ಅನ್ ನಮ್‌ಲ್ | ترجمة سورة النمل

    تـرجمـة سورة النمل من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅನ್ ನಮ್‌ಲ್ | ಪವಿತ್ರ ಕುರ್‌ಆನ್ ನ 27 ನೆಯ ಸೂರಃ | ಇದರಲ್ಲಿ ಒಟ್ಟು 93 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

طس ۚ تِلْكَ آيَاتُ الْقُرْآنِ وَكِتَابٍ مُبِينٍ

ತ್ವಾ - ಸೀನ್! ಇದು ಕುರ್‌ಆನ್ ನ ಅಂದರೆ ಬಹಳ ಸ್ಪಷ್ಟವಾದ ಒಂದು ಗ್ರಂಥದ ವಚನಗಳು. {1}

هُدًى وَبُشْرَىٰ لِلْمُؤْمِنِينَ

ಇದು ವಿಶ್ವಾಸಿಗಳ ಪಾಲಿಗೆ ಒಂದು ಮಾರ್ಗದರ್ಶನವಾಗಿದೆ; ಮತ್ತು ಇದರಲ್ಲಿ ಅವರಿಗೆ ಸಂತಸದ ಸುದ್ದಿ ಇದೆ. {2}

الَّذِينَ يُقِيمُونَ الصَّلَاةَ وَيُؤْتُونَ الزَّكَاةَ وَهُمْ بِالْآخِرَةِ هُمْ يُوقِنُونَ

(ನಿಜವಾದ ವಿಶ್ವಾಸಿಗಳು) ಯಾರೆಂದರೆ ಸ್ಥಿರವಾಗಿ ನಮಾಝ್ ಮಾಡುವವರು, ಝಕಾತ್ ನೀಡುವವರು, ಮತ್ತು ಪರಲೋಕ ಜೀವನದ ಬಗ್ಗೆ ಗಟ್ಟಿ ನಂಬಿಕೆ ಹೊಂದಿರುವವರು. {3}

إِنَّ الَّذِينَ لَا يُؤْمِنُونَ بِالْآخِرَةِ زَيَّنَّا لَهُمْ أَعْمَالَهُمْ فَهُمْ يَعْمَهُونَ

ಇನ್ನು ಯಾರಿಗೆ ಪರಲೋಕದ ಜೀವನದಲ್ಲಿ ನಂಬಿಕೆ ಇಲ್ಲವೋ ಅಂತಹವರಿಗೆ ನಾವು (ಶಿಕ್ಷೆಯಾಗಿ) ಅವರ ಕರ್ಮಗಳನ್ನು ಅವರಿಗೆ ಆಕರ್ಷಕವಾಗಿ ತೋರುವಂತೆ ಮಾಡಿರುವೆವು; ಆದ್ದರಿಂದಲೇ ಅವರು ಅಂಧರಾಗಿ ಅಲೆಯುತ್ತಿರುತ್ತಾರೆ. {4}

أُولَٰئِكَ الَّذِينَ لَهُمْ سُوءُ الْعَذَابِ وَهُمْ فِي الْآخِرَةِ هُمُ الْأَخْسَرُونَ

ಅಂತಹವರಿಗೆ ಬಹಳ ಕೆಟ್ಟ ಸ್ವರೂಪದ ಶಿಕ್ಷೆ ಇದೆ; ಪರಲೋಕದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಲಿರುವವರು ಅಂತಹವರೇ ಆಗಿರುವರು. {5}

وَإِنَّكَ لَتُلَقَّى الْقُرْآنَ مِنْ لَدُنْ حَكِيمٍ عَلِيمٍ

ಪೈಗಂಬರರೇ, [ನೀವು ಅಂಜಬೇಕಾಗಿಲ್ಲ; ಏಕೆಂದರೆ] ಅತ್ಯಂತ ವಿವೇಕಪೂರ್ಣವಾದ ಮತ್ತು ಮಹಾ ಪ್ರಾಜ್ಞನಾದ (ಅಲ್ಲಾಹ್ ನ) ವತಿಯಿಂದ ನೀವು ಈ ಕುರ್‌ಆನ್ ಅನ್ನು ಪಡೆಯುತ್ತಿರುವಿರಿ ಎಂಬುದು ಸಂಶಯಾತೀತ ವಿಷಯ. {6}

إِذْ قَالَ مُوسَىٰ لِأَهْلِهِ إِنِّي آنَسْتُ نَارًا سَآتِيكُمْ مِنْهَا بِخَبَرٍ أَوْ آتِيكُمْ بِشِهَابٍ قَبَسٍ لَعَلَّكُمْ تَصْطَلُونَ

ಹಾಗಿರುವಾಗ, ಪ್ರವಾದಿ ಮೂಸಾ [ಮದ್‌ಯನ್ ಪ್ರದೇಶದಿಂದ ಈಜಿಪ್ಟ್ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ] ತಮ್ಮ ಕುಟುಂಬದವರೊಂದಿಗೆ ಹೇಳಿದ್ದನ್ನು ಸ್ಮರಿಸಿರಿ: ನಾನು (ದೂರದಲ್ಲಿ) ಬೆಂಕಿಯನ್ನು ಕಂಡಿರುತ್ತೇನೆ. ಅಲ್ಲಿಂದ ನಿಮಗೆ ಏನಾದರೂ (ಪ್ರಯೋಜನಕಾರಿ) ಮಾಹಿತಿಯನ್ನು ತರುತ್ತೇನೆ ಅಥವಾ ಬೆಂಕಿಯ ಒಂದು ದೊಂದಿಯನ್ನಾದರೂ ಹೊತ್ತಿಸಿಕೊಂಡು ಬರುತ್ತೇನೆ, ನೀವು ಚಳಿಕಾಯಿಸಿ ಕೊಳ್ಳಬಹುದು. {7}

فَلَمَّا جَاءَهَا نُودِيَ أَنْ بُورِكَ مَنْ فِي النَّارِ وَمَنْ حَوْلَهَا وَسُبْحَانَ اللَّهِ رَبِّ الْعَالَمِينَ

ಹಾಗೆ ಅವರು ಅದರ ಹತ್ತಿರ ತಲುಪಿದಾಗ, ಕರೆಯೊಂದು ಮೊಳಗಿತು: ಬೆಂಕಿಯಲ್ಲಿರುವವರನ್ನು ಮತ್ತು ಅದರ ಪರಿಸರದಲ್ಲಿರುವವರನ್ನು ಅನುಗ್ರಹ ಪೂರಿತರನ್ನಾಗಿ ಮಾಡಲಾಗಿದೆ. ಇಡೀ ಜಗತ್ತಿನ ಒಡೆಯನಾದ ಆ ಅಲ್ಲಾಹ್ ನು ಬಹಳ ಪರಿಶುದ್ಧನು! {8}

يَا مُوسَىٰ إِنَّهُ أَنَا اللَّهُ الْعَزِيزُ الْحَكِيمُ

ಓ ಮೂಸಾ! ನಾನೇ ಆ ಅಲ್ಲಾಹ್ ನು; ಬಹಳ ಪ್ರತಾಪವುಳ್ಳವನೂ ಅತ್ಯಂತ ವಿವೇಕಪೂರ್ಣನೂ ಆದವನು! {9}

وَأَلْقِ عَصَاكَ ۚ فَلَمَّا رَآهَا تَهْتَزُّ كَأَنَّهَا جَانٌّ وَلَّىٰ مُدْبِرًا وَلَمْ يُعَقِّبْ ۚ يَا مُوسَىٰ لَا تَخَفْ إِنِّي لَا يَخَافُ لَدَيَّ الْمُرْسَلُونَ

ಈಗ ನಿನ್ನ ಊರುಗೋಲನ್ನು ಕೆಳಕ್ಕೆ ಹಾಕು! (ಮೂಸಾ ಅದನ್ನು ಕೆಳಕ್ಕೆ ಹಾಕಿದಾಗ) ಅದು ಹಾವಿನಂತೆ ಹರಿದಾಡತೊಡಗಿತು. ಅವರು (ಹೆದರಿ) ಹಿಂದಿರುಗಿ ಓಟಕಿತ್ತರು; ತಿರುಗಿ ನೋಡಲೂ ಇಲ್ಲ. ಓ ಮೂಸಾ! ಹೆದರಬೇಡ, ನನ್ನ ಸನ್ನಿಧಿಯಲ್ಲಿ ನನ್ನ ದೂತರುಗಳು ಹೆದರುವುದಿಲ್ಲ! {10}

إِلَّا مَنْ ظَلَمَ ثُمَّ بَدَّلَ حُسْنًا بَعْدَ سُوءٍ فَإِنِّي غَفُورٌ رَحِيمٌ

ಅನ್ಯಾಯವಾಗಿ ತಪ್ಪು ಮಾಡಿದವನ ಹೊರತು! ಆದರೆ ತಪ್ಪು ಮಾಡಿದ ನಂತರ (ಒಳಿತನ್ನು ಮಾಡುವ ಮೂಲಕ) ಅದನ್ನು ಒಳಿತಾಗಿ ಪರಿವರ್ತಿಸಿ ಕೊಂಡವನ ಪಾಲಿಗೆ ನಾನು ಬಹಳವಾಗಿ ಕ್ಷಮಿಸುವವನೂ ಹೆಚ್ಚು ಕರುಣಾಮಯಿಯೂ ಆಗಿರುವೆನು. {11}

وَأَدْخِلْ يَدَكَ فِي جَيْبِكَ تَخْرُجْ بَيْضَاءَ مِنْ غَيْرِ سُوءٍ ۖ فِي تِسْعِ آيَاتٍ إِلَىٰ فِرْعَوْنَ وَقَوْمِهِ ۚ إِنَّهُمْ كَانُوا قَوْمًا فَاسِقِينَ

ಈಗ ನಿಮ್ಮ ಕೈಯನ್ನು ನಿಮ್ಮ ವಕ್ಷದ ಜೇಬಿನೊಳಕ್ಕೆ ಹಾಕಿರಿ; ಅದು ನ್ಯೂನತೆಗಳಿಲ್ಲದ ಬಿಳುಪಾಗಿ (ಹೊಳೆಯುತ್ತಾ) ಹೊರಬರುವುದು. ಇವು ಫಿರ್‌ಔನ್ ಮತ್ತು ಆತನ ಸಮುದಾಯದೆಡೆಗೆ ಕೊಂಡೊಯ್ಯಬೇಕಾದ ಒಂಬತ್ತು ದೈವಿಕ ನಿದರ್ಶನಗಳ ಸಾಲಿಗೆ ಸೇರಿದ (ಎರಡು ನಿದರ್ಶನಗಳು). ಸಂಶಯಾತೀತವಾಗಿ ಅವರು ಹದ್ದುಮೀರಿದ ಒಂದು ಸಮುದಾಯವಾಗಿರುವರು. {12}

فَلَمَّا جَاءَتْهُمْ آيَاتُنَا مُبْصِرَةً قَالُوا هَٰذَا سِحْرٌ مُبِينٌ

ಕಣ್ಣು ತೆರೆಸುವಂತಹ ನಮ್ಮ ನಿದರ್ಶನಗಳು ಅವರ ಬಳಿಗೆ ಬಂದಾಗ ಇವೆಲ್ಲ ಶುದ್ಧ ಜಾದೂಗಾರಿಕೆಯಾಗಿವೆ ಎಂದು ಅವರು (ಅಲ್ಲಗಳೆಯುತ್ತಾ) ಹೇಳಿದರು. {13}

وَجَحَدُوا بِهَا وَاسْتَيْقَنَتْهَا أَنْفُسُهُمْ ظُلْمًا وَعُلُوًّا ۚ فَانْظُرْ كَيْفَ كَانَ عَاقِبَةُ الْمُفْسِدِينَ

ಆ ಎಲ್ಲ ನಿದರ್ಶನಗಳು ಸತ್ಯವೆಂದು ಅವರ ಹೃದಯಗಳಿಗೆ ಮನರಿಕೆಯಾಗಿದ್ದರೂ, ಅನ್ಯಾಯವಾಗಿ ಮತ್ತು ದುರಹಂಕಾರ ತೋರುತ್ತಾ ಅವುಗಳನ್ನು ಅವರು ತಿರಸ್ಕರಿಸಿ ಬಿಟ್ಟರು! ಅಂತಹ ಭ್ರಷ್ಟ ಜನರ ಅಂತ್ಯವೇನಾಯಿತು ಎಂದು ನೀವೇ ನೋಡಿರಿ. {14}

