ಅಲ್ ಅಅರಾಫ್ | ترجمة سورة الأعراف

تـرجمـة سـورة الأعراف من القـرآن الكريـم إلى اللغـة الكنديـة من قبـل المترجـم الخـادم / إقبـال صوفـي – الكــويت

* سهل الفهم من غير الرجوع إلى كتاب التفسير *

| ಸೂರಃ ಅಲ್ ಅಅರಾಫ್ | ಪವಿತ್ರ್ ಕುರ್‌ಆನ್ ನ 7 ನೆಯ ಸೂರಃ | ಇದರಲ್ಲಿ ಒಟ್ಟು 206 ಆಯತ್ ಗಳು ಇವೆ |

ಅಲ್ಲಾಹ್ ನ ನಾಮದೊಂದಿಗೆ, ಅವನು ಮಹಾ ಕಾರುಣ್ಯವಂತನೂ ನಿರಂತರ ಕರುಣೆ ತೋರುವವನೂ ಆಗಿರುತ್ತಾನೆ !

ಅಲಿಫ್ ಲಾಮ್ ಮೀಮ್ ಸಾದ್ ! {1}

ಇದು [ಅರ್ಥಾತ್ ಈ ಅಧ್ಯಾಯವು] ನಿಮ್ಮೆಡೆಗೆ ಇಳಿಸಲಾದ ಒಂದು ದಿವ್ಯಾದೇಶವಾಗಿದೆ [ಅರಬಿ: ಅಲ್ ಕಿತಾಬ್]. ಅದ್ದರಿಂದ [ಪೈಗಂಬರರೇ, ನಮ್ಮ ಅದೇಶವನ್ನು ಸತತವಾಗಿ ಧಿಕ್ಕರಿಸುತ್ತಾ ಬಂದವರಿಗೆ ಇದನ್ನು ತಲುಪಿಸುವಾಗ] ನಿಮ್ಮ ಹೃದಯದಲ್ಲಿ ಯಾವ ಬಗೆಯ ಸಂಕೋಚವೂ ಉಂಟಾಗದಿರಲಿ! ನೀವು ಇದರ ಮೂಲಕ (ಅವರಿಗೆ) ಮುನ್ನೆಚ್ಚರಿಕೆ ನೀಡುವ ಸಲುವಾಗಿ (ಇದನ್ನು ಇಳಿಸಲಾಗಿದೆ)! ಮತ್ತು [ನಿಮ್ಮನ್ನು ಪೈಗಂಬರರೆಂದು ಒಪ್ಪಿಕೊಂಡ] ವಿಶ್ವಾಸಿಗಳ ಪಾಲಿಗೆ ಇದೊಂದು ಉಪದೇಶವೂ ಹೌದು! {2}

(ಓ ಜನರೇ), ನಿಮ್ಮ ಕರ್ತೃವಿನ ವತಿಯಿಂದ ಯಾವ (ದಿವ್ಯಾದೇಶವನ್ನು) ನಿಮ್ಮೆಡೆಗೆ ಕಳಿಸಿ ಕೊಡಲಾಗುತ್ತಿದೆಯೋ ನೀವು ಅದನ್ನು ಅನುಸರಿಸಿರಿ; ಅವನನ್ನು ಬಿಟ್ಟು ಇತರ ಮುಖ್ಯಸ್ಥರ ಮಾತು ಕೇಳದಿರಿ. (ವಿಪರ್ಯಾಸವೆಂದರೆ) ನಿಮ್ಮಲ್ಲಿ ಉಪದೇಶ ಸ್ವೀಕರಿಸುವವರು ವಿರಳವೇ ಸರಿ! {3}

[ಇದಕ್ಕಿಂತ ಮುಂಚೆ] ನಾವು ಅದೆಷ್ಟು ನಾಡುಗಳನ್ನು ನಾಶಪಡಿಸಿ ಬಿಟ್ಟಿರುತ್ತೇವೆ! ರಾತ್ರಿಯ ನಿದ್ರಾವಸ್ಥೆಯಲ್ಲಿ ಅಥವಾ ಮಧ್ಯಾನದ ವೇಳೆ ಅವರು [ಅರ್ಥಾತ್ ಆಯಾ ನಾಡಿನ ಅಕ್ರಮಿಗಳು] ವಿಶ್ರಮಿಸುತ್ತಿರುವಾಗ ನಮ್ಮ ಶಿಕ್ಷೆ ಹಠಾತ್ತನೆ ಎರಗಿ ಬೇಳುತ್ತಿತ್ತು. ಹಾಗೆ ನಮ್ಮ ಶಿಕ್ಷೆ ಅವರ ಮೇಲೆ ಬಂದೆರಗಿದಾಗ, ನಾವು ನಿಜವಾಗಿಯೂ ಅನ್ಯಾಯವೆಸಗಿದವರೇ ಆಗಿದ್ದೆವು ಎಂಬ ಮಾತೊಂದರ ಹೊರತು ಅವರಿಗೆ ಬೇರಾವುದೇ ಫಿರ್ಯಾದು ಇರುತ್ತಿರಲಿಲ್ಲ! {4-5}

