30 ನೆಯ ಭಾಗ | ترجمــة جز عم كامل



ಅನ್-ನಬ’ | ســورة النبــأ

| ಸೂರಃ ಅನ್-ನಬ' | ಪವಿತ್ರ್ ಕುರ್‌ಆನ್ ನ 78 ನೆಯ ಸೂರಃ | ಇದರಲ್ಲಿ ಒಟ್ಟು 40 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹ್ ನ ನಾಮದೊಂದಿಗೆ (ಆರಂಭಿಸುವೆ)!

ಅದಾವ ವಿಷಯದ ಕುರಿತು ಅವರು [ಅರ್ಥಾತ್ ದೇವನು ಏಕ ಮಾತ್ರನು ಎಂದು ನಂಬದವರು - ಮುಖ್ಯವಾಗಿ ಮಕ್ಕಾ ಪಟ್ಟಣದಲ್ಲಿನ ಕುರೈಶರು] ಪರಸ್ಪರ ಚರ್ಚೆಯಲ್ಲಿ ನಿರತರಾಗಿದ್ದಾರೆ? (ಪುನರುತ್ಥಾನ ದಿನದ) ಆ ಘನಗಂಭೀರ ಸುದ್ದಿಯ ಕುರಿತಾಗಿದೆಯೇ ಅವರ ಚರ್ಚೆ? ಅವರು ವಿಭಿನ್ನ ಅಭಿಪ್ರಾಯ ತಾಳಿರುವುದು ಆ ವಿಷಯದ ಕುರಿತೇನು? ಇಲ್ಲ, ಅವರಿಗದು ಗೊತ್ತಾಗಲಿದೆ. ಸರ್ವಥಾ ಇಲ್ಲ! ಶೀಘ್ರದಲ್ಲೇ ಅವರಿಗೆ ಗೊತ್ತಾಗಿ ಬಿಡುವುದು! {1-5}

ನೆಲವನ್ನು (ನಿಮ್ಮ ಉಪಯೋಗಕ್ಕಾಗಿ) ಹಾಸುಗೆಯಂತೆ ನಾವು ಹರಡಲಿಲ್ಲವೇ? ಪರ್ವತಗಳನ್ನು (ಭೂಮಿಯ) ಗೂಟಗಳನ್ನಾಗಿ ಮಾಡಲಿಲ್ಲವೇ? ಮತ್ತು (ಗಂಡು-ಹೆಣ್ಣಿನ) ಜೋಡಿಗಳನ್ನಾಗಿ ನಿಮ್ಮನ್ನು ನಾವು ಸೃಷ್ಟಿಸಲಿಲ್ಲವೇ? ಹಾಗೆಯೇ, ನಿಮ್ಮ ನಿದ್ರೆಯನ್ನು (ಎಲ್ಲ ಚಟುವಟಿಕೆಗಳಿಂದ) ವಿರಮಿಸಲಿಕ್ಕಾಗಿಯೂ, ರಾತ್ರಿಯನ್ನು (ಸರ್ವವನ್ನೂ ಕವಿದುಕೊಳ್ಳುವ) ಹೊದಿಕೆಯನ್ನಾಗಿಯೂ, ಹಗಲನ್ನು ಜೇವನೋಪಾಯದ (ಸಿದ್ಧತೆಗಾಗಿಯೂ) ನಾವು ನಿಯುಕ್ತಗೊಳಿಸಿರುವೆವು! ಅಂತೆಯೇ ನಿಮ್ಮ ಮೇಲ್ಭಾಗದಲ್ಲಿ ಸುಭದ್ರವಾದ ಏಳು [ಗಗನ ಛಾವಣಿಗಳನ್ನು] ನಿರ್ಮಿಸಿರುವೆವು. ಹೊತ್ತಿ ಉರಿಯುವ, ಪ್ರಜ್ವಲಿಸುವ ಒಂದು ದೀಪವನ್ನೂ ನಾವು ಅಲ್ಲಿ ಇರಿಸಿರುವೆವು! ಮಾತ್ರವಲ್ಲ, ದವಸಧಾನ್ಯ, ಸಸ್ಯರಾಶಿ ಮತ್ತು ದಟ್ಟವಾಗಿ ಬೆಳೆದ ತೋಟಾದಿಗಳನ್ನು ಉತ್ಪಾದಿಸುವ ಸಲುವಾಗಿ ತೊಟ್ಟಿಕ್ಕುವ ಮೋಡಗಳಿಂದ ನಾವು ಧಾರಾಕಾರ ಮಳೆ ಸುರಿಸಿದೆವು! {6-16}

[ನಿಮ್ಮ ಕರ್ಮಗಳಿಗೆ ತಕ್ಕ ಪ್ರತಿಫಲ ನೀಡಲಾಗುವ] ನಿರ್ಣಾಯಕ ದಿನದ ಸಮಯವನ್ನು ಅದಾಗಲೇ ಗೊತ್ತುಪಡಿಸಲಾಗಿದೆ! ಅಂದು ಕಹಳೆಯನ್ನು ಊದಲಾಗುವುದು ಮತ್ತು ನೀವೆಲ್ಲ ತಂಡೋಪತಂಡವಾಗಿ [ನಿಮ್ಮ ನಿಮ್ಮ ಸಮಾಧಿಗಳಿಂದ] ಎದ್ದು ಬರುವಿರಿ. ಆಕಾಶವು ಅಂದು ತೆರೆಯಲ್ಪಡುವುದು ಮತ್ತು ಅದು ಸಾಕ್ಷಾತ್ ಬಾಗಿಲುಗಳಿಂದ ತುಂಬಿಕೊಂಡಿರುವುದು. ಪರ್ವತಗಳು ಅಂದು (ತಮ್ಮ ಬುಡದಿಂದ) ಸರಿಸಲ್ಪಟ್ಟಾಗ ಒಂದು ಮರೀಚಿಕೆಯಾಗಿ ತೋರುವುದು. {17-20}

ವಾಸ್ತವದಲ್ಲಿ ನರಕವು ಹೊಂಚು ಹಾಕುತ್ತಲಿದೆ; ಅತಿಕ್ರಮವೆಸಗಿದವರ ಅಂತಿಮ ತಾಣವದು. ಅಂತಹವರು ಅದರಲ್ಲಿ ದೀರ್ಘಕಾಲ ಬಿದ್ದುಕೊಂಡಿರುವರು. ಕುದಿಯುವ ನೀರು ಮತ್ತು ಕೀವುಗಳಂತಹ [ಅಸಹ್ಯ ವಸ್ತುಗಳ] ಹೊರತು ತಂಪಾಗಲಿ ಅಥವಾ ಯಾವುದೇ ಪಾನೀಯವಾಗಲಿ ರುಚಿ ನೋಡಲೂ ಅವರಿಗೆ ಅದರಲ್ಲಿ ಸಿಗದು. [ಅತಿಕ್ರಮಿಗಳಿಗೆ] ತಕ್ಕುದಾದ ಪ್ರತಿಫಲ!! {21-26}

ವಾಸ್ತವದಲ್ಲಿ ವಿಚಾರಣೆ ನಡೆಯಲಿದೆ ಎಂದು ಅವರು ನಿರೀಕ್ಷಿಸಿಯೇ ಇರಲಿಲ್ಲ; ನಮ್ಮ ವಚನಗಳನ್ನು ಅವರು ಧಿಕ್ಕರಿಸಿ ತಳ್ಳಿಹಾಕಿದ್ದರು. ಆದರೆ ನಾವು ಅವರ ಪ್ರತಿಯೊಂದು ಕೃತ್ಯವನ್ನು ಒಂದೊಂದಾಗಿ ಎಣಿಸಿ ದಾಖಲಿಸಿಟ್ಟಿದ್ದೇವೆ! ಆದ್ದರಿಂದ ಈಗ ಸವಿಯಿರಿ, ಶಿಕ್ಷೆಯ ಕಾಠಿಣ್ಯವನ್ನಲ್ಲದೆ ಬೇರೇನನ್ನೂ ನಿಮ್ಮ ಪಾಲಿಗೆ ನಾವು ಹೆಚ್ಚಿಸುವಂತಿಲ್ಲ (ಎಂದು ಅವರಿಗೆ ಹೇಳಲಾಗುವುದು)! {27-30}

ಖಂಡಿತವಾಗಿಯೂ [ಅಲ್ಲಾಹ್ ನಿಗೆ ಭಯಭಕ್ತಿ ತೋರಿ ಜೀವಿಸಿದ] ಧರ್ಮನಿಷ್ಠರಿಗೆ ಗೆಲುವು ಖಚಿತ. ಅಂತಹವರಿಗಾಗಿ (ಅಲ್ಲಿ) ಉದ್ಯಾನವನಗಳಿವೆ, ದ್ರಾಕ್ಷಿ ತೋಟಗಳಿವೆ, ಸಮವಯಸ್ಕ ತರುಣಿಯರ ಸಾಂಗತ್ಯವಿದೆ, ತುಂಬಿ ತುಳುಕುವ ಪಾನಪಾತ್ರೆಗಳೂ ಇವೆ. ಅಲ್ಲಿ ನಿರರ್ಥಕವಾದ ಮಾತಾಗಲೀ ಅಥವಾ ಹುಸಿ ನುಡಿಯಾಗಲೀ ಅವರು ಕೇಳಿಸಿ ಕೊಳ್ಳಲಾರರು. ನಿಮ್ಮ ಒಡೆಯನ ಕಡೆಯಿಂದ ಇರುವ ಸೂಕ್ತ ಪ್ರತಿಫಲವದು; ಬಹಳ ತಕ್ಕುದಾದ ಬಹುಮಾನವದು! {31-36}

ಅವನು ಭೂಮಿ-ಆಕಾಶಗಳು ಮತ್ತು ಅವೆರಡರ ಮಧ್ಯೆ ಏನೆಲ್ಲ ಇವೆಯೋ ಅವೆಲ್ಲವುಗಳ ಒಡೆಯನು; ಮಹಾ ಕಾರುಣ್ಯವಂತನು! ಅವನ ವತಿಯಿಂದ ಏನನ್ನೂ ಹೇಳಲು ಯಾರಿಗೂ ಅಧಿಕಾರ ನೀಡಲಾಗಿಲ್ಲ. (ಪುನರುತ್ಥಾನದ) ಆ ದಿನ 'ಅರ್-ರೂಹ್' [ಅರ್ಥಾತ್: ಜಿಬ್ರೀಲ್, ಏಂಜಲ್ ಗೇಬ್ರಿಯಲ್] ಮತ್ತು ಇತರ 'ಮಲಕ್' ಗಳು ಸಾಲು ಸಾಲಾಗಿ [ಅಲ್ಲಾಹ್ ನ ಸನ್ನಿಧಿಯಲ್ಲಿ] ನಿಲ್ಲಲಿರುವರು. ಆ ಮಹಾ ಕಾರುಣ್ಯವಂತನು ಯಾರಿಗೆ ಅನುಮತಿ ನೀಡುವನೋ ಅವನ ಹೊರತು ಬೇರೆ ಯಾವೊಬ್ಬನೂ (ಅಂದು) ಮಾತನಾಡಲಾರನು; ಮತ್ತು ಅವನು ಸರಿಯಾದ ಮಾತನ್ನೇ ಹೇಳುವನು. ಅದಂತೂ (ಅನಿವಾರ್ಯವಾಗಿ) ಬಂದೇ ತೀರುವ ದಿನ; ಆದ್ದರಿಂದ ಇಷ್ಟವಿದ್ದವನು ತನ್ನ ಒಡೆಯನ ಬಳಿ ಒಂದು ಆಸರೆಯನ್ನು (ಕೂಡಲೇ) ಮಾಡಿಕೊಳ್ಳಲಿ! ಖಂಡಿತವಾಗಿಯೂ ಸನ್ನಿಹಿತವಾಗಿ ಬಿಟ್ಟಿರುವ ಶಿಕ್ಷೆಯ ಕುರಿತು ನಾವು ನಿಮಗೆ ಮುನ್ನೆಚ್ಚರಿಕೆ ನೀಡಿದ್ದೇವೆ. ಅಂದು ಮನುಷ್ಯನು ತಾನು ಕೈಯಾರೆ ಸಂಪಾದಿಸಿ ಕಳಿಸಿದ್ದೆಲ್ಲವನ್ನೂ ಕಣ್ಣಾರೆ ಕಂಡುಕೊಳ್ಳುವನು; ಮತ್ತು (ಪುನರುತ್ಥಾನ ದಿನವನ್ನು) ಧಿಕ್ಕರಿಸಿದವನು – ಅಕಟಕಟಾ! ನಾನು (ಮನುಷ್ಯನಾಗುವುದಕ್ಕಿಂತ) ಮಣ್ಣಾಗಿರುತ್ತಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಎಂದು ಗೋಳಿಡುವನು! {37-40} ☑

----------

ಅನ್ - ನಾಝಿಆತ್ | سورة الـنازعات

| ಸೂರಃ ಅನ್ - ನಾಝಿಆತ್ | ಪವಿತ್ರ್ ಕುರ್‌ಆನ್ ನ 79 ನೆಯ ಸೂರಃ | ಇದರಲ್ಲಿ ಒಟ್ಟು 46 ಆಯತ್ ಗಳು ಇವೆ |

ಅತ್ಯಂತ ದಯಾಮಯನೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುತ್ತೇನೆ)!

[ಮರಣದ ವೇಳೆ ದುರ್ಜನರ ಆತ್ಮವನ್ನು] ಹಿಂಸಾತ್ಮಕವಾಗಿ ಹಿಂಡಿ ಹೊರಗೆಳೆಯುವ; [ಸಜ್ಜನರ ಆತ್ಮವನ್ನು] ಮೃದುವಾಗಿ ಬಿಡಿಸಿ ತರುವ; ಮತ್ತು [ಆಕಾಶಗಳಲ್ಲಿ] ರಭಸವಾಗಿ ತೇಲುತ್ತಾ ಚಲಿಸುವ (ಮಲಕ್ ಗಳು) ಸಾಕ್ಷಿಯಾಗಿವೆ! [ಅಲ್ಲಾಹನ ಆಜ್ಞಾಪಾಲನೆಯಲ್ಲಿ ಅಂತಹ ಮಲಕ್ ಗಳು] ಪರಸ್ಪರ ಸ್ಪರ್ಧೆಯಲ್ಲಿ ತೊಡಗಿರುವರು; (ಪ್ರತಿಯೊಂದು) ವಿಷಯದ ಕಾರ್ಯ ವ್ಯವಹಾರವನ್ನು ನೋಡಿಕೊಳ್ಳುತ್ತಿರುವರು. {1-5}

[ಲೋಕಾಂತ್ಯಗೊಳ್ಳುವ] ಆ ದಿನ (ಭೂಮಿಯು) ಭಯಂಕರವಾಗಿ ಕಂಪಿಸುವುದು. ಅದರ ಬೆನ್ನಿಗೇ ಮತ್ತೊಂದು ಭಯಾನಕ ನಡುಕ ಸಂಭವಿಸುವುದು. ಕೆಲವು ಹೃದಯಗಳು (ಅಂದು) ಭಯದಿಂದ ನಡುಗುವುವು; ದೃಷ್ಟಿಗಳು ದೀನತೆಯಿಂದ ತಗ್ಗಿರುವುವು. {6-9}

[ಸಾವು ಸನ್ನಿಹಿತವಾದ ಆ ಸಂದರ್ಭದಲ್ಲಿ] ಅವರು ಕೇಳತೊಡಗುವರು: [ಒಮ್ಮೆ ಸತ್ತು ಮಣ್ಣಾದ ನಂತರ] ನಮ್ಮನ್ನು ಪುನಃ ಹಿಂದಿನ ಸ್ಥಿತಿಗೆ ಮರಳಿಸಲಾಗುವುದೇ? ನಾವು ಟೊಳ್ಳಾದ, ಕೆಲಸಕ್ಕೆ ಬಾರದ ಮೂಳೆಗಳಾಗಿ ಬಿಟ್ಟ ನಂತರವೂ (ಹಾಗೆ ಮಾಡುವುದು ಸಾಧ್ಯವೇ)? ಪುನಃ ಹೇಳುವರು: ಹಾಗೆ (ನಮ್ಮನ್ನು ಜೀವಂತಗೊಳಿಸಿ ಹಿಂದಿನ ಸ್ಥಿತಿಗೆ) ಮರಳಿಸಲಾದರೆ ಅದೊಂದು ನಷ್ಟದಾಯಕ ವ್ಯವಹಾರವೇ ಸರಿ! ನಿಜವಾಗಿಯೂ ಅದು ಒಮ್ಮಿಂದಮ್ಮೆಲೇ ಸಂಭವಿಸಿ ಬಿಡುವ ಒಂದು ಘನಘೋರ ಘರ್ಜನೆ, ಆ ಕೂಡಲೇ ಅವರೆಲ್ಲರೂ ಒಂದು ಮೈದಾನದಲ್ಲಿರುವರು! {10-14}

(ಪ್ರವಾದಿ) ಮೂಸಾ ರವರ ವೃತ್ತಾಂತವು ನಿಮಗೆ ತಲುಪಿದೆಯಲ್ಲವೇ? ಪವಿತ್ರವಾದ 'ತುವಾ' ಕಣಿವೆಯಲ್ಲಿ ಅವರನ್ನು ಅವರ ಒಡೆಯನು ಕರೆದ ಆ ಸಂದರ್ಭವನ್ನು ನೆನಪಿಸಿಕೊಳ್ಳಿ! [ಅಲ್ಲಿ ಮೂಸಾ ರಿಗೆ ಆಜ್ಞಾಪಿಸಲಾಯಿತು:] ನೀವಿನ್ನು 'ಫಿರ್‌ಔನ್' ನ ಬಳಿಗೆ ಹೋಗಬೇಕು, ಅವನು ಆಜ್ಞೋಲ್ಲಂಘನೆಯ ಹಾದಿ ಹಿಡಿದಿದ್ದಾನೆ. ಮತ್ತು ಹೇಳಬೇಕು: ನಿನಗೆ ಸ್ವತಃ ತನ್ನನ್ನು ತಿದ್ದಿಕೊಂಡು ಸುಧಾರಣೆಯ ಹಾದಿ ಹಿಡಿಯುವ ಮನಸ್ಸಿದೆಯೇ? ನಾನು ನಿನಗೆ ನಿನ್ನ ಒಡೆಯನ ಕಡೆಗಿರುವ ಹಾದಿಯನ್ನು ತೋರಿಸಿ ಕೊಡಲೇ? ಹಾಗಾದರೆ (ನಿನ್ನಲ್ಲಿ ಅವನ) ಭಯ ಉಂಟಾದೀತೇ? {15-19}

(ಪ್ರವಾದಿ) ಮೂಸಾರವರು ಫಿರ್‌ಔನ್ ನಿಗೆ ಅತಿ ಮಹತ್ತರವಾದ ಪವಾಡಗಳನ್ನು ತೋರಿಸಿದರು. ಆದರೆ ಅವನು ಅವುಗಳನ್ನು ಧಿಕ್ಕಾರದೊಂದಿಗೆ ತಿರಸ್ಕರಿಸಿದನು. ಮಾತ್ರವಲ್ಲ ಅವನು (ತಿರಸ್ಕಾರದೊಂದಿಗೆ) ಬೆನ್ನುತಿರುಗಿಸಿ ಓಡಿ ಹೋದನು. [ತನ್ನ ಸಮುದಾಯದ ಜನರನ್ನು] ಒಟ್ಟುಗೂಡಿಸಿದನು ಮತ್ತು ಅವರಿಗೆ ಸಾರಿದನು; ನಿಮ್ಮೆಲ್ಲರ ಅತ್ಯುನ್ನತನಾದ ಪ್ರಭು ನಾನೇ ಆಗಿರುವೆನು ಎಂದು ಘೋಷಿಸಿದನು. ಪರಿಣಾಮವಾಗಿ ಅಲ್ಲಾಹನು ಅವನನ್ನು ಪರಲೋಕದಲ್ಲಿಯೂ ಇಹಲೋಕದಲ್ಲಿಯೂ ಶಿಕ್ಷಿಸುವ ಸಲುವಾಗಿ ಹಿಡಿದುಬಿಟ್ಟನು. ಖಂಡಿತವಾಗಿಯೂ ಈ ವೃತ್ತಾಂತದಲ್ಲಿ ಅಲ್ಲಾಹನ ಭಯವಿರುವವರಿಗೆ ಪಾಠವಿದೆ. {20-26}

[ಸೃಷ್ಟಿಗಳಲ್ಲಿ] ಪ್ರಬಲವೂ ಪ್ರಚಂಡವೂ ಆದ ಸೃಷ್ಟಿಯು ನೀವೋ ಅಥವಾ ಆ ಅಕಾಶವೋ? ಅಲ್ಲಾಹನು ಆಕಾಶವನ್ನು ನಿರ್ಮಿಸಿರುವನು! ಅದರ ಮೇಲ್ಛಾವಣಿಯನ್ನು ಎತ್ತರಕ್ಕೆ ಏರಿಸಿ, ಅದನ್ನು ಸಕಲ ರೀತಿಯಲ್ಲಿ ಸರಿಪಡಿಸಿರುವನು. ಅದರ ರಾತ್ರಿಯನ್ನು (ಕತ್ತಲೆಯಲ್ಲಿ) ಮರೆಗೊಳಿಸಿದನು; ಮತ್ತು ಹಗಲನ್ನು ಅದರಿಂದ ಹೊರಹೊಮ್ಮಿಸಿದನು. ಅದಾದ ನಂತರ ಭೂಮಿಯನ್ನು ಹರಡಿದನು. ಅದರೊಳಗಿಂದ ನೀರನ್ನೂ ಹುಲ್ಲು-ಮೇವುಗಳನ್ನೂ ಉತ್ಪಾದಿಸಿದನು. ಅದರಲ್ಲಿ ಪರ್ವತಗಳನ್ನು (ಗೂಟಗಳಂತೆ) ನೆಟ್ಟನು. ಇವೆಲ್ಲಾ ನಿಮಗೂ ನಿಮ್ಮ ಜಾನುವಾರುಗಳಿಗೂ ಜೀವನ ಸಾಗಿಸಲು ಬೇಕಾದ ಸಾಧನವನ್ನು ಒದಗಿಸಲಿಕ್ಕಾಗಿಯೇ (ಆಗಿದೆ). {27-33}

ಮುಂದೆ, ಆ ಭಯಾನಕ ವಿಪತ್ತು [ಅರ್ಥಾತ್: ಪುನರುತ್ಥಾನ ದಿನ] ಬಂದೆರಗಿದಾಗ, ಮನುಷ್ಯನು (ಭೂಮಿಯಲ್ಲಿ) ತಾನೆಸಗಿದ ಕೃತ್ಯಗಳನ್ನು ಸ್ಮರಿಸಿಕೊಳ್ಳುವನು. ಅಂದು (ಧಗಧಗಿಸಿ ಉರಿಯುವ) ನರಕಾಗ್ನಿಯನ್ನು ಪ್ರತಿಯೊಬ್ಬ ನೋಡುವವನ ಮುಂದೆ ಪ್ರತ್ಯಕ್ಷಗೊಳಿಸಲಾಗುವುದು. ಯಾರು (ಅಲ್ಲಾಹನ) ಆಜ್ಞೆಗಳನ್ನು ಉಲ್ಲಂಘಿಸಿದ್ದನೋ ಮತ್ತು (ಪರಲೋಕಕ್ಕಿಂತ) ಇಹಲೋಕ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದನೋ ನರಕವೇ ಅಂಥವನಿಗೆ ಅಂತಿಮ ತಾಣವಾಗಿರುವುದು. ಯಾರು ತನ್ನ ಒಡೆಯನ ಮುಂದೆ (ಲೆಕ್ಕ ಸಮರ್ಪಣೆಗಾಗಿ) ನಿಲ್ಲಬೇಕಾದ ಸಂದರ್ಭದ ಕುರಿತು ಅಂಜಿಕೊಂಡಿದ್ದನೋ; ಮತ್ತು ಸ್ವೇಚ್ಛಾಚಾರದಿಂದ ತನ್ನನ್ನು ತಡೆದುಕೊಂಡಿದ್ದನೋ – ಅಂಥವನಿಗೆ ಸ್ವರ್ಗೋದ್ಯಾನವಿದೆ ಮತ್ತು ಅದುವೇ ಅವನ ಶಾಶ್ವತ ನಿವಾಸವಾಗಿರುವುದು. {34-41}

(ಲೋಕಾಂತ್ಯಗೊಳ್ಳುವ) ಆ ಘಳಿಗೆಯು ಯಾವಾಗ ಬಂದುಬಿಡುತ್ತದೆ? ಎಂದು (ಓ ಪೈಗಂಬರರೇ) ಅವರು ನಿಮ್ಮೊಡನೆ ವಿಚಾರಿಸುತ್ತಿದ್ದಾರೆ. ಅದರ ವಿಷಯವಾಗಿ ನಿಮಗೆ ಏನು ತಾನೆ ತಿಳಿದಿದೆ? ಅದರ ಕುರಿತಾದ ಅಂತಿಮ ಜ್ಞಾನವಿರುವುದು ನಿಮ್ಮ ಒಡೆಯನ ಬಳಿ ಮಾತ್ರ. ನೀವಾದರೋ ಅದನ್ನು ಭಯಪಡುವವರಿಗೆ ಎಚ್ಚರಿಕೆ ನೀಡುವವರು ಮಾತ್ರ! ಇನ್ನು ಅದನ್ನು ಕಣ್ಣಾರೆ ಕಂಡುಕೊಂಡಾಗ ನಾವು (ಭೂಮಿಯಲ್ಲಿ) ಬದುಕಿದ್ದುದು ಕೇವಲ ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರ ಎಂದು ಅವರಿಗೆ ಭಾಸವಗುವುದು. {42-46} ☑

----------

ಸೂರಃ ‘ಅಬಸ | سورة عبس

| ಸೂರಃ ‘ಅಬಸ | ಪವಿತ್ರ್ ಕುರ್‌ಆನ್ ನ 80 ನೆಯ ಸೂರಃ | ಇದರಲ್ಲಿ ಒಟ್ಟು 42 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಆರಂಭಿಸುವೆ)!

[ಕುರೈಶರ ಸರದಾರರೊಂದಿಗೆ ಪೈಗಂಬರರು ಮಾತುಕತೆಲ್ಲಿ ನಿರತರಾಗಿದ್ದಾಗ] ಆ ಕುರುಡ ವ್ಯಕ್ತಿಯು ಅವರಲ್ಲಿಗೆ ಹಾದು ಬಂದು [ಮಧ್ಯೆ ಪ್ರವೇಶಿಸಿದ್ದಕ್ಕೆ ಪೈಗಂಬರರು] ಸಿಡುಕು ಮೋರೆ ಮಾಡಿಕೊಂಡರು ಹಾಗೂ ಮುಖ ತಿರುಚಿ ಕೊಂಡರು. {1-2}

(ಓ ಪೈಗಂಬರರೇ), ನಿಮಗೇನು ಗೊತ್ತು! [ಆ ಕುರುಡ ವ್ಯಕ್ತಿಯತ್ತ ನೀವು ಗಮನ ಹರಿಸಿರುತ್ತಿದ್ದರೆ] ಪ್ರಾಯಶಃ ಆತ ತನ್ನನ್ನು ಸಂಸ್ಕರಿಸಿಕೊಳ್ಳೂತ್ತಿದ್ದ! ಅಥವಾ (ನಿಮ್ಮ) ಉಪದೇಶವನ್ನು ಆತನು ಸ್ವೀಕರಿಸುವಂತಾಗಿ ಅವನ ಪಾಲಿಗೆ ಅದು ಪ್ರಯೋಜನಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇತ್ತು! {3-4}

ಯಾರು ತನಗೆ ತಾನೇ ಸ್ವಯಂ-ಸಂಪೂರ್ಣನು [ಅರ್ಥಾತ್ ನನಗೆ ನಿಮ್ಮ ಈ ಉಪದೇಶಗಳ ಅಗತ್ಯವಿಲ್ಲ ಎಂಬಂತೆ ವರ್ತಿಸಿ ಅದನ್ನು ತಿರಸ್ಕರಿಸಿದನೋ] ಅವನ ಬಗ್ಗೆಯಂತು ನೀವು ತುಂಬಾ ಕಾಳಜಿ ವಹಿಸುತ್ತೀರಿ! ಅಂತಹವನು ತನ್ನನ್ನು ಸುಧಾರಿಸಿಕೊಳ್ಳದೇ ಹೋದರೂ ನಿಮಗೆ ಅದರ ಹೊಣೆಗಾರಿಕೆ ಇಲ್ಲ. ಯಾರು (ಅಲ್ಲಾಹ್ ನಿಗೆ) ಭಯಭಕ್ತಿ ತೋರುತ್ತಾ ನಿಮ್ಮ ಬಳಿಗೆ (ಉಪದೇಶ ಪಡೆಯಲು) ಧಾವಿಸಿ ಬಂದನೋ ಅಂತಹವನನ್ನು ನೀವು ಕಡೆಗಣಿಸಿ ಬಿಟ್ಟಿರಿ! ಸರ್ವಥಾ ಸಲ್ಲದು; ಈ (ಕುರ್‌ಆನ್) ಒಂದು ಉಪದೇಶ ಮಾತ್ರವಾಗಿದೆ. ಆದ್ದರಿಂದ ಯಾರಿಗೆ ಇಷ್ಟವಿದೆಯೋ ಅವನು ಮಾತ್ರ ಅದರಿಂದ ಉಪದೇಶ ಸ್ವೀಕರಿಸಿದರೆ ಸಾಕು. ಅದು ಅತ್ಯಂತ ಆದರಪೂರ್ಣವಾದ, ಅತ್ಯುನ್ನತವಾದ, ಪರಿಶುದ್ಧವಾದ ದಿವ್ಯ ಹೊತ್ತಗೆಯಲ್ಲಿ (ಲಿಖಿತಗೊಂಡಿದೆ); ಆದರಣೀಯರೂ ಕರ್ತವ್ಯನಿಷ್ಠರೂ ಆದ ಬರಹಗಾರ (ಮಲಕ್ ಗಳ) ಸುರಕ್ಷೆಯಲ್ಲಿದೆ! {5-16}

ಮನುಷ್ಯ ನಾಶವಾಗಿ ಹೋದನು! (ಉಪದೇಶವನ್ನು ಧಿಕ್ಕರಿಸಿದ) ಅವನು ಅದೆಂತಹ ಕೃತಘ್ನ! ಅವನನ್ನು ಯಾವ ವಸ್ತುವಿನಿಂದ (ಅಲ್ಲಾಹ್ ನು) ಸೃಷ್ಟಿಸಿರುವನು [ಎಂಬುದನ್ನು ಅವನು ತಿಳಿಯದೇ ಹೋದನೇ]! ಒಂದು ಹನಿ ವೀರ್ಯದಿಂದ ಅವನನ್ನು ಸೃಷ್ಟಿಸಿದನು; ನಂತರ ಅವನ ವಿಧಿಯನ್ನು ನಿಗದಿಪಡಿಸಿದನು. ತದನಂತರ ಅವನು (ಕ್ರಮಿಸ ಬೇಕಾದ) ಹಾದಿಯನ್ನು ಸುಗಮಗೊಳಿಸಿದನು. ತರುವಾಯ ಅವನಿಗೆ ಮರಣ ನೀಡಿದನು; ಬಳಿಕ ಅವನು ಗೋರಿ ಸೇರುವಂತೆ ಮಾಡಿದನು. ಆಮೇಲೆ ತಾನು ಬಯಸಿದಾಗ ಅವನನ್ನು ಪುನಃ ಎಬ್ಬಿಸುವನು. {17-22}

ಖಂಡಿತಾಗಿಯೂ ಇಲ್ಲ! (ಅಲ್ಲಾಹನು) ಯಾವುದರ ಆಜ್ಞಾಪನೆ ಮಾಡಿದ್ದನೋ (ಮನುಷ್ಯನು) ಅದನ್ನು ಪಾಲಿಸಲೇ ಇಲ್ಲ! (ಕನಿಷ್ಟ ಪಕ್ಷ) ತನ್ನ ಆಹಾರ ಪದಾರ್ಥಗಳ ಕಡೆಗಾದರೂ ಮನುಷ್ಯನು ಒಮ್ಮೆ ದೃಷ್ಟಿ ಹಾಯಿಸಲಿ! ಅದೆಷ್ಟು ಬೇಕೋ ಅಷ್ಟು ಮಳೆಯನ್ನು ನಾವು ಸುರಿಸಿದೆವು; ನಂತರ ನೆಲವನ್ನು ಸೀಳಬೇಕಾದ ರೀತಿಯಲ್ಲಿ ನಾವು ಸೀಳಿದೆವು. ಅದರಿಂದ ದವಸಧಾನ್ಯ, ದ್ರಾಕ್ಷಿಹಣ್ಣು, ತರಕಾರಿಗಳು, ಆಲಿವ್ ಮತ್ತು ಖರ್ಜೂರದ ಮರಗಳು, ದಟ್ಟವಾದ ತೋಟಗಳು, ಹಣ್ಣು-ಹಂಪಲು ಹಾಗೂ ಹುಲ್ಲು-ಮೇವುಗಳನ್ನು ನಾವು ನಿಮ್ಮ ಜೀವನಾಧಾರಕ್ಕಾಗಿಯೂ ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿಯೂ ಬೆಳೆಸಿದೆವು. {23-32}

[ಪೈಗಂಬರ ಉಪದೇಶಕ್ಕೆ ಕಿವಿಗೊಡದಿರುವ ಓ ಮನುಷ್ಯಾ!] ಕಿವಿ ಕಿವುಡಾಗಿಸಿ ಬಿಡುವಂತಹ ಆ ಶಬ್ಧ-ಸ್ಪೋಟನೆ ಸಂಭವಿಸಿದಾಗ [ಎಲ್ಲಿ ಹೋಗುವೆ]? ಆ ದಿನ ಮನುಷ್ಯನು ತನ್ನದೇ ಸಹೋದರನಿಂದ ದೂರ ಓಡಿ ಹೋಗುವನು; ತನ್ನ ತಂದೆ-ತಾಯಿಂದಲೂ, ತನ್ನ ಪತ್ನಿಯಿಂದಲೂ ಮಕ್ಕಳಿಂದಲೂ ದೂರ ಓಡಿ ಹೋಗುವನು. ಅವರಲ್ಲಿ ಪ್ರತಿಯೊಬ್ಬನು ಅಂದು (ದಿಗಿಲು ಬಡಿದಂತಿದ್ದು) ತನ್ನ ಬಗ್ಗೆ ಮಾತ್ರ ಚಿಂತಿಸುವನು. {33-37}

ಆದರೆ ಕೆಲವು ಮುಖಗಳು ಅಂದು ಶೋಭಿಸುತ್ತಿರುವುವು; ನಗುನಗುತ್ತಾ ಹರ್ಷಿಸುತ್ತಿರುವುವು. ಇನ್ನು ಕೆಲವು ಮುಖಗಳು ಅಂದು ಧೂಳು ಮುಕ್ಕಿದ್ದು, ಕಪ್ಪು ಕವಿದಂತೆ ಇರುವುವು. ಅವರೇ ನಮ್ಮ (ಉಪದೇಶವನ್ನು) ತಿರಸ್ಕರಿಸಿದ ದುಷ್ಕರ್ಮಿ ಪಾಪಿಗಳು! {38-42} ☑

----------

ಅತ್-ತಕ್ವೀರ್ | سورة التكوير

| ಸೂರಃ ಅತ್-ತಕ್ವೀರ್ | ಪವಿತ್ರ್ ಕುರ್‌ಆನ್ ನ 81 ನೆಯ ಸೂರಃ | ಇದರಲ್ಲಿ ಒಟ್ಟು 29 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ!

ಸೂರ್ಯನು ಮಡಿಚಲ್ಪಡುವಾಗ; ನಕ್ಷತ್ರಗಳು ಕಾಂತಿಹೀನಗೊಳ್ಳುವಾಗ; ಪರ್ವತಗಳು ಚಲಿಸಲ್ಪಡುವಾಗ; ತುಂಬು ಗರ್ಭಿಣಿ ಒಂಟೆಗಳು ನಿರ್ಲಕ್ಷಿಸಲ್ಪಡುವಾಗ; ವನ್ಯ ಪ್ರಾಣಿಗಳು ಒಟ್ಟುಗೂಡಿಸಲ್ಪಡುವಾಗ; ಸಮುದ್ರಗಳು ಉಕ್ಕಿಹರಿಯಲ್ಪಡುವಾಗ; ಆತ್ಮಗಳು (ಕರ್ಮಗಳಿಗೆ ತಕ್ಕಂತೆ) ವರ್ಗೀಕರಿಸಲ್ಪಡುವಾಗ; ಯಾವ ಪಾಪಕ್ಕಾಗಿ ಕೊಲ್ಲಲ್ಪಟ್ಟೆ ಎಂದು ಜೀವಂತ ಹೂಳಲ್ಪಟ್ಟ ಆ ಹೆಣ್ಣುಮಗು ವಿಚಾರಿಸಲ್ಪಡುವಾಗ; (ಮನುಷ್ಯನು ಮಾಡಿದ ಒಳಿತು-ಕೆಡುಕುಗಳ) ಕರ್ಮಪತ್ರಗಳನ್ನು ತೆರೆಯಲಾದಾಗ; ಆಕಾಶದ ಕವಚವನ್ನು ಕಳಚಿ ಬಿಡಲಾದಾಗ; ನರಕಾಗ್ನಿಯು ಕೆರಳಿಸಲ್ಪಡುವಾಗ; ಸ್ವರ್ಗೋದ್ಯಾನವು ಸಮೀಪಗೊಳಿಸಲ್ಪಡುವಾಗ; (ನಿಮ್ಮಲ್ಲಿಯ) ಪ್ರತಿಯೊಬ್ಬನೂ ತಾನು ಏನನ್ನು (ಭೂಲೋಕದಿಂದ ಸಂಪಾದಿಸಿ) ತಂದಿರುವನು ಎಂಬುದನ್ನು ತಿಳಿದು ಕೊಳ್ಳುವನು. {1-14}

ಹಾಗಲ್ಲ! ಹಿಂದಕ್ಕೆ ಸರಿಯುವ, ರಭಸದಿಂದ ಮುನ್ನುಗ್ಗುವ ಅನಂತರ ಕಣ್ಮರೆಯಾಗಿ ಬಿಡುವ (ನಕ್ಷತ್ರಗಳನ್ನು) ಸಾಕ್ಷಿಯಾಗಿಸುತ್ತೇನೆ! ರಾತ್ರಿಯು ನಿರ್ಗಮಿಸುವ ಸಮಯ ಹಾಗೂ ಹಗಲು (ಉದಯಿಸಿ) ಉಸಿರಾಡುವ ಸಮಯವನ್ನು ಸಾಕ್ಷಿಯಾಗಿಸುತ್ತೇನೆ! ವಾಸ್ತವದಲ್ಲಿ ಈ 'ಕುರ್‌ಆನ್' ಆದರಣೀಯ ದೂತ (ಜಿಬ್ರೀಲ್) ತಂದಿರುವ ವಚನವೇ ಆಗಿದೆ. ಬಲಶಾಲಿಯಾದ (ಜಿಬ್ರೀಲ್ ಗೆ) ವಿಶ್ವದ ಅಧಿಕಾರ ಗದ್ದುಗೆಯ ಅಧಿಪತಿಯಾದ (ಅಲ್ಲಾಹ್ ನ) ಬಳಿ ಉನ್ನತ ಸ್ಥಾನಮಾನವಿದೆ. (ಮಲಕ್ ಗಳು) ಅವರ ಆಜ್ಞಾನುಸರಣೆ ಮಾಡುತ್ತಾರೆ ಮತ್ತು ಅವರು [ತನ್ನ ದೌತ್ಯದ ನಿರ್ವಹಣೆಯಲ್ಲಿ] ಅತ್ಯಂತ ಪ್ರಾಮಾಣಿಕರಾಗಿದ್ದಾರೆ. {15-21}

[ಮಕ್ಕಃ ಪಟ್ಟಣದ ನಿವಾಸಿಗಳಾದ ಕುರೈಶರೇ!] ನಿಮ್ಮ ಈ ಒಡನಾಡಿಯು [ಅರ್ಥಾತ್ ಮುಹಮ್ಮದ್ ಪೈಗಂಬರರು] ಬುದ್ಧಿಭ್ರಾಂತಿಯಾದವರಲ್ಲ. ಜಿಬ್ರೀಲ್ ರನ್ನು ತಿಳಿಯಾದ ದಿಗಂತದಲ್ಲಿ ಅವರು ನಿಜವಾಗಿಯೂ ಕಂಡಿರುತ್ತಾರೆ. ಅದೃಷ್ಯ (ಲೋಕದಿಂದ ತನ್ನೆಡೆಗೆ ಬರುವ) ಜ್ಞಾನವನ್ನು ಅವರು (ಯಥಾವತ್ತಾಗಿ) ನಿಮಗೆ ತಲುಪಿಸುವಲ್ಲಿ ಜಿಪುಣತೆ ತೋರುವುದಿಲ್ಲ. ಮತ್ತು [ಪೈಗಂಬರರು ನಿಮಗೆ ಓದಿ ಕೇಳಿಸುತ್ತಿರುವ] ಈ 'ಕುರ್‌ಆನ್', ತಿರಸ್ಕರಿಸಲ್ಪಟ್ಟ ಸೈತಾನನ ಮಾತೂ ಅಲ್ಲ! ಹಾಗಿರುವಾಗ, (ಕುರೈಶರೇ) ನೀವು ಅದೆಲ್ಲಿ ಅಲೆಯುತ್ತಿದ್ದೀರಿ? ಇದಾದರೋ ಜಗತ್ತಿನಲ್ಲಿ ವಾಸಿಸುವ ಸಕಲ ಜನರಿಗೆ ಒಂದು ಉಪದೇಶ ಮಾತ್ರವಾಗಿದೆ. ನಿಮ್ಮ ಪೈಕಿ ಯಾರು ನೇರವಾದ ಮಾರ್ಗವನ್ನು ಅನುಸರಿಸ ಬಯಸುತ್ತಾರೋ (ಅಂಥವರು ಈ 'ಕುರ್‌ಆನ್' ನಿಂದ ಮಾರ್ಗದರ್ಶನ ಪಡೆಯಲಿ), ಆದರೆ ಲೋಕ ವಾಸಿಗಳ ಕರ್ತಾರನಾದ ಅಲ್ಲಾಹ್ ನು ಬಯಸದೇ ಕೇವಲ ನೀವು ಬಯಸಿದ ಮಾತ್ರಕ್ಕೆ ಏನೂ ಸಂಭವಿಸದು! {22-29} ☑

----------

ಅಲ್-ಇನ್ಫಿತಾರ್ | سورة الانفطار

| ಸೂರಃ ಅಲ್-ಇನ್ಫಿತಾರ್ | ಪವಿತ್ರ್ ಕುರ್‌ಆನ್ ನ 82 ನೆಯ ಸೂರಃ | ಇದರಲ್ಲಿ ಒಟ್ಟು 19 ಆಯತ್ ಗಳು ಇವೆ |

ಅಪಾರ ದಯಾಳುವೂ ನಿರಂತರ ಕರುಣೆ ತೋರುವವನೂ ಆದ ಅಲ್ಲಾಹನ ನಾಮದೊಂದಿಗೆ (ಆರಂಭಿಸುವೆ)!