وَلَقَدْ آتَيْنَا دَاوُودَ وَسُلَيْمَانَ عِلْمًا ۖ وَقَالَا الْحَمْدُ لِلَّهِ الَّذِي فَضَّلَنَا عَلَىٰ كَثِيرٍ مِنْ عِبَادِهِ الْمُؤْمِنِينَ

(ಮತ್ತೊಂದು ಕಡೆ), ಪ್ರವಾದಿಗಳಾದ ದಾವೂದ್ ಮತ್ತು ಸುಲೈಮಾನ್ ರಿಗೆ ನಿಜಕ್ಕೂ ನಾವು (ಅಸಾಧಾರಣವಾದ) ಸುಜ್ಞಾನವನ್ನು ದಯಪಾಲಿಸಿದ್ದೆವು. ಆಗ ಅವರಿಬ್ಬರೂ [ಅಹಂಕಾರ ತೋರಲಿಲ್ಲ, ಬದಲಾಗಿ], ಎಲ್ಲಾ ಸ್ತುತಿಸ್ತೋತ್ರಗಳು ಅಲ್ಲಾಹ್ ನಿಗೆ ಸಲ್ಲುತ್ತದೆ; ವಿಶ್ವಾಸಿಗಳಾದ ತನ್ನ ಹೆಚ್ಚಿನ ಉಪಾಸಕರಿಗಿಂತ ಅವನು ನಮಗೆ ಶ್ರೇಷ್ಠತೆಯನ್ನು ಕರುಣಿಸಿರುವನು ಎಂದು (ಕೃತಜ್ಞನೆ ತೋರುತ್ತಾ) ಹೇಳಿದರು! {15}

وَوَرِثَ سُلَيْمَانُ دَاوُودَ ۖ وَقَالَ يَا أَيُّهَا النَّاسُ عُلِّمْنَا مَنْطِقَ الطَّيْرِ وَأُوتِينَا مِنْ كُلِّ شَيْءٍ ۖ إِنَّ هَٰذَا لَهُوَ الْفَضْلُ الْمُبِينُ

ಪ್ರವಾದಿ ದಾವೂದ್ ರ ನಂತರ ಸಾಮ್ರಾಜ್ಯದ ಅಧಿಕಾರವನ್ನು ಪ್ರವಾದಿ ಸುಲೈಮಾನ್ ರು ಪಡೆದುಕೊಂಡರು. ಓ ಜನರೇ, ನಮಗೆ ಪಕ್ಷಿಗಳ ಭಾಷೆಯನ್ನು ಕಲಿಸಿ ಕೊಡಲಾಗಿದೆ ಮತ್ತು (ಬೇಕಾದ) ಎಲ್ಲಾ ವಸ್ತುಗಳನ್ನು ನೀಡಲಾಗಿದೆ. ಅದು ನಿಜವಾಗಿ ಒಂದು ಸ್ಪಷ್ಟವಾದ ಅನುಗ್ರಹವೇ ಸರಿ! {16}

وَحُشِرَ لِسُلَيْمَانَ جُنُودُهُ مِنَ الْجِنِّ وَالْإِنْسِ وَالطَّيْرِ فَهُمْ يُوزَعُونَ

ಸುಲೈಮಾನ್ ರ ಮುಂದೆ ಜಿನ್ನ್ ವರ್ಗ, ಮಾನವರು ಮತ್ತು ಪಕ್ಷಿಗಳಿಂದ ಕೂಡಿದ ಸೇನಾಪಡೆಯನ್ನು [ಒಂದು ದಿನ ಪರಿಶೀಲನೆಗಾಗಿ] ಒಟ್ಟು ಸೇರಿಸಲಾಗಿತ್ತು; ಪಡೆಯನ್ನು ಸಾಲಾಗಿ ಕ್ರಮಬದ್ಧವಾಗಿ ವಿಂಗಡಿಸಲಾಗಿತ್ತು. {17}

حَتَّىٰ إِذَا أَتَوْا عَلَىٰ وَادِ النَّمْلِ قَالَتْ نَمْلَةٌ يَا أَيُّهَا النَّمْلُ ادْخُلُوا مَسَاكِنَكُمْ لَا يَحْطِمَنَّكُمْ سُلَيْمَانُ وَجُنُودُهُ وَهُمْ لَا يَشْعُرُونَ

[ಅದು ಮುನ್ನಡೆಯುತ್ತಾ] ಇರುವೆಗಳ ಒಂದು ಕಣಿವೆಯ ಬಳಿಗೆ ಬಂದಾಗ ಹೆಣ್ಣಿರುವೆಯೊಂದು ಹೇಳಿತು: ಇರುವೆಗಳೇ, ನೀವೆಲ್ಲ ನಿಮ್ಮ ನಿಮ್ಮ ಮನೆಗಳೊಳಗೆ ಪ್ರವೇಶಿಸಿಕೊಳ್ಳಿರಿ, ಸುಲೈಮಾನ್ ಮತ್ತವರ ಸೇನಾಪಡೆಯು ತಮಗೆ ಅರಿವಿಲ್ಲದಂತೆ ನಿಮ್ಮನ್ನು ತುಳಿದು ನುಚ್ಚುನೂರು ಗೊಳಿಸದಿರಲಿ! {18}

فَتَبَسَّمَ ضَاحِكًا مِنْ قَوْلِهَا وَقَالَ رَبِّ أَوْزِعْنِي أَنْ أَشْكُرَ نِعْمَتَكَ الَّتِي أَنْعَمْتَ عَلَيَّ وَعَلَىٰ وَالِدَيَّ وَأَنْ أَعْمَلَ صَالِحًا تَرْضَاهُ وَأَدْخِلْنِي بِرَحْمَتِكَ فِي عِبَادِكَ الصَّالِحِينَ

ಅದರ ಮಾತನ್ನಾಲಿಸಿದ ಸುಲೈಮಾನ್ ರು ಹರ್ಷಿತರಾಗಿ ಮುಗುಳ್ನಕ್ಕರು. ನಂತರ ಅವರು, ಓ ನನ್ನ ಒಡೆಯನೇ, ನನಗೂ ನನ್ನ ಮಾತಾಪಿತರಿಗೂ ನೀನು ದಯಪಾಲಿಸಿದ ಅನುಗ್ರಹಗಳಿಗಾಗಿ ನಿನಗೆ ಕೃತಜ್ಞತೆ ತೋರಲು, ಹಾಗೂ ನೀನು ಮುಚ್ಚುವಂತಹ ಸತ್ಕರ್ಮಗಳನ್ನು ನಾನು ಮಾಡುವಂತಾಗಲು ನನಗೆ ಸ್ಫೂರ್ತಿ ನೀಡು; ಮತ್ತು ನಿನ್ನ ವಿಶೇಷ ಕೃಪೆಯಿಂದ ನನ್ನನ್ನು ನಿನ್ನ ಸಜ್ಜನ ಉಪಾಸಕರ ಸಾಲಿಗೆ ಸೇರಿಸು ಎಂದು ಪ್ರಾರ್ಥಿಸಿಕೊಂಡರು! {19}

وَتَفَقَّدَ الطَّيْرَ فَقَالَ مَا لِيَ لَا أَرَى الْهُدْهُدَ أَمْ كَانَ مِنَ الْغَائِبِينَ

(ಮತ್ತೊಂದು ದಿನ, ತಮ್ಮ ಸೇನಾಪಡೆಯ) ಪಕ್ಷಿಗಳನ್ನು ಸುಲೈಮಾನ್ ರು ಪರಿಶೀಲಿಸುತ್ತಿದ್ದಾಗ ಹೇಳಿದರು: ಅದೇಕೆ ನಾನು ಹುದ್‌ಹುದ್ ಪಕ್ಷಿಯನ್ನು ಇಲ್ಲಿ ಕಾಣುತ್ತಿಲ್ಲ? ಅದು ಗೈರುಹಾಜರಾಗಿದೆಯೇ? {20}

لَأُعَذِّبَنَّهُ عَذَابًا شَدِيدًا أَوْ لَأَذْبَحَنَّهُ أَوْ لَيَأْتِيَنِّي بِسُلْطَانٍ مُبِينٍ

ಹೌದಾದರೆ ನಾನು ಅದಕ್ಕೆ ಜರೂರಾಗಿ ಕಠಿಣ ಸ್ವರೂಪದ ಶಿಕ್ಷೆ ನೀಡಲಿರುವೆನು; ಅಥವಾ ಅದರ ಕತ್ತು ಕೊಯ್ಯಲಿರುವೆನು! ಅಥವಾ ಅದು (ತನ್ನ ಗೈರುಹಾಜರಿಗೆ) ಸ್ಪಷ್ಟವಾದ ಪ್ರಬಲವಾದ ಕಾರಣ ನೀಡಬೇಕು. {21}

فَمَكَثَ غَيْرَ بَعِيدٍ فَقَالَ أَحَطْتُ بِمَا لَمْ تُحِطْ بِهِ وَجِئْتُكَ مِنْ سَبَإٍ بِنَبَإٍ يَقِينٍ

ಹೆಚ್ಚು ಸಮಯ ದೂರ ಉಳಿಯದೆ ಹುದ್‌ಹುದ್ ಪಕ್ಷಿಯು ಅಲ್ಲಿಗೆ ತಲುಪಿ ಹೇಳಿತು: ನಿಮಗೆ ತಿಳಿಯಲು ಸಾಧ್ಯವಾಗದ ಒಂದು ಸಂಗತಿಯ ಬಗ್ಗೆ ನಾನು ಅರಿವು ಪಡೆದಿರುತ್ತೇನೆ; ಹೌದು, ಸಬಾ ಎಂಬ ನಾಡಿನಿಂದ ಖಚಿತವಾದ ಒಂದು ಸುದ್ದಿಯನ್ನು ತಂದಿರುತ್ತೇನೆ! {22}

إِنِّي وَجَدْتُ امْرَأَةً تَمْلِكُهُمْ وَأُوتِيَتْ مِنْ كُلِّ شَيْءٍ وَلَهَا عَرْشٌ عَظِيمٌ

ಅದೇನಂದರೆ ಒಬ್ಬ ಮಹಿಳೆ ಅಲ್ಲಿಯ ಜನರ ಮೇಲೆ (ರಾಣಿಯಾಗಿ) ಆಡಳಿತ ನಡೆಸುತ್ತಿರುವುದನ್ನು ನಾನು ಕಂಡಿರುತ್ತೇನೆ. ಆಕೆಗೆ ಸಕಲ ವಿಧ ಸವಲತ್ತುಗಳು ನೀಡಲಾಗಿದೆ. ಮಾತ್ರವಲ್ಲ, ಅಕೆಯ ಬಳಿ ಭವ್ಯವಾದ ಒಂದು ಸಿಂಹಾಸನವೂ ಇದೆ. {23}

وَجَدْتُهَا وَقَوْمَهَا يَسْجُدُونَ لِلشَّمْسِ مِنْ دُونِ اللَّهِ وَزَيَّنَ لَهُمُ الشَّيْطَانُ أَعْمَالَهُمْ فَصَدَّهُمْ عَنِ السَّبِيلِ فَهُمْ لَا يَهْتَدُونَ

ಅಕೆ ಮತ್ತು ಆಕೆಯ ಸಮುದಾಯದ ಜನರು ಅಲ್ಲಾಹ್ ನನ್ನು ಬಿಟ್ಟು ಸೂರ್ಯನಿಗೆ ನಮಿಸುವವರಾಗಿದ್ದಾರೆ. ಅವರ ಅಂತಹ ದುಶ್ಕೃತ್ಯಗಳನ್ನು ಸೈತಾನನು ಅವರಿಗೆ ಚಂದಗೊಳಿಸಿ ತೋರಿಸಿರುತ್ತಾನೆ ಮತ್ತು ಅವರನ್ನು (ಅಲ್ಲಾಹ್ ನ) ದಾರಿಯಿಂದ ತಡೆದಿಟ್ಟಿರುತ್ತಾನೆ. ಆದ್ದರಿಂದ ಅವರಿಗೆ ಸರಿದಾರಿಗೆ ಬರಲಾಗುತ್ತಿಲ್ಲ. {24}