ತರುವಾಯ, ಯಾವೆಲ್ಲ (ಜನಾಂಗಗಳ) ಕಡೆಗೆ (ದಿವ್ಯ ಸಂದೇಶದೊಂದಿಗೆ ದೂತರುಗಳನ್ನು) ಕಳುಹಿಸಲಾಗಿತ್ತೋ ಅವರನ್ನು ನಾವು ಪ್ರಶ್ನಿಸಿಯೇ ತೀರುವೆವು. ಹಾಗೆಯೇ ಅಂತಹ ದೂತರುಗಳೊಡನೆ [ಜನರಿಂದ ಅವರಿಗೆ ಸಿಕ್ಕ ಪ್ರತಿಕ್ರಿಯೆಯ ಬಗ್ಗೆಯೂ] ನಾವು ಖಂಡಿತ ಕೇಳಲಿರುವೆವು. ಅನಂತರ (ಅವರದೇ) ವೃತ್ತಾಂತಗಳನ್ನು ನಾವು ಅವರರಿಗೆ ವಿವರಸಲಿರುವೆವು - ನಿಖರವಾದ ಅರಿವಿನ ಆಧಾರದಲ್ಲಿ! [ಆ ಜನರ ದುಷ್ಕೃತ್ಯಗಳನ್ನು ಕಾಣದಿರಲು] ನಾವು ಆಗ ಇಲ್ಲದೇ ಇರಲಿಲ್ಲವಲ್ಲ! {6-7}

ಅಂದು (ನಿಮ್ಮ ಕರ್ಮಗಳನ್ನು) ಸರಿದೂಗಿಸಿ ನೋಡಲಾಗುವುದಂತು ಒಂದು ಪರಮ ಯಾಥಾರ್ಥ್ಯ. ಹೌದು, ಯಾರ (ಸತ್ಕರ್ಮಗಳು) ಭಾರವಾಗಿ ತೂಗುವುದೋ ಅವರೇ ವಿಜಯಿಗಳ ಯಾದಿಗೆ ಸೇರುವವರು; ಮತ್ತು ಯಾರ (ಸತ್ಕರ್ಮಗಳ) ತೂಕವು ಕಡಿಮೆಯಾಗಿ ಬಿಡುವುದೋ ಅಂತಹವರು, ನಮ್ಮ ವಚನಗಳ ಜೊತೆ ಅನ್ಯಾದಿಂದ ವರ್ತಿಸಿದ ಕಾರಣ ಸ್ವತಃ ತಮ್ಮನ್ನೇ ನಷ್ಟಕ್ಕೊಳಗಾಗಿಸಿ ಕೊಂಡವರು! {8-9}

ಭೂಮಿಯಲ್ಲಿ ನೀವು ಸುಭದ್ರತೆಯೊಂದಿಗೆ ನೆಲೆಸಿಕೊಳ್ಳುವಂತೆ ನಾವು ಮಾಡಿದೆವು; ಜೊತೆಗೆ ಅದರಲ್ಲಿ ನಿಮಗಾಗಿ ಜೀವನೋಪಾಯದ ಏರ್ಪಾಡನ್ನೂ ಮಾಡಿದೆವು. (ವಿಪರ್ಯಾಸವೆಂದರೆ ನಮಗೆ) ಕೃತಜ್ಞರಾಗಿ ಬದುಕುವವರು ನಿಮ್ಮಲ್ಲಿ ವಿರಳವೇ ಸರಿ! {10}

[ಮಾನವರೇ! ನಿಮ್ಮ ಹುಟ್ಟಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ. ಮೊದಲಿಗೆ] ನಾವು ನಿಮ್ಮ (ವ್ಯಕ್ತಿತ್ವವನ್ನು) ಸೃಷ್ಟಿ ಮಾಡಿದೆವು; ನಂತರ ನಿಮ್ಮ (ಅಸ್ತಿತ್ವಕ್ಕೊಂದು) ಆಕಾರ ನೀಡಿದೆವು. ತರುವಾಯ [ನಿಮ್ಮ ಪಿತಾಮಹನಾದ ಆದಿಮಾನವ] ಆದಮ್ ರಿಗೆ ತಲೆಬಾಗುವಂತೆ ನಾವು ಮಲಕ್ ಗಳಿಗೆ ಆಜ್ಞಾಪಿಸಿದೆವು. ಕೂಡಲೇ ಅವರೆಲ್ಲರೂ ತಲೆಬಾಗಿದರು - ಒಬ್ಬ 'ಇಬ್ಲೀಸ್' ನ ಹೊರತು! ಆತ ತಲೆಬಾಗಿದವರೊಂದಿಗೆ ಸೇರಿಕೊಳ್ಳಲಿಲ್ಲ! {11}

ನಾನು ನಿನಗೆ ಆಜ್ಞೆ ನೀಡಿದಾಗ ತಲೆಬಾಗದಂತೆ ನಿನ್ನನ್ನು ತಡೆದಿಟ್ಟ ಅಂಶವು ಯಾವುದು ಎಂದು (ಅಲ್ಲಾಹ್ ನು) ಪ್ರಶ್ನಿಸಿದನು. ನಾನು ಅವನಿಗಿಂತ ಉತ್ತಮವಾದ (ಸೃಷ್ಟಿ ಸ್ವರೂಪ) ಎಂಬುದು! ನನ್ನನ್ನು ನೀನು ಬೆಂಕಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ಹಸಿಮಣ್ಣಿನಿಂದ! (ಇಬ್ಲೀಸನು) ಉತ್ತರಿಸಿದನು. {12}

ಹಾಗಾದರೆ ನೀನು ಅಲ್ಲಿಂದ ಇಳಿದು ಹೋಗು. ಅಲ್ಲಿದ್ದುಕೊಂಡು ದುರಹಂಕಾರ ಮೆರೆಯುವ ಹಕ್ಕು ನಿನಗಿಲ್ಲ; ಹೊರ ಹೋಗು! ಖಂಡಿತವಾಗಿ ನೀನು ನಿಂದಿತರ ಸಾಲಿಗೆ ಸೇರಿ ಹೋದೆ - ಎಂದು (ಅಲ್ಲಾಹ್ ನು) ಆಜ್ಞಾಪಿಸಿದನು. {13}

