ಅಲ್ ಅನ್‌ಫಾಲ್ | ترجمة سـورة الأنفـال

تـرجمـة سـورة الأنفـال من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

* سهل الفهم من غير الرجوع إلى كتاب التفسير *

| ಸೂರಃ ಅಲ್ ಅನ್‌ಫಾಲ್ | ಪವಿತ್ರ್ ಕುರ್‌ಆನ್ ನ 8 ನೆಯ ಸೂರಃ | ಇದರಲ್ಲಿ ಒಟ್ಟು 75 ಆಯತ್ ಗಳು ಇವೆ |

ಅಲ್ಲಾಹ್ ನ ನಾಮದೊಂದಿಗೆ, ಅವನು ಮಹಾ ಕಾರುಣ್ಯವಂತನೂ ನಿರಂತರ ಕೃಪೆ ತೋರುವವನೂ ಆಗಿರುತ್ತಾನೆ !

[ಬದ್ರ್ ಯುದ್ಧದ ಸಂದರ್ಭದಲ್ಲಿ ವಶಪಡಿಸಿಕೊಂಡ] ಆ ಹೆಚ್ಚುವರಿ ಸೊತ್ತಿನ ಬಗ್ಗೆ ಅವರು [ಅರ್ಥಾತ್ ಆ ಯುದ್ಧದಲ್ಲಿ ಪಾಲ್ಗೊಂಡವರು] ನಿಮ್ಮೊಂದಿಗೆ ಪ್ರಶ್ನಿಸುತ್ತಿದ್ದಾರೆ! (ಓ ಪೈಗಂಬರರೇ,) ನೀವು ಅವರಿಗೆ ತಿಳಿಹೇಳಿರಿ: ಆ ಹೆಚ್ಚುವರಿ ಸೊತ್ತು ಅಲ್ಲಾಹ್ ನಿಗೆ ಮತ್ತು ಪೈಗಂಬರರಿಗೆ ಸೇರಿದ್ದಾಗಿದೆ; ಆದ್ದರಿಂದ (ಇಂತಹ ವಿಷಯಗಳಲ್ಲಿ) ನೀವು ಅಲ್ಲಾಹ್ ನ ಭಯವಿರಿಸಿಕೊಳ್ಳಿ ಮತ್ತು [ಪರಸ್ಪರ ಕಚ್ಚಾಡುವುದನ್ನು ಬಿಟ್ಟು] ನಿಮ್ಮ ನಡುವಿನ ಸಂಬಂಧವನ್ನು ಸರಿಪಡಿಸಿಕೊಳ್ಳಿ; ಹಾಗೂ ನೀವು ನಿಜವಾದ ವಿಶ್ವಾಸಿಗಳು ಹೌದಾದರೆ ಅಲ್ಲಾಹ್ ನ ಮತ್ತು ಅವನ ದೂತನ ಆದೇಶಗಳನ್ನು ಪಾಲಿಸಿರಿ. {1}

ಅಲ್ಲಾಹ್ ನ ವಿಷಯ ಪ್ರಸ್ತಾಪಿಸಲ್ಪಡುವಾಗ ಹೃದಯಗಳಲ್ಲಿ ಯಾರಿಗೆ ಭಯಭಕ್ತಿ ಮೂಡುವುದೋ ಅವರೇ ಯಥಾರ್ಥ ವಿಶ್ವಾಸಿಗಳು. ಹೌದು, ಅವರ ಮುಂದೆ ಅಲ್ಲಾಹ್ ನ ವಚನಗಳನ್ನು ಓದಿ ಕೇಳಿಸಿದಾಗ ಅದು ಅವರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ; ಮತ್ತು ಅಂತಹವರು ತಮ್ಮ ಕರ್ತಾರನ ಮೇಲೆ ಸಂಪೂರ್ಣ ಭರವಸೆಯನ್ನು ಇಟ್ಟಿರುತ್ತಾರೆ. ಅವರು ತಮ್ಮ ನಮಾಝ್ ಗಳನ್ನು ನಿಷ್ಠೆಯೊಂದಿಗೆ ನಿರ್ವಹಿಸುತ್ತಾರೆ ಮತ್ತು ನಾವು ಏನನ್ನು ಅವರಿಗೆ ಒದಗಿಸಿರುವೆವೋ ಅದರಿಂದ ಅವರು (ನಮ್ಮ ಮಾರ್ಗದಲ್ಲಿ) ಖರ್ಚು ಮಾಡುತ್ತಿರುತ್ತಾರೆ. ನಿಜವಾದ ಅರ್ಥದಲ್ಲಿ ವಿಶ್ವಾಸಿಗಳು ಅವರೇ ಆಗಿರುವರು. ಅವರಿಗೆ ತಮ್ಮ ದೇವನ ಬಳಿ ಉನ್ನತ ಸ್ಥಾನಮಾನಗಳಿವೆ. ಮಾತ್ರವಲ್ಲ, ಪಾಪ ವಿಮೋಚನೆಯೂ ಮಾನ್ಯವಾದ ಸವಲತ್ತುಗಳೂ ಇವೆ! {2-4}

(ಓ ಪೈಗಂಬರರೇ,) ನಿಮ್ಮ ಕರ್ತಾರನು ಒಂದು ನ್ಯಾಯಬದ್ಧ ಉದ್ದೇಶದೊಂದಿಗೆ ನಿಮ್ಮನ್ನು ನಿಮ್ಮ ಮನೆಯಿಂದ (ಯುದ್ಧ ನಿಮಿತ್ತ) ಹೊರಡುವಂತೆ ಮಾಡಿದಾಗ, ಮುಸ್ಲಿಮರ ಒಂದು ಗುಂಪಿಗೆ ಅದು ಬಹಳವಾಗಿ ಅಪ್ರಿಯವಾಗಿ ತೋರಿತ್ತು. ನ್ಯಾಯಯುತವಾಗಿದ್ದ ಆ ವಿಷಯದಲ್ಲಿ, ಅದು ಸತ್ಯವೆಂದು ಅವರಿಗೆ ಸ್ಪಷ್ಟವಾಗಿದ್ದರೂ ಸಹ, ಕಣ್ಣೆದುರಲ್ಲೇ ಕಾಣುತ್ತಿರುವ ಮರಣಕೂಪಕ್ಕೆ ಅವರನ್ನು ಅಟ್ಟಲಾಗುತ್ತಿದೆಯೋ ಎಂಬಂತೆ ಅವರು ನಿಮ್ಮೊಂದಿಗೆ (ಆಗ) ಜಗಳವಾಡಿದ್ದ ಹಾಗೆಯೇ [ಈಗ ಯುದ್ಧದಲ್ಲಿ ವಶಪಡಿಸಿಕೊಂಡ ಸೊತ್ತಿನ ವಿತರಣೆಯ ಬಗ್ಗೆ ಅವರು ನಿಮ್ಮನ್ನು ಪ್ರಶ್ನಿಸುತ್ತಿದ್ದಾರೆ]! {5-6}

ಎರಡು ತಂಡಗಳ ಪೈಕಿ [ಅರ್ಥಾತ್ ಕುರೈಷರ ಸಶಸ್ತ್ರ ಸೇನೆ ಮತ್ತು ಅವರ ವ್ಯಾಪಾರೀ ತಂಡ - ಇವೆರಡರಲ್ಲಿ] ಒಂದನ್ನು ಖಂಡಿತವಾಗಿ ನೀವು ಎದುರಿಸಿ (ಪರಾಜಯಗೊಳಿಸುವಂತೆ) ನಾನು ಮಾಡಲಿದ್ದೇನೆ ಎಂದು ಅಲ್ಲಾಹ್ ನು ನಿಮಗೆ [ಅರ್ಥಾತ್ ವಿಶ್ವಾಸಿಗಳಿಗೆ] ವಾಗ್ದಾನ ಮಾಡಿದ್ದುದನ್ನು ಸ್ಮರಿಸಿರಿ! ಶಸ್ತ್ರಸಜ್ಜಿತವಲ್ಲದ (ವ್ಯಾಪಾರಿಗಳ ತಂಡವು) ನಮಗೆ ಎದುರಾಗಲಿ ಎಂದು ನೀವು ಅತಿಯಾಗಿ ಬಯಸುತ್ತಿದ್ದಿರಿ. ಆದರೆ ಅಲ್ಲಾಹ್ ನು ಆ (ವಾಗ್ದಾನದ) ಮಾತುಗಳ ಮೂಲಕ ಸತ್ಯವನ್ನು ಸತ್ಯವಾಗಿ ಸಾಬೀತು ಪಡಿಸಲೂ, ಸತ್ಯವನ್ನು ಧಿಕ್ಕರಿಸಿದವರ ಬುಡವನ್ನೇ ಕತ್ತರಿಸಲೂ ಬಯಸಿದ್ದನು. ಆ ಪಾಪಿ ಜನರಿಗೆ ಅದು ಇಷ್ಟವೇ ಆಗದಿದ್ದರೂ ಸಹ ಸತ್ಯವನ್ನು ಸತ್ಯವಾಗಿಯೂ ಮಿಥ್ಯವನ್ನು ಮಿಥ್ಯವಾಗಿಯೂ ಸಾಬೀತುಪಡಿಸಲು (ಅಲ್ಲಾಹ್ ನು ಉದ್ದೇಶಿಸಿದ್ದನು). {7-8}

ಇನ್ನು ನೀವು ನಿಮ್ಮ ಕರ್ತಾರನೊಂದಿಗೆ ಸಹಾಯಕ್ಕಾಗಿ ಮೊರೆಯಿಟ್ಟಾಗ, ಒಂದನ್ನೊಂದು ಹಿಂಬಾಲಿಸಿ ಬರುವ ಸಾವಿರ ಮಲಕ್ ಗಳ ಮೂಲಕ ನಾನು ಖಂಡಿತವಾಗಿಯೂ ನಿಮಗೆ ನೆರವು ನೀಡಲಿರುವೆನು ಎಂದು ಅವನು ಉತ್ತರಿಸಿದ್ದ ಸಂದರ್ಭವನ್ನೂ ನೆನಪಿಸಿರಿ. ಅದೊಂದು ಶುಭಸುದ್ದಿಯಾಗಲಿ ಮತ್ತು ಆ ಮೂಲಕ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವಂತಾಗಲಿ ಎಂಬ ಕಾರಣಕ್ಕಾಗಿ ಅಲ್ಲಾಹ್ ನು ಹಾಗೆ ಮಾಡಿದನು. ಯಥಾರ್ಥದಲ್ಲಿ ಅಂತಹ ಸಹಾಯವು ಅಲ್ಲಾಹ್ ನ ಬಳಿಯಿಂದಲ್ಲದೆ ಬೇರೆಲ್ಲಿಂದಲೂ ಬರುವುದಿಲ್ಲ. ನಿಜವಾಗಿ ಅಲ್ಲಾಹ್ ನು ತುಂಬಾ ಬಲಾಢ್ಯನೂ ಅಗಾಧ ಅರಿವುಳ್ಳವನೂ ಆಗಿರುವನು. {9-10}