أَلَّا يَسْجُدُوا لِلَّهِ الَّذِي يُخْرِجُ الْخَبْءَ فِي السَّمَاوَاتِ وَالْأَرْضِ وَيَعْلَمُ مَا تُخْفُونَ وَمَا تُعْلِنُونَ

ಭೂಮಿ ಮತ್ತು ಆಕಾಶಗಳಲ್ಲಿ ಅಡಗಿರುವ ವಸ್ತುಗಳನ್ನು ಹೊರತರಬಲ್ಲ, ಹಾಗೂ ನೀವು ಬಚ್ಚಿಡುವ ಮತ್ತು ಬಹಿರಂಗ ಪಡಿಸುವ ಎಲ್ಲಾ ಸಂಗತಿಗಳನ್ನು ಅರಿಯುವ ಆ ಅಲ್ಲಾಹ್ ನಿಗೆ ನಮಿಸದಂತೆ ಸೈತಾನನು ಅವರನ್ನು ತಡೆದಿಟ್ಟಿರುತ್ತಾನೆ. {25}

اللَّهُ لَا إِلَٰهَ إِلَّا هُوَ رَبُّ الْعَرْشِ الْعَظِيمِ ۩

ಅಲ್ಲಾಹ್! ಅವನ ಹೊರತು ಬೇರೆ ಯಾರೂ ದೇವರಿಲ್ಲ; ಭವ್ಯವಾದ ಅರ್‌ಷ್ (ಅರ್ಥಾತ್ ವಿಶ್ವದ ಆಡಳಿತ ಗದ್ದುಗೆಗೆ) ಅವನೇ ಒಡೆಯನು! {26} ۩

قَالَ سَنَنْظُرُ أَصَدَقْتَ أَمْ كُنْتَ مِنَ الْكَاذِبِينَ

ಪ್ರವಾದಿ ಸುಲೈಮಾನ್ ರು ಹುದ್‌ಹುದ್ ಪಕ್ಷಿಗೆ ಹೇಳಿದರು, ನೀನು ಹೇಳುತ್ತಿರುವುದು ಸತ್ಯವೋ ಅಥವಾ ನೀನೊಬ್ಬ ಸುಳ್ಳುಗಾರನೋ ಎಂಬುದು ನಾನಿದೋ ಕಂಡುಕೊಳ್ಳಲಿದ್ದೇನೆ. {27}

اذْهَبْ بِكِتَابِي هَٰذَا فَأَلْقِهْ إِلَيْهِمْ ثُمَّ تَوَلَّ عَنْهُمْ فَانْظُرْ مَاذَا يَرْجِعُونَ

ಈಗ ಈ ನನ್ನ ಓಲೆಯನ್ನು ಕೊಂಡೊಯ್ದು ಅವರ ಮುಂದೆ ಹಾಕಿ ಬಿಡು; ನಂತರ ಅವರಿಂದ ಸ್ವಲ್ಪ ಸರಿದು ನಿಂತು ಅವರು ಹೇಗೆ ಪ್ರತಿಕ್ರಯಿಸುತ್ತಾರೆ ಎಂಬುದನ್ನು ಕಾದು ನೋಡು ಎಂದು ಸುಲೈಮಾನ್ ರು ಆದೇಶಿಸಿದರು. {28}

قَالَتْ يَا أَيُّهَا الْمَلَأُ إِنِّي أُلْقِيَ إِلَيَّ كِتَابٌ كَرِيمٌ

(ಓಲೆಯನ್ನು ಓದಿದ) ರಾಣಿಯು ಹೇಳಿದಳು: ಆಸ್ಥಾನ ಪ್ರಮುಖರೇ, ನನ್ನೆಡೆಗೆ ಒಂದು ಗೌರವಾರ್ಹವಾದ ಒಂದು ಓಲೆಯನ್ನು ಕಳುಹಿಸಲಾಗಿದೆ! {29}

إِنَّهُ مِنْ سُلَيْمَانَ وَإِنَّهُ بِسْمِ اللَّهِ الرَّحْمَٰنِ الرَّحِيمِ

ಅದು ಸುಲೈಮಾನ್ ರ ವತಿಯಿಂದ ಬಂದಿದೆ; ಅದು ಪ್ರಾರಂಭವಾಗುವುದು ಬಹಳ ಕರುಣಾಮಯಿಯೂ ನಿತ್ಯ ಕಾರುಣ್ಯವಂತನೂ ಆದ ಅಲ್ಲಾಹ್ ನ ಹೆಸರಿನಿಂದ! {30}

أَلَّا تَعْلُوا عَلَيَّ وَأْتُونِي مُسْلِمِينَ

ನೀವು ನನ್ನ ವಿರುದ್ಧ ಅಹಂಭಾವ, ದೊಡ್ಡಸ್ತಿಕೆಗಳನ್ನು ತೋರದಿರಿ ಹಾಗೂ ಮುಸ್ಲಿಮರಾಗಿ ನನ್ನ ಬಳಿ ಹಾಜರಾಗಿರಿ ಎಂದು (ಅದರಲ್ಲಿ ನಮಗೆ ಹುಕುಂ ನೀಡಲಾಗಿದೆ). {31}

قَالَتْ يَا أَيُّهَا الْمَلَأُ أَفْتُونِي فِي أَمْرِي مَا كُنْتُ قَاطِعَةً أَمْرًا حَتَّىٰ تَشْهَدُونِ

ರಾಣಿ ಹೇಳಿದಳು: ಆಸ್ಥಾನಿಕ ಮಹಾಶಯರೇ, ನನಗೆ ಎದುರಾಗಿರುವ ಈ ಸನ್ನಿವೇಶದಲ್ಲಿ ನೀವು ನನಗೆ ಸಲಹೆ ನೀಡಿರಿ; ನೀವು ನನ್ನ ಮುಂದೆ ಹಾಜರಾಗಿ ಸಲಹೆ ನೀಡಿದ ಹೊರತು ನಾನು ಏಕಾಂಗಿಯಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳುವುದಿಲ್ಲ (ಎಂಬುದು ನಿಮಗೆ ತಿಳಿದೇ ಇದೆ ತಾನೆ). {32}

قَالُوا نَحْنُ أُولُو قُوَّةٍ وَأُولُو بَأْسٍ شَدِيدٍ وَالْأَمْرُ إِلَيْكِ فَانْظُرِي مَاذَا تَأْمُرِينَ

ಆಸ್ಥಾನಿಕರು ಹೇಳಿದರು: ನಾವು ಒಂದು ಬಲಿಷ್ಠ ಶಕ್ತಿಯಾಗಿರುವೆವು ಹಾಗೂ ಉಗ್ರ ಹೋರಾಟ ನಡೆಸಬಲ್ಲ ಸೇನಾಬಲನ್ನು ಹೊಂದಿರುವೆವು. ಆದರೆ ತೀರ್ಮಾನ ತೆಗೆದುಕೊಳ್ಳುವ ವಿಷಯ ನಿಮ್ಮ ಕೈಯಲ್ಲಿದ್ದೆ. ಆದ್ದರಿಂದ ಚೆನ್ನಾಗಿ ಆಲೋಚಿಸಿ ನಿಮ್ಮ ತೀರ್ಮಾನ ತಿಳಿಸಿರಿ. {33}

قَالَتْ إِنَّ الْمُلُوكَ إِذَا دَخَلُوا قَرْيَةً أَفْسَدُوهَا وَجَعَلُوا أَعِزَّةَ أَهْلِهَا أَذِلَّةً ۖ وَكَذَٰلِكَ يَفْعَلُونَ

ರಾಣಿ ಹೇಳಿದಳು: ಸಾಮಾನ್ಯವಾಗಿ ರಾಜರುಗಳು ಯಾವುದಾದರೂ ನಾಡಿನೊಳಗೆ ನುಗ್ಗಿದರೆ ಅದನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಾರೆ. ಅಲ್ಲಿನ ಪ್ರತಿಷ್ಠಿತರನ್ನು ಅಪಮಾನಿತರನ್ನಾಗಿ ಮಾಡುತ್ತಾರೆ. ಇವರೂ ಸಹ ಅದನ್ನೇ ಮಾಡಲಿರುವರು. {34}

وَإِنِّي مُرْسِلَةٌ إِلَيْهِمْ بِهَدِيَّةٍ فَنَاظِرَةٌ بِمَ يَرْجِعُ الْمُرْسَلُونَ

ಆದ್ದರಿಂದ ನಾನು ಅವರೆಡೆಗೆ ಉಡುಗೊರೆಯೊಂದನ್ನು ಕಳುಹಿಸಿ ಕೊಡುವೆನು ಮತ್ತು ನನ್ನ ರಾಯಭಾರಿಗಳು ಅಲ್ಲಿಂದ ಯಾವ ಸುದ್ದಿಯೊಂದಿಗೆ ಮರಳುತ್ತಾರೆಂದು ಕಾದು ನೋಡುವೆನು. {35}

فَلَمَّا جَاءَ سُلَيْمَانَ قَالَ أَتُمِدُّونَنِ بِمَالٍ فَمَا آتَانِيَ اللَّهُ خَيْرٌ مِمَّا آتَاكُمْ بَلْ أَنْتُمْ بِهَدِيَّتِكُمْ تَفْرَحُونَ

(ಉಡೂಗೊರೆಯೊಂದಿಗೆ ರಾಣಿಯ) ರಾಯಭಾರಿ ಸುಲೈಮಾನ್ ರ ಬಳಿಗೆ ಬಂದಾಗ (ಅದನ್ನು ನೊಡಿದ ಸುಲೈಮಾನ್ ರು) ಹೇಳಿದರು: ಏನು? ನೀವು ಈ ಸಂಪತ್ತಿನಿಂದ ನನಗೆ ನೆರವು ನೀಡಲು ಬಯಸುತ್ತಿರುವಿರಾ? ನನಗಂತು ಅಲ್ಲಾಹ್ ನು ನಿಮಗಿಂತ ಬಹಳ ಮಿಗಿಲಾದ ಸಂಪತ್ತನ್ನು ನೀಡಿರುವನು. ಆದರೆ ನೀವು ಮಾತ್ರ ನಿಮ್ಮ ಈ (ಕ್ಷುಲ್ಲಕ) ಉಡುಗೊರೆಯ ಬಗ್ಗೆ ಹರ್ಷಿತರಾಗಿರುವಿರಿ. {36}

ارْجِعْ إِلَيْهِمْ فَلَنَأْتِيَنَّهُمْ بِجُنُودٍ لَا قِبَلَ لَهُمْ بِهَا وَلَنُخْرِجَنَّهُمْ مِنْهَا أَذِلَّةً وَهُمْ صَاغِرُونَ

ಆದ್ದರಿಂದ ನೀನೀಗ ನಿನ್ನನ್ನು ಕಳುಹಿಸಿದವರ ಬಳಿಗೆ (ಉಡುಗೊರೆ ಸಮೇತ) ಹಿಂದಿರುಗಿ ಹೋಗು. ಖಂಡಿತವಾಗಿ ಅವರಿಗೆ ಎದುರಿಸಲು ಸಾಧ್ಯವೇ ಇಲ್ಲದಂತಹ ಒಂದು ಬೃಹತ್ ಸೇನೆಯೊಂದಿಗೆ ನಾವು ಅಲ್ಲಿಗೆ ಬರಲಿದ್ದೇವೆ. ನಂತರ ಅವರನ್ನು (ಸೋಲಿಸಿ) ಅವಮಾನಿತರನ್ನಾಗಿ ಮಾಡಿ ಅದೇ ಸ್ಥಿತಿಯಲ್ಲಿ ನಾವು ಅವರನ್ನು ಅವರ ನಾಡಿನಿಂದ ಹೊರಗಟ್ಟಲಿರುವವು. ಅವರಿಗೆ ಗರ್ವಭಂಗವೂ ಆಗುವುದು. {37}

قَالَ يَا أَيُّهَا الْمَلَأُ أَيُّكُمْ يَأْتِينِي بِعَرْشِهَا قَبْلَ أَنْ يَأْتُونِي مُسْلِمِينَ

