂ ಇಬ್ಭಾಗವಾಗಿ ನಿಂತುಕೊಂಡಿದ್ದ ಸಮುದ್ರದ ನೀರು ಒಟ್ಟುಸೇರಿ] ಫಿರ್‌ಔನ್ ನಿಗೆ ಮುಳುಗುವ ಪರಿಸ್ಥಿತಿ ಬಂದಾಗ, ಇಸ್ರಾಈಲ್ ಜನರು ಯಾವ ದೇವನಲ್ಲಿ ನಂಬಿಕೆ ಇಟ್ಟಿರುವರೋ ಅವನ ಹೊರತು ಬೇರೆ ದೇವರಿಲ್ಲ ಎಂಬುದನ್ನು ನಾನೂ ಒಪ್ಪಿಕೊಂಡಿದ್ದೇನೆ, ಮಾತ್ರವಲ್ಲ ನಾನೂ ಸಹ (ಅವರಂತೆಯೇ ಅಲ್ಲಾಹ್ ನಿಗೆ) ಸರ್ವ ಸಂಪೂರ್ಣವಾಗಿ ಶರಣಾಗಿದ್ದೇನೆ ಎಂದು (ಮುಳುಗುತ್ತಿದ್ದ) ಫಿರ್‌ಔನ್ ಘೋಷಿಸಿದನು. {90}

ಈ ಕ್ಷಣದಲ್ಲೇ ಶಣಾಗತಿ? ಇದಕ್ಕಿಂತ ಮುಂಚೆ ನೀನು ಹಠಮಾರಿತನದೊಂದಿಗೆ ಪ್ರತಿಭಟಿಸುತ್ತಿದ್ದೆ ತಾನೆ! ಕ್ಷೋಭೆಯುಂಟು ಮಾಡುವರ ಯಾದಿಗೆ ಸೇರಿದ್ದವನು ನೀನು! {91}

ಆದ್ದರಿಂದ ನಾವಿಂದು ನಿನ್ನನ್ನು ಕಳೇಬರವಾಗಿಸಿ ಬಾಕಿ ಉಳಿಸುವೆವು! ನಿನ್ನ ನಂತರ ಬರಲಿರುವ (ನಿನ್ನಂತಹ ದುರಹಂಕಾರಿಗಳಿಗೆ ನಿನ್ನ ಮೃತದೇಹವು) ಒಂದು ದೃಷ್ಟಾಂತವಾಗಿ ಪರಣಮಿಸಲಿಕ್ಕಾಗಿ! ಹೌದು, ಬಹಳ ದೊಡ್ಡ ಸಂಖ್ಯೆಯಲ್ಲಿ ಜನರು ಮಾತ್ರ ನಮ್ಮ ದೃಷ್ಟಾಂತಗಳನ್ನು ಅರಿಯುವ ಬಗ್ಗೆ ಅಸಡ್ಡೆಯನ್ನಷ್ಟೇ ತೋರುತ್ತಾರೆ! {92}

[ಈಜಿಪ್ಟಿನಲ್ಲಿ ಇಸ್ರೇಲಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಫಿರ್‌ಔನ್ ನ ಕಪಿಮುಷ್ಟಿಯಿಂದ ವಿಮೋಚಿಸಿದ ನಂತರ ಪ್ಯಾಲೆಸ್ಟೈನ್ ನ] ನಿರ್ಮಲ ಪ್ರದೇಶಗಳಲ್ಲಿ ನಾವು ಇಸ್ರಾಈಲ್ ಜನಾಂಗದವರಿಗೆ ಯೋಗ್ಯವಾದ ವಾಸ್ತವ್ಯ ದಯಪಾಲಿಸಿದೆವು; ಮಾತ್ರವಲ್ಲ ಅವರಿಗೆ ಅತ್ಯುತ್ತಮವಾದ ಆಹಾರ, ಜೀವನಾವಶ್ಯಕತೆಗಳನ್ನೂ ಒದಗಿಸಿದೆವು! ಇನ್ನು ಅವರು ಪರಸ್ಪರ ವಿವಾದಗಳಲ್ಲಿ ತೊಡಗಿದುದು [ಧಾರ್ಮಿಕ ವಿಷಯದಲ್ಲಿ ಭಿನ್ನತೆ ಸಲ್ಲದು ಎಂಬ] ಖಚಿತವಾದ ಜ್ಞಾನ ಅವರ ಬಳಿಗೆ ತಲುಪಿದ ನಂತರವಷ್ಟೇ ಆಗಿತ್ತು! (ಓ ಪೈಗಂಬರರೇ), ಯಾವ ವಿಷಯದಲ್ಲಿ ಅವರು ವಿವಾದಗಳಲ್ಲಿ ತೊಡಗಿದ್ದರೋ ಅದರ ಕುರಿತು ನಿಮ್ಮ ಪ್ರಭುವೇ ಪುರುತ್ಥಾನ ದಿನ ಅವರ ನಡುವೆ ತೀರ್ಪು ನೀಡಲಿರುವನು! {93}