ನನಗೆ (ಪುನರುತ್ಥಾನದಂದು ಮನುಷ್ಯ ವರ್ಗವು) ಪುನಃ ಎಬ್ಬಿಸಲ್ಪಡುವ ದಿನದ ವರೆಗೂ ಕಾಲಾವಕಾಶ ನೀಡಬೇಕು ಎಂದು ಇಬ್ಲೀಸನು ಕೋರಿದನು. ನಿನಗೆ ಕಾಲಾವಕಾಶ ನೀಡಲಾಗಿದೆ ಎಂದು (ಅಲ್ಲಾಹ್ ನು) ಹೇಳಿದನು. {14-15}

ನಾನು ದಾರಿಗೆಡುವಂತೆ ನೀನು ಕುಮ್ಮಕ್ಕು ನೀಡಿದ ಕಾರಣಕ್ಕಾಗಿ ನಿನ್ನೆಡೆಗಿರುವ ನೇರದಾರಿಗೆ ಅಡ್ಡ ಕುಳಿತು ಅವರಿಗಾಗಿ [ಅರ್ಥಾತ್ ನಿನ್ನ ದಾರಿಯಲ್ಲಿ ನಡೆಯ ಬಯಸುವ ಮಾನವರಿಗಾಗಿ] ಖಂಡಿತಾ ನಾನು ಹೊಂಚು ಹಾಕುತ್ತೇನೆ. ಅಷ್ಟು ಮಾತ್ರವಲ್ಲ, ಅವರ ಮುಂದುಗಡೆಯಿಂದಲೂ ಹಿಂದುಗಡೆಯಿಂದಲೂ ಬಂದೆರಗುವೆನು; ಬಲಗಡೆಯಿಂದಲೂ ಎಡಗಡೆಯಿಂದಲೂ ಅವರನ್ನು ತಡೆಯುವೆನು. ಅವರಲ್ಲಿ ಹೆಚ್ಚಿನವರನ್ನು ಕೃತಜ್ಞತೆಯುಳ್ಳವರಾಗಿ ನೀನು ಕಾಣಲಾರೆ - ಎಂದು ಇಬ್ಲೀಸನು ಹೇಳಿದನು. {16-17}

ಇನ್ನು ಅಲ್ಲಿಂದ ಹೊರನಡೆ; ನಿಂದಿತನಾಗಿ ಬಹಿಷ್ಕೃತನಾಗಿ ತೊಲಗು! ಖಂಡಿತವಾಗಿಯೂ (ನಿನ್ನನ್ನೂ) ಮನುಷ್ಯರ ಪೈಕಿ ನಿನ್ನ ಹಿಂಬಾಲಕರಾಗುವವರನ್ನೂ ಒಟ್ಟಾಗಿಸಿ ನರಕವನ್ನು ನಿಮ್ಮಿಂದ ತುಂಬಿಸಿ ಬಿಡುವೆನು - ಎಂದು (ಅಲ್ಲಾಹ್ ನು) ಹೇಳಿದನು! {18}

ಓ ಆದಮ್! ನೀವು ಮತ್ತು ನಿಮ್ಮ ಪತ್ನಿ ಆ ಉದ್ಯಾನವನದಲ್ಲೇ ತಂಗಿಕೊಳ್ಳುವವರಾಗಿರಿ; ಮತ್ತು ಉದ್ಯಾನವನದ ಯಾವ ಭಾಗದಿಂದ ಬೇಕಾದರೂ ನೀವಿಬ್ಬರೂ ಬಯಸಿಕೊಂಡಂತೆ ತಿನ್ನಬಹುದು. ಆದರೆ ಆ ನಿರ್ದಿಷ್ಟ ವೃಕ್ಷವನ್ನು ಮಾತ್ರ ನೀವಿಬ್ಬರು ಸಮೀಪಿಸಲೂ ಬಾರದು. ಹಾಗೆ ಮಾಡಿದರೆ ನೀವಿಬ್ಬರೂ ಅಕ್ರಮಿಗಳಾಗಿ ತೀರುವಿರಿ (ಎಂದು ಅಲ್ಲಾಹ್ ನ ಆಜ್ಞೆಯಾಯಿತು)! {19}

ಹಾಗಿರುವಾಗ ಆ ಸೈತಾನನು [ಅರ್ಥಾತ್ ಧೂರ್ತನಾದ ಇಬ್ಲೀಸನು] ಆ ಇಬ್ಬರಿಂದಲೂ ಮುಚ್ಚಿಡಲಾಗಿದ್ದ ಅವರ ಗುಪ್ತಾಂಗಗಳು ಪರಸ್ಪರರ ಮುಂದೆ ಪ್ರಕಟವಾಗುವಂತೆ ಮಾಡಲು ಅವರ ಹೃದಯಗಳಲ್ಲಿ ಪಿಸುಗುಟ್ಟುತ್ತಾ, ನಿಮ್ಮ ಕರ್ತಾರನು ನಿಮ್ಮಿಬ್ಬರನ್ನು ಆ ವೃಕ್ಷದಿಂದ ತಡೆದಿರುವುದು ನೀವು ಮುಂದೆ ಮಲಕ್ ಗಳು ಆಗಿಬಿಡಬಾರದು ಅಥವಾ ನೀವು (ಈ ಉದ್ಯಾನದಲ್ಲೇ) ಸ್ಥಿರವಾಗಿ ವಾಸ್ತವ್ಯ ಹೂಡುವಂತೆ ಆಗಬಾರದು ಎಂಬ ಉದ್ದೇಶಕ್ಕಾಗಿಯಲ್ಲದೆ ಬೇರಾವ ಕಾರಣಕ್ಕಾಗಿಯೂ ಅಲ್ಲ ಎಂದು ದುಷ್ಪ್ರೇರಣೆ ಬಿತ್ತಿದನು. ಮಾತ್ರವಲ್ಲ, ನಾನಾದರೋ ನಿಮ್ಮಿಬ್ಬರ ನಿಜವಾದ ಹಿತಾಕಾಂಕ್ಷಿಯಾಗಿದ್ದೇನೆ ಎಂದು ಅವನು ಅವರೊಂದಿಗೆ ಆಣೆ ಹಾಕಿ ಹೇಳಿದನು. {20-21}

