ಪಾರಿಭಾಷಿಕ ಪದಾವಳಿ

ಪಾರಿಭಾಷಿಕ ಪದಾವಳಿ 

ಅರಬಿ ಪಾರಿಭಾಷಿಕಗಳ ಲಿಪ್ಯಂತರಣ: ಈ ಕೃತಿಯಲ್ಲಿ, ಕೆಲವು ಅರಬಿ ಪಾರಿಭಾಷಿಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಗೋಜಿಗೆ ಹೋಗದೆ  ಕೇವಲ ಲಿಪ್ಯಂತರಣ ಮಾಡಿ ಅವುಗಳನ್ನು ಮೂಲ ರೂಪದಲ್ಲೇ ಇರಿಸಲಾಗಿದೆ. ಕೆಲವೊಂದು ಅರಬಿ ಶಬ್ಧಗಳಿಗೆ ಕನ್ನಡ ಪರ್ಯಾಯವು ಇಲ್ಲದೇ ಇರುವ ಕಾರಣದಿಂದಲೂ ಹಾಗೆ ಮಾಡುವುದು ಅನುವಾದಕನ ಅನಿವಾರ್ಯ. ಇನ್ನು ಕೆಲವು ಪದಗಳನ್ನು ಬಲವಂತವಾಗಿ ಅನುವಾದಿಸಲು ಪ್ರಯತ್ನಿಸಿದರೆ ಅಪಾರ್ಥ ಉಂಟಾಗುವ ಸಾಧ್ಯತೆಯೇ ಹೆಚ್ಚು. ಓದುಗರ ಅನುಕೂಲಕ್ಕಾಗಿ ಅಂತಹ ಶಬ್ಧಗಳ ಒಂದು ಪಟ್ಟಿಯನ್ನು ಅರ್ಥವಿವರಣೆ ಸಮೇತ ಇಲ್ಲಿ ಶೀಘ್ರದಲ್ಲೇ ಸೇರಿಸಲಾಗುವುದು: 

ಅಲ್ಲಾಹ್: ಸಕಲ ಜಗತ್ತಿನ ಸೃಷ್ಟಿಕರ್ತನಾದ ಏಕಮೇವ ದೇವನ ಅಂಕಿತನಾಮವೇ ಅಲ್ಲಾಹ್. ಅಲ್ಲಾಹ್ ಎಂಬುದು ಅರಬಿ ಭಾಷೆಯ ಪದವಾದ್ದರಿಂದ ಅರಬಿಗಳೆಲ್ಲರೂ ಏಕಮೇವ ದೇವನನ್ನು ಅಲ್ಲಾಹ್ ಎಂದೇ ಸಂಬೋಧಿಸುತ್ತಾರೆ. ಅರಬ್ ಭೂಪ್ರದೇಶದಲ್ಲಿರುವ ಕ್ರೈಸ್ತರು ಮತ್ತು ಯಹೂದ್ಯರು ಸಾಮಾನ್ಯವಾಗಿ ದೇವನಿಗೆ ಅಲ್ಲಾಹ್ ಎಂಬ ಪದವನ್ನೇ ಬಳಸುತ್ತಾರೆ. ಕಾಪ್ಟಿಕ್ ಕ್ರೈಸ್ತರು ಉಪಯೋಗಿಸುವ ಅರಬಿ ಬೈಬಲ್ ನಲ್ಲಿ ದೇವನಿಗೆ ಅಲ್ಲಾಹ್ ಎಂಬ ಪದವನ್ನೇ ಬಳಸಲಾಗಿದೆ. ಕುರ್‌ಆನ್ ಗ್ರಂಥವು ಜಗತ್ತನ್ನು ಸೃಷ್ಟಿಸಿದ ದೇವನ ಅಂಕಿತನಾಮವಾಗಿ ಅಲ್ಲಾಹ್ ಎಂಬ ಪದವನ್ನೇ ಬಳಸಿದೆ. ಕುರ್‌ಆನ್ ಗಿಂತ ಮುಂಚಿನ ಕಾಲದಲ್ಲೂ ದೇವನನ್ನು ಉಲ್ಲೇಖಿಸಲು ಅಲ್ಲಾಹ್ ಎಂಬ ಪದವನ್ನು ಮುಸ್ಲಿಮರಲ್ಲದ ಸಾಮಾನ್ಯ ಅರಬರು, ಕ್ರೈಸ್ತರು, ಯಹೂದಿಗಳು ಮತ್ತಿತರು ಉಪಯೋಗಿಸುತ್ತಿದ್ದರು. ಅರಬ್ ಮುಸ್ಲಿಮರು ಮತ್ತು ಜಗತ್ತಿನ ಇತರೆಲ್ಲ ಕಡೆಗಳಲ್ಲಿರುವ ಮುಸ್ಲಿಮರು ದೇವನನ್ನು ಅಲ್ಲಾಹ್ ಎಂಬ ಅಂಕಿತನಾಮದಿಂದ ಕರೆಯುತ್ತಾರೆ. ಅಲ್ಲಾಹ್ ನನ್ನು ಮುಸ್ಲಿಮರ ಮಾತ್ರ ದೇವನಾಗಿ ತಿಳಿಯುವುದು ತಪ್ಪು ಗ್ರಹಿಕೆಯಾಗಿದೆ.