[ಬದ್ರ್ ಯುದ್ಧದ ಹಿಂದಿನ ರಾತ್ರಿಯ ಅತ್ಯಂತ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ] ತನ್ನ ವತಿಯಿಂದ ಬಂದ ಮಾನಸಿಕ ಪ್ರಶಾಂತತೆ ಲಘುನಿದ್ರೆಯ ರೂಪದಲ್ಲಿ ನಿಮ್ಮನ್ನು ಆವರಿಸಿಕೊಳ್ಳುವಂತೆ ಅಲ್ಲಾಹ್ ನು ಮಾಡಿದ್ದ ಆ ಸಂದರ್ಭವನ್ನು ಸಹ ನೀವು ಜ್ಞಾಪಿಸಿಕೊಳ್ಳಿರಿ. ನಿಮ್ಮನ್ನು ಶಿಚಿಗೊಳಿಸಲು ಆಕಾಶದಿಂದ ನಿಮ್ಮ ಮೇಲೆ ಮಳೆನೀರು ಅವನು ಸುರಿಸಿದ್ದನು; ಸೈತಾನನು [ನಿಮ್ಮ ಹೃದಯಗಳಲ್ಲಿ ಬಿತ್ತಿದ್ದ ಅಭದ್ರತೆ, ಭಯದಂತಹ] ಮಾಲಿನ್ಯವನ್ನು ಆ ಮೂಲಕ ಅವನು ನಿಮ್ಮಿಂದ ನೀಗಿಸಿದ್ದನು. [ಮರುಭೂಮಿಯನ್ನು ನೆನೆಸಿ, ಪ್ರತಿಕೂಲ ಸ್ಥಿತಿಯನ್ನು ಹೋಗಲಾಡಿಸಿ ನೆಲವನ್ನು ನಿಮಗೆ ಅನುಕೂಲಕರವಾಗಿಸುವ ಮೂಲಕ] ನಿಮ್ಮಲ್ಲಿ ಚಿತ್ತಸ್ಥೈರ್ಯ ತುಂಬಿದ ಮತ್ತು ಕಾಲು ಕದಲದೆ ನೀವು (ಯುದ್ಧಭೂಮಿಯಲ್ಲಿ) ಭದ್ರವಾಗಿ ನಿಲ್ಲುವಂತೆ ಮಾಡಿದ್ದ ಆ ಸಂದರ್ಭ! {11}

ನಾನು ನಿಮ್ಮೊಂದಿಗೇ ಇದ್ದೇನೆ; ನೀವು ವಿಶ್ವಾಸಿಗಳಿಗೆ ಚಿತ್ತಸ್ಥೈರ್ಯ ನೀಡಿರಿ; [ಪೈಗಂಬರ ಕರೆಯನ್ನು] ಧಿಕ್ಕರಿಸಿ ತಳ್ಳಿ ಹಾಕಿದವರ ಹೃದಯಗಳಲ್ಲಿ ನಾನಿದೋ ಭೀತಿಯನ್ನು ಬಿತ್ತುವೆನು. ನೀವು ಅವರ ಕುತ್ತಿಗೆಯ ಮೇಲೆ ಪ್ರಹಾರ ನಡೆಸಿರಿ; ಅವರ ಒಂದೊಂದು ಬೆರಳುಗಳಿಗೆ ಪೆಟ್ಟು ಕೊಡಿರಿ ಎಂದು ನಿಮ್ಮ ಕರ್ತಾರನು ಆ ಮಲಕ್ ಗಳಿಗೆ ಆದೇಶ ನೀಡಿದ ಸಂದರ್ಭವನ್ನು ನೆನೆಸಿಕೊಳ್ಳಿ. {12}

ಅಲ್ಲಾಹ್ ಮತ್ತು ಅವನ ದೂತ (ಪೈಗಂಬರ್ ಮುಹಮ್ಮದ್) ರಿಗೆ ಎದುರು ನಿಂತ ಕಾರಣಕ್ಕಾಗಿಯೇ ಅಂತಹ ಶಿಕ್ಷೆ! ಹೌದು, ಯಾರು ಅಲ್ಲಾಹ್ ಮತ್ತು ಅವನ ಪೈಗಂಬರರನ್ನು ವಿರೋಧಿಸುತ್ತಾರೋ ಅಂತಹವರನ್ನು ಅಲ್ಲಾಹ್ ನು ನಿಜವಾಗಿಯೂ ಬಹಳ ಕಠಿಣವಾಗಿ ಶಿಕ್ಷಿಸುತ್ತಾನೆ. {13}

ಅದು ನಿಮಗಿರುವ ಶಿಕ್ಷೆ; ಈಗ ಅದನ್ನು ಸವಿಯಿರಿ! ಹಾಗೆಯೇ ಧಿಕ್ಕಾರ ತೋರಿದವರಿಗಾಗಿ ಮುಂದೆ ನರಕದ ಶಿಕ್ಷೆ ಬೇರೆಯೇ ಇದೆ. {14}

ಓ ವಿಶ್ವಾಸಿಗಳೇ, (ಪೈಗಂಬರರ ಕರೆಯನ್ನು) ಧಿಕ್ಕರಿಸಿದ ಜನರನ್ನು ನೀವು (ಯುದ್ಧಭೂಮಿಯಲ್ಲಿ) ಎದುರಿಸಬೇಕಾಗಿ ಬಂದಾಗ, ಅವರದು ಶಸ್ತ್ರಸಜ್ಜಿತ ಸೇನೆಯಾಗಿದ್ದರೂ ಸಹ, ನೀವು ಅವರಿಗೆ ಬೆನ್ನು ತೋರಿಸಿ ಓಡದಿರಿ. ಯುದ್ಧ ತಂತ್ರಗಳ ಸಲುವಾಗಿ ಅಥವಾ (ಸಂಕಷ್ಟದಲ್ಲಿ ಸಿಲುಕಿರುವ) ತಮ್ಮ ಇನ್ನೊಂದು ತಂಡವನ್ನು ಸೇರಿಕೊಳ್ಳುವ ಸಲುವಾಗಿ ಹೊರತು, ಯಾರಾದರೂ ಆ ದಿನ (ಶತ್ರುಗಳ ಪಡೆಗೆ) ಬೆನ್ನು ತೋರಿಸಿ ಹಿಮ್ಮೆಟ್ಟಿ ಓಡಿದರೆ ಆತನು ಅಲ್ಲಾಹ್ ನ ಪ್ರಕೋಪಕ್ಕೆ ಗುರಿಯಾಗುವನು; ಅವನ ತಾಣವು ನರಕವಾಗುವುದು! ಬಹಳ ನಿಕೃಷ್ಟವಾದ ನೆಲೆಯದು! {15-16}

[ವಿಶ್ವಾಸಿಗಳೇ, ಆ ಯುದ್ಧದಲ್ಲಿ] ಅವರನ್ನು ವಧಿಸಿದವರು ನೀವಲ್ಲ; ಬದಲಾಗಿ ಅವರನ್ನು ಅಲ್ಲಾಹ್ ನು ವಧಿಸಿದ್ದನು! ಮತ್ತು [ಓ ಪೈಗಂಬರರೇ, ಶತ್ರುಗಳ ಮುಖಕ್ಕೆ ಅಂದು ಹಿಡಿ ಮಣ್ಣು] ಎಸೆದವರು ನೀವೂ ಅಲ್ಲ! ನೀವದನ್ನು ಎಸೆಯುತ್ತಿದ್ದಾಗ ಯಥಾರ್ಥದಲ್ಲಿ ಅಲ್ಲಾಹ್ ನೇ ಅದನ್ನು ಎಸೆದಿದ್ದನು! ವಿಶ್ವಾಸಿಗಳ ತಂಡವನ್ನು ಹಿತಕರವಾದ ಒಂದು ಪರೀಕ್ಷೆಗೊಳಪಡಿಸಿ ತನ್ನ ವತಿಯಿಂದ (ವಿಜಯ ದೊರಕಿಸುವುದು) ಉದ್ದೇಶವಾಗಿತ್ತು. ಅಲ್ಲಾಹ್ ನಾದರೋ (ಪ್ರಾರ್ಥನೆಗಳನ್ನು) ಕೇಳಿಸಿಕೊಳ್ಳುವವನೂ (ಪರಿಸ್ಥಿತಿಯ) ಪರಿಜ್ಞಾನ ಇರುವವನೂ ಆಗಿರುವನು. {17}

ಅದೆಲ್ಲ ನಿಮಗಾಗಿ ಮಾಡಿದ್ದಾಯಿತು! ಇನ್ನು (ಆ ಶತ್ರುಗಳ ವಿಷಯ); ಧಿಕ್ಕಾರ ತೋರಿದವರ ಮೋಸಗಾರಿಕೆಯ ಎಲ್ಲ ತಂತ್ರಗಳನ್ನು ಅಲ್ಲಾಹ್ ನು ಖಂಡಿತ ನಿಷ್ಪ್ರಯೋಜಕವಾಗಿಸುತ್ತಾನೆ. {18}

[ಪೈಗಂಬರರ ಬಳಗದೊಂದಿಗೆ ಶತ್ರುತ್ವ ಸಾರಿರುವ ಕುರೈಶರೇ, ಆ ಯುದ್ಧದಲ್ಲಿ], ನೀವು ಬಯಸಿರುವುದು ಗೆಲುವನ್ನಾದರೆ ಅದೆಂತಹ 'ಗೆಲುವು' ನಿಮ್ಮ ಮುಂದೆ ಬಂದು ನಿಂತಿದೆ ನೋಡಿ! ಹಾಗಿರುವಾಗ ನಿಮ್ಮನ್ನು ನೀವೇ (ಎಲ್ಲ ಅಕ್ರಮಗಳಿಂದ) ತಡೆದುಕೊಂಡರೆ ಅದು ನಿಮಗೇ ಲೇಸು! ಇನ್ನು ನೀವು ನಿಮ್ಮ ಆ ಧೋರಣೆಗೇ ಮರಳುವುದಾದರೆ ನಾವೂ ಮರಳ ಬೇಕಾಗುವುದು! ನಿಮ್ಮ ತಂಡವು ಅದೆಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೂ ಅದರಿಂದ ನಿಮಗೆ ಯಾವ ಪ್ರಯೋಜನವೂ ಆಗದು. ಅಲ್ಲಾಹ್ ನು ವಿಶ್ವಾಸಿಗಳ ಪಕ್ಷದಲ್ಲಿರುವನು ಎಂಬುದನ್ನು ನೀವು ತಿಳಿಯಿರಿ. {19}