ಹಾಗೆ ಅವನು ಮೋಸದಿಂದ ಸ್ವಲ್ಪ ಸ್ವಲ್ಪವಾಗಿ ಅವರಿಬ್ಬರನ್ನು ಪುಸಲಾಯಿಸಿದನು. ಕೊನೆಗೆ ಅವರು ಆ ವೃಕ್ಷದ (ಫಲವನ್ನು) ಸವಿದಾಗ ಅವರ ಗುಪ್ತಾಂಗಗಳು ಅವರಿಗೆ ಪ್ರಕಟವಾದವು. ಕೂಡಲೇ ಉದ್ಯಾನದ ಎಲೆಗಳಿಂದ ತಮ್ಮ ಶರೀರಗಳನ್ನು ಅವರಿಬ್ಬರೂ ಮುಚ್ಚತೊಡಗಿದರು. ಆಗ ಅವರ ಕರ್ತಾರನು ಅವರಿಬ್ಬರನ್ನೂ ಕರೆದು, ಆ ವೃಕ್ಷವನ್ನು (ಸಮೀಪಿಸುವುದರಿಂದ) ನಿಮ್ಮಿಬ್ಬರನ್ನೂ ನಾನು ತಡೆದಿರಲಿಲ್ಲವೇ; ಮತ್ತು ಸೈತಾನನು ನಿಮ್ಮಿಬ್ಬರಿಗೂ ಬಹಿರಂಗ ಶತ್ರುವಾಗಿರುವನು ಎಂದು ನಾನು ಹೇಳಿರಲಿಲ್ಲವೇ - ಎಂದು ಕೇಳಿದನು. {22}

ಓ ನಮ್ಮ ಕರ್ತೃವೇ! ನಾವು ಸ್ವತಃ ನಮ್ಮ ಮೇಲೆಯೇ ಅನ್ಯಾಯ ಮಾಡಿಕೊಂಡವರಾದೆವು. ಇನ್ನು ನೀನು ನಮ್ಮನ್ನು ಕ್ಷಮಿಸದೇ ಹೋದರೆ, ಮತ್ತು ನಮ್ಮ ಮೇಲೆ ಕರುಣೆ ತೋರದೇ ಇದ್ದರೆ, ನಾವಂತು ಎಲ್ಲವನ್ನೂ ಕಳೆದುಕೊಂಡವರಾಗಿ ತೀರುವೆವು ಎಂದು ಅವರಿಬ್ಬರೂ ಪ್ರಾರ್ಥಿಸಿಕೊಂಡರು. {23}

ಇನ್ನು ನೀವೆಲ್ಲರೂ (ಉದ್ಯಾನವನದಿಂದ) ಹೊರಗಿಳಿಯಿರಿ; ನೀವುಗಳು [ಅರ್ಥಾತ್ ಮನುಷ್ಯರು ಮತ್ತು ಇಬ್ಲೀಸ್] ಪರಸ್ಪರರಿಗೆ ಶತ್ರುಗಳಾಗಿರುವಿರಿ. ಒಂದು ನಿರ್ದಿಷ್ಟ ಕಾಲದ ವರೆಗೆ ನಿಮಗಾಗಿ ಭೂಮಿಯಲ್ಲಿ ವಾಸದ ಸೌಕರ್ಯವನ್ನು ಮತ್ತು ಜೀವನೋಪಾಯವನ್ನು ಇರಿಸಲಾಗಿದೆ ಎಂದು [ಅಲ್ಲಾಹ್ ನು ತನ್ನ ಯೋಜನೆಯನ್ನು ಅವರಿಗೆ] ವಿವರಿಸಿದನು. (ಇನ್ನು ಮುಂದೆ) ನೀವು ಬದುಕಬೇಕಾದುದು ಅದರಲ್ಲೇ; ನಿಮಗೆ ಸಾವು ಬರುವುದೂ ಅದರಲ್ಲೇ; ತರುವಾಯ ನಿಮ್ಮನ್ನು ಹೊರತೆಗೆಯಲಾಗುವುದೂ ಸಹ ಅದರಿಂದಲೇ ಎಂದೂ ಹೇಳಿದನು. {24-25}

ಆದಮರ ಸಂತತಿಗಳೇ! ನೀವು ನಿಮ್ಮ ಮಾನ ಮುಚ್ಚಿಕೊಳ್ಳುವಂತಾಗಲು ನಾವು ಉಡುಗೆ-ತೊಡುಗೆಗಳನ್ನು ನಿಮಗೆ ಇಳಿಸಿ ಕೊಟ್ಟೀರುತ್ತೇವೆ; ಅದು ಭೂಷಣಕ್ಕಾಗಿಯೂ ಹೌದು. ಮತ್ತು ಭಯ-ಭಕ್ತಿ ಎಂಬ ಒಂದು ತೊಡುಗೆಯನ್ನೂ, ಅದಾದರೋ ಅತ್ಯಂತ ಮಹತ್ತರವಾದುದು! ಮಾನವರು (ಅಲ್ಲಾಹ್ ನ ಕೊಡುಗೆಗಳನ್ನು) ಮನನ ಮಾಡಿಕೊಳ್ಳುವಂತಾಗಲು ಅವೆಲ್ಲ ಅವನ ದೃಷ್ಟಾಂತಗಳೇ ಆಗಿವೆ. {26}