ಆಕಾಶವು ಒಡೆದು ಚೂರಾಗುವಾಗ; ನಕ್ಷತ್ರಗಳು ಚದುರಿ ಹೋಗುವಾಗ; ಸಮುದ್ರಗಳು ಸಿಡಿದು ಎಲ್ಲೆ ಮೀರುವಾಗ; ಗೋರಿಗಳು ಬುಡಮೇಲಾಗುವಾಗ - ತಾನು ಏನನ್ನು ಸಂಪಾದಿಸಿ ಮುಂದೆ (ಪರಲೋಕಕ್ಕಾಗಿ) ಕಳಿಸಿರುವೆ ಮತ್ತು ಏನನ್ನು ತನ್ನ ಹಿಂದೆ (ಭೂಲೋಕದಲ್ಲಿ) ಬಿಟ್ಟು ಬಂದಿರುವೆ ಎಂಬುದು ಪ್ರತಿಯೊಬ್ಬ ಮನುಷ್ಯನೂ ತಿಳಿದು ಕೊಳ್ಳುವನು. {1-5}

ಹೇ ಮನುಷ್ಯಾ! ಅತ್ಯಂತ ಉದಾರಿಯಾದ ನಿನ್ನ ಕರ್ತಾರನ ಕುರಿತು ಯಾವ ವಿಷಯವು ನಿನ್ನನ್ನು ವಂಚಿಸಿತು? ನಿನ್ನನ್ನು (ತಾಯಿಯ ಗರ್ಭದಲ್ಲಿ) ಸೃಷ್ಟಿಸಿ, (ಅಲ್ಲೇ ನಿನ್ನ ಅಸ್ತಿತ್ವವನ್ನು) ಸಕಲ ರೀತಿಯಲ್ಲಿ ಸರಿಪಡಿಸಿ, ನಂತರ ನಿನ್ನನ್ನು ಸಂಪೂರ್ಣವಾಗಿ ಸಮನ್ವಯಗೊಳಿಸಿದ ಆ ಕರ್ತೃ ತಾನಿಚ್ಚಿಸಿದ ಆಕೃತಿಯಲ್ಲಿ ನಿನ್ನ (ಶರೀರವನ್ನು) ಜೋಡಿಸಿದನು. {6-8}

ಸರ್ವತಾ ಸಲ್ಲದು! ನೀವಾದರೋ ಕರ್ಮಗಳ ಫಲಿತಾಂಶದ ದಿನವನ್ನು ಸುಳ್ಳೆಂದು ನಿರಾಕರಿಸುತ್ತಿದ್ದೀರಿ. ನಿಮ್ಮ ಮೇಲೆ ಖಂಡಿತ (ಕರ್ಮಗಳನ್ನು ದಾಖಲಿಸುವ ಮಲಕ್ ಗಳನ್ನು) ಕಾವಲುಗಾರರಾಗಿ ನೇಮಿಸಲಾಗಿದೆ. ಅವರು ಆದರಣೀಯರೂ (ನಿಮ್ಮ ಕರ್ಮಗಳನ್ನು) ಬರೆದಿಡುವವರೂ ಆಗಿದ್ದಾರೆ. ನೀವು ಏನೆಲ್ಲಾ ಮಾಡುತ್ತಿರುವಿರೋ ಆ ಕುರಿತು ಅವರು (ಚೆನ್ನಾಗಿ) ಬಲ್ಲವರಾಗಿದ್ದಾರೆ. {9-12}

ಖಂಡಿತವಾಗಿ ಸದಾಚಾರಿ ಸಜ್ಜನರು 'ನಈಮ್' (ಎಂಬ ಐಶಾರಾಮ ತುಂಬಿದ ಸ್ವರ್ಗೋದ್ಯಾನಗಳಲ್ಲಿ) ಇರುವರು. ಮತ್ತು ದುಷ್ಕರ್ಮಿ ಪಾಪಿಗಳು 'ಜಹೀಮ್' (ಎಂಬ ಭುಗಿಲೆದ್ದುರಿಯುವ ನರಕದಲ್ಲಿ) ಬಿದ್ದಿರುವರು; ತೀರ್ಮಾನವಾಗುವ ಆ ದಿನ ಅವರು ಅದರಲ್ಲಿ ಉರಿಯಲಿರುವರು. ಅದರಿಂದ ಅವಿತುಕೊಳ್ಳಲು ಅವರಿಗೆ ಸಾಧ್ಯವಾಗದು. ಕರ್ಮಗಳಿಗೆ ಪ್ರತಿಫಲ ನೀಡಲಾಗುವ ಆ ದಿನದ ಬಗ್ಗೆ ಏನಾದರೂ ನಿಮಗೆ ಗೊತ್ತಿದೆಯೇ? ಇನ್ನೊಮ್ಮೆ (ಯೋಚಿಸಿ)! ಕರ್ಮಗಳಿಗೆ ಪ್ರತಿಫಲ ನೀಡಲಾಗುವ ಆ ದಿನದ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೇ? ಆ ದಿನ ಯಾವ ವ್ಯಕ್ತಿಗೂ ಮತ್ತೊಬ್ಬನಿಗಾಗಿ ಏನೂ ಮಾಡಲು ಸಾಧ್ಯವಿಲ್ಲ. ಪರಮಾಧಿಕಾರವು ಅಂದು ಸಂಪೂರ್ಣವಾಗಿ ಅಲ್ಲಾಹ್ ನಿಗೆ ಮಾತ್ರವಾಗಿರುವುದು! {13-19} ☑

----------

ಅಲ್-ಮುತಫ್ಫಿಫೀನ್ | سورة المطـفـفين

| ಸೂರಃ ಅಲ್-ಮುತಫ್ಫಿಫೀನ್ | ಪವಿತ್ರ್ ಕುರ್‌ಆನ್ ನ 83 ನೆಯ ಸೂರಃ | ಇದರಲ್ಲಿ ಒಟ್ಟು 36 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ !

ಅಳತೆ ಮತ್ತು ತೂಕದಲ್ಲಿ ಕಡಿತಗೊಳಿಸುವ [ಮೋಸಗಾರ ವರ್ತಕರಿಗೆ] ಭಾರೀ ವಿನಾಶ ಕಾದಿದೆ! ಜನರಿಂದ ಕೊಳ್ಳಲು ಅಳೆಯುವಾಗ ಅಂತಹವರು (ಸರಿಯಾಗಿ ಅಳೆದು, ಸಾಮಗ್ರಿಗಳನ್ನು) ಪೂರ್ತಿಯಾಗಿ ಪಡೆಯುತ್ತಾರೆ. ಆದರೆ ಅಳೆದು ಅಥವಾ ತೂಕ ಮಾಡಿ ಮಾರುವಾಗ ಅವರು ಜನರಿಗೆ ನಷ್ಟವುಂಟುಮಾಡುತ್ತಾರೆ! (ಮರಣಾನಂತರ) ಅವರನ್ನು ಪುನಃ ಎಬ್ಬಿಸಲಾಗುವ ವಿಚಾರ ಅವರಿಗೆ ತಿಳಿದಿಲ್ಲವೇನು?! ಒಂದು ಭಯಂಕರ ದಿನ (ವಿಚಾರಣೆಯ) ಸಲುವಾಗಿ! ಸಕಲ ವಿಶ್ವದ ಒಡೆಯನಾದ (ಅಲ್ಲಾಹ್ ನ) ಮುಂದೆ ಮುನುಷ್ಯಜಾತಿ ನಿಲ್ಲಬೇಕಾದಂತಹ (ಕಠಿಣ) ದಿನವದು! {1-6}

[ದುರ್ಜನರು ತಮ್ಮ ಪ್ರಭುವಿನಿಂದ ಅಂದು ತಪ್ಪಿಸಿಕೊಳ್ಳುವುದೇ?!] ಎಂದಿಗೂ ಇಲ್ಲ! ದುರ್ಜನರ ಕೃತ್ಯಗಳ ದಾಖಲೆಯನ್ನು 'ಸಿಜ್ಜೀನ್' ನಲ್ಲಿ ಇರಿಸಲಾಗುತ್ತದೆ. ಇನ್ನು ಆ 'ಸಿಜ್ಜೀನ್' ಏನೆಂದು ಯಾವ ವಿವರಣೆ ತಾನೆ ನಿಮಗೆ ಅರ್ಥೈಸಿ ಕೊಟ್ಟೀತು?! ಅದು ಲಿಖಿತಗೊಳಿಸಲಾದ ಒಂದು ದಾಖಲೆಯಾಗಿದೆ! ಸತ್ಯವನ್ನು ಅಲ್ಲಗಳೆದವರಿಗೆ ಅಂದು ಭಾರೀ ವಿನಾಶ ಕಾದಿದೆ! ಅವರು ನಿರಾಕರಿಸುತ್ತಿರುವುದು ಪ್ರತಿಫಲದ ಆ ದಿನವನ್ನು! ದುಷ್ಕೃತ್ಯದ ಎಲ್ಲ ಮೇರೆಗಳನ್ನು ಮೀರಿದ ಪಾಪಿಗಳಲ್ಲದೆ ಬೇರಾರೂ ಅದನ್ನು ನಿರಾಕರಿಸಲಾರರು. ನಮ್ಮ (ಕುರ್‌ಆನ್ ನ) ವಚನಗಳನ್ನು ಅಂತಹವರಿಗೆ ಓದಿ ಕೇಳಿಸಿದಾಗ ಇವೆಲ್ಲ ಪೂರ್ವಜರ ಪುರಾಣ ಕಥೆಗಳು ಎಂದು ಹೇಳಿ ಬಿಡುವರು! ಅಲ್ಲ, ವಾಸ್ತವದಲ್ಲಿ ಅವರ (ನಿರಂತರ) ದುಷ್ಕೃತ್ಯಗಳ ಕಾರಣ ಅವರ ಹೃದಯಗಳಿಗೆ ತುಕ್ಕು ಹಿಡಿದು ಹೋಗಿದೆಯಷ್ಟೆ. [ಅಂತಹ ದುರ್ಜನರು ತಮ್ಮ ಪ್ರಭುವನ್ನು ಭೇಟಿಯಾಗುವುದೇ?] ಎಂದಿಗೂ ಇಲ್ಲ! ಆ ದಿನ ಅವರನ್ನು ಅವರ ಪ್ರಭುವಿನಿಂದ ತಡೆದು ಮರೆಯಲ್ಲಿಡಲಾಗುವುದು. ತರುವಾಯ ಅವರು ಹೊತ್ತಿ ಉರಿಯುವ ನರಕಾಗ್ನಿಯನ್ನು ಸೇರುವರು. ನಂತರ, ನೀವು ಅಲ್ಲಗಳೆಯುತ್ತಿದ್ದುದು ಇದನ್ನೇ (ಅರ್ಥಾತ್ ಈ ನರಕವನ್ನೇ) ಎಂದು ಅವರಿಗೆ ನೆನಪಿಸಿ ಕೊಡಲಾಗಿವುದು. {7-17}

[ಸಜ್ಜನರು ಮತ್ತು ದುರ್ಜನರು ಸರಿಸಮಾನರೇ!] ಎಂದಿಗೂ ಇಲ್ಲ! ಸಜ್ಜನರ ಸತ್ಕರ್ಮಗಳ ದಾಖಲೆಯನ್ನು 'ಇಲ್ಲಿಯ್ಯೀನ್' ನಲ್ಲಿ ಇರಿಸಲಾಗುತ್ತದೆ. ಇನ್ನು ಆ 'ಇಲ್ಲಿಯ್ಯೀನ್' ಏನೆಂದು ಯಾವ ವಿವರಣೆ ತಾನೆ ನಿಮಗೆ ಅರ್ಥೈಸಿ ಕೊಟ್ಟೀತು?! ಅದೂ ಸಹ ಲಿಖಿತಗೊಳಿಸಲಾದ ಒಂದು ದಾಖಲೆಯಾಗಿದೆ! (ಅಲ್ಲಾಹ್ ನ) ಸಾಮೀಪ್ಯ ಪಡೆದ (ಮಲಕ್ ಗಳು) ಅದನ್ನು ನೋಡಿಕೊಳ್ಳುತ್ತಾರೆ. ಹೌದು, ಸಜ್ಜನರು 'ನಈಮ್' [ಅರ್ಥಾತ್ ಸುಖಸೌಭಾಗ್ಯಗಳು ತುಂಬಿರುವ ಸ್ವರ್ಗೋದ್ಯಾನದಲ್ಲಿ] ಇರುವರು. ಉನ್ನತ ಆಸನಗಳಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿರುವರು. ಆ ಸುಖಸೌಭಾಗ್ಯಗಳ ಕಾಂತಿಯನ್ನು ನೀವು ಅವರ ಮುಖ ಚಹರೆಯಲ್ಲಿ ಕಾಣುವಿರಿ. ಮುಚ್ಚಿ ಮುದ್ರೆ ಹಾಕಿ ಇರಿಸಿದ ಶುದ್ಧ ಮದಿರೆಯನ್ನು ಅವರಿಗೆ ಕುಡಿಸಲಾಗುವುದು. ಅದರ ಮುಚ್ಚಳವೋ ಕಸ್ತೂರಿಯ ಸುಗಂಧ! ಹೌದು, ಸ್ಪರ್ಧಿಸಲು ಬಯಸುವವರು (ಅದನ್ನು ತನ್ನದಾಗಿಸಿಕೊಳ್ಳಲು) ಸ್ಪರ್ಧಿಸಲಿ! ಅದರಲ್ಲಿ [ಸ್ವರ್ಗೋದ್ಯಾನದ ಒಂದು ಚಿಲುಮೆಯಾದ] 'ತಸ್ನೀಮ್' ನ ಮಿಶ್ರಣವಿರುವುದು. ಅಂತಹ ಚಿಲುಮೆಯ ಬಳಿ (ಅಲ್ಲಾಹ್ ನ) ಸಾಮೀಪ್ಯ ಪಡೆದ (ಸ್ವರ್ಗದ ನಿವಾಸಿಗಳು) ಅದನ್ನು ಸೇವಿಸುವರು! {18-28}

ಅಪರಾಧಗಳನ್ನೆಸಗಿದ್ದ ಪಾಪಿಗಳು [ಅಲ್ಲಾಹ್ ಮತ್ತು ಪುನರುತ್ಥಾನ ದಿನದಲ್ಲಿ ವಿಶ್ವಾಸವಿರಿಸಿದ್ದ] 'ಮೂಮಿನ್' ಗಳನ್ನು (ಇಹಜೀವನದಲ್ಲಿ) ಗೇಲಿ ಮಾಡಿ ನಗುತ್ತಿದ್ದರು. ಅವರು 'ಮೂಮಿನ್' ಗಳ ಬಳಿಯಿಂದ ಅವರು ಹಾದು ಹೋಗುವಾಗ (ಲೇವಡಿ ಮಾಡುವ ಸಲುವಾಗಿ) ಪರಸ್ಪರ ಕಣ್ಣು ಮಿಟುಕಿಸುತ್ತಿದ್ದರು; ಮತ್ತು ತಮ್ಮವರೆಡೆಗೆ ಮರಳುವಾಗ ಸಂಭ್ರಮಿಸುತ್ತಾ ಅವರು ಮರಳುತ್ತಿದ್ದರು. 'ಮೂಮಿನ್' ಗಳನ್ನು ಅವರು ನೋಡಿದಾಗಲೆಲ್ಲ ನಿಜವಾಗಿಯೂ ಇವರು ದಾರಿ ತಪ್ಪಿರುವರು ಎನ್ನುತ್ತಿದ್ದರು. [ಮೂಮಿನ್ ಗಳ ಅರ್ಥಾತ್ ವಿಶ್ವಾಸಿಗಳ ಮೇಲ್ವಿಚಾರಕರಂತೆ ವರ್ತಿಸುತ್ತಿದ್ದ] ಅವರನ್ನು 'ಮೂಮಿನ್' ಗಳ ಉಸ್ತುವಾರಿ ಕಾರ್ಯಕ್ಕಾಗಿ ಕಳುಹಿಸಲಾಗಿರಲಿಲ್ಲ! {29-33}

ಆದರೆ [ಅಲ್ಲಾಹ್ ನ ಆಜ್ಞಾನುವರ್ತಿಗಳಾಗಿ ಭೂಲೋಕದಲ್ಲಿ ಬದುಕಿದ್ದ] 'ಮೂಮಿನ್' ಗಳು ಇಂದು (ಅಲ್ಲಾಹ್ ನ ಆಜ್ಞೆಗಳನ್ನು) ಧಿಕ್ಕರಿಸಿದವರನ್ನು ನೋಡಿ ನಗುವರು. ಅವರು ಉನ್ನತ ಪೀಠಗಳಲ್ಲಿ ಆಸೀನರಾಗಿ (ಆ ಪಾಪಿಗಳ ದುರವಸ್ಥೆಯನ್ನು) ನೋಡುತ್ತಿರುವರು. [ಅಲ್ಲಾಹ್ ನ ಆದೇಶಗಳನ್ನು] ಧಿಕ್ಕರಿಸಿದವರು ಎಸಗುತ್ತಿದ್ದ ಕರ್ಮಕ್ಕೆ ಅತ್ಯಂತ ಯೋಗ್ಯ ಪ್ರತಿಫಲವು ಸಿಕ್ಕಿದೆಯಲ್ಲವೇ! {34-36} ☑

----------

ಅಲ್-ಇನ್ಶಿಕಾಕ್ | سورة الانشقاق

| ಸೂರಃ ಅಲ್-ಇನ್ಶಿಕಾಕ್ | ಪವಿತ್ರ್ ಕುರ್‌ಆನ್ ನ 84 ನೆಯ ಸೂರಃ | ಇದರಲ್ಲಿ ಒಟ್ಟು 25 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ಆರಂಭಿಸುವೆ)!

ಆಕಾಶವು ಸೀಳಲ್ಪಟ್ಟಾಗ - ಹೌದು, ಅದು ಅದರ ಯಜಮಾನ (ಅಲ್ಲಾಹ್) ನ ಆಜ್ಞೆಯನ್ನು ಪಾಲಿಸುವುದು. (ಆಜ್ಞೆ ಪಾಲನೆಯೇ) ಅದರ ಕರ್ತವ್ಯವಾಗಿದೆ! ಮತ್ತು ಭೂಮಿಯು (ಸಮತಟ್ಟಾಗಿ) ವಿಸ್ತರಿಸಲ್ಪಟ್ಟಾಗ - ಹೌದು, ಅದು ತನ್ನೊಳಗೆ ಇರುವುದೆಲ್ಲವನ್ನೂ ಹೊರಚೆಲ್ಲಿ ಬರಿದಾಗಿ ಬಿಡುವುದು. ಅದು ಅದರ ಯಜಮಾನನ ಆಜ್ಞೆಯನ್ನು ಪಾಲಿಸುವುದು. (ಆಜ್ಞೆ ಪಾಲನೆಯೇ) ಅದರ ಕರ್ತವ್ಯವಾಗಿದೆ! [ಅದುವೇ ಮಾನವಜಾತಿಯು ತನ್ನ ಯಜಮಾನನ ಮುಂದೆ ನಿಲ್ಲಬೇಕಾದ ಕಿಯಾಮತ್ ದಿನ!] {1-5}

ಓ ಮನುಷ್ಯ! ಹೌದು, ನೀನು ಅತಿ ಹೆಚ್ಚಿನ ಪ್ರಯಾಸದೊಂದಿಗೆ ನಿನ್ನ ಪ್ರಭುವಿನೆಡೆಗೆ ಸಾಗುತ್ತಿದ್ದು, ಕೊನೆಗೆ (ಆ ದಿನ ಬಂದಾಗ) ಅವನನ್ನು ನೀನು ಖಂಡಿತ ಭೇಟಿಯಾಗಲಿರುವೆ! ಆಮೇಲೆ, (ತಾವೆಸಗಿದ ಕರ್ಮಗಳ) ದಾಖಲೆ ಪುಸ್ತಕವನ್ನು ಯಾರ ಬಲಗೈಗೆ ನೀಡಲಾಗುವುದೋ ಅವನ ವಿಚಾರಣೆಯು ಬಲು ಸುಲಭವಾಗಿ ನಡೆಯುವುದು; ಮತ್ತು ಅವನು ತನ್ನವರೆಡೆಗೆ ಮರಳುವಾಗ ಹರ್ಷಚಿತ್ತನಾಗಿ ಮರಳುವನು. ಇನ್ನು ಕರ್ಮಗಳ ದಾಖಲೆ ಪುಸ್ತಕವನ್ನು ಯಾರಿಗೆ ಆತನ ಬೆನ್ನ ಹಿಂದಿನಿಂದ ನೀಡಲಾಗುವುದೋ ಆತನು ತನಗೆ ಸಾವು ಬರಲೆಂದು ಬೇಡುವನು; ಮತ್ತು ಅವನು ಧಗಧಗಿಸುವ ನರಕದಲ್ಲಿ ಬಿದ್ದುರುವನು. ತನ್ನ ಪರಿವಾರದೊಂದಿಗೆ [ಮೈಕರೆತು ಆತ ಭೂಲೋಕದಲ್ಲಿ] ತುಂಬಾ ಹರ್ಷಿತನಾಗಿ ಜೀವಿಸಿದ್ದನು. ತನಗೆಂದೂ (ತನ್ನ ಸೃಷ್ಟಿಕರ್ತನೆಡೆಗೆ) ಮರಳಲಿಕ್ಕಿಲ್ಲವೆಂದೇ ಆತನು ಭಾವಿಸಿದ್ದನು. ಏಕಿಲ್ಲ? ಆತನ ಕರ್ತಾರನು ಆತನ ಸಕಲ ಕೃತ್ಯಗಳನ್ನು ನೋಡುತ್ತಿದ್ದನು! {6-15}

ಇಲ್ಲ! ಮುಸ್ಸಂಜೆಯ ನಸುಬೆಳಕನ್ನು ನಾನು ಸಾಕ್ಷಿಯಾಗಿಸುತ್ತೇನೆ. ಹಾಗೆಯೇ ಕತ್ತಲನ್ನೂ, ಅದು ಆವರಿಸಿಕೊಳ್ಳುವುದನ್ನೂ! ಮತ್ತು ಪೂರ್ಣ ಸ್ಥಿತಿಗೆ ತಲುಪಿದ ಚಂದ್ರನನ್ನೂ (ಸಾಕ್ಷಿಯಾಗಿಸುತ್ತೇನೆ). ಏನೆಂದರೆ, (ಅವನೆಡೆಗೆ ತಲುಪಲು) ನೀವೊ ಸಹ ಒಂದೊಂದೇ ಹಂತ ಕ್ರಮಿಸುತ್ತೀರಿ. {16-19}

ಅವರಿಗೆ ಅದೇನಾಗಿದೆಯೋ! (ಸತ್ಯವನ್ನು) ಅವರು ಒಪ್ಪುತ್ತಿಲ್ಲವೇಕೆ? ಅವರ ಮುಂದೆ 'ಕುರ್‌ಆನ್' ಓದಿ ಕೇಳಿಸಿದಾಗ [ಅದರ ಘನತೆಯನ್ನು ಒಪ್ಪಿ ನಮಗೆ] ಅವರು ನಮಿಸುವುದೂ ಇಲ್ಲ!۩ ನಮಿಸುವುದಿರಲಿ, ಆ ಅಧರ್ಮಿಗಳು ಅದನ್ನು ಅಲ್ಲಗಳೆಯುತ್ತಿದ್ದಾರೆ! ಹೌದು, ಅವರು ತಮ್ಮೊಳಗೆ ಕೂಡಿಟ್ಟಿರುವ (ಪಾಪಗಳು) ಎಂತಹದ್ದೆಂದು ಅಲ್ಲಾಹನು ಚೆನ್ನಾಗಿಯೇ ಬಲ್ಲನು. ಆದ್ದರಿಂದ (ಓ ಪೈಗಂಬರರೇ), ಬಹಳವಾಗಿ ನೋಯಿಸುವ ಶಿಕ್ಷೆಯ 'ಸುವಾರ್ತೆ' ಅವರಿಗೆ ನೀವು ತಿಳಿಸಿರಿ. ಆದರೆ (ಸತ್ಯವನ್ನು ಒಪ್ಪಿಕೊಂಡು) ವಿಶ್ವಾಸಿಗಳಾಗಿ ಸತ್ಕಾರ್ಯಗಳಲ್ಲಿ ಮಗ್ನರಾದವರ ವಿಷಯ ಬೇರೆ! ಅಂತಹವರಿಗೆ ಅಲ್ಲಿ ಶಾಶ್ವತವಾದ ಪ್ರತಿಪಲಗಳಿವೆ. {20-25} ☑

-----------

ಅಲ್-ಬುರೂಜ್ | سورة البروج

| ಸೂರಃ ಅಲ್-ಬುರೂಜ್ | ಪವಿತ್ರ್ ಕುರ್‌ಆನ್ ನ 85 ನೆಯ ಸೂರಃ | ಇದರಲ್ಲಿ ಒಟ್ಟು 22 ಆಯತ್ ಗಳು ಇವೆ |

ಅಪಾರ ದಯಾಳುವೂ ದಯಾಸಂಪನ್ನನೂ ಆದ ಅಲ್ಲಾಹನ ನಾಮದೊಂದಿಗೆ (ಆರಂಭಿಸುವೆ)!