[ಕೆಲವರು ಸಂಶಯಿಸುತ್ತಿದ್ದಾರೆ! ಇಸ್ರೇಲಿಯರ ಕುರಿತಂತೆ] ನಿಮ್ಮೆಡೆಗೆ ಈಗ ಕಳುಹಿಸಲಾಗುತ್ತಿರುವ (ಮಾಹಿತಿಯಲ್ಲಿ) ನಿಮಗೇನಾದರೂ ಸಂಶಯವಿದ್ದರೆ ನಿಮಗಿಂತ ಮುಂಚಿನಿಂದಲೇ ದಿವ್ಯಗ್ರಂಥಗಳನ್ನು ಓದುತ್ತಿರುವ [ಯಹೂದಿಯರ ಮತ್ತು ನಸಾರಾಗಳ ಸಜ್ಜನರನ್ನು] ಕೇಳಿ ನೋಡಿರಿ. ಪೈಗಂಬರರೇ, ನಿಮ್ಮೊಡೆಯನ ವತಿಯಿಂದ ನಿಮ್ಮಡೆಗೆ ಬಂದಿರುವುದು ಅಪ್ಪಟವಾದ ಸತ್ಯವಾಗಿದೆ; ಆದ್ದರಿಂದ ನೀವು ಸಂಶಯಿಸುವವರ ಸಾಲಿಗೆ ಸೇರದಿರಿ. {94}

ಹಾಗೆಯೇ ನಮ್ಮ ಸತ್ಯವಚನಗಳನ್ನು ನಿರಾಕರಿಸಿದವರ ಸಾಲಿಗೂ ನೀವು ಸೇರದಿರಿ; ಅನ್ಯಥಾ ನೀವೂ ಸಹ (ಅವರಂತೆಯೇ ಎಲ್ಲವನ್ನೂ) ಕಳೆದು ಕೊಂಡವರ ಯಾದಿಗೆ ಸೇರಿ ಹೋಗುವಿರಿ! {95}

ಹೌದು, ಪೈಗಂಬರರೇ ನಿಮ್ಮ ಒಡೆಯನ ಮಾತುಗಳ ಸತ್ಯತೆ ಸಾಬೀತಾಗಿಯೂ ಯಾರು (ನಿರಾಕರಿಸುತ್ತಾರೋ) ಅಂತಹವರು ಯಾವತ್ತೂ ವಿಶ್ವಾಸಿಗಳಾಗಲಾರರು. {96}

ಇನ್ನು ಅಂತಹವರ ಮುಂದೆ (ಅಲ್ಲಾಹ್ ನ) ಸಕಲ ದೃಷ್ಟಾಂತಗಳು ಬಂದರೂ ಅವರು ಸಂಕಟದಾಯಕ ಶಿಕ್ಷೆಯನ್ನು ಕಣ್ಣಾರೆ ಕಾಣುವ ತನಕ (ನಂಬಲಾರರು). {97}