ಆದಮರ ಸಂತತಿಗಳೇ! ನಿಮ್ಮ ಮಾತಾಪಿತರನ್ನು [ಅಲ್ಲಾಹ್ ನು ಅವರನ್ನು ಇರಿಸಿದ್ದ] ಉದ್ಯಾನವನದಿಂದ ಹೊರಗಟ್ಟಿಸಿ ಬಿಟ್ಟಂತೆ, ಆ ಸೈತಾನನು [ಅಂತಹದ್ದೇ ಚಪಲತೆ ಬಳಸಿ] ನಿಮ್ಮನ್ನೂ ಪ್ರಲೋಭಿಸದಿರಲಿ. [ಅಂದು] ಅವರ ನಗ್ನತೆ ಅವರಿಗೆ ಗೋಚರಿಸುವಂತೆ ಮಾಡುವ ಸಲುವಾಗಿ ಸೈತಾನನು ಅವರ ವಸ್ತ್ರಗಳು ಕಳಚಿ ಬೇಳುವಂತೆ ಮಾಡಿದ್ದನು. ಅವನೂ ಅವನ ಸಂಗಡಿಗರೂ ನಿಮಗೆ ಅವರನ್ನು ನೋಡಲು ಸಾಧ್ಯವಾಗದ ಕಡೆಗಳಿಂದ ನಿಮ್ಮನ್ನು ಗಮನಿಸುತ್ತಿರುತ್ತಾರೆ. ಯಾರು ವಿಶ್ವಾಸವಿರಿಸುವುದಿಲ್ಲವೋ ಅಂತಹವರಿಗೆ ಖಂಡಿತವಾಗಿಯೂ ನಾವು ಸೈತಾನರ ವರ್ಗವನ್ನು ಮಿತ್ರರನ್ನಾಗಿ ಮಾಡಿರುತ್ತೇವೆ. {27}

ಅಂತಹವರು ಅಶ್ಲೀಲತೆಗಳಲ್ಲಿ ತೊಡಗಿಕೊಂಡಾಗ [ಅದನ್ನು ಸಮರ್ಥಿಸಿಕೊಳ್ಳಲು] ನಾವು ನಮ್ಮ ಪೂರ್ವಿಕರನ್ನು ಇದೇ ದಾರಿಯಲ್ಲಿ ಸಾಗಿರುವುದನ್ನು ಕಂಡಿರುತ್ತೇವೆ; ಮಾತ್ರವಲ್ಲ, ಅಲ್ಲಾಹ್ ನು ನಮಗೆ ಇದನ್ನೇ ಆಜ್ಞಾಪಿಸಿದ್ದಾನೆ ಎಂದು ಹೇಳುತ್ತಾರೆ. ಅಲ್ಲಾಹ್ ನು ಎಂದಿಗೂ ಅಶ್ಲೀಲತೆಯನ್ನು ಬೋಧಿಸುವುದಿಲ್ಲ. ನೀವು ಅಲ್ಲಾಹ್ ನ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲದ ವಿಷಯಗಳನ್ನು ಕಟ್ಟಿ ಹೇಳುವುದೇ? ಎಂದು (ಪೈಗಂಬರರೇ ನೀವು) ಅವರೊಂದಿಗೆ ಕೇಳಿರಿ. {28}

(ಬದಲಾಗಿ), ನನ್ನ ಕರ್ತಾರನು (ಎಲ್ಲಾ ವ್ಯವಹಾರಗಳಲ್ಲಿ) ನ್ಯಾಯ-ನೀತಿ ಪಾಲಿಸುವಂತೆ ಆಜ್ಞಾಪಿಸಿರುತ್ತಾನೆ ಎಂದು (ಪೈಗಂಬರರೇ) ನೀವು ಅವರಿಗೆ ತಿಳಿಸಿರಿ. ಮಾತ್ರವಲ್ಲ, ಸಾಷ್ಟಾಂಗವೆರಗುವ ಸ್ಥಳ ಮತ್ತು ಸಮಯಗಳಲ್ಲಿ ನೀವು ನಿಮ್ಮ ಮುಖಗಳನ್ನು [ಅವನು ಆಜ್ಞಾಪಿಸಿದ ದಿಕ್ಕಿನತ್ತ] ಸರಿಪಡಿಸಿಕೊಳ್ಳಬೇಕು; ಸಂಪೂರ್ಣ ನಿಷ್ಕಳಂಕತೆಯೊಂದಿಗೆ ಅವನಿಗೆ ಮಾತ್ರ ವಿಧೇಯರಾಗಿದ್ದುಕೊಂಡು ಅವನೊಂದಿಗೆ ಪ್ರಾರ್ಥಿಸಬೇಕು (ಎಂದೂ ಆಜ್ಞಾಪಿಸಿರುವನು). ನಿಮ್ಮನ್ನು ಮೊದಲಬಾರಿಗೆ ಉಂಟು ಮಾಡಿದಂತೆಯೇ ನೀವು (ಕೊನೆಯದಾಗಿ ಅವನೆಡೆಗೇ) ಮರಳುತ್ತೀರಿ [ಎಂಬ ವಾಸ್ತವವನ್ನು ಮರೆಯದಿರಿ]. {29}

[ಆಜ್ಞಾಪಾಲನೆ ಮಾಡಿದ] ಸಮೂಹವನ್ನು ಅವನು ಸರಿದಾರಿಯಲ್ಲಿ ನಡೆಸಿದನು. ಇನ್ನೊಂದು ಸಮೂಹವು ದಾರಿಗೆಡಲು ಸ್ವತಃ ತಾನೇ ಅರ್ಹವಾಯಿತು. ಅವರಾದರೋ ಅಲ್ಲಾಹ್ ನನ್ನು ಬಿಟ್ಟು ಸೈತಾನರನ್ನು ತಮ್ಮ ಮಿತ್ರರನ್ನಾಗಿ ಮಾಡಿಕೊಂಡವರು. ಆದರೂ ನಾವು ಸರಿದಾರಿಯಲ್ಲಿವವರು ಎಂದು ಎಣಿಸಿಕೊಂಡವರು! {30}