ಶಿರ್ಕ್: ಏಕಮಾತ್ರನಾದ ಅಲ್ಲಾಹ್‌ ನ ಏಕತ್ವದ ಪರಿಕಲ್ಪನೆಗೆ ಧಕ್ಕೆ ತರುವ ಸಕಲ ರೀತಿಯ ಭಾವನೆ, ವರ್ತನೆ, ಆಚಾರ, ವಿಚಾರ ಇತ್ಯಾದಿಗಳನ್ನು ಕುರ್‌ಆನ್ ನ ಪಾರಿಭಾಷಿಕೆಯಲ್ಲಿ 'ಶಿರ್ಕ್' ಎಂದೂ, ಅಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು 'ಮುಶ್ರಿಕ್' ಎಂದೂ ಕರೆಯಲಾಗುತ್ತದೆ. ಕುರ್‌ಆನಿನ ಪ್ರಕಾರ, ಶಿರ್ಕ್ ಎಂಬುದು ಗುರುತರವಾದ ಪಾಪ, ಅಪರಾಧ ಹಾಗೂ ಅತ್ಯಂತ ದೊಡ್ಡ ಅತಿಕ್ರಮವಾಗಿದೆ; ಅಕ್ಷಮ್ಯವೂ ಆಗಿದೆ!

ಪೈಗಂಬರ್ ಮುಹಮ್ಮದ್ ರವರಿಗೆ ಕುರ್‌ಆನ್ ಅವತರಿಸಲಾರಂಭಿಸಿದ ಕಾಲದಲ್ಲಿ ಮಕ್ಕಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಬಹುಪಾಲು ಜನರು ಶಿರ್ಕ್ ನಂತಹ ಅಪರಾಧದಲ್ಲಿ ಮುಳುಗಿದ್ದರು. ಕುರ್‌ಆನ್ ನ ಅವತರಣೆಯ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ಅರೇಬಿಯಾದ ಬಹುಭಾಗದ ಜನರು ಶಿರ್ಕ್ ಎಂಬ ಪಿಡುಗಿನಿಂದ ಹೊರಬಂದು, ತಮ್ಮ ಪೂರ್ವಜರಾದ ಇಬ್ರಾಹೀಮ್ ಮತ್ತು ಇಸ್ಮಾಈಲ್ ರವರ ಧಾರ್ಮಿಕ ನಿಷ್ಠೆಯಾದ ಏಕಮಾತ್ರ ದೇವನಾದ ಅಲ್ಲಾಹ್‌ನನ್ನು ಮಾತ್ರ ಆರಾಧಿಸುವ (ಏಕದೇವೋಪಾಸನೆಯ ಧರ್ಮವಾದ) ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದರು.

ಮಹಾಪಾಪವಾದ ಶಿರ್ಕ್ ಅನ್ನು ಸಂಪೂರ್ಣವಾಗಿ ತೊರೆದು ಏಕೈಕನಾದ ಅಲಾಹ್ ನನ್ನು ತಮ್ಮ ದೇವನೆಂದು ಒಪ್ಪಿಕೊಂಡು ಅವನನ್ನು ಮಾತ್ರ ಆರಾಧಿಸುವಂತೆ ಇಸ್ಲಾಮ್ ಧರ್ಮವು ಸಮಸ್ತ ಮಾನವತೆಗೆ ಕರೆ ನೀಡುತ್ತದೆ.

ಮುಶ್ರಿಕ್: ಏಕಮಾತ್ರನಾದ ಅಲ್ಲಾಹ್‌ನ ದೈವಿಕ ಏಕತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಇತರರನ್ನು ಅವನಿಗೆ ಸಮಾನರನ್ನಾಗಿ ಪರಿಗಣಿಸುವ, ಅವನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವ ಅಥವಾ ಅವನಿಗೆ ಮಾತ್ರ ಸಲ್ಲಬೇಕಾದ ಆರಾಧನೆ, ದೈವಿಕ ಅಧಿಕಾರ ಹಾಗೂ ಗುಣವಿಶೇಷಗಳಲ್ಲಿ ಇತರರಿಗೂ ಪಾಲು ನೀಡುವ ಅಥವಾ ಪಾಲುದಾರಿಕೆ ಇದೆ ಎಂದು ಕಲ್ಪಿಸುವ ವ್ಯಕ್ತಿಯನ್ನು ಇಸ್ಲಾಮಿನ ಪಾರಿಭಾಷಿಕೆಯಲ್ಲಿ 'ಮುಶ್ರಿಕ್' ಎನ್ನಲಾಗುತ್ತದೆ. ಅಂದರೆ, ಶಿರ್ಕ್‌ನಲ್ಲಿ ತೊಡಗಿರುವ ವ್ಯಕ್ತಿಯೇ ಮುಶ್ರಿಕ್.