ನಕ್ಷತ್ರಪುಂಜಗಳಿಂದ ತುಂಬಿದ ಆಕಾಶದ ಸಾಕ್ಷ್ಯ! ವಾಗ್ದಾನಿತ (ಕಿಯಾಮತ್) ದಿನದ ಸಾಕ್ಷ್ಯ! ವೀಕ್ಷಕನಾದ (ಮನುಷ್ಯನ) ಸಾಕ್ಷ್ಯ ಹಾಗೂ ವೀಕ್ಷಿಸಲ್ಪಡುವ (ಕಿಯಾಮತ್ ನ ವಿದ್ಯಮಾನಗಳ) ಸಾಕ್ಷ್ಯ! [ವಿಶ್ವಾಸಿಗಳನ್ನು ಶಿಕ್ಷಿಸಿ ಕೊಲ್ಲಲು] ಕಂದಕ ತೋಡಿದ ಜನರು ನಾಶವಾದರು! ಬೆಂಕಿ ತುಂಬಿದ ಕಂದಕ; ಇಂಧನ (ಹೊತ್ತಿ ಉರಿಯುವ) ಬೆಂಕಿ! (ಉರಿಯುವ) ಕಂದಕದ ಬಳಿಯೇ ಆ ದುಷ್ಟರು ಕುಳಿತಿದ್ದರು. ತಾವು ವಿಶ್ವಾಸಿಗಳೊಂದಿಗೆ ಯಾವ ರೀತಿಯ (ಕ್ರೌರ್ಯ) ತೋರಿದ್ದರು ಎಂಬುದಕ್ಕೆ ಅವರು ಸ್ವತಃ ಸಾಕ್ಷಿಯಾಗಿದ್ದರು. ಅತ್ಯಂತ ಪ್ರಬಲನೂ ಸಾಕ್ಷಾತ್ ಸ್ತುತ್ಯರ್ಹನೂ ಆದ ಅಲ್ಲಾಹ್ ನನ್ನು ನಂಬಿದ್ದರು ಎಂಬುದಲ್ಲದೆ, ಆ ವಿಶ್ವಾಸಿಗಳ ಮೇಲೆ [ಅಷ್ಟು ಕಠೋರವಾದ] ಸೇಡು ತೀರಿಸಲು ಬೇರೆ ಯಾವ ಕಾರಣವೂ (ಕಂದಕದಲ್ಲಿ ಬೆಂಕಿ ಉರಿಸಿದ ದುಷ್ಟರ) ಬಳಿ ಇರಲಿಲ್ಲ.{1-7}

ಭೂಮಿ ಮತ್ತು ಆಕಾಶಗಳ ಒಡೆತನ ಆ ಅಲ್ಲಾಹ್ ನಿಗೆ ಮಾತ್ರ ಸೇರಿದೆ; ಮತ್ತು ಅವನು ಸಕಲ ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದಾನೆ. {8-9}

ವಿಶ್ವಾಸಿಗಳಾದ ಪುರುಷರನ್ನು ಮತ್ತು ಸ್ತ್ರೀಯರನ್ನು (ಅವರು ವಿಶ್ವಾಸಿಗಳಾದ ಕಾರಣಕ್ಕಾಗಿ) ಪೀಡಿಸಿದವರು, ನಂತರ ಅದಕ್ಕಾಗಿ ಪಶ್ಚಾತ್ತಾಪ ಪಡದಿದ್ದರೆ ಅಂತಹವರಿಗೆ ನರಕದ ಶಿಕ್ಷೆ ಕಾದಿದೆ; ಮಾತ್ರವಲ್ಲ ಸುಡುವ ಶಿಕ್ಷೆ ಕೂಡ ಇರುವುದು. ಇನ್ನು, ವಿಶ್ವಾಸಿಗಳಾಗಿದ್ದುಕೊಂಡು ಸತ್ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ಸ್ವರ್ಗೋದ್ಯಾನಗಳಿವೆ; ಅದರಲ್ಲಿ ಕೆಳಗೆ ಹೊನಲುಗಳು ಹರಿಯುತ್ತಲಿರುತ್ತವೆ. ಹೌದು, ಅದುವೇ ಎಲ್ಲಕ್ಕಿಂತ ದೊಡ್ಡ ವಿಜಯ! {10-11}

(ಹೇ ಮನುಷ್ಯ!) ನಿನ್ನ ಕರ್ತಾರನ ಹಿಡಿತವು ಖಂಡಿತವಾಗಿ ಬಹಳ ಕಠಿಣವಾದ ಹಿಡಿತ! ಅವನೇ ಸೃಷ್ಟಿಕಾರ್ಯ ಪ್ರಾರಂಭಿಸಿದವನು; (ಮರಣಾನಂತರ) ಅದನ್ನು ಪುನರಾವರ್ತಿಸುವವನೂ ಆವನೇ. ಅವನು ಕ್ಷಮಾಶೀಲನೂ ಆಗಿರುವನು; ಬಹಳವಾಗಿ ಪ್ರೀತಿಸುವವನೂ ಹೌದು. ವೈಭವಾನ್ವಿತ 'ಅರ್ಶ್' ಅಧಿಕಾರಪೀಠವು ಆಧಿಪತ್ಯ ಅವನದ್ದಾಗಿದೆ. ತಾನು ಇಚ್ಛಿಸಿದ್ದನ್ನು ಕಾರ್ಯಗತಗೊಳಿಸಲು ಶಕ್ತನಾದವನು! {12-16}

ನಿಮ್ಮ ಬಳಿಗೆ ಆ ಸೇನಾಪಡೆಗಳ ವೃತ್ತಾಂತಗಳು ತಲುಪಿವೆ ತಾನೆ? ಅಂದರೆ ಫಿರ್‌ಔನ್ ಮತ್ತು ತಮೂದ್ ರಿಗೆ ಸೇರಿದ ಸೇನಾಪಡೆಗಳ ವೃತ್ತಾಂತ! ಆದರೆ [ಅಲ್ಲಾಹ್ ನ ದೂತರುಗಳು ನೀಡಿದ ಉಪದೇಶಗಳನ್ನು ಸ್ವೀಕರಿಸುವ ಬದಲು] ಅದನ್ನು ತಿರಸ್ಕರಿಸುವುದರಲ್ಲಿ ಅವರು ನಿರತರಾದರು. {17-19}

ಯಥಾರ್ಥದಲ್ಲಿ ಅಲ್ಲಾಹ್ ನು ದುಷ್ಟರನ್ನು ಹಿಂದಿನಿಂದ ಆವೃತನಾಗಿರುತ್ತಾನೆ, [ಆದ್ದರಿಂದ ಜಾಗರೂಕರಾಗಿರಿ]! ಹೌದು, (ನಿಮಗೆ ಕೇಳಿಸಲಾಗುತ್ತಿರುವ) ಇದು ಬಹಳ ಮಹತ್ವಪೂರ್ಣವಾದ ಕುರ್‌ಆನ್ (ನ ವಚನಗಳಾಗಿವೆ). ಅದನ್ನು ಸರಕ್ಷಿತವಾದ ಫಲಕದಲ್ಲಿ ಬರೆದು ಇಡಲಾಗಿದೆ! {20-22} ☑

----------

ಅತ್-ತ್ವಾರಿಕ್ | سورة الـطارق

| ಸೂರಃ ಅತ್-ತ್ವಾರಿಕ್ | ಪವಿತ್ರ್ ಕುರ್‌ಆನ್ ನ 86 ನೆಯ ಸೂರಃ | ಇದರಲ್ಲಿ ಒಟ್ಟು 17 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ಆಕಾಶವು ಸಾಕ್ಷಿ! (ರಾತ್ರಿಯಲ್ಲಿ ಪ್ರತ್ಯಕ್ಷ್ಯಗೊಳ್ಳುವ) ‘ತ್ವಾರಿಕ್’ ಸಹ ಸಾಕ್ಷಿ! ‘ತ್ವಾರಿಕ್’ ಎಂದರೇನು ಎಂದು ನೀವು ಬಲ್ಲಿರಾ? ಅದು (ಕೋರೈಸುವ) ಹೊಳಪುಳ್ಳ ಒಂದು ನಕ್ಷತ್ರ! ತನ್ನ ಮೇಲೆ (ಅಲ್ಲಾಹ್ ನ) ಸಂರಕ್ಷಣೆ ಇಲ್ಲದ ಯಾವೊಂದು ಜೀವಿಯೂ ಇಲ್ಲ. [1-4]

ತನ್ನನ್ನು ಯಾವ ಮೂಲದಿಂದ ಸೃಷ್ಟಿಸಲಾಗಿದೆ ಎಂಬುದನ್ನು ಮನುಷ್ಯನೊಮ್ಮೆ ಅವಲೋಕಿಸಿಕೊಳ್ಳಲಿ. ಬೆನ್ನು ಮತ್ತು ಪಕ್ಕೆಲುಬುಗಳ ಮಧ್ಯೆ ಉತ್ಪತ್ತಿಯಾಗಿ ಹೊರಚಿಮ್ಮುವ ದ್ರವದಿಂದ ಅವನ ಸೃಷ್ಟಿಕಾರ್ಯವು ನಡೆದಿದೆ. (ಹಾಗಿರುವಾಗ, ಮರಣಾನಂತರ) ಅವನನ್ನು ಪುನಃ ಜೀವಂತಗೊಳಿಸುವಲ್ಲಿ ಅಲ್ಲಾಹ್ ನು ಸರ್ವಶಕ್ತನಾಗಿದ್ದಾನೆ ಎಂಬುದರಲ್ಲಿ ಸಂದೇಹ ಬೇಡ. (ಪುನರುತ್ಥಾನದ) ಆ ದಿನ (ಮನುಷ್ಯನು ತನ್ನ ಅಂತರಾಳದಲ್ಲಿ ಅಡಗಿಸಿಟ್ಟ) ರಹಸ್ಯಗಳನ್ನೂ (ಹೊರಗೆಡಹಿ) ವಿಚಾರಣೆ ನಡೆಸಲಾಗುವುದು. ಅಂದು ಅವನು ಬಲಹೀನನೂ ನಿಸ್ಸಹಾಯಕನೂ ಆಗಿರುವನು. [5-10]

ಮಳೆಯನ್ನು ಸುರಿಸುವ, ಅದನ್ನು ಪದೇ ಪದೇ ಮರುಕಳಿಸುವಂತೆ ಮಾಡುವ ಅಕಾಶವು ಸಾಕ್ಷಿ! (ಸಸ್ಯಾದಿಗಳು ಮೊಳಕೆಯೊಡೆದು ಹೊರಬರಲು ಅನುವಾಗುವ ರೀತಿಯಲ್ಲಿ) ಸೀಳಿಕೊಳ್ಳುವ ಭೂಮಿಯು ಸಾಕ್ಷಿ! (ಈ ಕುರ್‌ಆನ್) ಲಘುವಾಗಿ ತೆಗೆದುಕೊಳ್ಳುವಂತಹ ವಿನೋದದ ಮಾತಲ್ಲ; ಬದಲಾಗಿ ಇದೊಂದು ನಿರ್ಣಾಯಕವಾದ ವಚನ ಎಂಬುದರಲ್ಲಿ ಸಂದೇಹವಿಲ್ಲ. [11-14]

(ಸತ್ಯವನ್ನು ಧಿಕ್ಕರಿಸುವ ಮಕ್ಕಃ ಪಟ್ಟಣ ವಾಸಿಗಳಾದ) ಆ ಜನರು ಕುತಂತ್ರಗಳನ್ನು ಹೂಡುತ್ತಲೇ ಇದ್ದಾರೆ; ಮತ್ತು ನಾನೂ (ಅವರ ವಿರುದ್ಧ) ಉಪಾಯದ ಜಾಲವನ್ನು ಹರಡಿದ್ದೇನೆ. ಆದ್ದರಿಂದ (ಓ ಪ್ರವಾದಿ ಮುಹಮ್ಮದ್,) ಸತ್ಯವನ್ನು ಧಿಕ್ಕರಿಸುತ್ತಿರುವ ಆ ‘ಕಾಫಿರ್’ ಗಳಿಗೆ ಸ್ವಲ್ಪ ಕಾಲಾವಕಾಶ ನೀಡಿ; ಅವರನ್ನು ಒಂದಲ್ಪ ಸಮಯ ಅವರ ಪಾಲಿಗೆ ಬಿಟ್ಟು ಬಿಡಿ! [15-17]

----------

ಅಲ್-ಅ’ಲಾ | سورة الأعـلى

| ಸೂರಃ ಅಲ್-ಅ’ಲಾ | ಪವಿತ್ರ್ ಕುರ್‌ಆನ್ ನ 87 ನೆಯ ಸೂರಃ | ಇದರಲ್ಲಿ ಒಟ್ಟು 19 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

(ಓ ಪೈಗಂಬರರೇ), ಮಹೋನ್ನತನಾದ ನಿಮ್ಮ ಸಂರಕ್ಷಕನ/ಪ್ರಭುವಿನ ನಾಮದ ಪಾವಿತ್ರ್ಯವನ್ನು ಜಪಿಸಿರಿ. (ಸಕಲವನ್ನೂ) ಸೃಷ್ಟಿಸಿ ನಂತರ ಸರ್ವತ್ರ ಸಮ/ಸಂತುಲಿತಗೊಳಿಸಿದವನು ಆ ಪ್ರಭುವೇ. (ನಂತರ) ಪ್ರತಿಯೊಂದರ ವಿಧಿವಿಧಾನ ನಿಗದಿ ಪಡಿಸಿ [ಮುಂದೆ ಸಾಗುವ] ದಾರಿಯನ್ನು ತೋರಿಸಿರುವನು. ಅವನೇ ಹುಲ್ಲು-ಸಸ್ಯಾದಿಗಳನ್ನು ಬೆಳೆಸಿ ನಂತರ [ಇನ್ನೊಂದು ಘಟ್ಟದಲ್ಲಿ] ಅವುಗಳನ್ನು ಒಣಗಿ ಕರ್ರಗಾದ ಕಸ-ಕಡ್ಡಿಯಂತಾಗಿಸಿದನು. {1-5}

[ಓ ಪೈಗಂಬರರೇ, ಈ ಕುರ್‌ಆನ್ ನ್ನು ಕಲಿಸುವ ಸಲುವಾಗಿ] ನಾವು ನಿಮಗೆ ಓದಿಸುವೆವು; ನಂತರ ನೀವು ಅದನ್ನು (ಎಂದೂ) ಮರೆಯಲಾರಿರಿ; ಆದರೆ ಅಲ್ಲಾಹ್ ನು ಇಚ್ಛಿಸಿದ್ದರ ಹೊರತು! ಅವನು ಅಂತರಂಗ-ಬಹಿರಂಗಗಳನ್ನು ಅರಿಯುವವನಾಗಿದ್ದಾನೆ. {6-7}

[ಓ ಪೈಗಂಬರರೇ, ದೌತ್ಯ ನಿರ್ವಹಣೆಯ] ಹಾದಿಯನ್ನು ನಿಮಗಾಗಿ ನಾವು ಸರಳವಾಗಿಸಿ ಸುಗಮಗೊಳಿಸಿದ್ದೇವೆ. ಆದ್ದರಿಂದ, ಉಪದೇಶವು ಫಲಕಾರಿಯಾಗುವುದೆಂದಾದರೆ ನೀವಿನ್ನು (ಜನರಿಗೆ) ಉಪದೇಶ ಮಾಡಿರಿ. ಯಾರ [ಮನಸ್ಸಿನಲ್ಲಿ ಅಲ್ಲಾಹ್ ನಿಗಾಗಿ] ಭಯಭಕ್ತಿ ಇದೆಯೋ ಅಂಥವನು ಉಪದೇಶವನ್ನು ಸ್ವೀಕರಿಸುವನು. ಆದರೆ ಅತಿ ನಿಕೃಷ್ಟನಾದವನು ಅದರಿಂದ ತಪ್ಪಿಸಿಕೊಳ್ಳುವನು. ಅವನು ಮಹಾ ಅಗ್ನಿ ಕುಂಡವನ್ನು ಸೇರಲಿರುವನು; ಅನಂತರ ಅದರಲ್ಲಿ ಅವನು ಸಾಯುವುದೂ ಇಲ್ಲ, ಬದುಕಿ ಉಳಿಯುವುದೂ ಸಾಧ್ಯವಲ್ಲ! {8-13}

ಆತ್ಮ ಸಂಸ್ಕರಣೆ ಮಾಡಿಕೊಂಡು, ತನ್ನ ಒಡೆಯನ/ಸೃಷ್ಟಿಕರ್ತನ (ಪವಿತ್ರ) ನಾಮವನ್ನು ಯಥೇಚ್ಛವಾಗಿ ಸ್ಮರಿಸಿತ್ತಾ, ‘ಸಲಾತ್’ [ಅರ್ಥಾತ್: ನಮಾಝ್] ನಿರ್ವಹಿಸಿಕೊಂಡವನು ವಾಸ್ತವದಲ್ಲಿ ವಿಜಯ ಸಾಧಿಸಿದನು. {14-15}

ಆದರೆ [ಓ ಮಕ್ಕಃ ಪಟ್ಟಣದ ಜನರೇ,] ನೀವು ಲೌಕಿಕ/ಭೌತಿಕ ಜೀವನಕ್ಕೇ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದೀರಿ. ನಿಜವಾಗಿ ನಂತರ ಬರಲಿರುವ ಪರಲೋಕ [ಅರ್ಥಾತ್ ಮರಣೋತ್ತರ] ಜೀವನವು ಉತ್ತಮವಾದುದೂ, ಎಂದೂ ಕೊನೆಗೊಳ್ಳದ ಶಾಶ್ವತವಾದ ಜೀವನವೂ ಆಗಿದೆ. ಈ ಎಲ್ಲ ವಿಷಯಗಳು ಮುಂಚಿನ [ಅರ್ಥಾತ್ ಗತ ಪ್ರವಾದಿಗಳ] ಗ್ರಂಥಗಳಲ್ಲೂ ಇತ್ತು; ಇಬ್ರಾಹೀಮ್ ಮತ್ತು ಮೂಸಾ ರವರ ಗ್ರಂಥಗಳಲ್ಲಿಯೂ (ಇದನ್ನೇ ಹೇಳಲಾಗಿತ್ತು). {16-19}

----------

ಅಲ್-ಘಾಶಿಯಃ | سورة الغاشـيـة

| ಸೂರಃ ಅಲ್-ಘಾಶಿಯಃ | ಪವಿತ್ರ್ ಕುರ್‌ಆನ್ ನ 88 ನೆಯ ಸೂರಃ | ಇದರಲ್ಲಿ ಒಟ್ಟು 26 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ಹಠಾತ್ತನೆ ಕವಿದುಕೊಳ್ಳುವ ವಿಪತ್ತಿನ (ಅರ್ಥಾತ್ ಪುನರುತ್ಥಾನದ ದಿನ) ಸುದ್ದಿ ನಿಮಗೆ ತಲುಪಿದೆಯೇ? (ಹಲವರ) ಮುಖಗಳು ಅಂದು ಖಿನ್ನವಾಗಿ ತಗ್ಗಿಕೊಂಡಿರುವುವು. ತ್ರಾಸದಾಯಕ ಪರಿಶ್ರಮದ ಕಾರಣ ಬಳಲಿ ಬೆಂಡಾಗಿರುವುವು. (ಅಂಥವರು) ಭುಗಿಲೆದ್ದುರಿಯುವ ಅಗ್ನಿಯನ್ನು ಸೇರಲಿರುವರು; ಕುದಿಯುವ ನೀರಿನ ಚಿಲುಮೆಯಿಂದ ಅವರಿಗೆ ಕುಡಿಸಲಾಗುವುದು. ಮುಳ್ಳು ತುಂಬಿದ ಕಡುಕಹಿಯಾದ ಗಿಡಗಳಲ್ಲದೆ ಅವರಿಗೆ ಬೇರೇನೂ ತಿನ್ನಲು ಸಿಗದು, ಅದು ಅವರನ್ನು ಪೋಷಿಸುವುದೂ ಇಲ್ಲ; ಹಸಿವು ನಿವಾರಿಸಿಕೊಳ್ಳಲು ಉಪಯುಕ್ತವೂ ಅಲ್ಲ. [1-7]

(ಹಲವರ) ಮುಖಗಳು ಅಂದು ಹರ್ಷದಿಂದ ನಲಿಯುತ್ತಿರುವುವು. ತನ್ನ ಸಾಧನೆಯ ಕಾರಣ ಸಂತುಷ್ಟವಾಗಿರುವುವು. (ಅಂಥವರು) ಅತ್ಯುನ್ನತವಾದ ಸ್ವರ್ಗೋದ್ಯಾನದಲ್ಲಿ ಇರುವರು. ಅಲ್ಲಿ ಅವರು (ಇಹಲೋಕದಲ್ಲಿ ಕೇಳುತ್ತಿದ್ದಂತಹ) ಅಸಂಗತ/ನಿರರ್ಥಕ ಮಾತನ್ನು ಕೇಳಲಾರರು. ಅದರಲ್ಲಿ (ಅವರಿಗೆ) ಹರಿಯುವ ಚಿಲುಮೆಗಳಿವೆ; ಎತ್ತರದ ಸುಖಾಸನಗಳಿವೆ; ಸಿದ್ಧಗೊಳಿಸಿಟ್ಟ ಪಾನಪಾತ್ರೆಗಳಿವೆ; ಸಾಲಾಗಿಡಲಾದ ಒರಗು-ದಿಂಬುಗಳಿವೆ ಮತ್ತು ಹಾಸಲಾದ ಅನರ್ಘ್ಯ ಜಮಖಾನೆಗಳಿವೆ! [8-16]

(ಅಲ್ಲಾಹ್ ನ ಏಕತೆಯನ್ನು ನಿರಾಕರಿಸುವ) ಆ ಜನರು ಒಂಟೆಗಳ ಸೃಷ್ಟಿ ವೈಖರಿಯನ್ನು ನೋಡುವುದಿಲ್ಲವೇ? ಅಕಾಶವನ್ನು ಹೇಗೆ ಎತ್ತರಕ್ಕೇರಿಸಲಾಗಿದೆ, ಪರ್ವತಗಳನ್ನು ಹೇಗೆ ಭದ್ರವಾಗಿ ನೆಡಲಾಗಿದೆ ಮತ್ತು ಭೂಮಿಯನ್ನು ಯಾವ ರೀತಿ ವಿಸ್ತರಿಸಿ ಹಾಸಲಾಗಿದೆ ಎಂಬುದನ್ನು ಗಮನಿಸುವುದಿಲ್ಲವೇ? [17-20]

(ಪ್ರವಾದಿ ಮುಹಮ್ಮದ್ ರೇ,) ನೀವಿನ್ನು ಅವರನ್ನು ಉಪದೇಶಿಸಿರಿ; ನಿಮ್ಮ ದೌತ್ಯವು ಉಪದೇಶಿಸುವುದು ಮಾತ್ರ! ಅವರ ಮೇಲಿನ ಉಸ್ತುವಾರಿ ಕಾರ್ಯವು ನಿಮ್ಮ ಹೊಣೆಯಲ್ಲ. ಉಪದೇಶದಿಂದ ವಿಮುಖನಾದವನು ಮತ್ತು ಅದನ್ನು ಧಿಕ್ಕರಿಸಿದವನನ್ನು (ನಮ್ಮ ಪಾಲಿಗೆ) ಬಿಟ್ಟು ಬಿಡಿ. ಅಂಥವನನ್ನು ಅಲ್ಲಾಹ್ ನು ಅತಿಭಯಂಕರವಾಗಿ ಶಿಕ್ಷಿಸುವನು. [21-24]

(ನಮ್ಮ ಉಪದೇಶಗಳನ್ನು ಧಿಕ್ಕರಿಸಿದ) ಅವರು ಮರಳಿ ಬರಬೇಕಾಗಿರುವುದು ನಮ್ಮ ಬಳಿಗೇ, ಮಾತ್ರವಲ್ಲ ಅವರ ವಿಚಾರಣೆಯ ಹೊಣೆಯೂ ನಮ್ಮ ಮೇಲೆಯೇ ಇರುವುದು! [25-26]

----------

ಅಲ್-ಫಜ್ರ್ | سورة الفجر

| ಸೂರಃ ಅಲ್-ಫಜ್ರ್ | ಪವಿತ್ರ್ ಕುರ್‌ಆನ್ ನ 89 ನೆಯ ಸೂರಃ | ಇದರಲ್ಲಿ ಒಟ್ಟು 30 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಆರಂಭಿಸುವೆ)!

ಪ್ರಾತಃಕಾಲ ಮತ್ತು ದಶರಾತ್ರಿಗಳು ಸಾಕ್ಷಿ! ಸಮ-ಬೆಸಗಳು ಸಾಕ್ಷಿ! ನಿರ್ಗಮಿಸುತ್ತಿರುವ ರಾತ್ರಿಯು ಸಾಕ್ಷಿ! – ಇದರಲ್ಲಿರುವ ಪ್ರಮಾಣಗಳು ವಿವೇಕಮತಿಗಳಿಗೆ ಸಾಲದೇ? {1-5}

ಭವ್ಯ ಸ್ಥಂಬಗಳನ್ನು ನಿರ್ಮಿಸಿದ ‘ಇರಮ್’ ನವರಾದ ‘ಆದ್ ಜನಾಂಗ’ ದವರೊಡನೆ ನಿಮ್ಮ ಒಡೆಯನು ಹೇಗೆ ವ್ಯವಹರಿಸಿದನೆಂದು ನೀವು ನೋಡಲಿಲ್ಲವೇ? ಜನಾಂಗಗಳ ಪೈಕಿ ಅವರಿಗೆ ತುಲ್ಯವಾದ ಇನ್ನೊಂದು ಜನಾಂಗವು ಆ ಪ್ರದೇಶದಲ್ಲಿ ಸೃಷ್ಟಿಸಲ್ಪಟ್ಟಿರಲಿಲ್ಲ. ಕಂದರಗಳಲ್ಲಿ ಹೆಬ್ಬಂಡೆಗಳನ್ನು ಕೊರೆದು (ನಿವೇಶನಗಳನ್ನು ನಿರ್ಮಿಸಿಕೊಂಡಿದ್ದ) ‘ತಮೂದ್ ಜನಾಂಗ’ ದವರೊಂದಿಗೆ ಮತ್ತು ಮೊಳೆಗಳವನಾದ ”ಫಿರ್‍ಔನ್’ ನೊಂದಿಗೆ (ನಿಮ್ಮ ಒಡೆಯನು ಹೇಗೆ ವ್ಯವಹರಿಸಿದನೆಂದು ನೀವು ನೋಡಿಲ್ಲವೇ?) – ಅವರೆಲ್ಲರೂ ತಮ್ಮ ತಮ್ಮ ನಾಡುಗಳಲ್ಲಿ ಮಿತಿಮೀರಿದ ಅಕ್ರಮವೆಸಗಿದ್ದರು, ನಾಡಿನಲ್ಲಿ ಅನ್ಯಾಯ ಭ್ರಷ್ಟಾಚಾರಗಳು ವರ್ಧಿಸುವಂತೆ ಮಾಡಿದ್ದರು. ಹಾಗಿರುವಾಗ ನಿಮ್ಮ ಒಡೆಯನು ಅವರ ಮೇಲೆ ಘೋರ ಶಿಕ್ಷೆಯ ಚಾವಟಿ ಬೀಸಿದನು. ನಿಜವಾಗಿಯೂ ನಿಮ್ಮ ಒಡೆಯನು (ಅಕ್ರಮಿಗಳನ್ನು ಸದೆಬಡಿಯಲು) ಹೊಂಚು ಹಾಕುತ್ತಾನೆ. {6-14}

ಮನುಷ್ಯನನ್ನು ಅವನ ಒಡೆಯನು/ಪರಿಪಾಲಕನು ಗೌರವಾದರ ಮತ್ತು ಅನುಗ್ರಹಗಳನ್ನು ದಯಪಾಲಿಸಿ ಪರೀಕ್ಷೆಗೊಳಪಡಿಸಿದಾಗ, ನನ್ನ ಒಡೆಯನು ನನ್ನನ್ನು ಸನ್ಮಾನಿಸಿರುವನು ಎಂದು ಹೇಳಿಕೊಳ್ಳುವನು. ಇನ್ನು, ಅವನಿಗೊದಗಿಸುವ ಜೀವನಸೌಲಭ್ಯಗಳನ್ನು ತುಸು ಬಿಗಿಗೊಳಿಸಿ ಬಿಟ್ಟರೆ ಅಯ್ಯೋ ನನ್ನ ಒಡೆಯನು ನನ್ನನ್ನು ಅವಮಾನಿಸಿ ಬಿಟ್ಟನು ಎನ್ನುವನು. {15-16}

ಎಂದಿಗೂ ಇಲ್ಲ! ನೀವು ಅನಾಥರನ್ನು ಆದರಿಸುವುದಿಲ್ಲ; ಬಡಬಗ್ಗರಿಗೆ ಉಣಬಡಿಸುವ ಕಾರ್ಯದಲ್ಲಿ ಪರಸ್ಪರರನ್ನು ಪ್ರೋತ್ಸಾಹಿಸುವುದಿಲ್ಲ; ಸೊತ್ತನ್ನು ಅದರ ವಾರೀಸುದಾರರಿಗೆ ಕೊಡದೆ ಕಬಳಿಸಿ ನುಂಗಿ ಬಿಡುತ್ತೀರಿ. ಸಂಪತ್ತಿನ ವ್ಯಾಮೋಹದಲ್ಲಿ ಮಿತಿಮೀರಿ ಹೋಗಿದ್ದೀರಿ. {17-20}

ಖಂಡಿತ ಅಲ್ಲ! (ಲೋಕಾಂತ್ಯದ ದಿನ) ಭೂಮಿಯನ್ನು ಗುದ್ದಿ ಹುಡಿಮಾಡಲಾದಾಗ, ಸಾಲು ಸಾಲಾಗಿ ಬಂದು ನಿಲ್ಲುವ ‘ಮಲಕ್’ ಗಳ ಕೂಟದಲ್ಲಿ ನಿಮ್ಮ ಒಡೆಯನು ಪ್ರತ್ಯಕ್ಷಗೊಳ್ಳುವನು! ಅಂದು ನರಕವನ್ನೂ (ಕಣ್ಮುಂದೆ) ತರಲಾಗುವುದು! ಆ ದಿನ ಮನುಷ್ಯನು (ಎಲ್ಲವನ್ನೂ) ಅರ್ಥೈಸಿಕೊಳ್ಳುವನು, ಆದರೆ ಆಗ ಅರ್ಥೈಸಿಕೊಂಡರೇನು ಫಲ? ಓ ನನ್ನ ದೌರ್ಭಾಗ್ಯವೇ, (ಇಹಲೋಕದಲ್ಲಿರುವಾಗ ಏನಾದರೂ ಸಂಪಾದಿಸಿ) ಈ ಜೀವನಕ್ಕಾಗಿ ಮುಂಗಡವಾಗಿ ಕಳಿಸಿರುತ್ತಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು – ಎಂದು ಅವನು ವ್ಯಥೆ ತೋಡಿಕೊಳ್ಳುವನು. ಅಂದು ಅಲ್ಲಾಹ್ ನು ಕೊಡುವಂತಹ ಶಿಕ್ಷೆಯನ್ನು ಕೊಡಲು ಯಾರಿಂದಲೂ ಆಗದು; ಅವನ ಬಂಧನಕ್ಕಿಂತ ಬಿಗಿಯಾಗಿ ಬಂಧಿಸಲು ಯಾರಿಂದಲೂ ಸಾಧ್ಯವಲ್ಲ {21-26}

[‘ಮಲಕ್’ ಗಳು ಸಜ್ಜನರ ಆತ್ಮವನ್ನು ಹಿಂಪಡೆಯುವಾಗ] ಓ ಪರಮ ಪ್ರಶಾಂತವಾದ ಸಂತೃಪ್ತ ಆತ್ಮವೇ, ನೀನಿನ್ನು ನಿನ್ನ ಒಡೆಯನ ಬಳಿಗೆ ಹಿಂದಿರುಗಿ ಬಾ, ನೀನು ಅವನ (ಸನ್ನಿಧಿಯನ್ನು) ಇಷ್ಟಪಡುತ್ತಿರುವೆ ಮತ್ತು ಅವನೂ ನಿನ್ನಿಂದ ಸಂಪೂರ್ಣ ಸಂತೃಪ್ತನಾಗಿರುವನು (ಎಂದು ಶುಭನುಡಿಯುವರು)! {27-28}

ಆಗ, ಸಜ್ಜನರಾದ ನನ್ನ ಉಪಾಸಕರ ಸಾಲಿಗೆ ಸೇರಿಕೋ; ನನ್ನ ಸ್ವರ್ಗೋದ್ಯಾನದ ಒಳಕ್ಕೆ ಪ್ರವೇಶಿಸು (ಎಂದು ಅಲ್ಲಾಹ್ ನು ಸ್ವಾಗತಿಸುವನು)! {29-30}

----------

ಅಲ್-ಬಲದ್ | سورة الـبلد

| ಸೂರಃ ಅಲ್-ಬಲದ್ | ಪವಿತ್ರ್ ಕುರ್‌ಆನ್ ನ 90 ನೆಯ ಸೂರಃ | ಇದರಲ್ಲಿ ಒಟ್ಟು 20 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಆರಂಭಿಸುವೆನು)!

ಹೌದು! ನಾನು ಈ (ಮಕ್ಕಃ) ಪಟ್ಟಣದ ಪ್ರಮಾಣ ಮಾಡುತ್ತೇನೆ. (ಪೈಗಂಬರರೇ,) ನೀವು ಈ ಪಟ್ಟಣದಲ್ಲಿ (ನ್ಯಾಯೋಚಿತವಾಗಿಯೇ) ವಾಸವಾಗಿದ್ದೀರಿ. ತಂದೆಯಾದ [ಆದಿ ಮಾನವನೂ ನಬಿ/ಪ್ರವಾದಿಯೂ ಆದ ಆದಮ್] ಮತ್ತು ಅವರಿಂದ ಜನಿಸಿದ (ಸಕಲ ಮಾನವ) ಸಂತತಿಯ ಪ್ರಮಾಣ ಮಾಡುತ್ತೇನೆ. ವಾಸ್ತವದಲ್ಲಿ ನಾವೇ ಮನುಷ್ಯನ (ಬದುಕನ್ನು) ಸಂಕಷ್ಟ/ಕಠಿಣ ಪರಿಶ್ರಮಗಳಿಂದ ಕೂಡಿರುವಂತೆ ರೂಪಿಸಿದ್ದೇವೆ.

(ಹಾಗಿರುವಾಗ) ತನ್ನ ಮೇಲೆ ಯಾರ ಹಿಡಿತವೂ/ನಿಯಂತ್ರಣವೂ ಇರುವುದಿಲ್ಲವೆಂದು ಮನುಷ್ಯನು ಭ್ರಮಿಸಿದ್ದಾನೆಯೇ? ರಾಶಿಗಟ್ಟಲೆ ಸಂಪತ್ತನ್ನು ನಾನು [ಮುಹಮ್ಮದ್ ರ ಸಂದೇಶವನ್ನು ತಡೆಯಲು] ಖರ್ಚು ಮಾಡಿ ಬಿಟ್ಟಿದ್ದೇನೆ ಎಂದು ಆತನು (ಅಹಂಭಾವ ಕೊಚ್ಚಿಕೊಳ್ಳುತ್ತಾ) ಹೇಳುತ್ತಿದ್ದಾನೆ. (ಅವನ ಆ ಕೃತ್ಯವನ್ನು) ಯಾರೂ ನೋಡಿಯೇ ಇಲ್ಲವೆಂದು ಅವನು ಭಾವಿಸಿರುವನೇನು? {1-7}

ಮನುಷ್ಯನಿಗೆ (ನೋಡಲು ಶಕ್ತವಾದ) ಕಣ್ಣುಗಳನ್ನು ಕೊಟ್ಟವರು ನಾವಲ್ಲವೇ? (ಮಾತನಾಡಲು) ನಾಲಿಗೆಯನ್ನೂ ತುಟಿಗಳನ್ನೂ ಕೊಟ್ಟಿಲ್ಲವೇ? (ಒಳಿತು ಮತ್ತು ಕೆಡುಕು / ಭೌತಿಕ ಮತ್ತು ಆಧ್ಯಾತ್ಮಿಕ ಎಂಬ) ಎರಡು ಸುವ್ಯಕ್ತ ದಾರಿಗಳನ್ನು ತೋರಿಸಿ ಬಿಟ್ಟಿದ್ದೇವೆ. {8-10}

ಆದರೆ ಮನುಷ್ಯನು ‘ದುಸ್ತರ ಹಾದಿ’ (ಎಂದು ತಿಳಿದುಕೊಂಡ ದಾರಿಯಲ್ಲಿ) ಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಧೈರ್ಯ ತೋರಲಿಲ್ಲ. ಆ ‘ದುಸ್ತರ ಹಾದಿ’ ಯು ಯಾವುದೆಂದು ನೀವು ತಿಳಿದಿದ್ದೀರೇನು? [ನಿಮ್ಮ ದಾಸ್ಯದಲ್ಲಿರುವ] ದಾಸ/ಗುಲಾಮರನ್ನು ಗುಲಾಮಗಿರಿಯಿಂದ ವಿಮೋಚಿಸುವುದು; ಸಂಕಷ್ಟದ ದಿನಗಳಲ್ಲಿ ಅನಾಥ ಸಂಬಂಧಿಕರಿಗೂ ನಿಕೃಷ್ಟ ಸ್ಥಿತಿಯಲ್ಲಿರುವ ಬಡವರಿಗೂ ಉಣಬಡಿಸುವುದು; ಜೊತೆಗೆ [ಅಲ್ಲಾಹ್ ನ ಏಕತೆ, ಪುನರುತ್ಥಾನ ದಿನ, ಪ್ರವಾದಿತ್ವವೇ ಮುಂತಾದ ‘ಈಮಾನ್’ ಗೆ ಸಂಬಂಧಿಸಿದ ವಿಷಯಗಳಲ್ಲಿ] ಧೃಡ ವಿಶ್ವಾಸವಿಟ್ಟು ಪರಸ್ಪರರಿಗೆ ಸಹನೆ ಸಹಿಷ್ಣುತೆ ಮತ್ತು ಕರುಣೆಯನ್ನು ಬೋಧಿಸುತ್ತಿರುವ ಜನರ ಸಾಲಿಗೆ ಸೇರಿಕೊಳ್ಳುವುದು [ಇದುವೇ ಮನುಷ್ಯನು ಇಷ್ಟಪಡದ ಆ ‘ದುಸ್ತರ ಹಾದಿ’ ಯಾಗಿದೆ]. {11-17}

ಇವರೇ (ಸೌಭಾಗ್ಯವಂತರು, ಪ್ರತಿಫಲದ ದಿನ) ಬಲಬದಿಯಲ್ಲಿ ಇರುವವರು! ಇನ್ನು ಯಾರು ನಮ್ಮ ‘ಆಯತ್’ [ಅರ್ಥಾತ್: ಅಲ್ಲಾಹ್ ನ ಏಕತೆ ಮತ್ತು ಪ್ರಭುತ್ವವನ್ನು ಸ್ಥಿರೀಕರಿಸುವ ಪುರಾವೆ] ಗಳನ್ನು ತಿರಸ್ಕರಿಸಿದರೋ ಅವರೇ (ಭಾಗ್ಯಹೀನರು, ಮತ್ತು ಪ್ರತಿಫಲದ ದಿನ) ಎಡಬದಿಯಲ್ಲಿ ಇರುವವರು. ಅಂಥವರನ್ನು ನರಕಾಗ್ನಿಯು (ಎಲ್ಲಾ ಕಡೆಗಳಿಂದಲೂ) ಸುತ್ತುವರಿದಿರುವುದು! {18-20}

----------

ಅಶ್-ಶಮ್ಸ್ | سورة الـشـمـس

| ಸೂರಃ ಅಶ್-ಶಮ್ಸ್ | ಪವಿತ್ರ್ ಕುರ್‌ಆನ್ ನ 91 ನೆಯ ಸೂರಃ | ಇದರಲ್ಲಿ ಒಟ್ಟು 15 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ಸೂರ್ಯ ಮತ್ತು ಸೂರ್ಯನ ತೇಜಸ್ಸು ಸಾಕ್ಷಿ; ಚಂದಿರನು ಸಾಕ್ಷಿ – ಅದು ಸೂರ್ಯನನ್ನು ಹಿಂಬಾಲಿಸಿ ಬಂದಾಗ; ಹಗಲು ಸಾಕ್ಷಿ – ಅದು ಸೂರ್ಯನನ್ನು ಪ್ರತ್ಯಕ್ಷಗೊಳಿಸಿದಾಗ; ರಾತ್ರಿಯು ಸಾಕ್ಷಿ – ಅದು ಸೂರ್ಯನನ್ನು ಕವಿದುಕೊಂಡಾಗ! ಆಕಾಶ ಮತ್ತು ಅದರ ನಿರ್ಮಾಣ ವೈಖರಿಯು ಸಾಕ್ಷಿ; ಭೂಮಿ ಮತ್ತು ಅದು ಹಾಸಲ್ಪಟ್ಟ ರೀತಿಯು ಸಾಕ್ಷಿ! [1-6]

ಮತ್ತು ಮನುಷ್ಯನ ಆತ್ಮವನ್ನು ಹೇಗೆ (ಅದ್ಭುತ ರೀತಿಯಲ್ಲಿ) ಪರಿಪೂರ್ಣತೆಯೊಂದಿಗೆ ರೂಪಿಸಲಾಗಿದೆ (ಎಂಬುದು ನೀವು ನೋಡುವುದಿಲ್ಲವೇ?) ಅಲ್ಲಾಹ್ ನು ಮನುಷ್ಯನ ಆತ್ಮಕ್ಕೆ ಅಧರ್ಮ ಮತ್ತು ಧರ್ಮ (ಅರ್ಥಾತ್: ಕೆಡುಕು ಮತ್ತು ಒಳಿತುಗಳ ಬಗ್ಗೆ) ಸ್ವಯಂ ತಿಳಿದುಕೊಳ್ಳುವಂತಹ ಅರಿವು ಮೂಡಿಸಿದನು. ಯಾರು ತನ್ನ ಆತ್ಮವನ್ನು ಸಂಸ್ಕರಿಸಿಕೊಂಡು ಪರಿಶುದ್ಧಗೊಳಿಸಿದನೋ ಅವನು ವಿಜಯ ಸಾಧಿಸಿದನು. ಇನ್ನು ಯಾರು ಅದನ್ನು ಸಂಸ್ಕರಿಸದೆ ಅಶುದ್ಧಗೊಳಿಸಿದನೋ ಅವನು ವಾಸ್ತವದಲ್ಲಿ ಸೋಲುಂಡನು. [7-10]

ತಮ್ಮ ಉದ್ಧಟ ಸ್ವಭಾವದ ಕಾರಣ ‘ತಮೂದ್’ ಜನಾಂಗದವರು (ಪ್ರವಾದಿ ಸ್ವಾಲಿಹ್ ರವರ ಸಂದೇಶವನ್ನು) ತಿರಸ್ಕಾರದಿಂದ ತಳ್ಳಿಹಾಕಿದರು. ಅವರ ಪೈಕಿ ಅತ್ಯಂತ ಹೀನಾಯ/ದುಷ್ಟನೊಬ್ಬನು (ಎದುರು ಬೀಳುವ ಸಲುವಾಗಿ) ಎದ್ದು ನಿಂತನು. ಆ ಸಂದರ್ಭದಲ್ಲಿ ಅಲ್ಲಾಹ್ ನ ದೂತ (ಸ್ವಾಲಿಹ್ ರವರು) ‘ತಮೂದ್’ ಜನಾಂಗದವರನ್ನು ಎಚ್ಚರಿಸುವ ಸಲುವಾಗಿ ಹೇಳಿದರು – ಅಲ್ಲಾಹ್ ನ ಒಂಟೆ ಮತ್ತು ಅದರ ನೀರು ಕುಡಿಯುವ (ಸರದಿಯ ಬಗ್ಗೆ) ಎಚ್ಚರದಿಂದಿರಬೇಕು! ಆದರೆ ಅವರು (ಪ್ರವಾದಿ ಸ್ವಾಲಿಹ್ ನೀಡಿದ್ದ ಮುನ್ನೆಚ್ಚರಿಕೆಯನ್ನು) ಧಿಕ್ಕರಿಸಿದರು ಮತ್ತು ಆ ಹೆಣ್ಣೊಂಟೆಯನ್ನು ಕಡಿದು ಸಂಹರಿಸಿ ಬಿಟ್ಟರು. ಅವರೆಸಗಿದ ಆ (ಅಕ್ಷಮ್ಯ) ಪಾಪದ ಕಾರಣ ಅವರ ಒಡೆಯನು (ಅರ್ಥಾತ್: ಅಲ್ಲಾಹ್ ನು) ಅವರೆಲ್ಲರ ಮೇಲೆ ಘೋರ ಶಿಕ್ಷೆಯನ್ನೆರಗಿಸಿ ಅವರನ್ನು ನಿರ್ನಾಮ ಮಾಡಿ ಬಿಟ್ಟನು. ಶಿಕ್ಷಿಸುವಾಗ ಅಲ್ಲಾಹ್ ನು ಪರಿಣಾಮದ ಕುರಿತು ಅಂಜುವವನಲ್ಲ! [11-15]