[ಆಕೆ ತನ್ನಲ್ಲಿಗೆ ಬರುತ್ತಾಳೆಂದು ಸುಲೈಮಾನ್ ರಿಗೆ ಖಚಿತವಿದ್ದುದರಿಂದ] ಅವರು ತಮ್ಮ (ಆಸ್ಥಾದ ಪ್ರಮುಖರೊಂದಿಗೆ) ಕೇಳಿದರು: ಓ ಆಸ್ಥಾನ ಪಮುಖರೇ, ಅವರೆಲ್ಲ ಶರಣಾಗತರಾಗಿ ನನ್ನಲ್ಲಿಗೆ ತುಲುಪುವುದಕ್ಕಿಂತ ಮೊದಲೇ ನಿಮ್ಮ ಪೈಕಿ ಯಾರು ಆಕೆಯ ಆ ಭವ್ಯ ಸಿಂಹಾಸನವನ್ನು ನನ್ನಲ್ಲಿಗೆ ತರಬಲ್ಲರು? {38}

قَالَ عِفْرِيتٌ مِنَ الْجِنِّ أَنَا آتِيكَ بِهِ قَبْلَ أَنْ تَقُومَ مِنْ مَقَامِكَ ۖ وَإِنِّي عَلَيْهِ لَقَوِيٌّ أَمِينٌ

ಜಿನ್ನ್ ವರ್ಗಕ್ಕೆ ಸೇರಿದ (ಇಫ್‌ರೀತ್ ಎಂಬ) ಒಬ್ಬ ಬಲಾಢ್ಯನು ಹೇಳಿದನು: ನೀವು ನಿಮ್ಮ ಸ್ಥಾನದಿಂದ ಎದ್ದು ನಿಲ್ಲುವುದಕ್ಕಿಂದ ಮುಂಚಿತವಾಗಿ ನಾನು ಅದನ್ನು ನಿಮ್ಮಲ್ಲಿಗೆ ತರಬಲ್ಲೆ; ನನಗೆ ಅದರ ಶಕ್ತಿಯೂ ಇದೆ ಮತ್ತು ನಾನು ವಿಶ್ವಾಸಾರ್ಹನೂ ಹೌದು. {39}

قَالَ الَّذِي عِنْدَهُ عِلْمٌ مِنَ الْكِتَابِ أَنَا آتِيكَ بِهِ قَبْلَ أَنْ يَرْتَدَّ إِلَيْكَ طَرْفُكَ ۚ فَلَمَّا رَآهُ مُسْتَقِرًّا عِنْدَهُ قَالَ هَٰذَا مِنْ فَضْلِ رَبِّي لِيَبْلُوَنِي أَأَشْكُرُ أَمْ أَكْفُرُ ۖ وَمَنْ شَكَرَ فَإِنَّمَا يَشْكُرُ لِنَفْسِهِ ۖ وَمَنْ كَفَرَ فَإِنَّ رَبِّي غَنِيٌّ كَرِيمٌ

ಆದರೆ ದೈವಿಕ ಶಾಸನದ (ಅರ್ಥಾತ್ ವಸ್ತುಗಳ ಭೌತಿಕ ನಿಯಮಗಳ) ಪರಿಜ್ಞಾನವಿದ್ದ ಒಬ್ಬರು, ನೀವು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನಾನು (ಆಕೆಯ ಆ ಬೃಹತ ಸಿಂಹಾಸನವನ್ನು) ನಿಮ್ಮ ಬಳಿ ತಂದಿರಿಸಬಲ್ಲೆ ಎಂದು ಹೇಳಿದರು. ಹಾಗೆ ಆ ಸಿಂಹಾಸನವು ಅದಾಗಲೇ ತನ್ನ ಬಳಿ ಇರುವುದನ್ನು ಕಂಡಾಗ ಸುಲೈಮಾನ್ ರು ಹೇಳಿದರು: ಇದು (ಅಂದರೆ ಆ ವ್ಯಕ್ತಿಯ ಈ ಕಾರ್ಯಾಚರಣೆಯು) ನನ್ನ ಒಡೆಯನ ಅನುಗ್ರಹವೇ ಸರಿ; ನಾನು ಕೃತಜ್ಞತೆ ತೋರುವವನೋ ಅಥವಾ ಕೃತಘ್ನತೆ ತೋರುವವನೋ ಎಂದು ನನ್ನು ಪರೀಕ್ಷಿಸುವ ಸಲುವಾಗಿ. [ತನ್ನೊಡೆಯನಿಗೆ ಕೃತಜ್ಞತೆ ಸಲ್ಲಿಸಿದ ಸುಲೈಮಾನ್ ರು ಹೇಳಿದರು], ಹೌದು, ಯಾರಾದರೂ ಕೃತಜ್ಞತೆ ತೋರಿದರೆ ಅದು ಅವನ ಪಾಲಿಗೇ ಒಳಿತು; ಇನ್ನು ಅವನು ಕೃತಘ್ನನಾದರೆ ಆತ ತಿಳಿಯಲಿ ನನ್ನ ಒಡೆಯನು ನಿರಪೇಕ್ಷಿಯೂ ಬಹಳ ಉದಾತ್ತನೂ ಆಗಿರುವನು! {40}

قَالَ نَكِّرُوا لَهَا عَرْشَهَا نَنْظُرْ أَتَهْتَدِي أَمْ تَكُونُ مِنَ الَّذِينَ لَا يَهْتَدُونَ

ಈಗ ಆಕೆಗೆ (ಗೊಂದಲವುಂಟಾಗುವಂತೆ) ಈ ಸಿಂಹಾಸನದ ಮೂಲ ರೂಪವನ್ನು ಅಲ್ಪಸ್ವಲ್ಪ ಬದಲಾಯಿಸಿ ಬಿಡಿ ಎಂದು ಸುಲೈಮಾನ್ ರು ಆಜ್ಞಾಪಿಸಿದರು. ಆಕೆ (ತನ್ನದೇ ಸಿಂಹಾಸನವನ್ನು) ಗುರಿತಿಸಿಕೊಳ್ಳುವಳೋ ಅಥವಾ ಗುರುತಿಸಲಾರದೇ ಹೋಗುವಳೋ ಎಂದು ನೋಡೋಣ (ಎಂದರು). {41}

فَلَمَّا جَاءَتْ قِيلَ أَهَٰكَذَا عَرْشُكِ ۖ قَالَتْ كَأَنَّهُ هُوَ ۚ وَأُوتِينَا الْعِلْمَ مِنْ قَبْلِهَا وَكُنَّا مُسْلِمِينَ

ತರುವಾಯ ಆಕೆ ಅಲ್ಲಿಗೆ ಬಂದಾಗ, ನಿಮ್ಮ ಸಿಂಹಾಸನ ಹೀಗೆಯೇ ಇತ್ತೇನು ಎಂದು ಆಕೆಯೊಂದಿಗೆ ಕೇಳಲಾಯಿತು. ಇದು ಅದರಂತೆಯೇ ಕಾಣುತ್ತಿದೆ; ಮತ್ತು ನಮಗೆ (ಸುಲೈಮಾನ್ ರ ಪ್ರವಾದಿತ್ವ ಮತ್ತು ಶಕ್ತಿ ಸಾಮರ್ಥ್ಯದ ಬಗ್ಗೆ) ಈ ಮೊದಲೇ ಮಾಹಿತಿ ಲಭಿಸಿರುತ್ತದೆ; ಆದ್ದರಿಂದ ನಾವು ಶ್ರಣಾಗತರಾಗಿಯೇ ಇಲ್ಲಿ ಹಾಜರಾಗಿದ್ದೇವೆ ಎಂದು ರಾಣಿ ಉತ್ತರಿಸಿದಳು. {42}

وَصَدَّهَا مَا كَانَتْ تَعْبُدُ مِنْ دُونِ اللَّهِ ۖ إِنَّهَا كَانَتْ مِنْ قَوْمٍ كَافِرِينَ

ಅಲ್ಲಾಹ್ ನನ್ನು ಬಿಟ್ಟು ಅವಳು ಏನನ್ನು ಆರಾಧಿಸುತ್ತಿದ್ದಳೋ ಅದು ಅವಳನ್ನು (ಅಲ್ಲಾಹ್ ನ ಆರಾಧನೆಯಿಂದ, ಈ ಮೊದಲು) ತಡೆದಿತ್ತು. ನಿಜವಾಗಿ ಅವಳು ಸತ್ಯಕ್ಕೆ ವಿರೋಧ ತೋರುತ್ತಿದ್ದ ಒಂದು ಜನಕೂಟದವಳಾಗಿದ್ದಳು. {43}

قِيلَ لَهَا ادْخُلِي الصَّرْحَ ۖ فَلَمَّا رَأَتْهُ حَسِبَتْهُ لُجَّةً وَكَشَفَتْ عَنْ سَاقَيْهَا ۚ قَالَ إِنَّهُ صَرْحٌ مُمَرَّدٌ مِنْ قَوَارِيرَ ۗ قَالَتْ رَبِّ إِنِّي ظَلَمْتُ نَفْسِي وَأَسْلَمْتُ مَعَ سُلَيْمَانَ لِلَّهِ رَبِّ الْعَالَمِينَ

ಅರಮನೆಯೊಳಗೆ ಪ್ರವೇಶಿಸು ಎಂದು ಆಕೆಯೊಡನೆ ಹೇಳಲಾಯಿತು. (ಅರಮನೆಯ ಅಂಗಳವನ್ನು) ಕಂಡಾಗ ಆಕೆಗೆ ಅದೊಂದು ನೀರಿನ ಸರೋವರದಂತೆ ಭಾಸವಾಯಿತು, ಮತ್ತು ಆಕೆ (ಮುಂದೆ ದಾಟಲು) ತನ್ನ ಕಾಲುಗಳಿಂದ ವಸ್ತ್ರವನ್ನು ಸರಿಸಿದಳು. ಸುಲೈಮಾನ್ ಹೇಳಿದರು, ಇದು ನುಣುಪಾದ ಗಾಜುಗಳನ್ನು ಜೋಡಿಸಿ ತಯಾರಿಸಿದ ಅರಮನೆಯಾಗಿದೆ! ಆಗ ಆಕೆ ತನ್ನೊಳಗೇ ಹೇಳಿಕೊಂಡಳು: ನನ್ನೊಡೆಯಾ, (ಇದುವರೆಗೂ) ನಾನು ನನಗೇ ದ್ರೋಹ ಬಗೆಯುತ್ತಿದ್ದೆ; ಈಗ ನಾನು ಸರ್ವ ಲೋಕಗಳ ಪಾಲಕನಾದ ಅಲ್ಲಾಹ್ ನಿಗೆ ಈ ಸುಲೈಮಾನ್ ರ ಸಂಗಡ ಅವರಂತೆಯೇ ಸಂಪೂರ್ಣವಾಗಿ ಶರಣಾಗಿರುತ್ತೇನೆ. {44}

وَلَقَدْ أَرْسَلْنَا إِلَىٰ ثَمُودَ أَخَاهُمْ صَالِحًا أَنِ اعْبُدُوا اللَّهَ فَإِذَا هُمْ فَرِيقَانِ يَخْتَصِمُونَ

ನೀವು ಅಲ್ಲಾಹ್ ನನ್ನು ಆರಾಧಿಸುವವರಾಗಿರಿ ಎಂಬ ಸಂದೇಶದೊಂದಿಗೆ, ತಮೂದ್ ಜನಾಂಗದ ಕಡೆಗೆ ನಾವು ಅವರ ಸಹೋದರನಾದ ಸಾಲಿಹ್ ಅವರನ್ನು (ಪ್ರವಾದಿಯನ್ನಾಗಿ ನಿಯೋಗಿಸಿ) ಕಳುಹಿಸಿದ್ದೆವು. ಆದರೆ ಆ ಕೂಡಲೇ ಅವರು ಎರಡು ಗುಂಪುಗಳಾಗಿ ಒಡೆದು ಪರಸ್ಪರ ಕಚ್ಚಾಡತೊಡಗಿದರು. {45}

قَالَ يَا قَوْمِ لِمَ تَسْتَعْجِلُونَ بِالسَّيِّئَةِ قَبْلَ الْحَسَنَةِ ۖ لَوْلَا تَسْتَغْفِرُونَ اللَّهَ لَعَلَّكُمْ تُرْحَمُونَ