ಆದಮರ ಸಂತತಿಗಳೇ! ನಮಾಝ್ ನಿರ್ವಹಿಸುವ ಪ್ರತಿ ವೇಳೆಯಲ್ಲಿ, ಪ್ರತಿ ಮಸೀದಿಯಲ್ಲಿ, ನೀವು [ನಿಮ್ಮ ಪೂರ್ವಜರ ಸಂಪ್ರದಾಯದಂತೆ ಬೆತ್ತಲೆ ಅರೆಬೆತ್ತಲೆಯಾಗದೆ] ಭೂಷಣಪ್ರಾಯವಾದ ವಸ್ತ್ರಧಾರಣೆ ಮಾಡಿಕೊಳ್ಳಿರಿ. ನೀವು [ಎಲ್ಲ ಒಳ್ಳೆಯ ಆಹಾರ ಪಾನೀಯಗಳನ್ನು] ತಿನ್ನಬಹುದು; ಕುಡಿಯಬಹುದು. ಆದರೆ [ಉಡುಗೆ-ತೊಡುಗೆ, ಆಹಾರ ಮುಂತಾದ ವಿಷಯಕ್ಕಾಗಿ] ಅಪವ್ಯಯ ಮಾಡುವವರಾಗಬಾರದು. ಅಲ್ಲಾಹ್ ನು ಖಂಡಿತಾ ದುಂದುವೆಚ್ಚ ಮಾಡುವವರನ್ನು ಇಷ್ಟ ಪಡುವುದಿಲ್ಲ. {31}

ತನ್ನ ಉಪಾಸಕರ ಉಪಯೋಗಕ್ಕೆಂದೇ ಅಲ್ಲಾಹ್ ನು ಒದಗಿಸಿದ ಭೂಷಣಪ್ರಾಯವಾದ (ಉಡುಗೆ-ತೊಡುಗೆಗಳನ್ನು) ಹಾಗೂ ನಿರ್ಮಲವಾದ ಆಹಾರ ಪದಾರ್ಥಗಳನ್ನು ನಿಷಿದ್ಧಗೊಳಿಸಿದವರು ಯಾರು ಎಂದು (ಪೈಗಂಬರರೇ) ನೀವು ಅವರೊಂದಿಗೆ ಕೇಳಿರಿ. ಇಹಜೀವನದಲ್ಲಿ ವಿಶ್ವಾಸಿಗಳಿಗಾಗಿಯೇ ಅವುಗಳನ್ನು ಒದಗಿಸಲಾಗಿದೆ [ಇತರರೂ ಅದರಿಂದ ಪ್ರಯೋಜನ ಪಡೆದರೆ ಅಭ್ಯಂತರವಿಲ್ಲ]! ಆದರೆ ಪುನರುತ್ಥಾನದಲ್ಲಿ ಅವರಿಗಾಗಿ ಮಾತ್ರವೇ ಅವೆಲ್ಲ ಮೀಸಲು [ಅಂದರೆ ವಿಶ್ವಾಸಿಗಳಲ್ಲದವರಿಗೆ ಅವು ಲಭ್ಯವಾಗದು] ಎಂದೂ ಅವರಿಗೆ ತಿಳಿಸಿ ಬಿಡಿರಿ. ತಿಳಿದುಕೊಳ್ಳುವವರಿಗಾಗಿ ನಾವು ದೃಷ್ಟಾಂತಗಳನ್ನು ಹೀಗೆ ವಿಸ್ತಾರವಾಗಿ ತಿಳಿಸುತ್ತೇವೆ! {32}

[ನಿಷೇಧಿಸಿರುವುದು ಅವುಗಳನ್ನಲ್ಲ! ಬದಲಾಗಿ] ನನ್ನ ಕರ್ತಾರನು ನಿಷಿದ್ಧಗೊಳಿಸಿರುವ ವಿಷಯಗಳೆಂದರೆ ಪ್ರಕಟಗೊಳ್ಳುವ ಮತ್ತು ಗುಪ್ತವಾಗಿಯೇ ಉಳಿಯುವಂತಹ ಎಲ್ಲ ಅಶ್ಲೀಲತೆಗಳು; ಎಲ್ಲ ವಿಧ ಪಾಪಕಾರ್ಯಗಳು; ನ್ಯಾಯೋಚಿತವಲ್ಲದ (ಈ ನಿಮ್ಮ) ಉಲ್ಲಂಘನಾ ಪ್ರವೃತ್ತಿ; [ದೇವತ್ವದಲ್ಲಿ ಅಲ್ಲಾಹ್ ನಿಗೆ ಜೊತಗಾರರೆಂದು ಬಗೆಯಲು] ಯಾವುದೇ ಪುರಾವೆಯನ್ನು ಅವನು ಒದಗಿಸಿ ಕೊಡದಿದ್ದರೂ ನೀವು (ಕೆಲವರನ್ನು) ಅವನಿಗೆ ಜೊತೆಗಾರರನ್ನಾಗಿಸಿಕೊಳ್ಳುವುದು ಹಾಗೂ ನಿಮಗೆ [ಒಂದು ವಿಷಯದಲ್ಲಿ ಖಚಿತವಾದ] ಜ್ಞಾನವಿರದಾಗಲೂ ಅಂತಹದ್ದನ್ನು ಅಲ್ಲಾಹ್ ನ ಮೇಲೆ ಕಟ್ಟಿ ಹೇಳುವುದು - (ಇವನ್ನು) ಮಾತ್ರವೇ ಅವನು ನಿಷಿದ್ಧಗೊಳಿಸಿರುತ್ತಾನೆ ಎಂದು (ಪೈಗಂಬರರೇ) ನೀವು ಅವರೊಂದಿಗೆ ಹೇಳಿರಿ. {33}