ಕುರ್‌ಆನ್: ಕುರ್‌ಆನ್ ಎಂಬುದು ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಓದಲ್ಪಡುವ ಒಂದು ಅಸಾಧಾರಣ ಗ್ರಂಥ. ಹೆಚ್ಚುಕಡಿಮೆ ಆರು ನೂರು ಪುಟಗಳಷ್ಟು ಬರುವ ಈ ಗ್ರಂಥ ಅತ್ಯಂತ ಸುಂದರವಾದ, ಸರಿಸಾಟಿಯಿಲ್ಲದ, ಶಾಸ್ತ್ರೀಯ ಅರಬಿ ಭಾಷೆಯಲ್ಲಿದೆ. ಕ್ರಿ. ಶ. 610 ರಲ್ಲಿ ಪ್ರಾರಂಭವಾಗಿ ಮುಂದಿನ 23 ವರ್ಷಗಳಷ್ಟು ಕಾಲ ಹಂತ ಹಂತವಾಗಿ, ಕಾಲದ ಬೇಡಿಕೆಗೆ ತಕ್ಕಂತೆ ಅದರ ವಚನಗಳನ್ನು ಪೈಗಂಬರ್ ಮುಹಮ್ಮದ್ ರಿಗೆ ಕಳುಹಿಸಲಾಗುತ್ತಿತ್ತು. ಅದರಲ್ಲಿರುವ ಎಲ್ಲ 114 ಅಧ್ಯಾಯಗಳೂ ಸರ್ವ ಸಂಪೂರ್ಣವಾಗಿ ಅಲ್ಲಾಹ್ ನ ಮಾತುಗಳಲ್ಲಿವೆ. ಅದರಲ್ಲಿರುವ ಆದೇಶ, ನಿರ್ದೇಶ, ನೀತಿ, ನಿಯಮಗಳು, ಸೂಚನೆಗಳು, ಎಚ್ಚರಿಕೆಗಳು, ಶುಭ ಸುದ್ದಿ, ಅಲ್ಲಾಹ್ ನು ಮಾಡಿದ ವಾಗ್ದಾನಗಳು ಮುಂತಾದ ಸಕಲ ವಿಷಯಗಳನ್ನು ಮಲಕ್ ಗಳಲ್ಲಿ ಶ್ರೇಷ್ಠರಾದ ಜಿಬ್ರೀಲ್ (The Archangel Gabriel) ಎಂಬವರ ಮೂಲಕ ಅಲ್ಲಾಹ್ ನು ಪೈಗಂಬರರ ಬಳಿಗೆ ಕಳುಹಿಸುತ್ತಿದ್ದನು. ಅದರ ಸಂರಕ್ಷಣೆ ಹೊಣೆಯನ್ನು ಸ್ವತಃ ಅಲ್ಲಾಹ್ ನು ಹೊತ್ತಿರುವನು. ಆದ್ದರಿಂದಲೇ ಅದು ಮಾರ್ಪಾಡನ್ನೇ ಕಾಣದ, ಹದಿನಾಲ್ಕು ಶತಮಾನಗಳಲ್ಲಿ ಒಂದಕ್ಷರವೂ ಬದಲಾಗದ, ಬದಲಾಯಿಸಲು ಸಾಧ್ಯವಿಲ್ಲದ ಒಂದು ಕಾಲಾತೀತ ಗ್ರಂಥವಾಯಿತು. ಕುರ್‌ಆನ್ ನಲ್ಲಿರುವ ಒಂದು ಚಿಕ್ಕ ಅಧ್ಯಾಯಕ್ಕೆ ತುಲ್ಯವಾದ ಮತ್ತೊಂದು ಅಧ್ಯಾಯವನ್ನು ಯಾರಿಗಾದರೂ ರಚಿಸಲು ಸಾಧ್ಯವಾದರೆ ರಚಿಸಿ ತನ್ನಿ ಎಂದು ಅದು ಸವಾಲೊಡ್ಡುತ್ತದೆ; ಅದಕ್ಕಾಗಿ ಯಾರ ಸಹಾಯವನ್ನು ಬೇಕಾದರೂ ಪಡೆದುಕೊಳ್ಳಬಹುದು ಎಂದೂ ಅದು ಸಾರುತ್ತದೆ. ಸೋಜಿಗವೆಂದರೆ ಆ ಸವಾಲು ಇಂದಿಗೂ ಪ್ರಾಬಲ್ಯದಲ್ಲಿದೆ!

ಕುರ್‌ಆನ್ ನ ಪ್ರಧಾನ ವಿಷಯವೆಂದರೆ 'ಮನುಷ್ಯ' ಮತ್ತು 'ಮನುಷ್ಯನ ಪರಲೋಕ ಜೀವನ'. ಮುನುಷ್ಯನು ಸಾವಿನ ಸವಿಯುಣ್ಣಲೇ ಬೇಕು; ಅವನು ಬದುಕಿರುವ ಈ ಲೋಕವನ್ನೂ ಒಂದು ದಿನ ನಾಶಪಡಿಸಲಾಗುವುದು. ಆದರೆ ಅಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ, ಮರಣವು ಜೀವನದ ಕೊನೆಯಲ್ಲ; ಬದಲಾಗಿ ಮನುಷ್ಯನನ್ನು ಪುನಃ ಜೀವಂತಗೊಳಿಸಿ ಪರಲೋಕದಲ್ಲಿ ಎಬ್ಬಿಸಲಾಗುವುದು ಎಂದು ಕುರ್‌ಆನ್ ತನ್ನ ಓದುಗನಿಗೆ ಮನದಟ್ಟು ಮಾಡಿಸುತ್ತದೆ. ಭೂಲೋಕದಲ್ಲಿನ ಅವನ ಸದಾಚಾರ ಸತ್ಕರ್ಮಗಳಿಗೆ ಸತ್ಫಲವಾಗಿ ಸ್ವರ್ಗೋದ್ಯಾನಗಳಲ್ಲಿ ಶಾಶ್ವತ ಸ್ವರೂಪದ ವಿಲಾಸೀ ಜೀವನವನ್ನೂ, ಅವನ ದುರಾಚಾರ ದುಷ್ಕರ್ಮಗಳಿಗೆ ದುಷ್ಫಲವಾಗಿ ನಿರಂತರ ನರಕಯಾತನೆಯನ್ನೂ ನೀಡಲಾಗುವುದು ಎಂಬುದು ಕುರ್‌ಆನ್ ನ ಮೂಲ ಮಂತ್ರವಾಗಿದೆ.