ಇನ್ನು, ವಿಶ್ವಾಸಿಗಳಾದ ಓ ಜನರೇ (ನೀವು ಅವರಂತಾಗದಿರಿ)! ನೀವು ಅಲ್ಲಾಹ್ ನ ಮಾತನ್ನು ಮತ್ತವನ ಪೈಗಂಬರರ ಮಾತನ್ನು ಅನುಸರಿಸಿ ನಡೆಯುವವರಾಗಿರಿ. ಪೈಗಂಬರರ ಉಪದೇಶಗಳನ್ನು ಕೇಳಿಸಿಕೊಂಡೂ ಸಹ ಅದರಿಂದ ಮುಖ ತಿರುಚಿಕೊಳ್ಳುವವರು ನೀವಾಗದಿರಿ! ಏನನ್ನೂ ಕೇಳಿಸಿಕೊಳ್ಳುವ ಗೋಜಿಗೆ ಹೋಗದೆ ನಾವು ಕೇಳಿಸಿಕೊಂಡಿದ್ದೇವೆ ಎಂದು ಹೇಳುತ್ತಿದ್ದವರಂತೆ ನೀವಾಗಬೇಡಿರಿ. ಬುದ್ಧಿ ಉಪಯೋಗಿಸದ ಅಂತಹ ಕಿವುಡರು ಹಾಗೂ ಮೂಕರು ಅಲ್ಲಾಹ್ ನ ದೃಷ್ಟಿಯಲ್ಲಿ ಜೀವಿಗಳ ಪೈಕಿ ಅತ್ಯಂತ ನಿಕೃಷ್ಟ ಜೀವಿಗಳು! {20-22}

ಕಿಂಚಿತ್ತಾದರೂ ಅವರಲ್ಲಿ ಸದ್ಗುಣವಿರುವುದು ಅಲ್ಲಾಹ್ ನ ಅರಿವಿಗೆ ಬರುತ್ತಿದ್ದರೆ ಖಂಡಿತವಾಗಿಯೂ ಅವನು ಅವರನ್ನು (ಉಪದೇಶಗಳಿಗೆ) ಕಿವಿಯೊಡ್ಡುವವರನ್ನಾಗಿ ಮಾಡಿರುತ್ತಿದ್ದನು! ಇನ್ನು ಅವರನ್ನು ಅವನು ಹಾಗೆ ಕಿವಿಯೊಡ್ಡೂವ ಜನರನ್ನಾಗಿ ಮಾಡಿದರೂ ಸಹ ಅವರು ಅದರಿಂದ ಬೇರೆಡೆಗೆ ತಿರುಗಿಕೊಳ್ಳುತ್ತಿದ್ದರು! ಅವರಾದರೋ (ಸತ್ಯಕ್ಕೆ) ಬೆನ್ನು ತೋರಿಸುವವರೇ ಆಗಿರುವರು. {23}

ವಿಶ್ವಾಸಿಗಳಾದ ಓ ಜನರೇ, ನಿಮಗೆ ಜೀವಕಳೆ ನೀಡುವಂತಹ ಕಾರ್ಯಗಳತ್ತ ಆಹ್ವಾನ ನೀಡಲಾದಾಗ ನೀವು ಅಲ್ಲಾಹ್ ನ ಮತ್ತು ಪೈಗಂಬರರ ಅಂತಹ ಕರೆಗೆ ಓಗೊಡುವವರಾಗಿರಿ. [ಇನ್ನು ನಿರಂತರವಾಗಿ ನೀವು ಅದಕ್ಕೆ ಧಿಕ್ಕಾರ ತೋರಿದರೆ] ಖಂಡಿತವಾಗಿಯೂ ಅಲ್ಲಾಹ್ ನು ಮನುಷ್ಯನ ಮತ್ತು ಅವನ ಹೃದಯದ ನಡುವೆ ಒಂದು ಅಡ್ಡಿಯಾಗಿ ನಿಲ್ಲುವನು ಎಂದೂ, ಕೊನೆಗೆ ಅವನ ಸನ್ನಿಧಿಯಲ್ಲೇ ನಿಮ್ಮೆಲ್ಲರನ್ನೂ (ವಿಚಾರಣೆಗಾಗಿ) ಒಟ್ಟು ಸೇರಿಸಲಾಗುವುದು ಎಂದೂ ಚೆನ್ನಾಗಿ ತಿಳಿದುಕೊಂಡಿರಿ. {24}

ನಿಮ್ಮ ಪೈಕಿ ಅನ್ಯಾಯವೆಸಗಿದರನ್ನು ಮಾತ್ರವಾಗಿ ಬಾಧಿಸದೆ (ನಿಮ್ಮ ಇಡೀ ಸಮಾಜಕ್ಕೇ ಬಂದೆರಗಬಹುದಾದ) ಪರೀಕ್ಷೆಯ ಕುರಿತು ನೀವು ಜಾಗರೂಕತೆ ವಹಿಸಿಕೊಳ್ಳಿ. ಅಲ್ಲಾಹ್ ನು ಬಹಳ ಕಠಿಣವಾಗಿ ಶಿಕ್ಷಿಸುವವನು ಎಂಬುದನ್ನು ನೀವು ಚೆನ್ನಾಗಿ ಮನನ ಮಾಡಿಕೊಳ್ಳಿ. {25}

ನೀವು ನಾಡಿನಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದು ದುರ್ಬಲರೆಂದು ಪರಿಗಣಿಸಲ್ಪಟ್ಟು ಮರ್ದಿಸಲ್ಪಡುತ್ತಿದ್ದ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ. ಜನರು ನಿಮ್ಮನ್ನು (ನಾಡಿನಿಂದ) ಕಿತ್ತೊಗೆದು ಬಿಡುವರೋ ಎಂಬ ಭೀತಿ ನಿಮ್ಮದಾಗಿತ್ತು! ಹಾಗಿರುವಾಗ ನೀವು ಕೃತಜ್ಞತೆ ತೋರುವವರಾಗಿ ತೀರಲು ಅಲ್ಲಾಹ್ ನು ನೆಲೆಯೊಂದನ್ನು ನಿಮಗೆ ನೀಡಿದನು; ತನ್ನ ನೆರವಿನ ಮೂಲಕ ನಿಮ್ಮನ್ನು ಸಶಕ್ತರನ್ನಾಗಿ ಮಾಡಿದನು; ಮಾತ್ರವಲ್ಲ, ನಿಮಗೆ ಉತ್ಕೃಷ್ಟವಾದ ಜೀವನಾಧಾರವನ್ನೂ ಒದಗಿಸಿದನು. {26}

ಓ ವಿಶ್ವಾಸಿಗಳೇ, ನೀವು ಅಲ್ಲಾಹ್ ನಿಗೂ ಪೈಗಂಬರರಿಗೂ ದ್ರೋಹ ಬಗೆಯದಿರಿ. (ಹಾಗೆ ಮಾಡಬಾರದೆಂದು) ಅರಿತವರಾಗಿಯೂ ನೀವು (ನಿಮಗೊಪ್ಪಿಸಲಾದ ಯಾವುದರಲ್ಲಿಯೂ) ವಿಶ್ವಾಸಘಾತುಕತನ ತೋರಬೇಡಿರಿ. {27}

ಹೌದು! ನಿಮ್ಮ ಸಂಪತ್ತು ಹಾಗೂ ನಿಮ್ಮ ಸಂತತಿಯು ನಿಮಗೊಂದು ಪರೀಕ್ಷೆಯೆಂಬುದು ನೀವು ಚೆನ್ನಾಗಿ ಅರಿಯಿರಿ; ಹಾಗೆಯೇ ಮಹತ್ತರವಾದ ಪ್ರತಿಫಲವಿರುವುದು ಅಲ್ಲಾಹ್ ನ ಬಳಿಯೇ ಎಂಬ ವಾಸ್ತವಿಕತೆಯನ್ನೂ! {28}

ವಿಶ್ವಾಸಿಗಳಾದ ಓ ಜನರೇ! ನೀವು ಆಲ್ಲಾಹ್ ನ ಭಯಭಕ್ತಿ ಮೈವೆತ್ತು ಜೀವಿಸುವವರಾದರೆ ಸತ್ಯಾಸತ್ಯವನ್ನು ಅರ್ಥಮಾಡಿಕೊಳ್ಳುವ ವಿವೇಚನೆಯನ್ನು ಅವನು ನಿಮಗೆ ನೀಡುವನು. ಮಾತ್ರವಲ್ಲ ನೀವೆಸಗಿದ ದುಷ್ಕೃತ್ಯಗಳನ್ನು ನಿಮ್ಮಿಂದ ಅವನು ತೊಡೆದು ಹಾಕುವನು ಹಾಗೂ ನಿಮಗೆ ಕ್ಷಮಾದಾನ ನೀಡುವನು. ಹೌದು, ಅಲ್ಲಾಹ್ ನು (ಅಂತಹ) ಅಗಾಧವಾದ ಧಾರಾಳತನವನ್ನು ಹೊಂದಿರುವನು! {29}

(ಓ ಪೈಗಂಬರರೇ, ನಿಮ್ಮ ಬೋಧನೆಯನ್ನು) ತಿರಸ್ಕರಿಸಿ ಬಿಟ್ಟವರು ನಿಮ್ಮನ್ನು ಬಂಧನಕ್ಕೊಳಪಡಿಸಲು ಅಥವಾ ನಿಮ್ಮನ್ನು ವಧಿಸಿ ಬಿಡಲು ಅಥವಾ ನಿಮ್ಮನ್ನು ನಾಡಿನಿಂದ ಹೊರಗಟ್ಟಿ ಬಿಡಲು ನಿಮ್ಮ ವಿರುದ್ಧ ತಂತ್ರಗಳನ್ನು ಹೂಡುತ್ತಿದ್ದ ಸಮಯವನ್ನೂ ನೆನಪಿಸಿಕೊಳ್ಳಿ! ಅತ್ತ ಅವರು ತಂತ್ರಗಳನ್ನು ಹೂಡುತ್ತಿದ್ದರು; ಇತ್ತ ಅಲ್ಲಾಹ್ ನು ಮರುತಂತ್ರ ರೂಪಿಸಿದ್ದನು. ಹೌದು! ತಂತ್ರಗಳಿಗೆ ಮರುತಂತ್ರ ರೂಪಿಸುವುದರಲ್ಲಿ ಅಲ್ಲಾಹ್ ನೇ ಅತ್ಯುತ್ಕೃಷ್ಟನು. {30}

ನಮ್ಮ ವಚನಗಳನ್ನು ಅವರ [ಅರ್ಥಾತ್ ಕುರೈಶರ] ಮುಂದೆ ಓದಿ ಕೇಳಿಸಲಾದಾಗ, ಅದನ್ನು ನಾವು ಕೇಳಿಸಿ ಕೊಂಡದ್ದಾಯಿತು, ಒಂದು ವೇಳೆ ನಾವು ಬಯಸಿದ್ದಿದ್ದರೆ ಅಂತಹದ್ದನ್ನು ನಾವೂ ಸಹ ಹೇಳುತ್ತಿದ್ದೆವು; ಇವೆಲ್ಲಾ ಹಿಂದಿನವರು ಹೇಳುತ್ತಿದ್ದಂತಹ ಕಟ್ಟುಕಥೆಗಳೇ ಹೊರತು ಬೇರೇನೂ ಅಲ್ಲ ಎಂದು ಅವರು [ಲೇವಡಿ ಮಾಡುತ್ತಾ] ಹೇಳುತ್ತಾರೆ. ಹಾಗೂ, ಓ ದೇವನೇ, ನಿಜವಾಗಿಯೂ ಇದು ನಿನ್ನ ವತಿಯಿಂದ ಬಂದಂತಹ ಸತ್ಯವು ಹೌದಾದರೆ [ನಾವು ಅದನ್ನು ಪ್ರಶ್ನಿಸುತ್ತಿರುವ ಕಾರಣಕ್ಕಾಗಿ] ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆ ಸುರಿಯುವಂತೆ ಮಾಡು ಅಥವಾ ಯಾತನಾಮಯವಾದ ಒಂದು ಶಿಕ್ಷೆಯನ್ನಾದರೂ ನಮ್ಮ ಮೇಲೆರಗಿಸಿ ತೋರಿಸು ಎಂದು ಅವರು [ಸವಾಲೊಡ್ಡುತ್ತಾ] ಹೇಳಿದ ಸಂದರ್ಭವನ್ನೂ ಸ್ವಲ್ಪ ನೆನಪಿಸಿಕೊಳ್ಳಿ. {31-32}