ಪ್ರವಾದಿ ಸಾಲಿಹ್ ಹೇಳಿದರು: ಓ ನನ್ನ ಜನರೇ, ಒಳಿತು ಸಂಭವಿಸುವುದಕ್ಕಿಂತ ಮುಂಚೆಯೇ ಕೆಡುಕಿಗಾಗಿ ನೀವೇಕೆ ಆತುರ ಪಡುತ್ತಿದ್ದೀರಿ? ಒಂದು ವೇಳೆ ಪಾಪವಿಮೋಚನೆಗಾಗಿ ನೀವು ಅಲ್ಲಾಹ್ ನೊಂದಿಗೆ ಯಾಚಿಸಿರುತ್ತಿದ್ದರೆ (ಅದು ನಿಮ್ಮ ಪಾಲಿಗೆ ಒಳ್ಳೆಯದಿತ್ತು ತಾನೆ); ನಿಮ್ಮ ಮೇಲೆ ಕರುಣೆ ತೋರುವಂತಾಗಲು! {46}

قَالُوا اطَّيَّرْنَا بِكَ وَبِمَنْ مَعَكَ ۚ قَالَ طَائِرُكُمْ عِنْدَ اللَّهِ ۖ بَلْ أَنْتُمْ قَوْمٌ تُفْتَنُونَ

ಆ ಜನರು ಉತ್ತರಿಸಿದರು: ನೀವೂ ನಿಮ್ಮೊಂದಿಗೆ ಇರುವ ಈ ಜನರೂ ನಮ್ಮ ಪಾಲಿಗೆ ಒಂದು ಅನಿಷ್ಟವಾಗಿರುವಿರಿ. ಅದಕ್ಕೆ ಪ್ರವಾದಿಯವರು ಪ್ರತಿಕ್ರಿಯಿಸಿದರು: ತಿಳಿಯಿರಿ, ನಿಮ್ಮ ಅಷ್ಟಾನಿಷ್ಟಗಳು ಅಲ್ಲಾಹ್ ನ ಬಳಿಯಿದೆ; ಅದು ಮಾತ್ರವಲ್ಲ, ನೀವು ಪರೀಕ್ಷೆಗೆ ಒಳಪಡಿಸಲಾದ ಒಂದು ಜನಸಮೂಹವಾಗಿರುವಿರಿ. {47}

وَكَانَ فِي الْمَدِينَةِ تِسْعَةُ رَهْطٍ يُفْسِدُونَ فِي الْأَرْضِ وَلَا يُصْلِحُونَ

ಆ ನಾಡಿನಲ್ಲಿ ಒಂಬತ್ತು ಜನ (ದುಷ್ಟ ಮುಖಂಡರ) ಒಂದು ಕೂಟವಿತ್ತು; ಅವರು ನಾಡಿನಲ್ಲಿ ಭ್ರಷ್ಟಾಚಾರ ಹಬ್ಬುತ್ತಿದ್ದರು, ಸುಧಾರಣೆಯ ಕೆಲಸವಂತು ಅವರು ಮಾಡುತ್ತಿರಲಿಲ್ಲ. {48}

قَالُوا تَقَاسَمُوا بِاللَّهِ لَنُبَيِّتَنَّهُ وَأَهْلَهُ ثُمَّ لَنَقُولَنَّ لِوَلِيِّهِ مَا شَهِدْنَا مَهْلِكَ أَهْلِهِ وَإِنَّا لَصَادِقُونَ

ಅವರು ಪರಸ್ಪರ (ಒಂದು ನಿರ್ಧಾರಕ್ಕೆ ಬಂದು) ಹೇಳಿದರು, ರಾತ್ರಿಯ ಹೊತ್ತಿನಲ್ಲಿ ಸಾಲಿಹ್ ಮತ್ತು ಆತನ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಾವು ಅವರನ್ನು ಮುಗಿಸಿ ಬಿಡುವೆವೆಂದು ನೀವೆಲ್ಲ ಅಲ್ಲಾಹ್ ನ ಹೆಸರಿನಲ್ಲಿ ಪ್ರತಿಜ್ಞೆ ಮಾಡಿರಿ; ನಂತರ, ಆ ಕುಟುಂಬದವರ ಮೇಲೆ ಹಲ್ಲೆ ನಡೆದಾಗ ಆ ಸ್ಥಳದಲ್ಲಿ ನಾವು ಇರಲೇ ಇಲ್ಲವೆಂದೂ, ನಾವು ಹೇಳುತ್ತಿರುವುದು ಸತ್ಯವೆಂದೂ ಆತನ ಮೇಲ್ವಿಚಾರಕರಿಗೆ ಹೇಳಬೇಕು! {49}

وَمَكَرُوا مَكْرًا وَمَكَرْنَا مَكْرًا وَهُمْ لَا يَشْعُرُونَ

ಅತ್ತ ಅವರು ತಮ್ಮ ಕುತಂತ್ರ ರೂಪಿಸುತ್ತಿದ್ದರು; ಇತ್ತ ನಾವು (ಅದನ್ನು ನೀಗಿಸುವ) ನಮ್ಮ ತಂತ್ರ ಹೂಡಿದೆವು. ಮತ್ತು ಅವರಿಗೆ ಅದರ ಅರಿವೇ ಆಗಲಿಲ್ಲ. {50}

فَانْظُرْ كَيْفَ كَانَ عَاقِبَةُ مَكْرِهِمْ أَنَّا دَمَّرْنَاهُمْ وَقَوْمَهُمْ أَجْمَعِينَ

ಈಗ ನೋಡಿ, ಅವರ ರೂಪಿಸಿದ್ದ ಕುತಂತ್ರದ ಗತಿ ಏನಾಯಿತೆಂದು? ಏನಾಯಿತೆಂದರೆ, ನಾವು ಅವರನ್ನೂ ಅವರ ಇಡೀ ಜನಾಂಗವನ್ನೂ ಸಂಪೂರ್ಣವಾಗಿ ನಾಶ ಮಾಡಿ ಬಿಟ್ಟೆವು! {51}

فَتِلْكَ بُيُوتُهُمْ خَاوِيَةً بِمَا ظَلَمُوا ۗ إِنَّ فِي ذَٰلِكَ لَآيَةً لِقَوْمٍ يَعْلَمُونَ

ಅವರು ಮಾಡುತ್ತಿದ್ದ ಅನ್ಯಾಯದ ಫಲವಾಗಿ, ಇವೆಲ್ಲ ಅವರಿಗೆ ಸೇರಿದ ಅವರ ಪಾಳು ಬಿದ್ದ ನಿವಾಸಗಳು! ತಿಳಿಯ ಬಯಸುವ ಜನರಿಗೆ ಈ ವೃತ್ತಾಂದಲ್ಲಿ ಖಂಡಿತವಾಗಿಯೂ ಪಾಠವಿದೆ. {52}

وَأَنْجَيْنَا الَّذِينَ آمَنُوا وَكَانُوا يَتَّقُونَ

(ಪ್ರವಾದಿಗಳ ಬೋಧನೆಗಳನ್ನು) ನಂಬಿದ ಮತ್ತು (ಅಲ್ಲಾಹ್ ನ) ವಿಷಯದಲ್ಲಿ ಜಾಗರೂಕತೆ ಪಾಲಿಸಿದ ಜನರನ್ನು ನಾವು ಶಿಕ್ಷೆಯಿಂದ ರಕ್ಷಿಸಿದೆವು. {53}

وَلُوطًا إِذْ قَالَ لِقَوْمِهِ أَتَأْتُونَ الْفَاحِشَةَ وَأَنْتُمْ تُبْصِرُونَ

ಹಾಗೆಯೇ, ಪ್ರವಾದಿ ಲೂತ್ ರು ತಮ್ಮ ಜನಾಂಗದವರಿಗೆ ಬೋಧಿಸಿದ್ದನ್ನು ನೆನಪಿಸಿರಿ: ನೀವು (ಅದರ ಪರಿಣಾಮವನ್ನು) ಕಂಡೂ ಸಹ ಅಂತಹ ಅಶ್ಲೀಲ ಕೃತ್ಯವೆಸಗುವುದೇ? {54}

أَئِنَّكُمْ لَتَأْتُونَ الرِّجَالَ شَهْوَةً مِنْ دُونِ النِّسَاءِ ۚ بَلْ أَنْتُمْ قَوْمٌ تَجْهَلُونَ

ಏನು? ಪತ್ನಿಯರನ್ನು ಬಿಟ್ಟು ಲೈಂಗಿಕ ತೃಪ್ತಿಗಾಗಿ ನೀವು ಪುರುಷರ ಬಳಿಗೆ ಹೋಗುವುದೇ? ಇಲ್ಲ, ನೀವು ವಿವೇಕವಿಲ್ಲದ ಒಂದು ಜನಕೂಟವೇ ಸರಿ! {55}

فَمَا كَانَ جَوَابَ قَوْمِهِ إِلَّا أَنْ قَالُوا أَخْرِجُوا آلَ لُوطٍ مِنْ قَرْيَتِكُمْ ۖ إِنَّهُمْ أُنَاسٌ يَتَطَهَّرُونَ

✽20✽ ಅದಕ್ಕೆ ಆ ಜನರು, ನೀವು ಲೂತ್ ರ ಇಡೀ ಪರಿವಾರವನ್ನು ನಿಮ್ಮ ನಾಡಿನಿಂದ ಹೊರದಬ್ಬಿ ಬಿಡಿರಿ; ಅವರೆಲ್ಲ ಮಹಾ ಪರಿಶುದ್ಧತೆ ಬಯಸುವ ಜನರಾಗಿದ್ದಾರೆ ಎಂಬುದಲ್ಲದೆ ಅವರ ಪ್ರತಿಕ್ರಿಯೆ ಬೇರೇನೂ ಆಗಿರಲಿಲ್ಲ! {56}

فَأَنْجَيْنَاهُ وَأَهْلَهُ إِلَّا امْرَأَتَهُ قَدَّرْنَاهَا مِنَ الْغَابِرِينَ

ಕೊನೆಗೆ ನಾವು ಲೂತ್ ಮತ್ತು ಅವರ ಜೊತೆಗಿದ್ದವರನ್ನು ಪಾರು ಮಾಡಿದೆವು; ಆದರೆ ಅವರ ಪತ್ನಿಯ ಹೊರತು! ಅವಳು [ದುಷ್ಟರೊಂದಿಗೆ ಸೇರಿದ್ದ ಕಾರಣ] ಹಿಂದೆಯೇ ಉಳಿದುಕೊಳ್ಳುವಂತೆ ನಾವು ಮಾಡಿದೆವು. {57}

وَأَمْطَرْنَا عَلَيْهِمْ مَطَرًا ۖ فَسَاءَ مَطَرُ الْمُنْذَرِينَ

ನಂತರ (ತಪ್ಪಿತಸ್ಥರ) ಮೇಲೆ ನಾವು (ಕಲ್ಲಿನಿಂದ ಕೂಡಿದ) ಭೋರ್ಗರೆವ ಮಳೆ ಸುರಿಸಿದೆವು. (ಶಿಕ್ಷೆಯ ಕುರಿತು ಅದಾಗಲೇ) ಎಚ್ಚರಿಸಲ್ಪಟ್ಟವರ ಮೇಲೆ ಅದೆಷ್ಟು ಕೆಟ್ಟದಾದ ಮಳೆ ಸುರಿದಿತ್ತು! {58}

قُلِ الْحَمْدُ لِلَّهِ وَسَلَامٌ عَلَىٰ عِبَادِهِ الَّذِينَ اصْطَفَىٰ ۗ آللَّهُ خَيْرٌ أَمَّا يُشْرِكُونَ

ಪೈಗಂಬರರೇ, ಎಲ್ಲ ವಿಧ ಪ್ರಶಂಸೆಗಳು ಅಲ್ಲಾಹ್ ನಿಗೆ ಮಾತ್ರವೆಂದು ಘೋಷಿಸಿರಿ. ಯಾರನ್ನೆಲ್ಲ ಅವನು (ಪ್ರವಾದಿತ್ವ ನೀಡಲು) ಆರಿಸಿಕೊಂಡನೋ ಅವರೆಲ್ಲರ ಮೇಲೆ ಶಾಂತಿಯಾಗಲಿ. ಯಾರು ಮಿಗಿಲು? ಅವನ ದೇವತ್ವದಲ್ಲಿ ಜೊತೆಗೂಡಿಸಲು ಜನರು ಮಾಡಿಕೊಂಡ (ಆ ಮಿಥ್ಯ) ದೇವರುಗಳೋ ಅಥವಾ ಆ ಅಲ್ಲಾಹ್ ನೋ ಮಿಗಿಲು!? {59}