ಮನುಷ್ಯರ ಪಾರಲೌಕಿಕ ವಿಜಯಕ್ಕೆ ಕುರ್‌ಆನ್ ಒತ್ತುಕೊಡುತ್ತದೆ; ಅದನ್ನು ಸಾಧಿಸಲು ಯಾವ ನಿಬಂಧನೆಗಳನ್ನು ಭೂಲೋಕದಲ್ಲಿ ಅಗತ್ಯವಾಗಿ ಪಾಲಿಸಬೇಕು ಎಂದು ಅತ್ಯಂತ ಸರಳವಾಗಿ ತಿಳಿಸುತ್ತದೆ. ಅದರಂತೆ ಅಲ್ಲಾಹ್ ನು, ಮನುಷ್ಯರ ಮತ್ತು ಇಡೀ ಪ್ರಪಂಚದ ಸೃಷ್ಟಿಕರ್ತ, ಪರಿಪಾಲಕ ಹಾಗೂ ಏಕೈಕ ಜಗನ್ನಿಯಾಮಕ. ಏಕಮೇವನಾದ ಆ ಅಲ್ಲಾಹ್ ನು ಮಾತ್ರ ಆರಾಧಿಸಿಕೊಳ್ಳಲು ಅರ್ಹನಾಗಿರುತ್ತಾನೆ. ಅವನ ಹೊರತು ಉಳಿದೆಲ್ಲವೂ ಅವನ ಸೃಷ್ಟಿಗಳು. ಆದ್ದರಿಂದ ಸೃಷ್ಟಿಕರ್ತನಾದ ಆ ಅಲ್ಲಾಹ್ ನನ್ನು ಮಾತ್ರ ಆರಾಧಿಸುವುದೇ ಪರಲೋಕ ವಿಜಯಕ್ಕಿರುವ ಏಕೈಕ ಹಾದಿ. ವಿಗ್ರಹಾರಾಧನೆ, ಬಹುದೇವಾರಾಧನೆಗಳಂತಹ ಸಲ್ಲದ ಆಚರಣೆಗಳನ್ನು ಕುರ್‌ಆನ್ ವಿರೋಧಿಸುತ್ತದೆ; ಪ್ರಬಲವಾಗಿ ಖಂಡಿಸುತ್ತದೆ ಮತ್ತು ಅದನ್ನು ಅಕ್ಷಮ್ಯವಾದ ಅಪರಾಧವೆಂದು ಸಾರುತ್ತದೆ. ಮಾನವನ ಮರಣಾನಂತರದ ಪರಲೋಕ ಜೀವನದಲ್ಲಿ ಶಾಶ್ವತ ವಿಜಯ ಸಾಧಿಸಬೇಕಾದರೆ ಭೂಲೋಕದಲ್ಲಿ ಅಲ್ಲಾಹ್ ನ ಆದೇಶಗಳಿಗೆ ಅನುಗುಣವಾಗಿ ಹೇಗೆ ಜೀವಿಸಬೇಕು ಎಂಬ ಪಾಠವನ್ನು ಕುರ್‌ಆನ್ ಸಾದ್ಯಂತ ಬೋಧಿಸುತ್ತದೆ!

ತಾಘೂತ್:  ಅಖಿಲ ವಿಶ್ವದ ಕರ್ತಾರನೂ, ಪರಿಪಾಲಕನೂ, ಏಕಮಾತ್ರ ಒಡೆಯನೂ ಆದ ಅಲ್ಲಾಹ್ ನಿಗೆ ಮಾತ್ರ ಸಲ್ಲಬೇಕಾದ ಆರಾಧನೆ, ಅನುಸರಣೆ, ವಿಧೇಯತೆ, ಸಾರ್ವಭೌಮ ಅಧಿಕಾರ ಮುಂತಾದವುಗಳನ್ನು ತನ್ನದಾಗಿಸಿಕೊಳ್ಳುವ ಅಥವಾ ಅವುಗಳಲ್ಲಿ ಅಲ್ಲಾಹ್ ನಿಗೆ ಸರಿಸಮಾನನಾಗಲು ಪ್ರಯತ್ನಿಸುವ ಯಾವುದೇ ವ್ಯಕ್ತಿ, ಶಕ್ತಿ ಅಥವಾ ವಸ್ತುವನ್ನು 'ತಾಘೂತ್' ಎಂದು ಕರೆಯಲಾಗುತ್ತದೆ.

ಅಂತೆಯೇ, ಅಲ್ಲಾಹ್ ನ ಹೊರತಾಗಿ ಆರಾಧಿಸಲ್ಪಡುವ ಮಿಥ್ಯ ದೇವತೆಗಳು, ಸುಳ್ಳು ದೇವರುಗಳು, ಪೂಜಿಸಲ್ಪಡುವ ವಿಗ್ರಹಗಳು, ಸೈತಾನನಂತಹ ವಿದ್ರೋಹಿ ಶಕ್ತಿಗಳು ಹಾಗೂ ಜನರನ್ನು ಸತ್ಯಮಾರ್ಗದಿಂದ ವಿಮುಖಗೊಳಿಸುವ ಅಥವಾ ವಿಮುಖಗೊಳಿಸಲು ಪ್ರಯತ್ನಿಸುವ ದುಷ್ಟ ಶಕ್ತಿಗಳು ತಾಘೂತ್ ಎಂಬ ಪರಿಕಲ್ಪನೆಯ ವ್ಯಾಪ್ತಿಗೆ ಸೇರುತ್ತವೆ.