[ನಮ್ಮ ದೂತರುಗಳನ್ನು ತಿರಸ್ಕರಿಸಿದ ಕಾರಣ ಶಿಕ್ಷೆ ಎರಗಿ ಬೀಳುವುದಕ್ಕಿಂತ ಮುಂಚಿತವಾಗಿಯೇ] ಊರಿನ ಜನರು ವಿಶ್ವಾಸಿಗಳಾಗಿ, ಮತ್ತು ಅವರ ವಿಶ್ವಾಸವು ಅವರಿಗೆ ಪ್ರಯೋನಕಾರಿಯಾಗಿ ಪರಿಣಮಿಸುವಂತೆ ಏಕೆ ಆಗಲಿಲ್ಲ?! ಆದರೆ ಪ್ರವಾದಿ ಯೂನುಸ್ [ಬೈಬಲ್ ನ ಯೋನ ಅಥವಾ ಜೋನ] ರ ಊರಿನವರು ಮಾತ್ರ ಇದಕ್ಕೆ ಹೊರತಾಗಿದ್ದಾರೆ. ಅವರು (ಶಿಕ್ಷೆಯ ಸೂಚನೆಗಳನ್ನಷ್ಟೇ ಕಂಡು) ವಿಶ್ವಾಸಿಗಳಾದಾಗ ಭೂಲೋಕದಲ್ಲೇ (ಅವರಿಗೆ ಬರಲಿದ್ದ) ಅಪಮಾನಭರಿತ ಶಿಕ್ಷೆಯನ್ನು ನಾವು ಅವರಿಂದ ನೀಗಿಸಿ ಬಿಟ್ಟೆವು! ಮಾತ್ರವಲ್ಲ ಮುಂದೆ ಒಂದು ನಿರ್ಧಿಷ್ಟ ಅವಧಿಯ ತನಕ ನಾವು ಅವರಿಗೆ ಜೀವನದ ಸಕಲ ಸುಖ ಸೌಲಭ್ಯಗಳನ್ನೂ ನೀಡಿದೆವು. {98}

ಪೈಗಂಬರರೇ, ಒಂದು ವೇಳೆ (ಜನರೆಲ್ಲ ಮುಸ್ಲಿಮರಾಗಿರಬೇಕೆಂದು) ನಿಮ್ಮ ಕರ್ತಾರನು ಬಯಸಿರುತ್ತಿದ್ದರೆ ಖಂಡಿತವಾಗಿ ಭೂಲೋಕದಲ್ಲಿರುವ ಸಕಲ ಜನರೂ ಸಾರಾಸಗಟಾಗಿ ವಿಶ್ವಾಸಿಗಳಾಗಿ ಬಿಡುತ್ತಿದ್ದರು! ಹಾಗಿರುವಾಗ, ಈ ಜನರೆಲ್ಲ ವಿಶ್ವಾಸಿಗಳಾಗುವ ತನಕ ಅವರನ್ನು ನೀವು ಒತ್ತಾಯಿಸುತ್ತಾ ಇರುವಿರೇನು? {99}

(ಒತ್ತಾಯಿಸುವ ಅಗತ್ಯವಿಲ್ಲ. ಏಕೆಂದರೆ) ಅಲ್ಲಾಹ್ ನ ಒಪ್ಪಿಗೆಯ ವಿನಾ ಯಾವೊಬ್ಬ ಜೀವಿಗೂ ವಿಶ್ವಾಸಿಯಾಗಿ ಬಿಡಲು ಸಾಧ್ಯವಿಲ್ಲ. (ಅಲ್ಲಾಹ್ ನು ಮನುಷ್ಯರಿಗೆ ವಿವೇಚನಾ ಶಕ್ತಿ ನೀಡಿರುತ್ತಾನೆ!) ಹಾಗಿರುವಾಗ ವಿವೇಚಿಸುವ ಗೋಜಿಗೆ ಹೋಗದ ಜನರ ಮೇಲೆ ಅಲ್ಲಾಹ್ ನು (ಚಿತ್ತ) ಮಾಲಿನ್ಯವನ್ನು ಹೇರಿ ಬಿಡುತ್ತಾನೆ. {100}

[ಇವರು ಪ್ರಮಾಣಗಳನ್ನು ಕೇಳುತ್ತಿದ್ದಾರೆ ತಾನೆ? ಪೈಗಂಬರರೇ,] ಅಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಎನೆಲ್ಲ (ಪ್ರಮಾಣಗಳಿವೆ) ಎಂಬುದನ್ನು ನೋಡಿ ಕೊಳ್ಳಿ ಎಂದು ಅವರೊಂದಿಗೆ ಹೇಳಿರಿ. ಆದರೆ ಅಂತಹ ಪ್ರಮಾಣಗಳಾಗಲಿ ಮುನ್ನೆಚ್ಚರಿಕೆಗಳಾಗಲಿ ವಿಶ್ವಾಸಿಗಳಾಗಲು ಬಯಸದ ಒಂದು ಜನವರ್ಗಕ್ಕೆ ಪ್ರಯೋಜನಕಾರಿಯಾಗದು! {101}