[ಧಿಕ್ಕರಿಸಿಯೂ ಗೆದ್ದಿರುವೆವು ಎಂದು ಅವರು ಭ್ರಮಿಸದಿರಲಿ; ಏಕೆಂದರೆ] ಪ್ರತಿ ಸಮುದಾಯಕ್ಕೂ ನಿಗದಿಪಡಿಸಲಾಗಿರುವ ಒಂದು ಕಾಲಾವಧಿ ಇದೆ. ಅವರ (ನಿರ್ಧರಿತ) ಸಮಯ ಬಂದೆರಗಿದರೆ ಒಂದು ಘಳಿಗೆಯಷ್ಟಾದರೂ ಹಿಂದೆಯೋ ಮುಂದೆಯೋ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗದು! {34}

ಆದಮರ ಸಂತತಿಗಳೇ, ನಮ್ಮ ವಚನಗಳನ್ನು ನಿಮ್ಮ ಮುಂದೆ ವಿವರಿಸುತ್ತಾ ನಿಮ್ಮದೇ ಜನಾಂಗಕ್ಕೆ ಸೇರಿದವರಾದ (ನಮ್ಮ) ದೂತರುಗಳು ನಿಮ್ಮ ಬಳಿಗೆ ಬಂದಾಗಲೆಲ್ಲಾ ನಿಮ್ಮ ಪೈಕಿ ಯಾರು (ಅವುಗಳ ಉಲ್ಲಂಘನೆಯಾಗದಂತೆ) ಎಚ್ಚರಿಕೆ ವಹಿಸುತ್ತಾರೋ ಹಾಗೂ ತಮ್ಮನ್ನು (ಅದರ ಪ್ರಕಾರ) ಸುಧಾರಿಸಿಕೊಳ್ಳುತ್ತಾರೋ ಅಂತಹವರಿಗೆ ಭಯವಾಗಲಿ ವ್ಯಥೆಯಾಗಲಿ ಬರಲಾರದು [ಎಂಬುದು ನಮ್ಮ ಸ್ಥಿರ ನಿಯಮವಾಗಿರುತ್ತದೆ]. ಮತ್ತು ಯಾರು ನಮ್ಮ ವಚನಗಳನ್ನು ತಿರಸ್ಕರಿಸುತ್ತಾರೋ, ಅವುಗಳ ವಿರುದ್ಧ ಉದ್ಧಟತಂದಿಂದ ವರ್ತಿಸುತ್ತಾರೋ ಅಂತಹವರೇ ನರಕಾಗ್ನಿಯ ಸಂಗಾತಿಗಳಾಗುತ್ತಾರೆ; ಅದರೊಳಗೇ ಅವರು ಸದಾ ಕಾಲ ಬಿದ್ದಿರುತ್ತಾರೆ. {35-36}

ಇನ್ನು ಸುಳ್ಳುಗಳನ್ನು ಹೆಣೆದು ಅದನ್ನು ಅಲ್ಲಾಹ್ ನ ಮೇಲೆ ಆರೋಪಿಸಿದವರಿಗಿಂತ ಅಥವಾ ಅವನ ವಚನ-ನಿದರ್ಶನಗಳನ್ನು ಸುಳ್ಳೆಂದು ಸಾರಿ ತಳ್ಳಿ ಹಾಕಿದವರಿಗಿಂತ ದೊಡ್ಡ ಅಕ್ರಮಿಗಳು ಯಾರಿರಬಹುದು! ಅಂತಹವರಿಗೂ, ನಮ್ಮ ಮಲಕ್ ಗಳು ಅವರ ಆತ್ಮಗಳನ್ನು ವಶಪಡಿಸಿಕೊಳ್ಳಲು ಅವರಲ್ಲಿಗೆ ಬರುವ ತನಕವೂ [ಇಹಲೋಕದ ಜೀವನಕ್ಕೆ] ಅವರಿಗಾಗಿ ನಿಶ್ಚಿತವಾಗಿರುವ ಪಾಲು ತಲುಪುತ್ತಲೇ ಇರುತ್ತದೆ. (ಆ ಸಂದರ್ಭದಲ್ಲಿ ಮಲಕ್ ಗಳು,) ನೀವು ಅಲ್ಲಾಹ್ ನನ್ನು ಬಿಟ್ಟು (ಸಹಾಯಕ್ಕಾಗಿ) ಯಾರಿಗೆಲ್ಲ ಮೊರೆಯಿಡುತ್ತಿದ್ದಿರೋ ಅವರು ಈಗೆಲ್ಲಿದ್ದಾರೆ ಎಂದು ಕೇಳುವಾಗ, ಅವರೆಲ್ಲ ನಮ್ಮನ್ನು ತೊರೆದು ಮಾಯವಾಗಿ ಬಿಟ್ಟಿದ್ದಾರೆ ಎಂದು ಹೇಳುವರು; ಮಾತ್ರವಲ್ಲ ತಾವು ಧಿಕ್ಕಾರಿಗಳೇ ಆಗಿದ್ದೆವು ಎಂದು ಅವರು ಸ್ವತಃ ತಮ್ಮ ವಿರುದ್ಧ ಸಾಕ್ಷ್ಯವನ್ನೂ ವಹಿಸುವರು. {37}