ಕುರ್‌ಆನ್‌ ನಲ್ಲಿ ತಾಘೂತ್‌ ಅನ್ನು ತಿರಸ್ಕರಿಸಿ, ಸರ್ವಶಕ್ತನಾದ ಅಲ್ಲಾಹ್ ನನ್ನು ಮಾತ್ರ ಆರಾಧಿಸುವಂತೆ ಬೋಧಿಸಲಾಗಿದೆ. ತಾಘೂತ್‌ ಅನ್ನು ತಿರಸ್ಕರಿಸುವುದು ಏಕದೇವಾರಾಧನೆಯ ಪ್ರಮುಖ ತಳಹದಿಯಾಗಿದೆ.

ಜಿಬ್ರೀಲ್: ಮಲಕ್ ವರ್ಗದವರಲ್ಲಿಯೇ 'ಜಿಬ್ರೀಲ್' ಬಹಳ ಮಹತ್ವಪೂರ್ಣ ಹಾಗೂ ಗೌರ್ವಾನ್ವಿತರಾದ ಒಬ್ಬ ಹಿರಿಯ ಮಲಕ್! ಇಸ್ಲಾಮ್ ನಂತೆಯೇ ಕ್ರೈಸ್ತರ ಹಾಗೂ ಯೆಹೂದ್ಯರ ಧರ್ಮಗ್ರಂಥಗಳಲ್ಲೂ ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿಯೂ ಈ ಪ್ರಧಾನ ದೇವದೂತ ಜಿಬ್ರೀಲ್ (Archangel Gabiel) ರಿಗೆ ಬಹಳ ಮಹತ್ವ ಕಲ್ಪಿಸಲಾಗಿದೆ.

ಅಲ್ಲಾಹ್ ನು ಮನುಷ್ಯರ ಮಾರ್ಗದರ್ಶನಕ್ಕಾಗಿ ನಿಯೋಗಿಸಿದ ಸಕಲ ಪ್ರವಾದಿಗಳಿಗೆ, ಅಂದರೆ ಮೊದಲ ಪ್ರವಾದಿ ಆದಮ್ ರಿಂದ ಅಂತಿಮ ಪ್ರವಾದಿ ಮುಹಮ್ಮದ್ ರ ತನಕ ಹೆಚ್ಚು ಕಡಿಮೆ ಒಂದೂಕಾಲು ಲಕ್ಷದಷ್ಟಿರುವ ಸಕಲ ಪ್ರವಾದಿಗಳಿಗೆ, ಅಲ್ಲಾಹ್ ನು ದಿವ್ಯ ಸಂವಹನ ಮಾಡುತ್ತಿದ್ದುದು ಜಿಬ್ರೀಲ್ ರ ಮೂಲಕವೇ ಆಗಿತ್ತು. ಪ್ರವಾದಿಗಳಿಗೆ ದಿವ್ಯ ಗ್ರಂಥಗಳನ್ನು ಮತ್ತಿತರ ದಿವ್ಯ ಬೋಧನೆಗಳನ್ನು, ಉಪದೇಶಗಳನ್ನು ಅಲ್ಲಾಹ್ ನ ಇಚ್ಛೆಯಂತೆ ತಲಪಿಸಿ ಕೊಡುವುದು ಈ ಪ್ರಧಾನ ದೇವದೂತ ಜಿಬ್ರೀಲ್ ರ ಮುಖ್ಯ ಕರ್ತವ್ಯ. ಪ್ರವಾದಿಗಳಾದ ಮೋಸೆಸ್ ರಿಗೆ ತೋರಾ, ಡೇವಿಡ್ ರಿಗೆ ಝಬೂರ್, ಜೀಸಸ್ ರಿಗೆ ಇಂಜೀಲ್ ತಂದು ಕೊಟ್ಟವರೂ ಇದೇ ಜಿಬ್ರೀಲ್. ಇತರ ಕೆಲವು ಪ್ರವಾದಿಗಳಿಗೆ ಇತರ ಗ್ರಂಥಗಳನ್ನೂ ಅಲ್ಲಾಹ್ ನ ಇಚ್ಛೆಯಂತೆ ತಲುಪಿಸಿರುವರು.

ಇಸ್ಲಾಮ್ ಧರ್ಮದ ಬುನಾದಿಯಾದ ವೈಭವಯುತ ಕುರ್‌ಆನ್ ಗ್ರಂಥವನ್ನು ಅಗತ್ಯಕ್ಕೆ ತಕ್ಕಂತೆ ಹಂತ ಹಂತವಾಗಿ ಒಟ್ಟು 23 ಚಂದ್ರಮಾನ ವರ್ಷಗಳಲ್ಲಿ ಆಲ್ಲಾಹ್ ನ ಆದೇಶದಂತೆ ಪೈಗಂಬರ್ ಮುಹಮ್ಮದ್ ರಿಗೆ ತಲಪಿಸಿದವರು ಸಹ ಜಿಬ್ರೀಲ್ ರೇ ಆಗಿದ್ದರು. ಪ್ರವಾದಿಗಳಿಗೆ ಹೆಚ್ಚಿನ ಸಹಾಯದ ಅಗತ್ಯ ಬಂದಾಗ ಅಲ್ಲಾಹ್ ನು ಜಿಬ್ರೀಲ್ ರನ್ನು ಪ್ರವಾದಿಗಳ ಬಳಿಗೆ ಕಳುಹಿಸುತ್ತಿದ್ದ ವಿಷಯಕ್ಕೆ ಕುರ್‌ಆನ್ ನಲ್ಲಿ ಪ್ರಸ್ತಾಪವಿದೆ.