----------

ಅಲ್-ಲೈಲ್ | سورة اللـيـل

| ಸೂರಃ ಅಲ್-ಲೈಲ್ | ಪವಿತ್ರ್ ಕುರ್‌ಆನ್ ನ 92 ನೆಯ ಸೂರಃ | ಇದರಲ್ಲಿ ಒಟ್ಟು 21 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ರಾತ್ರಿಯು ಸಾಕ್ಷಿ – ಅದು ಕವಿದುಕೊಂಡಾಗ; ಮತ್ತು ಹಗಲು ಸಾಕ್ಷಿ – ಅದು ಪ್ರಕಾಶಮಾನವಾದಾಗ! ಗಂಡು ಹೆಣ್ಣು ಎಂಬ ಸೃಷ್ಟಿ ವೈವಿಧ್ಯವೂ ಸಾಕ್ಷಿ! ವಾಸ್ತವದಲ್ಲಿ ನಿಮ್ಮ ದುಡಿಮೆ/ಹೆಣಗಾಟಗಳು ವ್ಯತ್ಯಸ್ತ ರೀತಿಯಲ್ಲಿ ಸಾಗಿದೆ [1-4]

(ತನ್ನ ಸಂಪತ್ತಿನಿಂದ ಅಲ್ಲಾಹ್ ನ ಮಾರ್ಗದಲ್ಲಿ) ದಾನ ಮಾಡಿಕೊಂಡು ಧರ್ಮನಿಷ್ಠನಾಗಿ ಉಳಿದು ಸದ್ಗುಣಗಳನ್ನು ಮೈಗೂಡಿಸಿಕೊಂಡವನಿಗೆ ನಾವು (ಸ್ವರ್ಗದತ್ತ ಸಾಗಿಸುವ) ಸರಳ ಹಾದಿಯನ್ನು ಸುಗಮಗೊಳಿಸುತ್ತೇವೆ. ಇನ್ನು ಯಾರು ಜಿಪುಣತೆ ತೋರಿ (ಅಲ್ಲಾಹ್ ನ ಆಜ್ಞೆಗಳನ್ನು) ನಿರ್ಲಕ್ಷಿಸಿ ಸದ್ಗುಣಗಳನ್ನು ತಿರಸ್ಕರಿದನೋ ಅಂಥವನಿಗೆ ನಾವು (ನರಕದತ್ತ ಕೊಂಡೊಯ್ಯುವ) ದುರ್ಗಮ ಹಾದಿಯನ್ನು ಸುಗಮಗೊಳಿಸುತ್ತೇವೆ. ಅಂಥವನು ಸ್ವತಃ ನಾಶ ಹೊಂದಿದಾಗ ಅವನ ಆ ಸಂಪತ್ತು ಅವನ ಯಾವ ಪ್ರಯೋಜನಕ್ಕೆ ಬಂದೀತು? [5-11]

(ಒಳಿತು ಮತ್ತು ಕೆಡುಕಿನ) ದಾರಿಯನ್ನು ಚೆನ್ನಾಗಿ ವಿವರಿಸುವುದು ಖಂಡಿತ ನಮ್ಮ ಹೊಣೆ. ಇಹಲೋಕ ಪರಲೋಕಗಳೆರಡೂ ನಮೆಗೇ ಸೇರಿದವುಗಳು. ನಾನಿದೋ ನಿಮ್ಮನ್ನು ಧಗಧಗಿಸಿ ಉರಿಯುವ ನರಕದ ಬೆಂಕಿಯ ಕುರಿತು ಎಚ್ಚರಿಸಿ ಬಿಟ್ಟಿದ್ದೇನೆ. (ನಮ್ಮ ಎಚ್ಚರಿಕೆಯನ್ನು) ಸುಳ್ಳೆಂದು ತಿರಸ್ಕರಿಸಿ ಅದಕ್ಕೆ ಬೆನ್ನು ತೋರಿಸಿದ ನಿಕೃಷ್ಟ/ಭಾಗ್ಯಹೀನನ ಹೊರತು ಬೇರೆ ಯಾವೊಬ್ಬನೂ ಆ ಬೆಂಕಿಯನ್ನು ಸೇರಲಾರನು. ಧರ್ಮನಿಷ್ಠೆಯನ್ನು ಮೈಗೂಡಿಸಿಕೊಂಡು, ತನ್ನನ್ನೂ ತನ್ನ ಸಂಪತ್ತನ್ನೂ ನಿರ್ಮಲಗೊಳಿಸಿಕೊಳ್ಳುವ ಸಲುವಾಗಿ (ಅಲ್ಲಾಹ್ ನ ಮಾರ್ಗದಲ್ಲಿ) ದಾನವಿತ್ತವನನ್ನು ಆ ಬೆಂಕಿಯಿಂದ ದೂರವಿರಿಸಲಾಗುವುದು. ಪರಮೋನ್ನತ ಪ್ರಭುವಿನ ಸಂಪ್ರೀತಿ ಪಡೆಯುವುದೇ ಹೊರತು ತನ್ನ ಮೇಲಿರುವ ಬೇರೊಬ್ಬನ ಋಣ ತೀರುಸುವ ಸಲುವಾಗಿ ಅವನು ದಾನ ಮಾಡುವುದಲ್ಲ. ಬಹುಬೇಗನೇ (ನಾವು ಕೊಡಲಿರುವ ಪ್ರತಿಫಲದಿಂದಾಗಿ) ಅವನು ಸಂತೃಪ್ತನಾಗಿ ಬಿಡುವನು. [12-21]

----------

ಅದ್-ದುಹಾ | سورة الضـحى

| ಸೂರಃ ಅದ್-ದುಹಾ | ಪವಿತ್ರ್ ಕುರ್‌ಆನ್ ನ 93 ನೆಯ ಸೂರಃ | ಇದರಲ್ಲಿ ಒಟ್ಟು 11 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುವೆ)!

ಪೂರ್ವಾಹ್ನ ಸಮಯದ ಸೂರ್ಯಪ್ರಕಾಶವು ಸಾಕ್ಷಿ; ಪ್ರಶಾಂತತೆಯೊಂದಿಗೆ ಆವರಿಸಿಕೊಳ್ಳುವ ರಾತ್ರಿಯು ಸಾಕ್ಷಿ! (ಓ ಪೈಗಂಬರರೇ), ನಿಮ್ಮ ಒಡೆಯನು ನಿಮ್ಮನ್ನು [ಪ್ರವಾದಿತ್ವದ ದೌತ್ಯ ನಿರ್ವಹಣೆಯ ಕಾರ್ಯದಿಂದ] ಉಪೇಕ್ಷಿಸಿ ಬಿಟ್ಟಿಲ್ಲ; ಮತ್ತು ನಿಮ್ಮಿಂದ ಬೇಸರಿಸಿಕೊಂಡೂ ಇಲ್ಲ. ನಿಜವಾಗಿ, ಮುಂದೆ ಬರಲಿರುವ ಆ ಕಾಲವು ಕಳೆದು ಹೋದ ಈ ಕಾಲಕ್ಕಿಂತ ನಿಮ್ಮ ಪಾಲಿಗೆ ಬಹಳ ಉತ್ತಮವಾಗಿರುವುದು. ಖಂಡಿತವಾಗಿಯೂ, ಅತಿ ಶೀಘ್ರದಲ್ಲೇ ನಿಮ್ಮ ಒಡೆಯನು ನಿಮಗೆ [ಎಲ್ಲವನ್ನೂ] ದಯಪಾಲಿಸಲಿರುವನು ಮತ್ತು ನೀವು ಸಂತುಷ್ಟರಾಗಿ ಬಿಡುವಿರಿ. {1-5}

ನೀವು ಅನಾಥರಾಗಿದ್ದುದನ್ನು ಕಂಡು ಅವನು ನಿಮಗೆ ಆಶ್ರಯ ಒದಗಿಸಲಿಲ್ಲವೇ? ನೀವು ಗೊಂದಲದಲ್ಲಿ ಸಿಲುಕಿರುವುದನ್ನು ಕಂಡು ಅವನು ನಿಮಗೆ ದಾರಿ ತೋರಿಸಲಿಲ್ಲವೇ? ನಿಮ್ಮನ್ನು ನಿರ್ಗತಿಕ ಸ್ಥಿತಿಯಲ್ಲಿ ಕಂಡು ಅವನು ನಿಮಗೆ ಸಂಪನ್ನತೆಯನ್ನು ದಯಪಾಲಿಸಲಿಲ್ಲವೇ? {6-8}

ಆದ್ದರಿಂದ (ಓ ಪೈಗಂಬರರೇ), ಅನಾಥರೊಂದಿಗೆ ಕಠಿಣವಾಗಿ ವ್ಯವಹರಿಸಬೇಡಿರಿ; ಯಾಚಿಸುವವರನ್ನು ಜರೆಯಬೇಡಿರಿ; ಮತ್ತು ನಿಮ್ಮ ಒಡೆಯನು/ಪರಿಪಾಲಕನು (ನಿಮಗೆ ದಯಪಾಲಿಸಿರುವ) ಅನುಗ್ರಹಗಳನ್ನು ಬಹಿರಂಗವಾಗಿ ಪ್ರಕಟಿಸುತ್ತಲಿರಿ. {9-11}

----------

ಅಲ್-ಇನ್ಶಿರಾಹ್ | سورة الإنشراح

| ಸೂರಃ ಅಲ್-ಇನ್ಶಿರಾಹ್ | ಪವಿತ್ರ್ ಕುರ್‌ಆನ್ ನ 94 ನೆಯ ಸೂರಃ | ಇದರಲ್ಲಿ ಒಟ್ಟು 8 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ಓದಲಾರಂಭಿಸುವೆ)!

(ಮುಹಮ್ಮದ್ ಪೈಗಂಬರರೇ!) ನಿಮ್ಮ ಹೃದಯವನ್ನು ನಾವು ನಿಮಗೋಸ್ಕರ ತೆರೆದು ವಿಶಾಲಗೊಳಿಸಿ ಕೊಡಲಿಲ್ಲವೇ? ನಿಮ್ಮ ಬೆನ್ನು ಮುರಿದು ಬಿಡುತ್ತಿದ್ದ, ನಿಮಗೆ ಹೊರಲಾಗದ ಭಾರವನ್ನು ನಾವು ನಿಮ್ಮಂದ ನೀಗಿಸಿ ಬಿಡಲಿಲ್ಲವೇ? ತರುವಾಯ, ನಿಮ್ಮ ಸಲುವಾಗಿ ನಾವು ನಿಮ್ಮ ಕೀರ್ತಿಯನ್ನು ಔನ್ನತ್ಯಕ್ಕೆ ಏರಿಸಿದೆವು. ವಾಸ್ತವದಲ್ಲಿ ಸಂಕಷ್ಟಗಳ ಜೊತೆಜೊತೆಗೆ ಸುಖ-ಸಮಾಧಾನಗಳೂ (ಬರುತ್ತವೆ). ಹೌದು, ಕಷ್ಟ-ಕಾರ್ಪಣ್ಯಗಳ ಬೆನ್ನಿಗೇ ಶಾಂತಿ-ನೆಮ್ಮದಿಗಳೂ (ದೊರಕುತ್ತವೆ). {1-6}

ಆದ್ದರಿಂದ, (ಪೈಗಂಬರರೇ, ದೌತ್ಯ ನಿರ್ವಹಣೆಯ ನಿಬಿಡತೆಯಿಂದ) ನಿಮಗೆ ಬಿಡುವು ಪ್ರಾಪ್ತವಾದಾಗಲೆಲ್ಲ ಶ್ರಮವಹಿಸಿ (ಅಲ್ಲಾಹ್ ನ ಉಪಾಸನೆಯಲ್ಲಿ) ತೊಡಗಿರಿ ಮತ್ತು (ನಿಮ್ಮನ್ನು ಸದಾ ಕಾಪಾಡುವ ಆ) ನಿಮ್ಮ ಒಡೆಯನೆಡೆಗೆ ಹೆಚ್ಚಿನ ಒಲವು ತೋರುವರಾಗಿರಿ. {7-8}

----------

ಅತ್-ತೀನ್ | سورة الـتين

| ಸೂರಃ ಅತ್-ತೀನ್ | ಪವಿತ್ರ್ ಕುರ್‌ಆನ್ ನ 95 ನೆಯ ಸೂರಃ | ಇದರಲ್ಲಿ ಒಟ್ಟು 8 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯನೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಆರಂಭಿಸುವೆ)!

‘ಅತ್-ತೀನ್’, ‘ಅಝ್-ಝೈತೂನ್’ ಮತ್ತು ‘ಸೀನಾಯ್’ ಬೆಟ್ಟಗಳು ಸಾಕ್ಷಿಯಾಗಿವೆ! ಅಂತೆಯೇ ಪ್ರಶಾಂತವಾದ ಈ ಸಂರಕ್ಷಿತ, ಸುರಕ್ಷಿತ (ಮಕ್ಕಃ) ಪಟ್ಟಣವೂ ಸಾಕ್ಷಿಯಾಗಿದೆ! ನಿಸ್ಸಂಶಯವಾಗಿಯೂ ನಾವು ಮನುಷ್ಯನನ್ನು ಅತ್ಯುತ್ತಮ ಸ್ವರೂಪದಲ್ಲಿ ಸೃಷ್ಟಿಸಿದ್ದೇವೆ, (ಆದರೆ ಅವನು ಸ್ವತಃ ಅವನತಿಯ ಹಾದಿ ಹಿಡಿದಾಗ) ನಾವು ಅವನನ್ನು ನಿಕೃಷ್ಟತೆಯ ಅಧೋಗತಿಗೆ ತಳ್ಳಿ ಬಿಟ್ಟೆವು. [ಅಲ್ಲಾಹ್ ನ ಏಕತ್ವ, ಸಾರ್ವಭೌಮತ್ವ, ಪುನರುತ್ಥಾನದ ದಿನವೇ ಮುಂತಾದವುಗಳಲ್ಲಿ] ದೃಢ ವಿಶ್ವಾಸವಿರಿಸಿಕೊಂಡು ಸದಾಚಾರ ಸತ್ಕರ್ಮಗಳನ್ನು ಮೈಗೂಡಿಸಿಕೊಂಡವರು ಅದಕ್ಕೆ ಹೊರತಾಗಿದ್ದಾರೆ. ಮಾತ್ರವಲ್ಲ, ಅಂಥವರಿಗೆ ಎಂದೂ ಕೊನೆಗಾಣದ ಶಾಶ್ವತವಾದ ಪ್ರತಿಫಲವೂ ಇದೆ. ಹಾಗಿರುವಾಗ (ಓ ಮಾನವಾ), ಪ್ರತಿಫಲ ಸಿಗಲಿರುವ ದಿನವನ್ನು ನೀನು ಹೇಗೆ ತಾನೇ ನಿರಾಕರಿಸುವೆ? (ಆ ದಿನ ಯೋಗ್ಯತೆಯನ್ನು ನಿರ್ಣಯಿಸಿ ತೀರ್ಪು ನೀಡುವ) ತೀರ್ಪುಗಾರರ ಪೈಕಿ ಅತ್ಯುತ್ತಮನಾದವನು ಅಲ್ಲಾಹ್ ನೇ ಅಲ್ಲವೇ? {1-8}

----------

ಅಲ್-‘ಅಲಕ್ | سورة الـعلق

| ಸೂರಃ ಅಲ್-‘ಅಲಕ್ | ಪವಿತ್ರ್ ಕುರ್‌ಆನ್ ನ 96 ನೆಯ ಸೂರಃ | ಇದರಲ್ಲಿ ಒಟ್ಟು 19 ಆಯತ್ ಗಳು ಇವೆ |

ಅಲ್ಲಾಹ್ ನ (ಪವಿತ್ರ) ಹೆಸರಿನೊಂದಿಗೆ, ಅವನು ಅತಿಹೆಚ್ಚು ಕರುಣೆಯುಳ್ಳವನು ಮತ್ತು ನಿರಂತರ ಕರುಣೆ ತೋರುವವನು!

(ಓ ಪೈಗಂಬರರೇ, ಸಕಲ ವಿಶ್ವವನ್ನು) ಸೃಷ್ಟಿಸಿರುವ ನಿಮ್ಮ ಒಡೆಯನ ನಾಮದೊಂದಿಗೆ ಪಠಿಸಿರಿ. ಅಂಟಿಕೊಳ್ಳುವ (ಸ್ವಭಾವದ) ರಕ್ತಪಿಂಡದಿಂದ ಅವನು ಮನುಷ್ಯನನ್ನು ಸೃಷ್ಟಿಸಿರುವನು. ಪಠಿಸಿರಿ, ನಿಮ್ಮ ಸೃಷ್ಟಿಕರ್ತನಾದ ಒಡೆಯನು ಅತ್ಯಂತ ಉದಾತ್ತನಾಗಿರುವನು, ಆದರಣೀಯನಾಗಿರುವನು. ಅವನು (ಓದು-ಬರಹದ ಜ್ಞಾನವನ್ನು) ಲೇಖನಿಯ ಮೂಲಕ (ಮನುಷ್ಯನಿಗೆ) ಕಲಿಸಿದನು. ಮನಷ್ಯನಿಗೆ ತಿಳಿಯದೇ ಇದ್ದಂತಹ ವಿಷಯಗಳನ್ನೂ ಅವನು ಕಲಿಸಿದನು. {1-5}

ಎಂದಿಗೂ ಸಾಧ್ಯವಲ್ಲ! ತಾನು (ಯಾವ ಅಗತ್ಯಗಳೂ ಇಲ್ಲದ) ನಿರಪೇಕ್ಷಕನೆಂದು ತನ್ನ ಬಗ್ಗೆ ಭ್ರಮಿಸಿ ಕೊಂಡಿರುವ ಮನುಷ್ಯನು ನಿಜವಾಗಿ ಹದ್ದು ಮೀರಿದವನಾಗಿದ್ದಾನೆ. (ಆದರೆ) ಯಥಾರ್ಥದಲ್ಲಿ ಅವನ ಮರಳುವಿಕೆಯು ನಿಮ್ಮ ಒಡೆಯನ ಕಡೆಗೇ ಆಗಿರುವುದು. {6-8}

ನಮ್ಮ ಓರ್ವ ಉಪಾಸಕ, [ಪ್ರವಾದಿ ಮುಹಮ್ಮದ್ ರು] ನಮಾಝ್ ಸಲ್ಲಿಸುತ್ತಿದ್ದಾಗ ಅದಕ್ಕೆ ಅಡ್ಡಿಪಡಿಸಿದ ಒಬ್ಬಾತನನ್ನು ನೀವು ನೋಡಿದಿರೇನು? ಒಂದು ವೇಳೆ ಅವರು ಸನ್ಮಾರ್ಗದಲ್ಲಿದ್ದುಕೊಂಡು ಧರ್ಮನಿಷ್ಠೆಯನ್ನು ಬೋಧಿಸುತ್ತಿದ್ದರು – ಎಂದಾದರೆ ನಿಮಗೆ (ನಮಾಝ್ ಗೆ ಅಡ್ಡಿಪಡಿಸಿದವನ ಬಗ್ಗೆ) ಏನನ್ನಿಸುತ್ತದೆ?

ಇನ್ನು (ನಮಾಝ್ ಗೆ ಅಡ್ಡಿಪಡಿಸಿದವನು) ಸತ್ಯವನ್ನು ಧಿಕ್ಕರಿಸಿದವನೂ ಅದರಿಂದ ಮುಖ ತಿರುಚಿಕೊಂಡವನೂ ಹೌದಾದರೆ ಆಗ ನಿಮ್ಮ ಅಭಿಪ್ರಾಯವೇನು? ಅಲ್ಲಾಹ್ ನು ತನ್ನನ್ನು ನೋಡುತ್ತಿದ್ದಾನೆ ಎಂಬುದು ಆತನಿಗೆ ತಿಳಿಯದೇ? {9-14}

ಸರ್ವಥಾ ಇಲ್ಲ! ಅವನು ಸ್ವಯಂ (ತನ್ನನ್ನು ಅಂತಹ ದುಷ್ಕೃತ್ಯಗಳಿಂದ) ತಡೆದುಕೊಳ್ಳದಿದ್ದರೆ, ನಾವು ಅವನ ಮುಂದಲೆಯ ಕೂದಲು ಹಿಡಿದು [ನಿಂದ್ಯವಾಗಿ ನೆಲದಲ್ಲಿ] ಎಳೆಯುವೆವು; ಸುಳ್ಳುಗಾರ ಪಾಪಿಯ ಮುಂದಲೆ ಅದು! (ಹಾಗೆ ಎಳೆಯುವಾಗ ಅವನು ಸಹಾಯಕ್ಕಾಗಿ) ತನ್ನ ಹಿಂಬಾಲಕರ ಕೂಟವನ್ನು ಕರೆಯಲಿ. ನಾವೂ ಸಹ (ಯಾತನೆ ಕೊಡುವ) ಮಲಕ್ ಗಳ ಕೂಟವನ್ನು ಕರೆಯುವೆವು! {15-18}

ಬೇಡ! (ಓ ಪೈಗಂಬರರೇ,) ನೀವು ಆ (ಧಿಕ್ಕಾರಿಯತ್ತ) ಗಮನ ಹರಿಸಬೇಡಿರಿ; ಬದಲಾಗಿ ನೀವು (ಅಲ್ಲಾಹ್ ನ ಮುಂದೆ) ಸಾಷ್ಟಾಂಗವೆರಗಿರಿ ಮತ್ತು (ಆ ಮೂಲಕ ಅಲ್ಲಾಹ್ ನ) ಸಾಮೀಪ್ಯ ಪಡೆಯಿರಿ. {19} ۩

----------

ಅಲ್-ಕದ್ರ್ | سورة الـقدر

| ಸೂರಃ ಅಲ್-ಕದ್ರ್ | ಪವಿತ್ರ್ ಕುರ್‌ಆನ್ ನ 97 ನೆಯ ಸೂರಃ | ಇದರಲ್ಲಿ ಒಟ್ಟು 5 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಧಾರಾಳ ದಯೆ ತೋರುವವನು, ಅವನ ಕಾರುಣ್ಯವು ಶಾಶ್ವತ!