ಆದರೆ (ಪೈಗಂಬರರೇ) ನೀವಿನ್ನೂ ಅವರ ನಡುವೆಯೇ ಇದ್ದು (ಬೋಧನೆಯ ಕರ್ತವ್ಯದಲ್ಲಿ ತೊಡಗಿರುವಾಗ) ಅವರ ಮೇಲೆ ಶಿಕ್ಷೆ ಎರಗಿಸುವುದು ಅಲ್ಲಾಹ್ ನ ರೀತಿಯಲ್ಲ. ಹಾಗೆಯೇ ಅವರಲ್ಲಿ (ಕೆಲವರು) ತಮ್ಮನ್ನು ಕ್ಷಮಿಸುವಂತೆ ಪ್ರಾರ್ಥಿಸುತ್ತಿರುವಾಗಲೂ ಅಲ್ಲಾಹ್ ನು (ನಾಡಿನವರನ್ನು ಒಟ್ಟಾಗಿ) ಶಿಕ್ಷಿಸುವುದಿಲ್ಲ. {33}

ಅದಿರಲಿ, ಅಲ್ಲಾಹ್ ನು ಅವರನ್ನು ಶಿಕ್ಷಿಸದೇ ಇರಲು ಅವರಲ್ಲಿ ಏನಿದೆ? ಸಾಲದಕ್ಕೆ ಈಗ ಅವರು (ಮಕ್ಕಾದ ಪವಿತ್ರ ಮಸೀದಿಯಾದ) ಮಸ್ಜಿದ್ ಅಲ್ ಹರಾಮ್ ಪ್ರವೇಶಿಸದಂತೆ ಜನರನ್ನು ತಡೆಯುತ್ತಿದ್ದಾರೆ. ಇಷ್ಟಾಗಿ ಅವರು ಅದರ ನಿಜವಾದ ಅಭಿರಕ್ಷಕರೂ ಅಲ್ಲ. (ಅಲ್ಲಾಹ್ ನಿಗೆ) ಭಯಭಕ್ತಿ ತೋರುವವರು ಮಾತ್ರವೇ ಅದರ ಅಭಿರಕ್ಷಕರಾಗಲು ಅರ್ಹತೆಯುಳ್ಳವರು. ಆದರೆ ಅವರಲ್ಲಿ ಹೆಚ್ಚಿನವರಿಗೆ ಅಷ್ಟೂ ತಿಳಿಯದು! {34}

ಆ ಭವನದ [ಅರ್ಥಾತ್ ಮಸ್ಜಿದ್ ಅಲ್ ಹರಾಮ್ ಅಥವಾ ಕಾಬಾದ] ಬಳಿ ಅವರು ಮಾಡುವ ನಮಾಝ್ ಎಂದರೆ ಕೇವಲ ಸಿಳ್ಳೆ ಹೊಡೆಯುವುದು ಮತ್ತು ಚಪ್ಪಾಳೆ ತಟ್ಟುವುದಲ್ಲದೆ ಬೇರೇನೂ ಅಲ್ಲ. ಯಾಥಾರ್ಥ್ಯ ಹಾಗಿರುವಾಗ, ನೀವು ಧಿಕ್ಕರಿಸುತ್ತಿದ್ದ ಕಾರಣಕ್ಕಾಗಿ ಈಗ ಶಿಕ್ಷೆಯ ಸವಿಯುಣ್ಣಿರಿ (ಎಂದು ಅವರೊಂದಿಗೆ ಅಂದು ಹೇಳಲಾಗುವುದು). {35}

ಹೌದು, ಯಾರು ಧಿಕ್ಕಾರವನ್ನೇ ಧ್ಯೇಯವಾಗಿಸಿಕೊಂಡರೋ ಅವರು ಜನರನ್ನು ಅಲ್ಲಾಹ್ ನ ಮಾರ್ಗದಿಂದ ತಡೆಯಲು ತಮ್ಮ ಸಂಪತ್ತನ್ನು ವ್ಯಯಿಸುತ್ತಾರೆ. ಮುಂದೆಯೂ ಅದನ್ನು ಅವರು ಅದಕ್ಕಾಗಿ ವ್ಯಯಿಸುತ್ತಲಿರುತ್ತಾರೆ. ಮುಂದೆ ಅವರು ಅತಿಯಾಗಿ ಖೇದಪಡಲು ಅದು ಕಾರಣವಾಗುವುದು. ನಂತರ ಅವರನ್ನು ಅಧೀನಪಡಿಸಿಕೊಳ್ಳಲಾಗುವುದು. ಹೌದು, ಯಾರು ಧಿಕ್ಕಾರವನ್ನೇ ಮೈವೆತ್ತು ಜೀವಿಸಿದರೋ ಅವರನ್ನು ನರಕಕ್ಕಾಗಿ ಒಂದುಗೂಡಿಸಲಾಗುವುದು. {36}

ನೀಚರನ್ನು ಒಳ್ಳೆಯವರಿಂದ ಪ್ರತ್ಯೇಕಿಸಿ ತೆಗೆದು, ನೀಚರನ್ನು ಅಂತಹದ್ದೇ ನೀಚ ಜನರೊಂದಿಗೆ ಕಲೆಹಾಕಿ, ಅವರೆಲ್ಲರನ್ನು ಒಟ್ಟು ರಾಶಿ ಹಾಕಿ, ನಂತರ ಸಾರಾಸಗಟಾಗಿ ನರಕದೊಳಗೆ ದಬ್ಬಿ ಬಿಡಲು ಅಲ್ಲಾಹ್ ನು ಹಾಗೆ ಮಾಡುವನು. ಎಲ್ಲವನ್ನೂ ಕಳೆದುಕೊಂಡ ಜನರು ಅವರೇ ಆಗಿರುತ್ತಾರೆ! {37}

(ತಮ್ಮ ಧಿಕ್ಕಾರದ ಧೋರಣೆಯನ್ನು) ಇನ್ನಾದರೂ ಅವರು ಕೈಬಿಟ್ಟರೆ ಈ ಹಿಂದೆ ಅವರಿಂದ ಸಂಭವಿಸಿದ ಪಾಪವನ್ನು ಅವರಿಗೆ ಕ್ಷಮಿಸಲಾಗುವುದು ಎಂದು ಅವರೊಂದಿಗೆ ಹೇಳಿರಿ. ಇನ್ನು ಅವರು ಅದನ್ನೇ ಪುನರಾವರ್ತಿಸಿದರೆ ಪೂರ್ವ ಜನಾಂಗಗಳು (ನಾಶವಾಗಿ ಹೋದ) ಅದೆಷ್ಟು ಉದಾಹರಣೆಗಳು ಗತಿಸಿ ಹೋಗಿವೆ! {38}

(ವಿಶ್ವಾಸಿಗಳೇ, ಅವರ ಕಡೆಯಿಂದ) ದಬ್ಬಾಳಿಕೆ ಹಿಂಸಾಚಾರಗಳು ಇಲ್ಲದಾಗುವ ತನಕ ಮತ್ತು (ನಾಡಿನಲ್ಲಿ ನೆಲೆಸಬೇಕಾದ) ಧರ್ಮವು ಸಂಪೂರ್ಣವಾಗಿ ಅಲ್ಲಾಹ್ ನ ಧರ್ಮವಾಗಿ ತೀರುವ ತನಕ ನೀವು ಅವರೊಂದಿಗೆ ಹೋರಾಟ ನಡೆಸಿರಿ. ಹಾಗೆ ಅವರೇನಾದರೂ ದಬ್ಬಾಳಿಕೆ ತೊರೆದರೆ (ಮುಂದೆ) ಯಾವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ ಎಂಬುದನ್ನು ಖಂಡಿತವಾಗಿ ಅಲ್ಲಾಹ್ ನು ವೀಕ್ಷಿಸಲಿರುವನು. {39}

ಅಷ್ಟಾಗಿಯೂ ಅವರು ಮುಖ ತಿರುಗಿಸಿಕೊಂಡರೆ (ನೀವು ಅಳುಕಬೇಕಾಗಿಲ್ಲ), ಏಕೆಂದರೆ ನಿಮ್ಮ ಸಂರಕ್ಷಕನು ನಿಸ್ಸಂಶಯವಾಗಿ ಆ ಅಲ್ಲಾಹ್ ನು! ಬಹಳ ಶ್ರೇಷ್ಠವಾದ ಸಂರಕ್ಷಕನವನು! ಎಷ್ಟೊಂದು ಶ್ರೇಷ್ಠತೆಯುಳ್ಳ ಸಹಾಯಕನು! {40}