أَمَّنْ خَلَقَ السَّمَاوَاتِ وَالْأَرْضَ وَأَنْزَلَ لَكُمْ مِنَ السَّمَاءِ مَاءً فَأَنْبَتْنَا بِهِ حَدَائِقَ ذَاتَ بَهْجَةٍ مَا كَانَ لَكُمْ أَنْ تُنْبِتُوا شَجَرَهَا ۗ أَإِلَٰهٌ مَعَ اللَّهِ ۚ بَلْ هُمْ قَوْمٌ يَعْدِلُونَ

ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿ, ಆಕಾಶದಿಂದ ನಿಮಗಾಗಿ ಮಳೆನೀರು ಸುರಿಸಿದವನಲ್ಲವೇ ಮಿಗಿಲು! ಮಳೆನೀರ ಮೂಲಕ ಮನಮೋಹಕವಾದ ತೋಟಗಳನ್ನು ಉತ್ಪಾದಿಸಿದವರು ನಾವು! ಅದರಲ್ಲಿಯ ಮರಗಳನ್ನು ಉತ್ಪಾದಿಸಲು ನಿಮ್ಮಿಂದ ಸಾಧ್ಯವಿಲ್ಲ. ಆ ಅಲ್ಲಾಹ್ ನ ಜೊತೆಗೆ ಬೇರೊಬ್ಬ ದೇವನು ಇರುವನೇ!? ಅದರೆ (ಪೈಗಂಬರರೇ), ಅವರು ಇತರರನ್ನು ಅಲ್ಲಾಹ್ ನಿಗೆ ಸಮಾನವೆವೆಂದು (ಭಾವಿಸುವ ಮೂಲಕ ಸರಿದಾರಿಯಿಂದ) ಸರಿಯುತ್ತಿದ್ದಾರೆ! {60}

أَمَّنْ جَعَلَ الْأَرْضَ قَرَارًا وَجَعَلَ خِلَالَهَا أَنْهَارًا وَجَعَلَ لَهَا رَوَاسِيَ وَجَعَلَ بَيْنَ الْبَحْرَيْنِ حَاجِزًا ۗ أَإِلَٰهٌ مَعَ اللَّهِ ۚ بَلْ أَكْثَرُهُمْ لَا يَعْلَمُونَ

ಅಥವಾ, (ಚಲಿಸುವ) ಭೂಮಿಗೆ ಸ್ಥಿರತೆ ಒದಗಿಸಿ (ವಾಸಯೋಗ್ಯವಾಗಿ ಮಾಡಿದ), ಮತ್ತು ಅದರಲ್ಲಿ ನದಿ ನಾಲೆಗಳನ್ನು ಹರಿಸಿದ, ಅದರ (ಭದ್ರತೆಗಾಗಿ) ಪರ್ವತಗಳನ್ನು ಉಂಟುಮಾಡಿದ, ಮತ್ತು ಎರಡು ಕಡಲುಗಳ ನಡುವೆ ಒಂದು ತಡೆಯನ್ನು ಏರ್ಪಡಿಸಿದವನಲ್ಲವೇ ಮಿಗಿಲು! ಅಂತಹ ಅಲ್ಲಾಹ್ ನ ಜೊತೆಗೆ ಬೇರೂಬ್ಬ ದೇವನು ಇರಲು ಸಾಧ್ಯವೇ? ಇಲ್ಲ! ಆದರೆ (ಪೈಗಂಬರರೇ), ಅವರಲ್ಲಿ ಹೆಚ್ಚಿನವರು ತಿಳಿಯ ಬಯಸುವುದಿಲ್ಲ! {61}

أَمَّنْ يُجِيبُ الْمُضْطَرَّ إِذَا دَعَاهُ وَيَكْشِفُ السُّوءَ وَيَجْعَلُكُمْ خُلَفَاءَ الْأَرْضِ ۗ أَإِلَٰهٌ مَعَ اللَّهِ ۚ قَلِيلًا مَا تَذَكَّرُونَ

ಅಥವಾ, ಸಂಕಷ್ಟಕ್ಕೊಳಗಾಗಿ ತತ್ತರಿಸಿ ಹೋದವನು ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಗೆ ಪ್ರತಿಕ್ರಯಿಸಿ ಅವನಿಂದ ಸಂಕಷ್ಟವನ್ನು ನೀಗಿಸಿದವನಲ್ಲವೇ ಮಿಗಿಲು? ಅವನು ಭೂಮಿಯಲ್ಲಿ ನಿಮಗೆ ಅಧಿಕಾರ ನೀಡಿ ನಿಯೋಜಿಸಿರುವನು. ಆ ಅಲ್ಲಾಹ್ ನ ಜೊತೆಗೆ ಬೇರೊಬ್ಬ ದೇವನು ಇರುವನೇ?! ನಿಮ್ಮಲ್ಲಿ ವಿಷಯವನ್ನು ಅರ್ಥ ಮಾಡಿಕೊಳ್ಳುವವರು ಸ್ವಲ್ಪ ಜನರು ಮಾತ್ರ! {62}

أَمَّنْ يَهْدِيكُمْ فِي ظُلُمَاتِ الْبَرِّ وَالْبَحْرِ وَمَنْ يُرْسِلُ الرِّيَاحَ بُشْرًا بَيْنَ يَدَيْ رَحْمَتِهِ ۗ أَإِلَٰهٌ مَعَ اللَّهِ ۚ تَعَالَى اللَّهُ عَمَّا يُشْرِكُونَ

ಅಥವಾ, ನೆಲ ಮತ್ತು ಜಲಗಳಲ್ಲಿ (ನೀವು ಪ್ರಯಾಣಿಸುವಾಗ, ಅದರ) ಅಂಧಕಾರಗಳಲ್ಲಿಯೂ ನಿಮಗೆ ದಾರಿ ತೋರುವವನಲ್ಲವೇ ಮಿಗಿಲು! ತನ್ನ ಅನುಗ್ರಹವನ್ನು (ಮಳೆಯ ರೂಪದಲ್ಲಿ) ಕಳುಹಿಸುವ ಮುನ್ನ ತಂಗಾಳಿಯ ಮೂಲಕ ಅದರ ಸುವಾರ್ತೆಯನ್ನು ನೀಡುವವನು ಯಾರು? ಆ ಅಲ್ಲಾಹ್ ನ ಜೊತೆಗೆ ಬೇರೊಬ್ಬ ದೇವನಿರುವನೇ?! (ಪೈಗಂಬರರೇ), ಈ ಜನರು ಯಾವುದನ್ನೆಲ್ಲ ಅಲ್ಲಾಹ್ ನಿಗೆ ಜೊತೆಯಾಗಿಸಿ ಕೊಂಡಿರುವರೋ ಅವೆಲ್ಲಕ್ಕಿಂತ ಅಲ್ಲಾಹ್ ನು ತುಂಬಾ ಮಿಗಿಲಾದವನು. {63}

أَمَّنْ يَبْدَأُ الْخَلْقَ ثُمَّ يُعِيدُهُ وَمَنْ يَرْزُقُكُمْ مِنَ السَّمَاءِ وَالْأَرْضِ ۗ أَإِلَٰهٌ مَعَ اللَّهِ ۚ قُلْ هَاتُوا بُرْهَانَكُمْ إِنْ كُنْتُمْ صَادِقِينَ

ಅಥವಾ, ಸೃಷ್ಟಿ ಕಾರ್ಯಕ್ಕೆ ಮೊದಲಿಟ್ಟು ತರುವಾಯ ಅದರ ಪುನರಾವರ್ತನೆ ಮಾಡಿದವನು; ಹಾಗೆಯೇ ಭೂಮಿ ಮತ್ತು ಆಕಾಶಗಳಿಂದ ಅನ್ನಾಹಾರವನ್ನು ನಿಮಗೆ ಒದಗಿಸಿದವನಲ್ಲವೇ (ನಿಮ್ಮ ಎಲ್ಲ ಮಿಥ್ಯ ದೇವರುಗಳಿಗಿಂತ) ಮಿಗಿಲು?! ಆ ಅಲ್ಲಾಹ್ ನ ಜೊತೆಗೇನು ಬೇರೊಬ್ಬ ದೇವನಿರುವನೇ?! ನೀವು ಸತ್ಯವಂತರಾದರೆ (ನಿಮ್ಮ ವಾದಕ್ಕೆ) ನಿಮ್ಮಲ್ಲಿರುವ ಪುರಾವೆನ್ನು ತನ್ನಿರಿ ಎಂದು ಪೈಗಂಬರರೇ ನೀವು ಅವರೊಂದಿಗೆ ಹೇಳಿರಿ! {64}

قُلْ لَا يَعْلَمُ مَنْ فِي السَّمَاوَاتِ وَالْأَرْضِ الْغَيْبَ إِلَّا اللَّهُ ۚ وَمَا يَشْعُرُونَ أَيَّانَ يُبْعَثُونَ

ಅಲ್ಲಾಹ್ ನ ಹೊರತು ಭೂಮಿ ಮತ್ತು ಆಕಾಶಗಳಲ್ಲಿರುವ ಯಾರಿಗೂ ಅಗೋಚರ ವಿಷಯಗಳ ಜ್ಞಾನವಿಲ್ಲ ಎಂದು ಪೈಗಂಬರರೇ ನೀವು ಹೇಳಿರಿ. ಅವರನ್ನು ಯಾವಾಗ ಪುನಃ ಜೀವಂತ ಎಬ್ಬಿಸಲಾಗುವುದು ಎಂಬ ಅರಿವು ಸಹ ಅವರಿಗಿಲ್ಲ. {65}

بَلِ ادَّارَكَ عِلْمُهُمْ فِي الْآخِرَةِ ۚ بَلْ هُمْ فِي شَكٍّ مِنْهَا ۖ بَلْ هُمْ مِنْهَا عَمُونَ

ಇಲ್ಲ, ನಿಜಕ್ಕೂ (ಭೌತಿಕವಾಗಿ ಮಾತ್ರ ಚಿಂತಿಸುವ) ಅವರ ಜ್ಞಾನವು ಪರಲೋಕವನ್ನು ಗ್ರಹಿಸಲಾರದು. ಇಲ್ಲ, [ನಿರಂತರ ಬೋಧನೆಯ ನಂತರವೂ] ಅವರು ಅದರ ಬಗ್ಗೆ ಸಂಶಯಗ್ರಸ್ತರಾಗಿರುವರು. ಇಲ್ಲ, ನಿಜಕ್ಕೂ ಅವರು ಅದರ ಕುರಿತು (ಕಣ್ಣು ಮುಚ್ಚಿ) ಕುರುಡರಾಗುತ್ತಿದ್ದಾರೆ! {66}

وَقَالَ الَّذِينَ كَفَرُوا أَإِذَا كُنَّا تُرَابًا وَآبَاؤُنَا أَئِنَّا لَمُخْرَجُونَ

(ಸತ್ಯವನ್ನು) ತಿರಸ್ಕರಿಸಿದವರು ಕೇಳುತ್ತಿದ್ದಾರೆ: ಏನು? ನಾವು ಮತ್ತು ನಮ್ಮ ತಾತ-ಮುತ್ತಾತಂದಿರು ಸತ್ತು ಮಣ್ಣಾಗಿ ಹೋದರೂ (ನಮ್ಮ ಸಮಾಧಿಗಳಿಂದ ಜೀವಂತವಾಗಿ) ನಮ್ಮನ್ನು ಹೊರತೆಗೆಯಲಾಗುವುದೇ? {67}

لَقَدْ وُعِدْنَا هَٰذَا نَحْنُ وَآبَاؤُنَا مِنْ قَبْلُ إِنْ هَٰذَا إِلَّا أَسَاطِيرُ الْأَوَّلِينَ