ಇವರಿಗಿಂತ ಮುಂಚೆ ಗತಿಸಿ ಹೋದವರಿಗೆ ಬಂದಂತಹ ಕೆಟ್ಟ ದಿನಗಳಿಗಾಗಿಯೇ ಇವರು ಕಾಯುತ್ತಿರುವುದು!? ಹೌದೇನು, ನೀವು ಕಾಯುತ್ತಲಿರಿ, ನಾನೂ ಸಹ ನಮ್ಮ ಜೊತೆ ಕಾಯುತ್ತಿರುವೆನು ಎಂದು ಅವರೊಂದಿಗೆ ಹೇಳಿ ಬಿಡಿ. {102}

ತರುವಾಯ [ಅಂತಹ ಶಿಕ್ಷೆ ಬಂದೆರುಗುವಾಗ] ನಮ್ಮ ದೂತರುಗಳನ್ನೂ ಅವರೊಂದಿಗಿರುವ ವಿಶ್ವಾಸಿಗಳನ್ನೂ ನಾವು ರಕ್ಷಿಸಿ ಕೊಳ್ಳುತ್ತೇವೆ. ಹಾಗೆ ಮಾಡುವುದು ನಮ್ಮ ಸಂಪ್ರದಾಯ. ವಿಶ್ವಾಸಿಗಳನ್ನು ರಕ್ಷಿಸುವುದು ನಮ್ಮ ಹೊಣೆಯಾಗಿದೆ. {103}

ಜನರೇ, ನಾನು ಪಾಲಿಸುವ ಧರ್ಮದ ಬಗ್ಗೆ (ಇನ್ನೂ) ನಿಮಗೆ ಖಚಿತವಾಗಿರದಿದ್ದರೆ, ತಿಳಿಯಿರಿ, ಅಲ್ಲಾಹ್ ನನ್ನು ಬಿಟ್ಟು ನೀವು ಯಾರನ್ನೆಲ್ಲಾ ಪೂಜಿಸುತ್ತಿರುವಿರೋ ನಾನು ಅವರನ್ನು ಪೂಜಿಸುವುದಿಲ್ಲ! ಆದರೆ ಯಾವ ಅಲ್ಲಾಹ್ ನು ನಿಮಗೆ ಮರಣ ನೀಡಲು ಶಕ್ತನಾಗಿರುವನೋ ಆ ಅಲ್ಲಾಹ್ ನನ್ನು ಮಾತ್ರ ನಾನು ಪೂಜಿಸುತ್ತೇನೆ! ನಾನು ವಿಶ್ವಾಸಿಯಾಗಿರಬೇಕು ಎಂದೇ ನನಗೆ ಆಜ್ಞಾಪಿಸಲಾಗಿದೆ ಎಂದು ಪೈಗಂಬರರೇ ನೀವು (ಮತ್ತೊಮ್ಮೆ) ಅವರಿಗೆ ಸಾರಿರಿ. {104}

ಹಾಗೆಯೇ, ಅಂತಹ ಧರ್ಮಕ್ಕಾಗಿ ತಮ್ಮ ಅಸ್ತಿತ್ವವನ್ನು (ಸ್ವಲ್ಪವೊ ಕದಲದ) ಏಕಾಗ್ರತೆಯೊಂದಿಗೆ ಸರ್ವಸಂಪೂರ್ಣವಾಗಿ ಸಮರ್ಪಿಸಿಕೊಳ್ಳ ಬೇಕು; ಯಾವತ್ತೂ (ಮಿಥ್ಯ) ದೇವರುಗಳನ್ನು ಉಪಾಸಿಸುವವರ ಸಾಲಿಗೆ ಸೇರಬಾರದು (ಎಂದೂ ನನಗೆ ಆಜ್ಞಾಪಿಸಲಾಗಿದೆ). {105}

ಹಾಗೆಯೇ, ಅಲ್ಲಾಹ್ ನನ್ನು ಬಿಟ್ಟು, ನಿಮಗೆ ಲಾಭವೋ ನಷ್ಟವೋ ಮಾಡಲು ಶಕ್ತಿ ಹೊಂದಿಲ್ಲದ [ಪ್ರತಿಮೆ, ವಿಗ್ರಹ ಮುಂತಾದ] ಯಾವುದಕ್ಕೂ ನೀವು ಮೊರೆಯಿಡಬಾರದು; ಹಾಗೇನಾದರೂ ಮಾಡಿದರೆ ಖಂಡಿತವಾಗಿಯೂ ನೀವು ಪಾಪಿಗಳ ಕೂಟಕ್ಕೆ ಸೇರಿದವರಾಗುವಿರಿ (ಎಂದೂ ನನ್ನನ್ನು ಎಚ್ಚರಿಸಲಾಗಿದೆ). {106}