ಖಂಡಿತವಾಗಿ ನಾವು ಈ (ಕುರ್‌ಆನ್) ಅನ್ನು ‘ಅಲ್-ಕದ್ರ್’ ನ ರಾತ್ರಿಯಲ್ಲಿ (ಧರೆಗೆ) ಇಳಿಸಿದ್ದೇವೆ. ‘ಅಲ್-ಕದ್ರ್ ನ ರಾತ್ರಿ’ ಯ (ಮಹತ್ವವು) ಏನೆಂಬುದು ನಿಮಗೇನಾದರೂ ತಿಳಿದಿದೆಯೇನು?! ‘ಅಲ್-ಕದ್ರ್ ನ ರಾತ್ರಿ’ ಯು [ಅದರ ಹಿರಿಮೆ, ಶ್ರೇಷ್ಠತೆಗಳಲ್ಲಿ] ಒಂದು ಸಾವಿರ ತಿಂಗಳಿಗಿಂತಲೂ ಹೆಚ್ಚು ಉತ್ತಮವಾದ ರಾತ್ರಿಯಾಗಿದೆ. ಆ ರಾತ್ರಿಯಲ್ಲಿ ‘ಮಲಕ್’ ಗಳು ಮತ್ತು ‘ಅರ್-ರೂಹ್’ [ಅರ್ಥಾತ್: ಜಿಬ್ರೀಲ್/ಏಂಜಲ್ ಗೇಬ್ರಿಯಲ್] ತಮ್ಮ ಒಡೆಯನ ಅಪ್ಪಣೆಯಂತೆ ಸಕಲ ವಿಷಯಗಳಿಗೆ ಸಂಬಂಧಿಸಿದ ಆದೇಶಗಳೊಂದಿಗೆ (ಆಕಾಶದಿಂದ) ಇಳಿಯುತ್ತಾರೆ! ಮುಂಜಾವಿನ ಉದಯದ ತನಕವೂ ಸರ್ವತ್ರ ಶಾಂತಿ-ಸಮಾಧಾನಗಳ ರಾತ್ರಿಯದು! [1-5]

----------

ಅಲ್-ಬಯ್ಯಿನಃ | سورة الـبينة

| ಸೂರಃ ಅಲ್-ಬಯ್ಯಿನಃ | ಪವಿತ್ರ್ ಕುರ್‌ಆನ್ ನ 98 ನೆಯ ಸೂರಃ | ಇದರಲ್ಲಿ ಒಟ್ಟು 8 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ – ಅವನು ಅತಿ ಹೆಚ್ಚು ಕರುಣೆಯುಳ್ಳವನು; ನಿರಂತರ ಕರುಣೆ ತೋರುವವನು!

(ದಿವ್ಯ) ಗ್ರಂಥವನ್ನು ಹೊಂದಿರುವಂತಹ [ಯಹೂದ್ಯರು] ಹಾಗೂ ಬಹುದೇವವಿಶ್ವಾಸಿಗಳಾದ [ವಿಗ್ರಹಾರಾಧಕ ಅರಬರ] ಪೈಕಿ [ಪೈಗಂಬರರ ಸಂದೇಶವನ್ನು] ಧಿಕ್ಕರಿಸಿ ಬಿಟ್ಟವರು, ತಮ್ಮ ಬಳಿಗೆ ಆ ‘ಸ್ಪಷ್ಟವಾದ ದೃಷ್ಟಾಂತವು’ ಬರುವ ತನಕವೂ (ತಮ್ಮ ಧಿಕ್ಕಾರದ ನಿಲುವನ್ನು) ತೊರೆಯುವವರಲ್ಲ! ಅಂದರೆ [ಅವರ ಅಪೇಕ್ಷೆಯಂತೆ] ಅತ್ಯಂತ ನಿಖರವಾದ ಆದೇಶಗಳಿರುವ ಪರಮ ಪಾವನವಾದ ಗ್ರಂಥವೊಂದನ್ನು ಪಠಿಸುತ್ತಾ ಅಲ್ಲಾಹ್ ನ ಬಳಿಯಿಂದ ದೂತನೊಬ್ಬನು [ನೇರವಾಗಿ ಆಕಾಶದಿಂದಲೇ ಇಳಿದು] ಬರುವ ತನಕವೂ (ಅವರು ತಮ್ಮ ಪಟ್ಟು ಬಿಡುವವರಲ್ಲ)! {1-3}

[ಆದರೆ ವಾಸ್ತವವೇನೆಂದರೆ,] ಗ್ರಂಥವನ್ನು ಪಡೆದುಕೊಂಡಿದ್ದ [ಯಹೂದ್ಯರು ಈ ಹಿಂದೆಯೂ ಸತ್ಯವನ್ನು ಒಪ್ಪಿಕೊಳ್ಳುವ ವಿಷಯದಲ್ಲಿ] ಭಿನ್ನಮತಕ್ಕೊಳಗಾದುದು, ಅವರ ಬಳಿಗೆ ಅಂತಹ ‘ಸ್ಪಷ್ಟವಾದ ದೃಷ್ಟಾಂತವು’ ಬಂದ ಬಳಿಕವೇ ಆಗಿತ್ತು! ಧರ್ಮವನ್ನು ನಿಷ್ಕಳಂಕವಾಗಿಸಿ (ಅದನ್ನು) ಅಲ್ಲಾಹ್ ನಿಗೆ ಮಾತ್ರ ಮೀಸಲಾಗಿಸಿಕೊಂಡು, ಸಂಪೂರ್ಣ ತನ್ಮಯತೆಯೊಂದಿಗೆ ಅವನನ್ನು ಮಾತ್ರ ಆರಾಧಿಸಬೇಕು; ನಮಾಝ್ ನಿರ್ವಹಿಸಬೇಕು ಮತ್ತು ಝಕಾತ್ ನೀಡುತ್ತಿರಬೇಕು – [ನೀವು ಹಾಗೆ ಮಾಡಿಕೊಂಡರೆ] ಅದುವೇ ನಿಜವಾದ ಧರ್ಮ ಎಂದೇ (ಗತ ಗ್ರಂಥಗಳಲ್ಲಿಯೂ) ಅವರಿಗೆ ಆದೇಶಿಸಲಾಗಿತ್ತೇ ಹೊರತು ಬೇರೇನೂ ಆಗಿರಲಿಲ್ಲ! {4-5}

ಗ್ರಂಥದವರು ಹಾಗೂ ಬಹುದೇವವಿಶ್ವಾಸಿಗಳ ಪೈಕಿ ಧಿಕ್ಕಾರದ ನಿಲುವು ತಾಳಿದವರು ಖಂಡಿತವಾಗಿ ನರಕದ ಬೆಂಕಿಯಲ್ಲಿ ಸದಾ ಕಾಲ ಬಿದ್ದುಕೊಂಡಿರುವರು; ಅವರೇ ಜೀವಿಗಳ ಪೈಕಿ ಅತ್ಯಂತ ನಿಕೃಷ್ಟ ಜೀವಿಗಳು! [ಅದಕ್ಕೆ ಪ್ರತಿಯಾಗಿ, ಪೈಗಂಬರರ ಸಂದೇಶದಲ್ಲಿ] ವಿಶ್ವಾಸವಿರಿಸಿಕೊಂಡು ಜೊತೆಗೆ ಸತ್ಕರ್ಮಗಳನ್ನು ಕೈಗೊಂಡವರು ಸೃಷ್ಟಿಗಳ ಪೈಕಿ ಖಂಡಿತ ಅತ್ಯುತ್ತಮ ಸೃಷ್ಟಿಗಳು. ಅಂಥವರಿಗಾಗಿ ಹೊನಲುಗಳು ಕೆಳಭಾಗದಲ್ಲಿ ಹರಿಯುತ್ತಿರುವ ಶಾಶ್ವತವಾದ ಸ್ವರ್ಗೋದ್ಯಾನಗಳು ಪ್ರತಿಫಲದ ರೂಪದಲ್ಲಿ ಅವರ ಸೃಷ್ಟಿಕರ್ತನ ಬಳಿ ಸಿದ್ಧವಿದೆ. ಅವರು ಅದರಲ್ಲಿ ಸದಾಕಾಲ ನೆಲೆಸುವರು. ಅಲ್ಲಾಹ್ ನು ಅವರ (ನಡತೆಯಿಂದ) ಸಂತೃಪ್ತನಾಗಿರುವನು; ಮತ್ತು ಅವರೂ ಸಹ ಅಲ್ಲಾಹ್ ನ (ಅಪಾರ ಕೊಡುಗೆಗಳಿಂದ) ಸಂತುಷ್ಟರಾಗಿರುವರು – ಇವೆಲ್ಲವೂ ಇರುವುದು ತನ್ನ ಸೃಷ್ಟಿಕರ್ತನಿಗೆ ಭಯಭಕ್ತಿ ತೋರುವವನಿಗಾಗಿ. {6-8}

----------

ಅಝ್-ಝಿಲ್ಝಾಲ್ | سورة الزلزال

| ಸೂರಃ ಅಝ್-ಝಿಲ್ಝಾಲ್ | ಪವಿತ್ರ್ ಕುರ್‌ಆನ್ ನ 99 ನೆಯ ಸೂರಃ | ಇದರಲ್ಲಿ ಒಟ್ಟು 8 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದಂತಹ ಅಲ್ಲಾಹನ ನಾಮದೊಂದಿಗೆ (ಆರಂಭಿಸುವೆ)!

ಭೂಮಿಯು ಅದರ ಕಂಪನದ (ರಭಸ, ಭಯಾನಕತೆಯೊಂದಿಗೆ ಒಟ್ಟಾರೆ) ಅಲುಗಾಡಿಸಲ್ಪಡುವಾಗ, ತನ್ನೊಳಗಿನ ಎಲ್ಲ ಭಾರವನ್ನು ಅದು ಹೊರಚೆಲ್ಲಿ ಬಿಡುವಾಗ, ಅದೇನಾಯಿತು ಇದಕ್ಕೆ ಎಂದು ಮನುಷ್ಯನು [ಭಯಭೀತಿಯಿಂದ] ಕೇಳುವನು! {1-3}

ಆ ದಿನ ಭೂಮಿಯು ತನ್ನ ಸಮಾಚಾರವನ್ನು (ಸ್ವತಃ) ತಿಳಿಸುವುದು; ಏಕೆಂದರೆ ಅದಕ್ಕೆ ನಿಮ್ಮ ಕರ್ತಾರನು ಅದನ್ನೇ ನಿರ್ದೇಶಿಸಿರುವನು! {4-5}

ತಮ್ಮ ತಮ್ಮ ಕರ್ಮಗಳನ್ನು ತಾವೇ ಕಾಣುವಂತೆ ಮಾಡಲಾಗುವ ಆ ದಿನ ಜನರು [ತಾವು ಮಾಡಿದ ಕರ್ಮಗಳಿಗೆ ತಕ್ಕಂತೆ] ಪ್ರತ್ಯೇಕ ಗುಂಪುಗಳಾಗಿ ಹೊರಟು ಬರುವರು. ಹೌದು, ಒಂದು ಅಣುವಿನ ತೂಕದಷ್ಟು ಒಳಿತನ್ನು ಮಾಡಿದವನೂ ಅದನ್ನು ಕೊಂಡುಕೊಳ್ಳುವನು; ಹಾಗೆಯೇ ಒಂದು ಅಣುವಿನ ತೂಕದಷ್ಟು ಕೆಡುಕನ್ನು ಮಾಡಿದವನೂ ಸಹ ಅದನ್ನು ಕಂಡುಕೊಳ್ಳುವನು. {6-8} ☑

----------

ಅಲ್-‘ಆದಿಯಾತ್ | سورة الـعاديات

| ಸೂರಃ ಅಲ್-'ಆದಿಯಾತ್ | ಪವಿತ್ರ್ ಕುರ್‌ಆನ್ ನ 100 ನೆಯ ಸೂರಃ | ಇದರಲ್ಲಿ ಒಟ್ಟು 11 ಆಯತ್ ಗಳು ಇವೆ |

ಪರಮ ಕಾರುಣ್ಯವಂತನೂ ಸಾದ್ಯಂತ ದಯಾಮಯಿಯೂ ಆದ ಅಲ್ಲಾಹ್ ನ ನಾಮದೊಂದಿಗೆ (ಆರಂಭಿಸುವೆ)!

ಏದುಸಿರು ಬಿಡುತ್ತಾ ಧಾವಿಸುವ, ಗೊರಸು ಅಪ್ಪಳಿಸಿ ಕಿಡಿಯೆಬ್ಬಿಸುವ, ಮುಂಜಾವಿನ ವೇಳೆಯೇ (ಶತ್ರುವಿನ ಮೇಲೆ) ದಾಳಿಯಿಡುವ ಮತ್ತು [ನಾಗಾಲೋಟದಿಂದ ಓಡಿ] ಧೂಳೆರಚುತ್ತಾ (ಶತ್ರುವಿನ) ಸೇನೆಯನ್ನು ಭೇದಿಸಿ ಒಳನುಗ್ಗುವ (ಆ ಯುದ್ಧ ಕುದುರೆಗಳು) ಸಾಕ್ಷಿ! ನಿಜವಾಗಿಯೂ ಮನುಷ್ಯನು ತನ್ನ ಕರ್ತೃವಿಗೆ ತೀರಾ ಕೃತಘ್ನನಾಗಿದ್ದಾನೆ! ಹೌದು, ಸ್ವತಃ ಅವನೇ ಆ ಕೃತಘ್ನತೆಗೆ ಸಾಕ್ಷಿಯಾಗಿದ್ದಾನೆ! ವಾಸ್ತವದಲ್ಲಿ ಅವನು ಸಿರಿ-ಸಂಪತ್ತಿನ ಅತಿಯಾದ ವ್ಯಾಮೋಹದಲ್ಲಿ ಸಿಲುಕಿದ್ದಾನೆ. {1-8}

ಸಮಾಧಿಗಳಲ್ಲಿ [ಹೂಳಲ್ಪಟ್ಟವರನ್ನು ವಿಚಾರಣೆಯ ದಿನ] ಎಬ್ಬಿಸಲಾದಾಗ (ಅವರ) ಎದೆಯಾಳದಲ್ಲಿರುವ ಸಕಲವನ್ನೂ ಹೊರಗೆಡಹಲಾಗುವುದು ಎಂದು ಅವನು ತಿಳಿಯುವುದಿಲ್ಲವೇ? ಖಂಡಿತವಾಗಿಯೂ ಆ ದಿನ ಅವರ ಕರ್ತೃವಿಗೆ ಅವರ ಎಲ್ಲ ಕರ್ಮಗಳ ಬಗ್ಗೆ ಸಂಪೂರ್ಣವಾದ ಅರಿವಿರುತ್ತದೆ! {9-11} ☑

----------

ಅಲ್-ಕಾರಿ'ಅಃ | سورة الـقارعـة

| ಸೂರಃ ಅಲ್-ಕಾರಿ'ಅಃ | ಪವಿತ್ರ್ ಕುರ್‌ಆನ್ ನ 101 ನೆಯ ಸೂರಃ | ಇದರಲ್ಲಿ ಒಟ್ಟು 11 ಆಯತ್ ಗಳು ಇವೆ |

ಅಲ್ಲಾಹ್ ನ ನಾಮದೊಂದಿಗೆ (ಪ್ರಾರಂಭಿಸುವೆ); ಅವನು ಅಪಾರ ದಯೆ ತೋರುವವನು, ಅವನ ಕಾರುಣ್ಯವು ಚಿರಂತನ!

ಭಾರೀ ಆಘಾತಕಾರಿ ಅಪ್ಪಳಿಕೆ! ಏನದು ಆ ಭಾರೀ ಆಘಾತಕಾರಿ ಅಪ್ಪಳಿಕೆ?! ಆ ಅನಾಹುತಕಾರಿ ಅಪ್ಪಳಿಕೆ ಏನೆಂದು ಯಾವ ವಿವರಣೆ ತಾನೆ ನಿಮಗೆ ಅರ್ಥೈಸಿ ಕೊಟ್ಟೀತು?! ಆ ದಿನ ಮನುಷ್ಯರು ದಿಕ್ಕಾಪಾಲಾಗಿ ಚದುರಿಬಿಟ್ಟ ಪತಂಗಗಳಂತಾಗುವರು; ಬೃಹತ್ ಪರ್ವತಗಳು ಹಿಂಜಿದ ಉಣ್ಣೆಯಂತೆ (ಹಾರಿ ಹೋಗುವುವು)! ಯಾರ (ಸತ್ಕರ್ಮಗಳ) ತಕ್ಕಡಿಯು ಭಾರವಾಗಿ ತೂಗುವುದೋ ಅವನು (ಅಂದು) ಬಹಳ ತೃಪ್ತನಾಗಿ ಐಶಾರಾಮದಲ್ಲಿರುವನು. ಇನ್ನು ಯಾರ (ಸತ್ಕರ್ಮಗಳ) ತಕ್ಕಡಿಯು ಹಗುರವಾಗಿ ಬಿಡುವುದೋ ನರಕದ (ಹಾವಿಯಃ ಎಂಬ) ಹೊಂಡವು ಅವನ ಅಂತಿಮ ತಾಣವಾಗುವುದು! ಅದೇನೆಂದು ನೀವು ಬಲ್ಲಿರೇನು? ತೀವ್ರ ಕಾವಿರುವ (ನರಕದ) ಬೆಂಕಿಯದು! {1-11} ☑

----------

ಅತ್-ತಕಾತುರ್ | سورة الـتكاثر

| ಸೂರಃ ಅತ್-ತಕಾತುರ್ | ಪವಿತ್ರ್ ಕುರ್‌ಆನ್ ನ 102 ನೆಯ ಸೂರಃ | ಇದರಲ್ಲಿ ಒಟ್ಟು 8 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ, ಅವನು ತುಂಬಾ ಕರುಣೆ ತೋರುವವನೂ ಕರುಣೆ ತೋರುತ್ತಲೇ ಇರುವವನೂ ಆಗಿರುವನು!

(ಓ ಜನರೇ!) ಲೌಕಿಕ, ಆರ್ಥಿಕ ಹೆಗ್ಗಳಿಕೆಗಾಗಿ ನೀವು ಪರಸ್ಪರ ನಡೆಸುವ ಸೆಣಸಾಟವು (ಅಲ್ಲಾಹ್ ನ ಸ್ಮರಣೆಯಿಂದ) ನಿಮ್ಮನ್ನು ನಿರ್ಲಕ್ಷ್ಯರನ್ನಾಗಿ ಮಾಡಿರುತ್ತದೆ; ನೀವು (ನಿಮ್ಮನಿಮ್ಮ) ಗೋರಿಗಳನ್ನು ತಲುಪುವ ಕ್ಷಣದವರೆಗೂ! {1-2}

ಇಲ್ಲ, ಶೀಘ್ರದಲ್ಲೇ ನೀವು ತಿಳಿಯುವಿರಿ! ಖಂಡಿತಾ ಇಲ್ಲ, ಬಹು ಬೇಗನೇ ನೀವು ತಿಳಿದುಕೊಳ್ಳುವಿರಿ! ಒಂದು ವೇಳೆ ದೃಢೀಕೃತ ತಿಳುವಳಿಕೆ ನಿಮಗಿರುತ್ತಿದ್ದರೆ (ನಿಮ್ಮ ಧೋರಣೆ) ಖಂಡಿತಾ ಹಾಗೆ ಇರುತ್ತಿರಲಿಲ್ಲ! (ಚೆನ್ನಾಗಿ ತಿಳಿದುಕೊಳ್ಳಿ,) ನರಕಾಗ್ನಿಯನ್ನು ನಿಜವಾಗಿಯೂ ನೀವು ಕಂಡೇ ತೀರುವಿರಿ! ಹೌದು, ಆಗ ನೀವು ಅದನ್ನು ಖಚಿತವಾಗಿಯೂ ವಿಶ್ವಸನೀಯವಾದ ನಿಮ್ಮ ಕಣ್ಣುಗಳಿಂದ ಕಾಣಲಿರುವಿರಿ! ಅದಾದ ಮೇಲೆ [ನೀವು ಪೈಪೋಟಿ ನಡೆಸಿ ಕೂಡಿಟ್ಟ ಲೌಕಿಕವಾದ] ಸಕಲ ಅನುಗ್ರಹಗಳ ಬಗ್ಗೆ ಆ ದಿನ ಪ್ರಶ್ನಿಸಲ್ಪಡುವುರಿ! {3-8} ☑

----------

ಅಲ್-'ಅಸ್ರ್ | سورة الـعصر

| ಸೂರಃ ಅಲ್-'ಅಸ್ರ್ | ಪವಿತ್ರ್ ಕುರ್‌ಆನ್ ನ 103 ನೆಯ ಸೂರಃ | ಇದರಲ್ಲಿ ಒಟ್ಟು 3 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹ್ ನ ನಾಮದೊಂದಿಗೆ (ಆರಂಭಿಸುವೆ)!

(ನಿರಂತರ ಗತಿಸುತ್ತಲೇ ಇರುವ) ಕಾಲವು ಸಾಕ್ಷಿಯಾಗಿದೆ! ಹೌದು, ಮನುಷ್ಯ ಸಮುದಾಯವು ಖಂಡಿತವಾಗಿಯೂ ನಷ್ಟದಲ್ಲಿ ಸಾಗಿದೆ! ವಿಶ್ವಾಸಿಗಳಾಗಿರುತ್ತಾ ಸದಾಚಾರ-ಸತ್ಕರ್ಮಗಳನ್ನು ಮೈಗೂಡಿಸಿಕೊಂಡು ಪರಸ್ಪರರಿಗೆ ಸತ್ಯದ ಬಗ್ಗೆ ಉಪದೇಶಿಸುವ ಮತ್ತು ಪರಸ್ಪರರಿಗೆ ಸಹನೆ-ಸಹಿಷ್ಣುತೆಗಳ ಬಗ್ಗೆ ಬೋಧಿಸುತ್ತಿರುವವರನ್ನು ಹೊರತು ಪಡಿಸಿದರೆ (ಉಳಿದವರು ಘೋರ ನಷ್ಟದಲ್ಲಿರುವರು). {1-3} ☑

----------

ಅಲ್-ಹುಮಝಃ | سورة الـهمزة

| ಸೂರಃ ಅಲ್-ಹುಮಝಃ | ಪವಿತ್ರ್ ಕುರ್‌ಆನ್ ನ 104 ನೆಯ ಸೂರಃ | ಇದರಲ್ಲಿ ಒಟ್ಟು 9 ಆಯತ್ ಗಳು ಇವೆ |

ಅಲ್ಲಾಹ್ ನ ನಾಮದೊಂದಿಗೆ - ಅವನು ಅಪಾರ ದಯೆ ತೋರುವವನು; ಅವನ ಕಾರುಣ್ಯವು ಚಿರಂತನ!