ಯಥಾರ್ಥದಲ್ಲಿ (ಜೀವಂತವಾಗಿ ಪುನಃ ಎಬ್ಬಿಸುವ) ಈ ವಾದವನ್ನು ನಮ್ಮ ಮುಂದೆಯೂ; ಇದಕ್ಕಿಂತ ಮುಂಚೆ ನಮ್ಮ ತಾತ ಮುತ್ತಾತಂದಿರ ಮುಂದೆಯೂ ಇಡಲಾಗಿದೆ. ಆದರೆ ಅವೆಲ್ಲ ಕೇವಲ ಹಿಂದಿನವರು ನಿರ್ಮಿಸಿದ ಕಟ್ಟುಕಥೆಗಳೇ ಹೊರತು ಬೇರೇನೂ ಅಲ್ಲ. {68}

قُلْ سِيرُوا فِي الْأَرْضِ فَانْظُرُوا كَيْفَ كَانَ عَاقِبَةُ الْمُجْرِمِينَ

ಜನರೇ, ನೀವು (ನಿಮ್ಮ ಸುತ್ತ ಮುತ್ತಲಿನ) ನಾಡುಗಳಲ್ಲಿ ಸಂಚರಿಸಿ, ತಪ್ಪಿತಸ್ಥರ ಅಂತ್ಯವು ಹೇಗಾಯಿತೆಂದು ಸ್ವತಃ ನೋಡಿರಿ - ಎಂದು ಪೈಗಂಬರೇ, ಅವರನ್ನು ಎಚ್ಚರಿಸಿರಿ. {69}

وَلَا تَحْزَنْ عَلَيْهِمْ وَلَا تَكُنْ فِي ضَيْقٍ مِمَّا يَمْكُرُونَ

ಇನ್ನು ಅವರ ವಿಷಯದಲ್ಲಿ ನೀವು ಏನೂ ದುಃಖಿಸ ಬೇಡಿ, ಹಾಗೂ ಅವರು ನಡೆಸುತ್ತಿರುವ ಪಿತೂರಿಗಳಿಗಾಗಿ ನೀವು ಸಂಕಟಕ್ಕೂ ಒಳಗಾಗದಿರಿ. {70}

وَيَقُولُونَ مَتَىٰ هَٰذَا الْوَعْدُ إِنْ كُنْتُمْ صَادِقِينَ

(ದೈವಿಕ ಶಿಕ್ಷೆಯ ಬಗ್ಗೆ) ನೀವು ನೀಡಿದ ಆ ಎಚ್ಚರಿಕೆ ಸತ್ಯವಾಗುವುದು ಯಾವಾಗ? ನೀವು ಸತ್ಯವಂತರು ಹೌದಾದರೆ (ಅದನ್ನು ಈಗಲೇ ಮಾಡಿ ತೋರಿಸಿರಿ) ಎಂದು ಅವರು ನಿಮಗೆ ಸವಾಲೊಡೊತ್ತಿದ್ದಾರೆ. {71}

قُلْ عَسَىٰ أَنْ يَكُونَ رَدِفَ لَكُمْ بَعْضُ الَّذِي تَسْتَعْجِلُونَ

ಜನರೇ, ನೀವು (ಅಣಕಿಸಿ) ಯಾವುದನ್ನು ಆತುರಪಡಿಸುತ್ತಿರುವಿರೋ ಅದರಲ್ಲಿ ಕೆಲವಂತು ಅದಾಗಲೇ ನಿಮ್ಮನ್ನು ಬೆನ್ನಟ್ಟಿ ಬರುತ್ತಿರಬಹುದು - ಎಂದು ಪೈಗಂಬರರೇ ನೀವು ಅವರಿಗೆ ತಿಳಿಸಿ! {72}

وَإِنَّ رَبَّكَ لَذُو فَضْلٍ عَلَى النَّاسِ وَلَٰكِنَّ أَكْثَرَهُمْ لَا يَشْكُرُونَ

ನಿಜವಾಗಿ, ಪೈಗಂಬರರೇ, ನಿಮ್ಮ ದೇವನು ಮನುಷ್ಯರ ಮೇಲೆ ತುಂಬಾ ಕೃಪೆ ತೋರುವವನಾಗಿರುವನು! ಆದರೆ ಅವರಲ್ಲಿ ಹೆಚ್ಚಿನವರೂ ಕೃತಜ್ಞತಾ ಭಾವ ಇಲ್ಲದವರು! {73}

وَإِنَّ رَبَّكَ لَيَعْلَمُ مَا تُكِنُّ صُدُورُهُمْ وَمَا يُعْلِنُونَ

ಆದರೆ ಪೈಗಂಬರರೇ, ನಿಮ್ಮ ಪರಿಪಾಲಕನಾದ (ಅಲ್ಲಾಹ್ ನಿಗೆ) ಅವರು ಏನನ್ನು ತಮ್ಮ ಹೃದಯಗಳಲ್ಲಿ ಬಚ್ಚಿಡುತ್ತಿದ್ದಾರೆ ಮತ್ತು ಏನನ್ನು ಬಹಿರಂಗಪಡಿಸುತ್ತಿದ್ದಾರೆ ಎಂಬುದು ಚೆನ್ನಾಗಿ ತಿಳಿದೇ ಇದೆ. {74}

وَمَا مِنْ غَائِبَةٍ فِي السَّمَاءِ وَالْأَرْضِ إِلَّا فِي كِتَابٍ مُبِينٍ

[ಕೇವಲ ಅವರ ವಿಷಯ ಮಾತ್ರವಲ್ಲ, ಬದಲಾಗಿ] ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಇರುವ ಅಗೋಚರವಾದ ಯಾವ ವಿಷಯವನ್ನೂ ಒಂದು ಸುಸ್ಪಷ್ಟವಾದ ದಾಖಲೆ ಗ್ರಂಥದಲ್ಲಿ ನಮೂದಿಸದೆ ಬಿಟ್ಟಿಲ್ಲ! {75}

إِنَّ هَٰذَا الْقُرْآنَ يَقُصُّ عَلَىٰ بَنِي إِسْرَائِيلَ أَكْثَرَ الَّذِي هُمْ فِيهِ يَخْتَلِفُونَ

ನಿಜಕ್ಕೂ, [ಮುಶ್ರಿಕ್ ಜನರಿಗೆ ಉಪದೇಶ ನೀಡುತ್ತಿರುವಂತೆಯೇ] ಈ ಕುರ್‌ಆನ್, ಇಸ್ರಾಈಲ್ ಸಂತತಿಯವರ ಮುಂದೆ, ಅವರು ಪರಸ್ಪರ ಭಿನ್ನಾಭಿಪ್ರಾಯ ಹೊಂದಿರುವ ಹೆಚ್ಚಿನೆಲ್ಲ ವಿಷಯಗಳ ವಾಸ್ತವಿಕತೆಯನ್ನು ವಿವರಿಸುತ್ತದೆ. {76}

وَإِنَّهُ لَهُدًى وَرَحْمَةٌ لِلْمُؤْمِنِينَ

ಇನ್ನು ವಿಶ್ವಾಸಿಗಳ ಪಾಲಿಗಂತು ಈ ಕುರ್‌ಆನ್ ಸಾಕ್ಷಾತ್ ಒಂದು ಮಾರ್ಗದರ್ಶನವೂ ಒಂದು ಅನುಗ್ರಹವೂ ಆಗಿರುತ್ತದೆ. {77}

إِنَّ رَبَّكَ يَقْضِي بَيْنَهُمْ بِحُكْمِهِ ۚ وَهُوَ الْعَزِيزُ الْعَلِيمُ

ನಿಜವಾಗಿಯೂ, ಪೈಗಂಬರರೇ, ನಿಮ್ಮ ಪ್ರಭು [ಇಸ್ಲಾಮ್ ಧರ್ಮವನ್ನು ಒಪ್ಪಿಕೊಂಡವರ ಮತ್ತು ಧಿಕ್ಕರಿಸಿದವರ] ನಡುವೆ ತನ್ನ ವಿವೇಕವಂತಿಕೆಯಿಂದ ತೀರ್ಪು ನೀಡಲಿರುವನು! ಹೌದು, ಅವನು ಅತಿ ಪ್ರಬಲನೂ ಎಲ್ಲ ವಿಷಯಗಳ ಅರಿವುಳ್ಳವನೂ ಆಗಿರುವನು. {78}

فَتَوَكَّلْ عَلَى اللَّهِ ۖ إِنَّكَ عَلَى الْحَقِّ الْمُبِينِ

ಆದ್ದರಿಂದ ನೀವು ಅಲ್ಲಾಹ್ ನ ಮೇಲೆ ಭರವಸೆ ಇಡುವವರಾಗಿರಿ; ಸಂಶಯಾತೀತವಾಗಿ ನೀವು ಸ್ಪಷ್ಟವಾದ ಸತ್ಯದ ಹಾದಿಯಲ್ಲೇ ಇರುವಿರಿ. {79}

إِنَّكَ لَا تُسْمِعُ الْمَوْتَىٰ وَلَا تُسْمِعُ الصُّمَّ الدُّعَاءَ إِذَا وَلَّوْا مُدْبِرِينَ

ಪೈಗಂಬರರೇ, ಸತ್ತು ಬಿದ್ದವರಿಗೆ ಕಿವಿ ಕೇಳಿಸುವಂತೆ ಮಾಡಲು ನಿಮ್ಮಿಂದಾಗದು. ಹಾಗೆಯೇ ಕಿವುಡರು ಮುಖ ತಿರುಗಿಸಿ ಒಡುತ್ತಿರುವಾಗ ಅವರಿಗೆ ನಿಮ್ಮ ಕರೆಯನ್ನು ಕೇಳಿಸಲೂ ನಿಮ್ಮಿಂದ ಖಂಡಿತ ಸಾಧ್ಯವಿಲ್ಲ! {80}

وَمَا أَنْتَ بِهَادِي الْعُمْيِ عَنْ ضَلَالَتِهِمْ ۖ إِنْ تُسْمِعُ إِلَّا مَنْ يُؤْمِنُ بِآيَاتِنَا فَهُمْ مُسْلِمُونَ

ಮತ್ತು ಈ ಕುರುಡರನ್ನು ಅವರು ನಡೆಯುವ ತಪ್ಪು ದಾರಿಯಿಂದ ತಡೆದು ಸರಿದಾರಿಯತ್ತ ತರಲು ಸಹ ನಿಮಗೆ ಸಾಧ್ಯವಾಗದು. ಬದಲಾಗಿ, ಯಾರು ನಮ್ಮ ವಚನಗಳಲ್ಲಿ ನಂಬಿಕೆ ಇಡುತ್ತಾರೋ ಅವರಿಗೆ ಮಾತ್ರ ನೀವು ಕೇಳಿಸಬಲ್ಲಿರಿ; ಹೌದು, ಅವರೇ (ನಮಗೆ) ಶರಣಾಗತರಾದ ಮುಸ್ಲಿಮರು! {81}

وَإِذَا وَقَعَ الْقَوْلُ عَلَيْهِمْ أَخْرَجْنَا لَهُمْ دَابَّةً مِنَ الْأَرْضِ تُكَلِّمُهُمْ أَنَّ النَّاسَ كَانُوا بِآيَاتِنَا لَا يُوقِنُونَ

[ಕಿಯಾಮತ್ ನ ದಿನ ಅಂತಹ ಕುರುಡರ, ಕಿವುಡರ] ವಿಧಿ ಅವರಿಗೆ ಎದುರಾಗಿ ಜರುಗಿದಾಗ, ನೆಲದಿಂದ ಒಂದು ಜೀವಿಯನ್ನು ನಾವು ಅವರಿಗಾಗಿ ಹೊರತರಲಿದ್ದೇವೆ. ಅವರು ನಮ್ಮ ವಚನಗಳ ಮೇಲೆ ಖಚಿತವಾದ ವಿಶ್ವಾಸ ಹೊಂದಿರದ ಬಗ್ಗೆ ಅದು ಅವರಿಗೆ ತಿಳಿಸಲಿರುವುದು! {82}

وَيَوْمَ نَحْشُرُ مِنْ كُلِّ أُمَّةٍ فَوْجًا مِمَّنْ يُكَذِّبُ بِآيَاتِنَا فَهُمْ يُوزَعُونَ