ಒಂದು ವೇಳೆ ಅಲ್ಲಾಹ್ ನು ನಿಮ್ಮನ್ನು ವಿಪತ್ತಿಗೆ ಸಿಲುಕಿಸಿ ಬಿಟ್ಟರೆ ಅದನ್ನು ನಿವಾರಿಸಲು ಅವನ ಹೊರತು ಬೇರೆ ಯಾರಿಗೂ ಸಾಧ್ಯವಿಲ್ಲ. ಇನ್ನು ಅವನು ನಿಮಗೆ ಶ್ರೇಯಸ್ಸು ನೀಡಲು ಬಯಸಿದರೆ ಅವನ ಆ ಔದಾರ್ಯವನ್ನು ತಡೆಯುವವರು ಕೂಡ ಯಾರೂ ಇಲ್ಲ. ಅವನು ತನ್ನ ಉಪಾಸಕರಲ್ಲಿ ಯಾರಿಗೆ ನೀಡ ಬಯಸುವನೋ ಅವರಿಗೆ ಅದನ್ನು ನೀಡುವನು. ಅವನು ಕ್ಷಮಾಶೀಲನೂ ಮಹಾ ಕರುಣಾಮಯಿಯೂ ಆಗಿರುವನು. {107}

ಜನರೇ, ನಿಮ್ಮ ಕರ್ತಾರನ ವತಿಯಿಂದ ಪರಮ ಸತ್ಯವು ನಿಮ್ಮೆಡೆಗೆ ಬಂದಿರುತ್ತದೆ. ಆದ್ದರಿಂದ ಯಾರಾದರೂ ಸರಿದಾರಿ ಸ್ವೀಕರಿಸಿದರೆ ಅದರಿಂದ ಪ್ರಯೋಜನವಾಗಲಿರುವುದು ಸ್ವತಃ ಆತನಿಗೇ. ಇನ್ನು ಯಾರಾದರೂ ಅದರಿಂದ ವ್ಯತಿಚಲಿಸಿದರೆ ಅದರ ನಷ್ಟ ಸಹ ಆತನ ಮೇಲೆಯೇ! ಹಾಗಿರುವಾಗ ಜನರೇ, [ಬುದ್ಧಿ ಉಪಯೋಗಿಸದೆ ನೀವು ತೆಗೆದುಕೊಳ್ಳುವ ತೀರ್ಮಾನಕ್ಕೆ] ನಾನು ಸರ್ವಥಾ ಜವಾಬ್ದಾರನಲ್ಲ - ಎಂದು ಪೈಗಂಬರರೇ ನೀವು [ಅಂತಿಮವಾಗಿ ನಿಮ್ಮ ಸಮುದಾಯದ ಜನರಿಗೆ] ಸಾರಿ ಬಿಡಿರಿ! {108}

ಮತ್ತು ಪೈಗಂಬರರೇ, ನಿಮ್ಮೆಡೆಗೆ ಕಳುಹಿಸಲಾದ ವಹೀ [ಅರ್ಥಾತ್ ದೈವಿಕ ಮಾರ್ಗದರ್ಶನ] ವನ್ನು ನೀವು ಅನುಸರಿಸುತ್ತಲಿರಿ; ಅಲ್ಲಾಹ್ ನು [ಈ ನಿಮ್ಮ ಸಮುದಾಯದ ವಿಷಯದಲ್ಲಿ] ಅಂತಿಮ ತೀರ್ಪು ತಿಳಿಸುವ ತನಕ ಸಹನೆಯೊಂದಿಗೆ ವರ್ತಿಸಿರಿ. ಹೌದು, (ಇವರ ಬಗ್ಗೆ) ತೀರ್ಪು ನೀಡುವಲ್ಲಿ ಅವನೇ ಸರ್ವೋತ್ತಮನು! {109} 
-------------- 


ಅನುವಾದಿತ ಸೂರಃ ಗಳು:

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...