(ಪೈಗಂಬರರೇ, ನಿಮ್ಮನ್ನು) ಮೂದಲಿಸುತ್ತಿರುವ ಹಾಗೂ (ಬೆನ್ನ ಹಿಂದೆ ನಿಮ್ಮ) ನಿಂದನೆಯಲ್ಲಿ ತೊಡಗಿರುವ ಪ್ರತಿಯೊಬ್ಬನಿಗೂ ವಿನಾಶ ಕಾದಿದೆ! ಸಿರಿ-ಸಂಪತ್ತನ್ನು ಒಟ್ಟುಗೂಡಿಸಿಟ್ಟು ಅದನ್ನು ಎಣಿಸಿ ಎಣಿಸಿ ಇಡುತ್ತಿರುವ ಪ್ರತಿಯೊಬ್ಬನೂ ತನ್ನ ಸಂಪತ್ತು ತನ್ನನ್ನು ಸದಾ ಕಾಲ ಬದುಕಿಸುತ್ತದೆ ಎಂಬ ಭ್ರಮೆಯಲ್ಲಿದ್ದಾನೆ! ಖಂಡಿತಾ ಇಲ್ಲ! ನುಚ್ಚು-ನೂರುಗೊಳಿಸಿ ಬಿಡುವಂತಹ (ಅಲ್-ಹುತಮಃ ಎಂಬ ನರಕ ಕುಂಡದಲ್ಲಿ) ಅವನು ಎಸೆಯಲ್ಪಡುವುದು ನಿಶ್ಚಿತ! 'ಅಲ್-ಹುತಮಃ' ವು ಏನೆಂದು ಅದಾವ ವಿವರಣೆ ತಾನೆ ನಿಮಗೆ ಅರ್ಥೈಸಿ ಕೊಟ್ಟೀತು!? ಅಲ್ಲಾಹ್ ನು ಉರಿಸಿದಂತಹ ಬೆಂಕಿಯದು! ಹೃದಯಗಳ ಮೇಲೂ ಅದು ಏರಿ ಬರುವಂತಹದ್ದು! ಉದ್ದುದ್ದದ ಕಂಬದಂತಹ (ಆ ಬೆಂಕಿಯು ಅಲ್ಲಿ) ಅವರನ್ನು ಆವರಿಸಿಕೊಂಡು ಬಿಡುವುದು. {1-9} ☑

----------

ಅಲ್-ಫೀಲ್ | سورة الـفيل

| ಸೂರಃ ಅಲ್-ಫೀಲ್ | ಪವಿತ್ರ್ ಕುರ್‌ಆನ್ ನ 105 ನೆಯ ಸೂರಃ | ಇದರಲ್ಲಿ ಒಟ್ಟು 5 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ಆರಂಭಿಸುವೆ)!

[ಕಅಬಃ ಕಟ್ಟಡವನ್ನು ಧ್ವಂಸಗೊಳಿಸಲು ಯಮನ್ ನಿಂದ ದಂಡೆತ್ತಿ ಬಂದ] ಆನೆಗಳ ಸೇನೆಯವರೊಡನೆ ನಿಮ್ಮ ಒಡೆಯನು ಹೇಗೆ ವ್ಯವಹರಿಸಿದನೆಂದು (ಪೈಗಂಬರರೇ) ನೀವು ನೋಡಿದಿರಲ್ಲವೇ? ಅವರು ಹೂಡಿದ್ದ ಸಂಚನ್ನು ಅವನು ನಿರರ್ಥಕಗೊಳಿಸಲಿಲ್ಲವೇ? ಪಕ್ಷಿಗಳ (ಸೇನೆಯನ್ನು) ಅವನು ದಂಡು ದಂಡಾಗಿ ಅವರ ಮೇಲೆ ಎರಗಿಸಿ ಬಿಡಲಿಲ್ಲವೇ! {1-3}

ಸುಟ್ಟ ಆವೆಮಣ್ಣಿನ ಹೆಂಟೆಗಳನ್ನು ಅವರ ಮೇಲೆ ಎಸೆಯಲಾಗುತ್ತಿತ್ತು; ಕೂಡಲೇ ಅಲ್ಲಾಹ್ ನು ಅವರನ್ನು ಮೇವು ಹುಲ್ಲಿನಂತೆ ಮಾಡಿ ಬಿಟ್ಟನು! {4-5} ☑

----------

ಕುರೈಶ್ | سورة قريش

| ಸೂರಃ ಕುರೈಶ್ | ಪವಿತ್ರ್ ಕುರ್‌ಆನ್ ನ 106 ನೆಯ ಸೂರಃ | ಇದರಲ್ಲಿ ಒಟ್ಟು 4 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಆರಂಭಿಸುವೆ)!

ಕುರೈಶರಿಗೆ ರೂಢಿಯಾಗಿ ಬಿಟ್ಟ ಕಾರಣಕ್ಕಾಗಿ! (ಹೌದು)! ಚಳಿಗಾಲದ ಮತ್ತು ಬೇಸಿಗೆಯ ಪ್ರಯಾಣವನ್ನು [ಆ ಪ್ರದೇಶದ ಪ್ರತಿಕೂಲ ಸ್ಥಿತಿಯಲ್ಲೂ ಅಲ್ಲಾಹ್ ನು ಸುಗಮಗೊಳಿಸಿದ್ದರಿಂದ] ಅವರಿಗದು ರೂಢಿಯಾಗಿ (ಬದುಕಿನೊಂದಿಗೆ ಬೆಸೆಯಿತು)! ಅದಕ್ಕಾಗಿಯಾದರೂ ಈ ಭವನದ [ಅರ್ಥಾತ್ ಮಕ್ಕಃ ದಲ್ಲಿರುವ ಕಅಬಃ ಭವನದ] ಪ್ರಭುವನ್ನು ಅವರು ಆರಾಧಿಸಲಿ. [ಬರಡು ಭೂಮಿಯಲ್ಲಿ] ಹಸಿವೆಯಿಂದ ರಕ್ಷಿಸಿ ಅವರಿಗೆ ಉಣಿಸಿದ ಮತ್ತು [ಅಭದ್ರತೆಯ ಆ ಪ್ರದೇಶವನ್ನು] ಭೀತಿಮುಕ್ತಗೊಳಿಸಿ ಅವರಿಗೆ ಶಾಂತಿ-ಸುಭದ್ರತೆ ಒದಗಿಸಿದವನು ಆ ಪ್ರಭುವೇ! {1-4} ☑

----------

ಅಲ್-ಮಾ’ಊನ್ | سورة المـاعون

| ಸೂರಃ ಅಲ್-ಮಾ'ಊನ್ | ಪವಿತ್ರ್ ಕುರ್‌ಆನ್ ನ 107 ನೆಯ ಸೂರಃ | ಇದರಲ್ಲಿ ಒಟ್ಟು 7 ಆಯತ್ ಗಳು ಇವೆ |

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಆರಂಭಿಸುವೆ)!

[ಮರಣಾನಂತರದ] ಪ್ರತಿಫಲದ ದಿನವನ್ನು ಸುಳ್ಳೆಂದು ನಿರಾಕರಿಸಿ ಬಿಟ್ಟ ಆತನನ್ನು (ಓ ಪೈಗಂಬರರೇ,) ನೀವು ನೋಡಿದಿರಲ್ಲ?! ಅನಾಥರನ್ನು (ನಿರ್ದಯವಾಗಿ) ಹಿಂದೂಡಿ ಬಿಟ್ಟವನೂ, ಬಡವರಿಗೆ ಉಣಬಡಿಸುವ ಕಾರ್ಯದಲ್ಲಿ ಪ್ರೋತ್ಸಾಹಿಸದೇ ಇದ್ದವನೂ ಆತನೇ ತಾನೆ! ಇನ್ನು [ಆತನು ನಮಾಝ್ ನಿರ್ವಹಿಸಿದರೂ] ನಮಾಝ್ ನಿರ್ವಹಿಸುತ್ತಿರುವ ಅಂತಹ ಜನರಿಗೆ ವಿನಾಶವೇ ಗತಿ! ತಮ್ಮ ನಮಾಝ್ ಗಳ ಕುರಿತು ಅವರು ತೀರಾ ಅಸಡ್ಡೆಯಲ್ಲಿರುತ್ತಾರೆ; [ನಮಾಝ್ ಮುಂತಾದ ಸತ್ಕರ್ಮವನ್ನೂ] ಅವರು ಕೇವಲ ತೋರಿಕೆಗಾಗಿ ಮಾಡುತ್ತಾರೆ! (ವಾಸ್ತವದಲ್ಲಿ) ದೈನಂದಿನ ಬಳಕೆಯ ಸಣ್ಣ ಪುಟ್ಟ ವಸ್ತುಗಳನ್ನೂ (ಅಗತ್ಯವಿರುವವರಿಗೆ) ಕೊಡಲು ಅವರು ನಿರಾಕರಿಸುವವರಾಗಿದ್ದಾರೆ! {1-7} ☑

----------

ಅಲ್-ಕೌತರ್ | سورة الـكوثر

| ಸೂರಃ ಅಲ್-ಕೌತರ್ | ಪವಿತ್ರ್ ಕುರ್‌ಆನ್ ನ 108 ನೆಯ ಸೂರಃ | ಇದರಲ್ಲಿ ಒಟ್ಟು 3 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಅತ್ಯಧಿಕ ದಯೆ ತೋರುವವನು, ಶಾಶ್ವತವಾದ ಕರುಣೆಯುಳ್ಳವನು!

(ಓ ಪೈಗಂಬರರೇ,) ನಿಮಗೆ 'ಅಲ್-ಕೌತರ್' [ಅರ್ಥಾತ್ ಸಮೃದ್ಧಿ ಸೌಭಾಗ್ಯಗಳ ಆಧಿಕ್ಯ ಅಥವಾ ವಿಚಾರಣಾ ದಿನದ ಒಂದು ವಿಶಿಷ್ಟ ಕೊಳ] ವನ್ನು ನಾವು ದಯಪಾಲಿಸಿಯಾಗಿದೆ. ನೀವಿನ್ನು ನಿಮ್ಮ ಕರ್ತಾರನಿಗಾಗಿ [ಪವಿತ್ರ ಕಅಬಾ ದಲ್ಲಿ] 'ನಮಾಝ್' ನಿರ್ವಹಿಸುವವರಾಗಿರಿ ಮತ್ತು ಅವನಿಗಾಗಿ ಬಲಿ ನೀಡಿರಿ. ವಾಸ್ತವದಲ್ಲಿ ನಿಮ್ಮನ್ನು [ಪುತ್ರ ವಿಹೀನನೆಂದು ಅಪಮಾನಿಸುತ್ತಿರು] ನಿಮ್ಮ ಶತ್ರುವೇ ನಿರ್ವಂಶ, ನಿರ್ನಾಮನಾಗಲಿರುವನು! {1-3} ☑

----------

ಅಲ್-ಕಾಫಿರೂನ್ | سورة الـكافرون

| ಸೂರಃ ಅಲ್-ಕಾಫಿರೂನ್ | ಪವಿತ್ರ್ ಕುರ್‌ಆನ್ ನ 109 ನೆಯ ಸೂರಃ | ಇದರಲ್ಲಿ ಒಟ್ಟು 6 ಆಯತ್ ಗಳು ಇವೆ |

ಅತ್ಯಂತ ದಯಾಮಯನೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹ್ ನ ಹೆಸರಿನೊಂದಿಗೆ!

[ಸತ್ಯವನ್ನು ಉದ್ದೇಶಪೂರ್ವಕವಾಗಿಯೇ ನಿರಾಕರಿಸುತ್ತಿರುವ ಮಕ್ಕಃ ಪಟ್ಟಣದ] ಓ ಧಿಕ್ಕಾರಿಗಳೇ, ನೀವು ಏನನ್ನು ಪೂಜಿಸುತ್ತಿರುವಿರೋ ನಾನು ಅದನ್ನು ಪೂಜಿಸಲಾರೆ – ಎಂದು (ಓ ಪೈಗಂಬರರೇ) ನೀವು ಘೋಷಿಸಿರಿ. {1-2}

ಇನ್ನು, ಯಾರನ್ನು ನಾನು ಆರಾಧಿಸುತ್ತಿರುವೆನೋ ನೀವು ಅವನನ್ನು ಆರಾಧಿಸುವವರಲ್ಲ. ನೀವು ಏನನ್ನು ಆರಾಧಿಸುತ್ತಿದ್ದಿರೋ ನಾನಂತೂ ಅದನ್ನು (ಹಿಂದೆಯೂ) ಆರಾಧಿಸಿದನವಲ್ಲ. ಅಂತೆಯೇ, ಯಾರ ಆರಾಧನೆ ನಾನು ಮಾಡುತ್ತಿರುವೆನೋ ನೀವು ಅವನ ಅರಾಧನೆ ಮಾಡುವವರಲ್ಲ. [ಆದ್ದರಿಂದ ಇನ್ನು ಮುಂದೆ] ನಿಮಗೆ ನಿಮ್ಮ ಧರ್ಮವಿರಲಿ, ನಾನು ನನ್ನ ಧರ್ಮದಲ್ಲಿರುತ್ತೇನೆ – [ಎಂದು ಖಡಾಖಂಡಿತವಾಗಿ ಪೈಗಂಬರರೇ ನೀವು ಅವರಿಗೆ ಸಾರಿ ಹೇಳಿರಿ]. {3-6} ☑

----------

ಅನ್-ನಸ್ರ್ | سورة الـنصر

| ಸೂರಃ ಅನ್-ನಸ್ರ್ | ಪವಿತ್ರ್ ಕುರ್‌ಆನ್ ನ 110 ನೆಯ ಸೂರಃ | ಇದರಲ್ಲಿ ಒಟ್ಟು 3 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಅತ್ಯಧಿಕ ದಯೆ ತೋರುವವನೂ ಶಾಶ್ವತವಾದ ಕರುಣೆಯುಳ್ಳವನೂ ಆಗಿರುವನು!

(ಓ ಪೈಗಂಬರರೇ,) ಮುಂದೆ, ಅಲ್ಲಾಹ್ ನ ನೆರವು ಬಂದು ಬಿಟ್ಟಾಗ, ಮತ್ತು [ಮಕ್ಕಃ ಪಟ್ಟಣದ ಮೇಲೆ ನಿಮಗೆ] ವಿಜಯ ಪ್ರಾಪ್ತವಾದಾಗ (ಅಲ್ಲಿಯ) ಜನರು ಸಮೂಹ ಸಮೂಹವಾಗಿ ಅಲ್ಲಾಹ್ ನ 'ದೀನ್' ಗೆ [ಅರ್ಥಾತ್ ಇಸ್ಲಾಮ್ ಧರ್ಮಕ್ಕೆ] ಬಂದು ಸೇರಿಕೊಳ್ಳುವುದನ್ನು ನೀವು (ಕಣ್ಣಾರೆ) ಕಂಡುಕೊಳ್ಳುವ ಸಂದರ್ಭ ಬಂದಾಗ, ಕೀರ್ತನೆ ಮಾಡುವುದರೊಂದಿಗೆ ನೀವು ನಿಮ್ಮ ಕರ್ತಾರನ ಪಾವಿತ್ರ್ಯವನ್ನು ಜಪಿಸಿರಿ; ಜೊತೆಗೆ ಅವನಿಂದ ಕ್ಷಮೆ ಬಯಸುತ್ತಲಿರಿ! ಅವನಾದರೋ ಬಹಳವಾಗಿ ಕ್ಷಮಿಸುವವನಾಗಿರುವನು. {1-3} ☑

----------

ಅಲ್-ಲಹಬ್ | سورة اللهب

| ಸೂರಃ ಅಲ್-ಲಹಬ್ | ಪವಿತ್ರ್ ಕುರ್‌ಆನ್ ನ 111 ನೆಯ ಸೂರಃ | ಇದರಲ್ಲಿ ಒಟ್ಟು 5 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಪರಮಾವಧಿ ದಯಾಮಯನು, ನಿತ್ಯ ಕಾರುಣ್ಯವಂತನು!

'ಅಬೂ ಲಹಬ್' ನ ಎರಡೂ ಕೈಗಳು ಕ್ಷಯಿಸಿ ಹೋದವು; ಅವನೂ ನಶಿಸಿ ಹೋದನು. ಅವನ ಸಂಪತ್ತು ಹಾಗೂ [ತೋರಿಕೆಗಾಗಿ ಮಾಡುತ್ತಿದ್ದ] ಸತ್ಕಾರ್ಯಗಳು ಅವನ ಯಾವ ಪ್ರಯೋಜನಕ್ಕೂ ಬರಲಿಲ್ಲ. ಧಗಧಗಿಸುವ ಜ್ವಾಲೆಗಳನ್ನು ಹೊಂದಿದ ಬೆಂಕಿಗೆ ಶೀಘ್ರವೇ ಅವನು ತಳ್ಳಲ್ಪಡುವನು. ಜೊತೆಗೆ, ಉರುವಲು ಹೊರುವ ಅವನ ಮಡದಿಯೂ (ಅದೇ ಬೆಂಕಿಗೆ ತಳ್ಳಲ್ಪಡುವಳು). ಆಕೆಯ ಕೊರಳಲ್ಲಿ [ಆಡಂಬರದ ಆಭರಣಕ್ಕೆ ಬದಲಾಗಿ ಅಂದು] ನೆಯ್ದು ಬಿಗಿಗೊಳಿಸಲ್ಪಟ್ಟ ಹಗ್ಗವಿರುವುದು. {1-5} ☑

---------

ಅಲ್-ಇಖ್ಲಾಸ್ | سورة الإخلاص

| ಸೂರಃ ಅಲ್-ಇಖ್ಲಾಸ್ | ಪವಿತ್ರ್ ಕುರ್‌ಆನ್ ನ 112 ನೆಯ ಸೂರಃ | ಇದರಲ್ಲಿ ಒಟ್ಟು 4 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಪರಮಾವಧಿ ದಯಾಮಯನು, ನಿತ್ಯ ಕಾರುಣ್ಯವಂತನು!

ಅವನೇ ಅಲ್ಲಾಹ್ ನು, ಏಕಮಾತ್ರನು! ಅಲ್ಲಾಹ್ ನಿಗೆ ಯಾವ, ಯಾರ ಆಶ್ರಯದ ಅಗತ್ಯವೂ ಇಲ್ಲ; ಎಲ್ಲರಿಗೂ ಅವನೇ ಆಶ್ರಯದಾತನು. ಅವನು ಯಾರಿಗೂ ಜನ್ಮವಿತ್ತಿಲ್ಲ, ಅವನು ಜನಿಸಲ್ಪಟ್ಟವನೂ ಅಲ್ಲ. ಅವನಿಗೆ ಸರಿಸಾಟಿ ಯಾರೂ ಇಲ್ಲ - ಎಂದು [ಪೈಗಂಬರರೇ, ನೀವಿನ್ನು ಮಕ್ಕಃ ಪಟ್ಟಣದಲ್ಲಿನ ಬಹುದೇವ ವಿಶ್ವಾಸಿಗಳಿಗೆ ಘಂಟಾಘೋಷವಾಗಿ] ಸಾರಿ ಹೇಳಿರಿ. {1-4} ☑

----------

ಅಲ್-ಫಲಕ್ | سورة الـفلق

| ಸೂರಃ ಅಲ್-ಫಲಕ್ | ಪವಿತ್ರ್ ಕುರ್‌ಆನ್ ನ 113 ನೆಯ ಸೂರಃ | ಇದರಲ್ಲಿ ಒಟ್ಟು 5 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಧಾರಾಳ ದಯೆ ತೋರುವವನು, ಅವನ ಕಾರುಣ್ಯವು ನಿರಂತರ!

(ಅಲ್ಲಾಹ್ ನು) ಏನೆಲ್ಲ ಸೃಷ್ಟಿರುವನೋ ಅವುಗಳಿಂದ (ಸಂಭವಿಸಬಹುದಾದ) ತೊಂದರೆಗಳಿಂದ; (ವಿಶೇಷವಾಗಿ) ಕತ್ತಲು ಆವರಿಸಿಕೊಂಡಾಗ ಅದರ [ಅಂಧಕಾರದಲ್ಲಿ ತಲೆದೋರುವ ಎಲ್ಲ] ವಿಪತ್ತುಗಳಿಂದ; (ನೂಲಿನಲ್ಲಿ ಬಿಗಿದ) ಗಂಟುಗಳಲ್ಲಿ (ಮಂತ್ರಿಸಿ) ಊದುವ ಮಾಟಗಾತಿಯರ ಕಾಟದಿಂದ, ಹಾಗೂ ಮತ್ಸರಿಗಳು ಅಸೂಯೆ ಪಡುತ್ತಿರುವಾಗ ಅವರ ಅಸೂಯೆಯ ಕೇಡಿನಿಂದ, ನಾನು ಸಕಲ (ಜೀವರಾಶಿಯನ್ನು) ಅಸ್ತಿತ್ವಕ್ಕೆ ತಂದ ಸೃಷ್ಟಿಕರ್ತ (ಅಲ್ಲಾಹ್) ನ ರಕ್ಷಣೆಯನ್ನು ಬಯಸುತ್ತೇನೆ – ಎಂದು (ಓ ಪೈಗಂಬರರೇ) ನೀವು ಪ್ರಾರ್ಥಿಸಿರಿ. {1-5} ☑

----------

ಅನ್-ನಾಸ್ | سورة الـناس
| ಸೂರಃ ಅನ್-ನಾಸ್ | ಪವಿತ್ರ್ ಕುರ್‌ಆನ್ ನ 114 ನೆಯ ಸೂರಃ | ಇದರಲ್ಲಿ ಒಟ್ಟು 6 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಮಹಾ ಕರುಣಾಮಯಿ, ಅವನ ಕಾರುಣ್ಯವು ಶಾಶ್ವತ!

ಪದೇಪದೇ ಗೊಂದಲಗಳನ್ನು ಬಿತ್ತಿ (ಮನುಷ್ಯರನ್ನು) ಚಂಚಲಚಿತ್ತರನ್ನಾಗಿ ಮಾಡುವವನ ಕಾಟದಿಂದ ನಾನು ಮನುಷ್ಯರ ಕರ್ತೃ, ಮನುಷ್ಯರ ಅಧಿಪತಿ, ಮನುಷ್ಯರ ಆರಾಧ್ಯನಾದ (ಅಲ್ಲಾಹ್ ನ) ರಕ್ಷಣೆಯನ್ನು ಬಯಸುತ್ತೇನೆ – ಎಂದು (ಓ ಪೈಗಂಬರರೇ) ನೀವು ಪ್ರಾರ್ಥಿಸಿರಿ. ಮನುಷ್ಯರ ಮನಸ್ಸುಗಳಲ್ಲಿ ಅವನು ನಿರಂತರ ದುಷ್ಪ್ರೇರಣೆ ಉಂಟುಮಾಡುತ್ತಾನೆ. [ಮನುಷ್ಯರನ್ನು ಹಾಗೆ ಕಾಡುವವರಲ್ಲಿ] ಕೆಲವರು 'ಜಿನ್ನ್' ವರ್ಗಕ್ಕೆ ಸೇರಿದವರಾಗಿದ್ದಾರೆ; (ಇನ್ನು ಕೆಲವರು) 'ಮನುಷ್ಯ' ವರ್ಗಕ್ಕೆ ಸೇರಿದವರಾಗಿದ್ದಾರೆ! {1-6} ☑
------------ 


ಅನುವಾದಿತ ಸೂರಃ ಗಳು:

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...