ನಿಮಗಿಂತಲೂ ಮೊದಲು ಗತಿಸಿ ಹೋದ, ನರಕ ಪಾಲಾದ ಜಿನ್ನ್ ಮತ್ತು ಮನುಷ್ಯರ ಗುಂಪುಗಳನ್ನು ನೀವೂ ನರಕದಲ್ಲಿ ಸೇರಿಕೊಳ್ಳಿ ಎಂದು ಅಲ್ಲಾಹ್ ನು ಅವರೊಂದಿಗೆ ಹೇಳಲಿರುವನು. ಪ್ರತಿಯೊಂದು ಗುಂಪು ನರಕ ಸೇರಿಕೊಳ್ಳುವಾಗಲೂ (ತನ್ನಂತಹ) ತನ್ನ ಸಹೋದರ ಗುಂಪನ್ನು ಶಪಿಸುತ್ತಾ ಸೇರುವುದು. ಎಲ್ಲಿಯವರೆಗೆಂದರೆ, ಎಲ್ಲಾ ಗುಂಪುಗಳು ಅದರಲ್ಲಿ ಒಟ್ಟಾಗಿ ಬಿಟ್ಟಾಗ ನಂತರದವರು (ತಮಗಿಂತ) ಮುಂಚೆ ಅಲ್ಲಿದ್ದವರ ಕುರಿತು, ಓ ನಮ್ಮ ಕರ್ತಾರನೇ, ನಾವು ದಾರಿತಪ್ಪುವಂತೆ ಮಾಡಿದವರು ಇವರೇ ಆಗಿರುತ್ತಾರೆ; ಆದ್ದರಿಂದ ಇವರಿಗೆ ನರಕಶಿಕ್ಷೆಯನ್ನು ಇಮ್ಮಡಿಗೊಳಿಸಿ ನೀಡು ಎಂದು ಹೇಳುವರು. ಆಗ, ಪ್ರತಿ ಗುಂಪಿಗೂ ಇರುವುದು ಇಮ್ಮಡಿ ಶಿಕ್ಷೆಯೇ; ಆದರೆ ಅದು ನಿಮಗೆ ತಿಳಿದಿಲ್ಲವೆಂದು (ಅಲ್ಲಾಹ್ ನು) ಹೇಳುವನು. ಹಾಗಿರುವಾಗ, ಮುಂಚೆಯೇ ಅಲ್ಲಿದ್ದವರು ನಂತರ ಬಂದವರೊಂದಿಗೆ [ನಾವೇನೋ ತಪ್ಪಿತಸ್ಥರು ಹೌದು] ಆದರೆ ನಿಮಗೂ ನಮ್ಮ ಮೇಲೆ ಯಾವ ರೀತಿಯ ಶ್ರೇಷ್ಠತೆಯೂ ಇಲ್ಲ; ಆದ್ದರಿಂದ (ಭೂಲೋಕದಲ್ಲಿ) ಸಂಪಾದಿಸುತ್ತಿದ್ದುದರ ಫಲವಾಗಿ ಈಗ ನೀವೂ ಶಿಕ್ಷೆಯ ಸವಿಯುಣ್ಣಿರಿ ಎಂದು ಹೇಳುವರು. {38-39}

ನಿಜವಾಗಿ, ಯಾರು ನಮ್ಮ ವಚನಗಳನ್ನು ನಿರಾಕರಿಸಿದರೋ, ಅಹಂಕಾರ ತೋರಿ ಅದರಿಂದ ಮುಖ ತಿರುಚಿಕೊಂಡರೋ ಅಂತಹವರ ಪಾಲಿಗೆ ಆಕಾಶದ [ಅರ್ಥಾತ್ ಕರುಣೆಯ] ಬಾಗಿಲುಗಳು ತೆರೆದುಕೊಳ್ಳಲಾರವು; ಸೂಜಿಯ ರಂದ್ರದೊಳಗೆ ಒಂಟೆಯ ನುಸುಳುವಿಕೆ ಸಂಭವಿಸುವ ತನಕ ಅವರು ಸ್ವರ್ಗ ಪ್ರವೇಶಿಸುವುದು ಸಾಧ್ಯವಿಲ್ಲದ ವಿಷಯ! ಅಪರಾಧಿಗಳಿಗೆ ನಾವು ಕೊಡುವ ಶಿಕ್ಷೆ ಹಾಗಿರುತ್ತದೆ. ಅಂತಹವರಿಗೆ ನರಕದ (ಬೆಂಕಿಯ) ಹಾಸಿಗೆ ಮತ್ತು ಮೇಲಿನಿಂದ ಅದರದೇ ಹೊದಿಕೆ ಇರುವುದು. ಅನ್ಯಾಯವೆಸಗಿದವರಿಗೆ ನಾವು ಕೊಡುವ ಶಿಕ್ಷೆ ಹಾಗಿರುತ್ತದೆ. {40-41}

ಇನ್ನು (ನಮ್ಮ ವಚನಗಳನ್ನು ಸತ್ಯವೆಂದು) ಒಪ್ಪಿಕೊಂಡವರು ಮತ್ತದರ ಜೊತೆಗೆ ಸತ್ಕಾರ್ಯಗಳಲ್ಲಿ ತೊಡಗಿಕೊಂಡವರು (ತಿಳಿದಿರಬೇಕಾದ ವಿಷಯವೆಂದರೆ) ಯಾವೊಬ್ಬ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾದ ಹೊರೆಯನ್ನು ನಾವು ಹೊರಿಸುವುದಿಲ್ಲ; (ಕೊನೆಯದಾಗಿ ವಿಶ್ವಾಸಿಗಳಾದ) ಅವರೇ ಸ್ವರ್ಗವಾಸಿಗಳು ಆಗುವವರು; ಅದರಲ್ಲಿ ಶಾಶ್ವತವಾಗಿ ಅವರು ನೆಲೆಸಲಿರುವರು. {42}

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo

oooooooo


Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...