ಮಕ್ಕಃ ಅಥವಾ ಮಕ್ಕಾ: ಮಕ್ಕಃ ಪಟ್ಟಣವು ಇಸ್ಲಾಮ್ ಧರ್ಮದ ಅಂತಿಮ ಪ್ರವಾದಿಯಾದ ಮುಹಮ್ಮದ್ ಪೈಗಂಬರರು ಜನಿಸಿದ ಸ್ಥಳ. ಅಲ್ಲಿಯ ಜನರು ಮುಖ್ಯವಾಗಿ ಪ್ರವಾದಿಗಳಾದ ಇಬ್ರಾಹೀಮ್ ಮತ್ತು ಇಸ್ಮಾಈಲ್ ರವರ ಸಂತಾನ. ಅವರಲ್ಲಿ ಕುರೈಷ್ ಎಂಬ ಗೋತ್ರವು ಬಹಳ ಗೌರವಾನ್ವಿತವಾದ ಗೋತ್ರ. ಮುಹಮ್ಮದ್ ಪೈಗಂಬರರು ಅದೇ ಗೋತ್ರಕ್ಕೆ ಸೇರಿದವರು. ಮಕ್ಕಃ ಪಟ್ಟಣದಲ್ಲಿ ಪೈಗಂಬರರ ಜನನವಾದಾಗ ಅಲ್ಲಿಯ ಹೆಚ್ಚಿನ ಜನರು ಇಬ್ರಾಹೀಮ್ ಮತ್ತು ಇಸ್ಮಾಈಲ್ ರಂತಹ ಮಹಾನ್ ಪ್ರವಾದಿಗಳು ಸಾರಿದ ತೌಹೀದ್ (ಅರ್ಥಾತ್ ಅಲ್ಲಾಹ್ ನ ಏಕತ್ವವನ್ನು) ಮರೆತು ಹಲವು ವಿಧವಾದ ಮಿಥ್ಯ ದೇವರು ದೇವತೆಗಳನ್ನು ಪೂಜಿಸುತ್ತಿದ್ದರು. ಹಾಗಿದ್ದರೂ ಬೆರಳೆಣಿಕೆಯ ಕೆಲವರು ಪೂರ್ವ ಪ್ರವಾದಿಗಳ ಬೋಧನೆಯಂತೆ ಸ್ವಾಭಾವಿಕವಾದ ಏಕದೇವೋಪಾಸನೆಯನ್ನು ಅನುಸರಿಸುತ್ತಾ ಬಂದಿದ್ದರು.

ವಿಶ್ವದ ಸೃಷ್ಟಿಕರ್ತನಾದ ಅಲ್ಲಾಹ್ ನ ಆರಾಧನೆಗಾಗಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟ ಮೊದಲ ಮಸೀದಿ, ಅಂದರೆ "ಅಲ್ ಮಸ್ಜಿದ್ ಅಲ್ ಹರಾಮ್" ಅನ್ನು ಮಕ್ಕಃ ಪಟ್ಟಣದಲ್ಲೇ ನಿರ್ಮಿಸಲಾಗಿದೆ. ಅದು ಅತ್ಯಂತ ಪುರಾತನವಾದ ಏಕದೇವೋಪಾಸನೆಯ ಕೇಂದ್ರವಾದ್ದರಿಂದ ಅದನ್ನು ಪವಿತ್ರ ಕುರ್‌ಆನ್ "ಬೈತುಲ್ ಅತೀಕ್" ಎಂದು ಪ್ರಸ್ತಾಪಿಸುತ್ತದೆ. ಇಂದಿಗೆ ಹೆಚ್ಚು ಕಡಿಮೆ ನಾಲ್ಕು ಸಾವಿರ ವರ್ಷಗಳ ಹಿಂದೆ ಪ್ರವಾದಿ ಇಬ್ರಹೀಮ್ ಮತ್ತು ಅವರ ಪುತ್ರ ಪ್ರವಾದಿ ಇಸ್ಮಾಈಲ್ ರು ಸೇರಿ ಅದರ ಅಳಿದುಳಿದ ಮೂಲ ಬುನಾದಿಯ ಮೇಲೆ ಅದನ್ನು ಪುನಃ ನಿರ್ಮಿಸಿದರು ಎಂದು ಕುರ್‌ಆನ್ ತಿಳಿಸುತ್ತದೆ.