✽10✽ [ಶತ್ರುವಿನೊಂದಿಗೆ ಹೋರಾಡಿದಾಗ ನಿಮ್ಮ ಕೈವಶವಾದ ಹೆಚ್ಚುವರಿ ಸಂಪತ್ತಿನ ಬಗ್ಗೆ ನೀವು ಪ್ರಶ್ನಿಸಿದ್ದೀರಿ! ಯುದ್ಧದಲ್ಲಿ ಪಾಲ್ಗೊಂಡವರೇ, ಅದರ ಬಗೆಗಿನ ವಿಧಿಯನ್ನು] ನೀವು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ; ಯುದ್ಧಾನಂತರ ನಿಮ್ಮ ಸ್ವಾಧೀನಕ್ಕೆ ಏನಾದರೂ ಸಂಪತ್ತು ಬಂದಿದ್ದರೆ [ಅದು ಸಂಪೂರ್ಣವಾಗಿ ನಿಮ್ಮದಾಗುವುದಿಲ್ಲ. ಬದಲಾಗಿ] ಅದರ ಐದನೇ ಒಂದು ಭಾಗವು ಅಲ್ಲಾಹ್ ನಿಗೂ ಪೈಗಂಬರರಿಗೂ ಪೈಗಂಬರರ ಸಂಬಂಧಿಕರಿಗೂ ಹಾಗೆಯೇ ಅನಾಥ ಮಕ್ಕಳಿಗೂ ನಿರ್ಗತಿಕರಿಗೂ ದಾರಿಹೋಕರಿಗೂ ಸೇರಿದ್ದಾಗಿರುತ್ತದೆ. ಹೌದು, ಅಲ್ಲಾಹ್ ನಲ್ಲಿ ನಿಮಗೆ ವಿಶ್ವಾಸ ಇದೆ ಎಂದಾದರೆ, ಸತ್ಯ ಮತ್ತು ಅಸತ್ಯಗಳನ್ನು ಬೇರ್ಪಡಿಸಿ ತೋರಿಸಿಲಾದ ಆ ದಿನ ಅರ್ಥಾತ್ ಎರಡು ಸೇನೆಗಳು (ಬದ್ರ್ ನ ಯುದ್ಧಭೂಮಿಯಲ್ಲಿ) ಪರಸ್ಪರ ಮುಖಾಮುಖಿಯಾದ ಆ ದಿನ, ನಾವು ನಮ್ಮ ಉಪಾಸಕರಾದ (ಈ ಪೈಗಂಬರರಿಗೆ) ಇಳಿಸಿಕೊಟ್ಟ (ದಿವ್ಯಾದೇಶ, ಅನುಗ್ರಹ ಮತ್ತು ಗೆಲುವುಗಳಲ್ಲಿ) ನಿಮಗೆ ನಂಬಿಕೆ ಇದೆ ಎಂದಾದರೆ (ನಮ್ಮ ಈ ಆದೇಶವನ್ನು ನೀವು ಪಾಲಿಸಿರಿ). ಅಲ್ಲಾಹ್ ನು ಏನನ್ನು ಬೇಕಾದರೂ ಸಾಧಿಸುವ ಸಾಮರ್ಥ್ಯ ಹೊಂದಿರುತ್ತಾನೆ. {41}

[ವಿಶ್ವಾಸಿ ಜನರೇ, ಯುದ್ಧರಂಗವಾಗಬೇಕಿದ್ದ] ಕಣಿವೆಯ ಇತ್ತ [ಅಂದರೆ ಮದೀನಾ ಪಟ್ಟಣಕ್ಕೆ] ಹತ್ತಿರವಾದ ಬದಿಯಲ್ಲಿ ನೀವು, ದೂರದ ಬದಿಯಲ್ಲಿ ಅವರು [ಅಂದರೆ ನಿಮ್ಮ ಶತ್ರುಗಳಾದ ಕುರೈಶರು]; ಹಾಗೂ ನಿಮಗಿಂತ ತಗ್ಗಿನ ಪ್ರದೇಶದಲ್ಲಿ ವರ್ತಕರ ತಂಡವು ಬಿಡಾರ ಹೂಡಿದ್ದ ಆ ಸನ್ನಿವೇಶವನ್ನೂ ನೆನಪಿಸಿಕೊಳ್ಳಿ! ಒಂದು ವೇಳೆ ಮುಂಚಿತವಾಗಿಯೇ (ಸಂಘರ್ಷದ) ಸಮಯವು ನಿಮ್ಮೊಳಗೆ ನಿಶ್ಚಯವಾಗಿದ್ದಿದ್ದರೆ (ತಪ್ಪಿಸಿಕೊಳ್ಳುವ ಸಲುವಾಗಿ) ನೀವುಗಳು ಖಂಡಿತವಾಗಿಯೂ ಭಿನ್ನಾಭಿಪ್ರಾಯಗಳಲ್ಲಿ ತೊಡಗಿ (ಅದರಿಂದ ನುಣುಚಿಕೊಳ್ಳುತ್ತಿದ್ದಿರಿ)! ಆದರೆ ಅತ್ತ ಅಲ್ಲಾಹ್ ನ ನಿರ್ಧಾರವೂ ಕಾರ್ಯರೂಪ ತಾಳಲೇ ಬೇಕಿತ್ತು! ಅಂದರೆ ನಾಶವಾಗಲೇ ಬೇಕಾದವರನ್ನು ಸ್ಪಷ್ಟ ಸಮರ್ಥನೆಯೊಂದಿಗೆ ನಾಶಗೊಳಿಸುವುದು ಮತ್ತು ಬದುಕುಳಿಯ ಬೇಕಾದವರನ್ನು ಸ್ಪಷ್ಟ ಪುರಾವೆಗಳೊಂದಿಗೆ ಬದುಕುಳಿಸುವುದೇ (ಆಲ್ಲಾಹ್ ನ ನಿರ್ಧಾರವಾಗಿತ್ತು)! ಹೌದು, ಅಲ್ಲಾಹ್ ನಾದರೋ [ನಿಮ್ಮ ಪಿಸುಮಾತುಗಳನ್ನೂ] ಕೇಳಿಸಿಕೊಳ್ಳುತ್ತಾನೆ; ಬಹಳ ಸೂಕ್ಷ್ಮ ಅರಿವುಳ್ಳವನಾಗಿದ್ದಾನೆ {42}

(ಓ ಪೈಗಂಬರರೇ,) ನಿಮ್ಮ ಕನಸಿನಲ್ಲಿ ಶತ್ರುಗಳ ಸಂಖ್ಯೆಯನ್ನು ಅಲ್ಲಾಹ್ ನು ಚಿಕ್ಕದಾಗಿಸಿ ಕಾಣಿಸಿದ್ದ ಸನ್ನಿವೇಶವನ್ನೂ ನೆನಪಿಸಿರಿ. ಅವನೇನಾದರೂ ನಿಮಗೆ ಅವರ (ಯಥಾರ್ಥ) ಆಧಿಕ್ಯವನ್ನು ತೋರಿಸಿರುತ್ತಿದ್ದರೆ ನೀವುಗಳು ಧೈರ್ಯಗೆಡುವಂತಾಗುತ್ತಿತ್ತು; ಮತ್ತು ಯುದ್ಧದ ವಿಷಯದಲ್ಲಿ ಖಂಡಿತವಾಗಿಯೂ ನೀವುಗಳು (ನುಣುಚಿ ಕೊಳ್ಳುವುದಕ್ಕೋಸ್ಕರ) ವಾದ ವಿವಾದಗಳಲ್ಲಿ ತೊಡಗುತ್ತಿದ್ದಿರಿ. ಆದರೆ ಅಲ್ಲಾಹ್ ನು ನಿಮ್ಮನ್ನು ಅದರಿಂದ ಕಾಪಾಡಿದನು! ಹೌದು, ಅವನು ಎದೆಯೊಳಗಿನ ವಿಚಾರಗಳನ್ನೂ ಚೆನ್ನಾಗಿ ಅರಿತಿರುತ್ತಾನೆ! {43}

ನಂತರ ನೀವುಗಳು (ಯುದ್ಧಭೂಮಿಯಲ್ಲಿ ನಿಜವಾಗಿ) ಮುಖಾಮುಖಿಯಾದ ಸಂದರ್ಭದಲ್ಲೂ ನಿಮ್ಮ ಕಣ್ಣುಗಳಿಗೆ ಅವರ ಸಂಖ್ಯೆಯನ್ನು ಚಿಕ್ಕದಾಗಿಸಿ ಕಾಣಿಸಿದ್ದ ಮತ್ತು ಅವರ ಕಣ್ಣುಗಳಿಗೆ ನಿಮ್ಮ ತಂಡವನ್ನು ಕ್ಷುಲ್ಲಕವಾಗಿಸಿ ತೋರಿಸಿದ್ದ ಸಂದರ್ಭವನ್ನೂ (ನಿಮ್ಮ ಜನರಿಗೆ) ನೆನಪಿಸಿ ಕೊಡಿ. ಅದೇಕೆಂದರೆ (ಸತ್ಯವನ್ನು ಅಸತ್ಯದಿಂದ ಬೇರ್ಪಡಿಸಿ ತೋರಿಸಬೇಕು ಎಂಬ) ಅಲ್ಲಾಹ್ ನ ನಿರ್ಧಾರವು (ಯುದ್ಧದ ಮೂಲಕವೇ) ಕಾರ್ಯಗತವಾಗ ಬೇಕಿತ್ತು! ಹೌದು, ಪ್ರತಿಯೊಂದು ಸಂಗತಿಯೂ (ಇತ್ಯರ್ಥಕ್ಕಾಗಿ) ಮರಳಬೇಕಾಗಿರುವುದು ಅಲ್ಲಾಹ್ ನ ಕಡೆಗೇ ಆಗಿರುತ್ತದೆ! {44}

ಓ ವಿಶ್ವಾಸಿಗಳೇ, (ಇನ್ನು ಮುಂದೆಯೂ) ಗುಂಪೊಂದನ್ನು ಎದುರಿಸಬೇಕಾದ ಸನ್ನಿವೇಶ ನಿಮಗುಂಟಾದರೆ ನೀವು ಸ್ಥರ್ಯದಿಂದ ವರ್ತಿಸುವವರಾಗಿರಿ ಮತ್ತು ಅಲ್ಲಾಹ್ ನನ್ನು ಹೆಚ್ಚು ಹೆಚ್ಚಾಗಿ ಸ್ಮರಿಸುತ್ತಲಿರಿ. ಹಾಗಾದರೆ ನೀವು (ಇಹಪರಗಳಲ್ಲಿ) ವಿಜಯಿಗಳಾಗುವಿರಿ. {45}

ನೀವು ಅಲ್ಲಾಹ್ ನ ಮಾತನ್ನೂ ಅವನ ಪೈಗಂಬರರ ಮಾತನ್ನೂ ಅನುಸರಿಸುವವರಾಗಿರಿ. ಎಂದೂ ಪರಸ್ಪರ ವಾದ-ವಿವಾದಗಳಲ್ಲಿ ತೊಡಗಬೇಡಿರಿ. ಅನ್ಯಥಾ (ನಿಮ್ಮ ಐಕ್ಯತೆ ಛಿದ್ರಗೊಂಡು) ನೀವು ಎದೆಗುಂದಿದ ಹೇಡಿಗಳಾಗುವಿರಿ; ನಿಮ್ಮ ವರ್ಚಸ್ಸು ಹೊರಟು ಹೋಗುವುದು. ಬದಲಾಗಿ ನೀವು ಸ್ಥಿರಚಿತ್ತರಾಗಿರಿ. ಸ್ಥಿರಚಿತ್ತತೆ ಉಳ್ಳವರೊಂದಿಗೆ ಅಲ್ಲಾಹ್ ನೂ ಇರುವನು. {46}

ಜಂಭ ಕೊಚ್ಚುತ್ತಾ ತಮ್ಮ ದುರಹಂಕಾರವನ್ನು ಜನರಿಗೆ ಪ್ರದರ್ಶಿಸುತ್ತಾ, ಜನಸಾಮಾನ್ಯರು ಅಲ್ಲಾಹ್ ನ ದಾರಿಯತ್ತ ಬಾರದಂತೆ ತಡೆಯುವ ಉದ್ದೇಶದಿಂದಲೇ ತಮ್ಮ ನಿವಾಸಗಳಿಂದ ಹೊರಟು ಬಂದ ಆ ಜನರಂತೆ ನೀವಾಗಬಾರದು. (ವಿಶ್ವಾಸಿಗಳೇ), ಅಂತಹವರ ಕೃತ್ಯಗಳನ್ನು ಯಥಾರ್ಥದಲ್ಲಿ ಅಲ್ಲಾಹ್ ನು ಸುತ್ತುವರಿದಿರುತ್ತಾನೆ. {47}