ಪ್ರತಿಯೊಂದು ಸಮುದಾಯದಿಂದಲೂ ನಮ್ಮ ವಚನಗಳನ್ನು ಅಲ್ಲಗಳೆದವರ ಗುಂಪುಗಳನ್ನು ನಾವು ಒಟ್ಟುಗೂಡಿಸಲಿರುವ ಆ ಒಂದು ದಿನದ ಕುರಿತು (ಭಯವಿರಿಸಿಕೊಳ್ಳಿ). ತರುವಾಯ ಅವರನ್ನೆಲ್ಲ (ತಕ್ಕ ಶಿಕ್ಷೆಗಾಗಿ) ಕ್ರಮಬದ್ಧವಾಗಿ ವಿಂಗಡಿಸಲಾಗುವುದು. {83}

حَتَّىٰ إِذَا جَاءُوا قَالَ أَكَذَّبْتُمْ بِآيَاتِي وَلَمْ تُحِيطُوا بِهَا عِلْمًا أَمَّاذَا كُنْتُمْ تَعْمَلُونَ

ಕೊನೆಗೆ ಅವರೆಲ್ಲ (ವಿಚಾರಣಾ ಸ್ಥಳಕ್ಕೆ) ಬಂದು ಸೇರಿದಾಗ (ಅವರ ಒಡೆಯನು ಅವರೊಂದಿಗೆ) ಕೇಳಲಿರುವನು: ನಿಮ್ಮ ಜ್ಞಾನವು ನನ್ನ ವಚನಗಳ ಇಂಗಿತವನ್ನು ಗ್ರಹಿಸದಿದ್ದಾಗ ನೀವು (ಅರ್ಥೈಸಲು ಪ್ರಯತ್ನಿಸುವ ಬದಲು) ಅದನ್ನು ತಿರಸ್ಕರಿಸಿ ಬಿಡುವುದೇ?! ಅಥವಾ, ನೀವು ಮಾಡಿದ್ದಾದರೂ ಏನು? {84}

وَوَقَعَ الْقَوْلُ عَلَيْهِمْ بِمَا ظَلَمُوا فَهُمْ لَا يَنْطِقُونَ

ಅವರು ಮಾಡಿದ್ದ ಅನ್ಯಾಯದ ಕಾರಣ ವಿಧಿ ಅವರಿಗೆ ಎದುರಾಗಿ ಜರುಗಲಿರುವುದು. ಆಗ ಏನನ್ನೂ ವಾದಿಸಲು ಅವರಿಗೆ ಸಾಧ್ಯವಾಗದು. {85}

أَلَمْ يَرَوْا أَنَّا جَعَلْنَا اللَّيْلَ لِيَسْكُنُوا فِيهِ وَالنَّهَارَ مُبْصِرًا ۚ إِنَّ فِي ذَٰلِكَ لَآيَاتٍ لِقَوْمٍ يُؤْمِنُونَ

ಅವರು ವಿಶ್ರಾಂತಿ ಪಡೆದುಕೊಳ್ಳಲು ರಾತ್ರಿಯನ್ನು ನಾವು (ಕತ್ತಲಾಗಿಸಿರುವುದನ್ನು) ಮತ್ತು ಅವರು (ದುಡಿಮೆ ಮಾಡಿಕೊಳ್ಳಲು) ಹಗಲನ್ನು ನಾವು ಪ್ರಕಾಶಮಯಗೊಳಿಸಿರುವುದನ್ನು ಅವರು ಕಾಣುತ್ತಿಲ್ಲವೇ!? ವಿಶ್ವಾಸಿಗಳಾಗಲು ಬಯಸುವವರಿಗೆ ನಿಜವಾಗಿ ಇದರಲ್ಲಿ [ಅರ್ಥಾತ್ ಹಗಲು ಮತ್ತು ರಾತ್ರಿಗಳ ಈ ವ್ಯವಸ್ಥೆಯಲ್ಲಿ] ಸಾಕಷ್ಟು ಪುರಾವೆಗಳಿವೆ! {86}

وَيَوْمَ يُنْفَخُ فِي الصُّورِ فَفَزِعَ مَنْ فِي السَّمَاوَاتِ وَمَنْ فِي الْأَرْضِ إِلَّا مَنْ شَاءَ اللَّهُ ۚ وَكُلٌّ أَتَوْهُ دَاخِرِينَ

ಸೂರ್ [ಅರ್ಥಾತ್ ಲೋಕಾಂತ್ಯದ] ಆ ಕಹಳೆಯಲ್ಲಿ ಊದಲಾಗುವ ದಿನ, ಯಾರನ್ನು ಅಲ್ಲಾಹ್ ನು ಹೊರತು ಪಡಿಸುವನೋ ಅವರ ವಿನಾ, ಆಕಾಶದಲ್ಲಿರುವ ಮತ್ತು ಭೂಮಿಯಲ್ಲಿರುವ ಉಳಿದ ಎಲ್ಲರೂ ಭಯಭೀತರಾಗಿರುವರು! ಎಲ್ಲರೂ ಬಹಳ ದೈನ್ಯತೆಯೊಂದಿಗೆ ಅವನ ಸನ್ನಿಧಿಗೆ ಬರಲಿರುವರು. {87}

وَتَرَى الْجِبَالَ تَحْسَبُهَا جَامِدَةً وَهِيَ تَمُرُّ مَرَّ السَّحَابِ ۚ صُنْعَ اللَّهِ الَّذِي أَتْقَنَ كُلَّ شَيْءٍ ۚ إِنَّهُ خَبِيرٌ بِمَا تَفْعَلُونَ

ಪರ್ವತಗಳನ್ನು ನೋಡಿ ಅವು ಅಲುಗಾಡದೆ ನಿಂತಿರುತ್ತವೆ ಎಂದು ನೀವು ಭಾವಿಸುತ್ತೀರಿ. ಅದರೆ ಅವು [ಲೋಕಾಂತ್ಯಗೊಳ್ಳುವ ಕಹಳೆಯ ಸದ್ದಿಗೆ ಗಾಳಿಯಲ್ಲಿ] ಮೋಡಗಳು ತೇಲುವಂತೆ ತೇಲಿ ಹೋಗುವುವು. ಪ್ರತಿಯೊಂದು ವಸ್ತುವೂ ಸೂತ್ರಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ರಚಿಸಿರುವ ಆ ಅಲ್ಲಾಹನ ಕಾರ್ಯವೈಖರಿಯದು! ಹೌದು, ನೀವು ಏನು ಮಾಡುತ್ತಿರುವಿರಿ ಎಂಬದು ಸಹ ಅವನು ಬಹಳ ಚೆನ್ನಾಗಿ ಬಲ್ಲನು! {88}

مَنْ جَاءَ بِالْحَسَنَةِ فَلَهُ خَيْرٌ مِنْهَا وَهُمْ مِنْ فَزَعٍ يَوْمَئِذٍ آمِنُونَ

ಯಾರು (ಭೂಲೋಕದಲ್ಲಿ ತಾವು ಮಾಡಿದ) ಒಳಿತಿನೊಂದಿಗೆ ಬರುವರೋ ಅವರಿಗೆ (ಅಂದು) ಅದಕ್ಕಿಂತಲೂ ಉತ್ತಮವಾದ ಪ್ರಿತಿಫಲವಿರುವುದು. ಅವರೇ ಅಂದಿನ ಭೀತಿಗ್ರಸ್ತ ಸ್ಥಿತಿಯಲ್ಲೂ ಸುರಕ್ಷಿತರಾಗಿ ನೆಮ್ಮದಿಯಿಂದ ಇರುವವರು! {89}

وَمَنْ جَاءَ بِالسَّيِّئَةِ فَكُبَّتْ وُجُوهُهُمْ فِي النَّارِ هَلْ تُجْزَوْنَ إِلَّا مَا كُنْتُمْ تَعْمَلُونَ

ಇನ್ನು, ಯಾರು (ತಾವು ಮಾಡಿದ) ಕೆಡುಕಿನೊಂದಿಗೆ ಬರುವರೋ ಅವರನ್ನು ಮಕಾಡೆಯಾಗಿ ನರಕದೊಳಕ್ಕೆ ತಳ್ಳಿಬಿಡಲಾಗುವುದು. ಏನು, ನೀವು ಮಾಡಿದ ಕರ್ಮಗಳಿಗಲ್ಲದೆ ಬೇರೆ ಪುರಸ್ಕಾರ ನಿಮಗಿರುವುದೇ?! {90}

إِنَّمَا أُمِرْتُ أَنْ أَعْبُدَ رَبَّ هَٰذِهِ الْبَلْدَةِ الَّذِي حَرَّمَهَا وَلَهُ كُلُّ شَيْءٍ ۖ وَأُمِرْتُ أَنْ أَكُونَ مِنَ الْمُسْلِمِينَ

[ಪೈಗಂಬರರೇ, ಕೊನೆಯದಾಗಿ ನೀವು ಜನರಿಗೆ ಹೇಳಿರಿ]: ನಾನಂತು, ಈ ಪಟ್ಟಣವನ್ನು ಪಾವನಗೊಳಿಸಿದ ಇದರ ಸಂರಕ್ಷಕ ಪ್ರಭುವಾದ (ಅಲ್ಲಾಹ್ ನನ್ನು) ಮಾತ್ರ ಆರಾಧಿಸಬೇಕೆಂದು ನನಗೆ ತಾಕೀತು ಮಾಡಲಾಗಿದೆ! ಸಕಲವೂ ಅವನ ಯಜಮಾನಿಕೆಗೆ ಸೇರಿದ್ದಾಗಿವೆ. ನಾನೂ ಸಹ (ಅವನಿಗೆ) ಶರಣಾಗಿ ಮುಸ್ಲಿಮನಾಗಿ ಜೀವಿಸಬೇಕೆಂದು ನನಗೆ ತಾಕೀತು ಮಾಡಲಾಗಿದೆ. {91}

وَأَنْ أَتْلُوَ الْقُرْآنَ ۖ فَمَنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَنْ ضَلَّ فَقُلْ إِنَّمَا أَنَا مِنَ الْمُنْذِرِينَ

ನನಗೆ (ನಿಮ್ಮ ಮುಂದೆ) ಕುರ್‌ಆನ್ ಅನ್ನು ಓದಿ ಕೇಳಿಸಲು ಸಹ ಆದೇಶಿಸಲಾಗಿದೆ; ಇನ್ನು ಯಾರಾದರೂ ಸರಿದಾರಿ ಸ್ವೀಕರಿಸಿದರೆ ಅವನ ಸ್ವಂತ ಒಳಿತಿಗಾಗಿಯೇ ಸ್ವೀಕರಿಸುತ್ತಾನೆ. ಅದಾಗ್ಯೂ ಯಾರಾದರೂ ತಪ್ಪು ದಾರಿಗೆ ಬಿದ್ದರೆ, (ಪೈಗಂಬರರೇ,) ನಾನು ಕೇವಲ ಎಚ್ಚರಿಸುವವನು ಮಾತ್ರ ಎಂದು ನೀವು ಸ್ಪಷ್ಟವಾಗಿ ಹೇಳಿಬಿಡಿ. {92}

وَقُلِ الْحَمْدُ لِلَّهِ سَيُرِيكُمْ آيَاتِهِ فَتَعْرِفُونَهَا ۚ وَمَا رَبُّكَ بِغَافِلٍ عَمَّا تَعْمَلُونَ

ಎಲ್ಲಾ ರೀತಿಯ ಸ್ತುತಿಸ್ತೋತ್ರಗಳು ಸಲ್ಲಬೇಕಾದುದು ಅಲ್ಲಾಹ್ ನಿಗೆ ಮಾತ್ರ! ಅವನು ತನ್ನ ದೃಷ್ಟಾಂತಗಳನ್ನು ಬೇಗನೇ ತೋರಿಸಿಕೊಡಲಿದ್ದಾನೆ; ಆಗ ನೀವು ಅವನ್ನು ಗುರುತಿಸಲಿರುವಿರಿ; (ಆದರೆ ಈಗ) ನೀವು ಅದೆಂತಹ ಕರ್ಮಗಳಲ್ಲಿ ತೊಡಗಿರುವಿರೋ ಅದರಿಂದ ಅಲ್ಲಾಹ್ ನು ಅಲಕ್ಷ್ಯನಾಗಿಲ್ಲ ಎಂದು ಪೈಗಂಬರರೇ ನೀವು (ಜನರಿಗೆ) ಎಚ್ಚರಿಕೆ ನೀಡಿರಿ. {93}


---  

ಅನುವಾದಿತ ಸೂರಃ ಗಳು 



        Featured post

        ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...