ಮಕ್ಕಃ ಪಟ್ಟಣದಲ್ಲಿ ಜನಿಸಿದ ಪೈಗಂಬರ್ ಮುಹಮ್ಮದ್ ರಿಗೆ ನಲವತ್ತು ವರ್ಷ ಪ್ರಾಯವಾದಾಗ ಪ್ರವಾದಿತ್ವ ಲಭಿಸಿತು. ಮುಂದಿನ ಹದಿಮೂರು ವರ್ಷಗಳ ಕಾಲ ಅವರು ಮಕ್ಕಃ ಪಟ್ಟಣವನ್ನೇ ಕೇಂದ್ರವಾಗಿರಿಸಿಕೊಂಡು ಜನರಿಗೆ ಕುರ್‌ಆನ್ ನ ಬೋಧನೆ ನೀಡುತ್ತಿದ್ದರು. ವಾಸ್ತವ ಅದಾಗಿದ್ದರೂ ಅಲ್ಲಿಯ ಹೆಚ್ಚಿನ ಜನರು, ಅದರಲ್ಲೂ ಕುರೈಷ್ ವಂಶಕ್ಕೆ ಸೇರಿದ ಸ್ಥಿತಿವಂತರು ಪವಿತ್ರ ಕುರ್‌ಆನ್ ನ ಬೋಧನೆಗಳನ್ನು ಒಪ್ಪಿಕೊಂಡು ಸೃಷ್ಟಿಕರ್ತನಾದ ಆ ಅಲ್ಲಾಹ್ ನನ್ನು ಮಾತ್ರವಾಗಿ ಆರಾಧಿಸಲು ತಯಾರಾಗಲಿಲ್ಲ. ಬದಲಾಗಿ ಅವರು ಅಲ್ಲಾಹ್ ನ ಜೊತೆಗೆ, ಹತ್ತು ಹಲವು ವಿಗ್ರಹಗಳನ್ನೂ ಇತರ ಹಲವರನ್ನೂ ಪೂಜಿಸುತ್ತಿದ್ದರು; ಅವುಗಳಿಗೆ ಮೊರೆಯಿಡುತ್ತಿದ್ದರು. ಆದರೆ ಇಸ್ಲಾಮ್ ಧರ್ಮವು ಏಕಮೇವನಾದ ಅಲ್ಲಾಹ್ ನನ್ನು ಬಿಟ್ಟು ಉಳಿದೆಲ್ಲ ಆರಾಧನೆಗಳನ್ನು ಸರ್ವಸಂಪೂರ್ಣವಾಗಿ ನಿಷೇಧಿಸುತ್ತದೆ.

ಇಸ್ಲಾಮ್ ಧರ್ಮದ ಮುಖ್ಯ ಆರಾಧನಾ ಕರ್ಮವಾದ ಹಜ್ಜ್ ಅನ್ನು ಮಕ್ಕಃ ಪಟ್ಟಣದಲ್ಲಿರುವ ಮಸ್ಜಿದ್ ಅಲ್ ಹರಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ವಹಿಸಬೇಕಾಗುತ್ತದೆ. ಅಂತೆಯೇ ಉಮ್ರಾ ಎಂಬ ಆರಾಧನೆಯನ್ನು ನಿರ್ವಹಿಸಲು ಮಕ್ಕಃ ಪಟ್ಟಣಕ್ಕೆ ಭೇಟಿ ನೀಡಬೇಕಾಗುತ್ತದೆ.

ಮಕ್ಕಃ ಪಟ್ಟಣಕ್ಕೆ ಕುರ್‌ಆನ್ ನಲ್ಲಿ ಉದ್ಧರಿಸಲಾದ ಹೆಸರುಗಳೆಂದರೆ - 1) ಮಕ್ಕಃ, 2) ಬಕ್ಕಃ, 3) ಉಮ್ಮು ಅಲ್ ಕುರಾ ಹಾಗೂ 4) ಅಲ್ ಬಲದ್ ಅಲ್ ಅಮೀನ್.

ದೀನ್: ಮುಖ್ಯವಾಗಿ 'ಧರ್ಮ' ಅರ್ಥಾತ್ 'ಇಸ್ಲಾಮ್ ಧರ್ಮ' ಎಂಬ ಅರ್ಥದಲ್ಲಿ ಉಪಯೋಗಿಸಿದ್ದರೂ 'ದೀನ್' ಅಥವಾ 'ಅಲ್-ದೀನ್' (ಉಚ್ಛರಿಸುವಾಗ 'ಅದ್ದೀನ್') ಎಂಬುದಕ್ಕೆ ಅನೇಕ ಅರ್ಥ ಮತ್ತು ವ್ಯಾಖ್ಯಾನಗಳಿವೆ. ಸಂದರ್ಭಕ್ಕನುಸಾರ ಇದು ವಿವಿಧ ಅರ್ಥಗಳಲ್ಲಿ ಉಪಯೋಗಿಸಲ್ಪಟ್ಟಿದೆ.

ವಹೀ: ಸೃಷ್ಟಿಕರ್ತನಾದ ಅಲ್ಲಾಹ್ ನು ಜಿಬ್ರೀಲ್ ಎಂಬ ಮಲಕ್ (Archangel Gabriel) ನ ಮೂಲಕ ಪ್ರವಾದಿಗಳಿಗೆ ನೀಡುವ ಸಂದೇಶ ಅಥವಾ ದಿವ್ಯಬೋಧನೆಗೆ ಕುರ್‌ಆನ್ ನ ಭಾಷೆಯಲ್ಲಿ ವಹೀ ಎನ್ನಲಾಗಿದೆ. ಪವಿತ್ರ ಕುರ್‌ಆನ್ ನಲ್ಲಿರುವ ಎಲ್ಲ ನೂರ ಹದಿನಾಲಕ್ಕು ಅಧ್ಯಾಯಗಳು, ಮತ್ತು ಆ ಅಧ್ಯಾಯಗಳಲ್ಲಿರುವ ಪ್ರತಿ ಪದವೂ ವಹೀ ಮೂಲಕವೇ ಮುಹಮ್ಮದ್ ಪೈಗಂಬರರಿಗೆ ಅಲ್ಲಾಹ್ ನು ಕಳುಹಿಸಿ ಕೊಟ್ಟಿರುವನು. ಅದಕ್ಕಿಂತ ಮುಂಚಿನ ಕಾಲಗಳಲ್ಲೂ ಪ್ರವಾದಿಗಳಿಗೆ ವಹೀ ಮೂಲಕವೇ ಅಲ್ಲಾಹ್ ನು ಸಂದೇಶಗಳನ್ನು ಕಳುಹಿಸುತ್ತಿದ್ದನು. ಉದಾಹರಣೆಗೆ ಪ್ರವಾದಿಗಳಾದ ಮೋಸೆಸ್, ಕಿಂಗ್ ಡೆವಿಡ್ ಮತ್ತು ಏಸು ಕ್ರಿಸ್ತರವರ ಬಳಿಗೆ ಏಂಜೆಲ್ ಗೇಬ್ರಿಯಲ್ (ಅರಬಿ: ಜಿಬ್ರೀಲ್) ವಹೀ ತಲುಪಿಸಲು ಬರುತ್ತಿದ್ದರು.