ಜನರ ಪೈಕಿ ಯಾರಿಗೂ ಇಂದು ನಿಮ್ಮನ್ನು ಜಯಿಸಲು ಸಾಧ್ಯವಿಲ್ಲ, ನಾನಾದರೋ ಸಹಾಯಕನಾಗಿ ನಿಮ್ಮ ಪಕ್ಕದಲ್ಲೇ ಇರುವೆನು ಎಂದು ಹೇಳಿ ಸೈತಾನನು ಅಂತಹವರು ಎಸಗುತ್ತಿದ್ದ ದುಷ್ಕೃತ್ಯಗಳನ್ನು ಅವರಿಗೆ ಮನೋಹರವಾಗಿಸಿ ತೋರಿಸಿ ಕೊಡುತ್ತಿದ್ದ ಸಂದರ್ಭವನ್ನು ನೆನಪಿಸಿರಿ. ನಂತರ ಎರಡೂ ತಂಡಗಳು ಒಂದನ್ನೊಂದು ಎದುರುಬದುರಾಗಿ ಕಂಡುಕೊಂಡಾಗ ಆ ಸೈತಾನನು, ನನಗೆ ನಿಮ್ಮೊಂದಿಗೆ ಯಾವ ರೀತಿಯ ಬಾಧ್ಯತೆಯೂ ಇಲ್ಲ; ನೀವಿನ್ನೂ ಕಾಣದಿರುವುದನ್ನು ನಾನು ಕಾಣುತ್ತಿದ್ದೇನೆ, ಮಾತ್ರವಲ್ಲ ಅಲ್ಲಾಹ್ ನ ವಿಷಯದಲ್ಲಿ ನಾನು ಭಯಗ್ರಸ್ತನಾಗಿದ್ದೇನೆ; ಅಲ್ಲಾಹ್ ನಾದರೋ ಬಹಳ ಕಠೋರವಾಗಿ ಶಿಕ್ಷಿಸುವವನೂ ಹೌದು ಎಂದು ಹೇಳುತ್ತಾ ಹಿಂದಡಿ ಇಟ್ಟು ಅಲ್ಲಿಂದ ಪಲಾಯನಗೊಂಡ ಸಂದರ್ಭವದು! {48}

ಹಾಗೆಯೇ, ಮುಸ್ಲಿಮರಂತೆ ನಟಿಸುತ್ತಿದ್ದವರು ಮತ್ತು ಹೃದಯಗಳಲ್ಲಿ [ಧಿಕ್ಕಾರದ] ರೋಗವನ್ನು ಹೊಂದಿದ್ದವರು, ಈ ಮುಸ್ಲಿಮರನ್ನು ಅವರು ನಂಬುವ ಧರ್ಮವು ಮೋಸಗೊಳಿಸಿ ಬಿಟ್ಟಿದೆ ಎಂದು ಹೇಳುತ್ತಿದ್ದ ಸಂದರ್ಭವನ್ನು ನೆನಪಿಸಿರಿ. ಆದರೆ ಯಾರು ಅಲ್ಲಾಹ್ ನಲ್ಲಿ ಭರವಸೆ ಇಡುತ್ತಾರೋ ಅಂತಹವರು [ಅಳುಕಬೇಕಾಗಿಲ್ಲ]; ಏಕೆಂದರೆ ಖಂಡಿತವಾಗಿಯೂ ಅಲ್ಲಾಹ್ ನು ಪರಾಕ್ರಮದಲ್ಲಿ ಮಿಗಿಲಾದವನೂ ಅತ್ಯಂತ ವಿವೇಚನಾಶಾಲಿಯೂ ಆಗಿರುವನು. {49}

ಧಿಕ್ಕಾರ ತೋರಿದವರ ಮೂತಿಗಳಿಗೂ ಬೆನ್ನುಗಳಿಗೂ ಹೊಡೆತ ಕೊಡುತ್ತಾ ಮಲಕ್ ಗಳು ಅವರ ಪ್ರಾಣಹರಣ ಮಾಡುವ ದೃಷ್ಯವನ್ನು (ಪೈಗಂಬರರೇ) ನೀವು ಕಂಡಿರುತ್ತಿದ್ದರೆ! ಇನ್ನು ಉರಿಯುವ ಆ ಬೆಂಕಿಯ ಶಿಕ್ಷೆಯನ್ನು ನೀವು ಸವಿಯಿರಿ; ಇದೆಲ್ಲ ನಿಮ್ಮದೇ ಕೈಗಳು ಸ್ವತಃ ದುಡಿದು ಮುಂಗಡವಾಗಿ ಕಳಿಸಿದುದರ ಫಲವಾಗಿರುತ್ತದೆ ಎಂದು (ಆ ಮಲಕ್ ಗಳು ಹೇಳುವರು). ನಿಜವೇನೆಂದರೆ ಅಲ್ಲಾಹ್ ನು ತನ್ನ ದಾಸರಾದ (ಮನುಷ್ಯರ) ಮೇಲೆ ಕಿಂಚಿತ್ತೂ ಅನ್ಯಾಯ ಮಾಡುವವನಲ್ಲ! {50-51}

(ಇವರ ಚಾಳಿಯೂ) ಫಿರ್‌ಔನ್ ನ ಬಳಗದವರ ಮತ್ತು ಅವರಿಗಿಂತಲೂ ಹಿಂದೆ ಗತಿಸಿ ಹೋದಂತಹ ಜನರ ಚಾಳಿಯಂತೆಯೇ ಆಗಿದೆ. ಅವರೆಲ್ಲ ಅಲ್ಲಾಹ್ ನ ದೃಷ್ಟಾಂತಗಳನ್ನು ಧಿಕ್ಕರಿಸಿ ಬಿಟ್ಟಿದ್ದರು. ಆಗ ಅಲ್ಲಾಹ್ ನು ಅವರೆಸಗಿದ ಪಾಪಕ್ಕಾಗಿ ಅವರನ್ನು ಹಿಡಿದು ಶಿಕ್ಷಿಸಿದನು. ಅಲ್ಲಾಹ್ ನಾದರೋ ಅತ್ಯಂತ ಪ್ರಬಲನು; ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸುವವನೂ ಹೌದು! {52}

ಅದೇಕೆಂದರೆ, ಒಂದು ಜನತೆಯು ತನ್ನ ಅಂತರಾತ್ಮದ ನಿಲುವನ್ನು (ಧಿಕ್ಕಾರದ ನಿಲುವಾಗಿ) ಬದಲಾಯಿಸಿಕೊಳ್ಳುವ ತನಕ ಅವರಿಗೆ ತಾನು ದಯಪಾಲಿಸಿದ್ದ ಅನುಗ್ರಹವನ್ನು (ಶಿಕ್ಷೆಯಾಗಿ) ಬದಲಾಯಿಸುವುದು ಅಲ್ಲಾಹ್ ನ ರೀತಿಯಲ್ಲ! ಅಲ್ಲಾಹ್ ನು ಸಕಲವನ್ನೂ ಕೇಳಿಸಿಕೊಳ್ಳುತ್ತಾನೆ ಮತ್ತು ಮಹಾಜ್ಞಾನಿಯಾಗಿದ್ದಾನೆ ಎಂಬುದನ್ನೂ ತಿಳಿದುಕೊಳ್ಳಿ. {53}

[ದೃಷ್ಟಾಂತಗಳನ್ನು ಕಣ್ಣಾರೆ ಕಂಡೂ ನಿರಾಕರಿಸುತ್ತಿರುವ ಜನರೇ, ನಿಮಗೂ ಸಹ] ಫಿರ್‌ಔನ್ ನ ಬಳಗದವರಿಗೂ ಅವರಿಗಿಂತ ಮುಂಚಿನವರಿಗೂ ಬಂದ ಸ್ಥಿತಿಯೇ ಬರಲಿರುವುದು! ಅವರೆಲ್ಲರೂ ಸಹ ತಮ್ಮ ಕರ್ತಾರನ ದೃಷ್ಟಾಂತಗಳನ್ನು ಧಿಕ್ಕರಿಸಿದ್ದರು. ಆಗ ನಾವು ಅವರೆಸಗಿದ ಪಾಪಕ್ಕಾಗಿ ಅವರನ್ನು ನಾಶಪಡಿಸಿ ಬಿಟ್ಟೆವು ಹಾಗೂ ಫಿರ್‌ಔನ್ ನ ಬಳಗದವರನ್ನು ನಾವು ಸಮುದ್ರದಲ್ಲಿ ಮುಳುಗಿಸಿದೆವು. ಅವರೆಲ್ಲ ಅನ್ಯಾಯವೆಸಗಿದ ಅಕ್ರಮಿಗಳೇ ಆಗಿದ್ದರು. {54}

ಹೌದು, ಅಲ್ಲಾಹ್ ನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟ ಜಂತುಗಳೆಂದರೆ (ಅವನ ದೃಷ್ಟಾಂತಗಳನ್ನು) ತಿರಸ್ಕರಿಸಿ ತಳ್ಳಿಹಾಕಿದವರು; ಎಂತೂ ವಿಶ್ವಾಸಿಗಳಾಗದವರು! (ಮುಖ್ಯವಾಗಿ, ಓ ಪೈಗಂಬರರೇ,) ಅವರಲ್ಲಿ ಯಾರೊಂದಿಗೆ ನೀವು ಒಪ್ಪಂದ ಮಾಡಿಕೊಂಡಿರುವಿರೋ ಅವರು. ತಾವು ಮಾಡಿದ ಒಪ್ಪಂದವನ್ನು ಪ್ರತಿ ಬಾರಿಯೂ ಮುರಿಯುತ್ತಿರುವವರು! ಅವರಿಗೆ (ಪರಿಣಾಮದ ಕುರಿತು) ಭಯವೇ ಇಲ್ಲ! {55-56}

ಅಂತಹವರನ್ನು ನೀವು ಯುದ್ಧಭೂಮಿಯಲ್ಲಿ ಎದುರುಗೊಂಡಾಗ ಚೆನ್ನಾಗಿ ಸದೆಬಡಿಯುವ ಮೂಲಕ ಅವರ ನಂತರ ಕದನಕ್ಕೆ ಇಳಿಯಲಿರುವವರೂ ಚೆಲ್ಲಾಪಿಲ್ಲಿಯಾಗಿ ಹೋಗುವಂತೆ ವ್ಯವಹರಿಸಿ. ಅವರೆಲ್ಲ ಪಾಠಕಲಿಯುವಂತಾಗಲಿ! {57}

[ಅದಾಗಲೇ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವ] ಒಂದು ಜನತೆಯ ಕಡೆಯಿಂದ ವಿಶ್ವಾಸಘಾತುಕತನದ ಖಚಿತ ಭೀತಿಯು ನಿಮಗುಂಟಾದರೆ ಸಮಾನತೆಯ ಬುನಾದಿಯ ಮೇಲೆ ಅವರೊಂದಿಗಿನ ಆ ಕರಾರನ್ನು ಅವರತ್ತ ಎಸೆದು ಬಿಡಿರಿ. ಅಲ್ಲಾಹ್ ನು ಎಂದೂ ವಿಶ್ವಾಸ ದ್ರೋಹಿಗಳನ್ನು ಮೆಚ್ಚುವುದಿಲ್ಲ. {58}

ಧಿಕ್ಕಾರ ತೋರುತ್ತಿರುವ ಜನರು ತಾವು (ಅಲ್ಲಾಹ್ ನ ಹಿಡಿತವನ್ನು ತಪ್ಪಿಸಿಕೊಂಡು) ಮುಂದಕ್ಕೆ ಸಾಗಿ ಬಿಟ್ಟೆವು ಎಂಬ ಭ್ರಮೆಗೆ ಒಳಗಾಗದಿರಲಿ. ನಿಜವಾಗಿಯೂ ಅವರು (ಅಲ್ಲಾಹ್ ನ ಶಕ್ತಿಯನ್ನು) ಮಣಿಸಲಾರರು. {59}

ಅವರನ್ನು ಎದುರಿಸಲು ನಿಮ್ಮಿಂದ ಸಾಧ್ಯವಾದಷ್ಟೂ ಶಕ್ತಿ ಮತ್ತು ಸನ್ನದ್ಧಗೊಂಡ ಕುದುರೆಗಳನ್ನು (ಹೊಂದಿದ ಸೇನಾಬಲವನ್ನು) ಸಜ್ಜುಗೊಳಿಸಿ ಇಟ್ಟುಕೊಳ್ಳಿ. ಆ ಮೂಲಕ ನಿಮ್ಮ ಮತ್ತು ಅಲ್ಲಾಹ್ ನ ಶತ್ರುಗಳನ್ನು ಹಾಗೂ ನಿಮಗೆ ತಿಳಿಯದಿರುವ ಆದರೆ ಅಲ್ಲಾಹ್ ನಿಗೆ ಚೆನ್ನಾಗಿ ತಿಳಿದಿರುವ ನಿಮ್ಮ ಇತರ ಶತ್ರುಗಳಲ್ಲಿ ಭೀತಿಯುಂಟು ಮಾಡಿರಿ. (ಅದನ್ನು ಸಂಘಟಿಸಲು) ನೀವು ಅಲ್ಲಾಹ್ ನ ಮಾರ್ಗದಲ್ಲಿ ಏನನ್ನು ವ್ಯಯಿಸುವಿರೋ ಅದನ್ನು ಸರ್ವಸಂಪೂರ್ಣವಾಗಿ (ಪ್ರತಿಫಲದ ರೂಪದಲ್ಲಿ) ನಿಮಗೆ ಹಿಂದಿರುಗಿಸಲಾಗುವುದು. ನಿಮ್ಮ ಮೇಲೆ ಸ್ವಲ್ಪವೂ ಅನ್ಯಾಯವಾಗಲಾರದು. {60}

ಒಂದು ವೇಳೆ ಶತ್ರುಗಳು ಶಾಂತಿ-ಸಮಾಧಾನದೆಡೆಗೆ ವಾಲಿದರೆ (ಓ ಪೈಗಂಬರರೇ) ನೀವೂ ಸಹ ಅದಕ್ಕಾಗಿ ಒಲವು ತೋರಿಸಿ ಹಾಗೂ ಅಲ್ಲಾಹ್ ನಲ್ಲಿ ಭರವಸೆ ಇಟ್ಟುಕೊಳ್ಳಿ. ಹೌದು, ಎಲ್ಲವನ್ನೂ ಆಲಿಸುವವನು ಮತ್ತು ಸಕಲವನ್ನೂ ಬಲ್ಲವನು ಅವನೇ ಆಗಿರುವನು. {61}

ಅದಾಗ್ಯೂ ನಿಮಗೆ ಮೋಸ ಮಾಡುವ ಇರಾದೆಯೇ ಅವರದ್ದಾಗಿದ್ದರೆ (ಅಂಜಬೇಕಾಗಿಲ್ಲ); ನಿಮಗೆ ಅಲ್ಲಾಹ್ ನು ಮಾತ್ರವೇ ಸಾಕು. ತನ್ನ ಸಹಾಯ ಮತ್ತು (ನಿಮ್ಮೊಂದಿಗೆ ನಿಂತಿರುವ) ಮುಸ್ಲಿಮರ ಮೂಲಕ ನಿಮ್ಮ ಕೈ ಬಲಪಡಿಸಿರುವವನೂ ಅವನೇ. {62}

ಆ ಮುಸ್ಲಿಮರ ಹೃದಯಗಳು ಪರಸ್ಪರ ಬೆರೆಯುವಂತೆ ಅವನು ಮಾಡಿದನು. ಭೂಮಿಯಲ್ಲಿರುವ ಸಕಲವನ್ನೂ ನೀವು ವ್ಯಯಿಸಿದರೂ ಅವರ ಹೃದಯಗಳನ್ನು ಬೆಸೆಯುವುದು ನಿಮ್ಮಿಂದ ಸಾಧ್ಯವಿರಲಿಲ್ಲ. ಆದರೆ ಅಲ್ಲಾಹ್ ನು (ನಿಮಗೆ ಅನುಕೂಲವಾಗುವಂತೆ) ಅವರನ್ನು ಪರಸ್ಪರ ಬೆಸೆದನು. ಅವನಾದರೋ ಬಲಾಢ್ಯನೂ ಧೀಮಂತನೂ ಆಗಿರುವನು. ಹಾಗಿರುವಾಗ ಓ ಪೈಗಂಬರರೇ, ಅಲ್ಲಾಹ್ ನು ಹಾಗೂ ನಿಮ್ಮನ್ನು ಅನುಸರಿಸಿತ್ತಿರುವ ಆ ವಿಶ್ವಾಸಿಗಳಷ್ಟೇ ನಿಮಗೆ ಸಾಕು. {63-64}

ಓ ಪೈಗಂಬರರೇ, (ಅದಾಗಲೇ ನಿಮಗೆ ಆದೇಶಿಸಲಾದ) ಯುದ್ಧಕ್ಕಾಗಿ ಅಣಿಗೊಳ್ಳುವಂತೆ ಆ ವಿಶ್ವಾಸಿಗಳನ್ನು ಹುರಿದುಂಬಿಸಿ. [ನಮ್ಮ ನಿಯಮದ ಪ್ರಕಾರ] ನಿಮ್ಮಲ್ಲಿ ಇಪ್ಪತ್ತು ಮಂದಿ ಸ್ಥೈರ್ಯವಂತರಿದ್ದರೆ ಸಾಕು, ಇನ್ನೂರು ಮಂದಿಯನ್ನು ಜಯಿಸಬಲ್ಲರು; ಇನ್ನು ನಿಮ್ಮಲ್ಲಿ ಅಂತಹ ನೂರು ಮಂದಿ ಇದ್ದರೆ ನಿಮ್ಮನ್ನು ಅಲ್ಲಗಳೆದ ಸಾವಿರ ಮಂದಿಯನ್ನು ಅವರು ಸೋಲಿಸಿ ಬಿಡುವರು. ಅವರು [ಅರ್ಥಾತ್ ನಿಮ್ಮ ಶತ್ರುಗಳು, ಧರ್ಮಶ್ರದ್ಧೆಯುಳ್ಳವರ ಆತ್ಮಸ್ಥೈರ್ಯದ ಕುರಿತು] ವಿವೇಚಿಸದ ಒಂದು ಜನತೆಯಾಗಿರುವುದೇ ಅದಕ್ಕೆ ಕಾರಣ! {65}

[ವಾಸ್ತವದಲ್ಲಿ ಸತ್ಯಾಸತ್ಯತೆಯ ಹೋರಾಟದಲ್ಲಿ ಸರಿಯಾದ ಅನುಪಾತ ಅದೇ ಆಗಿದ್ದರೂ ಸಹ] ಈ ಸಂದರ್ಭದಲ್ಲಿ ಅಲ್ಲಾಹ್ ನು ನಿಮ್ಮ ಬಳಗಕ್ಕೆ (ಅಂತಹ ಕಠಿಣ ಕಾರ್ಯವನ್ನು ಸ್ವಲ್ಪ) ಹಗುರಗೊಳಿಸಿರುವನು. ಕಾರಣ, ನಿಮ್ಮ [ಬಳಗದವರಲ್ಲಿ ಇನ್ನೂ ಅಲ್ಪಸ್ವಲ್ಪ] ದೌರ್ಬಲ್ಯ ಇರುವುದನ್ನು ಅವನು ತಿಳಿದಿರುತ್ತಾನೆ. ಹಾಗಿರುವಾಗ ಸ್ಥೈರ್ಯವಂತರಾದ ನೂರು ಮಂದಿ ನಿಮ್ಮೊಳಗಿದ್ದರೆ ಅವರು ಇನ್ನೂರು ಮಂದಿಯನ್ನು ಸದೆಬಡಿಯುವರು; ಇನ್ನು ಅಂತಹ ಸಾವಿರ ಮಂದಿ ನಿಮ್ಮೊಳಗಿದ್ದರೆ ಅವರು (ಶತ್ರುಗಳ) ಎರಡು ಸಾವಿರ ಮಂದಿಯನ್ನು, ಅಲ್ಲಾಹ್ ನ ಅನುಮತಿಯೊಂದಿಗೆ, ಸೋಲಿಸುವರು. [ನಿಮ್ಮ ಅನುಯಾಯಿಗಳು ದೌರ್ಬಲ್ಯ ತೊರೆದು ಸ್ಥೈರ್ಯವಂತರಾಗಲಿ]. ಅಲ್ಲಾಹ್ ನಾದರೋ ಸ್ಥೈರ್ಯವಂತರ ಜತೆಗಿರುವನು. {66}

[ಕುರೈಶರೇ, ಯುದ್ಧದಲ್ಲಿ ಕೈದಿಗಳನ್ನು ಹಿಡಿದಿರುವ ಬಗ್ಗೆ ನೀವು ಪೈಗಂಬರರ ಮೇಲೆ ಹೊರಿಸುತ್ತಿರುವ ಅಪವಾದ ಸರಿಯಲ್ಲ]. ನಾಡಿನಲ್ಲಿ ರಕ್ತ ಹರಿಸಿಯಾದರೂ ಕೈದಿಗಳನ್ನು ಹಿಡಿದು ಒತ್ತೆಯಾಳುಗಳಾಗಿ ಇರಿಸಲೇ ಬೇಕು ಎಂಬುದು ಯಾವ ಪ್ರವಾದಿಗೂ ಭೂಷಣವಾದ ವಿಷಯವಲ್ಲ. ಪ್ರಾಪಂಚಿಕ ಸುಖಭೋಗಗಳನ್ನು ಬಯಸುತ್ತಿರುವವರು ನೀವೇ (ಹೊರತು ಪೈಗಂಬರರಲ್ಲ). ಅಲ್ಲಾಹ್ ನಾದರೋ ಬಯಸುವುದು (ನಿಮ್ಮ) ಪರಲೋಕ ವಿಜಯವನ್ನು! ಹೌದು, ಅಲ್ಲಾಹ್ ನು ಅತ್ಯಂತ ಪ್ರಬಲನೂ ವಿವೇಕಪೂರ್ಣನೂ ಆಗಿರುವನು. [ಕುರೈಶರೇ, ನಿಮ್ಮಂತಹ ತಪ್ಪಿತಸ್ಥರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ನೀಡಬೇಕು ಎಂಬುದು] ಅಲ್ಲಾಹ್ ನ ವತಿಯಿಂದ ಪೂರ್ವ ವಿಧಿತವಾಗಿರದಿದ್ದರೆ ನೀವು ಅನುಸರಿಸಿದ ಧೋರಣೆಗಾಗಿ ದೊಡ್ಡ ಪ್ರಮಾಣದ ಶಿಕ್ಷೆಯು ನಿಮ್ಮ ಮೇಲೆರಗುತ್ತಿತ್ತು! {67-68}