ಝಕಾತ್: ಝಕಾತ್ ಇಸ್ಲಾಮ್ ಧರ್ಮದ ಬುನಾದಿಗಳಲ್ಲೊಂದು. ಆರಾಧನೆಗಳಲ್ಲಿ ನಮಾಝ್ ನ ನಂತರ ಬರುವುದೇ ಝಕಾತ್. ಇದು ಧನಿಕ ಮುಸ್ಲಿಮರು ಕಡ್ಡಾಯವಾಗಿ ಬಡ ಮತ್ತು ಅರ್ಹ ಜನರಿಗೆ ನೀಡಬೇಕಾದ ಸಹಾಯ. ಮುಸ್ಲಿಮರು ಒಂದು ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದ್ದರೆ ಝಕಾತ್ ನ ಸಂಗ್ರಹ ಮತ್ತು ವಿತರಣಾ ಕಾರ್ಯ ಸರಕಾರೀ ಮಟ್ಟದಲ್ಲಿ ನಡೆಯುತ್ತದೆ. ಅಂತಹ ವ್ಯವಸ್ಥೆ ಇಲ್ಲದಿರುವಾಗ ಮುಸ್ಲಿಮರು ವೈಯಕ್ತಿಕವಾಗಿ ಅದನ್ನು ಅನುಷ್ಠಾನಿಸಬೇಕು. ಝಕಾತ್ ನ ಮೂಲಕ ಸಂಗರಹವಾದ ಮೊತ್ತವನ್ನು ಭತ್ಯೆ ರೂಪದಲ್ಲಿ ಪೈಗಂಬರರ ಆಡಳಿತವು ಹೇಗೆ ಜನಪರ ಕಾರ್ಯಗಳಿಗಾಗಿ ವ್ಯಯಿಸಬೇಕು ಎಂಬುದನ್ನು ಕುರ್‌ಆನ್ ನ ಒಂಬತ್ತನೆಯ ಸೂರಃ ದ ಅರವತ್ತನೆಯ ವಚನದಲ್ಲಿ (9:60) ವಿವರಿಸಲಾಗಿದೆ. ಉಳಿತಾಯ, ಚಿನ್ನಬೆಳ್ಳಿ, ಜಾನುವಾರುಗಳು, ಕೃಷ್ಯುತ್ಪನ್ನ ಮುಂತಾದವುಗಳ ಮೇಲಿನ ಝಕಾತ್ ದರವನ್ನು ಪೈಗಂಬರರು ತಮ್ಮ ಅನುಯಾಯಿಗಳಿಗೆ ಬೋಧಿಸಿರುತ್ತಾರೆ. ಮುಸ್ಲಿಮರು ಅದನ್ನೇ ಅನುಸರಿಸುತ್ತಾರೆ; ಅನುಸರಿಸಬೇಕು. 

ಕುಫ್ಫಾರ್: ಸತ್ಯವು ಚೆನ್ನಾಗಿ ಮನವರಿಕೆಯಾದ ನಂತರವೂ ಅದನ್ನು ತಿರಸ್ಕರಿಸಿದವರು; ಸತ್ಯವನ್ನು ಬೇಕಂತಲೇ ಬಚ್ಚಿಟ್ಟವರು; ಅಲ್ಲಾಹ್ ನ ಪ್ರವಾದಿಗಳ ಕರೆಯನ್ನು ಧಿಕ್ಕರಿಸಿದವರು; ಸೃಷ್ಟಿಕರ್ತನಿಗೇ ಎದುರು ನಿಲ್ಲುವ ದಾರ್ಷ್ಟ್ಯ ತೋರಿದವರು; ಪೈಗಂಬರರ ಬೋಧನೆಗಳನ್ನು ಉದ್ಧಟತನದಿಂದ ಹಂಗಿಸಿದವರು ಎಂಬೀ ಅರ್ಥಗಳಲ್ಲಿ ಕುರ್‌ಆನ್ ಈ ಪಾರಿಭಾಷಿಕೆಯನ್ನು ಬಳಸಿದೆ. ಇದು ಅಲ್ ಕಾಫಿರ್ ಎಂಬ ಪದದ ಬಹುವಚನ ರೂಪ. ಕೇವಲ ಮುಸ್ಲಿಮೇತರರು ಎಂಬ ಅರ್ಥದಲ್ಲಿ ಕಾಫಿರ್ ಮತ್ತು ಕುಫ್ಫಾರ್ ಪದಗಳನ್ನು ಇಲ್ಲಿ ಬಳಸಲಾಗಿಲ್ಲ.


ಇಸ್ರಾಈಲ್

ಬನೀ ಇಸ್ರಾಈಲ್

ಕಅಬಃ

ಕುರೈಶ್

ಜಿನ್ನ್

ಮಲಕ್

ಮೂಮಿನ್


Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...