[ವಿಶ್ವಾಸಿಗಳೇ, ನೀವು ಶತ್ರುಗಳ ಆಪಾದನೆಗಳನ್ನು ಲೆಕ್ಕಿಸ ಬೇಡಿ], ಬದಲಾಗಿ ಯುದ್ಧದ ಮುಖಾಂತರ ನೀವು ಏನನ್ನು ಗಳಿಸಿರುವಿರೋ ಅವುಗಳನ್ನು ಧರ್ಮಸಮ್ಮತವೂ ನಿರ್ಮಲವೂ ಆದುದೆಂದು ಬಗೆದು ಅನುಭವಿಸಿರಿ. ಯಾವತ್ತೂ ಅಲ್ಲಾಹ್ ನ (ವಿಧಿನಿಷೇಧ ನಿಯಮಗಳ) ಬಗ್ಗೆ ಜಾಗೃತರಾಗಿ ಇರಿ. ಖಂಡಿತವಾಗಿಯೂ ಅಲ್ಲಾಹ್ ನು ಬಹಳ ಕ್ಷಮಿಸುವವನೂ ನಿರಂತರ ಕೃಪೆ ತೋರುವವನೂ ಆಗಿರುವನು. {69}

ನಿಮ್ಮ ಹೃದಯಗಳಲ್ಲಿ ಏನಾದರೂ ಒಳಿತು ಇರುವುದನ್ನು ಅಲ್ಲಾಹ್ ನು ಕಂಡರೆ ನಿಮ್ಮಿಂದ ಏನನ್ನು (ಈ ಯುದ್ಧದಲ್ಲಿ) ವಶ ಪಡಿಸಿಕೊಳ್ಳಲಾಗಿದೆಯೋ ಅದಕ್ಕಿಂತ ಹೆಚ್ಚು ಉತ್ತಮವಾದುದನ್ನು ಅವನು ನಿಮಗೆ ನೀಡುವನು ಮಾತ್ರವಲ್ಲ ನಿಮ್ಮ ಪಾಪಗಳನ್ನು ಅವನು ಕ್ಷಮಿಸಿ ಬಿಡುವನು ಎಂದು ಓ ಪಗಂಬರರೇ ನೀವು ಈಗ ನಿಮ್ಮ ಕೈವಶವಿರುವ ಕೈದಿಗಳಿಗೆ ಸಾರಿರಿ. ವಾಸ್ತವದಲ್ಲಿ ಅಲ್ಲಾಹ್ ನು ಅತ್ಯಧಿಕ ಕ್ಷಮಿಸುವವನೂ ಕರುಣೆಯುಳ್ಳವನೂ ಆಗಿರುವನು. {70}

ಇನ್ನು ಈ ಕೈದಿಗಳ ಇರಾದೆಯು ನಿಮ್ಮನ್ನು ವಂಚಿಸುವುದೇ ಆಗಿದ್ದರೆ (ಪೈಗಂಬರರೇ, ನಿಮಗೆ ತಿಳಿದಿರಲಿ) ಈ ಹಿಂದೆ ಇವರು ಅಲ್ಲಾಹ್ ನನ್ನೇ ವಂಚಿಸಿದ್ದರು! ಆ ಕಾರಣಕ್ಕಾಗಿಯೇ (ಈಗ ಅವನು) ಇವರ ಮೇಲೆ ನಿಮಗೆ ಹತೋಟಿ ನೀಡಿರುವನು. ಹೌದು, ಅಲ್ಲಾಹ್ ನು ಎಲ್ಲಾ ತಿಳಿದವನೂ ವಿವೇಕಶಾಲಿಯೂ ಆಗಿರುವನು. {71}

[ಹೌದು, ಇನ್ನೂ ಮಕ್ಕಾ ದಲ್ಲೇ ಉಳಿದುಕೊಂಡು ಮೀನವೇಷ ಎಣಿಸುತ್ತಿರುವ ಮುಸ್ಲಿಮರು ಈಗ ಮದೀನ ಕ್ಕೆ ವಲಸೆ ಬರಲೇ ಬೇಕಾಗುವುದು. ಏಕೆಂದರೆ] ವಿಶ್ವಾಸಿಗಳಾಗಿ ಬಳಿಕ ವಲಸೆ ಬಂದು ತಮ್ಮ ತನು ಮತ್ತು ಧನಗಳ ಮೂಲಕ (ನಿಮ್ಮೊಂದಿಗೆ ನಿಂತು) ಅಲ್ಲಾಹ್ ನ ಮಾರ್ಗದಲ್ಲಿ ಹೋರಾಟ ನಡೆಸಿದ ಜನರು ಹಾಗೂ ಅವರಿಗೆ (ಮದೀನಾ ದಲ್ಲಿ) ಆಶ್ರಯ ಒದಗಿಸಿ ಎಲ್ಲ ವಿಧ ಸಹಾಯ ಮಾಡಿದ ಜನರು - ಇವರು ಮಾತ್ರವೇ ನಿಜವಾಗಿ ಪರಸ್ಪರರ ಹಿತದ ಸಂರಕ್ಷಕರಾಗಿರುವರು. ಅದಲ್ಲದೆ ವಿಶ್ವಾಸಿಗಳಾಗಿಯೂ (ಮದೀನ ಕ್ಕೆ) ವಲಸೆ ಬರದೆ (ಮಕ್ಕಾ ದಲ್ಲೇ ಉಳಿದುಕೊಂಡ) ಜನರು (ನಿಮ್ಮಲ್ಲಿಗೆ) ವಲಸೆ ಬರುವ ತನಕ ಅವರ ಹಿತ ಸಂರಕ್ಷಣೆಯ ಯಾವೆದೇ ಹೊಣೆಗಾರಿಕೆ ನಿಮ್ಮ ಮೇಲೆ ಇರುವುದಿಲ್ಲ! ಇನ್ನು ಧಾರ್ಮಿಕ ವಿಷಯದಲ್ಲಿ ಅವರು ನಿಮ್ಮಿಂದ ಏನಾದರೂ ಸಹಾಯ ಬಯಸಿದರೆ ಆಗ ಅವರಿಗೆ ಸಹಾಯ ಮಾಡುವುದು ನಿಮ್ಮ ಕರ್ತವ್ಯವಾಗಿದೆ. ಆದರೆ ಅಂತಹ ಸಹಾಯವು ನಿಮ್ಮ ಜೊತೆಗೆ ಅದಾಗಲೇ ಒಪ್ಪಂದದಲ್ಲಿರವ ಒಂದು ಜನತೆಗೆ ವಿರುದ್ಧವಾಗಿರಬಾರದು. ನೀವು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹ್ ನು ವೀಕ್ಷಿಸುತ್ತಿರುತ್ತಾನೆ. {72}

(ಪೈಗಂಬರರೇ, ನಿಮ್ಮನ್ನು) ತಿರಸ್ಕರಿಸಿರುವವರೂ ಸಹ ಪರಸ್ಪರರ ಮೈತ್ರಿಯಲ್ಲಿರುವವರು. ಹಾಗಿರುವಾಗ (ನಿಮಗೆ ನೀಡಲಾದ ನಿರ್ದೇಶನಗಳನ್ನು) ನೀವು ಕಾರ್ಯರೂಪಕ್ಕೆ ತರದೇ ಹೋದರೆ ನಾಡಿನಲ್ಲಿ ಕ್ಷೋಭೆಯುಂಟಾಗುವುದು; ದೊಡ್ಡ ಪ್ರಮಾಣದಲ್ಲಿ ವಿನಾಶ ಸಂಭವಿಸುವುದು. {73}

ಹೌದು, (ಪೈಗಂಬರರ ಕರೆಗೆ ಓಗೊಟ್ಟು) ವಿಶ್ವಾಸಿಗಳಾಗಿ (ಅಲ್ಲಾಹ್ ನ ಧರ್ಮಕ್ಕಾಗಿ ಮನೆ ಮಠ ತೊರೆದು) ವಲಸೆ ಹೋದ ಜನರು, ಅಲ್ಲಾಹ್ ನ ಮಾರ್ಗದಲ್ಲಿ ಹೋರಾಟ ನಡೆಸಿದವರು ಮತ್ತು ಅಂತಹವರಿಗೆ ಅಶ್ರಯ ನೀಡಿದವರು ಮತ್ತು ಅವರಿಗೆ ಎಲ್ಲ ರೀತಿಯಲ್ಲಿ ನೆರೆವಾದವರು - ಈ ಜನರೇ ನಿಜಾರ್ಥದಲ್ಲಿ ವಿಶ್ವಾಸಿಗಳಾಗಿರುವರು! ಅಂತಹವರಿಗೆ ಪಾಪ ವಿಮೋಚನೆ ಲಭ್ಯವಾಗುವುದು ಹಾಗೂ ಅವರಿಗೆ ಗೌರವೋಚಿತ ಸೌಲಭ್ಯಗಳು ಸಿಗಲಿರುವುವು. {74}

ತದನಂತರ ವಿಶ್ವಾಸಿಗಳಾಗಿ (ನಿಮ್ಮಲ್ಲಿಗೆ) ವಲಸೆ ಬಂದು, ನಿಮ್ಮೊಟ್ಟಿಗೆ ನಿಂತು ಹೋರಾಟ ನಡೆಸಿದ ಜನರೂ ನಿಮ್ಮವರೇ ಆದರೂ ಸಹ ಅಲ್ಲಾಹ್ ನ ಕಾಯ್ದೆಯ ಪ್ರಕಾರ ರಕ್ತ ಸಂಬಂಧಿಕರು ಒಬ್ಬರಿಗೊಬ್ಬರು (ವಾರಸುದಾರಿಕೆಯಲ್ಲಿ) ಹೆಚ್ಚು ನಿಕಟವಾಗಿರುವರು. ಅಲ್ಲಾಹ್ ನಿಗಾದರೋ ಸಕಲ ವಿದ್ಯಮಾನಗಳ ಕುರಿತು ಅಗಾಧವಾದ ಜ್ಞಾನವಿದೆ. {75}
---------------

ಅನುವಾದಿತ ಸೂರಃ ಗಳು:


Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...